Friday, November 20, 2026

ಗುಲಾಬಿ ನಗರ ಜೈಪುರ

 ಗುಲಾಬಿ ನಗರ ಜೈಪುರ

ಒಂದು ವರ್ಷಕ್ಕೆ ಒಂದು ರಾಜ್ಯವನ್ನು ಸುತ್ತುವ ನನ್ನ ಕ್ರಮದಂತೆ ಈ ವರ್ಷ ರಾಜಸ್ತಾನ ನನ್ನ ಪ್ರವಾಸದ ರಾಜ್ಯವಾಗಿತ್ತು. ರಾಜಸ್ತಾನದ ಪ್ರಮುಖ ಐತಿಹಾಸಿಕ ಮಹತ್ವದ ನಗರಗಳಾದ ಜಯಪುರ, ಉದಯಪುರ, ಚಿತ್ತೋಡ್‌ಗಡ್, ಜೈಸಲ್‌ಮೇರ್‌ಗಳ ಜೊತೆಗೆ ಅರಾವಳಿ ಪರ್ವತ ಶ್ರೇಣಿಯ ಅತ್ಯಂತ ಎತ್ತರ ಶಿಖರವಿರುವ ಮತ್ತು ರಾಜಸ್ತಾನದ ಏಕೈಕ ಗಿರಿಧಾಮವಾದ ಅಬುಪರ್ವತ ಹಾಗೂ ಭಾರತ ಪಾಕಿಸ್ತಾನಗಳ ಗಡಿಯಲ್ಲಿರುವ  ಲೋಂಗೇವಾಲ ಯುದ್ಧಸ್ಮಾರಕ ಇವುಗಳೆಲ್ಲವನ್ನೂ ನೋಡುವುದನ್ನು ನನ್ನ ರಾಜಸ್ತಾನ ಪ್ರವಾಸ ಯೋಜನೆ ಒಳಗೊಂಡಿತ್ತು. ಜೈಪುರದಿಂದ ಆರಂಭಿಸಿ ಜೈಪುರಕ್ಕೇ ಬಂದು ಪ್ರವಾಸ ಮುಕ್ತಾಯವಾಗುವುದನ್ನು ಈ ಯೋಜನೆ ಹೊಂದಿತ್ತು.

ರಾಜಸ್ತಾನದ ಪ್ರವಾಸದ ಪ್ರಾರಂಭದ ದಿನ ನಾನು ಜೈಪುರ ರೈಲು ನಿಲ್ದಾಣ ತಲುಪಿದಾಗ ಬೆಳಗಿನ ಆರೂ ಮುಕ್ಕಾಲು. ಮೊದಲೇ ಅಲ್ಲಿನ ರೈಲ್ವೇ ರಿಟೈರಿಂಗ್‌ ರೂಮನ್ನು ಬುಕ್‌ ಮಾಡಿಕೊಂಡಿದ್ದರೂ ನನಗೆ ಬೆಳ್ಳಂಬೆಳಗ್ಗೆ ಒಂದಿಷ್ಟು ತಾಪತ್ರಯ ಉಂಟಾಯಿತು. ನಾನು ಹೋದಾಗ ರೈಲ್ವೇ ಪ್ಲಾಟ್‌ಫಾರ್‌ ಕೆಲವು ಭಾಗದಲ್ಲಿ ರಿಪೇರಿ ನಡೆಯುತ್ತಿತ್ತು. ಒಂದನೇ ಫ್ಲಾಟ್‌ಫಾರಂನ ಪಕ್ಕ ೧ಎ ಮತ್ತು ೧ಬಿ ಎಂದು ಎರಡು ಹೊಸ ಫ್ಲಾಟ್‌ಫಾರಂ ಬೇರೆ ಮಾಡಲ್ಪಟ್ಟಿದ್ದವು. ಇವುಗಳನ್ನು ದಾಟಿ ನಾನು ಹೊರಗಡೆ ಬಂದು ಸುತ್ತ ನೋಡಿದಾಗ ಅಲ್ಲಿ ರಿಟೈರಿಂಗ್‌ ರೂಂ ರೀತಿ ಕಾಣುವ ಒಂದು ಕಟ್ಟಡ ಕಂಡಿತು. ಸರಿ ಅಲ್ಲಿಗೆ ಸೂಟ್‌ಕೇಸ್‌ ಬ್ಯಾಗ್‌ಗಳನ್ನು ಎಳೆದುಕೊಂಡು ಹೋಗುವಾಗ ನನ್ನ ಹತ್ತಿರ ಬಂದ ಒಬ್ಬ ಆಟೋವಾಲಾ, “ಅದು ಮುಚ್ಚಿದೆ; ಅದರ ಹಿಂದೆ ಇನ್ನೊಂದು ಕಟ್ಟಡ ಇದೆ; ಅಲ್ಲಿ ಹೋಗಿ” ಎಂದು ತಪ್ಪು ಮಾರ್ಗದರ್ಶನ ಮಾಡಿದ.  ಅವನು ಹೇಳಿದಲ್ಲಿಗೆ ಲಗೇಜು ಎಳೆದುಕೊಂಡು ಹೋದ ತಕ್ಷಣ ಅಲ್ಲಿನ ಕಾವಲುಗಾರ, “ಇದಲ್ಲ ಅಲ್ಲಿದೆ ನೋಡಿ” ಎಂದು ಇನ್ನೊಂದು ಕಟ್ಟಡ ತೋರಿಸಿದ. ಅಲ್ಲಿಗೂ ಹೋದೆ. ಅಲ್ಲಿ ವಸತಿ ಗೃಹ ನೋಡಿಕೊಳ್ಳುವ ಉಸ್ತುವಾರಿಯಲ್ಲಿದ್ದ ವ್ಯಕ್ತಿ ನನ್ನ ಬುಕಿಂಗ್‌ ಸ್ಲಿಪ್‌ ನೋಡಿ, “ಇದು ಇಲ್ಲಿಯದಲ್ಲ. ರೈಲ್ವೇ ಫ್ಲಾಟ್‌ಫಾರಂ ಒಂದರಲ್ಲಿರುವ ಒಂದನೇ ಮಹಡಿಗೆ ಹೋಗಿ” ಎಂದು ಮತ್ತೆ ನನ್ನನ್ನು ಅಲ್ಲಿಂದ ಕಳಿಸಿದ.

ಅಂತೂ ಇಂತೂ ಹೀಗೆ ಬೆಳ್ಳಂಬೆಳಗ್ಗೆ ಲಗೇಜು ಹೊತ್ತೂ ಎಳೆದೂ ನಾನು ಬುಕ್‌ಮಾಡಿಕೊಂಡಿದ್ದ ಕೊಠಡಿಗೆ ಬಂದು ತಲುಪುವಷ್ಟರಲ್ಲಿ ಏಳೂವರೆ ಆಗೇ ಬಿಟ್ಟಿತು. ನಾವು ಎಷ್ಟೇ ಕ್ರಮಬದ್ಧವಾಗಿ ಯೋಜನೆ ಮಾಡಿಕೊಂಡರೂ ಅಪರಿಚಿತ ಪ್ರದೇಶಕ್ಕೆ ಹೋದಾಗ ಇಂತಹ ಕೆಲವು ಸಣ್ಣಪುಟ್ಟ ತಾಪತ್ರಯಗಳು ಆಗುವುದು ಸಹಜ ಎಂದು ನನಗೆ ಗೊತ್ತಿದ್ದದ್ದೆ. ಹಾಗಾಗಿ ಅದಕ್ಕೆ ಬಹಳಷ್ಟು ವಿಷಾಧಪಡುವಂಥದ್ದೇನೂ ಇರಲಿಲ್ಲ. ನನ್ನ ರಾಜಸ್ತಾನ ಪ್ರವಾಸಕ್ಕೆ ನಾನು ಗೊತ್ತು ಮಾಡಿಕೊಂಡದ್ದು ಅದೊಂದೇ ದಿನವಾಗಿತ್ತು. ಈ ಬಾರಿ ನನ್ನಜೊತೆಗೆ ಯಾರೂ ಇರಲಿಲ್ಲವಾಗಿ ನನ್ನದು ಏಕಾಂಗಿ ಪ್ರವಾಸವಾಗಿತ್ತು. ಹೀಗೇ ಏಕಾಂಗಿಯಾಗಿ ಹೋದಾಗ ಟ್ಯಾಕ್ಸಿ ಮಾಡಿಕೊಂಡು ತಿರುಗಿದರೆ ಹೆಚ್ಚು ಖರ್ಚು ಬರುವ ಕಾರಣ ಸಾಧ್ಯವಿದ್ದಲ್ಲಿ ಆಯಾ ರಾಜ್ಯಗಳ ಪ್ರವಾಸೋಧ್ಯಮ ಇಲಾಖೆ ಅಥವಾ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೂಲಕ ಸುತ್ತಾಡಿ ಸ್ಥಳ ವೀಕ್ಷಣೆ ಮಾಡುವುದು ಇವು ಯಾವೂ ಹೊಂದಾಣಿಕೆ ಆಗದಿದ್ದರೆ ಆಟೋ ಮಾಡಿಕೊಂಡು ತಿರುಗುವುದು ನಾನು ಅನುಸರಿಸುತ್ತಿದ್ದ ಕ್ರಮವಾಗಿತ್ತು.

