Tuesday, October 14, 2025

ʻಅಧ್ಯಕ್ಷೆʼ ʻಅಧ್ಯಕ್ಷಿಣಿʼ ಯಾವುದು ಸರಿ?

 ʻಅಧ್ಯಕ್ಷೆʼ ʻಅಧ್ಯಕ್ಷಿಣಿʼ ಯಾವುದು ಸರಿ?

ಸ್ನೇಹಿತರೊಬ್ಬರು ʻಅಧ್ಯಕ್ಷʼ ಪದದ ಸ್ತ್ರೀಲಿಂಗ ಪದ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಕೆಲವರು ʼಅಧ್ಯಕ್ಷೆʼ ಎಂಬುದು ಸರಿ ಎಂದರೆ ಮತ್ತೆ ಕೆಲವರು ʼಅಧ್ಯಕ್ಷಿಣಿʼ ಎಂಬುದನ್ನುಸೂಚಿಸಿದ್ದಾರೆ. ಈ ಬಗ್ಗೆ ಒಂದು ಪುಟ್ಟ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ.

ತಮಗೆ ತಿಳಿದಿರಬಹುದು. ಈ ಪ್ರಪಂಚದಲ್ಲಿ ಇರುವ ಜೀವಿಗಳು  ಎಲ್ಲ ಕಡೆಗೂ ಸ್ವಾಭಾವಿಕವಾಗಿ (ಇಲ್ಲಿ ಸ್ವಾಭಾವಿಕವಾಗಿ ಎಂಬ ಪದವನ್ನು ಒತ್ತುಕೊಟ್ಟು ಗಮನಿಸಲು ವಿನಂತಿ) ಮತ್ತು ಜೈವಿಕವಾಗಿ ಇರುವುದು ʻಗಂಡುʼ ಮತ್ತು ʻಹೆಣ್ಣುʼ ಎರಡೇ ರೀತಿ. ಹಾಗಿದ್ದರೂ ಎಲ್ಲ ದೇಶಗಳಲ್ಲಿ ಹಾಗನ್ನುವುದಕ್ಕಿಂತ ಎಲ್ಲ ಭಾಷೆಗಳಲ್ಲಿ ಅವುಗಳ ಪರಿಗಣನೆ ಒಂದೇ ರೀತಿ ಇಲ್ಲ. ಇದಕ್ಕೆ ಕಾರಣಗಳೇನು ಎಂಬುದನ್ನು ನಾವು ಮೂಲಭೂತವಾಗಿ ಅರ್ಥೈಸಿಕೊಳ್ಳಬೇಕು. ಅದನ್ನು ಇಂಗ್ಲೀಷಿನಿಂದಲೇ ಆರಂಭಿಸಬಹುದು ಅನ್ನಿಸುತ್ತದೆ.

ನಾವು ಕನ್ನಡದಲ್ಲಿ ಯಾವುದನ್ನು ʼಲಿಂಗʼ ಎನ್ನುತ್ತೇವೆಯೋ ಅದಕ್ಕೆ ಸಮಾನಾರ್ಥಕವಾಗಿ ಇಂಗ್ಲಿಷಿನಲ್ಲಿ ಎರಡು ಪದಗಳ ಬಳಕೆಯಿದೆ. ಅವೆಂದರೆ ಒಂದು Sex ಇನ್ನೊಂದು Gender. ಅಲ್ಲಿ ಇವೆರಡೂ ಒಂದೇ ಅಲ್ಲ. ಎರಡಕ್ಕೂ ಅರ್ಥದಲ್ಲಿ ವ್ಯತ್ಯಾಸವಿದೆ. ʻಸೆಕ್ಸ್‌ʼ ಎಂಬುದು ಒಂದು ಜೀವಿಯು ಜೈವಿಕವಾಗಿ ʻಗಂಡೋʼ ʻಹೆಣ್ಣೋʼ ಎಂಬುದನ್ನು ತಿಳಿಸುವ ಅಂಶವಾಗಿದೆ. ಆದರೆ ಜೆಂಡರ್‌ ಎಂಬುದು ಭಾಷೆಯಲ್ಲಿ ಆ ಜೀವಿಯನ್ನು ಏನಾಗಿ ಪರಿಗಣಿಸುತ್ತೇವೆ ಎಂಬ ಅಂಶಕ್ಕೆ ಸಂಬಂಧಿಸಿದೆ. ಇದು ಜೈವಿಕವಲ್ಲ; ಬದಲಾಗಿ ಸಾಮಾಜಿಕ ಅಥವಾ ಭಾಷಿಕವಾದದ್ದು.

ಈ ಕಾರಣದಿಂದಲೇ ಅಲ್ಲಿ ʻಸೆಕ್ಸ್‌ʼ ನಲ್ಲಿ ʻಮೇಲ್‌ʼ , ʻಫಿಮೇಲ್‌ʼ ಎಂಬ ಎರಡು ವರ್ಗಗಳಿವೆ. ಆದರೆ ಇವುಗಳಲ್ಲಿ ಭಾಷಿಕವಾಗಿ ಅಥವಾ ಸಾಮಾಜಿಕವಾಗಿ ಪರಿಗಣಿಸುವಲ್ಲಿ ʻಮ್ಯಾಸ್ಕುಲಿನ್‌ʼ, ʻಪೆಮಿನೈನ್‌ʼ, ʻಕಾಮನ್‌ʼ ಮತ್ತು ʻನ್ಯೂಟರ್‌ʼ ಎಂಬ ನಾಲ್ಕು ವರ್ಗಗಳಿವೆ. ನಾವು ಯಾವುದಾದರೂ ಫಾರಂ ತುಂಬುವಾಗ ಅಲ್ಲಿ ʻಸೆಕ್ಸ್‌ʼ ಎಂದು ಕೇಳಿದ್ದರೆ ʻಮೇಲ್‌ʼ ಅಥವಾ ʻಫಿಮೇಲ್‌ʼ (ಇತ್ತೀಚೆಗೆ ʻಅದರ್ಸ್‌ʼ ಎಂಬ ಮೂರನೇ ವಿಭಾಗ ಸೇರಿಸಲಾಗಿದೆಯಾದರೂ ಅದನ್ನು ಈ ಚರ್ಚೆಯಿಂದ ಹೊರಗಿಟ್ಟಿದೆ) ಎಂದಷ್ಟೇ ಬರೆಯಬೇಕಾಗುತ್ತದೆ. ಆದರೆ ʻಜಂಡರ್‌ʼ ಎಂದು ಎಲ್ಲಿಯಾದರೂ ಕೇಳಿದರೆ ಅದಕ್ಕೆ ಈ ರೀತಿ ʻಮೇಲ್‌ʼ ಅಥವಾ ʻಫಿಮೇಲ್‌ʼ ಎಂದು ಬರೆದರೆ ಅದು ತಪ್ಪಾಗುತ್ತದೆ. ಅಲ್ಲಿ ʻಮ್ಯಾಸ್ಕುಲಿನ್‌ʼ, ʻಫೆಮಿನೈನ್‌ʼ, ʻಕಾಮನ್‌ʼ ಅಥವಾ ʻನ್ಯೂಟರ್‌ʼ ಎಂದು ಬರೆಯಬೇಕಾಗುತ್ತದೆ.

