Friday, March 13, 2026

ಅಂಕವ್ಯಸನʼದ ಅವಾಂತರಗಳು… (ಭಾಗ-2)

 ʻಅಂಕವ್ಯಸನʼದ ಅವಾಂತರಗಳು… (ಭಾಗ-2)


(ಈ ಲೇಖನದ ಮೊದಲನೆಯ ಭಾಗವನ್ನು ಓದದೇ ಇರುವವರು ಅದನ್ನು ಓದಿಕೊಂಡು ಇದನ್ನು ಓದುವುದು ಸೂಕ್ತ. ಅದರ ಲಿಂಕ್‌ ಇಲ್ಲಿದೆ:

https://buradikatti.blogspot.com/2026/02/blog-post.html

ಆ ಭಾಗದ ಆರಂಭದಲ್ಲಿ ಓದುಗರಿಗೆ ಕೊಟ್ಟ ಈ ಕೆಳಗಿನ ಸೂಚನೆ ಲೇಖನದ ಈ ಭಾಗಕ್ಕೂ ಅನ್ವಯಿಸುತ್ತದೆ:

 (Note: Purpose of this article is do something to educate the erring ones and to prevent the system from derailing and not to hinder or humiliate anything or anyone.)

ಬರದ ಮನಸುಗಳಿಗೆ ಬರೆಹಾಕುವಾಗ ಮಾತ್ರ

ದಯವಿಟ್ಟು ಮುಗ್ದ ಕಣ್ಣುಗಳ

ನೆನಪಿನಲ್ಲಿಡು

ಇವು ಕವಯಿತ್ರಿ ದೀಪ್ತಿ ಭದ್ರಾವತಿ ಅವರ ಕವಿತೆಯೊಂದರ ಮೂರು ಸಾಲುಗಳು. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಟುಜಾಡ್ಯವಾಗುತ್ತಿರುವ ಅಂಕವ್ಯಸನವನ್ನು ಕುರಿತು ಯೋಚಿಸುವಾಗ ನನಗೆ ತಕ್ಷಣಕ್ಕೆ ಸಾಲುಗಳು ನೆನಪಿಗೆ ಬಂದವು. ಇಲ್ಲಿ ಬರೆಹಾಕುವವರು ಯಾರು ಮುಗ್ಧಕಣ್ಣುಗಳು ಯಾರವು ಎಂದು ಬಿಡಿಸಿ ಹೇಳುವ ಅಗತ್ಯ ಇಲ್ಲವೇನೋ.

ಶೇಕಡಾ ನೂರು ಫಲಿತಾಂಶ ಪಡೆಯುವುದು ಒಂದು ರೀತಿಯ ಮಾದಕ ವ್ಯಸನವಿದ್ದಂತೆ (Drug Addiction), ಒಂದು ಸಲ ಅದಕ್ಕೆ ದಾಸರಾದವರು ಅದರಿಂದ ತಪ್ಪಿಸಿಕೊಳ್ಳುವುದು ಎಷ್ಟು ಕಷ್ಟ ಮತ್ತು ಅದನ್ನು ಉಳಿಸಿಕೊಳ್ಳಲು ಏನೆಲ್ಲ ಮಾಡಬಾರದ ಚಟುವಟಿಕೆಗಳಿಗೆ ತೊಡಗುತ್ತಾರೆ ಎಂಬುದನ್ನು ಲೇಖನದ ಹಿಂದಿನ ಭಾಗದಲ್ಲಿ ಕೆಲವು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಲೇಖನದ ಭಾಗವನ್ನು ಬರೆಯುವ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಬಂಧದ ದುರ್ಘಟನೆಯೊಂದು ನಡೆದದ್ದು ಸುದ್ಧಿಯಾಗಿದೆ. ಒಂದು ಶಾಲೆಯಲ್ಲಿ ಸುಮಾರು ರಾತ್ರಿ ಒಂಬತ್ತರ ತನಕ ತರಗತಿ ತಗೆದುಕೊಂಡಿದ್ದಾರೆ. ಆಮೇಲೆ ಮಕ್ಕಳನ್ನು ಬಿಟ್ಟಿದ್ದಾರೆ. ಮನೆಗೆ ಹೋಗಬೇಕಾದಾಗ ಒಬ್ಬ ವಿದ್ಯಾರ್ಥಿ ಕೊಲೆಯಾಗಿದ್ದಾನೆ. “ಕೊಲೆಯಾಗಿದ್ದು ಶಾಲೆಯ ಆವರಣದಲ್ಲಿ ಅಲ್ಲ; ಅದಕ್ಕೂ ಶಾಲೆಗೂ ಯಾವುದೇ ಸಂಬಂಧವಿಲ್ಲ. ಅದೊಂದು ನಡೆಯಬಾರದಿದ್ದ ಘಟನೆ. ನಡೆದುಬಿಟ್ಟಿತು. ಅದಕ್ಕೆ ನಮ್ಮ ವಿಷಾಧವಿದೆಯಾದರೂ ಅದಕ್ಕೆ ನಾವು ಕಾರಣರಲ್ಲಎಂದು ಸಂಬಂಧಪಟ್ಟವರು ತಾಂತ್ರಿಕ ಕಾರಣಗಳನ್ನು ಹೇಳಿ ಕಾನೂನಾತ್ಮಕ ಶಿಕ್ಷೆಯಿಂದ ಬಹಳಷ್ಟು ಸುಲಭವಾಗಿಯೇ ತಪ್ಪಿಸಿಕೊಳ್ಳಬಹುದೋ ಏನೋ ಗೊತ್ತಿಲ್ಲ. ಆದರೆ ನೈತಿಕತೆಯ ದೃಷ್ಟಿಯಿಂದ, ಆತ್ಮಸಾಕ್ಷಿಯ ದೃಷ್ಟಿಯಿಂದ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎನ್ನಲು ಆಗಬಹುದೇ? ಮಗುವಿನ ಸಾವಿಗೆ ನೇರವಾಗಿ ಕಾರಣವಲ್ಲದಿದ್ದರೂ ಹಿನ್ನಲೆಯಾದದ್ದು ಅಂಕವ್ಯಸನದ ಒಂದು ಅವಾಂತರವಾದ ʼವಿಶೇಷ ತರಗತಿಅದರ ವಿಶ್ಲೇಷಣೆಗೆ ತೊಡಗುವ ಮುನ್ನ ಅದಕ್ಕೆ ಒತ್ತಾಸೆಯಾದ ಕೆಲವು ಸಂಗತಿಗಳನ್ನು ವಿಶ್ಲೇಷಿಸುವುದು ಬಹಳ ಮುಖ್ಯ.

ಗರ್ಭಪಾತ  ಮತ್ತು ಪೀಚಲು ಮಗು:

ಅಂಕವ್ಯಸನದ ಅವಾಂತರಗಳಲ್ಲಿ ʻವಿಶೇಷ ತರಗತಿʼ ಎಂಬುದು ಬಹಳ ಮುಖ್ಯವಾದದ್ದು. ಪರೀಕ್ಷೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಇದು ಶನಿಕಾಟದಂತೆ ವಿದ್ಯಾರ್ಥಿಗಳನ್ನೂ ಶಿಕ್ಷಕರನ್ನೂ ಹೇಗೆ ಕಾಡತೊಡಗುತ್ತದೆ ಮತ್ತು ಏನೆಲ್ಲ ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಸರಿಯಾಗಿ ಗ್ರಹಿಸಬೇಕಾದರೆ ಇದರ ಆರಂಭದ ಹೆಜ್ಜೆಗಳನ್ನೇ ನೋಡಬೇಕು. ಅನೇಕ ಜಿಲ್ಲೆಗಳಲ್ಲಿ ʼಡಿಸೆಂಬರ್ಒಳಗೆ ಎಲ್ಲ ಪಾಠಬೋಧನೆ ಮುಗಿಸಿʼ ಎಂದು ಅಲ್ಲಿನ ಅಧಿಕಾರಿಗಳು ಜೂನ್ಜುಲೈ ತಿಂಗಳುಗಳಲ್ಲಿಯೇ ಒತ್ತಡ ಹಾಕಲು ಆರಂಭಿಸುತ್ತಾರೆ. ಇನ್ನೂ ಕೆಲವರು ಗಡುವನ್ನು ಇನ್ನೂ ಒಂದು ತಿಂಗಳು ಹಿಂದಕ್ಕೆ ಎಳೆದುಕೊಂಡು ನವೆಂಬರ್ಗೆ ಮುಗಿಸಿʼ ಎಂದು ಹೇಳುವುದೂ ಇದೆ! ಅಷ್ಟೇ ಏಕೆ ಕೆಲವು ಶಿಕ್ಷಕರು ಇವರಿಂದ ʼಸೈʼ ಅನ್ನಿಸಿಕೊಳ್ಳಲು ಅಕ್ಟೋಬರ್ಗೇ ʻಪಾಠ ಮುಗಿಸುವ ಶಾಸ್ತ್ರʼವನ್ನು ಮಾಡುವುದೂ ಇದೆ!! ಹೀಗೆ ಸಲಹೆ ಕೊಡುವವರನ್ನೂ ಹಾಗೆ ಮಾಡುವವರನ್ನೂ ಒಟ್ಟಾರೆಯಾಗಿ ನಾವು ಒಂದು ʼಗರ್ಭಪಾತ ತಂಡʼ (ಅಬಾರ್ಶನ್ಟೀಮ್‌)ʼ ಎಂದು ಕರೆಯಬಹುದು. ತಂಡದಲ್ಲಿ ಕೆಲವರು ಡಾಕ್ಟರ್ಕೆಲಸ ಮಾಡಿದರೆ ಇನ್ನು ಕೆಲಸವು ನರ್ಸ್ಕೆಲಸ ಮಾಡಬಹುದು ಅಷ್ಟೇ!

