Saturday, April 13, 2024

ಕಣ್ಣಿಗೆ ಕಟ್ಟುವ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ!

 



ಪಂಜಾಬಿಗೆ ಪ್ರವಾಸ ಹೋದವರು  ಅವಶ್ಯವಾಗಿ ನೋಡುವ ಮೂರು ಸ್ಥಳಗಳೆಂದರೆ ಒಂದು ಅಮೃತಸರದ ಸುವರ್ಣಮಂದಿರ, ಇನ್ನೊಂದು ಭಾರತ ಪಾಕಿಸ್ತಾನಗಳ ಗಡಿಯಾದ ವಾಘಾ ಬಾರ್ಡರ್‌ ಮತ್ತು ಮೂರನೆಯದೇ ಅಮೃತಸರದ ಸುವರ್ಣಮಂದಿರದ ಪಕ್ಕವೇ ಇರುವ ಐತಿಹಾಸಿಕ ಮಹತ್ವದ ಜಲಿಯನ್‌ ವಾಲಾಭಾಗ್.‌  ಆಧುನಿಕ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಯಂಕರವಾದ ಹತ್ಯೆಯ ಕಾರಣ ಹೆಸರುವಾಸಿ  ಆಗಿರುವಂಥದ್ದು ಜಲಿಯನ್ ವಾಲಾ ಬಾಗ್.  ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ ನಡೆದದ್ದು ೧೯೧೯ರ ಏಪ್ರಿಲ್‌ ೧೩ ರಂದು.  

ಅಂದು ಅಲ್ಲಿ ರೌಲತ್‌ ಕಾಯ್ದೆಯನ್ನು ವಿರೋಧಿಸಿ ಮತ್ತು ಬಂಧನಕ್ಕೊಳಗಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದ್ದೀನ್‌ ಕಿಚ್ಲೇವ್‌ ಮತ್ತು ಡಾ ಸತ್ಯಪಾಲ್‌ ಅವರ ಬಿಡುಗಡೆಗೆ ಒತ್ತಾಯಿಸಿ ಶಾಂತಿಯುತವಾಗಿ ಸಭೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ  ತಾತ್ಕಾಲಿಕ ಅಧಿಕಾರದಲ್ಲಿದ್ದ ಜನರಲ್‌ ಡಯರ್ ಎಂಬ ಕ್ರೂರಿ  ಬ್ರಿಟೀಷ್‌ ಆರ್ಮಿಯಲ್ಲಿದ್ದ ಸಿಕ್‌ ಮತ್ತು ಗೂರ್ಖಾ ಬ್ರಿಗೇಡ್‌ ಗಳನ್ನೇ ಬಳಸಿಕೊಂಡು ಅಮಾನವೀಯವಾಗಿ ಗುಂಡಿನ ಮಳೆಗರೆದು ಅಪಾರ ಸಂಖ್ಯೆಯ ಸಾವುನೋವಿಗೆ ಕಾರಣವಾದ. ಮೂರು ಕಡೆಗಳಲ್ಲಿ ಕಟ್ಟಡಗಳಿದ್ದು ಒಂದು ಕಡೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುವ ಈ ಸ್ಥಳಕ್ಕೆ ಬಂದ ಡಯರ್‌ ಪ್ರವೇಶ ಅವಕಾಶವಿದ್ದ ದ್ವಾರಕ್ಕೆ ತನ್ನ ಸೈನ್ಯವನ್ನು ನಿಲ್ಲಿಸಿ  ಫೈಯರ್‌ ಮಾಡಲು ಆದೇಶ ನೀಡಿದ. ಒಳಗೆ ಸಿಕ್ಕಿಬಿದ್ದವರು ಎತ್ತಲೂ ಹೋಗಲು ಆಗದೆ ದಾರುಣ ಸಾವನ್ನಪ್ಪಿದರು. ಈ ಕ್ರೂರ ಘಟನೆಯಲ್ಲಿ ಸತ್ತವರ ಸಂಖ್ಯೆಯ ಬಗ್ಗೆ ನಿಖರತೆಯಿಲ್ಲವಾದರೂ ಸತ್ತವರ ಸಂಖ್ಯೆ ವಿವಿಧ ವರದಿಗಳ ಪ್ರಕಾರ ೪೦೦ ರಿಂದ ೧೫೦೦ ರ ವರೆಗೆ ಇದೆ. ಈ ಸಾವಲ್ಲದೆ ಅನೇಕರು ವಿಪರೀತವಾಗಿ ಗಾಯಗೊಂಡರು. ಹೀಗೆ ಗುಂಡು ಹಾರಿಸುವಾಗ ಅನೇಕರು ಏನು ಮಾಡಲು ತೋರದೆ ಅಲ್ಲಿದ್ದ ಬಾವಿಗೆ ಹಾರಿ ಪ್ರಾಣಬಿಟ್ಟರು.

***

ಈ ಹೇಯ ಕೃತ್ಯವನ್ನು ಎಸಗಿದ ಡೈಯರ್‌ ನ ಜೀವನ ವೃತ್ತಾಂತವನ್ನು ನಾವು ತುಸು ನೋಡುವುದಾದರೆ ಅವನು ಆಗಿನ ಭಾರತದ ಭಾಗವೇ ಆಗಿದ್ದ ಈಗಿನ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮೂರಿಯಲ್ಲಿಯೇ  ಜನಿಸಿದವನು. ಅವನು ತನ್ನ ಆರಂಭಿಕ ಶಿಕ್ಷಣವನ್ನು ಮಾಡಿದ್ದು ಮೂರಿ ಮತ್ತು ನಮ್ಮ ಹಿಮಚಲಪ್ರದೇಶದ ಶಿಮ್ಲಾದಲ್ಲಿಯೇ. ಮುಂದೆ ಐರ್ಲೆಂಡಿಗೆ ಹೋಗಿ ಪದವಿ ಶಿಕ್ಷಣ ಪಡೆದನಾದರೂ ಅನೇಕ ಭಾರತೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವನಾಗಿದ್ದ ಇವನು ಮತ್ತೆ ಭಾರತಕ್ಕೆ ಬಂದು ಈಗಿನ‍ ಝಾನ್ಸಿಯ ಚರ್ಚ್‌ ಒಂದರಲ್ಲಿ ಮದುವೆಯೂ ಆದ.  ಮೊದಲು ಬಂಗಾಳ ಮಿಲಿಟರಿಯಲ್ಲಿ ನಂತರ ಹೊಸದಾಗಿ ರಚಿತವಾದ ಭಾರತೀಯ ಬ್ರಿಟಿಷ್‌ ಆರ್ಮಿಯಲ್ಲಿ ಸೇರಿ ಹಂತಹಂತವಾಗಿ ಮೇಲೇರಿದ.  ಈ ಘಟನೆಯನ್ನು ಅವನು ನಡೆಸಿದಾಗ ಅವನು ತಾತ್ಕಾಲಿಕ ಬ್ರಿಗೇಡಿಯರ್‌ ಆಗಿದ್ದ.

