Tuesday, September 14, 2021

ತಮಿಳು ಮೂಲದ ಕನ್ನಡ ‘ಪ್ರೇ(ಮಿ)ಮ’ಕುಮಾರ್!

 

ತಮಿಳು ಮೂಲದ ಕನ್ನಡಪ್ರೇ(ಮಿ)ಕುಮಾರ್!


ಇವರು
ಆರ್. ಪ್ರೇಮ್ ಕುಮಾರ್. ನನ್ನ ಪ್ರಮುಖ ಲೇಖನಿಮಿತ್ರರಲ್ಲಿ ಒಬ್ಬರಾದ ತಮಿಳುನಾಡಿನ ಊಟಿ ಮೂಲದ ಪ್ರೇಮ್ ಕುಮಾರ್ ತಮ್ಮ ಸೇವೆಯನ್ನು ಆರಂಭಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಮುಂದೆ ಅಸ್ಸಾಂ, ಗುಜರಾತ್ ಗಳಲ್ಲಿ ಕೆಲಸಮಾಡಿ ಗಾಜನೂರು ನವೋದಯ ಪ್ರಿನ್ಸಿಪಾಲರಾಗಿ ಬಂದು ಏಳೆಂಟು ವರ್ಷ ಕೆಲಸಮಾಡಿ ಇದೀಗ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನವೋದಯ ವಿದ್ಯಾಲಯಕ್ಕೆ ವರ್ಗವಾಗಿದ್ದಾರೆ. ಅದರಲ್ಲಿ ಏನು ವಿಶೇಷ? ಅದನ್ನು ಇಲ್ಲಿ ಹೇಳುವ ಅವಶ್ಯಕತೆಯಾದರೂ ಏನು ಅನ್ನುವಿರಾ? ಕೇಳಿ

ಅವರ ಬಗ್ಗೆ ಇಲ್ಲಿ ಹೇಳಲು ಕಾರಣವಾಗಿದ್ದು ಅವರು ನಮ್ಮ ನಾಡು ನುಡಿ, ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಹೊಂದಿದ್ದ ಪ್ರೀತಿ ಮತ್ತು ಕಾಳಜಿ. ನಾವಿಬ್ಬರೂ ಏನನ್ನಾದರೂ ಮಾತನಾಡಬೇಕಾದಾಗ ನಾನು ಇಂಗ್ಲಿಷ್ ನಲ್ಲಿ ಪ್ರಶ್ನೆಕೇಳಿದರೆ ತಕ್ಷಣ ನನ್ನ ಕೆನ್ನೆಗೆ ಹೊಡೆದಂತೆ ಕನ್ನಡದಲ್ಲಿ ಉತ್ತರ ಕೊಡುತ್ತಿದ್ದ ಇವರು ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಭಾಷೆಯ ಸಾಹಿತ್ಯ ಓದು ಅವರಿಗೆ ಎಷ್ಟರಮಟ್ಟಿಗೆ ಇತ್ತೆಂದರೆ ಮಿಲ್ಟನ್ನನ್ನ ಮಹಾಕಾವ್ಯಪ್ಯಾರಡೈಸ್ ಲಾಸ್ಟ್ ಬಹುಮುಖ್ಯ ಭಾಗಗಳನ್ನು ಅರ್ಧರಾತ್ರಿಯಲ್ಲಿ ಎಬ್ಬಿಸಿ ಕೇಳಿದರೂ ಪಟಪಟ ಹೇಳುವಷ್ಟು, ವ್ಯಾಖ್ಯಾನಿಸುವಷ್ಟು!

ಪ್ರೇಮ್ ಕುಮಾರ್ ಒಬ್ಬ ಉತ್ತಮ ಆಡಳಿತಗಾರರಾಗಿದ್ದುದರ ಜೊತೆಗೆ ಒಬ್ಬ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವಂಥವರು.  ಒಬ್ಬ ಉತ್ತಮ ಭಾಷಣಕಾರರಾದ ಅವರು ತಮ್ಮ ಭಾಷಣಕ್ಕೆ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲವರು. ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಟಿಪ್ಪಣಿರೂಪದಲ್ಲಿ ಅವರು ಮಾಡುತ್ತಿದ್ದ ಭಾಷಣಶೈಲಿಯನ್ನು ನಾನು ಅನೇಕ ವೇಳೆ ಅಳವಡಿಸಿಕೊಂಡದ್ದಿದೆ.

ತಮಿಳಿಗಿಂತ ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಪ್ರಭುತ್ವ ಹೊಂದಿದ್ದ ಇವರು ತಮ್ಮ ಕವಿಮನಸ್ಸಿನ ಕಾರಣಕ್ಕೆ ನನಗೆ ಹತ್ತಿರವಾದವರು. ಇಂಗ್ಲಿಷಿನಲ್ಲಿ ಅವರು ಬರೆದಿದ್ದ ಹಲವು ಕವಿತೆಗಳಲ್ಲಿ ಇದ್ದ ಭಾವತೀವ್ರತೆ ನನ್ನನ್ನು ಅಚ್ಚರಿಗೊಳಿತ್ತುಅವುಗಳೆಲ್ಲವನ್ನು ಕೂಡಿಸಿ ಸಂಗ್ರಹವೊಂದನ್ನು ಹೊರತರಲು ನಾನು ಪದೇ ಪದೇ ಹೇಳುತ್ತಿದ್ದೆ. ನಾನು ಮತ್ತು ನನ್ನಂಥವರ ಒತ್ತಡದಿಂದ ಕೆಲಸವನ್ನು ಮಾಡಿ ಕಳೆದ ವರ್ಷ ಅವರು ಪ್ರಕಟಿಸಿದ ಮೊದಲ ಕೃತಿ ‘Love Beyond’ ಕವನ ಸಂಕಲನದ ಮೂಲಕ ಒಬ್ಬ ಒಳ್ಳೆಯ ಕವಿಯೆಂದು ಗುರುತಿಸಲ್ಪಟ್ಟವರು.

ನನ್ನನ್ನು ಇನ್ನೂ ಚಕಿತಗೊಳಿಸಿದ್ದು ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿದ್ದ ಪ್ರೀತಿ. ಕನ್ನಡದ ಬಹುಮುಖ್ಯ ಕೃತಿಗಳನ್ನು ಓದಬೇಕೆಂದು ಅವರು ಉತ್ಕಟ ಆಸೆ ಇಟ್ಟುಕೊಂಡಿದ್ದರು. ಆದರೆ ಭಾಷೆಯ ಕಾರಣಕ್ಕೆ ಅವರ ಆಸೆಯನ್ನು ನಾನು ಅವರ ಮಟ್ಟದಲ್ಲಿ ಪೂರೈಸಲು ಆಗಲಿಲ್ಲ.  ನಮ್ಮ ಕನ್ನಡ ಮೇಷ್ಟ್ರೇ ಓದದಿರುವ ಹಲವು ಮುಖ್ಯ ಕೃತಿಗಳನ್ನು ಅವರು ಓದಲು ನನಗೆ ಕೇಳುತ್ತಿದ್ದರು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಇಂಗ್ಲಿಷ್ ಆವೃತ್ತಿಯನ್ನು ನಾನು ಕೊಟ್ಟ ಹದಿನೈದು ದಿನಗಳೊಳಗೆ ಓದಿ ಅದರ ಬಗ್ಗೆ ಗಂಭೀರವಾದ ಚರ್ಚೆಯನ್ನು ಅವರು ನನ್ನೊಡನೆ ಮಾಡಿದ್ದರು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗವನ್ನು ನಾನು ಓದಲೇಬೇಕು ಎಂದು ಹಟಮಾಡಿ ನಾನು ಅದರ ಇಂಗ್ಲಿಷ್ ಆವೃತ್ತಿಯನ್ನು ಹುಡುಕಿಕೊಡುವವರೆಗೂ ನನ್ನ ಬಿಡದೆ ತರಿಸಿಕೊಂಡು ಓದಿದ್ದರು.

ಸ್ಥಳೀಯ ಭಾಷೆ ಸಂಸ್ಕೃತಿಗಳ ಬಗ್ಗೆ ತಕ್ಕಮಟ್ಟಿನ ಅರಿವು ಇಲ್ಲದಿದ್ದರೆ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತದೆ ಎಂದು ಸರಿಯಾಗಿ ಗುರುತಿಸಿದ್ದ ಇವರು ಗಾಜನೂರು ವಿದ್ಯಾಲಯದಲ್ಲಿ ಹನ್ನೊಂದು ಹನ್ನೆರಡನೆಯ ತರಗತಿಗಳಿಗೆ ಕನ್ನಡ ಅಧ್ಯಾಪಕರು ಇಲ್ಲದಿದ್ದಾಗ ಸ್ಥಳೀಯವಾಗಿ ಯಾರನ್ನಾದರೂ ವ್ಯವಸ್ಥೆಮಾಡಲು ನಮ್ಮನ್ನೆಲ್ಲ ಕಟ್ಟಿಕೊಂಡು ನಮಗಿಂತಲೂ ಹೆಚ್ಚು ಕಾಳಜಿವಹಿಸಿ ಗೋಳಾಡಿದ್ದರು!

ಅವರು ತನಿಖಾಧಿಕಾರಿಯಾಗಿ ಖಾಸಗೀ ಶಾಲೆಗಳಿಗೆ ಅದರಲ್ಲೂ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳಿಗೆ ಹೋದಾಗ, ಅದು ಬೆಂಗಳೂರು ಇರಲಿ, ಹೈದರಾಬಾದ್ ಇರಲಿ ವೆಲ್ಲೂರು ಇರಲಿ ಅವರು ಒತ್ತುಕೊಟ್ಟು ಗಮನಿಸುತ್ತಿದ್ದು, ಪ್ರಶ್ನೆಕೇಳುತ್ತಿದ್ದುದು ನೆಲದ ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಕ್ಕಮಟ್ಟಿನ ಜ್ಞಾನವಾದರೂ ಇದೆಯಾ ಎಂಬುದನ್ನು. ನಮ್ಮ ರಾಜ್ಯದ ಅನೇಕ ಖಾಸಗೀ ಶಾಲೆಗಳಿಗೆ ವಿಶೇಷವಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ಅವರು ಹೋಗಿ ಬಂದು ನನ್ನೊಡನೆ ಮಾತನಾಡುವಾಗ ಬಹಳಷ್ಟು ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯವೇ ಆಗುತ್ತಿಲ್ಲವೆಂದು ನೋವಿನಿಂದ ಹೇಳುತ್ತಿದ್ದರು. ಕೊನೆಯ ಪಕ್ಷ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿತಂದುಕೊಟ್ಟ ಸಾಹಿತಿಗಳ ಹೆಸರಾದರೂ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಅವರು ಕೇಳುವ ಪ್ರಶ್ನೆಗೆ ನಾನು ಅಪರಾಧಿಯಂತೆ ಸುಮ್ಮನೆ ಉತ್ತರ ಕೊಡಲಾಗದೆ ಕೂತದ್ದಿದೆ!


ಬಹುಶಃ ಇದೇ ಕಾರಣದಿಂದ ಇರಬೇಕು. ತಾವು ಪ್ರಾಚಾರ್ಯರಾಗಿರುವ ಶಾಲೆಯಲ್ಲಿ ಮಕ್ಕಳಿಗೆ ರೀತಿಯಸಾಂಸ್ಕೃತಿಕ ಬಡತನಉಂಟಾಗದಂತೆ ಏನಾದರೂ ಮಾಡಬೇಕೆಂದು ಅವರು ಹವಣಿಸುತ್ತಲೆ ಇದ್ದರು. ಧಾರವಾಡದ ಬೇಂದ್ರೆ ಪ್ರತಿಷ್ಠಾನದಿಂದ ತಂಡವನ್ನು ಕರೆಸಿ, ಬೇಂದ್ರೇ ವೇಷಧಾರಿಯನ್ನು ನೋಡಿ, ಅವರ ಬಗ್ಗೆ ಉಪನ್ಯಾಸ ಕೇಳುವಂತೆ ಮಾಡಿ, ಅವರ ಹಾಡುಗಳನ್ನು ಸವಿಯುಂತೆ ಮಾಡಿ ಮಕ್ಕಳ ಮನಸ್ಸಿನಲ್ಲಿ .ರಾ.ಬೇಂದ್ರೆ ಅಚ್ಚಳಿಯುವಂತೆ ಅವರು ಮಾಡಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಕುವೆಂಪು ಸೇರಿದಂತೆ ಪ್ರಮುಖ ಸಾಹಿತಿಗಳ ಬಗ್ಗೆ ಪರಿಚಯ ಕಾರ್ಯಕ್ರಮ ಮಾಡಲು ಅವರು ಬಹಳ ಉತ್ಸುಕರಾಗಿದ್ದು ಅವರ ವೇಗಕ್ಕೆ ತಕ್ಕಂತೆ ನಾವೇ ಕೆಲಸ ಮಾಡಲಿಲ್ಲವಾಗಿ ಅವುಗಳ ಬಹಳ ನಡೆಯಲು ಸಾಧ್ಯವಾಗಲಿಲ್ಲ.