ಏಕೆಂದು ಈಗ ನೋಡೋಣ. ಈ ಲೇಖನದ ಆರಂಭದಲ್ಲಿಯೇ ಹೇಳಿದಂತೆ ಪ್ರಪಂಚದ ಜೀವಿಗಳು ಒಂದು ಗಂಡೋ ಅಥವಾ ಹೆಣ್ಣೊ ಇವೆರಡರಲ್ಲಿ ಒಂದಾಗಿರುವುದು ನಿಜವಾದರೂ ಅವನ್ನು ಎಲ್ಲ ಭಾಷೆಗಳಲ್ಲಿ ಒಂದೇ ಆಗಿ ಪರಿಗಣಿಸಿಲ್ಲ. ಹಾಗಾಗಿ ಬೇರೆ ಬೇರೆ ಭಾಷೆಗಳಲ್ಲಿ ಲಿಂಗವ್ಯವಸ್ಥೆ ಬೇರೆ ಬೇರೆಯೇ ಆಗಿದೆ. ಇಂಗ್ಲಿಷಿನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ನಾಲ್ಕು ಲಿಂಗಗಳ ವ್ಯವಸ್ಥೆ ಇದೆ. ಯಾವುದು ಗಂಡೋ ಅದು ಮ್ಯಾಸ್ಕುಲಿನ್‌, ಯಾವುದು ಹೆಣ್ಣೋ ಅದು ಫೆಮಿನೈನ್‌, ಯಾವುದು ಎರಡೂ ಆಗಿರಬಹುದೋ ಅದು ಕಾಮನ್‌ ಅದೇ ರೀತಿ ಯಾವುದು ಎರಡೂ ಅಲ್ಲವೋ ಅದು ನ್ಯೂಟರ್.‌ ಹಾಗಾಗಿ ಅಲ್ಲಿ ಹೆಚ್ಚು ಗೊಂದಲವಿಲ್ಲ. ಕೋಣ ಮ್ಯಾಸ್ಕುಲಿನ್‌, ಎಮ್ಮೆ ಫೆಮಿನೈನ್, ಡಾಕ್ಟರ್‌ ಕಾಮನ್. ಮರ ನ್ಯೂಟರ್!

ಆದರೆ ಇದೇ ರೀತಿಯ ಲಿಂಗವ್ಯವಸ್ಥೆ ಇತರ ಭಾಷೆಗಳಲ್ಲಿ ಇಲ್ಲ. ಇರುವ ಗಂಡು ಹೆಣ್ಣು ಎರಡನ್ನೇ ಬೇರೆಬೇರೆ ರೀತಿಯಲ್ಲಿ ಪರಿಗಣಿಸುವ ಪರಿಪಾಟವಿದ್ದು ಅದಕ್ಕೆ ಅನುಗುಣವಾಗಿ ಆಯಾ ಭಾಷೆಗಳ ಲಿಂಗವ್ಯವಸ್ಥೆ ಕೂಡ ಬೆಳೆದುಬಂದಿದೆ. ತೆಲುಗಿನಲ್ಲಿ ‌ʻಮಹತ್‌ʼ ಮತ್ತು ʻಅಹಮತ್‌ʼ ಎಂಬ ಎರಡು ಲಿಂಗಗಳ ಲಿಂಗವ್ಯವಸ್ಥೆ ಇದ್ದು ಅಲ್ಲಿ ಗಂಡಸರು ಮಹತ್‌ ಲಿಂಗದಲ್ಲಿ ಬಂದರೆ ಹೆಂಗಸರು ಪ್ರಾಣಿಗಳು ಎಲ್ಲ ಅಹಮತ್‌ ಲಿಂಗದಲ್ಲಿ ಬಂದುಬಿಡುತ್ತವೆ. ತೆಲುಗಿನದು ಈಪರಿಯಾದರೆ ಹಿಂದಿಯದ್ದು ಇನ್ನೊಂದು ಪರಿ. ಅಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎರಡೇ ಇರುವುದು. ನಿರ್ಜೀವ ವಸ್ತುಗಳನ್ನೂ ಕೂಡ ಒಂದು ಗಂಡಾಗಿ ಇಲ್ಲವೇ ಇನ್ನೊಂದು ಹೆಣ್ಣಾಗಿ ಪರಿಗಣಿಸಲಾಗುತ್ತದೆ.

ಆದರೆ ಕನ್ನಡದಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಲಿಂಗವ್ಯವಸ್ಥೆ ಇದೆ. (ಲಿಂಗಮೊಂಬತ್ತು ತೆರಂʼ ಎಂಬ ವೈಯಾಕರಣಿಯ ಮಾತನ್ನು ಇಲ್ಲಿ ಲಕ್ಷಕ್ಕೆ ತೆಗೆದುಕೊಂಡಿಲ್ಲ). ಇಲ್ಲಿ ವಯಸ್ಕ ಗಂಡಸರು ಪುಲ್ಲಿಂಗವಾದರೆ ವಯಸ್ಕ ಹೆಂಗಸರು ಸ್ತ್ರೀಲಿಂಗವಾಗುತ್ತಾರೆ. ಇವನ್ನು ಹೊರತುಪಡಿಸಿದ ಎಲ್ಲರೂ ಎಲ್ಲವೂ ಅಂದರೆ ಚಿಕ್ಕಚಿಕ್ಕ ಮಕ್ಕಳು, ಕೂಸುಗಳು, ಪ್ರಾಣಿಗಳು ಪಕ್ಷಿಗಳು ಮರಗಿಡಗಳು, ನಿರ್ಜೀವ ವಸ್ತುಗಳು ಎಲ್ಲವೂ ನಪುಂಸಕಲಿಂಗವಾಗಿಬಿಡುತ್ತವೆ!

