Saturday, May 23, 2026

ಊರಿಗೆ ಊರೇ ಹಸೆಯಲಿ ನಿಂತರೆ……

ಊರಿಗೆ ಊರೇ ಹಸೆಯಲಿ ನಿಂತರೆ……

ಕಾರವಾರದ ಕಡಲತಡಿಯಲ್ಲಿ ಇಂಗ್ಲಿಷ್‌ ಶಿಕ್ಷಕಿಯಾರುವ ‍ಲೇಖನಿ ಸ್ನೇಹಿತೆ ಶ್ರೀದೇವಿ ಕೆರೆಮನೆ ಜನಗಣತಿ, ಚುನಾವಣೆ ಇಂತಹ ಸಂದರ್ಭಗಳಲ್ಲಿ ಇತರೆ ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿ ಬರೆದ ಲೇಖನವೊಂದನ್ನು ಗಮನಿಸಿದೆ. ಅದರಲ್ಲಿ ಅವರು, ವಯಸ್ಸು ಅನುಭವ ಅಷ್ಟೇ ಏಕೆ ಅಧಿಕಾರದ ಸ್ಥಾನಮಾನದಲ್ಲಿಯೂ ಕಿರಿಯರಾದ ಸಿಬ್ಬಂಧಿ ಸಂದರ್ಭಾನುಸಾರ ಸಿಕ್ಕ ಅಧಿಕಾರದ ಅಮಲಿನಿಂದ ಮೇಲಿನ ಎಲ್ಲ ವಿಷಯಗಳಲ್ಲೂ ಬಹಳಷ್ಟು ಹಿರಿಯರಾದ ಶಿಕ್ಷಕರಿಗೆ ಹೇಗೆಲ್ಲ ಮೂದಲಿಸುವುದು, ಹಿಯ್ಯಾಳಿಸುವುದು, ಬೇಜವಾಬ್ದಾರಿ ವ್ಯಕ್ತಿಗಳೆಂದು ಪರಿಗಣಿಸಿ ನಿಂದನೆಯ ಮಾತುಗಳನ್ನು ಆಡುವುದು ಮಾಡುತ್ತಾರೆ ಮತ್ತು ಶಿಕ್ಷಕರನ್ನು ಎಷ್ಟೊಂದು ತುಚ್ಛವಾಗಿ ಕಾಣುತ್ತಾರೆ ಎಂಬುದನ್ನು ಬಹಳಷ್ಟು ಮನಮುಟ್ಟುವಂತೆ ವಿವರಿಸಿದ್ದಾರೆ.

ಶ್ರೀದೇವಿ ಅವರು ಲೇಖನದಲ್ಲಿ ಹೇಳಿದ ಯಾವ ವಿಷಯವೂ ಸುಳ್ಳಲ್ಲ. ಇದನ್ನು ಬಹಳಷ್ಟು ಜನ ಶಿಕ್ಷಕರು ಸ್ವತಃ ಅನುಭವಿಸಿದ್ದರೆ ಉಳಿದವರು ಅನುಭವಿಸುವುದನ್ನು ಕಂಡಾದರೂ ಇದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇವೆಲ್ಲವನ್ನೂ ಒಪ್ಪಿಕೊಂಡೂ ಈ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗುತ್ತಿದೆ. ಇದು ಈ ಸಮಸ್ಯೆಯನ್ನು ಇನ್ನೊಂದು ಕಡೆಯಿಂದ ನೋಡುವ ಪ್ರಯತ್ನವಷ್ಟೆ.

ಶ್ರೀದೇವಿ ಅವರು ತಮ್ಮ ಲೇಖನದಲ್ಲಿ ಇತ್ತೀಚೆಗೆ ನಡೆದ ಮನೆಗಣತಿಗೆ ನಿಯೋಜಿತರಾದ ದೈಹಿಕವಾಗಿ ಅದನ್ನು ನಿಜವಾಗಿಯೂ ಮಾಡಲು ಕಷ್ಟಪಡುವ ಶಿಕ್ಷಕಿ ಆ ಕೆಲಸದಿಂದ ವಿನಾಯತಿ ಕೋರಿದಾಗ ಸಿಬ್ಬಂದಿ ಹೇಗೆಲ್ಲ ಅವರನ್ನು ಗೇಲಿ ಮಾಡಿ ಅಪಹಾಸ್ಯ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ಇದು ಅನೇಕ ಕಡೆ ಈ ಗಣತಿ ಸಂದರ್ಭದಲ್ಲಿ ಮಾತ್ರವಲ್ಲ ಇತರ ಗಣತಿಗಳೂ ಸೇರಿದಂತೆ, ಚುನಾವಣೆಗಳ ಸಂದರ್ಭಗಳಲ್ಲಿಯೂ ನಡೆಯುವಂಥ ಒಂದು ಸಾಮಾನ್ಯ ವಿದ್ಯಮಾನ. ಚುನಾವಣೆ ಅಥವಾ ಗಣತಿ ಕಾರ್ಯಕ್ಕೆ ನಿಯೋಜಿತರಾದ ಅನೇಕರು ತಮ್ಮನ್ನು ಆ ಕೆಲಸದಿಂದ ಬಿಡುಗಡೆ ಮಾಡಲು ಕೋರಿಕೊಳ್ಳುವ ಮನವಿಗಳನ್ನು ಹಿಡಿದುಕೊಂಡು ಅಧಿಕಾರಿಗಳ ಕಛೇರಿಗಳಿಗೆ ಅಲೆದಾಡುವ ದೃ‍ಶ್ಯಗಳನ್ನು ಎಲ್ಲರೂ ಸಾಮಾನ್ಯವಾಗಿ ನೋಡಿಯೇ ಇರುತ್ತಾರೆ. ಇಂಥವರಲ್ಲಿ ಕೆಲವರು ಆಸ್ಪತ್ರೆಯವರು ನೀಡುವ ಆಳೆತ್ತರದ ಬಾಡಿ ಸ್ಕ್ಯಾನಿಂಗ್‌ ಚಿತ್ರಗಳು, ಹೃದಯ ಕಾಯಿಲೆಗೆ ಸಂಬಂಧಿಸಿದ ಫೈಲುಗಳು ಇತ್ಯಾದಿಗಳೊಂದಿಗೆ ಬಂದರೆ ಇನ್ನು ಕೆಲವು ತಾಯಂದಿರು ಹಾಲುಕುಡಿಯವ ಕೂಸುಗಳನ್ನು ಕಂಕುಳಲ್ಲಿ ಇಟ್ಟುಕೊಂಡೇ ಕಛೇರಿಗಳಿಗೆ ಬರುವುದೂ ಇದೆ. ತಮ್ಮ ಸಮಸ್ಯೆಗೆ ಪ್ರತ್ಯಕ್ಷ ಸಾಕ್ಷಿ ಒದಗಿಸಿ ವಿನಾಯತಿ ಪಡೆಯುವುದು ಇವರ ಉದ್ದೇಶವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ಇಂತಹ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯತಿ ಸಿಗುತ್ತದೆ. ಇನ್ನು ಕೆಲವರಿಗೆ ಸಿಗುವುದಿಲ್ಲ. ಸಿಕ್ಕವರು ಸಂತೋಷದಿಂದ ಅಲ್ಲದಿದ್ದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮನೆಕಡೆಗೆ ಕಾಲು ಹಾಕಿದರೆ ಸಿಗದಿದ್ದವರು ʼಇನ್ನೇನು ಮಾಡ್ಲಿಕ್ಕೆ ಆಗುತ್ತೆʼ ಎಂದು ಮುಖ ಸಣ್ಣದು ಮಾಡಿಕೊಂಡು ಚುನಾವಣೆಯ ಸೂಟ್‌ಕೇಸ್‌ ಹಿಡಿದುಕೊಂಡು ಬಸ್ಸಿನ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾರೆ. ಇಲ್ಲಿ ಸಮಸ್ಯೆ ಹೇಳಿಕೊಂಡವರಲ್ಲಿ ಯಾರಿಗೆ ವಿಯಾಯತಿ ಸಿಗುತ್ತದೆ ಮತ್ತು ಯಾರಿಗೆ ಸಿಗುವುದಿಲ್ಲ ಎಂಬುದನ್ನು ಹೀಗೆಯೇ ಎಂದು ಹೇಳುವುದು ಕಷ್ಟ. ಕೆಲವು ಗಂಭೀರ ಪ್ರಕರಣಗಳನ್ನು ಸಂಬಂಧ ಪಟ್ಟ ವ್ಯವಸ್ಥೆ ಗುರುತಿಸಿ ಅವುಗಳನ್ನು ಪರಿಗಣಿಸಲು ವ್ಯವಸ್ಥೆ ಮಾಡುತ್ತದೆಯಾದರೂ ಇವುಗಳ ಇತ್ಯರ್ಥದಲ್ಲಿ ಎಲ್ಲಕಡೆಯೂ ಬಹಳಷ್ಟು ನ್ಯಾಯಯುತವಾಗಿಯೇ ಇಂತಹ ಪ್ರಕರಣಗಳ ಇತ್ಯರ್ಥ ಆಗುತ್ತದೆ ಎನ್ನುವಂತಿಲ್ಲ. ಕೆಲವು ಗಂಭೀರ ಸಮಸ್ಯೆಯಲ್ಲಿರುವವರಿಗೆ ವಿನಾಯತಿಯ ಸೌಲಭ್ಯ ಸಿಗದೇ ಅಷ್ಟೇನೂ ಗಂಭೀರವಲ್ಲದವರಿಗೆ ವಿನಾಯತಿಯ ಸೌಲಭ್ಯ ದೊರೆಯುವುದೂ ಇದೆ. ಇದಕ್ಕೆ ಅವರು ಸಮಸ್ಯೆಯನ್ನು ಪ್ರಸ್ತುತ ಪಡಿಸುವ ವಿಧಾನ, ಸಲ್ಲಿಸುವ ದಾಖಲೆಗಳು, ಇವುಗಳ ಜೊತೆಗೆ ಇವುಗಳನ್ನು ಇತ್ಯರ್ಥ ಪಡಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ನ್ಯಾಯಪರತೆ, ಮಾನವೀಯ ಕಾಳಜಿ ಹೀಗೆ ಹತ್ತು ಹಲವು ಕಾರಣಗಳು ಸೇರಿಕೊಳ್ಳುತ್ತವೆ.