ಅವರ ಕನ್ನಡದ ಕಾಳಜಿಯ ಕಾರ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ಬಹಳದಿನಗಳ ಕಾಲ ಉಳಿಯುವಂಥದ್ದು ಅವರು ಗಾಜನೂರಿನ ನವೋದಯ ವಿದ್ಯಾಲಯದ ಆವರಣದಲ್ಲಿ ರೂಪಿಸಿದ ‘Writers Memorial’. ವಿದ್ಯಾಲಯ ಆವರಣಕ್ಕೆ ಬರುವವರಿಗೆ ನಮ್ಮ ನೆಲದ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಬರುವಂತೆ ಏನನ್ನಾದರೂ ಮಾಡಬೇಕೆಂದು ಸದಾ ಯೋಚಿಸುತ್ತಿದ್ದ ಅವರು ನನ್ನ ಜೊತೆ ಹಲವು ಸಾರಿ ಚರ್ಚಿಸಿ ಯೋಜನೆಯನ್ನು ರೂಪಿಸಿದರು. ಅದಕ್ಕೆ ಬೇಕಾದ ಹಣಕಾಸಿಗಾಗಿ ಅವರು ಪಟ್ಟ ಕಷ್ಟ ಹೇಳತೀರದು. ಆದರೂ ಹಟಕ್ಕೆ ಬಿದ್ದು ಅದನ್ನು ಮುಗಿಸಿಯೇ ತೀರಬೇಕೆಂದು ಪಟ್ಟು ಹಿಡಿದು ಮುಗಿಸಿದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟೂ ಜನ ಸಾಹಿತಿಗಳ ಪುತ್ಥಳಿಗಳೂ ಸೇರಿದಂತೆ ಅನೇಕ ಆಕರ್ಷಕ ಅಂಶಗಳನ್ನು ಹೊಂದಿರುವ ಸ್ಥಳಕ್ಕೆಪುಸ್ತಕಲೋಕಎಂದು ಹೆಸರನ್ನು ಕೊಡುವ ಭಾಗ್ಯ ನನಗೆ ಬಂದಿತುಈ ಪುಸ್ತಕ ಲೋಕವನ್ನು ರೂಪಿಸುವಲ್ಲಿ ಅವರೊಂದಿಗೆ ಕೈಜೋಡಿಸಿ ಅದನ್ನು ಆಗುಮಾಡಿದ ಗಾಜನೂರಿನ ನವೋದಯ ವಿದ್ಯಾಲಯದ ಅಧ್ಯಾಪಕರು ಮತ್ತು ಸಿಬ್ಬಂದಿ ಅದರಲ್ಲಿಯೂ ವಿಶೇಷವಾಗಿ ಅಲ್ಲಿನ ಕಲಾಶಿಕ್ಷಕರು (ಅವರೇ ಸ್ವತಃ ಇಲ್ಲಿನ ಜ್ಞಾನಪೀಠ ಪುರಸ್ಕೃತರ ಪುತ್ಥಳಿ ರೂಪಿಸಿದವರು) ಅಭಿನಂದನಾರ್ಹರು.

ಇಂತಹ ಸಾಹಿತ್ಯ ಸಂಸ್ಕೃತಿಗಳ ಒಡನಾಡಿ ಆರ್. ಪ್ರೇಮ್ ಕುಮಾರ್ ಇದೀಗ ಜವಾಬ್ದಾರಿ ವಹಿಸಿಕೊಂಡಿರುವ ಚಿಕ್ಕಮಗಳೂರು ನವೋದಯದಲ್ಲೂ ಇಂಥದೇ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿ.

ಅವರು ಗಾಜನೂರು ಬಿಡುವಾಗ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಸ್ಪೂರ್ತಿದಾಯಕವಿದಾಯಭಾಷಣವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://youtu.be/juerreYmqws


ಡಾ. ರಾಜೇಂದ್ರ ಬುರಡಿಕಟ್ಟಿ

Tuesday, September 14, 2021

Saturday, August 14, 2021

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

 

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

(ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಸಮಾರಂಭ ಹೇಗೆ ನಡೆಯಿತು? ಆಗಸ್ಟ್ ಹದಿನೈದೇ ಏಕೆ ನಿಗಧಿಯಾಯಿತು? ಹದಿನೈದರ ಬದಲು ಹದಿನಾಲ್ಕರ ರಾತ್ರಿ ಸಮಾರಂಭ ಏಕೆ ಆರಂಭವಾಯಿತು?  ಸಮಾರಂಭದಲ್ಲಿ ಆದ ಎಡವಟ್ಟುಗಳೇನು? ಇಂತಹ ಕೆಲವು ಕುತೂಹಲಕಾರಿ ಅಂಶಗಳಿಗಾಗಿ ಈ ಲೇಖನವನ್ನು ಗಮನಿಸಿ – ಡಾ. ರಾಜೇಂದ್ರ ಬುರಡಿಕಟ್ಟಿ)

*****


1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ದೇಶಭಕ್ತ ಭಾರತೀಯರು ಇದಕ್ಕೂ ಹದಿನೇಳು ವರ್ಷ ಮುಂಚೆಯೇ ಪ್ರಥಮ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದರು……. 1930 ರ ಜನವರಿಯ ಕೊನೆಯ ಭಾನುವಾರ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕೆಂದು ಗೊತ್ತುಪಡಿಸುವ ಠರಾವನ್ನು ಲಾಹೋರ್ ನಗರದಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಪಾಸು ಮಾಡಲಾಯಿತು. ಇಲ್ಲಿಯೇ ಜವಾಹರ ಲಾಲ್ ನೆಹರು ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದದ್ದು……..

ಮಧ್ಯರಾತ್ರಿಯೇಕೆ?

1930ರ ನಂತರ, ಪ್ರತಿವರ್ಷ ಕಾಂಗ್ರೆಸ್ ಮನೋಧರ್ಮದ ಭಾರತೀಯರು ಜನವರಿ 26ರಂದು ಸ್ವಾತಂತ್ರ್ಯದಿನ ಆಚರಿಸಿದರು. ಬ್ರಿಟೀಷರು ಆಖೈರಾಗಿ ಉಪಖಂಡ ತ್ಯಜಿಸಿ ಹೋದಾಗ, ಅವರು ಅಧಿಕಾರ ಹಸ್ತಾಂತರಿಸಲು 1947 ಆಗಸ್ಟ್ 15 ರ ದಿನಾಂಕವನ್ನು ಆಯ್ಕೆಮಾಡಿಕೊಂಡರು. ಈ ತಾರೀಖನ್ನು ಆಯ್ಕೆ ಮಾಡಿದ್ದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಅದು, ಎರಡನೆಯ ಮಹಾಯುದ್ಧದಲ್ಲಿ ಜಪಾನಿಗಳು ಮಿತ್ರರಾಷ್ಟ್ರಗಳ ಪಡೆಗಳಿಗೆ ಶರಣಾಗತಿಯಾದುದರ ಎರಡನೆಯ ವಾರ್ಷಿಕ ದಿನವಾಗಿತ್ತು. ಇನ್ನು ಕೆಲವರು 1948ರ ಜನವರಿ 26 ರಂದು ಅಧಿಕಾರ ಹಸ್ತಾಂತರವಾಗಬೇಕೆಂದು ಬಯಸಿದರು. ಆದರೆ ಮೌಂಟ್ ಬ್ಯಾಟನ್ ಮತ್ತು ಅಧಿಕಾರ ಸ್ವೀಕಾರಕ್ಕೆ ಕಾಯುತ್ತಿದ್ದ ರಾಜಕಾರಣಿಗಳು ಅಧಿಕಾರ ಹಸ್ತಾಂತರವನ್ನು ವಿಳಂಬಗೊಳಿಸಲು ಒಪ್ಪಲಿಲ್ಲ.

ಹೀಗೆ, ರಾಷ್ಟ್ರೀಯ ಭಾವನೆಗಿಂತ, ಸಾಮ್ರಾಜ್ಯಶಾಹಿಯ ಹಮ್ಮು-ಪ್ರತಿಷ್ಠೆಗಳನ್ನು ಅನುರಣಿಸಿದ ದಿನ ಸ್ವಾತಂತ್ರ್ಯ ಕೊನೆಗೂ ಬಂತು. ಆಗಸ್ಟ್ 15 ಮಂಗಳಕರ ದಿನವಲ್ಲವೆಂದು ಜ್ಯೋತಿಷಿಗಳು ಕಟ್ಟಳೆ ಮಾಡಿದ್ದರು. ಆದ್ದರಿಂದ 14ರಂದೇ


ಸಂಭ್ರಮಾಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಹೊಸ ಸಂವಿಧಾನ ರಚಿಸಲು ಭಾರತೀಯ ಪ್ರತಿನಿಧಿಗಳನ್ನೊಳಗೊಂಡಿದ್ದ ಸಂವಿಧಾನ ರಚನಾ ಸಭೆಯ ವಿಶೇಷ ಅಧಿವೇಶನವನ್ನು 14ರಂದೇ ನಡೆಸುವುದರೊಂದಿಗೆ ಸ್ವಾತಂತ್ರ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

ಹಿಂದಿನ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಲೆಜಿಸ್ಲೆಟಿವ್ ಕೌನ್ಸಿಲ್ ಅಧಿವೇಶನ ನಡೆಯುತ್ತಿದ್ದ ಎತ್ತರದ ಗುಮ್ಮಟದ ಸಭಾಂಗಣದಲ್ಲಿ ಸಮಾರಂಭ ಏರ್ಪಾಡಾಗಿತ್ತು. ಉಜ್ವಲ ದೀಪಗಳಿಂದ ಬೆಳಗುತ್ತಿದ್ದ ಸಭಾಂಗಣ ಬಾವುಟಗಳಿಂದ ಅಲಂಕೃತಗೊಂಡಿತ್ತು. ಹಿಂದಿನ ವಾರ ಬ್ರಿಟಿಷ್ ವೈಸ್ ರಾಯ್ ಗಳ ಭಾವಚಿತ್ರಗಳಿದ್ದ ಫೋಟೋ ಫ್ರೇಮ್ ಗಳಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ರಾಷ್ಟ್ರಭಕ್ತಿಗೀತೆ ‘ವಂದೇ ಮಾತರಂ’ ಗಾಯನದೊಂದಿಗೆ ರಾತ್ರಿ 11 ಗಂಟೆಗೆ ಸಮಾರಂಭದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾರತದೊಳಗೆ ಹಾಗೂ ಬೇರೆಡೆ ಪ್ರಾಣಾರ್ಪಣೆ ಮಾಡಿದವರಿಗೆ” ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಭಾರತೀಯ ನಾರಿಯರ ಪರವಾಗಿ ರಾಷ್ಟ್ರಧ್ವಜವನ್ನು ಪ್ರದಾನಮಾಡುವುದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು….

ಸ್ತೋತ್ರಗೀತೆ ಮತ್ತು ರಾಷ್ಟ್ರಧ್ವಜ ಪ್ರದಾನಗಳ ಮಧ್ಯೆ ಭಾಷಣಗಳಾದವು. ಆ ರಾತ್ರಿ ಮೂವರು ಪ್ರಮುಖರು ಭಾಷಣ ಮಾಡಿದರು. ಒಬ್ಬರು, ಚೌಧುರಿ ಖಲೀಕ್ ಉಸ್ಮಾನ್, ಭಾರತದ ಮುಸ್ಲಿಮರ ಪ್ರತಿನಿಧಿಯಾಗಿ ಇವರನ್ನು ಆರಿಸಲಾಗಿತ್ತು. ಇವರು ಹೊಸದಾಗಿ ಸ್ವಾತಂತ್ರ್ಯಗೊಂಡ ಭಾರತ ದೇಶಕ್ಕೆ ಅಲ್ಪಸಂಖ್ಯಾತರ ನಿಷ್ಠೆಯನ್ನು ಯಥೋಚಿತವಾಗಿ ಘೋಷಿಸಿದರು. ಎರಡನೆಯವರು ತತ್ವಶಾಸ್ತ್ರಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್. ವಾಕ್ ಶಕ್ತಿ, ಪ್ರಾವೀಣ್ಯತೆ ಹಾಗೂ ಪೂರ್ವ-ಪಶ್ವಿಮಗಳನ್ನು ಹತ್ತಿರ ತರುವ ಗ್ರಂಥದ ಕರ್ತೃವಾದ್ದರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಡಚ್ಚರು ಇಂಡೋನೇಷ್ಯಾದಲ್ಲೆ ಉಳಿದಿದ್ದು, ಫ್ರೆಂಚರು ಇಂಡೋ ಚೀನಾದಿಂದ ಕಾಲ್ತೆಗೆಯಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ, ಭಾರತ ತ್ಯಜಿಸುವುದನ್ನು ಆಯ್ಕೆ ಮಾಡಿಕೊಂಡ ಬ್ರಿಟನ್ನಿನ ರಾಜಕೀಯ ವ್ಯವಹಾರಿಕ ವಿವೇಕ ಮತ್ತು ಎದೆಗಾರಿಕೆಯನ್ನು ರಾಧಾಕೃಷ್ಣನ್ ಪ್ರಶಂಸಿಸಿದರು.

ಅಂದಿನ ಭಾಷಣಕಾರರಲ್ಲಿ ತಾರಾ ಆಕರ್ಷಣೆಯೆಂದರೆ ಸ್ವತಂತ್ರ  ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್


ನೆಹರೂ.  ನೆಹರೂ ಆ ರಾತ್ರಿ ಭಾಷಣಕಾರರಲ್ಲಿ ಧ್ರುವತಾರೆಯಾಗಿದ್ದರು. ಅವರ ಭಾಷಣ ಭಾವತೀವ್ರತೆಯಿಂದಲೂ ವಾಗ್ಮಯ ಕಲೆಯಿಂದಲೂ ತುಂಬಿ ಶ್ರೀಮಂತವಾಗಿತ್ತು. ಆ ರಾತ್ರಿ ಅವರು ಆಡಿದ, “ಮಧ್ಯರಾತ್ರಿಯ ಘಂಟಾನಾದದ ಈ ಮುಹೂರ್ತದಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಜೀವಚೈತನ್ಯಕ್ಕೆ-ಸ್ವಾತಂತ್ರ್ಯಕ್ಕೆ ಕಣ್ತೆರೆಯುತ್ತಿದೆ.” ಈ ಮಾತುಗಳು ಅಂದಿನಿಂದ ವ್ಯಾಪಕವಾಗಿ ಉಲ್ಲೇಖಗೊಂಡವು. “ಈ ಮುಹೂರ್ತ ಇತಿಹಾಸದ ಅತ್ಯಪೂರ್ವ ಕ್ಷಣ, ನಾವು ಹಳೆಯದರಿಂದ ಹೊಸತಿಗೆ ಪಾದಾರ್ಪಣ ಮಾಡುತ್ತಿದ್ದೇವೆ, ರಾಷ್ಟ್ರಾತ್ಮ ಸುದೀರ್ಘಕಾಲ ತುಳಿತಕ್ಕೊಳಗಾಗಿದ್ದ ಯುಗಾಂತ್ಯಗೊಂಡು ವಾಕ್ ಶಕ್ತಿ ಪಡೆಯುತ್ತಿರುವ ಮುಹೂರ್ತವಿದು” ಎಂದು ನೆಹರೂ ಹೇಳಿದ್ದರು.

