Wednesday, October 8, 2025

ಭಾವಕೋಶ ತುಂಬುವ ʻಬಾಪುʼ ಆಶ್ರಮ!

ಭಾವಕೋಶ ತುಂಬುವ ʻಬಾಪುʼ ಆಶ್ರಮ!

ಇತ್ತೀಚೆಗೆ ಅನೇಕ ಮಹಾಪುರುಷರ ಜಯಂತಿಗಳು ʻಕಾಟಾಚಾರದ ಫೋಟಾಚರಣೆʼಗಳಾಗಿರುವುದು ಸುಳ್ಳಲ್ಲ. ಮಹಾತ್ಮರ ಜಯಂತಿಗಳೂ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ  ಆಚರಿಸುವ ವ್ಯವಸ್ಥೆ ಮಾಡುತ್ತಿದ್ದ ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ಅತ್ಯಂತ  ಉತ್ಸಾಹದಿಂದ ಭಾಗವಹಿಸುತ್ತಿದ್ದ ನನಗೆ ಇತ್ತೀಚಿನ ವಿದ್ಯಮಾನ ನೋಡಿ ನಿಜಕ್ಕೂ ಅನೇಕ ಸಲ ಕಿರಿಕಿರಿ ಅನ್ನಿಸಿದ್ದಿದೆ. ಹೀಗೆಯೇ ಒಬ್ಬ ಮಹಾಪುರುಷನ ದಿನಾಚರಣೆಯನ್ನು ಆಚರಿಸಲೆಂದು ಒಂದು ಸಲ ನಾನು ಸುಮಾರು ೨೫ ಕಿ.ಮೀ ದೂರದಿಂದ ಬೇಗನೆ ಎದ್ದು ಹೋಗಿದ್ದೆ. ಅಲ್ಲಿ ನಡೆದದ್ದು ಏನು ಗೊತ್ತೆ?   ಮಹಾಪುರುಷರ ಫೋಟೋ ಇಟ್ಟು ಅತ್ತ ಇತ್ತ ನಾಲ್ಕಾರು ಜನ ನಿಂತು ಫೋಟೋ ಹೊಡೆಸಿಕೊಂಡದ್ದು ಅಷ್ಟೆ. ಎಲ್ಲವೂ ಐದು ನಿಮಿಷದಲ್ಲಿ ಮುಗಿದುಹೋಯಿತು. ಆಚರಿಸುವವರು ಯಾರಿಗೋ ಫೋಟೋವರದಿ ಕೊಡಬೇಕಿತ್ತೇನೋ.  ಅದಕ್ಕೆ ಅಷ್ಟು ಮಾಡಿದರು. ಅಷ್ಟಕ್ಕೆ ನಾನು ಅಷ್ಟು ದೂರದಿಂದ ಯಾಕಾದರೂ ಬರಬೇಕಿತ್ತು ಅನ್ನಿಸಿಬಿಟ್ಟಿತ್ತು.

ವರ್ಷದ ಗಾಂಧೀಜಯಂತಿ ಕಾರ್ಯಕ್ರಮಕ್ಕೂ ಇದೇ ಗತಿ ಬರುವುದೆಂದು ನನಗೆ ಊಹಿಸಲು ಕಾರಣವಿತ್ತು. ಈಗಾಗಲೇ ರಜೆಯಲ್ಲಿ ಬರುವ ಅಂಬೇಡ್ಕರ್ಜಯಂತಿ ತೀರಾ ಸಪ್ಪೆಯಾಗಿ ಬಣಬಣಗುಟ್ಟುವ ವಾತಾವರಣದಲ್ಲಿ ನಡೆಯುತ್ತಿದೆ. ಆಚರಣೆಗಳು ಎಲ್ಲಿ ಹೇಗೆ ನಡೆಯುತ್ತವೆಯೋ ಆದರೆ ಶಾಲಾಕಾಲೇಜುಗಳಲ್ಲಿಯಾದರೂ ಒಂದಿಷ್ಟು ಅರ್ಥಪೂರ್ಣವಾಗಿ ನಡೆಯಬೇಕಾದದ್ದು ತೀರಾ ಅವಶ್ಯ. ಆದರೆ ವರ್ಷ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ದಸರಾ ರಜೆಯ ಅವಧಿಯಲ್ಲಿ ಮಾರ್ಪಾಡು ಆಗಿದ್ದು ಗಾಂಧೀಜಯಂತಿಯು ರಜೆಯ ಮಧ್ಯೆ ಬರುತ್ತಿದೆ. ಮಕ್ಕಳು ಇರುವುದಿಲ್ಲ. ಆಚರಣೆ ಬಹಳ ಮುಖ್ಯವಾದದ್ದು ರಜೆಯಿದ್ದರೂ ನಾವು ಬಂದು ಭಾಗವಹಿಸಬೇಕು ಎಂಬಷ್ಟು ಅರಿವಮೂನ್ನು ಮಕ್ಕಳಲ್ಲಿ ಮೂಡಿಸಲು ನಮಗೆ ಇನ್ನೂ ಆಗಿಲ್ಲ. ಮಕ್ಕಳ ಕಥೆ ಇದಾದರೆ ಇನ್ನು ಶಾಲಾ ಕಾಲೇಜುಗಳ ಶಿಕ್ಷಕರದ್ದು ಇನ್ನೊಂದು ಕಥೆ. ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಕಡ್ಡಾಯ ಮಾಡದೆ, ಭಾಗವಹಿಸುವ ಅಥವಾ ಬಿಡುವ ಆಯ್ಕೆಯನ್ನು ಅವರಿಗೆ ಕೊಟ್ಟಿದ್ದರೆ ಅವರಲ್ಲಿ ಎಷ್ಟು ಜನ ಭಾಗವಹಿಸುತ್ತಿದ್ದರು ಎಂಬುದನ್ನು ಊಹಿಸಲು ಕಷ್ಟವೇನಲ್ಲ.

ಇಂತಹ ಮನಸ್ಸಿಗೆ ಬೇಸರ ತರಿಸುವ ನಾಮಕಾವಸ್ತೆ ಆಚರಣೆಗಿಂತ ನಿಜಾರ್ಥದಲ್ಲಿ ಅರ್ಥಪೂರ್ಣವಾಗಿ ನಡೆಯುವ ಆಚರಣೆಗಳಲ್ಲಿ ವರ್ಷದಲ್ಲಿ ಒಂದುಸಲವಾದರೂ ಭಾಗವಹಿಸಬೇಕು ಎಂಬ ಆಸೆಯಿತ್ತು. ಹೀಗಾಗಿ ವರ್ಷದ ಗಾಂಧೀ ಜಯಂತಿಯ ಆಚರಣೆಯನ್ನು ಅವರ ಮನೆ ಮತ್ತು ಆಶ್ರಮಗಳಲ್ಲಿಯೇ ಅಚರಿಸಲು ನಿರ್ಧರಿಸಿ ಗುಜರಾತಿಗೆ ಹೋಗುವುದೆಂದು ನಿರ್ಧರಿಸಿದ್ದೆ. ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರ್ಬಾ ಅವರು ಹುಟ್ಟಿಬೆಳೆದ ಮನೆಗಳನ್ನು ಹೋಗಿ ನೋಡುವುದು ಮತ್ತು ಗಾಂಧೀಜಿಯವರು ತಮ್ಮ ಸಾರ್ವಜನಿಕ ಜೀವನದ ಬಹುಪಾಲು ಕಾಲವನ್ನು ಬದುಕಿದ, ಮತ್ತು ಅನೇಕ ಚಳವಳಿಗಳನ್ನು ನಿಂತು ಮುನ್ನಡೆಸಿದ ಅವರ ಸಾಬರಮತಿ ಆಶ್ರಮದಲ್ಲಿ ಗಾಂಧೀಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಯೋಜನೆಯಾಗಿತ್ತು. ಹೊರಡುವಾಗ ಮತ್ತು ಹೊರಟ ಮೇಲೂ ಎದುರಾದ ಕೆಲವು ಆಡಳಿತಾತ್ಮಕ ತೊಡಕುಗಳನ್ನು ಏನೇನೋ ಮಾಡಿ ಇದಕ್ಕಾಗಿ ಬಗೆಹರಿಸಿಕೊಂಡಿದ್ದೆ.

ಗುಜರಾತ್‌ ಪ್ರವಾಸದ ನನ್ನ ಯೋಜನೆ

ಗುಜರಾತಿನಲ್ಲಿ ಮುಖ್ಯವಾಗಿ ಸರದಾರ ವಲ್ಲಭ ಭಾಯಿ ಪಟೇಲ್‌ ಸ್ಮರಣೆಯಲ್ಲಿ ವಿಶ್ವದ ಅತ್ಯಂತ ಎತ್ತರವಾದ ಅವರ ಮೂರ್ತಿಯಾದ ಏಕತಾ ಮೂರ್ತಿ (Statue of Unity̧) ಇರುವ ಏಕತಾ ನಗರಕ್ಕೆ ಭೇಟಿ ನೀಡುವುದು, ಪ್ರಾಚೀನ ಪೌರಾಣಿಕ ನಗರವಾದ ದ್ವಾರಕಾ ದರ್ಶನ ಮಾಡುವುದು, ಮಹಾತ್ಮಾ ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರ್ಬಾ ಅವರು ಹುಟ್ಟಿಬೆಳೆದ ಪೋರಬಂದರ್‌ ನಗರಕ್ಕೆ ಭೇಟಿ ನೀಡಿ ಅವರ ಮನೆಗಳನ್ನು ನೋಡಿಕೊಂಡು ಬರುವುದು, ಸಾಧ್ಯವಾದರೆ ಇತಿಹಾಸ ಪ್ರಸಿದ್ಧ ಸೋಮನಾಥಕ್ಕೆ ಭೇಟಿ ನೀಡಿ ಸೋಮನಾಥನ ದರ್ಶನ ಮಾಡುವುದು ನನ್ನ ಪ್ರವಾಸ ಯೋಜನೆಯಲ್ಲಿ ಸೇರಿದ್ದವಾದರೂ ಮುಖ್ಯವಾಗಿ ಅಹಮದಾಬಾದ್‌ ನಗರದ ಮಧ್ಯಭಾಗದಲ್ಲಿ ಇರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಗಾಂಧೀಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವುದು ಅತ್ಯಂತ ಆದ್ಯತೆಯ ಚಟುವಟಿಕೆಯಾಗಿತ್ತು.

