Tuesday, July 14, 2020

'ಒಡೆದು ಹೇ(ಆ)ಳುವ ಶಿಕ್ಷಕರು: 'ಅರಮನೆ’ಯ ದೌಲತ್ತಿನಲ್ಲಿ ನೆನಪಾಗದ ‘ಅಜ್ಜಿಮನೆ’

 'ಒಡೆದು ಹೇ(ಆ)ಳುವ' ಶಿಕ್ಷಕರು: 
 'ಅರಮನೆ’ಯ ದೌಲತ್ತಿನಲ್ಲಿ ನೆನಪಾಗದ ‘ಅಜ್ಜಿಮನೆ’ 
-ಡಾ.‌ ರಾಜೇಂದ್ರ ಬುರಡಿಕಟ್ಟಿ

‘ಭಾಷೆ ಎಂಬುದು ಆಸೆ, ಕವಿಗಳ ತಮಾಷೆ
ಭಾಷೆಯೊಳಗಿರಬೇಕು ನರನ ಅಭಿಲಾಷೆ
ಭಾಷೆ ಮಾನವ ಶಕ್ತಿ ಪವನಗಳ ಉಕ್ತಿ
ಭಾಷೆಯಿಂದಲೆ ನಮಗೆ ಜೀವನದ ಮುಕ್ತಿ’

ಇವು ಕನ್ನಡದ ವಿಡಂಬನ ಸಾಹಿತ್ಯ ಪ್ರಕಾರಕ್ಕೆ ತಮ್ಮ ಮೊನಚಾದ ಚೌಪದಿಗಳ ಮೂಲಕ ದೊಡ್ಡ ಕಾಣಿಕೆ ನೀಡಿ `ಚೌಪದಿಕವಿ’ ಎಂದೇ ಹೆಸರಾದ ದಿನಕರ ದೇಸಾಯಿಯವರ ಚೌಪದಿಯೊಂದರ ನಾಲ್ಕು ಸಾಲುಗಳು. ಭಾಷೆಯ ಬಗೆಗೆ ಇರುವ ಈ ನಾಲ್ಕೇ ನಾಲ್ಕು ಸಾಲುಗಳ ಈ ಚಿಕ್ಕ ಚೌಪದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಜಿಗವೆನಿಸುತ್ತದೆ. ಮೊದಲನೆಯ ಸಾಲು  ವಾಸ್ತವವನ್ನೂ ಎರಡನೆಯ ಸಾಲು ಕವಿಯ ಆಶಯವನ್ನೂ ಬಿಂಬಿಸಿದರೆ ಮೂರನೆಯ ಸಾಲು ಅತಿಶಯೋಕ್ತಿಯನ್ನೂ ನಾಲ್ಕನೆಯ ಸಾಲು ಅದರ ಮುಂದುವರಿಕೆಯ ಭಾಗವಾಗಿ ಅತಿರೇಖವನ್ನೂ ದಾಖಲಿಸುವಂತೆ ಕಂಡುಬರುತ್ತವೆ. ಭಾಷೆಯ ಬಗೆಗಿನ ಈ ಪುಟ್ಟ ಚೌಪದಿಯ ವಿಶ್ಲೇಷಣೆಯೇ ಈ ಲೇಖನದ ಉದ್ದೇಶವಲ್ಲವಾದರೂ ಇದನ್ನು ಇಲ್ಲಿ ಪೀಠಿಕೆಯಾಗಿ ಬಳಸಿಕೊಳ್ಳುತ್ತಿರುವುದು ಇದರ ಎರಡನೆಯ ಸಾಲು ಭಾಷೆಯನ್ನು ಕುರಿತು ನಮಗೆ ಅಂದರೆ ಸಾಮಾನ್ಯಾರ್ಥದಲ್ಲಿ ಎಲ್ಲ ಮನುಷ್ಯರಿಗೆವಿಶೇಷವಾಗಿ ಲೇಖಕರು ಮತ್ತು ಬೋಧಕರಿಗೆ ಇರಬೇಕಾದ `ಅಭಿಲಾಷೆ’ಯನ್ನು ಕುರಿತು ಹೇಳುತ್ತಿರುವ ಕಾರಣಕ್ಕಾಗಿ.

'ಭಾಷಾಪ್ರಯೋಗ' ಭಿನ್ನ ನೋಟಗಳು
ಭಾಷೆಯನ್ನು `ಪ್ರಯೋಗಿಸುವುದು’ ಎಂದರೆ ಅದನ್ನು ಬಳಸುವುದು ಎಂದರ್ಥ. ಆದರೆ ಬಳಸುವುದು ಅನ್ನುವುದಕ್ಕೆ ಏನರ್ಥ?  ಅದು ನೇರವಾಗಿ ಒಂದೇ ಅರ್ಥವನ್ನು ಕೊಡುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲವಾದ ಕಾರಣ ಈ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಇಲ್ಲಿ ಭಾಷೆಯನ್ನು ಬಳಸುವುದು ಎಂದರೆ ಸ್ವತಂತ್ರವಾಗಿ ಕೃತಿರಚನೆಮಾಡಲೂ ಇರಬಹುದು ಅಥವಾ ಬೇರೆಯವರು ರಚನೆ ಮಾಡಿದ್ದನ್ನು ಲೀಲಾಜಾಲವಾಗಿ ಆಕರ್ಷಣೀಯವಾಗಿ ಅರ್ಥೈಸುವುದು, ವ್ಯಾಖ್ಯಾನಿಸುವುದು ಇತ್ಯಾದಿಯೂ ಇರಬಹುದು. ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲಿರುವ ಬಹುತೇಕ ಎಲ್ಲರಿಗೂ ಚಿರಪರಿಚಿತವಾಗಿರುವ ಕವಿರಾಜ ಮಾರ್ಗಕಾರನ ಬಹುಪ್ರಸಿದ್ಧವಾದ `ಪದನರಿದು ನುಡಿಯಲುಂ…’ ಕಂದಪದ್ಯದಲ್ಲಿ ಬರುವ ‘ನಾಡವರ್ಗಳ್ ಚದುರರ್ ನಿಜದಿಂ ಕುರಿತೋದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂಬ ಮಾತನ್ನೇ ಗಮನಿಸಿ. ಬಹುತೇಕ ವಿದ್ವಾಂಸರು ಈ ಮಾತನ್ನು, `ಯಾವುದೇ ವಿಷಯದ ಬಗ್ಗೆ ಗಂಭೀರ ಅಧ್ಯಯನವನ್ನು ಮಾಡದೆಯೂ ಕೃತಿರಚನೆ ಮಾಡುವ ಸಾಮರ್ಥ್ಯವನ್ನು ಕನ್ನಡ ನಾಡಿನ ಸಾಮಾನ್ಯ ಜನ ಹೊಂದಿದ್ದರು’ ಎಂದು ಅರ್ಥೈಸುತ್ತಾರೆ.

ಆದರೆ ಕಿ.ರಂ. ಅಂತಹ ವಿದ್ವಾಂಸರು ಇದನ್ನು ಭಿನ್ನವಾಗಿ ಅರ್ಥೈಸುತ್ತಿದ್ದರು. “ಇಲ್ಲಿ `ಕಾವ್ಯಪ್ರಯೋಗ’ ಎಂದರೆ ‘ಕಾವ್ಯದ ರಚನೆ’ ಎಂದು ಕಡ್ಡಾಯವಾಗಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವನ್ನು ಕಾವ್ಯವೇನೂ ಹೇಳುವುದಿಲ್ಲ; ಅದಕ್ಕೆ ಒತ್ತಾಯ ಮಾಡುವ ಅಂಶಗಳೂ ಅಲ್ಲಿ ಇಲ್ಲ; ಹಾಗೆ ನೋಡಿದರೆ ನಾಡಿನ ಸಾಮಾನ್ಯ ಜನರು ಕಾವ್ಯರಚನೆಯ ಸಾಮರ್ಥ್ಯಹೊಂದಿದ್ದರು ಅದೂ ಗಂಭೀರ ಅಧ್ಯಯನ ಮಾಡದೆಯೇ ಎಂಬುದು ನಂಬಲು ಕಷ್ಟವಾದ ಸಂಗತಿ; ಹಾಗಾಗಿ ಇಲ್ಲಿರುವ `ಕಾವ್ಯಪ್ರಯೋಗ’ ಎಂಬುದನ್ನು `ಕಾವ್ಯದ ಉಪಯೋಗ’ ಎಂದೂ ಅರ್ಥೈಸಿಕೊಳ್ಳಲು ಸಾಧ್ಯವಿದೆ” ಎಂಬುದು ಅವರ ವ್ಯಾಖ್ಯಾನವಾಗಿತ್ತು. `ಕಾವ್ಯಪ್ರಯೋಗ ಪರಿಣಿತ ಮತಿಗಳ್’ ಎಂಬುದಕ್ಕೆ “ಕನ್ನಡ ನಾಡಿನ ಜನ ಕಾವ್ಯವನ್ನು ನಾಟಕ, ಗಮಕ ಮುಂತಾದವುಗಳಲ್ಲಿ ನಿಜಾರ್ಥದಲ್ಲಿ `ಪ್ರಯೋಗಿಸುವ’ ಆಲಿಸುವ, ಆಸ್ವಾದಿಸುವ ಸಾಮರ್ಥ್ಯವನ್ನು ಹೊಂದಿದ ಬುದ್ಧಿವಂತರಾಗಿದ್ದರು” ಎಂಬುದು ಅವರಿಗೆ ಹೆಚ್ಚು ಇಷ್ಟವಾಗುವ ವ್ಯಾಖ್ಯಾನವಾಗಿತ್ತು.

ಕುವೆಂಪು ಕೂಡ ಭಾಷೆಯ ಉಪಯೋಗವನ್ನು ಮುಖ್ಯವಾಗಿ ಎರಡು ಸ್ತರಗಳಲ್ಲಿ ಗುರುತಿಸುತ್ತಾರೆ. ಅವಕ್ಕೆ ಅವರು ಭಾಷೆಯ `ಭಾವೋಪಯೋಗಿ’ ಮತ್ತು `ಲೋಕೋಪಯೋಗಿ’ ಬಳಕೆ ಎಂದು ಹೆಸರಿಸುತ್ತಾರೆ.  ಲೋಕೋಪಯೋಗಿ ಎಂದರೆ ವ್ಯವಹಾರಕ್ಕೆ ಭಾಷೆಯನ್ನು ಬಳಸುವುದು. ಭಾವೋಪಯೋಗಿ ಎಂದರೆ ನಮ್ಮ ಭಾವನೆಗಳಾದ ಸಂತೋಷ ದುಃಖ, ನೋವು, ನಲಿವು, ಸಿಟ್ಟು, ದ್ವೇಷ ಇತ್ಯಾದಿಗಳನ್ನು ವ್ಯಕ್ತಪಡಿಸಲು ಬಳಸುವಂಥದ್ದು. ಭಾಷೆಯ ಲೊಕೋಪಯೋಗಿ ಬಳಕೆಯಲ್ಲಿ ಭಾಷೆಯ ಶಬ್ದಗಳು ನೀಡುವ ವಾಸ್ತವ ಅರ್ಥಕ್ಕೆ ಹೆಚ್ಚು ಬೆಲೆ. ಅದು ನೇರವಾಗಿರುತ್ತದೆ ಕೂಡ. ಆದರೆ ಭಾಷೆಯ ಭಾವೋಪಯೋಗಿ ಬಳಕೆಯಲ್ಲಿ ಶಬ್ಧಗಳು ಕೊಡುವ ವಾಸ್ತವ ಅಂದರೆ ಅಕ್ಷರಶಃ ಅರ್ಥಕ್ಕೆ ಅರ್ಥವಿರುವುದಿಲ್ಲ. ಅಲ್ಲಿ ಅದರ ಹೆಸರೆ ಸೂಚಿಸುವಂತೆ ಭಾವಕ್ಕೆ ಅರ್ಥವಿರತ್ತದೆ. ಒಂದೆರಡು ಉದಾಹರಣೆಗಳೊಂದಿಗೆ ಇದನ್ನು ನೋಡುವುದಾದರೆ ಒಬ್ಬ ವ್ಯಕ್ತಿ ಪ್ರೀತಿಯಿಂದ ತರುಣಿಯೊಬ್ಬಳನ್ನು `ಬಾರಮ್ಮ ಇಲ್ಲಿ’ ಎಂದು ಕರೆದಾಗ `ಆ ಚಿಕ್ಕ ಹುಡುಗಿ ಈ ದೊಡ್ಡ ವ್ಯಕ್ತಿಗೆ ಹೇಗೆ `ಅಮ್ಮ’ ಆಗುತ್ತಾಳೆ. ಇವನು ಹೇಗೆ ಅವಳಿಗೆ ಮಗ ಆಗುತ್ತಾನೆ’ ಎಂದು ಯಾರೂ ನಗುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಸಿಟ್ಟಿನಲ್ಲಿ ಇನ್ನೊಬ್ಬನಿಗೆ `ಸೂಳೆಮಗನೆ’ ಎಂದು ಬೈಯ್ಯುತ್ತಾನೆ ಎಂದಿಟ್ಟುಕೊಳ್ಳಿ. ಆಗ ಬಯ್ಯುವವನಿಗೆ ಕೂಡ ಅವನು `ಸೂಳೆಯ ಮಗ ಅಲ್ಲ’ ಎಂಬುದು ಗೊತ್ತಿರುತ್ತದೆ. ಸುತ್ತಲೂ ಇದ್ದವರು ಕೂಡ ಬೈಸಿಕೊಂಡವನು `ಸೂಳೆಯ ಮಗ’ ಎಂದು ಅರ್ಥಮಾಡಿಕೊಳ್ಳುವುದಿಲ್ಲ. ಬದಲಾಗಿ ಬೈದವನಿಗೆ ಬೈಸಿಕೊಂಡವನ ಮೇಲೆ ಯಾವ ಮಟ್ಟದ ಸಿಟ್ಟಿದೆ ಎಂದು ಅರ್ಥಮಾಡಿಕೊಳ್ಳುತ್ತಾರೆ! ಇವು ಭಾಷೆಯ ಭಾವೋಪಯೋಗಿ ಬಳಕೆಗೆ ಕೆಲವು ಉದಾಹರಣೆಗಳು.

ಲುಪ್ತ, ಲಿಪ್ತ ಮತ್ತು ಅಲಿಪ್ತ ಮಾರ್ಗದಾಳುಗಳು
ಸಾಹಿತ್ಯ ಮತ್ತು ಶಿಕ್ಷಣದ ಸಂದರ್ಭದಲ್ಲಿ ಭಾಷೆಯ ನಾವಿನ್ಯಯುತ ಬಳಕೆ ಎಂಬುದು ಬಹಳ ಪ್ರಮುಖವಾದ ಮತ್ತು ಅಷ್ಟೇ ಮಹತ್ವದ ಅಂಶ. ಭಾಷೆಯ ಬಳಕೆಯನ್ನು ಲೇಖಕರು ಹೇಗೆ ಮಾಡಬೇಕು ಎಂಬುದನ್ನು ಹೇಳುತ್ತಾ ಮೇಲೆ ಉಲ್ಲೇಖಿಸಿದ ದಿನಕರ ದೇಸಾಯಿಯವರು,` ಭಾಷೆ ಎಂಬುದು ವಿಡಂಬನದ ಬಂದೂಕು / ಹಾರಿಸಲು ಪ್ರತಿಯೊಬ್ಬ ಕವಿ ಕಲಿತಿರಬೇಕು’ ಎಂದು ಹೇಳುತ್ತಾರೆ ಮಾತ್ರವಲ್ಲ ಈ ಭಾಷೆಯನ್ನು ಪ್ರಯೋಗಿಸುವವರು ಅಂದರೆ ಅದನ್ನು ರಚಿಸುವವರು, ರುಚಿನೋಡುವವರು ಮತ್ತು ಇವರ ಮಧ್ಯೆ ಇರುವ ವಿದ್ವಾಂಸ, ಗಮಕಿ, ಬೋಧಕ ಇತ್ಯಾದಿ ಸಾಹಿತ್ಯಸಾಗಾಟದ `ಮಾರ್ಗದಾಳು’ಗಳು ಇವರನ್ನು ದೃಷ್ಟಿಯಲ್ಲಿಟ್ಟುಕೊಂಡು, ‘ಭಾಷೆಯೊಳಗಿರಬೇಕು ಶಬ್ದ ನಾವಿನ್ಯ / ರಸಿಕರಿಗೆ ಬರವಣಿಗೆಯಾಗುವುದು ಮಾನ್ಯ’ ಎಂದೂ ಹೇಳುತ್ತಾರೆ. ಒಟ್ಟಾರೆ ಸಂಖ್ಯಾ ದೃಷ್ಟಿಯಿಂದ ಹೇಳುವುದಾದರೆ ಸಾಹಿತ್ಯದ ಹಿನ್ನಲೆಯಲ್ಲಿ ಭಾಷೆಯನ್ನು ಬಳಸುವವರಲ್ಲಿ ಅಸ್ವಾದಿಸುವವರು ಅಂದರೆ ಇತ್ತೀಚೆಗೆ `ನೋಡುಗ’ರಾಗಿ ಬದಲಾಗಿರುವ `ಹಿಂದಿನ ಕಾಲದ ಓದುಗರು’ ಅಥವಾ `ಅದಕ್ಕೂ ಹಿಂದಿನ ಕಾಲದ ಕೇಳುಗರು’ ಯಾವಾಗಲೂ ಬಹುಸಂಖ್ಯಾತರು. ಸಾಹಿತ್ಯ ರಚನಾಕಾರರು ಅಲ್ಪಸಂಖ್ಯಾತರು. ಇವರ ಮಧ್ಯೆ ಇರುವ `ಸಾಹಿತ್ಯ ಸಾಗಾಣಿಕೆ’ ಮಾಡುವ ಮೇಲೆ ಹೇಳಲಾದ `ಮಾರ್ಗದಾಳು’ಗಳು ಸಂಖ್ಯಾದೃಷ್ಟಿಯಿಂದಲೂ ಮಧ್ಯಮರು!

ಈ ಮಾರ್ಗದಾಳುಗಳು ಸಾಮಾನ್ಯರಲ್ಲ. ಜನರಲ್ಲಿ ಸಾಹಿತ್ಯದ ಪ್ರೇಮವನ್ನು ಉದ್ಧೀಪನ ಮಾಡುವ ಉದ್ದೀಪನ ಮದ್ದನ್ನೂ ಇವರು ಕೊಡಬಲ್ಲರು. ಹಾಗೆ ಇನ್ನೆಂದೂ ಜನ ಸಾಹಿತ್ಯದ ಕಡೆ ತಲೆಹಾಕಿ ಕೂಡ ಮಲಗದಂತೆ ದೀರ್ಘದಂಡಪ್ರಣಾಮ ಹಾಕಿ ಹೋಗುವಂತೆಯೂ ಮಾಡಬಲ್ಲರು. ಈ ಅರ್ಥದಲ್ಲಿ ಹೇಳುವುದಾದರೆ ಇವರು ನಿಜಾರ್ಥದಲ್ಲಿ ಕವಿರಾಜಮಾರ್ಗಕಾರ ಹೇಳುವ `ಚದುರರ್’ ಮತ್ತು `ಪರಿಣಿತ ಮತಿಗಳ್’! ಗಮಕಿಗಳು, ಕೀರ್ತನಕಾರರು, ಪ್ರವಚನಕಾರರು ಇಂಥವರು ಕೃತಿಯಲ್ಲಿ ಇದ್ದದ್ದು ಒಂದಾದರೆ ಅದಕ್ಕೆ ತಮ್ಮದೇ ಆದ ಹತ್ತನ್ನು ಸೇರಿಸಿಕೊಂಡು ಹನ್ನೊಂದು ಮಾಡಿ ಹೇಳುಂಥವರು. ಇದ್ದದ್ದು ಇಲ್ಲದ್ದೂ ಸೇರಿಸಿಕೊಂಡು ಬೇಕಾಗಿದ್ದು ಬೇಡಾಗಿದ್ದು ಎಲ್ಲವನ್ನು ಕಡೆದು ರಸಮಾಡಿ ಭಾವಜೀವಿಗಳಿಗೆ ಕುಡಿಸಿ ಅವರನ್ನು ಮತ್ತೇರಿಸುವಂಥವರು.

ಇನ್ನು ವಿಮರ್ಶಾಕ್ರಮದ ವಿದ್ವಾಂಸರು ಕೃತಿಯಲ್ಲಿ ಹತ್ತು ಅಂಶ ಇದ್ದರೆ ‘ಆ ಕಾರಣಕ್ಕೆ ಅದು ಮುಖ್ಯವಲ್ಲ ಈ ಕಾರಣಕ್ಕೆ ಇದು ಮುಖ್ಯವಲ್ಲ’ ಎಂದು ಆರಿಸಿ, ಕೆಲವನ್ನು ಗಾಳಿಗೆ ಹಾರಿಸಿ, ಒಂಬತ್ತು ಅಂಶಗಳನ್ನು ಸೋಸಿ ತೆಗೆದು ಹಾಕಿ ಯಾವುದೋ ಒಂದು ಅಂಶವನ್ನು ಮಾತ್ರ ಒಪ್ಪಿಕೊಂಡು `ಇಷ್ಟೆಲ್ಲ ಮಿತಿಗಳ ನಡುವೆ ಈ ಅಂಶವನ್ನು ಮಾತ್ರ ನಾವು ಈ ಕೃತಿಯಲ್ಲಿ ಗೌರವಿಸಲೇಬೇಕು’ ಎಂದು ಹೇಳುವಂಥವರು. ಇದರಿಂದ ಜನಸಾಮಾನ್ಯರು ಒಂದು ಅಂಶ ಚೆನ್ನಾಗಿರುವುದನ್ನು ತಿಳಿದುಕೊಳ್ಳಲು ಒಂಬತ್ತು ಚೆನ್ನಾಗಿರದ ಅಂಶಗಳನ್ನು ಯಾಕೆ ಓದುವ ಪ್ರಯತ್ನ ಮಾಡಬೇಕು, ಇದಕ್ಕಿಂತ ಅರ್ಧಗಂಟೆಯ ಧಾರವಾಹಿಯಲ್ಲಿ  ಕಾಲುಗಂಟೆ ಜಾಹಿರಾತು ಕೊಟ್ಟು ಇನ್ನು ಕಾಲುಗಂಟೆ ಕಥೆ ತೋರಿಸಿದರೂ ಶೇ. 50 ರಷ್ಟು `ಸಾಹಿತ್ಯ’ ಸಿಗುತ್ತದೆ. ಅದು ಇಲ್ಲಿನ ಶೇ. 10ಕ್ಕಿಂತ ಲಾಭದಾಯಕವೇ ಎಂದು ಟಿವಿನೋಡಲು ಹೊರಟರೂ ಹೊರಡಬಹುದು!

'ಒಡೆದು ಹೇ(ಆ)   ನೀತಿ'
ಸಾಹಿತ್ಯದ ಬಗ್ಗೆ ಭಾಷೆಯ ಬಗ್ಗೆ ಹೆಚ್ಚುಕಡಿಮೆ ಅತ್ತ `ಲಿಪ್ತ’ವೂ ಅಲ್ಲದ ಇತ್ತ `ಲುಪ್ತ’ವೂ ಅಲ್ಲದ `ಅಲಿಪ್ತನೀತಿ’ಯನ್ನು ಅನುಸರಿಸುವವರು ಎಂದರೆ ಈಗಿನ ಸಾಮಾನ್ಯ ಶಿಕ್ಷಕರು. ಈ ರೀತಿಯ ಶಿಕ್ಷಕರು ಪ್ರಾಥಮಿಕ ಹಂತದಿಂದ ಹಿಡಿದು ಸ್ನತಕೋತ್ತರ ಹಂತದವರೆಗೂ ಹರಡಿಕೊಂಡಿದ್ದಾರೆ ಮತ್ತು ದೊಡ್ಡ ಸಂಖ್ಯೆಯಲ್ಲಿದ್ದಾರೆ ಕೂಡ. ಇವರು ಕವಿಯ ಆಶಯದ ಕಡೆಯೂ ಹೆಚ್ಚು ಗಮನ ಹರಿಸುವುದಿಲ್ಲ. ವಿದ್ಯಾರ್ಥಿಯ ಜೀವನದ ಭವಿಷ್ಯದ ಕಡೆಯೂ ಹೆಚ್ಚು ಗಮನ ಹರಿಸುವುದಿಲ್ಲ. ಇವರು ಗಮನ ಹರಿಸುವುದು ಒಂದರ ಕಡೆಗೆ ಮಾತ್ರ. ಅದೆಂದರೆ ಪರೀಕ್ಷೆ. ಪರೀಕ್ಷೆಯಲ್ಲಿ ಪ್ರಶ್ನೆ ಹೇಗೆ ಬರುತ್ತದೆ ಮತ್ತು ಅದಕ್ಕೆ ಹೇಗೆ ಉತ್ತರ ಬರೆದರೆ ಒಳ್ಳೆಯ ಅಂಕ ಬರುತ್ತದೆ ಎಂಬುದಷ್ಟೇ ಅವರಿಗೆ ಮುಖ್ಯವಾದದ್ದು. ಕನ್ನಡದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ತಾವು ಬರೆದ ಪುಸ್ತಕದ ಮೇಲೆ ತಾವೇ ಪರೀಕ್ಷೆ ಬರೆಯಬೇಕಾಗಿ ಬಂದಾಗ ಅವರಿಗೆ ನಲತ್ತರಿಂದ ಐವತ್ತರೊಳಗೆ ಅಂಕನೀಡಿ ಕೈತೊಳೆದುಕೊಂಡವರು ಇಂತಹ ಶಿಕ್ಷಕರೆ.

ಇವರಲ್ಲಿ ಯಾರೂ ವಿದ್ಯಾರ್ಥಿಗಳನ್ನು ಜೀವನಕ್ಕೆ ತಯಾರುಮಾಡುವವರಲ್ಲ. ಬದಲಾಗಿ ಅವರನ್ನು ಪರೀಕ್ಷೆಗೆ ತಯಾರುಮಾಡುವವರು. ಶಿಕ್ಷಕ ತನ್ನನ್ನು ಜೀವನಕ್ಕೆ ತಯಾರುಮಾಡಿದರೆ ವಿದ್ಯಾರ್ಥಿ ಜೀವನಪರ್ಯಂತ ಅಂತಹ ಶಿಕ್ಷಕರನ್ನು ನೆನಪಿಸಿಕೊಳ್ಳಬಲ್ಲ. ಪರೀಕ್ಷೆಗೆ ತಯಾರುಮಾಡುವ ಶಿಕ್ಷಕರನ್ನು ಪರೀಕ್ಷೆ ಮುಗಿಯುವತನಕ ಮಾತ್ರ ವಿದ್ಯಾರ್ಥಿ ನೆನಪಿಸಿಕೊಳ್ಳಬಲ್ಲ. ಆಮೇಲೆ ಆ ಶಿಕ್ಷಕರು ಅವನಿಗೆ `ಬಳಸಿ ಬೀಸಾಡಿ’ಗಳಾಗಿ ಕಂಡರೆ ಅದು ಅವನ ತಪ್ಪಲ್ಲ. ಈ ಶಿಕ್ಷಕರು ಹಾಗೆ ವರ್ತಿಸಲು ನಾವು ಕೇವಲ ಅವರನ್ನು ಮಾತ್ರ ಲೇವಡಿಮಾಡಬೇಕಾಗಿಲ್ಲ. ಹಾಗಂತ ಅವರು ಲೇವಡಿಗೆ ಪಾತ್ರರೇ ಅಲ್ಲ ಎಂದೂ ಹೇಳಬೇಕಾಗಿಲ್ಲ. `ಅವರೇ ಕಾರಣ’ವಲ್ಲದಿದ್ದರೂ `ಅವರೂ ಕಾರಣ’ ಎಂಬುದನ್ನಂತೂ ನಾವು ಒಪ್ಪಿಕೊಳ್ಳಲೇಬೇಕು.

ಶಾಲೆ ಕಾಲೇಜುಗಳ ಶೈಕ್ಷಣಿಕ ವರ್ಷದ ಆರಂಭದ ತಿಂಗಳಿನಲ್ಲಿಯೇ ಕೈಯಲ್ಲಿ ಪಾಸಿಂಗ್ ಪ್ಯಾಕೇಜ್ ಹಿಡಿದುಕೊಂಡು ತರಗತಿಗೆ ಹೋಗಿ, “ಇದನ್ನು ಮಾತ್ರ ಓದಿಕೊಳ್ಳಿ, ಅದು ಬೇಡ” ಎಂದು ಪಠ್ಯವನ್ನು `ಒಡೆದು ಹೇಳುವ’ (Devide and Teach) ಇವರ ನೀತಿಯು ಬ್ರಿಟೀಷರು ಅನುಸಸರಿಸಿದ `ಒಡೆದು ಆಳುವ’ (Devide and Rule) ನೀತಿಯಷ್ಟೇ ಗಂಭೀರ ಪರಿಣಾಮ ಬೀರುವಂಥದ್ದು.  ತಾವೇ ನೋಟ್ಸ್ ಕೊಟ್ಟು ಅದನ್ನೇ ವಿದ್ಯಾರ್ಥಿಗಳ ಕೈಯಿಂದ ಪರೀಕ್ಷೆಗಳಲ್ಲಿ ಬರೆಸಿಕೊಂಡು ತಮ್ಮ ಉತ್ತರವನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುವಂತಹ ಇಂತಹ ಶಿಕ್ಷಕರಿಂದ ನೂರಕ್ಕೆ ನೂರು ಅಂಕಗಳನ್ನು ಪಡೆಯುವ, `ಅಂಕವೀರರು’ ರಚನೆಯಾಗಬಹುದೇ ಹೊರತು ಒಬ್ಬ ಸಾಹಿತಿ, ಚಿಂತಕ, ಲೇಖಕ, ವಿಜ್ಞಾನಿ ಸೃಷ್ಟಿಯಾಗಲಾರ. ಏಕೆಂದರೆ ಇವರು ಎಂದಿಗೂ ಮಕ್ಕಳಲ್ಲಿ ಸ್ವತಂತ್ರ ಆಲೋಚನೆ ಬೆಳೆಯುವುದನ್ನು ಪ್ರಚೋದಿಸುವುದಿಲ್ಲ.

ನೆನಪಾಗದ ಕಜ್ಜಾಯದ ಅಜ್ಜಿ
ಇಂತಹ ಶಿಕ್ಷಕರು ಈ ವ್ಯವಸ್ಥೆಯ ಕಿರಿಕಿರಿ ಮತ್ತು ತಮ್ಮ ಸ್ವಂತಃ ನಿರಾಸಕ್ತಿ ಇವುಗಳ ಕಾರಣದಿಂದ ತಮ್ಮೊಳಗೆ ಇರುವ ಸೃಜನಶೀಲತೆಯನ್ನು ಎಳ್ಳಷ್ಟೂ ಬಳಸಿಕೊಳ್ಳದೇ ಎಷ್ಟು ಜಡ್ಡುಗಟ್ಟಿಹೋಗಿರುತ್ತಾರೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಇಲ್ಲಿ ದಾಖಲಿಸಬೇಕು ಅನ್ನಿಸುತ್ತದೆ. ಒಮ್ಮೆ ಕುತೂಹಲಕ್ಕಾಗಿ ಹತ್ತಾರು ಊರುಗಳ ಹತ್ತಾರು ಶಾಲೆಗಳಿಗೆ ಹೋಗುವ ಹೈಸ್ಕೂಲ್ ಮಕ್ಕಳ ಕನ್ನಡ ವ್ಯಾಕರಣದ ನೋಟ್ಸ್ ತೆಗೆದುಕೊಂಡು ಪರಿಶೀಲಿಸಿದೆ. ಅದರಲ್ಲಿ ಎಲ್ಲ ಶಾಲೆಗಳ ಮಕ್ಕಳ ನೋಟ್ಸಗಳಲ್ಲಿ ಸಂಧಿ ಸಮಾಸ ಇವುಗಳಿಗೆ ಶಿಕ್ಷಕರು ಬರೆಸಿದ ಉದಾಹರಣೆಗಳನ್ನು ಗಮನಿಸಿದರೆ ಬಹುತೇಕ ಅವು ಒಂದೇ ರೀತಿಯ ಉದಾಹರಣೆಗಳಾಗಿದ್ದವು. ಅವುಗಳಲ್ಲಿ `ಸಮಾಸ’ ಅಧ್ಯಾಯದಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗಿ, ಅರಸನ + ಮನೆ = ಅರಮನೆ ಎಂಬ ಒಂದು ಉದಾಹರಣೆಯನ್ನಂತೂ ನೂರಕ್ಕೆ.ತೊಂಬತ್ತಕ್ಕಿಂತಲೂ ಹೆಚ್ಚು ಶಿಕ್ಷಕರು ಬರೆಸಿದ್ದರು! ನಾನು ಚಿಕ್ಕವನಿದ್ದಾಗ ನಮ್ಮ ಹೈಸ್ಕೂಲ್ ಮೇಷ್ಟ್ರು ಕೂಡ ನನಗೆ ಬರೆಸಿದ ಐದಾರು ಉದಾಹರಣೆಗಳಲ್ಲಿ ಈ ಅರಮನೆ ಇತ್ತು. ಈಗಲೂ ಈ ಎಲ್ಲ ಮಕ್ಕಳ ನೋಟ್ಸನಲ್ಲಿ ಅದು ಇತ್ತು!

