ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಬೆಪ್ಪತಕ್ಕಡಿ ಬೋಳೇಶಂಕರ
ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಅದು 1998ನೆಯ ಇಸ್ವಿ. ಮಂಗಳೂರಿನಲ್ಲಿ ಕಯ್ಯಾರರ ಅಧ್ಯಕ್ಷತೆಯಲ್ಲಿ ೬೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಅದರ ಅಂಗವಾಗಿ ನಡೆದ ಕವಿಗೋಷ್ಟಿಯೊಂದರಲ್ಲಿ ತನ್ನ ಕವಿತೆಯನ್ನು ಓದಲು ತೊಡಗುವ ಮುನ್ನ ಕವಿಯೊಬ್ಬ, ತಾನು ಓದಬೇಕಾದ ಕವಿತೆಯ ಬಗ್ಗೆ ಒಂದು ಭಾಷಣವನ್ನೇ ಮಾಡಿ, ನಾನು ಇದೀಗ ಬರುವಾಗ ದಾರಿಯಲ್ಲಿ ಈ ಕವಿತೆಯನ್ನು ರಚಿಸಿಕೊಂಡು ಬಂದೆʼ ಎಂದು ಹೇಳಿ, ಯಾತಕ್ಕೂ ಬಾರದ ಒಂದು ಕವಿತೆಯನ್ನು ಓದಿದ. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಒಬ್ಬ ಪ್ರಸಿದ್ಧ ಸಾಹಿತಿಗೆ ಇದರಿಂದ ಎಷ್ಟು ಸಿಟ್ಟು ಬಂತು ಎಂದರೆ, ಅವರು ತಮ್ಮ ಅಧ್ಯಕ್ಷೀಯ ಭಾಷಣದ ಬಹುಪಾಲು ಭಾಗವನ್ನು ಈ ಕವಿ ಮತ್ತು ಅವರನ್ನು ಆಯ್ಕೆಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಬೇಜವಾಬ್ದಾರಿಯನ್ನು ತರಾಟೆಗೆ ತೆಗೆದುಕೊಂಡು ಹಿಗ್ಗಾಮುಗ್ಗಾ ಥಳಿಸಲಿಕ್ಕೇ ಬಳಸಿದರು.ಆಗ ಅವರು ಆ ದೊಡ್ಡ ವೇದಿಕೆಯಿಂದ ಹೇಳಿದ ಒಂದು ಮಾತು ನನಗೆ ಈಗಲೂ ನೆನಪಿದೆ. “ನಾವು ಒಂದು ತಾಲ್ಲೂಕು ಮಟ್ಟದ್ದೋ ಜಿಲ್ಲಾ ಮಟ್ಟದ್ದೋ ಕವಿಗೋಷ್ಠಿ ಮಾಡುವಾಗ ಕೂಡ ಮೊದಲೇ ಕವಿತೆಯನ್ನು ತರಿಸಿಕೊಂಡು ಅದರ ಅರ್ಹತ ಪರಿಶೀಲಿಸಿ ಆಯ್ಕೆ ಮಾಡುತ್ತೇವೆ. ಇಂತಹ ಅಖಿಲ ಭಾರತ ಮಟ್ಟದ ಕವಿಗೋಷ್ಠಿ ನಡೆಸುವಾಗ ಸಾಹಿತ್ಯ ಪರಿಷತ್ತು ಇಷ್ಟೊಂದು ಬೇಜವಾಬ್ದಾರಿ ಮಾಡಿವುದು ಸರಿಯಲ್ಲ. ಪರಿಷತ್ತು ಕವಿಯನ್ನು ಆಯ್ಕೆಮಾಡುವಾಗ, ಮತ್ತು ಕವಿ ತನ್ನ ಕವಿತೆಯನ್ನು ಆಯ್ಕೆ ಮಾಡುವಾಗ ಅತ್ಯಂತ ಜವಾಬ್ದಾರಿ ವಹಿಸಬೇಕು” ಎಂಬುದು ಆ ಮಾತು. ಹಾಗೆ ಹೇಳಿದ ಆ ಹಿರಿಯ ಸಾಹಿತಿ ಬೇರೆ ಯಾರೂ ಅಲ್ಲ 2025ರ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಕನ್ನಡದ ಕೃತಿಯನ್ನು ಆಯ್ಕೆ ಮಾಡಲು ಕೇಂದ್ರ ಸಾಹಿತ್ಯ ಅಕಾಡೆಮಿಯು ರಚಿಸಿದ ʻಮೂರುಜನʼದ ಆಯ್ಕೆ ಸಮಿತಿಯಲ್ಲಿ ಮೂರನೆಯ ಹೆಸರಾಗಿರುವ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು.
