ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು
ಭಾರತೀಯ ಸನಾತನ ಸಂಸ್ಕೃತಿಯೊಳಗಿಂದ ಚಿಗುರೊಡೆದು ಅದರ ಓರೆ
ಕೋರೆಗಳನ್ನು ಎತ್ತಿಹೇಳಿದ ಎರಡು ಮುಖ್ಯ ಧಾರ್ಮಿಕ ಪರಂಪರೆಗಳೆಂದರೆ ಅದು ಒಂದು ಬೌದ್ಧ ಇನ್ನೊಂದು
ಜೈನ. ಇವುಗಳ ಪರಂಪರೆಗಳ ಮುಖ್ಯ ವ್ಯಕ್ತಿಗಳನ್ನಾಗಿ ನಾವು ಗುರುತಿಸುವುದು ಗೌತಮ ಬುದ್ಧ ಮತ್ತು
ವರ್ಧಮಾನ ಮಹಾವೀರ ಅವರನ್ನು. ಇವರಿಬ್ಬರನ್ನು ಒಂದು ರೀತಿಯಿಂದ ವೈಚಾರಿಕ ಚಿಂತನೆಯ ಹಿನ್ನಲೆಯಿಂದ
ಈ ಇಬ್ಬರು ಧಾರ್ಮಿಕ ನಾಯಕರನ್ನು ಒಂದು ರೀತಿ ʼಒಳಹೋರಾಟಗಾರರುʼ(Inside Fighters) ಎಂದೇ ಗುರುತಿಸಲಾಗುತ್ತದೆ. ಈ
ಲೇಖನದಲ್ಲಿ ಇವರಿಬ್ಬರಲ್ಲಿ ಒಬ್ಬರಾದ ಮಹಾವೀರ ಅವರ ಜೀವನ ಮತ್ತು ಬೋಧನೆಗಳನ್ನು ಸಂಕ್ಷಿಪ್ತವಾಗಿ
ಚರ್ಚಿಸಲಾಗುತ್ತಿದೆ.
ಭಗವಾನ್ ಮಹಾವೀರರು ಭಾರತೀಯ ಇತಿಹಾಸದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಅವರು ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದರು. ಜೈನ ಧರ್ಮದ ತತ್ವಶಾಸ್ತ್ರ ಮತ್ತು ನೈತಿಕ ಆಚರಣೆಗಳನ್ನು ವ್ಯವಸ್ಥಿತಗೊಳಿಸಿ, ಅದಕ್ಕೆ ಮರುಜೀವ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜೀವನವು ತ್ಯಾಗ, ಸ್ವಯಂ ಶಿಸ್ತು ಮತ್ತು ಕರುಣೆಗೆ ಒಂದು ಪ್ರಜ್ವಲ ಉದಾಹರಣೆಯಾಗಿದೆ. ಅವರ ಬೋಧನೆಗಳು ಇಂದಿಗೂ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ.
ಜನ್ಮಸ್ಥಳದ ಗೊಂದಲ
ಮಹಾವೀರರ ಜನ್ಮಸ್ಥಳದ ಬಗ್ಗೆ ಕೆಲವು ಗೊಂದಲಗಳು ಇರುವುದು ನಿಜ. ಮುಖ್ಯವಾಗಿ ಅವರ ಜನ್ಮಸ್ಥಳ ವಿವಾದಕ್ಕೆ ಬಿಹಾರದ ಮೂರು ಸ್ಥಳಗಳು ಸಂಬಂಧ ಹೊಂದಿವೆ. ಒಂದು ವೈಶಾಲಿಯಲ್ಲಿರುವ ಬಸೋಕುಂಡ. ಎರಡನೆಯದು ಜಮೈನ ಲಚ್ಚೂರು. ಮೂರನೆಯದು ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ಪಕ್ಕದಲ್ಲಿಯೇ ಇರುವ ಕುಂಡಲಪುರ. ಈ ಮೂರು ಸ್ಥಳಗಳಲ್ಲಿ ಅವರ ನಿಜವಾದ ಜನ್ಮಸ್ಥಳ ಯಾವುದು ಎಂಬುದರ ಬಗ್ಗೆ ಪಂಡಿತರ ನಡುವೆ ಏಕಾಭಿಪ್ರಾಯವಿಲ್ಲ. ಅಷ್ಟೇ ಏಕೆ ದೊಡ್ಡ ಪ್ರಮಾಣದ ಭಿನ್ನಾಭಿಪ್ರಾಯವೂ ಇದೆ. ಈ ಭಿನ್ನಾಭಿಪ್ರಾಯ ಬುಗಿಲೆದ್ದದ್ದು 2003ರಲ್ಲಿ ಬಿಹಾರ ಸರ್ಕಾರವು ಕುಂಡಲಪುರದಲ್ಲಿ ನಡೆದ ಮೂರು ದಿನಗಳ ಮಹೋತ್ಸವ ಸಮಾರಂಭದಲ್ಲಿ ʼಕುಂಡಲಪುರವನ್ನೇ ಮಹಾವೀರರ ಜನ್ಮಸ್ಥಳವೆಂದು ಘೋಷಿಸಲು ಮಾಡಿದ ಪ್ರಯತ್ನದ ಸಂದರ್ಭದಲ್ಲಿ.
