ರಾಷ್ಟ್ರೀಯ ವಿಜ್ಞಾನದಿನದ ವಿಶೇಷ ಲೇಖನ
ಎಡಎಡವಿ ಬೀಳುತಿಹ ಎಡೆಬಿಡದ ನಡಿಗೆ....
- ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ
ರಾಷ್ಟ್ರೀಯ ವಿಜ್ಞಾನ ದಿನದ ಉದ್ದೇಶವೂ ಹೆಚ್ಚುಕಡಿಮೆ ಇದೇ ಆಗಿದೆ. 1986 ರಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಸಂಸ್ಥೆ (NCSTC) ಭಾರತ ಸರ್ಕಾರಕ್ಕೆ ಪ್ರತಿವರ್ಷ ಫೆ.28ನ್ನು ರಾಷ್ಟ್ರೀಯ ವಿಜ್ಞಾನದಿನವನ್ನಾಗಿ ಆಚರಿಸಲು ಮನವಿಮಾಡಿಕೊಂಡದ್ದರ ಮೇರೆಗೆ ಈ ಆಚರಣೆ ಜಾರಿಗೆ ಬಂದು ಈಗ ದೇಶದ ಎಲ್ಲ ಶಾಲೆ, ಕಾಲೇಜುಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿ ಸಂಘ ಸಂಸ್ಥೆಗಳಲ್ಲೆಲ್ಲ ಆಚರಿಸಲ್ಪಡುತ್ತಿದೆ. ಅನೇಕ ಕಡೆ ತಜ್ಞರಿಂದ ಉಪನ್ಯಾಸಗಳು, ಮಕ್ಕಳಿಗೆ ವಿಜ್ಞಾನದ ಅರಿವನ್ನು ಹೆಚ್ಚಿಸುವ ವಿವಿಧ ರೀತಿಯ ಸ್ಪರ್ಧೆಗಳು, ಯುವವಿಜ್ಞಾನಿಗಳ ಸಾಧನೆಗಳನ್ನು ಗುರುತಿಸಿ ಗೌರವಿಸುವ ಬೆಲೆಯುಳ್ಳ ಕಾರ್ಯಗಳು ಈ ದಿನದ ನೆಪದಲ್ಲಿ ನಡೆಯುವುದು ಅಪೇಕ್ಷಣೀಯ. ನಮ್ಮೆಲ್ಲರ ಜೀವನದಲ್ಲಿ ವಿಜ್ಞಾನ ಉಂಟುಮಾಡಿರುವ ಬದಲಾವಣೆ, ಸುಧಾರಣೆಗಳ ಅರಿವನ್ನು ಜನತೆಯಲ್ಲಿ ಮೂಡಿಸಿ ವಿಜ್ಞಾನವನ್ನು ಅದರ ಮುಂದುವರೆಗೆ ಭಾಗವಾದ ತಂತ್ರಜ್ಞಾನವನ್ನು ನಾವು ಹೇಗೆಲ್ಲ ಬಳಸಿಕೊಳ್ಳಬೇಕಿತ್ತು ಮತ್ತು ಹೇಗೆಲ್ಲ ಬಳಸಿಕೊಳ್ಳುತ್ತಿದ್ದೇವೆ. ಎಂಬುದರ ಕಡೆಗೆ ಜನರ ಗಮನವನ್ನು ಸೆಳೆಯುವುದು ಮತ್ತು ವಿಜ್ಞಾನ ತಂತ್ರಜ್ಞಾನವನ್ನು ಸುಧಾರಣೆಗಿಂತ ವಿನಾಶಕ್ಕಾಗಿ ಬಳಸಿಕೊಳ್ಳುತ್ತಿರುವುದರ ಅಪಾಯದ ಅರಿವನ್ನು ಮೂಡಿಸುವ ಮೂಲಕ ವೈಜ್ಞಾನಿಕ ತಿಳಿವಳಿಕೆಯನ್ನು ಜನಮಾನಸದಲ್ಲಿ ಹೆಚ್ಚಿಸುವುದು ಈ ದಿನದ ಆಚರಣೆಯ ಹಿಂದಿರುವ ಕಾಳಜಿ.
ಭಾರತದಲ್ಲಿ ಕೆಲವು ದಿನಾಚರಣೆಗಳು ಆ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರ ಜನ್ಮದಿನದಂದು ಆಚರಿಸಲ್ಪಡುತ್ತಿವೆ. ಶಿಕ್ಷಕರ ದಿನ, ಇಂಜನಿಯರ್ಸ್ ದಿನ, ಇತ್ಯಾದಿಗಳನ್ನು ನೆನಪಿಸಿಕೊಳ್ಳಬಹುದು. ಆದರೆ ವಿಜ್ಞಾನದಿನ ಇದಕ್ಕಿಂತ ತುಸು ಭಿನ್ನವಾದದ್ದು. ಇದು ವಿಜ್ಞಾನದ ಪ್ರಕಾರ ಅಷ್ಟೇನೂ ವಿಶೇಷವಲ್ಲದ ಜನ್ಮದಿನಕ್ಕೆ ಮಹತ್ವಕೊಡದೆ ಅಪರೂಪದ ಒಂದು ಸಂಶೋಧನೆ ಬೆಳಕಿಗೆ ಬಂದ ಸಂದರ್ಭವನ್ನು ಆಧರಿಸಿದ್ದೇ ಆ ವಿಶೇಷ. ಈ ದಿನಾಚರಣೆ ಭಾರತದ ಹೆಮ್ಮೆಯ ಭೌತವಿಜ್ಞಾನಿ ಸರ್. ಸಿ.ವಿ. ರಾಮನ್ ಅವರ ಹೆಸರಿನೊಂದಿಗೆ ಬೆರೆತುಕೊಂಡಿರುವುದು ನಿಜವಾದರೂ ಫೆ.28 ಅವರ ಜನ್ಮದಿನವಲ್ಲ. ಬದಲಾಗಿ ಅವರು ‘ಬೆಳಕಿನ ವಕ್ರೀಭವನ’ (Scattering of Light) ಕುರಿತು ತಾವು ಮಂಡಿಸಿದ ಸಂಶೋಧನೆಯನ್ನು ಪ್ರಕಟಿಸಿದ ದಿನ.