ಇಲ್ಲಿ ಗಮನಿಸಬೇಕಾದ ಪ್ರಾಥಮಿಕ ಅಂಶವೆಂದರೆ ಎಸ್ಎಸ್ಎಲ್ಸಿ ಪಠ್ಯಪುಸ್ತಕವು ಸಾಮಾನ್ಯವಾಗಿ ಫೆಬ್ರವರಿ ತಿಂಗಳಿಗೆ ಬೋಧನೆ ಮುಗಿಸುವಂತೆ ರಚಿತವಾಗಿರುತ್ತದೆಯೇ ಹೊರತು ಡಿಸೆಂಬರ್ಗೆ ಅಥವಾ ನವೆಂಬರ್ಗೆ ಮುಗಿಸುವಂತೆ ಅಲ್ಲ. ಅದನ್ನು ಹಾಗೆ ಡಿಸೆಂಬರ್ಅಥವಾ ನವೆಂಬರ್ಗೆ ಮುಗಿಸಿ ಎಂದು ಹೇಳುವುದಾಗಲೀ ಅಥವಾ ಶಿಕ್ಷಕರು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅಕ್ಟೋಬರ್ ತಿಂಗಳಿಗೇ ಮುಗಿಸುವುದಾಗಲೀ ಸರಿಯಾದ ಕ್ರಮವೇ ಅಲ್ಲ. ಹಾಗೆ ಮಾಡುವ ಅವಶ್ಯಕತೆ ಇದ್ದಿದ್ದರೆ ಅದಕ್ಕೆ ತಕ್ಕಂತೆ ರಾಜ್ಯಮಟ್ಟದಲ್ಲಿಯೇ ತಜ್ಞರ ಸಲಹೆ ಮೇರೆಗೆ ಪಠ್ಯ ರಚನೆ ಆಗುತ್ತಿತ್ತು. ಹಾಗಿಲ್ಲದಿರುವಾಗ ಅಧಿಕಾರಿಗಳು ಯಾವ ಆಧಾರದ ಮೇಲೆ ಸಲಹೆ ಕೊಡುತ್ತಾರೆ ಮತ್ತು ನಮ್ಮ ಶಿಕ್ಷಕರು ಅದನ್ನು ಅನುಸರಿಸುತ್ತಾರೆ? ಅಪಘಾತಕ್ಕೆ ಅವಸರವೇ ಕಾರಣವಲ್ಲದಿರಬಹುದು; ಆದರೆ ಅದೂ ಕಾರಣವಾಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಶಿಕ್ಷಕರೇನೋ ಬಹಳ ಜಾಣರಿರುತ್ತಾರೆ. ಅವರಿಗೆ ಒಂದು ದಿನ ಮಾಡಬೇಕಾದ ಪಾಠವನ್ನು ಒಂದು ವಾರ ಮಾಡುವುದೂ ಗೊತ್ತು; ಒಂದು ವಾರ ಮಾಡಬೇಕಾದ ಪಾಠವನ್ನು ಒಂದೇ ದಿನ ಮಾಡುವುದೂ ಗೊತ್ತು! ಅಕ್ಟೋಬರ್ನವೆಂಬರ್ಏಕೆ, ಜೂನ್ಒಂದೇ ತಿಂಗಳಲ್ಲಿ ಎಲ್ಲ ಪಾಠವನ್ನೂ ಮುಗಿಸಿ ಎಂದು ಹೇಳಿದರೂ ಅವರು ʻಆಗಲ್ಲʼ ಅನ್ನುವುದಿಲ್ಲಆದರೆ ಮಕ್ಕಳ ಗತಿ ಏನು?

ʻFirst impression is the best impressionʼ ಎಂಬ ಮಾತೊಂದಿದೆ. ಮಕ್ಕಳು ಶಿಕ್ಷಕರ ಪಾಠವನ್ನು ಮೊದಲ ಸಲ ಕೇಳುವುದು ಒಂದು ವಿಶಿಷ್ಟ ಅನುಭವ. ಅದನ್ನು ಶಿಕ್ಷಕರು ಸಮಾಧಾನ ಚಿತ್ತರಾಗಿ ಮಕ್ಕಳ ಮನಸ್ಸಿನಲ್ಲಿ ಅಷ್ಚೊತ್ತುವಂತೆ ಮಾಡಬೇಕಾಗುತ್ತದೆ. ಹಾಗೆ ಒಂದು ಸಲ ಅವರ ಮನಸ್ಸಿನಲ್ಲಿ ಕಲಿಕಾಂಶ ಸ್ಪಷ್ಟವಾಗಿ ಅಚ್ಚೊತ್ತಿದರೆ ಅದನ್ನು ಪದೇ ಪದೇ ಓದುವ ಅವಶ್ಯಕತೆಯೇ ಬರುವುದಿಲ್ಲ. ಶಿಕ್ಷಕರು ಅವಸರ ಅವಸರವಾಗಿ ಮೊದಲ ಬೋಧನೆಯನ್ನು ಮುಗಿಸುವುದರಿಂದ ಕಲಿಕಾಂಶವನ್ನು ಮಕ್ಕಳ ಮನಸ್ಸಿನಲ್ಲಿ ʼಅಚ್ಚೊತ್ತಿಸುವʼ ಕೆಲಸ ಸರಿಯಾಗಿ ಆಗಲು ಸಾಧ್ಯವೇ ಇಲ್ಲ. ಮಕ್ಕಳು ಶಿಕ್ಷಕರ ವೇಗಕ್ಕೆ ಸರಿಯಾಗಿ ನೋಟ್ಸ್ಮಾಡಿಕೊಳ್ಳಲೂ ಆಗುವುದಿಲ್ಲ. ಅನೇಕ ಶಾಲೆಗಳಲ್ಲಿ ಶಿಕ್ಷಕರು ಎಂಟನೆಯ ಪಾಠ ಮಾಡುವಾಗ ಮಕ್ಕಳು ಮನೆಯಲ್ಲಿ ಮೂರನೆಯ ಪಾಠದ ನೋಟ್ಸ್ಬರೆಯುತ್ತಿರುತ್ತಾರೆ! ಶಿಕ್ಷಕರು ಶಾಲೆಯಲ್ಲಿ ಮಾಡಿದ ಪಾಠವನ್ನು ಅಂದೇ ಮಕ್ಕಳು ಮನೆಯಲ್ಲಿ ಹಿತಮಿತವಾಗಿ ಹೋಮ್ವರ್ಕ್ಮಾಡುವುದು, ನೋಟ್ಸ್ಮಾಡುವುದು ಇತ್ಯಾದಿ ಮಾಡಿದರೆ ಮಾತ್ರ ʼಪುನರ್ಬಲನʼ ಎಂಬುದು ಸರಿಯಾದ ರೀತಿಯಲ್ಲಿ ಆಗುತ್ತದೆ ಎಂಬುದು ಶಿಕ್ಷಕರಾಗಿ ಒಂದಿಷ್ಟು ವರ್ಷಗಳಾದರೂ ಕೆಲಸ ಮಾಡಿದ ಯಾರಿಗೇ ಆದರೂ ಸ್ಪಷ್ಟವಾಗಿ ಅರ್ಥವಾಗುವ ಸಂಗತಿ. ಹೀಗೆ ಕಲಿಕಾಂಶ ಹೊಂದಾಣಿಕೆ ಆಗದೆ ಮಕ್ಕಳಿಗೆ ಇತ್ತ ಶಾಲೆಯಲ್ಲಿ ಮಾಡುತ್ತಿರುವ ಎಂಟನೆಯ ಪಾಠವೂ ಮನನವಾಗುವುದಿಲ್ಲ; ಅತ್ತ ಮನೆಯಲ್ಲಿ ಅವರು ಮಾಡುವ ಮೂರನೆಯ ಪಾಠವೂ ಮನನವಾಗುವುದಿಲ್ಲ.

ಹೀಗಾಗಿ ಅವಸರ ಅವಸರವಾಗಿ ʻಪಾಠ ಮುಗಿಸುವ ಶಾಸ್ತ್ರ ಮಾಡಿ, ಆಮೇಲೆ ಎಷ್ಟು ತಿಂಗಳು ಪುನರಾವರ್ತನೆ ಮಾಡಿದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ತರಗತಿಯಲ್ಲಿ ಶಿಕ್ಷಕರ ಪಾಠ ಬೋಧನೆಯ ವೇಗವು ತರಗತಿಯ ಎಲ್ಲ ಮಕ್ಕಳಲ್ಲದಿದ್ದರೂ ಬಹುಪಾಲು ಮಕ್ಕಳ ಕಲಿಕಾ ವೇಗಕ್ಕೆ ತಕ್ಕಂತೆಯೇ ಇರಬೇಕಾದದ್ದು ಅಪೇಕ್ಷಣೀಯ. ಆಗ ಮಾತ್ರ ಕಲಿಕೆಯ ಪುನರ್ಬಲನ ಪರಿಣಾಮಕಾರಿಯಾಗುತ್ತದೆ. ಅಂದಂದಿನ ಪಾಠವನ್ನು ಮಕ್ಕಳು ಅಂದಂದೇ ಕಲಿತು ಕಲಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋದರೆ ಐದಾರು ತಿಂಗಳು ಪುನರಾವರ್ತನೆ ಮಾಡುವ ಯಾವ ಅಗತ್ಯವೂ ಬರುವುದಿಲ್ಲ. ಹೆಚ್ಚೆಂದರೆ ಒಂದು ತಿಂಗಳು ಸಾಕಾಗುತ್ತದೆ. ಮೊದಲ ಕಲಿಕೆಯನ್ನು ಸದೃಡಗೊಳಿಸಿಕೊಳ್ಳದೆ ಪುನರಾವರ್ತನೆಯನ್ನು ಆರು ತಿಂಗಳು ಮಾಡಿದರೂ ಅಷ್ಟೆ; ಆರು ವರ್ಷ ಮಾಡಿದರೂ ಅಷ್ಟೆ.  ಏಳು ತಿಂಗಳಿಗೇ ತಾಯಿಯ ಹೊಟ್ಟೆಯಿಂದ ಹೊರಬಂದ ಪೀಚಲು ಕೂಸನ್ನು ಏಳು ವರ್ಷ ಆರೈಕೆ ಮಾಡಿದರೂ ಅದನ್ನು ಸ್ವತಂತ್ರವಾಗಿ ಮನೆಯಿಂದ ಹೊರಗೆ ಕಾಲಿಡುವಂತೆ ಮಾಡುವುದು ಕಷ್ಟ!

ಸಿಜೇರಿಯನ್ಡಿಲೇವರಿ ಮತ್ತು ಬಾಣಂತಿಕೋಣೆ

ಅನೇಕ ಶಿಕ್ಷಕರು ʼನಾವು ಯಾವುದೇ ಅವಸರ ಮಾಡುವುದಿಲ್ಲ; ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಬೋಧನಾ ಕಾರ್ಯವನ್ನು ಪರಿಣಾಮಕಾರಿಯಾಗಿಯೇ ಮಾಡುತ್ತೇವೆ ಎಂದು ತಮ್ಮ ಅವಸರದ ಕಾರ್ಯವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಮಕ್ಕಳ ಕಡೆಯಿಂದ ನೋಡಿದಾಗ ಅದು ಕೂಡ ಸರಿಯಾದ ಕ್ರಮವಲ್ಲ. ಏಕೆಂದರೆ ಮಕ್ಕಳು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಬೇಕಾದ ಅವಧಿಯನ್ನು ಅಗತ್ಯಕ್ಕಿಂತ ಹೆಚ್ಚು ಮಾಡುವುದೂ ಅವರ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಒಳ್ಳೆಯ ಕ್ರಮವಲ್ಲ. ಮಕ್ಕಳು ತಮ್ಮ ವಯೋಸಹಜ ಆಟ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುವುದೂ ಪಾಠಸಂಬಂಧಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಷ್ಟೇ ಮುಖ್ಯವಾದದ್ದು. ಇದೇ ಕಾರಣದಿಂದ ಅವರ ಶಾಲಾ ಅಭ್ಯಾಸ ಕ್ರಮದಲ್ಲಿ ದೈಹಿಕ ಶಿಕ್ಷಣ, ಕಲೆ, ಸಂಗೀತ ಇತ್ಯಾದಿ ಕೆಲವು ಅವಧಿಗಳು ಇರುತ್ತವೆ. ಇವೆಲ್ಲವನ್ನೂ ಮಕ್ಕಳ ಮನೋವಿಜ್ಞಾನದ ಹಿನ್ನಲೆಯಲ್ಲಿಯೇ ಜೋಡಿಸಲಾಗಿರುತ್ತದೆ. ಇವೆಲ್ಲ ಅನವಶ್ಯಕ ಅನ್ನಿಸಿದ್ದರೆ ಎಸ್ಎಸ್ಎಲ್ಸಿ ಮಕ್ಕಳಿಗೆ ರಾಜ್ಯಮಟ್ಟದಲ್ಲಿಯೇ ಅವಧಿಗಳನ್ನು ತೆಗೆದುಹಾಕಲಾಗುತ್ತಿತ್ತು. ಹಾಗೆ ಮಾಡಿಲ್ಲ ಎಂದರೆ ಅವೆಲ್ಲವೂ ಅಗತ್ಯ ಮತ್ತು ಅವಶ್ಯ ಎಂದೇ ಅರ್ಥ.

