ಇಳಿಕೆ ಅಂಕ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ ?
ಕನ್ನಡದ ಹೆಸರಾಂತ ಗದ್ಯಬರೆಹಗಾರ ಪಿ ಲಂಕೇಶ್ ಅವರ ಪುಟ್ಟಕವಿತೆಯೊಂದರಲ್ಲಿ ʼಬಿಚ್ಚಲಿಕ್ಕೆಂದೇ ಉಟ್ಟ ಸೀರೆʼ ಎಂಬ ಸಾಲು ಬರುತ್ತದೆ. ಮೇಲ್ನೋಟಕ್ಕೆ ತುಸು ʻಅಶ್ಲೀಲʼ ಎಂದು ಹಲವರಿಗೆ ಅನ್ನಿಸಬಹುದಾದ ಈ ಕವಿತೆಯ ಸಾಲು, ʼಬಿಚ್ಚುವುದೇ ಉದ್ದೇಶವಾಗಿದ್ದರೆ ಉಟ್ಟುದ್ದಾದರೂ ಏಕೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುವುದು ತೀರಾ ಸಹಜ. ಆದರೆ ತುಸು ಗಂಭೀರವಾಗಿ ಆಲೋಚಿಸಲು ನಮಗೆ ಸಾಧ್ಯವಾಗುವುದಾದರೆ ಉಡುವುದಕ್ಕೂ ಒಂದು ಕಾರಣವಿರುತ್ತದೆ; ಹಾಗೆಯೇ ಬಿಚ್ಚುವುದಕ್ಕೂಒಂದು ಕಾರಣವಿರುತ್ತದೆ ಎಂಬ ತಿಳಿವಳಿಕೆಯನ್ನು ನೀಡಿ ಹಲವು ಆಯಾಮಗಳಲ್ಲಿ ನಾವು ಇದರ ಅರ್ಥವನ್ನು ವಿಸ್ತರಿಸಿಕೊಳ್ಳುವಂತೆ ಮಾಡುತ್ತದೆ. ಪ್ರತಿವಿಷಯದಲ್ಲಿ ಪ್ರತಿಪಾಠಕ್ಕೆ ಇಪ್ಪತ್ತೈದು ಅಂಕಗಳ ಪರೀಕ್ಷೆ ಮಾಡಬೇಕು ಎಂದು ಕೆಲಸ ಶುರುಮಾಡಿ ಅರ್ಧಂಬರ್ಧ ಕೆಲಸ ಆಗುತ್ತಿರುವಂತೆ ಈಗ ಆ ಅಂಕಗಳು ಇಪ್ಪತ್ತೈದರಿಂದ ಇಪ್ಪತ್ತಕ್ಕೆ ಇಳಿದವೆಂದು ಸ್ನೇಹಿತನೊಬ್ಬ ಹೇಳಿದಾಗ ಯಾಕೋ ಈ ಸಾಲು ನೆನಪಾಯಿತು.
ಸರ್ಕಾರಿ ಶಾಲೆಗಳಲ್ಲಿ
ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನೂ ಪಾಠಬೋಧನೆ ಹೇಗೆ ಮಾಡಬೇಕು, ಪರೀಕ್ಷೆಗಳನ್ನು ಎಷ್ಟು
ಮಾಡಬೇಕು ಎಷ್ಟು ಅಂಕಗಳಿಗೆ ಮಾಡಬೇಕು ಎಂಬುದನ್ನು ನಮಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳಲು ಆಗದೆ ಶಾಲಾ
ವಾತಾವರಣಗಳನ್ನು ಗೊಂದಲದ ಗೂಡಾಗಿ ಮಾಡಿಕೊಂಡಿದ್ದೇವೆ. ಪರೀಕ್ಷೆ ಹೇಗೆ ಇರಬೇಕು ಎಷ್ಟು ಅಂಕಗಳಿಗೆ ಇರಬೇಕು ಇತ್ಯಾದಿ
ಅಂಶಗಳು ಒಂದು ವರ್ಷ ಮೊದಲೇ ಚರ್ಚೆಗಳು ಆರಂಭವಾಗಿ ಆ ಕ್ಷೇತ್ರದ ಅನುಭವಿಗಳು, ಮಕ್ಕಳ ಮನಶ್ಯಾಸ್ತ್ರ
ಓದಿಕೊಂಡ ತಜ್ಞರು ಮುಂತಾದವರೊಡನೆ ಚರ್ಚಿಸಿ ಕನಿಷ್ಠಪಕ್ಷ ಶಾಲೆ ಪ್ರಾರಂಭವಾಗುವ ಒಂದೆರಡು ತಿಂಗಳಾದರೂ
ಮೊದಲು ಅಂತಿಮಗೊಳಿಸಿ ಅದನ್ನು ಶಿಕ್ಷಕರಿಗೆ ತಿಳಿಸಿ ಅವರ ಕೆಲಸವನ್ನು ಅವರು ಮಾಡಲು ಸ್ವಾತಂತ್ರ್ಯ
ಕೊಡುವುದು ಸರಿಯಾದ ಕ್ರಮ. ಆದರೆ ಅರ್ಧವಾರ್ಷಿಕ ರಜೆ ಬರುತ್ತಿದ್ದರೂ ನಾವು ಇನ್ನೂ ಮಕ್ಕಳ ಮೇಲೆ ʻಅಪಾಯಕಾರಿ ಪ್ರಯೋಗʼಗಳನ್ನು ನಡೆಸುತ್ತಲೇ ಇದ್ದೇವೆ.
