Monday, January 30, 2023

ಗಾಂಧೀಜಿಯನ್ನು ಹತ್ಯೆಮಾಡಿದ ದಿನ ಕುವೆಂಪು ಮಾಡಿದ ಭಾಷಣ

 

ರಾಷ್ಟ್ರಪಿತ ದಿವಂಗತ! ಅದೃಷ್ಟಹೀನ ಭಾರತ!

(ಗಾಂಧೀಜಿಯನ್ನು ಕೊಂದಾಗ ರಾಷ್ಟ್ರಕವಿ ಕುವೆಂಪು ಮಾಡಿದ ಆಕಾಶವಾಣಿ ಪ್ರಸಾರ ಭಾಷಣ)


ರಾಷ್ಟ್ರಪಿತ ದಿವಂಗತ

ಉನ್ಮತ್ತ ಹಸ್ತ ಹತ!

ನರಹೃದಯದ ವಿಷವಾರ್ಧಿಗೆ

ಜೀವಾಮೃತ ಸಮರ್ಪಿತಃ

ಕ್ಷಮಿಸು ಜಗತ್ ಪಿತಃ

ಅದೃಷ್ಟಹೀನ ಭಾರತ!

ನಮ್ಮ ರಾಷ್ಟ್ರದ ಪಿತಾಮಹನು ರಣರಂಗದ ಮಧ್ಯೆ ಶರಶಯ್ಯೆಯಲ್ಲಿ ಅಸ್ತಂಗತನಾದನು. ನಮ್ಮ ಸಾಕ್ರೆಟೀಸನಿಗೆ ವಿಷಪಾನ ಮಾಡಿಸಿಯಾಯಿತು. ನಮ್ಮ ಯೇಸುಕ್ರಿಸ್ತನು ಶಿಲುಬೆಗೇರಿದನು. ಜಗದ್ವಂದ್ಯ ಲೋಕಗುರು ಪೂಜ್ಯ ಮಹಾತ್ಮಾಗಾಂಧಿ ತಲೆಕೆಟ್ಟ ಕೊಲೆಗಾರನೊಬ್ಬನ ಕ್ರೂರ ಹಸ್ತದಿಂದ ಪ್ರಾರ್ಥನಾ ಸಭೆಯ ವೇದಿಕೆಯ ಮೇಲೆ, ತಮ್ಮಿಬ್ಬರು ಮೊಮ್ಮಕ್ಕಳ ಪ್ರೇಮ ಬಾಹುಗಳ ನಡುವೆ ನಿಂತು, ತಮ್ಮನ್ನು ಸ್ವಾಗತಿಸುತ್ತಿದ್ದ ವಿಪುಲಜನವೃಂದಕ್ಕೆ ತಮ್ಮೆರಡು ಕೈಗಳನ್ನೂ ಹಣೆಗೆತ್ತಿ ನಮಸ್ಕರಿಸುತ್ತಿದ್ದಾಗಲೇ ಮೃತ್ಯುರಾಹುವಿಗೆ ತುತ್ತಾದರು. ವೇದಿಕೆಯ ಮೇಲೆ ಅತೀ ಸಮೀಪದಲ್ಲಿ ಕುಳಿತ ಹಿಂದೂ ಯುವಕನೊಬ್ಬನು ಚಿಮ್ಮಿ ನಿಂತು ಅವರ ತೆರೆದೆದೆಗೆ ಗುಂಡಿಟ್ಟು ಕೊಂದನಂತೆ. ಹಿಂದೆಂದೂ ಭರತಖಂಡದಲ್ಲಿ ನಡೆಯದಂತಹ ಇಂತಹ ಅಸಹ್ಯವಾದ ಘೋರ ಪಾತಕವನ್ನು ಇಂದು ನಡೆಸಿ ನಮ್ಮ ದೇಶಕ್ಕೆ ದೇಶವೇ ಜಗತ್ತಿನ ಮುಂದೆ ಮಹಾಪರಾಧಿಯಾಗಿದೆ; ಅವಮಾನಿತವಾಗಿದೆ. ನಾವು ತಲೆಯೆತ್ತಿ ನಡೆಯದಂತಾಗಿದೆ. ನಮ್ಮ ದೇಶ ತಿರಸ್ಕಾರಕ್ಕೂ ಶಾಪಕ್ಕೂ ಪಕ್ಕಾಗಿದೆ. ಪಾಪಕಾರ್ಯಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ನಮಗೆ ಯೇಸುಕ್ರಿಸ್ತನನ್ನು ಮೊಳೆಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೇನೋ ಎಂದು ಹೆದರಿಕೆಯಾಗುತ್ತಿದೆ.

ಮತ್ತೇನಿದ್ದೀತು ನಾವು ಕೈಕೊಳ್ಳುವ ಪ್ರಾಯಶ್ಚಿತ್ತ? ಯಾವ ಮಹಾಪುರುಷನ ಪ್ರೇಮಮಯ ಹೃದಯವು ಗುಂಡು ತಗುಲಿ ಬಿರಿಯಿತೋ ಹೃದಯದ ಆಶೆ ಆಕಾಂಕ್ಷೆ ಆದರ್ಶಗಳನ್ನು ಅಚಂಚಲವಾದ ದೃಢತೆಯಿಂದ ಆಚರಿಸಿ ಸಾಧಿಸುವುದೊಂದೇ ನಮಗೆ ಮುಂದಿರುವ ಶ್ರೇಯೋಮಾರ್ಗ. ಶಿಲುಬೆರೇರಿದ ಯೇಸು ಕ್ರಿಸ್ತನಿಗೆ, ‘ಕ್ಷಮಿಸು ತಂದೆ!’ ಎಂದು ಮಾನವರ ಪರವಾಗಿ ಭಗವಂತನನ್ನು ಬೇಡಲು ಸ್ವಲ್ಪ ಪ್ರಜ್ಞೆಯಾದರೂ ಇತ್ತಂತೆ. ನಿನ್ನೆ ಮಡಿದ ನಮ್ಮ ಕ್ರಿಸ್ತನಿಗೆ ಅಷ್ಟಕ್ಕೂ ಅವಕಾಶ ಕೊಡದಷ್ಟು ಬೇಗನೆ ಪ್ರಜ್ಞೆ ಹೋಯಿತಂತೆ. ಆದರೂ ಆತನ ಮುಖಮುದ್ರೆ ಪ್ರಶಾಂತವಾಗಿ, ಕ್ಷಮಾಶೀಲವಾಗಿ, ಧ್ಯಾನಪೂರ್ಣ ಶಾಂತಿಯಿಂದ ತುಂಬಿ, ‘ಕ್ಷಮಿಸು ತಂದೆ!’ ಎನ್ನುವಂತಿತ್ತೆಂದು ವರ್ಣನೆಯನ್ನು ಕೇಳಿದವರೆಲ್ಲರಿಗೂ ವೇದ್ಯವಾಗಿರುಬೇಕು. ಮೃತಸ್ಥಿತಿಯಲ್ಲಿಯೂ ಅಮೃತವನ್ನೇ ಪ್ರೋಕ್ಷಿಸುತ್ತಿದ್ದ ಮುಖಮುದ್ರೆಯ ಸಂದೇಶ-ಕ್ಷಮೆ, ಪ್ರೇಮ, ಸತ್ಯ, ಅಹಿಂಸೆ ಇವು ನಮಗೆ ರಕ್ಷಾಮಂತ್ರಗಳಾಗಬೇಕು. ಹಾಗಾದರೆ ಮಾತ್ರವೇ ನಮ್ಮ ದೇಶದ ಸದ್ಯೋಜಾತ ಸ್ವಾತಂತ್ರ್ಯಕ್ಕೆ ರಕ್ಷಾಯಂತ್ರ ಸಿದ್ಧವಾಗುತ್ತದೆ.

