ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?…
· ಡಾ. ರಾಜೇಂದ್ರ ಬುರಡಿಕಟ್ಟಿ
ತಳಬುಡವಿಲ್ಲದ ಯೋಜನೆ ನೂರು
ಮಕ್ಕಳ ಕತ್ತನು ಒತ್ತುತಿವೆ.
ಕಲಿಕೆಯ ಒಲವನು ಚಿಮ್ಮುವ ಚಿಲುಮೆ
ಬತ್ತಿದ ಹಳ್ಳ ಆಗುತಿದೆ
ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ವಿಮರ್ಶೆಮಾಡುವ ಮುಖ್ಯವಾದ ಕವಿತೆಯೊಂದರ ನಾಲ್ಕು ಸಾಲುಗಳಿವು. ಮೊನ್ನೆ ಒಂದು ಶಾಲೆಗೆ ಯಾತಕ್ಕೋ ಹೋಗಿದ್ದೆ. ಅದು ಹೈಸ್ಕೂಲು. ಅಲ್ಲಿ ಶಾಲೆಯ ಕಾರಿಡಾರಿನಲ್ಲಿ
ಏಳೆಂಟು ಜನ ಅಲ್ಲಿನ ಶಿಕ್ಷಕರ ಹತ್ತಿರ ಜಗಳ ಮಾಡುತ್ತಿದ್ದರು.
ಅವರು ಶಾಲೆಯ ಮಕ್ಕಳ ಪಾಲಕರು ಎಂದು ಗುರುತಿಸಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಏಕೆ ಇರಬಹುದೆಂಬ ಕುತೂಹಲ ಸಹವಾಗಿಯೇ ಉಂಟಾಯಿತು. ಹಾಗೇ ಅವರ ಮಾತಿಗೆ ಕಿವಿಗೊಟ್ಟು ದೂರದಲ್ಲಿ ಸ್ವಲ್ಪಹೊತ್ತು ನಿಂತುಕೊಂಡೆ. ಅವರ ಸಂಭಾಷಣೆಯ ಮಧ್ಯದಲ್ಲಿ ಆಲಿಸತೊಡಗಿದ ನನಗೆ ಅದರ ಸಂಪೂರ್ಣ ವಿವರ ಗೊತ್ತಾಗಲಿಲ್ಲ. ಆಮೇಲೆ ವಿಚಾರ ಮಾಡಿದಾಗ ತಿಳಿದ ಸಂಗತಿ ಏನೆಂದರೆ
ಅವರು ಮುಖ್ಯವಾಗಿ ಅಲ್ಲಿ ಎರಡು ವಿಷಯಗಳ ಬಗ್ಗೆ ಶಿಕ್ಷಕರ ಹತ್ತಿರ ಜಗಳವಾಡುತ್ತಿದ್ದರು. ಒಂದು: ಮಕ್ಕಳಿಗೆ
ಮಿತಿಮೀರಿದ ನೋಟ್ಸ್ ಇಡಿಸಿ ಪುಸ್ತಕದ ಚೀಲದ ಭಾರವನ್ನು ಹೆಣಭಾರಗೊಳಿಸಿದ್ದು. ಇನ್ನೊಂದು ಆ ಶಿಕ್ಷಕರು
ಹಗಲು ರಾತ್ರಿ ಕುಟುಂಬದ ಎಲ್ಲರೂ ಸೇರಿ ಮಾಡಿದರೂ ಮುಗಿಯದಷ್ಟು ಹೋಮ್ವರ್ಕ್ ಬರೆಯಲು ಮಕ್ಕಳಿಗೆ ಕೊಡುತ್ತಿದ್ದುದು.
ಅವುಗಳ ಬಗ್ಗೆ ಒಂದೊಂದಾಗಿ ಈಗ ನೋಡೋಣ ಬನ್ನಿ.
ಶಾಲೆಯ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಯ ಮಕ್ಕಳ ಪುಸ್ತಕದ ಚೀಲ
ಎಷ್ಟುಭಾರವಿರಬೇಕು ಎಂಬ ಬಗ್ಗೆ ಬಹಳಷ್ಟು ವರ್ಷಗಳ ಹಿಂದೆಯೇ ತಜ್ಞರ ಅಭಿಪ್ರಾಯ ಪಡೆದ ನ್ಯಾಯಾಲಯದ ನಿರ್ದೇಶನವಿದೆ.
ಅದರ ಆಧಾರದಲ್ಲಿ ಅನೇಕ ರಾಜ್ಯ ಸರ್ಕಾರಗಳು ಸುತ್ತೋಲೆ ಕೂಡ ಹೊರಡಿಸಿವೆ. ಈ ನಿರ್ದೇಶನದ ಪ್ರಕಾರ ದೇಶದ
ಯಾವುದೇ ಶಾಲೆಯಲ್ಲಿ ಓದುವ ಮಗುವಿನ ಪುಸ್ತಕದ ಚೀಲದ ತೂಕವು ಮಗುವಿನ ದೇಹದ ತೂಕದ ಶೇ. ೧೦ನ್ನು ಮೀರುವಂತಿಲ್ಲ.
ಅಂದರೆ ಮೂವತ್ತು ಕೆ.ಜಿ ತೂಕವಿರುವ ಮಗುವಿನ ಶಾಲೆಯ ಬ್ಯಾಗಿನ ತೂಕ ಮೂರು ಕೆ.ಜಿ ಮೀರುವಂತಿಲ್ಲ. ಇದು
ಮೀರಿದರೆ ಸಂಬಂಧಪಟ್ಟ ಶಿಕ್ಷಕರಿಗೆ ಮುಖ್ಯಶಿಕ್ಷಕರು ಶಿಕ್ಷೆಗೆ ಅರ್ಹರಾಗುತ್ತಾರೆ.
ಈ ನಿಯಮವನ್ನು ಉಲ್ಲಂಘಿಸಿ ಅನೇಕ ಖಾಸಗೀ ಶಾಲೆಗಳವರು ಮಕ್ಕಳಿಗೆ ಅನಗತ್ಯವಾಗಿ ಪುಸ್ತಕದ ಹೊರೆಯನ್ನುಂಟು ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು ಎಲ್ಲ ರಾಜ್ಯ ಸರ್ಕಾರಗಳೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ಕ್ರಮ ಎಲ್ಲ ಕಡೆಯೂ ಸಮರ್ಪಕವಾಗಿ ಆಗಲಿಲ್ಲ. ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾತ್ರ ಒಂದೆರಡು ವರ್ಷಗಳ ಹಿಂದೆ ಒಂದು ಶಾಲೆಗೆ ಸಂಜೆ ಬೆಲ್ ಹೊಡೆಯುವ ಸಮಯಕ್ಕೆ ಸರಿಯಾಗಿ ಭೇಟಿನೀಡಿ ಶಾಲೆಯ ಗೇಟಿನಲ್ಲಿ ನಿಂತು ಮಕ್ಕಳ ಬ್ಯಾಗುಗಳನ್ನು ತೂಕಹಾಕಿ ಅಲ್ಲಿನ ಮುಖ್ಯಶಿಕ್ಷಕರು ಮತ್ತು ಸಂಬಂಧಿಸಿದ ಶಿಕ್ಷಕರಿಗೆ ನೋಟೀಸ್ ನೀಡಿ ಶಿಸ್ತುಕ್ರಮ ತೆಗೆದುಕೊಂಡ ವರದಿಯಾಯಿತು. ಶಾಲಾ ಅವಧಿಯಲ್ಲಿ ಬಂದು ವಿಚಾರಿಸಿದರೆ ʻನಾವು ನೋಟ್ಸ್ ಇಡಿಸಿದರೂ ಅವೆಲ್ಲವನ್ನೂ ದಿನಾ ತರಲು ಮಕ್ಕಳಿಗೆ ಹೇಳುವುದಿಲ್ಲʼ ಇತ್ಯಾದಿ ಸಬೂಬು ಹೇಳಿ ಶಿಕ್ಷಕರು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇರುವುದರಿಂದ ಅವರು ಹೀಗೆ ಮಾಡಿದ್ದರು. ಆದರೆ ಇಂತಹ ಕ್ರಮಗಳುಗು ಎಲ್ಲಕಡೆಗೂ ಪರಿಣಾಮಕಾರಿ ಆಗಿ ಜಾರಿಯಾಗಲಿಲ್ಲ; ಹಾಗಾಗಿ ಮಕ್ಕಳು ಹೆಣಭಾರದ ಚೀಲವನ್ನು ಹೋರುವುದು ತಪ್ಪಲಿಲ್ಲ. ಆರಂಭದಲ್ಲಿ ಖಾಸಗೀ ಶಾಲೆಗಳಲ್ಲಿದ್ದ ಈ ಕಾಯಿಲೆ ಇತ್ತೀಚೆಗೆ ಸರ್ಕಾರದ ಶಾಲೆಗಳಿಗೂ ಹಬ್ಬಿದ್ದು ಒಂದು ದುರಂತವೆಂದೇ ಹೇಳಬೇಕು.