ಆರಂಭಿಕ ಜೀವನ ಮತ್ತು ಹಿನ್ನೆಲೆ
ಮಹಾವೀರರ ಸುಮಾರು ಕ್ರಿ.ಪೂ. 599 ರಲ್ಲಿ ಜನಿಸಿದರು ಎನ್ನಲಾಗುತ್ತದೆ. ಅವರು ಹುಟ್ಟಿದ್ದು ಒಂದು ರಾಜಮನೆತನ. ಇವರ ವಂಶ ಕ್ಷತ್ರಿಯ ವಂಶ. ಹಾಗಾಗಿ ಯುದ್ಧ, ಶೌರ್ಯ, ಹೋರಾಟ ಇವೆಲ್ಲ ಅವರ ಕುಲದ ಆಸ್ತಿ ಎಂಬಂತೆ ಕುಂಟಂಬಕ್ಕೆ ಅಂಟಿಕೊಂಡೇ ಇದ್ದವು. ಇವರ ತಂದೆ ಸಿದ್ದಾರ್ಥ ಚಿಕ್ಕ ಸಂಸ್ಥಾನವೊಂದರ ರಾಜನಾಗಿದ್ದು ತಾಯಿ ತ್ರಿಶಲಾ ಉನ್ನತ ಕುಲಕ್ಕೆ ಸೇರಿದ ಒಬ್ಬ ಸದ್ಗೃಹಸ್ಥ ಮಹಿಳೆಯಾಗಿದ್ದರು ಎನ್ನಲಾಗಿದೆ. ಮಹಾವೀರರ ಹುಟ್ಟುಹೆಸರು ʻವರ್ಧಮಾನʼ ಎಂದು. ಈ ಪದದ ಅರ್ಥವೇ ʼಬೆಳೆಯುವುದುʼ ಅಥವಾ ʼಪ್ರಗತಿಹೊಂದುವುದುʼ ಎಂದರ್ಥ!ರಾಜಮನೆತನವಾದ ಕಾರಣ ವರ್ಧಮಾನನನಿಗೆ ಸಕಲ ಸಂಪತ್ತು, ಸೌಲಭ್ಯಗಳಿಂದ
ಕೂಡಿ ವೈಭೋಗದ ಜೀವನವನ್ನು ನಡೆಸುವ ಎಲ್ಲ ಬಗೆಯ ಸ್ವಾತಂತ್ರ್ಯ ಮತ್ತು ಸೌಲಭ್ಯ ಇದ್ದವು. ಆದಾಗ್ಯೂ
ಬೆಳೆಯುವ ಪೈರನ್ನು ಮೊಳಕೆಯಲ್ಲಿಯೇ ಕಾಣು ಎನ್ನುವಂತೆ ಆರಂಭದ ಹಂತದಲ್ಲಿಯೇ ವೈಭೋಗವನ್ನು ತ್ಯಜಿಸಿ
ತ್ಯಾಗ ವೈರಾಗ್ಯಗಳ ಜೀವನಗಳತ್ತ ಹೊರಳುವ ಎಲ್ಲ ಲಕ್ಷಣಗಳೂ ವರ್ಧಮಾನರ ಆರಂಭಿಕ ಜೀವನದಲ್ಲಿಯೇ
ಗೋಚರಿಸತೊಡಗಿದವು. ಆ ಕಾಲದಲ್ಲಿಯೇ ಚಿಂತನಶೀಲತೆ, ದಯಾಪರತೆ ಮತ್ತು ಗಾಂಭೀರ್ಯ ಅವರ ವ್ಯಕ್ತಿತ್ವದ
ಬಹುಮುಖ್ಯ ಲಕ್ಷಣಗಳಾಗಿದ್ದವು ಮತ್ತು ಈ ಗುಣಗಳು ಮುಂದೆ ಅವರನ್ನು ಭಾರತದ ಒಬ್ಬ ಬಹುಮುಖ್ಯ
ಆಧ್ಯಾತ್ಮಿಕ ಗುರುವನ್ನಾಗಿ ಪರಿವರ್ತಿಸಿದವು ಎನ್ನಬಹುದು.
