ಎಳೆಯ ವಯಸ್ಸಿನ ಮನಸ್ಸನ್ನು ಸೆಳೆಯುವ ಸಂವಿಧಾನ ಕೃತಿ
ಶಾಲಾ ಮಕ್ಕಳಿಗೆ ತೀರಾ ಇತ್ತೀಚಿನವರೆಗೂ ಬಡತನ, ಅನಕ್ಷರತೆ, ಜನಸಂಖ್ಯಾಸ್ಪೋಟ, ನಿರುದ್ಯೋಗ ಇಂಥವುಗಳನ್ನು ಭಾರತವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಗಳೆಂದು ಹೇಳಿಕೊಡಲಾಗುತ್ತಿತ್ತು. ಆದರೆ ತೀರಾ ಇತ್ತೀಚೆಗಿನ ವಿದ್ಯಮಾನಗಳನ್ನು ನೋಡಿದರೆ ಇವು ಯಾವೂ ಇಂದು ಭಾರತದ ಗಂಭೀರ ಸಮಸ್ಯೆಗಳೆಂದು ತೊರುತ್ತಿಲ್ಲ. ಈಗ ಇಡೀ ದೇಶವನ್ನು ಗಂಭೀರವಾಗಿ ಕಾಡುತ್ತಿರುವ ಏಕೈಕ ಮತ್ತು ಬೃಹತ್ ಆದ ಸಮಸ್ಯೆ ಎಂದರೆ ಅದು ʻಕೂಡಿಬಾಳುವಿಕೆʼ ಅಥವಾ ʻಸೌಹಾರ್ದ ಬದುಕುʼ ಅನ್ನಿಸುತ್ತದೆ.
ಈ ಮೊದಲು ಹೇಳಿದ ಸಮಸ್ಯೆಗಳು ಹಲವಾರು ವರ್ಷಗಳು ನಮ್ಮ ದೇಶದ ಮುಖ್ಯ
ಸಮಸ್ಯೆಗಳು ಆಗಿದ್ದಾಗ್ಯೂ ದೇಶದ ಜನ ಅದನ್ನು ಹೇಗೋ ನಿಭಾಯಿಸಿಕೊಂಡು ಬದುಕುತ್ತಾ ಬಂದಿದ್ದಾರೆ. ಆದರೆ
ಈಗ ಜನಾಂಗಿಯ ಕಾರಣಕ್ಕಾಗಿ, ಧರ್ಮಗಳ ಕಾರಣಕ್ಕಾಗಿ ಹುಟ್ಟಿಕೊಂಡಿರುವ ಮೂಲಭೂತವಾದ ಮತ್ತು ಕೋಮುವಾದಗಳು
ಇಡೀ ದೇಶದ ಜನಜೀವನವನ್ನೇ ಆತಂಕದ ಹೊಸ್ತಿಲಿಗೆ ತಂದು ನಿಲ್ಲಿಸಿವೆ. ದೇಶದಲ್ಲಿ ಅನೇಕ ಧರ್ಮಗಳು, ಅವುಗಳ
ಮಠಮಾನ್ಯಗಳು, ಶ್ರದ್ಧಾಕೇಂದ್ರಗಳು ಇದ್ದಾಗ್ಯೂ ಅವುಗಳ ಗಮನ ತಮ್ಮ ತಮ್ಮ ಧರ್ಮಗಳ ಜನರನ್ನು ಒಳ್ಳೆಯ
ಸಂಬಂಧದಿಂದ ಕೂಡಿಬಾಳುವುದನ್ನು ಕಲಿಸುವುದರ ಕಡೆಗೇ ಇದ್ದು ತಮ್ಮ ತಮ್ಮ ಧಾರ್ಮಗಳ ಜನರಲ್ಲಿ ಧಾರ್ಮಿಕ
ಶ್ರದ್ಧೆಯನ್ನು ಉದ್ದೀಪನಗೊಳಿಸುವಲ್ಲಿಯೇ ಅವು ನಿರತವಾಗಿವೆ.
