ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು!
· ಡಾ. ರಾಜೇಂದ್ರ ಬುರಡಿಕಟ್ಟಿ
ತಾಯ ಮೊಲೆವಾಲು
ನಂಜಾಗಿ ಕೊಲುವೊಡೆ
ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ?
ಇವು ಬಸವಣ್ಣನವರ ವಚನವೊಂದರಲ್ಲಿ ಬರುವ ಎರಡು ಧ್ವನಿಪೂರ್ಣ ಸಾಲುಗಳು. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಒಂದು ಕೆಟ್ಟಬೆಳವಣಿಗೆಯನ್ನು ಗಮನಿಸುವಾಗ ಈ ಸಾಲುಗಳು ನೆನಪಾದವು. ಈ ಕೆಟ್ಟ ಬೆಳವಣಿಗೆ ಏನೆಂದರೆ ಎಸ್.ಎಸ್.ಎಲ್.ಸಿ ಮಕ್ಕಳಿಗೆ ನಿಗಧಿಯಾಗಿರುವ ಆಂತರಿಕ ಅಂಕಗಳನ್ನು ಶಿಕ್ಷಕರು ಪೂರ್ಣಪ್ರಮಾಣದಲ್ಲಿ ನೀಡಬೇಕು ಎಂದು ವಿವಿಧ ಹಂತದ ಅಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ತರುತ್ತಿರುವುದು. ಈ ಬಗ್ಗೆ ಅನೇಕ ಕಡೆ ಮುಖ್ಯಶಿಕ್ಷಕರ ಸಭೆ ನಡೆಸಿರುವ ಅಧಿಕಾರಿಗಳು ಈ ಬಗ್ಗೆ ಅವರಿಗೆ ಮೌಖಿಕ ಸೂಚನೆಗಳನ್ನು ನೀಡಿರುವುದೂ ನಡೆದಿದೆಯಂತೆ. ಒಂದು ವೇಳೆ ಇದು ʻಹೌದುʼ ಎನ್ನುವುದಾದರೆ ʼಶಿಕ್ಷಕರ ಘನತೆ ಗೌರವಗಳನ್ನು ಮಣ್ಣುಪಾಲು ಮಾಡುವ ಈ ನಡೆ ಒಂದು ಕೆಟ್ಟ ನಡೆಯಲ್ಲದೇ ಬೇರೇನೂ ಅಲ್ಲ. ಶಿಕ್ಷಕರ ಸಂಘದ ಶಾಖೆಗಳು ಎಲ್ಲ ಹಂತದಲ್ಲಿ ಇದ್ದರೂ ಅವು ಈ ವಿಷಯವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇದು ನಮ್ಮ ಶಿಕ್ಷಕರ ಹಕ್ಕನ್ನು ಕಸಿಯುವ ಅಥವಾ ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿ ಎಂದು ಅವಕ್ಕೆ ಅನ್ನಿಸಿ “ಮಕ್ಕಳಿಗೆ ಅಂಕನೀಡುವುದು ಶಿಕ್ಷಕರ ವಿವೇಚನೆಗೆ ಸಂಬಂಧಿಸಿದ್ದು; ಅದರಲ್ಲಿ ನೀವು ಹಸ್ತಕ್ಷೇಪ ಮಾಡುವುದು ಸರಿಯಲ್ಲ; ಅದನ್ನು ಮಾಡಬೇಡಿ” ಎಂದು ಈ ಸಂಘಗಳು ಶಿಕ್ಷಕರ ಸ್ವಾಭಿಮಾನವನ್ನು ಕಾಯುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದು ಎಲ್ಲಿಯೂ ಆದಂತೆ ಕಾಣುತ್ತಿಲ್ಲ.
ಈಗಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಮಗುವೊಂದು ಪ್ರಥಮ ಭಾಷೆಗೆ ಇಪ್ಪತ್ತೈದು, ಉಳಿದ ವಿಷಯಗಳಿಗೆ ಇಪ್ಪತ್ತರಂತೆ ಶಾಲೆಯ ವಿಷಯ ಬೋಧಕರಿಂದ ಅಂಕಪಡೆಯಬೇಕಾಗಿದೆ. ಈ ಅಂಕಗಳನ್ನು ಶಿಕ್ಷಕರು ಶಾಲೆಯಲ್ಲಿ ನಡೆಸುವ ಕಿರುಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವುದು, ಅವರು ನೀಡುವ ಯೋಜನಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆ ಬಗ್ಗೆ ವರದಿ ಸಲ್ಲಿಸುವುದು ಇತ್ಯಾದಿ ಮಾಡುವ ಮೂಲಕ ಆ ಮಗು ಪಡೆಯುಬೇಕಾಗಿದೆ. ಶಿಕ್ಷಕರು ಈ ಅಂಕಗಳನ್ನು ನೀಡುವಲ್ಲಿ ಅನುಸರಿಸಬೇಕಾದ ವಿಧಿವಿಧಾನಗಳೂ ನಿಯಮಗಳೂ ಇವೆ. ವ್ಯವಸ್ಥೆ ಹೀಗಿರುವಾಗ ತಮ್ಮ ಅಧಿಕಾರದ ಬಲದಿಂದ ವ್ಯಾಪ್ತಿಯನ್ನು ಮೀರಿ ಯಾವುದೇ ಹಂತದ ಅಧಿಕಾರಿಗಳು ಈ ರೀತಿ ಸೂಚನೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚರ್ಚಾಸ್ಪದವಾದದ್ದು.
ಈ ಸೂಚನೆ ಸಂಬಂಧವೋ ಏನೋ ಮೊನ್ನೆ ಶಿಕ್ಷಕರೊಬ್ಬರು ಪ್ರಶ್ನೆಯೊಂದನ್ನು ಕಳಿಸಿ ಸಲಹೆ ಕೇಳಿದ್ದಾರೆ. ಎಸ್.ಎಸ್.ಎಲ್.ಸಿ ಕನ್ನಡ ಬೋಧನೆ ಮಾಡುತ್ತಿರುವ ಅವರಿಗೆ, ಮಕ್ಕಳಿಗೆ ಎಲ್ಲರಿಗೂ ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು ನೀಡಿ ಎಂದು ಅವರ ಮುಖ್ಯೋಪಾಧ್ಯಾಯರು ಸಭೆಕರೆದು ಹೇಳಿದರಂತೆ. ಉಳಿದ ವಿಷಯ ಶಿಕ್ಷಕರೂ ಇಪ್ಪತ್ತಕ್ಕೆ ಇಪ್ಪತ್ತು ಅಂಕ ನೀಡಬೇಕು ಎಂಬುದು ಅವರ ಸೂಚನೆ. ʻಈ ಸೂಚನೆಯನ್ನು ನಾನೇ ನೀಡುತ್ತಿಲ್ಲ ನನಗೆ ಮೇಲಿನವರು ನೀಡಿದ್ದಾರೆ. ನಮ್ಮ ಜಿಲ್ಲೆಯ ಫಲಿತಾಂಶ ರಾಜ್ಯದ ಜಿಲ್ಲೆಗಳ ಫಲಿತಾಂಶದ ಪಟ್ಟಿಯಲ್ಲಿ ಮೇಲೆ ಬರಬೇಕಂತೆ. ಅದಕ್ಕೆ ಎಲ್ಲರೂ ಸಹಕರಿಸಬೇಕಂತೆ. ಅವರು ಹೇಳಿದ್ದನ್ನೇ ನಾನು ನಿಮಗೆ ಹೇಳುತ್ತಿದ್ದೇನೆʼ ಎಂದೂ ಸೇರಿಸಿದರಂತೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನನಗೆ ಸಲಹೆ ಕೇಳಿದ ಶಿಕ್ಷಕರ ಪ್ರಶ್ನೆ. ಏಕೆಂದರೆ ಅವರ ತರಗತಿಯಲ್ಲಿ ವಿಭಿನ್ನ ಕಲಿಕಾ ಮಟ್ಟದ ವಿದ್ಯಾರ್ಥಿಗಳಿದ್ದಾರೆ. “ಅವರೆಲ್ಲರೂ ಪ್ರಾಯೋಗಿಕ ಕಾರ್ಯಗಳನ್ನು ಸರಿಯಾಗಿ ಮಾಡಿಕೊಟ್ಟಿಲ್ಲ. ಕಿರುಪರೀಕ್ಷೆಗಳಲ್ಲಿಯೂ ಪಾಸಾಗಿಲ್ಲ” ಎಂದದ್ದಕ್ಕೆ ಅದಕ್ಕೆಲ್ಲ ನೀವು ಏನಾದರೂ ಮಾಡಿಕೊಳ್ಳಿ ಅಂಕಮಾತ್ರ ಎಲ್ಲರಿಗೂ ಪೂರ್ತಿಕೊಡಿ ಬೇಕಾದರೆ ಹೊಸದಾಗಿ ಎಲ್ಲ ಬರೆಸಿಕೊಳ್ಳಿ ಎಂದು ಸುಳ್ಳುದಾಖಲೆ ಸೃಷ್ಟಿಸಿ ಇಟ್ಟುಕೊಳ್ಳಲೂ ಅವರೇ ʻಮಾರ್ಗದರ್ಶನʼವನ್ನೂ ಮಾಡಿದರಂತೆ!
