ಶುಭ ಶುಕ್ರವಾರ (Good Friday): ಮರಣವೃಕ್ಷದಲ್ಲಿ ಬಿಟ್ಟ ಅಮೃತಫಲ!
“ದುಷ್ಟಕೃತಿಯ ಮುಚ್ಚಿಟ್ಟುಕೊಂಡು ಉತ್ತಮಿಕೆಯ ನಟಿಸಿಕೊಂದಪಾಪ ಅವರನ್ನೆ ತಿಂದು
ತೇಗುವುದು ಪೀಡೆಗೊಳಿಸಿ”
ಇವು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿ ಅವರ ʻತೀರ್ಪುʼ ಎಂಬ ಕವಿತೆಯ ಎರಡು ಶಕ್ತಿಶಾಲಿಯಾದ
ಸಾಲುಗಳು. ಯೇಸುಕ್ರಿಸ್ತನ ಜೀವನಕ್ಕೆ ಸಂಬಂಧಿಸಿದಂತೆ ಬರುವ ಬಹುಮುಖ್ಯ ಘಟನೆಗಳಲ್ಲಿ ಆತ ʼವ್ಯಭಿಚಾರಿಣಿʼ
ಎಂಬ ಕಳಂಕಹೊತ್ತು ಬರುವ ಮರಿಯಾ ಎಂಬ ಮಹಿಳೆಯೊಬ್ಬಳಿಗೆ ನೀಡಿದ ಕ್ಷಮಾಧಾನ ಅತ್ಯಂತ ಮಹತ್ವದ್ದು. ವ್ಯಭಿಚಾರ
ಮಾಡಿದ್ದಾಳೆ ಎಂದೂ ಅವಳಿಗೆ ಶಿಕ್ಷೆಯ ನಿರ್ಣಯವಾಗಬೇಕೆಂದೂ ಅವಳನ್ನು ಯೇಸುವಿನ ಬಳಿ ತಂದಾಗ ಯೇಸು,
“ನಿಮ್ಮಲ್ಲಿ ಇದುವರೆಗೂ ಯಾವುದೇ ಪಾಪದ ಕೆಲಸ ಮಾಡದೇ
ಇರುವವರು ಅವಳಿಗೆ ಕಲ್ಲಿನಿಂದ ಹೊಡೆಯಿರಿ” ಎಂದು ಹೇಳುವ ಸಂದರ್ಭದಲ್ಲಿ ಈ ಸಾಲುಗಳು ಬರುತ್ತವೆ.
ಯೇಸು ಹಾಗೆ ಹೇಳಿದಾಗ ಅಲ್ಲಿ ಯಾರೊಬ್ಬರೂ ಆ ಶಿಕ್ಷೆಕೊಡಲು ಮುಂದೆ ಬರುವುದಿಲ್ಲ. ʼಪಾಪವೆಂಬ
ತಿಳಿವಳಿಕೆ ಆಗ ನನಗಿರಲಿಲ್ಲ ತಂದೆ / ಇದಕೆ
ಅವರು ಅಪರಾಧವೆನಲು ನಾನರಿಯದೇನೆ ಗೈದೆʼ ಎನ್ನುವ ಅವಳ ಮಾತುಗಳು ಕೇವಲ ಯೇಸುವಿನ ಮನಸ್ಸನ್ನು ಮಾತ್ರವಲ್ಲ
ಇಡೀ ಜಗತ್ತಿನಲ್ಲಿ ಹೃದಯವಂತಿಕೆ ಇರುವ ಯಾರ ಮನಸ್ಸನ್ನಾದರೂ ಕರಗಿಸುವಂಥವು. ಕೊನೆಗೆ ಯೇಸು ಆ ಮಹಿಳೆಯನ್ನು
ಕ್ಷಮಿಸಿ ಬದುಕುವ ಅವಕಾಶ ಮಾಡಿಕೊಡುತ್ತಾನೆ. ಈ ಘಟನೆ ನಾವು ಆರೋಪಿಗಳನ್ನು ನೋಡುವ ದೃಷ್ಟಿಕೋನವನ್ನೇ
ಬದಲಿಸುವಂಥದ್ದು. ಯಾವುದೇ ವ್ಯಕ್ತಿ ತಪ್ಪು ಮಾಡುವುದು ಬಹುತೇಕ ಅಜ್ಞಾನದಿಂದ. ಈ ಅಜ್ಞಾನದಿಂದ ಮಾಡುವ
ತಪ್ಪುಗಳಿಗೆ ʻಶಿಕ್ಷೆʼ ಪರಿಹಾರವಲ್ಲ. ಶಿಕ್ಷಣವೇ ಪರಿಹಾರ. ಇಂಥ ಅಪರಾಧಗಳು ಕ್ಷಮೆಗೆ ಅರ್ಹವಾದಂಥವು ಎಂಬ
ಈ ತಿಳಿವಳಿಕೆಗೆ ಒಂದು ರೀತಿಯ ಜಗವನಾಳುವ ಶಕ್ತಿಯಿದೆ.
