ಬೆಳಕಾಗಬೇಕಾದ ಧರ್ಮಗಳು ಬೆಂಕಿಯಾದಾಗ…
ಗುಲ್ಬರ್ಗಾಕ್ಕೆ ಹೋದಾಗಲೆಲ್ಲ ನಾನು ಸಾಮಾನ್ಯವಾಗಿ ಭೇಟಿ ನೀಡುವ ಮೂರು ಸ್ಥಳಗಳೆಂದರೆ ಒಂದು ಪ್ರಾಚೀನ ಪರಂಪರೆಯ ಶರಣಬಸವೇಶ್ವರ ದೇವಸ್ಥಾನ, ಇನ್ನೊಂದು ಆಧುನಿಕವಾಗಿ ಊರಿನ ಹೊರವಲಯದಲ್ಲಿ ಎದ್ದುನಿಂತಿರುವ ಬುದ್ಧವಿಹಾರ. ಇವೆರಡರ ಜೊತೆಗೆ ಖ್ವಾಜಾ ಬಂದೇ ನವಾಜ್ ದರ್ಗಾ. ಧಾರ್ಮಿಕ ವಿಷಯಗಳಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಇಲ್ಲಿಗೆ ಬಂದಾಗಲೆಲ್ಲ ಸುಮ್ಮನೇ ಇವುಗಳಿಗೆ ಒಂದು ಭೇಟಿ ನೀಡಿ ಸುತ್ತಾಡಿ ಬರುತ್ತೇನೆ. ಈ ಮೂರೂ ಧಾರ್ಮಿಕ ಶ್ರದ್ಧಾಕೇಂದ್ರಗಳು ಮೂರು ಮುಖ್ಯ ಜನಾಂಗಗಳಿಗೆ ಸೇರಿರುವುದು ಸತ್ಯವಾದರೂ ಆ ಧರ್ಮಗಳ ಜನರು ಮಾತ್ರ ಈ ಸ್ಥಳಗಳಿಗೆ ಹೋಗಿಬರುವ ಬೇಲಿ ಇಲ್ಲಿಲ್ಲ ಎಂಬುದು ಈ ಸ್ಥಳಗಳಿಗೆ ನಾನು ಪ್ರೀತಿಯಿಂದ ಹೋಗಲು ಕಾರಣ. ನಾನು ಹೋದಾಗಗಲೆಲ್ಲ ಬೇರೆ ಬೇರೆ ಧರ್ಮಗಳಿಗೆ ನಂಬಿಕೆಗಳಿಗೆ ಸೇರಿದ ಜನ ಈ ಮೂರೂ ಸ್ಥಳಗಳಲ್ಲಿ ನನಗೆ ಕಂಡು ಬಂದಿದ್ದಾರೆ. ದರ್ಗಾದಲ್ಲಿ ಒಳಗೆ ಕೆಲವು ಭಾಗಗಳಿಗೆ ಹೋಗಲು ಮಾತ್ರ ಕೆಲವರಿಗೆ ಒಂದಿಷ್ಟು ನಿರ್ಬಂಧಗಳಿರುವುದನ್ನು ಬಿಟ್ಟರೆ ಉಳಿದೆರಡರಲ್ಲಿ ಆ ನಿರ್ಬಂಧಗಳೂ ಇಲ್ಲ.
ಇವತ್ತು ಕೂಡ ಗುಲ್ಬರ್ಗಾದಲ್ಲಿ ಸುತ್ತಾಡುವಾಗ ಇವು ಮೂರಕ್ಕೂ ಹೋಗುವ ಇಚ್ಚೆಯಿತ್ತಾದರೂ ಕಾರಣಾಂತರದಿಂದ ದರ್ಗಾಕ್ಕೆ ಹೋಗಲು ಆಗಲಿಲ್ಲ. ಆದರೆ ಶರಣಬಸವೇಶ್ವರ ದೇವಸ್ಥಾನ ಮತ್ತು ಬುದ್ಧವಿಹಾರಗಳಿಗೆ ಎಂದಿನಂತೆ ಹೋಗಿಬಂದೆ. ಕಲಬುರಗಿಯಲ್ಲಿ ಇವತ್ತು ಮಧ್ಯಾಹ್ನ ಆರ್ ಎಸ್ ಎಸ್ ನ ಪಥಸಂಚಲನ ಇತ್ತಂತೆ. ಅದಕ್ಕಾಗಿ ಬುದ್ಧವಿಹಾರಕ್ಕೆ ಹೋಗುವ ಮಾರ್ಗದಲ್ಲಿ ಎಲ್ಲಿಬೇಕೆಂದರಲ್ಲಿ ರಸ್ತೆಗಳಲ್ಲಿ ವಿಶೇಷವಾಗಿ ಕಲಬುರಗಿಯ ಪ್ರಮುಖ ಸರ್ಕಲ್ಗಳನ್ನು ಕೇಸರಿ ಬಾವುಟ, ಬ್ಯಾನರ್, ಕಟೌಟ್ಗಳಿಂದ ಮುಚ್ಚಿದ್ದರು. ಹಿಂದುತ್ವವಾದಿಗಳಿಗೆ ಪೂಜ್ಯರಾದಂತಹ ಹೆಡಗೆವಾರ್, ಗೋಲ್ವಾಲ್ಕರ್, ಸಾವರ್ಕರ್ ಇವರುಗಳ ಭಾವಚಿತ್ರಗಳು ರಾರಾಜಿಸುತ್ತಿದ್ದವು.
