Saturday, May 23, 2026

ಊರಿಗೆ ಊರೇ ಹಸೆಯಲಿ ನಿಂತರೆ……

ಊರಿಗೆ ಊರೇ ಹಸೆಯಲಿ ನಿಂತರೆ……

ಕಾರವಾರದ ಕಡಲತಡಿಯಲ್ಲಿ ಇಂಗ್ಲಿಷ್‌ ಶಿಕ್ಷಕಿಯಾರುವ ‍ಲೇಖನಿ ಸ್ನೇಹಿತೆ ಶ್ರೀದೇವಿ ಕೆರೆಮನೆ ಜನಗಣತಿ, ಚುನಾವಣೆ ಇಂತಹ ಸಂದರ್ಭಗಳಲ್ಲಿ ಇತರೆ ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿ ಬರೆದ ಲೇಖನವೊಂದನ್ನು ಗಮನಿಸಿದೆ. ಅದರಲ್ಲಿ ಅವರು, ವಯಸ್ಸು ಅನುಭವ ಅಷ್ಟೇ ಏಕೆ ಅಧಿಕಾರದ ಸ್ಥಾನಮಾನದಲ್ಲಿಯೂ ಕಿರಿಯರಾದ ಸಿಬ್ಬಂಧಿ ಸಂದರ್ಭಾನುಸಾರ ಸಿಕ್ಕ ಅಧಿಕಾರದ ಅಮಲಿನಿಂದ ಮೇಲಿನ ಎಲ್ಲ ವಿಷಯಗಳಲ್ಲೂ ಬಹಳಷ್ಟು ಹಿರಿಯರಾದ ಶಿಕ್ಷಕರಿಗೆ ಹೇಗೆಲ್ಲ ಮೂದಲಿಸುವುದು, ಹಿಯ್ಯಾಳಿಸುವುದು, ಬೇಜವಾಬ್ದಾರಿ ವ್ಯಕ್ತಿಗಳೆಂದು ಪರಿಗಣಿಸಿ ನಿಂದನೆಯ ಮಾತುಗಳನ್ನು ಆಡುವುದು ಮಾಡುತ್ತಾರೆ ಮತ್ತು ಶಿಕ್ಷಕರನ್ನು ಎಷ್ಟೊಂದು ತುಚ್ಛವಾಗಿ ಕಾಣುತ್ತಾರೆ ಎಂಬುದನ್ನು ಬಹಳಷ್ಟು ಮನಮುಟ್ಟುವಂತೆ ವಿವರಿಸಿದ್ದಾರೆ.

ಶ್ರೀದೇವಿ ಅವರು ಲೇಖನದಲ್ಲಿ ಹೇಳಿದ ಯಾವ ವಿಷಯವೂ ಸುಳ್ಳಲ್ಲ. ಇದನ್ನು ಬಹಳಷ್ಟು ಜನ ಶಿಕ್ಷಕರು ಸ್ವತಃ ಅನುಭವಿಸಿದ್ದರೆ ಉಳಿದವರು ಅನುಭವಿಸುವುದನ್ನು ಕಂಡಾದರೂ ಇದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇವೆಲ್ಲವನ್ನೂ ಒಪ್ಪಿಕೊಂಡೂ ಈ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗುತ್ತಿದೆ. ಇದು ಈ ಸಮಸ್ಯೆಯನ್ನು ಇನ್ನೊಂದು ಕಡೆಯಿಂದ ನೋಡುವ ಪ್ರಯತ್ನವಷ್ಟೆ.