ಐತಿಹಾಸಿಕ ಹಿನ್ನೆಲೆ
ಗುಡ್ ಫ್ರೈಡೇ ಮೂಲವು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿ ವಿವರಿಸಲಾದ ಘಟನೆಗಳಲ್ಲಿದೆ. ಕ್ರೈಸ್ತ ನಂಬಿಕೆಯ ಪ್ರಕಾರ, ಯೇಸು ಕ್ರಿಸ್ತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿ, ರೋಮನ್ ಸಾಮ್ರಾಜ್ಯದ ಅಧಿಕಾರದ ಅಡಿಯಲ್ಲಿ ಶಿಲುಬೆಗೇರಿಸುವ ಮೂಲಕ ಮರಣದಂಡನೆ ವಿಧಿಸಲಾಯಿತು. ರೋಮನ್ ಗವರ್ನರ್ ಪಾಂಟಿಯಸ್ ಪಿಲಾಟ್ ವಿಚಾರಣೆಯ ನೇತೃತ್ವವಹಿಸಿದ್ದ. ಆತ ಯೇಸುವಿನಲ್ಲಿ ಯಾವುದೇ ತಪ್ಪು ಕಂಡುಬರದಿದ್ದರೂ, ಅಂತಿಮವಾಗಿ ಜನರ ವಿರೋಧವನ್ನು ಎದುರಿಸಲಾಗದೆ ಅವರ ಒತ್ತಡಕ್ಕೆ ಮಣಿದು ತನ್ನ ಮನಸ್ಸು
ಇಲ್ಲದಿದ್ದರೂ ಯೇಸುವಿಗೆ ಮರಣದಂಡನೆಯ ಶಿಕ್ಷೆ ವಿಧಿಸುತ್ತಾನೆ!
ಈ ಘಟನೆಯನ್ನು ಕುರಿತಂತೆ ಕನ್ನಡದ ಮೊದಲ ರಾಷ್ಟ್ರಕವಿ ಎಂದು ಹೆಸರಾಗಿರುವ ಎಂ ಗೋವಿಂದ ಪೈ
ಅವರು 1930ರ ಹೊತ್ತಿಗೆ ʼಗೋಲ್ಗೊಥಾʼ ಎಂಬ ʻಖಂಡಕಾವ್ಯʼ ಎಂದು ಕರೆಯಬಹುದಾದ 377 ಸಾಲುಗಳ
ಒಂದು ದೀರ್ಘ ಕವಿತೆಯನ್ನು ಬರೆದರು. ಈ ಕಾವ್ಯದಲ್ಲಿ ಅವರು ಯೇಸುವನ್ನು ವಿಚಾರಣೆಗೆ ಒಳಪಡಿಸಿ ಆತನನ್ನು
ಶಿಲುಬೆಗೆ ಏರಿಸಿದ ದಿನದ ವಿವರಣೆಯನ್ನು ನೀಡಿದ್ದಾರೆ.
“ಜಗದ ಪಾಪದ ಸಾಲವಿಂದು ಹರಿಪುದೆಂದು ಸಾರೆ ತಂಗಾಳಿ ಸುತ್ತಲೂ ತೀಡೆ, ದಿವಕಿಂದು ದೇವಕುವರಂ ಮರಳಿ
ಬಹನೆಂದು ಗೆಲುವಿಂದ / ದೇವದೂತರೆ ಬಾರಿಸುವರೋ ಮಂಗಲವಾದ್ಯ” ಎಂದು ದೇವಲೋಕದ ಸಂಭ್ರಮವನ್ನು
ವರ್ಣಿಸುವುದರೊಂದಿಗೆ ಆರಂಭವಾಗುವ ಈ ಕಾವ್ಯ ಭೂಲೋಕದಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುವ ಸಂಕಟ
ಮತ್ತು ಶೋಕದ ಘಟನೆಯ ವಿವರಗಳನ್ನು ಮನಕಲಕುವಂತೆ ನೀಡುತ್ತಾ ಹೋಗುತ್ತದೆ.