ಅವನು ಎಸಗಿದ ಈ ಘಟನೆ ಭಾರತ ಮತ್ತು ಬ್ರಿಟನ್‌ ಎರಡೂ ದೇಶಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಯಿತಾದರೂ ಅವನಿಗೆ ಹೇಳಿಕೊಳ್ಳುವಂಥ ಶಿಕ್ಷೆಯೇನೂ ಆಗಲಿಲ್ಲ. ಆಗ ಬ್ರಿಟಿಷ್‌ ಸೈನ್ಯದ ಉಸ್ತುವಾರಿಯಾಗಿದ್ದ ಚರ್ಚಿಲ್‌,  ಡಯರ್‌ ನನ್ನು ಶಿಸ್ತುಕ್ರಮಕ್ಕೆ ಒಳಪಡಿಸಬಯಸಿದ. ಆದರೆ ಬ್ರಿಟಿಷ್‌ ಕೌನ್ಸಿಲ್‌ ಅವನಿಗೆ ರಾಜಿನಾಮೆ ನೀಡುವ ಆಯ್ಕೆಯನ್ನು ನೀಡಿತು. ಚರ್ಚಿಲ್‌ ಭಾಷಣದ ಕಾರಣದಿಂದ ಬ್ರಿಟನ್‌ ಪಾರ್ಲಿಮೆಂಟಿನಲ್ಲಿ ೧೯೨೦ ರಲ್ಲಿ ನಡೆದ ಗೊತ್ತುವಳಿಯಲ್ಲಿ ಡಯರ್‌ ನ ಕಾರ್ಯಕ್ಕೆ ಅನುಮೋದನೆ ಪಡೆಯುವ ಗೊತ್ತುವಳಿಯು ಸರ್ಕಾರದ ಪರವಾಗಿ ೨೩೦ ಹಾಗೂ ವಿರುದ್ಧವಾಗಿ  ೧೨೯ ಮತ ಪಡೆಯುವ ಮೂಲಕ ಬಿದ್ದುಹೋಯಿತು!

ಆದರೆ ಅವನು ಈ ಹೇಯ ಕೃತ್ಯವನ್ನು ಹೊಗಳಿ ಕೊಂಡಾಡುವವರೂ ಆಗೇನೂ ಕಡಿಮೆ ಸಂಖ್ಯೆಯಲ್ಲಿ ಇರಲಿಲ್ಲ. ಭಾರತದಲ್ಲಿ ಹುಟ್ಟಿಬೆಳೆದು ಐರ್ಲೆಂಡಿನಲ್ಲಿ ವ್ಯಾಸಂಗಮಾಡಿ ಭಾರತದ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಇವನು ಕೊನೆಗೆ ಬ್ರಿಟನ್‌ ನಲ್ಲಿ ತನ್ನ ಕೊನೆಯ ಕಾಲವನ್ನು ಕಳೆದ. ಈ ಘಟನೆಯು ನಡೆದು ಎರಡು ವರ್ಷದ ನಂತರ ಅಂದರೆ ೧೯೨೧ ರಲ್ಲಿ ಅವನಿಗೆ ಬ್ರಿಟನ್ನಿನಲ್ಲಿ ದೊಡ್ಡ ನಾಗರೀಕ ಸನ್ಮಾನವನ್ನು ಮಾಡಿ ದೊಡ್ಡ ಮೊತ್ತದ ನಿಧಿಯೊಂದನ್ನು ಸಂಗ್ರಹಮಾಡಿ ನೀಡಿದರು! ಆಗ ಬ್ರಿಟೀಷ್‌ ಆಡಳಿತದ ಪರವಾಗಿ ತುತ್ತೂರಿ ಬಾರಿಸುವ ಪತ್ರಿಕೆಯಾಗಿದ್ದ ʼಮಾರ್ನಿಂಗ್‌ ಪೋಸ್ಟ್‌ʼ ( ಇದು ಮುಂದೆ ಡೇಲಿ ಟಿಲಿಗ್ರಾಫ್‌ʼನಲ್ಲಿ ಲೀನವಾಯಿತು) ಈ ನಿಧಿಯ ಸಂಗ್ರಹದ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿತು.  ಅದೇ ಪತ್ರಿಕೆ ಅವನನ್ನು “ಭಾರತವನ್ನು ರಕ್ಷಿಸಿದ ವ್ಯಕ್ತಿ” ಎಂದು ಕೊಂಡಾಡಿತು. ಡಯರ್‌ ಗೆ ಈ ರೀತಿ ನಿಧಿ ಸಂಗ್ರಹ ಮಾಡಿದ್ದನ್ನು ಅತ್ಯಂತ ಪ್ರಬಲವಾಗಿ ವಿರೋಧಿಸಿದ ಭಾರತೀಯ ಲೇಖಕ ಎಂದರೆ ರವೀಂದ್ರನಾಥ ಟ್ಯಾಗೋರ್.‌  ಹತ್ಯಾಕಾಂಡಕ್ಕೆ ಒಳಗಾದವರ ಕುಟುಂಬಗಳಿಗೆ ಸರಿಯಾದ ಪರಿಹಾರವೇ ಇನ್ನೂ ಸಿಕ್ಕಿರದಿದ್ದಾಗ ಹತ್ಯಾಕಾಂಡ ಮಾಡಿದ ವ್ಯಕ್ತಿಗೆ ಈ ರೀತಿ ನಿಧಿ ಸಂಗ್ರಹಿಸಿಕೊಡುವ ಕಾರ್ಯವನ್ನು ಅವರು ಪ್ರಬಲವಾಗಿ ವಿರೋಧಿಸಿದರು. ಕೊನೆಗೂ ಬಾಧಿತರಿಗೆ ೫೦೦ ರೂ ಗಳ ಚಿಕ್ಕ ಪರಿಹಾರ ದೊರೆಯಿತು!