ಮೊನ್ನೆ ನಾಗರಪಂಚಮಿ
ಅಂತ ಶಾಲೆಗೆ ರಜೆಯಿತ್ತು. ರಜೆ ಎಂದರೆ ಹಳೆಯ, ಕೆಲವು
ವೇಳೆ ಹರಿದ ಬಟ್ಟೆ ಹಾಕಿಕೊಂಡು ಹುಚ್ಚುಹುಚ್ಚರಂಗೆ ಅಡ್ಡಾಡೋದು ನನಗೆ ಬಹಳ ಖುಷಿ ಕೊಡುವ ಸಂಗತಿ. ಶೂಟು
ಬೂಟು ಹಾಕಿಕೊಂಡು ಗತ್ತಿನಿಂದ ಇರುವಾಗ ಇಲ್ಲದ ಸ್ವಾತಂತ್ರ್ಯ ಖುಷಿ ಆಗ ನನಗೆ ಸಿಗುತ್ತದೆ. ಅವತ್ತೂ ಹಿಂಗೆ ಹಳೇ ಬಟ್ಟೆ ಹಾಕ್ಕೊಂಡು ಸವದು ಹೋದ ಹವಾಯ್
ಚಪ್ಪಲಿ ಹಾಕಿಕೊಂಡು ತಿರುಗಾಡ್ತಾ ಒಂದು ಕ್ಯಾಂಟಿನಿನಲ್ಲಿ ಟೀ ಕುಡೀತಿದ್ದೆ. ಆ ಕ್ಯಾಂಟಿನಿನ ಪಕ್ಕದಲ್ಲಿಯೇ
ಒಂದು ಜೆರಾಕ್ಸ್ ಅಂಗಡಿ ಇತ್ತು. ಅಲ್ಲಿ ಯಾರೋ ಮೇಷ್ಟ್ರು ಎಂಥದೋ ಜೆರಾಕ್ಸ್ ಮಾಡ್ಲಿಕ್ಕೆ ಕೊಟ್ಟು
ಜೆರಾಕ್ಸ್ ಅಂಗಡಿಯವನ ಹತ್ರ ಮಾತಾಡ್ತಿದ್ದದ್ದು ಕೇಳಿ ಅತ್ತ ಕಿವಿಕೊಟ್ಟೆ. “ಸಾರ್ ಇವು ಒಷ್ಟೂ ಸೆಟ್
ಆದ್ರೆ ಇಗೊಂದಿಷ್ಟು ರಾತ್ರಿ ಒಂದಿಷ್ಟು ಮಾಡಿಡ್ತೀನಿ ನಾಳೆ ಬೆಳಿಗ್ಗೆ ಅತ್ವಾ ಸಂಜೆ ಬಂದು ತಕ್ಕಳ್ಳಿ”
ಎಂದು ಒಂದೆರಡು ಜೆರಾಕ್ಸಿಗೆ ಹಾಕಿ ನಿಂತ. ಆ ಮೇಷ್ಟ್ರು
ಆಯಿತು ಅಂತ ಅತ್ತ ಹೋದ. ಅಷ್ಟರಲ್ಲಿ “ಅರ್ಜೆಂಟ್ ಒಂದ್ ಆಧಾರ್ ಕಾರ್ಡ್ ಜೆರಾಕ್ಸ್ ಮಾಡ್ಕೊಡಿ”
ಎಂದು ಯಾವುದೋ ಒಬ್ಬ ರೈತ ಅಲ್ಲಿಗೆ ಬಂದ. ಈ ಜೆರಾಕ್ಸ್ ಅಂಗಡಿಯವನ ಮಿಷಿನ್ ಜೆರಾಕ್ಸ್ ಹೊಡಿದೇ
ಹೊಡಿತಿತ್ತು. ಅವನಿಗೂ ಕಾದು ಕಾದು ಸಾಕಾಗಿ ಹೋಯಿತೋ ಏನೋ. “ಬಹಳ ಹೊತ್ತಾಗುತ್ತಾ ಏನ್ ಅಷ್ಟೊಂದು
ಜೆರಾಕ್ಸ್ ಮಾಡ್ತೀರಿ. ಯಾರ್ದು ಮರಾಯ್ರೆ ಅದು” ಅಂತ ಸುಮ್ಮನೆ ಇರ್ಲಾರ್ದೆ ಕೇಳಿದ. ಅದಕ್ಕೆ ಆ ಜೆರಾಕ್ಸ್
ಅಂಗಡಿಯವನು, “ಏ ಅದ್ಯಾವುದೋ ಮೇಷ್ಟ್ರುದು ಕಣ್ರಿ. ಮೇ ಜೂನ್ ತಿಂಗ್ಳು ಬಂತು ಅಂದ್ರೆ ಹಗ್ಲೂ ರಾತ್ರಿ
ಮಾಡಿದ್ರು ಮುಗಿಯಂಗಿಲ್ಲ. ಈ ವರ್ಷ ಬ್ಯಾರೆ ಅದ್ಯಾವುದೋ ಎಲ್‌ಬಿಎ ಅಂತ ಮಾಡ್ಯಾರಂತ. ಜೂನ್‌ದಾಗ ಒಂದ್ಸಲ
ಎಲ್ಲಾ ಹುಡುಗ್ರಿಗೆ ಕೊಡಾಕ ಅಂತ ನೋಟ್ಸ್ ಸೆಟ್ ಜೆರಾಕ್ಸ್ ಮಾಡಿಸ್ಕೊಂಡು ಹೋಗಿದ್ರು. ಈಗ ಅದೇನ
ಎಲ್‌ಬಿಎ ಅಂತ ಏನ ಹೊಸದ ಬಂದತಂತ. ಮತ್ ಎರಡ್ನೇ ಸಲ ಬಂದಾರ. ಹುಡುಗ್ರ ಮನ್ಯಾಗ ಏನ್ ದುಡ್ ಕೊಟ್
ಕೊಟ್ ಸುಸ್ತಾಗದ ಸೈ” ಎಂದ. “ಇದ್ನೆಲ್ಲ ಮಾಡೋದಾದ್ರೆ ಸರ್ಕಾರ ಬುಕ್ ಯಾತುಕ್ ಕೊಡುತ್ತೋ ಏನ್
ಸುಡಗಾಡೋ” ಎಂದು ಎನ್ನುತ್ತಾ ಒಂದು ಹೊಸ ಎ ಫೋರ್ ಬಂಡಲ್ ಕವರ್ ಚರ್ ಅಂತ ಹರಿದು ದೆವ್ವನಂತ
ಜೆರಾಕ್ಸ್ ಮಿಷನ್‌ಗೆ ಆಹಾರವಾಗಿ ತುಂಬಿದ.
