Sunday, March 15, 2026

ಬಾನು ಮುಸ್ತಾಕ್ ಮತ್ತು ʻನಗ್ನಪಾದʼ ಗೌರವ!

 ಬಾನು ಮುಸ್ತಾಕ್ ಮತ್ತು ʻನಗ್ನಪಾದʼ ಗೌರವ!

ಸಾಹಿತಿ ಬಾನು ಮುಸ್ತಾಕ್ ಅವರು ಚಪ್ಪಲಿಹಾಕಿಕೊಂಡು ಅಂಬೇಡ್ಕರ್ ಅವರಿಗೆ ಪುಷ್ಪನಮನ ಮಾಡಿದರು ಎಂಬುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂದು ಒಂದು ಸುದ್ಧಿವಾಹಿನಿಯ ಚಾನೆಲ್ ನಲ್ಲಿ ನೋಡಿದೆ. ಇಂತಹ ಕೆಲವು ಕೆಲಸಕ್ಕೆ ಬಾರದ ಸಂಗಂತಿಗಳಿಗೆ ತಮ್ಮಷ್ಟಕ್ಕೆ ತಾವು ವಿವಾದವಾಗುವ ಯಾವ ಅರ್ಹತೆಯಿಲ್ಲದಿದ್ದರೂ ಕೆಲವು ಕೆಲಸವಿಲ್ಲದ ಪತ್ರಕರ್ತರು ಮತ್ತು ಕೆಲವು ʼಧರ್ಮರಕ್ಷಕರುʼ ಸೇರಿ ಅವನ್ನು ವಿವಾದಕ್ಕೆ ತಿರುಗಿಸುತ್ತಾರೆ ಎಂಬುದನ್ನು ಬಹಳಷ್ಟು ಜನ ಪ್ರಜ್ಞಾವಂತರು ಬಲ್ಲರು.
ಈಗ ಇವರ ಪ್ರಕಾರ ಸಂವಿಧಾನವನ್ನೇ ಬರೆಯಲಿಲ್ಲ ಸುಮ್ಮಸುಮ್ಮನೆ ಹಾಗೆ ಹೆಸರು ತೆಗೆದುಕೊಂಡರು ಎಂದು ಇವರಲ್ಲಿ ಬಹಳಷ್ಟು ಜನ ಅಂಬೇಡ್ಕರ್ ಅವರನ್ನು ಗೌರವಿಸದವರು. ಈಗ ಅವರಿಗೆ ಅಗೌರವ ಆಯಿತು ಎಂದು ಬೊಬ್ಬೆಹಾಕಿ ಹುಯಿಲೆಬ್ಬಿಸುತ್ತಿದ್ದಾರೆ. ಏಕೆಂದರೆ ಈಗ ಇವರು ಬಾನು ಮುಸ್ತಾಕ್ ಅವರನ್ನು ಹಣಿಯಬೇಕಾಗಿದೆ. ಈಗ ಬಾನು ಮುಸ್ತಾಕ್ ಅವರನ್ನು ಹಣಿಯಲು ಇವರು ಅಂಬೇಡ್ಕರ್ ಅವರನ್ನು ಬಳಸಿಕೊಂಡಂತೆ ಅಂಬೇಡ್ಕರ್ ಅವರನ್ನು ಹಣಿಯಲು ಬಾನು ಮುಸ್ತಾಕ್ ಅವರ ಅಥವಾ ಅವರು ಸೃಷ್ಟಿಸಿದ ಯಾವುದಾದರೂ ಪಾತ್ರದ ಮಾತು ಉಪಯೋಗಕ್ಕೆ ಬರುವುದಾದರೆ ಇವರು ಅದನ್ನೂ ಮಾಡುವಂಥವರು.
ಹೀಗೆ ಚಪ್ಪಲಿ ಕನಿಷ್ಠ ಕಿರೀಟ ಶ್ರೇಷ್ಠ ಎನ್ನುವವರು ಇಡೀ ಸಮಾಜದ ಎಲ್ಲ ಜನರನ್ನು ಒಂದೆಂದು ಭಾವಿಸುವುದು ಒಂದುಕಡೆ ಇರಲಿ; ತಮ್ಮದೇ ದೇಹದ ಎಲ್ಲ ಅಂಗಗಳಿಗೂ ಸಮಾನ ಗೌರವ ಮರ್ಯಾದೆ ಕೊಡದವರು. ಅವರಿಗೆ ತಲೆ ಶ್ರೇಷ್ಠ; ಪಾದ ಕನಿಷ್ಠ. ಹಾಗಾಗಿಯೇ ಟೊಪ್ಪಿಗೆ ಕಿರೀಟಗಳಿಗೆ ಇರುವ ಮರ್ಯಾದೆ ಚಪ್ಪಲಿಗಳಿಗೆ ಇಲ್ಲ. ಹಾಗಾಗಿಯೇ ʻಮನೆದೇವರನ್ನು ಕಾಲಲ್ಲಿ ಧರಿಸುವ ಸಾಹಿತಿʼ ಎಂದು ಅವರನ್ನು ಟೀಕಿಸುವ ಕೆಲಸವೂ ಆರಂಭವಾಗಿದೆ.
