Wednesday, November 24, 2021

ನಾನೊಬ್ಳೇನಾ ಹೀಗೆ ರಜೆ ಹಾಕ್ತಿರೋದು?

 

 ರಜಾ ಸೌಲಭ್ಯಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ನೈತಿಕತೆ….

(ಶಿಕ್ಷಣದ ಕತೆಗಳು – 4)

ಸುಮಾರು ಇಪ್ಪತ್ತು ವರ್ಷಗಳ ಕಾಲ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿ ಕಾರ್ಯನಿರ್ವಹಿಸಿದ ನನಗೆ ಒಂದು ಕ್ರಮ ಅಭ್ಯಾಸವಾಗಿ ಹೋಗಿದೆ. ಅದೆಂದರೆ ನನ್ನ ಸ್ನೇಹಿತರು ಅಥವಾ ಜೊತೆಗೆ ಕೆಲಸ ಮಾಡುವವರು ಯಾರಾದರೂ ವೈದ್ಯಕೀಯ ರಜೆಯ ಮೇಲೆ ಹೋದರೆ ಮೂರುನಾಲ್ಕು ದಿನಗಳಿಗೊಮ್ಮೆ ಅವರಿಗೆ ಫೋನ್ ಮಾಡಿ, “ಹೇಗಿದ್ದೀರಿ? ಆರೋಗ್ಯ ಹೇಗಿದೆ?” ಎಂದು ಅವರ ಆರೋಗ್ಯ ವಿಚಾರಿಸಿಕೊಳ್ಳುವುದು. ಶಾಲೆಯ ಮುಖ್ಯಶಿಕ್ಷಕನಾಗಿದ್ದಾಗ ಶುರುವಾದ ಈ ಅಭ್ಯಾಸ (ಈ ಅಭ್ಯಾಸ ಕೆಟ್ಟದ್ದೊ ಒಳ್ಳೆಯದೋ ಎಂದು ಇನ್ನೂ ನನಗೆ ಸರಿಯಾಗಿ ಅರ್ಥವಾಗಿಲ್ಲ)  ಆ ಹುದ್ದೆಯಿಂದ ಹೊರಬಂದ ಮೇಲೂ ನನ್ನನ್ನು ಬಿಡುತ್ತಿಲ್ಲ. ಆಗ ನನ್ನ ಸಹಶಿಕ್ಷಕರಿಗೆ ರಜೆ ಸಿಗುವ ವ್ಯವಸ್ಥೆಮಾಡಿ ನನ್ನ ಕೆಲಸ ಮುಗಿಯಿತು ಎಂದು ಸುಮ್ಮನಿರದೆ ಅದರಾಚೆಯೂ ನಾನು ಹೀಗೆ ಆಗಾಗ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವ ಕ್ರಮ ಶಾಲಾ ಆಡಳಿತದ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಬೀರುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ಅಷ್ಟಲ್ಲದೇ ನನ್ನ ಬಗ್ಗೆ ಆ ಶಿಕ್ಷಕರಿಗೂ ಬಹಳಷ್ಟು ಗೌರವ ಭಾವನೆ ಉಂಟಾಗುತ್ತಿತ್ತು. ಸಂಬಂಧಗಳನ್ನು ವ್ಯಕ್ತಿಗತ ನೆಲೆಯಲ್ಲಿ ಗಟ್ಟಿಗೊಳಿಸಿ ವೃತ್ತಿಬದುಕಿಗೂ ಬಲವನ್ನು ಕೊಡುತ್ತಿತ್ತು. ಹತ್ತುದಿನ ರಜೆ ಹಾಕಿದವರು ಎಂಟು ದಿನಕ್ಕೇ ಶಾಲೆಗೆ ಬಂದದ್ದೂ ಇದೆ!

ಆದರೆ ಈಗ ಪರಿಸ್ಥಿತಿ ಯಾವ ಹಂತ ತಲುಪಿದೆ ಎಂಬುದನ್ನು ನನ್ನ ಅನುಭವಕ್ಕೆ ತಂದಿರುವ ಇತ್ತೀಚಿನ ಕೆಲವು ಘಟನೆಗಳು ನನ್ನ ಈ ವಾಡಿಕೆಯ ಕ್ರಮವನ್ನು ಬಿಟ್ಟುಬಿಡುವುದೇ ಒಳ್ಳೆಯದೇನೊ ಎಂದು ನಾನು ವಿಚಾರಿಸುವಂತೆ ಮಾಡಿವೆ. ಒಂದೆರಡು ಘಟನೆಗಳನ್ನು ಗಮನಸಿ. ಮೊನ್ನೆ ಇದ್ದಕ್ಕಿದ್ದಂತೆ ನನಗೆ ಪರಿಚಿತವಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ಯಾವುದೋ ಕೆಲಸದ ನಿಮಿತ್ತ ಫೋನ್ ಮಾಡಿ ಮಾತನಾಡುವಾಗ ತೀರಾ ಸಹಜವೆಂಬಂತೆ ಆ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ನನ್ನ ಸ್ನೇಹಿತೆರೊಬ್ಬರ ಬಗ್ಗೆ ಕೇಳಿ ಶಾಲೆಯಲ್ಲಿ ಇದ್ದಾರೆಯೇ ಎಂದು ಕೇಳಿದೆ. ಅವರು, “ಇಲ್ಲ. ಅವರ ಮಗಳಿಗೆ ಹುಷಾರಿಲ್ಲವಂತೆ ಹದಿನೈದು ದಿನ ರಜೆಹಾಕಿದ್ದಾರೆ” ಎಂದರು. 

ನನಗೆ ಸಹಜವಾಗಿ ಆತಂಕವಾಯಿತು. ತಕ್ಷಣ ಆ ಶಿಕ್ಷಕಿಗೆ ಫೋನ್ ಮಾಡಿ, “ಏನಾಗಿದೆ ಮಗುವಿಗೆ? ರಜೆ ಹಾಕಿದೆಯಂತಲ್ಲ. ಏನಾದರೂ ಸಹಾಯ ಬೇಕೆ? ನನಗೆ ಒಂದು ಮಾತು ಹೇಳಲಿಕ್ಕೆ ಆಗಲಿಲ್ಲವೇ?” ಎಂದು ಪ್ರೀತಿಯಿಂದ ದಬಾಯಿಸಿದೆ.” ನನ್ನ ಜೊತೆ ಮುಚ್ಚುಮರೆಯಿಲ್ಲದೆ ಮಾತನಾಡುವಷ್ಟು ಸಲುಗೆ ಇದ್ದ ಆಕೆ ಆ ಕಡೆಯಿಂದ ಫೋನಿನಲ್ಲಿ ಹೇಳಿದಳು, “ಏಯ್ ಏನೂ ಆಗಿಲ್ಲಪ್ಪ ಮಗಳಿಗೆ. ಅವ್ಳು ಚೆನ್ನಾಗಿದ್ದಾಳೆ. ಏನಾದ್ರೂ ಆಗಿದ್ರೆ ನಿನ್ಗೆ ಹೇಳ್ತಿರಲಿಲ್ಲವೇ? ಅವ್ಳು ಮನೆಯಲ್ಲಿ ಇಲ್ವಲ್ಲ. ರೆಸಿಡೆನ್ಸಿಯಲ್ ಸ್ಕೂಲಲ್ಲಿ ಓದ್ತಿದಾಳೆ. ಇನ್ನೊಂದೆರಡು ವರ್ಷಕ್ಕೆ ಅವಳಿಗೆ ಹದಿನೆಂಟು ವರ್ಷ ಆಗುತ್ತಲ್ಲ. ಶಿಶುಪಾಲನಾ ರಜೆ ಆಮೇಲೆ ಹಾಕಲಿಕ್ಕೆ ಬರಲ್ಲಲ. ಸುಮ್ನೆ ವೇಸ್ಟ್ ಆಗುತ್ತಲ್ಲ. ಅದನ್ನೂ ಎನೋ ವಾಪಸ್ ತಗೊಳ್ತಾರೆ ಅಂತಾ ಬೇರೆ ವಾಟ್ಸಪ್ನಲ್ಲಿ ಬರ್ತಿತ್ತು. ಅದ್ಕೆ ಸುಮ್ನೆ ಹಾಕಿದೆ.” ಅಂದರೆ ಯಾವುದೋ ಊರಿನಲ್ಲಿ `ಶಿಶು’ ಚೆಂದಾಗಿ ಶಾಲೆಗೆ ಹೋಗಿ ಪಾಠ ಕೇಳುತ್ತಿತ್ತು. ಈ ಊರಿನಲ್ಲಿ ಶಿಶುವಿನ ತಾಯಿ ಅದನ್ನು ಆರೈಕೆ ಮಾಡುವ ಕಾರಣ ಕೊಟ್ಟು ಶಾಲಾ ಮಕ್ಕಳಿಗೆ ಪಾಠಹೇಳುವ ಪವಿತ್ರ ಕಾರ್ಯವನ್ನು ಬಿಟ್ಟು ಕಾಲಕಳೆಯುತ್ತಿದ್ದರು!!  ನಾನು ಮುಂದೆ ಮಾತನಾಡಲು ಮನಸ್ಸಾಗದೆ ಫೋನ್ ಕಟ್ ಮಾಡಿದೆ.

ಇನ್ನೊಂದು ಘಟನೆಯಲ್ಲಿ ಶಿಕ್ಷಕರೊಬ್ಬರು ಮೆಡಿಕಲ್ ಲೀವ್ ಪಡೆದರೆಂದು ಕೇಳಿ ‘ಹುಂಬ’ನಾದ ನಾನು ಅವರಿಗೂ ಫೋನ್ ಮಾಡಿ ಆರೋಗ್ಯ ವಿಚಾರಿದೆ. ಅವರು, “ನನಗೆ ಏನೂ ಆಗಿಲ್ಲಣ. ಸೈಟ್ ತಗೊಂಡಿದ್ನಲ. ಮನೆ ಕಟ್ಟಿಸ್ತಿದೀನಿ. ಬೇರೆ ರಜೆ ಎಲ್ಲ ಖಾಲಿ ಆಗಿತ್ತು. ಅದ್ಕೆ ಮೆಡಿಕಲ್ ಲೀವ್ ಹಾಕಿದಿನಿ. ಮನೆ ಇನ್ನೇನು ಎರಡು ಮೂರು ತಿಂಗ್ಳಲ್ಲಿ ಮುಗಿಯುತ್ತೆ. ಎಲ್ಲ ಕುಟುಂಬ ಸಮೇತ ಗೃಹಪ್ರವೇಶಕ್ಕೆ ಬರ್ಬೇಕು” ಎಂದು ಆಗಲೇ ನನಗೆ ಆಮಂತ್ರಣ ನೀಡಿದರು.

ಆರಂಭದ ದಿನಗಳಲ್ಲಿ ನಾನು ಹೀಗೆ ವೈದ್ಯಕೀಯ ಕಾರಣ ಹೇಳಿ ರಜೆತೆಗೆದುಕೊಂಡವರಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದಾಗ ನನಗೆ ಧನ್ಯತೆಯ ಭಾವವೂ ಅವರಿಗೆ ಕೃತಜ್ಞತೆಯ ಭಾವವೂ ಉಂಟಾಗುತ್ತಿದ್ದವು. ಪರಸ್ಪರ ಗೌರವಗಳೂ ಹೆಚ್ಚುತ್ತಿದ್ದವು. ಬಾಂಧವ್ಯ ವೃದ್ಧಿಸುತ್ತಿತ್ತು. ಈಗ ಇದಕ್ಕೆ ತದ್ವಿರುದ್ಧವಾಗಿದೆ ಸ್ಥಿತಿ ಇದೆ. ಹೀಗೆ ನಾನು ಯಾರಿಗಾದರೂ ಫೋನ್ ಮಾಡಿದಾಗ ನಮ್ಮನ್ನು ಪರೀಕ್ಷೆ ಮಾಡ್ಲಿಕ್ಕೆ ಇವನು ಹೀಗೆ ಫೋನ್ ಮಾಡಿದ್ದಾನೆ’ ಎಂದು ಅವರು ತಿಳಿದುಕೊಳ್ಳುತ್ತಿದ್ದಾರೆ ಅಥವಾ ಅವರು ಹಾಗೆ ತಿಳಿದುಕೊಳ್ಳಬಹುದು ಎಂದು ನನಗೇ ಅನ್ನಿಸಿಬಿಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಎರಡು ಘಟನೆಗಳು ನೆನಪಿಗೆ ಬರುತ್ತಿವೆ:

ಹಬ್ಬದ ರಜೆಯನ್ನು ಆಸ್ಪತ್ರೆಗೆ ಬಳಸಲೊಪ್ಪದ ಆದರ್ಶ ಶಿಕ್ಷಕ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಅದೇ ಆಗ ನಾನು ಹೊಸದಾಗಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದೆ. ಮಲೆನಾಡಿನ ಹಳ್ಳಿಯೊಂದಕ್ಕೆ ನನ್ನನ್ನು ಹಾಕಲಾಗಿತ್ತು. ಆಗ ನಡೆದ ಒಂದು ಘಟನೆ ನನ್ನ ಇಡೀ ವೃತ್ತಿಬದುಕಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಆ ಘಟನೆ ಏನೆಂದರೆ ಒಂದು ದಿನ ಒಬ್ಬ ಶಿಕ್ಷಕರು ಒಂದು ಪರಿಮಿತ ರಜೆ (ಆರ್.ಎಚ್.) ಬೇಕೆಂದು ಅರ್ಜಿಕೊಟ್ಟರು. ಆ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರು ಒಂದು ದಿನ ಮೊದಲೇ ರಜೆಯನ್ನು ಮಂಜೂರು ಮಾಡಿದರು. ಸರಿ, ಆ ಶಿಕ್ಷಕರು ಮನೆಗೆ ಹೋದರು.  ಪರಿಮಿತ ರಜೆಗಳು ಸಾಮಾನ್ಯವಾಗಿ ಧಾರ್ಮಿಕ ಹಬ್ಬಗಳೊಂದಿಗೆ ನಂಟು ಹೊಂದಿರುತ್ತವೆ. ಭಾರತವು ಬಹುಸಂಸ್ಕೃತಿಯ ನಾಡಾಗಿರುವುದರಿಂದ ಮತ್ತು ಹಬ್ಬಗಳ ಸಂಖ್ಯೆ ತುಸು ಹೆಚ್ಚೇ ಇವೆ. ಎಲ್ಲ ರಜೆಗಳಿಗೂ ಸಾರ್ವತ್ರಿಕ ರಜೆಯನ್ನು ಕೊಡುವುದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಎಲ್ಲ ಹಬ್ಬಗಳನ್ನೂ ಎಲ್ಲರೂ ಮಾಡುವುದಿಲ್ಲವಾಗಿ ಹಾಗೆ ರಜೆ ಕೊಡುವ ಅವಶ್ಯಕತೆಯೂ ಇರುವುದಿಲ್ಲ. ಹೀಗಾಗಿ ಅವಶ್ಯವಿದ್ದವರು ಮಾತ್ರ ಬಳಸಿಕೊಳ್ಳಲು ಅನುಕೂಲವಾಗಲೆಂಬುದು ಈ ರಜೆಗಳ ನೀಡಿಕೆಯ ಉದ್ದೇಶ.