ಅವನು ಹೀಗೆ ಅಂದದ್ದೇ
ತಡ, ಆ ರೈತ, “ನಮ್ಮ ಮನ್ಯಾಗೂ ಎರಡು ಹುಡುಗ್ರು ಅದಾವ್ ಕಣ್ರಿ. ದಿನಾನೂ ಬಂದು ದುಡ್ ಕೇಳ್ತಾನೆ
ಇರ್ತಾವೆ. ಕೊಟ್ಟು ಕೊಟ್ಟು ಸಾಕಾಗಿ ಹೋಗೇತಿ. ಸರ್ಕಾರಿ ಶಾಲೆ ದುಡ್ ಖರ್ಚೇನೂ ಇರಲ್ಲ ಅಂತ ಕಳಿಸಿದ್ರೆ
ಇಲ್ಲೂ ಇದ್ದದ್ದೆ”. ಎಂದ. ಅದಕ್ಕೆ ಧ್ವನಿಗೂಡಿಸಿದ ಜೆರಾಕ್ಸ್ ಅಂಗಡಿಯವ, “ಖಾಸಗೀ ಶಾಲೆಯಲ್ಲಿ ಒಂದೇ ಸಲ ಕಟ್ಟಿಸ್ಕೊಳ್ತಾರೆ ಇಲ್ಲಿ
ಕಂತ್ ಕಂತ್ ಆಗಿ ತಗೊಳ್ತಾರೆ ಅಷ್ಟೆಯಾ” ಎಂದ. ಆ
ಮೇಷ್ಟ್ರ ಎಲ್‌ಬಿಎ ಸೆಟ್‌ನ್ನು ಹೆಬ್ಬಾವಿನಂತೆ ನುಂಗಿದ್ದ ಜೆರಾಕ್ಸ್ ಮಸಿನ್ ಇನ್ನೂ ಬಡ್ ಬಡ್
ಸೌಂಡ್ ಮಾಡ್ತಾ ನೂರಾರು ಜೆರಾಕ್ಸ್ ಪ್ರತಿಗಳನ್ನು ಇನ್ನೂ ಹೊರಗೆ ಹಾಕ್ತಾನೆ ಇತ್ತು… ಒಂದ್ ಪೇಜ್
ಜೆರಾಕ್ಸ್ ಮಾಡಿಸಕೊಂಡು ಅರ್ಜೆಂಟ್ ಹೋಗಲು ಬಂದ ಈ ರೈತ ಬೇರೆ ಕಡೆ ಹೋಗೋಣ ಅಂದ್ರೆ ಅಕ್ಕಪಕ್ಕ ಬೇರೆ
ಜೆರಾಕ್ಸೂ ಇರ್ಲಿಲ್ಲ. ಹಾಗಾಗಿ ಕಾಯ್ತಾ ಬೇಜಾರಕ್ಕೆ
ಮಾತಾಡ್ತಾ ನಿಂತ. “ಏನ್ ಮಾಡದು. ಶಾಲೆಗೆ ಹೋಗಿ ಕೇಳೀದ್ರೆ, ಖಾಸ್ಗೀ ಶಾಲೆಯಲ್ಲಿ ಐವತ್ ಅರ್ವತ್ ಸಾವ್ರ ಕಟ್ಟಿಸ್ಕಳ್ತಾರ. ಇಲ್ಲಿ ಐನೂರೋ ಸಾವ್ರನೋ
ಕೊಡಾಕ ಹಿಂಗೆ ಮಾಡ್ತೀರಲ್ಲ; ಊಟ ಮೊಟ್ಟೆ, ಬಾಳೆಹಣ್ಣು ಏನೆಲ್ಲ ಕೊಡ್ತೀವಿ ಅಂತ ನಮಗೆ ಜೋರ್ ಮಾಡ್ತಾರೆ.”.
ಎಂದು ನಿಟ್ಟುಸಿರು ಬಿಟ್ಟ.
ಇವರ ಮಾತು ಕೇಳಿಕೊಂಡು
ಟೀ ಬಿಲ್ ಕೊಟ್ಟು ನಾನು ಮಾಡ್ಲಿಕ್ ಕೆಲಸ ಇಲ್ಲದ್ದಕ್ಕೆ ಪಕ್ಕದ ಆ ಜೆರಾಕ್ಸ್ ಅಂಗಡಿಗೆ ಹೋಗಿ ಹಂಗೇ
ದೇಶಾವರಿ ನಗೆಬೀರಿ ಆ ರೈತನ್ನ ಮಾತಾಡಿಸಿದೆ. ಆ ಜೆರಾಕ್ಸ್ ಅಂಗಡಿಯವನೂ ನನ್ನನ್ನುನೋಡಿ ಯಾವುದೋ ಕೂಲಿ
ಕೆಲಸಕ್ಕೆ ಹೋಗುವವನು ಅಂದುಕೊಂಡು ಮಾತಿಗಿಳಿದ. “ನಾವ್ ಓದುವಾಗ ಎಜುಕೇಸನ್ ಎಸ್ಟ್ ಚೆಂದಿತ್ತು
ಅಲ್ಲನ್ರಿ. ಆ ಮೇಷ್ಟ್ರಿಗೂ ತಿಳಿಬಾರ್ದೇನ್ರಿ ದಿನಾ ಒಂದೊಂದ್ ತರ ಹೇಳಿಕಳಿಸ್ತಾನೆ ಇರ್ತಾರೆ” ಎಂದು
ಮೇಷ್ಟ್ರ ಮೇಲೆ ಕಂಪ್ಲೇಂಟ್ ಮಾಡಿದ. ನನಗೆ ಮುಖಕ್ಕೆ
ಹೊಡೆದಂತೆ ಆಯಿತು. ಆಗ ಆ ರೈತನೇ, “ಪಾಪ ಅವರರ ಏನ್
ಮಾಡ್ತಾರೆ, ಅವರಿಗೂ ದಿನಕೊಂದು ಆರ್ಡರ್ರು. ಗಂಟಿಗೊಂದ್ ರೂಲ್ಸು”. ಎಂದಾಗ ಇಬ್ಬರೂ ಸೇರಿ “ಒಟ್ನಲ್ಲಿ
ಗೌರ್ಮೆಂಟ್ ಶಾಲೆ ಎಲ್ಲ ಹಳ್ಳಾ ಹಿಡ್ದ್ ಹೋದ್ವು ನೋಡ್ರಿ”. ಎಂದು ಷರಾ ಬರೆದುಬಿಟ್ಟರು.
