ಅರಾವಳಿಯ ಅಪರೂಪದ ಗಿರಿಧಾಮ ಅಬು ಪರ್ವತ
ಈ ವರ್ಷದ ರಾಜಸ್ತಾನ
ರಾಜ್ಯದ ಪ್ರವಾಸದ ಭಾಗವಾಗಿ ನಾನು ಮೊನ್ನೆ ಮೌಂಟ್ ಅಬುವಿಗೆ ಹೋಗಿದ್ದೆ. ಅರಾವಳಿ ಅರಾವಳಿ ಪರ್ವತ
ಶ್ರೇಣಿಯಲ್ಲಿಯೇ ಅತ್ಯಂತ ಎತ್ತರ ಶಿಖರ ಎಂದು ಕರೆಯಲ್ಪಡುವ ಗುರುಶಿಖರವನ್ನು ಹೊಂದಿರುವ ಈ ಮೌಂಟ್
ಅಬು ರಾಜಸ್ಥಾನದ ಏಕೈಕ ಗಿರಿಧಾಮವೂ ಹೌದು. ಅಲ್ಲಿನ ಸುಂದರ ಪರಿಸರದಲ್ಲಿ ಒಂದೆರಡು ದಿನ ಸುತ್ತಾಡುವುದು
ನನ್ನ ಉದ್ದೇಶವಾಗಿತ್ತು. ಈ ಬೆಟ್ಟದ ಮೇಲಿನ ಪುಟ್ಟ ಪಟ್ಟಣ ಇರುವುದು ರಾಜಸ್ತಾನದ ಪಶ್ಚಿಮ ತುದಿಯ ಸಿರೋಹಿ
ಜಿಲ್ಲೆಯಲ್ಲಿ.
ಮೌಂಟ್ ಅಬು ಬೆಟ್ಟದ
ಮೇಲೆ ಇರುವ ಕಾರಣ ಅಲ್ಲಿಗೆ ನೇರವಾದ ರೈಲು ಸಂಪರ್ಕವಿಲ್ಲ. ಅಲ್ಲಿಗೆ ರೈಲಿನಲ್ಲಿ ಹೋಗುವವರು ಅಲ್ಲಿಗೆ
ಸುಮಾರು ನಲವತ್ತೈದು ಕಿ.ಮೀ. ದೂರದಲ್ಲಿ ಬೆಟ್ಟದ ಕೆಳಗೆ ಇರುವ ಅಬುರೋಡ್ ಎಂಬ ಊರಿನವರೆಗೆ ಮಾತ್ರ
ರೈಲಿನಲ್ಲಿ ಸಂಚರಿಸಬಹುದು. (ಅಬುರೋಡ್ ಎಂಬುದು ರೋಡಿನ ಹೆಸರಲ್ಲ; ಬದಲಾಗಿ ಊರಿನ ಹೆಸರು). ಅಲ್ಲಿಂದ
ಬಸ್ ನಲ್ಲಿ ಬೆಟ್ಟದ ಮೇಲಿರುವ ಅಬುಪರ್ವತವನ್ನು ತಲುಪಬೇಕು. ನಾನು ಉದಯಪುರದಿಂದ ಮೌಂಟ್ ಅಬುವಿಗೆ
ಹೋಗಬೇಕಾಗಿತ್ತಾದ್ದರಿಂದ ಮತ್ತು ನನಗೆ ಬೇಕಾದ ಹೊತ್ತಿಗೆ ಸರಿಯಾಗಿ ಅಲ್ಲಿ ರೈಲು ಸಂಪರ್ಕ ಇರಲಿಲ್ಲವಾದ
ಕಾರಣ ಉದಯಪುರದಿಂದ ಬಸ್ಸಿನಲ್ಲಿಯೇ ಹೊರಟೆ. ಉದಯಪುರದಿಂದ ಮೌಂಟ್ ಅಬುವಿಗೆ ಬಸ್ಸಿನಲ್ಲಿ ಸುಮಾರು
ಐದು ಗಂಟೆಗಳ ಪ್ರಯಾಣ.
