Thursday, October 15, 2026

ಅರಾವಳಿಯ ಅಪರೂಪದ ಗಿರಿಧಾಮ ಅಬು ಪರ್ವತ

 ಅರಾವಳಿಯ ಅಪರೂಪದ ಗಿರಿಧಾಮ ಅಬು ಪರ್ವತ

ಈ ವರ್ಷದ ರಾಜಸ್ತಾನ ರಾಜ್ಯದ ಪ್ರವಾಸದ ಭಾಗವಾಗಿ ನಾನು ಮೊನ್ನೆ ಮೌಂಟ್‌ ಅಬುವಿಗೆ ಹೋಗಿದ್ದೆ. ಅರಾವಳಿ ಅರಾವಳಿ ಪರ್ವತ ಶ್ರೇಣಿಯಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದು ಕರೆಯಲ್ಪಡುವ ಗುರುಶಿಖರವನ್ನು ಹೊಂದಿರುವ ಈ ಮೌಂಟ್‌ ಅಬು ರಾಜಸ್ಥಾನದ ಏಕೈಕ ಗಿರಿಧಾಮವೂ ಹೌದು. ಅಲ್ಲಿನ ಸುಂದರ ಪರಿಸರದಲ್ಲಿ ಒಂದೆರಡು ದಿನ ಸುತ್ತಾಡುವುದು ನನ್ನ ಉದ್ದೇಶವಾಗಿತ್ತು. ಈ ಬೆಟ್ಟದ ಮೇಲಿನ ಪುಟ್ಟ ಪಟ್ಟಣ ಇರುವುದು ರಾಜಸ್ತಾನದ ಪಶ್ಚಿಮ ತುದಿಯ ಸಿರೋಹಿ ಜಿಲ್ಲೆಯಲ್ಲಿ.

ಮೌಂಟ್‌ ಅಬು ಬೆಟ್ಟದ ಮೇಲೆ ಇರುವ ಕಾರಣ ಅಲ್ಲಿಗೆ ನೇರವಾದ ರೈಲು ಸಂಪರ್ಕವಿಲ್ಲ. ಅಲ್ಲಿಗೆ ರೈಲಿನಲ್ಲಿ ಹೋಗುವವರು ಅಲ್ಲಿಗೆ ಸುಮಾರು ನಲವತ್ತೈದು ಕಿ.ಮೀ. ದೂರದಲ್ಲಿ ಬೆಟ್ಟದ ಕೆಳಗೆ ಇರುವ ಅಬುರೋಡ್‌ ಎಂಬ ಊರಿನವರೆಗೆ ಮಾತ್ರ ರೈಲಿನಲ್ಲಿ ಸಂಚರಿಸಬಹುದು. (ಅಬುರೋಡ್‌ ಎಂಬುದು ರೋಡಿನ ಹೆಸರಲ್ಲ; ಬದಲಾಗಿ ಊರಿನ ಹೆಸರು). ಅಲ್ಲಿಂದ ಬಸ್‌ ನಲ್ಲಿ ಬೆಟ್ಟದ ಮೇಲಿರುವ ಅಬುಪರ್ವತವನ್ನು ತಲುಪಬೇಕು. ನಾನು ಉದಯಪುರದಿಂದ ಮೌಂಟ್‌ ಅಬುವಿಗೆ ಹೋಗಬೇಕಾಗಿತ್ತಾದ್ದರಿಂದ ಮತ್ತು ನನಗೆ ಬೇಕಾದ ಹೊತ್ತಿಗೆ ಸರಿಯಾಗಿ ಅಲ್ಲಿ ರೈಲು ಸಂಪರ್ಕ ಇರಲಿಲ್ಲವಾದ ಕಾರಣ ಉದಯಪುರದಿಂದ ಬಸ್ಸಿನಲ್ಲಿಯೇ ಹೊರಟೆ. ಉದಯಪುರದಿಂದ ಮೌಂಟ್‌ ಅಬುವಿಗೆ ಬಸ್ಸಿನಲ್ಲಿ ಸುಮಾರು ಐದು ಗಂಟೆಗಳ ಪ್ರಯಾಣ.

ಬೆಳಿಗ್ಗೆ ಉದಯಪುರದಿಂದ ರಾಜಸ್ತಾನ ಸರ್ಕಾರದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹೊರಟ ನಾನು  ಮೌಂಟ್‌ ಅಬು ತಲುಪಿದಾದ ಸುಮಮೊದಲ ದಿನ ಮೌಂಟ್‌ ಅಬು ತಲುಪಿದಾಗ ಆಗಲೇ ಮಧ್ಯಾಹ್ನ ಆಗಿದ್ದರಿಂದ ಗೊತ್ತು ಮಾಡಿಕೊಂಡಿದ್ದ ನನ್ನ ರೂಮಿಗೆ ಹೋಗಿ ತುಸುಹೊತ್ತು ವಿಶ್ರಾಂತಿ ಪಡೆದು ಸಂಜೆ ಅಲ್ಲಿನ ಪ್ರಸಿದ್ಧ ಸರೋವರ ನಕ್ಕಿ ಲೇಕ್‌ಗೆ ಸಂಜೆ ಹೋಗಿ ಒಂದಿಷ್ಟು ಹೊತ್ತು ಕಾಲಕಳೆದು ಬರಲು ಮಾತ್ರ ಸಾಧ್ಯವಾಯಿತು. ಹೀಗೆ ಯಾವುದಾದರೂ ಅಪರಿಚಿತ ಪ್ರದೇಶಕ್ಕೆ ಹೋದಾಗ ಸಾಧ್ಯವಿದ್ದರೆ ನಡೆದಾಡಿಕೊಂಡೇ ತಿರುಗುವುದು ನನಗೆ ಪ್ರೀತಿಯ ಹವ್ಯಾಸ.

ನಕ್ಕಿಲೇಕ್‌ ಅಬುಪರ್ವತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸುತ್ತಲೂ ಬೆಟ್ಟಗಳಿಂದ ಆವೃತವಾದ ಈ ಸರೋವರ ನೋಡುಗರ ಮನಸ್ಸನ್ನು ಆಕರ್ಷಿಸುವಂಥದ್ದು. ಈ ಸರೋವರ ಇರುವ ಸ್ಥಳವನ್ನು ʻಗಾಂಧಿ ವಾಟಿಕಾʼ ಎಂದು ಕರೆಯಲಾಗುತ್ತದೆ. ಸರೋವರವನ್ನು ಪ್ರವೇಶಿಸುವಾಗ ಮೊದಲು ನಮಗೆ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಇರುವ ಒಂದು ಚಿಕ್ಕ ಉದ್ಯಾನ ಸಿಗುತ್ತದೆ. ಅದನ್ನು ದಾಟಿ ಮುನ್ನೆಡರೆ ಸಿಗುವುದೇ ವಿಶಾಲವಾದ ಸುಂದರ ನಕ್ಕಿ ಸರೋವರ. ಈ ಸರೋವರದ ಸುತ್ತಲೂ ಸುತ್ತಲು ವಿಶಾಲವಾದ ಮತ್ತು ಟೈಲ್ಸ್‌ಗಳಿಂದ ರಚಿತವಾದ ರಸ್ತೆಯನ್ನು ಮಾಡಿದ್ದಾರೆ. ಈ ದಾರಿಯಲ್ಲಿ ನಡೆಯುತ್ತಾದ ಒಂದು ಸುತ್ತು ಬರುವಾದ ಆ ಸರೋವರ, ಅದರ ಸುತ್ತಣ ಬೆಟ್ಟಗಳ ವಿವಿಧ ಆಯಾಮಗಳ ಚಿತ್ರಗಳು ನಮಗೆ ಸಿಗುತ್ತವೆ. ಈ ಸರೋವರನ್ನು ಒಂದು ಸುತ್ತು ಬರಲು ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷಗಳು ಬೇಕಾಗುತ್ತವೆ. ಸುತ್ತುವಾದ ದಣಿವಾದರೆ ದಣಿವು ನಿರಾರಿಸಿಕೊಳ್ಳಲು ಅಲ್ಲಲ್ಲೆ ಕುಳಿತುಕೊಳ್ಳಲು ಕಲ್ಲುಬೆಂಚುಗಳ ವ್ಯವಸ್ಥೆ ಮಾಡಿದ್ದಾರೆ. ಒಂದಿಷ್ಟುಹೊತ್ತು ಕುಳಿತು ದಣಿವಾರಿಸಿಕೊಂಡು ಮುನ್ನಡೆಯಬಹುದು. ದಣಿದ ದೇಹ ಮನಸ್ಸುಗಳಿಗೆ ಆಲ್ಹಾದವನ್ನು ಉಂಟುಮಾಡಲು ಇಲ್ಲಿ ಎಲ್ಲ ಕಡೆ ಇರುವಂತೆ ದೋಣಿವಿಹಾರ ತಿಂಡಿತಿನಿಸುಗಳ ಏರ್ಪಾಡು ಎಲ್ಲ ಇದೆ. ಮಕ್ಕಳ ಆಟಕ್ಕೆ ಸರೋವರದ ಪಕ್ಕ ರಂಜನಾ ಉದ್ಯಾನ (ಫನ್‌ಪಾರ್ಕ್) ಕೂಡ ಇದೆ.

ವೃದ್ಧತಾಯಿ ಮತ್ತು ಪುಟ್ಟ ಮಗು

ನಾನು ಈ ನಕ್ಕಿ ಲೇಕ್‌ಗೆ ಹೋದಾಗ ಸಂಜೆ ಸೂರ್ಯ ಪಡುವಣದಲ್ಲಿ ಕೆಂಪುಬಣ್ಣಕ್ಕೆ ತಿರುಗಿದ್ದ. ಸರೋವರದ ಪರಿಸರದಲ್ಲಿ ನಾನು ಇದ್ದ ಸಂದರ್ಭದಲ್ಲಿ ನಡೆದ ಎರಡು ಚಿಕ್ಕ ಘಟನೆಗಳನ್ನು ಹೇಳಬೇಕು. ಒಂದು ನಾನು ಈ ಸರೋವರವನ್ನು ಸುತ್ತು ಹಾಕುವಾಗ ದಣಿದು ಅಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಾಗ ನನ್ನ ಪಕ್ಕ ಕಾವೀ ಸೀರೆ ಉಟ್ಟಿದ್ದ ಒಬ್ಬ ಅರವತ್ತರ ಆಸುಪಾಸಿನ ಮಹಿಳೆ ಬಂದು ಕುಳಿತರು. ಮಾತು ಬೆಳೆಯಿತು. ನಾನು ಕರ್ನಾಟಕದಿಂದ ಬಂದಿರುವುದಾಗಿಯೂ ಪ್ರತಿ ವರ್ಷ ಒಂದೊಂದು ರಾಜ್ಯ ಸುತ್ತುವುದು ನನ್ನ ಹವ್ಯಾಸವೆಂದೂ ಅದರ ಭಾಗವಾಗಿ ಈಗ ರಾಜಸ್ತಾನ ಸುತ್ತುತ್ತಿರುವುದಾಗಿಯೂ ಹೇಳಿದೆ. ಇದನ್ನು ಕೇಳಿ ಆಕೆ ಸಂತೋಷಪಟ್ಟಳು ಮತ್ತು ತನ್ನ ಬೆಂಗಳೂರು ಸಂಪರ್ಕದ ಬಗ್ಗೆ ಕೆಲವು ಮಾತುಗಳನ್ನು ನೆನಪು ಮಾಡಿಕೊಂಡು ಹೇಳಿದಳು.

ಅವಳ ಮಾತಿನಿಂದ ಆಕೆ ಒಂದೆಡೆ ನೆಲೆನಿಲ್ಲದ ಸುತ್ತುವ ಸಂತಳೆಂದು ತಿಳಿಯಿತು. ಆಕೆಗೆ ಎಲ್ಲಿಗೋ ಹೋಗಲು ಹಣದ ಅವಶ್ಯಕತೆ ಇತ್ತೇನೋ. ಒಂದಿಷ್ಟು ಹಣದ ಸಹಾಯ ಮಾಡಬಹುದೇ ಎಂದು ಕೇಳಿದಳು. ಪ್ರವಾಸಕ್ಕೆ ಹೋದ ನಾನು ಎಷ್ಟು ತಾನೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಒಂದು ನೂರು ರೂಪಾಯಿ ಅವಳ ಕೈಗೆ ಇಟ್ಟು ಅವಳ ಕಾಲಿಗೆ ನಮಸ್ಕರಿಸಿದೆ. ಊರು ದೂರ ಇರುವುದಾಗಿಯೂ ಇನ್ನಷ್ಟು ಹೆಚ್ಚು ಕೊಡಲು ಸಾಧ್ಯವೇ ಎಂದು ಆಕೆ ಸಣ್ಣದನಿಯಲ್ಲಿ ಕೇಳಿದಳು. ನಾನೂ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. “ನಾನೂ ಊರಿಗೆ ವಾಪಸ್‌ ಹೋಗಬೇಕಲ್ಲ ತಾಯಿ” ಎಂದು ಹೇಳಿಕೊಂಡಾಗ ಅವಳು ಅದನ್ನು ಒಪ್ಪಿ ಆ ನೂರು ರೂಪಾಯಿಯನ್ನೇ ತೆಗೆದುಕೊಂಡು “ಒಳ್ಳೆಯದಾಗಲಿ” ಎಂದು ನನಗೆ ಆಶೀರ್ವದಿಸಿದಳು. ನಾನು ಸರೋವರ ಸುತ್ತಲು ಎದ್ದೆ.

ಇಡೀ ಸರೋವರವನ್ನು ಸುತ್ತುಹಾಕಿಕೊಂಡು ಮುಖ್ಯದ್ವಾರದ ಬಳಿ ಇರುವ ದೋಣಿವಿಹಾರ ಸ್ಥಳಕ್ಕೆ ಬಂದೆ. ದೋಣಿವಿಹಾರ ನೋಡುವುದು ನನಗೆ ಇಷ್ಟ; ಆದರೆ ಮಾಡುವುದಲ್ಲ. ಹಾಗಾಗಿ ಅಲ್ಲಿ ಒಂದೆರಡು ಫೋಟೋ ತೆಗೆದುಕೊಂಡು ದೋಣಿ ವಿಹಾರ ನೋಡುತ್ತಾ ಕುಳಿತಿದ್ದೆ. ಹೀಗೆ ಕುಳಿತಿರುವಾಗ ನನ್ನ ಹತ್ತಿರ ಬಂದ ಚಿಕ್ಕ ಹುಡುಗಿಯೊಬ್ಬಳು ನನಗೆ ಎರಡು ಉಂಡೆಗಳನ್ನು ತೋರಿಸಿ, “ನನಗೆ ಹತ್ತು ರೂಪಾಯಿ ಕೊಡಿ. ಮೀನಿಗೆ ಹಾಕಲು ಈ ಉಂಡೆಗಳನ್ನು ನಿಮಗೆ ಕೊಡುತ್ತೇನೆ.” ಎಂದಳು. ಆ ಹುಡುಗಿ ಹಾಗಂದ ತಕ್ಷಣ ಅವಳ ಮುಖನೋಡಿದೆ. ನನ್ನ ಮೇಷ್ಟ್ರ ಬುದ್ಧಿ ಎಲ್ಲಿ ಹೋಗುತ್ತೆ? “ಏಕೆ ನೀನು ಶಾಲೆಗೆ ಹೋಗಲ್ವೆ?ʼ ಎಂದು ಕೇಳಿಯೇ ಬಿಟ್ಟೆ. “ಹೋಗುತ್ತೇನೆ” ಎಂದಳವಳು. “ಯಾವ ತರಗತಿ ಓದುತ್ತೀಯ?” ಎಂದದ್ದಕ್ಕೆ “ನಾಲ್ಕನೆಯ ತರಗತಿ” ಎಂದೂ ಹೇಳಿದಳು.

ನನ್ನ ದೇಶ ಸುತ್ತಾಟದ ಅನೇಕ ಕಡೆ ಹೀಗೆ ಶಾಲೆಗೆ ಹೋಗಬೇಕಾದ ವಯಸ್ಸಿನ ಮಕ್ಕಳ ಶಾಲೆಗೆ ರಜೆ ಇರುವಾಗ ಕೆಲವು ಸಂದರ್ಭಗಳಲ್ಲಿ ಶಾಲೆ ತಪ್ಪಿಸಿಯೂ ಇಂತಹ ಕೆಲಸಗಳನ್ನು ಮಾಡುವುದನ್ನು ಕಂಡಿದ್ದೇನೆ. ಇದೆಲ್ಲದಕ್ಕೂ ಯಾವಾಗಲೂ ಪಾಲಕರ ಬೇಜವಾಬ್ದಾರಿಯೇ ಕಾರಣವಾಗಿರುವುದಿಲ್ಲ. ನಾನು ಆ ಹುಡುಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವಳ ಅಪ್ಪ-ಅಮ್ಮ, ಅವಳ ಶಾಲೆ ಇವುಗಳ ಬಗ್ಗೆ ತುಸುಹೊತ್ತು ಮಾತನಾಡಿ ಅವಳ ಕೈಯಿಂದಲೇ ಅವಳು ಕೊಡಲು ಬಂದಿದ್ದ ಉಂಡೆಗಳನ್ನು ಅವಳ ಕೈಯಿಂದಲೇ ಮೀನಿಗೆ ಹಾಕಿಸಿ ಅವಳು ಕೇಳಿದ್ದ ಹತ್ತು ರೂಪಾಯಿಗಳನ್ನು ಅವಳಿಗೆ ಕೊಟ್ಟು ಕಳಿಸಿದೆ. ಅವಳ ಮುಖ ಅರಳಿತು. ಪ್ರವಾಸದ ಸಂದರ್ಭಗಳಲ್ಲಿ ಪ್ರಸಿದ್ಧ ಸ್ಥಳಗಳ ವೀಕ್ಷಣೆ ನೀಡುವ ಸಂತೋಷವನ್ನೇ ಇಂತಹ ಚಿಕ್ಕಪುಟ್ಟ ಸಂಗತಿಗಳು ಕೂಡ ನೀಡುತ್ತವೆ.

ಹೊಡೆಯಲು ಸಿಗದ ಗಂಡಸರ ಬೈಕು!

ಮರುದಿನ ಬೆಳಿಗ್ಗೆಯಿಂದ ಇಡೀ ದಿನ ಮೌಂಟ್‌ ಅಬುವಿನ ಪ್ರಮುಖ ಸ್ಥಳಗಳಿಗೆ ಭೇಟಿನೀಡಿ ನೋಡುವ ಉದ್ದೇಶ ಹೊಂದಿದ್ದ ನನಗೆ ಅಲ್ಲಿ ಚಿಕ್ಕ ತೊಂದರೆ ಎದುರಾಯಿತು. ನಾನು ಒಬ್ಬನೇ ಇದ್ದದ್ದರಿಂದ ಟ್ಯಾಕ್ಷಿ ಮಾಡಿಕೊಂಡು ತಿರುಗುವುದು ತುಸು ದುಬಾರಿ ಆಗುತ್ತಿತ್ತು. ಹೀಗೆ ಒಬ್ಬನೇ ಪ್ವವಾಸ ಹೋದಾಗ ಸಾಧ್ಯವಿದ್ದರೆ ನಡೆದಾಡಿಕೊಂಡೇ ತಿರುಗುವುದು ಅಥವಾ ಆಟೋ ಮಾಡಿಕೊಂಡು ತಿರುಗುವುದು ನನ್ನ ಕ್ರಮ. ಆದರೆ ಇಲ್ಲಿ ಇವೆರಡೂ ಸಾಧ್ಯತೆಗಳೂ ಇರಲಿಲ್ಲ. ನಡೆದಾಡಿಕೊಂಡು ತಿರುಗಲು ಮೌಂಟ್‌ ಅಬುವಿನಲ್ಲಿ ನೋಡತಕ್ಕ ಸ್ಥಳಗಳು ಒಂದೇ ಕಡೆ ಇಲ್ಲ. ಇನ್ನು ಎರಡನೇ ಆಯ್ಕೆಯ ಆಟೋ ಎಂದರೆ ಇಡೀ ಮೌಂಟ್‌ ಅಬುವಿನಲ್ಲಿ ಒಂದೇ ಒಂದು ಆಟೋ ಇಲ್ಲ! ಬೆಟ್ಟಗುಡ್ಡಗಳನ್ನು ಹತ್ತುವುದು ಈ ಆಟೋಗಳಿಗೆ ಸಾಧ್ಯವಿಲ್ಲದ ಕಾರಣವಿರಬಹುದು. ಊಬರ್‌ ಅದೂ ಇದು ಏನೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲವೇನೋ?

ಹೀಗಾಗಿ ಇಲ್ಲಿ ತಿರುಗಾಡಬೇಕಾದರೆ ಒಂದು ಬೆಟ್ಟಗುಡ್ಡಗಳನ್ನು ಸರಾಗವಾಗಿ ಹತ್ತಿಳಿಯಬಲ್ಲ ಜೀಪ್‌ (ಇಲ್ಲಿ ಅವೇ ಟ್ಯಾಕ್ಸಿಗಳು) ಬಳಸಬೇಕು. ಇಲ್ಲವೇ ಬಾಡಿಗೆ ಬೈಕ್‌ ಪಡೆದುಕೊಂಡು ಸುತ್ತಬೇಕು. ಇವೆರಡೇ ಆಯ್ಕೆಗಳಿದ್ದ ಕಾರಣ ಮತ್ತು ಒಬ್ಬನೇ ಇದ್ದ ಕಾರಣ ಬಾಡಿಗೆ ಬೈಕ್‌ ಪಡೆಯುವುದನ್ನೇ ನಾನು ಆಯ್ದುಕೊಂಡೆ. ನಾನು ಉಳಿದಿದ್ದ ಕಾಟೇಜ್‌ ಮಾಲಿಕನ ಸಹಾಯದಿಂದ ಇಂತಹ ಒಂದು ಬಾಡಿಗೆ ಬೈಕು ಸಿಕ್ಕಿತು. ನಾನು ಹಿರೋ ಹೊಂಡಾ ಗಾಡಿಯನ್ನು ಸುಮಾರು ಮೂವತ್ತು ವರ್ಷಗಳಿಂದ ಹೊಡೆದವನು. ಸ್ಕೂಟರ್‌ಗಳನ್ನು ಹೊಡೆದಿಲ್ಲ. ಇಲ್ಲಿ ಸ್ಕೂಟರ್‌ ಹೊಡೆಯುವುದು ಕೂಡ ಅನಿವಾರ್ಯವಾಯಿತು.

ಏಕೆಂದರೆ, “ಯಾವುದಾದರೂ ಗಂಡಸರು ಹೊಡೆಯುವ ಗಾಡಿ ಕೊಡಪ್ಪ” ಎಂದು ನಾನು ಕೇಳಿದೆನಾದರೂ, “ಅವು ಯಾವೂ ಇಲ್ಲ ಸಿಗಲ್ಲ ಸರ್‌” ಎಂದು ಬೈಕ್‌ ಅಂಗಡಿಯವನು ಅಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ Active Honda ವನ್ನೇ ಕೊಟ್ಟ. ಅದನ್ನೇ ತೆಗೆದುಕೊಂಡು ನಾನು ಬೆಳಗಿನಿಂದ ಸುತ್ತತೊಡಗಿದೆ. ಹೊರರಾಜ್ಯಗಳ ಪ್ರವಾಸದಲ್ಲಿ ನಾನು ಬೈಕ್‌ ತೆಗೆದುಕೊಂಡು ಸುತ್ತುವುದು ಇಲ್ಲ ಅನ್ನುವಷ್ಟು ಕಡಿಮೆ. ದಾರಿಮೇಲೆ ಗಾಡಿಗಳು ಕೈಕೊಡುವುದು, ಯಾರೋ ಬಂದು ಗುದ್ದುವುದು ಇವೆಲ್ಲ ರಿಸ್ಕ್‌ಗಳನ್ನು ದೂರದ ಊರಲ್ಲಿ ತೆಗೆದುಕೊಂಡು ಗೋಳಾಡುವುದು ಯಾಕೆ ಎಂಬುದು ನನ್ನ ಲೆಕ್ಕಾಚಾರ. ಆದರೆ ಅಂತಹ ರಿಸ್ಕ್‌ ತೆಗೆದುಕೊಳ್ಳುವುದು ಇಲ್ಲಿ ನನಗೆ ಅನಿವಾರ್ಯವಾಯಿತು.