ಹೀಗೆ ಉರಿದು ಮೆರೆದ ಈ ಡೈಯರ್‌ ನ ಕೊನೆಯ ಕಾಲವೇನೂ ಸರಿಯಿರಲಿಲ್ಲ. ಪಾರ್ಶ್ವವಾಯುವಿಗೆ ತುತ್ತಾಗಿ ಈ ಘಟನೆ ನಡೆದ ಎಂಟು ವರ್ಷಕ್ಕೆ ೧೯೨೭ ರಲ್ಲಿ ತನ್ನ ೬೩ನೇ ವಯಸ್ಸಿನಲ್ಲಿ ಸತ್ತುಹೋದ. ಸಾಯುವಾಗ ತನ್ನ ಸಾವಿನ ಹಾಸಿಗೆಯ ಮೇಲೆ ಅವನು  ಈ ಘಟನೆಯನ್ನು ಕುರಿತು, “ಕೆಲವರು ನಾನು ಮಾಡಿದ್ದು ಸರಿ ಎನ್ನುತ್ತಾರೆ; ಮತ್ತೆ ಕೆಲವರು ತಪ್ಪು ಎನ್ನುತ್ತಾರೆ ಆದರೆ ನಾನು ಮಾಡಿದ್ದು ತಪ್ಪೋ ಸರಿಯೋ ಎಂಬುದನ್ನು ನನ್ನ ನಿರ್ಮಾಪಕನಿಂದ (ಮೇಕರ್)‌ ತಿಳಿದುಕೊಳ್ಳಬಯಸುತ್ತೇನೆ” ಎನ್ನುತ್ತಿದ್ದನೆಂಬ ಮಾತು ಜನಜನಿತವಾಗಿದೆ.

***

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಸದಾ ಉರಿಯುವ ಬೆಂಕಿಯಂತೆ ದಾಖಲಾಗಿರುವ ಈ ರಕ್ತಸಿಕ್ತ ಘಟನೆ ಮೈ ಜುಂ ಅನ್ನಿಸುವಂಥದ್ದು.   ಘಟನೆ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ

 ಧಾರ್ಮಿಕವಾಗಿ ಅಷ್ಟೇನು ನಿಷ್ಠಾವಂತ ಭಕ್ತನಲ್ಲದ ನಾನು ಸುಮ್ಮನೆ ಸುವರ್ಣಮಂದಿರದ ಒಳಗೆ ಹೋಗಿ ಸುತ್ತಾಡಿ ಒಂದಿಷ್ಟುಹೊತ್ತು ಕುಳಿತೆದ್ದು ಸೀದಾ ಜಲಿಯನ್‌ ವಾಲಾಭಾಗ್‌ ಗೆ ಬಂದೆ. ಒಮ್ಮೆಲೆ ಇತಿಹಾಸದ ಘಟನೆ ನೆನಪಿಗೆ ಬಂದು ಮೈ ಬಿಸಿ ಆದದ್ದು ಸುಳ್ಳಲ್ಲ. ಹುತಾತ್ಮ ಯೋಧರಿಗೆ ಯೋಗ್ಯ ಗೌರವ ಸಲ್ಲಿಸುವ ರೀತಿಯಲ್ಲಿ ಸ್ಥಳವನ್ನು ಅಭಿವೃದ್ಧಿ ಪಡಿಸಿದ್ದು ಕಂಡು ಸಮಾಧಾನವಾಯಿತು.

ಸುಮಾರು ನಾಲ್ಕು ಫೋಟೋ ಮತ್ತು ವಿಡಿಯೋ ಗ್ಯಾಲರಿಗಳನ್ನು ಮಾಡಿ ಅಲ್ಲಿನ ಚಿತ್ರಗಳು ಕಾಲದ ಪತ್ರಿಕಾ ಸುದ್ದಿಗಳು ಘಟನೆ ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಒಂದು ವಿಡಿಯೋ ಥೇಟರ್ ಕೂಡ ಮಾಡಿ ಘಟನೆಯನ್ನು ತೋರಿಸಿ ಜನರಿಗೆ ದೇಶಾಭಿಮಾನ ಹುಟ್ಟುವಂತೆ ಮಾಡಿದ್ದಾರೆ.

                                               ಡೈಯರ್ ಗುಂಡು

ಹಾರಿಸತೊಡಗಿದಾಗ ಗುಂಡಿಗೆ ಬಲಿ ಆಗುವುದಕ್ಕಿಂತ ಅಲ್ಲಿದ್ದ ಬಾವಿಯೊಂದಕ್ಕೆ ಹಾರಿ ಪ್ರಾಣಬಿಡುವುದನ್ನು ಆಯ್ಕೆ ಮಾಡಿಕೊಂಡ ದೇಶಭಕ್ತರ ಕರುಳು ಕಿವುಚುವ ದೃಶ್ಯ ಕಣ್ಮುಂದೆ ಬರುವಂತೆ ಬಾವಿಯನ್ನೂ ಅಭಿವೃದ್ಧಿಪಡಿಸಿ ನೋಡಲು ವ್ಯವಸ್ಥೆ ಮಾಡಲಾಗಿದೆ.