ಬೆಳಿಗ್ಗೆ ಉದಯಪುರದಿಂದ
ರಾಜಸ್ತಾನ ಸರ್ಕಾರದ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಹೊರಟ ನಾನು ಮೌಂಟ್ ಅಬು ತಲುಪಿದಾದ ಸುಮಮೊದಲ ದಿನ ಮೌಂಟ್ ಅಬು ತಲುಪಿದಾಗ
ಆಗಲೇ ಮಧ್ಯಾಹ್ನ ಆಗಿದ್ದರಿಂದ ಗೊತ್ತು ಮಾಡಿಕೊಂಡಿದ್ದ ನನ್ನ ರೂಮಿಗೆ ಹೋಗಿ ತುಸುಹೊತ್ತು ವಿಶ್ರಾಂತಿ
ಪಡೆದು ಸಂಜೆ ಅಲ್ಲಿನ ಪ್ರಸಿದ್ಧ ಸರೋವರ ನಕ್ಕಿ ಲೇಕ್ಗೆ ಸಂಜೆ ಹೋಗಿ ಒಂದಿಷ್ಟು ಹೊತ್ತು ಕಾಲಕಳೆದು
ಬರಲು ಮಾತ್ರ ಸಾಧ್ಯವಾಯಿತು. ಹೀಗೆ ಯಾವುದಾದರೂ ಅಪರಿಚಿತ ಪ್ರದೇಶಕ್ಕೆ ಹೋದಾಗ ಸಾಧ್ಯವಿದ್ದರೆ ನಡೆದಾಡಿಕೊಂಡೇ
ತಿರುಗುವುದು ನನಗೆ ಪ್ರೀತಿಯ ಹವ್ಯಾಸ.
ನಕ್ಕಿಲೇಕ್ ಅಬುಪರ್ವತದ
ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸುತ್ತಲೂ ಬೆಟ್ಟಗಳಿಂದ ಆವೃತವಾದ ಈ ಸರೋವರ ನೋಡುಗರ ಮನಸ್ಸನ್ನು
ಆಕರ್ಷಿಸುವಂಥದ್ದು. ಈ ಸರೋವರ ಇರುವ ಸ್ಥಳವನ್ನು ʻಗಾಂಧಿ
ವಾಟಿಕಾʼ ಎಂದು ಕರೆಯಲಾಗುತ್ತದೆ. ಸರೋವರವನ್ನು ಪ್ರವೇಶಿಸುವಾಗ ಮೊದಲು ನಮಗೆ ಮಹಾತ್ಮಾ ಗಾಂಧಿ ಅವರ
ಪ್ರತಿಮೆ ಇರುವ ಒಂದು ಚಿಕ್ಕ ಉದ್ಯಾನ ಸಿಗುತ್ತದೆ. ಅದನ್ನು ದಾಟಿ ಮುನ್ನೆಡರೆ ಸಿಗುವುದೇ ವಿಶಾಲವಾದ
ಸುಂದರ ನಕ್ಕಿ ಸರೋವರ. ಈ ಸರೋವರದ ಸುತ್ತಲೂ ಸುತ್ತಲು ವಿಶಾಲವಾದ ಮತ್ತು ಟೈಲ್ಸ್ಗಳಿಂದ ರಚಿತವಾದ
ರಸ್ತೆಯನ್ನು ಮಾಡಿದ್ದಾರೆ. ಈ ದಾರಿಯಲ್ಲಿ ನಡೆಯುತ್ತಾದ ಒಂದು ಸುತ್ತು ಬರುವಾದ ಆ ಸರೋವರ, ಅದರ ಸುತ್ತಣ
ಬೆಟ್ಟಗಳ ವಿವಿಧ ಆಯಾಮಗಳ ಚಿತ್ರಗಳು ನಮಗೆ ಸಿಗುತ್ತವೆ. ಈ ಸರೋವರನ್ನು ಒಂದು ಸುತ್ತು ಬರಲು ಸುಮಾರು
ಇಪ್ಪತ್ತರಿಂದ ಮೂವತ್ತು ನಿಮಿಷಗಳು ಬೇಕಾಗುತ್ತವೆ. ಸುತ್ತುವಾದ ದಣಿವಾದರೆ ದಣಿವು ನಿರಾರಿಸಿಕೊಳ್ಳಲು
ಅಲ್ಲಲ್ಲೆ ಕುಳಿತುಕೊಳ್ಳಲು ಕಲ್ಲುಬೆಂಚುಗಳ ವ್ಯವಸ್ಥೆ ಮಾಡಿದ್ದಾರೆ. ಒಂದಿಷ್ಟುಹೊತ್ತು ಕುಳಿತು ದಣಿವಾರಿಸಿಕೊಂಡು
ಮುನ್ನಡೆಯಬಹುದು. ದಣಿದ ದೇಹ ಮನಸ್ಸುಗಳಿಗೆ ಆಲ್ಹಾದವನ್ನು ಉಂಟುಮಾಡಲು ಇಲ್ಲಿ ಎಲ್ಲ ಕಡೆ ಇರುವಂತೆ
ದೋಣಿವಿಹಾರ ತಿಂಡಿತಿನಿಸುಗಳ ಏರ್ಪಾಡು ಎಲ್ಲ ಇದೆ. ಮಕ್ಕಳ ಆಟಕ್ಕೆ ಸರೋವರದ ಪಕ್ಕ ರಂಜನಾ ಉದ್ಯಾನ
(ಫನ್ಪಾರ್ಕ್) ಕೂಡ ಇದೆ.