ಯಾವುದೇ ಸರ್ಕಾರವಿರಲಿ ಸರ್ಕಾರದ ಹತ್ತಿರ ಶಿಕ್ಷಣಶಾಸ್ತ್ರ, ಮಕ್ಕಳ
ಮನಶ್ಶಾಸ್ತ್ರ, ಆರೋಗ್ಯಶಾಸ್ತ್ರ ಇವುಗಳನ್ನು ಓದಿಕೊಂಡ ತಜ್ಞರು, ದೀರ್ಘಕಾಲ ಪಾಠಮಾಡಿದ ಅನುಭವಿ ಶಿಕ್ಷಕರೂ,
ಆಡಳಿತ ಮಾಡಿದ ಒಳ್ಳೆಯ ಅಧಿಕಾರಿಗಳೂ ಇರುತ್ತಾರೆ. ಹೀಗಾಗಿ ಸರ್ಕಾರಗಳು ಕಲಿಕೆಗೆ ಸಂಬಂಧಪಟ್ಟ ವಿಷಯಗಳಲ್ಲಿ
ಖಾಸಗೀಯವರಿಗೆ ಮಾದರಿಯಾಗುವಂಥ ಕ್ರಮಗಳನ್ನು ಕೈಗೊಂಡು ಅವನ್ನು ಖಾಸಗೀ ಶಾಲೆಗಳೂ ಅನುಸರಿಸುವಂತೆ ಆಗಬೇಕು.
ಅದು ಸರಿಯಾದ ಕ್ರಮ. ಆದರೆ ಅನೇಕ ವಿಷಯಗಳಲ್ಲಿ ಯಾವ ವೈಜ್ಞಾನಿಕ ಆಧಾರಗಳೂ ಇಲ್ಲದೆ ಕಾನ್ವೆಂಟಿನವರು
ರೂಪಿಸಿಕೊಂಡು ಅನುಸರಿಸುವ ಅನೇಕ ವಿಧಾನಗಳನ್ನು ಸರ್ಕಾರಿ ಶಾಲೆಗಳು ಅನುಸರಿಸಹೊರಟರೆ ಅದು ಇಡೀ ವ್ಯವಸ್ಥೆಗೆ
ಅವಮಾನಕರ ಸಂಗತಿ ಮಾತ್ರವಲ್ಲ; ಮಕ್ಕಳ ವ್ಯಕ್ತಿತ್ವ ವಿಕಸನದ ಹಿತದೃಷ್ಟಿಯಿಂದ ಅಪಾಯಕಾರಿ ಕೂಡ ಹೌದು.
ಇವುಗಳಲ್ಲಿ ಅನಗತ್ಯವಾಗಿ ಮಕ್ಕಳಿಗೆ ಹೆಚ್ಚು ನೋಟ್ಸ್ ಇಡಿಸಿ ಪುಸ್ತಕದ ಹೊರೆ ಹೆಚ್ಚಿಸುವ ಒಂದನ್ನು
ಈಗಾಗಲೇ ಚರ್ಚಿಸಿದ್ದೇವೆ. ಈಗ ಇನ್ನೊಂದನ್ನು ನೋಡೋಣ ಬನ್ನಿ.
*****
ಆ ಶಾಲೆಯಲ್ಲಿ ಯಾವುದೋ ಒಂದೋ ಎರಡೂ ಅವಧಿ
ಪಾಠಮಾಡುವ ಶಾಸ್ತ್ರ ಮಾಡಿ ಬಹುತೇಕ ಎಲ್ಲ ಅವಧಿಗಳಲ್ಲೂ ಶಿಕ್ಷಕರು ಬರೀ ಬರೆಸುವುದನ್ನೇ ಮಾಡಿದ್ದಾರೆ. ಎಲ್ಲ ಅವಧಿಗಳಲ್ಲಿ ಬರೆದೂ ಬರೆದು ಎಳೆಯ ಮಕ್ಕಳ ಕೈ ನೋವು ಬಂದರೂ ಆ ಮಕ್ಕಳ ಕಷ್ಟವನ್ನು ಯಾರೂ ಕೇಳಲಿಕ್ಕೆ ತಯಾರಿಲ್ಲ.
ಶಾಲೆಯಲ್ಲಿ ಅಷ್ಟು ಜೀವ ತಿಂದದ್ದಲ್ಲದೆ ಮನೆಗೆ ಹೋಗುವಾಗ ಮಕ್ಕಳಿಗೆ ದಿನವೂ ಹೆಣರಾಶಿ ಬರೆಯುವುದನ್ನು ಕೊಡುತ್ತಿದ್ದರಂತೆ. ಹೀಗಾಗಿ ಶಾಲೆಯಲ್ಲಿಯೂ ಬರೆಯೋದೆ ಮನೆಯಲ್ಲೂ ಬರೆಯೋದೆ.
ರೈಟಿಂಗ್ ರೈಟಿಂಗ್ ಆಲ್ ದ ಡೆ,
ಈವನ್ ಮಾರ್ನಿಂಗ್, ಇವ್ನಿಂಗ್, ನೈಟ್,
ಸ್ಪೀಕಿಂಗ್ ರೀಡಿಂಗ್ ನೊ ದ ವೇ
ಸಫರಿಂಗ್ ಪೇಯಿನ್! ಮೌತೀಸ್ ಟೈಟ್!!