ಈ ರಜೆಯನ್ನು ಪಡೆದ ಶಿಕ್ಷಕರ ವಿಷಯದಲ್ಲಿ ಏನಾಯಿತು ಎಂದರೆ ಅದು ಡಿಸೆಂಬರ್ ತಿಂಗಳು. ಅಂದು ಪರಿಮಿತ ರಜೆ ಯಾವ ಹಬ್ಬಕ್ಕಾಗಿ ಇತ್ತೋ ಆ ಹಬ್ಬವನ್ನು ವಾಸ್ತವವಾಗಿ ಈ ಶಿಕ್ಷಕರ ಮನೆಯಲ್ಲಿ ಮಾತ್ರವಲ್ಲ ಅವರ ಸಮುದಾಯದವರು ಯಾರೂ ಮಾಡುತ್ತಿರಲಿಲ್ಲ. ಆದರೆ ಅವರ ಹತ್ತಿರದ ಸ್ನೇಹಿತನೊಬ್ಬ ಬೇರೆ ಧರ್ಮಕ್ಕೆ ಸೇರಿದವನಾಗಿದ್ದ. ಆತ ಈ ಶಿಕ್ಷಕರಿಗೆ ಒತ್ತಾಯ ಮಾಡಿ, “ನಿಮ್ಮಲ್ಲಿ ಹಬ್ಬ ಮಾಡುವುದಿಲ್ಲವಲ್ಲ. ದಯವಿಟ್ಟು ನಮ್ಮ ಮನೆಗೆ ಬನ್ನಿ. ಕೂಡಿ ಹಬ್ಬ ಮಾಡೋಣ” ಎಂದು ಆಮಂತ್ರಿಸಿದ್ದ. ಇವರಿಗೂ ಹೋಗಲು ಮನಸ್ಸಾಯಿತು. ಈಗಿನಂತೆ ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ನಾವು ನಮ್ಮ ಧರ್ಮಕ್ಕೆ ಕೊಡುವ ಗೌರವ ಎನ್ನುವ ಕೆಟ್ಟ ವಾತಾವರಣ ಆಗ ಇರಲಿಲ್ಲ. ಇನ್ನೊಂದು ಧರ್ಮದವರ ಹಬ್ಬಹರಿದಿನಗಳಲ್ಲಿ ಭಾಗವಹಿಸುವವರನ್ನು ಕೆಂಗಣ್ಣಿನಿಂದ ನೋಡುವ `ಧರ್ಮರಾಕ್ಷಸ’ರ ಹಾವಳಿಯೂ ಆಗ ಇರಲಿಲ್ಲ. ಜನ ಸಹಜವಾಗಿ ಬೆರೆಯುವ ವಾತಾವರಣವಿತ್ತು. ಹೀಗಾಗಿ ಈ ಶಿಕ್ಷಕರು ಆ ಹಬ್ಬಕ್ಕಾಗಿ ರಜೆಕೋರಿ ಅರ್ಜಿಕೊಟ್ಟು ರಜೆಪಡೆದು ಮನೆಗೆ ಬಂದರು.

ಆದರೆ ಮರುದಿನ ಬೆಳಿಗ್ಗೆ ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಒಂದು ಚಿಕ್ಕ ದುರ್ಘಟನೆ ನಡೆಯಿತು. ಬೆಳಿಗ್ಗೆ ಹೆಂಡತಿಗೆ ತೆಂಗಿನ ಕಾಯಿ ಸುಲಿದುಕೊಡಲು ಹೋದ ಈ ಶಿಕ್ಷಕರ ಕೈಗೆ ಕತ್ತಿ ತಗುಲಿ ಚಿಮ್ಮುವ ಗಾಯವಾಗಿಬಿಟ್ಟಿತು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಅವರು ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಮಾಡಿ ಆಸ್ಪತ್ರೆಗೆ ಹೋಗಿ ಕೈಗೆ ಸೂಕ್ತಚಿಕಿತ್ಸೆಮಾಡಿಸಿಕೊಂಡು ಬಂದು ಮನೆಯಲ್ಲಿ ವಿಶ್ರಾಂತಿ ಪಡೆದರು.

ಮರುದಿನ ಎಂದಿನಂತೆ ಶಾಲೆಗೆ ಬಂದ ಅವರು ಮುಖ್ಯಶಿಕ್ಷಕರಿಗೆ ಇನ್ನೊಂದು ಅರ್ಜಿಯನ್ನು ಕೊಟ್ಟರು. ಅದರಲ್ಲಿ ಅವರು ಹಿಂದಿನ ದಿನ ನಡೆದ ಘಟನೆಯ ವಿವರಗಳನ್ನು ತಿಳಿಸಿ ‘ಈ ಕಾರಣದಿಂದ ನಾನು ಯಾವ ಉದ್ದೇಶಕ್ಕಾಗಿ ಆರ್. ಎಚ್. ಪಡೆದಿದ್ದೆನೋ ಆ ಉದ್ದೇಶಕ್ಕಾಗಿ ಅದನ್ನು ನನ್ನ ಶಕ್ತಿಗೆ ಮೀರಿದ ಕಾರಣಕ್ಕಾಗಿ ಬಳಸಲು ಆಗಲಿಲ್ಲ. ಆದ್ದರಿಂದ ತಾವು ಮಂಜೂರು ಮಾಡಿರುವ ಆರ್.ಎಚ್. ಅನ್ನು ವಾಪಸ್ಸು ಪಡೆದು ಅದರ ಬದಲು ಒಂದು ಸಿ.ಎಲ್. (ಸಾಂದರ್ಭಿಕ ರಜೆ) ಮಂಜೂರು ಮಾಡಬೇಕಾಗಿ ವಿನಂತಿ’ ಎಂದು ಬರೆದಿದ್ದರು. ಇದನ್ನು ನೋಡಿದ ಮುಖ್ಯೋಪಾಧ್ಯಾಯರಿಗೆ ಇದು ವಿಚಿತ್ರವಾಗಿ ತೋರಿತು. ಅವರು ಮೊದಲು ಅವರು ಹಬ್ಬದ ಬದಲು ಆಸ್ಪತ್ರೆಗೆ ಹೋಗಬೇಕಾಗಿ ಬಂದದ್ದಕ್ಕೆ ಒಂದಿಷ್ಟು ವಿಷಾದವನ್ನು ವ್ಯಕ್ತಪಡಿಸಿ, “ಯಾವ ರಜೆ ಆದ್ರೆ ಏನು ಬಿಡಿ. ಅದೇನು ಸಮಸ್ಯೆಯಲ್ಲ. ಒಂದು ದಿನ ನೀವು ಇರ್ಲಿಲ್ಲ. ಅದಕ್ಕೆ ಒಂದು ದಿನ ರಜೆ ಪಡೆದಿದ್ದೀರಿ. ಅದಕ್ಕೆ ಮೊದಲು ಕೊಟ್ಟ ಪರಿವರ್ತಿತ ರಜೆಯೇ ಆಗುತ್ತೆ” ಎಂದರು.

ಬಹಳಷ್ಟು ಜನ ಮುಖ್ಯಶಿಕ್ಷಕರು ಅಥವಾ ಕಚೇರಿ ಮುಖ್ಯಸ್ಥರಿಗೆ ಇಷ್ಟೇ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಅವರಿಗೆ ತಾಂತ್ರಿಕ ಕಾರಣಗಳು ಮುಖ್ಯವಾಗುತ್ತವೆಯೇ ಹೊರತು ತಾತ್ವಿಕ ಕಾರಣಗಳಲ್ಲ. ಅವರ ಪ್ರಕಾರ ಆ ಶಿಕ್ಷಕರು ಒಂದು ದಿನ ಶಾಲೆಯಲ್ಲಿ ಇರಲಿಲ್ಲ. ಅದಕ್ಕೆ ಒಂದು ದಿನ ರಜೆಕೊಡಲಾಗಿದೆ. ಅಲ್ಲಿಗೆ ಆ ವಿಷಯ ಮುಗಿಯಿತು. ಅದನ್ನು ಬದಲಿಸುವುದು ಅನವಶ್ಯಕ. ಹಾಗಾಗಿಯೇ ಅವರು ಮುಂದುವರೆದು ಹೇಳಿದರು, “ಸಿ.ಎಲ್. ಉಳಿದರೆ ಇನ್ನೊಂದು ದಿನ ಬಳಸಿಕೊಳ್ಳಬಹದು. ಆದರೆ ಆರ್. ಎಚ್. ಉಳಿದ್ರೆ ಬಳಸಿಕೊಳ್ಳಲು ಬರುವುದಿಲ್ಲ. ಅದನ್ನು ಬಳಸಿಕೊಳ್ಳಲು ಇವತ್ತೇ ಕಡೇ ದಿನ”. ಆದರೆ ಈ ಶಿಕ್ಷಕರ ಮನಸ್ಸು ಒಪ್ಪಲಿಲ್ಲ. ಅವರ ಸಲಹೆಯನ್ನು ಈ ಶಿಕ್ಷಕರು ಗೌರವಯುತವಾಗಿ ನಿರಾಕರಿಸಿ ರಜೆ ಪರಿವರ್ತನೆಗೆ ಮತ್ತೆ ಕೇಳಿಕೊಂಡರು. ಇವರ ಒತ್ತಾಯಕ್ಕೆ ಮಣಿದು ಕೊನೆಗೂ ಮುಖ್ಯೋಪಾಧ್ಯಾಯರು, ಇವರಿಗೆ ಮಂಜೂರು ಮಾಡಿದ್ದ ಪರಿವರ್ತಿತ ರಜೆಯನ್ನು ಮರಳಿ ಪಡೆದು ಅದರ ಬದಲು ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದರು. ಈ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ತರಗತಿಯ ಪಾಠಕ್ಕೆ ತೆರಳಿದರು. ಮುಖ್ಯೋಪಾಧ್ಯಾಯರು ಹೇಳಿದಂತೆ ಅವರ ಪರಿವರ್ತಿತ ರಜೆ ಬಳಕೆಯಾಗದೇ ಹಾಗೇ ಉಳಿಯಿತು! ಆದರೆ ಆ ಶಿಕ್ಷಕರಿಗೆ ಅದು ನಮ್ಮ ಬಹಳಷ್ಟು ಜನ ಶಿಕ್ಷಕರಿಗೆ ಅನ್ನಿಸುವಂತೆ ‘ವೇಸ್ಟ್’ ಆಯಿತು ಅನ್ನಿಸಲಿಲ್ಲ. ಈ ಘಟನೆ ನನ್ನ ಇಡೀ ವೃತ್ತಿಜೀವನದಲ್ಲಿ ರಜೆಯನ್ನು ಹಾಕುವಾಗಲೆಲ್ಲ ನೆನಪಿಗೆ ಬರುತ್ತದೆ ಮಾತ್ರವಲ್ಲ ರಜೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ.

ನಾನೊಬ್ಳೇನಾ ಹೀಗೆ ರಜೆ ಹಾಕೋದು?

