ಸಂಘಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲವೇ? ʻಹೌದುʼ ಎಂದಾದರೆ ಏಕೆ?
ವಿದ್ಯಾರ್ಥಿಯೊಬ್ಬರು, “ಈಗ ದೇಶಭಕ್ತಿಯ ಬಗ್ಗೆ ಬಹಳಷ್ಟು ದೊಡ್ಡದಾಗಿ ಮಾತನಾಡುವ ಆರ್ ಎಸ್ ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲವಂತೆ ಹೌದೇ? ಹೌದಾದರೆ ಅದಕ್ಕೆ ಕಾರಣಗಳೇನು?” ಎಂದು ಕೇಳಿದ್ದಾರೆ. ಈ ವಿದ್ಯಾರ್ಥಿಯು ಪ್ರಶ್ನೆ ಕೇಳಿರುವುದು ಕುಹಕಕ್ಕೆ ಎಂದು ಅನ್ನಿಸದೇ ವಿಷಯವನ್ನು ತಿಳಿದುಕೊಳ್ಳುವ ಹಂಬಲದಿಂದಲೇ ಇರಬಹುದು ಅನ್ನಿಸಿದ್ದರಿಂದ ಮತ್ತು ಇದು ಈ ವಿದ್ಯಾರ್ಥಿಯಂತೆ ಇತರ ವಿದ್ಯಾರ್ಥಿಗಳಿಗೂ ಉಪಯೋಗವಾದೀತು ಎಂದು ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗುತ್ತಿದೆ.
ವಿದ್ಯಾರ್ಥಿಯು ಕೇಳಿರುವ ಮೊದಲ ಖಚಿತತೆಯ ಪ್ರಶ್ನೆಗೆ ಉತ್ತರ ʻಹೌದುʼ ಎಂಬುದು. ಇನ್ನು ಎರಡನೆಯ ಪ್ರಶ್ನೆ ʻಏಕೆʼ ಎಂಬುದು ಮಾಹಿತಿ ಪ್ರಶ್ನೆಯಾಗಿದ್ದು ಅದಕ್ಕೆ ಒಂದಿಷ್ಟು ವಿವರಣೆ ಬೇಕಾಗುತ್ತದೆ. ಅದು ಹೀಗಿದೆ: ಆರ್ ಎಸ್ ಎಸ್ ಸ್ಥಾಪನೆ ಆದದ್ದು 1925 ರಲ್ಲಿ. ಆಗ ನಮ್ಮ ಸ್ವಾತಂತ್ರ್ಯ ಹೋರಾಟ ಮೂರನೆಯ ಮತ್ತು ಅಂತಿಮ ಘಟ್ಟದಲ್ಲಿ ನಡೆಯುತ್ತಿತ್ತು. ಇತಿಹಾಸಕಾರರು 1915ರ ಗಾಂಧೀ ಪ್ರವೇಶದ ನಂತರದ ಸ್ವಾತಂತ್ರ್ಯ ಹೋರಾಟವನ್ನು ಅಧ್ಯಯನದ ಅನುಕೂಲಕ್ಕಾಗಿ ʻಗಾಂಧೀಯುಗʼ ಎಂದು ಕರೆಯುತ್ತಾರೆ. ಈ ಯುಗದ ಹೋರಾಟ ಮೊದಲೆರಡು ಹಂತಗಳ ಹೋರಾಟಕ್ಕಿಂತ ವಿಶೇಷವಾದದ್ದು ಏಕೆಂದರೆ ಅದು ಭಾರತದ ದೊಡ್ಡ ಮಟ್ಟದ ಸಾಮಾನ್ಯ ಜನರನ್ನು ಹೋರಾಟದಲ್ಲಿ ತೊಡಗಿಸಿಕೊಂಡದ್ದು. ಅಂದರೆ ಸ್ವಾತಂತ್ರ್ಯ ಚಳವಳಿಯು ʻಜನಚಳವಳಿʼಯಾಗಿ ರೂಪಗೊಂಡಿದ್ದ ಕಾಲವದು.
