ಹಿಂದೂಗಳೊಂದು ʻಹಿಂದೂರಾಷ್ಟ್ರʼ ಕೇಳುವುದು ತಪ್ಪೇ? ಅದಕ್ಕೆ ಹಿಂದೂಗಳೇ ಅಡ್ಡಿಪಡಿಸುವುದು ಸರಿಯೇ?
· ಡಾ. ರಾಜೇಂದ್ರ ಬುರಡಿಕಟ್ಟಿ
ʻಹಿಂದೂಧರ್ಮʼ ʼಹಿಂದುತ್ವʼ ಎರಡೂ ಒಂದೇಯೇ ಬೇರೆ ಬೇರೆಯೇ?
ಮೊದಲನೆಯದಾಗಿ
ʼಹಿಂದೂʼ ಎಂದರೆ ಏನು ಮತ್ತು ಯಾರು ಎಂಬ ಪ್ರಶ್ನೆಯಿಂದಲೇ ಇದನ್ನು ಪ್ರಾರಂಭಿಸಬೇಕಾಗುತ್ತದೆ. ʻಮುಸ್ಲಿಮ್ʼ
ಎಂದರೆ ಯಾರು? ʼಕ್ರೈಸ್ತʼ ಎಂದರೆ ಯಾರು? ಇತ್ಯಾದಿ ಪ್ರಶ್ನೆಗಳು ಎದ್ದರೆ ಅವಕ್ಕೆ ತಕ್ಷಣ ಉತ್ತರ ದೊರಕಿಬಿಡುತ್ತದೆ.
ಖುರಾನಿನಲ್ಲಿ ನಂಬಿಕೆ ಇರುವ, ಮಸೀದಿಗೆ ಹೋಗುವ ನಮಾಜು ಮಾಡುವ ವ್ಯಕ್ತಿಯನ್ನು ಮುಸ್ಲಿಂ ಎಂದೂ, ಬೈಬಲ್ಲಿನಲ್ಲಿ
ನಂಬಿಕೆ ಇರುವ ಚರ್ಚ್ಗೆ ಹೋಗುವ ವ್ಯಕ್ತಿಯನ್ನು ಕ್ರೈಸ್ತನೆಂದೂ ಒಂದಿಷ್ಟು ವಿವರಣೆ ನೀಡಿ ಅದನ್ನು
ಮುಗಿಸಬಹುದು. ಆದರೆ ʼಹಿಂದೂʼ ಎಂದರೆ ಏನು ಮತ್ತು ಯಾರು ಎಂದರೆ ಇಷ್ಟು ಸುಲಭವಾಗಿ ಉತ್ತರಿಸುವುದು
ಕಷ್ಟ. ನಾನೇಕೆ ಮುಸಲ್ಮಾನ ಅಥವಾ ನಾನೇಕೆ ಕ್ರೈಸ್ತ ಎಂದು ಒಬ್ಬ ವ್ಯಕ್ತಿ ಉತ್ತರಿಸುವಂತೆ ಒಬ್ಬ ಹಿಂದೂ
ನಾನೇಕ ಹಿಂದೂ ಎಂದು ಸರಳವಾಗಿ ನಾಲ್ಕಾರು ವಾಕ್ಯಗಳಲ್ಲಿ ಉತ್ತರಿಸಲಾರ. ಈ ಗೊಂದಲಕ್ಕೆ ಕಾರಣಗಳೇನು
ನೋಡೋಣ.
ʻಹಿಂದೂʼ ಎಂಬ ಪದವು ʼಜನಾಂಗʼವನ್ನು ಸೂಚಿಸುತ್ತದೆಯೋ ಅಥವಾ ಧರ್ಮವನ್ನು
ಸೂಚಿಸುತ್ತದೆಯೋ ಎಂಬುದರ ಬಗ್ಗೆ ಹಿಂದುತ್ವವಾದಿಗಳಲ್ಲಿಯೇ ನಿಖರತೆಯಿಲ್ಲ. ಉದಾಹರಣೆಗೆ ಇಸ್ಲಾಂ ಎಂಬುದು ಧರ್ಮ. ಅದನ್ನು ಅನುಸರಿಸುವ ಜನಾಂಗ ಮುಸ್ಲಿಮ್. ಆ ರೀತಿ ʻಹಿಂದೂʼ ಎಂಬುದು ಏನು? ಧರ್ಮವೇ ಅಥವಾ ಜನಾಂಗವೇ? ಇದಕ್ಕೆ ಉತ್ತರ ಒಂದು ರೀತಿಯಿಲ್ಲ. ಸಾವರ್ಕರ್ ಅಂಥವರಿಗೆ ʻಹಿಂದೂʼ ಒಂದು ಧರ್ಮವಲ್ಲ! ಅದು ಒಂದು ಜನಾಂಗ. ಹಾಗಾಗಿಯೇ ಅವರು ಜೈನ, ಬೌದ್ಧ, ʻಲಿಂಗಾಯತʼ ಹೀಗೆ ಅನೇಕ ಸ್ವತಂತ್ರ ಧರ್ಮಗಳು ಹುಟ್ಟಿಕೊಂಡರೂ ಧಾರ್ಮಿಕವಾಗಿ ಅವರೆಲ್ಲರೂ ಬೇರೆ ಬೇರೆ ಆದರೂ ಅವರೆಲ್ಲರೂ ಜನಾಂಗವಾಗಿ ಹಿಂದೂ ಆಗಿಯೇ ಇರುತ್ತಾರೆ ಎನ್ನುತ್ತಾರೆ. ಅವರ ಪ್ರಕಾರ ʻಹಿಂದೂಧರ್ಮʼ(Hinduism)ವೇ ಬೇರೆ; ಹಿಂದುತ್ವ(Hindutva)ವೇ ಬೇರೆ. ʻಹಿಂದೂಧರ್ಮ́ ಎನ್ನುವುದು ಧಾರ್ಮಿಕವಾದದ್ದು. ʻಹಿಂದುತ್ವ́ ಎನ್ನುವುದು ರಾಜಕೀಯವಾದದ್ದು. ಇನ್ನು ಗೋಲ್ವಾಲ್ಕರ್ ಅವರು ʼಹಿಂದೂ ಸಮಾಜದ ಎಲ್ಲ ಪಂಗಡಗಳನ್ನೂ, ವಿವಿಧ ಜಾತಿಗಳನ್ನೂ ವಿವರಿಸಬಹುದು. ಆದರೆ ʻಹಿಂದೂʼ ಶಬ್ದವನ್ನು ವಿವರಿಸುವುದು ಅಸಾಧ್ಯʼ ಎಂದು ಹೇಳಿ ಅದಕ್ಕೆ ಕಾರಣವಾಗಿ ʼಹೆಸರಿನ ಅಗತ್ಯವೇ ಇಲ್ಲದಿದ್ದ ಕಾಲದಲ್ಲಿ ಇದ್ದವರು ನಾವುʼ ಎಂದು ಕೈತೊಳೆದುಕೊಳ್ಳುತ್ತಾರೆ.ನೆಹರೂ ಅವರು ಹೇಳುವಂತೆ ಈ ಹಿಂದೂʼ ಶಬ್ದ ನಮ್ಮ ಪ್ರಾಚೀನ ಸಾಂಸ್ಕೃತಿಕ ಪಠ್ಯಗಳಲ್ಲಿ ಎಲ್ಲೂ ಕಂಡುಬರುವುದಿಲ್ಲ. ಅದೇನಿದ್ದರೂ ಕ್ರಿ.ಶ. ಐದನೆಯ ಶತಮಾನದಿಂದ ಈಚೆಗಿನ ಪಠ್ಯಗಳಲ್ಲಿ ಕಂಡುಬರುವ ಶಬ್ದ. ಕೆಲವು ಹಿಂದುತ್ವವಾದಿಗಳು ಈ ಶಬ್ದದ ಹುಟ್ಟಿನ ಬಗ್ಗೆ ʻಸಿಂಧೂʼ ನದಿಯ ಕಾರಣದಿಂದ ಅಲ್ಲಿ ವಾಸಿಸುವ ಜನರ ಗುರುತಿಗಾಗಿ ಇದು ʻಸಿಂಧೂʼ ಆಗಿ ಜನ್ಮತಳೆಯಿತೆಂದೂ ಸಂಸ್ಕೃತದ ʻಸʼಕಾರ ಹಿಂದಿ ಕನ್ನಡ ಇತ್ಯಾದಿ ಭಾಷೆಗಳಲ್ಲಿ ʼಹʼಕಾರ ವಾಗುವ ಸ್ವಾಭಾವಿಕ ಚಲನೆಯಿಂದ ʼಹಿಂದೂʼ ಆಯಿತು ಎಂದೂ ಹೇಳುತ್ತಾರೆ. ಆದರೆ ಇದನ್ನು ಅನೇಕರು ಒಪ್ಪುವುದಿಲ್ಲ. ʼಸಿಂಧೂʼ ಎಂಬ ಜನಾಂಗದ ಪದ ʼಹಿಂದೂʼ ಆದಂತೆ ʼಸಿಂಧೂʼನದಿ ʼಹಿಂದೂ ನದಿʼ ಆಗಬೇಕಿತ್ತಲ್ಲ. ಅದೇಕ ಆಗಲಿಲ್ಲ ಎನ್ನುವುದು ಅವರು ಎತ್ತುವ ಪ್ರಶ್ನೆ.
ಈ ʻಹಿಂದೂʼ
ಪದದ ಅರ್ಥ ಅದು ʻಧರ್ಮʼ ಹೌದೋ ಅಲ್ಲವೋ ಎನ್ನುವ ಚರ್ಚೆ ದೇಶದ ಅತಿದೊಡ್ಡ ನ್ಯಾಯಾಲಯ ಸುಪ್ರೀಮ್
ಕೋರ್ಟಿನಲ್ಲೂ ಅನೇಕ ಸಲ ನಡೆದದ್ದಿದೆ. ಅವುಗಳ ಫಲಿತಂಶವನ್ನು
ಸಾರಾಂಶೀಕರಿಸಿ ಹೇಳುವುದಾದರೆ ʼಹಿಂದೂʼ ಎನ್ನುವುದನ್ನು ಒಂದು ಧರ್ಮ ಅನ್ನುವುದಕ್ಕಿಂತ ಒಂದು ʼಜೀವನ
ವಿಧಾನʼ ಎನ್ನುವುದು ಹೆಚ್ಚು ಸೂಕ್ತ. ಒಂದು ಕೇಸಿನಲ್ಲಂತೂ ಹಿಂದೂ ಎಂದರೆ ಯಾರು ಎಂದು ಹೇಳಲು ʼಮುಸ್ಲಿಂ
ಅಲ್ಲದ, ಕ್ರೈಸ್ತ ಅಲ್ಲದ, ಪಾರಸಿ ಅಲ್ಲದ… ಹೀಗೆ ಇತರ ಧರ್ಮಗಳನ್ನು ಬಳಸಿಕೊಳ್ಳಲಾಗಿದೆ. ಬಹುತೇಕ ನ್ಯಾಯಾಲಯಗಳ
ತೀರ್ಪುಗಳು ʼಹಿಂದೂʼಅನೇಕ ಭಿನ್ನವಾದ ಆಚರಣೆ ನಂಬಿಕೆ, ಸಂಪ್ರದಾಯಗಳನ್ನು ಒಳಗೊಂಡ ವಿವಿಧ ಜನಸಮೂಹಗಳ
ಒಂದು ಗುಂಪುʼ ಎನ್ನುವುದನ್ನು ಒತ್ತಿ ಹೇಳಿವೆ. ಆ ಮೂಲಕ ʼಹಿಂದೂʼ ಎನ್ನುವುದು ಒಂದು ನಿರ್ಧಿಷ್ಟ ಧರ್ಮವಲ್ಲ
ಬದಲಾಗಿ ʼಜನಾಂಗʼ ಎನ್ನುವುದನ್ನು ಎತ್ತಿ ತೋರಿಸಿವೆ.
