ಏಕತಾ ಮೂರ್ತಿ: ಸರದಾರನಿಗೆ ಸಿಕ್ಕ ಸರಿಯಾದ ಮನ್ನಣೆ!
ಡಾ. ರಾಜೇಂದ್ರ ಬುರಡಿಕಟ್ಟಿ
ನನ್ನ ಈ ವರ್ಷದ
ಗುಜಾರಾತ್ ಪ್ರವಾಸದಲ್ಲಿ ನಾನು ಗುರುತುಹಾಕಿಕೊಂಡಿದ್ದ ಪ್ರಮುಖ ಸ್ಥಳಗಳಲ್ಲಿ ನರ್ಮದಾ ನದಿಯ ಮಧ್ಯಭಾಗದಲ್ಲಿ
ಗಗನಚುಂಬಿಯಾಗಿ ನಿಂತಿರುವ, ವಿಶ್ವದ ಅತ್ಯಂತ ಎತ್ತರವಾದ ಮೂರ್ತಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ
ʼಏಕತಾ ಮೂರ್ತಿʼ (Statue of Unity) ಮೂರ್ತಿಯನ್ನು ನೋಡುವುದು ಅತ್ಯಂತ ಮುಖ್ಯವಾದದ್ದಾಗಿತ್ತು.
ನನ್ನ ಗುಜರಾತ್ ಪ್ರವಾಸ ಯೋಜನೆ
ಹಾಗೆ ನೋಡಿದರೆ
ನನ್ನ ಗುಜರಾತ್ ಪ್ರವಾಸವೇ ಈ ಸ್ಥಳದಿಂದ ಆರಂಭವಾಗಬೇಕಿತ್ತು. ಕರ್ನಾಟಕದಿಂದ ಗುಜರಾತಿಗೆ ಹೋಗುವವರಿಗೆ
ಸೂರತ್ ಬಿಟ್ಟರೆ ನಂತರ ಸಿಗುವ ಪ್ರಮುಖ ಪ್ರವಾಸಿ ಸ್ಥಳವೇ ಇದಾಗಿದ್ದರಿಂದ ಇದನ್ನೇ ನಾನು ಮೊದಲು ಭೇಟಿಮಾಡಲು
ಗೊತ್ತು ಮಾಡಿಕೊಂಡಿದ್ದೆ. ಆದರೆ ಈ ಸಲ ನಾನು ಏಕಾಂಗಿಯಾಗಿ ಪ್ರವಾಸ ಹೋಗುತ್ತಿದುದರಿಂದ ಸ್ವತಂತ್ರವಾಗಿ
ವಾಹನಗಳನ್ನು ತೆಗೆದುಕೊಳ್ಳುವುದು ಆರ್ಥಿಕವಾಗಿ ಬಹು ದುಬಾರಿ ಸಂಗತಿಯಾಗುವ ಕಾರಣ ಸರ್ಕಾರ ಅಥವಾ ಖಾಸಗೀ
ವ್ಯವಸ್ಥೆಯಲ್ಲಿರುವ ಸಾರ್ವಜನಿಕ ವಾಹನ ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸಿದ್ದೆ. ಹೀಗೆ ಬಸ್ಸುಗಳು
ಅಲ್ಲಿಗೆ ಅಹಮದಾಬಾದ್ ಮತ್ತು ಹತ್ತಿರದ ವಡೋದರಾ ನಗರಗಳಿಂದ ಹೋಗಿಬರುವ ವ್ಯವಸ್ಥೆ ಇತ್ತು. ಆದರೆ ನಾನು
ವಿಚಾರಿಸಿದಾಗ ಈ ರೀತಿ ಬಸ್ ವ್ಯವಸ್ಥೆ ಕೇವಲ ಭಾನುವಾರ ಮಾತ್ರ ಇರುವುದಾಗಿ ತಿಳಿದು ಬಂತು. ಆದರೆ
ನನಗೆ ಭಾನುವಾರ ಹೊಂದಾಣಿಕೆ ಆಗಲಿಲ್ಲವಾದ್ದರಿಂದ ನಾನು ಮೊದಲು ಮಾಡಿಕೊಂಡಿದ್ದ ಇಡೀ ಪ್ರವಾಸದ ವೇಳಾಪಟ್ಟಿಯನ್ನೇ
ಪ್ರವಾಸಕ್ಕೆ ಹೊರಡುವ ಮೂರು ನಾಲ್ಕು ದಿನಗಳ ಮೊದಲು ಅನಿವಾರ್ಯವಾಗಿ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾಗಿ
ಬಂತು.
ಈ ಮರುಹೊಂದಣಿಕೆ
ವೇಳಾಪಟ್ಟಿಗನುಗುಣವಾಗಿ ನಾನು ಈಗಾಗಲೇ ವಡೋದರಾದಲ್ಲಿ ಬುಕ್ ಮಾಡಿದ್ದ ಹೋಟೆಲ್, ಅಲ್ಲಿಯವರೆಗೆ ಮತ್ತು
ಅಲ್ಲಿಂದ ಮುಂದೆ ಮಾಡಿದ್ದ ರೈಲ್ ಬುಕಿಂಗ್ ಇತ್ಯಾದಿ ಎಲ್ಲವನ್ನೂ ರದ್ದುಪಡಿಸಿ ಒಂದಿಷ್ಟು ಹಣವನ್ನು
ಕಳೆದುಕೊಂಡಿದ್ದೂ ಆಯಿತು. ಹೊಸ ಬುಕಿಂಗ್‌ಗಳನ್ನು ಮಾಡಿದ್ದೂ ಆಯಿತು. ಹೊಸ ವೇಳಾಪಟ್ಟಿಯ ಪ್ರಕಾರ ಕರ್ನಾಟಕದಿಂದ
ಹೊರಟು ಸೀದಾ ಅಹಮದಾಬಾದ್‌ಗೆ ಹೋಗಿ ಅಲ್ಲಿ ಒಂದಿರುಳು ತಂಗಿದ್ದು ಅಲ್ಲಿಂದ ಬೆಳಿಗ್ಗೆ ನೇರವಾಗಿ ಹೊರಟು
ಅರಬ್ಬಿಸಮುದ್ರದ ತೀರದಲ್ಲಿರುವ ಪ್ರಾಚೀನ ನಗರ, ದೇವಭೂಮಿ ಎಂದು ಹೆಸರಾಗಿರುವ ದ್ವಾರಕಾ ಪಟ್ಟಣವನ್ನು
ನೋಡಿಕೊಂಡು ಅಲ್ಲಿಂದ ಗಾಂಧೀಜಿಯವರು ಹುಟ್ಟಿಬೆಳೆದ ಪೋರಬಂದರಿಗೂ ಹೋಗಿ ಅಲ್ಲಿನ ಪ್ರಮುಖ ಸ್ಥಳಗಳನ್ನು
ನೋಡಿಕೊಂಡು ಮತ್ತೆ ಅಹಮದಾಬಾದಿಗೆ ವಾಪಸಾಗಿ ಅಲ್ಲಿ ಇಡೀ ನಗರವನ್ನು ಒಂದು ದಿನ ಸುತ್ತಾಡಿ ಪ್ರಮುಖ
ಸ್ಥಳಗಳನ್ನು ನೋಡಿದ್ದೆ. ಅಹಮದಾಬಾದ್ ಸುತ್ತಾಡಿದ ದಿನ ಸೆಪ್ಟಂಬರ್ ಮೂವತ್ತು. ಮರುದಿನ ಅಕ್ಟೋಬರ್
ಒಂದು ದಿನ ನನಗೆ ಖಾಲೀ ಉಳಿದಿತ್ತು. ಅದರ ಮರುದಿನ ಮತ್ತೆ ಅದೇ ಅಹಮದಾಬಾದಿನಲ್ಲಿರುವ ಗಾಂಧೀಜಿಯವರ
ಸಾಬರಮತಿ ಆಶ್ರಮದಲ್ಲಿ ನಡೆಯುವ ಗಾಂಧೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.
ಹೀಗಾಗಿಯೇ ಅಕ್ಟೋಬರ್
ಒಂದರಂದು ಅಹಮದಾಬಾದಿನಿಂದ ನರ್ಮದಾ ಕಣಿವೆಗೆ ಹೋಗಿ ವಿಶ್ವದ ಅತಿ ಎತ್ತರದ ಈ ಮೂರ್ತಿಯನ್ನು ನೋಡಿಕೊಂಡು
ಬರಲು ಯೋಜಿಸಿದ್ದೆ. ಹಿಂದಿನ ದಿನ ಅಹಮಾದಾಬಾದ್ ನಗರ ತಿರುಗಾಡುವಾಗಲೇ ಸಮಯ ಸಿಕ್ಕಾಗೆಲ್ಲ ಆನ್ಲೈನಿಗೆ
ಹೋಗಿ ಅಲ್ಲಿಗೆ ಹೋಗಿಬರಲು ಮಾಡಿಕೊಳ್ಳಬೇಕಾದ ಎಲ್ಲ ಏರ್ಪಾಡುಗಳನ್ನು ಮಾಡಿಕೊಂಡೆ. ನನ್ನ ಅದೃಷ್ಟಕ್ಕೆ
ಬೆಳಿಗ್ಗೆ ಅಹಮದಾಬಾದಿನಿಂದ ವಡೋದರಾ ಮಾರ್ಗವಾಗಿ ಈ ಮೂರ್ತಿ ಇರುವ ಏಕತಾ ನಗರಕ್ಕೆ ನೇರವಾಗಿ ಹೋಗಿ
ಬರುವ ʼಜನಶತಾಬ್ದಿʼ ರೈಲೇ ಇತ್ತು. ತಡಮಾಡದೆ ಬುಕ್
ಮಾಡಿದೆ. ಹಾಗೆಯೇ ಏಕತಾ ಮೂರ್ತಿ ಆಡಳಿತ ಮಂಡಳಿಯ ಜಾಲತಾಣಕ್ಕೆ ಹೋಗಿ ಅಲ್ಲಿನ ಟಿಕೆಟ್ ಕೂಡ ಬುಕ್
ಮಾಡಿಕೊಂಡೆ. ಅಹಮದಾಬಾದಿನಿಂದ ರೈಲು ಬೆಳಿಗ್ಗೆ ಏಳೂ ಮುಕ್ಕಾಲಿಗೆ ಹೊರಟು ಏಕತಾ ನಗರವನ್ನು ಮೂರು ತಾಸುಗಳಲ್ಲಿ
ತಲುಪುವುದಿತ್ತು. ಹಾಗೆಯೇ ಅದೇ ರೈಲು ಮತ್ತೆ ರಾತ್ರಿ ಎಂಟೂ ಮುಕ್ಕಾಲಿಗೆ ಅಲ್ಲಿಂದ ಹೊರಟು ಮಧ್ಯರಾತ್ರಿಯ
ವೇಳೆಗೆ ಅಹಮದಾಬಾದಿಗೆ ಮರಳಿ ಬರುವುದಿತ್ತು. ಇಂತಹ ಅಪವೇಳೆಯ ಆಗಮನ ಮತ್ತು ನಿರ್ಗಮನಗಳ ನಿರೀಕ್ಷಿತ
ಕಾರಣಗಳಿಂದಾಗಿಯೇ ನಾನು ಹೊರರಾಜ್ಯಗಳಿಗೆ ಹೋದಾಗ ಉಳಿಯುವ ವ್ಯವಸ್ಥೆಯನ್ನು ಆದಷ್ಟೂ ರೈಲು ನಿಲ್ದಾಣ
ಅಥವಾ ಬಸ್ ನಿಲ್ದಾಣಗಳ ಹತ್ತಿರವೇ ಮಾಡಿಕೊಳ್ಳುತ್ತೇನೆ. ಇಲ್ಲಿ ಕೂಡ ರೈಲು ನಿಲ್ದಾಣದ ಹತ್ತಿರವೇ ಆ ವ್ಯವಸ್ಥೆಯನ್ನು ಮಾಡಕೊಂಡಿದ್ದರಿಂದ
ತೊಂದರೆ ಆಗುವಂಥದ್ದೇನೂ ಇರಲಿಲ್ಲ.
ಬೆಳಿಗ್ಗೆ ಏಳೂಕಾಲಿಗೆ
ರೈಲು ಎಂದುಕೊಂಡು ಬೇಗಬೇಗನೆ ಎದ್ದು ತಯಾರಾಗಿ ರೂಮಿನಿಂದ ಹೊರಬಂದು ಹತ್ತಿರವೇ ಇದ್ದ ಕ್ಯಾಂಟೀನಿಗೆ
ಹೋಗಿ ಬೆಳಗಿನ ಉಪಹಾರ ಮುಗಿಸಿದೆ. ಉತ್ತರ ಭಾರತದ ಪ್ರವಾಸ ಮಾಡುವಾಗ ಆಹಾರ ವಿಷಯದಲ್ಲಿ ಉಂಟಾಗುವ ಸಣ್ಣ
ಸಮಸ್ಯೆ ಎಂದರೆ ನಮಗೆ ದಕ್ಷಿಣ ಭಾರತದ ಊಟ ತಿಂಡಿ ಎಲ್ಲ ಕಡೆ ಸಿಗುವುದಿಲ್ಲ. ನಮ್ಮಲ್ಲಿ ಕೆಲವು ಹೊಟೆಲ್
ಗಳಲ್ಲಿ ʻನಾರ್ತ್ ಮೀಲ್ಸ್ʼ ಸಿಗುವಂತೆ ಅಲ್ಲಿಯೂ ಕೆಲವು ಹೋಟೆಲ್‌ಗಳಲ್ಲಿ ʼಸೌತ್
ಮೀಲ್ಸ್ʼ ಬೋರ್ಡುಗಳು ಇರುತ್ತವೆಯಾದರೂ ಅವು ಪೂರ್ಣಪ್ರಮಾಣದಲ್ಲಿ ʻಸೌತ್
ಮೀಲ್ಸ್ʼ ಆಗಿರುವುದು ಕಡಿಮೆಯೇ. ಆದರೆ ಈ ಕ್ಯಾಂಟೀನಿನಲ್ಲಿ ನಮ್ಮಲ್ಲಿಯಂತೆಯೇ ಇಡ್ಲಿ ವಡಾ ಸಿಕ್ಕಿತು.
ಅದು ನನ್ನ ಬೆಳಗಿನ ಮೆಚ್ಚಿನ ತಿಂಡಿಯೂ ಹೌದು. ಮುಗಿಸಿಕೊಂಡು ಕಾಲ್ನಡಿಗೆಯ ದೂರದ ಅಹಮದಾಬಾದ್ ರೈಲು
ನಿಲ್ದಾಣಕ್ಕೆ ಬಂದಾಗ ತಿಳಿಯಿತು ರೈಲು ನಾನಂದುಕೊಂಡಂತೆ ಏಳೂಕಾಲಿಗೆ ಅಲ್ಲ; ಬದಲಾಗಿ ಏಳೂ ಮುಕ್ಕಾಲಿಗೆ
ಎಂದು! ನಾನೇ ತಪ್ಪಾಗಿ ನೋಡಿಕೊಂಡಿದ್ದೆ.
