ಥಾರ್ ಮರುಭೂಮಿಯಲ್ಲೊಂದು ಸುತ್ತು
ರಾಜಸ್ತಾನದ ಪ್ರವಾಸದ ಭಾಗವಾಗಿ ನಾನು ಜೈಸಲ್ಮೇರ್ ತಲುಪಿದಾಗ ಮಧ್ಯಾಹ್ನ ಹನ್ನೆರಡೂವರೆ ಆಗಿತ್ತು. ನನ್ನ ಮೊದಲ ಯೋಜನೆಯ ಪ್ರಕಾರ ಸಾಧ್ಯವಾದರೆ ಅಂದು ಜೈಸಲ್ಮೇರ್ ನಗರದಲ್ಲಿ ಒಂದೆರಡು ಸ್ಥಳಗಳನ್ನು ನೋಡಿ ಮಧ್ಯಾಹ್ನ ಊಟ ಮಾಡಿ ಅಲ್ಲಿಂದ ಸುಮಾರು ನಲವತ್ತೈದು ಕಿಲೋಮೀಟರ್ ದೂರದಲ್ಲಿ ಗ್ರಾಮೀಣ ಭಾಗದಲ್ಲಿ ಇರುವ ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ಎಂಬ ಮರುಭೂಮಿಯ ಹಳ್ಳಿಗೆ ಹೋಗಿ ಅಲ್ಲಿ ಥಾರ್ ಮರುಭೂಮಿಯಲ್ಲಿ ಸಂಚರಿಸಿ ಅಲ್ಲಿಯೇ ಉಳಿಯುವುದು ಮತ್ತು ಮರುದಿನ ಮರಳಿ ಬಂದು ಜೈಸಲ್ಮೇರ್ ನಗರದಲ್ಲಿ ಉಳಿದುಕೊಂಡಿರುವ ಸ್ಥಳಗಳನ್ನು ನೋಡುವುದು ಎಂದಿತ್ತು.
ಆದರೆ ಜೈಸಲ್
ಮೇರ್ ತಲುಪುವ ಹೊತ್ತಿಗೆ ನನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಂಡು ಮೊದಲ ದಿನ ನೇರವಾಗಿ ಸ್ಯಾಮ್
ಸ್ಯಾಂಡ್ ಡ್ಯೂನ್ಸ್ಗೇ ಹೋಗಿ ಉಳಿದು ಮರುದಿನ ಜೈಸಲ್ ಮೇರ್ ನೋಡುವುದು ಎಂದು ಮಾಡಿಕೊಂಡೆ. ಇದಕ್ಕೆ
ಮುಖ್ಯ ಕಾರಣ ನಾವು ನಾಲ್ಕು ಜನ ಹೋಗುವುದು ಎಂದು ಆಗಿದ್ದು ಕೊನೆಗೆ ಎಲ್ಲರೂ ಪ್ರವಾಸಕ್ಕೆ ಬರದೇ ನಾನೊಬ್ಬನೇ
ಹೋದದ್ದು. ಜೈಸಲ್ಮೇರ್ಗೆ ರೈಲು ಸಂಚಾರ ಕೊನೆಯಾಗುತ್ತದೆ. ಅಲ್ಲಿಂದ ಮರುಭೂಮಿಯಲ್ಲಿ ನಾನು ಹೋಗಬೇಕಾದ
ಹಳ್ಳಿಗೆ ಯಾವುದೇ ಬಸ್ ಸಂಚಾರ ಇಲ್ಲ. ಆಟೋಗಳಿಗೆ ನಗರವ್ಯಾಪ್ತಿ ಬಿಟ್ಟು ಹೊರಹೋಗಲು ಅಲ್ಲಿನ ಆಡಳಿತ
ಅವಕಾಶ ಕೊಟ್ಟಿಲ್ಲ. ಹೀಗಾಗಿ ನಾವು ಟ್ಯಾಕ್ಷಿ (ಕಾರು) ಮಾಡಿಕೊಂಡೇ ಹೋಗಬೇಕು. ಹತ್ತಿರಕ್ಕೆ ಎಲ್ಲಾದ್ರೂ
ಸರ್ಕಾರಿ ಬಸ್ ಹೋಗಬಹುದೇ ಎಂದು ನೋಡಿದರೆ ಅದೂ ಸಸೂತ್ರ ಆಗಲಿಲ್ಲ.
ನಾನು ರೈಲು ಇಳಿಯುತ್ತಿದ್ದಂತೆ
ನನ್ನನ್ನು ಮುತ್ತಿಕೊಂಡ ಬಾಡಿಗೆ ಟ್ಯಾಕ್ಸಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ ಸ್ಪಷ್ಟವಾಗಿ, “ನನ್ನನ್ನು
ಪರಸ್ಪರ ಹಂಚಿಕೆಯ ಸಫಾರಿಯಲ್ಲಿ (ಶೇರಿಂಗ್ ವ್ಯವಸ್ಥೆಯಲ್ಲಿ) ಡ್ಯೂನ್ಸ್ಗೆ ಕರೆದೊಯ್ಯುವೆಯಾ?” ಎಂದು
ಕೇಳಿದೆ. ಅದಕ್ಕೆ ಅವನು, “ಸಾಧ್ಯವಿದೆ ಸರ್, ಅದಕ್ಕೆ ತಾವು ಮೂರು ನೂರು ರೂಪಾಯಿ ಕೊಟ್ಟರೆ ಸಾಕಾಗುತ್ತದೆ.
ಆದರೆ ಅದಕ್ಕಾಗಿ ತಾವು ಐದು ಆರು ಗಂಟೆಗಳ ಕಾಲ ಕಾಯಬೇಕಾಗಬಹುದೇನೋ. ನೀವು ಸ್ವಂತ ಕಾರು ಮಾಡಿಕೊಳ್ಳುವುದಾದರೆ
ನಿಮ್ಮನ್ನು ಬಿಟ್ಟು ಬರಲು ನನಗೆ ೧೫೦೦ ರೂಪಾಯಿ ಕೊಡಬೇಕಾಗುತ್ತದೆ. ಮರಳಿ ಕರೆತರುವ ಜವಾಬ್ದಾರಿಯೂ
ನನ್ನದೇ ಆದರೆ ೨೯೦೦ ಕೊಡಿ ಸಾಕು” ಎಂದ. ಇಂತಹ ಪ್ರದೇಶದಲ್ಲಿ ಮೂರರಿಂದ ನಾಲ್ಕು ಜನ ಕೂಡಿ ತಂಡವಾಗಿ
ಪ್ರವಾಸಮಾಡುವಾಗ ಈ ಖರ್ಚುಗಳು ಹಂಚಿಹೋಗುತ್ತವೆ. ಆದರೆ ನಾನು ಒಬ್ಬನೇ ಹೋಗಿದ್ದರಿಂದ ಇದು ನನಗೆ ತುಂಬಾ
ದುಬಾರಿ ಆಗುತ್ತಿತ್ತು. ಅದಕ್ಕಾಗಿ ನಾನು, “ಕಾಯಲು ಸಿದ್ಧನಿದ್ದೇನೆ. ತಡವಾದರೂ ಸಫಾರಿಯಲ್ಲಿಯೇ ಬರುತ್ತೇನೆ.”
ಎಂದೆ. ಆಗ ಅವನು “ಹಾಗಾದರೆ ನೀವು ಊಟಮಾಡಿ ನಾನು ಇತರೆ ಪ್ರಯಾಣಿಕರು ಯಾರಾದರೂ ಸಿಗುತ್ತಾರಾ ನೋಡುತ್ತೇನೆ”,
ಎಂದು ನನ್ನನ್ನು ಒಂದು ಹೊಟೆಲ್ ಬಳಿ ಇಳಿಸಿ ಹೋದ. ಹೋಗುವಾಗ, “ತಮಗೆ ಬೇರೆ ಯಾವುದಾದರೂ ಸವಾರಿ ಟ್ಯಾಕ್ಸಿ
ಸಿಕ್ಕರೆ ತಾವು ಹೋಗಲೂ ಬಹುದು” ಎಂದು ಹೇಳಿದ.
ಸರಿ ಎಂದು ನಾನು
ಆ ಹೊಟೆಲ್ಲಿನ್ಲಲಿ ಊಟಮಾಡಿ ಒಂದು ಗಂಟೆ ಕಾದರೂ ಅವನೂ ಬರಲಿಲ್ಲ. ಬೇರೆ ಯಾವ ಸವಾರಿ ಟ್ಯಾಕ್ಸಿ ಸಿಗುವ
ಲಕ್ಷಣವೂ ಕಾಣಲಿಲ್ಲ. ಇನ್ನೂ ಕಾಯುವುದರಲ್ಲಿ ಅರ್ಥವಿಲ್ಲವೆಂದು ಭಾವಿಸಿ, ಇಳಿಸಿ ಹೋದ ಅವನಿಗೇ ಫೋನ್
ಮಾಡಿ, “ನಿಮಗೆ ಇನ್ನೂ ಯಾರೂ ಸಿಗಲಿಲ್ಲವೇ?” ಎಂದು ಕೇಳಿದೆ. “ಇಲ್ಲ ಸರ್” ಎಂದು ಅವನು ಹೇಳಿದ. ಅನಿವಾರ್ಯವಾಗಿ
ನಾನು, “ಕಾರ್ ತನ್ನಿ ಹೋಗೋಣ” ಎಂದು ಹೇಳಿದೆ. ಅವನು ತಕ್ಷಣ ಬಂದ. ಅನಿವಾರ್ಯವಾಗಿ ಸ್ವಂತ ಕಾರು ಮಾಡಿಕೊಂಡು
ಹೊರಟೆ.
ಮಳೆಬೆಳೆ ಇಲ್ಲದಲ್ಲಿ ಕಲ್ಲೇ ಜೀವನಾಧಾರ
ಹೋಗುವ ಮಾರ್ಗದಲ್ಲಿ
ಕುತೂಹಲದಿಂದ ಅಲ್ಲಿನ ಬೆಳೆ, ಜನರ ಮನೆಗಳು, ಶಾಲೆಗಳು ಇತ್ಯಾದಿಗಳನ್ನು ವೀಕ್ಷಿಸುತ್ತಾ ನಡೆದೆ. ಇಲ್ಲಿನ
ಜನ ಮಳೆ ಬೆಳೆ ಇಲ್ಲದ ಈ ಸ್ಥಳದಲ್ಲಿ ಹೇಗೆ ಬದುಕುತ್ತಾರೆ. ಎಂಬುದು ನನಗೆ ಕುತೂಹಲದ ಸಂಗತಿಯಾಗಿತ್ತು.