ಈ ಉದಾಹರಣೆ ಯಾಕೆ ಇಷ್ಟು ಬಳಕೆಯಾಗಿದೆ ಎಂದು ನಾನು ಕುತೂಹಲಕ್ಕಾಗಿ ಚಿಕ್ಕ ಸಂಶೋಧನೆಯೊಂದನ್ನು ಮಾಡಿದಾಗ ತಿಳಿದುಬಂದ ಸಂಗತಿ ಎಂದರೆ ಈ ಎಲ್ಲ ಶಿಕ್ಷಕರು ವ್ಯಾಕರಣ ಹೇಳಲು ಬಳಸುವ ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಎಲ್ಲ ಚಿಕ್ಕದೊಡ್ಡ ವ್ಯಾಕರಣ ಪುಸ್ತಕಗಳಲ್ಲಿ ಈ ಉದಾಹರಣೆ ಇದ್ದೇ ಇತ್ತು. ಈ ವ್ಯಾಕರಣ ಪುಸ್ತಕಗಳನ್ನು ಯಾವ ಗ್ರಂಥಗಳನ್ನು ಆಕರವಾಗಿ ಇಟ್ಟುಕೊಂಡು ರಚಿಸಿದ್ದಾರೆ ಎಂದು ನೋಡಿದಾಗ ಬಹುತೇಕ  ಆ ಎಲ್ಲ ವ್ಯಾಕರಣ ಪುಸ್ತಕಗಳನ್ನು ಬರೆದ ಲೇಖಕರು (ಅದರಲ್ಲಿ ಬಹಳ ಜನ ಮೇಷ್ಟ್ರೇ ಆಗಿದ್ದವರು ಇದ್ದರು) ಬಳಸಿದ್ದು ಬೇರೆ ಬೇರೆ ಆಕರಗ್ರಂಥಗಳಾಗಿದ್ದರೂ ಆ ಆಕರಗ್ರಂಥಗಳಿಗೆ ಆಕರವಾಗಿರುವಂಥದ್ದು ಮೂಲದಲ್ಲಿ ಒಂದೇ ಒಂದು ಗ್ರಂಥವಾಗಿತ್ತು! ಆ ಗ್ರಂಥವೆಂದರೆ `ಕನ್ನಡ ವ್ಯಾಕರಣ ದರ್ಪಣ’ ಇದು 1971ರಲ್ಲಿ ಆಗಿನ ಮೈಸೂರು ಸರ್ಕಾರದ ಪಠ್ಯಪುಸ್ತಕ ಇಲಾಖೆ `ಎಂಟು ಒಂಬತ್ತು ಮತ್ತು ಹತ್ತನೆಯ ತರಗತಿಗಳಿಗೆ’ ಎಂದು ಪ್ರಕಟಿಸಿದ ವ್ಯಾಕರಣ ಪುಸ್ತಕ. ಅದರಲ್ಲಿ ತತ್ಪುರುಷ ಸಮಾಸದ ಪರಿಚಯವನ್ನು ‘ಅರಮನೆ’ ಪದದಿಂದ ಮಾಡಲಾಗಿತ್ತು. ಅದನ್ನು ಆದರಿಸಿ ತಮ್ಮ ವ್ಯಾಕರಣ ಪುಸ್ತಕಗಳನ್ನು ಬರೆಯುತ್ತಾ ಹೋದ ಮುಂದಿನ ಎಲ್ಲರೂ ಆ ಉದಾಹರಣೆಯನ್ನೂ ಯಾಂತ್ರಿಕವಾಗಿ ಹಾಗೆ ಅಲ್ಲಿಂದ ಎತ್ತಿ ತಮ್ಮ ತಮ್ಮ ಪುಸ್ತಕಗಳಲ್ಲಿ ಬರೆಯುತ್ತಾ ಹೋಗಿದ್ದರು. ಅವರಾಗಲಿ ಅವರ ಪುಸ್ತಕಗಳನ್ನು ಹಿಡಿದುಕೊಂಡ ಶಿಕ್ಷಕರಾಗಲಿ ಬೇರೊಂದು ಉದಾಹರಣೆಯನ್ನು ಕೊಡುವ ಗೋಜಿಗೆ ಹೋಗಿರಲಿಲ್ಲ. ಹಾಗಾಗಿಯೇ ನಾನು ಚಿಕ್ಕವನಿದ್ದಾಗಿನಿಂದಲೂ ಈಗಿನವರೆಗೂ ಈ ಅರಮನೆಯನ್ನು ಬಿಟ್ಟು ತತ್ಪುರುಷ ಸಮಾಸ ಹೊರಗೆ ಬರುತ್ತಲೇ ಇಲ್ಲ.

ಸೂಕ್ಷ್ಮವಾಗಿ ಗಮನಿಸಿ: ನಾನು ಶಾಲೆಯಲ್ಲಿ ವ್ಯಾಕರಣ ಕಲಿಯುವಾಗ ಅರಸನನ್ನು ನೋಡಿರಲಿಲ್ಲ. ಈಗಲೂ ನೋಡಲು ಆಗಿಲ್ಲ! ಇನ್ನು ಅವನ ಮನೆ ಅಂದರೆ ಅರಮನೆಯನ್ನು ನಾನು ನೋಡಿದ್ದು ಪದವಿ ಕಾಲೇಜಿನಲ್ಲಿ ಓದುವಾಗ. ಅಂದರೆ ಅರಸನನ್ನೂ ನೋಡದೆ ಅರಮನೆಯನ್ನೂ ನೋಡದೆ ಅದರ ಸ್ವಾನುಭವವಿಲ್ಲದೆ ಅರಮನೆಯನ್ನು ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗಿ ಕಲಿತಿದ್ದೆ. ಅದು ಬಾಯಿಪಾಠವೋ ಕಂಠಪಾಠವೋ ಆಗಿರದೆ ಮತ್ತೇನಾಗಿರಲು ಸಾಧ್ಯ? ನಮ್ಮ ಶಿಕ್ಷಕರು ಈಗಲೂ ಅದೇ ಅರಮನೆಯ ಉದಾಹರಣೆಯನ್ನೇ ಕೊಡುತ್ತಿದ್ದಾರೆ ಎಂದರೆ ಅದು ಅವರ ಜಡ್ಡುಗಟ್ಟಿರುವಿಕೆಗೆ ಸಾಕ್ಷಿಯಲ್ಲವೇ? ಹಾಗಾದರೆ ಒಂದು ಸಮಾಸಕ್ಕೆ ಹೊಸದೊಂದು ಉದಾಹರಣೆಯನ್ನು ಕೊಡಲಾರದಷ್ಟು ಈ ಶಿಕ್ಷಕರು ದಡ್ಡರೆ? ಖಂಡಿತಾ ಅಲ್ಲ. ಒಂದು ಕ್ಷಣ ಯೋಚಿಸಿದರೆ ಅಂತಹ ಹತ್ತಾರು ಉದಾಹರಣೆಗಳನ್ನು ತಾವೇ ಸೃಷ್ಟಿಸಿ ಕೊಡುವ ಸಾಮರ್ಥ್ಯ ಅವರಿಗಿದೆ. ಆದರೆ ಸೋಮಾರಿಗಳು. ಒಂದು ಉದಾಹರಣೆ ಇರುವಾಗ ಬೇರೆಯದು ಏತಕ್ಕೆ? ಒಟ್ಟಿನಲ್ಲಿ ವ್ಯಾಖ್ಯೆಗೆ ಉದಾಹರಣೆ ಸರಿಹೊಂದುತ್ತದೆಯಲ್ಲ. ಮತ್ಯಾಕೆ ಬೇರೆಯದನ್ನು ಕೊಡಬೇಕು ಎಂಬ ಮನೋಭಾವದವರು.

ಒಂದು ವೇಳೆ ಈ ಶಿಕ್ಷಕರು ಇದೇ ತತ್ಪುರುಷ ಸಮಾಸಕ್ಕೆ `ಅರಮನೆ’ ಬದಲು `ಅಜ್ಜಿಮನೆ’ ಕೊಟ್ಟಿದ್ದರೆ ಆಗುತ್ತಿದ್ದ ಪರಿಣಾಮ ಗಮನಿಸಿ. ಮೇಷ್ಟರು `ಅಜ್ಜಿಯ + ಮನೆ = ಅಜ್ಜಿಮನೆ’ ಎಂದು ಹೇಳುತ್ತಿದ್ದಂತೆಯೇ ಮಗುವಿನ  ಭಾವಕೋಶ ಅರಳುತ್ತದೆ. ಏಕೆಂದರೆ ಮಗುವಿಗೆ ರಾಜ ಮತ್ತು ಅವನ ಮನೆ ಹಾಗೆ ಅಜ್ಜಿ ಮತ್ತು ಅವಳ ಮನೆ ಅಪರಿಚಿತವಲ್ಲ.  ಅಜ್ಜಿ ಮತ್ತು ಅಜ್ಜಿಮನೆ ಪದಗಳು ಶಿಕ್ಷಕರ ಬಾಯಿಂದ ಬರುತ್ತಿದ್ದಂತೆಯೇ ಮಗು ತನ್ನ ಅಜ್ಜಿಯ ಮುಖವನ್ನು ಕಣ್ಣಿಗೆ ತಂದುಕೊಳ್ಳುತ್ತದೆ. ಅಜ್ಜಿ ಮಜ್ಜಿಗೆ ಕುಡಿಸಿದ್ದನ್ನೊ ಕಜ್ಜಾಯ ಮಾಡಿಕೊಟ್ಟದ್ದನ್ನೊ ನೆನಪು ಮಾಡಿಕೊಳ್ಳುತ್ತದೆ. ಅಜ್ಜಿಯ ಮನೆಯ ಕಟ್ಟೆಯ ಮೇಲೆ ಗೆಳೆಯರೊಂದಿಗೆ ಆಟವಾಡಿದ್ದನ್ನು ನೆನಪಿಸಿಕೊಳ್ಳುತ್ತದೆ. ಆಗ ಮೇಷ್ಟರು ಹೇಳಿದ ತತ್ಪುರುಷ ಸಮಾಸ ಮಗುವಿನ ಮನಸ್ಸಿನ ಆಳಕ್ಕೆ ಇಳಿದು ಅಂತರ್ಗತವಾಗುತ್ತದೆ. ಮಗುವಿನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇಂಥದ್ದು ಮಾತ್ರ ನಿಜವಾದ ಶಿಕ್ಷಣವಾಗುತ್ತದೆ.

ನಮ್ಮ ಶಿಕ್ಷಕರು ಯಾಂತ್ರೀಕೃತ ಬೋಧನೆಯಲ್ಲಿ ತೊಡಗಿದಷ್ಟೂ ಶಿಕ್ಷಣ ಸೊರಗುತ್ತಾ ಹೋಗುತ್ತದೆ. ಹೌದು ಅವರಿಗೆ ಹತ್ತಾರು ಮಿತಿಯೊತ್ತಡಗಳಿವೆ. ಆದರೂ ಕ್ರಿಯಾಶೀಲವಾಗಿರುವ ಶಿಕ್ಷಕರು ತಮ್ಮ ಮಿತಿಯ ಕಥೆ ಹೇಳುತ್ತಾ ಕೂರುವುದಿಲ್ಲ. ಬದಲಾಗಿ ಮಿತಿಯ ಒಳಗೂ ಅಪರಿಮಿತ ಸಾಧನೆಯನ್ನು ಮಾಡಿ ತೋರಿಸುತ್ತಾರೆ. ಇಂತಹ ಶಿಕ್ಷಕರನ್ನು ಉಳಿದವರೂ ಅನುಸರಿಸಬೇಕು. ಆಗ ಅವರೆಲ್ಲ  ಅಪರಿಚಿತವೂ, ಭಯವನ್ನು ತರಿಸುಂಥದ್ದೂ ಆದ ದೌಲತ್ತಿನ `ಅರಮನೆ’ ತೊರೆದು ಮಮತೆಯ ಮಡಿಲೂ, ಸಿಹಿನೆನಪಿನ ಒಡಲೂ ಆಗಿರುವ, ಕಜ್ಜಾಯ ಮಾಡಿಕೊಡುವ `ಅಜ್ಜಿಮನೆ’ಯನ್ನು ನೆನಪುಮಾಡಿಕೊಳ್ಳಬಲ್ಲರು. ಯಾಂತ್ರೀಕರಣಗೊಳಿಸಿಕೊಂಡಿರುವ ಶಿಕ್ಷಣವನ್ನು ಸೃಜನಶೀಲಗೊಳಿಸಬಲ್ಲರು. ಹಾಗಾಗಲಿ ಎಂದು ಆಶಿಸೋಣ. ಕೊನೆಯಲ್ಲಿ,  ಹಾಗಾಗದಿದ್ದರೆ ಏನಾಗಬಹುದು ಎನ್ನುವುದನ್ನು ಸೂಚಿಸುವ ದಿನಕರ ದೇಸಾಯಿಯವರದ್ದೇ ಆದ ಇನ್ನೊಂದು ಚೌಪದಿ:

ಭಾಷೆ ಕುಣಿದರೆ ಮಾತ್ರ ಕವಿತೆ ಕಾಯಮ್ಮು
ಕುಣಿಯದಿದ್ದರೆ ಪಾಪ ಹಿಡಿಯುವುದು ದಮ್ಮು
ಭಾಷೆಗಿರಬೇಕು, ಸಖಿ ಸುಗ್ಗಿಯ ತುರಾಯಿ,
ಬೋಳುತಲೆ ಕಾಣಿಸಲು ಬೊಗಳುವುದು ನಾಯಿ
*****
ಡಾ. ರಾಜೇಂದ್ರ ಬುರಡಿಕಟ್ಟಿ
Saturday, July 04, 2020

Wednesday, July 8, 2020


ಎಸ್.ಎಸ್.ಎಲ್.ಸಿ:
ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ’ ಪತ್ರ!?
- ಡಾರಾಜೇಂದ್ರ ಬುರಡಿಕಟ್ಟಿ

ರೋಗದ ವೇಗದ ಗಾಳಿಗೆ ಹರಿಯದೆ
ವಾದವಿವಾದದ ಸುಳಿಯಲಿ ಮುಳುಗದೆ
ಮೆಲ್ಲನೆ ತೇಲುತ ದಡವನು ಸೇರಿತು
ಶಾಲೆಗೆ ಹೋಗುವ ಮಗುವಿಗೆ ನೀಡುವ
ಶಾಲೆ ಬಿಡುವ ಪತ್ರ!
ಇವು ಮೊನ್ನೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದಾಗ ಹುಟ್ಟಿಬಂದ ಕವಿತೆಯೊಂದರ ಸಾಲುಗಳು. ಇಡೀ ಜಗತ್ತನ್ನು ತಲ್ಲಣಗೊಳಿಸಿ ಅದರ ಕಾರ್ಯವೈಖರಿಯನ್ನೇ ಬದಲಿಸಿದ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ  ಭಾರತದಲ್ಲಿ ಅತಿಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಗಾದ ಕ್ಷೇತ್ರಗಳು ಮೂರು. ಮೊದಲನೆಯದು ಆರೋಗ್ಯ. ಎರಡನೆಯದಾಗಿ ವಲಸೆ ಕಾರ್ಮಿಕರ ಸಮಸ್ಯೆ. ಮೂರನೆಯದು ಶಿಕ್ಷಣ. ಮೊದಲೆರಡಸು ಕ್ಷೇತ್ರಗಳ ಚರ್ಚೆಗಳು ಒಂದು ಹಂತವನ್ನು ತಲುಪಿದ ನಂತರ ಶಿಕ್ಷಣದ ಚರ್ಚೆಯ ಮುನ್ನೆಲೆಗೆ ಬಂತು. ಈ ಚರ್ಚೆಯಲ್ಲಿ ಮುಖ್ಯವಾಗಿ ಎರಡು ಅಂಶಗಳು ಪ್ರಾಮುಖ್ಯತೆ ಪಡೆದುಕೊಂಡವು. ಒಂದು ಮುಗಿದು ಹೋಗಿರುವ ಕಳೆದ ಸಾಲಿನ ಉಳಿದುಕೊಂಡ ಪರೀಕ್ಷೆಯ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆ ಇನ್ನೊಂದು ಆರಂಭವಾಗುತ್ತಿರುವ ಹೊಸ ವರ್ಷದ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ.
ಕರ್ನಾಟಕದಲ್ಲಿ ಈ ಶೈಕ್ಷಣಿಕ ಚರ್ಚೆಯ ಮುಂದಿನ ಸಾಲಿನಲ್ಲಿ ನಿಂತು ಆದ್ಯತೆಯ ವಿಷಯವಾಗಿ ತನ್ನನ್ನು ಚರ್ಚೆಗೆ ಒಳಪಡಿಸಿಕೊಂಡದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆ. ಅದು ಎಷ್ಟರ ಮಟ್ಟಿಗೆ ಚರ್ಚೆಗೆ ಒಳಗಾಯಿತು ಎಂದರೆ ಉಳಿದೆಲ್ಲ ಶೈಕ್ಷಣಿಕ ಚರ್ಚೆಯ ವಿಷಯ ಒಂದು ತೂಕವಾದರೆ ಅದೊಂದೇ ಒಂದು ತೂಕ ಅನ್ನುವಷ್ಟರ ಮಟ್ಟಿಗೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅದು ನಮ್ಮ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಡೆಯುವ ಮೊದಲ ಕೇಂದ್ರೀಕೃತ ಪರೀಕ್ಷೆ. ಚಿಕ್ಕಮಕ್ಕಳು ಬರೆಯುವ ಪರೀಕ್ಷೆ. ಜೊತೆಗೆ ಭಾವಹಿಸಿಸುವವ ಅಭ್ಯರ್ಥಿಗಳ ಸಂಖ್ಯಾದೃಷ್ಟಿಯಿಂದ ರಾಜ್ಯದ ಅತಿದೊಡ್ಡ ಪರೀಕ್ಷೆ ಕೂಡ. ಹಾಗಾಗಿಯೇ ಈ ಪರೀಕ್ಷೆ ಸಾರ್ವಜನಿಕ ಗಮನವನ್ನು ಅತಿಹೆಚ್ಚು ಪಡೆಯುವುದು ಸಹಜವೇ. ಈ ಪರೀಕ್ಷೆಯನ್ನು ನಡೆಸಬೇಕೆ ಅಥವಾ ಬೇಡವೇ ಎಂಬ ಚರ್ಚೆ ನಮ್ಮಲ್ಲಿ ಬಿರುಸಿನಿಂದಲೇ ನಡೆಯಿತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ವಿವಾದದ ಸುಳಿಯಲ್ಲಿಯೂ ಈಜಿ ದಡಸೇರಿದ ಪರೀಕ್ಷೆ

ರಾಜ್ಯದ ಅನೇಕ ಶಿಕ್ಷಣ ತಜ್ಞರು, ಸಂಸ್ಕೃತಿ ಚಿಂತಕರು ಇಂತಹ ಸಾಂಕ್ರಾಮಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ಷೆಯನ್ನು ನಡೆಸದೆಯೇ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ರೀರ್ಣಗೊಳಿಸುವ ಸಲಹೆಯನ್ನು ನೀಡಿದರು. ಕೆಲವರು ಈ ವರ್ಷವನ್ನು ಶೂನ್ಯವರ್ಷವೆಂದು ಪರಿಗಣಿಸಲು ಸೂಚಿಸಿದರು. ಸರ್ಕಾರ ಈ ಹಂತದಲ್ಲಿ ಭಾಗೀದಾರರ ಸಲಹೆ ಕೇಳುವ ನಿರ್ಧಾರವನ್ನು ಪ್ರಕಟಿಸಿತು. ಎಲ್ಲ ಶಾಲೆಗಳಿಂದ ಮಕ್ಕಳ ಪಾಲಕರು, ಎಸ್.ಡಿ.ಎಂ.ಸಿಯವರು ಇವರ ಅಭಿಪ್ರಾಯವನ್ನು ಕೇಳಿ ಮುಂದುವರೆಯುವುದಾಗಿ ಭರವಸೆ ನೀಡಿತು ಮತ್ತು ಆ ಕಾರ್ಯಕ್ಕೆ ಮುಂದಾಯಿತು ಕೂಡ. ಕರ್ನಾಟಕದಲ್ಲಿ ಈ ಚರ್ಚೆ ಹೀಗೆ ತೂಗುಯ್ಯಾಲೆಯಲ್ಲಿ ತೂಗುತ್ತಿರಬೇಕಾದರೆ ಅಕ್ಕಪಕ್ಕದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಪರೀಕ್ಷೆ ನಡೆಸದೆಯೇ ಅಲ್ಲಿನ ಮಕ್ಕಳನ್ನು ಸಾರ್ವತ್ರಿಕವಾಗಿ ಉತ್ತೀರ್ಣಗೊಳಿಸುವ ತಮ್ಮ ಸರ್ಕಾರಗಳ ನಿರ್ಧಾರಗಳನ್ನು ಪ್ರಕಟಿಸಿದರು. ಇದರಿಂದಾಗಿ  ಕರ್ನಾಟಕದಲ್ಲಿ ಪರೀಕ್ಷೆ ಬೇಡ ಎನ್ನುವವರಿಗೆ ಒಂದಿಷ್ಟು ಬೆಂಬಲವೂ ಸಿಕ್ಕಂತಾಗಿ ಅವರು ತಮ್ಮ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿದರು. ಸರ್ಕಾರ ತಮಗೆ ಸ್ಪಂದಿಸುತ್ತಿದೆ ಎಂಬ ಭರವಸೆ ಇಲ್ಲವಾಗಿ ಈ ಪ್ರಕರಣ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿಗೂ ಹೋಯಿತು.
ತಾನು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಪರೀಕ್ಷೆ ನಡೆಸುವುದಾಗಿ ಭರವಸೆ ಕೊಟ್ಟದ್ದರಿಂದ ಹೈಕೋರ್ಟು ಸರ್ಕಾರಕ್ಕೆ ಪರೀಕ್ಷೆ ನಡೆಸಲು ಅನುವುಮಾಡಿಕೊಟ್ಟಿತು. ಪ್ರಕರಣ ಸುಪ್ರೀಂ ಕೋರ್ಟಿಗೆ ಹೋದಾಗ ಸುಪ್ರೀಂ ಕೋರ್ಟು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದಾಗ ಕಾರಣ ಪರೀಕ್ಷೆ ನಡೆಯುವುದು ಬಹುತೇಕ ಖಾತ್ರಿಯಾಯಿತು. ಈ ಹಂತದಲ್ಲಿ ಕರ್ನಾಟಕದ  ಈ ಪರೀಕ್ಷೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿತು. ಏಕೆಂದರೆ ದಿನದಿನಕ್ಕೂ ಹೆಚ್ಚುತ್ತಿರುವ ಸಾಂಕ್ರಾಮಿಕ ಸೋಂಕಿನ ಅಪಾಯಕಾರಿ ಸಂದರ್ಭದಲ್ಲಿಯೇ ಸರ್ಕಾರ ಚಿಕ್ಕಮಕ್ಕಳ ಈ ಪರೀಕ್ಷೆಯನ್ನು ನಡೆಸಲು ಮುನ್ನುಗ್ಗುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಬೇಡಿ ಎಂದು ಹೇಳುವವರು ಕೋರ್ಟಿನ ತೀರ್ಪಿನಿಂದಾಗಿ ಸುಮ್ಮನಾಗಬೇಕಾಯಿತು. ಸರ್ಕಾರದ ಜವಾಬ್ದಾರಿ ಹೆಚ್ಚಾಯಿತು. ಕೊಟ್ಟ ಭರವಸೆಯಂತೆ ಪರೀಕ್ಷೆಯನ್ನು ಮಕ್ಕಳಿಗೆ ಯಾವ ತೊಂದರೆಯೂ ಆಗದಂತೆ ನಡೆಸಲು ಅದು ತೀವ್ರಗಮನ ಕೊಡಬೇಕಾಯಿತು.
ಈ ಸಂದರ್ಭದಲ್ಲಿ ಕರ್ನಾಟಕದ ಶಿಕ್ಷಣ ಸಚಿವರು ತೆಗೆದುಕೊಂಡ ಜವಾಬ್ದಾರಿ ಮಾತ್ರ ಬಹಳ ಪ್ರಶಂಸೆಗೆ ಪಾತ್ರವಾಯಿತು. ಅವರು ಸ್ವತಃ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಿ ಕೇವಲ ತಮ್ಮ ಶಿಕ್ಷಣ ಇಲಾಖೆಯಲ್ಲದೆ ಪೊಲೀಸ್, ಆರೋಗ್ಯ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆಲ್ಲ ಈ ಪರೀಕ್ಷೆ ಕೇವಲ ಶಿಕ್ಷಣ ಇಲಾಖೆಯ ಜವಾಬ್ದಾರಿಯಲ್ಲ ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದ್ದು ಇದರ ಯಶಸ್ವಿಗೊಳಿಸುವಿಕೆ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಅದರ ಪ್ರತಿಫಲವಾಗಿ ಈ ಪರೀಕ್ಷೆ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ರಾಜ್ಯದ ಮಕ್ಕಳಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಮಕ್ಕಳು ಪಾಲ್ಗೊಂಡದ್ದು ಸಣ್ಣ ಸಾಧನೆಯೇನಲ್ಲ. ಒಟ್ಟಿನಲ್ಲಿ ವಿವಾದದ ಸುಳಿಯಲ್ಲಿಯೂ ಈ ಪರೀಕ್ಷೆ ಈಜಿ ದಡಸೇರಿತು. ಇಲ್ಲಿ ಶಿಕ್ಷಣ ಸಚಿವರ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಅದಕ್ಕಿಂತ ಮುಖ್ಯವಾಗಿ ಶಿಕ್ಷಕರು ಇವರೆಲ್ಲರಿಗಿಂತ ಮುಖ್ಯವಾಗಿ ಆ ಚಿಕ್ಕ ಮಕ್ಕಳು ತೋರಿದ ಶಿಸ್ತು ಮತ್ತು ಬದ್ಧತೆ ಮೆಚ್ಚುವಂಥದ್ದು. ಮಕ್ಕಳ ಈ ನಡೆ ದೊಡ್ಡವರಿಗೂ ಮಾದರಿ ಎಂದು ರಾಜ್ಯದ ಪತ್ರಿಕೆಯೊಂದು ಶ್ಲಾಘಿಸಿ ಸಂಪಾದಕೀಯವನ್ನು ಬರೆದದ್ದು ಸರಿಯಾಗಿಯೇ ಇದೆ.
ಪರೀಕ್ಷೆ ಹತ್ತಿರವಾಗುತ್ತಿದ್ದರೂ ಸುಪ್ರೀಂ ಕೋರ್ಟಿನಿಂದ ಹಸಿರು ನಿಶಾನೆ ಸಿಕ್ಕರೂ ವಿವಾದ ಸಂಪೂರ್ಣವಾಗಿ ಮುಗಿದಿರಲಿಲ್ಲ. ಈ ಮಧ್ಯೆ ‘ಸರ್ಕಾರ ಖಾಸಗೀ ಶಾಲೆಗಳ ಒತ್ತಡಗಳಿಗೆ ಮಣಿದು ಈ ಪರೀಕ್ಷೆಯನ್ನು ಮಕ್ಕಳ ಜೀವವನ್ನು ಅಪಾಯಕ್ಕೆ ಒಡ್ಡಿ ಪ್ರತಿಷ್ಠೆಗಾಗಿ ನಡೆಸುತ್ತಿದೆ’ ಎಂದು ಕೆಲವರು ಭಿನ್ನಾಭಿಪ್ರಾಯವನ್ನು ಎತ್ತಿದ್ದರು. ಆಗ “ಸರ್ಕಾರ ಯಾರ ಒತ್ತಡಕ್ಕೂ ಮಣಿದಿಲ್ಲ ಪರೀಕ್ಷೆಯನ್ನು ಯಾರ ಪ್ರತಿಷ್ಠೆಗೂ ನಡೆಸುತ್ತಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ನಡೆಸುತ್ತೇವೆ. ಮತ್ತು ಇದನ್ನು ಮಕ್ಕಳ ಸುರಕ್ಷತೆಗೆ ಆಧ್ಯತೆ ನೀಡಿಯೇ ನಡೆಸುತ್ತೇವೆ” ಎಂದು ಶಿಕ್ಷಣ ಸಚಿವರು ಸ್ಪಷ್ಟವಾಗಿ ಹೇಳಿ ಪರೀಕ್ಷೆ ನಡೆಸುವ ತಮ್ಮ ಬದ್ಧತೆಯನ್ನು ಸಮರ್ಥಿಸಿಕೊಂಡರು. ಅದು ಸರಿಯೂ ಇರಬಹುದು. ಆದರೆ ಪರೀಕ್ಷೆಯನ್ನು ವಿರೋಧಿಸುವವರನ್ನು ವಿರೋಧಿಸುವಲ್ಲಿ ಅವರು ಇನ್ನಷ್ಟು ಪ್ರಬುದ್ಧತೆಯನ್ನು ತೋರಬಿಕಿತ್ತೇನೋ. ಏಕೆಂದರೆ ಅವರ ಕಾಳಜಿಯೂ ಕೂಡ ತಮ್ಮಂತೆಯೇ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯವೇ ಆಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ. ಎರಡೂ ಕಡೆಯವರ ಗುರಿ ಕಾಳಜಿಗಳು ಒಂದೇ ಇದ್ದರೂ ಮಾರ್ಗಮಾತ್ರ ಭಿನ್ನವಾದಂತಹವುಗಳು ಎಂಬುದನ್ನು ಗ್ರಹಿಸುವಲ್ಲಿ ವ್ಯವಸ್ಥೆಗೆ ಸಾಧ್ಯವಾದಾಗ ಹಾಗೆ ಸೈದ್ಧಾಂತಿಕವಾಗಿ ವಿರೋಧಿಸುವವರು ಕಿಡಿಗೇಡಿಗಳಂತೆ, ಸಮಾಜಘಾತುಕರಂತೆ ಕಂಡುಬರುವುದಿಲ್ಲ; ಅವರ ವಿಚಾರವನ್ನು ಒಪ್ಪಿಕೊಳ್ಳಲು ಆಗದಿದ್ದರೂ ಕೂಡ!
ಇಲ್ಲಿ ಖಾಸಗೀ ಶಾಲೆಗಳ ಒತ್ತಡಕ್ಕೆ ಸರ್ಕಾರ ಮಣಿಯದಿರಬಹುದು. ಆದರೆ ಅಂಥದೊಂದು ಒತ್ತಡ ಯಾವುದೇ ಸರ್ಕಾರಕ್ಕೆ ಇದ್ದೇ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಬಹುತೇಕ ಖಾಸಗೀ ಶಾಲೆಗಳವರು ‘ಪರೀಕ್ಷೆ ನಡೆಸಬೇಕು’ ಎನ್ನುವ ಕಡೆಗೆ ಇರುವವರು. ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾದರೆ ಅವರಿಗೆ ಎಷ್ಟೆಷ್ಟು ಅಂಕಗಳನ್ನು ಪಡೆದವರಿಗೆ ಎಷ್ಟೆಷ್ಟು ಡೊನೇಶನ್ನು ಎಂಬುದನ್ನು ಫಿಕ್ಸ್ ಮಾಡಲು ಅನುಕೂಲ. ಶೇಕಡಾ ತೊಂಬತ್ತರ ಮೇಲೆ ಅಂಕಪಡೆದ ಶೇ.10 ರಷ್ಟು ಮಕ್ಕಳಿಗೆ ಫೀ, ಡೊನೇಶನ್ನು ಎಲ್ಲವನ್ನೂ ಫ್ರೀ’ ಎಂದು ಘೋಷಣೆ ಮಾಡಿ ಆ ವಿದ್ಯಾರ್ಥಿಗಳ ಫೋಟೋಗಳನ್ನು ತಮ್ಮ ಶಾಲೆ ಕಾಲೇಜು ಪ್ರವೇಶದ್ವಾರದಲ್ಲಿ ಫ್ಲೆಕ್ಸ್ ಮಾಡಿ ಹಾಕಿ ಅದನ್ನು ನೋಡಿ ಒಳಬರುವ ಶೇ. 90ಕ್ಕಿಂತ ಕಡಿಮೆ ಅಂಕದ ಶೇ. 90 ರಷ್ಟು ವಿದ್ಯಾರ್ಥಿಗಳಿಗೆ ಒಂದೊಂದೇ ಸಾವಿರ ಡೊನೇಶನ್ ಹೆಚ್ಚಿಗೆ ಮಾಡಿದರೂ ಅವರಿಗೆ ಭರ್ಜರಿ ಲಾಭವೇ ಆಗುತ್ತದೆ. ಎಲ್ಲರನ್ನೂ ಪಾಸುಮಾಡಿದರೆ ಅವರಿಗೆ ಅವರ ವ್ಯವಹಾರಕ್ಕೆ ಗೊಂದಲವುಂಟಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಪರೀಕ್ಷೆ ನಡೆಸಲು ಅವರ ಒತ್ತಡ ಇರುವುದು ಸಹಜವೆ.
ಸರ್ಕಾರ ಎಲ್ಲ ಶಾಲೆಗಳಿಂದ ಪಾಲಕರಿಂದ ಅಭಿಪ್ರಾಯ ಕೇಳಿ ಬಹುಪಾಲು ಜನ ಹೇಳುವಂತೆ ಮಾಡುತ್ತೇವೆ ಎಂದು ಹೇಳಿದ್ದೇನೋ ನಿಜ. ಶಾಲೆಗಳಿಂದ ಅಭಿಪ್ರಾಯ ತರಿಸಿಕೊಂಡದ್ದೂ ನಿಜ. ಆದರೆ ಯಾವ ಶಾಲೆಗಳ ಪಾಲಕರು ಏನು ಹೇಳಿದರು ಎಂದು ಉಳಿದವರಿಗೆ ಗೊತ್ತಾಗಲಿಲ್ಲ. ರಾಜ್ಯದ ಬಹುಪಾಲು ಪಾಲಕರು ಏನು ಹೇಳಿದರು, ಒಟ್ಟಾರೆ ಈ ಪರೀಕ್ಷೆಯ ಬಗ್ಗೆ ಭಾಗಿದಾರರಿಂದ ಬಂದ ಬಹುಮತದ ಅಭಿಪ್ರಾಯ ಏನಾಗಿತ್ತು ಎಂಬುದು ಸಾರ್ವಜನಿಕವಾಗಿ ಪ್ರಕಟವಾದಂತಿಲ್ಲ. ಸುಪ್ರೀಂ ಕೋರ್ಟಿನ ರಹದಾರಿ ಸಿಕ್ಕದ್ದರಿಂದ ಈ ಜನಾಭಿಪ್ರಾಯದ ಕಡೆ ಯಾರ ಗಮನವೂ ಹೋಗಲಿಲ್ಲ. ಒಟ್ಟಿನಲ್ಲಿ ಪರೀಕ್ಷೆ ಮುಗಿದು ಯಾವುದೋ ಯುದ್ಧವೊಂದನ್ನು ಗೆದ್ದ, ಮಹಾಕಂಟಕವೊಂದನ್ನು ದಾಟಿಬಂಧ ಭಾವ ಇಂದು ಶೈಕ್ಷಣಿಕ ವಲಯದಲ್ಲಿ ಮತ್ತು ಅದರ ಭಾಗಿದಾರರೆಲ್ಲರಲ್ಲೂ ಆವರಿಸಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಶಾಲೆಗೆ ಹೋಗುವವರಿಗೇಕೆ ಶಾಲೆ ಬಿಡುವ ಪ್ರಮಾಣ ಪತ್ರ?

