Saturday, October 10, 2026

ರಾಣಿ ಪದ್ಮಿನಿ: ಹೆಣ್ಣೊಬ್ಬಳ ಸೌಂದರ್ಯಕ್ಕೆ ರಾಜ್ಯವೊಂದರ ಪತನವಾದ ದುರಂತ ಕಥೆ!


ರಾಣಿ ಪದ್ಮಿನಿಯ ಹೆಸರನ್ನು ಯಾರು ತಾನೆ ಕೇಳಿಲ್ಲ! ಅಲ್ಪ ಸ್ವಲ್ಪ ಓದಿಕೊಂಡವರೆಲ್ಲರೂ ಅವಳ ಇಡೀ ಜೀವನ ಕಥೆಯನ್ನು ಕೇಳದೇ ಹೋಗಿದ್ದರೂ ಹೆಸರನ್ನಾದರೂ ಕೇಳಿಯೇ ಇರುತ್ತಾರೆ. ಏಕೆಂದರೆ ಇಡೀ ಮಧ್ಯಭಾರತದ ಇತಿಹಾಸದಲ್ಲಿ ಮಿಂಚುವ ಇಬ್ಬರು ಮಹಿಳೆಯರ ಹೆಸರುಗಳೆಂದರೆ ಒಂದು ʻನೂರ್‌ ಜಹಾನ್‌ ʼ ಇನ್ನೊಂದು ʻರಾಣಿ ಪದ್ಮಿನಿʼ. ಶಿವಾಜಿ ಗಣೇಶನ್‌ ಮತ್ತು ವೈಜಯಂತಿಮಾಲಾ ಅಭಿಯನದ ತಮಿಳು ಚಿತ್ರ, ʼಚಿತ್ತೂರು ರಾಣಿ ಪದ್ಮಿನಿʼ ಹಾಗೂ ಖ್ಯಾತ ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ ʼಪದ್ಮಾವತ್‌ʼ ಈ ರಾಣಿಯ ರೋಚಕ ಕಥೆಯನ್ನು ಸಾಮಾನ್ಯ ಜನತೆಗೆ ಮುಟ್ಟಿಸುವಲ್ಲಿ ಸಾಕಷ್ಟು ದೊಡ್ಡ ಪಾತ್ರವಹಿಸಿದವು ಎನ್ನಬಹುದು.

ಪದ್ಮಾವತಿ ಎಂದೂ ಕರೆಯಲ್ಪಡುವ ಪದ್ಮಿನಿ ಸಿಂಗಾಲದ ರಾಜ ಗಂದರ್ಭಸೇನ ಮತ್ತು ಚಂಪಾವತಿ ದಂಪತಿಗಳಿಗೆ ಮಗಳಾಗಿ ಹುಟ್ಟಿದವಳು. ಅಪೂರ್ವ ಸುಂದರಿ ಎಂದು ಹೆಸರಾದವಳು. ಬಾಲ್ಯದಲ್ಲಿಯೇ ಅವಳು ಮಾತನಾಡುವ ಗಿಳಿಯೊಂದನ್ನು ಹೊಂದಿದ್ದಳಂತೆ. ಅವಳು ಬೆಳೆದು ವಯಸ್ಸಿಗೆ ಬಂದಮೇಲೆ ಆ ಕಾಲದ ಪದ್ಧತಿಯಂತೆ ಅವಳ ತಂದೆ ಏರ್ಪಡಿಸಿದ್ದ ಸ್ವಯಂವರದಲ್ಲಿ ರಜಪೂತ ರಾಜ ರಾವಲ್‌ ರತನ್‌ ಸಿಂಗ್‌ ಈ ಅಪೂರ್ವ ಸುಂದರಿನ್ನು ಗೆದ್ದು ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಈಗಾಗಲೇ  ನಾಗಮತಿ ಎಂಬ ಹೆಂಡತಿಯನ್ನು ಹೊಂದಿದ್ದ ರತನ ಸಿಂಗ್ ಗೆ ಈ ಪದ್ಮಾವತಿ ಹೀಗೆ ಎರಡನೆಯ ಹೆಂಡತಿಯಾಗಿ ಚಿತ್ತೂರು ಅರಮನೆ ಸೇರುತ್ತಾಳೆ.

ಇವಳ ಗಂಡ ರಾವಲ್‌ ರತನ್‌ ಸಿಂಗ್‌ ಒಬ್ಬ ಶೂರ ರಾಜನಾಗಿದ್ದ ಮಾತ್ರವಲ್ಲ ಕಲೆ ಹಾಗೂ ಸಂಗೀತ ಪ್ರೇಮಿ ಕೂಡ ಆಗಿದ್ದ. ಹಾಗಾಗಿ ಅವನ ಆಸ್ಥಾನದಲ್ಲಿ ಅನೇಕ ಸಾಹಿತಿ ಮತ್ತು ಕಲಾವಿದರು ಇದ್ದರು. ಅವರಲ್ಲಿ ರಾಘವ ಚೇತನ ಎಂಬ ಸಂಗೀತಗಾರ ಕೂಡ ಇದ್ದ. ಒಳ್ಳೆಯ ಸಂಗೀತಗಾರನಾದ ಅವನಿಗೆ ವಾಮಾಚಾರ ಕೂಡ ಗೊತ್ತಿದ್ದು ತನ್ನ ಪ್ರತಿಭೆಯನ್ನು ವಾಮಾಚಾರಕ್ಕೆ ಬಳಸಿಕೊಳ್ಳುತ್ತಿರುತ್ತಾನೆ. ಇವನು ಹೀಗೆ ಮಾಡುವಾಗ ಒಂದು ಸಲ ರತನ್‌ ಸಿಂಗ್‌ನ ಕೈಗೆ ಸಿಕ್ಕಿಬಿದ್ದನೆಂದೂ ಅದರಿಂದ ಕೋಪಗೊಂಡ ರತನ್‌ ಸಿಂಗ್‌ ಅವನಿಗೆ ನೀಡಿದ್ದ ಎಲ್ಲ ಸ್ಥಾನಮಾನಗಳನ್ನೂ ಹಿಂದೆಪಡೆದನೆಂದೂ ಮಾತ್ರವಲ್ಲದೇ ಅವನ ಮುಖಕ್ಕೆ ಮಸಿಬಳಿದು ಕತ್ತೆಯ ಮೇಲೆ ಮೆರವಣಿಗೆ ಮಾಡಿ ರಾಜ್ಯದಿಂದ ಹೊರಗೆ ಹಾಕಿದನೆಂದೂ ಹೇಳಲಾಗುತ್ತದೆ. ಸ್ವತಃ ರಾಜನೇ ಆ ಕೆಲಸಕ್ಕಾಗಿ ಅಂದರೆ ಶತ್ರುಗಳ ನಾಶಕ್ಕಾಗಿ ಅವನನ್ನು ತನ್ನ ರಾಜ್ಯಕ್ಕೆ ಕರೆತಂದಿದ್ದನೆಂದೂ ಹೇಳಲಾಗುತ್ತದೆ.