ಕನ್ನಡದ ಸೂಕ್ಷ್ಮಮನಸ್ಸಿನ ಸಂವೇದನಾಶೀಲ ಕಲಾವಿದ, ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ‘ಅವರವರ ಭಾವಕ್ಕೆ’ ಕೃತಿಯ ಲೇಖನವೊಂದರಲ್ಲಿ ಒಂದು ಮುಖ್ಯವಾದ ಘಟನೆಯನ್ನು ದಾಖಲಿಸುತ್ತಾರೆ. ಅವರು ಒಂದು ಸಲ ತಮ್ಮ ಸ್ನೇಹಿತನ ಮನೆಗೆ ಹೋಗುತ್ತಾರೆ. ಆ ಸ್ನೇಹಿತನ ಹೆಂಡತಿ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿದ್ದರು. ಇವರು ಹೋದಾಗ ಅವರು ತಮ್ಮ ಮನೆಯಲ್ಲಿ ತನ್ನ ಮಗನಿಗೆ ಪಾಠ ಮಾಡುತ್ತಿರುತ್ತಾರೆ. ಸಲಿಗೆಯಿದ್ದದ್ದರಿಂದ ಇವರು ಸಹಜವಾಗಿ, “ಇವತ್ತು ಶಾಲೆಯಿಲ್ಲವೇ?” ಎಂದು ಕೇಳುತ್ತಾರೆ, ಅದಕ್ಕೆ ಅವರು, “ಇದೆ ಮೆಡಿಕಲ್ ಲೀವ್ ಹಾಕಿದಿನಿ, ಮಗನಿಗೆ ಪಾಠ ಹೇಳಿಕೊಡಬೇಕಲ್ಲ” ಎನ್ನುತ್ತಾರೆ. “ಹಾಗಾದರೆ ಶಾಲೆಯಲ್ಲಿ ನಿಮ್ಮ ಬಳಿ ಕಲಿಯುವ ಮಕ್ಕಳ ಗತಿ” ಎಂದು ನಗುತ್ತ ಸ್ವಲ್ಪ ಸೀರಿಯಸ್ ಆಗಿಯೇ ಕೇಳುತ್ತಾರೆ. ಅದಕ್ಕೆ ಅವರು ಪ್ರಕಾಶ್ ರೈಗೆ ಶಾಕ್ ಹೊಡೆದಂತೆ ಉತ್ತರ ಕೊಡುತ್ತಾರೆ, “ಅದಕ್ಕೆ ನಾನೇನು ಮಾಡ್ಲಿ? ನಾನೊಬ್ಳೇನಾ ಹೀಗೆ ರಜಾ ತಗೋಳೋದು?”

ಇದನ್ನು ದಾಖಲಿಸಿ ಪ್ರಕಾಶ್ ರೈ ನಮ್ಮ ದೇಶದ ಬಹಳ ಮುಖ್ಯವಾದ, ಗಂಭೀರವಾದ ಸಮಸ್ಯೆಗಳಲ್ಲಿ ಇದೂ ಒಂದು ಎನ್ನುತ್ತಾರೆ. ಅವರೇ ಮುಂದುವರೆದು ಬರೆಯುತ್ತಾರೆ, “ಒಬ್ಬ ಗುರು ಹಲವು ಪರೀಕ್ಷೆಗಳನ್ನಿಟ್ಟು ಪ್ರತಿಭಾವಂತನಾದ ಒಬ್ಬನನ್ನು ಆಯ್ಕೆಮಾಡಿ ‘ಇವನೇ ನನ್ನ ಶಿಷ್ಯ’ ಎಂದು ಹೇಳುವ ಪ್ರಯತ್ನಕ್ಕಿಂತ, ಇಂಥವನೇ ನನ್ನ ಗುರು ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಆರಿಸುವ ಪಕ್ವತೆ ದೊಡ್ದದು.”

ಒಬ್ಬ ಶಿಕ್ಷಕರಿಗೆ ಹಬ್ಬಕ್ಕೆ ಎಂದು ರಜೆಪಡೆದು ಅದನ್ನು ಆಸ್ಪತ್ರೆಗೆ ಹೋಗಲು ಬಳಸಿಕೊಂಡದ್ದು ಎಷ್ಟರಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಎದುರಾಯಿತು. ಯೋಚಿಸಿ ನೋಡಿದಾಗ ಹಾಗೇ ಮಾಡುವುದು ‘ತಪ್ಪು’ ಅನ್ನಿಸಿತು. ಹಬ್ಬಕ್ಕಿಂತ ಆಸ್ಪತ್ರೆಗೆ ಹೋಗಿದ್ದು ಬಹಳ ಮುಖ್ಯವಾದ ಘಟನೆಯಾಗಿದ್ದರೂ ಅದು ಅವರಿಗೆ ಅಪರಾಧವಾಗಿ ಕಂಡಿತು! ಅವರು ತಮ್ಮ ಅಪರಾಧಿಪ್ರಜ್ಞೆಯಿಂದ ಹೊರಬರಲು ಮರುದಿನ ಶಾಲೆಗೆ ಬಂದು ತಾವು ಪಡೆದ ರಜೆಯನ್ನು ಪರಿವರ್ತಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನೊಬ್ಬರಿಗೆ ತಮಗೆ ಇಲ್ಲದ ಕಾಯಿಲೆಯನ್ನು ಸೃಷ್ಟಿಸಿಕೊಂಡು ರಜೆಪಡೆದದ್ದು ಅಪರಾಧವಾಗಿ ಕಾಣಲಿಲ್ಲ. ಮತ್ತೊಬ್ಬರಿಗೆ ಕಾರಣವೇ ಇಲ್ಲದೇ ರಜೆ ವೇಸ್ಟ್ ಆಗುತ್ತೆ ಅಂಥ ರಜೆಹಾಕಿ ಮನೆಯಲ್ಲಿ ಕುಳಿತುಕೊಳ್ಳುವುದು ತಪ್ಪಾಗಿ ಕಾಣಿಸಲಿಲ್ಲ….. ತಾವು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಇವರಲ್ಲಿ ಹುಟ್ಟಲೇ ಇಲ್ಲ.

ಹೌದು ಇವರೆಲ್ಲರೂ ನಮ್ಮ ‘ಗೌರವಾನ್ವಿತ’ ಶಿಕ್ಷಕರೆ. ನಮ್ಮ ಸಮಾಜವನ್ನು ದೇಶವನ್ನು ಕಟ್ಟಲು ಸ್ವಾರ್ಥರಹಿತ ಸೇವಾಮನೋಭಾವದ ಶಿಕ್ಷಕರ ಅವಶ್ಯಕತೆಯಿದೆ. ಅವರನ್ನು ಎಲ್ಲಿಂದ ತರುವುದು? ಇರುವವರನ್ನೇ ಸರಿಮಾಡುವ ಬಗೆ ಎಂಥದ್ದು. ಖಂಡಿತಾ ಇದು, ಬಲಪ್ರಯೋಗ, ಅಧಿಕಾರ ಮುಂತಾದವುಗಳಿಂದ ಆಗುವಂಥದ್ದಲ್ಲ. ಶಿಕ್ಷಕರ ಸಂಘಗಳು ಶಿಕ್ಷಕರಿಗೆ ರಜೆ ಕೊಡಿಸಲು ತೋರುವ ಉತ್ಸಾಹವನ್ನು ಮಿತಿಮೀರಿದ ಇಂತಹ ರಜೆಗಳಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಿ ಬದಲಿ ವ್ಯವಸ್ಥೆ ಮಾಡಿಸಲೂ ಉತ್ಸಾಹ ತೋರಿಸಬೇಕು. ಅದು ಅವುಗಳ ಜವಾಬ್ದಾರಿ ಕೂಡ ಹೌದು. ಆದರೆ ಅವು ಈ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿವೆ? ಇನ್ನು ಶಿಕ್ಷಕರಿಗೆ ತಮ್ಮದೇ ಆದ ಸಾಮಾಸಿಕ ಹೊಣೆಗಾರಿಕೆ ಇದೆ. ಅದನ್ನು ಅವರು ಮರೆಯಬಾರದು. ಇತರ ನೌಕರರಿಗೆ ತಮ್ಮನ್ನು ಅವರು ಹೋಲಿಸಿಕೊಳ್ಳಲೂ ಬಾರದು. ಏಕೆಂದರೆ ಈಗಲೂ  ನಮ್ಮ ಸಮಾಜದಲ್ಲಿ ಶಿಕ್ಷಕರೆಂದರೆ ಕೇವಲ ಸರ್ಕಾರಿ ನೌಕರರಲ್ಲ. ಸರ್ಕಾರ ಅವರಿಗೆ ಸಾವಿರ ಸೌಲಭ್ಯಗಳನ್ನು ಕೊಡಬಹುದು. ಆದರೆ ಅವುಗಳಲ್ಲಿ ಎಷ್ಟನ್ನು ಬಳಸಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸ್ವಯಂ ನ್ಯಾಯಾಧೀಶರಾಗಿ ಅವರು ತೀರ್ಮಾನಿಸಿಕೊಳ್ಳುವ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಬೇಕು.  ‘ಸಿಗುವ ಸೌಲಭ್ಯವನ್ನು ಯಾಕೆ ಬಿಡಬೇಕು’ ಎಂದು ಆಲೋಚಿಸುವುದು ಒಳ್ಳೆಯ ಶಿಕ್ಷಕರ ಲಕ್ಷಣವಲ್ಲ. ಪರೋಕ್ಷವಾಗಿ ಶಿಕ್ಷಕರು ರಜೆ ಹಾಕುವುದೇ ಅಪರಾಧ ಎಂದು ಬಿಂಬಿಸುವುದು ನನ್ನ ಮಾತಿನ ಅರ್ಥವಲ್ಲ. ಅವರಿಗೂ ಎಲ್ಲರಂತೆ ಒಂದು ಖಾಸಗೀ ಬದುಕೆಂಬುದು ಇರುತ್ತದೆ. ಆದರೆ ಒಂದು ದಿನ ರಜೆಹಾಕುವಾಗ ಐವತ್ತು ಮಕ್ಕಳಿಗೆ ಪಾಠ ಇಲ್ಲದಂತೆ ಆಗುತ್ತದೆಯಾದ್ದರಿಂದ ರಜೆ ಹಾಕುವ ಕಾರಣವೂ ಅಷ್ಟೊಂದು ಗಂಭೀರವಾಗಿರಬೇಕು ಎಂದು ಅವರಿಗೆ ಅನ್ನಿಸಬೇಕು.

ಯಾವಾಗ ಒಬ್ಬ ಶಿಕ್ಷಕನಿಗೋ ಶಿಕ್ಷಕಿಗೋ “ನನ್ನ ಒಂದು ಮಗುವಿಗೆ ಪಾಠಮಾಡಲಿಕ್ಕೆ ನನ್ನನ್ನು ನಂಬಿಕೊಂಡ ಐವತ್ತು ಮಕ್ಕಳಿಗೆ ಪಾಠಯಿಲ್ಲದಂತೆ ಮಾಡಿದೆ” ಎಂಬ ಭಾವನೆ ಉಂಟಾಗುತ್ತದೆಯೋ ಯಾವಾಗ ನನಗೆ ಒಂದು ಮನೆಯನ್ನು ಕಟ್ಟಿಕೊಳ್ಳಲು ದೇಶವನ್ನೇ ಕೆಡವುವ ಕೆಲಸ ಮಾಡುತ್ತಿದ್ದೇನೆ ಅನ್ನಿಸುವ ಭಾವನೆ ಉಂಟಾಗುತ್ತದೆಯೋ ಯಾವಾಗ ರಜೆ ವೇಸ್ಟ್ ಆಗುತ್ತದೆ ಎಂದು ಕಾರಣವೇ ಇಲ್ಲದೆ ರಜೆಹಾಕಿ ಕುಳಿತುಕೊಂಡು ತಿನ್ನುವ ಅನ್ನ ಪಾಪದ್ದು ಅನ್ನುವ ಭಾವನೆ ಉಂಟಾಗುತ್ತದೆಯೋ ಅಂದೇ ಆ ಶಿಕ್ಷಕ ಅಥವಾ ಶಿಕ್ಷಕಿಯ ವ್ಯಕ್ತಿತ್ವ ಮಾತ್ರವಲ್ಲ ಇಡೀ ದೇಶದ ಚಿತ್ರಣವೇ ಬದಲಾವಣೆಗೆ ಮುಖಮಾಡುತ್ತದೆ. ಹಾಗೆ ಆಗಲೆಂದು ನಾವೆಲ್ಲ ಆಶಿಸೋಣ…..

ಡಾ. ರಾಜೇಂದ್ರ ಬುರಡಿಕಟ್ಟಿ

Saturday, September 18, 2021

Tuesday, September 14, 2021

ತಮಿಳು ಮೂಲದ ಕನ್ನಡ ‘ಪ್ರೇ(ಮಿ)ಮ’ಕುಮಾರ್!

 

ತಮಿಳು ಮೂಲದ ಕನ್ನಡ ‘ಪ್ರೇ(ಮಿ)ಮ’ಕುಮಾರ್!


ಇವರು
ಆರ್. ಪ್ರೇಮ್ ಕುಮಾರ್. ನನ್ನ ಪ್ರಮುಖ ಲೇಖನಿಮಿತ್ರರಲ್ಲಿ ಒಬ್ಬರಾದ ತಮಿಳುನಾಡಿನ ಊಟಿ ಮೂಲದ ಈ ಪ್ರೇಮ್ ಕುಮಾರ್ ತಮ್ಮ ಸೇವೆಯನ್ನು ಆರಂಭಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಮುಂದೆ ಅಸ್ಸಾಂ, ಗುಜರಾತ್ ಗಳಲ್ಲಿ ಕೆಲಸಮಾಡಿ ಗಾಜನೂರು ನವೋದಯ ಪ್ರಿನ್ಸಿಪಾಲರಾಗಿ ಬಂದು ಏಳೆಂಟು ವರ್ಷ ಕೆಲಸಮಾಡಿ ಇದೀಗ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನವೋದಯ ವಿದ್ಯಾಲಯಕ್ಕೆ ವರ್ಗವಾಗಿದ್ದಾರೆ. ಅದರಲ್ಲಿ ಏನು ವಿಶೇಷ? ಅದನ್ನು ಇಲ್ಲಿ ಹೇಳುವ ಅವಶ್ಯಕತೆಯಾದರೂ ಏನು ಅನ್ನುವಿರಾ? ಕೇಳಿ. 