ರಾಜಸ್ತಾನದ ಜೈಪುರದಲ್ಲಿ ಮಾತ್ರ ಅಲ್ಲಿನ ಪ್ರವಾಸೋಧ್ಯಮ ಇಲಾಖೆಯವರು ಪ್ರತಿದಿನ ಪ್ರವಾಸಿಗರನ್ನು ತಮ್ಮ ವಾಹನದಲ್ಲಿ ಕರೆದೊಯ್ದು ಜೈಪುರದ ಪ್ರಮುಖ ಸ್ಥಳಗಳನ್ನು ತೋರಿಸುಕೊಂಡು ಬರುವ ವ್ಯವಸ್ಥೆ ಇತ್ತು. ಈ ವಾಹನದಲ್ಲಿಯೇ ಸುತ್ತುವರಿಯುವುದೆಂದು ನಾನು ಎರಡು ದಿನ ಮುಂಚಿತವಾಗಿ ಆನ್‌ಲೈನಿನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರೂ ಈ ಕ್ಷಣದವರೆಗೂ ನನಗೆ ಟಿಕೆಟೂ ಬಂದಿರಲಿಲ್ಲ; ಮಾತ್ರವಲ್ಲ ನನ್ನ ಟಿಕೆಟ್‌ ಖಾತ್ರಿ ಆಗಿರುವ ಬಗ್ಗೆ ಒಂದು ಸಂದೇಶಕೂಡ ಬಂದಿರಲಿಲ್ಲ. ಹೀಗಾಗಿ ಫೋನ್‌ ಮಾಡಿದೆ. ಫೋನ್‌ ಎತ್ತಿದ ವ್ಯಕ್ತಿ ಏನೂ ಖಾತ್ರಿಪಡಿಸದೆ, “ಎಂಟು ಗಂಟೆಗೆ ನಮ್ಮ ಆಫೀಸ್‌ ಓಪನ್‌ ಆಗುತ್ತೆ. ಅಲ್ಲಿ ಕಂಪ್ಯೂಟರ್‌ ನೋಡಿ ಹೇಳುತ್ತೇನೆ. ಆಗ ಮಾಡಿ” ಎಂದು ಫೋನ್‌ ಇಟ್ಟ. ಅವನು ಬಂದು ಆಫೀಸ್‌ ಓಪನ್‌ ಮಾಡಿ ಕಂಪ್ಯೂಟರ್‌ ಆನ್‌ ಮಾಡಿ ನನಗೆ ಹೇಳುವುದು ಯಾವಾಗ? ನಾನು ಇಲ್ಲಿಂದ ಹೋಗಿ ಅಲ್ಲಿ ತಲುಪುವುದು ಯಾವಾಗ? ಒಂಬತ್ತು ಗಂಟೆಗೆ ಅವರ ವಾಹನ ಹೊರಡುವುದಿತ್ತು. ಖಾತ್ರಿ ಆಗಿದೆ ಎಂದು ಗೊತ್ತಾಗಿದ್ದರೆ ನಾನು ಅಲ್ಲಿಗೇ ಹೋಗಬಹುದಿತ್ತು. ಆಗಿಲ್ಲ ಎಂದು ಗೊತ್ತಾಗಿದ್ದರೆ ಬೇರೆ ವಾಹನವನ್ನಾದರೂ ಮಾಡಿಕೊಳ್ಳಬಹುದಿತ್ತು. ಅವರಿಗೆ ಹಣಕಟ್ಟಿ ನಾನು ಗೊಂದಲದಲ್ಲಿ ಬೀಳಬೇಕಾಯಿತು.

ಕೊನೆಗೆ ನಾನೇ ಒಂದು ನಿರ್ಧರಕ್ಕೆ ಬಂದು ತಕ್ಷಣ ಸ್ನಾನಮಾಡಿ ಆಟೋ ಹತ್ತಿದೆ. ಮೊದಲು ಅವರ ಕಛೇರಿಗೆ ಹೋಗುವುದು. ಅಲ್ಲಿ ಟಿಕೆಟ್‌ ಖಾತ್ರಿ ಆಗಿದ್ದರೆ ಅವರ ಬಸ್ಸಲ್ಲಿ ಹೋಗುವುದು. ಆಗದಿದ್ದರೆ ಅಲ್ಲಿಂದಲೇ ಆಟೋ ಮಾಡಿಕೊಂಡು ಸುತ್ತಾಡುವುದು ಎಂಬುದು ನನ್ನ ನಿರ್ಧಾರವಾಗಿತ್ತು. ಅಲ್ಲಿ ಹೋದರೂ ತಕ್ಷಣಕ್ಕೆ ಸಮಸ್ಯೆ ಬಗೆಹರಿಯಲಿಲ್ಲ. ರಾಜಸ್ತಾನ ಪ್ರವಾಸೋಧ್ಯಮ ಕಛೇರಿಯಲ್ಲಿ ಎಲ್ಲ ಕೊಠಡಿಗಳು ತೆರೆದಿದ್ದರೂ ನನಗೆ ಅಲ್ಲಿ ಮಾಹಿತಿ ಕೊಡಲು ಯಾರೂ ಸಿಗಲಿಲ್ಲ. ಬಹುಶಃ ಅವರೆಲ್ಲರೂ ಹತ್ತುಗಂಟೆಗೆ ಆಫೀಸಿಗೆ ಬರುವವರಿದ್ದರೇನೋ. ಕೊನೆಗೆ ಅಲ್ಲಿ ಕಸಗುಡಿಸುತ್ತಿದ್ದ ವ್ಯಕ್ತಿಯನ್ನು ಕೇಳಿದಾಗ ಅವನು, “ಈ ಕಟ್ಟಡದ ಪಕ್ಕದಲ್ಲಿ ಒಂದು ಕಟ್ಟಡವಿದೆ. ಅಲ್ಲಿ ಹೊಟೆಲ್‌ ಮತ್ತು ಸಾರಿಗೆ ವಿಭಾಗವನ್ನು ನೋಡಿಕೊಳ್ಳುವವರು ಇದ್ದಾರೆ. ಅಲ್ಲಿಗೆ ಹೋಗಿ” ಎಂದು ಹೇಳಿದ. ಮತ್ತೆ ಅಲ್ಲಿಂದ ಹೊರಬಂದು ಅವನು ಹೇಳಿದ ಕಟ್ಟಡಕ್ಕೆ ಬಂದೆ. ಅಲ್ಲಿಯೂ ಸಾರಿಗೆ ವಿಭಾಗ ನನಗೆ ತಕ್ಷಣಕ್ಕೆ ಸಿಗಲಿಲ್ಲ. ಕೊನೆಗೆ ಹುಡುಕಿ ಹುಡುಕಿ ಯಾರಿಗೂ ತಕ್ಷಣಕ್ಕೆ ಕಾಣದಂತಹ ಮೂಲೆಯಲ್ಲಿರುವ ಒಂದು ಹಳೆಯ ಕಟ್ಟಡದ ಕೊಠಡಿಯೊಂದಕ್ಕೆ ಬಂದಾಗ ಅಲ್ಲಿ ಕೊಠಡಿಯಷ್ಟೆ ವಯಸ್ಸಾಗಿದೆಯೇನೋ ಎಂದು ಕಾಣುವ ಒಬ್ಬ ವ್ಯಕ್ತಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ. ನಾನು ನನ್ನ ಸಮಸ್ಯೆ ಹೇಳಿದೆ. ಆತ ತನ್ನ ರಜಿಸ್ಟರ್‌ ನೋಡಿ, “ಹೌದು. ನಿಮ್ಮ ಹೆಸರು ಇಂದಿನ ಸೈಟ್‌ ಸೀಯಿಂಗ್‌ಗೆ ಬುಕ್‌ ಆಗಿದೆ. ಇಲ್ಲೆ ಮುಂದೆ ಇರುವ ಹೊಟೆಲ್‌ನ ವೇಯಿಟಿಂಗ್‌ ರೂಮಿನಲ್ಲಿ ಅರಾಮಾಗಿ ಕುಳಿತಿರಿ. ಬಸ್‌ ಇಲ್ಲಿಂದಲೇ ಒಂಬತ್ತೂವರೆಗೆ ಹೊರಡುತ್ತದೆ.” ಎಂದು ಹೇಳಿದ. ನಾನು ಸಮಾಧಾನದ ನಿಟ್ಟುಸಿರು ಬಿಟ್ಟು ಹೊರಬಂದೆ.

ಇಷ್ಟೆಲ್ಲ ರಗಳೆ ಪುರಾಣ ಆಗುವುದರೊಳಗೆ ಒಂಬತ್ತು ಗಂಟೆ ಆಗಿತ್ತು. ಬಸ್‌ ಹೊರಡಲು ಇನ್ನೂ ಅರ್ಧಗಂಟೆಯಿತ್ತು. ಬೆಳಗಿನ ಈ ಗಡಿಬಿಡಿಯೊಳಗೆ ತಿಂಡಿಯನ್ನೂ ತಿಂದಿರಲಿಲ್ಲ. ಅಲ್ಲಿಯೇ ಪ್ರವಾಸೋಧ್ಯಮ ಇಲಾಖೆಯ ಅವರ ಹೊಟೆಲ್‌ ಇತ್ತಾದರೂ ಇಂತಹ ಅದ್ಧೂರಿ ಹೊಟೆಲ್‌ ಗಳಲ್ಲಿ ನಾನು ಊಟ-ತಿಂಡಿಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾಡುವವನಾಗಿದ್ದರಿಂದ ಮತ್ತು ಈಗ ಸಮಯವೂ ಇರುವುದರಿಂದ ಹೊರಗೆ ರಸ್ತೆಬದಿ ಒಂದಿಷ್ಟು ದೂರ ಹೋಗಿ ಸಾಮಾನ್ಯ ಹೋಟೆಲ್‌ ಒಂದರಲ್ಲಿ ತಿಂಡಿತಿಂದು ಬಂದು ಇವರ ಬಸ್ಸ್‌ ಹೊರಡುವುದನ್ನು ಕಾಯುತ್ತ ಕುಳಿತೆ. ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ತಮ್ಮ ಪ್ರದೇಶಕ್ಕೆ  ಅಪರಿಚಿತರಾಗಿರುತ್ತಾರೆ; ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂಬ ತಿಳಿವಳಿಕೆ ಅವರಿಗೆ ಅಷ್ಟಾಗಿ ಇದ್ದಂತೆ ಕಾಣಲಿಲ್ಲ. ಬಸ್‌ ಬುಕ್‌ ಮಾಡಿದಾಗ ಕೊನೆಯ ಪಕ್ಷ ಒಂದು ಈ ಮೇಲ್‌ ಅಥವಾ ಸಂದೇಶವನ್ನೂ ಕಳಿಸದೆ ನನಗೆ ಇಷ್ಟೆಲ್ಲ ತೊಂದರೆ ಉಂಟುಮಾಡಿದರು. ರಾಜಸ್ತಾನದಲ್ಲಿ ಸರಿಸುಮಾರು ಹದಿನೈದು ದಿನ ಇರುವ ನನ್ನ ಯೋಜನೆಯಲ್ಲಿ ಮೊದಲನೆಯ ದಿನವೇ ಆದ ಈ ಎರಡು ಗಡಿಬಿಡಿಗಳು ನನ್ನನ್ನು ಮುಂದಿನ ಪ್ರವಾಸ ಹೇಗೋ ಎಂಬ ಬಗ್ಗೆ ತುಸು ಕಿರಿಕಿರಿ ಉಂಟುಮಾಡಿದ್ದು ನಿಜವಾದರೂ ಅದನ್ನೇ ಧ್ಯಾನಿಸುತ್ತಾ ಕುಳಿತುಕೊಳ್ಳುವುದು ತರವಲ್ಲ ಎಂದು ನನ್ನ ಪ್ರವಾಸಕ್ಕೆ ತಯಾರಾದೆ.

ಬಿಳಿಬಣ್ಣದ ಬಿರ್ಲಾ ಮಂದಿರ.