ಮೊದಲದಿನ ನಾನೂ ಏಕತಾ ನಗರಕ್ಕೆ ಹೋಗುವ ಯೋಜನೆಯಿದ್ದರೂ ಅಹಮದಾಬಾದಿನಿಂದ ನನ್ನನ್ನು ಕರೆದೊಯ್ಯುವ ಬಸ್‌ ವ್ಯವಸ್ಥೆ ಕೇವಲ ಭಾನುವಾರ ಮಾತ್ರ ಇರುವುದೆಂದು ತಿಳಿದು ಅದು ಹೊಂದಾಣಿಕೆ ಆಗದ ಕಾರಣ ನನ್ನ ಪ್ರವಾಸದ ಯೋಜನೆಯನ್ನು ತುಸು ಮಾರ್ಪಡಿಸಿಕೊಂಡು ಮೊದಲು ನೇರವಾಗಿ ದ್ವಾರಕೆಗೆ ಹೋಗಿ ಅಲ್ಲಿಂದ ಪೋರಬಂದರ್‌ ಹೋಗಿ ಅವೆರಡರ ದರ್ಶನವಾದ ಮೇಲೆ ಸೋಮನಾಥಕ್ಕೂ ಹೋಗಿ ಸೋಮನಾಥನ ದರ್ಶನ ಪಡೆದು ರಾತ್ರಿ ರೈಲು ಹಿಡಿದು ಬೆಳ್ಳಂಬೆಳಗ್ಗೆ ಗಾಂಧೀನಗರಕ್ಕೆ ಬಂದಿದ್ದೆ. ಅಹಮದಾಬಾದ್‌ ಮತ್ತು ಗಾಂಧೀನಗರಗಳಿಗಾಗಿ ಒಟ್ಟು ನಾನು ಎರಡು ದಿನಗಳನ್ನು ಕಾಯ್ದಿರಿಸಿಕೊಂಡಿದ್ದು ಒಂದು ದಿನ ಅಹಮದಾಬಾದ್‌ ನಗರದ ಪ್ರಮುಖ ಸ್ಥಳಗಳನ್ನು ನೋಡುವುದು ಇನ್ನೊಂದು ದಿನ ಅದು ಅಕ್ಟೋಬರ್‌ ಎರಡು ಆದ್ದರಿಂದ ಇಡೀ ದಿನ ಗಾಂಧೀ ಆಶ್ರಮದಲ್ಲಿನ ಚಟುವಟಿಕೆಗಳಿಗಾಗಿ ಮೀಸಲಾಗಿರಿಸಿಕೊಂಡಿದ್ದೆ.

ಮೊದಲದಿನ ಯೋಜನೆಯಂತೆ ಅಹಮದಾಬಾದಿನ ಪ್ರಮುಖ ಸ್ಥಳಗಳನ್ನು ನೋಡಿದೆ. ಎರಡನೆಯ ದಿನ ಮತ್ತು ನನ್ನ ಗುಜರಾತ್‌ ಪ್ರವಾಸದ ಕೊನೆಯ ದಿನವಾದ ಅಕ್ಟೋಬರ್‌ ಎರಡರಂದು ಬೆಳಿಗ್ಗೆ ನಾನು ಗಾಂಧೀ ಆಶ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲ್ಲಿ ಏನೇನು ಕಾರ್ಯಕ್ರಮಗಳು ಇವೆ ಮತ್ತು ಎಷ್ಟು ಗಂಟೆಗೆ ಅವು ಆರಂಭವಾಗುತ್ತವೆ ಎಂಬುದನ್ನು ತಿಳಿಯಬೇಕಿತ್ತು. ಅದಕ್ಕಾಗಿ ನಾನು ಆನ್‌ ಲೈನಿನಲ್ಲಿ ಮಹಾತ್ಮಾಗಾಂಧೀ ಟ್ರಸ್ಟ್‌ನ ಜಾಲತಾಣಕ್ಕೆ ಹೋಗಿ ಮಾಹಿತಿ ನೋಡಿದೆ. ಅಲ್ಲಿ ಗುಜರಾತಿಯಲ್ಲಿ ಆ ಬಗ್ಗೆ ಒಂದು ಟಿಪ್ಪಣಿಯನ್ನು ಹಾಕಲಾಗಿತ್ತು. ನನಗೆ ಗುಜರಾತಿ ಓದಲು ಅಲ್ಪಸ್ವಲ್ಪ ಬರುತ್ತಿತ್ತಾದರೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಮಾಹಿತಿಯನ್ನು ಇಂಗ್ಲಿಷಿಗೆ ಅನುವಾದ ಮಾಡಿಸಿಕೊಂಡೆ. ಬೆಳಿಗ್ಗೆ ಎಂಟೂವರೆಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆಯೆಂದೂ ನಂತರ ಆಹ್ವಾನಿತ ಅತಿಥಿಗಳಿಂದ ಉಪನ್ಯಾಸವಿದೆಯೆಂದೂ ತಿಳಿಯಿತು.

ನಾನು ಉಳಿದುಕೊಂಡಿದ್ದು ಅಹಮದಾಬಾದಿನ ರೈಲ್ವೆ ನಿಲ್ದಾಣದ ಹತ್ತಿರದ ಒಂದು ಹೊಟೆಲ್‌ನಲ್ಲಿ. ಅಲ್ಲಿಂದ ಸಾಬರಮತಿ ಆಶ್ರಮ ಸುಮಾರು ಆರು ಕಿ.ಮೀ. ದೂರದಲ್ಲಿತ್ತು. ಅಲ್ಲಿಗೆ ಹೋಗಲು ಅಹಮದಾಬಾದ್‌ ಮೆಟ್ರೋ ರೈಲು ಇತ್ತು. ಆದರೆ ಮೆಟ್ರೋದಲ್ಲಿ ಹೋಗಲು ಅಲ್ಲಿ ತುಸು ಸುತ್ತೂ ಬಳಸಿ ರೈಲು ಬದಲಿಸಿ ಹೋಗಬೇಕಾಗಿತ್ತು. ಆದ್ದರಿಂದ ನೇರವಾಗಿ ಆಟೋ ಮಾಡಿಕೊಂಡು ಎಂಟೂಕಾಲು ಸಮಯಕ್ಕೆ ಆಶ್ರಮಕ್ಕೆ ಬಂದೆ. ಸ್ವತಃ ಮಾಡಿಕೊಂಡ ಆಟೋ ಆದ್ದರಿಂದ ಆಶ್ರಮದ ದ್ವಾರಕ್ಕೇ ಬಂದು ಆತ ನನ್ನನ್ನು ಬಿಟ್ಟುಹೋದ.

ನಿಜಾರ್ಥದ ಚಿಕ್ಕ ಮತ್ತು ಚೊಕ್ಕ ಗಾಂಧೀಜಯಂತಿ

ನಾನು ಆಶ್ರಮ ತಲುಪುತ್ತಿದ್ದಂತೆಯೇ ನನ್ನ ಭಾವಕೋಶ ಅರಳಿತು. ಸಾಬರ್ಮತಿ ಆಶ್ರಮ ಎಂಬ ನಾಮಫಲಕವನ್ನು ನೋಡುತ್ತಿದ್ದಂತೆಯೇ ಏನೋ ಸಾರ್ಥಕತೆಯ ಭಾವ ಉಂಟಾಯಿತು. ನಾನು ಆಶ್ರಮದ ದ್ವಾರದಲ್ಲಿ ಆಟೋ ಇಳಿಯುತ್ತಿರುವಾಗಲೇ ಕೆಲವು ಗಣ್ಯ ವ್ಯಕ್ತಿಗಳು ಕೂಡ ಅಲ್ಲಿ ಕಾರಿನಿಂದ ಕೆಳಗಿಳಿಯುತ್ತಿದ್ದರು. ಅವರು ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆಂದು ತಕ್ಷಣಕ್ಕೆ ತಿಳಿಯಲು ಏನೂ ಕಷ್ಟವಾಗಲಿಲ್ಲ. ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆಯೇ ಆಶ್ರಮದ ಇಡೀ ನಕ್ಷೆಯನ್ನು ಅಲ್ಲಿ ಹಾಕಿದ್ದು ಕಂಡಿತು. ಅದರ ಮೇಲೆ ಒಂದು ಸಲ ಕಣ್ಣಾಡಿಸಿದೆ. ಇಡೀ ಆಶ್ರಮದ ಆವರಣದಲ್ಲಿ ಯಾವ ಯಾವ ಭಾಗದಲ್ಲಿ ಏನೆಲ್ಲ ನೋಡತಕ್ಕದ್ದಿದೆ ಎಂಬುದನ್ನು ಅದರಲ್ಲಿ ಗುರುತುಮಾಡಲಾಗಿತ್ತು. ಅಲ್ಲಿಯೇ ಒಂದು ಮಾರ್ಗಸೂಚಿ ಫಲಕವೂ ಇದ್ದು ಅದು ಆಶ್ರಮದಲ್ಲಿ ಮಹಾತ್ಮಾಗಾಂಧೀಜಿಯವರು ವಾಸಮಾಡುತ್ತಿದ್ದ ಅವರ ಮನೆ ʼಹೃದಯಕುಂಜʼಕ್ಕೆ ಹೋಗುವ ಮಾರ್ಗವನ್ನು ನನಗೆ ತೋರಿಸಿತು. ಅದು ತೋರಿಸಿದ ಮಾರ್ಗದಲ್ಲಿಯೇ ತುಸು ಮುಂದೆ ಹೋದೆ. ಹೃದಯಕುಂಜ ಸಿಕ್ಕಿತು.