ಇಂತಹ ಸಮಸ್ಯೆಗಳನ್ನು ತಮ್ಮ ಬಿಡುವಿಲ್ಲದೆ ಅನೇಕ ಕಾರ್ಯಗಳ ನಡುವೆಯೂ ಸರಿಯಾಗಿ ಪರಿಶೀಲಿಸಿ ತುಂಬಾ ಗಂಭೀರ ಕಾರಣಗಳಿದ್ದವರಿಗೆ ನ್ಯಾಯಯುತವಾಗಿ ವಿನಾಯತಿ ನೀಡುವ ಅಧಿಕಾರಿಗಳು ಇಲ್ಲವೆಂದಲ್ಲ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ. ಒಬ್ಬಿಬ್ಬರಿಗೆ ಕೊಟ್ಟರೆ ಉಳಿದವರೂ ʼಶುರುವುʼಮಾಡುತ್ತಾರೆ ಎಂದು ಅರ್ಹರಿಗೂ ವಿನಾಯತಿ ನೀಡಲು ಹಿಂದೆಮುಂದೆ ನೀಡುವವರೆ ಹೆಚ್ಚು. ಆಗ ನಿಜವಾಗಿ ತೊಂದರೆ ಇರುವವರಿಗೂ ವಿನಾಯತಿ ಸಿಗದೆ ಅವರು ಕಷ್ಟ ಅನುಭವಿಸಬೇಕಾಗುತ್ತದೆ.

ಇಲ್ಲಿ ನಿಜವಾಗಿಯೂ ಶಿಕ್ಷಕರು ಅನುಭವಿಸುವ ಸಮಸ್ಯೆಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣವೇ ಅಥವಾ ಅದಕ್ಕೆ ಶಿಕ್ಷಕರೂ ಕಾರಣವೇ ಎಂಬುದನ್ನು ನಾವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ.  ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಅರ್ಹರಿಗೆ ವಿನಾಯತಿ ನೀಡಬೇಕಾದದ್ದು ಅಧಿಕಾರಿಗಳ ಹೊಣೆಗಾರಿಕೆ ಎಂಬುದನ್ನು ಒಪ್ಪಿಕೊಂಡೂ ಈ ಸಮಸ್ಯೆಯ ನಿರ್ವಹಣೆಯಲ್ಲಿ ಅವರಿಗೆ ಶಿಕ್ಷಕರೇ ಹೇಗೆ ಅಡೆತಡೆ ಉಂಟುಮಾಡುತ್ತಾರೆ ಎಂಬುದನ್ನೂ ನಾವು ನೋಡಬೇಕು.

ಚುನಾವಣೆ, ಜನಗಣತಿ ಇವು ರಾಷ್ಟ್ರೀಯ ಕಾರ್ಯಗಳು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಯಾರಿಗೆ ಏನೇ ಆದರೂ ಇವು ನಿಲ್ಲದೇ ನಡೆಯಬೇಕಾಗುತ್ತದೆ. ಶಿಕ್ಷಕರನ್ನು ಅನ್ಯಕೆಲಸಕ್ಕೆ ಬಳಸಿಕೊಳ್ಳಬಾರದು ಎಂಬ ನಿಯಮದಿಂದ ಈ ಎರಡು ಕಾರ್ಯಗಳನ್ನು ಹೊರಗಿಟ್ಟಿರುವುದು ಇವುಗಳ ಮಹತ್ವವನ್ನು ಸಾರುತ್ತದೆ. ಇಂತಹ ಕೆಲಸಗಳನ್ನು ಶಿಕ್ಷಕರನ್ನು ಬಿಟ್ಟು ಮಾಡುವುದೂ ವಾಸ್ತವದಲ್ಲಿ ಕಷ್ಟದ ಕೆಲಸವೇ ಸರಿ. ಹೀಗಿರುವಾಗ ಇಂತಹ ಕೆಲಸಗಳನ್ನು ಯಾರು ಯಾರಿಂದಲೋ ಮಾಡಿಸಲು ಸಾಧ್ಯವಿಲ್ಲ. ಇವು ನಾವೇ ಮಾಡಬೇಕಾದ ಬಹಳಷ್ಟು ಜವಾಬ್ದಾರಿಯ ಕೆಲಸಗಳು ಎಂದು ಸ್ವತಃ ಅರ್ಥಮಾಡಿಕೊಂಡು ಬಹಳಷ್ಟು ಸಂತೋಷದಿಂದ ಈ ಕೆಲಸದಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ ಎಷ್ಟಿದೆ ಎಂಬುದು ಇಲ್ಲಿ ಬಹಳ ಮುಖ್ಯವಾದ ಸಂಗತಿ. ಸಮಸ್ಯೆ ಇರುವವರನ್ನು  ಬಿಡಿ. ಸಮಸ್ಯೆ ಇಲ್ಲದವರಾದರೂ ಸಂತೋಷದಿಂದ ಇಂತಹ ಕೆಲಸಕ್ಕೆ ಮುಂದಾಗಿ ಬರುತ್ತಾರೆಯೇ? ಬರುತ್ತಾರೆ ಎನ್ನುವುದಾದರೆ ಅವರ ಸಂಖ್ಯೆ ಎಷ್ಟು? ನನ್ನ ಪ್ರಕಾರ ಬಹಳಷ್ಟು ಕಡಿಮೆ.