ಆದರೆ ʻಅಂಕವ್ಯಸನʼದ ದಾಸ್ಯಕ್ಕೆ ಅಂಟಿಕೊಂಡಿರುವ ಅನೇಕ ಶಾಲೆಗಳ ಶಿಕ್ಷಕರು ಎಸ್ಎಸ್ಎಲ್ಸಿ ಮಕ್ಕಳಿಗೆ ವರ್ಷದ ಬಹುತೇಕ ತಿಂಗಳು ಅವಧಿಗಳನ್ನು ವೇಳಾಪತ್ರಿಕೆಯಿಂದಲೇ ತೆಗೆದುಹಾಕಿರುತ್ತಾರೆ. ಕೆಲವರು ವೇಳಾಪಟ್ಟಿಯಲ್ಲಿ ಇಟ್ಟುಕೊಂಡರೂ ತರಗತಿಗಳನ್ನು ವಾಸ್ತವವಾಗಿ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಪರೋಕ್ಷವಾಗಿ ಅಧಿಕಾರಿಗಳ ಕುಮ್ಮಕ್ಕೂ ಇರುತ್ತದೆ. ಏಕೆಂದರೆ ಎಲ್ಲರಿಗೂ ಫಲಿತಾಂಶದ ಹುಚ್ಚು ಹಿಡಿದಿರುತ್ತದೆ. ಇವರ ʻವ್ಯಸನʼದಿಂದಾಗಿ ಮಕ್ಕಳು ತಮ್ಮ ವಯೋಸಹಜವಾದ ಆಸೆ ಆಕಾಂಕ್ಷೆಗಳಿಂದ ವಂಚಿತರಾಗಬೇಕಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಆಟಕ್ಕೆ ಬಿಡುವುದು ಇರಲಿ, ಉಚ್ಚೆ ಹೊಯ್ಯಲಿಕ್ಕೆ ಬಿಡುವುದಕ್ಕೂ ಮೀನಮೇಷ ಎಣಿಸುತ್ತಾರೆ ಎಂದರೆ ಇವರೆಲ್ಲ ಮಕ್ಕಳ ಮನಶ್ಶಾಸ್ತ್ರವನ್ನು ಏತಕ್ಕಾದರೂ ಓದಿಕೊಂಡು ಬಂದರೋ ಎನ್ನಿಸುತ್ತದೆಕೆಲವು ಶಾಲೆಗಳಲ್ಲಿ ಹತ್ತನೆ ತರಗತಿಗಳು ಹೇಗೆ ಇರುತ್ತವೆ ಎಂದರೆ ಶಿಕ್ಷಕರು ಎಂಟು ಮತ್ತು ಒಂಬತ್ತನೆಯ ತರಗತಿಗಳಿಗೆ ಬೆಲ್ಆದ ಮೇಲೆ ನಿಧಾನವಾಗಿ ಹೋಗುತ್ತಾರೆ. ಹತ್ತನೆಯ ತರಗತಿಯ ಮುಂದಿನ ಕಾರಿಡಾರಿನಲ್ಲಿ ಮಾತ್ರ ಸಿಜೇರಿಯನ್ಡಿಲೇವರಿ ಮಾಡಿಸುವ ಸಂದರ್ಭದಲ್ಲಿ ಡಾಕ್ಟ್ರು ನರ್ಸ್ಗಳು ಆಸ್ಪತ್ರೆಯಲ್ಲಿ ಗಡಿಬಿಡಿಯಲ್ಲಿ ಓಡಾಡುವಂತೆ ಓಡಾಡುತ್ತಿರುತ್ತಾರೆ. ಕೆಲವು ಶಾಲೆಗಳಲ್ಲಿ ಹತ್ತನೆಯ ತರಗತಿಗಳನ್ನು ಸುತ್ತಲೂ ಕಿಡಕಿ ಬಾಗಿಲು ಹಾಕಿಕೊಂಡು ಥೇಟ್ʻಬಾಣಂತಿಕೋಣೆʼಯನ್ನಾಗಿ ಮಾಡಿಕೊಂಡು ಪಾಠಮಾಡುವುದೂ ಇದೆ.

ಶಾಲಾ ಬೋಧನೆಯಲ್ಲಿ ಸಹಜತ ಕಾಯ್ದುಕೊಳ್ಳಬೇಕಾದದ್ದು ಅತ್ಯಂತ ಮುಖ್ಯವಾದದ್ದು. ಸರ್ಕಾರ ನಿಗಧಿಪಡಿಸಿದ ಎಲ್ಲ ಅವಧಿಗಳನ್ನೂ ನಿಗಧಿಯಾದಂತೆ ಬೋಧಿಸುವ ವ್ಯವಸ್ಥೆ ಆಗಬೇಕು. ಅದು ಮಾತ್ರ ವೈಜ್ಞಾನಿಕವಾದದ್ದು ಮತ್ತು ಕಲಿಕೆಯನ್ನು ಪರಿಣಾಮಕಾರಿಯಾಗಿಸುವಂಥದ್ದು. ಹಿನ್ನಲೆಯಲ್ಲಿ ಅತಿಕ್ರಮಣ ಮತ್ತು ಒತ್ತುವರಿ ಎರಡೂ ಸಲ್ಲದು. ಅನಗತ್ಯ ಅವಸರವೂ ಅಲ್ಲದ್ದು. ತಾಯಿಯ ಹೊಟ್ಟೆಯಲ್ಲಿ ಮಗು ಎಷ್ಟು ದಿನ ಇರಬೇಕೋ ಅಷ್ಟುದಿನ ಇದ್ದರೇನೇ ಅದರ ಆರೋಗ್ಯ ಸರಿಯಾಗಿರುತ್ತದೆ. ʻಅವಧಿಪೂರ್ವ ಹೆರಿಗೆʼ ಹೇಗೆ ಅಪೇಕ್ಷಣೀಯ ಅಲ್ಲವೋ ಅವಧಿಪೂರ್ವ ಪಠ್ಯಮುಗಿಸುವಿಕೆʼ ಕೂಡ ಅಪೇಕ್ಷಣೀಯವಲ್ಲ. ʼಗರ್ಭಪಾತʼ ಹೇಗೆ ಪಾಪವೋ ಅಕ್ಟೋಬರ್ನವೆಂಬರ್ಗೆ ಪಾಠ ಬೋಧನೆ ಮುಗಿಸುವುದೂ ಒಂದು ರೀತಿ ಪಾಪದ ಕೆಲಸವೇ.

ಕನಿಷ್ಠ ಪಾಯಸವೂ ಇಲ್ಲದ ಹಬ್ಬದಡುಗೆ:

ಅಂಕವ್ಯಸನದ ಅವಾಂತರಗಳಲ್ಲಿ ಇನ್ನೊಂದು ಮುಖ್ಯವಾದ ಅವಾಂತರವೆಂದರೆ ಅದು ಫಲಿತಾಂಶ ಉತ್ತಮ ಪಡಿಸಲೆಂದು ತೆಗೆದುಕೊಳ್ಳುವ ʻವಿಶೇಷ ತರಗತಿʼಗಳೆಂಬ ʻನಿಸ್ತೇಜ ತರಗತಿʼಗಳಿಗೆ ಸಂಬಂಧಿಸಿದ್ದು. ಅನೇಕ ಶಿಕ್ಷಕರು ಅಧಿಕಾರಿಗಳು ಆಡುವ ಮಾತು ಮಾಡುವ ಅವಾಂತರ ನೋಡಿದರೆ ಅವರಿಗೆ ʼವಿಶೇಷ ತರಗತಿʼ (Special Class) ಮತ್ತು ʼಹೆಚ್ಚುವರಿ ತರಗತಿʼ (Additional Class) ಇವುಗಳ ವ್ಯತ್ಯಾಸವೇ ತಿಳಿದಂತಿಲ್ಲ. ವಿಶೇಷ ತರಗತಿ ಎಂದರೆ ವಿಶೇಷ ಕಲಿಕಾರ್ಥಿಗಳನ್ನು ಗುರುತಿಸಿಕೊಂಡು, ವಿಶೇಷ ಬೋಧನಾ ತಂತ್ರ ಮತ್ತು ಸಾಧನಗಳನ್ನು ಬಳಸಿಕೊಂಡು ವಿಶೇಷವಾಗಿ ಬೋಧನೆ ಮಾಡುವ ತರಗತಿ. ಹೆಚ್ಚುವರಿ ತರಗತಿ ಎಂದರೆ ಎಲ್ಲರನ್ನೂ ಒಟ್ಟಾಗಿಸಿಕೊಂಡು ಆರು ತಾಸು ಮಾಡಿದ್ದನ್ನೇ ಇನ್ನೊಂದು ಅಥವಾ ಎರಡು ತಾಸು ಹೆಚ್ಚು ಬೋಧನೆ ಮಾಡುವ ತರಗತಿ. ವಿಶೇಷ ತರಗತಿ ಎಂಬುದು ಯಾವತ್ತೂ ಅತ್ಯಂತ ಸ್ಥಳೀಯ ಮಟ್ಟದಲ್ಲಿ ಅಂದರೆ ಒಬ್ಬ ಶಿಕ್ಷಕನ ಹಂತದಲ್ಲಿ ಅಥವಾ ಹೆಚ್ಚೆಂದರೆ ಶಾಲೆಯ ಮುಖ್ಯಸ್ಥರ ಹಂತದಲ್ಲಿ ನಿರ್ಧರಿಸಲ್ಪಡಬೇಕಾದ ಸಂಗತಿ. ಅದು ಎಂದೂ ರಾಜ್ಯಮಟ್ಟದಿಂದಲೋ ಜಿಲ್ಲಾ ಮಟ್ಟದಿಂದಲೋ ನಿರ್ದೇಶನ ನೀಡಲ್ಪಡುವಂಥದ್ದಲ್ಲ.