ಹೀಗೆ ಧಾರ್ಮಿಕ ಭಾವನೆಗಳ ಉದ್ದೀಪನ ಕಾರ್ಯ ಎಷ್ಟರ ಮಟ್ಟಿಗೆ ಇವತ್ತು
ಆಗಿದೆ ಎಂದರೆ ಎಲ್ಲ ಧರ್ಮಗಳ ಜನ ತಮ್ಮ ಧರ್ಮಗಳ ಬಗ್ಗೆ ಶ್ರದ್ಧೆಯನ್ನು ಹೊಂದುವುದು ಅಂದರೆ ಇತರ ಧರ್ಮಗಳನ್ನು ಅಗೌರವಿಸುವುದು ಅನ್ನುವಷ್ಟರ ಮಟ್ಟಿಗೆ!
ಹಾಗಾಗಿ ಈ ಧರ್ಮಗಳು ಧರ್ಮಗ್ರಂಥಗಳು ಇವೆಲ್ಲ ಬಹುತ್ವದ ದೇಶವಾದ ಭಾರತದ ಸಮಸ್ತ ಜನತೆಯನ್ನು ಒಟ್ಟಾಗಿ
ನಾವೆಲ್ಲ ಒಂದು ಎಂದು ಭಾವಿಸಿ ಪರಸ್ಪರ ಪ್ರೀತಿ ವಿಶ್ವಾಸ, ಶ್ರದ್ಧೆಯಿಂದ ಕೂಡಿಬಾಳುವುದನ್ನು ಕಲಿಸುವಲ್ಲಿ
ವಿಫಲವಾಗಿವೆ ಎಂದೇ ಹೇಳಬೇಕು.
ಇಂತಹ ಸಂದರ್ಭದಲ್ಲಿ ಭಿನ್ನಭಿನ್ನ ಸಂಸ್ಕೃತಿ ಪರಂಪರೆ, ಧಾರ್ಮಿಕ ಶ್ರದ್ಧೆ
ಮತ್ತು ಸಂಪ್ರದಾಯಗಳ ಜನರೆಲ್ಲರನ್ನೂ ಒಳಗೊಂಡ ಎಲ್ಲ ಭಾರತೀಯರನ್ನು ಒಟ್ಟಾಗಿ ಬಾಳುವಂತೆ ಮಾಡಬಹುದಾದ
ಶಕ್ತಿ ಇರುವುದು ಒಂದೇ ಒಂದು ಗ್ರಂಥಕ್ಕೆ. ಆ ಗ್ರಂಥ ಬೇರೆ ಯಾವುದೂ ಅಲ್ಲ ನಮ್ಮ ಸಂವಿಧಾನ! ಎಲ್ಲ ಧರ್ಮಗಳ
ಗ್ರಂಥಗಳು ತಮ್ಮ ತಮ್ಮ ಧರ್ಮದ ಜನರಿಗೆ ಮಾರ್ಗದರ್ಶನ ನೀಡಿದರೆ ಇದು ಎಲ್ಲ ಧರ್ಮಗಳ ಜನರಿಗೂ ಮಾರ್ಗದರ್ಶನ
ನೀಡಬಲ್ಲ ಗ್ರಂಥ! ಎಲ್ಲ ಧರ್ಮಗ್ರಂಥಗಳು ಸಾವಿನ ನಂತರದ ಸ್ವರ್ಗ ನರಕ ಇತ್ಯಾದಿಗಳ ಮಹತ್ವವದ ಕಡೆಗೆ
ಹೆಚ್ಚು ಗಮನ ಹರಿಸಿದರೆ ಸಾಯುವತನಕ ನಾವು ಬದುಕಬೇಕಾದ ಇಹದ ಬದುಕನ್ನು ನೆಮ್ಮದಿಯುತವಾಗಿ ಗೌರವಯುತವಾಗಿ
ಕಳೆಯುವುದು ಹೇಗೆ ಎಂಬುದರ ಕಡೆ ನಮ್ಮ ಸಂವಿಧಾನ ಗಮನ ಹರಿಸುತ್ತದೆ.
