ʻಅಂಕವ್ಯಸನʼದ ಅವಾಂತರಗಳು…. (ಭಾಗ-೧)
![]() |
(Note: Purpose of this article is do something to educate the erring ones and to prevent the system from derailing and not to hinder or humiliate anything or anyone.)
ಪರೀಕ್ಷೆಗಳು ಹತ್ತಿರ ಹತ್ತಿರ ಬಂದಹಾಗೆ ಬೇಸಗೆಯ ಬಿಸಿಲು ಹೊರಗಡೆಯಿಂದ ಹೊಡೆಯತೊಡಗಿದಂತೆ ಒಳಗಿಂದ ಪರೀಕ್ಷೆಯ ಭಯದ ಜ್ವರವೂ ಏರುತ್ತಾ ಹೋಗುತ್ತದೆ. ಅಂಕಗಳ ಹಿಂದೆ ಬಿದ್ದಿರುವ ನಮ್ಮ ಇಡೀ ವ್ಯವಸ್ಥೆ ಇಂದು ದಿನದಿನಕ್ಕೆ ಕಲಿಯುವವರು ಮತ್ತು ಕಲಿಸುವವರ ಮೇಲೆ ಅನಗತ್ಯವಾದ ಮತ್ತು ಅತಿಯಾದ ಒತ್ತಡಗಳನ್ನು ಸೃಷ್ಟಿಸುತ್ತಾ ಅವರ ಭವಿಷ್ಯವನ್ನು ಮಂಕಾಗಿಸುತ್ತಿರುವುದು ಆತಂಕದ ವಿಷಯ. ಒಂದುಕಡೆ ಮಕ್ಕಳ ಹಕ್ಕುಗಳ ಬಗ್ಗೆ ಪ್ರಚಾರ ಮಾಡುತ್ತಾ ಅವರ ಹಕ್ಕುಗಳನ್ನು ಗೌರವಿಸುವುದು ಇಡೀ ವ್ಯವಸ್ಥೆಯ ಭಾಗ ಎಂದು ಹೇಳುತ್ತಲೇ ಇನ್ನೊಂದು ಕಡೆಯಿಂದ ಅವರ ಅನೇಕ ಹಕ್ಕುಗಳನ್ನು ಅವರ ʻಭವಿಷ್ಯರೂಪಿಸುವʼ ನೆಪದಲ್ಲಿ ಧಮನಮಾಡುತ್ತಿರುವುದನ್ನು ಒಂದು ಆತಂಕಕಾರಿ ಬೆಳವಣಿಗೆಯಾಗಿದೆ.
ಶಿಕ್ಷಣದ ಮೂಲ ಉದ್ದೇಶವೇ ಮಕ್ಕಳ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆ ಎಂಬುದನ್ನು ಎಲ್ಲ ಶಿಕ್ಷಕರಿಗೂ ಅವರು ಪಡೆಯುವ ಶಿಕ್ಷಕ ತರಬೇತಿಯಲ್ಲಿ ಮನನ ಮಾಡಿಸಲಾಗುತ್ತದೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆಯುವುದೇ ಶಿಕ್ಷಣದ ಉದ್ದೇಶ ಅಥವಾ ಗುರಿ ಎಂದು ಯಾವ ಶಿಕ್ಷಣ ತಜ್ಞರೂ ಯಾವ ಪುಸ್ತಕದಲ್ಲಿಯೂ ಬರೆದದ್ದನ್ನಾಗಲೀ ಯಾವ ಮೇಷ್ಟ್ರೂ ಯಾವ ತರಗತಿಯಲ್ಲೂ ಶಿಕ್ಷಕ ತರಬೇತಿ ಪಡೆಯುವಾಗ ಹೇಳಿದ್ದಾಗಲೀ ನಾನಂತೂ ಕೇಳಿಲ್ಲ. ಹಾಗಿದ್ದ ಮೇಲೆ ಅಂಕಗಳನ್ನು ಅತಿಹೆಚ್ಚು ಪಡೆಯುವುದೇ ಶಿಕ್ಷಣದ ಉದ್ದೇಶ ಎಂಬ ಹಂತಕ್ಕೆ ವ್ಯವಸ್ಥೆಯನ್ನು ತಲುಪಿಸಿದವರು ಯಾರು? ಒಬ್ಬರು ಇನ್ನೊಬ್ಬರ ಕಡೆ ಬೆರಳು ತೋರಿಸುವುದು ಸುಲಭ. ಆದರೆ ನಮ್ಮೆಲ್ಲರ ಪಾಲೂ ಅಷ್ಟಿಷ್ಟು ಇರುವುದನ್ನು ತಳ್ಳಿಹಾಕಲಾದೀತೆ?
ಈ ಅತಿಹೆಚ್ಚು ಅಂಕಪಡೆಯುವ ʼವ್ಯಸನʼ ಒಂದು ಜಾಡ್ಯದಂತೆ ಹರಡಿಕೊಂಡು ಏನೆಲ್ಲ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಕಡೆ ನಮ್ಮ ಗಮನ ಸರಿಯಾಗಿ ಹರಿದಂತಿಲ್ಲ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಬಹುದು ʻನನ್ನ ವಿಷಯ, ನಮ್ಮ ಶಾಲೆ, ನಮ್ಮ ತಾಲ್ಲೂಕು, ನಮ್ಮ ಜಿಲ್ಲೆ ಎಲ್ಲರಿಗಿಂತ ಮೇಲಿರಬೇಕುʼ ಎಂಬ ʻದುರಾಸೆʼ ನಮ್ಮ ಶಿಕ್ಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ತಲೆಯಲ್ಲಿ ತುಂಬಿಕೊಂಡಿರುವುದು. ಯಾವುದೇ ಒಬ್ಬ ಶಿಕ್ಷಕ ತಾನು ಬೋಧಿಸುವ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಬರಬೇಕು ಎಂದು ಆಸೆ ಪಡುವುದು, ಒಬ್ಬ ಅಧಿಕಾರಿ ತನ್ನ ಶಾಲೆಗೋ ತನ್ನ ತಾಲ್ಲೂಕಿಗೋ ಜಿಲ್ಲೆಗೋ ಒಳ್ಳೆಯ ಫಲಿತಾಂಶ ಬರಬೇಕು ಎಂದು ಆಸೆಪಡುವುದು ಖಂಡಿತಾ ತಪ್ಪಲ್ಲ. ಆದರೆ ಈ ಆಸೆಯು ʼವ್ಯಸನʼದ ಹಂತ ತಲುಪಿದರೆ ಅದು ಉಂಟುಮಾಡುವ ಪರಿಣಾಮ ಒಳ್ಳೆಯದಕ್ಕಿಂತ ಕೆಟ್ಟದ್ದೇ ಇರುತ್ತದೆ. ವಿಷಯ ಯಾವುದಾದರೂ ಇರಲಿ, ಆಸೆ ಕೆಟ್ಟದ್ದಲ್ಲ. ಏಕೆಂದರೆ ಆಸೆಯು ಮಾಡಬೇಕಾದ ಕೆಲಸವನ್ನು ಇನ್ನಷ್ಟು ಉತ್ಸಾಹದಿಂದ ಮಾಡಲು ನಮಗೆ ಪ್ರೇರಣೆ ನೀಡುತ್ತದೆ.