ಸನ್ಯಾಸತ್ವ ಮತ್ತು ತಪಸ್ವಿ ಜೀವನ
ತಮ್ಮ 30ನೇ ವಯಸ್ಸಿನಲ್ಲಿ, ಪೋಷಕರ ನಂತರ, ವರ್ಧಮಾನರು ಆಧ್ಯಾತ್ಮಿಕ ಸತ್ಯದ ಹುಡುಕಾಟಕ್ಕಾಗಿ ರಾಜಮನೆತನದ ಜೀವನ ಮತ್ತು ಎಲ್ಲಾ ಲೌಕಿಕ ವಸ್ತುಗಳನ್ನು ತ್ಯಜಿಸಿದರು. ಇದು ಅವರ ತಪಸ್ವಿ ಜೀವನದ ಆರಂಭವಾಗಿತ್ತು. ಅವರು ವಸ್ತ್ರಗಳನ್ನು ತ್ಯಜಿಸಿ, ಕಠಿಣ ತಪಸ್ಸನ್ನು ಕೈಗೊಂಡರು ಮತ್ತು ಸ್ವಯಂ-ನಿಗ್ರಹದ ಹಾದಿಯನ್ನು ಆರಿಸಿಕೊಂಡರು. ಸುಮಾರು ಹನ್ನೆರಡು ವರ್ಷಗಳ ಕಾಲ ಅವರು ಕಾಡು- ನಾಡು ಎನ್ನದೆ ದೇಶಾದ್ಯಂತ ಅಲೆದಾಡಿದರು. ಹಸಿವು, ಬಿಸಿಲು, ಚಳಿ ಮತ್ತು ದೈಹಿಕ ಹಿಂಸೆಗಳಂತಹ ಅನೇಕ ಸಂಕಷ್ಟಗಳನ್ನು ಎದುರಿಸಿದರು. ಇಷ್ಟೆಲ್ಲಾ ಸವಾಲುಗಳಿದ್ದರೂ, ಅವರು ಶಾಂತವಾಗಿದ್ದರು ಮತ್ತು ಯಾರ ಮೇಲೂ ಕೋಪ ಅಥವಾ ದ್ವೇಷ ಸಾಧಿಸದೆ ಕ್ಷಮಾ ಗುಣವನ್ನು ಹೊಂದಿದ್ದರು. ಈ ಅವಧಿಯು ಅವರ ಅಸಾಧಾರಣ ತಾಳ್ಮೆ ಮತ್ತು ಆಂತರಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿತು.
ಹನ್ನೆರಡು ವರ್ಷಗಳ ಸುದೀರ್ಘ ಧ್ಯಾನ ಮತ್ತು ತಪಸ್ಸಿನ ನಂತರ, ಸುಮಾರು 42ನೇ ವಯಸ್ಸಿನಲ್ಲಿ ಮಹಾವೀರರು 'ಕೇವಲ ಜ್ಞಾನ' (ಪರಿಪೂರ್ಣ ಜ್ಞಾನ ಅಥವಾ ಸರ್ವಜ್ಞತ್ವ) ಪಡೆದರು. ಈ ಜ್ಞಾನೋದಯವು ಅವರನ್ನು 'ಜಿನ' (ತನ್ನನ್ನು ತಾನು ಗೆದ್ದವನು) ಆಗಿ ಪರಿವರ್ತಿಸಿತು. ಈ ಸಾಕ್ಷಾತ್ಕಾರದೊಂದಿಗೆ, ಅವರು ಆತ್ಮದ ನೈಜ ಸ್ವರೂಪ, ಕರ್ಮ ಮತ್ತು ಮೋಕ್ಷದ ಹಾದಿಯನ್ನು ಅರ್ಥಮಾಡಿಕೊಂಡರು. ನಂತರದ 30 ವರ್ಷಗಳ ಕಾಲ ಅವರು ತಮ್ಮ ತತ್ವಗಳನ್ನು ಬೋಧಿಸುತ್ತಾ, ಜನರನ್ನು ಆಧ್ಯಾತ್ಮಿಕ ಜಾಗೃತಿಯತ್ತ ಮುನ್ನಡೆಸಿದರು.