ಬಡಗಿಯ ಕೆಲಸದ ತಂದೆ ತಾಯಿಗಳಿಗೆ ಜನಿಸುವ ಬಡತನದ ಬಾಳಿನ ಯೇಸು, ʼದೇವಸುತನಾದ ತನಗಿಂದ ಬೇರೆ ಶ್ರೀಮಂತನಿಲ್ಲʼಎಂದು ಸಾರಿದ್ದು, ಜಡ್ಡುಗಟ್ಟಿದ
ಸಾಮಾಜಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಕೊಡಲು ಹೊಸಧರ್ಮವೊಂದರ ಅನ್ವೇಷಣೆಗೆ ತೊಡಗಿದ್ದೇ
ದೊಡ್ಡ ತಪ್ಪಾಗಿಬಿಡುತ್ತದೆ. ಆತನನ್ನು ಶಿಕ್ಷಿಸಲೆಂದು ಕೈಸರನ ಪ್ರತಿನಿಧಿಯಾದ ಪಿಲಾತನ (ಗ್ರೀಕ್
ಹೆಸರುಗಳನ್ನು ಪೈಗಳು ಕನ್ನಡಕ್ಕೆ ಹೊಂದಿಕೆಯಾಗುವಂತೆ ಮುರಿದುಕಟ್ಟಿದ್ದಾರೆ.) ಮನೆಗೆ ಒಯ್ದಾಗ
ನಡೆದ ವಿಚಾರಣೆಯಲ್ಲಿ ರಾಜನಿಗೆ ಯೇಸುವಿನಲ್ಲಿ ಯಾವ ತಪ್ಪು ಕಾಣದಿದ್ದರೂ ಅವನು ಪ್ರಜೆಗಳ ಒತ್ತಡಕ್ಕೆ
ಮಣಿದು ಅವನಿಗೆ ಮರಣದ ಶಿಕ್ಷೆಯನ್ನು ವಿಧಿಸುತ್ತಾನೆ. ಹಾಗೆ ಮಾಡುವಾಗ ಅವನಿಗೆ ನಿಜವಾಗಿಯೂ
ಗೊತ್ತಿರುತ್ತದೆ. ನಿರಪರಾಧಿಯಾದ ಯೇಸುವನ್ನು ಮರಣದಂಡನೆಗೆ ಆದೇಶಿಸಿದ ತನಗೆ ಆ ಪಾಪ
ಅಂಟಿಕೊಳ್ಳುತ್ತದೆ ಎಂದು. ಹಾಗಾಗಿಯೇ ಅವನು ಅದನ್ನು ತಕ್ಕಮಟ್ಟಿಗೆ ಪರಿಹಾರ ಮಾಡಿಕೊಳ್ಳುವವನಂತೆ,
ಅವನಿಗೆ ಮರಣದಂಡನೆಯ ಶಿಕ್ಷೆ ವಿಧಿಸಿ, ಒಂದಿಷ್ಟು ನೀರು ತರಿಸಿ ಅದರಲ್ಲಿ ಕೈತೊಳೆದುಕೊಂಡು ಈ ಪಾಪ
ನನಗೆ ಅಂಟುವುದಿಲ್ಲ ಎನ್ನುತ್ತಾನೆ!