ಜೀವನ ನಡೆಸಲು ಏನು ಉದ್ಯೋಗ ಮಾಡುತ್ತಾರೆ? ಏನು ಬೆಳೆಯುತ್ತಾರೆ ಇತ್ಯಾದಿ ಕೇಳಿ ತಿಳಿದುಕೊಂಡೆ. ಮಳೆ
ಅತ್ಯಂತ ಕಡಿಮೆ ಆಗುವುದರಿಂದ ಇಲ್ಲಿ ಜನ ರೈತಾಪಿ ಕೆಲಸ ಮಾಡುವುದು ಇಲ್ಲ ಎನ್ನುವಷ್ಟು ಕಡಿಮೆ. ಇಲ್ಲಿ
ಬಾರ್ಲಿ ಬಿಟ್ಟರೆ ಪಲ್ಯ ಸಂಬಾರು ಮಾಡುವ ಒಂದೆರಡು ತರಕಾರಿ ಬೆಳೆಯುತ್ತಾರೆ ಅಷ್ಟೆ. ತಮ್ಮ ಜೀವನ ನಡೆಸಲು
ಇಲ್ಲಿನ ಸಾಮಾನ್ಯ ಜನ ಕಲ್ಲಿನಿಂದ ಮೂರ್ತಿಗಳು, ಪಿಂಗಾಣಿಗಳು, ಕಲ್ಲಿನ ಪಾತ್ರೆ ಪಗಡೆಗಳು ಇತ್ಯಾದಿಗಳನ್ನು
ಮಾಡುತ್ತಾರೆ ಇವುಗಳು ದೇಶದ ಬೇರೆ ಬೇರೆ ಭಾಗಗಳಿಗೆ ಹೋಗುತ್ತವೆ ಎಂದು ತಿಳಿಯಿತು. ಆಗ ನಮ್ಮ ನಗರಗಳಲ್ಲಿ
ಕೂಡ ಇಂತಹ ಕಲ್ಲಿನ ಮೂರ್ತಿಗಳು ಪಿಂಗಾಣಿಗಳು ಇತ್ಯಾದಿ ರಸ್ತೆ ಮೇಲೆ ಇಟ್ಟು ಮಾರುವವರು ನನ್ನ ಮನಸ್ಸಿನಲ್ಲಿ
ಸುಳಿದು ಹೋದರು.
ನನ್ನ ಕಾರಿನವನ
ಮನೆ ಕೂಡ ಈ ಥಾರ್ ಮರುಭೂಮಿಯಲ್ಲಿಯೇ ಇದ್ದು ಅದನ್ನೂ ನಾನು ನೋಡಿದೆ. ಇಲ್ಲಿನ ಬಹುತೇಕ ಎಲ್ಲ ಮನೆಗಳೂ
ಹಳದಿಬಣ್ಣದ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿವೆ. ರಾಜಸ್ತಾನದಲ್ಲಿ ಜೈಪುರವನ್ನು ʻಪಿಂಕ್
ಸಿಟಿʼʻ ಎಂದೂ ಉದಯಪುರವನ್ನು ʻಬ್ಲೂ
ಸಿಟಿʼ ಎಂದೂ ಕರೆದಂತೆ ʻಜೈಸಲ್ಮೇರ್ʼನ್ನು ʻಎಲ್ಲೋ
ಸಿಟಿʼ ಎಂದು ಕರೆಯುತ್ತಾರೆ. ಇಲ್ಲಿನ ಎಲ್ಲ ಕಟ್ಟಡಗಳೂ ಬಹುತೇಕ ಈ ಹಳದಿಬಣ್ಣದ ಸ್ವಾಭಾವಿಕ ಇಟ್ಟಿಗೆಗಳಿಂದಲೇ
ಕಟ್ಟಲ್ಪಟ್ಟಿವೆ. ನಮ್ಮಲ್ಲಿ ಕೆಂಪು ಇಟ್ಟಿಗೆಗಳು ಇದ್ದಂತೆ ಇಲ್ಲಿ ಹಳದಿ ಇಟ್ಟಿಗೆಗಳು. ನಮ್ಮಲ್ಲಿಯ
ಇಟ್ಟಿಗೆಗಳು ಮಣ್ಣಿನಿಂದ ಮಾಡಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ. ಆದರೆ ಇಲ್ಲಿನ ಇಟ್ಟಿಗೆಗಳು
ಅಂದರೆ ಅವು ಕಲ್ಲಿನಿಂದಲೇ ಮಾಡಲ್ಪಟ್ಟಂಥವು. ಸುಡಲ್ಪಡದ ಸ್ವಾಭಾವಿಕ ಇಟ್ಟಿಗೆಗಳು.
ಎಲ್ಲೋ ಹತ್ತಿಪ್ಪತ್ತು
ಕಿಲೋಮೀಟರ್ ದೂರಕ್ಕೆ ಮರಳಿನ ಮಧ್ಯೆ ಸ್ಮಶಾನಮೌನದ ಸ್ಥಳದಲ್ಲಿ ಕಾಣುವ ಈ ಮನೆಗಳ ಸುತ್ತ ಒಂದೂ ಗಿಡಗಂಟಿಗಳಿರುವುದಿಲ್ಲ.
ಎಲ್ಲ ಬೋಳುಬೋಳು. ಇಲ್ಲಿ ಮನೆಗಳ ಚಾವಣಿಗೆಲ್ಲ ಕಲ್ಲನ್ನೇ ಹಾಕಿರುತ್ತಾರೆ. ಬಹುಶಃ ಆರ್ ಸಿ ಸಿ ಇಲ್ಲಿನ
ಬಿಸಿಲಿಗೆ ತಡೆದುಕೊಳ್ಳಲು ಸಾಧ್ಯವೇ ಇಲ್ಲದ್ದು ಇದಕ್ಕೆ ಕಾರಣವಿರಬಹುದು. ಮಾರ್ಗಮಧ್ಯದಲ್ಲಿ ಒಂದೆರಡು
ಶಾಲೆಗಳನ್ನೂ ನೋಡಿದೆ. ಈ ಶಾಲೆಗಳಿಗೆ ಮಕ್ಕಳು ಹೇಗೆ ಬರುತ್ತಾರೋ ಎಲ್ಲಿಂದ ಬರುತ್ತಾರೋ ಏನೋ? ಏಕೆಂದರೆ
ನಮ್ಮಂತೆ ಅಲ್ಲಿ ಬಸ್ಸುಗಳ ವ್ಯವಸ್ಥೆಯೇ ಇಲ್ಲ. ಮನೆಗಳೂ ಶಾಲೆಗಳ ಹತ್ತಿರ ಇರುವುದಿಲ್ಲ. ಈ ಬಗ್ಗೆ
ಯಾವುದಾದರೂ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳುವ ಆಸಕ್ತಿ ಇದ್ದಿತ್ತಾದರೂ ಸಮಯದ
ಹೊಂದಾಣಿಕೆ ಆಗದ ಕಾರಣ ಒಂದೆರಡು ಶಾಲೆಗಳ ಮುಂದೆ ನಿಂತು ಫೋಟೋ ಹೊಡೆದುಕೊಂಡು ಮುಂದೆ ಹೋಗಲು ಮಾತ್ರವೇ
ನನಗೆ ಸಾಧ್ಯವಾಯಿತು.
ಜೀಪ್ ಮತ್ತು ಒಂಟೆ ಸವಾರಿ
ಹೋಗುವಾಗ ಮಾರ್ಗಮಧ್ಯದಲ್ಲಿ
ನನ್ನ ಕಾರಿನ ಚಾಲಕ ಜೈಸಲ್ಮೇರ್ನಲ್ಲಿ ನನ್ನ ಪ್ರವಾಸದ ಯೋಜನೆ ವಿವರ ಕೇಳಿದ. ಅದನ್ನು ಕೇಳಿ ಅವನು,
“ತಾವು ಮುಖ್ಯವಾಗಿ ನೋಡಬೇಕಾದ ಎರಡು ಸ್ಥಳಗಳನ್ನು ಬಿಟ್ಟಿರುವಿರಿ. ಗಡಿಭಾಗಕ್ಕೆ ಹೋಗಿ ಭಾರತ ಮತ್ತು
ಪಾಕಿಸ್ತಾನ ಗಡಿ ನೋಡುವುದು, ಹಾಗೂ ಭಾರತ ಪಾಕಿಸ್ತಾನಗಳ ಮಧ್ಯೆ ೧೯೭೧ರಲ್ಲಿ ನಡೆದ ಯುದ್ಧದ ಸ್ಥಳದಲ್ಲಿ
ಇರುವ ಸ್ಮಾರಕ ಮತ್ತು ಮ್ಯೂಜಿಯಂ ನೋಡುವುದು” ಎಂದ. ನಾನು ಅದಕ್ಕೆ ನನ್ನದೇ ಆದ ಕಾರಣವನ್ನು ಹೇಳಿದೆ.
ನಾನು ಒಬ್ಬನೇ ಬಂದಿರುವುದರಿಂದ ಸ್ವಂತಕ್ಕೆ ಟ್ಯಾಕ್ಸಿ ಮಾಡಿಕೊಂಡು ತಿರುಗಾಡುವುದು ದುಬಾರಿ ಆಗುವುದು
ಮತ್ತು ಜೈಸಲ್ಮೇರ್ನಲ್ಲಿ ನೋಡತಕ್ಕ ಸ್ಥಳಗಳೆಲ್ಲವನ್ನೂ ಒಂದೂವರೆ ದಿನಗಳಲ್ಲಿಯೇ ಮುಗಿಸಬೇಕಾಗಿರುವುದು
ಇದಕ್ಕೆ ನನ್ನ ಮುಖ್ಯವಾದ ಎರಡು ಕಾರಣಗಳಾಗಿದ್ದವು.