ಅರಾವಳಿ ಪರ್ತತ ಶ್ರೇಣಿಯಲ್ಲಿಯೇ ಅತ್ಯಂತ ಎತ್ತರದ ಶಿಖರವೆಂದು ಕರೆಯಲ್ಪಡುವ ಗಿರಿಶಿಖರಕ್ಕೆ ಭೇಟಿ ನೀಡುವುದು ನನ್ನ ಪ್ರಥಮ ಆದ್ಯತೆ ಆಗಿದ್ದ ಕಾರಣ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಈ ಹಳೆಯ ಸ್ಕೂಟರ್‌ ಹತ್ತಿಕೊಂಡು ಅವನು ಅದರ ಜೊತೆ ಕೊಟ್ಟ ಹಿಂದೆ ಯಾವುದು ಮತ್ತೆ ಮುಂದೆ ಯಾವುದು ಎಂದು ಗೊತ್ತಾಗದ ಸ್ಕೂಟರಿನಷ್ಟೆ ಹಳೆಯದಾದ ಹೆಲ್ಮೆಟ್‌ ಹಾಕಿಕೊಂಡು ಅಲ್ಲಿಗೇ ಹೊರಟೆ. ಸ್ಕೂಟರಿನಲ್ಲಿ ಬೆಳಗಿನ ಎಳೆಯ ಬಿಸಿಲಿನಲ್ಲಿ ದಟ್ಟವಾದ ಅರಣ್ಯದ ಮಧ್ಯೆ ಹಾವುದಾರಿ ಬಳಸಿ ಬೆಟ್ಟ ಏರುವುದು ಒಂದು ರೀತಿಯ ಮಜಾ ಅನ್ನಿಸಿತು. ಈ ಮಜಾದ ಜೊತೆಗೆ ಸಜಾ ಕೂಡ ಇರುತ್ತವಲ್ಲ! ಅಂಥದ್ದೂ ಒಂದು ಎದುರಾಯಿತು.

ದಾರಿಮಧ್ಯೆ ಸ್ಕೂಟರಿನಲ್ಲಿ ಬೆಟ್ಟವನ್ನು ಏರುವ ಸಂದರ್ಭದಲ್ಲಿ ಅತ್ತ ಇತ್ತ ಕಂಡ ಸುಂದರ ದೃಶ್ಯಗಳನ್ನು ಫೋಟೋ ಹೊಡೆದುಕೊಳ್ಳಲೆಂದು ಒಂದುಕಡೆ ಸ್ಕೂಟರ್‌ ನಿಲ್ಲಿಸಿದೆ. ಫೋಟೋ ಏನೋ ತೆಗೆದುಕೊಂಡೆ. ಆದರೆ ಮುಂದೆ ಹೊರಡಲು ಸ್ಕೂಟರ್‌ ಸ್ಟಾರ್ಟ್‌ ಆಗಬಾರದೆ? “ಅಯ್ಯೋ ಶಿವನೆ ಈಗ ಎಂಥ ಮಾಡುವುದಪ್ಪ!” ಎಂದು ದಾರಿಯಲ್ಲಿ ಯಾರಾದರೂ ಬರಬಹುದೇ ಎಂದು ತುಸು ಕಾದೆ. ನಾನು ನಿರೀಕ್ಷಿಸಿದಂತೆ ಯಾವುದೋ ಇನ್ನೊಂದು ಸ್ಕೂಟರಿನಲ್ಲಿ ಮೂವರು ಯುವಕರು ಬರುವುದನ್ನು ಗಮನಿಸಿ ನಾನು ಕೈ ಅಡ್ಡಹಾಕಿ ಅವರನ್ನು ನಿಲ್ಲಿಸಿದೆ. “ಈ ಸ್ಕೂಟರ್‌ ನನಗೆ ಹೊಸದು. ಇದನ್ನು ಹೊಡೆದು ಅಭ್ಯಾಸವಿಲ್ಲ. ಸ್ಟಾರ್ಟ್‌ ಆಗುತ್ತಿಲ್ಲ. ತುಸು ನೋಡುತ್ತೀರಾ?” ಎಂದು ಕೇಳಿದೆ. ಅವರು ತಮ್ಮ ಸ್ಕೂಟರಿನಿಂದ ಇಳಿದು ತಕ್ಷಣ ಸ್ಟಾರ್ಟ್‌ ಮಾಡಿಕೊಟ್ಟರು. ವಾಸ್ತವದಲ್ಲಿ ಸ್ಕೂಟರ್‌ ಏನೂ ಆಗಿರಲಿಲ್ಲ. ನಾನೂ ಸರಿಯಿದ್ದೆ. ಸ್ಕೂಟರ್ರೂ ಸರಿಯಿತ್ತು. ಆದರೆ ನಮ್ಮಿಬ್ಬರ ನಡುವೆ ಪರಿಚಯ ಇಲ್ಲದ್ದರಿಂದ ಹೀಗಾಯಿತು ಅಷ್ಟೆ. ಆ ಹುಡುಗರಿಗೆ ಧನ್ಯವಾದ ಹೇಳಿ ಮುಂದೆ ಹೊರಟೆ.

ಅರಾವಳಿಯ ಗರಿಮೆಯ ಗುರುಶಿಖರ

ಅಂತೂ ಇಂತೂ ಗುರುಶಿಖರಕ್ಕೆ ಬೆಳಗಿನ ಒಂಬತ್ತು ಒಂಬತ್ತೂವರೆ ಹೊತ್ತಿಗೆ ಬಂದು ತಲುಪಿ ಅಲ್ಲಿನ ವಾಹನ ನಿಲ್ದಾಣದಲ್ಲಿ ಬೈಕ್‌ ಪಾರ್ಕ್‌ ಮಾಡಿ ಕತ್ತೆತ್ತಿ ನೋಡಿದೆ. ಶಿಖರ ಇನ್ನೂ ತುಸು ಮೇಲೆ ಇತ್ತು. ಅಲ್ಲಿಯವರೆಗೆ ಮಾತ್ರ ವಾಹನ ಸಂಚಾರವಿದ್ದು ಅಲ್ಲಿಂದ ಮುಂದೆ ಸುಮಾರು ೫೦೦ ಮೆಟ್ಟಿಲುಗಳಲ್ಲಿ ಹತ್ತಿಯೇ ಹೋಗಬೇಕಿತ್ತು. ನಾನು ಈ ಶಿಖರವನ್ನು ಹತ್ತಿರದಿಂದಲೇ ನೋಡಲು ಬಂದವನಾದ್ದರಿಂದ ಮೆಟ್ಟಿಲುಗಳನ್ನು ಹತ್ತುವುದನ್ನು ಕಷ್ಟ ಅಂದುಕೊಳ್ಳಲು ಸಾಧ್ಯವಿರಲಿಲ್ಲ. ಅಷ್ಟಕ್ಕೂ ಬೆಳಿಗ್ಗೆ ಬಿಸಿಲು ಏರುವುದರೊಳಗೆ ಅಲ್ಲಿಗೆ ತಲುಪಿದ್ದೆನಲ್ಲ. ಮೆಟ್ಟಿಲುಗಳನ್ನು ಹತ್ತತೊಡಗಿದೆ. ಈ ಮೆಟ್ಟಿಲುಗಳನ್ನು ಹತ್ತಲು ವ್ಯವಸ್ಥಿತವದ ಮತ್ತು ಸುರಕ್ಷಿತವಾದ ದಾರಿ ಮಾಡಿದ್ದಾರೆ. ಮಾತ್ರವಲ್ಲ ಬೆಟ್ಟದ ತುದಿಯವರೆಗೂ ದಾರಿಯ ಎರಡೂ ಬದಿಯಲ್ಲಿ ಹತ್ತು ಹಲವು ರೀತಿಯ ಅಂಗಡಿಗಳಿವೆ. ದಣಿವು ಆರಿಸಿಕೊಳ್ಳಲು ಹೆಜ್ಜೆಹೆಜ್ಜೆಗೂ ತಂಪು ಪಾನೀಯಗಳು ಆಹಾರ ಪದಾರ್ಥಗಳಿ ಸಿಗುವ ಅಂಗಡಿ ಮುಂಗಟ್ಟುಗಳೂ ಇವೆ. ಇವೆಲ್ಲವನ್ನೂ ನೋಡುತ್ತಾ ನಾನು ಬೆಟ್ಟವನ್ನು ತುದಿಯವರೆಗೂ ಏರಿ ಅಂತೂ ಗುರುಶಿಖರದ ತುದಿಯ ಮೇಲೆ ಹೋಗಿ ನಿಂತೆ.

ಗುರು ಶಿಖರ ಮೌಂಟ್‌ ಅಬು ಪಟ್ಟಣದಿಂದ ಹದಿನೈದು ಕಿಲೋಮೀಟರ್‌ ದೂರದಲ್ಲಿ ಬೆಟ್ಟದ ಮೇಲೆ ಇದೆ. ಸಮುದ್ರಮಟ್ಟದಿಂದ ಸುಮಾರು ೧೭೨೨ ಮೀಟರ್‌ ಅಂದರೆ ೫೬೫೦ ಅಡಿ ಎತ್ತರದಲ್ಲಿರುವ ಮತ್ತು ಅರಾವಳಿ ಅರಾವಳಿ ಪರ್ವತ ಶ್ರೇಣಿಯಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದು ಕರೆಯಲ್ಪಡುವ ಗುರುಶಿಖರ  ಗುರು ದತ್ತಾತ್ರೇಯ ಅವರ ಹೆಸರಿನಿಂದ ಹಾಗೆ ಕರೆಯಲ್ಪಡುತ್ತಿದೆ. ಅಲ್ಲಿ ಗುರು ದತ್ತಾತ್ರೇಯ ಅವರ ಹೆಸರಿನಲ್ಲಿ ಮತ್ತು ಅವರ ತಾಯಿ ಅತ್ರಿ ಮಹರ್ಷಿಗಳ ಹೆಂಡತಿ ಅನಸೂಯ ಅವರ ಹೆಸರಿನಲ್ಲಿ ಗುಹೆಗಳಿವೆ. ಒಂದು ಇಪ್ಪತ್ತು ಮೂವತ್ತು ಮೆಟ್ಟಿಲುಗಳ ಕೆಳಗೆ ಒಂದು ದೇವಾಲಯ ಕೂಡ ಇದೆ. ಬೆಟ್ಟದ ಮೇಲೆ ಒಂದು ಬೃಹತ್‌ ಶಿಲೆಯಿದ್ದು ಇದು ಆಕಾಶಕ್ಕೆ ಮುಖಮಾಡಿ ನಿಂತಿದೆ. ಇದರ ಮುಂದೆ ಒಂದು ದೊಡ್ಡ ಗಂಟೆಯೂ ಇದೆ. ಈ ಗಂಟೆ ಬಾರಿಸಿ ಗುಹೆಯನ್ನು ಸುತ್ತುಹಾಕಿ ಭಕ್ತರು ತಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸುತ್ತಾರೆ.

ಈ ಬೆಟ್ಟದ ತುದಿಯಿಂದ ನೋಡಿದರೆ ಅರಾವಳಿ ಬೆಟ್ಟಸಾಲುಗಳ ಸುಂದರ ದೃಶ್ಯ ಕಣ್ಮನಗಳನ್ನು ತಣಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿ ಕೇಂದ್ರ ಸರ್ಕಾರದ ಪಿ. ಆರ್.‌ ಎಲ್.‌ (Physical Research Laboratory) ಇವರಿಂದ ನಡೆಸಲ್ಪಡುತ್ತಿರುವ ಒಂದು ವೀಕ್ಷಣಾಲಯಇದೆ. ಆಕಾಶ ಅಧ್ಯಯನವಾದ ಕಾರಣದಿಂದ ಇಷ್ಟೊಂದು ಎತ್ತರದ ಬೆಟ್ಟದಲ್ಲಿ ಅದನ್ನು ಸ್ಥಾಪಿಸಿದ್ದಾರೆ. ಆದರೆ ಅದಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲವಾಗಿ ನಾನು ಅದರ ಒಳಗೆ ಹೋಗದೆ ಬೆಟ್ಟದ ತುದಿಯಿಂದಲೇ ಅದರ ಫೋಟೋ ತೆಗೆದುಕೊಂಡು ಅಲ್ಲಿಂದ ಕೆಳಗಿಳಿಯತೊಡಗಿದೆ. ಈ ಬೆಟ್ಟ ನೋಡಲು ಬಹಳ ಚೆನ್ನಾಗಿದೆಯಾದರೂ ಅದರ ತುದಿಯಲ್ಲಿ ಪವಿತ್ರ ಗವಿಯ ಪಕ್ಕದಲ್ಲಿಯೇ ತಿಂಡಿ ತಿನಿಸುಗಳ ಅಂಗಡಿ ಮುಂತಾದವುಗಳನ್ನು ಇಡಲು ಅವಕಾಶ ಮಾಡಿಕೊಟ್ಟದ್ದು ಸರಿ ಅನ್ನಿಸಲಿಲ್ಲ. ಅವನ್ನು ತುಸು ಅಂತರದಲ್ಲಿ ಕೆಳಗೆ ಮಾಡಬಹುದಿತ್ತು. ಇವು ಆ ಬೆಟ್ಟದ ಪ್ರಶಾಂತತೆಗೆ ಮಾತ್ರವಲ್ಲ ಸ್ವಚ್ಚತೆಯ ಮತ್ತು ಶುಭ್ರತೆಗೂ ಧಕ್ಕೆ ತಂದಿವೆ ಅನ್ನಿಸಿತು.

ಮನಸ್ಸಿಗೆ ತಂಪು ನೀಡುವ ಶಾಂತಿವನ

ಬೆಟ್ಟದಿಂದ ಕೆಳಗಿಳಿಯುವಾದ ಮಾರ್ಗಮಧ್ಯದಲ್ಲಿಯೇ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪೀಸ್‌ ಪಾರ್ಕ್‌ ಸಿಕ್ಕಿತು. ಅಬುಪರ್ವದಲ್ಲಿನ ಈ ವಿಶ್ವವಿದ್ಯಾಲಯದ ಕೇಂದ್ರಯ  ಕಛೇರಿಗೆ ಹೋಗುವುದೂ ನನ್ನ ಯೋಜನೆಯ ಭಾಗವಾಗಿತ್ತು ಅಲ್ಲಿಗೆ ಹೋಗುವ ಮೊದಲು ಸಿಕ್ಕ ಈ ಪಾರ್ಕ್‌ ನಾನು ಹೋದಾಗ ಇನ್ನೊಂದು ಗಂಟೆಯಲ್ಲಿ ಮುಚ್ಚುವರದಲ್ಲಿತ್ತು. ತಕ್ಷಣ ಒಳಗೆ ಹೋದೆ. ಅಲ್ಲಿನ ವ್ಯವಸ್ಥಾಪಕ ಮಹಿಳೆಯೊಬ್ಬರು ನನ್ನನ್ನುಇತರೆ ಪ್ರವಾಸಿಗರೊಂದಿಗೆ ಒಂದು ವಿಶಾಲವಾದ  ಕೊಠಡಿಗೆ ಕರೆದೊಯ್ದು ಕೇಂದ್ರದ ವಿಚಾರಗಳನ್ನು ಹೇಳತೊಡಗಿದರು. ನಾವು ಕುಳಿತು ಕೇಳತೊಡಗಿದೆವು.

ಆದರೆ ಅವರು ಹೇಳಿ ಮುಗಿಸುವುದರೊಳಗೆ ನನ್ನ ಜೊತೆಗಿದ್ದ ಇತರರು ಒಬ್ಬೊಬ್ಬರೇ ಎದ್ದೆದ್ದು ಹೋದರು. ಅವರು ಹೇಳಿ ಮುಗಿಸುವವರೆಗೆ ಕುಳಿತವನು ನಾನು ಮಾತ್ರ. ನಾನು ಅವರ ಆ ವಿಚಾರಗಳನ್ನು ಹಿಂದಿನ ದಿನ ಸಂಜೆ ಲಕ್ಕಿ ಲೇಕ್‌ ಬಳಿಯ ಅವರ ಇನ್ನೊಂದು ಕೇಂದ್ರಕ್ಕೆ ಹೋದಾಗ ಕೇಳಿದ್ದೆ. ಅಲ್ಲಿ ಕೇಳಿದ್ದೇನೆಂದು ಇಲ್ಲಿ ಹೇಳುವಾಗ ಎದ್ದು ಹೋಗುವುದು ಸಭ್ಯತೆ ಆಗುವುದಿಲ್ಲ ಅನಿಸಿತು. ಒಬ್ಬ ಪಾಠ ಮಾಡುವ ಶಿಕ್ಷಕನಾಗಿ, ಭಾಷಣಕಾರನಾಗಿ, ಪಾಠ ಮಾಡುವಾಗ ಅಥವಾ ಭಾಷಣ ಮಾಡುವಾಗ ಯಾರಾದರೂ ಆಸಕ್ತಿಯಿಲ್ಲವೆಂದು ಎದ್ದು ಹೋದರೆ ಮಾಡುವವರ ಮನಸ್ಸಿಗೆ ಹೇಗನ್ನಿಸುತ್ತದೆ ಎಂಬುದು ನನಗೆ ತೀರಾ ಪರಿಚಯವಿರುವಂಥದ್ದು. ಹಾಗಾಗಿ ಅವರು ಹೇಳಿ ಮುಗಿಸುವವರೆಗೂ ನಾನು ಕುಳಿತಿದ್ದೆ ಮಾತ್ರವಲ್ಲ; ಅವರ ವಿಷಯವನ್ನು ಎಂದೂ ಕೇಳಿಯೇ ಇಲ್ಲವೇನೋ ಅನ್ನುವಂತೆ ಆಸಕ್ತಿಯಿಂದ ಕೇಳಿದೆ ಕೂಡ.

ಅವರ ವಿಚಾರವನ್ನು ಕೇಳಿಕೊಂಡು ಪಾರ್ಕನ ಇನ್ನೊಂದು ವಿಶಾಲವಾದ ಬಿಡಾರದ ಒಳಗೆ ಹೋದೆ. ಅಲ್ಲಿ ಅವರ ವಿಚಾರವನ್ನು ಬಿಂಬಿಸುವ ಹತ್ತು ಹಲು ಚಿತ್ರಗಳು ಮೂರ್ತಿಗಳು ಇತ್ಯಾದಿ ಇವೆ.   ಇಲ್ಲಿರುವ ಇನ್ನೊಂದು ವಿಶೇಷ ವೆಂದರೆ ಭಾರತ ಸಂಸ್ಕೃತಿಯಲ್ಲಿ ಹೇಳಲಾಗುವ ಎಲ್ಲ ಹದಿನಾರು ಜೋತಿರ್ಲಿಂಗಗಳನ್ನೂ ಇಲ್ಲಿ ಸ್ಥಾಪಿಸಿ ನೋಡಲು ನಮಗೆ ಸಿಗುವಂತೆ ಮಾಡಿದ್ದಾರೆ. ಇವನ್ನು ನೋಡಿಕೊಂಡು ಒಳಗೆ ಹೋದರೆ ವಿಶಾಲ ಕೊಠಡಿಯಲ್ಲಿ ಮಲಗಿರುವ ಬೃಹತ್‌ ಕುಂಭಕರ್ಣನನ್ನು ಎಬ್ಬಿಸಿ ಜಾಗೃತಗೊಳಿಸುವ ಒಂದು ದೃಶ್ಯಾವಳಿಯನ್ನು ಕೂಡ ತೋರಿಸುವ ವ್ಯವಸ್ಥೆ ಇದೆ.

ಇವೆಲ್ಲವನ್ನೂ ನೋಡಿಕೊಂಡು ಹೊರಬಂದು ಅಲ್ಲಿ ಬೆಳಸಿರುವ ಸುಂದರವಾದ ಉದ್ಯಾನದಲ್ಲಿ ಒಂದು ಸುತ್ತು ಹಾಕಲು ಹೋದೆ. ಇಡೀ ಉದ್ಯಾನ ಬಗೆಬಗೆಯ ಹೂವುಗಳಿಂದ ಕಂಗೊಳಿಸುತ್ತಿತ್ತು. ಉದ್ಯಾನದ ಒಂದು ಸ್ಥಳದಲ್ಲಿ ʻಓಂʼ ಎಂಬ ಸಂಸ್ಕೃತ ಅಕ್ಷರವನ್ನು ಸಿಮೆಂಟಿನಲ್ಲಿ ಬೃಹತ್‌ ಆಕಾರದಲ್ಲಿ ಸ್ಥಾಪಿಸಿದ್ದಾರೆ. ಒಟ್ಟಾರೆ ಈ ಕೇಂದ್ರದಲ್ಲಿ ಸುತ್ತಾಡುವುದು ಮನಸ್ಸಿಗೆ ಆಲ್ಹಾದವನ್ನುಂಟುಮಾಡುವುದಂತೂ ಸುಳ್ಳಲ್ಲ.

ಕಲಾಪ್ರತಿಭೆಯ ವ್ಯಾಕ್ಸ್‌ ಮ್ಯೂಜಿಯಂ ಮತ್ತು ವೈಭವದ ಜೈನಮಂದಿರ

ಬೆಟ್ಟವನ್ನು ಇಳಿಯುವಾಗ ಸಿಗುವ ಇನ್ನೊಂದು ಮುಖ್ಯಸ್ಥಳವೆಂದರೆ ʻವ್ಯಾಕ್ಸ್‌ ಸೆಲಿಬ್ರಿಟಿ ಮ್ಯೂಜಿಯಂʼ. ಭಾರತದ ತರುಣ ಇಂಜನಿಯರ್‌ ಒಬ್ಬರ ಇಚ್ಚಾಶಕ್ತಿಯಿಂದಾಗಿ ರೂಪಿತವಾಗಿರುವ ಈ ಮ್ಯೂಸಿಯಂ ವ್ಯಾಕ್ಸ್‌ನಿಂದ ತಯಾರಿಸಲ್ಪಟ್ಟಿರುವ ಭಾರತ ಮತ್ತು ಜಾಗತಿಕ ಮಟ್ಟದ ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳನ್ನು ವ್ಯಾಕ್ಸಿನಲ್ಲಿ ತಯಾರಿಸಿ ನೋಡಲು ಇಟ್ಟಿರುವ ಒಂದು ವಸ್ತುಸಂಗ್ರಹಾಲಯ. ಇವು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ ಒಟ್ಟಾರೆಯಾಗಿ ಸೆಲಿಬ್ರಿಟಿಯಾಗಿರುವ ಎಲ್ಲ ವ್ಯಕ್ತಿಗಳ ಮೂರ್ತಿಗಳನ್ನು ಒಳಗೊಂಡಿವೆ. ಭಾರತದ ವಿವಿಧ ಕ್ಷೇತ್ರಗಳ ಸೆಲಿಬ್ರಿಟಿಗಳಾದ ಮತ್ತು ಪ್ರಸಿದ್ಧ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ, ರವೀಂದ್ರ ನಾಥ ಟ್ಯಾಗೋರ್‌, ಎ ಪಿ ಜೆ ಅಬ್ದುಲ್‌ ಕಲಾಂ, ನರೇಂದ್ರ ಮೋದಿ, ರವಿಶಂಕರ್‌ ಗುರೂಜಿ, ಪಟೇಲ್‌, ನೆಹರೂ, ವಾಜಪೇಯಿ, ಮೊಹಮ್ಮದ್‌ ರಫಿ, ಎಂ ಎಸ್.‌ ದೋನಿ, ಇವರುಗಳ ಜೊತೆಗೆ ಜಾಗತಿಕ ಮಟ್ಟದ ಸೆಲಿಬ್ರಿಟಿಗಳಾದ ಚಾರ್ಲಿ ಚಾಪ್ಲಿನ್‌, ಅಬ್ರಹಾಂ ಲಿಂಕನ್‌, ಐನ್‌ಸ್ಟೀನ್‌ ಮುಂತಾದವರೂ ಇಲ್ಲಿ ಸ್ಥಾನ ಪಡೆದಿದ್ದು ಈ ಮೂರ್ತಿಗಳು ಜೀವತಳೆದಂತೆ ತೋರುವ ಮೂಲಕ ನೋಡಲು ಖುಷಿ ಕೊಡುತ್ತವೆ.

ಬೆಟ್ಟದಿಂದ ಇಳಿದು ಮೌಂಟ್‌ ಅಬು ಪಟ್ಟಣಕ್ಕೆ ಬರುವ ಮಾರ್ಗದಲ್ಲಿಯೇ ದಿಲ್‌ವಾಡ ಎಂಬ ಊರು ಸಿಗುತ್ತದೆ. ಅಲ್ಲಿ ಪ್ರಸಿದ್ಧವಾದ ಜೈನ ಮಂದಿಗಳ ಒಂದು ಆವರಣವಿದೆ. ಅಲ್ಲಿಗೆ ಬೆಟ್ಟಕ್ಕೆ ಹೋಗಿ ಬರುವವರು ಅವಶ್ಯವಾಗಿ ಇಲ್ಲಿನ ದೇವಾಲಯ ಆವರಣಕ್ಕೆ  ಭೇಟಿ ನೀಡಬೇಕು. ಈ ಆವರಣದಲ್ಲಿ ಸುಮಾರು ಮೂರು-ನಾಲ್ಕು ಬೃಹತ್‌ ಆದ ದೇವಾಲಯಗಳಿದ್ದು ಐದಾರು ಚಿಕ್ಕಪುಟ್ಟ ಮಂದಿರಗಳಿವೆ. ಇವೆಲ್ಲವೂ ಜೈನಧರ್ಮದ ವಿವಿಧ ತೀರ್ಥಂಕರರ ಹೆಸರಿನಲ್ಲಿರುವ ಮಂದಿರಗಳು. ದೊಡ್ಡ ದೇವಾಲಯಗಳ ಗರ್ಭಗುಡಿಯ ಭಾಗಗಳು ಕಪ್ಪುಶಿಲೆಯಿಂದ ಕೂಡಿವೆ. ಅವುಗಳ ಹಜಾರಗಳು ಮಾತ್ರ ಬಿಳಿ ಹಾಗೂ ಹಳದಿ ಬಣ್ಣದ ಬೆಲೆಬಾಳುವ ಅಮೃತಶಿಲೆಗಳಿಂದ ಕೂಡಿದ ಅಲಂಕೃತ ಕಂಬಗಳಿಂದ ರಾರಾಜಿಸುತ್ತವೆ. ಈ ಕಂಬಗಳು ಮತ್ತು ಮೇಲ್ಚಾವಣಿಗಳು ಭಾರತೀಯ ಪುರಾಣ, ಚರಿತ್ರೆ, ಜೈನಸಂಪ್ರದಾಯ ಇತ್ಯಾದಿಗಳಿಗೆ ಸಂಬಂಧಿಸಿ ಅನೇಕ ಚಿತ್ರಾವಳಿಗಳಿಂದ ಕೂಡಿದ್ದು ಅವು ತಮ್ಮ ಕಲಾ ಶ್ರೀಮಂತಿಕೆಯಿಂದ ವಿಜೃಂಭಿಸುತ್ತಿವೆ.