ಇದು ಆ ಶಿಕ್ಷಕರೊಬ್ಬರ ಶಾಲೆಯ ಕಥೆ ಆಗಿದ್ದರೆ ಇದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ನನಗೆ ತಿಳಿದಂತೆ ಇದು ಈಗ ರಾಜ್ಯದ ಹಲವು ಜಿಲ್ಲೆಗಳ ಬಹುತೇಕ ಶಾಲೆಗಳ ಕಥೆಯಾಗಿಬಿಟ್ಟಿದೆ. ಶಾಲೆಯ ಶಿಕ್ಷಕರಿಗೆ ಒಳ್ಳೆಯದನ್ನು ಹೇಳುವ, ಅವರು ತಪ್ಪು ಮಾಡಿದರೆ ತಿದ್ದಿಹೇಳಬೇಕಾದ ಸ್ಥಾನದಲ್ಲಿರುವ ಮುಖ್ಯೋಪಾಧ್ಯಾಯರು ಮತ್ತು ಅವರ ಮೇಲಿನ ಅಧಿಕಾರಿಗಳೇ ಹೀಗೆ ಶಿಕ್ಷಕರಿಗೆ ಕಳ್ಳತನ, ಸುಳ್ಳುತನ, ಅಪ್ರಮಾಣಿಕತೆ ಇಂಥವನ್ನು ಕಲಿಸುವ ಹಂತಕ್ಕೆ ಇಳಿದುಬಿಟ್ಟಿದ್ದಾರೆ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಬಸವಣ್ಣನವರ ವಚನದ ಸಾಲುಗಳು, ಈ ಸ್ಥಿತಿಯನ್ನು ನೋಡಿಯೇ ನೆನಪಾದದ್ದು. ಈ ಅಧಿಕಾರಿಗಳೆಲ್ಲರೂ ಶಿಕ್ಷಕರಿಗೆ ʻಮಾರ್ಗದರ್ಶನʼ ಎಂಬ ʼಮೊಲೆಹಾಲʼನ್ನು ಕೊಡುವ ತಾಯಿಯ ಸ್ಥಾನದಲ್ಲಿರುವವರು. ಇಂತಹ ತಾಯಿಯರೇ ಈಗ ತಮ್ಮ ಮೊಲೆಗಳಿಗೆ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಶಿಕ್ಷಕರೆಂಬ ಮಕ್ಕಳಿಗೆ ಮೊಲೆಚೀಪಲು ಹೇಳುತ್ತಿದ್ದಾರೆ! ಈ ಮೊಲೆಹಾಲನ್ನು ಕುಡಿಯುವುದೋ ಉಗುಳುವುದೋ ಎಂಬ ಧರ್ಮಸಂಕಟ ಶಿಕ್ಷಕರೆಂಬ ಮಕ್ಕಳದ್ದು. ಹಾಲು ಕುಡಿಯದಿದ್ದರೆ ತಾಯಿ ಏನೇನೋ ನೆಪಮಾಡಿ ಗುದ್ದುತ್ತಾಳೆ. ಕುಡಿದರೆ ನಂಜೇರಿ ಸಾಯುವ ಸಾಧ್ಯತೆಗಳೂ ಇರುತ್ತವೆ. ಅತ್ತ ಧರೆ; ಇತ್ತ ಪುಲಿ ಎತ್ತ ಹೋಗುವುದು. ಅವರಿಗೆ ದಾರಿಕಾಣದಾಗಿದೆ.
ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳುವುದಾದರೆ ಯಾವುದೇ ಹಂತದ ಅಧಿಕಾರಿಗಳು ಇಂತಹ ಅಸಂಬದ್ಧ ಸೂಚನೆಯನ್ನು ಶಿಕ್ಷಕರಿಗೆ ನೀಡುವುದು ಸರಿಯಾದ ನಡವಳಿಕೆಯೇ ಅಲ್ಲ. ಮೇಲಧಿಕಾರಿಗಳು, ಶಾಲೆಗೆ ಹೋಗದ ಶಿಕ್ಷಕರಿಗೆ, ಹೋದರೂ ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳದ ಶಿಕ್ಷಕರಿಗೆ, ಅಶಿಸ್ತಿನಿಂದ ವರ್ತಿಸುವ ಬೇಜವಾಬ್ದಾರಿ ತೋರಿಸುವ ಶಿಕ್ಷಕರಿಗೆ, ಬುದ್ಧಿಹೇಳುವುದು, ಅದಕ್ಕೆ ಅವರು ಸ್ಪಂದಿಸಿ ತಿದ್ದಿಕೊಳ್ಳದಿದ್ದರೆ ಅವರ ಮೇಲೆ ಶಿಸ್ತುಕ್ರಮ ತಗೆದುಕೊಳ್ಳುವುದು ಇತ್ಯಾದಿ ಮಾಡಬೇಕೆ ಹೊರತು, ಶಿಕ್ಷಕರಿಗೆ ಅಂಕವನ್ನು ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು ಹೇಳುವ ಕೆಲಸಕ್ಕೆ ಕೈಹಾಕಬಾರದು. ಅದನ್ನೂ ಅವರು ಹೇಳುವುದಾದರೆ ಶಿಕ್ಷಕರು ಇರುವುದಾದರೂ ಏತಕ್ಕೆ ಮತ್ತು ಶಾಲೆಯಲ್ಲಿ ಶಿಕ್ಷಕರು ಪರೀಕ್ಷೆ, ಯೋಜನೆ ಇತ್ಯಾದಿ ಮಾಡಿಸುವುದಾದರೂ ಏತಕ್ಕೆ? ಈಗಿನ ವ್ಯವಸ್ಥೆಯಲ್ಲಿ ಎಲ್ಲ ಹಂತದ ಅಧಿಕಾರಿಗಳಿಗೂ ತಮ್ಮ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳ ಅಂಕಿಅಂಶಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ. ಹೀಗಿರುವಾಗ ತಮ್ಮ ವ್ಯಾಪ್ತಿಯ ಎಲ್ಲ ಮಕ್ಕಳಿಗೂ ಅವರೇ ಸಾಮೂಹಿಕವಾಗಿ ಆಂತರಿಕ ಅಂಕಗಳನ್ನು ನೀಡಿಬಿಡಬಹುದು. ಆದರೆ ವ್ಯವಸ್ಥೆ ಅದಕ್ಕೆ ಅನುವು ಮಾಡಿಕೊಡದೇ ಅದನ್ನು ಶಿಕ್ಷಕರೇ ಮಾಡಬೇಕು ಎಂಬುದು ಸುಮ್ಮನೆ ಅಲ್ಲ. ಅದರು ಅವರು ಮಾತ್ರ ಸರಿಯಾಗಿ ಮಾಡಬಹುದಾದ ಜವಾಬ್ದಾರಿಯ ಕೆಲಸ ಎಂಬ ಕಾರಣಕ್ಕಾಗಿ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅವರಿಗೆ ಮುಕ್ತ ಅವಕಾಶ ಕೊಡಬೇಕೆ ಹೊರತು ಇಂತಹ ವಿಷಯದಲ್ಲಿ ಕೈ ಆಡಿಸಲು ಹೋಗಬಾರದು. ಇದು ತಮ್ಮ ಕೆಳಹಂತದ ಅಧಿಕಾರಿಗಳು, ನೌಕರರು ತಮ್ಮ ಮೇಲೆ ಇಟ್ಟಿರುವ ಗೌರವ, ಘನತೆಗಳನ್ನೂ ಕಳೆಯುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಹಿಂದೊಮ್ಮೆ ನಮ್ಮಲ್ಲಿ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡುವ ವ್ಯವಸ್ಥೆ ಇತ್ತು. ಅದು ಮಕ್ಕಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡಿ ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನಿಸಿದಾಗ ಅದನ್ನು ತೆಗೆದು ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆ ಮೂಲಕ ಮಕ್ಕಳ ಮೇಲೆ ಅನಗತ್ಯವಾಗಿ ನಡೆಯುತ್ತಿದ್ದ ಒತ್ತಡವನ್ನು ಸಂಪೂರ್ಣ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಡಿಮೆ ಮಾಡಲಾಯಿತು. ಆದರೆ ಜಿಲ್ಲೆಗಳ ಶ್ರೇಣೀಕರಣ ಆರಂಭವಾದ ಮೇಲೆ ಮಕ್ಕಳ ನಡುವಿನ ಈ ಅನಾರೋಗ್ಯಕರ ಸ್ಪರ್ಧೆಯು ಜಿಲ್ಲೆ ಜಿಲ್ಲೆಗಳ ನಡುವೆ ನಡೆಯತೊಡಗಿತು. ಇದಕ್ಕಾಗಿ ತಮ್ಮ ಜಿಲ್ಲೆಯನ್ನು ಎತ್ತರದ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಹವಣಿಸುವ ಅನೇಕ ಜಿಲ್ಲೆಗಳ ಅಧಿಕಾರಿಗಳು ಸರಿಯಾದ ವೈಜ್ಞಾನಿಕ ಹಿನ್ನಲೆಯಿಲ್ಲದ ಅನೇಕ ಕ್ರಮಗಳನ್ನು ಜಾರಿಗೆ ಮಾಡತೊಡಗಿದರು. ಯಾವುದೇ ವಿಶೇಷವಿಲ್ಲದ ವಿಶೇಷ ತರಗತಿಗಳು, ಮಿತಿಮೀರಿದ ಕಲಿಕಾವೇಳೆ, ಅಪರಿಮಿತವಾದ ಬರೆವಣಿಗೆ ಹೀಗೆ ಪಟ್ಟಿ ಬೆಳಸಬಹುದು.