***
ಅವರ ಮಾತಿಗೆ ʻಆʼ
ʻಹೂʼ ಅಂತ ತಲೆಹಾಕಿ ನಾನು ರಸ್ತೆಗಿಳಿಯುತ್ತಿದ್ದಂತೆ ಫೋನು ರಿಂಗಾಯಿತು.
ನೋಡಿದೆ. ಸ್ನೇಹಿತೆಯೊಬ್ಬಳ ಫೋನದು. ಏನು ಅಂತ ಕೇಳಿದೆ,. “ಅದು ಎಲ್ ಬಿ ಎ ಪ್ರತಿ ಪಾಠಕ್ಕೂ ೨೫ ಮಾರ್ಕ್ಸಿಗೆ
ಪರೀಕ್ಷೆ ಮಾಡ್ಬೇಕು ಅಂತಾ ಹೇಳಿದೀರಲ. ಅದು ಹೆಂಗೆ ಸಾಧ್ಯ ಆಗುತ್ತೆ? ನಲ್ವತ್ತು ನಿಮಿಷದ ಪಿರಿಯಡ್ಡಲ್ಲಿ
ಅಷ್ಟು ಮಾಡ್ಲಿಕ್ ಆಗುತ್ತಾ?ʼ ಪ್ರತಿಪಾಠಕ್ಕೆ ಪ್ರಶ್ನೆಪತ್ರಿಕೆ ಪ್ರಿಂಟು ಜೆರಾಕ್ಸು ಮಾಡ್ಲಿಕ್ಕಂತೂ
ಆಗಲ್ಲ. ಬೋರ್ಡ್ ಮೇಲೆ ಪ್ರಶ್ನೆ ಬರೀಬೇಕು. ಮಕ್ಳು ಅದನ್ ನೋಡ್ಕಂಡು ಅಷ್ಟೂ ಬರೆಯೋದ ಹೌದಾ? ನನಗಂತೂ
ತಲೆ ಕೆಟ್ಟು ಹೋಗಿದೆ…ಕೆಲ್ಸನೇ ಬೇಡ ಅನಿಸಿಬಿಟ್ಟಿದೆ…. ಎಂದು ತನ್ನ ಅಸಮಾಧಾನ ಹೊರಹಾಕಿದಳು. ಅವಳು ಇನ್ನೂ ಮಾತು ಮುಗಿಸಿರಲಿಲ್ಲ. ನನಗೆ ಸಿಟ್ಟು ಬಂದುಬಿಟ್ಟಿತು.
“ಕುಂತ್ರೂ ನಿಂತ್ರೂ ಅವನ್ದೇ ಧ್ಯಾನ ಮನಸಿಗಿಲ್ಲ ಸಮಾಧಾನ” ಅನ್ನೋ ಹಂಗೆ ನೀನು ಹಗ್ಲೂ ರಾತ್ರಿ ಬರೇ
ಶಾಲೆ ಚಿಂತೇನೇ ಮಾಡ್ತಿರು. ಹಬ್ಬ ಮಾಡ್ಲಿಕ್ಕೆ ಅಂತ
ರಜೆ ಕೊಟ್ರೆ ನೀನು ಉಂಡೇನೋ ಪಾಯಸನೋ ಮಾಡಿಕೊಂಡು ಚೆಂದಾಗಿ ಗಂಡ ಮಕ್ಳು ಜೊತೆ ಊಟಮಾಡಿ ಸಂತೋಷವಾಗಿರೋದ್
ಬಿಟ್ಟು ಮನೆಯಲ್ಲಿ ಬರೀ ಶಾಲೆಯದೇ ಯೋಚ್ನೆ ಮಾಡ್ತಾ ಮಾತಾಡ್ತಾ ಇರು. ಹಿಂಗೇ ಮಾಡ್ತಿದ್ರೆ ಗಂಡ ಮಕ್ಳೂ ದೂರಾಗ್ತಾರೆ ನೋಡು ಹುಷಾರು ಈಗ ಕೆಲ್ಸನೇ ಬೇಡ ಅನ್ನಿಸಿದೆ ಅಷ್ಟೇ. ಇನ್ನೊಂದು ಸ್ವಲ್ಪ್ ದಿನಕ್ಕೆ ಜೀವನೇ
ಬೇಡ ಅನ್ನಿಸಿಬಿಡುತ್ತೆ” ಎಂದು ಅವಳಿಗೆ ಜೋರು ಮಾಡಿದೆ.
ಅವಳು ನನಗೇ ಫೋನು
ಮಾಡಲಿಕ್ಕೆ ಕಾರಣವೂ ಇತ್ತು. ನಾನು ಪಠ್ಯಪುಸ್ತಕ ರಚನೆ ಸೇರಿದಂತೆ ಬೇರೆ ಬೇರೆ ಇಂತಹ ಕೆಲಸ ಮಾಡುವ
ಟೀಮಿನಲ್ಲಿ ಇರುತ್ತೇನೆಯಾದ್ದರಿಂದ. ಈ ಎಲ್ ಬಿ ಎ ಕೂಡ ಇವನದೇ ಕಿತಾಪತಿ ಎಂದು ಅವಳಿಗೆ ಅನ್ನಿಸಿದೆ.