ಜೈಪುರದ ದಿನದ ಪ್ರವಾಸದಲ್ಲಿ ನಾವು ಮೊದಲು ನೋಡಲು ಹೋದದ್ದು ಅಲ್ಲಿನ ತಿಲಕ್‌ ನಗರದಲ್ಲಿನ ಮೋತಿ ದುಂಗಾರಿಯಲ್ಲಿರುವ ಬಿರ್ಲಾ ಮಂದಿರವನ್ನು. ಲಕ್ಷ್ಮೀ ನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಬಿರ್ಲಾಮಂದಿರಗಳು ದೆಹಲಿ ಸೇರಿದಂತೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ಇವೆ. ಅದರಂತೆಯೇ ಈ ಜೈಪುರದಲ್ಲಿಯೂ ಇರುವ ಈ ಮಂದಿರ ಎಲ್ಲೆಡೆಗಳಂತೆ ಬಿಳಿಯ ಅಮೃತಶಿಲೆಯಿಂದಲೇ ವಿಶಾಲವಾದ ಮತ್ತು ಎತ್ತರವಾದ ಚೌಕಟ್ಟಿನ ಮೇಲೆ ನಿರ್ಮಾಣಗೊಂಡಿರುವ ಒಂದು ಅಪೂರ್ವ ಚೆಲುವಿನ ಕಟ್ಟಡ. ಭಾರತದ ಮುಖ್ಯ ಕೈಗಾರಿಕೋಧ್ಯಮಿಗಳಲ್ಲಿ ಒಬ್ಬರಾದ ಬಿರ್ಲಾ ಅವರ ಕುಟುಂಬಕ್ಕೆ ಈ ದೇವಾಲಯವನ್ನು ನಿರ್ಮಾಣಮಾಡಲು ಜೈಪುರ ರಾಜ ಕೇವಲ ಒಂದು ರೂಪಾಯಿಗೆ ಈ ಸ್ಥಳವನ್ನು ಮಾರಿದರಂತೆ! ೧೯೭೭ ರಲ್ಲಿ ನಿರ್ಮಾಣ ಆರಂಭವಾಗಿ ೧೯೮೮ ರಲ್ಲಿ ಲೋಕಾರ್ಪಣೆಗೊಂಡ ಈ ಮಂದಿರ ತನ್ನ ನಿರ್ಮಾಣಕ್ಕೆ ತೆಗೆದುಕೊಂಡದ್ದು ಒಟ್ಟು ಒಂಬತ್ತು ವರ್ಷಗಳನ್ನು.

 ಬಿರ್ಲಾ ಮಂದಿರ ಮುಖ್ಯವಾಗಿ ಪ್ರವೇಶ, ಸಭಾಂಗಣ, ಗರ್ಭಗುಡಿ ಮತ್ತು ಗೋಪುರ ಹೀಗೆ ಮುಖ್ಯವಾದ ನಾಲ್ಕು ವಿಭಾಗಗಳನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಸಂಪತ್ತಿನ ಅಧಿದೇವತೆ ಎಂದು ಹೆಸರಾದ ಲಕ್ಷ್ಮಿ ಮತ್ತು ನಾರಾಯಣ ಎಂದೂ ಕರೆಯಲ್ಪಡುವ ವಿಷ್ಣು ಈ ದೇವತಾ ದಂಪತಿಗಳ ಸುಂದರ ಮೂರ್ತಿಗಳಿವೆ. ಸಭಾಂಗಣದ ಕಂಬಗಳು ಮತ್ತು ಮೇಲ್ಚಾವಣಿಗಳು ಹಿಂದೂ ಧರ್ಮದ ಅನೇಕ ದೇವಾನುದೇವತೆಗಳ ಚಿತ್ರಗಳು, ಅನೇಕ ಧಾರ್ಮಿಕ ಸಂದೇಶ ಬೀರುವ ಮೂರ್ತಿಗಳ ಸುಂದರ ಕೆತ್ತನೆಗಳನ್ನು ಒಳಗೊಂಡಿದವೆ. ಗೋಪುರ ಭಾಗದ ಒಂದು ವಿಶೇಷತೆ ಎಂದರೆ ಇದು ಮುಖ್ಯವಾಗಿ ಹಿಂದೂ ಧರ್ಮದ ದೇವಾಲಯ ಆಗಿದ್ದಾಗ್ಯೂ ಭಾರತದ ಸರ್ವಧರ್ಮ ಸಮಭಾವವನ್ನು (ಸೆಕ್ಯುಲರ್) ಬಿಂಬಿಸುವಂತೆ ಈ ದೇಶದ ಮೂರು ಪ್ರಮುಖ ಧಾರ್ಮಿಕ ಧಾರೆಗಳಾದ ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಈ ಮೂರೂ ಧರ್ಮಗಳನ್ನು ಪ್ರತಿನಿಧಿಸುವ ಮೂರು ಗೋಪುರಗಳನ್ನು ಹೊಂದಿರುವುದು!

ಮಂದಿರಕ್ಕೆ ಹತ್ತಿಕೊಂಡೆ ಕೆಳಗೆ ವಸ್ತುಸಂಗ್ರಹಾಲಯವಿದ್ದು ಅದರಲ್ಲಿ ಈ ಮಂದಿರ ನಿರ್ಮಾಣ ಕಾಲದ ವಿವಿಧ ಸನ್ನಿವೇಶಗಳನ್ನು ತೋರಿಸುವ ಚಿತ್ರಗಳು ಮತ್ತು ಬಿರ್ಲಾ ಕುಟುಂಬದ ವಿವಿಧ ಚಿತ್ರಗಳು ನೋಡಲು ಸಿಗುತ್ತವೆ. ಮಂದಿರದ ಹತ್ತಿರದ ಸುಂದರ ಉದ್ಯಾನ ಉಂದಿರಕ್ಕೆ ವಿಶೇಷ ಮೆರಗನ್ನು ನೀಡಿದೆ. ರಾತ್ರಿಯ ವೇಳೆ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕೃತವಾಗುವ ಈ ಮಂದಿರ ನೋಡುಗರ ಕಣ್ಣುಸೆಳೆಯುವಂಥದ್ದು. ವಿಶಾಲವಾದ ಮತ್ತು ಎತ್ತರವಾದ ಪ್ರದೇಶದಲ್ಲಿ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಈ ಮಂದಿರ ಪಶ್ಚಿಮ ಜೈಪುರದ ಒಂದು ವಿಶಿಷ್ಟ ಆಕರ್ಷಣೆಯಾಗಿದೆ.

ಪ್ರಾಚೀನ ತಂತ್ರಜ್ಞಾನದ ಕುರುಹು ಜಂತರ್‌ ಮಂತರ್‌


ಬಿರ್ಲಾಮಂದಿರವನ್ನು ನೋಡಿಕೊಂಡು ನಾವು ನೋಡಲು ಬಂದದ್ದು ಜೈಪುರದ ಅತ್ಯಂತ ಮಹತ್ವದ ಸ್ಥಳವಾದ ʻಜಂತರ್‌ಮಂತರ್‌ʼ ನೋಡಲು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದಿಂದ ʻಜಾಗತಿಕ ಪಾರಂಪರಿಕ ಮಹತ್ವದ ಸ್ಥಳʼವೆಂದು ಗುರುತಿಸಲ್ಪಟ್ಟಿರುವ ಭಾರತದ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಜಂತರ್‌ ಮಂತರ್‌ ಒಂದು ಪ್ರಾಚೀನ ಖಗೋಳ ವೀಕ್ಷಣಾಲಯ. ಕ್ರಿ.ಶ. ೧೬೮೮ರಿಂದ ೧೭೪೩ರವರೆಗೆ ಜೈಪುರ ರಾಜ್ಯದ ರಾಜನಾಗಿದ್ದ ಮತ್ತು ಜೈಪುರ ನಗರವನ್ನು ನಿರ್ಮಿಸಿದ ಮಹಾರಾಜ ಸವಾಯಿ ಜೈ ಸಿಂಗ್‌ ಭಾರತದಲ್ಲಿ ವಿವಿಧಕಡೆ ಸ್ಥಾಪಿಸಿದ ಒಟ್ಟು ಐದು ಖಗೋಳ ವೀಕ್ಷಣಾಲಯಗಳಲ್ಲಿ ಅತ್ಯಂತ ವಿಶಾಲವಾದದ್ದು ಮತ್ತು ಸುವ್ಯವಸ್ಥಿತವಾಗಿ ಇದುವರೆಗೂ ಕಾಪಾಡಲ್ಪಟ್ಟ ವೀಕ್ಷಣಾಲಯವೆಂದರೆ ಅದು ಜೈಪುರದ ಜಂತರ್‌ ಮಂತರ್. ಜೈಪುರದ ಈ ಖಗೋಳ ವೀಕ್ಷಣಾಲಯ ೧೭೨೮ ರಿಂದ ೧೭೩೪ ರ ಅವಧಿಯಲ್ಲಿ ನಿರ್ಮಿಸಲ್ಪಟ್ಟರೆ ಉಳಿದ ನಾಲ್ಕು ವೀಕ್ಷಣಾಲಗಳಾದ ದೆಹಲಿ ವೀಕ್ಷಣಾಲಯ ೧೭೨೪ ರಲ್ಲಿ, ಮಥುರಾ ವೀಕ್ಷಣಾಲಯ ೧೭೩೮ರಲ್ಲಿ, ಉಜ್ಜೈನಿ ವೀಕ್ಷಣಾಲಯ ೧೭೩೪ರಲ್ಲಿ ಮತ್ತು ಬನಾರಸ್‌ ವೀಕ್ಷಣಾಲಯ ೧೭೩೭ರಲ್ಲಿ ಸ್ಥಾಪಿಸಲ್ಪಟ್ಟಿವೆ.

ಜಂತರ್‌-ಮಂತರ್‌ ಈ ಹೆಸರಿನಲ್ಲಿರುವ ʻಜಂತರ್‌ʼ ಅಂದರೆ ಉಪಕರಣಗಳು ಎಂದೂ ʻಮಂತರ್‌ʼ ಎಂದರೆ ಲೆಕ್ಕಾಚಾರ ಎಂದೂ ಅರ್ಥ. ಜಂತರ್‌ಮಂತರ್‌ ಹೆಸರೇ ಸೂಚಿಸುವಂತೆ ಆಕಾಶಕಾಯಗಳಾದ ಸೂರ್ಯ, ಚಂದ್ರ, ನಕ್ಷತ್ರಗಳು, ಒಳಗೊಂಡಂತೆ ವಿವಿಧ ಗೃಹನಕ್ಷತ್ರಗಳ ಚಲನವಲನಗಳನ್ನು ಅಧ್ಯಯನ ಮಾಡಲಿಕ್ಕೆಂದು ರೂಪಿತವಾದ ಬಹುಮುಖ್ಯವಾದ ಒಂದು ಖಗೋಳ ವೀಕ್ಷಣಾಲಯ. ಮೊಗಲ್‌ ಚಕ್ರವರ್ತಿ ಮೊಹಮ್ಮದ್‌ ಶಾ ಗೃಹತಾರೆಗಳ ಲೆಕ್ಕಾಚಾರವನ್ನು ಕರಾರುವಕ್ಕಾಗಿ ಗುರುತಿಸಿ ಕ್ಯಾಲೆಂಡರ್‌ ರಚಿಸುವ ಒಂದು ಮಹತ್ವದ ಕೆಲಸಕ್ಕೆ ಮಹಾರಾಜ ಸವಾಯಿ ಜೈಸಿಂಗ್ ಅವರನ್ನು ನೇಮಿಸಿದನಂತೆ. ಏಳು ವರ್ಷಗಳ ಕಠಿಣ ಶ್ರಮದಿಂದ ಜೈಸಿಂಗ್‌ ಅವರು ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರಂತೆ. ಇಲ್ಲಿ ಗೃಹ ನಕ್ಷತ್ರಗಳನ್ನು ದೂರದಿಂದ ವೀಕ್ಷಿಸಲು, ಅವುಗಳ ಚಲನವಲನಗಳನ್ನು ಕರಾರುವಕ್ಕಾಗಿ ಅಳೆಯಲು ಮಾಡಿರುವ ತಾಂತ್ರಿಕ ಮತ್ತು ಯಾಂತ್ರಿಕ ಕಾರ್ಯಗಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆರಗುಗೊಳಿಸುವಂತೆ ಇವೆ.