ಹೀಗಾಗಿ ಹಿಂದೂ
ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಬಹಳಷ್ಟು ಹಿಂದುತ್ವವಾದಿಗಳಿಗೆ ಈಗಲೂ ಹಿಂದೂ ಎನ್ನುವುದು ಒಂದು
ಧರ್ಮವೇ ಜನಾಂಗವೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇದ್ದಂತಿಲ್ಲ. ಕೆಲವರು ಹಾಗೆ ಹೇಳಿದರೆ ಇನ್ನು ಕೆಲವರು
ಹೀಗೆ ಹೇಳುತ್ತಾರೆ. ಇನ್ನು ಕೆಲವರೂ ಎರಡೂ ಒಂದೇ ಎಂದು ತಿಪ್ಪೇಸಾರಿಸಿ ಕೈತೊಳೆದುಕೊಳ್ಳುತ್ತಾರೆ.
ಹೀಗಾಗಿ ಗೊಂದಲ ಮುಂದುವರೆದೇ ಇದೆ. ಗೊಂದಲದಲ್ಲಿ ಮುಂದುವರೆಯುವ ಯಾವುದೇ ಹೋರಾಟಕ್ಕೆ ಜಯದೊರೆಯುವುದು
ಕಷ್ಟ.
ದೇಶವಿಭಜನೆಗೆ ಮುಸ್ಲಿಮ್ ನಾಯಕರು ಮಾತ್ರ ಕಾರಣವೇ?
ಸ್ವಾತಂತ್ರ್ಯ
ಸಿಕ್ಕಾಗ ದೇಶ ವಿಭಜನೆ ಆದದ್ದು ನಿಜ. ಆದರೆ ಅದಕ್ಕೆ ಮುಸ್ಲಿಂ ನಾಯಕರು ಮತ್ತು ಗಾಂಧೀಜಿ ಮಾತ್ರ ಕಾರಣ
ಎಂಬುದು ಅರ್ಧಸತ್ಯ. ಗಾಂಧೀಜಿಯಂತೂ ಕೊನೆಯವರೆಗೂ ಹಿಂದೂ ಮುಸ್ಲಿಮರನ್ನು ಒಟ್ಟಾಗಿಸುವಲ್ಲಿ ತಮ್ಮ ಪ್ರಾಣವನ್ನೂ
ಪಣಕ್ಕಿಟ್ಟು ಹೋರಾಡಿದರು ಮಾತ್ರವಲ್ಲ ಅದಕ್ಕಾಗಿಯೇ ತಮ್ಮ ಪ್ರಾಣವನ್ನೂ ಕಳೆದುಕೊಂಡರು. ಇದು ಜಗತ್ತೇ
ಒಪ್ಪುವ ಮುಚ್ಚುಮರೆಯಿಲ್ಲದ ಇತಿಹಾಸ. ಅವರು ಎಷ್ಟೇ ಹೋರಾಡಿದರೂ ಕೊನೆಗೂ ಅವರು ಆ ವಿಷಯದಲ್ಲಿ ಜಯಗಳಿಸಲು
ಸಾಧ್ಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾದಾಗ ದೇಶವಿಭಜನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು.
ಹಾಗಾಗಿ ಅವರೇ ಮುಂದು ನಿಂತು ದೇಶ ವಿಭಜಿಸಿದರು ಎನ್ನುವ ಮಾತಂತೂ ಅಪ್ಪಟ ಸುಳ್ಳು.
ಇನ್ನು ದೇಶವಿಭಜನೆಗೆ
ಮುಸ್ಲಿಂ ನಾಯಕರೇ ಕಾರಣ ಎನ್ನುವುದೂ ಪೂರ್ಣ ಸತ್ಯವಲ್ಲ. ಮುಸ್ಲಿಮ್ ಲೀಗ್ನ ನಾಯಕರಾದ ಮೊಹಮ್ಮದ್
ಆಲಿ ಜಿನ್ನಾ ಅವರು ದ್ವಿರಾಷ್ಟ್ರ ಕಲ್ಪನೆಯನ್ನು ಮುನ್ನೆಲೆಗೆ ತಂದುಪಾಕಿಸ್ತಾನʼ
ಎಂಬ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟದ್ದು ನಿಜ. ಆದರೆ ಆ ಬೇಡಿಕೆಯನ್ನು ಮೊದಲಿಗೆ ಇಟ್ಟವರು ಅವರಲ್ಲ
ಬದಲಾಗಿ ಹಿಂದೂ ಸಂಘಟನೆಯವರು ಎಂಬುದನ್ನು ಬಹಳ ಜನ ಅರಿತಿಲ್ಲ. ಮುಸ್ಲಿಮ್ ಲೀಗ್ ʼಪಾಕಿಸ್ತಾನʼ ದ
ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿದ್ದು 1940ರ ಲಾಹೋರ್ ಅಧಿವೇಶನದಲ್ಲಿ. ಅಲ್ಲಿ ನಿರ್ಣಯದ ಪರವಾಗಿ
ಮಾತನಾಡುತ್ತಾ ಮೊಹಮ್ಮದ್ ಆಲಿ ಜಿನ್ನಾ ಅವರು ತಮ್ಮ ಮಾತುಗಳಲ್ಲಿ ಸಾವರ್ಕರ್ ಅವರನ್ನು ಉಲ್ಲೇಖಮಾಡಿ,
ʼಸಾವರ್ಕರ್ ಹೇಳುವಂತೆ ಶತಮಾನಗಳ ಕಾಲದ ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಮುಂತಾದವುಗಳ ಕಾರಣದಿಂದ
ಹಿಂದೂ- ಮುಸ್ಲಿಮರು ಒಟ್ಟಾಗಿ ಒಂದು ದೇಶವಾಗಿ ನೆಮ್ಮದಿಯಿಂದ ಬಾಳುವುದು ಸಾಧ್ಯವಿಲ್ಲʼ ಎಂದು ಹೇಳಿ
ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ!
ಜಿನ್ನಾ ಹೀಗೆ
ತಮ್ಮ ದ್ವಿರಾಷ್ಟ್ರ ಬೇಡಿಕೆಗೆ ಸಾವರ್ಕರ್ ಅವರ ಮಾತನ್ನು ಬೆಂಬಲವಾಗಿ ತೆಗೆದುಕೊಳ್ಳುತ್ತಾರೆ ಎಂದರೆ
ಅದಕ್ಕಿಂತ ಮೊದಲೇ ಸಾವರ್ಕರ್ ಎಲ್ಲಿಯಾದರೂ ಆ ವಿಷಯವನ್ನು ಕುರಿತು ಮಾತಾಡಿರಬೇಕಲ್ಲವೇ? ಇದರ ಒಳಹೊಕ್ಕು
ನೋಡಿದಾಗ ಅದು ಸತ್ಯವೆಂದು ತಿಳಿಯುತ್ತದೆ. ಜಿನ್ನಾ ನೇತೃತ್ವದ ಒಂದಿಷ್ಟು ಮುಸ್ಲಿಮ್ ಕೋಮುವಾದಿಗಳ
ಗುಂಪು ಹೀಗೆ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುವ ಮೂರು ವರ್ಷ ಮೊದಲೇ ಅಂದರೆ 1937ರಲ್ಲಿಯೇ
ಈ ದ್ವಿರಾಷ್ಟ್ರ ಸಿದ್ಧಾಂತವನ್ನು ಸಾವರ್ಕರ್ ಪ್ರತಿಪಾದಿಸಿರುವುದು ನಮಗೆ ಕಂಡುಬರುತ್ತದೆ. ಆ ವರ್ಷ
ಅಹಮದಾಬಾದಿನಲ್ಲಿ ನಡೆದ ಹಿಂದೂ ಮಹಾಸಭಾದ 37ನೆಯ ಅಧಿವೇಶನದಲ್ಲಿ ಮಾತನಾಡುತ್ತಾ ಅವರು, “ಭಾರತದಲ್ಲಿ
ಈಗಾಗಲೇ ಎರಡು ಪರಸ್ಪರ ವಿರುದ್ಧವಾಗಿ ಕೆಲಸ ಮಾಡುತ್ತಿರುವ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ನೆಲಸಿವೆ”
ಎಂದು ಹೇಳಿ ಮುಂದುವರೆದು ಹೀಗೆ ಹೇಳುತ್ತಾರೆ, “ಈ ಸಂಗತಿಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ
ಶತಶತಮಾನಗಳ ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ವೈಷಮ್ಯಗಳಾಗಿದ್ದು ಪರಂಪರಾಗತವಾಗಿ ಹರಿದುಬಂದಿವೆ.
ಆ ಅಹಿತಕರ ವಾಸ್ತವವನ್ನು ಅದು ಹೇಗಿದೆಯೋ ಹಾಗೆಯೇ ನಾವು ಧೈರ್ಯದಿಂದ ಎದುರಿಸಬೇಕು. ಭಾರತವನ್ನು ಒಂದು
ಏಕಘಟಕ ಹಾಗೂ ಸಮರಸದ ದೇಶವೆಂದು ಇವತ್ತು ಭಾವಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರತಿಯಾಗಿ, ಭಾರತದಲ್ಲಿ
ಪ್ರಧಾನವಾಗಿ ಎರಡು ದೇಶಗಳಿವೆ; ಹಿಂದೂಗಳದ್ದು ಮತ್ತು ಮುಸ್ಲಿಮರದ್ದು.”