ವಿಚಿತ್ರವೆಂದರೆ ಅದರ ಹೊಣೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಇರಲಿ ಎಂದು ಅಲ್ಲಿನ ಜನರೇ
ಉನ್ಮಾದದಲ್ಲಿ ಕೂಗುತ್ತಾರೆ. ಮಾತ್ರವಲ್ಲ ರಾಜ ಆ ಜನರಿಗೆ ಒಬ್ಬ ಕಳ್ಳ ಮತ್ತು ಯೇಸು ಇವರಲ್ಲಿ
ಒಬ್ಬರನ್ನು ಶಿಕ್ಷೆಯಿಂದ ಬಿಡುಗಡೆ ಮಾಡುತ್ತೇನೆ ನಿಮ್ಮ ಆಯ್ಕೆ ಯಾರು ಎಂದು ಕೇಳಿದಾಗ ಇವರು ಆ
ಕಳ್ಳನನ್ನೆ ಆಯ್ದುಕೊಳ್ಳುತ್ತಾರೆ. ಆಮೂಲಕ ಯೇಸುವಿನ ಮರಣಕ್ಕೆ ಕಾರಣವಾಗುತ್ತಾರೆ. ತಪ್ಪು
ಅಭಿಪ್ರಾಯ ಎಂಬುದು ಒಂದು ಸಲ ಸಾಮಾನ್ಯ ಜನರ ಗುಂಪಿಗೆ ಹೊಕ್ಕರೆ ಅದು ಏನೆಲ್ಲ ಅನಾಹುತ ಮಾಡುತ್ತದೆ
ಎಂಬುದಕ್ಕೆ ಯೇಸುವಿನ ವಿಚಾರಣೆ ಮತ್ತು ಮರಣದಂಡನೆಯ ಪ್ರಸಂಗ ಒಂದು ಉತ್ತಮ ಉದಾಹರಣೆ. ಯೇಸು ಯಾರ
ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದನೋ ಆ ಜನರೇ ಅವನನ್ನು ಹಿಡಿದು ಶಿಕ್ಷೆಕೊಡುವಂತೆ ಮಾಡುತ್ತಾರೆ.
ಈ ಬಗ್ಗೆ ಮಾತನಾಡುತ್ತಾ ವಿವೇಕಾನಂದರು ಯೇಸುವಿನ ಯಹೂದಿಗಳ ಎರಡು ಗುಂಪುಗಳಾದ ʼಸ್ಯಾಡೂಸಿಗಳುʼ
ಮತ್ತು ʻಪ್ಯಾರಸಿಗಳುʼ ಎಷ್ಟೇ ಆಷಾಢಭೂತಿಗಳು ಇರಬಹುದು, ದುರ್ಜನರು ಇರಬಹುದು, ಮಾಡಬಾರದ ಕೆಲಸಗಳನ್ನು
ಮಾಡಿರಬಹುದು ಆದರೆ ಅವರೆಲ್ಲರೂ ತಮ್ಮ ಈ ಕಾರ್ಯಗಳ ಮೂಲಕ ಈ ದೇವದೂತನ ಅವತಾರಕ್ಕೆ ಕಾರಣರಾದರು
ಎನ್ನುತ್ತಾರೆ.
ಆ ಕಾಲದಲ್ಲಿ ಅಪರಾಧಿಗಳನ್ನು ಶಿಲುಬೆಗೆ ಏರಿಸುವುದು ಒಂದು ಸಾಮಾನ್ಯ ಶಿಕ್ಷೆಯಾಗಿತ್ತು.
ಬಹುಶಃ ಈಗಿನಂತೆ ರಾಜಕೀಯ ಕೈದಿಗಳು ಮತ್ತು ಕಳ್ಳತನ ದರೋಡೆಗಳಂಥ ಅಪರಾಧ ಎಸಗಿದ ಕೈದಿಗಳನ್ನು
ಪ್ರತ್ಯೇಕವಾಗಿ ಪರಿಗಣಿಸಿ ಶಿಕ್ಷಿಸುವ ವ್ಯವಸ್ಥೆ ಇರಲಿಲ್ಲವೇನೋ. ಹಾಗಾಗಿ ಇಬ್ಬರು ಕಳ್ಳರ ನಡುವೆ
ಯೇಸುವನ್ನು ಶಿಲುಬೆಗೆ ಏರಿಸಿ ಸಾಯಿಸುತ್ತಾರೆ. ಈ ಶಿಲುಬೆಗೇರಿಸುವ ಕಾರ್ಯ 'ಗೊಲ್ಗೊಥಾ' ಎಂಬ ಸ್ಥಳದಲ್ಲಿ ನಡೆಯಿತು, ಇದನ್ನು "ಕಪಾಲದ ಸ್ಥಳ" ಎಂದೂ ಕರೆಯಲಾಗುತ್ತದೆ. ಯೇಸುವನ್ನು ಮರದ ಶಿಲುಬೆಗೆ ಮೊಳೆ ಹೊಡೆದು ಸಾಯಲು ಬಿಡಲಾಯಿತು. ಇದು ಆ ಕಾಲದಲ್ಲಿ ಅಪರಾಧಿಗಳು ಮತ್ತು ಬಂಡಾಯಗಾರರಿಗೆ ರೋಮನ್ನರು ನೀಡುತ್ತಿದ್ದ ಸಾಮಾನ್ಯ ಶಿಕ್ಷೆಯಾಗಿತ್ತು. ಈ ಬಲಿದಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಬದಲಿಗೆ ಮಾನವಕುಲದ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯೇಸು ಸ್ವಇಚ್ಛೆಯಿಂದ ತನ್ನ ಪ್ರಾಣವನ್ನು ನೀಡಿದ ದೈವಿಕ ವಿಮೋಚನೆಯ ಕಾರ್ಯ ಎಂದು ಕ್ರೈಸ್ತರು ನಂಬುತ್ತಾರೆ.