ಎಷ್ಟು ಅನಿರೀಕ್ಷಿತ, ಎಷ್ಟು ಆಕಸ್ಮಿಕ, ಎಷ್ಟು ಭಯಂಕರವಾಗಿತ್ತು ನಿನ್ನೆ ಬಂದ ಘೋರವಾರ್ತೆ! ಮೊನ್ನೆತಾನೆ ಆಮರಣ ಪರ್ಯಂತ ಕೈಕೊಂಡ ಉಪವಾಸ ವ್ರತದಿಂದ ದೆಹಲಿಯ ವಿಷಸಮುದ್ರವನ್ನೂ ಕ್ಷೀರಸಾಗರವಾಗಿ ಪರಿವರ್ತಿಸಿ, ಲೋಕದ ಪ್ರಶಂಸೆಗೂ ಪೂಜೆಗೂ ಕೃತಜ್ಞತೆಗೂ ಪಾತ್ರರಾಗಿದ್ದರು. ಅಲ್ಲದೇ ನಮ್ಮೆಲ್ಲರಲ್ಲಿ ಮತ್ತೊಂದು ಹೊಸ ಆಶೆಯನ್ನೂ ಪ್ರಚೋದಿಸಿದ್ದರು. ನೂರಿಪ್ಪತ್ತೈದು ವರ್ಷದ ಹೊಂಗನಸು ಎಪ್ಪತೆಂಟಕ್ಕೇ ಬಿರಿಯುವಂತೆ ಮಾಡಿದ ಈಶ್ವರೇಚ್ಛೆಯ ಕಟುಲೀಲೆಗೆ ಏನು ಹೇಳುವುದು? ತಲೆಬಾಗಿ ಮೂಖರಾಗುವುದೊಂದೇ ದಾರಿ. ವಾರ್ತೆ ಕಿವಿಗೆ ಬಿದ್ದಾಗ ಜನ ನಕ್ಕುಬಿಟ್ಟರು. ಅದನ್ನು ತಿಳಿಸಿದವರಿಗೆ ಛಿಃ ಮಾಡಿದರು. ಸತ್ತರೆಂದು ನಂಬುವುದಾದರೂ ಎಂತು? ಗುಂಡು ಬಿದ್ದು ಸತ್ತರೆಂದಾಗಲೂ ಯಾರೂ ನಂಬದೆಹೋದರು. ಏನು? ಗಾಂಧೀಜಿಗೆ? ಗುಂಡಿನೇಟು? ಅಸಾಧ್ಯ! ಅಸಂಭವ! ಅವಿವೇಕ! ಸುಳ್ಳು! ಖಂಡಿತಾ ಸುಳ್ಳು! ಆಕಾಶವಾಣಿ ಲೋಕವಾರ್ತೆಯನ್ನು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದಾಗ ನಂಬಲೇಬೇಕಾಗಿ ಬಂತು.

ಆಗಂತೂ ಜನರಲ್ಲುಂಟಾದ ಕಳವಳ, ಭೀತಿ, ನಿರಾಶೆ, ಸಂಕಟ ಇವುಗಳನ್ನು ಹೇಳತೀರದು. ಬದುಕಿನ ಅರ್ಥವೇ ಇದ್ದಕ್ಕಿದ್ದಂತೆ ಶೂನ್ಯವಾದಂತಾಯಿತು. ಜೀವನದ ಪ್ರಯೋಜನವೇ ಕೊನೆಮುಟ್ಟಿದಂತೆ ತೋರಿತು. ಗಾಂಧಿ ಇಲ್ಲದ ಜಗತ್ತು! ತೆಗೆ ತೆಗೆ ಅದೆಲ್ಲಿಯ ಮಾತು! ಎರಡು ತಲೆಮಾರುಗಳಿಂದ ಪ್ರಪಂಚದ, ಅದರಲ್ಲಿಯೂ ಭರತಖಂಡದ ಬಾಳನ್ನೆಲ್ಲ ಆವರಿಸಿ, ಉಸಿರನ್ನೆಲ್ಲ ತುಂಬಿ ಚೇತನಕ್ಕೆ ಶಕ್ತಿಯಾಗಿ, ಕಣ್ಣಿಗೆ ಬೆಳಕಾಗಿ, ದಾರಿಗೆ ಸಂಗಾತಿಯಾಗಿ, ಕೆಳೆಯನಾಗಿ, ನಾಯಕನಾಗಿ, ಸುಧಾರಕನಾಗಿ, ಮಾರ್ಗದರ್ಶಿಯೂ ಗುರುವೂ ಆಗಿದ್ದ ಗಾಂಧಿ ಇಲ್ಲದ ಜಗತ್ತು ಜಗತ್ತೆ? ಅದೊಂದು ಅಮಂಗಲ ವಿಪತ್ತು! ಉಳಿದವರ ಮಾತಿರಲಿ! ನೆಹರು, ಪಟೇಲ್, ಆಜಾದ್ ಅಂಥವರಿಗೂ ಏನಾಯಿತೆಂಬುದನ್ನು ರೇಡಿಯೋದಿಂದ ಕೇಳಿದ್ದೇವೆ. ಭಾರತದ ಪ್ರಧಾನಿ ಮತ್ತು ಉಪಪ್ರಧಾನಿ ಇಬ್ಬರೂ ದೆಹಲಿಯಿಂದ ಮಾಡಿದ ಪ್ರಸಾರ ಭಾಷಣಗಳಲ್ಲಿ ತಮ್ಮ ತಮ್ಮ ಸಹಜ ಧೈರ್ಯವನ್ನೂ ಒತ್ತಿ ಮೀರಿಬಂದ ದುಃಖಾತಿಶಯಕ್ಕೆ ಗದ್ಗದ ಧ್ವನಿ ನೀಡಿದುದನ್ನು ನಾವೆಲ್ಲರೂ ಆಲಿಸಿ ಮರುಗಿದ್ದೇವೆ.