ಹೀಗೆ ಸಾವರ್ಕರ್
ಹುಟ್ಟುಹಾಕಿದ ದ್ವಿರಾಷ್ಟ್ರ ಸಿದ್ಧಾಂತವನ್ನೇ ಎತ್ತಿಕೊಂಡು ಜಿನ್ನಾ ತಮ್ಮದೇ ಆದ ಶೈಲಿಯಲ್ಲಿ ದ್ವಿರಾಷ್ಟ್ರ
ಬೇಡಿಕೆಯನ್ನು ಮುಂದಿಟ್ಟರು. ನಂತರ ಅದನ್ನು ಸಾವರ್ಕರ್ ಅವರು ಕೂಡ ಸ್ವಾಗತಿಸಿದರು ಎಂಬುದು ಗಮನಿಸಬೇಕಾದ
ಸಂಗತಿ. ಈ ಬಗ್ಗೆ 1943ರ ಆಗಸ್ಟ್ 15 ರಂದು ನಾಗಪುರದಲ್ಲಿ ನಡೆಸಿದ ಪತ್ರಿಕಾ ಗೋಷ್ಟ್ರಿಯಲ್ಲಿ ಅವರು
ಆಡಿದ, “ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದೊಂದಿಗೆ ನನಗೇನೂ ಜಗಳವಿಲ್ಲ. ನಾವು ಹಿಂದೂಗಳು ಒಂದು
ದೇಶವಾಗಿದ್ದೇವೆ ಮತ್ತು ಹಿಂದೂಗಳು ಮುಸ್ಲಿಮರು ಎರಡು ದೇಶಗಳು ಎನ್ನುವುದು ಚಾರಿತ್ರಿಕ ಸತ್ಯ!” ಎಂಬ
ಮಾತು ಇದನ್ನು ದೃಢಪಡಿಸುತ್ತದೆ.
ಈ ಎಲ್ಲ ಚರ್ಚೆಯಿಂದ
ವೇದ್ಯವಾಗುವ ಸಂಗತಿ ಎಂದರೆ ದೇಶವಿಭಜನೆ ಆಗಿಹೋದ ಒಂದು ಘಟನೆ. ಆ ಸಂದರ್ಭದಲ್ಲಿನ ವಿದ್ಯಾಮಾನಗಳು,
ಚಾರಿತ್ರಿಕ ಒತ್ತಡಗಳು ಏನೇನೋ ಇದ್ದವು. ಈಗ ನಾವು ಅದನ್ನೊಂದು ಆಗಬಾರದಾಗಿದ್ದ ಒಂದು ಘಟನೆ, ಅದನ್ನು
ಇಂಥವರೇ ಮಾಡಿದರು ಎಂದು ಯಾರ ಮೇಲಾದರೂ ಗೂಬೆ ಕೂರಿಸುವುದು ಸರಿಯಾದ ನಡೆಯಲ್ಲ. ಮುಂದೇನು ಮಾಡಬೇಕು
ಎಂಬುದರ ಕಡೆ ನಮ್ಮ ಗಮನ ಹರಿಯಬೇಕಾಗಿದೆ.
ಸಮಯಕ್ಕೆ ಸಿಕ್ಕ ಸಾವರ್ಕರ್ ಎಂಬ ಸಿದ್ಧಾಂತಿ
ಸ್ವತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿರುವ ಆ ಸಂದರ್ಭದಲ್ಲಿ ಹಿಂದೂ ಮುಸ್ಲಿಮರು ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಸ್ವತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧಾರ್ಮಿಕ ಆಯಾಮ ನೀಡುವ ಪ್ರಯತ್ನಗಳು ಕೂಡ ನಡೆದವು. ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ್ದು ಇತ್ಯಾದಿಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದರಿಂದ ಸ್ವಾತಂತ್ರ್ಯ ಚಳವಳಿಗೆ ಹೆಚ್ಚಾಗಿ ಆದದ್ದು ಲಾಭವೇ ಅಥವಾ ನಷ್ಟವೇ ಎನ್ನುವುದು ಧೀರ್ಘ ಅಧ್ಯಯನ ನಿರೀಕ್ಷಿಸುವ ಸಂಗತಿ. ಆದರೆ ಆ ಸಂದರ್ಭದಲ್ಲಿ ಇಂತಹ ಸಣ್ಣಪುಟ್ಟ ಬಿರುಕುಗಳ ನಡುವೆಯೂ ಹಿಂದೂ ಮುಸ್ಲಿಮರು ಐಕ್ಯತೆಯಿಂದಲೇ ಒಗ್ಗಟ್ಟಿನಿಂದಲೇ ಹೋರಾಟದಲ್ಲಿ ತೊಡಗಿಕೊಂಡಿದ್ದರು ಎಂಬುದಂತೂ ಸತ್ಯ. ಬ್ರಿಟೀಷರು ಈ ಸ್ವಾತಂತ್ರ್ಯ ಹೋರಾಟವನ್ನು ಬಗ್ಗುಬಡಿಯಬೇಕಾದರೆ ಈ ಎರಡು ದೊಡ್ಡ ಜನಸಮುದಾಯಗಳ ನಡುವಿನ ಒಗ್ಗಟ್ಟನ್ನು ಮುರಿಯಲೇಬೇಕಾಗಿತ್ತು. ಆದರೆ ಅದಕ್ಕೆ ಮೂರನೇ ಶಕ್ತಿಯಾಗಿ ಅವರು ಹೊರಗಿನಿಂದ ಹೊಡೆತ ಕೊಡುವುದು ಅವರಿಗೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚು ಉಂಟುಮಾಡುವ ಸಾಧ್ಯತೆಯಿತ್ತು. ಈ ಸಂದರ್ಭದಲ್ಲಿ ಈ ಐಕ್ಯತೆಯನ್ನು ಒಡೆಯಲು ಇವರೊಳಗಿನ ಒಬ್ಬ ಪ್ರಭಾವಿ ವ್ಯಕ್ತಿಯನ್ನು ಅವರು ಹುಡುಕುತ್ತಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಸೂಕ್ತ ಆಯ್ಕೆ ಆಗಿ ಸಿಕ್ಕದ್ದೇ ಸಾವರ್ಕರ್ ಅವರು.
ಒಂದು ಕ್ಷಣ ಯೋಚಿಸಿ,
ಸಾವರ್ಕರ್ ಅವರು ಐದು ಬಾರಿ ಕ್ಷಮಾಪಣೆ ಪತ್ರ ಬರೆದದ್ದೇನೋ ನಿಜ. (ಇತ್ತೀಚಿನ ಕೆಲವು ಸಂಶೋಧಕರು ಏಳು
ಪತ್ರಗಳಿವೆ ಎಂದು ಸಂಶೋಧಿಸಿ ಹೇಳಿದ್ದಾರೆ). ಆದರೆ ಅಷ್ಟು ಸುಲಭವಾಗಿ ಯಾರಿಗೂ ಬ್ರಿಟೀಷರು ವಿಧಿಸಲ್ಪಟ್ಟ
ಜೈಲು ಶಿಕ್ಷೆಯಿಂದ ರಿಯಾಯತಿ ಅಥವಾ ವಿನಾಯತಿಗಳನ್ನು ಕೊಡುತ್ತಿರಲಿಲ್ಲ. ಆದರೆ ಸಾವರ್ಕರ್ ಅವರಿಗೆ
ಮಾತ್ರ ಹೆಚ್ಚು ಮೀನಾಮೇಷ ಎಣಿಸದೆ ತಕ್ಷಣ ಕೊಟ್ಟರು. ಇದಕ್ಕೆ ಕಾರಣ ಸಾವರ್ಕರ್ ಅವರಿಗೆ ಸಹಾಯ ಮಾಡುವುದು
ಅವರ ಉದ್ದೇಶವೇನೂ ಆಗಿರಲಿಲ್ಲ. ʻಈ ವ್ಯಕ್ತಿಯನ್ನು ಒಳಗೆ ಇಟ್ಟುಕೊಳ್ಳುವುದಕ್ಕಿಂತ ಹೊರಗೆ ಬಿಟ್ಟರೇನೇ
ತಮಗೆ ಹೆಚ್ಚು ಅನುಕೂಲʼ ಎಂದು ಅನ್ನಿಸಿಯೇ ಅವರನ್ನು ಹೊರಗೆ ಬಿಟ್ಟರು.
ಕೆಲವರು ಸಾವರ್ಕರ್ ಅವರು ಕ್ಷಮಾಪಣೆ ಪತ್ರ ಬರೆದದ್ದು ಒಂದು ಯುದ್ಧತಂತ್ರವೆಂದೂ ಸಮಯ ಸಾಧಿಸಿ ಬ್ರಿಟೀಷರ ಮೇಲೆ ಸಕಲತಯಾರಿಯೊಂದಿಗೆ ಮುಗಿಬೀಳುವುದು ಅವರ ಉದ್ದೇಶವಾಗಿತ್ತೆಂದೂ ವಾದಿಸುತ್ತಾರೆ. ಆದರೆ ಬಿಡುಗಡೆಯಾದ ಮೇಲೆ ತಮ್ಮ ಸಾವಿನ ತನಕ ಸಾವರ್ಕರ್ ಅಂಥದ್ದೇನನ್ನೂ ಮಾಡಲಿಲ್ಲ. ಅವರು ಕ್ಷಮಾಪಣೆ ಪತ್ರಗಳಲ್ಲಿ ಬರೆದುಕೊಟ್ಟ ಮಾತಿನಂತೆ ಮುಂದೆಂದೂ ಬ್ರಿಟೀಷರ ವಿರುದ್ಧ ಯಾವುದೇ ಕಾರ್ಯ ಮಾಡದೇ ಸಾಧ್ಯವಿದ್ದಷ್ಟೂ ಅವರಿಗೆ ಸಹಾಯ ಮಾಡುತ್ತಲೇ ಬದುಕಿ ಕೊನೆಯುಸಿರೆಳೆದರು. ಉಳಿದ ವಿಷಯಗಳು ಏನಾದರೂ ಇರಲಿ ಕೊಟ್ಟ ಮಾತಿನಂತೆ ಕೊನೆಯವರೆಗೂ ನಡೆದುಕೊಂಡ ಅವರ ಪ್ರಾಮಾಣಿಕತೆಯನ್ನು ಮಾತ್ರ ನಾವು ಮೆಚ್ಚಲೇಬೇಕು!
ಇತ್ತ ಸಾವರ್ಕರ್
ತಿಲಕ್ ಮುಂತಾದವರು ಮಾಡುತ್ತಿರುವ ಹಿಂದೂಗಳ ಸಂಘಟನೆ, ಅತ್ತ ಜಿನ್ನಾ ಮತ್ತು ಸಂಗಡಿಗರು ಮಾಡುತ್ತಿದ್ದ
ಮುಸ್ಲಿಮರ ಸಂಘಟನೆಗಳ ಕಾರಣದಿಂದ ಈ ಎರಡೂ ಸಮುದಾಯಗಳ ನಡುಗೆ ಬಿರುಕು ಹುಟ್ಟಿ ಬೆಳೆಯುತ್ತಾ ಹೋಗಿದ್ದು
ಮತ್ತು ಇವೆರಡರ ನಡುವೆ ʼಭಾರತೀಯರನ್ನು ಸಂಘಟಿಸುವ ಬಲಾಢ್ಯ ವ್ಯವಸ್ಥೆಯೊಂದು ಇಲ್ಲದೇ ಹೋದದ್ದು ದ್ವಿರಾಷ್ಟ್ರ
ಸಿದ್ಧಾಂತ ಮುನ್ನೆಲೆಗೆ ಬಂದು ಸ್ವಾತಂತ್ರ್ಯ ಬರುತ್ತಿದ್ದಂತೆಯೇ ದೇಶ ಚಾರಿತ್ರಿಕವಾಗಿ ಎರಡು ಭಾಗವಾಗಿಯೇಬಿಟ್ಟಿತು.