ಈ ಚಳವಳಿಗೆ ದೇಶದ ಜನವೆಲ್ಲ ಗಾಂಧೀಜಿಯ ನೇತೃತ್ವದಲ್ಲಿ ಹೋರಾಟ ನಡೆಸುತ್ತಿರಬೇಕಾದರೆ ಈ ಆರ್ ಎಸ್ ಎಸ್ ನವರು ಅಂತಹ ಹೋರಾಟಕ್ಕೆ ಪ್ರವೇಶ ಮಾಡಲೂ ಇಲ್ಲ; ಬೆಂಬಲವನ್ನೂ ಕೊಡಲೂ ಇಲ್ಲ. ಇನ್ನೂ ವಿಷಾಧದ ಸಂಗತಿ ಎಂದರೆ ಒಂದು ಕಡೆ ಗಾಂಧೀಜಿಯ ನೇತೃತ್ವದಲ್ಲಿ ಇನ್ನೊಂದೆಡೆ ಸುಭಾಷ್ ಚಂದ್ರ ಭೋಸ್ ಅವರ ನೇತೃತ್ವದಲ್ಲಿ ಬೇರೆ ಬೇರೆಯಾಗಿ ನಡೆಯುತ್ತಿದ್ದ ಬ್ರಿಟೀಷರ ವಿರುದ್ಧದ ಹೋರಾಟಗಳಿಗೆ ಕೂಡ ಇವರು ದ್ರೋಹ ಬಗೆದರು. ಅವುಗಳನ್ನು ಒಂದೊಂದಾಗಿ ನೋಡೋಣ.
ಮೊದಲನೆಯದಾಗಿ ಇವರು ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಗ್ಗದಿರಲು ಕಾರಣವೇನು ಎಂಬುದನ್ನು ತಿಳಿಯೋಣ. ಭಾರತ ಸ್ವಾತಂತ್ರ್ಯ ಚಳವಳಿಯ ಮೂರನೆ ಘಟ್ಟವಾದ ಗಾಂಧೀಯುಗದ ಚಳವಳಿಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದು ಒಂದು ಸಂಗತಿ ಏನೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತ ಜಾರಿಗೆ ಬರುತ್ತದೆ ಎಂಬುದು. ಪ್ರಜಾಪ್ರಭುತ್ವದ ಬಗ್ಗೆ ಆರ್ ಎಸ್ ಎಸ್ ನವರಿಗೆ ಬಹುದೊಡ್ಡ ವಿರೋಧವಿತ್ತು.
ಏಕೆಂದರೆ ಪ್ರಜಾಪ್ರಭುತ್ವ ಬಂದರೆ ಹಿಂದೂ ಸಮಾಜದ ಭದ್ರತೆ ಕುಸಿಯುತ್ತದೆ ಎಂಬುದು ಅವರ ಆತಂಕವಾಗಿತ್ತು. ಮನುಧರ್ಮಶಾಸ್ತ್ರದ ಆಧಾರದಲ್ಲಿ ಆಡಳಿತ ಇರಬೇಕು ಎಂಬುದು ಈಗಿನಂತೆಯೇ ಆಗಲೂ ಅವರು ಬಯಸುತ್ತಿದ್ದರು. ಮನುಧರ್ಮಶಾಸ್ತ್ರದ ಪ್ರಕಾರ ಮನುಷ್ಯನ ಹುಟ್ಟಿನ ಆಧಾರದ ಮೇಲೆ ಸಮಾಜದಲ್ಲಿ ನಮ್ಮ ಸ್ಥಾನಮಾನಗಳು ನಿರ್ಧಾರವಾಗುತ್ತವೆ. ಅದರ ಪ್ರಕಾರ ಮನುಷ್ಯರೆಲ್ಲರೂ ಎಂದಿಗೂ ಸಮಾನರಲ್ಲ. ಸಮಾನರಾಗಿರಬಾರುದು ಕೂಡ.