ಸಮಾರಂಭದಲ್ಲಾದ ಎಡವಟ್ಟು!

ಭಾರತದಲ್ಲಿ ಯಾವುದೇ ಒಂದು ಮಹತ್ವದ ಸಮಾರಂಭವೂ ಎಡವಟ್ಟು-ಅಚಾತುರ್ಯಗಳಿಲ್ಲದೆ ಮುಗಿಯುವುದಿಲ್ಲ. ಈ ಸಂದರ್ಭದಲ್ಲಿ ಆದ ಅಚಾತುರ್ಯ ಹೋಲಿಕೆಯಿಂದ ಸಣ್ಣದು. ಮಧ್ಯರಾತ್ರಿಯ ಅಧಿವೇಶನದ ನಂತರ ಜವಹರಲಾಲ್ ನೆಹರೂ ಅವರು ಗೌರ್ನರ್ ಜನರಲ್ ಅವರಿಗೆ ತಮ್ಮ ಸಂಪುಟದ ಸಚಿವರ ಪಟ್ಟಿ ಸಲ್ಲಿಸಲು ಧಾವಿಸಿದರು. ಅವರು ಗೌರ್ನರ್ ಜನರಲ್ ಅವರಿಗೆ ಖಾಲಿ ಲಕೋಟೆಯೊಂದನ್ನು ನೀಡಿದ್ದರು! ಆದರೆ ಪ್ರಮಾಣವಚನ ಸ್ವೀಕಾರದ ವೇಳೆಗೆ ಕಳೆದುಹೋಗಿದ್ದ ಕಾಗದದ ಚೂರು ಸಿಕ್ಕಿತು. ಪ್ರಧಾನಮಂತ್ರಿಯಲ್ಲದೆ, ಸಂಪುಟದಲ್ಲಿ ಹದಿಮೂರು ಮಂದಿ ಇತರೆ ಸಚಿವರುಗಳಿದ್ದರು. ಅವರಲ್ಲಿ ವಲ್ಲಭಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಆಜಾದ್ ರಂಥ ರಾಷ್ಟ್ರೀಯ ಅತಿರಥ ಮಹಾರಥ ನಾಯಕರುಗಳಿದ್ದರು. ಅಲ್ಲದೆ ಯುವ ಜನಾಂಗದ ನಾಲ್ವರು ಕಾಂಗ್ರೆಸ್ ರಾಜಕಾರಣಿಗಳೂ ಸೇರಿದ್ದರು.

ಸಂಪುಟದ ಸಚಿವರುಗಳ ಹೆಸರುಗಳಲ್ಲಿ ತುಂಬಾ ಗಮನಾರ್ಹವಾದವು ಕಾಂಗ್ರೆಸ್ ಪಕ್ಷದವರದಾಗಿರಲಿಲ್ಲ. ಸಂಪುಟದಲ್ಲಿ ವಾಣಿಜ್ಯ ಪ್ರಪಂಚ ಹಾಗೂ ಸಿಖ್ಖರ ಪ್ರತಿನಿಧಿಗಳಿದ್ದರು. ಉಳಿದ ಮೂವರು ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದವರು. ಇವರು, ಭಾರತದ ಅತ್ಯುತ್ತಮ ವಿತ್ತೀಯ ಬುದ್ಧಿವಂತರೆನ್ನಿಸಿಕೊಂಡ ಮದ್ರಾಸಿನ ವಣಿಕ ಮಹಾಶಯರಾದ ಆರ್. ಕೆ. ಷಣ್ಮುಖಂ ಚೆಟ್ಟಿ, ನ್ಯಾಯಶಾಸ್ತ್ರದ ಮೇಧಾವಿಗಳೂ ಜಾತಿಯಿಂದ ಅಸ್ಪೃಶ್ಯರೂ ಆದ ಬಿ.ಆರ್. ಅಂಬೇಡ್ಕರ್ ಮತ್ತು ಹಿಂದೂ ಮಹಾಸಭಾಗೆ ಸೇರಿದ ಬಂಗಾಳದ ಪ್ರಮುಖ ರಾಜಕಾರಣಿ ಶ್ಯಾಮ್ ಪ್ರಸಾದ್ ಮುಖರ್ಜಿ. ಕಾಂಗ್ರೇಸ್ಸಿಗರು ಬ್ರಿಟೀಷರ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಆಡಳಿತಗಾರರೊಂದಿಗೆ ಕೈಜೋಡಿಸಿದವರೂ ಇದ್ದರು. ಆದರೆ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಈಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬುದ್ಧಿವಂತಿಕೆಯಿಂದ ಪಕ್ಕಕ್ಕೆ ದೂಡಿದ್ದರು. ‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ, ಕ್ರಾಂಗ್ರೆಸ್ಸಿಗೆ ಅಲ್ಲ’ ಎಂಬುದನ್ನು ನೆನಪಿಸುವ ಮೂಲಕ ಗಾಂಧೀಜಿಯವರು, ಪಕ್ಷಭೇದ ಮರೆತು ಸಮರ್ಥರನ್ನೊಳಗೊಂಡ ಸಂಪುಟವನ್ನು ಬರಚಿಸಬೇಕೆಂದು ಆಗ್ರಹಪಡಿಸಿದ್ದರು.

ಮೊದಲ ಮಂತ್ರಿಮಂಡಲ ರಾಜಕೀಯವಾಗಿಯಷ್ಟೇ ಅಲ್ಲದೆ, ಬೇರೆ ರೀತಿಯಿಂದಲೂ ವ್ಯಾಪಕ ಪ್ರಾತಿನಿಧ್ಯದಿಂದ ಕೂಡಿತ್ತು. ಮಂತ್ರಿಮಂಡಲದಲ್ಲಿ ಐದು ಪ್ರಮುಖ ಧರ್ಮಗಳವರಿದ್ದರು (ಸಾಕಷ್ಟು ಪ್ರಮಾಣದಲ್ಲಿ ನಿರೀಶ್ವರವಾದಿಗಳೂ ಇದ್ದರು) ಹಾಗೂ ಭಾರತದ ಎಲ್ಲ ಭಾಗಗಳವರೂ ಇದ್ದರು. ಇಬ್ಬರು ಅಸ್ಪೃಶ್ಯರಲ್ಲದೆ ಮಹಿಳಾ ಪ್ರತಿನಿಧಿಯೆಂಬಂತೆ ರಾಜಕುಮಾರಿ ಅಮೃತ ಕೌರ್ ಅವರೂ ಇದ್ದರು.

ಸಮಾರಂಭದ ಕಾರ್ಯಸೂಚಿ!

ಆಗಸ್ಟ್ 15 ರ ಕಾರ್ಯಸೂಚಿಯ ಮೊದಲ ವಿಷಯ, ಗೌರ್ನರ್ ಜನರಲ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಪ್ರಮಾಣವಚನ ಸ್ವೀಕಾರ. ಇವರು ಹಿಂದಿನ ರಾತ್ರಿಯವರೆಗೆ ಬ್ರಿಟಿಷರ ಕೊನೆಯ ವೈಸರಾಯ್ ಆಗಿದ್ದವರು. ಆ ದಿನ ಉಳಿದ ಕಾರ್ಯಕ್ರಮದ ಪಟ್ಟಿ ಹೀಗಿತ್ತು:

ಬೆಳಿಗ್ಗೆ 8.30 ಸರ್ಕಾರಿ ಭವನದಲ್ಲಿ ಗೌರ್ನರ್ ಜನರಲ್ ಹಾಗೂ ಸಚಿವರಿಂದ ಪ್ರಮಾಣ ವಚನ ಸ್ವೀಕಾರ.

ಬೆಳಿಗ್ಗೆ 9.40 – ಸಂವಿಧಾನ ರಚನಾ ಸಭೆಗೆ ಸಚಿವರ ಮೆರವಣಿಗೆ.

ಬೆಳಿಗ್ಗೆ 9.50 – ಸಂವಿಧಾನ ರಚನಾ ಸಭೆಗೆ ಗೌರ್ನರ್ ಜನರಲ್ ಆಗಮನ.

ಬೆಳಿಗ್ಗೆ 9.55 – ಗೌರ್ನರ್ ಜನರಲ್ ಅವರಿಗೆ ರಾಜೋಚಿತ ಗೌರವ ವಂದನೆ.

ಬೆಳಿಗ್ಗೆ 10.30 – ಸಂವಿಧಾನ ರಚನಾ ಸಭೆಯಲ್ಲಿ ಧ್ವಜಾರೋಹಣ

ಬೆಳಿಗ್ಗೆ 10.35 – ಸರ್ಕಾರಿ ಭವನಕ್ಕೆ ಗೌರ್ನರ್ ಜನರಲ್ ನಿರ್ಗಮನ.

ಸಂಜೆ 6.00 – ಇಂಡಿಯಾ ಗೇಟಿನಲ್ಲಿ ಧ್ವಜಾರೋಹಣ.

ಸಂಜೆ 7.00 – ದೀಪೋತ್ಸವ.

ಸಂಜೆ 7.45 – ಬಾಣ ಬಿರುಸುಗಳ ಪ್ರದರ್ಶನ.

ಸಂಜೆ 8.45 – ಸರ್ಕಾರಿ ಭವನದಲ್ಲಿ ಅಧಿಕೃತ ಭೋಜನಕೂಟ.

ರಾತ್ರಿ 10.15 – ಸರ್ಕಾರಿ ಭವನದಲ್ಲಿ ಉತ್ಸವ.

ನಿರ್ಗಮಿಸಿದ ಪ್ರಭುಗಳಂತೆ ಭಾರತೀಯರಿಗೂ ಅದ್ಧೂರಿ-ಆಡಂಬರದ ಸಮಾರಂಭಗಳು ಪ್ರಿಯವಾಗಿರುವಂತೆ ತೋರುತ್ತದೆ. ದೆಹಲಿ ಉದ್ದಗಲಗಳಲ್ಲಿ ಹಾಗೂ ಭಾರತದ ಇತರ ಭಾಗಗಳಲ್ಲಿ ಸರ್ಕಾರ ಮತ್ತು ಪ್ರಜೆಗಳು ಸ್ವಾತಂತ್ರ್ಯಾಗಮನವನ್ನು ಹರ್ಷೋಲ್ಲಾಸಗಳಿಂದ ಆಚರಿಸಿದರು. ರಾಜಧಾನಿಯೊಂದರಲ್ಲೇ ಮುನ್ನೂರು ಧ್ವಜಾರೋಹಣ ಸಮಾರಂಭಗಳು ನಡೆದುದಾಗಿ ವರದಿಯಾಗಿದೆ. ರಾಷ್ಟ್ರದ ವಾಣಿಜ್ಯ ಕೇಂದ್ರವಾದ ಮುಂಬಯಿಯಲ್ಲಿ ನಗರದ ಮೇಯರ್ ಭವ್ಯ ತಾಜ್ ಮಹಲ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸಿದ್ದರು. ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಕಾಶಿಯಲ್ಲಿ ದೇವಾಲಯವೊಂದರಲ್ಲಿ, ಗಮನಾರ್ಹವಾಗಿ ಮುಸ್ಲಿಮನೊಬ್ಬನಿಂದ ರಾಷ್ಟ್ರಧ್ವಜಾರೋಹಣ ನಡೆಯಿತು. …….

ಶಿಸ್ತಿನಿಂದ ಅಶಿಸ್ತಿನ ಕಡೆಗೆ…

1930ರ ಜನವರಿ 26 ರಂದು ಅದ್ಭುತವಾಗಿ ಆಚರಿಸಲಾದ ಮೊದಲ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ, ನೆಹರೂ ಹೇಳಿರುವಂತೆ, ಭಾಗವಹಿಸಿದವರು ಶಿಸ್ತುಗಾಂಭೀರ್ಯಗಳಿಂದ ಆಜ್ಞಾನುವರ್ತಿಗಳಾಗಿದ್ದರು. ಆದರೆ 1947ರಲ್ಲಿ, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂದಾಗ ಭಾವನೆಗಳ ಅಭಿವ್ಯಕ್ತಿ, ಪ್ರದರ್ಶನಗಳು ಅತ್ಯಂತ ಸಹಜವಾಗಿದ್ದವು. ವಿದೇಶಿಯೊಬ್ಬರನ್ನು ಉಲ್ಲೇಖಿಸಿ ಹೇಳುವುದಾದರೆ, “ ನಗರಗಳ ನಂತರ ನಗರಗಳಲ್ಲಿ ಉತ್ಸಾಹಭರಿತ ಜನಸಮುದಾಯ, ಅನೇಕ ವರ್ಷಗಳಿಂದ ಅದುಮಿಟ್ಟಿದ್ದ ಹತಾಶೆಗಳು ಕಟ್ಟೆಯೊಡೆದು ಬಂದಂತೆ ಮೋಜಿನಿಂದ, ಆಮೋದ-ಪ್ರಮೋದಗಳಿಂದ ಆಚರಿಸಿತು….. ಮನೆಗಳ ಮೇಲೆ ಕಟ್ಟಡಗಳ ಮೇಲೆ ಸಾಲು ಸಾಲಾಗಿ ನಿಶಾನೆಗಳು ಹಾರಾಡಿದವು. ಕಾರುಗಳ ಮೇಲೆ ಬೈಸಿಕಲ್ಲುಗಳ ಮೇಲೆ, ಮಕ್ಕಳು, ಹಾಲು ಹಸುಳೆಗಳ ಕೈಗಳಲ್ಲಿ ನಿಶಾನೆಗಳು ಹಾರಾಡಿದವು……

ಈ ಮಧ್ಯೆ ಸರ್ಕಾರಿ ಭವನದಲ್ಲಿ ಹೊಸ ಭಾರತೀಯ ಗೌರ್ನರ್ ನ ಪ್ರಮಾಣವಚನ ಸ್ವೀಕಾರ ನಡೆದಿತ್ತು…. “ಅರಮನೆಯ ತುಂಬ ಅನಧಿಕೃತ ವ್ಯಕ್ತಿಗಳೇ ತುಂಬಿದ್ದು, ಸಮಾರಂಭವು ಬ್ರಿಟೀಷರು ಭಾರತವನ್ನು ತ್ಯಜಿಸಿದ ನಂತರ ಭವಿಷ್ಯದ ದಿನಗಳಲ್ಲಿ ಬರಲಿರುವುದರ ಮುನ್ಸೂಚನೆಯಂತಿತ್ತು.”….