ಇಷ್ಟೆಲ್ಲ ದೊಡ್ಡಮಟ್ಟದ ಆಡಳಿತ ವ್ಯವಸ್ಥೆಯನ್ನು ಜನಮಾನಸದ ಮನಸ್ಸನ್ನು ತನ್ನೆಡೆಗೆ ಕೇಂದ್ರೀಕಿಸಿಕೊಳ್ಳುವ ಈ ಎಸ್.ಎಸ್.ಎಲ್.ಸಿ. ಪರೀಕ್ಷೆ ನಿಜಕ್ಕೂ ವಾಸ್ತವದಲ್ಲಿ ಈಗ ಅಷ್ಟು ಮಹತ್ವದ್ದೆ, ಅದಕ್ಕೆ ನಾವು ಅಗತ್ಯಕ್ಕಿಂತ ಹೆಚ್ಚು ಆದ್ಯತೆ ನೀಡಿದ್ದೇವೆಯೆ ಎಂಬುದನ್ನು ನಾವಿಂದು ಪರಿಶೀಲಿಸಿಕೊಳ್ಳಬೇಕಾಗಿದೆ. ಎಸ್.ಎಸ್.ಎಲ್.ಸಿ. ಎಂಬ ಪ್ರಥಮಾಕ್ಷರಗಳಿಂದ ಕರೆಯಲ್ಪಡುವ ಈ ಪರೀಕ್ಷೆಯ ವಿಸ್ತೃತ ರೂಪ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್’ ಎಂಬುದು. ಇದರಲ್ಲಿನ `ಸ್ಕೂಲ್ ಲಿಂವಿಂಗ್ ಸರ್ಟಿಫಿಕೇಟ್’ ಪದಪುಂಜವು ಕೆಲವರಿಗಾದರೂ ಏಕೆ ಸೇರಿಕೊಂಡಿದೆ ಎಂಬ ಕುತೂಹಲವನ್ನು ಹುಟ್ಟಿಸೀತು. ನಾವು ಆ ಹಂತದ ಶಿಕ್ಷಣವನ್ನು ಮುಗಿಸಿದ ಮಕ್ಕಳಿಗೆ ಶಾಲೆಯನ್ನು ಮುಂದುವರೆಸುವ ಅರ್ಹತಾ ಪ್ರಮಾಣಪತ್ರವನ್ನು ಕೊಡುವ ಬದಲು ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುತ್ತಿದ್ದೇವಲ್ಲ ಅನ್ನಿಸದಿರದು. ನಮ್ಮಲ್ಲಿ ಅನೇಕ ಹೆಸರುಗಳನ್ನು ನಾವು ಪಳೆಯುಳಿಕೆಯ ರೀತಿ ಇಟ್ಟುಕೊಂಡೇ ಮುಂದುವರೆಯುತ್ತೇವೆ. ಅವುಗಳಲ್ಲಿ ಇದು ಕೂಡ ಒಂದು.
ಹಿಂದೆ ಬ್ರಿಟೀಷರು ಭಾರತದಲ್ಲಿ ಇಂಗ್ಲಿಷ್ ಮತ್ತು ವರ್ನಾಕುಲರ್ ಶಿಕ್ಷಣವನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಆಡಳಿತಕ್ಕೆ ಗುಮಾಸ್ತರನ್ನು ತಯಾರು ಮಾಡುವುದೇ ಅವರ ಉದ್ದೇಶವಾಗಿತ್ತು. ಆ ಕಾರಣದಿಂದ ಅವರು ಭಾರತದಲ್ಲಿ ಆರಂಭಿಸಿದ ಶಾಲಾ ವ್ಯವಸ್ಥೆಯಲ್ಲಿ ಬಹಳ ದಿನಗಳವರೆಗೆ ಪ್ರೌಢಶಿಕ್ಷಣವೇ ಲಭ್ಯವಿರುವ ಉನ್ನತ ಶಿಕ್ಷಣವಾಗಿತ್ತು. ಇಡೀ ಜಿಲ್ಲೆಗೆ ಒಂದೇ ಒಂದು ಪ್ರೌಢಶಾಲೆ ಜಿಲ್ಲಾಕೇಂದ್ರದಲ್ಲಿರುತ್ತಿತ್ತು. ಒಂದು ಕಾಲಘಟ್ಟದಲ್ಲಿ ಇಡೀ ಒಂದು ಜಿಲ್ಲೆಯಲ್ಲಿ ಇಬ್ಬರೇ ಇಬ್ಬರು `ಹಸಿರುಮಸಿ’ ಅಧಿಕಾರಿಗಳು ಇರುತ್ತಿದ್ದರು. ಅವರೆಂದರೆ ಒಬ್ಬ ಆ ಜಿಲ್ಲೆಯ ಕಲೆಕ್ಟರ್ ಅಂದರೆ ಜಿಲ್ಲಾಧಿಕಾರಿ. ಇನ್ನೊಬ್ಬ ಆ ಜಿಲ್ಲೆಯ ಹೈಸ್ಕೂಲ್ ಹೆಡ್ ಮಾಸ್ಟರ್! ಈ ಹೈಸ್ಕೂಲ್ ಹೆಡ್ ಮಾಸ್ಟರ್ ಹುದ್ದೆ ಎಂತಹ ಘನತೆ ಹೊಂದಿತ್ತು ಎಂದರೆ ಜಿಲ್ಲಾಧಿಕಾರಿಯು ಜಿಲ್ಲೆಯಿಂದ ಹೊರಗೆ ಹೋಗಬೇಕಾದಾಗಲೆಲ್ಲ ಜಿಲ್ಲಾಧಿಕಾರಿಯ ಚಾರ್ಜಿನಲ್ಲಿ ಇರುತ್ತಿದ್ದದ್ದು ಈ ಹೈಸ್ಕೂಲ್ ಹೆಡ್ ಮಾಸ್ಟರ್!! ಕನ್ನಡ ನವೋದಯ ಕಾಲಘಟ್ಟದ ಪ್ರಮುಖ ಲೇಖಕರಾದ `ನಾಗರಹಾವಿನ’ ಪಂಜೆ ಮಂಗೇಶರಾಯರು ಕೊಡಿಗಿನ ಜಿಲ್ಲಾಧಿಕಾರಿಯಾಗಿ ಆಗಾಗ ಕೆಲಸ ಮಾಡುತ್ತಿದ್ದದು ಈ ರೀತಿ ಅವರು ಮಡಿಕೇರಿ ಗೌರ್ಮೆಂಟ್ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರಿಂದಲೇ!
ಈ ಎಲ್ಲ ಕಾರಣಗಳಿಂದ ಆಗಿನ ಪ್ರೌಢಶಿಕ್ಷಣಕ್ಕೆ ಈಗಿನ ವಿಶ್ವಿವಿದ್ಯಾಲಯ ಹಂತದ ಶಿಕ್ಷಣದ ಘನತೆಯಿತ್ತು. ಪ್ರೌಢಶಿಕ್ಷಣದ ನಂತರದ ಶಿಕ್ಷಣವನ್ನು ಪಡೆಯಬೇಕಾದರೆ ಬೇರೆ ಬೇರೆ ದೇಶಗಳಿಗೆ ಹೋಗಬೇಕಾಗಿತ್ತು ಬೇರೆ ದೇಶಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೋಗುವವರು ಬೆರಳೆಣಿಕೆಯಲ್ಲಿರುತ್ತಿದ್ದರು. ಉಳಿದಂತೆ ಬಹುಪಾಲು ಎಲ್ಲರೂ ಪ್ರೌಢಹಂತ ಮುಗಿಸಿ ಶಿಕ್ಷಣವನ್ನು ಬಿಡುತ್ತಿದ್ದರು. ಬಿಡುವಾಗ ಈ `ಲಿವಿಂಗ್ ಸರ್ಟಿಫಿಕೇಟ್’ ಅಥವಾ ಶಾಲೆ ಬಿಡುವ ಪ್ರಮಾಣಪತ್ರವನ್ನು ಕೊಡುವ ಕ್ರಮ ಸರಿಯಾಗಿಯೇ ಇತ್ತು. ಆ ಹಂತದ ಶಿಕ್ಷಣ ಮುಗಿಸಿದವರಿಗೆ ಈಗಿನ ಸಿ ದರ್ಜೆಯ ಹಂತದ ಹುದ್ದೆಗಳು ದೊರೆಯುತ್ತಿದ್ದವು. ಹಾಗಾಗಿ ಈ ಎಸ್.ಎಸ್.ಎಲ್.ಸಿ. ಲಿವಿಂಗ್ ಸರ್ಟಿಫಿಕೇಟಿಗೆ ಈಗಿನ ಪದವಿ ಪ್ರಮಾಣಪತ್ರಕ್ಕಿಂತ ಹೆಚ್ಚಿನ ಬೆಲೆಯಿತ್ತು!
ಈಗ ಪರಿಸ್ಥಿತಿ ಹಾಗಿದೆಯೇ? ಇಲ್ಲ. ಅದಕ್ಕೆ ವಿರುದ್ಧವಾದ ಸ್ಥಿತಿಯಲ್ಲಿದೆ. ಹಳ್ಳಿಹಳ್ಳಿಗೂ ಶಾಲೆ ಕಾಲೇಜುಗಳು ವಿಸ್ತರಣೆಯಾಗಿವೆ. ಈಗ ಎಸ್.ಎಸ್.ಎಲ್.ಸಿ. ಎಂದು ಕರೆಯಲಾಗುವ ಹತ್ತನೆಯ ತರಗತಿ ಕೂಡ ಉಳಿದ ಎಲ್ಲ ತರಗತಿಗಳಂತೆ ಒಂದು ಸಾಮಾನ್ಯ ತರಗತಿಯಾಗಿದೆ. ಹೀಗಾಗಿ ಈ ಪರೀಕ್ಷೆಯೂ ಈಗ ವಾಸ್ತವದಲ್ಲಿ ಅಷ್ಟೇನೂ ಮಹತ್ವದ ಪರೀಕ್ಷೆಯಾಗಿ ಉಳಿದಿಲ್ಲ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ, ಉದ್ಯೋಗ ಮತ್ತಿತರ ಅವಕಾಶಗಳ ಹಿನ್ನಲೆಯಲ್ಲಿ ಹೇಳುವುದಾದರೆ ಅದನ್ನು ಕನಿಷ್ಠ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣವಾಗುವ ವಿದ್ಯಾರ್ಥಿಗೂ ಉತ್ರೀರ್ಣವಾಗದ ವಿದ್ಯಾರ್ಥಿಗೂ ಅಷ್ಟೇನೂ ಅಂತರ ಇರುವುದಿಲ್ಲ. ಚಿಕ್ಕಪುಟ್ಟ ನೌಕರಿ ಪಡೆಯಲಿಕ್ಕೂ ಈಗ ಪಿ.ಯು.ಸಿ. ಕನಿಷ್ಠ ಅರ್ಹತೆಯಾಗಿದೆ. ಈಗ ಅದು ಬಹುಪಾಲು `ಪ್ರತಿಷ್ಠಿತ’ ಕಾಲೇಜುಗಳಿಗೆ `ಪ್ರತಿಭಾವಂತರನ್ನ’ ಆಯ್ಕೆಮಾಡಿಕೊಡುವ ಮಾನದಂಡವಾಗಿ ಕೆಲಸವನ್ನು ಮಾಡುತ್ತಿರುವಂತೆ ಕಾಣುತ್ತಿದೆ.
ಈ ಹಂತದಲ್ಲಿಯಾದರೂ ಎಸ್.ಎಸ್.ಎಲ್.ಸಿ.ಗೆ ಇರುವ ಹುಸಿಘನತೆಯನ್ನು ನಾವು ಬಿಟ್ಟುಹಾಕಬೇಕಿದೆ. ಹೊಸ ಶಿಕ್ಷಣ ನೀತಿಯನ್ವಯ ಶಾಲಾಹಂತದ ಪುನರ್ ರಚನಾ ಪ್ರಕ್ರಿಯೆ ತ್ವರಿತಗೊಂಡರೆ ಇದು ಸರಿಯಾಗಬಹುದು. ಉದ್ದೇಶಿತ ಒಂಬತ್ತರಿಂದ ಹನ್ನೆರಡನೆಯ ತರಗತಿಯವರೆಗೆ ಎರಡು ಹಂತದ ಮಾಧ್ಯಮಿಕ ಶಿಕ್ಷಣಕ್ರಮ ಜಾರಿಯಾದರೆ ಈಗ ಕೇಂದ್ರೀಯ ಕ್ರಮದಂತೆ ಹತ್ತನೆಯ ತರಗತಿ ಉಳಿದ ತರಗತಿಗಳಂತೆ ಒಂದು ಸಾಮಾನ್ಯ ತರಗತಿಯಾಗುತ್ತದೆ. ಅದಕ್ಕಿರುವ ಮಹತ್ವ ಹನ್ನೆರಡನೆ ತರಗತಿಗೆ ಸಹಜವಾಗಿ ವರ್ಗಾವಣೆಯಾಗುತ್ತದೆ. ಆದರೆ ಅದನ್ನು ಮಾಡಿಕೊಳ್ಳಲು ಸಧ್ಯಕ್ಕೆ ಆಗದಿದ್ದರೆ ಕೊನೆಯ ಪಕ್ಷ ಎಸ್.ಎಸ್.ಎಲ್.ಸಿ. ಎಂದು ಅದಕ್ಕಿರುವ ಹೆಸರನ್ನಾದರೂ ಬದಲಿಸಿಕೊಳ್ಳಬೇಕು ಎಂದು ನಮಗೆ ಅನ್ನಿಸಬೇಕು. ಏಕೆಂದರೆ ಅದನ್ನು ಮುಗಿಸಿದ ಬಹುಪಾಲು ಮಕ್ಕಳು ಈಗ ಶಾಲೆ ಬಿಡುತ್ತಿಲ್ಲ. ಮುಂದಿನ ವ್ಯಾಸಂಗಕ್ಕೆ ಹೋಗುತ್ತಿದ್ದಾರೆ. ಹೀಗೆ ಶಾಲೆಗೆ ಹೋಗಬೇಕಾದ ಮತ್ತು ಹೋಗಲು ತಯಾರಾಗಿರುವ ಮಕ್ಕಳಿಗೆ ನಾವಿನ್ನೂ ಆ ಹಳೆಯ ಕಾಲದ `ಶಾಲೆಯನ್ನು ಬಿಡುವ’ ಹೆಸರಿನ ಪ್ರಮಾಣಪತ್ರವನ್ನೇ ಕೊಡುತ್ತಿದ್ದೇವೆ! ಇದು ಎಷ್ಟರ ಮಟ್ಟಿಗೆ ಸರಿ? ಅದರ ಬದಲು ಪ್ರೌಢಹಂತವನ್ನು `ಪೂರೈಸಿರುವ’ `ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿರುವ’ ಇತ್ಯಾದಿ ಅರ್ಥಗಳು ಬರುವಂತೆ ಅದನ್ನು ಬದಲಿಸುವುದು ಉಚಿತವಲ್ಲವೆ?
`ಹೆಸರಿನಲ್ಲಿ ಏನಿದೆ’ ಎಂದು ಕೆಲವರು ಕೇಳಬಹುದು. ಆದರೆ `ಹೆಸರಿನಲ್ಲಿ ಏನಿಲ್ಲ ಹೇಳಿ?’ ಕನ್ನಡದ ಹಿರಿಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪದ್ಯದ ನಾಲ್ಕು ಸಾಲು ನಮ್ಮ ನಿಲುವು ದೋರಣೆಗಳನ್ನು ಹೇಳುವುದು ಹೀಗೆ:

ಅಪ್ಪ ನೆಟ್ಟ ಆಲದ ಗಿಡ
ಮಗನ ಕಾಲಕ್ಕೆ ಬರಿ ಬುಡ
ಮೊಮ್ಮಗನಿಗಿಲ್ಲ ಅದರ ಕಲ್ಪನೆ ಕೂಡ
ಹೀಗೇ ಬೆಳೆದಿದ್ದೇವೆ ನಾವು
*****
ಡಾ. ರಾಜೇಂದ್ರ ಬುರಡಿಕಟ್ಟಿ
Wednesday, July 08, 2020




Sunday, June 21, 2020


ಅಂತರರಾಷ್ಟ್ರೀಯ ಯೋಗದಿನದ ವಿಶೇಷ ಲೇಖನ
`ಜೀವನಯೋಗ’ದ ಮೇಲೆ ನಿಂತು ನೃತ್ಯಗೈಯ್ಯುತ್ತಿರುವ `ಪ್ರದರ್ಶನ ಯೋಗ’




















`ಯೋಗ’ ಎಂದರೇನು? ಶಬ್ದಕೋಶಗಳ ಅರ್ಥದಲ್ಲಿ ಈ ಪದಕ್ಕೆ `ಕೂಡುವುದು’ `ಸೇರುವುದು’ `ಒಂದಾಗುವುದು’ ಎಂದು ಅರ್ಥಕೊಡಬಹುದು. ಅದನ್ನು ಸ್ವಲ್ಪ ದೇವರು ಧರ್ಮ ಇತ್ಯಾದಿಗಳ ಕಡೆಗೆ ಎಳೆದುಕೊಂಡರೆ `ಜೀವಾತ್ಮ ಪರಮಾತ್ಮನಲ್ಲಿ ಸೇರುವುದು’, `ಭಕ್ತನು ದೇವರಲ್ಲಿ ಒಂದಾಗುವುದು’ ಇತ್ಯಾದಿಯಾಗಿ ಅರ್ಥೈಸಬಹುದು. `ಯೋಗ’ ಎಂಬುದು ಭಾರತೀಯರಿಗೆ ಹೊಸದೇನಲ್ಲ. ಹಾಗೆ ನೋಡಿದರೆ ಅದರ ಹುಟ್ಟನ್ನು ಇಲ್ಲಿಯೇ ಗುರುತಿಸಲಾಗುತ್ತದೆ.  ಭಗವದ್ಗೀತೆ ಸೇರಿದಂತೆ ಅನೇಕ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಇದರ ಉಲ್ಲೇಖಗಳಿವೆ. ಜೀವಾತ್ಮನು ಪರಮಾತ್ಮನನ್ನು ಸೇರುವ ಮುಕ್ತಿಯನ್ನು ಮನುಷ್ಯ ಜೀವನದ ಪರಮಗುರಿ ಎಂದು ಸಾರುವ ನಮ್ಮ ಧಾರ್ಮಿಕ ಸಾಹಿತ್ಯ ಈ ಗುರಿಸಾಧನೆಗೆ ಮನುಷ್ಯನಿಗೆ ನಾಲ್ಕು ದಾರಿಗಳನ್ನು ನೀಡುತ್ತದೆ. ಅವನ್ನು ಜ್ಞಾನಯೋಗ, ರಾಜಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಎಂದು ಗುರುತಿಸಲಾಗುತ್ತದೆ.

ಜ್ಞಾನದ ಮೂಲಕ ದಿವ್ಯತೆಯನ್ನು ಅರಿಯುವುದು ಜ್ಞಾನಯೋಗವಾದರೆ ಮನಸ್ಸಿನ ನಿಗ್ರಹದಿಂದ ಮನುಷ್ಯ ತನ್ನ ದಿವ್ಯತೆಯನ್ನು ಅರಿಯುವುದು ರಾಜಯೋಗ. ಹಾಗೆಯೇ ದೇವರ ಮೇಲೆ ಭಕ್ತಿಯಿಟ್ಟು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವ ಮೂಲಕ ದಿವ್ಯತೆಯನ್ನು ಅರಿಯುವುದು ಭಕ್ತಿಯೋಗವಾದರೆ ತನ್ನ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುವ ಮೂಲಕ ತನ್ನ ದಿವ್ಯತೆಯನ್ನು ಅರಿತು ಆ ಮೂಲಕ ಭಗವಂತನನ್ನು ಸೇರುವುದು ಕರ್ಮಯೋಗ. ಸ್ವಾಮಿ ವಿವೇಕಾನಂದರ ಈ ಯೋಗವಿಧಗಳ ಈ ವಿವರಣೆಯೇ ಬಹುತೇಕ ಎಲ್ಲ ಯೋಗಾಚಾರ್ಯರ ವಿವರಣೆಯೂ ಆಗಿದೆ ಎನ್ನಬಹುದು. ಈ ವಿವರಣೆಯನ್ನು ನೀಡುವ ವಿವೇಕಾನಂದರು ಇವುಗಳೆಲ್ಲ ದೇವರೆಂಬ ಒಂದೇ ಗುರಿಯೆಡೆಗೆ ಒಯ್ಯುವ ಹಲವು ಮಾರ್ಗಗಳು, ಒಂದಕ್ಕಿಂತ ಹೆಚ್ಚು ಮಾರ್ಗಗಳಿರುವುದು ಸೌಲಭ್ಯವೇ ಹೊರತು ಸಂಕಟವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಯೋಗ ಮತ್ತು ಭಗವದ್ಗೀತೆ:

‘ಯೋಗ ಎಂಬ ಪದ `ಸಂದರ್ಭ’ `ಅವಕಾಶ’ ಅನ್ನುವ ಅರ್ಥದಲ್ಲಿಯೂ ಬಳೆಕೆಯಾಗುವುದಿದೆ. ಭಗವದ್ಗೀತೆಯ ಎಲ್ಲ ಹದಿನೆಂಟು ಅಧ್ಯಾಯಗಳೂ `ಯೋಗ’ ಎಂಬ ಪದವನ್ನು ತಮ್ಮೆಲ್ಲ ಶೀರ್ಷಿಕೆಯಲ್ಲೂ ಒಳಗೊಂಡಿರುವುದು ಬಹುಶಃ ಇದೇ ಅರ್ಥದಲ್ಲಿ. ಈ ಯೋಗದ ಹುಟ್ಟು ಬೆಳವಣಿಗೆಯ ಬಗ್ಗೆ ಗೀತೆಯಲ್ಲಿ ಕೃಷ್ಣನ ಬಾಯಿಂದ ಅರ್ಜುನನಿಗೆ ಹೇಳಿಸಲಾಗಿರುವ ಮಾತು ಹೀಗಿದೆ. ‘ಈ ಅವ್ಯಯವಾದ ಯೋಗವನ್ನು ನಾನು ಸೂರ್ಯನಿಗೆ ಹೇಳಿದೆನು; ಸೂರ್ಯನು ಮನುವಿಗೆ ಹೇಳಿದನು; ಮನುವು ಇಕ್ಷ್ವಾಕುವಿಗೆ ಹೇಳಿದನು. ಹೀಗೆ ಪರಂಪರೆಯಿಂದ ಬಂದ ಇದನ್ನು ರಾಜರ್ಷಿಗಳು ತಿಳಿದಿದ್ದರು. ಆ ಯೋಗವು ದೀರ್ಘಕಾಲವಾದುದರಿಂದ ಇಲ್ಲಿ ನಷ್ಟವಾಯಿತು. (ನೀನು) ನನಗೆ ಭಕ್ತನೂ ಸ್ನೇಹಿತನೂ ಆಗಿರುವುದರಿಂದ ಈ ಪುರಾತನ ಯೋಗವೇ ಈಗ ನನ್ನಿಂದ ನಿನಗೆ ಹೇಳಲ್ಪಡುತ್ತಿದೆ; ಏಕೆಂದರೆ ಇದು ಉತ್ತಮವಾದ ರಹಷ್ಯವು” (ಭಗೀ:4:1-3).

ಗೀತೆಯ ಈ ಮಾತುಗಳು ಯೋಗದ ಬಗ್ಗೆ ಕೆಲ ಸಂಗತಿಗಳನ್ನು ದೃಢಪಡಿಸುತ್ತವೆ. ಅವೆಂದರೆ ಮೊದಲನೆಯದಾಗಿ ಯೋಗವು ಅತ್ಯಂತ ಪುರಾತನವಾಗಿದ್ದು ಪರಂಪರೆಯಿಂದ ಹರಿದುಬಂದಂಥದ್ದು. ಎರಡನೆಯದು ಅದನ್ನು ರಾಜರ್ಷಿಗಳು ತಿಳಿದಿದ್ದರು. ಅಂದರೆ ಜನಸಾಮಾನ್ಯರಿಗೆ ಅದು ತಿಳಿದಿರಲಿಲ್ಲ ಅಥವಾ ಅದು ಅವರಿಗೆ ಬೇಕಿರಲಿಲ್ಲ. ಇನ್ನೊಂದು ಬಹಳ ಮುಖ್ಯವಾದದ್ದು ಇದನ್ನು ತಮಗೆ ಬೇಕಾದವರಿಗೆ ಮಾತ್ರ ಗುಟ್ಟಾಗಿ ಕಲಿಸಲಾಗುತ್ತಿತ್ತು. ಇದನ್ನೇ ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುವುದಾದರೆ ಯೋಗವು ಯಾವ ಕಾಲದಲ್ಲಿಯೂ ಜನಸಾಮಾನ್ಯರೂ ಸೇರಿದಂತೆ ಎಲ್ಲರೂ ಸಾಮೂಹಿಕವಾಗಿ ಭೇದಭಾವವಿಲ್ಲದೇ ಯಾವುದೇ ರಹಸ್ಯವಿಲ್ಲದೇ ತೆರೆದ ಮನಸ್ಸು ಹೃದಯಗಳಿಂದ ಮಾಡುವಂಥದ್ದಾಗಿರಲಿಲ್ಲ ಎಂದು ನಾವು ಹೇಳಬಹುದು. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಎಂದೆ ಅದು ಯೋಗವಿರಬಹುದು ಆಯುರ್ವೇದ ಪದ್ಧತಿಯ ಔಷಧಕ್ರಮ ಇರಬಹುದು ಇವುಗಳಲ್ಲೆಲ್ಲ `ರಹಸ್ಯ’ವನ್ನು ಕಾಪಾಡಿಕೊಂಡು ಬರಲಾಗುತ್ತಿತ್ತು ಮತ್ತು ಅದರ ಪ್ರಯೋಜನಗಳು ಎಲ್ಲರಿಗೂ ಸಿಗದಂತೆ ನೋಡಿಕೊಳ್ಳಲಾಗುತ್ತಿತ್ತು ಎನ್ನುವುದು!

ಸರ್ವರೋಗಕ್ಕೂ ಯೋಗವೇ ಮದ್ದು!

ಈಗ ಈ ಯೋಗಕ್ಕೆ ಜನ ಸಮೂಹಸನ್ನಿಯಂತೆ ಮುಗಿಬಿದ್ದಿದ್ದಾರೆ. ಮನುಷ್ಯನ ಎಲ್ಲ ಬಗೆಯ ದೈಹಿಕ ಮತ್ತು ಮನಸ್ಸಿನ ಸಮಸ್ಯೆ ಸಂಕೋಲೆಗಳಿಗೆ ಯೋಗವು ಏಕೈಕ ಮದ್ದೇನೊ ಎನ್ನುವಂತೆ ಜನರ ಬೆಂಬಲ ಈಗ ಅದಕ್ಕೆ ದಕ್ಕಿದೆ. ಕಳೆದ ಕೆಲವು ವರ್ಷಗಳ ಹಿಂದೆ ಜೂನ್ 21ನ್ನು ‘ಅಂತರರಾಷ್ಟ್ರೀಯ ಯೋಗದಿನ’ವೆಂದು ಘೋಷಿಸಿದ ಮೇಲಂತೂ ಈಗದು ಅಂತರರಾಷ್ಟ್ರೀಯ ವಿದ್ಯಮಾನವಾಗಿದೆ. ಅದಕ್ಕಾಗಿ ದೇಶದ ಜನರೆಲ್ಲ ಹೆಮ್ಮೆಯಿಂದ ಬೀಗುತ್ತಿದ್ದಾರೆ. ಭಾರತೀಯ ಜೀವನ ಪದ್ಧತಿಯೊಂದು ವಿಶ್ವದ ಗಮನ ಸೆಳೆಯಿತು ಎಂಬ ಬಗ್ಗೆ ದೇಶವಾಸಿಗಳಿಗೆ ಹೆಮ್ಮೆಯುಂಟಾಗುವುದು ತಪ್ಪಲ್ಲ. ಆದರೆ ಅಭಿಮಾನವೆಂಬುದು ಮಿತಿಮೀರಿ ತಾರಕಕ್ಕೇರಿದರೆ ಅದು ಒಳಿತು ಕೆಡುಕುಗಳನ್ನು ಸ್ವೀಕರಿಸಿ ಆಲೋಚಿಸುವ ಮನಸ್ಥಿತಿಯನ್ನು ಹೊಸಕಿಹಾಕಿಬಿಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಇಂತಹ ಸಂದರ್ಭದಲ್ಲಿ ಯೋಗದ ಬಗ್ಗೆ ಟೀಕೆ ಇರಲಿ ವಿಮರ್ಶೆಯನ್ನು ಕೇಳುವ ಮನಸ್ಥಿತಿ ಕೂಡ ಸಾಮಾನ್ಯವಾಗಿ ಜನಸಮುದಾಯಕ್ಕೆ ಇರುವುದಿಲ್ಲವಾದರೂ ಸತ್ಯಸಂಗತಿಗಳ ಬೌದ್ಧಿಕ ಚರ್ಚೆಯನ್ನು ನಿಲ್ಲಿಸಲು ಬರುವುದಿಲ್ಲ. ಕಾಲವನ್ನು ಜೀವಂತವಾಗಿಡಲಿಕ್ಕೆ ಇಂತಹ ವೈಚಾರಿಕೆ ಚರ್ಚೆಗಳು ಅನಿವಾರ್ಯ. ಇಲ್ಲಿ ಇದಕ್ಕೆ ಪೂರಕವಾದ ಇನ್ನೊಂದು ಸಂಗತಿಯನ್ನು ಉಲ್ಲೇಖಿಸಿದರೆ ತಪ್ಪಾಗಲಾರದೇನೋ. ಯೋಗದಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಕೂಡ ಅಂತರರಾಷ್ಟ್ರೀಯ ಮಹತ್ವ ಪಡೆದು ಏಪ್ರಿಲ್ 14ನ್ನು ವಿಶ್ವಸಂಸ್ಥೆ `ಜಾಗತಿಕ ಜ್ಞಾನದ ದಿನ’ ಎಂದು ಘೋಷಿಸಿದೆ. ಆದರೆ ಯೋಗದಿನದಂತೆ ಜ್ಞಾನದಿನಕ್ಕೆ ನಮ್ಮಜನ ಏಕೆ ಮುಗಿಬೀಳುತ್ತಿಲ್ಲ. ಅದನ್ನು ಇನ್ನೂ ಬಾಬಾಸಾಹೇಬರ ಭಾವಚಿತ್ರಕ್ಕೊಂದು ಮಾಲೆಹಾಕಿ ಫೋಟೋ ಹೊಡೆದುಕೊಂಡು ದಾಖಲೀಕರಣ ಮಾಡುವ ಕಾಟಾಚಾರದ ಹಂತದಲ್ಲಿಯೇ ನಮ್ಮ ಜನ ಇಟ್ಟುಕೊಂಡಿರುವುದೇಕೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ನಮಗೆ ಎದುರಾಗಬೇಕು. ಆಗ ನಮಗೆ ಉತ್ತರ ಹೊಳೆಯುತ್ತದೆ. `ಜ್ಞಾನವು ವಿಚಾರವಂತಿಕೆಯನ್ನು ಬೆಳೆಸುವ ಸಾಧನ. ಯೋಗ ಅದಕ್ಕೆ ವಿರುದ್ಧವಾಗಿ `ಮೋಡಿ’ ಮಾಡುವಂಥದ್ದು! ಜ್ಞಾನವು ನಮ್ಮ ಕಣ್ಣು ತೆರೆಸುವಂಥದ್ದು; ಯೋಗವು ಕಣ್ಣುಮುಚ್ಚುವುದನ್ನು ಕಲಿಸುವಂಥದ್ದು. ನಮಗೆ ಕಣ್ಣುತೆರೆಸುವಂಥದ್ದಕ್ಕಿಂತ ನಮ್ಮನ್ನು ಎಚ್ಚರಿಸುವಂಥದ್ದಕ್ಕಿಂತ ನಮ್ಮ ಕಣ್ಣುಮುಚ್ಚುವಂಥದ್ದು ನಮ್ಮನ್ನು ಮೋಡಿಗೊಳಪಡಿಸುವಂಥದ್ದೇ ಹೆಚ್ಚು ಇಷ್ಟ! ಏಕೆಂದರೆ ನಾವು ಭಾವಜೀವಿಗಳು!!

