ಪವಾಡಗಳ ಮುಖವಾಡ
ಕಳಚಿದ ವಿಚಾರವಾದಿ…….
ಏಪ್ರಿಲ್ ಹತ್ತು ಜಗತ್ಪ್ರಸಿದ್ಧ ವಿಚಾರವಾದಿ ಚಿಂತಕ ಡಾ. ಅಬ್ರಹಾಂ ಟಿ. ಕೋವೂರ್ ಅವರ ಜನ್ಮದಿನ. ಅವರ ಜನ್ಮದಿನದ ಆಸುಪಾಸಿನಲ್ಲಿಯೇ ಅವರ ಪ್ರಾತಿನಿಧಿಕ ಲೇಖನಗಳ ಸಂಗ್ರಹವೆನ್ನಬಹುದಾದ ಕನ್ನಡ ಪುಸ್ತಕ ‘ದೇವರು ದೆವ್ವ ವಿಜ್ಞಾನ’ (ಸಂಪಾದಕರು: ಡಾ. ಪುರುಷೋತ್ತಮ ಬಿಳಿಮಲೆ) ಹದಿನಾಲ್ಕನೆಯ ಮುದ್ರಣವಾಗಿ ಪ್ರಕಟವಾಗಿ ಒಂದಿಷ್ಟು ಸುದ್ಧಿಮಾಡಿದೆ. ಭಾರತದಂತಹ ಭಾವುಕರ ದೇಶದಲ್ಲಿ ಮೌಢ್ಯವನ್ನು ಬಿತ್ತುವ, ಕೋಮದ್ವೇಷವನ್ನೋ ಜನಾಂಗಿಯ ಕಲಹಗಳನ್ನೋ ಬೆಳೆಸುವ ಪುಸ್ತಕಗಳು ಹತ್ತಾರು ಮುದ್ರಣ ಕಾಣುವುದು ವಿಶೇಷವಲ್ಲ. ಆದರೆ ನಾಸ್ತಿಕತೆಯನ್ನು ಪ್ರತಿಪಾದಿಸುವ, ಶುದ್ಧ ಮಾನವತ್ವದ ವೈಚಾರಿಕತೆಯನ್ನು ಬೆಂಬಲಿಸುವ ಇಂತಹ ಪುಸ್ತಕವೊಂದು ಇಷ್ಟೊಂದು ಮುದ್ರಣ ಕಾಣುವುದು ಸಾಮಾನ್ಯ ಸಂಗತಿಯಲ್ಲ. ಅವರ ಜನ್ಮದಿನ ಮತ್ತು ಈ ಪುಸ್ತಕದ ಮರುಮುದ್ರಣದ ನೆಪದಲ್ಲಿ ಅಬ್ರಹಾಂ ಟಿ. ಕೋವೂರ್ ಯಾರು ಅವರು ಮಾಡಿದ ವೈಚಾರಿಕ ಕ್ರಾಂತಿ ಏನು ಎಂಬುದನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು ಈ ಲೇಖನದ ಉದ್ದೇಶ.
ದೇವರು ದೇವಮಾನವರ ದೇಶ
ಈಗಾಗಲೇ ಹೇಳಿದಂತೆ ನಮ್ಮದು ಭಾವುಕರ ದೇಶ. ಹಾಗಾಗಿ ವೈಚಾರಿಕತೆ, ಮಾನವತೆ ಇವುಗಳಿಗಿಂತ ದೇವರು, ಧರ್ಮ, ಅಧ್ಯಾತ್ಮ ಇಂತಹುಗಳಿಗೆ ಇಲ್ಲಿ ಬೆಲೆ ಜಾಸ್ತಿ. ನಮ್ಮದು ಜನಸಂಖ್ಯೆಯಲ್ಲಿ ಮಾತ್ರ ದಟ್ಟವಾದ ದೇಶವಲ್ಲ. ದೇವಸಂಖ್ಯೆಯಲ್ಲಿಯೂ ಇದು ದಟ್ಟವಾದ ದೇಶವೇ. ಇಲ್ಲಿ ನಡೆಯುವ ದಶವಾರ್ಷಿಕ ಜನಗಣತಿಯಂತೆ ಈಗ ನಮ್ಮ ದೇಶದ ಜನಸಂಖ್ಯೆ ಸುಮಾರು ನೂರಾಮೂವತ್ತು ಕೋಟಿ. ಜನಗಣತಿಯಂತೆ ಇಲ್ಲಿ ದೇವಗಣತಿ ನಡೆಯುವುದಿಲ್ಲವಾದ್ದರಿಂದ ನಮ್ಮ ದೇಶದ ದೇವರುಗಳ ಸಂಖ್ಯೆಯನ್ನು ಕರಾರುವಕ್ಕಾಗಿ ಹೇಳಲು ಆಗದಿದ್ದರೂ ಕೆಲವು ಧಾರ್ಮಿಕ ನಾಯಕರು ಧರ್ಮಶಾಸ್ತ್ರಗಳನ್ನು ಉಲ್ಲೇಖಿಸಿ ಹೇಳುವ ಮಾತುಗಳ ಪ್ರಕಾರ ನಮ್ಮ ದೇಶದ ದೇವರುಗಳ ಸಂಖ್ಯೆ ಮೂವತ್ತುಮೂರು ಕೋಟಿ! ಅಂದರೆ ನಮ್ಮ ದೇಶದಲ್ಲಿ ಶಾಲೆಗಳಲ್ಲಿ ಶಿಕ್ಷರು ಮತ್ತು ವಿದ್ಯಾರ್ಥಿಗಳ ಅನುಪಾತಕ್ಕಿಂತ, ವೈದ್ಯರು ಮತ್ತು ರೋಗಿಗಳ ಅನುಪಾತಕ್ಕಿಂತ, ಕಳ್ಳರು ಮತ್ತು ಪೋಲೀಸರ ಅನುಪಾತಕ್ಕಿಂತ, ವಾಹನಗಳು ಮತ್ತು ಅವುಗಳ ಓಡಾಟವನ್ನು ನಿಯಂತ್ರಿಸುವ ಟ್ರಾಫಿಕ್ ಪೋಲೀಸರು ಇವರುಗಳ ಅನುಪಾತಕ್ಕಿಂತ ಈ ದೇಶದ ಜನಸಂಖ್ಯೆ ಮತ್ತು ದೇವರುಗಳ ಅನುಪಾತದ ಅಂತರ ತೀರಾ ಕಡಿಮೆ ಇದೆ! ಮೇಲಿನ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸರಾಸರಿ ನಲವತ್ತು ಜನರನ್ನು ನೋಡಿಕೊಳ್ಳುವುದಕ್ಕೆ ಒಬ್ಬ ದೇವರಿದ್ದಂತೆ ಆಗುತ್ತದೆ!!. ಇದರಲ್ಲಿ ದೇವರು ಮತ್ತು ಜನರ ನಡುವೆ ಮೀಡಿಯೇಟರ್ ಆಗಿ ಕೆಲಸಮಾಡುವ, ಪುರೋಹಿತರು, ದೇವಮಾನವರು, ಇತ್ಯಾದಿ ಸೇರಿಲ್ಲ. ಅವರ ಸಂಖ್ಯೆ ಸೇರಿದರೆ ಇದು ಇನ್ನೂ ಹತ್ತಿರಕ್ಕೆ ಸರಿಯುತ್ತದೆ!