ಬೋಧನೆ ಮತ್ತು ಜೈನ ಧರ್ಮದ ಸಂಘಟನೆ
ಮಹಾವೀರರು ಜೈನ ಧರ್ಮವನ್ನು ಸ್ಥಾಪಿಸಲಿಲ್ಲ, ಬದಲಿಗೆ ಅದರ ಬೋಧನೆಗಳನ್ನು ಸುಧಾರಿಸಿ ಒಂದು ವ್ಯವಸ್ಥಿತ ಧರ್ಮವಾಗಿ ರೂಪಿಸಿದರು. ಸಾಮಾನ್ಯ ಜನರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಅವರು ಅಂದಿನ ಪ್ರಾದೇಶಿಕ ಭಾಷೆಯಾದ ʻಅರ್ಧಮಾಗಧಿ'ಯಲ್ಲಿ ಬೋಧನೆ ಮಾಡಿದರು. ರಾಜರು, ವ್ಯಾಪಾರಿಗಳು, ರೈತರು, ಪುರುಷರು ಮತ್ತು ಮಹಿಳೆಯರು ಹೀಗೆ ಸಮಾಜದ ಎಲ್ಲಾ ಸ್ತರದ ಜನರು ಅವರ ಅನುಯಾಯಿಗಳಾಗಿದ್ದರು. ಅವರು ಸಾಧುಗಳು, ಸಾಧ್ವಿಯರು, ಶ್ರಾವಕರು (ಗೃಹಸ್ಥರು) ಮತ್ತು ಶ್ರಾವಿಕೆಯರು (ಗೃಹಸ್ಥ ಮಹಿಳೆಯರು) ಎಂಬ ಚತುರ್ವಿಧ ಸಂಘವನ್ನು ಸ್ಥಾಪಿಸಿ, ತಮ್ಮ ಬೋಧನೆಗಳನ್ನು ಎಲ್ಲರಿಗೂ ತಲುಪುವಂತೆ ಮಾಡಿದರು. ಕ್ರಿ.ಪೂ. 527 ರ ಸುಮಾರಿಗೆ ಪಾವಾಪುರಿಯಲ್ಲಿ ಅವರು ಮೋಕ್ಷ (ಜನನ-ಮರಣಗಳ ಚಕ್ರದಿಂದ ಮುಕ್ತಿ) ಹೊಂದಿದರು ಎನ್ನಲಾಗುತ್ತದೆ.
ಜೈನಧರ್ಮದಲ್ಲಿ
ʼಸುಷಮಾʼ ಮತ್ತು ʻದುಷಮಾʼ
ಜೈನಧರ್ಮದ ಪ್ರಕಾರ ಅನಾದಿಕಾಲದಲ್ಲಿ ಈ
ಭೂಮಿ ದಿವ್ಯವಾಗಿತ್ತು. ಜೈನಧರ್ಮದ ಪರಿಭಾಷೆಯಲ್ಲಿ , ‘ಸುಷಮಾ-ಸುಷಮಾ’ ಆಗಿತ್ತು. ಅಂದರೆ, ಸರ್ವತ್ರ ತೃಪ್ತಿ, ಆನಂದ, ಭಕ್ತಿ, ಶಾಂತಿ – ಇತ್ಯಾದಿಗಳು ನೆಲೆಸಿದ್ದವು. ಕ್ರಮೇಣ ಕಾಲುಷ್ಯ ಪ್ರವೇಶಿಸಿ ‘ಸುಷಮಾ-ದುಷಮಾ’ ಅವಸ್ಥೆ ಉಂಟಾಯಿತು. ಪರಿಸ್ಥಿತಿ ಮತ್ತೂ ಹದಗೆಟ್ಟು ಕಡೆಗೆ ಎಲ್ಲವೂ ಎಲ್ಲೆಲ್ಲಿಯೂ ‘’ದುಷಮಾ-ದುಷಮಾ’ ಅವಸ್ಥೆ ಬಂದುಬಿಟ್ಟಿದೆ. ದುಃಖ, ದುಮ್ಮಾನ, ಅಶಾಂತಿ, ನೀಚತನ – ಇತ್ಯಾದಿಗಳೇ ಜಗತ್ತಿನಲ್ಲಿ ತುಂಬಿಹೋಗಿವೆ.ಮತ್ತೊಮ್ಮೆ ಆ ಪವಿತ್ರ ಶಾಂತ ‘ಸುಷಮಾ-ಸುಷಮಾ’ ಸ್ತರಕ್ಕೆ ಜಗತ್ತು ಏರಬೇಕು. ಇದೇ ಜೈನಧರ್ಮದ ಪ್ರಧಾನ ಉದ್ದೇಶ.