ಯೋಗ ಮತ್ತು ಅದರ ತಾತ್ವಿಕತೆ:

ಭಾರತೀಯ ಯೋಗವನ್ನು `ಮೋಡಿ’ ಮಾಡುವಂಥದ್ದನ್ನು ಎನ್ನುವಲ್ಲಿ ನನಗೆ ಅದರ ಮಹತ್ವವನ್ನು ಅಲ್ಲಗಳೆಯುವ ಯಾವ ಉದ್ದೇಶವೂ ಇಲ್ಲ. ಅದರ ಅಗತ್ಯವೂ ನನಗಿಲ್ಲ. ಜನಸಾಮಾನ್ಯರ ಮೇಲೆ ಅದು ಮಾಡುವ ಪರಿಣಾಮಕ್ಕಷ್ಟೇ ಈ ಮಾತನ್ನು ಅನ್ವಯಿಸಿಕೊಳ್ಳಬೇಕು. ಈಗ ಯೋಗವನ್ನು ಕುರಿತ ಕೆಲವು ಅಭಿಪ್ರಾಯಗಳನ್ನು ನೋಡೋಣ. ಕೆಲವು ಪ್ರಾಚೀನ ಸಾಹಿತ್ಯ ಉಲ್ಲೇಖಗಳನ್ನು ಗಮನಿಸುವುದಾದರೆ ಬ್ರಾಹ್ಮಣಗಳು ಹೇಳುವಂತೆ ಯೋಗವು ಸಾಂಖ್ಯದ ಒಂದು ರೂಪವಷ್ಟೆ. ಇದು ಮನಸ್ಸಿನ ಏಕಾಗ್ರತೆಯನ್ನು ಗಳಿಸುವ ಸಲುವಾಗಿ ಒಂದು ರೀತಿಯ ಸಮಾನ ಶಿಸ್ತನ್ನು ಕ್ರಮಬದ್ಧಗೊಳಿಸುವ ಪ್ರಯತ್ನ. ನಮ್ಮ ದೇಶದಲ್ಲಿ ಬಹುತೇಕ ಎಲ್ಲ ಯೋಗಾಚಾರ್ಯರು ಯೋಗವನ್ನು ಕಲಿಸಲು ಬಳಸುವ ಅತ್ಯಂತ ಪ್ರಾಚೀನ ಶಾಸ್ತ್ರಗ್ರಂಥವೆಂದರೆ ಅದು ಪತಂಜಲಿ ಮಹರ್ಷಿಗಳ `ಯೋಗಸೂತ್ರ’. ಅದರ ಮಹತ್ವವನ್ನು ವಿವರಿಸುತ್ತ ಭಾರತದ ಬಹುಮುಖ್ಯ ತತ್ವಜ್ಞಾನಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ತಮ್ಮ ಅಭಿಪ್ರಾಯವನ್ನು ದಾಖಲಿಸುವುದು ಹೀಗೆ:

“ಪತಂಜಲಿಯ ಪ್ರಕಾರ ಯೋಗವೆಂದರೆ ಭೌತಿಕವೂ, ಮಾನಸಿಕವೂ ಆದ ಮಾನವ ಸ್ವಭಾವದ ಹಲವಾರು ಗುಣಗಳನ್ನು ನಿಗ್ರಹಿಸುವ ಮೂಲಕ ಪರಿಪೂರ್ಣತೆಯನ್ನು ಸಾಧಿಸುವ ಶಿಸ್ತುಬದ್ಧ ಪ್ರಯತ್ನ. ಪತಂಜಲಿಯು ದೇಹವನ್ನು ಅದರ ಅಶಾಂತತೆಯಿಂದ ಮುಕ್ತಗೊಳಿಸಲು ಮತ್ತು ಅದರ ಕಲ್ಮಶಗಳಿಂದ ಬಿಡುಗಡೆಗೊಳಿಸಲು ಕೆಲವು ಅಭ್ಯಾಸಗಳನ್ನು ಸೂಚಿಸುತ್ತಾನೆ. ಈ ವಿಧಾನಗಳಿಂದ ಪಡೆಯುವ ಶಕ್ತಿಯನ್ನು ತೊಡಗಿಸಿ ಪರಮಾವಧಿಯ ಯೌವನವನ್ನು ಮತ್ತು ದೀರ್ಘಾಯಸ್ಸನ್ನು ಪಡೆಯಬಹುದು ಮತ್ತು ಅವನ್ನು ಆಧ್ಯಾತ್ಮಿಕ ಬಿಡುಗಡೆಯ ಆಸಕ್ತಿಗಳಲ್ಲಿ ತೊಡಗಿಸಬಹುದು.”
ರಾಧಾಕೃಷ್ಣನ್ ಅವರ ಅಭಿಪ್ರಾಯದಂತೆ ಅದು ಮನಸ್ಸನ್ನು ಅಶಾಂತತೆಯಿಂದ ಬಿಡುಗಡೆಗೊಳಿಸುವುದೋ ಇಲ್ಲವೋ ಅದನ್ನು ಕಲ್ಮಶಗಳಿಂದ ಬಿಡುಗಡೆಗೊಳಿಸಲು ಎಷ್ಟರಮಟ್ಟಿಗೆ ಪ್ರಯತ್ನಿಸುತ್ತದೋ ಆದರೆ ಅದೊಂದು ಶಿಸ್ತುಬದ್ಧ ಪ್ರಯತ್ನವಂತೂ ಹೌದು. ಅದರ ಕ್ರಮಬದ್ಧ ಆಚರಣೆ ನಮಗೆ ಒಂದಿಷ್ಟು ಲಾಭಗಳನ್ನು ತರಲಿಕ್ಕೆ ಸಾಧ್ಯವಿದೆ. ಆದರೆ ಅದರ ತಾತ್ವಿಕತೆಯಲ್ಲಿನ ಮನುಷ್ಯ ವಿರೋಧಿಯಾದ ಅಂಶವೊಂದರ ಕಡೆ ರಾಧಾಕೃಷ್ಣನ್ ಅವರ ಗಮನ ಕೂಡ ಹರಿದಿಲ್ಲವೆಂಬುದನ್ನು ನಾವು ಗಮನಿಸಬೇಕು. ಆ ತಾತ್ವಿಕತೆ ಏನು ಎಂಬುದನ್ನು ಚರ್ಚಿಸುವ ಮುನ್ನ ಪ್ರಾಚೀನ ಸಾಹಿತ್ಯದಲ್ಲಿಯೇ ಯೋಗದ ಬಗ್ಗೆ `ಭಿನ್ನಾಭಿಪ್ರಾಯ’ ಇದ್ದ ಬಗ್ಗೆ ನಮಗೆ ಪುರಾವೆಗಳು ಸಿಗುವುದನ್ನು ತಜ್ಞರು ಗುರುತಿಸಿರುವುದನ್ನು ಒಂದು ಕ್ಷಣ ಗಮನಿಸೋಣ. ಪ್ರಸಿದ್ಧ ಮೀಮಾಂಸ ತತ್ವಕಾರ ಕುಮಾರಿಲಭಟ್ಟನ `ಯೋಗಾನುಭವವು ಕೇವಲ ಮಾನಸಿಕ ಕಲ್ಪನೆ. ಆದ್ದರಿಂದ ಅದು ಮನಸ್ಸಿನ ಇತರ ಕಲ್ಪನೆಗಳಿಗಿಂತ ಯಾವ ರೀತಿಯಿಂದಲೂ ಭಿನ್ನವಲ್ಲ’ ಎಂಬ ಅಭಿಪ್ರಾಯ ಇಂಥವುಗಳಲ್ಲಿ ಒಂದು.

ಈಗ ಯೋಗದ ಮನುಷ್ಯ ವಿರೋಧಿ ತಾತ್ವಿಕತೆಯೊಂದನ್ನು ಚರ್ಚಿಸಬಹುದು. ಯಾವುದೇ ಯೋಗಾಚಾರ್ಯನು ತನ್ನ ಶಿಷ್ಯರಿಗೆ ಯೋಗಾಭ್ಯಾಸವನ್ನು ಆರಂಭಿಸುವ ಮೊದಲು ಯೋಗವೆಂದರೇನು ಎಂದು ಹೇಳುವಾಗ ಸಾಮಾನ್ಯವಾಗಿ ಹೇಳಿಯೇ ಹೇಳುವ ಮಾತೆಂದರೆ ಅದು ಪತಂಜಲಿಯ `ಯೋಗಃ ಚಿತ್ತವೃತ್ತಿ ನಿರೋಧಃ’ ಎಂಬ ಧ್ಯೇಯವಾಕ್ಯ. ಈ ವಾಕ್ಯದ ಅರ್ಥವನ್ನು ಬಹಳಜನ ಹೇಗೆ ಬೇಕೋ ಹಾಗೇ ಅದನ್ನು ಎಳೆದುಕೊಂಡು ಅರ್ಥೈಸುವುದುಂಟು. ಅದು ಮನಸ್ಸಿನ ಕೆಟ್ಟ ಭಾವನೆಗಳನ್ನು ನಿರೋಧಿಸುವುದು ಎಂದು ಹೇಳುವುದೂ ಉಂಟು. ಆದರೆ `ಚಿತ್ತವೃತ್ತಿ’ ಎನ್ನುವಲ್ಲಿ ಒಳ್ಳೆಯ ಮತ್ತು ಕೆಟ್ಟ ಎಂಬ ಭೇದವನ್ನೇನೂ ಅಲ್ಲಿ ಮಾಡಲಾಗಿಲ್ಲ.  ಪತಂಜಲಿ ಸ್ಪಷ್ಟಪಡಿಸುವಂತೆ ಯೋಗದ ಮೂಲ ಉದ್ದೇಶವೇ ಒಟ್ಟಾರೆ `ಚಿತ್ತವೃತ್ತಿಗಳನ್ನು ನಿರೋಧಿಸುವುದು’ ಅಂದರೆ ‘ಮನಸ್ಸಿನ ಆಲೋಚನೆಗಳನ್ನು ಇಲ್ಲವಾಗಿಸುವುದು’. ಇಲ್ಲಿ ಮನಸ್ಸಿನ ಆಲೋಚನೆಗಳನ್ನು ಇಲ್ಲವಾಗಿಸುವುದು ಅಂದರೇನು? ನಮ್ಮ ಸ್ವತಂತ್ರ  ಆಲೋಚನಾ ಶಕ್ತಿಯನ್ನು ನಾಶಪಡಿಸಿ ನಮ್ಮನ್ನು ಹೇಳಿದಂತೆ ಕೇಳುವ ಗೊಂಬೆಗಳನ್ನಾಗಿ ಮಾಡುವುದಲ್ಲದೇ ಬೇರೇನೂ ಅಲ್ಲ ಎಂಬುದನ್ನು ಈಗಾಗಲೇ ಹಲವಾರು ವಿದ್ವಾಂಸರು ವಿಶ್ಲೇಷಣೆ ಮಾಡಿದ್ದಾರೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಇದು ಕೇವಲ ಯೋಗಶಾಸ್ತ್ರದ ತಪ್ಪಲ್ಲ. ಏಕೆಂದರೆ ಚಿತ್ತವೃತ್ತಿ ಅಂದರೆ ಮನಸ್ಸಿನ ವ್ಯಾಪಾರಗಳು (ಆಲೋಚನೆಗಳು) ಮನುಷ್ಯ ಪರಮಾತ್ಮನನ್ನು ಸೇರಲು ಇರುವ ಅಡೆತಡೆಗಳು ಎಂದೇ ನಮ್ಮ ಶಾಸ್ತ್ರಗಳು ಬಿಂಬಿಸಿವೆ! ಈ ಹಿನ್ನಲೆಯಲ್ಲಿ ಯೋಗವು ಹಾಗೆ ಹೇಳಿದ್ದರೆ ಅದು ಶಾಸ್ತ್ರಸಮ್ಮತವೇ ಆಗುತ್ತದೆಯಲ್ಲ!

ಜ್ಞಾನ ಮತ್ತು ಗೀತೆ
ಇದೇ ತತ್ವವನ್ನು ಭಗವದ್ಗೀತೆಯಲ್ಲಿ ಕೂಡ ಪ್ರತಿಪಾದಿಸಲಾಗಿದೆ. ಭಗವದ್ಗೀತೆಯಲ್ಲಿ ಬರುವ `ನಹೀ ಜ್ಞಾನೇನ ಸದೃಶಂ’ ಎಂಬ ಒಂದು ಮಾತು ಅತ್ಯಂತ ಜನಪ್ರಿಯವಾದದ್ದು. ಜ್ಞಾನದ ಮಹತ್ವವನ್ನು ಹೇಳಬೇಕಾದ ಸಂದರ್ಭ ಬಂದಾಗಲೆಲ್ಲ ನಮ್ಮ ಲೇಖಕರು, ಭಾಷಣಕಾರರು ಬಹುವಾಗಿ ಉಲ್ಲೇಖಿಸುವ ಈ ಹೇಳಿಕೆ ಕರ್ನಾಟಕದ ಒಂದು ವಿಶ್ವವಿದ್ಯಾಲಯದ ಧ್ಯೇಯವಾಕ್ಯಕೂಡ ಆಗಿದೆ! ಇಲ್ಲಿ ತಮಾಸೆಯ ಸಂಗತಿ ಎಂದರೆ ಇವತ್ತು ಯಾವುದನ್ನು ಇಡೀ ಆಧುನಿಕ ಪ್ರಪಂಚ `ಜ್ಞಾನ’ವೆಂದು ಪರಿಗಣಿಸಿದೆಯೋ ಅದು ಭಗವದ್ಗೀತೆಯ ಪ್ರಕಾರ ಜ್ಞಾನವೇ ಅಲ್ಲ! ಜ್ಞಾನಕ್ಕೆ ಮೂಲ ಕಾರಣಗಳೆಂದು ಪರಿಗಣಿತವಾಗಿರುವ ಬುದ್ಧಿ, ಮನಸ್ಸು, ಅವುಗಳಿಗೆ ಸಹಾಯಕಾಗಿರುವ ಇಂದ್ರಿಯಗಳು ಇವು ಅದರ ಪ್ರಕಾರ ಜ್ಞಾನಕ್ಕೆ ಸೌಲಭ್ಯಗಳಲ್ಲ; ಬದಲಾಗಿ ಅಡೆತಡೆಗಳು!


ಈ ಹಿನ್ನಲೆಯಲ್ಲಿ ನೋಡಿದಾಗ ಗೀತೆಯ ಪ್ರಕಾರ ಅದರ ಶ್ಲೋಕಭಾಗವನ್ನು ವಾಕ್ಯವನ್ನು ಧ್ಯೇಯವಾಕ್ಯವಾಗಿ ಹೊಂದಿರುವ ಮೇಲಿನ ವಿಶ್ವವಿದ್ಯಾಲಯ ಸೇರಿದಂತೆ ಪ್ರಪಂಚದ ಬಹತೇಕ ವಿಶ್ವವಿದ್ಯಾಲಯಗಳು ನೀಡುವ ಪದವಿಗಳು, ಮಾಡಿರುವ ಸಂಶೋಧನೆಗಳು ಜ್ಞಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಏಕೆಂದರೆ ಅವೆಲ್ಲ ಗೀತೆಯು ಜ್ಞಾನಕ್ಕೆ ಅಡೆತಡೆಗಳೆಂದು ಪ್ರತಿಪಾದಿಸುವ ಮನಸ್ಸಿನ ಆಲೋಚನೆಯಿಂದ ಜನ್ಮತಾಳಿರುವಂಥವು! ಹಾಗಾದರೆ ಗೀತೆಯ ಪ್ರಕಾರ ಜ್ಞಾನವೆಂದರೇನು ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಅದರ ಪ್ರಕಾರ ಜ್ಞಾನವೆಂದರೆ ಮನುಷ್ಯ ಮನಸ್ಸು, ಬುದ್ದಿ, ಮೆದುಳು ಸೇರಿದಂತೆ ತನ್ನ ಇಂದ್ರಿಯಗಳನ್ನು ಬಳಸಿಕೊಳ್ಳದೆ ಪಡೆಯುವ ಎಂಥದೋ ಒಂದು ರೀತಿಯ ಅನುಭವ! (ಹಾಗೆ ಅನುಭವವೊಂದನ್ನು ಪಡೆಯಲು ಸಾಧ್ಯವಿದೆಯೇ ಎನ್ನುವುದು ಹೆಚ್ಚು ಚರ್ಚೆಯನ್ನು ನಿರೀಕ್ಷಿಸುವ ಅಂಶ.) ಒಟ್ಟಿನಲ್ಲಿ ಸಾರಾಂಶೀಕರಿಸಿ ಹೇಳುವುದಾದರೆ ಆಧುನಿಕ ಪ್ರಪಂಚ ಯಾವುದನ್ನು ಜ್ಞಾನವೆಂದು ಒಪ್ಪಿಕೊಂಡಿದೆಯೋ ಅದು ಗೀತೆಯ ಪ್ರಕಾರ ಜ್ಞಾನವಲ್ಲ; ಅದರ ಪ್ರಕಾರ ಜ್ಞಾನವಾದದ್ದು ಆಧುನಿಕ ಪ್ರಪಂಚದ ಪ್ರಕಾರ ಜ್ಞಾನವಲ್ಲ!

ಮತ್ತೆ ಗೀತೆಯನ್ನು ಬಿಟ್ಟು ಯೋಗಕ್ಕೆ ಬರುವುದಾದರೆ, ಈ ಪ್ರಕೃತಿಯಲ್ಲಿ ಮನುಷ್ಯ ಇತರ ಪ್ರಾಣಿಗಳಿಂದ ಬೇರೆಯಾಗಿರುವುದೇ ಅವನ ಯೋಚನಾಶಕ್ತಿಯಿಂದ. ಅದೇ ಅವನನ್ನು ತನ್ನ ಸಹಜೀವಿಗಳಿಂದ ಬೇರ್ಪಡಿಸಿರುವ ಮುಖ್ಯ ಅಂಶ. ಈ ಯೋಚನಾಶಕ್ತಿ ಎಂಬುದು ಚಿತ್ತವೃತ್ತಿಗಳಿಂದಲೇ ಅಂದರೆ ಮನಸ್ಸಿನ ಯೋಚನೆಗಳಿಂದಲೇ ಉತ್ಪತ್ತಿಯಾಗುವಂಥದ್ದು. ಮನುಷ್ಯ ಎಂಬ ಪದ ಬಂದಿರುವುದೇ ಮನಸ್ಸು ಎಂಬ ಪದದಿಂದ. ಮನಸ್ಸು ಇಲ್ಲದವನನ್ನು ಮನುಷ್ಯ ಎಂದು ಕರೆಯಲಾಗದು. ಹೀಗೆ ಮನುಷ್ಯನ ಅಸ್ತಿತ್ವ ನಿಂತಿರುವುದೇ ಅವನ ಮನಸ್ಸಿನ ವ್ಯಾಪಾರಗಳಿಂದ. ಯೋಗದ ಉದ್ದೇಶ ಮನಸ್ಸಿನ ಆಲೋಚನಾ ಕ್ರಮವನ್ನೇ ನಿಲ್ಲಿಸುವುದು ಎಂದರೆ ಮನಸ್ಸಿಲ್ಲದ ಮನುಷ್ಯನನ್ನು ತಯಾರುಮಾಡುವುದು. ಇದು ಮಾನವ ವಿರೋಧಿ ಮಾತ್ರವಲ್ಲ ಪ್ರಕೃತಿಯ ವಿರೋಧಿಕೂಡ ಹೌದು ಎಂಬುದನ್ನು ಹಲವಾರು ವಿದ್ವಾಂಸರು ಈಗಾಗಲೇ ತಮ್ಮ ಅಧ್ಯಯನಗಳಿಂದ ತೋರಿಸಿಕೊಟ್ಟಿದ್ದಾರೆ. ಆದರೆ ಅವು ನಮ್ಮ ಜನರಿಗೆ ಮುಟ್ಟಿದ್ದು ಕಡಿಮೆ. ಅದಕ್ಕೆ ಕಾರಣ ಅವು ಜ್ಞಾನಕ್ಕೆ ಸಂಬಂಧಿಸಿದಂಥವು. ನಮ್ಮಲ್ಲಿ ಜ್ಞಾನಕ್ಕಿಂತ ಮೋಡಿಗೆ ಮುಗಿಬೀಳುವವರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ.

ಯೋಗವನ್ನು ಅನುಸರಿಸುವ ಜನರ ಎರಡು ಗುಂಪುಗಳು

ಯೋಗದ ತಾತ್ವಿಕತೆಯ ಬಗ್ಗೆ ಭಿನ್ನಾಭಿಪ್ರಾಯಗಳು ಏನೇ ಇರಲಿ ಅದನ್ನು ಒಂದು ವಿದ್ಯೆ ಎಂದು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಅದು ಇಂದು ವಿಶ್ವವ್ಯಾಪಿಯಾಗುತ್ತಿರಲಿಲ್ಲ. ಆದರೆ ಆ ವಿದ್ಯೆಯ ಅಗತ್ಯ ಯಾರಿಗೆ ಮತ್ತು ಏತಕ್ಕೆ ಇದೆ ಎಂಬುದನ್ನು ವಿವೇಚಿಸಿ ನಿರ್ಧರಿಸಿಕೊಳ್ಳುವಲ್ಲಿ ನಾವು ಎಡವಿದ್ದೇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಯೋಗವನ್ನು ಅಭ್ಯಾಸ ಮಾಡುವವರನ್ನು ಮುಖ್ಯವಾಗಿ ಎರಡುವಿಧವಾಗಿ ವಿಂಗಡಿಸಲಾಗುತ್ತದೆ. ಅವರೆಂದರೆ ಮುಮುಕ್ಷುಗಳು ಮತ್ತು ಜನಸಾಮಾನ್ಯರು. ಮುಮುಕ್ಷುಗಳು ಅಂದರೆ ಯೋಗಿಗಳು. ಅವರು ದೇವರು ಧರ್ಮ, ಅಧ್ಯಾತ್ಮ ಇವುಗಳಲ್ಲಿ ತೀವ್ರ ಆಸಕ್ತಿಯುಳ್ಳಂಥ ಜನರು. ಯೋಗವನ್ನು ಅವರು ತಮ್ಮ ಜೀವನದ ಬಹುಮುಖ್ಯ ಭಾಗವಾಗಿ ಸ್ವೀಕರಿಸಿ ದಿನದ ಬಹುಪಾಲು ಸಮಯವನ್ನು ಯೋಗಾಭ್ಯಾಸದಲ್ಲಿಯೇ ತೊಡಗಿಕೊಂಡು, ಮನುಷ್ಯ ಹುಟ್ಟುಸಾವುಗಳಿಗೆ ಅತೀತವಾದಂಥ, ದೇವರನ್ನು ಸೇರಿ ಮುಕ್ತಿ ಪಡೆಯುವ ಮಾರ್ಗವಾಗಿ ಅನುಸರಿಸುತ್ತಾರೆ. ಅವರ ಅನುಭವವು ` ಪ್ರಯೋಗಕ್ಕೆ ದಕ್ಕದ ಅನುಭವ’ ಅಂದರೆ ಎಕ್ಸಪಿರಿಮೆಂಟಿಗೆ ಒಳಪಡದ ಎಕ್ಸಪೀರಿಯನ್ಸ್’ ಆಗಿರುವುದರಿಂದ ಆ ಬಗ್ಗೆ ಯಾವುದೇ ರೀತಿಯ ಚರ್ಚೆ ಅಸಾಧ್ಯ. ಹಾಗಾಗಿ ಅದನ್ನು ಅಲ್ಲಗಳೆಯುವುದು ಉದ್ಧಟತನವಾಗಬಹುದು. ಹಾಗಾಗಿ ಅಲ್ಲಿ ನಮಗಿರುವ ಆಯ್ಕೆ ಎರಡೇ ಒಂದು ಒಪ್ಪುವುದು ಇನ್ನೊಂದು ಬಿಡುವುದು.

ಇಂತಹ ಒಂದು ಅನುಭವವನ್ನು ಕುತೂಹಲಕ್ಕೆ ನೋಡುವುದಾದರೆ, ವಿಶ್ವಕವಿ ರವೀಂದ್ರ ನಾಥ್ ಠಾಕೂರ್, ಜಗತ್ಪ್ರಸಿದ್ಧ ಭಾರತೀಯ ಭೌತವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರೊಡನೆ ನಿಕಟ ಸಂಪರ್ಕ ಹೊಂದಿದ್ದ, ವಿಶ್ವವಿಖ್ಯಾತ ಯೋಗಿ ಪರಮಹಂಸ ಯೋಗಾನಂದ ಅವರ ಒಂದು ಟಿಪ್ಪಣಿಯನ್ನು ನೋಡಬಹುದು. ಜಗತ್ತಿನ ಬಹುತೇಕ ಎಲ್ಲ ಪ್ರಮುಖ ದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಭಾರತದ ಕೆಲವೇ ಗ್ರಂಥಗಳಲ್ಲಿ ಒಂದಾದ ಅವರ `ಯೋಗಿಯ ಆತ್ಮಕಥೆ’ (ಅಟೋಬಯಾಗ್ರಫಿ ಆಫ್ ಎ ಯೋಗಿ)ಯಲ್ಲಿ ಅವರು ಹೀಗೆ ಬರೆಯುತ್ತಾರೆ:

“ಕೇವಲ ಜ್ಞಾನವನ್ನು ಹೊಂದಲು ಸಮರ್ಥವಾಗುವಂತೆ ಮಾನವನ ಮೆದುಳು ಪರಿಪುಷ್ಟಿಗೊಳ್ಳಬೇಕಾದರೆ ಒಂದು ದಶಲಕ್ಷ ವರ್ಷಗಳ ಸಾಧಾರಣ ರೋಗರಹಿತ ವಿಕಾಸದ ಅಗತ್ಯವಿದೆಯೆಂದು ಶಾಸ್ತ್ರಗ್ರಂಥಗಳು ಒತ್ತಿ ಹೇಳುತ್ತವೆ. ಒಂದು ದಿನದಲ್ಲಿ ಎಂಟೂವರೆ ಗಂಟೆಗಳ ಅವಧಿಯಲ್ಲಿ, ಒಂದು ಸಾವಿರ ಬಾರಿ ಅಭ್ಯಸಿಸಲ್ಪಟ್ಟ, `ಕ್ರಿಯಾ’ ಒಬ್ಬ ಯೋಗಿಗೆ, ಒಂದು ಸಾವಿರ ವರ್ಷಗಳಲ್ಲಿ ಸ್ವಾಭಾವಿಕವಾಗಿ ಉಂಟಾಗುವ ವಿಕಾಸವನ್ನು ತಂದುಕೊಡುತ್ತದೆ. ಒಂದು ವರ್ಷದಲ್ಲಿ 3,65,000 ವರ್ಷಗಳಷ್ಟು ವಿಕಾಸವಾಯಿತು. ಒಬ್ಬ ಕ್ರಿಯಾಯೋಗಿ ಪ್ರಜ್ಞಾಪೂರ್ವ ಸ್ವಪ್ರಯತ್ನದಿಂದ ಪೃಕೃತಿ ಒಂದು ದಶಲಕ್ಷ ವರ್ಷಗಳ ಅವಧಿಯಲ್ಲಿ ತಂದುಕೊಡುವಂತಹ ಪರಿಣಾಮವನ್ನೇ ಸತತ ಅಭ್ಯಾಸದ ಮೂರು ವರ್ಷಗಳಲ್ಲಿ ಪಡೆಯಬಲ್ಲ.” 

ಯೋಗದ ಈ ಶಕ್ತಿಯ ವಿವರ ದಾಖಲಿಸಿದ ಅವರು ಅದರಿಂದ ಪವಾಡಗಳು ಹೇಗೆ ಸಾಧ್ಯವಾಗುತ್ತವೆ ಇತ್ಯಾದಿ ವಿವರಗಳನ್ನು ನಮಗೆ ನೀಡುತ್ತಾರೆ ಮಾತ್ರವಲ್ಲ `ತನ್ನ ದೇಹ ಮನಸ್ಸುಗಳ ಮೇಲೆ ಪ್ಭುತ್ವ ಸಾಧಿಸಿದ ಕ್ರಿಯಾಯೋಗಿ ಕಟ್ಟಕಡೆಯದಾಗಿ ತನ್ನ `ಅಂತಿಮ ಶತ್ರು’ವೆನಿಸಿದ ಮರಣವನ್ನು ಸಹ ಜಯಿಸಿಬಿಡುತ್ತಾನೆ’ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರ ಈ ಅಭಿಪ್ರಾಯವನ್ನು `ಅಲ್ಲ’ ಅನ್ನುವ ಅಧಿಕಾರ ನಮಗೆ ಬರುವುದು ಅವರು ಹೇಳಿದಂತೆ ಮಾಡಿದ ನಂತರವೇ. ಹಾಗಾಗಿ ಇಲ್ಲಿ ನಮಗಿರುವ ಆಯ್ಕೆಗಳು ನಾನು ಮೊದಲೇ ಹೇಳಿದಂತೆ `ಒಪ್ಪುವುದು’ `ಬಿಡುವುದು’ ಎರಡೆ! ಹಾಗಿದ್ದೂ ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯವೆಂದರೆ ಹೀಗೆ ಯೋಗದಿಂದ ಮರಣವನ್ನೇ ಜಯಿಸಬಹುದು ಎಂದು ಹೇಳಿದ ಈ ಮಹಾಯೋಗಿ ಕೂಡ 1952ರಲ್ಲಿ ಮರಣಹೊಂದಿದರು ಎಂಬುದು!!

ಸಾಮಾನ್ಯರ ಯೋಗ: ಮತ್ತು ಮಾರುಕಟ್ಟೆಯ ತಂತ್ರಗಳು

ಇನ್ನು ಯೋಗವನ್ನು ಅನುಸರಿಸುವ ಎರಡನೆಯ ವರ್ಗ ಎಂದರೆ ಅದು ಜನಸಾಮಾನ್ಯರು. ಅಥವಾ ಯೋಗಿಗಳಲ್ಲದ ಇತರರು. ಇವತ್ತು ಯೋಗ ಅಂತರರಾಷ್ಟ್ರೀಯ ಮನ್ನಣೆ ಪಡೆದದ್ದು ಇಂಥವರ ಅಧಿಕ ಪಾಲ್ಗೊಳ್ಳುವಿಕೆಯಿಂದಲೇ ಎಂಬುದನ್ನು ನಾವು ಗಮನಿಸಬೇಕು. ಅಂತರರಾಷ್ಟ್ರಿಯ ಮನ್ನಣೆ ಎಂಬದು ಬರುವಾಗ ಅದಕ್ಕೆ ಹತ್ತು ಹಲವು ಕಾರಣಗಳು ಹಿತಾಸಕ್ತಿಗಳೂ ಕೆಲಸಮಾಡಿರುತ್ತವೆ ಎಂಬುದು ಅಲ್ಲಗಳೆಯಲಾಗದ ಮಾತು. ಕೇವಲ ಯೋಗಕ್ಕಿರುವ ಮಹತ್ವದಿಂದಲೇ ಅಂಥದ್ದೊಂದು ಮಾನ್ಯತೆ ಬಂತೆಂದು ನಂಬುವುದು ಸರಿಯಾಗಲಾರದು. ಆ ಮಹತ್ವದ ಜೊತೆಗೆ ಅದನ್ನು `ವಿದ್ಯೆ’ಯಿಂದ `ಉದ್ಯಮ’ವನ್ನಾಗಿ ಮಾಡಿಕೊಂಡ ಹಿತಾಸಕ್ತಿಗಳ ಪಾತ್ರ ಬಹಳ ದೊಡ್ಡಮಟ್ಟದಲ್ಲಿಯೇ ಇರುತ್ತದೆ. `ಅಪ್ಪಂದಿರ ದಿನ’ `ಅಮ್ಮಂದಿರ ದಿನ’ `ಪ್ರೇಮಿಗಳ ದಿನ’ ಹೀಗೆಲ್ಲ ದಿನಗಳು ಘೋಷಣೆಯಾಗುವುದು ನಮಗೆ ನಮ್ಮ ಪ್ರೀತಿಪಾತ್ರರನ್ನು ಪ್ರೀತಿಸುವುದನ್ನು ನೆನಪು ಮಾಡಿಕೊಡಲೆಂದೇ ಎಂದು ಕೊಂಡರೆ ತೀರಾ ಬಾಲಿಶವಾದೀತು.

ಈ ದಿನಗಳ ನೆಪದಲ್ಲಿ ಗ್ರೀಟಿಂಗ್ಸ್, ಉಡುಗೊರೆಗಳು, ಬಟ್ಟೆಬರೆಗಳು ಇತ್ಯಾದಿಗಳ ಮಾರಾಟವನ್ನು ಹೆಚ್ಚುಗೊಳಿಸುವ ಒಂದು ಮಾರುಕಟ್ಟೆಯ ತಂತ್ರ ದೊಡ್ಡಪ್ರಮಾಣದಲ್ಲಿ ಕೆಲಸಮಾಡುತ್ತದೆ. ಇದು ಮನುಷ್ಯ ಮನುಷ್ಯರ ನಡುವೆ ಸಂಬಂಧವನ್ನು ಉಳಿಸಿಕೊಳ್ಳಲು ಅಗತ್ಯವಾಗಿ ಖರ್ಚುಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಮಾಡುವ ತಂತ್ರ. `ಪ್ರೇಮಿಗಳ ದಿನ’ದಂದು ಒಂದಾದರೂ ಉಡುಗೊರೆಯನ್ನು ಕೊಡಿಸದಿದ್ದರೆ ಅವನು ಅಥವಾ ಅವಳು ತನ್ನ ಪ್ರಿಯತಮೆಗೆ ಅಥವಾ ಪ್ರಿಯಕರನಿಗೆ ಮುಖತೋರಿಸುವುದಾದರೂ ಹೇಗೆ? `ಹೆಂಡತಿಯರ ದಿನ’ ಹೆಂಡತಿಗೆ ಒಂದು ಹೊಸ ಸೀರೆಯನ್ನಾದರೂ ಕೊಂಡುಕೊಳ್ಳದೇ ಗಂಡಸರು ಸಂಜೆ ಮನೆಗೆ ಹೋಗುವ ಧೈರ್ಯ ಮಾಡುವುದಾದರೂ ಹೇಗೆ? ಇಂತಹ ಮಾರುಕಟ್ಟೆಯ ತಂತ್ರಗಳು  ಯೋಗವು ಅಂತರರಾಷ್ಟ್ರೀಯ ದಿನವಾಗಲು ತಮ್ಮ ಪಾತ್ರವನ್ನು ವಹಿಸಿರಲು ಸಾಧ್ಯವಿಲ್ಲವೆನ್ನುವುದನ್ನು ನಂಬುವುದಾದರೂ ಹೇಗೆ?