2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕರಾದ ಅಮರೇಶ
ನುಗಡೋಣಿ ಅವರ, ʻದಡ ಸೇರಿಸು ತಂದೆʼ ಕೃತಿ ಆಯ್ಕೆ ಆಗಿದೆ. ನನ್ನ ಗಮನಕ್ಕೆ ಬಂದಂತೆ ಈ
ಆಯ್ಕೆಯ ಬಗ್ಗೆ ಯಾರೊಬ್ಬರೂ ಇದುವರೆಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಆದರೆ ಅನೇಕ ಸ್ನೇಹಿತರು ಈ ಆಯ್ಕೆ
ಮಾಡಿದ ಸಮಿತಿಯ ಪಟ್ಟಿಯನ್ನು ಉಲ್ಲೇಖಿಸಿ, ಆ ಪಟ್ಟಿಯಲ್ಲಿ ಪಟ್ಟಣಶೆಟ್ಟಿ ಅವರೊಂದಿಗೆ ಇರುವ ಇನ್ನೆರಡು
ಹೆಸರುಗಳ ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ
ನನಗೆ ಮೇಲಿನ ಘಟನೆ ನೆನಪಾಯಿತು.
ಇನ್ನು ಡಾ. ಜಯಲಲಿತ. ಕನ್ನಡ ಸಾಹಿತ್ಯದ ಒಬ್ಬ ನಿಷ್ಠಾವಂತ ಓದುಗನಾಗಿ
ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಕೂಡ ಇದುವರೆಗೂ ಅನೇಕ ಸ್ನೇಹಿತರು ಹೇಳಿದಂತೆ ಅವರ ಹೆಸರನ್ನು
ಕೇಳಿಲ್ಲ. ಅವರ ಸಾಹಿತ್ಯ ಸಾಧನೆ ಬಗ್ಗೆ ಉಳಿದ ಸ್ನೇಹಿತರಂತೆ ನಾನು ತಿಳಿಯಬಯಸುತ್ತೇನೆ. ಒಟ್ಟಿನಲ್ಲಿ
ಹೇಳುವುದಾದರೆ ಇಲ್ಲಿ ಸಹನಾ ಅವರಾಗಲೀ ಜಯಲಲಿತ ಅವರಾಗಲಿ ಪಟ್ಟಣಶೆಟ್ಟಿ ಅವರೊಂದಿಗೆ ಈ ಆಯ್ಕೆಸಮಿತಿಯಲ್ಲಿ
ಕನ್ನಡದ ಪ್ರಾತಿನಿಧಿಕ ಕೃತಿಯನ್ನೋ ಲೇಖಕರನ್ನೋ ಪ್ರಶಸ್ತಿಗೆ ಆಯ್ಕೆಮಾಡುವ ಅರ್ಹತೆ ಇರುವವರಲ್ಲ ಎಂಬುದು
ನನ್ನ ಅಭಿಪ್ರಾಯ. ಹೀಗೆ ಹೇಳುವಾಗ ನನಗೆ ಕಂಬಾರರ ಬೆಪ್ಪತಕ್ಕಡಿ ಬೋಳೇಶಂಕರ ಆಡುವ, “ನಾನು ದಡ್ಡ ಅಂತ ಅವರ ಅಭಿಪ್ರಾಯ. ಸ್ವಂತ ಅಭಿಪ್ರಾಯ ಇಟ್ಟುಕೊಳ್ಳಲಿಕ್ಕೆ
ಎಲ್ಲಾರಿಗೂ ಹಕ್ಕಿದೆ. ನನಗೂ ಇದೆ.” ಎಂಬ ಮಾತು ನನ್ನ ಮನಸ್ಸಿನಲ್ಲಿದೆ. ಇದಕ್ಕೆ ಅಕಾಡೆಮಿ ಏನು
ಮಾನದಂಡ ಇಟ್ಟುಕೊಂಡಿದೆಯೋ ದೇವರೇ ಬಲ್ಲ.