ಜೈಸಲ್ಮೇರ್ನಿಂದ
ಮರುಭೂಮಿಯ ಹಳ್ಳಿಗಳಿಗೆ ಕರೆದೊಯ್ಯುವುದು, ಅಲ್ಲಿ ಒಂಟೆ ಸವಾರಿ, ಜೀಪ್ ಸವಾರಿ ಮಾಡಿಸುವುದು, ಅಲ್ಲಿ
ಉಳಿಯುವ ವ್ಯವಸ್ಥೆ, ಊಟತಿಂಡಿ ವ್ಯವಸ್ಥೆ, ಮನರಂಜನೆಯ ವ್ಯವಸ್ಥೆ ಎಲ್ಲವನ್ನೂ ಮಾಡಿ ಮರಳಿ ಜೈಸಲ್ಮೇರ್
ಗೆ ಕರೆತರುವ ಪ್ಯಾಕೇಜ್ ಟೂರನ್ನು ಮಾಡುವ ಅನೇಕ ಟ್ರಾವೆಲ್ ಏಜಂಟರು ಅಲ್ಲಿ ಇದ್ದದ್ದು ನನಗೆ ಗೊತ್ತಿದ್ದರೂ
ಅವು ಬಹಳಷ್ಟು ದುಬಾರಿ ಆಗಿದ್ದರಿಂದ ಮತ್ತು ನನಗೆ ಸ್ವತಂತ್ರವಾಗಿ ತಿರುಗಾಡಲು ಒಂದಿಷ್ಟು ನಿರ್ಬಂಧ
ಅವುಗಳಿಂದ ಉಂಟಾಗುತ್ತಿತ್ತಾದ್ದರಿಂದ ಆ ಪ್ಯಾಕೇಜ್ ಯಾವನ್ನೂ ನಾನು ಮಾಡಿಕೊಳ್ಳದೇ ಮರುಭೂಮಿಯ ಹಳ್ಳಿಯಲ್ಲಿ
ಉಳಿಯಲು ಟೆಂಟ್ ಮಾತ್ರ ಬುಕ್ ಮಾಡಿಕೊಂಡಿದ್ದೆ. ಉಳಿದವನ್ನು ಅಲ್ಲಿಯೇ ಹೋಗಿ ಸಂದರ್ಭಾನುಸಾರ ಮಾಡಿಕೊಳ್ಳುವುದು
ಎಂಬುದು ನನ್ನ ವಿಚಾರವಾಗಿತ್ತು.
ಇದನ್ನು ಕೇಳಿ
ತಿಳಿದ ಆತ, “ತಾವು ಜೀಪ್ ಸವಾರಿ ಮತ್ತು ಒಂಟೆ ಸವಾರಿ ಮಾಡದಿದ್ದರೆ ಧಮರುಭೂಮಿಯ ಅನುಭವವೇ ತಮಗೆ ಆಗುವುದಿಲ್ಲವಲ್ಲ”
ಎಂದು ಹೇಳಿದ ಮಾತ್ರವಲ್ಲ; “ನೀವು ಅಷ್ಟುದೂರದಿಂದ ಬಂದಿರುವಿರಿ. ಗಡಿಭಾಗಕ್ಕೆ ಹೋಗಿ ಗಡಿ ಮತ್ತು ಯುದ್ಧಸ್ಥಳವನ್ನು
ನೋಡಿ ಬಂದರೆ ಮಾತ್ರ ನಿಮ್ಮ ಈ ಭಾಗದ ಪ್ರವಾಸ ಪೂರ್ಣ ಆಗುತ್ತದೆ. ಆದರೆ ನೀವು ಒಬ್ಬರೇ ಬಂದಿರುವುದರಿಂದ
ಟ್ಯಾಕ್ಸಿ ಹಣ ಒಬ್ಬರೇ ಕೊಡಬೇಕಾದುದರಿಂದ ದುಬಾರಿ ಆಗುತ್ತದೆ ಎನ್ನುವುದು ನಿಜ. ವಿಚಾರ ಮಾಡಿ ಹೇಳಿ.
ಧೈರ್ಯಮಾಡಿ ತಾವು ಒಪ್ಪುವುದಾದರೆ ಇಲ್ಲಿನ ಎಲ್ಲ ಭಾಗಗಳನ್ನೂ ನಾನು ಸ್ವತಃ ನಿಮ್ಮ ಜೊತೆಗೆ ಇದ್ದು
ತೋರಿಸಿ ಕಳಿಸುತ್ತೇನೆ. ನಾಳೆ ಇಡೀ ದಿನ ನೋಡುವಂಥದ್ದು ಜೈಸಲ್ಮೇರ್ನಲ್ಲಿ ಏನೂ ಇಲ್ಲ. ನಿಮ್ಮ ಬಸ್
ಬುಕ್ ಆಗಿರುವುದು ನಾಳೆ ರಾತ್ರಿಗೆ. ಅಷ್ಟೊತ್ತು ಅಲ್ಲಿ ಕಾಲ ಕಳೆಯುವುದು ನಿಮಗೆ ತುಂಬಾ ಬೇಸರವನ್ನುಂಟುಮಾಡಬಹುದು.
ಖರ್ಚು ಆದರೂ ಆಗಲಿ ಎಂದು ನೀವು ಒಪ್ಪುವುದಾದರೆ ನಾಳೆ ಬೆಳಿಗ್ಗೆ ಗಡಿಭಾಗಕ್ಕೆ ಕರೆದೊಯ್ಯುವೆ” ಎಂದು
ಹೇಳಿದ.
ನಾನು ಗೊಂದಲದಲ್ಲಿ
ಬಿದ್ದೆ. ಅವನು ಹೇಳುವುದು ನಿಜವಿತ್ತು; ಆದರೆ ನನಗೆ ಅದು ದುಬಾರಿ ಆಗುವುದೂ ನಿಜವಿತ್ತು. ಒಟ್ಟಾರೆ
ಇಂದು ಮತ್ತು ನಾಳಿನ ಎಲ್ಲ ಪ್ರದೇಶಗಳ ವೀಕ್ಷಣೆಗೆ ಎಷ್ಟಾಗುತ್ತದೆ ಎಂದು ಲೆಕ್ಕಹಾಕಿದಾಗ ಅದು ಸುಮಾರು
ಎಂಟು ಸಾವಿರ ಹಣ ಆಗುತ್ತಿತ್ತು. ನಾನು ದೊಡ್ಡ ಧೈರ್ಯ ಮಾಡಿ, “ಆಗಲಿ ನಡೆ; ಖರ್ಚಾದರೂ ಪರವಾಗಿಲ್ಲ.
ಈ ಮರುಭೂಮಿ ಭಾಗದಲ್ಲಿ ನೋಡುವಂಥದ್ದು ಏನೂ ಉಳಿಯಬಾರದು ಎಲ್ಲ ತೋರಿಸಿ ಕಳಿಸು” ಎಂದೆ. ಹೀಗೆ ನಮ್ಮಿಬ್ಬರ
ನಡುವೆ ಒಪ್ಪಂದ ಆದ ನಂತರ ನಮ್ಮ ಕಾರು ನೇರವಾಗಿ ನಮ್ಮ ಟೆಂಟಿಗೆ ಹೋಗುವ ಬದಲು ಕುಲ್ಧಾರ ಎಂಬ ಎಂಬ ಒಂದು ಅಪರೂಪದ ನಿರ್ಜನ ಮತ್ತು ಪಾಳುಬಿದ್ದ ಹಳ್ಳಿಯ ಕಡೆಗೆ
ತಿರುಗಿತು. ಅದು ಒಂದೇ ರಾತ್ರಿಯಲ್ಲಿ ಊರಿನ ಜನವೆಲ್ಲ ಊರುತೊರೆದು ಹೋದ ಒಂದು ಅಪರೂಪದ ಹಳ್ಳಿ. ಆ ಹಳ್ಳಿಯ
ಬಗ್ಗೆಯೇ ನಾನು ವಿಶೇಷ ಲೇಖನವೊಂದನ್ನು ಬರೆದಿರುವುದರಿಂದ ಅದನ್ನು ಇಲ್ಲಿ ವಿಸ್ತರಿಸುತ್ತಿಲ್ಲ.
ಆ ಹಳ್ಳಿಯನ್ನು
ನೋಡಿಕೊಂಡು ಟೆಂಟಿಗೆ ಹೋಗುವ ಮಾರ್ಗದಲ್ಲಿಯೇ ಒಂಟೆ ಸವಾರಿ ಜೀಪ್ ಸವಾರಿ ಮಾಡಿಸುವವರ ವ್ಯವಸ್ಥೆ ಇತ್ತು.
ಸಮಯ ಸುಮಾರು ಐದು ಗಂಟೆ ಆಗಿತ್ತು. “ನೀವು ಈಗ ನೇರವಾಗಿ ಟೆಂಟಿಗೆ ಹೋಗುವುದು ಉಪಯೋಗಕ್ಕೆ ಬರುವುದಿಲ್ಲ.
ಈಗ ಟೆಂಟ್ಗಳಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಜೀಪ್ ಸವಾರಿ ಮತ್ತು ಒಂಟೆ ಸವಾರಿ ಮಾಡುತ್ತಿರುತ್ತಾರೆ.
ಇವೆಲ್ಲವನ್ನೂ ಮಾಡಿಕೊಂಡು ಮರುಭೂಮಿಯಲ್ಲಿ ಸೂರ್ಯಾಸ್ತವನ್ನು ನೋಡಿಕೊಂಡು ಎಲ್ಲರೂ ಏಳುಗಂಟೆಯ ಹೊತ್ತಿಗೆ
ಟೆಂಟ್ಗಳಿಗೆ ಬರುತ್ತಾರೆ. ನೀವೂ ಹಾಗೆ ಮಾಡುವುದು ಒಳ್ಳೆಯದು. ಹೇಗಿದ್ದರೂ ಅಲ್ಲಿ ಮನರಂಜನೆಯ ಕಾರ್ಯಕ್ರಮಗಳು
ಆರಂಭವಾಗುವುದು ಸಂಜೆ ಏಳರ ಮೇಲೆ. ಏನು ಮಾಡುತ್ತೀರಿ?” ಎಂದು ಆತ ನನ್ನ ಮುಖ ನೋಡಿದ. ನನಗೂ ಅದೇ ಸರಿ ಅನ್ನಿಸಿತು.
“ಸರಿ ಅವೆಲ್ಲವನ್ನೂ
ಮುಗಿಸಿಯೇ ಹೋಗೋಣ” ಎಂದು ನಾನು ಹೇಳಿದ್ದರಿಂದ ಅವನು ಮಾರ್ಗಮಧ್ಯದಲ್ಲಿ ಇಂಥ ಸವಾರಿ ಮಾಡಿಸುವ ಜೀಪ್
ಏಜಂಟರ್ ಕ್ಯಾಂಪೊಂದರ ಬಳಿ ಕಾರು ನಿಲ್ಲಿಸಿದ. ಅವನು ಹೇಳಿದಂತೆ ನಮ್ಮ ವಸತಿ ಕ್ಯಾಂಪ್ ಇರುವ ಸ್ಥಳಗಳು
ಮರುಭೂಮಿಯಾದರೂ ಅಲ್ಲಿ ವಿಶಾಲವಾದ ಮರಳಿನ ಸಮುದ್ರ ನಮಗೆ ಕಾಣಸಿಗುವುದಿಲ್ಲ. ಅದನ್ನು ನೋಡಲು ನಾವು
ಜೀಪ್ ಸವಾರಿ ಮಾಡಲೇಬೇಕು. ಮೂರು ಸಾವಿರ ರೂಪಾಯಿ ಮಾತನಾಡಿಕೊಂಡು ನನ್ನ ಕಾರಿನವನಿಗೆ ಅಲ್ಲಿಯೇ ಕಾಯಲು
ಹೇಳಿ ನಾನು ಜೀಪ್ ಏರಿ ಮರಳು ಸಾಗರಕ್ಕೆ ಹೊರಟೆ.