ಆದರೆ ಇವು ಯಾವೂ ಅವರ ನಿರೀಕ್ಷಿತ ಫಲ ನೀಡಲಿಲ್ಲ. ಕೆಲವು ಕಡೆ ಇದರಿಂದ ವ್ಯತಿರಿಕ್ತಪರಿಣಾಮ ಆಗಿದ್ದೂ ಇದೆ. ಇದಕ್ಕೆ ಕಾರಣವೂ ಇದೆ. ಆ ವಯಸ್ಸಿನ ಮಕ್ಕಳು ದಿನಕ್ಕೆ ಎಷ್ಟು ಸಮಯ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿರಬೇಕು. ಎಷ್ಟು ಓದಬೇಕು ಎಷ್ಟು ಬರೆಯಬೇಕು ಎಂಬುದೆಲ್ಲವೂ ವೈಜ್ಞಾನಿಕವಾಗಿ ರಾಜ್ಯಮಟ್ಟದಲ್ಲಿ ತೀರ್ಮಾನವಾಗಿಯೇ ಪಠ್ಯ ರಚನೆಯಾಗಿರುತ್ತದೆ. ಫೆಬ್ರವರಿಗೆ ಮುಗಿಯಬೇಕಾದ ಪಠ್ಯವನ್ನು ಡಿಸೆಂಬರಿಗೇ ಅವಸರ ಅವಸರವಾಗಿ ಮುಗಿಸುವುದು. ಮಕ್ಕಳಿಗೆ ಆಟಗಳೇ ಇಲ್ಲದಂತೆ ಅವರನ್ನು ಬಂಧೀಖಾನೆಯ ಖೈದಿಗಳಂತೆ ನೋಡಿಕೊಳ್ಳುವುದು ಒಂದೇ ಎರಡೇ ಮಕ್ಕಳ ಮೇಲೆ ಇವರ ಹಿಂಸೆಗಳು. ಮಕ್ಕಳ ಮೇಲೆ ನಿರಾತಂಕವಾಗಿ ಮುಂದುವರೆಯುತ್ತಿರುವ ಈ ಹಿಂಸೆಯನ್ನು ನೋಡಿದರೆ ಯಾರಾದರೂ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಅನೇಕ ಶಿಕ್ಷಕರು ಅಧಿಕಾರಿಗಳು ತಕ್ಕ ಶಿಕ್ಷೆ ಅನುಭವಿಸುವ ಕಾಲವೂ ದೂರವಿಲ್ಲವೆನಿಸುತ್ತದೆ. ಮಾಡಬಾರದ್ದನ್ನು ಮಾಡಲು ಹೋದಾಗ ಆಗಬಾರದ್ದೇ ಆಗುತ್ತದೆ ಎಂಬ ಮಾತೊಂದಿದೆ. ಏನೆಲ್ಲ ಮಾಡಿದರೂ ಫಲಿತಾಂಶ ಏರದಿದ್ದನ್ನು ಕಂಡ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಅಡ್ಡದಾರಿಯನ್ನು ಅನೇಕರು ತುಳಿಯತೊಡಗಿದ್ದಾರೆ. ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ತಮ್ಮ ಕೆಳಗಿನವರೆದುರು ʼಕುಬ್ಜʼರಾಗುತ್ತಿದ್ದಾರೆ! ಹೀಗೆ ಕಳ್ಳತನ ಸುಳ್ಳುತನ ಹೇಳಿಕೊಡುವ ಅಧಿಕಾರಿಗಳ ಬಗ್ಗೆ ಶಿಕ್ಷಕರು ಹೇಗೆ ತಾನೆ ಗೌರವದ ಭಾವನೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ?
ಅಧಿಕಾರಿಗಳು ಈ ರೀತಿ ಸೂಚನೆ ನೀಡಿದಾಗ ಶಿಕ್ಷಕರು ಏನು ಮಾಡಬೇಕು ಎಂಬುದು ಇಲ್ಲಿ ಮುಖ್ಯ ಪ್ರಶ್ನೆ. ಇದರ ಬಗ್ಗೆಯೇ ಆ ಶಿಕ್ಷಕರು ನನ್ನ ಸಲಹೆ ಕೇಳಿದ್ದಾರೆ. ನನಗೆ ತಿಳಿದಂತೆ ಇದಕ್ಕೆ ಎರಡು ಮುಖಗಳಿವೆ. ಒಂದು ʼನಿಯಮ-ಕಾನೂನುʼ ಇತ್ಯಾದಿಗೆ ಸಂಬಂಧಿಸಿದ್ದು! ಇನ್ನೊಂದು ʼವೃತ್ತಿನೈತಿಕತೆʼ (ಪ್ರೊಫೆಶನಲ್ ಎಥಿಕ್ಸ್). ಅವೆರಡನ್ನೂ ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. ಮೊದಲನೆಯದು ನಿಯಮ-ಕಾನೂನು ಮುಖ. ನಾನು ಈಗಾಗಲೇ ಹೇಳಿದಂತೆ ಮಕ್ಕಳಿಗೆ ಆಂತರಿಕ ಅಂಕ ನೀಡುವುದು ಶಿಕ್ಷಕರೇ ಮಾಡಬೇಕಾದ ಕೆಲಸ. ಅದು ಅಧಿಕಾರಿಗಳು ಹೇಳುವ ವಿಷಯವೇ ಅಲ್ಲ. ಹಾಗಾಗಿ ಅವರು ಹೇಳುವ ಮಾತನ್ನು ಯಾವ ಶಿಕ್ಷಕರೂ ಕೇಳುವ ಅವಶ್ಯಕತೆಯಿಲ್ಲ. ಕೇಳಬಾರದು ಕೂಡ!