ಕಳೆದ ಮೂವತ್ತೈದು ವರ್ಷಗಳ ನನ್ನ ವೃತ್ತಿಜೀವನದಲ್ಲಿ ನನ್ನನ್ನು ಬಿಟ್ಟು ಒಂದೋ ಎರಡೋ ಚುನಾವಣೆ ನಡೆದಿರಬಹುದು ಅಷ್ಟೆ. ಇನ್ನು ಜನಗಣತಿ. ಒಬ್ಬ ಶಿಕ್ಷಕ ಅಥವಾ ನೌಕರನ ವೃತ್ತಿ ಜೀವನದಲ್ಲಿ ಸಾಮಾನ್ಯವಾಗಿ ಬರುವುದು ಎರಡೇ ಜನಗಣತಿ. ಒಂದಿಷ್ಟು ಪುಣ್ಯಮಾಡಿದವರಿಗೆ ಮೂರು ಸಿಗಬಹುದು ಅಷ್ಟೆ. ಯಾರಿಗಾದರೂ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕು ರಾಷ್ಟ್ರೀಯ ಜನಗಣತಿ ಕಾರ್ಯಗಳು ಸಿಕ್ಕರೆ ಅವರು ಬಾರೀ ಪುಣ್ಯ ಮಾಡಿದವರು ಅಂದುಕೊಳ್ಳಬೇಕು. ಏಕೆಂದರೆ ಹೀಗೆ ಒಬ್ಬ ನೌಕರನಿಗೆ ಅಥವಾ ನೌಕರಳಿಗೆ ನಾಲ್ಕು ಜನಗಣತಿ ಸಿಗಬೇಕು ಎಂದರೆ ಎರಡು ಶರತ್ತುಗಳು ಪೂರೈಕೆ ಆಗಬೇಕು. ಒಂದು: ಅವರು ಇಪ್ಪತ್ತು ವರ್ಷದೊಳಗೇ ನೌಕರಿಗೆ ಸೇರಿರಬೇಕು. ಇನ್ನೊಂದು: ಅವರು ಕೆಲಸಕ್ಕೆ ಸೇರಿದ ತಕ್ಷಣ ಒಂದು ಜನಗಣತಿ ಬರಬೇಕು. ಈ ಎರಡು ಶರತ್ತು ಪೂರೈಕೆ ಆದವರು ಮಾತ್ರ ನಾಲ್ಕು ಜನಗಣತಿ ಮಾಡುವ  ಭಾಗ್ಯ ಪಡೆದುಕೊಳ್ಳುತ್ತಾರೆ.

ಹೀಗಿದ್ದೂ ನಮ್ಮ ಶಿಕ್ಷಕರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯವನ್ನು ಸ್ವಇಚ್ಚೆಯಿಂದ ಮಾಡಲು ಮುಂದೆಬರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದೇ ಈ ಸಮಸ್ಯೆಯನ್ನು ಗಂಭೀರಗೊಳಿಸುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಇಂತಹ ಕಾರ್ಯಗಳಿಗೆ ನಿಯೋಜಿತರಾದ ಶಿಕ್ಷಕರಲ್ಲಿ ನಿಜವಾಗಿಯೂ ಸಮಸ್ಯೆ ಇರುವವರನ್ನು ಬಿಟ್ಟು ಈ ಕಾರ್ಯಗಳನ್ನು ಮಾಡುವುದು ಯಾವ ಅಧಿಕಾರಿಗೂ ವಾಸ್ತವದಲ್ಲಿ ಸಮಸ್ಯೆಯೇ ಅಲ್ಲ. ಏಕೆಂದರೆ ನಿಜವಾಗಿಯೂ ಸಮಸ್ಯೆ ಇರುವ ಶಿಕ್ಷಕರು ಅಥವಾ ನೌಕರರ ಸಂಖ್ಯೆ ಎಷ್ಟಿರುತ್ತದೆ. ಅದು ಏನೇ ಇದ್ದರೂ ಶೇಕಡಾ ಹತ್ತನ್ನು ಮೀರುವುದಿಲ್ಲ. ಆದರೂ ಇದು ಸಮಸ್ಯೆ ಆಗುವುದು ಏಕೆ ಎಂದರೆ ಸಮಸ್ಯೆ ಇಲ್ಲದವರೂ ಕೂಡ ಇಂತಹ ಕೆಲಸಗಳಿಂದ ಹೊರಗುಳಿಯಲು ಇಲ್ಲಸಲ್ಲದ ನೆಪಹೇಳಿ ತಪ್ಪಿಸಿಕೊಳ್ಳಲು  ಪ್ರಯತ್ನಿಸುವುದು.