ಹುತಾತ್ಮರ ದೊಡ್ಡ ಸ್ಮಾರಕ ನಿರ್ಮಿಸಿ ಯುವಜನತೆ ಪ್ರೇರಣೆ ಪಡೆಯುವಂತೆ ಮಾಡಿದ್ದಾರೆ. ಅನೇಕ ಹುತಾತ್ಮರ ಕೆಚ್ಚೆದೆಯ ಮಾತುಗಳನ್ನು ಆಳೆತ್ತರದ ಕಲ್ಲು ಕಂಬಗಳನ್ನು ನಿಲ್ಲಿಸಿ ಅವುಗಳ ಮೇಲೆ ಕೆತ್ತಿದ್ದಾರೆ. ಆರದ ಅಮರಜ್ಯೋತಿಯೊಂದನ್ನು ಇರಿಸಿ ನಾವು ಹುತಾತ್ಮ ಯೋಧರಿಗೆ ನಮ್ಮ ಶ್ರದ್ಧಾಪೂರ್ವಕ ಗೌರವ ಸಲ್ಲಿಸುವ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ.

ಒಟ್ಟಿನಲ್ಲಿ ಹುತಾತ್ಮ ದೇಶಭಕ್ತರಿಗೆ ಗರಿಷ್ಠ ಪ್ರಮಾಣದಲ್ಲಿ ಯಾವರೀತಿ ಗೌರವ ಸಲ್ಲಿಸಬಹುದೋ ಎಲ್ಲ ಕೆಲಸಗಳನ್ನೂ ಇಲ್ಲಿ ಮಾಡಿದ್ದಾರೆ ಎನ್ನಬಹುದು.  ಏಪ್ರಿಲ್‌ ಹದಿಮೂರರ ಈ ದಿನ ಈ ಕರಾಳ ಘಟನೆಯನ್ನು ನೆನಪುಮಾಡಿಕೊಳ್ಳುವ ದಿನವಾಗಿ ಈ ಟಿಪ್ಪಣಿ. ಹಾಗೂ ಕೆಲವು ಫೋಟೋಗಳು ತಮಗಾಗಿ. ಪಂಜಾಬಿನ ಪ್ರವಾಸಕ್ಕೆ ಹೋಗುವವರು ತಪ್ಪದೆ ಈ ಸ್ಥಳಕ್ಕೆ ಹೋಗಿಬನ್ನಿ.

ರಾಬು

೧೩-೦೪-೨೦೨೪

 

Sunday, June 4, 2023

ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್..


ಈ ಪುಸ್ತಕವನ್ನು ಪಡೆಯುವ ಬಗೆ

ಇದು ನನ್ನ ಹೊಸ ಪುಸ್ತಕ. ಭಾರತ ಜನತೆಯಲ್ಲಿ ಅದರಲ್ಲಿಯೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಅವರು ಮತಮೌಢ್ಯಗಳಿಂದ ದೂರವಾಗಿ ಅವರಿವರ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಉದ್ದೇಶದ ಒಟ್ಟು 30 ಲೇಖನಗಳು ಇದರಲ್ಲಿವೆ. ಈ ಪುಸ್ತಕವು 176 ಪುಟಗಳನ್ನು ಹೊಂದಿದ್ದು 180 ರೂ ಮುಖಬೆಲೆ ಹೊಂದಿದೆ. ವೈಯಕ್ತಿಕ ಬಳಕೆಗಾಗಿ ಅಂಚೆ ಮೂಲಕ ತರಿಸಿಕೊಳ್ಳುವವರು ಅಂಚೆ ವೆಚ್ಚ ರೂ. 20ನ್ನು ಸೇರಿಸಿ ಒಟ್ಟು ರೂ. 200 ನ್ನು ನನ್ನ 9481504080 (Rajendra Buradikatti) ನಂಬರಿಗೆ PhonePay ಮಾಡಿ ಅದರ ಸ್ಕ್ರೀನ್ ಶಾಟ್ ಮತ್ತು ತಮ್ಮ ವಿಳಾಸವನ್ನು ವಾಟ್ಸಪ್ ಮೂಲಕ 8310938434 ನಂಬರಿಗೆ ಕಳಿಸಿದರೆ ನೋಂದಾಯಿತ ಅಂಚೆ ಮೂಲಕ ಪುಸ್ತಕವನ್ನು ಕಳಿಸಿಕೊಡಲಾಗುವುದು.

ಪುಸ್ತಕ ಮಾರಾಟಗಾರರು ಸಗಟು ಖರೀದಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ – 577204 ದೂ:9449886390, 9916197291 email: geethanjalipusthakaprakashana@gmail.com

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು

ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು


ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು  ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ.ಮಾಡಿ ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ ಪಿ.ಹೆಚ್.ಡಿ ಮಹಾಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದರು. ನಂತರ ಹೈಸ್ಕೂಲಿಗೆ ಬಡ್ತಿ ಹೊಂದಿದರು. ಪುಸ್ತಕಗಳನ್ನು ಪ್ರಕಟಿಸಿದ್ದು ಕಡಿಮೆ. 'ಕೆಮ್ಮುಗಿಲು' 'ಗುಲಾಬಿ ಮುಳ್ಳು' ಎಂಬ ಎರಡು ಕವನ ಸಂಕಲನಗಳು, 'ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು' (ಪಿಹೆಚ್ ಡಿ ಮಹಾಪ್ರಬಂಧ) ಮತ್ತು ಇತ್ತೀಚೆಗೆ ಪ್ರಕಟಿಸಿದ 'ಕಪ್ಪು ಬುರ್ಖಾ ಮತ್ತು ಕೇಸರಿ ಶಾಲ್ ' ಎಂಬ ಲೇಖನ ಸಂಕಲನ. ಇವಿಷ್ಟೇ ಇವರ ಕೃತಿಗಳು.