ಅದೇನೆ ಇದ್ದರೂ ಒಟ್ಟಿನಲ್ಲಿ ಅವನನ್ನು ಅವಮಾನ ಮಾಡಿ ರಾಜ್ಯದಿಂದ ಹೊರಹಾಕುವ ಒಂದು ಎಡವಟ್ಟು ಕೆಲಸದ ಮೂಲಕ ರಾಜ ರತನ್ ಸಿಂಗ್‌ ತಾನು ಎಂದೆಂದೂ ಎದುರಿಸಿ ಸೋಲಿಸಲಾಗದ ಒಬ್ಬ ದೊಡ್ಡ ಶತ್ರುವನ್ನು ಗಳಿಸಿಕೊಂಡುಬಿಡುತ್ತಾನೆ ಮತ್ತು ಆಮೂಲಕ ತಾನು ತನ್ನ ಪರಿವಾರ ಅಷ್ಟೇ ಏಕೆ ತನ್ನ ರಾಜ್ಯವೇ ಇನ್ನಿಲ್ಲದಂತೆ ಹಾಳಾಗಲು ಆಮಂತ್ರಣ ಸ್ವೀಕರಿಸಿಬಿಡುತ್ತಾನೆ!

ಖಿಲ್ಜಿಯ ಕಣ್ಣಿಗೆ ಬಿದ್ದ ಸುಂದರಿ

ಅದು ಹೇಗೆ ಎಂದರೆ ಆ ಕಾಲಘಟ್ಟದಲ್ಲಿ ವಾಯುವ್ಯ ಭಾರತದ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ರಾಜ್ಯಗಳನ್ನು ಸ್ಥಾಪಿಸಿದ ದಾಳಿಕೋರರು ದೆಹಲಿಯಲ್ಲಿ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಆ ಸಂದರ್ಭದಲ್ಲಿ ಸುತ್ತ ಮುತ್ತಲ ರಾಜರನ್ನು ಸೋಲಿಸಿ ರಾಜ್ಯ ವಿಸ್ತರಿಸುತ್ತಿದ್ದವನು ದೆಹಲಿ ಸುಲ್ತಾನರ ರಾಜ ಅಲ್ಲಾ ಉದ್ದೀನ್‌ ಖಿಲ್ಜಿ. ರಾವಲ್‌ ರತನ್‌ಸಿಂಗ್‌ ಅವನಿಂದ ಅವಮಾನಿಸಲ್ಪಟ್ಟು ರಾಜ್ಯದಿಂದ ಹೊರಹಾಕಲ್ಪಟ್ಟ ರಾಘವ ಚೇತನ  ದೆಹಲಿ ಕಡೆ ಹೋಗಿ ಅಲ್ಲಾವುದ್ದೀನ್‌ ಖಿಲ್ಜಿಯ ಪಾಳೆಯವನ್ನು ಸೇರಿಬಿಡುತ್ತಾನೆ.

ಒಂದು ಸಲ ಅಲ್ಲಾವುದ್ದೀನ್‌ ಖಿಲ್ಜಿ ಬೇಟೆಗೆಂದು ಕಾಡಿಗೆ ಬರುವ ಸಂದರ್ಭವನ್ನು ಕಾದು ಅವನ ಗಮನ ಸೆಳೆಯಲು ಅಲ್ಲಿ ತನ್ನ ಸಂಗೀತ ಆರಂಭಿಸಿ ಅವನ ಕಿವಿಗೆ ಆ ಸಂಗೀತ ಬೀಳುವಂತೆ ಮಾಡುತ್ತಾನೆ ಈ ರಾಘವ ಚೇತನ! ಇದು ಅಲ್ಲಾವುದ್ದೀನ್‌ ಕಿವಿಗೆ ಬಿದ್ದು ಅವನು ಯಾರೆಂದು ನೋಡಿ ಕರೆತರಲು ತನ್ನ ಬಂಟರಿಗೆ ಆಜ್ಞಾಪಿಸುತ್ತಾನೆ. ಅವರು ಅವನನ್ನು ಹಿಡಿದು ತಂದು ರಾಜನ ಎದುರು ನಿಲ್ಲಿಸಿದಾಗ ಅವನ ಸಂಗೀತ ತನಗೆ ಇಷ್ಟವಾಗಿದೆಯೆಂದೂ ಅರಮನೆಗೆ ಬಂದಿರಲು ಖಿಲ್ಜಿ ಅವನಿಗೆ ಹೇಳುತ್ತಾನೆ.