ಹೀಗಾಗಿ ಇಂದು ನಮ್ಮ ಜನರಿಗೆ ವಿಶೇಷವಾಗಿ ಯುವಜನತೆ ಮತ್ತು ಶಾಲಾಮಕ್ಕಳಿಗೆ
ನಮ್ಮ ನಮ್ಮ ಧರ್ಮಗ್ರಂಥಗಳ ಪರಿಚಯ ಮಾಡಿಕೊಡುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಸಂವಿಧಾನವನ್ನು ಪರಿಚಯಮಾಡಿಕೊಡುವ
ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕಡಿಮೆಯಾದರೂ ಕೆಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಕರ್ನಾಟಕ ಸರ್ಕಾರ
ಶಾಲಾಕಾಲೇಜುಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ಮಕ್ಕಳಿಂದ ಹೇಳಿಸುವ ಆದೇಶ
ಮಾಡಿ ಅದು ನಡೆಯುವಂತೆ ಮಾಡಿರುವುದು ಈ ಹಿನ್ನಲೆಯಲ್ಲಿ ಒಂದು ಮಹತ್ವದ ಹೆಜ್ಜೆ ಎಂದೇ ಹೇಳಬೇಕು. ಇದರ
ಜೊತೆಗೆ ಮಕ್ಕಳಿಗೆ ಮತ್ತು ಯುವಕರಿಗೆ ಸಂವಿಧಾನವನ್ನು ಸರಳವಾಗಿ ಪರಿಚಯ ಮಾಡಿಕೊಡುವ ಕೆಲವು ಪುಸ್ತಕಗಳು
ಪ್ರಕಟವಾಗುತ್ತಿರುವುದೂ ಒಂದು ಒಳ್ಳೆಯ ಬೆಳವಣಿಗೆ.
ಕನ್ನಡದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ, ಪ್ರೊ. ಎಂ. ಅಬ್ದುಲ್
ರೆಹಮಾನ್ ಪಾಷ ಅವರ ʻಸರಳ ಓದಿಗಾಗಿ ಭಾರತ ಸಂವಿಧಾನʼ ಸೇರಿದಂತೆ ಕೆಲವು ಚಿಕ್ಕಚಿಕ್ಕಪುಸ್ತಕಗಳು
ಪ್ರಕಟವಾಗಿ ಈ ಬಗೆಯ ಒಂದು ತುರ್ತು ಅಗತ್ಯವನ್ನು ಪೂರೈಸಿವೆ. ಆದರೆ ಈ ಕೆಲಸ ಎಷ್ಟಕ್ಕೂ ಸಾಲದು. ಬಹಳಷ್ಟು
ಜನ ಲೇಖಕರು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಸಂವಿಧಾನವವನ್ನು ವಿವಿಧ ಹಂತದ ಮಕ್ಕಳಿಗೆ ಅವರ ವಯೋಮಾನಕ್ಕೆ
ತಕ್ಕಂತೆ ಸರಳವಾಗಿ ಆಕರ್ಷಕ ಭಾಷೆಯಲ್ಲಿ ಪರಿಚಯಿಸುವ ಕೆಲಸ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ನೋಡಿದಾಗ
ಇತ್ತೀಚೆಗೆ ಪ್ರಕಟವಾದ ಡಾ. ಎಂ ಬಸವರಾಜಪ್ಪ ಅವರ, ʼವಿದ್ಯಾರ್ಥಿಗಳಿಗಾಗಿ ಭಾರತ ಸಂವಿಧಾನʼ ಎಂಬ ಚಿಕ್ಕ
ಪುಸ್ತಕವೊಂದು ಗಮನ ಸೆಳೆಯುತ್ತದೆ.
ಈ ಮೊದಲು ಪ್ರಸ್ತಾಪವಾದ ಪ್ರೊ. ಅಬ್ದುಲ್ ರೆಹಮಾನ್ ಅವರ ಪುಸ್ತಕ
ಒಂದಿಷ್ಟು ವಿವರಣೆಗಳನ್ನು ಹೊಂದಿದ್ದು ಅದು ಕಾಲೇಜು ವಿದ್ಯಾರ್ಥಿಗಳ ಮಟ್ಟಕ್ಕೆ ಸರಿಹೊಂದುವಂತಿದೆ.
ಆದರೆ ಅದಕ್ಕೂ ಮೊದಲೇ ಬರುವ ಪ್ರೌಢಶಾಲೆ ಮಕ್ಕಳ ಮಟ್ಟಕ್ಕೆ ಸರಿಯಾಗಿ ಬಸವರಾಜಪ್ಪ ಅವರ ಈ ಪುಸ್ತಕ ರಚನೆಯಾಗಿರುವುದು
ಈ ನಿಟ್ಟಿನಲ್ಲಿರುವ ಒಂದು ಕೊರತೆಯನ್ನು ತುಂಬುವ ಪ್ರಯತ್ನವಾಗಿದೆ ಎನ್ನಬಹುದು.