         ಬುದ್ಧಿ ಬಂದಾಗಿನಿಂದ ವೈಚಾರಿಕ ಚಿಂತನೆಯಲ್ಲಿ ನಂಬಿಕೆಯಿಟ್ಟು ಆ ಪ್ರಕಾರ ನಡೆಯುತ್ತಾ ಬಂದವರು ರಾಜೇಂದ್ರ ಬುರಡಿಕಟ್ಟಿಯವರು. ತಳಬುಡವಿಲ್ಲದ ಮೂಢನಂಬಿಕೆಗಳನ್ನು ಬೆಳೆಸಿಕೊಳ್ಳುವುದರಿಂದ ಸಾಮಾಜಿಕ ಪ್ರಗತಿ  ಕುಂಠಿತವಾಗುತ್ತದೆ ಎಂದು ಹೇಳುತ್ತಲೇ ಬಂದವರು. ಪುರೋಹಿತಶಾಹಿಯಿಂದ ಜನರಿಗಾಗುವ ಅನ್ಯಾಯವನ್ನು ಖಂಡಿಸುವ ನಿಟ್ಟಿನಲ್ಲಿ ಕುವೆಂಪು ಪ್ರಣೀತ 'ಮಂತ್ರಮಾಂಗಲ್ಯ' ರೀತಿಯಲ್ಲಿ ಶಶಿಕಲಾ ಅವರನ್ನು ಮದುವೆಯಾದವರು. ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳಿಗೆ ಯಾವುದೇ ಮುಹೂರ್ತ-ಗಳಿಗೆಗಳನ್ನು ನೋಡುವ ಅಗತ್ಯವಿಲ್ಲ, ಬದಲಾಗಿ ಗುರು-ಹಿರಿಯರ, ಬಂಧು-ಮಿತ್ರರ ಶುಭಹಾರೈಕೆಗಳಿದ್ದರೆ ಸಾಕು ಎಂದು ವಾದಿಸಿ ಆ ಪ್ರಕಾರ ಮಾಡಿ  ಸಾಧಿಸಿದವರು. ಅವರು ಬರೆದು ಕೃತಿಗಳೂ ಇವೇ ಆದರ್ಶವನ್ನು ಹಿಡಿದಿವೆ.

   ಪ್ರಸ್ತುತ ' ಕಪ್ಪುಬುರ್ಖಾ ಮತ್ತು ಕೇಸರಿ ಶಾಲು ' ಕೃತಿಯಲ್ಲಿ ಮೂವತ್ತು ಲೇಖನಗಳಿವೆ. ಎಲ್ಲವೂ ವೈಚಾರಿಕ ಚಿಂತನೆಯ ಮೇಲೆ ಒತ್ತು ಹಾಕಿದ ಲೇಖನಗಳು. ವರ್ತಮಾನದ ಘಟನೆಗಳಿಗೆ ಸಂಬಂಧಿಸಿ ಸಮಯೋಚಿತವಾಗಿ ಸರಿ-ತಪ್ಪುಗಳ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು, ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು ಇಲ್ಲಿವೆ. ಏಳೆಂಟು ಲೇಖನಗಳಷ್ಟೇ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದವು ಒಂದೆರಡು ಪುಟಗಳ ಪುಟ್ಟ ಬರಹಗಳು.

   ಮುಖ್ಯವಾಗಿ ಇಲ್ಲಿ ಹಲವು ಲೇಖನಗಳಲ್ಲಿ ತಮ್ಮ ಧರ್ಮದ ಸಿದ್ಧಾಂತಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಹಿಂಸೆ-ದೊಂಬಿಗಿಳಿದು ಸಾಮಾಜಿಕ ಶಾಂತಿಯನ್ನು ಹಾಳುಗೆಡಹುವ ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಕ್ರೈಸ್ತರಾಗಲಿ- ಎಲ್ಲರ ಅಜ್ಞಾನದ ಬಗ್ಗೆ ಲೇಖಕರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬರ ಧಾರ್ಮಿಕ  ನಂಬಿಕೆಗಳನ್ನು ಹೀಗಳೆದು ಗೇಲಿ ಮಾಡುವುದು ಯಾವ ಧರ್ಮದ ಲಕ್ಷಣವೂ ಅಲ್ಲವೆನ್ನುತ್ತಾರೆ.  ನಮ್ಮ ಧರ್ಮವೇ ಸರ್ವಶ್ರೇಷ್ಠ, ಅದು ಪ್ರಪಂಚದ ಎಲ್ಲರೂ ಅನುಸರಿಸುವ ಧರ್ಮವಾಗಬೇಕೆಂದು ಹೇಳುತ್ತಾ  ಅದಕ್ಕಾಗಿ ಹಿಂಸಾಮಾರ್ಗಕ್ಕಿಳಿಯುವುದು ಅಮಾನುಷ ಅನ್ನುತ್ತಾರೆ. ನಮ್ಮದೇ ಸರಿಯೆಂದು ವಾದಿಸುವವರು ಸ್ವಲ್ಪ ತಾಳ್ಮೆ ವಹಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ  ಕೊಡುತ್ತಾರೆ.  ಎಲ್ಲ ಧರ್ಮಗಳ ಅನುಯಾಯಿಗಳಲ್ಲೂ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡವರಿಂದಾಗಿ  ಒಳ್ಳೆಯ ಮನಸ್ಸಿನ ಮುಗ್ಧರು ತೊಂದರೆ ಅನುಭವಿಸುವಂತಾಗುತ್ತದೆ ಅನ್ನುತ್ತಾರೆ. ಈ ರೀತಿ ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಲೇಖಕರು ಎಲ್ಲ ಪ್ರಮುಖ  ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ನಿಷ್ಪಕ್ಷವಾಗಿ  ಅಲ್ಲಿಂದ  ಸಂಬಂಧಪಟ್ಟ ಸಾಲುಗಳನ್ನು  ಉದಾಹರಿಸುತ್ತಾರೆ. ಇದು ಅವರ ಸೂಕ್ಷ್ಮ ವಿವೇಚನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. 