ಮೂರು ಹೆಸರಿನಿಂದ ಕರೆಯಲಾಗುವ ಥಾರ್ ಮರುಭೂಮಿ
ಜೀಪ್ ಸವಾರಿಯವರು ನನಗೆ ಫೋಟೋ ಅಲ್ಬಂ ತೋರಿಸಿ ಮೂರು ಮರುಭೂಮಿಗಳನ್ನೂ ಸೂರ್ಯಾಸ್ತವನ್ನೂ ತೋರಿಸಿಕೊಂಡು ಒಂಟೇ ಸವಾರಿ ಮಾಡಿಸಿಕೊಂಡು ಸುಮಾರು ಒಂದು ಗಂಟೆಯ ಕಾಲ ಮರುಭೂಮಿಯ ಮರಳು ದಾರಿಯಲ್ಲಿ ಸುತ್ತಾಡಿಸಿಕೊಂಡು ಬರುವುದಾಗಿ ಹೇಳುವುದೇನೋ ನಿಜ. ಆದರೆ ವಾಸ್ತವವಾಗಿ ಅವರೆಲ್ಲ ಮಾಡುವುದು ತುಂಬಾ ಚಾಣಾಕ್ಷತನದಿಂದ ಕೂಡಿರುತ್ತದೆ. ಅಲ್ಲಿ ಇರುವುದು ಒಂದೇ ಥಾರ್ ಮರುಭೂಮಿಯೇ ಆದರೂ ಅದು ಕೆಲವು ಕಡೆ ನದಿಯಂತೆ ಭಾಗ ಭಾಗವಾಗಿ ಮರಳನ್ನು ಹರಡಿ ನಡುನಡುಗೆ ಮರಳು ಅಷ್ಟಾಗಿ ಇಲ್ಲದ ಗಟ್ಟಿ ಭೂಮಿಯನ್ನು ನಿರ್ಮಾಣ ಮಾಡಿದೆ. ಈ ಮರಳು ನದಿಗಳು ಆ ಭಾಗದಲ್ಲಿ ಮುಖ್ಯವಾಗಿ ಮೂರು ಭಾಗಗಳಾಗಿದ್ದು ಅವನ್ನು ಅವರು ಕ್ರಮವಾಗಿ ಥಾರ್, ರೋವಲ್ ಮತ್ತು ಸೋನಾರ್ ಎಂದುಮೂರು ಹೆಸರಿನಿಂದ ಕರೆಯುತ್ತಾರೆ. ಒಂದು ಗಂಟೆಯ ಸವಾರಿ ಎಂದರೆ ನಾವೆಲ್ಲ ಸುಮಾರು ನಲವತ್ತು ಐವತ್ತು ಕಿಲೋಮೀಟರ್ ಸುತ್ತಾಡಿಸಬಹುದು ಅಂದುಕೊಳ್ಳುತ್ತೇವೆ. ಆದರೆ ಅವರು ಹತ್ತು ನಿಮಿಷದಲ್ಲಿ ಈ ಮೂರೂ ಮರುಭೂಮಿ ತೋರಿಸುತ್ತಾ ಹೋಗಿ ಕೊನೆಯದರಲ್ಲಿ ಜೀಪ್ ನಿಲ್ಲಿಸುತ್ತಾರೆ.
ಆ ಸ್ಥಳದಲ್ಲಿ
ನಾವು ಇಳಿಯಬೇಕು. ಅಲ್ಲಿ ಮರಳಿನಲ್ಲಿ ನಮ್ಮಸವಾರಿ
ಮಾಡಿಸಲು ಒಂಟೆಗಳನ್ನು ಹೊಂದಿರುವ ಬೇರೆಯವರು ಇರುತ್ತಾರೆ. ಅದಕ್ಕೆ ನಾವು ದುಡ್ಡುಕೊಟ್ಟು ಒಂಟೇ ಸವಾರಿ
ಮಾಡಬಹುದು. ಫೋಟೋ ವಿಡಿಯೋ ತೆಗೆಸಿಕೊಳ್ಳಬಹುದು. ಅಲ್ಲಿ ಮರಳಿನಲ್ಲಿಯೇ ವೇಗವಾಗಿ ಓಡುವ ಕೆಲವು ವಿಶಿಷ್ಟ
ಯಂತ್ರಚಾಲಿತ ಚಿಕ್ಕ ಚಿಕ್ಕ ವಾಹನಗಳೂ ಇವೆ. ಅವಕ್ಕೂ ದುಡ್ಡುಕೊಟ್ಟು ಸವಾರಿ ಮಾಡಬಹುದು. ಅವನ್ನು ಮರಳಿನಲ್ಲಿ
ಓಡಿಸುವ ಕಲೆಯನ್ನು ಕರಗತಮಾಡಿಕೊಂಡ ಯುವಕರು ನಮ್ಮನ್ನು ಅವುಗಳಲ್ಲಿ ಕೂರಿಸಿಕೊಂಡು ಗಂಟೆಗೆ ನೂರು ನೂರಿಪ್ಪತ್ತು
ಕಿ.ಮೀ. ವೇಗದಲ್ಲಿ ನಮ್ಮ ತಲೆ ಸುತ್ತು ಬರುವಂತೆ ಓಡಿಸಿ ವಿಶೇಷ ಅನುಭವ ಉಂಟುಮಾಡುತ್ತಾರೆ. ಇವೆಲ್ಲವಕ್ಕೂ
ಹಣ ಪಾವತಿಸಬೇಕು. ಇವೆಲ್ಲ ಅಲ್ಲದೆ ಅಲ್ಲಿಂದ ಮುಂದೆ ಯಾವ ವಾಹನವೂ ಹೋಗದಷ್ಟು ಆಳವಾದ ಕಂದರ ಮತ್ತು
ಎತ್ತರವಾದ ಬೆಟ್ಟಗಳಂಥ ರಚನೆಗಳು ಮರಳಿನಿಂದಲೇ ನಿರ್ಮಾಣವಾಗಿರುವುದಾಗಿಯೂ ಅವುಗಳಿಗೆ ವಿಶೇಷವಾಗಿ ದುಡ್ಡುಕೊಟ್ಟರೆ
ಒಂಟೆಗಳ ಮೇಲೆ ಕರೆದೊಯ್ಯುವುದಾಗಿ ಅಲ್ಲಿ ಅದಕ್ಕಾಗಿ ಇರುವವರು ನಮ್ಮನ್ನು ಮುತ್ತಿಕೊಂಡು ತಲೆತಿನ್ನುತ್ತಾರೆ.
ಆಸಕ್ತಿ ಅಭಿರುಚಿ ಇದ್ದರೆ ನಾವು ಹಣ ಪಾವತಿಸಿ ಆ ಅನುಭವವನ್ನೂ ಪಡೆಯಬಹುದು.
ನೃತ್ಯಕ್ಕೆ ಬಂದ ಚೆಂದದ ಹುಡುಗಿಯರು
ನಾನು ಈ ಮರುಭೂಮಿ ನೋಡಲು ಬಂದದ್ದು ಅವನ್ನು ಕಂಡದ್ದು ನನಗೆ ಸಾಕೆನಿಸಿತು. ಇನ್ನೂ ವಿಶೇಷವಾದ
ಸ್ಥಳಗಳನ್ನು ನೋಡುವ ಅಗತ್ಯವಿಲ್ಲವೆನಿಸಿತು. ಅಲ್ಲಿಯೇ ಇದ್ದ ಒಂಟೆ ಸವಾರಿ ಮಾತ್ರ ಮಾಡಿ ಫೋಟೋ ತೆಗೆಸಿಕೊಂಡು
ಸೂರ್ಯಾಸ್ತಕ್ಕಾಗಿ ಮರಳಿನಲ್ಲಿ ಅತ್ತಿತ್ತ ಸುತ್ತಾಡುತ್ತಾ, ಬರುವ ಹೋಗುವ ಸವಾರಿ ಮಾಡುವ ಜನರನ್ನು
ನೋಡುತ್ತಾ ಕಾಲ ಕಳೆಯತೊಡಗಿದೆ. ಹೀಗೆ ಸುತ್ತಾಡುವಾಗ ಚೆಂದಾಗಿ ಅಲಂಕಾರ ಮಾಡಿಕೊಂಡ ಇಬ್ಬರು ವಯಸ್ಸಿಗೆ
ಬಂದ ಹುಡುಗಿಯರು ನನ್ನ ಹತ್ತಿರ ಬಂದು “ರಾಜಸ್ತಾನಿ ಡಾನ್ಸ್ ತೋರಿಸುವುದಾ?” ಎಂದು ಕೇಳಿದರು. ಐವತ್ತೋ
ನೂರೋ ಕೊಟ್ಟಿದ್ದರೆ ಅವರು ನನ್ನನ್ನೂ ಸೇರಿಸಿಕೊಂಡು ಡಾನ್ಸ್ ಮಾಡುತ್ತಿದ್ದರು. ನನಗೆ ಅವರೊಂದಿಗೆ
ಕುಣಿಯುವ ವಯಸ್ಸು ಅಲ್ಲ ಅನ್ನಿಸಿ ʻಬೇಡʼ ಎಂದೆ.
ಅವರು ಬೇರೆಯವರ ಕಡೆ ಹೋದರು. ಅವರನ್ನು ಅತ್ತ ಕಳಿಸಿದ ಮೇಲೆ ನಾನು ಅವರ ಜೊತೆಗೆ ಕುಣಿಯದಿದ್ದರೂ ಅವರನ್ನು
ಕುಣಿಸಿ ನೋಡಬಹುದಿತ್ತಲ್ಲ ಅನ್ನಿಸಿದ್ದು ಸುಳ್ಳಲ್ಲ.
