Saturday, October 14, 2017

ಘಂಟಿ ಮಾತು: `ಪರಂಪರೆಯ ಪಿಸುಮಾತು’

ಘಂಟಿ ಮಾತು: `ಪರಂಪರೆಯ ಪಿಸುಮಾತು’


ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿಯವರಿಗೆ ಹೈಕೋರ್ಟ್, `ವೇದಿಕೆಗಳಲ್ಲಿ ಎಚ್ಚರಿಕೆಯಿಂದ ಮಾತನಾಡಿ’ ಎಂದು ಎಚ್ಚರಿಸಿದ್ದು ಇಂದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಅವರು ಕುವೆಂಪು ವಿವಿ ಯ ಕುಲಸಚಿವರಾಗಿದ್ದಾಗ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, `ರಾಮಾಯಣ, ಮಹಾಭಾರತ ಅತ್ಯಾಚಾರದ ಕೂಪಗಳು. ಅವುಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂದು ಘಂಟಿ ಆಡಿದ್ದರು ಎನ್ನಲಾದ ಮಾತಿಗೆ ಪ್ರತಿಹೇಳಿಕೆಯಾಗಿ ಶಂಕರಗೌಡ ಎಂಬುವವರು ಖಾಸಗೀ ಟಿವಿ ಚಾನಲ್ ಒಂದರಲ್ಲಿ ಪ್ರತಿಹೇಳಿಕೆ ನೀಡುವಾಗ `ನನ್ನ ವಿರುದ್ಧ ಶಂಕರಗೌಡ ಅವರು ಅಸಹ್ಯಕರ ಮತ್ತು ಅಸಭ್ಯ ಪದಗಳನ್ನು ಬಳಸಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಭದ್ರಾವತಿ ಪೋಲೀಸ್ ಠಾಣೆಗೆ ಮಲ್ಲಿಕಾ ಘಂಟಿಯವರು ದೂರು ಸಲ್ಲಿಸಿದ್ದರಂತೆ. ದೂರಿನ ವಿಚಾರಣೆಯ ಭಾಗವಾಗಿ ತಮ್ಮ ಮೇಲೆ ಪೋಲೀಸರು ಭದ್ರಾವತಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಶಂಕರಗೌಡ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡುತ್ತಾ ಈ  ಎಚ್ಚರಿಕೆಯನ್ನು ನೀಡಿರುವುದಾಗಿ ಈ ವರದಿ ಹೇಳುತ್ತದೆ.

ನ್ಯಾಯಮೂರ್ತಿಗಳುಗಳು ಮೌಖಿಕವಾಗಿ ಅಭಿಪ್ರಾಯಪಟ್ಟರು ಎಂದು ವರದಿಯಾಗಿರುವ ಅವರ ಎರಡು ಮಾತು ಮಾಧ್ಯಮಗಳಲ್ಲಿ ಹೀಗೆ ವರದಿಯಾಗಿವೆ, ಒಂದು: “ಮಲ್ಲಿಕಾ ಘಂಟಿಯವರು ಬಳಸಿರುವ ಪದಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹೀಗೆಂದರೆ ಏನರ್ಥ. ರಾಮಾಯಣ ಮತ್ತು ಮಹಾಭಾರತ ಓದಿದವರೆಲ್ಲಾ ದೌರ್ಜನ್ಯ ಎಸಗುತ್ತಾರೆಯೇ. ಅವರೇನು ದೋಷಿಗಳೇ. ಇಂತಹ ಮಾತುಗಳನ್ನು ಆಡುವುದು ತರವಲ್ಲ. ಪ್ರತಿಯೊಬ್ಬರೂ ಬೇರೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು.” ಎರಡು: “ಮಲ್ಲಿಕಾ ಘಂಟಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಕಡಿಮೆ ಮಾತನಾಡಬೇಕು. ಒಂದೊಮ್ಮೆ ಮಾತನಾಡಿದರೂ ಜವಾಬ್ದಾರಿಯಿಂದ ನುಡಿಯಬೇಕಾಗುತ್ತದೆ. ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅದರಲ್ಲೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಮಾಜದ ಸಾಮರಸ್ಯಕ್ಕೆ ಪೆಟ್ಟು ಬೀಳುವಂತಹ ಹೇಳಿಕೆ ನೀಡಬಾರದು.”

ನ್ಯಾಯಾಲಯದ ವಾದ-ವಿವಾದ, ಅದರ ಪ್ರತಿಫಲವಾಗಿ ಬರುವ ತೀರ್ಪು ಇಂತಹ ಕಾನೂನಾತ್ಮಕ ಅಂಶಗಳ ಹೊರತು ಈ ಪ್ರಕರಣ ಎತ್ತುತ್ತಿರುವ ಕೆಲವು ಸೈದ್ಧಾಂತಿಕ ಪ್ರಶ್ನೆಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ನ್ಯಾಯಾಲಯದ ಮೇಲೆ ನಾವು ಹೊಂದಿರಲೇಬೇಕಾಗಿರುವ ಗೌರವವನ್ನು ಇಟ್ಟುಕೊಂಡೇ ಈ ಸಮಸ್ಯೆಗಳನ್ನು ಚರ್ಚಿಸುವುದು ನಾಡಿನ ಸಾಂಸ್ಕೃತಿಕ ವೈಚಾರಿಕತೆಯ ಬೆಳವಣಿಗೆಯ ದೃಷ್ಟಿಯಿಂದ ಬಹುಮುಖ್ಯ ಸಂಗತಿಯಾದುದರಿಂದ ಅದನ್ನು ಇಲ್ಲಿ ಆದ್ಯತೆ ನೀಡಿ ಕೈಗೆತ್ತಿಕೊಳ್ಳಲಾಗುತ್ತಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳುವ ಮೊದಲ ಮತ್ತು ಬಹುಮುಖ್ಯ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತಗಳಂತಹ ಅದರಲ್ಲಿಯೂ ಬಹಳಷ್ಟು ಭಿನ್ನ ವ್ಯಾಖ್ಯಾನಗಳನ್ನು ಹೊಂದಿರುವ ಸಾಂಸ್ಕೃತಿಕ ಪಠ್ಯಗಳ ಮೇಲೆ ಮಾತನಾಡುವಾಗ ಬೇರೆಯವರ ಅಭಿಪ್ರಾಯಕ್ಕೆ ಧಕ್ಕೆಯಾಗದಂತೆ ಮಾತನಾಡುವುದು ವಾಸ್ತವದಲ್ಲಿ ಸಾಧ್ಯವಿದೆಯೇ ಎಂಬುದು. ವೈಯಕ್ತಿಕ ಚಾರಿತ್ರ್ಯವಧೆ, ಮಾನಹಾನಿ, ವ್ಯಕ್ತಿತ್ವ ಘನತೆ ಇಂತಹ ವಿಷಯಗಳಲ್ಲಿ ಬೇರೆಯವರ ಭಾವನೆಗಳಿಗೆ ಧಕ್ಕೆ ಯಾಗದಂತೆ ನಡೆದುಕೊಳ್ಳಲು ಎಲ್ಲರಿಗೂ ಸಾಧ್ಯವಿದೆ. ಹಾಗೆ ನಡೆದುಕೊಳ್ಳಬೇಕು ಕೂಡ. ಆದರೆ ಇದು ಸಾಂಸ್ಕೃತಿಕ ಪಠ್ಯಗಳ ಚರ್ಚೆಯ ಸಂದರ್ಭದಲ್ಲಿ ಪಾಲಿಸಲು ಅಸಾಧ್ಯವಾದ ಸಂಗತಿ ಎಂಬುದನ್ನು ನಾವು ಗಮನಿಸಬೇಕು. ಅದರಲ್ಲೂ ರಾಮಾಯಣ ಮತ್ತು ಮಹಾಭಾರತಗಳಂತಹ ಬಹು ವಿವಾದಾತ್ಮಕ ಕೃತಿಗಳ ಬಗ್ಗೆ ಹೇಳುವಾಗ ಯಾರಿಗೂ ಬೇಸರವಾಗದಂತೆ ಅಥವಾ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ಮಾತನಾಡುವುದು ಹೇಗೆ ಸಾಧ್ಯ? ಈ ಬಗ್ಗೆ ಸಹಜವಾಗಿ ಉಂಟಾಗುವ ಅಭಿಪ್ರಾಯಭೇಧಗಳನ್ನೇ ಅನಗತ್ಯವಾಗಿ ವಿವಾದವನ್ನಾಗಿ ಪರಿವರ್ತಿಸುವವರನ್ನು ತಡೆಯುವುದು ಈ ರೀತಿಯಲ್ಲಿ ಸಾಧ್ಯವೇ? ಒಂದು ವೇಳೆ ಆಡಳಿತ ವ್ಯವಸ್ಥೆಯು ಕೆಲವು ಪುಸ್ತಕಗಳನ್ನು ಪಟ್ಟಿಮಾಡಿ ಅವುಗಳ ಬಗ್ಗೆ `ಏನನ್ನೂ ಮಾತನಾಡಕೂಡದು’ ಎಂದೋ ಅಥವಾ ಅವುಗಳ ಬಗ್ಗೆ ಇಂಥದ್ದೇ ಅಭಿಪ್ರಾಯ `ಅಧಿಕೃತ’ ಮತ್ತು ಆ ಅಭಿಪ್ರಾಯವನ್ನು ಹೊರತು ಪಡಿಸಿದ ಇತರ ಅಭಿಪ್ರಾಯಗಳನ್ನು `ಅನಧಿಕೃತ’ ಎಂದು ಘೋಷಿಸಿಯೋ ಶಾಸನವನ್ನೇನಾದರೂ ಮಾಡಿದರೆ ಇಂತಹ ವಿವಾದಗಳನ್ನು ತಡೆಯಬಹುದೇನೋ. ವಾಸ್ತವದಲ್ಲಿ ಅವೆಲ್ಲ ಸಾಧ್ಯವಿಲ್ಲದ ಸಂಗತಿಗಳು.  

ಸರಿ, ಇಂತಹ ಪಠ್ಯಗಳ ಬಗ್ಗೆ ಯಾರಾದರೂ ಏನಾದರೂ ಮಾತನಾಡಿದಾಗ ಕೆಲವರ ಭಾವನೆಗಳಿಗೆ ಏಕೆ ಧಕ್ಕೆಯಾಗಬೇಕು? ಅವರ ಭಾವನೆಗಳಿಗೆ ಧಕ್ಕೆ ಎಂಬ ಕಾರಣಕ್ಕೆ ಅವುಗಳ ಮೇಲೆ ಅವರು ಒಪ್ಪುವ ಅಭಿಪ್ರಾಯವನ್ನೇ ಎಲ್ಲರೂ ಹೊಂದಿರಲು ಸಾಧ್ಯವಿದೆಯೇ? ಅಷ್ಟಕ್ಕೂ ಆ ಪಠ್ಯಗಳು ಹೀಗೆ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಅಹವಾಲು ಸಲ್ಲಿಸುವವರ ಖಾಸಗೀ ಆಸ್ತಿಗಳೇನಲ್ಲ. ಅವು ಈ ನಾಡಿನ ಸಮಸ್ತ ಜನರ ಕೂಡುಆಸ್ತಿಗಳು. ಆ ಆಸ್ತಿಗಳ ಮೇಲಿನ ಜವಾಬ್ದಾರಿ, ಹಕ್ಕು, ಅವುಗಳ ಬಗೆಗಿನ ಜಗಳ ಎಲ್ಲವೂ ಸಾಮೂಹಿಕವಾಗಿಯೇ ಇರುತ್ತವೆಯೆಂದು ನಾವು ತಿಳಿಯಬೇಕಾಗುತ್ತದೆ. ಆ ಕೃತಿಗಳನ್ನು ಹೊಗಳುವ ಹಕ್ಕು ಇದೆ ತೆಗಳುವ ಹಕ್ಕು ಇಲ್ಲ ಎನ್ನುವುದಾದರೆ ಅವನ್ನು ಹೊಗಳುವವರ ಖಾಸಗೀ ಆಸ್ತಿಯಾಗಿ ಪರಿಗಣಿಸದಂತಾಗುವುದಿಲ್ಲವೇ? ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳ ವಿಷಯದಲ್ಲಿ ವಿವಾದ ಉಂಟಾಗಲು ಬಹುಮುಖ್ಯ ಕಾರಣ ಈ ಕೃತಿಗಳಿಗೆ ಧಾರ್ಮಿಕ ಆಯಾಮ ಇರುವುದಾಗಿದೆ. ಕೆಲವರು ಈ ಕೃತಿಗಳ ಬಗ್ಗೆ `ಪೂಜ್ಯ’ಭಾವನೆ ಬೆಳಸಿಕೊಂಡಿರುತ್ತಾರೆ.  ನಾವು ಯಾವುದಾದರೂ ಒಂದು ಗ್ರಂಥದ ಬಗ್ಗೆ ಹೀಗೆ `ಪೂಜ್ಯ’ ಭಾವನೆ ಬೆಳಸಿಕೊಂಡರೆ ಆ ಗ್ರಂಥದ ಬಗ್ಗೆ ಟೀಕೆ ಇರಲಿ ಕನಿಷ್ಠ ವಿಮರ್ಶೆಯನ್ನೂ ಆಲಿಸುವ ಸೌಜನ್ಯ ತೋರದ ಹಟಮಾರಿಗಳಾಗಿಬಿಡುತ್ತೇವೆ.

ಕುವೆಂಪು ಹಾಗಾಗಿಯೇ, “ಯಾವೊಂದು ಗ್ರಂಥವೂ ಪೂಜನೀಯವಾಗಬಾರದು. ಎಲ್ಲರೂ ಎಲ್ಲ ಒಳ್ಳೆಯ ಗ್ರಂಥಗಳಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ತಮ್ಮದೇ ವಿಚಾರವನ್ನು ಕಟ್ಟಿಕೊಳ್ಳಬೇಕು” ಎಂಬ ಅಭಿಪ್ರಾಯವನ್ನು ಎಂದು ತಮ್ಮ ಕೊನೆಗಾಲದ ವಿಶ್ವಮಾನವ ಸಂದೇಶದಲ್ಲಿ ಹೇಳಿದ್ದಾರೆ. `ಧರ್ಮವು ಗುಂಪು ಕಟ್ಟುವ ವಿಷಯವಾಗಬಾರದು’ ಎಂಬ ಅವರ ವಿಚಾರಧಾರೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ನಮ್ಮ ಇಂದಿನ ಸಮಾಜಕ್ಕೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದನ್ನು ನಾವಿಂದು ಆಲೋಚಿಸಬೇಕಿದೆ. ಈ ರಾಮಾಯಣ ಮಹಾಭಾರತ ನಮ್ಮ ಬಹುಮುಖ್ಯ ಸಾಂಸ್ಕೃತಿಕ ಪಠ್ಯಗಳಾಗಿರುವುದರಿಂದ ಅವುಗಳನ್ನು ಓದುವ, ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವ, ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕಾದದ್ದು ಅತ್ಯಂತ ಅವಶ್ಯ. ಇದು ಅಭಿಪ್ರಾಯ ವ್ಯಕ್ತಪಡಿಸುವವರ ಸ್ವಾತಂತ್ರ್ಯ ಮಾತ್ರವಲ್ಲ ಕೃತಿಗಳ ಸ್ವಾತಂತ್ರ್ಯ ಕೂಡ ಹೌದು. ಏಕೆಂದರೆ ಇವೆಲ್ಲ ಬೌದ್ಧಿಕ ಚರ್ಚೆಯ ಸಂಗತಿಗಳು. ಬೌದ್ಧಿಕ ಚರ್ಚೆಗಳಲ್ಲಿ ವೈಚಾರಿಕ ಸಂಘರ್ಷ ಎಂಬುದು ಅತ್ಯಂತ ಸಾಮಾನ್ಯ ಸಂಗತಿ. ಆ ಸಂಘರ್ಷಗಳು ಆ ಕೃತಿಗಳನ್ನು ಒರೆಗೆ ಹಚ್ಚುವ ಮೂಲಕ ಅವುಗಳು ನಮ್ಮ ಕಾಲಕ್ಕೆ ಔಟ್ ಡೇಟೆಡ್ ಆಗದಂತೆ ಜೀವಂತವಾಗಿಟ್ಟುಕೊಳ್ಳುವ ಬಹುಮುಖ್ಯ ಕಾರ್ಯಗಳೂ ಆಗಿರುತ್ತವೆ.

ಹಾಗಾಗಿ ಇಲ್ಲಿ ನಾವು ಭಾವನೆಗಳಿಗೆಂತ ಸಹನೆಗೆ ಆದ್ಯತೆ ನೀಡಬೇಕಾಗುತ್ತದೆ. ಇಂತಹ ವಿಷಯಗಳಲ್ಲಿ ಯಾರಿಗೇ ಆಗಲಿ ತನ್ನಾಭಿಪ್ರಾಯದೊಂದಿಗೆ ಭಿನ್ನಾಭಿಪ್ರಾಯವನ್ನೂ ಕೇಳುವ ಸಹನೆ ಇಲ್ಲದಿದ್ದರೆ ವಿವಾದವಾಗುವುದು ಅತ್ಯಂತ ಸಹಜವಾದದ್ದು.  ಈ ಕೃತಿಗಳನ್ನು ತೆಗಳುವವರನ್ನು ಕಂಡು ಅವನ್ನು ಹೊಗಳುವವರ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಹೊಗಳುವವರನ್ನು ಕಂಡು ತೆಗಳುವವರ ಭಾವನೆಗಳಿಗೂ ಧಕ್ಕೆಯಾಗುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಆದ್ದರಿಂದ ಹೊಗಳುವವರು ಮತ್ತು ತೆಗಳುವವರು ಇಬ್ಬರೂ ಪರಸ್ಪರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳದಿದ್ದರೂ ಆಲಿಸುವ, ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದೊಂದೆ ಇದಕ್ಕಿರುವ ಸಮರ್ಪಕ ಪರಿಹಾರ.

ಇನ್ನು ಎರಡನೆಯ ಪ್ರಶ್ನೆ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಹಿಂಸೆಯನ್ನು ಪ್ರಚೋದಿಸುವ ಕೃತಿಗಳಾಗಿಲ್ಲವೇ ಎಂಬುದು. ಇದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ನಮಗೆ ಸಧ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಎರಡು ಅಂಶಗಳು ಸ್ಪಷ್ಟವಾಗುತ್ತಿವೆ: 1) ಇದು ರಾಮಾಯಣ ಮಹಾಭಾರತಗಳಂತಹ ಬಹಳಷ್ಟು ವೈವಿಧ್ಯಮಯವೂ ಪರಸ್ಪರ ವಿರುದ್ಧ ವ್ಯಾಖ್ಯಾನಗಳೂ ಗುರಿಯಾಗಿರುವ ಸಾಂಸ್ಕೃತಿಕ ಪಠ್ಯಗಳ ಮೇಲಿನ ವಿದ್ವಾಂಸರೊಬ್ಬರ ಅಭಿಪ್ರಾಯಕ್ಕೆ ಸಂಬಂಧಿಸಿದ ಪ್ರಕರಣ. 2) `ಅವುಗಳನ್ನು (ರಾಮಾಯಣ ಮತ್ತು ಮಹಾಭಾರತ) ಓದುವವರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಿರುತ್ತದೆ’ ಎಂಬ ಮಲ್ಲಿಕಾ ಘಂಟಿ ಅವರ ಹೇಳಿಕೆಯಲ್ಲಿ ಇಲ್ಲದ `ಎಲ್ಲರೂ’ ಎಂದು ಅರ್ಥಕೊಡುವ ಪದ ನ್ಯಾಯಮೂರ್ತಿಗಳ ಈ ಬಗೆಗಿನ ಅಭಿಪ್ರಾಯದಲ್ಲಿ ಸೇರಿಕೊಂಡಿದೆ. (ಓದಿದವರೆಲ್ಲಾ). ಹೀಗಾಗಿ ಘಂಟಿಯವರ ಹೇಳಿಕೆ `ಈ ಕಾವ್ಯಗಳು ಹಿಂಸೆಯನ್ನು ಪ್ರಚೋದಿಸುತ್ತವೆ’ ಎಂಬ ಸಾಮಾನ್ಯ ಹೇಳಿಕೆಯಾಗಿರಬಹುದೇ ಹೊರತು `ಅವನ್ನು ಓದಿದ ಎಲ್ಲರೂ ಹಿಂಸಾ ಪ್ರವೃತ್ತಿ ಬೆಳಸಿಕೊಳ್ಳುತ್ತಾರೆ’ ಎಂದಿರಲಾರದು ಎಂಬುದು ನನ್ನ ಅನಿಸಿಕೆ.

ಹೀಗೆ ನನ್ನ ಅನಿಸಿಕೆಯಂತೆ ಅವರ ಹೇಳಿಕೆಯ ಹಿಂದಿನ ಧ್ವನಿ, `ರಾಮಾಯಣ ಮಹಾಭಾರತಗಳು ಹಿಂಸೆಯನ್ನು ಪ್ರತಿನಿಧಿಸುತ್ತವೆ’ ಎಂಬುದೇ ಆಗಿದ್ದಲ್ಲಿ ಅದನ್ನು ಸುಳ್ಳು ಎನ್ನುವ ಧೈರ್ಯ ಯಾರಿಗೆ ಇದೆ ಎಂಬುದು ಇಲ್ಲಿನ ಮುಖ್ಯ ಪ್ರಶ್ನೆ.  ರಾಮಾಯಣ ಮತ್ತು ಮಹಾಭಾರತ ಎರಡೂ ಹೇಳಿ ಕೇಳಿ ಯುದ್ಧಕಾವ್ಯಗಳು. ಭಗವದ್ಗೀತೆ ಯುದ್ದಕ್ಕೆ ಹೆದರಿದ ಅರ್ಜುನನನ್ನು ಕರ್ತವ್ಯದ ಹೆಸರಿನಲ್ಲಿ ಯುದ್ಧಮಾಡಲು ಹುರುದುಂಬಿಸಿ ಬಂಧುಬಳಗವನ್ನು ಕೊಲ್ಲಲು ಹಚ್ಚಿದ ಕೃತಿ. ಭಾರತದ ಮಾತ್ರವಲ್ಲ ಜಗತ್ತಿನ ಬಹುತೇಕ ಮಹಾಕಾವ್ಯಗಳ ಪ್ರಧಾನ ರಸ ಎರಡೇ ಎಂಬುದು ಬಹಳಷ್ಟು ಜನ ವಿದ್ವಾಂಸರ ಅಭಿಪ್ರಾಯ. ಅವೆಂದರೆ ಒಂದು ಶೃಂಗಾರ ಇನ್ನೊಂದು ವೀರ! `ವೀರ’ಎಂಬುದನ್ನು ಸಾಭೀತುಮಾಡುತ್ತಿದ್ದಂತಹ ಸಂಗಂತಿಗಳೇ `ಕೊಲೆ ಮತ್ತು ಹಿಂಸೆ’ಗಳು. ಇವೇ ಆಗ ಈ `ವೀರತ್ವ’ಕ್ಕೆ ಮಾನದಂಡಗಳಾಗಿದ್ದವು.  ಆ ಕಾಲಘಟ್ಟ ಯುದ್ಧಪ್ರಧಾನವಾದ ಕಾಲಘಟ್ಟ. ಹಾಗಾಗಿ ಕೊಲೆ ಮತ್ತು ಹಿಂಸೆ ಅಲ್ಲಿ ಅಪರಾಧವಾಗಿರಲಿಲ್ಲ. ಹೆಚ್ಚೆಚ್ಚು ಜನರನ್ನು ಕೊಂದ ರಾಜನನ್ನು ನಾವು ಮಹಾರಾಜ ವೀರಾಧಿವೀರ ಎಂದು ಹೊಗಳಿ ಗೌರವಿಸುತ್ತಲೇ ಬಂದಿದ್ದೇವೆ. ಅದು ಆ ಕಾಲಘಟ್ಟದ ಒಪ್ಪಿತ ವಿಚಾರಧಾರೆ!  ಈಗ ನಾವು `ಕೊಲೆ’ ಮತ್ತು `ಹಿಂಸೆ’ಗಳು `ಅಪರಾಧ’ ಎಂದು ಪರಿಗಣಿತವಾಗುತ್ತಿರುವ `ಪ್ರಜಾಪ್ರಭುತ್ವ’ದ ಕಾಲಘಟ್ಟದಲ್ಲಿದ್ದೇವೆ. ತೇಜಸ್ವಿ ಯಾವುದೋ ಒಂದು ಸಂದರ್ಶನದಲ್ಲಿ ಹೇಳಿದಂತೆ, “ಯಾವುದೋ ಕಾಲಘಟ್ಟದ ಮೌಲ್ಯಗಳನ್ನು ಪ್ರತಿಪಾದಿಸಲು ರಚನೆಯಾದ ಕೃತಿಗಳನ್ನು ಇನ್ನಾವುದೋ ಕಾಲಘಟ್ಟದಲ್ಲಿ ಯಥಾವತ್ತಾಗಿ ಸ್ವೀಕರಿಸುವುದು ಮೂರ್ಖತನ” ಆಗಬಹುದು. ಇವೆಲ್ಲ ದೇಶ ಕಾಲಗಳ ಪಲ್ಲಟದಲ್ಲಿ ಕೃತಿಯೊಂದರ ಮೌಲ್ಯವಿವೇಚನೆಯ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು.

ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಹಿಂಸೆಯನ್ನು ಪ್ರಚೋಧಿಸುವ ಭಾಗಗಳು ಎಷ್ಟೊಂದು ದೊಡ್ಡ ಮಟ್ಟದಲ್ಲಿವೆ ಎಂಬುದನ್ನು ಅವುಗಳನ್ನು ಒಂದುಬಾರಿ ಓದಿದವರೂ ಕೂಡ ಅವುಗಳ ಬಾಹುಳ್ಯವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಹೀಗಿದ್ದೂ ಅವನ್ನು `ಅಹಿಂಸೆಯನ್ನು ಪ್ರತಿಪಾದಿಸುವ ಕೃತಿಗಳು’ ಎಂದು ಯಾರಾದರೂ ಕರೆದರೆ ಅದು ಆ ಕೃತಿಗಳ ಆಶಯಕ್ಕೆ ಮಾಡುವ ಅವಮಾನವೇ ಆದೀತು. ವಾಲ್ಮೀಕಿ ರಾಮಾಯಣವನ್ನೇ ಉದಾಹರಿಸುವುದಾದರೆ ಅದು ಪ್ರತಿಪಾದಿಸುವ ಹಿಂಸೆಗೆ ತತ್ತರಿಸಿಹೋದ ಕವಿ ಕುವೆಂಪು ಇಡೀ ರಾಮಾಯಣವನ್ನು ಅಹಿಂಸೆಯ ಪ್ರತಿಪಾದನೆಯ ಮಹಾಕಾವ್ಯವನ್ನಾಗಿ ರೂಪಿಸಲು ಎಷ್ಟೆಲ್ಲ ಹೆಣಗಿದರು ಎಂಬುದನ್ನು ಗಮನಿಸಬೇಕು. ತಮ್ಮ ಕಾವ್ಯದ ಆರಂಭದಲ್ಲಿಯೇ ಕ್ರೌಂಚಪಕ್ಷಿಯನ್ನು ಬಾಣಬಿಟ್ಟು ಹೊಡೆದುರುಳಿಸಿದ ನಿಷಾದನಿಗೆ, `ಮಾಣ್ ನಿಷಾದನೆ ಮಾಣ್/ ಕೊಲೆ ಸಾಲ್ಗುಮಯ್ಯೋ ಮಾಣ್’’ ಎಂದು ಅವನಿಗೆ `ಶಿಕ್ಷೆ’ ಕೊಡದೇ `ಶಿಕ್ಷಣ’ವನ್ನು ಕೊಟ್ಟು ಆ ಹಕ್ಕಿಯನ್ನು ಆರೈಕೆಮಾಡಿ ಬದುಕಿಸುವ ಮೂಲಕ ತನ್ನದು ಭಿನ್ನ ನಡೆ ಎಂದು ತೋರಿಸುವ ಕುವೆಂಪು,  “ಕೊಲೆಯ ಸಾಹಸದ ಕಥೆ ಜನರಿಗೆ ಸಹಜವಾಗಿ ರುಚಿಸುತ್ತದೆ ಆದರೆ ಕೊಲೆಯ ಕಥೆ ಬದಲು ರಾಮನ ಮನದ ಕಲೆಯ ಕಥೆಯನ್ನು ರುಚಿಸುವಂತೆ ಕೃತಿರಚಿಸುವ ಸಾಮರ್ಥ್ಯವನ್ನು ಕೊಡು” ಎಂದು ಸರಸ್ವತಿಯಲ್ಲಿ ಯಾಕೆ ಬೇಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಂಡರೆ ವಾಲ್ಮೀಕಿ ರಾಮಾಯಣದಲ್ಲಿನ ಹಿಂಸೆಯ ಬಾಹುಳ್ಯ ನಮ್ಮ ಅರಿವಿಗೆ ಬಾರದೇ ಇರದು.

ಹೀಗೆ ಹಿಂಸೆಯ ವಾಲ್ಮೀಕಿ ರಾಮಾಯಣವನ್ನು ಅಹಿಂಸೆಯ ರಾಮಾಯಣವನ್ನಾಗಿ ಮುರಿದು ಕಟ್ಟುವ ಸಾಹಸ ಮಾಡಿದ  ಕುವೆಂಪು ಅವರಿಗೆ  ಕೂಡ ತಮ್ಮ ಕಾವ್ಯದಲ್ಲಿ ಯುದ್ಧವನ್ನು ವರ್ಜಿಸಲು ಅವರಿಗೆ  ಆಗಲಿಲ್ಲ ಎಂಬ ಸಂಗತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಯುದ್ಧವನ್ನು ತಮ್ಮ ಕಾವ್ಯದಿಂದಲೇ ವರ್ಜಿಸಿ ಕುವೆಂಪು ಅಹಿಂಸೆಯ ಪ್ರತಿಪಾದನೆ ಮಾಡಬೇಕಿತ್ತು ಎಂದು ಯಾವ ಓದುಗನಿಗೂ ಅಲ್ಲಿ ಅನ್ನಿಸುವುದಿಲ್ಲ. ಹಾಗೇ ಮಾಡಿದ್ದರೆ ಅದು ರಾಮಾಯಣವಾಗದೇ ಇನ್ನಾವುದೋ ಕಾವ್ಯವಾಗುತ್ತಿತ್ತು. ಈ ಮಾತು ಯಾಕೆ ಎಂದರೆ ಹಿಂಸೆಯನ್ನು ರಾಮಾಯಣ ಮಹಾಭಾರತಗಳಿಂದ ತೆಗೆಯುವುದು ಎಂದರೆ ಅವುಗಳ ಜೀವತೆಗೆದಂತೆ! ಏಕೆಂದರೆ ರಕ್ತ ಹರಿಯದ ರಾಮಾಯಣ ಮತ್ತು ಮಾಂಸ ಸುರಿಯದ ಮಹಾಭಾರತ ಎರಡೂ ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿಗಳು!! ಕುವೆಂಪು ಒಬ್ಬ ಅಸಾಮಾನ್ಯ ಪ್ರತಿಭಾಶಾಲಿ ಕವಿಯಾದ ಕಾರಣ ತಮ್ಮ ಕಾವ್ಯದಲ್ಲಿ ಸಾವಿರಾರು ಸಾವು ನೋವುಗಳನ್ನು ತೋರಿಸಿಯೂ, ಈ ಹರಿದ ರಕ್ತವನ್ನೇ ನೀರಾಗಿ ಸುರಿದ ಮಾಂಸದ ಮುದ್ದೆಯನ್ನೇ ಗೊಬ್ಬರ ಮಾಡಿಕೊಂಡು, ಈ `ರಕ್ತ ಹರಿಯುವಿಕೆ’ ಮತ್ತು `ಮಾಂಸ ಸುರಿಯುವಿಕೆ’ಯ ಭಯಂಕರತೆಯ ವಿರೋಧಿ ಅರಿವಿನ ಸಸಿಗಳು ಬೆಳೆಯುವಂತೆ ಮಾಡಿ ಕಾವ್ಯವನ್ನು ಮುರಿದುಕಟ್ಟುವಲ್ಲಿ ಯಶಸ್ವಿಯಾದರು. ಇಂಥದೇ ಅನೇಕ ಉದಾಹರಣೆಗಳನ್ನು ನಾವು ಮಹಾಭಾರತದ ಬಗ್ಗೆಯೂ ಕೊಡಬಹುದಾಗಿದೆ. ಈ ಸತ್ಯವನ್ನು ಸಂಬಂಧಪಟ್ಟವರೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಘಂಟಿಯವರ ಈ ಪ್ರಕರಣದಲ್ಲಿ `ರಾಮಾಯಣ’ ಮತ್ತು `ಮಹಾಭಾರತ’ ಎಂಬ ಪದಗಳನ್ನು ಪ್ರಸ್ತಾಪಿಸಲಾಗಿದೆ. ಯಾವ ರಾಮಾಯಣ ಯಾವ ಮಹಾಭಾರತ ಎಂದು ಉಲ್ಲೇಖಿಸಲ್ಪಟ್ಟಿರಲಿಕ್ಕಿಲ್ಲ. ಹಾಗಿದ್ದರೆ ಯಾವ ರಾಮಾಯಣ ಮತ್ತು ಯಾವ ಮಹಾಭಾರತ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಂಡೇ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನಮಗೆ ರಾಮಾಯಣ ಎಂಬುದು ಒಂದಿಲ್ಲ. ಮಹಾಭಾರತ ಎಂಬುದೂ ಒಂದಿಲ್ಲ. ನೂರಾರು ರಾಮಾಯಣಗಳೂ ಬಹುದೊಡ್ಡ ಸಂಖ್ಯೆಯ ಮಹಾಭಾರತಗಳೂ ನಮ್ಮಲ್ಲಿವೆ. ರಾಮಾಯಣದ ವಿಚಾರದಲ್ಲಿ ಬೌದ್ಧ ರಾಮಾಯಣಗಳು, ಜೈನರಾಮಾಯಣಗಳು, ವೈದಿಕ ರಾಮಾಯಣಗಳು ಮತ್ತು ಜನಪದ ರಾಮಾಯಣಗಳು ಎಂದು ಬಹುಮುಖ್ಯವಾಗಿ ನಾಲ್ಕು ಧಾರೆಯಲ್ಲಿ ವಿಭಾಗಿಸಬಹುದಾದ ಈ ರಾಮಾಯಣಗಳ ಗಾತ್ರ, ಪಾತ್ರ, ಕಥೆ, ಪ್ರತಿಪಾದಿಸುವ ಮೌಲ್ಯ ಇವುಗಳ ನಡುಗೆ ಆಡು-ಆನೆಯಷ್ಟು ಅಂತರವಿದೆ. ಅನೇಕ ಕಡೆ ಇವು ಪ್ರತಿಪಾದಿಸುವ ಮೌಲ್ಯಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿಯೂ ಇವೆ. ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ರಾಮ ಸೀತೆ ಅಣ್ಣ ತಂಗಿಯರು ಎಂದು ಹೇಳುವು ರಾಮಾಯಣಗಳೂ ನಮ್ಮಲ್ಲಿವೆ! ಜೈನ ರಾಮಾಯಣವೊಂದರಲ್ಲಿ ರಾಮ, ಲಕ್ಷ್ಮಣ, ರಾವಣ ಇವರೆಲ್ಲ ನೆಂಟರು! ಸೀತೆ ರಾವಣನ ಪತ್ನಿ ಮಂಡೋದರಿಯ ಗರ್ಭಸಂಜಾತೆ! ರಾವಣನನ್ನು ಕೊಲ್ಲುವವ ಲಕ್ಷ್ಮಣನೇ ಹೊರತು ರಾಮನಲ್ಲ!! ಮಹಾಭಾರತದ ಬಗ್ಗೆ ಇಷ್ಟು ವೈವಿಧ್ಯತೆ ಇಲ್ಲದಿದ್ದರೂ ಕಥೆಯ ಭಿನ್ನರೂಪಗಳ ಅನೇಕ ಪ್ರತಿಗಳು ದೊರೆತಿರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ.

ಹೀಗೆ ವೈವಿಧ್ಯತೆ ಮತ್ತು ಹತ್ತು ಹಲವು ವಿಷಯಗಳಲ್ಲಿ ಅನಿರ್ಧಿಷ್ಟತೆಯನ್ನು ಒಳಗೊಂಡ ಈ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯಾವ ಯಾವ ರಾಮಾಯಣ ಮತ್ತು ಮಹಾಭಾರತವಗಳನ್ನು ಕೇಂದ್ರೀಕರಿಸಿ ಈ ಪ್ರಕರಣದಲ್ಲಿ ಚರ್ಚೆ ನಡೆಯುತ್ತಿದೆಯೋ ಗೊತ್ತಿಲ್ಲ. ದೂರದಿಂದ ನೋಡಿ ಊಹಿಸುವುದಾದರೆ ಇದು ವೈದಿಕ ರಾಮಾಯಣಗಳ ಗುಂಪಿನಲ್ಲಿ ಬರುವ `ವಾಲ್ಮೀಕಿ ರಾಮಾಯಣ’ವನ್ನೂ ಮತ್ತು `ವ್ಯಾಸಮಹಾಭಾರತ’ವನ್ನೂ ಕೇಂದ್ರೀಕರಿಸಿ ನಡೆಯುತ್ತಿರುವಂತೆ ತೋರುತ್ತಿದೆ. ಹೀಗಾಗಿ ಈ ಕೃತಿಗಳ ಬಗ್ಗೆಯಾದರೂ ನಮ್ಮಲ್ಲಿ ಒಂದು ನಿರ್ಧಿಷ್ಟತೆ ಇದೆಯೇನೋ ಅಂದರೆ ಅದೂ ಇದ್ದಂತಿಲ್ಲ. ಅವುಗಳ ಗಾತ್ರ ಕಾಲಗಳ ಬಗ್ಗೆ ರಚನಾಕಾರರ ಬಗ್ಗೆ ಬಹುದೊಡ್ಡ ವಿದ್ವಾಂಸರೇ ನಾವು ಆಶ್ಚರ್ಯಪಡುವ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಗಮನಿಸಬಹುದು:

ವಿಶ್ವಕವಿ ರವೀಂದ್ರ ನಾಥ ಟ್ಯಾಗೋರ್ ಅವರು, “ನಿಜವಾಗಿಯೂ `ವ್ಯಾಸ’ ಅಥವಾ `ವಾಲ್ಮೀಕಿ’ ಎಂಬುದು ಯಾರ ಹೆಸರೂ ಆಗಿರಲಿಲ್ಲ” ಎಂದು ಹೇಳುತ್ತಾರೆ. `ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಪ್ರಕಾರ ಈ ಎರಡು ಮಹಾಕಾವ್ಯಗಳ ಅನುಕ್ರಮಿಕ ವಿಕಾಸವನ್ನೂ ಅವು ಬೆಳೆದುನಿಂತ ಬೃಹದ್ಗಾತ್ರವನ್ನೂ ನೋಡಿದ ಯಾರಿಗಾದರೂ “ಮೂಡುವ ಮೊದಲ ಅಭಿಪ್ರಾಯವೆಂದರೆ ಅದು ಒಬ್ಬ ಬರೆದ ಬರಹ ಅಲ್ಲ; ಅಷ್ಟೇ ಅಲ್ಲ ಒಂದು ತಲೆಮಾರಿನ ಬರಹಗಾರರದೂ ಅಲ್ಲ ಎಂಬುದು; ಬೇರೆ ಬೇರೆ ಪ್ರಮಾಣದ ಶಕ್ತಿಯುಳ್ಳ  ಅನೇಕ ಬರಹಗಾರರ ಕಲಬೆರಕೆ ಅದು ಎಂದೂ ಗೊತ್ತಾಗುತ್ತದೆ.” ನಮ್ಮ ಇನ್ನೊಬ್ಬ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು `ವಾಲ್ಮೀಕಿ’ ಮತ್ತು `ವ್ಯಾಸ’ ಎಂಬವು ನಿಜವಾಗಿಯೂ ಯಾರ ಹೆಸರೂ ಆಗಿರಲಿಲ್ಲ ಎಂಬ ಟ್ಯಾಗೋರರ ಮಾತನ್ನು ಅನುಮೋದಿಸಿ, ಈ ರೀತಿ ಅಭಿಪ್ರಾಯಪಡುತ್ತಾರೆ: “`ವಾಲ್ಮೀಕಿ’ ಎಂಬುದು ಒಂದು ಸಂಕೇತ; ಹುತ್ತಗಟ್ಟಿಕೊಂಡ ಚಿತ್ತದ ಸಂಕೇತ. `ವಾಲ್ಮೀಕಿ’ ಕೂತಲ್ಲೇ ಹುತ್ತ ಬೆಳೆಯಿತು ಎಂದರೆ, ಅದು ಆ ವ್ಯಕ್ತಿತ್ವದ ಏಕಾಗ್ರತೆಯ ಸ್ಥಿರತೆಯ ಸಂಕೇತ. ಇಂಥ ಏಕಾಗ್ರತೆಯಿಲ್ಲದೆ ರಾಮಾಯಣದಂತಹ ಮಹಾಕೃತಿ ರಚನೆಯಾಗುವುದು ಸಾಧ್ಯವಿಲ್ಲ. ಹಾಗೆಯೇ `ವ್ಯಾಸ’ ಎಂದರೆ ವಿಸ್ತಾರ; ಮಹಾಭಾರತವನ್ನೂ ಅದರ ವಿಷಯ ವಿಪುಲತೆಯನ್ನೂ ನೋಡಿದರೆ, ಜಗತ್ತಿನಲ್ಲಿ ಏನೆಲ್ಲ ಇದೆಯೋ ಅದೆಲ್ಲವೂ ಮಹಾಭಾರತದಲ್ಲಿ ಇದೆ ಎನ್ನಿಸುತ್ತದೆ. ಹೀಗಾಗಿ ಲೋಕಾನುಭವದ ಸಮಸ್ತವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಸಾಮರ್ಥ್ಯಕ್ಕೆ `ವ್ಯಾಸ’ ಎಂಬುದು ಒಂದು ಸಂಕೇತ. ಅಷ್ಟೇ ಅಲ್ಲ “ಇದೊಂದು (ರಾಮಾಯಣ) ಆರ್ಯ ದ್ರಾವಿಡರ ಸಮರದ ಕಥೆ; ಆರ್ಯರು ದಕ್ಷಿಣ ಭಾರತವನ್ನು ನಿರ್ನಾಮಗೊಳಿಸಲು ಕೈಗೊಂಡ ಸಾಹಸಯಾತ್ರೆ” ಎಂದು ಹೇಳಿದ ವಿದ್ವಾಂಸರೂ ಇದ್ದಾರೆ. ಇನ್ನು “ರಾಮಾಯಣದ ಕಥೆ ತುಂಬಾ ಚಿಕ್ಕದು ಜೊತೆಗೆ ಅದು ಸರಳವಾದ ಕತೆ ಹಾಗೂ ಅದರಲ್ಲಿ ಭಾವೋದ್ರೇಕಕಾರಿಯಾದದ್ದು ಏನೂ ಇಲ್ಲ” ಎನ್ನುವ ಅಂಬೇಡ್ಕರ್, “ಈ ಕಥೆಯಲ್ಲಿ ರಾಮನನ್ನು ಆರಾಧಿಸಲು ಪ್ರೇರೇಪಿಸುವಂಥ ಯಾವ ಅಂಶಗಳೂ ಕಾಣವು. ಅವನೊಬ್ಬ ಕರ್ತವ್ಯಪಾಲಕ ಮಗ ಅಷ್ಟೇ.” ಎಂದು ಹೇಳಿ ಭಾವನೆಗಳಿಗೆ ಧಕ್ಕೆ ಯಾಗುವ ಅಂಶಗಳನ್ನೇ ನಿರಾಕರಿಸುತ್ತಾರೆ.

ಮಹಾಭಾರತದ ಬಗ್ಗೆಯೂ ಅದರ ರಚನೆ, ಗಾತ್ರ, ಪ್ರಕ್ಷೇಪಗಳು, ಅದು ಪ್ರತಿಪಾದಿಸುವ ಮೌಲ್ಯಗಳು ಇವುಗಳನ್ನು ಕುರಿತು ಈ ರೀತಿಯ ಅನೇಕ ವಿವಾದಗಳು, ಗೊಂದಲಗಳು ಇವೆ. ಒಂದೆರಡನ್ನು  ಪ್ರಸ್ತಾಪಿಸುವುದಾದರೆ ಅದರ ರಚನೆಯ ಕಾಲ ಮತ್ತು ರಾಮಾಯಣ ಮತ್ತು ಮಹಾಭಾರತ ಇವುಗಳ ಗಾತ್ರಗಳ ಬಗ್ಗೆ ಇರುವ ಗೊಂದಲವನ್ನು ನೋಡಬಹುದು. ಆರಂಭದಲ್ಲಿ ಕೇವಲ ಎಂಟು ಸಾವಿರ ಶ್ಲೋಕಗಳಿದ್ದ `ಜಯ’ ಎಂಬ ಕೃತಿ ಅನೇಕ ಕಾಲಘಟ್ಟಗಳಲ್ಲಿ ಅನೇಕರು ಸೇರಿಸಿದ ಶ್ಲೋಕಗಳಿಂದಾಗಿ ಇಂದು ಒಂದು ಲಕ್ಷ ಶ್ಲೋಕಗಳ ಗಾತ್ರ ಮುಟ್ಟಿದೆಯಂತೆ! ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿ ಯಾವುದು ಮೊದಲು ರಚಿತವಾಯಿತು ಯಾವುದು ಅನಂತರ ರಚಿತವಾಯಿತು ಮತ್ತು ಯಾವುದು ಚಿಕ್ಕದು ಯಾವುದು ದೊಡ್ಡದು ಎಂಬುದರ ಬಗ್ಗೆ ಕೂಡ ವಿದ್ವಾಂಸರಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಇರುವ ಹತ್ತು ಹಲವು ಗೊಂದಲಮಯ ಹೇಳಿಕೆಗಳನ್ನೂ ಆಧಾರಗಳನ್ನೂ ಆಳವಾಗಿ ಅಧ್ಯಯನ ನಡೆಸಿದ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಎ. ಆರ್. ಕೃಷ್ಣಶಾಸ್ತ್ರೀ ಅವರು “ರಾಮನ ಕಥೆ ಪ್ರಾಚೀನವಾದದ್ದು. ಆದರೆ ‘ರಾಮಾಯಣ’ವು ಮಾತ್ರ `ಭಾರತವು’ ಹುಟ್ಟಿ `ಮಹಾಭಾರತ’ವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಮಧ್ಯೆ ಯಾವಾಗಲೋ ಹುಟ್ಟಿರಬೇಕೆಂದೂ ರಾಮಾಯಣವು ಹುಟ್ಟಿದ ಮೇಲೆ ಭಾರತದ ಬೆಳವಣಿಗೆ ಮುಗಿದು ಅದು ಇಂದಿನ ರೂಪವನ್ನು ತಾಳಿತೆಂದೂ ಸಾಧಾರಣವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ ರಾಮಾಯಣಕ್ಕಿಂತ ಭಾರತ ಹಳೆಯದು. ಭಾರತಕ್ಕಿಂತ ರಾಮಾಯಣ ಹಳೆಯದು” ಎಂದು ತಮಾಸೆ ಎನಿಸಬಹುದಾದ ಆದರೆ ವಾಸ್ತವದ ಅಭಿಪ್ರಾಯವನ್ನು ಬರೆಯುತ್ತಾರೆ.

ಇನ್ನು ಅದು ಪ್ರತಿಪಾದಿಸುವ ಮೌಲ್ಯದ ಬಗ್ಗೆ ಇರುವ ಒಂದು ಅಭಿಪ್ರಾಯವನ್ನು ನೋಡುವುದಾದರೆ, ಅದರ ಪಾತ್ರವೊಂದರ ಬಗ್ಗೆ ಸ್ವತಂತ್ರೋತ್ತರ ಭಾರತದ ಮಹಾನ್ ಚಿಂತಕ ಡಾ. ರಾಮ ಮನೋಹರ್ ಲೋಹಿಯಾ ಮಾಡುವ ಕಠಿಣ ವಿಮರ್ಶೆಯ ಈ ಮಾತುಗಳನ್ನು ನೋಡಬಹುದು: “ಕೃಷ್ಣ ಕಳ್ಳನಾಗಿದ್ದ, ಸುಳ್ಳುಗಾರನಾಗಿದ್ದ, ಕೊಲೆಗಾರನಾಗಿದ್ದ. ಇವುಗಳನ್ನೂ ಇನ್ನಿತರ ಪಾತಕಗಳನ್ನೂ, ಕಿಂಚತ್ ಪಶ್ಚಾತ್ತಾಪವೂ ಇಲ್ಲದೇ ಮಾಡಿದ. ತನ್ನ ಸಾಕು ತಾಯಿಯಲ್ಲಿ ಬೆಣ್ಣೆ ಕದಿಯುವುದರಿಂದ ಪ್ರಾರಂಭಿಸಿ ಮತ್ತೊಬ್ಬನ ಹೆಂಡತಿಯನ್ನು ಕದಿಯುವ ಹಂತಕ್ಕೆ ಏರಿದ.”

ಮಹಾನ್ ವಿದ್ವಾಂಸರುಗಳ ನಡುವೆಯೇ ಇಷ್ಟೊಂದು ಗೊಂದಲಗಳು ಸಂದೇಹಗಳು ಅವುಗಳ ಮೌಲ್ಯಗಳ ಬಗ್ಗೆ ಪರಸ್ಪರ ವಿರುದ್ಧಾಭಿಪ್ರಾಯಗಳು, ಇರುವ ಇಂತಹ ಪ್ರಾಚೀನ ಕೃತಿಗಳ ಬಗ್ಗೆ ಈಗಿನ ಯಾವುದೇ ವಿದ್ವಾಂಸರು ಹೇಗೆ ತಾನೆ ಒಂದೇ ರೀತಿಯ ಯಾರಿಗೂ ಬೇಸರವಾಗದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿದೆ ಎಂಬುದು ಅರ್ಥವಾಗುತ್ತಿಲ್ಲ. ಘಂಟಿ ಹೇಳಿದ ಮಾತು ಲೋಹಿಯಾ ಮಾತಿಗಿಂತ ಉಗ್ರವಾಗಿರುವಂತೆ ಏನೂ ಕಾಣುವುದಿಲ್ಲ.

ಮೂರನೆಯ ಮತ್ತು ಕೊನೆಯ ಪ್ರಶ್ನೆ ಸಾಂಸ್ಕೃತಿಕ ಪಠ್ಯವೊಂದನ್ನು ಧಾರ್ಮಿಕ ಭಾವನೆಗಳ ಪರೀಧಿಯಲ್ಲಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು. ಇತ್ತೀಚಿನ ದಿನಗಳ ವಿದ್ಯಮಾನಗಳನ್ನು ನೋಡಿದರೆ ನಾವು ಸಂವಿಧಾನವು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ವಿಶ್ಲೇಷಿಸಿಕೊಳ್ಳುವಲ್ಲಿ ಎಡವಿದ್ದೇವೆಯೇನೋ ಎನಿಸುತ್ತಿದೆ. ಒಂದು ಉದಾಹರಣೆಯ ಮೂಲಕ ಇದನ್ನು ನಾವು ವಿಸ್ತರಿಸಿಕೊಳ್ಳಬಹುದು: ಉದಾಹರಣೆಗೆ ಒಬ್ಬ ವ್ಯಕ್ತಿ ಯಾವುದೋ ಸಾರ್ವಜನಿಕ ಸ್ಥಳದಲ್ಲಿರುವ ಅವನ ಖಾಸಗೀ ಆಸ್ತಿಯಲ್ಲದ ಒಂದು ದೇವರ ಮೂರ್ತಿಯನ್ನು `ಪೂಜಿಸುತ್ತಾನೆ’ ಎಂದಿಟ್ಟುಕೊಳ್ಳೋಣ. ಇನ್ನೊಬ್ಬ ಯಾರೋ ಆ ಮೂರ್ತಿಯ ಮೇಲೆ `ಕಾಲಿಡುತ್ತಾನೆ’, ಎಂದಿಟ್ಟುಕೊಳ್ಳೋಣ. ಆಗ ಮೂರ್ತಿಯನ್ನು ಪೂಜಿಸುತ್ತಿದ್ದವನು ಸಾಮಾನ್ಯವಾಗಿ `ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ನ್ಯಾಯಾಲಯದ ಮೆಟ್ಟಿಲೇರಿದರೆ ಏನಾಗಬಹುದು ಎಂಬುದು ನಮಗೆ ಗೊತ್ತಿದೆ. ಬಹುತೇಕವಾಗಿ ಅವನ ಅಹವಾಲು ಮಾನ್ಯಮಾಡಲ್ಪಡುತ್ತದೆ. ಬಹುಶಃ ಮೂರ್ತಿಯನ್ನು ಈ ರೀತಿ `ಅಪಮಾನ’ ಮಾಡಿದ್ದಕ್ಕಾಗಿ ಅವನ ಎದುರು ಪಾರ್ಟಿಗೆ ಅಂದರೆ `ಕಾಲಿಟ್ಟವನಿಗೆ’ ಶಿಕ್ಷೆಯಾದರೂ ಆಗಬಹುದು.