ಯಾವುದೇ ಊರಿಗೆ
ಹೊಸದಾಗಿ ಹೋದಾಗ ಅಲ್ಲಿನ ಬಸ್ ನಿಲ್ದಾಣವಿರಲಿ ರೈಲು ನಿಲ್ದಾಣವಿರಲಿ ಸಮಯವಿದ್ದರೆ ವಾಚು ನೋಡುತ್ತಾ
ಕೂರುವುದು ನನ್ನ ಜಾಯಮಾನವಲ್ಲ. ಆ ರೈಲು ನಿಲ್ದಾಣವನ್ನೋ ಬಸ್ ನಿಲ್ದಾಣವನ್ನೋ ಸುಮ್ಮನೇ ಸುತ್ತುಹಾಕಿ
ಅಲ್ಲಿ ಕಾಣಬಹುದಾದ ಕೆಲವು ವಿಶೇಷ ವ್ಯಕ್ತಿವಿಷಯಗಳನ್ನು ತಿಳಿಯುವುದು ನನ್ನ ಚಾಳಿ. ಇಲ್ಲಿಯೂ ನನ್ನ
ಹತ್ತಿರವಿದ್ದ ಅರ್ಧಗಂಟೆಯನ್ನು ಈ ಕೆಲಸಕ್ಕೇ ಬಳಸಿದೆ. ನಾನು ಹೊರಡುವ ರೈಲು ಎರಡನೆಯ ಪ್ಲಾಟ್‌ಫಾರಂನಿಂದ
ಹೊರಡಬೇಕಿತ್ತು. ಅದಕ್ಕಾಗಿ ಹೋಗಿ ಆ ಫ್ಲಾಟ್ ಫಾರಂ ಎಂದು ಹೋಗಿ ಕುಳಿತುಕೊಂಡು ತುಸುಹೊತ್ತು ಕಾದೆ.
ಏಳೂವರೆ ಆದರೂ ರೈಲು ಬಂದು ನಿಲ್ಲಲಿಲ್ಲ. ಹೋಗಬೇಕಾದದ್ದು ಜನಶತಾಬ್ದಿ ರೈಲು. ಅದು ಅಲ್ಲಿಂದಲೇ ಹೊರಡುವುದು.
ಹಾಗಿರುವಾಗ ಕನಿಷ್ಠ ಅರ್ಧಗಂಟೆಯಾದರೂ ಮೊದಲು ಅದನ್ನು ಸಂಬಂಧಿಸಿದ ಫ್ಲಾಟ್‌ಫಾರಂಗೆ ತಂದು ನಿಲ್ಲಿಸಿರುತ್ತಾರೆ.
ಇದು ಒಂದು ಸಾಮಾನ್ಯ ಜ್ಞಾನ. ಅನುಮಾನ ಶುರುವಾಗಿ ಮತ್ತೆ ವಿವರಗಳನ್ನು ಚೆಕ್ ಮಾಡಿದೆ. ನಾನು ಕುಳಿತ
ಫ್ಲಾಟ್‌ಫಾರಂ ೨ ರ ಬದಲು ೨ಎ ಆಗಿತ್ತು!
ರೈಲು ಪ್ರಯಾಣ
ಮಾಡುವವರಿಗೆ ಗೊತ್ತಿರುತ್ತದೆ. ಕೊನೆಗಳಿಗೆಯಲ್ಲಿ ಫ್ಲಾಟ್‌ಫಾರಂ ಬದಲಿಸೋದು ಎಷ್ಟು ಕಷ್ಟ ಎಂದು. ಆದರೆ
೨ ಮತ್ತು ೨ ಎ ವಾಸ್ತವದಲ್ಲಿ ಒಂದೇ ಫ್ಲಾಟ್ ಫಾರಂ ಆಗಿದ್ದು ಅದರ ಮುಂದಿನ ಭಾಗವನ್ನು ೨ಎ ಎಂದೂ ಹಿಂದಿನ
ಭಾಗವನ್ನು ೨ ಎಂದೂ ತಾಂತ್ರಿಕವಾಗಿ ಗುರುತಿಸಿದ್ದರು. ಇದರಿಂದ ಮೆಟ್ಟಿಲುಗಳನ್ನು ಹತ್ತುವ ಮತ್ತು ಇಳಿಯುವ
ತಾಪತ್ರಯವೇನೂ ಆಗಲಿಲ್ಲ ನಿಜ. ಆದರೆ ಹೀಗೆ ಸಹಜವಾಗಿ ಜನರಿಗೆ ಗೊಂದಲವಾಗುವಂತಹ ಕೆಲವು ವ್ಯವಸ್ಥೆಗಳು
ಹೆಚ್ಚು ಪ್ರಯಾಣಾನುಭವ ಇಲ್ಲದವರಿಗೆ ದೊಡ್ಡ ಸಮಸ್ಯೆಯನ್ನೇ ಉಂಟುಮಾಡಬಹುದು ಅಲ್ಲವೇ? ನಾನು ಕಂಡಂತೆ
ಹೀಗೆ ಫ್ಲಾಟ್‌ಫಾರಂ ಒಂದನ್ನೇ ಎರಡಾಗಿ ಪರಿಗಣಿಸಿರುವ ವ್ಯವಸ್ಥೆ ಭಾರತದ ಕೆಲವೇ ರೈಲ್ವೆ ನಿಲ್ದಾಣಗಳಲ್ಲಿ
ಇದ್ದು ಅದರಲ್ಲಿ ಈ ಅಹಮದಾಬಾದ್ ರೈಲ್ವೇ ನಿಲ್ದಾಣ ಕೂಡ ಒಂದು!
ʼಅಮೂಲ್ʼ ತವರುಮನೆ ಮತ್ತು ಬ್ಯಾಂಕ್ ಆಫ್ ಬರೋಡಾ...
ರೈಲು ನಿಗಧಿತ
ಸಮಯಕ್ಕೆ ಹೊರಟು ಆನಂದ, ವಡೋದರಾ ಮಾರ್ಗವಾಗಿ ಏಕತಾನಗರಕ್ಕೆ ಸುಮಾರು ಹತ್ತೂವರೆಯಷ್ಟು ಹೊತ್ತಿಗೆ ತಲುಪಿತು.
ಮಾರ್ಗಮಧ್ಯದಲ್ಲಿ ಬರುವ ಎರಡು ನಗರಗಳಾದ ಆನಂದ್ ಮತ್ತು ವಡೋದರಾ ಎರಡೂ ಕನ್ನಡಿಗರಿಗೆ ಬೇರೆ ಬೇರೆಯಾದ
ಎರಡು ಕಾರಣಗಳಿಗೆ ಪರಿಚಯ ಇವೆ. ಭಾರತದ ಎಲ್ಲೆಡೆಯಂತೆ ಕರ್ನಾಟಕದಲ್ಲಿಯೂ ಹೆಚ್ಚು ಮಾರಾಟವಾಗುವ ʻಅಮೂಲ್ʼ
(Amul) ಹಾಲಿನ ಉತ್ಪನ್ನಗಳ ತವರು ಮನೆಯೇ ಈ ಆನಂದ್ (ಅಮೂಲ್ ಎಂಬ ಶಬ್ದದ ವಿಸ್ತ್ರುತ ರೂಪವೇ ಆನಂದ್
ಮಿಲ್ಕ್ ಯೂನಿಯನ್ ಲಿಮಿಟೆಡ್). ಇನ್ನು ವಡೋದರಾ ಮೊದಲು ʻಬರೋಡಾʼ
ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಗರ. ಕರ್ನಾಟಕದಲ್ಲಿಯೂ ಅನೇಕ ಶಾಖೆಗಳನ್ನು ಹೊಂದಿರುವ ನಮ್ಮ
ಕರ್ನಾಟಕ ಮೂಲಕ ವಿಜಯಾಬ್ಯಾಂಕನ್ನು ತನ್ನ ಹೊಟ್ಟೆಗೆ ಇತ್ತೀಚೆಗೆ ಹಾಕಿಕೊಂಡ ʼಬ್ಯಾಂಕ್ ಆಫ್ ಬರೋಡಾʼ
ಈ ಊರಿನ ಮೂಲದ್ದು. ಇವುಗಳ ನೆನಪಿಗಾಗಿ ನಾನು ಆ ನಿಲ್ದಾಣಗಳು ಬಂದಾಗ ಸುಮ್ಮನೆ ಕೆಳಗಿಳಿದು ಒಂದೆರಡು
ಫೋಟೋ ತೆಗೆದುಕೊಂಡೆ.
ʻಏಕತಾ
ನಗರʼ ಎಂಬುದು ಹೊಸದಾಗಿ ಕಟ್ಟಲ್ಪಟ್ಟಿರುವ ಒಂದು ನಗರವೇ
ಹೊರತು ಸಹಜವಾಗಿ ಹುಟ್ಟಿ ಬೆಳೆದ ನಗರವಲ್ಲ . ಇದರ ಹೆಸರೇ ಹೇಳುವಂತೆ ಇದು ಇಲ್ಲಿನ ಏಕತಾ ಮೂರ್ತಿಯ
ಕಾರಣಕ್ಕಾಗಿ ಕಟ್ಟಲ್ಪಟ್ಟಿರುವ ನಗರ. ಈ ನಗರದಲ್ಲಿ ಆ ಮೂರ್ತಿ ಮತ್ತು ಅದಕ್ಕೆ ಸಂಬಂಧಿಸಿದ ಕಟ್ಟಡಗಳು,
ಪಾರ್ಕುಗಳು, ಉದ್ಯಾನಗಳು, ಉಸತಿಗೃಹಗಳು ಬಸ್ ನಿಲ್ದಾಣಗಳು ಇವನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಗುಜರಾತಿನ
ನರ್ಮದಾ ನದಿ ಪ್ರದೇಶದ ʻಕವಾಡಿಯಾʼ ಕಾಲನಿಯ ಪರಿಸರದಲ್ಲಿ ಇರುವ ಈ ನಗರಕ್ಕೆ ಬರುವ ರೈಲುಗಳಿಗೂ
ಇದೇ ಅಂತಿಮ ನಿಲ್ದಾಣ. ಅವು ಇಲ್ಲಿಂದ ಮರಳಿ ಹೊರಡಬೇಕು. ವಡೋದರಾ ನಿಲ್ದಾಣದಿಂದ ಮುಂದೆ ರೈಲು ಹೊರಟಾಗ
ರೈಲಿನಲ್ಲಿ ಇರುವವರೆಲ್ಲರೂ ಈ ಏಕತಾ ಮೂರ್ತಿ ನೋಡಲಿಕ್ಕೇ ಹೋಗುತ್ತಿರುವವರು ಎಂದು ನಮಗೆಲ್ಲ ಅಂದಾಜಾಗಿಬಿಡುತ್ತದೆ.
ನಾನು ರೈಲು ಇಳಿದು
ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಏಕತಾ ಮೂರ್ತಿಯ ಎಂಬ್ಲಮ್ ಇರುವ ಅಲ್ಲಿನ ಆಡಳಿತ ವ್ಯವಸ್ಥೆಯ
ಬಸ್ಸುಗಳೇ ಸಾಲಾಗಿ ನಿಂತಿದ್ದವಾದ್ದರಿಂದ ಯಾರನ್ನೂ ಏನನ್ನೂ ಕೇಳುವ ಅಗತ್ಯವೇ ಉಂಟಾಗಲಿಲ್ಲ. ರೈಲಿನಿಂದ
ಇಳಿದ ಎಲ್ಲರೂ ಸುಮ್ಮನೇ ಈ ಬಸ್ಸುಗಳನ್ನು ಹತ್ತತೊಡಗಿದರು. ಬಸ್ಸುಗಳು ತುಂಬುತ್ತಿದ್ದಂತೆ ಅವುಗಳ ಚಾಲಕರು
ಹೊರಡುತ್ತಿದ್ದರು. ಹೀಗೆ ಹೋಗುವ ಬಸ್ಸುಗಳಲ್ಲಿ ಟಿಕೆಟ್ ಕೊಡಲು ಕಂಡಕ್ಟರ್ ಇರಲಿಲ್ಲ. ಇವೆಲ್ಲ ಕೇವಲ
ಚಾಲಕ ಇರುವ ಬಸ್ಸುಗಳು. ಇಡೀ ಏಕತಾ ನಗರದಲ್ಲಿರುವ ವಿವಧ ಸ್ಥಳಗಳನ್ನು ತೋರಿಸಲು ಅಲ್ಲಿನ ಆಡಳಿತ ಮಂಡಳಿಯೇ
ಈ ಬಸ್ಸುಗಳ ವ್ಯವಸ್ಥೆಮಾಡಿದೆ. ಇಲ್ಲಿಗೆ ಹೋಗುವಾಗ ಬರುವಾಗ ಪ್ರತ್ಯೇಕವಾಗಿ ಎಲ್ಲಿಯೂ ಟಿಕೆಟ್ ಪಡೆಯುವ
ವ್ಯವಸ್ಥೆಯಿಲ್ಲ. ಒಟ್ಟಾರೆ ಏಕತಾ ನಗರದ ಟ್ರಿಪ್ ಗೆ ನಾವು ಟಿಕೆಟ್ ಪಡೆಯಬೇಕು. ಹೀಗೆ ಟಿಕೆಟ್ ಪಡೆಯುವ
ವ್ಯವಸ್ಥೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಲಭ್ಯವಿದೆ.