ಇವೆಲ್ಲವನ್ನೂ ನೋಡುವುದರೊಳಗೆ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲಿಯೇ ದಿಲ್ವಾರದಲ್ಲಿ ಹೊಟೆಲ್‌ ಒಂದರಲ್ಲಿ ಊಟ ಪೂರೈಸಿದೆ. ಇನ್ನು ಮೌಂಟ್‌ ಅಬುವಿನಲ್ಲಿ ನಾನು ಹೋಗಲೇಬೇಕಾದ್ದು ಒಂದು ಪ್ರಮುಖ ಸ್ಥಳವಿತ್ತು. ಅದೆಂದರೆ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಇರುವ ಆವರಣ. ಅದಕ್ಕಾಗಿ ಬೇಗ ಬೇಗ ಊಟ ಪೂರೈಸಿ ಸ್ಕೂಟರ್‌ ಸ್ಟಾರ್ಟ್‌ ಮಾಡಿದೆ.

ಧರ್ಮಗಳ ಎಲ್ಲ ಮೀರಿದ ಅಧ್ಯಾತ್ಮಿಕತೆ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ

ಭಾರತದ ಬಹುತೇಕ ಎಲ್ಲ ತಾಲ್ಲೂಕು ಕೇಂದ್ರಗಳು ಒಳಗೊಂಡಂತೆ ದೇಶದಾದ್ಯಂತ ಸುಮಾರು ಐದು ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಬ್ರಿಟನ್‌ ಅಮೇರಿಕ ಸೇರಿದಂತೆ ಪ್ರಪಂಚದ ಸುಮಾರು ನೂರಾ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಪ್ರಪಂಚದ ಬಹುಮುಖ್ಯ ಆಧ್ಯಾತ್ಮಿಕ ವಿದ್ಯಾಬೋಧನಾ ಸಂಸ್ಥೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ. ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಹೀಗೆ ಯಾವುದಾದರೂ ಒಂದು ಧರ್ಮವನ್ನು ಹಿಡಿದುಕೊಂಡು ಆಧ್ಮಾತ್ಮದ ಹೆಸರಿನಲ್ಲಿ ಧರ್ಮವನ್ನು ಬೋಧಿಸುವ ಅನೇಕ ಸಂಘ ಸಂಸ್ಥೆಗಳು ನಮ್ಮಲ್ಲಿ ಇವೆ. ಆದರೆ ಎಲ್ಲ ಧರ್ಮಗಳ ಎಲ್ಲೆಗಳನ್ನು ಮೀರಿ ಶುದ್ಧ ಆಧ್ಯಾತ್ಮಿಕತೆಯನ್ನು ಬೋಧಿಸುವುದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿಶೇಷತೆ.


ಮೌಂಟ್‌ ಅಬುಗೆ ಹೋಗಿ ಈ ವಿಶ್ವವಿದ್ಯಾಲಯದ ಆವರಣಕ್ಕೆ ಹೋಗಿಬರದಿದ್ದರೆ ನನ್ನ ಮೌಂಟ್‌ ಅಬು ಪ್ರವಾಸ ಅಪೂರ್ಣವೇ ಆಗುತ್ತಿತ್ತಾದ್ದರಿಂದ ಅಲ್ಲಿಗೆ ಹೋಗುವುದನ್ನು ನಾನು ಆದ್ಯತೆ ಮೇಲೆ ಗುರುತಿಸಿಕೊಂಡಿದ್ದೆ. ಅಬು ಪರ್ವತದ ದಟ್ಟ ಕಾಡಿನ ಮಧ್ಯೆ ಶಾಂತ ಪರಿಸರದಲ್ಲಿರುವ ವಿಶಾಲವಾದ ಈ ಆವರಣಕ್ಕೆ ನಾನು ಹೋದಾಗ ಮಧ್ಯಾಹ್ನ ಎರೆಡೂವರೆ ಆಗಿತ್ತು. ಯಾರೇ ಈ ಆವರಣಕ್ಕೆ ಬರಲಿ ಆವರನ್ನು ಪ್ರೀತಿಯಿಂದ ಸ್ವಾಗತಿಸಿ ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪರಿಚಯ ಮಾಡಿಕೊಡುವ ವ್ಯವಸ್ಥೆ ಇಲ್ಲಿದೆ. ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಶ್ವೇತ ವಸ್ತ್ರಧಾರಿಣಿಯಾದ ಸ್ವಾಗತಕಾರಿಣಿ ನಾನು ದೂರದ ಕರ್ನಾಟಕದಿಂದ ಬಂದದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿ, 'ನಾನು ಇಂಗ್ಲೀಷಿನಲ್ಲೇ ಹೇಳಬೇಕೇ ಅಥವಾ ಹಿಂದಿ ನಡೆಯುತ್ತದೆಯೇ' ಎಂದು ತುಸು ಸಂಕೋಚದಿಂದ ಕೇಳಿದಳು.

ಅವಳಿಗೆ ಇಂಗ್ಲೀಷು ಅಷ್ಟು ಚೆನ್ನಾಗಿ ಬರೆಯುತ್ತಿರಲಿಲ್ಲ. ದಕ್ಷಿಣದ ರಾಜ್ಯಗಳ ಜನರಿಗೆ ಹಿಂದಿ ಚೆನ್ನಾಗಿ ಬರುವುದಿಲ್ಲ ಅವರು ಇಂಗ್ಲಿಷ್ ಪ್ರವೀಣರು ಎಂಬುದು ಉತ್ತರದ ರಾಜ್ಯಗಳಲ್ಲಿ ಜನರ ಸಾಮಾನ್ಯ ಭಾವನೆ. ಅವಳ ಸಂಕೋಚವನ್ನು ಅರ್ಥಮಾಡಿಕೊಂಡ ನಾನು, ಪರವಾಗಿಲ್ಲ ಹಿಂದಿಯಲ್ಲಿಯೇ ಹೇಳಿ ಎಂದೆ. ಅವಳು 'ಮುಜೆ ಇಂಗ್ಲಿಷ್ ತೊಡಾ ತೊಡಾ ಆತಾ ಹೈ' ಎಂದಾಗ ಆಕೆಯ ಸಂಕೋಚವನ್ನು ನಿವಾರಿಸಲಿಕ್ಕೆಂದೇ ನಾನೂ ಕೂಡ, "ಕೋಯಿ ದಿಕ್ಕತ್ ನಹಿ. ಮುಜೆಬಿ ಹಿಂದಿ ತೋಡಾ ತೊಡಾ ಆತಾ ಹೈ" ಎಂದು ಒಂದು ಸಣ್ಣ ಸುಳ್ಳು ಹೇಳಿ ಅವಳ ಮುಜುಗರ ಹೋಗಲಾಡಿಸಿದೆ. ಏಕೆಂದರೆ ಯಾರಾದರೂ ತಮ್ಮಲ್ಲಿ ಏನೋ ಒಂದು ಕೊರತೆ ಇದೆ ಎಂದು ನಮ್ಮ ಮುಂದೆ ಸಂಕೋಚಪಡುವಾಗ ನಾವು ಕೂಡ ನಮ್ಮಲ್ಲಿಯೂ ಒಂದು ಕೊರತೆ ಇದೆ ಎಂದು ಹೇಳಿದರೆ ಅವರಿಗೆ ಸಮಾಧಾನ ಸಂತೋಷ ಆಗುತ್ತವೆ. ಇದು ಮನುಷ್ಯ ಸ್ವಭಾವ. ನನ್ನ ಮಾತು ಕೇಳಿ ಅವಳು ಬಾಯ್ತುಂಬ ನಕ್ಕಳು. ಕರೆದುಕೊಂಡು ಹೋಗಿ ಇಡೀ ಆವರಣವನ್ನು ಪರಿಚಯಿಸಿದಳು.

ಇಲ್ಲಿಯೂ ಬಂದವರಿಗೆಲ್ಲ ಅವರ ವಿಚಾರ ಬೋಧನೆ ಮಾಡುವ ವ್ಯವಸ್ಥೆ ಇದೆ. ಈಗಾಗಲೆ ಮೌಂಟ್‌ ಅಬುವಿನಲ್ಲಿ ಇವರದ್ದೇ ಆದ ಎರಡು ಕೇಂದ್ರಗಳಲ್ಲಿ ಈ ಬೋಧನೆಯನ್ನು ನಾನು ಕೇಳಿದ್ದರೂ ಕೂಡ ಇಲ್ಲಿಯೂ ಅದನ್ನು ಬಹಳ ಶ್ರದ್ಧೆಯಿಂದಲೇ ಕೇಳಿದೆ. ಅದಕ್ಕಾಗಿ ನೇಮಿಸಲ್ಪಟ್ಟ ಒಬ್ಬ ತರುಣ ಇದನ್ನು ನನಗೆ ಬಹಳ ಶ್ರದ್ಧೆಯಿಂದಲೇ ಹೇಳಿದ. ನಾವೆಲ್ಲ ಎಲ್ಲ ಧರ್ಮಗಳ ಆಚೆಗೆ ಇರುವ ಪ್ರಜಾಪಿತ ಪರಬ್ರಹ್ಮನ ಮಕ್ಕಳು. ಒಂದು ಕಾಲದಲ್ಲಿ ಎಲ್ಲರೂ ಸುಖ ಸಂತೋಷದಿಂದ ನೆಮ್ಮದಿಯಿಂದ ಬದುಕುತ್ತಿದ್ದ ಈ ಜಗತ್ತು ಇಂದು ಮನುಷ್ಯನ ಅಸುರೀ ಗುಣಗಳಿಂದಾಗಿ ಇಷ್ಟೊಂದು ಕೆಟ್ಟ ಸ್ಥಿತಿಗೆ ತಲುಪಿದೆ. ಮಾನವ ತನ್ನ ಅಸುರೀ ಗುಣಗಳನ್ನು ಕಳೆದುಕೊಂಡು ಪರಬ್ರಹ್ಮನೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮತ್ತೆ ಈ ಕಲಿಯುಗವನ್ನು ಸುಖ ಸಂತೋಷಗಳ ಸುಖಯುಗವನ್ನಾಗಿ ಮಾಡುವುದೇ ಈಶ್ವರೀಯ ವಿಶ್ವವಿದ್ಯಾಲಯದ ಗುರಿ. ಇದು ಅವರ ಬೋಧನೆಯ ಸಾರಾಂಶ.


ಈ ಎಲ್ಲ ವಿಚಾರಗಳನ್ನು ತಿಳಿದುಕೊಂಡು ವಿದ್ಯಾಲಯದ ಪ್ರಧಾನ ಕಟ್ಟಡಗಳ ಆವರಣದಿದ ಹೊರಗೆ ಬಂದು ಪಕ್ಕದಲ್ಲಿಯೇ ಇದ್ದ ಸುಂದರ ಮತ್ತು ಶಾಂತವಾದ ಉದ್ಯಾನದಲ್ಲಿ ಹೋಗಿ ಸುತ್ತಾಡಿ ಒಂದಿಷ್ಟು ಹೊತ್ತು ಕಾಲಕಳೆದೆ. ಅಲ್ಲಿ ಕೂಡ ಅಲ್ಲಲ್ಲಿ ಕೃಷ್ಣರಾಧೆ, ಲಕ್ಷ್ಮಿ ಸರಸ್ವತಿ ಸೇರಿದಂತೆ ವಿವಿಧ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತಿ ನಿಲ್ಲಿಸಿದ್ದಾರೆ. ಅರಾವಳಿಯ ಪರ್ವತ ಶ್ರೇಣಿಯ ದಟ್ಟ ಅರಣ್ಯದಲ್ಲಿನ ಪ್ರಶಾಂತ ವಾತಾವರಣದಲ್ಲಿರುವ ಈ ವಿದ್ಯಾಲಯದಲ್ಲಿಒಂದೆರಡು ಗಂಟೆ ಇದ್ದು ಅಲ್ಲಿಂದ ಹೊರಟಾಗ ದೇಹ ಮಾತ್ರವಲ್ಲ ಮನಸ್ಸು ಹೃದಯ ಎಲ್ಲ ತಂಪಾದವು. ಅಬು ಪರ್ವತದ ಭೇಟಿ ಸಾರ್ಥಕ ಎನಿಸಿತು.

ಸಮಯ ಇನ್ನೂ ಒಂದೆರಡು ಗಂಟೆ ಇತ್ತು. ಆದರೆ ಅಬುಪರ್ವತದಲ್ಲಿ ನೋಡಲು ಬಹಳ ಮುಖ್ಯವಾದದ್ದು ಏನೂ ಉಳಿಯಲಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಕಾರಣ ರೂಮಿಗೆ ಹೋಗಿ ಮಾಡುವುದಾದರೂ ಏನನ್ನು ಎಂದು ಮತ್ತೆ ನಿನ್ನೆ ಸಂಜೆ ನೋಡಿಬಂದ ನಕ್ಕಿ ಸರೋವರದ ಕಡೆ ಸ್ಕೂಟರ್‌ ತಿರುಗಿಸಿದೆ. ಆ ಪ್ರಶಾಂತ ಪರಿಸರದಲ್ಲಿ ಎರಡನೆಯ ದಿನ ಸಂಜೆ ಕೂಡ ಒಂದೆರಡು ಗಂಟೆ ಕಳೆದೆ. ಸರೋವರದ ಎಡಭಾಗದಿಂದ ಬೆಟ್ಟವನ್ನು ಮೆಟ್ಟಿಲು ಹತ್ತಿ ಹೋಗಿದ್ದರೆ ಸೂರ್ಯಾಸ್ತವನ್ನು ನೋಡುವ ಒಂದು ಸ್ಥಳ ಇತ್ತು. ಆದರೆ ಇಡೀದಿನ ಸ್ಕೂಟರ್‌ ಹೊಡೆದು ಓಡಾಡಿ ಗುರುಶಿಖರವನ್ನು ಏರಿ ಇಳಿದು ಬಂದದ್ದರಿಂದ ಸಾಕಷ್ಟು ದಣಿವಾಗಿತ್ತು. ಮೇಲಾಗಿ ರಾಜಸ್ತಾನದ ಈ ಪ್ರವಾಸದಲ್ಲಿಯೇ ಬೇರೆ ಬೇರೆ ಕಡೆ ಸೂರ್ಯಾಸ್ತಗಳನ್ನು ನೋಡಿದ್ದೆ. ಹೀಗಾಗಿ ಆಸಕ್ತಿ ಹುಟ್ಟಲಿಲ್ಲ.  ಬೀಸುವ ತಂಪಾದ ಗಾಳಿಗೆ ಮೈಯೊಡ್ಡಿ ಒಂದೆರಡು ಗಂಟೆ  ಕಣ್ಣಮುಂದಿನ ಸುಂದರ ಸರೋವರವನ್ನು ನೋಡುತ್ತಾ ಕುಳಿತು ಪೇಟೆಯಲ್ಲಿ ಸುತ್ತಾಡುತ್ತಾ ರೂಮಿಗೆ ಬಂದುಬಿಟ್ಟೆ.

ಕಾಟೇಜು ಮಾಲಿಕನ ಮದ್ಯ-ಮದಿರೆ ಪುರಾಣ

ಮೌಂಟ್‌ ಅಬು ಪರ್ವತ ಪ್ರವಾಸದ ಅನುಭವದಲ್ಲಿ ಇನ್ನೊಂದು ಸಂಗತಿಯನ್ನು ಹೇಳಬೇಕು. ಅಬು ಪರ್ವತದಲ್ಲಿ ನಾನು ಉಳಿದುಕೊಂಡದ್ದು ಊರ ಅಂಚಿನಲ್ಲಿರುವ ಒಂದು ಕಾಟೇಜಿನಲ್ಲಿ. ನಾಲ್ಕೈದು ಜನ ಹೊರಟಾಗ ದೊಡ್ಡ ಹೊಟೆಲ್‌ನಲ್ಲಿಯೇ ರೂಮು ಬುಕ್‌ ಮಾಡಿದ್ದ ನಾನು ಕೊನೆಗೆ ಅವರೆಲ್ಲ ಬರುವುದಿಲ್ಲ ಎಂತಾಗಿ ನಾನೊಬ್ಬನೇ ಹೊರಡುವುದು ಅಂತಾದಾಗ ಆ ಹೊಟೆಲ್‌ ರೂಮುಗಳನ್ನು ಬುಕ್ಕಿಂಗ್‌ ರದ್ದುಪಡಿಸಿ, ಹೊಸದಾಗಿ ಈ ಕಾಟೇಜ್‌ ಬುಕ್‌ ಮಾಡಿಕೊಂಡಿದ್ದೆ. ಐಶಾರಾಮಿ ಹೊಟೆಲ್‌ಗಳ ಸೌಲಭ್ಯಗಳೂ ಈ ಕಾಟೇಜುಗಳಲ್ಲಿ ಇರುವುದಿಲ್ಲ. ಅವುಗಳಷ್ಟು ದೊಡ್ಡ ಬೆಲೆಯೂ ಇರುವುದಿಲ್ಲ. ಉಳಿದುಕೊಳ್ಳಲಿಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಮಾತ್ರ ಇಲ್ಲಿ ಇರುತ್ತವೆ. ಅಷ್ಟೇ ನನಗೆ ಸಾಕಾಗುತ್ತಿತ್ತಾದ್ದರಿಂದ ಮತ್ತು ಒಬ್ಬನೇ ಇದ್ದದ್ದರಿಂದ ಈ ವ್ಯವಸ್ಥೆ ಮಾಡಿಕೊಂಡಿದ್ದೆ.

ಈ ಕಾಟೇಜ್‌ ಮಾಲಿಕ ಕಾಟೇಜಿನ ಸ್ವಾಗತ ಕೌಂಟರ್‌ ಬಳಿಯೇ ಮಲಗುತ್ತಿದ್ದ. ನಾನು ಹೋದಾಗ ಆತ ಇರಲಿಲ್ಲ. ರೂಮುಗಳಿಗೆ ಬೀಗ ಹಾಕಿರಲಿಲ್ಲ. ನನ್ನಂತೆಯೇ ಉಳಿಯಲು ಬಂದಿದ್ದವರು, “ಅವರು ಹೊರಗೆ ಹೋಗಿದ್ದಾರೆ ಬರುವವರೆಗೆ ಖಾಲಿ ಇರುವ ಯಾವುದಾದರೂ ಒಂದು ರೂಮಿನಲ್ಲಿ ಸಧ್ಯಕ್ಕೆ ಇರಿ” ಎಂದು ಹೇಳಿದರು. ನಾನು ಹಾಗೆಯೇ ಮಾಡಿದೆ. ನಂತರ ಬಂದ ಕಾಟೇಜ್‌ ಮಾಲಿಕ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ ಎಷ್ಟೋವರ್ಷಗಳ ಹಳೆಯ ಸ್ನೇಹಿತನಂತೆ ಮಾತನಾಡತೊಡಗಿದೆ. ನಾನು ಉಳಿದುಕೊಂಡಿದ್ದ ಎರಡೂ ದಿನಗಳ ಸಂಜೆ ನನ್ನನ್ನು ಸ್ನೇಹಿತನಂತೆ ಕೂರಿಸಿಕೊಂಡು ಹರಟೆಹೊಡೆಯತೊಡಗಿದ. ಆತನ ಕೈಯಲ್ಲಿ ಯಾವಾಗಲೂ ಮದ್ಯದ ಗ್ಲಾಸು ಇದ್ದೇ ಇರುತ್ತಿತ್ತು. ಹತ್ತು ಮಾತನಾಡುವುದರೊಳಗೆ ಹದಿನೈದು ಗುಟುಕು ಕುಡಿಯುತ್ತಿದ್ದ. ನನ್ನನ್ನು ಬಹಳ ಪ್ರೀತಿಯಿಂದಲೇ ಕುಡಿಯಲು ಆಮಂತ್ರಿಸಿದ. ಎಂದೂ ಕುಡಿಯದ ನಾನು ಆತನ ಆಮಂತ್ರಣವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಯವಾಗಿ ನಿರಾಕರಿಸಿದೆ. “ಬೀರೂ ಆಗುವುದಿಲ್ಲವೇ? ಎಂದು ಆತ ಕೇಳಿದಾಗ, “ಇಲ್ಲ ನೀರು ಆಗುತ್ತದೆ ಅಷ್ಟೆ” ಎಂದೆ. “ಓ ಮೈ ಗಾಡ್!”‌ ಎಂದು ಆತ ನಶೆಯಲ್ಲಿಯೇ ಆಶ್ಚರ್ಯ ವ್ಯಕ್ತಪಡಿಸಿದ.

ಆತ ಮಾತನಾಡುತ್ತಾ ಮಾತನಾಡುತ್ತಾ ಸ್ನೇಹಿತನಂತೆ ನನ್ನನ್ನು ಭಾವಿಸಿ ನನ್ನ ವೃತ್ತಿ, ಊರು ಕುಟುಂಬ ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡ. ಅದಾದ ಮೇಲೆ ತನ್ನ ವೈಯಕ್ತಿಕ ಜೀವನದ ಕತೆಯನ್ನು ಹೇಳತೊಡಗಿದ. ಆತನಿಗೆ ಹೆಂಡತಿ ಅಲ್ಲದೇ ಮೂರು ಜನ ಗರ್ಲ್‌ ಪ್ರಂಡ್ಸ್‌ ಇದ್ದಾರಂತೆ. ಒಬ್ಬಳಂತೂ ಕಳೆದ ಇಪ್ಪತ್ತು ವರ್ಷಗಳಿಂದ ಮದುವೆಯೇ ಆಗದೇ ಇವನಿಗಾಗಿ ಕಾಯುತ್ತಿದ್ದಾಳಂತೆ. ಅವಳನ್ನು ಹೆಂಡತಿ ಇರುವ ಮನೆಗೆ ಕರೆತರುವಂತೆಯೂ ಇಲ್ಲ; ಅಧಿಕೃತವಾಗಿ ಮದುವೆ ಆಗುವಂತೆಯೂ ಇಲ್ಲ. ಹೀಗಾಗಿ ಏನು ಮಾಡುವುದು ಎಂದು ಅವನು ಒದ್ದಾಡುತ್ತಿರುವುದು ಮತ್ತು ಈ ಒದ್ದಾಟದ ಮಾನಸಿಕ ತುಮುಲದಿಂದ ಒಂದಿಷ್ಟು ರಿಲ್ಯಾಕ್ಸ್‌ ಪಡೆಯಲು ಅವನು ಕುಡಿತದ ಚಟಕ್ಕೆ ಬಿದ್ದಿರುವುದು ನನಗೆ ತಿಳಿಯಿತು.



ಮಾತಿನ ಮಧ್ಯೆ ಆತ ಸ್ವಾಭಾವಿಕವಾಗಿ, “ನಿಮಗೆ ಎಷ್ಟು ಜನ ಗರ್ಲ್‌ ಫ್ರೆಂಡ್ಸ ಇದ್ದಾರೆ?” ಎಂದೂ ಕೇಳಿದ. “ನನಗೆ ಒಬ್ಬ ಹೆಂಡತಿ ಬಿಟ್ಟರೆ ಮತ್ಯಾರೂ ಇಲ್ಲ.” ಎಂದು ನಾನು ಹೇಳಿದಾಗ ಅವನು ಮತ್ತೊಮ್ಮೆ, “ಓ ಮೈ ಗಾಡ್!”‌ ಎಂದು ಮತ್ತೊಂದು ಗುಟುಕು ಹೀರುತ್ತಾ ಉದ್ಧರಿಸಿಬಿಟ್ಟ. ಬಹುಶಃ  ಪ್ರಪಂಚದಲ್ಲಿ ಎಲ್ಲಾ ಗಂಡಸರೂ ಅವನಂತೆ ಮೂರು ಅಲ್ಲದಿದ್ದರೂ ಒಬ್ಬಿಬ್ಬರನ್ನಾದರೂ ಹೀಗೆ ಗರ್ಲ್‌ಫ್ರೆಂಡ್‌ ಅಂತ ಇಟ್ಟುಕೊಂಡಿರುತ್ತಾರೆ ಎಂದು ಅವನು ಭಾವಿಸಿದ್ದ ಎಂದು ಕಾಣುತ್ತದೆ. ಅವನು ಏನು ಮಾಡಬೇಕು ಎಂದು ನನ್ನ ಸಲಹೆ ಕೇಳಿದ. ಹೀಗೆ ಮೂರು ನಾಲ್ಕು ಹೆಂಗಸರನ್ನು ಇಟ್ಟುಕೊಂಡು ನಿಭಾಯಿಸಿ ಅನುಭವ ಇಲ್ಲದ ನಾನು ಅವನಿಗೆ ಹೇಗೆ ತಾನೆ ಉತ್ತಮ ಸಲಹೆ ಕೊಡಲು ಸಾಧ್ಯ? ಆದರೂ ಅನುಭವವಿಲ್ಲದಿದ್ದರೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಅವನನ್ನು ಕೂರಿಸಿಕೊಂಡು ಒಂದೆರಡು ಬುದ್ಧಿ ಮಾತುಗಳನ್ನು ಹೇಳಿದೆ. ನನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವನಾಗಿದ್ದ ಅವನು ನನ್ನ ಮಾತುಗಳನ್ನು ಶ್ರದ್ಧೆಯಿಂದಲೋ ನಶೆಯಿಂದಲೋ ಒಟ್ಟು ಕೇಳಿದ.