ನಾನು ಹೋದಾಗ ʻಹೃದಯಕಂಜʼ ಗಾಂಧೀಜಯಂತಿಯ ಆಚರಣೆಗಾಗಿ ಸಕಲರೀತಿಯಲ್ಲೂ ತಯಾರಾಗಿತ್ತು. ಗಾಂಧೀಜಿಯ ಬದುಕು ಹೇಗೆ ತೆರೆದಪುಸ್ತಕವೋ ಅವರ ಮನೆಯೂ ಹಾಗೇ ತೆರೆದ ಮನೆಯೇ. ಅದೊಂದು ಮಧ್ಯಮ ಗಾತ್ರದ ಅರ್ಧಕೊಳವೆ ಆಕಾರದ ಕೆಂಪು ಹಂಚಿನ ಮನೆ. ಅದರಲ್ಲಿ ಗೋಡೆಗಳಿರುವುದೂ ಬಹಳ ಕಡಿಮೆ. ಅಡುಗೆ ಮನೆ, ಕಸ್ತೂರಬಾ ಕೋಣೆ, ಗಾಂಧೀಜಿ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ಕೋಣೆ ಬಿಟ್ಟರೆ ಉಳಿದಂತೆ ಇಡೀ ಮನೆ ಬಟಾಬಯಲು ಪ್ರದೇಶವೇ! ಹೊರಗಿನಿಂದ ನೋಡಿದರೆ ದೊಡ್ಡ ಹಜಾರ ಎನ್ನಬಹುದಾದ ವಿಶಾಲವಾದ ಕಟ್ಟೆ ಇದೆ. ಅದರಲ್ಲಿ ಏನಿಲ್ಲವೆಂದರೂ ಐವತ್ತರಿಂದ ಅರವತ್ತು ಜನ ಕೂತುಕೊಳ್ಳುವುದಕ್ಕೆ ಏನೂ ಅಡ್ಡಿಯಿಲ್ಲ. ಈ ಹಜಾರದಂತಹ ಕಟ್ಟೆಯ ಮೇಲೆ ಬಿಳಿಬಣ್ಣದ ತಡಿಗಳನ್ನು ಹಾಕಲಾಗಿತ್ತು. ಅದರ ಮೇಲೆ ಸರ್ವಧರ್ಮ ಪ್ರಾರ್ಥನೆಗಾಗಿ ವಿವಿಧ ಧರ್ಮದ ಧರ್ಮಗುರುಗಳು, ಪ್ರತಿನಿಧಿಗಳು ಆಸೀನರಾಗಿದ್ದರು. ಅವತ್ತಿನ ಪ್ರಧಾನ ಭಾಷಣ ಮಾಡಲಿರುವ ಅತಿಥಿಗಳು ಮತ್ತು ಗಾಂಧೀಪ್ರತಿಷ್ಠಾನದ ಮುಖ್ಯಸ್ಥರೂ ಕೂತಿದ್ದರು.

ಮನೆಯ ಮುಂದುಗಡೆ ವಿಶಾಲವಾದ ಬಯಲು ಜಾಗೆಯಿದೆ. ಈ ಜಾಗೆಯಲ್ಲಿ ಹಸಿರು ಜಮಖಾನೆಗಳನ್ನು ಹಾಕಲಾಗಿತ್ತು. ಅದರ ಮೇಲೆ ಯಾವುದೋ ಶಾಲೆಯ ಶಾಲಾಮಕ್ಕಳು ಶಿಸ್ತಾಗಿ ಕುಳಿತುಕೊಂಡಿದ್ದರು.  ಆ ಮಕ್ಕಳ ಹಿಂದುಗಡೆ ಕೆಲವು ಕುರ್ಚಿಗಳನ್ನು ಹಾಕಲಾಗಿತ್ತು. ಸಾಮಾನ್ಯವಾಗಿ ಗಾಂಧೀ ಆಶ್ರಮಕ್ಕೆ ಬರುವವರು ಕುರ್ಚಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಕೆಳಗೆ ಕುಳಿತುಕೊಳ್ಳುವುದನ್ನೇ ಇಷ್ಟಪಡುತ್ತಾರೆ. ಆದರೆ ವಯಸ್ಸಾದವರು, ಮಂಡಿನೋವು ಇತ್ಯಾದಿಗಳ ಕಾರಣಕ್ಕೆ ಕೆಳಗೆ ಕುಳಿತುಕೊಳ್ಳಲು ಆಗದವರು ಮುಂತಾದವರನ್ನು ಗಮನದಲ್ಲಿ ಇಟ್ಟುಕೊಂಡು ಈ ವ್ಯವಸ್ಥೆಯನ್ನು ಅಲ್ಲಿ ಮಾಡಿದ್ದರು. ಆ ಕುರ್ಚಿಗಳಲ್ಲಿ ಕೆಲವರು ಕುಳಿತರೆ ಮತ್ತೆ ಕೆಲವರು ಕೆಳಗೆ ಶಾಲಾ ಮಕ್ಕಳ ಜೊತೆಗೇ ಕುಳಿತುಕೊಂಡರು. ಒಂದಿಷ್ಟು ಹೊತ್ತು ಮೌನವಿತ್ತು. ಕಾರ್ಯಕ್ರಮ ಆರಂಭವಾಗಿರಲಿಲ್ಲ. ಯಾರಿಗಾದರೂ ಅವರು ಕಾಯುತ್ತಿರಬಹುದು ಎಂದು ನಾನು ಅಂದುಕೊಂಡೆ. ಆದರೆ ಆಮೇಲೆ ನನಗೆ ತಿಳಿದದ್ದೇನೆಂದರೆ ಅವರೂ ಯಾರಿಗೂ ಕಾಯುತ್ತಿರಲಿಲ್ಲ; ಸಮಯಕ್ಕಾಗಿ ಕಾಯುತ್ತಿದ್ದರು ಎಂದು! ಎಂಟೂವರೆಗೆ ಆರಂಭ ಎಂದು ಪ್ರಕಟಿಸಿದ್ದರಲ್ಲ. ಆ ಎಂಟೂವರೆ ಆಗುವುದನ್ನು ಅವರು ಕಾಯುತ್ತಿದ್ದರು!

ನಿಗಧಿತ ಸಮಯ ಏಂಟೂವರೆ ಆಗುತ್ತಿದ್ದಂತೆ ಸರ್ವಧರ್ಮ ಪ್ರಾರ್ಥನೆ ಆರಂಭವಾಯಿತು. ಇಸ್ಲಾಂ ಧರ್ಮದ ಧರ್ಮಗುರುವೊಬ್ಬರು ಕುರಾನಿನ ಆಯ್ದಭಾಗಗಳನ್ನು ಪಠಿಸಿದರು. ನಂತರ ಭಗವದ್ಗೀತೆಯಿಂದ ಆಯ್ದ ಭಾಗಗಳನ್ನು ಮಹಿಳೆಯೊಬ್ಬರು ಪಠಣಮಾಡಿದರು. ಇದರ ಜೊತೆಗೆ ಗಾಂಧೀಜಿಯವರ ಅತ್ಯಂತ ಪ್ರೀತಿಯ ಪ್ರಾರ್ಥನಾ ಗೀತೆಗಳಾದ, ʻವೈಷ್ಣವ ಜನತೋ….ʼರಘುಪತಿ ರಾಘವ ರಾಜಾರಾಮ್‌ ಸಬಕೋ ಸನ್ಮತಿ ದೇ ಭಗವಾನ್…‌ʼ ಗೀತೆಗಳನ್ನು ಹಾಡಲಾಯಿತು. ವಿಶೇಷವೆಂದರೆ ಈ ಹಾಡು ಭಜನೆ ನಡೆಯುತ್ತಿರುವಾಗಲೇ ಅಲ್ಲಿ ಸೇರಿದ್ದ ಶಾಲಾ ಮಕ್ಕಳು ಕಿವಿಯಿಂದ ಈ ಭಕ್ತಿಗೀತೆಗಳನ್ನು ಕೇಳುತ್ತಲೇ ಗಾಂಧೀಜಿಗೆ ಅತ್ಯಂತ ಪ್ರೀತಿಯ ಕೆಲಸವಾದ ಚರಕದಿಂದ ನೂಲು ತೆಗೆಯುವ ಕಾರ್ಯವನ್ನು ಸಾಂಕೇತಿಕವಾಗಿ ಮಾಡುತ್ತಿದ್ದರು. ಶಾಲಾಮಕ್ಕಳ ಈ ಚಟುವಟಿಕೆಯು ಭಕ್ತಿ ಎಂಬುದು ಕೇವಲ ಬಾಯಿ ಮತ್ತು ಕಿವಿಗಳಿಗೆ ಮಾತ್ರ ಸಂಭದಿಸಿದ್ದಲ್ಲ; ಬದಲಿಗೆ ಕೈಗಳಿಗೂ ಸಂಬಂಧಿಸಿದ್ದು ಎನ್ನುವುದನ್ನು ಸಂಕೇತಿಸುವಂತಿತ್ತು.

ಸರ್ವಧರ್ಮ ಪ್ರಾರ್ಥನೆಯ ನಂತರ ಮುಖ್ಯ ಅತಿಥಿಯಾಗಿ ಬಂದಿದ್ದ ಹಿರಿಯ ಗಾಂಧೀವಾದಿಯೊಬ್ಬರು ದಿನವಿಶೇಷತೆಯನ್ನು ಕುರಿತು ಮಾತನಾಡಿದರು. ಅವರು ಸಂಪೂರ್ಣವಾಗಿ ಗುಜರಾತಿಯಲ್ಲಿ ಮಾತನಾಡಿದ್ದರಿಂದ ಮತ್ತು ನನಗೆ ಆ ಭಾಷೆಯು ಅರ್ಧಂಬರ್ಧ ಅರ್ಥವಾಗುತ್ತಿದ್ದರಿಂದ ಹೆಚ್ಚುಕಡಿಮೆ ಅವರ ಮಾತು ಅರ್ಧದಷ್ಟು ಅರ್ಥವಾಯಿತು ಅನ್ನಬಹುದು. ಆದರೆ ಅವರು ಮಾತನಾಡುವಾಗ ಗಾಂಧೀಜಿಯವರನ್ನು ಕುರಿತು ಅತ್ಯಂತ ಪ್ರೌಢವಾಗಿ ಮಾತನಾಡದೆ ಎದುರಿಗೆ ಕುಳಿತ ಮಕ್ಕಳ ಮಟ್ಟಕ್ಕೆ ಹೊಂದುವಂತೆ ಸತ್ಯ ಅಹಿಂಸೆಯ ಮಹತ್ವ, ಯುದ್ಧದಿಂದ ಜಗತ್ತಿಗೆ ಆಗುವ ಹಾನಿ ಮತ್ತು ಯುದ್ಧವಿರೋಧಿ ನಿಲುವನ್ನು ನಾವು ಹೇಗೆಲ್ಲ ರೂಪಿಸಿಕೊಳ್ಳಬಹುದು ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದ್ದನ್ನು ನಾನು ಗಮನಿಸಿದೆ. ಅಮೇರಿಕ ಜಪಾನಿನ ಮೇಲೆ ಎರಡನೆಯ ಜಾಗತಿಕ ಯುದ್ಧಸಂದರ್ಭದಲ್ಲಿ ನಡೆಸಿದ ಅಣುಬಾಂಬ್ ದಾಳಿ ಕುರಿತು ಜಪಾನಿನ ಬಾಲಕನ ಕಥೆಯೊಂದನ್ನು ಹೇಳುವ ಮೂಲಕ ಅವರು ಮಕ್ಕಳ ಗಮನವನ್ನು ಸೆಳೆದು ವಿಷಯವನ್ನು ಮುಟ್ಟಿಸಿದರು. ಇವರ ಭಾಷಣದಿಂದ ನಾನು ಕಲಿತ ಪಾಠವೇನೆಂದರೆ, “ನಾವು ಸರ್ವಜನಿಕವಾಗಿ ಮಾತನಾಡುವಾಗ ಅನೇಕ ಸಂದರ್ಭಗಳಲ್ಲಿ ವಿಷಯದ ಬಗ್ಗೆ ನಮಗೆ ಯಾವ ಮಟ್ಟದ ತಿಳಿವಳಿಕೆ ಇದೆ ಎನ್ನುವುದನ್ನು ಪ್ರದರ್ಶಿಸುತ್ತಿರುತ್ತೇವೆ. ಆದರೆ ಅದು ಸರಿಯಾದ ಮಾರ್ಗವಲ್ಲ. ಮುಂದೆ ಮಾತನ್ನು ಕೇಳುವವರು ಯಾವ ಮಟ್ಟದವರು ಎಂಬುದರ ಕಡೆಗೆ ಹೆಚ್ಚುಗಮನ ಕೊಟ್ಟು ಅವರ ಮಟ್ಟಕ್ಕೆ ತಕ್ಕಂತೆ ಮಾತನಾಡಬೇಕು; ಅದು ಸರಿಯಾದ ಮಾರ್ಗ ಎಂಬುದು.”