ಹಾಗಂತ ಶಿಕ್ಷಕರೂ ತಮ್ಮ ಮನಬಂದಂತೆ ಈ ಅಂಕಗಳನ್ನು ನೀಡಬಾರದು. ಅಂಕ ನೀಡುವುದು ಶಿಕ್ಷಕರ ʻವಿವೇಚನಾಧಿಕಾರʼವೇ ಹೊರತು ʻಸರ್ವಾಧಿಕಾರʼವಲ್ಲ ಎಂಬುದನ್ನೂ ಅವರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಯಾವುದೇ ಮಕ್ಕಳಿಗೆ ಭೇದಭಾವ ಮಾಡದೆ ಅವರು ಮಾಡಿರುವ ಕೆಲಸಕ್ಕೆ ತಕ್ಕಂತೆ ಅವರು ಆಂತರಿಕ ಅಂಕವನ್ನು ನೀಡುವುದೇ ಸರಿಯಾದ ಕ್ರಮ. ಹೀಗೆ ʻಅಷ್ಟು ಅಂಕಕೊಡಿ ಇಷ್ಟು ಅಂಕಕೊಡಿʼ ಎಂದು ಹೇಳಿದವರು ಕಷ್ಟಕಾಲದಲ್ಲಿ ಶಿಕ್ಷಕರ ನೆರವಿಗೆ ಬರುವುದಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಅದು ತಪ್ಪು ಎಂದು ಗೊತ್ತಿರುವುದರಿಂದಲೇ ಅವರು ಯಾವುದೇ ಲಿಖಿತ ಆದೇಶವನ್ನು ನೀಡುವುದಿಲ್ಲ. ಹೋಗಲಿ ಈ ಬಗ್ಗೆ ಏನಾದರೂ ವಿಚಾರಣೆ ನಡೆದರೆ ʼಹೌದು ನಾನು ಹಾಗೆ ಮಾರ್ಗದರ್ಶನ ಮಾಡಿದ್ದು ನಿಜʼ ಎಂದು ಹೇಳುವ ಮೂಲಕ ಅವರ ಮಾತು ಕೇಳಿದ ಶಿಕ್ಷಕರ ಬೆನ್ನಿಗೆ ನಿಲ್ಲುವ ಎದೆಗಾರಿಕೆಯನ್ನಾದರೂ ಯಾವುದಾದರೂ ಅಧಿಕಾರಿ ತೋರಬಹುದೇ? ಖಂಡಿತಾ ಇಲ್ಲ. ಎಲ್ಲದನ್ನೂ ಶಿಕ್ಷಕರೇ ಅನುಭವಿಸಬೇಕು. ಈ ಬಗ್ಗೆ ಯಾರು ಎಷ್ಟೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡರೂ ಅವು ಕಷ್ಟಕಾಲದಲ್ಲಿ ಅವನ್ನು ಕಾಪಾಡುವ ಗ್ಯಾರಂಟಿ ಇರುವುದಿಲ್ಲ. ಶಿಕ್ಷಕರು ಒಂದು ತಪ್ಪು ಮಾಡಲು ಹೋಗಿ ಅದಕ್ಕೆ ನೂರು ತಪ್ಪುಗಳನ್ನು ಮಾಡಬೇಕಾಗುತ್ತದೆ. ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲೆಲ್ಲೋ ಕಾಲಕಾಲಕ್ಕೆ ಸಾಕ್ಷಿಗಳು ದಾಖಲಾಗಿರುತ್ತವೆ. ಸತ್ಯವನ್ನು ಬಹಳಷ್ಟು ದಿನ ಮುಚ್ಚಿಡಬಹುದೇ ಹೊರತು ಶಾಸ್ವತವಾಗಿ ಅಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನೇರವಾಗಿ ಸ್ಪಷ್ಟವಾಗಿ ಇರುವುದೇ ಸರಿಯಾದ ಕ್ರಮ.
ಇನ್ನು ಎರಡನೆಯದು ವೃತ್ತಿ ನೈತಿಕತೆಗೆ ಸಂಬಂಧಿಸಿದ್ದು. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ʻವೃತಿನೈತಿಕತೆʼ ಎಂಬುದು ಇರುತ್ತದೆ. ಅದರಲ್ಲಿಯೂ ಶಿಕ್ಷಕ ವೃತ್ತಿಯಂಥ ವೃತ್ತಿಗಳಲ್ಲಿ ಇದು ಅತ್ಯಂತ ಮಹತ್ವವನ್ನು ವಹಿಸುತ್ತದೆ. ಸಮಾಜದಲ್ಲಿ ಶಿಕ್ಷಕರ ಬೆಲೆ ಬಹಳ ಕಡಿಮೆ ಆಗಿದೆ ಎಂಬಂತಹ ಈ ಕಾಲದಲ್ಲಿಯೂ ನಮ್ಮ ಸಮಾಜದಲ್ಲಿ ʼಶಿಕ್ಷಕ ಎಂದರೆ ಕೇವಲ ಒಬ್ಬ ಸರ್ಕಾರಿ ನೌಕರ ಅಲ್ಲʼ ಎಂಬುದನ್ನು ನಮ್ಮ ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಅವರು ತಮ್ಮ ವೃತ್ತಿನೈತಿಕತೆಯನ್ನು ಹಾಳುಮಾಡಿಕೊಳ್ಳುವ ಯಾವುದೇ ಕಾರ್ಯಕ್ಕೆ ಕೈ ಹಾಕಬಾರದು. ಈ ಹಿನ್ನಲೆಯಲ್ಲಿ ತಮ್ಮ ಮೇಲಧಿಕಾರಿಗಳು ಹೀಗೆ ಕೆಟ್ಟ ಮಾರ್ಗದರ್ಶನ ಮಾಡಿದಾಗ ಅದನ್ನು ಅವರು ಕುರುಡಾಗಿ ಅನುಸರಿಸಬಾರದು. ಅಲ್ಲೆಲ್ಲ ತಮ್ಮ ವಿವೇಚನೆಯನ್ನು ಬಳಸಿ ಮುಂದೆ ಹೆಜ್ಜೆ ಇಡಬೇಕು. ನನ್ನ ಪ್ರಕಾರ ಯಾರೋ ಹೇಳಿದರು ಎಂದು ಅಂಕ ಕೊಡುವ ಒಬ್ಬ ವ್ಯಕ್ತಿ ತನಗೆ ಮೇಷ್ಟ್ರ ಕೆಲಸವನ್ನು ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡ ಒಬ್ಬ ಅಯೋಗ್ಯ ವ್ಯಕ್ತಿಯೇ ಆಗುತ್ತಾನೆ. ಇದು ಕೇವಲ ಆ ಶಿಕ್ಷಕನನ್ನು ಮಾತ್ರವಲ್ಲ ಇಡೀ ಶಿಕ್ಷಕ ಸಮುದಾಯವನ್ನು ಸಮಾಜ ಕೆಟ್ಟರೀತಿ ಕಾಣಲು ಕಾರಣವೂ ಆಗುತ್ತದೆ.
ಬಾಹ್ಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದೇನೋ. ನಾನು ಒಂದು ಸಲ ಪರೀಕ್ಷಾ ಮೌಲ್ಯಮಾಪನಕ್ಕೆ ಹೋಗಿದ್ದೆ. ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಮಾಡಿದರೂ ನನ್ನ ಮೌಲ್ಯಮಾಪನ ಮುಗಿಯುತ್ತಿರಲಿಲ್ಲ. ಇದರ ಮಧ್ಯೆ ನನಗೆ ಪರಿಚಯ ಇರುವ ಹಿಂದಿ ಶಿಕ್ಷಕಿಯೊಬ್ಬರು ದಿನಾ ಹನ್ನೊಂದು ಗಂಟೆಗೆ ಬಂದು ಮೂರು ಮೂರೂವರೆ ವೇಳೆಗೆ ಮೌಲ್ಯಮಾಪನ ಮುಗಿಸಿ ಹೊರಡುತ್ತಿದ್ದರು. ಎರಡು ದಿನ ಇದನ್ನು ನೋಡಿದ ನಾನು ಕುತೂಹಲ ತಾಳದೆ ಮೂರನೆ ದಿನ ಅವರು ಮನೆಗೆ ಹೊರಟ ಸಂದರ್ಭದಲ್ಲಿ ಮಾತನಾಡಿಸಿ, “ನೀವೇನು ಪೇಪರ್ ಓದಿ ವ್ಯಾಲುವೇಶನ್ ಮಾಡೋದಿಲ್ಲೇನೋ” ಎಂದು ಕೇಳಿಬಿಟ್ಟೆ. ನನ್ನ ಮಾತನ್ನು ಕೇಳಿದ ಅವರು, “ಪಡನೇಕಿ ಜರೂರತ್ ಕ್ಯಾ ಹೈ ರಾಬು ಜೀ? ಡಿಡಿಪಿಐ ಸಾಬ್‌ನೆ ಸಬ್‌ಕೊ ಪಾಸ್ ಕರ್ನೆಕೋ ಬೋಲಾ ಹೈ ನ?” ಎಂದು ನನ್ನ ಕಡೆ ಒಂದು ಮುಗಳು ನಗೆ ಬೀರಿ ಸ್ಕೂಟಿ ಸ್ಟಾರ್ಟ್ ಮಾಡಿದರು.