ಇಲ್ಲಿ ದೇವರು, ಧರ್ಮ, ಅದ್ಯಾತ್ಮ ಇಂತಹ ಸಂಗತಿಗಳನ್ನು ಇಟ್ಟುಕೊಂಡು ಜನರನ್ನು ಹೇಗೆ ಬೇಕೋ ಹಾಗೆ ಆಟ ಆಡಿಸುವುದು ಬಹಳ ಸುಲಭವಾದ ಕೆಲಸ. ಹಾಗಾಗಿ ಈ ದೇಶ ಸ್ವಘೋಷಿತ ದೇವಮಾನವರಿಗೆ, ಪುರೋಹಿತರಿಗೆ, ಧರ್ಮದಲ್ಲಾಳಿಗಳಿಗೆ ಸಮೃದ್ಧವಾದ ತವರುಮನೆ. ಅವರೆಲ್ಲ ಜನರ ತಲೆತಿಕ್ಕಿ ಅವರ ತಲೆಯೊಳಗೆ ದೇವರು ಧರ್ಮಗಳ ಬಗ್ಗೆ ಭಯವನ್ನು ತುಂಬಿ ‘ಆ ಶಾಸ್ತ್ರ ಹಾಗೇ ಹೇಳುತ್ತೆ’ ‘ಈ ಶಾಸ್ತ್ರ ಹೀಗೆ ಹೇಳುತ್ತೆ’ ಎಂದು ಜನರನ್ನು ನಂಬಿಸಿ, ಅವರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಎಂಥೆಂಥದೋ ಆಚರಣೆಗಳನ್ನು ಹುಟ್ಟುಹಾಕಿ ಹೊಟ್ಟೆ ತುಂಬಿಸಿಕೊಂಡು ಜನರ ಜೇಬು ಮತ್ತು ತಲೆ ಎರಡನ್ನೂ ಖಾಲಿಮಾಡಿ ಅವರನ್ನು ಶೋಷಣೆಮಾಡುತ್ತಲೇ ಬಂದಿದ್ದಾರೆ. ಈ ಹಿನ್ನಲೆಯಲ್ಲಿಯೇ ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದ್ದನ್ನು ಖ್ಯಾತ ವಿಚಾರವಾದಿ ಶಿಕ್ಷಣ ತಜ್ಞ ಕರ್ನಾಟಕ ವಿಜ್ಞಾನ ಪರಿಷತ್ತಿನ ಸ್ಥಾಪಕ, ಡಾ. ಎಚ್. ನರಸಿಂಹಯ್ಯ ನವರು ತುಸು ಬದಲಿಸಿ, ‘ಭಯವೇ ಧರ್ಮದ ಮೂಲವಯ್ಯ’ ಎಂದು ಹೇಳಿ ತಮಾಸೆ ಮಾಡುತ್ತಿದ್ದರು!ಈ ದೇಶದ ಜನರನ್ನು ಹೀಗೆ ಧಾರ್ಮಿಕವಾಗಿ, ಬೋಳೇ ಸ್ವಭಾವದವರನ್ನಾಗಿ ಮಾಡಿ ಅವರನ್ನು ಆದಷ್ಟೂ ಅಜ್ಞಾನದ ಕತ್ತಲೆಯಲ್ಲಿಟ್ಟು ಆಡಳಿತ ಮಾಡುವ, ಸುಖಜೀವನ ನಡೆಸುವ ದೊಡ್ಡ ಪಡೆಯೊಂದು ಬಹಳಷ್ಟು ಕ್ರಿಯಾಶೀಲವಾಗಿರುವ ಸಂದರ್ಭಗಳಲ್ಲಿಯೇ, ಜನರಲ್ಲಿ ವೈಚಾರಿಕತೆಯ ಮನೋಭಾವನೆಯನ್ನು ಹೆಚ್ಚಿಸಿ ಅವರು ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಪ್ರಯತ್ನಗಳೂ ಕಡಿಮೆ ಪ್ರಮಾಣದಲ್ಲಿಯಾದರೂ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುತ್ತವೆ. ಇಂತಹ ಪ್ರಯತ್ನಗಳಲ್ಲಿ ಎದ್ದು ಕಾಣುವ ಪ್ರಯತ್ನ ಮಾಡಿದ ಮಜಾಗತಿಕ ಮಟ್ಟದ ವಿಚಾರವಾದಿಗಳಲ್ಲಿ ಡಾ. ಅಬ್ರಾಹಂ ಟಿ. ಕೋವೂರ್ ಅವರು ಪ್ರಮುಖರು.