ಈ ಟಿಕೆಟ್‌ಗಳು
ಬೇರೆ ಬೇರೆ ಹಂತದಲ್ಲಿ ಇವೆ. ಕೇವಲ ಗ್ಯಾಲರಿ ವೀಕ್ಷಣೆ, ಅದರ ಜೊತೆಗೆ ಮೇಜ್ ಗಾರ್ಡನ್ ವೀಕ್ಷಣೆ,
ಇವುಗಳ ಜೊತೆಗೆ ವಸತಿ ವ್ಯವಸ್ಥೆ ಇತ್ಯಾದಿಗಳ ಮೇಲೆ ಇವುಗಳ ದರ ನಿಗಧಿಯಾಗಿದೆ. ಈ ಟಿಕೆಟ್‌ಗಳ ಅಂತರ
ನಾನು ಬುಕ್ ಮಾಡುವ ಸಂದರ್ಭದ್ಲಿ ನಾಲ್ಕು ನೂರರಿಂದ ಮೂವತ್ತು ಸಾವರಗಳವರೆಗೂ ಇತ್ತು! ನಾನು ಅಂದು
ಹೋಗಿ ಅಂದೇ ಮರಳಿ ಬರುವವನಾದ್ದರಿಂದ ೪೫೦ ರೂಗಳ ಬೇಸಿಕ್ ಟಿಕೇಟ್ ಖರೀದಿಸಿದ್ದೆ. ಯಾವ ಟಿಕೇಟ್
ಪಡೆದವರೇ ಅಗಿರಲಿ ಅವರಿಗೆಲ್ಲ ಈ ಬಸ್‌ಗಳಲ್ಲಿ ಓಡಾಡುವ ವ್ಯವಸ್ಥೆ ಉಚಿತವಾಗಿದೆ. ನಾನು ಏರಿದ ಬಸ್ಸು
ರೈಲು ನಿಲ್ದಾಣವನ್ನು ಬಿಟ್ಟು ತುಸು ದೂರಹೋದ ಮೇಲೆ ಬಸ್ಸುಗಳಲ್ಲಿ ಅಳವಡಿಸಿದ್ದ ಸ್ವಯಂ ಚಾಲಿತ ಮಾಹಿತಿಯು
ಧ್ವನಿವರ್ಧಕಗಳ ಮೂಲಕ ಬಿತ್ತರವಾಗತೊಡಗಿತು. ʼಏಕತಾ
ನಗರಕ್ಕೆ ನಮ್ಮನ್ನು ಸ್ವಾಗತಿಸಿಕೊಂಡ ಅವರು ಮೊದಲ ಮಾಹಿತಿಯಾಗಿಯೇ ಬಸ್ಸುಗಳು ಈ ರೈಲು ನಿಲ್ದಾಣದಿಂದ
ಹೊರಟು ಕೊನೆಗೆ ಇಲ್ಲಿಗೆ ಬಂದು ನಿಲ್ಲುತ್ತವೆ ಎಂಬ ಸಂಗತಿಯನ್ನು ನೀಡಿದರು. ಇದರಿಂದ ರೈಲಿಗೆ ಬಂದಿದ್ದ
ನಮ್ಮೆಲ್ಲರಿಗೂ ಸಂಜೆ ಮರಳುವುದು ಹೇಗೆ ಎಂಬ ಸಹಜ ಆತಂಕ ದೂರವಾಯಿತು.
ಬಸ್ ಹೊರಟ ಮಾರ್ಗದಲ್ಲಿ
ಬರುವ ವಿವಿಧ ನೋಡತಕ್ಕ ಸ್ಥಳಗಳನ್ನು ಬಸ್ಸಿನಲ್ಲಿ ಪರಿಚಯಿಸುತ್ತಾ ಆಯಾ ಸ್ಥಳಗಳಲ್ಲಿ ನಿಲುಗಡೆ ಕೊಡುತ್ತಾ
ಬಸ್ ಹೊರಟಿತು. ಆಯಾ ಸ್ಥಳಗಳನ್ನು ನೋಡುವವರು ಅಲ್ಲಿ ಇಳಿಯಬಹುದಿತ್ತು. ಮತ್ತು ನೋಡಿದವರು ಹತ್ತಬಹುದಿತ್ತು.
ಹೀಗೆ ಮಾಡುತ್ತಾ ಬಸ್ಸು ಏಕತಾ ಮೂರ್ತಿ ಇರುವ ಪ್ರಧಾನ ಸ್ಥಳಕ್ಕೆ ನಮ್ಮನ್ನು ಕರೆದುಕೊಂಡು ಬಂದಿತು.
ಅಲ್ಲಿಯೂ ವಾಹನಗಳ ನಿಲುಗಡೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಎಲ್ಲಿಂದಲೇ ಬರಲಿ ಜನ ಇಳಿಯುವ ಸ್ಥಳ ಒಂದೇ ಇದೆ. ಆದರೆ ಅಲ್ಲಿಂದ ಹೊರಡುವ ಬಸ್ಸುಗಳು ಮಾತ್ರ ಎರಡು
ಮೂರು ಕಡೆಯಿಂದ ಹೊರಡುತ್ತವೆ. ಅವೆಲ್ಲ ಸ್ಥಳಗಳಿಗೆ ನಂಬರ್ ಕೊಟ್ಟು ಅಲ್ಲಿ ಜನ ನಿಲ್ಲಲು ಅನುಕೂಲವಾದ
ವ್ಯವಸ್ಥೆಮಾಡಿ ಯಾರಿಗೂ ಸಮಸ್ಯೆ ಮತ್ತು ಗೊಂದಲಗಳು ಆಗದಂತೆ ಮಾಡಿದ್ದಾರೆ. ಇಷ್ಟಕ್ಕೂ ಗೊಂದಲ ಆದರೆ
ಕೇಳಿ ಪರಿಹರಿಸಿಕೊಳ್ಳಲು ಎಲ್ಲರಿಗೂ ಕಾಣುವಂತಹ ಸ್ಥಳದಲ್ಲಿಯೇ ಮಾಹಿತಿ ಕೇಂದ್ರ ಕೂಡ ಇದ್ದು ಅಲ್ಲಿ
ಕೇಳಿ ಪರಿಹರಿಸಿಕೊಳ್ಳಬಹುದಾಗಿದೆ.
ಭಾರತದ ಬಹುಮುಖ್ಯ ಜಲಯೋಜನೆ ʻಸರದಾರ್ ಸರೋವರ ಯೋಜನೆʼ
ನಾನು ಈ ಸ್ಥಳಕ್ಕೆ
ಬಂದಿಳಿದಾಗ ಒಂದು ಚಿಕ್ಕ ಸಮಸ್ಯೆ ಉಂಟಾಯಿತು. ಈ ಏಕತಾ ಮೂರ್ತಿ ಇರುವಲ್ಲಿ ಏಕತಾ ಮೂರ್ತಿಯ ಅಡಿಪಾಯದ
ಅಡಿಯಲ್ಲಿಯೇ ಬೃಹತ್ ಗ್ಯಾಲರಿ ಮಾಡಲಾಗಿದ್ದು ಅದರ ಒಳಗೆ ಹೋಗಲು ಮಾತ್ರ ಕೆಲವು ಸುರಕ್ಷತಾ ಕ್ರಮಗಳನ್ನು
ಬಿಗಿಯಾಗಿ ಪಾಲಿಸುತ್ತಾರೆ. ಒಳಗಡೆ ಏನೇನು ಒಯ್ಯಬಹುದು; ಏನೇನು ಒಯ್ಯವಂತಿಲ್ಲ ಎಂಬುದನ್ನು ನೋಂದಣಿ
ಸಮಯದಲ್ಲಿಯೇ ಮಾಹಿತಿ ನೀಡಲಾಗಿರುತ್ತದೆ. ಈ ಗ್ಯಾಲರಿಯ ಒಳಗೆ ಹೋಗಲು ಎರಡೆರಡು ಗಂಟೆಗಳ ಒಂದು ಅವಧಿಗಳು
ಇರುತ್ತವೆ. ಉದಾಹರಣೆಗೆ ಬೆಳಿಗ್ಗೆ ೧೦ ರಿಂದ ೧೨ ಗಂಟೆ, ೧೨ ರಿಂದ ೦೨ ಗಂಟೆ, ೦೨ ರಿಂದ ೦೪ ಗಂಟೆ ಹೀಗೆ.
ಇವುಗಳಲ್ಲಿ ನಮಗೆ ಅನುಕೂಲವಾಗುವ ಸಮಯವನ್ನು ನಾವು ಟಿಕೆಟ್ ನೋಂದಣಿ ಮಾಡುವಾಗಲೇ ನೀಡಬೇಕಾಗುತ್ತದೆ.
ಮತ್ತು ಅದರ ಪ್ರಕಾರವೇ ನಮ್ಮನ್ನು ಒಳಗೆ ಬಿಡಲಾಗುತ್ತದೆ. ನಾನು ಅಹಮದಾಬಾದಿನಿಂದ ಇಲ್ಲಿಗೆ ಬರುತ್ತಿರುವುದು
ಮೊದಲ ಸಲವಾಗಿತ್ತಾದ್ದರಿಂದ ಅಲ್ಲಿಗೆ ಹೋಗಿ ತಲುಪಲು ಎಷ್ಟು ಹೊತ್ತು ಆಗಬಹುದು ಎಂಬುದರ ಬಗ್ಗೆ ಸರಿಯಾದ
ಖಾತ್ರಿ ಇರಲಿಲ್ಲ. ಹೀಗಾಗಿ ತಡವಾದರೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಗ್ಯಾಲರಿಯ ಒಳಗೆ ಹೋಗಲು ಮಧ್ಯಾಹ್ನ
೨.೦೦ ರಿಂದ ೪.೦೦ ಗಂಟೆಯ ಸ್ಲ್ಯಾಬನ್ನು ಗೊತ್ತುಮಾಡಿಕೊಂಡಿದ್ದೆ.
ಆದರೆ ನಾನು ಬೆಳಿಗ್ಗೆ
೧೧.೩೦ ರ ವೇಳಗೇ ಅಲ್ಲಿಗೆ ತಲುಪಿಬಿಟ್ಟಿದ್ದೆ. ನನ್ನ ಪ್ರವೇಶಾವಧಿ ಬರಲು ಸುಮಾರು ಎರಡೂವರೆ ಗಂಟೆಗಳ
ಕಾಲ ನಾನು ಕಾಯಬೇಕಾಗಿ ಬಂತು. ಹಾಗಾಗಿ ಮಧ್ಯಾಹ್ನದ
ಬದಲು ಬೆಳಗಿನ ೧೨.೦೦ ರಿಂದ ೦೨.೦೦ ರ ಅವಧಿಯಲ್ಲಿ ಒಳಗೆ ಹೋಗಿಬರಬಹುದೇ ಎಂದು ತಿಳಿಯಬೇಕಿತ್ತು. ಅದಕ್ಕಾಗಿ
ಮಾಹಿತಿ ಕೇಂದ್ರದಲ್ಲಿ ಕುಳಿತಿದ್ದ ಯುವತಿಯನ್ನು ಕೇಳಿದೆ. ಅವಳು ಅದಕ್ಕೆ ಈಗ ನೀವು ಒಳಗೆ ಹೋಗುವಂತಿಲ್ಲ;
ಬದಲಾಗಿ ಹತ್ತಿರದಲ್ಲಿಯೇ ಇರುವ ಸರದಾರ್ ಸರೋವರ ಡ್ಯಾಂ, ಮೇಜ್ ಗಾರ್ಡನ್, ಫ್ಲಾವರ್ ವ್ಯಾಲಿ ಇತ್ಯಾದಿ
ನೋಡಿಕೊಂಡು ಬನ್ನಿ. ಅಷ್ಟರೊಳಗೆ ನಿಮ್ಮ ಸಮಯ ಆಗುತ್ತದೆ. ಒಂದೂವರೆ ಹೊತ್ತಿಗೆ ನೀವು ಇಲ್ಲಿದ್ದರೆ
ಸಾಕುʼ ಎಂದು ಹೇಳಿ ತಾನು ಹೇಳಿದ ಸ್ಥಳಕ್ಕೆ ಹೋಗಲು ಇದ್ದ ಬಸ್ ನಿಲ್ದಾಣವನ್ನು ನನಗೆ ಕೈಮಾಡಿ ತೋರಿಸಿದಳು.
ಅವಳು ಹೇಳಿದ ಸ್ಥಳಗಳೂ ನಾನು ನೋಡಲೇಬೇಕಾಗಿದ್ದ ಸ್ಥಳಗಳಾಗಿದ್ದರಿಂದ ಅವಳು ಹೇಳಿದಂತೆ ಮಾಡುವುದೇ ಸರಿ
ಅನ್ನಿಸಿ ಅವಳು ತೋರಿಸಿದ ಬಸ್ ನಿಲ್ದಾಣಕ್ಕೆ ಹೋಗಿ ನಿಂತೆ. ತಕ್ಷಣಕ್ಕೇ ಅಲ್ಲಿಗೆ ಬಂದು ಬಸ್ಸು ಬಂದಾಗ
ಅದನ್ನು ಏರಿ ಹೊರಟೆ.
ಏಕತಾ ಮೂರ್ತಿ
ಇರುವ ಸ್ಥಳದಿಂದ ಸ್ವಲ್ಪವೇ ದೂರದಲ್ಲಿರುವ ʼವ್ಯಾಲಿ ಆಫ್ ಫ್ಲಾವರ್ಸ್ʼ ಎಂಬ ಸ್ಥಳಕ್ಕೆ ಬಸ್ಸು ಬಂದು
ನನ್ನನ್ನು ಬಿಟ್ಟಿತು. ಕೆಳಗಿಳಿದು ನೋಡಿದರೆ ಅಕ್ಕಪಕ್ಕವೇ ಮೂರು ನಾಲ್ಕು ನೋಡತಕ್ಕ ಸ್ಥಳಗಳು ಅಲ್ಲಿದ್ದವು.
ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೊರಟೆ. ಮೊದಲು ನಾನು ಒಳಹೊಕ್ಕದ್ದು ʼವ್ಯಾಲಿ ಆಫ್ ಫ್ಲಾವರ್ಸ್ʼ
ಎಂಬು ಪುಷ್ಪೋದ್ಯಾನವನ್ನಾದರೂ ಆ ಉದ್ಯಾನವನ್ನು ಪ್ರವೇಶಸುತ್ತಿದ್ದಂತೆಯೇ ಎಡಗಡೆಗೆ ಸರ್ದಾರ್ ಸರೋವರ
ಡ್ಯಾಮನ್ನು ನೋಡುವ ಸ್ಥಳಕ್ಕೆ ದಾರಿಯಿತ್ತು. ಮತ್ತು ಅಲ್ಲಿಂದಲೇ ದೂರದಲ್ಲಿರುವ ಸರ್ದಾರ್ ಸರೋವರ
ಡ್ಯಾಮು ಆಕರ್ಷಕವಾಗಿ ಕಾಣುತ್ತಿತ್ತು. ಮೊದಲು ಅದನ್ನು ನೋಡಿಯೇ ಉದ್ಯಾನವನ್ನು ನೋಡುವುದೆಂದು ನಿರ್ಧರಿಸಿ
ಅಲ್ಲಿಗೆ ಹೊರಟೆ.