ಆದರೆ “ಇಂತಹ ಮೂರ್ತಿಯನ್ನು ಪೂಜೆ ಮಾಡುವುದರಿಂದ ಮೂಡನಂಬಿಕೆ ಬೆಳೆಯುತ್ತದೆ; ದೇವರ ಮೇಲೆ ಗೌರವ ಹೆಚ್ಚಾಗಿ ಮನುಷ್ಯನ ಮೇಲೆ ಗೌರವ ಕಡಿಮೆಯಾಗುತ್ತದೆ. ಹೀಗಾಗಿ ‘ಪೂಜೆಮಾಡುವುದರಿಂದ ನನ್ನ ಭಾವನೆಗಳಿಗೆ ಧಕ್ಕೆಯಾಯಿತು’ ಎಂದು ಹೀಗೆ ಆ ಮೂರ್ತಿಯನ್ನು `ಪೂಜಿಸುವವನ’ ವಿರುದ್ಧ ಕಾಲಲ್ಲಿ ತುಳಿಯುವವನು ನ್ಯಾಯಾಲಯದ ಮೆಟ್ಟಿಲನ್ನು ಏರಿದರೆ ತೀರ್ಪು ಏನೆಂದು ಬರಬಹುದು?  ಗೊತ್ತಿಲ್ಲ. ಯಾರೂ ಹೀಗೆ ನ್ಯಾಯಾಲಯದ ಮೊರೆಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಅಂಥದ್ದೇನಾದರೂ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದರೆ “ಆ ಮೂರ್ತಿ ನಿಮ್ಮೊಬ್ಬರಲ್ಲಿ ಯಾರ ಖಾಸಗೀ ಆಸ್ತಿಯೂ ಅಲ್ಲ. ಪೂಜೆಮಾಡುವವರು ಪೂಜೆ ಮಾಡಿ; ತುಳಿಯುವವರು ತುಳಿಯಿರಿ’ ಅದು ನಿಮ್ಮ ನಿಮ್ಮ ಸ್ವಾತಂತ್ಯ. ನಿಮ್ಮ ನಿಮ್ಮ ಸ್ವಾತಂತ್ರ್ಯವನ್ನು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ ಅಷ್ಟೇ” ಎಂಬ ತೀರ್ಪು ಬರಬೇಕು ಎಂಬುದು ನಮ್ಮಂಥವರ ಅಪೇಕ್ಷೆ. ಏಕೆಂದರೆ `ಪೂಜ್ಯ’ಕ್ಕೂ `ತ್ಯಾಜ್ಯ’ಕ್ಕೂ ಸಮಾನವಾದ ಮಾನ್ಯತೆ ಇದ್ದಾಗ ಮಾತ್ರ `ಸ್ವಾತಂತ್ರ್ಯ’ ಎಂಬುದಕ್ಕೆ ಅರ್ಥ ಬರುತ್ತದೆ.

ಹೀಗೆ ಸಂವಿಧಾನ ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ನೇರವಾಗಿ ಧಾರ್ಮಿಕ ಸಂಗತಿಗಳಲ್ಲಿಯೇ ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿರುವ ನಾವು ಈ ಸ್ವಾತಂತ್ರ್ಯವನ್ನು ರಾಮಾಯಣ ಮಹಾಭಾರತಗಳಂತಹ ಸಾಹಿತ್ಯ ಕೃತಿಗಳಿಗೆ ತಗಲುಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಕು. ಈ ಬಗ್ಗೆ ಕುವೆಂಪು ಅವರ ಇನ್ನೊಂದು ಉಲ್ಲೇಖವನ್ನು ಕೊಡುವುದಾದರೆ ರಾಮಾಯಣದಲ್ಲಿನ ಹಿಂಸೆಯೂ ಸೇರಿದಂತೆ ಅನೇಕ ಸಂಗತಿಗಳನ್ನು ಒಪ್ಪದೇ ಅವೆಲ್ಲವನ್ನೂ ಬದಲಿಸುವ ಸಂಕಲ್ಪಮಾಡಿ ಹೊಸದಾದ ರಾಮಾಯಣವನ್ನು ಬರೆಯುವ ಸಂಕಲ್ಪ ಮಾಡುವ ಮೊದಲು ಅವರು ಕೂಡ ವಾಲ್ಮೀಕಿ ರಾಮಾಯಣವನ್ನು ಬಹಳ ಮೆಚ್ಚಿಕೊಂಡಿದ್ದರು. ಅದರಲ್ಲಿರುವ ಹಿಂಸೆ ಮತ್ತು ಕ್ರೌರ್ಯವನ್ನು ಗುರುತಿಸದೇ ಅದರ ರಸಮಾಧುರ್ಯಕ್ಕೆ ಮಾರುಹೋಗಿದ್ದರು: ಆ ಕಾಲಘಟ್ಟದಲ್ಲಿ ಆ ಕಾವ್ಯವನ್ನು ಕುರಿತು ಹೇಳುವಾಗಲೂ ಅವರು ಅದಕ್ಕೆ ಧಾರ್ಮಿಕತೆಯ ತಳುಕುಹಾಕಲಿಲ್ಲ ಎಂಬುದನ್ನು ನಾವು ಮರೆಯಬಾರದು ``ವಾಲ್ಮೀಕಿಯ ಮಹಾಕೃತಿ ಚರಿತ್ರೆಯಲ್ಲ; ಕಾವ್ಯ; ಆ ಚರಿತ್ರೆ ಕವಿಯ ಚಿದ್ರಂಗದಲ್ಲಿ ನಡೆದದ್ದು’ ಎನ್ನುವ ಅವರು ರಾಮಾಯಣವು ಕೇವಲ ಕವಿಯ ಕಲ್ಪನೆ ಮಾತ್ರ. ಹಾಗಾಗಿ ಅದನ್ನು `ಸಾಹಿತ್ಯ ಕೃತಿ’ಯಾಗಿ ಮಾತ್ರ ನೋಡಬೇಕೆ ಹೊರತು `ಇತಿಹಾಸದ ಪುಸ್ತಕ’ವಾಗಿ ಅಲ್ಲ ಎನ್ನುವ ತಿಳಿವಳಿಕೆಯನ್ನು ನಮಗೆ ನೀಡುತ್ತಾರೆ. ಈ ಬಗ್ಗೆ  ಇನ್ನೂ ಮುಂದುವರೆದು ಮಾತನಾಡುವ ಅವರು ವಾಲ್ಮೀಕಿಯ ಈ ರಾಮಾಯಣವನ್ನು ಕಬ್ಬಿನಕೋಲಿಗೆ ಹೋಲಿಸಿ “ಕಬ್ಬಿನ ಕೋಲಿನಲ್ಲಿ ದೊಣ್ಣೆಯತನ ಇಲ್ಲ ಎಂದಲ್ಲ. ಅದನ್ನು ಎಮ್ಮೆ ಹೊಡೆಯಲಿಕ್ಕೆ ಉಪಯೋಗಿಸಲು ಸಾಧ್ಯವಿಲ್ಲ ಎಂದೂ ಅಲ್ಲ. ಆದರೆ ಕಬ್ಬಿನ ಪ್ರಧಾನೋದ್ದೇಶ ರಸಮಾಧುರ್ಯ. ಅದರ ಮುಖ್ಯ ಸತ್ವವೂ ಅದರ ಸಹಿಯಲ್ಲಿಯೇ ನಿಷ್ಠಿತ. ಬೆಲ್ಲವೇ ಅದರ ಸತ್ಯಸ್ಯ ಸತ್ಯ” ಎನ್ನುತ್ತಾರೆ. ಅವರು ಹೇಳುವಂತೆ ರಾಮಾಯಣ ಮತ್ತು ಮಹಾಭಾರತ ಎಂಬ ಕಬ್ಬಿನ ಕೋಲನ್ನು ನಾವು ಎಮ್ಮೆ ಹೊಡೆಯಲು ಬಳಸಿಕೊಳ್ಳುವ ದಡ್ಡತನಕ್ಕೆ ಇಳಿಯಬಾರದು. ಕುವೆಂಪು ಅವರ ಈ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳುವುದಾದರೆ ಕಾವ್ಯಕೃತಿಯಾದ ರಾಮಾಯಣ, ಮಹಾಭಾರತ ಮಾತ್ರವಲ್ಲ ಯಾವುದೇ ಕೃತಿಯನ್ನು ನಾವು ಸಾಹಿತ್ಯ ಕೃತಿಯಾಗಿ ನೋಡಬೇಕೆ ಹೊರತು ಅದಕ್ಕೆ `ದೈವತ್ವ’ವನ್ನು ಆರೋಪಿಸಿ ರಂಪಮಾಡಬಾರದು.

ಕೊನೆಯ ಮಾತು: ನ್ಯಾಯಾಲಯದ ತೀರ್ವು ತಾಂತ್ರಿಕವಾಗಿ ಏನೋ ಆಗಬಹುದು ಅದು ಬೇರೆ ವಿಷಯ. ತಾತ್ವಿಕವಾಗಿ ನೋಡುವುದಾದರೆ ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಇನ್ನೊಂದು ಕಡೆ, ಈ ರಾಮಾಯಣ ಮತ್ತು ಮಹಾಭಾರತ ಕೃತಿಗಳಲ್ಲಿ ಬರುವ ಮಾತುಗಳನ್ನು ಕುರಿತು ಅವು ಒಬ್ಬ ವ್ಯಕ್ತಿಯ ಅಥವಾ ಒಂದು ಕಾಲಘಟ್ಟದ ಜನರ ಮಾತುಗಳಾಗಿರದೇ “ಒಂದು ಪರಂಪರೆಯ ಮಾತುಗಳು” ಎಂಬ ಬಹುಮುಖ್ಯವಾದ ಮಾತನ್ನು ಹೇಳುತ್ತಾರೆ. ಟ್ಯಾಗೋರರ ಈ ಮಾತಿನ ಚುಂಗನ್ನು ಹಿಡಿದೆಳೆದು ಮಾತನ್ನು ಮುಂದುವರಿಸಿ ಹೇಳಬಹುದಾದರೆ, ಮಲ್ಲಿಕಾ ಘಂಟಿ ಅವರು ಆಡಿದ ಮಾತು ಕೂಡ ಅವರೊಬ್ಬರ ಮಾತಲ್ಲ; ಅದೂ ಕೂಡ ಈ `ಪರಂಪರೆಯ ಮಾತೇ’. ಆ ಮಾತು ತಾಂತ್ರಿಕವಾಗಿ ಘಂಟಿಯವರ ಗಂಟಲಿನಿಂದ ಘಂಟಾಘೋಷವಾಗಿ ಹೊರಬಂದದ್ದು ನಿಜವಾದರೂ ಅದು ಅವರೊಬ್ಬರ ಮಾತಲ್ಲ; ಬದಲಾಗಿ ಅದು ನಮ್ಮ `ಪರಂಪರೆಯ ಪಿಸುಮಾತು’.  ಅದು ಇಡೀ ಭಾರತೀಯ ಸಾಹಿತ್ಯ ಪರಂಪರೆ ಮತ್ತು ಅದರ ಭಾಗವಾದ ಕನ್ನಡ ಸಾಹಿತ್ಯ ಪರಂಪರೆ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರೂಢಿಸಿಕೊಂಡ ವೈಚಾರಿಕತೆಯ ಪರಿಣಾಮವಾಗಿ ರೂಪುಗೊಂಡ ಸಾಮೂಹದ ಒಮ್ಮಾತು. ಹಾಗಾಗಿ ಈ ಮಾತಿನ ಹೊಣೆಗಾರಿಕೆ ಘಂಟಿಯವರದ್ದು ಮಾತ್ರವಲ್ಲ; ಇಡೀ ಪರಂಪರೆಯದ್ದು; ಅದನ್ನು ಪ್ರತಿನಿಧಿಸುವ ಎಲ್ಲರದ್ದು!
********
ಡಾ. ರಾಜೇಂದ್ರ ಬುರಡಿಕಟ್ಟಿ

14-10-2017  

Sunday, October 8, 2017

ಗಾಂಧಿಗೆ ಗುಂಡು ಹಾರಿದಾಗ ………

ಗಾಂಧಿಗೆ ಗುಂಡು ಹಾರಿದಾಗ ………

ಹಂತಕನು ಗುಂಡುಗಳನ್ನು ಹಾರಿಸಿದಾಗ ನಾನು ಆ ಜಾಗದಿಂದ ಕೆಲವೇ ಬೀದಿಗಳಷ್ಟು ಆಚೆಗಿದ್ದೆ. ನನಗೆ ಸುದ್ದಿ ತಿಳಿಸಲು ನನ್ನ ಸ್ನೇಹಿತರು ತಕ್ಷಣವೇ ನನ್ನನ್ನು ಹುಡುಕಿಕೊಂಡು ಬಂದರು. ನಾನು ಅಲ್ಬುಕರ್ಕ್ ರಸ್ತೆಯ ಆ ಭವನದ ಬಳಿ ಬಂದಿದ್ದೆ. ಭಾರತದಲ್ಲಿ ಸುದ್ದಿ ಬಹಳ ಬೇಗ ಹರಡುತ್ತದೆ. ಅಷ್ಟರಲ್ಲಾಗಲೇ ಸಾವಿರಾರು ಜನ ದುರಂತದ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಬಿರ್ಲಾ ಭವನದ ಸುತ್ತ ಸೇರಿದ್ದ ಜನರ ಗುಂಪಿನ ನಡುವೆ ದಾರಿ ಮಾಡಿಕೊಂಡು ಒಳಹೋಗುವುದೇ ಕಷ್ಟವಾಯಿತು. ಆದರೆ ಅಲ್ಲಿದ್ದ ಕಾವಲುಗಾರರು ನನ್ನ ಗುರುತು ಹಿಡಿದು ನನ್ನನ್ನು ಒಳಗೆ ಬಿಟ್ಟರು. ಗಾಂಧೀಜಿಯನ್ನು ಮಲಗಿಸಿದ್ದ ಕೋಣೆಗೆ ನಾನು ಹೋದೆ. ಗಾಂಧೀಜಿ ಮೃತರಾಗಿ ಇನ್ನೂ ಒಂದು ಗಂಟೆ ಕಾಲವೂ ಕಳೆದಿರಲಿಲ್ಲ. ಅವರ ತಲೆ ಅವರ ಕಾರ್ಯದರ್ಶಿ ಬ್ರಿಜ ಕೃಷ್ಣರವರ ತೊಡೆಯ ಮೇಲಿತ್ತು. ಗಾಂಧೀಜಿ ಬದುಕಿದ್ದಾಗಲೂ ಸದಾ ಅವರ ಸುತ್ತಮುತ್ತಲಲ್ಲೆ ಇರುತ್ತಿದ್ದ ಸೋದರನ ಮೊಮ್ಮಕ್ಕಳು, ಸೊಸೆಯರು ಮೊದಲಾದ ಬಂಧುಬಳಗದವರೆಲ್ಲ ಸಮೀಪದಲ್ಲಿಯೇ ಇದ್ದರು. ಗಾಂಧಿಯವರ ಮುಖ ಆಗಲೇ ಬದಲಾಗಿತ್ತು. ಅವರು ನಿದ್ದೆಯಲ್ಲಿದ್ದಾಗಲೂ ಅವರ ಮುಖಕ್ಕೆ ಅಸಾಧಾರಣ ಎಚ್ಚರದ ಸ್ಥಿತಿಯನ್ನು ತಂದುಕೊಡುತ್ತಿದ್ದ ಕಾಂತಿಯುಕ್ತವಾದ ಕಂದುಚರ್ಮ ತನ್ನ ಬಿಗಿ ಕಳೆದುಕೊಂಡಿತ್ತು. ಕೋಣೆಯೊಳಗೆ ಗಾಢವಾದ ಮೌನ. ಕೆಲವರು ಅಳುತ್ತಿದ್ದರು. ಅಲ್ಲಿ ಆವರಿಸಿದ್ದ ಮೌನದಲ್ಲಿ ಗೀತಾಪಠಣ ಮಾತ್ರ ಕಿವಿಗೆ ಕೇಳಿಸುತ್ತಿತ್ತು. ಗಾಂಧೀಜಿಗೆ ಸ್ವಲ್ಪ ದೂರದಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಕುಳಿತಿದ್ದ ಹೆಂಗಸರ ಗುಂಪು ಗೀತಾಪಠಣ ಮಾಡುತ್ತಿತ್ತು. ಹಿಂದೂಗಳಲ್ಲಿ ಯಾರಾದರೂ ಸಾವಿಗೀಡಾದಾಗ ಪಠಣ ಮಾಡಲಾಗುವ ಗೀತೆಯ ಭಾಗ ಅದು. ಗಾಂಧೀಜಿಯವರ ಸಂದರ್ಭಕ್ಕೆ ಈ ಪಠಣ ಇನ್ನೂ ವಿಶೇಷವಾಗಿ ಹೊಂದಿಕೊಳ್ಳುತ್ತಿತ್ತು. ಅರ್ಜುನ ತನ್ನ ಸೋದರರು, ರಕ್ತಸಂಬಂಧಿಗಳೊಂದಿಗೆ ಪರಸ್ಪರ ಹೋರಾಡಲು ಮನಸ್ಸು ಬಾರದೆ ಶಸ್ತ್ರವನ್ನು ಕೆಳಗಿರಿಸುತ್ತಾನೆ. ಶ್ರೀಕೃಷ್ಣ ಅವನನ್ನು ಕುರಿತು ನಮ್ಮ ಕೆಲಸವನ್ನು ನಾವು ಮಾಡಬೇಕು. ಅದರ ಫಲಾಫಲಗಳು ಭಗವಂತನಿಗೇ ಸೇರುತ್ತದೆ ಎಂದು ಬೋಧಿಸುತ್ತಾನೆ.

ಹೆಂಗಸರ ಪಠಣ ಹಾಗೇ ಮುಂದುವರೆದಿತ್ತು. ಆ ಕೋಣೆಯಲ್ಲಿ ತುಂಬಿದ್ದ ಗಾಢ ದುಃಖವನ್ನು ಕಲಕುವಂತೆ ಗಾಜು ಒಡೆದ ಶಬ್ದ ಕೇಳಿಸಿತು. ಹೊರಗಿದ್ದ ಜನರ ನೂಕುನುಗ್ಗಲಿನ ಒತ್ತಡಕ್ಕೆ ಕಿಟಕಿ ಬಾಗಿಲುಗಳ ಗಾಜು ಒಡೆದಿದ್ದವು. ಮಹಾತ್ಮರ ಕೊನೆಯ ದರ್ಶನಕ್ಕಾಗಿ ಜನರ ಹಂಬಲವನ್ನು ವರ್ಣಿಸುವುದು ಸಾಧ್ಯವಿಲ್ಲ. ಮಹಾತ್ಮಾಜಿ ಸಾಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೇವಲ ಹತ್ತು ದಿನಹಗಳ ಹಿಂದೆಯಷ್ಟೇ ಗಾಂಧೀಜಿನ ಮೇಲೆ ಯಾರೋ ನಾಡಬಾಂಬನ್ನು ಎಸೆದಿದ್ದರು. ಕೆಲವೇ ಗಜಗಳ ಅಂತರದಲ್ಲಿ ಅದು ಗುರಿ ತಪ್ಪಿತ್ತು. ಆದರೆ ಅದು ಗಾಂಧಿಯವರನ್ನು ಹತ್ಯೆ ಮಾಡಬೇಕೆಂದಿದ್ದ ಮತಾಂಧ ಹಿಂದೂ ಹಂತಕರ ಮೊದಲ ಪ್ರಯತ್ನವೆಂದು ಯಾರಿಗೂ ಗೊತ್ತಾಗಲಿಲ್ಲ. ಗಾಂಧಿಯವರು ಇತ್ತೀಚಿನ ಉಪವಾಸ ಆರಂಭಿಸಿದಾಗ ಅವರ ಪ್ರಾಣದ ಬಗ್ಗೆ ತೀವ್ರ ಆತಂಕರ ಸ್ಥಿತಿ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿಯೂ ಯಾರನ್ನಾದರೂ ಗಾಂಧಿಯವರ ಪ್ರಾಣಕ್ಕೆ  ಅಪಾಯವಿದೆಯೇ ಎಂದು ಪ್ರಶ್ನಿಸಿದರೆ ಇಲ್ಲ, ನಾವು ಅದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಆ ಸಾವು ಸಂಭವಿಸಿಯೇಬಿಟ್ಟಿತು.

ಆ ದುರಂತ ತುಂಬಿದ ಕೋಣೆಯಿಂದ ನಾನು ಮೆಲ್ಲಗೆ ಹೊರಗೆ ಬಂದೆ. ದುಃಖಿಸುತ್ತಿದ್ದ ಜನಗಳ ಮಧ್ಯೆ ದಾರಿಮಾಡಿಕೊಂಡು ಗಾಂಧಿಯವರು ಕೊನೆಯುಸಿರೆಳೆದ ಜಾಗಕ್ಕೆ ಹೋದೆ. ಅಲ್ಲಿ ಬೆಳಕಿನ ಪ್ರಭೆಯೊಂದು ಹರಡಿತ್ತು. ಯಾರೋ ಒಂದು ಮೇಣದಬತ್ತಿ ಹಚ್ಚಿಟ್ಟಿದ್ದರು. ಕತ್ತಲು ತುಂಬಿದ ರಾತ್ರಿಯಲ್ಲಿ ಅದರ ಹೊಂಬಣ್ಣದ ಬೆಳಕು ಹರಡಿತ್ತು. ಕೆಲವು ಕಡ್ಡಿಗಳನ್ನು ಆ ಸ್ಥಳದಲ್ಲಿ ತ್ರಿಕೋನಾಕೃತಿಯಲ್ಲಿ ಜೋಡಿಸಿ ಸ್ಥಳದ ಗುರುತು ಮಾಡಿದ್ದರು. ಗಾಂಧಿಯವರು ಬಿದ್ದ ಸ್ಥಳವನ್ನು ನಿಖರವಾಗಿ ಗುರುತಿಸುವುದಕ್ಕಾಗಿ ಒಂದು ತಗಡಿನ ಡಬ್ಬಿಯನ್ನು ಅಲ್ಲಿಟ್ಟರು. ಸ್ವತಃ ಗಾಂಧಿಯವರೇ ಅಲ್ಲಿದ್ದಾರೇನೋ ಎಂಬಂತೆ ಜನರು ಅದರ ಮುಂದೆ ಭಕ್ತಿಯಿಂದ ಬಾಗಿ ನಮಸ್ಕರಿಸುತ್ತಿದ್ದರು. ಹೀಗೆ ನಮಸ್ಕರಿಸುತ್ತಿರುವವರಲ್ಲಿ ಎಲ್ಲ ಧರ್ಮಗಳವರೂ ಇದ್ದರು. ಅಲ್ಲಿದ್ದ ಮಣ್ಣನ್ನು ಕರವಸ್ತ್ರಗಳಲ್ಲಿ ಕಟ್ಟಿಕೊಂಡು ಹೋಗುತ್ತಿದ್ದರು.