ಸಸ್ಯಶಾಸ್ತ್ರಜ್ಞನ ವೃತ್ತಿ ಜೀವನ
ಹತ್ತೊಂಬತ್ತನೆ ಶತಮಾನದ ಕೊನೆಯ ವರ್ಷಗಳಲ್ಲಿ (1898)ಹುಟ್ಟಿ ಎಂಬತ್ತು ವರ್ಷಗಳ ತುಂಬ ಜೀವನ ನಡೆಸಿ 1978ರಲ್ಲಿ ನಮ್ಮನ್ನಗಲಿದ ಕೋವೂರ್ ಈ ಜಗತ್ತು ಕಂಡ ಮಹತ್ವದ ವಿಚಾರವಾದಿ ಚಿಂತಕ. ಹುಟ್ಟಿದ್ದು ಭಾರತದ ಕೇರಳ ರಾಜ್ಯವಾದರೂ ಅವರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡದ್ದು ಶ್ರೀಲಂಕಾವನ್ನು. ಒಂದು ಸಂಪ್ರದಾಯಸ್ಥ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಕೋವೂರ್, ಪಾದ್ರಿಯೊಬ್ಬರ ಮಗ. ಹಾಗೆ ನೋಡಿದರೆ ಒಬ್ಬ ಸಂಪ್ರದಾಯಸ್ತ ಕ್ರಿಶ್ಚಿಯನ್ ಧರ್ಮಾನುಯಾಯಿಯಾಗಲು ಬೇಕಾದ ಎಲ್ಲ ಬಗೆಯ ಪೂರಕ ವಾತಾವರಣದಲ್ಲಿಯೇ ಹುಟ್ಟಿ ಬೆಳೆದರು. ಆದರೆ ಅದಕ್ಕೆ ವಿರುದ್ಧವಾಗಿ ಅಪ್ಪಟ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇಡೀ ಜಗತ್ತಿಗೆ ಬೆಳಕಾಗುವಂತಹ ಪ್ರಖರ ವಿಚಾರವಾದಿಯಾಗಿ ಅವರು ರೂಪಗೊಂಡದ್ದು ಒಂದು ಮಹತ್ವದ ಸಂಗತಿಯೇ ಸರಿ.
ಕಲ್ಕತ್ತಾದಲ್ಲಿ ಸಸ್ಯಶಾಸ್ತ್ರದ ಅಧ್ಯಯನವನ್ನು ಮಾಡಿ, ಕೇರಳದ ಕೊಟ್ಟಾಯಂ ನಲ್ಲಿ ಕೆಲವು ಕಾಲ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಬಿಟ್ಟರೆ ಕೋವೂರ್ ಅವರ ಉಳಿದೆಲ್ಲ ಜೀವನ ನಡೆದದ್ದು ಶ್ರೀಲಂಕಾದಲ್ಲಿಯೇ. ಅತ್ಯುತ್ತಮ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಕೋವೂರ್ ಅವರಿಗೆ ವಿಚಿತ್ರವೆಂದರೆ ಸಸ್ಯಶಾಸ್ತ್ರದ ಜೊತೆಗೆ ಧರ್ಮದ ಬಗ್ಗೆಯೂ ತರಗತಿಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿತ್ತಂತೆ! ಆದರೆ ಆ ಕೆಲಸದಿಂದ ಅವರನ್ನು ಬಹಳ ಬೇಗ ಬಿಡಿಸಲಾಯಿತು ಕೂಡ!! ಅವರಿಗೆ ಧರ್ಮದ ಬಗ್ಗೆ ಪಾಠಮಾಡಲು ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕಲ್ಲ; ಅವರ ಪಾಠ ಕೇಳಿದ ಮೇಲೆ ಯಾವ ವಿದ್ಯಾರ್ಥಿಯೂ ಧಾರ್ಮಿಕನಾಗಿ ಉಳಿಯುವುದಿಲ್ಲ ಎಂದು!!!
ಶ್ರೀಲಂಕಾದ ಬೇರೆ ಬೇರೆ ಕಾಲೇಜುಗಳಲ್ಲಿ ಸೇವೆಸಲ್ಲಿಸಿ, ಕೊನೆಗೆ ಕೋಲೋಂಬೋದ ಕಾಲೇಜೊಂದರಲ್ಲಿ ಜೀವಶಾಶ್ತ್ರ ವಿಭಾಗದ ಮುಖ್ಯಸ್ಥರಾಗಿ 1959ರಲ್ಲಿ ನಿವೃತ್ತರಾದ ಡಾ. ಕೋವೂರ್ ಅವರು ಇಂದು ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವುದು ಅವರು ತಮ್ಮ ವೃತ್ತಿಜೀವನದ ಸಂದರ್ಭದಲ್ಲಿನ ಸಸ್ಯಶಾಸ್ತ್ರದ ಪರಿಣಿತಿಯಿಂದಾಗಿಯಲ್ಲ; ಬದಲಿಗೆ ತಮ್ಮ ವೃತ್ತಿಜೀವನದ ನಿವೃತ್ತಿಯ ನಂತರ ಪ್ರಪಂಚದ ವೈಚಾರಿಕತೆ ಅದರಲ್ಲಿಯೂ ನಾಸ್ತಿಕತೆಯ ಮಹತ್ವದ ಬಗ್ಗೆ ಅವರು ಮಂಡಿಸಿದ ಕ್ರಾಂತಿಕಾರಿ ವಿಚಾರಗಳಿಂದ. ಇಡೀ ಪ್ರಪಂಚದಲ್ಲಿಯೇ ದೇವರು, ದೆವ್ವ ಇತ್ಯಾದಿಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿ, ಪವಾಡಗಳನ್ನು