ದೇಶ ವಿಭಜನೆ ಆದಾಗ ಎಲ್ಲ ಮುಸ್ಲಿಮರು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ?
ಸರಿ, ದೇಶವಿಭಜನೆ
ಆಯಿತು. ಆಗಿದ್ದು ಆಗಿ ಹೋಯಿತು. ಆದರೆ ದೇಶವಿಭಜನೆ ಆದಾಗ ಅದು ಧರ್ಮ ಅಥವಾ ಜನಾಂಗದ ಆಧಾರದ ಮೇಲೆಯೇ
ಆದ್ದರಿಂದ ಪಾಕಿಸ್ತಾನವನ್ನು ಮುಸ್ಲಿಮರಿಗೆ ಎಂದು ಕೊಟ್ಟಮೇಲೆ ಉಳಿದ ಭಾರತವನ್ನು ಹಿಂದೂಗಳ ದೇಶ ಎಂದು
ಘೋಷಿಸಬೇಕಿತ್ತಲ್ಲ. ಎಲ್ಲ ಹಿಂದೂಗಳೂ ಈ ದೇಶದಲ್ಲಿ ಇರುವಂತೆ ಮತ್ತು ಎಲ್ಲ ಮುಸ್ಲಿಮರು ಪಾಕಿಸ್ತಾನಕ್ಕೆ
ಹೋಗುವಂತೆ ಮಾಡಬೇಕಿತ್ತಲ್ಲ ಅದನ್ನೇಕೆ ಮಾಡಲಿಲ್ಲ? ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರಮಾಡಿ ಭಾರತವನ್ನು
ಎಲ್ಲರೂ ಇರಬಹುದಾದ ರಾಷ್ಟ್ರವನ್ನಾಗಿ ಉಳಿಸಿದ್ದು ಹಿಂದೂಗಳಿಗೆ ಮಾಡಿದ ದ್ರೋಹವಲ್ಲವೇ? ಎಂಬ ಸರಣಿ
ಪ್ರಶ್ನೆಗಳನ್ನು ನಮ್ಮ ಹಿಂದುತ್ವವಾದಿಗಳು ಕೇಳುವುದನ್ನು ನಾವು ನೋಡಿದ್ದೇವೆ. ಇವೆಲ್ಲವೂ ಒಂದೇ ದೊಡ್ಡ
ಪ್ರಶ್ನೆಯ ಭಾಗಗಳು. ಪ್ರಧಾನವಾಗಿ ಮುಸ್ಲಿಮರು ದೇಶ ವಿಭಜನೆಯ ನಂತರ ಭಾರತದಲ್ಲಿ ಉಳಿದದ್ದು ತಪ್ಪು
ಎಂಬುದು ಅವರ ಅಭಿಪ್ರಾಯ. ಇದಕ್ಕೆ ಕಾರಣವಾದ ಚಾರಿತ್ರಿಕ ಅಂಶಗಳನ್ನು ಈಗ ನೋಡೋಣ.
ಈಗ ಹೇಗೆ ʻಹಿಂದೂರಾಷ್ಟ್ರʼ
ಎಂಬುದು ಸಮಗ್ರ ಹಿಂದೂಗಳ ಬೇಡಿಕೆಯಾಗಿರದೇ ಕೆಲವು ಹಿಂದೂ ಕೋಮುವಾದಿಗಳ ಬೇಡಿಕೆಯಾಗಿದೆಯೋ ಆಗಲೂ ʻಮುಸ್ಲಿಮ್
ರಾಷ್ಟ್ರʼ ಎಂಬುದು ಸಮಗ್ರ ಮುಸ್ಲಿಮರ ಬೇಡಿಕೆ ಆಗಿರದೇ ಕೆಲವು ಮುಸ್ಲಿಮ್ ಕೋಮುವಾದಿಗಳ ಬೇಡಿಕೆ ಮಾತ್ರವಾಗಿತ್ತು.
ಹಿಂದುತ್ವವಾದಿಗಳ ಬೇಡಿಕೆಯನ್ನು ಮಾನ್ಯಮಾಡದ ದೊಡ್ಡ ಪ್ರಮಾಣದ ಹಿಂದೂಗಳು ಈಗ ಹೇಗೆ ಇದ್ದಾರೋ ಆಗ ಮುಸ್ಲಿಂ
ಲೀಗಿನ ಪಾಕಿಸ್ತಾನ ಬೇಡಿಕೆಯನ್ನು ಮಾನ್ಯಮಾಡದ ದೊಡ್ಡ ಪ್ರಮಾಣದ ಮುಸ್ಲಿಮರೂ ಇದ್ದರು! ಆದರೆ ಈ ಹಿಂದೂ
ಕೋಮುವಾದಿ ಮುತ್ತು ಮುಸ್ಲಿಮ್ ಕೋಮುವಾದಿ ಸಂಘಟನೆಗಳೇ ಸಮಗ್ರ ಹಿಂದೂಗಳ ಮತ್ತು ಸಮಗ್ರ ಮುಸ್ಲಿಮರ
ಪ್ರತಿನಿಧಿಗಳು ಎಂಬಂತೆ ಬಿಂಬಿತವಾದವು. ಹೀಗಾಗಿ ಇವರು ಆಡಿದ್ದೇ ಆಟ ಮಾಡಿದ್ದೇ ಮಾಟ ಎನ್ನುವಂತಹ ಪರಿಸ್ಥಿತಿ
ನಿರ್ಮಾಣವಾಗಿತ್ತು. ಇವರ ಅಭಿಪ್ರಾಯಗಳೇ ಇಡೀ ಸಮುದಾಯಗಳ ಅಭಿಪ್ರಾಯಗಳು ಎಂಬಂತೆ ಸ್ವೀಕರಿಸಲ್ಪಟ್ಟವು.
ದೇಶ ವಿಭಜನೆಯ
ಸಂದರ್ಭಕ್ಕೆ ಎಲ್ಲರನ್ನೂ ಒತ್ತಾಯದಿಂದ ಈ ರಾಷ್ಟ್ರಗಳಿಗೇ ಸೇರಬೇಕು ಎಂದು ಅವರನ್ನು ತಳ್ಳಲು ಸಾಧ್ಯವಿರಲಿಲ್ಲ.
ಹಾಗಾಗಿ ಯಾವ ದೇಶದಲ್ಲಿರಬೇಕು ಎಂಬುದನ್ನು ಆಯ್ಕೆಗೆ ಬಿಡಲಾಯಿತು. ಆಗ ಭಾರತದ್ಲಲಿ ಇದ್ದ ಮುಸ್ಲಿಮರ
ಸಂಖ್ಯೆ ಸುಮಾರು ಒಂಬತ್ತು ಕೋಟಿ. ಅದರಲ್ಲಿ ಪಾಕಿಸ್ತಾನಕ್ಕೆ ಹೋದವರ ಸಂಖ್ಯೆ ಸುಮಾರು ಆರು ಕೋಟಿ.
ಇಲ್ಲಿಯೇ ಉಳಿದವರು ಸುಮಾರು ಮೂರು ಕೋಟಿ. ಅಂದರೆ ಮೂರನೇ ಒಂದು ಭಾಗ (33%) ಇಲ್ಲಿಯೇ ಉಳಿದರು. ಇದು
ಏಕೆ ಎಂದು ನೋಡೋಣ. ಯಾವುದೇ ವ್ಯಕ್ತಿ ಕೇವಲ ಧಾರ್ಮಿಕ ಅಥವಾ ಜನಾಂಗೀಯ ಕಾರಣಕ್ಕಾಗಿ ಕೂಡಿ ಬಾಳುವುದು
ಸಾಧ್ಯವಿಲ್ಲ. ಅವರ ವ್ಯಾಪಾರ, ವ್ಯವಹಾರ, ಮನುಷ್ಯ ಸಂಬಂಧಗಳು ಇವೆಲ್ಲ ಸೇರಿ ಎಲ್ಲಿ ಬದುಕಬೇಕು ಮತ್ತು
ಯಾರೊಡನೆ ಬದುಕಬೇಕು ಎಂಬ ಸಂಗತಿಯನ್ನು ನಿರ್ಧರಿಸುತ್ತವೆ. ದೇಶ ವಿಭಜನೆಯ ಸಂದರ್ಭದಲ್ಲಿ ದೇಶದಲ್ಲಿ
ಇದ್ದ ಸುಮಾರು ಒಂಬತ್ತು ಕೋಟಿ ಮುಸ್ಲಿಮರೂ ಯಾವುದೋ ಒಂದು ಕಡೆ ವಾಸಿಸುತ್ತಿರಲಿಲ್ಲ. ಹಾಗಿದ್ದಿದ್ದರೆ
ಯಾರನ್ನೂ ಸ್ಥಳಾಂತರ ಮಾಡದೆ ದೇಶವನ್ನು ವಿಭಜಿಸಬಹುದಿತ್ತು.