ಶ್ರೀದೇವಿ ಅವರು ತಮ್ಮ ಲೇಖನದಲ್ಲಿ ಇತ್ತೀಚೆಗೆ ನಡೆದ ಮನೆಗಣತಿಗೆ ನಿಯೋಜಿತರಾದ ದೈಹಿಕವಾಗಿ ಅದನ್ನು ನಿಜವಾಗಿಯೂ ಮಾಡಲು ಕಷ್ಟಪಡುವ ಶಿಕ್ಷಕಿ ಆ ಕೆಲಸದಿಂದ ವಿನಾಯತಿ ಕೋರಿದಾಗ ಸಿಬ್ಬಂದಿ ಹೇಗೆಲ್ಲ ಅವರನ್ನು ಗೇಲಿ ಮಾಡಿ ಅಪಹಾಸ್ಯ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ಇದು ಅನೇಕ ಕಡೆ ಈ ಗಣತಿ ಸಂದರ್ಭದಲ್ಲಿ ಮಾತ್ರವಲ್ಲ ಇತರ ಗಣತಿಗಳೂ ಸೇರಿದಂತೆ, ಚುನಾವಣೆಗಳ ಸಂದರ್ಭಗಳಲ್ಲಿಯೂ ನಡೆಯುವಂಥ ಒಂದು ಸಾಮಾನ್ಯ ವಿದ್ಯಮಾನ. ಚುನಾವಣೆ ಅಥವಾ ಗಣತಿ ಕಾರ್ಯಕ್ಕೆ ನಿಯೋಜಿತರಾದ ಅನೇಕರು ತಮ್ಮನ್ನು ಆ ಕೆಲಸದಿಂದ ಬಿಡುಗಡೆ ಮಾಡಲು ಕೋರಿಕೊಳ್ಳುವ ಮನವಿಗಳನ್ನು ಹಿಡಿದುಕೊಂಡು ಅಧಿಕಾರಿಗಳ ಕಛೇರಿಗಳಿಗೆ ಅಲೆದಾಡುವ ದೃ‍ಶ್ಯಗಳನ್ನು ಎಲ್ಲರೂ ಸಾಮಾನ್ಯವಾಗಿ ನೋಡಿಯೇ ಇರುತ್ತಾರೆ. ಇಂಥವರಲ್ಲಿ ಕೆಲವರು ಆಸ್ಪತ್ರೆಯವರು ನೀಡುವ ಆಳೆತ್ತರದ ಬಾಡಿ ಸ್ಕ್ಯಾನಿಂಗ್‌ ಚಿತ್ರಗಳು, ಹೃದಯ ಕಾಯಿಲೆಗೆ ಸಂಬಂಧಿಸಿದ ಫೈಲುಗಳು ಇತ್ಯಾದಿಗಳೊಂದಿಗೆ ಬಂದರೆ ಇನ್ನು ಕೆಲವು ತಾಯಂದಿರು ಹಾಲುಕುಡಿಯವ ಕೂಸುಗಳನ್ನು ಕಂಕುಳಲ್ಲಿ ಇಟ್ಟುಕೊಂಡೇ ಕಛೇರಿಗಳಿಗೆ ಬರುವುದೂ ಇದೆ. ತಮ್ಮ ಸಮಸ್ಯೆಗೆ ಪ್ರತ್ಯಕ್ಷ ಸಾಕ್ಷಿ ಒದಗಿಸಿ ವಿನಾಯತಿ ಪಡೆಯುವುದು ಇವರ ಉದ್ದೇಶವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ಇಂತಹ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯತಿ ಸಿಗುತ್ತದೆ. ಇನ್ನು ಕೆಲವರಿಗೆ ಸಿಗುವುದಿಲ್ಲ. ಸಿಕ್ಕವರು ಸಂತೋಷದಿಂದ ಅಲ್ಲದಿದ್ದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಮನೆಕಡೆಗೆ ಕಾಲು ಹಾಕಿದರೆ ಸಿಗದಿದ್ದವರು ʼಇನ್ನೇನು ಮಾಡ್ಲಿಕ್ಕೆ ಆಗುತ್ತೆʼ ಎಂದು ಮುಖ ಸಣ್ಣದು ಮಾಡಿಕೊಂಡು ಚುನಾವಣೆಯ ಸೂಟ್‌ಕೇಸ್‌ ಹಿಡಿದುಕೊಂಡು ಬಸ್ಸಿನ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾರೆ. ಇಲ್ಲಿ ಸಮಸ್ಯೆ ಹೇಳಿಕೊಂಡವರಲ್ಲಿ ಯಾರಿಗೆ ವಿಯಾಯತಿ ಸಿಗುತ್ತದೆ ಮತ್ತು ಯಾರಿಗೆ ಸಿಗುವುದಿಲ್ಲ ಎಂಬುದನ್ನು ಹೀಗೆಯೇ ಎಂದು ಹೇಳುವುದು ಕಷ್ಟ. ಕೆಲವು ಗಂಭೀರ ಪ್ರಕರಣಗಳನ್ನು ಸಂಬಂಧ ಪಟ್ಟ ವ್ಯವಸ್ಥೆ ಗುರುತಿಸಿ ಅವುಗಳನ್ನು ಪರಿಗಣಿಸಲು ವ್ಯವಸ್ಥೆ ಮಾಡುತ್ತದೆಯಾದರೂ ಇವುಗಳ ಇತ್ಯರ್ಥದಲ್ಲಿ ಎಲ್ಲಕಡೆಯೂ ಬಹಳಷ್ಟು ನ್ಯಾಯಯುತವಾಗಿಯೇ ಇಂತಹ ಪ್ರಕರಣಗಳ ಇತ್ಯರ್ಥ ಆಗುತ್ತದೆ ಎನ್ನುವಂತಿಲ್ಲ. ಕೆಲವು ಗಂಭೀರ ಸಮಸ್ಯೆಯಲ್ಲಿರುವವರಿಗೆ ವಿನಾಯತಿಯ ಸೌಲಭ್ಯ ಸಿಗದೇ ಅಷ್ಟೇನೂ ಗಂಭೀರವಲ್ಲದವರಿಗೆ ವಿನಾಯತಿಯ ಸೌಲಭ್ಯ ದೊರೆಯುವುದೂ ಇದೆ. ಇದಕ್ಕೆ ಅವರು ಸಮಸ್ಯೆಯನ್ನು ಪ್ರಸ್ತುತ ಪಡಿಸುವ ವಿಧಾನ, ಸಲ್ಲಿಸುವ ದಾಖಲೆಗಳು, ಇವುಗಳ ಜೊತೆಗೆ ಇವುಗಳನ್ನು ಇತ್ಯರ್ಥ ಪಡಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ನ್ಯಾಯಪರತೆ, ಮಾನವೀಯ ಕಾಳಜಿ ಹೀಗೆ ಹತ್ತು ಹಲವು ಕಾರಣಗಳು ಸೇರಿಕೊಳ್ಳುತ್ತವೆ.