ಆಗ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಹೊಸ ಸಂಚಲನ ಉಂಟಾಯಿತು. ಗುಂಪಿನೊಂದಿಗೆ ನಾನೂ ತಳ್ಳಿಕೊಂಡು ಭವನದ ಮುಂಭಾಗಕ್ಕೆ ಬಂದಿದ್ದೆ. ಅಲ್ಲಿ ನೆಹರೂ ಜನರನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಮತ್ತೊಮ್ಮೆ ಬಿರ್ಲಾ ಭವನದ ಗೇಟಿನ ಮೇಲೆ ಹತ್ತಿ ನಿಂತಿದ್ದರು. ಬೀದಿ ದೀಪದ ಬೆಳಕು ಅವರ ಮೇಲೆ ಬಿದ್ದಿತ್ತು. ಗಾಂಧೀಜಿಯ ಸಾವಿನ ನೋವು ಮತ್ತು ಆಘಾತ ನೆಹರೂ ಮುಖದಲ್ಲಿ ವ್ಯಕ್ತವಾಗಿತ್ತು. “ಮಹಾತ್ಮಾಜಿ ತೀರಿಕೊಂಡರು, ಮಹಾ ಬೆಳಕೊಂದು ಆರಿಹೋಯಿತು. ನಮ್ಮೆಲ್ಲರ ಮೇಲೂ ದುಃಖ ವ್ಯಥೆಯ ಕಾರ್ಮೋಡ ಕವಿದಿದೆ. ಗಾಂಧಿಯವರು ಸ್ವರ್ಗದಿಂದಲೇ ನಮಗೆ ದಾರಿ ತೋರಿಸುತ್ತಾರೆ. ಆದರೆ ಈ ಮೊದಲು ಕಷ್ಟ ಎದುರಾದಾಗಲೆಲ್ಲ ಸಮಾಧಾನ ಪಡೆಯುವುದಕ್ಕಾಗಿ ಅವರ ಬಳಿ ಓಡುತ್ತಿದ್ದಂತೆ ಈಗ ಮಾಡುವುದಕ್ಕಾಗುವುದಿಲ್ಲ….” ಈ ಮಾತುಗಳನ್ನು ಹೇಳುವಾಗ ನೆಹರೂ ನಿಜವಾಗಿಯೂ ದುಃಖ ತಡೆಯಲಾರದೆ ಅಳತೊಡಗಿದರು. ಬಹುಶಃ ಬೇರೆ ಯಾವ ನಾಯಕರೂ ಸಹ ತೊಂದರೆಯ ಸಂದರ್ಭದಲ್ಲಿ ಸಮಾಧಾನ ಹಾಗೂ ಧೈರ್ಯಕ್ಕಾಗಿ ಗಾಂಧಿಯವರನ್ನು ನೆಹರೂ ಅವರಷ್ಟು ಅವಲಂಬಿಸಿರಲಿಲ್ಲ. ನೆಹರೂ ಅತ್ತಾಗ ಇತರ ಸಾವಿರಾರು ಮಂದಿ ಅಳತೊಡಗಿದರು. ನಂತರ ನೆಹರೂ ತುಂಬಾ ಪ್ರಯಾಸದಿಂದ ತಮ್ಮ ಮಾತಿನ ಕೊನೆಯ ವಾಕ್ಯಗಳನ್ನು ಹೇಳಿದರು: “ ಗಾಂಧೀಜಿಯವರು ಯಾವ ಆದರ್ಶಗಳಿಗಾಗಿ ಬದುಕಿದ್ದರೋ ಮತ್ತು ಯಾವ ಉದ್ದೇಶಕ್ಕಾಗಿ ಮೃತರಾದರೋ ಅಂತಹ ಆದರ್ಶಗಳಿಗಾಗಿ ನಮ್ಮನ್ನು ನಾವು ಮುಡಿಪಾಗಿಟ್ಟುಕೊಳ್ಳುವ ಮೂಲಕ ಮಾತ್ರವೇ ಅವರ ಆತ್ಮಕ್ಕೆ ನಮ್ಮ ಅತ್ಯುತ್ತಮ ಸೇವೆ ಸಲ್ಲಿಸಬಹುದು”

ಆ ರಾತ್ರಿಯೆಲ್ಲ ಹಳೆಯ ದೆಹಲಿ ಮತ್ತು ಹೊಸ ದೆಹಲಿಯ ರಸ್ತೆಗಳಲ್ಲೆಲ್ಲ ಜನವೋ ಜನ. ಈ ದುರಂತ ಸಂಭವಿಸಿದ ಎಷ್ಟೋ ಗಂಟೆಗಳ ನಂತರ ಮೊತ್ತ ಮೊದಲ ಬಾರಿಗೆ ಹಂತಕನ ಹೆಸರು ಕೇಳಿಬಂತು. ಈ ಕೃತ್ಯ ಮಾಡಿದವನು ಪೂನಾದ ಒಬ್ಬ ಆರ್. ಎಸ್.ಎಸ್. ಪತ್ರಿಕಾ ಸಂಪಾದಕ, ವಕ್ರ ಮನಸ್ಸಿನ ಯುವಕ ನಾಥೂರಾಮ್ ವಿನಾಯಕ ಗೋಡ್ಸೆ ಎಂದು ತಿಳಿಯಿತು. ಆತನನ್ನು ತಕ್ಷಣವೇ ಬಂಧಿಸಿ ಲಾಕಪ್ಪಿನಲ್ಲಿಡಲಾಗಿತ್ತು. ಆದರೆ ದುಃಖಿತ ಜನರ ದೃಷ್ಟಿಯಲ್ಲಿ ಇದು ಯಾರೋ ಒಬ್ಬ ವ್ಯಕ್ತಿ ಮಾಡಿದ ಕೃತ್ಯವಾಗಿರಲಿಲ್ಲ. ಮುಖಹೀನ ಶಕ್ತಿಯೊಂದು ಈ ಕೃತ್ಯ ಮಾಡಿತ್ತು. ಅಷ್ಟರಮಟ್ಟಿಗೆ  ಜನರ ಅಭಿಪ್ರಾಯ ಸರಿಯಾಗೇ ಇತ್ತು.

ಧರ್ಮ ಸಹಿಷ್ಣುತೆಯ ಬಗ್ಗೆ ಇಡೀ ದೇಶದಲ್ಲಿ ಅತ್ಯಂತ ಶಕ್ತಿಯುತವೂ ಸ್ಪಷ್ಟವೂ ಆಗಿದ್ದ ಏಕೈಕ ದನಿಯಾಗಿದ್ದರು ಗಾಂಧಿ. ಆದರೆ ಈ ದನಿಯ ವಿರುದ್ಧದ ದನಿಗಳು ಉಳಿಯಬೇಕಾದರೆ ಗಾಂಧಿಯವರ ದನಿಯನ್ನು ಅಡಗಿಸಲೇಬೇಕಿತ್ತು. ಗಾಂಧಿಯವರನ್ನು ಒಬ್ಬ ಹಿಂದೂ ದರ್ಮೀಯನೇ ಕೊಂದಿದ್ದೂ ಕೂಡ ಆಕಸ್ಮಿಕವೇನಲ್ಲ.  ಗಾಂಧಿಯವರು ಯಾವ ಹಿಂದೂ ಧರ್ಮದ ವಿಶಾಲ ದೃಷ್ಟಿಕೋನವನ್ನು, ಮತ್ತು ಉತ್ತಮಿಕೆಯನ್ನು ಎತ್ತಿಹಿಡಿದಿದ್ದರೋ ಅವರನ್ನು ಇಲ್ಲವಾಗಿಸಿದವನು ಅದೇ ಹಿಂದೂ ಧರ್ಮದಲ್ಲಿ ಅತ್ಯಂತ ಕೆಟ್ಟದ್ದು ಹಾಗೂ ಅತಿರೇಕವಾದದ್ದು ಏನೇನಿದೆಯೋ ಅದರ ಪ್ರತೀಕವಾಗಿದ್ದ.

ಬಹುದೀರ್ಘಕಾಲದಿಂದ ಬೆಳಸಿಕೊಂಡು ಬಂದ ಧಾರ್ಮಿಕ ವೈರತ್ವಗಳ ಇತಿಹಾಸ ಗಾಂಧಿಯವರ ಹತ್ಯೆಯ ಮೂಲಕ ತನ್ನ ಪರಾಕಾಷ್ಠ ಸ್ಥಿತಿ ಮುಟ್ಟಿತ್ತು. ವಿದೇಶೀಯರ ಒಡೆದು ಆಳುವ ನೀತಿ ಹಿಂದೂ ಮುಸ್ಲಿಮರು ಒಂದುಗೂಡದಂತೆ ಏನೇನು ಮಾಡಬೇಕೋ ಅವೆಲ್ಲವನ್ನೂ ಮಾಡಿತ್ತು. ಈ ಒಡಕಿನ ಲಾಭ ಪಡೆದವರು ಮುಸ್ಲಿಂ ಮೂಲಭೂತವಾದಿಗಳು. ಇದರಷ್ಟೇ ಮೂಲಭೂತವಾದಿಯಾಗಿದ್ದ ಹಿಂದೂಧರ್ಮ ಆರ್.ಎಸ್.ಎಸ್.ನ್ನು ಹುಟ್ಟುಹಾಕಿ ಅವರಿಗೆ ಉತ್ತರ ಕೊಟ್ಟಿತ್ತು. ಗೋಡ್ಸೆಯ ವಿಚಾರಣೆ ನಡೆದಾಗ ಈ ಮತಾಂಧ ಯುವ ಚಳುವಳಿಗೆ ಪ್ರೋತ್ಸಾಹ ಕೊಟ್ಟಂತಹ ರಾಜ್ಯಗಳಲ್ಲಿಯೇ ಅದರ ಜಾಡು ಸಿಕ್ಕಿದ್ದು ಕೂಡ ಆಕಸ್ಮಿಕವೇನಲ್ಲ. ಈ ಜಾಡು ಗ್ವಾಲಿಯರ್ ನಿಂದ ಆಳ್ವಾರ್ ವರೆಗೆ ಹೋಗಿತ್ತು. ಆಳ್ವಾರ್ ಮಹಾರಾಜ ತನ್ನ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ಹತ್ತಿಕ್ಕುವುದಕ್ಕಾಗಿ ಮತೀಯ ಕಲಹವನ್ನು ಸಮರ್ಥವಾಗಿ ಬಳಸಿಕೊಂಡಿದ್ದ. ಆತನ ಅರಮನೆ ಆರ್. ಎಸ್.ಎಸ್. ನವರು ಸಭೆ ಸೇರುವ ಸ್ಥಳವಾಗಿತ್ತು. ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಸಂದೇಹದ ಮೇಲೆ ಬಂಧಿತರಾದವರಲ್ಲಿ ಈ ರಾಜನೂ ಒಬ್ಬನಾಗಿದ್ದ. ಆದರೆ ಆರಂಭದ ಹಂತದಲ್ಲಿ ಈ ಹತ್ಯೆಯಲ್ಲಿ ಭಾಗಿಯಾದವರ ಸುಳಿವುಗಳೇನೂ ಕೇಳಿಬರಲಿಲ್ಲ. ಮತ್ತು ಸ್ವತಃ ಹಂತಕನ ಬಗ್ಗೆಯೂ ಕೂಡ ಆತನ ಹೆಸರಿನಿಂದ ಆತ ಉಚ್ಛಕುಲಕ್ಕೆ ಸೇರಿದವನು ಎಂಬುದೊಂದನ್ನು ಬಿಟ್ಟರೆ ಉಳಿದ ಮಾಹಿತಿಯೂ ಸಿಕ್ಕಿರಲಿಲ್ಲ. ಈ ಹತ್ಯೆಯನ್ನು ಯಾರೋ ಒಬ್ಬ ವ್ಯಕ್ತಿ ನಡೆಸಿದ್ದಾನೆ ಎಂದು ಭಾವಿಸಿದ್ದ ಜನರು ಆ ಪಾಪಿ ಅಂಗುಲ ಅಂಗುಲವಾಗಿ ನರಳಿ ಸಾಯುತ್ತಾನೆ. ಅವನು ಜೀವನ ಕೊನೆಯ ಕ್ಷಣದವರೆಗೆ ಇದಕ್ಕಾಗಿ ಪರಿತಪಿಸುವುದು ಖಂಡಿತ ಎಂದು ಶಾಪ ಹಾಕುತ್ತಿದ್ದರು.

ಬೆಳಕು ಮೂಡುವ ಹೊತ್ತಿಗೆ ಬಿರ್ಲಾ ಭವನದ ಹುಲ್ಲು ಹಾಸು, ಉದ್ಯಾನ, ಸುತ್ತಮುತ್ತಲ ಮನೆಗಳ ಮೇಲೆ, ಅಲ್ಬುಕರ್ಕ್ ರಸ್ತೆ ಹಾಗೂ ಆ ರಸ್ತೆಗೆ ಸೇರುವ ಎಲ್ಲ ರಸ್ತೆಗಳಲ್ಲೂ ಜನಪ್ರವಾಹ ಹರಿದು ಬರತೊಡಗಿತು. ಅಂತಹ ಜನಸಾಗರದ ದೃಶ್ಯವನ್ನು ನಾನು ಈ ಮೊದಲು ಎಲ್ಲಿಯೂ ನೋಡಿರಲಿಲ್ಲ. ಎತ್ತೆತ್ತರದ ಛಾವಣಿಗಳನ್ನುಳ್ಳ ಬಿರ್ಲಾಭವನ ಈ ದುಃಖ ಸಾಗರದ ಮಧ್ಯೆ ತಲೆಯೆತ್ತಿ ನಿಂತ ಬಂಡೆಗಲ್ಲಿನಂತೆ ಅಚಲವಾಗಿತ್ತು. ಅದರ ಮೇಲಿನ ಅಂತಸ್ತಿನಲ್ಲಿ ಎಲ್ಲರಿಗೂ ಕಾಣುವಂತೆ ಗಾಂಧೀಜಿಯ ದೇಹವನ್ನು ಇರಿಸಿದ್ದರು. ಗಾಂಧಿಯ ಮುಖ ಶಾಂತವಾಗಿತ್ತು. ಯಾವುದೇ ಭಾವನೆಗಳನ್ನು ತೋರಗೊಡದೆ ನಿರ್ಮಲವಾಗಿತ್ತು. ಗಾಂಧಿಯವರ ದೇಹಕ್ಕೆ ಹೊದಿಸಿದ್ದ ಅಚ್ಚ ಬಿಳಿಯ ಬಟ್ಟೆ ಸೂರ್ಯನ ಬೆಳಕಿನಲ್ಲಿ ಇನ್ನಷ್ಟು ಪ್ರಕರವಾಗಿ ಕಾಣುತ್ತಿತ್ತು. ಗಾಂಧಿಯವರ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರ ನಿಕಟವರ್ತಿಗಳು ಗಾಂಧಿಯವರ ದೇಹದ ಅಕ್ಕಪಕ್ಕಗಳಲ್ಲಿ ನಿಂತಿದ್ದರು. ಗಾಂಧಿಯವರಿಗೆ ಅತ್ಯಂತ ಹತ್ತಿರದವರು ಮತ್ತು ನಿಷ್ಠಾವಂತರೆಂದರೆ ನೆಹರೂ ಮತ್ತು ಪಟೇಲ್. ಅವರು ಗಾಂಧಿಜಿಯ ತಲೆಯ ಬದಿಯಲ್ಲಿ ನಿಂತಿದ್ದರು. ಅದೇ ವಾರ ಪಟೇಲರು ನನ್ನೊಂದಿಗೆ ಮಾತನಾಡುತ್ತಾ ಆರ್.ಎಸ್.ಎಸ್. ಯುವಕರಲ್ಲಿ ಕಂಡು ಬರುತ್ತಿರುವ ಮತೀಯ ಭಾವನೆ ಕೇಲವ ತಾತ್ಕಾಲಿಕ ಎಂದು ತಳ್ಳಿ ಹಾಕಿದ್ದನ್ನು ನೆನೆಸಿಕೊಂಡಾಗ ದುಃಖವಾಯಿತು.

ಸುಶೀಲಾ ಒಬ್ಬರನ್ನು ಹೊರತುಪಡಿಸಿ ಆಶ್ರಮದ ನಿಕಟವರ್ತಿಗಳೆಲ್ಲ ಅಲ್ಲಿದ್ದರು. ಕೆಲವೇ ದಿನಗಳ ಹಿಂದೆ ಈ ಮಹಿಳಾ ವೈದ್ಯೆ ಶಾಂತಿನಿಯೋಗದ ನೇತೃತ್ವ ವಹಿಸಿ ಪಾಕಿಸ್ತಾನಕ್ಕೆ ಹೋಗಿದ್ದರು. ಅವರು ಹೋಗಿದ್ದ ಸ್ಥಳದ ಹೆಸರು ಬಹಾವಲ್ಪುರ. ಅದು ಒಬ್ಬ ಮುಸ್ಲಿಂ ನವಾಬನ ಆಳ್ವಿಕೆಯಲ್ಲಿತ್ತು. ಅಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ಪುನಹ ಅತ್ಯಾಚಾರಗಳು ನಡೆದಿದ್ದವು. ಒಬ್ಬ ಹಿಂದೂ ಮಹಿಳೆ ಇಂತಹ ನಿಯೋಗವನ್ನು ಒಯ್ಯುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೆ ಆಕೆಯ ಕುಟುಂಬ ಮೂಲತಃ ಇದೇ ಸ್ಥಳಕ್ಕೆ ಸೇರಿತ್ತು. ಅಲ್ಲಿ ನಡೆದ ಹಿಂಸಾಕೃತ್ಯಗಳಿಗೆ ಆಕೆಯ ಬಂಧುಗಳು ತುತ್ತಾಗಿದ್ದರು. ಜೈಲುವಾಸದ ದಿನಗಳಲ್ಲೂ ಗಾಂಧಿಯವರ ಯೋಗಕ್ಷೇಮ ವಹಿಸಿಕೊಂಡು ಜೊತೆಯಲ್ಲೇ ಇದ್ದ ಸುಶೀಲಾಗೆ, ಗಾಂಧಿಯವರ ಸಂದೇಶವಾಹಕಳಾಗಿ ಕೈಗೊಂಡ ಈ ಕೊನೆಯ ಕಾರ್ಯಭಾರದಿಂದಾಗಿ ಗಾಂಧಿಯ ಅಂತಿಮ ಕ್ಷಣದಲ್ಲೇ ಅವರ ಬಳಿ ಇರುವ ಅವಕಾಶ ತಪ್ಪಿಹೋಯಿತು.


ಬೆಳಿಗ್ಗೆ ಹನ್ನೊಂದು ಗಂಟೆಗೆ ಸರಿಯಾಗಿ ಗಾಂಧಿಯವರ ದೇಹವನ್ನು ಇಳಿಸಿದರು. ಹೂವುಗಳಿಂದ ಅಲಂಕೃತವಾದ ಸಶಸ್ತ್ರ ವಾಹನದ ಮೇಲೆ ಅವರ ದೇಹವನ್ನು ಇರಿಸಿದರು. ನೆಹರೂ, ಪಟೇಲ್, ಬಲದೇವ್ ಸಿಂಗ್,(ರಕ್ಷಣಾ ಮಂತ್ರಿ) ಈ ಅಂತಿಮ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗಾಂಧಿಯವರ ದೇಹದ ಮೇಲೆ ತ್ರಿವರ್ಣಧ್ವಜವನ್ನು ಹೊದಿಸಲಾಯಿತು. ಅಂತಿಮ ಮೆರವಣಿಗೆ ಹೊರಟಿತು. ಜನಜಂಗುಳಿಯ ನಡುವೆ ಏನೋ ಗಡಿಬಿಡಿಯಾದಂತೆ ಕಂಡಿತು. ನಾನು ಯಾವುದೋ ಕಟ್ಟಡದ ಛಾವಣಿಯ ಮೇಲೆ ನಿಂತುಕೊಂಡು ಫೋಟೋ ತೆಗೆಯುತ್ತಿದ್ದೆ. ಶವವಾಹನದ ಬಳಿ ಮಹಿಳೆಯೊಬ್ಬಳು ನಡೆದು ಬರುತ್ತಿದ್ದಳು. ಆಕೆ ಸುಶೀಲಾ ಎಂದು ತಿಳಿಯಿತು.  ಪಾಕಿಸ್ತಾನದಲ್ಲಿ ಸುಶೀಲಾಗೆ ಸುದ್ದಿ ತಲುಪಿತ್ತು. ಒಂದು ವಿಶೇಷ ವಿಮಾನದಲ್ಲಿ ಅದೇ ಸಮಯಕ್ಕೆ ಬಂದಿದ್ದಳು. ಗಾಂಧಿಯವರ ಪಾದದ ಮೇಲೆ ಬಿದ್ದು ಆಕೆ ಜೋರಾಗಿ ಅಳತೊಡಗಿದ್ದಳು.

ಅತ್ಯಂತ ದೊಡ್ಡ ಮೆರವಣಿಗೆ ಮುಂದಕ್ಕೆ ಚಲಿಸಿತು. ಅದು ಐದು ಮೈಲುಗಳ ಹಾದಿಯನ್ನು ಕ್ರಮಿಸಬೇಕಾಗಿತ್ತು. ದೇಶದ ಎಲ್ಲ ಭಾಗಗಳಿಂದ ಉಪನದಿಗಳಂತೆ ಹರಿದು ಬಂದ ಜನ ಈ ಮಹಾನದಿಯನ್ನು ಸೇರಿದ್ದರು. ಅನೇಕ ತಿಂಗಳುಗಳ ನಂತರ ಮುಸ್ಲಿಮರು ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿರುವ ಮುಸ್ಲಿಮರು ಈ ದಿನ ತಮ್ಮ ತಂದೆಯನ್ನು ಕಳೆದುಕೊಂಡರು ಎಂದು ಯಾರೋ ಹೇಳಿದ್ದು ಕೇಳಿಸಿತು.  ಈ ಮೆರವಣಿಗೆಯ ಮುಂಭಾಗದಲ್ಲಿ ಮಿಲಿಟರಿ ವಿನ್ಯಾಸದ ಸಶಸ್ತ್ರ ವಾಹನಗಳಿದ್ದವು.  ಅಂತಿಮ ಯಾತ್ರೆಯ ವ್ಯವಸ್ಥೆಯನ್ನು ಮಾಡಲು ಸೇನೆಯನ್ನು ಕರೆಯಲಾಗಿತ್ತು.  ಇದರಿಂದ ಈ ಮೆರವಣಿಗೆಗೆ ಬೇರೆಯದೇ ಆದ ಛಾಯೆ ಬಂದಂತಿತ್ತು. ಇದರ ಹಿಂದೆ ಗೌರ್ನರ್ ಜನರೆಲ್ ಅವರ ಅಂಗರಕ್ಷಕ ಪಡೆಯ ರಾವುತ ದಳ. ಇದರ ಹಿಂದೆ ಕೆಂಪು ನೀಲಿ ಸಮವಸ್ತ್ರದ ರಜಪುತಾನ ರೈಫಲ್ ದಳ ಹಾಗೂ ಇತರ ಮಿಲಿಟರಿ ಘಟಕಗಳು. ಇವರ ಹಿಂದೆ ಗಾಂಧಿಯವರ ಪಾರ್ಥೀವ ಶರೀರವಿದ್ದ ಸಶಸ್ತ್ರ ವಾಹನ. ನನ್ನ ಹಿಂದಿದ್ದ ಯಾರೋ ಹೇಳುತ್ತಿದ್ದರು. ಅಹಿಂಸೆಯನ್ನು ಬೋಧಿಸಿದ ಮಹಾತ್ಮನನ್ನು ಮಿಲಿಟರಿ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ ಕಣ್ಣೀರು ಉಕ್ಕುತ್ತದೆ ಎಂದು. ಈ ವಾಹನದ ಹಿಂದೆ ಖದ್ದರ್ ಉಡುಪಿನ ಜನರ ಗುಂಪು ನಡೆದುಕೊಂಡು ಬರುತ್ತಿತ್ತು. ಇದು ಮೆರವಣಿಗೆಗೆ ಸ್ವಲ್ಪ ಶಾಂತಿಯ ಕಳೆ ಮೂಡಿಸಿತ್ತು.

ಶವವಾಹನದ ಸ್ಥಳದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಪೇರಿಸಲಾಗಿದ್ದ ಜಾಗದವರೆಗೆ ನಾನು ಹೋದೆ. ಮೂವರು ಹಿಂದೂ ಪುರೋಹಿತರು ಆ ಕೊರಡುಗಳ ಮೇಲೆ ತುಪ್ಪ ಸುರಿಯುತ್ತಿದ್ದರು. ಜೊಗೆಗೆ ಸುಗಂಧಿತ ಕರ್ಪೂರವನ್ನು ಹಾಕುತ್ತಿದ್ದರು. ಆ ಸ್ಥಳಕ್ಕೆ ಹೊಂದಿಕೊಳ್ಳುವುದಿಲ್ಲ ಎನಿಸುವಂಥ ಒಂದು ದೊಡ್ಡ ಗುಂಪು ಬಂತು. ಅದರಲ್ಲಿ ಬೇರೆ ಬೇರೆ ರೀತಿಯ ಜನ ಇದ್ದರು. ಅವರೆಲ್ಲ ಕ್ಯಾಂಪ್ ಫೈರಿನ ಸುತ್ತ ಕುಳಿತುಕೊಳ್ಳುವಂತೆ ನೆಲದ ಮೇಲೆ ಕುಳಿತರು. ಇದರಲ್ಲಿ ಲಾರ್ಡ್ ಮತ್ತು ಲೇಡಿ ಮೌಂಟ್ ಬ್ಯಾಟನ್, ಚೈನಾದ ರಾಯಬಾರಿ, ಮೌಲಾನಾ ಆಜಾದ್, ಗಾಂಧಿಯವರನ್ನು ಮಿಕಿಮೌಸ್ ಎಂದು ತಮಾಷೆಯಿಂದ ಕರೆಯುತ್ತಿದ್ದ ಕವಿಯತ್ರಿ ಸರೋಜಿನಾಯ್ಡು, ರಾಜಕುಮಾರಿ ಅಮೃತ್ ಕೌರ್ ಮೊದಲಾದವರು ಇದ್ದರು.

ಜನರ ಗುಂಪು ನುಗ್ಗಿಕೊಂಡು ಬಂದಾಗ ಅಲ್ಲಿ ಕುಳಿತವರೆಲ್ಲ ತುರಾತುರಿಯಲ್ಲಿ ಮೇಲೇಳಬೇಕಾಯಿತು. ಮೆರವಣಿಗೆ ಹತ್ತಿರ ಬಂದಿತ್ತು. ಪುರೋಹಿತರು ಮಂತ್ರಪಠಣ ಆರಂಭಿಸಿದರು. ಗಾಂಧಿಯವರ ದೇಹವನ್ನು ಚಿತೆಗೆ ಅರ್ಪಿಸುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗಳು ಮೇಲೆದ್ದವು. ಜನರ ನೂಕುನುಗ್ಗಲು ಇನ್ನಷ್ಟು ಹೆಚ್ಚಾಯಿತು. ಜನರನ್ನು ಚದುರಿಸಲು ಕುದುರೆಗಳ ಮೇಲಿದ್ದ ಪೋಲೀಸ್ ದಳದವರು ಲಾಠಿ ಬೀಸಿದ್ದರಿಂದ ಇನ್ನಷ್ಟು ಗೊಂದಲವಾಯಿತು. ಮಾರನೆಯ  ಬೆಳಿಗ್ಗೆ ನೆಹರೂ ಅತ್ಯಂತ ಖಿನ್ನವಾದ ದನಿಯಲ್ಲಿ ಕೆಲವು ಮಾತುಗಳನ್ನು ಹೇಳಿದರು. “ನಮ್ಮ ಅತಿ ಅಮೂಲ್ಯ ಸಂಪತ್ತನ್ನು ನಾವು ರಕ್ಷಿಸಿಕೊಳ್ಳಲಿಲ್ಲ” ಎಂದರು. ಆ ಮೇಲೆ ಸಾಂಪ್ರದಾಯಿಕ ವಿಧಿಗಳೊಂದಿಗೆ ಚಿತಾಭಸ್ಮವನ್ನು ಭಾರತದ ಪವಿತ್ರ ನದಿಗಳಲ್ಲಿ ಹಾಕಲಾಯಿತು.