ಸಾಯುವ ಕಾಲದಲ್ಲಿಯೂ ಯೇಸು ಯಾರ ಮೇಲೂ ಕೋಪ ದ್ವೇಷ ತಾಳದೆ, ತನ್ನನ್ನು ಕೊಲ್ಲುತ್ತಿರುವವರನ್ನೂ ಕರುಣೆಯಿಂದಲೇ ಕಾಣುತ್ತಾ, “ಇವರೇನು ಮಾಡುತ್ತಿದ್ದಾರೆ ಎಂಬುದು ಇವರಿಗೆ ತಿಳಿದಿಲ್ಲವಾದ್ದರಿಂದ ಇವರ ತಪ್ಪನ್ನು ಕ್ಷಮಿಸು ತಂದೆ” ಎಂದು ಹೇಳುವ ಮಾತು ಮನುಕುಲಕ್ಕೆ ನೀಡಿದ ಒಂದು ಮಹಾನ್ ಸಂದೇಶವಾಗಿಯೇ ಇಂದಿಗೂ ಉಳಿದುಕೊಂಡಿದೆ. ಗೋವಿಂದ ಪೈಗಳು ಯೇಸುವು ತನ್ನ ಕೊನೆಯ ಕ್ಷಣದಲ್ಲಿ ಶಿಲುಬೆಯಲ್ಲಿ ತೂಗುವುದನ್ನು ʼಮರಣವೃಕ್ಷದೊಳಮೃತಫಲದಂತೆ ತೂಗುತಿರೆʼ ಎಂದು ಮಾರ್ಮಿಕವಾಗಿ ಹೇಳುತ್ತಾರೆ ಮಾತ್ರವಲ್ಲ ಆತನ ತ್ಯಾಗವನ್ನು, ʻತನ್ನ ಕಡಿವರ್ಗೆ ತಣ್ನೆಳಲನೀವ ಮರದಂತೆʼ ಎಂದು ಶ್ಲಾಘಿಸುತ್ತಾರೆ.