ವಿಶೇಷ ತರಗತಿಗಳು ಬಹಳ ವಿಶೇಷವಾಗಿಯೇ ರೂಪಿಸಲ್ಪಡುತ್ತವೆ. ಒಂದು ಶಾಲಾ ಹಂತದಲ್ಲಿ ಎಲ್ಲ ಶಿಕ್ಷಕರನ್ನು ಕೂರಿಸಿಕೊಂಡು ಶಾಲೆಯ ಮುಖ್ಯೋಪಾಧ್ಯಾಯರು, ಯಾವ ಯಾವ ವಿಷಯಗಳಲ್ಲಿ ಯಾವ ಮಕ್ಕಳು ನಿಧಾನವಾಗಿ ಕಲಿಯುತ್ತಿದೆ ಎಂಬುದನ್ನು ಅವಲೋಕಿಸಿ, ಅಂಥಹ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ಮಾಡಿದರೆ ಅವರ ಕಲಿಕೆಯಲ್ಲಿ ಪ್ರಗತಿ ಕಾಣಬಹುದೇ ಎಂದು ಯೋಚಿಸಿ, ವಿಶೇಷ ತರಗತಿ ತೆಗೆದುಕೊಂಡರೆ ಅವರ ಕಲಿಕೆಯಲ್ಲಿ ಪ್ರಗತಿ ಕಾಣಲಿ ಸಾಧ್ಯವಿದೆ ಎಂದು ಅವರಿಗೆ ಅನ್ನಿಸಿದರೆ ಮಾತ್ರ, ಅಂತಹ ವಿದ್ಯಾರ್ಥಿಗಳನ್ನು ಮಾತ್ರ ಬೋಧನೆಗೆ ಒಳಪಡಿಸಬೇಕಾಗುತ್ತದೆ. (ಕಲಿಕೆಯಲ್ಲಿ ಬಹಳ ಹಿಂದಿದ್ದ ಮಾತ್ರಕ್ಕೆ ಅಂತಹ ಎಲ್ಲ ಮಕ್ಕಳಿಗೆ ವಿಶೇಷ ತರಗತಿ ಉಪಯೋಗವಾಗುವುದಿಲ್ಲ. ಕಲಿಕೆಯಲ್ಲಿ ಬಹಳ ಹಿಂದಿದ್ದರೂ, ಎಷ್ಟೇ ವಿಶೇಷ ಬೋಧನೆ ಮಾಡಿದರೂ ಕೆಲವು ಮಕ್ಕಳ ಪ್ರಗತಿ ಸಾಧ್ಯವಿಲ್ಲ ಅನ್ನಿಸಿದರೆ ಅಂತಹ ಮಕ್ಕಳನ್ನು ಅವರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಒಂದೇ ಕಾರಣದಿಂದ ವಿಶೇಷ ತರಗತಿಗೆ ಸೇರಿಸಿಕೊಳ್ಳುವುದು ಕೂಡ ಅರ್ಥವಿಲ್ಲದ್ದು).  ಈ ವಿಶೇಷ ತರಗತಿಗಳನ್ನು ಎಲ್ಲ ಶಿಕ್ಷಕರೂ ತೆಗೆದುಕೊಳ್ಳಬೇಕಾಗಿಲ್ಲ. ಎಲ್ಲ ಮಕ್ಕಳೂ ಇರಬೇಕಾಗಿಲ್ಲ. ಯಾರ ಬೋಧನೆ ಅಗತ್ಯವಿರುತ್ತದೆಯೇ ಶಿಕ್ಷಕರು ಯಾರಿಗೆ ಬೋಧನೆ ಅಗತ್ಯವಿದೆಯೋ ಕಲಿಕಾರ್ಥಿಗಳು ಮಾತ್ರ ಅಲ್ಲಿ ಇರಬೇಕು. ʻಎಲ್ಲ ಶಿಕ್ಷಕರೂ ಇರಬೇಕು; ಎಲ್ಲ ಮಕ್ಕಳನ್ನೂ ಕಡ್ಡಾಯವಾಗಿ ಹಿಡಿದಿಟ್ಟುಕೊಳ್ಳಬೇಕುʼ ಎಂಬುದು ʼಅಧಿಕಾರʼ ಮತ್ತು ʼಅವಿವೇಕʼ ಮಾತಾಗಬಹುದೇ ಹೊರತು, ʻಕಾಳಜಿʼ ಮತ್ತು ʻವಿವೇಕʼ ಮಾತಂತೂ ಆಗುವುದಿಲ್ಲ. ಆದರೆ ನಮ್ಮಲ್ಲಿ ಬಹುತೇಕ ಶಾಲೆಗಳಲ್ಲಿ ನಡೆಯುವ ʼವಿಶೇಷ ತರಗತಿಗಳುʼ ಯಾವ ವಿಶೇಷತೆಯೂ ಇಲ್ಲದ ʻಹೆಚ್ಚುವರಿ ತರಗತಿʼಗಳಾಗಿಯೋ ʻಕಡ್ಡಾಯ ತರಗತಿʼಗಳಾಗಿಯೋ ಇನ್ನೂ ತುಸು ಒರಟಾಗಿ ಹೇಳುವುದಾದರೆ ʻಕಾಟಾಚಾರದ ತರಗತಿʼಗಳಾಗಿರುವುದೇ ಹೆಚ್ಚು. ಕನಿಷ್ಟ ಒಂದು ಪಾಯಸ, ಕೋಸಂಬರಿಯಾದರೂ ಇಲ್ಲದಿದ್ದರೆ ಅದಕ್ಕೆ ಹಬ್ಬದ ಅಡುಗೆ ಅನ್ನುವುದಾದರೂ ಹೇಗೆ?

ರೀತಿ ವಿಶೇಷ ತರಗತಿಗಳ ಹೆಸರಿನಲ್ಲಿ ತೆಗೆದುಕೊಳ್ಳುವ ಹೆಚ್ಚುವರಿ ತರಗತಿಗಳು ಹೇಗಿರಬೇಕು ಮತ್ತು ಎಷ್ಟು ಸಮಯ ಇರಬೇಕು ಎಂಬುದರ ಬಗ್ಗೆಯೂ ನಮ್ಮಲ್ಲಿ ಸರಿಯಾದ ತಿಳಿವಳಿಕೆ ಇದ್ದಂತಿಲ್ಲ. ಎಸ್.‌ಎಸ್.‌ ಎಲ್.‌ಸಿ ಮಕ್ಕಳು ಅಂದರೆ ಸುಮಾರು ಹದಿನೈದು ಹದಿನಾರು ವರ್ಷಗಳ ಮಕ್ಕಳು. ಅವರ ದೈಹಿಕ ಸಾಮರ್ಥ್ಯ ಎಷ್ಟಿರುತ್ತದೆ, ಅವರು ಎಷ್ಟು ಕಾಲ ತರಗತಿಗಳಲ್ಲಿ ಕುಳಿತಿರಬೇಕು ಎಂಬ ಸಂಗತಿಗಳೆಲ್ಲ ರಾಜ್ಯಮಟ್ಟದಲ್ಲಿ ಚರ್ಚಿತವಾಗಿಯೇ ಪಠ್ಯಗಳು ರಚಿತವಾಗಿರುತ್ತವೆ. ಆದರೆ ಅಂಕವ್ಯಸನಕ್ಕೆ ಗುರಿಯಾದವರು ಮಕ್ಕಳ ಬಗೆಯ ಯಾವ ಅಂಶಗಳನ್ನು ಗಮನಿಸದೇ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಥರ ಬೇಕಾಬಿಟ್ಟಿಯಾಗಿ ಸಮಯ ನಿಗಧಿಮಾಡುವುದು ಇದೆ. ನಾನು ಕಂಡತೆ ಒಂದೇ ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಶಾಲೆಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದಿದೆಶಿವಮೊಗ್ಗದಲ್ಲಿ ಕೊಲೆಯಾದ ವಿದ್ಯಾರ್ಥಿಯ ಶಾಲೆಯಲ್ಲಿ ರಾತ್ರಿ ಒಂಬತ್ತರ ತನಕ ತರಗತಿ ನಡೆಯುತ್ತಿತ್ತೆಂದು ಹೇಳುತ್ತಾರೆ. ಹೀಗೆ ಬೆಳಗ್ಗೆಯಿಂದ ರಾತ್ರಿವರೆಗೂ ಮಕ್ಕಳನ್ನು ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸುವವರು ಕನಿಷ್ಟ ಸಂಜೆ ಒಂದು ಗಂಟೆ ಅವರನ್ನು ಆಟ ಆಡಿಸಿದ್ದು ಇದೆಯಾ? ಬಹುತೇಕ ಶಾಲೆಗಳಲ್ಲಿ ಇಲ್ಲ.  ಮಕ್ಕಳ ಧಾರಣ ಶಕ್ತಿ ಎಷ್ಟು ಸಮಯ ಇರುತ್ತದೆ ಎಂಬ ಕನಿಷ್ಠ ತಿಳಿವಳಿಕೆಯೂ ಇವರಿಗೆ ಇಲ್ಲವೇ? ಬೆಳೆಗ್ಗೆಯಿಂದ ಸಂಜೆಯ ತನಕ ಬಿಡುವಿಲ್ಲದೇ ಕಲಿಕಾಚಟುವಟಿಕೆಯಲ್ಲಿರುವ ಮಕ್ಕಳು ಐದು ಗಂಟೆಯ ನಂತರವೂ ಕಲಿಯುವ ಮನಸ್ಥಿತಿಯಲ್ಲಿರುತ್ತಾರೆಯೇ? ಅವರು ಮನುಷ್ಯರೋ ಅಥವಾ ಯಂತ್ರಗಳೋ?