ಕುರಿತು ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಎಂಬ ಕೀರ್ತಿಯೂ ಡಾ ಕೋವೂರ್ ಅವರಿಗೆ ಸಲ್ಲುತ್ತದೆ. ಈ ಬಗ್ಗೆ ಅವರು ರಚಿಸಿ ಸಲ್ಲಿಸಿದ ‘Phychic and Para-Physhic Phenomena’ ಎಂಬ ಸಂಶೋಧನಾ ಪ್ರಪಂಧಕ್ಕೆ ಅಮೇರಿಕೆಯ ಪ್ರತಿಷ್ಠಿತ ಸಂಸ್ಥೆಯೊಂದು ಅವರಿಗೆ Ph.D ಪದವಿಯನ್ನು ನೀಡಿ ಗೌರವಿಸಿತು.ಪವಾಡಪುರುಷರ
ಪವಾಡ ಬಯಲುಗೊಳಿಸಿದ ವಿಜ್ಞಾನಿ
ನಿವೃತ್ತಿಯ ನಂತರ ಇಡೀ ಪ್ರಪಂಚದ ಜನಮಾನಸದ ವೈಚಾರಿಕತೆಯನ್ನು ವೃದ್ಧಿಸಲು ಹಗಲಿರುಳು ದುಡಿದ ಡಾ ಕೋವೂರ್ ಅವರು ಬದುಕಿದಷ್ಟೂ ವರ್ಷಗಳು ಇಡೀ ಪ್ರಪಂಚದ ಎಲ್ಲ ಧರ್ಮಗಳ ಧರ್ಮಗುರುಗಳಿಗೆ, ವಿಶೇಷವಾಗಿ ಭಾರತದ ಎಲ್ಲಬಗೆಯ ವಂಚಕ ದೇವಮಾನವರಿಗೆ, ಪವಾಡಪುರುಷರಿಗೆ ಸಿಂಹಸ್ವಪ್ನವಾಗಿದ್ದರು. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಪವಾಡಗಳ ಹೆಸರಿನಲ್ಲಿ ನಡೆಯುವ ವಂಚನೆಗಳನ್ನು ಬಲೆಗೆ ಬೀಳದಂತೆ ಜನರನ್ನು ಎಚ್ಚರಿಸುವ ಉಪನ್ಯಾಸಗಳನ್ನು ನೀಡುತ್ತಿದ್ದ ಕೋವೂರ್ ಅವರ ಹೆಚ್ಚುಗಾರಿಕೆ ಎಂದರೆ ಪವಾಡಪುರುಷರು ಮಾಡುತ್ತಿದ್ದ ಅನೇಕ ಪವಾಡಗಳನ್ನು ಅವರೇ ಸ್ವತಃ ಮಾಡಿತೋರಿಸಿ ಅಲ್ಲಿರುವ ವೈಜ್ಞಾನಿಕತೆಯನ್ನು ಜನರಿಗೆ ಮನದಟ್ಟುಮಾಡಿಕೊಡುತ್ತಿದ್ದುದು. ಅತೀಂದ್ರಿಯ, ಅತಿಮಾನಸ ಶಕ್ತಿಯೆಂಬುದೊಂದು ಯಾವ ಕಾಲದಲ್ಲಿಯೂ ಇರಲಿಲ್ಲ. ಈಗಲೂ ಇಲ್ಲ ಎಂಬ ಸ್ಪಷ್ಟ ನಿಲುವಿನವರಾಗಿದ್ದ ಅವರು ಅತೀಂದ್ರಿಯ, ಅತಿಮಾನಸ ಹಾಗೂ ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದ್ದೇವೆಂದು ಹೇಳಿಕೊಳ್ಳುವವರೆಲ್ಲ ವಂಚಕರು ಇಲ್ಲವೇ ಮನೋರೋಗಿಗಳು ಎಂದೇ ಹೇಳುತ್ತಿದ್ದರು.
ಸಾಯಿಬಾಬಾ ಸೇರಿದಂತೆ ಎಲ್ಲ ಪವಾಡಪುರುಷರಿಗೆ ಅನ್ವಯವಾಗುವ, 22 ರೀತಿಯ ಪವಾಡಗಳನ್ನು ಸೂಚಿಸಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿತೋರಿಸಿದರೆ ಒಂದು ಲಕ್ಷ್ಮ ರೂ.ಗಳ ಬಹುಮಾನ ನೀಡುವುದಾಗಿ ಅವರು ಹಾಕಿದ ಪಂಥಾಹ್ವಾನವನ್ನು ಸ್ವೀಕರಿಸಲು ಯಾವೊಬ್ಬ ಪವಾಡಪುರುಷನೂ ಅವರು ಸಾಯುವವರೆಗೂ ಮುಂದೆಬರಲಿಲ್ಲ. ನಮ್ಮ ದೇವಮಾನವರು, ಪವಾಡಪುರುಷರು ಮಾಡುವ ಪವಾಡಗಳನ್ನು ಅವುಗಳ ಹಿಂದಿನ ವೈಜ್ಞಾನಿಕ ಸಂಗತಿಗಳನ್ನು ಅರಿಯದೆ ಬೆರಗುಗಣ್ಣಿನಿಂದ ನೋಡಿ ಚೆಪ್ಪಾಳೆತಟ್ಟಿ ಕಾಲಿಗೆ ಬೀಳುವ, ದಕ್ಷಿಣೆಕೊಟ್ಟು ಕಳಿಸುವ ಲಕ್ಷಾಂತರ ಮೂಢಭಕ್ತರು ಇರುವಾಗ ಇಂತಹ ಕಷ್ಟಕರ ಪಂಥವನ್ನು ಸ್ವೀಕರಿಸಿ ನಗೆಪಾಟಲಿಗೀಡಾಗುವ ತೊಂದರೆಯನ್ನು ಅವರೇಕೆ ತೆಗೆದುಕೊಳ್ಳುತ್ತಾರೆ?ಸಾಹಿತ್ಯ
ಮತ್ತು ಚಲನಚಿತ್ರಗಳ ಮೂಲಕ ವೈಚಾರಿಕ ಕ್ರಾಂತಿ