ಜೈಪುರದಲ್ಲಿ ಯಾವ ಯಾವ ಕಾಲದಲ್ಲಿ ಯಾವ ಯಾವ ಸಮಯಕ್ಕೆ ಸೂರ್ಯನ ಬೆಳಕು ಹೇಗೆಲ್ಲ ಬೀಳುತ್ತದೆ. ನೆರಳು ಯಾವ ದಿನದಂದು ಎಲ್ಲಿ ಬೀಳುತ್ತದೆ, ಯಾವ ಯಾವ ತಿಂಗಳಲ್ಲಿ ಯಾವ ಯಾವ ಸಮಯಕ್ಕೆ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಆಗುತ್ತವೆ ಎಂಬುದನ್ನು ಕರಾರುವಕ್ಕಾಗಿ ತಿಳಿಸುವಂಥ ಅದ್ಭುತ ವ್ಯವಸ್ಥೆ ಆ ಕಾಲಕ್ಕೇ ಇಲ್ಲಿ ಇದ್ದದ್ದು ನಿಜಕ್ಕೂ ಆಶ್ಚರ್ಯಪಡುವ ಸಂಗತಿಯಾಗಿದೆ. ಎತ್ತರವಾದ ಗೋಡೆಗಳು, ಚಕ್ರಾಕಾರದ ರಚನೆಗಳು, ತ್ರಿಕೋನ, ಚೌಕ, ಆಯತಾಕಾರದ ಎಂತೆಂಥದೋ ರಚನೆಗಳು ಏನೇನೋ ಹೇಳಲು ಇಲ್ಲಿ ರೂಪಿತವಾಗಿವೆ. ಎಲ್ಲವನ್ನೂ ನಾವು ತಿಳಿಯುವುದು ಕಷ್ಟದ ಕೆಲಸವೆಂದೇ ಹೇಳಬೇಕು. ಉಳಿದೆಲ್ಲ ಜಂತರ್‌ ಮಂತರ್‌ ಗಳಲ್ಲಿ ನೋಡಲು ಸಿಗದೇ ಇರುವ ಒಂದು ವಿಶೇಷವಾದ ವಸ್ತುವೆಂದರೆ ಇಲ್ಲಿರುವ ʻರಾಸಿವಲಯ ಯಂತ್ರʼ. ಇದು ಹಿಂದೂ ಪಂಚಾಂಗಗಳು ಹೇಳುವ ಜನ್ಮರಾಶಿಗಳಿಗನುಗುಣವಾಗಿ ಸಮಯವನ್ನು ಲೆಕ್ಕಾಚಾರ ಮಾಡುವ ಒಂದು ವ್ಯವಸ್ಥೆ. ಇದನ್ನು ೧೯೦೧ರ ವೇಳೆಗೆ ಅಲ್ಲಿನ ರಾಜನಾಗಿದ್ದ ಮಹಾರಾಜ ಎರಡನೆಯ ಸವಾಯಿ ಮಾಧವ ಸಿಂಗ್ ಅಂದಿನ ತನ್ನ ರಾಜ್ಯದ ಇಂಜನಿಯರ್‌ಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮರುಸ್ಥಾಪನೆ ಮಾಡಿ ಸುಸಜ್ಜಿತಗೊಳಿಸಿದ್ದಾನೆ. ದಿನದ ಗಂಟೆ ನಿಮಿಷ ಸೆಕೆಂಡ್‌ ಮಾತ್ರವಲ್ಲ ಸೆಕೆಂಡಿನ ಭಾಗವನ್ನೂ ಅಳೆಯುವಷ್ಟು ಸೂಕ್ಷ್ಮ ವ್ಯವಸ್ಥೆ ಇಲ್ಲಿದೆ ಎಂದರೆ ಆ ಕಾಲಕ್ಕೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಸಾಧಿಸಿದ ಪ್ರಗತಿ ಎಷ್ಟು ದೊಡ್ಡಮಟ್ಟದ್ದಿತ್ತು ಎಂಬ ಅರಿವು ನಮಗೆ ಆಗದಿರದು. ವಿಜ್ಞಾನ, ತಂತ್ರಜ್ಞಾನ, ಕ್ಷೇತ್ರದಲ್ಲಿ ಅಧ್ಯಯನ ನಡೆಸುವವರಿಗೆ ಈಗಲೂ ಅಧ್ಯಯನದ ಪ್ರಮುಖ ಆಕರವಾಗಿರುವ ಈ ಜಂತರ್‌ ಮಂತರ್‌ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನಮ್ಮ ಪ್ರಾಚೀನರ ಕೊಡುಗೆ ಎಷ್ಟುದೊಡ್ಡದಿತ್ತು ಎಂಬುದನ್ನು ತಿಳಿಯಲು ಪ್ರಮುಖ ಸಾಕ್ಷಿಯಾಗಿ ನಿಂತಿದೆ.

ಭವ್ಯ ಪರಂಪರೆ ಬಿಂಬಿಸುವ ಸಿಟಿ ಪ್ಯಾಲೇಸ್:‌

ಜಂತರ್‌ಮಂತರ್‌ಗೆ ಹೊಂದಿಕೊಂಡೇ ಇರುವ ʻಸಿಟಿಪ್ಯಾಲೇಸ್‌ʼ ಜೈಪುರದ ಪ್ರಮುಖವಾದ ನೋಡತಕ್ಕ ಸ್ಥಳಗಳಲ್ಲಿ ಒಂದು. ಇದು ಜೈಪುರವನ್ನು ಆಳಿದ ರಾಜರ ಅರಮನೆ. ಈಗ ಅದನ್ನು ʻಸವಾಯಿ ಜೈಪುರ ಸಿಟಿ ಪ್ಯಾಲೇಸ್‌ ಮ್ಯೂಜಿಯಂʼ ಎಂದು ಕರೆಯಲಾಗುತ್ತಿದ್ದು ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. ಈ ಭವ್ಯ ಅರಮನೆಯ ನಿರ್ಮಾಣ ಜೈಪುರ ನಗರದ ನಿರ್ಮಾತೃವೆಂದು ಗುರುತಿಸಲಾಗುವ ಮಹಾರಾಜ ಸವಾಯಿ ಜೈಸಿಂಗ್‌ ತನ್ನ ಆಸ್ತಾನವನ್ನು ೧೭೨೭ರ ವೇಳೆಗೆ ಅಮೀರ್‌ನಿಂದ (ಅಂಬೇರಾದಿಂದ) ಇಲ್ಲಿಗೆ ಸ್ಥಳಾಂತರಿಸಿದ ಸಂದರ್ಭದಲ್ಲಿಯೇ ಆರಂಭವಾಗಿದ್ದು ಮುಂದಿನ ಅನೇಕ ವರ್ಷಗಳಲ್ಲಿ ಅದು ಒಳಗೆ ಅನೇಕ ಪ್ರತ್ಯೇಕ ರಚನೆಗಳನ್ನು ಸಭಾಂಗಣಗಳನ್ನೂ ರಚಿಸಿಕೊಂಡು ಇಂದಿನ ಸ್ವರೂಪ ತಲುಪಿದೆ. ವೀರೇಂದ್ರ ಪೋಲ್‌ ಮತ್ತು ಉದಯ ಪೋಲ್‌ ಎಂಬ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರುವ ಈ ಅರಮೆನೆ ಸಂಕೀರ್ಣದಲ್ಲಿ ಚಂದ್ರಮಹಲ್‌ ಎಂದು ಕರೆಯಲ್ಪಡುವ ಮಹಾರಾಜರು ವಾಸಮಾಡುತ್ತಿದ್ದ ಪ್ರಮುಖ ಅರಮನೆ ಸೇರಿದಂತೆ ಪರಸ್ಪರ ಸಂಪರ್ಕಹೊಂದಿರುವ ಏಳು ರಾಜಾಂಗಣಗಳಿವೆ.



ಭಾರತೀಯ ವಾಸ್ತುಶಾಸ್ತ್ರದ ನಿಯಮಗಳಿಗನುಗುಣವಾಗಿ ರಚಿಸಲ್ಪಟ್ಟಿದೆ ಎಂದು ಹೇಳಲಾಗುವ ಜೈಪುರದ ಈ ಅರಮನೆಯ ಸಂಕೀರ್ಣ ಆರಂಭದಿಂದ ಕೊನೆಯವರೆಗೂ ಜೈಪುರವನ್ನು ಆಳಿದ ರಾಜರ ರಾಜಧಾನಿಯ ಪ್ರಮುಖ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸಿರುವಂತದ್ದು. ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುವ ತಾಣವಾಗಿಯೂ, ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸಿರುವಂಥದ್ದು. ಈಗ ಈ ಅರಮನೆಯ ಸಂಕೀರ್ಣದ ನಾಲ್ಕು ರಾಜಾಂಗಣಗಳೂ ಸೇರಿದಂತೆ ವಸ್ತುಸಂಗ್ರಹಾಲಯವು ಪ್ರವಾಸಿಗರಿಗೆ ಮುಕ್ತವಾಗಿದ್ದು, ಭಾರತೀಯ ಇತಿಹಾಸ, ಕಲೆ, ವಾಸ್ತುಶಿಲ್ಪ, ಮಾತ್ರವಲ್ಲ ಸಾಹಿತ್ಯ, ಸಂಗೀತ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರಿಗೆ ಒಂದು ಸಂಪದ್ಭರಿತ ಆಕರಗಳ ತಾಣವಾಗಿದೆ ಎಂದು ಹೇಳಬಹುದು.