ಎಂಬತ್ತು ಪುಟಗಳ, ಬಣ್ಣದ ಮುದ್ರಣವನ್ನು ಹೊಂದಿರುವ ಈ ಪುಸ್ತಕ ಒಳ್ಳೆಯ
ಗುಣಮಟ್ಟವನ್ನು ಕಾಯ್ದುಕೊಂಡಿದೆ ಮಾತ್ರವಲ್ಲ; ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರಾದ ಡಾ. ಬಿ. ಆರ್.
ಅಂಬೇಡ್ಕರ್ ಅವರು ಸಂವಿಧಾನದದ ಅಂತಿಮ ಪ್ರತಿಯನ್ನು ಸಂವಿಧಾನ ರಚನಾಸಮಿತಿಯ ಅಧ್ಯಕ್ಷರಾಗಿದ್ದ ಡಾ
ಬಾಬು ರಾಜೇಂದ್ರ ಪ್ರಸಾದ್ ಅವರಿಗೆ, ನೆಹರೂ ಪಟೇಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸಲ್ಲಿಸುತ್ತಿರುವ
ಐತಿಹಾಸಿಕ ಮಹತ್ವದ ಭಾವಚಿತ್ರವನ್ನು ಮುಖಪುಟವಾಗಿ ಬಳಸಿಕೊಳ್ಳುವ ಮೂಲಕ ಆಕರ್ಷಕ ಹೊರನೋಟವನ್ನೂ ಹೊಂದಿದೆ.
ನಮ್ಮ ಸಂವಿಧಾನವನ್ನು ಪರಿಚಯಿಸುವ ಇದುವರೆಗಿನ ಪುಸ್ತಕಗಳಿಗಿಂತ ಈ ಪುಸ್ತಕ
ಒಂದು ವಿಷಯದಲ್ಲಿ ಭಿನ್ನವಾಗಿದೆ. ಅದೆಂದರೆ ನಮ್ಮ ಸಂವಿಧಾನ ಹೊಂದಿರುವ ಇಪ್ಪತ್ತೆರಡು ವಿಭಾಗಗಳಲ್ಲೂ
ಪ್ರತಿವಿಭಾಗದ ಆರಂಭದಲ್ಲಿ ಬಳಸಲ್ಪಟ್ಟಿರುವ ಇಪ್ಪತ್ತೆರಡು ಚಿತ್ರಗಳು ಮತ್ತು ಅವುಗಳ ವಿವರಣೆ ನೀಡಿರುವುದು.
ಈ ಚಿತ್ರಗಳು ಭಾರತದ ಪ್ರಾಚೀನ ಮತ್ತು ಅರ್ವಾಚೀನ ಪರಂಪರೆ ಮತ್ತು ಇತಿಹಾಸಗಳೊಂದಿಗೆ ಸಂಬಂಧಹೊಂದಿರುವ
ಮಹತ್ವದ ಚಿತ್ರಗಳಾಗಿದ್ದು ಇವುಗಳ ವಿವರಣೆ ಪುಸ್ತಕದ ಅರ್ಧದಷ್ಟು ಪುಟಗಳನ್ನು ತಗೆದುಕೊಂಡಿದೆ.
ಸಂವಿಧಾನದ ಮೊದಲನೆಯ ಭಾಗವಾದಲ್ಲಿ ಕಾಣಿಸಿಕೊಳ್ಳುವ ಸಿಂಧೂನಾಗರಿಕತೆಯ
ಪ್ರಮುಖ ಗುರುತಾಗಿರುವ ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವ ಲಿಪಿಯೊಂದಿಗಿರುವ ಗೂನುಳ್ಳ ಬುಲ್
ಸೀಲ್ ನಿಂದ ಹಿಡಿದು ಕೊನೆಯ ಅಂದರೆ ಇಪ್ಪತ್ತೆರಡನೆಯ ವಿಭಾಗದಲ್ಲಿ ಚಿತ್ರಿಸಲ್ಪಟ್ಟಿರುವ ಭಾರತದ ಸಮುದ್ರಯಾನದ
ದೃಶ್ಯದ ವರೆಗೆ ಎಲ್ಲ ವಿಭಾಗಳ ಚಿತ್ರಗಳೂ ಅವುಗಳ ಐತಿಹಾಸಿಕ ಮಹತ್ವದೊಂದಿಗೆ ಒಂದೊಂದು ಪುಟದಲ್ಲಿ ವಿವರಿಸಲ್ಪಟ್ಟಿವೆ.