ವೃದ್ಧತಾಯಿ ಮತ್ತು ಪುಟ್ಟ ಮಗು
ನಾನು ಈ ನಕ್ಕಿ
ಲೇಕ್ಗೆ ಹೋದಾಗ ಸಂಜೆ ಸೂರ್ಯ ಪಡುವಣದಲ್ಲಿ ಕೆಂಪುಬಣ್ಣಕ್ಕೆ ತಿರುಗಿದ್ದ. ಸರೋವರದ ಪರಿಸರದಲ್ಲಿ ನಾನು
ಇದ್ದ ಸಂದರ್ಭದಲ್ಲಿ ನಡೆದ ಎರಡು ಚಿಕ್ಕ ಘಟನೆಗಳನ್ನು ಹೇಳಬೇಕು. ಒಂದು ನಾನು ಈ ಸರೋವರವನ್ನು ಸುತ್ತು
ಹಾಕುವಾಗ ದಣಿದು ಅಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಾಗ ನನ್ನ ಪಕ್ಕ ಕಾವೀ ಸೀರೆ ಉಟ್ಟಿದ್ದ
ಒಬ್ಬ ಅರವತ್ತರ ಆಸುಪಾಸಿನ ಮಹಿಳೆ ಬಂದು ಕುಳಿತರು. ಮಾತು ಬೆಳೆಯಿತು. ನಾನು ಕರ್ನಾಟಕದಿಂದ ಬಂದಿರುವುದಾಗಿಯೂ
ಪ್ರತಿ ವರ್ಷ ಒಂದೊಂದು ರಾಜ್ಯ ಸುತ್ತುವುದು ನನ್ನ ಹವ್ಯಾಸವೆಂದೂ ಅದರ ಭಾಗವಾಗಿ ಈಗ ರಾಜಸ್ತಾನ ಸುತ್ತುತ್ತಿರುವುದಾಗಿಯೂ
ಹೇಳಿದೆ. ಇದನ್ನು ಕೇಳಿ ಆಕೆ ಸಂತೋಷಪಟ್ಟಳು ಮತ್ತು ತನ್ನ ಬೆಂಗಳೂರು ಸಂಪರ್ಕದ ಬಗ್ಗೆ ಕೆಲವು ಮಾತುಗಳನ್ನು
ನೆನಪು ಮಾಡಿಕೊಂಡು ಹೇಳಿದಳು.
ಅವಳ ಮಾತಿನಿಂದ
ಆಕೆ ಒಂದೆಡೆ ನೆಲೆನಿಲ್ಲದ ಸುತ್ತುವ ಸಂತಳೆಂದು ತಿಳಿಯಿತು. ಆಕೆಗೆ ಎಲ್ಲಿಗೋ ಹೋಗಲು ಹಣದ ಅವಶ್ಯಕತೆ
ಇತ್ತೇನೋ. ಒಂದಿಷ್ಟು ಹಣದ ಸಹಾಯ ಮಾಡಬಹುದೇ ಎಂದು ಕೇಳಿದಳು. ಪ್ರವಾಸಕ್ಕೆ ಹೋದ ನಾನು ಎಷ್ಟು ತಾನೆ
ಸಹಾಯ ಮಾಡಲು ಸಾಧ್ಯವಾಗುತ್ತದೆ. ಒಂದು ನೂರು ರೂಪಾಯಿ ಅವಳ ಕೈಗೆ ಇಟ್ಟು ಅವಳ ಕಾಲಿಗೆ ನಮಸ್ಕರಿಸಿದೆ.
ಊರು ದೂರ ಇರುವುದಾಗಿಯೂ ಇನ್ನಷ್ಟು ಹೆಚ್ಚು ಕೊಡಲು ಸಾಧ್ಯವೇ ಎಂದು ಆಕೆ ಸಣ್ಣದನಿಯಲ್ಲಿ ಕೇಳಿದಳು.
ನಾನೂ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. “ನಾನೂ ಊರಿಗೆ ವಾಪಸ್ ಹೋಗಬೇಕಲ್ಲ ತಾಯಿ” ಎಂದು ಹೇಳಿಕೊಂಡಾಗ
ಅವಳು ಅದನ್ನು ಒಪ್ಪಿ ಆ ನೂರು ರೂಪಾಯಿಯನ್ನೇ ತೆಗೆದುಕೊಂಡು “ಒಳ್ಳೆಯದಾಗಲಿ” ಎಂದು ನನಗೆ ಆಶೀರ್ವದಿಸಿದಳು.
ನಾನು ಸರೋವರ ಸುತ್ತಲು ಎದ್ದೆ.