ಆದರೆ ಭಾರತದ ಉಳಿದ
ಭಾಗದ ಮುಸ್ಲಿಮರು ತಾವಿರುವ ಸ್ಥಳವನ್ನು ಬಿಟ್ಟು ಅವರಿಚಿತವಾದ ಈ ಹೊಸದೇಶಕ್ಕೆ, ಅಪರಿಚಿತ ಪ್ರದೇಶಕ್ಕೆ
ತೆರಳಬೇಕಿತ್ತು. ಅಂತಹ ಅನಿವಾರ್ಯತೆ ಅವರಿಗೆ ಇರಲಿಲ್ಲ. ಏಕೆಂದರೆ ಅವರು ತಮ್ಮ ತಮ್ಮ ಪ್ರದೇಶದ ಹಿಂದೂಗಳೊಂದಿಗೆ
ಎಷ್ಟರ ಮಟ್ಟಿಗೆ ಬೆರೆತುಹೋಗಿದ್ದರು ಎಂದರೆ ಅವರಿಗೆ ತಾವು ಬಹುಸಂಖ್ಯಾತ ಹಿಂದೂಗಳ ನಡುವೆ ಆತಂಕದಲ್ಲಿದ್ದೇವೆ
ಅನ್ನಿಸಲೇಯಿಲ್ಲ. ಹಿಂದೂಗಳಿಗೂ ಇವರು ತಮ್ಮ ಸಹಾಯಕರಾಗಿ ಕಂಡರೇ ಹೊರತು ಆತಂಕವಾದಿಗಳಾಗಿ ಕಾಣಲಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಹಿಂದೂಗಳು ರೈತರಾಗಿದ್ದರು. ಮುಸ್ಲಿಮರು ರೈತರಿಗೆ ಪೂರಕವಾದ
ಉದ್ಯೋಗಗಳಲ್ಲಿ ಅಂದರೆ ಬಡಿಗತನ, ಕಮ್ಮಾರಿಕೆ, ಕಾಳುಕಡಿ ವ್ಯಾಪಾರ, ದನಗಳ ವ್ಯಾಪಾರ ಇತ್ಯಾದಿ ಉದ್ಯೋಗಗಳನ್ನು
ಮಾಡಿಕೊಂಡು ನೆಮ್ಮದಿಯಿಂದ ಇದ್ದರು. ಈಗ ಇರುವ ನೆಮ್ಮದಿಯ ಬದುಕನ್ನು ತ್ಯಜಿಸಿ ತಮ್ಮ ಧರ್ಮ ಮತ್ತು
ಜನಾಂಗದವರೇ ಒಟ್ಟಿಗೆ ಇರಬಹುದಾದರೂ ಅಪರಿಚಿತರೊಂದಿಗೆ ಆತಂಕದ ಹೊಸಬದುಕು ಕಟ್ಟಿಕೊಳ್ಳಲು ಅವರು ಮುಂದಾಗಲಿಲ್ಲ.
ಅಷ್ಟಕ್ಕೂ ಹಿಂದೂಗಳಿಗಾಗಲೀ
ಮುಸ್ಲಿಮರಿಗಾಗಲಿ ಆಗ ಬದುಕು ನಡೆಯುವುದು ಮುಖ್ಯವಾಗಿತ್ತೇ ಹೊರತು ದೇವರು ಧರ್ಮ ಇವುಗಳನ್ನು ತಲೆಯ
ಮೇಲೆ ಹೊತ್ತುಕೊಂಡು ಕುಣಿಯುವುದು ಮುಖ್ಯವಾಗಿರಲಿಲ್ಲ. ಹಾಗಾಗಿ ಅವರಲ್ಲಿ, ತಮ್ಮ ಜನರಿಗಾಗಿ ರಚಿತವಾದ
ಹೊಸರಾಷ್ಟ್ರಕ್ಕೆ ಹೋಗುವುದು ಮತ್ತು ಹುಟ್ಟಿಬೆಳೆದ ಇಲ್ಲಿಯೇ ಮುಂದುವರೆಯುವುದು ಇವುಗಳಲ್ಲಿ ಇಲ್ಲಿರುವುದನ್ನೇ
ಬಹುಪಾಲು ಜನ ಆಯ್ದುಕೊಂಡರು.
ʻಅಖಂಡಭಾರತʼ ದ ಕನಸು ಮತ್ತು ʻಹಿಂದೂ ರಾಷ್ಟ್ರʼದ ವಾಸ್ತವ
ನಮ್ಮ ಸಂಘಪರಿವಾರದ
ಸ್ನೇಹಿತರ ಪರಮಗುರಿ ʻಅಖಂಡಭಾರತʼ ರಚನೆ. ಅದು ಆಗುವ ಮಾತಲ್ಲ ಎಂಬುದು ಅರಿವಾಗಿ ಅವರು ಈಗ
ಅದಾಗದಿದ್ದರೆ ಕನಿಷ್ಠ ಈಗಿರುವ ಭಾರತವನ್ನಾದರೂ ಸಂಪೂರ್ಣ ʻಹಿಂದೂರಾಷ್ಟ್ರʼವನ್ನಾಗಿ
ಮಾಡಬೇಕು ಎಂದು ಪಣತೊಟ್ಟು ಹೋರಾಡುತ್ತಿದ್ದಾರೆ. ಇವುಗಳು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ನೋಡೋಣ.
ಮೊದಲು ʻಅಖಂಡಭಾರತʼ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುತಿನಲ್ಲಿ ಹಿಂಹಕ್ಕೆ
ಒರಗಿನಿಂತ ಕಿರೀಟಧಾರಿಣಿ ಭಾರತಮಾತೆಯ ಹಿಂದಿನ ಭಾರತದ ಚಿತ್ರವನ್ನು ಗಮನಿಸಿ. ಅದಕ್ಕೆ ಕೆಳಗಡೆ ಸಮುದ್ರಗಳಿವೆಯಾದ್ದರಿಂದ
ಗಡಿಗಳಿವೆ. ಮೇಲ್ಭಾಗದಲ್ಲಿ ಗಡಿಗಳೇ ಇಲ್ಲ. ಇದು ಬಹುಶಃ ಅವರ ಅಖಂಡಭಾರತ ಕನಸನ್ನೇ ಪ್ರತಿನಿಧಿಸುತ್ತದೆ.
ಇನ್ನು ʻಹಿಂದೂರಾಷ್ಟ್ರʼ
ಈಗ ಇದು ಬಹಳ ಮುನ್ನೆಲೆಯಲ್ಲಿರುವ ಅವರ ಬೇಡಿಕೆಯಾಗಿದೆ. ಈ ಬೇಡಿಕೆ ಕೂಡ ಸಾಧುವೂ ಅಲ್ಲ; ಈಡೇರಿಕೆ
ಸಾಧ್ಯವೂ ಇಲ್ಲ. ವಾಸ್ತವ ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂದರೆ ಹಿಂದುತ್ವವಾದಿಗಳು ಇಡೀ ದೇಶವನ್ನು
ಹಿಂದೂರಾಷ್ಟ್ರ ಮಾಡುವುದು ಇರಲಿ ಯಾವುದಾದರೂ ಒಂದು ಹಳ್ಳಿಯನ್ನೋ ಅಥವಾ ನಗರವನ್ನೋ ʻಹಿಂದೂಹಳ್ಳಿʼ
ಎಂದೋ ʻಹಿಂದೂನಗರʼ ಎಂದೋ ಮಾಡುವುದೂ ಕಷ್ಟವಿದೆ. ಹೀಗಿರುವಾಗ ʻಹಿಂದೂರಾಷ್ಟ್ರʼ
ಎಂಬುದು ಅಷ್ಟುಸುಲಭವಾಗಿ ಆಗುವ ಸಂಭವ ಇಲ್ಲವೇ ಇಲ್ಲ. ಸತತ ನೂರು ವರ್ಷಗಳಿಂದ ಹೋರಾಟಮಾಡಿದರೂ ಇದು
ಆಗಿಲ್ಲವೆಂದರೆ ಇನ್ನೂ ನೂರು ವರ್ಷ ಕಳೆದರೂ ಆಗಲಾರದು. ಆ ಮಟ್ಟದ ವಿರೋಧ ಅದಕ್ಕೆ ಇದೆ. ಆದರೆ ಸಂಘಪರಿವಾರದವರು
ಅದನ್ನು ಅಷ್ಟು ಸುಲಭವಾಗಿ ಬಿಡಲಾರರು. ಅದಕ್ಕಾಗಿ ಅವರು ಹೋರಾಟವನ್ನು ತೀವ್ರಗೊಳಿಸುತ್ತಿದ್ದಾರೆ.
ಅವರ ಹೋರಾಟ ತೀವ್ರಗೊಳ್ಳುತ್ತಿರುವಂತೆಯೇ ಅದಕ್ಕೆ ಪ್ರತಿರೋಧವೂ ಅಷ್ಟೇ ಪ್ರಬಲವಾಗಿ ಬೆಳೆಯುತ್ತಿದೆ.
ಇವೆಲ್ಲದರ ಪರಿಣಾಮ ಏನಾಗಬಹುದು ಎಂದರೆ ಭಾರತ ಇತ್ತ ಸಂಪೂರ್ಣವಾಗಿ ʼಸೆಕ್ಯುಲರ್ ರಾಷ್ಟ್ರʼವಾಗಿಯೂ
ಆಗದೆ, ಅತ್ತ ಸಂಪೂರ್ಣವಾಗಿ ʼಹಿಂದೂ ರಾಷ್ಟ್ರʼವಾಗಿಯೂ ಆಗದೇ ಇನ್ನೂ ನೂರಾರು ವರ್ಷಗಳ ಕಾಲ ʻಕದನದ
ಕಣʼ (War Field) ಆಗಿಯೇ ಮುಂದುವರೆಯಬೇಕಾಗಬಹುದು.
ಈ ʻಹಿಂದೂರಾಷ್ಟ್ರʼ
ಎಂಬುದು ದೇಶದ ನೂರಿಪ್ಪತ್ತು ಕೋಟಿ ಹಿಂದೂಗಳ ಒಕ್ಕೊರಲ ಬೇಡಿಕೆಯಾಗಿದೆʼ ಎಂದು ಹಿಂದುತ್ವವಾದಿಗಳು
ಆವೇಶದಿಂದ ಮಾತನಾಡುವುದನ್ನು ನೀವು ಪದೇ ಪದೇ ಕೇಳಿರುತ್ತೀರಿ. ಅವರು ಹೀಗೆ ಆವೇಶದಿಂದ ಮಾತನಾಡುವುದು
ನಿಜವಾದರೂ ವಾಸ್ತವದಲ್ಲಿ ಅದು ಸತ್ಯವಲ್ಲ. ಅದು ಸತ್ಯವೇ ಆಗಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ
ಮಾಡಲು ನೂರಾ ಇಪ್ಪತ್ತು ನಿಮಿಷಗಳು ಸಾಕಾಗುತ್ತಿತ್ತು. ನೂರು ವರ್ಷಗಳ ಕಾಲ ಹೋರಾಟ ಮಾಡುವ ಅಗತ್ಯವೇ
ಇರಲಿಲ್ಲ. ಶತಮಾನಗಳ ಕಾಲ ಹೋರಾಟ ಮಾಡಿದರೂ ಅದು ಆಗುತ್ತಿಲ್ಲ ಎಂಬುದೇ ಅದು ಎಲ್ಲ ಹಿಂದೂಗಳ ಬೇಡಿಕೆ
ಅಲ್ಲ ಎಂಬುದನ್ನು ದೃಢಪಡಿಸುತ್ತದೆ.
ʻಹಿಂದೂರಾಷ್ಟ್ರʼಕ್ಕೆ ಏಕೆ ಈ ಪರಿ ವಿರೋಧ
ಈ ಕಾರಣಕ್ಕೂ ನಮ್ಮ
ಹಿಂದುತ್ವವಾದಿಗಳಿಗೆ ತಮ್ಮ ಹಿಂದೂರಾಷ್ಟ್ರ ಬೇಡಿಕೆಗೆ ಬೆಂಬಲ ಕೊಡದ ಹಿಂದೂಗಳ ಮೇಲೆ ಅಪಾರ ಕೋಪವಿದೆ.
