ದ್ವಾರಕಾ ಎಂಬ ದೇವಭೂಮಿ !
ಮಹಾಭಾರತ ಕಥೆಯ ಪ್ರಕಾರ ದೇವಮಾನವನಾದ ಶ್ರೀಕೃಷ್ಣನಿಗೆ ಮನುಷ್ಯಜೀವಿಯಿಂದ ಮೂರು ಶಾಪಗಳು ಹಾಕಲ್ಪಡುತ್ತವೆ. ಅವೆಂದರೆ ಮೊದಲನೆಯದು ʻಅವನ ಸಾವು ಸಾಮಾನ್ಯ ಮನುಷ್ಯನೊಬ್ಬನಿಂದ ಆಗಲಿʼ ಎಂಬುದು. ಎರಡನೆಯದು ʻಅವನ ಕುಲಜರಾದ ಯಾದವರು ಅವರವರಲ್ಲಿಯೇ ಹೊಡದಾಡಿ ನಾಶವಾಗಲಿʼ ಎಂಬುದು. ಮೂರನೆಯದು ʻಬಂಗಾರದಿಂದಲೇ ನಿರ್ಮಾಣವಾಗಿರುವ ಅವನ ʼಸ್ವರ್ಣನಗರಿʼ ದ್ವಾರಕಾ ಸಮುದ್ರದಲ್ಲಿ ಮುಳಗಿಹೋಗಲಿʼ ಎಂಬುದು. ಇವು ಮೂರೂ ಶಾಪಗಳು ಜಾರಿಗೆ ಬರುವ ಮೂಲಕ ದ್ವಾಪಾರಯುಗ ಮುಗಿಯುತ್ತದೆ ಮತ್ತು ಕಲಿಯುಗ ಆರಂಭವಾಗುತ್ತದೆ.
ಹೀಗಿ ಭಾಗವತ ಮತ್ತು ಮಹಾಭಾರತದಲ್ಲಿ ಬಹಳಷ್ಟು ವರ್ಣಿತವಾಗಿರುವ ಈಗ ಸಮುದ್ರದಲ್ಲಿ ಮುಳುಗಿಹೋಗಿದೆ ಎಂದು ಹೇಳಲಾಗುವ ಮತ್ತು ನವನಿರ್ಮಾಣಗೊಂಡಿರುವ ದ್ವಾರಕಾ ನಗರ ಇರುವುದು ಇಂದಿನ ಗುಜರಾತ್ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ದಂಡೆಯಲ್ಲಿ. ಪಾಕಿಸ್ತಾನದ ಮುಖ್ಯ ನಗರವಾದ ಕರಾಚಿಯಿಂದ ಕೇವಲ ಸುಮಾರು ಒಂದು ನೂರು ಕಿಲೋಮೀಟರ್ ಅಷ್ಟು ಅಂತರದಲ್ಲಿರುವ ಈ ಪ್ರಾಚೀನ ನಗರ ಭಾರತೀಯ ಭಕ್ತಿ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ.
ಗೋಮತಿ
ಬೇಟ್ದ್ವಾರಕ ಮೊದಲೇ ಹೇಳಿದಂತೆ ಪ್ರಾಚೀನ ಚಿನ್ನದನಗರವಾದ ದ್ವಾರಕಾ ಇದ್ದ ಸ್ಥಳವೆಂದು ಹೇಳಲಾಗುತ್ತದೆ. ಅದು ಮುಳುಗಿದ ಮೇಲೆ ಅಲ್ಲಿಗೆ ದ್ವಾಪಾರಯುಗ ಮುಗಿಯಿತು. ಕಲಿಯುಗದಲ್ಲಿ ನಂತರದಲ್ಲಿ ಅಲ್ಲಿ ಕೂಡ ದ್ವಾರಕಾದೀಶನ ಮಂದಿರ ಸ್ಥಾಪಿಸಲಾಗಿದೆ. ಭಕ್ತರು ಇಲ್ಲಿಗೂ ಕೂಡ ಹೇರಳ ಸಂಖ್ಯೆಯಲ್ಲಿ ಬರುತ್ತಾರೆ. ಆಧ್ಯಾತ್ಮಿಕರಿಗೆ ದ್ವಾರಕಾದೀಶನ ದಿವ್ಯದರ್ಶನ ಕೊಟ್ಟಷ್ಟೆ ಸಂತೋಷ ನೆಮ್ಮದಿಗಳನ್ನು ಲೌಕಿಕರಿಗೆ ಇಲ್ಲಿನ ಬೃಹತ್ ʻಸುದರ್ಶನ ಸೇತುʼ ಮತ್ತು ವಿಶಾಲ ನೀಲ ಸಾಗರದ ಭವ್ಯ ನೋಟಗಳು ನೀಡುತ್ತವೆ.