ಜನಸಾಮಾನ್ಯರು ಈ ಯೋಗೋದ್ಯಮಕ್ಕೆ ಬಲಿಯಾಗುವ ಕ್ರಿಯೆ ಒಂದುಕಡೆ ನಿಧಾನವಾಗಿ ಬೆಳೆಯುತ್ತಿರುವಾಗ ಅದರಕಡೆ ಅವರನ್ನು ಸೆಳೆಯುವ ಪ್ರಯತ್ನಗಳು ತೀವ್ರಸ್ವರೂಪಪಡೆದುಕೊಳ್ಳುತ್ತವೆ. ಇಂತಹ ಮಾರುಕಟ್ಟೆಯ ತಂತ್ರಗಳ ಜನಸಾಮಾನ್ಯರ ದೌರ್ಬಲ್ಯಗಳನ್ನು ಬಹಳ ನಾಜೂಕಾಗಿ ನಗದೀಕರಣಮಾಡಿಕೊಳ್ಳುತ್ತಿರುತ್ತವೆ. ಜನ ಯಾವುದಕ್ಕೆ ಹಾತೊರೆಯುತ್ತಿದ್ದಾರೆ ಎಂಬುದನ್ನು ಅವು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುತ್ತವೆ. ಜನರು ಸಾಮಾನ್ಯವಾಗಿ ತಮಗೆ ಬೇಕಾದ ಯಾವುದು ತಮ್ಮಲ್ಲಿ ಇರುವುದಿಲ್ಲವೋ ಅಥವಾ ಯಾವುದನ್ನು ಕಳೆದುಕೊಂಡಿರುತ್ತಾರೋ ಅದಕ್ಕೆ ಹಾತೊರೆಯುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ಜನರ ಕೈಯಲ್ಲಿ ದುಡ್ಡು ಆಡುತ್ತಿರಲಿಲ್ಲ. ಆಗ ದುಡ್ಡುಮಾಡುವ ಆಸೆ ಜನರಿಗೆ ಸಹಜವಾಗಿ ಇತ್ತು. ಅದಕ್ಕೆ ತಕ್ಕಂತೆ ದುಡ್ಡನ್ನು ಡಬ್ಬಲ್ ಮಾಡವ ತಂತ್ರವನ್ನು ಹೇಳಿಕೊಡುವ ಗುರುಗಳು, ಶಿಬಿರಗಳು ಎಲ್ಲಿಯಾದರೂ ಸಿಗುವುದನ್ನು ಕೇಳಿದರೆ ಜನ ಮುಗಿಬೀಳುತ್ತಿದ್ದರು. ಈಗ ಅದು ಜನಕ್ಕೆ ಸಾಕಾಗಿದೆ. ಈಗ ಯಾರಾದರೂ ಮನಸ್ಸಿಗೆ, ಶಾಂತಿ, ನೆಮ್ಮದಿ, ಆರೋಗ್ಯ ಇಂಥವನ್ನು ಹೇಳಿಕೊಡುತ್ತಾರೆ ಎಂದರೆ ಅದಕ್ಕೆ ಮುಗಿಬೀಳುತ್ತಿದ್ದಾರೆ. ಏಕೆಂದರೆ ಈಗ ಜನ ಇವನ್ನು ಕಳೆದುಕೊಂಡಿದ್ದಾರೆ. ಹಾಗಾಗಿಯೇ ಈಗ ಯೋಗದ ಗುರುಗಳಿಗೆ, ಆಯುರ್ವೇದದ ಹೆಸರಿನಲ್ಲಿ ನಕಲಿಮಾರಾಟ ಮಾಡುವ ತಜ್ಞರಿಗೆ ಬಾರಿ ಬೇಡಿಕೆ. ಅವರ ಶಿಬಿರಗಳೆಂದರೆ ಜನ ಮುಗಿಬೀಳುತ್ತಿದ್ದಾರೆ.

ಈಗಿನ ನಮ್ಮ ಯೋಗ ಆಚರಣೆಯ ವಿಧಾನ ಎಷ್ಟು ಕ್ರಮಬದ್ಧವಾಗಿದೆ?

ಯೋಗದ ಮಾರುಕಟ್ಟೆಯ ತಂತ್ರಗಳು ಮತ್ತು ಸುಲಿಗೆಗಳು ಏನಾದರೂ ಇರಲಿ ಅದನ್ನು ಒಂದು ವಿದ್ಯೆಯಾಗಿ ಕಲಿಯುವ ಕ್ರಮವಾದರೂ ಸರಿಯಿದೆಯೇ ಎಂದರೆ ಬಹುಪಾಲು ಸರಿಯಿಲ್ಲ ಎಂದೇ ಹೇಳಬೇಕು. ಇವತ್ತು ಯೋಗದ ಶಿಬಿರಗಳಲ್ಲಿ ಯಾವುದನ್ನು ಯೋಗ ಎಂದು ಕಲಿಸಲಾಗುತ್ತಿದೆಯೋ ಅದು ಬಹುತೇಕವಾಗಿ `ಯೋಗಾಸನಗಳು’ ಮತ್ತು `ಪ್ರಾಣಾಯಾಮ’ ಇವುಗಳಿಗೆ ಒತ್ತುಕೊಟ್ಟಿರುವಂಥದ್ದು. ಆದರೆ ಯೋಗಶಾಸ್ತ್ರದ ಪ್ರಕಾರ ಇದೇ ಸಂಪೂರ್ಣಯೋಗವಲ್ಲ. ಸಂಪೂರ್ಣಯೋಗವು ಒಂದು ಶೈಕ್ಷಣಿಕ ಶಿಸ್ತಾಗಿದ್ದು ಕ್ರಮಬದ್ಧವಾದ ಹಂತಗಳನ್ನು ಒಳಗೊಂಡಿದೆ. ನಮ್ಮ ಶೈಕ್ಷಣಿಕ ಶಿಸ್ತಿನಲ್ಲಿ ಹೇಗೆ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹೀಗೆ ನಾಲ್ಕೈದು ಹಂತಗಳಿವೆಯೋ ಹಾಗೆಯೇ ಯೋಗದಲ್ಲಿಯೂ ಬಹುಮುಖ್ಯವಾದ ಏಳೆಂಟು ಹಂತಗಳಿವೆ. ಪತಂಜಲಿ ಮಹರ್ಷಿ ಹೇಳುವ ಅಷ್ಟಾಂಗಯೋಗ ಎಂಟು ಹಂತಗಳನ್ನು ಒಳಗೊಂಡಿರುವಂಥದ್ದು. ಅವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಪತಂಜಲಿ ಇವನ್ನು ಅಷ್ಟಮಾರ್ಗಗಳು ಎನ್ನದೇ ಅಷ್ಟಾಂಗ ಮಾರ್ಗ ಎನ್ನುವುದನ್ನು ನೋಡಿದರೆ ಇವು ಪರಸ್ಪರ ಸಂಬಂಧವಿರದ ಪ್ರತ್ಯೇಕವಾದ ಸಾಧನಾ ಮಾರ್ಗಗಳಾಗಿರದೇ ಒಂದೇ ಮಾರ್ಗದಲ್ಲಿರುವ ಕ್ರಮಬದ್ಧವಾದ ಹಂತಗಳು ಎಂಬುದು ನಿರ್ವಿವಾದ. ಅದರ ಪ್ರಕಾರ ನಾವು ಹಂತಹಂತವಾಗಿ ಕ್ರಮಬದ್ಧವಾಗಿ ಇವನ್ನು ಅಭ್ಯಾಸ ಮಾಡುತ್ತಾ ಹೋಗಬೇಕಾಗುತ್ತದೆ.

ಆದರೆ ನಮ್ಮಲ್ಲಿ ಮಾಡುತ್ತಿರುವುದೇನು? ಯೋಗದ ಒಂದೆರಡು ಅಂಗಗಳಾದ `ಆಸನ’ ಮತ್ತು `ಪ್ರಾಣಾಯಾಮ’ ಇವುಗಳನ್ನೇ `ಯೋಗ’ ಎಂದು ಕಲಿಸಲಾಗುತ್ತಿದೆ. ಹೆಚ್ಚೆಂದರೆ ಕೆಲವರು ಧ್ಯಾನಕ್ಕೂ ಒಂದಿಷ್ಟು ಪ್ರವೇಶ ಪಡೆದಿರಬಹುದು ಅಷ್ಞೆ. ಉಳಿದ ಐದು ಹಂತಗಳು ಬಹುಪಾಲು ಜನರಿಗೆ ಅಪರಿಚಿತ. ಯೋಗಶಾಸ್ತ್ರದದಲ್ಲಿ `ಆಸನ’ ಅಥವಾ `ಯೋಗಾಸನ’ ಎಂಬುದು ಮೂರನೆಯ ಹಂತವಾದರೆ `ಪ್ರಾಣಾಯಾಮ’ ಎನ್ನುವುದು ನಾಲ್ಕನೆಯ ಹಂತ. ಇದಕ್ಕೆ ಪೂರ್ವಭಾವಿಯಾಗಿ ಆರಂಭದ ಎರಡು ಹಂತಗಳಾದ `ಯಮ’ ಮತ್ತು `ನಿಯಮ’ ಇವುಗಳನ್ನು ಸರಿಯಾಗಿ ಪಾಲಿಸಿಕೊಂಡೇ ಈ ಹಂತಗಳಿಗೆ ಪ್ರವೇಶ ಪಡೆಯಬೇಕು. ಆದರೆ ಆರಂಭದ ಈ ಎರಡು ಹಂತಗಳ ಕಡೆ ನಮ್ಮ ಈ ಜನರ ಗಮನವೇ ಇಲ್ಲ. ಕೆಲವರಿಗೆ ಗಮನವಿದ್ದದೂ ಅದು ಲಾಭದಾಯಕವಲ್ಲದ ಕಾರಣ ಅದು ಅವರಿಗೆ ಆದ್ಯತೆಯ ಸಂಗತಿಯಲ್ಲ. ಇದರಿಂದಾಗಿ ಪ್ರಾಥಮಿಕ ಮತ್ತು ಪ್ರೌಢಹಂತಗಳನ್ನು ಪೂರೈಸದೇ ವಿದ್ಯಾರ್ಥಿಗಳನ್ನು ನೇರವಾಗಿ ಕಾಲೇಜಿಗೆ ಕರೆದುಕೊಂಡು ಕೂರಿಸಿಕೊಂಡು ಪಾಠಹೇಳಿದರೆ ಏನು ಮತ್ತು ಎಷ್ಟು ಪರಿಣಾಮ ಪ್ರತಿಫಲಗಳು ದೊರೆಯಬಹುದೋ ಈ ಯೋಗದ್ದೂ ಅದೇ ಕಥೆಯಾಗಿದೆ.

ಹಾಗಾದರೆ ಯೋಗದ ಪ್ರಾಥಮಿಕ ಹಂತಗಳಾದ ಯಮ ನಿಯಮಗಳು ಹೇಳುವುದಾದರೂ ಏನು ಎಂಬುದನ್ನು ನೋಡಿಕೊಂಡರೆ ಇವು ಏಕೆ ಅಲಕ್ಷ್ಯ ಮತ್ತು ನಿರ್ಲಕ್ಷಕ್ಕೆ ಒಳಗಾಗಿವೆ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊದಲ ಹಂತವಾದ ಯಮ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಐದು ವಿಧಿಗಳನ್ನು ವಿಧಿಸುತ್ತದೆ. ಜೊತೆಗೆ ಕ್ಷಮಾ, ದೃತಿ, ದಯಾ, ಸರಳತೆ, ಮಿತಾಹಾರಗಳನ್ನು ಒತ್ತಿಹೇಳುತ್ತದೆ. ಅಂದರೆ ಯೋಗಾಭ್ಯಾಸಿಯ ಆರಂಭದ ಹಂತವೇ ಅವನು ಅಥವಾ ಅವಳು ಸುಳ್ಳು ಹೇಳುವುದನ್ನು ಬಿಡಬೇಕು, ಬೇರೆಯವರಿಗೆ ಹಿಂಸೆಯನ್ನು ಕೊಡಬಾರದು, ಕಳ್ಳತನ ಮಾಡಬಾರದು, ಲಂಚ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಬಿಡಬೇಕು ಇನ್ನು ಎರಡನೆಯ ಹಂತವಾದ ನಿಯಮವು `ಶೌಚ’ `ಸಂತೋಷ’ `ತಪಸ್ಸು’ `ಸ್ವಾಧ್ಯಾಯ’ `ಈಶ್ವರ’ `ಪ್ರಣೀದಾನ’ವೆಂಬ ನೈತಿಕ ಕಟ್ಟಳೆಗಳನ್ನು ವಿಧಿಸುತ್ತದೆ. ಈ ಹಂತದಲ್ಲಿ ಮನಸ್ಸನ್ನು ಕಲ್ಮಶ ಭಾವನೆಗಳಿಂದ ದೂರೀಕರಿಸಿ ತ್ಯಾಗ, ವೈರಾಗ್ಯ, ವಿವೇಕಗಳಿಂದ ಸಂತೋಷಗೊಳಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಆಗ ನಮ್ಮ ದೇಹ ಮತ್ತು ಮನಸ್ಸು ಪ್ರಸನ್ನಗೊಂಡು ಮುಂದಿನ ಹಂತಕ್ಕೆ ಸಿದ್ಧತೆಯನ್ನು ಪಡೆದುಕೊಳ್ಳುತ್ತವೆ. ಹೀಗೆ ಈ ನಿಯಮ ಕಟ್ಟಳೆಗಳನ್ನು ಅನುಸರಿಸಿದವರು ಮಾತ್ರ ಮುಂದಿನ ಹಂತಗಳಾದ `ಆಸನ’ `ಪ್ರಾಣಾಯಾನ’ `ಧ್ಯಾನ’ ಇತ್ಯಾದಿಗಳಿಗೆ ಹೋಗುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ.

ಇವೆಲ್ಲವೂ ಆಚರಣೆಗೆ ತರುವುದು ಅಷ್ಟು ಸುಲಭವೇ? ನಮ್ಮಲ್ಲಿ ಈಗ ಯೋಗಾಸನ ಮಾಡುವವರಲ್ಲಿ ಹೀಗಡೆ ಸುಳ್ಳುಹೇಳದ, ಯಾವುದೇ ಬಗೆಯ ಕಳ್ಳತನ ಮಾಡದ, ಲಂಚ ಇತ್ಯಾದಿಗಳಿಗೆ ಆಶಿಸದ, ಬೇರೆಯವಿಗೆ ಯಾವುದೇ ಬಗೆಯ ತೊಂದರೆ ಹಿಂಸೆಗಳನ್ನು ಕೊಡದೆ ಬೇರೆಯವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಂಡುಕೊಳ್ಳುವಂಥವರು ಎಷ್ಟು ಜನ ಸಿಗಬಹುದು? ಯೋಗವನ್ನು ಉದ್ಯಮ ಅಥವಾ ಉದ್ಯೋಗನ್ನಾಗಿ ಮಾಡಿಕೊಂಡವರಿಗೆ ಇವು ನುಂಗಲಾರದ ಬಿಸಿತುಪ್ಪ. ಅತ್ತ ಶಾಸ್ತ್ರನ್ನೂ ಬಿಡಲಾಗದು; ಇತ್ತ ಅದರಂತೆ ಜನರನ್ನು ತಯಾರುಮಾಡಲಿಕ್ಕು ಆಗದು. ಕಾರಣ ಇವನ್ನು ಶಾಸ್ತ್ರಕ್ಕೆ ಅನ್ನುವಂತೆ ಅಭ್ಯಾಸಿಗಳ ಕಿವಿಯ ಮೇಲೆ ಹಾಕಿ ಮುನ್ನೆಡೆಯುವ ಚತುರತೆ ಬಹಳ ಮಂದಿ ಯೋಗಾಚಾರ್ಯರದ್ದಾಗಿದೆ.

ಯೋಗಶಾಸ್ತ್ರದ ಪ್ರಕಾರವೇ ನಾವು ಮಾಡುತ್ತಿರುವ ಯೋಗದ ಕ್ರಮ ಸರಿಯಿಲ್ಲ ಎಂದಾದರೆ ಅದು ಸರಿಯಾದ ಪ್ರತಿಫಲ ಕೊಡುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ? ಯಮ ನಿಯಮಗಳನ್ನು ಕಟ್ಟುನಿಟ್ಟಾಗಿ ಆಚರಿಸದೇ ಮೂರನೆಯ ಹಂತದ ಆಸನಗಳನ್ನು ಮಾಡುವುದು ದೇಹಕ್ಕೆ ಒಂದಿಷ್ಟು ವ್ಯಾಯಾಮ ಕೊಡಬಹುದು ಅಷ್ಟೇ ಅದೂ ಸರಿಯಾಗಿ ಅವುಗಳನ್ನು ಮಾಡಿದರೆ ಮಾತ್ರ. ಹಾಗಾಗಿ ಇಲ್ಲಿ ಯೋಗಾಚಾರ್ಯನೊಬ್ಬನು ಒಬ್ಬ ಒಳ್ಳೆಯ ವ್ಯಾಯಾಮ ಶಿಕ್ಷಕನಿಗಿಂತ ಹೆಚ್ಚೇನೂ ಮಾಡಲಾರದವನಾಗುತ್ತಾನೆ. ಇಲ್ಲಿ ಅದಕ್ಕಿರುವ ದೈವತ್ವ, ಪೂಜ್ಯಭಾವ ಮುಂತಾದವು ಸಹಜವಾಗಿಯೇ ಅರ್ಥಕಳೆದುಕೊಳ್ಳುತ್ತವೆ.

ಪ್ರಾಣಾಯಾಮ: ಮೀನಿಗೆ ಈಜುವುದನ್ನು ಕಲಿಸುವ ಪರಿ

ಇನ್ನು ಪ್ರಾಣಾಯಾಮದ ಬಗ್ಗೆ ಹೇಳುವ ಮೊದಲು ಒಂದು ಘಟನೆಯನ್ನು ನಾನು ಇಲ್ಲಿ ಉಲ್ಲೇಖಿಸಬೇಕು. ಯಾವುದೋ ಒಂದು ಯೋಗದ ತರಬೇತಿಯೊಂದಕ್ಕೆ ಹೋಗಿಬಂದ ವ್ಯಕ್ತಿಯೊಬ್ಬನು ಬೆಳಿಗ್ಗೆ ಪ್ರಾಣಾಯಾಮ ಮಾಡುತ್ತಿರುವುದನ್ನು ಗಮನಿಸಿದ ಹಳ್ಳಿಯೊಂದರ ವೃದ್ಧನೊಬ್ಬ `ಅವರೇಕೆ ಹಾಗೆ ಕತ್ತೆ ಉಸಿರುಬಿಟ್ಟಂತೆ ಉಸಿರು ಬಿಡುತ್ತಾರೆ?’ ಎಂದು ನನ್ನನ್ನು ಒಂದು ಬಾರಿ ಕೇಳಿದ್ದ. ಹಾಗೆ ಕೇಳಿದ ಆ ವೃದ್ಧ ಒಬ್ಬ ಅನಕ್ಷರಸ್ಥ ಹಳ್ಳಿಗನಾಗಿದ್ದು ಯೋಗಾಸನ ಪ್ರಾಣಾಯಾಮ ಇತ್ಯಾದಿಗಳ ಹೆಸರನ್ನೇ ಕೇಳದೇ ಅವೇನೆಂದು ತಿಳಿಯದೇ ಸುಮಾರು ಎಂಬತ್ತಕ್ಕೂ ಹೆಚ್ಚು ವರ್ಷಗಳ ಕಾಲ ತುಂಬಾ ಚಟುವಟಿಕೆಯಿಂದ ಬದುಕಿದ್ದ ಗಟ್ಟಿಮುಟ್ಟಾದ ಮನುಷ್ಯನಾಗಿದ್ದ. ಅವನಿಗೆ ವಾಸ್ತವದಲ್ಲಿ ಪ್ರಾಣಾಯಾಮವನ್ನು ಲೇವಡಿಮಾಡುವ ಅಥವಾ ಅವಹೇಳನ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಅವನ ಕೇಳಿಕೆ ಕೇವಲ ಕುತೂಹಲವನ್ನು ಅವಲಂಬಿಸಿತ್ತು ಮತ್ತು ತೀರಾ ಸಹಜವಾದದ್ದಾಗಿತ್ತು.

ಈ ಹಳ್ಳಿಗನಿಗೆ ನಾನು ಏನೆಂದು ಉತ್ತರಿಸಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಮುಖ್ಯವಾದ ಸಂಗತಿ ಎಂದರೆ ಈ ಘಟನೆ ನಡೆದು ಎಷ್ಟೋ ವರ್ಷಗಳ ನಂತರ ನಾನು ಓದಿದ, ಜಗತ್ತಿನ ಬಹುಮುಖ್ಯ ಯೋಗದ ಗ್ರಂಥವೆಂದು ಪ್ರಸಿದ್ಧಿ ಪಡೆದಿರುವ ಮೇಲೆ ಉಲ್ಲೇಖಿಸಲ್ಪಟ್ಟ `ಯೋಗಿಯ ಆತ್ಮಕಥೆ’ಯಲ್ಲಿ ಬರುವ, `ತಪ್ಪು ದಾರಿಗೆಳೆಯಲ್ಪಟ್ಟ ಅನೇಕ ಛಲವಾದಿಗಳಿಂದ ಕಲಿತ ಅವೈಜ್ಞಾನಿಕ ಉಸಿರಾಟದ ಅಭ್ಯಾಸಗಳಿಗೂ ಕ್ರಿಯಾಯೋಗದ ಅಭ್ಯಾಸಕ್ಕೂ ಯಾವೊಂದು ಸಮಾನತೆಯೂ ಇಲ್ಲ. ಶ್ವಾಸಕೋಶಗಳಲ್ಲಿ ಬಲಾತ್ಕಾರವಾಗಿ ಉಸಿರನ್ನು ತಡೆಯಿಡಿಯುವುದು ಅಸ್ವಾಭಾವಿಕವಾದುದಲ್ಲದೆ ಖಂಡಿತವಾಗಿಯೂ ಅಸುಖಕರವಾದುದು.” ಎಂಬ ಮಾತುಗಳು ಕೂಡ ಈ ಹಳ್ಳಿಗನ ಅಭಿಪ್ರಾಯವನ್ನೇ ಪುಷ್ಟೀಕರಿಸುವಂತೆ ಇದ್ದದ್ದು. ಅಂದರೆ ಈ ಪ್ರಾಣಾಯಾಮದ ಬಗ್ಗೆ ಒಬ್ಬ ಜಗತ್ಪಸಿದ್ಧ ಮಹಾಯೋಗಿಯ ಅಭಿಪ್ರಾಯವೇ ಪ್ರಾಣಾಯಾಮದ ಗಂಧಗಾಳಿ ಗೊತ್ತಿಲ್ಲದ ಒಬ್ಬ ಹಳ್ಳಿಗನದ್ದೂ ಆಗಿತ್ತು. ತಾತ್ಪರ್ಯ ಇಷ್ಟೇ. ಮನುಷ್ಯನಿಗೆ ಉಸಿರಾಡುವುದನ್ನು ಕಲಿಸುವುದು ಅಂದರೆ ಮೀನಿಗೆ ಈಜುವುದನ್ನು ಕಲಿಸಲು ಹೋಗುವಷ್ಟು ಮೂರ್ಖತನವೂ ಆಗಬಹುದು ಎಂಬುದು.

ಆರೋಗ್ಯದ ದೃಷ್ಟಿಯಿಂದ ಪ್ರಾಣಾಯಾಮ ಎಲ್ಲರಿಗೂ ತೀರಾ ಅವಶ್ಯಕವೆಂದು ವಾದಿಸುವವರು ಮಹಾಯೋಗಿ ಪರಮಹಂಸ ಯೋಗಾನಂದರ ಈ ಅಭಿಪ್ರಾಯವನ್ನೂ ಅವಶ್ಯವಾಗಿ ಗಮನಿಸಬೇಕು: “ನಿದ್ರಿಸುವ ಮನುಷ್ಯ ಯೋಗಿಯೇ ಆಗಿರುತ್ತಾನೆ. ಪ್ರತಿರಾತ್ರಿಯೂ ಅವನು ತನಗರಿವಿಲ್ಲದಂತೆಯೇ ದೇಹಪ್ರಜ್ಞೆಯಿಂದ ತನ್ನನ್ನು ಬೇರ್ಪಡಿಸಿಕೊಳ್ಳುವ ಯೌಗಿಕ ಕ್ರಿಯೆಯನ್ನು ಮಾಡಿ ತನ್ನ ಪ್ರಾಣಶಕ್ತಿಯನ್ನು ಮೆದುಳಿನ ಮುಖ್ಯಭಾಗದಲ್ಲಿರುವ ಉಪಶಮನ ಶಕ್ತಿಪ್ರವಾಹದಲ್ಲಿಯೂ ಮೇರುದಂಡದ ಆರು ಕೇಂದ್ರಗಳಲ್ಲಿರುವ ಉಪಜನಕ ವಿದ್ಯುಜ್ಜನಕ ಯಂತ್ರಗಳಲ್ಲಿಯೂ ಬೆರೆಯುವಂತೆ ಮಾಡುತ್ತಾನೆ. ನಿದ್ರಿಸುವವನು ತಾನು ಕಳೆದುಕೊಂಡಿದ್ದ ಜೀವಶಕ್ತಿಯನ್ನು ಸಕಲ ಜೀವರಕ್ಷಕ ವಿಶ್ವಾತ್ಮಕ ಶಕ್ತಿಯಿಂದ ತನಗೆ ಅರಿವಿಲ್ಲದಂತೆಯೇ ಮತ್ತೆ ತುಂಬಿಕೊಳ್ಳುತ್ತಾನೆ.”

`ಬಕಧ್ಯಾನವಾಗುತ್ತಿರುವ ಯಮನಿಯಮವಿಲ್ಲದ ಧ್ಯಾನ

ಇನ್ನು ಐದನೆಯ ಹಂತವಾದ ಧ್ಯಾನದ ಬಗ್ಗೆ ಒಂದು ಮಾತು. ಇದನ್ನು ಮುಖ್ಯವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವ ತಂತ್ರವಾಗಿ ಪ್ರಚಾರಮಾಡಲಾಗಿದೆ. ಇದನ್ನು ಕಲಿಸುವಾಗ ಕೂಡ ಆರಂಭದ ಹಂತಗಳಾದ ಯಮ ಮತ್ತು ನಿಯಮಗಳು ವಿಧಿಸುವ ವಿಧಿನಿಷೇಧಗಳನ್ನು ಅವರು ಪೂರೈಸಿದ್ದಾರೆಯೇ ಎಂಬುದನ್ನು ಅಲಕ್ಷಿಸಲಾಗುತ್ತದೆ. ಇದರಿಂದ ಇದರ ಪ್ರತಿಫಲವೂ ಸಕಾರಾತ್ಮಕವಾಗಿರುವುದು ಅನುಮಾನವೇ. ಒಟ್ಟಿನಲ್ಲಿ ಕಣ್ಣುಮುಚ್ಚಿಕೊಂಡು ಓಂಕಾರ `ಹೇಳಿ ಶಾಂತಿ ಶಾಂತಿ ಶಾಂತಿ’ ಎಂದು ಹೇಳಿ ಕೈಮತ್ತು ಕಣ್ಣುಗಳನ್ನು ಉಜ್ಜಿಕೊಂಡು ಕಣ್ಣುತೆರೆಯುವ ಒಂದು ಯಾಂತ್ರೀಕೃತ ಚಟುವಟಿಕೆಯ ಹಂತಕ್ಕೆ ಇದು ಈಗ ಬಂದು ನಿಂತಿದೆ. ಧ್ಯಾನ ಕ್ರಿಯೆ ಸಫಲವಾಗಬೇಕಾದರೆ ಮನಸ್ಸು ಪ್ರಸನ್ನಗೊಂಡಿರಬೇಕು. ಮನಸ್ಸು ಪ್ರಸನ್ನಗೊಳ್ಳಬೇಕಾದರೆ ಅದಕ್ಕೆ ಪೂರಕವಾಗಿ ಯಮನಿಯಮಗಳ ಆಚರಣೆ ಆಗಿರಬೇಕು. ಎಲ್ಲವೂ ಒಂದಕ್ಕೊಂದು ಒಳಸಂಬಂಧದ ಹೆಣಿಗೆಯನ್ನು ಹೊಂದಿರುವಂಥವು. ಅವಿಲ್ಲದೆ ನೇರವಾಗಿ ಧ್ಯಾನ ಪ್ರತಿಫಲಕೊಡದು. ಸದಾ ಲಂಚದ ದುಡ್ಡಿನ ಆಸೆಯನ್ನೇ ತಲೆಯಲ್ಲಿ ತುಂಬಿಕೊಂಡಿರುವ ವ್ಯಕ್ತಿಯೊಬ್ಬನು ಧ್ಯಾನಮಾಡುವಾಗ ಅವನು ತನ್ನ ಯೋಗಾಚಾರ್ಯ ಮನಸ್ಸನ್ನು ಇಷ್ಟದೇವತೆಯಲ್ಲಿ ಕೇಂದ್ರೀಕರಿಸಿ ಎಂದು ಎಷ್ಟು ಹೇಳಿದರೂ ಅವನ ಕಣ್ಣೆದುರು ಎರಡು ಸಾವಿರ ರೂಪಾಯಿಯ ನೋಟುಗಳ ಚಿತ್ರ ಬಂದು ನಿಲ್ಲಬಹುದೇ ಹೊರತು ಇಷ್ಟದೇವರ ಚಿತ್ರವಲ್ಲ!

ಧ್ಯಾನದ ವೈದ್ಯಕೀಯ ಪ್ರಯೋಜನಗಳ ಬಗ್ಗೆ ಇನ್ನೂ `ಇದೇ ಸತ್ಯ’ ಎನ್ನುವಷ್ಟರಮಟ್ಟಿಗೆ ಸಂಶೋಧನೆಗಳು ಆದಂತಿಲ್ಲ. ಧ್ಯಾನವನ್ನು ಒತ್ತಡದ ನಿಯಂತ್ರಣ (Stress Control)ಕ್ಕಾಗಿ ಬಳಸಿಕೊಳ್ಳಬಹುದು ಎನ್ನುವ ಅಭಿಪ್ರಾಯವಿದೆಯಾದರೂ ಅದು ಎಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಬೀರುತ್ತದೆ ಎಂಬುದನ್ನೂ ಇನ್ನು ಖಚಿತಗೊಳಿಸಿಕೊಳ್ಳಬೇಕಾಗಿದೆ. ನಾನು ಈ ಬಗ್ಗೆ ತಜ್ಞವೈದ್ಯರೊಬ್ಬರನ್ನು ವಿಚಾರಿಸಿದಾಗ, ಅವರು, “Meditation  ಎಂಬುದನ್ನು Medication ಆಗಿ ಪರಿವರ್ತಿಸಿಕೊಳ್ಳುವಲ್ಲಿ ನಾವು ಸಫಲವಾದರೆ ಮಾತ್ರ ಧ್ಯಾನ ವೈದ್ಯಕೀಯವಾಗಿ ಪ್ರಯೋಜನಕ್ಕೆ ಬರುತ್ತದೆ. ಆದರೆ ಧ್ಯಾನ ಮಾಡುವ ಸಮಯ ಮತ್ತು ಮನಸ್ಸಿಗೆ ಒತ್ತಡ ಉಂಟಾಗುವ ಸಮಯ ಮನುಷ್ಯನಲ್ಲಿ ಒಂದೇ ಇರುವುದಿಲ್ಲ. ದಿನದ ಯಾವುದೋ ಒಂದು ಸಮಯದಲ್ಲಿ ಮಾಡಿದ ಧ್ಯಾನದ ಪರಿಣಾಮವು (ಅಂದರೆ ಬೆಳಿಗ್ಗೆ ಒಂದರ್ಧಗಂಟೆ ಮಾಡಿದ ಧ್ಯಾನದ ಪರಿಣಾಮವು) ಅವನಿಗೆ ಕಛೇರಿಯಲ್ಲಿ ಕೆಲಸ ಮಾಡುವಾಗಲೋ ಯಾವಾಗಲೋ ಉಂಟಾಗುವ ಒತ್ತಡ ನಿಯಂತ್ರಣಕ್ಕೆ ಸಹಾಯಕ್ಕೆ ಬರುತ್ತದೆಯೇ ಎಂಬುದನ್ನು ಖಚಿತವಾಗಿ ಹೇಳಲು ಇನ್ನೂ ಸಾಧ್ಯವಾಗಿಲ್ಲ. ಆ ಬಗ್ಗೆ ಇನ್ನೂ ಸಂಶೋಧನೆಗಳು ಆಗಬೇಕಿದೆ’ ಎಂದರು.

ಯೋಗದ ಬಗ್ಗೆ ಇಷ್ಟೆಲ್ಲ ಗೊಂದಲ ಭಿನ್ನಾಭಿಪ್ರಾಯ ಇದ್ದಾಗ್ಯೂ ನಾವು ಅದನ್ನು ನಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಬಲ್ಲ ಏಕೈಕ ಮೂಲವೇನೋ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಮುಗಿಬಿದ್ದಿದ್ದೇವೆ. ಶಾಲಾಕಾಲೇಜುಗಳಿಗೂ ಅದನ್ನು ವಿಸ್ತರಿಸುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ಶಿವರಾಮ ಕಾರಂತರಂಥ ಮೇದಾವಿಗಳು ಇದ್ದಿದ್ದರೆ ಇಂತಹ ಕ್ರಮವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ ಚಿಕ್ಕಮಕ್ಕಳು ಅವರ ವಯಸ್ಸಿಗೆ ಅತ್ಯಂತ ಸಹಜವಾದ ಆಟ–ಪಾಠಗಳಂತಹ ಸಹಜವಾದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವುದರಿಂದಲೇ ಅವರ ದೈಹಿಕ, ಮಾನಸಿಕ, ಭಾವನಾತ್ಮಕ ಹೀಗೆ ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನವಾಗುತ್ತದೆ, ಹಾಗಾಗಿ ಅವರಿಗೆ ಅಂತಹ ಸಹಜ ಚಟುವಟಿಕೆಗಳನ್ನು ಪೂರೈಸಬೇಕೆ ಹೊರತು ಅವರ ಮೇಲೆ ಈ `ಯೋಗ’ದಂತಹ ಭಾರವನ್ನು ಹೇರುವುದು ಸರಿಯಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಅವರ `ಓದುವ ಆಟ’ ಇಂತಹ ಅನೇಕ ಚಟುವಟಿಕೆಗಳನ್ನು ಬೆಂಬಲಿಸುವ ಕ್ರಮವೇ ಆಗಿತ್ತು.

ಶಾಲಾಮಕ್ಕಳು ಮತ್ತು ಯೋಗ

ಶಾಲೆಗಳಲ್ಲಿ ಯೋಗವನ್ನು ಕಲಿಸಲಾಗುತ್ತಿರುವ ಕ್ರಮ ಎಷ್ಟೊಂದು ಎಡವಟ್ಟಿನ ಸ್ಥಿತಿಯಲ್ಲಿದೆ ಎಂಬುದನ್ನು ನೋಡಿಯೇ ತಿಳಿಯಬೇಕು. ಸಾಮಾನ್ಯವಾಗಿ ನಮ್ಮ ಶಾಲೆಗಳು ಆರಂಭಗೊಳ್ಳುವುದು ಬೆಳಿಗ್ಗೆ ಹತ್ತುಗಂಟೆಗೆ. ಬಿಡುವುದು ಸಂಜೆ ನಾಲ್ಕೂವರೆ ಐದಕ್ಕೆ. ಇಡೀ ಶಾಲಾ ಅವಧಿ ಯೋಗಕ್ಕೆ ಯಾವ ದೃಷ್ಟಿಯಿಂದಲೂ ಯೋಗಾಭ್ಯಾಸಕ್ಕೆ ಸರಿಯಾದ ಸಮಯವಲ್ಲ. ಹಾಗಿದ್ದೂ ಅವರು ಯೋಗ ಮಾಡಿಸಬೇಕು. ಏನು ಮಾಡಿಸುತ್ತಾರೆ? ಬೆಳಿಗ್ಗೆ ಹೊಟ್ಟೆತುಂಬ ತಿಂಡಿ ತಿಂದು ಬಂದ ಮಕ್ಕಳನ್ನು ಹಿಡಿದುಕೊಂಡು ಯೋಗಾಸನಕ್ಕೆ ಅವೈಜ್ಞಾನಿಕವಾಗಿ ತೊಡಗಿಸುವುದು, ಯಾವಾಗ ಬೇಕೋ ಆವಾಗ ಕಣ್ಣುಮುಚ್ಚಿ ಧ್ಯಾನಮಾಡಲು ಹೇಳುವುದು ಇಂಥದ್ದೆಲ್ಲ ಮಾಡುತ್ತಾರೆ. ಅದರ ಫೋಟೋ ಹೊಡೆದು ಕಳಿಸಬೇಕಾದವರಿಗೆ ಕಳಿಸಿ ದಾಖಲೆಯಲ್ಲಿ ಯೋಗ ಕಲಿಸುತ್ತಾರೆ. ಇಂತಹ ಕ್ರಮಗಳಿಂದ ಆಗುವ ಪ್ರಯೋಜನಗಳಿಂದ ಅಡ್ಡಪರಿಣಾಮಗಳೇ ಹೆಚ್ಚು ಎಂಬುದನ್ನು ನಾವು ಮರೆಯಬಾರದು.