ಅವರ ಬಗ್ಗೆ ಇಲ್ಲಿ ಹೇಳಲು ಕಾರಣವಾಗಿದ್ದು ಅವರು ನಮ್ಮ ನಾಡು ನುಡಿ, ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಹೊಂದಿದ್ದ ಪ್ರೀತಿ ಮತ್ತು ಕಾಳಜಿ. ನಾವಿಬ್ಬರೂ ಏನನ್ನಾದರೂ ಮಾತನಾಡಬೇಕಾದಾಗ ನಾನು ಇಂಗ್ಲಿಷ್ ನಲ್ಲಿ ಪ್ರಶ್ನೆಕೇಳಿದರೆ ತಕ್ಷಣ ನನ್ನ ಕೆನ್ನೆಗೆ ಹೊಡೆದಂತೆ ಕನ್ನಡದಲ್ಲಿ ಉತ್ತರ ಕೊಡುತ್ತಿದ್ದ ಇವರು ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಆ ಭಾಷೆಯ ಸಾಹಿತ್ಯ ಓದು ಅವರಿಗೆ ಎಷ್ಟರಮಟ್ಟಿಗೆ ಇತ್ತೆಂದರೆ ಮಿಲ್ಟನ್ನನ್ನ ಮಹಾಕಾವ್ಯ ‘ಪ್ಯಾರಡೈಸ್ ಲಾಸ್ಟ್’ನ ಬಹುಮುಖ್ಯ ಭಾಗಗಳನ್ನು ಅರ್ಧರಾತ್ರಿಯಲ್ಲಿ ಎಬ್ಬಿಸಿ ಕೇಳಿದರೂ ಪಟಪಟ ಹೇಳುವಷ್ಟು, ವ್ಯಾಖ್ಯಾನಿಸುವಷ್ಟು!

ಪ್ರೇಮ್ ಕುಮಾರ್ ಒಬ್ಬ ಉತ್ತಮ ಆಡಳಿತಗಾರರಾಗಿದ್ದುದರ ಜೊತೆಗೆ ಒಬ್ಬ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವಂಥವರು.  ಒಬ್ಬ ಉತ್ತಮ ಭಾಷಣಕಾರರಾದ ಅವರು ತಮ್ಮ ಭಾಷಣಕ್ಕೆ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲವರು. ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಟಿಪ್ಪಣಿರೂಪದಲ್ಲಿ ಅವರು ಮಾಡುತ್ತಿದ್ದ ಭಾಷಣಶೈಲಿಯನ್ನು ನಾನು ಅನೇಕ ವೇಳೆ ಅಳವಡಿಸಿಕೊಂಡದ್ದಿದೆ.

ತಮಿಳಿಗಿಂತ ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಪ್ರಭುತ್ವ ಹೊಂದಿದ್ದ ಇವರು ತಮ್ಮ ಕವಿಮನಸ್ಸಿನ ಕಾರಣಕ್ಕೆ ನನಗೆ ಹತ್ತಿರವಾದವರು. ಇಂಗ್ಲಿಷಿನಲ್ಲಿ ಅವರು ಬರೆದಿದ್ದ ಹಲವು ಕವಿತೆಗಳಲ್ಲಿ ಇದ್ದ ಭಾವತೀವ್ರತೆ ನನ್ನನ್ನು ಅಚ್ಚರಿಗೊಳಿತ್ತು. ಅವುಗಳೆಲ್ಲವನ್ನು ಕೂಡಿಸಿ ಸಂಗ್ರಹವೊಂದನ್ನು ಹೊರತರಲು ನಾನು ಪದೇ ಪದೇ ಹೇಳುತ್ತಿದ್ದೆ. ನಾನು ಮತ್ತು ನನ್ನಂಥವರ ಒತ್ತಡದಿಂದ ಆ ಕೆಲಸವನ್ನು ಮಾಡಿ ಕಳೆದ ವರ್ಷ ಅವರು ಪ್ರಕಟಿಸಿದ ಮೊದಲ ಕೃತಿ ‘Love Beyond’ ಕವನ ಸಂಕಲನದ ಮೂಲಕ ಒಬ್ಬ ಒಳ್ಳೆಯ ಕವಿಯೆಂದು ಗುರುತಿಸಲ್ಪಟ್ಟವರು.

ನನ್ನನ್ನು ಇನ್ನೂ ಚಕಿತಗೊಳಿಸಿದ್ದು ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿದ್ದ ಪ್ರೀತಿ. ಕನ್ನಡದ ಬಹುಮುಖ್ಯ ಕೃತಿಗಳನ್ನು ಓದಬೇಕೆಂದು ಅವರು ಉತ್ಕಟ ಆಸೆ ಇಟ್ಟುಕೊಂಡಿದ್ದರು. ಆದರೆ ಭಾಷೆಯ ಕಾರಣಕ್ಕೆ ಅವರ ಆಸೆಯನ್ನು ನಾನು ಅವರ ಮಟ್ಟದಲ್ಲಿ ಪೂರೈಸಲು ಆಗಲಿಲ್ಲ.  ನಮ್ಮ ಕನ್ನಡ ಮೇಷ್ಟ್ರೇ ಓದದಿರುವ ಹಲವು ಮುಖ್ಯ ಕೃತಿಗಳನ್ನು ಅವರು ಓದಲು ನನಗೆ ಕೇಳುತ್ತಿದ್ದರು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಇಂಗ್ಲಿಷ್ ಆವೃತ್ತಿಯನ್ನು ನಾನು ಕೊಟ್ಟ ಹದಿನೈದು ದಿನಗಳೊಳಗೆ ಓದಿ ಅದರ ಬಗ್ಗೆ ಗಂಭೀರವಾದ ಚರ್ಚೆಯನ್ನು ಅವರು ನನ್ನೊಡನೆ ಮಾಡಿದ್ದರು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗವನ್ನು ನಾನು ಓದಲೇಬೇಕು ಎಂದು ಹಟಮಾಡಿ ನಾನು ಅದರ ಇಂಗ್ಲಿಷ್ ಆವೃತ್ತಿಯನ್ನು ಹುಡುಕಿಕೊಡುವವರೆಗೂ ನನ್ನ ಬಿಡದೆ ತರಿಸಿಕೊಂಡು ಓದಿದ್ದರು.

ಸ್ಥಳೀಯ ಭಾಷೆ ಸಂಸ್ಕೃತಿಗಳ ಬಗ್ಗೆ ತಕ್ಕಮಟ್ಟಿನ ಅರಿವು ಇಲ್ಲದಿದ್ದರೆ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತದೆ ಎಂದು ಸರಿಯಾಗಿ ಗುರುತಿಸಿದ್ದ ಇವರು ಗಾಜನೂರು ವಿದ್ಯಾಲಯದಲ್ಲಿ ಹನ್ನೊಂದು ಹನ್ನೆರಡನೆಯ ತರಗತಿಗಳಿಗೆ ಕನ್ನಡ ಅಧ್ಯಾಪಕರು ಇಲ್ಲದಿದ್ದಾಗ ಸ್ಥಳೀಯವಾಗಿ ಯಾರನ್ನಾದರೂ ವ್ಯವಸ್ಥೆಮಾಡಲು ನಮ್ಮನ್ನೆಲ್ಲ ಕಟ್ಟಿಕೊಂಡು ನಮಗಿಂತಲೂ ಹೆಚ್ಚು ಕಾಳಜಿವಹಿಸಿ ಗೋಳಾಡಿದ್ದರು!

ಅವರು ತನಿಖಾಧಿಕಾರಿಯಾಗಿ ಖಾಸಗೀ ಶಾಲೆಗಳಿಗೆ ಅದರಲ್ಲೂ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳಿಗೆ ಹೋದಾಗ, ಅದು ಬೆಂಗಳೂರು ಇರಲಿ, ಹೈದರಾಬಾದ್ ಇರಲಿ ವೆಲ್ಲೂರು ಇರಲಿ ಅವರು ಒತ್ತುಕೊಟ್ಟು ಗಮನಿಸುತ್ತಿದ್ದು, ಪ್ರಶ್ನೆಕೇಳುತ್ತಿದ್ದುದು ಆ ನೆಲದ ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಕ್ಕಮಟ್ಟಿನ ಜ್ಞಾನವಾದರೂ ಇದೆಯಾ ಎಂಬುದನ್ನು. ನಮ್ಮ ರಾಜ್ಯದ ಅನೇಕ ಖಾಸಗೀ ಶಾಲೆಗಳಿಗೆ ವಿಶೇಷವಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ಅವರು ಹೋಗಿ ಬಂದು ನನ್ನೊಡನೆ ಮಾತನಾಡುವಾಗ ಬಹಳಷ್ಟು ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯವೇ ಆಗುತ್ತಿಲ್ಲವೆಂದು ನೋವಿನಿಂದ ಹೇಳುತ್ತಿದ್ದರು. ಕೊನೆಯ ಪಕ್ಷ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿತಂದುಕೊಟ್ಟ ಸಾಹಿತಿಗಳ ಹೆಸರಾದರೂ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಅವರು ಕೇಳುವ ಪ್ರಶ್ನೆಗೆ ನಾನು ಅಪರಾಧಿಯಂತೆ ಸುಮ್ಮನೆ ಉತ್ತರ ಕೊಡಲಾಗದೆ ಕೂತದ್ದಿದೆ!


ಬಹುಶಃ ಇದೇ ಕಾರಣದಿಂದ ಇರಬೇಕು. ತಾವು ಪ್ರಾಚಾರ್ಯರಾಗಿರುವ ಶಾಲೆಯಲ್ಲಿ ಮಕ್ಕಳಿಗೆ ಈ ರೀತಿಯ ‘ಸಾಂಸ್ಕೃತಿಕ ಬಡತನ’ ಉಂಟಾಗದಂತೆ ಏನಾದರೂ ಮಾಡಬೇಕೆಂದು ಅವರು ಹವಣಿಸುತ್ತಲೆ ಇದ್ದರು. ಧಾರವಾಡದ ಬೇಂದ್ರೆ ಪ್ರತಿಷ್ಠಾನದಿಂದ ತಂಡವನ್ನು ಕರೆಸಿ, ಬೇಂದ್ರೇ ವೇಷಧಾರಿಯನ್ನು ನೋಡಿ, ಅವರ ಬಗ್ಗೆ ಉಪನ್ಯಾಸ ಕೇಳುವಂತೆ ಮಾಡಿ, ಅವರ ಹಾಡುಗಳನ್ನು ಸವಿಯುಂತೆ ಮಾಡಿ ಮಕ್ಕಳ ಮನಸ್ಸಿನಲ್ಲಿ ದ.ರಾ.ಬೇಂದ್ರೆ ಅಚ್ಚಳಿಯುವಂತೆ ಅವರು ಮಾಡಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಕುವೆಂಪು ಸೇರಿದಂತೆ ಪ್ರಮುಖ ಸಾಹಿತಿಗಳ ಬಗ್ಗೆ ಪರಿಚಯ ಕಾರ್ಯಕ್ರಮ ಮಾಡಲು ಅವರು ಬಹಳ ಉತ್ಸುಕರಾಗಿದ್ದು ಅವರ ವೇಗಕ್ಕೆ ತಕ್ಕಂತೆ ನಾವೇ ಕೆಲಸ ಮಾಡಲಿಲ್ಲವಾಗಿ ಅವುಗಳ ಬಹಳ ನಡೆಯಲು ಸಾಧ್ಯವಾಗಲಿಲ್ಲ.

ಅವರ ಕನ್ನಡದ ಕಾಳಜಿಯ ಕಾರ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ಬಹಳದಿನಗಳ ಕಾಲ ಉಳಿಯುವಂಥದ್ದು ಅವರು ಗಾಜನೂರಿನ ನವೋದಯ ವಿದ್ಯಾಲಯದ ಆವರಣದಲ್ಲಿ ರೂಪಿಸಿದ ‘Writers Memorial’. ವಿದ್ಯಾಲಯ ಆವರಣಕ್ಕೆ ಬರುವವರಿಗೆ ನಮ್ಮ ನೆಲದ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಬರುವಂತೆ ಏನನ್ನಾದರೂ ಮಾಡಬೇಕೆಂದು ಸದಾ ಯೋಚಿಸುತ್ತಿದ್ದ ಅವರು ನನ್ನ ಜೊತೆ ಹಲವು ಸಾರಿ ಚರ್ಚಿಸಿ ಈ ಯೋಜನೆಯನ್ನು ರೂಪಿಸಿದರು. ಅದಕ್ಕೆ ಬೇಕಾದ ಹಣಕಾಸಿಗಾಗಿ ಅವರು ಪಟ್ಟ ಕಷ್ಟ ಹೇಳತೀರದು. ಆದರೂ ಹಟಕ್ಕೆ ಬಿದ್ದು ಅದನ್ನು ಮುಗಿಸಿಯೇ ತೀರಬೇಕೆಂದು ಪಟ್ಟು ಹಿಡಿದು ಮುಗಿಸಿದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟೂ ಜನ ಸಾಹಿತಿಗಳ ಪುತ್ಥಳಿಗಳೂ ಸೇರಿದಂತೆ ಅನೇಕ ಆಕರ್ಷಕ ಅಂಶಗಳನ್ನು ಹೊಂದಿರುವ ಈ ಸ್ಥಳಕ್ಕೆ ‘ಪುಸ್ತಕಲೋಕ’ ಎಂದು ಹೆಸರನ್ನು ಕೊಡುವ ಭಾಗ್ಯ ನನಗೆ ಬಂದಿತು. ಈ ಪುಸ್ತಕ ಲೋಕವನ್ನು ರೂಪಿಸುವಲ್ಲಿ ಅವರೊಂದಿಗೆ ಕೈಜೋಡಿಸಿ ಅದನ್ನು ಆಗುಮಾಡಿದ ಗಾಜನೂರಿನ ನವೋದಯ ವಿದ್ಯಾಲಯದ ಅಧ್ಯಾಪಕರು ಮತ್ತು ಸಿಬ್ಬಂದಿ ಅದರಲ್ಲಿಯೂ ವಿಶೇಷವಾಗಿ ಅಲ್ಲಿನ ಕಲಾಶಿಕ್ಷಕರು (ಅವರೇ ಸ್ವತಃ ಇಲ್ಲಿನ ಜ್ಞಾನಪೀಠ ಪುರಸ್ಕೃತರ ಪುತ್ಥಳಿ ರೂಪಿಸಿದವರು) ಅಭಿನಂದನಾರ್ಹರು.

