ವಾಲ್ಮೀಕಿ ಎಂಬ ಋಷಿ ವಾಸ್ತವದಲ್ಲಿ ಇದ್ದನೇ?
ಇಂಥದ್ದೊಂದು ಪ್ರಶ್ನೆ
ಬಹಳಷ್ಟು ಜನರಿಗೆ ಬಾಲಿಷವಾಗಿ ಕಂಡರೂ ಕಂಡೀತು. ಏಕೆಂದರೆ ವಾಲ್ಮೀಕಿ ಎಂಬ ಹೆಸರು ಭಾರತದಲ್ಲಿ
ಯಾರಿಗೆ ತಾನೆ ಗೊತ್ತಿಲ್ಲ? ಆಬಾಲವೃದ್ಧರಿಗೆಲ್ಲ ಈ ಹೆಸರು ಪರಿಚಿತ. ಅಂಥದ್ದರಲ್ಲಿ ಇಂಥದ್ದೊಂದು
ಪ್ರಶ್ನೆ ಬಾಲಿಷವಾಗಿ ತೋರುವುದರಲ್ಲಿ ಆಶ್ಚರ್ಯವೇನೂ ಇರಲಾರದು. ಆದರೆ ಭಾವನಾತ್ಮಕ ಅಂಶಗಳೇ ಬೇರೆ
ಸಂಶೋಧನಾತ್ಮಕ ಸತ್ಯಗಳೇ ಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುವುದಾದರೆ
ಇಂಥದ್ದೊಂದು ಪ್ರಶ್ನೆ ಖಂಡಿತಾ ಬಾಲಿಷ ಅನ್ನಿಸಲಾರದು.
ವಾಲ್ಮೀಕಿಯ ಜಯಂತಿ
ಬಂತೆಂದರೆ ಬಹುತೇಕ ಭಾಷಣಕಾರರು ಹೇಳಿ ಹೇಳಿ ಸವೆದುಹೋಗಿರುವ ಒಂದು ಮಾತನ್ನು ಇತ್ತೀಚಿನವರೆಗೂಹೇಳುತ್ತಲೇ
ಬಂದಿದ್ದರು ಅದೇನೆಂದರೆ ವಾಲ್ಮೀಕಿ ಬೇಡ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆರಂಭದಲ್ಲಿ ಕೊಲೆ ದರೋಡೆ
ಇತ್ಯಾದಿ ಮಾಡುತ್ತಿದ್ದ. ಮುಂದೆ ಬದಲಾಗಿ ಮಹಾ ಋಷಿಯಾದ ಎಂಬುದೇ ಆ ಮಾತು. ಈಗ ಎಲ್ಲ ಸಮುದಾಯದವರೂ
ಸಂಘಟಿತರಾಗಿರುವಂತೆ ಬೇಡರೂ ಸಂಘಟಿತರಾಗಿದ್ದಾರೆ.
ಅವರು ಈ ಮಾತನ್ನು ತಮ್ಮ ಸಮುದಾಯಕ್ಕೆ ಮಾಡುವ ಅವಮಾನವೆಂದು ಪರಿಗಣಿಸಿದ್ದಾರೆ. ವಾಲ್ಮೀಕಿ ಹೀಗೆ
ದರೋಡೆಕೋರನಾಗಿದ್ದ ಎಂಬ ಬಗ್ಗೆ ಆಧಾರವಿಲ್ಲದೇ ಮಾತನಾಡುವುದನ್ನು ಅವರು ಗಂಭೀರವಾಗಿ ಪರಿಗಣಿಸಿ
ಹೀಗೆ ಮಾತನಾಡಿದವರ ಮೇಲೆ ಮೊಕದ್ಧಮೆ ದಾಖಲಿಸುವ ಕೆಲಸಗಳೂ ಉತ್ತರ ಭಾರತದಲ್ಲಿ ಕೆಲವೆಡೆ ನಡೆದ
ಮೇಲೆ ಹೀಗೆ ಪುಂಗೀ ಊದುವವರ ಸಂಖ್ಯೆ ಹಟತ್ತಾಗಿ ನಿಂತುಬಿಟ್ಟಿದೆ!
ಈ ಮಧ್ಯೆ ಕೆಲವು ಸಂಶೋಧಕರು, “ವಾಲ್ಮೀಕಿ ಮೂಲತಃ ಬೇಡ
ಸಮುದಾಯದವನಲ್ಲ. ಆತ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಶಿಶು, ಬಾಲ್ಯದಲ್ಲಿ ಪರಿತ್ಯಕ್ತನಾಗಿ ಬೇಡ
ಸಮುದಾಯದಲ್ಲಿ ಬೆಳೆದ” ಎಂಬ ವಾದವೊಂದನ್ನು
ತೇಲಿಬಿಟ್ಟರು. ಇದಕ್ಕೂ ಬಲವಾದ ಆಧಾರಗಳಿರಲಿಲ್ಲ. ಇದು ಸತ್ಯವಾಗಿರುವುದಕ್ಕಿಂತ ಹೆಚ್ಚಾಗಿ, “ದೊಡ್ಡ
ಸಾಧನೆಯೊಂದನ್ನು ಮಾಡುವುದು ಸಮಾಜದಲ್ಲಿ ಉತ್ತಮ ಕುಲವೆಂದು ಕರೆದುಕೊಂಡಿರುವ ಕುಲದಲ್ಲಿ
ಹುಟ್ಟಿದವರಿಗೆ ಮಾತ್ರ ಸಾಧ್ಯ” ಎಂಬುದನ್ನು ಪರೋಕ್ಷವಾಗಿ ಸಾಧಿಸಲು ಮಾಡಿದ ಕುತಂತ್ರ ಎಂದು
ವ್ಯಾಪಕ ಟೀಕೆಗೆ ಒಳಗಾಯಿತು. ಹೀಗೆ ವಾಲ್ಮೀಕಿ ಕುರಿತು ಅನೇಕ ಭಾವನಾತ್ಮಕ ಅಂಶಗಳು ಇರುವಾಗ
ಅವನ್ನೆಲ್ಲ ಬದಿಗಿಟ್ಟು ವಾಲ್ಮೀಕಿ ಮತ್ತು ಆತನಿಂದ ರಚಿತವಾಗಿದೆ ಎಂದು ಹೇಳಲಾಗುವ ರಾಮಾಯಣ ಹಾಗೂ
ಅದರೊಟ್ಟಿಗೆ ಉಲ್ಲೇಖಿಸಲ್ಪಡುವ ಮಹಾಭಾರತ ಇವುಗಳ ಕುರಿತು ಬೌದ್ಧಿಕ ವಲಯದಲ್ಲಿ ಏನೆಲ್ಲ ಚರ್ಚೆಗಳು
ಆಗಿವೆ ಅವು ನಮ್ಮ ಅರಿವನ್ನು ವಿಸ್ತರಿಸಲು ಎಷ್ಟರ ಮಟ್ಟಿಗೆ ನೆರವಾಗಿವೆ ಎಂಬುದನ್ನು ಈ
ಲೇಖನದಲ್ಲಿ ತಕ್ಕಮಟ್ಟಿಗೆ ಚರ್ಚೆಗೆ ಎತ್ತಿಕೊಳ್ಳಲಾಗಿದೆ.