*****

ಡಾ. ರಾಜೇಂದ್ರ ಬುರಡಿಕಟ್ಟಿ

15-08-2021

{ಮೇಲಿನ ಲೇಖನವು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ India After Gandhi ಕೃತಿಯ ಕನ್ನಡ ಅನುವಾದವಾದ ‘ಬಾಪು ನಂತರದ ಭಾರತ’ (ಅನು:ಜಿ.ಎನ್. ರಂಗನಾಥ ರಾವ್) ಕೃತಿಯ ಮೊದಲ ಅಧ್ಯಾಯವಾದ  ‘ಸ್ವಾತಂತ್ರ್ಯ ಮತ್ತು ಪಿತೃಹತ್ಯೆ’ಯ ಆಯ್ದ ಈ ಭಾಗವಾಗಿದ್ದು ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದ ಓದಿಗಾಗಿ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಮೂಲ ಲೇಖಕರಿಗೆ ಮತ್ತು ಅನುವಾದಕರಿಗೆ ಕೃತಜ್ಞನಾಗಿದ್ದೇನೆ. – ರಾಬು}

 

Friday, August 13, 2021

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

 

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

ನಮ್ಮಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಕೆಲವು ಆಚರಣೆಗಳ ದಿನಗಳು ಎರಡೆರಡಾಗಿ ಆಚರಿಸಲ್ಪಡುತ್ತಿವೆ. ಅವೆಂದರೆ ಶಿಕ್ಷಕ ದಿನ, ವಿಜ್ಞಾನ ದಿನ ಇತ್ಯಾದಿ. ಅವುಗಳಂತೆಯೇ ‘ಅಂಗಾಂಗ ದಾನದ ದಿನ’ ಕೂಡ ನಮ್ಮಲ್ಲಿ ಎರಡು ದಿನ ಆಚರಿಸಲ್ಪಡುವ ದಿನವಾಗಿದೆ. ಮೊದಲನೆಯದಾಗಿ ಪ್ರತಿವರ್ಷ ಆಗಸ್ಟ್ 13ನ್ನು ‘ವಿಶ್ವ ಅಂಗಾಂಗ ದಾನದ ದಿನ’ (World Organ Donation Day) ಎಂದು ಆಚರಿಸಿದರೆ ಇದೇ ದಿನವನ್ನು ನಮ್ಮ ದೇಶದ ಮಟ್ಟದಲ್ಲಿ ಪ್ರತಿವರ್ಷ ನವೆಂಬರ್ 27 ರಂದು ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಅಂಗಾಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಮಾಡುವುದು ಈ ಆಚರಣೆಗಳ ಮುಖ್ಯವಾದ ಉದ್ದೇಶ. ಕಳೆದ ವರ್ಷ ಸರ್ಕಾರ “ನಿಮ್ಮ ಅಂಗಾಂಗಗಳನ್ನು ನಿಮ್ಮೊಂದಿಗೆ ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅವಶ್ಯಕತೆ ಇಲ್ಲಿಯೇ ಇದೆ ಎಂಬುದು ದೇವರಿಗೆ ಗೊತ್ತಿದೆ” ಎಂಬ ಧ್ಯೇಯವಾಕ್ಯದೊಂದಿಗೆ ಜನರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಂಗಾಂಗ ಕಸಿ (Organ Transplantation) ಯ ಇತಿಹಾಸ

ಆಧುನಿಕ ಪ್ರಪಂಚದಲ್ಲಿ ಅಂಗಾಗ ಕಸಿಯ ಮೂಲಕ ವೈಜ್ಞಾನಿಕವಾಗಿ ನಮ್ಮ ಜಗತ್ತು ಒಂದು ಮಹತ್ವದ ಮೈಲುಗಲ್ಲನ್ನು


ಮುಟ್ಟಿದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ. 1954 ರಲ್ಲಿ ಅಮೇರಿಕೆಯ ವೈದ್ಯವಿಜ್ಞಾನಿ ಡಾ. ಜೊಸೆಫ್ ಮೂರಿಯು ಮೊಟ್ಟಮೊದಲು ರಿಚರ್ಡ್ ಹ್ಯಾರಿಕ್ ಮತ್ತು ರೊನಾಲ್ಡ್ ಹ್ಯಾರಿಕ್ ಎಂಬ ಇಬ್ಬರು ಅವಳಿಗಳ ನಡುವೆ ಮೂತ್ರಕೋಶದ ಯಶಸ್ವಿ ಕಸಿಮಾಡುವುದರೊಂದಿಗೆ ಅಂಗಾಂಗ ಕಸಿಗೆ ವೈದ್ಯವಿಜ್ಞಾನದಲ್ಲಿ ಒಂದು ಮಹತ್ವದ ಅಡಿಗಲ್ಲು ಹಾಕಿದ. ಮನಶ್ಶಾಸ್ತ್ರದಲ್ಲಿ ಅನೇಕ ಮಹತ್ವದ ಜಾಗತಿಕ ಮಟ್ಟದ ಕೃತಿಗಳನ್ನೂ ಬರೆದಿರುವ ಈ ವಿಜ್ಞಾನಿಗೆ ಮುಂದೆ 1990 ರಲ್ಲಿ ಪ್ರತಿಷ್ಠಿತ ನೊಬೆಲ್ ಬಹುಮಾನವನ್ನು ನೀಡುವ ಮೂಲಕ ಜಗತ್ತು ಗೌರವಿಸಿತು. ಮೂರಿ ಮಾಡಿದ ಈ ಸಾಧನೆಯಿಂದಾಗಿ ಇಂದು ಜಗತ್ತಿನಾದ್ಯಂತ ಅಂಗಾಂಗ ಕಸಿ ವಿಭಿನ್ನ ಆಯಾಮಗಳಲ್ಲಿ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಅಂಗಾಗ ಕಸಿ

ಭಾರತದಲ್ಲಿ ಅಂಗಾಗ ಕಸಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ನಡೆದಿಲ್ಲವೆನ್ನಬಹುದು. ಅಂಗಾಗ ಕಸಿಯ ಸಾಧ್ಯತೆಯನ್ನು ನಾವು ಆರಂಭದಲ್ಲಿ ದುರುಪಯೋಗಪಡಿಸಿಕೊಂಡದ್ದೇ ಹೆಚ್ಚು. ಅನೇಕ ‘ಕಿಡ್ನಿವ್ಯಾಪಾರಗಳು’ ನಡೆಯತೊಡಗಿದಾಗ ಇದಕ್ಕೊಂದು ವ್ಯವಸ್ಥಿತ ಸಂಘಟಿತ ರೂಪರೇಷೆಗಳನ್ನು, ಕಾನೂನಾತ್ಮಕ ಚೌಕಟ್ಟನ್ನು ರೂಪಿಸುವ ಕೆಲಸಗಳು ನಮ್ಮಲದಲಿ ಆರಂಭವಾದವು.  ಈ ನಿಟ್ಟಿನಲ್ಲಿ ಭಾರತ ಸರ್ಕಾರವು 2011 ರಲ್ಲಿ ಜಾರಿಗೆ ತಂದ ಮಾನವ ಅಂಗಾಗ ಕಸಿ (ತಿದ್ದುಪಡಿ)ವಿಧೇಯಕ (Transplantation of Human Organ (Amendment) Bill 2011) ಒಂದು ಮಹತ್ವದ ಹೆಜ್ಜೆಯಾಯಿತು. ಈಗ ಈ ಕಾಯ್ದೆಯ ಅನ್ವಯ ಭಾರತದಲ್ಲಿಯ ಅಂಗಾಗ ಕಸಿಯ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರಮಟ್ಟದ


ಸಂಸ್ಥೆ ‘ನೊಟ್ಟೊ’ (National Organ and Tissue Transplant Organization –NOTTO) ಹೊತ್ತಿದೆ. ಈ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 1995 ರಿಂದ 2010 ವರೆಗಿನ 15 ವರ್ಷಗಳಲ್ಲಿ ಅಂಗಾಗಕಸಿಯ ಪ್ರಕರಣಗಳು ಯಾವ ವರ್ಷವೂ ಒಂದು ಸಾವಿರವನ್ನು ದಾಟಿಲ್ಲ! 2011 ರಲ್ಲಿ ಮೊಟ್ಟ ಮೊದಲ ಬಾರಿ ಸಾವಿರ ಗಡಿಯನ್ನು ದಾಟಿ ಇತ್ತೀಚೆಗೆ ಹೆಚ್ಚಾಗುತ್ತಿವೆಯಾದರೂ ಹೇಳಿಕೊಳ್ಳುವಂಥ ಪ್ರಗತಿ ಆಗಿಲ್ಲ. ಇನ್ನೊಂದು ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಕೇವಲ ಶೇ. 3 ರಷ್ಟು ಮಾತ್ರ ಅಂಗಾಗ ದಾನಿಗಳಿದ್ದಾರೆ! ಭಾರತದಲ್ಲಿ ಅದರ ಭಾಗವಾದ ಕರ್ನಾಟಕದಲ್ಲಿ ಕೂಡ ಅಂಗಾಗ ಕಸಿಗೆ ಬೇಡಿಕೆ ಸಲ್ಲಿಸಿ ಕಾಯುತ್ತಿರುವವರಲ್ಲಿ ಅತೀ ಹೆಚ್ಚು ಜನ ಮೂತ್ರಕೋಶಕ್ಕೆ ಬೇಡಿಕೆ ಸಲ್ಲಿಸಿದವರಿದ್ದರೆ ಎರಡನೆಯ ಸ್ಥಾನದಲ್ಲಿ ಲಿವರ್ ಗಾಗಿ ಬೇಡಿಕೆ ಸಲ್ಲಿಸಿದವರಿದ್ದಾರೆ. ಮೂರನೆಯ ಸ್ಥಾನದಲ್ಲಿ ಹೃದಯದವರಿದ್ದಾರೆ. ಕಸಿಮಾಡುವಿಕೆಯಲ್ಲಿಯೂ ಇವೇ ಮೂರು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವರೆಲ್ಲ ಕಾಯುವಿಕೆಯ ಸಾಲಿನಲ್ಲಿ ಹಾಗೇ ಇದ್ದಾರೆ…

ಇದಕ್ಕೆ ಕಾರಣ ಭಾರತೀಯರಾದ ನಮ್ಮ ಆಲೋಚನಾ ಕ್ರಮ. ಸತ್ತಮೇಲಿನ ಬದುಕಿನ ಬಗ್ಗೆ ಎಲ್ಲ ದೇಶಗಳಲ್ಲಿಯೂ ಎಲ್ಲ ಸಮಾಜಗಳಲ್ಲಿಯೂ ಹತ್ತು ಹಲವು ನಂಬಿಕೆಗಳಿವೆ. ಹಲವು ಧರ್ಮಗಳ ನಾಡಾಗಿರುವ  ಭಾರತದಲ್ಲಿ ಇವು ತುಸು ಹೆಚ್ಚೇ ಇವೆ. ಸತ್ತಮೇಲೆ ಶವವನ್ನು ಹೂಳಬೇಕೋ ಸುಡಬೇಕೋ ಇತ್ಯಾದಿ ಚರ್ಚೆಗಳು ನಮ್ಮಲ್ಲಿ ಮಹತ್ವ ಪಡೆದುಕೊಂಡಂತೆ ಇವೆರಡಕ್ಕಿಂತ ಭಿನ್ನವಾಗಿ ಯಾರಿಗಾದರೂ ಉಪಯುಕ್ತವಾದದ್ದನ್ನು ಏನನ್ನಾದರೂ  ಮಾಡಬಹುದೇ ಎಂಬ ಚರ್ಚೆ ನಡೆಯುವುದು ಅಪರೂಪ. ಈ ಕಾರಣದಿಂದ ನಮ್ಮಲ್ಲಿ ಅಂಗಾಗ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ತುಂಬಾ ಕಡಿಮೆ. ನಮ್ಮ ದೇಶದಲ್ಲಿ ಅಪಘಾತ ಮತ್ತಿತರ ಕಾರಣಗಳಿಂದ ಸಾಯುತ್ತಿರುವ ಎಲ್ಲರ ಅಂಗಾಂಗಗಳನ್ನು ಪಡೆಯಲು ಸಾಧ್ಯವಾಗುವುದಾದರೆ ಅಂಗಾಗಗಳ ವೈಫಲ್ಯದಿಂದ ನರಳುತ್ತಿರುವ ಪ್ರಕರಣಗಳೇ ಇರುವುದಿಲ್ಲ. ಆದರೆ ಬಹಳಷ್ಟು ಜನರು ತಮ್ಮ ಧಾರ್ಮಿಕ ನಂಬಿಕೆಗಳಿಂದ ಹೊರಬಂದು ಒಂದಿಷ್ಟು ವೈಚಾರಿಕವಾಗಿ ವಿಚಾರಿಸಲು ತೊಡಗುತ್ತಿಲ್ಲವಾದ್ದರಿಂದ ಇದು ಇಂದಿಗೂ ಸಾಧ್ಯವಾಗಿಲ್ಲ.