ಆದರೆ ಈ ಆಸೆ ಬೆಳೆಯುತ್ತಾ ʼಅತಿಯಾಸೆʼಯಾದಾಗ ಅದು ಮಾಡಬೇಕಾದ ಕೆಲಸಗಳ ಜೊತೆಗೆ ಒಂದಿಷ್ಟು ಮಾಡಬಾರದ ಕೆಲಸಗಳನ್ನೂ ಮಾಡಲು ನಮ್ಮ ಮನಸ್ಸನ್ನು ತಯಾರುಮಾಡುತ್ತದೆ. ಈ ಅತಿಯಾಸೆ ಇನ್ನಷ್ಟು ಬೆಳೆದು ʼದುರಾಸೆʼಯಾದಾಗ ಅದು ಮಾಡಬೇಕಾದ ಕೆಲಸಗಳನ್ನು ನಿರ್ಲಕ್ಷಿಸಿ ಮಾಡಬಾರದ ಕೆಲಸಗಳನ್ನು ಮಾಡಲಿಕ್ಕಾಗಿ ಅಡ್ಡದಾರಿ ಹಿಡಿಯಲು ಧೈರ್ಯಕೊಟ್ಟು ನಮ್ಮಿಂದ ಕೆಟ್ಟ ಕೆಲಸಗಳನ್ನು ಅಳುಕಿಲ್ಲದಂತೆ ಮಾಡಿಸತೊಡಗುತ್ತದೆ. ಇವೆಲ್ಲವೂ ಅಂತಿಮವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆ ಎಳೆಯುವ ಕೆಲಸಗಳೇ ಆಗುತ್ತವೆ! ಮಕ್ಕಳಿಗೆ ಕಲಿಸುವ ವಿಷಯದಲ್ಲಿ ಶಿಕ್ಷಕರನ್ನು ಬಳಸಿಕೊಂಡು ಇದೇ ಬಗೆಯ ಕೆಲಸಕ್ಕೆ ನಾವು ಮುಂದಾಗುತ್ತಿದ್ದೇವೆಯೇ ಎಂಬುದನ್ನು ಸಂಬಂಧಪಟ್ಟವರೆಲ್ಲರೂ ಆತ್ಮಾವಲೋಕನ (ಆತ್ಮ ಇದ್ದವರು) ಮಾಡಿಕೊಳ್ಳುವ ಅತಿ ತುರ್ತು ಇಂದು ಬಂದಿದೆ.
ಸಖಿಯ ಅಲಂಕಾರ
ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಶೇಕಡಾ ನೂರು ಫಲಿತಾಂಶವನ್ನು ಪಡೆದ ಶಾಲೆಗಳನ್ನು ಗೌರವಿಸುವ ಕೆಲಸ ಆರಂಭವಾಗಿ ಅದು ಇಂದಿಗೂ ಮುಂದುವರೆಯುತ್ತಿದೆ. ಇದು ಒಂದು ಉತ್ತಮ ಕಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಪ್ರತಿಭೆಗಳನ್ನು ಗೌರವಿಸುವುದು ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲೇಬೇಕಾದ ಒಂದು ಕೆಲಸ. ಆದರೆ ಈ ಫಲಿತಾಂಶ ಪಡೆದವರು ʻಅದನ್ನು ಹೇಗೆ ಪಡೆದರುʼ ಎಂಬುದನ್ನು ಗೌರವ ಕೊಡುವಾಗ ಪರಿಶೀಲಿಸಿ ನೋಡಿ ಕೊಡುವ ಕ್ರಮವೇನೂ ಇಲ್ಲ! ಹೀಗಾಗಿ ಇದು ಬರುಬರುತ್ತಾ ಈ ಗೌರವವನ್ನು ಪಡೆಯಲು ನಮ್ಮ ಶಿಕ್ಷಕರು ಅಡ್ಡದಾರಿಯನ್ನು ಹಿಡಿಯಲೂ ಪ್ರೇರೇಪಿಸಿದ್ದೂ ಇದೆ. ಎಲ್ಲರೂ ಅಲ್ಲದಿದ್ದರೂ ಕೆಲವು ಶಾಲೆಗಳ ಶಿಕ್ಷಕರಾದರೂ ಏನಾದರೂ ಮಾಡಿ (ʻಏನಾದರೂ ಮಾಡಿʼ ಎಂಬುದಕ್ಕೆ ಏನೆಲ್ಲ ಅರ್ಥಗಳು ಬರುತ್ತವೆ ಎಂದು ಬಿಡಿಸಿ ಹೇಳಬೇಕಾಗಿಲ್ಲ) ʻಶೇಕಡಾ ನೂರುʼ ಫಲಿತಾಂಶ ಪಡೆಯಲು ಪಟ್ಟು ಹಿಡಿದಿರುವುದು ಸುಳ್ಳಲ್ಲ; ಅದಕ್ಕಾಗಿ ಅವರು ನೈತಿಕತೆ, ನಾಚಿಕೆ ಮಾನ ಮರ್ಯಾದೆಗಳನ್ನು ತ್ಯಾಗಮಾಡಲು ತಯಾರಿರುವುದೂ ಗುಟ್ಟಲ್ಲ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಈ ಶೇಕಡಾ ನೂರು ಫಲಿತಾಂಶ ಪಡೆಯುವುದು ಕೂಡ ಒಂದು ರೀತಿಯಲ್ಲಿ ʻಮಾದಕ ವ್ಯಸನʼ (Drug Addiction) ಇದ್ದಹಾಗೆ. ಒಂದು ಸಲ ಅದಕ್ಕೆ ಅಡಿಕ್ಟ್ ಆದರೆ ಅದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಅದಕ್ಕೆ ದಾಸರಾಗುವುದು ಯಾರಿಗೂ ಒಳ್ಳೆಯದಲ್ಲ.
ಒಂದು ಸಲ ಇದಕ್ಕೆ ದಾಸರಾದರೆ ಅದು ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ನಿಮಗೆ ತಮಾಸೆಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ಒಂದು ಶಾಲೆಯಲ್ಲಿ ಒಂದು ವರ್ಷ ಸುಮಾರು ನೂರಿಪ್ಪತ್ತು ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವವರಿದ್ದರು. ಅವರಲ್ಲಿ ಸಹಜವಾಗಿಯೇ ಎಲ್ಲ ಹಂತದ ಮಕ್ಕಳೂ ಇದ್ದರು. ಆದರ ಹಿಂದಿನ ವರ್ಷ ಆ ಶಾಲೆಗೆ ಶೇಕಡಾ ನೂರು ಫಲಿತಾಂಶ ಬಂದಿತ್ತು. ಈ ವರ್ಷವೂ ಅದನ್ನು ಪಡೆಯಲೇ ಬೇಕು ಎಂದು ಅಲ್ಲಿನ ಮುಖ್ಯೋಪಾಧ್ಯಾಯರೂ ಶಿಕ್ಷಕರೂ ಅದನ್ನು ಮತ್ತೆ ಪಡೆಯಲು ಮಾಡಬೇಕಾದ ಕೆಲಸ ಏನನ್ನು ಮಾಡಬೇಕು ಮತ್ತು ಮಾಡಬಾರದ ಕೆಲಸ ಏನು ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರು. ಏಕೆಂದರೆ ಈ ವರ್ಷ ಶೇಕಡಾ ನೂರರ ಫಲಿತಾಂಶವನ್ನು ಪಡೆಯಲು ನಾಲ್ಕು ಮಕ್ಕಳು ಅಡ್ಡಿಯಾಗಿದ್ದರು. ಅವರು ದೈಹಿಕ ನ್ಯೂನತೆಯುಳ್ಳ ಮಕ್ಕಳಾಗಿದ್ದರಿಂದ ಅವರ ಉತ್ತೀರ್ಣತೆ ಅಷ್ಟು ಸುಲಭವಿರಲಿಲ್ಲ. ಹೀಗೆ ದೈಹಿಕ ನ್ಯೂನತೆಯುಳ್ಳ ಮಕ್ಕಳು ಬೌದ್ಧಿಕವಾಗಿ ಪರೀಕ್ಷೆ ಎದುರಿಸಲು ಸಮರ್ಥರಿದ್ದೂ ತಮ್ಮ ದೈಹಿಕ ನ್ಯೂನತೆಯ ಕಾರಣದಿಂದ ಅನ್ಯಾಯಕ್ಕೊಳಗಾಗಬಾರದೆಂದು ಅವರಿಗೆ ಪರೀಕ್ಷೆ ಬರೆಯಲು ಸಹಾಯಕರನ್ನು ಕೊಡುವ ಕ್ರಮವೊಂದು ಇದೆ. ಈ ಮಕ್ಕಳಿಗೂ ಅದನ್ನು ವ್ಯವಸ್ಥೆ ಮಾಡಿದರು.