ನಿಜ, ನಮ್ಮ ದುಖಃಕ್ಕೆ ತೀರವಿಲ್ಲ; ನಮ್ಮ ನಷ್ಟಕ್ಕೆ ಅಳತೆಯಿಲ್ಲ. ಎಂದೆಂದಿಗೂ ಪಡೆಯಲಾಗದ ಒಡವೆ ಚ್ಯುತವಾಗಿದೆ. ನಮ್ಮ ಆಧ್ಯಾತ್ಮಿಕ ರಿಕ್ತತೆಯೋ ಪಾತಾಳದಂತೆ ಗಂಭೀರವಾಗಿದೆ; ಆಕಾಶದಂತೆ ವಿಸ್ತಾರವಾಗಿದೆ. ನಿನ್ನೆ ಸರ್ವದೇಶಗಳನ್ನೂ ನಗುವಂತೆ ಶ್ರೀಮಂತರಾಗಿದ್ದವರು ಇಂದು ಎಲ್ಲ ನಾಡುಗಳೂ ನಗುವಂತೆ ದಟ್ಟದರಿದ್ರರಾಗಿದ್ದೇವೆ. ಆದರೂ, ಪಂಡಿತ ನೆಹರು ತಮ್ಮ ಭಾಷಣದಲ್ಲಿ ಹೇಳಿದಂತೆ, ಕ್ಲೈಬ್ಯಕ್ಕಿದು ಕಾಲವಲ್ಲ; ಅಧೈರ್ಯಕ್ಕಿದು ಅಪಕಾಶವಲ್ಲ; ಅಸ್ಥಿರತೆಗೆ ಸಮಯವಲ್ಲ. ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತ ಕೂರುವುದು ಅವಿವೇಕವೇ.

ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊಟ್ಟಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀರಾಮಚಂದ್ರನಿಗೆ ಕೊನೆ ಬಂದ ಪರಿಯನ್ನೂ ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. ನಮಗೆ ಅನರ್ಥವಾಗಿರುವುದು ಈಶ್ವರನ ಸಮದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮರೇ ಹೇಳುತ್ತಿದ್ದರು: ‘ನನ್ನನ್ನು ಕೊಲ್ಲುವ ಸಾಮರ್ಥ್ಯ ಈಶ್ವರನಿಗೊಬ್ಬನಿಗೇ ಇದೆಎಂದು. ಕೊಂದವನು ಯಃಕಶ್ಚಿತ್ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು. ಸರ್ವಮಂಗಲ ನಿಧಿಯಾದ ಭಗವಂತನ ಇಚ್ಛೆಯಲ್ಲಿ ಶ್ರದ್ಧೆಯಿಟ್ಟು ಸಮಾಧಾನ ತಂದುಕೊಂಡು ಮುಂದಿನ ಕಾರ್ಯಕ್ಕೆ ಸೊಂಟಕಟ್ಟಿ ನಿಲ್ಲಬೇಕು.

ಆತ್ಮದ ಅಮೃತತ್ವದಲ್ಲಿಯೂ ಅವತಾರಗಳಲ್ಲಿಯೂ ಜನ್ಮಾಂತರ ಮತ್ತು ಪುನರ್ಜನ್ಮಗಳಲ್ಲಿಯೂ ಶ್ರದ್ಧಾಳುಗಳಾದ ನಮಗೆ ಪೂಜ್ಯ ಗಾಂಧೀಜಿಯ ದೇಹಾವಸಾನವು ಪುರರುತ್ಥಾನಕ್ಕೆ ಪ್ರಚೋದನವಾಗಬೇಕು. ಸ್ಥಿತಿಪ್ರಜ್ಞರಾದ ಗಾಂಧೀಜಿ ಮೃತರಾದರು ಎಂಬುದು ಲೋಕೋಪಚಾರದ ಮಾತು. ನಿಜವಾದ ನಿಜವಲ್ಲ. ಏಕ ದೇಹಸ್ಥವಾಗಿದ್ದ ಚೇತನ ಈಗ ಸರ್ವತ್ರವಾಗಿದೆ. ಶಕ್ತಿಗೆ ಅಂತ್ಯವಿಲ್ಲ. ಕಾಲ ಕಳೆದಂತೆಲ್ಲ ಅದು ಬಹುಗುಣಿತವಾಗುತ್ತಾ ಹೋಗುತ್ತದೆ. ಭಕ್ತಿಸೂತ್ರಗಳು ಹೇಳುವಂತೆ ಅಂತಹ ವಿಭೂತಿಗಳ ಅವಿರ್ಭಾವದಿಂದ, ‘ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾಚೇಯಂ ಭೂರ್ಭವತಿ’: ‘ಪಿತೃಗಳು ನಲಿಯುತ್ತಾರೆ; ದೇವತೆಗಳು ಕುಣಿಯುತ್ತಾರೆ. ನಮ್ಮೀ ಪೃಥ್ವಿ ಸನಾಥಳಾಗುತ್ತಾಳೆ.’ ಗಾಂಧೀಜಿಯನ್ನು ಹೆತ್ತ ನಮ್ಮೀ ಪೃಥ್ವಿ ಎಂದೆಂದಿಗೂ ಅನಾಥೆಯಲ್ಲ, ನಿತ್ಯ ಸನಾಥೆ! ಪೂಜ್ಯ ಮಹಾತ್ಮನು ನಮ್ಮನ್ನು ಕ್ಷಮಿಸಲಿ; ಆತನ ಕೃಪೆ ನಮ್ಮನ್ನು ಕೈಬಿಡದೆ ಕಾಯಲಿ; ದೇವಮಾನವನ ದಿವ್ಯಸ್ಮೃತಿ ಕಂಗೆಡುತ್ತಿರುವ ನಮ್ಮ ಜನತೆಯ ಮುನ್ನಡೆಗೆ ಗಗನೋನ್ನತ ದೀಪಸ್ತಂಭವಾಗಲಿ!

ಮಹಾತ್ಮಾ ಗಾಂಧೀಕಿ ಜೈ!

ಜಯ್ ಹಿಂದ್!