ವಿವಿಧ ವಿಭಾಗಗಳಲ್ಲಿ ಚಿತ್ರಿತವಾಗಿರುವ ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣ, ರಾಮಾಯಣದ ಪುಷ್ಪಕ ವಿಮಾನಯಾನ,
ಮಹಾಭಾರತದ ಗೀತಾಬೋಧನೆ, ಬುದ್ಧ ಮಹಾವೀರ, ಗುರುಗೋವಿಂದ ಸಿಂಗ್ ಮುಂತಾದ ಧಾರ್ಮಿಕ ನಾಯಕರ ಜೀವನಕ್ಕೆ
ಸಂಬಂಧಿಸಿದ ಚಿತ್ರಗಳ ಜೊತೆಗೆ ಅಶೋಕ, ವಿಕ್ರಮಾದಿತ್ಯ, ಶಿವಾಜಿ, ಅಕ್ಬರ್ ಮುಂತಾದ ರಾಜರಿಗೆ ಸಂಬಂಧಿಸಿದ ಚಿತ್ರಗಳೂ ನಮ್ಮ ಸಂವಿಧಾನದಲ್ಲಿ ಸ್ಥಾನ ಪಡೆದಿದ್ದು ಆ ಎಲ್ಲ
ಚಿತ್ರಗಳನ್ನು ಸೂಕ್ತ ವಿವರಣೆಯೊಂದಿಗೆ ಇಲ್ಲಿ ನೀಡಲಾಗಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಆರಂಭದ ಕಾಲಘಟ್ಟದಲ್ಲಿ ಬ್ರಿಟೀಷರೊಂದಿಗೆ
ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಟಿಪ್ಪುಸುಲ್ತಾನ್, ಇವರುಗಳ
ಜೊತೆಗೆ ಕೊನೆಯ ಘಟ್ಟದ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿಯ ಉಪ್ಪಿನ ಸತ್ಯಾಗ್ರಹ, ಸುಭಾಷ್ ಚಂದ್ರದ
ಫಾರ್ವರ್ಡ್ ಬ್ಲಾಕ್ ಇವುಗಳ ಚಿತ್ರಗಳ ವಿವರಣೆ ಕೂಡ ಚೆನ್ನಾಗಿದೆ. ಸ್ವಾತಂತ್ರ್ಯ ಸಿಕ್ಕ ಹೊಸತರದಲ್ಲಿ
ಉಂಟಾದ ಕೋಮುಗಲಭೆಗಳನ್ನೂ ಅದರ ಶಮನಕ್ಕೆ ಗಾಂಧೀಜಿ ಮಾಡಿದ ಪ್ರಯತ್ನವನ್ನು ನೆನಪಿಸುವಂತೆ ಹದಿನೆಂಟನೆಯ
ವಿಭಾಗದಲ್ಲಿರುವ ನೌಖಾಲಿಯ ಗಾಂಧೀಪ್ರವಾಸದ ಚಿತ್ರ ಮತ್ತು ಅದರ ವಿವರಣೆ ಗಮನ ಸೆಳೆಯುತ್ತದೆ. ಇವುಗಳ
ಜೊತೆಗೆ ಭಾರತ ಭೌಗೋಳಿಕ ಭಿನ್ನತೆಯ ಪ್ರತೀಕವಾಗಿ ಚಿತ್ರಿಸಲ್ಪಟ್ಟ ಉತ್ತರದ ಹಿಮಾಲಯ ಪರ್ವತ ಶ್ರೇಣಿ
ಹಾಗೂ ರಾಜಸ್ಥಾನದ ಮರುಭೂಮಿ ಚಿತ್ರಣಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವಂತೆ ಇವೆ. ಸಂವಿಧಾನದ ಹಿಂದಿನ
ರಕ್ಷಾಪುಟದಲ್ಲಿ ಚಿತ್ರಿತವಾಗಿರುವ ಕಪ್ಪುಹಿನ್ನಲೆಯ ಕಮಲಮಾಲೆಯ ವೃತ್ತಾಕಾರದ ಚಿತ್ರ, ಆರಂಭದಲ್ಲಿ
ಅಲಂಕಾರಿಕ ಪುಟದಲ್ಲಿರುವ ಪ್ರಸ್ತಾವನೆ ಹೀಗೆ ಇಡೀ ಸಂವಿಧಾನದಲ್ಲಿ ಬಳಕೆಯಾಗಿರುವ ಎಲ್ಲ ಬಗೆಯ ಕಲಾತ್ಮಕ
ಚಿತ್ರಗಳನ್ನು ಅವುಗಳ ಪೌರಾಣಿಕ ಅಥವಾ ಐತಿಹಾಸಿಕ ಮಹತ್ವಗಳೊಂದಿಗೆ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ
ವಿವರಿಸಲಾಗಿದೆ.