“ಯಾವ ಹೆಣ್ಣಿಗೂ ಜೀವನದಲ್ಲಿ ನಾವು ಮೋಸಮಾಡಬಾರದು. ಗಂಡು ಹೆಣ್ಣಿನ ಸಂಬಂಧ ಜೀವನವು ನಮಗೆ ಕೊಡುವ ಅತ್ಯಮೂಲ್ಯ ಸಂತೋಷಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ನಿಮಗೆ ಮದುವೆ ಆಗಿರಬಹುದು. ಆದರೆ ನಿಮಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಇನ್ನೊಬ್ಬ ಹೆಣ್ಣು ಮದುವೆಯೇ ಆಗದೆ ಕಾಯುತ್ತಿದ್ದಾಳೆ ಎಂದರೆ ಏನರ್ಥ? ನಿಮ್ಮ ಹೆಂಡತಿಯಂತೆಯೇ ಅವಳನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಲ್ಲವೇ?, ಅದಕ್ಕಾಗಿ ನೀವು ಏನಾದರೂ ಮಾಡಲೇ ಬೇಕಲ್ಲವೇ?” ಎಂದು ತಿಳಿಹೇಳಿದೆ. “ಹೌದು ಬ್ರದರ್”‌ ಎಂದು ಒಪ್ಪಿಕೊಂಡ ಆತ, “ಬೇರೆ ಒಂದು ಮನೆಮಾಡಿ ಅವಳನ್ನು ಇಡುತ್ತೇನೆ. ಅಲ್ಲಿಗೂ ಇಲ್ಲಿಗೂ ಹೋಗುತ್ತಾ ಬರುತ್ತಾ ಇರುತ್ತೇನೆ” ಎಂದ. “ಅಷ್ಟು ಮಾಡಿ” ಎಂದು ನಾನು ಎದ್ದೆ.


ನಾನು ಕುಡಿಯದಿದ್ದರೂ ಕುಡುಕರು ಹೇಗೆಲ್ಲ ಮಾತನಾಡುತ್ತಾರೆ ಎಂಬುದರ ಅನುಭವ ಇರುವವನು. ಕುಡಿಯುವ ಅವನ ಮುಂದೆ ಕುಡಿಯದೆ ಕೂತು ನಾನು ಅವನ ಕತೆಯನ್ನು ಕೇಳತೊಡಗಿದ್ದೆ. ಇಷ್ಟ ಇದೆಯೋ ಇಲ್ಲವೋ ಬೇರೆ ಪ್ರಶ್ನೆ. ಆದರೆ ಕುಡುಕರು ಏನಾದರೂ ಹೇಳತೊಡಗಿದರೆ ಅವರು ಹೇಳಿ ಮುಗಿಸುವವರೆಗೂ (ಅವರು ಬೇಗ ಮುಗಿಸುವುದಿಲ್ಲವೆಂಬುದೂ ನಿಜ) ಕೇಳದಿದ್ದರೆ ಅಥವಾ ಅವರು ಭಾವಪರವಶರಾಗಿ ಮಾತನಾಡುವಾಗ ದಿಢೀರನೆ ನಾವು ಎದ್ದರೆ ಅವರಿಗೆ ಕೋಪ ಬರುತ್ತದೆ. ಸಮಯ ನೋಡಿ ನಿಧಾನವಾಗಿ ಅವರಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ನಾನು ಇದೇ ತಂತ್ರವನ್ನು ಇಲ್ಲಿಯೂ ಅನುಸರಿಸಿದೆ.

ಅವನಿಗೆ ಸಮಾಧಾನ ಆಗುವಂತೆ ಒಂದಿಷ್ಟು ಹೊತ್ತು ಆಲಿಸಿ ಕೆಲವು ಸಲಹೆ ನೀಡಿ ಅವನ ಮನಸ್ಸನ್ನು ಗೆದ್ದು, “ಆಯಾಸವಾಗುತದೆ ಮಲಗಲೇ? ಎಂದು ಕೇಳಿದಾಗ ಅವನೇ, “ಎಸ್‌ ಎಸ್‌ ಐ ಡಿಸ್ಟರ್ಬ್ಡ್‌ ಯು; ಸಾರಿ ಫಾರ್‌ ದ ಸೇಮ್”‌ ಎಂದು ನನ್ನನ್ನು ಮಲಗಲು ಬೀಳ್ಕೊಟ್ಟ. ಇಡೀ ರಾತ್ರಿ ತಿರುಗಾಟದ ಕಾರಣದಿಂದ ಕಣ್ತುಂಬ ನಿದ್ದೆಮಾಡಿ ಬೆಳಿಗ್ಗೆ ಅದೇ ಸ್ಕೂಟರ್‌ ತೆಗೆದುಕೊಂಡು ಲಗೇಜ್‌ ಸಮೇತ್‌ ಬಸ್‌ ನಿಲ್ದಾಣ ತಲುಪಿ ಅಲ್ಲಿ ಸ್ಕೂಟರ್‌ ಇಟ್ಟು ಪಕ್ಕದ ಹೊಟೆಲ್‌ ಒಂದರಲ್ಲಿ ಕೀ ಕೊಟ್ಟು ನನ್ನ ಮುಂದಿನ ಪ್ರವಾಸೀ ತಾಣವಾದ ಜೋಧಪುರಕ್ಕೆ ಬಸ್‌ ಹತ್ತಿದೆ. ಎರಡು ದಿನಗಳ ಮೌಂಟ್‌ ಅಬು ಪ್ರವಾಸದ ಅನುಭವ ನನ್ನ ರಾಜಸ್ತಾನದ ಪ್ರವಾಸದ ಅನುಭವವನ್ನು ಶ್ರೀಮಂತಗೊಳಿಸಿತು ಎಂದು ಬೇರೆ ಹೇಳಬೇಕಾಗಿಲ್ಲ.

****

ಡಾ ರಾಜೇಂದ್ರ ಬುರಡಿಕಟ್ಟಿ

೧೪-೧೦-೨೦೨೬

 

 

 

ಪ್ರಾಚೀನ ನವೀನ ಅರಮನೆಗಳ ಜೋಧ್‌ಪುರ

 ಪ್ರಾಚೀನ ನವೀನ ಅರಮನೆಗಳ ಜೋಧ್‌ಪುರ


ಜೋಧ್‌ಪುರ ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಜೈಪುರ, ಉದಯಪುರ ಮತ್ತು ಅಬುಪರ್ವತಗಳ ಪ್ರವಾಸ ಮುಗಿಸಿ ನಾನು ಜೋಧ್‌ಪುರಕ್ಕೆ ಬಂದಾಗ ಆಗಲೇ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಜೋಧ್‌ಪುರ ನೋಡಲು ನನ್ನ ಹತ್ತಿರ ಇದ್ದದ್ದು ಆ ದಿನದ ಮಧ್ಯಾಹ್ನದ ಅರ್ಧದಿನ ಮಾತ್ರ. ಮರುದಿನ ಬೆಳಗಿನ ಆರು ಗಂಟೆಗೇ ನಾನು ಥಾರ್‌ ಮರುಭೂಮಿ ಇರುವ ಜೈಸಲ್‌ಮೇರ್‌ ಕಡೆ ಹೊರಡಬೇಕಿತ್ತು. ಹಾಗಾಗಿ ತಕ್ಷಣ ಒಂದು ಆಟೋ ಮಾಡಿಕೊಂಡು ಈ ಮೂರು ಸ್ಥಳಗಳನ್ನು ನೋಡಲು ಹೊರಟೆ. ಅರ್ಧ ದಿನ ಮಾತ್ರ ಇದ್ದದ್ದರಿಂದ ಅಲ್ಲಿನ ಒಂದು ಪ್ರಮುಖವಾದ ಪ್ರಾಚೀನ ಅರಮನೆ ಕೋಟೆ, ಕ್ಲಾಕ್‌ ಟವರ್‌ ಮತ್ತು ಸ್ಟೆಪ್‌ವೆಲ್‌ ಇವು ಮೂರನ್ನು ಮಾತ್ರ ನೋಡಲು ಯೋಜನೆ ರೂಪಿಸಿಕೊಂಡಿದ್ದೆ. ಅರಮನೆ ಪ್ರವೇಶವು ಸಂಜೆ ಐದು ಗಂಟೆಗೆ ಮುಗಿಯುವುದು ಬೇರೆ ಇತ್ತು.

ಆದರೆ ನನ್ನ ಆಟೋವಾಲ ತಾವು ಇಷ್ಟಪಡುವುದಾದರೆ ಉಳಿದ ಆಕರ್ಷಕ ಸ್ಥಳಗಳನ್ನೂ ನಾನು ತಮಗೆ ತೋರಿಸುತ್ತೇನೆ. ಎಂದು ಹೇಳಿ ನಾನು ಮೇಲೆ ಹೇಳಿದ ಸ್ಥಳಗಳ ಜೊತೆಗೆ ಮತ್ತೆ ಏನನ್ನು ನೋಡಬಹುದು ಎಂಬ ವಿವರಣೆ ನೀಡಿದ. ನನಗೂ ಅದು ಸರಿ ಎನಿಸಿ ಆಗಲಿ ನಡೆ ಎಂದೆ.

ನಾವು ಮೊದಲು ನೋಡಲು ಹೋದದ್ದು ಉಮೇದ್‌ ಭವನ ಪ್ಯಾಲೇಸ್.‌  ಈ ಅರಮನೆ ಜೋದ್‌ಪುರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಈ ಅರಮನೆಯ ವಿಶೇಷತೆ ಏನೆಂದರೆ ಇದು ಭಾರತದ ಅರಮನೆಗಳಲ್ಲಿಯೇ ಅತ್ಯಂತ ಇತ್ತೀಚೆಗೆ ಕಟ್ಟಲ್ಪಟ್ಟ ಕೊನೆಯ ಅರಮನೆ. ಇದಾದ ನಂತರ ಭಾರತದಲ್ಲಿ ಯಾವ ಅರಮನೆಗಳೂ ಕಟ್ಟಲ್ಪಡಲಿಲ್ಲ. ಅಷ್ಟರಲ್ಲಿ ಸ್ವಾತಂತ್ರ್ಯ ಬಂದು ಎಲ್ಲ ರಾಜರ ರಾಜ್ಯಗಳು ಭಾರತ ಒಕ್ಕೂಟದಲ್ಲಿ ಒಂದಾಗಿಬಿಟ್ಟವು. ಅಷ್ಟೇ ಅಲ್ಲ ಮುನ್ನೂರಾ ನಲವತ್ತು ಕೊಠಡಿಗಳನ್ನು ಹೊಂದಿರುವ ಈ ಬೃಹತ್‌ ಅರಮನೆ ಪ್ರಪಂಚದ ಬಹಳ ದೊಡ್ಡದಾದ ಅರಮನೆಗಳಲ್ಲಿ ಕೂಡ ಒಂದು.  ೧೯೧೮ ರಿಂದ ೧೯೪೭ ರವರೆಗೆ ಜೋಧ್‌ಪುರವನ್ನು ಆಳಿದ ಅಲ್ಲಿನ ಕೊನೆಯ ರಾಜ ಉಮೈದ್‌ ಸಿಂಗ್‌ ಈ ಅರಮನೆಯನ್ನು ಕಟ್ಟಿಸಿದ್ದಾರೆ. ೧೯೨೯ ರಿಂದ ೧೯೪೪ ರವರೆಗೆ ಒಟ್ಟು ಹದಿನೈದು ವರ್ಷಗಳ ಕಾಲ ಸುಮಾರು ಮೂರು ಸಾವಿರ ಕಾರ್ಮಿಕರು ದುಡಿದು ಈ ಅರಮನೆ ಕಟ್ಟಿದ್ದಾರಂತೆ.

ಆಗಿನ ಕಾಲದಲ್ಲಿ ಸುಮಾರು ೯೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟಲ್ಪಟ್ಟಿರುವ ಈ ಅರಮನೆಯ ಇನ್ನೊಂದು ವಿಶೇಷತೆ ಏನೆಂದರೆ ಇದು ಇಂದಿನ ಉದ್ಯೋಗ ಖಾತ್ರಿ ಅಂತಹ ಯೋಜನೆಯ ಅಡಿಯಲ್ಲಿ ಕಟ್ಟಲ್ಪಟ್ಟಿರುವುದು! ಆ ಕಾಲದಲ್ಲಿ ಬರಗಾಲ ಬಂದು ಜನರು ಉದ್ಯೋಗ ಸಿಗದೆ ತಿನ್ನಲು ಉಣ್ಣಲು ಪರದಾಡುವಂಥ ಸ್ಥಿತಿ ನಿರ್ಮಾಣವಾದಾಗ ರಾಜ ಉಮೈದ್‌ ಸಿಂಗ್‌ ಉದ್ಯೋಗ ಸೃಷ್ಟಿಸಲು ಕೆರೆಗಳನ್ನು ತೋಡಿಸುವುದು, ಡ್ಯಾಮುಗಳನ್ನು ಕಟ್ಟಿಸುವುದು, ರಸ್ಗೆಗಳನ್ನು ಮಾಡಿಸುವುದು ಮುಂತಾದ ಉದ್ಯೋಗ ಸೃಷ್ಟಿಯ ಕಾರ್ಯಗಳನ್ನು ಕೈಗೆತ್ತಿಕೊಂಡರಂತೆ. ಅದರ ಭಾಗವಾಗಿ ಈ ಅರಮನೆ ಕೂಡ ರೂಪುಗೊಂಡಿದೆ. ಬ್ರಿಟಿಷ್‌ ವಾಸ್ತುಶಿಲ್ಪಿ ಹೆನ್ರಿ ಲಾನ್ಚೆಸ್ಟರ್‌ ಅವರು ವಿನ್ಯಾಸ ಮಾಡಿರುವ ಈ ಅರಮನೆ ರಜಪೂತ ಶೈಲಿ ಒಳಗೊಂಡಂತೆ ಭಾರತ ಮತ್ತು ಪಾಶ್ಚಾತ್ಯ ಸಂಪ್ರದಾಯಗಳು ಮತ್ತು ಜೀವನ ಕ್ರಮವನ್ನು ಪ್ರತಿಬಿಂಬಿಸುತ್ತದೆ. ಇದರ ಅರ್ಧಭಾಗ ಉಮೈದ್‌ ಸಿಂಗ್‌ ಅವರ ಮೊಮ್ಮಗ ಅವರ ನಿಯಂತ್ರಣದಲ್ಲಿದ್ದು ಅದನ್ನು ಈಗ ಪಂಚತಾರಾ ಹೊಟೆಲ್‌ ಆಗಿ ಪರಿವರ್ತಿಸಲಾಗಿದೆ. ಉಳಿದರ್ಧ ಭಾಗ ಮಾತ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.

ಅರಮನೆಯ ಒಳಭಾಗದ ವಸ್ತು ಸಂಗ್ರಹಾಲಯದಲ್ಲಿ ಎಲ್ಲ ಅರಮನೆ ವಸ್ತುಸಂಗ್ರಹಾಲಯಗಳಂತೆ ಆ ರಾಜರು ಬಳಸಿದ ವಸ್ತುಗಳು, ಆಯುಧಗಳು ಇವೆಲ್ಲ ಇವೆಯಾದರೂ ಇಲ್ಲಿರುವ ಪಚ್ಚೆ ಹರಳುಗಳ ಸಂಗ್ರಹ ಮತ್ತು ಗಡಿಯಾರಗಳ ಸಂಗ್ರಹ ಮತ್ತು ಹೊರಭಾಗದಲ್ಲಿರುವ ಕಾರುಗಳ ಸಂಗ್ರಹ ಬಹಳ ವಿಶೇಷವಾಗಿದೆ. ಗಡಿಯಾರಗಳ ಉಗಮ ಕಾಲದಿಂದ ಹಿಡಿದು ಇಂದಿನವರೆಗಿನ ಎಲ್ಲ ಬಗೆಯ ಗಡಿಯಾರಗಳೂ ಇಲ್ಲಿ ನೋಡಲು ಸಿಗುತ್ತವೆ. ಕಾರುಗಳ ಸಂಗ್ರಹದಲ್ಲಿ ಭಾರತಕ್ಕೆ ಕಾರುಗಳು ಬಂದಾಗ ಅವುಗಳು ಹೇಗಿದ್ದವು ಎಂಬುದನ್ನು ಇಲ್ಲಿ ನೋಡಬಹುದು. ೧೯೨೦ರ ಮಾಡೆಲ್‌ ನಿಂದ ಹಿಡಿದು ೧೯೪೭ರ ಮಾಡೆಲ್‌ ವರೆಗೆ ಬಂದ ಎಲ್ಲ ಮಾದರಿಯ ಕಾರುಗಳು ಇಲ್ಲಿದ್ದು ಗಮನ ಸೆಳೆಯುತ್ತವೆ.

ಉಮೈದ್ ಭವನ ಪ್ಯಾಲೇಸ್‌ ನೋಡಿಕೊಂಡು ನಗರದ ಇನ್ನೊಂದು ದಿಕ್ಕಿಗೆ ಇರುವ ಪ್ರಾಚೀನ ಅರಮನೆಯನ್ನು ನೋಡಲು ಹೊರಟಾಗ ದಾರಿಯಲ್ಲಿ ನಮಗೆ ಎರಡು ಸ್ಥಳಗಳು ಸಿಕ್ಕವು. ಅವೆಂದರೆ ಒಂದು ಜೋಧ್‌ಪುರವನ್ನು ಆಳಿದ ಪ್ರಥಮ ರಾಜ ಅಶ್ವಾರೋಹಿಯಾಗಿರುವ ಸ್ಟ್ಯಾಚೂ ಮತ್ತು ರಾಜನ ಸಮಾಧಿ ಸ್ಥಳ. ಇವೆರಡೂ ಪ್ರಾಚೀನ ಅರಮನೆಯ ಹತ್ತಿರದಲ್ಲಿಯೇ ಇದ್ದು ನೋಡಲು ಆಕರ್ಷಕವಾಗಿವೆ. ಸಮಾದಿ ಸ್ಥಳದಲ್ಲಿ ಬೃಹತ್‌ ದೇವಾಲಯ ನಿರ್ಮಾಣವಾಗಿದ್ದು ಬೆಟ್ಟದ ಮೇಲಿರುವ ಇದು ಮತ್ತು ಅದಕ್ಕೆ ಹೊಂದಿಕೊಂಡತೆ ಕೆಳಗೆ ಇರುವ ಕೊಳ ಇವುಗಳು ಅದಕ್ಕೆ ಒಂದು ವಿಶಿಷ್ಟ ಚೆಲುವನ್ನು ನೀಡಿವೆ.

ಅತ್ಯಂತ ಎತ್ತರದ ಪ್ರಾಚೀನ ಅರಮನೆ

ಇವೆರಡನ್ನೂ ನೋಡಿಕೊಂಡು ನಾನು ನನ್ನ ಯೋಜನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಜೋಧ್‌ಪುರದ ಪ್ರಾಚೀನ ಅರಮನೆ ನೋಡಲು ಬಂದಾಗ ಸಂಜೆ ನಾಲ್ಕೂವರೆ ಅಗಿತ್ತು. ಅರಮನೆಯ ಒಳಗೆ ಹೋಗಲೂ ಇನ್ನೂ ಅರ್ಧಗಂಟೆ ಸಮಯ ಇತ್ತು. ಐದಕ್ಕೆ ಒಳಕ್ಕೆ ಹೋಗುವುದು ಕೊನೆಯಾಗುವುದು ನಿಜವಾದರೂ ಒಳಗೆ ಹೋದವರು ಹೊರಗೆ ಬರಲು ಆರು ಆರೂವರೆ ಆಗುತ್ತದೆ. ನಾನು ಟಿಕೆಟ್‌ ಪಡೆದು ಒಳಗೆ ಹೋಗುತ್ತಿದ್ದಂತೆಯೇ ಈ ಅರಮನೆಯ ಎತ್ತರ ನನ್ನ ಕಣ್ಣುಕುಕ್ಕಿತು. ತಲೆ ಎತ್ತಿ ನೋಡಿದರೆ ತಲೆಯ ಮೇಲಿನ ಟೋಪಿ ಕೆಳಗೆ ಬೀಳುವಷ್ಟು ಇದು ಎತ್ತರವಿದೆ. ಇರುವುದೇ ಬೆಟ್ಟದ ಮೇಲೆ. ಅಲ್ಲಿಂದ ಮತ್ತೆ ಇದು ಅಷ್ಟು ಎತ್ತರ ಬೇರೆ!!

ಈ ಇಡೀ ಅರಮನೆಯನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ. ಅಲ್ಲಲ್ಲಿ ಇವುಗಳನ್ನು ನೋಡಿಕೊಳ್ಳಲು ಇರುವವರು ರಾಜಸ್ತಾನಿ ಉಡುಪಿನಲ್ಲಿ ನಮ್ಮ ಗಮನವನ್ನು ಸೆಳೆಯುತ್ತಾರೆ. ಒಳಗೆ ಒಂದು ಪುಟ್ಟ ದೇವಾಲಯ ಸೇರಿದಂತೆ ಅನೇಕ ವಿಭಾಗಳು ಇದ್ದು ಇವೆಲ್ಲವೂ ನೋಡಲು ಆಕರ್ಷಕವಾಗಿವೆ. ರಾಜರ ಉಡುಪುಗಳು, ಆಯುಧಗಳು, ಇತ್ಯಾದಿಗಳ ಜೊತೆಗೆ ೧೮೬೦ರ ವೇಳೆಗೆ ರಚಿತವಾದ ʼಝಾಂಕಿ ಮಹಲ್‌ʼ ಎಂಬ ರಾಜಪರಿವಾರದ ಮಹಿಳೆಯರಿಗಾಗಿಯೇ ಮೀಸಲಾಗಿದ್ದ ವಿಭಾಗವೂ ಇದೆ. ಈ ವಿಭಾಗದಲ್ಲಿರುವ ಮಹಿಳೆಯರು ತಾವು ಹೊರಗೆ ಬರದೇ ಮತ್ತು ಹೊರಗಿನವರಿಗೆ ಕಾಣಿಸದೆಯೇ ಹೊರಗೆ ಎರಡು ಆವರಣಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಅನುಕೂಲವಾಗುವಂತೆ ಇವುಗಳ ವಿನ್ಯಾಸವಿದೆ. ʻಝಾಂಕಿʼ ಅಂದರೇನೆ ಸ್ಥಳೀಯ ಭಾಷೆಯಲ್ಲಿ ಇಣಿಕಿ ನೋಡುವುದುʼ ಎಂದರ್ಥ.

ಈ ಅರಮನೆಯಲ್ಲಿ ಪೂರ್ಣಪ್ರಮಾಣದಲ್ಲಿ ವಾಸವಿದ್ದ ಕೊನೆಯ ರಾಜ ಎಂದರೆ  ಜೋಧ್‌ಪುರವನ್ನು ೧೮೪೩ ರಿಂದ ೭೩ ರವರೆಗೆ ಆಳಿದ ರಾಜ ತಕಹತ್‌ ಸಿಂಗ್.‌ ಆತನ ಮಲಗುವ ಕೋಣೆಯು ವಿಶೇಷವಾಗಿದೆ. ಭಾರತದ ಪುರಾಣ ಪರಂಪರೆಯ ದೇವಾನು ದೇವತೆಗಳಿಂದ ಹಿಡಿದು ಬ್ರಿಟೀಷ್‌ ರಾಜ ರಾಣಿಯರ ಚಿತ್ರಗಳ ವರೆಗೆ ವೈವಿಧ್ಯಮಯ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿದೆ. ನೆಲದಿಂದ ಹಿಡಿದು ಚಾವಣಿಯವರೆಗೆ ಇರುವ ಪೇಂಟಿಂಗ್‌ ಗಮನ ಸೆಳೆಯುವಂತಿದೆ. ರಾಜಸಭೆ ನಡೆಸುತ್ತಿದ್ದ ಸ್ಥಳ ಸಾಧಾರಣವಾಗಿದೆ.