******

(ಇದು ಮಹಾತ್ಮಾಗಾಂಧೀಜಿಯವರು ಕೊಲೆಯಾದ ಮರುದಿನ ದಿನ (31-01-1948) ರಾಷ್ಟ್ರಕವಿ ಕುವೆಂಪು ಅವರು ಮೈಸೂರು ಆಕಾಶವಾಣಿಯಿಂದ ಮಾಡಿದ ಪ್ರಸಾರ ಭಾಷಣ. ಭಾಷಣವನ್ನು ಕುವೆಂಪು ಅವರ ಬರೆಹಗಳ ಸಂಗ್ರಹದಿಂದ ಎತ್ತಿ ಕೊಟ್ಟಿದ್ದು: ಡಾ. ರಾಜೇಂದ್ರ ಬುರಡಿಕಟ್ಟಿ)

 

Thursday, June 9, 2022

ಕುವೆಂಪು ವಿಶ್ವಮಾನವ ಸಂದೇಶ ಮತ್ತು ಯುವಜನತೆ

ಕುವೆಂಪು ವಿಶ್ವಮಾನವ ಸಂದೇಶ ಮತ್ತು ಯುವಜನತೆ

ಒಂದುಕಡೆ ಮೂಲಭೂತವಾದಿಗಳಿಂದ ಮತ್ತೊಂದು ಕಡೆ  ಕೋಮುವಾದಿಗಳಿಂದ ದುರ್ಬೋಧೆಗೊಳಗಾಗಿ ಮತಧರ್ಮಗಳ ಕೆಸರನ್ನು ತಮ್ಮ ತಲೆಯಲ್ಲಿ ತುಂಬಿಕೊಂಡು ತಮ್ಮ ವ್ಯಕ್ತಿತ್ವವನ್ನೇ ಹಾಳುಮಾಡಿಕೊಳ್ಳುತ್ತಿರುವ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ಇಂತಹ 'ಧರ್ಮರಾಕ್ಷಸ'ರ ಮಾತು ಕೇಳುವುದನ್ನು ಬಿಟ್ಟು ದೇವರು ಮತ್ತು ಧರ್ಮದ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುವ ಕುವೆಂಪು ಅವರ 'ವಿಶ್ವಮಾನವ ಸಂದೇಶ'ವನ್ನು ಅರ್ಥ ತಿಳಿದು ಮಾಡಿಕೊಂಡು ಅದರಂತೆ ನಡೆಯುವುದು ಅವರ ಭವಿಷ್ಯ ಮಾತ್ರವಲ್ಲ ಇಡೀ ದೇಶದ ಭವಿಷ್ಯದ ದೃಷ್ಟಿಯಿಂದ ಕೂಡ ಇಂದಿನ ತುರ್ತು ಅಗತ್ಯವಾಗಿದೆ. ಕುವೆಂಪು ಅವರ 'ವಿಶ್ವಮಾನವ ಸಂದೇಶ'ವನ್ನು ತಿಳಿಯಲು ಈಗಾಗಲೇ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ನೋಡಿರುವ ಈ ವಿಡಿಯೋ ಲಿಂಕ್ ಬಳಸಬಹುದು.... (ರಾಬು)

https://youtu.be/4TSr6fcpWZ8

Thursday, May 26, 2022

ಎಸ್.ಎಸ್.ಎಲ್.ಸಿ. ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

 ಎಸ್.ಎಸ್.ಎಲ್.ಸಿ. ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!

ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆಯಿತು. ಉದ್ದೇಶಪೂರ್ವಕವಾಗಿ ಒಂದು ವಾರದ ನಂತರ ಲೇಖನ ಬರೆಯುತ್ತಿದ್ದೇನೆ. ಫಲಿತಾಂಶ ಬಂದ ವಾರ ಸಹಜವಾಗಿ ಅಭಿನಂಧನೆಗಳು, ಕೊಂಡಾಟ ಮೊಂಡಾಟಗಳು, ಬೆನ್ನುತಟ್ಟಿಕೊಳ್ಳುವ ಚಟುವಟಿಕೆಗಳಿಂದ ಮಾಧ್ಯಮಗಳು ತುಂಬಿಹೋಗುವುದರಿಂದ ಇಡೀ ಶಿಕ್ಷಣ ಕ್ಷೇತ್ರವನ್ನು ಒಂದು ರೀತಿಯ ಮಹಾಪೂರ ಆವರಿಸಿರುತ್ತದೆ. ಮಹಾಪೂರ ಇಳಿದ ಮೇಲೆ ಕೆಲವರನ್ನಾದರೂ ಚಿಂತನೆಗೆ ಹಚ್ಚಬಹುದೇನೋ ಎಂಬ ಆಶಯ ಲೇಖನದ್ದೇ ಹೊರತು ಇಡೀ ವ್ಯವಸ್ಥೆಯನ್ನಾಗಲೀ ಯಾವುದೇ ವ್ಯಕ್ತಿಯನ್ನಾಗಲಿ ಟೀಕಿಸುವುದಲ್ಲ ಎಂಬುದನ್ನು ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತೇನೆ ಮತ್ತು  ಪ್ರಾಮಾಣಿಕವಾಗಿ ಶ್ರಮಪಟ್ಟು ಪಾಠಮಾಡಿ ಉತ್ತಮ ಫಲಿತಾಂಶ ಪಡೆದ ಶಿಕ್ಷಕರು ಇಲ್ಲಿಯ ನಕಾರಾತ್ಮಕ ಅಂಶಗಳು ತಮಗೆ ಸಂಬಂಧಿಸಿದ್ದಲ್ಲವೆಂದು ಭಾವಿಸಲು ಕೋರುತ್ತೇನೆ. ಹಾಗೆ ಮಾಡದೇ ಇದು ಶಿಕ್ಷಕ ಸಮುದಾಯಕ್ಕೇ ಮಾಡುವ ಅವಮಾನವೆಂದು ಅವರೇನಾದರೂ ಗ್ರಹಿಸಿದರೆ ಇಡೀ ಲೇಖನದ ಆಶಯವೇ ಬುಡಮೇಲಾಗುತ್ತದೆ ಎಂಬುದನ್ನು ವಿನಮ್ರವಾಗಿ ಸೂಚಿಸಬಯಸುತ್ತೇನೆ.

ಮೊಟ್ಟಮೊದಲನೆಯದಾಗಿ ವರ್ಷವಿಡೀ ಶ್ರಮಪಟ್ಟು ನಿಷ್ಟೆಯಿಂದ ಮಕ್ಕಳಿಗೆ ಭೋಧನೆಮಾಡಿ ಒಳ್ಳೆಯ ಫಲಿತಾಂಶ ತಂದುಕೊಂಡು ಧನ್ಯತೆ ಅನುಭವಿಸುತ್ತಿರುವ ಶಿಕ್ಷಕ ಶಿಕ್ಷಕಿಯರನ್ನು ಅತ್ಯಂತ ಗೌರವದಿಂದ ಅಭಿನಂಧಿಸುತ್ತೇನೆ. ಅನಂತರವೇ ಮುಂದಿನ ವಿಷಯಕ್ಕೆ ಬರುತ್ತಿದ್ದೇನೆ. ಇವತ್ತಿನ ರಾಜ್ಯ ಪತ್ರಿಕೆಯೊಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಮನಗರದಲ್ಲಿ ನಡೆದಿದೆ ಎನ್ನಲಾದ ಹಗರಣವೊಂದರ ಬಗ್ಗೆ ಮುಖಪುಟವರದಿಮಾಡಿದೆ. ರಾಜ್ಯವ್ಯಾಪಿ ಸುದ್ಧಿಮಾಡಿರುವ ಪಿ.ಎಸ್. ಆಯ್ಕೆ ಹಗರಣ ತನಿಖೆಯ ಮುಂದುವರೆದ ಭಾಗವಾಗಿ ಹಗರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಅಲ್ಲಿನ ಶಿಕ್ಷಕರು ಪರೀಕ್ಷಾ ಕೆಂದ್ರದ ಮುಖ್ಯಸ್ಥರು ಸೇರಿಕೊಂಡು ಪ್ರಶ್ನೆಪತ್ರಿಕೆಗೆ ತಜ್ಞ ಶಿಕ್ಷಕರಿಂದ ಉತ್ತರ ಬರೆಸಿ ಪರೀಕ್ಷಾ ಕೊಠಡಿಗಳಿಗೆ ಕಳಿಸಿ ಬರೆಸಿದ್ದಾರಂತೆ. ಬರೀ ರಾಮನಗರದ ಕಥೆ ಇದಾಗಿದ್ದರೆ ನಾನು ಲೇಖನವನ್ನು ಬರೆಯುತ್ತಿರಲಿಲ್ಲ. ಇಂಥ ಅಯೋಗ್ಯ ಕೆಲಸಗಳು ಬಹಳಷ್ಟು ಕಡೆ ಬೆಳಕಿಗೆ ಬಂದಿಲ್ಲ ನಿಜ. ಆದರೆ ನಡೆದಿಲ್ಲ ಎಂಬುದು ನಿಜವಲ್ಲ.