ಇಂತಹ ಸಾಹಿತ್ಯ ಸಂಸ್ಕೃತಿಗಳ ಒಡನಾಡಿ ಆರ್. ಪ್ರೇಮ್ ಕುಮಾರ್ ಇದೀಗ ಜವಾಬ್ದಾರಿ ವಹಿಸಿಕೊಂಡಿರುವ ಚಿಕ್ಕಮಗಳೂರು ನವೋದಯದಲ್ಲೂ ಇಂಥದೇ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿ.

ಅವರು ಗಾಜನೂರು ಬಿಡುವಾಗ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಸ್ಪೂರ್ತಿದಾಯಕ ‘ವಿದಾಯಭಾಷಣ’ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ…

https://youtu.be/juerreYmqws


ಡಾ. ರಾಜೇಂದ್ರ ಬುರಡಿಕಟ್ಟಿ

Tuesday, September 14, 2021

Saturday, August 14, 2021

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

 

ಹೀಗೆ ನಡೆದಿತ್ತು ನೋಡಿ ನಮ್ಮ ಮೊದಲ ಸ್ವಾತಂತ್ರ್ಯೋತ್ಸವ!

(ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಸಮಾರಂಭ ಹೇಗೆ ನಡೆಯಿತು? ಆಗಸ್ಟ್ ಹದಿನೈದೇ ಏಕೆ ನಿಗಧಿಯಾಯಿತು? ಹದಿನೈದರ ಬದಲು ಹದಿನಾಲ್ಕರ ರಾತ್ರಿ ಸಮಾರಂಭ ಏಕೆ ಆರಂಭವಾಯಿತು?  ಸಮಾರಂಭದಲ್ಲಿ ಆದ ಎಡವಟ್ಟುಗಳೇನು? ಇಂತಹ ಕೆಲವು ಕುತೂಹಲಕಾರಿ ಅಂಶಗಳಿಗಾಗಿ ಈ ಲೇಖನವನ್ನು ಗಮನಿಸಿ – ಡಾ. ರಾಜೇಂದ್ರ ಬುರಡಿಕಟ್ಟಿ)

*****


1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ ದೇಶಭಕ್ತ ಭಾರತೀಯರು ಇದಕ್ಕೂ ಹದಿನೇಳು ವರ್ಷ ಮುಂಚೆಯೇ ಪ್ರಥಮ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದರು……. 1930 ರ ಜನವರಿಯ ಕೊನೆಯ ಭಾನುವಾರ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕೆಂದು ಗೊತ್ತುಪಡಿಸುವ ಠರಾವನ್ನು ಲಾಹೋರ್ ನಗರದಲ್ಲಿ ನಡೆದ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಪಾಸು ಮಾಡಲಾಯಿತು. ಇಲ್ಲಿಯೇ ಜವಾಹರ ಲಾಲ್ ನೆಹರು ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದದ್ದು……..

ಮಧ್ಯರಾತ್ರಿಯೇಕೆ?

1930ರ ನಂತರ, ಪ್ರತಿವರ್ಷ ಕಾಂಗ್ರೆಸ್ ಮನೋಧರ್ಮದ ಭಾರತೀಯರು ಜನವರಿ 26ರಂದು ಸ್ವಾತಂತ್ರ್ಯದಿನ ಆಚರಿಸಿದರು. ಬ್ರಿಟೀಷರು ಆಖೈರಾಗಿ ಉಪಖಂಡ ತ್ಯಜಿಸಿ ಹೋದಾಗ, ಅವರು ಅಧಿಕಾರ ಹಸ್ತಾಂತರಿಸಲು 1947 ಆಗಸ್ಟ್ 15 ರ ದಿನಾಂಕವನ್ನು ಆಯ್ಕೆಮಾಡಿಕೊಂಡರು. ಈ ತಾರೀಖನ್ನು ಆಯ್ಕೆ ಮಾಡಿದ್ದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಅದು, ಎರಡನೆಯ ಮಹಾಯುದ್ಧದಲ್ಲಿ ಜಪಾನಿಗಳು ಮಿತ್ರರಾಷ್ಟ್ರಗಳ ಪಡೆಗಳಿಗೆ ಶರಣಾಗತಿಯಾದುದರ ಎರಡನೆಯ ವಾರ್ಷಿಕ ದಿನವಾಗಿತ್ತು. ಇನ್ನು ಕೆಲವರು 1948ರ ಜನವರಿ 26 ರಂದು ಅಧಿಕಾರ ಹಸ್ತಾಂತರವಾಗಬೇಕೆಂದು ಬಯಸಿದರು. ಆದರೆ ಮೌಂಟ್ ಬ್ಯಾಟನ್ ಮತ್ತು ಅಧಿಕಾರ ಸ್ವೀಕಾರಕ್ಕೆ ಕಾಯುತ್ತಿದ್ದ ರಾಜಕಾರಣಿಗಳು ಅಧಿಕಾರ ಹಸ್ತಾಂತರವನ್ನು ವಿಳಂಬಗೊಳಿಸಲು ಒಪ್ಪಲಿಲ್ಲ.

ಹೀಗೆ, ರಾಷ್ಟ್ರೀಯ ಭಾವನೆಗಿಂತ, ಸಾಮ್ರಾಜ್ಯಶಾಹಿಯ ಹಮ್ಮು-ಪ್ರತಿಷ್ಠೆಗಳನ್ನು ಅನುರಣಿಸಿದ ದಿನ ಸ್ವಾತಂತ್ರ್ಯ ಕೊನೆಗೂ ಬಂತು. ಆಗಸ್ಟ್ 15 ಮಂಗಳಕರ ದಿನವಲ್ಲವೆಂದು ಜ್ಯೋತಿಷಿಗಳು ಕಟ್ಟಳೆ ಮಾಡಿದ್ದರು. ಆದ್ದರಿಂದ 14ರಂದೇ


ಸಂಭ್ರಮಾಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಹೊಸ ಸಂವಿಧಾನ ರಚಿಸಲು ಭಾರತೀಯ ಪ್ರತಿನಿಧಿಗಳನ್ನೊಳಗೊಂಡಿದ್ದ ಸಂವಿಧಾನ ರಚನಾ ಸಭೆಯ ವಿಶೇಷ ಅಧಿವೇಶನವನ್ನು 14ರಂದೇ ನಡೆಸುವುದರೊಂದಿಗೆ ಸ್ವಾತಂತ್ರ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

ಹಿಂದಿನ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಲೆಜಿಸ್ಲೆಟಿವ್ ಕೌನ್ಸಿಲ್ ಅಧಿವೇಶನ ನಡೆಯುತ್ತಿದ್ದ ಎತ್ತರದ ಗುಮ್ಮಟದ ಸಭಾಂಗಣದಲ್ಲಿ ಸಮಾರಂಭ ಏರ್ಪಾಡಾಗಿತ್ತು. ಉಜ್ವಲ ದೀಪಗಳಿಂದ ಬೆಳಗುತ್ತಿದ್ದ ಸಭಾಂಗಣ ಬಾವುಟಗಳಿಂದ ಅಲಂಕೃತಗೊಂಡಿತ್ತು. ಹಿಂದಿನ ವಾರ ಬ್ರಿಟಿಷ್ ವೈಸ್ ರಾಯ್ ಗಳ ಭಾವಚಿತ್ರಗಳಿದ್ದ ಫೋಟೋ ಫ್ರೇಮ್ ಗಳಲ್ಲಿ ಬಾವುಟಗಳು ರಾರಾಜಿಸುತ್ತಿದ್ದವು. ರಾಷ್ಟ್ರಭಕ್ತಿಗೀತೆ ‘ವಂದೇ ಮಾತರಂ’ ಗಾಯನದೊಂದಿಗೆ ರಾತ್ರಿ 11 ಗಂಟೆಗೆ ಸಮಾರಂಭದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾರತದೊಳಗೆ ಹಾಗೂ ಬೇರೆಡೆ ಪ್ರಾಣಾರ್ಪಣೆ ಮಾಡಿದವರಿಗೆ” ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಭಾರತೀಯ ನಾರಿಯರ ಪರವಾಗಿ ರಾಷ್ಟ್ರಧ್ವಜವನ್ನು ಪ್ರದಾನಮಾಡುವುದರೊಂದಿಗೆ ಸಮಾರಂಭ ಮುಕ್ತಾಯಗೊಂಡಿತು….

ಸ್ತೋತ್ರಗೀತೆ ಮತ್ತು ರಾಷ್ಟ್ರಧ್ವಜ ಪ್ರದಾನಗಳ ಮಧ್ಯೆ ಭಾಷಣಗಳಾದವು. ಆ ರಾತ್ರಿ ಮೂವರು ಪ್ರಮುಖರು ಭಾಷಣ ಮಾಡಿದರು. ಒಬ್ಬರು, ಚೌಧುರಿ ಖಲೀಕ್ ಉಸ್ಮಾನ್, ಭಾರತದ ಮುಸ್ಲಿಮರ ಪ್ರತಿನಿಧಿಯಾಗಿ ಇವರನ್ನು ಆರಿಸಲಾಗಿತ್ತು. ಇವರು ಹೊಸದಾಗಿ ಸ್ವಾತಂತ್ರ್ಯಗೊಂಡ ಭಾರತ ದೇಶಕ್ಕೆ ಅಲ್ಪಸಂಖ್ಯಾತರ ನಿಷ್ಠೆಯನ್ನು ಯಥೋಚಿತವಾಗಿ ಘೋಷಿಸಿದರು. ಎರಡನೆಯವರು ತತ್ವಶಾಸ್ತ್ರಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್. ವಾಕ್ ಶಕ್ತಿ, ಪ್ರಾವೀಣ್ಯತೆ ಹಾಗೂ ಪೂರ್ವ-ಪಶ್ವಿಮಗಳನ್ನು ಹತ್ತಿರ ತರುವ ಗ್ರಂಥದ ಕರ್ತೃವಾದ್ದರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಡಚ್ಚರು ಇಂಡೋನೇಷ್ಯಾದಲ್ಲೆ ಉಳಿದಿದ್ದು, ಫ್ರೆಂಚರು ಇಂಡೋ ಚೀನಾದಿಂದ ಕಾಲ್ತೆಗೆಯಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ, ಭಾರತ ತ್ಯಜಿಸುವುದನ್ನು ಆಯ್ಕೆ ಮಾಡಿಕೊಂಡ ಬ್ರಿಟನ್ನಿನ ರಾಜಕೀಯ ವ್ಯವಹಾರಿಕ ವಿವೇಕ ಮತ್ತು ಎದೆಗಾರಿಕೆಯನ್ನು ರಾಧಾಕೃಷ್ಣನ್ ಪ್ರಶಂಸಿಸಿದರು.

ಅಂದಿನ ಭಾಷಣಕಾರರಲ್ಲಿ ತಾರಾ ಆಕರ್ಷಣೆಯೆಂದರೆ ಸ್ವತಂತ್ರ  ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್


ನೆಹರೂ.  ನೆಹರೂ ಆ ರಾತ್ರಿ ಭಾಷಣಕಾರರಲ್ಲಿ ಧ್ರುವತಾರೆಯಾಗಿದ್ದರು. ಅವರ ಭಾಷಣ ಭಾವತೀವ್ರತೆಯಿಂದಲೂ ವಾಗ್ಮಯ ಕಲೆಯಿಂದಲೂ ತುಂಬಿ ಶ್ರೀಮಂತವಾಗಿತ್ತು. ಆ ರಾತ್ರಿ ಅವರು ಆಡಿದ, “ಮಧ್ಯರಾತ್ರಿಯ ಘಂಟಾನಾದದ ಈ ಮುಹೂರ್ತದಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಜೀವಚೈತನ್ಯಕ್ಕೆ-ಸ್ವಾತಂತ್ರ್ಯಕ್ಕೆ ಕಣ್ತೆರೆಯುತ್ತಿದೆ.” ಈ ಮಾತುಗಳು ಅಂದಿನಿಂದ ವ್ಯಾಪಕವಾಗಿ ಉಲ್ಲೇಖಗೊಂಡವು. “ಈ ಮುಹೂರ್ತ ಇತಿಹಾಸದ ಅತ್ಯಪೂರ್ವ ಕ್ಷಣ, ನಾವು ಹಳೆಯದರಿಂದ ಹೊಸತಿಗೆ ಪಾದಾರ್ಪಣ ಮಾಡುತ್ತಿದ್ದೇವೆ, ರಾಷ್ಟ್ರಾತ್ಮ ಸುದೀರ್ಘಕಾಲ ತುಳಿತಕ್ಕೊಳಗಾಗಿದ್ದ ಯುಗಾಂತ್ಯಗೊಂಡು ವಾಕ್ ಶಕ್ತಿ ಪಡೆಯುತ್ತಿರುವ ಮುಹೂರ್ತವಿದು” ಎಂದು ನೆಹರೂ ಹೇಳಿದ್ದರು.

ಸಮಾರಂಭದಲ್ಲಾದ ಎಡವಟ್ಟು!