ಹೀಗೆ ಸಹಾಯಕರನ್ನು ಕೊಡುವಾಗ ಕೆಲವು ನಿಯಮಗಳಿರುತ್ತವೆ. ಎಸ್ ಎಸ್ ಎಲ್ ಸಿ ಗಿಂತ ಹಿಂದಿನ ತರಗತಿಯ ಮಕ್ಕಳಾಗಿರಬೇಕು… ಇತ್ಯಾದಿ. ಇಲ್ಲಿನ ತಾತ್ವಿಕತೆ ಏನೆಂದರೆ ಸಹಾಯಕರಾಗಿರುವ ವಿದ್ಯಾರ್ಥಿ ತನ್ನ ಬುದ್ಧಿ ಅಥವಾ ಜ್ಞಾನವನ್ನು ಬಳಸಬಾರದು. ಅದು ಅಭ್ಯರ್ಥಿಯದ್ದೇ ಆಗಿರಬೇಕು. ಉದಾಹರಣೆಗೆ ಅಭ್ಯರ್ಥಿಗೆ ಕೈ ಬರೆಯಲು ಬರುತ್ತಿಲ್ಲ ಎಂದರೆ ಅವರಿಗೆ ತಕ್ಷಣ ಬೇರೆ ಕೈ ಹಾಕಲು ಆಗುವುದಿಲ್ಲ. ಕಣ್ಣು ಸರಿಯಾಗಿ ಕಾಣದಿದ್ದರೆ ಕಣ್ಣು ಹಾಕಲು ಆಗುವುದಿಲ್ಲ. ಈ ಸಹಾಯಕರು ಅವರಿಗೆ ಕಣ್ಣಾಗಿ ಅಥವಾ ಕೈ ಆಗಿ ಒಂದು ರೀತಿ ʼಉಪಕರಣದಂತೆʼ ಬಳಕೆಯಾಗಬೇಕಾಗುತ್ತದೆ. ಆದರೆ ಈ ಸೌಲಭ್ಯವನ್ನು ಬಳಸಿಕೊಂಡ (ಹಾಗನ್ನುವುದಕ್ಕಿಂತ ದುರುಪಯೋಗ ಮಾಡಿಕೊಂಡ) ಆ ಶಾಲೆಯ ಶಿಕ್ಷಕರು ಮೂಲ ಅಭ್ಯರ್ಥಿಗಳನ್ನು ಬಿಟ್ಟು ಈ ಸಹಾಯಕರಿಗೇ ಪಾಠಮಾಡುವುದು ಅವರನ್ನೇ ಪರೀಕ್ಷೆಗೆ ತಯಾರು ಮಾಡುವುದು ಇತ್ಯಾದಿ ಮಾಡತೊಡಗಿದರು. ಇದು ಒಂದು ರೀತಿಯಲ್ಲಿ ಮದುಮಗಳನ್ನು ಬಿಟ್ಟು ಅವಳ ಜೊತೆಗಿರುವ ಅವಳ ಸಖಿಗೆ ಅಲಂಕಾರ ಮಾಡಿದಂತೆ! ನಮ್ಮ ಅಲಂಕಾರ ಏನಿದ್ದರೂ ಮದುಮಗಳಿಗೆ ಹೆಚ್ಚಿರಬೇಕೇ ಹೊರತು ಅವಳ ಸಖಿಗಲ್ಲ. ಮದುಮಗಳಿಗಿಂತ ಸಖಿಗೆ ಹೆಚ್ಚು ಅಲಂಕಾರ ಮಾಡುವುದು ವಾಸ್ತವದಲ್ಲಿ ಮದುಮಗಳಿಗೆ ʻವರʼ ಆಗುವ ಬದಲು ʼಶಾಪʼ ಆಗುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ ಮದುವೆ ಮಂಟಪದಲ್ಲಿ ವಧುವಿಗಿಂತ ಈ ಸಖಿಯೇ ಹೆಚ್ಚು ಚೆಂದ ಕಾಣುವುದರಿಂದ ಮದುಮಗ ಮೂಲವಧುವನ್ನು ಬಿಟ್ಟು ಈ ಸಖಿಗೇ ಮನಸೋತು ಅವಳಿಗೇ ತಾಳಿಕಟ್ಟಲು ಹಟಮಾಡಬಹುದು; ಕಟ್ಟಿಯೂ ಬಿಡಬಹುದು!
ಮೃಷ್ಟಾನ್ನ ಮತ್ತು ಗೋಮೂತ್ರ
ಈ ನೂರರ ಫಲಿತಾಂಶದ ಹುಚ್ಚಿಗೆ ಬಲಿಯಾದವರು ನಾನು ಮೊದಲೇ ಹೇಳಿದ ಹಾಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಾಡಬಾರದ ಅನೇಕ ಕೆಲಸಗಳಿಗೆ ಕೈಹಾಕುತ್ತಾರೆ. ಅವುಗಳಲ್ಲಿ ಆಂತರಿಕ ಅಂಕಗಳ ನೀಡಿಕೆಯೂ ಒಂದು. ಈ ಮೊದಲು ಈ ಆಂತರಿಕ ಅಂಕಗಳ ಬಗ್ಗೆಯೇ ಬರೆದ ನನ್ನ ಲೇಖನವೊಂದನ್ನು ಓದಿದ ಅನೇಕ ಶಿಕ್ಷಕರು ಈ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಭಾವಿತರಾಗಿ ʻತಮ್ಮತನʼವನ್ನು ಉಳಿಸಿಕೊಳ್ಳುವ ಧೈರ್ಯಮಾಡಿದ್ದಾರೆ. ಆ ವಿಷಯವನ್ನು ಆ ಲೇಖನದಲ್ಲಿ ವಿವರವಾಗಿ ಚರ್ಚಿಸಿರುವುದರಿಂದ ಇಲ್ಲಿ ಅದನ್ನು ಪುನರಾವರ್ತನೆ ಮಾಡದೆ ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಚರ್ಚೆಗೆ ಎತ್ತಿಕೊಳ್ಳುತ್ತೇನೆ.
ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮಂಡಳಿಯು ನಡೆಸುವ ಬಾಹ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಜೊತೆಗೆ ತಮ್ಮ ವಿಷಯ ಶಿಕ್ಷಕರಿಂದ ಪ್ರಥಮ ಭಾಷೆಗೆ ಇಪ್ಪತ್ತೈದು ಮತ್ತು ಇತರೆ ಭಾಷೆ ಮತ್ತು ವಿಷಯಗಳಿಗೆ ಇಪ್ಪತ್ತು ಗರಿಷ್ಠ ಅಂಕಗಳನ್ನು ಪಡೆಯುವ ಅವಕಾಶವಿದೆ. ಈ ಆಂತರಿಕ ಅಂಕಗಳನ್ನು ಇಡುವ ಉದ್ದೇಶವೇನೆಂದರೆ ಕೆಲವು ಸಂಗತಿಗಳನ್ನು ಬಾಹ್ಯ ಪರೀಕ್ಷೆಯ ಮೂಲಕ ಪರೀಕ್ಷಿಸಲು ಸಾಧ್ಯವೇ ಇಲ್ಲ. ಅಂತಹ ವಿಷಯಗಳಲ್ಲಿ ಮಕ್ಕಳ ಕೌಶಲ, ಜ್ಞಾನಗಳನ್ನು ಶಿಕ್ಷಕರು ತಮ್ಮ ಹಂತದಲ್ಲಿ ಒರೆಗೆ ಹಚ್ಚಿ ಪರೀಕ್ಷಿಸಿ ಈ ಅಂಕಗಳನ್ನು ನ್ಯಾಯಯುತವಾಗಿ ಮಕ್ಕಳಿಗೆ ನೀಡಬೇಕು ಎಂಬುದು. ಉದಾಹರಣೆಗೆ ಒಂದು ಮಗು ಒಂದು ಪದ್ಯವನ್ನು ಬಹಳಷ್ಟು ಚೆನ್ನಾಗಿ ಒಂದಿಷ್ಟೂ ತಪ್ಪಿಲ್ಲದಂತೆ ಸೊಗಸಾಗಿ ಓದುತ್ತದೆ ಅಥವಾ ಹಾಡುತ್ತದೆ ಎಂದಿಟ್ಟುಕೊಳ್ಳಿ. ಆದರೆ ಈ ಮಗುವಿಗೆ ಬರೆಯುವ ಕೌಶಲವಿಲ್ಲ. ಹಾಗಾಗಿ ತನಗೆ ಸರಿಯಾಗಿ ಬರುವ ಪದ್ಯವನ್ನೂ ಲಿಖಿತ ಪರೀಕ್ಷೆಯಲ್ಲಿ ಸರಿಯಾಗಿ ಬರೆಯಲು ಬಾರದ ಕಾರಣಕ್ಕೆ ಪೂರ್ಣ ಅಂಕಗಳನ್ನು ಪಡೆಯಲು ಆಗುವುದಿಲ್ಲ. ಇದರಿಂದ ಆ ಮಗುವಿಗೆ ಆಗುವ ಅನ್ಯಾಯವನ್ನು ಶಿಕ್ಷಕರು ಇಲ್ಲಿ ಪದ್ಯ ಹೇಳಿಸಿ ಅಂಕಕೊಟ್ಟು ಸರಿಪಡಿಸಲು ಸಾಧ್ಯವಿದೆ. ಹೀಗೆಯೇ ಇತರ ವಿಷಯಗಳಲ್ಲೂ ಕೆಲವು ಸಂಗತಿಗಳು ಇದ್ದೇ ಇರುತ್ತವೆ. ಇವುಗಳನ್ನು ಶಿಕ್ಷಕರು ನ್ಯಾಯಯುತವಾಗಿ ಪರೀಕ್ಷಿಸಿ ಮೌಲ್ಯಮಾಪನಮಾಡಿ ಮಗುವಿಗೆ ಅಂಕಗಳನ್ನು ನೀಡಬೇಕಾಗುತ್ತದೆ.