ಒಂದೊಂದು ವರ್ಷ ಒಂದೊಂದು ಧ್ಯೇಯ
ಪ್ರತಿವರ್ಷ ರಾಷ್ಟ್ರೀಯ ವಿಜ್ಞಾನದ ದಿನವನ್ನು ಒಂದೊಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಆ ಮೂಲಕ ಆ ವರ್ಷ ಆ ವಿಷಯಕ್ಕೆ ಒತ್ತುಕೊಟ್ಟು ಅರಿವು ಮೂಡಿಸುವುದು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಇದರ ಹಿಂದಿನ ಉದ್ದೇಶ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 2000 ವರ್ಷದ ರಾಷ್ಟ್ರೀಯ ವಿಜ್ಞಾನದಿನವನ್ನು ‘ಮೂಲಭೂತ ವಿಜ್ಞಾನದಲ್ಲಿ ಆಸಕ್ತಿಯನ್ನು ಪುನಃ ಹುಟ್ಟಿಸುವುದು’ (Recreation Interest in Basic Science) ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಆಚರಿಸಿದರೆ ಅದರ ಮುಂದಿನ ವರ್ಷವನ್ನು ಅಂದರೆ 2001ನ್ನು ‘ವಿಜ್ಞಾನಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಯಿತು. ಹಾಗೇ 2002ರಲ್ಲಿ ಈ ದಿನಕ್ಕೆ “ಕಸದಿಂದ ರಸ’ (Wealth from Waste), 2004ರಲ್ಲಿ ‘ಜನಸಮೂಹದಲ್ಲಿ ವೈಜ್ಞಾನಿಕ ಅರಿವಿನ ಪ್ರೋತ್ಸಾಹಿಸುವಿಕೆ’ 2005 ರಲ್ಲಿ ‘ಭೌತಶಾಸ್ತ್ರವನ್ನು ಆಚರಿಸೋಣ’ 2006ರಲ್ಲಿ ‘ನಮ್ಮ ಭವಿಷ್ಯಕ್ಕಾಗಿ ನಮ್ಮ ಪರಿಸರ (Nature Nature for our Future) ಎಂಬವು ಧ್ಯೇಯವಾಕ್ಯಗಳಾಗಿದ್ದವು.
ಈ ಧ್ಯೇಯವಾಕ್ಯಗಳು ಆಯಾ ವರ್ಷಗಳಲ್ಲಿ ಅಗತ್ಯಗಳನ್ನು ಗಮನಿಸಿ ರೂಪಿಸಲ್ಪಟ್ಟಿವೆ ಎಂಬುದನ್ನು ಗಮನಿಸಬೇಕು. ಅನೇಕ ವೇಳೆ ಇವು ವಿಜ್ಞಾನದಿಂದ ಸಾಮಾಜಿಕ ಆಯಾಮಕ್ಕೂ ವಿಸ್ತರಿಸಿಕೊಂಡದ್ದು ಕಂಡುಬರುತ್ತದೆ. 2007ರ ದಿನ ನೀರಿನ ಮಹತ್ವಕ್ಕೆ ಕೇಂದ್ರೀಕರಿಸಿದರೆ, 2010 ಲಿಂಗಸಮಾನತೆಯನ್ನು ಅಭಿವೃದ್ಧಿಯೊಂದಿಗೆ ತಾಳೆಹಾಕಿಕೊಂಡಿತ್ತು. ವರ್ಷಗಳ ಕೆಲವು ಧ್ಯೇಯವಾಕ್ಯಗಳನ್ನು ನೋಡುವುದು ಕುತೂಹಲಕಾರಿಯಾಗಬಲ್ಲದು. 2014ನ್ನು “ವೈಜ್ಞಾನಿಕ ಮನೋಭಾವದ ಉದ್ಧೀಪನ’ (Fostering Scientific Temper) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಿದರೆ 2015ನ್ನು ರಾಷ್ಟ್ರನಿರ್ಮಾಣಕ್ಕಾಗಿ ವಿಜ್ಞಾನ’ ಎಂಬ ಧ್ಯೇಯವನ್ನಿಟ್ಟುಕೊಂಡು ಆಚರಿಸಲಾಯಿತು. ಇತ್ತೀಚೆಗೆ ಅಂದರೆ 2018, 2019 ಮತ್ತು 2020 ಈ ವರ್ಷಗಳನ್ನು ಕ್ರಮವಾಗಿ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ’ “ಜನತೆಗಾಗಿ ವಿಜ್ಞಾನ; ವಿಜ್ಞಾನಕ್ಕಾಗಿ ಜನತೆ’ ಹಾಗೂ ‘ವಿಜ್ಞಾನದಲ್ಲಿ ಮಹಿಳೆ’ ಎಂಬ ಧ್ಯೇಯವಾಕ್ಯಗಳನ್ನಿಟ್ಟುಕೊಂಡು ಆಚರಿಸಲಾಗಿದೆ.ಹಾಗೆಯೇ 2023ನ್ನು ‘ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಯಿತು.