ನಾವು ಒಂದು ಭಾಷೆಯನ್ನು ಮಾತ್ರ ಬಳಸುವ ಸಂದರ್ಭದಲ್ಲಿ ಇವುಗಳು ಸಮಸ್ಯೆಗಳೇ ಅಲ್ಲ. ಆದರೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಳಸುವ ಸಂದರ್ಭ ಬಂದಾಗ ಇವು ಸಹಜವಾಗಿಯೇ ಅನೇಕ ಗೊಂದಲಗಳನ್ನೂ, ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಒಂದು ಭಾಷೆಯಲ್ಲಿ ಪುಲ್ಲಿಂಗದಲ್ಲಿರುವ ಪದ ಇನ್ನೊಂದು ಭಾಷೆಯಲ್ಲಿ ಸ್ತ್ರೀಲಿಂಗವಾಗಿ ಪರಿಗಣಿತವಾಗುವುದು, (ಉದಾ: Moon ಎಂಬ ಇಂಗ್ಲಿಷ್‌ ಪದ ಅಲ್ಲಿ ಸ್ತ್ರೀಲಿಂಗವಾದರೆ ಕನ್ನಡದಲ್ಲಿ ಅದರ ಸಮಾನಾರ್ಥಕ ಪದವಾದ ಚಂದ್ರ, ನಪುಂಸಕ ಲಿಂಗವಾಗಿ ಬಳಸಲ್ಪಡುವುದು), ಒಂದು ಭಾಷೆಯಲ್ಲಿ ಒಂದು ಲಿಂಗದಲ್ಲಿ ಮಾತ್ರ ಬಳಕೆಯಾಗುವ ಪದ ಇನ್ನೊಂದು ಭಾಷೆಯಲ್ಲಿ ಎರಡೂ ಲಿಂಗಗಳಲ್ಲಿ ಬಳಕೆಯಾಗುವುದು (ಉದಾ: ಇಂಗ್ಲಿಷ್‌ ನ Dog ಪದವು ಅಲ್ಲಿ ಗಂಡುನಾಯಿʼಗೆ ಮಾತ್ರ ಬಳಕೆಯಾದರೆ ಕನ್ನಡದಲ್ಲಿ ಹೆಣ್ಣುನಾಯಿಗೂ  ಬಳಕೆಯಾಗುವುದು) ಇಂತಹ ಸಮಸ್ಯೆಗಳಲ್ಲಿ ಕೆಲವು.

ನಿರ್ಜೀವ ವಸ್ತುಗಳು ಗಂಡೋ ಹೆಣ್ಣೋ ಆಗಿ ಪರಿಗಣಿಸಲ್ಪಡುವುದು (ಉದಾ: ಹಿಂದಿಯಲ್ಲಿ   ʻನೀರುʼ ಗಂಡಾದರೆ ʻಹವಾʼ ಹೆಣ್ಣು ಆಗಿ ಬಳಸಲ್ಪಡುವುದು) ಒಂದೇ ಭಾಷೆಯಲ್ಲಿಯೇ ಒಂದೇ ವಸ್ತುವಿನ ಎರಡು ಭಾಗಗಳಲ್ಲಿ ಒಂದು ಗಂಡಾಗಿಯೂ ಇನ್ನೊಂದು ಹೆಣ್ಣಾಗಿಯೂ ಬಳಕೆಯಾಗುವುದು (ಉದಾ: ಅದೇ ಹಿಂದಿಯಲ್ಲಿ ರೈಲಿನ ಇಂಜಿನ್‌ ಪುಲ್ಲಿಂಗ, ಭೋಗಿ ಸ್ತ್ರೀಲಿಂಗ!) ಇತ್ಯಾದಿಗಳನ್ನು ಈ ಗೊಂದಲಗಳಿಗೆ ಇನ್ನಷ್ಟು ಉದಾಹರಣೆಗಳನ್ನಾಗಿ ನೀಡಬಹುದು. ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ ನಾನು ಗಮನಿಸಿದಂತೆ ಚಿಕ್ಕ ತರಗತಿಗಳಲ್ಲಿ ಮಕ್ಕಳಿಗೆ ಇಂಗ್ಲಿಷ್‌ನ ʻLionʼ  ʻLionessʼ ಪದಗಳಿಗೆ ಕನ್ನಡದಲ್ಲಿ ʻಸಿಂಹʼ ʻಸಿಂಹಿಣಿʼ ಎಂದು ಹೇಳಿಕೊಡಲಾಗುತ್ತಿತ್ತು. ಪುಣ್ಯಕ್ಕೆ ಇಂಗ್ಲಿಷ್‌ನ ʻDogʼ  ʻBitchʼ ಪದಗಳಿಗೆ ʻನಾಯಿʼ ʻನಾಯಿಣಿʼ ಎಂದು ಹೇಳಿಕೊಡಲಾಗುತ್ತಿರಲಿಲ್ಲ! ಈ ಗೊಂದಲಗಳ ಭಾಗವಾಗಿಯೇ ಇಲ್ಲಿ ಅಧ್ಯಕ್ಷ ಪದಕ್ಕೆ ಅಧ್ಯಕ್ಷೆ ಸರಿಯೋ ಅಧ್ಯಕ್ಷಿಣಿ ಸರಿಯೋ ಎಂಬುದು ಹುಟ್ಟಿಕೊಂಡಿರುವುದು.

ಇದಕ್ಕೆ ಕೇವಲ ಭಾಷಿಕ ಆಯಾಮಮಾತ್ರವಿಲ್ಲ. ಸಾಮಾಜಿಕ ಆಯಾಮವೂ ಇದೆ. ನಮ್ಮದು ಬಹಳಷ್ಟು ಹಿಂದಿನ ಕಾಲದಿಂದಲೂ ಪುರುಷಪ್ರಧಾನ ಸಮಾಜ. ಹಾಗಾಗಿ ಹೆಣ್ಣುಮಕ್ಕಳಿಗೆ ಮನೆ ನೋಡಿಕೊಳ್ಳುವುದು, ಮಕ್ಕಳನ್ನು ಹೆತ್ತು ಪಾಲನೆ ಪೋಷಣೆ ಮಾಡುವುದು ಇಷ್ಟನ್ನೇ ನಿಗಧಿಪಡಿಸಿ ಅವರನ್ನು ಗೃಹಕ್ಕೆ ಬಂಧಿಸುವ ʻಗೃಹಿಣಿʼಯರನ್ನಾಗಿ ಮಾಡಲಾಗಿತ್ತು. ಸಾಮಾಜಿಕವಾಗಿ ಅಧಿಕಾರದ ಸ್ಥಾನಗಳಲ್ಲಿ ತೀರಾ ಇತ್ತೀಚಿನವರೆಗೂ ಅವರ ಪ್ರವೇಶ ಪ್ರಾತಿನಿಧ್ಯಗಳು ಇರಲೇ ಇಲ್ಲ. ಪ್ರವೇಶ ಪ್ರಾತಿನಿಧ್ಯಗಳೇ ಇರಲಿಲ್ಲವೆಂದಮೇಲೆ ಅವಕ್ಕೆ ಸಂಬಂಧಿಸಿದ ಪದಗಳು ಭಾಷೆಯಲ್ಲಿ ಬರಲು ಹೇಗೆ ತಾನೆ ಸಾಧ್ಯ? ಇತ್ತೀಚೆಗೆ ಎಲ್ಲ ಬಗೆಯ ಸಾಮಾಜಿಕ ಸ್ಥಾನಮಾನಗಳು, ಅಧಿಕಾರದ ಸ್ಥಾನಗಳು ಇತ್ಯಾದಿಗಳಿಗೆ ಪುರುಷರಂತೆ ಮಹಿಳೆಯರಿಗೂ ಪ್ರವೇಶ ಪ್ರಾತಿನಿಧ್ಯ ಸಿಗುತ್ತಿರುವಾಗ ತುಸು ಗೊಂದಲ ಸಹಜವಾದದ್ದೆ.