ಸರ್ದಾರ್ ಸರೋವರ
ಡ್ಯಾಮ್ ಭಾರತದ ಬಹುಮುಖ್ಯವಾದ ಜಲಯೋಜನೆಗಳಲ್ಲಿ ಒಂದು. ಭಾರತದ ಬಹುಮುಖ್ಯವಾದ ನದಿಗಳಲ್ಲಿ ಒಂದಾದ
ನರ್ಮದಾ ನದಿಗೆ ಕಟ್ಟಲಾದ ಈ ಆಣೆಕಟ್ಟು ಉದ್ದ, ಎತ್ತರ ಜಲಾನಯನ ಪ್ರದೇಶ ಇತ್ಯಾದಿ ಎಲ್ಲ ವಿಷಯಗಳ ಕಾರಣದಿಂದಲೂ
ಭಾರತದ ಬಹುಮುಖ್ಯವಾದ ಒಂದು ಆಣೆಕಟ್ಟು. ಭಾರತದ ಎರಡು ದೊಡ್ಡ ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ಥಾನದ
ಅಸಂಖ್ಯಾತ ಕುಟುಂಬಗಳಿಗೆ ಕುಡಿಯುವ ನೀರು, ಹೊಲಗದ್ದೆಗಳ ಬೆಳಗಳ ಆಧಾರ ಆಗಿರುವ ಈ ಆಣೆಕಟ್ಟು ಈ ಎರಡೂ
ರಾಜ್ಯಗಳ ಜನರ ಜೀವನಾಡಿಯೇ ಆಗಿದೆ ಎನ್ನಬಹುದು. ಸರ್ದಾರ ಪಟೇಲರ ಕನಸಿನ ಈ ಆಣೆಕಟ್ಟು ಅವರ ಹೆಸರಿನಿಂದಲೇ
ನಿರ್ಮಾಣವಾಗಿ ನೇತಾರನಿಗೆ ತಕ್ಕ ಗೌರವವೇ ಸಿಕ್ಕಂತಾಗಿದೆ.
ಈ ಆಣೆಕಟ್ಟಿನ
ಮುಂಭಾಗದಲ್ಲಿಯೇ ಆಣೆಕಟ್ಟೆಗೆ ಮುಖಮಾಡಿಯೇ ಏಕತಾ ಮೂರ್ತಿಯನ್ನು ಸ್ಥಾಪಿಸಲಾಗಿದ್ದು ನದಿಯ ಮಧ್ಯಭಾಗದಲ್ಲಿ
ಇರುವ ಈ ಮೂರ್ತಿ ಇರುವ ಸ್ಥಳಕ್ಕೆ ನೀರಿನ ಹರಿವು ಎದ್ವಾತದ್ವಾ ಆಗಿ ಅಪಾಯವಾಗದಂತೆ ತಡೆಯುವ ತಂತ್ರವೂ
ಈ ಸ್ಥಳದ ಆಯ್ಕೆಯಲ್ಲಿ ಒಂದು ಮಾನದಂಡ ಆಗಿರಬಹುದು ಅನ್ನಿಸಿತು. ಈ ನೋಡುಸ್ಥಳದಲ್ಲಿ ನಿಂತು ಸುತ್ತಲೂ
ಕಣ್ಣಾಡಿಸಿದರೆ ಸರ್ದಾರ ಸರೋವರ ಆಣೆಕಟ್ಟು ಅದರ ಒಂದು ಕಡೆಯಲ್ಲಿ ವಿಂಧ್ಯಪರ್ತತ ಶ್ರೇಣಿ, ಮತ್ತೊಂದು
ಕಡೆ ಇರುವ ಪಶ್ಚಿಮ ಬೆಟ್ಟಗಳ ಸಾಲು ಅತ್ಯಂತ ನಯನಮನೋಹರವಾಗಿ ಕಾಣುತ್ತವೆ. ನದಿಯ ಆ ಭಾಗದ ಕಾಡುಗಳಲ್ಲಿ
ʼಕಾಕ್ಟಸ್ ಗಾರ್ಡನ್ʼ ʻಬಟರ್‌ಫ್ಲೈ ಗಾರ್ಡನ್ʼ ಇತ್ಯಾದಿ ದೊಡ್ಡ ಬೋರ್ಡುಗಳು ನದಿಯ ಈ ಬದಿಯಿಂದಲೇ
ಕಾಣುತ್ತವೆ. ಇವೆಲ್ಲವನ್ನು ಕಣ್ತುಂಬಿಕೊಂಡು ನಾನು ʻವ್ಯಾಲಿ
ಆಫ್ ಫ್ಲಾವರ್ಸ್ʼ ಎಂಬ ಉದ್ಯಾನವನ್ನು ನೋಡಲು ಮುಂದುವರೆದೆ.
ಈ ಉದ್ಯಾನವನದಲ್ಲಿ
ನೂರಾರು ಜಾತಿಯ ಹೂವುಗಳ ಗಿಡಗಳನ್ನು ಬೆಳಸಲಾಗಿದೆ. ಇವುಗಳಲ್ಲಿ ಗಿಡಗಳು, ಪೊದೆಗಳು, ಬಳ್ಳಿಗಳು ಎಲ್ಲ
ಸೇರಿವೆ. ಬಹುಶಃ ದೇಶದ ಎಲ್ಲ ಭಾಗಗಳಲ್ಲಿ ಬೆಳೆಯುವ ಹೂವುಗಳನ್ನೂ ಇಲ್ಲಿ ಬೆಳೆಸುವ ಸಾಹಸಕ್ಕೆ ಅವರು
ಕೈಹಾಕಿದಂತಿತ್ತು. ಈ ಉದ್ಯಾನವನದಲ್ಲಿ ಇಕ್ಕೆಲಗಳಲ್ಲಿಯೂ ಗಿಡಗಳಿಗೆ ಹಾಕಲಾಗಿದ್ದ ನಾಮಫಲಕಗಳಲ್ಲಿ
ಆಯಾ ಹೂವಿನ ಗಿಡಗಳ ಹೆಸರುಗಳನ್ನು ಅವುಗಳ ವೈಜ್ಞಾನಿಕ ಹೆಸರುಗಳ ಜೊತೆಗೆ ಇಂಗ್ಲಿಷ್, ಹಿಂದಿ ಮತ್ತು
ಸ್ಥಳೀಯ ಭಾಷೆಯಾದ ಗುಜರಾತಿಯಲ್ಲಿ ಬರೆಯಲಾಗಿತ್ತು. ಅವುಗಳನ್ನು ಓದುತ್ತಾ ಬಗೆಬಗೆಯ ಹೂವುಗಳನ್ನು ನೋಡುತ್ತಾ
ಈ ಉದ್ಯಾನವನದಲ್ಲಿ ಸುತ್ತಾಡುವುದು ಒಂದು ಉಲ್ಲಾಸದಾಯಕ ಅನುಭವ ಎಂದೇ ಹೇಳಬೇಕು.
ಈ ವಿಶಾಲವಾದ ಉದ್ಯಾನವನದಲ್ಲಿ
ವಿವಿಧ ಬಗೆಯ ಹೂವಿನ ಗಿಡಮರಗಳನ್ನು ಬೆಳಸಿರುವ ಉದ್ಯಾನದ ವಿನ್ಯಾಸ ಕೂಡ ಬಹಳಷ್ಟು ಆಕರ್ಷಕವಾಗಿದೆ. ಉದ್ಯಾನದ ಮಧ್ಯೆ ತಿರುಗಾಡಲು ಸುಂದರವಾದ ಕಾಲುದಾರಿಗಳು,
ಆಯಾಸವಾದರೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ನೆರಳು ಬೇಕಾದರೆ ಕಾಟೇಜುಗಳು ಎಲ್ಲವೂ ಇಲ್ಲಿವೆ.
ಇವುಗಳ ಜೊತೆಗೆ ಇಲ್ಲಿ ಎರಡು ಮೂರು ಕಡೆ ಸೆಲ್ಫಿ ತೆಗೆದುಕೊಳ್ಳಲು ಬಯಸುವಂಥವರಿಗೆ ಅನುಕೂಲವಾಗುವ ಸ್ಥಳಗಳನ್ನು
ನಿರ್ಮಿಸಿದ್ದಾರೆ. ಒಂದು ಸ್ಥಳದಲ್ಲಿ ನಿಂತುಕೊಂಡು ಫೋಟೋ ತೆಗೆದುಕೊಂಡರೆ ದೂರದಲ್ಲಿ ಗಗನದೆತ್ತರಕ್ಕೆ
ಎದ್ದುನಿಂತ ಏಕತಾಮೂರ್ತಿ ಅದರ ಸುತ್ತಲ ಸುಂದರ ಬೆಟ್ಟಗುಡ್ಡಗಳು ಇವುಗಳ ಮಧ್ಯೆ ನಿರ್ಮಲವಾಗಿ ಹರಿಯುವ
ನರ್ಮದಾ ಎಲ್ಲವೂ ನಮ್ಮ ಹಿಂದೆ ಚೆನ್ನಾಗಿ ಮೂಡಿಬರುತ್ತವೆ.
ಇನ್ನೊಂದು ಸೆಲ್ಫಿ
ಸ್ಪಾಟಿನಲ್ಲಿ, I am in the valley of flowers in Gujara̧t
India ಎಂಬ ದೊಡ್ಡ ಆಕರ್ಷಕವಾದ ಸಿಮೆಂಟಿನ ಗೋಡೆಯನ್ನು ಮಾಡಲಾಗಿದ್ದು ಅದರ ಮುಂದೆ ನಿಂತು ಫೋಟೋ ತೆಗೆದುಕೊಂಡರೆ
ನಾವು ಗುಜರಾತಿನಲ್ಲಿರುವುದರ ಗುರುತು ಬಹಳ ಚೆನ್ನಾಗಿ ಬರುತ್ತದೆ. ನಾನು ಇವೆರಡರಲ್ಲಿಯೂ ಒಂದೆರಡಲು
ಫೋಟೋ ತೆಗೆದುಕೊಂಡು ಅಲ್ಲಿಂದ ಹೊರಟೆ. ಇಲ್ಲಿರುವ ಗ್ಲೋ ಗಾರ್ಡನ್ ನಲ್ಲಿ ಸಿಮೆಂಟಿನ ರಚನೆಗಳಲ್ಲಿಯೇ
ವಿವಿಧ ಹೂವುಗಳನ್ನು ಕೃತಕವಾಗಿ ರೂಪಿಸಿದ್ದಾರೆ. ಸಂಜೆ ಇಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನವೂ
ಇರುತ್ತದೆಯಂತೆ. ಈ ಪ್ರದರ್ಶನದ ವೇಳೆಯನ್ನು ಏಕತಾ ಮೂರ್ತಿಯ ಬಳಿ ಸಂಜೆ ನಡೆಯುವ ಲೇಸರ್ ಶೋ ಸಮಯಕ್ಕೆ
ಸರಿಯಾಗಿ ಹೊಂದಿಸಿದ್ದಾರೆ ಅನ್ನಿಸಿತು.
ಏಕೆಂದರೆ ಏಕತಾ
ಮೂರ್ತಿಯ ಬಳಿ ಪ್ರತಿದಿನ ಸಂಜೆ ಏಳೂವರೆಗೆ ಲೆಸರ್ ಶೋ ಆರಂಭವಾಗುತ್ತದೆ. ಇದನ್ನು ನೋಡಿಕೊಂಡು ಅಲ್ಲಿಗೆ
ತೆರಳಲು ಪ್ರವಾಸಿಗರಿಗೆ ಅನುಕೂಲವಾಗಲೆಂದು ಇಲ್ಲಿನ ಶೋವನ್ನು ಅವರು ಆರೂವರೆಗೇ ಇಟ್ಟಿರುವುದು ಅನ್ನಿಸಿತು.
ಈ ಉದ್ಯಾನವನದ ಪಕ್ಕದಲ್ಲಿಯೇ ʻಮೇಜ್ ಗಾರ್ಡನ್ʼ ಎಂಬ ಇನ್ನೊಂದು ವಿಶೇಷ ಉದ್ಯಾನವಿದೆ. ಆದರೆ ಅಲ್ಲಿ
ಹೋಗಿ ನನ್ನ ಟಿಕೇಟ್ ತೋರಿಸಿದಾಗ, “ನಿಮ್ಮ ಟಿಕೆಟ್ ಬೇಸಿಕ್ ಟಿಕೆಟ್ ಆಗಿದ್ದು ಅದರಲ್ಲಿ ಇದರ
ಪ್ರವೇಶ ಸೇರಿಲ್ಲ. ನಿಮಗೆ ಪ್ರವೇಶ ಬೇಕಾದರೆ ಒಬ್ಬರಿಗೆ ೧೦೦ ರೂ. ಪಾವತಿಸಿ ಟಿಕೇಟ್ ಪಡೆಯಬೇಕು”
ಎಂದು ಹೇಳಿದರು. ಆಗಲೇ ಮಧ್ಯಾಹ್ನವಾಗುತ್ತಾ ಬಂದಿದ್ದರಿಂದ ಹಣದ ಕಾರಣಕ್ಕಲ್ಲದಿದ್ದರೂ ಸಮಯದ ಕಾರಣಕ್ಕೆ
ನಾನು ಅದನ್ನು ಬಿಟ್ಟು ಬಸ್ ನಿಲ್ದಾಣದತ್ತ ಬಂದೆ. ಬಸ್ಸು ಆಗಲೇ ಸಿದ್ಧವಾಗಿತ್ತು. ಹತ್ತಿ ಕುಳಿತ
ಏಳೆಂಟು ನಿಮಿಷಗಳಲ್ಲಿ ಅದು ಮತ್ತೆ ನಾನು ಹೊರಟಿದ್ದ ಏಕತಾ ಮೂರ್ತಿಯಿರುವ ಮುಖ್ಯವಾದ ಸ್ಥಳಕ್ಕೆ ನನ್ನನ್ನು
ತಂದು ಬಿಟ್ಟಿತು.
ಮಗುವಿನ ಹೊಟ್ಟೆಯನ್ನೇ ಕಸದಬುಟ್ಟಿಯನ್ನಾಗಿ ಮಾಡಿಕೊಂಡ ದಂಪತಿಗಳು!
ಏಕತಾ ಮೂರ್ತಿಯ
ಕೆಳಭಾಗದ ಗ್ಯಾಲರಿ ಪ್ರವೇಶಕ್ಕೆ ನನಗೆ ನಿಗಧಿಯಾದ ಸಮಯಕ್ಕೆ ಅರ್ಧಗಂಟೆ ಮೊದಲೇ ನಾನು ಗೇಟಿನ ಬಳಿ ಹೋಗಿ
ಒಳಗೆ ಹೋಗಬಹುದೇ ಎಂದು ಕೇಳಿದಾಗ ಅಲ್ಲಿನ ಸೆಕ್ಯೂರಿಟಿಯವರು ಹೋಗಿ ಎಂದು ಕೈಬೀಸಿ ಸನ್ನೆಮಾಡಿದರು.
ಒಳಗಡೆ ಹೋಗುವಾಗ ಏನು ಒಯ್ಯಬೇಕು ಏನು ಒಯ್ಯಬಾರದು ಎಂಬುದುನ್ನು ಸಂಘಟಕರು ಮೊದಲೇ ಟಿಕೆಟ್ ಬುಕ್
ಮಾಡುವಾಗ ತಿಳಿಸಿರುತ್ತಾರಾದರೂ ಕೆಲವರು ಅಲ್ಲಿ ಪ್ರವೇಶಕ್ಕೆ ನಿಷಿದ್ಧವಾದ ವಸ್ತುಗಳೊಂದಿಗೇ ಬಂದು
ತಪಾಸಣೆ ವೇಳೆ ತಡೆಯಲ್ಪಟ್ಟು ಉಳಿದವರಿಗೂ ಕಿರಿಕಿರಿ ಉಂಟುಮಾಡುವುದು ಎಲ್ಲಿಯಂತೆ ಇಲ್ಲಿಯೂ ಇತ್ತು.