ಅಂಬೇಡ್ಕರ್ ಅವರನ್ನು ಬಹಳಷ್ಟು ಹಾಗನ್ನುವುದಕ್ಕಿಂತ ಅವರನ್ನು ಸರಿಯಾಗಿ ಓದಿಕೊಂಡ ಯಾರಿಗೇ ಆಗಲಿ ಬಾನುಮುಸ್ತಾಕ್ ಅವರ ನಡೆ ಅಂಬೇಡ್ಕರ್ ಅವರಿಗೆ ಅವಮಾನ ಅನ್ನಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಅಂಬೇಡ್ಕರ್ ಅವರ ವಿಚಾರ, ಆಲೋಚನೆಗಳನ್ನು ಒಪ್ಪಿಕೊಂಡು ಅವನ್ನು ತಮ್ಮ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಳವಡಿಸಿಕೊಂಡು ಬದುಕುವವರು ಅವರ ಭಾವಚಿತ್ರಕ್ಕೆ ಚಪ್ಪಲಿಹಾಕಿಕೊಂಡು ಹೂವು ಹಾಕಿದರೂ ಸರಿ; ಚಪ್ಪಲಿಬಿಟ್ಟು ಹೂವು ಹಾಕಿದರೂ ಸರಿ ಎರಡೂ ಅವರಿಗೆ ಗೌರವವೆ.
ಅವರ ಕೃತಿಗಳನ್ನು ಓದದೆ, ಅವರ ವಿಚಾರವನ್ನು ಒಪ್ಪಿಕೊಳ್ಳದೆ, ಜಾತಿ, ಅಸ್ಪೃಷ್ಯತೆ ಮುಂತಾದ ವಿಷಯಗಳಲ್ಲಿ ಅವರು ಯಾವುದನ್ನು ತಮ್ಮ ಜೀವಮಾನ ಪೂರ್ತಿ ವಿರೋಧಿಸುತ್ತಾ ಬಂದರೋ ಅದನ್ನೇ ಧರ್ಮ ಮತ್ತು ಸಂಸ್ಕೃತಿಗಳ ಹೆಸರಿನಲ್ಲಿ ಜೀವಂತ ಇಡುತ್ತಾ, ಸದಾ ಕೊಳೆತುನಾರುವ ಧಾರ್ಮಿಕ ಹೊಂಡದಲ್ಲಿ ಬಿದ್ದು ಒದ್ದಾಡುವವರು ಯಾವಾಗಲೋ ಒಮ್ಮೆ ತಮಗೆ ಉಪಯೋಗ ಆಗುತ್ತದೆ ಅನ್ನಿಸಿದಾಗ ಸ್ವಚ್ಚವಾಗಿ ಸ್ನಾನಮಾಡಿ ಮಡಿಯುಡಿಯಿಂದ ಚಪ್ಪಲಿಬಿಟ್ಟು ಬಹಳಷ್ಟು ಗೌರವ ಕೊಡುವವರಂತೆ ಅವರ ಭಾವಚಿತ್ರಕ್ಕೆ ಹೂವು ಹಾಕಿದರೂ ಅದು ಅಂಬೇಡ್ಕರ್ ಅವರಿಗೆ ಅಗೌರವವೆ!
ನಾನು ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಅಗಲಿದ ಗಣ್ಯರಿಗೆ ಹೀಗೆ ಪುಷ್ಪನಮನ ಸಲ್ಲಿಸುವ ಅನೇಕ ಸಂದರ್ಭಗಳನ್ನು ಕಣ್ಣಾರೆ ನೋಡಿದ್ದೇನೆ. (ಅವನ್ನು ದೇಶದ ಜನವೆಲ್ಲ ಟಿವಿಯಲ್ಲಿ ನೋಡಿರುತ್ತಾರೆ ಕೂಡ). ಆ ನಾಯಕರು ಇವರು ಹೇಳಿದಂತೆ ಚಪ್ಪಲಿ ತಗೆಯುವುದು, ಬೂಟು ಬಿಚ್ಚುವುದೂ ʻಇಲ್ಲʼ ಎನ್ನುವಷ್ಟು ಕಡಿಮೆ. ಹಾಗೆ ʻನಗ್ನಪಾದʼ (Barefoot) ದಿಂದ ಪುಷ್ಪನಮನ ಸಲ್ಲಿಸುವುದು ಆ ಮಹನೀಯರಿಗೆ ʼಅಗೌರವʼ ಎಂದು ಭಾವಿಸುವುದೂ ಇದೆ. ಹೀಗೆ ಗೌರವ ಕೊಡುವ ಕ್ರಮಗಳು ಅವರರವ ನಂಬಿಕೆ ವಿಚಾರಕ್ಕೆ ತಕ್ಕಂತೆ ಬೇರೆ ಬೇರೆ ಆಗಿಯೇ ಇರುತ್ತವೆ. ವಾಸ್ತವ ಹೀಗಿರುವಾಗ ಅವರೆಲ್ಲ ಮಾಡುವುದು ಸರಿ. ಬಾನು ಮುಸ್ತಾಕ್ ಮಾಡುವುದು ತಪ್ಪು ಹೇಗೆ?