ಜನಸಾಮಾನ್ಯರ ಶಕ್ತಿ ಮತ್ತು ಇಚ್ಚೆಯಂತೆ ನಡೆಯುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸುತ್ತಾ ಸಂಘ ಪರಿವಾರಿಗಳ ಗುರೂಜಿʼ ಎಂ. ಎಸ್. ಗೋಲ್ವಾಲ್ಕರ್ ಅವರು ಸಾಮಾನ್ಯ ಮನುಷ್ಯನ ಸ್ವಾತಂತ್ರ್ಯ ಮತ್ತು ಸಾಮರ್ಥ್ಯವನ್ನು ಕಡೆಗಣಿಸುವುದು ಹೀಗೆ: “ಮನುಷ್ಯರು ಬರಿಯ ಪ್ರಾಣಿಗಳು. ಬರಿಯ ಭೌತಿಕ ವಸ್ತುಗಳು ಮಾತ್ರ. ಆದರೆ ಅವರು ಒಬ್ಬರನ್ನೊಬ್ಬರು ತಿಂದುಹಾಕದಿರುವುದು ತಲೆಯ ಮೇಲಿನ ರಾಜದಂಡದ ಹೆದರಿಕೆಯಿಂದ ಮಾತ್ರ. ಈ ಅಧಿಕಾರ ಅಥವಾ ಶಕ್ತಿ ಇಲ್ಲದಿದ್ದಾಗ ಅವರು ಕಚ್ಚಾಡದೇ ಹೇಗಿರಬಲ್ಲರು? ಮನುಷ್ಯ ಪ್ರಾಣಿ ಎಂದ ಮೇಲೆ ಅವನು ದೈಹಿಕ ವಾಸನೆಗಳ ದಾಸ. ವಾಸನೆಗಳೋ ತೃಪ್ತಿಪಡಿಸಿದಷ್ಟೂ ಪ್ರಭಲವಾಗುತ್ತವೆ. ಹೀಗಿರುವಾಗ ತೃಪ್ತಿಯಿಲ್ಲದ ಮನುಷ್ಯ ಇತರರೊಂದಿಗೆ ಶಾಂತಿ ಪ್ರೇಮಗಳಿಂದ ಬಾಳುವುದು ಹೇಗೆ? ಅಲ್ಲದೆ ಇತರ ಪ್ರಾಣಿಗಳಿಗಿಂತ ಚತುರನಾದ ಮನುಷ್ಯ ತನ್ನ ವೈಯಕ್ತಿಕ ಅಗತ್ಯಗಳು ಪೂರೈಕೆಯಾದ ನಂತರವೂ ಕೊಟ್ಟಿಗೆಯಲ್ಲಿನ ನಾಯಿಯಂತೆ…” ಹೀಗೆ ಮುಂದುವರೆಯುತ್ತದೆ ಅವರ ವಾದ ಸರಣಿ.
ಅಂದರೆ ಅವರಿಗೆ ಸಾಮಾನ್ಯ ಜನ ಲೆಕ್ಕಕಿಲ್ಲ. ಅವರ ಮೇಲೆ ಬಹುಶಃ ದೇವರು ಕಳಿಸುವ ಒಬ್ಬ ಸರ್ವಾಧಿಕಾರಿ ಆಡಳಿತ ನಡೆಸಬೇಕೇನೋ…
ಆದರೆ ಪ್ರಜಾಪ್ರಭುತ್ವ ಮಾದರಿ ಸಂಘದ ಈ ವಿಚಾರಧಾರೆಗೆ ವಿರುದ್ಧವಾದದ್ದು. ಅದು ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದು ಸಾರುವ ವ್ಯವಸ್ಥೆಮತ್ತು ಜನಸಾಮಾನ್ಯರ ಶಕ್ತಿ ಮತ್ತು ಇಚ್ಚೆಯನ್ನು ಗೌರವಿಸುವ ವ್ಯವಸ್ಥೆ. “ಪ್ರಜಾಪ್ರಭುತ್ವ ಬಂದರೆ ನಮ್ಮ ಮನೆಯಲ್ಲಿ ಕೊಟ್ಟಿಗೆ ಗುಡಿಸಲಿಕ್ಕೆ, ದನಕರು ಮೇಯಿಸಲಿಕ್ಕೆ, ಹೊಲಗಳಲ್ಲಿ ಕಷ್ಟದ ದೈಹಿಕ ಶ್ರಮ ಮಾಡಲಿಕ್ಕೆ, ಅಷ್ಟೇ ಏಕೆ ನಮ್ಮ ಮಲಮೂತ್ರಗಳನ್ನು ಹೊತ್ತು ಹೊರಹಾಕಲಿಕ್ಕೆ ಇರುವ ಜಾತಿಗಳ ಜನರೆಲ್ಲ ಅಧಿಕಾರದ ಸ್ಥಾನಕ್ಕೆ ಏರುವ ಸಾಧ್ಯತೆ ಉಂಟಾಗುತ್ತದೆʼ ಅವರ ಮೇಲೆ ನಮ್ಮ ಅಧಿಕಾರ ತಪ್ಪಿಹೋಗುತ್ತದೆ ಮತ್ತು ಅವರೆದುರು ನಾವು ಕೈಕಟ್ಟಿ ನಿಲ್ಲಬೇಕಾಗುತ್ತದೆ” ಎಂಬುದು ಈ ಪರಿವಾರದ ಮೇಲ್ಜಾತಿಯ ಜನರಿಗೆ ಇದ್ದ ಬಹುದೊಡ್ಡ ಆತಂಕವಾಗಿತ್ತು. ಇದರಿಂದ “ಅಂತಹ ಪ್ರಜಾಪ್ರಭುತ್ವ ಮಾದರಿಯ ಆಡಳಿತವನ್ನು ತರುವ ಸ್ವಾತಂತ್ರ್ಯ ಹೋರಾಟ ನಮಗೆ ಬೇಕಾಗಿಲ್ಲ” ಎಂದು ಅವರಿಗೆಲ್ಲ ಅನ್ನಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ಹೀಗಾಗಿ ಈ ಸಂಘಟನೆಯ ನಾಯಕರು ತಮ್ಮನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲಿಲ್ಲ. ಮತ್ತು ತಮ್ಮ ಅನುಯಾಯಿಗಳನ್ನೂ ತೊಡಗಿಕೊಳ್ಳಲು ಬಿಡಲಿಲ್ಲ. ಗಾಂಧೀಜಿಯವರು ಬ್ರಿಟೀಷರ ವಿರುದ್ಧ ಹೋರಾಡಲು ಹೋರಾಟಕ್ಕೆ ಸೇರಿಕೊಳ್ಳಿ ಎಂದು ಸಾರ್ವಜನಿಕರಿಗೆ ಕರೆಕೊಟ್ಟಾಗ ದೇಶದ ಅನೇಕ ತರುಣರು ತಾವು ವ್ಯಾಸಂಗಮಾಡುತ್ತಿದ್ದ ಶಾಲಾ ಕಾಲೇಜುಗಳನ್ನೇ ತೊರೆದು ಚಳವಳಿಗೆ ದುಮ್ಮಿಕ್ಕಿದರು. ಆ ಸಂದರ್ಭದಲ್ಲಿ ಈ ಪರಿವಾರದ ನಾಯಕರು, “ಸ್ವಾತಂತ್ರ್ಯ ಚಳವಳಿಗೆ ಸೇರಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ, ಮೊದಲು ನಮ್ಮ ಸಮಾಜ ಹಾಳಾಗುವುದನ್ನು ತಡೆಯಲು ನಿಮ್ಮ ಶಕ್ತಿ ಸಮಯಗಳನ್ನು ಬಳಿಸಿ” ಎಂದು ಕೋಣೆಯಲ್ಲಿ ಕೂರಿಸಿಕೊಂಡು ತರುಣರಿಗೆ ದುರ್ಬೋದೆ ಮಾಡುತ್ತಿದ್ದರು! ಸಮಾಜ ಹಾಳಾಗುವುದು ಎಂದರೆ ಜಾತಿವ್ಯವಸ್ಥೆಯ ಕಟ್ಟು ಹರಿದು ಎಲ್ಲರೂ ಒಂದಾಗುವುದು ಎಂದು ಇಲ್ಲಿ ಅರ್ಥ!
ಇನ್ನು ಗಾಂಧೀಜಿ ಮತ್ತು ಸುಭಾಷ್ ಚಂದ್ರರ ಹೋರಾಟಕ್ಕೆ ದ್ರೋಹಬಗೆದ ಕತೆ ಕೇಳಿ. 1942 ರಲ್ಲಿ ಗಾಂಧೀ ನೇತೃತ್ವದ ಸ್ವಾತಂತ್ರ್ಯ ಒಂದು ನಿರ್ಣಯಕ ಘಟ್ಟ ತಲುಪಿ ʼಭಾರತ ಬಿಟ್ಟು ತೊಲಗಿʼ ಚಳವಳಿ ಭರದಿಂದ ನಡೆಯುತ್ತಿರಬೇಕಾದರೆ ಹಿಂದೂ ಮಹಾಸಭಾ ಬ್ರಿಟಿಷ್ ದೊರೆಗಳ ಜೊತೆ ಸಹಕರಿಸಲು ತೀರ್ಮಾನ ಮಾಡಿತ್ತು! 1942ರಲ್ಲಿ ಕಾನ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 24ನೆಯ ಅಧಿವೇಶನದಲ್ಲಿ ಮಾತನಾಡಿದ ಸಾವರ್ಕರ್ ಅವರು ಹಿಂದೂ ಮಹಾಸಭಾದ ಕಾರ್ಯಕರ್ತರು ಬ್ರಿಟೀಷರ ಆಡಳಿತಕ್ಕೆ ಹೇಗೆ ಸಹಾಯ ಮಾಡಬೇಕು ಎಂದು ವಿವರವಾಗಿ ಮಾತನಾಡಿ ಬ್ರಿಟೀಷ್ ಆಡಳಿತ ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಮಹಾಸಭಾದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು! (ವಿವರಕ್ಕೆ ಅವರ ಭಾಷಣವನ್ನು ಓದಬಹುದು).