ಇದೇ ಕಾರಣದಿಂದ ಭಾರತದಲ್ಲಿ ಬಹುಕಾಲದಿಂದ ಬಳಕೆಯಿರುವ ಅಧಿಕಾರದ ಸ್ಥಾನದ ಹುದ್ದೆಗಳು ಬಹುತೇಕ ಪುರುಷವಾಚಿಯಾಗಿಯೇ ಇದ್ದವು. Chairman ಎಂಬ ಪದವನ್ನೇ ಗಮನಿಸಿ. ಅದರಲ್ಲಿ man ಪದವಿದೆ. ಅದಕ್ಕೆ ಪರ್ಯಾಯವಾಗಿ Chairwoman ಪದವಿಲ್ಲ. ಏಕೆಂದರೆ ಆ ಪದವಿಯನ್ನು ಹೆಂಗಸರು ಸ್ವೀಕರಿಸುವ ಸಂದರ್ಭವೇ ಇರಲಿಲ್ಲ. ಇನ್ನೂ ತುಸು ವಿಸ್ತರಿಸಿ ಹೇಳುವುದಾದರೆ ಛೇರ್‌ ಮೇಲೆ ಯಾರು ಬೇಕಾದರೆ ಅವರು ಕೂರುವಂತೆಯೂ ಇರಲಿಲ್ಲ! ಅದಕ್ಕೆ ಕನ್ನಡದ ಪರ್ಯಾಯ ಪದವಾಗ ʼಅಧ್ಯಕ್ಷʼ ಪದವನ್ನು ಸೃಷ್ಟಿಸಲಾಯಿತ್ತಾದರೂ ಬಹಳ ಕಾಲದವರೆಗೂ ಅದಕ್ಕೆ ಒಂದು ಸ್ತ್ರೀಲಿಂಗವಾಚಿ ಶಬ್ದದ ಅವಶ್ಯಕತೆಯೂ ಬರಲಿಲ್ಲ.

ಆದರೆ ಸಾಮಾಜಿಕ ಜೀವನದಲ್ಲಿ ಮಹಿಳೆಯರ ಪ್ರವೇಶ ಮತ್ತು ಪ್ರಾತಿನಿಧ್ಯಗಳನ್ನು ವಿಶೇಷವಾಗಿ ಪ್ರೋತ್ಸಾಹಿಸುವ ಉಪಕ್ರಮಗಳು ಹೆಚ್ಚಾಗುತ್ತಿರುವ ಈ ಸಂದರ್ಭಗಳು ಇಂತಹ ಪದಗಳ ಹುಡುಕಾಟ ಮಾಡಬೇಕಾಗಿ ಬಂದಿರುವುದು ಇತ್ತೀಚೆಗಿನ ಅವಶ್ಯಕತೆಯಾಗಿದೆ. ನನಗೆ ಗೊತ್ತಿರುವಂತೆ ಇಂತಹ ಒಂದು ಹುಡುಕಾಟದ ಗೊಂದಲ ಸಾರ್ವಜನಿಕವಾಗಿ ಭಾರತದಲ್ಲಿ ಮೊದಲು ಕಾಣಿಸಿಕೊಂಡದ್ದು ಶ್ರೀಮತಿ ಪ್ರತಿಭಾ ದೇವಿಸಿಂಗ್‌ ಪಾಟೀಲ್‌ ಅವರು ಭಾರತದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದಾಗ. ʼರಾಷ್ರ್ಟಪತಿʼ ಎಂಬ ಪದದಲ್ಲಿರುವ ʼಪತಿʼಯ ಕಾರಣಕ್ಕಾಗಿ ಆ ಇಡೀ ಪದ ಪುರುಷವಾಚಕವಾಗಿ ತೋರುತ್ತಿತ್ತು. ಇದನ್ನು ಮಹಿಳೆಯಾದ ಪ್ರತಿಭಾ ಪಾಟೀಲರಿಗೆ ಬಳಸುವುದು ಸರಿಯೇ? ಎಂಬುದು ಆಗ ಎದ್ದ ಪ್ರಶ್ನೆ. ಅದಕ್ಕೆ ಅವರು ʻರಾಷ್ಟ್ರಪತಿʼ ಅಲ್ಲ ಬದಲಾಗಿ ʼರಾಷ್ಟ್ರಸತಿʼ ಎಂದು ಕೆಲವರು ಕರೆದಾಗ ಅದು ತೀವ್ರ ವಿವಾದಕ್ಕೆ ಕಾರಣವಾಯಿತು.

ಏಕೆಂದರೆ ʻರಾಷ್ಟ್ರಪತಿʼ ಎಂಬ ಪದದಲ್ಲಿರುವ ʻಪತಿʼ ಪದಕ್ಕೆ ʻಗಂಡʼ ಎಂಬ ಅರ್ಥದ ಜೊತೆಗೆ ʻಒಡೆಯʼ, ʻಮುಖ್ಯಸ್ಥʼ, ʻನಾಯಕʼ ಇತ್ಯಾದಿ ಅರ್ಥಗಳಿವೆ. ಆದರೆ ʻಸತಿʼ ಎಂಬ ಪದಕ್ಕೆ ʻಹೆಂಡತಿʼ ಎಂಬ ಅರ್ಥದ ಜೊತೆಗೆ ಅದಕ್ಕಿದ್ದಂತೆ ʻಒಡತಿʼ ಮುಖ್ಯಸ್ಥೆʼ ʻನಾಯಕಿʼ ಇತ್ಯಾದಿ  ಅರ್ಥಗಳು ಇಲ್ಲ. ಹೀಗಾಗಿ ಯಾವುದಾದರೂ ಪುರುಷನನ್ನು ʻನೀನು ದೇಶಕ್ಕೆ ಪತಿʼ ಎಂದಾಗ ಅವರ ಗೌರವಕ್ಕೆ ಯಾವುದೇ ಚ್ಯುತಿ ಆಗುವುದಿಲ್ಲ. ಆದರೆ ಯಾವುದಾದರೂ ಮಹಿಳೆಯನ್ನು ನೀನು ʻದೇಶಕ್ಕೇ ಸತಿʼ ಎಂದು ಕರೆದಾಗ ಅದು ಅವರ ಗೌರವಕ್ಕೆ ಧಕ್ಕೆ ತರುವ ಅಂಶವೇ ಆಗಿಬಿಡುತ್ತದೆ.