ರಾತ್ರಿಯೆಲ್ಲ ಉರಿದ ಈ ಅಜರಾಮರ ಬೆಂಕಿಯ ಒಂದೊಂದು ಪುಟ್ಟ ಜ್ವಾಲೆ ಅಲ್ಲಿದ್ದ ಸಹಸ್ರಾರು ಮಂದಿಯಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ಬೆಳಗುತ್ತದೆ ಎಂದು ನಾನು ಕಲ್ಪಿಸಿಕೊಂಡೆ. ಬಾಪು ಬಯಸಿದಂತೆಯೇ ಯಾವುದೇ ಬಲವಂತವಿಲ್ಲದೆ ಆಂತರಿಕ ಪರಿವರ್ತನೆಯ ಮೂಲಕವೇ ಜನರು ಸರಿಯಾದ ಪಥದಲ್ಲಿ ಮುಂದುವರೆಯುತ್ತಾರೆ ಎಂದು ಆಶಿಸಿದೆ. ಧರ್ಮಸಹಿಷ್ಣುತೆ ಮತ್ತು ಏಕತೆಗಾಗಿ ಅವರು ಮಾಡಿದ ಬಲಿದಾನ ಭಾರತಕ್ಕೆ ಒಂದು ತಿರುವು ತರಬಹುದು ಎಂದು ನಿರೀಕ್ಷಿಸಿದೆ. ಬೆಳಕು ತೋರಿಸುವುದಕ್ಕಾಗಿ ಗಾಂಧಿ ತಮ್ಮ ಜೀವವನ್ನೇ ಅರ್ಪಣೆ ಮಾಡಿದ್ದರು.

*******

ಮೂಲ: Margaret Bourke White, (Half Way to Freedom)
ಕನ್ನಡಕ್ಕೆ: ಡಾ. ಕೆ. ಆರ್. ಸಂಧ್ಯಾರೆಡ್ಡಿ ( ಬರ್ಕವೈಟ್ ಕಂಡ ಭಾರತ)

*******

ಫೋಟೋಗಳ ವಿವರ:
1.
ಗಾಂಧಿಯ ಶವದ ಅಂತ್ಯಸಂಸ್ಕಾರದ ಮೆರವಣಿಗೆಗೆ ಸೇರಿದ ಜನಸಾಗರ: ಜಾಗ ಸಿಗದೇ ಲೈಟಿನ
ಕಂಬವನ್ನು ಹತ್ತಿ ನಿಂತಿರುವ ಜನ!
2.
ಗಾಂಧಿಯ ಚಿತಾಭಸ್ಮವನ್ನು ಗಂಗಾನದಿಗೆ ಹಾಕಲು ಹೊರಟ ಮೆರವಣಿಗೆಯಲ್ಲೂ ಜನಸಾಗರ!
3.
ಗಾಂಧಿಯೊಂದಿಗೆ ನಡೆಯುತ್ತಾ ಮಾತಿನಲ್ಲಿ ತೊಡಗಿರುವ ಬರ್ಕ್ ವೈಟ್
*****
ಟಿಪ್ಪಣಿ:
ಬರ್ಕ್ ವೈಟ್ ಅಮೇರಿಕದ ಸುಪ್ರಸಿದ್ಧ ಫೋಟೋ ಜರ್ನಾಲಿಸ್ಟ್. ಅಲ್ಲಿನ `ಲೈಫ್ಪತ್ರಿಕೆಗೆ ವರದಿ ಮಾಡಲೆಂದು ಈಕೆ 1946ರಲ್ಲಿ ಭಾರತಕ್ಕೆ ಬಂದಿದ್ದಳು. ಸ್ವಾತಂತ್ರ್ಯ ಪಡೆಯುವ ಮತ್ತು ದೇಶ ವಿಭಜನೆಯ ರಾಜಕೀಯ ಪ್ರಕ್ಷುಬ್ಧತೆಯ ಬಹುಮುಖ್ಯ ಅವಧಿಯಲ್ಲಿ ಭಾರತದ ರಾಜಕಾರಣದ ಬಿರುಸಿನ ಚಟುವಟಿಕೆಗಳ ಕೇಂದ್ರಕ್ಕೆ ಹತ್ತಿರವಾಗಿದ್ದು ಅಲ್ಲಿನ ಬಹುಮುಖ್ಯ ಸಂಗತಿಗಳನ್ನು ಅರಿತುಕೊಂಡವಳು. 1946 ರಿಂದ 1948 ರವರೆಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ತಿರುಗಾಡಿ ಜನರ ಭಾವನೆ ಮತ್ತು ಆಶೋತ್ತರಗಳನ್ನು ತಿಳಿದವಳು. ಇವಳು ತನ್ನ ಭಾರತದ ತನ್ನ ಅನುಭವಗಳನ್ನು ಭಾರತದ ಇತಿಹಾಸದ ಬಹುಮುಖ್ಯ ದಾಖಲೆಗಳೇ ಆಗಿರುವ ಅನೇಕ ಛಾಯಾಚಿತ್ರಗಳೊಂದಿಗೆ ದಾಖಲಿಸಿ `ಹಾಫ್ ವೇ ಟು ಫ್ರೀಡಂಎಂಬ ಪುಸ್ತಕ ಬರೆದಳು.
ಆಕೆಯ ಪುಸ್ತಕವನ್ನು ಡಾ. ಕೆ. ಸಂಧ್ಯಾರೆಡ್ಡಿ `ಬರ್ಕ್ ವೈಟ್ ಕಂಡ ಭಾರತಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಪುಸ್ತಕ ಕನ್ನಡಕ್ಕೆ ಬರಲು ಕಾರಣರಾದವರು ಲೇಖಕ ಪಿ. ಲಂಕೇಶ್. ಅವರು ತುಂಬಾ ಮೆಚ್ಚಿಕೊಂಡು ಇದನ್ನು ಕನ್ನಡಕ್ಕೆ ಅನುವಾದಿಸಲು ಸಂಧ್ಯಾರೆಡ್ಡಿಯವರಿಗೆ ತಮ್ಮಲ್ಲಿದ್ದ ಪ್ರತಿ ಕೊಟ್ಟು ಕೇಳಿಕೊಂಡರಂತೆ. ಸಂಧ್ಯಾರೆಡ್ಡಿ ಅದನ್ನು ಅನುವಾದಿಸಿದರು. ಆದರೆ ಅದು ಕನ್ನಡದಲ್ಲಿ ಪ್ರಕಟವಾಗುವುದನ್ನು ನೋಡಲು ಇಲ್ಲದಂತೆ ಲಂಕೇಶ್ ಅದೇ ವೇಳೆಗೆ ತೀರಿಕೊಂಡರು! ಅಂದಹಾಗೆ ಬರ್ಕ್ ವೈಟ್ ಕೂಡ ತುಂಬು ಜೀವನ ನಡೆಸಿ ತೊಂಬತ್ತರ ದಶಕದ ಕೊನೆಯ ವರ್ಷಗಳಲ್ಲಿ ನಮ್ಮನ್ನಗಲಿದರು. ನಾನು ಮೇಲೆ ಕೊಟ್ಟಿರುವುದು ಗ್ರಂಥದ ಕೊನೆಯ ಅಧ್ಯಾಯ. ಪುಸ್ತಕದ ಇಡೀ ಓದು ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಒಂದು ವಿಶೇಷವಾದ ಅನುಭವ.
*****
– ಡಾ ರಾಜೇಂದ್ರ ಬುರಡಿಕಟ್ಟಿ


Friday, September 29, 2017

ಎಲ್.ಇ.ಡಿ. ಸೀರೆ ಮತ್ತು ಡುಮ್ಮಿ ಟಿ.ವಿ.

ಇದು ಎಲ್.ಇ.ಡಿ. ಸೀರೆಯಂತೆ! ಏಳು ಸೆಕೆಂಡಿನ ಈ ವಿಡಿಯೋವನ್ನು ಆಮೇಲೆ ಗಮನಿಸಿ. ಹೊಸದಾಗಿ ಮದುವೆಯಾದಾಗ ಇಪ್ಪತ್ತು ವರ್ಷಗಳ ಹಿಂದೆ ನಾನು ನನ್ನ ಹೆಂಡತಿ ಹೋಗಿ ತಂದಿದ್ದ ಒನಿಡಾ ಡುಮ್ಮಿ ಟಿವಿನೇ ಇನ್ನೂ ನಾವು ಎಲ್.ಇ.ಡಿ.ಗೆ ಬದಲಿ ಮಾಡಿಕೊಂಡಿಲ್ಲ. ಅಷ್ಟರೊಳಗೇ ಸೀರೆಯೂ ಎಲ್.ಇ.ಡಿ. ಬಂತಾ?

ಎಲ್ಲ ಹೆಂಗಸರೇ (ಸಹೋದರಿಯರೇ, ಗೆಳತಿಯರೇ, ಮಾತೆಯರೇ ಹಿಂಗೆಲ್ಲ ಏನೇ ಪದ ಬಳಸಿದರೂ ಒಂದಿಷ್ಟು ಜನ ಆ ಪದದ ವ್ಯಾಪ್ತಿಯಿಂದ ಹೊರಗೆ ಉಳಿಯುವುದರಿಂದ ಹೀಗನ್ನುತ್ತಿರುವೆ ಅಷ್ಟೇ, ಒರಟೆನಿಸಿದರೆ ಸಹಿಸಿಕೊಂಡು ಕ್ಷಮಿಸಿ) ಹೇಗಿದ್ದರೂ `ನಿಮ್ಮ’ ಗಂಡಸರೆಲ್ಲ ಇವತ್ತು ವಿಜಯದಶಮಿ ಹಬ್ಬ ಅಂತ ಮನೆಯಲ್ಲಿಯೇ ಇರ್ತಾರೆ. “ಮೈಸೂರು ದಸರಾ ಎಷ್ಟೊಂದು ಸುಂದರಾ” ಎಂದು ಮಂಜುಳಾ ರಾಜಕುಮಾರನ ಜೊತೆಗೆ ಕುಣಿಯುವ ಹಾಡನ್ನು ಟಿವಿಯವರು ತೋರಿಸುವುದನ್ನು ನೋಡ್ತಾ ಒಂದ್ತರಾ ಹ್ಯಾಪಿ ಮೂಡಿನಲ್ಲಿ ಇರ್ತಾರೆ. ಅವರು ಈ ಹಬ್ಬಕ್ಕೆ ಹೊಸ ಸೀರೆ ಕೊಡಿಸಿದರೇನು ಬಿಟ್ಟರೇನು ನೀವು ಮಾತ್ರ ಪೂಜೆ ಪುನಸ್ಕಾರ ಮಾಡುವುದರಲ್ಲಿಯಾಗಲಿ ಸಿಹಿ ಅಡುಗೆ ಮಾಡುವುದರಲ್ಲಾಗಲೀ ಏನೂ ಕಡಿಮೆ ಮಾಡದೇ ಏನೇನು ಮಾಡಬೇಕೋ ಅದೆಲ್ಲ ಮಾಡಿ ಅವರ ಮನಸ್ಸನ್ನು ಗೆದ್ದಿರ್ತಿರಾ.

ಈ ಸಮಯದಲ್ಲಿ ಗಂಡಸರಿಗೆ ನಿಮ್ಮ ಬಗ್ಗೆ ಒಂದು ಗುಡ್ ವಿಲ್ ಇದ್ದೇ ಇರ್ತದೆ. ಇದೇ ಒಳ್ಳೇ ಟೈಮು. ಗಂಡಸರು ಊಟಮಾಡುವಾಗ `ಸಾರು ತುಂಬಾ ಚೆನ್ನಾಗಿದೆ’ `ಪಾಯಸ ತುಂಬಾ ಟೇಸ್ಟಿದೆ’ ಎನ್ನುವ ಮಾತು ಅವರ ಬಾಯಿಂದ ಹೊರಬರುವ ಸಮಯ ನೋಡಿ, ಅವರು ತುತ್ತು ನೆತ್ತಿಗೆ ಹತ್ತದ ಹಾಗೆ ನೈಸಾಗಿ ಅವರ ಕಿವಿಗೆ ಈ ಸೀರೆ ಬಗ್ಗೆ ಒಂದು ಮಾತು ಹಾಕಿಡಿ. ತಗಳ್ಳುವುದೋ ಬಿಡೋದೋ ಆಮೇಲೆ ನೋಡಿದರಾಯಿತು.ಯಾವುದಕ್ಕೂ ದೀಪಾವಳಿ ಇನ್ನೂ ಒಂದು ತಿಂಗಳಿದೆಯಲ್ಲ! ಇಂತಹ ಹ್ಯಾಪಿ ಮೂಡಿನಲ್ಲಿರುವಾಗ ಈ ಸೀರೆಯನ್ನು ಕೊಡಿಸುವ ಬಗ್ಗೆ ಎಲ್ಲ ಗಂಡಸರೂ `ಭರವಸೆ’ ಕೊಟ್ಟೇಕೊಡ್ತಾರೆ. ಭರವಸೆ ಕೊಡದಿದ್ದರೆ ಕೊನೆಯ ಪಕ್ಷ `ಆಸ್ವಾಸನೆ’ಯನ್ನಾದರೂ ಕೊಡದಿದ್ದರೆ ಅವರ ಗಂಡಸುತನಕ್ಕೆ ಅವಮಾನವಾಗುವುದರಿಂದ ನಿಮ್ಮ ಪ್ರಯತ್ನ ಹುಸಿಹೋಗಲಿಕ್ಕಿಲ್ಲ!

ಮನೆಯಲ್ಲಿರುವ ಮಹಿಳೆಯರು ಸೀರೆಗಾಗಿ ಗಂಡಸರನ್ನು ಗೋಗರೆಯುವುದು ಭಾರತದಲ್ಲಿ ಸಾಮಾನ್ಯ ಬಿಡಿ. ಆದರೆ ಹೊರಗಡೆ ಹೋಗಿ ದುಡಿಯುವ ಬಹಳಷ್ಟು ಮಹಿಳೆಯವರು ಕೂಡ ತಮ್ಮ ದುಡಿಮೆಯ ಹಣದಲ್ಲಿಯೇ ಒಂದು ಹೊಸಸೀರೆಯನ್ನು ತೆಗೆದುಕೊಳ್ಳುವಾಗಲೂ ತಮ್ಮ ಗಂಡಂದಿರಿಗೆ `ಒಂದುಮಾತು ಹೇಳಿ ತಗೊಳ್ಳುವುದು’ ಅವರು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ! ಆ ಮೂಲಕ `ನಾನು ಈ ಮನೆಯ ಯಜಮಾನ ಅಲ್ಲ’ ಎಂಬ ಅಸುರಕ್ಷತೆಯ ಭಾವ ಗಂಡಸರಲ್ಲಿ ಮೂಡದಂತೆ ಅವರುನ್ನು ಕಾಪಾಡಿಕೊಂಡು ಅವರು ಬರುತ್ತಿದ್ದಾರೆ. ಅದು ಅವರ ದೊಡ್ಡಗುಣವೋ ಇರಬಹುದು ಅಸಹಾಯಕತೆಯೂ ಎಂಥದಾದರೂ ಇರ್ಲಿಬಿಡಿ. ಅದನ್ನ ಕಟ್ಟಿಕೊಂಡು ಆಗಬೇಕಾಗಿದ್ದಾದರೂ ಏನು? ಒಟ್ಟಿನಲ್ಲಿ “ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು…. ಬದುಕು ಹಗುರ ಎನ್ನುತಿರಲು ಪ್ರೇಮವೆನಲು ಹಾಸ್ಯವೇ’’ ಎಂಬ ಕವಿವಾಣಿಯಂತೆ ನೋಡೋಕೆ ಚೆನ್ನಾಗಿ ಕಾಣುವಂತೆ ಬದುಕುತ್ತಾರಲ್ಲ ಅಷ್ಟು ಸಾಕು.

ಗಂಡುಹೆಣ್ಣಿನ ಪ್ರೀತಿಗೂ ಇಂತಹ ಸೀರೆಗಳಿಗೂ ಎಂತೆಂಥದೋ ಸಂಬಂಧಗಳು ಇರುತ್ತವೆ. ಅವನ್ನೆಲ್ಲ ಹೇಳೋದು ಕಷ್ಟ. `ಪ್ರೀತಿ’ `ಪ್ರೇಮ’ ಇಂತಹ ಸಂಗತಿಗಳನ್ನೆಲ್ಲ ಸಾರ್ವಜನಿಕವಾಗಿ ಮಾತನಾಡಲು ನಮ್ಮ ಹಿಂದಿನ ತಲೆಮಾರಿನ ಜನ ಮುಜುಗರಪಡುತ್ತಿದ್ದರು. `ಮೈಸೂರು ಮಲ್ಲಿಗೆ’ ಕೃತಿಯ ಪ್ರೇಮಗೀತೆಗಳ ಮೂಲಕ ಕನ್ನಡ ಜನಮಾನಸದಲ್ಲಿ `ಪ್ರೇಮಕವಿ’ ಎಂದೇ ಹೆಸರಾದ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ಗೀತೆಗಳನ್ನು ಯಾರಾದರೂ `ಪ್ರೇಮಗೀತೆಗಳು’ ಎಂದದ್ದು ತಮ್ಮ ಕಿವಿಗೆ ಬಿದ್ದರೆ, `ಅವು ಪ್ರೇಮಗೀತೆಗಳಲ್ಲ ದಾಂಪತ್ಯಗೀತೆಗಳು’ ಎಂದು ತಿದ್ದಿ ಹೇಳುತ್ತಿದ್ದರಂತೆ! ಬಹುಶಃ ದಾಂಪತ್ಯದಲ್ಲಿರುವ `ಪತ್ಯ’ದ ಕಾರಣಕ್ಕೆ ಅವರು ಹಾಗೆ ತಿದ್ದುತ್ತಿರಬಹುದು. ಆ ಕಾಲದ ದಾಂಪತ್ಯದ್ದು ಈ ಕಥೆಯಾದರೆ ಇನ್ನು ಈ ಕಾಲದ ಇತ್ತೀಚಿನ ಜೋಡಿಗಳು, ಅಂದರೆ ಮದುವೆಯಾದ ಅಥವಾ ಆಗದೆಯೂ ಆದವರಂತೆ ಜೊತೆಯಾಗಿ ಬದುಕುತ್ತಿರುವ ಪ್ರೀತಿ ಪ್ರೇಮದ ಹುಡುಗ ಹುಡುಗಿಯರ ಜೋಡಿಗಳಿಗೆ ಈ ಸೀರೆ ಬೇಕಾಗಿಲ್ಲ. ಅವರು ಒಂದು ರೀತಿಯಲ್ಲಿ `ಜಿನ್ಪ್ ಪ್ಯಾಂಟ್ ಟೀ ಶರ್ಟ್ ಜೋಡಿ’ಗಳು. ಅವರಿಗೆ ಗಂಡಸರ ಬಟ್ಟೆ ಹೆಂಗಸರ ಬಟ್ಟೆ ಇವುಗಳ ನಡುವೆ ವ್ಯತ್ಯಾಸ ಏನೂ ಇರಬೇಕಾಗಿಲ್ಲ. ಎಲ್ಲಿಗಾದರು ಹೊರಟರೆ ಎರಡು ಜಿನ್ ಪ್ಯಾಂಟು ಎರಡು ಟೀ ಶರ್ಟ್ ಬ್ಯಾಗಿನಲ್ಲಿ ತುರುಕಿಕೊಂಡರೆ ಮುಗಿಯಿತು. ಇಬ್ಬರಿಗೂ ಆಗುತ್ತೆ. ಅಷ್ಟೇ ಅಲ್ಲ  ಕವಿ ಬೇಂದ್ರೆ ಅವರ `ಬಳಸಿಕೊಂಡೆವು ನಾವು ಅದನೆ ಅದಕು ಇದಕು ಎದಕು’ ಎನ್ನುವ ಸಾಲಿನಂತೆ ಹಗಲು ತಿರುಗಲಿಕ್ಕೆ ರಾತ್ರಿ ಮಲಗಲಿಕ್ಕೆ ಎಲ್ಲದಕ್ಕೂ ಆಗುತ್ತೆ. ಅವರಿಗೂ ಈ ಸೀರೆಗೂ ಸಂಬಂಧನೇ ಇಲ್ಲದ್ದರಿಂದ ಅವರ ಉಸಾಬರಿ ನಮಗೆ ಬೇಡ!

ಹೆಂಗಸರಿಗೆ ಸೀರೆ ಕೊಡಿಸುವ ವಿಚಾರದಲ್ಲಿ ಗಂಡಸರು ಹೆಂಗೆಂಗೋ ವರ್ತಿಸುತ್ತಾರೆ. ಕೆಲವು ಗಂಡಸರು ಹೆಂಗಸರಿಗಿಂತಲೂ ಹೆಚ್ಚಾಗಿ ಸೀರಿಯಸ್ಸಾಗಿ ಅಂಗಡಿಗಳಲ್ಲಿ ಅವರಿಗಿಂತಲೂ ಹೆಚ್ಚು ಸೀರೆ ಕಿತ್ತುಹಾಕಿಸಿ ಅವರಿಗಿಂತಲೂ ಹೆಚ್ಚಾಗಿ ಎತ್ತಿಕೊಳ್ಳೊದು ಮತ್ತೆ ವಾವಸ್ಸು ಕೊಡೋದು ಬದಲಿ ಮಾಡಿಕೊಳ್ಳೋದು ಮಾಡುವುದುಂಟು. ಆದರೆ ಇಂಥವರ ಸಂಖ್ಯೆ ಬಹಳ ಕಡಿಮೆ. ನಾನು ಕಂಡಂತೆ ನಮ್ಮ ಲಂಕೇಶ್ ಅವರಂಥ ಗಂಡಸರೇ ಹೆಚ್ಚು. ಲಂಕೇಶ್ ಹೆಸರು ಹೇಳಿದೆನಲ್ಲ, ಅವರ ಕಥೆ ಕೇಳಿ: ಲಂಕೇಶ್ ಸೀರೆ ಕೊಡಿಸಲೆಂದು ಅವರ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗನ್ನುವುದಕ್ಕಿಂತ ಅವರ ಹೆಂಡತಿಯೇ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಎನ್ನುವುದು ಹೆಚ್ಚು ಸರಿಯಾಗುವ ಮಾತು ಆಗಬಹುದು. ಹಾಗೆ ಹೋದ ಲಂಕೇಶ್ ಹೆಂಡತಿಯನ್ನು ಬಟ್ಟೆ ಅಂಗಡಿ ಒಳಗೆ ಕಳಿಸಿ ಹೊರಗಡೆ ನಿಂತು ಒಂದು ಸಿಗರೇಟು ಹಚ್ಚುತ್ತಿದ್ದರಂತೆ. ಆ ಸಿಗರೇಟು ಮುಗಿದು ಅದರ ತುಂಡನ್ನು ಅವರು ನೆಲಕ್ಕೆ ಎಸೆದು ಹೊಸಕಿಹಾಕುವುದರೊಳಗೆ ಹೆಂಡತಿ ಸೀರೆ ಸೆಲೆಕ್ಟ್ ಮಾಡಿಕೊಂಡು ಬರಬೇಕಾಗಿತ್ತಂತೆ. ಅಷ್ಟರೊಳಗೆ ಒಂದು ವೇಳೆ ಅವರು ಬರದಿದ್ದರೆ, “ನೀನೇನು ಜೀವನಪೂರ್ತಿ ಒಂದೇ ಸೀರೆ ಉಡ್ತೀಯಾ?” ಎಂದು ಜೋರು ಮಾಡುತ್ತಿದ್ದರಂತೆ!

ಲಂಕೇಶ್ ಅವರ ಕಥೆ ಹಂಗಾಯ್ತಲ್ಲ, ಅದು ಒಂದುಕಡೆ ಇರ್ಲಿ. ಗಂಡಸರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಲ್ಕು ಮಾತು: ಅಂದಹಾಗೆ ಈ ಸೀರೆ ಬೆಲೆ ಎಷ್ಟು ಅಂತ ಇನ್ನೂ ಗೊತ್ತಿಲ್ಲ. ಆದರೆ ಇದನ್ನು ಉಟ್ಟುಕೊಂಡು ಬಳುಕಾಡುತ್ತಾ, ಬೆಳಕುಬೀರುತ್ತಾ ಹೆಂಗಸರು ನಡೆಯುವುದು ಯಾವುದೇ ಗಂಡಸರಿಗಾದರೂ ಪುಳಕವನ್ನುಂಟುಮಾಡುವ ಸಂಗತಿಯಾದೀತು. ಸ್ವತಃ ಹೆಂಗಸರಿಗೂ ಇದು ಸಂತೋಷವನ್ನುಂಟು ಮಾಡೀತು. ಮನೆಯಲ್ಲಿ ಸ್ವಲ್ಪಹೊತ್ತು ಕರೆಂಟು ಹೋದರೂ ನಡೆದೀತು. ರಸ್ತೆಯಲ್ಲಿ ಬೀದಿದೀಪ ಇಲ್ಲದಿದ್ದರೂ ಆದೀತು. ಆದರೆ ಇಂತಹ ಈ ಸೀರೆ ಉಟ್ಟುಕೊಂಡ ಹೆಂಗಸರ ಮೈಮುಟ್ಟಿದರೆ ಪ್ರೀತಿಪ್ರೇಮದ, ಅನುರಾಗದ ಭಾವನೆ ಉಂಟಾಗುತ್ತದೆಯೋ ಅಥವಾ ಕರೆಂಟ್ ಹೊಡೆಸಿಕೊಂಡ ಅನುಭವ ಆಗುತ್ತದೆಯೋ ಇನ್ನೂ ಗಂಡಸರಿಗೆ ಗೊತ್ತಿಲ್ಲ. ಹತ್ತಿರ ಹೋದರೆ ಗ್ರೌಂಡಿಂಗ್ ಆಗಿ ಶಾಕ್ ಹೊಡೆಯುವ ಚಾನ್ಸ್ ಕೂಡ ಇರಬಹುದು. ಯಾವುದಕ್ಕೂ `ಹತ್ತಿರವಿದ್ದರೂ ಹತ್ತಿಕೊಂಡಿರುವುದನ್ನು ತಪ್ಪಿಸುವುದು’ ಆ ಮೂಲಕ `ಸುರಕ್ಷಿತ ಅಂತರ’ ಅಂದರೆ `Comfortable Distance’ ಮೇಂಟೇನ್ ಮಾಡೋದು ಒಳ್ಳೆಯದೇನೋ ಅಲ್ವಾ?