ಖ್ಯಾತನಾಮರ ನಡೆಯ ಪ್ರಭಾವ

ಈ ನಿಟ್ಟಿನಲ್ಲಿ ಜನಪ್ರಿಯ ವ್ಯಕ್ತಿಗಳು (ಸೆಲಿಬ್ರಿಟಿಗಳು) ಅಂಗಾಗ ದಾನಕ್ಕೆ ಮುಂದೆ ಬಂದಾಗ ಅವು ವಿಪರೀತ ಸುದ್ಧಿಯಾಗಿ ಒಂದಿಷ್ಟು ಧನಾತ್ಮಕ ಪರಿಣಾಮ ಬೀರುವುದುಂಟು. ನಮ್ಮಲ್ಲಿ ರಾಷ್ಟ್ರಮಟ್ಟದ ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕರು ಅಂಗಾಗ ದಾನಮಾಡುವ ಮೂಲಕ ದಾನದ ವಾಗ್ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರಲ್ಲಿ ಹಲವು ಕ್ಷೇತ್ರಗಳ ಖ್ಯಾತನಾಮರಿದ್ದಾರೆ. ಡಾ. ಮನಮೋಹನ್ ಸಿಂಗ್, ಅಮೀರ್ ಖಾನ್, ಐಶ್ವರ್ಯ ಬಚನ್, ಗೌತಮ್ ಗಂಭೀರ್, ನವಜ್ಯೋತ್ ಸಿಂಗ್ ಸಿದೂ, ರಜನಿಕಾಂತ್ ಜಯಪ್ರದಾ… ಹೀಗೆ ಒಂದಿಷ್ಟು ಹೆಸರುಗಳನ್ನು ಪಟ್ಟಿಮಾಡಬಹುದು. 


ಕರ್ನಾಟಕದಲ್ಲಿ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿ ಮೆದುಳು ನಿಷ್ಕ್ರೀಯಗೊಂಡು ನಮ್ಮನ್ನಗಲಿದ ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ವಿಷಯವು ಅನೇಕ ಪತ್ರಿಕೆಗಳ ಮುಖಪುಟ ಸುದ್ಧಿಯಾಗಿ ಪ್ರಕಟವಾದಾಗ ಕರ್ನಾಟಕದಲ್ಲಿ ಅಂಗಾಂಗದಾನದಲ್ಲಿ ಒಂದಿಷ್ಟು ಅರಿವು ಉಂಟಾಯಿತು. ಅವರ ಕುಟುಂಬ ಅಂಗಾಂಗ ದಾನಕ್ಕೆ ತ್ವರಿತವಾಗಿ ಮಾಡಿದ ನಿರ್ಧಾರದಿಂದಾಗಿ ಕೆಲವರಿಗೆ ಜೀವಕೆಲಸ ಮಾನವೀಯ ಕೆಲಸವಾಯಿತು ಮಾತ್ರವಲ್ಲ ಅದು ಅಂಗಾಗ ದಾನದ ಅರಿವನ್ನು ವಿಸ್ತರಿಸಲೂ ನೆರವಾಯಿತು. ಸಂಚಾರಿ ವಿಜಯ್ ಅವರ ಪ್ರಕರಣದಿಂದಾಗಿ ಆ ಸಂದರ್ಭದಲ್ಲಿ ಕೇವಲ 20 ದಿನಗಳ ಅವಧಿಯಲ್ಲಿ ಸುಮಾರು 230 ಜನ ತಮ್ಮ ಅಂಗಾಂಗ ದಾನದ ಘೋಷಣೆಮಾಡಿ ನೋಂದಾಯಿಸಿಕೊಂಡಿದ್ದಾರೆಂಬುದು ಕರ್ನಾಟಕದಲ್ಲಿ ಅಂಗಾಗಕಸಿಯ ವ್ಯವಸ್ಥಿತಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯದ ಸೊಟ್ಟೊ (State Organ Transplant and Tissue Organization) ನ ಹೇಳಿಕೆ.

ಅಂಗಾಗ ಕಸಿ ಮತ್ತು ದಾನದ ಅರಿವಿನ ವಿಸ್ತಾರದ ಅಗತ್ಯ

ಅಂಗಾಗ ಕಸಿ ಎಂಬುದು ಆಧುನಿಕ ವೈದ್ಯವಿಜ್ಞಾನ ನಮಗೆ ನೀಡಿದ ಒಂದು ವರದಾನ. ಒಬ್ಬ ವ್ಯಕ್ತಿ ತನ್ನ ಸಾವಿನ ನಂತರ ತನಗೆ ಉಪಯೋಗಕ್ಕೆ ಬಾರದ ಆದರೆ ಇತರರಿಗೆ ಜೀವ ನೀಡಬಲ್ಲ ತನ್ನ ಅಂಗಳನ್ನು ಸುಟ್ಟುಹಾಕುವ ಮೂಲಕವೋ ಹೂತುಹಾಕುವ ಮೂಲಕವೋ ಅವನ್ನು ನಾಶಮಾಡದೆ ಅವನ್ನು ಇತರರಿಗೆ ದಾನಮಾಡುವ ಔದಾರ್ಯವನ್ನು ಬೆಳಸಿಕೊಳ್ಳಬೇಕು. ಇದರಿಂದ ಎಷ್ಟೋ ಜೀವಿಗಳಿಗೆ ನಾವು ಸತ್ತಮೇಲೆಯೂ ಉಪಕಾರ ಮಾಡಿದಂತಾಗುತ್ತದೆ. ಮೂತ್ರಕೋಶ ಮತ್ತು ಲಿವರ್ ಹೊರತು ಉಳಿದೆಲ್ಲ ಅಂಗಗಳ ದಾನವನ್ನು ವ್ಯಕ್ತಿಯ ಮರಣಾನಂತರವಷ್ಟೇ ಪಡೆಯಲಾಗುವುದರಿಂದ ನಮ್ಮ ಜನರು ತಮ್ಮ ಧಾರ್ಮಿಕ ನಂಬಿಕೆಗಳಾಚೆಗೆ ಬಂದು ಮಾನವೀಯ ನೆಲೆಯಲ್ಲಿ ಆಲೋಚಿಸಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈ ಬಗ್ಗೆ ಅರಿವಿನ ವಿಸ್ತಾರ ಇಂದಿನ ತುರ್ತು ಅಗತ್ಯ. ಇದ್ದಾಗ ಯಾರು ಯಾರಿಗೆ ಎಷ್ಟು ಸಹಾಯಮಾಡಲು ಸಾಧ್ಯವಾಗುತ್ತದೆಯೋ. ಆದರೆ ಸತ್ತಮೇಲಂತೂ ಈ ಅಂಗಾಗ ದಾನದ ಮೂಲಕ ನಾವು ಖಂಡಿತಾ ಇತರರಿಗೆ ಅವರು ಮರೆಯಲಾರದಂತ ಸಹಾಯಮಾಡಬಹುದು.ಆ ಮೂಲಕ ನಮ್ಮ ಬದುಕ ಸಾರ್ಥಕತೆ ಪಡೆಯಬಹುದು. ಈ ಬಗ್ಗೆ ನಾವೆಲ್ಲರೂ ಆಲೋಚಿಸೋಣ.  

(ಅಂಗಾಂಗ ದಾನ ಮಾಡಲಿಚ್ಚಿಸುವವರು ಕರ್ನಾಟಕದಲ್ಲಿ ಸಂಪರ್ಕಿಸಬೇಕಾದ ಎರಡು ವೆಬ್ ವಿಳಾಸಗಳು:

1) NOTTO: https://notto.gov.in

2) SOTTO: https://www.jeevasarthakathe.karnataka.gov.in/Website/Home.aspx

*****

ಈ ದಿನದ ವಿಶೇಷ ಓದಿಗಾಗಿ ಅಂಗಾಂಗ ದಾನದ ಮಹತ್ವವನ್ನು ಸಾರುವ ನನ್ನ ಒಂದು ಗೀತೆ:

ಉಯಿಲು

ನನ್ನ ದೇಹವ ನೀವು ಸುಟ್ಟುಹಾಕಲು ಬೇಡಿ

ಸಾಯುವವು ಮರವೆರಡು ನನ್ನ ಚಿತೆಗೆ

ಹೂತುಹಾಕಲುಬೇಡಿ ನನ್ನನ್ನು ಭುವಿಯೊಳಗೆ

ಕೊಳೆತು ಹೋಗುವುದೆಲ್ಲ ನನ್ನ ಜೊತೆಗೆ


ಕಿತ್ತುಕೊಡಿ ಕುರುಡಂಗೆ ನನ್ನೆರಡು ಕಣ್ಣುಗಳ

ಕತ್ತಲೆಯ ಬದುಕಿಂಗೆ ಬೆಳಕು ಬರಲಿ

ಸುತ್ತುತ್ತ ಊರುಗಳ ಕರ್ಣದೋಷದ ಕಿವುಡ

ಹುಡುಕುತ್ತ ಬರಬಹುದು ಕಿವಿಗಳಿರಲಿ


ನಿಂತ ಹೃದಯವನೆ ನಡೆಸುವವರು ಬಂದಾರು

ನಿಂತ ಗಡಿಯಾರವನು ನಡೆಸುವಂತೆ

ಸಾಯುವವನೆದೆಯೊಳಗೆ ನನ್ನ ಹೃದಯವನಿಟ್ಟು

ಮಾಡಿಬಿಡಿ ಅವನುಸಿರು ಆಡುವಂತೆ


ಮುತ್ತುಗಳ ಬೆಲೆಯಂತೆ ಮೂತ್ರಕೋಶಗಳಿಂಗೆ

ಯಾತ್ರೆ ಮುಗಿದಿರಲವು ನನಗದೇಕೆ?

ಎತ್ತಿಹಾಕಿರಿ ಅವನು ಹಾಸಿಗೆಯಲಿರುವಂಗೆ

ಎದ್ದು ಬರಲಿ ಅವನು ನರಳಲೇಕೆ?


ಸತ್ತ ಕೂಡಲೆ ನೀವು ಮರೆತುಬಿಡಿ ನನ್ನನ್ನು

ಕಟ್ಟಹೋಗಲು ಬೇಡಿ ಗೋರಿ ನನಗೆ

ಗೋರಿಗಳ ಊರಲ್ಲಿ ದಾರಿ ಹುಡುಕುವುದು ಹೇಗೆ

ಬದುಕಿ ಬಾಳುವ ಜನರ ಪ್ರೀತಿ ಮನೆಗೆ


ಬರುವುದೆಲ್ಲವ ಬಳಸಿ ಉಳಿದುದನು ಬದಿಗಿರಿಸಿ

ಕೂಗಿ ಕರೆಯಿರಿ ಪ್ರಾಣಿ ಪಕ್ಷಿಗಳನು

ತಿಂದು ಸಂತಸ ಪಡಲಿ ಒಂದು ದಿನ ಅವು ಎಲ್ಲ

ಸಾರ್ಥಕವು ಆದೀತು ನನ್ನ ಬದುಕು!

*****

ಡಾ. ರಾಜೇಂದ್ರ ಬುರಡಿಕಟ್ಟಿ

(ವಿಶ್ವ ಅಂಗಾಂಗ ದಾನದ  ದಿನದ ಓದಿಗಾಗಿ ಹಿಂದೆಂದೋ ಬರೆದ ಒಂದು ಗೀತೆ…)

13-08-2021 (World Organ Donation Day)

 

Sunday, August 8, 2021

. ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!

ಈ ವಾರದ ಭಾವಗೀತೆ….. 

ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!








ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ

ಅಕ್ಕಪಕ್ಕ ಕುಳಿತುಕೊಂಡರು ಮಾತನಾಡದಾದೆವು




ಎಲ್ಲೊ ದೂರ ಕಂಡರೂ ಮುಖವು ಅರಳುತಿದ್ದವು

ಮಾತುಗಳನು ಕೇಳಲು ಮನಸು ಕಾಯುತಿದ್ದವು

ಒಂದು ದಿವಸ ಕಾಣದಿದ್ದರೆ ಮಾತುಗಳನು ಆಡದಿದ್ದರೆ

ಮನಸು ಕುದಿಯುತಿದ್ದವು ನಮ್ಮ ಮನಸು ಕುದಿಯುತಿದ್ದವು…

ಎಂಥ ದಿವಸ ಬಂದುಬಿಟ್ಟವು..

 

ಈಗ ಎದುರು ಬಂದರೂ ಕಣ್ಣು ಕಣ್ಣು ಸೇರವು

ಮುಖದಿ ನಗೆಯ ಸೂಸಿ ನಾವು ಸುಖವ ಪಡೆಯದಾದೆವು

ಮಾತಿನಲ್ಲಿ ಸುರಿಯುತಿದ್ದ ಜೇನು ಬತ್ತಿತು

ಮಧ್ಯೆ ಬೆಟ್ಟ ಬೆಳೆಯಿತು ಮೌನದ ಬೆಟ್ಟ ಬೆಳೆಯಿತು

ಎಂಥ ದಿವಸ ಬಂದುಬಿಟ್ಟವು..

*****

ರಾಬು (08082021)


Friday, April 30, 2021

 ತಟ್ಟೆಲೋಟ ಬಡಿತವೂ ತಜ್ಞವೈದ್ಯರ ಸಲಹೆಯೂ.......

(ಹುಚ್ಚಾಟ ಬಿಟ್ಟು ಎಚ್ಚರಾಗುವ ಪರಿ)

ಕಳೆದ ವರ್ಷದ ಯುಗಾದಿ ಹಬ್ಬದ ಹಿಂದಿನ ಎರಡು ಮೂರು ದಿನಗಳನ್ನು ನೆನಪಿಸಿಕಳ್ಳೋಣ. ಕೊರೋನಾ ಬಗ್ಗೆ ಸಾರ್ವಜನಿಕರಿಗಾಗಲೀ ನಮ್ಮನ್ನಾಳುವವರಿಗಾಗಲೀ ಸ್ಪಷ್ಟವಾದ ತಿಳಿವಳಿಕೆ ಇನ್ನೂ ಇರಲಿಲ್ಲ. ತಿಳಿವಳಿಕೆ ಇದ್ದ ತಜ್ಞವೈದ್ಯರಿದ್ದರಾದರೂ ಅವರ ಮಾತು ಸಲಹೆ ಕೇಳಿ ಮುಂದುವರೆಯಬೇಕು ಎಂಬ ವಿವೇಕವೂ ನಮ್ಮನಾಳುವವರಿಗೆ ಇದ್ದಂತಿರಲಿಲ್ಲ.