ಆಗ  ರಾಘವ ಚೇತನ, “ಜಗತ್ತಿನಲ್ಲಿ ಪಡೆಯಬೇಕಾದ ಅನೇಕ ಸುಂದರ ವಸ್ತುಗಳಿದ್ದೂ ತನ್ನಂತಹ ಸಾಮಾನ್ಯ ಸಂಗೀತಗಾರನನ್ನು ಪಡೆಯಲು ಏಕೆ ಇಚ್ಚಿಸುತ್ತೀರಿ ರಾಜಾ?” ಎಂದು ಮಾರ್ಮಿಕವಾಗಿ ಕೇಳುತ್ತಾನೆ.  ಒಗಟಿನಂತಹ ತನ್ನ ಮಾತಿನ ಅರ್ಥವನ್ನು ಬಿಡಿಸಿ ಹೇಳಲು ಖಿಲ್ಜಿ ಕೇಳಿದಾಗ ಈ ರಾಘವ ಚೇತನ ಖಿಲ್ಜಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಳುತ್ತಾನೆ. ಅವಳಂತಹ ಅಪೂರ್ವ ಸುಂದರಿ ಜಗತ್ತಿನಲ್ಲಿಯೇ ಇರಲಿಕ್ಕಿಲ್ಲ ಎಂದು ಖಿಲ್ಜಿಗೆ ಅವಳ ಬಗ್ಗೆ ಆಸೆ ಹುಟ್ಟುವಂತೆ ಮಾಡುತ್ತಾನೆ. ಎಲ್ಲ ರಾಜರಿಗಿಂತ ತುಸು ಹೆಚ್ಚೇ ಹೆಣ್ಣುಬಾಕನಾಗಿದ್ದ ಖಿಲ್ಜಿ ಅಷ್ಟೊಂದು ಸುಂದರಿಯಾದ ಹೆಣ್ಣು ತನ್ನ ಅಂತಃಪುರದಲ್ಲಿರಲೇಬೇಕು ಎಂದು ಬಯಸುತ್ತಾನೆ. ಅವಳನ್ನು ಪಡೆಯಲು ಅಲ್ಲಿಂದಲೇ ಅವನು ತನ್ನ ಕೆಲಸ ಆರಂಭಿಸುತ್ತಾನೆ.

ಮೋಸದ ಬಲೆಯಲ್ಲಿ ಬಿದ್ದ ಚಿತ್ತೂರು ರಾಜ

ಆದರೆ ಸ್ವತಃ ಶೌರ್ಯಕ್ಕೆ ಹೆಸರಾದ ರಜಪೂತರ ಕೋಟೆ ಸಾಕಷ್ಟು ಸುರಕ್ಷಿತವಾಗಿದ್ದು ಅದನ್ನು ಅಷ್ಟುಸುಲಭವಾಗಿ ಭೇದಿಸುವುದು ಅಸಾಧ್ಯವೆಂದು ಮನದಟ್ಟಾದ ಖಿಲ್ಜಿ ಕುಟಿಲ ಉಪಾಯವೊಂದನ್ನು ಹೆಣೆಯುತ್ತಾನೆ. ರಾಣಿ ಪದ್ಮಿನಿಯು ತನ್ನ ಸಹೋದರಿ ಇದ್ದಂತೆ ಅವಳ ಮುಖವನ್ನೊಮ್ಮೆ ನೋಡಲು ತಾನು ಇಚ್ಚಿಸುವುದಾಗಿ ರಜಪೂತ ರಾಜನಿಗೆ ಸಂದೇಶ ಕಳಿಸುತ್ತಾನೆ. ಬಲಾಡ್ಯ ಶತ್ರುವೊಬ್ಬನನ್ನು ಮಿತ್ರನನ್ನಾಗಿ ಮಾಡಿಕೊಳ್ಳುವ ರಾಜತಂತ್ರದ ಭಾಗವಾಗಿ  ರತನ್‌ ಸಿಂಗ್‌ ತನ್ನ ಹೆಂಡತಿಯ ಮನವೊಲಿಸಿ ಇದಕ್ಕೆ ಖಿಲ್ಜಿಗೆ ಒಪ್ಪಿಗೆ ಸೂಚಿಸುತ್ತಾನೆ.

ಹೀಗೆ ಸಿಕ್ಕ ಒಪ್ಪಿಗೆಯಿಂದ ತನ್ನ ಆಪ್ತರಕ್ಷಕರ ಜೊತೆಗೆ ಮೇವಾಡ್‌ ರಾಜ್ಯದ ಚಿತ್ತೂರಿಗೆ ಬರುವ ಖಿಲ್ಜಿಗೆ ಸುಂದರ ರಾಣಿ ಎಂದೆ ಹೆಸರಾದ ಪದ್ಮಿನಿ ತನ್ನ ಮುಖವನ್ನು ತೋರಿಸುತ್ತಾಳೆ; ಆದರೆ ನೇರವಾಗಿ ಅಲ್ಲ; ಬದಲಾಗಿ ಕನ್ನಡಿಯಲ್ಲಿ! ಹೀಗೆ ಕನ್ನಡಿಯಲ್ಲಿ ಅವಳ ಮುಖನೋಡಿ ಖಿಲ್ಜಿ ಮರಳಿ ದೆಹಲಿಕಡೆ ಹೊರಡುತ್ತಾನೆ. ಸ್ನೇಹದ ನೆಪದಲ್ಲಿ ಬಂದಿದ್ದ ಖಿಲ್ಜಿಯ ಆಪ್ತರಕ್ಷಕ ಪಡೆ ಕೋಟೆಯ ಆಯಕಟ್ಟಿನ ಜಾಗೆಗಳನ್ನು ಸೂಕ್ಷ್ಮವಾಗಿ ಯಾರಿಗೂ ಗೊತ್ತಾಗದಂತೆ ಪರಿಶೀಲಿಸುತ್ತಲೇ ಹೋಗುತ್ತದೆ. ಇದು ಸ್ನೇಹದ ಭೇಟಿ ಆಗಿದ್ದರಿಂದ ಖಿಲ್ಜಿಯ ಪಡೆಯನ್ನು ಬೀಳ್ಕೊಡಲು ರಾಜ ರಾವಲ ರತನ್‌ ಸಿಂಗ್‌ ತನ್ನ ರಾಜಧಾನಿಯಿಂದ ಒಂದಿಷ್ಟು ದೂರದವರೆಗೆ ಅವರೊಡನೆ ಹೋಗುತ್ತಾನೆ. ಆದರೆ ತನ್ನನ್ನು ಹೀಗೆ ಬೀಳ್ಕೊಡಲು ಬಂದ ರಾಜ ರತನ್‌ಸಿಂಗ್‌ನನ್ನು ಖಿಲ್ಜಿ ರಾಜ್ಯದ ಹೊರವಲಯದಲ್ಲಿ ಬಂಧಿಸಿಬಿಡುತ್ತಾನೆ. ಅವನನ್ನು ಬಂಧನದಿಂದ ಮುಕ್ತಗೊಳಿಸಲು ಪದ್ಮಿನಿಯನ್ನು ತನಗೆ ಕೊಡಬೇಕೆಂಬ ಬೇಡಿಕೆ ಇಡುತ್ತಾನೆ.

ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ರತನ್‌ಸಿಂಗ ಇದಕ್ಕೆ ಒಪ್ಪಿಗೆ ಸೂಚಿಸಿ ತನ್ನ ಆಪ್ತರನ್ನು ಸುದ್ಧಿ ಮುಟ್ಟಿಸಲು ರಾಜಧಾನಿಗೆ ಕಳಿಸುತ್ತಾನೆ. ಈ ಸುದ್ಧಿ ರಾಜಧಾನಿಗೆ ತಲುಪಿದ ಮೇಲೆ ಅಲ್ಲಿಂದ ಸುಮಾರು ನೂರಾ ಐವತ್ತು ದೋಲಿಗಳು ಹೊರಡುತ್ತವೆ. (ದೋಲಿ ಎಂದರೆ ರಾಜಮನೆತನದ ಹೆಣ್ಣುಮಕ್ಕಳನ್ನು ಕರೆದೊಯ್ಯಲು ಬಳಸುತ್ತಿದ್ದ ಸುತ್ತಲೂ ಪರದೆ ಇರುವ ಪಲ್ಲಕ್ಕಿ- ಆಗ ಪರದಾ ಪದ್ಧತಿ ಇದ್ದ ಕಾರಣ). ಈ ನೂರಾ ಐವತ್ತು ದೋಲಿಗಳು ರಾಜನನ್ನು ಬಂಧಿಸಲ್ಪಟ್ಟಿದ್ದ ರಾಜ್ಯದ ಹೊರವಲಯಕ್ಕೆ ಬರುತ್ತಿದ್ದಂತೆಯೇ ರಾಜ ರತನ್‌ಸಿಂಗ್‌ ತುಂಬಾ ಮುಜುಗರಕ್ಕೆ ಒಳಗಾಗುತ್ತಾನೆ. ತನ್ನ ಬಿಡುಗಡೆಗಾಗಿ ತನ್ನ ಸುಂದರ ರಾಣಿ ಮತ್ತು ರಾಜಪರಿವಾರದ ಹೆಂಗಸರನ್ನು ಬೇರೆಯವರಿಗೆ ಕೊಡುವುದು ಯಾವ ರಾಜನಿಗೆ ತಾನೆ ಮುಜುಗರ ಉಂಟು ಮಾಡುವುದಿಲ್ಲ…


ಆದರೆ ಇಲ್ಲೊಂದು ವಿಚಿತ್ರ ಘಟನೆ ಸಂಭವಿಸುತ್ತದೆ. ಆ ದೋಲಿಗಳು ಬಂದ ನಂತರ ಅವುಗಳನ್ನು ಸ್ವಾಗತಿಸಲು ಹೋದ ಅಲ್ಲಾವುದ್ದೀನ್‌ ಖಿಲ್ಜಿಯ ಆಪ್ತಪಡೆಗೆ ಕಂಡದ್ದು ರಾಣಿ ಪದ್ಮಿನಿ ಮತ್ತು ಅರಮನೆಯ ಹೆಂಗಸರು ಅಲ್ಲ! ಬದಲಾಗಿ ದೋಲಿಯೊಳಗೆ ಶಸ್ತ್ರಸಜ್ಜಿತವಾಗಿದ್ದ ರಜಪೂತ ಸೈನಿಕರು! ತಕ್ಷಣ ಅವರು ಅಲ್ಲಾವುದ್ದೀನ್‌ ಖಿಲ್ಜಿಯ ಪಡೆಯ ಮೇಲೆ ಎರಗಿ ತಮ್ಮ ರಾಜನನ್ನು ಬಿಡಿಸಿಕೊಂಡು ರಾಜಧಾನಿಗೆ ಮರಳುವಲ್ಲಿ ಯಶಸ್ವಿಯಾಗುತ್ತಾರೆ. ಸ್ನೇಹದ ಭೇಟಿಗಾಗಿ ಬಂದಿದ್ದರಿಂದ ಅಲ್ಲಾವುದ್ದೀನ್‌ ದೊಡ್ಡ ಸೈನ್ಯವನ್ನೇನೂ ತನ್ನ ಜೊತೆಗೆ ತಂದಿರಲಿಲ್ಲವಾದ್ದರಿಂದ ಅವನನ್ನು ಹಿಮ್ಮೆಟ್ಟಿಸಲು ರಜಪೂತ ಸೈನ್ಯಕ್ಕೆ ಸಾಧ್ಯವಾಗುತ್ತದೆ.

ತುಳಿಸಿಕೊಂಡ ಹಾವಾದ ಖಿಲ್ಜಿ!