ಈ ಸಂಕೀರ್ಣದಲ್ಲಿ ಸುಮಾರು ಆರೇಳು ನೋಡಲೇಬೇಕಾದ ಸ್ಥಳಗಳಿವೆ. ಅವುಗಳಲ್ಲಿ ʻಪ್ರೀತಮ್‌ ನಿವಾಸ ಚೌಕʼ ಒಂದು. ರಾಜರ ಪ್ರಮುಖ ನಿವಾಸವಾದ ʻಚಂದ್ರಮಹಲ್‌ʼಗೆ ಹೊಂದಿಕೊಂಡಿರುವ ಈ ಸ್ಥಳ ಅರಮನೆಯ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದ್ದ ಸ್ಥಳವಾಗಿದೆ. ಇಲ್ಲಿರುವ ನಾಲ್ಕು ದ್ವಾರಗಳು ನಾಲ್ಕು ಕಾಲವನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತಿದ್ದರೂ ನಾಲ್ಕೂ ದ್ವಾರಗಳ ಮೇಲೆ ನಾಲ್ಕು ಮುಖ್ಯವಾದ ಹಿಂದೂ ದೇವತೆಗಳ ಮೂರ್ತಿಗಳು ಇರುವುದನ್ನು ನಾವು ಕಾಣಬಹುದು. ಇದರ ನಂತರ ನೋಡತಕ್ಕ ಇನ್ನೊಂದು ಸ್ಥಳವೆಂದರೆ ಅದು ʻಸರ್ವತೋ ಭದ್ರʼ ಎಂಬ ಸಭಾಂಗಣ. ಇದು ರಾಜ ಮನೆತನದ ಖಾಸಗೀ ಕಾರ್ಯಕ್ರಮಗಳು, ಪೂಜೆ ಇತ್ಯಾದಿ ನಡೆಯುತ್ತಿದ್ದ ಸ್ಥಳ. ಇದು

ಖಾಸಗೀವಲಯದವರಿಗೆ ಮಾತ್ರ ಪ್ರವೇಶ ಇರುವಂಥದ್ದು. ರಾಜಮನೆತನದ ಹಬ್ಬ ಹರಿದಿನಗಳ ಆಚರಣೆಗಳು ಇಲ್ಲಿ ನಡೆಯುತ್ತಿದ್ದವಂತೆ. ಈ ಸ್ಥಳದಲ್ಲಿ ಬಹಳ ಮಹತ್ವದ ಎರಡು ವಸ್ತುಗಳಿವೆ. ಅವೆಂದರೆ ರಾಜಮನೆತನದವರು ಪೂಜೆ ಪುನಸ್ಕಾರಕ್ಕಾಗಿ ಪವಿತ್ರ ಗಂಗಾಜಲವನ್ನು ತರಲು ಬಳಸುತ್ತಿದ್ದ ಎರಡು ಬೃಹತ್‌ ಆದ ಬೆಳ್ಳಿಯ ಪಾತ್ರೆಗಳು! ಇವು ಎಷ್ಟು ದೊಡ್ಡದಿವೆ ಎಂದರೆ ಇವುಗಳ ಒಳಗೆ ಸಾಕಷ್ಟು ಎತ್ತರವಾಗಿಯೂ ಬಲಿಷ್ಠವಾಗಿಯೂ ಇರುವ ವ್ಯಕ್ತಿಯೊಬ್ಬ ಈ ಪಾತ್ರೆಗಳ ಒಳಗೆ ನಿಂತರೆ ಹೊರಗೆ ಯಾರಿಗೂ ಕಾಣುವುದಿಲ್ಲ!! ಇವುಗಳ ಇನ್ನೊಂದು ವಿಶೇಷತೆ ಎಂದರೆ ಇಂಗ್ಲೆಂಡಿನಲ್ಲಿ ಅಲ್ಲಿನ ರಾಜ ಏಳನೇ ಎಡ್ವರ್ಡ್‌ ಅವರ ಕಿರೀಟಧಾರಣ ಸಮಾರಂಭ ನಡೆದಾಗ ಆ ಸಮಾರಂಭಕ್ಕೆ ಹೋಗಿದ್ದ ಜೈಪುರದ ರಾಜ ಇವುಗಳಲ್ಲಿ ಗಂಗಾಜಲದೊಂದಿಗೆ ಅಲ್ಲಿಗೆ ಪ್ರಯಾಣ ಮಾಡಿದ್ದರಂತೆ!

ಈ ಸಂಕೀರ್ಣದಲ್ಲಿರುವ ʻಸಭಾನಿವಾಸʼ ಹೆಸರೇ ಸೂಚಿಸುವಂತೆ ರಾಜರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತಿದ್ದ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದ ಸ್ಥಳ. ಮೊಗಲ್‌ ದೊರೆಗಳ ದಿವಾನಿ-ಇ-ಆಮ್‌ ರೀತಿಯ ಸ್ಥಳ ಇದಾಗಿದ್ದು ಇಲ್ಲಿ ಜೀವಂತ ಮನುಷ್ಯ ಗಾತ್ರದ ಪೇಯಿಂಟಿಂಗ್ಸ್‌ ಅತ್ಯಾಕರ್ಷಕವಾಗಿವೆ. ಇಲ್ಲಿಯೇ ಇರುವ ʻಮುಬಾರಕ್‌ ಹಾಲ್‌ʼ ರಾಜರು ತಮ್ಮ ಅತಿಥಿಗಳಿಗೆ ವಿಶೇಷವಾಗಿ ಯುರೋಪಿಯನ್‌ ಅತಿಥಿಗಳ ವಾಸಕ್ಕಾಗಿ ಕಟ್ಟಿಸಿದ್ದ ಅತಿಥಿಗೃಹ. ಈಗ ಇದು ರಾಜ ಮನೆತನದ ಉಡುಪುಗಳ ಗ್ಯಾಲರಿಯಾಗಿದ್ದು ಆಗ ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಉಡುಪುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿನ ಕಸೂತಿ ಹಾಕಲ್ಪಟ್ಟ ಬಟ್ಟೆಗಳು, ಕಾರ್ಪೆಟ್ಟುಗಳು, ಚಾಪೆಗಳು ಅತ್ಯಾಕರ್ಷಕವಾಗಿವೆ. ಇದರ ಪಕ್ಕದಲ್ಲಿಯೇ ಇರುವ ʻಸಿಲೇಹ್‌ಖಾನಾʼ ರಜಪೂತ ಮತ್ತು ಮೊಗಲ್‌ ಸಾಮ್ರಾಜ್ಯದಲ್ಲಿ ಬಳಕೆ ಇದ್ದ ವೈವಿಧ್ಯಮಯ ಆಯುಧಗಳ ಸಂಗ್ರಹವಾಗಿದೆ. ಈ ಆಯುಧಗಳನ್ನು ವಿವಿಧ ಅರಮನೆಗಳಂತೆ ಇಲ್ಲಿಯೂ ಅಲಂಕಾರಿಕವಾಗಿ ಜೋಡಿಸಲಾಗಿದೆ. ಇಲ್ಲಿರುವ ಒಂದು ಅಪರೂಪದ ವಸ್ತು ಎಂದರೆ ಮೊಗಲ್‌ ರಾಜಕುಮಾರಿ ಜಹನರಾ ಅವರ ಅಪರೂಪದ ಆ‍ಧ್ಯಾತ್ಮಿಕ ಆತ್ಮಚರಿತ್ರೆ. ಇದು ಉಳಿದುಕೊಂಡಿರುವ ಏಕೈಕ ದಾಖಲೆ ಎಂದು ಹೇಳಲಾಗುತ್ತದೆ. ಜೈಪುರ ಆಗ್ರಾ ಒಳಗೊಂಡ ಆಗಿನ ನಕ್ಷೆ ಕೂಡ ಇಲ್ಲಿ ನೋಡಲು ಸಿಗುತ್ತದೆ.


ಇನ್ನುಳಿದ ಈ ಅರಮನೆ ಸಂಕೀರ್ಣದ ಪ್ರಮುಖ ಅಂಗಗಳೆಂದರೆ ಒಂದು ʻಪೇಯಿಂಟಿಂಗ್‌ ಮತ್ತು ಫೋಟೋ ಗ್ಯಾಲರಿʼ. ಅರಮನೆ, ಜೈಪುರ ನಗರ, ರಾಜ್ಯ ಇತ್ಯಾದಿಗಳ ನಕ್ಷೆಗಳು, ವೈವಿಧ್ಯಮಯ ಪೇಯಿಂಟಿಂಗ್‌ ಅಷ್ಟೇ ಅಲ್ಲದೆ ಮಹಾರಾಜ ಎರಡನೆಯ ಸವಾಯಿ ರಾಮ್‌ ಸಿಂಗ್ ಬಳಸುತ್ತಿದ್ದ ಗ್ಲಾಸ್‌ ಕ್ಯಾಮರಾ ಮತ್ತು ಅದರಲ್ಲಿ ಅವರು ತೆಗೆದ ನೆಗಿಟಿವ್ ಫೋಟೋಗಳು ಕೂಡ ಇಲ್ಲಿವೆ. ಇವು ನಮ್ಮ ದೇಶಕ್ಕೆ ಕ್ಯಾಮರಗಳು ಹೊಸದಾಗಿ ಬಂದ ಕಾಲದಲ್ಲಿ ಅವು ಹೇಗಿದ್ದವು ಎಂಬುದನ್ನು ನಮಗೆ ತಿಳಿಸುತ್ತವೆ. ಈ ಗ್ಯಾಲರಿಯ ಪಕ್ಕದಲ್ಲಿರುವ ʻರಥಖಾನಾʼ ಈ ರಾಜಮನೆತನದವರು ಸುಮಾರು ಮೂರು ಶತಮಾನದ ಕಾಲಾವಧಿಯಲ್ಲಿ ಬಳಸುತ್ತಿದ್ದ ವಿವಿಧ ಸಾರಿಗೆಯ ವಾಹನ ಮಾದರಿಗಳ ಚಿತ್ರಣವನ್ನು ನಮಗೆ ನೀಡುತ್ತದೆ. ವಿವಿಧ ಬಗೆಯ ಮತ್ತು ಮಾದರಿಯ ರಥಗಳು ಇಲ್ಲಿವೆ. ಇವುಗಳಲ್ಲಿ ಸಾಮಾನ್ಯ ಸಾರಿಗೆಗೆ ಬಳಸುತ್ತಿದ್ದ ರಥಗಳು, ಅಂಬಾರಿಗಳು, ಹೌದಾಗಳು ದೋಣಿಗಳು, ಇವುಗಳ ಜೊತೆಗೆ ಯುದ್ಧಕ್ಕೆ ಬಳಸುತ್ತಿದ್ದ ವೈವಿಧ್ಯಮಯ ರಥಗಳೂ ಇತರೆ ವಾಹನಗಳೂ ಇವೆ. ಹೀಗೆ ವೈವಿಧ್ಯಮಯ ವಸ್ತುಗಳ ಸಂಗ್ರಹದ ಕಾರಣಕ್ಕಾಗಿ ಈ ಅರಮನೆ ವಸ್ತುಸಂಗ್ರಹಾಲಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಎನ್ನಬಹುದು.

ಅನ್‌ಲಿಮಿಟೆಡ್‌ ಅಜ್ಜಂದಿರು!

