Tuesday, October 22, 2024

ಗಾಂಧೀಜಿ ಸಮಾಧಿಯ ಚಪ್ಪಲಿ ಸ್ಟ್ಯಾಂಡು


ಕನ್ನಡದ ಹಿರಿಯ ಲೇಖಕರಾದ ಡಾ. ಕೆ. ಶಿವರಾಮ ಕಾರಂತ ಅವರು ಒಂದು ಸಲ ಗಾಂಧೀಜಿಯನ್ನು ನೋಡಲು, ಅವರ ಆಶ್ರಮದಲ್ಲಿ ಕೆಲದಿನ ಇರಲು ಎಂದು ಹೊರಡುತ್ತಾರೆ. ಆಗ ಈಗಿನಂತೆ ಆನ್ಲೈನ್‌ ಬುಕ್ಕಿಂಗ್‌, ಡಿಜಿಟಲ್‌ ಟಿಕೆಟ್‌ ಇತ್ಯಾದಿ ಸೌಲಭ್ಯಗಳು ಇರುವುದಿಲ್ಲ. ರೈಲಿಗೆ ಹೋಗುವವರು ರೈಲ್ವೇ ಸ್ಟೇಷನ್ಗಳ ಕೌಂಟರ್‌ಗಳಲ್ಲಿ ಹಣನೀಡಿ ಭೌತಿಕ ಟಿಕೆಟ್‌ ಪಡೆದು ರೈಲು ಹತ್ತಬೇಕಿತ್ತು. ಸರಿ ಕಾರಂತರು ಇದೇ ರೀತಿ ಟಿಕೆಟ್‌ ಕೊಂಡು ತಮ್ಮ ಜುಬ್ಬಾದ ಕಿಸೆಗೆ ಹಾಕಿಕೊಂಡು ಹೊರಡುತ್ತಾರೆ. ಅಹಮದಾಬಾದಿಗೆ ತಲುಪುವಲ್ಲಿ ಅವರಿಗೆ ಒಂದು ಸಂಕಷ್ಟ ಎದುರಾಗುತ್ತದೆ. ಅವರು ಕಿಸೆಗೆ ಹಾಕಿಕೊಂಡ ಟಿಕೆಟ್‌ ಕಾಣೆಯಾಗಿರುತ್ತದೆ. ಕಾರಂತರಿಗೆ ಏನು ಮಾಡಬೇಕು ಎಂದು ತಕ್ಷಣಕ್ಕೆ ಹೊಳೆಯುವುದಿಲ್ಲ.

ಕೊನೆಗೆ ಅನಿವಾರ್ಯವಾಗಿ ಅಲ್ಲಿ ಟಿಕೆಟ್‌ ಪರಿಶೀಲನೆ ಮಾಡಲು ಗೇಟಿನಲ್ಲಿ ನಿಂತ ವ್ಯಕ್ತಿಯ ಹತ್ತಿರ ಹೋಗಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅವನು ʼಟಿಕೆಟ್‌ ಎಲ್ಲಿ ತೆಗೆದುಕೊಂಡಿದ್ದಿರಿ?ʼ ಎಂದು ಕೇಳಿದಾಗ ಅವರು ಉತ್ತರಿಸುತ್ತಾರೆ. ʻಟಿಕೆಟ್‌ ನಂಬರ್‌ ಇತ್ಯಾದಿ ಏನಾದರೂ ಗೊತ್ತಿದೆಯೇ?ʼ ಎಂದು ಕೇಳಿದಾಗ ಕಾರಂತರು ನಂಬರ್‌ ನೋಡಿಕೊಂಡಿಲ್ಲವೆಂದು ಹೇಳುತ್ತಾರೆ.


ಜೊತೆಗೆ ಅದನ್ನು ಯಾವ ಸ್ಟೇಷನ್ನಿನಲ್ಲಿ ನೋಡಿಕೊಂಡಿದ್ದೆ ಮತ್ತು ಯಾವ ಸ್ಟೇಷನ್ನಿನಲ್ಲಿ ಪರಿಶೀಲನೆ ಮಾಡಿದ್ದರು ಎಂಬುದನ್ನು ನೆನಪುಮಾಡಿಕೊಂಡು ಹೇಳುತ್ತಾರೆ. `ಸರಿ ಈಗ ಎಲ್ಲಿಗೆ ಹೋಗಬೇಕು?ʼ ಎಂದು ಅವನು ಕೇಳಿದಾಗ ಕಾರಂತರು, ʼಸಾಬರಮತಿಗೆʼ ಎಂದು ಹೇಳುತ್ತಾರೆ. ಹಾಗೆ ಅಂದದ್ದೇ ತಡ ಅವನು, ʼಹೋಗಿʼ ಎಂದು ಅವರನ್ನು ರೈಲು ಹತ್ತಲು ಬಿಟ್ಟುಬಿಡುತ್ತಾನೆ. ಈ ಘಟನೆಯನ್ನು ನೆನಪಿಸಿಕೊಂಡು ಕಾರಂತರು ಬರೆಯುತ್ತಾರೆ, “ಗಾಂಧಿಯನ್ನು ನೋಡಲು ಹೊರಟ ಈ ವ್ಯಕ್ತಿ ಸುಳ್ಳುಹೇಳಲಾರ ಎಂದು ಅವನಿಗೆ ಅನ್ನಿಸಿರಬೇಕು” ಎಂದು.