ಹೀಗೆ ಪದ್ಮಿನಿಯನ್ನು ಪಡೆಯುವ ಪ್ರಥಮ ಯತ್ನದಲ್ಲಿ ಸೋತ ಅಲ್ಲಾ ಉದ್ದೀನ್‌ ಖಿಲ್ಜಿ ತುಳಿಸಿಕೊಂಡ ಹಾವಿನಂತಾಗುತ್ತಾನೆ. ಏನೇ ಆದರೂ ಸರಿ ಪದ್ಮಿನಿಯನ್ನು ಪಡೆಯಲೇ ಬೇಕು ಎಂಬ ಛಲಕ್ಕೆ ನಿಲ್ಲುತ್ತಾನೆ. ಸಮಯ ಸಾಧಿಸಿ ತನ್ನ ವಿಶಾಲಪಡೆಯೊಂದಿಗೆ ಚಿತ್ತೂರು ಕೋಟೆಗೆ ಮುತ್ತಿಗೆ ಹಾಕುತ್ತಾನೆ. ಕೋಟೆಗೆ ಆಹಾರ ಮುಂತಾದ ಅವಶ್ಯಕ ಸಾಮಗ್ರಿಗಳು ಹೊರಗಿನಿಂದ ಹೋಗದಂತೆ ದಿಗ್ಬಂಧನ ಹಾಕುತ್ತಾನೆ. ರಜಪೂತರು ಧೈರ್ಯಕ್ಕೆ ಹೆಸರುವಾಸಿಯಾದವರು ನಿಜ. ಆದರೆ ಖಿಲ್ಜಿಯ ಸೈನ್ಯಕ್ಕೆ ಹೋಲಿಸಿದರೆ ಅವರದ್ದು ಚಿಕ್ಕ ಸೈನ್ಯ. ಬಲಾಢ್ಯನಾದ ಖಿಲ್ಜಿಯ ಸೈನ್ಯವ!ನ್ನು ಎದುರಿಸಿ ಗೆಲ್ಲುವುದು ವಾಸ್ತವದಲ್ಲಿ ಅವರಿಗೆ ಸಾಧ್ಯವಿರಲಿಲ್ಲ. ಅದು ಅವರಿಗೂ ಗೊತ್ತಿತ್ತು. ಆದರೆ ಸೋಲು ಮತ್ತು ಸಾವು ಇವುಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳಬೇಕಾದ ಸಂದರ್ಭ ಬಂದರೆ ಅವರ ಆಯ್ಕೆ ಸಾವೇ. ಕೊನೆಗೆ ಏನಾದರೂ ಆಗಲಿ ಎಂದು ಧೈರ್ಯತುಂಬಿದ ರಾಜ ಹೊರಗೆ ಜಮಾವಣೆಗೊಂಡಿದ್ದ ಖಿಲ್ಜಿಯ ಸೈನ್ಯದ ಮೇಲೆ ದಾಳಿಮಾಡಲು ಆಜ್ಞಾಪಿಸುತ್ತಾನೆ. ಮಾಡು ಇಲ್ಲವೇ ಮಡಿ ಎಂಬಂತೆ ಸಾಯಲು ಸಿದ್ಧರಾದ ರಜಪೂತ ಸೈನ್ಯ ಅರಮನೆ ಕೋಟೆಯನ್ನು ಸುತ್ತುವರಿದಿದ್ದ ಖಿಲ್ಜಿಯ ಸೈನ್ಯದ ಮೇಲೆ ಎರಗುತ್ತದೆ.

ಒಳಗೆ ಇದೆಲ್ಲ ಬೆಳವಣಿಗೆಯನ್ನು ಗಮನಿಸಿದ್ದ ರಾಣಿ ಪದ್ಮಿನಿಗೆ ತನ್ನ ಸಲುವಾಗಿಯೇ ನಡೆಯುತ್ತಿರುವ ಈ ಯುದ್ಧದಲ್ಲಿ ತನ್ನ ಗಂಡನಿಗೆ ಗೆಲುವು ಸಾಧ್ಯವಿಲ್ಲವೆಂದು ಅನಿಸುತ್ತದೆ ಮತ್ತು ತಾನು ಹಾಗೂ ತನ್ನ ಪರಿವಾರದ ಹೆಂಗಸರು ಅಲ್ಲಾವುದ್ದೀನ್‌ ಖಿಲ್ಜಿಯ ವಶವಾಗುವುದು ಅನಿವಾರ್ಯವಾಗುತ್ತದೆ  ಎಂಬುದೂ ಖಚಿತವಾಗುತ್ತದೆ. ಏಕೆಂದರೆ ಆ ಕಾಲಘಟ್ಟದಲ್ಲಿ ಯುದ್ಧದಲ್ಲಿ ಗೆದ್ದ ರಾಜ ಮತ್ತು ರಾಜನ ಸೈನ್ಯ ಸೋತ ರಾಜನ ರಾಜಧಾನಿಯನ್ನು ಲೂಟಿ ಮಾಡುವುದು, ಆ ರಾಜಧಾನಿಯಲ್ಲಿರುವ ರಾಜಪರಿವಾರದ ಹೆಂಗಸರನ್ನು ಎತ್ತಿಕೊಂಡು ಹೋಗುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಈ ಕ್ರೌರ್ಯಕಾರ್ಯ ಯಾವುದೇ ಜಾತಿ ಜನಾಂಗ ಅಥವಾ ಧರ್ಮದ ಆಧಾರದಲ್ಲಿ ನಡೆಯದೇ ಯಾರೇ ಗೆದ್ದರೂ ಯಾರೇ ಸೋತರೂ ನಡೆಯುವ ಸಾಮಾನ್ಯ ಸಂಗತಿಯಾಗಿರುತ್ತದೆ.

ಕೊನೆಗೂ ಖಿಲ್ಜಿಗೆ ಸಿಗದೇ ಹೋದ ಸುಂದರಿ!