ಕಾರ್ಯಕ್ರಮ ಅತ್ಯಂತ ಸರಳವಾಗಿ ಆದರೆ ಪರಿಣಾಮಕಾರಿಯಾಗಿ ಆಯಿತು. ಮುಖ್ಯ ಭಾಷಣಕಾರರೊಬ್ಬರನ್ನು ಬಿಟ್ಟರೆ ಮತ್ಯಾರೂ ಮಾತನಾಡಲಿಲ್ಲ. ಅದರ ಅವಶ್ಯಕತೆ ಇಲ್ಲ ಎಂಬುದನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿದ್ದರು ಅನಿಸುತ್ತದೆ. ನಮ್ಮ ಅನೇಕ ಸಭೆಗಳಲ್ಲಿ ಅವಶ್ಯವಿರುವವರ ಮಾತಿನ ಮಹತ್ವವೇ ಗೌಣವಾಗುವಂತೆ ಅನವಶ್ಯಕವಾಗಿ ಅನೇಕರನ್ನು ಮಾತನಾಡಿಸಿಬಿಡುತ್ತೇವೆ. ಆ ಕೆಲಸವನ್ನು ಅವರು ಮಾಡಲಿಲ್ಲ. ಕಾರ್ಯಕ್ರಮಕ್ಕೆ ನಿರೂಪಕರ ಹಾವಳಿಯೂ ಇರಲಿಲ್ಲ. ಸ್ವಾಗತಕ್ಕೆ, ಪರಿಚಯಕ್ಕೆ, ಪ್ರಾಸ್ತಾವಿಕ ನುಡಿಗೆ, ವಂದನೆಗೆ ಅಂತ ಹಿಂಡು ಜನರನ್ನುಅಲ್ಲಿ ಹಾಕಿಕೊಂಡಿರಲೂ ಇಲ್ಲ. ಸಂಸ್ಥೆಯ ಮುಖ್ಯಸ್ಥರೇ ಅತಿಥಿಗಳ ಮಾತಿಗೆ ಮೊದಲು ಒಂದು ವಾಕ್ಯದ ಸ್ವಾಗತ ಮಾಡಿ ನಾಲ್ಕಾರು ವಾಕ್ಯಗಳ ಪ್ರಾಸ್ತಾವಿಕ ನುಡಿ ಆಡಿದರು. ಅವರೇ ಕೊನೆಯಲ್ಲಿ ಒಂದು ವಾಕ್ಯದ ವಂದನೆಗಳನ್ನೂ ಸಲ್ಲಿಸಿದರು! ಇಡೀ ಕಾರ್ಯಕ್ರಮದಲ್ಲಿ ಅನವಶ್ಯಕ ಎನಿಸುವ ಯಾರನ್ನೂ ಅವರು ಕರೆಯಲಿಲ್ಲ; ಏನನ್ನೂ ಮಾಡಲಿಲ್ಲ. ಆ ದೃಷ್ಟಿಯಿಂದ ಇದು ನಿಜಾರ್ಥದಲ್ಲಿ ಒಂದು ʼಚಿಕ್ಕ ಮತ್ತು ಚೊಕ್ಕ ಕಾರ್ಯಕ್ರಮʼ ಆಗಿ ಮೂಡಿಬಂದಿತು.

ವಿನೋಬಾ-ಮೀರಾ ಕುಟೀರ

ಕಾರ್ಯಕ್ರಮದ ನಂತರ ಆಶ್ರಮದ ಆವರಣದಲ್ಲಿ ಒಂದು ಸುತ್ತು ಹಾಕಲು ಹೊರಟೆ. ಬೆಳಗಿನ ಸೂರ್ಯನ ಎಳೆಯ ಬಿಸಿಲು ಮೈಮನಸ್ಸುಗಳಿಗೆ ಹರುಪು ಹುಮ್ಮಸ್ಸುಗಳನ್ನು ತುಂಬುತ್ತಿತ್ತು. ಪಕ್ಕದಲ್ಲಿಯೇ ಹರಿಯುವ ಸಾಬರಮತಿ ನದಿ ಕಣ್ಣುಗಳಿಗೆ ಒಂದಿಷ್ಟು ತಂಪನ್ನೂ ಕೊಡುತ್ತಿತ್ತು. ಗಾಂಧೀಜಿಯವರ ʻಹೃದಯಕುಂಜʼಕ್ಕೆ ಹತ್ತಿರದಲ್ಲಿಯೇ ಒಂದು ಸಣ್ಣ ಕುಟೀರವಿದೆ. ಒಳಗಡೆ ಕೋಣೆಗಳೇನೂ ಇಲ್ಲದ ಸುತ್ತಲೂ ನಾಲ್ಕು ಕಚ್ಚಾ ಗೋಡೆಗಳಿರುವ ಒಂದೇ ಒಂದು ಕೋಣೆಯಿರುವ ಈ ಕುಟೀರ ಇಬ್ಬರು ಮಹಾವ್ಯಕ್ತಿಗಳ ಹೆಸರುಗಳೊಂದಿಗೆ ತಳುಕುಹಾಕಿಕೊಂಡಿದೆ. ಅದರಲ್ಲಿ ಒಬ್ಬರು ಭೂಧಾನ ಚಳವಳಿಯ ನೇತಾರ ವಿನೋಬಾ ಭಾವೆ. ಇನ್ನೊಬ್ಬರು ಗಾಂಧೀಜಿಯವರ ಚಿಂತನೆಗಳಿಗೆ ಮಾರುಹೋಗಿ ಅವರ ಅನುಯಾಯಿಯಾದ ಬ್ರಿಟೀಷ್‌ ತರುಣಿ Madeleine Slade.

೧೮೯೫ರಲ್ಲಿ ಇಂದಿನ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಜನಿಸಿದ ವಿನೋಬಾ ಭಾವೆ ಆಧುನಿಕ ಭಾರತೀಯ ಇತಿಹಾಸದಲ್ಲಿ ವಿಶೇಷವಾಗಿ ʼಭೂದಾನ ಚಳವಳಿʼಯ ನೇತಾರರೆಂದೇ ಗುರುತಿಸಲ್ಪಡುವ ಒಬ್ಬ ಆಧ್ಯಾತ್ಮಿಕ ಗುರು. ಗಾಂಧೀಜಿಯವರ ಚಿಂತನೆಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದ ವಿನೊಬಾ ಭಾವೆ ಕನ್ನಡ, ಮರಾಠಿ, ಸಂಸ್ಕೃತ, ಇಂಗ್ಲಿಷ್‌, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಪಂಡಿತರಾಗಿದ್ದವರು. ಕನ್ನಡವನ್ನು ʼಲಿಪಿಗಳ ರಾಣಿʼ ಎಂದು ಕರೆದದ್ದಕ್ಕಾಗಿ ಅವರು ಕನ್ನಡಿಗರಿಗೆ ಹೆಚ್ಚು ಅಚ್ಚುಮೆಚ್ಚಾದವರು. ಅವರು ಈ ಆಶ್ರಮದಲ್ಲಿ ೧೯೧೮ ರಿಂದ ೧೯೨೧ ರ ವರೆಗೆ ಹಲವು ತಿಂಗಳುಗಳ ಕಾಲ ವಾಸವಾಗಿದ್ದರು.

ಇನ್ನೊಬ್ಬರಾದ ಮ್ಯಾಡ್ಲಿನ್‌ ಸ್ಲಾಡೆ. ೧೮೯೨ರಲ್ಲಿ ಇಂಗ್ಲೆಂಡ್‌ನಲ್ಲಿ ಬ್ರಿಟೀಷ್‌ ದಂಪತಿಗಳಿಗೆ ಮಗಳಾಗಿ ಜನಿಸಿದ ಮೆಡ್ಲಿನ್‌ ಸ್ಲಾಡೆ ಗಾಂಧೀಜಿಯ ಸತ್ಯ ಮತ್ತು ಅಹಿಂಸೆಯ ವಿಚಾರಧಾರೆಗಳಿಂದ ಬಹಳಷ್ಟು ಪ್ರಭಾವಿತರಾಗಿ ೧೯೨೫ರಲ್ಲಿ ಭಾರತಕ್ಕೆ ಬಂದು ಸುಮಾರು ೩೪ ವರ್ಷ ಭಾರತದಲ್ಲಿದ್ದವರು. ಇವರು ಗಾಂಧೀಜಿಯವರ ಅಪ್ಪಟ ಅಭಿಮಾನಿಯಾಗಿ ಅವರೊಂದಿಗೆ ಭಾರತ ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಗಾಂಧೀಜಿಯವರಿಂದ ʼಮೀರಾ ಬಹೆನ್‌ (ಮೀರಾ ಸಹೋದರಿ) ಎಂದು ಮರುನಾಮಕರಣ ಹೊಂದಿದ ಈ ಮಹಿಳೆಗೆ ಭಾರತ ಸರ್ಕಾರ ೧೯೮೨ ರಲ್ಲಿ ಭಾರತದ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೀರಾ ಬಹೆನ್‌ ಅವರು ಇದೇ ಕುಟೀರದಲ್ಲಿ ೧೯೨೫ ರಿಂದ ೧೯೩೩ ರವರೆಗೆ ವಾಸವಾಗಿದ್ದರು. ಈ ಇಬ್ಬರು ಮಹಾವ್ಯಕ್ತಿಗಳ ವಾಸದ ಕಾರಣಕ್ಕೆ ಇದಕ್ಕೆ ʻಮೀರಾಕುಟೀರʼ ಮತ್ತು ʻವಿನೋಬಾ ಕುಟೀರʼ ಎಂಬ ಎರಡು ಹೆಸರುಗಳಿದ್ದು ಈ ಎರಡೂ ಹೆಸರಿನಿಂದ ಇದನ್ನು ಜನ ಪ್ರೀತಿಯಿಂದ ಕರೆಯುತ್ತಾರೆ. ಸಂಘಟಕರು ಕೂಡ ʼಎರಡು ಹೆಸರಿನ ಒಂದು ಕುಟೀರʼ ಎಂದು ಇದರ ಮುಂದೆ ಚಿಕ್ಕ ಪರಿಚಯದ ಒಂದು ನಾಮಫಲಕವನ್ನು ಕೂಡ ಹಾಕಿದ್ದಾರೆ.