ಮೊದಲು ಈ ಆಂತರಿಕ ಅಂಕಗಳನ್ನು ಎಷ್ಟು ಪಡೆದುಕೊಂಡರೂ ಬಾಹ್ಯ ಪರೀಕ್ಷೆಯಲ್ಲಿ ಪಡೆಯಬೇಕಾದ ಕನಿಷ್ಠ ಅಂಕಗಳನ್ನು ನಿಗಧಿಪಡಿಸಲಾಗಿತ್ತು. ಆದರೆ ಈ ವರ್ಷ ಇದನ್ನು ತುಸು ಮಾರ್ಪಡಿಸಿ ಆಂತರಿಕ ಮತ್ತು ಬಾಹ್ಯಗಳ ಭೇದ ತಗೆದು ಒಟ್ಟಾರೆ ಮಗು ಇಷ್ಟು ಅಂಕಗಳಿಸಿದರೆ ಸಾಕು ಎಂದು ಮಾಡಲಾಯಿತು. ಜೊತೆಗೆ ಕನಿಷ್ಠ ತೇರ್ಗಡೆಗೆ ಇದ್ದ ಅಂಕಗಳನ್ನೂ ತುಸು ಇಳಿಸಲಾಯಿತು. ಈ ಎಲ್ಲ ಕ್ರಮಗಳೂ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರ ಮೇಲಿನ ಗೌರವ ಹೆಚ್ಚಿಸುವ ಕೆಲಸಗಳೇ ಎಂದು ನನಗಾದರೂ ಅನ್ನಿಸುತ್ತದೆ. ಏಕೆಂದರೆ ಶಿಕ್ಷಕರು ಮಂಡಳಿ ನಡೆಸುವ ಬಾಹ್ಯ ಮೌಲ್ಯಮಾಪನವನ್ನು ಹೇಗೆ ಜವಾಬ್ದಾರಿಯಿಂದ ಮಾಡಬೇಕೋ ಹಾಗೆಯೇ ಮತ್ತು ಅಷ್ಟೇ ಜವಾಬ್ದಾರಿಯಿಂದ ನಿಷ್ಪಕ್ಷಪಾತವಾಗಿ ಆಂತರಿಕ ಮೌಲ್ಯಮಾಪನವನ್ನೂ ಮಾಡುತ್ತಾರೆ ಎಂದು ವ್ಯವಸ್ಥೆ ನಂಬಿದಂತೆ ಆಯಿತು.
ಆದರೆ ವ್ಯವಸ್ಥೆ ತಮ್ಮ ಮೇಲಿಟ್ಟಿದ್ದ ಈ ನಂಬಿಕೆಯನ್ನು ಎಷ್ಟು ಜನ ಶಿಕ್ಷಕರು ಉಳಿಸಿಕೊಂಡರು? ಮತ್ತು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುತ್ತಾರೆ? ಎಷ್ಟು ಜನ ಈ ಗುರುತರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆಯಬೇಕಾದರೆ ಕನಿಷ್ಟ ಈ ವರ್ಷದ ಫಲಿತಾಂಶ ಪ್ರಕಟವಾಗುವವರೆಗೂ ಕಾಯಬೇಕೇನೋ. ಫಲಿತಾಂಶ ಪ್ರಕಟವಾದಾಗ ಮಕ್ಕಳ ಅಂಕಪಟ್ಟಿಗಳನ್ನು ನೋಡಿದಾಗ ಬಹಳ ವಿಚಿತ್ರವಾದರೂ ಸತ್ಯವೆಂಬ ಸಂಗತಿಗಳು ಗೋಚರಿಸಬಹುದು. ಅಂಕಪಟ್ಟಿಯಲ್ಲಿ ತಾಯಿಗಿಂತ ಮಗಳೇ ದೊಡ್ಡವಳಾಗಿ ಕಾಣುವ ಅಂದರೆ ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೋ ಎಂಬತ್ತಕ್ಕೋ ತಗೆಯುವ ಅಂಕಗಳಿಗಿಂತ ಆಂತರಿಕವಾದ ಇಪ್ಪತ್ತೈದಕ್ಕೋ ಇಪ್ಪತ್ತಕ್ಕೋ ತೆಗೆಯುವ ಅಂಕಗಳೇ ಹೆಚ್ಚಾಗಿರುವ ಲಕ್ಷಾಂತರ ಉದಾಹರಣೆಗಳು ನಮಗೆ ಸಿಗಬಹುದು. ಅದು ಮಕ್ಕಳ ಮೌಲ್ಯಮಾಪನ ಆಗದೆ ಶಿಕ್ಷಕರ ಮೌಲ್ಯಮಾಪನವೇ ಆಗಿಬಿಡಬಹುದು!
ಹೀಗೆ ಬೇಕಾಬಿಟ್ಟಿ ಅಂಕಕೊಡುವ ಶಿಕ್ಷಕರಲ್ಲಿ ನಾನು ಕಂಡಂತೆ ಎರಡು ಬಗೆಯ ಶಿಕ್ಷಕರಿರುತ್ತಾರೆ. ಮೊದಲನೆಯವರು ಸ್ವಭಾವತಃ ಬೇಜವಾಬ್ದಾರಿಯವರು. ಸರಿಯಾಗಿ ಪಾಠಮಾಡದೇ ಇರುವುದು, ಕಾಲಕಾಲಕ್ಕೆ ಮಕ್ಕಳಿಂದ ನಿಯೋಜಿತ ಕಾರ್ಯಮಾಡಿಸದೇ ಇರುವುದು, ಕಿರುಪರೀಕ್ಷೆಗಳನ್ನು ಸರಿಯಾಗಿ ಮಾಡದೇ ಇರುವುದು ಅಥವಾ ಮಾಡಿದರೂ ಸರಿಯಾಗಿ ಮೌಲ್ಯಮಾಪನ ಮಾಡದೆ ಇರುವುದು ಇವರ ಸಾಮಾನ್ಯ ಲಕ್ಷಣಗಳು. ಇವರ ಸಂಖ್ಯೆ ಕಡಿಮೆ ಇರಬಹುದು; ಆದರೆ ಇಲ್ಲವೇ ಇಲ್ಲ ಎನ್ನಲು ಸಾಧ್ಯ ಇದೆಯೇ? ಇವರು ವರ್ಷಪೂರ್ತಿ ಉಂಡಾಡಿ ಗುಂಡಾಡಿಗಳಾಗಿರುವಂಥವರು. ಇಂಥವರ ಬಗ್ಗೆ ನಮ್ಮ ವ್ಯವಸ್ಥೆಯೂ, “ಅವರು ಶಾಲೆಗೆ ಬರುವುದೇ ಹೆಚ್ಚು, ಒಂದಿಷ್ಟು ಅಡ್ಜೆಸ್ಟ್ ಮಾಡಿಕೊಂಡು ಹೋಗಿ” ಎಂದು ಉಳಿದವರಿಗೆ ಹೇಳುವ ಮೂಲಕ ಅವರಿಗೆ ʼವಿಶೇಷ ರಿಯಾಯತಿʼ ಕೊಟ್ಟಿರುವುದರಿಂದ ಅವರ ಬಗ್ಗೆ ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ.
