Sunday, July 23, 2017

ಮಂಗಳೂರಿನ ಕೆಂಪು ಮತ್ತು ಕಲಬುರಗಿಯ ಕಂಪು

ಮಂಗಳೂರಿನ ಕೆಂಪು ಮತ್ತು ಕಲಬುರಗಿಯ ಕಂಪು

 “ಸೂಜಿ ಚುಚ್ಚಿದರೆ ಸಾಕು ಪೂತ್ಕರಿಸುವ ಘಟಸರ್ಪದ
ಕೋರೆಯಿಂದ ವಿಷದ ಚಿಲುಮೆ ಚಿಮ್ಮುತ್ತಿದೆ

ನಮ್ಮ ಕುವೆಂಪು ಕಾರಂತರ ಸಮಕಾಲೀನರಾಗಿದ್ದ ಇಪ್ಪತ್ತನೆಯ ಶತಮಾನದ ಉರ್ದು ಸಾಹಿತ್ಯದ ಮೇರುಪ್ರತಿಭೆ ಫೈಜ್ ಅಹ್ಮದ್ ಫೈಜ್ ಅವರ ಕವಿತೆಯೊಂದರ ಎರಡು ಸಾಲುಗಳಿವು. ಪಾಕಿಸ್ತಾನದಿಂದ ಬೇರ್ಪಡೆಯಾದ ಪೂರ್ವಬಂಗಾಳವು `ಬಾಂಗ್ಲಾದೇಶ’ವಾಗಿ ಉದಯವಾಗುವ ಕಾಲಘಟ್ಟದಲ್ಲಿ ಅಲ್ಲಿನ ಪರಿಸ್ಥಿತಿಯನ್ನೂ ಜನರ ಮನಸ್ಥಿತಿಯನ್ನೂ ಅನುಭವಿಸಿ ಬರೆದ ಪದ್ಯವೊಂದರ ಈ ಸಾಲುಗಳು (ಅನು:ಬಾಗೇಶ್ರೀ) ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಈಗಿನ ಪರಿಸ್ಥಿತಿ ಮತ್ತು ಅಲ್ಲಿನ ಕೆಲವರ ಮನಸ್ಥಿತಿಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತವೆ. ಒಂದು ಕಾಲದಲ್ಲಿ ದಕ್ಷಿಣಕನ್ನಡ ಎಂದರೆ ಅದರ ಹೆಸರಿನಲ್ಲಿಯೇ ಅಡಕವಾಗಿರುವ `ಕನ್ನಡ’ದ ಕಾರಣಕ್ಕೋ ವಿಶಾಲವಾದ ಕಡಲಿನ ಕಾರಣಕ್ಕೋ ನಮ್ಮೆಲ್ಲರಿಗೂ ಒಂದು ಆಕರ್ಷಣೆಯಾಗಿತ್ತು. ಇಂದು ಆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ವಾಕರಿಕೆ ಹಾಗನ್ನುವುದಕ್ಕಿಂತ ಹೆದರಿಕೆಯಾಗುತ್ತಿದೆ. ಘಟ್ಟ ಇಳಿಯಲು ಖುಷಿಪಡುತ್ತಿದ್ದ ನಾವೆಲ್ಲ ಇಳಿದರೆ ಮೇಲಕ್ಕೆ ಸುರಕ್ಷಿತವಾಗಿ ಬರುತ್ತೇವೋ ಇಲ್ಲವೋ ಎಂದು ಆತಂಕಪಡುವಂತಾಗಿದೆ.

ಇದೇ ಹೊತ್ತಿನಲ್ಲಿ ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಲಾವಿದ ಮಂಡ್ಯ ರಮೇಶ್ ಅವರು `ದಕ್ಷಿಣಕನ್ನಡ ಜಿಲ್ಲೆಗೆ ಕಲಬುರಗಿ ಜಿಲ್ಲೆ ಮಾದರಿಯಾಗಬೇಕು’ ಎಂದು ಹೇಳಿರುವುದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಸಾಮಾನ್ಯ ಜನರ ನೆಮ್ಮದಿಯನ್ನು ಹಾಳುಮಾಡಿರುವ ಕೋಮಗಲಭೆಗಳ ಹಿನ್ನಲೆಯಲ್ಲಿಯೇ ಅವರು ಈ ಮಾತನ್ನು ಆಡಿದ್ದಾರೆ ಎಂಬುದು ಮೇಲುನೋಟಕ್ಕೇ ತಿಳಿಯುವ ಸಂಗತಿ. ಬಹಳಷ್ಟು ವಿಷಯದಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಮುಂದುವರೆದ ಜಿಲ್ಲೆಯೆಂದೂ ಇತರ ಜಿಲ್ಲೆಗಳಿಗೆ ಮಾದರಿ ಎಂದೂ ಹೇಳಲಾಗುತ್ತದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ, ಸಾಕ್ಷರತೆ, ಸ್ವಚ್ಚತೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಹೀಗೆ ಕೆಲವನ್ನು ಹೆಸರಿಸಬಹುದು. ಕಲಬುರಗಿಯನ್ನು ಇಂತಹ ವಿಷಯಗಳಲ್ಲಿ ಮಾದರಿ ಎಂದು ತೋರಿಸಿರುವುದು ಇಲ್ಲ ಎನ್ನಬಹುದಾದಷ್ಟು ಕಡಿಮೆ ಎಂದೇ ಹೇಳಬೇಕು. ಬಹಳಷ್ಟು ವಿಷಯಗಳಲ್ಲಿ `ಹಿಂದುಳಿದ’ ಎಂದೇ ಸಂಬೋಧಿಸಲ್ಪಡುವ ಈ ಜಿಲ್ಲೆ `ಮುಂದುವರಿದ’ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಗೆ `ಕೋಮುಸಾಮರಸ್ಯ’ದ ಬಹುಮುಖ್ಯವಾದ ಒಂದು ವಿಷಯದಲ್ಲಿ ಬುದ್ದಿಹೇಳುವ ಹಂತದಷ್ಟು ಎತ್ತರದಲ್ಲಿದೆ ಎಂದು ಈ ಕಲಾವಿದ ಭಾವಿಸಿರುವುದು ಸರಿಯಾಗಿಯೇ ಇದೆ ಅನಿಸುತ್ತದೆ.

ಮೇಲ್ನೋಟಕ್ಕೆ ಇದು ಎರಡು ಜಿಲ್ಲೆಗಳ ಹೋಲಿಕೆಯಾಗಿ ಕಂಡರೂ ವಾಸ್ತವದಲ್ಲಿ ಇದು ಎರಡು ಭೂಪ್ರದೇಶಗಳ ಹೋಲಿಕೆಯೆಂದು ಅನಿಸುತ್ತದೆ. ಇಲ್ಲಿ ಕಲಬುರಗಿ ಅಂದರೆ ಇಡೀ `ಕಲ್ಯಾಣ ಕರ್ನಾಟಕ’ ಎಂದೂ ದಕ್ಷಿಣಕನ್ನಡ ಎಂದರೆ `ಕರಾವಳಿ ಕರ್ನಾಟಕ’ ಎಂದೂ ಇದನ್ನು ವಿಸ್ತರಿಸಿಕೊಂಡು ಸದ್ಯದ ವಿದ್ಯಮಾನವನ್ನು ಚರ್ಚಿಸುವ ಅನುಕೂಲತೆಗಳಿವೆ. ಯಾಕೆ ಈ ಕಲ್ಯಾಣ ಕರ್ನಾಟಕವು ಕೋಮುಸೌಹಾರ್ದತೆಯ ವಿಷಯದಲ್ಲಿ ಕರಾವಳಿ ಕರ್ನಾಟಕಕ್ಕೆ ಬುದ್ಧಿಕಲಿಸುವ ಹಂತದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಇದರಿಂದ ಸಾಧ್ಯವಾಗುತ್ತದೆ. ಅಂತಹ ಪರಿಶೀಲನಾಪ್ರಯತ್ನ ಈ ಲೇಖನದ ಉದ್ದೇಶ.

ಈ ಮೊದಲೇ ಹೇಳಿದಂತೆ ದಕ್ಷಿಣಕನ್ನಡ ಜಿಲ್ಲೆ ವರ್ತಮಾನದಲ್ಲಿ ಮಾತ್ರವಲ್ಲ ಹಿಂದಿನಿಂದಲೂ ಹಲವು ವಿಷಯಗಳಲ್ಲಿ ನಾಡಿನ ಗಮನ ಸೆಳೆದ ಜಿಲ್ಲೆ. ಆದರೆ ಈ ಗಮನ ಸೆಳೆಯುವಿಕೆಯ ಕಾರಣಗಳು ಈಗ ನಕಾರಾತ್ಮಕವಾಗಿದ್ದರೆ ಆಗ ಸಕಾರಾತ್ಮಕವಾಗಿದ್ದವು. ಯುರೋಪಿಯನ್ನರ ಆಗಮನದ ಆರಂಭಿಕ ಹೆಜ್ಜೆಗುರುತುಗಳು, ಸಮುದ್ರ ವ್ಯಾಪಾರ-ವಹಿವಾಟು, ಇಂಗ್ಲಿಷ್ ಶಿಕ್ಷಣ, ಬ್ರಿಟೀಶ್ ವಿದ್ವಾಂಸರು ಬಾಸೆಲ್ ಮಿಶಿನ್ ಮೂಲಕ ಮಾಡಿದ ಸಾಹಿತ್ಯ-ಸಂಸ್ಕೃತಿ ಸಂಬಂಧಿ ಕೆಲಸಗಳು, ಯಕ್ಷಗಾನದಂತಹ ಒಂದು ಅಪರೂಪದ ಕಲೆ ಹೀಗೆ ಹೆಮ್ಮೆ ಪಡುವ ಹಲವು ಸಂಗತಿಗಳಿಂದ ಅದು ನಾಡಿನ ಗಮನವನ್ನು ಸೆಳೆಯುತ್ತಿತ್ತು. ಈಗ ಅದು ಮುಖ್ಯವಾಗಿ ಗಮನ ಸೆಳೆಯುತ್ತಿರುವುದು ಕೋಮುಕಲಹಗಳಿಗಾಗಿ. ಈಗ ಅಲ್ಲಿನ ಪರಿಸ್ಥಿತಿ ಹೇಗೆಲ್ಲ ಆಗಿದೆ ಎಂಬುದನ್ನು ಯಾರೂ ಯಾರಿಗೂ ವರ್ಣಿಸಿ ಹೇಳಬೇಕಾದ ಅವಶ್ಯಕತೆಯೇ ಇಲ್ಲದಷ್ಟು ಅದು ನಾಡಿಗೆ ಪರಿಚಿತವಾಗಿದೆ. ಈ ಪ್ರದೇಶವು ವಿವಿಧ ಧರ್ಮ-ಸಂಸ್ಕೃತಿಗಳು ವಿಭಿನ್ನ ಆಚಾರ ವಿಚಾರಗಳಗಳ ಜನರನ್ನು ಎಷ್ಟೋ ವರ್ಷಗಳಿಂದ ಬಾಳಿಬದುಕಿಸಿದೆಯಾದರೂ ಈಗಿನ ವಿದ್ಯಮಾನಗಳು ಆ ಪ್ರದೇಶದ ಘನತೆ-ಗೌರವಗಳನ್ನು ತಗ್ಗಿಸುತ್ತಿವೆ.

ಜೈನ-ಬೌದ್ಧ-ವೈಷ್ಣವ-ಶೈವ-ಮುಂತಾದ `ಅಧಿಕೃತ’ ಧರ್ಮಗಳ ಕೆಲವು `ಪ್ರತಿಷ್ಠಿತ’ ದೇವರುಗಳ ಜೊತೆ `ಅನಧಿಕೃತ’ ಎಂದು ಅಲಕ್ಷಿಸಲ್ಪಟ್ಟಿರುವ ಚೌಡಿ, `ಕಲ್ಲುಕುಟಿಕ’ ಮುಂತಾದ ಎಷ್ಟಫ ದೈವಗಳ ಆರಾಧಕರೂ ಅಲ್ಲಿದ್ದಾರೆ. ಅವರೆಲ್ಲರ ನಡುವೆ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ದ್ವೇಷ-ವೈಷಮ್ಯಗಳು ಇವೆಯೆಂದು ಎನಿಸುವುದಿಲ್ಲ. ಆದರೆ ಅಲ್ಲಿನ ಬಹುದೊಡ್ಡ ಎರಡು ಜನಸಮುದಾಯಗಳಾದ `ಹಿಂದೂ’ ಮತ್ತು `ಮುಸ್ಲಿಂ’ ಸಮುದಾಯಗಳ ವಾರಸುದಾರರು ಎಂದು ಹೇಳಿಕೊಳ್ಳುವ ಕೆಲವು ವ್ಯಕ್ತಿ ಮತ್ತು ಸಂಘಟನೆಗಳು ಅಲ್ಲಿನ ಪರಿಸ್ಥಿತಿಯನ್ನು ಎಷ್ಟು ಕೆಡಿಸಿದ್ದಾರೆಂದರೆ ಅಲ್ಲಿನ ಸಾಮಾನ್ಯ ಜನಜೀವನ ದಿನದಿನಕ್ಕೂ ಅಸಹನೀಯವಾಗುತ್ತಿದೆ. ಹಸುಸಾಗಿಸುವವರನ್ನು ಹಿಡಿದು ಹೊಡೆಯುವುದು, ಗೋವಿನ  ಮಾಂಸವನ್ನು ಇಟ್ಟುಕೊಂಡಿದ್ದರೆಂದು ಮನೆನುಗ್ಗಿ ಪರಿಶೀಲನೆಗೆ ತೊಡಗುವುದು, ಲವ್ ಜಿಹಾದ್ ಕಾರಣವಿಟ್ಟುಕೊಂಡು ಹುಡುಗರನ್ನು ತಳಿಸುವುದು ಮತ್ತು ಇಂತಹ ಕಾರಣಗಳಿಗಾಗಿ ಹಲ್ಲೆಗೊಳಗಾದವರು ಪ್ರತಿಕಾರಕ್ಕಾಗಿ ಪ್ರತಿಹಲ್ಲೆಮಾಡುವುದು ಇವೆಲ್ಲ ಅಲ್ಲಿನ ನಿತ್ಯದ ವರ್ತಮಾನವಾಗುತ್ತಿವೆ. ಪರಿಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎಂದರೆ ಈ ಸಮುದಾಯಗಳಿಗೆ ಸೇರಿದ ವಯಸ್ಸಿಗೆ ಬಂದು ಒಬ್ಬ ಹುಡುಗಿ-ಹುಡುಗ ಸಾರ್ವಜನಿಕ ಸ್ಥಳಗಳಲ್ಲಿ ನಿಂತುಕೊಂಡು ಮಾತನಾಡುವುದೂ ಅಲ್ಲಿ ಅಪರಾಧವಾಗಿಬಿಟ್ಟಿದೆ!