ಇಡೀ ಸರೋವರವನ್ನು
ಸುತ್ತುಹಾಕಿಕೊಂಡು ಮುಖ್ಯದ್ವಾರದ ಬಳಿ ಇರುವ ದೋಣಿವಿಹಾರ ಸ್ಥಳಕ್ಕೆ ಬಂದೆ. ದೋಣಿವಿಹಾರ ನೋಡುವುದು
ನನಗೆ ಇಷ್ಟ; ಆದರೆ ಮಾಡುವುದಲ್ಲ. ಹಾಗಾಗಿ ಅಲ್ಲಿ ಒಂದೆರಡು ಫೋಟೋ ತೆಗೆದುಕೊಂಡು ದೋಣಿ ವಿಹಾರ ನೋಡುತ್ತಾ
ಕುಳಿತಿದ್ದೆ. ಹೀಗೆ ಕುಳಿತಿರುವಾಗ ನನ್ನ ಹತ್ತಿರ ಬಂದ ಚಿಕ್ಕ ಹುಡುಗಿಯೊಬ್ಬಳು ನನಗೆ ಎರಡು ಉಂಡೆಗಳನ್ನು
ತೋರಿಸಿ, “ನನಗೆ ಹತ್ತು ರೂಪಾಯಿ ಕೊಡಿ. ಮೀನಿಗೆ ಹಾಕಲು ಈ ಉಂಡೆಗಳನ್ನು ನಿಮಗೆ ಕೊಡುತ್ತೇನೆ.” ಎಂದಳು.
ಆ ಹುಡುಗಿ ಹಾಗಂದ ತಕ್ಷಣ ಅವಳ ಮುಖನೋಡಿದೆ. ನನ್ನ ಮೇಷ್ಟ್ರ ಬುದ್ಧಿ ಎಲ್ಲಿ ಹೋಗುತ್ತೆ? “ಏಕೆ ನೀನು
ಶಾಲೆಗೆ ಹೋಗಲ್ವೆ?ʼ ಎಂದು ಕೇಳಿಯೇ ಬಿಟ್ಟೆ. “ಹೋಗುತ್ತೇನೆ” ಎಂದಳವಳು. “ಯಾವ ತರಗತಿ ಓದುತ್ತೀಯ?”
ಎಂದದ್ದಕ್ಕೆ “ನಾಲ್ಕನೆಯ ತರಗತಿ” ಎಂದೂ ಹೇಳಿದಳು.
ನನ್ನ ದೇಶ ಸುತ್ತಾಟದ
ಅನೇಕ ಕಡೆ ಹೀಗೆ ಶಾಲೆಗೆ ಹೋಗಬೇಕಾದ ವಯಸ್ಸಿನ ಮಕ್ಕಳ ಶಾಲೆಗೆ ರಜೆ ಇರುವಾಗ ಕೆಲವು ಸಂದರ್ಭಗಳಲ್ಲಿ
ಶಾಲೆ ತಪ್ಪಿಸಿಯೂ ಇಂತಹ ಕೆಲಸಗಳನ್ನು ಮಾಡುವುದನ್ನು ಕಂಡಿದ್ದೇನೆ. ಇದೆಲ್ಲದಕ್ಕೂ ಯಾವಾಗಲೂ ಪಾಲಕರ
ಬೇಜವಾಬ್ದಾರಿಯೇ ಕಾರಣವಾಗಿರುವುದಿಲ್ಲ. ನಾನು ಆ ಹುಡುಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವಳ ಅಪ್ಪ-ಅಮ್ಮ,
ಅವಳ ಶಾಲೆ ಇವುಗಳ ಬಗ್ಗೆ ತುಸುಹೊತ್ತು ಮಾತನಾಡಿ ಅವಳ ಕೈಯಿಂದಲೇ ಅವಳು ಕೊಡಲು ಬಂದಿದ್ದ ಉಂಡೆಗಳನ್ನು
ಅವಳ ಕೈಯಿಂದಲೇ ಮೀನಿಗೆ ಹಾಕಿಸಿ ಅವಳು ಕೇಳಿದ್ದ ಹತ್ತು ರೂಪಾಯಿಗಳನ್ನು ಅವಳಿಗೆ ಕೊಟ್ಟು ಕಳಿಸಿದೆ.
ಅವಳ ಮುಖ ಅರಳಿತು. ಪ್ರವಾಸದ ಸಂದರ್ಭಗಳಲ್ಲಿ ಪ್ರಸಿದ್ಧ ಸ್ಥಳಗಳ ವೀಕ್ಷಣೆ ನೀಡುವ ಸಂತೋಷವನ್ನೇ ಇಂತಹ
ಚಿಕ್ಕಪುಟ್ಟ ಸಂಗತಿಗಳು ಕೂಡ ನೀಡುತ್ತವೆ.
ಹೊಡೆಯಲು ಸಿಗದ ಗಂಡಸರ ಬೈಕು!