ಈ ಅರಮನೆಯ ಒಳಭಾಗದಲ್ಲಿಯೇ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈಗ ವಿವಿಧ ವ್ಯಾಪಾರಿ ಮಳಿಗೆಗಳನ್ನು ಮಾಡಿದ್ದಾರೆ. ರಾಜಸ್ಥಾನಿ ಜೀವನಶೈಲಿಯ ಅನೇಕ ವಸ್ತುಗಳು ಬಟ್ಟೆಬರೆಗಳು, ಅಲಂಕಾರಿಕ ವಸ್ತುಗಳು ಇಲ್ಲಿ ಸಿಗುತ್ತವೆ. ಪ್ರವಾಸಿಗರು ನೆನಪಿಗಾಗಿ ಇಲ್ಲಿ ಇವನ್ನು ಕೊಳ್ಳುವ ವ್ಯವಸ್ಥೆ ಇದೆ. ಅರಮನೆಯ ಒಳಗೇ ಈ ವ್ಯವಸ್ಥೆ ಭಾರತದ ಕೆಲವೇ ಅರಮನೆಗಳಲ್ಲಿ ಇದ್ದು ಅವುಗಳಲ್ಲಿ ಇದು ಕೂಡ ಒಂದು. ಅರಮನೆಯ ಮೇಲಿಂದ ನೋಡಿದರೆ ಇಡೀ ಜೋಧ್‌ಪುರದ ಮನೆಗಳು ಬಿಳಿಯ ಹಕ್ಕಿಗಳ ಹಿಂಡಿನಂತೆ ಮನಮೋಹಕವಾಗಿ ಕಾಣುತ್ತವೆ.


ನಾನು ಅರಮನೆಯನ್ನು ಹತ್ತಿ ಇಳಿಯುವುದರೊಳಗೆ ಸುಸ್ತಾಗಿಬಿಟ್ಟೆ. ನಾನು ಹತ್ತಿಳಿದ ಅರಮನೆಗಳಲ್ಲಿ ಇದೇ ಏನೋ ಇಷ್ಟೊಂದು ಎತ್ತರ ಇರುವಂಥದ್ದು. ಕೆಳಗಿಳಿದು ಬಂದಾಗ ಇನ್ನೇನು ಹೊರಗೆ ಹೊರಡಬೇಕು ಎಂದು ಮುಖ್ಯದ್ವಾರಕ್ಕೆ ಬರುತ್ತಿದ್ದಂತೆ ಅಲ್ಲಿ ಕುಳಿತು ರಾಜಸ್ತಾನಿ ಸಂಗೀತ ನುಡಿಸುತ್ತಿದ್ದ ಇಬ್ಬರು ಮೂವರು ಕಲಾವಿದರು ಕಂಡರು. ಅವರ ಸಂಗೀತವನ್ನು ಕೇಳಿಕೊಂಡು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕಾಲೇಜು ಹುಡುಗಿಯರು ಈ ಸಂಗೀತಕ್ಕೆ ಆಕರ್ಷಕ ನೃತ್ಯವನ್ನು ಮಾಡತೊಡಗಿದರು. ಅದನ್ನೂ ನೋಡಿಕೊಂಡು ಅರಮನೆಯನ್ನು ಇಳಿದು ಹೊರಗೆ ಬರುವಷ್ಟರಲ್ಲಿಸಂಜೆ ಆರು ಗಂಟೆ ಆಗಿಯೇ ಹೋಯಿತು.

ಸ್ಟೆಪ್‌ ವೆಲ್‌ ಮತ್ತು ಘಂಟಾಘರ್

ಈ ಸ್ಥಳಗಳನ್ನು ನೋಡಿಕೊಂಡು ನಾನು ನಗರದ ಪ್ರಮುಖ ಉದ್ಯಾನವಾದ ಮಂಡೋರೆ ಗಾರ್ಡನ್‌ ನೋಡಲು ಹೋದೆ. ಈ ಗಾರ್ಡನ್‌ ಒಳಗೆ ಅಷ್ಟೇನು ಹೇಳಿಕೊಳ್ಳುವಂಥದ್ದು ಏನೂ ಇಲ್ಲವಾದರೂ ಬೇಸರ ಕಳೆಯಲು ಬೇಕಾದ ಕೆಲವು ಆಕರ್ಷಣೆಗಳು ಇವೆ. ಈ ಉದ್ಯಾನದ ಒಳಗೆ ಕೂಡ ಒಂದು ವಸ್ತು ಸಂಗ್ರಹಾಲಯವಿದ್ದು ಅದು ಆಗಲೇ ಸಂಜೆ ಆದ ಕಾರಣ ಮುಚ್ಚಲ್ಪಟ್ಟಿತ್ತು. ನೋಡಲು ಆಗಲಿಲ್ಲ. ನನ್ನ ಪ್ರವಾಸದಲ್ಲಿ ಎಲ್ಲ ಊರುಗಳಲ್ಲಿಯೂ ವಸ್ತುಸಂಗ್ರಹಾಲಯಗಳನ್ನು ಲೆಕ್ಕವಿಲ್ಲದಷ್ಟು ನೋಡಿರುವುದರಿಂದ ನೋಡುವ ಆಸಕ್ತಿಯೂ ಅಷ್ಟಾಗಿ ಇರಲಿಲ್ಲ.

ಇವನ್ನು ಬಿಟ್ಟರೆ ಜೋಧ್‌ಪುರದಲ್ಲಿ ಇರುವ ಇನ್ನೆರಡು ಆಕರ್ಷಣೆಗಳೆಂದರೆ ಒಂದು ಸ್ಟೆಪ್‌ವೆಲ್.‌ ಇನ್ನೊಂದು ಕ್ಲಾಕ್‌ ಟವರ್‌ ಅಥವಾ ಘಂಟಾಘರ್.‌ ಸ್ಟೆಪ್‌ವೆಲ್‌ ಅದರ ಹೆಸರೇ ಹೇಳುವಂತೆ ಮೆಟ್ಟಿಲುಗಳಿಂದಲೇ ನಿರ್ಮಾಣವಾಗಿರುವ ಒಂದು ಬಾವಿ. ಇದು ನಗರದ ಮಧ್ಯದಲ್ಲಿಯೇ ಇದ್ದು ಜನಾಕರ್ಷಕವಾಗಿದೆ. ಸುತ್ತಲೂ ಮೆಟ್ಟಿಲುಗಳಿದ್ದು ಆಳದಲ್ಲಿ ನೀರಿದೆ. ಮೆಟ್ಟಿಲುಗಳನ್ನು ಇಳಿಯುತ್ತಾ ನಾವು ತಳದವರೆಗೂ ಹೋಗಿ ಮೇಲೆ ಬರಬಹುದು. ಮೇಲೆ ಸುತ್ತಲು ಕಂಬಗಳಿಂದ ಕೂಡಿದ ಪಾಪಳಿ ಇದೆ. ಸಂಜೆ ಅಲ್ಲಿ ಕುಳಿತು ಅನೇಕರು ತಮ್ಮ ಬೇಸರವನ್ನು ನೀಗಿಸಿಕೊಳ್ಳುತ್ತಿದ್ದರು. ನಾನು ಅಲ್ಲಿಗೆ ಹೋದಾಗ ಅಲ್ಲಿಕೂಡ ಒಬ್ಬ ಸಂಗೀತಗಾರ ಸಂಗೀತ ನುಡಿಸುತ್ತಿದ್ದ. ಹೀಗೆ ಸಂಗೀತ ನುಡಿಸುವವರು ರಾಜಸ್ತಾನದ ಎಲ್ಲ ಪ್ರವಾಸಿ ಸ್ಥಳಗಳಲ್ಲಿ ನೋಡಲು ಸಿಗುತ್ತಾರೆ. ಪ್ರವಾಸಿಗರು ಹಾದು ಹೋಗುವಾಗ ಅವರ ಗಮನ ಸೆಳೆಯಲು ಇವರು ಸಂಗೀತ ನುಡಿಸುತ್ತಾರೆ. ಕೆಲವರು ಕೇಳುತ್ತಾ ಸುಮ್ಮನೆ ಮುಂದೆ ಹೋದರೆ ಕೆಲವರು ತುಸು ಹೊತ್ತು ನಿಂತು ಆಲಿಸಿ ಅವರಿಗೆ ಹತ್ತಿಪ್ಪತ್ತು ರೂಪಾಯಿ ಕೊಟ್ಟು ತಮ್ಮ ಕಲಾಗೌರವ ವ್ಯಕ್ತಪಡಿಸುತ್ತಾರೆ.

ಜೋಧ್‌ಪುರದ ನನ್ನ ಕೊನೆಯ ವೀಕ್ಷಣಾ ಸ್ಥಳವಾಗಿ ನೋಡಲು ನಾನು ಹೋದದ್ದು ಘಂಟಾಗರ್‌ ಎಂದು ಕರೆಯಲ್ಪಡುವ ಕ್ಲಾಕ್‌ ಟವರ್‌ ಅನ್ನು. ಇದು ಈಗಿನ ಜೋಧ್‌ಪುರದ ಮಧ್ಯಭಾಗದಲ್ಲಿಯೇ ಇದ್ದು ಅತ್ಯಂತ ಜನಸಂದಣಿಯ ಮಾರುಕಟ್ಟೆಯ ಸ್ಥಳದಲ್ಲಿಯೇ ಇದೆ. ಇದರ ವಿಶೇಷತೆ ಏನೆಂದರೆ ೧೯೧೦ರ ವೇಳೆಗೆ ರಾಜನಾಗಿದ್ದ ರಾಜಾ ಸರ್ದಾರ್‌ ಸಿಂಗ್‌ ಜೋಧ್‌ಪುರದ ಮಧ್ಯಭಾಗದ ಈ ಚೌಕಾಕಾರದ ಮಾರುಕಟ್ಟೆಯನ್ನು ಸ್ಥಾಪಿಸಿದ್ದು ಅದೇ ವೇಳೆಗೆ ಮಧ್ಯಭಾಗದಲ್ಲಿ ಒಂದು ನೂರು ಅಡಿ ಎತ್ತರದ ಬೃಹತ್‌ ಆದ ಈ ಕ್ಲಾಕ್‌ ಟವರ್‌ ನಿರ್ಮಿಸಿದ್ದಾನೆ. ಆಗಿನ ಕಾಲದಲ್ಲಿ ಸುಮಾರು ೩ ಲಕ್ಷದ ವೆಚ್ಚದಲ್ಲಿ ಇಲ್ಲಿನ ಗಡಿಯಾರಗಳನ್ನು ಸ್ಥಾಪಿಸಲಾಗಿದೆ. ಈ ಗಡಿಯಾರಗಳು ಸುತ್ತ ಎಲ್ಲ ದಿಕ್ಕಿಗೂ ಇದ್ದರೂ ಅವೆಲ್ಲವೂ ಒಂದೇ ಯಂತ್ರದಿಂದ ನಡೆಯುತ್ತಿರುವಂತೆ ರೂಪಿತವಾಗಿವೆ. ಲಂಡನ್ನಿನ ಕಂಪನಿಯೊಂದು ತಯಾರಿಸಿರುವ ಈ ಗಡಿಯಾರವನ್ನು ಹಾಕುವುದಕ್ಕೆ ಗಡಿಯಾರದ ಬೆಲೆಯಷ್ಟೇ ಖರ್ಚು ಬಂದಿತಂತೆ.

ನಾನು ಈ ಗಡಿಯಾರಮನೆಯನ್ನು ಏರಿ ಮೇಲೆ ಹೋದಾಗ ಒಂದು ಅಪರೂಪದ ಸಂಗತಿ  ಘಟಿಸಿತು. ಯಾರೋ ಕನ್ನಡದಲ್ಲಿ ಮಾತನಾಡುವುದು ಕೇಳಿಸಿತು. ಹೊರರಾಜ್ಯಗಳಲ್ಲಿ ನಾವು ಸುತ್ತಾಡುವಾಗ ಹೀಗೆ ಯಾರಾದರೂ ಕನ್ನಡ ಮಾತನಾಡುವವರು ಸಿಕ್ಕರೆ ನಾವು ತೀರಾ ಪಕ್ಕದ ಮನೆಯವರಂತೆಯೇ ಬಹಳ ಕಾಲದ ಸ್ನೇಹಿತರಂತೆಯೇ ವರ್ತಿಸತೊಡಗುತ್ತೇವೆ. ಅವರ ಕನ್ನಡ ಮಾತನ್ನು ಕೇಳಿ ನಾನೇ ಅವರನ್ನು ಮಾತನಾಡಿಸಿದೆ. ಅವರು ಬೆಳಗಾಗಿ ಜಿಲ್ಲೆಯ ಅಥಣಿಯಿಂದ ಬಂದಿದ್ದ ಶಿವಾನಂದ ಎಂಬ ಶಿಕ್ಷಕರು ಮತ್ತು ಅವರ ಸ್ನೇಹಿತರಾಗಿದ್ದರು. ಅವರೂ ನಾನು ಮಾತನಾಡಿಸಿದಾಗ ಬಹಳ ಖುಷಿಪಟ್ಟರು ಮಾತ್ರವಲ್ಲ. ನನ್ನ ಜೊತೆಗೆ ಕೆಲವು ಫೋಟೋ ತೆಗೆಸಿಕೊಂಡು ವಿಡಿಯೋ ಮಾಡಿಕೊಂಡು ಪ್ರೀತಿಯಿಂದ ಮಾತನಾಡಿಸಿ ನನ್ನನ್ನು ಬೀಳ್ಕೊಟ್ಟರು. ರಾತ್ರಿ ಮತ್ತು ದಣಿವು ಎರಡೂ ಆದ ಕಾರಣ ನಾನು ವಿಶ್ರಾಂತಿ ಪಡೆಯಲು ನನ್ನ ರೂಮಿಗೆ ಹೊರಡಲು ಆಟೋ ಹತ್ತಿದೆ. ಜೋಧ್‌ಪುರದ ಅರ್ಧದಿನದ ಭೇಟಿ ನನ್ನ ನಿರೀಕ್ಷೆಗೂ ಮೀರಿ ಸಂತೋಷ ಕೊಟ್ಟದ್ದಂತ್ತೂ ಸುಳ್ಳಲ್ಲ.


*****

ಡಾ ರಾಜೇಂದ್ರ ಬುರಡಿಕಟ್ಟಿ

೧೨-೧೦-೨೦೨೬

ಥಾರ್‌ ಮರುಭೂಮಿಯಲ್ಲೊಂದು ಸುತ್ತು

 ಥಾರ್‌ ಮರುಭೂಮಿಯಲ್ಲೊಂದು ಸುತ್ತು


ರಾಜಸ್ತಾನದ ಪ್ರವಾಸದ ಭಾಗವಾಗಿ ನಾನು ಜೈಸಲ್‌ಮೇರ್‌ ತಲುಪಿದಾಗ ಮಧ್ಯಾಹ್ನ ಹನ್ನೆರಡೂವರೆ ಆಗಿತ್ತು. ನನ್ನ ಮೊದಲ ಯೋಜನೆಯ ಪ್ರಕಾರ ಸಾಧ್ಯವಾದರೆ ಅಂದು ಜೈಸಲ್‌ಮೇರ್‌ ನಗರದಲ್ಲಿ ಒಂದೆರಡು ಸ್ಥಳಗಳನ್ನು ನೋಡಿ ಮಧ್ಯಾಹ್ನ ಊಟ ಮಾಡಿ ಅಲ್ಲಿಂದ ಸುಮಾರು ನಲವತ್ತೈದು ಕಿಲೋಮೀಟರ್‌ ದೂರದಲ್ಲಿ ಗ್ರಾಮೀಣ ಭಾಗದಲ್ಲಿ ಇರುವ ಸ್ಯಾಮ್‌ ಸ್ಯಾಂಡ್‌ ಡ್ಯೂನ್ಸ್‌ ಎಂಬ ಮರುಭೂಮಿಯ ಹಳ್ಳಿಗೆ ಹೋಗಿ ಅಲ್ಲಿ ಥಾರ್‌ ಮರುಭೂಮಿಯಲ್ಲಿ ಸಂಚರಿಸಿ ಅಲ್ಲಿಯೇ ಉಳಿಯುವುದು ಮತ್ತು ಮರುದಿನ ಮರಳಿ ಬಂದು ಜೈಸಲ್‌ಮೇರ್‌ ನಗರದಲ್ಲಿ ಉಳಿದುಕೊಂಡಿರುವ ಸ್ಥಳಗಳನ್ನು ನೋಡುವುದು ಎಂದಿತ್ತು.

ಆದರೆ ಜೈಸಲ್‌ ಮೇರ್‌ ತಲುಪುವ ಹೊತ್ತಿಗೆ ನನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಂಡು ಮೊದಲ ದಿನ ನೇರವಾಗಿ ಸ್ಯಾಮ್‌ ಸ್ಯಾಂಡ್‌ ಡ್ಯೂನ್ಸ್‌ಗೇ ಹೋಗಿ ಉಳಿದು ಮರುದಿನ ಜೈಸಲ್‌ ಮೇರ್‌ ನೋಡುವುದು ಎಂದು ಮಾಡಿಕೊಂಡೆ. ಇದಕ್ಕೆ ಮುಖ್ಯ ಕಾರಣ ನಾವು ನಾಲ್ಕು ಜನ ಹೋಗುವುದು ಎಂದು ಆಗಿದ್ದು ಕೊನೆಗೆ ಎಲ್ಲರೂ ಪ್ರವಾಸಕ್ಕೆ ಬರದೇ ನಾನೊಬ್ಬನೇ ಹೋದದ್ದು. ಜೈಸಲ್‌ಮೇರ್‌ಗೆ ರೈಲು ಸಂಚಾರ ಕೊನೆಯಾಗುತ್ತದೆ. ಅಲ್ಲಿಂದ ಮರುಭೂಮಿಯಲ್ಲಿ ನಾನು ಹೋಗಬೇಕಾದ ಹಳ್ಳಿಗೆ ಯಾವುದೇ ಬಸ್‌ ಸಂಚಾರ ಇಲ್ಲ. ಆಟೋಗಳಿಗೆ ನಗರವ್ಯಾಪ್ತಿ ಬಿಟ್ಟು ಹೊರಹೋಗಲು ಅಲ್ಲಿನ ಆಡಳಿತ ಅವಕಾಶ ಕೊಟ್ಟಿಲ್ಲ. ಹೀಗಾಗಿ ನಾವು ಟ್ಯಾಕ್ಷಿ (ಕಾರು) ಮಾಡಿಕೊಂಡೇ ಹೋಗಬೇಕು. ಹತ್ತಿರಕ್ಕೆ ಎಲ್ಲಾದ್ರೂ ಸರ್ಕಾರಿ ಬಸ್‌ ಹೋಗಬಹುದೇ ಎಂದು ನೋಡಿದರೆ ಅದೂ ಸಸೂತ್ರ ಆಗಲಿಲ್ಲ.

ನಾನು ರೈಲು ಇಳಿಯುತ್ತಿದ್ದಂತೆ ನನ್ನನ್ನು ಮುತ್ತಿಕೊಂಡ ಬಾಡಿಗೆ ಟ್ಯಾಕ್ಸಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ ಸ್ಪಷ್ಟವಾಗಿ, “ನನ್ನನ್ನು ಪರಸ್ಪರ ಹಂಚಿಕೆಯ ಸಫಾರಿಯಲ್ಲಿ (ಶೇರಿಂಗ್‌ ವ್ಯವಸ್ಥೆಯಲ್ಲಿ) ಡ್ಯೂನ್ಸ್‌ಗೆ ಕರೆದೊಯ್ಯುವೆಯಾ?” ಎಂದು ಕೇಳಿದೆ. ಅದಕ್ಕೆ ಅವನು, “ಸಾಧ್ಯವಿದೆ ಸರ್‌, ಅದಕ್ಕೆ ತಾವು ಮೂರು ನೂರು ರೂಪಾಯಿ ಕೊಟ್ಟರೆ ಸಾಕಾಗುತ್ತದೆ. ಆದರೆ ಅದಕ್ಕಾಗಿ ತಾವು ಐದು ಆರು ಗಂಟೆಗಳ ಕಾಲ ಕಾಯಬೇಕಾಗಬಹುದೇನೋ. ನೀವು ಸ್ವಂತ ಕಾರು ಮಾಡಿಕೊಳ್ಳುವುದಾದರೆ ನಿಮ್ಮನ್ನು ಬಿಟ್ಟು ಬರಲು ನನಗೆ ೧೫೦೦ ರೂಪಾಯಿ ಕೊಡಬೇಕಾಗುತ್ತದೆ. ಮರಳಿ ಕರೆತರುವ ಜವಾಬ್ದಾರಿಯೂ ನನ್ನದೇ ಆದರೆ ೨೯೦೦ ಕೊಡಿ ಸಾಕು” ಎಂದ. ಇಂತಹ ಪ್ರದೇಶದಲ್ಲಿ ಮೂರರಿಂದ ನಾಲ್ಕು ಜನ ಕೂಡಿ ತಂಡವಾಗಿ ಪ್ರವಾಸಮಾಡುವಾಗ ಈ ಖರ್ಚುಗಳು ಹಂಚಿಹೋಗುತ್ತವೆ. ಆದರೆ ನಾನು ಒಬ್ಬನೇ ಹೋಗಿದ್ದರಿಂದ ಇದು ನನಗೆ ತುಂಬಾ ದುಬಾರಿ ಆಗುತ್ತಿತ್ತು. ಅದಕ್ಕಾಗಿ ನಾನು, “ಕಾಯಲು ಸಿದ್ಧನಿದ್ದೇನೆ. ತಡವಾದರೂ ಸಫಾರಿಯಲ್ಲಿಯೇ ಬರುತ್ತೇನೆ.” ಎಂದೆ. ಆಗ ಅವನು “ಹಾಗಾದರೆ ನೀವು ಊಟಮಾಡಿ ನಾನು ಇತರೆ ಪ್ರಯಾಣಿಕರು ಯಾರಾದರೂ ಸಿಗುತ್ತಾರಾ ನೋಡುತ್ತೇನೆ”, ಎಂದು ನನ್ನನ್ನು ಒಂದು ಹೊಟೆಲ್‌ ಬಳಿ ಇಳಿಸಿ ಹೋದ. ಹೋಗುವಾಗ, “ತಮಗೆ ಬೇರೆ ಯಾವುದಾದರೂ ಸವಾರಿ ಟ್ಯಾಕ್ಸಿ ಸಿಕ್ಕರೆ ತಾವು ಹೋಗಲೂ ಬಹುದು” ಎಂದು ಹೇಳಿದ.

ಸರಿ ಎಂದು ನಾನು ಆ ಹೊಟೆಲ್ಲಿನ್ಲಲಿ ಊಟಮಾಡಿ ಒಂದು ಗಂಟೆ ಕಾದರೂ ಅವನೂ ಬರಲಿಲ್ಲ. ಬೇರೆ ಯಾವ ಸವಾರಿ ಟ್ಯಾಕ್ಸಿ ಸಿಗುವ ಲಕ್ಷಣವೂ ಕಾಣಲಿಲ್ಲ. ಇನ್ನೂ ಕಾಯುವುದರಲ್ಲಿ ಅರ್ಥವಿಲ್ಲವೆಂದು ಭಾವಿಸಿ, ಇಳಿಸಿ ಹೋದ ಅವನಿಗೇ ಫೋನ್‌ ಮಾಡಿ, “ನಿಮಗೆ ಇನ್ನೂ ಯಾರೂ ಸಿಗಲಿಲ್ಲವೇ?” ಎಂದು ಕೇಳಿದೆ. “ಇಲ್ಲ ಸರ್”‌ ಎಂದು ಅವನು ಹೇಳಿದ. ಅನಿವಾರ್ಯವಾಗಿ ನಾನು, “ಕಾರ್‌ ತನ್ನಿ ಹೋಗೋಣ” ಎಂದು ಹೇಳಿದೆ. ಅವನು ತಕ್ಷಣ ಬಂದ. ಅನಿವಾರ್ಯವಾಗಿ ಸ್ವಂತ ಕಾರು ಮಾಡಿಕೊಂಡು ಹೊರಟೆ.