ಇನ್ನೊಂದು ಬಗೆಯವರು ಬಹಳ ಒಳ್ಳೆಯ ಶಿಕ್ಷಕರು. ಇವರ ಸಂಖ್ಯೆಯೂ ದೊಡ್ಡದು. ಅವರು ಒಳ್ಳೆಯವರಿದ್ದೂ ಹೀಗೆ ಏಕೆ ಬೇಕಾಬಿಟ್ಟಿ ಅಂಕಕೊಟ್ಟು ಕಳಿಸುತ್ತಾರೆ ಎಂದು ಯಾರಾದರೂ ಕೇಳಬಹುದು? ಹೌದು ಇವರು ಮೊದಲಿನವರಂತೆ ಬೇಜವಾಬ್ದಾರಿ ಶಿಕ್ಷಕರಲ್ಲ. ವರ್ಷಪೂರ್ತಿ ಕಷ್ಟಪಟ್ಟು ಪಾಠ ಮಾಡುವವರು, ಮಕ್ಕಳಿಂದ ನಿಯೋಜಿತ ಕಾರ್ಯ, ಕಿರುಪರೀಕ್ಷೆ ಎಲ್ಲವನ್ನು ಮಾಡಿಸಿ ಅವನ್ನು ಶ್ರದ್ಧೆಯಿಂದ ಶಾಲೆಯಲ್ಲಿ ಆಗದಿದ್ದರೆ ಮನೆಗೆ ಹೊತ್ತುಕೊಂಡು ಹೋಗಿ ಮೌಲ್ಯಮಾಪನ ಮಾಡುವವರು. ಇಂಥವರೂ ಕೂಡ ವರ್ಷದ ಕೊನೆಗೆ ತಾವು ವರ್ಷವಿಡೀ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೂ ತಾವು ವರ್ಷದ ಕೊನೆಯಲ್ಲಿ ಕೊಡುವ ಅಂಕಕ್ಕೂ ಸಂಬಂಧವಿಲ್ಲದಂತೆ ಬೇಕಾಬಿಟ್ಟಿಯಾಗಿ ಅಂಕಗಳನ್ನು ಎಲ್ಲರಿಗೂ ಕೊಟ್ಟುಬಿಡುವುದುಂಟು! ಹೀಗೆ ಬೇಧಭಾವ ಮಾಡದೆ ಸಮಾನವಾಗಿ ಹಂಚಲು ಅಂಕಗಳು ಸಾಮೂಹಿಕ ಸತ್ಯನಾರಾಯಣ ವ್ರತದ ಪ್ರಸಾದ ಅಲ್ಲ ಎಂಬುದನ್ನು ಇಂಥವರೂ ಆ ಕ್ಷಣ ಮರೆತುಬಿಡುತ್ತಾರೆ. ಯಾರೋ ಅದುವರೆಗೂ ಮೃಷ್ಟಾನ್ನ ಭೋಜನವನ್ನು ಸಂತೋಷದಿಂದ ಊಟಮಾಡಿ ಕೊನೆಯಲ್ಲಿ ಗೋಮೂತ್ರದಲ್ಲಿ ಬಾಯಿ ತೊಳೆದುಕೊಂಡರಂತೆ! ಹಾಗಿರುತ್ತದೆ ಇಂತಹ ಶಿಕ್ಷಕರ ಸ್ಥಿತಿ.
ಒತ್ತಡಮಾತ್ರ ಕಾರಣವೇ?
ಶಿಕ್ಷಕರು ಹೀಗೆ ತಮಗಿರುವ ಗುರುತರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ಬೇಕಾಬಿಟ್ಟಿ ಅಂಕಗಳನ್ನು ಮಕ್ಕಳಿಗೆ ನೀಡುವ ಪರಿಪಾಠವು ಮುಂದೆ ಏನೆಲ್ಲ ಅನಾಹುತಗಳನ್ನು ಉಂಟುಮಾಡಬಹುದು ಎಂಬುದರ ಚರ್ಚೆಗೆ ತೊಡಗುವ ಮುನ್ನ ಇದರ ಬಗ್ಗೆ ಶಿಕ್ಷಕರ ಅಭಿಪ್ರಾಯ ಏನು ಎಂಬುದನ್ನೂ ಇಲ್ಲಿ ದಾಖಲಿಸಬೇಕು. ಈ ಬಗ್ಗೆ ನಾನು ಅನೇಕ ಶಿಕ್ಷಕರನ್ನು ಮಾತನಾಡಿಸಿದಾಗ ಅವರಲ್ಲಿ ಬಹುತೇಕರು ಕೊಡುವ ಅಭಿಪ್ರಾಯವೆಂದರೆ “ಈ ರೀತಿ ನಾವು ಮಾಡುವುದು ನಮ್ಮ ಸ್ವಂತ ಇಚ್ಚೆಯಿಂದ ಅಲ್ಲ; ಮೇಲಿನವರ ಒತ್ತಡದಿಂದ.” ಎಂಬುದು. ನಾನು ಗಮನಿಸಿದಂತೆ ಶಿಕ್ಷಕರು ಹೇಳುವ ಈ ಮಾತು ಸುಳ್ಳಲ್ಲ. ಅನೇಕ ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯನ್ನು ಎಲ್ಲರಿಗಿಂತ ಮುಂದೆ ನಿಲ್ಲಿಸುವ ಉಮೇದಿನಲ್ಲಿರುವ ಅಧಿಕಾರಿಗಳು ಹೀಗೆ ಹೇಳುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಇದರ ಬಗ್ಗೆ ನಾನು ಕೇಳಿದಾಗ ಒಬ್ಬ ಶಿಕ್ಷಕಿ ನನಗೆ, “We are not hopeless sir but helpless” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡದ್ದೂ ಇದೆ. ಇದರ ಜೊತೆಗೆ ನಾನು ಕಂಡುಕೊಂಡ ಒಂದು ಸತ್ಯವೇನೆಂದರೆ ಇದು ಕೇವಲ ಮೇಲಧಿಕಾರಿಗಳ ಒತ್ತಡದಿಂದ ಶಿಕ್ಷಕರು ತಮ್ಮ ಇಚ್ಚೆಗೆ ವಿರುದ್ಧವಾಗಿ ಮಾಡುವ ಕೆಲಸವಲ್ಲಎಂಬುದು. ಇಲ್ಲಿ ಶಿಕ್ಷಕರ ಮೇಲೆ ನಿಜವಾಗಿಯೂ ಒತ್ತಡ ಇರುತ್ತದೆಯೋ ಅಥವಾ ಒತ್ತಡ ಇದೆ ಎಂಬ ಒತ್ತಡದವನ್ನು ಅವರವರೇ ಸೃಷ್ಟಿಸಿಕೊಳ್ಳುತ್ತಾರೆಯೇ ಎಂಬುದು ಇಲ್ಲಿ ಬಹುಮುಖ್ಯ ಪ್ರಶ್ನೆ. ಏಕೆಂದರೆ ಮೇಲಧಿಕಾರಿಗಳು ಹೀಗೆ ಹೆಚ್ಚು ಅಂಕಕೊಡಿ ಎಂತಲೋ ಪೂರ್ತಿ ಅಂಕಕೊಡಿ ಎಂದು ಹೇಳಲಿ ಎಂದೇ ಹಲವರು ಕಾಯ್ದುಕೊಂಡಿದ್ದು ಅವರಿಂದ ಸೂಚೆನೆ ಬಂದ ತಕ್ಷಣ ಒಳಗೊಳಗೇ ಬಹಳ ಸಂತೋಷದಿಂದಲೇ ಈ ಕೆಲಸ ಮಾಡುತ್ತಾರೆ ಎಂಬುದು ಸುಳ್ಳೇನಲ್ಲ.