ಕಾರಂತರ ಜೀವನದ ಈ ಚಿಕ್ಕಘಟನೆ ಗಾಂಧಿ ಆ ಕಾಲದ ಜನಮಾನಸವನ್ನು ಯಾವ ಪ್ರಮಾಣದಲ್ಲಿ ಪ್ರಭಾವಿಸಿದ್ದರು ಎಂಬುದನ್ನು ತಿಳಿಸುತ್ತದೆ. ಕರ್ನಾಟಕದಲ್ಲಿಯಾದರೆ ಸಾಹಿತ್ಯ ಓದದಿದ್ದರೂ ಒಬ್ಬ ಗೇಟ್‌ ಕೀಪರ್‌ ಶಿವರಾಮ ಕಾರಂತರು ದೊಡ್ಡ ಸಾಹಿತಿ ಎಂದು ಅವರ ಹೆಸರನ್ನಾದರೂ ಕೇಳಿರುವ ಸಾಧ್ಯತೆಗಳಿರುತ್ತವೆ. ಆದರೆ ದೂರದ ಗುಜರಾತಿನಲ್ಲಿ ಅವರು ಆ ಗೇಟ್‌ ಕೀಪರ್‌ಗೆ ಅಪರಿಚಿತರು. ಆದಾಗ್ಯೂ ಅವರು ʼಪ್ರಾಮಾಣಿಕರುʼ ಎಂದು ಪರಿಗಣಿಸಲ್ಪಡುವುದು ಯಾವುದರಿಂದ? ʼಗಾಂಧಿʼ ಎಂಬ ಹೆಸರಿನಿಂದ! ಅಂದರೆ ಆ ಕಾಲದಲ್ಲಿ ಕೇವಲ ಗಾಂಧಿ ಮಾತ್ರವಲ್ಲ ಗಾಂಧಿಯ ಸಂಪರ್ಕಕ್ಕೆ ಬರುವವರೆಲ್ಲ ʼಕಳ್ಳಸುಳ್ಳರಲ್ಲʼ ಎಂದು ಪರಿಗಣಿಸಲ್ಪಡುತ್ತಿದ್ದರು. ಹೀಗಾಗಿಯೇ, “ದೂರದ ಕರ್ನಾಟಕದಿಂದ ಈ ವ್ಯಕ್ತಿ ಗಾಂಧಿಯನ್ನು ನೋಡಲು ಬಂದಿದ್ದಾನೆ ಎಂದರೆ ಈತ ಸುಳ್ಳುಹೇಳುವ ವ್ಯಕ್ತಿ ಆಗಿರಲು ಸಾಧ್ಯವೇ ಇಲ್ಲ” ಎಂದು ಆ ಗೇಟ್‌ ಕೀಪರ್‌ಗೆ ಅನ್ನಿಸಿಬಿಟ್ಟಿತು!

*****

ದೆಹಲಿಗೆ ಹೋದಾಗಲೆಲ್ಲ ಸಾಮಾನ್ಯವಾಗಿ ನಾನು ತಪ್ಪದೆ ಹೋಗುವ ಸ್ಥಳಗಳಲ್ಲಿ ರಾಷ್ಟ್ರಪಿತನ ಸಮಾಧಿ ಇರುವ ರಾಜಘಾಟ್ ಮುಖ್ಯವಾದದ್ದು.‌ ಮೊನ್ನೆ ಎಂದಿನಂತೆ ಹೋದಾಗ ಒಂದು ಅಂಶವನ್ನು ಗಮನಿಸಿದೆ. ಸಾಮಾನ್ಯವಾಗಿ ಪೂಜಾಸ್ಥಳಗಳು ಅಥವಾ ಹಾಲುಗಲ್ಲಿನ ನೆಲಹಾಸಿರುವ ಕೆಲವು ಕಟ್ಟಡಗಳಿಗೆ ಹೋದಾಗ ಅಲ್ಲಿ ನಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಹೋಗುವ ಕ್ರಮ ಇರುವುದನ್ನು ನಾವೆಲ್ಲ ಬಲ್ಲೆವು.