ಮಹಾವೀರರ ಪ್ರಮುಖ ಬೋಧನೆಗಳು (ಪಂಚ ಮಹಾವ್ರತಗಳು)
ಮಹಾವೀರರ ಬೋಧನೆಗಳು ನೈತಿಕ ಜೀವನ, ಸ್ವಯಂ ಶಿಸ್ತು ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಒತ್ತಿಹೇಳುತ್ತವೆ. ಅವರ ಬೋಧನೆಯ ತಿರುಳಾಗಿ ನಾವು ಅವರು ಬೋಧಿಸಿದ ಪಂಚಮಹಾವ್ರತಗಳು ಮತ್ತು
ʼರತ್ನತ್ರಯʼಗಳನ್ನು ಗುರುತಿಸಬಹುದು. ಅವುಗಳಲ್ಲಿ ಪಂಚ ಮಹಾವ್ರತಗಳನ್ನು ಮೊದಲಿಗೆ ನೋಡಬಹುದು.
ಮೊದಲನೆಯದು ʻಅಹಿಂಸೆʼ. ಇದು ಮಹಾವೀರರ ಬೋಧನೆಗಳ ಕೇಂದ್ರಬಿಂದು. ಮನುಷ್ಯರು, ಪ್ರಾಣಿಗಳು, ಸಸ್ಯಗಳು ಮತ್ತು ಸೂಕ್ಷ್ಮಜೀವಿಗಳೂ ಸೇರಿದಂತೆ ಎಲ್ಲಾ ಜೀವಿಗಳು ಆತ್ಮವನ್ನು ಹೊಂದಿವೆ ಮತ್ತು ಅವು ಗೌರವಕ್ಕೆ ಅರ್ಹವಾಗಿವೆ ಎಂದು ಅವರು ಬೋಧಿಸಿದರು. ಕೇವಲ ಕೃತ್ಯದಲ್ಲಿ ಮಾತ್ರವಲ್ಲದೆ, ಆಲೋಚನೆ ಮತ್ತು ಮಾತಿನಲ್ಲೂ ಅಹಿಂಸೆಯನ್ನು ಪಾಲಿಸಬೇಕು ಎಂಬುದು ಅವರ ಅಹಿಂಸಾ ತತ್ವ ಹೇಳುತ್ತದೆ. ಇನ್ನು ಎರಡನೆಯದು ʻಸತ್ಯʼ. ಯಾವಾಗಲೂ ಸತ್ಯವನ್ನೇ ನುಡಿಯಬೇಕು. ಆದರೆ ಆ ಸತ್ಯವು ಇತರರಿಗೆ ಹಾನಿ ಮಾಡುವಂತಿರಬಾರದು.ಎಂಬುದು ಅವರ ತಿಳಿವಳಿಕೆಯಾಗಿತ್ತು. ಇಲ್ಲಿ ಯಾರಿಗೂ ಹಾನಿ
ಉಂಟುಮಾಡದಂತೆ ಸತ್ಯವನ್ನು ನುಡಿಯುವುದು ಹೇಗೆ ಎಂಬ ಬಗ್ಗೆ ಗೊಂದಲವಿದೆಯಾದರೂ ಅದನ್ನು ಇಲ್ಲಿ
ಚರ್ಚೆಗೆ ಎತಿಕೊಳ್ಳುತ್ತಿಲ್ಲ. ಮೂರನೆಯದು ಅಸ್ತೇಯ. ಆಸ್ತೇಯ
ಎಂದರೆ ಅನುಮತಿಯಿಲ್ಲದೆ ಅಥವಾ ಹಕ್ಕಿಲ್ಲದೆ ಇನ್ನೊಬ್ಬರ ವಸ್ತುವನ್ನು ತೆಗೆದುಕೊಳ್ಳದಿರುವುದು. ಏಕೆಂದರೆ ಹೀಗೆ
ಅನುಮತಿ ಪಡೆಯದೆ ಮತ್ತು ಹಿಂದಿರುಗಿಸುವ ಉದ್ದೇಶವಿಲ್ಲದೇ ಯಾರದ್ದಾದರೂ ವಸ್ತುಗಳನ್ನು
ತೆಗೆದುಕೊಳ್ಳುವುದು ಕಳ್ಳತನ ಅನ್ನಿಸಿಕೊಳ್ಳುತ್ತದೆ. ಆಸ್ತೇಯ ಎಂದರೆ ಸರಳವಾಗಿ ಕಳ್ಳತನ
ಮಾಡದಿರುವುದು ಎಂದು ಅರ್ಥೈಸಬಹುದಾಗಿದೆ.