ಯೇಸುವಿನ ಮರಣದ ಈ ಘಟನೆಯು ವಾಸ್ತವದಲ್ಲಿ ಒಂದು ಸಂತೋಷದ ಅಥವಾ
ಉಲ್ಲಾಸದ ಘಟನೆಯಲ್ಲ ಬದಲಾಗಿ ಅದು ನೋವು, ಮತ್ತು ಕಹಿಭಾವನೆಗಳನ್ನು ನೆನಪಿಗೆ ತರುವ ಒಂದು ಶೋಕದ
ಘಟನೆ. ಹಾಗಿದ್ದೂ ಅದನ್ನು ʼಶುಭʼ ಶುಕ್ರವಾರ ಎಂದು ಕರೆಯುವುದು ವಿರೋಧಾಭಾಸವಲ್ಲವೇ ಅನ್ನಿಸುವುದು
ಸಹಜ. ಆದರೆ ದುಃಖದ ಆಳದಿಂದಲೇ ಹೊಸಚೈತನ್ಯ
ಹುಟ್ಟಿಬರುವುದು ಈ ಜಗದ ಒಂದು ನಿಯಮ. ಹೀಗಾಗಿಯೇ
ವಚನಕಾರರು ಮರಣವನ್ನು ʼಮಹಾನವಮಿʼ ಎಂದು ಕರೆದರು. ಹಾಗೆಯೇ ಇಲ್ಲಿ ಕೂಡ "ಶುಭ" ಅಥವಾ "ಗುಡ್" ಎಂಬ ಪದವನ್ನು ದೇವತಾಶಾಸ್ತ್ರದ ಅರ್ಥದಲ್ಲಿ ಬಳಸಲಾಗಿದೆ, ಇದು ವಿಶ್ವಾಸಿಗಳಿಗೆ ಮೋಕ್ಷ ಮತ್ತು ಭರವಸೆಯನ್ನು ತರುವಲ್ಲಿ ಈ ದಿನದ ಅಗಾಧ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಆಚರಣೆ ಮತ್ತು ಸಂಪ್ರದಾಯಗಳು
ಕ್ಯಾಥೋಲಿಕ್, ಪ್ರಾಟಸ್ಟಂಟ್ ಮತ್ತು ಆರ್ಥೊಡಾಕ್ಸ್ ಸೇರಿದಂತೆ ವಿವಿಧ ಕ್ರೈಸ್ತ ಪಂಗಡಗಳಲ್ಲಿ ಗುಡ್ ಫ್ರೈಡೇಯನ್ನು ಬಹಳ ಗೌರವದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಸಾಮಾನ್ಯವಾಗಿ ಉಪವಾಸ, ಪ್ರಾರ್ಥನೆ ಮತ್ತು ಯೇಸುವಿನ ಸಂಕಟ ಹಾಗೂ ಮರಣದ ಮೇಲೆ ಕೇಂದ್ರೀಕರಿಸುವ ಚರ್ಚ್ ಸೇವೆಗಳ ಮೂಲಕ ಗುರುತಿಸಲಾಗುತ್ತದೆ.
ಮೂರು ಗಂಟೆಗಳ ಸಂಕಟ (Three Hours’ Agony): ಇದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನಡೆಯುವ ಭಕ್ತಿ ಸೇವೆಯಾಗಿದೆ. ಯೇಸು ಶಿಲುಬೆಯ ಮೇಲೆ ನೇತಾಡುತ್ತಿದ್ದ ಸಮಯವನ್ನು ಇದು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ಉಪನ್ಯಾಸಗಳು ಮತ್ತು ಪ್ರಾರ್ಥನೆಗಳ ಮೂಲಕ ಯೇಸುವಿನ ಅಂತಿಮ ಮಾತುಗಳನ್ನು ಸ್ಮರಿಸಲಾಗುತ್ತದೆ.
ಶಿಲುಬೆಯ ಹಾದಿ (Stations of the Cross): ಯೇಸುವಿನ ಶಿಲುಬೆಗೇರಿಸುವಿಕೆಗೆ ಕಾರಣವಾದ 14 ಘಟನೆಗಳನ್ನು ನೆನಪಿಸುವ ಸರಣಿ ಇದಾಗಿದೆ. ಭಕ್ತರು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುತ್ತಾ, ಯೇಸುವಿಗೆ ಮರಣದಂಡನೆ ವಿಧಿಸಿದ ಸಮಯದಿಂದ ಹಿಡಿದು ಅವರ ಅಂತ್ಯಕ್ರಿಯೆಯವರೆಗಿನ ಪ್ರತಿ ಕ್ಷಣವನ್ನು ಧ್ಯಾನಿಸುತ್ತಾರೆ.