ಒಳಗೆ ಚಾಕು, ಚೂರಿ, ಬಂದೂಕು ಮುಂತಾದ ಆಯುಧಗಳಲ್ಲದೆ, ಆಹಾರ ಪೊಟ್ಟಣ ಇಂತಹವುಗಳನ್ನೂ ಒಯ್ಯಲು ಅವಕಾಶವಿರಲಿಲ್ಲ.
ಆದಾಗ್ಯೂ ಅಲ್ಲಿ ಮಕ್ಕಳೊಂದಿಗೆ ಬಂದಿದ್ದ ದಂಪತಿಗಳಿಬ್ಬರ ಬ್ಯಾಗಿನಲ್ಲಿದ್ದ ಕುರುಕುರೆ ತಿಂಡಿ ಪ್ಯಾಕನ್ನು
ಹೊರತಗೆದು ತಪಾಸಣೆಯವರು ಇದನ್ನು ಒಯ್ಯುವಂತಿಲ್ಲ ಎಂದು ಆ ದಂಪತಿಗಳಿಗೆ ಹೇಳಿದರು.
ಬಹಳ ಎಂದರೆ ಇಪ್ಪತ್ತು
ರೂಪಾಯಿ ಬೆಲೆಬಾಳಬಹುದಾದ ಆ ಪ್ಯಾಕನ್ನು ಪೋಲೀಸರು ಅಲ್ಲಿಟ್ಟಿದ್ದ ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು
ಗೊತ್ತಾದಾಗ ಆ ದಂಪತಿಗಳು ಅದನ್ನು ಅವರಿಂದ ಪಡೆದು
ಮಗುವನ್ನು ಅಲ್ಲೇ ಪಕ್ಕಕ್ಕೆ ಕರೆದು ಅವಸರ ಅವಸರವಾಗಿ ಆ ಪ್ಯಾಕೆಟ್ ಒಡೆದು ಅದರಲ್ಲಿನ ತಿಂಡಿಯನ್ನು
ಮಗುವಿನ ಬಾಯಿಗೆ ತುರುಕತೊಡಗಿದರು. ಮಕ್ಕಳು ತಮಗೆ ಇಷ್ಟಬಂದಾಗ ತಿಂಡಿಗಳನ್ನು ತಿನ್ನುವುದಕ್ಕೂ ಅವಕ್ಕೆ
ಇಷ್ಟ ಇಲ್ಲದಾಗ ನಾವು ತಿನ್ನಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಆ ಮಗು ಅದೇ ಆಗ ಏನೋ ತಿಂದಿತ್ತೇನೋ.
ಆದ್ದರಿಂದ ಅದಕ್ಕೆ ತಿನ್ನಲು ಮನಸ್ಸಿಲ್ಲವೆಂದು ಕಾಣುತ್ತದೆ. ಅದು ಬಾಯಿಯನ್ನು ತೆರೆಯದೇ ʼಬೇಡʼ ಎಂದು
ತಲೆ ಅಲ್ಲಾಡಿಸುತ್ತಿತ್ತು. ಆದರೆ ಆ ದಂಪತಿಗಳು ಒತ್ತಾಯದಿಂದ ಅದರ ತುಟಿ ಬಿಡಿಸಿ ಅದರ ಬಾಯಿಗೆ ತಿಂಡಿಯನ್ನು
ಬಲವಂತವಾಗಿ ತುರುಕುತ್ತಿದ್ದರು. ಇಪ್ಪತ್ತು ರೂಪಾಯಿ ಹಾಳಾಗುತ್ತದೆ ಎಂಬುದರ ಕಡೆಗೆ ಅವರ ಗಮನವಿತ್ತೇ
ಹೊರತು ಮಗುವಿನ ಆರೋಗ್ಯದ ಕಡೆಗೆ ಆ ಕ್ಷಣ ಅವರಿಗೆ ಅಷ್ಟು ಗಮನ ಹರಿದಂತೆ ಕಾಣಲಿಲ್ಲ. ಹಾಗಾಗಿ ಮಗುವಿನ
ಹೊಟ್ಟೆಯನ್ನೇ ಆ ಕ್ಷಣಕ್ಕೆ ಅವರು ʻಕಸದಬುಟ್ಟಿʼ ಎಂದು ಪರಿಗಣಿಸಿದಂತಿತ್ತು ಅವರ ವರ್ತನೆ!
ಅವರನ್ನು ಪಕ್ಕಕ್ಕೆ ಸರಿಸಿ ನಾನು ತಪಾಸಣೆಯವರ ಹತ್ತಿರ ಹೋದೆ. ನನ್ನ ಜೊತೆಗಿದ್ದ ಚಿಕ್ಕ ಬ್ಯಾಗನ್ನೂ ನಾನು ಹೊರಗೆ ಅದನ್ನು ಇಡಲು ಇದ್ದ ಸ್ಥಳದಲ್ಲಿ ಜಮೆ ಮಾಡಿ ಬಂದಿದ್ದೆ. ಒಳಗಡೆ ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಹೇಳಿ ನನ್ನ ಕೈಯಲ್ಲಿದ್ದ ನೀರಿನ ಬಾಟಲಿಯನ್ನು ಅಲ್ಲೇ ಇಡಲು ಹೇಳಿದರು. ಅದನ್ನು ಇಟ್ಟು ಒಳನಡೆದೆ. ಸಾಮಾನ್ಯವಾಗಿ ಒಳಗೆ ನಿಷಿದ್ಧವಾಗಿರುವ ವಸ್ತುಗಳಲ್ಲಿ ಮೊಬೈಲ್ ಕೂಡ ಇರುತ್ತದೆ ಎಂಬುದು ನನ್ನ ಎಣಿಕೆಯಾಗಿತ್ತು. ಆದರೆ ಇಲ್ಲಿ ಒಳಗೆ ಮೊಬೈಲ್ ಒಯ್ಯಲು ನಿರ್ಬಂಧವಿರಲಿಲ್ಲ. ಹಾಗಾಗಿ ನನಗೆ ಒಳಗೆ ಹೋದಾಗ ಒಂದಿಷ್ಟು ಐತಿಹಾಸಿಕ ಮಹತ್ವದ ಫೋಟೋಗಳನ್ನು ತೆಗೆದುಕೊಳ್ಳಲು ತೊಂದರೆಯೇನೂ ಆಗಲಿಲ್ಲ.
ಏಕತಾ ಮೂರ್ತಿ ಇರುವ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಒಂದಿಷ್ಟು ಫೋಟೋ ಪಾಯಿಂಟ್‌ಗಳನ್ನು ಮಾಡಲಾಗಿದೆ. ʼಏಕ ಭಾರತ್ ಶ್ರೇಷ್ಠ ಭಾರತ್ʼ ಸೇರಿದಂತೆ ಕೆಲವು ಸ್ಲೋಗನ್‌ಗಳ ಹಿನ್ನಲೆಯಲ್ಲಿ ಜುಳುಜುಳು ಸುರಿಯುವ ನೀರಿನ ಕೃತಕ ಕಿರುಜಲಪಾತಗಳ ಹಿನ್ನಲೆಗಳನ್ನು ಇಲ್ಲಿ ಸೃಷ್ಟಿಸಲಾಗಿದ್ದು ಇಲ್ಲಿ ನಾವು ನೆನಪಿನ ಫೋಟೋಗಳನ್ನು ಪಡೆದುಕೊಳ್ಳಬಹುದು. ವಾಶ್ ರೂಮುಗಳಿಗೆ ಹೋಗಿ ಹಗುರವಾಗಬಹುದು. ಅಲ್ಲಿಂದ ಸುಮಾರು ನೂರು ನೂರು ನೂರೈವತ್ತು ಮೀಟರ್ ದೂರ ನಡೆದು ನಾವು ಏಕತಾಮೂರ್ತಿಯ ಬುಡಕ್ಕೆ ಹೋಗಬೇಕು. ಅಲ್ಲಿಯವರೆಗೆ ನಡೆಯಲು ಆಗದಿದ್ದರೆ ಅದಕ್ಕಾಗಿ ಅಲ್ಲಿ ಉಚಿತ ಎಲೆಕ್ಟ್ರಿಕ್ ಆಟೋಗಳು ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಲೇ ಇರುತ್ತವೆ. ಹತ್ತಿ ಕುಳಿತರೆ ಎರಡು ಮೂರು ನಿಮಿಷಕ್ಕೆ ಒಯ್ದು ಬಿಡುತ್ತವೆ.
ಏಕತಾಮೂರ್ತಿಯ ರೂಪುರೇಷೆ....
ಏಕತಾಮೂರ್ತಿ ಆಧುನಿಕ
ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹೆಸರಾಗಿರುವ, ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ
ಮೊದಲ ಉಪಪ್ರಧಾನಿ ಹಾಗೂ ಗೃಹಸಚಿವರೂ ಆಗಿದ್ದ ಸರದಾರ್ ವಲ್ಲಭಭಾಯಿ ಪಟೇಲ್ ಅವರ ತದ್ರೂಪ ಪ್ರತಿಮೆ.
ಭಾರತದ ಏಕೀಕರಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಪಟೇಲರು ಮೂಲತಃ ಗುಜರಾತಿನ ಮಗ. ಬ್ರಿಟೀಷರು
ದೇಶವನ್ನು ಬಿಟ್ಟಾಗ ಈಗಿನ ನಮ್ಮ ದೇಶದ ಭಾಗ ಸುಮಾರು ಐದು ನೂರಕ್ಕೂ ಹೆಚ್ಚು ರಾಜರುಗಳ ಆಡಳಿತ ಅಧೀನದಲ್ಲಿತ್ತು.
ಅವೆಲ್ಲವನ್ನೂ ಭಾರತದ ಒಕ್ಕೂಟದಲ್ಲಿ ಕೂಡಿಸಿ ಬೃಹತ್ ಭಾರತವನ್ನು ರಚಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.
ಇವೆಲ್ಲವನ್ನೂ ಒಟ್ಟುಗೂಡಿಸುವುದು ಅಷ್ಟೊಂದು ಸುಲಭದ ಕೆಲಸವೇನೂ ಆಗಿರಲಿಕ್ಕಿಲ್ಲ ಎಂಬುದು ಯಾರಿಗಾದರೂ
ಸುಲಭವಾಗಿ ವೇದ್ಯವಾಗುವ ಸಂಗತಿ. ಆದರೆ ಪಟೇಲರು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮನವೊಲಿಸುವ ತಂತ್ರ,
ಅದು ಸಾಧ್ಯವಾಗದಿದ್ದ ಕಡೆ ಬಲತ್ಕಾರದ ತಂತ್ರ ಹೀಗೆ ಏನೇನೋ ರಾಜಕೀಯ ಮುತ್ಸದ್ಧಿತನ ತೋರಿ ಅಂತೂ ಅವೆಲ್ಲವೂ
ಭಾರತದಲ್ಲಿ ವಿಲೀನವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿಯೇ ಅವರನ್ನು ಭಾರತದ ಉಕ್ಕಿನ ಮನುಷ್ಯ
(Iron man of India) ಎಂದು ಕೂಡ ಕರೆಯಲಾಗುತ್ತದೆ.
ಇಂತಹ ಒಬ್ಬ ಮಹಾವ್ಯಕ್ತಿಯ
ನೆನಪನ್ನು ಸಾರ್ವಜನಿಕರ ಮೈಮನಸ್ಸುಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಹೆಬ್ಬಯಕೆಯಿಂದ ಗುಜರಾತ್
ಸರ್ಕಾರ ೨೦೧೦ ರಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಏಕತಾಮೂರ್ತಿಯ ಯೋಜನೆಯನ್ನು
ಪ್ರಕಟಿಸಿ ಅದನ್ನು ಕಟ್ಟುವ ಕೆಲಸವನ್ನು ೨೦೧೩ರಲ್ಲಿ ಪ್ರಾರಂಭಿಸಿತು. ಸತತ ಐದು ವರ್ಷಗಳ ಕಾಲ ನಿರ್ಮಾಣವಾದ
ಈ ಬೃಹತ್ ಪ್ರತಿಮೆ ೨೦೧೮ರಲ್ಲಿ ಪಟೇಲರ ಜನ್ಮದಿನವಾದ ಅಕ್ಟೋಬರ್ ೩೧ರಂದು ಉದ್ಘಾಟನೆಯಾಗಿ ಜಗತ್ತಿನ
ಗಮನ ಸೆಳೆಯಿತು. ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿ ಈ ಯೋಜನೆ ರೂಪಿಸಿದ್ದ ನರೇಂದ್ರಮೋದಿ ಅವರೆ
ಈಗ ಇದನ್ನು ದೇಶದ ಪ್ರಧಾನಮಂತ್ರಿಯಾಗಿ ಉದ್ಘಾಟಿಸಿದರು.
ಏಕತಾಮೂರ್ತಿ ಒಟ್ಟು
೧೮೨ ಮೀಟರ್ ಎತ್ತರವನ್ನು ಹೊಂದಿದ್ದು ಇದು ಸಧ್ಯ ಇಡೀ ಪ್ರಪಂಚದಲ್ಲಿರುವ ಮೂರ್ತಿಗಳಲ್ಲಿಯೇ ಅತ್ಯಂತ
ಎತ್ತರದ ಮೂರ್ತಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಷ್ಯಾದ ʻಮದರ್
ಅಂಡ್ ಕಾಲ್ಸ್ʼ (೯೧ ಮೀ), ಅಮೇರಿಕಾದ ʻಸ್ಟ್ಯಾಚ್ಯೂ ಆಫ್
ಲಿಬರ್ಟಿʼ (೯೩ ಮೀ.) ಚೀನಾದ ʻಗನಿಯಾನ್ ಆಫ್ ನಾಷನ್ʼ (೧೦೮ ಮೀ) ಇವುಗಳ ನಂತರ ಚೀನಾದ ʻಸ್ಪ್ರಿಂಗ್
ಟೆಂಪಲ್ ನ ಬುದ್ಧನ ವಿಗ್ರಹʼವೇ (೧೨೮ ಮೀ) ಇದುವರೆಗೆ ಪ್ರಪಂಚದ ಅತ್ಯಂತ ಎತ್ತರದ ಮೂರ್ತಿ ಎಂದು ಖ್ಯಾತವಾಗಿತ್ತು.