ಕಳ್ಳ ಪೋಲೀಸ್ಸಂಬಂಧಕ್ಕೆ ತಿರುಗುತ್ತಿರುವ ಗುರು-ಶಿಷ್ಯ ಸಂಬಂಧ

ಇಂತಹ ವಿಶೇಷ ತರಗತಿಗಳನ್ನು ಮಾಡಲು ಹೇಳುವವರು ಮತ್ತು ಮಾಡುವವರು ಇದನ್ನು ಸಮರ್ಥಿಸಿಕೊಳ್ಳುವುದು ಬೇರೆಯದೇ ಆದ ಕಾರಣವನ್ನು ನೀಡಿ. “ಎಸ್.‌ಎಸ್.‌ಎಲ್.ಸಿ. ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು. ಅಲ್ಲಿ ಅನುತ್ತೀರ್ಣರಾದರೆ ಅವರ ಭವಿಷ್ಯವೇ ನಿಂತುಹೋಗುವ ಸಂಭವವಿರುತ್ತದೆ. ಅವರು ಅಡ್ಡದಾರಿ ಹಿಡಿದು ಸಮಾಜಘಾತುಕರಾಗುವ ಸಂಭವ ಇರುತ್ತದೆ. ಆದ್ದರಿಂದ ಅವರನ್ನು ಏನಾದರೂ ಮಾಡಿ ಕನಿಷ್ಠ ಪಾಸಾಗುವಂತೆ ಮಾಡಿದರೆ ಮುಂದೆ ಅವರು ಮತ್ತೆರಡು ವರ್ಷವಾದರೂ ಕಾಲೇಜಿಗೆ ಹೋಗುವುದರಿಂದ ಅವರು ಕೆಟ್ಟದಾರಿ ಹಿಡಿಯದಂತೆ ನೋಡಿಕೊಂಡಂತಾಗುತ್ತದೆ. ಅದಕ್ಕಾಗಿಯೇ ಎಲ್ಲ ಪ್ರಯತ್ನ” ಎಂಬುದು ಅವರ ಸಮರ್ಥನೆ. ಮೇಲ್ನೋಟಕ್ಕೆ ಇದು ಹೌದು ಸರಿ ಎನ್ನುವಂತೆ ಕಂಡರೂ ವಾಸ್ತವದಲ್ಲಿ ಇದು ಮಕ್ಕಳ ಮೇಲಿನ ಕಾಳಜಿಯಿಂದ ಮಾಡುವ ಕೆಲಸವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಷ್ಟಕ್ಕೂ ಅನುತ್ತೀರ್ಣರಾದವರು ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬುದು ಒಂದು ʼವಿದ್ಯಾವಂತ ಮೂಢನಂಬಿಕೆʼಯಲ್ಲದೆ ಬೇರೆ ಏನೂ ಅಲ್ಲ. ದೇಶದ ದೊಡ್ಡ ದೊಡ್ಡ ಅಪರಾಧಗಳಲ್ಲಿ ತೊಡಗಿಕೊಂಡವರು ಇಂತಹ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಅಷ್ಟಕ್ಕೂ ಮಕ್ಕಳು ಹಿಂದಿನ ಏಳೆಂಟು ವರ್ಷಗಳಲ್ಲಿ ಕಲಿಯದೇ ಇದ್ದದ್ದನ್ನೆಲ್ಲ ಪ್ರೌಢಶಾಲೆಯ ಎರಡು ಮೂರು ವರ್ಷಗಳಲ್ಲಿ ಕಲಿಯಬೇಕು ಎಂದು ನಿರೀಕ್ಷಿಸುವುದೇ ದೊಡ್ಡ ತಪ್ಪು. ಅದು ಸಾಧ್ಯವೂ ಇಲ್ಲ. ಸಾಧುವೂ ಅಲ್ಲ. ಮಕ್ಕಳು ಯಾವ ಯಾವ ತರಗತಿಗಳಲ್ಲಿ ಯಾವ ಯಾವ ವಿಷಯವನ್ನು ಕಲಿಯಬೇಕೋ ಅಲ್ಲಿ ಅದನ್ನು ಸರಿಯಾಗಿ ಕಲಿಸುವಂತಾದರೆ ಮಾತ್ರ ಕಲಿಕೆ ಸರಿಯಾಗಿ ಆಗುತ್ತದೆ. ತಳಪಾಯವನ್ನು ಸರಿಯಾಗಿ ಹಾಕದೆ ಗೋಡೆಯನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಕಟ್ಟಡದ ಭದ್ರವಾಗುವುದಿಲ್ಲ. ಅದಕ್ಕಾಗಿ   ಹೀಗೆ ಮಕ್ಕಳನ್ನು ಸಮಯವನ್ನು ಬೇಕಾಬಿಟ್ಟಿಯಾಗಿ ಕಸಿದುಕೊಂಡು ಅವರನ್ನು ಬಂಧಿಖಾನೆಯ ಕೈದಿಗಳಂತೆ ಹಿಡಿದಿಟ್ಟುಕೊಳ್ಳುವ ಅಧಿಕಾರನ್ನು ಯಾರು ಯಾರಿಗೆ ಕೊಟ್ಟರು? ಮಕ್ಕಳೇನು ಇವರಿಗೆ ಉತ್ತಮ ಫಲಿತಾಂಶವನ್ನು ತಂದುಕೊಡಲು ಇರುವ ಉಪಕರಣಗಳೇ? ಯಾರದ್ಯಾರದೋ ತೀಟೆಯನ್ನು ತೀರಿಸಲಿಕ್ಕಾಗಿ ಮಕ್ಕಳನ್ನು ಹೀಗೆ ಬಳಸಿಕೊಳ್ಳುವುದು ಸರಿಯೇ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ? ಸಂಬಂಧ ದೂರುಗಳು ದಾಖಲಾದ ಮೇಲೆಯೇ ಪರಿಸ್ಥಿತಿ ಬದಲಾಗಬೇಕೆ?

ಇಂತಹ ಚಿತ್ರಹಿಂಸೆಯಿಂದ ಹೈರಾಣಾಗಿರುವ ಮಕ್ಕಳು ಮತ್ತು ಶಿಕ್ಷಕರ ಪರಿಸ್ಥಿತಿ ಏನಾಗಿದೆ ಎಂದು ಹೇಳಲು ಒಂದೆರಡು ಉದಾಹರಣೆ ನೋಡಿ. ಒಂದು ಶಾಲೆಯಲ್ಲಿ ಹೀಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ʻಶಾಸ್ತ್ರʼ ನಡೆಯುತ್ತಿತ್ತು. ಬೆಳೆಗ್ಗೆಯಿಂದ ಒಂದಿಷ್ಟೂ ಆಟ ಇತ್ಯಾದಿ ಇಲ್ಲದೆ ಕಲಿಕಾ ಚಟುವಟಿಕೆಗಳಿಂದ ದಣಿದುಹೋಗಿದ್ದ ಮಕ್ಕಳು ಸಂಜೆ ಶಾಲೆಬಿಡುವ ಬೆಲ್ಹೊಡೆದಾಗ ಉಳಿದ ಮಕ್ಕಳು ಮನೆಗೆ ಹೊರಟಾಗ ಅವರ ಮನಸ್ಸು ಕೂಡ ಅತ್ತ ಎಳೆಯುತ್ತಿತ್ತೋ ಏನೋ. ವಾಶ್ರೂಮಿಗೆ ಅಂತ ಹೋದವರು ಅಲ್ಲಿಂದಲೇ ಕಾಂಪೌಂಡ್ಹಾರಿ ಮನೆಗೆ ಹೋಗುತ್ತಿದ್ದರು. ಅವರ ಪುಸ್ತಕ ನೋಟ್ಸ್ಇರುವ ಬ್ಯಾಗಷ್ಟೇ ಶಿಕ್ಷಕರ ಸ್ಪೇಷಲ್ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಭಾಗವಹಿಸುತ್ತಿತ್ತು. ಅವರು ಮನೆಗೆ ಪುಸ್ತಕ ಒಯ್ದಿದ್ದರೆ ಕೊನೆಯ ಪಕ್ಷ ಅವನ್ನು ತಿರಿವಿಹಾಕುವ ಕೆಲವಾದರೂ ಆಗುತ್ತಿತ್ತು. ಆದರೆ ಒಯ್ಯುವುದು ಹೇಗೆ? ಒಯ್ಯಲು ಬಂದರೆ ಶಿಕ್ಷಕರು ಬಿಡುವುದಿಲ್ಲ. ಇಂತಹ ಒತ್ತಡಗಳಿಂದ ಶಾಲೆಗಳಲ್ಲಿ ಉಂಟಾದ ಒಂದು ದೊಡ್ಡ ಮತ್ತು ಕೆಟ್ಟ ಪರಿಣಾಮವೆಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ʼಗುರು-ಶಿಷ್ಯ ಸಂಬಂಧದಂತಹ ಒಂದು ಮಹೋನ್ನತ ಸಂಬಂಧದಿಂದ ʼಕಳ್ಳ-ಪೋಲೀಸ್‌ʼ ಸಂಬಂಧವಾಗಿ ಅಧಪತನಕ್ಕೆ ಇಳಿದದ್ದು. ಒಂದು ಸಲ ಶಿಕ್ಷಕರು ಮತ್ತು ಮಕ್ಕಳ ನಡುವೆ ರೀತಿ ʼಕಳ್ಳ-ಪೋಲಿಸ್ಸಂಬಂಧ ಏರ್ಪಟ್ಟು ಬಿಟ್ಟರೆ ಅದನ್ನು ಸರಿದಾರಿಗೆ ತರುವುದು ಕಷ್ಟಸಾಧ್ಯ. ಶಿಕ್ಷಕರು ಮಕ್ಕಳನ್ನು ಮನೆಗೆ ಬಿಟ್ಟರೆ ಓದುವುದಿಲ್ಲ ಎಂದು ಅವರನ್ನು ʼಕಳ್ಳರಂತೆಯೇ ನೋಡುತ್ತಿದ್ದರೆ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಪೋಲೀಸರಂತೆ ನೋಡದೆ ಬೇರೆ ಯಾವ ಆಯ್ಕೆ ಇರುತ್ತದೆ? ಕಳ್ಳರ ಮನಸ್ಸಿನಲ್ಲಿ ಯಾವಾಗಲೂ ಪೋಲೀಸರಿಗೆ ಟೊಪ್ಪಿಗೆ ಹೇಗೆ ಹಾಕಬೇಕು ಎಂಬ ಆಲೋಚನೆಗಳೇ ಹೇಗೆ ತುಂಬಿಕೊಳ್ಳತೊಡಗುತ್ತವೆಯೋ ಹಾಗೆಯೇ ಇಲ್ಲಿ ಶಿಕ್ಷಕರಿಗೆ ಕೈಕೊಡುವುದನ್ನೇ ಮಕ್ಕಳು ಯೋಚಿಸತೊಡಗುತ್ತಾರೆ. ಕಾಂಪೌಂಡ್ಹಾರಿ ಮನೆಗೆ ಹೋದವರು ನಾಳೆ ನಾಲ್ಕು ಹೊಡೆತ ತಿನ್ನಲು ತಯಾರಾಗಿಯೇ ಬಂದರೆ ಶಿಕ್ಷಕರು ಏನು ಮಾಡಬಹುದು?

ಅವರನ್ನು ಕರೆತರಲು ಮನೆಗೂ ಶಿಕ್ಷಕರು ಲಗ್ಗೆ ಹಾಕಿದರೆ ಮಕ್ಕಳು ಮನೆಯನ್ನೇ, ಊರನ್ನೇ ಬಿಟ್ಟು ಹೊರಡಬಹುದು. ತೀರಾ ಹಿಂಸೆ ಅನ್ನಿಸಿದರೆ ಜೀವ ಕಳೆದುಕೊಳ್ಳಲೂ ಮುಂದಾಗಬಹುದುಏನೋ ಮಾಡಲು ಹೋಗಿ ಏನೋ ಆಯಿತು ಅನ್ನುತ್ತಾರಲ್ಲ ಹಾಗೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅತಿಯಾದರೆ ಅಮೃತವೂ ವಿಷ. ಹಾಗಾಗಿ ಶಿಕ್ಷಕರಾಗಲಿ ಅಧಿಕಾರಿಗಳಾಗಲಿ ಅಂಕವ್ಯಸನಕ್ಕೆ ಅಂಟಿಕೊಂಡು ಮಕ್ಕಳ ಬದುಕಿಗೆ ಮಾರಕವಾಗಬಾರದು. ಅವರ ಮನಸ್ಸನ್ನು ಗೆದ್ದು ಪ್ರೀತಿಯಿಂದ ಎಷ್ಟು ಕಲಿಸಲು ಸಾಧ್ಯವೋ ಅಷ್ಟನ್ನೇ ಕಲಿಸಬೇಕು. ಅಷ್ಟಕ್ಕೇ ತೃಪ್ತಿಪಡುವುದನ್ನು ಕಲಿಯಬೇಕು. ದುರಾಸೆಗೆ ಬೀಳಬಾರದು. ಇಂತಹ ಹಿಂಸೆ ಕೇವಲ ಮಕ್ಕಳಿಗೆ ಮಾತ್ರ ಆಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಶಿಕ್ಷಕರ ಮೇಲೂ ಇದು ಗಂಭೀರ ಮಾನಸಿಕ ದೈಹಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದನ್ನು ಹೆಚ್ಚು ವಿಸ್ತರಿಸಬೇಕಿಲ್ಲವಾದರೂ ಒಬ್ಬ ಶಿಕ್ಷಕಿಯ ಕಥೆಯನ್ನು ಇಲ್ಲಿ ಕೇಳುವುದು ಸೂಕ್ತವೇನೋ.