ರಾಮಾಯಣ ಮಹಾಭಾರತಗಳ ʼರಾಮಾಯಣ!ʼ
ಕನ್ನಡವೂ ಸೇರಿದಂತೆ
ಬಹುತೇಕ ಎಲ್ಲ ಭಾಷೆಗಳ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿದ ಎರಡು ಮುಖ್ಯವಾದ
ಪ್ರಾಚೀನ ಸಂಸ್ಕೃತ ಮಹಾಕಾವ್ಯಗಳೆಂದರೆ ಒಂದು ರಾಮಾಯಣ ಇನ್ನೊಂದು ಮಹಾಭಾರತ. ರಾಮಾಯಣವನ್ನು
ವಾಲ್ಮೀಕಿ ಎಂಬ ಋಷಿ ಹಾಗೆಯೇ ಮಹಾಭಾರತವನ್ನು ವ್ಯಾಸ ಎಂಬ ಋಷಿ ರಚಿಸಿದರು ಎಂದು ಹೇಳಲಾಗುತ್ತದೆ.
ಆದರೆ ಈ ಅಭಿಪ್ರಾಯಕ್ಕೆ ಖಚಿತತೆಯ ಕೊರತೆ ಈಗಲೂ ಇದೆ. ಈ ಕೃತಿಗಳು ನಿಜವಾಗಿಯೂ ಇವರಿಂದ ರಚಿತವಾಗಿವೆಯೇ
ಎಂಬ ಬಗ್ಗೆ ಅಷ್ಟೇ ಏಕೆ ಈ ʻವಾಲ್ಮೀಕಿʼʻ ಮತ್ತುʻವ್ಯಾಸʼ ಎಂಬುವು ನಿಜವಾಗಿಯೂ ವ್ಯಕ್ತಿಗಳ ಹೆಸರುಗಳಾಗಿದ್ದವೇ ಎಂಬ ಬಗ್ಗೆಯೇ ದೊಡ್ಡ
ವಿದ್ವಾಂಸರುಗಳು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ʻವಾಲ್ಮೀಕಿʼ ಎಂಬ ಪದ ʻವಲ್ಮೀಕʼದಿಂದ
ಹುಟ್ಟಿದ್ದು. ʻವಲ್ಮೀಕʼ ಎಂದರೆ ಹುತ್ತ ಎಂದರ್ಥ. ʻವ್ಯಾಸʼ ಎಂಬ ಪದಕ್ಕೆ ʼವಿಸ್ತಾರʼ ʻವಿಸ್ತೀರ್ಣʼ ಎಂಬ
ಅರ್ಥಗಳಿವೆ.
ಹಾಗಾಗಿ ಇವು ವಾಸ್ತವದಲ್ಲಿ ಅನ್ವರ್ಥನಾಮಗಳಾಗಿರಬಹುದೇ ಹೊರತು ನಿರ್ದಿಷ್ಟ ವ್ಯಕ್ತಿಗಳಿಗಿದ್ದ ಅಂಕಿತನಾಮಗಳಾಗಿರಲಾರವು ಎಂಬುದು ಬಹಳಷ್ಟು ವಿದ್ವಾಂಸರ ಅಭಿಮತ. ನಿಜವಾಗಿಯೂ ಇವು ಯಾರ ಹೆಸರೂ ಆಗಿರಲಿಲ್ಲ ಎಂದು ಸ್ವತಃ ಕುವೆಂಪು ಅವರ ಗುರುಗಳೂ ಹೆಸರಾಂತ ವಿದ್ವಾಂಸರೂ ಆಗಿದ್ದ ಟಿ ಎಸ್ ವೆಂಕಣ್ಣಯ್ಯ ಅವರು ಅಭಿಪ್ರಾಯಪಡುವುದಾಗಿ ಮಹಾಕಾವ್ಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಕನ್ನಡದ ಹಿರಿಯ ಕವಿ ಡಾ ಜಿ ಎಸ್ ಶಿವರುದ್ರಪ್ಪ ಅಭಿಪ್ರಾಯಪಡುತ್ತಾರೆ.