ಮಳೆಬೆಳೆ ಇಲ್ಲದಲ್ಲಿ ಕಲ್ಲೇ ಜೀವನಾಧಾರ

ಹೋಗುವ ಮಾರ್ಗದಲ್ಲಿ ಕುತೂಹಲದಿಂದ ಅಲ್ಲಿನ ಬೆಳೆ, ಜನರ ಮನೆಗಳು, ಶಾಲೆಗಳು ಇತ್ಯಾದಿಗಳನ್ನು ವೀಕ್ಷಿಸುತ್ತಾ ನಡೆದೆ. ಇಲ್ಲಿನ ಜನ ಮಳೆ ಬೆಳೆ ಇಲ್ಲದ ಈ ಸ್ಥಳದಲ್ಲಿ ಹೇಗೆ ಬದುಕುತ್ತಾರೆ. ಎಂಬುದು ನನಗೆ ಕುತೂಹಲದ ಸಂಗತಿಯಾಗಿತ್ತು. ಜೀವನ ನಡೆಸಲು ಏನು ಉದ್ಯೋಗ ಮಾಡುತ್ತಾರೆ? ಏನು ಬೆಳೆಯುತ್ತಾರೆ ಇತ್ಯಾದಿ ಕೇಳಿ ತಿಳಿದುಕೊಂಡೆ. ಮಳೆ ಅತ್ಯಂತ ಕಡಿಮೆ ಆಗುವುದರಿಂದ ಇಲ್ಲಿ ಜನ ರೈತಾಪಿ ಕೆಲಸ ಮಾಡುವುದು ಇಲ್ಲ ಎನ್ನುವಷ್ಟು ಕಡಿಮೆ. ಇಲ್ಲಿ ಬಾರ್ಲಿ ಬಿಟ್ಟರೆ ಪಲ್ಯ ಸಂಬಾರು ಮಾಡುವ ಒಂದೆರಡು ತರಕಾರಿ ಬೆಳೆಯುತ್ತಾರೆ ಅಷ್ಟೆ. ತಮ್ಮ ಜೀವನ ನಡೆಸಲು ಇಲ್ಲಿನ ಸಾಮಾನ್ಯ ಜನ ಕಲ್ಲಿನಿಂದ ಮೂರ್ತಿಗಳು, ಪಿಂಗಾಣಿಗಳು, ಕಲ್ಲಿನ ಪಾತ್ರೆ ಪಗಡೆಗಳು ಇತ್ಯಾದಿಗಳನ್ನು ಮಾಡುತ್ತಾರೆ ಇವುಗಳು ದೇಶದ ಬೇರೆ ಬೇರೆ ಭಾಗಗಳಿಗೆ ಹೋಗುತ್ತವೆ ಎಂದು ತಿಳಿಯಿತು. ಆಗ ನಮ್ಮ ನಗರಗಳಲ್ಲಿ ಕೂಡ ಇಂತಹ ಕಲ್ಲಿನ ಮೂರ್ತಿಗಳು ಪಿಂಗಾಣಿಗಳು ಇತ್ಯಾದಿ ರಸ್ತೆ ಮೇಲೆ ಇಟ್ಟು ಮಾರುವವರು ನನ್ನ ಮನಸ್ಸಿನಲ್ಲಿ ಸುಳಿದು ಹೋದರು. 

ನನ್ನ ಕಾರಿನವನ ಮನೆ ಕೂಡ ಈ ಥಾರ್‌ ಮರುಭೂಮಿಯಲ್ಲಿಯೇ ಇದ್ದು ಅದನ್ನೂ ನಾನು ನೋಡಿದೆ. ಇಲ್ಲಿನ ಬಹುತೇಕ ಎಲ್ಲ ಮನೆಗಳೂ ಹಳದಿಬಣ್ಣದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿವೆ. ರಾಜಸ್ತಾನದಲ್ಲಿ ಜೈಪುರವನ್ನು ʻಪಿಂಕ್‌ ಸಿಟಿʼʻ ಎಂದೂ ಉದಯಪುರವನ್ನು ʻಬ್ಲೂ ಸಿಟಿʼ ಎಂದೂ ಕರೆದಂತೆ ʻಜೈಸಲ್‌ಮೇರ್‌ʼನ್ನು ʻಎಲ್ಲೋ ಸಿಟಿʼ ಎಂದು ಕರೆಯುತ್ತಾರೆ. ಇಲ್ಲಿನ ಎಲ್ಲ ಕಟ್ಟಡಗಳೂ ಬಹುತೇಕ ಈ ಹಳದಿಬಣ್ಣದ ಸ್ವಾಭಾವಿಕ ಇಟ್ಟಿಗೆಗಳಿಂದಲೇ ಕಟ್ಟಲ್ಪಟ್ಟಿವೆ. ನಮ್ಮಲ್ಲಿ ಕೆಂಪು ಇಟ್ಟಿಗೆಗಳು ಇದ್ದಂತೆ ಇಲ್ಲಿ ಹಳದಿ ಇಟ್ಟಿಗೆಗಳು. ನಮ್ಮಲ್ಲಿಯ ಇಟ್ಟಿಗೆಗಳು ಮಣ್ಣಿನಿಂದ ಮಾಡಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ. ಆದರೆ ಇಲ್ಲಿನ ಇಟ್ಟಿಗೆಗಳು ಅಂದರೆ ಅವು ಕಲ್ಲಿನಿಂದಲೇ ಮಾಡಲ್ಪಟ್ಟಂಥವು. ಸುಡಲ್ಪಡದ ಸ್ವಾಭಾವಿಕ ಇಟ್ಟಿಗೆಗಳು.


ಎಲ್ಲೋ ಹತ್ತಿಪ್ಪತ್ತು ಕಿಲೋಮೀಟರ್‌ ದೂರಕ್ಕೆ ಮರಳಿನ ಮಧ್ಯೆ ಸ್ಮಶಾನಮೌನದ ಸ್ಥಳದಲ್ಲಿ ಕಾಣುವ ಈ ಮನೆಗಳ ಸುತ್ತ ಒಂದೂ ಗಿಡಗಂಟಿಗಳಿರುವುದಿಲ್ಲ. ಎಲ್ಲ ಬೋಳುಬೋಳು. ಇಲ್ಲಿ ಮನೆಗಳ ಚಾವಣಿಗೆಲ್ಲ ಕಲ್ಲನ್ನೇ ಹಾಕಿರುತ್ತಾರೆ. ಬಹುಶಃ ಆರ್‌ ಸಿ ಸಿ ಇಲ್ಲಿನ ಬಿಸಿಲಿಗೆ ತಡೆದುಕೊಳ್ಳಲು ಸಾಧ್ಯವೇ ಇಲ್ಲದ್ದು ಇದಕ್ಕೆ ಕಾರಣವಿರಬಹುದು. ಮಾರ್ಗಮಧ್ಯದಲ್ಲಿ ಒಂದೆರಡು ಶಾಲೆಗಳನ್ನೂ ನೋಡಿದೆ. ಈ ಶಾಲೆಗಳಿಗೆ ಮಕ್ಕಳು ಹೇಗೆ ಬರುತ್ತಾರೋ ಎಲ್ಲಿಂದ ಬರುತ್ತಾರೋ ಏನೋ? ಏಕೆಂದರೆ ನಮ್ಮಂತೆ ಅಲ್ಲಿ ಬಸ್ಸುಗಳ ವ್ಯವಸ್ಥೆಯೇ ಇಲ್ಲ. ಮನೆಗಳೂ ಶಾಲೆಗಳ ಹತ್ತಿರ ಇರುವುದಿಲ್ಲ. ಈ ಬಗ್ಗೆ ಯಾವುದಾದರೂ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳುವ ಆಸಕ್ತಿ ಇದ್ದಿತ್ತಾದರೂ ಸಮಯದ ಹೊಂದಾಣಿಕೆ ಆಗದ ಕಾರಣ ಒಂದೆರಡು ಶಾಲೆಗಳ ಮುಂದೆ ನಿಂತು ಫೋಟೋ ಹೊಡೆದುಕೊಂಡು ಮುಂದೆ ಹೋಗಲು ಮಾತ್ರವೇ ನನಗೆ ಸಾಧ್ಯವಾಯಿತು.

ಜೀಪ್‌ ಮತ್ತು ಒಂಟೆ ಸವಾರಿ

ಹೋಗುವಾಗ ಮಾರ್ಗಮಧ್ಯದಲ್ಲಿ ನನ್ನ ಕಾರಿನ ಚಾಲಕ ಜೈಸಲ್‌ಮೇರ್‌ನಲ್ಲಿ ನನ್ನ ಪ್ರವಾಸದ ಯೋಜನೆ ವಿವರ ಕೇಳಿದ. ಅದನ್ನು ಕೇಳಿ ಅವನು, “ತಾವು ಮುಖ್ಯವಾಗಿ ನೋಡಬೇಕಾದ ಎರಡು ಸ್ಥಳಗಳನ್ನು ಬಿಟ್ಟಿರುವಿರಿ. ಗಡಿಭಾಗಕ್ಕೆ ಹೋಗಿ ಭಾರತ ಮತ್ತು ಪಾಕಿಸ್ತಾನ ಗಡಿ ನೋಡುವುದು, ಹಾಗೂ ಭಾರತ ಪಾಕಿಸ್ತಾನಗಳ ಮಧ್ಯೆ ೧೯೭೧ರಲ್ಲಿ ನಡೆದ ಯುದ್ಧದ ಸ್ಥಳದಲ್ಲಿ ಇರುವ ಸ್ಮಾರಕ ಮತ್ತು ಮ್ಯೂಜಿಯಂ ನೋಡುವುದು” ಎಂದ. ನಾನು ಅದಕ್ಕೆ ನನ್ನದೇ ಆದ ಕಾರಣವನ್ನು ಹೇಳಿದೆ. ನಾನು ಒಬ್ಬನೇ ಬಂದಿರುವುದರಿಂದ ಸ್ವಂತಕ್ಕೆ ಟ್ಯಾಕ್ಸಿ ಮಾಡಿಕೊಂಡು ತಿರುಗಾಡುವುದು ದುಬಾರಿ ಆಗುವುದು ಮತ್ತು ಜೈಸಲ್‌ಮೇರ್‌ನಲ್ಲಿ ನೋಡತಕ್ಕ ಸ್ಥಳಗಳೆಲ್ಲವನ್ನೂ ಒಂದೂವರೆ ದಿನಗಳಲ್ಲಿಯೇ ಮುಗಿಸಬೇಕಾಗಿರುವುದು ಇದಕ್ಕೆ ನನ್ನ ಮುಖ್ಯವಾದ ಎರಡು ಕಾರಣಗಳಾಗಿದ್ದವು. 

ಜೈಸಲ್‌ಮೇರ್‌ನಿಂದ ಮರುಭೂಮಿಯ ಹಳ್ಳಿಗಳಿಗೆ ಕರೆದೊಯ್ಯುವುದು, ಅಲ್ಲಿ ಒಂಟೆ ಸವಾರಿ, ಜೀಪ್‌ ಸವಾರಿ ಮಾಡಿಸುವುದು, ಅಲ್ಲಿ ಉಳಿಯುವ ವ್ಯವಸ್ಥೆ, ಊಟತಿಂಡಿ ವ್ಯವಸ್ಥೆ, ಮನರಂಜನೆಯ ವ್ಯವಸ್ಥೆ ಎಲ್ಲವನ್ನೂ ಮಾಡಿ ಮರಳಿ ಜೈಸಲ್‌ಮೇರ್‌ ಗೆ ಕರೆತರುವ ಪ್ಯಾಕೇಜ್‌ ಟೂರನ್ನು ಮಾಡುವ ಅನೇಕ ಟ್ರಾವೆಲ್‌ ಏಜಂಟರು ಅಲ್ಲಿ ಇದ್ದದ್ದು ನನಗೆ ಗೊತ್ತಿದ್ದರೂ ಅವು ಬಹಳಷ್ಟು ದುಬಾರಿ ಆಗಿದ್ದರಿಂದ ಮತ್ತು ನನಗೆ ಸ್ವತಂತ್ರವಾಗಿ ತಿರುಗಾಡಲು ಒಂದಿಷ್ಟು ನಿರ್ಬಂಧ ಅವುಗಳಿಂದ ಉಂಟಾಗುತ್ತಿತ್ತಾದ್ದರಿಂದ ಆ ಪ್ಯಾಕೇಜ್‌ ಯಾವನ್ನೂ ನಾನು ಮಾಡಿಕೊಳ್ಳದೇ ಮರುಭೂಮಿಯ ಹಳ್ಳಿಯಲ್ಲಿ ಉಳಿಯಲು ಟೆಂಟ್‌ ಮಾತ್ರ ಬುಕ್‌ ಮಾಡಿಕೊಂಡಿದ್ದೆ. ಉಳಿದವನ್ನು ಅಲ್ಲಿಯೇ ಹೋಗಿ ಸಂದರ್ಭಾನುಸಾರ ಮಾಡಿಕೊಳ್ಳುವುದು ಎಂಬುದು ನನ್ನ ವಿಚಾರವಾಗಿತ್ತು.

ಇದನ್ನು ಕೇಳಿ ತಿಳಿದ ಆತ, “ತಾವು ಜೀಪ್‌ ಸವಾರಿ ಮತ್ತು ಒಂಟೆ ಸವಾರಿ ಮಾಡದಿದ್ದರೆ ಧಮರುಭೂಮಿಯ ಅನುಭವವೇ ತಮಗೆ ಆಗುವುದಿಲ್ಲವಲ್ಲ” ಎಂದು ಹೇಳಿದ ಮಾತ್ರವಲ್ಲ; “ನೀವು ಅಷ್ಟುದೂರದಿಂದ ಬಂದಿರುವಿರಿ. ಗಡಿಭಾಗಕ್ಕೆ ಹೋಗಿ ಗಡಿ ಮತ್ತು ಯುದ್ಧಸ್ಥಳವನ್ನು ನೋಡಿ ಬಂದರೆ ಮಾತ್ರ ನಿಮ್ಮ ಈ ಭಾಗದ ಪ್ರವಾಸ ಪೂರ್ಣ ಆಗುತ್ತದೆ. ಆದರೆ ನೀವು ಒಬ್ಬರೇ ಬಂದಿರುವುದರಿಂದ ಟ್ಯಾಕ್ಸಿ ಹಣ ಒಬ್ಬರೇ ಕೊಡಬೇಕಾದುದರಿಂದ ದುಬಾರಿ ಆಗುತ್ತದೆ ಎನ್ನುವುದು ನಿಜ. ವಿಚಾರ ಮಾಡಿ ಹೇಳಿ. ಧೈರ್ಯಮಾಡಿ ತಾವು ಒಪ್ಪುವುದಾದರೆ ಇಲ್ಲಿನ ಎಲ್ಲ ಭಾಗಗಳನ್ನೂ ನಾನು ಸ್ವತಃ ನಿಮ್ಮ ಜೊತೆಗೆ ಇದ್ದು ತೋರಿಸಿ ಕಳಿಸುತ್ತೇನೆ. ನಾಳೆ ಇಡೀ ದಿನ ನೋಡುವಂಥದ್ದು ಜೈಸಲ್‌ಮೇರ್‌ನಲ್ಲಿ ಏನೂ ಇಲ್ಲ. ನಿಮ್ಮ ಬಸ್‌ ಬುಕ್‌ ಆಗಿರುವುದು ನಾಳೆ ರಾತ್ರಿಗೆ. ಅಷ್ಟೊತ್ತು ಅಲ್ಲಿ ಕಾಲ ಕಳೆಯುವುದು ನಿಮಗೆ ತುಂಬಾ ಬೇಸರವನ್ನುಂಟುಮಾಡಬಹುದು. ಖರ್ಚು ಆದರೂ ಆಗಲಿ ಎಂದು ನೀವು ಒಪ್ಪುವುದಾದರೆ ನಾಳೆ ಬೆಳಿಗ್ಗೆ ಗಡಿಭಾಗಕ್ಕೆ ಕರೆದೊಯ್ಯುವೆ” ಎಂದು ಹೇಳಿದ.

ನಾನು ಗೊಂದಲದಲ್ಲಿ ಬಿದ್ದೆ. ಅವನು ಹೇಳುವುದು ನಿಜವಿತ್ತು; ಆದರೆ ನನಗೆ ಅದು ದುಬಾರಿ ಆಗುವುದೂ ನಿಜವಿತ್ತು. ಒಟ್ಟಾರೆ ಇಂದು ಮತ್ತು ನಾಳಿನ ಎಲ್ಲ ಪ್ರದೇಶಗಳ ವೀಕ್ಷಣೆಗೆ ಎಷ್ಟಾಗುತ್ತದೆ ಎಂದು ಲೆಕ್ಕಹಾಕಿದಾಗ ಅದು ಸುಮಾರು ಎಂಟು ಸಾವಿರ ಹಣ ಆಗುತ್ತಿತ್ತು. ನಾನು ದೊಡ್ಡ ಧೈರ್ಯ ಮಾಡಿ, “ಆಗಲಿ ನಡೆ; ಖರ್ಚಾದರೂ ಪರವಾಗಿಲ್ಲ. ಈ ಮರುಭೂಮಿ ಭಾಗದಲ್ಲಿ ನೋಡುವಂಥದ್ದು ಏನೂ ಉಳಿಯಬಾರದು ಎಲ್ಲ ತೋರಿಸಿ ಕಳಿಸು” ಎಂದೆ. ‌ಹೀಗೆ ನಮ್ಮಿಬ್ಬರ ನಡುವೆ ಒಪ್ಪಂದ ಆದ ನಂತರ ನಮ್ಮ ಕಾರು ನೇರವಾಗಿ ನಮ್ಮ ಟೆಂಟಿಗೆ ಹೋಗುವ ಬದಲು ಕುಲ್ಧಾರ ಎಂಬ  ಎಂಬ ಒಂದು ಅಪರೂಪದ ನಿರ್ಜನ ಮತ್ತು ಪಾಳುಬಿದ್ದ ಹಳ್ಳಿಯ ಕಡೆಗೆ ತಿರುಗಿತು. ಅದು ಒಂದೇ ರಾತ್ರಿಯಲ್ಲಿ ಊರಿನ ಜನವೆಲ್ಲ ಊರುತೊರೆದು ಹೋದ ಒಂದು ಅಪರೂಪದ ಹಳ್ಳಿ. ಆ ಹಳ್ಳಿಯ ಬಗ್ಗೆಯೇ ನಾನು ವಿಶೇಷ ಲೇಖನವೊಂದನ್ನು ಬರೆದಿರುವುದರಿಂದ ಅದನ್ನು ಇಲ್ಲಿ ವಿಸ್ತರಿಸುತ್ತಿಲ್ಲ.

ಆ ಹಳ್ಳಿಯನ್ನು ನೋಡಿಕೊಂಡು ಟೆಂಟಿಗೆ ಹೋಗುವ ಮಾರ್ಗದಲ್ಲಿಯೇ ಒಂಟೆ ಸವಾರಿ ಜೀಪ್‌ ಸವಾರಿ ಮಾಡಿಸುವವರ ವ್ಯವಸ್ಥೆ ಇತ್ತು. ಸಮಯ ಸುಮಾರು ಐದು ಗಂಟೆ ಆಗಿತ್ತು. “ನೀವು ಈಗ ನೇರವಾಗಿ ಟೆಂಟಿಗೆ ಹೋಗುವುದು ಉಪಯೋಗಕ್ಕೆ ಬರುವುದಿಲ್ಲ. ಈಗ ಟೆಂಟ್‌ಗಳಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಜೀಪ್‌ ಸವಾರಿ ಮತ್ತು ಒಂಟೆ ಸವಾರಿ ಮಾಡುತ್ತಿರುತ್ತಾರೆ. ಇವೆಲ್ಲವನ್ನೂ ಮಾಡಿಕೊಂಡು ಮರುಭೂಮಿಯಲ್ಲಿ ಸೂರ್ಯಾಸ್ತವನ್ನು ನೋಡಿಕೊಂಡು ಎಲ್ಲರೂ ಏಳುಗಂಟೆಯ ಹೊತ್ತಿಗೆ ಟೆಂಟ್‌ಗಳಿಗೆ ಬರುತ್ತಾರೆ. ನೀವೂ ಹಾಗೆ ಮಾಡುವುದು ಒಳ್ಳೆಯದು. ಹೇಗಿದ್ದರೂ ಅಲ್ಲಿ ಮನರಂಜನೆಯ ಕಾರ್ಯಕ್ರಮಗಳು ಆರಂಭವಾಗುವುದು ಸಂಜೆ ಏಳರ ಮೇಲೆ. ಏನು ಮಾಡುತ್ತೀರಿ?” ಎಂದು ಆತ ನನ್ನ ಮುಖ ನೋಡಿದ.  ನನಗೂ ಅದೇ ಸರಿ ಅನ್ನಿಸಿತು.

“ಸರಿ ಅವೆಲ್ಲವನ್ನೂ ಮುಗಿಸಿಯೇ ಹೋಗೋಣ” ಎಂದು ನಾನು ಹೇಳಿದ್ದರಿಂದ ಅವನು ಮಾರ್ಗಮಧ್ಯದಲ್ಲಿ ಇಂಥ ಸವಾರಿ ಮಾಡಿಸುವ ಜೀಪ್‌ ಏಜಂಟರ್‌ ಕ್ಯಾಂಪೊಂದರ ಬಳಿ ಕಾರು ನಿಲ್ಲಿಸಿದ. ಅವನು ಹೇಳಿದಂತೆ ನಮ್ಮ ವಸತಿ ಕ್ಯಾಂಪ್‌ ಇರುವ ಸ್ಥಳಗಳು ಮರುಭೂಮಿಯಾದರೂ ಅಲ್ಲಿ ವಿಶಾಲವಾದ ಮರಳಿನ ಸಮುದ್ರ ನಮಗೆ ಕಾಣಸಿಗುವುದಿಲ್ಲ. ಅದನ್ನು ನೋಡಲು ನಾವು ಜೀಪ್‌ ಸವಾರಿ ಮಾಡಲೇಬೇಕು. ಮೂರು ಸಾವಿರ ರೂಪಾಯಿ ಮಾತನಾಡಿಕೊಂಡು ನನ್ನ ಕಾರಿನವನಿಗೆ ಅಲ್ಲಿಯೇ ಕಾಯಲು ಹೇಳಿ ನಾನು ಜೀಪ್‌ ಏರಿ ಮರಳು ಸಾಗರಕ್ಕೆ ಹೊರಟೆ.

ಮೂರು ಹೆಸರಿನಿಂದ ಕರೆಯಲಾಗುವ ಥಾರ್‌ ಮರುಭೂಮಿ

ಜೀಪ್‌ ಸವಾರಿಯವರು ನನಗೆ ಫೋಟೋ ಅಲ್ಬಂ ತೋರಿಸಿ ಮೂರು ಮರುಭೂಮಿಗಳನ್ನೂ ಸೂರ್ಯಾಸ್ತವನ್ನೂ ತೋರಿಸಿಕೊಂಡು ಒಂಟೇ ಸವಾರಿ ಮಾಡಿಸಿಕೊಂಡು ಸುಮಾರು ಒಂದು ಗಂಟೆಯ ಕಾಲ ಮರುಭೂಮಿಯ ಮರಳು ದಾರಿಯಲ್ಲಿ ಸುತ್ತಾಡಿಸಿಕೊಂಡು ಬರುವುದಾಗಿ ಹೇಳುವುದೇನೋ ನಿಜ. ಆದರೆ ವಾಸ್ತವವಾಗಿ ಅವರೆಲ್ಲ ಮಾಡುವುದು ತುಂಬಾ ಚಾಣಾಕ್ಷತನದಿಂದ ಕೂಡಿರುತ್ತದೆ. ಅಲ್ಲಿ ಇರುವುದು ಒಂದೇ ಥಾರ್‌ ಮರುಭೂಮಿಯೇ ಆದರೂ ಅದು ಕೆಲವು ಕಡೆ ನದಿಯಂತೆ ಭಾಗ ಭಾಗವಾಗಿ ಮರಳನ್ನು ಹರಡಿ ನಡುನಡುಗೆ ಮರಳು ಅಷ್ಟಾಗಿ  ಇಲ್ಲದ ಗಟ್ಟಿ ಭೂಮಿಯನ್ನು ನಿರ್ಮಾಣ ಮಾಡಿದೆ. ಈ ಮರಳು ನದಿಗಳು ಆ ಭಾಗದಲ್ಲಿ ಮುಖ್ಯವಾಗಿ ಮೂರು ಭಾಗಗಳಾಗಿದ್ದು ಅವನ್ನು ಅವರು ಕ್ರಮವಾಗಿ ಥಾರ್‌, ರೋವಲ್‌ ಮತ್ತು ಸೋನಾರ್ ಎಂದುಮೂರು ಹೆಸರಿನಿಂದ ಕರೆಯುತ್ತಾರೆ. ಒಂದು ಗಂಟೆಯ ಸವಾರಿ ಎಂದರೆ ನಾವೆಲ್ಲ ಸುಮಾರು ನಲವತ್ತು ಐವತ್ತು ಕಿಲೋಮೀಟರ್‌ ಸುತ್ತಾಡಿಸಬಹುದು ಅಂದುಕೊಳ್ಳುತ್ತೇವೆ. ಆದರೆ ಅವರು ಹತ್ತು ನಿಮಿಷದಲ್ಲಿ ಈ ಮೂರೂ ಮರುಭೂಮಿ ತೋರಿಸುತ್ತಾ ಹೋಗಿ ಕೊನೆಯದರಲ್ಲಿ ಜೀಪ್‌ ನಿಲ್ಲಿಸುತ್ತಾರೆ.