ಧರ್ಮ ಮತ್ತು ವಿಜ್ಞಾನಗಳ ತಿಕ್ಕಾಟ
ಧರ್ಮಕ್ಕೂ ವಿಜ್ಞಾನಕ್ಕೂ ಈ ಪ್ರಪಂಚದಲ್ಲಿ ಯಾವಾಗಲೂ ದೊಡ್ಡಮಟ್ಟದ ಜಗಳ ತಿಕ್ಕಾಟ ನಡೆದುಕೊಂಡೇ ಬಂದಿದೆ. ಭಾರತ ಪಾಕಿಸ್ತಾನ ಇಂತಹ ದೇಶಗಳಲ್ಲಿಯಂತೂ ಇದು ಒಂದಿಷ್ಟು ದೊಡ್ಡಮಟ್ಟದಲ್ಲಿಯೇ ಇದೆ ಎನ್ನಬೇಕು. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ವಿಜ್ಞಾನದ ಸಾಧನೆ ಹೇಳಿಕೊಳ್ಳುವಂಥ ಮಟ್ಟದಲ್ಲಿ ಇಲ್ಲ. ವಿಶ್ವಮಟ್ಟದ ವಿಜ್ಞಾನ ಪತ್ರಿಕೆಗಳು ನಿಯತಕಾಲಿಕೆಗಳು ಆಗಾಗ ಪ್ರಕಟಿಸುವ ವಿಜ್ಞಾನ ಸಾಧನೆಯ ದೇಶಗಳ ಪಟ್ಟಿಯಲ್ಲಿ ನಮ್ಮದೇಶವು, ಗ್ಲೋಬನ್ನು ಜೋರಾಗಿ ತಿರುಗಿಸಿದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಅನೇಕ ದೇಶಗಳಿಗಿಂತ ಹಿಂದೆ ಇರುವುದನ್ನು ನಾವು ಕಾಣುತ್ತೇವೆ. ನೋಬೆಲ್ ಪುರಸ್ಕಾರಕ್ಕೆ ಅರ್ಹವಾಗುವಂತಹ ಸಂಶೋಧನೆಗಳು ನಮ್ಮಲ್ಲಿ ನಡೆದದ್ದೂ ಬೆರಳೆಣಿಕೆಯಷ್ಟೇ. ಸಿ.ವಿ. ರಾಮನ್, ವಿಕ್ರಮ ಸಾರಾಬಾಯಿ, ಅಬ್ದುಲ್ ಕಲಾಂ ಅವರಂಥ ಬೆರಳೆಣಿಕೆಯ ವಿಜ್ಞಾನಿಗಳನ್ನು ಬಿಟ್ಟರೆ ಆ ಕ್ಷೇತ್ರದಲ್ಲಿ ದೊಡ್ಡ ವಿಜ್ಞಾನಿಗಳು ಹೇಳಿಕೊಳ್ಳುವಷ್ಟು ಸಂಖ್ಯೆಯಲ್ಲಿ ನಮ್ಮಲ್ಲಿ ಬರಲಿಲ್ಲವೆಂದೇ ಹೇಳಬೇಕು.
ಇದಕ್ಕೆ ಕಾರಣವೂ ಇದೆ. ನಮ್ಮ ದೇಶದ ಸಂಶೋಧನೆಗಳು ‘ಗೋಮೂತ್ರ’ ‘ಗೋವಿನ ಸಗಣಿ’ ಇವುಗಳ ಸುತ್ತವೇ ಗಿರಕಿಹೊಡೆಯುತ್ತಾ ನಿಂತಂತಿದೆ. ಪ್ರಪಂಚದ ಜನತೆಯ ಬಾಳಿಗೆ ಬೆಳಕಾಗಬಲ್ಲ ಸಂಶೋಧನೆ ಮಾಡುವವರಿಗೆ ಆಡಳಿತಗಳಿಂದಲೂ ದೊಡ್ಡಮಟ್ಟದ ಪ್ರೋತ್ಸಾಹ ಬೇಕಾಗುತ್ತದೆ. ಅದನ್ನು ಮಾಡಲು ಆಡಳಿತಗಾರರು ಧರ್ಮಕ್ಕಿಂತ ವಿಜ್ಞಾನಕ್ಕೆ ಒಲಿದವರಾಗಿರಬೇಕಾಗುತ್ತದೆ. ಆ ವಿಷಯದಲ್ಲಿ ಭಾರತಕ್ಕೆ ಒಳ್ಳೆಯ ಭವಿಷ್ಯವಿದ್ದಂತಿಲ್ಲ. ಎಲ್ಲ ರೀತಿಯ ವಿಜ್ಞಾನವೂ ನಮ್ಮ ಪೂರ್ವಜರಿಗೆ ತಿಳಿದಿತ್ತು. ನಾವು ಯಾರಿಂದಲೂ ಕಲಿಯುವಂಥದ್ದೇನಿಲ್ಲ ಎಂಬ ಗರ್ವವೂ ನಮ್ಮನ್ನು ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಅಡ್ಡಗಾಲು ಹಾಕುತ್ತಿದ್ದಂತೆ ಕಾಣುತ್ತಿದೆ. ಆಡಳಿತಗಾರರು ವಿಜ್ಞಾನಕ್ಕಿಂತ ದೇವರು ಧರ್ಮ ಇಂಥವುಗಳಲ್ಲಿ ಆಸಕ್ತಿ ತೋರತೊಡಗಿದಾಗ ದೇಶದ ಭವಿಷ್ಯ ಮಸುಕಾಗುವುದು ತೀರಾ ಸಹಜ.