ಗೋಮತಿ ದ್ವಾರಕಾದಿಂದ ಬೇಟ್ ದ್ವಾರಕಾಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಎರಡು ಮೂರು ಮುಖ್ಯವಾದ ಸ್ಥಳಗಳು ಸಿಗುತ್ತವೆ. ಅವೆಂದರೆ ಒಂದು ಮಾತಾ ರುಕ್ಮಿಣಿ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ, ಮತ್ತು ಗೋಪಿ ತಾಲಬ್. ಮೊದಲು ಸಿಗುವ ಮಾತಾ ರುಕ್ಮಿಣಿ ದೇವಾಲಯ ಶ್ರೀಕೃಷ್ಣನ ಹಿರಿಯ ಹೆಂಡತಿ ರುಕ್ಮಿಣಿಯ ಗೌರವದಲ್ಲಿ ನಿರ್ಮಿತವಾದ ಮಂದಿರ. ಹಳೆಯ ಶೈಲಿಯ ಕಲ್ಲಿನ ಕೆತ್ತನೆಯ ಈ ಮಂದಿರದ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಕೃಷ್ಣ ಮತ್ತು ರುಕ್ಮಿಣಿಯರ ಮದುವೆ. ಇದಕ್ಕೆ ದುರ್ವಾಸ ಮುನಿಯ ಶಾಪ ಇತ್ಯಾದಿ ಬಹಳಷ್ಟು ನಮ್ಮ ಪುರಾಣ ಸಾಹಿತ್ಯದಲ್ಲಿ ಉಲ್ಲೇಖವಾಗಿವೆ. ಇವುಗಳ ಬಗ್ಗೆ ದೊಡ್ಡ ದೊಡ್ಡ ಕತೆಗಳೇ ಇವೆ. ಇವನ್ನು ಓದುವುದು ಕೇಳುವುದು ಒಂದು ರೀತಿಯ ಅನುಭವವಾದರೆ ಅವನ್ನು ನೋಡಿ ಕಣ್ತುಂಬಿಕೊಳ್ಳುವುದು ಇನ್ನೊಂದು ಬಗೆಯ ಅನುಭವ.
ರುಕ್ಮಿಣಿ ಮಂದಿರವನ್ನು ನೋಡಿ ಮುಂದೆ ಹೊರಟರೆ ನಮಗೆ ಸಿಗುವುದು ನಾಗೇಶ ಜೋತಿರ್ಲಿಂಗ. ಭಾರತದ ಮೂರು ಮಹತ್ವದ ಜೋತಿರ್ಲಿಂಗಗಳಲ್ಲಿ ಇಲ್ಲಿನ ನಾಗೇಶ್ವರ ಜ್ಯೋತಿರ್ಲಿಂಗವೂ ಒಂದು. ಸ್ವತಃ ಶಿವ ಪಾರ್ವತಿಯರು ಸರ್ಪಗಳಾಗಿ ನಾಗೇಶ್ವರ ಮತ್ತು ನಾಗಿಣಿಯರಾಗಿ ಇಲ್ಲಿ ಅವತರಿಸಿ ತಮ್ಮ ಲೀಲೆಯನ್ನು ತೋರಿದರು ಎನ್ನುವುದು ಇಲ್ಲಿನ ಪ್ರತೀತಿ. ಇಲ್ಲಿ ನಿರ್ಮಾಣವಾಗಿರುವ ಬೃಹತ್ ಶಿವನ ಮೂರ್ತಿ ಅತ್ಯಂತ ಭವ್ಯವಾಗಿದೆ. ನಾನು ನೋಡಿದಂತೆ ಆಂದ್ರ ಪ್ರದೇಶದ ವಿಶಾಖಪಟ್ಟಣದಲ್ಲಿ (ವಿಶಾಖ ಎಂಬುದು ಶಿವನ ಇನ್ನೊಂದು ಹೆಸರು) ಮತ್ತು ಶಿವಮೊಗ್ಗದಲ್ಲಿ ಇಂತಹ ಶಿವನ ಮೂರ್ತಿಗಳು ಇರುವುದು ನಿಜವಾದರೂ ಇದು ಗಾತ್ರದಲ್ಲಿ ಅವೆರಡಕ್ಕೂ ಎಷ್ಟೋ ದೊಡ್ಡದಿರುವ ಮೂರ್ತಿಯಾಗಿದೆ.