ಆಂತರಿಕ ಮೌಲ್ಯಮಾಪನಕ್ಕೆ
ಸಂಬಂಧಿಸಿದಂತೆ ಇನ್ನೊಂದು ಘಟನೆ ನಡೆಯಿತು. ನಾನು ಶಿಕ್ಷಕನಾದ ಮೇಲೆ ಒಂದು ಶಾಲೆಯಲ್ಲಿ ನನ್ನ ವಿಷಯದಲ್ಲಿ
ಒಬ್ಬ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ೧೨೫ಕ್ಕೆ ೧೨೩ ಅಂಕ ಬಂದಿತ್ತು. ಆಕೆ ಬಾಹ್ಯಪರೀಕ್ಷೆಯಲ್ಲಿ
ನೂರಕ್ಕೆ ನೂರೂ ಅಂಕಗಳನ್ನು ಪಡೆದಿದ್ದಳು. ಆದರೆ ಶಾಲೆಯಲ್ಲಿ ಆಂತರಿಕ ಅಂಕಗಳು ಅವಳಿಗೆ ಇಪ್ಪತ್ತೈದಕ್ಕೆ
ಇಪ್ಪತ್ತೈದು ಅಂಕಗಳು ಬಂದಿರಲಿಲ್ಲ. ಇಪ್ಪತ್ಮೂರು ಬಂದಿತ್ತು. ಇದನ್ನು ನೋಡಿದ ಅನೇಕ ನಮ್ಮ ಅನೇಕ ಸಹೋದ್ಯೋಗಿಗಳು,
ನಮ್ಮ ಸರ್ ದೊಡ್ಡ ಮನಸ್ಸು ಮಾಡಿ ಪೂರ್ತಿ ಅಂಕಗಳನ್ನು ನೀಡಬಹುದಿತ್ತು. ಆ ಹುಡುಗಿಗೆ ಅನ್ಯಾಯ ಮಾಡಿದರುʼ
ಎಂದೇ ಭಾವಿಸಿದರು. ನನ್ನ ವಿಷಯದಲ್ಲಿಯೇ ಶಾಲೆಯಲ್ಲಿ ಕೆಲವರು ಇಪ್ಪತ್ತೈದಕ್ಕೆ ಇಪ್ಪತ್ತೈದೂ ಅಂಕಗಳನ್ನು
ಪಡೆದದ್ದೂ ಇತ್ತು. ಅವರಲ್ಲಿ ಕೆಲವರಿಗೆ ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಡೆಯುವುದು ಸಾಧ್ಯವಾಗಿದ್ದರೆ
ಕೆಲವರಿಗೆ ಸಾಧ್ಯವಾಗಿರಲಿಲ್ಲ.
ನಾನು ಆ ಮಗುವನ್ನೂ ಅದರ ಪಾಲಕರನ್ನೂ ಕರೆದು ಅವಳು ಇನ್ನೊಂದಿಷ್ಟು ಕಾಳಜಿ ವಹಿಸಿದ್ದರೆ ಶಾಲೆಯಲ್ಲಿ ಕೂಡ ಹೇಗೆ ಪೂರ್ತಿ ಅಂಕಗಳನ್ನು ಪಡೆಯಬಹುದಿತ್ತು ಎಂಬುದನ್ನು ತಿಳಿಹೇಳಿದೆ. ಇಪ್ಪತ್ತೈದು ಅಂಕ ಪಡೆದವರು ಹೇಗೆ ಪಡೆದರು ಮತ್ತು ಅಷ್ಟು ಅಂಕ ತನಗೇಕೆ ಬರಲಿಲ್ಲ ಎಂಬುದನ್ನು ಆ ಮಗು ಅರ್ಥಮಾಡಿಕೊಂಡಿತು. ಅವಳಿಗಾಗಲೀ ಅವಳ ಪಾಲಕರಿಗಾಗಲೀ ನಾನು ಮಾಡಿದ್ದು ತಪ್ಪು ಎನಿಸಲಿಲ್ಲ. ಅವರಿಗೆ ನನ್ನ ಬಗ್ಗೆ ಯಾವುದೇ ಬಗೆಯ ಕೆಟ್ಟಭಾವನೆ ಕೂಡ ಹುಟ್ಟಿ ಬೆಳೆಯಲಿಲ್ಲ. ಆದರೆ ನಮ್ಮಲ್ಲಿಯೇ ಕೆಲವು ಶಿಕ್ಷಕರು ಮಾತ್ರ ಇದನ್ನು ನಾನು ಮಗುವಿಗೆ ಮಾಡಿದ ಅನ್ಯಾಯ ಎಂದೇ ಭಾವಿಸಿದರು. ಬಾಹ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವಂತೆ ಮಗು ಬರೆದಿರಬಹುದು. ಆದರೆ ಶಾಲೆಯಲ್ಲಿ ಇಪ್ಪತ್ತೈದಕ್ಕೆ ಇಪ್ಪತ್ತೈದು ಅಂಕ ಬರುವಂತೆ ಕೆಲಸ ಮಾಡಿರಲಿಕ್ಕಿಲ್ಲ ಎಂಬ ಸಣ್ಣ ತಿಳಿವಳಿಕೆಯೂ ಇಲ್ಲದ ಸೋಗಲಾಡಿಗಳು ಇವರಾಗಿದ್ದರು. ಜೊತೆಗೆ ಮಕ್ಕಳು ಕೆಲಸಮಾಡಿದರೇನು ಬಿಟ್ಟರೇನು ಅವರಿಗೆ ಪೂರ್ಣ ಅಂಕಗಳನ್ನು ನೀಡಿದದ ಗಣ್ಯವ್ಯಕ್ತಿಗಳೂ ಇದರಲ್ಲಿ ಇದ್ದರು.
ಯಾವುದೇ ಒಂದು ತರಗತಿಯಲ್ಲಿ ಒಂದೇ ಮಟ್ಟದ ಕಲಿಕೆಯ ಮಕ್ಕಳಿರುವುದಿಲ್ಲ ಎಂಬುದು ಶಿಕ್ಷಕರ ಕೆಲಸ ಮಾಡಿದ ಯಾರೇ ಆದರೂ ಒಪ್ಪಿಕೊಳ್ಳುವ ಸಂಗತಿ. ಹೀಗಿರುವಾಗ ಎಲ್ಲರಿಗೂ ಒಂದೇ ರೀತಿಯ ಅಂಕಗಳನ್ನು ಹೇಗೆ ಕೊಡಲು ಸಾಧ್ಯ? ಬಾಹ್ಯಪರೀಕ್ಷೆಯಲ್ಲಿ ಎಂಬತ್ತಕ್ಕೆ ಇಪ್ಪತ್ತು ಅಂಕಗಳನ್ನೂ ಪಡೆಯಲಾರದ ಒಂದು ಮಗುವಿಗೆ ಆಂತರಿಕವಾಗಿ ಇಪ್ಪತ್ತಕ್ಕೆ ಇಪ್ಪತ್ತು ಅಂಕಗಳನ್ನು ನೀಡಿದರೆ ಅದು ಏನನ್ನು ಸೂಚಿಸುತ್ತದೆ? ನಾಚಿಕೆ, ಮಾನ, ಮರ್ಯಾದೆ ಇರುವ ಯಾವುದಾದರೂ ಶಿಕ್ಷಕರು ಇದನ್ನು ಸಮರ್ಥಿಸಿಕೊಳ್ಳಬಹುದೇ? ಇಂತಹ ಸಂದರ್ಭದಲ್ಲಿ ನಮ್ಮ ಅನೇಕ ಶಿಕ್ಷಕರು ʼಪಾಪ ಏನೋ ಸಹಾಯ ಮಾಡುವುದುʼ ಎಂಬ ಧೋರಣೆ ತಾಳುತ್ತಾರೆ. ನನಗೊಬ್ಬ ಶಿಕ್ಷಕಿ ಒಂದು ಸಲ ಹೀಗೆ ಮಾತನಾಡುತ್ತಾ, ʼರಾಬು ಸರ್, ಮಕ್ಕಳಿಗೆ ನಾವು ಇನ್ನೇನು ಸಹಾಯ ಮಾಡ್ಲಿಕ್ಕೆ ಆಗುತ್ತೆ ಹೇಳಿ? ಏನೋ ಒಂದಿಷ್ಟು ಮಾರ್ಕ್ಸು ಕೊಡೋದಪ. ನಾವೇನು ಅವನ್ನು ದುಡ್ಡು ಕೊಟ್ಟು ತರ್ತೀವಾ? ಎಂದು ಪ್ರೀತಿಯಿಂದಲೇ ಛೇಡಿಸಿದ್ದಿದೆ.
ಇಂತಹ ಶಿಕ್ಷಕರು ನಮ್ಮಲ್ಲಿ ಬಹಳ ಜನ ಇದ್ದಾರೆ. ಇವರು ಶಿಕ್ಷಕರ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವವರು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಮುಖ್ಯವಾಗಿ ಮೂರು ರೀತಿಯ ಪಾತ್ರಗಳನ್ನು ವಹಿಸಬೇಕಾಗುತ್ತದೆ. ಅವರು ಪಾಠಮಾಡುವಾಗ ತಾಯಿಯಾಗಿರಬೇಕು. ಪರೀಕ್ಷೆ ಮಾಡುವಾಗ ಸಬ್ ಇನ್ಸ್ ಪೆಕ್ಟರ್ ಆಗಿರಬೇಕು. ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶ ಆಗಿರಬೇಕು. ಅದರೆ ನಮ್ಮಲ್ಲಿ ಅನೇಕರದ್ದು ಉಲ್ಟಾ ಕೇಸು. ಅವರು ಪಾಠಮಾಡುವಾಗ ಸಬ್ ಇನ್ಸ್ ಪೆಕ್ಟರ್ ಆಗಿರುತ್ತಾರೆ. ಪರೀಕ್ಷೆ ಮಾಡುವಾಗ ತಾಯಿಯಾಗಿಬಿಡುತ್ತಾರೆ! ಮೌಲ್ಯಮಾಪನದ ಬಗ್ಗೆ ಕೇಳಬೇಡಿ. ಏಕೆಂದರೆ ಅವರು ಅಲ್ಲಿ ʻತಳ್ಳುಸೇವಕʼರಾಗಿ ಕೆಲಸಮಾಡುತ್ತಿರುತ್ತಾರೆ!!