ಒಂದು ಚುನಾವಣೆ ಅಥವಾ ಗಣತಿಯ ಸಂದರ್ಭದಲ್ಲಿ ಸಮಸ್ಯೆ ಇರುವವರ ಜೊತೆಗೆ ಸಮಸ್ಯೆ ಇರದವರೂ ಕೂಡ ದೊಡ್ಡ ಸಂಖ್ಯೆಯಲ್ಲಿ ವಿನಾಯತಿಗಾಗಿ ಕೋರಿಕೆ ಸಲ್ಲಿಸುವುದು ಸುಳ್ಳಲ್ಲ. ಒಂದೊಂದು ಸಲ ವಿನಾಯತಿ ಕೋರುವವರಲ್ಲಿ ಶೇಕಡಾ ೯೦ರಷ್ಟು ವಿನಾಯತಿಗೆ ಅರ್ಹರಲ್ಲದವರೇ ಇರುತ್ತಾರೆ.    ಹಿಂದೆ ನಾವೆಲ್ಲ ಕೆಲಸಕ್ಕೆ ಸೇರಿದ ಹೊಸತರಲ್ಲಿ ಶಿಕ್ಷಕರಿಗೆ ಬಹಳ ಕಡಿಮೆ ಸಂಬಳ ಇತ್ತು. ಆದರ್ಶದ ಕಾರಣಕ್ಕೆ ಅಲ್ಲದಿದ್ದರೂ ಕೊನೆಯ ಪಕ್ಷ ಎರಡೋ ಮೂರೋ ಸಾವಿರ ರೂಪಾಯಿ ಗೌರವಧನ ಸಿಕ್ಕರೆ ಯಾವುದಾದರೂ ಖರ್ಚಿಗೆ ಆಗುತ್ತದೆ ಎಂದಾದರೂ ಶಿಕ್ಷಕರು ಈ ಕಾರ್ಯಗಳಿಗೆ ಹೋಗುತ್ತಿದ್ದರು. ಈಗ ಶಿಕ್ಷಕರಿಗೆ ಅಂತಹ ದರ್ದೂ ಏನಿಲ್ಲ. ಯಾರಿಗೂ ತೀರಾ ಕಳಪೆ ಸಂಬಳ ಏನಿಲ್ಲ. ʼನಮ್ಮನ್ನು ಗಣತಿಯಿಂದ ಬಿಟ್ಟರೆ ನಾವೇ ಎರಡು ಸಾವಿರ ಕೊಡ್ತೀವಿʼ ಅನ್ನುವ ಮಟ್ಟದಲ್ಲಿ ಅವರಿದ್ದಾರೆ. ಹಾಗಾಗಿ ಗೌರವ ಧನದ ಆಸೆಯಿಂದ ಹೋಗುವವರು ಯಾರೂ ಇಲ್ಲ. ಆದರ್ಶದ ನೆಲೆಯಲ್ಲಿ ಹೋಗುವವರೂ ದಿನೇ ದಿನೇ ಕಡಿಮೆ ಆಗುತ್ತಿದ್ದಾರೆ.

ಈ ಕಾರಣದಿಂದ ಇಂತಹ ಕಾರ್ಯಗಳಿಗೆ ಮಾನವ ಸಂಪನ್ಮೂಲಕ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಇಂತಹ ಅಭಾವವನ್ನು ಸೃಷ್ಟಿಸುತ್ತಿರುವವರಲ್ಲಿ ಶಿಕ್ಷಕರೇ ದೊಡ್ಡ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಸಮಸ್ಯೆಯನ್ನು ಈ ಕಡೆಯಿಂದಲೂ ನೋಡಬೇಕಾಗಿದೆ. ನೆರೆಹಾವಳಿಯಾದಾಗ ಸರ್ಕಾರ ಪರಿಹಾರ ಕೊಡುತ್ತದೆ ಎಂದು ಗೊತ್ತಾದ ತಕ್ಷಣ ಬೆಳೆ ಹಾಳದವರ ಜೊತೆಗೆ ಹಾಳಾಗದವರೂ ಒಂದಿಷ್ಟು ಫೋಟೋ ದಾಖಲೆ ಸೃಷ್ಟಿಸುವುದರಿಂದ ನೆರೆಹಾವಳಿಯಲ್ಲಿ ನೀರು ಹೊಲಕ್ಕೆ ನುಗ್ಗಿದಂತೆಯೇ ತಾಲ್ಲೂಕು ಕಛೇರಿಗೆ ಅರ್ಜಿಗಳ ನೆರೆಯೂ ಹರಿದು ಬರುತ್ತದೆ! ಆಗ ಯಾರಿಗೆ ಹಾನಿ ಆಗಿದೆ ಯಾರಿಗೆ ಆಗಿಲ್ಲ ಎಂಬುದನ್ನು ಪತ್ತೆಹಚ್ಚುವುದೇ ಒಂದು ದೊಡ್ಡ ಸಮಸ್ಯೆಯಾಗಿ ಬಂದ ಅರ್ಜಿಗಳಿಗೆಲ್ಲ ತಲಾ ಐದುನೂರು ರೂಪಾಯಿ ಕೊಟ್ಟು ವ್ಯವಸ್ಥೆ ಕೈತೊಳೆದುಕೊಳ್ಳುವುದಿದೆ. ಇಲ್ಲಿಯೂ ಹಾಗೇ ಆಗುತ್ತದೆ. ಸಮಸ್ಯೆ ಇರುವವರು ಇಲ್ಲದವರೂ ಎಲ್ಲರೂ ಅಳತೊಡಗಿದರೆ, ನಿಜವಾಗಿಯೂ ಅಳುವ ಸಂಕಟ ಯಾರಿಗೆ ಇದೆ ಎಂಬುದನ್ನು ಪತ್ತೆ ಹಚ್ಚುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿ, ʼಯಾರಿಗೂ ವಿನಾಯತಿ ಕೊಡಲ್ಲ, ಹೋಗಿʼ ಎಂದು ಅವರು ಹೇಳುವುದೂ ಇದೆ.


ಅಂದರೆ ಅಧಿಕಾರಿಗಳು ಹೀಗೆ ಸಾಮೂಹಿಕವಾಗಿ ವಿನಾಯತಿ ನಿರಾಕರಿಸುವುದು ಸರಿ ಎಂದು ಪರೋಕ್ಷವಾಗಿ ಹೇಳುವುದು ನನ್ನ ಮಾತಿನ ಉದ್ದೇಶವಲ್ಲ. ಅವರು ಅವನ್ನು ಪರಿಶೀಲಿಸಿ ಅರ್ಹರಿಗೆ ಅನುಮತಿ ನೀಡಬೇಕು ಅದು ಅವರ ಹೊಣೆಗಾರಿಕೆ. ಆದರೆ ಅಂತಹ ಕೃತಕ ಅಭಾವವನ್ನು ಸೃಷ್ಟಿಸುವ ಕೆಲಸಕ್ಕೆ ಶಿಕ್ಷಕರು ಕೈ ಹಾಕದಿದ್ದರೆ ಈ ಸಮಸ್ಯೆ ದೊಡ್ಡದಾಗಿ ಬೆಳೆಯುವುದೇ ಇಲ್ಲವಾದ್ದರಿಂದ ಇದಕ್ಕೆ ಶಿಕ್ಷಕರೂ ಸಹಕರಿಸಬೇಕು ಎಂಬುದಷ್ಟೆ ಇಲ್ಲಿ ಆಶಯ. ನಿಜವಾಗಿಯೂ ಸಮಸ್ಯೆ ಇರುವವರು ಮಾತ್ರ ವಿನಾಯತಿಗೆ ಅರ್ಜಿ ಸಲ್ಲಿಸಿ ಉಳಿದವರು ಇದೊಂದು ಗೌರವ ಮತ್ತು ಘನತೆಯ ಕೆಲಸ ಎಂದು ಸ್ವ ಇಚ್ಚೆಯಿಂದ ಈ ಕೆಲಸಗಳಿಗೆ ಮುಂದಾಗುವುದಾದರೆ ನನ್ನ ಪ್ರಕಾರ ಇದೊಂದು ಸಮಸ್ಯೆಯೇ ಆಗುವುದಿಲ್ಲ.

ಕೆ ಎಸ್‌ ನರಸಿಂಹ ಸ್ವಾಮಿ ಅವರ ಹಿಂದಿನ ಸಾಲಿನ ಹುಡುಗರು ಪದ್ಯದ ಈ ಸಾಲುಗಳನ್ನು ಗಮನಿಸಿ: ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗುವರಾರಲ್ಲಿ? / ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ?. ಹಾಗೆಯೇ ಎಲ್ಲರೂ ವಿನಾಯತಿ ಕೊಡಿ ಎಂದು ಅರ್ಜಿ ಹಿಡಿದುಕೊಂಡು ಹಿಂತರೆ ಕೆಲಸ ಮಾಡಲು ಜನವೆಲ್ಲಿ?