ಈಗ ಇಲ್ಲಿ ನಿರ್ಮಾಣವಾಗಿರುವ ಪಟೇಲರ ಮೂರ್ತಿಯು ಇವೆಲ್ಲವನ್ನೂ ಮೀರಿಸುವಂತೆ ಬರೋಬ್ಬರಿ ೧೮೨ ಮೀ. ಎತ್ತರವನ್ನು
ಹೊಂದಿದ್ದು ಪ್ರಪಂಚದ ಅತ್ಯಂತ ಎತ್ತರವಾದ ಮೂರ್ತಿ ಎಂಬ ಕೀರ್ತಿಗೆ ಭಾಜನವಾಗಿದೆ.
ಅಡಿಪಾಯವೇ ಇದೆ ಮೂರುನಾಲ್ಕು ಅಂತಸ್ತು!
ಏಕತಾ ಮೂರ್ತಿ
ಕೆಳಗೆ ಹಾಕಲಾದ ಅಡಿಪಾಯವೇ (Basement) ಸುಮಾರು ಮೂರು ನಾಲ್ಕು ಅಂತಸ್ತುಗಳನ್ನು ಹೊಂದಿದ್ದು ಅದರ
ಕೆಳಭಾಗದಿಂದ ಮೇಲ್ಭಾಗಕ್ಕೆ ಅಂದರೆ ಮೂರ್ತಿಯ ಪಾದಕ್ಕೆ ಏರಲು ಲಿಫ್ಟ್ ವ್ಯವಸ್ಥೆ ಇದೆ ಎಂದರೆ ಈ ಮೂರ್ತಿಯ
ಎತ್ತರದ ಅಗಾಧತೆಯನ್ನು ನಾವು ಕಲ್ಪಿಸಿಕೊಳ್ಳಬಹುದು.
ಈ ಅಡಿಪಾಯವನ್ನು ರಚಿಸಲು ಆ ಕಾಲದಲ್ಲಿ ಗುಜರಾತಿನ ರೈತರು ತಾವು ಬಳಸಿ ನಿರುಪಯುಕ್ತವಾದ ಕಬ್ಬಿಣದ
ಸಲಕರಣೆಗಳನ್ನು ಉಚಿತವಾಗಿ ನೀಡಿದ್ದಾರಂತೆ. ಅವನ್ನು ಸಂಸ್ಕರಿಸಿ ಇದರ ಅಡಿಪಾಯಕ್ಕೆ ಬಳಸಿಕೊಳ್ಳಲಾಗಿದೆ.
ಈ ಬೃಹತ್ ಅಡಿಪಾಯದ ಒಳ ರಚನೆಗಳನ್ನು ಅಲ್ಲಿ ಬಳಸಲಾದ ತಂತ್ರಜ್ಞಾನದ ಚಾಕಚಕ್ಯತೆಯನ್ನು ಪ್ರವಾಸಿಗಳಿಗೆ
ಒಳಗಿನಿಂದ ಲಿಫ್ಟ್‌ಗಳಲ್ಲಿ ಕರೆದುಕೊಂಡು ಹೋಗಿ ತೋರಿಸುತ್ತಾರೆ.
ಈ ಅಡಿಪಾಯದ ವಿಸ್ತೀರ್ಣವೇ ʻಅಬ್ಬಾʼ ಎನಿಸುವಷ್ಟು ವಿಶಾಲವಾಗಿದೆ. ಅಡಿಪಾಯದ ಒಳಗಡೆಯೇ ಬೃಹತ್ ಆದ ಗ್ಯಾಲರಿ ಇದೆ. ಇದರಲ್ಲಿ ಅನೇಕ ವಿಭಾಗಗಳಿವೆ. ಪಟೇಲರ ಬೃಹತ್ ಮೂರ್ತಿ ಆಕಾಶದೆತ್ತರಕ್ಕೆ ಹೊರಗಡೆ ಇದರ ಮೇಲೆ ಇದ್ದರೆ ಇಲ್ಲಿ ಅಡಿಪಾಯದ ಒಳಭಾಗದಲ್ಲಿಯೇ ಅವರ ಚಿಕ್ಕದಾದ (ಚಿಕ್ಕದು ಅಂದರೂ ಹತ್ತು ಅಡಿಯದ್ದು) ಕಂಚಿನ ಪ್ರತಿಮೆ ಮತ್ತು ಬೃಹತ್ ಆದ ಅವರ ತಲೆ ಮಾತ್ರ ಇರುವ ಇನ್ನೊಂದು ರಚನೆಗಳಿವೆ. ಅವುಗಳ ಮುಂದೆ ನಿಂತು ಪ್ರವಾಸಿಗರು ಫೋಟೋ ತೆಗೆದುಕೊಳ್ಳಬಹುದಾಗಿದೆ. ಈ ಅಡಿಪಾಯದ ಗ್ಯಾಲರಿಯ ವಿವಿಧ ಕೋಣೆಗಳಲ್ಲಿ ಭಾರತದ ಏಕೀಕರಣದ ಸಂದರ್ಭ ಮತ್ತು ಅದರಲ್ಲಿ ಪಟೇಲರು ನಿರ್ವಹಿಸಿದ ಪಾತ್ರಗಳ ಮಹತ್ವ ಇವುಗಳನ್ನು ತೋರಿಸುವ ಅನೇಕ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ.
ಒಂದು ಕೊಠಡಿಯಲ್ಲಿ
ಪಟೇಲರ ಗ್ರಂಥಾಲಯದ ತದ್ರೂಪವನ್ನು ಮಾಡಿದರೆ ಇನ್ನೊಂದರಲ್ಲಿ ಆ ಕಾಲಘಟ್ಟದಲ್ಲಿ ದೇಶದ ಬಹುಮುಖ್ಯ ಪತ್ರಿಕೆಗಳಲ್ಲಿ
ಬಂದ ಸುದ್ದಿಗಳನ್ನು ನಾವು ಓದುವಂತೆ ಆ ಪತ್ರಿಕೆಗಳ ಬೃಹತ್ ಫೋಟೋಗಳನ್ನು ಅಳವಡಿಸಿದ್ದಾರೆ. ಒಂದು
ಕೊಠಡಿಯಲ್ಲಿ ಒಂದು ಬೃಹತ್ ಪರದೆಯ ಮೇಲೆ ಇಡೀ ನರ್ಮದಾ ಯೋಜನೆಯ ಮಾಹಿತಿಯು ಬರುವಂತೆ ಮಾಡಿದ್ದಾರೆ.
ಅಲ್ಲಿ ಹೋಗಿ ಕುಳಿತರೆ ಇಡೀ ಯೋಜನೆಯ ರೂಪುರೇಷೆ ಅದು ಅನುಷ್ಠಾನಕ್ಕೆ ಬಂದ ಬಗೆ ಅದರಿಂದ ಎಷ್ಟೆಲ್ಲ
ಪ್ರಯೋಜನ ಆಗಿದೆ ಎಂಬ ಮಾಹಿತಿಯ ಒಂದು ಸಾಕ್ಷ ಚಿತ್ರ ಕ್ರಮವಾಗಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಬರುತ್ತಿರುತ್ತದೆ.
ಅಲ್ಲಿ ಒಂದಿಷ್ಟು ಹೊತ್ತು ಕುಳಿತು ಅದನ್ನು ನೋಡಿ ಆನಂದಿಸಿದೆ. ಇನ್ನೊಂದು ಕೊಠಡಿಯಲ್ಲಿನ ತೆರೆಯಲ್ಲಿ
ಪಟೇಲರ ಜೀವನದ ಪ್ರಮುಖ ಸಂಗತಿಗಳನ್ನು ತೋರಿಸುವ ವ್ಯವಸ್ಥೆಯೂ ಇದೆ.
ಅಲ್ಲಲ್ಲಿ ಕಂಬಗಳಲ್ಲಿ
ದೇಶಕಟ್ಟುವ ಕಾರ್ಯದಲ್ಲಿನ ಪ್ರಮುಖ ಮೈಲುಗಲ್ಲುಗಳನ್ನು ಚಿತ್ರಿಸಲಾಗಿದೆ. ಜೊತೆಗೆ ಗುಜರಾತಿನ ಜನಜೀವನವನ್ನು
ಬಿಂಬಿಸುವ ಕಲಾಕೃತಿಗಳನ್ನು ಕೂಡ ಅಳವಡಿಸಲಾಗಿದೆ. ಇವುಗಳಲ್ಲೆಲ್ಲ ನನ್ನ ಗಮನ ಸೆಳೆದದ್ದು ಒಂದು ವಿಶೇಷವಾದ
ಬೃಹತ್ ಗುಂಪು ಭಾಗಚಿತ್ರ. ಇದುವರೆಗೂ ನಾನು ದೇಶದ ಅನೇಕ ವಸ್ತುಸಂಗ್ರಹಾಲಯಗಳನ್ನು ನೋಡಿದ್ದರೂ ಈ
ಚಿತ್ರವನ್ನು ಎಲ್ಲಿಯೂ ನೋಡಿರಲಿಲ್ಲ. ಅದು ಯಾವ ಚಿತ್ರವೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ತಕ್ಷಣ ದೇಶದ ವಿವಿಧ ಭಾಗಗಳನ್ನು
ಆಳುತ್ತಿದ್ದ ಆಳರಸರಲ್ಲಿ ಬಹುತೇಕ ಎಲ್ಲರನ್ನೂ ಒಂದೆಡೆ ಸೇರಿಸಿ ಅವರು ತಮ್ಮ ರಾಜ್ಯಗಳನ್ನು ಹೊಸದಾಗಿ
ರಚಿತವಾಗುತ್ತಿರುವ ಭಾರತ ಒಕ್ಕೂಟದಲ್ಲಿ ಮನವೊಲಿಸಲು ಮಾಡಿದ ಸಭೆಯೊಂದರ ಚಿತ್ರ.
ಕಣ್ಣಿಗೆಬಿದ್ದ ʻಕನ್ನಡದ ರಾಜʼ ಮತ್ತು ʻಆಂಧ್ರದ ಹುಡುಗಿಯರು!ʼ
ಬಹಳಷ್ಟು ದೇಶಿಯ
ರಾಜರುಗಳು ಒಂದೆಡೆ ಸೇರಿದ ಅಪರೂಪದ ಚಿತ್ರವಿದು. ಅವುಗಳಲ್ಲಿ ನಾನು ಹುಡುಕುತ್ತಾ ಹೋದಾಗ ಕರ್ನಾಟಕ
ಭಾಗದ ಜಮಖಂಡಿಯ ರಾಜರಾಗಿದ್ದ ಬಿ ಡಿ ಜತ್ತಿ ಅವರೂ ಇದ್ದದ್ದು ಕಂಡಿತು. ಆದರೆ ಮೈಸೂರು ಅರಸರು ಅಲ್ಲಿರಲಿಲ್ಲ!
ಏಕೆಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಮೊದಲು ಭಾರತದ ಒಕ್ಕೂಟದಲ್ಲಿ ಸೇರಲು ಒಪ್ಪಿಕೊಂಡಿದ್ದ ಮೈಸೂರು
ಅರಸರು ಕೊನೆಯ ಗಳಿಗೆಯಲ್ಲಿ ಉಲ್ಟಾಹೊಡೆದಿದ್ದರು. ಆಗ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ʼಪ್ರಜಾಪ್ರತಿನಿಧಿ
ಸರ್ಕಾರʼಕ್ಕಾಗಿ ಹೋರಾಟ ಮಾಡಿ ಮೈಸೂರು ಕೂಡ ಭಾರತ ಒಕ್ಕೂಟದಲ್ಲಿ ಸೇರುವಂತೆ ಮಾಡಬೇಕಾಯಿತು! ಆದರೆ
ಇನ್ನೊಂದೆಡೆ ಈ ದೇಶಿಯ ಸಂಸ್ಥಾನಗಳನ್ನು ಒಗ್ಗೂಡಿಸಲು ಕಾರ್ಯತಂತ್ರ ರೂಪಿಸಲು ಪಟೇಲರು ಏಳೆಂಟು ದೇಶೀಯ
ರಾಜರ ಒಂದು ಉನ್ನತ ಮಟ್ಟದ ಸಮಿತಿಯನ್ನು ಮಾಡಿಕೊಂಡಿದ್ದ ವಿವರ ಸಿಕ್ಕಿತು. ಆ ಪಟ್ಟಿಯಲ್ಲಿ ಮೈಸೂರು ಅರಸರಾದ ಜಯಚಾಮರಾಜೇಂದ್ರ ಒಡೆಯರ್
ಇದ್ದರು.
ಇವೆಲ್ಲವನ್ನೂ ನೋಡಿಕೊಂಡು ಹೊರಬರುವಾಗ ಮಕ್ಕಳಿಗೆ ಖುಷಿಕೊಡುವ ಡಿಜಿಟಲ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವ ಅವಕಾಶವಿರುವ ಕೆಲವು ಏರ್ಪಾಡುಗಳನ್ನು ಅಲ್ಲಲ್ಲಿ ಮಾಡಿರುವುದು ಕಂಡಿತು. ಭಾರತ ಏಕೀಕರಣಕ್ಕೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೆಗಳನ್ನು ಅಲ್ಲಿ ಅಳವಡಿಸಿದ್ದು ಮಕ್ಕಳು ಆಯ್ಕೆಗಳನ್ನು ಆಯ್ಕೆಮಾಡಿ ತಮ್ಮ ಉತ್ತರ ತಪ್ಪೋ ಸರಿಯೋ ಎಂದು ಪರೀಕ್ಷಿಸಿ ಆನಂದಿಸುವ ಮನರಂಜನೆಯನ್ನು ಒದಗಿಸುವ ಈ ವ್ಯವಸ್ಥೆಯು ಮಕ್ಕಳು ಮರಿಯೊಂದಿಗೆ ಬಂದವರಿಗೆ ಬಹಳಷ್ಟು ಖುಷಿಕೊಡುವ ಸಂಗತಿ. ಇದರ ಜೊತೆಗೆ ವಯಸ್ಕರು ಈ ಮಹಾವ್ಯಕ್ತಿಯ ಸನ್ನಿದಿಯಲ್ಲಿ ದೇಶದ ಏಕತೆ ಸಮಗ್ರತೆಗಾಗಿ, ಇಲ್ಲಿನ ಜೀವಸಂಕುಲ ರಕ್ಷಣೆಗಾಗಿ, ಕಾನೂನು ವ್ಯವಸ್ಥೆಯ ರಕ್ಷಣೆಗಾಗಿ, ಸರ್ವಧರ್ಮಗಳನ್ನು ಸಮಾನವಾಗಿ ಗೌರವಿಸುವುದರ ಸಲುವಾಗಿ ಪ್ರತಿಜ್ಞೆಯನ್ನು ಸ್ವಯಂ ಪ್ರೇರಿತರಾಗಿ ಮಾಡುವ ವ್ಯವಸ್ಥೆ ಕೂಡ ಇಲ್ಲಿದೆ.