ಮೂರನೆಯದು ಮತ್ತು ಮುಖ್ಯವಾದದ್ದು ʻಗೋಪಿ ತಾಲಬ್ʼ ತಾಲಬ್ ಎಂದರೆ ಕೆರೆ. ಈ ಸ್ಥಳಕ್ಕೆ ಎರಡು ಪೌರಾಣಿಕ ಕಥೆಗಳು ಅಂಟಿಕೊಂಡಿವೆ. ಒಂದು. ಮಹಾಭಾರತಕ್ಕೆ ಪ್ರವೇಶ ಕೊಡುವ ಮೊದಲು ಹದಿನಾರು ಸಾವಿರ ಗೋಪಿಯರೊಂದಿಗೆ ಶ್ರೀಕೃಷ್ಣ ಆಡುವ ಆಟ ಜಗತ್ ಪ್ರಸಿದ್ಧವಾಗಿದೆ. ಗಂಡುಹೆಣ್ಣಿನ ಅದಮ್ಯ ಪ್ರೇಮಕ್ಕೆ ಹೆಸರಾಗಿರುವ ಈ ಪ್ರಸಂಗದಂತೆ ಶ್ರೀಕೃಷ್ಣನೊಂದಿಗೆ ಸಾಮೂಹಿಕ ನೃತ್ಯ ಮಾಡಿ ಪುನೀತರಾದ ಎಲ್ಲ ಗೋಪಿಯರೂ ತಮ್ಮ ಜೀವನ ಸಾರ್ಥಕವಾಯಿತು ನಾವು ಇಲ್ಲಿನ ಮಣ್ಣಿನಲ್ಲಿ ಮಣ್ಣಾಗುತ್ತೇವೆ ಎಂಬ ಬೇಡಿಕೆ ಇಟ್ಟು ಕೃಷ್ಣನ ಅನುಮತಿ ಪಡೆದು ಅವರು ಇಲ್ಲಿನ ಕೆರೆಯಲ್ಲಿ ಹಾರಿ ಪ್ರಾಣಾರ್ಪಣೆ ಮಾಡುತ್ತಾರೆ. ಇಲ್ಲಿನ ಮಣ್ಣು ಹಾಲುಮಿಶ್ರಿತ ಚಂದನ ರೂಪದಲ್ಲಿಯೇ ಇದ್ದು ಇದನ್ನು ಭಕ್ತರು ʼಗೋಪಿಚಂದನʼ ಎಂದು ಹಣೆಗೆ ಹಚ್ಚಿಕೊಳ್ಳುವ ಸಂಪ್ರದಾಯವಿದೆ.
ಇನ್ನೊಂದು ಕಥೆಯ ಪ್ರಕಾರ ಮಹಾಬಾರತದ ಯುದ್ಧದ ನಂತರ ಅರ್ಜುನನಿಗೆ ತನ್ನ ಪೌರುಷದ ಬಗ್ಗೆ ಅತಿಯಾದ ಅಹಂಕಾರ ಉಂಟಾಗುತ್ತದೆ. ತನ್ನ ಶಕ್ತಿಯಿಂದಲೇ ಪಾಂಡವರಿಗೆ ಜಯವಾಯಿತು ಎಂಬುದು ಅವನ ಅಹಂಕಾರದ ಹಿಂದೆ ಇದ್ದ ಕಾರಣ. ಅವನ ಈ ಅಹಂಕಾರವನ್ನು ಮುರಿಯಲೆಂದು ಶ್ರೀಕೃಷ್ಣ ಅವನಿಗೆ ಒಂದು ಜವಾಬ್ದಾರಿಯ ಕೆಲಸವನ್ನುನೀಡುತ್ತಾನೆ. ಅದೆಂದರೆ ಅದೇ ಆಗ ಮುಗಿದ ಯುದ್ಧದಲ್ಲಿ ಕೌರವರ ಕಡೆಯ ಎಲ್ಲ ಅತಿರಥಮಹಾರಥರು ತೀರಿಹೋಗಿ ಅವರ ಹೆಂಡತಿಯರು ವಿಧವೆಯರೂ ದಿಕ್ಕಿಲ್ಲದವರೂ ಆಗಿ ದುಃಖಿತರಾಗಿರುತ್ತಾರೆ. ಸ್ವತಃ ಮಹಾರಾಣಿಯಾಗಿ ಮೆರೆದ ದುರ್ಯೋಧನನ ಪತ್ನಿ ಭಾನುಮತಿ ಕೂಡ ಇದರಲ್ಲಿ ಸೇರಿರುತ್ತಾಳೆ.