ಇಂತಹ ಸಮಸ್ಯೆಗಳನ್ನು ತಮ್ಮ ಬಿಡುವಿಲ್ಲದೆ ಅನೇಕ ಕಾರ್ಯಗಳ ನಡುವೆಯೂ ಸರಿಯಾಗಿ ಪರಿಶೀಲಿಸಿ ತುಂಬಾ ಗಂಭೀರ ಕಾರಣಗಳಿದ್ದವರಿಗೆ ನ್ಯಾಯಯುತವಾಗಿ ವಿನಾಯತಿ ನೀಡುವ ಅಧಿಕಾರಿಗಳು ಇಲ್ಲವೆಂದಲ್ಲ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ. ಒಬ್ಬಿಬ್ಬರಿಗೆ ಕೊಟ್ಟರೆ ಉಳಿದವರೂ ʼಶುರುವುʼಮಾಡುತ್ತಾರೆ ಎಂದು ಅರ್ಹರಿಗೂ ವಿನಾಯತಿ ನೀಡಲು ಹಿಂದೆಮುಂದೆ ನೀಡುವವರೆ ಹೆಚ್ಚು. ಆಗ ನಿಜವಾಗಿ ತೊಂದರೆ ಇರುವವರಿಗೂ ವಿನಾಯತಿ ಸಿಗದೆ ಅವರು ಕಷ್ಟ ಅನುಭವಿಸಬೇಕಾಗುತ್ತದೆ.

ಇಲ್ಲಿ ನಿಜವಾಗಿಯೂ ಶಿಕ್ಷಕರು ಅನುಭವಿಸುವ ಸಮಸ್ಯೆಗಳಿಗೆ ಅಧಿಕಾರಿಗಳು ಮಾತ್ರವೇ ಕಾರಣವೇ ಅಥವಾ ಅದಕ್ಕೆ ಶಿಕ್ಷಕರೂ ಕಾರಣವೇ ಎಂಬುದನ್ನು ನಾವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ.  ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಅರ್ಹರಿಗೆ ವಿನಾಯತಿ ನೀಡಬೇಕಾದದ್ದು ಅಧಿಕಾರಿಗಳ ಹೊಣೆಗಾರಿಕೆ ಎಂಬುದನ್ನು ಒಪ್ಪಿಕೊಂಡೂ ಈ ಸಮಸ್ಯೆಯ ನಿರ್ವಹಣೆಯಲ್ಲಿ ಅವರಿಗೆ ಶಿಕ್ಷಕರೇ ಹೇಗೆ ಅಡೆತಡೆ ಉಂಟುಮಾಡುತ್ತಾರೆ ಎಂಬುದನ್ನೂ ನಾವು ನೋಡಬೇಕು.