ಕೆಸರು ನೀರು ಮತ್ತು ಶುದ್ಧಜಲ

ವರ್ಷ ಉತ್ತಮ ಫಲಿತಾಂಶ ಬಂದದ್ದು ಒಬ್ಬ ಶಿಕ್ಷಕನಾಗಿ ನನಗಂತೂ ಖುಷಿಕೊಡಲಿಲ್ಲ. ಇದಕ್ಕೆ ಕಾರಣ ಫಲಿತಾಂಶ ಬಹಳ ಕಡೆ ಪ್ರಾಮಾಣಿಕ ಪ್ರತಿಫಲದಿಂದ ಬಂದ ಫಲಿತಾಂಶವಾಗಿಲ್ಲ ಎಂಬುದು. ಕೆಲವು ಶಾಲೆಗಳಿಗಂತೂ ಮಳೆಗಾಲದಲ್ಲಿ ಮಹಾಪೂರ ಬಂದು ಕೊಳಚೆನೀರೆಲ್ಲ ಮನೆನುಗ್ಗುವಂತೆ ಎರ್ರಾಬಿರ್ರಿ ಫಲಿತಾಂಶ ಬಂದಿದೆ. ಸಾರೆ ಒಟ್ಟಾರೆ ರಾಜ್ಯದಲ್ಲಿ ಉತ್ತಮ ಫಲಿತಾಂಶ ಬರಲು ಉತ್ತಮ ಶಿಕ್ಷಕರಿಗಿಂತ ಕೆಟ್ಟ ಶಿಕ್ಷಕರ ಕೊಡುಗೆಯೇ ಹೆಚ್ಚೇನೋ ಅನಿಸುತ್ತಿದೆ. ಅನೇಕ ಕಡೆ ಫಲಿತಾಂಶ ಅಸಹಜತೆಯಿಂದ ಕೂಡಿದ್ದನ್ನು ನಾವು ಸಮೀಕ್ಷೆ ವಿಶ್ಲೇಷಣೆ ಮಾಡಿ ತಿಳಿಯಬಹುದಾಗಿದೆ. ನಮ್ಮ ನಿರೀಕ್ಷೆಗಿಂತ ಅತ್ಯಂತ ಕಡಿಮೆ ಫಲಿತಾಂಶ ಬಂದಾಗ ನಮಗೆ ಹೇಗೆ ನೋವಾಗುತ್ತದೆಯೋ ಹಾಗೆಯೇ ನಿರೀಕ್ಷೆಗಿಂತ ಅತ್ಯಂತ ಹೆಚ್ಚು ಫಲಿತಾಂಶ ಬಂದಾಗಲೂ ನೋವಾಗಬೇಕು! ಏಕೆಂದರೆ ಇವುಗಳಲ್ಲಿ ಮೊದಲನೆಯದು ಲೋ ಬಿಪಿ ಆದರೆ ಎರಡನೆಯದು ಹೈ ಬಿಪಿ. ಎರಡೂ ಕಾಯಿಲೆಗಳೇ!

ಪ್ರಶ್ನೆಪತ್ರಿಕೆಗಳನ್ನು ಅಗತ್ಯಮೀರಿ ಸರಳೀಕರಿಸುವುದು, ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳು, ಮೌಲ್ಯಮಾಪನದ ಔದಾರ್ಯ, ಇಂತಹ ಅಂಶಗಳು ಅನೇಕ ವೇಳೆ ಫಲಿತಾಂಶವನ್ನು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಎತ್ತರಕ್ಕೆ ಒಯ್ಯುತ್ತವೆ. ವರ್ಷದ ಇಂತಹ ಹೈಬಿಪಿ ಫಲಿತಾಂಶಕ್ಕೂ ಇಂಥದ್ದೇ ಅಂಶಗಳು ಹೆಚ್ಚು ಕಾರಣವಾದದ್ದು ಎಂಬುದನ್ನು ನಾವು ಗಮನಿಸಿಬೇಕು.  ಪ್ರಶ್ನೆಪತ್ರಿಕೆಯ ಮಿತಿಮೀರಿದ ಸರಳತೆ ಸಾರ್ವಜನಿಕವಾಗಿ ಎದ್ದು ಕಾಣುವುದರಿಂದ ಅದನ್ನಿಲ್ಲಿ ನಾನು ವಿಸ್ತರಿಸುತ್ತಿಲ್ಲ. ಇನ್ನು ಮೌಲ್ಯಮಾಪನ. ಇದರ ಕಥೆ ಇವತ್ತು ಯಾವ ಅಧೋಗತಿಗೆ ಇಳಿದುಬಿಟ್ಟಿದೆ ಎಂಬುದನ್ನು ನೆನಸಿಕೊಂಡರೆ ಖೇಧವೆನಿಸುತ್ತದೆ. ಇದಕ್ಕೆ ಶಿಕ್ಷಕರಷ್ಟೇ ಕಾರಣ ಅಲ್ಲ ನಿಜ. ಹಾಗಂತ ಅವರು ಕಾರಣವೇ ಅಲ್ಲ ಎನ್ನಲಾಗದು. ನಾನು ಮುಖ್ಯವಾಗಿ ಲೇಖನದಲ್ಲಿ ಮೂರನೆಯ ಮತ್ತು ಕೊನೆಯದಾದ ಪರೀಕ್ಷಾ ಅಕ್ರಮಗಳ ಬಗ್ಗೆ ತುಸು ದೀರ್ಘವಾಗಿ ಹೇಳಬೇಕಾಗಿರುವುದರಿಂದ ಮೌಲ್ಯಮಾಪನದ ಕಥೆಯನ್ನು ಇಲ್ಲಿಯೇ ಮೊಟಕುಗೊಳಿಸುತ್ತೇನೆ.