ಇಂದಿನ ನಮ್ಮ ಸಮಾಜದ ವಿದ್ಯಮಾನಗಳನ್ನು ಗಮನಿಸಿದರೆ ನಾವು ಮುಂದೆ ಸಾಗುತ್ತಿದ್ದೇವೆಯೋ ಹಿಂದೆಕ್ಕೆ ನಡೆಯುತ್ತಿದ್ದೇವೆಯೋ ಎನ್ನುವುದೇ ಸಂಶಯಬರುವಂತಿದೆ. ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದಕ್ಕಿಂತ ಅವರನ್ನು ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಅಂಧಕಾರದಲ್ಲಿಡುವುದಕ್ಕೇ ನಾವು ಹೆಣಗಾಡುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಬೆಳ್ಳಂಬೆಳಿಗ್ಗೆ ಎದ್ದು ಟಿವಿ ಜ್ಯೋತಿಷಿಗಳು ಜನರ ತಲೆತಿಕ್ಕುವ ಕೆಲಸ ಆರಂಭಿಸುವುದರಿಂದಲೇ ಇದು ಆರಂಭವಾಗುತ್ತದೆ. ನಮ್ಮ ಯುವಜನತೆಯಲ್ಲಿ ಪ್ರಶ್ನಿಸುವ ಮನೋಭಾವವನ್ನೇ ಹತ್ತಿಕ್ಕಿ ಅವರನ್ನು ಹೇಳಿದಂತೆ ಕೇಳುವ ‘ಹೌದಪ್ಪ’ಗಳನ್ನಾಗಿ ಮಾಡಲಾಗುತ್ತಿದೆ. ತಿಳಿವಳಿಕೆಯ ಕೊರತೆಯ ಕಾರಣದಿಂದ ವೈಜ್ಞಾನಿಕವಾಗಿ ಯೋಚಿಸಲಾರದ ಅಪ್ಪಅಮ್ಮಂದಿರು, ರಾಹುಕಾಲ ಗುಳಿಕಕಾಲ ನೋಡಿ ರಾಕೆಟ್ ಹಾರಿಸುವ ವಿಜ್ಞಾನಿಗಳು, ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು ಯಜ್ಞ-ಯಾಗ ಮಾಡಿ ಉದ್ಘಾಟಿಸುವ ರಾಷ್ಟ್ರೀಯ ನೇತಾರರು, ತಮ್ಮ ಭವಿಷ್ಯವೇನು, ತಮ್ಮ ದಿನದ ದುಡಿಮೆ ಏನು ಎಂಬುದನ್ನೇ ತಿಳಿಯಲಾರದ ಜ್ಯೋತಿಷಿಗಳು ಹೇಳುವ ಜ್ಯೋತಿಷ್ಯಕ್ಕೆ ತಲೆತಿಕ್ಕಿಸಿಕೊಂಡು, ಸರ್ಕಾರಿ ಕಛೇರಿಗಳನ್ನೇ ವಾಸ್ತುವಿನ ಹೆಸರಿನಲ್ಲಿ ಒಡೆದು ಹಾಕುವ ಮಂತ್ರಿಮಹೋದಯರು ಇಂಥವರ ಮಧ್ಯೆ ನಮ್ಮ ಭವ್ಯಭಾರತದ ಪ್ರಜೆಗಳು ಬೆಳೆಯುತ್ತಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:
ಸುಮಾರು ನೂರು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಆಡಿದ ಈ ಮಾತುಗಳನ್ನು ಗಮನಿಸಿ. ಅವರ ಅತ್ಯಂತ ಪ್ರಖ್ಯಾತ ಉಪನ್ಯಾಸದ (ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ) ಈ ಮಾತುಗಳು ನಿನ್ನೆಯೋ ಆಡಿದ ಮಾತುಗಳಂತೆ ಇವೆ:
· “ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಙಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.”
· “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆಡ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೇ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ. ವಿಜ್ಞಾನದ ಪಾಠ ಹೇಳಿಕೊಡುವ ಅಧ್ಯಾಪಕನೆ ತನ್ನ ಸ್ವಂತ ಬದುಕಿನಲ್ಲಿ ರಾಹುಕಾಲ ಪಂಚಾಂಗ ವಾರಭವಿಷ್ಯ ಇತ್ಯಾದಿ ಮೂಢ ನಂಬಿಕೆಗಳಿಂದ ಮೂರುಹೊತ್ತೂ ಮತ ಮೂರ್ಖನಾಗಿದ್ದರೆ ವಿದ್ಯಾರ್ಥಿಗಳಿಗೆ ಹೇಗೆತಾನೆ ಸಿದ್ಧಿಸೀತು ವಿಚಾರದೃಷ್ಟಿ.”
"ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ.”
· "ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೌಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ."
· "ದೇವಾಲಯಗಳಿಗೆ ಹೋಗುವುದನ್ನು ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು."