ಮರುದಿನ ಬೆಳಿಗ್ಗೆಯಿಂದ
ಇಡೀ ದಿನ ಮೌಂಟ್ ಅಬುವಿನ ಪ್ರಮುಖ ಸ್ಥಳಗಳಿಗೆ ಭೇಟಿನೀಡಿ ನೋಡುವ ಉದ್ದೇಶ ಹೊಂದಿದ್ದ ನನಗೆ ಅಲ್ಲಿ
ಚಿಕ್ಕ ತೊಂದರೆ ಎದುರಾಯಿತು. ನಾನು ಒಬ್ಬನೇ ಇದ್ದದ್ದರಿಂದ ಟ್ಯಾಕ್ಷಿ ಮಾಡಿಕೊಂಡು ತಿರುಗುವುದು ತುಸು
ದುಬಾರಿ ಆಗುತ್ತಿತ್ತು. ಹೀಗೆ ಒಬ್ಬನೇ ಪ್ವವಾಸ ಹೋದಾಗ ಸಾಧ್ಯವಿದ್ದರೆ ನಡೆದಾಡಿಕೊಂಡೇ ತಿರುಗುವುದು
ಅಥವಾ ಆಟೋ ಮಾಡಿಕೊಂಡು ತಿರುಗುವುದು ನನ್ನ ಕ್ರಮ. ಆದರೆ ಇಲ್ಲಿ ಇವೆರಡೂ ಸಾಧ್ಯತೆಗಳೂ ಇರಲಿಲ್ಲ. ನಡೆದಾಡಿಕೊಂಡು
ತಿರುಗಲು ಮೌಂಟ್ ಅಬುವಿನಲ್ಲಿ ನೋಡತಕ್ಕ ಸ್ಥಳಗಳು ಒಂದೇ ಕಡೆ ಇಲ್ಲ. ಇನ್ನು ಎರಡನೇ ಆಯ್ಕೆಯ ಆಟೋ
ಎಂದರೆ ಇಡೀ ಮೌಂಟ್ ಅಬುವಿನಲ್ಲಿ ಒಂದೇ ಒಂದು ಆಟೋ ಇಲ್ಲ! ಬೆಟ್ಟಗುಡ್ಡಗಳನ್ನು ಹತ್ತುವುದು ಈ ಆಟೋಗಳಿಗೆ
ಸಾಧ್ಯವಿಲ್ಲದ ಕಾರಣವಿರಬಹುದು. ಊಬರ್ ಅದೂ ಇದು ಏನೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲವೇನೋ?
ಹೀಗಾಗಿ ಇಲ್ಲಿ
ತಿರುಗಾಡಬೇಕಾದರೆ ಒಂದು ಬೆಟ್ಟಗುಡ್ಡಗಳನ್ನು ಸರಾಗವಾಗಿ ಹತ್ತಿಳಿಯಬಲ್ಲ ಜೀಪ್ (ಇಲ್ಲಿ ಅವೇ ಟ್ಯಾಕ್ಸಿಗಳು)
ಬಳಸಬೇಕು. ಇಲ್ಲವೇ ಬಾಡಿಗೆ ಬೈಕ್ ಪಡೆದುಕೊಂಡು ಸುತ್ತಬೇಕು. ಇವೆರಡೇ ಆಯ್ಕೆಗಳಿದ್ದ ಕಾರಣ ಮತ್ತು
ಒಬ್ಬನೇ ಇದ್ದ ಕಾರಣ ಬಾಡಿಗೆ ಬೈಕ್ ಪಡೆಯುವುದನ್ನೇ ನಾನು ಆಯ್ದುಕೊಂಡೆ. ನಾನು ಉಳಿದಿದ್ದ ಕಾಟೇಜ್
ಮಾಲಿಕನ ಸಹಾಯದಿಂದ ಇಂತಹ ಒಂದು ಬಾಡಿಗೆ ಬೈಕು ಸಿಕ್ಕಿತು. ನಾನು ಹಿರೋ ಹೊಂಡಾ ಗಾಡಿಯನ್ನು ಸುಮಾರು
ಮೂವತ್ತು ವರ್ಷಗಳಿಂದ ಹೊಡೆದವನು. ಸ್ಕೂಟರ್ಗಳನ್ನು ಹೊಡೆದಿಲ್ಲ. ಇಲ್ಲಿ ಸ್ಕೂಟರ್ ಹೊಡೆಯುವುದು
ಕೂಡ ಅನಿವಾರ್ಯವಾಯಿತು.