*****

ರಾಜೇಂದ್ರ ಬುರಡಿಕಟ್ಟಿ

Sunday, May 24, 2026

Saturday, May 2, 2026

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ

 

ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಂವಿಧಾನದ ಆಶಯ


ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವರ್ಷ ಎಲ್ಲಿಲ್ಲದ ಅಡ್ಡಿ ಆತಂಕಗಳು ಎದುರಾಗಿವೆ. ನಿರ್ವಿಘ್ನವಾಗಿಯಲ್ಲದಿದ್ದರೂ ಸವಿಘ್ನವಾಗಿಯಾದರೂ `ಒಟ್ಟಿನಲ್ಲಿ ನಡೆಯಿತುಎಂಬಂತೆ ಉತ್ಸವವನ್ನು ನೆಡೆಸಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕೆಂದಿರುವ ಗುಲ್ಬರ್ಗ ಜಿಲ್ಲಾಡಳಿತದ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಲಿಕ್ಕೆ ನಾವೆಲ್ಲ ಇನ್ನೊಂದು ವಾರವಾದರೂ ಕಾಯಬೇಕಾಗಿದೆ. ಅಡ್ಡಪಲ್ಲಕ್ಕಿ ಉತ್ಸವದ ಪರ-ವಿರೋಧ ನಡೆದ ಮತ್ತು ನಡೆಯುತ್ತಿರುವ ಚರ್ಚೆ ಮತ್ತು ವಾಗ್ವಾದಗಳು, ಪ್ರತಿರೋಧ ಹಾಗೂ ಪ್ರತಿಭಟನೆಗಳು ನಮ್ಮ ಸಂವಿಧಾನ ಹಾಗೂ ನಮ್ಮ ಭಾವನೆಗಳ ಹೊಂದಾಣಿಕೆ ಕುರಿತು ನಾವು ಮತ್ತೊಮ್ಮೆ ಚಿಂತಿಸುವಂತೆ ಮಾಡಿವೆ.

ಜೇವರ್ಗಿಯಲ್ಲಿ ಅಕ್ಟೋಬರ್ ರಿಂದ ೧೪ರವರೆಗೆ ನಡೆಸಲು ಉದ್ದೇಶಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವರ್ಷ ವಿವಾದಕ್ಕೆ ಸಿಲುಕಲು ಕಾರಣ ಅದೇ ಅವಧಿಯಲ್ಲಿ ಅಲ್ಲಿನ ಕೆಲವು ಸಂಘಟನೆಗಳು ಮತ್ತು ಸ್ವಾಮೀಜಿಗಳು ಸೇರಿ `ನಿಜಶರಣರ ಜೀವನದರ್ಶನ ಪ್ರವಚನಎಂಬ ಕಾರ್ಯಕ್ರಮವನ್ನು ಸಂಘಟಿಸಿರುವುದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುವ ವೇಳೆ ಸಮ್ಮೇಳನದ ಅಧ್ಯಕ್ಷರು ಸೆಕ್ಯುಲರ್ ಅಲ್ಲವೆಂದೋ ಆಯ್ಕೆಮಾಡಿಕೊಂಡ ಸ್ಥಳ ಸೆಕ್ಯೂಲರ್ ಅಲ್ಲ ಎಂದೋ ಮತ್ತೆ ಇನ್ನಾವುದೋ ಕಾರಣಕ್ಕೋ ಅದೇ ಸಮಯದಲ್ಲಿ ಕೆಲವು ವೇಳೆ ಅದೇ ಸ್ಥಳದಲ್ಲಿ ನಡೆಯುವ ಪರ್ಯಾಯ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಇದು ಒಂದು ರೀತಿಯ ಪರ್ಯಾಯ ಧಾರ್ಮಿಕ ಸಮ್ಮೇಳನ ಅನ್ನಬಹುದು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದವರೇ ಎದುರುಬದುರು ಆದಂತೆ ಇಲ್ಲಿ ಧಾರ್ಮಿಕ ಕ್ಷೇತ್ರದವರೆ ಎದುರು ಬದುರು ಆಗಿರುವುದು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬೇಕು.

ಮನುಷ್ಯರೇ ಆದ ಸ್ವಾಮಿಗಳನ್ನು ದೇವರಂತೆ ಹೊತ್ತು ಒಯ್ಯುವ (ದೇವರನ್ನು ಉದ್ದಪಲ್ಲಕ್ಕಿಯಲ್ಲಿ ಒಯ್ಯುತ್ತಾರಾದರೂ) ಅಡ್ಡಪಲ್ಲಕ್ಕಿ ಉತ್ಸವ ಪ್ರಜಾಪ್ರಭುತ್ವ ವಿರೋಧಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಆದ್ದರಿಂದ ಸರ್ಕಾರ ಅದನ್ನು ನಿಷೇಧಿಸಬೇಕುಎಂಬುದು ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧಿಸುವ ಗುಂಪಿನ ಪ್ರಮುಖ ವಾದವಾದರೆ, “ ಉತ್ಸವ ಪರಂಪರಾಗತವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಆಚರಣೆ, ಅದಕ್ಕೆ ಅಡ್ಡಿಪಡಿಸುವುದು ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಮೂಲಕ ಸಂವಿಧಾನ ವಿರೋಧಿಯಾಗುತ್ತದೆಎಂಬುದು ಉತ್ಸವವನ್ನು ಬೆಂಬಲಿಸುವ ಗುಂಪಿನ ವಾದವಾಗಿದೆ.

ಸಂವಿಧಾನದ ಪ್ರಕಾರ ಯಾವುದು ಸರಿ ಯಾವುದು ತಪ್ಪು ಎಂಬುದು ನಿರ್ಣಯವಾಗಬೇಕಾದದ್ದು ನ್ಯಾಯಾಲಯದಲ್ಲಿ. ಅದನ್ನು ನಿರ್ಧಿಷ್ಟವಾಗಿ ಸ್ಪಷ್ಟಪಡಿಸಿಕೊಳ್ಳುವುದು ತುರ್ತಾಗಿ ಸಾಧ್ಯವಿಲ್ಲವಾದ್ದರಿಂದ ಎರಡೂ ಗುಂಪುಗಳ ನಡುವೆ ಶಾಂತಿ ಸಂಧಾನ ನಡೆಸಿ ಕೆಲವು ಷರತ್ತುಗಳನ್ನು ವಿಧಿಸಿ ಗುಲ್ಬರ್ಗ ಜಿಲ್ಲಾಧಿಕಾರಿಗಳು ಅಡ್ಡಪಲ್ಲಕ್ಕಿ ಉತ್ಸವವನ್ನು ಸಾಂಕೇತಿಕವಾಗಿ ನಡೆಸಲು ಅನುಮತಿ ನೀಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಅವರು ವಿಧಿಸಿರುವ ಪ್ರಮುಖ ಷರತ್ತುಗಳು ಹೀಗಿವೆ:

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಕೇವಲ ಎರಡು ನೂರು ಮೀಟರ್ವರೆಗೆ ಮಾತ್ರ ಸಾಂಕೇತಿಕವಾಗಿ ನಡೆಯಬೇಕು. ಉತ್ಸವದಲ್ಲಿ ಗಾಂಧೀಜಿ, ಬಸವಣ್ಣ, ಮಾದಾರ ಚೆನ್ನಯ್ಯ ಮುಂತಾದ ವೇಷಧಾರಿಗಳಿಂದ `ನಜರ್ಸ್ವೀಕರಿಸುವ (ನಮಸ್ಕಾರ ಮಾಡುವುದು) ಸಂಪ್ರದಾಯ ಕೈಬಿಡಬೇಕು. ಬಸವತತ್ವ ಅನುಯಾಯಿಗಳು (ಅಂದರೆ ಅಡ್ಡಪಲ್ಲಕ್ಕಿ ವಿರೋಧಿ ಗುಂಪು) ಸಂಜೆ .೦೦ ರಿಂದ .೩೦ ರವರೆಗೆ ಪ್ರವಚನ ನೀಡಬೇಕು. ಸಂಜೆ .೩೦ ರಿಂದ ೧೦.೩೦ ರವರೆಗೆ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಬೇಕು. ಷರತ್ತುಗಳ ಜೊತೆಗೆ ಕೊನೆಯಲ್ಲಿ ಎರಡೂ ಗುಂಪಿನವರಿಗೆ ಅನ್ವಯಿಸುವಂತೆ ಯಾರೂ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂಬುದು ಸಹಜವಾಗಿ ನೀಡಲಾಗಿರುವ ಎಚ್ಚರಿಕೆ ಇದೆ.

ಮುಖ್ಯವಾಗಿ ಇಲ್ಲಿ ನಡೆಯುತ್ತಿರುವ ಸಂಘರ್ಷ ಶೈವ-ವೀರಶೈವ-ಲಿಂಗಾಯತ ಮುಂತಾಗಿ ಕರೆಯಲಾಗುತ್ತಿರುವ, ಇವುಗಳ ಮಧ್ಯೆ ಒಂದಿಷ್ಟು ಭಿನ್ನತೆಗಳಿದ್ದಾಗ್ಯೂ ಸರ್ಕಾರಿ ಲೆಕ್ಕದಲ್ಲಿ ಒಂದೇ ಜಾತಿಯಾಗಿ ಗುರುತಿಸಲಾಗುತ್ತಿರುವ ಧರ್ಮದ ಸ್ಥಾಪಕರ ಕುರಿತಾದದ್ದು. ಒಂದು ವಾದದ ಪ್ರಕಾರ ವೀರಶೈವ ಧರ್ಮ ರಂಭಾಪುರಿ ಸೇರಿದಂತೆ ಐದು ಪೀಠಗಳಿಂದ ಪ್ರಾರಂಭವಾಯಿತು. ಪೀಠಗಳನ್ನು ಪಂಚಪೀಠಗಳೆಂದೂ ಇವುಗಳನ್ನು ಪ್ರತಿನಿಧಿಸುವ ಸ್ವಾಮಿಗಳನ್ನು ಪಂಚಪೀಠಾಧೀಶ್ವರರೆಂದು ಕರೆಯಲಾಗುತ್ತಿದೆ. ಇವರ ಮಠಗಳಿಗೆ ನಡೆದುಕೊಳ್ಳುವ ವೀರಶೈವ ಧರ್ಮದ ಭಕ್ತರನ್ನು `ಪಂಚಮಸಾಲಿಗಳುಎಂದು ಸಾಮಾನ್ಯವಾಗಿ ಎಂದು ಗುರುತಿಸಲಾಗುತ್ತದೆ. ಇವರ ಪ್ರಕಾರ ಬಸವಣ್ಣ ಧರ್ಮದ ಸ್ಥಾಪಕ ಅಲ್ಲ. ಆತ ಒಂದಿಷ್ಟು ಸುಧಾರಣೆ ಮಾಡಿದ ವ್ಯಕ್ತಿಮಾತ್ರ.

ಆದರೆ ಬಸವತತ್ವ ಪ್ರತಿಪಾದಕರ ಪ್ರಕಾರ ಬಸವಣ್ಣನೇ ಲಿಂಗಾಯತ -ವೀರಶೈವ ಧರ್ಮದ ಸ್ಥಾಪಕನೇ ಹೊರತು ಪಂಚಪೀಠಾಧೀಶ್ವರರಲ್ಲ. ಹಿಂದೂ ಧರ್ಮದಿಂದ ಸಿಡಿದೆದ್ದ ವಿಚಾರಧಾರೆಗಳು ಹೇಗೆ ಸ್ವತಂತ್ರವಾಗಿ ಜೈನ, ಬೌದ್ಧ ಧರ್ಮಗಳಾದವೋ ಹಾಗೆಯೇ ಧರ್ಮ ಕೂಡ ಒಂದು ಸ್ವತಂತ್ರ ಅಸ್ತಿತ್ವ ಉಳ್ಳದ್ದೇ ಹೊರತು ಹಿಂದೂ ಧರ್ಮದ ಉಪಪಂಗಡವಲ್ಲ ಎಂದುದು ಇವರ ವಾದ. ವಚನಸಾಹಿತ್ಯವನ್ನು ಧರ್ಮಗ್ರಂಥವೆಂದು ನಂಬುವ, ಇಷ್ಟಲಿಂಗವನ್ನು ಪೂಜಿಸುವ ಸ್ಥಾವರಕ್ಕಿಂತ ಜಂಗಮಕ್ಕೆ ಆದ್ಯತೆ ನೀಡುವ ಲಿಂಗಾಯತ-ವೀರಶೈವ ಧರ್ಮದ ಭಕ್ತರನ್ನು ಸಾಮಾನ್ಯವಾಗಿ `ಸಾದರುಎಂದು ಗುರುತಿಸಲಾಗುತ್ತದೆ.