“ಹೋಗು ಅನ್ನಲಾರದೆ ಹೊಗೆ ಹಾಕಿದ್ರು” ಅನ್ನುವ ಹಾಗೆ ಅವಳು ಅದನ್ನು
ಬೇರೆಯದೇ ಆದ ರೀತಿಯಲ್ಲಿ ನನಗೆ ಮುಟ್ಟಿಸಿದ್ದಳು. ಆಕೆ ಹೇಳಿದ್ದು ನನಗೆ ತಕ್ಷಣಕ್ಕೆ ಸಿಟ್ಟು ತರಿಸಿದ್ದು
ನಿಜವಾದರೂ ಫೋನಿಟ್ಟಮೇಲೆ ಸಿಟ್ಟುಮಾಡಿದ್ದಕ್ಕೆ ಬೇಸರವಾಯಿತು. ಕಷ್ಟ ಹೇಳಿಕೊಳ್ಳಲು ಬಂದವರ ಕೆನ್ನೆಗೆ
ಹೊಡೆಯುವ ಕೆಲಸ ಮಾಡಿದೆನಾ ಎಂದೂ ಒಂದು ಕ್ಷಣ ಅನ್ನಿಸಿತು. ಹೌದು ಹಿಂದೆಯಲ್ಲ ಶಾಲೆಯಲ್ಲಿ ಪಾಠದ ನಡುವೆ ಬಿಡುವಿದ್ದಾಗ
ಶಿಕ್ಷಕರು ಅವರ ಶಾಲೆಯ ಕೆಲಸಕ್ಕೆ ಹೊರಗಿನದಾದ ಖಾಸಗೀ ವಿಚಾರಗಳನ್ನು ಮನೆಯ ಸುಖದುಃಖಗಳನ್ನು ಮಾತಾಡಿಕೊಂಡು
ತುಸು ಚೈತನ್ಯವನ್ನು ಪಡೆದುಕೊಂಡು ಮತ್ತೆ ತಮ್ಮ ತಮ್ಮ ತರಗತಿಗಳಿಗೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು.
ಪುರುಷರು ಹೊಲ ಗದ್ದೆ ಮಳೆ ಬೆಳೆ, ರಾಜಕೀಯ ಇತ್ಯಾದಿ ಮಾತಾಡಿದರೆ ಮಹಿಳೆಯರು, ತಮ್ಮ ಸಂಸಾರದ ತಾಪತ್ರಯಗಳನ್ನು
ಹಂಚಿಕೊಂಡು ತುಸು ಹಗುರಾಗುತ್ತಿದ್ದರು. ಆದರೆ ಈಗ ಶಾಲೆಯಲ್ಲಿ ಮನೆಯ ವಿಷಯ ಮಾತಾಡುವುದಿರಲಿ ಮನೆಯಲ್ಲಿಯೇ
ಮನೆಯ ವಿಚಾರ ಮಾತನಾಡಲು ಸಮಯವಿಲ್ಲದಂತಾಗಿದೆ. ಶಿಕ್ಷಕರು ಮನೆಯಲ್ಲಿ ಶಾಲೆಯ ವಿಷಯವನ್ನು ಮಾತನಾಡಬಾರದು
ಅಥವಾ ಶಾಲೆಯ ಕೆಲಸವನ್ನು ಮಾಡಬಾರದು ಎಂದಲ್ಲ. ಆದರೆ ಅವರು ಶಾಲೆಯ ಕೆಲಸವನ್ನು ಮನೆಗೆ ತಂದು ಮಾಡಬಹುದು
ಆದರೆ ಮನೆಯ ಕೆಲಸಗಳನ್ನು ಶಾಲೆಗೆ ಒಯ್ದು ಮಾಡಲು ಆಗುವುದಿಲ್ಲ. ಗೃಹಿಣಿಯೂ ಆದ ಒಬ್ಬ ಶಿಕ್ಷಕಿ ಶಾಲೆಯ
ಮಕ್ಕಳ ಪೇಪರ್ ಮನೆಗೆ ತಂದು ಮೌಲ್ಯಮಾಪನ ಮಾಡಲು ಸಾಧ್ಯವಿದೆ. ಆದರೆ ಅವಳು ಮನೆಯ ಮುಸುರೆ ಪಾತ್ರೆಗಳನ್ನು
ಶಾಲೆಗೆ ಒಯ್ದು ತೊಳೆಯಲು ಸಾಧ್ಯವಿಲ್ಲವಲ್ಲ! ಇದೆಲ್ಲ ನೆನಪಿಗೆ ಬಂದು ಅವಳ ದುಃಖವನ್ನು ಅರ್ಥಮಾಡಿಕೊಂಡು
ನಾಲ್ಕು ಸಮಾಧಾನದ ಮಾತು ಆಡಬೇಕುತ್ತು ಅನ್ನಿಸಿತು. ಆದರೆ ಮಾತು ಆಡಿದರೆ ಹೋಯಿತು….
ಆಕೆಯ ಜೊತೆ ಮಾತಾಡಿ
ಫೋನಿಡುತ್ತಿದ್ದಂತೆಯೇ ಸ್ನೇಹಿತನೊಬ್ಬ ನನ್ನೆದುರಿಗೆ ಬೈಕ್ ತಂದು ನಿಲ್ಲಿಸಿದ. ʻಇಪ್ಪತ್ತೈದು ಇಪ್ಪತ್ತಾತು ಡುಂ ಡುಂ ಡುಂʼ ಎಂದು ತಮಾಸೆಗೆ ಏನೋ ಹಾಡು ಹೇಳುತ್ತಲೇ ಬೈಕ್ ಇಳಿದು ಅದರ ಸೈಡ್ ಸ್ಟ್ಯಾಂಡ್ ಒದ್ದು ನಿಲ್ಲಿಸಿದ ಅವನು ಬಹಳ ಉತ್ಸಾಹದಲ್ಲಿದ್ದ.