ಅಂದಮಾತ್ರಕ್ಕೆ ಅಲ್ಲಿ ನಡೆಯುತ್ತಿವೆ ಎನ್ನಲಾಗಿರುವ ಅಪರಾಧಿ ಚಟುವಟಿಕೆಗಳನ್ನು ನೋಡಿಕೊಂಡು ಕೈಕಟ್ಟಿಕುಳಿತುಕೊಳ್ಳಬೇಕು ಎಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಇರುವುದು ಪ್ರಜ್ಞಾವಂತ ಪ್ರಜೆಗಳ ಲಕ್ಷಣವೂ ಅಲ್ಲ. ಆದರೆ ನಾವು ಅಂತಹ ಚಟುವಟಿಕೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಮುಖ್ಯ. ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿದ್ದರೆ ಅವನ್ನು ನಿಗ್ರಹಿಸಲು, ನಿಯಂತ್ರಿಸಲು ನಮ್ಮಲ್ಲಿ ಕಾನೂನು ಕೋರ್ಟು ಪೋಲೀಸು ಇವೆ. ಅವುಗಳನ್ನು ನಾವು ಸರಿಯಾಗಿ ಬಳಸಿಕೊಂಡೇ ಇಂತಹ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕೇ ಹೊರತು ನಾವೇ ಅವೆಲ್ಲವೂ ಆಗಿ ಕಾನೂನು ಕೈಗೆ ತೆಗೆದುಕೊಂಡರೆ ಅರಾಜಕತೆ ಸೃಷ್ಟಿಯಾಗುತ್ತದೆ. ದಕ್ಷಿಣಕನ್ನಡದ ನೆಲದಲ್ಲಿ ದಿನದಿನಕ್ಕೂ ಉಂಟಾಗುತ್ತಿರುವ ಈ ಅರಾಜಕತೆ ಸಾಮಾನ್ಯರ ನೆಮ್ಮದಿಯನ್ನೇ ಕಸಿದುಕೊಂಡು ಅವರೆಲ್ಲ ಕೈಯಲ್ಲಿ ಜೀವಹಿಡಿದುಕೊಂಡು ಬದುಕಬೇಕಾದ `ಭಯಾನಕ’ ವಾತಾವರಣವನ್ನು ಸೃಷ್ಟಿಸುತ್ತಿದೆ. ಬೇರೆ ಧರ್ಮವನ್ನಿರಲಿ ತಮ್ಮ ಧರ್ಮವನ್ನೂ ಸರಿಯಾಗಿ ಅರಿಯಲಾರದ ಕೆಲವು ಅವಿವೇಕಿ ಮಂಗಗಳು ಇಂದು ಆ ಪ್ರದೇಶವನ್ನು `ಮತಧರ್ಮಗಳ ಮರಕೋತಿ ಆಟ’ ಆಡುವ ಅಂಗಣವನ್ನಾಗಿ ಮಾಡಿಕೊಂಡು ಕುಣಿಯುತ್ತಿವೆ. ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಬೇಕು ಎಂದು ಆಸೆ ಹೊಂದಿರುವ,

`ಜಾತಿಧರ್ಮ ಜನಾಂಗಗಳ ಹೆಸರಿನಲಿ
ಮನುಜ ಮನುಜರ ಮಧ್ಯೆ ಗೋಡೆ
ಕಟ್ಟುವ ದುರುಳ ಭಸ್ಮಾಸುರರನು
ಮಟ್ಟಹಾಕಲು ರುದ್ರ ಮೇಣ ಭದ್ರನಾಗುವಾಸೆ’ (ಅಶೋಕ ನರೋಡೆ)

ಇಟ್ಟುಕೊಂಡು ಈ ಎರಡೂ ಸಮುದಾಯಗಳಲ್ಲಿ ಇದ್ದಿರಲೇಬಹುದಾದ ಅಸಂಖ್ಯಾತ ಸಜ್ಜನರು ಈ ಆಟವನ್ನು ಅಸಹಾಯಕರಾಗಿ ನೋಡುತ್ತಾ ಕೂರುವಂತಾಗಿದೆ ಮಾತ್ರವಲ್ಲ, ತಮ್ಮ ಈ ಆಸೆ ಕೈಗೂಡದಿರುವ ವಿಷಾಧದ ಹೊಗೆಯೂ ಅವರ ಮೂಗುಬಾಯಿಹೊಕ್ಕು ಉಸಿರಾಡುವುದನ್ನೇ ಕಷ್ಟಮಾಡಿ ಮಾತುಹೊರಡದಂತೆ ಮಾಡಿದೆ. ಈ ಮಂಗಗಳ ಮರಕೋತಿ ಆಟಕ್ಕೆ ಇತ್ತೀಚೆಗೆ ಎರಡೂ ಸಮುದಾಯಗಳಿಂದ ಒಬ್ಬೊಬ್ಬರಂತೆ ಬಲಿಯಾದ ಇಬ್ಬರು ಯುವಕರ ಕೊಲೆಗಳು ಮಾನವೀಯತೆ ಇರುವ ಯಾರ ಮನಸ್ಸನ್ನೇ ಆಗಲಿ ಮರುಗಿಸದೇ ಇರಲಾರವು. ಇದು ಆ ಜಿಲ್ಲೆಗೆ ಮಾತ್ರವಲ್ಲ ಇಡೀ ನಾಡಿಗೆ ಕಳಂಕ ತರುವಂಥದ್ದು.

ಕೋಮುಗಲಭೆಗಳು ಎಲ್ಲಿಯೇ ನಡೆಯಲಿ ಅಲ್ಲಿ ಸಂಕಷ್ಟಕ್ಕೆ ಸಿಲುಕುವವರು ಬಹಳಷ್ಟುಮಟ್ಟಿಗೆ ಅಮಾಯಕರಾದ ಜನ. ತಮ್ಮ ತುತ್ತಿನಚೀಲವನ್ನು ತುಂಬಿಕೊಳ್ಳಲು ದಿನವಿಡೀ ಹೆಣಗಾಡುವ ಈ ಶ್ರಮಜೀವಿಗಳು ತಮ್ಮದಲ್ಲದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುವ ಹಿಂಸೆ ಹೇಳತೀರದು. ಲೇಖಕಮಿತ್ರ ಅಬ್ಬಾಸ್ ಮೇಲಿನಮನಿ ಅವರದೊಂದು ಕಥೆ ಇದೆ. ಅದರಲ್ಲಿ ಹೀಗೇ ಒಂದು `ಹಿಂದೂ-ಮುಸ್ಲಿಂ’ ಗಲಭೆಯಲ್ಲಿ ಒಬ್ಬ ಅಮಾಯಕ ಮಹಿಳೆ ಸಿಕ್ಕಿಹಾಕಿಕೊಳ್ಳುತ್ತಾಳೆ. ನಿರ್ಜನವಾದ ಸ್ಮಶಾನಮೌನದ ಬೀದಿಯಲ್ಲಿ ಏಕಾಂಗಿಯಾಗಿ ನಡೆದುಹೋಗಬೇಕಾದ ಅನಿವಾರ್ಯತೆಗೆ ಒಳಗಾದ ಅವಳು ತಾನು ಹಾದು ಹೋಗಬೇಕಾದದ್ದು ಮುಸ್ಲಿಮರ ಪ್ರದೇಶ ಎಂದೋ ಏನೋ `ಸ್ವರಕ್ಷಣಾತಂತ್ರ’ವಾಗಿ ಮುಸ್ಲಿಮ್ ಮಹಿಳೆಯಂತೆ ವೇಷಹಾಕಿಕೊಂಡು ಹೊರಡುತ್ತಾಳೆ. ಆದರೆ ಹಾಗೆ ಹೊರಟ ಅವಳು ಒಂದು `ಉಗ್ರಹಿಂದೂ’ಗಳ ಗುಂಪಿಗೆ ಎದುರಾಗಿಬಿಡುತ್ತಾಳೆ; ಅವರಿಂದ ಅತ್ಯಾಚಾರಕ್ಕೊಳಗಾಗಿಬಿಡುತ್ತಾಳೆ! ಈ ದೌರ್ಜನ್ಯದಿಂದ ಜರ್ಝರಿತವಾದ ಅವಳು ಸುಧಾರಿಸಿಕೊಂಡು ಅಲ್ಲಿಂದ ಮುಂದೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ನಡೆಯತೊಡಗುತ್ತಾಳೆ. ತನ್ನ ಅನುಭವ ಕಲಿಸಿದ ಪಾಠದಿಂದಾಗಿ ಅವಳು ಮುಸ್ಲಿಮ್ ಮಹಿಳೆಯ ಉಡುಪು ತೆಗೆದುಹಾಕಿ ಈ ಬಾರಿ ಹಿಂದೂ ಮಹಿಳೆಯ ಉಡುಪು ಧರಿಸಿ ಹೊರಡುತ್ತಾಳೆ. ಒಂದಿಷ್ಟು ದೂರ ನಡೆದ ಮೇಲೆ ಈ ಸಲ ಅವಳು `ಉಗ್ರ ಮುಸ್ಲಿಮ್’ ಗುಂಪಿಗೆ ಸಿಕ್ಕಿಬಿದ್ದು ಮತ್ತೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ.!  ಈ ಕಥೆ ನಮಗೆ ಕಟ್ಟಿಕೊಡುವ ತಾತ್ವಿಕತೆ ಅಂದರೆ ಇಂತಹ ದುರ್ಭರ ಭವಣೆಯ ಸಂದರ್ಭಗಳು ನಮ್ಮ ಅನುಭವದಿಂದ ಕಲಿತ ಪಾಠಗಳೂ ನಮ್ಮ ರಕ್ಷಣೆಗೆ ಬರದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತವೆ ಎಂಬುದು. ಇದು ಮಂಗಳೂರಿರಲಿ ಬೆಂಗಳೂರಿರಲಿ ಎಲ್ಲ ಕಡೆಗೂ ಸತ್ಯವಾದದ್ದು.

ಕೋಮುಗಲಭೆಗಳು ನಮ್ಮ ರಾಜ್ಯದಲ್ಲಿ ಅಥವಾ ಕೇವಲ ದಕ್ಷಿಣಕನ್ನಡದಲ್ಲಿ ಮಾತ್ರ ನಡೆಯುತ್ತಿಲ್ಲವಾದರೂ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಉಳಿದೆಲ್ಲ ಪ್ರದೇಶಗಳಿಗಿಂತ ಅವುಗಳ ಸಂಖ್ಯೆ ಇಲ್ಲಿ ಗಣನೀಯವಾಗಿ ಹೆಚ್ಚುತ್ತಿವೆ ಎಂಬುದು ಎದ್ದುಕಾಣುತ್ತಿರುವ ಅಂಶ. ಹಾಗೆ ನೋಡಿದರೆ ಈ `ದಕ್ಷಿಣಕನ್ನಡ’ ಎಂಬುದು ಒಂದು ರೀತಿಯಲ್ಲಿ ನಮ್ಮ ರಾಜ್ಯದ `ದೇವರಜಿಲ್ಲೆ’. ಬಹುಶಃ ಇಲ್ಲಿರುವಷ್ಟು ಪ್ರಸಿದ್ಧ ಮತ್ತು ಪ್ರತಿಷ್ಠಿತ ದೇವಾಲಯಗಳು ನಮ್ಮ ರಾಜ್ಯದ ಬೇರೆ ಎಲ್ಲಿಯೂ ಇಲ್ಲವೇನೋ. ಈ ಜಿಲ್ಲೆಯಲ್ಲಿ ಯಾರಾದರೂ ಎಡವಿಬಿದ್ದರೆ ಅವರ ತಲೆ ಯಾವುದಾದರೂ ದೇವರ ಪಾದಕ್ಕೇ ಬೀಳುತ್ತದೆ’ ಎಂಬುದೊಂದು ಅತಿಶಯೋಕ್ತಿ. ಈ ಲೇಖನದಲ್ಲಿ ಉಲ್ಲೇಖಿಸಿರುವ ಕಲಬುರಗಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಅಪಾರವಾದ ಸಂಖ್ಯೆಯ ಜನ ಇಲ್ಲಿನ ದೇವದೇವತೆಗಳು ಒಳ್ಳೆಯದನ್ನು ಮಾಡುತ್ತಾರೆಂದು ನಂಬಿ ಬರುತ್ತಾರೆ. ಅವರಿಗೆಲ್ಲ ಅಷ್ಟೊಂದು ಒಳ್ಳೆಯದನ್ನು ಮಾಡುವ ಈ ದೇವದೇವತೆಗಳು ತನ್ನ ಮಡಿಲಿನಲ್ಲಿಯೇ ಇರುವ ತನ್ನ ಮಕ್ಕಳನ್ನು ಈ ರೀತಿಯ ಜೀವಮಾರಕ ಆಟವಾಡಲು ಬಿಟ್ಟದ್ದಾದರೂ ಏಕೆ ಎಂದು ನಾನು ಪ್ರಶ್ನಿಸಿದರೆ ಅದು ಉಡಾಫೆಯಾಗಲರದೇನೋ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕೋಮುಕಲಹಗಳು ಹೆಚ್ಚು ಆಗುತ್ತಿರುವುದಕ್ಕೆ ಸ್ಪಷ್ಟವಾದ ಕಾರಣಗಳು ಏನಿರಬಹುದು ಮತ್ತು ಇಂತಹ ಕಲಗಹಗಳಿಗೆ ಕಾರಣವಾಗುವಂತಹ ವಿಷಬೀಜಗಳು ಅಲ್ಲಿನ ಮಣ್ಣಿನಲ್ಲಿಯೇ ಹಿಂದಿನಿಂದಲೂ ಇದ್ದುಕೊಂಡೇ ಬಂದಿವೆಯೋ ಅಥವಾ ಎತ್ತಲಿಂದಾದರೂ ಹಾರಿಬಂದಂತಹುಗಳೇ ಎಂಬುದು ಹೆಚ್ಚಿನ ಅಧ್ಯಯನವನ್ನು ನಿರೀಕ್ಷಿಸುವ ಸಂಗತಿ. ಮೇಲುನೋಟಕ್ಕೆ ಕಂಡುಬರುವ ಸಂಗತಿಗಳ ಆಧಾರದ ಮೇಲೆ ಹೇಳುವುದಾದರೆ ಉಡುಪಿಯನ್ನೂ ಒಳಗೊಂಡ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮತ್ತು ಅದರ ಸುತ್ತಮುತ್ತಲ `ತುಳುನಾಡು’ ತನ್ನ ಇತಿಹಾಸದ ಗರ್ಭದಲ್ಲಿ ಈ ವಿಷಬೀಜಗಳನ್ನು ಇಟ್ಟುಕೊಂಡಂತಿಲ್ಲ. ಇದನ್ನು ಇಲ್ಲಿನ ಸಾಹಿತ್ಯ ಕಲೆಗಳು ತೋರಿಸಿಕೊಟ್ಟಿವೆ.

ಕನ್ನಡ ಸಾಹಿತ್ಯ ಸಂಸ್ಕೃತಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಮತ್ತು ನಾಡು ಎಂದೆಂದೂ ಮರೆಯಬಾರದ ಮುಖ್ಯ ಲೇಖಕರನ್ನು ಈ ಪ್ರದೇಶ ನೀಡಿದೆ. ತೀರಾ ಹಿಂದಕ್ಕೆ ಹೋಗದೆ ನೋಡುವುದಾದರೂ ಹೊಸಗನ್ನಡದ ಅರುಣೋದಯದ ಮುಂಗೋಳಿ ಎಂದು ಕರೆಯಲ್ಪಡುವ ನಮ್ಮ ಮುದ್ದಣ-ಮನೋರಮೆಯರು ಬಾಳಿಬದುಕಿದ್ದು ಈ ಪ್ರದೇಶದಲ್ಲಿ. ನವೋದಯದ ಆರಂಭಿಕ ಕಾಲಘಟ್ಟದ ಮಹತ್ವದ ಕವಿಗಳಾದ ಮಂಜೇಶ್ವರ ಗೋವಿಂದ ಪೈಗಳು, ಪಂಜೆ ಮಂಗೇಶರಾಯರು ಇಲ್ಲಿಯವರು. ತಮ್ಮ ಅಪಾರ ಜೀವನಾನುಭದ ಕಾದಂಬರಿಗಳ ಮೂಲಕ ಈ ಪ್ರದೇಶ ಮಾತ್ರವಲ್ಲ ಇಡೀ ನಾಡಿನ ಕೀರ್ತಿಯನ್ನು ಬೆಳಗಿದ ಶಿವರಾಮ ಕಾರಂತ, ಸಂಶೋಧಕ ಸೇಡಿಯಾಪು ಕೃಷ್ಣಭಟ್, ಮಳಿಯ ತಿಮ್ಮಪ್ಪಯ್ಯ, ಕಯ್ಯಾರ ಕಿಞ್ಞಣ್ಣ ರೈ ಅವರಂಥ ದಿಗ್ಗಜರು ಹುಟ್ಟಿಬೆಳೆದದ್ದು ಇಲ್ಲಿ. ವರ್ತಮಾನದ ಲೇಖಕರಾದ ಸಾರಾ ಅಬೂಬಕ್ಕರ್, ನಾ. ದಾಮೋದರ ಶೆಟ್ಟಿ, ವೈದೇಹಿ, ಕೆ.ಟಿ.ಗಟ್ಟಿ, ವಿವೇಕ ರೈ, ಕಟ್ಪಾಡಿ, ಬೋಳುವಾರು, ಪುರುಷೋತ್ತಮ ಬಿಳಿಮಲೆ, ಜಿ.ರಾಜಶೇಖರ್, ಫಣಿರಾಜ್, ದಿನೇಶ ಅಮಿನಮಟ್ಟು, ಪಾರ್ವತಿ ಐತಾಳ್ ಮುಂತಾದವರೆಲ್ಲರೂ ಈ ಪ್ರದೇಶದವರು. ನನ್ನ ಓದಿನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿ ಹೇಳುವುದಾದರೆ ಇವರಲ್ಲಿ ಯಾರೂ  ಪ್ರತ್ಯಕ್ಷವಾಗಿಯಾಗಿಯಾಗಲೀ ಪರೋಕ್ಷವಾಗಿಯಾಗಲೀ ತಮ್ಮ ಬರಹ ಅಥವಾ ಭಾಷಣಗಳ ಮೂಲಕ ಕೋಮುದ್ವೇಷವನ್ನು ಪ್ರಚೋದಿಸಿದವರಲ್ಲ. ಬದಲಾಗಿ ಕೂಡಿಬಾಳುವುದನ್ನು ಹೇಳಿಕೊಟ್ಟವರು.