ಯೋಗವನ್ನು ಒಂದು ಜೀವನಶಿಸ್ತಾಗಿ ಅನುಸರಿಸುವಾಗ ಅದಕ್ಕೆ ಸೂಕ್ತ ತರಬೇತಿಯನ್ನಾದರೂ ಪಡೆದುಕೊಳ್ಳಬೇಕಾಗುತ್ತದೆ. ಯೋಗದ ಬಹುತೇಕ ಆಸನಗಳು ಹಿಂದಿನ ಕಾಲದಲ್ಲಿ ಗುರುಗಳ ನೇರಮಾರ್ಗದರ್ಶನದಲ್ಲಿ ಅವರೆದುರೇ ನಡೆಯುವಂಥವಾಗಿದ್ದವು. ಅಲ್ಪಸ್ವಲ್ಪ ವ್ಯತ್ಯಾಸವಾದರೂ ಅಡ್ಡಪರಿಣಾಮ ಆಗುವ ಸಾಧ್ಯತೆ ಯೋಗದಲ್ಲಿ ಹೆಚ್ಚು. ಗುರುಗಳ ನೇರ ಮಾರ್ಗದರ್ಶನದ ಕಾರಣ ಈ ಅಡ್ಡಪರಿಣಾಮಗಳ ಪ್ರಮಾಣ ಆಗಿನ ಕಾಲದಲ್ಲಿ ಇಲ್ಲವೆನ್ನುವಷ್ಟು ಕಡಿಮೆ ಇದ್ದವು. ಮೇಲಾಗಿ ಆಗಿನ ಗುರುಗಳು ಯೋಗವನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡೂ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.  ಯೋಗದ ಬಗ್ಗೆ ಏನೋ ಒಂದಿಷ್ಟು ತಿಳಿದುಕೊಂಡಿರುವ ಅನೇಕರು ದುಡ್ಡಿಗಾಗಿಯೋ ಅಥವಾ ಮತ್ತೇತಕ್ಕೋ ನಡೆಸುವ ಅರೆಬರೆ ತರಬೇತಿ ಪಡೆದು ಬಂದು ಟಿ.ವಿ. ನೋಡಿಕೊಂಡು ಯೋಗಾಭ್ಯಾಸ ಮಾಡುವ ಜನರೇ ಹೆಚ್ಚು. ಇವರೆಲ್ಲ ಯೋಗಾಸನಕ್ಕೆ ಬೇಕಾದ ಜಮಖಾನೆ, ಟವೆಲ್ಲು, ಒಳ್ಳೆಯ ಯುನಿಫಾರಂ ಇತ್ಯಾದಿ ಭೌತಿಕ ಸಲಕರಣೆಗಳ ಸಿದ್ಧತೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡಿರುತ್ತಾರೆಯೇ ಹೊರತು ಅದಕ್ಕೆ ಬೇಕಾದ ದೈಹಿಕ ಮತ್ತು ಮಾನಸಿಕ ತಯಾರಿಯಾಗಿ ಯಮನಿಯಮಗಳನ್ನು ಪಾಲಿಸಿರುವುದಿಲ್ಲ. ಹಾಗಾಗಿ ನಿರೀಕ್ಷಿತ ಪ್ರತಿಫಲ ದೊರೆಯುವುದು ಹೇಗೆ ಸಾಧ್ಯ?

`ತಿರುಕಕಲಿಸಿದ ಯೋಗ

ಈಗಿನ ಯುವಜನರಂತೆ ನಾನೂ ಕೂಡ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ತಾರುಣ್ಯದಲ್ಲಿ ಯೋಗದ ಬಗ್ಗೆ `ಹುಚ್ಚು’ ಹಚ್ಚಿಕೊಂಡಿದ್ದೆ. ಎಷ್ಟರಮಟ್ಟಿಗೆ ಎಂದರೆ ಯೋಗವನ್ನು ಕಲಿಸುವ ಗುರುವೊಬ್ಬರು ಸಿಗುವವರೆಗೂ ನನಗೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅದೇ ಸಮಯಕ್ಕೆ ಮಲ್ಲಾಡಿಹಳ್ಳಿಯಲ್ಲಿ ಮೂರುನಾಲ್ಕು ವಾರಗಳ ಯೋಗಶಿಕ್ಷಣ ತರಬೇತಿಯೊಂದನ್ನು ಏರ್ಪಡಿಸಿರುವುದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅಲ್ಲಿಗೆ ಓಡಿದೆ. ಆ ಕಾಲದಲ್ಲಿ `ತಿರುಕ’ ಎಂಬ ಹೆಸರಿನಿಂದ ಹೆಸರಾಗಿದ್ದ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಸ್ವಾಮಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಶಿಬಿರದಲ್ಲಿ ಪಾಲ್ಗೊಂಡು ಒಂದು ಕ್ರಮಬದ್ಧವಾದ ಶಿಕ್ಷಣವನ್ನು ಪಡೆದು ನನ್ನ ಜೀವನದ ಬಹಳಷ್ಟು ವರ್ಷಗಳ ಕಾಲ ಅದನ್ನು ಮುಂದುವರೆಸಿದೆ.

ಅವರು ಸ್ಪಷ್ಟವಾಗಿ ಯೋಗ ಸಾಧಕರಿಗೆ ಬೇರೆ, ಸಂಸಾರಿ ಸಾಮಾನ್ಯರಿಗೆ ಬೇರೆ ಎಂಬುದನ್ನು ನಮಗೆ ಸ್ಪಷ್ಟಪಡಿಸಿ ಇರುವ ಸಾವಿರಾರು ಆಸನಗಳಲ್ಲಿ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗಬಲ್ಲ ಕೆಲವು ಆಸನಗಳನ್ನು ಆಯ್ದು `ಆರೋಗ್ಯಕ್ಕಾಗಿ ಯೋಗ’ ಮತ್ತು `ಸರ್ವಾಂಗ ಸುಂದರ ವ್ಯಾಯಾಮ’ ಎಂಬ ಎರಡು ಕೋರ್ಸ್ ಗಳನ್ನು ತಯಾರಿಸಿ ನಮ್ಮನ್ನು ತರಬೇತುಗೊಳಿಸಿದ್ದರು. ಸಂಸಾರಿಗಳಿಗೆ ಸಿಗುವ ಸಮಯದ ಮಿತಿಯನ್ನು ಗಮನಿಸಿ ಬೆಳಿಗ್ಗೆ ಮತ್ತು ಸಂಜೆ 45 ನಿಮಿಷ ಅಥವಾ ಒಂದು ಗಂಟೆಯನ್ನು ಬಳಸಿಕೊಂಡು ಹೇಗೆ ಯೋಗಾಭ್ಯಾಸ ಮಾಡಬಹುದು ಎಂಬುದನ್ನು ಹೇಳಿಕೊಟ್ಟಿದ್ದರು. ಬೆಳಿಗ್ಗಿನದು ದೇಹ ಮನಸ್ಸುಗಳ ಆರೋಗ್ಯವನ್ನು ಕೇಂದ್ರೀಕರಿಸಿದ್ದರೆ ಸಂಜೆಯದು ಸದೃಢವೂ ಸುಂದರವೂ ಆದ ದೇಹವನ್ನು ಅಂದರೆ ಅಂಗಸೌಸ್ಟವವನ್ನು ರೂಪಿಸಿಕೊಳ್ಳುವುದಾಗಿತ್ತು. ಇಂತಹ ಒಂದು ಶಿಸ್ತಿನ ಕ್ರಮಬದ್ಧತೆ ಇಲ್ಲದೇ ಎಲ್ಲೋ ಒಂದಿಷ್ಟು ಪುಸ್ತಕ ಓದಿ, ಟಿ.ವಿ ನೋಡಿ, ಅಥವಾ ನಾಲ್ಕಾರು ಆಸನಗಳನ್ನು ವ್ಯಾಯಾಮದ ರೀತಿ ಕೈಕಾಲು ಆಡಿಸಿ ಮಾಡಿ `ನಾನೂ ಯೋಗ ಮಾಡಿದೆ’ ಎಂದು ಹೇಳಿಕೊಳ್ಳುವ ಶೋಕಿಯಾದರೆ ಆಗ ಯೋಗಾಸನ ಎನ್ನುವುದು ಒಂದು `ಪ್ರದರ್ಶನ ಕಲೆ’ಯ ಹಂತವನ್ನು ತಲುಪುತ್ತದೆ.

ಜೀವನಯೋಗ ಮತ್ತು ಪ್ರದರ್ಶನ ಯೋಗ

ಅಷ್ಟಕ್ಕೂ ಜನಸಾಮಾನ್ಯರೆಲ್ಲರಿಗೂ ಈ ಮಾದರಿಯ ಯೋಗದ ಅವಶ್ಯಕತೆ ನಿಜವಾಗಲೂ ಇದೆಯೇ ಎಂಬುದನ್ನು ನಾವು ಯೋಚಿಸಬೇಕು. ಈ ದೇಶದ ಶೇಕಡಾ ಎಂಬತ್ತರಷ್ಟು ಜನ ಶ್ರಮಜೀವಿಗಳು. ದೇಹವನ್ನು ದಂಡಿಸಿ ದುಡಿಯುವವರು ಇಂತಹ ಯೋಗಾಸನ ಪ್ರಾಣಾಯಾಮ ಇತ್ಯಾದಿಗಳನ್ನು ಮಾಡುವುದಿಲ್ಲವಾದರೂ ಅವರೆಲ್ಲ ಆರೋಗ್ಯವಾದ ಬದುಕನ್ನು ಬದುಕಲು ಸಾಧ್ಯವಾಗಿದೆ. ಹನ್ನೆರಡನೆಯ ಶತಮಾನದ ಶರಣರು ಈ ಸಾಂಪ್ರದಾಯಿಕ ‘ಹಠಯೋಗ’ ಕ್ರಮಗಳನ್ನು ತಿರಸ್ಕರಿಸಿ ಅಥವಾ ಪರಿಷ್ಕರಿಸಿ `ಶಿವಯೋಗ’ದಂತಹ ಆಚರಣೆಯನ್ನು ಜನತೆಗೆ ನೀಡಿದರು. ಇದರಲ್ಲಿ ಯಮ ನಿಯಮ ಹೇಳುವ ವೈಯಕ್ತಿಕ ಶುದ್ಧತೆ, ಪರೋಪಕಾರ ಮನೋಭಾವ ಇತ್ಯಾದಿಗಳ ಜೊತೆಗೆ ದೈಹಿಕ ಶ್ರಮ ಕಡ್ಡಾಯವಾಗಿತ್ತು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕೂಡ ಹೀಗೆ ಸಚ್ಚಾರಿತ್ರ್ಯದಿಂದೊಡಗೂಡಿದ ಜೀವನಕ್ರಮವೇ `ಸದ್ಧರ್ಮಯೋಗ’ ಎಂಬುದನ್ನು ಪ್ರತಿಪಾದಿಸುತ್ತದೆ.

ಅರ್ಥವಿಷ್ಟೇ ಯಾರು ಮೈಮುರಿದು ದುಡಿಯುವರೋ, ಯಾರು ತಮ್ಮ ಮನಸ್ಸಿನಲ್ಲಿ ಬೇರೆಯವರಿಗೆ ಕೆಡುಕನ್ನುಂಟು ಮಾಡುವ, ಬೇರೆಯವರನ್ನು ಯಾವುದೇ ರೀತಿ ಹಿಂಸಿಸುವ, ಕಳ್ಳತನ, ಲಂಚಗುಳಿತನ ಮುಂತಾದವುಗಳಿಂದ ಮನಸ್ಸನ್ನು ಭ್ರಷ್ಟಗೊಳಿಸಿಕೊಳ್ಳದೇ ಪ್ರಸನ್ನವಾಗಿಟ್ಟುಕೊಂಡು ನಿಸರ್ಗಕ್ಕೆ ಹೊಂದಿಕೊಂಡು ಬದುಕುವ ಒಂದು ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೋ ಅವರಿಗೆ ಈ ಯಾವ ಯೋಗವೂ ಬೇಕಾಗುವುದಿಲ್ಲ.  ಅವರ ಜೀವನ ಶೈಲಿಯೇ ಒಂದು ಯೋಗ. ಅದು `ಜೀವನಯೋಗ’. ಆದರೆ ಯಾರು ಈ ದೈಹಿಕ ಶ್ರಮದ, ಸಚ್ಚಾರಿತ್ರ್ಯದಿಂದ ಕೂಡಿದ, ಸರಳ ಮತ್ತು ನಿಸರ್ಗಕ್ಕೆ ಪೂರಕವಾದ ಬದುಕಿನ ಶೈಲಿಯನ್ನು ರೂಢಿಸಿಕೊಳ್ಳದೆ ಇದಕ್ಕೆ ವ್ಯತಿರಿಕ್ತವಾಗಿ ಬದುಕುವ ಅಸಹಜ ಜೀವನ ಶೈಲಿಯನ್ನು ರೂಢಿಸಿಕೊಂಡಿರುತ್ತಾರೋ ಅವರಿಗೆ ಇಂಥದ್ದೆಲ್ಲ ಬೇಕಾಗಬಹುದು ಇನ್ನೂ ಮುಂದುವರೆದು ಹೇಳುವುದಾದರೆ ಇದೂ ಸಾಕಾಗದೇ ಹೋಗಬಹುದು.

ಕೊನೆಯಲ್ಲಿ ನಾವೆಲ್ಲ ಸ್ಪಷ್ಟವಾಗಿ ನೆನಪಿಡಬೇಕಾದ ಒಂದು ಸಂಗತಿ: ನಮಗೆ ಪ್ರಕೃತಿ ದೇಹವನ್ನು ನೀಡಿದ್ದು ಬಹುಮುಖ್ಯವಾಗಿ ಮುರು ಕಾರ್ಯವನ್ನು ನಿರ್ವಹಿಸಲು. ಅವೆಂದರೆ ದುಡಿಯುವುದು, ನಡೆಯುವುದು ಮತ್ತು ಹಡೆಯುವುದು (ಸಂತಾನಾಭಿವೃದ್ಧಿ ಮಾಡುವುದು). ಕೊನೆಯದನ್ನು ಎಲ್ಲರೂ ಮಾಡುತ್ತಾರೆ. ಆದರೆ ಮೊದಲೆರಡು? ಇವತ್ತು ದುಡಿಯುವುದು ಮತ್ತು ನಡೆಯುವುದು ಯಾರಿಗೂ ಬೇಡ! ಇದು ಪ್ರಕೃತಿಗೆ ವಿರುದ್ಧವಾದ ಜೀವನ ಶೈಲಿ! ತನಗೆ ವಿರುದ್ಧವಾಗಿ ಬದುಕುವರನ್ನು ಶಿಕ್ಷಿತರನ್ನಾಗಿ ಮಾಡುವ ಮಾತು ಕೇಳದಿದ್ದರೆ ಶಿಕ್ಷಿಸುವ ಎಲ್ಲ ಅಧಿಕಾರವನ್ನೂ ಈ ಪ್ರಕೃತಿ ತನ್ನಲ್ಲಿ ಇಟ್ಟುಕೊಂಡಿರುತ್ತದೆ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದೇ ಸರಿಯಾದ ಕ್ರಮ. ಈ ನಿಟ್ಟಿನಲ್ಲಿ ನಾವೇ ಆಯ್ದುಕೊಳ್ಳೋಣ `ಜೀವನಯೋಗಮತ್ತು `ಪ್ರದರ್ಶನಯೋಗಇವುಗಳಲ್ಲಿ ನಮ್ಮ ಆಯ್ಕೆ ಯಾವುದಾಗಬೇಕು ಎಂಬುದನ್ನು!
*****
ಡಾ. ರಾಜೇಂದ್ರ ಬುರಡಿಕಟ್ಟಿ
Sunday, June 21, 2020
Edited on June 20,2023

Saturday, April 25, 2020

'ತಳ್ಳುಸೇವೆ' ಮತ್ತು 'ಕಳ್ಳಪೋಲೀಸ್ ಆಟ'!


 'ತಳ್ಳುಸೇವೆ' ಮತ್ತು 'ಕಳ್ಳಪೋಲೀಸ್ ಆಟ'!


ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ

ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ, ಶೂನ್ಯಪೀಠಾಧ್ಯಕ್ಷ ಅಲ್ಲಮನ ವಚನವೊಂದರಲ್ಲಿ ಬರುವ ಎರಡು ಸಾಲುಗಳಿವು. `ಸುಳ್ಳನ್ನೇ ಬೆಳೆಯಾಗಿ ಬೆಳೆದು ಪೈರಾಗಿ ಕೊಯ್ದುಕೊಂಡು ಅದನ್ನೇ ಪೂಜಿಸಿ ಸಂಕಷ್ಟಕ್ಕೆ ಒಳಗಾದಿರಿಎಂಬರ್ಥದ ಮಾತು, ಸ್ವತಃ ಅಲ್ಲಮನ ಅಂಕಿತದ ಒಂದು ವಚನವೂ ಸೇರಿದಂತೆ ಅನೇಕ ಸುಳ್ಳು ಮತ್ತು ಜಳ್ಳು ಸುದ್ಧಿಗಳು ನಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ, ಕೊರೊನಾ ವೈರಾಣು (ಕೋವಿಡ್19) ವಿಗಿಂತ ವೇಗವಾಗಿ ಮತ್ತು ವ್ಯಾಪಕವಾಗಿ ನಮ್ಮ ಸಮಾಜದಲ್ಲಿ ಹರಡಿ ಸಮಾಜದ ಜನಮಾನಸದಲ್ಲಿ ಅನಗತ್ಯ ಭಯ, ಆತಂಕ, ಮೌಢ್ಯ ಇವೆಲ್ಲಕ್ಕೂ ಮಿಗಿಲಾಗಿ ಕೋಮುದ್ವೇಷದಂತಹ ಕೆಟ್ಟ ಭಾವನೆಗಳನ್ನು ಹರಡಿ ಮನಸ್ಸುಗಳನ್ನು ಕೆಡಿಸುತ್ತಿರುವ ಸಂದರ್ಭದಲ್ಲಿ ಸುಮ್ಮನೆ ನೆನಪಾದವು.

ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೊರೊನಾ ಬಿಕ್ಕಟ್ಟು ನಮ್ಮ ದೇಶವನ್ನೂ ಅದರ ಭಾಗವಾದ ಕರ್ನಾಟಕವನ್ನು ಇತ್ತೀಚಿನ ದಿನಮಾನಗಳಲ್ಲಿ ಕಂಡರಿಯದಷ್ಟು ಹಿಂಡಿಹಿಪ್ಪೆ ಮಾಡುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಪ್ರಾರಂಭವಾದ ಅದರ ದಾಳಿ ಇನ್ನೂ ನಿಂತಿಲ್ಲ. ಜಗತ್ತಿನ ಶಕ್ತಿಮಾನ್ ರಾಷ್ಟ್ರಗಳೆಲ್ಲ ಇಂದು ಅದನ್ನು ನಿಯಂತ್ರಿಸುವಲ್ಲಿ ತಮ್ಮ ಶಕ್ತಿಯ ತುದಿಯಂಚಿನವರೆಗೂ ಹೋಗಿ ಶ್ರಮಿಸುತ್ತಿವೆ. ಭಾರತದಲ್ಲಿ ಕೂಡ ಇದರ ದಾಳಿ ತೀವ್ರಗತಿಯನ್ನು ಪಡೆದುಕೊಳ್ಳದಿದ್ದರೂ ಅಲಕ್ಷಿಸುವ ರೀತಿಯಲ್ಲಂತೂ ಇಲ್ಲ. ಹಂತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳು ಅವುಗಳ ಅಧೀನ ಸಂಸ್ಥೆ ಮತ್ತು ನೌಕರರು ಹಗಲಿರುಳೆನ್ನದೆ ಅದರ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಪ್ರಜ್ಞಾವಂತಿಕೆಯ ಸಹಕಾರ ಅತ್ಯಂತ ಮಹತ್ವದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಪ್ರಜ್ಞಾವಂತಿಕೆಯನ್ನು ಯಾವಮಟ್ಟದಲ್ಲಿ ನಾವೆಲ್ಲ ಪ್ರದರ್ಶಿಸಬೇಕಿತ್ತೋ ಮಟ್ಟದಲ್ಲಿ ಪ್ರದರ್ಶಿಸಲಿಲ್ಲ ಎಂಬುದು ಕೊರೋನಾ ವೈರಾಣುವಿನ ಸುತ್ತ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ದೇಶದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ದೇಶದ ಲಕ್ಷೋಪಲಕ್ಷ ಜನರ ಮನಸ್ಥಿತಿಯನ್ನೂ ಕಾಯಿಲೆ ನಿಯಂತ್ರಣದ ಪರಿಸ್ಥಿತಿಯನ್ನೂ ಹಳಿತಪ್ಪಿಸುವ ಕಾರ್ಯಮಾಡಿದ ಸುಳ್ಳು ಮತ್ತು ಜಳ್ಳು ಸುದ್ಧಿಗಳಿಂದ ಸಾಬೀತಾಯಿತು.

ಇರುವ ಹೊಣೆಗಾರಿಕೆಯ ನಿರ್ವಹಣೆಯೇ ಸವಾಲಾಗಿರುವ ಆಡಳಿತಗಳಿಗೆ ಮೈಮೇಲೆ ಬಿದ್ದಿರುವ ಹೆಚ್ಚುವರಿ ಹೊಣೆಗಾರಿಕೆ ಎಂದರೆ ಕಿಡಿಗೇಡಿ ಸುದ್ಧಿಗಳ ನಿಯಂತ್ರಣ. ಸಂಖ್ಯಾ ದೃಷ್ಟಿಯಿಂದ ದೊಡ್ಡ ಪ್ರಮಾಣದಲ್ಲಿಯೇ ಇದ್ದು, ವೈರಸ್ಸಿನ ಹರಡುವಿಕೆಯಷ್ಟೇ ಅಥವಾ ಅದಕ್ಕಿಂತಲೂ ಒಂದು ಗುಂಜಿ ಹೆಚ್ಚೇ ವೇಗವಾಗಿ ಹರಡುತ್ತಿರುವ ಸುದ್ಧಿಗಳ ನಿಯಂತ್ರಣ ಮಾಡುವುದು ವೈರಸ್ಸನ್ನು ಹರಡುವಿಕೆಯನ್ನು ನಿಯಂತ್ರಿಸುವುದಕ್ಕಿಂತಲೂ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಒಂದು ಕಡೆ ವೈದ್ಯರು, ದಾದಿಯರು, ಪೌರಕಾರ್ಮಿಕರು ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು, ನೌಕರರು ಅವಿಶ್ರಾಂತರಾಗಿ ಕೆಲಸ ನಿರ್ವಹಿಸುತ್ತಿದ್ದರೆ ಕೆಲವರು ಮನೆಯಲ್ಲಿ ಕುಳಿತು ಇಂತಹ ಸುದ್ಧಿಗಳ ಹಂಚಿಕೆ ಮಾಡುತ್ತಿದ್ದಾರೆ. ತೀವ್ರತರಹದ ಎಚ್ಚರಿಕೆಯ ಕ್ರಮಗಳಿಂದ ಕಳೆದ ಐದಾರು ದಿನಗಳಿಂದ ಇವುಗಳಿಗೆ ಕಡಿವಾಣ ಬಿದ್ದದ್ದು ನಿಜವಾದರೂ ಅವುಗಳು ಸಂಪೂರ್ಣ ನಿಂತಂತಿಲ್ಲ. ಕಳೆದ ಹದಿನೈದು ದಿನಗಳ ಅವಧಿಗಳಲ್ಲಿ ಭಾರತದಲ್ಲಿ ಹೀಗೆ ಹಂಚಿಕೆಯಾದ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿನ, ಇಂತಹ ಸುದ್ಧಿಗಳನೇಕನ್ನು ವಿಶ್ಲೇಷಣೆಗೆ ಒಳಪಡಿಸುವುದು ಲೇಖನದ ಉದ್ದೇಶವಾಗಿದೆ.

ಹೀಗೆ ದೊಡ್ಡ ಪ್ರಮಾಣದ ಗೊಂದಲವನ್ನು ಸೃಷ್ಟಿಸಿದ ಸಂದೇಶಗಳು ಭೌತಿಕ ಸ್ವರೂಪದಲ್ಲಿ ಮುಖ್ಯವಾಗಿ ಮೂರು ರೀತಿಯಲ್ಲಿದ್ದವು. ಅವೆಂದರೆ ಲಿಖಿತ ರೂಪದ ಸಂದೇಶಗಳು, ಆಡಿಯೋ ಸಂದೇಶಗಳು ಮತ್ತು ವಿಡಿಯೋ ಸಂದೇಶಗಳು. ಮೂರೂ ರೀತಿಯ ಸಂದೇಶಗಳನ್ನು ಅವುಗಳ ರಚನಾ ಸ್ವರೂಪದ ದೃಷ್ಟಿಯಿಂದ ಮೂರು ವಿಧಗಳಲ್ಲಿ ವಿಂಗಡಿಸಬಹುದು. ಅವೆಂದರೆ ಮೊದಲನೆಯದು ಅನಾಥ ಸಂದೇಶಗಳು ಎರಡನೆಯದು ಬೇನಾಮಿ ಸಂದೇಶಗಳು ಮತ್ತು ಕೊನೆಯದಾಗಿ ನಕಲಿ ಸಂದೇಶಗಳು.
ಹೆಸರೇ ಇಲ್ಲದ ಅನಾಥ ಸಂದೇಶಗಳು:
ಸಂದೇಶಗಳು ಒಂದು ರೀತಿಯಲ್ಲಿ ಅಪ್ಪಅಮ್ಮ ಯಾರೂ ದಿಕ್ಕಿಲ್ಲದ ಮಕ್ಕಳಿದ್ದಂತೆ. ಅಂದರೆ ಇವನ್ನು ರಚನೆ ಮಾಡಿದವರು ಯಾರು ಏನು ಎಂದು ಯಾವ ವಿವರಗಳೂ ಇವುಗಳಲ್ಲಿ ಇರುವುದಿಲ್ಲ. ಹಾಗಾಗಿ ಇವುಗಳ ಬಗ್ಗೆ ನಮಗೆ ಏನಾದರೂ ಸಂಶಯ ಬಂದರೆ ಇವುಗಳನ್ನು ರಚಿಸಿದವರನ್ನು ಕೇಳಿ ಖಾತ್ರಿಪಡಿಸಿಕೊಳ್ಳುವ ಅವಕಾಶ ಇಲ್ಲಿ ಇರುವುದಿಲ್ಲ. ಇವು ಸುಮ್ಮನೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಮತ್ತೆಲ್ಲಿಗೋ ಫುಟ್ಬಾಲ್ ಚೆಂಡಿನಂತೆ ಹಾರುತ್ತ ಬರುತ್ತವೆ. ಇಂತಹ ಸಂದೇಶಗಳಿಗೆ ಉದಾಹರಣೆಯಾಗಿ ನನಗೆ ಸುಮಾರು ಒಂದು ವಾರದ ಹಿಂದೆ ಬಂದ ಎರಡು ಸಂದೇಶಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತೇನೆಒಂದುಚೈನಾ ಇಡೀ ಪ್ರಪಂಚದಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಬೇಕೆಂದು ಕೊರೊನಾ ವೈರಸ್ಸನ್ನು ಪ್ರಪಂಚದ ವೈರಿ ರಾಷ್ಟ್ರಗಳ ಮೇಲೆ ಪ್ರಯೋಗಿಸಲು ಜೈವಿಕ ಅಸ್ತ್ರವನ್ನಾಗಿ ಬಳಸಲು ತಯಾರಿಸಿತ್ತು; ಆಯತಪ್ಪಿ ಅದು ಅದಕ್ಕೇ ಮುಳುವಾಯಿತುಎನ್ನುವ ಅರ್ಥದ ಸಂದೇಶ. ಇನ್ನೊಂದು: “ಚೈನಾದೇಶವೇ ಕಾಯಿಲೆ ತಡೆಗಟ್ಟಲು ತನ್ನ ದೇಶದಲ್ಲಿ `ಗೋಮೂತ್ರಮತ್ತು `ಅರಿಶಿಣ ನೀರುಇವುಗಳನ್ನು ವಿಮಾನದಿಂದ ಸಿಂಪಡಿಸುತ್ತಿದೆ; ಅಲ್ಲಿ ಮಾಡಿದರೆ ಅದು ದೈವ ನಂಬಿಕೆ ನಮ್ಮಲ್ಲಿ ಮಾಡಿದರೆ ಮೂಢನಂಬಿಕೆಎಂಬ ವ್ಯಂಗಾರ್ಥದ ಸಂದೇಶ

ಇವೆರಡೂ ತಳಬುಡಗಳಿಲ್ಲದ ಸಂದೇಶಗಳು ಮಾತ್ರವಲ್ಲ ಕೊಳಕು ಆಲೋಚನೆಯ ಸಂದೇಶಗಳೂ ಹೌದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೊದಲನೆಯದಾಗಿ ತಳಬುಡವಿಲ್ಲದ ಸಂದೇಶಗಳು ಏಕೆಂದರೆ ಇವುಗಳೆರಡಕ್ಕೂ ಸ್ಪಷ್ಟವಾದ ಯಾವುದೇ ಆಧಾರಗಳಿಲ್ಲಕುತೂಹಲಕ್ಕೆ ನಾನು ವಿಶ್ವ ಆರೋಗ್ಯ ಸಂಸ್ಥೆಯ ಹಾಗೆಯೇ ಚೀನಾ ಸರ್ಕಾರದ ಬಗೆಗಿನ ಪ್ರಕಟಣೆಗಳನ್ನು ಪರಿಶೀಲಿಸಿ ನೋಡುವ ಪ್ರಯತ್ನಮಾಡಿದಾಗ ಇವೆರಡಕ್ಕೂ ಯಾವ ಆಧಾರವೂ ಸಿಗಲಿಲ್ಲ. ಇನ್ನೂ ತಮಾಸೆಯ ಸಂಗತಿ ಎಂದರೆ ರೋಗ ತಡೆಗೆ ಚೀನಾ ಯಾವ ಕ್ರಮ ಅನುಸರಿಸಿತು ಎಂಬ ಸಂಗತಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರಗಳಿಗೇ ಇನ್ನೂ ಸರಿಯಾಗಿ ಗೊತ್ತಿಲ್ಲದ ಸಮಯದಲ್ಲಿಯೇ ಸಂದೇಶ ಕಳಿಸಿದವರಿಗೆ ಅದು ಗೊತ್ತಾಗಿತ್ತು! ಇವರೇ ನಮ್ಮ ಸರ್ಕಾರಕ್ಕೂ ಗೊತ್ತಿಲ್ಲದಂತೆ ಅಲ್ಲಿ ಗುಪ್ತಾಚಾರರನ್ನೇನಾದರೂ ನೇಮಿಸಿದ್ದರೋ ಏನೋ!!