ಚುನಾವಣೆ, ಜನಗಣತಿ ಇವು ರಾಷ್ಟ್ರೀಯ ಕಾರ್ಯಗಳು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಯಾರಿಗೆ ಏನೇ ಆದರೂ ಇವು ನಿಲ್ಲದೇ ನಡೆಯಬೇಕಾಗುತ್ತದೆ. ಶಿಕ್ಷಕರನ್ನು ಅನ್ಯಕೆಲಸಕ್ಕೆ ಬಳಸಿಕೊಳ್ಳಬಾರದು ಎಂಬ ನಿಯಮದಿಂದ ಈ ಎರಡು ಕಾರ್ಯಗಳನ್ನು ಹೊರಗಿಟ್ಟಿರುವುದು ಇವುಗಳ ಮಹತ್ವವನ್ನು ಸಾರುತ್ತದೆ. ಇಂತಹ ಕೆಲಸಗಳನ್ನು ಶಿಕ್ಷಕರನ್ನು ಬಿಟ್ಟು ಮಾಡುವುದೂ ವಾಸ್ತವದಲ್ಲಿ ಕಷ್ಟದ ಕೆಲಸವೇ ಸರಿ. ಹೀಗಿರುವಾಗ ಇಂತಹ ಕೆಲಸಗಳನ್ನು ಯಾರು ಯಾರಿಂದಲೋ ಮಾಡಿಸಲು ಸಾಧ್ಯವಿಲ್ಲ. ಇವು ನಾವೇ ಮಾಡಬೇಕಾದ ಬಹಳಷ್ಟು ಜವಾಬ್ದಾರಿಯ ಕೆಲಸಗಳು ಎಂದು ಸ್ವತಃ ಅರ್ಥಮಾಡಿಕೊಂಡು ಬಹಳಷ್ಟು ಸಂತೋಷದಿಂದ ಈ ಕೆಲಸದಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ ಎಷ್ಟಿದೆ ಎಂಬುದು ಇಲ್ಲಿ ಬಹಳ ಮುಖ್ಯವಾದ ಸಂಗತಿ. ಸಮಸ್ಯೆ ಇರುವವರನ್ನು  ಬಿಡಿ. ಸಮಸ್ಯೆ ಇಲ್ಲದವರಾದರೂ ಸಂತೋಷದಿಂದ ಇಂತಹ ಕೆಲಸಕ್ಕೆ ಮುಂದಾಗಿ ಬರುತ್ತಾರೆಯೇ? ಬರುತ್ತಾರೆ ಎನ್ನುವುದಾದರೆ ಅವರ ಸಂಖ್ಯೆ ಎಷ್ಟು? ನನ್ನ ಪ್ರಕಾರ ಬಹಳಷ್ಟು ಕಡಿಮೆ.