ಮೊದಲಭಾಗ ಹೀಗೆ ಚಿತ್ರಗಳು ಮತ್ತು ಅವುಗಳ ವಿವರಣೆಗೆ ಮೀಸಲಾಗಿದ್ದರೆ
ಮುಂದಿನ ಭಾಗ ಇಡೀ ನಮ್ಮ ಸಂವಿಧಾನದಲ್ಲಿ ಒಟ್ಟು ಎಷ್ಟು ಭಾಗಗಳಿವೆ ಮತ್ತು ಅವು ಯಾವುದಕ್ಕೆ ಸಂಬಂಧಿಸಿದ
ವಿಭಾಗಗಳಾಗಿವೆ ಹಾಗೂ ಆ ವಿಭಾಗದಲ್ಲಿ ಯಾವೆಲ್ಲ ವಿಧಿಗಳು ಬರುತ್ತವೆ ಎಂಬುದನ್ನು ತಿಳಿಸಲು ಮೀಸಲಾಗಿದೆ.
ಇಲ್ಲಿ ಪ್ರತಿ ವಿಭಾಗದಲ್ಲಿ ಬರುವ ಎಲ್ಲ ವಿಧಿಗಳನ್ನೂ
ಯಾವುದನ್ನೂ ಬಿಡದಂತೆ ವಿವರಿಸಲಾಗಿದೆಯಾದರೂ ಯಾವ ವಿಧಿಯನ್ನೂ ದೀರ್ಘವಾಗಿ ವಿವರಿಸದೇ ಒಂದೆರಡು ವಾಕ್ಯಗಳಲ್ಲಿ
ಸಂಕ್ಷಿಪ್ತವಾಗಿ ವಿವರಿಸಿದೆ. ಮುಖ್ಯವಾಗಿ ಆ ವಿಧಿಗಳು ಏನನ್ನು ಹೇಳುತ್ತವೆ ಎಂಬುದಕ್ಕೆ ಕೇಂದ್ರೀಕರಿಸಿ
ಈ ವಿವರಣೆ ನೀಡಲಾಗಿದೆ. ಚಿಕ್ಕಮಕ್ಕಳನ್ನು ಉದ್ದೇಶಿಸಿರುವ ಪುಸ್ತಕವಾಗಿರುವುದರಿಂದ ಲೇಖಕರು ಇದನ್ನು
ಬಹಳ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಅನ್ನಿಸುತ್ತದೆ.