    ಧರ್ಮ ಮಾತ್ರವಲ್ಲದೆ ಇಂದಿನ ಶಿಕ್ಷಣ ಕ್ರಮ, ಸಂಸ್ಕೃತಿ-ಕಲೆಗಳ ಬಗೆಗೂ ಇಲ್ಲಿ ಲೇಖನಗಳಿವೆ. ಅಲ್ಲಲ್ಲಿ ನಡೆದ ಘಟನೆಗಳನ್ನು ಉದಾಹರಣೆಯಾಗಿ ಕೊಡುತ್ತಾ ತಮ್ಮ ನಿಲುವುಗಳನ್ನು ಲೇಖಕರು ಮಂಡಿಸುತ್ತಾರೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಅನೇಕ ಉತ್ತಮ ಕೃತಿಗಳನ್ನು ಚೆನ್ನಾಗಿ ಓದಿಕೊಂಡ ಅವರು ಅಲ್ಲಿಂದ ಆಯ್ದ ಸಾಲುಗಳನ್ನು ಸಂದರ್ಭೋಚಿತವಾಗಿ ಉಲ್ಲೇಖಿಸುತ್ತಾರೆ.  ಲೇಖನಗಳಿಗೆ ಅವರು ಕೊಡುವ ಶೀರ್ಷಿಕೆಗಳು  ( ಒಂದಾಗಲು ಬಿಡದ 'ವಂದೇ ಮಾತರಂ',  ಮಂಗನಬ್ಯಾಟೆ ಮತ್ತು ಮಂಗಚೇಷ್ಟೆ,  ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ, ಖಾಲಿ ಕುರ್ಚಿ ಮತ್ತು ಪೋಲಿ ಪತ್ರಕರ್ತ,  ಮಂಗಳೂರಿನ ಕೆಂಪು ಮತ್ತು ಕಲಬುರ್ಗಿಯ ಕಂಪು ಇತ್ಯಾದಿ) ಆಕರ್ಷಕವಾಗಿದ್ದು ಗಮನ ಸೆಳೆಯುತ್ತವೆ. ದೋಷಮುಕ್ತ ವಾದ ಸರಳ ಸುಂದರ ಬರವಣಿಗೆಯ ಶೈಲಿಯು ಅವರ ಕೃತಿಗೆ ಮೆರುಗನ್ನೂ ಗಾಂಭೀರ್ಯವನ್ನೂ ಇತ್ತಿದೆ. 

- ಡಾ. ಪಾರ್ವತಿ ಜಿ. ಐತಾಳ್

ಲೇಖನವನ್ನುಅವಧಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿರಿ.

http://bitly.ws/G4TE



 ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದ ಬರಹಗಳು


ಕಳೆದ ಭಾನುವಾರ(21 -5- 2023 )ಶಿವಮೊಗ್ಗ ಹೊರವಲಯದ ರತ್ನಗಿರಿ ನಗರದಲ್ಲಿ ಒ0ದು ಖಾಸಗಿ ಕಾರ್ಯಕ್ರಮದ ಭಾಗವಾಗಿ ಪುಸ್ತಕ ವೊ0ದು ಬಿಡುಗಡೆಯಾಯಿತು.ಅದ್ಯಾಕೋ ಯಾವ ಮಾಧ್ಯಮಗಳಲ್ಲಿಯೂ ಅದು ಸುದ್ದಿಯಾಗಲೇ ಇಲ್ಲ.

.ಅ0ದು ಲೋಕಾರ್ಪಣೆಯಾದ ಕೃತಿ ನಮ್ಮ ನಡುವಿನ ಶಿಕ್ಷಕ ಪ್ರಗತಿಪರ ಚಿಂತಕ ಮತ್ತು ಲೇಖಕರಾದ ಡಾ.ರಾಜೇಂದ್ರ ಬುರಡಿಕಟ್ಟಿ ಅವರ ಕಪ್ಪು ಬುರ್ಖಾ ಮತ್ತು ಕೇಸರಿ ಶಾಲು ಎಂಬ ವೈಚಾರಿಕ ಲೇಖನಗಳ ಸಂಗ್ರಹ. ವಿಚಾರವಂತರ ಸಂಖ್ಯೆ ನಮ್ಮಲ್ಲಿ ಕಡಿಮೆ.ವೈಚಾರಿಕ ಸಾಹಿತ್ಯ ರಚನೆ ಓದು ಎಲ್ಲವೂ ಕಡಿಮೆಯೇ.ಇ0ಥ ಸಂದರ್ಭದಲ್ಲಿ ಬೆಳಕು ಕಾಣುತ್ತಿರುವ ಕೃತಿಯೊ0ದು ಅಜ್ಞಾತವಾಗಿ ಉಳಿಯಬಾರದೆ0ಬ ಕಾರಣಕ್ಕೆ ಬಿಡುಗಡೆಗೊಳಿಸಿದ ನಾನೇ ಬಿಡೆ ಬಿಟ್ಟು ಪುಸ್ತಕವನ್ನು ಸಂಕ್ಷಿಪ್ತವಾಗಿ ಇಲ್ಲಿ ಪರಿಚಯಿಸುತ್ತಿದ್ದೇನೆ.
ಮೂಲತ: ಕವಿಪ್ರತಿಭೆಯ ಬುರಡಿಕಟ್ಟಿಯವರ ಎರಡನೆಯ ಗದ್ಯಕೃತಿ ಇದು .ಆಧುನಿಕ ಕನ್ನಡದ ಹತ್ತು ಮಹಾಕಾವ್ಯಗಳ ಕುರಿತು ಮೌಲಿಕ ಸಂಶೋಧನೆ ನಡೆಸಿ ಪ್ರಕಟಗೊಳಿಸಿದ ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು ಎ0ಬುದು ಮೊದಲ ಬೃಹದ್ಗದ್ಯಗ್ರಂಥ.
ಕಪ್ಪುಬೂರ್ಖಾ ಮತ್ತು ಕೇಸರಿ ಶಾಲು ಎ0ಬ ಪುಸ್ತಕದ ಹೆಸರು ನಮ್ಮ ಸಮಾಜದ ಸದ್ಯದ ವಿದ್ಯಮಾನಗಳ ನಡುವೆ ಧಾರ್ಮಿಕ ಸಂವಾದ,ಸಂಘರ್ಷಕ್ಕೆ ಆಹ್ವಾನ ನೀಡುವ ಅಥವ ಪ್ರಚೋದಿಸು ಬಗೆಯಲ್ಲಿದೆ ಎನಿಸಿದರೂ ವಾಸ್ತವದಲ್ಲಿ ಹಾಗಿಲ್ಲ.ಪುಸ್ತಕದ ಕೊನೆಯಲ್ಲಿರುವ ಈ ಪ್ರಬಂಧ ಶೈಕ್ಷಣಿಕ ದೃಷ್ಟಿಯಿಂದ ವಸ್ತುವನ್ನು ವಿಶ್ಲೇಷಿಸುತ್ತದೆ.ಭಿನ್ನ ಬಗೆಯ ವಸ್ತ್ರಗಳನ್ನು ತೊಟ್ಟು ವಿದ್ಯಾರ್ಥಿಗಳು ತರಗತಿಯಲ್ಲಿ ಕೂರುವುದರಿ0ದ ಪಾಠ ಪ್ರವಚನಕ್ಕೆ ಕಲಿಕೆಗೆ ಆಗುವ ಅಡೆತಡೆಗಳ ಕಡೆ ಬೆಳಕು ಚೆಲ್ಲುತ್ತದೆ.ಇಲ್ಲಿ ಪೋಷಕರ ಪಾತ್ರವನ್ನು ಗುರುತಿಸುತ್ತದೆ.