ಈ ಕಾವ್ಯಗಳ ಬಗ್ಗೆ ವಿದ್ವಾಂಸರಲ್ಲಿ ಏನೇ ಭಿನ್ನಾಭಿಪ್ರಾಯಗಳಿರಲಿ ಸಂಶಯಗಳಿರಲಿ ಆ ಎರಡೂ ಮಹಾಕಾವ್ಯಗಳು ನಮ್ಮೆದುರು ಇರುವುದಂತೂ ನಿಜ. ಅವುಗಳ ಹುಟ್ಟಿನ ಬಗ್ಗೆ ಹೇಳುತ್ತಾ ವೇದ ಉಪನ್ನಿಷತ್ತಿನ ಗಂಭೀರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಸರಳವಾಗಿ ಜನರಿಗೆ ತಲುಪಿಸುವ ಕಾರ್ಯಕ್ಕಾಗಿ ಮಹಾಕಾವ್ಯಗಳ ರಚನೆಯಾಯಿತು. ಇದರ ಭಾಗವಾಗಿ ಮೊದಲೇ ಜನರ ಹೃದಯಗಳನ್ನು ಗೆದ್ದಿದ್ದ ವೀರಾಧಿವೀರ ರಾಜರು ಮುಂತಾದವರನ್ನು ದೈವೀಕರಿಸುವ ಕಾರ್ಯ ನಡೆಯಿತು. ಇದರ ಉತ್ಪನ್ನಗಳೇ ಈ ಮಹಾಕಾವ್ಯಗಳು ಎನ್ನಲಾಗುತ್ತದೆ.
ರಾಮಾಯಣ ಮತ್ತು
ಮಹಾಭಾರತದ ಗಾತ್ರ ಮತ್ತು ಕಾಲದ ಬಗ್ಗೆ ಕೂಡ ಸಾಕಷ್ಟು ಗೊಂದಲಗಳಿವೆ. ವಾಸ್ತವದಲ್ಲಿ ಈಗ ನಾವು
ಯಾವುದನ್ನು ವಾಲ್ಮೀಕಿ ರಾಮಾಯಣ ಎಂದು ಕರೆಯುತ್ತೇವೆಯೋ ಮತ್ತು ಯಾವುದನ್ನು ವ್ಯಾಸಭಾರತ ಎಂದು
ಕರೆಯುತ್ತೇವೆಯೋ ಅವೆರಡೂ ತಮ್ಮಷ್ಟಕ್ಕೆ ತಾವು ಬೃಹತ್ ಗ್ರಂಥಗಳೇ ಆಗಿವೆ. ಆದರೆ ಅವುಗಳನ್ನೇ
ಪರಸ್ಪರ ಹೋಲಿಸಿ ಹೇಳುವುದಾದರೆ ಗಾತ್ರದಲ್ಲಿ ರಾಮಾಯಣಕ್ಕಿಂತ ಮಹಾಭಾರತ ದೊಡ್ಡದು. ಈಗಿರುವ ವಾಲ್ಮೀಕಿ
ರಾಮಾಯಣದಲ್ಲಿ ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ ಎಂದು ಹೇಳಲಾಗುತ್ತದೆ. ಆದರೆ
ವ್ಯಾಸಮಹಾಭಾರತದಲ್ಲಿನ ಶ್ಲೋಕಗಳ ಸಂಖ್ಯೆ ಸುಮಾರು ಒಂದು ಲಕ್ಷ! ಅಂದರೆ ರಾಮಾಯಣಕ್ಕಿಂತ ಸುಮಾರು
ನಾಲ್ಕುಪಟ್ಟು ದೊಡ್ಡದು!
ಹೀಗೆ ಈಗ
ರಾಮಾಯಣಕ್ಕಿಂತ ಮಹಾಭಾರತ ಬಹಳಷ್ಟು ದೊಡ್ಡದಿರುವುದು ನಿಜವಾದರೂ ಆರಂಭದಲ್ಲಿ ಅದು ಈ ಸ್ವರೂಪದಲ್ಲಿ ಇರಲಿಲ್ಲ,
ಆರಂಭದಲ್ಲಿ ಅದು ಕೇವಲ ಎಂಟು ಸಾವಿರ ಶ್ಲೋಕಗಳ ʼಒಂದು ಚಿಕ್ಕಕಾವ್ಯವಾಗಿತ್ತು ಮತ್ತು ಆಗ ಅದನ್ನು ʻಜಯʼ ಎಂಬ ಹೆಸರಿನಿಂದ
ಕರೆಯಲಾಗುತ್ತಿತ್ತು. ಈ ಜಯಕ್ಕೆ ಕಾಲಾನುಕ್ರಮದಲ್ಲಿ ಆಯಾ ಕಾಲದ ಕವಿಗಳು ತಮ್ಮ ತಮ್ಮ ಹಿತಾಸಕ್ತಿ ಮತ್ತು ಕಾಲದ ಅವಶ್ಯಕತೆಗಳನ್ನು
ಗಮನದಲ್ಲಿಟ್ಟುಕೊಂಡು ತಮ್ಮದೇ ಆದ ಶ್ಲೋಕಗಳನ್ನು ಸೇರಿಸುತ್ತಾ ಹೋದ ಪರಿಣಾಮವಾಗಿ ಅದು ʼಭಾರತʼ
ಆಗಿ ಬೆಳೆಯಿತು ಮತ್ತೂ ಬೆಳೆಯುತ್ತಾ ಹೋಗಿ ಇಂದಿನ ಬೃಹತ್ ʻಮಹಾಭಾರತʼವಾಗಿ ನಮ್ಮೆದುರಿಗೆ
ನಿಂತಿದೆ. ಹೀಗಾಗಿ ಈ ಎರಡೂ ಕಾವ್ಯಗಳಲ್ಲಿ
ಯಾವುದು ದೊಡ್ಡದು ಎಂಬುದಕ್ಕೆ ʻಅದಕ್ಕಿಂತ ಇದು ದೊಡ್ಡದು; ಇದಕ್ಕಿಂತ ಅದು ದೊಡ್ಡದುʼ ಎಂಬುದೇ ಸರಿಯಾದ ಉತ್ತರ!
ಈ ಕಾವ್ಯಗಳ ಗಾತ್ರದ
ಬಗ್ಗೆ ಇದ್ದಂತೆ ಕಾಲದ ಬಗ್ಗೆಯೂ ಇಂಥದ್ದೇ ಚರ್ಚೆಗಳು ವಿದ್ವಾಂಸರ ವಲಯದಲ್ಲಿ ಬಹಳಷ್ಟು ನಡೆದಿವೆ.
ಈ ಕಾವ್ಯಗಳ ರಚನೆಯ ಕಾಲವನ್ನು ಕೆಲವರು ಕ್ರಿ.ಪೂ. ೩೦೦ಕ್ಕೆ ಹಿಂದಕ್ಕೆ ತಳ್ಳಿದರೆ ಕೆಲವರು
ಕ್ರಿ.ಶ. ೭೦೦ಕ್ಕೆ ಮಂದೆ ಎಳೆಯುತ್ತಾರೆ. ಅಂದರೆ ಸರಿಸುಮಾರು ಒಂದು ಸಾವಿರ ವರ್ಷಗಳ ಧೀರ್ಘ
ಅವಧಿಯನ್ನು ಈ ಕಾವ್ಯಗಳು ʻರಚನೆಯ ಎಳೆದಾಡುವ ಕಾಲʼವನ್ನಾಗಿ ಹೊಂದಿವೆ. ಕೆಲವರು ರಾಮಾಯಣ ಮೊದಲು ರಚಿತವಾಗಿ ನಂತರ
ಮಹಾಭಾರತ ರಚಿತವಾಗಿದೆಯೆಂದು ವಾದಿಸಿದರೆ ಇನ್ನು ಕೆಲವರು ಮಹಾಭಾರತವೇ ಮೊದಲು ರಚಿತವಾಗಿ ನಂತರ
ರಾಮಾಯಣ ರಚಿತವಾಗಿದೆಯೆಂದೂ ವಾದಿಸುತ್ತಾರೆ.
ಇವೆರಡಕ್ಕೂ ಸಾಕಷ್ಟು ಆಧಾರಗಳೂ ಇವೆ. ಈ
ವಿವಾಧವನ್ನು ತಿಳಿಗೊಳಿಸುವಂತೆ ಇರುವ ಕನ್ನಡ ʻವಚನಭಾರತʼ ಬರೆದ ಹಿರಿಯ ವಿದ್ವಾಂಸ ಎ ಆರ್
ಕೃಷ್ಣಶಾಸ್ತ್ರೀ ಅವರ ಈ ಅಭಿಪ್ರಾಯ ಗಮನಿಸಿ: “ ರಾಮನ ಕಥೆ ಪ್ರಾಚೀನವಾದದ್ದು. ಆದರೆ ರಾಮಾಯಣವು
ಮಾತ್ರ ಭಾರತವು ಹುಟ್ಟಿ ಅದು ʼಮಹಾಭಾರತʼವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಮಧ್ಯೆ ಯಾವಾಗಲೋ
ಹುಟ್ಟಿರಬೇಕೆಂದೂ, ರಾಮಾಯಣವು ಹುಟ್ಟಿದ ಮೇಲೆ, ʻಭಾರತʼದ ಬೆಳವಣಿಗೆ ಮುಗಿದು ಅದು ಇಂದಿನ ʻಮಹಾಭಾರತʼದ
ಸ್ವರೂಪವನ್ನು ತಾಳಿತೆಂದೂ ಸಾಧಾರಣವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದಲೇ, ರಾಮಾಯಣಕ್ಕಿಂತ
ಭಾರತ ಹಳೆಯದು; ಭಾರತಕ್ಕಿಂತ ರಾಮಾಯಣ ಹಳೆಯದು.”
ರಚನೆಯ ಕಾಲಾವಧಿಯ
ದೃಷ್ಟಿಯಿಂದ ನೋಡಿದರೆ ಈ ಮಹಾಕಾವ್ಯಗಳು ಈಗಿನ ಕಾವ್ಯಗಳಂತೆ ಐದೋ ಹತ್ತೋ ವರ್ಷಗಳಲ್ಲಿ ಬರೆಯಲ್ಪಟ್ಟಿರಲಿಕ್ಕಿಲ್ಲ
ಎಂಬುದಂತೂ ಸತ್ಯ. ವ್ಯಾಸನಾಗಲೀ ವಾಲ್ಮೀಕಿಯಾಗಲೀ ಈ ಕಾವ್ಯಗಳನ್ನು ಸ್ವತಂತ್ರವಾಗಿ ತಾವೆ
ರಚಿಸಿರಲಿಕ್ಕಿಲ್ಲ. ಆ ಕಾಲಘಟ್ಟದಲ್ಲಿ ಜನಪದರ ಬಾಯಲ್ಲಿ ಹರಿದಾಡುತ್ತಿದ್ದ ಕಥೆಗಳಿಗೆ ಒಂದು
ಚೌಕಟ್ಟು ರಚಿಸಿಕೊಟ್ಟು ಅವನು ಲಿಖಿತರೂಪಕ್ಕೆ ಇಳಿಸಿದರೆಂದೂ ಈ ಕಾವ್ಯಗಳು ಕಾಲಾನುಕ್ರಮದಲ್ಲಿ
ಬೆಳೆಯುತ್ತಾ ಈ ಸ್ಥಿತಿಗೆ ಬಂದು ತಲುಪಿವೆಯೆಂದೂ ಅನೇಕ ವಿದ್ವಾಂಸರ ಅಭಿಪ್ರಾಯ
ರಾಮಾಯಣಗಳ ಮೂರು ಗುಂಪುಗಳು
ಇನ್ನು ರಾಮಾಯಣಕ್ಕೆ
ವಿಷಯವನ್ನು ಕೇಂದ್ರೀಕರಿಸುವುದಾದರೆ ಭಾರತದಲ್ಲಿ ಸುಮಾರು ಮೂರು ನೂರಕ್ಕೂ ಹೆಚ್ಚು ರಾಮಾಯಣಗಳು
ಇವೆಯೆಂದು ಒಂದು ಅಂದಾಜಿದೆ. ಎ ಕೆ. ರಾಮಾನುಜನ್ ಅವರ ʼತ್ರೀ ಹಂಡ್ರಡ್ ರಾಮಾಯಣಾಸ್ʼ ಎಂಬ
ಕೃತಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಎಲ್ಲ ರಾಮಾಯಣಗಳನ್ನು ಅಧ್ಯಯನದ ದೃಷ್ಟಿಯಿಂದ ಮೂರು
ವಿಭಾಗಗಳಾಗಿ ವಿಂಗಡಿಸುವರು. ಅವೆಂದರೆ ವೈದಿಕ ರಾಮಾಯಣಗಳು, ಜೈನ ರಾಮಾಯಣಗಳು ಮತ್ತು ಬೌದ್ಧ
ರಾಮಾಯಣಗಳು.