ಇಂಗ್ಲಿಷಿನಲ್ಲಿ ರಾಷ್ಟ್ರಪತಿಗೆ President ಎಂದು ಕರೆಯುವುದರಿಂದ ಮತ್ತು ಅದು ಇಂಗ್ಲಿಷಿನಲ್ಲಿ ಗಂಡಸು ಹೆಂಗಸು ಇಬ್ಬರೂ ತೊಡಬಹುದಾದ ಜಿನ್‌ಪ್ಯಾಂಟಿನಂತಹ ಉಭಯಬಳಕೆಯ Commoń ಜೆಂಡರ್‌ ಆಗಿರುವುದರಿಂದ ಅಲ್ಲಿ ಸಮಸ್ಯೆಯೇ ಇರಲಿಲ್ಲ. ಆದರೆ ಕನ್ನಡಕ್ಕೆ ಬಂದಾಗ ಅದು ಸೀರೆಯೋ ಪಂಚೆಯೋ ಎಂದು ಚರ್ಚೆಯೊಂದು ಆರಂಭವಾಗುವುದು ಸ್ವಾಭಾವಿಕವೇ. ಆದರೆ ಈ ಗೊಂದಲಕ್ಕೆ ತೆರೆಯೆಳೆಯುವ ಕ್ರಮವಾಗಿ ಆಗ ಮೊಟ್ಟಮೊದಲು ʻರಾಷ್ಟ್ರಪತಿʼ ಎಂಬ ಪದವನ್ನು ಕೂಡ ನಮ್ಮ ಭಾಷೆಗಳಲ್ಲಿ ಇಲ್ಲದ ʻಕಾಮನ್‌ ಜೆಂಡರ್‌ʼ ರೀತಿಯಲ್ಲಿಯೇ ಅಂದರೆ ಜಿನ್‌ ಪ್ಯಾಂಟ್‌ ರೀತಿಯಲ್ಲಿಯೇ ಬಳಸಲು ನಿರ್ಧರಿಸಲಾಯಿತು. ಹಾಗಾಗಿ ದ್ರೌಪದಿ ಮುರ್ಮು ಅವರು ಆ ಸ್ಥಾನಕ್ಕೆ ಏರಿದಾಗ ಆ ಬಗ್ಗೆ ಚರ್ಚೆ ಏಳಲಿಲ್ಲ.

ಸಾಮಾಜಿಕ ಸ್ಥಾನಮಾನವನ್ನು ಅಧಿಕಾರದ ಸ್ಥಾನವನ್ನು ಸೂಚಿಸುವ ಬಹುತೇಕ ಎಲ್ಲ ಇಂಗ್ಲಿಷ್‌ ಪದಗಳು ಅಂದರೆ ಉದ್ಯೋಗಗಳ ಹೆಸರುಗಳು ಇಂಗ್ಲಿಷಿನಲ್ಲಿ ಕಾಮನ್‌ ಜೆಂಡರ್‌ ವ್ಯಾಪ್ತಿಯಲ್ಲಿ ಬರುತ್ತವೆ. ʻಟೀಚರ್‌ʼ, ʻಡಾಕ್ಟರ್‌ʼ, ʻಇಂಜಿನಿಯರ್‌ʼ, ʻಡ್ರೈವರ್‌ʼ ಈ ಎಲ್ಲ ಪದಗಳೂ ಜಿನ್‌ಪ್ಯಾಂಟುಗಳೇ. ಆದರೆ ಕನ್ನಡದಲ್ಲಿ ಇಂಗ್ಲಿಷಿನ Common Gender ಗೆ ಸರಿಸಮವಾಗಿ ʻಸಾಮಾನ್ಯಲಿಂಗʼ ಎಂಬುದು ಇಲ್ಲ. ಇರುವ ಮೂರು ಲಿಂಗಗಳಲ್ಲಿ ಈ ಉದ್ಯೋಗದ ಹೆಸರುಗಳನ್ನು ನಪುಂಸಕ ಲಿಂಗಕ್ಕೆ ಸೇರಿಸಲಿಕ್ಕೆ ಬರುವುದೂ ಇಲ್ಲ. ಹಾಗಾಗಿ ಇಲ್ಲಿ ಇವನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಸೇರಿಸಲು ಅದಕ್ಕಾಗಿ ಕೆಲವು ಪದಗಳನ್ನು ಹುಟ್ಟಿಸಿಕೊಳ್ಳಲು ಪರದಾಡಬೇಕಾಗುತ್ತದೆ.

ಹೀಗೆ ಮಾಡಲು ಇದುವರೆಗೂ ಒಂದೆರಡು ಕ್ರಮಗಳನ್ನು ಅನುಸರಿಸುತ್ತಾ ಬರಲಾಗಿದೆ. ʻಡಾಕ್ಟರ್‌ʼ ಎಂಬ ಪದವನ್ನು ʻವೈದ್ಯʼ, ʻವೈದ್ಯೆʼ ಎಂದೂ ʻಟೀಚರ್‌ʼ ಎಂಬ ಪದವನ್ನು ʻಶಿಕ್ಷಕʼ, ʻಶಿಕ್ಷಕಿʼ ಎಂದೂ ಹೋಳುಮಾಡಿಕೊಳ್ಳುವುದು ಇದರಲ್ಲಿ ಒಂದು ಪದ್ಧತಿ. ಈ ಪದಗಳನ್ನು ಗಂಡು ಹೆಣ್ಣು ಇಬ್ಬರಿಗೂ ಬಹುವಚನಮಾಡಿ ಬಳಸುವುದು ಇನ್ನೊಂದು ಪದ್ಧತಿ. ಉದಾಹರಣೆಗೆ ʻಟೀಚರ್‌ʼ ಎಂಬ ಪದವನ್ನು ʼಶಿಕ್ಷಕರುʼ ಎಂದು ಬಹುವಚನ ಮಾಡಿದರೆ ಅದು ಜಿನ್‌ಪ್ಯಾಂಟ್‌ ಪದವಾಗಿಬಿಡುತ್ತದೆ. ಇಬ್ಬರಿಗೂ ಬಳಕೆಗೆ ಬರುತ್ತದೆ ಮಾತ್ರವಲ್ಲ ಒಂದಿಷ್ಟು ಗೌರವಯುತವಾಗಿ ಮಾತಾಡಿದಂತೆಯೂ ಆಗುತ್ತದೆ. ಮೊದಲನೆಯದು ಒಂದಿಷ್ಟು ತ್ರಾಸದಾಯಕವಾದರೆ ಈ ಎರಡನೆಯದು ಸರಳ ಮತ್ತು ಸುಲಭವಾದದ್ದು.