ಈ ಕೂಡಿಬಾಳುವಿಕೆಯನ್ನು ಇಲ್ಲಿನ ಸಾಹಿತ್ಯ ಹೇಗೆ ಬೆಂಬಲಿಸಿದೆ ಮತ್ತು ಪ್ರತಿಪಾದಿಸಿದೆ ಎಂಬುದಕ್ಕೆ ಹತ್ತುಹಲವು ಉದಾಹರಣೆಗಳನ್ನು ಕೊಡಬಹುದಾದರೂ  ಎರಡನ್ನು ಮಾತ್ರ ಇಲ್ಲಿ ಮಾದರಿಯಾಗಿ ಎತ್ತಿಕೊಳ್ಳುತ್ತಿದ್ದೇನೆ. ಒಂದು: ಈ ತುಳುನಾಡಿನವರೇ ಆದ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಅಭಿಧಾನಕ್ಕೆ ಪಾತ್ರರಾದ, ಸ್ವತಃ ಕ್ರೈಸ್ತರೂ ಅಲ್ಲದ ಬೌದ್ಧರೂ ಅಲ್ಲದ  ಎಂ. ಗೋವಿಂದ ಪೈಗಳು ಸುಮಾರು ಎಂಬತ್ತು ವರುಷಗಳ ಹಿಂದೆಯೇ ಕ್ರಿಸ್ತನ ಜೀವನದ ಕೊನೆಯ ದಿನವನ್ನು ವರ್ಣಿಸುವ `ಗೋಲ್ಗೊಥಾ’ ಮತ್ತು ಬುದ್ಧನ ಕೊನೆಯ ದಿನವನ್ನು ವರ್ಣಿಸುವ `ವೈಶಾಖಿ’ ಎಂಬ ಎರಡು ಖಂಡಕಾವ್ಯಗಳನ್ನು ಬರೆದು ಅವುಗಳಲ್ಲಿ ಬರುವ ಜೀವನಮೌಲ್ಯಗಳನ್ನು ಜನರಿಗೆ ತಿಳಿಸಿದರು. ಅಷ್ಟೇ ಅಲ್ಲ ಇವುಗಳಲ್ಲಿ ಒಂದು ಕಾವ್ಯವನ್ನು ತಮ್ಮ ತಮ್ಮಂದಿರ ಮಕ್ಕಳಿಗೆ ಅರ್ಪಿಸುತ್ತಾ ಅವರು `ಎಲ್ಲರಥಕೊಂದೆ ಪಥ…ಇಂತಖಿಲ ಧರ್ಮಗಳೊಳೇಕ ದೇವನನೋವಲೆಂದು ಮಕ್ಕಳಿರ ನಿಮಗಿತ್ತೇನೀ ಕಾವ್ಯಂ’ ಎಂದೂ ಬರೆದರು. ಚಿಕ್ಕಮಕ್ಕಳಿಗೆ ಅನ್ಯಧರ್ಮಗಳ ಬಗ್ಗೆ ಅನ್ಯ ಧರ್ಮೀಯರ ಬಗ್ಗೆ ಅತ್ಯಂತ ದ್ವೇಷಮತ್ಸರಗಳನ್ನು ಬೆಳೆಸುತ್ತಿರುವ ಕೆಟ್ಟ ಸಂದರ್ಭವೊಂದರಲ್ಲಿ ಬದುಕುತ್ತಿರುವ ನಾವೆಲ್ಲ ನಮ್ಮ ಮಕ್ಕಳಿಗೆ ಯಾವ ಭಾವನೆಯನ್ನು ಬೆಳೆಸಬೇಕು ಎಂಬುದಕ್ಕೆ ಅಂದು ಗೋವಿಂದ ಪೈಗಳು ತಮ್ಮ ಮಕ್ಕಳಿಗೆ ಹೇಳಿಕೊಟ್ಟ `ಎಲ್ಲ ಧರ್ಮಗಳಲ್ಲಿಯೂ ಒಬ್ಬನೇ ದೇವನನ್ನು ಕಾಣುವ’ ಮತ್ತು `ಎಲ್ಲ ಧರ್ಮಗಳೆಂಬ ರಥಗಳು ನಡೆಯುವುಕ್ಕೆ ಇರುವುದು ಒಂದೇ ಹಾದಿ’ ಎಂಬ ಪಾಠಗಳು ನಮ್ಮ ಕಣ್ಣುಗಳನ್ನು ತೆರೆಸಬೇಕಿದೆ.

ಇನ್ನೊಂದು ಉದಾಹರಣೆ ಕೊಡುವುದಾದರೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೂ ಆಗಿದ್ದ ಲೇಖಕ ಬಾಗಲೋಡಿದೇವರಾಯ ಅವರು `ಮಗ್ಗದ ಸಾಹೇಬ’ ಎಂಬ ಒಂದು ಕಥೆಯನ್ನು ಬರೆದರು. ಆ ಕಥೆಯಲ್ಲಿ ಅವರ ಊರಿನಲ್ಲಿ ಮುಸಲ್ಮಾನ ಉದಾರಿ ಧನಿಕನೊಬ್ಬ ಮಸೀದಿ ಜೊತೆಗೆ ದೇವಸ್ಥಾನವನ್ನೂ ಕಟ್ಟಿಸಿದ್ದನ್ನೂ ಎರಡೂ ಸಮುದಾಯಗಳಿಂದ ಅಪಾರ ಗೌರವಕ್ಕೆ ಪಾತ್ರವಾಗಿದ್ದನ್ನೂ ಚಿತ್ರಿಸಿದ್ದಾರೆ. ಅವರು ಕಟ್ಟಿಸಿದ್ದ ಆ ದೇವಾಲಯದಲ್ಲಿ ರಥೋತ್ಸವದ ಸಂದರ್ಭದಲ್ಲಿ ಆ ಮುಸಲ್ಮಾನ ಧನಿಕನ ಮನೆತನದ ಹಿರಿಯ ಪ್ರತಿನಿಧಿಯೊಬ್ಬರಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದ ಸ್ವೀಕರಿಸುವ `ಹಕ್ಕು’ ಇತ್ತಂತೆ. ಅದೇ ರೀತಿ ಆ ಊರಿನಲ್ಲಿ ಮುಸಲ್ಮಾನರು ಆಚರಿಸುತ್ತಿದ್ದ `ಉರುಸ್’ ಸಂದರ್ಭದಲ್ಲಿ ಹಿಂದೂಗಳಾದ ಈ ಲೇಖಕರ ಮನೆತನದ ಯಾರಾದರು ಹಿರಿಯರು ಇರಲೇಬೇಕು ಎಂಬ ಸಂಪ್ರದಾಯವಿತ್ತಂತೆ. ಮುಸಲ್ಮಾನ ಅಧಿಕಾರಿಯೊಬ್ಬನ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಿರುವುದರಿಂದ ಹಿಂದೂ ಸಂಪ್ರದಾಯಕ್ಕೆ ಅಪಚಾರವಾಯಿತು ಎಂದು ದೊಂಬಿಮಾಡಿ ದೇವಾಲಯದ ಉತ್ಸವವನ್ನೇ ತಡೆದು ಹೊಸದಾಗಿ ಆ ಹೆಸರನ್ನು ಬಿಟ್ಟು ಆಮಂತ್ರಣ ಮಾಡಿಸುವಂತೆ ಮಾಡಿದ್ದು ನಮ್ಮ ಸಂಸ್ಕೃತಿಯೋ ಅಥವಾ ಬಾಗಲೋಡಿ ದೇವರಾಯರು ಕೊಡುವ ಚಿತ್ರಣ ನಮ್ಮ ಸಂಸ್ಕೃತಿಯೋ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಈ ಧರ್ಮದ ಅಪವ್ಯಾಖ್ಯಾನ ಕೇವಲ ಒಂದು ಕಡೆಯಿಂದ ಅಂದರೆ `ಹಿಂದೂ’ ಅನ್ನಿಸಿಕೊಂಡವರಿಂದ ಮಾತ್ರ ಅಲ್ಲಿ ನಡೆಯುತ್ತಿದೆ ಎನ್ನಲಾಗದು. ಇಸ್ಲಾಮ್ ಧರ್ಮ ಮತ್ತು ಅದರ ಮುಖ್ಯ ಧರ್ಮಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಪವಿತ್ರ ಕುರಾನಿನ ಅಪವ್ಯಾಖ್ಯಾನವೂ ಬೇರೆಕಡೆಗೆ ಆದಂತೆ ಅಲ್ಲಿನ ಕ್ಷೋಭೆಗೆ ಕಾರಣವಾಗಿರಬಹುದು. ಹಿಂದೂಗಳಿಗೆ ಹೋಲಿಸಿದರೆ ಸಾಮಾನ್ಯ ಶಿಕ್ಷಣಕ್ಕೆ ಮುಖಮಾಡಿದವರ ಸಂಖ್ಯೆ ಮುಸ್ಲಿಂ ಸಮುದಾಯದಲ್ಲಿ ಸಹಜವಾಗಿಯೇ ಕಡಿಮೆ ಇರುವುದು ಅಂಕಿಸಂಖ್ಯೆಗಳಿಂದ ತಿಳಿದುಬರುವ ಸಂಗತಿ. ಹೀಗಾಗಿ ಧಾರ್ಮಿಕ ವಿಷಯಗಳಲ್ಲಿ ಇನ್ನೊಬ್ಬರ ಅವಲಂಬನ ಅವರಲ್ಲಿ ಹೆಚ್ಚೆಂದೇ ಹೇಳಬೇಕು.  ಇದು  ಜನಸಾಮಾನ್ಯರು ಸ್ವಸಾಮರ್ಥ್ಯದಿಂದ ಧರ್ಮಗ್ರಂಥಗಳನ್ನು `ಓದಿ ಆಚರಿಸುವುದಕ್ಕಿಂತ’ ಬೇರೆಯವರು ಹೇಳುವುದನ್ನು `ಕೇಳಿ ಪಾಲಿಸುವುದು’ ಹೆಚ್ಚಾಗುವಂತೆ ಮಾಡಿದೆ. ಈ ಪರಾವಲಂಬನ ಪ್ರಕ್ರಿಯೆ ಉಂಟುಮಾಡುವ ಪರಿಣಾಮ ಯಾವ ರೀತಿಯಲ್ಲಿ ಇರುತ್ತದೆ ಎಂದು ಹೇಳುವುದು ಕಷ್ಟ. ಒಬ್ಬ `ಗುರು’ ಸರಿಯಾಗಿ ಬೋಧಿಸಿದರೆ ಏಕಕಾಲದಲ್ಲಿ ನೂರಾರು, ಸಾವಿರಾರು ಜನರ ಹೃದಯಗಳಲ್ಲಿ ಬೆಳಕು ಮೂಡಬಹುದು; ಹಾಗೆ ಆ ಗುರು ಏನಾದರೂ ಧರ್ಮಗ್ರಂಥವನ್ನು ವ್ಯಾಖ್ಯಾನಮಾಡುವಲ್ಲಿ ಎಡವಿ ಅಪವ್ಯಾಖ್ಯಾನ ಮಾಡಿಬಿಟ್ಟರೆ ಏಕಕಾಲದಲ್ಲಿ ಸಾವಿರಾರು ಜನರ ಹೃದಯದಲ್ಲಿ ಬೆಳಕು ಮೂಡಬೇಕಿದ್ದ ಸ್ಥಳದಲ್ಲಿ ಬೆಂಕಿ ಹತ್ತಿಕೊಳ್ಳಬಹುದು.

ಆದರೆ ಸ್ವತಃ ಓದಿ ಅರ್ಥಮಾಡಿಕೊಳ್ಳುವಲ್ಲಿ ಲಾಭವಾಗಲೀ ನಷ್ಟವಾಗಲೀ ಇಷ್ಟೊಂದು ದೊಡ್ಡಮಟ್ಟದಲ್ಲಿರುವುದಿಲ್ಲ. ಒಬ್ಬ ಸರಿಯಾಗಿ ಓದದೆ ತಪ್ಪಾಗಿ ಅರ್ಥೈಸಿಕೊಂಡರೆ ಬಹಳ ಎಂದರೆ ಅದು ಅವನೊಬ್ಬನಿಗೆ ಆಗುವ ಹಾನಿ. ಇಲ್ಲಿ ಹಾಗಾಗುವುದಿಲ್ಲ. ಹಿಂದೂ ಧರ್ಮ ಎಂಬುದು ಹಿಂದೂ ಮಹಾಸಾಗರವೇ ಇದ್ದಂತೆ. ಹಿಂದೂ ಧರ್ಮ ಅಂದರೇನು ಮತ್ತು ಅದರ ಮುಖ್ಯ ತತ್ವಗಳೇನು ಎಂಬುದನ್ನು ಸರಿಯಾಗಿ ಸ್ಪಷ್ಟವಾಗಿ ಹೇಳಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಅದು ಒಂದು ಧರ್ಮ ಹೌದಾ ಅಲ್ಲವಾ ಎಂಬುದೂ ದೊಡ್ಡ ಮಟ್ಟದ ಚರ್ಚೆಯ ವಿಷಯ. ಇದನ್ನು ಅಂದರೆ `ಹಿಂದೂ ಅಂದರೇನು ಅದು ಧರ್ಮ ಹೌದಾ ಅಲ್ಲವಾ ಎಂದು ಹೇಳಲು ನಮ್ಮ ಸುಪ್ರಿಂ ಕೋರ್ಟೇ ಎಷ್ಟು ಒದ್ದಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಕೊನೆಗೂ ಅದು ಅದನ್ನು ಒಂದು `ಧರ್ಮ’ (Riligion) ಎಂದು ಕರೆಯದೆ `ಜೀವನಮಾರ್ಗ’ (Way of Life) ಎಂದು  ಹೇಳಿ ಕೈತೊಳೆದುಕೊಂಡಿದೆ.ಹೀಗಾಗಿ ಅದರ ಚರ್ಚೆಯನ್ನು ಇಲ್ಲಿ ಎತ್ತಿಕೊಳ್ಳದೆ ಆ ಜೀವನ ಮಾರ್ಗ ಯಾವುದು ಎಂಬುದನ್ನು ಮೇಲಿನ ಕೆಲವು ಉದಾಹರಣೆಗಳೊಂದಿಗೆ ವಿವರಿಸಿರುವ ನಾನು ಹೆಸರಿನ ವಿಷಯದಲ್ಲಿ ಇಂತಹ ಬಹಳಷ್ಟು ಗೊಂದಲಗಳಿರದ ಇಸ್ಲಾಂ ಬಗ್ಗೆ ಚರ್ಚೆಯನ್ನು ಮುಂದುವರೆಸುತ್ತಿದ್ದೇನೆ.

`ಇಸ್ಲಾಂ’ ಅಂದರೆ ಏನು ಮತ್ತು ಸಹಬಾಳ್ವೆ ಹಾಗೂ ಮತಾಂತರ ಕುರಿತು ಅದು ಏನು ಹೇಳುತ್ತದೆ ಎಂಬುದನ್ನು ನೋಡೋಣ. `ಇಸ್ಲಾಂ’ ಎಂಬುದು ಬಹುವಾಗಿ ಈಗ ಒಂದು ಧರ್ಮದ ಹೆಸರಾಗಿ ಈಗ ಪ್ರಚಲಿತವಾಗಿದೆಯಾದರೂ ಅರಬ್ಬೀ ಭಾಷೆಯ ಈ ಪದ ಮುಖ್ಯವಾಗಿ ಮತ್ತು ಮೂಲವಾಗಿ ಒಂದು ಗುಣದ ಹೆಸರು. ಅರಬ್ಬೀಯಲ್ಲಿ `ಇಸ್ಲಾಂ’ ಅಂದರೆ `ಅನುಸರಣೆ ಮತ್ತು ವಿಧೇಯತೆ’. `ಇಸ್ಲಾಂ’ ಧರ್ಮವು ಮುಖ್ಯವಾಗಿ ಅಲ್ಲಾಹನ ಅನುಸರಣೆ ಮತ್ತು ವಿಧೇಯತೆಯಾಗಿರುವುದರಿಂದ ಅದಕ್ಕೆ ಆ ಹೆಸರು ಬಂದಿದೆ. “ಇಸ್ಲಾಂ ಮನುಸ್ಯನ ಪ್ರಾಕೃತಿಕ ಧರ್ಮ, ಅದು ಯಾವುದೇ ಜನಾಂಗ, ದೇಶ, ಭಾಷೆಗಳಿಗೆ ಸೀಮಿತವಾದುದಲ್ಲ, ಎಲ್ಲ ಕಾಲ, ಜನಾಂಗ, ದೇಶ, ಭಾಷೆಗಳಲ್ಲಿನ ದೈವಭಕ್ತರೂ ಸತ್ಯಸಂದರೂ ಆದ ಜನರೆಲ್ಲರ ಧರ್ಮ ಈ ಇಸ್ಲಾಮೇ ಆಗಿತ್ತು, ಅವರವರ ಭಾಷೆಗಳಲ್ಲಿ ಅವರ ಧರ್ಮದ ಹೆಸರು ಇಸ್ಲಾಂ ಆಗಿರಲಿ ಅಥವಾ ಇನ್ಯಾವುದೇ ಆಗಿರಲಿ ಅವರೆಲ್ಲರೂ ಮುಸ್ಲಿಮರಾಗಿದ್ದರು” ಎಂದು ಅದು ಭಾವಿಸುತ್ತದೆ.