ದೇಶಕ್ಕೆ ದೇಶವೇ ಗಂಟೆ-ಜಾಗಟೆಗಳ ಜೊತೆಗೆ ತಟ್ಟೆ-ಲೋಟ, ಗಂಗಾಳ-ಚರಿಗೆ, ಕೈಗೆ ಏನು ಸಿಗುತ್ತೋ ಅದನ್ನು ಬಡಿಯುತ್ತಾ ಬೀದಿಬೀದಿಗಳಲ್ಲಿ ಕುಣಿದಾಡಿ ಕೊರೊನಾ ಓಡಿಸಲು ಹುಚ್ಚಾಟದಲ್ಲಿ ತೊಡಗಿ ಅಪಹಾಸ್ಯಕ್ಕೆ ಈಡಾದ ದಿನಗಳವು.

ಆಗ ನಮ್ಮ ನಾಯಕರು ಜನರಿಗೆ ಕೊಡುವ ಕರೆಗಳು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಬರುತ್ತಿದ್ದವು. ಅವುಗಳಲ್ಲಿ ಒಂದು ಮಾತು, ಇಪ್ಪತ್ತೆರಡೋ ಇಪ್ಪತ್ತನಾಲ್ಕೋ ಗಂಟೆಗಳು "ಎಲ್ಲರೂ ಮನೆಯೊಳಗಿದ್ದು ಜನಾತಾ ಕರ್ಪ್ಯೂ ಆಚರಿಸಿದರೆ . ನಾಳೆಯಿಂದ ಕೊರೊನಾ ಭಯವೇ ನಮಗೆ ಇರುವುದಿಲ್ಲ. ನಾಳೆ ಇಷ್ಟೊತ್ತಿಗೆ ಕೊರೋನಾ ನಮ್ಮ ದೇಶದಲ್ಲಿ ಇರುವುದೇ ಇಲ್ಲ" ಎಂಬುದು.  ಸರಿ ಜನರೆಲ್ಲ ಜನನಾಯಕರ ಮಾತಿಗೆ ತಕ್ಕ ಗೌರವಕೊಟ್ಟು ಜನತಾ ಕರ್ಫ್ಯೂ ಆಚರಿದರು. ಆದರೆ ಈ ಮಾತನ್ನು ನಂಬಿ ಮರುದಿನ ಕೊರೋನಾವನ್ನು ದೇಶದಿಂದಲೇ ಹೊರಗೆ ಓಡಿಸಿದವರೆಂತೆ ಯಾವುದೇ ಭಯ ಆತಂಕಗಳಿಲ್ಲದೆ ಸಂಭ್ರಮದಿಂದ ಯುಗಾದಿ ಶಾಪಿಂಗ್ ಮಾಡತೊಡಗಿದರು!!

ದೇಶದ ಜನರಿಗೆ ದೊರೆತ ತಪ್ಪುಸಂದೇಶ ಮತ್ತು ಜನರ ಹುಚ್ಚಾಟದ ಈ ಸಂದರ್ಭದಲ್ಲಯೇ ಅಂತರರಾಷ್ಟ್ರೀಯ ಮಟ್ಟದ ಭಾರತದ ಕೆಲವೇ ತಜ್ಞವೈದ್ಯರಲ್ಲಿ ಒಬ್ಬರಾದ ಡಾ. ದೇವಿಪ್ರಸಾದ ಶೆಟ್ಟಿ ಅವರ ಚಿಕ್ಕ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಎಂಬಂತೆ ಪ್ರಸಾರವಾಯಿತು. ಆ ವಿಡಿಯೋದಲ್ಲಿ ದೇಶದ ಜನರ ಹುಚ್ಚಾಟವನ್ನು ಅದಕ್ಕೆ ಕಾರಣವಾದ ತಪ್ಪುಮಾರ್ಗದರ್ಶನವನ್ನೂ ಪರೋಕ್ಷವಾಗಿ ಟೀಕಿಸಿದ ಅವರು ಜನರು ಹೀಗೆ ಹುಚ್ಚಾಟದಲ್ಲಿ ತೊಡಗಿದರೆ ದೇಶ ಯಾವ ಸ್ಥಿತಿಗೆ ಹೋಗಬಹುದು ಎಂಬುದನ್ನು ಅತ್ಯಂತ ಸಮರ್ಪಕ ಸಾಕ್ಷಾಧಾರಗಳೊಂದಿಗೆ ಎಚ್ಚರಿಸಿದ್ದರು. ಅವರ ಈ ವಿಡಿಯೋ ವೈರಲ್ ಆದ ನಂತರ ಅದೆಷ್ಟೋ ಜನರಿಗೆ, ಜನನಾಯಕರಿಗೆ ಕೊರೋನಾದ ಭೀಕರತೆಯ ಅರಿವಾಗಿ ಹುಚ್ಚಾಟದ ಕ್ರಮಗಳು ತುಸು ಕಡಿಮೆಯಾಗಿ ಒಂದಿಷ್ಟು 'ಎಚ್ಚರದ ಕ್ರಮಗಳು' ಜಾರಿಗೆ ಬಂದವು.

ಕೊರೋನಾ ಎರಡನೆಯ ಅಲೆಯ ಜೊತೆಗೆ ಎರಡನೆಯ ಹಂತದ ಹುಚ್ಚಾಟಗಳೂ ಶುರುವಾಗಿವೆ. ಕಿವಿಗೋ, ಮೂಗಿಗೋ ನಿಂಬೆಹಣ್ಣನ್ನೂ ಹುಣಿಸಿಹಣ್ಣನ್ನೋ ಹಿಂಡಿಕೊಂಡರೆ ಕೊರಾನ ಬರಲ್ಲವೆಂದು ಯಾರಾದರೂ ಒಂದು ಸಂದೇಶವನ್ನು (ಇಂತಹ ಸಂದೇಶ ಹಾಕುವವರು ಬಹಳಷ್ಟುವೇಳೆ ಆ ವಿಷಯದಲ್ಲಿ ಪರಿಣಿತರಾಗಿರುವುದಿಲ್ಲ) ಹಾಕಿದರೆ ಅದನ್ನು ಹಿಂದೆಮುಂದೆ ನೋಡದೆ ನಮ್ಮ ವಾಟ್ಸಪ್ ವಿಶ್ವವಿದ್ಯಾಲಯದ ಪದವಿಧರರು ಅವುಗಳನ್ನು ತಮಗೆ ಗೊತ್ತಿರುವ ಎಲ್ಲರಿಗೂ ತಳ್ಳುತ್ತಿದ್ದಾರೆ. ಆ ಮೇಲೆ ಆ ರೀತಿ ಮಾಡಿ ಯಾರಾದರೂ ಸತ್ತರೆ ಅವರ ಫೋಟೋಗಳನ್ನೂ ಇವರು ಅದೇ ರೀತಿ ಹಿಂದಿನಿಂದ ನಮಗೆ ಕಳಿಸಿಕೊಡುತ್ತಾರೆ!!

ಅತ್ತ ಜವಾಬ್ದಾರಿಯಿಲ್ಲದ ವಿದ್ಯಾವಂತರ ಸ್ಥಿತಿ ಹೀಗಾದರೆ ಇತ್ತ ರಾಜಕೀಯ ನಾಯಕರ ಅಂಧಾಭಿಮಾನಿಗಳ ಸ್ಥಿತಿ ಇನ್ನೊಂದು ರೀತಿಯದ್ದು. ಸಾವಿನ ಮನೆಯಲ್ಲಿಯೂ ನಾಯಕಭಜನೆ ಮಾಡುವ, ದೇಶದ ಜನ ಎಷ್ಟುಸತ್ತರೂ ತಮ್ಮ ನಾಯಕನ ವರ್ಚಸ್ಸಿಗೆ ಮಾತ್ರ ಧಕ್ಕೆಯಾಗಬಾರದೆಂದು ಹಟಕ್ಕೆ ನಿಂತಿರುವ ಅಂಧಾಭಿಮಾನಿಗಳು ಈಗಲೂ ಆಮ್ಲಜನಕ ಸಿಗದೆಯೋ ಹಾಸಿಗೆ ಸಿಗದೆಯೋ ಸತ್ತ ರೋಗಿಗಳ ಸುದ್ಧಗಳೇನಾದರೂ ಒಂದಿಷ್ಟು ಹೆಚ್ಚು ಪ್ರಸಾರವಾದರೆ, "ಇದು ಸಂದರ್ಭದ ದುರುಪಯೋಗ ಮಾಡಿಕೊಂಡು ನೆಗಿಟಿವಿಟಿ ಕ್ರಿಯೇಟ್ ಮಾಡುತ್ತಿರುವ ದೇಶದ್ರೋಹಿಗಳ ಕೆಲಸ" ಎಂದೇ ಹೇಳುತ್ತಾರೆ. ಹಿಂದೆ ಎಪ್ಪತ್ತು ವರ್ಷ ಎಲ್ಲ ಸರಿಯಾಗಿಯೇ ಇತ್ತೇ? ಎಂದು ಕೇಳಲೂ ಅವರು ಹಿಂಜರಿಯುವುದಿಲ್ಲ. ಒಂದು ಸಲ ವ್ಯಕ್ತಿಪೂಜೆಗೆ ಇಳಿದರೆ ನಮ್ಮೆಲ್ಲರ ಸ್ಥಿತಿಯೂ ಹೀಗೆಯೇ ಆಗುವುದು. 

ಆದಾಗ್ಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾವು ಬಹಳ ಸುಧಾರಿಸಿದ್ದೇವೆ ಎಂದೇ ಹೇಳಬೇಕು. ಈ ವರ್ಷ ನಾವು ಯಾರೂ ತಟ್ಟೆ ಲೋಟ ಬಡಿಯುವ ಮಾತಾಡದೆ ಲಸಿಕೆ ಔಷಧಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಷ್ಟರ ಮಟ್ಟಿಗೆ ನಮಗೆಲ್ಲ ಹುಚ್ಚು ವಾಸಿಯಾಗಿದೆ ಎಂಬುದೇ ಸಮಾಧಾನದ ಸಂಗತಿ.

ಈಗಲೂ ನಮ್ಮನಾಳುವವರಿಗೆ 'ಧನ್ವಂತರಿ ಹೋಮ ಮಾಡಿಸಿ' 'ವಿಶೇಷ ಪೂಜೆ ಮಾಡಿಸಿ' ಎಂದು ತಲೆತಿಕ್ಕುವ ಧಾರ್ಮಿಕ ನಾಯಕರು ಇದ್ದರೂ ಅವರ ಮಾತಿನ ಮೇಲೆ ಅವರಿಗೂ ನಂಬಿಕೆ ಇದ್ದಂತಿಲ್ಲ! ಅವರ ದೇವರ ಶಕ್ತಿ ಯಾವ ಮಟ್ಟದ್ದು ಎಂಬುದು ಜನರಿಗೆ ಕಳೆದವರ್ಷ ಗೊತ್ತಾಗಿದ್ದು ಅವರಿಗು ಗೊತ್ತಾಗಿದೆ.

ರಾಜಕೀಯ ನಾಯಕರು ಹುಚ್ಚರಾದರೆ ಅವರನ್ನು ಬದಲಿಸಿ ಬೇರೆಯವರನ್ನು ನಾಯಕರನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಜನರೇ ಹುಚ್ಚರಾಗಿಬಿಟ್ಟರೆ ಎಚ್ಚರಾಗುವುದನ್ನು ಬಿಟ್ಟು ಬೇರೆ ಮಾರ್ಗಗಳೇ ಇರುವುದಿಲ್ಲ. ಹಾಗಾಗಿ ನಾವೆಲ್ಲ ಹುಚ್ಚರಾಗದೆ ಎಚ್ಚಾರಾಗೋಣ.

ಕೊರೋನಾ ನಮ್ಮನ್ನು ಇನ್ನೂ ಯಾವಹಂತಕ್ಕೆ ಒಯ್ಯಬಹುದು ಎಂಬುದನ್ನು ಅದೇ ದೇವಿ ಪ್ರಸಾದ ಶೆಟ್ಟಿ ಮತ್ತೊಮ್ಮೆ ಎಚ್ಚರಿಸಿದ್ದಾರೆ. ನಿಯಂತ್ರಣಕ್ಕೆ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದ್ದಾರೆ. ಯಾರುಯಾರದೋ ಮಾತು ಕೇಳಿ ತಾವೂ ಹಾಳಾಗಿ ದೇಶವನ್ನೂ ಹಾಳುಮಾಡುವುದಕ್ಕಿಂತ ಇಂತಹ ತಜ್ಞ ವೈದ್ಯರ ಮಾತನ್ನು ಕೇಳುವ ವಿವೇಕ ಸಂಬಂಧಪಟ್ಟವರಿಗೆ ಬರಲಿ.