ರಾಮನಗರದ ಹಗರಣದ ವಿವರಣೆಗಳನ್ನು ನೋಡಿದರೆ ಅಂತಹ ಅನೇಕ ಪ್ರಕರಣಗಳು ಬಹಳಷ್ಟುಕಡೆ ನಡೆದೂ ಬೆಳಕಿಗೆ ಬಂದಿಲ್ಲದಿರಬಹುದು. ಅನೇಕ ಕೇಂದ್ರಗಳಲ್ಲಿ (ಎಲ್ಲ ಅಲ್ಲ) ಪರೀಕ್ಷಾ ಅಕ್ರಮಗಳನ್ನು ಶಿಕ್ಷಕರೇ ಮುಂದೆ ನಿಂತು ನಡೆಸುವುದನ್ನು ನೋಡಿ, ಕೇಳಿ ಮೂವತ್ತು ವರ್ಷಗಳ ಕಾಲ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ ನನಗೆ ಸಹಜವಾಗಿಯೇ ಅವರ ಮೇಲೆ ಸಾತ್ವಿಕ ಕೋಪ (ದ್ವೇಷವಲ್ಲ). ಉಂಟಾಗುತ್ತದೆ. ನಮ್ಮ ಶಿಕ್ಷಕರೇಕೆ ಇಂತಹ ಕೆಟ್ಟ ಕೆಲಸಗಳಿಗೆ ಕೈಹಾಕಿ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಕಿರಿಕಿರಿಯಾಗುತ್ತದೆ. ಅನೇಕ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೇ ಅಕ್ಕಪಕ್ಕದ ಶಾಲೆಗಳಿಂದತಜ್ಞಶಿಕ್ಷಕರನ್ನು ಕರೆಸಿಕೊಂಡು ಅವರಿಂದ ಉತ್ತರ ಬರೆಸಿಕೊಂಡು ಕೊಠಡಿಗಳಿಗೆ ಕಳಿಸಿಕೊಡುವುದೂ ಉಂಟು.

ಹೀಗಾಗಿ ಇಂಗ್ಲಿಷಿನಲ್ಲಿ ಒಂದು ವಾಕ್ಯವನ್ನು ಬರೆಯಲಾಗದವರು ವಿಷಯದಲ್ಲಿ ಅರವತ್ತು ಎಪ್ಪತ್ತು ಅಂಕಗಳನ್ನು ಪಡೆಯುವುದೂ ಗಣಿತದ ಮೂಲಕ್ರಿಯೆಗಳನ್ನೇ ಮಾಡಲಾಗದ ಮಕ್ಕಳು ಗಣಿತದಲ್ಲಿ ದೊಡ್ಡ ಮಟ್ಟದ ಅಂಕಗಳನ್ನು ಪಡೆಯುವುದೂ ಸಾಧ್ಯವಾಗಿಬಿಡುತ್ತದೆ. ಉಳಿದ ವಿಷಯಗಳೂ ಇದಕ್ಕೆ ಹೊರತಲ್ಲ. ಹೀಗಾಗಿ ನಾನು ಕೇಳಿದ ಅನೇಕ ಶಾಲೆಗಳಲ್ಲಿ ಫೇಲಾಗಬೇಕಾದ ಮಕ್ಕಳೆಲ್ಲರೂ ಪಾಸಾಗಿದ್ದಾರೆ. ಮೂವತ್ತು ನಲವತ್ತು ಅಂಕ ಪಡೆದು ಪಾಸಾಗಬೇಕಾದವರು ಎಪ್ಪತ್ತು ಎಂಬತ್ತು ಅಂಕ ಪಡೆದುಕೊಂಡಿದ್ದಾರೆ. ಅಲ್ಲಿ ಇರಬೇಕಾವರು ಗರಿಷ್ಠಮಿತಿ ನೂರಕ್ಕೆ ನೂರರ ಗಡಿರೇಖೆ ಮುಟ್ಟಿದ್ದಾರೆ. ಹೀಗೆ ಬರುವ ಫಲಿತಾಂಶವನ್ನು ಹಿಡಿದುಕೊಂಡು ನಾವು ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತಿದೆ ಎಂದುಕೊಂಡರೆ ನಮ್ಮಂಥ ಮೂರ್ಖರೇ ಇಲ್ಲವೆನ್ನಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಕೆಸರು ನೀರು ಮತ್ತು ಶುದ್ಧಜಲಗಳ ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿರಬೇಕಾದದ್ದು ಅಪೇಕ್ಷಣೀಯ.

ನಿಜವಾದ ಶಿಕ್ಷಕರು ನಿಜವಾದ ಶಿಕ್ಷಕರು ಹೇಗಿರುತ್ತಾರೆ?

ನಿಜವಾದ ಶಿಕ್ಷಕರು ಪಾಠಮಾಡುವಾಗ ತಾಯಿಯಂತೆ, ಪರೀಕ್ಷಾ ಕೊಠಡಿಯಲ್ಲಿ ಪೋಲೀಸ್ ಇನಸ್ಪೆಕ್ಟರಂತೆ, ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸಬೇಕು. ಆದರೆ ನಮ್ಮಲ್ಲಿ ಅನೇಕರು ಪಾಠಮಾಡುವಾಗ ಪೋಲೀಸರಂತೆ ಇದ್ದು ಪರೀಕ್ಷಾ ಕೊಠಡಿಯಲ್ಲಿ ತಾಯಿಯಾಗಿಬಿಡುತ್ತಾರೆ. ಇನ್ನು ಮೌಲ್ಯಮಾಪನ ಮಾಡುವಾಗ ನ್ಯಾಯಾಧೀಶರಂತೆ ಇರದೆಜಳ್ಳುಪತ್ರಿಕೆ’ಗಳನ್ನುತಳ್ಳುಸೇವೆ’ ಮೂಲಕ ಸಾಗುಹಾಕುವಸುಗಮಕಾರರಾಗಿಬಿಡುತ್ತಾರೆ! ಇಂಥವರಿಂದ ಶಿಕ್ಷಣ ವ್ಯವಸ್ಥೆಯ ಸುಧಾರಣೆಯಾಗುವುದಿರಲಿ ಇರುವ ಸ್ಥಿತಿಕೂಡ ಅಧೋಗತಿಗಿಳಿಯುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ನಾವು ಬೇರೆ ಯಾರಾದರೂ ತಪ್ಪು ಮಾಡಿದರೆ ಸಹಿಸಿಕೊಳ್ಳಬಹುದು. ಆದರೆ ಶಿಕ್ಷಕರು ತಪ್ಪುಗಳನ್ನು ಮಾಡಿದರೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಸಮಾಜ ಇನ್ನು ಸಾವಿರ ವರ್ಷಕ್ಕೆ ಸರಿಯಾಗುವುದಾದರೂ ಅದಕ್ಕೆ ಇರುವುದು ಒಂದೇ ದಾರಿ. ಅದು ಶಿಕ್ಷಣ. ದಾರಿಯ ದ್ವಾರಬಾಗಿಲಿನಲ್ಲಿ ನಿಂತವರು ಶಿಕ್ಷಕರು! ಇಂತಹ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ಇಂತಹ ಕೆಟ್ಟ ಕೆಲಸದಲ್ಲಿ ತೊಡಗಬಾರದು. ಹೀಗೆ ತೊಡಗುವವರು ಬಹುಶಃ ಸರಿಪಡಿಸಲು ಸಾಧ್ಯವಾಗದಷ್ಟು ಕೆಟ್ಟುಹೋದವರೇ ಆಗಿರುತ್ತಾರೆ. ಇಂತಹವರನ್ನು ಸರಿದಾರಿಗೆ ತರುವುದು ಸಮಾಜಕ್ಕೆ ಎಷ್ಟರಮಟ್ಟಿಗೆ ಸರಿಯಾಗುತ್ತದೆಯೋ ಆದರೆ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವುದು ಮಕ್ಕಳ ಮಾತ್ರವಲ್ಲ ಸಮಾಜ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಕೂಡ ಅತ್ಯಂತ ಅಗತ್ಯವಾದದ್ದು.