ವೀರಶೈವ ಮತ್ತು ಲಿಂಗಾಯತ ಧರ್ಮಗಳು ಬೇರೆ ಬೇರೆ ಎನ್ನುವಾಗ ಸಮಸ್ಯೆ ಇಲ್ಲ. ಪಂಚಪೀಠಾಧೀಶ್ವರರು ವೀರಶೈವ ಧರ್ಮದ ಸ್ಥಾಪಕರು, ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂಬ ಸರಳ ಸೂತ್ರದಿಂದ ಇದನ್ನು ಬಗೆಹರಿಸಬಹುದಿತ್ತು. ಆದರೆ ಸರ್ಕಾರದ ಲೆಕ್ಕದಲ್ಲಿ ಶೈವ-ವೀರಶೈವ-ಲಿಂಗಾಯತ ಎಲ್ಲವೂ ಸೇರಿ ಒಂದು ಜಾತಿಯಾಗಿ ಪರಿಗಣಿತವಾಗಿರುವುದರಿಂದ ಮತ್ತು ಜಾತಿಗೆ ಧಾರ್ಮಿಕ ಆಚರಣೆಗಳ ಜೊತೆಗೆ ರಾಜಕೀಯ ಸಾಮಾಜಿಕ ಆಯಾಮಗಳೂ ಇರುವುದರಿಂದ ಸಮಸ್ಯೆ ಹೆಚ್ಚು ಬಿಗಡಾಯಿಸಿದೆ. ಮಧ್ಯೆ ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಪರಿಗಣಿಸಬೇಕು ಎನ್ನುವ ಮತ್ತು ಅದಕ್ಕೆ ವಿರುದ್ಧವಾಗಿ ಇವರೆಲ್ಲರನ್ನೂ ಒಂದೇ ಎಂದು ಪರಿಗಣಿಸಬೇಕು ಎಂಬ ಒತ್ತಡಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ನಡೆಯುತ್ತಲೇ ಇವೆ. ಇದು ಕೇವಲ ಒಂದು ಧರ್ಮದ ಅನುಯಾಯಿಗಳ ನಡುವಿನ ತಿಕ್ಕಾಟವಾಗಿದ್ದರೆ ಇದನ್ನು ಇಲ್ಲಿ ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ಅದಕ್ಕೆ ಅದರಾಚೆಗೂ ಸಾಮಾಜಿಕ ಮಹತ್ವವಿರುವುದರಿಂದ ಚರ್ಚೆ ಅವಶ್ಯವಾಗಿದೆ.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಬಂಧ ಗುಲ್ಬರ್ಗ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಸೂಕ್ಷ್ಮವಾಗಿ ನೋಡಿದರೆ ಷರತ್ತುಗಳು ಬಹುವಾಗಿ ಅಡ್ಡಪಲ್ಲಕ್ಕಿ ಪರವಾದ ಗುಂಪಿಗೇ ವಿಧಿಸಿರುವ ಷರತ್ತುಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ರಂಭಾಪುರಿ ಶ್ರೀಗಳು ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾಡಬಾರದು ಎಂಬುದನ್ನೇ ಒತ್ತುಕೊಟ್ಟು ಹೇಳಲಾಗಿದೆನಮ್ಮದು ಇತ್ತ ಸಂಪೂರ್ಣ ಧಾರ್ಮಿಕವೂ ಅಲ್ಲದ ಅತ್ತ ಸಂಪೂರ್ಣ ಸೆಕ್ಯುಲರ್ ಕೂಡ ಅಲ್ಲದ ಆದರೆ ಎರಡೂ ಅಂಶಗಳನ್ನು ಒಳಗೊಂಡ ಸಂಕೀರ್ಣ ಸಮಾಜೋರಾಜಕೀಯ ವ್ಯವಸ್ಥೆ. ಹಾಗಾಗಿ ನಮ್ಮ ಧಾರ್ಮಿಕ ಭಾವನೆಗಳು ಮತ್ತು ನಮ್ಮ ಸಂವಿಧಾನದ ಆಶಯಗಳ ನಡುವೆ ಘರ್ಷಣೆ ಆಗಾಗ ಇಲ್ಲಿ ಸಾಮಾನ್ಯ.

ಭಾರತ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಬಹುಶಃ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಷ್ಟು ಬೇರೆ ಯಾವುದೇ ಹಕ್ಕನ್ನು ನಾವು ದುರುಪಯೋಗ ಪಡಿಸಿಕೊಂಡಿಲ್ಲವೇನೋ. ಅನೇಕ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಹಕ್ಕಿನ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ಸಮರ್ಥಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸ್ವಾಮಿಗಳು ಕೊಡುವ ಒಂದು ಸಾಮಾನ್ಯ ಉತ್ತರ ಎಂದರೆಇದು ಭಕ್ತರ ಇಚ್ಚೆಯ ಮೇರೆಗೆ ನಡೆಯುತ್ತಿದೆ; ನನಗಾಗಿ ಅಲ್ಲಎಂಬುದು. ಹುಬ್ಬಳ್ಳಿಯಿಂದ ವರದಿಯಾದಂತೆ ಉತ್ಸವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಇದನ್ನೇ ಹೇಳಿದ್ದಾರೆ: “ದಸರಾ ದರ್ಬಾರ್ ವೀರಶೈವ ಭಕ್ತರ ಒತ್ತಾಸೆಯಿಂದ ನಡೆಯುತ್ತಿದೆಯೇ ಹೊರತು ನನ್ನ ಒತ್ತಾಸೆಯಿಂದಲ್ಲ ಹಿಂದೆ ನಡೆಯದ ಹೋರಾಟಗಳು ಈಗ ಏಕೆ?”

ಕೇವಲ ಹಿಂದಿನಿಂದ ನಡೆದು ಬಂದಿದೆ ಎಂಬ ಒಂದೇ ಕಾರಣಕ್ಕೆ ನಾವು ಯಾವುದನ್ನೂ ಒಪ್ಪಿಕೊಳ್ಳಬೇಕಾಗಿಲ್ಲ. ಯಾವುದೇ ಒಂದು ಧರ್ಮ ಅದು ಕಾಲಕ್ಕೆ ತಕ್ಕಂತೆ ತನ್ನೊಳಗೆ ಸುಧಾರಣೆ ತಂದುಕೊಳ್ಳದೇ ಹೋದರೆ ಅವನತಿಯ ಹಾದಿ ಹಿಡಿಯುತ್ತದೆ. ನಿಂತನೀರು ಗಂಗಾಜಲವೇ ಆದರೂ ಕೆಲದಿನಗಳ ನಂತರ ಕುಡಿಯಲು ಯೋಗ್ಯವಾಗದೇ ಹೋಗುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು ನಿಜ. ಆದರೆ ಬುದ್ಧಿಯನ್ನು ಒತ್ತೆಯಿಟ್ಟು ಭಾವನೆಗಳನ್ನು ಗೌರವಿಸುವ ಅವಿವೇಕಕ್ಕೆ ನಾವು ಹೋಗುವ ಅವಶ್ಯಕತೆಯಿಲ್ಲ. ಏಕೆಂದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ನೆಪವೊಡ್ಡಿ ನಾವು ನಮ್ಮ ವೈದಿಕ ಮಠಗಳಲ್ಲಿ ನಡೆಯುವ ಪಂಕ್ತಿಭೇದವನ್ನೂ ಅಷ್ಟೇ ಏಕೆ ಕುಕ್ಕೆ ಸುಬ್ರಹ್ಮಣ್ಯದ ಎಂಜಲೆಲೆ ಮೇಲಿನ ಹೊರಳಾಟದ ಮಡೆಸ್ನಾನವನ್ನೂ ಸಮರ್ಥಿಸಬಹುದಾದ ಅಪಾಯವಿದೆ.