ವೈದಿಕ ರಾಮಾಯಣಗಳು ವೇದ
ಉಪನ್ನಿಷತ್ತುಗಳಲ್ಲಿ ಹೇಳಲಾಗುವ ಜ್ಞಾನವನ್ನು ಜನಸಾಮಾನ್ಯರಿಗೆ ತಿಳಿಸಲಿಕ್ಕಾಗಿ
ರಚಿತವಾಗಿರುವಂಥವು. ಸ್ವರ್ಗ, ನರಕ, ಮುಕ್ತಿ, ಅದನ್ನು ಪಡೆಯುವ ಬಗೆ, ಜೀವಾತ್ಮ ಪರಮಾತ್ಮ ಇಂತಹ
ಸಂಗತಿಗಳು ಇಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಈ ರಾಮಾಯಣಗಳ ಪ್ರತಿನಿಧಿಯಾಗಿ ವಾಲ್ಮೀಕಿ ರಾಮಾಯಣವನ್ನು
ಗುರುತಿಸಲಾಗುತ್ತದೆ. ಇನ್ನು ಜೈನ ರಾಮಾಯಣಗಳು ಜೈನಧರ್ಮದ ತತ್ವಗಳನ್ನು ಪ್ರತಿಪಾದಿಸಲು
ರಚಿತವಾಗಿರುವಂಥವು. ಈ ರಾಮಾಯಣಗಳ ಪ್ರಕಾರ ರಾಮ, ಲಕ್ಷ್ಮಣ, ಹನುಮಂತ ಎಲ್ಲರೂ ಜೈನರು. ಸುಗ್ರೀವ, ವಾಲಿ
ಇವರು ಕಪಿಗಳಲ್ಲ. ಬದಲಾಗಿ ಕಪಿಧ್ವಜರು! ಇಲ್ಲಿ ರಾವಣನನ್ನು ವಧಿಸಿದವನು ರಾಮನಲ್ಲ; ಲಕ್ಷ್ಮಣ!
ಸೀತೆ ಮಂಡೋದರಿಯ ಗರ್ಭಸಂಜಾತೆ! ರಾವಣನು ಸೀತೆಯನ್ನು ಅಪಹರಿಸುವುದು ರಾಮನ ವೇಷದಿಂದ! ಇಲ್ಲಿ
ರಾವಣನೂ ಅಹಿಂಸಾವ್ರತಿ. ಆ ಧರ್ಮದ ತತ್ವ ಪ್ರತಿಪಾದನೆಗಾಗಿ ಇಲ್ಲಿ ರಾಮ ಲಕ್ಷ್ಮಣ ರಾವಣ ಎಲ್ಲರೂ
ಅಹಿಂಸಾವ್ರತಿಗಳಾಗಿ ಚಿತ್ರಿತರಾಗಿದ್ದಾರೆ.
ಇನ್ನು ಬೌದ್ಧ ಪರಂಪರೆಯ ರಾಮಾಯಣಗಳು ಉಳಿದೆರಡರಂತೆ ಭಾರತದಲ್ಲಿ ಹುಲುಸಾಗಿ ಬೆಳೆಯಲಿಲ್ಲ. ಕನ್ನಡ ಪರಿಸರದಲ್ಲಂತೂ ಅವು ಬೆಳೆಯಲೇ ಇಲ್ಲ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಕನ್ನಡ ಪರಿಸರದಲ್ಲಿ ಬೌದ್ಧ ಮತಾವಲಂಬಿಯಾದ ಯಾವ ದೊಡ್ಡ ರಾಜರೂ ಆಳ್ವಿಕೆ ಮಾಡಲಿಲ್ಲ. ಹಾಗಾಗಿ ರಾಜಾಶ್ರಯ ದೊರೆಯಲಿಲ್ಲ. ಇದಕ್ಕೆ ಇನ್ನೊಂದು ಕಾರಣ ಈ ಬೌದ್ಧ ರಾಮಾಯಣಗಳ ತತ್ವಗಳನ್ನು ಜನ ಅಷ್ಟಾಗಿ ಆಗ ಒಪ್ಪಿಕೊಳ್ಳಲಿಲ್ಲ. ಇವು ತುಂಬಾ ಭಿನ್ನವಾದ ಕಥಾಹಂದರವನ್ನು ಹೊಂದಿದ್ದು ಇದಕ್ಕೆ ಕಾರಣ.