ಏನೋ ಹೇಳಿ ನನ್ನಿಂದ ಸೈ ಅನ್ನಿಸಿಕೊಳ್ಳುವ ಕಾತುರ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಾನು ಏನನ್ನೂ ಕೇಳಲಿಲ್ಲ. ಅವನು ಶಿಕ್ಷಕ
ಸಂಘದಲ್ಲಿ ಇದ್ದ. ಪದೇ ಪದೇ ನಾನು “ಸಂಘದಲ್ಲಿ ಇದ್ದುಕೊಂಡು ಏನ್ ಮಾಡ್ತೀರಿ ನೀವು. ಸರ್ ಸರ್ ಅಂತ
ಸಾಹೇಬ್ರ ಹಿಂದೆ ಮೈ ಮುದುಡಿಕೊಂಡು ತಿರುಗಾಡ್ತೀರಿ. ಈ ಬಕೆಟ್ ಹಿಡಿಯೋ ಕೆಲಸಕ್ಕಾ ನಿಮಗೆ ಶಿಕ್ಷಕರು
ಓಟು ಹಾಕಿ ಕಳಿಸಿದ್ದು? ಅಧಿಕಾರಿಗಳಿಗೆ ಸಹಕಾರ ಕೊಡುವ ಹಾಗೆಯೇ ಸಂದರ್ಭ ಬಂದಾಗ ಅಧಿಕಾರಿಗಳಿಗೆ ಜೋರು ಮಾಡೋದು ಕೂಡ ಗೊತ್ತಿರ್ಬೇಕಲ್ವ ನಿಮ್ಗೆ?”
ಎಂದು ಜೋರು ಮಾಡುತ್ತಿದ್ದೆ. ಅದಕ್ಕೆ ಉತ್ತರ ಕೊಡಲೇ ಅವನು ನನ್ನೆದುರು ಇವತ್ತು ಬೈಕ್ ನಿಲ್ಲಿಸಿದಂತಿತ್ತು.
ಬಹಳ ಎಳೆಯದೆ ವಿಷಯಕ್ಕೆ ಅವನು ನೇರವಾಗಿ ಬಂದ. ವಿಷಯ ಏನೆಂದರೆ ನಾವ್ ಸಂಘದವರೆಲ್ಲ ಸೇರಿ ಅಧಿಕಾರಿಗಳೊಡನೆ ಮಾತಾಡಿ ಎಲ್
ಬಿ ಎ ಪರೀಕ್ಷೆಯನ್ನು ಇಪ್ಪತ್ತೈದು ಅಂಕಗಳಿಂದ ಇಪ್ಪತ್ತು ಅಂಕಗಳಿಗೆ ಇಳಿಸಿದ್ದೇವೆ. ಪದೇ ಪದೇ ನೀವು ಸಂಘದೋರು ಏನು ಮಾಡ್ತಿಲ್ಲ ಮಾಡ್ತಿಲ್ಲ ಅಂತೀರಿ….” ಎಂದು ಅವನು ತನ್ನ ಕೆಲಸವನ್ನು ಸಮರ್ಥನೆ ಮಾಡಿಕೊಂಡ.
ನನಗೆ ಅವತ್ತು
ಮಾಡ್ಲಿಕ್ಕೆ ಕೆಲಸನೂ ಬಹಳ ಇರ್ಲಿಲ್ಲಲ ಎಂದು ಮೊದಲೇ ಹೇಳಿದ್ದೇನಲ್ಲ. ಹಂಗಾಗಿ ಅವನನ್ನೂ ಕರೆದುಕೊಂಡು ಮತ್ತೆ ಮೊದಲು ಟೀ ಕುಡಿದ
ಕ್ಯಾಂಟೀನಿಗೇ ಕರೆದೊಯ್ದು ಬೈಟೂ ಟಿ ಹೇಳಿ ಅವನಿಗೆ ಮತ್ತು ಅದನ್ನು ಮಾಡಿದ ಅವನಿರುವ ಸಂಘಕ್ಕೆ ಅವನ
ಮೂಲಕ ಧನ್ಯವಾದವನ್ನು ಹೇಳಿದೆ. ಆದರೂ ಮನಸ್ಸಿನಲ್ಲಿ ಇರುವುದನ್ನು ಹೊರಗೆ ಹಾಕದೆ ನಿರಾಳ ಆಗುವುದಾದರೂ
ಹೇಗೆ? ಒಂದೆರಡು ಉದಾಹರಣೆ ಸಮೇತ ವಿವರಿಸಿದೆ:
***
ನೋಡಿ ಬಟ್ಟೆ ಅಂಗಡಿಯವರು
ಐದು ನೂರು ರೂಪಾಯಿ ಸೀರೆಯನ್ನು ಐದುನೂರು ರೂಪಾಯಿಗೇ ಬೆಲೆಯಿಟ್ಟು ಮಾರಿದರೆ ಏನು ಚೆಂದ ಇರುತ್ತೇ ಅಲ್ವಾ?
ಅದಕ್ಕೆ ಅವರು ಅದಕ್ಕೆ ಒಂದೂವರೆ ಸಾವಿರ ಬೆಲೆಯಿಟ್ಟು ಅದನ್ನು ಕೊಂಡರೆ ಅದರ ಜೊತೆಗೆ ಇನ್ನೂರು ರೂಪಾಯಿಯೋ
ಮುನ್ನೂರು ರೂಪಾಯಿಯೋ ಬೆಲೆಬಾಳುವ ಇನ್ನೊಂದು ಸೀರೆಯನ್ನು ಉಚಿತ ಕೊಡುವ ವ್ಯವಸ್ಥೆ ಮಾಡಿ ʻಒಂದು
ಕೊಂಡರೆ ಇನ್ನೊಂದು ಉಚಿತʼ ಎಂದು ಬೋರ್ಡ್ ಹಾಕುತ್ತಾರೆ. ಒಂದೂವರೆ ಸಾವಿರ ಬೆಲೆಯಿಟ್ಟಾಗ ಮಾನ ಮರ್ಯಾದೆಗೆ ಅಂಜುವ
ನಾವೆಲ್ಲ ಕಡಿಮೆ ಎಂದರೆ ಒಂದು ಸಾವಿರಕ್ಕೆ ಕೇಳಬೇಕಾಗುತ್ತದೆ. ಅದೂ ಇದೂ ಚೌಕಾಸಿ ನಡೆದು ಹನ್ನೆರಡು
ನೂರು ರೂಪಾಯಿಗೆ ಡೀಲ್ ಆದರೂ ಇಬ್ಬರಿಗೂ ಸಂತೋಷ. ನಮಗೆ ಮುನ್ನೂರು ರೂಪಾಯಿ ಕಡಿಮೆ ಮಾಡಿಸಿದೆವು ಎನ್ನುವ
ಸಂತೋಷ. ಅಂಗಡಿಯವರಿಗೆ ನಾಲ್ಕುನೂರು ರೂಪಾಯಿ ಟೊಪ್ಪಿಗೆ ಹಾಕಿ ಪಡೆದೆವು ಎನ್ನುವ ಸಂತೋಷ.! ಇದು ಒಂದು ʼವ್ಯಾಪಾರಿತಂತ್ರʼ.