ರಾಬು

30-04-2021

Sunday, April 25, 2021

 



 



ನಿನ್ನ ಹತ್ತಿರ ನಾನು ಬರುವುದನು ಬಿಡಬಹುದು

ನೀನು ಹೇಳಿದ ಹಾಗೇ ಎಂದೆಂದಿಗು

ಆದರೆ ಅದು ಹೇಗೆ ತಡೆಯಬಹುದು ಹೇಳು

ನನ್ನ ಮನಸು ನಿನ್ನ ಕಡೆ ಬರದ ಹಾಗೆ

 

ನೀನು ಕೂಡ ನನ್ನ ಕಣ್ಣೆತ್ತಿ ನೋಡದೆಯೆ

ಇರಬಹುದು ಕೊಟ್ಟಿರುವ ಮಾತಿನಂತೆ

ಆದರೆ ಅದು ಹೇಗೆ ತಡೆಯುವೆಯೊ ಗೊತ್ತಿಲ್ಲ

ನನ್ನ ಬಿಂಬವು ಕಣ್ಣೊಳಗೆ ನುಗ್ಗಿಬರುವುದ

 

ಮನೆಗೆ ಹಾಕಿದ ಹಾಗೆ ಹಾಕಬಹುದೇ ಹೇಳು

ಕದಮುಚ್ಚಿ ಬೀಗವನು ಮನಸುಗಳಿಗೆ

ನೆನಪು ಬಾರದ ಹಾಗೆ ಕನಸು ಬೀಳದ ಹಾಗೆ

ಕಟ್ಟಿಹಾಕಲು ಬಹುದೆ ಅವುಗಳನ್ನು


ಏನೆಲ್ಲ ಒಪ್ಪಂದ ಮಾಡಿಕೊಳ್ಳಲು ಬಹುದು

ಅದರಂತೆ ನಾವುಗಳು ನಡೆಯಬಹುದು

ನಮ್ಮ ಮನಸ್ಸು ಹೃದಯಗಳು ನಮ್ಮ ಆಳುಗಳಲ್ಲ

ಅವು ನಮ್ಮ ಮಾತುಗಳ ಕೇಳುವುದೂ ಇಲ್ಲ

ಈ ಸತ್ಯ ಅರಿಯುವುದು ಒಳಿತಲ್ಲವೆ?

****

ರಾಜೇಂದ್ರ ಬುರಡಿಕಟ್ಟಿ

Thursday, April 22, 2021


ಜೂನ್ ಬರ್ತ್ & ಟಾಪ್ ಟೆನ್

ಜೂನ್ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಳ್ಳುವವರಲ್ಲಿ ಶೇಕಡಾ ಎಂಬತ್ತರಷ್ಟು ಜನರ ಜನ್ಮದಿನಗಳು ಅವರ ನಿಜವಾದ ಜನ್ಮದಿನಗಳಲ್ಲ. ಈಗ ಐವತ್ತು ಅರವತ್ತು ವರ್ಷ ವಯಸ್ಸಾಗಿರುವವರ ವಿಷಯದಲ್ಲಂತೂ ಇದು ಶೇ 90 ರಷ್ಟು ಸರಿ. ಹೀಗಾಗಿ ಅವರ ಜನ್ಮದಿನಗಳೆಲ್ಲ‘ನಿಜವಜನ್ಮದಿನ’ಗಳಾಗಿರದೇ ‘ಒಪ್ಪಿತ ಜನ್ಮದಿನ’ ಅಥವಾ ‘ಸರ್ಕಾರಿಜನ್ಮದಿನ’ಗಳಾಗಿರುತ್ತವೆ. ಇದಕ್ಕೆ `ಜೂನ್ ಹುಟ್ಟು’ (June Birth) ಎಂದು ಕರೆಯಬಹುದು. ಏನು ಈ ಜೂನ್ ಹುಟ್ಟು? ಈ ಜೂನ್ ಹುಟ್ಟಿಗೆ ಕಾರಣವೇನು ಎಂಬುದನ್ನು ತುಸು ನೋಡೋಣ. ಈಗ ಐವತ್ತರ ಆಸುಪಾಸಿನಲ್ಲಿರುವವರಲ್ಲಿ ಶಾಲೆಗೆ ಸೇರುವ ಹಿಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು ಇರಲಿಲ್ಲ. ಹಾಗಾಗಿ ಜನ್ಮದಿನವನ್ನು ಬರೆದಿಡುವ ಪದ್ಧತಿಯೇ ಬಹಳಷ್ಟು ಕುಟುಂಬದಲ್ಲಿ ಇರಲಿಲ್ಲ. ಆ ಕಾಲದಲ್ಲಿ ಊರ ಗೌಡರೊಬ್ಬರ ಮನೆಯಲ್ಲಿ ಒಂದು ಕ್ಯಾಲೆಂಡರ್ರು, ಒಂದು ಹಳೆಯಕಾಲದ ಗಡಿಯಾರ ಇರುತ್ತಿದ್ದರೆ ಹೆಚ್ಚು. ಗೌಡರ ಮಾತು ಹೇಗೆ ಊರಿಗೆ ವೇದವಾಕ್ಯವಾಗಿತ್ತೋ ಹಾಗೆ ಅವರ ಮನೆಯ ಕ್ಯಾಲೆಂಡರ್ ತೋರಿಸಿದ್ದೇ ದಿನದಿನಾಂಕಗಳು ಅವರ ಗಡಿಯಾರ ತೋರಿಸಿದ್ದೇ ಟೈಮು!!

ಹಾಗಾಗಿ ಶಾಲೆಗೆ ಸೇರಿಸುವ ವಯಸ್ಸನ್ನು ಲೆಕ್ಕಹಾಕಲು ಒಂದಿಷ್ಟು ಅಂದಾಜುಲೆಕ್ಕದ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಆಗ ಶಿಕ್ಷಣ ಇಲಾಖೆಯಲ್ಲಿಯೇ ಶಾಲೆಗೆ ಮಕ್ಕಳನ್ನು ಸೇರಿಸುವ ವಿಷಯದಲ್ಲಿ ವಯಸ್ಸಿನ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಂದಾಜುಲೆಕ್ಕದ ಇಂತಹ ಕೆಲವು ನಿಯಮಗಳೇ ಇದ್ದವು. ಆ ನಿಯಮಗಳ ಪ್ರಕಾರ ಪಾಲಕರಿಗೆ ಮಗುವಿನ ಹುಟ್ಟಿದ ವರ್ಷ ತಿಂಗಳು ಗೊತ್ತಿದ್ದು ದಿನಾಂಕ ಗೊತ್ತಿಲ್ಲದಿದ್ದರೆ ಆ ತಿಂಗಳ ಒಂದನೆಯ ತಾರೀಖನ್ನು ಹುಟ್ಟಿದ ದಿನವಾಗಿ ಪರಿಗಣಿಸಬೇಕಾಗಿತ್ತು. ಒಂದು ವೇಳೆ ವರ್ಷ ಮಾತ್ರ ಗೊತ್ತಿದ್ದು ತಿಂಗಳು, ದಿನಾಂಕ ಎರಡೂ ಗೊತ್ತಿಲ್ಲದಿದ್ದರೆ, ಆ ವರ್ಷದ ಜೂನ್ ಒಂದನ್ನು ಜನ್ಮದಿನಾಂಕವಾಗಿ ಪರಿಗಣಿಸಬೇಕಾಗಿತ್ತು. ವರ್ಷ ತಿಂಗಳು, ದಿನಾಂಕ ಏನೂ ಗೊತ್ತಿಲ್ಲದಿದ್ದರೆ ತಲೆಮೇಲೆ ಕೈಹಾಕಿ ಪಕ್ಕದ ದಿಕ್ಕಿನ ಕಿವಿಯನ್ನು ಮುಟ್ಟಿಸಿ ವರ್ಷವನ್ನು ನಿರ್ಧರಿಸಿ ಆ ವರ್ಷದ ಜೂನ್ ತಿಂಗಳ ಯಾವುದಾದರೂ ಒಂದು ದಿನಾಂಕವನ್ನು ಶಿಕ್ಷಕರು ಬರೆಯುತ್ತಿದ್ದರು. ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟಂಬರ್, ಅಷ್ಟೇ ಏಕೆ ಅಕ್ಟೋಬರ್ ತಿಂಗಳವರೆಗೂ ಹುಟ್ಟಿದವರನ್ನೆಲ್ಲ ಜೂನ್ ತಿಂಗಳಿಗೆ ಹಿಂದಕ್ಕೆ ಎಳೆದುಕೊಂಡು ಶಾಲೆಗೆ ಸೇರಿಸಲಾಗುತ್ತಿತ್ತು. ಬಿಟ್ಟರೆ ಮುಂದಿನ ವರ್ಷಕ್ಕೆ ಶಾಲೆಗೆ ಸೇರಿಸುವುದು ತುಂಬಾ ಲೇಟಾಗುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಈಗ ಮಧ್ಯವಯಸ್ಸಿನಲ್ಲಿರುವವರಲ್ಲಿ ‘ಜೂನ್ ತಿಂಗಳಲ್ಲಿ ಹುಟ್ಟಿದವರು’ ಉಳಿದ ತಿಂಗಳುಗಳಲ್ಲಿ ಹುಟ್ಟಿದವರಿಗಿಂತ ಸಹಜವಾಗಿಯೇ ಹೆಚ್ಚಾಗಿರುತ್ತಾರೆ. ಇದೇ ‘ಜೂನ್ ಹುಟ್ಟು’!

ಹೀಗೆ ಜೂನ್ ಹುಟ್ಟಿನ ಪ್ರವಾಹದಲ್ಲಿ ಹುಟ್ಟಿದವರಲ್ಲಿ ನಾನೂ ಒಬ್ಬ. ಜೂನ್ ಇಪ್ಪತ್ತು ನನ್ನ ಸರ್ಕಾರಿಜನ್ಮದಿನ ಅಥವಾ ಒಪ್ಪಿತ ಜನ್ಮದಿನ. ಪ್ರತಿವರ್ಷ ಜನ್ಮದಿನ ಆಚರಿಸಿಕೊಳ್ಳುವ ಅಭ್ಯಾಸ ನನಗೆ ಇಲ್ಲ. ಹುಟ್ಟಿದಾಗ ಒಂದು ‘ನಾಮಕರಣ’ ಸತ್ತಾಗ ಒಂದು ‘ತಿಥಿ’ ಅಷ್ಟೇ ನಮ್ಮ ಹಿಂದಿನವರು ಮಾಡುತ್ತಿದ್ದದ್ದು. ನಾನೂ ಅದಕ್ಕೇ ಒಗ್ಗಿಕೊಂಡಿರುವೆ. ಆದರೂ ಬಹಳಷ್ಟು ಜನ ನನಗೆ ಶುಭಕೋರಿದಾಗ ಕನಿಷ್ಠ ‘ಧನ್ಯವಾದಗಳು’ ಎಂದಾದರೂ ಹೇಳುವಷ್ಟು ಆಧುನಿಕತೆಗೆ ಹೊಂದಿಕೊಂಡಿದ್ದೇನೆ. ಜೊತೆಗೆ ಈ ದಿನವನ್ನು ನೆಪಮಾಡಿಕೊಂಡು ಪ್ರತಿವರ್ಷ,ಬಹಳಷ್ಟು ಜನರಿಗೆ ಇಷ್ಟವಾಗದಿದ್ದರೂ ನಾನು ನನ್ನ ಜೀವನದಲ್ಲಿ ಬಹಳ ಜತನದಿಂದ ಕಾಪಾಡಿಕೊಂಡು ಬಂದಿರುವ ನನ್ನ ಹತ್ತು ಮೇಲ್ಸಾಲಿನ (Top-Ten) ಗುಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಾ ಬಂದಿದ್ದೇನೆ. ಈ ಗುಣಗಳನ್ನು ನೋಡಿ ಕೆಲವರು ನನ್ನ ಸ್ನೇಹಿತರಾಗುತ್ತಾರೆ. ಮತ್ತೆ ಕೆಲವರು ಇವನ ಸಹವಾಸವೇ ಬೇಡ ಎಂದು ದೂರಸರಿಯುತ್ತಾರೆ. ಇದರಿಂದ ಅವರಿಗೂ ಅನುಕೂಲವಾಗಿದೆ; ನನಗೂ ಅನುಕೂಲವಾಗಿದೆ. ಹೊಸದಾಗಿ ನನ್ನ ಸಂಪರ್ಕಕ್ಕೆ ಬರುವವರಿಗೆ ಗೊತ್ತಿರಲಿ ಅಂತ ಇಂತಹ ಕೆಲಸ ಪ್ರತಿವರ್ಷ ಮಾಡುತ್ತೇನೆ. ಅಂತೆಯೇ ಈ ವರ್ಷಕೂಡ ಆ ನನ್ನ ಹತ್ತು ಗುಣಗಳನ್ನು ಪ್ರಕಟಿಸುತ್ತಿದ್ದೇನೆ. ಅವು ಹೀಗಿವೆ. (ಟೈಮಿದ್ದರೆ ಆಸಕ್ತಿ ಇದ್ದರೆ ಮಾತ್ರ ಓದಿ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳಬೇಡಿ)

- ರಾಬು 

ಬಹಳಷ್ಟು ಜನ ಮೆಚ್ಚದಿರುವ, ಆದರೂ ನಾನು ಜೋಪಾನವಾಗಿ ಕಾಯ್ದಿಟ್ಟುಕೊಂಡಿರುವ  ನನ್ನ ಮೇಲ್ಸಾಲಿನ ಹತ್ತು (Top-Ten) ಗುಣಗಳು!! 

1.       ಪ್ರಾಮಾಣಿಕ ದುಡಿಮೆಯ ಶ್ರಮದಿಂದ ಬರುವ ಆದಾಯದ ಹೊರತು ಅಪಮಾರ್ಗದಿಂದ   ಬರುವ ಯಾವುದೇ ನಗದು, ವಸ್ತು ಅಥವಾ ಇನ್ನಾವುದೇ ಬಗೆಯ ಆದಾಯಗಳನ್ನು ಸ್ಪಷ್ಟವಾಗಿ ನಿರಾಕರಿಸುವ ಗುಣವಿದೆ. ‘ಪುಗಸಟ್ಟೆ ಬರುವುದನ್ನು ಯಾಕೆ ಬಿಡಬೇಕು’ ಎಂಬುದಕ್ಕೆ ವಿರುದ್ಧವಾಗಿ ‘ಪುಗಸಟ್ಟೆ ಬರುವುದನ್ನು ಯಾಕೆ ತೆಗೆದುಕೊಳ್ಳಬೇಕು’ ಎಂಬ ಸ್ವಾಭಿಮಾನದ ಧಿಮಾಕು ನನ್ನದು!