ಭಾರತದಲ್ಲಿ ಯಾವುದೇ ಒಂದು ಮಹತ್ವದ ಸಮಾರಂಭವೂ ಎಡವಟ್ಟು-ಅಚಾತುರ್ಯಗಳಿಲ್ಲದೆ ಮುಗಿಯುವುದಿಲ್ಲ. ಈ ಸಂದರ್ಭದಲ್ಲಿ ಆದ ಅಚಾತುರ್ಯ ಹೋಲಿಕೆಯಿಂದ ಸಣ್ಣದು. ಮಧ್ಯರಾತ್ರಿಯ ಅಧಿವೇಶನದ ನಂತರ ಜವಹರಲಾಲ್ ನೆಹರೂ ಅವರು ಗೌರ್ನರ್ ಜನರಲ್ ಅವರಿಗೆ ತಮ್ಮ ಸಂಪುಟದ ಸಚಿವರ ಪಟ್ಟಿ ಸಲ್ಲಿಸಲು ಧಾವಿಸಿದರು. ಅವರು ಗೌರ್ನರ್ ಜನರಲ್ ಅವರಿಗೆ ಖಾಲಿ ಲಕೋಟೆಯೊಂದನ್ನು ನೀಡಿದ್ದರು! ಆದರೆ ಪ್ರಮಾಣವಚನ ಸ್ವೀಕಾರದ ವೇಳೆಗೆ ಕಳೆದುಹೋಗಿದ್ದ ಕಾಗದದ ಚೂರು ಸಿಕ್ಕಿತು. ಪ್ರಧಾನಮಂತ್ರಿಯಲ್ಲದೆ, ಸಂಪುಟದಲ್ಲಿ ಹದಿಮೂರು ಮಂದಿ ಇತರೆ ಸಚಿವರುಗಳಿದ್ದರು. ಅವರಲ್ಲಿ ವಲ್ಲಭಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಆಜಾದ್ ರಂಥ ರಾಷ್ಟ್ರೀಯ ಅತಿರಥ ಮಹಾರಥ ನಾಯಕರುಗಳಿದ್ದರು. ಅಲ್ಲದೆ ಯುವ ಜನಾಂಗದ ನಾಲ್ವರು ಕಾಂಗ್ರೆಸ್ ರಾಜಕಾರಣಿಗಳೂ ಸೇರಿದ್ದರು.

ಸಂಪುಟದ ಸಚಿವರುಗಳ ಹೆಸರುಗಳಲ್ಲಿ ತುಂಬಾ ಗಮನಾರ್ಹವಾದವು ಕಾಂಗ್ರೆಸ್ ಪಕ್ಷದವರದಾಗಿರಲಿಲ್ಲ. ಸಂಪುಟದಲ್ಲಿ ವಾಣಿಜ್ಯ ಪ್ರಪಂಚ ಹಾಗೂ ಸಿಖ್ಖರ ಪ್ರತಿನಿಧಿಗಳಿದ್ದರು. ಉಳಿದ ಮೂವರು ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದವರು. ಇವರು, ಭಾರತದ ಅತ್ಯುತ್ತಮ ವಿತ್ತೀಯ ಬುದ್ಧಿವಂತರೆನ್ನಿಸಿಕೊಂಡ ಮದ್ರಾಸಿನ ವಣಿಕ ಮಹಾಶಯರಾದ ಆರ್. ಕೆ. ಷಣ್ಮುಖಂ ಚೆಟ್ಟಿ, ನ್ಯಾಯಶಾಸ್ತ್ರದ ಮೇಧಾವಿಗಳೂ ಜಾತಿಯಿಂದ ಅಸ್ಪೃಶ್ಯರೂ ಆದ ಬಿ.ಆರ್. ಅಂಬೇಡ್ಕರ್ ಮತ್ತು ಹಿಂದೂ ಮಹಾಸಭಾಗೆ ಸೇರಿದ ಬಂಗಾಳದ ಪ್ರಮುಖ ರಾಜಕಾರಣಿ ಶ್ಯಾಮ್ ಪ್ರಸಾದ್ ಮುಖರ್ಜಿ. ಕಾಂಗ್ರೇಸ್ಸಿಗರು ಬ್ರಿಟೀಷರ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಆಡಳಿತಗಾರರೊಂದಿಗೆ ಕೈಜೋಡಿಸಿದವರೂ ಇದ್ದರು. ಆದರೆ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಈಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬುದ್ಧಿವಂತಿಕೆಯಿಂದ ಪಕ್ಕಕ್ಕೆ ದೂಡಿದ್ದರು. ‘ಸ್ವಾತಂತ್ರ್ಯ ಬಂದಿರುವುದು ಭಾರತಕ್ಕೆ, ಕ್ರಾಂಗ್ರೆಸ್ಸಿಗೆ ಅಲ್ಲ’ ಎಂಬುದನ್ನು ನೆನಪಿಸುವ ಮೂಲಕ ಗಾಂಧೀಜಿಯವರು, ಪಕ್ಷಭೇದ ಮರೆತು ಸಮರ್ಥರನ್ನೊಳಗೊಂಡ ಸಂಪುಟವನ್ನು ಬರಚಿಸಬೇಕೆಂದು ಆಗ್ರಹಪಡಿಸಿದ್ದರು.

ಮೊದಲ ಮಂತ್ರಿಮಂಡಲ ರಾಜಕೀಯವಾಗಿಯಷ್ಟೇ ಅಲ್ಲದೆ, ಬೇರೆ ರೀತಿಯಿಂದಲೂ ವ್ಯಾಪಕ ಪ್ರಾತಿನಿಧ್ಯದಿಂದ ಕೂಡಿತ್ತು. ಮಂತ್ರಿಮಂಡಲದಲ್ಲಿ ಐದು ಪ್ರಮುಖ ಧರ್ಮಗಳವರಿದ್ದರು (ಸಾಕಷ್ಟು ಪ್ರಮಾಣದಲ್ಲಿ ನಿರೀಶ್ವರವಾದಿಗಳೂ ಇದ್ದರು) ಹಾಗೂ ಭಾರತದ ಎಲ್ಲ ಭಾಗಗಳವರೂ ಇದ್ದರು. ಇಬ್ಬರು ಅಸ್ಪೃಶ್ಯರಲ್ಲದೆ ಮಹಿಳಾ ಪ್ರತಿನಿಧಿಯೆಂಬಂತೆ ರಾಜಕುಮಾರಿ ಅಮೃತ ಕೌರ್ ಅವರೂ ಇದ್ದರು.

ಸಮಾರಂಭದ ಕಾರ್ಯಸೂಚಿ!

ಆಗಸ್ಟ್ 15 ರ ಕಾರ್ಯಸೂಚಿಯ ಮೊದಲ ವಿಷಯ, ಗೌರ್ನರ್ ಜನರಲ್ ಆಗಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಪ್ರಮಾಣವಚನ ಸ್ವೀಕಾರ. ಇವರು ಹಿಂದಿನ ರಾತ್ರಿಯವರೆಗೆ ಬ್ರಿಟಿಷರ ಕೊನೆಯ ವೈಸರಾಯ್ ಆಗಿದ್ದವರು. ಆ ದಿನ ಉಳಿದ ಕಾರ್ಯಕ್ರಮದ ಪಟ್ಟಿ ಹೀಗಿತ್ತು:

ಬೆಳಿಗ್ಗೆ 8.30 ಸರ್ಕಾರಿ ಭವನದಲ್ಲಿ ಗೌರ್ನರ್ ಜನರಲ್ ಹಾಗೂ ಸಚಿವರಿಂದ ಪ್ರಮಾಣ ವಚನ ಸ್ವೀಕಾರ.

ಬೆಳಿಗ್ಗೆ 9.40 – ಸಂವಿಧಾನ ರಚನಾ ಸಭೆಗೆ ಸಚಿವರ ಮೆರವಣಿಗೆ.

ಬೆಳಿಗ್ಗೆ 9.50 – ಸಂವಿಧಾನ ರಚನಾ ಸಭೆಗೆ ಗೌರ್ನರ್ ಜನರಲ್ ಆಗಮನ.

ಬೆಳಿಗ್ಗೆ 9.55 – ಗೌರ್ನರ್ ಜನರಲ್ ಅವರಿಗೆ ರಾಜೋಚಿತ ಗೌರವ ವಂದನೆ.

ಬೆಳಿಗ್ಗೆ 10.30 – ಸಂವಿಧಾನ ರಚನಾ ಸಭೆಯಲ್ಲಿ ಧ್ವಜಾರೋಹಣ

ಬೆಳಿಗ್ಗೆ 10.35 – ಸರ್ಕಾರಿ ಭವನಕ್ಕೆ ಗೌರ್ನರ್ ಜನರಲ್ ನಿರ್ಗಮನ.

ಸಂಜೆ 6.00 – ಇಂಡಿಯಾ ಗೇಟಿನಲ್ಲಿ ಧ್ವಜಾರೋಹಣ.

ಸಂಜೆ 7.00 – ದೀಪೋತ್ಸವ.

ಸಂಜೆ 7.45 – ಬಾಣ ಬಿರುಸುಗಳ ಪ್ರದರ್ಶನ.

ಸಂಜೆ 8.45 – ಸರ್ಕಾರಿ ಭವನದಲ್ಲಿ ಅಧಿಕೃತ ಭೋಜನಕೂಟ.

ರಾತ್ರಿ 10.15 – ಸರ್ಕಾರಿ ಭವನದಲ್ಲಿ ಉತ್ಸವ.

ನಿರ್ಗಮಿಸಿದ ಪ್ರಭುಗಳಂತೆ ಭಾರತೀಯರಿಗೂ ಅದ್ಧೂರಿ-ಆಡಂಬರದ ಸಮಾರಂಭಗಳು ಪ್ರಿಯವಾಗಿರುವಂತೆ ತೋರುತ್ತದೆ. ದೆಹಲಿ ಉದ್ದಗಲಗಳಲ್ಲಿ ಹಾಗೂ ಭಾರತದ ಇತರ ಭಾಗಗಳಲ್ಲಿ ಸರ್ಕಾರ ಮತ್ತು ಪ್ರಜೆಗಳು ಸ್ವಾತಂತ್ರ್ಯಾಗಮನವನ್ನು ಹರ್ಷೋಲ್ಲಾಸಗಳಿಂದ ಆಚರಿಸಿದರು. ರಾಜಧಾನಿಯೊಂದರಲ್ಲೇ ಮುನ್ನೂರು ಧ್ವಜಾರೋಹಣ ಸಮಾರಂಭಗಳು ನಡೆದುದಾಗಿ ವರದಿಯಾಗಿದೆ. ರಾಷ್ಟ್ರದ ವಾಣಿಜ್ಯ ಕೇಂದ್ರವಾದ ಮುಂಬಯಿಯಲ್ಲಿ ನಗರದ ಮೇಯರ್ ಭವ್ಯ ತಾಜ್ ಮಹಲ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸಿದ್ದರು. ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಕಾಶಿಯಲ್ಲಿ ದೇವಾಲಯವೊಂದರಲ್ಲಿ, ಗಮನಾರ್ಹವಾಗಿ ಮುಸ್ಲಿಮನೊಬ್ಬನಿಂದ ರಾಷ್ಟ್ರಧ್ವಜಾರೋಹಣ ನಡೆಯಿತು. …….

ಶಿಸ್ತಿನಿಂದ ಅಶಿಸ್ತಿನ ಕಡೆಗೆ…

1930ರ ಜನವರಿ 26 ರಂದು ಅದ್ಭುತವಾಗಿ ಆಚರಿಸಲಾದ ಮೊದಲ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ, ನೆಹರೂ ಹೇಳಿರುವಂತೆ, ಭಾಗವಹಿಸಿದವರು ಶಿಸ್ತುಗಾಂಭೀರ್ಯಗಳಿಂದ ಆಜ್ಞಾನುವರ್ತಿಗಳಾಗಿದ್ದರು. ಆದರೆ 1947ರಲ್ಲಿ, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂದಾಗ ಭಾವನೆಗಳ ಅಭಿವ್ಯಕ್ತಿ, ಪ್ರದರ್ಶನಗಳು ಅತ್ಯಂತ ಸಹಜವಾಗಿದ್ದವು. ವಿದೇಶಿಯೊಬ್ಬರನ್ನು ಉಲ್ಲೇಖಿಸಿ ಹೇಳುವುದಾದರೆ, “ ನಗರಗಳ ನಂತರ ನಗರಗಳಲ್ಲಿ ಉತ್ಸಾಹಭರಿತ ಜನಸಮುದಾಯ, ಅನೇಕ ವರ್ಷಗಳಿಂದ ಅದುಮಿಟ್ಟಿದ್ದ ಹತಾಶೆಗಳು ಕಟ್ಟೆಯೊಡೆದು ಬಂದಂತೆ ಮೋಜಿನಿಂದ, ಆಮೋದ-ಪ್ರಮೋದಗಳಿಂದ ಆಚರಿಸಿತು….. ಮನೆಗಳ ಮೇಲೆ ಕಟ್ಟಡಗಳ ಮೇಲೆ ಸಾಲು ಸಾಲಾಗಿ ನಿಶಾನೆಗಳು ಹಾರಾಡಿದವು. ಕಾರುಗಳ ಮೇಲೆ ಬೈಸಿಕಲ್ಲುಗಳ ಮೇಲೆ, ಮಕ್ಕಳು, ಹಾಲು ಹಸುಳೆಗಳ ಕೈಗಳಲ್ಲಿ ನಿಶಾನೆಗಳು ಹಾರಾಡಿದವು……

ಈ ಮಧ್ಯೆ ಸರ್ಕಾರಿ ಭವನದಲ್ಲಿ ಹೊಸ ಭಾರತೀಯ ಗೌರ್ನರ್ ನ ಪ್ರಮಾಣವಚನ ಸ್ವೀಕಾರ ನಡೆದಿತ್ತು…. “ಅರಮನೆಯ ತುಂಬ ಅನಧಿಕೃತ ವ್ಯಕ್ತಿಗಳೇ ತುಂಬಿದ್ದು, ಸಮಾರಂಭವು ಬ್ರಿಟೀಷರು ಭಾರತವನ್ನು ತ್ಯಜಿಸಿದ ನಂತರ ಭವಿಷ್ಯದ ದಿನಗಳಲ್ಲಿ ಬರಲಿರುವುದರ ಮುನ್ಸೂಚನೆಯಂತಿತ್ತು.”….