ಇದನ್ನೂ ಒಳಗೊಂಡಂತೆ ಇಸ್ಲಾಮಿನ ಕೆಲವು ವಿಚಾರಧಾರೆಗಳು ಅನೇಕಕಡೆ ಅಪವ್ಯಾಖ್ಯಾನಕ್ಕೆ ಗುರಿಯಾಗಿ ಇಡೀ ಜಗತ್ತನ್ನು ಇಸ್ಲಾಮಿಕರಣ ಮಾಡಬೇಕು ಎಂಬ ಆಲೋಚನೆ ಕೆಲವರಿಗೆ ಬಂದು ಅವರು ಆ ಧರ್ಮಕ್ಕೆ ಬೇರೆ ಧರ್ಮದ ಜನರನ್ನು ಬಲಾತ್ಕಾರದಿಂದ ಮತಾಂತರ ಮಾಡುತ್ತಿರುವ ಸಂಗತಿಗಳೂ ಬೆಳಕಿಗೆ ಬಂದಿವೆ. ಇದರ ಭಾಗವಾಗಿ ಭಾರತದಲ್ಲಿಯೂ ಈ ಚಟುವಟಿಕೆಗಳು ನಡೆಯುತ್ತಿವೆಯೆಂದೂ ಹೇಳಲಾಗುತ್ತಿದೆ. ಇದಕ್ಕೆ ಪ್ರತಿರೋಧವೆಂಬಂತೆ `ಅವರು ಇಡೀ ಪ್ರಪಂಚವನ್ನು `ಇಸ್ಲಾಮಿಕ್ ಸ್ಟೇಟ್’ ಮಾಡಲು ಹೊರಟಿರುವಾಗ ನಾವು ಕನಿಷ್ಠ ನಮ್ಮ ದೇಶವನ್ನಾದರೂ `ಹಿಂದೂರಾಷ್ಟ್ರ’ವನ್ನಾಗಿ ಮಾಡಿಕೊಳ್ಳುವುದರಲ್ಲಿ ತಪ್ಪೇನು ಎಂದು ಇನ್ನು ಕೆಲವರು ಅದಕ್ಕೆ ಕಂಕಣಬದ್ಧರಾಗಿ ಹೋರಾಡುತ್ತಿರುವುದು ಮಂಗಳೂರಲ್ಲಿ ಮಾತ್ರವಲ್ಲ ಇಡೀ ನಮ್ಮ ದೇಶದಲ್ಲಿಯೇ ನಡೆಯುತ್ತಿರುವ ಈ ಬಗೆಯ ಸಂಘರ್ಷಗಳಿಗೆ ಮೂಲಕಾರಣ. `ಧರ್ಮನಿರಪೇಕ್ಷತೆ’ಯನ್ನು ಜೀವಾಳವಾಗಿಟ್ಟುಕೊಂಡು ನಾವು ಇತ್ತೀಚೆಗಷ್ಟೇ ಕಟ್ಟಿಕೊಂಡಿರುವ ನಮ್ಮ `ಭಾರತ’ದ ಭದ್ರತೆ ಮತ್ತು ಬಾಳುವಿಕೆ ಎರಡಕ್ಕೂ ಈ ಎರಡೂ ಆಲೋಚನಾ ಕ್ರಮಗಳು ಅಪಾಯಕಾರಿಯೇ.

ಮಂಗಳೂರು ಭಾಗದ ಈಗಿನ ಮತೀಯ ಕಲಹಗಳಿಗೆ ತೋರಿಕೆಯ ನೆಪಮಾತ್ರದ ಕಾರಣಗಳು ಏನೇ ಇರಲಿ ಅವುಗಳು ನೆಲದೊಳಗೆ ಹುದುಗಿರುವ ಈ ಎರಡು ದೊಡ್ಡದಾದ ತಾಯಿಬೇರಿನಿಂದ ಮೇಲೆಬಂದ ಚಿರುರುಗಳೇ ಎಂದು ಬೇರೆ ಹೇಳಬೇಕಿಲ್ಲ. ಇದು ಏದನಾದರೂ ಇರಲಿ ಆದರೆ ಇಸ್ಲಾಮಿನ ಪವಿತ್ರ ಗ್ರಂಥವೆಂದು ಪರಿಗಣಿಸಲ್ಪಟ್ಟಿರುವ ಕುರಾನ್ ಸಹಬಾಳ್ವೆ ಮತ್ತು ಮತಾಂತರ ವಿಷಯಗಳ ಕುರಿತು ಏನು ಹೇಳುತ್ತದೆ ನೋಡೋಣ. ಮೊದಲು ಸಹಬಾಳ್ವೆ ಕುರಿತು: ಕುರಾನಿನ ಪ್ರಕಾರ ದೇವರು (ಅಲ್ಲಾಹ್) ಕೇವಲ ಮುಸ್ಲಿಮರ ಸೃಷ್ಟಿಕರ್ತನಲ್ಲ. ಅವನು ಸಕಲ ಮಾನವರ ಕರ್ತನಾಗಿದ್ದಾನೆ ಮತ್ತೂ ಎಲ್ಲರಿಗೂ ಅತ್ಯಂತ ನಿಕಟವಾದವನಾಗಿದ್ದಾನೆ (ಪ.ಕು.50.16). ಜಗತ್ತಿನ ಎಲ್ಲ ಮಾನವರು ಅಲ್ಲಾಹ್ ಸೃಷ್ಟಿಸಿದ ಒಂದು ಜೀವದಿಂದ ವಿಕಸನಗೊಂಡವರು (ಪ.ಕು.4:1). ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯದವರಾಗಿದ್ದು ನಂತರದಲ್ಲಿ ವಿವಿಧ ತತ್ವಾದರ್ಶಗಳನ್ನು ಮಾಡಿಕೊಂಡರು(ಪ.ಕು.10:19). ಹೀಗಾಗಿ ಕುರಾನಿನ ಪ್ರಕಾರ ಇಡೀ ಮಾನವಕುಲವೇ ಒಂದು. ಅವರೆಲ್ಲ ಸೋದರಸಂಬಂಧಿಗಳು! ಹೀಗಿದ್ದ ಮೇಲೆ ಹಿಂದೂಗಳನ್ನು ಮಾತ್ರವಲ್ಲ ಈಗ ಯಾರು ಮುಸ್ಲಿಮರಾಗಿಲ್ಲವೋ ಅಂತಹ ಯಾರನ್ನೇ ಆಗಲಿ ವಿರೋಧಿಗಳೆಂದು ಭಾವಿಸುವವನು ನಿಜವಾದ ಮುಸ್ಲಿಮನಾಗಿರಲು ಸಾಧ್ಯವಿಲ್ಲ.

`ಇನ್ನು ಮತಾಂತರದ ಬಗ್ಗೆ ಕುರಾನ್ ಹೇಳುವುದೇನು? `ಧರ್ಮಪ್ರಚಾರ’ ಎಂಬುದು ಮುಸ್ಲಿಮ್ ಆದವನ ನೈತಿಕ ಮತ್ತು ಧಾರ್ಮಿಕ ಕರ್ತವ್ಯವೆಂದು ಅದು ಒತ್ತಿಹೇಳಿದೆ ನಿಜ. ಆದರೆ ಅದನ್ನು ಹೇಗೆ ಮಾಡಬೇಕು ಎಂಬುದನ್ನೂ ಅದು ಹೇಳಿದೆ, ಸ್ವತಃ ಪೈಗಂಬರರಿಗೇ ಅದು, “ಯುಕ್ತಿ ಮತ್ತು ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ವಾದಿಸಿರಿ” (ಪ.ಕು.16:125) ಎಂದು ಆಜ್ಞಾಪಿಸಿದೆ. ಇಸ್ಲಾಮಿಗೆ ಜನರನ್ನು ಆಕರ್ಷಿಸಲು `ಯುಕ್ತಿ’ `ಸದುಪದೇಶ’ ಮತ್ತು `ವಾದ’ ಗಳನ್ನು ಅದು ಮುಂದುಮಾಡಿದೆಯೇ ಹೊರತು `ಶಕ್ತಿ’ `ದುರುಪದೇಶ’ ಮತ್ತು `ಖಡ್ಗ’ ಇವುಗಳನ್ನು ಅಲ್ಲ ಎಂಬುದನ್ನು ನಾವು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ಗಮನಿಸಬೇಕು. ಕುರಾನ್ ಇಷ್ಟು ಹೇಳಿ ಸುಮ್ಮನಾಗಲಿಲ್ಲ. `ನಮ್ಮ ಸಂದೇಶವಾಹಕರಿಗೆ ಸುಸ್ಪಷ್ಟ ಆಜ್ಞೆಗಳನ್ನು ತಲುಪಿಸುವ ಹೊಣೆಗಾರಿಕೆ ಮಾತ್ರವಿತ್ತೆಂಬುದನ್ನು ಅರಿತುಕೊಳ್ಳಿರಿ” (ಪ.ಕು.5:92), ‘ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆಗಾರಿಕೆ ಮಾತ್ರವಿದೆ’ (ಪ.ಕು.5:99) ಎಂಬ ಎಚ್ಚರಿಕೆಗಳನ್ನೂ ನೀಡಿದೆ. ಇದರರ್ಥ ಯಾರನ್ನೇ ಆಗಲಿ ಒತ್ತಾಯದಿಂದ ಇಸ್ಲಾಮಿಗೆ ಮತಾಂತರ ಮಾಡುವುದು ಕುರಾನಿಗೆ ಆ ಮೂಲಕ ಇಸ್ಲಾಮಿಗೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ಸಾರಾಂಶೀಕರಿಸ ಹೇಳುವುದಾದರೆ ಕುರಾನ್ ಬೆಂಬಲಿತ ಇಸ್ಲಾಂ ಮನುಷ್ಯ ಒಳ್ಳೆಯವನಾಗುವುದನ್ನು ದೈವಭಕ್ತನಾಗಿರುವುದನ್ನು ಮತ್ತು ಮನುಷ್ಯಮನುಷ್ಯರ ನಡುವಿನ ಸಾಮರಸ್ಯವನ್ನು ಸಾರುತ್ತದೆಯೇ ಹೊರತು ಇಡೀ ಜಗತ್ತಿನ ಎಲ್ಲರೂ ಇಸ್ಲಾಮಿಗೆ ಸೇರಬೇಕೆಂದು ಒತ್ತಾಯಪಡಿಸುವುದಿಲ್ಲ.

ಕಲಬುರಗಿಯ ಹೋಲಿಕೆ ಈ ಲೇಖನದಲ್ಲಿ ಪ್ರಾಸಂಗಿಕವಾಗಿ ಬಂದಿರುವುದರಿಂದ ಅದು ಇರುವ ಕಲ್ಯಾಣ ಕರ್ನಾಟಕದ  ಬಗ್ಗೆ ನಾಲ್ಕಾರು ಮಾತುಗಳನ್ನು ಹೇಳಲೇಬೇಕು. ಆ ಪ್ರದೇಶ ಕರಾವಳಿ ಪ್ರದೇಶಕ್ಕೆ ಹೋಲಿಸಿದರೆ ಆರ್ಥಿಕವಾಗಿ ಬಡತನದ ಪ್ರದೇಶ. ಪ್ರತಿವರ್ಷ ಹೊಟ್ಟೆಪಾಡಿಗಾಗಿ ಬೆಂಗಳೂರು, ಮಂಗಳೂರು, ಹೈದರಾಬಾದು, ಮುಂಬೈ ಮುಂತಾದ ನಗರಗಳಿಗೆ ಹೊಟ್ಟೆತುಂಬಿಸಿಕೊಳ್ಳಲು ವಲಸೆಹೋಗುವ ಮತ್ತು ಹೀಗೆ ವಲಸೆ ಹೋದವರಲ್ಲಿ ಕಟ್ಟಡ ಕುಸಿದೋ ಕೆಲಸಮಾಡುವಾಗ ಬಿದ್ದೋ ಕೆಲವರು ಸತ್ತಾಗ ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ಧಿ ಮತ್ತು ಆ ಹಿನ್ನಲೆಯಲ್ಲಿ ಪ್ರಕಟಗೊಳ್ಳುವ ಲೇಖನಗಳು ಪ್ರತಿವರ್ಷ ಇದನ್ನು ಸಾಬೀತುಗೊಳಿಸುತ್ತವೆ. ಮಂಗಳೂರಿನಲ್ಲಿ ಸುರಿವ ಮಳೆಯಷ್ಟೆ ಭಯಂಕರವಾದದ್ದು ಕಲಬುರಗಿಯಲ್ಲಿ ಉರಿವ ಬಿಸಿಲು.ಅಲ್ಲಿಗೂ ಇಲ್ಲಿಗೂ ಇರುವ ಸಾಮ್ಯತೆ ಎಂದರೆ `ಬೆವರು’ ಮಾತ್ರ.  ಕರಾವಳಿ ಕರ್ನಾಟಕಕ್ಕೆ ಹೋಲಿಸಿದರೆ ಈ ಪ್ರದೇಶಗಳಲ್ಲಿ ಮತೀಯ ಕಲಹಗಳು ಇಲ್ಲವೆನ್ನುವಷ್ಟು ಕಡಿಮೆ. ಹಾಗೆ ನೋಡಿದರೆ ಬೇರೆ ಬೇರೆ ಧರ್ಮಗಳಿಗೆ ಸೇರಿದ ಜನರು ಈ ಭಾಗಗಳಲ್ಲಿ ಕರಾವಳಿಗಿಂತಲೂ ಹೆಚ್ಚಿದ್ದಾರೆ. ಅವರೆಲ್ಲ ಇಲ್ಲಿ ಸೌಹಾರ್ದತೆಯಿಂದ ಕೂಡಿ ಬಾಳುವಂತೆ ಮಾಡಿರುವ ಅಂಶಗಳು ಯಾವುವಿರಬಹುದು ಎಂದು ನಾನು ಹಲವುಬಾರಿ ಯೋಚಿಸಿದ್ದಿದೆ. ಧಾರ್ಮಿಕ ಕ್ಷೇತ್ರಗಳೇ, ರಾಜಕಾರಣಿಗಳೇ, ಸಾಹಿತ್ಯ ಸಂಸ್ಕೃತಿಗಳೇ ಎಂದು ತಲೆಕೆಡಿಸಿಕೊಂಡದ್ದಿದೆ. ಅವೆಲ್ಲವೂ ಕೆಲಮಟ್ಟಿಗೆ ಇಲ್ಲಿ ಸೌಹಾರ್ದ ಕದಡದಂತೆ ನೋಡಿಕೊಂಡಿರುವುದು ಸುಳ್ಳಲ್ಲ.

ಧಾರ್ಮಿಕ ಕ್ಷೇತ್ರಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮತ್ತು ಅಲ್ಲಿನ ದರ್ಗಾಗಳ ನಡುವಿನ ಸಂಬಂಧವನ್ನು ನೋಡಬಹುದು. ಶರಣಬಸವೇಶ್ವರ ಸಂಸ್ಥಾನಕ್ಕೆ ಬಂದ ಭಕ್ತರಿಗೆಲ್ಲ ಆಶೀರ್ವಾದ ಮಾಡುತ್ತಾ ಅಲ್ಲಿನ ಗುರುಗಳು, `ದರ್ಗಾಕ್ಕೆ ಹೋಗಿ ಬಂದಿರಾ?’ ಎಂದು ವಿಚಾರಿಸುತ್ತಿದ್ದರಂತೆ. ಭಕ್ತರು, `ಇಲ್ಲ ಬುದ್ಧಿ’ ಎಂದರೆ `ಇಲ್ಲೇ ಹತ್ರಾನೆ ಇದೆ ಹೋಗುವಾಗ ಅಲ್ಲಿಗೂ ಹೋಗಿ’ ಎಂದು ಹೇಳುತ್ತಿದ್ದರಂತೆ. ಆ ಕಡೆ ದರ್ಗಾದಲ್ಲಿಯೂ ಮಠದ ಬಗ್ಗೆ ಇಂಥದ್ದೇ ಮಾತುಗಳನ್ನು ಹೇಳುತ್ತಿದ್ದರಂತೆ! ಇನ್ನು ರಾಜಕಾರಣವನ್ನು ನೋಡುವುದಾದರೆ ಎಲ್ಲಕಡೆಯಂತೆ ಜಾತಿಲೆಕ್ಕಾಚಾರ ಆ ಭಾಗದಲ್ಲಿಯೂ ಇದೆಯಾದರೂ ಮತೀಯ ಗುಂಪುಗಳನ್ನು ಉದ್ದೇಶಿಸಿ ಚೀರಿಚೀರಿ ಮಾತಾಡಿ ಜನರನ್ನು ಉದ್ರೇಕಿಸಿ ಮತೀಯ ಕಲಹಗಳನ್ನು ಹುಟ್ಟುಹಾಕಿ ತಮ್ಮ ರಾಜಕಾರಣಕ್ಕಾಗಿ ಬಳಸಿಕೊಂಡವರೂ ಅಲ್ಲಿ ಇಲ್ಲ ಎನ್ನುವಷ್ಟು ಕಡಿಮೆ ಎನ್ನಬೇಕು. ಇನ್ನು ಸಾಹಿತ್ಯ ಸಂಸ್ಕೃತಿಯ ವಿಷಯಕ್ಕೆ ಬಂದರೆ ಆ ಭಾಗದ ಸಾಹಿತಿಗಳಿಗೆ ಮಂಗಳೂರು ಭಾಗದಲ್ಲಿನ ಸಾಹಿತಿ ಚಿಂತಕರು ಮಾಡಿದ ಜನರನ್ನು ಬೆಸೆಯುವ ಕೆಲಸವನ್ನು ಮಾಡುವ ಅಗತ್ಯವೇ ಬರದಂತೆ ಸೌಹಾರ್ದ ಅನ್ನುವುದು ಅಲ್ಲಿ ಸ್ವಾಭಾವಿಕ ಸ್ಥಿತಿಯಾಗಿ ಉಳಿದು ಅವರು ಮನುಷ್ಯನ ಇನ್ನಿತರ ಸಮಸ್ಯೆಗಳ ಕಡೆ ಗಮನಹರಿಸುವಂತೆ ಮಾಡಿತು.