ನಾಲ್ಕನೆಯದು. ʻಬ್ರಹ್ಮಚರ್ಯʼ. ಈ ಬ್ರಹ್ಮಚರ್ಯದ ಬಗ್ಗೆ ಅನೇಕ ಸಂದೇಹ ಗೊಂದಲಗಳು ಇರುವುದು ನಿಜ. ಏಕೆಂದರೆ ಇದು ಮನುಷ್ಯನ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾದ ʼಲೈಂಗಿಕತೆʼಯೊಂದಿಗೆ ತಳುಕುಹಾಕಿಕೊಂಡಿರುವಂಥದ್ದು. ಮನುಷ್ಯನ ಲೈಂಗಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ʼಬ್ರಹ್ಮಚರ್ಯʼ ಎಂದು ಬಹಳಷ್ಟು ಕಡೆ ವಿವರಿಸಲಾಗುತ್ತದೆ. ಇದಕ್ಕೆ ಪರ್ಯಾಯ ಅರ್ಥಗಳನ್ನು ಕೊಡುವ ಪ್ರಯತ್ನಗಳು ನಡೆದಿವೆಯಾದರೂ ಹೆಚ್ಚಾಗಿ ಈ ಅರ್ಥವನ್ನೇ ಬಹಳಷ್ಟುಕಡೆ ಕೊಡಲಾಗುತ್ತದೆ. ಮಹಾವೀರರ ಪ್ರಕಾರವೂ ಇದೇ ಅರ್ಥವಿದ್ದು ಸನ್ಯಾಸಿಗಳಾದವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆದರೆ ಗೃಹಸ್ಥರು ʼಇತಿಮಿತಿʼಯಲ್ಲಿ ಇದನ್ನು ಪಾಲಿಸಬೇಕಾಗುತ್ತದೆ. ಮುಖ್ಯವಾಗಿ ಲೈಂಗಿಕತೆಯು ನೈತಿಕತೆಯನ್ನು ಒಳಗೊಂಡಿರಬೇಕಾಗುತ್ತದೆ. ಅದಕ್ಕೆ ಒಂದಿಷ್ಟು ಇತಿಮಿತಿಗಳು ಇಲ್ಲದಿದ್ದರೆ ಅದು ಅನೇಕ ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ಇದರ ಹಿಂದಿನ ತಾತ್ವಿಕತೆ ಇದ್ದಿರಬಹುದಾಗಿದೆ. ಇನ್ನು ಐದನೆಯದು ಮತ್ತು ಕೊನೆಯದು ಅಪರಿಗ್ರಹ. ಮುಂದೆ ಗಾಂಧೀಜಿಯವರ ಮೇಲೆ ಅಗಾಧ ಪರಿಣಾಮ ಬೀರಿದ ಈ ತತ್ವ ʼಅಸಂಗ್ರಹʼವನ್ನು ಹೇಳುವಂಥದ್ದು. ಅಂದರೆ ಮನುಷ್ಯ ತನ್ನ ಅವಶ್ಯಕತೆಗಳನ್ನು ಇತಿಮಿತಿಯಲ್ಲಿ ಇಟ್ಟುಕೊಂಡು ಲೌಕಿಕ ಜೀವನವನ್ನು ನಡೆಸಬೇಕು. ದುರಾಸೆಗೆ ಒಳಗಾಗಿ ಅವನು ತನ್ನ ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸತೊಡಗಿದರೆ ವಸ್ತುಗಳ ಅಭಾವ ಸೃಷ್ಟಿಯಾಗಿ ಸಾಮಾಜಿಕ ಸಂಕಷ್ಟಗಳು ಎದುರಾಗುತ್ತವೆ ಎಂಬುದು ಇದರ ತಿಳಿವಳಿಕೆ.