ನನ್ನ ಕಥೆ ಕೇಳಿ. ನಾನಂತು ಈ ಸೀರೆ ಕೊಡಿಸುವ ಸಂದರ್ಭ ಬರ್ಲಿಕ್ಕಿಲ್ಲ ಅಂದ್ಕೊಂಡಿದ್ದೇನೆ. ಯಾಕೆಂದರೆ ನನ್ನ ಹೆಂಡತಿ ಅದನ್ನು ಉಟ್ಟುಕೊಂಡು ಬಳ್ಳಿಯಂತೆ ಬಳುಕಾಡಿ ನಡೆದಾಡುವಷ್ಟು ತೆಳ್ಳಗೂ ಇಲ್ಲ. ಕ್ಯಾಟ್ ವಾಕ್ ಮಾಡಿ ನನ್ನನ್ನು ಖುಷಿಪಡಿಸುವ ವಯಸ್ಸೂ ಅವಳದಲ್ಲ! ನನಗೂ ನನ್ನ ಹೆಂಡ್ತಿಗೂ ನಮ್ಮ ಮನೆಯ ಡುಮ್ಮಿ ಟಿವಿಗೂ ಹೇಳಿಮಾಡಿಸಿದ ಜೋಡಿ! ಮೇಡ್ ಫಾರ್ ಈಚ್ ಅದರ್ ಅಂತನೋ ಏನೋ ಹೇಳ್ತಾರಲ್ಲ ಹಂಗೆ. ನಮ್ಮ ಕವಿ ಜಿ.ಪಿ. ರಾಜರತ್ನಂ ಅವರ ರತ್ನ ಹೇಳುವಂತೆ, `ನಮ್ಮಷ್ಟಕ್ ನಾವಾಗಿ, ಇದ್ದದ್ರಲ್ಲಿ ಹಾಯಾಗಿ’ ಅದೀವಿ. ನೀವು ಯಾರಾದ್ರು ಬೇಕಾದರೆ ಕೊಡಿಸಿ ಉಡಿಸಿ ನೋಡಿ ಸಂತೋಷ ಪಡಿರಪ್ಪ. ನಾವೆಲ್ಲ ದೂರದಿಂದ ನೋಡಿ ಸಂತೋಷ ಪಡ್ತೀವಿ. ಕೊನೆಯಲ್ಲಿ ನಾಲ್ಕು ಸಾಲಿನ ಒಂದು ಪದ್ಯ:

ಬಂದಿತು ನೋಡಿ ಎಲ್ಇಡಿ ಸೀರೆ
ಜಗಮಗ ಜಗಮಗ ಬೆಳಕಿನ ಧಾರೆ
ಉಟ್ಟುನಡೆದರೆ ಬಳುಕುತ ನೀರೆ
ನಿಂತು ನೋಡೀತು ಊರಿಗೆ ಊರೆ


·         ರಾಜೇಂದ್ರ ಬುರಡಿಕಟ್ಟಿ

Friday, September 22, 2017

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್

ಆಚಾರವೇ ಅನಾಚಾರವಾದಾಗ - ಪಿ. ಲಂಕೇಶ್
ಮೊನ್ನೆ ನಮ್ಮ ಬಿ.ವಿ. ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಪುಸ್ತಕ ಬಿಡುಗಡೆ ಮಾಡಲು ಶೂದ್ರ ಸಭೆ ಏರ್ಪಡಿಸಿದ್ದ ಸಂದರ್ಭ. ಶರ್ಮರ ಭಾಷಣ, ಕಿ.ರಂ. ನಾಗರಾಜನ ವಿಮರ್ಶೆ, ಮತ್ತು ವೀರಭದ್ರಪ್ಪನವರ ಒಂದೆರಡು ಮಾತುಗಳು. ನಮ್ಮ ಜನ ಇತ್ತೀಚೆಗೆ ಏನನ್ನು ಹೇಳಲೂ ಹಿಂಜರಿಯುತ್ತಿದ್ದಾರೆ; ಅವರು ಹಿಂಜರಿಯಲು ಕಾರಣಗಳಿವೆ. ಇಲ್ಲಿಯ ಕಂದಾಚಾರ, ಜಾತೀಯತೆ, ಮೂಢನಂಬಿಕೆಯ ವಿರುದ್ಧ ಸದಾ ಪ್ರತಿಭಟಿಸುವ ಒಂದು ಗುಂಪಿತ್ತು. ಅದರಲ್ಲಿ ದಲಿತರು, ಬಂಡಾಯದವರು, ಸಮಾಜವಾದಿಗಳು, ಕಮ್ಯುನಿಷ್ಟರು ಇದ್ದರು. ಇವರು ತುಂಬಾ ಉಗ್ರವಾಗಿ ಪ್ರತಿಭಟಿಸುತ್ತ ಇದ್ದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ; ಇಲ್ಲಿ ಸಮಾಜವಾದಿ ಸರ್ಕಾರ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗ್ಯಾರಂಟಿಯಾಗಿದ್ದಾಗ, ಈ ಪ್ರತಿಭಟನಾಕಾರರು ಪೂಜ್ಯರೂ ಪುನೀತರೂ ಆಗುವ ಸಂಭವವೇ ಇಲ್ಲ ಎಂಬುದು ನಿಶ್ಚಿತವಾಗಿದ್ದಾಗ…


ಆಮೇಲೇನಾಯಿತು ಅಂದರೆ, ಇವರಲ್ಲಿ ಅನೇಕರು ಸಾಂಪ್ರದಾಯಿಕ ಮದುವೆ ಮಾಡಿಕೊಂಡರು, ಕೆಲವರು ಪ್ರೇಮವಿವಾಹವಾಗಿ ವಿಚ್ಛೇದನಗೊಂಡರು. ಗುಟ್ಟಾಗಿ ವರದಕ್ಷಿಣೆ ತೆಗೆದುಕೊಂಡರು, ಜಗದ್ಗುರುಗಳ ನೇತೃತ್ವದ ಕಾಲೇಜಿನಲ್ಲಿ ಕೆಲಸಕ್ಕಾಗಿ ಜಗದ್ಗುರು ಮತ್ತು ಮ್ಯಾನೇಜ್ಮೆಂಟಿನ ಕಾಲಿಗೆ ಎರಗಿದರು. ಜನತಾದಳ, ಜನತಾ ಸರ್ಕಾರದಲ್ಲಿ ಸಾಕಷ್ಟು ತಿಂದು ಕೆಟ್ಟರು. ಕಾಂಗೈಗಳೊಂದಿಗೆ ಹೊಂದಾಣಿಕೆ ನಡೆಸಿಕೊಂಡು ಕೃತಾರ್ಥರಾದರು. ಇವರೆಲ್ಲರ ಪ್ರತಿಭಟನೆ ಸ್ಫೂರ್ತಿ ಕಳೆದುಕೊಂಡು ಶಿವಪೂಜೆಯ ಗುಣ ಪಡೆಯತೊಡಗಿತು. ಇದೊಂದು ವ್ಯರ್ಥವಾಗಿ ಹಾರಾಡುವವರ ಗುಂಪಾಗಿ ಜನ ಪರಿಗಣಿಸಿದರು.

ಆದ್ದರಿಂದಲೇ ವೀರಭದ್ರಪ್ಪ ತಮ್ಮೆಲ್ಲ ಕಷ್ಟಗಳ ನಡುವೆ, ಒತ್ತಡಗಳ ನಡುವೆ ನಮ್ಮ ತರುಣ ಜನಾಂಗಕ್ಕೆ ಉಪಯುಕ್ತವಾಗಬಲ್ಲ ಲೇಖನಗಳನ್ನು ಬರೆದಾಗ ಅವನ್ನೆಲ್ಲ ಸೇರಿಸಿ ಪುಸ್ತಕ ಮಾಡಿದೆವು. ಇವತ್ತು ಹೊಸ ಜನಾಂಗ, ಹೊಸ ಸ್ಫೂರ್ತಿಯಿಂದ, ಕಟ್ಟಕಡೆಯವರೆಗೆ ಇರಬಲ್ಲ ಕನಿಷ್ಠ ಕಾಳಜಿಯಿಂದ, ಬದುಕುವ ರೀತಿಯ ಅಂಗವಾಗಿಯೇ ಪ್ರತಿಭಟಿಸುವುದನ್ನು, ವೈಚಾರಿಕ ಪ್ರಶ್ನೆ ಕೇಳುವುದನ್ನು ಕಲಿಯಬೇಕಾಗಿದೆ. ಎಂದಿಗಿಂತ ಇವತ್ತು ವೈಚಾರಿಕತೆಯ ಅವಶ್ಯಕತೆ ಇದೆ. ವೈಚಾರಿಕತೆ ಎಂದರೆ ಕೇವಲ ತರ್ಕವಲ್ಲ, ಒಣವಾದವಲ್ಲ. ವೈಚಾರಿಕತೆ ಎಂದರೆ ನಮ್ಮ ಪಂಚೇಂದ್ರಿಯ ಮತ್ತು ಅಂತರಾಳಕ್ಕೆ ಗೋಚರಿಸುವ ಸತ್ಯಗಳ ಬಗ್ಗೆ ನಿಷ್ಠರಾಗಿರುವುದು, ನಮ್ಮಂತೆಯೇ ಅನುಭವಿಸುವ ಎಲ್ಲರೊಂದಿಗೆ ಆ ಸತ್ಯಗಳನ್ನು ಹಂಚಿಕೊಳ್ಳುವುದು. ಕಣ್ಣೆದುರು ಕಾಣುವ ಅನ್ಯಾಯ, ಅನಾಚಾರ, ಮೌಢ್ಯ, ಸ್ವಾರ್ಥದ ವಿರುದ್ಧ ಸೊಲ್ಲೆತ್ತುವ ದಿಟ್ಟತನ, ಸ್ಪಷ್ಟತೆ ಬೆಳಸಿಕೊಳ್ಳುವುದು.



ಮಾರ್ಕ್ಸ್ ತೀರಿಕೊಂಡಿರುವುದಾಗಿ ಲೋಹಿಯಾ, ಜೆ.ಪಿ, ಗಾಂಧಿಗಳೆಲ್ಲ ಕಣ್ಮರೆಯಾಗಿರುವುದಾಗಿ ಬೀಗುತ್ತಿರುವ ಕೊಳಕರಾದ ಹುಂಬರು ಈ ಪ್ರತಿಭಟನೆಯ ಅರ್ಥ ತಿಳಿದುಕೊಳ್ಳದಿದ್ದರೆ ಮಣ್ಣುಮುಕ್ಕುತ್ತಾರೆ. ಭಾರತದ ಬಂಡವಾಳಶಾಹಿ ಮತ್ತು ಸಮಾಜವಾದ, ಸಮತಾವಾದಗಳೆಲ್ಲ ಕ್ಲೀಷೆಗಳಾಗಿವೆಯೇ ಹೊರತು ಸತ್ತುಹೋಗಿಲ್ಲ. ಇವಕ್ಕೆಲ್ಲ ಹೊಸ ಅರ್ಥ ಮತ್ತು ಚಾಲನೆ ಬರಬೇಕಾದರೆ ಚಿಂತನೆ ಮತ್ತು ಕ್ರಿಯೆಗೆ ಜೀವ ಬರಬೇಕಾಗಿದೆ.
*****

ಇದು ನಿನ್ನೆ - 21-09-2017- ನಮ್ಮ ಭೌತಿಕ ಜಗತ್ತಿನಿಂದ ಕಳಚಿಕೊಂಡ ನಾಡಿನ ವೈಚಾರಿಕ ಸಾಹಿತ್ಯದ ಪ್ರಮುಖ ಕೊಂಡಿ, ಕನ್ನಡದ ಆಚೆಗೆ ಹೋಗಿ ತೆಲುಗು ಇಂಗ್ಲಿಷ್ ಭಾಷೆಗಳಿಗೂ ಅನುವಾದ ಗೊಂಡಿದ್ದ ಬಹುಮುಖ್ಯ ವೈಚಾರಿಕ ಕೃತಿಗಳ ಲೇಖಕ ಪ್ರೊ.ಬಿ.ವಿ.ವೀರಭದ್ರಪ್ಪನವರ `ವೇದಾಂತ ರೆಜಿಮೆಂಟ್’ ಇಪ್ಪತ್ತೈದು ವರ್ಷಗಳ ಹಿಂದೆ (1991-92) ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ನೆಪಮಾಡಿಕೊಂಡು ಆಗಿನ ಬಹುಮುಖ್ಯ ಲೇಖಕ ಪಿ.ಲಂಕೇಶ್ ತಮ್ಮ `ಲಂಕೇಶ್ ಪತ್ರಿಕೆ’ಯಲ್ಲಿ ಆ ಕಾಲದ ವೈಚಾರಿಕ ಸಾಹಿತ್ಯ ಕ್ಷೇತ್ರದ ಸೂಕ್ಷ್ಮ ಒಳನೋಟವನ್ನು ಕೊಡುತ್ತಾ ಬರೆದ ಲೇಖನ - ಎತ್ತಿಕೊಟ್ಟದ್ದು: ರಾಜೇಂದ್ರ ಬುರಡಿಕಟ್ಟಿ)

Friday, September 15, 2017

ಕುವೆಂಪು - ಲಂಕಿಣಿ - ಗೌರಿ

ಕುವೆಂಪು - ಲಂಕಿಣಿ - ಗೌರಿ

ಒಂದು ನಾಡಿನ-ದೇಶದ ಕಲೆ, ಸಾಹಿತ್ಯ ಸಂಸ್ಕೃತಿಗಳನ್ನು ಆ ದೇಶದ ಮಕ್ಕಳಿಗೆ ಯುವಜನತೆಗೆ ಸರಿಯಾದ ರೀತಿಯಲ್ಲಿ ಪರಿಚಯ ಮಾಡಿಕೊಡದೆ ಅವರ ತಲೆಗೆ ಮತಧರ್ಮಗಳ ಲದ್ಧಿಯನ್ನು ತುಂಬಿದರೆ ಏನಾಗುತ್ತದೆ ಎಂಬುದಕ್ಕೆ ಈ ದೇಶದ ವರ್ತಮಾನ ಮತ್ತು ಭವಿಷ್ಯವನ್ನು ಹೆಗಲಮೇಲೆ ಹೊತ್ತುಕೊಂಡಿರುವ ಯುವ ಸಮುದಾಯದ ಒಂದು ಭಾಗ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭವನ್ನು ಸಂಭ್ರಮಾಚರಣೆಯನ್ನಾಗಿ ಸ್ವೀಕರಿಸುವಂತಹ ವಿಕೃತ ಮನಸ್ಥಿತಿಗೆ ಇಳಿದ ಘಟನೆ ಸೂಕ್ಷ್ಮವಾಗಿ ಸೂಚಿಸುತ್ತದೆ.

ಈ ಯುವಕರಲ್ಲಿ ಕೆಲವರು ಗೌರಿಯವರನ್ನು ಟೀಕಿಸುವ ಭರಾಟೆಯಲ್ಲಿ ಅವರನ್ನು `ಲಂಕಿಣಿ’ `ಲಂಕಿಣಿ’ ಎಂದು ಕರೆದು ಕುಣಿದು ಕುಪ್ಪಳಿಸಿದರು. (ಹೀಗೆ ಸಂಭ್ರಮಾಚರಣೆಯನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಆಚರಿಸಿದ ಒಬ್ಬಾತನನ್ನು ಪೋಲೀಸರು ಬಂಧಿಸಿದ್ದೂ ಈಗಾಗಲೇ ನಡೆದಿದೆ. ಆ ದಾರಿ ಒಂದು ಕಡೆ ಇರಲಿ) ಗೌರಿಯನ್ನು `ಲಂಕಿಣಿ’ ಎಂದು ಕರೆಯುವ ಮೂಲಕ ಅವರನ್ನು ತೆಗಳುತ್ತಿದ್ದೇವೆಯೋ ಹೊಗಳುತ್ತಿದ್ದೇವೆಯೋ ಎಂಬ ಪರಿಜ್ಞಾನವೂ ಇಲ್ಲದ ಖಾಲಿಕೊಡಗಳಾಗಿ ಈ ಯುವಕರು ವರ್ತಿಸಿದ್ದು ಮಾತ್ರ ದುಃಖದಲ್ಲೂ ತಮಾಸೆಯಾಗಿ ಕಾಣುವ ವ್ಯಂಗವಾಗಿತ್ತು!

ಗೌರಿ ಲಂಕೇಶ್ ಯಾರು ಏನು ಎಂಬುದನ್ನು ಇಂದು ಇಡೀ ಜಗತ್ತು ಹೇಳುತ್ತಿದೆ. ಅವರ ಹತ್ಯೆಗೆ ಹೊರದೇಶಗಳಿಂದ ಬಂದ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನಾ ಪ್ರತಿಕ್ರಿಯೆ ನನಗೆ ಗೊತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಬೇರಾವ ಕನ್ನಡಿಗರಿಗೂ ಬಂದಂತಿಲ್ಲ. ಅವರ ಹತ್ಯೆಯನ್ನು ಖಂಡಿಸಿ ವಿಶ್ವಸಂಸ್ಥೆ ಖಂಡನಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಪ್ರಪಂಚದ ಬೇರೆಬೇರೆ ರಾಷ್ಟ್ರಗಳ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಮಾಡುವ ಮೂಲಕ ಇದು ಜಾಗತಿಕ ಮಟ್ಟದ ಸುದ್ಧಿಯಾಯಿತು! ಆ ಮೂಲಕ ಭಾರತ ‘ಸಹಿಷ್ಣುತೆಯ ದೇಶ’ ಮತ್ತು ಅದರ ಭಾಗವಾದ ಕರ್ನಾಟಕ `ಸರ್ವಜನಾಂಗದ ಶಾಂತಿಯ ತೋಟ’ ಎಂಬಿತ್ಯಾದಿ ಭಾವನಾತ್ಮಕ ಹೇಳಿಕೆಗಳು ಮರುಪರಿಶೀಲನೆಗೆ ಒಳಪಡುವಂತಾಯಿತು ಕೂಡ. ಈ ಘಟನೆಯಿಂದಾಗಿ ರಾಜ್ಯದ ಮತ್ತು ಆ ಮೂಲಕ ದೇಶದ ಮರ್ಯಾದೆಯನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಹರಾಜು ಹಾಕಿದಂತಾಗಿದ್ದೂ ಸುಳ್ಳಲ್ಲ.

ಗೌರಿಯವರನ್ನು `ಅವಳು ಅಂಥವಳು’ `ಅವಳು ಇಂಥವಳು’ `ಅವಳು ನಕ್ಷಲೀಯಳು’ `ಅವಳು ಸೈನಿಕರನ್ನು ಅವಮಾನಿಸುತ್ತಿದ್ದಳು’ `ಅವಳು ರಾಷ್ಟ್ರದ್ರೋಹಿಯಾಗಿದ್ದಳು’ ಎಂಬಿತ್ಯಾದಿ ನಮ್ಮ ರಾಷ್ಟ್ರಭಕ್ತರ `ಭಜನೆ’ಗೆ ಜಾಗತಿಕ ಸಮುದಾಯ ಕಿವಿಗೊಡದೇ ಒಬ್ಬ ದಿಟ್ಟಪತ್ರಕರ್ತೆಗೆ, ವಿಚಾರವಾದಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಿತು.

ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ಘನತೆಯನ್ನು ತಿಳಿದುಕೊಳ್ಳುವ ಯೋಗ್ಯತೆ ಅಥವಾ ಇಚ್ಚೆ `ಸಂಗ್ತಿಸವಾಸ’ದಿಂದಾಗಿ ಇವರಿಗೆಲ್ಲ ಇಲ್ಲದಿರಬಹುದು. ಅದು ಸಹಜ ಕೂಡ. ಆದರೆ ಮಾತೆತ್ತಿದರೆ ತಮ್ಮನ್ನು ಈ ದೇಶದ ಧರ್ಮ ಮತ್ತು ಸಂಸ್ಕೃತಿಗಳ ಅಧಿಕೃತ ವಾರಸುದಾರರು ಎಂದು ಬಿಂಬಿಸಿಕೊಳ್ಳುವ ಇವರ `ದೇಶಪ್ರೇಮಿ’ ಗುರುಗಳು ಇವರಿಗೆ ಕೊನೆಯ ಪಕ್ಷ, ತಾವು ಈ ದೇಶದ ಸಂಸ್ಕೃತಿಯ ಪ್ರತೀಕಗಳೆಂದು ಸಾರಲಾಗುತ್ತಿರುವ ರಾಮಾಯಣ, ಮಹಾಭಾರತ ಅವುಗಳ ಅಂಗಗಳಾದ ರಾಮ, ಸೀತೆ, ಅಯೋಧ್ಯೆ, ರಾವಣ, ಲಂಕೆ, ಲಂಕಿಣಿ, ಪಾಂಡವರು, ಕೌರವರು ಇಂತಹ ಸಂಗತಿಗಳಲ್ಲಿಯಾದರೂ ಒಂದು ಮಟ್ಟದ ಪಾಠವನ್ನೂ ಹೇಳಿಕೊಡದಿದ್ದರೆ ಹೇಗೆ?

ಇಂತಹ ದಾರಿತಪ್ಪಿಸುವ ಗುರುಗಳ ಸಹವಾಸ ಬಿಟ್ಟು ದಾರಿತೋರಿಸುವ ಗುರುಗಳಾದ ಸಾಹಿತಿ-ಸಂಸ್ಕೃತಿ ಚಿಂತಕರ ಕಡೆ ಬಂದು ನಿಮ್ಮ ವ್ಯಕ್ತಿತ್ವವನ್ನು ಪೂರ್ಣಪ್ರಮಾಣದಲ್ಲಿ ಬೆಳಸಿಕೊಳ್ಳಿ ಎಂದು ಈ ದಾರಿಬಿಡುತ್ತಿರುವ ಯುವಜನತೆಗೆ ಪ್ರೀತಿಪೂರ್ವಕ ವಿನಂತಿ ಮಾಡಿಕೊಳ್ಳುತ್ತಾ ಲಂಕಿಣಿ ಯಾರು ಎಂಬುದನ್ನು ನಮ್ಮ ಕನ್ನಡ ಸಂಸ್ಕೃತಿ ಕಂಡ ಬಗೆಯ ಒಂದು ಉದಾಹರಣೆಯನ್ನು ಕೊಡುತ್ತೇನೆ ಗಮನಿಸಿ:

ಕನ್ನಡದ ಮಹಾಕವಿ ಕುವೆಂಪು ಅವರು ತಮ್ಮ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಕೊಡುವ ಲಂಕಿಣಿಯ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಾಡಿನ ಮಧ್ಯೆ ಹೆಂಡತಿಯನ್ನು ಕಳೆದುಕೊಂಡ ರಾಮ ಅಕ್ಷರಶಃ ಅಲೆಮಾರಿ ಗಾಯಕನಾಗಿಬಿಡುತ್ತಾನೆ. ದೇವರ ಅವತಾರ ಎಂದು ನಾವೆಲ್ಲ ತಿಳಿದುಕೊಂಡಿರುವ ಈ ರಾಮ ಬುದ್ಧಿಸ್ಥಿಮಿತ ಕಳೆದುಕೊಂಡ ಸಾಮಾನ್ಯ ಮನುಷ್ಯನಂತೆ (ಮರಗಿಡಗಳನ್ನೆಲ್ಲ ನನ್ನ ಹೆಂಡತಿಯನ್ನು ಕಂಡಿರಾ ಕಂಡಿರಾ ಹೇಳಿರಿ ಹೇಳಿರಿ ಎಂದು ಕೇಳುತ್ತಾ) ಅಲೆದಾಡುವ ಸಂದರ್ಭ ನಿರ್ಮಾಣವಾಗಿ ಈ ದೇವಮಾನವ ಕಳೆದುಹೋದ ತನ್ನ ಸ್ವಂತ ಹೆಂಡತಿಯನ್ನೂ ಸ್ವಶಕ್ತಿಯಿಂದ ಹುಡುಕಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿಬಿಡುತ್ತಾನೆ!

ಕೊನೆಗೆ ಮನುಷ್ಯರಿಗಿಂತ ಅಂತಸ್ತಿನಲ್ಲಿ ಒಂದು ಹೆಜ್ಜೆ ಕೆಳಗೆ ಎಂದು ಗುರುತಿಸಲ್ಪಟ್ಟಿದ್ದ ಸುಗ್ರೀವನ ಸಹಾಯವನ್ನು ಅವನು ಪಡೆಯುವಂತಾಗಿಬಿಡುತ್ತದೆ! ಕಂಗಾಲಾಗಿ ಅಂಗಲಾಚುವ ಸ್ಥಿತಿಯಲ್ಲಿದ್ದ ರಾಮಲಕ್ಷ್ಮಣರಿಗೆ ಈ ಸುಗ್ರೀವಸಖ್ಯದಿಂದಾಗಿಯೇ ಸೀತೆಯನ್ನು ಹುಡುಕಲು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಈ ಯೋಜನೆಯ ಪ್ರಕಾರ ಲಂಕೆಗೆ ಹೋದ ಹನುಮಂತನಿಗೆ ಲಂಕೆಯ ಪ್ರವೇಶದ್ವಾರದಲ್ಲಿ ಮೊದಲಿಗೆ ಸಿಗುವವಳೇ ಈ ಲಂಕಿಣಿ. ಅವಳು ತನ್ನನ್ನು ‘ದಶಶಿರ ಕಲಕಲಕ್ಷ್ಮಿ, ಲಂಕಾದೇವಿ, ಲಂಕಿಣಿಯೆನಾಂ’ ಎಂದು ಹನುಮಂತನಿಗೆ ಪರಿಚಯಿಸಿಕೊಳ್ಳುತ್ತಾಳೆ. ಅವಳು ಇಡೀ ಲಂಕಾ ಸಾಮ್ರಾಜ್ಯವನ್ನು ರಕ್ಷಿಸುವ ಲಂಕೆಯ ಅಧಿದೇವತೆ! ವೈರಿಪಾಳೆಯದಿಂದ ಬಂದ ಹನುಮಂತನನ್ನು ಆರಂಭದಲ್ಲಿ ಒಳಗೆ ಬಿಡಲು ಒಪ್ಪದ ಇವಳು ನಂತರ ಹನುಮಂತನ ಜೊತೆ ದೀರ್ಘಚರ್ಚೆಮಾಡಿ ಸಾವಧಾನದಿಂದ ಅವನ ಮಾತುಗಳನ್ನು ಆಲಿಸಿ ಅವನು ಬಂದ ಸದುದ್ದೇಶವನ್ನು ತಿಳಿದುಕೊಳ್ಳುತ್ತಾಳೆ.