ಇವೆರಡರ ಜೊತೆಗೆ ಇನ್ನೂ ಎರಡು ಕ್ರಮಗಳನ್ನು ಈಗ ಹೊಸದಾಗಿ ಅನುಸರಿಸಲಾಗುತ್ತಿದೆ. ಅವುಗಳಲ್ಲಿ ಮೊದಲನೆಯದು ಪುರುಷ ಅಥವಾ ಸ್ತ್ರೀಲಿಂಗವಾಚಿಯಾಗಿರುವ ಪದವನ್ನು ಅದು ಇದ್ದಹಾಗೆ ಇಟ್ಟುಕೊಂಡು ಎರಡೂ ಲಿಂಗದ ವ್ಯಕ್ತಿಗಳಿಗೂ ಧಾರಾಳವಾಗಿ  ಬಳಸುವುದು. ಇದು ಒಂದರ್ಥದಲ್ಲಿ ಪಂಚೆ ಗಂಡಸರ ಉಡುಪು ಸೀರೆ ಹೆಂಗಸರ ಉಡುಪು ಎಂಬುದನ್ನು ಮಾನಸಿಕವಾಗಿ ತಲೆಯಿಂದ ತಗೆದುಹಾಕಿ ಯಾರು ಯಾವುದನ್ನಾದರೂ ಉಡಬಹುದು ತಪ್ಪೇನಿಲ್ಲ ಎನ್ನುವ ಪರಿ. ‌ ನಮ್ಮ ರಾಷ್ಟ್ರಪತಿ ಪದದ ಗೊಂದಲದ ಸಂದರ್ಭದಲ್ಲಿ ಇದೇ ಮಾರ್ಗವನ್ನು ಅನುಸರಿಸಲಾಗಿದೆಯಲ್ಲ. ಹೀಗಾಗಿ ʻನಾನು ಒಬ್ಬ ಶಿಕ್ಷಕ ಆಗಿ ಕೆಲಸಮಾಡುತ್ತಿದ್ದೇನೆʼ. ʻನಾನು ಒಬ್ಬ ಕವಿʼ ಎಂದು ಮಹಿಳೆಯರು ಹೇಳುವುದನ್ನು ತಪ್ಪೆಂದು ಈಗ ಪರಿಗಣಿಸುತ್ತಿಲ್ಲ; ಬದಲಾಗಿ ಅಂತಹ ಪ್ರಯೋಗಗಳನ್ನು ಬೆಂಬಲಿಸಲಾಗುತ್ತಿದೆ. 

ಇದರ ಮುಂದಿನದ್ದು ಈಗ ಬಳಕೆಯಲ್ಲಿರುವ ಲಿಂಗವಾಚಿಯಾಗಿರುವ ಪದಗಳನ್ನು ಆಪರೇಷನ್‌ ಮಾಡಿ  ಅವುಗಳಲ್ಲಿನ ಲಿಂಗತ್ವವನ್ನು ತೆಗೆದುಹಾಕಿ ʻಗಂಡುʼ ʻಹೆಣ್ಣುʼ ಎಂದು ಗೊತ್ತಾಗದಂತೆ ʻನಿರ್ಲಿಂಗಪದʼಗಳನ್ನಾಗಿ ಅಂದರೆ ʻಜಿನ್‌ಪ್ಯಾಂಟ್ ಪದʼಗಳನ್ನಾಗಿ ರೂಪಾಂತರಿಸುವುದು. ಇದು ಇಂಗ್ಲಿಷಿನಲ್ಲಿ ಈಗ ಇದು ಹೆಚ್ಚು ವೇಗವಾಗಿ ಬೆಳೆಯುತ್ತಿರುವ ವಿಧಾನ. ಈ  ಉದಾಹರಣೆಗಳನ್ನು ಗಮನಿಸಿ:  `Chairman' `Spokesman' `Head Master' ʻHouse Wifeʼ ಮುಂತಾದ ಲಿಂಗವಾಚಿ ಪದಗಳನ್ನು ಹೀಗೆ ಆಪರೇಷನ್ ಮಾಡಿ ಈಗ  ಅವನ್ನು `Chairperson' `Spokesperson' `Head of the School' ʻHouse Keeperʼ (House Maker)  ಹೀಗೆ ನಿರ್ಲಿಂಗಪದಗಳನ್ನಾಗಿ ರೂಪಾಂತರಿಸಿಕೊಂಡು ವ್ಯಾಪಕವಾಗಿ ಬಳಸಲಾಗುತ್ತಿದೆ. ಕಾಲದ ಅಗತ್ಯವನ್ನು ನೋಡಿದರೆ ಇಂತಹ ಕೆಲಸ ಕನ್ನಡದಲ್ಲಿಯೂ ವ್ಯಾಪಕವಾಗಿ ಆಗಬೇಕಿದೆ.

ಆದರೆ ಈ ಪದಗಳ ರಚನೆ ಮತ್ತು ಬಳಕೆ ಸೈದ್ಧಾಂತಿಕ ಭಿನ್ನತೆಯ ಜೊತೆಜೊತೆಗೆ ವೈಯಕ್ತಿಕ ಭಾವನೆಗಳನ್ನೂ ಅವಲಂಬಿಸಿರುತ್ತದೆ ಎಂಬುದನ್ನೂ ನಾವು ವಿಶೇಷವಾಗಿ ಗಮನಿಸಬೇಕು. ತಮಾಸೆಗಾಗಿ ಇಲ್ಲಿ ಒಂದು ಉದಾಹರಣೆಯನ್ನು ನಾನು ಕೊಡಬಹುದು ಅನ್ನಿಸುತ್ತದೆ. ಪ್ರೌಢಶಾಲೆಯೊಂದಕ್ಕೆ ಒಂದು ಸಲ ನಿವೃತ್ತಿಯ ಅಂಚಿನಲ್ಲಿರುವ ಸೌಮ್ಯ ಸ್ವಭಾವದ ಮಹಿಳೆಯೊಬ್ಬರು ಮುಖ್ಯೋಪಾಧ್ಯಾಯರಾಗಿ ಬಡ್ತಿಹೊಂದಿ ಬಂದರು. ಅವರು ಬಂದಾಗ ಶಾಲೆಯಲ್ಲಿದ್ದ ʻHead Masterʼ ಎಂಬ ಸೀಲನ್ನು ಬಳಸಲು ಅವರಿಗೆ ಏಕೋ ಸಂಕೋಚವಾಯಿತೋ ಏನೋ ಗೊತ್ತಿಲ್ಲ; ಅದರ ಬದಲು ʻHead Mistressʼ ಎಂಬ ಸೀಲನ್ನು ಹೊಸದಾಗಿ ಮಾಡಿಸಿಕೊಂಡು ಬಳಸಲಾರಂಭಿಸಿದರು. ಅವರು ಸ್ವಲ್ಪ ದಿನಗಳಲ್ಲಿ ನಿವೃತ್ತಿಯೂ ಆದರು.