ಸುಶೀಲಮ್ಮನ ಸಿಎಲ್ಕಥೆ!

ಕೆಲವು ವರ್ಷಗಳ ಹಿಂದಿನ ಮಾತಿದು. ನಾನಾಗ ಒಂದು ಹೈಸ್ಕೂಲಿನಲ್ಲಿ ಕೆಲಸಮಾಡುತ್ತಿದ್ದೆ. ನನ್ನ ಶಾಲೆಯ ಪಕ್ಕದ ಊರಿನ ಶಾಲೆಯಲ್ಲಿ ನನಗೆ ತುಂಬಾ ಪರಿಚಿತವಾಗಿದ್ದ ಸುಶೀಲಮ್ಮ ಎಂಬ ಒಬ್ಬ ಗಣಿತ ಶಿಕ್ಷಕಿ ಇದ್ದರು. ಅವರು ಬಹಳ ಒಳ್ಳೆಯ ಶಿಕ್ಷಕಿಯಾಗಿದ್ದರು. ಯಾರಕೂಡವೂ ತಮ್ಮ ಕೆಲಸದ ಬಗ್ಗೆ ಬೆರಳು ತೋರಿಸಿಕೊಂಡವರಲ್ಲ. ಆದರೆ ಅವರ ಒಂದೇ ಒಂದು ದೌರ್ಬಲ್ಯವೆಂದರೆ ಶಾಲೆಯ ಎಸ್ಎಸ್ಎಲ್‌ ಸಿ ಫಲಿತಾಂಶವನ್ನು ನೆತ್ತಿಗೆ ಏರಿಸಿಕೊಂಡು ಪದೇ ಪದೇ ʻಮೆದುಳುಜ್ವರʼ(!)ಕ್ಕೆ ಗುರಿಯಾಗುತ್ತಿದ್ದುದು! ಸರ್ಕಾರ ಅವರ ಕಷ್ಟಸುಖಕ್ಕೆ ಎಂದು ವರ್ಷಕ್ಕೆ ನೀಡುತ್ತಿದ್ದ ಹದಿನೈದು ಸಾಂದರ್ಭಿಕ ರಜೆಗಳಲ್ಲಿ ಎರಡು ಮೂರು ರಜೆಗಳನ್ನು ಅವರು ಸುಖಕ್ಕೆ ಬಳಸಿಕೊಂಡರೆ ಉಳಿದಂತೆ ಹನ್ನೆರಡು ಹದಿಮೂರು ರಜೆಗಳನ್ನು ಕಷ್ಟಕ್ಕೇ ಬಳಸಿಕೊಳ್ಳುತ್ತಿದ್ದರು. ಕಷ್ಟಕ್ಕೆ ಬಳಸಿಕೊಳ್ಳುತ್ತಿದ್ದ ಹನ್ನೆರಡು ಹದಿಮೂರು ರಜೆಗಳಲ್ಲಿ ಎರಡು ಮೂರು ರಜೆಗಳನ್ನು ಮನೆಯ ಕಷ್ಟಕ್ಕೆ ಬಳಸಿಕೊಂಡರೆ ಉಳಿದಂತೆ ಹತ್ತು ಹನ್ನೊಂದು ರಜೆಗಳನ್ನು ಶಾಲೆಯ ಕಷ್ಟಕ್ಕೇ ಬಳಸಿಕೊಳ್ಳುತ್ತಿದ್ದರು. ಕೆರೆಯ ನೀರನ್ನು ಕೆರೆಗೇ ಚೆಲ್ಲುವುದು ಅನ್ನುತ್ತಾರಲ್ಲ ಹಾಗೆ.


ಅದು ಹೇಗೆ ಎಂದರೆ ಅವರು ಶಾಲೆಗೆ ಬಂದ ತಕ್ಷಣ ಹತ್ತನೆಯ ತರಗತಿಗೆ ಪಾಠ ತೆಗೆದುಕೊಳ್ಳಬೇಕಾದ ಶಿಕ್ಷಕರು ಯಾರಾದರೂ ಗೈರು ಇದ್ದಾರೆಯೇ ಎಂದು ನೋಡಿಕೊಂಡು ಯಾರಾದರೂ ಬರದಿದ್ದರೆ, ಹತ್ತನೆಯ ತರಗತಿಗೆ ತಮ್ಮ ಪಿರಿಯಡ್ಇರಲಿ ಬಿಡಲಿ ಅಲ್ಲಿಗೆ ನುಗ್ಗುತ್ತಿದ್ದರು. ಹೀಗೆ ನುಗ್ಗುವಾಗ ಅವರಿಗೆ ಬೇರೆ ತರಗತಿಗೆ ತಮ್ಮ ಪಿರಿಯಡ್ಇರುವುದೂ ಕೂಡ ಮರೆತುಹೋಗುತ್ತಿತ್ತು. ಕೆಲವು ದಿನ ಅವರು ನಾಲ್ಕು ಐದು ಪಿರಿಯಡ್‌ ʼನಿರಂತರಗಣಿತʼ ಮಾಡಿದ್ದೂ ಇರುತ್ತಿತ್ತು. ಹೀಗೆ ವಾರದಲ್ಲಿ ಮೂರುನಾಲ್ಕು ದಿನ ಸಿಕ್ಕಾಪಟ್ಟೆ ಕ್ಲಾಸ್ತೆಗೆದುಕೊಳ್ಳುವ ಕಾರಣ ಬಳಲಿ ಬೆಂಡಾಗಿ ಶಾಲೆಗೆ ಬರಲಾಗದಷ್ಟು ಸುಸ್ತಾಗಿ ಒಂದು ದಿನ ಶಾಲೆಗೆ ರಜೆ ಹಾಕುತ್ತಿದ್ದರು. ಹೀಗೆ ರಜೆಪಡೆದು ಒಂದಿಷ್ಟು ಸುಧಾರಿಸಿಕೊಂಡು ಶಾಲೆಗೆ ಬಂದಾಗ ಮತ್ತೆ ಮೊದಲಿನಂತೆಯೇ ಬಾರಾಡಿ ಕ್ಲಾಸ್ತೆಗೆದುಕೊಳ್ಳುತ್ತಿದ್ದರುಅವರು ಅಷ್ಟು ಗೋಳಾಡಿದರೂ, ವೈಯಕ್ತಿಕ ರಜೆಯನ್ನೂ ಆರೋಗ್ಯವನ್ನೂ ಕಳೆದುಕೊಂಡರೂ ಕಲಿಕೆಯ ಮಟ್ಟದ ತಕ್ಕಡಿ ಮಾತ್ರ ಅವರ ನಿರೀಕ್ಷೆಗೆ ತಕ್ಕಂತೆ ತಳಬಿಟ್ಟು ಮೇಲೆ ಏಳುತ್ತಿರಲಿಲ್ಲ. ಅವರ ತರಗತಿಗಳ ಮಕ್ಕಳ ವಿಶೇಷವೆಂದರೆ ಅವರು ಇವತ್ತು ಕಲಿಸಿದ ಲೆಕ್ಕಗಳನ್ನು ಕಲಿತು ಅವರಿಗೆ ನಾಳೆ ಒಪ್ಪಿಸಿ ಅವರನ್ನು ತುಸು ಸಂತೋಷಗೊಳಿಸುತ್ತಿದ್ದುದು ನಿಜವಾದರೂ ಎರಡು ದಿನಗಳ ನಂತರ ಹಿಂದಿನದ್ದೆಲ್ಲವನ್ನೂ ಮರೆತು ಅವರಿಗೆ ಅಪರಿಮಿತ ಆಘಾತವನ್ನುಂಟುಮಾಡುತ್ತಿದ್ದರು. ಅಂದರೆ ಅವರು ಎಷ್ಟೇ ಕಲಿಸಿದರೂ ಮಕ್ಕಳು ಎರಡು ಮೂರು ದಿನಗಳಿಗಿಂತ ಹಿಂದೆ ಅವರು ಕಲಿಸಿದ್ದನ್ನು ಮಾತ್ರ ಒಪ್ಪಿಸಲು ಅವರಿಗೆ ಆಗುತ್ತಿರಲಿಲ್ಲ. ಇದನ್ನು ಕಂಡಾಗ ಅವರುಅಯ್ನೋ ಶಿವ್ನೆ ನಾನು ಎರಡೇ ದಿನಾನಾ ಪಾಟ ಮಾಡಿದ್ದು?” ಎಂದು ತಲೆಯ ಮೇಲೆ ಕೈಹೊತ್ತು ಕೂರುತ್ತಿದ್ದರು. ಆಗ ಅರೆದೆಲೆ ನೋವು ಆರಂಭವಾಗುತ್ತಿತ್ತು. ಅನಿವಾರ್ಯವಾಗಿ ಮತ್ತೆ ರಜೆ ಹಾಕಬೇಕಾಗುತ್ತಿತ್ತು. ಅದೇ ರಾಗ ಅದೇ ಹಾಡು ಮುಂದುವರೆಯುತ್ತಿತ್ತು.