*****

ಡಾ. ರಾಜೇಂದ್ರ ಬುರಡಿಕಟ್ಟಿ

15-08-2021

{ಮೇಲಿನ ಲೇಖನವು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ India After Gandhi ಕೃತಿಯ ಕನ್ನಡ ಅನುವಾದವಾದ ‘ಬಾಪು ನಂತರದ ಭಾರತ’ (ಅನು:ಜಿ.ಎನ್. ರಂಗನಾಥ ರಾವ್) ಕೃತಿಯ ಮೊದಲ ಅಧ್ಯಾಯವಾದ  ‘ಸ್ವಾತಂತ್ರ್ಯ ಮತ್ತು ಪಿತೃಹತ್ಯೆ’ಯ ಆಯ್ದ ಈ ಭಾಗವಾಗಿದ್ದು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಮೂಲ ಲೇಖಕರಿಗೆ ಮತ್ತು ಅನುವಾದಕರಿಗೆ ಕೃತಜ್ಞನಾಗಿದ್ದೇನೆ. – ರಾಬು}

 

Friday, August 13, 2021

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

 

ಅಂಗಾಂಗ ದಾನ ಮತ್ತು ಜೀವಸಾರ್ಥಕತೆ

ನಮ್ಮಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಕೆಲವು ಆಚರಣೆಗಳ ದಿನಗಳು ಎರಡೆರಡಾಗಿ ಆಚರಿಸಲ್ಪಡುತ್ತಿವೆ. ಅವೆಂದರೆ ಶಿಕ್ಷಕ ದಿನ, ವಿಜ್ಞಾನ ದಿನ ಇತ್ಯಾದಿ. ಅವುಗಳಂತೆಯೇ ‘ಅಂಗಾಂಗ ದಾನದ ದಿನ’ ಕೂಡ ನಮ್ಮಲ್ಲಿ ಎರಡು ದಿನ ಆಚರಿಸಲ್ಪಡುವ ದಿನವಾಗಿದೆ. ಮೊದಲನೆಯದಾಗಿ ಪ್ರತಿವರ್ಷ ಆಗಸ್ಟ್ 13ನ್ನು ‘ವಿಶ್ವ ಅಂಗಾಂಗ ದಾನದ ದಿನ’ (World Organ Donation Day) ಎಂದು ಆಚರಿಸಿದರೆ ಇದೇ ದಿನವನ್ನು ನಮ್ಮ ದೇಶದ ಮಟ್ಟದಲ್ಲಿ ಪ್ರತಿವರ್ಷ ನವೆಂಬರ್ 27 ರಂದು ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಅಂಗಾಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಮಾಡುವುದು ಈ ಆಚರಣೆಗಳ ಮುಖ್ಯವಾದ ಉದ್ದೇಶ. ಕಳೆದ ವರ್ಷ ಸರ್ಕಾರ “ನಿಮ್ಮ ಅಂಗಾಂಗಗಳನ್ನು ನಿಮ್ಮೊಂದಿಗೆ ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅವಶ್ಯಕತೆ ಇಲ್ಲಿಯೇ ಇದೆ ಎಂಬುದು ದೇವರಿಗೆ ಗೊತ್ತಿದೆ” ಎಂಬ ಧ್ಯೇಯವಾಕ್ಯದೊಂದಿಗೆ ಜನರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಂಗಾಂಗ ಕಸಿ (Organ Transplantation) ಯ ಇತಿಹಾಸ

ಆಧುನಿಕ ಪ್ರಪಂಚದಲ್ಲಿ ಅಂಗಾಗ ಕಸಿಯ ಮೂಲಕ ವೈಜ್ಞಾನಿಕವಾಗಿ ನಮ್ಮ ಜಗತ್ತು ಒಂದು ಮಹತ್ವದ ಮೈಲುಗಲ್ಲನ್ನು


ಮುಟ್ಟಿದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ. 1954 ರಲ್ಲಿ ಅಮೇರಿಕೆಯ ವೈದ್ಯವಿಜ್ಞಾನಿ ಡಾ. ಜೊಸೆಫ್ ಮೂರಿಯು ಮೊಟ್ಟಮೊದಲು ರಿಚರ್ಡ್ ಹ್ಯಾರಿಕ್ ಮತ್ತು ರೊನಾಲ್ಡ್ ಹ್ಯಾರಿಕ್ ಎಂಬ ಇಬ್ಬರು ಅವಳಿಗಳ ನಡುವೆ ಮೂತ್ರಕೋಶದ ಯಶಸ್ವಿ ಕಸಿಮಾಡುವುದರೊಂದಿಗೆ ಅಂಗಾಂಗ ಕಸಿಗೆ ವೈದ್ಯವಿಜ್ಞಾನದಲ್ಲಿ ಒಂದು ಮಹತ್ವದ ಅಡಿಗಲ್ಲು ಹಾಕಿದ. ಮನಶ್ಶಾಸ್ತ್ರದಲ್ಲಿ ಅನೇಕ ಮಹತ್ವದ ಜಾಗತಿಕ ಮಟ್ಟದ ಕೃತಿಗಳನ್ನೂ ಬರೆದಿರುವ ಈ ವಿಜ್ಞಾನಿಗೆ ಮುಂದೆ 1990 ರಲ್ಲಿ ಪ್ರತಿಷ್ಠಿತ ನೊಬೆಲ್ ಬಹುಮಾನವನ್ನು ನೀಡುವ ಮೂಲಕ ಜಗತ್ತು ಗೌರವಿಸಿತು. ಮೂರಿ ಮಾಡಿದ ಈ ಸಾಧನೆಯಿಂದಾಗಿ ಇಂದು ಜಗತ್ತಿನಾದ್ಯಂತ ಅಂಗಾಂಗ ಕಸಿ ವಿಭಿನ್ನ ಆಯಾಮಗಳಲ್ಲಿ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಅಂಗಾಗ ಕಸಿ

ಭಾರತದಲ್ಲಿ ಅಂಗಾಗ ಕಸಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ನಡೆದಿಲ್ಲವೆನ್ನಬಹುದು. ಅಂಗಾಗ ಕಸಿಯ ಸಾಧ್ಯತೆಯನ್ನು ನಾವು ಆರಂಭದಲ್ಲಿ ದುರುಪಯೋಗಪಡಿಸಿಕೊಂಡದ್ದೇ ಹೆಚ್ಚು. ಅನೇಕ ‘ಕಿಡ್ನಿವ್ಯಾಪಾರಗಳು’ ನಡೆಯತೊಡಗಿದಾಗ ಇದಕ್ಕೊಂದು ವ್ಯವಸ್ಥಿತ ಸಂಘಟಿತ ರೂಪರೇಷೆಗಳನ್ನು, ಕಾನೂನಾತ್ಮಕ ಚೌಕಟ್ಟನ್ನು ರೂಪಿಸುವ ಕೆಲಸಗಳು ನಮ್ಮಲದಲಿ ಆರಂಭವಾದವು.  ಈ ನಿಟ್ಟಿನಲ್ಲಿ ಭಾರತ ಸರ್ಕಾರವು 2011 ರಲ್ಲಿ ಜಾರಿಗೆ ತಂದ ಮಾನವ ಅಂಗಾಗ ಕಸಿ (ತಿದ್ದುಪಡಿ)ವಿಧೇಯಕ (Transplantation of Human Organ (Amendment) Bill 2011) ಒಂದು ಮಹತ್ವದ ಹೆಜ್ಜೆಯಾಯಿತು. ಈಗ ಈ ಕಾಯ್ದೆಯ ಅನ್ವಯ ಭಾರತದಲ್ಲಿಯ ಅಂಗಾಗ ಕಸಿಯ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರಮಟ್ಟದ


ಸಂಸ್ಥೆ ‘ನೊಟ್ಟೊ’ (National Organ and Tissue Transplant Organization –NOTTO) ಹೊತ್ತಿದೆ. ಈ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 1995 ರಿಂದ 2010 ವರೆಗಿನ 15 ವರ್ಷಗಳಲ್ಲಿ ಅಂಗಾಗಕಸಿಯ ಪ್ರಕರಣಗಳು ಯಾವ ವರ್ಷವೂ ಒಂದು ಸಾವಿರವನ್ನು ದಾಟಿಲ್ಲ! 2011 ರಲ್ಲಿ ಮೊಟ್ಟ ಮೊದಲ ಬಾರಿ ಸಾವಿರ ಗಡಿಯನ್ನು ದಾಟಿ ಇತ್ತೀಚೆಗೆ ಹೆಚ್ಚಾಗುತ್ತಿವೆಯಾದರೂ ಹೇಳಿಕೊಳ್ಳುವಂಥ ಪ್ರಗತಿ ಆಗಿಲ್ಲ. ಇನ್ನೊಂದು ವರದಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಕೇವಲ ಶೇ. 3 ರಷ್ಟು ಮಾತ್ರ ಅಂಗಾಗ ದಾನಿಗಳಿದ್ದಾರೆ! ಭಾರತದಲ್ಲಿ ಅದರ ಭಾಗವಾದ ಕರ್ನಾಟಕದಲ್ಲಿ ಕೂಡ ಅಂಗಾಗ ಕಸಿಗೆ ಬೇಡಿಕೆ ಸಲ್ಲಿಸಿ ಕಾಯುತ್ತಿರುವವರಲ್ಲಿ ಅತೀ ಹೆಚ್ಚು ಜನ ಮೂತ್ರಕೋಶಕ್ಕೆ ಬೇಡಿಕೆ ಸಲ್ಲಿಸಿದವರಿದ್ದರೆ ಎರಡನೆಯ ಸ್ಥಾನದಲ್ಲಿ ಲಿವರ್ ಗಾಗಿ ಬೇಡಿಕೆ ಸಲ್ಲಿಸಿದವರಿದ್ದಾರೆ. ಮೂರನೆಯ ಸ್ಥಾನದಲ್ಲಿ ಹೃದಯದವರಿದ್ದಾರೆ. ಕಸಿಮಾಡುವಿಕೆಯಲ್ಲಿಯೂ ಇವೇ ಮೂರು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವರೆಲ್ಲ ಕಾಯುವಿಕೆಯ ಸಾಲಿನಲ್ಲಿ ಹಾಗೇ ಇದ್ದಾರೆ…

ಇದಕ್ಕೆ ಕಾರಣ ಭಾರತೀಯರಾದ ನಮ್ಮ ಆಲೋಚನಾ ಕ್ರಮ. ಸತ್ತಮೇಲಿನ ಬದುಕಿನ ಬಗ್ಗೆ ಎಲ್ಲ ದೇಶಗಳಲ್ಲಿಯೂ ಎಲ್ಲ ಸಮಾಜಗಳಲ್ಲಿಯೂ ಹತ್ತು ಹಲವು ನಂಬಿಕೆಗಳಿವೆ. ಹಲವು ಧರ್ಮಗಳ ನಾಡಾಗಿರುವ  ಭಾರತದಲ್ಲಿ ಇವು ತುಸು ಹೆಚ್ಚೇ ಇವೆ. ಸತ್ತಮೇಲೆ ಶವವನ್ನು ಹೂಳಬೇಕೋ ಸುಡಬೇಕೋ ಇತ್ಯಾದಿ ಚರ್ಚೆಗಳು ನಮ್ಮಲ್ಲಿ ಮಹತ್ವ ಪಡೆದುಕೊಂಡಂತೆ ಇವೆರಡಕ್ಕಿಂತ ಭಿನ್ನವಾಗಿ ಯಾರಿಗಾದರೂ ಉಪಯುಕ್ತವಾದದ್ದನ್ನು ಏನನ್ನಾದರೂ  ಮಾಡಬಹುದೇ ಎಂಬ ಚರ್ಚೆ ನಡೆಯುವುದು ಅಪರೂಪ. ಈ ಕಾರಣದಿಂದ ನಮ್ಮಲ್ಲಿ ಅಂಗಾಗ ದಾನ ಮಾಡಲು ಮುಂದೆ ಬರುವವರ ಸಂಖ್ಯೆ ತುಂಬಾ ಕಡಿಮೆ. ನಮ್ಮ ದೇಶದಲ್ಲಿ ಅಪಘಾತ ಮತ್ತಿತರ ಕಾರಣಗಳಿಂದ ಸಾಯುತ್ತಿರುವ ಎಲ್ಲರ ಅಂಗಾಂಗಗಳನ್ನು ಪಡೆಯಲು ಸಾಧ್ಯವಾಗುವುದಾದರೆ ಅಂಗಾಗಗಳ ವೈಫಲ್ಯದಿಂದ ನರಳುತ್ತಿರುವ ಪ್ರಕರಣಗಳೇ ಇರುವುದಿಲ್ಲ. ಆದರೆ ಬಹಳಷ್ಟು ಜನರು ತಮ್ಮ ಧಾರ್ಮಿಕ ನಂಬಿಕೆಗಳಿಂದ ಹೊರಬಂದು ಒಂದಿಷ್ಟು ವೈಚಾರಿಕವಾಗಿ ವಿಚಾರಿಸಲು ತೊಡಗುತ್ತಿಲ್ಲವಾದ್ದರಿಂದ ಇದು ಇಂದಿಗೂ ಸಾಧ್ಯವಾಗಿಲ್ಲ.