ಮೆರವಣಿಗೆಗಳು: ಅನೇಕ ದೇಶಗಳಲ್ಲಿ ಯೇಸುವಿನ ಕಷ್ಟಾನುಭವಗಳನ್ನು ಮರುಸೃಷ್ಟಿಸುವ ಮೆರವಣಿಗೆಗಳು ನಡೆಯುತ್ತವೆ. ಭಾರತದಲ್ಲಿ, ವಿಶೇಷವಾಗಿ ಕ್ರೈಸ್ತ ಧರ್ಮಾವಲಂಬಿಗಳು ಹೆಚ್ಚಿರುವ ಗೋವಾ, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕ್ರೈಸ್ತರು ವಿಶೇಷ ಚರ್ಚ್ ಸೇವೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಭಕ್ತಿಯ ಸಂಕೇತವಾಗಿ ಶಿಲುಬೆಗಳನ್ನು ಹೊತ್ತು ಮೆರವಣಿಗೆ ನಡೆಸುತ್ತಾರೆ.ಈ ಸಂದರ್ಭದಲ್ಲಿ ಚರ್ಚ್ಗಳಲ್ಲಿನ ಅಲಂಕಾರಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಪೀಠಗಳನ್ನು (Altars) ಬರಿದಾಗಿ ಬಿಡಲಾಗುತ್ತದೆ, ಇದು ದಿನದ ದುಃಖ ಮತ್ತು ಶೂನ್ಯತೆಯನ್ನು ಸಂಕೇತಿಸುತ್ತದೆ. ಗಂಟೆಗಳು ಸಾಮಾನ್ಯವಾಗಿ ಮೊಳಗುವುದಿಲ್ಲ ಮತ್ತು ಸಂಗೀತವು ತುಂಬಾ ಗಂಭೀರವಾಗಿರುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ
ಗುಡ್ ಫ್ರೈಡೇ ಕ್ರೈಸ್ತ ಧರ್ಮದಲ್ಲಿ ಅಪಾರ ದೈವಿಕ ಮಹತ್ವವನ್ನು ಹೊಂದಿದೆ. ಇದು ಮಾನವಕುಲದ ವಿಮೋಚನೆಗಾಗಿ ಯೇಸು ಕ್ರಿಸ್ತನು ಮಾಡಿದ ಪರಮ ತ್ಯಾಗವನ್ನು ಪ್ರತಿನಿಧಿಸುತ್ತದೆ. ಈ ದಿನವು ಈ ವಿಷಯಗಳನ್ನು ಒತ್ತಿಹೇಳುತ್ತದೆ: ತ್ಯಾಗ ಮತ್ತು ಪ್ರೀತಿ: ಯೇಸು ಸಂಕಟ ಮತ್ತು ಮರಣವನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದು ಪ್ರೀತಿಯ ಅತ್ಯುನ್ನತ ರೂಪವೆಂದು ಪರಿಗಣಿಸಲಾಗಿದೆ. ಕ್ಷಮೆ: ಯೇಸುವಿನ ಬಲಿದಾನದ ಮೂಲಕ ಮಾನವರ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ಕ್ರೈಸ್ತರು ನಂಬುತ್ತಾರೆ. ವಿಮೋಚನೆ: ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ಮಾನವಕುಲಕ್ಕೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಗೆ ಗುಡ್ ಫ್ರೈಡೇ ಕೇಂದ್ರಬಿಂದುವಾಗಿದೆ.
ಭಾರತ, ಬ್ರಿಟನ್ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಗುಡ್ ಫ್ರೈಡೇ ಸಾರ್ವಜನಿಕ ರಜಾದಿನವಾಗಿದೆ. ಆಚರಣೆಯ ವಿಧಾನಗಳು ಬದಲಾಗಬಹುದಾದರೂ, ಅದರ ಆಂತರಿಕ ಸಂದೇಶವು ಒಂದೇ ಆಗಿರುತ್ತದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವಿವಿಧ ಸಮುದಾಯಗಳು ಒಟ್ಟಾಗಿ ಪ್ರಾರ್ಥನೆ ಮತ್ತು ಆತ್ಮಾವಲೋಕನದಲ್ಲಿ ತೊಡಗುವ ಮೂಲಕ ಈ ದಿನವು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ದಿನವೂ ಆಗಿದೆ.