ಎರಡನೆಯದಾಗಿ ಸಂದೇಶಗಳು ಕೊಳಕು ಏಕೆಂದರೆ ಮೊದಲನೆಯದು ನಮ್ಮ ಅಕ್ಕಪಕ್ಕದ ರಾಷ್ಟ್ರಗಳನ್ನು `ಶತ್ರುಗಳನ್ನಾಗಿ ಮಾಡಿಕೊಂಡು ತೊಳುಮಡಿಯುವ ಟಗರೋತ್ಸಾಹಕ್ಕೆ ಪ್ರೇರಣೆ ನೀಡುವ ಮೂಲಕ ದೇಶವಾಸಿಗಳಲ್ಲಿ `ದ್ವೇಷಭಾವನೆಯನ್ನು ತುಂಬುವ ದುರುದ್ಧೇಶವನ್ನು ಹೊಂದಿದ್ದರೆ ಎರಡನೆಯದು ನಮ್ಮ ದೇಶದ ಸಂವಿಧಾನವು ಒತ್ತುಕೊಟ್ಟು ಹೇಳಿರುವ ಬಹುಮುಖ್ಯವಾದ `ದೇಶವಾಸಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಜವಾಬ್ದಾರಿಯುತ ಕಾರ್ಯವನ್ನೇ ಸಂಪೂರ್ಣವಾಗಿ ಗೋಮೂತ್ರದಲ್ಲಿ ಮುಳುಗಿಸಿ ಉಸಿರುಕಟ್ಟಿಸಿ ಸಾಯಿಸುವಂಥ, ಅಜ್ಞಾನಪ್ರಣೀತವಾದಂಥ ಮತ್ತು ದೇಶವನ್ನು ಹಿಮ್ಮುಖ ಚಲನೆಗೆ ತಳ್ಳುವಂಥ ಪ್ರತಿಗಾಮಿ ಉದ್ದೇಶವನ್ನು ಹೊಂದಿರುವಂಥದ್ದು. ಇಂಥವನ್ನೆಲ್ಲ ನೋಡಿದರೆ ನಮ್ಮ ದೇಶವನ್ನು ಗೋವಿನ ಸಗಣಿ ಮತ್ತು ಮೂತ್ರಗಳಿಂದ ಮೇಲೆತ್ತಿಕೊಳ್ಳಲಿಕ್ಕೇ ನಮಗೆ ಇನ್ನೂ ಎಷ್ಟೋ ವರ್ಷಗಳು ಬೇಕಾಗಬಹುದೇನೋ ಅನ್ನಿಸುತ್ತದೆ.
ಯಾರದೋ ಹೆಸರಿನ ಬೇನಾಮಿ ಸಂದೇಶಗಳು:
ಇವು ಯಾವುದಾದರೂ ಒಂದು ಹೆಸರನ್ನು ಹೊತ್ತು ಬರುವ ಸಂದೇಶಗಳು. ಇದರಲ್ಲಿ ಎರಡು ರೀತಿ ಇರುತ್ತವೆ. ಒಂದು: ಸಂದೇಶ ಇದ್ದು ವ್ಯಕ್ತಿ ಇಲ್ಲದಿರುವಂಥವು. ಇನ್ನೊಂದು ವ್ಯಕ್ತಿಯಿದ್ದು ಸಂದೇಶ ನಕಲಿ ಇರುವಂಥವು. ಮೊದಲನೆಯ ಪ್ರಕಾರದ ಸಂದೇಶಗಳಲ್ಲಿ ಸಾರ್ವಜನಿಕ ಮಹತ್ವದ ಒಂದು ಸಂದೇಶವಿದ್ದು ಅದರ ಕೆಳಗೆ ಯಾರದೋ ಒಂದು ಹೆಸರು ಇರುತ್ತದೆ. ಅವರ ಸಂಪರ್ಕಕ್ಕೆ ಅವರ ದೂರವಾಣಿ -ಮೇಲ್ ಇತ್ಯಾದಿ ಏನೂ ಇರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ವಾಸ್ತವವಾಗಿ ವ್ಯಕ್ತಿ ಇರುವುದೇ ಇಲ್ಲ. ಇಲ್ಲದೇ ಇರುವ ವ್ಯಕ್ತಿಯೊಬ್ಬನ ಹೆಸರು ಇಲ್ಲಿರುತ್ತದೆ. ಉದಾಹರಣೆಗೆ ಒಂದು ಸಂದೇಶದ ಕೊನೆಯಲ್ಲಿ  `ಭಾಸ್ಕರ್ ರಾವ್, ವಕೀಲರು, ಮುಂಬೈ ರೀತಿ ಇರುತ್ತದೆ. ವ್ಯಕ್ತಿಯನ್ನು ನೀವು ಹೇಗೆ ಪತ್ತೆ ಹಚ್ಚುವಿರಿ? ವ್ಯಕ್ತಿ ಇದ್ದರೆ ತಾನೆ ಪತ್ತೆ ಹಚ್ಚುವುದು? ಎರಡನೆಯ ಪ್ರಕಾರದ ಸಂದೇಶಗಳಲ್ಲಿ ವ್ಯಕ್ತಿ ಅಧಿಕೃತವಾಗಿ ಇರುತ್ತಾರೆ ಆದರೆ ಸಂದೇಶ ಅವರು ನೀಡಿದ್ದಾಗಿರುವುದಿಲ್ಲ. ಅವರ ಹೆಸರು ಬಳಸಿಕೊಂಡು ಇನ್ಯಾರೋ ನೀಡಿರುತ್ತಾರೆ. ಇಂಥವು ಪ್ರಮುಖವಾಗಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಪ್ರಸಾರ ಆಗುತ್ತವೆ. ಜನರನ್ನು ನಂಬಿಸುವಲ್ಲಿ ಇವು ಮೊದಲನೆಯ ಸಂದೇಶಗಳಿಗಿಂತ ಹೆಚ್ಚು ಪರಿಣಾಮಕಾರಿ ಆದವುಗಳಾಗಿರುತ್ತವೆ. ಹಾಗಾಗಿ ಮೊಲನೆಯ ರೀತಿಯ ಸಂದೇಶಗಳನ್ನು ಹಂಚಿಕೆ ಮಾಡಲು ಹಿಂಜರಿಯುವವರು ಇವನ್ನು ಮುಂತಳ್ಳಲು ಒಂದಿಷ್ಟು ಧೈರ್ಯಮಾಡುತ್ತಾರೆ. ಇಲ್ಲೊಂದು ತಮಾಸೆಯ ಸಂಗತಿ ಎಂದರೆ ಮೊದಲು ಹಂತದಲ್ಲಿ ಬಂದ ಸಂದೇಶಗಳು ಸುಳ್ಳಾಗಿರುತ್ತವೆ. ಸುಳ್ಳು ಸಂದೇಶಗಳನ್ನು ನಿಯಂತ್ರಿಸಲು ಎರಡನೆಯ ಹಂತದಲ್ಲಿ ಅಧಿಕಾರಿಗಳ ಹೆಸರಿನಲ್ಲಿ ಬರುವ ಎಚ್ಚರಿಕೆಯ ಸಂದೇಶಗಳು ಕೂಡ ಸುಳ್ಳಾಗಿರುವಂಥದ್ದು! ಅಂದರೆ ಕಳ್ಳನಾಗಿ ಬಂದವನು ಕಳ್ಳನೂ ಅಲ್ಲ. ಅವನನ್ನು ಹಿಡಿಯಲು ಪೋಲೀಸನಾಗಿ ಬಂದವನು ಪೋಲೀಸನೂ ಅಲ್ಲ! ಇದೊಂದು ರೀತಿಯ ಕಳ್ಳ ಪೋಲೀಸ್ ಆಟ!!
ಇದಕ್ಕೆ ಒಂದು ಉದಾಹರಣೆ ನೋಡಿ. ಇದು ಭಾರತ ಸರ್ಕಾರದ ಗೃಹಮಂತ್ರಾಲಯದ ಪ್ರಧಾನ ಕಾರ್ಯದರ್ಶಿ ರವಿ ನಾಯಕ್ ಎಂಬುವರ ಹೆಸರಿನಲ್ಲಿ ಬಂದ ಸಂದೇಶ. ವಾಟ್ಸಪ್ ಗ್ರೂಫ್ಗಳ ಅಡ್ಮಿನ್ ಗಳು ಮತ್ತು ಸದಸ್ಯರುಗಳಿಗೆ ಎಚ್ಚರಿಕೆ ನೀಡಲಾದ ಸಂದೇಶದಲ್ಲಿ ಕೊರೊನಾ ವೈರಸ್ ಕುರಿತು ಸರ್ಕಾರದ ಏಜನ್ಸಿಗಳನ್ನು ಹೊರತು ಯಾರೇ ಮಾಹಿತಿಯನ್ನು ಪ್ರಕಟಿಸುವುದನ್ನು `ಶಿಕ್ಷಾರ್ಹ ಅಪರಾಧಎಂದು ಹೆದರಿಸಿ ತಪ್ಪು ಸಂದೇಶ ಪ್ರಕಟಣೆಗೆ ಗುಂಪಿನ ಆಡಳಿತಗಾರರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ಇದೆ. ಸಂದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅದರಲ್ಲಿ ಎರಡು ಮೂರು ತೊಡಕುಗಳು ನನಗೆ ಗೋಚರಿಸಿದವು. ಒಂದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುವುದಾದರೆ, ನಮ್ಮಲ್ಲಿ ಸರ್ಕಾರಗಳಿಗೆ ಯಾವುದೇ ವಿಷಯಯಕ್ಕೆ ಸಂಬಂಧಿಸಿದಂತೆ ಪ್ರಜೆಗಳು ಆಡಿದ ಮಾತು ಅಥವಾ ಮಾಡಿದ ಪ್ರಕಟಣೆ ತಪ್ಪು ಅಥವಾ ಸುಳ್ಳು ಆಗಿದ್ದರೆ ನೆಲದ ಕಾನೂನಿನನ್ವಯ ಶಿಕ್ಷಿಸುವ ಅಧಿಕಾರವಿರುತ್ತದೆಯೇ ಹೊರತುಯಾವ ಮಾಹಿತಿಯನ್ನೂ ಯಾರೂ ಪ್ರಕಟಿಸಬಾರದುಎಂದು ಹೇಳುವ ಅಧಿಕಾರ ಇರುವುದಿಲ್ಲ. ಏಕೆಂದರೆ ಇದು ಸಂವಿಧಾನವು ಪ್ರಜೆಗಳಿಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದಾದ ಪ್ರಕರಣವಾಗಬಹುದು. ಬಗ್ಗೆ ಸಂಶಯ ಬಂದು, ಸಂದೇಶ ನನ್ನ ಹತ್ತಿರ ಬಂದ ತಕ್ಷಣ ಕೇಂದ್ರ ಸರ್ಕಾರದ ಗೃಹಮಂತ್ರಾಲಯದ ಅಧಿಕಾರಿಗಳ ಹೆಸರಿನ ದೊಡ್ಡ ಪಟ್ಟಿಯನ್ನು ಪರಿಶೀಲಿಸಿದಾಗ ಸಂದೇಶದಲ್ಲಿದ್ದ ಅಧಿಕಾರಿಯ ಹೆಸರೇ ನನಗೆ ಎಲ್ಲಿಯೂ ಸಿಗಲಿಲ್ಲ. ಬಗ್ಗೆ ಸಂಬಂಧಪಟ್ಟ ಮಂತ್ರಾಲಯಕ್ಕೆ ಸ್ಪಷ್ಟೀಕರಣ ಕೇಳಿ ಬರೆದ ಪತ್ರಕ್ಕೆ ತಕ್ಷಣ ಉತ್ತರವೂ ಬರಲಿಲ್ಲ. ಆದರೆ ನಂತರ ಇದು ಗೃಹಮಂತ್ರಾಲಯದಿಂದ ಹೊರಟ ಸುದ್ಧಿಯಲ್ಲವೆಂಬುದು ಖಚಿತವಾಯಿತು.
ಪ್ರಸಿದ್ಧ ಸಂಸ್ಥೆಗಳ `ಅಧಿಕೃತನಕಲಿ ಸಂದೇಶಗಳು
ಇವು ಮೇಲಿನ ಎರಡೂ ಪ್ರಕಾರದ ಸಂದೇಶಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಮತ್ತು ವೇಗವಾಗಿ ಸಂಚರಿಸುವ ಸಂದೇಶಗಳು. ಏಕೆಂದರೆ ಇವು ಸಾಂವಿಧಾನಿಕ ಹುದ್ದೆಗಳಾದ ಪ್ರಧಾನಮಂತ್ರಿ, ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ಇಂತಹ ಗಣ್ಯವ್ಯಕ್ತಿಗಳ ಮತ್ತು ದೊಡ್ಡ ದೊಡ್ಡ ಸಂಸ್ಥೆಗಳ ಕಛೇರಿಗಳ ಲೆಟರ್ ಹೆಡ್ ಗಳು ಸಹಿಗಳು ಇತ್ಯಾದಿಗಳನ್ನು ಒಳಗೊಂಡು ಆದೇಶ ಸುತ್ತೋಲೆ ಮಾದರಿಯಲ್ಲಿ ಸೃಷ್ಟಿಸಲ್ಪಟ್ಟಿರುತ್ತವೆ! ಕಾರಣಕ್ಕೆ ಇವುಗಳು ಮೇಲಿನ ಎರಡು ರೀತಿಯ ಸಂದೇಶಗಳಿಗಿಂತ ಹೆಚ್ಚು ವಿಶ್ವಾಸಾರ್ಹತೆಯನ್ನು ಪಡೆಯುತ್ತವೆ. ಸತ್ಯದ ತಲೆಯ ಮೇಲೆ ಹೊಡೆಯುವಂತೆ ಇವು ಇರುತ್ತವೆ. ಇವನ್ನು ನಕಲಿ ಎಂದು ಗುರುತಿಸುವುದು ಬಹಳ ಕಷ್ಟ. ಹೀಗಾಗಿ ವಿದ್ಯಾವಂತರು, ಜವಾಬ್ದಾರಿಯುತ ವ್ಯಕ್ತಿಗಳನ್ನೂ ಇವು ವಂಚಿಸಿ, ಅವರನ್ನೂ ಒಂದು ಕ್ಷಣ ಮೂರ್ಖರನ್ನಾಗಿ ಮಾಡಿ, ಅವರಿಂದಲೇ ಅನೇಕ ಗುಂಪುಗಳಿಗೆ ಹಂಚಲ್ಪಡುತ್ತವೆ.

ಕೋರೋನ ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಇಂತಹ `ಅಧಿಕೃತಅನ್ನಿಸುವ ಅನಧಿಕೃತ ಆದೇಶ ಸುತ್ತೋಲೆಗಳು `ಪ್ರಧಾನಮಂತ್ರಿಗಳ ಕಾರ್ಯಾಲಯ’ `ಇಂಡಿಯನ್ ಮೆಡಿಕಲ್ ಅಸೋಸಿಯೇಶನ್’ `ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ), ಇಂತಹ ದೇಶದ ಅತ್ಯುನ್ನತ ಸಂಸ್ಥೆಗಳಲ್ಲದೆ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವಿದೇಶಿ ಸಂಸ್ಥೆಗಳಾದ `ವಿಶ್ವ ಆರೋಗ್ಯ ಸಂಸ್ಥೆಯುನಿಸೆಫ್, ನಾಸಾ(ಅಮೇರಿಕ) ಮುಂತಾದವುಗಳ ಹೆಸರಿನಲ್ಲಿಯೂ ಸೃಷ್ಟಿಸಿ ಹಂಚಲ್ಪಟ್ಟವುಸ್ಥಳೀಯವಾಗಿ ಹೇಳುವುದಾದರೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯೊಂದರ ಕರೋನಾ ರಜಾಸಂಬಂಧಿ ಆದೇಶವೊಂದು ಹೀಗೇ ಫೋರ್ಜರಿ ಆಗಿ ದೊಡ್ಡಮಟ್ಟದಲ್ಲಿ ಹರಿದಾಡಿತು. ಕೊನೆಗೆ ಅದು `ಅನಧಿಕೃತಎಂದು ಹೇಳುವು ಆದೇಶ ಪ್ರಕಟವಾಯಿತು. ಸುಳ್ಳುಆದೇಶವನ್ನು ಮೊದಲು ಹಂಚಿದವರೇ ನಿಜವಾದ ಆದೇಶವನ್ನೂ ಹಂಚಿ ಮಾಡಿದ ಪಾಪವನ್ನು ತೊಳೆದುಕೊಂಡರು!

ಹೀಗೆ ಇಂತಹ ಸಂದೇಶಗಳನ್ನು ಅವುಗಳ ಭೌತಿಕ ಮತ್ತು ರಾಚನಿಕ ಸ್ವರೂಪದ ಮೇಲೆ ಮೇಲಿನಂತೆ ವಿಭಾಗಿಸಬಹುದಾದರೆ ಅವುಗಳ ಹಿಂದಿನ ಕಲ್ಪಿತ ಉದ್ದೇಶಗಳ ಆಧಾರದ ಮೇಲೆ ಅಧ್ಯಯನ ದೃಷ್ಟಿಯಿಂದ ಮೂರು ವಿಧಗಳಾಗಿ ವಿಂಗಡಿಸಿಕೊಳ್ಳಲು ಸಾಧ್ಯವಿದೆ. ಅವೆಂದರೆ ಮೊದಲನೆಯದಾಗಿ, ಮೌಢ್ಯ ಮತ್ತು ಅಜ್ಞಾನವನ್ನು ಹರಡುವ ಸಂದೇಶಗಳು ಎರಡನೆಯದಾಗಿ ಜನಾಂಗಿಯ ದ್ವೇಷವನ್ನು ಹರಡುವ ಸಂದೇಶಗಳು ಮತ್ತು ಹಣಕಾಸು ವಂಚನೆ ಮತ್ತಿತರ ಸಂದೇಶಗಳು. ಅವುಗಳನ್ನು ಒಂದೊಂದಾಗಿ ನೋಡಬಹುದು.
ಮೌಢ್ಯ ಮತ್ತು ಅಜ್ಞಾನವನ್ನು ಹರಡುವ ಸಂದೇಶಗಳು
ನಮ್ಮ ದೇಶ ವೈಜ್ಞಾನಿಕವಾಗಿ ಏನೆಲ್ಲ ಸಾಧನೆಮಾಡಿದರೂ ಅದನ್ನು ಅಜ್ಞಾನದಿಂದ ಮತ್ತು ಮತಮೌಢ್ಯಗಳಿಂದ ಮೇಲೆತ್ತಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನಮ್ಮಲ್ಲಿ ಅನೇಕರು ವಿಜ್ಞಾನದ ಎಲ್ಲ ಕೊಡುಗೆಗಳನ್ನೂ ತಮ್ಮ ಬದುಕಿನಲ್ಲಿ ಬಳಸಿಕೊಳ್ಳುತ್ತಲೇ ವಿಜ್ಞಾನವನ್ನು ಜರಿಯುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇಂಥವರ ಬಹುಮುಖ್ಯ ಲಕ್ಷಣ ಎಂದರೆ ಪ್ರಪಂಚ ಈಗ ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಲಿರುವ ಎಲ್ಲಾ ಸಮಸ್ಯೆಗಳನ್ನೂ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ತಮ್ಮ ದಿವ್ಯದೃಷ್ಟಿಯಿಂದ ಕಂಡುಕೊಂಡಿದ್ದರು ಮತ್ತು ಅವುಗಳಿಗೆ ತಕ್ಕ ಪರಿಹಾರಗಳನ್ನು ಆಗಲೇ ಕಂಡುಹಿಡಿದುಬಿಟ್ಟಿದ್ದರು ಎಂದು ನಂಬುವುದು. ಮತ್ತು ಅದಕ್ಕೆ ಪೂರಕವಾಗಿ ಯಾವುದಾದರೂ ಶಾಸ್ತ್ರ ಪುರಾಣಗಳ ಶ್ಲೋಕಗಳನ್ನು ಹೆಕ್ಕಿ ತೆಗೆದು ಸಂದರ್ಭಾನುಸಾರ ಅವುಗಳ ಆಧಾರದ ಮೇಲೆ ವಾದಿಸುವುದು. ಹಿಂದೆ ನಮ್ಮಲ್ಲಿ ಒಂದು ದೊಡ್ಡಮಟ್ಟದ ಒಂದು ಜ್ಞಾನಪರಂಪರೆ ಇತ್ತು ಎಂಬುದನ್ನು ನಾವು ಒಪ್ಪಿಕೊಳ್ಳುವುದು ತಪ್ಪಲ್ಲ.ಅದರ ಬಗ್ಗೆ ಹೆಮ್ಮೆಪಡುವುದೂ ತಪ್ಪಲ್ಲ. ಆದರೆ ಎಲ್ಲದಕ್ಕೂ ಅಲ್ಲಿಯೇ ಉತ್ತರವಿತ್ತು ಎಂದು ಸಾಧಿಸಲು ಹೋಗುವುದು ಮಾತ್ರ ಅವಿವೇಕದ ಹಠಮಾರಿತನವಾಗುತ್ತದೆ. ಹೀಗೆ ಸಾಧಿಸಹೊರಡುವವರು ಸಮಾಜವನ್ನು ಹಿಮ್ಮುಖಚಲನೆಗೆ ತಳ್ಳಬಲ್ಲರಲ್ಲದೆ ಇನ್ನೇನನ್ನೂ ಮಾಡಲಾರರು. ಅವರು ಸಂದರ್ಭದಲ್ಲಿ ಸುಮ್ಮನಿರುತ್ತಾರೆಯೇ? ಖಂಡಿತಾ ಇಲ್ಲ.

ಸುಮಾರು ಎಂಟುಹತ್ತು ದಿನಗಳು ಆಗಿರಬಹುದು. ನನಗೊಂದು ಸಂದೇಶ ಬಂತು. ಅದರ ಜೊತೆಗೆ ಒಂದು ವಿಡಿಯೋ ತುಣುಕು ಕೂಡ. ಅದರ ಪ್ರಕಾರ ಸಾವಿರಾರು ವರ್ಷಗಳ ಹಿಂದೆಯೇ ಶಿವಪುರಾಣದಲ್ಲಿ `ಕರೋನ ರಕ್ಷಾ ಕವಚಬರೆದಿರುವ ಇತಿಹಾಸವಿದೆಯಂತೆ (ಇವರ ದೃಷ್ಟಿಯಲ್ಲಿ `ಇತಿಹಾಸಅಂದರೇನೋ ಗೊತ್ತಿಲ್ಲ). ದೇವನಾಗಿರಿ ಲಿಪಿಯಲ್ಲಿ ಅದು ಇರುವುದರಿಂದ ಉಚ್ಛರಿಸಲು ಕಷ್ಟವಾಗುವುದರಿಂದ ಜನಸಾಮಾನ್ಯರು ಬಳಸಲು ಅನುಕೂಲವಾಗುವಂತೆ ಒಂದು ಆಡಿಯೋ ಕಳಿಸುತ್ತಿದ್ದೇವೆ ಬಳಸಿಕೊಳ್ಳಿ. ಎಂಬ ವಿನಂತಿಆದರೆ ಅನೇಕ ಸಂಸ್ಕೃತ ವಿದ್ವಾಂಸರ ಪ್ರಕಾರ ಇದು ಶಿವಪುರಾಣದಲ್ಲಿ ಇಲ್ಲವೇ ಇಲ್ಲ. ಸಂದರ್ಭಾನುಸಾರ ಯಾರೋ ಈಗ ರಚನೆಮಾಡಿರಬಹುದು ಎಂಬುದು ಅವರ ಅಭಿಮತ. ನಮ್ಮ ಪುರಾಣಗಳ ಸಂಖ್ಯೆ ಎಷ್ಟು ಎಂಬುದೇ ಇನ್ನೂ ಸಂಖ್ಯಾ ನಿರ್ಣಯವಾಗಿಲ್ಲ. ಹದಿನೆಂಟು ಪುರಾಣಗಳು ಮತ್ತು ಹದಿನೆಂಟು ಉಪಪುರಾಣಗಳು ಎಂದು ಒಂದು ಅಂದಾಜಿದೆಯಾದರೂ ಆಗ್ಗೆ ಸಾಕಷ್ಟು ವಾದವಿವಾಧಗಳಿವೆ. ಹೀಗಿರುವಾಗ ಇಂತಹ ಶ್ಲೋಕಗಳನ್ನು ಸಂಸ್ಕೃತ ಬರುವ ಯಾರೇ ಆದರೂ ಮಾಡಿ ಚಲಾವಣೆಗೆ ಬಿಡಬಹುದು. ಅದಕ್ಕೆ ಶಿವಪುರಾಣವೇ ಆಗಬೇಕಿಲ್ಲ. ಯಾವುದೋ ಒಂದು ಹೇಳಿದರೂ ಅವರನ್ನು ಯಾರೂ ಏನೂ ಮಾಡುವಂತಿಲ್ಲ

ಹೀಗೆ ಎಲ್ಲದಕ್ಕೂ ನಮ್ಮ ಪ್ರಾಚೀನರಲ್ಲಿಯೇ ಉತ್ತರವಿತ್ತು ಎಂದು ಯಾವಾಗಲೂ ನೆಲಕೆದರುವಂಥ ಚಾಳಿ ನಮ್ಮಲ್ಲಿ ವೈದಿಕರಲ್ಲಿ ಹೆಚ್ಚು. ಆದರೆ ಚಾಳಿ ಶರಣರ ಪರಂಪರೆಯ ವಾರಸುದಾರರೆಂದು ಹೇಳಿಕೊಳ್ಳುವವರಲ್ಲಿಯೂ ಶುರುವಾಗಿರುವಂತೆ ತೋರುತ್ತದೆ. ಇಲ್ಲದೆ ಹೋಗಿದ್ದರೆ ಇದುವರೆಗೂ ಯಾವ ಸಂಶೋಧಕರ ಕೈಗೂ ಸಿಗದ `ಅಲ್ಲಮನ ವಚನವೊಂದು (?) ಸಂದರ್ಭದಲ್ಲಿ ಶಿವಪುರಾಣ ಸಂದೇಶದಂತೆಯೇ ಹರಿದಾಡುತ್ತಿರಲಿಲ್ಲ. ಅಲ್ಲಮನ ಅಗೋಚರ ವಚನವು ವಚನ ಸಾಹಿತ್ಯ ಕನ್ನಡನಾಡಿನಿಂದ ಆಚೆಗೆ ಹೋಗುವಲ್ಲಿ ಬಹುದೊಡ್ಡ ಕೆಲಸವನ್ನು ಮಾಡಿದ ಬಸವ ಸಮಿತಿಯ ಮುಖ್ಯಸ್ಥ, ಅರವಿಂದ ಜತ್ತಿಯವರ ಟ್ವಿಟರ್ ಖಾತೆಯಲ್ಲಿಯೇ ಪ್ರಕಟವಾಯಿತು ಎನ್ನುವುದು ಬಹಳ ವಿಶೇಷ. ಪ್ರಕರಣಗಳ ಹಾಗೆಯೇ ಲೇಖನದ ಆರಂಭದಲ್ಲಿಯೇ ಬಂದ ಗೋಮೂತ್ರ ಮತ್ತು ಅರಿಶಿಣ ನೀರಿನ ಸಂದೇಶವನ್ನೂ ಹಿನ್ನಲೆಯಲ್ಲಿ ನಾವು ನೋಡಬಹುದು.

ಇವುಗಳ ಜೊತೆಗೆ ನಮ್ಮಲ್ಲಿ ಹಿಂದೆ ಆಯುರ್ವೇದದ ಹೆಸರಿನಲ್ಲಿ, ಮನೆವೈದ್ಯದ ಹೆಸರಿನಲ್ಲಿ ಹರಿದಾಡಿದ ಸಂದೇಶಗಳು ಒಂದಲ್ಲ ಎರಡಲ್ಲ. ಒಂದು ಸಂದೇಶದಲ್ಲಿ `ಬೆಳ್ಳುಳ್ಳಿ ನೀರು ಕುಡಿದು ಅದರಿಂದ ಬಾಯಿಮುಕ್ಕಳಿಸಿದರೆ ಕೊರೊನಾ ಬರಲ್ಲಅಂತ ಇದ್ದರೆ ಇನ್ನೊಂದರಲ್ಲಿ `ಚಹ ಕುಡಿದರೆ ಕೊರೊನಾ ಬರುವುದಿಲ್ಲಎಂದು ಇರುತ್ತಿತ್ತು. ಮತ್ತೊಂದರಲ್ಲಿ ಸರಾಯಿಯನ್ನು ಕುಡಿದರೆ ಕೊರೋನಾ ಬರುವುದಿಲ್ಲ ಎಂದು ಇದ್ದರೆ ಮುಗುದೊಂದರಲ್ಲಿ ಸೊಳ್ಳೆಕಚ್ಚುವಿಕೆಯಿಂದ ಕೊರೊನಾ ಬರುತ್ತದೆ ಎಂದಿರುತ್ತಿತ್ತು. `ಕೋಳಿ ತಿನ್ನುವುದರಿಂದ ಬರುತ್ತದೆಎಂಬ ಸಂದೇಶದ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಹೆಸರಿನಲ್ಲಿಯೇ `ಬೇಕರಿ ಐಟಂ ಐಸ್ ಕ್ರೀಮ್ ಅವೈಡ್ ಮಾಡಿ ಅವುಗಳಿಂದ ಕೊರೊನಾ ಬರುವ ಸಂಭವ ಹೆಚ್ಚು ಎನ್ನುವ ಸಂದೇಶವೂ ಬಂತು! ಇಷ್ಟೇ ಏಕೆ ಕೊರೋನಗೆ ಭಾರತದಲ್ಲಿ 27 ವರ್ಷಗಳ ಹಿಂದೆಯೇ ಔಷಧಿ ಕಂಡುಹಿಡಿಯಾಗಿದೆ ಎಂಬ ಸಂದೇಶವೂ ಬಂತು! `ಕೂಸು ಹುಟ್ಟುವ ಮೊದಲೆ ಕುಲಾವಿ ಹೊಲಿಸಿಟ್ಟರುಅನ್ನುವ ಹಾಗೆ!! ತಾವು ಸಂದೇಶಗಳಲ್ಲಿನ ಅಂಶವನ್ನು ಸ್ವತಃ ಅನುಸರಿಸದಿದ್ದರೂ ಜನ ಇವನ್ನು ಸುಮ್ಮನೆ ಕುರುಡಾಗಿ ತಮಗೆ ಗೊತ್ತಿರುವ ಗುಂಪುಗಳಿಗೆ ತಳ್ಳುತ್ತಾ ಹೋದರು. ಸಮಾಧಾನದ ಸಂಗತಿ ಎಂದರೆಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ಬರಲ್ಲಎಂದು ನಟಿ ಶ್ರೀರೆಡ್ಡಿ ಮಾಡಿದ ಟ್ವೀಟ್ ಇವರ ಕೈಗೆ ಸಿಗದೇ ಇದ್ದದ್ದು!! 

ವಿಭಾಗದಲ್ಲಿ ನಮೂದಿಸಬಹುದಾದಿ ಇನ್ನೊಂದು ಮುಖ್ಯವಾದ ಸಂದೇಶವೆಂದರೆ ಅದು ಪ್ರಧಾನಮಂತ್ರಿಯವರು ದೇಶವಾಸಿಗಳಿಗೆ .5 ರಂದು ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಮನೆಗಳ ವಿದ್ಯುದ್ದೀಪಗಳನ್ನು ಕೆಡಿಸಿ,ಕ್ಯಾಂಡಲ್, ಟಾರ್ಚ್, ಮೊಬೈಲ್ ಫ್ಲ್ಯಾಷ್ ಇತ್ಯಾದಿ ಹಚ್ಚಲು ನೀಡಿದ ಕರೆಯ ಹಿನ್ನಲೆಯಲ್ಲಿ ಸೃಷ್ಟಿಯಾದ ಒಂದು `ಅಜ್ಞಾನವಿಜ್ಞಾನಸಂದೇಶ. ಇದನ್ನು ನೆನಪಿಡಲು ನೀವು `ಮೇಣದಬತ್ತಿ ಸಂದೇಶಎಂದೂ ಬೇಕಾದರೆ ಕರೆದುಕೊಳ್ಳಬಹುದು ಸಂದೇಶದದಲ್ಲಿ  ಒಂದು ಮೇಣದಬತ್ತಿ, ಒಂದು ಮೊಬೈಲ್ ಫ್ಲಾಷ್, ಒಂದು ದೀಪ ಎಷ್ಟು ಶಾಖ ನೀಡುತ್ತವೆ. ದೇಶದಲ್ಲಿ ಒಟ್ಟು ಇರುವ ಜನರೆಷ್ಟು ಅವರಲ್ಲಿ ಎಷ್ಟುಜನ ಪ್ರಧಾನಿಗಳ ಮಾತನ್ನು ನಡೆಸಿದರೆ ಎಷ್ಟು ಶಾಖ ಬಿಡುಗಡೆಯಾಗುತ್ತದೆ ಎಂಬ ಲೆಕ್ಕಾಚಾರ ಮಾಡಿ, ಕಾರ್ಯದಿಂದ ಉತ್ಪನ್ನವಾಗುವ ದೊಡ್ಡ ಮಟ್ಟದ ಶಾಖವೊಂದು  ಹೇಗೆ ಕೊರೊನಾ ವೈರಾಣು ಇನ್ನಿಲ್ಲದಂತೆ ಮಾಡುತ್ತದೆ ಎಂದು ಜನತಲೆತೂಗುವಂತೆ ಹೇಳಿ ಅವರನ್ನು ಯಾಮಾರಿಸಲಾಗಿತ್ತು.