ಆದರೆ ನನಗೆ ತಿಳಿದಮಟ್ಟಿಗೆ ಕರಾವಳಿ ಭಾಗಗಳಂತೆ ಇಲ್ಲಿಯ ಮತೀಯ ಕಲಹಗಳು ಉಂಟಾಗದಂತೆ ಮತ್ತು ಜನರು ಸೌಹಾರ್ದತೆಯಿಂದ ಬಾಳಿಬದುಕುವುದಕ್ಕೆ ಇವೆಲ್ಲವುಗಳ ಜೊತೆಗೆ ಕಾರಣವಾದ ಬಹುದೊಡ್ಡ ಅಂಶವೆಂದರೆ ಬಡತನವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರನ್ನು `ಹೊಟ್ಟೆಹಸಿದವರು’ ಮತ್ತು `ಹೊಟ್ಟೆ ತುಂಬಿದವರು’ ಎಂದು ನಾವು ವಿಭಾಗಿಸಬಹುದೇ ಹೊರತು ಹಿಂದೂ-ಮುಸ್ಲಿಮರು ಎಂದಲ್ಲ. ಅಲ್ಲಿನ ಬಹಳಷ್ಟು ಜನರು ಹೊಟ್ಟೆಹಸಿದವರು. ಯಾವಾಗಲೂ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿಯಲ್ಲಿರುವ ಜನರಲ್ಲಿ ಮತೀಯ ಕಲಹಗಳನ್ನೆಬ್ಬಿಸಿ ಮಜಾ ತೆಗೆದುಕೊಳ್ಳಲು ಸಮಯವೂ ಇರುವುದಿಲ್ಲ; ಸಾಧ್ಯತೆಯೂ ಇರುವುದಿಲ್ಲ. ಅಂತಹದ್ದೇನಿದ್ದರೂ ಹೊಟ್ಟೆತುಂಬಿದವರ ಚಿನ್ನಾಟ. ಅಂತಹವರ ಸಂಖ್ಯೆ ಅಲ್ಲಿ ಅತ್ಯಂತ ಕಡಿಮೆ ಇದೆ. ಇದೇ ಅಲ್ಲಿನ ಸೌಹಾರ್ದತೆಯ ಜೀವನಕ್ಕೆ ಭದ್ರಬುನಾದಿಯಾದ ಅಂಶ. ಕರಾವಳಿ ಕರ್ನಾಟಕದಲ್ಲಿ ಹರಿದಾಡುವ `ದುಬೈದುಡ್ಡು’ ಮತ್ತು `ಕಾಡುಕನ್ನ’ದ ಚಟುವಟಿಕೆಗಳು ಅಲ್ಲಿನ ಇಂತಹ ಮತೀಯ ಕುಕೃತ್ಯಗಳಿಗೆ ಪ್ರೋತ್ಸಾಹಕವಾಗಿರಬಹುದು. ಕಲಬುರಗಿ ಕಡೆಯ `ಬರಗಾಲದ ಬವಣೆ’ ಮತ್ತು `ಹಸಿದ ಹೊಟ್ಟೆ’ ಅವರನ್ನು ಮತೀಯವಾದಿಗಳಾಗದಂತೆ ತಡೆದಿರಬಹುದು. `ತುಂಬಿದ ಜೇಬು ನೂರು ಆಟ ಆಡಿಸುತ್ತದೆ; ಖಾಲೀ ಜೇಬು ನೂರು ಪಾಠ ಕಲಿಸುತ್ತದೆ’ ಎಂಬುದು ಈ ಸಂದರ್ಭಕ್ಕೆ ಹೆಚ್ಚು ಹೊಂದಿಕೊಳ್ಳುವ ಮಾತು.

ಒಂದು ಸಂಗತಿಯನ್ನು ನೆನಪಿಸಿಕೊಂಡು ಈ ಚರ್ಚೆಯನ್ನು ಮುಗಿಸಬಹುದು. ಈ ಮೊದಲೇ ಉಲ್ಲೇಖಿಸಲ್ಪಟ್ಟ ತುಳುನಾಡಿನ ನಮ್ಮ ಹೆಮ್ಮೆಯ ರಾಷ್ಟ್ರಕವಿ ಎಂ. ಗೋವಿಂದ ಪೈಗಳು ತಮ್ಮ `ವೈಶಾಖಿ’ಯಲ್ಲಿ ಸಾವಿನ ಹಾಸಿಗೆಯಲ್ಲಿದ್ದ ಬುದ್ಧನ ಬಾಯಿಂದ ಹೇಳಿಸುವ, “ಯಾರು ಬೇರೆಯವರ ಧರ್ಮವನ್ನೂ ಸ್ವಾತಂತ್ರ್ಯವನ್ನೂ ಜನರನ್ನೂ ಗೌರವಿಸುವರೊ ಅವರ ಧರ್ಮ, ಸ್ವಾತಂತ್ರ್ಯ ಮತ್ತು ಜನ ಆಕಾಶದಂತೆ ವಿಶಾಲವಾಗಿ ಬೆಳೆಯುತ್ತದೆ; ಯಾರು ಬೇರೆಯವರ ಧರ್ಮವನ್ನೂ ಸ್ವಾತಂತ್ರ್ಯವನ್ನೂ ಜನವನ್ನೂ ಕೆಡಿಸುವರೋ ಅವರ ಧರ್ಮ, ಸ್ವಾತಂತ್ರ್ಯ ಮತ್ತು ಜನ ಮೇಲೆದ್ದ ತೆರೆ ಇಳಿಯುವಂತೆ ಕ್ಷಣಮಾತ್ರದಲ್ಲಿ ಕುಸಿಯುತ್ತದೆ” ಎಂಬ ಮಾತುಗಳು ನಮ್ಮೆಲ್ಲರ ವಿಶೇಷವಾಗಿ ಅನ್ಯಮತದ್ವೇಷವನ್ನು ತಮ್ಮೊಳಗೆ ತುಂಬಿಕೊಂಡು ಒಂದರ್ಥದಲ್ಲಿ `ವಿಷಪುರುಷ’ರಾಗಿರುವಂಥವರ ಮನಸ್ಸುಗಳನ್ನು ಮುಟ್ಟಲಿ; ಹೃದಯಗಳನ್ನು ತಟ್ಟಲಿ. ಹಾಗೇ ಕಲಬುರಗಿಯ ಕಡೆಯ ಸೌಹಾರ್ದದ ಗಾಳಿ ಮಂಗಳೂರಿನ ಕಡೆಗೂ ಬೀಸಿ ಅಲ್ಲಿನ ರಕ್ತದ ಕೆಂಪುಕಲೆಗಳನ್ನು ಅಳಿಸಿಹಾಕಿ ಸಹಬಾಳ್ವೆಯ ಕಂಪನ್ನು ಹರಡಲಿ.
******
ಡಾರಾಜೇಂದ್ರ ಬುರಡಿಕಟ್ಟಿ

Sunday, July 23, 2017

Tuesday, July 11, 2017


ಇದು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಕೇಳಿದ ಮತ್ತು ಇಂದಿಗೂ ಅಚ್ಚಳಿಯದೇ ನನ್ನ ಮನಸ್ಸಿನಲ್ಲಿ ಉಳಿದ `ತೆರಿಗೆ’ ಕುರಿತ ಪಾಠದ ಒಂದು ಅಂಶ. ಪ್ರಾಚೀನ ಕಾಲದ ಬಹಳಷ್ಟು ವಿದ್ವಾಂಸರು ಮತ್ತು ಅರ್ಥಶಾಸ್ತ್ರಜ್ಞರ ಚಿಂತನಾ ಕ್ರಮವನ್ನು ಆದರಿಸಿ ನನ್ನ ಪ್ರಾಧ್ಯಾಪಕರು ತರಗತಿಯಲ್ಲಿ ಹೇಳಿದ್ದ ಈ ಹೇಳಿಕೆ ಕಾಲದೇಶಗಳ ವಿದ್ಯಮಾನಗಳ ಕಾರಣಕ್ಕೋ ಏನೋ ಮನಸ್ಸಿನ ಆಳದಿಂದ ಎದ್ದು ಮುನ್ನೆಲೆಗೆ ಬಂದಿತು. ತೆರಿಗೆ ಎಂದರೇನು ಮತ್ತು ಅದನ್ನು ಹೇಗೆ ವಸೂಲಿ ಮಾಡಬೇಕು ಎಂಬುದಕ್ಕೆ ಈ ಹೇಳಿಕೆ ಎಂದಿಗೂ ಪಾಠವಾಗಬಲ್ಲದು.

ಇಂದು ಭಾರತದ ತೆರಿಗೆ ವಿಧಾನ ಹಿಡಿದಹಾದಿ ನೋಡಿದರೆ ಕೆಲವೊಮ್ಮೆ ಆತಂಕವೂ ಮತ್ತೆ ಕೆಲವೊಮ್ಮೆ ನಾಚಿಕೆಯೂ ಆಗುತ್ತಿದೆ. ಆತಂಕ ಏಕೆಂದರೆ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂದರೆ ಎಲ್ಲರೂ ಸಮಾನವಾಗಿ ತೆರಿಗೆ ಕೊಡಬೇಕು ಎಂದು ಅರ್ಥಮಾಡಿಕೊಳ್ಳಬೇಕೇನೋ ಎಂದು. ಅಸಮಾನ ಆರ್ಥಿಕತೆಯ ವ್ಯವಸ್ಥೆಯಲ್ಲಿ ಅಸಮಾನ ತೆರಿಗೆ ವ್ಯವಸ್ಥೆಯಿಂದ ಮಾತ್ರ ಸಮಾನತೆಯನ್ನು ತರುವಕಡೆ ನಾವು ಹೆಜ್ಜೆ ಇಡಬಹುದು. ಇದನ್ನು ಒಂದು ಉದಾಹರಣೆಯ ಮೂಲಕ ಸರಳವಾಗಿ ಅರ್ಥೈಸಬಹುದು: ಸಾಮಾನ್ಯನಾದ ವೈದ್ಯ ಒಬ್ಬ ರೋಗಿಗೆ 100 ನೂರು ರೂಪಾಯಿಗಳ ಶುಲ್ಕ ಎಂದು ನಿಗಧಿಮಾಡಿ ಯಾರೇ ಬರಲಿ ಚಿಕಿತ್ಸೆ ನೀಡಿ ಹಾಗೇ ವಸೂಲಿ ಮಾಡುತ್ತಾ ಹೋಗುತ್ತಾನೆ. ಆದರೆ ಒಬ್ಬ ಅಂತಃಕರಣವುಳ್ಳ ವೈದ್ಯ ತಿನ್ನಲು ಅನ್ನಸಿಗದೆ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬಂದ ಒಬ್ಬ ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಿ, ತಿಂದು ಹೆಚ್ಚಾಗಿ ಅಜೀರ್ಣದಿಂದ ರೋಗಕ್ಕೆ ತುತ್ತಾಗಿ ತನ್ನಲ್ಲಿಗೆ ಬರುವ ಇನ್ನೊಬ್ಬ ರೋಗಿಯಿಂದ 200 ರೂ ವಸೂಲಿ ಮಾಡಿಕೊಳ್ಳುತ್ತಾನೆ. ತನ್ನ ಆದಾಯಕ್ಕೆ ಕುತ್ತೂ ಬರಬಾರದು. ಬಡವರ ಕತ್ತೂ ಹಿಚುಕಬಾರದು ಅಂತಹ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕಾದರೆ ಪ್ರಜಾಪತಿಯೊಬ್ಬನಿಗೆ ಹಿಟ್ಟಿನ ಮೇಲಿನ ತೆರಿಗೆಯನ್ನು ತೆಗೆದು ಅದನ್ನು ರೊಟ್ಟಿಯ ಮೇಲೆ ಹಾಕುವ ಚಾಣಾಕ್ಷತನ ಮಾತ್ರವಿದ್ದರೆ ಸಾಲದು. ಅದರ ಜೊತೆಗೆ ಹಸಿದ ಹೊಟ್ಟೆಗಳ ಬಗ್ಗೆ ಅಂತಃಕರಣವೂ ಇರಬೇಕಾಗುತ್ತದೆ.

ಇನ್ನು ನಾಚಿಕೆ ಏಕೆಂದರೆ ಪ್ರಸ್ತುತ ಹೊಸತೆರಿಗೆ ವ್ಯವಸ್ಥೆ ಮನುಷ್ಯ ಜೀವನದ ಕೆಲವು `ಸೂಕ್ಷ್ಮ’ ಸಂಗತಿಗಳನ್ನು ಹಾದಿಬೀದಿ ರಂಪಾಟವಾಗುವಂತೆ ಮಾಡಿದ್ದು. ಸ್ವಭಾವತಃ ನಮ್ಮ ಮಹಿಳೆಯರು ನಾಚಿಕೆ ಮತ್ತು ಮುಜುಗರದ ಸ್ವಭಾವದವರು. ಯಾವ ಸಂಗತಿಗಳನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರಪಡುತ್ತಾರೋ ಅಂತಹ ಸಂಗತಿಗಳನ್ನು ಅವರು ಬೀದಿಗಿಳಿದು ಬಾಯಿಬಿಟ್ಟು ಗಟ್ಟಿದನಿಯಲ್ಲಿ ಪ್ರತಿಭಟಿಸುವಂತೆ ಮಾಡಿದ್ದು ಆಡಳಿತ ನಡೆಸುವವರಿಗೆ ಮತ್ತು ನಾಗರಿಕವೆನಿಸಿಕೊಳ್ಳುವ ಸಮಾಜವೊಂದಕ್ಕೆ ಗೌರವತರುವ ಸಂಗತಿಯಲ್ಲ. ನಮ್ಮ`ಪ್ರಜಾಪತಿ’ಯು ಭಾರತದ `ಭಾಗ್ಯವಿಧಾತ’ನಾಗಿ ನಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಲು ಬಂದಿರುವ `ಅವತಾರ ಪುರುಷ’ನೆಂದು ಮುಗ್ದವಾಗಿಯಾದರೂ ಪ್ರಾಮಾಣಿಕವಾಗಿ ನಂಬಿರುವ ನಮ್ಮ ಕೆಲವು ಯುವಸ್ನೇಹಿತರು ಸಾಮಾಜಿಕ ಜಾಲತಾಣಗಳಗಳ ಮೂಲಕ ಹೊಸತೆರಿಗೆ ವ್ಯವಸ್ಥೆಯಿಂದ ನಮಗೆಲ್ಲ ಎಷ್ಟೊಂದು ಲಾಭವಾಗಿದೆ ಎಂಬುದನ್ನು ತೋರಿಸುವ ತೆರಿಗೆ ಕಡಿಮೆಯಾದ ವಸ್ತುಗಳ ದೊಡ್ಡದೊಡ್ಡ ಪಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಮಾಡಿ (ತೆರಿಗೆ ಹೆಚ್ಚಳವಾದ ಸರಕು-ಸೇವೆಗಳನ್ನು ಅವರು ಈ ಪಟ್ಟಿಯಲ್ಲಿ ಸೇರಿಸುವುದಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿರಲಾರದು) `ತಿಳಿಹೇಳಲು’ ಏನೆಲ್ಲ ಪ್ರಯತ್ನ ಮಾಡುತ್ತಿದ್ದರೂ, ಇಂದು ಮುಟ್ಟಿನಬಟ್ಟೆಗೆ ತೆರಿಗೆ ಹಾಕಿದವರು ನಾಳೆ ಹುಟ್ಟುವ ಕೂಸಿಗೆ `ಹೆರಿಗೆತೆರಿಗೆ’ (Pregnancy Tax) ಹಾಕದಿರುತ್ತಾರೆಯೇ? ಎಂಬ ಈ ಮಹಿಳೆಯರ ಆತಂಕವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಆಡಳಿತಗಾರರು ಯಾರೇ ಇರಲಿ ಅವರು ಸೂಕ್ಷ್ಮಮನಸ್ಸಿನವರಾಗಿದ್ದರೆ ಅವರಿಗೆ ಇನ್ನೊಬ್ಬರ ಮನಸ್ಸಿನ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಇಲ್ಲದೇ ಹೋದರೆ ಇವೆಲ್ಲ ಒಳ್ಳೆಯ ನಾಯಕರಿಗೆ-ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರಾಜಕೀಯ ಷಡ್ಯಂತ್ರಗಳಾಗಿಯೂ, `ವಿರೋಧ ಪಕ್ಷಗಳ ಚಿತಾವಣೆಗಳಾಗಿಯೂ ಕಂಡುಬಿಡುತ್ತವೆ!