ಇದನ್ನು ಪರೋಕ್ಷವಾಗಿ ನುಗಡೋಣಿ ಅವರ ಆಯ್ಕೆಯ ಬಗೆಗಿನ ಅಸಮಾಧಾನ ಎಂದು
ಯಾರೂ ಭಾವಿಸಬೇಕಾಗಿಲ್ಲ. ಮೇಲೆ ಉಲ್ಲೇಖಿಸಿದ ಕಂಬಾರರ ಬೋಳೇಶಂಕರನೇ ಇನ್ನೊಂದು ಸಂದರ್ಭದಲ್ಲಿ ತನ್ನನ್ನು
ಹಾಡಿ ಹೊಗಳಿದ ಹುಡುಗಿಯರನ್ನು ಕುರಿತು, ʼಎಷ್ಟು ಚೆನ್ನಾಗಿ ಕೆಟ್ಟ ಹಾಡ ಹಾಡಿದಿರಿʼ ಎಂದು ಹೇಳುತ್ತಾನೆ. ಆ ಮಾತನ್ನು ಹೊಗಳಿಕೆಯಾಗಿಯೂ ತೆಗೆದುಕೊಳ್ಳಬಹುದು; ಟೀಕೆಯಾಗಿಯೂ
ತೆಗೆದುಕೊಳ್ಳಬಹುದು. ಅದೇ ಮಾತನ್ನು ಇಲ್ಲಿ ಉಲ್ಟಾ ಮಾಡಿ ಹೇಳುವುದಾದರೆ, ʻಅರ್ಹತೆ ಇಲ್ಲದವರೂ ಎಷ್ಟು ಚೆಂದ ಅರ್ಹತೆ ಇರುವವರನ್ನೇ ಆಯ್ಕೆ ಮಾಡಿದ್ರಿʼ ಎಂದು ಈ ವರ್ಷದ ಮಟ್ಟಿಗೆ ಮೆಚ್ಚಿಕೊಳ್ಳಬಹುದು. ಆದಾಗ್ಯೂ ಅರ್ಹತೆಯಿಲ್ಲದವರಿಂದ ಅರ್ಹತೆ ಇರುವ ಲೇಖಕರು, ಕೃತಿಗಳು
ಆಯ್ಕೆ ಆಗುತ್ತವೆ ಎಂದು ಎಲ್ಲ ಕಾಲಕ್ಕೂ ನಿರೀಕ್ಷಿಸಲಾಗದು. ಹಾಗಾಗಿ ಅದು ಸರಿಯಾದ ಕ್ರಮ ಅಲ್ಲ.