ಬೌದ್ಧ ರಾಮಾಯಣಗಳ ಪ್ರತಿನಿಧಿಯೆಂದು
ಗುರುತಿಸಲಾಗುವ, ʻದಶರತ ಜಾತಕʼ ಕಥೆಯಲ್ಲಿ ಗಮನ ಸೆಳೆಯುವ ಅಂಶವೆಂದರೆ ರಾಮ ಮತ್ತು ಸೀತೆ ಮೊದಲು
ಅಣ್ಣತಂಗಿಯರಾಗಿದ್ದು ಮುಂದೆ ಮದುವೆಯಾಗಿ ದಂಪತಿಗಳಾಗಿ ಬದುಕುತ್ತಾರೆ. ಹಿಂದೆ ಸಮಾಜದಲ್ಲಿ ಆಸ್ತಿ
ಮತ್ತಿತರ ಕಾರಣಗಳಿಂದ ಅಣ್ಣತಂಗಿಯರ ಮದುವೆಗಳು ನಡೆಯುತ್ತಿದ್ದದ್ದನ್ನದು ಅನೇಕ ಅಧ್ಯಯನಗಳು ಕೂಡ
ದೃಢಪಡಿಸಿವೆ. ಅಷ್ಟೇ ಏಕೆ ಋಗ್ವೇದದಲ್ಲಿಯೇ ಬರುವ
ಯಮ-ಯಮಿಯರ ಸಂವಾದವೂ ಇಂಥದ್ದೊಂದು ಪದ್ಧತಿ ಚಾಲ್ತಿಯಲ್ಲಿ ಇದ್ದ ಬಗ್ಗೆ ನಮಗೆ ಸೂಚನೆಯನ್ನು
ನೀಡುತ್ತದೆ. ಆದರೆ ಈ ಬಗೆಯ ಸತ್ಯವನ್ನು ಒಪ್ಪಿಕೊಳ್ಳಲು ನಮ್ಮ ಜನರ ಕಿವಿಗಳು ತಯಾರಿರಲಿಲ್ಲವಾದ್ದರಿಂದ
ಬೌದ್ಧರಾಮಾಯಣಗಳು ಇಲ್ಲಿ ಜನಪ್ರೀಯತೆ ಗಳಿಸುವಲ್ಲಿ ವಿಫಲವಾದವೆಂದೇ ಹೇಳಬೇಕು
ಕನ್ನಡ ರಾಮಾಯಣಗಳು
ಕನ್ನಡದಲ್ಲಿ ಬೆಳೆದು
ಬಂದ ವೈದಿಕ ರಾಮಾಯಣ ಮತ್ತು ಜೈನರಾಮಾಯಣ ಪರಂಪರೆಗೆ ಕ್ರಮವಾಗಿ ತೊರವೆ ನರಹರಿಯ ʼತೊರವೇ ರಾಮಾಯಣʼ
ಮತ್ತು ನಾಗಚಂದ್ರನ “ರಾಮಚಂದ್ರಚರಿತ ಪುರಾಣʼ ಇವುಗಳನ್ನು ಶ್ರೇಷ್ಠ ಮತ್ತು ಪ್ರಾತಿನಿಧಿಕ ಕಾವ್ಯಗಳೆಂದು
ಗುರುತಿಸಲಾಗುತ್ತದೆ. ಆಧುನಿಕ ಕನ್ನಡದಲ್ಲಿ ಕೂಡ
ಕುವೆಂಪು ಮಾಸ್ತಿ ಮುಂತಾದವರು ರಾಮಾಯಣವನ್ನು ಬರೆದಿದ್ದಾರೆ. ಇವರಿಬ್ಬರೂ ತಮ್ಮ ಕಾವ್ಯಗಳಿಗೆ
ಆಧಾರವಾಗಿ ಇಟ್ಟುಕೊಂಡಿರುವುದು ವೈದಿಕ ರಾಮಾಯಣ ಪರಂಪರೆಯ ವಾಲ್ಮೀಕಿ ರಾಮಾಯಣವನ್ನಾದರೂ ನಮ್ಮ ಕಾಲಕ್ಕೆ ತಕ್ಕಂತೆ ಅದರಲ್ಲಿ ಹತ್ತು ಹಲವು
ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
ಮಾಸ್ತಿ ವೆಂಕಟೇಶ
ಅಯ್ಯಂಗಾರರು ರಾಮಾಯಣಕ್ಕೆ ಅನೇಕರು ಇಲ್ಲಸಲ್ಲದ ಅನೇಕ ಸಂಗತಿಗಳನ್ನು ಸೇರಿಸಿ ಅದನ್ನು
ಕುಲಗೆಡಿಸಿಬಿಟ್ಟಿದ್ದಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿ ಅದನ್ನು ಶುದ್ಧೀಕರಿಸುವುದಕ್ಕಾಗಿ
ತಾವು ಈ ಕಾವ್ಯ ಬರೆಯುತ್ತಿರುವುದಾಗಿ ತಮ್ಮ ʼಶ್ರೀರಾಮಪಟ್ಟಾಭಿಷೇಕʼದಲ್ಲಿ ಹೇಳುತ್ತಾರೆ. ಈ
ಕಾರಣದಿಂದ ರಾಮಾಯಣದಲ್ಲಿ ಬರುವ ಹಲವು ಸಂಶಯಾಸ್ವದ ಘಟನೆಗಳನ್ನು ಅವರು ತಮ್ಮ ಕಾವ್ಯದಿಂದ ಹೊರಹಾಕಿದ್ದಾರೆ.