ಇಂತಹ ಸ್ಥಳಗಳಲ್ಲೆಲ್ಲ ಎರಡು ಕ್ರಮ ಇರುತ್ತದೆ. ಹೊರಗಡೆ ಚಪ್ಪಲಿ ಬಿಡಲು ಒಂದು ವ್ಯವಸ್ಥೆಯನ್ನು ಆ ಸಂಸ್ಥೆಯವರೇ ಮಾಡಿರುತ್ತಾರೆ. ಅಲ್ಲಿ ಉಚಿತವಾಗಿ ಅಥವಾ ಹಣಪಾವತಿಮಾಡಿ ನಾವು ಕಟ್ಟಡದ ಒಳಗೆ ಹೋಗಿ ಬರುವವರೆಗೆ ನಮ್ಮ ಪಾದರಕ್ಷೆಗಳನ್ನು ಕಾಯ್ದಿರಿಸಿ ʼಸುರಕ್ಷಿತಭಾವʼದಿಂದ ಒಳಗೆ ಹೋಗಿ ಬರಬಹುದು. ಇನ್ನೊಂದು ಇಂತಹ  ಸುವ್ಯವಸ್ಥೆ ಇಲ್ಲದ ಕಡೆ  ಹೊರಗಡೆ ಯಾರೂ ನೋಡಿಕೊಳ್ಳುವವರು ಇಲ್ಲದೆಯೇ ನಾವು ಅವನ್ನು ಬಿಟ್ಟು ಒಳಗೆ ಹೋಗಬೇಕು. ಒಂದು ರೀತಿಯ ʼಅಸುರಕ್ಷಿತಭಾವʼದಿಂದ ಒಳಗೆ ಹೋಗಬೇಕಾಗುತ್ತದೆ. ಮರಳಿ ನಾವು ಹೊರಗಡೆ ಬಂದಾಗ ನಮ್ಮ ಪಾದರಕ್ಷೆಗಳು ಇದ್ದರೆ ಹಾಕಿಕೊಂಡು ಬರಬೇಕು. ಇಲ್ಲದಿದ್ದರೆ ಬರಿಗಾಲಲ್ಲಿ ಬರಬೇಕು. ನಾವು ತೀರಾ ಪ್ರಾಮಾಣಿಕರಲ್ಲದಿದ್ದರೆ ಮೂರನೆಯ ಆಯ್ಕೆಯೂ ಇರುತ್ತದೆ. ಅದೆಂದರೆ ಕಳೆದುಕೊಂಡ ನಮ್ಮ ಪಾದರಕ್ಷೆಗಳಿಗೆ ಬದಲಾಗಿ ನಮ್ಮ ಕಾಲಿಗೆ ಹೊಂದಿಕೆ ಆಗುವ ಅಲ್ಲಿರುವ ಯಾರದ್ದಾದರೂ ಪಾದರಕ್ಷೆಗಳನ್ನು ಹಾಕಿಕೊಂಡು ಬರುವುದು!! 

ಆದರೆ ಗಾಂಧೀಜಿ ಸಮಾಧಿಸ್ಥಳ ಪ್ರವೇಶಿಸುವಲ್ಲಿ ತುಸು ಭಿನ್ನವಾಗಿ ಈ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅಲ್ಲಿಗೆ ನಾನು ಹಲವುಸಲ ಹೋದರೂ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದು ಈಸಲವೇ. ಅಲ್ಲಿ ಪಾದರಕ್ಷೆ ಇಡಲು ನಿರ್ಧಿಷ್ಟ ಸ್ಥಳವನೋನ್ನೇನೋ ಮಾಡಲಾಗಿದೆ. ಅಲ್ಲಿ ವ್ಯವಸ್ಥೆಯನ್ನು ನೋಡಿಕೊಳ್ಳುವವರು ಕೂರಲು ಒಂದು ಕುರ್ಚಿಯೂ ಇರುತ್ತದೆ. ಆದರೆ ಆ ಖುರ್ಚಿಯು ಖಾಲಿ ಇರುವುದೇ ಹೆಚ್ಚು. ಅಲ್ಲಿ ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಅದನ್ನು ನಿರ್ವಹಿಸಲು ಕುಳಿತಿರುವುದಿಲ್ಲ. ನಾವೇ ಸ್ಟ್ಯಾಂಡಿನಲ್ಲಿ ನಮ್ಮ ಪಾದರಕ್ಷೆಗಳನ್ನು ಇಡಬೇಕು. ಹೊರಗೆ ಬರುವಾಗ ತೆಗೆದುಕೊಂಡು ಹಾಕಿಕೊಂಡು ಹೊರಗೆ ಬರಬೇಕು. ಅಲ್ಲಿ ಪಾದರಕ್ಷೆ ಸ್ಟ್ಯಾಂಡುಗಳು ಇರುವ ಎರಡೂ ಕಡೆ "ವೈಯಕ್ತಿಕ ಜವಾಬ್ದಾರಿಯ ಮೇರೆಗೆ ಉಚಿತ ಪಾದರಕ್ಷೆ ಇಡುವ ಸ್ಥಳ" ಎಂಬರ್ಥದ ಸೂಚನಾ ಫಲಕಗಳು ಮಾತ್ರ ಇವೆ.