ಅಷ್ಟಕ್ಕೂ ಅಂಬೇಡ್ಕರ್ ಅವರು ದೇವರೂ ಅಲ್ಲವಲ್ಲ. ಒಟ್ಟಿನಲ್ಲಿ ಇವರಿಗೆ ಕಿತಾಪತಿ ಮಾಡಿ ಕಿಡಿಹತ್ತಿಸಲು ಏನಾದರೂ ಒಂದು ಘಟನೆ ಬೇಕೆ ಬೇಕು, ಸಾಮಾಜಿಕ ಜಾಲತಾಣದಲ್ಲಿ ಒಂದು ವಾರ ರುಬ್ಬುತ್ತಾ ಖುಷಿಪಡಲಿಕ್ಕೆ! ಬಾನುಮುಸ್ತಾಕ್ ಅವರಂಥ ಒಬ್ಬ ಪ್ರಗತಿಪರ ಸಾಹಿತಿಗೆ ಅವರ ಬರೆವಣಿಗೆಯನ್ನು ಬಹಳಷ್ಟು ಪ್ರಮಾಣದಲ್ಲಿ ಪ್ರಭಾವಿಸಿರುವ ಮಹಾ ಚಿಂತಕ ಅಂಬೇಡ್ಕರ್ ಅವರಿಗೆ ಗೌರವ ಕೊಡುವುದು ಹೇಗೆ ಎಂದು ಯಾವ ತಿರುಬೋಕಿಗಳೂ ಹೇಳುವ ಅವಶ್ಯಕತೆಯಿರಲಾರದು.
ಅಷ್ಟಕ್ಕೂ ಅವರು ಚಪ್ಪಲಿಯನ್ನು ದೇವರೆಂದು ಭಾವಿಸಿರುವುದು ಒಂದು ಮಹತ್ವದ ಅಂಶ. ಇದರಿಂದ ಅವರು ಅಂಬೇಡ್ಕರ್ ಅವರನ್ನು ಗೌರವಿಸುವಾಗ ಬಹಳಷ್ಟು ಜನರು ಮಾಡುವಂತೆ ಚಮ್ಮಾರರನ್ನು ಅವಮಾನಿಸಲಿಲ್ಲ ಎಂಬುದೇ ಇಲ್ಲಿ ಅತ್ಯಂತ ಮಾದರಿಯಾದ ಅಂಶ. ಈ ಪ್ರಕರಣವನ್ನು ನೋಡಿದಾಗ ಸುಮಾರು ವರ್ಷಗಳ ಹಿಂದೆ ಬರೆದ ನನ್ನ ʻಚಪ್ಪಲಿಹಾರʼ ಎಂಬ ಒಂದು ಕವಿತೆ ನೆನಪಾಯಿತು. ಅದನ್ನು ಇಲ್ಲಿ ಕೊಟ್ಟಿರುವೆ.
****
ಚಪ್ಪಲಿಯ ಹಾರ
ಚಪ್ಪಲಿಯ ಹಾರ ನಮಗೆ ಅವಮಾನವಲ್ಲ
ಪುಷ್ಪಹಾರದ ಹಾಗೆ ಗೌರವವೆ ಎಲ್ಲ
ನನ್ನಜ್ಜ ಮುತ್ತಜ್ಜರೆಲ್ಲ
ಚಪ್ಪಲಿಯ ಹೊಲಿದು ಬದುಕಿದವರು
ರಾಯರ ಕಾಲಿಗೆ ಮುಳ್ಳೊತ್ತದಂತೆ
ಒಡೆಯರ ಕಾಲಿಗೆ ಕಲ್ಲೊತ್ತದಂತೆ
ಅವರ ಕಾಲಿಗೆ ಹೊಸ ಚಪ್ಪಲಿಯ ತೊಡಿಸಿ
ತಮ್ಮ ಹಣೆಯನ್ನು ಅವರ ಪಾದಕ್ಕೆ ಮುಟ್ಟಿಸಿ
ಧನ್ಯತೆಯ ಪಡೆದವರು
ಚಪ್ಪಲಿ ಎಂಬುದು ಕೇವಲ ಮೆಟ್ಟಲ್ಲ
ಚಪ್ಪಲಿ ಹೊಡೆತ ಕೇವಲ ಪೆಟ್ಟಲ್ಲ
ಅನ್ನವನು ನೀಡಿ ಬನ್ನವನು ನೀಗುವ
ಚಪ್ಪಲಿ ಎಂಬುದು ಚಮ್ಮಾರನೊಬ್ಬನಿಗೆ
ಭಕ್ತನೊಬ್ಬನಿಗೆ ದೇವರ ಮೂರ್ತಿಯಂತೆ
*****
ರಾಜೇಂದ್ರ ಬುರಡಿಕಟ್ಟಿ
('ಗುಲಾಬಿ ಮುಳ್ಳುʼ ಕವನಸಂಕಲನದ ಒಂದು ಕವಿತೆ)

No comments:

Post a Comment