ಮೂಢನಂಬಿಕೆ ಎನ್ನುವುದು ಕೇವಲ ಅನಕ್ಷರಸ್ಥರಲ್ಲಿ, ಅಥವಾ ಅಶಿಕ್ಷಿತರಲ್ಲಿ ಮಾತ್ರ ಇರುವುದಿಲ್ಲ. ಅದು ವಿದ್ಯಾವಂತರಲ್ಲಿಯೂ ಇರುತ್ತದೆ. ಅದರ ಸ್ವರೂಪ ಬೇರೆ ಇರುತ್ತದೆ ಅಷ್ಟೆ. ಇದಕ್ಕೆ ಶಿಕ್ಷಕರೂ ಹೊರತಲ್ಲ. ಶಿಕ್ಷಕರಲ್ಲಿ ಇರುವ ಮೂಢನಂಬಿಕೆಗಳಲ್ಲಿ ಹೈಸ್ಕೂಲಿಗೆ ಬಂದರೂ ಮಕ್ಕಳಿಂದ ಕಾಪಿ ಬರೆಸುವುದು ಇದರಿಂದ ಅಕ್ಷರ ಮುದ್ದಾಗಿ ಆಗುತ್ತವೆ ಎಂದು ತಿಳಿಯುವುದು ಒಂದಾದರೆ. ಬಹಳಷ್ಟು ಸಲ ಬರೆದರೆ ವಿಷಯ ಅರ್ಥವಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ ಎನ್ನುವುದು ಇನ್ನೊಂದು. ಕಾಪಿ ಬರೆವಣಿಗೆ ಬಗ್ಗೆ ಇನ್ನೊಂದು ಸಲ ನೋಡೋಣ ಇಲ್ಲಿ ಇನ್ನೊಂದನ್ನು ಮಾತ್ರ ಚರ್ಚಿಸೋಣ. ನಮ್ಮ ಬಹಳಷ್ಟು ಜನ ಶಿಕ್ಷಕರು ಸದಾ ಪಠಣ ಮಾಡುವ ಒಂದು ಮಾತಿದೆ. ಅದೆಂದರೆ ʻಒಂದು ಸಲ ಬರೆಯುವುದು ಹತ್ತು ಸಲ ಓದುವುದಕ್ಕೆ ಸಮʼ ಎಂಬುದು. ಇದು ಮಕ್ಕಳ ಮನಸ್ಸನ್ನು ಅಧ್ಯಯನ ಮಾಡುವ ಆಧುನಿಕ ವಿಜ್ಞಾನ ಬೆಳೆಯದೇ ಇರುವ ಕಾಲದಲ್ಲಿ ಯಾರೋ ಹುಟ್ಟುಹಾಕಿದ ಒಂದು ಹೇಳಿಕೆ. ಅದನ್ನು ನಮ್ಮ ಬಹಳಷ್ಟು ಜನ ಶಿಕ್ಷಕರು ಈಗಲೂ ವೇದವಾಕ್ಯ ಎಂಬಂತೆ ನಂಬಿಕೊಂಡಿದ್ದಾರೆ. ಇದರ ಕಾರಣದಿಂದಾಗಿ ಅವರು ಮಕ್ಕಳನ್ನು ಒಂದರ್ಥದಲ್ಲಿ ʼಬರೆಯುವ ಯಂತ್ರʼ (Writing Machine)ಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ತರಗತಿಗಳಲ್ಲಿ ಲವಲವಿಕೆಯ ಕಲಿಕಾವಾತಾವರಣವೇ ಮಾಯವಾಗುತ್ತಿದೆ. ಶಿಕ್ಷಕರ ಮುಖದಲ್ಲೂ ನಗುವಿಲ್ಲ; ಮಕ್ಕಳ ಮುಖದಲ್ಲೂ ನಗುವಿಲ್ಲ. ಇಬ್ಬರ ಮುಖದಲ್ಲೂ ಸದಾ ಆವರಿಸಿರುತ್ತದೆ ಪರೀಕ್ಷಾಮೋಡದ ಕರಿನೆರಳು. ಶಿಕ್ಷಕರು ಉತ್ಸಾಹದಿಂದ ಪಾಠಮಾಡುವ, ಮಕ್ಕಳನ್ನು ತರಗತಿಯಲ್ಲಿಯೇ ಪ್ರಶ್ನೆಕೇಳುವ, ಆಗ ಮಕ್ಕಳು ನಾ ಮುಂದೆ ನೀಮುಂದೆ ಎಂದು ಉತ್ಸಾಹದಿಂದ ಕೈಯೆತ್ತಿ ಉತ್ತರ ಕೊಡಲು ಕಾತರಾಗಿ ಕುಣಿದಾಡುವ ಚಿತ್ರಣಗಳೇ ಕಾಣದಂತಾಗಿ ತರಗತಿಗಳು ʻಸ್ಮಶಾನಮೌನʼದ ತಾಣಗಳಾಗುತ್ತಿವೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ.
ನಮ್ಮ ಶಿಕ್ಷಕರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಎಂದರೆ ಸುಮ್ಮಸುಮ್ಮನೆ ಬಹಳಷ್ಟು ಸಲ ಓದಿದರೆ ಬಹಳಷ್ಟು ಸಲ ಬರೆದರೆ ವಿಷಯ ಮನನವಾಗುತ್ತದೆ ಎಂಬ ಹೇಳಿಕೆಗೆ ಯಾವುದೇ ಶಿಸ್ತುಬದ್ಧವಾದ ಅಧ್ಯಯನದ ಮೇರೆಗೆ ಹೊರಬಂಧ ವೈಜ್ಞಾನಿಕ ಆಧಾರಗಳಿಲ್ಲ.
ಈ ಬಗ್ಗೆ
ಯಾರು ಸಂಶೋಧನೆ ಮಾಡಿ ವರದಿ ಕೊಟ್ಟಿದ್ದಾರೆ? ಒಮ್ಮೆ ಆಲಿಸಿದಾಗ ಅಥವಾ
ಓದಿದಾದ
ಅರ್ಥವಾಗದ ಅಥವಾ ನೆನಪಿನಲ್ಲಿ ಉಳಿಯದ ವಿಷಯ ಅದನ್ನು ಹತ್ತಾರು ಸಲ ಓದಿದಾಗ ಅಥವಾ ಬರೆದಾಗ ಅರ್ಥವಾಗುತ್ತದೆ ಅಥವಾ ನೆನಪಿನಲ್ಲಿ ಉಳಿಯುತ್ತದೆ ಎಂಬುದು ಎಲ್ಲ ವಿಷಯಗಳಲ್ಲೂ
ಎಲ್ಲ ಕಾಲದಲ್ಲೂ ಸರಿ ಎಂಬಂತಹ ಫಲಿತಾಂಶ ನೀಡಿದ ಯಾವ ಸಂಶೋಧನೆಯೂ ನನ್ನ ಗಮನಕ್ಕಂತೂ ಬಂದಿಲ್ಲ. ಹೋಗಲಿ
ದೊಡ್ಡ ಸಂಶೋಧನೆ ಬಂದಿಲ್ಲವಾದರೂ ಹೀಗೆ ಪಠಣ ಮಾಡುವ ಈ ಶಿಕ್ಷಕರಾದರೂ ತಮ್ಮ ಹಂತದಲ್ಲಿ ಒಂದು ಚಿಕ್ಕ
ಸಂಶೋಧನೆ ಮಾಡಿಕೊಂಡು ಈ ನಿರ್ಣಯಕ್ಕೆ ಬಂದಿದ್ದಾರೆಯೇ? ಅದೂ ಇಲ್ಲ. ಹಾಗಿದ್ದ ಮೇಲೆ ಇದು ಕೇವಲ ನಂಬಿಕೆ
ಅಥವಾ ಮೂಢನಂಬಿಕೆ ಅಲ್ಲದೆ ಮತ್ತೇನು? ಮಕ್ಕಳ ಕಲಿಕೆಯಂತಹ ಸೂಕ್ಷ್ಮ ವಿಷಯಗಳಲ್ಲಿ ಇಂತಹ ಕುರುಡು ನಂಬಿಕೆಯನ್ನು
ಯಾರೇ ಆಗಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.