ರಂಭಾಪುರಿ ಶ್ರೀಗಳ ಆಚರಣೆ ಪ್ರಜಾಪ್ರಭುತ್ವ ವಿರೋಧಿಯಾದ ರಾಜಪ್ರಭುತ್ವದ ಮಾದರಿಯಾದ ಅನೇಕ ಅನಿಷ್ಟ ಚಟುವಟಿಕೆಗಳನ್ನು ಹೊಂದಿರುವುದು ಎಲ್ಲರಿಗೂ ಎದ್ದುಕಾಣುವ ವಿಷಯ. ಬಸವಣ್ಣ ಮತ್ತು ಗಾಂಧೀಜಿಯ ವೇಷಧಾರಿಗಳು ಶ್ರೀಗಳಿಗೆ ಬಗ್ಗಿ ನಮಸ್ಕರಿಸುವುದು, ಜೀವಂತವಿರುವ ವ್ಯಕ್ತಿ ತನ್ನ ಸಹಮಾನವರ ಮೇಲೆ ಸವಾರಿ ಮಾಡುವುದು ಏನನ್ನು ಸೂಚಿಸುತ್ತವೆಕಾರ್ಲ್ಮಾರ್ಕ್ಸ್ ಎಂಬ ಮೇಧಾವಿ ಜಗತ್ತಿಗೆ ಬರುವ ಎಷ್ಟೋ ನೂರು ವರ್ಷಗಳ ಹಿಂದೆಯೇ ಜಗತ್ತಿಗೆ ಕಾಯಕದ ಮಹತ್ವವನ್ನೂ, ಮನುಷ್ಯರ ನಡುವಿನ ಸಮಾನತೆಯನ್ನೂ ಬಸವನ ನೇತೃತ್ವದ ಶರಣರು ಪ್ರತಿಪಾದಿಸಿದ್ದರು. ಇಂದು ವೀರಶೈವ ಸಮುದಾಯದ ಅನುಯಾಯಿಗಳ ಆಚೆಯೂ ಧರ್ಮದ ಆಶಯಗಳು ಏನಾದರು ಹರಡಿಕೊಂಡಿದ್ದರೆ ಅದಕ್ಕೆ ಬಸವಾದಿ ಶರಣರು ಮೂಲ ಕಾರಣ. ಧರ್ಮ ಮತ್ತು ಸಾಹಿತ್ಯಗಳನ್ನು ಸಮಾಜಪರಿವರ್ತನೆಯ ಪ್ರಬಲ ಅಸ್ತ್ರವಾಗಿ ಅವರಷ್ಟು ಸಮರ್ಥವಾಗಿ ಬಳಸಿಕೊಂಡವರು ಜಗತ್ತಿನಲ್ಲಿಯೇ ವಿರಳ. ಅವರ ತಾತ್ವಿಕತೆಯನ್ನು ಆಚರಣೆಗಳನ್ನು ಅವರ ನಂತರ ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರು ಸರಿಯಾಗಿ ಅನುಷ್ಠಾನಗೊಳಿಸಿದ್ದರೆ ನಮ್ಮ ಸಮಾಜದ ಹತ್ತು ಹಲವು ಸಮಸ್ಯೆಗಳು ಇಂದು ಇರುತ್ತಲೇ ಇರಲಿಲ್ಲ. ಶಿವನನ್ನು ಮತ್ತು ಶವವನ್ನು ಮಾತ್ರ ಮನುಷ್ಯರು ಹೋರುವುದು ನಾನು ತಿಳಿದುಕೊಂಡಂತೆ ವೀರಶೈವ-ಲಿಂಗಾಯತ ಧರ್ಮದಲ್ಲಿ ಗೌರವದ ಸಂಕೇತವೇ ಹೊರತು ಜೀವಂತವಿರುವ ಸ್ವಾಮಿಗಳನ್ನು ಅಲ್ಲ. ಇದನ್ನು ಅರ್ಥಮಾಡಿಕೊಂಡ ಅನೇಕ ಸ್ವಾಮಿಗಳು ಇಂತಹ ಆಚರಣೆಗಳು ಹಿಂದೆ ಇದ್ದರೂ ಅವನ್ನು ತಾವೇ ಕೈಬಿಟ್ಟಿದ್ದಾರೆ. ರಂಭಾಪುರಿ ಶ್ರೀಗಳೂ ಅದನ್ನು ಬಿಟ್ಟು ದೊಡ್ಡವರಾಗಬೇಕು. ಭಕ್ತರು ಹಠಮಾಡಿದರೆ ಅವರಿಗೆ ಶ್ರೀಗಳೇ ತಿದ್ದಿ ಹೇಳಬೇಕು.

ಕಣ್ಣುಮುಚ್ಚಿಕೊಂಡು ಆಶೀರ್ವಾದ ಮಾಡುವ ಸ್ವಾಮಿಗಳಿಗಿಂತ ಕಣ್ಣುತೆರೆಸುವ ಕೆಲಸ ಮಾಡುವ ಸ್ವಾಮಿಗಳ ಅವಶ್ಯಕತೆ ನಮ್ಮ ಸಮಾಜಕ್ಕೆ ಹಿಂದಿಗಿಂತಲೂ ಇಂದು ಹೆಚ್ಚಿದೆ. ಅಂಥವರು ನಮ್ಮ ಸಮಾಜ ಪರಿವರ್ತನೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಬಲ್ಲರು. ಏಕೆಂದರೆ ಭಾರತದಲ್ಲಿ ಒಬ್ಬ ಸಾಹಿತಿ ಅಥವಾ ಒಬ್ಬ ರಾಜಕಾರಣಿಯ ಹಿಂದೆ ಇರುವುದಕ್ಕಿಂತ ಹೆಚ್ಚು ಜನ ಒಬ್ಬ ಧರ್ಮಗುರುವಿನ ಹಿಂದೆ ಇರುತ್ತಾರೆ. ನಿಟ್ಟಿನಲ್ಲಿ ರಂಭಾಪುರಿ ಶ್ರೀಗಳು ತಾವೇ ಮುಂದೆ ನಿಂತು ಆಚರಣೆಯನ್ನು ನಿಲ್ಲಿಸುವ, ಮೂಲಕ ಎಲ್ಲ ಮಾನವಪ್ರೇಮಿಗಳ ಗೌರವಕ್ಕೆ ಪಾತ್ರರಾಗಬೇಕು. ಇಲ್ಲದೇ ಹೋದರೆ ವರ್ಷ ೨೦೦ ಮೀಟರ್ಗೆ ಇಳಿದ ಅಡ್ಡಪಲ್ಲಕ್ಕಿ ಉತ್ಸವ ಮುಂದಿನ ವರ್ಷ ೧೦೦ ಮೀಟರ್ಗೆ ಅದರ ಮುಂದಿನ ವರ್ಷ ೫೦ ಮೀಟರ್ಗೆ ಹೀಗೆ ಇಳಿಯುತ್ತಾ ಹೋಗಿ ಕೊನೆಗೆ ಸ್ವಾಮಿಗಳ ಸಹಕಾರವಿಲ್ಲದೆಯೂ ನಿಂತುಹೋಗಬಹುದು!

 *****

ಡಾ. ರಾಜೇಂದ್ರ ಬುರಡಿಕಟ್ಟಿ

ಅಕ್ಟೋಬರ್‌, 2013

ಗಮನಿಸಿ: ಈ ಬರೆಹ ಬರೆದದ್ದು 2013ರ ಅಕ್ಟೋಬರ್‌ ಮೊದಲ ವಾರದಲ್ಲಿ. ಆದರೆ ಇದನ್ನು ಈ ಬ್ಲಾಗಿನಲ್ಲಿ ಹಾಕಿದ್ದು 2026ರ ಮೇ ಮೊದಲ ವಾರದಲ್ಲಿ. ಇಲ್ಲಿ ಬಳಕೆಯಾಗಿರುವ ಚಿತ್ರವು ಈ ಲೇಖನದಲ್ಲಿ ಉಲ್ಲೇಖವಾಗಿರುವ ಜೇವರ್ಗಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ್ದು. ರಾಬು

 

*****