ಇದಕ್ಕಾಗಿ ಮಾಡಲಾಗಿರುವ
ಕಂಪ್ಯೂಟರ್ ನಲ್ಲಿ ನಮ್ಮ ಹೆಸರು ವಿಳಾಸ ಕೊಟ್ಟರೆ ನಮ್ಮ ಪ್ರತಿಜ್ಞೆಯ ಮೇಲ್ಕಂಡ ಆಯ್ಕೆಗಳು ಬರುತ್ತವೆ.
ನಮಗೆ ಇಷ್ಟವಾದ ವಿಷಯದಲ್ಲಿ ನಾವು ಪ್ರತಿಜ್ಞೆ ಮಾಡಬಹುದು. ನಾವು ಮಾಡಿದ ಪ್ರತಿಜ್ಞೆ ತಕ್ಷಣಕ್ಕೆ ದೊಡ್ಡ
ಪರದೆಯ ಮೇಲೆ ನಮ್ಮ ಹೆಸರು ಊರು ರಾಜ್ಯಗಳೊಂದಿಗೆ ಬಂದು ನಿಲ್ಲುತ್ತದೆ. ಈ ಬೃಹತ್ ಪರದೆಯ ಮೇಲೆ ಸುಮಾರು
ಇಪ್ಪತ್ತು ಇಪ್ಪತ್ತೈದು ಪ್ರತಿಜ್ಞೆಗಳು ಕಾಣುತ್ತಿರುತ್ತವೆ. ಅದಕ್ಕೂ ಹೆಚ್ಚಿನ ಪ್ರತಿಜ್ಞೆಗಳು ಬಂದ
ಹಾಗೆ ಮೊದಲಿನ ಪ್ರತಿಜ್ಞೆಗಳು ತೆರೆಮರೆಗೆ ಸರಿಯುತ್ತವೆ. ಇಲ್ಲಿ ನಾನು ಭಾರತದ ಎಲ್ಲ ಧರ್ಮಗಳನ್ನು
ಗೌರವಿಸುವ ಮತ್ತು ಅವುಗಳನ್ನು ಸಮಾನವಾಗಿ ಕಾಣುವ ಒಂದು ಪ್ರತಿಜ್ಞೆ ಮತ್ತು ಇಲ್ಲಿನ ಸಂವಿಧಾನವನ್ನು
ಕಾನೂನು ವ್ಯವಸ್ಥೆಯನ್ನು ಗೌರವಿಸುವ ಇನ್ನೊಂದು ಪ್ರತಿಜ್ಞೆಯನ್ನೂ ದಾಖಲಿಸಿದೆ.
ನಾನು ಪ್ರತಿಜ್ಞೆ
ದಾಖಲಿಸುವಾಗಲೇ ನನ್ನ ಹತ್ತಿರ ಬಂದು ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಕುತೂಹಲದಿಂದ ನೋಡತೊಡಗಿದ
ಆಂಧ್ರ ಪ್ರದೇಶದ ಇಬ್ಬರು ಕಾಲೇಜು ಹುಡುಗಿಯರಿಗೆ ಅದನ್ನು ದಾಖಲಿಸುವ ವಿಧಾನ ಹೇಳಿಕೊಟ್ಟೆ. ಅವರಲ್ಲಿ
ಒಬ್ಬಳು ತನ್ನ ಪ್ರತಿಜ್ಞೆಯನ್ನು ದಾಖಲಿಸಲು ತನ್ನ ವಿವರವನ್ನು ಕೊಟ್ಟಾಗ ಕಂಪ್ಯೂಟರ್ ಅದನ್ನು ತಿರಸ್ಕರಿಸಿತು.
ಏಕೆಂದು ಅವಳು ನನ್ನನ್ನು ಕೇಳಿದಳು. ನಿನಗೆ ಇನ್ನೂ ಹದಿನೆಂಟು ವರ್ಷ ತುಂಬಿಲ್ಲ. ಆ ಕಾರಣದಿಂದ ನೀನು
ಯಾವುದೇ ಪ್ರತಿಜ್ಞೆ ತೆಗೆದುಕೊಂಡರೆ ಅದು ಭಾರತ ಸಂವಿಧಾನದ ಪ್ರಕಾರ ಅಧಿಕೃತ ಆಗುವುದಿಲ್ಲ. ಅದಕ್ಕೆ
ಎಂದೆ. ʼಹೌದಾ?ʼ ಎಂದು ಅವಳು ಸುಮ್ಮನಾದಾಗ ನಾನೇ ಅವಳ ಮುಖ ಸಪ್ಪೆ ಆದದ್ದನ್ನು ನೋಡಿ ಅವಳ ಜನ್ಮದಿನಾಂಕವನ್ನು
ತುಸು ಬದಲಿಸಿ ನೀಡಲು ಹೇಳಿದೆ. ಅವಳು ಅಧಿಕೃತತೆಗಾಗಿ ಅಲ್ಲದಿದ್ದರೂ ಮನರಂಜನೆಗಾಗಿ ಅದನ್ನು ಮಾಡಿ
ತನ್ನ ಪ್ರತಿಜ್ಞೆ ದಾಖಲಾದದ್ದನ್ನು ನೋಡಿ ಸಂತೋಷ ಪಟ್ಟು ನನಗೆ ಕೃತಜ್ಞತೆಯಿಂದ ಧನ್ಯವಾದ ಹೇಳಿ ತನ್ನ
ಗೆಳತಿಯೊಂದಿಗೆ ಮುನ್ನಡೆದಳು.
ʻಅವರ ಮೆಟ್ಟಿಗೂ ನೀನು ಸಮನಲ್ಲʼ ಎಂಬ ಮಾತಿಲ್ಲಿ ಅರ್ಥವಾಯಿತು!
ಅಡಿಪಾಯದಲ್ಲಿರುವ ಈ ವಿಶಾಲವಾದ ಗ್ಯಾಲರಿಯನ್ನು ನೋಡುವುದು ಒಂದು ಭಾಗವಾದರೆ ಹೊರಗೆ ಬಂದು ಮೆಟ್ಟಿಲುಗಳನ್ನು ಏರುತ್ತಾ ಏರುತ್ತಾ ಮೇಲೆ ಮೇಲೆ ಹೋಗಿ ಅಂತೂ ಇಂತೂ ಪಟೇಲರ ಬೃಹತ್ ಆದ ಮೂರ್ತಿಯ ಪಾದವನ್ನು ಸೇರುವುದು ಇನ್ನೊಂದು ಅದ್ಭುತ ಅನುಭವ. ಒಳಗಡೆ ಲಿಫ್ಟ್‌ಗಳಲ್ಲಿ ಏರುವ ಎತ್ತರವನ್ನೇ ಇಲ್ಲಿ ಮೆಟ್ಟಿಲುಗಳ ಮೇಲೆ ಹತ್ತುತ್ತಾ ಹೋಗಬೇಕು. ಈ ಮೆಟ್ಟಿಲುಗಳ ಪಕ್ಕದಲ್ಲಿಯೇ ಮೇಲಿನವರೆಗೂ ಹೋಗಲು ಎಕ್ಸಲೇಟರ್‌ಗಳ ವ್ಯವಸ್ಥೆ ಇದೆಯಾದರೂ ಅದನ್ನು ವಿಕಲಾಂಗರು ಮತ್ತು ಅಶಕ್ತರು ಮಾತ್ರ ಬಳಸಲು ಸೂಚನೆ ಹಾಕಿದ್ದಾರೆ ಮತ್ತು ಅಲ್ಲೆಲ್ಲ ಅದನ್ನು ಮಾನಿಟರ್ ಮಾಡಲು ಸೆಕ್ಯೂರಿಟಿಯವರು ಇರುತ್ತಾರೆ. ಆದರೆ ನಾನು ಹೋದ ದಿನ ಅಲ್ಲಿ ಯಾವುದೇ ರೀತಿಯ ಜನಸಂದಣಿಯಿಲ್ಲದ್ದರಿಂದ ಆಶಕ್ತರಲ್ಲದ ನಾವೆಲ್ಲರೂ ಖಾಲಿ ಇರುವ ಎಕ್ಸಲೇಟರ್ ಮೂಲಕವೇ ಮೇಲೆ ಹತ್ತಲು ಸಾಧ್ಯವಾಯಿತು. ಮತ್ತು ಇಳಿಯಲು ಕೂಡ.
ಈ ಎಕ್ಸಲೇಟರ್
ಮೂಲಕ ಹತ್ತಿ ಹತ್ತಿ ಮೇಲೆ ಹೋಗಿ ಅಂತೂ ಇಂತೂ ನಾನು ಪಟೇಲರ ಪಾದವನ್ನು ಬಂದು ಮುಟ್ಟಿದೆ. ಅವರ ಪಾದದ
ಹತ್ತಿರ ಬರಲಿಕ್ಕೇ ಇಷ್ಟು ಮೇಲೆ ಬರಬೇಕು. ತಲೆಯನ್ನು ಮುಟ್ಟಲಿಕ್ಕಂತೂ ಅವಕಾಶವೇ ಇಲ್ಲವಲ್ಲ. ಅವರ
ಪಾದದ ಹತ್ತಿರ ನಿಂತುಕೊಂಡು ಅವರ ತಲೆಯನ್ನು ನೋಡಲು ಪ್ರಯತ್ನಿಸಿದರೆ ನಮ್ಮ ತಲೆಯ ಮೇಲಿನ ಟೊಪ್ಪಿಗೆಯೇ
ಕೆಳಗೆ ಬೀಳುತ್ತದೆ! ಈ ಬೃಹತ ಮೂರ್ತಿಯ ಪಟೇಲರ ಎರಡೂ ಪಾದಗಳ ನಡುವೆಯೇ ಒಂದು ಬಸ್ಸು ಹೋಗುವಷ್ಟು ಜಾಗೆಯಿದೆ.
ಇಲ್ಲೊಂದು ತಮಾಸೆಯನ್ನು ಹೇಳಬೇಕು. ನಾವು ಯಾವುದಾದರೂ ದೊಡ್ಡವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡಿದರೆ
ʼನೀನು ಅವರ ಮೆಟ್ಟಿಗೂ ಸಮ ಅಲ್ಲ ತಿಳ್ಕೊʼ ಎಂದು ನಮ್ಮ ಊರಿನ ಕಡೆ ಜನ ಹೇಳುತ್ತಾರೆ. ಹಾಗಂದರೇನು ಎಂದು
ಇಲ್ಲಿ ಪಟೇಲರ ಮೆಟ್ಟಿನ ಹತ್ತಿರ ನಿಂತಾಗ ನನಗೆ ಸರಿಯಾಗಿ ಅರ್ಥವಾಯಿತು. ಏಕೆಂದರೆ ಅವರ ಮೆಟ್ಟಿಗೆ
ಇರಲಿ ಆ ಮೆಟ್ಟಿನ ಕೆಳಭಾಗದಲ್ಲಿ ಒಂದು ಗಟ್ಟಿಯಾದ ಅಡಿಪಟ್ಟಿ (ಸೋಲ್)
ಇರುತ್ತದೆಯಲ್ಲ ಅದಕ್ಕೂ ನಾನು ಸಮ ಇರಲಿಲ್ಲ. ಹಿಮ್ಮಡದ ಭಾಗದಲ್ಲಿ ಅದರ ಎತ್ತರವೇ ಎಂಟು ಅಡಿಯಷ್ಟು
ಇತ್ತು. ನಾನು ಇದ್ದದ್ದು ಐದೂಕಾಲು ಅಡಿ ಮಾತ್ರ!
ಹೀಗಾಗಿ ನಮಸ್ಕಾರ
ಮಾಡಲು ಅವರ ಪಾದವೂ ನನಗೆ ಸಿಗಲಿಲ್ಲ! ಇಲ್ಲಿ ನಿಂತು ಸುತ್ತ ನೋಡಿದರೆ ಜುಳುಜುಳು ಹರಿಯುವ ನರ್ಮದಾ
ಅದರ ಸುತ್ತ ಹಬ್ಬಿರುವ ವಿಶಾಲವಾದ ಬೆಟ್ಟಗುಡ್ಡಗಳು. ಇವುಗಳ ಮಧ್ಯೆ ಎದ್ದು ಕಾಣುವ ಸರ್ದಾರ್ ಸರೋವರ
ಆಣೆಕಟ್ಟೆ ಇವುಗಳನ್ನುಕಣ್ಣು ತುಂಬಿಕೊಳ್ಳುವುದೇ ಒಂದು ಹಬ್ಬ. ಎಲ್ಲವನ್ನೂ ನೋಡಿಯಾದ ಮೇಲೆಯೇ ಗಡಿಯಾರದ
ಕಡೆಗೆ ನನ್ನ ಗಮನ ಹೋದದ್ದು. ಆಗಲೇ ನಾಲ್ಕು ಗಂಟೆಯಾಗತ್ತು.
ಒಳಗೆ ಬಂದು ನಾನು ಎರಡೂವರೆ ಗಂಟೆಗಳನ್ನು ಕಳೆದದ್ದೇ ತಿಳಿಯಲಿಲ್ಲ. ಕೆಳಗಿಳಿದು ಬಂದು ಅಲ್ಲಲ್ಲಿ ಹಾಕಲಾಗಿದ್ದ
ಕಲ್ಲಿನ ಬೆಂಚುಗಳಲ್ಲಿ ಚಿಕ್ಕಚಿಕ್ಕ ಚೆಂದದ ಮರಗಳ ನೆರಳಿನಲ್ಲಿ ಇದ್ದ ಒಂದನ್ನು ಹಿಡಿದು ಒಂದಿಷ್ಟು
ಹೊತ್ತು ಕೂತು ದಣಿವಾರಿಸಿಕೊಂಡೆ. ನಂತರ ಶಬ್ದಮಾಡದೆ ಸುತ್ತುಹೊಡೆಯುತ್ತಿದ್ದ ಎಲೆಕ್ಟ್ರಿಕ್ ಆಟೋ
ಏರಿ ಗ್ಯಾಲರಿ ಪ್ರದೇಶದ ನಿರ್ಗಮನ ಸ್ಥಳಕ್ಕೆ ಬಂದು ಹೊರಬಂದೆ.
ಹೊರಗೆ ಲಾಕರ್
ನಿಂದ ನನ್ನ ಬ್ಯಾಗ್ ಪಡೆದೆ. ಬೆಳಿಗ್ಗೆ ಅಹಮದಾಬಾದಿನ ರೈಲ್ವೇ ನಿಲ್ದಾಣದಲ್ಲಿ ಎಂಥದ್ದೋ ಸಿಕ್ಕದ್ದು
ತಿಂದಿದ್ದೆ. ತಿಂಡಿ ಹಿಡಿಸಿರಲಿಲ್ಲ. ಮಧ್ಯಾಹ್ನ ಕೂಡ ಊಟ ಮಾಡಿರಲಿಲ್ಲ. ಏನನ್ನಾದರೂ ತಿನ್ನಬೇಕು ಅನ್ನಿಸಿತು.