ಸುಮಾರು ಮೂವತ್ತು ಸಣ್ಣ ದೊಡ್ಡ ಲೇಖನಗಳನ್ನೊಳಗೊ0ಡ ಈ ವೈಚಾರಿಕ ಪ್ರಬಂಧ ಸಂಕಲನದ ಇತರ ಬರಹಗಳು ರಾಜಕಾರಣಿಗಳ ಧಾರ್ಮಿಕ ನಾಯಕರ ಸಾಹಿತಿಗಳ ಸಾ0ದರ್ಭಿಕ ಹೇಳಿಕೆ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಗಳ ರೂಪದಲ್ಲಿ ಹೊಮ್ಮಿಬಂದವು.ಅವು ಸಾರ್ವಕಾಲಿಕ ಮತ್ತುಸಾರ್ವತ್ರಿಕವಾಗಿಯೂ ಸಲ್ಲುತ್ತವೆ.ಇವು ಸಮಾಜದ ಮುಖ್ಯವಾಹಿನಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಪ್ರತಿಪಾದಿಸುತ್ತ ವಾದರೂ ಅವೆಲ್ಲೂ ಆವೇಶವನ್ನೊಳಗೊ0ಡ ಕೆಳಮಟ್ಟದ ಕೆಟ್ಟ ಭಾಷೆಯನ್ನು ಬಳಸಿದ ಸಂಘರ್ಷವನ್ನು ಪ್ರೇರೇಪಿಸುವ ಬರಹಗಳಾಗುವುದಿಲ್ಲ.ಬದಲಿಗೆ ಶುದ್ಧ ಸುಂದರ ನೇರ ಸರಳ ಸ್ಪಷ್ಟ ತರ್ಕಬದ್ಧ ವಾದಸರಣಿಯಿ0ದ ವಿಚಾರವನ್ನು ಮನದಟ್ಟು ಮೂಡಿಸುತ್ತವೆ.ಅವರೇ ಹೇಳಿಕೊಂಡಿರುವಂತೆ ಬುರಡಿಕಟ್ಟಿಯವರದು ಮನವರಿಕೆಯ ತಂತ್ರ(convincing approch) ವಿಷಯ ವಿರೋಧಿಗಳಿಗೂ ಓದೋದುತ್ತ ಅಹುದಹುದೆನಿಸಿಬಿಡುವಂತ ನಿಶ್ಕಲ್ಮಷ ಸಮರ್ಥ ಶೈಲಿ.ಅನುಭವವೇದ್ಯ ಘಟನೆಗಳ ಮಾಹಿತಿ ಸಾಹಿತಿ ದಾರ್ಶನಿಕರ ಸಾಲುಗಳ ಉದಾಹರಣೆಗಳನ್ನು ನಡು ನಡುವೆ ಹೊ0ದಿ ಹೃದ್ಯವಾಗುವ ಬರಹ.ಈಚಿನ ದಿನಗಳಲ್ಲಿ ನಮ್ಮ ಶೈಕ್ಷಣಿಕ ಧಾರ್ಮಿಕ ರಾಜಕೀಯ ನೆಮ್ಮದಿಯನ್ನು ಕಲಕಿದ ಬಹುತೇಕ ಸಂದರ್ಭಗಳು ಈ ಕೃತಿಯಲ್ಲಿ ಪ್ರಸ್ತಾಪಿತವಾಗಿವೆ.ಧ್ವನಿಪೂರ್ಣ ಶೀರ್ಷಿಕೆಗಳು ತಾವೇ ಠಂಕಿಸಿದ ಕೆಲವು ನುಡಿಗಟ್ಟುಗಳಿಂದ ಕೂಡಿ ಪ್ರಖರ ವೈಚಾರಿಕತೆಯನ್ನೊಳಗೊ0ಡೂ ಬುದ್ಧಿಗೆ ಭಾರವೆನಿಸದೆ ಇಲ್ಲಿನ ಬರಹಗಳು ಸರಾಗವಾಗಿ ಓದಿಸಿಕೊ0ಡು ಹೋಗುತ್ತವೆ.