ಒಂದು ತರಗತಿಯಲ್ಲಿ ಎಲ್ಲರಿಗೂ ಹೆಚ್ಚು ಅಂಕಗಳನ್ನು ಅಥವಾ ಪೂರ್ಣ ಅಂಕಗಳನ್ನು ಕೊಡುವುದರಿಂದ ಯಾರಿಗೂ ಅನ್ಯಾಯ ಮಾಡಿದಂತೆ ಆಗುವುದಿಲ್ಲವಲ್ಲ ಎಂಬುದು ಕೆಲವು ಶಿಕ್ಷಕರ ವಾದ. ಆದರೆ ಅದು ಸರಿಯಲ್ಲ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ನಾವು ಕೆಲವರಿಗೆ ಮಾಡುವ ʼಸಹಾಯʼವು ಪರೋಕ್ಷವಾಗಿ ಬೇರೆ ಯಾರಿಗೋ ಮಾಡುವ ʼಅನ್ಯಾಯʼವೇ ಆಗಿರುತ್ತದೆ. ಸಹಾಯ ಮಾಡಿದ ಪುಣ್ಯ ನಮಗೆ ಬರುತ್ತದೆ ಎಂದು ಭಾವಿಸುವಾಗಲೇ ಆಕಡೆ ಉಂಟಾದ ಅನ್ಯಾಯದ ಪಾಪ ತುಸು ಹೆಚ್ಚಾಗಿಯೇ ನಮಗೆ ಅಂಟಿಕೊಳ್ಳಬಹುದು. ಒಂದು ತರಗತಿಯಲ್ಲಿ ಕಷ್ಟಪಟ್ಟು ಶ್ರದ್ಧೆಯಿಂದ ಓದುವ ಒಂದು ಪ್ರತಿಭಾವಂತ ಮಗುವಿಗೂ, ಯಾವುದೇ ಯೋಜನಾ ಕಾರ್ಯವನ್ನು ಮಾಡದ, ಏನನ್ನೂ ಒದಿ ಬರೆದು ಮಾಡದ, ಶಿಕ್ಷಕರ ಯಾವ ಮಾತಿಗೂ ಸ್ಪಂದಿಸದೇ ಅಡ್ಡ ಉದ್ದ ಸೆಟೆಯುವ ಒಂದು ಮಗುವಿಗೂ ಒಬ್ಬ ಶಿಕ್ಷಕ ಸಮಾನ ಅಂಕಗಳನ್ನು (ಆ ಅಂಕಗಳು ಎಷ್ಟಾದರೂ ಇರಲಿ) ನೀಡಿದರೆ ಅದು ಹೇಗೆ ನ್ಯಾಯ ಆಗುತ್ತದೆ? ಇದರಿಂದ ಪ್ರತಿಭಾವಂತ ಮಗುವಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ನಾನೇಕ ಇಷ್ಟು ಕಷ್ಟಪಟ್ಟು ಓದಿ ಶಿಕ್ಷಕರು ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಿತ್ತು? ಎಂದು ಆ ಮಗುವಿಗೆ ಅನ್ನಿಸುವುದಿಲ್ಲವೇ?
ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕರು ತಮ್ಮಲ್ಲಿರುವ ಇಪ್ಪತ್ತು ಅಂಕಗಳಲ್ಲಿ 18,19,20 ಈ ಮೂರನ್ನು ಮಾತ್ರ ಬಳಸುತ್ತಿದ್ದರು. ಅದರ ಕೆಳಗೆ ಸಂಖ್ಯೆಗಳಿವೆ ಎಂಬುದನ್ನೂ ಅವರು ಮರೆತಂತಿತ್ತು. ಈ ಅಂಕಗಳನ್ನು ಕೊಡುವಾಗ ಅವರು ತಮ್ಮದೇ ಅದ ಒಂದು ತತ್ವವನ್ನು ಇಟ್ಟುಕೊಂಡಿದ್ದರು. ದಿನವೂ ಶಾಲೆಗೆ ತಪ್ಪದೇ ಬಂದು ಶಿಕ್ಷಕರು ಹೇಳಿದ ಎಲ್ಲ ಬರೆವಣಿಗೆ ಮಾಡಿ ಕೊಡುವವರಿಗೆ ಇಪ್ಪತ್ತು, ಆಗೊಮ್ಮ ಈಗೊಮ್ಮೆ ಬರುವವರಿಗೆ ಹತ್ತೊಂಬತ್ತು ಮತ್ತು ಎಂದೂ ಶಾಲೆಗೆ ಬರದೇ ಇರುವರಿಗೆ ಹದಿನೆಂಟು ಕೊಡುತ್ತಿದ್ದರು. ಈ ಅಂಕಗಳ ನಡುವೆ ಬಹಳಷ್ಟು ಅಂತರವಿಲ್ಲದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಹದಿನೆಂಟು ಪಡೆಯುವುದನ್ನೇ ಆಯ್ದುಕೊಳ್ಳುತ್ತಿದ್ದರು! ಏಕೆಂದರೆ, “ನೀನು ಕೆಲಸಮಾಡಿದರೆ ಇಪ್ಪತ್ತು ಸಾವಿರ ಕೊಡುತ್ತೇನೆ. ಕೆಲಸ ಮಾಡದಿದ್ದರೆ ಹತ್ತು ಸಾವಿರ ಕೊಡುತ್ತೇನೆ” ಎಂದು ನಮಗೆ ಯಾರಾದರೂ ಆಯ್ಕೆ ನೀಡಿದರೆ ನಮ್ಮಲ್ಲಿ ಬಹುತೇಕರ ಆಯ್ಕೆಯು ಹತ್ತು ಸಾವಿರವೇ ಆಗಿರುತ್ತದೆ ಅಲ್ಲವೇ?
ಶಿಕ್ಷಕರ ಈ ಬಗೆಯ ಕೆಟ್ಟ ಮತ್ತು ಬೇಜವಾಬ್ದಾರಿಯ ವರ್ತನೆಯು ಮಕ್ಕಳ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಕರ ಮೇಲಿನ ಗೌರವ ಕಡಿಮೆ ಮಾಡುವುದು, ಅವರ ಬಗ್ಗೆ ದ್ವೇಷ ಬೆಳೆಸುವುದು, ಕಷ್ಟಪಟ್ಟು ಕೆಲಸ ಮಾಡುವುದನ್ನು ಕೈಬಿಡುವುದು ಹೀಗೆ. ನನ್ನದೇ ಒಂದು ಉದಾಹರಣೆಯನ್ನು ಕೊಡುವುದಾದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಾಗ ಒಂದು ಘಟನೆ ನಡೆಯಿತು. ಆಗ ನನಗೆ ಪುಟ್ಟಮ್ಮ ಎಂಬ ಹೆಸರಿನ ಗೆಳತಿಯೊಬ್ಬಳು ಇದ್ದಳು. ನಾವಿಬ್ಬರೂ ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿ ಬೆಳೆದವರು. ನಮ್ಮಿಬ್ಬರ ಮನೆಗಳಲ್ಲೂ ಕರೆಂಟ್ ಇರಲಿಲ್ಲ. ಹೊಗೆ ಉಗುಳುವ ಚಿಮಣಿಬುಡ್ಡಿ ದೀಪದಲ್ಲಿ ನಾವು ಓದುತ್ತಿದ್ದೆವು. ದೀಪದ ಕರಕಲು ಹೊಗೆಯಿಂದಾಗಿ ನಮ್ಮ ಮೂಗಿನ ಹೊರಳೆಗಳು ಮತ್ತು ಕಣ್ಣ ರೆಪ್ಪೆಯ ತುಂಬೆಲ್ಲ ದೀಪದ ಕರಿ ತುಂಬಿರುತ್ತಿತ್ತು.