ಅದನ್ನು ಅವರು ಆಗಾಗ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಲೂ ಬಂದಿದ್ದಾರೆ. ಆದರೆ ಈ ವಿಷಯದಲ್ಲಿ ಅವರು
ತಮ್ಮ ಬೇಡಿಕೆಯನ್ನು ಬೆಂಬಲಿಸದ ಇತರ ಹಿಂದೂಗಳ ಮೇಲೆ ಕೆಂಡಕಾರುವ ಕೆಲಸ ಮಾಡುತ್ತಾರೆಯೇ ಹೊರತು ಅವರೆಲ್ಲ
ಏಕೆ ತಮ್ಮ ಬೇಡಿಕೆಯನ್ನು ಬೆಂಬಲಿಸುತ್ತಿಲ್ಲ ಕೊನೆಯ ಪಕ್ಷ ಸುಮ್ಮನಾದರೂ ಇರದೇ ಇವರೇ ತಮ್ಮ ಬೇಡಿಕೆಯನ್ನು
ವಿರೋಧಿಸುತ್ತಿದ್ದಾರಲ್ಲ. ಇದಕ್ಕೆ ಕಾರಣ ಏನಿರಬಹುದು ಎಂಬುದನ್ನು ಪ್ರಾಮಾಣಿಕವಾಗಿ ತಿಳಿಯುವ ಪ್ರಯತ್ನವನ್ನು
ಇದುವರೆಗೂ ಮಾಡಿದಂತಿಲ್ಲ. ಹೀಗಾಗಿ ಇವರು ಏನೇ ಕೆಂಡಕಾರಿದರೂ ನಿರೀಕ್ಷಿತ ಪ್ರತಿಫಲ ಸಿಗುತ್ತಿಲ್ಲ.
ಹಾಗಾದರೆ ಹಿಂದುತ್ವವಾದಿಗಳ
ಹಿಂದೂರಾಷ್ಟ್ರ ಬೇಡಿಕೆಯನ್ನು ಬಹಳಷ್ಟು ಜನ ಹಿಂದೂಗಳೇ ಏಕೆ ವಿರೋಧಿಸುತ್ತಿದ್ದಾರೆ ಎಂಬುದನ್ನು ನೋಡೋಣ.
ಹಿಂದುತ್ವವಾದಿಗಳು ತಮ್ಮ ಮಾತು ಮತ್ತು ವರ್ತನೆಗಳ ಮೂಲಕ ಈಗಿರುವ ಭಾರತದ ಸಂವಿಧಾನದ ಮೇಲೆ ಅವರಿಗೆ
ಗೌರವ ಇಲ್ಲ ಎಂಬುದನ್ನು ಹತ್ತು ಹಲವು ಬಾರಿ ತೋರಿಸಿದ್ದಾರೆ. ನಮ್ಮ ಸಂವಿಧಾನ ಜಗತ್ತಿನ ಅತ್ಯುತ್ತಮ
ಸಂವಿಧಾನಗಳಲ್ಲಿ ಒಂದೆಂದು ಖ್ಯಾತಿ ಪಡೆದಿದ್ದರೂ ಅವರಿಗೆ ಅದರ ಬಗ್ಗೆ ಗೌರವ ಇಲ್ಲ. ಸಂವಿಧಾನ ಜಾರಿಗೆ
ಬರುವಾಗ ಅದರಲ್ಲಿ ʼಭಾರತೀಯತೆʼ ಅನ್ನುವುದೇ ಇಲ್ಲ. ಕೇವಲ ಹೊರದೇಶಗಳಿಂದ ಪಡೆದ ವಿಚಾರಗಳು ಅದರಲ್ಲಿ
ತುಂಬಿಕೊಂಡಿವೆ ಎಂದು ಇವರೆಲ್ಲ ಅಸಮಾಧಾನ ವ್ಯಕ್ತಪಡಿದಿದ್ದರು. ರಾಷ್ಟ್ರಧ್ವಜಕ್ಕೂ ಅಪಸ್ವರ ಎತ್ತಿ
ಮೂರು ಬಣ್ಣಗಳಿವೆ. ಮೂರು ಎಂಬುದೇ ನಮ್ಮ ಸಂಸ್ಕೃತಿಯಲ್ಲಿ ಅನಿಷ್ಟ ಎಂದೆಲ್ಲ ಮಾತನಾಡಿದ್ದರು.
ಸಂವಿಧಾನದಲ್ಲಿ ಇಲ್ಲ ಎಂದು ಇವರು ಹೇಳುವ ʼಭಾರತೀಯತೆʼ ಅಂದರೆ ಏನು? ಮನುಷ್ಯರನ್ನು ಸಮಾನವಾಗಿ ಕಾಣದೇ ಅವರ ಹುಟ್ಟಿನ ಆಧಾರದ ಮೇಲೆ ಅವರನ್ನು ಮೇಲು ಕೀಳು ಎಂದು ವಿಭಜಿಸಿ ಕೆಲವರನ್ನು ವಿಶೇಷ ಸ್ಥಾನಮಾನ ಕಲ್ಪಿಸಿ ಮೊದಲದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸುವುದು, ಉಳಿದ ಕೆಲವರನ್ನು ಜಾತಿಯ ಕಾರಣಕ್ಕೆ ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಿ ಅವರವರ ಜಾತಿಯ ಆಧಾರದ ಮೇಲೆ ಅವರಿಗೆ ಸ್ಥಾನಮಾನ ನೀಡುವುದು ಇದೇ ಆಗಿತ್ತು. ಅದಕ್ಕಾಗಿಯೇ ಅಂತಹ ಆಡಳಿತ ವ್ಯವಸ್ಥೆಯನ್ನು ಪ್ರತಿಪಾದಿಸುವ ʻಮನುಧರ್ಮಶಾಸ್ತ್ರʼವನ್ನು ಅವರು ತಮ್ಮ ಸಂವಿಧಾನವೆಂದು ಪರಿಗಣಿಸಿದ್ದರು ಮತ್ತು ಅದನ್ನೇ ಭಾರತದ ಸಂವಿಧಾನವಾಗಿ ತರಲು ಬಯಸಿದ್ದರು. ಆದರೆ ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನೆಯ ಕರುಡು ಸಮಿತಿ ದೇಶದ ಎಲ್ಲ ಪ್ರಜೆಗಳೂ ಕಾನೂನಿನ ದೃಷ್ಟಿಯಲ್ಲಿ ಸರಿಸಮಾನರು ಎಂದು ಹೇಳುವ ಸಂವಿಧಾನವನ್ನು ತಂದಾಗ ಮನುಷ್ಯರೆಲ್ಲರೂ ಸಮಾನರು ಎಂಬುದನ್ನು ಕನಸಿನಲ್ಲಿಯೂ ಕಂಡಿರದ ಇವರು ಅದನ್ನು ವಾಸ್ತವವಾಗಿ ಸ್ವೀಕರಿಸಬೇಕಾದ ಅನಿವಾರ್ಯತೆಗೆ ತಳ್ಳಲ್ಪಟ್ಟು ತೀವ್ರವಾಗಿ ಕಸಿವಿಸಿಗೊಂಡು ಏನೂ ಮಾಡಲಾಗದೇ ಕೊನೆಗೆ ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದರು.
ಹಿಂದೂʼ
ಎಂಬುದು ಅನೇಕ ಭಿನ್ನ ಭಿನ್ನ ಧರ್ಮಗಳ, ಭಿನ್ನ ಭಿನ್ನಜಾತಿಗಳ, ಭಿನ್ನ ಭಿನ್ನ ನಂಬಿಕೆ ಮತ್ತು ಸಂಪ್ರದಾಯಗಳ ಜನಸಮೂಹಗಳನ್ನು ಒಳಗೊಂಡ ಒಂದು
ಜನಾಂಗ ಎಂಬುದನ್ನು ಈ ಲೇಖನದ ಆರಂಭದಲ್ಲಿಯೇ ಚರ್ಚಿಸಿದ್ದೇವೆ. ಜಾತಿಯ ಕಾರಣಕ್ಕೆ ಎಂದೆಂದೂ ಮುಗಿಯದಂತಹ
ಶೋಷಣೆಗೆ ಹಿಂದೂಗಳಲ್ಲಿಯೇ ಬಹುಸಂಖ್ಯಾತ ದುಡಿಯುವ ವರ್ಗದ ಜನ ಸಿಕ್ಕು ಅದುವರೆಗೂ ನರಳಿದ್ದರು. ಅವರಿಗೆಲ್ಲ
ಶಿಕ್ಷಣವನ್ನೇ ವಂಚಿಸಲಾಗಿತ್ತು. ಇದಕ್ಕೆ ತಕ್ಕಂತೆ ಶಾಸ್ತ್ರಗಳನ್ನು ರಚಿಸಿಕೊಂಡು ಈ ಅಸಮಾನತೆಯನ್ನು
ದೇವರ ಬಾಯಿಂದಲೇ ಹೇಳಿಸಿ ಅದಕ್ಕೆ ಅಧಿಕೃತತೆಯನ್ನು ಕಲ್ಪಿಸಿ, ಅದನ್ನೇ ಶಾಸನವನ್ನಾಗಿ ಮಾಡಿ ಬೆರಳೆಣಿಕೆಯಲ್ಲಿರುವ
ʼಬುದ್ಧಿವಂತರುʼ ದೊಡ್ಡ ಸಂಖ್ಯೆಯ ಜನರನ್ನುʻದಡ್ಡರನ್ನಾಗಿ
ಮಾಡಿಕೊಂಡುʼ ಸೇವೆ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದರು. ಇಂಥದ್ದೊಂದು ವ್ಯವಸ್ಥೆ ಹಿಂದೂ ಸಮಾಜದಲ್ಲಿತ್ತು.
ಈ ಬಂಧನಕ್ಕೆ ಸಿಕ್ಕ ಬಹಳಷ್ಟು ತಳಸಮುದಾಯದ ಜನ ಇದರಿಂದ ಬಿಡುಗಡೆಗಾಗಿ ಹಾತೊರೆಯುತ್ತಿದ್ದರು. ಹಪಹಪಿಸಿ
ಹಣ್ಣಾಗಿದ್ದ ಈಶೋಷಿತ ಸಮುದಾಯಕ್ಕೆ ಬ್ರಿಟಿಷ್ ಶಿಕ್ಷಣ ಎಂಬುದು ವರದಾನವಾಗಿ ಬಂತು. ಅದರ ಮುಂದಿನ
ಬೆಳವಣಿಗೆಯಾಗಿ ಸ್ವಾತಂತ್ರ್ಯ ಮತ್ತು ಸಮಾನತೆ ಸಾರುವ ಈಗಿರುವ ನಮ್ಮ ಸಂವಿಧಾನ ಕೂಡ ಬಂದವು.