ರಜಪೂತ ಮಹಿಳೆಯರು ತಮ್ಮ ಗಂಡಂದಿರಂತೆ ಶೌರ್ಯ ಮತ್ತು ಸ್ವಾಭಿಮಾನಕ್ಕೆ ಹೆಸರಾದವರು. ಅವರಿಗೆ ʻಶೀಲʼ ಮತ್ತು ʻಸಾವುʼ ಇವುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಬಂದರೆ ಅವರ ಆಯ್ಕೆ ಕೂಡ ಸಾವೇ ಆಗಿತ್ತು. ಅಲ್ಲಾವುದ್ದೀನ್‌ ಖಿಲ್ಜಿಯ ಕೈಗೆ ಸಿಕ್ಕು ಅವನಿಂದ ತನ್ನ ಮನಸ್ಸಿಗೆ ವಿರುದ್ಧವಾಗಿ ದೌರ್ಜನ್ಯಕ್ಕೆ ಒಳಗಾಗಿ ಅವಮಾನಿತಳಾಗುವುದಕ್ಕಿಂತ ತಾನು ಅವನಿಗೆ ಸಿಗದಂತೆ ಸಾಯುವುದೇ ಸರಿ ಎಂದು ಅವಳು ನಿರ್ಧರಿಸುತ್ತಾಳೆ. ಅವಳ ನಿರ್ಧಾರವನ್ನು ಅರಮನೆಯ ಪರಿವಾರದ ಹೆಂಗಸರೆಲ್ಲ ಬೆಂಬಲಿಸಿ ತಾವು ಅವಳೊಂದಿಗೆ ಸಾಯಲು ನಿರ್ಧರಿಸುತ್ತಾರೆ.

ಆ ಕಡೆ ಕೋಟೆಯ ಹೊರಗೆ ಗಂಡಸರ ಯುದ್ಧ ನಡೆಯುತ್ತಿರಬೇಕಾದರೆ ಈ ಕಡೆ ಕೋಟೆಯ ಒಳಗೆ ಅರಮನೆಯ ಹೆಂಗಸರೆಲ್ಲ ರಾಣಿ ಪದ್ಮಿನಿಯ ಜೊತೆ ಜೋಹಾರ್‌ ಪದ್ಧತಿ ಅನುಸರಿಸಿ ಬೆಂಕಿಗೆ ಬಿದ್ದು ಸಾಯಲು ಸಾಮೂಹಿಕ ನಿರ್ಧಾರ ಮಾಡುತ್ತಾರೆ. (ಜೋಹಾರ್‌ ಎಂದರೆ ಕ್ಷತ್ರಿಯ ಹೆಣ್ಣುಮಕ್ಕಳು ತಮ್ಮ ಗಂಡಂದಿರು ಯುದ್ಧದಲ್ಲಿ ವೀರಮರಣ ಅಪ್ಪಿದಾಗ ವೈರಿರಾಜರ ಕೈಗೆ ಸಿಗದಂತೆ ಬೆಂಕಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಪದ್ಧತಿ. ಇದನ್ನು ಅವರ ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾಗಿ ಗೌರವದಿಂದ ಕಾಣಲಾಗುತ್ತಿತ್ತು).

ಪದ್ಮಿನಿ ನಿರೀಕ್ಷಿಸಿದಂತೆಯೇ ರಜಪೂತ ಸೈನ್ಯಕ್ಕೆ ಸೋಲಾಗುತ್ತದೆ. ಕೋಟೆಯ ಒಳನುಗ್ಗಿ ಉತ್ಸಾಹದಲ್ಲಿ ರಾಣಿ ಪದ್ಮಿನಿಯನ್ನು ಪಡೆಯಲು ಒಳಬಂದ ಅಲ್ಲಾವುದ್ದೀನ್‌ ಖಿಲ್ಜಿಗೆ ಅವಳು ಸಿಕ್ಕಳೇ? ಇಲ್ಲ. ಅವನಿಗೆ ಸಿಕ್ಕದ್ದು ಬೆಂಕಿಯಲ್ಲಿ ಸುಟ್ಟು ಹೋಗಿದ್ದ ಅವಳ ದೇಹದ ಬೂದಿ! ಅವನು ಒಳಬರುವುದರೊಳಗೆ ಅರಮನೆಯ ಪರಿವಾರದ ಎಲ್ಲ ಹೆಂಗಸರನ್ನೂ ಕಟ್ಟಿಕೊಂಡು ಅವಳು ಜೋಹಾರ್‌ ಪದ್ದತಿಯಂತೆ ಬೆಂಕಿಗೆ ಹಾರಿ ಪ್ರಾಣತ್ಯಾಗಮಾಡಿದ್ದಳು!

ಹೀಗೆ ಹೆಣ್ಣೊಬ್ಬಳ ಸೌಂದರ್ಯವೋ ಅಥವಾ ಆ ಸೌಂದರ್ಯದ ಬಗ್ಗೆ ಗಂಡೊಬ್ಬ ಹಚ್ಚಿಕೊಂಡ ಹುಚ್ಚೋ ಆ ಹೆಣ್ಣು ಮಾತ್ರವಲ್ಲ ಸಾವಿರಾರು ಸ್ತ್ರೀಯರ ಜೀವಕ್ಕೇ ಕುತ್ತುತಂದ ಅಷ್ಟೇ ಅಲ್ಲ ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾದ ರಜಪೂತ ರಾಜ್ಯವೊಂದರ ನಾಶಕ್ಕೆ ಕಾರಣವಾದ ದುರಂತ ಕತೆ ಈ ರಾಣಿ ಪದ್ಮಿನಿಯದ್ದು! ಮೊನ್ನೆ ಚಿತ್ತೋಡ್‌ಗಡ್‌ನ ಬೆಟ್ಟದ ಮೇಲೆ ಹತ್ತಿ ಅಲ್ಲಿನ ಅನೇಕ ಸ್ಥಳಗಳನ್ನು ವೀಕ್ಷಿಸಿದೆ. ಪದ್ಮಿನಿಯ ಅರಮನೆ ರಿಪೇರಿ ನಡೆಯುತ್ತಿದ್ದರಿಂದ ಅದೊಂದನ್ನು ನೋಡಲು ಆಗಲಿಲ್ಲ. ಸುತ್ತಿ ಸುತ್ತಿ ಆಯಾಸಗೊಂಡು ಆಯಾಸ ಪರಿಹರಿಸಿಕೊಳ್ಳಲೆಂದು ಈ ಪದ್ಮಿನಿ ಸಾವಿರಾರು ಹೆಂಗಸರೊಂದಿಗೆ ಹೀಗೆ ಬೆಂಕಿಗೆ ಹಾರಿ ಪ್ರಾಣಕಳೆದುಕೊಂಡ ಸ್ಥಳದಲ್ಲಿದ್ದ ಮರದ ಕೆಳಗೆ  ಬೀಸುವ ಗಾಳಿಗೆ ಮೈಯೊಡ್ಡಿ ಅಲ್ಲಿನ ಮಂಗಗಳ ಜೊತೆ ತುಸುಹೊತ್ತು ಕುಳಿತುಕೊಂಡಾಗ ಈ ಎಲ್ಲ ಘಟನೆಗಳು ನೆನಪಿಗೆ ಬಂದು ಮನಸ್ಸಿಗೆ ಬಹಳಷ್ಟು ಬೇಸರ ಅನ್ನಿಸಿತು. ಕೆಲವು ಫೋಟೋ ಇವೆ ಗಮನಿಸಿ.