2.       ನನಗೆ ಗೊತ್ತಿಲ್ಲದ ವಿಷಯದಲ್ಲಿ ಚಿಕ್ಕಮಗುವಿನಿಂದ ಬುದ್ದಿಹೇಳಿಸಿಕೊಳ್ಳಲೂ ನನಗೆ ನಾಚಿಕೆಯಾಗುವುದಿಲ್ಲ; ಅದು ಅವಮಾನ ಅನ್ನಿಸುವುದಿಲ್ಲ. ಆದರೆ ನನಗೆ ಗೊತ್ತಿರುವ ವಿಷಯದಲ್ಲಿ ತಪ್ಪುಮಾಡಿ ಬೇರೆಯವರಿಂದ ಬುದ್ದಿಹೇಳಿಸಿಕೊಳ್ಳಲು ತುಂಬಾ ನಾಚಿಕೆಯಾಗುತ್ತದೆ ಮತ್ತು ತುಂಬಾ ಮುಜುಗರ ಮತ್ತು ಅವಮಾನಗೊಂಡಂತೆ ಆಗುತ್ತದೆ.

3.       ನನಗೆ ಒಳಗೊಂದು ಹೊರಗೊಂದು ವ್ಯಕ್ತಿತ್ವವಿಲ್ಲ. ನನಗೆ ಅನ್ನಿಸಿದ್ದನ್ನು ಕೇಳುವವರಿಗೆ ತುಸು ನೋವಾದರೂ ನೇರವಾಗಿ ಹೇಳಿಬಿಡುವ ಗುಣವಿದೆ. ಇದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂಬುದು ನನ್ನ ನಿಲುವು. ಇದರಿಂದ ಮಾನವ ಸಂಬಂಧಗಳ ನಡುವೆ ಸಂಶಯ, ಅನುಮಾನಗಳಿಗೆ ಅವಕಾಶ ಇರುವುದಿಲ್ಲವಾಗಿ ಕೇಳುವವರಿಗೆ ಆ ಕ್ಷಣದಲ್ಲಿ ತುಸು ಬೇಸರವಾದರೂ ಧೀರ್ಘಾವಧಿಯಲ್ಲಿ ಇದು ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಹೀಗಾಗಿ ಇತರರು  ತಮ್ಮ ಬಗ್ಗೆ ನನ್ನ ಭಾವನೆಯನ್ನು ತಿಳಿದುಕೊಳ್ಳಲು ಕಷ್ಟಪಡಬೇಕಾಗಿಲ್ಲ.

4.       ನಾನೊಬ್ಬ ನಂಬಿಗಸ್ಥ ಪ್ರೇಮಿ. (Faithful Lover). ಒಂದು ಸಲ ನನಗೆ ಯಾರ ಮೇಲೆಯಾದರೂ ಪ್ರೀತಿ ಹುಟ್ಟಿತು ಎಂದರೆ  ಅವರ ಮೇಲೆ ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಸಿಟ್ಟು, ರೋಷ ಹುಟ್ಟಬಹುದೇ ಹೊರತು ಮತ್ತೆಂದಿಗೂ ದ್ವೇಷ  ಹುಟ್ಟುವುದಿಲ್ಲ; ಅವರು ನನ್ನನ್ನು ಪ್ರೀತಿಸಲಿ; ಬಿಡಲಿ; ನಿರಾಕರಿಸಲಿ; ಅಷ್ಟೇ ಏಕೆ ದ್ವೇಷಿಸಿದರೂ ಕೂಡ!

5.      
ನನಗೆ ಯಾರಿಗೂ ಮೋಸ-ವಂಚನೆ ಮಾಡುವ  ಗುಣವಿಲ್ಲ. ಯಾರಿಗೂ ತೊಂದರೆ ಕೊಡದಂತೆ ಆದಷ್ಟೂ ಬೇರೆಯವರಿಗೆ ಸಹಾಯಮಾಡಿ ಬದುಕುವ ಗುಣವಿದೆ.

6.       ಬೇರೆಯವರ ಸಹಾಯ ಮತ್ತು ಸೇವೆಗಳನ್ನು ನನ್ನ ಅಸಹಾಯಕ ಸ್ಥಿತಿಯಲ್ಲಿ ಮತ್ತು ತೀರಾ  ಅನಿವಾರ್ಯ ಎನಿಸುವ  ಸಂದರ್ಭಗಳಲ್ಲಿ ಮಾತ್ರ ಅದೂ ಎಷ್ಟುಸಾಧ್ಯವೋ ಅಷ್ಟೂ ಕಡಿಮೆ ಮಟ್ಟದಲ್ಲಿ ಬಳಸಿಕೊಳ್ಳುವ ಗುಣವಿದೆ. ಮಾಡುವವರು ಸಿಕ್ಕರೆ ಏನೆಲ್ಲ ಸೇವೆ ಮಾಡಿಸಿಕೊಳ್ಳುವ ಗುಣವಿಲ್ಲ.

7.       ಹಾಲಲ್ಲಿ ಜೇನಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವ ಗುಣ ನನಗಿಲ್ಲ. ಅಂದರೆ ಪರಿಸ್ಥಿತಿಗೆ ತಕ್ಕಂತೆ ಒಳ್ಳೆಯವರ ಜೊತೆಗೆ ಒಳ್ಳೆಯವನಾಗಿ, ಕೆಟ್ಟವರ ಜೊತೆಗೆ ಕೆಟ್ಟವನಾಗಿ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸಮಯಸಾಧಕತನವಿಲ್ಲ!

ಉದ್ದೇಶಪೂರ್ವಕವಾಗಿ ಅನ್ಯಾಯ, ಪಾಪಕಾರ್ಯಗಳಲ್ಲಿ ಪಾಲ್ಗೋಳ್ಳುವುದೇ ಇಲ್ಲ. ಇಂತಹ ಚಟುವಟಿಕೆಗಳು ಕಂಡರೆ ಸುಮ್ಮನೆ, ‘ಏನಾದರೂ ಮಾಡಿಕೊಳ್ಳಲಿ ನನಗೇನು’ ಎಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಅನ್ಯಾಯ ಮಾಡುವವರ ಜೊತೆಗೆ ಅದನ್ನು ಕಂಡೂ ಸುಮ್ಮನಿರುವವರೂ ಆ ಕಾರ್ಯದ ಪಾಲುದಾರರೇ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಇಂತಹ ಘಟನೆಗಳು ನನಗೆ ಕಂಡುಬಂದಾಗೆಲ್ಲ ಮೊದಲ ಹಂತದಲ್ಲಿ ಅವನ್ನು ಸರಿಪಡಿಸಲು ನನ್ನ ಇತಿಮಿತಿಗಳಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ  ಮಾಡುತ್ತೇನೆ. ಆಗದಿದ್ದಾಗ ಅನಿವಾರ್ಯವಾಗಿ ಅಂತಹ ಚಟುವಟಿಕೆಗಳಿಂದ ಅದನ್ನು ಮಾಡುವವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತೇನೆ.

8.       ತಪ್ಪುಮಾಡುವವರ ಬಗ್ಗೆ ನನಗೆ ಸಿಟ್ಟು ಬರುತ್ತದೆಯೇ ಹೊರತು ಅವರ ಬಗ್ಗೆ ದ್ವೇಷಹುಟ್ಟುವುದಿಲ್ಲ. ತಪ್ಪುಮಾಡುವವರು ಅಜ್ಞಾನದಿಂದ ಮಾಡುತ್ತಾರೆ. ಅಜ್ಞಾನಕ್ಕೆಶಿಕ್ಷಣಪರಿಹಾರವೇ ಹೊರತುಶಿಕ್ಷೆಯಲ್ಲವೆಂಬುದನ್ನು ನಾನು  ಅರ್ಥಮಾಡಿಕೊಂಡಿದ್ದೇನೆ. ಇನ್ನು ನೂರು ವರ್ಷಕ್ಕೆ ಈ ಸಮಾಜ ಸರಿಯಾಗುವುದಾದರೂ ಅದಕ್ಕೆ ಇರುವ ಏಕೈಕ ದಾರಿ ಎಂದರೆ ಶಿಕ್ಷಣ! ಹಾಗಾಗಿ ಯಾರು ಕೆಟ್ಟರೂ ಶಿಕ್ಷಕರಂತೂ ಕೆಡಲೇಬಾರದು ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಶಿಕ್ಷಕರು ಮಾಡುವ ಸಣ್ಣತಪ್ಪುಗಳೂ ನನಗೆ ಬಹಳ ದೊಡ್ಡವಾಗಿ ಕಾಣುತ್ತವೆ!! ಏಕೆಂದರೆ ಈ ಸಮಾಜ ಒಂದು ಬಸ್ ಇದ್ದಂತೆ. ಬಸ್ಸಿನಲ್ಲಿ 49 ಜನ ನಿದ್ದೆಮಾಡಿದರೂ ನಡೆಯುತ್ತದೆ. ಆದರೆ ಒಬ್ಬ ಮಾತ್ರ ನಿದ್ದೆ ಮಾಡಲೇ ಕೂಡದು. ಅವನೇ ಚಾಲಕ.  ಅವನು ಒಂದು ಕ್ಷಣ ಕಣ್ಣುಮುಚ್ಚಿದರೆ ಉಳಿದ 49 ಜನ ಶಾಶ್ವತವಾಗಿ ಕಣ್ಣುಮುಚ್ಚಬೇಕಾಗುತ್ತದೆ! ಸಮಾಜ ಎಂಬ ಬಸ್ಸಿನ ಚಾಲಕ ಸ್ಥಾನದಲ್ಲಿ ಕುಳಿತವರೇ ಶಿಕ್ಷಕರು ಅದಕ್ಕಾಗಿ ಈ ಕಾಳಜಿ ಅಷ್ಟೆ.

9.       ದೇವರು ಧರ್ಮ ಇಂಥವುಗಳ ಬಗ್ಗೆ ನಂಬಿಕೆ  ವಿಶ್ವಾಸಗಳಿಲ್ಲ;  ಆದರೆ ಅವನ್ನು ಪ್ರಾಮಾಣಿಕವಾಗಿ ನಂಬಿಕೊಂಡವರ ಬಗ್ಗೆ ದ್ವೇಷವಿಲ್ಲ. ಆದರೆ ಅವುಗಳನ್ನು ಜನರಲ್ಲಿ ಮೌಢ್ಯಬಿತ್ತಲು, ಜನರನ್ನು ಜಾತಿ-ಧರ್ಮ-ಜನಾಂಗಗಳಾಗಿ ವಿಭಜಿಸಿ ಅವರಲ್ಲಿ ದ್ವೇಷಾಸೂಯೆಗಳನ್ನು ಬಿತ್ತಲು ಬಳಸಿಕೊಳ್ಳುವವರ ಬಗ್ಗೆ ನನಗೆ ಸಾತ್ವಿಕ ಸಿಟ್ಟಿದೆ. ಅದು ಸಹಜವಾಗಿ ನನ್ನ ಬರೆಹ-ಭಾಷಣಗಳಲ್ಲಿ ಎದ್ದು ಕಾಣುವಂತಿರುತ್ತದೆ.

10.  


ಮನುಷ್ಯರು, ಮನುಷ್ಯತ್ವ ಮಾನವೀಯತೆ ಇವುಗಳ ಬಗ್ಗೆ ನನಗೆ ಬಹಳಷ್ಟು ವಿಶ್ವಾಸವಿದೆ.  ಹೀಗಾಗಿ ನನ್ನ ಎದುರಿಗೆ ಬರುವ ಮನುಷ್ಯನೊಬ್ಬ ನನಗೆ ಹಿಂದೂ ಆಗಿ ಮುಸಲ್ಮಾನನಾಗಿ ಕ್ರೈಸ್ತನಾಗಿ ಇನ್ನೇನೋ ಆಗಿ ಹೋಳು ಹೋಳಾಗಿ ಒಡೆದು ಕಾಣುವುದಿಲ್ಲ. ಅವನು ಒಬ್ಬ ಮನುಷ್ಯನಾಗಿಯೇ ನನಗೆ ಕಾಣುತ್ತಾನೆ. ಮನುಷ್ಯರನ್ನು ಜಾತಿ-ಮತ-ಜನಾಂಗಗಳ ಆಧಾರದ ಮೇಲೆಒಳ್ಳೆಯವರು’ಕೆಟ್ಟವರು’ ಎಂದು ಪರಿಗಣಿಸುವ ಗುಣನನಗೆ ಇಲ್ಲವೇ ಇಲ್ಲ. ಪ್ರಪಂಚದ ಎಲ್ಲ ಜನರೂ ಜಾತಿ-ಮತ-ಲಿಂಗ-ಪ್ರದೇಶ ಇವುಗಳ ಕೆಸರುಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವ ಬಗ್ಗೆ ಮರುಕವಿದ್ದು ಅವರೆಲ್ಲರೂ ಇವುಗಳ ಬಂಧನಗಳಿಂದ ಹೊರಬಂದು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸುಖ-ಸಂತೋಷ ಮತ್ತು ನೆಮ್ಮದಿಗಳಿಂದ ಬದುಕಬೇಂಬ ಅಪೇಕ್ಷೆಯಿದ್ದು ಬಗ್ಗೆ ನನ್ನ ಮಿತಿಯಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುವ ಗುಣವಿದೆ.

*****

(ರಾಜೇಂದ್ರ ಬುರಡಿಕಟ್ಟಿ)

22-04-2021

*****

(ಇದನ್ನು ಓದುವುದಾಗಲೀ ಇದಕ್ಕೆ ಪ್ರತಿಕ್ರಿಯಿಸುವುದಾಗಲೀ ಕಡ್ಡಾಯವಲ್ಲ. ಆದರೆ ಪುರಸೊತ್ತು ಮತ್ತು ಇಂಟ್ರೆಸ್ಟು ಇದ್ದವರು ಪ್ರತಿಕ್ರಿಯಿಸಬಹುದು. ಹಿಮ್ಮಾಹಿತಿಯಾಗಿ ಬರುವ ಎಲ್ಲ ಅಭಿಪ್ರಾಯಗಳನ್ನು ವಿಶೇಷವಾಗಿ ಭಿನ್ನಾಭಿಪ್ರಾಯಗಳನ್ನು ಸಕಲ ಮರ್ಯಾದೆಯಿಂದ ಸ್ವಾಗತ ಮಾಡಲಾಗುವುದು!!ರಾಬು)