ಸಂದೇಶದಲ್ಲಿ `ಕೊರೊನಾ ವೈರಾಣು ಯಾವ ದಿನಾಂಕದಂದು ಸಾಯುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಸಂದೇಶ ನನಗೆ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ಅನೇಕಕಡೆಗಳಿಂದ ಬಂದಿತ್ತು. ಇಂಗ್ಲಿಷ್ ಸಂದೇಶಗಳಲ್ಲಿ ವೈರಾಣುವಿನ ಮರಣ ದಿನಾಂಕವನ್ನು .5 ಎಂದು ನಿಗಧಿಪಡಿಸಿದ್ದರೆ ಕನ್ನಡ ಸಂದೇಶಗಳಲ್ಲಿ ಅದನ್ನು .7 ಎಂದು ನಿಗಧಿಪಡಿಸಲಾಗಿತ್ತು. ಆದರೆ ಲೇಖನ ಬರೆಯುವ ವೇಳೆಗೆ ಎರಡೂ ದಿನಾಂಕಗಳು ದಾಟಿಹೋಗಿವೆ ಮತ್ತು ವೈರಾಣು ಇನ್ನೂ ನಮ್ಮಲ್ಲಿ ಹಬ್ಬುತ್ತಲೇ ಇದೆ. ಇದನ್ನು `ಅಜ್ಞಾನವಿಜ್ಞಾನಸಂದೇಶ ಎನ್ನಲಿಕ್ಕೆ ಇದಕ್ಕೆ ಬೇರೆ ಏನೂ ಸಾಕ್ಷಿ ಬೇಡವೇನೋ. ಕನ್ನಡ ಇಂಗ್ಲಿಷ್ ಎರಡೂ ಸಂದೇಶಗಳಲ್ಲಿ ಸಮಾನವಾಗಿದ್ದ ಒಂದು ಅಂಶವೆಂದರೆ ಇದು ನಮ್ಮ ಪ್ರಧಾನಿಯವರ `ಮಾಸ್ಟರ್ ಸ್ಟ್ರೋಕ್ಎಂಬ ಹೊಗಳುಮಾತು. ಪ್ರಧಾನಿಗಳನ್ನು ಹೊಗಳುವುದಕ್ಕೆ ವಿಜ್ಞಾನವನ್ನು ಅಜ್ಞಾನಮಾಡುವ ಅವಶ್ಯಕತೆ ಇರಲಾರದು. ಇಂತಹ ಇನ್ನೂ ಹಲವಾರು ಸಂದೇಶಗಳು ಹರಿದಾಡಿದವಾದರೂ ಅವನ್ನೆಲ್ಲವನ್ನೂ ಚರ್ಚಿಸಲು ಇಲ್ಲಿ ಆಗುತ್ತಿಲ್ಲವಾದ್ದರಿಂದ ಕೈಬಿಡಲಾಗಿದೆ.
ಜನಾಂಗೀಯ ದ್ವೇಷ ಹರಡುವ ಸಂದೇಶಗಳು
ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಕೂಡಿಬಾಳುವಿಕೆ ಎಂಬುದು ಒಂದು ರಾಷ್ಟ್ರೀಯ ಮೌಲ್ಯ. ದೇಶದ ಅಸ್ತಿತ್ವವೇ ಕೂಡುಬಾಳುವಿಕೆಯ ಮೇಲೆ ನಿಂತಿರುತ್ತದೆ. ಇದನ್ನು ಹಾಳುಗೆಡವುವಂಥ ದುಷ್ಟಪ್ರಯತ್ನಗಳು ನಮ್ಮಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅಂತಹ ದುಷ್ಟಶಕ್ತಿಗಳಿಗೆ ಕೂಡ ಕೊರಾನಾ ಸಂದರ್ಭ ವರದಾನವಾಯಿತು. ಅವು ಕೂಡ ತಮ್ಮ ಕಾರ್ಯವನ್ನು ಚುರುಕುಗೊಳಿಸಿದವು. ಒಂದು ಜನಾಂಗದ ಮೇಲೆ ಇನ್ನೊಂದು ಜನಾಂಗಕ್ಕೆ ದ್ವೇಷಬರುವಂತೆ ಮಾಡುವ ಸಂದೇಶಗಳನ್ನು ಅವು ಬಿತ್ತರಿಸತೊಡಗಿದವು. ಇವುಗಳಲ್ಲಿ ಮುಖ್ಯವಾಗಿ ಮತ್ತು ಮೊದಲ ಆದ್ಯತೆಯಾಗಿ ವಿಶ್ಲೇಷಿಸಬೇಕಾದದ್ದು ಬಹಳ ವೈರಲ್ ಆದ ಎರಡು ವಿಡಿಯೋ ತುಣುಕುಗಳ ಸಂದೇಶಗಳನ್ನು. ಅವುಗಳಲ್ಲಿ ಮೊದಲನೆಯದು `ಕೊರೊನಾ ವೈರಸ್ ಪೀಡಿತ ಹಣ್ಣಿನ ವ್ಯಾಪಾರಿಯೊಬ್ಬ ಇತರರಿಗೆ ವೈರಸ್ ತಗಲಿಸಲೆಂದು ತಾನು ಮಾರುವ ಹಣ್ಣುಗಳಿಗೆ ತನ್ನ ಎಂಜಲನ್ನು ಸವರಿ ಸವರಿ ಮಾರುತ್ತಿದ್ದಾನೆಎಂಬುದನ್ನು ತೋರಿಸುವ ಒಂದು ವಿಡಿಯೋ ತುಣುಕು ವಿಡಿಯೋ ತುಣುಕು ನೋಡಿ ಜನ ಎಷ್ಟು ಮನಸ್ಸು ಕೆಡಿಸಿಕೊಂಡರೆಂದರೆ ಹಣ್ಣಿನ ವ್ಯಾಪಾರಿ ಪ್ರತಿನಿಧಿಸುವ ಜನಾಂಗದ ಯಾವ ವ್ಯಾಪಾರಿಯ ಹತ್ತಿರವೂ ಹಣ್ಣು, ತರಕಾರಿ ಏನನ್ನೂ ಖರೀದಿಸಬಾರದೆಂದು ಕೆಲವು ಕೋಮುಪಿತ್ತದ ಹುಡುಗರು ತಮ್ಮ ತಮ್ಮ ಜನಾಂಗಗಳಿಗೆ ಸಂದೇಶ ಕಳಿಸತೊಡಗಿದರು. ಕೆಲವು ಊರುಗಳ ದ್ವಾರಗಳಲ್ಲಿ `ಇಂತಹ ಜನಾಂಗದ ವ್ಯಾಪಾರಿಗಳಿಗೆ ಊರೊಳಗೆ ಪ್ರವೇಶವಿಲ್ಲಎಂಬ ಕಾನೂನು ವಿರೋಧಿ ಸೂಚನಾ ಫಲಕಗಳು ನೇತಾಡತೊಡಗಿದವು! ವಾಸ್ತವದಲ್ಲಿ ವಿಡಿಯೋ ಮಧ್ಯಪ್ರದೇಶದ್ದು, ಕಳೆದ ಫೆಬ್ರವರಿಯಲ್ಲಿ ಚಿತ್ರೀಕರಣಗೊಂಡಿರುವಂಥದ್ದು, ಕೋಮುದ್ವೇಷ ಉದ್ರಿಕ್ತತೆಗೆ ಅದನ್ನು ಬಳಸಿಕೊಳ್ಳಲಾಗಿತ್ತು. ಸತ್ಯಾಂಶ ಎಂದರೆ ಹಣ್ಣಿನ ವ್ಯಾಪಾರಿಗೆ ಕೊರೊನ ಸೋಂಕು ತಗಲಿದ್ದಿಲ್ಲ ಎಂಬುದು.

ಇದೇ ರೀತಿ ನಿಜಾಮುದ್ಧೀನ್ ದರ್ಗಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಕೊರೊನಾ ಹರಡುವ ಉದ್ದೇಶದಿಂದ ಊಟದ ಪಾರ್ಸಲ್ಲಿನಲ್ಲಿ ಉಗುಳುವ ದೃಶ್ಯವುಳ್ಳ ವಿಡಿಯೋ ತುಣುಕೊಂದು ಎಲ್ಲೆಡೆ ಹರಿದಾಡಿತು. ಹಾಗೆಯೇ ಒಂದಿಷ್ಟು ಜನ ಸಾಮೂಹಿಕವಾಗಿ ಸೀನುವ ದೃಶ್ಯದ ವಿಡಿಯೋ ಕೂಡಆದರೆ ಊಟದಲ್ಲಿ ಉಗುಳುವ ದೃಶ್ಯದ ವಿಡಿಯೋ ಹಳೆಯ ವಿಡಿಯೋ ಆಗಿದ್ದು ವೈರಾಣುವಿನ ಸುದ್ಧಿಯೇ ಇಲ್ಲದಾಗ ಅಂದರೆ 2019 ಏಪ್ರಿಲ್ಲಲ್ಲಿಯೇ ಯೂಟ್ಯೂಬಲ್ಲಿ ಪ್ರಕಟಗೊಂಡಿತ್ತು ಎಂಬುದನ್ನು ಪತ್ತೆಹಚ್ಚಲಾಯಿತು. ಇನ್ನು ಸೀನುವ ದೃಶ್ಯವಿರುವ ವಿಡಿಯೋ ನಮ್ಮಲ್ಲಿಯದಲ್ಲ; ಅದು ಪಾಕಿಸ್ತಾನದ ಮೂಲದ್ದು ಮತ್ತು ಅದು ಸೀನುವಂಥದ್ದಲ್ಲ;. ಒಂದು ಸೂಫಿ ಆಚರಣೆ ಎನ್ನುವುದೂ ದೃಢಪಟ್ಟಿತು. ವಿಡಿಯೋಗಳಲ್ಲದೆ ಅನೇಕ ಸಂದೇಶಗಳೂ ಇಂತಹ ಉದ್ದೇಶಕ್ಕಾಗಿ ಹರಿಬಿಡಲ್ಪಟ್ಟವು. ಎಂದೋ ಎಲ್ಲಿಯೋ ಚಿತ್ರೀಕರಣಗೊಂಡ ಹಳೆಯ ವಿಡಿಯೋ ತುಣುಕಗಳನ್ನು, ಸಂದೇಶಗಳನ್ನು ಸಂದರ್ಭಕ್ಕೆ ಜೋಡಿಸಿ ಜನರ ಮನಸ್ಸಿನಲ್ಲಿ ದ್ವೇಷಭಾವನೆಯನ್ನು ಬಿತ್ತುವ ಇಂತಹವರು ನೀಚರಲ್ಲದೆ ಇನ್ನೇನಾಗಿರಲು ಸಾಧ್ಯ?
ಹಣಕಾಸು ದುರುಪಯೋಗ ಮತ್ತು ಇತರೆ ಸಂದೇಶಗಳು
ವಿಭಾಗದಲ್ಲಿ ಮುಖ್ಯವಾಗಿ ಪ್ರಧಾನಮಂತ್ರಿಗಳು ಕೊರೊನಾ ವಿರುದ್ಧದ ದೇಶದ ಹೋರಾಟದಲ್ಲಿ ಅಗತ್ಯ ಬೀಳುವ ಖರ್ಚು ನಿರ್ವಹಣೆಗಾಗಿ ದೇಶವಾಸಿಗಳಿಗೆ ಉದಾರ ಸಹಾಯ ಹಸ್ತ ಚಾಚಲು ಮನವಿ ಮಾಡಿಕೊಂಡು ಅವರು ಅದಕ್ಕಾಗಿ ಸ್ಥಾಪಿಸಿದ ಪಿ.ಎಂ. ಕೇರ್ಸ್ (PM CARES) ನಿಧಿಯ ಗುರುತು ಸಂಖ್ಯೆಗಳನ್ನು ನಕಲಿಮಾಡಿ ಹಂಚಿ ಹಣ ಅಲ್ಲಿಗೆ ಹೋಗದೆ ಬೇರೆಕಡೆಗೆ ಹೋಗಲು ಪ್ರಯತ್ನಿಸಿದ ಸಂದೇಶಗಳು ಸೇರುತ್ತವೆದೇಶದ ಬಡಬಗ್ಗರು ಅನ್ನಕ್ಕಾಗಿ ಆಹಾಕಾರವುಂಟಾಗಿ ಸಂಕಟದಿಂದ ನರಳುತ್ತಿರುವ ಸಂದರ್ಭದಲ್ಲಿಯೂ ಕೆಲವರದ್ದು ದುಡ್ಡುಮಾಡುವ ದಂಧೆ. ಒಂದು ಸಾರೆ ದುಡ್ಡುಮಾಡುವ ದಂಧೆಗೆ ಇಳಿದರೆ ಅದಕ್ಕೆ ಯಾವ ಸಂಬಂಧ ಸಂಕಟಗಳೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಇಂತಹ ಪ್ರಕರಣಗಳು ಸಾಕ್ಷಿ. ಉರಿಯುವ ಮನೆಯಲ್ಲಿ ಗಳ ಹಿರಿಯುವುದು ಅಂತಾರಲ್ಲ ಇದಕ್ಕೆ ಇರಬಹುದು. ಇಲ್ಲಿನ ಕೆಲವು ಸಂದೇಶಗಳನ್ನು ಗಮನಿಸಿ. ಪ್ರಧಾನಿಗಳ ನಿಧಿಗೆ ಹೋಗಬೇಕಾದ ಹಣದ ಕಾಲುವೆಯನ್ನು ದಿಕ್ಕುತಪ್ಪಿಸಲು ಇವರು ಮಾಡಿದ ವಂಚನೆ ಮತ್ತು ವಂಚನೆಯನ್ನು ಭೇದಿಸಿ ಅದನ್ನುಸರಿದಾರಿಗೆ ತರಲು ಮಾಡಿದ ಪ್ರಯತ್ನ ಎರಡೂ ಅರಿವಿಗೆ ಬರುತ್ತವೆ.

ವಿಭಾಗದಲ್ಲಿ ಗಮನಿಸಬಹುದಾದ ಮತ್ತಿತಯರ ಸುಳ್ಳುಸುದ್ಧಿಗಳೆಂದರೆ ಪ್ರಧಾನಿಯವರು ಘೋಷಣೆ ಮಾಡಿದ ಲಾಕ್ಡೌನ್ ಸುತ್ತಮುತ್ತ ಹಬ್ಬಿದ ಸುಳ್ಳು ಸುದ್ಧಿಗಳು, ಮತ್ತು ಕೇಂದ್ರ ಸರ್ಕಾರ ಪ್ರಜೆಗಳ ಟಿಲಿಫೋನ್, ಮೆಸೇಜ್ ಇತ್ಯಾದಿಗಳ ಮೇಲ್ವಿಚಾರಣೆ ಮಾಡುತ್ತಿದೆ ಎಂಬ ಸುದ್ಧಿಗಳು. ಲಾಕ್ಡೌನ್ ಸುದ್ಧಿಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಸಂದೇಶಗಳಿದ್ದವು. ಒಂದು ಅವರು ಹೇಳಿದ್ದನ್ನು ತಿರುಚಿ ತಪ್ಪು ಅರ್ಥ ಬರುವಂತೆ ಮಾಡಿದ ಸಂದೇಶಗಳು. ಇನ್ನೊಂದು ಅವರು ಹೇಳದೇ ಇರುವುದನ್ನೂ ಹೇಳಿದ್ದಾರೆ ಎಂದು ತಾವೇ ಕೃತಕವಾಗಿ ಸೃಷ್ಟಿಸಿ ಹರಿಬಿಟ್ಟ ಸಂದೇಶಗಳು. ಇವು ಲಾಕ್ಡೌನ್ ವಿಸ್ತರಣೆ, ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ, ನೌಕರರ ವೇತನ ಕಡಿತಮಾಡುವುದು ಇತ್ಯಾದಿ ಸುದ್ಧಿಗಳನ್ನು ಒಳಗೊಂಡಿದ್ದವು. ವಾಸ್ತವದಲ್ಲಿ ಇವೆಲ್ಲವೂ ಸುಳ್ಳುಸುದ್ಧಿಗಳಾಗಿದ್ದವು. ಮುಖ್ಯವಾಗಿ ಜನರಲ್ಲಿ ಗೊಂದಲ ಸೃಷ್ಟಿಸಿ ಆಡಳಿತದ ಹಳಿತಪ್ಪಿಸುವುದು ಇಂತಹ ಸಂದೇಶಗಳ ಗುರಿಯಾಗಿತ್ತು.

ಇನ್ನು ಕೇಂದ್ರ ಸರ್ಕಾರ ದೇಶವಾಸಿಗಳ ಟಿಲಿಫೋನ್ ಎಸ್.ಎಂ.ಎಸ್. ವಾಟ್ಸ್ಪ್ ಮ್ಯಾಸೇಜ್ಗಳನ್ನು ಮೇಲುಸ್ತುವಾರಿ ಮಾಡುತ್ತಿದೆ ಎನ್ನುವುದನ್ನು ಸಾರಲು ಮುಖ್ಯವಾಗಿ ಎರಡು ಸಂದೇಶಗಳು ತೀವ್ರಗತಿಯಲ್ಲಿ ಹಂಚಿಕೆಯಾದವು. ಅವುಗಳಲ್ಲಿ ಒಂದು ಕಾಲ್ ರಿಕಾರ್ಡಿಂಗ್, ಫೇಸ್ಬುಕ್ ಟ್ವಿಟರ್ ಖಾತೆಗಳ ಮೇಲ್ವಿಚಾರಣೆ, ವಾಟ್ಸಪ್ ಸಂದೇಶಗಳ ಉಸ್ತುವಾರಿ ಏನೇನು ಮಾಡಲಾಗುತ್ತದೆ ಎಂದು ಹೇಳಿ ಸೈಬರ್ ಪೋಲೀಸರಿಸಿ `ಹುಷಾರಾಗಿರಿಎಂದು ಹೆದರಿಸಿತ್ತು. ಇನ್ನೊಂದು ವಿಶೇಷವಾಗಿ ವಾಟ್ಸಪ್ ಗುಂಪುಗಳಿಗಾಗಿಯೇ ರಚಿತವಾಗಿದ್ದು ಅದರಲ್ಲಿ ಟಿಕ್ ಮಾರ್ಕಿನ ವಿವರಣೆ ಇತ್ತು. ಅಂದರೆ ಒಂದು ಟಿಕ್ ಮಾರ್ಕ್ ಬಂದರೆ ಏನರ್ಥ, ಎರಡು ಟಿಕ್ ಮಾರ್ಕ್ ಬಂದರೆ ಏನರ್ಥ ಮೂರು ಬಂದರೆ ಏನರ್ಥ ಇತ್ಯಾದಿಗಳನ್ನು ವಿವರಿಸಲಾಗಿತ್ತು. ಯಾವ ಮಾರ್ಕ್ ಬಂದರೆ ನಿಮ್ಮ ಸಂದೇಶವನ್ನು ಸರ್ಕಾರ ನೋಡಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ವಿವರಿಸಲಾಗಿತ್ತುಇಂತಹುಗಳ ಮುಖ್ಯ ಉದ್ದೇಶ ಜನರಲ್ಲಿ ಅನಗತ್ಯ ಭಯ, ಆತಂಕ, ಖಾಸಗೀತನದ ನಷ್ಟದ ಅಸುರಕ್ಷತಾ ಭಾವ ಉಂಟಾಗುವಂತೆ ಮಾಡುವುದೇ ಆಗಿರುತ್ತದೆ. ಇವು ಕೂಡ ಬಹಳ ದೊಡ್ಡ ಮಟ್ಟದಲ್ಲಿ ವೈರಲ್ ಆದವು. ವಾಸ್ತವವಾಗಿ ಸರ್ಕಾರ ತಾನು ಕೆಲಸವನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುವುದರೊಂದಿಗೆ ಇವು ಸುಳ್ಳು ಸುದ್ಧಿಗಳು ಎಂಬುದು ಖಚಿತವಾಯಿತು.
ದುರ್ಜನರೊಡಗೂಡಿದ ಸಜ್ಜನರ ತಳ್ಳುಸೇವೆ
ಹೀಗೆ ಸಂಖ್ಯಾದೃಷ್ಟಿಯಿಂದ ದೊಡ್ಡದಾದ ಮತ್ತು ಪರಿಣಾಮಕಾರಿ ದೃಷ್ಟಿಯಿಂದ ಅಪಾಯಕಾರಿಯಾದ ರೀತಿಯ ಅಶುದ್ಧ ಸುದ್ಧಿಗಳನ್ನು ಹಂಚುವ ಕಾರ್ಯ ಯಾವ ಮಾಧ್ಯಮದಲ್ಲಿ ಹೆಚ್ಚಾಗಿ ನಡೆಯಿತು ಮತ್ತು ಅದರಲ್ಲಿ ಯಾರೆಲ್ಲ ಇದ್ದರು ಎಂಬುದನ್ನು ನೋಡೋಣ. ಇಂತಹ ಸುದ್ಧಿಗಳು ಮುದ್ರಣ ಮಾಧ್ಯಮದಲ್ಲಿ ಪ್ರಸಾರವಾಗುವುದು ಬಹಳ ಕಡಿಮೆ. ಇವುಗಳಿಗೆ ದೃಶ್ಯಮಾಧ್ಯಮಗಳಲ್ಲೂ ತಕ್ಕಮಟ್ಟಿನ ನಿಯಂತ್ರಣ ಇರುತ್ತದೆ ಎಂದು ನಾವು ನಿರೀಕ್ಷಿಸಬಹುದು. (`ಕೇಂದ್ರ ಗೃಹಮಂತ್ರಿಗಳಿಗೆ ಕೊರೊನಾಎಂಬ ಸುದ್ಧಿಯೊಂದು ಟಿ.ವಿ ವಾಹಿನಿಯೊಂದರಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರವಾಯಿತಾದರೂ.) ಆದರೆ ಇತ್ತೀಚಿನ ದಿನಮಾನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ಸಾಮಾಜಿಕ ಮಾಧ್ಯಮದಲ್ಲಿ ಇವುಗಳಿಗೆ ಇಂಥದ್ದೊಂದು ನಿರ್ಬಂಧವನ್ನು ನಿರೀಕ್ಷಿಸಲಾಗುವುದಿಲ್ಲ. ಸುದ್ಧಿಗಳು ವ್ಯಾಪಕವಾಗಿ ಹರಡಿದ್ದೇ ಸಾಮಾಜಿಕ ಮಾಧ್ಯಮದಲ್ಲಿ. ನಮ್ಮಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಪ್ರಸಾರ ಇರುವಂಥ ಮೂರು ಸಾಮಾಜಿಕ ಮಾಧ್ಯಮಗಳೆಂದರೆ ಟ್ವಿಟರ್, ಫೇಸ್ಬುಕ್ ಮತ್ತು ವಾಟ್ಸಪ್. ಇದರಲ್ಲಿ ಟ್ವಿಟರ್ ಖಾತೆಯನ್ನು ಹೆಚ್ಚು ಬಳಸುವವರು ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಕ್ಷೇತ್ರಗಳ `ಮೇಲ್ಮಟ್ಟ ಜನವರ್ಗ. ಪ್ರಧಾನಿ, ರಾಷ್ಟ್ರಪತಿ, ಚಲನಚಿತ್ರ ತಾರೆಯರು ವಿಜ್ಞಾನಿಗಳು ಹೀಗೆ. ಮಧ್ಯಮ ವರ್ಗವೂ ಸೇರಿದಂತೆ ಜನಸಾಮಾನ್ಯರು ಮಾಧ್ಯಮವನ್ನು ಬಳಸುವುದು ಬಹಳ ಕಡಿಮೆ. ಮಾಧ್ಯಮವನ್ನು ಬಳಸುವವರು ರೀತಿಯ ಸುದ್ಧಿ ಹಂಚಿಕೆಯ ವಿಷಯದಲ್ಲಿ ಬಹಳ ಜನ ಜವಾಬ್ದಾರಿಯುತ ಆಗಿರುವುದರಿಂದಲೋ ಅಥವಾ ನಿರಾಸಕ್ತರಾಗಿರುವುದರಿಂದಲೋ ಅಲ್ಲಿ ಕೆಡುಕಿನ ಸುದ್ಧಿಗಳು ಹರಡಿದ್ದು ಇಲ್ಲ ಎನ್ನುವಷ್ಟು ಕಡಿಮೆ. ಇವುಗಳು ವ್ಯಾಪಕವಾಗಿ ಹರಡಿದ್ದು ಫೇಸ್ಬುಕ್ ಮತ್ತು ವಾಟ್ಸಪ್ಗಳಲ್ಲಿಅದರಲ್ಲಿಯೂ ವಾಟ್ಸಪ್ ಅಂತೂ ಫೇಸ್ಬುಕ್ ಬಳಸದವರೂ ಅಂದರೆ ಸ್ಮಾರ್ಟ್ ಫೋನ್ ಇದ್ದವರೆಲ್ಲರೂ ಬಳಸುವಂಥದ್ದು. ಸುದ್ಧಿ ಹರಡುವಿಕೆಯಲ್ಲಿ ಬಹುಪಾಲು ಇದೇ ಮುಂಚೂಣಿಯಲ್ಲಿತ್ತು ಎಂಬುದನ್ನು ನಾವು ಗಮನಿಸಬೇಕು.

ಇದರಲ್ಲಿ ಏನೂ ಸಾಮಾಜಿಕ ಜವಾಬ್ದಾರಿ ಅರಿಯದ ಜನರು ಮಾತ್ರ ಇರಲಿಲ್ಲ. ಅವರ ಜೊತೆಗೆ ದೊಡ್ಡದೊಡ್ಡ ವಿದ್ಯಾವಂತರೂ ಇದ್ದರು ಎಂಬುದನ್ನು ನಾವು ಗಮನಿಸಬೇಕು. ಇವರೆಲ್ಲ ತಮಗೆ ಯಾವುದ್ಯಾವುದೋ ಮೂಲಗಳಿಂದ ಬರುವ ಇಂತಹ ಸುಳ್ಳು ಮತ್ತು ಜಳ್ಳು ಸುದ್ಧಿಗಳನ್ನು ಇವರು ಅವುಗಳ ಮೂಲಚೂಲಗಳನ್ನರಿಯದೆ, ಅವುಗಳು ಸಮಾಜದಲ್ಲಿ ಉಂಟುಮಾಡಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸದೆ ವಿವೇಚನಾರಹಿತರಾಗಿ ತಮಗೆ ಗೊತ್ತಿರುವ ಎಲ್ಲ ಗುಂಪುಗಳಿಗೆ ಹೀಗೆ ಜವಾಬ್ದಾರಿಹೀನರಾಗಿ ಮುಂತಳ್ಳುವ ಕೆಲಸ ಮಾಡಿದ್ದಾರೆ. ನಮ್ಮ ಪೌರಕಾರ್ಮಿಕರು ಹೆಚ್ಚು ಓದಿಕೊಂಡ ವಿದ್ಯಾವಂತರಲ್ಲ. ಅವರು ತಮ್ಮ ತಳ್ಳುಗಾಡಿಗಳನ್ನು ಬಳಸಿಕೊಂಡು ಊರ ಒಳಗಿನ ಕೊಳಕನ್ನು ಊರ ಹೊರಗೆ ಒಯ್ದು ಹಾಕುತ್ತಾರೆ. ಆದರೆ ಓದಿಕೊಂಡ ನಮ್ಮ ವಿದ್ಯಾವಂತರು ವಾಟ್ಸಪ್ ನಂತಹ ಮಾಧ್ಯಮಗಳನ್ನು ಸುಳ್ಳುಸುದ್ಧಿಗಳನ್ನು ಸಾಗಿಸುವ ಕಳ್ಳಗಾಡಿಗಳನ್ನಾಗಿ ಮಾಡಿಕೊಂಡು ಊರಹೊರಗಿನ ಕೊಳಕನ್ನು ತಂದು ಊರ ಒಳಗೆ ಹಾಕುವ ಕೆಲಸ ಮಾಡುತ್ತಾರೆ! ಇವರಲ್ಲಿ ಅನೇಕರು ಇದನ್ನು `ದೇಶಸೇವೆಅಥವಾ `ಸಮಾಜಸೇವೆಎಂದೇ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಭಕ್ತರು ಕಣ್ಣುಮುಚ್ಚಿಕೊಂಡು ಶ್ರದ್ಧೆಯಿಂದ `ಪೂಜಾಸೇವೆ’ `ಉರುಳುಸೇವೆಇತ್ಯಾದಿಗಳನ್ನು ಮಾಡುತ್ತಾರಲ್ಲ ಅದರಂತೆಯೇ ಇವರದ್ದೂ ಒಂದು ರೀತಿ ಸಂದೇಶಗಳನ್ನು ತಮಗೆ ಗೊತ್ತಿರುವ ಎಲ್ಲ ಗುಂಪುಗಳಿಗೆ ಕಣ್ಮುಚ್ಚಿಕೊಂಡು ಮುಂತಳ್ಳುವ `ತಳ್ಳುಸೇವೆ’!!  

ಹಾಗೆ ನೋಡಿದರೆ ಸಮಯದಲ್ಲಿ ಇಂತಹ ಕೆಡುಕಿನ ಸುದ್ಧಿಗಳು ಮಾತ್ರ ಇರಲಿಲ್ಲ. ಇವುಗಳ ಜೊತೆಗೆ ನಮಗೆ ಆತ್ಮಸ್ಥೈರ್ಯ ತುಂಬುವ, ಧೈರ್ಯವನ್ನು ಹೇಳುವ, ಜಾತಿ ಜನಾಂಗಗಳ ಬೇಧಗಳನ್ನು ಮರೆತು ಒಂದಾಗುವ ಮಾನವೀಯ ಗುಣಗಳನ್ನು ಮರೆಯುವ ಮೂಲಕ ಆದರ್ಶವಾಗುವ ಕೆಲವು ಸುದ್ಧಿಗಳು ಅಲ್ಲಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದವು. ಒಂದು ಕೆಟ್ಟಸುದ್ಧಿಯನ್ನು ತಕ್ಷಣ ಪತ್ತೆಹಚ್ಚಿ ಅದನ್ನು ವೈರಲ್ ಮಾಡುವ ಕಿಡಿಗೇಡಿ ಮನಸ್ಸುಗಳಿಗೆ ಇಂತಹ ಒಳ್ಳೆಯ ಸುದ್ಧಿಗಳು ರುಚಿಸುವುದಾದರೂ ಹೇಗೆ? ಅದನ್ನು ಹಂಚಿಕೊಳ್ಳಬೇಕೆಂಬ ಮನಸ್ಸು ಬರುವುದಾದರೂ ಹೇಗೆ?
ಹಾನಿ ಮತ್ತು ಅನಾಹುತಗಳಿಗೆ ಯಾರು ಹೊಣೆ?
ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ಇಲ್ಲಿ ವೈರಲ್ ಆದ ಕಿಡಿಗೇಡಿ ಸುದ್ಧಿಗಳು ಮಾಡಿರುವ ಹಾನಿ ಮತ್ತು ಅನಾಹುತಗಳನ್ನು ನಾವು ಸುಲಭವಾಗಿ ಲೆಕ್ಕಹಾಕಲು ಸಾಧ್ಯವೇ?  ಇವೆಲ್ಲ ತಪ್ಪು ಅಥವಾ ಸುಳ್ಳು ಸುದ್ಧಿಗಳು ಎಂದು ಗೊತ್ತಾಗಿ ವ್ಯವಸ್ಥೆ ಅವುಗಳ ನಿಯಂತ್ರಣಕ್ಕೆ ಮುಂದಾಗುವ ವೇಳೆಗಾಗಲೇ ಅವು ಲಕ್ಷಾಂತರ ಜನರನ್ನು ತಲುಪಿ ಮಾಡಬಾರದ ಹಾನಿಯನ್ನು ಮಾಡಿಬಿಟ್ಟಿರುತ್ತಿದ್ದವುಅವು ಮಾಡಿರುವ ಹಾನಿ ಕೇವಲ ಭೌತಿಕ, ಆರ್ಥಿಕ, ಸಾಮಾಜಿಕ ಹೀಗೆ ಹಲವು ನೆಲೆಗಳಲ್ಲಿ ವಿಸ್ತರಿಸಲ್ಪಟ್ಟಿತು. ಇವು ಮಾಡಿದ ಹಾನಿಗಳಲ್ಲಿ ಬಹುದೊಡ್ಡ ಹಾನಿ ಎಂದರೆ ಭಾರತದ ಕೂಡಿಬಾಳುವಿಕೆಗೆ ಕೊಡಲಿಪೆಟ್ಟು ಕೊಟ್ಟದ್ದು. ಅಪರಿಚಿತರನ್ನು ಸದಾ ಸಂಶಯದಿಂದ ನೋಡುವಂತೆ ಮಾಡಿದ್ದು. ಹಿಂದೆ ನಮ್ಮಲ್ಲಿ ನಗರಗಳಲ್ಲಿ ಮಾತ್ರ ಇದ್ದ ಕಾಯಿಲೆ ಇಂದು ನಗರಗಳ ಜೊತೆಗೆ ಹಳ್ಳಿಗಳಿಗೂ ಹಬ್ಬುವಂತೆ ಮಾಡಿದ್ದು. ಅಪರಿಚಿತರನ್ನು ಅತಿಥಿಗಳೆಂದು ಸ್ವಾಗತಿಸಿ, ಸತ್ಕರಿಸುವ ನಮ್ಮ ಭವ್ಯ ಪರಂಪರೆಯೊಂದಕ್ಕೆ ತಿಲಾಂಜಲಿಯನ್ನಿತ್ತದ್ದು. ಆ ಮೂಲಕ ಜನರ ಮನಸುಗಳೆಲ್ಲವೂ ಎಂದೆಂದಿಗೂ ತಿರಸ್ಕಾರ, ಅಸೂಯೆ, ಹೊಟ್ಟೆಕಿಚ್ಚು ಮುಂತಾದ ನಕಾರಾತ್ಮಕ ಭಾವನೆಗಳ ಕೊಳಕುಹೊಂಡಗಳಾಗುವಂತೆ ಮಾಡಿದ್ದು! ಹೌದು, ನಾವು ಹಿಂದಿನ ಕಾಲದಂತೆ ಎಲ್ಲರನ್ನೂ ಯಾವಾಗಲೂ ನಂಬಲು ಆಗದಿರಬಹುದು. ಆ ಹಿನ್ನಲೆಯಲ್ಲಿ ಜಾಗೃತಿ ಎನ್ನುವುದು ಕಾಲದ ಅಗತ್ಯವೂ ಆಗಿರಬಹುದು. ಆದರೆ ಅದರ ಜೊತೆಗೆ ನಾವು ಇನ್ನೊಂದು ಮುಖ್ಯವಾದ ಸಂಗತಿಯನ್ನೂ ಗಮನಿಸಬೇಕು. ಜಾಗೃತಿ ಹೆಸರಿನಲ್ಲಿ ಸದಾ ನಮ್ಮೊಳಗೆ ಅಪರಿಚರನ್ನು ಕುರಿತು ನಕಾರಾತ್ಮಕ ಭಾವನೆಗಳು ಬೆಳೆಯತೊಡಗಿದರೆ ಅದು ಅಜಾಗರೂಕರಾಗಿರುವುದಕ್ಕಿಂತ ಹೆಚ್ಚು ಅಪಾಯಕರ! ಏಕೆಂದರೆ ನಾವು ಅಜಾಗರೂಕರಾದರೆ, ಎಚ್ಚರ ತಪ್ಪಿದರೆ ಎಂದೋ ಒಂದು ಸಲ ತೊಂದರೆಗೆ ಸಿಕ್ಕಿಹಾಕಿಕೊಂಡು ನರಳಬೇಕಾಗಬಹುದು ಆದರೆ ಈ ನಕಾರಾತ್ಮಕ ಭಾವನೆಗಳು ಬೆಳೆದುಬಿಟ್ಟರೆ ಎಲ್ಲ ಅಪರಿಚಿತರೂ ಅಪಾಯಕಾರಿಗಳಾಗಿ ಕಾಣತೊಡಗಿ ನಾವು ನಿತ್ಯನರಳಬೇಕಾಗುತ್ತದೆ!!

ವಿದ್ಯಮಾನ ಈಗ ಮಾಡಿರುವ ಹಾನಿ ದೊಡ್ಡದೇ ಆದರೂ ಮುಂದೆ ಮಾಡಬಹುದಾದ ಹಾನಿ ಇದಕ್ಕಿಂತ ದೊಡ್ಡದು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಸರ್ಕಾರ ತೆಗೆದುಕೊಳ್ಳುವ ನಿಯಂತ್ರಣ ಕ್ರಮಗಳಿಂದಲೇ ಇಂತಹ ಸುದ್ಧಿಗಳ ಹರಡುವಿಕೆ ತಡೆಯುವುದು ಕಷ್ಟ. ಲೇಖನದ ಆರಂಭದಲ್ಲಿಯೇ ಉಲ್ಲೇಖಿಸಿದ ಅಲ್ಲಮನ ವಚನದಲ್ಲಿ ಹೇಳಿದಂತೆ `ಹುಸಿಯನ್ನು ಬಿತ್ತಿಬೆಳೆಯುವ, ಕೊಯ್ದುಪೂಜಿಸುವ, ಅದರಿಂದ ತಾವೂ ಗಸಣಿಗೊಳಗಾಗಿ ಇತರರನ್ನೂ ಗಸಣಿಗೊಳಪಡಿಸುವ ದುಷ್ಟಕಾರ್ಯವನ್ನು ಎಲ್ಲರೂ ಬಿಡಬೇಕು. ವಿಶೇಷವಾಗಿ ನಮ್ಮ `ವಿದ್ಯಾವಂತಜನ!
*****
ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail.com
Monday, April 20, 2020