ಈ ತಂತ್ರ ಮಾರುಕಟ್ಟೆಯಲ್ಲಿ
ಹಾಗೆ ಇದ್ದರೆ ಸರ್ಕಾರದ ವ್ಯವಸ್ಥೆಯಲ್ಲಿ ಇನ್ನೊಂದು ರೀತಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಸರ್ಕಾರಗಳು
ಆಗಾಗ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಏರಿಸುವುದನ್ನು ನಾವು ನೋಡಿಯೇ ಇರುತ್ತೇವೆ . ಅಲ್ಲಿ ಯಾವುದೇ
ಸರ್ಕಾರಗಳಿರಲಿ ಕೆಲವು ರಾಜಕೀಯ ತಂತ್ರಗಳನ್ನು ಅನುಸರಿಸುತ್ತವೆ. ಅದೇನೆಂದರೆ ಒಂದು ಸರ್ಕಾರಕ್ಕೆ ಪೆಟ್ರೋಲ್
ದರವನ್ನು ಲೀಟರ್ ಗೆ ಮೂರು ರೂಪಾಯಿ ಏರಿಸುವ ಇಚ್ಚೆಯಿದ್ದರೆ ಅದು ನೇರವಾಗಿ ಮೂರು ರೂಪಾಯಿ ಏರಿಸುವುದಿಲ್ಲ.
ಅದಲಾಗಿ ಐದು ರೂಪಾಯಿ ಏರಿಸುತ್ತದೆ. ಏಕೆ ಗೊತ್ತೆ? ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಯಲ್ಲಿ
ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಇರುತ್ತವೆ. ಎಷ್ಟು ರೂಪಾಯಿ ಏರಿಸಿದರೂ ವಿರೋಧ ಪಕ್ಷಗಳು ವಿರೋಧ
ಮಾಡುತ್ತವೆ. ಮೂರು ರೂಪಾಯಿ ಏರಿಸಿದರೇನು ಆರು ರೂಪಾಯಿ ಏರಿಸಿದರೇನು ವಿರೋಧ ಪಕ್ಷಗಳು ವಿರೋಧ ಮಾಡಿಯೇ
ಮಾಡುತ್ತವೆ. ಅವರು ವಿರೋಧ ಮಾಡಿದಾಗ ಇಳಿಸಲಿಕ್ಕೆ
ಎಂದು ಮೊದಲ ಹಂತದಲ್ಲಿ ಆಡಳಿತ ಪಕ್ಷ ಬೆಲೆಯನ್ನು ಮೂರು ರೂಪಾಯಿಗೆ ಬದಲಾಗಿ ಇಳಿಸಬೇಕಾದ ಎರಡು ರೂಪಾಯಿ
ಸೇರಿಸಿ ಐದು ರೂಪಾಯಿ ಏರಿಸಿಬಿಡುತ್ತದೆ. ಆಗ ವಿರೋಧ
ಪಕ್ಷಗಳು ಧರಣಿ, ಪ್ರತಿಭಟನೆ ಮಾಡುತ್ತವೆ. ಆಗ ಎರಡು ರೂಪಾಯಿ ಇಳಿಸುತ್ತದೆ! ಹೀಗೆ ಇಳಿಸಲಿಕ್ಕೆಂದೇ
ಏರಿಸುವ ಈ ಹೆಚ್ಚುವರಿ ಏರಿಕೆಯನ್ನು ನೋಡಿದಾಗ ನನಗೆ ಲಂಕೇಶರ ಕವಿತೆಯೊಂದರಲ್ಲಿ ಬರುವ, ʼಬಿಚ್ಚಲಿಕ್ಕೆಂದೇ
ಉಟ್ಟಸೀರೆʼ ಎಂಬ ಮಾತು ನೆನಪಿಗೆ ಬರುತ್ತದೆ. ಬಿಚ್ಚುವುದೇ ಉದ್ದೇಶವಾಗಿದ್ದರೆ ಉಟ್ಟುಕೊಂಡದ್ದಾದರೂ
ಏಕೆ? ಎಂಬ ಪ್ರಶ್ನೆ ಸಾಮಾನ್ಯರಿಗೆ ಎದುರಾಗುವುದು ನಿಜ. ಆದರೆ ಅದಕ್ಕೆ ಬೇರೆಯದೇ ಅದ ಉದ್ದೇಶಗಳಿರುತ್ತವೆ.