ಆ ಸ್ಥಳದಲ್ಲಿ ನಾವು ಇಳಿಯಬೇಕು. ಅಲ್ಲಿ ಮರಳಿನಲ್ಲಿ ನಮ್ಮಸವಾರಿ ಮಾಡಿಸಲು ಒಂಟೆಗಳನ್ನು ಹೊಂದಿರುವ ಬೇರೆಯವರು ಇರುತ್ತಾರೆ. ಅದಕ್ಕೆ ನಾವು ದುಡ್ಡುಕೊಟ್ಟು ಒಂಟೇ ಸವಾರಿ ಮಾಡಬಹುದು. ಫೋಟೋ ವಿಡಿಯೋ ತೆಗೆಸಿಕೊಳ್ಳಬಹುದು. ಅಲ್ಲಿ ಮರಳಿನಲ್ಲಿಯೇ ವೇಗವಾಗಿ ಓಡುವ ಕೆಲವು ವಿಶಿಷ್ಟ ಯಂತ್ರಚಾಲಿತ ಚಿಕ್ಕ ಚಿಕ್ಕ ವಾಹನಗಳೂ ಇವೆ. ಅವಕ್ಕೂ ದುಡ್ಡುಕೊಟ್ಟು ಸವಾರಿ ಮಾಡಬಹುದು. ಅವನ್ನು ಮರಳಿನಲ್ಲಿ ಓಡಿಸುವ ಕಲೆಯನ್ನು ಕರಗತಮಾಡಿಕೊಂಡ ಯುವಕರು ನಮ್ಮನ್ನು ಅವುಗಳಲ್ಲಿ ಕೂರಿಸಿಕೊಂಡು ಗಂಟೆಗೆ ನೂರು ನೂರಿಪ್ಪತ್ತು ಕಿ.ಮೀ. ವೇಗದಲ್ಲಿ ನಮ್ಮ ತಲೆ ಸುತ್ತು ಬರುವಂತೆ ಓಡಿಸಿ ವಿಶೇಷ ಅನುಭವ ಉಂಟುಮಾಡುತ್ತಾರೆ. ಇವೆಲ್ಲವಕ್ಕೂ ಹಣ ಪಾವತಿಸಬೇಕು. ಇವೆಲ್ಲ ಅಲ್ಲದೆ ಅಲ್ಲಿಂದ ಮುಂದೆ ಯಾವ ವಾಹನವೂ ಹೋಗದಷ್ಟು ಆಳವಾದ ಕಂದರ ಮತ್ತು ಎತ್ತರವಾದ ಬೆಟ್ಟಗಳಂಥ ರಚನೆಗಳು ಮರಳಿನಿಂದಲೇ ನಿರ್ಮಾಣವಾಗಿರುವುದಾಗಿಯೂ ಅವುಗಳಿಗೆ ವಿಶೇಷವಾಗಿ ದುಡ್ಡುಕೊಟ್ಟರೆ ಒಂಟೆಗಳ ಮೇಲೆ ಕರೆದೊಯ್ಯುವುದಾಗಿ ಅಲ್ಲಿ ಅದಕ್ಕಾಗಿ ಇರುವವರು ನಮ್ಮನ್ನು ಮುತ್ತಿಕೊಂಡು ತಲೆತಿನ್ನುತ್ತಾರೆ. ಆಸಕ್ತಿ ಅಭಿರುಚಿ ಇದ್ದರೆ ನಾವು ಹಣ ಪಾವತಿಸಿ ಆ ಅನುಭವವನ್ನೂ ಪಡೆಯಬಹುದು.

ನೃತ್ಯಕ್ಕೆ ಬಂದ ಚೆಂದದ ಹುಡುಗಿಯರು

ನಾನು ಈ ಮರುಭೂಮಿ ನೋಡಲು ಬಂದದ್ದು ಅವನ್ನು ಕಂಡದ್ದು ನನಗೆ ಸಾಕೆನಿಸಿತು. ಇನ್ನೂ ವಿಶೇಷವಾದ ಸ್ಥಳಗಳನ್ನು ನೋಡುವ ಅಗತ್ಯವಿಲ್ಲವೆನಿಸಿತು. ಅಲ್ಲಿಯೇ ಇದ್ದ ಒಂಟೆ ಸವಾರಿ ಮಾತ್ರ ಮಾಡಿ ಫೋಟೋ ತೆಗೆಸಿಕೊಂಡು ಸೂರ್ಯಾಸ್ತಕ್ಕಾಗಿ ಮರಳಿನಲ್ಲಿ ಅತ್ತಿತ್ತ ಸುತ್ತಾಡುತ್ತಾ, ಬರುವ ಹೋಗುವ ಸವಾರಿ ಮಾಡುವ ಜನರನ್ನು ನೋಡುತ್ತಾ ಕಾಲ ಕಳೆಯತೊಡಗಿದೆ. ಹೀಗೆ ಸುತ್ತಾಡುವಾಗ ಚೆಂದಾಗಿ ಅಲಂಕಾರ ಮಾಡಿಕೊಂಡ ಇಬ್ಬರು ವಯಸ್ಸಿಗೆ ಬಂದ ಹುಡುಗಿಯರು ನನ್ನ ಹತ್ತಿರ ಬಂದು “ರಾಜಸ್ತಾನಿ ಡಾನ್ಸ್‌ ತೋರಿಸುವುದಾ?” ಎಂದು ಕೇಳಿದರು. ಐವತ್ತೋ ನೂರೋ ಕೊಟ್ಟಿದ್ದರೆ ಅವರು ನನ್ನನ್ನೂ ಸೇರಿಸಿಕೊಂಡು ಡಾನ್ಸ್‌ ಮಾಡುತ್ತಿದ್ದರು. ನನಗೆ ಅವರೊಂದಿಗೆ ಕುಣಿಯುವ ವಯಸ್ಸು ಅಲ್ಲ ಅನ್ನಿಸಿ ʻಬೇಡʼ ಎಂದೆ. ಅವರು ಬೇರೆಯವರ ಕಡೆ ಹೋದರು. ಅವರನ್ನು ಅತ್ತ ಕಳಿಸಿದ ಮೇಲೆ ನಾನು ಅವರ ಜೊತೆಗೆ ಕುಣಿಯದಿದ್ದರೂ ಅವರನ್ನು ಕುಣಿಸಿ ನೋಡಬಹುದಿತ್ತಲ್ಲ ಅನ್ನಿಸಿದ್ದು ಸುಳ್ಳಲ್ಲ.

ಈ ವಿಷಯದಲ್ಲಿ ರಾಜಸ್ತಾನದಲ್ಲಿ ನಮಗಿಂತ ಭಿನ್ನವಾದ ದೃಷ್ಟಿಕೋನವಿದೆ. ನಮ್ಮಲ್ಲಿ ಹಾಡು ಡಾನ್ಸು ಇವೆಲ್ಲ ಚಿಕ್ಕ ಮಕ್ಕಳು ಹೆಚ್ಚೆಂದರೆ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ಮಾಡುವ ಚಟುವಟಿಕೆಗಳು ಎಂಬ ಭಾವನೆ ಇದೆ. ಹೀಗಾಗಿ ವಯಸ್ಸಾದವರು ಇಂಥ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸುವುದಿಲ್ಲ. ಯಾವುದಾದರೂ ಸಮಾರಂಭದಲ್ಲಿ ಹೀಗೆ ಯಾರಾದರೂ ವಯಸ್ಸಾದ ವ್ಯಕ್ತಿ ಡಾನ್ಸ್‌ ಮಾಡತೊಡಗಿದರೆ ನಮ್ಮಲ್ಲಿ ಜನ ಅವನನ್ನು ವಿಚಿತ್ರವಾಗಿ ನೋಡುತ್ತಾರೆ. ಅಲ್ಲಿ ಅವನ ಹೆಂಡತಿ ಇದ್ದರಂತೂ ಅವಳಿಗೆ ಕುತ್ತಿಗೆ ಹಿಚುಕಿಕೊಳ್ಳುವಂತೆ ಆಗಿಬಿಡುತ್ತದೆ. “ಏನ್ರಿ ಇದೆಲ್ಲ ಹುಚ್ಚಾಟ ಈ ವಯಸ್ಸಿನಲ್ಲಿ” ಎಂದು ಗದರಿಸಿ ಅವನನ್ನು ಕರೆದು ಕೂರಿಸಿಕೊಳ್ಳುತ್ತಾಳೆ.

ಸರ್ಕಾರ ಅರವತ್ತು ವರ್ಷ ಮೀರಿದವರನ್ನು ಹಿರಿಯ ನಾಗರಿಕರು ಎಂದು ಘೋಷಿಸಿದೆ. ಆದರೆ ನಮ್ಮಲ್ಲಿ ಬಹಳಷ್ಟು ಜನ ನಲವತ್ತು ವರ್ಷ ಮುಟ್ಟಿದ ಕೂಡಲೇ ತಮ್ಮಷ್ಟಕ್ಕೆ ತಾವೇ ಹಿರಿಯ ನಾಗರಿಕರು ಅಂದುಕೊಂಡು ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಿರಿತನಕ್ಕೆ ತಕ್ಕುದಲ್ಲ ಎಂದು ಭಾವಿಸಿ ಕೇವಲ ಅವರಿವರಿಗೆ ಬುದ್ಧಿಹೇಳುವ ಕೆಲಸದಲ್ಲಿ ತೊಡಗುತ್ತಾರೆ. ಆದರೆ ರಾಜಸ್ತಾನದಲ್ಲಿ ಹೀಗಿಲ್ಲ. ಅಲ್ಲಿ ಯಾರಾದರೂ ಹುಡುಗ ಹುಡುಗಿಯರು ಡಾನ್ಸ್‌ ಶುರುವು ಮಾಡಿದರೆ ಸುತ್ತಮುತ್ತ ಇರುವ ಎಲ್ಲ ವಯಸ್ಸಿನವರೂ ಅವರೊಂದಿಗೆ ಕೂಡಿಕೊಂಡು ನೃತ್ಯ ಮಾಡುತ್ತಾರೆ. ಇವರಲ್ಲಿ ಎಪ್ಪತ್ತು ಎಂಬತ್ತು ವರ್ಷಗಳ ವ್ಯಕ್ತಿಗಳೂ ಇರುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಅಲ್ಲಿ ಹೀಗೆ ಒಬ್ಬ ಅಜ್ಜ ಗುಂಪಿನಲ್ಲಿ ಕುಣಿಯಲು ಹೋದರೆ ಅವನ ಹೆಂಡತಿ ಅಜ್ಜಿ ಅದನ್ನು ಸಂಭ್ರಮಿಸುತ್ತಾಳೆ. ಆ ಹುಡುಗ ಹುಡುಗಿಯರು ನೃತ್ಯಕ್ಕೆ ಅವಳನ್ನೂ ಎಳೆದುಕೊಂಡರೆ ತುಸು ನಾಚಿಕೆ ವ್ಯಕ್ತಪಡಿಸಿ ಸಂಭ್ರಮದಿಂದ ಅವಳೂ ಗುಂಪಿನಲ್ಲಿ ಸೇರಿಕೊಳ್ಳುತ್ತಾಳೆ. ಇದು ಅವರ ಜೀವನ ಪ್ರೀತಿ.

ವಿವಿಧ ಬಗೆಯ ಟೆಂಟುಗಳು

 ಮರುಭೂಮಿ ಎಂದರೆ ನಾನು ಕೇವಲ ಮರಳೇ ಇರುತ್ತದೆ ಗಟ್ಟಿನೆಲ ಕಾಣಿಸುವುದೇ ಇಲ್ಲ ಅಂದುಕೊಂಡಿದ್ದೆ. ಅದರೆ ಹಾಗೇನು ಇರುವುದಿಲ್ಲ. ಕೆಲವು ಕಡೆ ನದಿಯಂತೆ ಮತ್ತೆ ಕೆಲವು ಕಡೆ ಕರೆಯಂತೆ ಇನ್ನು ಕೆಲವು ಕಡೆ ಸಮುದ್ರದಂತೆ ಮರಳು ಹರಡಿಕೊಂಡಿರುವುದು ಕಾಣುತ್ತದೆ. ಕೆಲವು ಕಡೆ ಮರಳೇ ಗುಡ್ಡಗಳಂಥ ಕಣಿವೆಗಳಂಥ ರಚನೆಗಳನ್ನು ಮಾಡಿರುವುದೂ ಇದೆ. ಆದರೆ ಅವುಗಳ ಮಧ್ಯೆ ಗಟ್ಟಿ ನೆಲವೂ ಇದ್ದು ಅಲ್ಲಿ ನೀರನ್ನು ಹೆಚ್ಚು ನಿರೀಕ್ಷಿಸದ ಕೆಲವು ಗಿಡಗಂಟಿಗಳು ಬೆಳೆದಿರುತ್ತವೆ ಎಂಬುದು ಇಲ್ಲಿ ನೋಡಿದಾಗ ತಿಳಿಯಿತು.

ಸಂಜೆ ಆಗುತ್ತಿದ್ದಂತೆ ಮರುಳುಗಾಡಿನ ಸುಂದರ ಸೂರ್ಯಾಸ್ತವನ್ನು ನೋಡಿಕೊಂಡು ಅಲ್ಲಿಂದ ಹೊರಟೆ. ಹತ್ತು ನಿಮಿಷದಲ್ಲಿ ನನ್ನ ಜೀಪಿನವನು ನನ್ನನ್ನು ಮುಖ್ಯರಸ್ತೆಗೆ ಮರಳಿ ತಂದ. ಒಂದು ಗಂಟೆಯ ಸವಾರಿ ಎಂದು ಹೇಳುವುದು ಅವರು ನಿಜವಾದರೂ ಆ ಒಂದು ಗಂಟೆಯಲ್ಲಿ ಅವರು ಸವಾರಿ ಮಾಡಿಸುವುದು ಹತ್ತಿಪ್ಪತ್ತು ನಿಮಿಷ ಮಾತ್ರ. ಅಷ್ಟಕ್ಕೇ ಮೂರು ಮೂರೂವರೆ ಸಾವಿರ ಹಣ ತೆಗೆದುಕೊಳ್ಳುತ್ತಾರೆ. ಹೋದವರಿಗೆ ಇದು ವಿಶೇಷ ಅನ್ನಿಸುವುದರಿಂದ ಮತ್ತು ಅದನ್ನು ಬಿಟ್ಟು ಹೋದರೆ ಪ್ರವಾಸ ಅಪೂರ್ಣ ಅನ್ನಿಸುವುದರಿಂದ ಅನಿವಾರ್ಯವಾಗಿ ಕೊಡುತ್ತಾರೆ.

ಅಲ್ಲಿಂದ ಹತ್ತಿರವೇ ಇದ್ದ ನನ್ನ ವಸತಿ ಟೆಂಟಿಗೆ ಹೋದಾಗ ಸಂಜೆ ಏಳರ ಸಮಯ. ಆ ಟೆಂಟಿನ ಮಾಲಿಕ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡ. “ವಿಶೇಷ ಊಟ ಮತ್ತು ಮನರಂಜೆಯ ಅವಶ್ಯಕತೆ ಇದ್ದರೆ ಹೇಳಿ ಬೇರೆಯ ಟೆಂಟಿನಲ್ಲಿ ಅದು ಇದೆ. ನಾನು ಹೇಳಿ ವ್ಯವಸ್ಥೆ ಮಾಡುವೆ” ಎಂದು ಅವನು ಕೇಳಿದ. ಇವೆಲ್ಲವನ್ನು ಬಿಟ್ಟು ಕೇವಲ ವಸತಿಯನ್ನಷ್ಟೇ ನಾನು ಬುಕ್‌ ಮಾಡಿದ್ದೆ. ಸಾಕಷ್ಟು ಆಯಾಸ ಆಗಿದ್ದರಿಂದ ಮತ್ತು ಮನರಂಜನೆಯಾಗಿ ರಾಜಸ್ತಾನಿ ಸಂಗೀತವನ್ನು ಬಹಳಷ್ಟು ಕಡೆ ಆಗಲೆ ನೋಡಿ ಕೇಳಿ ಮಾಡಿದ್ದರಿಂದ ಮತ್ತು ವಿಶೇಷ ಊಟದ ವ್ಯವಸ್ಥೆಯೂ ಬೇಕಾಗಿರಲಿಲ್ಲವಾಗಿದ್ದರಿಂದ ಯಾವುದೂ ಬೇಡ ಎಂದು ಹೇಳಿ ಅವರಲ್ಲಿಯೇ ಸಿಗುವ ಸಾದಾ ಊಟಕ್ಕೆ ಆರ್ಡರ್‌ ಮಾಡಿ ನನ್ನ ಟೆಂಟನ್ನು ಸೇರಿಕೊಂಡೆ.

ಮರುಳುಗಾಡಿನಲ್ಲಿ ಉಳಿದುಕೊಳ್ಳಲು ವಿವಿಧ ಬಗೆಯ ಟೆಂಟ್‌ಗಳು ಇರುತ್ತವೆ. ಸ್ವಿಸ್‌ ಟೆಂಟ್‌, ಲಕ್ಷುರಿ ಟೆಂಟ್‌ ಇತ್ಯಾದಿ. ಸ್ವಿಸ್‌ ಟೆಂಟ್‌ ಎಂದರೆ ಎ. ಸಿ ವೈಗೈರೆ ಇಲ್ಲದ ಮತ್ತು ಬೇಕಾದಾಗ ಬೇರೆಕಡೆ ಎತ್ತಿ ಇಡಬಹುದಾದ ತಾತ್ಕಾಲಿಕ ಟೆಂಟ್‌ಗಳು. ಲಕ್ಷುರಿ ಟೆಂಟ್‌ ಎಂದರೆ ಸುತ್ತಲೂ ಇಟ್ಟಿಗೆಗಳಿಂದ ಕಟ್ಟಿದ ಗೋಡೆ ಇರುವ ಮೇಲೆ ಸಿಮೆಂಟ್‌ ತಗಡು ಅಥವಾ ಕಲ್ಲು ಹಾಕಿರುವ ಮತ್ತು ಒಳಗಿನಿಂದ ಬಟ್ಟೆ ಹಾಕಿ ಅಲಂಕರಿಸಿರುವ ಟೆಂಟ್‌ಗಳು. ಇಲ್ಲಿ ಎ. ಸಿ ವೈಗೈರೆ ಸೌಲಭ್ಯಗಳು ಇರುತ್ತವೆ. ಇವುಗಳ ಜೊತೆಗೆ ಇಲ್ಲಿ ಮೋಜು ಮಜಾ ಮಾಡಲಿಕ್ಕಾಗಿಯೇ ಬರುವವರಿಗೆ ಪಂಚತಾರಾ ಹೋಟೆಲ್‌ಗಳಂಥ ಐಷಾರಾಮಿ ಹೋಟೆಲ್‌ಗಳು ಕೂಡ ಇವೆ. ಬರುವವರು ತಮ್ಮ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಉದ್ದೇಶಕ್ಕೆ ಅನುಗುಣವಾಗಿ ಇವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 

ಸಾಮಾನ್ಯವಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ಗುಜರಾತಿನ ಜನ ಇಲ್ಲಿಗೆ ಮೋಜು ಮಾಡಲು ತಂಡೋಪತಂಡವಾಗಿ ಬರುವುದರಿಂದ ಆ ಕಾಲದಲ್ಲಿ ಟೆಂಟ್‌ಗಳ ಬೆಲೆ ಮತ್ತು ಸವಾರಿಗಳ ಬೆಲೆ ದುಪ್ಪಟ್ಟಾಗುವುದೆಂದು ನನ್ನ ಕಾರು ಚಾಲಕ ಮಾಹಿತಿ ನೀಡಿದ. ನಾನು ಹೋದ ತಿಂಗಳು ಅಂತಹ ತಿಂಗಳು ಆಗಿರಲಿಲ್ಲವಾದ್ದರಿಂದ ಹೆಚ್ಚುವರಿ ಹೊರೆ ನನಗೆ ಬೀಳಲಿಲ್ಲ. ನಾನು ಉಳಿದುಕೊಂಡ ಕ್ಯಾಂಪ್‌ ಸುಮಾರು ಇಪ್ಪತ್ತು ಮೂವತ್ತು ಲಕ್ಷುರಿ ಟೆಂಟ್‌ಗಳನ್ನೂ ಐವತ್ತರಷ್ಟು ಸ್ವಿಸ್‌ ಟಂಟ್‌ಗಳನ್ನೂ ಹೊಂದಿರುವ ಒಂದು ಸಾಮಾನ್ಯ ಕ್ಯಾಂಪ್‌ ಆಗಿತ್ತು. ದಿನವೆಲ್ಲ ಪ್ರಯಾಣ ಮತ್ತು ಸುತ್ತಾಟದ ಕಾರಣದಿಂದ ದಣಿವಾದ ಕಾರಣ ಊಟಮಾಡಿ ಮಲಗುವ ಮೂಲಕ ಅಂದಿನ ಪ್ರಯಾಣಕ್ಕೆ ಕೊನೆಹಾಡಿದೆ. ಬೆಳಿಗ್ಗೆ ಥಾರ್‌ ಮರುಭೂಮಿಯಲ್ಲಿಯೇ ಹಾದು ಅಲ್ಲಿಂದ ಸುಮಾರು ಅರವತ್ತು ಕಿ.ಮೀ. ದೂರದ ಭಾರತ ಪಾಕಿಸ್ತಾನ ಗಡಿಯನ್ನು ನೋಡಲು ಮತ್ತು ೧೯೭೧ರ ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆದ ಸ್ಥಳದಲ್ಲಿರುವ ಯುದ್ಧಸ್ಥಳ ಸ್ಮಾರಕವನ್ನು ನೋಡಲು ಹೋಗಬೇಕಾಗಿದ್ದರಿಂದ ರಾತ್ರಿ ಮನರಂಜನೆ ಇತ್ಯಾದಿಗಳಲ್ಲಿ ಹೊತ್ತು ಕಳೆಯಲು ಮನಸ್ಸಾಗಲಿಲ್ಲ. ಮರುದಿನ ಬೆಳಿಗ್ಗೆ ಬೆಳಗಿನ ಸೂರ್ಯನ ಬಿಸಿಲಲ್ಲಿ ಕಾಣುವ ನಾನು ಉಳಿದಿದ್ದ ಕ್ಯಾಪಿನ ವಿವಿದ ಟೆಂಟುಗಳ ಪೋಟೋ ತೆಗೆದುಕೊಂಡು ಗಡಿಭಾಗಕ್ಕೆ ಹೊರಡು ಕಾರು ಹತ್ತಿದೆ.

ಕೈಕೊಟ್ಟ ಬಸ್ಸು ಮತ್ತು ಕೈಬಿಟ್ಟ ಕನ್ನಡಕಗಳ ಕಥೆ

ಗಡಿಭಾಗಕ್ಕೆ ಹೋಗಿ ಅವೆರಡೂ ಸ್ಥಳಗಳನ್ನೂ ನೋಡಿಕೊಂಡು ಜೈಸಲ್‌ಮೇರ್‌ಗೆ ಮರಳಿ ಬಂದಾಗ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯವಾಗಿತ್ತು. ಜೈಸಲ್‌ಮೇರ್‌ ನಗರದಲ್ಲಿ ನೋಡಲು ಮುಖ್ಯವಾಗಿ ಎರಡು ಹವೇಲಿಗಳು ಮತ್ತು ಒಂದು ಪುರಾತನ ಅರಮೆನ ಇತ್ತು. ಇವೆಲ್ಲವನ್ನೂ ನೋಡಲು ಎರಡು ಮೂರು ಗಂಟೆ ಬೇಕಾಗಿತ್ತು. ಈ ಮಧ್ಯೆ ನಾನು ರಾತ್ರಿ ಹತ್ತು ಗಂಟೆಗೆ ಅಲ್ಲಿಂದ ಬಿಕನೇರ್‌ಗೆ ಹೊರಡಲು ಬುಕ್‌ ಮಾಡಿಕೊಂಡಿದ್ದ ಬಸ್‌ ರದ್ದಾಗಿರುವುದಾಗಿಯೂ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿ ಹಣ ಹಿಂತಿರುಗಿಸುತ್ತಿರುವುದಾಗಿ ಬಸ್‌ ಏಜನ್ಸಿಯವರು ನನಗೆ ಫೋನ್‌ ಮಾಡಿ ಒಂದು ಟೆನ್ಸನ್‌ ಶುರುವು ಮಾಡಿದರು .