 


ಕಾರಂತರನ್ನು ಟಿಕೇಟ್‌ ಇಲ್ಲದೆ ರೈಲು ಹತ್ತಲು ಬಿಟ್ಟ ವ್ಯವಸ್ಥೆ ಮತ್ತು ಹೀಗೆ ನೋಡಿಕೊಳ್ಳುವವರಿಲ್ಲದೆ ಪಾದರಕ್ಷೆ ಬಿಡಲು ಮಾಡಿರುವ ವ್ಯವಸ್ಥೆ ಇವುಗಳ ಆಲೋಚನಾ ಕ್ರಮವನ್ನು ಒಂದು ಏಕಸೂತ್ರ ಬಂಧಿಸಿದೆ ಎಂದು ನನಗೆ ಅನ್ನಿಸುತ್ತದೆ. ಆ ಏಕಸೂತ್ರ ಗಾಂಧಿ ಅಲ್ಲದೆ ಬೇರೆ ಏನಾಗಿರಲು ಸಾಧ್ಯ? 


ಸಾಮಾನ್ಯವಾಗಿ ದೇವಸ್ಥಾನಗಳಿಗೆ ಬರುವವರು ಎಲ್ಲರೂ ಹೇಗೆ ಜೀವನದಲ್ಲಿ ಪ್ರಾಮಾಣಿಕರಾಗಿ ಇರುವವರೇ ಇರುವುದಿಲ್ಲವೋ ಹಾಗೇಯೇ ಗಾಂಧೀಜಿಯ ಸಮಾಧಿಗೆ ಬರುವವರೂ ಕೂಡ ಎಲ್ಲರೂ ಪ್ರಾಮಾಣಿಕರಾಗಿ ಇರುವುದಿಲ್ಲ ನಿಜ. ಆದರೆ ಎಂತಹ ಭ್ರಷ್ಟನೇ ಇರಲಿ, ಸುಳ್ಳು ಅಥವಾ ಮೋಸಮಾಡುವವನೇ ಇರಲಿ, ಅವನು ದೇವಸ್ಥಾನಕ್ಕೆ ಬಂದಾಗ ಅಲ್ಲಿ ಅದನ್ನು ಮಾಡಲು ಹಿಂಜರಿದು ಕನಿಷ್ಟ ಆ ಆವರಣದಲ್ಲಿರುವವರೆಗಾದರೂ ʼಒಳ್ಳೆಯʼವ್ಯಕ್ತಿ ಆಗಿರಲು ಎಂಥದೋ ಒಂದು ಒತ್ತಡ ಅವನ ಮೇಲಿರುತ್ತದೆ. ಅದೇ ರೀತಿ ಗಾಂಧೀಜಿಯಂತಹ ಮಹಾವ್ಯಕ್ತಿಯ ಸಮಾಧಿಗೆ ನೋಡಲೋ ಅಥವಾ ಗೌರವ ನಮನ ಸಲ್ಲಿಸಲೋ ಬರುವ ವ್ಯಕ್ತಿಗಳು ಎಷ್ಟೇ ಕೆಟ್ಟವರಾಗಿದ್ದರೂ, ಸುಳ್ಳು ಮೋಸ ವಂಚನೆ ಇಂತಹ ಕೆಲಸಗಳಲ್ಲಿ ತೊಡಗಿಕೊಂಡಿದ್ದವರಾಗಿದ್ದರೂ ʻಕನಿಷ್ಠ ಈ ಸ್ಥಳದಲ್ಲಿ ಅವರು ಬೇರೆಯವರ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗುವಷ್ಟು ಕೆಳಮಟ್ಟಕ್ಕೆ ಇಳಿಯಲಾರರುʼ ಎಂಬುದು ಈ ವ್ಯವಸ್ಥೆಮಾಡಿದವರ ಆಲೋಚನೆ ಇರಬಹುದು; ಕಾರಂತರಿಗೆ ಟಿಕೆಟ್‌ ಇಲ್ಲದೆ ರೈಲು ಹತ್ತಲು ಬಿಟ್ಟ ವ್ಯಕ್ತಿಯ ಆಲೋಚನೆಯಂತೆ.

ರಾಬು

೨೨-೧೦-೨೦೨೪

 


No comments:

Post a Comment