ಈ ವಿಷಯದಲ್ಲಿ ರಾಜಸ್ತಾನದಲ್ಲಿ ನಮಗಿಂತ ಭಿನ್ನವಾದ ದೃಷ್ಟಿಕೋನವಿದೆ. ನಮ್ಮಲ್ಲಿ ಹಾಡು ಡಾನ್ಸು
ಇವೆಲ್ಲ ಚಿಕ್ಕ ಮಕ್ಕಳು ಹೆಚ್ಚೆಂದರೆ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ಮಾಡುವ ಚಟುವಟಿಕೆಗಳು ಎಂಬ
ಭಾವನೆ ಇದೆ. ಹೀಗಾಗಿ ವಯಸ್ಸಾದವರು ಇಂಥ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸುವುದಿಲ್ಲ. ಯಾವುದಾದರೂ
ಸಮಾರಂಭದಲ್ಲಿ ಹೀಗೆ ಯಾರಾದರೂ ವಯಸ್ಸಾದ ವ್ಯಕ್ತಿ ಡಾನ್ಸ್ ಮಾಡತೊಡಗಿದರೆ ನಮ್ಮಲ್ಲಿ ಜನ ಅವನನ್ನು
ವಿಚಿತ್ರವಾಗಿ ನೋಡುತ್ತಾರೆ. ಅಲ್ಲಿ ಅವನ ಹೆಂಡತಿ ಇದ್ದರಂತೂ ಅವಳಿಗೆ ಕುತ್ತಿಗೆ ಹಿಚುಕಿಕೊಳ್ಳುವಂತೆ
ಆಗಿಬಿಡುತ್ತದೆ. “ಏನ್ರಿ ಇದೆಲ್ಲ ಹುಚ್ಚಾಟ ಈ ವಯಸ್ಸಿನಲ್ಲಿ” ಎಂದು ಗದರಿಸಿ ಅವನನ್ನು ಕರೆದು ಕೂರಿಸಿಕೊಳ್ಳುತ್ತಾಳೆ.
ಸರ್ಕಾರ ಅರವತ್ತು ವರ್ಷ ಮೀರಿದವರನ್ನು ಹಿರಿಯ ನಾಗರಿಕರು ಎಂದು ಘೋಷಿಸಿದೆ. ಆದರೆ ನಮ್ಮಲ್ಲಿ
ಬಹಳಷ್ಟು ಜನ ನಲವತ್ತು ವರ್ಷ ಮುಟ್ಟಿದ ಕೂಡಲೇ ತಮ್ಮಷ್ಟಕ್ಕೆ ತಾವೇ ಹಿರಿಯ ನಾಗರಿಕರು ಅಂದುಕೊಂಡು
ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಿರಿತನಕ್ಕೆ ತಕ್ಕುದಲ್ಲ ಎಂದು ಭಾವಿಸಿ ಕೇವಲ ಅವರಿವರಿಗೆ
ಬುದ್ಧಿಹೇಳುವ ಕೆಲಸದಲ್ಲಿ ತೊಡಗುತ್ತಾರೆ. ಆದರೆ ರಾಜಸ್ತಾನದಲ್ಲಿ ಹೀಗಿಲ್ಲ. ಅಲ್ಲಿ ಯಾರಾದರೂ ಹುಡುಗ
ಹುಡುಗಿಯರು ಡಾನ್ಸ್ ಶುರುವು ಮಾಡಿದರೆ ಸುತ್ತಮುತ್ತ ಇರುವ ಎಲ್ಲ ವಯಸ್ಸಿನವರೂ ಅವರೊಂದಿಗೆ ಕೂಡಿಕೊಂಡು
ನೃತ್ಯ ಮಾಡುತ್ತಾರೆ. ಇವರಲ್ಲಿ ಎಪ್ಪತ್ತು ಎಂಬತ್ತು ವರ್ಷಗಳ ವ್ಯಕ್ತಿಗಳೂ ಇರುತ್ತಾರೆ ಎಂದು ಬೇರೆ
ಹೇಳಬೇಕಾಗಿಲ್ಲ. ಅಲ್ಲಿ ಹೀಗೆ ಒಬ್ಬ ಅಜ್ಜ ಗುಂಪಿನಲ್ಲಿ ಕುಣಿಯಲು ಹೋದರೆ ಅವನ ಹೆಂಡತಿ ಅಜ್ಜಿ ಅದನ್ನು
ಸಂಭ್ರಮಿಸುತ್ತಾಳೆ. ಆ ಹುಡುಗ ಹುಡುಗಿಯರು ನೃತ್ಯಕ್ಕೆ ಅವಳನ್ನೂ ಎಳೆದುಕೊಂಡರೆ ತುಸು ನಾಚಿಕೆ ವ್ಯಕ್ತಪಡಿಸಿ
ಸಂಭ್ರಮದಿಂದ ಅವಳೂ ಗುಂಪಿನಲ್ಲಿ ಸೇರಿಕೊಳ್ಳುತ್ತಾಳೆ. ಇದು ಅವರ ಜೀವನ ಪ್ರೀತಿ.
ವಿವಿಧ ಬಗೆಯ ಟೆಂಟುಗಳು
ಮರುಭೂಮಿ ಎಂದರೆ ನಾನು ಕೇವಲ ಮರಳೇ ಇರುತ್ತದೆ
ಗಟ್ಟಿನೆಲ ಕಾಣಿಸುವುದೇ ಇಲ್ಲ ಅಂದುಕೊಂಡಿದ್ದೆ. ಅದರೆ ಹಾಗೇನು ಇರುವುದಿಲ್ಲ. ಕೆಲವು ಕಡೆ ನದಿಯಂತೆ
ಮತ್ತೆ ಕೆಲವು ಕಡೆ ಕರೆಯಂತೆ ಇನ್ನು ಕೆಲವು ಕಡೆ ಸಮುದ್ರದಂತೆ ಮರಳು ಹರಡಿಕೊಂಡಿರುವುದು ಕಾಣುತ್ತದೆ.
ಕೆಲವು ಕಡೆ ಮರಳೇ ಗುಡ್ಡಗಳಂಥ ಕಣಿವೆಗಳಂಥ ರಚನೆಗಳನ್ನು ಮಾಡಿರುವುದೂ ಇದೆ. ಆದರೆ ಅವುಗಳ ಮಧ್ಯೆ ಗಟ್ಟಿ
ನೆಲವೂ ಇದ್ದು ಅಲ್ಲಿ ನೀರನ್ನು ಹೆಚ್ಚು ನಿರೀಕ್ಷಿಸದ ಕೆಲವು ಗಿಡಗಂಟಿಗಳು ಬೆಳೆದಿರುತ್ತವೆ ಎಂಬುದು
ಇಲ್ಲಿ ನೋಡಿದಾಗ ತಿಳಿಯಿತು.
ಸಂಜೆ ಆಗುತ್ತಿದ್ದಂತೆ ಮರುಳುಗಾಡಿನ ಸುಂದರ ಸೂರ್ಯಾಸ್ತವನ್ನು ನೋಡಿಕೊಂಡು ಅಲ್ಲಿಂದ ಹೊರಟೆ.
ಹತ್ತು ನಿಮಿಷದಲ್ಲಿ ನನ್ನ ಜೀಪಿನವನು ನನ್ನನ್ನು ಮುಖ್ಯರಸ್ತೆಗೆ ಮರಳಿ ತಂದ. ಒಂದು ಗಂಟೆಯ ಸವಾರಿ
ಎಂದು ಹೇಳುವುದು ಅವರು ನಿಜವಾದರೂ ಆ ಒಂದು ಗಂಟೆಯಲ್ಲಿ ಅವರು ಸವಾರಿ ಮಾಡಿಸುವುದು ಹತ್ತಿಪ್ಪತ್ತು
ನಿಮಿಷ ಮಾತ್ರ. ಅಷ್ಟಕ್ಕೇ ಮೂರು ಮೂರೂವರೆ ಸಾವಿರ ಹಣ ತೆಗೆದುಕೊಳ್ಳುತ್ತಾರೆ. ಹೋದವರಿಗೆ ಇದು ವಿಶೇಷ
ಅನ್ನಿಸುವುದರಿಂದ ಮತ್ತು ಅದನ್ನು ಬಿಟ್ಟು ಹೋದರೆ ಪ್ರವಾಸ ಅಪೂರ್ಣ ಅನ್ನಿಸುವುದರಿಂದ ಅನಿವಾರ್ಯವಾಗಿ
ಕೊಡುತ್ತಾರೆ.
ಅಲ್ಲಿಂದ ಹತ್ತಿರವೇ ಇದ್ದ ನನ್ನ ವಸತಿ ಟೆಂಟಿಗೆ ಹೋದಾಗ ಸಂಜೆ ಏಳರ ಸಮಯ. ಆ ಟೆಂಟಿನ ಮಾಲಿಕ
ನನ್ನನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡ. “ವಿಶೇಷ ಊಟ ಮತ್ತು ಮನರಂಜೆಯ ಅವಶ್ಯಕತೆ ಇದ್ದರೆ ಹೇಳಿ
ಬೇರೆಯ ಟೆಂಟಿನಲ್ಲಿ ಅದು ಇದೆ. ನಾನು ಹೇಳಿ ವ್ಯವಸ್ಥೆ ಮಾಡುವೆ” ಎಂದು ಅವನು ಕೇಳಿದ. ಇವೆಲ್ಲವನ್ನು
ಬಿಟ್ಟು ಕೇವಲ ವಸತಿಯನ್ನಷ್ಟೇ ನಾನು ಬುಕ್ ಮಾಡಿದ್ದೆ. ಸಾಕಷ್ಟು ಆಯಾಸ ಆಗಿದ್ದರಿಂದ ಮತ್ತು ಮನರಂಜನೆಯಾಗಿ
ರಾಜಸ್ತಾನಿ ಸಂಗೀತವನ್ನು ಬಹಳಷ್ಟು ಕಡೆ ಆಗಲೆ ನೋಡಿ ಕೇಳಿ ಮಾಡಿದ್ದರಿಂದ ಮತ್ತು ವಿಶೇಷ ಊಟದ ವ್ಯವಸ್ಥೆಯೂ
ಬೇಕಾಗಿರಲಿಲ್ಲವಾಗಿದ್ದರಿಂದ ಯಾವುದೂ ಬೇಡ ಎಂದು ಹೇಳಿ ಅವರಲ್ಲಿಯೇ ಸಿಗುವ ಸಾದಾ ಊಟಕ್ಕೆ ಆರ್ಡರ್
ಮಾಡಿ ನನ್ನ ಟೆಂಟನ್ನು ಸೇರಿಕೊಂಡೆ.