ಓದುವುದಾಗಲೀ, ವಿಷಯವನ್ನು ಗ್ರಹಿಸುವುದಾಗಲೀ ಜನ್ಮದಿಂದ ಬರುವ ಸಂಗತಿಗಳಾಗಿರುವುದಕ್ಕಿಂತ ಸೂಕ್ತ ತರಬೇತಿಯಿಂದ ಪಡೆಯುವ ಕೌಶಲಗಳಾಗಿರುವುದೇ ಹೆಚ್ಚು. ಕಲಿಕೆ ಎಂಬುದು ಒಂದು ಕಸುಬುಗಾರಿಕೆ. ಕಸುಬು ಎನ್ನುವುದು ಮಾಡುತ್ತಾ ಮಾಡುತ್ತಾ ಹಂತಹಂತವಾಗಿ ಪರಿಣತಿ ಪಡೆಯುವ ವಿಧಾನ. ಓದುವ, ಓದಿದ ವಿಷಯವನ್ನು ಮನನ ಮಾಡುವ, ಮನನ ಮಾಡಿದ ವಿಷಯವನ್ನು ನೆನಪಿಟ್ಟುಕೊಳ್ಳುವ ವಿಧಾನಗಳನ್ನು ಕುರಿತು ಜಾಗತಿಕವಾಗಿ ಅನೇಕ ತಜ್ಞರು ಸಂಶೋಧನೆ ಮಾಡಿ ಉಪಯುಕ್ತ ಫಲಿತಗಳನ್ನು ನೀಡಿದ್ದಾರೆ. ಆ ತಂತ್ರಗಳನ್ನು ನಮ್ಮ ಶಿಕ್ಷಕರು ಬಳಸಿಕೊಳ್ಳಬೇಕು. ಆಗ ಕಲಿಕೆ ಸಂತಷವನ್ನುಂಟುಮಾಡುತ್ತದೆ ಮಾತ್ರವಲ್ಲ ಪರಿಣಾಮಕಾರಿಯಾಗಿ ಆಗುತ್ತದೆ. ಹೀಗೆ ತಾಂತ್ರಿಕತೆಯನ್ನು ಬಿಟ್ಟು ಕಲಿಕೆಯನ್ನು ಯಾಂತ್ರಿಕವಾಗಿಸಿಕೊಂಡರೆ ಶಿಕ್ಷಕರ ಸಮಯ, ಮಕ್ಕಳ ಶ್ರಮ, ಮತ್ತು ಪಾಲಕರ ಖರ್ಚು ಹೆಚ್ಚಾಗಬಹುದೇ ಹೊರತು ಕಲಿಕೆಯ ಗುಣಮಟ್ಟವಲ್ಲ ಎಂಬ ಅರಿವು ಸಂಬಂಧಪಟ್ಟವರಿಗೆಲ್ಲ ಇರುವುದು ಅಪೇಕ್ಷಣೀಯ.
ಈ ಶಾಲೆಯಲ್ಲಿ ಈ ರೀತಿ ಶಿಕ್ಷಕರು ಮಿತಿಮೀರಿ ಬರೆವಣಿಗೆ ಕೊಡಲು ಅವರ
ಅಜ್ಞಾನ ಮಾತ್ರ ಕಾರಣವಾಗಿರಲಿಲ್ಲ. ಅಲ್ಲಿ ಇನ್ನೊಂದು ಅಂಶವೂ ಇತ್ತು. ಆ ಶಾಲೆಯಿರುವ ಜಿಲ್ಲೆಯಲ್ಲಿ
ಜಿಲ್ಲಾಮಟ್ಟದ ಆಡಳಿತ ಎಸ್ ಎಸ್. ಎಲ್ ಸಿ ಪರೀಕ್ಷೆಯ ಸುಧಾರಣೆ ಮಾಡಬೇಕೆಂದು ಎಂಟು ಒಂತ್ತನೆಯ ತರಗತಿಗಳಿಗೆ
ಒಂದು ʼವಿಶಿಷ್ಟʼ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರ ಮುಖ್ಯಗುರಿ ಒಂದನೆಯ ತರಗತಿಯಿಂದ ಏಳನೆಯ ತರಗತಿವರೆಗೆ
ಏಳುವರ್ಷಗಳ ಕಾಲ ಮಕ್ಕಳು ಕಲಿತು ಬರದೇ ಇರುವ ಮೂಲಭೂತ ಕಲಿಕಾಂಶಗಳನ್ನು ಹೈಸ್ಕೂಲಲ್ಲಿ ಎರಡು ತಿಂಗಳಲ್ಲಿಯೇ
ಕಲಿಸಿಬಿಡುವುದು! ಅದಕ್ಕಾಗಿ ನಿಗಧಿತ ಪಾಠಗಳನ್ನು ಮಾಡುವುದನ್ನು ಬಿಟ್ಟು ಅವರಿಗೆ ಪ್ರೈಮರಿ ಸ್ಕೂಲಲ್ಲಿ
ಕಲಿಯಬೇಕಾದದ್ದನ್ನು ಹೇಳಿಕೊಡುವುದು, ಎರಡು ತಿಂಗಳಾದ ಮೇಲೆ ಪಠ್ಯಪುಸ್ತಕವನ್ನು ತೆರೆಯುವುದು ಎಂಬುದು
ಆ ಯೋಜನೆಯಾಗಿತ್ತು. ಪುಸ್ತಕದ ಪಾಠ ಮಾಡದಿದ್ದರೆ ಪಾಲಕರು ಗಲಾಟೆ ಮಾಡಬಹುದೆಂದು ಎಲ್ಲ ಶಾಲೆಗಳಲ್ಲಿ
ಪಾಲಕರಿಗೆ ಸಭೆಮಾಡಿ ʻಎರಡು ತಿಂಗಳು ಪಾಠನೇ ಮಾಡಿಲ್ಲ ಅಂತ; ತಿಳಿದುಕೊಳ್ಳಬೇಡಿ ಶಾಲೆಯಲ್ಲಿ ಇಂಥ ಕೆಲ್ಸ
ಮಾಡ್ತೇವೆʼ ಎಂದು ಶಿಕ್ಷಕರು ಈ ಬಗ್ಗೆ ಮನವರಿಕೆ ಕೂಡ ಮಾಡಿಕೊಟ್ಟಿದ್ದರು.