ಈ ಸಂಗತಿಗಳನ್ನೂ ಗಮನಿಸಿ:

ಮನೋಹರ ಲೋಹಿಯಾ ಚಿಂತನೆ:

ಸ್ವತಂತ್ರ ಭಾರತದ ಬಹುಮುಖ್ಯ ಚಿಂತಕರಾಗಿದ್ದ ಡಾ ರಾಮ ಮನೋಹರ ಲೋಹಿಯಾ ಅವರು ತಮ್ಮ ಬಹುಮುಖ್ಯವಾದ ಲೇಖನವೊಂದರಲ್ಲಿ ರಾಣಿ ಪದ್ಮಿನಿಯ ಪ್ರಸ್ತಾಪವನ್ನು ಪ್ರಾಸಂಗಿಕವಾಗಿ ಮಾಡುತ್ತಾರೆ. ಭಾರತದ ಇಂದಿನ ಮಹಿಳೆಯರು (ಅರವತ್ತರ ದಶಕದಲ್ಲಿ) ʻಸೀತಾಮಾದರಿʼ ಮತ್ತು ʻದ್ರೌಪದಿ ಮಾದರಿʼ ಎಂಬ ಎರಡು ಮಾದರಿಗಳನ್ನು ಹೊಂದಿದ್ದು ಅವುಗಳಲ್ಲಿ ಯಾವ ಮಾದರಿಯನ್ನು ಅನುಸರಿಸಬೇಕು ಎಂಬ ಚರ್ಚೆ ಮಾಡುತ್ತಾ ಅವರು ಈ ಪ್ರಸ್ತಾಪವನ್ನು ಮಾಡುತ್ತಾರೆ.

ಗಂಡ ಹೇಳಿದಂತೆ ಕೇಳಿಕೊಂಡು ಹೋಗುವ ಸೀತಾಮಾದರಿಗಿಂತ ಸ್ವತಂತ್ರವಾಗಿ ಆಲೋಚಿಸಿ ಮುನ್ನಡೆಯುವ ದ್ರೌಪದಿ ಮಾದರಿ ಅವರ ಆದರ್ಶವಾಗಬೇಕು ಎಂದು ಪ್ರತಿಪಾದಿಸುವ ಸಂದರ್ಭದಲ್ಲಿ ಅವರು ರಾಣಿ ಪದ್ಮಿನಿ ಹೀಗೆ ಸಾವಿರಾರು ಮಹಿಳೆಯರೊಂದಿಗೆ ಬೆಂಕಿಗೆ ಹಾರುವುದನ್ನು ಮೆಚ್ಚಿಕೊಳ್ಳುವುದಿಲ್ಲ ಮತ್ತು ಅದನ್ನು ಆದರ್ಶವೆಂದು ಕುಲಗೌರವ ಕಾಪಾಡಿದ ಹೆಮ್ಮೆಯ ಸಂಗತಿ ಎಂದು ಒಪ್ಪಿಕೊಳ್ಳುವುದಿಲ್ಲ. ಸ್ವತಃ ಶೂರಳೇ ಆಗಿದ್ದ ಪದ್ಮಿನಿ ಸಾಯುವುದು ಎಂದೇ ತೀರ್ಮಾನ ಮಾಡಿದ್ದರೆ ಪದ್ಮಿನಿ ಬೆಂಕೆಗೆ ಹಾರುವ ಬದಲು ಆ ಹೆಂಗಸರನ್ನು ಕಟ್ಟಿಕೊಂಡು ಗಂಡಂದಿರೊಂದಿಗೆ ವೈರಿ ಸೈನ್ಯದ ಮೇಲೆ ಎರಗಬೇಕಿತ್ತು ಎಂಬುದು ಅವರ ಅಭಿಪ್ರಾಯ. ಇದು ಪದ್ಮಿನಯ ಬಗ್ಗೆ ಇರುವ ಅವರ ಅಗೌರವವಲ್ಲ; ಬದಲಾಗಿ ಭಿನ್ನಮತ ಅಷ್ಟೆ!