ನನಗೆ ತಿಳಿದಿರುವಂತೆ ಯಾವುದೇ ಒಂದು ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯಲ್ಲಿ ಆ ಪ್ರಶಸ್ತಿಯನ್ನು ಅದಕ್ಕೂ ಮೊದಲು ಪಡೆದ ಕೆಲವರು ಸೇರಿದಂತೆ ಬಹಳಷ್ಟು ಹಿರಿಯರು ಆ ಕ್ಷೇತ್ರದ ಪರಿಣಿತರು ಇರುತ್ತಾರೆ. ಇರಬೇಕು ಕೂಡ. ಆಯ್ಕೆ ಆಗುವವರು ಅಲ್ಲಿರುವ ಆಯ್ಕೆ ಸಮಿತಿಯವರಿಗಿಂತ ಸಾಹಿತ್ಯ ಸಾಧನೆಯಲ್ಲಿ
ʻದೊಡ್ಡವರುʼ ಆಗಿರುವುದು ಸರಿಯಲ್ಲ. ದೊಡ್ಡವರು ಚಿಕ್ಕವರ ಮದುವೆ ಮಾಡಿ ಶುಭ
ಹಾರೈಸುವುದು ಚೆಂದ. ಇದು ಮಕ್ಕಳೇ ಅಪ್ಪ ಅಮ್ಮನ ಮದುವೆ ಮಾಡಿದಂತೆ ಕಾಣುತ್ತದೆ. ಏಕೆಂದರೆ ಈ ಪಟ್ಟಿಯಲ್ಲಿ ಪಟ್ಟಣಶೆಟ್ಟಿ ಅವರನ್ನು ಬಿಟ್ಟರೆ ಉಳಿದ ಇಬ್ಬರೂ ಪ್ರಶಸ್ತಿಗೆ ಆಯ್ಕೆಯಾದ ಅಮರೇಶ ನುಗಡೋಣಿ ಅವರಿಗಿಂತ ಸಾಹಿತ್ಯ ಸಾಧನೆಯಲ್ಲಿ ʻದೊಡ್ಡವರುʼ ಎಂದು ನನಗಂತೂ
ಅನಿಸುವುದಿಲ್ಲ.
ಪ್ರಶಸ್ತಿ ಪಡೆಯುವವರಿಗಿಂತ ಪ್ರಶಸ್ತಿಗೆ ಆಯ್ಕೆ ಮಾಡುವವರು ತುಸು ಹೆಚ್ಚು ಸಾಧನೆ ಮಾಡಿರಬೇಕಾದದ್ದು ಅಪೇಕ್ಷಣೀಯ ಮಾತ್ರವಲ್ಲ ಅಗತ್ಯ ಕೂಡ ಹೌದು. ಏಕೆಂದರೆ ನಮಗೆ ನೆರಳು ಕೊಡುವ ಮರ ನಮಗಿಂತ ಒಂಚೂರಾದರೂ ಎತ್ತರ ಇರಬೇಕಾದದ್ದು ಅವಶ್ಯ ಮಾತ್ರವಲ್ಲ ಅನಿವಾರ್ಯ ಕೂಡ ಹೌದು. ಈ ದಿಸೆಯಲ್ಲಿ ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಪಟ್ಟಣಶೆಟ್ಟಿ ಅವರು ಸಾಹಿತ್ಯ ಪರಿಷತ್ತಿಗೆ ಹೇಳಿದ ಕಿವಿ ಮಾತನ್ನೇ ನಾನು ಅಕಾಡೆಮಿಗೆ ಹೇಳಬಯಸುತ್ತೇನೆ: “ಇಂತಹ ಅಖಿಲ ಭಾರತ ಮಟ್ಟದ ಪ್ರಶಸ್ತಿಗೆ ಲೇಖಕರನ್ನು ಕೃತಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಕಾಡೆಮಿ ಇಷ್ಟೊಂದು ಬೇಜವಾಬ್ದಾರಿ ಮಾಡುವುದು ಸರಿಯಲ್ಲ. ಅಕಾಡೆಮಿ ಆಯ್ಕೆ ಸಮಿತಿಯ ಸದಸ್ಯರನ್ನು ಆಯ್ಕೆಮಾಡುವಾಗ, ಮತ್ತು ಆಯ್ಕೆ ಸಮಿತಿಯ ಸದಸ್ಯರು ಲೇಖಕರನ್ನು ಆಯ್ಕೆಮಾಡುವಾಗ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು.”
ಡಾ. ರಾಜೇಂದ್ರ ಬುರಡಿಕಟ್ಟಿ
ಸೋಮವಾರ, 16 ಮಾರ್ಚ್ 2026



No comments:
Post a Comment