ಕೊನೆಯಲ್ಲಿ ನಾನು ಮೊದಲು ಉಲ್ಲೇಖಿಸಿದ ನನ್ನ ಪಾಠದ ಅಂಶಕ್ಕೆ ಬರುವುದಾದರೆ ತೆರಿಗೆಗೆ ಸಂಬಂಧಿಸಿದಂತೆ ಅಲ್ಲಿ ಬಳಸಿರುವ `ಕಡ್ಡಾಯ ವಂತಿಕೆ’ (Compulsory Contribution) ಎಂಬ ಪದಪುಂಜವನ್ನು ವಿಶೇಷವಾಗಿ ಗಮನಿಸಬೇಕು. ಇಲ್ಲಿರುವ `ಕಡ್ಡಾಯ’ ಎಂಬ ಪದವು ನಮ್ಮಲ್ಲಿ ಉಂಟುಮಾಡಬಹುದಾದ ಭಯವನ್ನು `ವಂತಿಕೆ’ ಎಂಬ ಪದವು ಹೋಗಲಾಡಿಸಿ ಅಭಯ ನೀಡುವಂತಿದೆ. ತೆರಿಗೆ ಎಂಬುದು ಈ ಭಯ-ಅಭಯಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಪ್ರಜೆಗಳು ಸಂತೋಷದಿಂದ ನಲಿಯುವ ಸಂದರ್ಭದಲ್ಲಿ ಅವರು ಆನಂದದಿಂದ ಮೈರೆತು ಕುಣಿಯುತ್ತಿರುವವಾಗ ಅವರ ಅರಿವಿಗೆ ಬರದಂತೆ ಎತ್ತಿಕೊಳ್ಳಬೇಕಾದ ಈ ತೆರಿಗೆಯನ್ನು ಅವರು ದುಃಖದಿಂದ ನರಳುವಂತೆ ಮಾಡಿ ಅವರ ಅರಿವಿನ ಆಳಕ್ಕೆ ಇರಿತವನ್ನುಂಟುಮಾಡಿ ಎತ್ತಿಕೊಳ್ಳುವುದರಿಂದ  ಜನರ ಮನಸ್ಸು ಸೂಕ್ಷ್ಮತೆ ಕಳೆದುಕೊಂಡು ಅವರು ರೂಕ್ಷರಾಗುವಂತೆ ಮಾಡುತ್ತದೆ. `ಮನಸ್ಸು ರೂಕ್ಷವಾಗುತ್ತಾ ಹೋದಂತೆ ಮನುಷ್ಯರು ರಾಕ್ಷಸರಾಗುತ್ತಾಹೋಗುತ್ತಾರೆ’ ಎಂಬುದು ಹಿರಿಯರು ಹೇಳುವ ಒಂದು ಅನುಭವನ ಮಾತು. ನಮ್ಮಲ್ಲಿ ಹಾಗಾಗದಿರಲಿ. – ರಾಜೇಂದ್ರ ಬುರಡಿಕಟ್ಟಿ

Thursday, June 29, 2017

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

ಬಂಡುಂಬ ಭ್ರಮರವೂ ಬಂಡಾಯದ ಕಾಗೆಗಳೂ...

`ಅಂಬುಜಕೆ ಭಾನುವಿನ ಉದಯದ ಚಿಂತೆ

 ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ'

ಇವು  ಬಸವಣ್ಣನವರ ವಚನವೊಂದರ ಎರಡು ಧ್ವನಿಪೂರ್ಣವಾದ ಸಾಲುಗಳು. ನಮ್ಮ ಚಿಂತೆಯನ್ನು ಅನುಸರಿಸಿಯೇ ನಮ್ಮ ಚಿಂತನೆಗಳು ಮೂಡುವುದನ್ನೂ ಚಿಂತನೆಯಂತೆಯೇ ನಾವು ಕ್ರಿಯಾಶೀಲರಾಗುವುದನ್ನು ಸಾಲುಗಳು ಸೂಚ್ಯವಾಗಿ ಅರುಹುತ್ತವೆ. ಕನ್ನಡದ ಮಹಾಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ತಮ್ಮೊಂದಿಗಿನ `ಸಂವಾದ'ವೊಂದರಲ್ಲಿ ಭಾಗವಹಿಸಿ ಚಳವಳಿಗಳು ಮತ್ತು ಪ್ರಗತಿಪರ ಸಾಹಿತ್ಯದ ಬಗೆಗಿನ ತಮ್ಮ ಮಾಮೂಲಿ ವಿಷಕಾರುವಿಕೆಯನ್ನು ಮಾಡಿದ್ದು ವರದಿಯಾಗಿದೆ. ಕೆಲವು ವರ್ಷಗಳ ಹಿಂದೆ ಭೈರಪ್ಪನವರು ಏನಾದರೂ ಹೇಳಿಕೆ ನೀಡಿದರೆ ಅದಕ್ಕೆ ನಮ್ಮ ಸಾಹಿತ್ಯ ವಲಯದಿಂದ ಬಹುದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿತ್ತು.

ಆದರೆ ಇತ್ತೀಚೆಗೆ ಅವರ ಹೇಳಿಕೆಗೆ ಕನ್ನಡದ ಯಾವ ಮುಖ್ಯ ಬರಹಗಾರರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುತ್ತಿಲ್ಲ. ಇದಕ್ಕೆ ಅವರ ವಿಚಾರವನ್ನು ಎಲ್ಲರೂ ಒಪ್ಪಿಕೊಂಡರು ಎಂದಾಗಲೀ ಅವರ ವಿಚಾರವನ್ನು ಎದುರಿಸುವ ಸಾಮಥ್ರ್ಯ ಯಾರಿಗೂ ಇಲ್ಲದಾಯಿತು ಎಂದಾಗಲೀ ಅರ್ಥವಲ್ಲ. ಬದಲಿಗೆ ಮನುಷ್ಯನ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಹುತೇಕರು ಬಂದಿದ್ದಾರೆಂದರ್ಥ. ಏಕೆಂದರೆ ದಾವಣಗೆರೆಯಲ್ಲಿ ಸಂವೇದನೆಯ ಸೂಕ್ಷ್ಮತೆಯ ಬಗ್ಗೆ ಮಾತಾಡಿರುವ ನಮ್ಮ ಭೈರಪ್ಪನವರು ಕನ್ನಡದ ಶಕ್ತಿಶಾಲಿ ಬರಹಗಾರರಲ್ಲಿ ಬಹುತೇಕ ಏಕೈಕ `ಸಂವಾದಸಾಧ್ಯ ಲೇಖಕ' ಅನ್ನಬಹುದು. ವರ್ಷಕ್ಕೆ ಒಂದೋ ಎರಡೋ ಬಾರಿ ಹುತ್ತದೊಳಗಿನಿಂದ ಹೊರಗೆ ಬರುವ ಹಾವೊಂದು ವಿಷವನ್ನು ಕಾರಿ ಮತ್ತೆ ಹುತ್ತ ಸೇರಿಕೊಳ್ಳುವ ಒಂದು ಚಿತ್ರಣವನ್ನು ನಾವು ಕಣ್ಣಮುಂದೆ ತಂದುಕೊಳ್ಳುವುದು ಅವರಿಗೆ ಮಾಡುವ ಅವಮಾನವೇನೂ ಆಗಲಿಕ್ಕಿಲ್ಲ

ಭೈರಪ್ಪನವರು ಕಳೆದ ವರ್ಷ ಬಹುತೇಕ ಹಸಿದವರ ಹೊಟ್ಟೆಗೆ ಒಂದಿಷ್ಟು ಅನ್ನಸಿಗುವುದಕ್ಕೆ ದಾರಿಯಾದ `ಅನ್ನಭಾಗ್ಯ' ಬಡವರ ಉಣ್ಣುವ ತಟ್ಟೆಗೆ ಕಲ್ಲುಹಾಕುವ ಮಾತುಗಳನ್ನು ಆಡಿ ಸಾಹಿತ್ಯ ಮಾತ್ರವಲ್ಲ ಅದರಾಚೆಗಿನ ದುಡಿಯುವ ವರ್ಗದಿಂದಲೂ ಎರ್ರಾಬಿರ್ರಿ ಬೈಸಿಕೊಂಡು ಹೋದವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಇದೇ ಮೊದಲೇನೋ. ಅವರ ಹೇಳಿಕೆಗಳಿಗೆ ಮತ್ತು ಅವರು ತಮ್ಮ ಕೃತಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಪ್ರತಿಪಾದಿಸುವ ಅನ್ಯಮತಧರ್ಮಗಳ ಬಗೆಗಿನ ದ್ವೇಷ-ರೋಷಗಳಿಗೆ, ತಮ್ಮದೇ ಧರ್ಮದ ಮಹಿಳೆಯರು, ದಲಿತರು ಮುಂತಾದವರ ಏಳಿಗೆ ಬಗೆಗಿನ ಅಸೂಯೆಗೆ ವ್ಯಕ್ತವಾಗುವ ಧನಾತ್ಮಕವೂ ವ್ಯಾಪಕವೂ ಆದ ಟೀಕೆಗಳು ಅವರನ್ನು ಮುಟ್ಟುತ್ತವೆಯೋ  ಇಲ್ಲವೋ ಭಗವಂತನೇ ಬಲ್ಲ. ಏಕೆಂದರೆ ಟೀಕೆಗಳಿಗೆ ಅವರಿಂದ ಯಾವುದೇ ಬಗೆಯ ಪ್ರತಿಕ್ರಿಯೆ ಬರುವುದಿಲ್ಲ.

ಹಾಗೆ ನೋಡಿದರೆ `ವಿವಾದಾತ್ಮಕ' ಎಂದು ಕರೆಯಬಹುದಾದ ಹೇಳಿಕೆ ನೀಡುವ, ಕೃತಿರಚಿಸುವ ಲೇಖಕರು ಕನ್ನಡದಲ್ಲಿ ಭೈರಪ್ಪ ಒಬ್ಬರೇ ಅಲ್ಲ. ಇನ್ನೂ ಹಲವರು ಇದ್ದರು ಮತ್ತು ಇದ್ದಾರೆ. ಆದರೆ ಅವರೆಲ್ಲರಲ್ಲಿ ಇರುವ ಒಂದು ಗುಣವಿಶೇಷತೆ ಎಂದರೆ ರೀತಿಯ ಧನಾತ್ಮಕವೋ ಋಣಾತ್ಮಕವೋ ಆದ ಟೀಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಬಂದಾಗ, ವಿವಾದಗಳು ಎದ್ದಾಗ, ಅವುಗಳಿಗೆ ತಮ್ಮ ಪ್ರತಿಕ್ರಿಯೆ ನೀಡುವಂಥದ್ದು ಮತ್ತು   ಮೂಲಕ ಎದ್ದ ವಿವಾದವನ್ನು ಮುಕ್ತಾಯ ಮಾಡುವುದು ಅಥವಾ ಬಗ್ಗೆ ಒಂದಿಷ್ಟು ಆರೋಗ್ಯಕರ ಚರ್ಚೆ ಮಾಡುವುದು. ಆದರೆ ಭೈರಪ್ಪನವರದ್ದು ಇದಕ್ಕೆ ವಿರುದ್ಧವಾದ ನಡೆ. ಒಮ್ಮೆ ಅವರು ಇಂತಹ ವಿವಾದಕ್ಕೆಡೆಮಾಡುವ ಹೇಳಿಕೆಯನ್ನು ನೀಡಿ ಅಂತರ್ಗತರಾದರೆ ಮುಗಿಯಿತು. ಅದರ ಬಗ್ಗೆ ಎಂತಹ ಉಗ್ರ ಪ್ರತಿಕ್ರಿಯೆ ಬಂದರೂ ಅದಕ್ಕೆ ಅವರು ಏನೊಂದೂ ಪ್ರತಿಕ್ರಿಯೆ ನೀಡಲಾರರು. ಯಾರೇ ಹೋರಾಡಲಿ ಊರೇ ಕೂಗಾಡಲಿ ಅವರ ನೆಮ್ಮದಿಗೆ ಭಂಗವಿಲ್ಲ! ಅವರು ಮತ್ತೆ ನಮಗೆ ಕಾಣಸಿಗುವುದು ಇನ್ನೊಂದೋ ಎರಡೋ ವರ್ಷಗಳ ನಂತರ. ಅದೂ ಇನ್ನೊಂದು ಇಂತಹ ವಿವಾದಾಸ್ಪದ ಹೇಳಿಕೆಯೊಂದಿಗೇ. ಇದೇ ಹಿನ್ನಲೆಯಲ್ಲಿ ಅವರನ್ನು ನಾನು ಅವರನ್ನು `ಸಂವಾದಸಾಧ್ಯ ಲೇಖಕ' ಎಂದದ್ದು. ಅವರ ಸಂವಾದರಾಹಿತ್ಯವೇ ಅವರ ಹೇಳಿಕೆಗಳನ್ನು ಸಾಹಿತ್ಯವಲಯ ತೀವ್ರ ನಿರ್ಲಕ್ಷಕ್ಕೆ ತಳ್ಳಲು ಇಂದು ಕಾರಣವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಓದುವ ವರ್ಗವನ್ನು ಹೊಂದಿಯೂ ಬೌದ್ಧಿಕವಲಯದಿಂದ ತಿರಸ್ಕಾರಕ್ಕೊಳಗಾದ ಭೈರಪ್ಪನವರು ವರ್ಷಕ್ಕೆ ಒಂದೋ ಎರಡೋ ಕಡೆ ನೇರವಾಗಿ ಓದುಗರೊಂದಿಗೆ ನಡೆಸುವ ಸಂವಾದದ ವರದಿಗಳು, ಐದೋ ಆರೋ ವರ್ಷಕ್ಕೊಮ್ಮೆ ಬರುವ ಅವರ `ಮಹಾ'ಕಾದಂಬರಿಗಳು ಅವರನ್ನು ಒಮ್ಮೆಗೆ ಸುದ್ದಿಗೆ ತಂದು ಒಂದಿಷ್ಟು ದಿನ ಚಲಾವಣೆಗೊಳಿಸಿ ಸುಮ್ಮನಾಗಿಸುತ್ತವೆ. ಅವರ `ಅಪಾರ ಓದುವ ವರ್ಗ' ವಿಶಿಷ್ಟ ಬಗೆಯದು. ಕುವೆಂಪು ಸಾಹಿತ್ಯವನ್ನು ವಿಮರ್ಶೆ ಮಾಡುತ್ತ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್, `ಪ್ರಕೃತಿ ಎಂಬುದು ಕುವೆಂಪು ಅವರ ಮಿತ್ರನೂ ಹೌದು ಶತ್ರುವೂ ಹೌದು' ಎಂದು ಬರೆದಿದ್ದರು. ಇದನ್ನೇ ಭೈರಪ್ಪನವರಿಗೆ ಅನ್ವಯಿಸಿ ಹೇಳುವುದಾದರೆ `ಅವರ ಅಪಾರ ಓದುವ ವರ್ಗ ಅವರ ಮಿತ್ರನೂ ಹೌದು ಶತ್ರುವೂ ಹೌದು. ಮಿತ್ರ ಯಾಕೆಂಬುದದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಶತ್ರು ಯಾಕೆಂದರೆ ಅವರಲ್ಲಿ ಬಹಳಷ್ಟು ಓದುಗರು ಸಾಹಿತ್ಯಕ್ಕಿಂತ ಧಾರ್ಮಿಕ ಕಾರಣಗಳಿಗಾಗಿ ಅವರ ಕೃತಿಗಳನ್ನು ಓದುವಂಥವರು ಅಥವಾ ಪಾರಾಯಣ ಮಾಡುವಂಥವರು.