ಕಳೆದ ಮೂವತ್ತೈದು ವರ್ಷಗಳ ನನ್ನ ವೃತ್ತಿಜೀವನದಲ್ಲಿ ನನ್ನನ್ನು ಬಿಟ್ಟು ಒಂದೋ ಎರಡೋ ಚುನಾವಣೆ ನಡೆದಿರಬಹುದು ಅಷ್ಟೆ. ಇನ್ನು ಜನಗಣತಿ. ಒಬ್ಬ ಶಿಕ್ಷಕ ಅಥವಾ ನೌಕರನ ವೃತ್ತಿ ಜೀವನದಲ್ಲಿ ಸಾಮಾನ್ಯವಾಗಿ ಬರುವುದು ಎರಡೇ ಜನಗಣತಿ. ಒಂದಿಷ್ಟು ಪುಣ್ಯಮಾಡಿದವರಿಗೆ ಮೂರು ಸಿಗಬಹುದು ಅಷ್ಟೆ. ಯಾರಿಗಾದರೂ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕು ರಾಷ್ಟ್ರೀಯ ಜನಗಣತಿ ಕಾರ್ಯಗಳು ಸಿಕ್ಕರೆ ಅವರು ಬಾರೀ ಪುಣ್ಯ ಮಾಡಿದವರು ಅಂದುಕೊಳ್ಳಬೇಕು. ಏಕೆಂದರೆ ಹೀಗೆ ಒಬ್ಬ ನೌಕರನಿಗೆ ಅಥವಾ ನೌಕರಳಿಗೆ ನಾಲ್ಕು ಜನಗಣತಿ ಸಿಗಬೇಕು ಎಂದರೆ ಎರಡು ಶರತ್ತುಗಳು ಪೂರೈಕೆ ಆಗಬೇಕು. ಒಂದು: ಅವರು ಇಪ್ಪತ್ತು ವರ್ಷದೊಳಗೇ ನೌಕರಿಗೆ ಸೇರಿರಬೇಕು. ಇನ್ನೊಂದು: ಅವರು ಕೆಲಸಕ್ಕೆ ಸೇರಿದ ತಕ್ಷಣ ಒಂದು ಜನಗಣತಿ ಬರಬೇಕು. ಈ ಎರಡು ಶರತ್ತು ಪೂರೈಕೆ ಆದವರು ಮಾತ್ರ ನಾಲ್ಕು ಜನಗಣತಿ ಮಾಡುವ  ಭಾಗ್ಯ ಪಡೆದುಕೊಳ್ಳುತ್ತಾರೆ.

ಹೀಗಿದ್ದೂ ನಮ್ಮ ಶಿಕ್ಷಕರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯವನ್ನು ಸ್ವಇಚ್ಚೆಯಿಂದ ಮಾಡಲು ಮುಂದೆಬರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದೇ ಈ ಸಮಸ್ಯೆಯನ್ನು ಗಂಭೀರಗೊಳಿಸುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಇಂತಹ ಕಾರ್ಯಗಳಿಗೆ ನಿಯೋಜಿತರಾದ ಶಿಕ್ಷಕರಲ್ಲಿ ನಿಜವಾಗಿಯೂ ಸಮಸ್ಯೆ ಇರುವವರನ್ನು ಬಿಟ್ಟು ಈ ಕಾರ್ಯಗಳನ್ನು ಮಾಡುವುದು ಯಾವ ಅಧಿಕಾರಿಗೂ ವಾಸ್ತವದಲ್ಲಿ ಸಮಸ್ಯೆಯೇ ಅಲ್ಲ. ಏಕೆಂದರೆ ನಿಜವಾಗಿಯೂ ಸಮಸ್ಯೆ ಇರುವ ಶಿಕ್ಷಕರು ಅಥವಾ ನೌಕರರ ಸಂಖ್ಯೆ ಎಷ್ಟಿರುತ್ತದೆ. ಅದು ಏನೇ ಇದ್ದರೂ ಶೇಕಡಾ ಹತ್ತನ್ನು ಮೀರುವುದಿಲ್ಲ. ಆದರೂ ಇದು ಸಮಸ್ಯೆ ಆಗುವುದು ಏಕೆ ಎಂದರೆ ಸಮಸ್ಯೆ ಇಲ್ಲದವರೂ ಕೂಡ ಇಂತಹ ಕೆಲಸಗಳಿಂದ ಹೊರಗುಳಿಯಲು ಇಲ್ಲಸಲ್ಲದ ನೆಪಹೇಳಿ ತಪ್ಪಿಸಿಕೊಳ್ಳಲು  ಪ್ರಯತ್ನಿಸುವುದು.