ರತ್ನತ್ರಯಗಳು (ಮೂರು ರತ್ನಗಳು)
ಪಂಚಮಹಾವ್ರತಗಳು ಸಾಮಾನ್ಯ ಮನುಷ್ಯರ ಲೌಕಿಕ ಬದುಕನ್ನು
ಸಹನೀಯವಾಗಿಡಲು ಮತ್ತು ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳನ್ನು ಕಾಪಾಡಲು ಬೋದಿಸಲ್ಪಟ್ಟರೆ
ಸಾಧಕರು ತಮ್ಮ ಜೀವನದ ಸಾರ್ಥಕ್ಯವನ್ನು ಪಡೆಯಲು ಅಂದರೆ ಈ ಲೌಕಿಕ ಜೀವನದ ಚಕ್ರದಿಂದ
ಬಿಡುಗಡೆಪಡೆದು ʻಶಾಶ್ವತಸುಖʼ ಪಡೆಯಲು ಬೋಧಿಸಲ್ಪಟ್ಟ
ತತ್ವಗಳೇ ರತ್ನತ್ರಯಗಳು. ಅವು ಯಾವುವೆಂದರೆ ಮೊದಲನೆಯದು, ʻಸಮ್ಯಕ್ ದರ್ಶನʼ (ಸರಿಯಾದ ನಂಬಿಕೆ) ಅಂದರೆ ಸತ್ಯ ಮತ್ತು ಆಧ್ಯಾತ್ಮಿಕ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವುದು. ಎರಡನೆಯದು ʻಸಮ್ಯಕ್ ಜ್ಞಾನʼ (ಸರಿಯಾದ ತಿಳುವಳಿಕೆ) ಅಂದರೆ ವಾಸ್ತವದ ಸರಿಯಾದ ಜ್ಞಾನ. ಮೂರನೆಯದು ಮತ್ತು ಕೊನೆಯದು ಸಮ್ಯಕ್ ಚಾರಿತ್ರ್ಯ (ಸರಿಯಾದ ನಡತೆ) ಅಂದರೆ
ವ್ಯಕ್ತಿ ತನ್ನ ಜೀವನವನ್ನು ಶಿಸ್ತುಬದ್ಧವಾಗಿ ಮತ್ತು ನೈತಿಕವಾಗಿ ನಡೆಸುವುದು.
ಕರ್ಮ ಮತ್ತು ಅನೇಕಾಂತವಾದ
ಮಹಾವೀರರ ಪ್ರಕಾರ, ಪ್ರತಿಯೊಂದು ಕ್ರಿಯೆಯೂ ಕರ್ಮವನ್ನು ಸೃಷ್ಟಿಸುತ್ತದೆ, ಇದು ಆತ್ಮವನ್ನು ಜನ್ಮ-ಮರಣಗಳ ಚಕ್ರದಲ್ಲಿ ಬಂಧಿಸುತ್ತದೆ. ಒಬ್ಬ ವ್ಯಕ್ತಿಯ ಭವಿಷ್ಯಕ್ಕೆ ಆತನ ಅಥವಾ ಆಕೆಯ ಕಾರ್ಯಗಳೇ ಕಾರಣ ಹೊರತು ಯಾವುದೇ ಬಾಹ್ಯ ಶಕ್ತಿಯಲ್ಲ.