ಈ ಪುಸ್ತಕ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಅದರಲ್ಲೂ ಶಾಲಾ ವಿದ್ಯಾರ್ಥಿಗಳನ್ನು
ಉದ್ದೇಶಿಸಿ ಬರೆದದ್ದಾಗಿದ್ದಾಗ್ಯೂ ದೊಡ್ಡವರಿಗೂ ಒಂದು ರೀತಿಯಲ್ಲಿ ಸಂವಿಧಾನದ ಕೈಪಿಡಿಯಂತೆ ಬಳಸಲು
ಬಹಳ ಉಪಯುಕ್ತವಾಗಿದೆ. ದೊಡ್ಡವರಿಗೆ ಇದು ವಿಶೇಷವಾಗಿ ʻರೆಫರೆನ್ಸ್
ಗೈಡ್ʼ ಆಗಿ ಬಳಕೆಗೆ ಸೂಕ್ತವಾಗಿದೆ. ಉದಾಹರಣೆಗೆ ಭಾರತದ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯವನ್ನು
ಮೂಲಭೂತ ಹಕ್ಕಾಗಿ ಸಂವಿಧಾನ ಯಾವ ವಿಧಿ ಮೂಲಕ ನೀಡಿದೆ ಎಂಬ ಮಾಹಿತಿಯೋ ಅಥವಾ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಕರ್ತವ್ಯವನ್ನು ಯಾವ
ವಿಧಿಯ ಮೂಲಕ ಮೂಲಭೂತ ಕರ್ತವ್ಯವಾಗಿ ವಿಧಿಸಿದೆ ಎಂಬ ಮಾಹಿತಿಯೋ ಬೇಕಾಯಿತು ಎಂದರೆ ಇದರಲ್ಲಿ ಅದು ತಕ್ಷಣಕ್ಕೆ
ಸಿಗುತ್ತದೆ. ಹೆಚ್ಚಿನ ವಿವರಣೆ ಬೇಕಾದರೆ ಬೇರೆಯ ಗ್ರಂಥಗಳನ್ನು
ಪರಿಶೀಲಿಸಿವುದು ಅಗತ್ಯವಾಗಬಹುದಾದರೂ ತಕ್ಷಣದ ಮಾಹಿತಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.
ಭವ್ಯಭಾರತದ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕಾಗಿರುವ ನಮ್ಮ ಮಕ್ಕಳಿಗೆ
ಇಂತಹ ಉತ್ತಮ ಕೃತಿಗಳನ್ನುಎಳೆಯ ವಯಸ್ಸಿನಲ್ಲಿಯೇ ನಾವು ಪರಿಚಯಿಸುವುದು ಆ ಮೂಲಕ ಅವರು ಧಾರ್ಮಿಕ ಮೂಲವಾದಿಗಳು
ಹಾಗೂ ಕೋಮುವಾದಿಗಳ ಕೈಗೆ ಸಿಕ್ಕು ಹಾಳಾಗದೆ, ಉತ್ತಮ ನಾಗರಿಕಾಗಿ ಬೆಳೆದು ಭಾರತದ ಸೌಹಾರ್ದ ಪರಂಪರೆಯನ್ನು
ಗೌರವಿಸುತ್ತ ಎಲ್ಲ ಜಾತಿಧರ್ಮಗಳೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ನೆಮ್ಮದಿಯ ಬದುಕನ್ನು ಬದುಕುವಂತೆ
ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಅದು ಅವರು ತಮ್ಮ ಕುಟುಂಬಕ್ಕೆ ಮಾತ್ರವಲ್ಲ
ಇಡೀ ದೇಶಕ್ಕೆ ಕೊಡುವ ಅತ್ಯಮೂಲ್ಯ ಕೊಡುಗೆಯೂ ಹೌದು. ಅಂತಹ ಕೊಡುಗೆ ನೀಡಲು ಈ ಪುಸ್ತಕ ಕೂಡ ಒಂದು ಅತ್ಯುತ್ತಮ
ಸಾಧನ. ಈ ಪುಸ್ತಕವನ್ನು ನಮ್ಮ ನಮ್ಮ ಮಕ್ಕಳಿಗೆ ಕೊಡಿಸಿ ಓದಿಸುವ ಮೂಲಕ ಕೃತಿಯ ಲೇಖಕರನ್ನೂ ಅದನ್ನು
ಪ್ರಕಟಿಸಿದ ಶಿವಮೊಗ್ಗದ ಬಸವಾಮೃತ ಪ್ರಕಾಶನವನ್ನೂ ಅವರ ಈ ಶ್ಲಾಘನೀಯ ಕಾರ್ಯಕ್ಕಾಗಿ ಬೆಂಬಲಿಸೋಣ.
ಡಾ. ರಾಜೇಂದ್ರ ಬುರಡಿಕಟ್ಟಿ
22-10-2025

No comments:
Post a Comment