ಹೀಗೆ ಮನವರಿಕೆ ಮಾಡಿಕೊಟ್ಟು ಆ ಕೆಲಸ ಮಾಡುತ್ತಿರುವ ಮಧ್ಯದಲ್ಲಿಯೇ
ದಿಢೀರನೆ ʻಪಾಠಮಾಡಿ. ಪಾಠದ ನಂತರ
ಪ್ರತಿಪಾಠಕ್ಕೂ ಪರೀಕ್ಷೆಮಾಡಿ. ಎಂದು ಮಾರ್ಗದರ್ಶಿಯೊಂದು ಅವರಿಗೆ ಬಂದಿತ್ತು. ಅದರಲ್ಲಿ ಪಾಠಕ್ಕಿಂತ
ಪರೀಕ್ಷೆನೇ ಮುಖ್ಯ ಎಂದು ಪರಿಗಣಿಸಿದಂತಿತ್ತು. ಲೆಕ್ಕ ಹಾಕಿ ನೋಡಿದರೆ ಹೆಚ್ಚು ಕಡಿಮೆ ಶಾಲೆ ನಡೆಯುವ
ದಿನಗಳಷ್ಟೇ ಪರೀಕ್ಷೆಗಳ ಸಂಖ್ಯೆಯೂ ಇತ್ತು! ಇದನ್ನು ನೋಡಿ ಆ ಶಿಕ್ಷಕರಿಗೆ ಅದನ್ನು ಕಳಿಸಿದವರ ಮೇಲೆ
ವ್ಯಕ್ತಪಡಿಸಲಾರದ ಕೋಪ ಉಂಟಾಗಿತ್ತು. ಅವರ ಕೋಪಕ್ಕೆ ಕಾರಣವಾದ ಎರಡು ಅಂಶಗಳೆಂದರೆ ಒಂದು ಶಾಲೆಯ ಶಿಕ್ಷಕರನ್ನು
ಪಾಠಮಾಡಿ ಪ್ರಶ್ನೆಪತ್ರಿಕೆ ತೆಗೆಯಲೂ ಬಾರದವರು ಎಂದು ಪರಿಗಣಿಸುವಂತೆ ಪ್ರಶ್ನೆಪತ್ರಿಕೆ ರಚಿಸಿ ಅದಕ್ಕೆ
ಉತ್ತರಗಳನ್ನೂ ಕೊಟ್ಟಿದ್ದು. ಇನ್ನೊಂದು ಕಾನ್ವೆಂಟ್ ಮಾದರಿ ಎಂದು ಪ್ರಸ್ತಾಪಿಸಿದ್ದು. ಆದರೆ ಅವರೇನು
ಮಾಡಿಯಾರು? ಬಡವನ ಕೋಪ ದವಡೆಗೇ ಮೂಲ ಎಂಬ ಗಾದೆಯೇ ಇದೆ.
ಇದರ ಜೊತೆಗೆ ಆ ಮಾರ್ಗದರ್ಶಿ ಬಂದ ಕೂಡಲೆ ಅದನ್ನು ಓದಿ ʻಮಾರ್ಗದರ್ಶಿʼ ಮತ್ತು ʼಸುತ್ತೋಲೆʼ ಇವುಗಳ ವ್ಯತ್ಯಾಸ ತಿಳಿಯದ ಅಲ್ಲಿನ ಹೆಡ್ಮಾಸ್ಟರ್
ಅದನ್ನು ಸುಗ್ರೀವಾಜ್ಞೆಯ ರೀತಿ ಸ್ವೀಕರಿಸಿ ತಕ್ಷಣಕ್ಕೆ ಎಲ್ಲ ಪಾಠಗಳನ್ನೂ ಮಾಡಿ ಎಲ್ಲ ಪಾಠಕ್ಕೂ ಪರೀಕ್ಷೆ
ಮಾಡಿ ವರದಿಕೊಡಿ ಎಂದು ಈ ಶಿಕ್ಷಕರಿಗೆ ಮೆಮೊ ಹಾಕಿದ್ದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಕೇಳಿದರೆ ಅವರೂ
ಸರಿಯಾಗಿ ಎಂಥದ್ದು ಹೇಳದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಸುಮ್ಮನಾಗಿದ್ದರು. ಇದರಿಂದ ಗೊಂದಲಕ್ಕೆ
ಒಳಗಾಗಿ ಒತ್ತಡಕ್ಕೆ ಸಿಲುಕಿದ್ದ ಈ ಶಿಕ್ಷಕರು ಎರಡು ತಿಂಗಳಲ್ಲಿ ಮಾಡಬೇಕಾದ ಪಾಠ ಪರೀಕ್ಷೆ ಎಲ್ಲವನ್ನೂ
ಅರ್ಧ ತಿಂಗಳಲ್ಲಿ ಮಾಡಲು ಮುಂದಾಗಿದ್ದರು. ಅದರ ಭಾಗವಾಗಿ ವಿಪರೀತ ಬರೆವಣಿಗೆ ಕೊಡತೊಡಗಿದ್ದರು. ಮೂರು
ದಿನ ಮಾಡಬೇಕಾಧ ಊಟಗಳನ್ನು ಒಂದೇ ದಿನ ಮಾಡಿದರೆ ಏನಾಗುತ್ತೋ ಅದೇ ಅಲ್ಲಿಯೂ ಆಗಿತ್ತು.
ಇದನ್ನು ಈ ಪಾಲಕರಲ್ಲಿ ಒಬ್ಬ ಪ್ರಶ್ನೆಮಾಡಿ, “ಮೊನ್ನೆ ಮೀಟಿಂಗ್ ಮಾಡಿ ಅದೇನ ಎರಡು ತಿಂಗಳು ಪಾಠ ಮಾಡಲ್ಲ ಪೌಂಡೇಶನ್
ಹಾಕ್ತೀವಿ ಅಂದಿದ್ರಿ. ಆದ್ರೆ ಒಂದೇ ತಿಂಗ್ಳಲ್ಲಿ ………ʼ ಎಂದು ತನ್ನ ಮಾತನ್ನು ಮುಗಿಸುವುದರ ಒಳಗೆ
ಅಲ್ಲಿದ್ದ ಬಯಲುಸೀಮೆಯಿಂದ ಬಂದಿದ್ದ ಒಬ್ಬ ಮೇಷ್ಟ್ರಿಗೆ ವಿಪರೀತ ಸಿಟ್ಟು ಬಂದುಬಿಟ್ಟಿದೆ. ಮೇಲಧಿಕಾರಿಗಳ
ಮೇಲೆ ತನಗಿದ್ದ ಸಿಟ್ಟೆಲ್ಲವನ್ನೂ ಆತ ಇವರ ಮೇಲೆ ಹಾಕುತ್ತಾ, “ಹೌದು ನಾವ್ ಹಂಗ ಹೇಳಿದ್ದು ನಿಜ.
ಏನ್ ಮಾಡಾಣ ನೀವೆ ಹೇಳ್ರಿ. ನೀವು ಕೂಡ ಗಾರೆ ಕೆಲ್ಸ್ ಮಾಡೋ ಕೂಲಿಗಳು. ನಾವು ನಿಮ್ತರನೇ ಕೂಲಿ ಮಾಡೋರು.
ನಿಮ್ಗೆ ಒಬ್ಬ ಮೇಸ್ತ್ರಿ ಮಾತ್ರ ಇರ್ತಾನ. ಅವ್ನು ಹೇಳಿದ ಕೆಲ್ಸ ಮಾಡ್ತಾ ಹೋದ್ರ ನಿಮ್ ಕೆಲ್ಸ ಮುಗೀತು.
ಆದರೆ ನಮ್ದು ಹಂಗಲ್ಲ. ನಮ್ಮ ಮೇಲೆ ಹದ್ನಾರ್ ಜನ ಮೇಸ್ತ್ರಿಗಳು ಇರ್ತಾರ. ಯಾವ ಮೇಸ್ತ್ರಿ ಹೇಳಿದ್ದೂ
ಮಾಡಾಕ ಆಗಲ್ಲ ಅನ್ನಾಕ ಬರಂಗಿಲ್ಲ. ಒಬ್ಬ ಮೇಸ್ತ್ರಿ ಪೌಂಡೇಶನ್ ಹಾಕಿ ಅಂದ್ರು ಹಾಕಾಕ ಶುರುವು ಮಾಡಿದ್ವಿ.