ಹೀಗೆ ಪ್ರಕರವಿಚಾರವಾದಿಯಾಗಿ ಪ್ರಪಂಚ ವೈಚಾರಿಕತೆಯನ್ನು ಎತ್ತರಿಸುವಲ್ಲಿ ಜೀವನ ಪರ್ಯಂತ ಶ್ರಮಿಸಿದ ಡಾ. ಕೋವೂರ್ ಅವರು ತಮ್ಮ ವೈಚಾರಿಕತೆಯನ್ನು ಪ್ರತಿಪಾದಿಸುವ ಅನೇಕ ಪುಟ್ಟ ಪುಟ್ಟ ಲೇಖನಗಳನ್ನು ಬರೆದು ಜನರನ್ನು ಮುಟ್ಟುವ ಪ್ರಯತ್ನ ಮಾಡಿದರು. ಅವರು ಬರೆದ ಪುಸ್ತಕಗಳಲ್ಲಿ ‘ದೇವಮಾನವರೆ ತೊಲಗಿ’ (Begone Godmen) , ‘ದೇವರುಗಳು, ದೆವ್ವಗಳು ಮತ್ತು ಆತ್ಮಗಳು’ (Gods, Demons and Spirits) ‘ಮಾನಸಿಕ ಅತಿರೇಖದ ಘಟನೆಗಳ ಅನಾವರಣ’ (Exposing Paranormal Claims) ‘ಆತ್ಮ, ಚೈತನ್ಯ, ಮರುಹುಟ್ಟು ಮತ್ತು ಸ್ವಾಧೀನತೆ’ (Soul, Spiril, Rebirth & Possessin) ‘ಕ್ರೈಸ್ತಧರ್ಮವನ್ನು ಕುರಿತು’ (On Christianity) ‘ಬೌದ್ಧಧರ್ಮವನ್ನು ಕುರಿತು’ (On Buddhism) ‘ಜೋತಿಷ್ಯ ಮತ್ತು ಹಿಂದೂಧರ್ಮ’ (Astrology & Hinduism) ಪ್ರಮುಖವಾದವು. ಇಂಗ್ಲಿಷ್ ಭಾಷೆಯಲ್ಲಿರುವ ಅವರ ಬಹುತೇಕ ಪುಸ್ತಕಗಳು ತಮಿಳು, ಮಲೆಯಾಳಂ, ಹಿಂದಿ, ಪಂಜಾಬಿ, ಸಿಂಹಳ ಹೀಗೆ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡು ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಿಂದ ಪ್ರಕಟಗೊಂಡಿವೆ.
ಕೋವೂರ್ ತಮ್ಮ ವೈಚಾರಿಕತೆಯನ್ನು ಜನರಿಗೆ ಮುಟ್ಟಿಸಲು ಪುಸ್ತಕಗಳ ಬರೆವಣಿಗೆಯ ಜೊತೆಗೆ ಚಲನಚಿತ್ರ ಮಾಧ್ಯಮವನ್ನೂ ಬಳಸಿಕೊಂಡರು. 1972 ರಲ್ಲಿ ಕೆ.ಎಸ್. ಸೇತುಮಾಧವನ್ ನಿರ್ದೇಶನದಲ್ಲಿ ತೆರೆಕಂಡ ಮಲೆಯಾಳಿ ಚಲನಚಿತ್ರ ‘ಪುನರ್ಜನ್ಮಮ್’ ಕೋವೂರ್ ಅವರು ಬರೆದ ಕಥೆಯನ್ನಾಧರಿಸಿದ ಸಿನೇಮಾ. ತನ್ನ ತೀರಿಹೋದ ತಾಯಿಯ ದೀರ್ಘಕಾಲೀನ ಗೀಳು ಅರವಿಂದನ್ ಎಂಬ ವ್ಯಕ್ತಿ ತಾನು ಮದುವೆಯಾದ ಹೆಂಡತಿ ರಾಧಾ ಎಂಬುವಳಲ್ಲಿ ತನ್ನ ತಾಯಿಯನ್ನು ಕಾಣುವುದು ಇದು ಗಂಡ-ಹೆಂಡತಿ ನಡುವೆ ಇರಬೇಕಾದ ಪ್ರೇಮಕಾಮದ ಸಹಜ ಸಂಬಂಧಕ್ಕೆ ಅಡ್ಡಿಪಡಿಸಿ ಅವರ ಸಂಬಂಧವನ್ನು ಹಾಳುಮಾಡುವುದು ಇದರ ಕಥಾವಸ್ತು. ಅದರಂತೆ 1973ರಲ್ಲಿ ತಮಿಳಿನಲ್ಲಿ ಬಂದ ‘ಮರು ಪಿರಾವಿ’ ಹಾಗೇ ತೆಲುಗಿನಲ್ಲಿ ಬಂದ ‘ನಿಂತಕಾಂತ’ ಕೋವೂರ್ ಅವರ ಟಿಪ್ಪಣಿ ಕಥೆ, ಸತ್ಯಕತೆ ಸಂಶೋಧನಾ ಸಾಹಿತ್ಯವನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರಗಳು. 2014 ರಲ್ಲಿ ಬಿಡುಗಡೆಯಾಗಿ ತುಂಬಾ ಹೆಸರು ಮಾಡಿದ ಅಮೀರ್ ಖಾನ್ ಅಭಿನಯದ ಪ್ರಸಿದ್ಧ ಹಿಂದಿ ಚಲಹಚಿತ್ರ ‘ಪಿಕೆ’ ಯಲ್ಲಿ ಅಮೀರ್ ಖಾನ್ ಪಾತ್ರದ ಮೇಲೆ ಕೋವೂರ್ ಪ್ರಭಾವವನ್ನು ದಟ್ಟವಾಗಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ‘ಭಾರತೀಯ ಯುಕ್ತವಾದಿ ಸಂಘಟನೆ’ಯು ಕೋವೂರ್ ಹೆಸರಿನಲ್ಲಿ ಜಾತ್ಯತೀತ ಕಲಾವಿದರಿಗೆಂದೇ ರಾಷ್ಟ್ರೀಯ ಪ್ರಶಸ್ತಿಯೊಂದನ್ನು ಸ್ಥಾಪಿಸಿದಾಗ ಅದಕ್ಕೆ ಮೊದಲ ಆಯ್ಕೆಯಾದವರು ದಕ್ಷಿಣ ಭಾರತದ ಬಹುಭಾಷಾ ನಟ ಕಮಲ ಹಾಸನ್ ಅವರು.