ಪ್ರಾರ್ಥನಾ ಕಟ್ಟೆ, ಅತಿಥಿಗೃಹ ಮತ್ತು ಬಾಪೂವಿನ ಧ್ಯಾನಸ್ಥ ಮೂರ್ತಿಗಳು

ಈ ಕುಟೀರದ ಎದುರೇ ಒಂದು ವಿಶಾಲವಾದ ಎತ್ತರದ ಆಯತಾಕಾರದ ಕಟ್ಟೆ ಇದೆ. ಇದು ಆಶ್ರಮದ ಪ್ರಾರ್ಥನಾ ಕಟ್ಟೆ. ಗಾಂಧೀಜಿಯವರ ಆಶ್ರಮದಲ್ಲಿ ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆ ಆಶ್ರಮ ವಾಸಿಗಳಿಗೆ ಎಷ್ಟು ಮಹತ್ವದ್ದಾಗಿತ್ತು ಮತ್ತು ಹೇಗೆ ಕಡ್ಡಾಯವಾಗಿತ್ತು ಎಂಬುದನ್ನು ನಾವೆಲ್ಲ ಓದಿ ಬಲ್ಲೆವು. ಆಶ್ರಮದ ವಿವಿಧ ಕುಟೀರಗಳಲ್ಲಿ ವಾಸಿಸುವ ಎಲ್ಲರೂ ಬಂದು ಕುಳಿತುಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಲು ಅನುಕೂಲವಾಗುವಂತೆ ಇದು ಆಶ್ರಮದ ಆವರಣದ ಮಧ್ಯಭಾಗದಲ್ಲಿ ಇದೆ. ಕಟ್ಟೆಯ ಮೇಲೆ ಮಧ್ಯಭಾಗದಲ್ಲಿ ಬಹುಶಃ ಗಾಂಧೀಜಿ ಕುಳಿತುಕೊಳ್ಳುತ್ತಿದ್ದರು ಮತ್ತು ಕೆಳಗೆ ಮುಂಭಾಗದ ನೆಲದ ಮೇಲೆ ಅವರೆದುರು ಆಶ್ರಮವಾಸಿಗಳು ಕುಳಿತುಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಅನ್ನಿಸುತ್ತದೆ.

ಈ ಪ್ರಾರ್ಥನಾ ಕಟ್ಟೆಯಿಂದ ತುಸು ಮುಂದೆ ಸಾಗಿದರೆ ಆಶ್ರಮದ ಅತಿಥಿಗೃಹವಿದೆ. ಅದು ಕೂಡ ಅರ್ಧಕೊಳವೆ ಆಕಾರದ ಕೆಂಪು ಹಂಚಿನ ಮನೆ. ಒಳಗಡೆ ಯಾವುದೇ ಐಷಾರಾಮಿ ಗೃಹೋಪಯೋಗಿ ಸಲಕರಣೆಗಳಿಲ್ಲದ ಸರಳ ಜೀವನಾವಶ್ಯಕಗಳು ಮಾತ್ರ ಇರುವ ಕೆಲವು ಕೊಠಡಿಗಳು ಇರುವ ಗೃಹ. ನಾನು ಹೋದಾಗ ಅದನ್ನು ಬೀಗಹಾಕಲಾಗಿದ್ದರಿಂದ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಹೊರಗಡೆಯಿಂದಲೇ ಒಂದು ಸುತ್ತು ಹಾಕಿಕೊಂಡು ಅದನ್ನು ನೋಡಿಕೊಂಡು ಬಂದೆ. ಗಾಂಧೀ ಆಶ್ರಮದಲ್ಲಿ ಇರುವ ಇತರ ವಿಭಾಗಗಳನ್ನು ನೋಡಲೆಂದು ಹೊರಟ ನನಗೆ ಇನ್ನೊಂದು ಕಡೆ ಖಾದೀ ಅಂಗಡಿ, ಪುಸ್ತಕ ಅಂಗಡಿ ಮತ್ತು ವಸ್ತುಸಂಗ್ರಹಾಲಯ ಇರುವುದು ಅಲ್ಲಿರುವ ಮಾರ್ಗಫಲಕದಿಂದ ತಿಳಿಯಿತು.

ಅವುಗಳನ್ನು ನೋಡಲು ಹೊರಡುವಾಗಲೆ ಅಲ್ಲಿಯೇ ಸಮೀಪ ಒಂದು ವಿಶಾಲವಾದ ಹುಲ್ಲುಹಾಸಿನ ನಡುವೆ ಒಂದಿಷ್ಟು ಎತ್ತರವಾದ ದಿಬ್ಬದಂತಹ ಭೂರಚನೆಯ ಮೇಲೆ ಧ್ಯನಸ್ಥಗಾಂಧೀಜಿಯ ಮೂರ್ತಿ ಕಂಡಿತು. ಬಹುಶಃ ಆಶ್ರಮಕ್ಕೆ ಬಂದವರು ಗಾಂಧೀಜಿಗೆ ತಮ್ಮ ಗೌರವವನ್ನು ಸಲ್ಲಿಸಲು ಇದನ್ನು ಮಾಡಿದ್ದಾರೆಂದು ಅದನ್ನು ನೋಡಿದ ತಕ್ಷಣ ನನಗೆ ಅರ್ಥವಾಯಿತು. ಕೂಡಲೆ ನಾನು ಕೂಡ ಅಲ್ಲಿಗೆ ಹೋಗಿ ಆ ಮೂರ್ತಿಗೆ ಕೈಮುಗಿದು ಅದರ ಹತ್ತಿರ ಒಂದಿಷ್ಟು ಹೊತ್ತು ಕುಳಿತು ಧ್ಯಾನಾಸಕ್ತನಾದೆ. ನನ್ನಂಥವರು ಇನ್ನೇನು ತಾನೇ ಬೇಡಿಕೊಳ್ಳುತ್ತಾರೆ? “ಕಪಟ, ವಂಚನೆ, ಹಿಂಸೆಗಳಿಂದ ತಾಂಡವವಾಡುತ್ತಿರುವ ಈ ಸಮಾಜ ನಿಷ್ಕಪಟ, ನಿರ್ವಂಚನೆ ಮತ್ತು ಅಹಿಂಸೆಗಳ ಮಹತ್ವವನ್ನು ಅರಿಯುವಂತೆ ಮಾಡು ಮಹಾಮಹಿಮನೆ” ಎಂದು ಬೇಡಿಕೊಂಡು ಅಲ್ಲಿಂದ ಎದ್ದೆ.

ಸರಳತೆ ಮತ್ತು ವಿರಕ್ತತೆಗೆ ಸಾಕ್ಷಿಯಾದ ʻಹೃದಯಕುಂಜʼ

ಗಾಂಧೀಜಿ ವಾಸವಿದ್ದ ಮನೆ ಹೃದಯಕುಂಜವನ್ನು ಇನ್ನೊಮ್ಮೆ ನೋಡಬೇಕು ಅನ್ನಿಸಿತು. ಬೆಳಿಗ್ಗೆ ಅಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರಿಂದ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಕಾರ್ಯಕ್ರಮ ಮುಗಿದಿದ್ದರಿಂದ ಒಳಗೆ ಹೋಗಿ ನೋಡಲು ಏನೂ ಅಡ್ಡಿ ಇರಲಿಲ್ಲ. ಮನೆಯ ಹಿಂಭಾಗದಿಂದ ಕೂಡ ಪ್ರವೇಶವಿತ್ತು. ಅಲ್ಲಿಂದ ಒಳಗೆ ಬಂದು ಇರುವ ಎಲ್ಲ ಕೊಠಡಿಗಳಿಗೂ ಹೋಗಿ ನೋಡಿದೆ. ಇದ್ದದ್ದೇ ಮೂರು ಕೊಠಡಿಗಳು ಒಂದು ಅಡುಗೆಮನೆ. ಅಲ್ಲಿ ಕೆಲವು ಪಾತ್ರೆ ಪರಿಕರಗಳು ಇದ್ದವು. ಇನ್ನೊಂದು ಕೊಠಡಿಯ ಬಾಗಿಲಿನಲ್ಲಿ ಕಸ್ತೂರ್ಬಾ ಅವರ ಕೋಣೆ ಎಂದು ಬರೆಯಲಾಗಿತ್ತು ಅದರ ಒಳಗೂ ಹೋಗಿ ಬಂದೆ. ಅದೊಂದು ಚಿಕ್ಕ ಕೊಠಡಿಯಾಗಿತ್ತು. ಇವೆರಡನ್ನೂ ಬಿಟ್ಟರೆ ಇದ್ದದ್ದು ಹೊರಗೆ ಗಾಂಧೀಜಿ ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚೆಮಾಡುತ್ತಿದ್ದ ಕೊಠಡಿ. ಉಳಿದಂತೆ ಎಲ್ಲ ಮೊದಲೇ ಹೇಳಿದಂತೆ ಬಟಾ ಬಯಲು.