ಎರಡು ಮೂರು ಕೋರ್ಸ್ ಇಟ್ಟಿಗೆ ಕಟ್ತಿದ್ದಂಗನ ಆ ಮೇಸ್ತ್ರಿಯ ಮ್ಯಾಗಿನ ಮೇಸ್ತ್ರಿ, "ಈಗೆಂಥ ಪೌಂಡೇಶನ್ ಕಟ್ಟಾಕ ಹತ್ತೀರಿ;
ಗೋಡೆನೆ ಕಟ್ಬೇಕಿತ್ತು; ಬೇಗ ಬೇಗ ಗೋಡೆ ಕಟ್ಟಿ ಮುಗ್ಸಿ” ಎಂದು ತಾಕೀತು ಮಾಡಿ ರಾಶಿ ರಾಶಿ ಇಟ್ಟಿಗೆ
ತಂದು ಹಾಕಿದ್ರು. ನಾವ್ ಪೌಂಡೇಶನ್ ಅರ್ದಕ್ಕೆ ಬಿಟ್ಟು ಈಗ ಗೋಡೆ ಕಟ್ಟಾಗ ಶುರುವು ಮಾಡಿದ್ವಿ. ಇಟ್ಗಿ
ಖಾಲಿ ಆಗ್ದಿದ್ರೆ ಆ ಮೇಸ್ತ್ರಿ ನಮ್ಮುನ್ನ ಸುಮ್ನೆ ಬಿಡ್ತಾನ? ಇದರಾಗ ನಮ್ದೇನು ತಪ್ಪೈತಿ? ನೀವೆ ಹೇಳಿ” ಎಂದು ಲಾಯರ್ ಪಾಯಿಂಟ್
ಹಾಕಿ ಅವರ ಬಾಯಿ ಮುಚ್ಚಿಸುವ ಪ್ರಯತ್ನಮಾಡಿದ.
ಆತನ ಈ ಲಾಯರ್ ಪಾಯಿಂಟ್‌ಗೆ ಮಾರುತ್ತರ ಕೊಡಲು ಅವರು ಸೋತು ಸುಮ್ಮನಾಗುತ್ತಿದ್ದದ್ದನ್ನು
ಕಂಡು ತುಸು ಉತ್ಸಾಹ ಬರಿತನಾದ ಆ ಶಿಕ್ಷಕ, “ಈ ಗೋಡೆ ಕಟ್ಟೋ ಕೆಲ್ಸಾನೂ ಪೂರಾ ಮಾಡ್ತೀವಿ ಅಂದ್ಕೋಬೇಡಿ.
ನಾಳೆ ಈ ಹೊಸ ಮೇಸ್ತ್ರಿಯ ಮೇಲಿನ ಮೇಸ್ತ್ರೀ ಬಂದು, “ಗೋಡೆ ಕಟ್ಟೋದು ಸಾಕು; ಆರ್ ಸಿ ಸಿ ಹಾಕಿ ಅಂದ್ರೆ
ನಾವು ಗೋಡೆ ಕಟ್ಟೋದನ್ನೂ ಅಲ್ಲಿಗೆ ನಿಲ್ಸಿ ಆರ್ಸಿಸಿ ಹಾಕಾಕ ಶುರುವು ಮಾಡ್ಬೇಕಾಗುತ್ತೆ. ಆವಾಗ ಬಂದು
ಮತ್ತೆ ಗಲಾಟೆ ಮಾಡ್ಬೇಡಿ” ಎಂದು ಹಿತವಚನದ ಒಂದು ಮಾತು ಆಡಿ ತಮ್ಮ ಮಾತಿಗೆ ಇತೀಶ್ರೀ ಹಾಡುವ ಹಂತದಲ್ಲಿದ್ದಾಗ
ದಿನನಿತ್ಯ ಕಟ್ಟಡ ಕಟ್ಟುವ ಗಾರೆ ಕೆಲಸದವರೇ ಆದ ಆ ಪಾಲಕರು ಹೇಗೆ ತಾನೆ ಸುಮ್ಮನಿದ್ದಾರು?, “ಅಲ್ಲ
ಸಾರ್, ಅರ್ದಂಬರ್ದ ಪೌಂಡೇಶನ್ನು ಗೋಡೆ ಕಟ್ಕಂಡ್ ಆರ್‌ಸಿಸಿ ಹಾಕಿದ್ರೆ ಆರ್‌ಸಿಸಿ ನಿಲ್ಲುತ್ತಾ?”
ಎಂದು ತಮ್ಮ ಸಂಶಯವನ್ನು ಎತ್ತಿದಾಗ, “ನಿಲ್ಲಲ್ಲ ಅಂತ ನಮ್ಗೂ ಗೊತ್ತು ಕಣ್ರಿ; ಆದ್ರೆ ಅದ್ಕೆ ನಾವೇನು
ಮಾಡಾಕ ಅಕತಿ ಹೇಳಿ? ನೀವು ಆರ್‌ಸಿಸಿ ಬೀಳ್ತದೆ ಅಂತ ಗೊತ್ತಾದಾಗ ಅದರ ಕೆಳಗೆ ಹೋಗಿ ತಲೆಕೊಟ್ಟು ನಿಲ್ಸಾಗ ಹೋಗ್ತೀರೋ ಅತ್ವಾ ಉಳಕೊಳ್ಳಾಗ ಹೊರಗ ಓಡಿ ಬರ್ತಿರೋ.. ಆಗ ನಿಮ್ಗೆ ಜೀವ ಉಳಿಸ್ಕೋಳ್ಳೋದು ಮುಕ್ಯ ಆಗುತ್ತೇ ಅಲ್ವಾ? ನಮ್ದು ಹಂಗೇ.. ಅರ್‌ಸಿಸಿ ನಿಂತರ ನಿಲ್ಲಿ; ಬಿದ್ದರ ಬೀಳ್ಲಿ ಮೇಸ್ತ್ರಿ ಹೇಳಿದ್ ಕೆಲ್ಸ ಮಾಡೋದು ಅಷ್ಟೇ ನಮ್ ಕೆಲ್ಸ ಏನೂ ಮಾಡಕ ಆಗಲ್ಲ;ಬರ್ತೀನಿ ನಂಗೆ ಕ್ಲಾಸ್ ಇದೆ” ಎಂದು ಹುಬ್ಬು ಹಾರಿಸಿ ಆ ಶಿಕ್ಷಕ ಹೊರಟೇಬಿಟ್ಟ!