ಕೆಲಸಗಳನ್ನು ಹೇಗೆ ಮಾಡಬಹುದು? ಮೊಟ್ಟಮೊದಲನೆಯದಾಗಿ ಸಮಾಜ ಶಿಕ್ಷಕರೆದಂರೆ ದೇವರ ಸಮಾನ ಎಂದು ಎಲ್ಲ ಶಿಕ್ಷಕರಿಗೂಹುಂಬುಗೌರವಕೊಡುವುದನ್ನು ನಿಲ್ಲಿಸಬೇಕು. ಯಾವುದೋ ಕಾಲದಲ್ಲಿ ರಚಿತವಾದ ಗುರುಬ್ರಹ್ಮ ಗುರುವಿಷ್ಣು, ಗುರುದೇವೋ ಮಹೇಶ್ವರಎಂಬ ಶ್ಲೋಕ ಪಠಿಸುತ್ತಾ ಶಿಕ್ಷಕರೆಂದರೆ ಸಾಕ್ಷಾತ್ ದೇವರು ಎಂದು ತಿಳಿದು ಅವರ ಬಗ್ಗೆಆರಾಧನಾ ಮನೋಭಾವನೆ’ಯನ್ನು ತಳೆಯುವುದನ್ನು ಬಿಟ್ಟುಚಿಕಿತ್ಸಕ ಮನೋಭಾವನೆ’ಯನ್ನು ತಳೆಯಬೇಕು. ಶ್ಲೋಕದ ಕಾಲಕ್ಕೆ ಎಲ್ಲ ಶಿಕ್ಷಕರೂ ಒಳ್ಳೆಯವರಾಗಿದ್ದರೂ ಇದ್ದಿರಬಹುದು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎಂಬ ವಾಸ್ತವನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರ ಪವಿತ್ರವಾದದ್ದೆಂಬುದು ಸುಳ್ಳಲ್ಲ. ಆದರೆ ಅಲ್ಲಿರುವ ಶಿಕ್ಷಕರೆಲ್ಲರೂ ಪವಿತ್ರಾತ್ಮರು ಎಂಬುದು ನಿಜವಲ್ಲ! ಹಾಗಾಗಿ ಅವರನ್ನೂ ಮನುಷ್ಯರು ಎಂದು ಬಗೆದು ಒಳ್ಳೆಯವರಿಗೆ ಗೌರವನ್ನೂ ಕೆಟ್ಟು ಕೆಟ್ಟವರಿಗೆ ಗೌರವ ಕೊಡುವುದನ್ನು ನಿಲ್ಲಿಸಬೇಕು.

ದುಷ್ಟಶಿಕ್ಷಕರ ನಿಯಂತ್ರಣ: ಮೂರು ದಾರಿಗಳು

ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಖ್ಯವಾಗಿ ಮುಖ್ಯವಾಗಿ ಇಂತಹ ಶಿಕ್ಷಕರನ್ನು ಸುಧಾರಿಸುವುದು ಸಾಧ್ಯವಿಲ್ಲದಿದ್ದಲ್ಲಿ ಇವರ ಹಾವಳಿ ನಿಯಂತ್ರಿಸಲಾದರೂ ನಾವು ಕ್ರಮಕೈಗೊಳ್ಳಬೇಕಾಗುತ್ತದೆ. ಅದನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ಮಾಡಬಹುದು ಎಂಬುದು ನನ್ನ ಸಲಹೆ. ಮೊದಲನೆಯದೆಂದರೆ ಅದು ಇಲಾಖೆಯ ಅಧಿಕಾರಿಗಳು ಮಾಡಬೇಕಾದ್ದು. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಶಿಕ್ಷಕರನ್ನು ಪತ್ತೆಹಚ್ಚಿ ಅಂತಹವರ ಮೇಲೆ ಕಠಿಣ ಕ್ರಮವನ್ನು ಅವರು ಜರುಗಿಸಬೇಕು. ಆದರೆ ಇದು ಹೇಳಲು ಮತ್ತು ಕೇಳಲು ಚೆನ್ನಾಗಿದೆ. ಆದರೆ ಇದರ ಬಗ್ಗೆ ನಾವು ಎಷ್ಟರ ಮಟ್ಟಿಗೆ ಭರವಸೆ ಇಟ್ಟುಕೊಳ್ಳಬಹುದು? ಅನೇಕ ಅಧಿಕಾರಿಗಳು ಶಾಲೆಗಳಿಗೆ ಬಂದಾಗಏನಾದರೂ ಮಾಡಿ ಸಲ ಇಷ್ಟು ಪರ್ಶೆಂಟ್ ರಿಜಲ್ಟ್ ಕೊಡಿಎಂದು ಶಿಕ್ಷಕರಿಗೆ ಹೇಳುವುದು ತೀರಾ ಸಾಮಾನ್ಯ. ಇಲ್ಲಿ ಅವರು ಬಳಸುವಏನಾದರೂ ಮಾಡಿಎಂಬ ಪದಪುಂಜವನ್ನು ನಾವು ಹೇಗಾದರೂ ಅರ್ಥಮಾಡಿಕೊಳ್ಳಬಹುದಾಗಿದೆ.