ಸಾಮಾನ್ಯವಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ಗುಜರಾತಿನ ಜನ ಇಲ್ಲಿಗೆ ಮೋಜು ಮಾಡಲು ತಂಡೋಪತಂಡವಾಗಿ
ಬರುವುದರಿಂದ ಆ ಕಾಲದಲ್ಲಿ ಟೆಂಟ್ಗಳ ಬೆಲೆ ಮತ್ತು ಸವಾರಿಗಳ ಬೆಲೆ ದುಪ್ಪಟ್ಟಾಗುವುದೆಂದು ನನ್ನ ಕಾರು
ಚಾಲಕ ಮಾಹಿತಿ ನೀಡಿದ. ನಾನು ಹೋದ ತಿಂಗಳು ಅಂತಹ ತಿಂಗಳು ಆಗಿರಲಿಲ್ಲವಾದ್ದರಿಂದ ಹೆಚ್ಚುವರಿ ಹೊರೆ
ನನಗೆ ಬೀಳಲಿಲ್ಲ. ನಾನು ಉಳಿದುಕೊಂಡ ಕ್ಯಾಂಪ್ ಸುಮಾರು ಇಪ್ಪತ್ತು ಮೂವತ್ತು ಲಕ್ಷುರಿ ಟೆಂಟ್ಗಳನ್ನೂ
ಐವತ್ತರಷ್ಟು ಸ್ವಿಸ್ ಟಂಟ್ಗಳನ್ನೂ ಹೊಂದಿರುವ ಒಂದು ಸಾಮಾನ್ಯ ಕ್ಯಾಂಪ್ ಆಗಿತ್ತು. ದಿನವೆಲ್ಲ
ಪ್ರಯಾಣ ಮತ್ತು ಸುತ್ತಾಟದ ಕಾರಣದಿಂದ ದಣಿವಾದ ಕಾರಣ ಊಟಮಾಡಿ ಮಲಗುವ ಮೂಲಕ ಅಂದಿನ ಪ್ರಯಾಣಕ್ಕೆ ಕೊನೆಹಾಡಿದೆ.
ಬೆಳಿಗ್ಗೆ ಥಾರ್ ಮರುಭೂಮಿಯಲ್ಲಿಯೇ ಹಾದು ಅಲ್ಲಿಂದ ಸುಮಾರು ಅರವತ್ತು ಕಿ.ಮೀ. ದೂರದ ಭಾರತ ಪಾಕಿಸ್ತಾನ
ಗಡಿಯನ್ನು ನೋಡಲು ಮತ್ತು ೧೯೭೧ರ ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆದ ಸ್ಥಳದಲ್ಲಿರುವ ಯುದ್ಧಸ್ಥಳ
ಸ್ಮಾರಕವನ್ನು ನೋಡಲು ಹೋಗಬೇಕಾಗಿದ್ದರಿಂದ ರಾತ್ರಿ ಮನರಂಜನೆ ಇತ್ಯಾದಿಗಳಲ್ಲಿ ಹೊತ್ತು ಕಳೆಯಲು ಮನಸ್ಸಾಗಲಿಲ್ಲ.
ಮರುದಿನ ಬೆಳಿಗ್ಗೆ ಬೆಳಗಿನ ಸೂರ್ಯನ ಬಿಸಿಲಲ್ಲಿ ಕಾಣುವ ನಾನು ಉಳಿದಿದ್ದ ಕ್ಯಾಪಿನ ವಿವಿದ ಟೆಂಟುಗಳ
ಪೋಟೋ ತೆಗೆದುಕೊಂಡು ಗಡಿಭಾಗಕ್ಕೆ ಹೊರಡು ಕಾರು ಹತ್ತಿದೆ.
ಕೈಕೊಟ್ಟ ಬಸ್ಸು ಮತ್ತು ಕೈಬಿಟ್ಟ ಕನ್ನಡಕಗಳ ಕಥೆ
ಗಡಿಭಾಗಕ್ಕೆ ಹೋಗಿ ಅವೆರಡೂ ಸ್ಥಳಗಳನ್ನೂ ನೋಡಿಕೊಂಡು ಜೈಸಲ್ಮೇರ್ಗೆ ಮರಳಿ ಬಂದಾಗ ಮಧ್ಯಾಹ್ನ
ಸುಮಾರು ಮೂರು ಗಂಟೆಯ ಸಮಯವಾಗಿತ್ತು. ಜೈಸಲ್ಮೇರ್ ನಗರದಲ್ಲಿ ನೋಡಲು ಮುಖ್ಯವಾಗಿ ಎರಡು ಹವೇಲಿಗಳು
ಮತ್ತು ಒಂದು ಪುರಾತನ ಅರಮೆನ ಇತ್ತು. ಇವೆಲ್ಲವನ್ನೂ ನೋಡಲು ಎರಡು ಮೂರು ಗಂಟೆ ಬೇಕಾಗಿತ್ತು. ಈ ಮಧ್ಯೆ
ನಾನು ರಾತ್ರಿ ಹತ್ತು ಗಂಟೆಗೆ ಅಲ್ಲಿಂದ ಬಿಕನೇರ್ಗೆ ಹೊರಡಲು ಬುಕ್ ಮಾಡಿಕೊಂಡಿದ್ದ ಬಸ್ ರದ್ದಾಗಿರುವುದಾಗಿಯೂ
ಅದಕ್ಕಾಗಿ ವಿಷಾದ ವ್ಯಕ್ತಪಡಿಸಿ ಹಣ ಹಿಂತಿರುಗಿಸುತ್ತಿರುವುದಾಗಿ ಬಸ್ ಏಜನ್ಸಿಯವರು ನನಗೆ ಫೋನ್
ಮಾಡಿ ಒಂದು ಟೆನ್ಸನ್ ಶುರುವು ಮಾಡಿದರು .
ಏಕೆಂದರೆ ನನ್ನ ಇಡೀ ಪ್ರವಾಸದಲ್ಲಿ ಪ್ರಯಾಣದ ತೊಂದರೆ ಇದ್ದದ್ದೆ ಜೈಸಲ್ ಮೇರ್ನಿಂದ ಬಿಕನೇರ್ಗೆ. ಅಲ್ಲಿ ಇರುವುದು ಒಂದೇ ರೈಲಾಗಿದ್ದು ಅದು ಮಧ್ಯರಾತ್ರಿ ಹೊರಡುತ್ತಿತ್ತು. ನನಗೆ ಅನುಕೂಲವಿರಲಿಲ್ಲ. ರಾಜಸ್ತಾನ ಸರ್ಕಾರದ ಬಸ್ ಕೂಡ ಅಲ್ಲಿ ರಾತ್ರಿ ಸಂಚಾರಕ್ಕೆ ಇರಲಿಲ್ಲ. ಇರುವ ಒಂದೇ ಒಂದು ಖಾಸಗೀ ಬಸ್ನ್ನು ಬುಕ್ ಮಾಡಿಕೊಂಡರೆ ಅದೂ ಕೊನೆಯ ಗಳಿಗೆಯಲ್ಲಿ ರದ್ದಾಯಿತು. ಏನುಮಾಡುವುದೆಂದು ತೋಚದೆ ಕೂಡಲೇ ನನ್ನ ಕಾರಿನ ಡ್ರೈವರ್ ಸಹಾಯ ಪಡೆದು ಅವನಿಗೆ ಗೊತ್ತಿದ್ದ ಬಸ್ ಮಾಲಿಕನೊಬ್ಬನನ್ನು ಸಂಪರ್ಕಿಸಿದೆ. ಎ. ಸಿ ಬಸ್ ಇಲ್ಲವೆಂದೂ ಇರುವುದು ಒಂದೇ ಒಂದು ನಾನ್ ಎಸಿ ಬಸ್ ಎಂದೂ ಸ್ಲೀಪರ್ಗೆ ಒಂದು ಸೀಟಿಗೆ ೧೨೦೦ ರೂಪಾಯಿ ಅಗುತ್ತದೆ ಎಂದೂ ಆತ ಹೇಳಿದ. ಅನಗೆ ಗತಿಯಿಲ್ಲ; ಅವನಿಗೆ ಮತಿಯಿಲ್ಲ. ಒಪ್ಪಿಕೊಂಡೆ. ಈ ಖಾಸಗೀ ಬಸ್ಗಳಿಗೆ ಸರ್ಕಾರಿ ಬಸ್ಸುಗಳಂತೆ ಒಂದು ನಿರ್ಧಿಷ್ಟ ದರ ಇರುವುದಿಲ್ಲ. ಜನರ ಒತ್ತಡ ಹೇಗೆಲ್ಲ ಇರುತ್ತದೆಯೋ ಹಾಗೆಲ್ಲ ಅವರ ರೇಟು ಕೂಡ ಬದಲಾಗುತ್ತಿರುತ್ತದೆ. ಹೀಗಾಗಿಯೇ ಕೇವಲ ೬೦೦ ರೂಪಾಯಿಗಳಿಗೆ ಎಸಿ ಬಸ್ ಸೀಟನ್ನೇ ಬುಕ್ ಮಾಡಿಕೊಂಡಿದ್ದ ನಾನು ಈಗ ಅದರ ಎರಡರಷ್ಟು ಹಣ ನೀಡಿಯೂ ನಾನ್ ಎ.ಸಿ. ಬಸ್ ನಲ್ಲಿ ಸೀಟ್ ಖಾತ್ರಿಪಡಿಸಿಕೊಳ್ಳಬೇಕಾಯಿತು.
ಬಸ್ ಬುಕಿಂಗ್ ಖಾತ್ರಿ ಆದಮೇಲೆ ಒಂದಿಷ್ಟು ನಿಶ್ಚಿಂತೆ ಅನ್ನಿಸಿತಾದರೂ ಅದು ಹೊರಡುವುದು ರಾತ್ರಿ ಹತ್ತು ಗಂಟೆಗೆ. ಅಲ್ಲಿಯತನಕ ಕೋಟೆ ಇತ್ಯಾದಿ ನೋಡಬಹುದಾದರೂ ಕಾರಿನವನು ಅಷ್ಟುಹೊತ್ತು ಇರಲು ಸಾಧ್ಯವಿರಲಿಲ್ಲ. ಲಗೇಜ್ ಇಡುವುದು ಎಲ್ಲಿ ಎಂಬ ಚಿಂತೆ ಶುರುವಾಯಿತು. ಕೊನೆಗೆ ನನ್ನ ಕಾರಿನವನೇ, “ಕೋಟೆಯ ಪಕ್ಕದಲ್ಲಿಯೇ ನನ್ನ ಅಣ್ಣನ ಮಗನ ಹೊಟೆಲ್ ಇದೆ ಅಲ್ಲಿ ನಿಮ್ಮ ಲಗೇಜ್ ಇಡಲು ವ್ಯವಸ್ಥೆ ಮಾಡುತ್ತೇನೆ ನೀವು ಎಲ್ಲ ತಿರುಗಾಟ ಮುಗಿಸಿ ರಾತ್ರಿಯ ಊಟವನ್ನೂ ಮುಗಿಸಿ, ಬಸ್ ಹೊರಡುವ ವೇಳೆಗೆ ಒಂದು ಆಟೋ ತೆಗೆದುಕೊಂಡು ಬಸ್ ಹಿಡಿಯಬಹುದೆಂದು” ಎಂದು ಸಲಹೆ ನೀಡಿದ. ಮನಗೂ ಅದೇ ಸರಿ ಅನ್ನಿಸಿ ಜೈಸಲ್ ಮೇರ್ ನಗರ ತಲುಪುತ್ತಿದ್ದಂತೆಯೇ ಮೊದಲು ಒಂದು ಹವೇಲಿ ನೋಡಲು ಹೋದೆ. ಹವೇಲಿ ಎಂದರೆ ಉತ್ತರ ಭಾರತದಲ್ಲಿ ವಿಶೇಷವಾಗಿ ರಾಜಸ್ತಾನ ಭಾಗದಲ್ಲಿ ಅಲ್ಲಿನ ಸಾಂಪ್ರದಾಯಿಕವಾದ ಕಲಾ ಶೈಲಿಯಲ್ಲಿ ರಚನೆಯಾಗಿರುವ ವಿಶೇಷ ಕಟ್ಟಡಗಳು. ರಾಜಸ್ತಾನದ ಬಹುತೇಕ ಎಲ್ಲ ನಗರಗಳಲ್ಲಿಯೂ ಇಂತಹ ಹವೇಲಿಗಳು ನಮಗೆ ನೋಡಸಿಗುತ್ತವೆ.