ಇಷ್ಟೆಲ್ಲ ನೋಡುವುದರೊಳಗೆ ಮಧ್ಯಾಹ್ನ ಆಗಿಯೇ ಬಿಟ್ಟಿತು. ಮಧ್ಯಾಹ್ನದ ನಂತರ ಮುಖ್ಯವಾಗಿ ನಾವು ಅಂಬೇರಾ ಅರಮೆನೆ ಕೋಟೆ ಸೇರಿದಂತೆ ಇನ್ನೂ ಕೆಲವು ಪ್ರಮುಖ ಸ್ಥಳಗಳನ್ನು ನೋಡುವುದಿತ್ತು. ಹಾಗಾಗಿಯೇ ಅಂಬೇರಕ್ಕೆ ಹೋಗುವ ದಾರಿಯಲ್ಲಿ ಊಟಕ್ಕಾಗಿ ಒಂದು ಹೊಟೆಲ್‌ ಬಳಿ ವಾಹನ ನಿಲ್ಲಿಸಲಾಯಿತು. ಸಾಮಾನ್ಯವಾಗಿ ಯಾವುದೇ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ವಾಹನಗಳು ಬೇರೆ ಬೇರೆ ರಾಜ್ಯಗಳಿಂದ ಬಂದ ಪ್ರವಾಸಿಗರನ್ನು ತಮ್ಮದೇ ಆದ ಹೊಟೆಲ್‌ನಲ್ಲಿ ಅದು ಸಾಧ್ಯವಿಲ್ಲದಿದ್ದರೆ ಸಾಕಷ್ಟು ಉತ್ತಮವಾದ ಖಾಸಗೀ ಹೊಟೆಲ್‌ಗಳಿಯೇ ಊಟಕ್ಕೆ ನಿಲ್ಲಿಸುತ್ತವೆ. ಊಟತಿಂಡಿ ಸರಿಯಿಲ್ಲದಿದ್ದರೆ ಇಲಾಖೆಗೆ ಸರ್ಕಾರಕ್ಕೆ ಹೊರರಾಜ್ಯದಲ್ಲಿ ಕೆಟ್ಟಹೆಸರು ಬರುತ್ತದೆ ಎಂಬುದು ಅವರ ಲೆಕ್ಕಾಚಾರ. ಇಲ್ಲಿಯೂ ನಮ್ಮ ವಾಹನ ಒಂದು ಉತ್ತಮವಾದ ಖಸಗೀ ಹೊಟೆಲ್‌ಬಳಿಯೇ ನಿಂತಿತು.


ಈ ಜೈಪುರ ದಿನದ ಪ್ರವಾಸದ ತಂಡದಲ್ಲಿ ಕರ್ನಾಟಕದಿಂದ ನಾನೊಬ್ಬನೇ ಇದ್ದೆ. ಉಳಿದವರು ಉತ್ತರ ಪ್ರದೇಶ, ತೆಲಂಗಾಣ, ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಿಂದ ಬಂದವರಾಗಿದ್ದರು. ಇವರಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ನಾಲ್ಕುಜನ ಅಜ್ಜಂದಿರ ಬಗ್ಗೆ ಎರಡು ಮಾತು ಹೇಳಬೇಕು. ಈ ನಾಲ್ಕೂಜನ ಅಜ್ಜಂದಿರು ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದರು. ಜೈಪುರದಲ್ಲಿ ನಡೆಯುವ ಯಾವುದೋ ಯೋಗಶಿಬಿರದಲ್ಲಿ ಪಾಲ್ಗೊಂಡು ಅಲ್ಲಿಯೇ ಕೆಲದಿನ ಇದ್ದ ಅವರು ಅಂದು ಬಿಡುವು ಮಾಡಿಕೊಂಡು ನಗರವೀಕ್ಷಣೆಗೆ ನಮ್ಮ ತಂಡ ಸೇರಿಕೊಂಡಿದ್ದರು. ಅವರೆಲ್ಲರೂ ಹೆಚ್ಚೂ ಕಡಿಮೆ ಎಪ್ಪತ್ತರ ವಯಸ್ಸಿನ ಆಸುಪಾಸಿನಲ್ಲಿದ್ದರು. ನಾನು ಎಲ್ಲಿಯೇ ಫೋಟೋ ಹೊಡೆದುಕೊಳ್ಳಲು ನಿಂತರೂ ʻನಮ್ಮದೊಂದು ತೆಗೆಯಿರಿʼ ಎಂದು ಅವರು ನನ್ನ ಹತ್ತಿರ ಬಂದು ದುಂಬಾಲು ಬೀಳುತ್ತಿದ್ದರು.

ಈ ಹೋಟೆಲ್‌ನಲ್ಲಿ ಊಟಕ್ಕೆ ಅವರನ್ನು ಬಿಟ್ಟಾಗ ಎಲ್ಲರೂ ಊಟಮಾಡಿ ಅರ್ಧಗಂಟೆ ಅವರಿಗಾಗಿ ಕಾದರೂ ಅವರು ಊಟದ ಟೇಬಲ್‌ ಬಿಟ್ಟು ಏಳುವ ಲಕ್ಷಣಗಳೇ ಕಾಣಲಿಲ್ಲ! ನಾನು ಹೋಗಿ ನೋಡಿ ಹೇಳಿಬಂದೆ. ನಮ್ಮ ಟೂರ್‌ ಗೈಡ್‌ ಕೂಡ ಹೋಗಿ ಕರೆದು ಬಂದ. ಏನೇ ಆದರೂ ಅವರದ್ದು ಮುಗಿಯುತ್ತಿರಲಿಲ್ಲ. ಊಟಕ್ಕೆ ಆರ್ಡರ್‌ ಮಾಡುವಾಗ ಅವರು, “ಅನ್‌ಲಿಮಿಟಿಡ್‌ ತಾನೆ?” “ಫುಲ್‌ ತಾನೆ?” ಎಂದು ಪದೇ ಪದೇ ವಿಚಾರಿಸಿಕೊಂಡು ಆರ್ಡರ್‌ ಮಾಡುತ್ತಿದ್ದರು. ವಾಸ್ತವವಾಗಿ ʻಲಿಮಿಟೆಡ್‌ʼ ಅಥವಾ ʻಪ್ಲೇಟ್‌ ಮೀಲ್ಸ್‌ʼ ಕೊಟ್ಟರೂ ಅದರಲ್ಲಿಯ ಅರ್ಧವನ್ನೂ ತಿನ್ನುವುದು ಆಗದೇ ಹಾಗೇ ಬಿಡುತ್ತಿದ್ದ ಅವರು ವೇಯಿಟರ್‌ಗೆ ʼಫುಲ್‌ ತಾನೆ?ʼ ʼಅನ್‌ಲಿಮಿಟೆಡ್‌ ತಾನೆ?ʼ ಎಂದು ಪದೇ ಪದೇ ಕೇಳಿ ಕೇಳಿ ಖಾತರಿ ಪಡಿಸಿಕೊಳ್ಳುವುದನ್ನು ಮಾತ್ರ ಬಿಡುತ್ತಲೇ ಇರಲಿಲ್ಲ. ಹಾಗಾಗಿ ಇಡೀ ದಿನ ಈ ಅನ್‌ಲಿಮಿಟೆಡ್‌ ಅಜ್ಜಂದಿರು ಪ್ರವಾಸಕ್ಕೆ ಒಂದಿಷ್ಟು ಹಿನ್ನಡೆ ಮಾಡಿದ್ದು ಸುಳ್ಳಲ್ಲ.

ಅಂತೂ ಇಂತೂ ಊಟ ಮುಗಿಸಿ ನಾವು ಸೀದಾ ಹೊರಟದ್ದು ಊರ ಹೊರಗಿನ ಅಂಬೇರ ಬೆಟ್ಟದ ಮೇಲಿನ ಕೋಟೆ ಮತ್ತು ಅರಮನೆಯನ್ನು ನೋಡಲು. ʻಅಂಬೇರಾʼ ಎಂಬ ಹೆಸರು ಮೊದಲು ಆ ಸ್ಥಳವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಸುಸಾವತ್‌ ಮೀನಾ ಎಂಬ ಗುಡ್ಡಗಾಡು ಜನರ ಅಧಿದೇವತೆ ʻಅಂಬಿಕೇಶ್ವರʼ ಎಂಬುದರಿಂದ ಬಂದಿರುವಂಥದ್ದು. ಈ ಅಂಬೇರ ಜೈಪುರ ರಾಜವಂಶಸ್ಥರು ಜೈಪುರವನ್ನು ನಿರ್ಮಿಸುವವರೆಗೆ ಅಂದರೆ ಕ್ರಿ.ಶ. ೧೭೨೭ರವರೆಗೆ ಅವರ ರಾಜಧಾನಿಯಾಗಿದ್ದ ಊರು. ಈ ಊರಿನ ಬಗ್ಗೆ ಕನ್ನಡದ ಹಿರಿಯ ಲೇಖಕರಾದ ಡಾ ಶಿವರಾಮ ಕಾರಂತ ಅವರು ತಮ್ಮ ʼಅಬುವಿನಿಂದ ಬರಾಮಕ್ಕೆʼ ಎಂಬ ಪ್ರವಾಸ ಕಥನದಲ್ಲಿ ಬರೆದದ್ದನ್ನು ನಾನು ಓದಿದ್ದೆ. ಅವರು ಎರಡನೆಯ ಬಾರಿ ಅಲ್ಲಿಗೆ ಹೋದಾಗ “ನಾನು ಮೊದಲ ಸಲ ಇಲ್ಲಿ ಬಂದಾಗ ಜನವಸತಿ ಇರಲಿಲ್ಲ. ಈಗ ಅನೇಕ ಸಿಂಧಿ ಕುಟುಂಬಗಳು ಮನೆಮಾಡಿಕೊಂಡಿದದ್ದವು.” ಎಂದು ಬರೆದಿದ್ದಾರೆ. ಆದರೆ ಈಗ ಅಂಬೇರ ಕಾಲಕ್ಕನುಗುಣವಾಗಿ ಇನ್ನೂ ಬೆಳೆದು ಅಲ್ಲಿ ಒಂದು ಉಪನಗರವೇ ಸೃಷ್ಟಿಯಾಗಿದೆ!