ಇನ್ನು ಎರಡನೆಯದು. ಶಿಕ್ಷಣ ಕ್ಷೇತ್ರದಲ್ಲಿರುವ ಒಳ್ಳೆಯ ಶಿಕ್ಷಕರು ಮಾಡಬಹುದಾದಂಥದ್ದು. ನಾನು ಗಮನಿಸಿದಂತೆ ಇಂತಹ ಕೆಟ್ಟ ಕೆಲಸದಲ್ಲಿ ತೊಡಗಿಕೊಂಡ ಶಿಕ್ಷಕರ ಸಂಖ್ಯೆ ಈಗಲೂ ಬಹಳ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೂ ಅವರ ಕಾರ್ಯ ಮಾಡುವ ಪರಿಣಾಮ ಚಿಕ್ಕದಲ್ಲ. ಇಂತಹ ಕೆಟ್ಟ ಶಿಕ್ಷಕರು ತಾವು ಮಾಡಿದ ಇಂತಹ ಕೆಟ್ಟ ಕೆಲಸಗಳನ್ನು ನಾಚಿಕೆ, ಮಾನ ಮರ್ಯಾದೆಗಳನ್ನು ಬಿಟ್ಟು ರಾಜಾರೋಷವಾಗಿ ಹೇಳಿಕೊಳ್ಳವಷ್ಟು ಮಾನಗೇಡಿಗಳಾಗಿರುತ್ತಾರೆ. ಇಂತಹ ಅಪಮಾರ್ಗದಿಂದ ತಾವು ಪಡೆದ ಫಲಿತಾಂಶವನ್ನೂ ಫೋಟೋಗಳನ್ನೂ ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಹಾಕಿಕೊಂಡು ಪರಸ್ಪರ ಅಭಿನಂದನೆ, ಶುಭಾಶಯಗಳ ಕೊಂಡಾಟದಲ್ಲಿ ತೊಡಗಿರುತ್ತಾರೆ. ಇದು ಥೇಟ್ ಕೆಸರುಗುಂಡಿಯಲ್ಲಿನ ಕಪ್ಪೆಗಳು ಪರಸ್ಪರ ಮೈಗೆ ಕೆಸರನ್ನು ಎರಚಿಕೊಂಡು ಸಂಭ್ರಮಪಡುವಂತೆಯೇ ಇರುತ್ತದೆ! ಇಂತಹ ಕಾರ್ಯಗಳನ್ನು ಸ್ಟಾಪ್ ರೂಮ್ ಗಳಲ್ಲಿ ಇವರು ಮಾಡುವಾಗ ಒಳ್ಳೆಯ ಶಿಕ್ಷಕರು ಇವರಿಗೆ ಛೀಮಾರಿ ಹಾಕಬೇಕೆ ಹೊರತು ಅವರು ಹೇಳಿದ್ದಕ್ಕೆ ಪಕಪಕ ಹಲ್ಲುಬಿಡುತ್ತಾ ಬೆಂಬಲ ಸೂಚಿಸಬಾರದು. ಇಂತಹ ಕೆಟ್ಟ ಕೆಲಸಗಳನ್ನು ಮಾಡಿದ ಶಿಕ್ಷಕ ಅಥವಾ ಶಿಕ್ಷಕಿ  ತಮ್ಮ ಪಕ್ಕದಲ್ಲಿದ್ದಾಗ ನಾನು ಹೇಸಿಗೆಯ ಪಕ್ಕ ನಿಂತಿದ್ದೇನೆ ಎಂಬ ಭಾವನೆ ಒಳ್ಳೆಯ ಶಿಕ್ಷಕರಿಗೆ ಮೂಡಬೇಕು.  ಅಷ್ಟೂ ಮಾಡದಿದ್ದರೆ ಒಳ್ಳೆಯವರ ಕೊಡುಗೆ ಸುಧಾರಣೆಗೆ ಏನೂ ಇಲ್ಲದಂತಾಗುತ್ತದೆ.

ಮೂರನೆಯದು ಮತ್ತು ಕೊನೆಯದು ಶಿಕ್ಷಕರಿಗೆ ಅನ್ನ ನೀಡುವ ದೇವರಾದ ಮಕ್ಕಳೇ ಮಾಡುವಂಥದ್ದು ಮತ್ತು ಅತ್ಯಂತ ಪರಿಣಾಮಕಾರಿಯಾಗಿರುವಂಥದ್ದು. ಮಕ್ಕಳು ಏನು ಮಾಡಬಹುದು? ಪರಿಕ್ಷಾ ಕೊಠಡಿಯಲ್ಲಿರುವ ಮಕ್ಕಳಲ್ಲಿ ಎಲ್ಲ ಮಕ್ಕಳೂ ಓದುವಲ್ಲಿ ಬೇಜವಾಬ್ದಾರಿಯಿಂದ ಬಂದು ಅವರಂತೆಯೇ ಬೇಜವಾಬ್ದಾರಿತೋರಿ ಅಪಮಾರ್ಗದಿಂದ ಶಿಕ್ಷಕರಾದ ಕೆಟ್ಟ ಶಿಕ್ಷಕರು ಕೊಡುವಬಿಕ್ಷೆಗಾಗಿ ಕಾಯುತ್ತಿರುವುದಿಲ್ಲ. ನಮ್ಮಲ್ಲಿ ಒಳ್ಳೆಯ ಶಿಕ್ಷಕರು ದೊಡ್ಡಪ್ರಮಾಣದಲ್ಲಿ ಇರುವುದರಿಂದ ಅವರಿಂದ ತಯಾರಾದ ಒಳ್ಳೆಯ ಮಕ್ಕಳೂ ಇರುತ್ತಾರೆ. ಅಂತಹ ಮಕ್ಕಳಲಿ ಒಂದು ಮಗು (ಒಂದೇ ಒಂದು ಮಗು) ಹೀಗೆ ಉತ್ತರಗಳನ್ನು ಹೇಳಿಕೊಡಲು ಪರೀಕ್ಷಾ ಕೊಠಡಿಯ ಒಳಗೆ ಇಂತಹ ಕೆಟ್ಟ ಶಿಕ್ಷಕ ಅಥವಾ ಶಿಕ್ಷಕಿ ಬಂದು ತಮ್ಮ ಕೆಲಸವನ್ನು ಮಾಡತೊಡಗುತ್ತಿದ್ದಂತೆಯೇ ಮೆಲ್ಲನೆ ಎದ್ದು ತಮ್ಮ ಕಾಲಿನ ಚೆಪ್ಪಲಿಯನ್ನು ತೆಗೆದುಕೊಂಡು ಆತನ ಅಥವಾ ಆಕೆಯ ಮುಖಕ್ಕೆ ಎಸೆದುಬಿಡಬೇಕು, ಪೂಜ್ಯಭಾವನೆಯಿಂದ ದೇವರ ಮೂರ್ತಿಗೆ ಹೂವನ್ನು ಹಾಕುವಂತೆ!!!

 *****

ರಾಜೇಂದ್ರ ಬುರಡಿಕಟ್ಟಿ

26-05-2022