ಗಾಂಧೀಜಿಯವರ ಕೋಣೆ ಅದು ಸಾರ್ವಜನಿಕ ಕೋಣೆ. ಒಳಗಡೆ ಇದ್ದದ್ದು ಕಸ್ತೂರ್ಭಾ ಅವರ ಕೋಣೆ. ಇಲ್ಲಿ ಗಂಡ ಹೆಂಡತಿ ಕೂಡಿ ಮಲಗುವ ಒಂದು ಖಾಸಗೀ ಕೋಣೆ ಈ ದಂಪತಿಗಳಿಗೆ ಇರಲಿಲ್ಲವೇ ಎಂಬ ಪ್ರಶ್ನೆ ಗಾಂಧೀಜಿಯವರ ಜೀವನವನ್ನು ತಿಳಿಯದ ಕೆಲವರಿಗೆ ಎದುರಾಗಬಹುದಾದರೂ ಅವರ ಜೀವನ ಚರಿತ್ರೆಯನ್ನು ಓದಿದವರಿಗೆ ಆ ಪ್ರಶ್ನೆ ಬರುವುದೇ ಇಲ್ಲ. ಏಕೆಂದರೆ ಬಹುತೇಕ ದಂಪತಿಗಳು ಕೂಡಿಮಲಗುವ ಸಾಂಸಾರಿಕ ಜೀವನವನ್ನು ಆರಂಭಿಸುವ ವಯಸ್ಸಿಗೇ ಗಾಂಧೀಜಿ ಅದೆಲ್ಲವನ್ನೂ ಮುಗಿಸಿಯಾಗಿತ್ತು! ಆಶ್ರಮದಲ್ಲಿ ಕಸ್ತೂರ್ಬಾ ಉಳಿದವರಂತೆ ಒಬ್ಬ ಆಶ್ರಮವಾಸಿಯೇ ಹೊರತು ಈ ವಿಷಯದಲ್ಲಿ ಅವರ ಹೆಂಡತಿ ಅಲ್ಲ!

ಗಾಂಧೀಜಿಯವರ ಸಾರ್ವಜನಿಕ ಕೋಣೆಯಲ್ಲಿ ಗಾಂಧೀಜಿಯವರು ಕೂರುತ್ತಿದ್ದ ಸ್ಥಳದಲ್ಲಿ ಒಂದು ಬಿಳಿಯ ಕೂರುವ ತಡಿಯನ್ನು ಮತ್ತು ಅವರು ನೆಲದ ಮೇಲೆ ಕುಳಿತು ಬರೆವಣಿಗೆ ಮಾಡಲು ಬಳಸುತ್ತಿದ್ದ ನೆಲಮೇಜನ್ನು ಇಟ್ಟಿದ್ದು ಸುತ್ತಲೂ ಅದಕ್ಕೆ ಜನ ನುಗ್ಗಿ ಅದು ಹಾಳಾಗದಂತೆ ಒಂದು ತಡೆಬೇಲಿ ರೂಪದ ಕಟ್ಟಿಗೆಯ ರಚನೆಯನ್ನು ಈಗ ಮಾಡಲಾಗಿದೆ. ಈ ಕೋಣೆಯಲ್ಲಿ ನಾನು ಒಂದಿಷ್ಟು ಹೊತ್ತು ಕುಳಿತು ಸುತ್ತ ಗೋಡೆಗಳ ಮೇಲಿನ ಚಿತ್ರಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಅಲ್ಲಿಗೆ ಒಬ್ಬ ತರುಣ ಮತ್ತು ಒಬ್ಬ ತರುಣಿ ಜೊತೆಯಾಗಿ ಮಾತನಾಡುತ್ತಾ ಒಳಬಂದರು. ಅವರು ದೂರದ ಜಪಾನ್‌ ದೇಶದಿಂದ ಬಂದಿದ್ದರು. ಅವರನ್ನು ಕಂಡ ನನಗೆ ಪ್ರಪಂಚ ಎಲ್ಲ ಜನರ ಶಾಂತಿ ಮತ್ತು ನೆಮ್ಮದಿಯ ಬದುಕಿನ ಕನಸನ್ನು ಕಾಣುವ ಬೇರೆ ಬೇರೆ ದೇಶದ ಯುವಜನರನ್ನು ಭಾರತಕ್ಕೆ ಸೆಳೆಯುವ ಚೈತನ್ಯ ಭಾರತದಲ್ಲಿ ಯಾರಿಗಾದರೂ ಇದೆ ಎನ್ನುವುದಾದರೆ ಅದು ಗಾಂಧೀಜಿಗೆ ಮಾತ್ರ ಎನಿಸಿತು. ಆ ಯುವಕ ಯುವತಿಯರೊಂದಿಗೆ ಒಂದಿಷ್ಟು ಮಾತನಾಡಿದಾಗ ನನಗೆ, ಗಾಂಧೀಜಿಯವರನ್ನು ಕೊಲ್ಲುವ ವಿಫಲ ಪ್ರಯತ್ನಗಳು ಭಾರತದ ಒಳಗೆ ಎಷ್ಟು ಪ್ರಮಾಣದಲ್ಲಿ ಈಗ ನಡೆಯುತ್ತಿವೆಯೋ ಅಷ್ಟೇ ಅಥವಾ ಅದಕ್ಕೂ ತುಸು ಹೆಚ್ಚೇ ಅನ್ನಿಸುವಷ್ಟು ಅವರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತಿಬೆಳೆಸುವ ಪ್ರಯತ್ನಗಳೂ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿವೆ ಎಂದು ಅನ್ನಿಸಿತು.

ವಸ್ತುಸಂಗ್ರಹಾಲಯ ಮತ್ತು ಆಶ್ರಮವಾಸಿಗಳ ವಾಸಸ್ಥಳಗಳು

ನಂತರ ನಾನು ಹೋದದ್ದು ಆಶ್ರಮದ ವಸ್ತುಸಂಗ್ರಹಾಲಯಕ್ಕೆ. ಅಲ್ಲಿ ಎಲ್ಲ ವಸ್ತುಸಂಗ್ರಹಾಲಯದಂತೆ ಗಾಂಧೀಜಿಯ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ಸಂಗತಿಗಳನ್ನು ಸಂಗ್ರಹಿಸಲಾಗಿದೆ. ಅವರ ವಿವಿಧ ಹೋರಾಟಗಳನ್ನು ಬಿಂಬಿಸುವ ಚಿತ್ರಗಳು, ಬರೆಹಗಳು ಇತ್ಯಾದಿಗಳು ಇವೆ. ಅವರು ಬರೆದ ಮತ್ತು ಅವರಿಗೆ ಬರೆಯಲ್ಪಟ್ಟ ಕೆಲವು ಪತ್ರಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ಅನೇಕ ನಾಯಕರೊಂದಿಗಿನ ಗಾಂಧೀಜಿಯವರ ಚಿತ್ರಗಳು ಇಲ್ಲಿವೆ. ಈ ದೃಶ್ಯಾವಳಿಗಳು ಗಾಂಧೀಜಿಯವರ ಇಡೀ ಹೋರಾಟದ ಬದುಕಿನ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇಲ್ಲಿರುವ ಒಂದು ವಿಶೇಷತೆ ಎಂದರೆ ಉಳಿದ ಅನೇಕ ಮಹಾಪುರುಷರ ಸ್ಮರಣೆಯ ವಸ್ತುಸಂಗ್ರಹಾಲಯಗಳಲ್ಲಿ ಇರುವಂತೆ ಅವರ ವೈಯಕ್ತಿಕ ಬದುಕಿನ, ಬಳಕೆಯ ಪರಿಕರಗಳು ಇಲ್ಲದೇ ಇರುವುದು. ಇದಕ್ಕೆ ಇದ್ದಿರಬಹುದಾದ ಕಾರಣಗಳೆಂದರೆ ಅವು ಅಮುಖ್ಯ ಎಂದು ಸಂಗ್ರಹಾಲಯ ಮಾಡಿದವರು ಭಾವಿಸಿರಬಹುದು; ಅಥವಾ ಸ್ವತಃ ಗಾಂಧೀಜಿಯ ಬದುಕೇ ʼಅಸಂಗ್ರಹʼ ತತ್ವವನ್ನು ಪಾಲಿಸಿದ್ದರಿಂದ ಸಂಗ್ರಹಿಸುವಂತಹ ಯಾವ ವಸ್ತುಗಳೂ ಇಲ್ಲದೆಯೂ ಇರಬಹುದು.

ಈ ವಸ್ತುಸಂಗ್ರಹಾಲಯದ ಪಕ್ಕ ಇನ್ನೊಂದು ಕಟ್ಟಡವಿದೆ. ಅದಕ್ಕೆ ʻಆಶ್ರಮವಾಸಿಗಳ ವಾಸದ ಮನೆʼ ಎಂದು ಕರೆಯುತ್ತಾರೆ. ಗಾಂಧೀಜಿಯವರ ಜೀವನ ಮತ್ತು ಸಾಧನೆಗಳನ್ನು ನೋಡಿದವರು ಮತ್ತು ಅವರ ಚಿಂತನೆಗಳಿಂದ ಪ್ರಭಾವಿತರಾದವರು ಅವರ ಕಾಲದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ದೇಶಾಧ್ಯಂತ ಇದ್ದರು ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿ. ಅವರಲ್ಲಿ ಅನೇಕರು ಗಾಂಧೀಜಿಯವರ ಆಶ್ರಮದಲ್ಲಿ ಇದ್ದು ಬಂದವರು ಎಂಬುದನ್ನೂ ನಾವು ಓದಿ ತಿಳಿದಿದ್ದೇವೆ. ಹೀಗೆ ಆಶ್ರಮಕ್ಕೆ ಬಂದು ಅಲ್ಲಿನ ಸಾಮಾನ್ಯ ನಿವಾಸಿಗಳಾಗಿ ಇದ್ದು ಗಾಂಧೀಜಿಯವರಿಂದ ಜೀವನಪಾಠವನ್ನು ಕಲಿಯುವವರು ತಾತ್ಕಾಲಿಕವಾಗಿ ವಾಸವಾಗಿರುತ್ತಿದ್ದ ಸ್ಥಳವಿದು. ಒಂದೇ ಒಂದು ವಿಶಾಲವಾದ ಹಾಲ್‌ ನಲ್ಲಿ ಅಲ್ಲಲ್ಲಿ ಪರದೆಗಳನ್ನು ಬಿಟ್ಟು ಕೆಲವು ಕಂಪಾರ್ಟ್‌ಮೆಂಟ್‌ಗಳನ್ನು ಇಲ್ಲಿ ಮಾಡಿದಂತಿತ್ತು. ಒಳಗಡೆ ಕೆಲವು ಫೋಟೋಗಳು ಕೆಲವು ವಸ್ತುಗಳು ಇಲ್ಲಿ ಕಂಡುಬಂದವು. ವಿಶೇಷವಾಗಿ ದೊಡ್ಡ ದೊಡ್ಡ ಹಳೆಯ ಚರಕಗಳು ಇಲ್ಲಿವೆ. ಗೋಡೆಗಳಲ್ಲಿ ನೂಲಿನ ಉಂಡೆಗಳನ್ನು ನೇತುಹಾಕಲಾಗಿದೆ. ಹೊರಗಡೆ ರಿಪೇರಿ ಕೆಲಸಕೂಡ ನಾನು ಹೋದಾಗ ಅಲ್ಲಿ ನಡೆಯುತ್ತಿತ್ತು.