ಶಾಲಾ-ಕಾಲೇಜುಗಳ ಗುರುತರ ಜವಾಬ್ದಾರಿ
ಕುವೆಂಪು ಮೇಲಿನ ಮಾತುಗಳನ್ನು ಆಡಿದ್ದು ಅವರು ಯುವಜನತೆಯನ್ನು ಉದ್ದೇಶಿಸಿ ಮಾಡಿದ ಒಂದು ಉಪನ್ಯಾಸದಲ್ಲಿ ಎಂಬುದನ್ನು ಗಮನಿಸಬೇಕು. ದೇಶ ವಿಜ್ಜಾನ ಕ್ಷೇತ್ರದಲ್ಲಿ ಮುಂದುವರೆಯಬೇಕಾದರೆ, ವಿಜ್ಞಾನವನ್ನು ಬಂಪರ್ ಬೆಳೆಯಾಗಿ ಬೆಳೆಯಬೇಕಾದರೆ ಅದಕ್ಕಿರುವ ಗದ್ದೆಗಳು ಎಂದರೆ ಶಾಲೆ ಕಾಲೇಜುಗಳು. ಅಲ್ಲಿರುವ ಶಿಕ್ಷಕರು ನಿಷ್ಠಾವಂತ ರೈತರಾಗಿ ಈ ವಿಜ್ಞಾನದ ಬೆಳೆಯನ್ನು ಬೆಳೆಯುವ ಕೆಲಸವನ್ನು ಮಾಡಿದರೆ ಮಾತ್ರ ಇದು ಸಾಧ್ಯ. ಶಿಕ್ಷಕರು ಮೊದಲು ಈ ನಿಸರ್ಗದ ಬಗ್ಗೆ ಕುತೂಹಲಿಗಳಾಗಿ ಅಧ್ಯಯನಶೀಲರಾಗಿ, ವೈಚಾರಿಕವಾಗಿ ಆಲೋಚಿಸುವಂಥವರಾದರೆ ಅವರಿಂದ ಕಲಿಯುವ ಮಕ್ಕಳು ಸ್ವಾಭಾವಿಕವಾಗಿಯೇ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಕಲಿಯುತ್ತಾರೆ. ಆದರೆ ಇಂತಹ ಇಂತಹ ಶಾಲೆ ಕಾಲೇಜುಗಳು ಅಲ್ಲಿರುವ ಬಹುತೇಕ ಅಧ್ಯಾಪಕರ ಈ ಬಗೆಗಿನ ಚಟುವಟಿಕೆಗಳನ್ನು ಗಮನಿಸಿದರೆ ನಿರಾಸೆ ಎನಿಸುತ್ತದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಚಟುವಟಿಕೆಳಿಗಿಂತ ಧಾರ್ಮಿಕ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತಿರುತ್ತವೆ.
ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಅತ್ಯಂತ ಮಹತ್ವದ ಪಾತ್ರವಹಿಸಬಲ್ಲ ಶಾಲಾ ಕಾಲೇಜುಗಳೇ ಇಂದು ಅವೈಜ್ಞಾನಿಕ ಚಟುವಟಿಕೆಗಳ ತಾಣವಾಗುತ್ತಿರುವುದು. ಯಾವ ಶಿಕ್ಷಕರು ಮಕ್ಕಳಲ್ಲಿ ಸಂವಿಧಾನದ ಪ್ರಧಾನ ಆಶಯವಾದ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವರೋ ಅಂತಹ ಶಿಕ್ಷಕರಲ್ಲಿಯೇ ಬಹಳಷ್ಟು ಜನ ಇಂದು ಧರ್ಮ ಸಂಸ್ಕೃತಿಗಳ ಹೆಸರಿನಲ್ಲಿ ಮಕ್ಕಳ ತಲೆಯಲ್ಲಿ ಮೌಢ್ಯವನ್ನು ತುಂಬುವ ಕೆಲಸದಲ್ಲಿ ತೊಡಗಿಕೊಂಡಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದೆ! ಶಾಲೆಯಲ್ಲಿ ಮಾಡುವ ಕೆಲಸ ಯಾವುದು ದೇವಸ್ಥಾನ ಮತ್ತು ಮನೆಗಳಲ್ಲಿ ಮಾಡುವ ಕೆಲಸ ಯಾವುದು ಎಂಬ ಸರಿಯಾದ ಪರಿಜ್ಞಾನವಿಲ್ಲದೇ ಪರೀಕ್ಷೆ ಹತ್ತಿರ ಬಂದಾಗ ಶಾಲೆಯಲ್ಲಿ ಸರಸ್ವತು ಫೋಟೋಮುಂದೆ ಪರಿಕ್ಷಾ ಪ್ರವೇಶಪತ್ರಗಳನ್ನು ಇಟ್ಟು ಪೂಜೆಮಾಡಿಸಿ ಮಕ್ಕಳಿಗೆ ವಿತರಿಸಿ, ಪರೀಕ್ಷೆ ಬರೆಸುವ ಶಿಕ್ಷಕರು ಯಾವ ರೀತಿ ತಾನೆ ಮಕ್ಕಳಲ್ಲಿ ವೈಜ್ಞಾನಿಕ ವೈಚಾರಿಕ ಮನೋಭಾವನೆಯನ್ನು ಬೆಳೆಸಲಿಕ್ಕೆ ಸಾಧ್ಯ?