ಇನ್ನು ದೇಶದ ಹೊರಗೆ ಬ್ರಿಟೀಷರ ವೈರಿಗಳನ್ನುಹುಡುಕಿ ಅವರೊಂದಿಗೆ ಸ್ನೇಹಬೆಳಸಿ ಹೋರಾಟ ರೂಪಿಸಿ ಭಾರತದಿಂದ ಬ್ರಿಟೀಷ್ ಆಡಳಿತವನ್ನು ಕಿತ್ತೊಗೆಯಲೇಬೇಕು ಎಂದು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಮಾಡುತ್ತಿದ್ದ ʼಫಾರ್ವರ್ಡ ಬ್ಲಾಕ್ʼ ಸಂಘಟನೆಯ ಸುಭಾಷ್ ಚಂದ್ರ ಅವರ ಹೋರಾಟಕ್ಕೂ ಇವರು ದ್ರೋಹಬಗೆದರು. ಅತ್ತ ಸುಭಾಷ್ ಚಂದ್ರ ಭೋಸ್ ಮತ್ತು ಗಾಂಧೀಜಿ ಬ್ರಿಟೀಷರ ವಿರುದ್ಧ ಜನರನ್ನು ಒಗ್ಗೂಡಿಸಿ ಬ್ರಿಟೀಷರ ಸೈನ್ಯವನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತಿದ್ದರೆ ಇತ್ತ ಇವರೆಲ್ಲ ಬ್ರಿಟೀಷರ ಸೈನ್ಯಕ್ಕೆ ಜನರನ್ನು ಸೇರಿಸುವ ಕೆಲದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು. ಇದನ್ನು ತಿಳಿಯಬೇಕಾದರೆ ಹಿಂದೂ ಮಹಾಸಭಾದ 23ನೆಯ ವಾರ್ಷಿಕ ಅಧಿವೇಶನ ಭಾಗಲ್ಪುರದಲ್ಲಿ ನಡೆದಾಗ (1941) ಇದೇ ʼವೀರʼ ಸಾವರ್ಕರ್ ಮಾಡಿದ ಭಾಷಣವನ್ನು ನೋಡಬೇಕು.
ಈ ಭಾಷಣದಲ್ಲಿ ಸಾವರ್ಕರ್ ಯಾವುದೇ ಮುಜುಗರವಿಲ್ಲದೇ ಯುವಜನತೆಗೆ ದೊಡ್ಡಪ್ರಮಾಣದಲ್ಲಿ ಬ್ರಿಟೀಷ್ ಸೈನ್ಯಕ್ಕೆ ಸೇರಲು ಹುರುದುಂಬಿಸಿ ಕರೆಕೊಡುತ್ತಾ ಹೀಗೆ ಹೇಳುತ್ತಾರೆ, “ಮಿಲಿಯಾಂತರ ಹಿಂದೂ ಯೋಧರು ಬ್ರಿಟಿಷ್ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಗೆ ಪ್ರವಾಹದ ರೀತಿಯಲ್ಲಿ ಹಿಂದೂ ಸಂಘಟನಾವಾದಿಗಳ ಹೃದಯದೊಂದಿಗೆ ಸೇರಬೇಕು….. ಭಾರತದ ರಕ್ಷಣೆಯ ವಿಷಯದಲ್ಲಿ ಬ್ರಿಟಿಷ್ ಸರ್ಕಾರದೊಂದಿಗೆ ನಮ್ಮನ್ನು ನಾವು ಯಾವುದೇ ಅನುಮಾನವಿಲ್ಲದೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.” (ವಿವರಕ್ಕೆ ಸಾವರ್ಕರ್ ಅವರ ಭಾಷಣವನ್ನು ಓದಬಹುದು).