ಕೃಷ್ಣ ಸಾವಿರಾರು ಸಂಖ್ಯೆಯಲ್ಲಿರುವ ಈ ರಾಣಿಯರೆಲ್ಲರನ್ನೂ ಸುರಕ್ಷಿತವಾಗಿ ತನ್ನ ಸ್ಥಳವಾದ ದ್ವಾರಕಾಕ್ಕೆ ಕರೆದುಕೊಂಡು ಬರಬೇಕೆಂದು ಅಲ್ಲಿ ಅವರ ಯೋಗಕ್ಷೇಮವನ್ನು ತಾನು ನೋಡಿಕೊಳ್ಳುತ್ತೇನೆಂದೂ ಹೇಳುತ್ತಾನೆ. ಅದರಂತೆ ಅರ್ಜುನ ಅವರೆಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ. ಆದರೆ ಇನ್ನೇನು ದ್ವಾರಕಾ (ಈಗಿನ ಬೇಟ್ ದ್ವಾರಕಾ) ಸ್ವಲ್ಪವೇ ದೂರದಲ್ಲಿರುವಾಗ ಅರ್ಜುನ ಕರೆದೊಯ್ಯುತ್ತಿರುವ ಈ ರಾಣಿಯರ ಗುಂಪಿನ ಮೇಲೆ ಕಾಡಿನ ಜನರ ಗುಂಪೊಂದು ಹಟಾತ್ ದಾಳಿ ನಡೆಸುತ್ತದೆ. ಆ ದಾಳಿಯಲ್ಲಿ ವೀರಾದಿವೀರನಾದ ಅರ್ಜುನ ಏನೂ ಮಾಡಲಾಗುವುದಿಲ್ಲ. ಅರ್ಜುನನು ಆ ಸಾಮಾನ್ಯ ಜನರಿಂದ ಸೋಲುವುದನ್ನು ಕಂಡ ಈ ರಾಣಿಯರೆಲ್ಲ ತಮ್ಮನ್ನು ಈ ಜನ ಹೊತ್ತು ಒಯ್ಯುತ್ತಾರೆಂದು ಗೊತ್ತಾದ ತಕ್ಷಣ ಪ್ರಾಣಕ್ಕಿಂತ ಮಾನವೇ ದೊಡ್ಡದು ಎಂದು ಪರಿಗಣಿಸಿ ಮಾನವನ್ನು ಉಳಿಸಿಕೊಳ್ಳಲು ಪ್ರಾಣವನ್ನು ಕೊಡಲು ನಿರ್ಧರಿಸಿ ಈ ಕೆರೆಯಲ್ಲಿ ಹಾರಿ ಪ್ರಾಣಬಿಡುತ್ತಾರೆ. ಈ ಕೆರೆಯ ನೋಟ ಅಲ್ಲಿನ ಗೋಪಿಚಂದನ ಮತ್ತು ಅಲ್ಲಿ ನಿರ್ಮಾಣವಾಗಿರುವ ʼಗೋಪಿನಾಥ ಮಂದಿರʼ ಕಣ್ಮನ ತಣಿಸುತ್ತವೆ.
ಹೀಗೆ ನಮ್ಮ ಪುರಾಣ ಸಾಹಿತ್ಯದಲ್ಲಿ ಅತ್ಯಂತ ರಂಜಿತವಾಗಿ ವರ್ಣಿತವಾಗಿರುವ ಈ ಪುರಾತನ ನಗರಿಯನ್ನು ನೋಡುವುದು ನನಗೆ ಬಾಕಿ ಇತ್ತು. ಇಂದು ಮತ್ತು ನಿನ್ನೆ ಈ ಎಲ್ಲ ಸ್ಥಳಗಳ ದರ್ಶನಮಾಡಿ ಕೃತಾರ್ಥನಾದೆ. ಮುಂಬೈನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಮಧ್ಯಪ್ರದೇಶ ಮೂಲಕ ತರುಣ ಸ್ನೇಹಿತ ಆಕಾಶ್ ಜೊತೆಗಿದ್ದು ಅಲ್ಲಲ್ಲಿ ಉಂಟಾಗಬಹುದಾಗಿದ್ದ ಏಕಾಂಗಿತನವನ್ನು ನೀಗಿಸಿದರು.
ದೇವರು ಧರ್ಮ ಇಂತಹ ವಿಷಯಗಳಲ್ಲಿ ಅಷ್ಟೇನೂ ಆಸಕ್ತಿಯಿಲ್ಲದ, ಶ್ರದ್ಧಾವಂತ ಭಕ್ತನಲ್ಲದ, ನಾಸ್ತಿಕ ಸ್ವಭಾವದ ನನಗೇ ದ್ವಾರಕ ಖುಷಿಕೊಟ್ಟಿತು ಎಂದರೆ ಆಸ್ತಿಕರಿಗೆ ಶ್ರದ್ಧಾವಂತ ಭಕ್ತರಿಗೆ ದ್ವಾರಕಾದರ್ಶನ ಖಂಡಿತಾ ಸಂತೋಷ ಉಲ್ಲಾಸಗಳ ಜೊತೆಗೆ ಅಪಾರವಾದ ದಿವಾನುಭವವನ್ನು ನೀಡುವಲ್ಲಿ ಯಾವುದೇ ಅನುಮಾನವಿಲ್ಲ.
ರಾಜೇಂದ್ರ ಬುರಡಿಕಟ್ಟಿ
ದ್ವಾರಕಾ, ಗುಜರಾತ್
೨೮-೦೯-೨೦೨೫