ಕಾಡಿನಿಂದಲೇ ಬಂದಿದ್ದ ಸ್ವತಃ ಕಾಡುಮನುಷ್ಯನೇ ಆಗಿದ್ದ (ನಮ್ಮಲ್ಲಿ `ಹಳ್ಳಿಗಮಾರ’ ಅನ್ನುವ ನಿಂದನಾಪದ ಇದೆಯಲ್ಲ! ) ಹನುಮಂತ ಆಧುನಿಕತೆಯ ಅವತಾರವಾಗಿರುವ ಭವ್ಯನಗರವಾದ ಲಂಕೆಯ ವೈಭವವನ್ನು ಕಂಡು ಕೀಳರಿಮೆಯಿಂದ ಕುಗ್ಗಿಹೋಗುತ್ತಾನೆ. ಹಳ್ಳಿಯಿಂದ ಹೊಸದಾಗಿ ನಗರಕ್ಕೆ ಹೋದ ವ್ಯಕ್ತಿಯೊಬ್ಬ ಅಲ್ಲಿನ ನಯನಾಜೂಕುಗಳಿಗೆ ಹೊಂದಿಕೊಳ್ಳಲಾಗದೆ ಅನುಭವಿಸುವ ಹಿಂಸೆ ಕೀಳರಿಮೆಗಳನ್ನೆಲ್ಲ ಈ ಹನುಮಂತ ಅನುಭವಿಸುತ್ತಾನೆ.

ಆದರೆ ಬಹುಚಾಣಾಕ್ಷಮತಿಯಾದ ಲಂಕಿಣಿ ಅವನ `ಹಳ್ಳಿತನ’ದಲ್ಲಿರುವ `ಒಳ್ಳೆಯತನ’ವನ್ನು ಸೂಕ್ಷ್ಮವಾಗಿ ಗುರುತಿಸುತ್ತಾಳೆ. ಒಂದು ಹಂತದಲ್ಲಿ ಹನುಮಂತನೇ ಅವಳಿಗೆ, `ಮನ್ನಿಸೆನ್ನೊರಟುತನಮಂ’ ಎಂದು ಕ್ಷಮೆ ಕೇಳಿ ದೊಡ್ಡವನಾಗುತ್ತಾನೆ. ಆದರೆ ಒಳ್ಳೆಯತನ ತೋರಿಸುವಲ್ಲಿ ಅವನಿಗೂ ಒಂದು ಹೆಜ್ಜೆ ಮುಂದೆ ಹೋಗುವ ಈ ಲಂಕಿಣಿ, `ಸೋಲೊಪ್ಪಿದೆನ್! ನಿನಗೆ ವಶಳಾದೆನ್’ ಎಂದು ಹೇಳುವ ಮೂಲಕ ಅವನಿಗಿಂತಲೂ ದೊಡ್ಡವಳಾಗಿಬಿಡುತ್ತಾಳೆ! ಹನುಮಂತನ ಹೇಳಿಕೆ ಮತ್ತು ರಾವಣನ ಕಾರ್ಯ ಎರಡನ್ನೂ ಕೂಲಂಕಷವಾಗಿ ವಿಚಾರಿಸಿನೋಡಿ ಕೊನೆಗೆ ಈ ಹನುಮಂತನನ್ನು ಲಂಕೆಯ ಒಳಗೆ ಹೋಗಲು ಬಿಟ್ಟುಬಿಡುತ್ತಾಳೆ!!

ಲಂಕೆಯನ್ನು ಕಾಯಲು ಇದ್ದ ಲಂಕಿಣಿ ಹೀಗೆ ವೈರಿ ಪಾಳೆಯದಿಂದ ಬಂದ ಹನುಮಂತನನ್ನು ಲಂಕೆಯ ಒಳಗೆ ಬಿಟ್ಟದ್ದು ಅವಳ ಕರ್ತವ್ಯಲೋಪ ಆದಂತಾಗಲಿಲ್ಲವೇ ಎಂದು ಅವಳ ನಿರ್ಧಾರದಿಂದ ನಮಗೆ ಅನ್ನಿಸಬಹುದು. ಅವಳಿಗೂ ಈ ಪ್ರಶ್ನೆ ಆರಂಭದಲ್ಲಿ ಕಾಡುತ್ತದೆ. ಆಗ ಅವಳ ಮುಂದೆ ಎರಡು ಆಯ್ಕೆಗಳಿದ್ದವು. ಒಂದು: ಹನುಮಂತನಿಗೆ ಲಂಕಾಪ್ರವೇಶಕ್ಕೆ ಅನುಮತಿ ಕೊಡುವುದು. ಇನ್ನೊಂದು ಅವನಿಗೆ ಪ್ರವೇಶ ನಿರಾಕರಿಸುವುದು: ಮೊದಲ ಆಯ್ಕೆಯನ್ನು ಅವಳು ಮಾಡಿಕೊಂಡು ಅವನನ್ನು ಒಳಗೆ ಬಿಟ್ಟರೆ ನ್ಯಾಯಕ್ಕೆ ಬೆಂಬಲಕೊಟ್ಟಂತಾಗುತ್ತದೆ ನಿಜ; ಆದರೆ ಅದು ತನ್ನೊಡೆಯನಾದ ಲಂಕೇಶ ರಾವಣನಿಗೆ ದ್ರೋಹಬಗೆದಂತಾಗುತ್ತದೆ! ಎರಡನೆಯದನ್ನು ಆಯ್ದುಕೊಂಡು ಅವನಿಗೆ ಲಂಕಾಪ್ರವೇಶವನ್ನು ನಿರಾಕರಿಸಿದರೆ ತನ್ನೊಡೆಯ ರಾವಣನಿಗೆ `ಸ್ವಾಮಿನಿಷ್ಠೆ’ ತೋರಿಸಿದಂತಾಗುತ್ತದೆ ನಿಜ; ಆದರೆ ಅದು ಅನ್ಯಾಯಕ್ಕೆ ಬೆಂಬಲವನ್ನು ಕೊಟ್ಟಂತಾಗುತ್ತದೆ. ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಬಗ್ಗೆ ಅವಳು ತೀವ್ರ ಗೊಂದಲಕ್ಕೆ ಬೀಳುತ್ತಾಳೆ. `ನನ್ನವಳಿಯಲ್ ಅತ್ತಲುಮ್ ಇತ್ತಲುಮ್ ಕತ್ತರಿಪುದಿರ್ಬಾಯ ಖಡ್ಗದೋಲ್’ ಎನ್ನುವ ಅವಳು ಮಾತು ಎರಡು ಅಲಗಿನ ಕತ್ತಿಗೆ ಸಿಕ್ಕು ಒದ್ದಾಡುವ ಅವಳ ಮನಸ್ಸುನ್ನು ಬಿಂಬಿಸುತ್ತದೆ.

ಹೀಗಿದ್ದೂ ಅವಳು ಅಂತಿಮವಾಗಿ ಆಯ್ಕೆಮಾಡಿಕೊಳ್ಳುವುದು ಹನುಮಂತನನ್ನು ಒಳಗೆ ಬಿಡುವ ಮೊದಲನೇ ಆಯ್ಕೆಯನ್ನೇ! ಇಲ್ಲಿ ಸಮಸ್ಯೆಯನ್ನು ಮೇಲ್ನೋಟದಲ್ಲಿ ಅಲ್ಲದೆ ಅಮೂಲಾಗ್ರವಾಗಿ ಗ್ರಹಿಸಿ ಅದರ ನಿವಾರಣೆ ಹೇಗೆ ಮಾಡಬಹುದೆಂದು ತೀರ್ಮಾನಿಸಿಯೇ ವೈರಿಪಾಳೆಯದ ಹನುಮಂತನನ್ನು ಒಳಗೆ ಬಿಡುವ ನಿರ್ಧಾರಕ್ಕೆ ಅವಳು ಬರುತ್ತಾಳೆ. ಆ ಮೂಲಕ ಬಹಳ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಚಾಣಾಕ್ಷೆಯಾಗಿ ನಮಗೆ ತೋರುತ್ತಾಳೆ. ಅವಳು ಯಾವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಳು ಎಂಬುದನ್ನು ಅವಳು ಹನುಮಂತನಿಗೆ ಹೇಳುವ ಈ ಮಾತು ಸ್ಪಷ್ಟಪಡಿಸುತ್ತದೆ: ‘ಸೀತಾನ್ವೇಷಣಂ ನಿನಗೆ; ನನಗದಂ ಕೂಡಿ, ಲಂಕಾಕ್ಷೇಮ ಚಿಂತನಂ’

ಗಮನಿಸಿ: ಹನುಮಂತ `ನನಗೆ ಸೀತೆಯನ್ನು ಹುಡುಕುವುದು ಚಿಂತೆ’ ಎಂದಾಗ ಸಾಮಾನ್ಯ ಹೆಣ್ಣಾಗಿದ್ದರೆ ಅವಳು `ನನಗೆ ಲಂಕೆಯನ್ನು ಕಾಯುವುದು ಚಿಂತೆ’ ಎಂದು ಹೇಳಿಬಿಡುತ್ತಿದ್ದಳು. ಅವಳು ಹಾಗೆ ಹೇಳದೆ `ಸೀತೆಯ ಕ್ಷೇಮ ಮತ್ತು ಲಂಕೆಯ ಕ್ಷೇಮ ಎರಡನ್ನೂ ಮಾಡುವುದು ಹೇಗೆ ಎಂಬುದು ನನ್ನ ಚಿಂತನೆ’ ಎಂಬ ಅದ್ಭುತವಾದ ಮಾತನ್ನು ಹೇಳುತ್ತಾಳೆ. ಅವಳ ನಿರ್ಧಾರದಿಂದ ಆಗಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪುತ್ತದೆ.

`ಮಾತುಕತೆಯ ಮೂಲಕ ಅಂದರೆ ಚರ್ಚೆಯ ಮೂಲಕ ಎಂತಹ ಸಮಸ್ಯೆಯನ್ನಾದರೂ ನಾವು ಬಗೆಹರಿಸಿಕೊಳ್ಳಬಹುದು’ `ವೈರಿಗಳಲ್ಲಿಯೂ ಇರುವ ಒಳ್ಳೆಯತನವನ್ನು ನಾವು ಗೌರವಿಸಬೇಕು’ ಎನ್ನುವ ಎರಡು ಮುಖ್ಯ ತತ್ವಗಳನ್ನು ಪ್ರತಿಪಾದಿಸುವ ಲಂಕಿಣಿ ಇವುಗಳ ಜೊತೆಗೆ ಇವೆರಡಕ್ಕೂ ಮುಖ್ಯವಾದ ಇನ್ನೊಂದು ಮಹತ್ವದ ತತ್ವವನ್ನು ಪ್ರತಿಪಾದಿಸುತ್ತಾಳೆ. ಅದೆಂದರೆ `ನಾವು ಕೇವಲ ನಮ್ಮವರ ಯೋಗಕ್ಷೇಮವನ್ನಲ್ಲ ನಮ್ಮ ವೈರಿಗಳ ಯೋಗಕ್ಷೇಮವನ್ನೂ ಬಯಸುವ ಮೂಲಕ ಇಡೀ ನಾಡಿನ ಯೋಗಕ್ಷೇಮವನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು’

ವೈರಿಗಳ ಯೋಗಕ್ಷೇಮವನ್ನೂ, ಇಡೀ ನಾಡಿನ ಯೋಗಕ್ಷೇಮವನ್ನೂ ಬಯಸಿದ ಕುಶಲಮತಿ ಮತ್ತು ವಿಶಾಲಮತಿ ಎರಡೂ ಆದ `ಲಂಕಿಣಿ’ಗೆ ನಮ್ಮ ಗೌರಿಯನ್ನು ಹೋಲಿಸಿ ಟೀಕಿಸುತ್ತಿದ್ದಾರೆ ನಮ್ಮ ಈ ಯುವಕರು! ಬಹುಶಃ ಗೌರಿ ಅವರಂತಹ ವಿಶಿಷ್ಟವೂ ಸಂಕೀರ್ಣವೂ ಆದ ವ್ಯಕ್ತಿತ್ವಗಳಿಗೆ ಮಾತ್ರ ಹೀಗೆ `ಬುದ್ಧಿಜೀವಿ’ಗಳಿಂದ ಪ್ರಜ್ಞಾಪೂರ್ವಕವಾಗಿ ಮತ್ತು `ಬುದ್ಧಿಗೇಡಿ’ಗಳಿಂದ ಅಪ್ರಜ್ಞಾಪೂರ್ವಕವಾಗಿ ಒಟ್ಟಿನಲ್ಲಿ ಎರಡೂ ವರ್ಗಗಳಿಂದಲೂ ಗೌರವಪಡೆಯಲು ಸಾಧ್ಯವೇನೋ!!

ಡಾ, ರಾಜೇಂದ್ರ ಬುರಡಿಕಟ್ಟಿ
15-09- 2017

Tuesday, August 29, 2017

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಪಂಪೀ ಒತ್ತಡ ಮತ್ತು ಕುಂವೀ ಸಂಕಟ

ಇತ್ತೀಚೆಗಷ್ಟೆ ಕೆಲವು ಪಂಚಪೀಠಾಧೀಶ  'ಜಗದ್ಗುರು'ಗಳ ಬಗ್ಗೆ ಹಿರಿಯ ಲೇಖಕ ಮಿತ್ರರಾದ ಕುಂಬಾರ ವೀರಭದ್ರಪ್ಪ ಅವರು ತಮ್ಮ ಸಹಜಶೈಲಿಯ ಮಾತಿನ ಚಾಟಿ ಬೀಸಿದ್ದರು. ಅವರು ಆಗ ಮಾತನಾಡಿದ್ದು ಅವರ ನಿಜವಾದ ಮತ್ತು ಸಹಜವಾದ ಅಭಿಪ್ರಾಯ ಎಂದು ನಂಬಲು ಕಾರಣಗಳಿವೆ. ಏಕೆಂದರೆ ಆ ಮಾತುಗಳನ್ನು ಆಡುವಾಗ ಅವರ ಮೇಲೆ ಯಾವುದೇ ಒತ್ತಡಗಳಿದ್ದಂತೆ ತೋರುವುದಿಲ್ಲ. ಆಗ ಅವರು ಆಡಿದ ಮಾತುಗಳು ಕೆಲವು ಪಂಪೀಗಳ ಅರ್ಥರಹಿತವಾದ ಕೆಲವು ಆಚರಣೆಗಳ ಬಗೆಗಿನ ಅವರ ವಿರೋಧವೇ ಹೊರತು ಆ 'ಮಹಾಗುರು' ಗಳನ್ನು ವೈಯಕ್ತಿಕವಾಗಿ ವಿರೋಧಿಸುವ ಉದ್ದೇಶ ಅವರಿಗಿದ್ದಂತೆ ತೋರುವುದಿಲ್ಲ.

ಆದರೆ ಅದೇ ಕುಂವೀ ಇಂದು ಈ ಪಂಪೀಗಳ ಕುರಿತು ಈ ಮೊದಲು ಆಡಿದ್ದ ತಮ್ಮ ಮಾತು 'ತುಟಿತಪ್ಪಿ ಆಡಿದ್ದು' ಎಂದೂ ಪಂಪೀಗಳ ಬಗ್ಗೆ ತಮಗೆ 'ಅಪಾರವಾದ ಗೌರವವಿದೆ' ಎಂದೂ ಹೇಳಿಕೆ ನೀಡಿದ್ದು ವರದಿಯಾಗಿದೆ. ಈ ಬಗ್ಗೆ ಅನೇಕ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿರೋಧ ಅಭಿಪ್ರಾಯಗಳಿರುವ ಅರ್ಥಪೂರ್ಣ ಚರ್ಚೆ ನಡೆಸಿದ್ದಾರೆ.

ಕುಂವೀ ಈ ಹೇಳಿಕೆ ನೀಡಲು ಅವರ  ಮೇಲೆ ಕೆಲವು ಪಂಪೀಗಳು ನೇರವಾಗಿಯೋ ತಮ್ಮನ್ನು ಹೊರುವ 'ಭಕ್ತರ' ಮೂಲಕವೋ ಒತ್ತಡ ಹೇರಿದ್ದಾರೆ, ಬೆದರಿಕೆ ಒಡ್ಡಿದ್ದಾರೆ ಎಂಬುದು ಇಲ್ಲಿ ಚರ್ಚಿಸಲ್ಪಡುತ್ತಿರುವ ಒಂದು ಮುಖ್ಯವಾದ ಸಂಗತಿ. ಇದನ್ನು ನಾವು ಸುಲಭವಾಗಿ ಅಲ್ಲಗಳೆಯುವಂತಿಲ್ಲ. ವಿಚಾರಗಳನ್ನು ವಿಚಾರಗಳಿಂದ ಎದುರಿಸುವ ಸಾಮರ್ಥ್ಯ ಇಲ್ಲದ ಕಾರಣದಿಂದ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಎದುರಾಳಿಗಳ ಮೇಲೆ ಇಂತಹ ಒತ್ತಡ ಹೇರುವುದು ಪ್ರಾಣಬೆದರಿಕೆ ಒಡ್ಡುವುದು ಅಷ್ಟೇ ಏಕೆ ದೈಹಿಕ ಹಲ್ಲೆಗೂ ಇಳಿಯುವ 'ಭಕ್ತರ ಕೆಟ್ಟಚಾಳಿ' ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ  ಸಾಮಾನ್ಯ ಸಂಗತಿಯಾಗಹತ್ತಿದೆ.

ಕುಂವೀ ಮೇಲೆ ಪಂಪೀಗಳು ಈ ರೀತಿ ಒತ್ತಡ ತಂದದ್ದು ನಿಜವೇ ಆಗಿದ್ದಲ್ಲಿ ಅದು ಅತ್ಯಂತ ಖಂಡನೀಯ. ಒಂದುವೇಳೆ ಅಂತಹ ಪಾಪದ ಕೆಲಸಕ್ಕೆ ಅವರು ಕೈ ಹಾಕಿದ್ದು ನಿಜವಾಗಿದ್ದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅವರು ತಡವಾಗಿಯಾದರೂ ಉಣ್ಣಬೇಕಾಗುತ್ತದೆ. ಅವರ ವರ್ತನೆ ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ  ಅವರು ತಮ್ಮ  ಅಡ್ಡಪಲ್ಲಕ್ಕಿ ಹೊರಲಿಕ್ಕೂ ಜನರಿಲ್ಲದಂತೆ ಮಾಡಿಕೊಳ್ಳುವುದು ಗ್ಯಾರಂಟಿ. ಅದನ್ನು ಅವರು ಈಗಲೇ ಅರಿತರೆ ಒಳ್ಳೆಯದು. ದೇವರು - ಧರ್ಮ ಕುರಿತು, ದೇವಮಾನವರನ್ನು ಕುರಿತು ದೇಶಾದ್ಯಂತ ನಡೆಯುತ್ತಿರುವ ವಿದ್ಯಮಾನಗಳು ಅವರ ಕಣ್ಣು ತೆರೆಸಬೇಕು. ಅವರ ಕಣ್ಣು ತೆರೆದರೆ ಅವರನ್ನು ನಂಬಿ ಮಠಗಳಿಗೆ ಬರುವ ಭಕ್ತರ ಕಣ್ಣೂ ತೆರೆದಾವು.

ಇಲ್ಲದಿದ್ದರೆ ಕುಂವೀ ಅವರ 'ಯಾಪಿಲ್ಲು' ಕಾದಂಬರಿಯ ಪಾತ್ರವೊಂದು  "ಹೋಗ್ರೋ ಇವನೌನ್ ದೇವ್ರು ಬ್ಯಾಡ ದಿಂಡ್ರು ಬ್ಯಾಡ, ಬಡವ್ರು ಬೊಗ್ರು ಬರಂಗಿಲ್ಲ ಹೋಗಂಗಿಲ್ಲ" ಎಂದು ಗೊಣಗುವಂತೆ ಜನ ಮಠ ಮಂದಿರಗಳ ಬಗ್ಗೆ ಬರುಬರುತ್ತಾ ಜಿಗುಪ್ಸೆ ತಾಳಿ ಅವುಗಳಿಂದ ದೂರವಾದಾರು. ಅಥವಾ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆ ತೊರೆದು ಕಾನ್ವೆಂಟಿಗೆ ಮುಖಮಾಡಿದ ಅಲ್ಲಿನ ಮಕ್ಕಳು, "ಟಿಂಕಲ್ ಟಿಂಕಲ್ ಲಿಟ್ಟಲ್ ಸ್ಟಾರೂ... ಗೋರಮೆಂಟಿಚ್ಕೂಲು ವುಯ್ ಡೋಂಟು ಕೇರೂ" ಎಂದು ಹಾಡುತ್ತಾ ಸರ್ಕಾರಿ ಶಾಲೆಯನ್ನು ಗೇಲಿಮಾಡುತ್ತಾ ಹೋಗುವಂತೆ ಭಕ್ತರು ಕೂಡ "ಮಠ ಗಿಟ ವುಯ್ ಡೋಂಟ್ ವಾಂಟು,   ಸ್ವಾಮಿ ಗೀಮಿ ವುಯ್ ಡೋಂಟ್ ಕೇರೂ ...." ಎಂದು ಇವರನ್ನೂ ಇವರ ಮಠಗಳನ್ನೂ ಗೇಲಿಮಾಡುತ್ತಾ ಹೋದಾರು!!

ತಮ್ಮನ್ನು ಕುಂವೀ ಅಂಥವರು ವಿಮರ್ಶಿಸಿ ಮಾತನಾಡಿದಾಗ ಆ ವಿಮರ್ಶೆಯ ಮಾತುಗಳ ಹಿಂದಿರುವ ಸದಾಶಯವನ್ನು  ಅರ್ಥಮಾಡಿಕೊಂಡು ತಮ್ಮಅರ್ಥರಹಿತವಾದ ಆಚರಣೆಗಳನ್ನು ಕಾಲಕ್ಕೆ ಸಲ್ಲದ ತಮ್ಮ ಕೆಲವು ನಡೆವಳಿಕೆಗಳನ್ನು ತಿದ್ದಿಕೊಳ್ಳುವ ಕಡೆ ನಮ್ಮ ಪಂಪೀಗಳ ಗಮನ ಹರಿಯಬೇಕಾಗಿತ್ತೇ ಹೊರತು ಆ ಮಾತುಗಳನ್ನು ಆಡಿದ್ದ ಕುಂವೀಯವರ ಬಾಯಿ ಮುಚ್ಚಿಸುವ ಕಡೆಗಲ್ಲ. ಅದು ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ  ಒಂದು ಒಲಕ್ಳೆಯ ನಡೆಯಾಗುತ್ತಿತ್ತು. ಆದರೆ ಹಾಗೆ ಅಗದಿದ್ದದ್ದು ವಿಷಾದದ ಸಂಗತಿ.

'ಮಾಡಬಾರದ್ದನ್ನು ಮಾಡಲು ಹೋದರೆ ಆಗಬಾರದ್ದು ಆಗುತ್ತದೆ' ಎಂಬುದೊಂದು ನಮ್ಮ ಹಿರಿಯರ ಅನುಭವ ನುಡಿ. ಇದಕ್ಕೆ ಸದ್ಯದ ಪ್ರಮುಖವಾದ ಮತ್ತು ತಾಜಾ ಉದಾಹರಣೆ ಎಂದರೆ ಹರ್ಯಾಣದಲ್ಲಿ ಮುಗ್ಧ ಜನರ ಭಕ್ತಿಯನ್ನು 'ತೊರುಂಬ ಲಾಭ' ಮಾಡಿಕೊಂಡು, ಯಾವ ರಾಜಕಾರಣಿಗೂ ಉದ್ಯಮಿಗೂ ಚಿತ್ರನಟ-ನಟಿಗೂ ಕಡಿಮೆ ಇಲ್ಲದಂತೆ ಭೋಗಜೀವನ ನಡೆಸಿ ಮೆರೆದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿಟ್ ರಾಮರಹೀಮ್ ಸಿಂಗ್ ಎಂಬ ದೇವಮಾನವನದ್ದು.