ಅವುಗಳಲ್ಲಿ ಒಂದು ಉದಾಹರಣೆ ಕೊಡುವುದಾದರೆ ಹನುಮಂತನು ಲಂಕೆಗೆ ಬೆಂಕಿಕೊಟ್ಟು ಅದನ್ನು
ಸುಟ್ಟುಹಾಕುವುದು. ಅವರ ಪ್ರಕಾರ ಯಾರೋ ರಂಜನೆಗಾಗಿ ರಾಮಾಯಣಕ್ಕೆ ಸೇರಿಸಿದ ಘಟನೆಯಿದು!
ಕುವೆಂಪು ಅವರ ಮಹಾಕಾವ್ಯ
ʼಶ್ರೀ ರಾಮಾಯಣ ದರ್ಶನಂʼ ಹತ್ತು ಹಲವು ಕಾರಣಕ್ಕಾಗಿ ಈ ಕಾಲದ ಒಂದು ಮಹತ್ವದ ಕೃತಿಯಾಗಿ
ರೂಪುಗೊಂಡಿದೆ. ಇಪ್ಪತ್ತನೆಯ ಶತಮಾನದ ಯುಗಧರ್ಮವಾದ ವಿಶ್ವಶಾಂತಿಯನ್ನು ಪ್ರತಿಪಾದಿಸುವ
ಕಾರಣಕ್ಕಾಗಿ ಇದು ಈ ʻಶತಮಾನದ ಕಾವ್ಯʼ ಎಂಬ ಗೌರವಕ್ಕೆ ಪಾತ್ರವಾಗಿದೆ. ಇದು ಕೂಡ ವಾಲ್ಮೀಕಿ ರಾಮಾಯಣದಿಂದ
ಪ್ರಭಾವಿತವಾಗಿರುವ ಕೃತಿಯಾದರೂ ಕಾಲಕ್ಕೆ ತಕ್ಕಂತೆ ಜನಕ್ಕೆ ತಕ್ಕಂತೆ ಹೊಸದಾಗಿ ಮುರಿದು
ಕಟ್ಟಿರುವ ಮಹಾಕಾವ್ಯ. ಈ ಕಾವ್ಯದ ಆರಂಭದಲ್ಲಿ ಕವಿಕೊಡುವ ವಾಲ್ಮೀಕಿಯ ಚಿತ್ರಣವನ್ನು ನೀಡಿ ಈ ಲೇಖನವನ್ನು
ಮುಗಿಸುತ್ತೇನೆ.
ಶ್ರೀರಾಮ ಕಥೆಯನ್ನು
ಮಹರ್ಷಿ ನಾರದ ವೀಣೆಯಿಂದ ಕೇಳಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಆತ್ಮಸುಖಿಯಾಗಿ ತಮಸಾ ನದಿ
ದಂಡೆಗೆ ಸ್ನಾನಕ್ಕೆಂದು ಬರುವ ವಾಲ್ಮೀಕಿ ಅಲ್ಲಿನ
ಮೆಟ್ಟಿಲುಗಳನ್ನು ಇಳಿದು ಇನ್ನೇನು ಸ್ನಾನಕ್ಕೆ ತೊಡಗಬೇಕು ಎನ್ನುವಷ್ಟರಲ್ಲಿ ಅವನಿಗೆ
ಹಕ್ಕಿಯೊಂದು ನರಳುತ್ತಾ ಕಿರುಚುವ ಧ್ವನಿ ಕೇಳುತ್ತದೆ. ಹೋಗಿ ನೋಡುತ್ತಾನೆ. ಪರಸ್ಪರ ಲೈಂಗಿಕ
ಕ್ರಿಯೆಯಲ್ಲಿ ತೊಡಗಿ ಅನಂದಿಸುತ್ತಿರುವ ಒಂದು ಕ್ರೌಂಚಪಕ್ಷಿಗಳ ಗಂಡುಹೆಣ್ಣು ಜೋಡಿಯಲ್ಲಿ ಗಂಡು
ಪಕ್ಷಿಗೆ ಮಾಂಸದ ಆಸೆಯಿಂದ ಬೇಡನೊಬ್ಬ ಬಾಣಬಿಟ್ಟು ಅದನ್ನು ಕೆಳಗುರುಳಿಸಿರುತ್ತಾನೆ. ಇದನ್ನು ಕಂಡ
ಹೆಣ್ಣುಹಕ್ಕಿ ಭೀಕರವಾಗಿ ಆಘಾತಕ್ಕೊಳಗಾಗಿ ಅಲ್ಲಿ ನರಳುತ್ತಿರುತ್ತದೆ. ವಾಲ್ಮೀಕಿ ಘಟನೆ
ಸ್ಥಳಕ್ಕೆ ಹೋದಕೂಡಲೇ ಏನು ಮಾಡುತ್ತಾನೆ ಗೊತ್ತೆ?
ಮಾಂಸದಾಸೆಗೆ ಖುಷಿಯಿಂದ
ಬಂದು ಬಿದ್ದ ಹಕ್ಕಿಯನ್ನು ತೆಗೆದುಕೊಳ್ಳಲು ಮುಂದಾದ ನಿಷಾಧನಿಗೆ ಶಾಪ ಕೊಡುವುದಿಲ್ಲ.