ಒಂದು ಚುನಾವಣೆ ಅಥವಾ ಗಣತಿಯ ಸಂದರ್ಭದಲ್ಲಿ ಸಮಸ್ಯೆ ಇರುವವರ ಜೊತೆಗೆ ಸಮಸ್ಯೆ ಇರದವರೂ ಕೂಡ ದೊಡ್ಡ ಸಂಖ್ಯೆಯಲ್ಲಿ ವಿನಾಯತಿಗಾಗಿ ಕೋರಿಕೆ ಸಲ್ಲಿಸುವುದು ಸುಳ್ಳಲ್ಲ. ಒಂದೊಂದು ಸಲ ವಿನಾಯತಿ ಕೋರುವವರಲ್ಲಿ ಶೇಕಡಾ ೯೦ರಷ್ಟು ವಿನಾಯತಿಗೆ ಅರ್ಹರಲ್ಲದವರೇ ಇರುತ್ತಾರೆ.    ಹಿಂದೆ ನಾವೆಲ್ಲ ಕೆಲಸಕ್ಕೆ ಸೇರಿದ ಹೊಸತರಲ್ಲಿ ಶಿಕ್ಷಕರಿಗೆ ಬಹಳ ಕಡಿಮೆ ಸಂಬಳ ಇತ್ತು. ಆದರ್ಶದ ಕಾರಣಕ್ಕೆ ಅಲ್ಲದಿದ್ದರೂ ಕೊನೆಯ ಪಕ್ಷ ಎರಡೋ ಮೂರೋ ಸಾವಿರ ರೂಪಾಯಿ ಗೌರವಧನ ಸಿಕ್ಕರೆ ಯಾವುದಾದರೂ ಖರ್ಚಿಗೆ ಆಗುತ್ತದೆ ಎಂದಾದರೂ ಶಿಕ್ಷಕರು ಈ ಕಾರ್ಯಗಳಿಗೆ ಹೋಗುತ್ತಿದ್ದರು. ಈಗ ಶಿಕ್ಷಕರಿಗೆ ಅಂತಹ ದರ್ದೂ ಏನಿಲ್ಲ. ಯಾರಿಗೂ ತೀರಾ ಕಳಪೆ ಸಂಬಳ ಏನಿಲ್ಲ. ʼನಮ್ಮನ್ನು ಗಣತಿಯಿಂದ ಬಿಟ್ಟರೆ ನಾವೇ ಎರಡು ಸಾವಿರ ಕೊಡ್ತೀವಿʼ ಅನ್ನುವ ಮಟ್ಟದಲ್ಲಿ ಅವರಿದ್ದಾರೆ. ಹಾಗಾಗಿ ಗೌರವ ಧನದ ಆಸೆಯಿಂದ ಹೋಗುವವರು ಯಾರೂ ಇಲ್ಲ. ಆದರ್ಶದ ನೆಲೆಯಲ್ಲಿ ಹೋಗುವವರೂ ದಿನೇ ದಿನೇ ಕಡಿಮೆ ಆಗುತ್ತಿದ್ದಾರೆ.

ಈ ಕಾರಣದಿಂದ ಇಂತಹ ಕಾರ್ಯಗಳಿಗೆ ಮಾನವ ಸಂಪನ್ಮೂಲಕ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಇಂತಹ ಅಭಾವವನ್ನು ಸೃಷ್ಟಿಸುತ್ತಿರುವವರಲ್ಲಿ ಶಿಕ್ಷಕರೇ ದೊಡ್ಡ ಪ್ರಮಾಣದಲ್ಲಿದ್ದಾರೆ. ಹಾಗಾಗಿ ಸಮಸ್ಯೆಯನ್ನು ಈ ಕಡೆಯಿಂದಲೂ ನೋಡಬೇಕಾಗಿದೆ. ನೆರೆಹಾವಳಿಯಾದಾಗ ಸರ್ಕಾರ ಪರಿಹಾರ ಕೊಡುತ್ತದೆ ಎಂದು ಗೊತ್ತಾದ ತಕ್ಷಣ ಬೆಳೆ ಹಾಳದವರ ಜೊತೆಗೆ ಹಾಳಾಗದವರೂ ಒಂದಿಷ್ಟು ಫೋಟೋ ದಾಖಲೆ ಸೃಷ್ಟಿಸುವುದರಿಂದ ನೆರೆಹಾವಳಿಯಲ್ಲಿ ನೀರು ಹೊಲಕ್ಕೆ ನುಗ್ಗಿದಂತೆಯೇ ತಾಲ್ಲೂಕು ಕಛೇರಿಗೆ ಅರ್ಜಿಗಳ ನೆರೆಯೂ ಹರಿದು ಬರುತ್ತದೆ! ಆಗ ಯಾರಿಗೆ ಹಾನಿ ಆಗಿದೆ ಯಾರಿಗೆ ಆಗಿಲ್ಲ ಎಂಬುದನ್ನು ಪತ್ತೆಹಚ್ಚುವುದೇ ಒಂದು ದೊಡ್ಡ ಸಮಸ್ಯೆಯಾಗಿ ಬಂದ ಅರ್ಜಿಗಳಿಗೆಲ್ಲ ತಲಾ ಐದುನೂರು ರೂಪಾಯಿ ಕೊಟ್ಟು ವ್ಯವಸ್ಥೆ ಕೈತೊಳೆದುಕೊಳ್ಳುವುದಿದೆ. ಇಲ್ಲಿಯೂ ಹಾಗೇ ಆಗುತ್ತದೆ. ಸಮಸ್ಯೆ ಇರುವವರು ಇಲ್ಲದವರೂ ಎಲ್ಲರೂ ಅಳತೊಡಗಿದರೆ, ನಿಜವಾಗಿಯೂ ಅಳುವ ಸಂಕಟ ಯಾರಿಗೆ ಇದೆ ಎಂಬುದನ್ನು ಪತ್ತೆ ಹಚ್ಚುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿ, ʼಯಾರಿಗೂ ವಿನಾಯತಿ ಕೊಡಲ್ಲ, ಹೋಗಿʼ ಎಂದು ಅವರು ಹೇಳುವುದೂ ಇದೆ.