ಮೇಲಧಿಕಾರಿಗಳ ಇಂತಹ ಮಾತನ್ನು ಬಹಳಷ್ಟು ಶಿಕ್ಷಕರು ʻರಕ್ಷಣಾ ತಂತ್ರʼವನ್ನಾಗಿ ಬಳಸಿಕೊಳ್ಳುತ್ತಾರೆ. ಅಂದರೆ ತಮ್ಮ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಪಡೆಯುವ ಆಸೆಯಿಂದಲೋ ಅಥವಾ ಕೆಲವು ಮಕ್ಕಳು ಫೇಲಾದರೆ ಅಧಿಕಾರಿಗಳಿಂದ ಉಂಟಾಗುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲೆಂದೋ ಈ ರೀತಿ ಎಲ್ಲಮಕ್ಕಳಿಗೂ ಸುಮ್ಮನೆ ಬೇಕಾಬಿಟ್ಟಿಯಾಗಿ ಹೆಚ್ಚು ಅಂಕಗಳನ್ನು ಅಥವಾ ಪೂರ್ಣ ಅಂಕಗಳನ್ನು ಕೊಡಲು ಅವರೂ ಮಾನಸಿಕವಾಗಿ ಮೊದಲೇ ತಯಾರಾಗಿರುತ್ತಾರೆ. ಆದರೆ ತಮ್ಮಷ್ಟಕ್ಕೆ ತಾವೇ ಹಾಗೆ ಮಾಡಿದರೆ ಯಾರಾದರೂ ʼಬೇಜವಾಬ್ದಾರಿಯ ವ್ಯಕ್ತಿಗಳುʼ ಎಂದು ಆಡಿಕೊಳ್ಳಬಹುದು. ಅದರ ಬದಲು ಮೇಲಧಿಕಾರಿಯೊಬ್ಬರು ಒಂದು ಮಾತು ಹೇಳಿದರೆ ಚೆನ್ನಾಗಿರುತ್ತದೆ ಎಂದು ಇವರೆಲ್ಲ ಬಯಸುತ್ತಿರುತ್ತಾರೆ. ಏಕೆಂದರೆ ಆಗ ಯಾರಾದರೂ ಕೇಳಿದರೆ, ʻಅವ್ರು ಹೇಳಿದ್ರು ಅದ್ಕೆ ನಾವು ಕೊಟ್ವಿ; ನಾವೇನ್ ಮಾಡೋಕೆ ಆಗುತ್ತೆ ಹೇಳಿʼ ಎಂದು ಅವರ ಕಡೆ ಬೆರಳು ಮಾಡಿ ತೋರಿಸಲು ಇದರಿಂದ ಅನುಕೂಲವಾಗುತ್ತದೆ ಮತ್ತು ಆ ಮೂಲಕ ತಮಗೆ ಬರಬಹುದಾದ ಕೆಟ್ಟ ಹೆಸರಿನಿಂದ ಬಚಾವಾಗಬಹದು ಎಂಬುದು ಇವರ ಲೆಕ್ಕ. ಹೀಗೆ ಮಾಡುವುದರಿಂದ ಬಾಳೆಹಣ್ಣು ತಿಂದ ತೃಪ್ತಿಯೂ ಆಗುತ್ತದೆ. ಬಾಳೆಹಣ್ಣು ಕದ್ದ ಆರೋಪವೂ ಬರುವುದಿಲ್ಲ. "ರೋಗಿ ಬಯಸಿದ್ದೂ ಹಾಲು ಅನ್ನ; ವೈದ್ಯ ಹೇಳಿದ್ದೂ ಹಾಲು ಅನ್ನ” ಅನ್ನುತ್ತಾರಲ್ಲ ಹಾಗೆ ಇದು.
ಅಲಕ್ಷಿಸಲಾಗದ ಅನಾಹುತಗಳು
ನಮ್ಮ ಶಿಕ್ಷಕರು ಒತ್ತಡಕ್ಕೆ ಒಳಗಾಗಿ ಹೀಗೆ ಅಂಕಕೊಡುತ್ತಾರೆ ಎಂದೇ ಇಟ್ಟುಕೊಂಡರೂ ಅದೇನೂ ಸಮರ್ಥಿಸಿಕೊಳ್ಳುವ ಸಂಗತಿಯಾಗುವುದಿಲ್ಲ. ಏಕೆಂದರೆ ಬೇರೆಯವರು, ಯಾವುದೇ ಮಟ್ಟದ ಅಧಿಕಾರಿಗಳು ಆಗಿರಲಿ, ಅವರು ಹೇಳಿದಂತೆ ಶಿಕ್ಷಕರು ಅಂಕ ಕೊಡುತ್ತಾರೆ ಎಂದರೆ ಅದಕ್ಕೆ ಎರಡೇ ಅರ್ಥ ಬರುವುದು. ಒಂದು: ಮೌಲ್ಯಮಾಪನ ಮಾಡುವ ʻತಿಳಿವಳಿಕೆ ಇಲ್ಲದವರು.ʼ ಇನ್ನೊಂದು ತಿಳಿವಳಿಕೆ ಇದ್ದರೂ ಎಲ್ಲ ಬಗೆಯ ಸ್ವಾತಂತ್ರ್ಯವನ್ನೂ ಕೆಳೆದುಕೊಂಡ ʻಮಾರಿಕೊಂಡವರು.ʼ ಎಂಬುದು. ಇವೆರಡರಲ್ಲಿ ಯಾವ ಅರ್ಥ ಬಂದರೂ ಅದು ಶಿಕ್ಷಕರ ಸ್ವಾಭಿಮಾನಕ್ಕೆ, ಘನತೆ, ಗೌರವಕ್ಕೆ ಧಕ್ಕೆ ತರುವ ಸಂಗತಿಯೇ ಆಗಿಬಿಡುತ್ತದೆ. ತಪ್ಪನ್ನು ಮಾಡಿದ ಮೇಲೆ ಅದನ್ನು ಮೆಚ್ಚಿಕೊಂಡು ಮಾಡಿದೆವೋ ಅಥವಾ ಮನಸ್ಸಿಲ್ಲದೆ ಮಾಡಿದೆವೋ ಎಂಬುದು ಬಹಳಷ್ಟು ಮುಖ್ಯವಾಗುವುದಿಲ್ಲ. ನಾವು ಮಾಡಿದ್ದು ಹೌದೋ ಅಲ್ಲವೋ ಎಂಬುದಷ್ಟೇ ಮುನ್ನೆಲೆಗೆ ಬಂದು ಚರ್ಚೆಗೊಳಪಡುತ್ತದೆ.
ಶಿಕ್ಷಕರು ಹೀಗೆ ಬೇಕಾಗಿಯೋ ಅಥವಾ ಒತ್ತಡಕ್ಕೆ ಒಳಗಾಗಿಯೋ ಬೇಕಾಬಿಟ್ಟಿ ಅಂಕಕೊಡುವುದರಿಂದ ಆಗುವ ಅಪಾಯಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ. ಈ ಕೆಲಸ ನಿಯಮಗಳ ಪ್ರಕಾರವೂ ತಪ್ಪು. ನೈತಿಕತೆಯ ಪ್ರಕಾರವೂ ತಪ್ಪು. ನಿಯಮಗಳ ಪ್ರಕಾರ ತಪ್ಪು ಏಕೆಂದರೆ ಆಂತರಿಕ ಅಂಕಗಳನ್ನು ಕೊಡಲು ಇಲಾಖೆ ನಿಯಮಗಳನ್ನು ರೂಪಿಸಿರುತ್ತದೆ. ವಿವಿಧ ಹಂತಗಳ ವಿವಿಧ ಚಟುವಟಿಕೆ ಮತ್ತು ಕಿರುಪರೀಕ್ಷೆಗಳಲ್ಲಿ ಪಡೆದ ಅಂಕಗಳು ಆಯಾ ಕಾಲದಲ್ಲಿಯೇ ಎಲ್ಲೆಂದರಲ್ಲಿ ದಾಖಲಾಗಿರುತ್ತವೆ. ಅನೇಕ ಶಾಲೆಗಳಲ್ಲಿ ಉತ್ತರ ಪತ್ರಿಕೆ ಅಂಕಪಟ್ಟಿಗಳನ್ನು ಮಕ್ಕಳಿಗೆ ಅವರ ಪಾಲಕರಿಗೆ ತೋರಿಸಲಾಗಿರುತ್ತದೆ. ಇವೆಲ್ಲವನ್ನೂ ಗಾಳಿಗೆ ತೂರಿ ವರ್ಷದ ಕೊನೆಯಲ್ಲಿ ಮನಸ್ಸಿಗೆ ಬಂದಂತೆ ಅಂಕಗಳನ್ನು ಕೊಡುವುದು ದೊಡ್ಡ ತಪ್ಪಾಗಿ ಬಿಡುತ್ತದೆ. ಶಿಕ್ಷಕರು ಎಷ್ಟೇ ಕಷ್ಟಪಟ್ಟು ಸುಳ್ಳುದಾಖಲೆಗಳನ್ನು ಸೃಷ್ಟಿಸಿದರೂ ನಿಜಾರ್ಥದಲ್ಲಿ ತನಿಖೆ ನಡೆದರೆ ಅವರು ತಮ್ಮನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಏಕೆಂದರೆ ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಬಹುದೇ ವಿನಃ ಶಾಶ್ವತವಾಗಿ ಅಲ್ಲ!