ಅಕ್ಷರಸ್ಥರ ಸಂಖ್ಯೆ ತೀರಾ ಕಡಿಮೆ ಇದ್ದಂತಹ ಹಿಂದಿನ ಸಂದರ್ಭವನ್ನು ಗಮನಿಸಿ ನಮ್ಮ ಸಂವಿಧಾನದ ರಚನಾಕಾರರು ಈ ʼಧರ್ಮಪ್ರಚಾರʼದ ಸ್ವಾತಂತ್ರ್ಯವನ್ನು ಸಂವಿಧಾನಮಾನ್ಯಗೊಳಿಸಿದ್ದಿರಬೇಕು. ಆದರೆ ಇಂದು ಈ ಹಕ್ಕಿನ ಉಪಯೋಗ ಇಂದು ಎಷ್ಟು ಮಿತಿಮೀರಿದೆ ಎಂದರೆ ಪ್ರತಿಯೊಬ್ಬರೂ ಈ ಧರ್ಮಪ್ರಚಾರದಲ್ಲಿ ಅಹಿತಕರ ಎನ್ನಿಸುವಷ್ಟು ಸ್ಪರ್ಧೆಗಿಳಿದಿದ್ದಾರೆ. ಇದು ಯಾವುದೇ ಒಂದು ಧರ್ಮಕ್ಕೆ ಸೇರಿದ ಸಂಗತಿಯಾಗಿ ಉಳಿದಿಲ್ಲ. ನಮ್ಮ ಧರ್ಮದ ಒಳ್ಳೆಯದನ್ನು ಹೇಳುವುದಕ್ಕಿಂತ ಹೆಚ್ಚಾಗಿ ಇತರ ಧರ್ಮಗಳ ಕುಂದುಕೊರತೆಗಳನ್ನು ಹೇಳುವುದೇ ಈಗ ನಮ್ಮ ಧರ್ಮಕ್ಕೆ ನಾವು ಸಲ್ಲಿಸುವ ಕಾಣಿಕೆ ಎಂಬಂತಾಗಿಬಿಟ್ಟಿದೆ. ಈ ನಕಾರಾತ್ಮಕ ಭಾವನೆಗಳು ಇಂದು ಸಹನೆಯ ಹಂತವನ್ನು ಮೀರಿ ಹೋಗಿ ಮಾನವನ ಬದುಕಿಗೆ ಬೆಳಕಾಗಬೇಕಾದ ಬಹುತೇಕ ಧರ್ಮಗಳು ಇಂದು ಸ್ಪೋಟಕ ಶಕ್ತಿಯನ್ನು ತುಂಬಿಕೊಂಡು ಬೆಂಕಿಯಾಗಿ ಸಮಾಜದ ಸ್ವಾಸ್ಥವನ್ನು ಸುಡುತ್ತಿವೆ.