ಹೀಗೆ ಮಾಡುವುದರಿಂದ ವರ್ಷಪೂರ್ತಿ ಮಾಡಿದ ತಮ್ಮ ಪಾಠದ ಮೇಲೆ ತಮಗೇ ನಂಬಿಗೆಯಿಲ್ಲ ಎಂದೂ ತಾವು ಕಲಿಸುವ ಮಕ್ಕಳ ಶ್ರಮದ ಮೇಲೆ ತಮಗೆ ವಿಶ್ವಾಸವಿಲ್ಲವೆಂದೂ ಒಪ್ಪಿಕೊಂಡಂತೆ ಆಗುತ್ತದೆ ಎಂಬುದನ್ನು ಈ ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಅದೂ ಈ ಸರಸ್ವತಿ ಪೂಜೆಗೆ ಮೊದಲ ಆದ್ಯತೆಯಾಗಿ ಶುಕ್ರವಾರವನ್ನೂ ಎರಡನೆಯ ಆದ್ಯತೆಯಾಗಿ ಮಂಗಳವಾರವನ್ನೂ ಆಯ್ಕೆಮಾಡಿಕೊಳ್ಳುವುದರಿಂದ ವಾರದ ದಿನಗಳಲ್ಲಿಯೂ ಕೂಡ ʻಶ್ರೇಷ್ಠ-ಕನಿಷ್ಠ’ ʻಒಳ್ಳೆಯದಿನʼ ʻಕೆಟ್ಟದಿನʼ ಎಂಬ ʻಜಾತಿಭೇದʼವಿದೆ ಎಂಬ ತಪ್ಪು ಸಂದೇಶ ಮಕ್ಕಳಿಗೆ ರವಾನೆಯಾಗುತ್ತದೆ ಎಂಬುದರ ಕಡೆಗೂ ಅವರ ಗಮನ ಹರಿಯಬೇಕು. ಇನ್ನೂ ತಮಾಸೆಯ ಸಂಗತಿ ಎಂದರೆ ಅನೇಕ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸದೇ ಇರುವುದೂ ಇದೆ. ಕೆಲವು ಶಾಲೆಗಳಲ್ಲಿ ಕಾಟಾಚಾರಕ್ಕೆ ನಾಲ್ಕು ಮಾತು ಆಡಿ ಆಚರಣೆಯ ಶಾಸ್ತ್ರ ಮಾಡುವುದೂ ಇದೆ. ಆದರೆ ಈ ಎಲ್ಲ ಶಾಲೆಗಳಲ್ಲಿ ಸರಸ್ವತಿ ಪೂಜೆಯನ್ನು ಮಾತ್ರ ಬಹಳ ಅದ್ದೂರಿಯಾಗಿಯೇ ಮಾಡುತ್ತಾರೆ! ಇದರಲ್ಲಿ ಅನೇಕ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರೇ ಬಾಳೆಕಂಬ ತೋರಣ ಕಟ್ಟುವಲ್ಲಿ ಮುಂದಿರುವುದೂ ಇದೆ. ಮಕ್ಕಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವುದು ಕೇವಲ ವಿಜ್ಞಾನ ಶಿಕ್ಷಕರ ಜವಾಬ್ದಾರಿಯಲ್ಲ ಅದು ಎಲ್ಲ ಶಿಕ್ಷಕರ ಜವಾಬ್ದಾರಿ. ಆದರೆ ಅವರು ಡ್ರೈವರ್ ಸೀಟಿನಲ್ಲಿ ಇರುವುದರಿಂದ ಅವರ ಪ್ರಸ್ತಾಪ ಮಾಡಿದೆ ಅಷ್ಟೆ.
ಸರಸ್ವತಿ ಪೂಜೆ ಮಾಡುವುದು ಸರಿಯೋ ತಪ್ಪೋ ಎಂದು ಹೇಳುವುದು ಈ ಲೇಖನದ ಉದ್ದೇಶವಲ್ಲ. ಆದರೆ ಶಾಲೆಯಲ್ಲಿ ಯಾವುದನ್ನು ಶಿಕ್ಷಕರು ಆದ್ಯತೆಯಾಗಿ ಸ್ವೀಕರಿಸಿ ಮಾಡುತ್ತಿದ್ದಾರೆ ಎಂಬುದರ ಕಡೆಗೆ ಗಮನ ಸೆಳೆಯುವುದಕ್ಕಷ್ಟೇ ಇದನ್ನು ಪ್ರಸ್ತಾಪಿಸಿದೆ ಅಷ್ಟೆ. ಹಾಗಂತ ಯಾವ ಶಾಲೆಯಲ್ಲಿಯೂ ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕೆಲಸವನ್ನೇ ಮಾಡುತ್ತಿಲ್ಲ ಎಂದು ಆರೋಪ ಮಾಡುವುದೂ ಇಲ್ಲಿ ಸಲ್ಲ. ನನಗೆ ತಿಳಿದಂತೆ ಅನೇಕ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಅನೇಕ ಕೊರತೆಗಳ ನಡುವೆಯೂ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅತ್ಯಂತ ಶ್ರದ್ಧೆಯಿಂದ ಇದನ್ನು ಮಾಡುತ್ತಿದ್ದಾರೆ. ಅವರೆಲ್ಲರಿಗೂ ಮನದಾಳದ ಧನ್ಯವಾದಗಳನ್ನು ಸಲ್ಲಿಸಲೂ ನನಗೆ ಹೆಮ್ಮೆ ಅನ್ನಿಸುತ್ತದೆ. ಅಂತಹ ಶಿಕ್ಷಕರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂಬ ಕೊರಗಿನ ನಡುವೆಯೂ ಅವರೇ ನನಗೆ ಭರವಸೆಯ ಬೆಳಕಾಗಿ ಕಾಡುತ್ತಾರೆ. ʻಫೇಲಾಗುವ ಒಬ್ಬ ವಿದ್ಯಾರ್ಥಿಯನ್ನು ಪಾಸುಮಾಡುವ ಸಾಮರ್ಥ್ಯ ಯಾರಿಗಾದರೂ ಇದೆ ಎನ್ನುವುದಾದರೆ ಅದು ಶಿಕ್ಷಕರಾದ ತಮಗೇ ಹೊರತೂ ಸರಸ್ವತಿ ಸೇರಿದಂತೆ ಯಾರಿಗೂ ಇಲ್ಲʼ ಎಂಬ ತಿಳಿವಳಿಕೆ ನಮ್ಮ ಶಿಕ್ಷಕರಿಗೆ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೂ ಅವರು ಮಕ್ಕಳನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ಪ್ರಭಾವಿಸಲು ಸಾಧ್ಯವಿಲ್ಲ. ಕುರುಡ ಗುರುವಿನ ಕೈಹಿಡಿದು ನಡೆವ ಕುರುಡ ಶಿಷ್ಯರು ಪದೇ ಪದೇ ಎಡವಿ ಬೀಳುವುದನ್ನೇ ಎಡಬಿಡದೇ ನಡೆಯುತ್ತಿದ್ದೇವೆ ಅಂದುಕೊಂಡಂತಾಗುತ್ತದೆ ಅಷ್ಟೆ!