ನಿಯಮಗಳ ಕಥೆ ಒತ್ತಟ್ಟಿಗಿರಲಿ. ನೈತಿಕತೆಯ ಕಥೆ ಏನು? ಶಿಕ್ಷಕರು ಎಂದರೆ ಮಕ್ಕಳಿಗೆ ಒಳ್ಳೆಯದು ಕೆಟ್ಟದ್ದನ್ನು ಕಲಿಸುವವರು. ಅವರೇ ಹಾದಿತಪ್ಪಿದರೆ ಮಕ್ಕಳ ಗತಿಯೇನು? ಅವರು ಮೌಲ್ಯಶಿಕ್ಷಣ ತರಬೇತಿ ಪಡೆಯುವುದು, ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಡುವುದು ಇವೆಲ್ಲ ಹಾಸ್ಯಾಸ್ಪದ ಎನಿಸುವುದಿಲ್ಲವೇ? ನೈತಿಕತೆಯ ಅಧಪತನದ ಅವರ ಈ ಕಾರ್ಯವು ಉಂಟುಮಾಡಬಹುದಾದ ಬಹಳಷ್ಟು ದುಷ್ಪರಿಣಾಮಗಳಲ್ಲಿ ನಾಲ್ಕನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ. ಮೊದಲನೆಯದು ಇದು ಶಿಕ್ಷಕರು ತಾವು ವರ್ಷಪೂರ್ತಿ ಮಾಡುವ ಕಿರುಪರೀಕ್ಷೆ, ಚಟುವಟಿಕೆ, ಅವುಗಳ ಮೌಲ್ಯಮಾಪನ ಇತ್ಯಾದಿ ಶ್ರದ್ಧಾಪೂರ್ವಕ ಕೆಲಸಗಳಿಗೆ ಅರ್ಥವಿಲ್ಲದಂತೆ ಮಾಡುತ್ತದೆ. ಆ ಮೂಲಕ ಶಿಕ್ಷಕರು ಇಂತಹ ಅಗತ್ಯ ಚಟುವಟಿಕೆಗಳನ್ನು ಮಾಡುವಲ್ಲಿ ನಿರಾಸಕ್ತಿ ತಾಳುವಂತಾಗುತ್ತದೆ. ಎರಡನೆಯದು ಇದು ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುವ ಘನಘೋರ ಅನ್ಯಾಯದ ಕ್ರಮವಾಗುತ್ತದೆ. ವರ್ಷಪೂರ್ತಿ ಕಷ್ಟಪಟ್ಟು ಅನೇಕಸಲ ಊಟಆಟನಿದ್ರೆಗಳನ್ನೂ ತ್ಯಾಗಮಾಡಿ ಶಿಕ್ಷಕರು ಹೇಳಿದ ಎಲ್ಲ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದ ವಿದ್ಯಾರ್ಥಿಗಳು, ಇಂತಹ ಯಾವ ಕೆಲಸಗಳನ್ನೂ ಮಾಡದೆ ವರ್ಷಪೂರ್ತಿ ಉಂಡಾಡಿ ಗುಂಡಾಡಿದ ತನ್ನ ಸಹಪಾಠಿಗಳೂ ತಮ್ಮ ಸರಿಸಮ ಅಂಕಗಳನ್ನು ಪಡೆಯುವುದರಿಂದ ಖಿನ್ನರಾಗುತ್ತಾರೆ. ಅವರು ಓದು ಬರೆಹಗಳಲ್ಲಿ ನಿರಾಸಕ್ತಿ ತಾಳುತ್ತಾರೆ.
ಮೂರನೆಯದು ಇದು ಮಕ್ಕಳಿಗೆ ಶಿಕ್ಷಕರೇ ಮುಂದಾಗಿ ʻದುರ್ಬುದ್ಧಿʼಯನ್ನು ಕಲಿಸುವ ಕ್ರಮವಾಗುತ್ತದೆ. ಏಕೆಂದರೆ ಶಿಕ್ಷಕರು ಕೊಡುವ ಅಂಕಗಳು ಗುಟ್ಟಾಗಿ ಉಳಿಯುವಂಥದ್ದೇನಲ್ಲ. ಅಂಕಪಟ್ಟಿಯಲ್ಲಿ ಪ್ರಕಟವಾಗುವಂಥದ್ದು. ಓದಿದವರು ಓದದವರು ಎಲ್ಲರಿಗೂ ಹೆಚ್ಚುಕಡಿಮೆ ಸರಿಸಮ ಅಂಕಗಳು ಬಂದಿರುವುದನ್ನು ನೋಡುವ ಹಿಂದಿನ ತರಗತಿಗಳ ಮಕ್ಕಳು ಮುಂದಿನ ವರ್ಷಗಳಲ್ಲಿ ಶಿಕ್ಷಕರು ಹೇಳುವ ಯಾವ ಚಟುವಟಿಕೆಗಳನ್ನು ಮಾಡದೆ ಯಾವ ಕಿರುಪರೀಕ್ಷೆಗಳಿಗೂ ಹಾಜರಾಗದೆ ಉಡಾಫೆಯನ್ನು ತೋರತೊಡಗಬಹುದು. ನಾಲ್ಕನೆಯದು ಮತ್ತು ಕೊನೆಯದು ಅತ್ಯಂತ ಗಂಭೀರವಾದದ್ದು ಮತ್ತು ಶಿಕ್ಷಕರಿಗೇ ಸಂಬಂಧಿಸಿದ್ದು. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಎಲ್ಲರಿಗೂ ಪೂರ್ಣ ಅಂಕಗಳನ್ನು ಕೊಡುವ ಒಂದು ಕೆಟ್ಟ ಕ್ರಮವನ್ನು ಒಮ್ಮೆ ಆರಂಭಿಸಿದರೆ ಮುಂದಿನ ವರ್ಷಗಳಲ್ಲಿ ಅದು ಆ ಶಾಲೆಯ ಒಂದು ʼರೂಢಿಗತ ಸಂಪ್ರದಾಯʼ ಆಗಿಬಿಡುತ್ತದೆ. ಒಮ್ಮೆ ಅದು ಸಂಪ್ರದಾಯ ಆದ ಮೇಲೆ ಅದನ್ನು ನಿಲ್ಲಿಸುವುದು ಕಷ್ಟ. ಈ ಕೆಟ್ಟ ಸಂಪ್ರದಾಯವನ್ನು ಆರಂಭಿಸಿದ ಶಿಕ್ಷಕರು ಒಬ್ಬೊಬ್ಬರಾಗಿ ಶಾಲೆಬಿಟ್ಟು ಹೋಗಬಹುದು. ಹೊಸಬರು ಒಬ್ಬಬ್ಬರಾಗಿ ಬಂದು ಸೇರಬಹುದು. ಆದರೆ ಈ ಸಂಪ್ರದಾಯ ಮುಂದುವರೆದುಬಿಡುತ್ತದೆ.