ʻಧರ್ಮ ಎಂಬುದು ಗುಂಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಧರ್ಮಕ್ಕೂ ಸೇರುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಧರ್ಮದಲ್ಲಿರುವ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಗಳನ್ನು ತಾವೇ ಕಟ್ಟಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರಪಂಚದಲ್ಲಿ ಎಷ್ಟು ವ್ಯಕ್ತಿಗಳಿರುವರೋ ಅಷ್ಟೂ ಧರ್ಮಗಳು ಇರಬಹುದುʼ ಇವು ರಾಷ್ಟ್ರಕವಿ ಕುವೆಂಪು ತಮ್ಮ ವಿಶ್ವಮಾನವ ಸಂದೇಶದಲ್ಲಿ ಹೇಳುವ ಬಹುಮುಖ್ಯ ಮಾತುಗಳು. ಇವುಗಳನ್ನು ನನ್ನ ಜೀವನದಲ್ಲಿ ಅಕ್ಷರಶಃ ಒಪ್ಪಿಕೊಂಡು ಪಾಲಿಸುತ್ತಿರುವ ನನಗೆ ಧರ್ಮ ಪ್ರಚಾರಕ್ಕೆಂದು ಜನಕೂಡಿಸಿ ದೊಡ್ಡ ದೊಡ್ಡ ಸಭೆ, ಜಾಥಾ ಇತ್ಯಾದಿಗಳನ್ನು ಮಾಡುವ ಅಗತ್ಯ ಇಂದಿನ ಆಧುನಿಕ ಯುಗದಲ್ಲಿ
ಯಾವುದಾದರೂ ಧರ್ಮಕ್ಕೆ ಇದೆ ಎಂದು ನನಗಂತೂ ಅನ್ನಿಸುವುದಿಲ್ಲ. ಆಯಾ ಧರ್ಮಗಳವರ ತಮ್ಮ ಧರ್ಮಗಳ ವಿವರ ಇರುವ ಕೃತಿಳನ್ನು ಪ್ರಕಟಿಸಿದರೆ ಸಾಕು. ಬೇಕಾದವರು ಬೇಕಾದ ಧರ್ಮಗಳನ್ನು ಆಯ್ಕೆಮಾಡಿಕೊಂಡು ಬದುಕುತ್ತಾರೆ.
ಕಣ್ಣು ಕೋರೈಸುವ ಇವುಗಳನ್ನು ಅಂತೂ ದಾಟಿಕೊಂಡು ಹೊರವಲಯದ ಬೆಟ್ಟದ ಮೇಲಿನ ಬುದ್ಧವಿಹಾರಕ್ಕೆ ಬಂದಾಗ ಮನಸ್ಸು ಅಲ್ಲಿನ ಪ್ರಶಾಂತ ವಾತಾವರಣ ಕಣ್ಣು ಮನಸ್ಸುಗಳನ್ನು ತಂಪಾಗಿಸಿತು. ಬೆಳಿಗ್ಗೆ ಶರಣಬಸವೇಶ್ವರ ದೇವಸ್ಥಾನದಲ್ಲಿ ಸುತ್ತಾಡಿ ಕೈಮುಗಿದು ಹೊರಟ ನನಗೆ ಇಲ್ಲಿನ ವಿಶೇಷ ವಾತಾವರಣ ಅತೀವ ಆನಂದವನ್ನು ನೀಡಿತು. ಒಳಗಡೆ ಹೋಗುವಾಗ ಮೊಬೈಲು ಇತ್ಯಾದಿ ಒಯ್ಯಲು ಗಲಾಟೆ ಮಾಡಲು ಅವಕಾಶ ಇಲ್ಲಿ ನೀಡುವುದಿಲ್ಲ. ಇಲ್ಲಿಗೆ ಬರುವಾಗ ಬರುವವರು ಕೂಡ ದೇವರು ಧರ್ಮ ಎಂದರೆ ಕೂಗಾಡುವುದು, ಗಲಾಟೆ ಎಬ್ಬಿಸುವುದು ರಂಪಾಟಮಾಡುವುದು ಎಂಬುದನ್ನು ಬಹುತೇಕರು ಮರೆಯುತ್ತಾರೆ. ಬೃಹತ್ ಬುದ್ಧಮಂದಿರದ ಮೇಲ್ಭಾಗದಲ್ಲಿನ ಹಾಲಿನಲ್ಲಿ ಹೋಗಿ ಬುದ್ಧಮಹಾಗುರುವಿನ ದರ್ಶನ ಪಡೆದು ಹೊರಬಂದೆ. ಕೆಳ ಅಂತಸ್ತಿನಲ್ಲಿರುವ ಧ್ಯಾನ ಮಂದಿರಕ್ಕೆ ಹೋಗಿ ಒಂದಿಷ್ಟು ಹೊತ್ತು ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಧ್ಯಾನ ಮಾಡುವುದನ್ನು ಮರೆಯಲಿಲ್ಲ.
ರಾಬು
೧೨-೧೦-೨೦೨೫





No comments:
Post a Comment