ಇದರಿಂದ ಸರ್ಕಾರಕ್ಕೆ
ಯಾವುದೇ ನಷ್ಟವಾಗಲೂ ಇಲ್ಲ. ವಿರೋಧಪಕ್ಷದ ಪ್ರತಿಭಟನೆ ವಿಫಲವಾಗಲೂ ಇಲ್ಲ. ಅವರು ನಾವು ಪ್ರತಿಭಟನೆ
ಮಾಡಿ ಎರಡು ರೂಪಾಯಿ ಇಳಿಸಿದೆವು ಎಂದು ಹೇಳಿಕೊಂಡು ತಿರುಗಾಡಲೂ ಆಯಿತು. ಆಡಳಿತ ಪಕ್ಷದ ಮೂರು ರೂಪಾಯಿ
ಏರಿಸುವ ಉದ್ದೇಶವೂ ಈಡೇರಿದಂತಾಯಿತು. ಇಲ್ಲಿ ಮಂಗ ಆಗುವವರು ನಾವು ಮಾತ್ರ ಅಲ್ಲವೇ ಎಂದೆ.
ಬೇರೆ ಏಕೆ ನಮ್ಮದೇ ಉದಾಹರಣೆ ತಗೊಳ್ಳಿ. ಒಬ್ಬ ಅಧಿಕಾರಿಗೆ ಸಂಜೆ ಆರು ಗಂಟೆ
ತನಕ ಸ್ಪೆಷಲ್ ಕ್ಲಾಸ್ ಮಾಡಿಸಬೇಕು ಅಂತ ಉದ್ದೇಶ ಇದ್ದರೆ ಆತ ಅದನ್ನು ಆರಂಭದಲ್ಲಿ ಆರುಗಂಟೆ
ಬದಲು ಏಳು ಗಂಟೆತನಕ ಅಂತ ಹೇಳ್ತಾನೆ. ನೀವು ಸಂಘದವರು ಬಂದೇ ಬರ್ತೀರಿ ಅಂತ ಅವನಿಗೆ ಮೊದ್ಲೇ ಗೊತ್ತಿರುತ್ತದೆ.
ನೀವು ಹೋಗಿ ಶಿಕ್ಷಕರ ಕಷ್ಟಸುಖ ಹೇಳಿ ಮನವಿ ಮಾಡಿಕೊಂಡ ಮೇಲೆ ಆತ ಒಂದು ಗಂಟೆ ಕಡಿಮೆ ಮಾಡಿ ʼಆಯ್ತು
ಆರು ಗಂಟೆತನಕ ಮಾಡಿ ಸಾಕುʼ ಎನ್ನುತ್ತಾನೆ. ʼನಮ್ಮ ಸಾಹೇಬ್ರು ಬಹಳ ಒಳ್ಳೆಯವೆರು ನಮ್ಮ ಮನವಿಗೆ ಸ್ಪಂದಿಸಿ
ಒಂದು ಗಂಟೆ ಕಡಿಮೆ ಮಾಡಿದ್ರು ಎಂದು ನೀವು ಖುಷಿಯಿಂದ ಎದ್ದು ಬಂದು ಮೇಷ್ಟ್ರಿಗೆ ಅದನ್ನೇ ಹೇಳ್ತೀರಿ.
ಇವೆಲ್ಲ ತಂತ್ರಗಳು ಅಂತ ತಿಳಿದ್ಕೊಳ್ಳಬೇಕು ಅಲ್ವಾ?"
ಇದರಿಂದ ಅವನಿಗೆ
ಏನು ಅನ್ನಿಸಿತೋ ಏನೋ…..”ನಾವೇನೂ ಹಾಗೆ ಮಾಡಿಲ್ಲ ಸಾರ್. ಯುನಿಟ್ ಟೆಸ್ಟನ್ನು ಹತ್ತೋ ಹದಿನೈದೋ ಅಂಕಗಳಿಗೆ ಇಡಬೇಕು
ಅಂತಿದ್ದ ಅವರನ್ನು ನಾವೇ ಹೋಗಿ ಹತ್ತು ಹದಿನೈದು ಬೇಡ ಇಪ್ಪತ್ತೈದಕ್ಕೇ ಆರಂಭದಲ್ಲಿ ಮಾಡಿ ಆಮೇಲೆ ನಾವು
ಬಂದು ಮನವಿ ಕೊಟ್ಟಮೇಲೆ ಐದೋ ಹತ್ತೋ ಇಳಿಸುವಿರಂತೆ ಎಂದು ನಾವು ಸಂಘದವರೇ ಹೇಳಿದ್ದೇವೆ ಅನ್ನುವಂತೆ
ನೀವು ಮಾತನಾಡುತ್ತಿದ್ದೀರಿ. ಖಂಡಿತಾ ನಮ್ಮ ಸಂಘದಲ್ಲಿ ಯಾರೂ ಹಂಗೆ ಮಾಡಿಲ್ಲ. ಎಂದು ಸಮರ್ಥನೆ ಕೊಟ್ಟ.
ಸುಮ್ಮನೆ ಇರ್ಲಾರ್ದೆ ತಲೆಕೆಟ್ಟವರ ಹಾಗೆ ನಾನು ಮಾತನಾಡಿದ್ದಕ್ಕೆ ಅವನೇಕೆ ಹಾಗೆ ಅದನ್ನು ಸೀರಿಯಸ್ಸಾಗಿ
ತೆಗೆದುಕೊಂಡನೋ ಏನೋ…..
ಶಿವನೇ ಶಂಭುಲಿಂಗ!!
- ರಾಬು (01082025)
***********
ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ನೀವು ಅವುಗಳ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಓದಬಹುದಾಗಿದೆ:
ಗಂಡ
ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು ?
https://buradikatti.blogspot.com/2025/07/blog-post.html
ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು
https://buradikatti.blogspot.com/2024/11/blog-post_17.html
ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು
https://buradikatti.blogspot.com/2024/11/blog-post.html
ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್ ರಜೆ
https://buradikatti.blogspot.com/2025/06/blog-post_5.html
ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು
https://buradikatti.blogspot.com/2024/05/blog-post_31.html
ಎಸ್.ಎಸ್.ಎಲ್.ಸಿ ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!
https://buradikatti.blogspot.com/2022/05/blog-post.html
ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:
https://buradikatti.blogspot.com/2020/07/blog-post.html
ʻಅರಮನೆʼಯ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ
https://buradikatti.blogspot.com/2020/07/blog-post_14.html
No comments:
Post a Comment