ದೇವರು ದೆವ್ವ ವಿಜ್ಞಾನ
ಹಾಗೆ ನೋಡಿದರೆ ಕೋವೂರ್ ಅವರ ಪುಸ್ತಕಗಳು ಕನ್ನಡಕ್ಕೆ ಬಂದದ್ದು ಉಳಿದ ಭಾಷೆಗಳಿಗೆ ಹೋಲಿಸಿದರೆ ಕಡಿಮೆ ಎಂದೇ ಹೇಳಬೇಕು. ಡಾ. ಬಿ.ವಿ. ವೀರಭದ್ರಪ್ಪನವರ ಕೆಲವು ಲೇಖನಗಳು, ಕೆ. ಮಾಯಿಗೌಡ ಅವರ ‘ಕೋವೂರ್ ಕಂಡ ವೈಜ್ಞಾನಿಕ ಸತ್ಯ’ ಇವನ್ನು ಇಲ್ಲಿ ಉಲ್ಲೇಖಿಸಬಹುದು. ಇವುಗಳ ಜೊತೆಗೆ ಈ ಲೇಖನದ ಆರಂಭದಲ್ಲಿಯೇ ಉಲ್ಲೇಖಿಸಲಾದ ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ಬಂದ ಪುಸ್ತಕ ಬಹಳ ಮುಖ್ಯವಾದದ್ದು. ಕೋವೂರ್ ಅವರ ಚಿಕ್ಕದಾದ ಆದರೆ ಮಹತ್ವದ ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಿ, ಕನ್ನಡಕ್ಕೆ ಭಾಷಾಂತರಿಸಿ ಅವನ್ನು ಕನ್ನಡಿಗರಿಗೆ ತಲುಪಿಸುವ ಕಾರ್ಯವನ್ನು ಸುಮಾರು ಮೂವತ್ತು ವರ್ಷಗಳ ಹಿಂದೆ ಅವರು ಈ ಪುಸ್ತಕದ ಮೂಲಕ ಮಾಡಿದರು.
ಇಪ್ಪತ್ತೆರಡು ಪ್ರಮುಖ ಲೇಖನಗಳ ಈ ಪುಸ್ತಕವನ್ನು 1988ರಲ್ಲಿ ಮೊದಲಬಾರಿ ಪ್ರಕಟಿಸಿದ್ದು ನವಕರ್ನಾಟಕ ಪ್ರಕಾಶನ. ಕನ್ನಡದ ಪ್ರಸಿದ್ಧ ಲೇಖಕರಾದ, ಮಹಾಬಲೇಶ್ವರ ರಾವ್, ಸಬಿಹಾ ಗಜೇಂದ್ರಗಡ (ಸಬಿಹಾ ಭೂಮಿಗೌಡ), ಸೇರಿದಂತೆ ಎಚ್.ಎಂ. ಕುಮಾರಸ್ವಾಮಿ, ತೀ.ನಂ ಶ್ರೀಧರ ಮುಂತಾದವರು ಅನುವಾದಿಸಿರುವ ಈ ಪುಸ್ತಕದಲ್ಲಿ ‘ತುಂಟ ಪಿಶಾಚಿ’ ‘ಬದುಕಿದ್ದವನ ಭೂತ’ ‘ಮನಸ್ಸನ್ನು ಓದುವ ಕುದುರೆ’ ‘ಪ್ರೇಮದಲ್ಲಿ ಸಿಲುಕಿದ ದೆವ್ವ’ ‘ಲತಾ ಹಾಗೂ ಅವಳ ನಿಗೂಢ ಪ್ರೇಮಿ’ ಮುಂತಾದ ಹಾಸ್ಯಸ್ವರೂಪದ ಲಘುಧಾಟಿಯ ಆದರೆ ಆ ಮೂಲಕ ಪ್ರಕರ ವೈಚಾರಿಕತೆಯನ್ನು ನೀಡುವ ಲೇಖನಗಳಿರುವುದರ ಜೊತೆಗೆ, ‘ಪವಾಡಗಳ ವೃತ್ತಾಂತ’ ‘ಇಂಡಿಯಾದ ದೇವಮಾನವರು’ ‘ದೇವರ ಕಲ್ಪನೆ’ ‘ಸಾವಿನಾಚೆಯ ಬದುಕು’ ‘ವಂಚಕ ಅನುಭವಗಳು’ ‘ಧ್ಯಾನದಿಂದ ಜ್ಞಾನೋದಯ’ ‘ಶಾಲೆಗಳಲ್ಲಿ ಧರ್ಮಭೋಧನೆ’ ‘ಉಳಿವಿಗಾಗಿ ಮಿಶ್ರವಿವಾಹಗಳಿಗೆ ಪ್ರೋತ್ಸಾಹ’ ಇತ್ಯಾದಿ ಗಂಭೀರಸ್ವರೂಪದ ಲೇಖನಗಳೂ ಇವೆ.