ನಿವೃತ್ತಿಯಾಗುತ್ತಿದ್ದಂತೆ ಆ ಸ್ಥಾನಕ್ಕೆ ಮತ್ತೊಬ್ಬ ಮಹಿಳೆಯೇ ಬಂದರು. ಈಗ ಬಂದ ಮಹಿಳೆ ಹರೆಯದವರಾಗಿದ್ದು ಉತ್ತಮ ಅಂಗಸೌಷ್ಠವ ಹೊಂದಿದ್ದು, ದೃಢಕಾಯರಾಗಿಯೂ ಇದ್ದು, ನೋಡಲೂ ನಾಟಕದ ಕಿತ್ತೂರು ಚೆನ್ನಮ್ಮನಂತೆ ʻಸ್ಟ್ರಾಂಗ್‌ ಲೇಡಿʼ ಆಗಿಯೇ ಕಾಣುತ್ತಿದ್ದರು. ಅವರು ಬಂದ ದಿನ ಅವರ ಟೇಬಲ್‌ ಮೇಲೆ ಎರಡೂ ಸೀಲುಗಳೂ ಇದ್ದವು. ಬಿಳಿಹಾಳೆಯ ಮೇಲೆ ಒಮ್ಮೆ ಅವೆರಡನ್ನೂ ಹಾಕಿ ನೋಡಿದ ಅವರು ಅವುಗಳಲ್ಲಿ ʻHead Mistressʼ ಎಂದು ಇದ್ದ ಸೀಲನ್ನು ಶಾಲೆಯಲ್ಲಿದ್ದ, ʻಬಳಕೆಗೆ ಬಾರದ ವಸ್ತುಗಳುʼ ಎಂದು ಚೀಟಿ ಅಂಟಿಸಿದ್ದ ಬೀರಿಗೆ ಹಾಕಿ, ʻHead Masterʼ ಎಂದಿದ್ದ ಸೀಲನ್ನೇ ಕೈಗೆತ್ತಿಕೊಂಡು ಒಂದು ಸಲ ತದೇಕಚಿತ್ತದಿಂದ ಅದನ್ನು ನೋಡಿ ತಮ್ಮ ವ್ಯಾನಿಟಿ ಬ್ಯಾಗಿಗೆ ಹಾಕಿಕೊಂಡರು. ಅವರು ಆ ಶಾಲೆಯಲ್ಲಿ ಇರುವಷ್ಟೂ ದಿನವೂ ಅದೇ ಸೀಲನ್ನು ಬಳಸಿದರು. ಇನ್ನೂ ಒತ್ತುಕೊಟ್ಟು ಗಮನಿಸಬೇಕಾದ ಸಂಗತಿ ಎಂದರೆ ಅವರು ಗ್ರೀನ್‌ ಇಂಕಿನಲ್ಲಿ ಸಹಿಮಾಡುವಾಗ ಸೀಲಿನಲ್ಲಿ ಇರುವ ʻMasterʼ ಎಂಬ ಪದದ ಮೇಲೆಯೇ ಐದಾರು ಅಡ್ಡಾದಿಡ್ಡಿ ಗೆರೆಗಳು ಬರುವಂತೆ ಸಹಿಮಾಡುತ್ತಿದ್ದರು. ಅವರು ಅಲ್ಲಿ ಸಹಿಮಾಡುವಾಗ ಯಾರಿಗೋ ಕೆನ್ನೆಗೆ ಪಟಪಟ ಹೊಡೆಯುತ್ತಿದ್ದಾರೇನೋ ಅನ್ನುವಂತೆ ಅವರ ಮುಖದ ಮೇಲಿನ ಭಾವರೇಖೆಗಳು ಕಾಣುತ್ತಿದ್ದವು!

ಸಾರ್ವಜನಿಕ ಸ್ಥಳಗಳಲ್ಲಿ ಅದೂ ಅಧಿಕಾರದ ಸ್ಥಳಗಳಲ್ಲಿ, ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಅವರು ಸಾಕಷ್ಟು ಸಮರ್ಥರಿದ್ದರೂ ಅವರನ್ನು ತುಸು ಅಸಡ್ಡೆಯಿಂದ ಕಾಣುವ, ಗಂಡಸರಿಗೆ ಕೊಡುವಷ್ಟು ಮರ್ಯಾದೆಯನ್ನು ಕೊಡದಿರುವ ಪರಿಸ್ಥಿತಿ ಈಗಲೂ ಕಡಿಮೆಯಾದರೂ ನಮ್ಮಲ್ಲಿ ಇರುವುದು ಸುಳ್ಳಲ್ಲ. ಪರಿಸ್ಥಿತಿ ಹೀಗಿರುವಾಗ ಇಂತಹ ಅಧಿಕಾರದಲ್ಲಿರುವ ಮಹಿಳೆಯರು ತಾವೇ ಮುಂದಾಗಿ ಈ ಸ್ಥಾನದಲ್ಲಿ ಕೆಲಸ ಮಾಡುತ್ತಿರುವ ʻನಾನು ಮಹಿಳೆʼ ಎಂದು ಅನಗತ್ಯವಾಗಿ ತೋರಿಸಿಕೊಳ್ಳುವ ಕೆಲಸವನ್ನು ಏಕಾದರೂ ಮಾಡಬೇಕು? ಈ ಹಿನ್ನಲೆಯಲ್ಲಿ ಅವರು ʻಮುಖ್ಯೋಪಾಧ್ಯಾಯನಿʼ ʻಪ್ರಾಂಶುಪಾಲೆʼ ಇತ್ಯಾದಿ ಸೀಲುಗಳನ್ನು ಮಾಡಿಸಿಕೊಳ್ಳುವುದನ್ನು ಬಿಟ್ಟುಬಿಡುವುದೇ ಒಳ್ಳೆಯದು. ಇದು ಅವರು ಕೆಟ್ಟಪದ್ದತಿಯೊಂದಕ್ಕೆ ಅಂತ್ಯಹಾಡುವ ದಿಟ್ಟಹೆಜ್ಜೆಯೇ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ.