ಒಟ್ಟಿನಲ್ಲಿ ಪುಸ್ತಕದ ಬರಹಗಳ ಉದ್ದೇಶ ಸಮಾಜದ ಸಾಮರಸ್ಯ ,ಶೈಕ್ಷಣಿಕ ಉನ್ನತಿ ,ಮೌಢ್ಯದ ವಿರುದ್ಧ ಹೋರಾಟ. ಲೇಖಕರ ಧ್ಯೇಯ ದೋರಣೆಯ ದ್ಯೋತಕವಾಗಿ ಪುಸ್ತಕದ ಹಿಂಭಾಗ ಅಚ್ಚಾಗಿರುವ ಒ0ದು ವಾಕ್ಯವನ್ನು ಉಲ್ಲೇಖಿಸಿ ಮುಗಿಸುತ್ತೇನೆ.
" ಸೂರ್ಯನಿಗೋ ಚಂದ್ರನಿಗೋ ಗ್ರಹಣ ಹಿಡಿದರೆ ಅದು ಅಸಹಜವೂ ಅಲ್ಲ ಅಪಾಯಕಾರಿಯೂ ಅಲ್ಲ.ಆದರೆ ಮನುಷ್ಯನ ಮನಸ್ಸಿಗೆ ಗ್ರಹಣ ಹಿಡಿದುಬಿಟ್ಟರೆ ಅದು ಅಸಹಜ ಮಾತ್ರವಲ್ಲ ಅಪಾಯಕಾರಿಯೂ ಹೌದು."
ಕನ್ನಡ ವೈಚಾರಿಕ ಸಾಹಿತ್ಯರಾಶಿಗೆ ಇದೊಂದು ಒಳ್ಳೆಯ ಸೇರ್ಪಡೆ.ರಚನಾಕಾರ ರಾಜೇಂದ್ರ ಬುರಡಿಕಟ್ಟಿ ಅವರಿಗೆ ಅಭಿನಂದನೆಗಳು.
ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನದವ ರು ಅಚ್ಚುಕಟ್ಟಾಗಿ ಪುಸ್ತಕ ಹೊರತಂದಿದ್ದಾರೆ.ಉಭಯತ್ರರನ್ನೂ ಪ್ರೋತ್ಸಾಹಿಸೋಣ ವೈಚಾರಿಕತೆಯನ್ನು ಉಳಿಸಿ ಬೆಳೆಸೋಣ.
ಡಾ.ಜೆ.ಕೆ.ರಮೇಶ.

Monday, February 27, 2023

ರಾಷ್ಟ್ರೀಯವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:


 







ರಾಷ್ಟ್ರೀಯವಿಜ್ಞಾನ ದಿನಕ್ಕೆ ಕುವೆಂಪು ಸಂದೇಶ:

ಸ್ನೇಹಿತರೆ, ಮತ್ತೊಂದು ವಿಜ್ಞಾನದ ದಿನದ ಆಚರಣೆಯ ಹೊಸ್ತಿಲಲ್ಲಿ ನಾವಿದ್ದೇವೆ.  ಸುಮಾರು ನೂರು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಆಡಿದ ಈ ಮಾತುಗಳನ್ನು ಗಮನಿಸಿ. ಇಂದೋ ನಿನ್ನೆಯೋ ಆಡಿದ ಮಾತುಗಳಂತೆ ಇವೆ. ಕುವೆಂಪು ಅವರ ಈ ಮಾತುಗಳು ಅವರ ಒಂದು ಪುಸ್ತಕ ಓದದಿದ್ದರೂ ಅವರ ಭಜನೆಮಾಡುವ ನಮ್ಮ ರಾಜಕಾರಣಿಗಳ ಅದಕ್ಕಿಂತಲೂ ಮುಖ್ಯವಾಗಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಗುರುತರ ಜವಾಬ್ದಾರಿ ಹೊತ್ತಿರುವ ವಿವಿಧ ಹಂತದ ಶಿಕ್ಷಕರ ಕಣ್ಣುತೆರೆಸಲಿ. ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುವ ಬದಲು ಅಥವಾ ಜೊತೆಗೆ ತಮ್ಮ ಅಜ್ಞಾನ ಮತ್ತು ಮೌಢ್ಯವನ್ನು ಧಾರೆಯೆರೆದು ಅವರನ್ನು ಅಂಧಕಾರದ ಕೂಪಕ್ಕೆ ತಳ್ಳುವ ಪಾಪಕಾರ್ಯದಲ್ಲಿ ಮಗ್ನರಾಗಿರುವ ಶಿಕ್ಷಕರನ್ನು ಅವರ ಪಾಪಕಾರ್ಯದಿಂದ ಬಿಡಿಸಿ ವಿಚಾರವಂತರನ್ನಾಗಿ ಮಾಡಿ ಅವರು ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಕಾರ್ಯದಲ್ಲಿ ತೊಡಗುವಂತೆ ಕುವೆಂಪು ಅವರ ಈ ನುಡಿಗಳು ಮಾಡಲಿ… (ರಾಬು, 27-02-2023)

*****

·         “ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಙಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೇ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರೆದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.”

·         “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆಡ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೇ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ. ವಿಜ್ಞಾನದ ಪಾಠ ಹೇಳಿಕೊಡುವ ಅಧ್ಯಾಪಕನೆ ತನ್ನ ಸ್ವಂತ ಬದುಕಿನಲ್ಲಿ ರಾಹುಕಾಲ ಪಂಚಾಂಗ ವಾರಭವಿಷ್ಯ ಇತ್ಯಾದಿ ಮೂಢ ನಂಬಿಕೆಗಳಿಂದ ಮೂರುಹೊತ್ತೂ ಮತ ಮೂರ್ಖನಾಗಿದ್ದರೆ ವಿದ್ಯಾರ್ಥಿಗಳಿಗೆ ಹೇಗೆತಾನೆ ಸಿದ್ಧಿಸೀತು ವಿಚಾರದೃಷ್ಟಿ.”


·  “"ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ.”

·         ಮೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೌಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ.

·         ದೇವಾಲಯಗಳಿಗೆ ಹೋಗುವುದನ್ನು ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು.

*****

(ಮೇಲಿನ ಮಾತುಗಳು ರಾಷ್ಟ್ರಕವಿ ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪ್ರಸಿದ್ಧ ಉಪನ್ಯಾಸ ಮತ್ತು ಅದರ ಮುದ್ರಣರೂಪಕ ಕೃತಿಗೆ ಅವರು ಬರೆದ ಮುನ್ನುಡಿಯಿಂದ ಆಯ್ದಭಾಗಗಳಾಗಿವೆ. ಆಯ್ಕೆಮಾಡಿ ಇಲ್ಲಿ ಕೊಟ್ಟಿದ್ದು: ಡಾ ರಾಜೇಂದ್ರ ಬುರಡಿಕಟ್ಟಿ)