ಅಂದರೆ ಅಧಿಕಾರಿಗಳು ಹೀಗೆ ಸಾಮೂಹಿಕವಾಗಿ ವಿನಾಯತಿ ನಿರಾಕರಿಸುವುದು ಸರಿ ಎಂದು ಪರೋಕ್ಷವಾಗಿ ಹೇಳುವುದು ನನ್ನ ಮಾತಿನ ಉದ್ದೇಶವಲ್ಲ. ಅವರು ಅವನ್ನು ಪರಿಶೀಲಿಸಿ ಅರ್ಹರಿಗೆ ಅನುಮತಿ ನೀಡಬೇಕು ಅದು ಅವರ ಹೊಣೆಗಾರಿಕೆ. ಆದರೆ ಅಂತಹ ಕೃತಕ ಅಭಾವವನ್ನು ಸೃಷ್ಟಿಸುವ ಕೆಲಸಕ್ಕೆ ಶಿಕ್ಷಕರು ಕೈ ಹಾಕದಿದ್ದರೆ ಈ ಸಮಸ್ಯೆ ದೊಡ್ಡದಾಗಿ ಬೆಳೆಯುವುದೇ ಇಲ್ಲವಾದ್ದರಿಂದ ಇದಕ್ಕೆ ಶಿಕ್ಷಕರೂ ಸಹಕರಿಸಬೇಕು ಎಂಬುದಷ್ಟೆ ಇಲ್ಲಿ ಆಶಯ. ನಿಜವಾಗಿಯೂ ಸಮಸ್ಯೆ ಇರುವವರು ಮಾತ್ರ ವಿನಾಯತಿಗೆ ಅರ್ಜಿ ಸಲ್ಲಿಸಿ ಉಳಿದವರು ಇದೊಂದು ಗೌರವ ಮತ್ತು ಘನತೆಯ ಕೆಲಸ ಎಂದು ಸ್ವ ಇಚ್ಚೆಯಿಂದ ಈ ಕೆಲಸಗಳಿಗೆ ಮುಂದಾಗುವುದಾದರೆ ನನ್ನ ಪ್ರಕಾರ ಇದೊಂದು ಸಮಸ್ಯೆಯೇ ಆಗುವುದಿಲ್ಲ.

ಕೆ ಎಸ್‌ ನರಸಿಂಹ ಸ್ವಾಮಿ ಅವರ ಹಿಂದಿನ ಸಾಲಿನ ಹುಡುಗರು ಪದ್ಯದ ಈ ಸಾಲುಗಳನ್ನು ಗಮನಿಸಿ: ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗುವರಾರಲ್ಲಿ? / ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನ ಇನ್ನೆಲ್ಲಿ?. ಹಾಗೆಯೇ ಎಲ್ಲರೂ ವಿನಾಯತಿ ಕೊಡಿ ಎಂದು ಅರ್ಜಿ ಹಿಡಿದುಕೊಂಡು ಹಿಂತರೆ ಕೆಲಸ ಮಾಡಲು ಜನವೆಲ್ಲಿ?

*****

ರಾಜೇಂದ್ರ ಬುರಡಿಕಟ್ಟಿ

Sunday, May 24, 2026

No comments:

Post a Comment