ಸುತ್ತ ನೋಡಿದರೆ ಯಾವುದೇ ಹೋಟೆಲ್ ಇತ್ಯಾದಿ ಇರಲಿಲ್ಲ. ಊಟ ತಿಂಡಿಗಳಿಗೆ ಇಲ್ಲಿ ಎಲ್ಲ ವ್ಯವಸ್ಥೆಗಳು
ಇವೆಯಾದರೂ ಅವು ಈ ಏಕತಾ ಮೂರ್ತಿ ಇರುವ ಸ್ಥಳದಿಂದ ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿವೆ. ಈ ಪರಿಸರದಲ್ಲಿ
ಅಂತಹ ಯಾವುದೇ ಅಂಗಡಿ ಇತ್ಯಾದಿ ಮಾಡಲು ಅವರು ಬಿಟ್ಟಿಲ್ಲ. ಬಹುಶಃ ಇದಕ್ಕೆ ಜಾತ್ರೆಯ ಸ್ವರೂಪ ಬರಬಾರದು
ಎಂದು ಇದ್ದೀತು. ಪರಿಸರದ ಕಾಳಜಿಯೂ ಇದ್ದೀತು. ಆದರೆ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಸಂಚಾರಿ ವಾಹನದಲ್ಲಿ
ಫಾಸ್ಟ್ ಫುಡ್ ತಂದು ಕೊಡುವ ಮೂರು ನಾಲ್ಕು ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ.
ನಾನು ಅಲ್ಲಿ ಹೋಗಿ
ಏನಾದರೂ ಸಿಗಬಹುದೇ ಎಂದು ನೋಡಿದೆ. ಪುಣ್ಯಕ್ಕೆ ಫ್ರೈಡ್ ರೈಸ್, ಸೇರಿದಂತೆ ಕೆಲವು ಐಟಂಗಳು ಲಭ್ಯವಿದ್ದವು.
ಒಂದು ಪ್ಲೇಟ್ ಫ್ರೈಡ್ ರೈಸ್ ಆರ್ಡರ್ ಮಾಡಿ ಪಡೆದು ತಿಂದು ನೀರು ಕುಡಿದು ನಿರಾಳವಾದೆ. ಇನ್ನು
ಇಲ್ಲಿ ನೋಡುವಂಥದ್ದು ಬಹುಮುಖ್ಯವಾಗಿ ಏನಾದರೂ ಉಳಿದಿದೆ ಎಂದು ನನಗೆ ಅನ್ನಿಸಲಿಲ್ಲ. ದೂರದಲ್ಲಿ ಕೆಲವು
ಸಸ್ಯಶಾಸ್ತ್ರ ಅಧ್ಯಯನದ ಉದ್ಯಾನಗಳು, ಮಕ್ಕಳು ಆಡುವ ವ್ಯವಸ್ಥೆ ಇರುವ ಉದ್ಯಾನಗಳು, ತಿಂಡಿತಿನಿಸುಗಳ
ಅಂಗಳವಾದ ಫುಡ್ ಕೋರ್ಟ್ ಇತ್ಯಾದಿ ಇದ್ದವಾದರೂ ಅವುಗಳನ್ನು ನೋಡಬೇಕೆಂಬ ಆಸಕ್ತಿ ಇರಲಿಲ್ಲ. ಜೊತೆಗೆ
ಬೆಳಗಿನಿಂದ ತಿರುಗಿ ತಿರುಗಿ ಆಯಾಸ ಬೇರೆ ಆಗಿತ್ತು. ಹಾಗಾಗಿ ಎಲ್ಲಿಯೂ ಹೋಗದೇ ಸಂಜೆ ಅಲ್ಲಿಯೇ ನಡೆಯುವ
ವಿಶೇಷವಾದ ಧ್ವನಿ ಮತ್ತು ಬೆಳಗಿನ ಲೇಜರ್ ಶೋ ನೋಡಲೆಂದು ಕಾಯುತ್ತಾ ಕುಳಿತೆ.
ಆದರೆ ಆ ಶೋ ಆರಂಭವಾಗುವುದು
ಆರಕ್ಕೆ ಎಂದು ತಿಳಿದು ಒಂದೆರೆಡು ಗಂಟೆ ಕಾಯುವುದಲ್ಲ ಎಂದು ಕುಳಿತೆ. ಆರಾದರೂ ಅದು ಆರಂಭವಾಗಲಿಲ್ಲ.
ಆರೂವರೆಗೂ ಆರಂಭ ಆಗಲಿಲ್ಲ. ಬೇಸರವಾಗಿ ಸಾಕು ಏಕತಾ ನಗರಕ್ಕೆ ಹೋಗೋಣ ಅಂದುಕೊಂಡೆ. ಆದರೆ ಅಲ್ಲಿ ಹೋಗಿ
ಮಾಡುವುದಾದರೂ ಏನನ್ನು? ಮರಳಿ ಹೋಗುವುದಕ್ಕೆ ರೈಲು ಇರುವುದು ರಾತ್ರಿ ಎಂಟೂ ಮುಕ್ಕಾಲಿಗೆ.. ಸುಮ್ಮನೆ
ಅತ್ತ ಇತ್ತ ಸುಳಿಯುತ್ತಾ ಪಶ್ಚಿಮದಲ್ಲಿ ಸೂರ್ಯ ಮುಳುಗುವುದನ್ನು ನೋಡುತ್ತಾ ಕುಳಿತ ಕುರ್ಚಿಗಳನ್ನು
ಬದಲಿಸುತ್ತಾ ಒಂದಿಷ್ಟು ಹೊತ್ತು ಕಾಲಕಳೆದೆ. ತಾಳಲಾರದೆ ಮಾಹಿತಿ ಕೇಂದ್ರಕ್ಕೆ ಹೋಗಿ ಕೇಳಿಯೂ ನೋಡಿದೆ.
ಶೋ ಶುರುವಾಗುವುದು ಏಳೂವರೆಗೆ ಎಂದು ಅವರು ಹೇಳಿದರು. ʼಅಯ್ಯೋʼ ಅಂದುಕೊಂಡು ಬೇಸರದಿಂದ ಅತ್ತಿತ್ತ
ತಿರುಗಾಡತೊಡಗಿದೆ.
ಶೋ ಶುರುವಾಗುವುದೇ
ಏಳೂವರೆಗೆ ಆದರೆ ಮುಗಿಯಲು ಎಂಟೂವರೆ ಆಗಬಹುದು ಅನ್ನಿಸಿತು. ಆದರೆ ಆ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ
ಇರುವುದೋ ಇಲ್ಲವೋ ಎಂಬ ಆತಂಕ ಬೇರೆ. ನಾನು ಇಲ್ಲಿಗೆ ಹೊರಡುವ ಹಿಂದಿನ ದಿನವೇ ಅಹಮದಾಬಾದಿನಲ್ಲಿ ಸಿಕ್ಕಿದ್ದ
ಮಂಗಳೂರಿನ ಹಿರಿಯರೊಬ್ಬರು, “ಏಕತಾ ನಗರದಲ್ಲಿ ಬಸ್ ತಪ್ಪಿಸಿಕೊಳ್ಳಬೇಡಿ. ಲೇಜರ್ ಶೋ ಮುಗಿಯುವವರೆಗೂ
ಮೈಮರೆತು ಕುಳಿತುಕೊಳ್ಳಬೇಡಿ. ಅದು ಮುಗಿದ ತಕ್ಷಣ ಎಲ್ಲ ಜನರೂ ಬಸ್ಸಿಗೆ ಮುಗಿಬೀಳುತ್ತಾರೆ. ತಪ್ಪಿಸಿಕೊಂಡರೆ
ಅಲ್ಲಿ ಹತ್ತಿರದಲ್ಲಿ ಉಳಿಯಲು ಯಾವ ವ್ಯವಸ್ಥೆಯೂ ಇಲ್ಲ” ಎಂದು ಸೂಚನೆ ಕೊಟ್ಟಿದ್ದರು. ಹಾಗಾಗಿ ಶೋ
ಶುರುವಾದ ತಕ್ಷಣ ಶಾಸ್ತ್ರಕ್ಕೆ ಅಂಥ ಐದು ಹತ್ತು ನಿಮಿಷ ನೋಡಿ ಬಸ್ಸಿಗೆ ಹತ್ತಿಬಿಡುವುದು ಎಂದು ಲೆಕ್ಕ
ಹಾಕಿಕೊಂಡ ನಾನು ಶೋ ಶುರುವಾಗುತ್ತಿದ್ದಂತೆ ಎಲ್ಲರೂ ಕುಳಿತುಕೊಳ್ಳತೊಡಗಿದರೆ ಎದ್ದು ಬಸ್ಸುಗಳಿದ್ದ
ಸ್ಥಳದಲ್ಲಿ ನಿಂತೇ ಒಂದಿಷ್ಟು ಹೊತ್ತು ಶೋ ನೋಡಿದೆ.
ಈ ಬೆಳಕು ಮತ್ತು
ಧ್ವನಿಯ ಪ್ರದರ್ಶನದಲ್ಲಿ ಗಗನದೆತ್ತರಕ್ಕೆ ಎದ್ದುನಿಂತ ಬೃಹತ್ ಆದ ಪಟೇಲ್ ಅವರ ಮೂರ್ತಿಯನ್ನೇ ಬಿತ್ತಿಯನ್ನಾಗಿ
ಮಾಡಿಕೊಂಡು ವಿಶೇಷ ವ್ಯವಸ್ಥೆಯಿಂದ ಪಟೇಲ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ಸಾಕ್ಷಚಿತ್ರವನ್ನು
ತೋರಿಸುತ್ತಾರೆ. ನೆರಳು ಬೆಳಕಿನ ಈ ನಯನಮನೋಹರವಾದ ದೃಶ್ಯ ಕತ್ತಲೆಯ ಆಕಾಶದಲ್ಲಿ ರೋಮಾಂಚನಕಾರಿಯಾಗಿ
ಕಾಣುತ್ತದೆ. ವಿಶಾಲವಾದ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಾಕಲಾಗಿದ್ದ ಕುರ್ಚಿಗಳಲ್ಲಿ ಎಲ್ಲಿ
ಕುಳಿತರೂ ಆಕಾಶದಲ್ಲಿ ನಡೆಯುವ ಈ ಸುಂದರ ದೃಶ್ಯ ಚೆನ್ನಾಗಿಯೇ ಕಾಣುತ್ತಿತ್ತು. ಕನ್ನಡ ಮಹಾಕಾವ್ಯವೊಂದರಲ್ಲಿ ʼಆಕಾಶ ನೋಡಲು ನೂಕು ನುಗ್ಗಲು
ಏಕೆ?ʼ ಎಂಬ ಮಾತು ಬರುತ್ತದೆ. ಇಲ್ಲಿಯೂ ಅಷ್ಟೆ ಆಕಾಶದೆತ್ತರಕ್ಕೆ ಇರುವ ಪಟೇಲರ ಮೂರ್ತಿಯನ್ನು ನೋಡಲು
ಕಷ್ಟಪಡಬೇಕಿಲ್ಲ. ಅದು ಕಣ್ಣಿಗೆ ಬೀಳದಂತೆ ಇರಲು ಕಷ್ಟಪಡಬೇಕಷ್ಟೆ!
ಇದನ್ನು ಒಂದಿಷ್ಟು
ಹೊತ್ತು ನಿಂತೇ ನೋಡಿಕೊಂಡು ಸಾಲಾಗಿ ನಿಂತುಕೊಂಡಿದ್ದ ಬಸ್ ಏರಿ ಕುಳಿತು ಸೀಟನ್ನು ಖಾತರಿಪಡಿಸಿಕೊಂಡೆ.
ನನ್ನನ್ನು ನೋಡಿ ನನ್ನಂತೆಯೇ ರೈಲಿಗೆ ಬಂದವರು ಒಬ್ಬೊಬ್ಬರಾಗಿ ಬಂದು ಬಸ್ಸು ಹತ್ತಿದರು. ಶೋ ಇನ್ನೂ
ಮುಗಿದಿರಲಿಲ್ಲ. ಆದರೆ ಬಸ್ಸು ತುಂಬಿದ್ದನ್ನು ನೋಡಿ ಚಾಲಕ ಬಸ್ಸನ್ನು ಸ್ಟಾರ್ಟ್ ಮಾಡಿಯೇ ಬಿಟ್ಟ.
ದಿನದ ಮೊದಲೇ ಹೇಳಿದಂತೆ ಬಸ್ಸು ಏಕತಾ ನಗರದ ವಿವಿಧ ಭಾಗಗಳನ್ನು ಸಂಚರಿಸುತ್ತಾ ಇಳಿಯುವವರನ್ನು ಇಳಿಸುತ್ತಾ
ಹತ್ತುವವರನ್ನು ಹತ್ತಿಸಿಕೊಳ್ಳುತ್ತಾ ಕೊನೆಗೆ ನಮ್ಮನ್ನು ಏಕತಾ ನಗರದ ರೈಲ್ವೇ ನಿಲ್ದಾಣಕ್ಕೆ ತಂದು
ಇಳಿಸಿತು. ರೈಲು ಹೊರಡಲು ಇನ್ನೂ ಅರ್ಧಗಂಟೆ ಸಮಯವಿತ್ತಾದರೂ ರೈಲು ಸಿದ್ಧವಾಗಿ ನಿಂತಿತ್ತು. ಟಿಕೆಟುಗಳು
ಮುಂಗಡವಾಗಿ ಬುಕ್ ಆಗಿದ್ದರಿಂದ ಸೀಟು ಹಿಡಿಯಲು ಪರದಾಡುವಂಥದ್ದೇನೂ ಇರಲಿಲ್ಲ. ಅಲ್ಲಿಯೇ ಪ್ಲಾಟ್‌ಫಾರಮ್
ನಲ್ಲಿ ಸಿಕ್ಕ ಒಂದಿಷ್ಟು ತಿಂಡಿ ತಿಂದು ರಾತ್ರಿ ಊಟದ ಶಾಸ್ತ್ರವನ್ನು ಮುಗಿಸಿ ರೈಲು ಹತ್ತಿದೆ. ಮಧ್ಯರಾತ್ರಿ
ಅಹಮದಾಬಾದ್ ಸೇರುವ ತನಕ ಇಡೀ ದಿನದ ಏಕತಾ ನಗರದ ಭೇಟಿಯ ವಿವಿಧ ಚಿತ್ರಗಳು ಮನಃಪಟಲದಲ್ಲಿ ಒಂದು ಸುತ್ತು
ಬಂದು ಹೋಗಿ ದಿನದ ಪ್ರವಾಸದಿಂದ ಸಾರ್ಥಕ ಭಾವವನ್ನು ಮೂಡಿಸಿದವು.
ಡಾ. ರಾಜೇಂದ್ರ ಬುರಡಿಕಟ್ಟಿ
೧೦-೧೦-೨೦೨೫
No comments:
Post a Comment