ನಾವು ರಾತ್ರಿ ಇಡೀ ಓದಿಕೊಂಡು ತರಗತಿಗೆ ಮೊದಲು ಬರಬೇಕು ಎಂಬ ಹುಮ್ಮಸ್ಸಿನೊಂದಿಗೆ ಬೆಳಿಗ್ಗೆ ಪರೀಕ್ಷೆಗೆ ಹೋಗುತ್ತಿದ್ದೆವು. ಆದರೆ ಆ ಪರೀಕ್ಷಾ ಕೇಂದ್ರದಲ್ಲಿ ಒಂದು ಕೆಟ್ಟ ಪದ್ಧತಿ ಇದ್ದದ್ದು ನಮ್ಮ ಗಮನಕ್ಕೆ ಬಂದಿತು. ಮಕ್ಕಳು ಪಾಸಾಗಲು ಬೇಕಾಗುವಷ್ಟು ಅಂಕಗಳು ಬರುವಂತೆ ಪರೀಕ್ಷಾ ಕೊಠಡಿಗೆ ಬಂದು ವಸ್ತುನಿಷ್ಠಮಾದರಿ ಪ್ರಶ್ನೆಗಳಿಗೆ ಉತ್ತರವನ್ನು ಹೇಳಿಕೊಡುತ್ತಿದ್ದರು. ಮೊದಲ ದಿನ ಹೀಗೆ ಬಂದು ಹೇಳಿಕೊಟ್ಟಾಗ ನನಗೆ ಬಹಳ ದುಃಖವಾಯಿತು. ನಾನು ರಾತ್ರಿ ಇಡೀ ಓದಿದ್ದೇ ವೇಸ್ಟು ಎನ್ನಿಸಿತು. ಏಕೆಂದರೆ ಏನೂ ಓದದೇ ಬಂದವರೂ ಸರಾಗವಾಗಿ ಅಂಕ ತೆಗೆದುಕೊಳ್ಳುವಂತೆ ಆಯಿತು. ಅಂದಿನ ಪರೀಕ್ಷೆ ಮುಗಿದ ಮೇಲೆ ನನ್ನ ಹತ್ತರ ಓಡಿ ಬಂದ ʻಪುಟ್ಟಿʼ ಅಳುತ್ತಾ ಈ ಬಗ್ಗೆ ತನ್ನ ನೋವನ್ನು ಹೇಳಿಕೊಂಡಳು.
ನಾವು ಏನು ತಾನೇ ಮಾಡುವ ಸ್ಥಿತಿಯಲ್ಲಿದ್ದೆವು? ಬಡವರ ಮಕ್ಕಳು. ಬಡವರ ಕೋಪ ದವಡೆಗೆ ಮೂಲ ಎಂಬ ಮಾತು ಬೇರೆ ಇದೆ. ಆದರೂ ಮನಸ್ಸು ತಡೆಯಲಿಲ್ಲ. ಏನೂ ಓದದೇ ಇರುವವರು ನಮ್ಮ ಸರಿಸಮ ಅಂಕಗಳನ್ನು ಪಡೆಯುವುದನ್ನು ಒಪ್ಪಿಕೊಳ್ಳಲು ನಾವು ತಯಾರಿರಲಿಲ್ಲ. ನಾನು ಅವಳಿಗೆ ಧೈರ್ಯ ತುಂಬುತ್ತಾ ಮರುದಿನ ಉತ್ತರ ಹೇಳಿಕೊಡಲು ಬರುವವರನ್ನು ವಾಪಸ್ಸು ಕಳಿಸುವ ಧೈರ್ಯ ಮಾಡಿದೆವು. ಒಂಬತ್ತನೆ ರೂಮಿನಲ್ಲಿ ಅವಳಿದ್ದಳು. ಹನ್ನೆರಡನೆಯ ರೂಮಿನಲ್ಲಿ ನಾನಿದ್ದೆ. ಉತ್ತರ ಹೇಳಿಕೊಡಲು ಬರುವ ʻಲೋಫರ್ʼಗಳಿಗೆ ಎದ್ದುನಿಂತು ಪ್ರತಿರೋಧ ವ್ಯಕ್ತಪಡಿಸಬೇಕೆಂದು ಮಾತನಾಡಿಕೊಂಡೆವು. ಆರಂಭದಲ್ಲಿ ಹಾಗೆ ಮಾಡಲು ಅವಳು ಹೆದರಿದಳಾದರೂ ನಾನು ಕೊಟ್ಟ ಧೈರ್ಯದಿಂದ ಅದನ್ನು ಮಾಡಲು ಮುಂದಾದಳು.
ಮರುದಿನ ಹೀಗೆ ಹೇಳಿಕೊಡಲು ನಾನು ನಿರೀಕ್ಷಿಸಿದಂತೆ ನನ್ನ ಕೊಠಡಿಗೆ ಒಬ್ಬ ಬಂದ. ಕೂಡಲೆ ಎದ್ದುನಿಂತು ನಾನು ಆಗಲೇ ಬಾಯಿಪಾಟ ಮಾಡಿಕೊಂಡಂತೆ, ʼಸರ್, ನಾವು ಕಷ್ಟಪಟ್ಟು ಇಡೀ ರಾತ್ರಿ ಓದಿಕೊಂಡು ಬಂದಿದ್ದೇವೆ. ದಯವಿಟ್ಟು ನೀವು ಹೀಗೆ ಉತ್ತರ ಹೇಳಿಕೊಡಬೇಡಿ. ನಮಗೆ ಅನ್ಯಾಯ ಅಗುತ್ತದೆʼ ಎಂದು ಒಂದೇ ಉಸುರಿಗೆ ಹೇಳಿಬಿಟ್ಟೆ. ಹಾಗೆ ಬಂದ ವ್ಯಕ್ತಿ ಇಂಗು ತಿಂದ ಮಂಗನಂತೆ ಸುತ್ತಲೂ ನೋಡಿ ಅಲ್ಲಿಂದ ತಕ್ಷಣ ಕಾಲ್ಕಿತ್ತ. ಪರೀಕ್ಷೆ ಮುಗಿದ ಮೇಲೆ ಹೊರಬಂದ ಪುಟ್ಟಿಯ ಮುಖದ ಮೇಲಿನ ಗೆಲುವಿನ ನಗು ನೋಡಿಯೇ ನನಗೆ ಅರ್ಥವಾಯಿತು ಅವಳೂ ತನ್ನ ರೂಮಿನಲ್ಲಿ ಅದನ್ನೇ ಮಾಡಿದ್ದಾಳೆ ಎಂದು. ಹಿಂದಿನ ದಿನದ ಅವಳ ಬಾಡಿದ ಮುಖವನ್ನು ನೋಡಿ ಕಂದಿಹೋಗಿದ್ದ ನನ್ನ ಮನಸ್ಸು ಅಂದಿನ ಅವಳ ನಗುಮುಖ ನೋಡಿ ಹಗುರಾಯಿತು ಮಾತ್ರವಲ್ಲ ಅವತ್ತು ಹಾಗೆ ಹೇಳಿಕೊಡಲು ಬಂದ ಶಿಕ್ಷಕರಿಗೆ ಬಳಸಿದ ʼಲೋಫರ್ʼ ಪದಕ್ಕೆ ಇವತ್ತಿಗೂ ನನಗೆ ಹಾಗೆ ಅನ್ನಬಾರದಿತ್ತು ಅನ್ನಿಸುತ್ತಿಲ್ಲ.