ಹೀಗೆ ನೋವು ಅಪಮಾನ,
ಹಿಂಸೆ ಕೊಟ್ಟು ಅವರ ಮೇಲೆ ದೌರ್ಜನ್ಯವನ್ನು ಮಾಡಿದವರು ಯಾರು? ಹೊರಗಿನವರೇನೂ ಅಲ್ಲ. ಹಿಂದೂಗಳಲ್ಲಿಯೇ
ಕೆಲವರು ಮಾಡಿದ್ದು. ಈ ಗಾಯದ ಬರೆಯನ್ನು ಆ ಜನಾಂಗಗಳು ಇನ್ನೂ ಮರೆತಿಲ್ಲ. ಮತ್ತೊಮ್ಮೆ ಏನಾದರೂ ʻಹಿಂದೂರಾಷ್ಟ್ರʼ
ಎಂಬುದು ರಚನೆಯಾದರೆ ಮತ್ತೆ ನಮ್ಮ ಸ್ಥಿತಿ ಅಧೋಗತಿಗಿಳಿದು ನಾವು ಮೇಲ್ಜಾತಿಗಳ ಚಾಕರಿ ಮಾಡುತ್ತಾ ಅವರು
ಹಾಕಿದ್ದನ್ನು ತಿನ್ನುತ್ತಾ ಬಿದ್ದಿರಬೇಕಾಗುತ್ತದೆ ಎಂಬ ಆತಂಕ ಈ ಶೋಷಿತ ಜನಾಂಗಗಳಿಗೆ ಈಗಲೂ ಇದೆ.
ಈ ಕಾರಣಕ್ಕೇ ಅವರು ಹಿಂದೂ ರಾಷ್ಟ್ರವನ್ನು ಬೆಂಬಲಿಸುತ್ತಿಲ್ಲ. ಶೋಷಿತ ಸಮುದಾಯಗಳಿಂದ ಬಂದ ಕೆಲವರು
ಹಿಂದೂರಾಷ್ಟ್ರ ಪ್ರತಿಪಾದಕರ ಜೊತೆಗೆ ಇರುವುದು ನಿಜ. ಅವರೆಲ್ಲ ಹಿಂದೂರಾಷ್ಟ್ರ ಎಂದರೆ ಹಿಂದೂಗಳಾದ
ಎಲ್ಲ ಜಾತಿಯವರೂ ಪರಸ್ಪರ ಪ್ರೀತಿ ವಿಶ್ವಾಸದಿಂದ, ಸಮಾನ ಗೌರವದಿಂದ, ಸಮಾನ ಸ್ಥಾನಮಾನ ಪಡೆದು ಬದುಕುವ
ಒಂದು ರಾಷ್ಟ್ರ ಎಂದು ತಪ್ಪು ತಿಳಿದುಕೊಂಡಿರುವುದರಿಂದ ಅಲ್ಲಿದ್ದಾರೆ. ಅವರಿಗೆ ತಮ್ಮ ಮೇಲೆ ಹಿಂದೆ
ಆದ ದೌರ್ಜನ್ಯ ಎಂಥದ್ದು ಮತ್ತು ಅದನ್ನು ಮಾಡಿದವರು ಯಾರು ಎಂದು ಗೊತ್ತಾಗದಿದ್ದದ್ದು ಅದಕ್ಕೆ ಕಾರಣ.
ಗೊತ್ತಾದ ದಿನವೇ ಅವರು ಅಲ್ಲಿಂದ ದೂರ ಸರಿಯುತ್ತಾರೆ.
ಹಿಂದುತ್ವವಾದಿಗಳು ಅನೇಕ ಸಲ ಹಿಂದೂಗಳಲ್ಲಿನ ಈ ತಳಸಮುದಾಯಗಳನ್ನು ಸೆಳೆಯಲು ʻಮುಸ್ಲಿಂಭಯʼ (Islamophobia) ತೋರಿಸುತ್ತಿದ್ದಾರೆ. ಆದರೆ ಅವರಲ್ಲಿ ಅನೇಕರಿಗೆ ನನಗೆ ಒಬ್ಬ ಹೇಳಿದಂತೆ, ʼಸಾಬ್ರ ಜೊತಿಗರ ಇರ್ತೀವಿ; ಈ ಬ್ರಾಂಬ್ರ ಜೊತೆಗೆ ಮಾತ್ರ ಇರಲ್ಲʼ ಅನ್ನಿಸಿದೆ. ಹಾಗಾಗಿ ಅವರು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ಕೊಡುತ್ತಿಲ್ಲ. ಇವರನ್ನು ಹೊರತುಪಡಿಸಿದರೆ ಪ್ರಗತಿಪರರು, ವಿಚಾರವಾದಿಗಳು ಇದನ್ನು ವಿರೋಧಿಸುವವರಲ್ಲಿ ಸೇರಿದ್ದಾರೆ. ಅವರದ್ದು ವೈಚಾರಿಕ ನಿಲುವು. ಇಲ್ಲಿ ಹುಟ್ಟಿದ ಯಾರೂ ಎಲ್ಲಿಗೂ ಹೋಗಬೇಕಾಗಿಲ್ಲ. ಎಲ್ಲರಿಗೂ ಇಲ್ಲಿ ಸರಿಸಮಾನವಾಗಿ ಬಾಳುವ ಹಕ್ಕು ಇದೆ. ಈ ದೇಶ ಯಾವುದೋ ಒಂದು ಧರ್ಮದವರಿಗೆ ನೀಡಿದ ಗುತ್ತಿಗೆಯಲ್ಲ ಎಂಬುದು ಅವರ ವಿಚಾರ. ಹಾಗಾಗಿ ಅವರು ವಿರೋಧಿಸುತ್ತಿದ್ದಾರೆ. ಇನ್ನು ಮುಸ್ಲಿಮರು, ಕ್ರೈಸ್ತರು ಅವರು ತಮ್ಮ ಅಸ್ತಿತ್ವದ ಕಾರಣಕ್ಕಾಗಿ ಹಿಂದೂ ರಾಷ್ಟ್ರ ರಚನೆಯ ಬಗ್ಗೆ ಸಹಜವಾಗಿ ಆತಂಕದಲ್ಲಿರುವುದರಿಂದ ಅವರ ವಿರೋಧವಂತೂ ಇದ್ದೇ ಇದೆ. ಅಷ್ಟಕ್ಕೂ ಈ ವಿಚಾರವಾದಿಗಳು (ಕಮ್ಯೂನಿಷ್ಟರು ಎನ್ನುವ ಅರ್ಥದಲ್ಲಿ), ಮುಸ್ಲಿಮರು ಮತ್ತು ಕ್ರೈಸ್ತರು ಈ ಮೂವರನ್ನೂ ʻಶತ್ರುಗಳುʼ ಎಂದು ಈ ಹಿಂದುತ್ವವಾದಿಗಳ ʻಗುರೂಜಿʼ ಬಹಿರಂಗವಾಗಿಯೇ ತಮ್ಮ ಪುಸ್ತಕದಲ್ಲಿ ಬರೆದಿರುವುದರಿಂದ ಅವರು ಹೇಗೆ ಮತ್ತು ಏಕೆತಾನೆ ಈ ಹಿಂದೂರಾಷ್ಟ್ರಕ್ಕೆ ಬೆಂಬಲ ಕೊಡಲು ಸಾಧ್ಯ?
ಅಸಹನೆ ಮಿತಿಮೀರಿದರೆ ಆಗಬಹುದಾದ ಅನಾಹುತ
ಇಷ್ಟೆಲ್ಲ ವಿರೋಧವನ್ನಿಟ್ಟುಕೊಂಡು
ಹಿಂದೂರಾಷ್ಟ್ರವೊಂದನ್ನು ಕಟ್ಟುವುದು ಸುಲಭದ ಮಾತೆ?. ಒಂದು ವೇಳೆ ಸಾಧ್ಯವಿದೆ ಎಂದು ವಾದಕ್ಕೆ ಒಪ್ಪಿಕೊಂಡರೂ
ಅದನ್ನು ವಾಸ್ತವದಲ್ಲಿ ಅಸ್ತಿತ್ವಕ್ಕೆ ತರುವುದು ಅಷ್ಟು ಸುಲಭವಿಲ್ಲ. ಈಗ ಇಷ್ಟೊಂದು ಸಂಖ್ಯೆಯಲ್ಲಿರುವ
ಮುಸ್ಲಿಮರನ್ನು ಕ್ರೈಸ್ತರನ್ನೂಅವರ ಜೊತೆಗೆ ಈ ವಿಚಾರವಾದಿಗಳನ್ನು ಏನು ಮಾಡುವುದು? ಅವರನ್ನೆಲ್ಲ ಸಾಮೂಹಿಕವಾಗಿ
ಹತ್ಯೆ ಮಾಡಬೇಕೆ? ಬೇರೆ ದೇಶಗಳಿಗೆ ಕಳಿಸಬೇಕೆ? ಕಳಿಸುವುದಾದರೆ ಯಾವ ದೇಶ ಅವರನ್ನು ಕರೆದುಕೊಳ್ಳುತ್ತದೆ?
ಇವು ಯಾವೂ ಆಗಿಹೋಗುವ ಸಂಗತಿಗಳಲ್ಲ. ಅಷ್ಟಕ್ಕೂ ಇಷ್ಟೆಲ್ಲ ಮಾಡಿ ಹಿಂದೂರಾಷ್ಟ್ರ ಮಾಡುವ ಜರೂರಾದರೂ
ಏನಿದೆ? ʼಒಂದು ದೇಶದಲ್ಲಿ ಒಂದು ಧರ್ಮದ ಜನರೇ ಇದ್ದರೆ ಧಾರ್ಮಿಕ ಜನಾಂಗಿಯ ಸಂಘರ್ಷಗಳು ಇರುವುದಿಲ್ಲ
ಅಥವಾ ಕಡಿಮೆ ಇರುತ್ತವೆʼ ಎಂಬುದು ಕೆಲವು ಹಿಂದುತ್ವವಾದಿಗಳ ಅಂಬೋಣ. ಆದರೆ ಅದಕ್ಕೆ ಯಾವುದೇ ಆಧಾರಗಳಿಲ್ಲ.
ಒಂದೇ ಧರ್ಮದ ಜನಾಂಗದ ಜನರನ್ನೊಳಗೊಂಡ ಅನೇಕ ರಾಷ್ಟ್ರಗಳು ಈಗ ಪ್ರಪಂಚದಲ್ಲಿದ್ದು ಅಲ್ಲಿನ ಜನಾಂಗೀಯ
ಘರ್ಷಣೆಗಳು ನಮ್ಮಲ್ಲಿಗಿಂತಲೂ ಹೆಚ್ಚಿರುವ ಉದಾಹರಣೆಗಳು ಈಗ ನಮ್ಮ ಕಣ್ಣ ಮುಂದೆಯೇ ಇವೆ. ಒಂದು ವೇಳೆ
ಮುಸ್ಲಿಮರು ಮತ್ತು ಕ್ರೈಸ್ತರು ಇಲ್ಲದ ಕೇವಲ ಹಿಂದೂಗಳ ದೇಶವನ್ನು ಮಾಡಿದರೂ ಅಲ್ಲಿ ಈ ಜಗಳ ತಿಕ್ಕಾಟ
ಇರುವುದಿಲ್ಲ ಎಂದೇನೂ ಅಲ್ಲ. ಈಗ ಮುಸ್ಲಿಮರು ಮತ್ತು ಕ್ರೈಸ್ತರೊಂದಿಗೆ ಇರುವ ಜನಗಳ ಹೊಡೆದಾಟಗಳು ಆಗ
ಹಿಂದೂಗಳಲ್ಲಿಯೇ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ಇರುತ್ತದೆ. ಅಷ್ಟೆ.