ಈ ಎಲ್ಲ ವಿವರಣೆಗಳನ್ನು ನೋಡಿದ ಮೇಲೆ ʻಅಧ್ಯಕ್ಷʼ ಪದಕ್ಕೆ ಮಹಿಳೆಯರಿಗೆ ಏನು ಬಳಸಬೇಕು ʻಅಧ್ಯಕ್ಷೆʼ ʻಅಧ್ಯಕ್ಷಿಣಿʼ ಯಾವುದು ಸರಿ ಎಂಬ ಲೇಖನದ ಆರಂಭಿಕ ಪ್ರಶ್ನೆಗ ಉತ್ತರ ತಕ್ಕಮಟ್ಟಿಗೆ ಹೊಳೆಯುತ್ತದೆ. ಅದಕ್ಕೂ ಮೊದಲು ಈ ʻಅಧ್ಯಕ್ಷʼ ಪದದ ಅರ್ಥವನ್ನು ಸೂಕ್ಷ್ಮವಾಗಿ ನೋಡಬೇಕು. ʻಅಧ್ಯಕ್ಷʼ ಎಂಬುದು ಮೇಲುನೋಟಕ್ಕೆ ಒಂದು ಸ್ವತಂತ್ರಪದವಾಗಿ ಕಂಡರೂ ವಾಸ್ತವದಲ್ಲಿ ಅದು ಒಂದು ಕೂಡುಪದ. ಸಂಸ್ಕೃತದ ʻಅಧಿʼ ಮತ್ತು ʻಅಕ್ಷʼ ಎಂಬ ಪದಗಳ ದಾಂಪತ್ಯದಿಂದ ಹುಟ್ಟಿದ ಕೂಸು!.

ʻಅಧಿʼ ಎಂಬ ಪದಕ್ಕೆʻಮೇಲೆʼ ʻಮೊದಲುʼ ʻಮುಖ್ಯವಾದʼ ಇತ್ಯಾದಿ ಅರ್ಥಗಳಿವೆ.(ಅಧಿಕಾರ, ಅಧಿಪತ್ಯ, ಅಧಿದೇವತೆ ಇತ್ಯಾದಿ ಪದಗಳನ್ನು ನೆನಪಿಗೆ ತಂದುಕೊಳ್ಳಿ) ʻಅಕ್ಷʼ ಎಂಬುದು ʻಅಕ್ಷಿ' ಪದದಿಂದ ಬಂದಿರುವಂಥದ್ದು ಮತ್ತು ʻಅಕ್ಷವನ್ನು ಉಳ್ಳವನುʼ ಅಂದರೆ 'ಕಣ್ಣುಳ್ಳವನು' ಎಂಬುದು ಅದರ ಅರ್ಥ. ಹೀಗಾಗಿ 'ಅಧ್ಯಕ್ಷ' ಪದದ ಅಕ್ಷರಶಃ ಅರ್ಥ ʻಮುಖ್ಯವಾದ ಕಣ್ಣುಳ್ಳವನುʼ ಎಂದಾಗುತ್ತದೆ. ಸಂದರ್ಭಾನುಸಾರ ಇದರ ಅರ್ಥವನ್ನು ʻಮೇಲೆ ನಿಂತು ಎಲ್ಲದನ್ನೂ ನೋಡುವವನುʼ ʻಮುಂದೆನಿಂತು ಎಲ್ಲವನ್ನೂ ಮಾಡಿಸುವವನು` ʻಸಮಗ್ರ ಉಸ್ತುವಾರಿ ವಹಿಸುವವನು' ಹೀಗೆ  ಒಂಚೂರು ಅತ್ತ ಇತ್ತ ಎಳೆದುಕೊಳ್ಳಬಹುದು.

ಹೀಗಾಗಿ ಮಹಿಳೆಯ ಸಂದರ್ಭದಲ್ಲಿ ಕೂಡ ಅರ್ಥ ಬರುವಂತಹ ಪದವನ್ನೇ ಬಳಸಬೇಕಾಗುತ್ತದೆ. ಇದಕ್ಕೆ  ಮೇಲೆ  ವಿರಿಸಿದ ಯಾವುದೇ ವಿಧಾನವನ್ನು ನಾವು ಬಳಸಬಹುದಾಗಿದೆ. ʻಅಧ್ಯಕ್ಷೆʼ ಮತ್ತು ʻಅಧ್ಯಕ್ಷಿಣಿʼ ಪದಗಳನ್ನೇ ಬಳಸುವುದಾದರೆ ಅವುಗಳು ಧ್ವನಿಸುವ ಸೂಕ್ಷ್ಮ ವ್ಯತ್ಯಾಸದ ಕಡೆಗೂ ಗಮನ ಇರಬೇಕು. ʻಅಧ್ಯಕ್ಷೆʼ ಎಂಬ ಪದ ʻಅಧ್ಯಕ್ಷಸ್ಥಾನದಲ್ಲಿರುವ ಮಹಿಳೆʼ ಎಂಬ ಅರ್ಥ ಧ್ವನಿಸಿದರೆ ʻಅಧ್ಯಕ್ಷಿಣಿʼ ಎಂಬ ಪದ ʻಅಧ್ಯಕ್ಷನ ಹೆಂಡತಿʼ ಎನ್ನುವ ಅರ್ಥವನ್ನು ಧ್ವನಿಸುತ್ತದೆ. ಸಂದರ್ಭನೋಡಿ ಇವನ್ನು ಬಳಸಬೇಕು. ಇನ್ನೊಂದು ವಿಧಾನ ʻಅಧ್ಯಕ್ಷರುʼ ಎಂಬ ಬಹುವಚನ ಪದ ಮಾಡಿದರೆ ಅದು ಪುರುಷರಂತೆ ಮಹಿಳೆಯರಿಗೂ ಆಗುತ್ತದೆ. ಇವೆರಡರ ಜೊತೆಗೆ ಮೂರನೆಯ ವಿಧಾನವಾಗಿ ರಾಷ್ಟ್ರಪತಿ ಪದವಿಯಂತೆ ʻಅಧ್ಯಕ್ಷʼ ಎಂಬುದನ್ನೇ ಮಹಿಳೆಯರಿಗೂ ಬಳಸಬಹುದು. ಏನೂ ತಪ್ಪಾಗುವುದಿಲ್ಲ.

ಡಾರಾಜೇಂದ್ರ ಬುರಡಿಕಟ್ಟಿ

14-10-2025

 

6 comments:

  1. ಉತ್ತಮ ಬರೆಹ. ಸಂಪೂರ್ಣವಾಗಿ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್.

    ReplyDelete
    Replies
    1. ತಮ್ಮ ಪ್ರೀತಿಯ ಓದಿಗಾಗಿ ಧನ್ಯವಾದಗಳು - ರಾಬು

      Delete
  2. Replies
    1. ತಮ್ಮ ಪ್ರೀತಿಯ ಓದಿಗಾಗಿ ಧನ್ಯವಾದಗಳು - ರಾಬು

      Delete
  3. ಬಹಳ ಉತ್ತಮವಾಗಿ ಹೇಳಿದ್ದೀರಿ ಸರ್.,🙏🙏

    ReplyDelete
  4. ತಮ್ಮ ಪ್ರೀತಿಯ ಓದಿಗಾಗಿ ಧನ್ಯವಾದಗಳು - ರಾಬು

    ReplyDelete