ಇಬ್ಬರು ಭಕ್ತೆಯರ ಮೇಲಿನ ಅತ್ಯಾಚಾರದ ಎರಡು ಪ್ರಕರಣದಲ್ಲಿ ದೋಷಿ ಎಂದು ಸಿ.ಬಿ.ಐ. ಕೋರ್ಟಿನಿಂದ ತೀರ್ಮಾನಿಸಲ್ಪಟ್ಟ ಆತ ಇದೀಗ ಮೂವತ್ತು ಲಕ್ಷ ದಂಡಕ್ಕೂ ಹತ್ತು ಹತ್ತು ಒಟ್ಟು ಇಪ್ಪತ್ತು ವರ್ಷಗಳ ಜೈಲುಶಿಕ್ಷೆಗೂ  ಗುರಿಯಾಗಿದ್ದಾನೆ. ಮಾಡಿದ್ದುಣ್ಣೋ ಮಾರಾಯ!! ಆತನ ಪ್ರಕರಣ ನೇರವಾಗಿ ನಮ್ಮ ಪಂಪೀಗಳಿಗೆ  ಸಂಬಂಧಪಡದಿರಬಹುದು. ಆತನಿಗೆ ತಮ್ಮನ್ನು ಹೋಲಿಸುವುದು 'ಅವಮಾನಕರ' ಎಂದೂ ಇವರಿಗೆ ಅನ್ನಿಸಿ ವಾಸ್ತವಿಕವಾಗಿ ಬರಬಾರದ ಸಿಟ್ಟ್ಟೂ ಬರಬಹುದು.  ಹಾಗೇನೂ ಅಗಬೇಕಿಲ್ಲ. ಭಕ್ತರ ಬದುಕಿನಲ್ಲಿ ಆಟವಾಡುವುದು ಅಥವಾ ಅವರನ್ನು ಅಜ್ಞಾನದಲ್ಲಿ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುವ ಕೆಲಸ ಯಾರಿಗೇ ಆಗಲಿ ಮುಂದಿನ ದಿನಗಳಲ್ಲಿ ಸುಲಬವಾದ ಕೆಲಸವಲ್ಲ ಎಂಬ ಎಚ್ಚರಿಕೆಯ ಗಂಟೆಯನ್ನಂತೂ ಈ ಪ್ರಕರಣ ಬಾರಿಸಿದಂತಾಗಿದೆ. ಇದನ್ನು ಸಂಬಂಧಪಟ್ಟವರು ಅಲಕ್ಷಿಸಬಾರದು.

ಇನ್ನು ಕುಂವೀ ಬಗ್ಗೆ ಹೇಳುವುವಾದರೆ ಅವರೆಂಥವರು ಎಂಬುದು ನಾಡಿನ ಬಹುತೇಕ ಎಲ್ಲ ವಿದ್ಯಾವಂತ ಜನಕ್ಕೂ ಗೊತ್ತಿದೆ. ಕೊಟ್ಟೂರಿನಂಥ ಬಿಸಿಲೂರಿನಲ್ಲಿ ಶ್ರಮಜೀವಿಗಳ ಕುಟುಂಬದಲ್ಲಿ ಹುಟ್ಟಿಬೆಳೆದ 'ಗಾಂಧೀಕ್ಲಾಸಿನ ಹುಡುಗನೊಬ್ಬ ಇಂದು ಕನ್ನಡ ಸಾಹಿತ್ಯ ಲೋಕದ ಶಕ್ತಶಾಲಿ ಬರಹಗಾರನಾಗಿ ರೂಪುಗೊಂಡಿರುವಂಥದ್ದೇ ಒಂದು ಅಚ್ಚರಿಯ ಸಂಗತಿ.  ಕರ್ನಾಟಕದ ಹೊರಭಾಗದಲ್ಲಿ, ಹತ್ತಿಪ್ಪತ್ತು ರೂಪಾಯಿಗಳಿಗೂ ಮನುಷ್ಯರ ಜೀವವನ್ನೇ ತೆಗೆಯಲು ಸಿದ್ದರಿರುವ ಜನಸಮೂಹದ ನಡುವಿದ್ದು ಅವರ ಮಕ್ಕಳಿಗೆ ಪಾಠಹೇಳುವ ಕೆಲಸದಲ್ಲಿ ಬಹುತೇಕ ತಮ್ಮ ವೃತ್ತಿಬದುಕನ್ನು ಕಳೆದವರು. ತನ್ನ ಕೈಯಲ್ಲಿ ಪಾಠ ಹೇಳಿಸಿಕೊಂಡ ಯಾವನೇ ಒಬ್ಬ ವಿದ್ಯಾರ್ಥಿ ಫೇಲಾಗುವುದು ಎಂದರೆ ಅದು ತನಗೆ ದೊಡ್ಡ insult ಎಂದು ಬಗೆದು ಪ್ರೈಮರಿ ಸ್ಕೂಲ್ ಮೇಷ್ಟ್ರ ಕೆಲಸವನ್ನು ಯುನಿವರ್ಸಿಟಿ ಪ್ರೊಫೆಸರ್ ಕೆಲಸಕ್ಕಿಂತ ಸೀರಿಯಸ್ ಆಗಿ ತೆಗೆದುಕೊಂಡು ವೃತ್ತಿಯಲ್ಲಿ ತೊಡಗಿಕೊಂಡು ನಿವೃತ್ತರಾದವರು.

ಕುಂವೀ ಪ್ರಾಥಮಿಕ ಶಾಲೆಯ ಮೇಷ್ಟ್ರಾಗಿಯೇ ಇದ್ದುಕೊಂಡು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾದ ಮತ್ತು ಅಲ್ಲಿನ ಪ್ರೊಫೆಸರ್ ಗಳು  ಘನವಾಗಿ ಚಿಂತನ-ಮಂಥನ ಮಾಡಿದಂಥ ಹಲವಾರು ಕೃತಿಗಳನ್ನು ಬರೆದ, ದಲಿತ-ಬಂಡಾಯದ ಹಿನ್ನೆಲೆಯಿಂದ ಬಂದ,  ಬಳ್ಳಾರಿ ಸ್ಟೈಲಿನ ಕನ್ನಡದ ಬಹುಮುಖ್ಯ ಲೇಖಕರು.  ಜನಪರವಾದ ಸಾಹಿತ್ಯ, ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾನೂ ಬೆಳೆಯುತ್ತ ನಮ್ಮ ಸಾಹಿತ್ಯವನ್ನೂ ಬೆಳೆಸಿದ, ಒಳಗೊಂದು ಹೊರಗೊಂದು ಇಲ್ಲದ ನೇರ ನಡೆನುಡಿಯ ಮನುಷ್ಯ. ತಳಸಮುದಾಯಗಳ ನೋವು-ನಲಿವುಗಳನ್ನು ನಮ್ಮ ಸಮಾಜಕ್ಕೆ ಎತ್ತಿತೋರಿಸುವ ಮೂಲಕ ಆ ವರ್ಗಕ್ಕೊಂದು ಅಸ್ಮಿತೆಯನ್ನು ದೊರಕಿಸಿಕೊಟ್ಟ ಚಿಂತಕರು.

ಎಲ್ಲರೂ ಓದಬಹುದಾದ ಮಹತ್ವದ ಅನೇಕ ಕೃತಿಗಳನ್ನು ಬರೆದರೂ ಯಾರೂ ಸರಿಯಾಗಿ ಸರಾಗವಾಗಿ ಓದಲಾಗದ ಕೃತಿಯೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಪಡೆದ ಸಾಹಿತಿ!  ದೇಶದಲ್ಲಿ ಅಸಹಿಷ್ಣುತೆ ವಿರುದ್ಧ ನಡೆದ ಪ್ರಶಸ್ತಿ ಪುರಸ್ಕಾರ ವಾಪಸಾತಿ ಚಳವಳಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ವಾಪಸ್ಸು.ಕೊಡಲು ಹೋದಾಗ ಅದನ್ನು ಮರಳಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಸಬೂಬು ಹೇಳಿದ ಅಧಿಕಾರಿಯ ಟೇಬಲ್ಲಿನ ಮೇಲೆ ಅವನ್ನೆಲ್ಲ ಬೀಸಾಕಿ 'ಏನರ ಮಾಡ್ಕ್ಯ' ಎಂದು ಹೇಳಿ ಹೊರಗೆ ಬರುವ ಮೂಲಕ ಸಾಮಾಜಿಕ ಬದ್ದತೆಯನ್ನುತೋರಿಸಿದ ವ್ಯಕ್ತಿ.

ಅವರ ನೇರ ಮಾತುಗಾರಿಕೆಗೆ ಒಂದು ಉದಾಹರಣೆ ಗಮನಿಸಿ: ಚಿತ್ರದುರ್ಗದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಮಠ-ಮಾನ್ಯಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎತ್ತಿದ್ದ ಕೆಲವು ಮಹತ್ವ ಪ್ರಶ್ನೆಗಳು ಅಲ್ಲಿನ ಊಟದ ಪೆಂಡಾಲು ಸೇರಿದಂತೆ ಎಲ್ಲೆಡೆ ಬುಗಿಲೆದ್ದ ವಿಪರೀತ ಕೆಂದೂಳಿನಲ್ಲಿ ಕಳೆದು ಹೋದವಾದರೂ ನಂತರ ಬಹಳಷ್ಟು ದಿನ ರಾಜ್ಯದ ಯಾವುದೇ ಭಾಗದಲ್ಲಿ ಸಾಹಿತ್ಯದ ಕಾರ್ಯಕ್ರಮ ನಡೆದರೂ ಅವುಗಳ ಪ್ರಸ್ತಾಪವಾಗುವ ಮೂಲಕ ಅವು ಅನುರಣನಗೊಳ್ಳುತ್ತಿದ್ದ ಸಂದರ್ಭ.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೊನೆಯ ಗೋಷ್ಟಿಯೊಂದರಲ್ಲಿ ಭಾಗವಹಿಸಿದ್ದ, ತಮ್ಮ ಹರಕು  ಬಾಯಿಯಿಂದ ರಾಜ್ಯದಲ್ಲಿಯೇ ಕುಖ್ಯಾತರಾಗಿದ್ದ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬ ಎಲ್. ಬಸವರಾಜು ಅವರ ಬಗ್ಗೆ ಹಗುರವಾಗಿ ಮಾತನಾಡಿ, 'ಇಂತಹ ಸಾಹಿತಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು' ಎಂದು ಬುದ್ದಿ ಹೇಳಿ ತನ್ನ ಅಜ್ಞಾನ ಪ್ರದರ್ಶಿಸಿದ.

ಆ ಗೋಷ್ಟಿಯ ನಂತರ ಸಮಾರೋಪ ಸಮಾರಂಭವಿದ್ದು ಕುಂವೀ ಸಮಾರೋಪ ಭಾಷಣಮಾಡುವುದಿತ್ತು. ಸಭಾಂಗಣದಲ್ಲಿದ್ದ ನಾನು ನನ್ನ ಪಕ್ಕ ಕುಳಿತಿದ್ದ  ಲೇಖಕ ಮಿತ್ರ ರಂಗರಾಜ ವನದುರ್ಗ ಅವರಿಗೆ 'ಕುಂವೀ ಅವರ ಗಮನಕ್ಕೆ ಈ ರಾಜಕಾರಣಿಯ ಮಾತನ್ನು ತಂದು ಅವರಿಂದ ಪ್ರತಿಕ್ರಿಯೆ ಕೊಡಿಸಿದರೆ ಚೆನ್ನಾಗಿತ್ತು' ಎಂದೆ. ಅದು ಅವರಿಗೂ ಸರಿ ಅನ್ನಿಸಿ ತಕ್ಷಣ ಫೋನು ಎತ್ತಿಕೊಂಡು ಇನ್ನೂ ಬಸ್ಸಿನಲ್ಲಿ ಕಾರ್ಯಕ್ರಮಕ್ಕೆ ಬರುತ್ತಲಿದ್ದ ಕುಂವೀಗೆ ವಿಷಯ ತಿಳಿಸಿಯೇಬಿಟ್ಟರು.

ಸಮಾರೋಪ ಭಾಷಣ ಮಾಡಲು ತುಸು  ಸ್ಟ್ರಾಂಗ್ ಆಗಿಯೇ ವೇದಿಕೆ ಏರಿದ ಕುಂವೀ ಆ ರಾಜಕಾರಣಿಯ ಮಾತಿಗೆ,  "ನಮ್ಮ ರಾಜಕಾರಣಿಗಳಿಗೆ ಏನು ಆಗಿದೆಯೋ. ಕನ್ನಡದಲ್ಲಿ ಯಾವೊಬ್ಬ ಸಾಹಿತಿಯೂ ರಾಜಕಾರಣಿಗಳನ್ನು ಟೀಕಿಸುವಾಗ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ; ಗಂಭೀರವಾಗಿ ತಾತ್ವಿಕವಾದ ಭಿನ್ನಾಭಿಪ್ರಾಯ ಎತ್ತುವ ಮೂಲಕ ಟೀಕಿಸುತ್ತಾರೆ. ಆದರೆ ಅದೇ ರಾಜಕಾರಣಿಗಳು ಸಾಹಿತಿಗಳ ಬಗ್ಗೆ ಟೀಕಿಸುವಾಗ ಕನಿಷ್ಟ. ಸೌಜನ್ಯವನ್ನೂ ಇಟ್ಟುಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಾಹಿತಿಗಳಿಂದ ನಮ್ಮ ರಾಜಕಾರಣಿಗಳಿಗೆ ಬೇರೆ ಏನನ್ನೂ ಕಲಿಯಲು ಆಗದಿದ್ದರೂ ಕೊನೆಯಪಕ್ಷ ಬೇರೆಯವರನ್ನು ಟೀಕಿಸುವುದು ಹೇಗೆ ಎಂಬುದನ್ನಾದರೂ ಕಲಿಯಬೇಕು" ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿ,  "ಬಸವರಾಜು ಎಷ್ಟು ದೊಡ್ಡವರು ಎಂದರೆ ಅವರು ಜೀವನದಲ್ಲಿ ಉಪ್ಪು ತಿಂದಷ್ಟು ನಮ್ಮಲ್ಲಿ ಬಹಳಷ್ಟು ಜನ ಅನ್ನವನ್ನೂ ತಿಂದಿಲ್ಲ. ಅಂತಹ ಹಿರಿಯರ ಬಗ್ಗೆ ಮಾತನಾಡುವಾಗ ಮೈಮೇಲೆ ಎಚ್ಚರಿಕೆ ಇಟ್ಟುಕೊಂಡು ಮಾತನಾಡಬೇಕು" ಎಂದು ಚಾಟಿ ಬೀಸಿ ಇಡೀ ಸಭಾಂಗಣದಲ್ಲಿ ಕರತಾಡನ ಪಡೆದರು!

ಇನ್ನೊಂದು ಸಂದರ್ಭ: ಕೆಲವು ವರ್ಷಗಳ ಹಿಂದೆ ನಾವೆಲ್ಲ ಸಹೋದರ ಪತ್ರಕರ್ತ ಕುಮಾರ್ ಬುರಡಿಕಟ್ಟಿ ಅವರ ಮದುವೆಯನ್ನು ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸದೇ ವೈಚಾರಿಕತೆಯ ಅರಿವಿನ ಕಾರ್ಯಕ್ರಮವಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಎಂಬ ನಮ್ಮ ಊರಿನಲ್ಲಿ ರೂಪಿಸಿದ್ದೆವು. ಅದೇ ಆಗ ರಿಟೈರ್ಡ್ ಆಗಿದ್ದ ಕುಂವೀ ಸರಿಯಾದ ರಸ್ತೆಯೂ ಇಲ್ಲದ ನಮ್ಮ ಊರಿಗೆ ಸರಳವಾದ ಕೆಂಪು ಬಸ್ಸಿನಲ್ಲೇ ಬಂದು ಕೆಂಪು ಭಾಷಣವನ್ನು ಮಾಡಿ ಅಷ್ಟೇ ಸರಳವಾಗಿ ಅದೇ ಕೆಂಪು ಬಸ್ಸಿನಲ್ಲೇ  ಮರಳಿ ಹೋಗುವ ಮೂಲಕ ಬಹಳ ಹತ್ತಿರವಾದರು. ಅಂದು ನಮ್ಮ ಕಾರ್ಯಕ್ರಮದಲ್ಲಿ ಇದ್ದ ಗೌರಿ ಲಂಕೇಶ್,  ಶಿವಸುಂದರ್, ಬಿಳಿದಾಳೆ ಈಶ,  ವಿ.ಎಸ್. ಶ್ರೀಧರ್ ಸೇರಿದಂತೆ ನಮ್ಮ ಹಳ್ಳಿಯ ಜನರೆಲ್ಲರೂ ಮೌಢ್ಯ ಸಂಪ್ರದಾಯಗಳ ವಿರುದ್ಧವಾಗಿ ಕುಂವೀ ಆಡಿದ ಅಪ್ರಾಮಾಣಿಕವಲ್ಲದ ಮಾತುಗಳಿಂದ ಸಂತುಷ್ಟರಾಗಿದ್ದು ನಮ್ಮ ಖಾಸಗೀ ಬದುಕಿನ ಅಂತೆಯೇ ಸಾರ್ವಜನಿಕ ಬದುಕಿನ ಒಂದು ಮುಖ್ಯ ಘಟನೆ ಎಂದೇ ನಾನು ಭಾವಿಸಿದ್ದೇನೆ.

ಇಂತಹ ನಮ್ಮ ಮೆಚ್ಚಿನ ಕುಂವೀ ಕೆಲವು ವೇಳೆ ಸ್ವಭಾವತಃ ಅವರ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗದಂತಹ  ಅಪ್ರಾಮಾಣಿಕ ಹೇಳಿಕೆ ನೀಡುವ ಮೂಲಕ ನಮಗೆ ನಿರಾಸೆಯನ್ನೂ ಮಾಡುವುದಿದೆ. ಈಗ ಪಂಪೀಗಳ ಕುರಿತು ಇಂತಹ ಹೇಳಿಕೆಯನ್ನು ನೀಡಿದ್ದು ಇತ್ತೀಚಿನ ದಿನಗಳಲ್ಲಿ  ಅವರು ನೀಡಿರುವ ಈ ಬಗೆಯ ಎರಡನೆಯ ಹೇಳಿಕೆ ಅಂದುಕೊಂಡಿದ್ದೇನೆ.  ಈ ಮೊದಲು ಹಿಂದೊಮ್ಮೆ ಅವರು ಹೀಗೇ ತಾವು ಅನುಗಾಲದಿಂದಲೂ  ಎದುರಾಳಿಗಳೆಂದು ಭಾವಿಸಿಕೊಂಡು ಬಂದಿದ್ದ, 'ಕಲ್ಪಿತ ಹಿಂದುತ್ವ' ಮತ್ತು ಅದರ ವಾಕ್ತಾರರಾದ 'ದೇಶಭಕ್ತ' ರನ್ನು ಕುರಿತು  'ಅವರೆಲ್ಲ ಬಹಳ ಒಳ್ಳೆಯವರು' ಎಂಬರ್ಥ ಬರುವಂಥ ಮಾತಾಡಿದ್ದು ವರದಿಯಾಗಿತ್ತು.  ಆಗ ಅವರ ಈ ಬದಲಾದ ನಿಲುವನ್ನು ಟೀಕಿಸಿದ್ದ ಚಂಪಾ 'ಕುಂ.ವೀ' ಎಂಬ ಅಕ್ಷರಗಳನ್ನು 'ಕುಂಕುಮ ವೀರ' ಎಂದು ವಿಸ್ತರಿಸಿ ಅಸಮಾಧಾನ ಸೂಚಿಸಿದ್ದರು!

ಈಗ ಕುಂವೀ ಪಂಪೀಗಳನ್ನು ಕುರಿತು ಅಂಥದ್ದೇ ಹೇಳಿಕೆಯನ್ನು ನೀಡಿದ್ದು ಅವರನ್ನೂ ಅವರ  ಸಾಹಿತ್ಯವನ್ನೂ ಪ್ರೀತಿಸುವ ಪ್ರಗತಿಪರ ಆಲೋಚನ ಕ್ರಮದ ನನ್ನಂತಹ ಬಹಳಷ್ಟು ಜನರಿಗೆ ಬೇಸರವನ್ನುಂಟು ಮಾಡಿದೆ ಎಂಬುದು ಸುಳ್ಳಲ್ಲ. ಇಂದು ಕುಂವೀ ಅವರ ಇಂತಹ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆ ವ್ಯಕ್ತವಾಗುತ್ತಿರುವುದು ಕೂಡ ಅವರ ಮೇಲಿನ ಮತ್ತು ಅವರ ಸಾಹಿತ್ಯದ ಮೇಲಿನ ಗೌರವದಿಂದಲೇ ಹೊರತು ಬೇರೇನೂ ಆಗಿರಲಾರದು. ಪರಿಸ್ಥಿತಿ ಹೀಗಿರುವಾಗ ಕುಂವೀ ಹೀಗೇಕೆ ಆಗೊಮ್ಮೆ ಈಗೊಮ್ಮೆ ದ್ವಂದ್ವ ನಿಲುವು ತಾಳುತ್ತಾರೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡು  ಗೊಂದಲಕ್ಕೆ ದಾರಿಮಾಡಿಕೊಡುವುದು ಸಹಜವಾದದ್ದು.

ಒಂದುವೇಳೆ ಈ 'ದ್ವಂದ್ವ' ಎಂಬುದು ಕುಂವೀ ಅವರ ನಿಲುವಿನಲ್ಲಿ ಸ್ವಾಭಾವಿಕವಾಗಿಯೇ ಉಂಟಾಗುತ್ತಿದ್ದರೆ ಅವರೇ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವ ಮೂಲಕ ಅವರು ಸ್ಪಷ್ಟವಾಗಿ ಒಂದುಕಡೆ  - ಅದೂ ಅವರು ತಮ್ಮ ಬದುಕಿನ ಉದ್ದಕ್ಕೂ ಒಪ್ಪಿಕೊಂಡು ಬಾಳಿ ಬದುಕುತ್ತಾ ಬಂದಿರುವ 'ಸಮಸಮಾಜ ನಿರ್ಮಾಣ ಒಲವಿನ' ಕಡೆ - ನಿಲ್ಲುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಅವರಲ್ಲಿ ನನ್ನ ಪ್ರಿತಿಪೂರ್ವಕ ಆಗ್ರಹ.

ಒಂದುವೇಳೆ ಈ 'ಧ್ವಂದ್ವ'ಎಂಬುದು ಬಾಹ್ಯ ಒತ್ತಡಗಳ ಕಾರಣದಿಂದ ಅವರಲ್ಲಿ ಉಂಟಾಗುತ್ತಿದ್ದರೆ ದಯವಿಟ್ಟು ತಮ್ಮ ಮೇಲಿರುವ ಅಂತಹ ಒತ್ತಡಗಳು ಯಾವುವು ಎಂಬುದನ್ನು ಸಾರ್ವಜನಿಕಗೊಳಿಸುವ ಧೈರ್ಯವನ್ನು ಕುಂವೀ ತೋರಬೇಕು. ಅವರಿಗಾಗಿ ಮಾತ್ರವಲ್ಲ ಕನ್ನಡ ಸಾಹಿತ್ಯ ಮತ್ತು ಸಂಸ್ಸೃತಿಯ ಆರೋಗ್ಯಯುತ ಬೆಳವಣಿಗೆಯ ದೃಷ್ಟಿಯಿಂದಲೂ ಇದು ಮಹತ್ವದ್ದು. ಯಾವುದೇ ಲೇಖಕರ ವಿಷಯದಲ್ಲಿ  ಕನ್ನಡ ಲೇಖಕ ಸಮೂಹ ಈ ಬಗೆಯ ಸಂಕಟಗಳ ಸಂದರ್ಭಗಳಲ್ಲಿ ಬಾಧಿತರ ಜೊತೆಗಿದ್ದು ಅವರಿಗೆ ನೈತಿಕ ಬೆಂಬಲವೂ ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಾ ಬಂದಿದೆ. ಕುಂವೀ ವಿಷಯದಲ್ಲಿಯೂ ಇದನ್ನು ಈ ಸಮೂಹ ಮಾಡಿಯೇ ಮಾಡುತ್ತದೆ. ಕುಂವೀ ಇಂತಹ ಪೊಳ್ಳು ಬೆದರಿಕೆಗಳಿಗೆ - ಅದರಲ್ಲಿಯೂ ತಮ್ಮ ಒಂದೂ ಕೃತಿಯನ್ನೂ ಬಹುಶಃ  ಓದಿರದವರ ಬೆದರಿಕೆಗಳಿಗೆ - ಮಣಿಯುವ ಯಾವ ಅವಶಯಕತೆಯೂ ಇಲ್ಲ. ಮಣಿಯಬಾರದು ಕೂಡ. ಅವರ ಜೊತೆಗೆ ನಾವೆಲ್ಲ ಇದ್ದೇವೆ ಎಂಬ ಧೈರ್ಯ ಅವರಿಗಿರಲಿ.

ಕನ್ನಡ ಸಾಹಿತ್ಯ ಲೋಕ ಈಗಾಗಲೇ ಪ್ರಗತಿಪರ ಆಲೋಚನ ಕ್ರಮದ ಬಹುಮುಖ್ಯವಾದ ಕೆಲವು ಲೇಖಕರನ್ನು ಕಳೆದುಕೊಂಡಿದೆ. ಈ ಕಳೆದುಕೊಳ್ಳುವಿಕೆ ಮುಖ್ಯವಾಗಿ ಎರಡು ನೆಲೆಯಲ್ಲಿ ನಡೆದಿದೆ. ಮೊದಲನೆಯದಾಗಿ ಕೆಲವರನ್ನು ದೈಹಿಕವಾಗಿ ಕಳೆದುಕೊಂಡಿದೆ. ಎರಡನೆಯದಾಗಿ  ಮತ್ತೆ ಕೆಲವರನ್ನು ತಾತ್ವಿಕವಾಗಿ ಕಳೆದುಕೊಂಡಿದೆ. ಕಲಬುರ್ಗಿ ಅವರನ್ನು ಮೊದಲನೆಯದಕ್ಕೆ ಉದಾಹರಿಸಬಹುದಾದರೆ ಸಿದ್ಧಲಿಂಗಯ್ಯ ಅವರನ್ನು ಎರಡನೆಯದಕ್ಕೆಉದಾಹರಿಸಬಹುದು. ಕುಂವೀ ಅವರನ್ನು ಈ ಯಾವ ನೆಲೆಯಿಂದಲೂ  ಕಳೆದುಕೊಳ್ಳಲು ಈ ಲೋಕ ಇಷ್ಟಪಡುವುದಿಲ್ಲ . ಇದನ್ನು ಎಲ್ಲರೂ ಅಂದರೆ ಕುಂವೀ, ಪಂಪೀಗಳು ಮತ್ತು ನಾವು - ಅರ್ಥಮಾಡಿಕೊಂಡು ಮುನ್ನಡೆಯಬೇಕಿದೆ. ಅಲ್ಲವೇ?

- ರಾಜೇಂದ್ರ.ಬುರಡಿಕಟ್ಟಿ