ಆ ಶಿಕ್ಷಕ ಅಲ್ಲಿಂದ ಹೊರಟ ಕೂಡಲೇ ಅನೇಕ ವಿಷಯಗಳಲ್ಲಿ ಆ ಶಿಕ್ಷಕನ ಜೊತೆ ಭಿನ್ನಮತಹೊಂದಿದ್ದ ಆ ಶಾಲೆಯ ಕನ್ನಡ ʻಪಂಡಿತʼ ಅಲ್ಲಿಗೆ ಬಂದ. ಮಾಡುವುದು ಕನ್ನಡ ಪಾಠವಾದರೂ ಆತನಿಗೆ ಸಂಸ್ಕೃತದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ ಎಂದೂ ಕನ್ನಡ ಪಾಠಮಾಡುವಾಗ ಸಮಯ ಸಿಕ್ಕಾಗಲೆಲ್ಲ ಸಂಸ್ಕೃತವನ್ನು ಹಾಡಿ ಹೊಗಳುತ್ತಿದ್ದನೆಂದೂ ಅಲ್ಲಿನ ಹಳೆಯ ವಿದ್ಯಾರ್ಥಿಗಳು ಹೇಳುತ್ತಿದ್ದರು. ತನ್ನ ವಿಚಾರನ್ನು ಸಮರ್ಥಿಸಲಿಕ್ಕಾಗಿ ನಯಸೇನನ ಪದ್ಯವನ್ನೇ ಅಪವ್ಯಾಖ್ಯಾನ ಮಾಡಿ ನಯಸೇನನ ಪದ್ಯದಲ್ಲಿ ಬರುವ ಘೃತ ಅಂದರೆ ತುಪ್ಪ ಅದು ಸಂಸ್ಕೃತ ಮತ್ತು ತೈಲ ಅಂದರೆ ಎಣ್ಣೆ ಅದು ಕನ್ನಡ. ಎಣ್ಣೆಗಿಂತ ತುಪ್ಪ ಶ್ರೇಷ್ಠ ಅಲ್ಲವೇ ಮಕ್ಕಳೇ? ಎಂದು ಮಕ್ಕಳಿಗೆ ಪರೋಕ್ಷವಾಗಿ ಕನ್ನಡದ ಬಗ್ಗೆ ಕೀಳರಿಮೆ ಉಂಟಾಗುವಂತೆ ಮಾಡುತ್ತಿದ್ದನಂತೆ. ಹೊರಗಡೆ ಶಿಕ್ಷಕರು ಮತ್ತು ಆ ಪಾಲಕರ ಜಗಳ ಒಂದು ಹಂತದಲ್ಲಿ ಏರುದನಿಗೆ ಏರಿದಾಗ ಒಳಗೆ ಪಾಠಮಾಡುವುದನ್ನು ಬಿಟ್ಟು ಹೊರಗೆ ಬಂದು, ʻಇದೆಂಥದು ಮಾರಾಯ್ರೆ.. ಶಾಲೆಯಲ್ಲಿ ಮಕ್ಕಳಿಗೆ ಕೇಳುವಂತೆ ಹೀಗೆ ಮೇಷ್ಟ್ರೊಂದಿಗೆ ಜಗಳ ಮಾಡುವುದು ಸರಿಯಾ?ʼ ಎಂದು ಆತ ಆ ಜನಕ್ಕೆ ಪ್ರಶ್ನೆಹಾಗಿ ತನ್ನ ಅಸಮಾಧಾನವನ್ನು ಹೊರಹಾಕಿದಾಗ ಆ ಜನ ಉಳಿದ ಶಿಕ್ಷಕರಿಗೆ ಹೇಳಿದ್ದನ್ನೇ ಮತ್ತೊಮ್ಮೆ ಆತನಿಗೂ ಹೇಳಿದ್ದಾರೆ. ಅವನೂ ಆ ಶಿಕ್ಷಕ ಹೇಳಿದ್ದನ್ನೇ ಬೇರೊಂದು ರೀತಿಯಲ್ಲಿ ಹೇಳುತ್ತಾ, "ನಾವೆಂತದು ಮಾಡೋದು ಮಾರಾಯ್ರೆ ನಮಗೂ ಕಲಿಸುವಲ್ಲಿ ಈಗ ಯಾವುದೇ ಬಗೆಯ ಸ್ವಾತಂತ್ರ್ಯವಿಲ್ಲ. ಭಗವದ್ಗೀತೆಯಲ್ಲಿ ಒಂದು ಮಾತು ಬರುತ್ತದೆ ಗೊತ್ತುಂಟ. ʻಕರ್ಮಣ್ಣೇ ವಾದಿಕಾರಸ್ತೇ ಮಾ ಫಲೇಷು ಕದಾಚನʼ ಅಂತ. ಅಂದ್ರೆ ಕೆಲ್ಸ ಮಾಡ್ಲಿಕ್ಕೆ ಮಾತ್ರ ನಮಗೆ ಹಕ್ಕುಂಟುಂತೆ. ಅದರ ಪ್ರತಿಫಲವನ್ನು ಕೇಳ್ಲಿಕ್ಕಲ್ಲವಂತೆ. ಹಾಗಾಗಿ ಪಾಠಹೇಳಲು ಮಾತ್ರ ನಾವು ಹಕ್ಕುಳ್ಳವರು. ಪಾಠದ ಪರಿಣಾಮ ಏನು ಅಂತ ಕೇಳೋಕೆ ನಮಗೆ ಹಕ್ಕಿಲ್ಲ. ಸ್ವತಃ ಶ್ರೀಕೃಷ್ಣ ಪರಮಾತ್ಮನೇ ಹಾಗೆ ಹೇಳಿರುವಾಗ ಅದು ಸುಳ್ಳು ಅನ್ನಲಿಕ್ಕೆ ಆಗುತ್ತಾ? ಎಂದು ಅಲ್ಲಿಯೂ ತನ್ನ ಸಂಸ್ಕೃತ ಪ್ರೇಮವನ್ನು ಪ್ರಕಟಿಸಿದ. ಆತ ಏನು ಹೇಳಿದ ಎಂದು ಅವರ್ಯಾರಿಗೂ ಅರ್ಥವಾಗಲಿಲ್ಲ.