ಇದನ್ನು ಅರ್ಥಮಾಡಿಕೊಳ್ಳದೆ
ವ್ಯತಿರಿಕ್ತವಾಗಿ ನಾವು ನಡೆಯತೊಡಗಿದರೆ ಆಗಬಹುದಾದ ಅನಾಹುತಗಳನ್ನೂ ನಾವು ಊಹಿಸಿಕೊಳ್ಳಬೇಕು. ಈಗ ಜಾಗತೀಕರಣದ
ಕಾಲಘಟ್ಟದಲ್ಲಿರುವ ಯಾವ ದೇಶಕ್ಕೂ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲವಾಗಿದೆ.
ಒಂದು ಗ್ರಾಮದ ಪಂಚಾಯತಿ ಅಧ್ಯಕ್ಷ, ಅಥವಾ ತಾಲ್ಲೂಕಿನ ಪಂಚಾಯತಿ ಅಧ್ಯಕ್ಷನ ಆಯ್ಕೆ ಹೇಗೆ ಆ ಪ್ರದೇಶಗಳ
ಹೊರಗೆ ಹೋಗಿ ಬೆಂಗಳೂರಿನಲ್ಲಿ ಆಗುತ್ತದೆಯೋ, ಒಂದು ರಾಜ್ಯದ ಮುಖ್ಯಮಂತ್ರಿಯ ಆಯ್ಕೆ ಹೇಗೆ ರಾಜ್ಯದ
ಹೊರಗೆ ಹೋಗಿ ದೆಹಲಿಯಲ್ಲಿ ಆಗುತ್ತದೆಯೋ ಹಾಗೆಯೇ ಒಂದು ದೇಶದ ಸಮಸ್ಯೆಯ ಪರಿಹಾರ ಕೂಡ ದೇಶದ ಹೊರಗೆ
ಹೋಗಿಯೇ ಆಗುವುದು! ಇದರ ಬಗ್ಗೆ ನಮಗೆಲ್ಲ ಸರಿಯಾದ ತಿಳಿವಳಿಕೆ ಇರಬೇಕು.
ಭಾರತದದಲ್ಲಿ ಈಗ
ಹಿಂದೂರಾಷ್ಟ್ರದ ಹೆಸರಿನಲ್ಲಿ ಹಿಂದುತ್ವವಾದಿಗಳು ಇಲ್ಲಿನ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರ
ಮೇಲೆ ನಡೆಸುವ ಹಲ್ಲೆಗಳು, ದೌರ್ಜನ್ಯಗಳು ಒಂದು ಹಂತದ ವರೆಗೂ ಹೊರಪ್ರಪಂಚಕ್ಕೆ ದಾಟಿಹೋಗದಿರಬಹುದು.
ಆದರೆ ಅವು ಹೆಚ್ಚಾದರೆ ಇದು ಅಂತರರಾಷ್ಟ್ರೀಯ ಸುದ್ಧಿಯಾಗಿ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಗಮನ
ಸೆಳೆಯಬಹುದು. ಆಗ ಇಲ್ಲಿನ ಮುಸ್ಲಿಮರ ಪರವಾಗಿ ಪ್ರಪಂಚದ ಮುಸ್ಲಿಮ್ ರಾಷ್ಟ್ರಗಳು ಒಟ್ಟಾಗಿ ನಿಲ್ಲಬಹುದು.
ಇಲ್ಲಿನ ಕ್ರೈಸ್ತರ ಬೆಂಬಲಕ್ಕೆ ಕ್ರೈಸ್ತ ರಾಷ್ಟ್ರಗಳು ಒಟ್ಟಾಗಿ ಬರಬಹುದು. ಆಗ ಇಲ್ಲಿನ ಹಿಂದೂಗಳ
ಪರವಾಗಿ ಯಾವ ದೇಶ ಬೆಂಬಲಕ್ಕೆ ಬರುತ್ತದೆ? ಈಗ ಬಹುಸಂಖ್ಯಾತರೆಂದು ಬೀಗುವವರೇ ಆಗ ಅಲ್ಪಸಂಖ್ಯಾತರಾಗುವುದಿಲ್ಲವೇ?
ಈ ಎಚ್ಚರಿಗೆ ಸಂಬಂಧಪಟ್ಟ ಎಲ್ಲರಿಗೂ ಇರಬೇಕಾಗುತ್ತದೆ.
ಆಗ ಅಂತರರಾಷ್ಟ್ರೀಯ
ಮಟ್ಟದಲ್ಲಿ ಏನು ತೀರ್ಮಾನವಾಗಲು ಸಾಧ್ಯವಿದೆ? ʻಹೊಂದಿಕೊಂಡು
ಹೋಗಲು ಸಾಧ್ಯವೇ ಇಲ್ಲದಿದ್ದರೆ ಬೇರೆ ಆಗಿʼ ಎಂಬ ತೀರ್ಮಾನವೇ ತಾನೆ ಆಗುವುದು. ʼಬೇರೆ ಆಗುವುದು ಅಂದರೇನು?
ಈ ದೇಶವನ್ನು ಮತ್ತೆ ಹರಿದು ಹಂಚಿಕೊಳ್ಳುವುದು. ಹಿಂದೆ ಒಮ್ಮೆ ಆದ ಐತಿಹಾಸಿಕ ತಪ್ಪು ಮತ್ತೆ ಮರುಕಳಿಸುವುದು.
ಇಂತಹ ದುರಂತ ಆಗಬಾರದು ಎಂದರೆ ಇಡೀ ಪ್ರಪಂಚವನ್ನೇ ʻಇಸ್ಲಾಮಿಕ್
ಸ್ಟೇಟ್ʼ ಮಾಡುತ್ತೇವೆ ಎನ್ನುವ ಮುಸ್ಲಿಮ್ ಮೂಲಭೂತವಾದಿಗಳು ಮತ್ತು, ಇಡೀ ಭಾರತವವನ್ನು ʻಹಿಂದೂರಾಷ್ಟ್ರʼವನ್ನಾಗಿ
ಮಾಡುತ್ತೇವೆ ಎಂಬ ಹಿಂದೂ ಕೋಮುವಾದಿಗಳು ಇಬ್ಬರನ್ನೂ ತಿರಸ್ಕರಿಸಿ ಈಗಿರುವ ನಮ್ಮ ಸಂವಿಧಾನವನ್ನು ಗೌರವಿಸಿಕೊಂಡು,
ಹಿಂದಿನದನ್ನೆಲ್ಲ ಮರೆತು ಇಲ್ಲಿರುವ ಹಿಂದೂ ಮುಸ್ಲಿಮ್ ಕ್ರೈಸ್ತ ಮತ್ತೆ ಯಾರು ಯಾರು ಇದ್ದಾರೋ ಅವರೆಲ್ಲರೂ
ಪರಸ್ಪರ ಪ್ರೀತಿ ವಿಸ್ವಾಸಗಳಿಂದ ಹೊಂದಿಕೊಂಡು ಹೋಗುವುದೊಂದೆ ನಮ್ಮೆಲ್ಲರಿಗೂ ಇರುವ ಏಕೈಕ ಮತ್ತು ಅತ್ಯುತ್ತಮ
ಆಯ್ಕೆ.
ಈ ಹಿನ್ನಲೆಯಲ್ಲಿ
ಈ ಲೇಖನದ ಶೀರ್ಷಿಕೆಯಲ್ಲಿ ಕೇಳಲಾದ ʻಹಿಂದೂಗಳೊಂದು ಹಿಂದೂರಾಷ್ಟ್ರ ಕೇಳುವುದು ತಪ್ಪೇ? ಎಂಬ ಮೊದಲನೆಯ ಪ್ರಶ್ನೆಗೆ ʼಹಿಂದೂಗಳೊಂದು ಹಿಂದೂರಾಷ್ಟ್ರ ಕೇಳುವುದು
ತಪ್ಪಲ್ಲ; ಅದು ಅವರ ಭಾವನಾತ್ಮಕ ಅಂಶ ಅದನ್ನು ಗೌರವಿಸೋಣ; ಆದರೆ ಅವರ ಬೇಡಿಕೆ ಈಡೇರಲು ಅವಕಾಶ ಮಾಡಿಕೊಡುವುದು
ತಪ್ಪುʼ ಎಂಬುದು ಉತ್ತರವಾದರೆ ಎರಡನೆಯ ಪ್ರಶ್ನೆ ʼಅದಕ್ಕೆ ಹಿಂದೂಗಳೇ ವಿರೋಧಿಸುವುದು ಸರಿಯೇ?ʼ ಎಂಬ
ಪ್ರಶ್ನೆಗೆ ʻಸರಿʼ ಎಂಬುದೇ ಉತ್ತರ.
*****
ಡಾ. ರಾಜೇಂದ್ರ ಬುರಡಿಕಟ್ಟಿ
19-10-2025






ಈ ಲೇಖನವನ್ನು ಓದಬಲ್ಲ ಎಲ್ಲರಿಗೂ ತಲುಪಿಸೋಣ. ಬಹಳ ಉಪಯುಕ್ತ ಮಾಹಿತಿ ಇದೆ
ReplyDeleteಈ ಲೇಖನ ಬಹಳ ಉಪಯುಕ್ತ ವಾಗಿದೆ
ReplyDeleteಒಳ್ಳೆಯ ತಿಳುವಳಿಕೆಯನ್ನು ಕೊಡುತ್ತದೆ
ನಮಗೆ ತಿಳಿಯದ ಹಲವು ವಿಷಯಗಳ
ಬಗ್ಗೆ ತಿಳಿದುಕೊಳ್ಳುವ ಅವಕಾಶವಾಯಿತು
ಎಂತಾ ಅದ್ಭುತ ಲೇಖನ ಸರ್ ಧನ್ಯವಾದಗಳು 🙏🏻 ಎಲ್ಲರ ಕಣ್ತೆರೆಸುವ ಲೇಖನ... ಆದರೆ ಪೊರೆಯನ್ನು ಕಳಚಿಕೊಳ್ಳ ಬಯಸುವವರಿಗೆ ಮಾತ್ರ ಈ ಲೇಖನ ಅತ್ಯಾಬ್ದುತ!
ReplyDelete