ಇದು ಆ ಒಬ್ಬ ಶಿಕ್ಷಕಿಯ ಕಥೆಯಲ್ಲ. ಶಿಕ್ಷಕರ ಮೇಲಿನ ಈ ಒತ್ತಡವು ಶಾಲೆಯ ಪರಿಸರದಲ್ಲಿ ಕೇವಲ ಮಕ್ಕಳು ಮತ್ತು ವಿದ್ಯಾರ್ಥಿಗಳ ಸಂಬಂಧವನ್ನು ಮಾತ್ರ ಹಾಳುಮಾಡಿಲ್ಲ ಬದಲಾಗಿ ಶಿಕ್ಷಕರ ನಡುವಿನ ಸಂಬಂಧವನ್ನೂ ಭೌನಾತ್ಮಕವಾಗಿ ಕೆಡಿಸಿದೆ. ಅನೇಕ ಶಿಕ್ಷಕರು ಶಾಲೆಯಲ್ಲಿ ಜಗಳ ಆಡುವುದೇ ಎಸ್‌ ಎಸ್‌ ಎಲ್‌ ಸಿ ಗೆ ʻನನಗೆ ಪಿರಿಯಡ್‌ ಕಡಿಮೆ; ಆಯಿತು ನಿನಗೆ ಹೆಚ್ಚಾಯಿತುʼ ʼನೀವ್‌ ಬೆಲ್‌ ಹೊಡೆದ ತಕ್ಷಣ ಹೊರಗೆ ಬರಲ್ಲʼ ʼನೀವು ಸಿಕ್ಕಾಪಟ್ಟೆ ಹೋಮ್‌ ವರ್ಕ್‌ ಕೊಟ್ರೆ ಆ ಮಕ್ಳು ನಮ್ಮ ವಿಷಯ ಓದೋದ್‌ ಯಾವಾಗʼ ʼನೀವು ಹೊಡೆಯೋದ್ರಿಂದ ಮಕ್ಳು ನಿಮ್ಮ ವಿಷಯ ಮಾತ್ರ ಓದ್ತಾರೆ; ಹೊಡೆಯದೇ ಮಕ್ಕಳ ಹಕ್ಕುಗಳನ್ನು ಗೌರವಿಸುವ ನಮ್ಮ ವಿಷಯ ಓದೋದೆ ಇಲ್ಲʼ ಇತ್ಯಾದಿ ಕ್ಷುಲ್ಲಕ ಕಾರಣಗಳಿಗಾಗಿ. ಇದು ಇತ್ತೀಚೆಗೆ ಎಷ್ಟು ಕೆಟ್ಟ ಮನಸ್ಥಿತಿಯನ್ನು ಶಿಕ್ಷಕರಲ್ಲಿ ಬೆಳೆಸುತ್ತಿದೆ ಎಂದರೆ, ಎಸ್‌ ಎಸ್‌ ಎಲ್‌ ಸಿ ಗೆ ಪಾಠ ತೆಗೆದುಕೊಳ್ಳಬೇಕಾದ ಯಾವುದಾದರೂ ಶಿಕ್ಷಕರು ಕಾಯಿಲೆಯಿಂದಲೋ ಸಣ್ಣಪುಟ್ಟ ಅಪಘಾತಕ್ಕೆ ಗುರಿಯಾಗಿಯೋ ಶಾಲೆಗೆ ನಾಲ್ಕಾರು ದಿನ ಬರದಂತಾದಾಗ, ಮೇಲ್ಮೇಲೆ ಅವರ ಬಗ್ಗೆ ʼಅಯ್ಯೋʼ ಅನ್ನಿಸಿದರೂ ಒಳಗೊಳಗೆ ಕೆಲವರಿಗೆ ʼಸಂತೋಷʼ ಆಗುವುದೂ ಇದೆ. “ಶಾಲೆ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ; ನಾವೆಲ್ಲ ನೋಡಿಕೊಳ್ತೇವೆ; ʼಆರೋಗ್ಯ ಬಹಳ ಮುಖ್ಯ, ನೀವು ಆರಾಮಾಗಿ ರೆಸ್ಟ್‌ ಮಾಡಿ ನಿಧಾನಕ್ಕೆ ಬನ್ನಿ” ಎಂದು ಅವರಿಗೆ ಪೋನ್‌ ಮಾಡುವ ಬಹಳಷ್ಟು ಸಹೋದ್ಯೋಗಿಗಳೆಲ್ಲರಿಗೂ ಅವರ ಆರೋಗ್ಯದ ಕಾಳಜಿ ಮಾತ್ರವೇ ಇರುತ್ತದೆಯೇ ಅಥವಾ ಅವರಲ್ಲಿ ಎಲ್ಲರಿಗೆ ಅಲ್ಲದಿದ್ದರೂ ಕೆಲವರಿಗಾದರೂ ಅವರ ಪಿರಿಯಡ್‌ಗಳನ್ನು ತಾವು ಬಳಸಿಕೊಳ್ಳಬಹುದೆಂಬ ಒಳಬಯಕೆಯೂ ಇರುತ್ತದೆಯೇ? ಅದನ್ನು ಅವರ ಎದೆಬಗೆದು ನೋಡುವುದಾದರೂ ಹೇಗೆ? ʻನೆರೆಮನೆ ಹಾಳ್‌ಬಿದ್ರೆ ಕರ ಕಟ್ಲಿಕ್ಕೆ ಜಾಗ ಆತುʼ ಅಂತಾ ಗಾದೆಯೇ ಇದೆಯಲ್ಲ.

ಅನಪೇಕ್ಷಿತ ಮತ್ತು ಎಡಬಿಡಂಗಿ ಮಾರ್ಗದರ್ಶನ:

ಅಂಕವ್ಯಸನದ ಅವಾಂತರಗಳಲ್ಲಿ ಮತ್ತೊಂದು ಅವಾಂತರ ಎಂದರೆ ಅದು ʼಮಾರ್ಗದರ್ಶನʼಕ್ಕೆ ಸಂಬಂಧಿಸಿದ್ದು. ಎಸ್ಎಸ್ಎಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವ ಶಿಕ್ಷಕರನೇಕರು ಚಿತ್ರವಿಚಿತ್ರವಾದ ಮಾರ್ಗದರ್ಶನಕ್ಕೆ ಗುರಿಯಾಗಬೇಕಾಗಿ ಬಂದು ದಂಗಾಗಿ ಹೋಗುವುದುಂಟು. ಮಾರ್ಗದರ್ಶನಗಳನ್ನು ನೋಡಿ ಅನೇಕರಿಗೆ ತಾವು ತರಬೇತಿ ಪಡೆದು ಶಿಕ್ಷಕ ಕೆಲಸಕ್ಕೆ ಬಂದವರೋ ಅಥವಾ ಎಸ್ಎಸ್ಎಲ್ಸಿ ಯನ್ನೂ ಪಾಸಾಗದೆ ಕೆಲಸಕ್ಕೆ ಬಂದ ದಡ್ಡರೋ ಎಂಬ ಅನುಮಾನ ಬಂದಿರಲಿಕ್ಕೂ ಸಾಕು. ಏಕೆಂದರೆ ಮಾರ್ಗದರ್ಶನ ಮಾಡಲು ಬಂದವರಲ್ಲಿ ಎಲ್ಲರಲ್ಲದಿದ್ದರೂ ಬಹಳಷ್ಟು ಜನ ಮಾಡುವ ಮಾರ್ಗೆದರ್ಶನ ಹಾಗೆಯೇ ಇರುತ್ತದೆ. ಶಾಲೆಗೆ ಮಾರ್ಗದರ್ಶನ ಮಾಡಲು ಬರುವವರು ಅಲ್ಲಿನ ಶಿಕ್ಷಕರು ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ ಎಂಬುದನ್ನು ಅವರಿಂದ ಕೇಳಿ ತಿಳಿದು ಅಂತಹ ಸಮಸ್ಯೆಗಳೇನಾದರೂ ಅವರ ಗಮನಕ್ಕೆ ಬಂದರೆ ಅವನ್ನು ತಮ್ಮ ಜ್ಞಾನದ ಬಲದಿಂದ, ಅದಾಗದಿದ್ದರೆ ತಿಳಿದವರಿಂದ ತಿಳಿದು ಸಮಸ್ಯೆಗಳನ್ನು ಬಗೆಹರಿಸಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಬೇಕು. ಅದು ಮಾತ್ರ ನಿಜವಾದ ಮಾರ್ಗದರ್ಶನವಾಗುತ್ತದೆ. ಆದರೆ ಕಾರ್ಯವನ್ನು ಎಷ್ಟು ಜನ ಮಾಡುತ್ತಾರೆ? ಯಾರೋ ತಮಗೆ ಹೇಳಿದ್ದನ್ನು ಅವರು ಶಿಕ್ಷಕರಿಗೆ ಹೇಳಿ ಅದಕ್ಕೆ ಸಾಕ್ಷಿಫೋಟೋ ತೆಗೆದುಕೊಂಡು ಹೋಗಲು ಬರುವವರೇ ಹೆಚ್ಚೆಂಬುದು ಬಹುತೇಕ ಶಿಕ್ಷಕರ ಅಂಬೋಣ.

ಹೀಗೆ ಬರುವವರ ಮಾರ್ಗದರ್ಶನ ಎಷ್ಟು ಕೆಟ್ಟದ್ದಾಗಿ ಇರುತ್ತದೆ ಎಂದರೆ ಇವರಲ್ಲಿ ಹಲವರು ಹೇಗೆ ಓದಿಸಬೇಕು, ಹೇಗೆ ಬರೆಸಬೇಕು. ಒಂದು ಪ್ರಶ್ನೆಗೆ ಎಷ್ಟು ನೂರುಸಲ ಉತ್ತರ ಬರೆಸಬೇಕು ಇತ್ಯಾದಿಯೆಲ್ಲವನ್ನೂ ಶಿಕ್ಷಕರಿಗೆ ಉಪದೇಶ ಮಾಡುವುದುಂಟು. ಒಬ್ಬ ಶಿಕ್ಷಕನಿಗೆ ಅಥವಾ ಶಿಕ್ಷಕಿಗೆ ತನ್ನ ತರಗತಿ ಮಕ್ಕಳ ಬಗ್ಗೆ ಇರುವಷ್ಟು ನಿಕಟತೆ ಇನ್ಯಾರಿಗೆ ಇರಲು ಸಾಧ್ಯ? ಯಾರಿಗೆ ಎಷ್ಟು ಸಲ ಬರೆಸಬೇಕು ಯಾರಿಗೆ ಎಷ್ಟು ಸಲ ಓದಿಸಬೇಕು ಎಂಬುದನ್ನೆಲ್ಲ ಅವರು ಬೇರೆಯವರಿಂದ ಕೇಳಿ ತಿಳಿಯಬೇಕೆ? ಹೀಗೆ ಬಂದು ಹೇಳುವ ಅನೇಕರಿಗೆ ʼಅಧಿಕಾರʼ ಇರುತ್ತದೆಯೇ ಹೊರತು ತರಗತಿಯ ʼಅನುಭವʼ ಇರುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಒಂದೆರಡು ಉದಾಹರಣೆಗಳನ್ನು ಗಮನಿಸಿ. ಒಬ್ಬ ಅಧಿಕಾರಿ ಒಂದು ಸಲ ಒಂದು ಶಾಲೆಗೆ ಹೋಗಿದ್ದಾರೆಆಗ ಶಾಲೆಯಲ್ಲಿ ಶಿಕ್ಷಕರೊಬ್ಬರು ಮಕ್ಕಳನ್ನು ದೂರ ದೂರ ಕೂರಿಸಿ (ಪರೀಕ್ಷೆಗೆ ಕೂರಿಸುವಂತೆ) ಓದಿಕೊಳ್ಳಲು ಹೇಳಿ ಕೊಠಡಿಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾರೆ. ಅದನ್ನು ಕಂಡ ಅಧಿಕಾರಿಗೆ ಸಿಟ್ಟುಬಂದುಬಿಟ್ಟಿದೆ. ಸರ್ಕಾರದಿಂದ ಲಕ್ಷದಷ್ಟು ಸಂಬಳ ಪಡೆದು ಶಿಕ್ಷಕರು ಸುಮ್ಮನೆ ಓಡಾಡುತ್ತಿದ್ದಾರಲ್ಲ; ಇದರಿಂದ ಸರ್ಕಾರದ ಹಣ ಎಷ್ಟು ಪೋಲಾಗುತ್ತಿದೆ ಅನ್ನಿಸಿತೋ ಏನೋ ಶಿಕ್ಷಕರನ್ನು ಬಗ್ಗೆ ವಿಚಾರಿಸಿದ್ದಾರೆ.   ಶಿಕ್ಷಕರು ಮಕ್ಕಳನ್ನು ಓದಿಸುತ್ತಿರುವುದಾಗಿಯೂ ತಾವು ಅದರ ಉಸ್ತುವಾರಿ ನೋಡಿಕೊಳ್ಳುತ್ತಿರುವುದಾಗಿಯೂ ಪ್ರಾಮಾಣಿಕವಾಗಿ ಹೇಳಿದ್ದಾರೆಆಗ ಅಧಿಕಾರಿ, “ನೀವು ರೀತಿ ಮಕ್ಕಳನ್ನು ಓದಲು ಹಚ್ಚಿಕೊಂಡು ತರಗತಿಯಲ್ಲಿ ತಿರುಗಾಡುವುದಾದರೆ ಮಕ್ಕಳು ಶಾಲೆಗೆ ಬರುವುದಾದರೂ ಏತಕ್ಕೆ? ಅವರು ಮನೆಯಲ್ಲಿಯೇ ಓದಿಕೊಳ್ಳಬಹುದಲ್ಲಎಂದು ಆವಾಜ್ಹಾಕಿ, “ನೀವು ಪ್ರಶ್ನೆ ಕೇಳುತ್ತಾ ಹೋಗಿ. ಮಕ್ಕಳು ಉತ್ತರ ಹೇಳುತ್ತಾ ಹೋಗಲಿಎಂದು ಹೇಳಿದರಂತೆ! ಒಟ್ಟಿನಲ್ಲಿ ಪರೀಕ್ಷೆಯ ದಿನದವರೆಗೂ ಶಿಕ್ಷಕರು ತರಗತಿಯಲ್ಲಿʻವಟವಟವಟʼ ಅನ್ನುತ್ತಲೇ ಇರಬೇಕು! ಹಾಗೆ ಮಾಡಿದರೆ ಮಾತ್ರ ಇಂಥವರಿಗೆ ಸಮಾಧಾನ.