ಹೀಗೆ ಇಡೀ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಸಂಘಪರಿವಾರ ದ್ರೋಹವನ್ನೇ ಬಗೆಯುತ್ತಾ ಬಂದಿತು. ಆದರೆ ಈ ಪರಿವಾರ ಎಷ್ಟೇ ಅಡ್ಡಗಾಲು ಹಾಕಿದರೂ ದೇಶಕ್ಕೆ ಸ್ವಾತಂತ್ರ್ಯ ಬಂದೇ ಬಿಟ್ಟಿತು. ಆಗ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಮತ್ತು ಬದುಕಿ ಉಳಿದವರಿಗೆ ಸಹಜವಾಗಿಯೇ ದೇಶ ದೊಡ್ಡಮಟ್ಟದ ಗೌರವವನ್ನು ಸಲ್ಲಿಸತೊಡಗಿತು. ಆಗ ಈ ಸಂಘಪರಿವಾರಕ್ಕೆ ಅತ್ಯಂತ ಮುಜುಗರವಾಗತೊಡಗಿತು. ಏಕೆಂದರೆ ಈ ಹೋರಾಟದಲ್ಲಿ ತೊಡಗಿಕೊಂಡು ತಮ್ಮ ಪ್ರಾಣವನ್ನು ಕೊಟ್ಟ ಸಾವಿರಾರು ಜನರು ಇದ್ದರು. ಅವರಲ್ಲಿ ಹಿಂದೂಗಳು ಮುಸ್ಲಿಮರು ಎಲ್ಲರೂ ಇದ್ದರು. ಆದರೆ ʻತಮ್ಮವನುʼ ಎಂದು ಹೇಳಿಕೊಳ್ಳಲು ಈ ಪರಿವಾರದ ಒಬ್ಬನೂ ಇವರಿಗೆ ಇರಲಿಲ್ಲ! ಅವರು ಹೋರಟಕ್ಕೆ ಬೆಂಬಲಿಸಿದ್ದರೆ ತಾನೇ ಇರೋದು?
ಈಗ ಇದು ಹೊಸ ಒರಸೆ ಶುರುವುಮಾಡಿತು. ಪೋಲೀಸನಾಗಿರುವ ನನ್ನ ಮಿತ್ರನೊಬ್ಬ ಖಾಸಗೀಯಾಗಿ ಒಂದು ಮಾತು ಹೇಳುತ್ತಿದ್ದ. ಕಳ್ಳರನ್ನು ಹುಡುಕಿ ಹುಡುಕಿ ಅವರು ಸಿಗದೇ ಇದ್ದಾಗ ಸಿಕ್ಕ ಯಾರನ್ನೋ ಹಿಡಿದು ʻಇವನೇ ಕಳ್ಳʼ ಎಂದು ತೋರಿಸಬೇಕಾದ ಒತ್ತಡ ಅವರಿಗೆ ಒಂದೊಂದು ಸಲ ಬಂದು ಬಿಡುತ್ತದೆಯಂತೆ. ಈ ಒತ್ತಡ ಈ ಸಂಘಪರಿವಾರಕ್ಕೂ ಆಗ ಬಂತು. ಹಾಗಾಗಿ ಸತ್ತವರಲ್ಲಿಯೇ ಕೆಲವರನ್ನು ಆಯ್ದು ʻಅವ ನಮ್ಮವʼ ʻಇವ ನಮ್ಮವʼ ಎಂದು ಕೆಲವು ಹುತಾತ್ಮರನ್ನು ಆಲಿಂಗನಮಾಡಿಕೊಳ್ಳಬೇಕಾಯಿತು!
ಒಟ್ಟಾರೆ ಹೇಳುವುದಾದರೆ ಈಗ ದೇಶಭಕ್ತಿಯ ಹೆಸರಿನಲ್ಲಿ ಗಲಾಟೆ ಮಾಡುವ ಸಂಘಟನೆಗಳ ʼವೀರʼರ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಮಾತ್ರವಲ್ಲ ಯಾವ ರೀತಿಯಿಂದಲೂ ಸಹಾಯವನ್ನೂ ಮಾಡಲಿಲ್ಲ. ಬದಲಾಗಿ ಇಡೀ ಹೋರಾಟಕ್ಕೆ ದ್ರೋಹ ಬಗೆಯುತ್ತಲೇ ಬಂದಿತು.
ಡಾ. ರಾಜೇಂದ್ರ ಬುರಡಿಕಟ್ಟಿ
16-10-2025
No comments:
Post a Comment