ಬಹುಭಾಷೆಗಳ ಗಾಂಧೀಪುಸ್ತಕಗಳಿಂದ ಶ್ರೀಮಂತಗೊಂಡ ಪುಸ್ತಕದ ಅಂಗಡಿ

ಇದನ್ನು ನೋಡಿಕೊಂಡು ನಾನು ನೋಡಲು ಉಳಿದುಕೊಂಡಿದ್ದ ಆಶ್ರಮದ ಪುಸ್ತಕ ಅಂಗಡಿಗೆ ಹೋದೆ. ಈ ಪುಸ್ತಕಾಲಯದಲ್ಲಿ ಗಾಂಧೀಜಿಯವರು ಬರೆದ ಮತ್ತು ಅವರ ಬಗ್ಗೆ ಬೇರೆಯವರು ಬರೆದ ಬಹುತೇಕ ಎಲ್ಲ ಪುಸ್ತಕಗಳೂ ಇದ್ದವು. ಇದರಲ್ಲಿ ಭಾರತದ ಲೇಖಕರಲ್ಲದೆ ಬೇರೆ ಬೇರೆ ದೇಶಗಳ ಲೇಖಕರು ಗಾಂಧೀಜಿಯವರ ಬಗ್ಗೆ ಬರೆದ ಬಹುಮುಖ್ಯ ಪುಸ್ತಕಗಳೂ ಸೇರಿದ್ದವು. ಅವೆಲ್ಲವೂ ಇಲ್ಲಿ ಮಾರಾಟಕ್ಕೆ ಇದ್ದವು. ಈ ಪುಸ್ತಕಾಲಯದಲ್ಲಿ ಪುಸ್ತಕಾಲಯದ ಅರ್ಧಕ್ಕೂ ಹೆಚ್ಚು ಭಾಗವನ್ನು ಇಂಗ್ಲಿಷ್‌ ಪುಸ್ತಕಗಳೇ ಆವರಿಸಿಕೊಂಡಿದ್ದವು. ಆ ವಿಭಾಗದಲ್ಲಿ ಜಪಾನ್‌ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಬಂದಿದ್ದ ಪ್ರವಾಸಿಗರು ಕೆಲವು ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಉಳಿದಂತೆ ಹೆಚ್ಚು ಕಂಡುಬಂದ ಪುಸ್ತಕಗಳೆಂದರೆ ಗಾಂಧೀಜಿಯವರ ಆತ್ಮಕಥೆಯ ವಿವಿಧ ಭಾಷೆಯ ಆವೃತ್ತಿಗಳು.

ತಮಿಳು, ತೆಲುಗು, ಮಲೆಯಾಳಿ, ಓರಿಯಾ, ಗುಜರಾತಿ, ಹಿಂದಿ ಸೇರಿದಂತೆ ಬಹುತೇಕ ಭಾರತದ ಎಲ್ಲ ಭಾಷೆಗಳಲ್ಲೂ ಗಾಂಧೀಜಿಯವರ ಆತ್ಮಕತೆ ಪ್ರಕಟವಾಗಿದೆ. ಈ ಎಲ್ಲ ಭಾಷೆಗಳ ಆವೃತ್ತಿಗಳ ಪುಸ್ತಕಗಳನ್ನೆಲ್ಲ ಕ್ರಮವಾಗಿ ಒಂದುಕಡೆ ಜೋಡಿಸಿಟ್ಟಿದ್ದಾರೆ. ಭಾರತದ ಯಾವುದೇ ಭಾಷೆಯ ಓದುಗ ಅಲ್ಲಿಗೆ ಹೋದರೂ ತನ್ನ ತಾಯಿನುಡಿಯಲ್ಲಿಯೇ ಗಾಂಧೀಜಿಯ ಜೀವನಕಥೆಯನ್ನು ಓದಲು ಇಲ್ಲಿ ಪುಸ್ತಕ ಸಿಗುತ್ತದೆ. ನಾನು ನನ್ನ ತಾರುಣ್ಯದಲ್ಲಿಯೇ ಅವರ ಆತ್ಮಕಥೆಯನ್ನು ಕನ್ನಡದಲ್ಲಿಯೇ ಓದಿದ್ದೆ. ʼಮೈ ಎಕ್ಸ್‌ಪೆರಿಮೆಂಟ್‌ ವಿಥ್‌ ಟ್ರುಥ್‌ʼ ಎಂಬ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದವರು ಸ್ವತಃ ಗಾಂಧೀವಾದಿಗಳಾಗಿದ್ದ ಮತ್ತು ಗಾಂಧೀ ಆಶ್ರಮದಲ್ಲಿ ಕೆಲವು ಕಾಲ ವಾಸವಾಗಿಯೂ ಇದ್ದ ʼನಮ್ಮ ಊರಿನ ರಚಿಕರುʼ ಖ್ಯಾತಿಯ ಕನ್ನಡದ ಹಿರಿಯ ಬರೆಹಗಾರರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರು. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಈ ಆತ್ಮಕಥೆಗಳನ್ನು ಅಹಮದಾಬಾದಿನ ನವಜೀವನ ಟ್ರಸ್ಟೇ ಪ್ರಕಟಿಸಿದೆ.  ಕನ್ನಡದ ಆವೃತ್ತಿಯ ಪುಸ್ತಕಗಳ ಮೇಲೆ ಕೈಯಾಡಿಸಿ ಮುಂದೆ ನಡೆದೆ.

ಈ ಅಂಗಡಿಯಲ್ಲಿಪುಸ್ತಕಗಳ ಜೊತೆಗೆ ಆಧುನಿಕ ಜನರ ಆಸಕ್ತಿ ಅಭಿರುಚಿಗಳನ್ನು ಗಮನಿಸಿ ಬೇರೆ ಬೇರೆ ವಸ್ತುಗಳನ್ನು ಕೂಡ ಮಾರಾಟಕ್ಕೆ ಇರಿಸಿದ್ದಾರೆ. ಹೌದು ಎಲ್ಲರೂ ಪುಸ್ತಕ ಓದುವ ಅಭಿರುಚಿಯನ್ನು ಹೊಂದಿರುವುದಿಲ್ಲ. ಪುಸ್ತಕ ಓದುವವರೇನೋ ಆಶ್ರಮಕ್ಕೆ ಬಂದ ನೆನಪಿಗೆ ಪುಸ್ತಕ ಒಯ್ಯಬಹುದು. ಉಳಿದವರು ಬೇರೆ ಏನಾದರೂ ಸಿಗುತ್ತದೆಯೇ ಎಂದು ಅತ್ತಿತ್ತ ನೋಡುವುದು ಸಹಜ. ಹಾಗಾಗಿಯೇ ಇಲ್ಲಿ ಗಾಂಧೀಜಿಯವರ ವಿವಿಧ ಭಂಗಿಯ ದೊಡ್ಡ ಚಿಕ್ಕ ಮೂರ್ತಿಗಳು ಮತ್ತು ಗಾಂಧೀಜೀವನದ ವಿವಿಧ ಸಂಗತಿಗಳನ್ನು ತಮ್ಮ ಮೇಲೆ ಕೆತ್ತಿಸಿಕೊಂಡ, ಅಥವಾ ಚಿತ್ರಿಸಿಕೊಂಡ ಅಥವಾ ಬರೆಯಿಸಿಕೊಂಡ ಅನೇಕ ವಸ್ತುಗಳನ್ನು ಇಲ್ಲಿ ಲಭ್ಯಗೊಳಿಸಿದ್ದಾರೆ. ಅವುಗಳಲ್ಲಿ ಗಾಂಧೀಜಿಯ  ಕನ್ನಡಕದ ಚಿತ್ರವಿರುವ ದೊಡ್ಡಗಾತ್ರದ ಟೀ ಕುಡಿಯುವ ಪಿಂಗಾಣಿ ಲೋಟಗಳು, ಕೀಬಂಚ್‌ಗಳು, ವಿವಿಧ ಗುಣಮಟ್ಟ ಮತ್ತು ಬೆಲೆಯ ಪೆನ್ನುಗಳು, ರಾಷ್ಟ್ರೀಯ ಧ್ವಜ, ಭಾರತದ ಚಿತ್ರ, ಗಾಂಧೀಜಿಯ ಚರಕದ ಚಿತ್ರಗಳಿರುವ ಎದೆಫಲಕಗಳು ಇತ್ಯಾದಿಗಳು ಸೇರಿವೆ. ʻಜಾತ್ರೆಗೆ ಹೋದವರು ಒಂದು ಪಾತ್ರೆ ತರುತ್ತಾರೆʼ ಎಂಬ ಒಂದು ಗಾದೆ ಮಾತಿದೆ. ಅದೇ ರೀತಿ ಈ ಆಶ್ರಮಕ್ಕೆ ಬಂದವರು ಏನನ್ನೂ ತೆಗೆದುಕೊಂಡು ಹೋಗದೆ ಬರಿಗೈಯಲ್ಲಿ ಹೇಗೆ ತಾನೆ ಹೋಗಲು ಸಾಧ್ಯ? ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ರೂಪಾಯಿ ಬೆಲೆಯ ಪೆನ್ನನ್ನೋ, ಕೀಬಂಚನ್ನೋ ನೆನಪಿಗಾಗಿ ಒಯ್ದೇ ಒಯ್ಯುತ್ತಾರೆ. ನಾನು ಕೂಡ ಸಾಗಾಟದ ಸಮಸ್ಯೆಯಿಂದಾಗಿ ಯಾವುದೇ ಪುಸ್ತಕ ಕೊಳ್ಳದೇ ಕೆಲವು ಮಿತ್ರರಿಗೆ ನೆನಪಿಗೆ ಕೊಡಲೆಂದು ಒಂದಿಷ್ಟು ಪೆನ್ನುಗಳು ಮತ್ತು ಕೀಬಂಚುಗಳನ್ನು ಕೊಂಡುಕೊಂಡು ಹೊರಬಂದೆ.