ಇನ್ನೂ ಚರ್ಚೆ ಮಾಡುತ್ತಾ ನಿಲ್ಲುವುದರಲ್ಲಿ ಅರ್ಥವಿಲ್ಲವೆಂದು ಭಾವಿಸಿದ ಅವರೆಲ್ಲ, “ಏನಾರ ಕಷ್ಟಾಗ್ಲಿ ನಾವೂ ಕಾನ್ವೆಂಟಿಗೆ ಸೇರುಸ್ತೀವಿ ಟಿಸಿ ಕೊಡಿ” ಎಂದು ಕೇಳತೊಡಗಿದರು. ಆಗ ಹಳ್ಳಿಗಾಡಿನ ಬಡತನದ ಹಿನ್ನಲೆಯಿಂದ ಬಂದಿದ್ದ ಒಬ್ಬಿಬ್ಬರು ಶಿಕ್ಷಕಿಯರಿಗೆ ಮನಸ್ಸು ʼಚುರ್ʼ ಅನ್ನಿಸಿತೋ ಏನೋ, “ನಿಮ್ಮ ಕಷ್ಟ ನಮ್ಗೆ ಅರ್ತ ಆಗುತ್ತೆ. ಆದ್ರೆ ನೀವು ನಮ್ ಕಷ್ಟನೂ ಅರ್ತ ಮಾಡ್ಕಳ್ಳಿ ಬೇಜಾರ್ ಮಾಡ್ಕೋಬೇಡಿ. ನಾವೇನು ನಿಮ್ಮಕ್ಳ ಶತ್ರುಗಳಲ್ಲ. ನಿಮ್ಮಕ್ಕಳಿಗೆ ನಮ್ಗೆ ತಿಳಿದದ್ದು ಸರಿಯಾಗಿ ಕಲಿಸಾಕು ನಮ್ಮನ್ನ ಬಿಡ್ತಿಲ್ಲ. ಯಾರು ಹೇಳಿದಂಗೆ ಕೇಳ್ಬೇಕು ಅನ್ನದ ತಿಳಿವಲ್ದು. ʻಗಂಡನ್ನೂ ಬಿಡಂಗಿಲ್ಲ; ಗಾವುಂಡನ್ನು ಬಿಡಂಗಿಲ್ಲʼ ಅನ್ನಂಗ ಆಗೇತಿ ನಮ್ಮ ಪರಿಸ್ಥಿತಿ. ನಮ್ಗೂ ತಲಿ ಕೆಟ್ ಮಸರ್ ಗಡಿಗಿ ಆಗೇತಿ” ಎಂದು ಅವರನ್ನು ಸಮಾಧಾನ ಮಾಡಿಸುತ್ತಾ ತಮ್ಮ ಸಂಕಟವನ್ನೂ ಹೊರಹಾಕಿದರು. ಅಷ್ಟರಲ್ಲಿ ಬೆಲ್ ಹೊಡೆದಾಗ ಅದುವರೆಗೂ ಯಾವುದೋ ಕ್ಲಾಸಿನಲ್ಲಿ ಪಾಠಮಾಡುತ್ತಾ ಈ ಘಟನೆಯನ್ನು ಕಿಡಕಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಾ ಇದ್ದ, ಕಾನ್ವೆಂಟಿನಲ್ಲಿಯೇ ಓದಿ ಅಲ್ಲಿಯೇ ಒಂದಿಷ್ಟು ವರ್ಷ ಕೆಲಸ ಮಾಡಿಬಂದಿದ್ದ ಇನ್ನಿಬ್ಬರು ಶಿಕ್ಷಕಿಯರು, ಬಳುಕಾಡುತ್ತಾ ಬಂದು, ಈ ಜನರನ್ನು ಸಮಾಧಾನ ಮಾಡುತ್ತಿದ್ದ ಆ ಗ್ರಾಮೀಣ ಸೊಗಡಿನ ಶಿಕ್ಷಕಿಯರಿಗೆ ʻವಾಟ್ ಹೆಪನ್ಡ್ʼ ಎಂದು ಅಪರಿಚಿತರಂತೆ ಕೇಳಿ ವಿಷಯ ತಿಳಿದು, “ವಾಟ್ ಕ್ಯಾನ್ ವಿ ಡೂ? ಇಟ್ಸ್ ನಾಟವರ್ ಫಾಲ್ಟ್. ಇಟ್ಸ ಸಿಸ್ಟಮ್ ಫಾಲ್ಟ್. ವಿ ಆರ್ ಹೆಲ್ಪಲೆಸ್ʼ ಎಂದು ಗಾಳಿಯಲ್ಲಿ ಕೈಯಾಡಿಸಿದರು. ಅದು ಅರ್ಥವಾಗದ ಆ ಗಾರೆ ಕೆಲಸದ ಮಹಿಳೆಯರು ʻಲೆಸ್ ಕುಡಿಯಾಕೆ ನಮ್ಗೇನು ಸುಗರ್ ಇಲ್ಲ ಬಿಡ್ರವ್ವ ನಾಳೆ ಹೆಡ್ಮೇಷ್ಟ್ರು ಬಂದ್ ಮ್ಯಾಲೆ ಟಿಸಿ ಇಸ್ಕಂಡ್ ಹೋಗ್ತೀವಿ” ಎಂದು ತಮ್ಮ ಗಂಡಂದಿರನ್ನು ಕರೆದುಕೊಂಡು ಅಲ್ಲಿಂದ ಹೊರಟರು!
ಶಿಕ್ಷಣದಲ್ಲಿ ಬದಲಾವಣೆಗಳು ಅವಶ್ಯ ಮಾತ್ರವಲ್ಲ ಅನಿವಾರ್ಯ ಕೂಡ ಹೌದು.
ಅದನ್ನು ಯಾರೂ ಅಲ್ಲಗಳೆಯಲಾಗದು. ಆದರೆ ಬದಲಾವಣೆಗಳು ಸುಧಾರಣೆಗೆ ದಾರಿಯಾಗಬೇಕೆ ಹೊರತು ಬದಲಾವಣೆಗಾಗಿ
ಬದಲಾವಣೆಗಳು ಆಗಬಾರದು. ಇದರಿಂದ ಕಲಿಕೆ ಬಲವರ್ಧನೆ ಆಗುವ ಬದಲು ದುರ್ಬಲವಾಗುವುದೇ ಹೆಚ್ಚು. ಹಾಗಾಗಿ
ಯಾವುದೇ ಒಂದು ಬದಲಾವಣೆಗೆ ಕೈಹಾಕುವ ಮೊದಲು ಹತ್ತು ಸಲ ವಿಚಾರಮಾಡಬೇಕು. ಮಕ್ಕಳ ವ್ಯಕ್ತಿತ್ವದ ಮೇಲೆ
ಅದು ಮಾಡುವ ಪರಿಣಾಮದ ಬಗ್ಗೆ ತಜ್ಞರಿಂದ ಪ್ರಾಮಾಣಿಕ ಅಧ್ಯಯನ ನಡೆದು ಅದರ ಸಾಧಕ ಭಾದಕಗಳನ್ನು ಅಂದಾಜುಮಾಡಿಯೇ
ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಚಿಮ್ಮುವ ಚಿಲುಮೆಯಾಗಿರಬೇಕಾದ ತರಗತಿಗಳು ಬತ್ತಿದ ಹಳ್ಳಗಳಾಗುತ್ತವೆ.
ಆ ಮೂಲಕ ನಮ್ಮ ಯೋಜನೆಗಳೂ ಅದೇ ಹಳ್ಳದಲ್ಲಿ ತೇಲಿಹೋಗುತ್ತವೆ. ಈ ಬಗ್ಗೆ ನಮಗೆಲ್ಲರಿಗೂ ಎಚ್ಚರಿಗೆ ಇರಬೇಕಾದದ್ದು
ಅಗತ್ಯ. ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಕವಿತೆಯ ಇನ್ನೊಂದು ನುಡಿಯೊಂದಿಗೆ ಈ ಲೇಖನ ಮುಗಿಸುತ್ತೇನೆ:
ಎಳೆಯ ಮಕ್ಕಳ ಜೀವವ ಹಿಂಡಿ
ಕಲಿಸುವುದಾದರೂ ಏನನ್ನು?
ಕಬ್ಬನು ಒಣಗಿಸಿ ಹಾಲನು ತೆಗೆಯುವ
ಮಬ್ಬುತನವಿದು ಸಾಕಿನ್ನು
*****
ಡಾ. ರಾಜೇಂದ್ರ
ಬುರಡಿಕಟ್ಟಿ
22-07-2025
***************************************************************************************
ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ನೀವು ಅವುಗಳ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಓದಬಹುದಾಗಿದೆ:
ಒತ್ತಿಮಾಡುವ
ಹಣ್ಣು
ಮತ್ತು
ದೇವರ
ಅಂಕಿ
ದರ್ಬಾರು
https://buradikatti.blogspot.com/2024/11/blog-post_17.html
ಶಾಲಾ
ಶಿಕ್ಷಕರ
ರಜಾ
ನಿರಾಕರಣೆಯ
ಸಾಧಕ
ಬಾಧಕಗಳು
https://buradikatti.blogspot.com/2024/11/blog-post.html
ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು
https://buradikatti.blogspot.com/2024/05/blog-post_31.html
ಎಸ್.ಎಸ್.ಎಲ್.ಸಿ ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!
https://buradikatti.blogspot.com/2022/05/blog-post.html
ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:
https://buradikatti.blogspot.com/2020/07/blog-post.html
ʻಅರಮನೆʼಯ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ
https://buradikatti.blogspot.com/2020/07/blog-post_14.html