*****

ಪಕ್ಷಪಾತದ ನಿರೂಪಣೆ ಎಂಬ ಆರೋಪ

ಪದ್ಮಿನಿಯ ಮೇಲ್ಕಂಡ ಕಥೆಯು ಅಲ್ಲಾವುದ್ದೀನ್‌ ಖಿಲ್ಜಿಯ ಇತಿಹಾಸಕಾರನಾದ ಮಲ್ಲಿಕ್‌ ಮೊಹಮ್ಮದ್‌ ಜಯಾಸಿ ಕ್ರಿ.ಶ. ೧೫೪೦ ರಲ್ಲಿ ಬರೆದ ʼಪದ್ಮಾವತ್‌ʼ ಎಂಬ ಕಾವ್ಯವನ್ನು ಆಧರಿಸಿದ್ದು ಇದಕ್ಕೆ ಅನೇಕ ಇತಿಹಾಸಕಾರರ ಅಪಸ್ವರವಿದೆ. ಆತ ಅಲ್ಲಾವುದ್ದೀನನ ಹಿರಿಮೆಯನ್ನು ಕೊಂಡಾಡುವಂತೆ ಮತ್ತು ರಜಪೂತರ ಶೌರ್ಯ ಮತ್ತು ಸಾಹಸಗಳಿಗೆ ಗೌರವಕ್ಕೆ ಧಕ್ಕೆ ತರುವಂತೆ  ಪಕ್ಷಪಾತದಿಂದ ಈ ಕೃತಿ ರಚಿಸಿದ್ದಾನೆ ಎಂಬುದು ಈ ಬಗ್ಗೆ ಇರುವ ಅಪಸ್ವರವಾಗಿದೆ. ಆದರೆ ಈ ಅಪಸ್ಪರಕ್ಕೆ ತಕ್ಕ ಐತಿಹಾಸಿಕ ಸಾಕ್ಷಗಳೊಂದಿಗೆ ನಿರೂಪಿತವಾದ ಬೇರೊಂದು ನಿರೂಪಣೆ ಇಲ್ಲವಾಗಿ ಸಧ್ಯಕ್ಕೆ ಇದೇ ಚಾಲ್ತಿಯಲ್ಲಿದೆ.

****

ಆಧುನಿಕ ಸ್ತ್ರೀವಾದಿ ದೃಷ್ಟಿಕೋನ

ಆಧುನಿಕ ಸ್ತ್ರೀವಾದಿ ಚಿಂತನೆಯ ಹಿನ್ನಲೆಯಲ್ಲಿ ರಾಣಿ ಪದ್ಮಾವತಿಯ ʻಜೋಹಾರ್‌ʼ ಬಗ್ಗೆ ಚರ್ಚೆ ಮಾಡಲಾಗುತ್ತದೆ.  ʻಶೀಲʼ ಅಥವಾ ʻಚಾರಿತ್ರ್ಯʼ ಎಂಬುದು ಕೇವಲ ಹೆಣ್ಣಿಗೆ ಅದರಲ್ಲಿಯೂ ಅವಳ ದೇಹದ ಯಾವುದೋ ಒಂದೋ ಅಥವಾ ಎರಡೋ ಅಂಗಗಳಿಗೆ ಸಂಬಂಧ ಪಟ್ಟ ವಿಷಯವೇ ಅಥವಾ ಅದು ಮನಸ್ಸು ದೇಹ ಆಲೋಚನೆ ಇವೆಲ್ಲವಕ್ಕೂ ಗಂಡು ಹೆಣ್ಣು ಎಂಬ ಭೇದವಿಲ್ಲದೇ ಎಲ್ಲರಿಗೂ ಸಂಬಂಧಪಟ್ಟದ್ದೇ ಎಂಬುದು ಈ ಚರ್ಚೆಯ ವಿಷಯ. ಶೀಲ ಅಥವಾ ಚಾರಿತ್ರ್ಯ ಎಂಬುದು ಕೇವಲ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಲ್ಲ ಅದಕ್ಕಾಗಿ ದಬ್ಬಾಳಿಕೆಗೆ ಒಳಗಾಗುವ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸಲ್ಲ ಎಂಬುದು ಈಗಿನ ನಿಲುವು.


ಚಿತ್ತೂರಿನ ಹೆಸರು ಬದಲಾವಣೆ

ರಾಣಿ ಪದ್ಮಿನಿಯ ಕಥೆಯ ನಡೆದ ಕೋಟೆ ಈಗ ಇರುವುದು ಈಗಿನ ರಾಜಸ್ತಾನ ರಾಜ್ಯದ ಒಂದು ಜಿಲ್ಲಾಕೇಂದ್ರವಾದ ಚಿತ್ತೋಡ್‌ಘಡ್‌ನ ಹೊರವಲಯದಲ್ಲಿ ಕೇಂದ್ರ ಸ್ಥಳಕ್ಕೆ ನಾಲ್ಕಾರು ಕಿಲೋಮೀಟರ್‌ ದೂರದಲ್ಲಿ ಬೆಟ್ಟವೊಂದರ ಮೇಲೆ. ಪದ್ಮಿನಿಯ ಕಾಲಕ್ಕೆ ಅದನ್ನು ಚಿತ್ತೂರು ಎಂದು ಕರೆಯಲಾಗುತ್ತಿತ್ತು. ಆ ಸ್ಥಳ ಖಿಲ್ಜಿಯ ವಶವಾದ ಮೇಲೆ ಅದಕ್ಕೆ ಅವನು ತನ್ನ ಮಗನ ಹೆಸರಲ್ಲಿ ಅದಕ್ಕೆ ಖಿಜರಾಬಾದ್‌ ಎಂದು ನಾಮಕರಣ ಮಾಡಿ ಆ ಮಗನನ್ನು ಅಲ್ಲಿನ ಗೌರ್ನರ್‌ ಅನ್ನಾಗಿ ಮಾಡುತ್ತಾನೆ. ಮುಂದೆ ಮತ್ತು ಇತಿಹಾಸದ ಇನ್ನೊಂದು ಘಟ್ಟದಲ್ಲಿ ಈಗಿರುವಂತೆ ಚಿತ್ತೋಡ್‌ಘಡ್‌ ಆಗಿ ಮತ್ತೊಮ್ಮೆ ಮರುನಾಮಕರಣವಾಗುತ್ತದೆ.

******

ಡಾ ರಾಜೇಂದ್ರ ಬುರಡಿಕಟ್ಟಿ

೧೦-೧೦-೨೦೨೬