ಖ್ಯಾತನಾಮರ ನಡೆಯ ಪ್ರಭಾವ

ಈ ನಿಟ್ಟಿನಲ್ಲಿ ಜನಪ್ರಿಯ ವ್ಯಕ್ತಿಗಳು (ಸೆಲಿಬ್ರಿಟಿಗಳು) ಅಂಗಾಗ ದಾನಕ್ಕೆ ಮುಂದೆ ಬಂದಾಗ ಅವು ವಿಪರೀತ ಸುದ್ಧಿಯಾಗಿ ಒಂದಿಷ್ಟು ಧನಾತ್ಮಕ ಪರಿಣಾಮ ಬೀರುವುದುಂಟು. ನಮ್ಮಲ್ಲಿ ರಾಷ್ಟ್ರಮಟ್ಟದ ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕರು ಅಂಗಾಗ ದಾನಮಾಡುವ ಮೂಲಕ ದಾನದ ವಾಗ್ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದರಲ್ಲಿ ಹಲವು ಕ್ಷೇತ್ರಗಳ ಖ್ಯಾತನಾಮರಿದ್ದಾರೆ. ಡಾ. ಮನಮೋಹನ್ ಸಿಂಗ್, ಅಮೀರ್ ಖಾನ್, ಐಶ್ವರ್ಯ ಬಚನ್, ಗೌತಮ್ ಗಂಭೀರ್, ನವಜ್ಯೋತ್ ಸಿಂಗ್ ಸಿದೂ, ರಜನಿಕಾಂತ್ ಜಯಪ್ರದಾ… ಹೀಗೆ ಒಂದಿಷ್ಟು ಹೆಸರುಗಳನ್ನು ಪಟ್ಟಿಮಾಡಬಹುದು. 


ಕರ್ನಾಟಕದಲ್ಲಿ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿ ಮೆದುಳು ನಿಷ್ಕ್ರೀಯಗೊಂಡು ನಮ್ಮನ್ನಗಲಿದ ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನದ ವಿಷಯವು ಅನೇಕ ಪತ್ರಿಕೆಗಳ ಮುಖಪುಟ ಸುದ್ಧಿಯಾಗಿ ಪ್ರಕಟವಾದಾಗ ಕರ್ನಾಟಕದಲ್ಲಿ ಅಂಗಾಂಗದಾನದಲ್ಲಿ ಒಂದಿಷ್ಟು ಅರಿವು ಉಂಟಾಯಿತು. ಅವರ ಕುಟುಂಬ ಅಂಗಾಂಗ ದಾನಕ್ಕೆ ತ್ವರಿತವಾಗಿ ಮಾಡಿದ ನಿರ್ಧಾರದಿಂದಾಗಿ ಕೆಲವರಿಗೆ ಜೀವಕೆಲಸ ಮಾನವೀಯ ಕೆಲಸವಾಯಿತು ಮಾತ್ರವಲ್ಲ ಅದು ಅಂಗಾಗ ದಾನದ ಅರಿವನ್ನು ವಿಸ್ತರಿಸಲೂ ನೆರವಾಯಿತು. ಸಂಚಾರಿ ವಿಜಯ್ ಅವರ ಪ್ರಕರಣದಿಂದಾಗಿ ಆ ಸಂದರ್ಭದಲ್ಲಿ ಕೇವಲ 20 ದಿನಗಳ ಅವಧಿಯಲ್ಲಿ ಸುಮಾರು 230 ಜನ ತಮ್ಮ ಅಂಗಾಂಗ ದಾನದ ಘೋಷಣೆಮಾಡಿ ನೋಂದಾಯಿಸಿಕೊಂಡಿದ್ದಾರೆಂಬುದು ಕರ್ನಾಟಕದಲ್ಲಿ ಅಂಗಾಗಕಸಿಯ ವ್ಯವಸ್ಥಿತಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯದ ಸೊಟ್ಟೊ (State Organ Transplant and Tissue Organization) ನ ಹೇಳಿಕೆ.

ಅಂಗಾಗ ಕಸಿ ಮತ್ತು ದಾನದ ಅರಿವಿನ ವಿಸ್ತಾರದ ಅಗತ್ಯ

ಅಂಗಾಗ ಕಸಿ ಎಂಬುದು ಆಧುನಿಕ ವೈದ್ಯವಿಜ್ಞಾನ ನಮಗೆ ನೀಡಿದ ಒಂದು ವರದಾನ. ಒಬ್ಬ ವ್ಯಕ್ತಿ ತನ್ನ ಸಾವಿನ ನಂತರ ತನಗೆ ಉಪಯೋಗಕ್ಕೆ ಬಾರದ ಆದರೆ ಇತರರಿಗೆ ಜೀವ ನೀಡಬಲ್ಲ ತನ್ನ ಅಂಗಳನ್ನು ಸುಟ್ಟುಹಾಕುವ ಮೂಲಕವೋ ಹೂತುಹಾಕುವ ಮೂಲಕವೋ ಅವನ್ನು ನಾಶಮಾಡದೆ ಅವನ್ನು ಇತರರಿಗೆ ದಾನಮಾಡುವ ಔದಾರ್ಯವನ್ನು ಬೆಳಸಿಕೊಳ್ಳಬೇಕು. ಇದರಿಂದ ಎಷ್ಟೋ ಜೀವಿಗಳಿಗೆ ನಾವು ಸತ್ತಮೇಲೆಯೂ ಉಪಕಾರ ಮಾಡಿದಂತಾಗುತ್ತದೆ. ಮೂತ್ರಕೋಶ ಮತ್ತು ಲಿವರ್ ಹೊರತು ಉಳಿದೆಲ್ಲ ಅಂಗಗಳ ದಾನವನ್ನು ವ್ಯಕ್ತಿಯ ಮರಣಾನಂತರವಷ್ಟೇ ಪಡೆಯಲಾಗುವುದರಿಂದ ನಮ್ಮ ಜನರು ತಮ್ಮ ಧಾರ್ಮಿಕ ನಂಬಿಕೆಗಳಾಚೆಗೆ ಬಂದು ಮಾನವೀಯ ನೆಲೆಯಲ್ಲಿ ಆಲೋಚಿಸಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಈ ಬಗ್ಗೆ ಅರಿವಿನ ವಿಸ್ತಾರ ಇಂದಿನ ತುರ್ತು ಅಗತ್ಯ. ಇದ್ದಾಗ ಯಾರು ಯಾರಿಗೆ ಎಷ್ಟು ಸಹಾಯಮಾಡಲು ಸಾಧ್ಯವಾಗುತ್ತದೆಯೋ. ಆದರೆ ಸತ್ತಮೇಲಂತೂ ಈ ಅಂಗಾಗ ದಾನದ ಮೂಲಕ ನಾವು ಖಂಡಿತಾ ಇತರರಿಗೆ ಅವರು ಮರೆಯಲಾರದಂತ ಸಹಾಯಮಾಡಬಹುದು.ಆ ಮೂಲಕ ನಮ್ಮ ಬದುಕ ಸಾರ್ಥಕತೆ ಪಡೆಯಬಹುದು. ಈ ಬಗ್ಗೆ ನಾವೆಲ್ಲರೂ ಆಲೋಚಿಸೋಣ.  

(ಅಂಗಾಂಗ ದಾನ ಮಾಡಲಿಚ್ಚಿಸುವವರು ಕರ್ನಾಟಕದಲ್ಲಿ ಸಂಪರ್ಕಿಸಬೇಕಾದ ಎರಡು ವೆಬ್ ವಿಳಾಸಗಳು:

1) NOTTO: https://notto.gov.in

2) SOTTO: https://www.jeevasarthakathe.karnataka.gov.in/Website/Home.aspx

*****

ಈ ದಿನದ ವಿಶೇಷ ಓದಿಗಾಗಿ ಅಂಗಾಂಗ ದಾನದ ಮಹತ್ವವನ್ನು ಸಾರುವ ನನ್ನ ಒಂದು ಗೀತೆ:

ಉಯಿಲು

ನನ್ನ ದೇಹವ ನೀವು ಸುಟ್ಟುಹಾಕಲು ಬೇಡಿ

ಸಾಯುವವು ಮರವೆರಡು ನನ್ನ ಚಿತೆಗೆ

ಹೂತುಹಾಕಲುಬೇಡಿ ನನ್ನನ್ನು ಭುವಿಯೊಳಗೆ

ಕೊಳೆತು ಹೋಗುವುದೆಲ್ಲ ನನ್ನ ಜೊತೆಗೆ


ಕಿತ್ತುಕೊಡಿ ಕುರುಡಂಗೆ ನನ್ನೆರಡು ಕಣ್ಣುಗಳ

ಕತ್ತಲೆಯ ಬದುಕಿಂಗೆ ಬೆಳಕು ಬರಲಿ

ಸುತ್ತುತ್ತ ಊರುಗಳ ಕರ್ಣದೋಷದ ಕಿವುಡ

ಹುಡುಕುತ್ತ ಬರಬಹುದು ಕಿವಿಗಳಿರಲಿ


ನಿಂತ ಹೃದಯವನೆ ನಡೆಸುವವರು ಬಂದಾರು

ನಿಂತ ಗಡಿಯಾರವನು ನಡೆಸುವಂತೆ

ಸಾಯುವವನೆದೆಯೊಳಗೆ ನನ್ನ ಹೃದಯವನಿಟ್ಟು

ಮಾಡಿಬಿಡಿ ಅವನುಸಿರು ಆಡುವಂತೆ


ಮುತ್ತುಗಳ ಬೆಲೆಯಂತೆ ಮೂತ್ರಕೋಶಗಳಿಂಗೆ

ಯಾತ್ರೆ ಮುಗಿದಿರಲವು ನನಗದೇಕೆ?

ಎತ್ತಿಹಾಕಿರಿ ಅವನು ಹಾಸಿಗೆಯಲಿರುವಂಗೆ

ಎದ್ದು ಬರಲಿ ಅವನು ನರಳಲೇಕೆ?


ಸತ್ತ ಕೂಡಲೆ ನೀವು ಮರೆತುಬಿಡಿ ನನ್ನನ್ನು

ಕಟ್ಟಹೋಗಲು ಬೇಡಿ ಗೋರಿ ನನಗೆ

ಗೋರಿಗಳ ಊರಲ್ಲಿ ದಾರಿ ಹುಡುಕುವುದು ಹೇಗೆ

ಬದುಕಿ ಬಾಳುವ ಜನರ ಪ್ರೀತಿ ಮನೆಗೆ


ಬರುವುದೆಲ್ಲವ ಬಳಸಿ ಉಳಿದುದನು ಬದಿಗಿರಿಸಿ

ಕೂಗಿ ಕರೆಯಿರಿ ಪ್ರಾಣಿ ಪಕ್ಷಿಗಳನು

ತಿಂದು ಸಂತಸ ಪಡಲಿ ಒಂದು ದಿನ ಅವು ಎಲ್ಲ

ಸಾರ್ಥಕವು ಆದೀತು ನನ್ನ ಬದುಕು!

*****

ಡಾ. ರಾಜೇಂದ್ರ ಬುರಡಿಕಟ್ಟಿ

(ವಿಶ್ವ ಅಂಗಾಂಗ ದಾನದ  ದಿನದ ಓದಿಗಾಗಿ ಹಿಂದೆಂದೋ ಬರೆದ ಒಂದು ಗೀತೆ…)

13-08-2021 (World Organ Donation Day)

 

Sunday, August 8, 2021

. ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!

ಈ ವಾರದ ಭಾವಗೀತೆ….. 

ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ!








ಎಂಥ ದಿವಸ ಬಂದುಬಿಟ್ಟವು ನನ್ನ ನಿನ್ನ ನಡುವೆ

ಅಕ್ಕಪಕ್ಕ ಕುಳಿತುಕೊಂಡರು ಮಾತನಾಡದಾದೆವು




ಎಲ್ಲೊ ದೂರ ಕಂಡರೂ ಮುಖವು ಅರಳುತಿದ್ದವು

ಮಾತುಗಳನು ಕೇಳಲು ಮನಸು ಕಾಯುತಿದ್ದವು

ಒಂದು ದಿವಸ ಕಾಣದಿದ್ದರೆ ಮಾತುಗಳನು ಆಡದಿದ್ದರೆ

ಮನಸು ಕುದಿಯುತಿದ್ದವು ನಮ್ಮ ಮನಸು ಕುದಿಯುತಿದ್ದವು…

ಎಂಥ ದಿವಸ ಬಂದುಬಿಟ್ಟವು..

 

ಈಗ ಎದುರು ಬಂದರೂ ಕಣ್ಣು ಕಣ್ಣು ಸೇರವು

ಮುಖದಿ ನಗೆಯ ಸೂಸಿ ನಾವು ಸುಖವ ಪಡೆಯದಾದೆವು

ಮಾತಿನಲ್ಲಿ ಸುರಿಯುತಿದ್ದ ಜೇನು ಬತ್ತಿತು

ಮಧ್ಯೆ ಬೆಟ್ಟ ಬೆಳೆಯಿತು ಮೌನದ ಬೆಟ್ಟ ಬೆಳೆಯಿತು

ಎಂಥ ದಿವಸ ಬಂದುಬಿಟ್ಟವು..

*****

ರಾಬು (08082021)