ಶಿಕ್ಷೆಯನ್ನೂ ವಿಧಿಸುವುದಿಲ್ಲ. ಬದಲಾಗಿ ಕರೆದು ಅವನಿಗೆ ಬುದ್ಧಿ ಹೇಳುತ್ತಾನೆ. ತನ್ನ ಜೀವನ
ವೃತ್ತಾಂತವನ್ನೇ ಉದಾಹರಣೆ ಕೊಟ್ಟು ನಾನು ಕೂಡ ಹಿಂದೊಮ್ಮೆ, “ಕೊಲೆಯ ಕಲೆಯಲ್ಲಿ ಕೋವಿದನಾಗಿ
ಮಲೆತಿರ್ದೆನಯ್ / ನಾರದ ಮಹಾಋಷಿಯ ದಯೆ ಕಣಾ ಕರುಣೆಯಂ ಕಲಿತೆನ್!” ಎಂದು ಹೇಳಿ ಅವನ ಮನಸ್ಸನ್ನು
ಪರಿವರ್ತನೆ ಮಾಡುತ್ತಾನೆ.
ಗಾಯಗೊಂಡು ಬಿದ್ದ ಗಂಡು ಪಕ್ಷಿಯನ್ನು ಆರೈಕೆ ಮಾಡಿ
ಬಿಡುತ್ತಾನೆ ಆಗ ಆ ಗಂಡು ಹಕ್ಕಿ ಹೆಣ್ಣುಹಕ್ಕಿಯನ್ನು ಸೇರುತ್ತದೆ. ಆಗ ಮರಳಿಬಂದ ಸಂಗಾತಿಯನ್ನು ಕಂಡು ಹೆಣ್ಣುಹಕ್ಕಿಯ ದುಃಖ ಅಳಿದು ಅದೂ
ಸಂತೋಷಪಡುತ್ತದೆ. ಕುವೆಂಪು ಮೂಲ ಕಾವ್ಯದಲ್ಲಿರುವ ವಾಲ್ಮೀಕಿಯನ್ನು ಇಲ್ಲಿ ಹೇಗೆ
ಬದಲಾಯಿಸಿದ್ದಾರೆ ಗಮನಿಸಬೇಕು. ಈ ಘಟನೆಯ ಮೂಲಕ ಕುವೆಂಪು ಕಟ್ಟಿಕೊಡುವ ತಾತ್ವಿಕತೆ ಏನೆಂದರೆ, “ಮನುಷ್ಯರು
ತಪ್ಪುಗಳನ್ನು ಮಾಡುವುದು ತಿಳಿವಳಿಕೆಯ ಕೊರತೆಯಿಂದ. ಇದಕ್ಕೆ ಪರಿಹಾರ ಶಿಕ್ಷಣವೇ ಹೊರತು
ಶಿಕ್ಷೆಯಲ್ಲ” ಎಂಬುದು. ಈ ಕಾರಣದಿಂದಲೇ ಕುವೆಂಪು ಅವರ ವಾಲ್ಮೀಕಿ ಶಿಕ್ಷೆಯ ಬದಲು ಶಿಕ್ಷಣ ಕೊಡಲು
ಮುಂದಾಗುತ್ತಾನೆ. ಆ ಮೂಲಕ ಮಾದರಿ ವ್ಯಕ್ತಿಯಾಗಿ ನಮ್ಮ ಮನಸ್ಸನ್ನು ಗೆಲ್ಲುತ್ತಾನೆ.
ಹೀಗೆ ರಾಮಾಯಣವನ್ನು
ರಚಿಸಿದನೆಂದು ಹೇಳಲಾಗುವ ವಾಲ್ಮೀಕಿ ನಿತ್ಯವೂ ಪರಿವರ್ತನೆಗೆ ಒಳಗಾಗುವ ಒಂದು ವ್ಯಕ್ತಿತ್ವ. ಒಂದು
ಕೃತಿಯ ರಚನಕಾರನೇ ಆ ಕೃತಿಯಲ್ಲಿ ಒಂದು ಪಾತ್ರವಾಗಿ ಬರುವುದೂ ರಾಮಾಯಣದದ ಒಂದು ವೈಶಿಷ್ಟ್ಯ. ಹೀಗೆ
ರಾಮಾಯಣವನ್ನೂ ಅದರ ಕರ್ತೃ ಎನ್ನಲಾಗುವ ವಾಲ್ಮೀಕಿಯನ್ನೂ ಕಾಲಕ್ಕೆ ತಕ್ಕಂತೆ
ಪರಿವರ್ತಿಸಿಕೊಳ್ಳುವುದೇ ನಾವು ವಾಲ್ಮೀಕಿಗೆ ಮಾತ್ರವಲ್ಲ ನಮ್ಮ ಬಹುಮುಖ್ಯ ಸಾಂಸ್ಕೃತಿಕ
ಪಠ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಿಗೆ ಕೊಡುವ ನಿಜವಾದ ಗೌರವ. ಆ ಕೆಲಸವನ್ನು ನಾವೆಲ್ಲ
ಮಾಡೋಣ.
ರಾಮನಿಗಷ್ಟೇ ಏಕೆ ವಾಲ್ಮೀಕಿಗೂ ಉಂಟು ಮಂದಿರ!
ಕೊನೆಯ ಮಾತು: ಈ ಲೇಖನದ
ತಲೆಬರೆಹವಾಗಿ ಕೇಳಲಾದ ಪ್ರಶ್ನೆ ʼವಾಲ್ಮೀಕಿ ಎಂಬ ಋಷಿ ವಾಸ್ತವದಲ್ಲಿ ಇದ್ದನೇʼ ಎಂಬುದಕ್ಕೆ
ಉತ್ತರವೇನೆಂದರೆ ʻಇದ್ದʼ ಅಂದುಕೊಂಡರೆ ಇದ್ದ; ʻಇಲ್ಲʼ ಅಂದುಕೊಂಡರೆ ಇಲ್ಲ ಅಷ್ಟೆ!
ಡಾ ರಾಜೇಂದ್ರ ಬುರಡಿಕಟ್ಟಿ
೦೭-೧೦-೨೦೨೫
(ವಾಲ್ಮೀಕಿ ಜಯಂತಿ
ದಿನ)

No comments:
Post a Comment