ನಾನು ನೋಡಿದ್ದು ಒಂದು ಮಂದಿರ ಪ್ಯಾಲೇಸ್ ಮ್ಯೂಜಿಯಂ. ಅದು ಜೈಸಲ್ ಮೇರ್ ರಾಜಕುಮಾರ ಮಹಾರ್ವಾರ್
ಜಹವೀರ್ ಸಿಂಗ್ ಅವರನ್ನು ೧೯೧೭ ರಲ್ಲಿ ಮದುವೆಯಾದ ಬುಂಡಿ ರಾಜಕುಮಾರಿ ಸಾಹಿಬಾ ಕಲ್ಯಾಣ್ ಕನ್ವರ್
ಅವರ ನೆನಪಿನಲ್ಲಿ ಮಾಡಿರುವಂಥದ್ದು. ಈ ವಸ್ತುಸಂಗ್ರಹಾಲಯದಲ್ಲಿ ಕೂಡ ಎಲ್ಲ ಅರಮನೆಗಳ ವಸ್ತು ಸಂಗ್ರಹಾಲಯದಲ್ಲಿರುವಂತೆ
ರಾಜ ಮನೆತನದ ವಿವಿಧ ರಾಜರ ವಂಶಾವಳಿ, ಆಯುಧ ಬಟ್ಟೆ ಬರೆ ಇತ್ಯಾದಿ ಇರುವುದು ಸಾಮಾನ್ಯವಾದರೂ ಬೇರೆ
ಅರಮನೆಗಳಲ್ಲಿ ಕಾಣದ ಒಂದು ಅಂಶ ಕಂಡಿತು. ಅದೆಂದರೆ ವಿವಿಧ ಮಾದರಿಯ ಬೀಗಗಳ ಸಂಗ್ರಹ. ಈ ಸಂಗ್ರಹದಲ್ಲಿ
ಅಲ್ಲಿಂದ ಇಲ್ಲಿಯ ತನಕ ಬಳಸಲ್ಪಟ್ಟ ವೈವಿಧ್ಯಮಯ ಬೀಗಗಳು ನೋಡಸಿಗುತ್ತವೆ. ಹವೇಲಿಯ ಹೊರ ನೋಟ ಆಕರ್ಷಕವಾಗಿದ್ದು
ತನ್ನ ಕಲಾ ಶ್ರೀಮಂತಿಕೆಯನ್ನು ಮೆರೆಯುತ್ತಿದೆ. ಇದರ ಒಂದು ಭಾಗವನ್ನು ಅದ್ದೂರಿ ಹೊಟೆಲ್ ಆಗಿ ಪರಿವರ್ತಿಸಿರುವುದರಿಂದ
ಅಲ್ಲಿ ನನಗೆ ಪ್ರವೇಶ ಸಾಧ್ಯವಾಗಲಿಲ್ಲ. ಉಳಿದ ಭಾಗವನ್ನೆಲ್ಲ ಸುತ್ತಿ ಬಂದ ನಾನು ಹೊರಗೆ ಬಂದು ಅಲ್ಲಿನ
ಸುಂದರ ವಾದ ದೃಶ್ಯದಲ್ಲಿ ಒಂದು ಸೆಲ್ಪಿ ತೆಗೆದುಕೊಳ್ಳುವಾಗ ನನ್ನ ಕನ್ನಡಕವನ್ನೆ ಬಿಟ್ಟುಬಂದುಬಿಟ್ಟೆ!
ಸಾಮಾನ್ಯವಾಗಿ ನಾನು ಪ್ರವಾಸಕ್ಕೆ ಹೋಗುವಾಗ ಎರಡು ಕನ್ನಡಕಗಳನ್ನು ಒಯ್ಯುತ್ತೇನೆ. ಒಂದು
ʻಅನಿವಾರ್ಯ ಕನ್ನಡಕʼ ಇನ್ನೊಂದು ʻಅದ್ದೂರಿ ಕನ್ನಡಕʼ. ʻಅನಿವಾರ್ಯ ಕನ್ನಡಕʼ ಎಂದರೆ ಕಣ್ಣು ಸರಿಯಾಗಿ
ಕಾಣದ್ದಕ್ಕೆ ಬಳಸುವ ಕನ್ನಡಕ. ʻಅದ್ದೂರಿ ಕನ್ನಡಕʼ
ಎಂದರೆ ಫೋಟೋ ತೆಗೆದುಕೊಳ್ಳಲು ಬಳಸುವ ಬಣ್ಣದ ಕನ್ನಡಕ. ಆದರೆ ಈ ಸಲ ಎರಡುʻ ಅನಿವಾರ್ಯ ಕನ್ನಡಕʼ ಮತ್ತು ಒಂದು ʻಅದ್ದೂರಿ ಕನ್ನಡಕʼ ಹೀಗೆ ಒಟ್ಟು ಮೂರು ಕನ್ನಡಕ
ಒಯ್ದಿದ್ದೆ. ಏಕೆಂದರೆ ಅದ್ದೂರಿ ಕನ್ನಡಕ ಎಲ್ಲಿಯಾದರೂ ಕಳೆದರೆ ಸಮಸ್ಯೆಯೇನೂ ಆಗುವುದಿಲ್ಲ. ಅವು ಎಲ್ಲೆಂದರಲ್ಲಿ
ಸಿಗುತ್ತವೆ. ಆದರೆ ಅನಿವಾರ್ಯ ಕನ್ನಡಕ ಕಳೆದರೆ ಸಮಸ್ಯೆ ಶುರುವಾಗುತ್ತದೆ. ಕಣ್ಣುಪರೀಕ್ಷೆ ಮಾಡಿಸಿ
ಸರಿಯಾದ ನಂಬರ್ ಕನ್ನಡಕ ಪಡೆಯುವ ಅನಿವಾರ್ಯತೆ ಉಂಟಾಗುತ್ತದೆ. ಈ ಸಾರಿ ಎರಡು ಇಂತಹ ಅನಿವಾರ್ಯ ಕನ್ನಡಕ
ಏಕೆ ಒಯ್ದೆ? ಬಹುಶಃ ಒಂದು ಕಳೆಯುತ್ತದೆ ಎಂದು ನನ್ನ ಒಳಮನಸ್ಸಿಗೆ ಮೊದಲೇ ಗೊತ್ತಾಗಿತ್ತೋ ಎನೊ.. ಯಾರಿಗೆ
ಗೊತ್ತು? ಈ ಸಾರಿ ಒಯ್ದಿದ್ದ ಈ ಎರಡು ಅನಿವಾರ್ಯ ಕನ್ನಡಕಗಳಲ್ಲಿ
ಕಾಯ್ದಿಟ್ಟ ಕನ್ನಡಕವನ್ನು ಇದುವರೆಗೂ ಮುಟ್ಟಿರಲಿಲ್ಲ.
ಆದರೆ ಈ ಹವೇಲಿಯ ಮುಂದೆ ನಿಂತು ಸುಂದರ ಫೋಟೋ ತೆಗೆದುಕೊಳ್ಳಲೆಂದು ನನ್ನ ಮಾಮೂಲಿ ಕನ್ನಡಕವನ್ನು
ಅಲ್ಲಿನ ಕಲ್ಲಿನ ಮೇಲೆ ಇಟ್ಟು ಬಣ್ಣದ ಕನ್ನಡಕ ಹಾಕಿಕೊಂಡೆ. ಫೋಟೋ ತೆಗೆದುಕೊಂಡ ಮೇಲೆ ಅದನ್ನು ತೆಗೆದುಕೊಳ್ಳುವುದನ್ನು
ಅಲ್ಲಿಯೇ ಮರೆತು ಬಂದು ಬಿಟ್ಟೆ! ಅಲ್ಲಿಂದ ಹೊರಟು ನನ್ನ ಲಗೇಜೆಲ್ಲವನ್ನೂ ಹೊಟೆಲ್ನಲ್ಲಿ ಇಟ್ಟು ಜೈಸಲ್
ಮೇರ್ ಕೋಟೆಯ ಹತ್ತಿರ ನನ್ನನ್ನು ಬಿಟ್ಟುಹೋಗಲು ಕಾರಿನವನು ಬಂದಾಗ, ನಾನು ಕಾರಿನಿಂದ ಇಳಿಯುವಾಗ ಈ
ಕನ್ನಡಕದ ನೆನಪಾಯಿತಾದರೂ ಅಲ್ಲಿಂದ ಮತ್ತೆ ವಾವಾಸ್ಸು ಹೋಗುವುದು ಬಹಳ ದೂರವಾಗಿದ್ದರಿಂದ ಮತ್ತು ಇನ್ನೊಂದು
ಕಾಯ್ದಿಟ್ಟ ಕನ್ನಡಿಕ ಸೂಟ್ಕೇಸ್ನಲ್ಲಿ ಇದ್ದದ್ದರಿಂದ ಕಾರಿನವನ ಲೆಕ್ಕಾಚಾರ ಚುಪ್ತಾ ಮಾಡಿ ಕಳಿಸಿ
ಕೋಟೆ ನೋಡಲು ಹೆಜ್ಜೆ ಹಾಕಿದೆ.