ಇಂತಹ ಅವೈಜ್ಞಾನಿಕ ಪರಿಸರದಲ್ಲಿ ನಮ್ಮ ದೇಶದ ಮುಂದಿನ ಪ್ರಜೆಗಳು ರೂಪುಗೊಳ್ಳುತ್ತಿರುವ ವಿಷಮಸ್ಥಿತಿ ನಮಗಿದೆ. ಮತಿಯ ವಿಕಸನಕ್ಕೆ ಮತ ಅಡ್ಡಿಯಾಗಿದೆ. ‘ಸಂಸ್ಕೃತಿಯ ಹೆಸರಿನಲ್ಲಿ ಮೌಢ್ಯವನ್ನು ಸಾಂಕ್ರಾಮಿಕ ರೋಗದಂತೆ ಹರಡುವ ಕೆಲಸಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಭಾರತದ ಸಂವಿಧಾನವು ಭಾರತೀಯ ನಾಗರಿಕರಿಗೆಂದು ನಿಗಧಿಪಡಿಸಿರುವ ಮೂಲಭೂತ ಕರ್ತವ್ಯಗಳ ಪಟ್ಟಿಯಲ್ಲಿ, “ವೈಜ್ಞಾನಿಕ ಮನೋಭಾವ, ಮಾನವತಾವಾದ, ವೈಚಾರಿಕ ಬುದ್ಧಿ ಮತ್ತು ಸುಧಾರಣೆ ಬೆಳೆಸಲೇಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ” (It shall be the duty of every citizen of India to develop the scientific temper, humanism and the spirit of enquiry and reform) (51 A) ಎಂದು ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ನಾವು ಯಾರೂ ಗಂಭೀರವಾಗಿ ತೆಗೆದುಕೊಂಡಂತೆಯೇ ಇಲ್ಲ.
ಅರಿಸ್ಟಾಟಲ್ ಮಾರ್ಗ, ಗೆಲಿಲಿಯೋ ಮಾರ್ಗ: ನಮ್ಮದು ಯಾವುದಿರಬೇಕು?
ಸ್ವಾತಂತ್ರ್ಯ ಸಿಕ್ಕ ಕಾಲಘಟ್ಟದಲ್ಲಿಯೇ ಆಚಾರ್ಯ ವಿನೋಬಾ ಭಾವೆ ಅವರು, “ಈಗ ಮತ ಮತ್ತು ಧರ್ಮಗಳ ಕಾಲ ಮುಗಿದುಹೋಗಿದೆ. ಇನ್ನೇನಿದ್ದರೂ ವಿಜ್ಞಾನ ಮತ್ತು ಅಧ್ಯಾತ್ಮದ ಕಾಲ’ ಎಂದಿದ್ದರು. ಅದಕ್ಕಿಂತ ಇಪ್ಪತ್ತೈದು ವರ್ಷಗಳ ಮೊದಲೇ ಕನ್ನಡದ ಮೇರು ಕವಿ ಕುವೆಂಪು, “ಹಳೆಮತದ ಕೊಳೆಯಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ” ಎಂದು ಬರೆದು ದೇಶದ ಯುವಕರಿಗೆ, “ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ” ಎಂದು ಕರೆ ನೀಡಿದ್ದರು. ನಾವಿಂದು ಅವರ ಹೇಳಿಕೆಗೆ ವಿರುದ್ಧ ದಾರಿಯಲ್ಲಿದ್ದೇವೆ. ನಮ್ಮ ಯುವಕರನ್ನು ಗುಡಿ ಚರ್ಚು ಮಸೀದಿಗಳ ಒಳಗೆ ಕಳಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಹೀಗೇ ಮಾಡುತ್ತಾ ಮಾಡುತ್ತಾ ನಮ್ಮ ದೇಶ ‘ವಿಶ್ವಗುರು’ ಆಗುತ್ತದೆ ಎಂದು ಸ್ವಕುಚಮರ್ಧನ ಮಾಡಿಕೊಳ್ಳುತ್ತಿದ್ದರೆ ʻವಿಶ್ವಗುರುʼ ಆಗುವ ಮಾತು ಸುಳ್ಳಾಗುತ್ತದೆ. ಹಾಗಾಗಬಾರದು ಎಂದರೆ ಅದಕ್ಕಿರುವ ಏಕೈಕ ಮಾರ್ಗ ಎಂದರೆ ದೇಶದ ಜನರಲ್ಲಿ ಧಾರ್ಮಿಕ ಮನೋಭಾವನೆಗಿಂತ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದಕ್ಕೆ ಆಧ್ಯತೆ ನೀಡುವುದು.