ಪಕ್ಕದಲ್ಲಿಯೇ ಇರುವ ಖಾದಿ ಅಂಗಡಿಗೂ ಹೋದೆ. ಅಲ್ಲಿ ಉತ್ತಮ ಗುಣಮಟ್ಟದ ಖಾದೀ ಜುಬ್ಬ, ಪೈಜಾಮು, ಶರ್ಟುಗಳು, ಕುರ್ತಾಗಳು, ಕೋಟುಗಳು, ಸೀರೆ ಬ್ಲೋಜುಗಳು ಎಲ್ಲ ಇದ್ದವು. ಆದರೆ ಅವುಗಳು ಯಾವುದರ ಮೇಲೂ ಗಾಂಧೀಜಿಯ ಯಾವುದೇ ಮಾರ್ಕುಗಳು ಇದ್ದದ್ದು ಕಾಣಲಿಲ್ಲ. ಬೇರೆ ಕಡೆ ಇರುವ ಖಾದಿ ಬಟ್ಟೆಗಳಂತೆಯೇ ಇದ್ದವು. ಅಲ್ಲಿಯೂ ಸಾಮಾನ್ಯವಾಗಿ ಜನ ಒಂದಿಷ್ಟು ಬಟ್ಟೆಬರೆ ಕೊಳ್ಳುತ್ತಿದ್ದರು. ಆದರೆ ಅಲ್ಲಿಗೆ ಬರುವವರು ನೆನಪಿಗಾಗಿ ಕೊಳ್ಳುವುದರಿಂದ ಆ ಬಟ್ಟೆಗಳ ಮೇಲೆ ಕೂಡ ಆಶ್ರಮದ ನೆನಪು ಮಾಡುವಂತಹ ಯಾವುದಾದರೂ ಚಿಕ್ಕದಾದರೂ ಗುರುತು ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಖಾದಿ ಅಂಗಡಿಯಲ್ಲಿ ಎಲ್ಲ ಬಟ್ಟೆಗಳನ್ನೂ ನೋಡಿಕೊಂಡು ಅದೇ ಸಾಗಾಟದ ಸಮಸ್ಯೆಯಿಂದಾಗಿ ಏನೂ ಕೊಳ್ಳದೇ ಹೊರಬಂದೆ.

ಇಲ್ಲಿಗೆ ಗಾಂಧೀ ಆಶ್ರಮದ ಬಹುತೇಕ ಎಲ್ಲ ವಿಭಾಗಗಳನ್ನೂ ನೋಡುವುದು ಮುಗಿದಿತ್ತು. ಸಮಯ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ವಾಸದ ರೂಮಿಗೆ ಹೋಗಿ ಒಂದಿಷ್ಟು ಹೊತ್ತು ವಿ‍ಶ್ರಾಂತಿ ಪಡೆದು ಸಂಜೆ ವೇಳೆ ಅಹಮದಾಬಾದಿನ ಮೆಟ್ರೋ ರೈಲಿನಲ್ಲಿ ಸುತ್ತಾಡಿ ಇನ್ನಷ್ಟು ಸ್ಥಳಗಳನ್ನು ನೋಡುವ ಯೋಚನೆ ಬಂತು. ಅದಕ್ಕಾಗಿ ಅಲ್ಲಿ ಮರದ ಕೆಳಗೆ ತುಸುಹೊತ್ತು ಕುಳಿತು ವಿಶ್ರಾಂತಿ ಪಡೆದು ಆಶ್ರಮದ ಹೊರಗೆ ಹೊರಡಲು ಎದ್ದೆ. ಆಶ್ರಮ ನಿಜಾರ್ಥದಲ್ಲಿ ಆಶ್ರಮವೇ ಆಗಿತ್ತು. ಅಲ್ಲಲ್ಲಿ ಬೆಳೆದು ನಿಂತ ದೊಡ್ಡದೊಡ್ಡ ಮರಗಳು ಬಂದವರಿಗೆ ಬಿಸಿಲಾಗದಂತೆ ನೆರಳು ನೀಡುತ್ತಿದ್ದವು. ಪಕ್ಕದಲ್ಲಿಯೇ ನಿರ್ಮಲವಾಗಿ ಹರಿಯುವ ಸಾಬರಮತಿ ನದಿ ಇಡೀ ಆಶ್ರಮಕ್ಕೆ ಒಂದು ಶೋಭೆ ತಂದಿತ್ತು.

ಕನ್ನಡಕ್ಕೆ ಅನ್ಯಾಯ ಮಾಡದ ಆಶ್ರಮ!

ಹೊರಡುವ ಮುನ್ನ ಒಂದು ವಿಶಾಲ ಫಲಕ ನನ್ನ ಗಮನ ಸೆಳೆಯಿತು. ಅದೆಂದರೆ ಸಾಬರ್ಮತಿ ಆಶ್ರಮ ಎಂಬ ಹೆಸರನ್ನು ಭಾರತದ ಬಹುತೇಕ ಎಲ್ಲ ಅಧಿಕೃತ ಭಾಷೆಗಳಲ್ಲೂ ಬರೆದಿರುವ ಒಂದು ಫಲಕ. ಇಂತಹ ಬಹುಭಾಷಿಕ ಫಲಕಗಳನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ನಾನು ನೋಡಿದ್ದೇನೆ. ಬೇರೆ ಬೇರೆ ಭಾಷೆಯ ಜನರು ಬರುವ ಸ್ಥಳಗಳಲ್ಲಿ ಜನರ ಅನುಕೂಲಕ್ಕಾಗಿ ಅಲ್ಲಿನ ಹೆಸರುಗಳನ್ನು ಸಾಮಾನ್ಯವಾಗಿ ಇಂಗ್ಲಿಷ್‌, ಹಿಂದಿ ಮತ್ತು ಅಲ್ಲಿನ ಸ್ಥಳೀಯ ಭಾಷೆ ಈ ಮೂರು ಭಾಷೆಗಳಲ್ಲಿ ಬರೆಯುವುದನ್ನು ತಾವೆಲ್ಲರೂ ಬಲ್ಲಿರಿ. ಆದರೆ ಕೆಲವರು ವಿಶೇಷ ಕಾಳಜಿ ತೆಗೆದುಕೊಂಡು ಇವುಗಳ ಜೊತೆಗೆ ಭಾರತದ ಎಲ್ಲ ಭಾಷೆಗಳಲ್ಲೂ ಹೆಸರು ಬರೆಯುವುದೂ ಇದೆ. ಹೀಗೆ ಬರೆಯುವಾಗ ಕೆಲವು ಭಾಷೆಗಳನ್ನು ಬಳಸುವ ಮತ್ತೆ ಕೆಲವನ್ನು ಕೈಬಿಡುವ ʼರಾಜಕಾರಣʼದ ಕೆಲಸಗಳು ನಡೆಯುತ್ತವೆ. ಇವೆಲ್ಲ ಆ ಭಾಷೆಗಳ ಬಗ್ಗೆ ಸಂಘಟಕರಿಗೆ ಇರುವ ಭಾವನೆಗಳನ್ನು ಸೂಚ್ಯವಾಗಿ ತೋರಿಸುತ್ತಿರುತ್ತವೆ.


ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ನಾನು ಇತ್ತೀಚೆಗೆ ರಾಮಮಂದಿರಕ್ಕೆ ಹೆಸರಾಗಿರುವ ಅಯೋಧ್ಯೆಯ ಬೀದಿಗಳಲ್ಲಿ ತಿರುಗಾಡುವಾಗ ಇಂತಹ ಅನೇಕ ಫಲಕಗಳನ್ನು ಗಮನಿಸಿದ್ದೆ. ಸರಯೂ ಆರತಿ ನಡೆಯುವ ಸರಯೂ ನದಿ, ಸೇರಿದಂತೆ ಅಯೋಧ್ಯೆಯ ಜನಭೇಟಿ ನೀಡುವ ಬಹಳಷ್ಟು ಸ್ಥಳಗಳಲ್ಲಿ ಸ್ಥಳಗಳ ಹೆಸರುಗಳನ್ನು ಭಾರತದ ಬಹಳಷ್ಟು ಭಾಷೆಗಳಲ್ಲಿ ಬರೆದಿದ್ದಾರೆ.  ಹೀಗೆ ಬಹಳಷ್ಟು ಭಾಷೆಗಳಲ್ಲಿ ಇರುವಾಗ ಅಲ್ಲಿಗೆ ಹೋಗುವವರು ಅದರಲ್ಲಿ ನನ್ನ ಭಾಷೆ ಇದೆಯೇ ಎಂದು ಹುಡುಕುವುದು ಮಾನವ ಸಹಜ ಸ್ವಭಾವ. ಎಲ್ಲರ ಭಾಷೆಗಳೂ ಇದ್ದು ತನ್ನ ಭಾಷೆ ಕಾಣದಾದಾಗ ತುಸು ಬೇಸರ ಆಗುವುದು ಕೂಡ ಅಷ್ಟೇ ಸಹಜವಾದ ಸ್ವಭಾವ. ದಕ್ಷಿಣ ಭಾರತದ ಬಹುತೇಕ ಭಾಷೆಗಳನ್ನು ಬಳಸಿದ್ದ ಅಯೋಧ್ಯೆಯ ಯಾವ ಫಲಕಗಳಲ್ಲಿಯೂ ಕನ್ನಡವನ್ನು ಮಾತ್ರ ಬಳಸಿರಲಿಲ್ಲ. ಅಲ್ಲಿ ನನಗಾದ ಬೇಸರ ಇಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ಆಗಲಿಲ್ಲ. ಗಾಂಧೀಜಿಯವರ ಆಶ್ರಮದ ಈ ಫಲಕದಲ್ಲಿ ನನ್ನ ಪ್ರೀತಿಯ ಕನ್ನಡಕ್ಕೆ ಸಿಗಬೇಕಾದ ಎಲ್ಲ ಬಗೆಯ ಗೌರವ ಮರ್ಯಾದೆ ಸಿಕ್ಕಿತ್ತು; ಮೊದಲ ನಾಲ್ಕೈದು ಹೆಸರುಗಳಲ್ಲಿಯೇ ಅದು ಬಳಸಲ್ಪಟ್ಟಿತ್ತು. ಆಮೂಲಕ ಇತರ ಭಾಷೆಗಳ ಸರಿಸಮವಾಗಿ ತಲೆಯೆತ್ತಿ ನಿಂತಿತ್ತು; ನನ್ನ ಆಶ್ರಮ ಭೇಟಿಯ ಸಾರ್ಥಕತೆ ಮತ್ತು ಸಂತೋಷಗಳನ್ನು ಹೆಚ್ಚಿಸುವಲ್ಲಿ ಇದೂ ಕೂಡ ಒಂದು ಕಾರಣವಾಗಿತು ಎಂದು ಬೇರೆ ಹೇಳಬೇಕಾಗಿಲ್ಲ.

ಡಾ. ರಾಜೇಂದ್ರ ಬುರಡಿಕಟ್ಟಿ

೦೬-೧೦-೨೦೨೫ 

No comments:

Post a Comment