ಜೈಸಲ್ಮೇರ್ ಕೋಟೆ ಮತ್ತು ಬೀದಿಗಳು
ಜೈಸಲ್ಮೇರ್ ನಗರದ ಮಧ್ಯಭಾಗದಲ್ಲಿರುವ ಕೋಟೆ ವಿಸ್ತಾರದ ದೃಷ್ಟಿಯಿಂದ ಬಹಳ ದೊಡ್ಡದು. ಇದಕ್ಕಿಂತ
ವಿಸ್ತಾರವಾದ ಜಾಗದಲ್ಲಿರುವ ನಾನು ನೋಡಿರುವ ಕೋಟೆ ಎಂದರೆ ನಮ್ಮ ಬೀದರಿನ ಕೋಟೆ ಮಾತ್ರ. ಕೆಲವು ಕೋಟೆಗಳ
ಒಳಗೇ ಅರಮನೆ ಒಳಗೇ ಕೆಲವು ಅಂಗಡಿ ಮುಂಗಟ್ಟುಗಳು ಕೆಲವು ಮನೆಗಳು ಇರುವುದು ಉಂಟು. ಆದರೆ ಜೈಸಲ್ಮೇರ್ನ
ಈ ಕೋಟೆಯ ವಿಶೇಷತೆ ಏನೆಂದರೆ ಈ ಕೋಟೆಯ ಒಳಗೆ ಒಂದು ಊರೇ ಇದೆ. ಬೆಟ್ಟದ ಮೇಲಿನ ಈ ಕೋಟೆಯ ಒಳಗೆ ಕಿರಿದಾದ
ದಾರಿಗಳು ಅನೇಕ ಇದ್ದು ಅವುಗಳ ಎಡಬಲದಲ್ಲಿ ನೂರಾರು ಮನೆಗಳಿವೆ. ನಾನು ಕೋಟೆಯ ಮುಖ್ಯದ್ವಾರದ ಬಳಿ ಪ್ರವೇಶ
ಮಾಡುವಾಗ ಅಲ್ಲಿನ ಸೆಕ್ಯೂರಿಟಿಗೆ ಟಿಕೇಟ್ ಎಲ್ಲಿ ಎಂದು ಕೇಳಿದೆ. ಅವನು ಮುಂದೆ ಹೋಗಿ ಎಂದು ನನಗೆ
ಕೈಸನ್ನೆ ಮಾಡಿದ. ಮುಂದಿನ ಗೇಟಿನಲ್ಲಿಯೂ ಕೇಳಿದೆ. ಅಲ್ಲಿಯೂ ಮುಂದೆ ಹೋಗಲು ನನಗೆ ಸೂಚನೆ ನೀಡಿದರು.
ಸಾಮಾನ್ಯವಾಗಿ ಕೋಟೆಯ ಪ್ರವೇಶ ಮಾಡುವಾಗಲೇ ಉಳಿದ ಕಡೆ ಟಿಕೇಟ್ ಪಡೆಯಬೇಕು ಇಲ್ಲೇಕೆ ಹೀಗೆ
ಎಂದು ಕೊಳ್ಳುತ್ತಾ ಎರಡೂ ಮುಖ್ಯದ್ವಾರಗಳನ್ನು ದಾಡಿ ಮುಂದೆ ಹೋಗಿ ನೋಡಿದರೆ ಅಲ್ಲಿ ಸಂತೆಯೇ ನಡೆಯುತ್ತಿತ್ತು.
ಇಡೀ ಊರೇ ಇತ್ತು! ಕೋಟೆಯ ಒಳಗೆ ವಾಹನಗಳು ಹೋಗುವುದೂ ಬರುವುದು ಮಾಡುತ್ತಿದ್ದವು. ಆಗ ತಿಳಿಯಿತು ಟಿಕೆಟ್
ಯಾಕೆ ಇಲ್ಲ ಎಂದು. ಕೋಟೆಯ ಒಳಗೆ ಹೋಗಿ ಅಲ್ಲಿ ಮಹಾರಾಜರ ಅರಮನೆಗೆ ಹತ್ತಿ ಹೋಗಬೇಕು. ಅಲ್ಲಿ ಮಾತ್ರ
ಟಿಕೆಟ್ ವ್ಯವಸ್ಥೆ ಇದೆ. ಟಿಕೆಟ್ ಪಡೆದು ನಾನು ಒಳಹೋಗಿ ಅರಮನೆಯ ಎಲ್ಲ ಭಾಗಗಳನ್ನೂ ನೋಡಿದೆ. ಉಳಿದೆಲ್ಲ
ಅರಮನೆಗಳಂತೆಯೇ ಇದೂ ಇದ್ದು ವಿಶೇಷ ಅನ್ನಿಸುವಂತೆ ಬೇರೆ ಏನೂ ಕಾಣಿಸಲಿಲ್ಲ. ಅರಮನೆಯ ತುದಿಗೆ ಹೋದಾಗ
ಎಲ್ಲ ಅರಮನೆಗಳಲ್ಲಿ ಇರುವಂತೆ ಇಡೀ ಕೋಟೆಯನ್ನು ಕೋಟೆಯ ಹೊರಗಿನ ಊರನ್ನು ನೋಡಲು ವ್ಯವಸ್ಥೆ ಇದೆ. ಅಲ್ಲಿಂದ
ಇಡೀ ಜೈಸಲ್ಮೇರ್ ನಗರ ಬಹಳ ಸುಂದರವಾಗಿ ಕಾಣುತ್ತದೆ.
ನೋಡಿ ಒಂದಿಷ್ಟು ಹೊತ್ತು ಕೂತಿದ್ದು ಅಲ್ಲಿಂದ ಕೆಳಗಿಳಿದು ಬಂದೆ.
ನನ್ನ ಬಸ್ಸು ಹೊರಡಲು ಇನ್ನೂ ಮೂರು ತಾಸುಗಳ ಸಮಯವಿತ್ತು. ಹೀಗೆ ಸಮಯ ಸಿಕ್ಕಾಗ ಹೊಸದಾಗಿ
ಹೋದ ಊರುಗಳಲ್ಲಿ ಸುಮ್ಮನೆ ಬೀದಿ ಬೀದಿ ಸುತ್ತುವುದು, ಏನಾದರೂ ಹೊಸದು ಕಂಡರೆ ನೋಡುವುದು ನನ್ನ ಪ್ರೀತಿಯ
ಹವ್ಯಾಸಗಳಲ್ಲಿ ಒಂದು. ಹಾಗೆ ಕೋಟೆಯಿಂದ ಕೆಳಗಿಳಿದು ಬಂದು ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಒಂದು ಚಹಾ
ಕುಡಿದು ಹೊರಟೆ. ಜೈಸಲ್ಮೇರ್ನ ಕೆಲವು ವಿಶಾಲವಾದ ರಸ್ತೆಗಳು ವೃತ್ತಗಳನ್ನು ಹಾದು ಹೋಗುವಾಗ ರಸ್ತೆಬದಿ
ಕಲ್ಲಿನ ವಿವಿಧ ಮೂರ್ತಿಗಳನ್ನು ಇಟ್ಟುಕೊಂಡು ಮಾರುತ್ತಿದ್ದ ಎರಡು ಮೂರು ಅಂಗಡಿಗಳು ಕಂಡವು. ಅವುಗಳಲ್ಲಿ
ಹಿಂದೂ ಪುರಾಣದ ಬಹುತೇಕ ಎಲ್ಲ ದೇವರ ಮೂರ್ತಿಗಳೂ ಇದ್ದವು. ಮರುಭೂಮಿಯಲ್ಲಿ ಮಳೆಬೆಳೆ ಇಲ್ಲ. ಕಲ್ಲಿನ
ಮೂರ್ತಿಗಳು, ಪಿಂಗಾಣಿ ಗೃಹ ಉಪಯೋಗಿ ಸಾಧನಗಳನ್ನು ಮಾಡುವುದೇ ಇಲ್ಲಿನ ಸಾಮಾನ್ಯ ಜನರ ಜೀವನಾಧಾರ ಉದ್ಯೋಗ
ಎಂದು ಮೊದಲೇ ಹೇಳಿದ್ದೇನೆ. ಅವುಗಳ ಉದಾಹರಣೆ ಇಲ್ಲಿ ನೋಡಲು ಸಿಕ್ಕಿತು.
ಸುತ್ತುತ್ತಾ ಒಂದು ಉದ್ಯಾನವನಕ್ಕೆ ಬಂದು ಅದುವರೆಗಿನ ತಿರುಗಾಟದಿಂದ ಆಗಿದ್ದ ಸುಸ್ತನ್ನು
ನಿವಾರಿಸಿಕೊಳ್ಳಲು ಕೂತೆ. ಅಲ್ಲಿಯೇ ಕೆಲವು ಹುಡುಗಿಯರು ಚೆಂದ ಚೆಂದ ಡ್ರೆಸ್ ಮಾಡಿಕೊಂಡು ಬಂದು ನೃತ್ಯಮಾಡಿ
ರೀಲ್ಸ್ ಮಾಡುತ್ತಿದ್ದರು. ದಣಿದ ಕಾಲುಗಳಿಗೆ ವಿಶ್ರಾಂತಿಯೂ ಆಯಿತು ಕಣ್ಣಿಗೆ ಹಬ್ಬವೂ ಅಯಿತು ಎಂದು
ಅವರಿಗೆ ಸಂಕೋಚವಾಗದಂತೆ ಒಂದಿಷ್ಟು ದೂರ ಹೋಗಿ ಕುಳಿತು ಮಲಗಿ ಕಾಲಕಳೆದು ರಾತ್ರಿಯ ಊಟದ ಶಾಸ್ತ್ರ ಪೂರೈಸಿ
ಗೊತ್ತು ಮಾಡಿದ್ದ ಬಸ್ ಹತ್ತಿ ಮುಂದಿನ ಮತ್ತು ನನ್ನ ರಾಜಸ್ತಾನ ಪ್ರವಾಸದ ಕೊನೆಯ ತಾಣವಾದ ಬಿಕನೇರ್
ಪ್ರವಾಸದ ಯೋಜನೆ ಮಾಡುತ್ತಾ ಮಲಗಿಕೊಂಡೆ. ರಾಜಸ್ತಾನದ ನನ್ನ ಪ್ರವಾಸದಲ್ಲಿ ಈ ಮರುಭೂಮಿಯ ಸುತ್ತಾಟ
ನೀಡಿದ ಅನುಭವ ಬಹಳಷ್ಟು ವಿಶಿಷ್ಟವಾದದ್ದು ಎಂದು ಬೇರೆ ಹೇಳಬೇಕಾಗಿಲ್ಲ.
****
ಡಾ ರಾಜೇಂದ್ರ ಬುರಡಿಕಟ್ಟಿ
೧೬-೧೦-೨೦೨೬








No comments:
Post a Comment