ಮೌಢ್ಯದೆದುರು ಮಂಡಿಯೂರುತ್ತಿರುವ ವೈಚಾರಿಕತೆ
ಭಾರತದಂತಹ ದೇಶದಲ್ಲಿ ಮೌಢ್ಯವನ್ನು ಬಿತ್ತುವವರಿಗೆ ಬಹಳಷ್ಟು ಗೌರವವಿದೆ. ಆದರೆ ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವವರಿಗೆ ಆ ಗೌರವವಿಲ್ಲ. ಗೌರವದ ಕಥೆ ಒಂದೆಡೆ ಇರಲಿ. ಇತ್ತೀಚೆಗೆ ಅವರ ಬಗ್ಗೆ ವೈಚಾರಿಕ ಭಿನ್ನಾಭಿಪ್ರಾಯವನ್ನು ಗೌರವಿಸುವಲ್ಲಿ ಸಹಜವಾಗಿ ಇರಬೇಕಾದ ಒಂದು ಸಹನೆಯೂ ಇಲ್ಲವಾಗಿದೆ. ನರೇಂದ್ರ ದಾಬೋಲ್ಕರ್, ಪನ್ಸಾರೆ, ನಮ್ಮವರೇ ಆದ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳು ವೈಚಾರಿಕತೆಗೆ ನಾವು ಯಾವ ಬೆಲೆಯನ್ನು ತೆರಬೇಕಾಗಿದೆ ಎಂಬುದನ್ನು ತೋರಿಸಿಕೊಟ್ಟಿವೆ. ವಾದವನ್ನು ವಾದದಿಂದ ಎದುರಿಸಲು ಸಾಧ್ಯವಿಲ್ಲದ ಹೇಡಿಗಳು ತಮ್ಮ ಸಂಸ್ಕೃತಿ, ಧರ್ಮ ಇತ್ಯಾದಿಗಳ ರಕ್ಷಣೆಯನ್ನು ಮುಂದುಮಾಡಿ ದೈಹಿಕ ಹಲ್ಲೆಗೆ ಮುಂದಾಗುವುದು ಇತ್ತೀಚೆಗೆ ಮಿತಿಮೀರಿದೆ. ಇದು ದೇಶವೊಂದು ತನ್ನ ಸಂಸ್ಕೃತಿ, ಧರ್ಮಗಳ ಹೆಚ್ಚುಗಾರಿಕೆಯನ್ನು ಜಂಭಕೊಚ್ಚಿಕೊಳ್ಳುತ್ತಲೇ ತನಗರಿವಿಲ್ಲದಂತೆ ಅವನತಿಯತ್ತ ಸಾಗುತ್ತಿರುವುದರ ಲಕ್ಷಣವೂ ಹೌದು. ಈ ವಿದ್ಯಮಾನಗಳು ನಡೆಯುವುದು ಈ ವೈಚಾರಿಕತೆಯ ಪ್ರಸಾರವನ್ನು ತಡೆಹಿಡಿಯುವ ಪ್ರಯತ್ನವಾಗಿ. ವೈಚಾರಿಕರನ್ನು ಹತ್ಯೆ ಮಾಡುವ ಜೊತೆಗೆ ವೈಚಾರಿಕತೆಯನ್ನು ಬೆಳೆಸುವ ಬಹುಮುಖ್ಯ ಪುಸ್ತಕಗಳನ್ನು ನಿಷೇಧಿಸುವ ಕ್ರಮಗಳೂ ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಕೋವೂರ್ ಅವರ ಪುಸ್ತಕಗಳೂ ಹೊರತಾಗಿರಲಿಲ್ಲ. ಬಹುತೇಕ ವೈಚಾರಿಕ ಬರೆಹಗಳ ಹಾಘೆ ಕೋವೂರ್ ಅವರ ಪುಸ್ತಕಗಳೂ ಸಹಜವಾಗಿ ವಿವಾದವನ್ನು ಹುಟ್ಟುಹಾಕಿವೆ. ಅದಕ್ಕೆ ಒಂದು ಉದಾಹರಣೆ ಎಂದರೆ 2008 ರಲ್ಲಿ ಕೋವೂರ್ ಅವರ ಪ್ರಸಿದ್ಧ ಪುಸ್ತಕ ‘ದೇವರುಗಳು, ದೆವ್ವಗಳು ಮತ್ತು ಆತ್ಮಗಳು’ (Gods, Demons and Spirits) ಪಂಜಾಬಿ ಭಾಷೆಗೆ ಅನುವಾದವಾದಾಗ ಅದನ್ನು ಶಿರೋಮಣಿ ಅಕಾಲಿದಳ ನಾಯಕ ಪ್ರಕಾಶ ಸಿಂಗ್ ಬಾದಲ್ ನೇತೃತ್ವದ ಸರ್ಕಾರ ನಿಷೇಧಿಸಿದ್ದು!