ಏಕೆಂದರೆ, “ಯಾವುದಾದರೂ
ಗಂಡಸರು ಹೊಡೆಯುವ ಗಾಡಿ ಕೊಡಪ್ಪ” ಎಂದು ನಾನು ಕೇಳಿದೆನಾದರೂ, “ಅವು ಯಾವೂ ಇಲ್ಲ ಸಿಗಲ್ಲ ಸರ್” ಎಂದು
ಬೈಕ್ ಅಂಗಡಿಯವನು ಅಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ Active Honda ವನ್ನೇ ಕೊಟ್ಟ. ಅದನ್ನೇ
ತೆಗೆದುಕೊಂಡು ನಾನು ಬೆಳಗಿನಿಂದ ಸುತ್ತತೊಡಗಿದೆ. ಹೊರರಾಜ್ಯಗಳ ಪ್ರವಾಸದಲ್ಲಿ ನಾನು ಬೈಕ್ ತೆಗೆದುಕೊಂಡು
ಸುತ್ತುವುದು ಇಲ್ಲ ಅನ್ನುವಷ್ಟು ಕಡಿಮೆ. ದಾರಿಮೇಲೆ ಗಾಡಿಗಳು ಕೈಕೊಡುವುದು, ಯಾರೋ ಬಂದು ಗುದ್ದುವುದು
ಇವೆಲ್ಲ ರಿಸ್ಕ್ಗಳನ್ನು ದೂರದ ಊರಲ್ಲಿ ತೆಗೆದುಕೊಂಡು ಗೋಳಾಡುವುದು ಯಾಕೆ ಎಂಬುದು ನನ್ನ ಲೆಕ್ಕಾಚಾರ.
ಆದರೆ ಅಂತಹ ರಿಸ್ಕ್ ತೆಗೆದುಕೊಳ್ಳುವುದು ಇಲ್ಲಿ ನನಗೆ ಅನಿವಾರ್ಯವಾಯಿತು.
ದಾರಿಮಧ್ಯೆ ಸ್ಕೂಟರಿನಲ್ಲಿ
ಬೆಟ್ಟವನ್ನು ಏರುವ ಸಂದರ್ಭದಲ್ಲಿ ಅತ್ತ ಇತ್ತ ಕಂಡ ಸುಂದರ ದೃಶ್ಯಗಳನ್ನು ಫೋಟೋ ಹೊಡೆದುಕೊಳ್ಳಲೆಂದು
ಒಂದುಕಡೆ ಸ್ಕೂಟರ್ ನಿಲ್ಲಿಸಿದೆ. ಫೋಟೋ ಏನೋ ತೆಗೆದುಕೊಂಡೆ. ಆದರೆ ಮುಂದೆ ಹೊರಡಲು ಸ್ಕೂಟರ್ ಸ್ಟಾರ್ಟ್
ಆಗಬಾರದೆ? “ಅಯ್ಯೋ ಶಿವನೆ ಈಗ ಎಂಥ ಮಾಡುವುದಪ್ಪ!” ಎಂದು ದಾರಿಯಲ್ಲಿ ಯಾರಾದರೂ ಬರಬಹುದೇ ಎಂದು ತುಸು
ಕಾದೆ. ನಾನು ನಿರೀಕ್ಷಿಸಿದಂತೆ ಯಾವುದೋ ಇನ್ನೊಂದು ಸ್ಕೂಟರಿನಲ್ಲಿ ಮೂವರು ಯುವಕರು ಬರುವುದನ್ನು ಗಮನಿಸಿ
ನಾನು ಕೈ ಅಡ್ಡಹಾಕಿ ಅವರನ್ನು ನಿಲ್ಲಿಸಿದೆ. “ಈ ಸ್ಕೂಟರ್ ನನಗೆ ಹೊಸದು. ಇದನ್ನು ಹೊಡೆದು ಅಭ್ಯಾಸವಿಲ್ಲ.
ಸ್ಟಾರ್ಟ್ ಆಗುತ್ತಿಲ್ಲ. ತುಸು ನೋಡುತ್ತೀರಾ?” ಎಂದು ಕೇಳಿದೆ. ಅವರು ತಮ್ಮ ಸ್ಕೂಟರಿನಿಂದ ಇಳಿದು
ತಕ್ಷಣ ಸ್ಟಾರ್ಟ್ ಮಾಡಿಕೊಟ್ಟರು. ವಾಸ್ತವದಲ್ಲಿ ಸ್ಕೂಟರ್ ಏನೂ ಆಗಿರಲಿಲ್ಲ. ನಾನೂ ಸರಿಯಿದ್ದೆ.
ಸ್ಕೂಟರ್ರೂ ಸರಿಯಿತ್ತು. ಆದರೆ ನಮ್ಮಿಬ್ಬರ ನಡುವೆ ಪರಿಚಯ ಇಲ್ಲದ್ದರಿಂದ ಹೀಗಾಯಿತು ಅಷ್ಟೆ. ಆ ಹುಡುಗರಿಗೆ
ಧನ್ಯವಾದ ಹೇಳಿ ಮುಂದೆ ಹೊರಟೆ.