ಈಗ ಶಿಕ್ಷಕರು ನೀಡುವ ಆಂತರಿಕ ಅಂಕಗಳು ಕೂಡ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ನಮೂದಾಗಿ ಸಾರ್ವಜನಿಕಗೊಳ್ಳುತ್ತವೆ. ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಅಕ್ಕಪಕ್ಕ ಓದುವ ಮಕ್ಕಳು ಓದಿದವರು ಓದದೇ ಇರುವವರು, ಶಾಲೆಗೆ ಬರುವವರು, ಬರದೇ ಇರುವವರು ಎಲ್ಲರಿಗೂ ಒಂದೇ ರೀತಿಯ ಅಂಕ ನೀಡಿದ್ದನ್ನು ನೋಡಿದರೆ ಓದಿದ ಮಕ್ಕಳು ಶಿಕ್ಷಕರ ಬಗ್ಗೆ ಯಾವ ಭಾವನೆಯನ್ನು ತಾಳುತ್ತಾರೆ? ವರ್ಷಪೂರ್ತಿ ಶಾಲೆಗೆ ಬರದೆ ಊರಲ್ಲಿ ತಿರುಗಾಡುವ ಹುಡುಗನೊಬ್ಬನಿಗೆ ಹೀಗೆ ಅಂಕಕೊಟ್ಟಾಗ ಆ ಹುಡುಗ ತನ್ನ ಹಿಂದಿನ ತರಗತಿಯ ಹುಡುಗರಿಗೆ, ʼಏಯ್ ಸುಮ್ನೆ ಯಾತಕ್ಕೆ ಕಷ್ಟಪಟ್ಟು ಪ್ರಾಜೆಕ್ಟ್ ಮಾಡ್ತೀರಾ? ನಾನೇನು ಮಾಡಿರ್ಲಿಲ್ಲ ನನಗೆ ಇಪ್ಪತ್ತು ಮಾರ್ಕ್ಸ್ ಕೊಟ್ಟಿದಾರೆ.. ನೀವು ಮಾಡಿದ್ರೇನು ಬಿಟ್ರೇನು ಅವ್ರು ಕೊಟ್ಟೇ ಕೊಡ್ತಾರೆ” ಎಂದು ಹೇಳಿ ಹಾದಿತಪ್ಪಿಸುತ್ತಿದ್ದನ್ನು ನಾನೇ ಕಣ್ಣಾರೆ ಕಂಡದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಸಲುಗೆ ಸಿಗಬಾರದು ಎಂದು ಆ ಶಾಲೆಯಲ್ಲಿ ಶಿಕ್ಷಕರು ʻನಾನು ಸುಮ್ಮಸುಮ್ಮನೆ ಮಾರ್ಕ್ಸು ಕೊಡಲ್ಲ. ಕೆಲಸ ಮಾಡಿದವರಿಗೆ ಅಷ್ಟೇ ಕೊಡೋದು ಎಂದು ಹೇಳುತ್ತಿದ್ದರು. ಆದರೆ ವರ್ಷದ ಕೊನೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳದೇ ಎಲ್ಲರಿಗೂ ʻದೇವರ ಅಂಕಿʼ ನೀಡುತ್ತಿದ್ದರು. ಹಾಗೆ ಮಾಡಲು ಅವರ ಮೇಲೆ ಯಾರದ್ದಾದರೂ ಒತ್ತಡ ಇದ್ದೀತು. ಆದರೆ ಈ ವರ್ತನೆಯಿಂದ ಆ ಶಿಕ್ಷಕರು ʻಸುಳ್ಳುಹೇಳುವವರುʼ ಎಂಬ ಸತ್ಯ ಮಾತ್ರ ಮಕ್ಕಳಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿತು. ಶಿಕ್ಷಕರಿಗೆ ಇದೆಲ್ಲ ಬೇಕೆ?
ನಮ್ಮ ಶಿಕ್ಷಕರು ತಮ್ಮ ಮೇಲೆ ಯಾವುದೇ ರೀತಿಯ ಎಷ್ಟೇ ಒತ್ತಡವಿದ್ದರೂ ತಮ್ಮ ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಳ್ಳುವ ಕೆಲಸಕ್ಕೆ ಕೈಹಾಕಬಾರದು. ಬಹುತೇಕ ಶಿಕ್ಷಕರು ಅಧಿಕಾರಿಗಳಿಂದ ಹೊಗಳಿಸಿಕೊಳ್ಳುವುದು ಅದಾಗದಿದ್ದರೆ ಕನಿಷ್ಠಪಕ್ಷ ಅವರ ಕಿರಿಕಿರಿ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನೇ ಚಿಂತಿಸುತ್ತಿರುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಅವರು ಚಿಂತಿಸಬೇಕಾಗಿರುವ ಅಂಶವೆಂದರೆ ನಾವು ನಮ್ಮ ಮತ್ತು ನಮ್ಮ ವೃತ್ತಿಯ ಮಾನ ಮರ್ಯಾದೆಗಳನ್ನು ಉಳಿಸಿಕೊಂಡು ಸಮಾಜದಲ್ಲಿ ಯಾರಿಗೂ ತಲೆತಗ್ಗಿಸದೆ ತಲೆಯೆತ್ತಿ ಬದುಕುವುದು ಹೇಗೆ ಎಂಬುದು. ನನ್ನ ಪ್ರಕಾರ ಅಧಿಕಾರಿಗಳ ಕಿರಿಕಿರಿ ಅನುಭವಿಸುವುದು, ವಿದ್ಯಾರ್ಥಿಗಳು ಪಾಲಕ ಪೋಷಕರೆದುರು ಮರ್ಯಾದೆ ತಲ್ಲದಂತಾಗುವುದು ಇವೆರಡಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಆಯ್ಕೆ ಅವರ ಮುಂದೆ ಬಂದಾಗ ಅವರು ಮೊದಲನೆಯದನ್ನೇ ಆಯ್ದುಕೊಳ್ಳಬೇಕು; ಅದು ಎಷ್ಟೇ ಕಷ್ಟವಾದರೂ ಸರಿ!
ʻThink globally Act Locallý ಎಂಬುದು ಇಂದು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬೇಕಾದ ಒಂದು ಬಹುಮುಖ್ಯ ತತ್ವ. ಒಬ್ಬ ಶಿಕ್ಷಕ ತಾನು ಕೆಲಸ ಮಾಡುವುದು ಯಾವುದೋ ಒಂದು ಹಳ್ಳಿಯ ಒಂದು ಚಿಕ್ಕಶಾಲೆಯ ಚಿಕ್ಕ ತರಗತಿ ಇರಬಹುದು. ಅವನ ಕಾರ್ಯವ್ಯಾಪ್ತಿ ಅಷ್ಟು ಸಣ್ಣದಿರಬಹುದು. ಆದರೆ ಅವನ ಆಲೋಚನೆ ಮಾತ್ರ ವಿಶ್ವಮಟ್ಟದಲ್ಲಿ ಇರಬೇಕು. ಇಲ್ಲಿ ನನ್ನ ತರಗತಿಯಲ್ಲಿ ನನ್ನ ಎದುರು ಇರುವ ಮಕ್ಕಳು ಮಾತ್ರ ನನ್ನ ವಿದ್ಯಾರ್ಥಿಗಳಲ್ಲ; ಬದಲಾಗಿ ಈ ಜಗತ್ತಿನ ಯಾವುದೇ ಮೂಲೆಯಲ್ಲಿ ಕಲಿಯುತ್ತಿರುವ ಮಗುವೂ ನನ್ನ ವಿದ್ಯಾರ್ಥಿಯೇ ಎಂಬ ವಿಶಾಲ ಭಾವ ಅವರಲ್ಲಿ ಬೆಳೆಯಬೇಕು. ಆವಾಗ ನನ್ನ ವಿಷಯವೇ ಮೊದಲು ಬರಬೇಕು. ನಮ್ಮ ಶಾಲೆಯೇ ಮೇಲೆ ಬರಬೇಕು ಎಂಬ ಕ್ಷುಲ್ಲಕ ಮನಸ್ಥಿತಿಯಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತದೆ. ಅವರು ಆ ಹಂತಕ್ಕೆ ಬಂದಾಗ ಪಾಸಾಗಬೇಕಾದ ಒಬ್ಬ ಮಗುವು ಫೇಲ್ ಆದಾಗ ಹೇಗೆ ಮನಸ್ಸಿಗೆ ನೋವಾಗುತ್ತದೆಯೋ ಹಾಗೆಯೇ ಅರ್ಹತೆಯಿಲ್ಲದ ಮಗುವೊಂದು ಅಪ್ರಮಾಣಿಕವಾಗಿ ಪಾಸ್ ಆದಾಗಲೂ ಅವರ ಮನಸ್ಸಿಗೆ ನೋವಾಗುತ್ತದೆ. ಮಾತ್ರವಲ್ಲ ಅರ್ಹತೆ ಮೀರಿ ತಮ್ಮ ಶಾಲೆಗೆ ಉತ್ತಮ ಫಲಿತಾಂಶ ಬಂದಾಗ ಸಿಹಿಹಂಚಿ ಸಂಭ್ರಮಿಸಲು ಅವರಿಗೆ ಮುಜುಗರ ನಾಚಿಕೆ ಆಗುತ್ತದೆ. ಅದಕ್ಕಾಗಿ ತೊಡಿಸುವ ಸಾಧನೆಯಕಿರೀಟ ಮುಳ್ಳಿನ ಕಿರೀಟವಾಗಿ ತಲೆಯನ್ನು ಚುಚ್ಚುತ್ತದೆ. ಆಗ ಶಿಕ್ಷಣದ ಪಥವೇ ಬದಲಾಗುತ್ತದೆ. ಆಗ ಮಾತ್ರ ನೆಲ್ಸನ್ ಮಂಡೇಲಾ ಹೇಳಿದಂತೆ ಶಿಕ್ಷಣವು ಸಮಾಜ ಪರಿವರ್ತನೆಯ ಪ್ರಬಲ ಆಯುಧವಾಗಿ ಕೆಲಸ ಮಾಡುತ್ತದೆ.
*****
ಡಾ ರಾಜೇಂದ್ರ ಬುರಡಿಕಟ್ಟಿ
18-01-2026