ಮುಂದೆ ಇದು ಯಾವ ಹಂತ ತಲುಪುತ್ತದೆ ಎಂದರೆ ಮುಂದೊಂದು ವರ್ಷ ಶಾಲೆಯಲ್ಲಿ ಅತ್ಯಂತ ದುರ್ವರ್ತನೆ ತೋರುವ ನಾಲ್ಕು ಮಕ್ಕಳು ಬರುತ್ತಾರೆ ಎಂದಿಟ್ಟುಕೊಳ್ಳಿ. ಅವರು ಶಿಕ್ಷಕರು ಹೇಳಿದ ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಅವರ ಮೇಲೆ ಎಗರಾಡುವವರಾಗಿರುತ್ತಾರೆ ಎಂದಿಟ್ಟುಕೊಳ್ಳಿ. ಆಗ ಅವರಿಗೆ ಆಂತರಿಕ ಅಂಕಗಳನ್ನು ಹೆಚ್ಚು ಕೊಡಬಾರದು ಎಂದು ಎಲ್ಲ ಶಿಕ್ಷಕರಿಗೆ ಅನ್ನಿಸಿದರೂ ಹಾಗೆ ಮಾಡುವ ಸ್ವಾತಂತ್ರ್ಯ ಆಗ ಅವರ ಕೈಯಲ್ಲಿ ಇರುವುದಿಲ್ಲ. ಪೂರ್ಣ ಅಂಕ ಕೊಡದಿದ್ದರೆ, ಅಥವಾ ಅತ್ಯಂತ ಕಡಿಮೆ ಅಂಕ ಕೊಟ್ಟರೆ, ಆ ವಿದ್ಯಾರ್ಥಿಗಳು, “ಯಾಕೆ ಕೊಡುವುದಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಶಾಲೆಯಲ್ಲಿ ಎಲ್ಲರಿಗೂ ಪೂರ್ಣ ಅಂಕಗಳನ್ನು ಕೊಡುವ ಸಂಪ್ರದಾಯ ಇದೆ. ಕೊಡ್ತೀರೋ ಇಲ್ಲವೋ ಹೇಳಿ” ಎಂದು ಶಿಕ್ಷಕರಿಗೆ ಚಾಕು ಚೂರಿ ತೋರಿಸಿ ಅವರು ಅಂಕಗಳನ್ನು ಪಡೆಯುವುದಿಲ್ಲ ಎನ್ನುವುದು ಏನು ಗ್ಯಾರಂಟಿ. ಆಗ ಶಿಕ್ಷಕರ ಪಾಡು ನಾಯಿಪಾಡು ಅನ್ನುತ್ತಾರಲ್ಲ ಹಾಗಾಗುತ್ತದೆ. ಕನ್ನಡದ ಮಹಾ ಕಾವ್ಯವೊಂದರಲ್ಲಿ ʻಹಚ್ಚಿದವನ ಇಚ್ಚೆಯಲ್ಲಿರದು ಕಿಚ್ಚುʼ ಎಂಬ ಅರ್ಥಪೂರ್ಣ ಮಾತೊಂದು ಬರುತ್ತದೆ. ನಾವೇ ಹಚ್ಚಿದರೂ ಬೆಂಕಿ ಒಂದು ಹಂತಕ್ಕೆ ಬೆಳೆದ ಮೇಲೆ ನಮ್ಮ ಮಾತನ್ನೂ ಕೇಳುವುದಿಲ್ಲವಂತೆ. ಇದೂ ಹಾಗೇ! ಈ ಬಗ್ಗೆ ಶಿಕ್ಷಕರು ಎಚ್ಚರದಿಂದ ಇರಬೇಕು.
ತೋರಣ ಒಣಗಲು ಕಾರಣ ಯಾರು?
ಒಬ್ಬ ಅಧಿಕಾರಿಗೆ ಮುಂದಿನ ಪರೀಕ್ಷೆಯ ಬಗ್ಗೆ ಆಲೋಚಿಸುವ ಶಿಕ್ತಿ ಮಾತ್ರ ಇರಬಹುದು; ಆದರೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಗೆ ಅದರಾಚೆಗೆ ಹೋಗಿ ಮುಂದಿನ ಜನಾಂಗದ ಬಗ್ಗೆ ಕೂಡ ಆಲೋಚಿಸುವ ಶಕ್ತಿ ಇರುತ್ತದೆ; ಇರಬೇಕು ಕೂಡ. ಹೀಗೆ ಅವರಿಗೆ ಈ ಶಕ್ತಿ ಇರುತ್ತದೆ ಎಂದೇ ವ್ಯವಸ್ಥೆ ಅಧಿಕಾರಿಗಳ ಮುಂದೆ ಏನೂ ಅಲ್ಲದ ಶಿಕ್ಷಕರಿಗೇ ಈ ವಿಶಿಷ್ಟ ಜವಾಬ್ದಾರಿಯನ್ನು ನೀಡಿರುತ್ತದೆ. ಏನೇ ಒತ್ತಡಗಳಿದ್ದರೂ ಶಿಕ್ಷಕರು ತಮ್ಮಈ ಗುರುತರ ಜವಾಬ್ದಾರಿಯಿಂದ ಹಿಂತೆಗೆಯಬಾರದು. ಹೌದು, ಏಕಾಂಗಿಯಾಗಿ ವ್ಯವಸ್ಥೆಯ ವಿರುದ್ಧ ಎದೆ ಸೆಟೆಸಿ ನಿಲ್ಲುವುದು ಅನೇಕರಿಗೆ ಅನೇಕ ಕಾರಣಗಳಿಂದ ಆಗದಿರಬಹುದು. ಅಂತಹ ಸಂದರ್ಭಗಳಲ್ಲಿ ಅವರೇ ಕಟ್ಟಿಕೊಂಡ ಸಂಘಗಳಾದರೂ ಸಾಮೂಹಿಕವಾಗಿ ಶಿಕ್ಷಕರನ್ನು ʼತಿಳಿವಳಿಕೆಯಿಲ್ಲದವರನ್ನಾಗಿಯೋ ಗುಲಾಮರನ್ನಾಗಿಯೋ ಪರಿಗಣಿಸುವ ಕೆಲಸಗಳು ಯಾರಿಂದಲೇ ಆಗಲಿ ಅವನ್ನು ಪ್ರಶ್ನಿಸುವುದು, ಪ್ರತಿಭಟಿಸುವುದು ಇತ್ಯಾದಿ ಮಾಡಬೇಕಲ್ಲವೇ? ಅನೇಕ ಸಂಘಗಳು ಶಿಕ್ಷಕರ ಬಿಲ್ ಮಾಡಿಸುವುದು, ರಜೆ ಕೊಡಿಸುವುದು ಇತ್ಯಾದಿ ಕಾರ್ಯಗಳಲ್ಲಿಯೇ ತಲೆಕೆಡಿಸಿಕೊಂಡಿರುತ್ತವೆ. ಸಂಘದವರು ಅಲ್ಲಿ ತೊಡಗಿಕೊಳ್ಳದಿದ್ದರೂ ಆ ಕೆಲಸಗಳು ನಾಲ್ಕುದಿನ ತಡವಾಗಿಯಾದರೂ ಆಗುವಂಥವು. ಹಾಗಾಗಿ ಅವೆಲ್ಲವುಗಳಿಗಿಂತ ಶಿಕ್ಷಕರ ಮಾನ ಮರ್ಯಾದೆ, ಘನತೆ ಗೌರವಗಳಿಗೆ ಧಕ್ಕೆ ಬರುವ ಅಂಶಗಳನ್ನು ಶಿಕ್ಷಕ ಸಂಘಗಳು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳಬೇಕು. ಒಂದು ಮಾತನ್ನು ನಾವು ನೆನಪಿಡಬೇಕು. ದೌರ್ಜನ್ಯ ಎಲ್ಲಿಯಾದರೂ ನಡೆದರೆ ಅದಕ್ಕೆ ಅದನ್ನು ಮಾಡುವವರು ಮಾತ್ರ ಕಾರಣವಲ್ಲ; ಅದನ್ನು ಮಾಡಿಸಿಕೊಂಡು ತೆಪ್ಪಗಿರುವವರೂ ಕಾರಣವೇ. ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಕವಿತೆಯ ಕೆಳಕಂಡ ಸಾಲುಗಳ ಮೂಲಕ ಈ ಲೇಖನ ಮುಗಿಸುತ್ತೇನೆ.
“ಬಾಗಿಲ ಮೇಲೆ
ಒಣಗಿದ್ದರೆ ತೋರಣ;
ನಾನೊಬ್ಬಳೇ ಅಲ್ಲ ನೀನೂ ಕಾರಣ”
ಡಾ ರಾಜೇಂದ್ರ ಬುರಡಿಕಟ್ಟಿ
13-09-2026
*****
ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಗಿನ ಲೇಖನಗಳನ್ನೂ ತಾವು ಅವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಬಹುದು:
ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು..
https://buradikatti.blogspot.com/2026/01/blog-post.html
ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?
https://buradikatti.blogspot.com/2025/07/blog-post.html
ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು
https://buradikatti.blogspot.com/2024/11/blog-post_17.html
ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?
https://buradikatti.blogspot.com/2025/08/blog-post.html
ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು
https://buradikatti.blogspot.com/2024/11/blog-post.html
ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್ ರಜೆ
https://buradikatti.blogspot.com/2025/06/blog-post_5.html
ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು
https://buradikatti.blogspot.com/2024/05/blog-post_31.html
ಎಸ್.ಎಸ್.ಎಲ್.ಸಿ ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!
https://buradikatti.blogspot.com/2022/05/blog-post.html
ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:
https://buradikatti.blogspot.com/2020/07/blog-post.html
ʻಅರಮನೆʼಯ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ
https://buradikatti.blogspot.com/2020/07/blog-post_14.html



No comments:
Post a Comment