ಕಾಲಕಸವಾಗುತ್ತಿರುವ ಸಂವಿಧಾನದ ಆಶಯ
ಜನರು ವಿದ್ಯಾವಂತರಾದರೆ ವಿಚಾರವಂತರಾಗುತ್ತಾರೆ ಎಂದು ನಂಬಿಕೊಂಡಿದ್ದವರಿಗೆಲ್ಲ ನಿರಾಶೆಯಾಗುವಂತೆ ಹಿಂದೆಂದಿಗಿಂತಲೂ ಜಮ್ಮ ಜನ ಇಂದು ಸಂಸ್ಕೃತಿ ಪರಂಪರೆಯ ಹೆಸರಿನಲ್ಲಿ ಮೌಢ್ಯಕ್ಕೆ ಶರಣಾಗುತ್ತಿದ್ದಾರೆ. ತಮ್ಮ ನಂಬಿಕೆಗಳನ್ನು ಮೂಢನಂಬಿಕೆಗಳನ್ನಾಗಿ ಮಾಡಿಕೊಂಡಿದ್ದಾರೆ. ಭಾರತದ ಸಂವಿಧಾನದ 54ನೇ ವಿಧಿಯು ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಸ್ಪಷ್ಟಪಡಿಸಿದ್ದರೂ ಅದರ ಕಡೆ ಬಹುತೇಕ ಯಾರ ಗಮನವೂ ಇದ್ದಂತಿಲ್ಲ. ಇತ್ತೀಚಿನ ದಿನಗಳಲ್ಲಿಯಂತೂ ದೇಶಭಕ್ತಿಯ ಹೆಸರಿನಲ್ಲಿ ಧರ್ಮಭಕ್ತಿಯನ್ನು ಬೆರೆಸಿ ಜನರನ್ನು ಗೊಂದಲದ ಸ್ಥಿತಿಗೆ ನೂಕಲಾಗುತ್ತಿದೆ. ದೇಶದ ಬೆಳೆಯುವ ಯುವಸಮುದಾಯದ ಉತ್ಸಾಹವನ್ನು ಉದ್ರೇಕವನ್ನಾಗಿ ಮಾಡಿಕೊಂಡು ಯುವಜನರನ್ನು ದಾರಿತಪ್ಪಿಸಲಾಗುತ್ತಿದೆ. ಅವರು ದೇಶಭಕ್ತರಾಗುವುದಕ್ಕಿಂತ ಬೇರೆ ದೇಶ ಬೇರೆ ಧರ್ಮ ಇತ್ಯಾದಿಗಳ ಬಗ್ಗೆ ದ್ವೇಷಭಕ್ತರಾಗುವಂತೆ ಮಾಡಿ ಅಧಿಕಾರಮೋಹಿಗಳು ಲಾಭಮಾಡಿಕೊಳ್ಳುತ್ತಿದ್ದಾರೆ. ದೊಡ್ಡದೊಡ್ಡ ವಿದ್ಯಾವಂತರಾದವರೂ ಕಾವಿಯನ್ನು ಕಂಡತಕ್ಷಣ ಹಿಂದೆಮುಂದೆ ನೋಡದೆ ದಢಾರನೆ ಕಾಲಿಗೆ ಬೀಳುವ ಮಟ್ಟಕ್ಕೆ ಇಳಿದಿದ್ದಾರೆ. ನಿಜವಾದ ದೇಶವಿರುವುದು ಭೂಪಟದಲ್ಲಿಯಲ್ಲ; ಭೂಮಿಯಲ್ಲಿಯೂ ಅಲ್ಲ. ಈ ಭೂಪ್ರದೇಶದ ಜನರಲ್ಲಿ. ಜನರು ಸ್ವತಂತ್ರ ಆಲೋಚಕರಾಗಿ ದೇಶಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡರೆ ಮಾತ್ರ ದೇಶಕ್ಕೆ ಭವಿಷ್ಯವಿದೆ. ಎಲ್ಲಿಯವರೆಗೆ ಪವಾಡಪುರುಷರ, ವಂಚಕರ ಬಲೆಗೆ ತಲೆಯನ್ನು ಜನ ಕೊಡುತ್ತಾ ಹೋಗುತ್ತಾರೋ ಅಲ್ಲಿಯವರೆಗೆ ಅವರ ಮೇಲಿನ ಶೋಷಣೆ ತಪ್ಪುವುದಿಲ್ಲ. ದೇಶವೂ ಉದ್ದಾರವಾಗುವುದಿಲ್ಲ. ಉದ್ದಾರವಾಗುವವರು ವಂಚಕರು ಮಾತ್ರ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶ ಇರುವಾಗ ಜನರ ವೈಚಾರಿಕತೆಯನ್ನು ಅದರಲ್ಲಿಯೂ ಹಾದಿತಪ್ಪಿ ಹೋಗುತ್ತಿರುವ ನಮ್ಮ ಯುವಜನತೆಯ ಅರಿವನ್ನು ಹೆಚ್ಚಿಸಿ ಅವರು ಸ್ವತಂತ್ರವಾಗಿ ಆಲೋಚಿಸುವಂತೆ ಮಾಡಬೇಕಾದದ್ದು ನಮ್ಮ ಸಂವಿಧಾನವೇ ಹೇಳಿರುವಂತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ಇಂದಿನ ತುರ್ತು ಅಗತ್ಯಕೂಡ. ಹೀಗೆ ಮಾಡುವಲ್ಲಿ ನಮಗೆ ಕೋವೂರ್ ಅವರ ಕೃತಿಗಳು ಅಪೂರ್ವ ಮಾರ್ಗದರ್ಶನ ಮಾಡಬಲ್ಲವು. ಕನ್ನಡದಲ್ಲಿ ಲಭ್ಯವಿರುವ ಕೋವೂರ್ ಅವರ ಪುಸ್ತಕಗಳನ್ನು ಅದರಲ್ಲಿಯೂ ‘ದೇವರು ದೆವ್ವ ವಿಜ್ಞಾನ’ವನ್ನು ನಾವೂ ಓದೋಣ. ಇತರರಿಗೂ ಓದಿಸೋಣ. ಆ ಮೂಲಕ ನಮ್ಮ ಅರಿವನ್ನು ವಿಸ್ತರಿಸಿಕೊಂಡು ಅಪೂರ್ವ ಮೇಧಾವಿ, ಮಹಾ ಮಾನವತಾವಾದಿ ಕೋವೂರ್ ಅವರಿಗೆ ಜನ್ಮದಿನದ ಸಾರ್ಥಕ ಶುಭಾಶಯ ಹೇಳೋಣ.
*****
ಡಾ, ರಾಜೇಂದ್ರ
ಬುರಡಿಕಟ್ಟಿ
Monday, April 05, 2021
ಕೋವೂರ್ ಬಗ್ಗೆ ವಿಸ್ತಾರವಾಗಿ ತಿಳಿಸಿದ ಲೇಖಕರಿಗೆ ಧನ್ಯವಾದಗಳು. ಈ ಬಗೆಯ ವೈಚಾರಿಕತೆ ಇಂದಿನ ಅಗತ್ಯ.
ReplyDelete