ಇನ್ನೊಂದು ಶಾಲೆಗೆ ಬಂದ ಒಬ್ಬ ಅಧಿಕಾರಿ, “ಪ್ರೇಯರಲ್ಲಿ ಭಾರತದ ಮ್ಯಾಪ್ತೋರಿಸಿ ಎರಡು-ಮೂರು ಸ್ಥಳಗಳನ್ನು ಗುರುತಿಸಲು ಹೇಳಿʼ ಎಂದು ಹೇಳಿದರಂತೆ. ಇವರೆಲ್ಲ ಮೇಷ್ಟ್ರನ್ನು ಏನೆಂದು ತಿಳಿದುಕೊಂಡಿದ್ದಾರೆ? ಇವರು ಹೇಳಿದ್ದನ್ನೆಲ್ಲ ಮಾಡುತ್ತಾ ಹೋದರೆ ಅದು ಪ್ರೇಯುರ್ಆಗುತ್ತೋ ಅಥವಾ ಕ್ಲಾಸ್ರೂಮ್ಆಗುತ್ತೋ? ಕುವೆಂಪು ಅವರು ಭಗವದ್ಗೀತೆಯನ್ನು ಕೃಷ್ಣ ಅರ್ಜುನನಿಗೆ ಯುದ್ಧರಂಗದಲ್ಲಿ ಬೋಧಿಸಿದ್ದು ಎಂದು ಯಾರೋ ಹೇಳಿದಾಗ, ʼಅಷ್ಟನ್ನು ಅಲ್ಲಿ ಬೋಧಿಸಲು ಅದು ಯುದ್ಧರಂಗವೋ ಅಥವಾ ಔತಣಕೂಟವೋ?” ಎಂದು ಕೇಳಿದ್ದರಂತೆ. ಹೀಗಾಗಿ ವಾಸ್ತವವಾಗಿ ತರಗತಿಯ ಅನುಭವ ಇಲ್ಲದ ಅಧಿಕಾರಿಗಳು ಮಾರ್ಗದರ್ಶಕರಾದಾಗ, ಅವರು ಶಿಕ್ಷಕರ ಗೈರುಹಾಜರಿ, ಬೇಜವಾಬ್ದಾರಿ ನಡವಳಿಕೆ ಇತ್ಯಾದಿಗಳ ಬಗ್ಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ʼಆಡಳಿತಾತ್ಮಕʼ ಕಾರ್ಯಗಳನ್ನು ಮಾಡಿ ತಮಗೆ ಅನುಭವ ಇಲ್ಲದ ʼಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದಿರುವಷ್ಟಾದರೂ ಸೌಜನ್ಯವನ್ನು ತೋರಿಸಬೇಕು.

ಕೊನೆಯ ಮಾತುಗಳು:

ಮಕ್ಕಳ ಕಲಿಕೆ ಎಂಬುದು ಒಂದು ಅತ್ಯಂತ ಸೂಕ್ಷ್ಮವಿಚಾರ. ಅದಕ್ಕೆ ಸಂಬಂಧಿಸಿದಂತೆ ನಾವು ಏನೇ ಪ್ರಯೋಗ ಮಾಡಹೊರಡುವಾಗ ಹತ್ತುಸಲ ಯೋಚಿಸಿ ಮುಂದಡಿಯಿಡಬೇಕು. ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದ ಕೇವಲ ತಮ್ಮ ನಂಬಿಕೆ, ಅಥವಾ ವೈಯಕ್ತಿಕ ಅನುಭವದ ಆಧಾರಗಳ ಮೇಲೆ ಯಾವ ಹಂತದಲ್ಲಿಯೂ ಯಾವುದೇ ಅಧಿಕಾರಿಗಳು ತಮ್ಮ ಅಧಿಕಾರದ ಬಲದಿಂದ ಯಾವುದೇ ಕ್ರಮಕ್ಕೆ ಮುಂದಾಗಬಾರದು. ಏನು ಕಲಿಸಬೇಕು, ಎಷ್ಟು ಕಲಿಸಬೇಕು, ಹೇಗೆ ಕಲಿಸಬೇಕು. ಮಕ್ಕಳು ಎಷ್ಟು ಸಮಯ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಬೇಕು ಎಂಬ ಎಲ್ಲ ಸಂಗತಿಗಳೂ ಮಕ್ಕಳ ಮನಶ್ಶಾಸ್ತ್ರದ ಹಿನ್ನಲೆಯಲ್ಲಿ ರಾಜ್ಯಮಟ್ಟದಲ್ಲಿಯೇ ನಿರ್ಣಯವಾಗುವಂತಹ ಸಂಗತಿಗಳು. ಅಲ್ಲಿ ನಿರ್ಣಯವಾದಂತೆ ಉಳಿದವರು ಅವನ್ನು ಅನುಸರಿಸಬೇಕು. ಇದನ್ನು ಯಾವುದೇ ಅಧಿಕಾರಿಗಳು ʼಪ್ರತಿಷ್ಠೆʼಯಾಗಿ ತೆಗೆದುಕೊಳ್ಳಬಾರದು. ಅವರು ತಮ್ಮ ತಮ್ಮ ಮೂಗಿನ ನೇರಕ್ಕೆ ತಮಗಿರುವ ʼಅಧಿಕಾರʼ ಬಲದಿಂದ ಇಂತಹ ವಿಷಯದಲ್ಲಿ ಮುಂದಡಿಯಿಟ್ಟರೆ ಅದು ಮಕ್ಕಳ ಭವಿಷ್ಯಕ್ಕೆ ಮಾರಕವಾಗುವುದೇ ಹೆಚ್ಚು. ಹೀಗಿದ್ದೂ ಯಾರಾದರೂ ಇದನ್ನು ಮಾಡಹೊರಟರೆ ಅಂತಹ ಸಂದರ್ಭಗಳಲ್ಲಿ ಮಕ್ಕಳ ಹಕ್ಕುಗಳ ಆಯೋಗವು ಯಾರಾದರೂ ದೂರುಕೊಡಲಿ ಎಂದು ಕಾಯದೇ ಸ್ವಯಂ ಪ್ರೇರಿತವಾಗಿ ಇಂತಹ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಇದರಿಂದ ಬಗ್ಗೆ ಒಂದಿಷ್ಟು ಜಾಗೃತಿ ಮೂಡಲು ಸಹಾಯವಾಗುತ್ತದೆ. ಇಡೀ ಲೇಖನದ ಸಾರವನ್ನು ಡಿವಿಜಿ ಅವರ ಚೌಪದಿ ಎಷ್ಟು ಅರ್ಥಪೂರ್ಣವಾಗಿ ಧ್ವನಿಸುತ್ತದೆ ನೋಡಿ:

ಪರಿಪರಿಯ ಮೃಷ್ಟಾನ್ನ ಭಕ್ಷಭೋಜ್ಯಗಳು ತಾ-

ವರದಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ

ಬರಿಯೋದು ಬರಿತರ್ಕ ಬರಿಭಕ್ತಿಗಳುಮುಂತು

ಹೊರೆಯೆ ಅರಿವಾಗದೊಡೆ ಮರುಳ ಮುನಿಯ

****

ಡಾ ರಾಜೇಂದ್ರ ಬುರಡಿಕಟ್ಟಿ

Wednesday, February 25, 2026

****************************************************************************

ಇಷ್ಟವಿದ್ದವರು ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದು.

ಅಂಕವ್ಯಸನದ ಅವಾಂತರಗಳು.. (ಭಾಗ-೧)

https://buradikatti.blogspot.com/2026/02/blog-post.html

ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು..

https://buradikatti.blogspot.com/2026/01/blog-post.html

ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?

https://buradikatti.blogspot.com/2025/07/blog-post.html

ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು

https://buradikatti.blogspot.com/2024/11/blog-post_17.html

ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?

https://buradikatti.blogspot.com/2025/08/blog-post.html

ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು

https://buradikatti.blogspot.com/2024/11/blog-post.html

ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್‌ ರಜೆ

https://buradikatti.blogspot.com/2025/06/blog-post_5.html

ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು

https://buradikatti.blogspot.com/2024/05/blog-post_31.html

ಎಸ್.ಎಸ್.ಎಲ್.ಸಿ ಫಲಿತಾಂಶಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

https://buradikatti.blogspot.com/2022/05/blog-post.html

ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:

https://buradikatti.blogspot.com/2020/07/blog-post.html

ʻಅರಮನೆʼ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ

https://buradikatti.blogspot.com/2020/07/blog-post_14.html

 


No comments:

Post a Comment