ಅವರು ಬೋಧಿಸಿದ ʻಅನೇಕಾಂತವಾದʼ ಎಂಬ ಸಿದ್ದಾಂತದ ಪ್ರಕಾರ ಸತ್ಯವನ್ನು ವಿವಿಧ ದೃಷ್ಟಿಕೋನಗಳಿಂದ ನೋಡಬಹುದು. ಅಂದರೆ ಒಂದು ಸತ್ಯವೇ ನೋಡುವ ಸಂದರ್ಭ, ವ್ಯಕ್ತಿ, ಮುಂತಾದ
ಕಾರಣಗಳಿಂದಾಗಿ ಬೇರೆಬೇರೆಯಾಗಿ ಕಾಣಬಹುದಾಗಿದೆ.
ಅವರ ಈ ಸಿದ್ಧಾಂತ ಸಮಾಜದಲ್ಲಿ ಸಹಿಷ್ಣುತೆ ಮತ್ತು ಮುಕ್ತ ಮನೋಭಾವವನ್ನು ಉತ್ತೇಜಿಸುತ್ತದೆ.
ಭಗವಾನ್ ಮಹಾವೀರರ ಜೀವನವು ವೈಭೋಗದಿಂದ ವೈರಾಗ್ಯದತ್ತ ಸಾಗಿದ ಮಹಾನ್ ಪಯಣ. ಅವರ ಅಹಿಂಸೆ, ಸತ್ಯ ಮತ್ತು ಕರುಣೆಯ ಸಂದೇಶಗಳು ಇಂದಿನ ಹಿಂಸಾಚಾರ ಮತ್ತು ಭೌತಿಕವಾದದ ಜಗತ್ತಿಗೆ ಅತ್ಯಂತ ಅವಶ್ಯಕವಾಗಿವೆ. ಅವರ ಅಹಿಂಸಾ ತತ್ವವನ್ನು ಅಕ್ಷರಶಃ ನಾವು ಇಂದು ಪಾಲಿಸುವಲ್ಲಿ ಅನೇಕ ತೊಡಕುಗಳಿವೆ ನಿಜ.
ಅವರು ಬೋಧಿಸಿದ ಕೆಲವು ತತ್ವಗಳು ಪಾಲಿಸಲು ಸಾಧ್ಯವೇ ಇಲ್ಲವೇನೋ ಅನ್ನಿಸುವಷ್ಟು ಕಠಿಣವಾಗಿವೆ
ಎಂಬುದೂ ನಿಜ. ಈ ಮಿತಿಗಳ ನಡುವೆಯೂ ಅವರು ಬೋಧಿಸಿದ ಅಹಿಂಸಾ ತತ್ವ ಇಂದು ಯಾತಕ್ಕೂ ಬಾರದ್ದುʼ
ಅನ್ನಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ನಾವು ಅರಿಯಬೇಕು. 2500 ವರ್ಷಗಳ ನಂತರವೂ ಅವರ ತತ್ವಗಳು ಮಾನವಕುಲಕ್ಕೆ ಶಾಂತಿ ಮತ್ತು ಸನ್ಮಾರ್ಗದ ದಾರಿದೀಪವಾಗಿವೆ. ʻಬೆಂಕಿಯನ್ನು ಬೆಂಕಿಯಿಂದಲೇ
ಕೆಡಿಸುತ್ತೇವೆʼ ʻಮುಳ್ಳನ್ನು ಮುಳ್ಳಿನಿಂದಲೇ ಕೀಳುತ್ತೇವೆʼ
ಎಂಬ ಹಟಮಾರಿ ಧೋರಣೆಯಿಂದ ಇಂದು ಜಗತ್ತು ದಿನದಿನಕ್ಕೂ ಹಿಂಸೆಯ ಅಗ್ನಿಕುಂಡವಾಗಿ
ಪರಿವರ್ತಿತವಾಗುತ್ತಿರುವ ಈ ಸಂದರ್ಭದಲ್ಲಿ ಮಹಾವೀರರ ಅಹಿಂಸೆಯ ತತ್ವಗಳು ನಮಗೆ
ದಾರಿದೀಪವಾಗಬಲ್ಲವು. ಆ ಕಡೆ ನಮ್ಮ ಗಮನ ಹರಿಸೋಣ.
ಡಾ. ರಾಜೇಂದ್ರ
ಬುರಡಿಕಟ್ಟಿ
Monday, 30 March 2026





No comments:
Post a Comment