ಇನ್ನು ಕೆಲವರು ಓದದೆಯೂ ಅವರ `ಅಭಿಮಾನಿ' ಆದವರು; ಅವರನ್ನು ಒಂದು ರೀತಿಯಲ್ಲಿ ಆರಾಧಿಸುವಂಥವರು. ಯಾವುದೇ ಲೇಖಕ ಇರಬಹುದು. ಅವನು ರೀತಿಯ ಭಾವನಾತ್ಮಕ ಭಕ್ತರ ನಡುವೆ ಸಿಕ್ಕಿಹಾಕಿಕೊಂಡರೆ ಅವನ ಕಥೆ ಮುಗಿಯಿತು.  ಅಲ್ಲಿಂದ ಮುಂದೆ ಲೇಖಕ ತನ್ನ ಭಕ್ತರ `ಭಾವನೆಗೆಗಳಿಗೆ ಧಕ್ಕೆ' ಬರದ ರೀತಿಯಲ್ಲಿ ಬರೆಯಬೆಕಾದ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡಬೇಕಾಗುತ್ತದೆ. (ಈಗ ಉಡುಪಿಯ ಕೃಷ್ಣಮಠದ ಆವರಣದಲ್ಲಿ ರಂಜಾನ್ ಇಫ್ತಾರ್ ಕೂಟ ನಡೆಸಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಪೇಚಾಡುತ್ತಿರುವ ಪೇಜಾವರ ಸ್ವಾಮಿಗಳನ್ನು ನೆನಪಿಸಿಕೊಳ್ಳಬಹುದು) ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ಏಕೆಂದರೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಕಷ್ಟವನ್ನು ಪರಿಹರಿಸದಿದ್ದರೆ ತಾವು ಅದುವರೆಗೂ ಹೊತ್ತು ಮೆರೆಸುತ್ತಿದ್ದ ದೇವರ ಮೂರ್ತಿಯನ್ನೆ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸುವ ಭಕ್ತರು ಲೇಖಕನಂಥ ಬಡಪ್ರಾಣಿಯನ್ನು ಸುಮ್ಮನೆ ಬಿಡುತ್ತಾರೆಯೇ? ಹೆಚ್ಚುಕಡಿಮೆ ಭೈರಪ್ಪನವರಂತೆ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯಂಥವರಿಗೆ ರೀತಿಯ ಇಕ್ಕಟ್ಟುಗಳು ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಭೈರಪ್ಪನವರ ಚೀಟಿಸಂವಾದ

ಭೈರಪ್ಪನವರು ತಮ್ಮ ಓದುಗರೊಂದಿಗೆ ನಡೆಸುವ ಸಂವಾದದ ಸ್ವರೂಪ ಸಾಮಾನ್ಯವಾಗಿ ಹೇಗಿರುತ್ತದೆ ಎಂಬುದಕ್ಕೆ ಒಂದು ನಿದರ್ಶನ ಕೊಡಬಹುದು ಅನ್ನಿಸುತ್ತಿದೆ.  2011 ರಲ್ಲಿ ಇರಬಹುದು. ತೀರ್ಥಹಳ್ಳಿಯಲ್ಲಿ ಭೈರಪ್ಪನವರೊಡನೆ ಸಂವಾದ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ನಾನು ಅಲ್ಲಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಕಾರಣಕ್ಕೋ ಏನೋ ಕಾರ್ಯಕ್ರಮದ ವೇದಿಕೆಗೆ ನನ್ನನ್ನು ಸಂಘಟಕರು ಕರೆದಿದ್ದರು. ಭೈರಪ್ಪನವರ ಆರಂಭದ ಕಾದಂಬರಿಗಳನ್ನು ನನ್ನ ತಾರುಣ್ಯದ ಆರಂಭದ ದಿನಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಸೊಂಟನೋವು ಬಂದರೂ ಏಳದೇ ಹಟವಿಟ್ಟು ಓದುತ್ತಿದ್ದ ಮತ್ತು ಅವುಗಳಿಂದ ಬಹಳಷ್ಟು ಪ್ರಭಾವಿತನಾಗಿದ್ದ ನಾನು ಸಹಜವಾಗಿಯೇ ಆಸಕ್ತಿಯಿಂದ ಕಾರ್ಯಕ್ರಮಕ್ಕೆ ಹೋಗಿದ್ದೆ. ಹೋಗುವಾಗ ನನ್ನ ಕಾರು ಕೆಟ್ಟು ನಾನು ದಾರಿಮೇಲೆ ಆದಾಗ ಸಂಘಟಕರು ಬೇರೆ ಕಾರು ಕಳಿಸಿ ನನ್ನನ್ನು ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ ದೊಡ್ಡಗುಣವನ್ನೂ ತೋರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಭೈರಪ್ಪನವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಗೆ ಹೋಗಿ ಅವರಿಗೆ ನಮಸ್ಕರಿಸಿ ನನ್ನ ಗೌರವವನ್ನು ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಬಂದ ನನಗೆ ಸಭಾಂಗಣದ ತುಂಬ ಜನ ಇದ್ದದ್ದು ನೋಡಿ ಆಶ್ಚರ್ಯವಾಯಿತು. ಏಕೆಂದರೆ ಅತಿರಥ ಮಹಾರಥರೆನಿಸುವ ಕನ್ನಡದ ಸಾಹಿತಿಗಳನ್ನು ನಾನು ಮತ್ತು ನನ್ನ ಹಿಂದಿನ ಅಧ್ಯಕ್ಷರು ತೀರ್ಥಹಳ್ಳಿಗೆ ಕರೆಸಿದಾಗ್ಯೂ ಅಷ್ಟೊಂದು ಜನ ಸೇರಿರಲಿಲ್ಲ. ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದೆ. ಎಂದೆಂದೂ ಆಸ್ಪತ್ರೆಯ ಹೊರಗೆ ಕಾಲು ಹಾಕದ ಯಾವಾಗಲೂ `ಬ್ಯೂಜಿ' ಆಗಿರುವ ವೈದ್ಯರೂ ಸೇರಿದಂತೆ ವಿವಿಧ ವಲಯದ ಜನ ಅಲ್ಲಿ ಸೇರಿದ್ದರು. ಭೈರಪ್ಪನವರ ಯಾವುದಾದರೂ ಪುಸ್ತಕ ಪ್ರಕಟವಾದ ಕೂಡಲೇ ಅದರ ನೂರಾರು ಪ್ರತಿಗಳನ್ನು ತರಿಸಿಕೊಂಡು ಮನೆಮನೆಗೆ ತಲುಪಿಸಿ `ಓದಿಸುವ ಕಾಯಕ'ದಲ್ಲಿ ನಿರತರಾಗಿದ್ದ ಇಬ್ಬರು ಮೂವರು `ಸಾಹಿತ್ಯ ಪರಿಚಾರಕ'ರೂ ಸಭಿಕರ ಮಧ್ಯೆ ಅತ್ತಿಂದಿತ್ತ ಓಡಾಡುತ್ತಿದ್ದರು.

ಎಂದೂ ಬರದ ಇವರೆಲ್ಲ ಎಲ್ಲಿಂದ ಬಂದರು ಎಂದು ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಸತ್ಯ ಅರ್ಥವಾಯಿತು. ಅವರೆಲ್ಲ `ಸಾಹಿತ್ಯಾಭಿಮಾನಿಗಳು' ಆಗಿರಲಿಲ್ಲ. `ಭೈರಪ್ಪಾಭಿಮಾನಿಗಳು' ಆಗಿದ್ದರು. ತೀರ್ಥಹಳ್ಳಿಯವರೇ ಆದ ಕುವೆಂಪು ಅವರ ಯಾವ ಒಂದು ಪುಸ್ತಕದ ಹೆಸರು ಗೊತ್ತಿರದವರೂ ಅಲ್ಲಿ ಬಹಳಷ್ಟು ಜನರಿದ್ದರು. ವಿಶೇಷವೆಂದರೆ ಬಹುತೇಕ ಒಂದೇ `ಕುಲಬಾಂಧವ'ರಾಗಿದ್ದರು! ಇದು ಎಂಥದ್ಧಾದರೂ ಆಗಲಿ ಸಂವಾದ ಹೇಗೆ ನಡೆಯಿತು ಗಮನಿಸಿ:  

ಅದನ್ನು ಸಂವಾದ ಎಂದು ಹೇಗೆ ಕರೆಯಬಹುದೋ ತಿಳಿಯದು. ಆರಂಭದಲ್ಲಿಯೇ ಸಭಿಕರಿಗೆ ಮೂರು ಕಂಡೀಶನ್ಗಳನ್ನು ಹಾಕಲಾಯಿತು. ಮೊದಲ ಎರಡು ಕಂಡೀಶನ್ಗಳನ್ನು ಭೈರಪ್ಪನವರೇ ಮೈಕು ಹಿಡಿದುಕೊಂಡು ಹೇಳಿದರು. ಅವೆಂದರೆ ಒಂದು: `ಯಾರು ರಾಜಕೀಯದ ಪ್ರಶ್ನೆಗಳನ್ನು ಕೇಳಬಾರದು'. ಇನ್ನೊಂದು: `ಪ್ರಶ್ನೆಗಳು ಶುದ್ಧ ಸಾಹಿತ್ಯದ ಬಗ್ಗೆ ಮಾತ್ರ ಇರಬೇಕು'. ಮೂರನೇ ಕಂಡೀಶನ್ನನ್ನು ಅವರ ಪರವಾಗಿ ಸಂಘಟಕರು ಅನೌನ್ಸ್ ಮಾಡಿದರು. ಕಂಡೀಶನ್: `ಪ್ರಶ್ನೆಗಳನ್ನು ಯಾರೂ ಎದ್ದುನಿಂತು ಕೇಳಬಾರದು, ಕೇಳಬಯಸುವ ಪ್ರಶ್ನೆಯನ್ನು ಚೀಟಿಯಲ್ಲಿ ಬರೆದು ಕೊಡಬೇಕು,' ನನಗೆ ಶರತ್ತುಗಳನ್ನು ನೋಡಿ ಕಿರಿಕಿರಿಯಾಗತೊಡಗಿತು.

ಸಂಘಟಕರು ಕುಳಿತ ಜನರಿಗೆ ಬಿಳಿಹಾಳೆಯ ಖಾಲೀ ಚೀಟಿಗಳನ್ನು ಹಂಚಿದರು. ಹಂಚಲ್ಪಟ್ಟ ಚೀಟಿಗಳನ್ನು ಸಭಿಕರಿಂದ ಸಂಗ್ರಹಿಸಿ ಒಂದು ಬುಟ್ಟಿಯಲ್ಲಿ ಸಂಗ್ರಹಿಸಿ ವೇದಿಕೆಗೆ ತರಲಾಯಿತು. ವೇದಿಕೆಯ ಮೇಲೆ ಭೈರಪ್ಪನವರು ಮಧ್ಯೆ ಕುಳಿತಿದ್ದರು. ಒಂದು ಕಡೆ ನಾನು ಇನ್ನೊಂದು ಕಡೆ ಸಂಘಟಕರ ಪರವಾಗಿ ಹಿರಿಯರೊಬ್ಬರು ಕುಳಿತಿದ್ದರು. ಹಿರಿಯರು ಬುಟ್ಟಿಯೊಳಗಿನ ಚೀಟಿಗಳನ್ನು ಒಂದೊಂದಾಗಿ ಭೈರಪ್ಪನವರಿಗೆ ಕೊಡುತ್ತಾ ಹೋದರು. ಭೈರಪ್ಪನವರು ಅವನ್ನು ಬಿಚ್ಚಿನೋಡಿ ಕೆಲವು ಚೀಟಿಯೊಳಗಿನ ಕೆಲವು ಪ್ರಶ್ನೆಗಳನ್ನು `ಆಯ್ದುಕೊಂಡು' ಉತ್ತರಿಸುತ್ತಾ ಹೋದರು. ಕೆಲವು ಚೀಟಿಗಳನ್ನು ಬಿಚ್ಚಿನೋಡಿ ಏನೊಂದೂ ಮಾತನಾಡದೆ ಅವನ್ನು ಪಕ್ಕಕ್ಕೆ ತಳ್ಳುತ್ತಾ ಹೋದರು. ಹೀಗೆ ತಳ್ಳಲ್ಪಟ್ಟ ಚೀಟಿಗಳನ್ನು ಟೇಬಲ್ ಕೆಳಗೆ ಇಟ್ಟಿದ್ದ ಇನ್ನೊಂದು ಬುಟ್ಟಿಗೆ (ಕಸದಬುಟ್ಟಿ)ಗೆ ಹಾಕುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಕಸದ ಬುಟ್ಟಿಗೆ ಹಾಕಲಾದ ಚೀಟಿಗಳಲ್ಲಿ ಯಾವ ಪ್ರಶ್ನೆಗಳಿದ್ದವು ಎಂಬುದು ಯಾರಿಗೂ ತಿಳಿಯಲೇ ಇಲ್ಲ!

ಸಂವಾದ ಎಂದರೆ ಪ್ರಶ್ನೆಕೇಳುವುದು ಮತ್ತು ಉತ್ತರ ಹೇಳುವುದು ಇರುತ್ತದೆ ಎಂದು ತಿಳಿದುಕೊಂಡಿದ್ದ ನನಗೆ ವಿಚಿತ್ರವಾದ `ಚೀಟಿಸಂವಾದ' ನೋಡಿ ತುಂಬಾ ನಿರಾಸೆಯಾಯಿತು. ದೊಡ್ಡಸಾಹಿತಿ ಎಂದು ರಜಾದಿನವನ್ನೂ ಗಮನಿಸದೇ ಬಂದಿದ್ದ ಪತ್ರಿಕೆಯ ವರದಿಗಾರಿಗೆ ಚಿಕ್ಕ ಪ್ರಶ್ನೆಗಳನ್ನೂ ಕೇಳಲು ಬಿಡಲಿಲ್ಲ. ಅವರಲ್ಲಿ ಬಹಳಷ್ಟು ಜನ ನಿರಾಶರಾಗಿ `ಇದು ಯಾವ ಸೀಮೆ ಸಂವಾದರೀ' ಎಂದು ತಲೆಕೊಡವಿಕೊಂಡು ಎದ್ದು ಹೋದರು. ಇಡೀ ಕಾರ್ಯಕ್ರಮ ಸಂವಾದ ಎಂದು ಕರೆಸಿಕೊಂಡಿದ್ದರೂ ಮಾತನಾಡಿದ್ದು ಭೈರಪ್ಪ ಮಾತ್ರ. ಎಲ್ಲರೂ ಅವರು ಹೇಳಿದ್ದನ್ನು ಕೇಳಿದರು ಅಷ್ಟೆ. ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ನಾನು ಸಂಘಟಕರಿಗೆ ಹೇಳಿದೆ, ʻ ರೀತಿ ಸಂವಾದ ಮಾಡುವ ಬದಲು ಎಲ್ಲ ಚೀಟಿಗಳನ್ನು ಭೈರಪ್ಪನವರ ಮನೆಗೇ ಕಳಿಸಿ ಅಲ್ಲಿಂದ ಉತ್ತರ ತರಿಸಿಕೊಳ್ಳಬಹುದಿತ್ತು. ಅವರನ್ನು ಅಷ್ಟು ದೂರದಿಂದ ಕರೆಸಿಕೊಳ್ಳುವ ಅಗತ್ಯವೇ ಇರಲಿಲ್ಲಅವರ ಎಲ್ಲ ಸಂವಾದಗಳು ಹೀಗೆಯೇ ನಡೆಯದಿರಬಹುದಾದರೂ ಬಹುತೇಕ ಅವುಗಳ ಒಳಸ್ವರೂಪಗಳಲ್ಲಿ ಬಹಳ ವ್ಯತ್ಯಾಸವಿರುವುದಿಲ್ಲ.

ಕಿಡಿಕಾರುವ ಹೇಳಿಕೆಗಳು

ಭೈರಪ್ಪನವರು ನಮ್ಮಲ್ಲಿ ತಮ್ಮ ಕೃತಿಗಳಿಂದ ಹೇಗೆ ಪ್ರಸಿದ್ಧರೋ ಹಾಗೇ ಬಗೆಯ ಚರ್ಚಾಸ್ಪದ ಹೇಳಿಕೆಗಳಿಂದಲೂ ಪ್ರಸಿದ್ಧರು. ಅವರ ಇಂತಹ ಹೇಳಿಕೆಗಳ ಒಂದು ದೊಡ್ಡ ಸರಮಾಲೆಯೇ ಇದೆ. ಮೂರು-ನಾಲ್ಕು ಸಂದರ್ಭಗಳನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದು. ಅವರಿಗೆ ನಾಡಿನ ಅತಿದೊಡ್ಡ ಸಾಹಿತ್ಯ ಪ್ರಶಸ್ತಿಯಾದ ಪಂಪಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸುತ್ತಾ ಬನವಾಸಿಯಲ್ಲಿ, 'ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ' ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಆಗ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮದ ವೇದಿಕೆಯಿಂದ ಪ್ರತಿಕ್ರಿಯೆ ನೀಡಿದ್ದ ಚಂಪಾ, `ಇದು ಭೈರಪ್ಪನವರ ಹೇಳಿಕೆ ಅಷ್ಟೇ ಆಗಿರಲಾರದು. ಅದು ಅವರ ಆಶಯ ಕೂಡ ಆಗಿರಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆ ಆಗಬಾರದು ಎಂಬುದು ಅವರ ಆಶಯವಾಗಿರದಿದ್ದರೆ ಅವರು ಇಂತಹ ಹೇಳಿಕೆಯನ್ನು ನೀಡುತ್ತಿರಲಿಲ್ಲ.' ಎಂದು ಪ್ರತಿಕ್ರಿಯಿಸಿದ್ದರು. ಇನ್ನೊಂದು ಸಂದರ್ಭ:  ಭೈರಪ್ಪನವರು ಶಿವಮೊಗ್ಗದ ಕರ್ನಾಟಕ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ `ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮಾರ್ಕಿಸ್ಟ್, ಬಂಡಾಯ, ಸ್ತ್ರೀವಾದಿ ದಲಿತ ಹೀಗೆ ನಾನಾ ಸಾಹಿತ್ಯಗಳು ಯಾವುದೇ ರಸವನ್ನು ಹೊಂದದೆ ಸಾಹಿತ್ಯ ಕ್ಷೇತ್ರದ ಮೇಲೆ ದಾಳಿಮಾಡಿದವು' ಎಂದಿದ್ದರು. ಹೀಗೆ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯ ಜನಮಾನಸದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದಿದ್ದ ಅವರು ಇದು ಕನ್ನಡ ಸಾಹಿತ್ಯಕ್ಕೆ‌, ಜನಜೀವನಕ್ಕೆ ಆದ ಒಂದು ನಷ್ಟ ಎಂಬರ್ಥದ ಮಾತುಗಳನ್ನು ಆಡಿದ್ದರು

ಬೆಂಕಿಗಾಹುತಿಯಾದ ಅಧ್ಯಕ್ಷರ ಭಾಷಣ ಮತ್ತು ಮಹಿಳಾ ಸಾಹಿತಿಗಳ ಮಂಗಳಾರತಿ

ಹಾಗೆಯೇ ಕನಕಪುರದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಚಳವಳಿಗಳ ಬಗ್ಗೆ ತಮ್ಮ ಅಖಂಡವಾದ ತಿರಸ್ಕಾರವನ್ನೂ ಶುದ್ಧಸಾಹಿತ್ಯದ ಬಗೆಗಿನ ತಮ್ಮ ಅಪರಿಮಿತ ಪ್ರೇಮವನ್ನು ವ್ಯಕ್ತಪಡಿಸಿ ಪ್ರಗತಿಪರ ಲೇಖಕರನೇಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಕ್ಕೆ ಅಪಸ್ವರ ಅದೇ ಮೊದಲೇನೂ ಆಗಿರಲಿಲ್ಲ. ಅಪಸ್ವರ, ಭಿನ್ನಾಭಿಪ್ರಾಯ ಇವೆಲ್ಲ ಮೊದಲೂ ಇದ್ದವು. ನಂತರವೂ ಬಂದವು. ಆದರೆ ನನಗೆ ತಿಳಿದ ಮಟ್ಟಿಗೆ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಅಧ್ಯಕ್ಷರ ಭಾಷಣದ ಪ್ರತಿಯೊಂದಕ್ಕೆ ಬೆಂಕಿಹಚ್ಚಿ ಸುಡುವ ಘಟನೆ ನಡೆದದ್ದು ಕನಕಪುರ ಸಮ್ಮೇಳನವೊಂದರಲ್ಲಿಯೇ.  