ಅರಾವಳಿಯ ಗರಿಮೆಯ ಗುರುಶಿಖರ
ಅಂತೂ ಇಂತೂ ಗುರುಶಿಖರಕ್ಕೆ
ಬೆಳಗಿನ ಒಂಬತ್ತು ಒಂಬತ್ತೂವರೆ ಹೊತ್ತಿಗೆ ಬಂದು ತಲುಪಿ ಅಲ್ಲಿನ ವಾಹನ ನಿಲ್ದಾಣದಲ್ಲಿ ಬೈಕ್ ಪಾರ್ಕ್
ಮಾಡಿ ಕತ್ತೆತ್ತಿ ನೋಡಿದೆ. ಶಿಖರ ಇನ್ನೂ ತುಸು ಮೇಲೆ ಇತ್ತು. ಅಲ್ಲಿಯವರೆಗೆ ಮಾತ್ರ ವಾಹನ ಸಂಚಾರವಿದ್ದು
ಅಲ್ಲಿಂದ ಮುಂದೆ ಸುಮಾರು ೫೦೦ ಮೆಟ್ಟಿಲುಗಳಲ್ಲಿ ಹತ್ತಿಯೇ ಹೋಗಬೇಕಿತ್ತು. ನಾನು ಈ ಶಿಖರವನ್ನು ಹತ್ತಿರದಿಂದಲೇ
ನೋಡಲು ಬಂದವನಾದ್ದರಿಂದ ಮೆಟ್ಟಿಲುಗಳನ್ನು ಹತ್ತುವುದನ್ನು ಕಷ್ಟ ಅಂದುಕೊಳ್ಳಲು ಸಾಧ್ಯವಿರಲಿಲ್ಲ.
ಅಷ್ಟಕ್ಕೂ ಬೆಳಿಗ್ಗೆ ಬಿಸಿಲು ಏರುವುದರೊಳಗೆ ಅಲ್ಲಿಗೆ ತಲುಪಿದ್ದೆನಲ್ಲ. ಮೆಟ್ಟಿಲುಗಳನ್ನು ಹತ್ತತೊಡಗಿದೆ.
ಈ ಮೆಟ್ಟಿಲುಗಳನ್ನು ಹತ್ತಲು ವ್ಯವಸ್ಥಿತವದ ಮತ್ತು ಸುರಕ್ಷಿತವಾದ ದಾರಿ ಮಾಡಿದ್ದಾರೆ. ಮಾತ್ರವಲ್ಲ
ಬೆಟ್ಟದ ತುದಿಯವರೆಗೂ ದಾರಿಯ ಎರಡೂ ಬದಿಯಲ್ಲಿ ಹತ್ತು ಹಲವು ರೀತಿಯ ಅಂಗಡಿಗಳಿವೆ. ದಣಿವು ಆರಿಸಿಕೊಳ್ಳಲು
ಹೆಜ್ಜೆಹೆಜ್ಜೆಗೂ ತಂಪು ಪಾನೀಯಗಳು ಆಹಾರ ಪದಾರ್ಥಗಳಿ ಸಿಗುವ ಅಂಗಡಿ ಮುಂಗಟ್ಟುಗಳೂ ಇವೆ. ಇವೆಲ್ಲವನ್ನೂ
ನೋಡುತ್ತಾ ನಾನು ಬೆಟ್ಟವನ್ನು ತುದಿಯವರೆಗೂ ಏರಿ ಅಂತೂ ಗುರುಶಿಖರದ ತುದಿಯ ಮೇಲೆ ಹೋಗಿ ನಿಂತೆ.
ಈ ಬೆಟ್ಟದ ತುದಿಯಿಂದ
ನೋಡಿದರೆ ಅರಾವಳಿ ಬೆಟ್ಟಸಾಲುಗಳ ಸುಂದರ ದೃಶ್ಯ ಕಣ್ಮನಗಳನ್ನು ತಣಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿ
ಕೇಂದ್ರ ಸರ್ಕಾರದ ಪಿ. ಆರ್. ಎಲ್. (Physical Research Laboratory) ಇವರಿಂದ ನಡೆಸಲ್ಪಡುತ್ತಿರುವ
ಒಂದು ವೀಕ್ಷಣಾಲಯಇದೆ. ಆಕಾಶ ಅಧ್ಯಯನವಾದ ಕಾರಣದಿಂದ ಇಷ್ಟೊಂದು ಎತ್ತರದ ಬೆಟ್ಟದಲ್ಲಿ ಅದನ್ನು ಸ್ಥಾಪಿಸಿದ್ದಾರೆ.