ಗುಡ್ ಫ್ರೈಡೆಗೆ ಸಂಬಂಧಿಸಿದ ಕೆಲವು
ಸಂಕೇತಗಳಿವೆ. ಅವುಗಳಲ್ಲಿ ಈ ಮೂರು ಮುಖ್ಯವಾದವು: ೧)
ಶಿಲುಬೆ: ಯೇಸುವನ್ನು ಶಿಲುಬೆಗೇರಿಸಿದ ಸಾಧನ ಮತ್ತು ಕ್ರೈಸ್ತ ಧರ್ಮದ ಅತ್ಯಂತ ಶಕ್ತಿಶಾಲಿ ಸಂಕೇತ.೨) ಕಪ್ಪು ಬಣ್ಣ: ಶೋಕ ಮತ್ತು ದುಃಖವನ್ನು ಸೂಚಿಸುತ್ತದೆ.೩)ಮೌನ: ದಿನದ ಗಾಂಭೀರ್ಯವನ್ನು ಪ್ರತಿಬಿಂಬಿಸಲು ಚರ್ಚ್ಗಳಲ್ಲಿ ಮೌನವನ್ನು ಆಚರಿಸಲಾಗುತ್ತದೆ.
ಹೀಗೆ ಗುಡ್ ಫ್ರೈಡೇ ಆಳವಾದ ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಗಾಂಭೀರ್ಯದ ದಿನವಾಗಿದೆ. ಇದು ಯೇಸು ಕ್ರಿಸ್ತನ ಸಂಕಟ ಮತ್ತು ತ್ಯಾಗವನ್ನು ನೆನಪಿಸುತ್ತದೆ ಹಾಗೂ ಪ್ರೀತಿ, ಕ್ಷಮೆ ಮತ್ತು ವಿಮೋಚನೆಯ ಮೌಲ್ಯಗಳನ್ನು ಒತ್ತಿಹೇಳುತ್ತದೆ. ಇದು ಒಂದು ದುರಂತ ಘಟನೆಯನ್ನು ಸ್ಮರಿಸಿದರೂ, ಇದರ ಅಂತಿಮ ಸಂದೇಶವು ಭರವಸೆ ಮತ್ತು ನವಜೀವನದ್ದಾಗಿದೆ. ಈಸ್ಟರ್ ಹಬ್ಬದ ಸಂಭ್ರಮಕ್ಕೆ ಭಕ್ತರನ್ನು ಸಿದ್ಧಪಡಿಸುವಲ್ಲಿ ಗುಡ್ ಫ್ರೈಡೇ ಪ್ರಮುಖ ಪಾತ್ರ ವಹಿಸುತ್ತದೆ. ಜಗತ್ತಿನ ಜನರ ಬಾಳಿಗೆ ಬೆಳಕನ್ನು ತಂದ ಮಹಾ ಚೈತನ್ಯಗಳನ್ಜು ಇಂದು ಜಾತಿ-ಧರ್ಮಗಳಂತಹ
ಸಂಕುಚಿತ ಆಲೋಚನೆಗಳಿಂದ ನೋಡುವ ಮೂಲಕ ಅವರ ಬೋಧನೆಯ ಒಳಿತನ್ನು ಸ್ವೀಕರಿಸಲು ಸಾಧ್ಯವಿಲ್ಲದಂತೆ
ಬೇಲಿಗಳನ್ನು ಕಟ್ಟಿಕೊಂಡು ಜನರು ಚಿಕ್ಕವರಾಗುತ್ತಿರುವಂಥ ಈ ಸಂದರ್ಭದಲ್ಲಿ ಅಂತಹ ಎಲ್ಲ
ಬೇಲಿಗಳನ್ನೂ ಗೋಡೆಗಳನ್ನು ಕಿತ್ತುಹಾಕಿ ಜಗತ್ತಿನ ಒಳಿತಿಗಾಗಿ ಶ್ರಮಿಸಿದ ತ್ಯಾಗ ಬಲಿದಾನಗಳನ್ನು
ಮಾಡಿದ ಎಲ್ಲ ಮಹಾವ್ಯಕ್ತಿಗಳ ಜೀವನ ಮತ್ತು ಬೋಧನೆಗಳಿಂದ ಚೈತನ್ಯವನ್ನು ಪಡೆಯುವ ಕಡೆಗೆ ನಮ್ಮ ಜನರ
ಚಿತ್ತ ಹರಿಯುವಂತಾಗಲಿ. ಆ ಮೂಲಕ ಇಡೀ ಜಗತ್ತೇ ಸರ್ವಜನಾಂಗದ ಶಾಂತಿಯ ತೋಟವಾಗಲಿ.
*****
ಡಾ ರಾಜೇಂದ್ರ ಬುರಡಿಕಟ್ಟಿ
Friday, 03 April 2026




No comments:
Post a Comment