ವೈಜ್ಞಾನಿಕ ಮನೋಧರ್ಮ ಎಂದರೇನು? ಯಾವುದನ್ನೇ ಆದರೂ ಕಾರ್ಯಕಾರಣಗಳ ಸಂಬಂಧದಿಂದ ವಿವೇಚಿಸಿ ತೀರ್ಮಾನಕ್ಕೆ ಬರುವುದು. ಈ ಮನೋಧರ್ಮವನ್ನು ಮುಖ್ಯವಾಗಿ ನಾಲ್ಕು ಪ್ರಧಾನ ಗುಣಗಳು ನಿರ್ಧರಿಸುತ್ತವೆ. ಅವೆಂದರೆ ಮೊದಲನೆಯದು ʻಶ್ರುತಿʼ ಅಂದರೆ ತಿಳಿದುಕೊಳ್ಳುವುದರ ಬಗ್ಗೆ ಇರುವ ಜ್ಞೇಯನಿಷ್ಟತೆ, ಎರಡನೆಯದು ʻಕೃತಿʼ ಅಂದರೆ ಕಾರ್ಯ-ಕಾರಣ ಸಂಬಂಧಗಳ ಅನ್ವೇಷಣೆ. ಮೂರನೆಯದು ʻಧೃತಿʼ ಅಂದರೆ ವೈಜ್ಞಾನಿಕ ವಿಧಾನದಿಂದ ಎಂದೂ ವಿಚಲಿತರಾದದ ಧೈರ್ಯ ಮತ್ತು ಕೊನೆಯದಾಗಿ ʻಗತಿʼ. ಅಂದರ ಧಾರ್ಮಿಕ ಮತಮೌಢ್ಯಗಳಿಗೆ ಒಳಗಾಗದೆ ಈ ನಿಸರ್ಗದ ನಿಯಮಗಳಿಗೆ ಅನುಸಾರವಾಗಿ ನಡೆಯುವಿಕೆ.
ಅತ್ಯಂತ ನಿಗೂಢವೂ
ಕುತೂಹಲಕರವೂ ಅನೇಕ ವೇಳೆ ಅಭೇದ್ಯವೂ ಆಗಿರುವ ಈ ನಿಸರ್ಗದ ವಿದ್ಯಮಾನಗಳನ್ನು ಅರಿಯುವಲ್ಲಿ ನಾವು ಅನುಸರಿಸಬೇಕಾದ
ಎರಡು ಮಾರ್ಗಗಳಿವೆ. ಒಂದು ಅರಿಸ್ಟಾಟಲ್ ಮಾರ್ಗ. ಇನ್ನೊಂದು ಗೆಲಿಲಿಯೋ ಮಾರ್ಗ. ಅರಿಸ್ಟಾಟಲ್ ಮಾರ್ಗ
ಅನುಸರಿಸಿದರೆ ನಾವು ದೇವರು ಧರ್ಮ ಎಂದು ಹಿಂದಕ್ಕೆ ಹೋಗುತ್ತೇವೆ. ಗೆಲಿಲಿಯೋ ಮಾರ್ಗ ಅನುಸರಿಸಿದರೆ
ನಿಸರ್ಗನಿಯಮದಂತೆ ವಿಜ್ಞಾನಕ್ಕೆ ಒಗ್ಗಿಕೊಂಡು ಮುನ್ನಡೆಯುತ್ತೇವೆ. ಆಗ ಗೆಲುವು ನಮ್ಮದಾಗುತ್ತದೆ.
ಇಂಥದ್ದರ ಕಡೆ ನಾವು ಮುಖಮಾಡಲು ಚಿಂತಿಸಲು ವೇದಿಕೆಯಾದರೆ ಮಾತ್ರ ವಿಜ್ಞಾನದಿನಾಚರಣೆಗೆ ಒಂದು ಅರ್ಥ
ಬರುತ್ತದೆ. ಇಲ್ಲದೇ ಹೋದರೆ ಅದೂ ಕೂಡ ಅನೇಕ ದಿನಾಚರಣೆಗಳಂತೆ ಸಿ.ವಿ. ರಾಮನ್ ಫೋಟೋ ಇಟ್ಟು ಕೈಮುಗಿದು
ಕಾಯಿ ಒಡೆದು ಕೊಬರಿ ತಿನ್ನುವ ಅವೈಜ್ಞಾನಿಕ ಆಚರಣೆಯಾಗಿ ಅರ್ಥಹೀನವಾಗಿಬಿಡುತ್ತದೆ; ಹಾಗಾಗದಿರಲಿ. ಭಾರತದ ನಿಜ ಭಾಗ್ಯವಿಧಾತನ ಈ ಮಾತು ಸದಾ ನಮ್ಮ ನೆನಪಿನಲ್ಲಿರಲಿ: “ಯಾವ ದೇಶದಲ್ಲಿ ಶಾಲೆಗಳ
ಗಂಟೆಗಳ ಸದ್ದಿಗಿಂತ ದೇವಸ್ಥಾನಗಳ ಗಂಟೆಗಳ ಸದ್ದು ಹೆಚ್ಚಾಗಿ ಕೇಳುತ್ತದೆಯೋ ಆ ದೇಶ ಮುಂದುವರೆಯುವುದಿಲ್ಲ.” ಪಾಚಿಗಟ್ಟಿರುವ
ಮೌಢ್ಯವ ತೊಡೆಯುವ
ವಿಚಾರ ಶಕ್ತಿಯ
ಹೊನಲನು ತರುವ
ಅರಿವಿನ ಪರಿಧಿಯ
ವಿಸ್ತಾರಿಸುವ
ಶ್ರೀ ವಿಜ್ಞಾನಿಗೆ
ನಮೋ ನಮೋ.
*****
ಡಾ. ರಾಜೇಂದ್ರ
ಬುರಡಿಕಟ್ಟಿ
Originally written on 26-02-2021
(Recently updated on 27-02-2026)



ಈ ಲೇಖನ ಶಿಕ್ಷಯಾದ ನನಗೆ ಬಹಳ ಇಷ್ಟ ಎನಿಸಿತು .ಎಲ್ಲೊ ಅಂಧಕಾರದಲ್ಲಿ ಬೇರೆ ಬೇರೆ ಗುರಿ ಸಾಧನೆಗೆ ನಾವು ನಮ್ಮ ಅತ್ಯಮೂಲ್ಯ ಸಮಯ ವ್ಯಯವಾಗುತ್ತದೆ ಎಂದು ಅರಿವಾಯಿತು .
ReplyDelete👋
ReplyDelete