ಏಕೆಂದರೆ ನನ್ನ ಇಡೀ ಪ್ರವಾಸದಲ್ಲಿ ಪ್ರಯಾಣದ ತೊಂದರೆ ಇದ್ದದ್ದೆ ಜೈಸಲ್‌ ಮೇರ್‌ನಿಂದ ಬಿಕನೇರ್‌ಗೆ. ಅಲ್ಲಿ ಇರುವುದು ಒಂದೇ ರೈಲಾಗಿದ್ದು ಅದು ಮಧ್ಯರಾತ್ರಿ ಹೊರಡುತ್ತಿತ್ತು. ನನಗೆ ಅನುಕೂಲವಿರಲಿಲ್ಲ. ರಾಜಸ್ತಾನ ಸರ್ಕಾರದ ಬಸ್‌ ಕೂಡ ಅಲ್ಲಿ ರಾತ್ರಿ ಸಂಚಾರಕ್ಕೆ ಇರಲಿಲ್ಲ. ಇರುವ ಒಂದೇ ಒಂದು ಖಾಸಗೀ ಬಸ್‌ನ್ನು ಬುಕ್‌ ಮಾಡಿಕೊಂಡರೆ ಅದೂ ಕೊನೆಯ ಗಳಿಗೆಯಲ್ಲಿ ರದ್ದಾಯಿತು. ಏನುಮಾಡುವುದೆಂದು ತೋಚದೆ ಕೂಡಲೇ ನನ್ನ ಕಾರಿನ ಡ್ರೈವರ್‌ ಸಹಾಯ ಪಡೆದು ಅವನಿಗೆ ಗೊತ್ತಿದ್ದ ಬಸ್‌ ಮಾಲಿಕನೊಬ್ಬನನ್ನು ಸಂಪರ್ಕಿಸಿದೆ. ಎ. ಸಿ ಬಸ್‌ ಇಲ್ಲವೆಂದೂ ಇರುವುದು ಒಂದೇ ಒಂದು ನಾನ್‌ ಎಸಿ ಬಸ್‌ ಎಂದೂ ಸ್ಲೀಪರ್‌ಗೆ ಒಂದು ಸೀಟಿಗೆ ೧೨೦೦ ರೂಪಾಯಿ ಅಗುತ್ತದೆ ಎಂದೂ ಆತ ಹೇಳಿದ. ಅನಗೆ ಗತಿಯಿಲ್ಲ; ಅವನಿಗೆ ಮತಿಯಿಲ್ಲ. ಒಪ್ಪಿಕೊಂಡೆ. ಈ ಖಾಸಗೀ ಬಸ್‌ಗಳಿಗೆ ಸರ್ಕಾರಿ ಬಸ್ಸುಗಳಂತೆ ಒಂದು ನಿರ್ಧಿಷ್ಟ ದರ ಇರುವುದಿಲ್ಲ. ಜನರ ಒತ್ತಡ ಹೇಗೆಲ್ಲ ಇರುತ್ತದೆಯೋ ಹಾಗೆಲ್ಲ ಅವರ ರೇಟು ಕೂಡ ಬದಲಾಗುತ್ತಿರುತ್ತದೆ. ಹೀಗಾಗಿಯೇ ಕೇವಲ ೬೦೦ ರೂಪಾಯಿಗಳಿಗೆ ಎಸಿ ಬಸ್‌ ಸೀಟನ್ನೇ ಬುಕ್‌ ಮಾಡಿಕೊಂಡಿದ್ದ ನಾನು ಈಗ ಅದರ ಎರಡರಷ್ಟು ಹಣ ನೀಡಿಯೂ ನಾನ್‌ ಎ.ಸಿ. ಬಸ್‌ ನಲ್ಲಿ ಸೀಟ್‌ ಖಾತ್ರಿಪಡಿಸಿಕೊಳ್ಳಬೇಕಾಯಿತು.

ಬಸ್‌ ಬುಕಿಂಗ್‌ ಖಾತ್ರಿ ಆದಮೇಲೆ ಒಂದಿಷ್ಟು ನಿಶ್ಚಿಂತೆ ಅನ್ನಿಸಿತಾದರೂ ಅದು ಹೊರಡುವುದು ರಾತ್ರಿ ಹತ್ತು ಗಂಟೆಗೆ. ಅಲ್ಲಿಯತನಕ ಕೋಟೆ ಇತ್ಯಾದಿ ನೋಡಬಹುದಾದರೂ ಕಾರಿನವನು ಅಷ್ಟುಹೊತ್ತು ಇರಲು ಸಾಧ್ಯವಿರಲಿಲ್ಲ. ಲಗೇಜ್‌ ಇಡುವುದು ಎಲ್ಲಿ ಎಂಬ ಚಿಂತೆ ಶುರುವಾಯಿತು. ಕೊನೆಗೆ ನನ್ನ ಕಾರಿನವನೇ, “ಕೋಟೆಯ ಪಕ್ಕದಲ್ಲಿಯೇ ನನ್ನ ಅಣ್ಣನ ಮಗನ ಹೊಟೆಲ್‌ ಇದೆ ಅಲ್ಲಿ ನಿಮ್ಮ ಲಗೇಜ್‌ ಇಡಲು ವ್ಯವಸ್ಥೆ ಮಾಡುತ್ತೇನೆ ನೀವು ಎಲ್ಲ ತಿರುಗಾಟ ಮುಗಿಸಿ ರಾತ್ರಿಯ ಊಟವನ್ನೂ ಮುಗಿಸಿ, ಬಸ್‌ ಹೊರಡುವ ವೇಳೆಗೆ ಒಂದು ಆಟೋ ತೆಗೆದುಕೊಂಡು ಬಸ್‌ ಹಿಡಿಯಬಹುದೆಂದು” ಎಂದು ಸಲಹೆ ನೀಡಿದ. ಮನಗೂ ಅದೇ ಸರಿ ಅನ್ನಿಸಿ ಜೈಸಲ್‌ ಮೇರ್‌ ನಗರ ತಲುಪುತ್ತಿದ್ದಂತೆಯೇ ಮೊದಲು ಒಂದು ಹವೇಲಿ ನೋಡಲು ಹೋದೆ. ಹವೇಲಿ ಎಂದರೆ ಉತ್ತರ ಭಾರತದಲ್ಲಿ ವಿಶೇಷವಾಗಿ ರಾಜಸ್ತಾನ ಭಾಗದಲ್ಲಿ ಅಲ್ಲಿನ ಸಾಂಪ್ರದಾಯಿಕವಾದ ಕಲಾ ಶೈಲಿಯಲ್ಲಿ ರಚನೆಯಾಗಿರುವ ವಿಶೇಷ ಕಟ್ಟಡಗಳು. ರಾಜಸ್ತಾನದ ಬಹುತೇಕ ಎಲ್ಲ ನಗರಗಳಲ್ಲಿಯೂ ಇಂತಹ ಹವೇಲಿಗಳು ನಮಗೆ ನೋಡಸಿಗುತ್ತವೆ.

ನಾನು ನೋಡಿದ್ದು ಒಂದು ಮಂದಿರ ಪ್ಯಾಲೇಸ್‌ ಮ್ಯೂಜಿಯಂ. ಅದು ಜೈಸಲ್‌ ಮೇರ್‌ ರಾಜಕುಮಾರ ಮಹಾರ್‌ವಾರ್‌ ಜಹವೀರ್‌ ಸಿಂಗ್‌ ಅವರನ್ನು ೧೯೧೭ ರಲ್ಲಿ ಮದುವೆಯಾದ ಬುಂಡಿ ರಾಜಕುಮಾರಿ ಸಾಹಿಬಾ ಕಲ್ಯಾಣ್‌ ಕನ್ವರ್‌ ಅವರ ನೆನಪಿನಲ್ಲಿ ಮಾಡಿರುವಂಥದ್ದು. ಈ ವಸ್ತುಸಂಗ್ರಹಾಲಯದಲ್ಲಿ ಕೂಡ ಎಲ್ಲ ಅರಮನೆಗಳ ವಸ್ತು ಸಂಗ್ರಹಾಲಯದಲ್ಲಿರುವಂತೆ ರಾಜ ಮನೆತನದ ವಿವಿಧ ರಾಜರ ವಂಶಾವಳಿ, ಆಯುಧ ಬಟ್ಟೆ ಬರೆ ಇತ್ಯಾದಿ ಇರುವುದು ಸಾಮಾನ್ಯವಾದರೂ ಬೇರೆ ಅರಮನೆಗಳಲ್ಲಿ ಕಾಣದ ಒಂದು ಅಂಶ ಕಂಡಿತು. ಅದೆಂದರೆ ವಿವಿಧ ಮಾದರಿಯ ಬೀಗಗಳ ಸಂಗ್ರಹ. ಈ ಸಂಗ್ರಹದಲ್ಲಿ ಅಲ್ಲಿಂದ ಇಲ್ಲಿಯ ತನಕ ಬಳಸಲ್ಪಟ್ಟ ವೈವಿಧ್ಯಮಯ ಬೀಗಗಳು ನೋಡಸಿಗುತ್ತವೆ. ಹವೇಲಿಯ ಹೊರ ನೋಟ ಆಕರ್ಷಕವಾಗಿದ್ದು ತನ್ನ ಕಲಾ ಶ್ರೀಮಂತಿಕೆಯನ್ನು ಮೆರೆಯುತ್ತಿದೆ. ಇದರ ಒಂದು ಭಾಗವನ್ನು ಅದ್ದೂರಿ ಹೊಟೆಲ್‌ ಆಗಿ ಪರಿವರ್ತಿಸಿರುವುದರಿಂದ ಅಲ್ಲಿ ನನಗೆ ಪ್ರವೇಶ ಸಾಧ್ಯವಾಗಲಿಲ್ಲ. ಉಳಿದ ಭಾಗವನ್ನೆಲ್ಲ ಸುತ್ತಿ ಬಂದ ನಾನು ಹೊರಗೆ ಬಂದು ಅಲ್ಲಿನ ಸುಂದರ ವಾದ ದೃಶ್ಯದಲ್ಲಿ ಒಂದು ಸೆಲ್ಪಿ ತೆಗೆದುಕೊಳ್ಳುವಾಗ ನನ್ನ ಕನ್ನಡಕವನ್ನೆ ಬಿಟ್ಟುಬಂದುಬಿಟ್ಟೆ!

ಸಾಮಾನ್ಯವಾಗಿ ನಾನು ಪ್ರವಾಸಕ್ಕೆ ಹೋಗುವಾಗ ಎರಡು ಕನ್ನಡಕಗಳನ್ನು ಒಯ್ಯುತ್ತೇನೆ. ಒಂದು ʻಅನಿವಾರ್ಯ ಕನ್ನಡಕʼ ಇನ್ನೊಂದು ʻಅದ್ದೂರಿ ಕನ್ನಡಕʼ. ʻಅನಿವಾರ್ಯ ಕನ್ನಡಕʼ ಎಂದರೆ ಕಣ್ಣು ಸರಿಯಾಗಿ ಕಾಣದ್ದಕ್ಕೆ ಬಳಸುವ ಕನ್ನಡಕ. ʻಅದ್ದೂರಿ ಕನ್ನಡಕʼ ಎಂದರೆ ಫೋಟೋ ತೆಗೆದುಕೊಳ್ಳಲು ಬಳಸುವ ಬಣ್ಣದ ಕನ್ನಡಕ. ಆದರೆ ಈ ಸಲ ಎರಡುʻ ಅನಿವಾರ್ಯ ಕನ್ನಡಕʼ ಮತ್ತು ಒಂದು ʻಅದ್ದೂರಿ ಕನ್ನಡಕʼ ಹೀಗೆ ಒಟ್ಟು ಮೂರು ಕನ್ನಡಕ ಒಯ್ದಿದ್ದೆ. ಏಕೆಂದರೆ ಅದ್ದೂರಿ ಕನ್ನಡಕ ಎಲ್ಲಿಯಾದರೂ ಕಳೆದರೆ ಸಮಸ್ಯೆಯೇನೂ ಆಗುವುದಿಲ್ಲ. ಅವು ಎಲ್ಲೆಂದರಲ್ಲಿ ಸಿಗುತ್ತವೆ. ಆದರೆ ಅನಿವಾರ್ಯ ಕನ್ನಡಕ ಕಳೆದರೆ ಸಮಸ್ಯೆ ಶುರುವಾಗುತ್ತದೆ. ಕಣ್ಣುಪರೀಕ್ಷೆ ಮಾಡಿಸಿ ಸರಿಯಾದ ನಂಬರ್‌ ಕನ್ನಡಕ ಪಡೆಯುವ ಅನಿವಾರ್ಯತೆ ಉಂಟಾಗುತ್ತದೆ. ಈ ಸಾರಿ ಎರಡು ಇಂತಹ ಅನಿವಾರ್ಯ ಕನ್ನಡಕ ಏಕೆ ಒಯ್ದೆ? ಬಹುಶಃ ಒಂದು ಕಳೆಯುತ್ತದೆ ಎಂದು ನನ್ನ ಒಳಮನಸ್ಸಿಗೆ ಮೊದಲೇ ಗೊತ್ತಾಗಿತ್ತೋ ಎನೊ.. ಯಾರಿಗೆ ಗೊತ್ತು?  ಈ ಸಾರಿ ಒಯ್ದಿದ್ದ ಈ ಎರಡು ಅನಿವಾರ್ಯ ಕನ್ನಡಕಗಳಲ್ಲಿ ಕಾಯ್ದಿಟ್ಟ ಕನ್ನಡಕವನ್ನು ಇದುವರೆಗೂ ಮುಟ್ಟಿರಲಿಲ್ಲ.

ಆದರೆ ಈ ಹವೇಲಿಯ ಮುಂದೆ ನಿಂತು ಸುಂದರ ಫೋಟೋ ತೆಗೆದುಕೊಳ್ಳಲೆಂದು ನನ್ನ ಮಾಮೂಲಿ ಕನ್ನಡಕವನ್ನು ಅಲ್ಲಿನ ಕಲ್ಲಿನ ಮೇಲೆ ಇಟ್ಟು ಬಣ್ಣದ ಕನ್ನಡಕ ಹಾಕಿಕೊಂಡೆ. ಫೋಟೋ ತೆಗೆದುಕೊಂಡ ಮೇಲೆ ಅದನ್ನು ತೆಗೆದುಕೊಳ್ಳುವುದನ್ನು ಅಲ್ಲಿಯೇ ಮರೆತು ಬಂದು ಬಿಟ್ಟೆ! ಅಲ್ಲಿಂದ ಹೊರಟು ನನ್ನ ಲಗೇಜೆಲ್ಲವನ್ನೂ ಹೊಟೆಲ್‌ನಲ್ಲಿ ಇಟ್ಟು ಜೈಸಲ್‌ ಮೇರ್‌ ಕೋಟೆಯ ಹತ್ತಿರ ನನ್ನನ್ನು ಬಿಟ್ಟುಹೋಗಲು ಕಾರಿನವನು ಬಂದಾಗ, ನಾನು ಕಾರಿನಿಂದ ಇಳಿಯುವಾಗ ಈ ಕನ್ನಡಕದ ನೆನಪಾಯಿತಾದರೂ ಅಲ್ಲಿಂದ ಮತ್ತೆ ವಾವಾಸ್ಸು ಹೋಗುವುದು ಬಹಳ ದೂರವಾಗಿದ್ದರಿಂದ ಮತ್ತು ಇನ್ನೊಂದು ಕಾಯ್ದಿಟ್ಟ ಕನ್ನಡಿಕ ಸೂಟ್‌ಕೇಸ್‌ನಲ್ಲಿ ಇದ್ದದ್ದರಿಂದ ಕಾರಿನವನ ಲೆಕ್ಕಾಚಾರ ಚುಪ್ತಾ ಮಾಡಿ ಕಳಿಸಿ ಕೋಟೆ ನೋಡಲು ಹೆಜ್ಜೆ ಹಾಕಿದೆ.

ಜೈಸಲ್‌ಮೇರ್‌ ಕೋಟೆ ಮತ್ತು ಬೀದಿಗಳು

ಜೈಸಲ್‌ಮೇರ್‌ ನಗರದ ಮಧ್ಯಭಾಗದಲ್ಲಿರುವ ಕೋಟೆ ವಿಸ್ತಾರದ ದೃಷ್ಟಿಯಿಂದ ಬಹಳ ದೊಡ್ಡದು. ಇದಕ್ಕಿಂತ ವಿಸ್ತಾರವಾದ ಜಾಗದಲ್ಲಿರುವ ನಾನು ನೋಡಿರುವ ಕೋಟೆ ಎಂದರೆ ನಮ್ಮ ಬೀದರಿನ ಕೋಟೆ ಮಾತ್ರ. ಕೆಲವು ಕೋಟೆಗಳ ಒಳಗೇ ಅರಮನೆ ಒಳಗೇ ಕೆಲವು ಅಂಗಡಿ ಮುಂಗಟ್ಟುಗಳು ಕೆಲವು ಮನೆಗಳು ಇರುವುದು ಉಂಟು. ಆದರೆ ಜೈಸಲ್‌ಮೇರ್‌ನ ಈ ಕೋಟೆಯ ವಿಶೇಷತೆ ಏನೆಂದರೆ ಈ ಕೋಟೆಯ ಒಳಗೆ ಒಂದು ಊರೇ ಇದೆ. ಬೆಟ್ಟದ ಮೇಲಿನ ಈ ಕೋಟೆಯ ಒಳಗೆ ಕಿರಿದಾದ ದಾರಿಗಳು ಅನೇಕ ಇದ್ದು ಅವುಗಳ ಎಡಬಲದಲ್ಲಿ ನೂರಾರು ಮನೆಗಳಿವೆ. ನಾನು ಕೋಟೆಯ ಮುಖ್ಯದ್ವಾರದ ಬಳಿ ಪ್ರವೇಶ ಮಾಡುವಾಗ ಅಲ್ಲಿನ ಸೆಕ್ಯೂರಿಟಿಗೆ ಟಿಕೇಟ್‌ ಎಲ್ಲಿ ಎಂದು ಕೇಳಿದೆ. ಅವನು ಮುಂದೆ ಹೋಗಿ ಎಂದು ನನಗೆ ಕೈಸನ್ನೆ ಮಾಡಿದ. ಮುಂದಿನ ಗೇಟಿನಲ್ಲಿಯೂ ಕೇಳಿದೆ. ಅಲ್ಲಿಯೂ ಮುಂದೆ ಹೋಗಲು ನನಗೆ ಸೂಚನೆ ನೀಡಿದರು.

ಸಾಮಾನ್ಯವಾಗಿ ಕೋಟೆಯ ಪ್ರವೇಶ ಮಾಡುವಾಗಲೇ ಉಳಿದ ಕಡೆ ಟಿಕೇಟ್‌ ಪಡೆಯಬೇಕು ಇಲ್ಲೇಕೆ ಹೀಗೆ ಎಂದು ಕೊಳ್ಳುತ್ತಾ ಎರಡೂ ಮುಖ್ಯದ್ವಾರಗಳನ್ನು ದಾಡಿ ಮುಂದೆ ಹೋಗಿ ನೋಡಿದರೆ ಅಲ್ಲಿ ಸಂತೆಯೇ ನಡೆಯುತ್ತಿತ್ತು. ಇಡೀ ಊರೇ ಇತ್ತು! ಕೋಟೆಯ ಒಳಗೆ ವಾಹನಗಳು ಹೋಗುವುದೂ ಬರುವುದು ಮಾಡುತ್ತಿದ್ದವು. ಆಗ ತಿಳಿಯಿತು ಟಿಕೆಟ್‌ ಯಾಕೆ ಇಲ್ಲ ಎಂದು. ಕೋಟೆಯ ಒಳಗೆ ಹೋಗಿ ಅಲ್ಲಿ ಮಹಾರಾಜರ ಅರಮನೆಗೆ ಹತ್ತಿ ಹೋಗಬೇಕು. ಅಲ್ಲಿ ಮಾತ್ರ ಟಿಕೆಟ್‌ ವ್ಯವಸ್ಥೆ ಇದೆ. ಟಿಕೆಟ್‌ ಪಡೆದು ನಾನು ಒಳಹೋಗಿ ಅರಮನೆಯ ಎಲ್ಲ ಭಾಗಗಳನ್ನೂ ನೋಡಿದೆ. ಉಳಿದೆಲ್ಲ ಅರಮನೆಗಳಂತೆಯೇ ಇದೂ ಇದ್ದು ವಿಶೇಷ ಅನ್ನಿಸುವಂತೆ ಬೇರೆ ಏನೂ ಕಾಣಿಸಲಿಲ್ಲ. ಅರಮನೆಯ ತುದಿಗೆ ಹೋದಾಗ ಎಲ್ಲ ಅರಮನೆಗಳಲ್ಲಿ ಇರುವಂತೆ ಇಡೀ ಕೋಟೆಯನ್ನು ಕೋಟೆಯ ಹೊರಗಿನ ಊರನ್ನು ನೋಡಲು ವ್ಯವಸ್ಥೆ ಇದೆ. ಅಲ್ಲಿಂದ ಇಡೀ ಜೈಸಲ್‌ಮೇರ್‌ ನಗರ ಬಹಳ ಸುಂದರವಾಗಿ ಕಾಣುತ್ತದೆ.  ನೋಡಿ ಒಂದಿಷ್ಟು ಹೊತ್ತು ಕೂತಿದ್ದು ಅಲ್ಲಿಂದ ಕೆಳಗಿಳಿದು ಬಂದೆ.

ನನ್ನ ಬಸ್ಸು ಹೊರಡಲು ಇನ್ನೂ ಮೂರು ತಾಸುಗಳ ಸಮಯವಿತ್ತು. ಹೀಗೆ ಸಮಯ ಸಿಕ್ಕಾಗ ಹೊಸದಾಗಿ ಹೋದ ಊರುಗಳಲ್ಲಿ ಸುಮ್ಮನೆ ಬೀದಿ ಬೀದಿ ಸುತ್ತುವುದು, ಏನಾದರೂ ಹೊಸದು ಕಂಡರೆ ನೋಡುವುದು ನನ್ನ ಪ್ರೀತಿಯ ಹವ್ಯಾಸಗಳಲ್ಲಿ ಒಂದು. ಹಾಗೆ ಕೋಟೆಯಿಂದ ಕೆಳಗಿಳಿದು ಬಂದು ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಒಂದು ಚಹಾ ಕುಡಿದು ಹೊರಟೆ. ಜೈಸಲ್‌ಮೇರ್‌ನ ಕೆಲವು ವಿಶಾಲವಾದ ರಸ್ತೆಗಳು ವೃತ್ತಗಳನ್ನು ಹಾದು ಹೋಗುವಾಗ ರಸ್ತೆಬದಿ ಕಲ್ಲಿನ ವಿವಿಧ ಮೂರ್ತಿಗಳನ್ನು ಇಟ್ಟುಕೊಂಡು ಮಾರುತ್ತಿದ್ದ ಎರಡು ಮೂರು ಅಂಗಡಿಗಳು ಕಂಡವು. ಅವುಗಳಲ್ಲಿ ಹಿಂದೂ ಪುರಾಣದ ಬಹುತೇಕ ಎಲ್ಲ ದೇವರ ಮೂರ್ತಿಗಳೂ ಇದ್ದವು. ಮರುಭೂಮಿಯಲ್ಲಿ ಮಳೆಬೆಳೆ ಇಲ್ಲ. ಕಲ್ಲಿನ ಮೂರ್ತಿಗಳು, ಪಿಂಗಾಣಿ ಗೃಹ ಉಪಯೋಗಿ ಸಾಧನಗಳನ್ನು ಮಾಡುವುದೇ ಇಲ್ಲಿನ ಸಾಮಾನ್ಯ ಜನರ ಜೀವನಾಧಾರ ಉದ್ಯೋಗ ಎಂದು ಮೊದಲೇ ಹೇಳಿದ್ದೇನೆ. ಅವುಗಳ ಉದಾಹರಣೆ ಇಲ್ಲಿ ನೋಡಲು ಸಿಕ್ಕಿತು.

ಸುತ್ತುತ್ತಾ ಒಂದು ಉದ್ಯಾನವನಕ್ಕೆ ಬಂದು ಅದುವರೆಗಿನ ತಿರುಗಾಟದಿಂದ ಆಗಿದ್ದ ಸುಸ್ತನ್ನು ನಿವಾರಿಸಿಕೊಳ್ಳಲು ಕೂತೆ. ಅಲ್ಲಿಯೇ ಕೆಲವು ಹುಡುಗಿಯರು ಚೆಂದ ಚೆಂದ ಡ್ರೆಸ್‌ ಮಾಡಿಕೊಂಡು ಬಂದು ನೃತ್ಯಮಾಡಿ ರೀಲ್ಸ್‌ ಮಾಡುತ್ತಿದ್ದರು. ದಣಿದ ಕಾಲುಗಳಿಗೆ ವಿಶ್ರಾಂತಿಯೂ ಆಯಿತು ಕಣ್ಣಿಗೆ ಹಬ್ಬವೂ ಅಯಿತು ಎಂದು ಅವರಿಗೆ ಸಂಕೋಚವಾಗದಂತೆ ಒಂದಿಷ್ಟು ದೂರ ಹೋಗಿ ಕುಳಿತು ಮಲಗಿ ಕಾಲಕಳೆದು ರಾತ್ರಿಯ ಊಟದ ಶಾಸ್ತ್ರ ಪೂರೈಸಿ ಗೊತ್ತು ಮಾಡಿದ್ದ ಬಸ್‌ ಹತ್ತಿ ಮುಂದಿನ ಮತ್ತು ನನ್ನ ರಾಜಸ್ತಾನ ಪ್ರವಾಸದ ಕೊನೆಯ ತಾಣವಾದ ಬಿಕನೇರ್‌ ಪ್ರವಾಸದ ಯೋಜನೆ ಮಾಡುತ್ತಾ ಮಲಗಿಕೊಂಡೆ. ರಾಜಸ್ತಾನದ ನನ್ನ ಪ್ರವಾಸದಲ್ಲಿ ಈ ಮರುಭೂಮಿಯ ಸುತ್ತಾಟ ನೀಡಿದ ಅನುಭವ ಬಹಳಷ್ಟು ವಿಶಿಷ್ಟವಾದದ್ದು ಎಂದು ಬೇರೆ ಹೇಳಬೇಕಾಗಿಲ್ಲ.

****

ಡಾ ರಾಜೇಂದ್ರ ಬುರಡಿಕಟ್ಟಿ

೧೬-೧೦-೨೦೨೬