ಇದು ಹೀಗಾದರೆ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಇನ್ನೊಂದು ಘಟನೆ ನಡೆಯಿತು.  ಹೊಟ್ಟೆಪಾಡಿಗೆ ಮನೆಬಿಟ್ಟು ಹೊರಗೆ ದುಡಿಯಲು ಹೋಗುವ ಮಹಿಳೆಯರ ಶೀಲ-ಚಾರಿತ್ರ್ಯಗಳನ್ನು ಜನ ಸಂಶಯದಿಂದ ಕಾಣುವಂತೆ ಮಾಡಬಲ್ಲ ಕೃತಿಯೊಂದನ್ನು ಅದೇ ಆಗ ಹೊರತಂದು ಮಹಿಳೆಯರ ಘನತೆ ಗೌರವಗಳಿಗೆ ಧಕ್ಕೆ ತರುವಂಥ ಕೆಲಸ ಮಾಡಿದ `ಆರೋಪ'ಕ್ಕೆ ಗುರಿಯಾಗಿದ್ದ ಅವರು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಹೋದನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ ನಾಡಿನ ಮುಖ್ಯ ಮಹಿಳಾ ಸಾಹಿತಿಗಳೆಲ್ಲರೂ ಅವರ ಸ್ತ್ರೀದ್ವೇಷವನ್ನು ಹಿಗ್ಗಾಮುಗ್ಗಾ ಥಳಿಸಿ `ಮಹಾಮಂಗಳಾರತಿ' ಎತ್ತಿದ್ದು ದೊಡ್ಡ ಸುದ್ಧಿಯಾಯಿತು.  

ಹೆಚ್ಚೂ ಕಡಿಮೆ ಅವರು ಇದುವರೆಗೆ ಆಡುತ್ತಾ ಬಂದ ಮಾತುಗಳನ್ನೇ ದಾವಣಗೆರೆಯಲ್ಲೂ ಮತ್ತೆ ಆಡಿದ್ದಾರೆ. ಅನಂತಮೂರ್ತಿ ಅವರ ಬಗ್ಗೆ (ಬಹುಶಃ ತೇಜಸ್ವಿ ಮಾಡಿದ್ದಿರಬೇಕು) ಒಂದು ಟೀಕೆ ಇತ್ತು, ಅನಂತಮೂರ್ತಿ ಬರೆದದ್ದು ಒಂದೇ ಒಂದು ಕತೆ ಅದು `ಎಂದೆಂದೂ ಮುಗಿಯದ ಕತೆ' ಎಂದು. ಹಾಗೇ ಭೈರಪ್ಪನವರ ಬಗ್ಗೆಯೂ ಪ್ರೀತಿಯಿಂದಲೇ ಮಾಡಬಹುದಾದ ಒಂದು ಟೀಕೆ ಎಂದರೆ `ಭೈರಪ್ಪ ಯಾವಾಗಲೂ ಹೇಳುವುದು ಬರೆಯುವುದು ಒಂದೇ ಒಂದು ತತ್ವ, ಅದು, `ಸಮಾಜ ಬದಲಾವಣೆ ಸಾಹಿತ್ಯದ ಅಂದರೆ ಸಾಹಿತಿಯ ಜವಾಬ್ದಾರಿ ಅಲ್ಲ, ಅದು ಆಗಬೇಕಾದ ಕೆಲಸವೂ ಅಲ್ಲ.'

ವಿವಿ ಪ್ರಧ್ಯಾಪಕರ ಮೇಲೆ ಕೋಪ

ಇನ್ನೊಂದು ಅಂಶವೇನೆಂದರೆ ಭೈರಪ್ಪನವರಿಗೆ ನಮ್ಮ ವಿಶ್ವವಿದ್ಯಾಲಯಗಳ ಬಗ್ಗೆ ಅಲ್ಲಿನ `ಬುದ್ಧಿಜೀವಿ' ಪ್ರಾಧ್ಯಾಪಕರ ಬಗ್ಗೆ ಅಪಾರವಾದ ಕೋಪ. ಪ್ರಾಧ್ಯಾಪಕರು ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುರುಕುತ್ತಾರೆ ಎಂಬುದು ಅವರ ಕೋಪಕ್ಕೆ ಇರುವ ಮುಖ್ಯ ಕಾರಣ. ಅವರ ಯಾವುದೇ ಬಗೆಯ ಅಪರೂಪದ ಸಂವಾದದ ವರದಿಯಲ್ಲಿ ಅವರ ಬುದ್ದಿಜೀವಿಗಳ ಬಗೆಗಿನ ಕೋಪ ವ್ಯಕ್ತವಾಗದಿದ್ದರೆ ಅದು ಅವರ ಕಾರ್ಯಕ್ರಮವೇ ಅಲ್ಲವೇನೋ ಅನ್ನಿಸುವಷ್ಟು ಅದು ಸಾಮಾನ್ಯವಾಗಿಬಿಟ್ಟಿದೆ. ಭೈರಪ್ಪನವರು ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ತತ್ವಸಿದ್ಧಾಂತಗಳಿಗೆ ಕನ್ನಡ ಸಾಹಿತ್ಯ ತೆರೆದುಕೊಳ್ಳದೇ ಇದ್ದಿದ್ದರೆ ಇಂದಿನ ಕನ್ನಡ ಸಾಹಿತ್ಯದ ಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಒಂದು ಕ್ಷಣ ಯೋಚಿಸೋಣ. ಈಗಲೂ ನಾವೆಲ್ಲರೂ ಅಲ್ಲಿಂದ ಹಿಂದೆ ಇದ್ದ `ರಸಭರಿತ' ಸಾಹಿತ್ಯವನ್ನೇ ಬರೆಯುತ್ತಾ ಓದುತ್ತಾ ಇರಬೇಕಾಗುತ್ತಿತ್ತು.

ಇಲ್ಲವೇ ಅಲ್ಲಿಂದ ಹಿಂದಿನ ಕೃತಿಗಳ ಪರಿಷ್ಕೃತ ಆವೃತ್ತಿಗಳನ್ನು ತರುತ್ತಾ ಹೋಗಬೇಕಾಗುತ್ತಿತ್ತು. ಆದರೆ ಕನ್ನಡ ಸಾಹಿತ್ಯ ತತ್ವಸಿದ್ಧಾಂತಗಳಿಗೆ ತೆರೆದುಕೊಂಡಿದ್ದರಿಂದಲೇ ಇಂದು ಇಡೀ ದೇಶ ಗಮನಿಸುವಷ್ಟು ಮಹತ್ವದ ಸಾಹಿತ್ಯವನ್ನು (ಕನ್ನಡಕ್ಕೆ ಬಂದಿರುವ ಜ್ಞಾನಪೀಠ ಮತ್ತಿತರ ಪ್ರಶಸ್ತಿಗಳ ಸಂಖ್ಯೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾತನ್ನು ಹೇಳುತ್ತಿಲ್ಲ) ರಚಿಸಲು ಸಾಧ್ಯವಾಯಿತು. ತತ್ವಸಿದ್ಧಾಂತಗಳಿಗೆ ಅನುಗುಣವಾಗಿ ರಚಿತವಾದ ಸಾಹಿತ್ಯವೇ ಕರ್ನಾಟಕ ಮಾತ್ರವಲ್ಲ ಭಾರತದ ಬಹುಪಾಲು ಜನರಿಗೆ ಉಸಿರಾಡುವ ಶಕ್ತಿಯನ್ನೂ ಬಿಡುಗಡೆಯ ಬದುಕನ್ನೂ ನೀಡಿತು. ಹಾಗಾಗಿ ಭೈರಪ್ಪನವರು ಹೇಳುವಂತೆ ತತ್ವಸಿದ್ದಾಂತಗಳು ಕನ್ನಡ ಸಾಹಿತ್ಯಕ್ಕೆ ಬಂದದ್ದು ಒಂದು `ದಾಳಿ'ಯಾಗಿ ಅಲ್ಲ; ಬಿಡುಗಡೆಯ ಒಂದು `ದಾರಿ'ಯಾಗಿ.

ಶುದ್ಧಸಾಹಿತ್ಯ ಎಂಬ ರಸಪೂರಿತ ಮಾವಿನ ಹಣ್ಣು

ಭೈರಪ್ಪನವರಂತಹ ಲೇಖಕರಿಗೆ ಓದುಗನಲ್ಲಿ ರಸಾನಂದವನ್ನುಂಟುಮಾಡುವುದು ಮೂಲಕ `ಜನಮಾನಸದಲ್ಲಿ ಯಶಸ್ವಿಯಾಗುವ' ಸಾಹಿತ್ಯ ರಚಿಸುವುದು ಆದ್ಯತೆಯಾಗಿದ್ದರೆ ಬಗೆಯ ಸಾಹಿತ್ಯ ರಚಿಸಿದ ಲೇಖಕರಿಗೆ `ಜನಮಾನಸವನ್ನು ಬಂಧನಗಳಿಂದ ಬಿಡುಗಡೆಗೊಳಿಸುವುದು' ಅವರ `ಸಂಕಟಗಳಿಗೆ ತಕ್ಕಮಟ್ಟಿನ ಸಾಂತ್ವಾನವನ್ನು ಹೇಳುವುದು' ಆದ್ಯತೆಯಾಗಿತ್ತು. ಕೊನೆಯಲ್ಲಿ ಬಸವಣ್ಣನವರ ಮೇಲೆ ಉಲ್ಲೇಖಿಸಲ್ಪಟ್ಟ ವಚನಸಾಲುಗಳಿಗೆ ಬರುವುದಾದರೆ ಭ್ರಮರವಾಗಿ ಬಂಡುಂಬುವುದು ಭೈರಪ್ಪನಂಥವರ ಚಿಂತೆಯಾದರೆ ಸರ್ವರಿಗೂ ಚೈತನ್ಯವನ್ನು ನೀಡುವ `ಭಾನು'ವಿನ ಉದಯಕ್ಕಾಗಿ `ಅಂಬುಜ'ವಾಗಿ ಕಾತುರದಿಂದ ಕಾಯುವ ಮತ್ತು ಉದಯಉತ್ಸಾಹ ಜನರಲ್ಲಿ ಕುಗ್ಗದಂತೆ ಕಾಗೆಗಳಾಗಿ ಕೂಗಿಕೂಗಿ ಎಚ್ಚರಿಸುವ ಚಿಂತೆಗಳು ಬಂಡಾಯವೂ ಸೇರಿದಂತೆ ಬಹುತೇಕ ಪ್ರಗತಿಪರ ಲೇಖಕರದ್ದು. ಅವರವರ ಆಲೋಚನಾ ಕ್ರಮ ಅವರವರ ಬರಹಗಳ ಆದ್ಯತೆಯನ್ನು ನಿರ್ಧರಿಸುತ್ತವೆ. ಇಷ್ಟಾಗಿಯೂ ಭೈರಪ್ಪನವರು ಹೇಳುವ `ರಸಭರಿತ' ಅಥವಾ `ರಸಪೂರಿತ' ಸಾಹಿತ್ಯ ಎಂಬುದು ರಸಪೂರಿತ ಮಾವಿನ ಹಣ್ಣೋ ಅಥವಾ ಕಬ್ಬಿನ ಜಲ್ಲೆಯೋ ಇದ್ದಂತೆ. ಅವನ್ನು ಒಂದು ಸಾರಿ ತಿಂದು (ಓದಿ) ಆನಂದಿಸಿದರೆ ಅಲ್ಲಿ ಉಳಿಯುವುದು ಸಿಪ್ಪೆ ಮತ್ತು ಹೋಟೆ ಮಾತ್ರ. ಮತ್ತೆ ಕೃತಿಗಳ ಕಡೆ ನೋಡುವಂಥದ್ದೇನೂ ಇರುವುದಿಲ್ಲ

ಆದರೆ ಸಿದ್ಧಾಂತ ಆಧಾರಿತ ಸಾಹಿತ್ಯ ಕೃತಿಗಳು `ರಸಾನಂದ'ಕ್ಕಿಂತ `ಜಾಗೃತಿ'ಯನ್ನು ಗುರಿಯಾಗಿಟ್ಟುಕೊಂಡಿರುವುದರಿಂದ ಅವುಗಳು ಎಲ್ಲಿಯವರೆಗೂ ನಮ್ಮ ಸಮಾಜ ಸಮಸ್ಯೆಗಳಿಂದ ಸಂಪೂರ್ಣವಾಗಿ ಬಿಡುಗಡೆಹೊಂದುವುದಿಲ್ಲವೋ ಅಲ್ಲಿಯವರೆಗೂ ತಮ್ಮ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ. ಇದೇ ಸಿದ್ಧಾಂತಕ್ಕನುಗುಣವಾಗಿ ರಚಿತವಾದ ಸಾಹಿತ್ಯದ ಶಕ್ತಿ! ಇಲ್ಲಿ ಎದುರಾಗುವ ಪ್ರಮುಖ ಪ್ರಶ್ನೆ ಎಂದರೆ ಎಲ್ಲ ಸಿದ್ಧಾಂತಗಳಿಂದ ಬಿಡಿಸಿಕೊಂಡ, ಭೈರಪ್ಪನವರು ಪದೇಪದೇ ಹೇಳುವ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಎಂಬುದು. ಏಕೆಂದರೆ ನಮ್ಮೆಲ್ಲರ ನಿಲುವುಗಳೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ನಿಲುವುಗಳೇ ಆಗಿರುತ್ತವೆಯಂತೆ. ನಾನು ಯಾವ ರಾಜಕೀಯ ನಿಲುವಿಗೂ ಸೇರಿದವನಲ್ಲ ಎಂಬ ನಿಲುವು ಕೂಡ ನಮ್ಮ ಒಂದು ರಾಜಕೀಯ ನಿಲುವೇ ಆಗಿರುತ್ತದೆ ಹೇಗೋ ಹಾಗೆ ನಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ ಎಂಬ ಧೋರಣೆಯೂ ನಮ್ಮ ಒಂದು ಸೈದ್ಧಾಂತಿಕ ಧೋರಣೆಯೇ ಆಗಿರುತ್ತದೆ!

 ಹೀಗಾಗಿ `ಶುದ್ಧಸಾಹಿತ್ಯ' ಎಂಬುದು ವಾಸ್ತವದಲ್ಲಿ ಇರಲು ಸಾಧ್ಯವೇ ಇಲ್ಲ. ಒಂದುವೇಳೆ ಅದು `ಇರಲು ಸಾಧ್ಯ' ಎಂದು ವಾದಕ್ಕಾಗಿ ಒಪ್ಪಿಕೊಂಡರೂ `ಶುದ್ಧಸಾಹಿತ್ಯ' ಎಂಬುದು `ಶುದ್ಧಚಿನ್ನ'ದಂತೆ ಬಹಳಷ್ಟು `ಬೆಲೆ'ಯುಳ್ಳದ್ದಾಗಿದ್ದರೂ `ಬಳಕೆ'ಗೆ ಬಾರದ್ದಾಗಿಯೇ ಇರಲು ಮಾತ್ರ ಸಾಧ್ಯ!! ಕೊನೆಯಮಾತು: ಕನ್ನಡ ಜನಜೀವನಕ್ಕೆ ಬಹುದೊಡ್ಡ ನಷ್ಟ ಆದದ್ದು ಭೈರಪ್ಪನವರು ಹೇಳುವಂತೆ ಅನ್ಯದೇಶಗಳಿಂದ ಕನ್ನಡಸಾಹಿತ್ಯವನ್ನು ಪ್ರವೇಶಮಾಡಿದ ಸಿದ್ಧಾಂತಗಳಿಂದ ಅಲ್ಲ; ಬದಲಾಗಿ ನಮ್ಮ ಸಾಹಿತ್ಯದ ಘನತೆ-ಗೌರವಗಳನ್ನು ಎತ್ತರಿಸಬಲ್ಲ ಎಲ್ಲಬಗೆಯ ಸಾಮಥ್ರ್ಯವಿದ್ದ ಭೈರಪ್ಪನವರಂತಹ ಒಬ್ಬ ಶಕ್ತಿಶಾಲಿ ಬರಹಗಾರರು ಮತಧರ್ಮ, ಕೋಮುವಾದ ಇಂತಹುಗಳ ಕಡೆ ವಾಲಿಕೊಂಡದ್ದರಿಂದ.

0-0-0-0-0

 ಡಾ. ರಾಜೇಂದ್ರ ಬುರಡಿಕಟ್ಟಿ

buradikatti@gmail.com

29-06-2017