ತುಂಬು ಚೆಲುವಿನ ಅಂಬೇರಾ ಅರಮನೆ

ಜೈಪುರದ ಹೊರವಲಯದಲ್ಲಿ ಅರಾವಳಿ ಬೆಟ್ಟಶ್ರೇಣಿಯ ಕಣಿವೆಯೊಂದರ ಹತ್ತಿರ ಇರುವ ಈ ಅಂಬೇರ ಅರಮನೆ ಮತ್ತು ಕೋಟೆ ಅಲ್ಲಿನ ಬೆಟ್ಟವೊಂದರ ಮೇಲೆ ಇವೆ. ಬೆಟ್ಟದ ಬುಡದಿಂದ ಮೇಲೆ ಹತ್ತಿಹೋಗಲು ಮೆಟ್ಟಿಲುಗಳು ಇವೆಯಾದರೂ ಅವನ್ನು ಹತ್ತಿ ಅರಮನೆ ಮುಟ್ಟಲು ಮೈಯಲ್ಲಿ ಒಂದಿಷ್ಟು ಶಕ್ತಿ ಇರಲೇಬೇಕಾಗುತ್ತದೆ. ಹತ್ತಿ ಹೋಗಲು ಆಗದವರನ್ನು ಮೇಲೆ ಕರೆದೊಯ್ಯಲು ಈಗ ʼಹಾಥಿ ಸಫಾರಿʼ ಮತ್ತು ʼಜೀಪ್‌ ಸವಾರಿʼ ವ್ಯವಸ್ಥೆ ಇದೆ. ನಾವು ಹೋದಾಗ ಇವೆರಡೂ ಯಾಕೋ ಚಾಲ್ತಿಯಿರಲಿಲ್ಲವಾದ್ದರಿಂದ ಆಗುವವರು ಹತ್ತುವುದು ಆಗದವರು ಕೆಳಗಿಂದಲೇ ನೋಡಿ ಆನಂದಿಸುವುದು ಇವೆರಡೇ ಆಯ್ಕೆಗಳು ಇದ್ದವು. ನಮ್ಮ ಅನ್‌ಲಿಮಿಟೆಡ್‌ ಅಜ್ಜಂದಿರಿಗೆ, ನಮ್ಮ ಟೂರ್‌ ಮ್ಯಾನೆಜರ್‌, “ನಿಮಗೆ ಹತ್ತುವುದು ಆಗುವುದಿಲ್ಲ. ನಾವು ಮೇಲೆ ಹೋಗಿ ಬರುತ್ತೇವೆ ಇಲ್ಲಿಯೇ ಕುಳಿತಿರಿ” ಎಂದು ಹೇಳಿದರೆ ಅವರು, “ನಮಗೆ ಆಗುತ್ತದೆ ಹತ್ತುತ್ತೇವೆ” ಎಂದು ಬಹಳ ಉತ್ಸಾಹದಿಂದಲೇ ನಮ್ಮ ಜೊತೆಗೆ ಹತ್ತತೊಡಗಿದರಾದರೂ ನೂರು ಮೆಟ್ಟಿಲು ಹತ್ತುವುದರೊಳಗೆ ಸುಸ್ತಾಗಿ, “ಇಲ್ಲಿಯೇ ನಮ್ಮದೊಂದು ಫೋಟೋ ಹೊಡೆಯಪ್ಪ” ಎಂದು ಅಲ್ಲಿಯೇ ನನ್ನಿಂದ ಒಂದು ಫೋಟೋ ತೆಗೆಸಿಕೊಂಡು, “ನಾವು ಇಲ್ಲಿಯೇ ಇರ್ತೇವೆ; ನೀವು ಹೋಗಿ ಬನ್ನಿ” ಎಂದು ನಮ್ಮನ್ನು ಮೇಲಕ್ಕೆ ಕಳಿಸಿಕೊಟ್ಟರು.

ಅಂಬೇರ ಬೆಟ್ಟದ ಮೇಲೆ ವಿಶಾಲವಾದ ಮತ್ತು ಗಟ್ಟಿಮುಟ್ಟಾದ ಕೋಟೆಯ ಒಳಗೆ ಇರುವ ಜೈಪುರ ಅರಸರ ಪುರಾತನ ಅರಮನೆ ಈಗಲೂ ತನ್ನ ಕಲೆ ವಾಸ್ತುಶಿಲ್ಪಗಳಿಂದಾಗಿ ಗಮನಸೆಳೆಯುವಂತಿದೆ. ಮೂಲತಃ ಸುಸಾವತ್‌ ಮೀನಾ ಎಂಬ ಗುಡ್ಡಗಾಡು ಪಂಗಡದ ನಿಯಂತ್ರಣದಲ್ಲಿದ್ದ ಈ ಅಂಬೇರವನ್ನು ಹನ್ನೊಂದನೆಯ ಶತಮಾನದ ವೇಳೆಗೆ ದುಲಾರೈ ಎಂಬುವವ ತನ್ನ ವಶಕ್ಕೆ ತೆಗೆದುಕೊಂಡು ಕಚವಾ ರಜಪೂತ ರಾಜವಂಶದ ಆಡಳಿತಕ್ಕೆ ಅಡಿಪಾಯ ಹಾಕುತ್ತಾನೆ. ಅವನ ಮಗ ಕಾಕಿಲ್‌ದೇವನ ಕಾಲದಲ್ಲಿ ರಜಪೂತರು ಈ ಭಾಗದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಈಗ ಇಲ್ಲಿರುವ ಅರಮನೆಯ ನಿರ್ಮಾಣಕಾರ್ಯ ಆರಂಭವಾದದ್ದು ಹದಿನಾರನೆಯ ಶತಮಾನದ ಅಂತ್ಯಭಾಗದಲ್ಲಿ. ರಾಜಾ ಒಂದನೇ ಮಾನಸಿಂಗ್‌ ಈ ಕಟ್ಟಡ ಸಂಕೀರ್ಣಕ್ಕೆ ಅಡಿಪಾಯ ಹಾಕಿದರೆ ಮುಂದೆ ಆಡಳಿತಕ್ಕೆ ಬಂದ ಒಂದನೇ ಮಿರ್ಜಾ ರಾಜ ಜೈಸಿಂಗ್‌ ಮತ್ತು ಎರಡನೆಯ ಸವಾಯಿ ಜೈಸಿಂಗ್‌ ಅವರು ಈ ಸಂಕೀರ್ಣವನ್ನು ತಮ್ಮದೇ ಆದ ಅಭಿರುಚಿ ಮತ್ತು ಆಸಕ್ತಿಗನುಗುಣವಾಗಿ ವಿಸ್ತರಿಸಿದ್ದಾರೆ.

ಅಂಬೇರ ಅರಮನೆ ಮೂರು ಅಂತಸ್ತುಗಳನ್ನು ಒಳಗೊಂಡ ಒಂದು ಭವ್ಯ ಕಟ್ಟಡ. ದೇವಸ್ಥಾನ, ಸಭಾಂಗಣ, ಮತ್ತು ರಾಜರ ಅಂತಃಪುರಗಳನ್ನೊಳಗೊಂಡ ಈ ಕಟ್ಟಡದಲ್ಲಿನ ವಿಶೇಷತೆ ಎಂದರೆ ಕನ್ನಡಿಗಳು ಮತ್ತು ಮೊಸಾಯಿಕ್‌ಗಳಿಂದ ಅಲಂಕೃತವಾದ ಗೊಡೆ ಮತ್ತು ಮೇಲ್ಚಾವಣಿಗಳು. ಇವು ಸೂರ್ಯನ ಪ್ರಕಾಶಕ್ಕೆ ಮಿರಿಮಿರಿಮಿಂಚುವ ಮೂಲಕ ಇಡೀ ಕಟ್ಟಡಕ್ಕೆ ನಕ್ಷತ್ರಲೋಕದ ಸೊಬಗನ್ನು ನೀಡಿವೆ. ಇಲ್ಲಿನ ಕನ್ನಡಿಯ ಮುಂದೆ ನನ್ನನ್ನು ನಿಲ್ಲಿಸಿ ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ನನ್ನ ಟೂರ್‌ ಮಾರ್ಗದರ್ಶಿ ಸೆರೆಹಿಡಿದು ತೋರಿಸಿಕೊಟ್ಟ. ಅನೇಕರು ಇಲ್ಲಿನ ಕನ್ನಡಿಯಲ್ಲಿ ತಮ್ಮ ಫೋಟೋ ತೆಗೆದುಕೊಳ್ಳುವುದನ್ನು ನೋಡಿ ಅಲ್ಲಿನ ಒಳಾಂಗಣ ಉದ್ಯಾನದಲ್ಲಿ ಕೆಲಸಮಾಡುವ ಕಾರ್ಮಿಕರನ್ನು ಮಾತನಾಡಿಸಿ, ಅರಮನೆ ಮೇಲಿಂದ ಇಡೀ ಅಂಬೇರ ಉಪನಗರವನ್ನು ನೋಡಿ ಕೆಳಗಿಳಿದೆ. ಅರಮನೆ ಮೇಲಿನಿಂದ ಕೆಳಗಿನ ಕೆರೆ ಅಲ್ಲಿರುವ ನೀರು, ಆ ಕೆರೆಯ ಪಕ್ಕದಲ್ಲಿ ಈ ಬೆಟ್ಟಕ್ಕೆ ಎರುರಾಗಿರುವ ಇನ್ನೊಂದು ಬೆಟ್ಟ ಆ ಬೆಟ್ಟವನ್ನು ಹತ್ತಲು ತುದಿಯವರೆಗೂ ಇರುವ ದಾರಿ ಇವೆಲ್ಲವೂ ಅತ್ಯಂತ ಮನೋಹರವಾಗಿ ಕಾಣುತ್ತವೆ. ನಾನು ಹೋದದ್ದು ಅಕ್ಟೋಬರ್‌ ತಿಂಗಳಾಗಿರುವುದರಿಂದ ಅರಾವಳಿ ಪರ್ವತ ಇನ್ನೂ ಹಚ್ಚಹಸಿರಾಗಿದ್ದು ಈ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಕೆಳಗಿಳಿದು ಬಂದು ನಹರಾಗಡ್‌ ಅರಮನೆ ನೋಡಲು ಬಸ್‌ ಹತ್ತಿದೆವು.

ನಹರಾಗಢ್ ಮತ್ತು ಜೇನುಗೂಡಿನಂಥ ಹವಾಮಹಲ್!

ʻನಹರಾಗಡ್‌ʼ ಅರಮನೆ ಜೈಪುರದಲ್ಲಿ ನೋಡಲು ಇರುವ ಇನ್ನೊಂದು ಪ್ರಮುಖ ಸ್ಥಳ. ಬ್ರಹ್ಮಪುರಿಯ ಕೃಷ್ಣನಗರ ಎಂಬ ಸ್ಥಳದಲ್ಲಿ ಅರಾವಳಿ ಬೆಟ್ಟಗಳ ತುದಿಯಲ್ಲಿರುವ ಈ ಅರಮನೆಯನ್ನು ಜೈಪುರ ನಗರವನ್ನು ನಿರ್ಮಿಸಿದ ಮಹಾರಾಜ ಸವಾಯಿ‌ ಎರಡನೆಯೆ ಜೈಸಿಂಗ್ ಅವರೇ ಕ್ರಿ.ಶ. ೧೭೩೪ ರ ವೇಳೆಗೆ ಕಟ್ಟಿಸಿದ್ದಾರೆ. ಮೂಲದಲ್ಲಿ ʻಸುದರ್ಶನಗಡ್‌ʼ ಎಂದು ಕರೆಯಲ್ಪಡುತ್ತಿದ್ದ ಈ ಬೆಟ್ಟದ ಮೇಲಿನ ಅರಮನೆ ಮತ್ತು ಕೋಟೆಯನ್ನು ನಂತರದ ದಿನಗಳಲ್ಲಿ ʼಹುಲಿಗಳ ವಾಸಸ್ಥಳʼ ಎಂಬ ಅರ್ಥ ಬರುವ ʻನಹರಾಗಡ್‌ʼ ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ತಮ್ಮ ರಾಜ್ಯದ ಮೇಲೆ ದಾಳಿ ಮಾಡುವ ನಿರೀಕ್ಷೆಯಿದ್ದ ಮರಾಠರ ಸೈನ್ಯದ ಚಲನವಲನಗಳ ಮೇಲೆ ಕಣ್ಣಿಡಲು ಸ್ಥಾಪಿಸಲಾಯಿತು ಎನ್ನಲಾಗುತ್ತದೆ. ‌

ಇದು ಸರಿಯೂ ಇರಬಹುದು. ಏಕೆಂದರೆ ರಾಜಧಾನಿ ಜೈಪುರ ಇರುವುದು ಸಮತಟ್ಟಾದ ಬಯಲು ಪ್ರದೇಶದಲ್ಲಿ. ವೈರಿ ಸೈನ್ಯ ಮುತ್ತಿಗೆ ಹಾಕುವುದು ಅಲ್ಲಿ ತಕ್ಷಣಕ್ಕೆ ತಿಳಿಯುವುದು ಕಷ್ಟ. ಹಾಗಾಗಿಯೇ ಈ ಬೆಟ್ಟದ ತುದಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿರುವ ಸಾಧ್ಯತೆ ಇದೆ. ಜೈಪುರಕ್ಕೆ ಬರುವವರು ಪ್ರಶಾಂತತೆಗೆ ಹೆಸರಾಗಿರುವ ಈ ಸ್ಥಳಕ್ಕೆ ಬರದೇ ಸಾಮಾನ್ಯವಾಗಿ ಹೋಗುವುದಿಲ್ಲ. ಇಲ್ಲಿಂದ ಇಡೀ ಜೈಪುರದ ನೋಟ ಅತ್ಯಂತ ಮನೋಹರವಾಗಿ ಕಾಣುತ್ತದೆ. ಸೂರ್ಯಾಸ್ತ ನೋಡುವ ಸ್ಥಳವಾಗಿಯೂ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಈ ಬೆಟ್ಟದ ಮೇಲಿನಿಂದ ಕಾಣುವ ಜೈಪುರದ ಕೆಲವು ಫೋಟೋ ತೆಗೆದುಕೊಂಡು ಈ ಅರಮನೆಯಲ್ಲಿನ ʻಸ್ಟೆಪ್‌ವೆಲ್‌ʼ ಹಾಗೂ ವಿವಿಧ ಬಗೆಯ ಒಂಬತ್ತು ಸುಂದರ ವಿಭಾಗಗಳನ್ನು ನೋಡಿಕೊಂಡು ಅಲ್ಲಿಂದ ಹೊರಟೆವು. ಸೂರ್ಯಾಸ್ತಕ್ಕೆ ಇನ್ನೂ ಬಹಳ ಸಮಯ ಇದ್ದದ್ದರಿಂದ ಅಷ್ಟುಹೊತ್ತು ನಿಲ್ಲುವುದಕ್ಕೆ ಆಗಲಿಲ್ಲ.

ಜೈಪುರದಲ್ಲಿ ನೋಡತಕ್ಕ ಮಖ್ಯವಾದ ಎಲ್ಲ ಸ್ಥಳಗಳನ್ನು ಚೆನ್ನಾಗಿ ನೋಡಬೇಕೆಂದರೆ ಕನಿಷ್ಠ ಎರಡು ದಿನಗಳನ್ನು ಇದಕ್ಕಾಗಿ ಇಟ್ಟುಕೊಳ್ಳಬೇಕು. ನಾನು ಒಂದೇ ದಿನವನ್ನು ಇಟ್ಟುಕೊಂಡದ್ದರಿಂದ ಕೆಲವು ಮುಖ್ಯವಾದ ಸ್ಥಳಗಳನ್ನು ನೋಡಲು ಆಗಲಿಲ್ಲ. ʻಜೈಗಢ್‌ʼ ಕೋಟೆಯನ್ನು ಬಿಟ್ಟೆವು. ʻಜಲಮಹಲ್‌ʼ ಹತ್ತಿರ ಒಂದು ನಿಮಿಷದಲ್ಲಿ ಫೋಟೋ ತೆಗೆದುಕೊಳ್ಳಲು ಮಾತ್ರ ಸಾಧ್ಯವಾಯಿತು. ಆದರೆ ಯಾವುದನ್ನು ಬಿಟ್ಟರೂ ʻಹವಾಮಹಲ್‌ʼ ನೋಡದೆ ಬಿಡುವಂತಿರಲಿಲ್ಲ. ಅದನ್ನು ನೋಡಿದರೆ ಮಾತ್ರ ಜೈಪುರ ಪ್ರವಾಸ ಪೂರ್ಣವಾದಂತೆ. ಏಕೆಂದರೆ ಇಡೀ ಭಾರತದಲ್ಲಿ ಬೇರೆ ಬೇರೆ ಕಡೆ ಜೈಪುರದಲ್ಲಿರುವಂತೆ ಅನೇಕ ಅರಮನೆಗಳಿವೆ. ಆದರೆ ಎಲ್ಲಿಯೂ ಇಲ್ಲದ ವಿಶೇಷ ಕಟ್ಟಡವೆಂದರೆ ಅದು ʻಹವಾಮಹಲ್ʼ.‌ ಇದನ್ನು ನೋಡಲು ಅಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲವಾದ್ದರಿಂದ ಸಾಮಾನ್ಯವಾಗಿ ಅದನ್ನು ಹೊರಗಿನಿಂದ ಮಾತ್ರ ತೋರಿಸುತ್ತಾರೆ.

ʻಹವಾಮಹಲ್‌ʼ ಬಗ್ಗೆ ಎರಡು ಮಾತ್ರ ಹೇಳಲೇಬೇಕು. ಅದು ಜೈಪುರದ ವೈಶಿಷ್ಟ್ಯ. ಅಂತರ್‌ಜಾಲದಲ್ಲಿ ಜೈಪುರವನ್ನು ತೋರಿಸುವುದೇ ಈ ʻಹವಾಮಹಲ್‌ʼ ಚಿತ್ರದೊಂದಿದೆ. ಜೈಪುರದ ಅರಮನೆ ಸಂಕೀರ್ಣಕ್ಕೆ ಹೊಂದಿಕೊಂಡೇ ಇರುವ ಈ ಹವಾಮಹಲ್‌ ೯೫೩ ʻಜಾರೋಕಾʼ ಅಂದರೆ ಕಿಡಕಿಗಳನ್ನು ಹೊಂದಿರುವ ಜೇನುಗೂಡಿನ ಮಾದರಿಯಲ್ಲಿ ರಚಿತವಾಗಿರುವ ಒಂದು ಸುಂದರ ಕಟ್ಟಡ. ಒಟ್ಟಾರೆಯಾಗಿ ಕೃಷ್ಣನ ಕಿರಿಟವನ್ನು ಹೋಲುವಂತೆ ಇದರ ರಚನೆ ಇದೆ. ಜೈಪುರದ ನಿರ್ಮಾತೃ ಸವಾಯಿ ಜೈಸಿಂಗ್‌ ಅವರ ಮೊಮ್ಮಗ ಸವಾಯಿ ಪ್ರತಾಪ್‌ ಸಿಂಗ್‌ ಅಧಿಕಾರದಲ್ಲಿದ್ದಾಗ ಕಟ್ಟಲ್ಪಟ್ಟ ಈ ಕಟ್ಟಡ ವಿಶೇಷವಾಗಿ ಅರಮನೆಯ ಮಹಿಳೆಯರಿಗಾಗಿಯೇ ಕಟ್ಟಲ್ಪಟ್ಟಿರುವಂಥದ್ದು. ಅವರು ಅರಮನಯೆ ಒಳಗೇ ಕುಳಿತು, ಹೊರಭಾಗದ ಜನರಿಗೆ ಕಾಣದೆಯೇ ಹೊರಭಾಗದ ನಗರ ಜೀವನವನ್ನು ವೀಕ್ಷಿಸಲು ಅನುಕೂಲವಾಗುವಂತೆ ಇದರ ರಚನೆಯಿದೆ. ಸ್ವಾಭಾವಿಕ ಗಾಳಿಯ ಚಲನೆ ಆಗುವಂತೆ ಇದನ್ನು ರಚಿಸಲಾಗಿರುವುದರಿಂದ ಇದನ್ನು ಹವಾಮಹಲ್‌ ವಿಂಡ್‌ ಪ್ಯಾಲೇಸ್‌ʼ ಎಂದೇ ಕರೆಯಲಾಗುತ್ತದೆ. ಇದರ ವಿನ್ಯಾಸವನ್ನು ಮಾಡಿದ ಲಾಲ್‌ಚಂದ್‌ ಉಸ್ತಾದ್‌ ನಿಜಕ್ಕೂ ಒಬ್ಬ ನಿಪುಣರೇ ಇರಬೇಕು ಅನ್ನಿಸುತ್ತದೆ.


ಇಷ್ಟನ್ನು ನೋಡುವುದರೊಳಗೆ ಸಂಜೆ ಆರಾಯಿತು. ನಮಗೂ ಆಯಾಸವಾಗಿತ್ತು. ಸಂಜೆಯಾದ ಕಾರಣ ಜೈಪುರ ನಗರ ಕೂಡ ಸಂಚಾರಿ ದಟ್ಟಣೆಯಿಂದ ಕೂಡಿತ್ತು. ಈ ಸಂಚಾರಿ ದಟ್ಟಣೆಯನ್ನು ದಾಟಿ ರೈಲ್ವೇ ನಿಲ್ದಾಣದ ಹತ್ತಿರ ನಮ್ಮ ಬಸ್‌ ಬಂದಾಗ ನಮ್ಮ ಮಾರ್ಗದರ್ಶಿಗೆ ಮತ್ತು ಸಹಪ್ರವಾಸಿಗರಿಗೆ  ಧನ್ಯವಾದ ತಿಳಿಸಿ ಕೆಳಗಿಳಿದೆ. ಆಗಲೂ ಈ ಅನ್‌ಲಿಮಿಟೆಡ್‌ ಅಜ್ಜಂದಿರು, “ಫೋಟೋ ಕಳಿಸಿ ಸರ್‌” ಎಂದು ನನಗೆ ನೆನಪು ಮಾಡುವುದನ್ನು ಮರೆಯಲಿಲ್ಲ!

*****

ಡಾ ರಾಜೇಂದ್ರ ಬುರಡಿಕಟ್ಟಿ