ಆದರೆ ಅದಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲವಾಗಿ ನಾನು ಅದರ ಒಳಗೆ ಹೋಗದೆ ಬೆಟ್ಟದ ತುದಿಯಿಂದಲೇ
ಅದರ ಫೋಟೋ ತೆಗೆದುಕೊಂಡು ಅಲ್ಲಿಂದ ಕೆಳಗಿಳಿಯತೊಡಗಿದೆ. ಈ ಬೆಟ್ಟ ನೋಡಲು ಬಹಳ ಚೆನ್ನಾಗಿದೆಯಾದರೂ
ಅದರ ತುದಿಯಲ್ಲಿ ಪವಿತ್ರ ಗವಿಯ ಪಕ್ಕದಲ್ಲಿಯೇ ತಿಂಡಿ ತಿನಿಸುಗಳ ಅಂಗಡಿ ಮುಂತಾದವುಗಳನ್ನು ಇಡಲು ಅವಕಾಶ
ಮಾಡಿಕೊಟ್ಟದ್ದು ಸರಿ ಅನ್ನಿಸಲಿಲ್ಲ. ಅವನ್ನು ತುಸು ಅಂತರದಲ್ಲಿ ಕೆಳಗೆ ಮಾಡಬಹುದಿತ್ತು. ಇವು ಆ ಬೆಟ್ಟದ
ಪ್ರಶಾಂತತೆಗೆ ಮಾತ್ರವಲ್ಲ ಸ್ವಚ್ಚತೆಯ ಮತ್ತು ಶುಭ್ರತೆಗೂ ಧಕ್ಕೆ ತಂದಿವೆ ಅನ್ನಿಸಿತು.
ಮನಸ್ಸಿಗೆ ತಂಪು ನೀಡುವ ಶಾಂತಿವನ
ಬೆಟ್ಟದಿಂದ ಕೆಳಗಿಳಿಯುವಾದ
ಮಾರ್ಗಮಧ್ಯದಲ್ಲಿಯೇ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪೀಸ್ ಪಾರ್ಕ್ ಸಿಕ್ಕಿತು. ಅಬುಪರ್ವದಲ್ಲಿನ
ಈ ವಿಶ್ವವಿದ್ಯಾಲಯದ ಕೇಂದ್ರಯ ಕಛೇರಿಗೆ ಹೋಗುವುದೂ
ನನ್ನ ಯೋಜನೆಯ ಭಾಗವಾಗಿತ್ತು ಅಲ್ಲಿಗೆ ಹೋಗುವ ಮೊದಲು ಸಿಕ್ಕ ಈ ಪಾರ್ಕ್ ನಾನು ಹೋದಾಗ ಇನ್ನೊಂದು
ಗಂಟೆಯಲ್ಲಿ ಮುಚ್ಚುವರದಲ್ಲಿತ್ತು. ತಕ್ಷಣ ಒಳಗೆ ಹೋದೆ. ಅಲ್ಲಿನ ವ್ಯವಸ್ಥಾಪಕ ಮಹಿಳೆಯೊಬ್ಬರು ನನ್ನನ್ನುಇತರೆ
ಪ್ರವಾಸಿಗರೊಂದಿಗೆ ಒಂದು ವಿಶಾಲವಾದ ಕೊಠಡಿಗೆ ಕರೆದೊಯ್ದು
ಕೇಂದ್ರದ ವಿಚಾರಗಳನ್ನು ಹೇಳತೊಡಗಿದರು. ನಾವು ಕುಳಿತು ಕೇಳತೊಡಗಿದೆವು.
ಆದರೆ ಅವರು ಹೇಳಿ
ಮುಗಿಸುವುದರೊಳಗೆ ನನ್ನ ಜೊತೆಗಿದ್ದ ಇತರರು ಒಬ್ಬೊಬ್ಬರೇ ಎದ್ದೆದ್ದು ಹೋದರು. ಅವರು ಹೇಳಿ ಮುಗಿಸುವವರೆಗೆ
ಕುಳಿತವನು ನಾನು ಮಾತ್ರ. ನಾನು ಅವರ ಆ ವಿಚಾರಗಳನ್ನು ಹಿಂದಿನ ದಿನ ಸಂಜೆ ಲಕ್ಕಿ ಲೇಕ್ ಬಳಿಯ ಅವರ
ಇನ್ನೊಂದು ಕೇಂದ್ರಕ್ಕೆ ಹೋದಾಗ ಕೇಳಿದ್ದೆ. ಅಲ್ಲಿ ಕೇಳಿದ್ದೇನೆಂದು ಇಲ್ಲಿ ಹೇಳುವಾಗ ಎದ್ದು ಹೋಗುವುದು
ಸಭ್ಯತೆ ಆಗುವುದಿಲ್ಲ ಅನಿಸಿತು. ಒಬ್ಬ ಪಾಠ ಮಾಡುವ ಶಿಕ್ಷಕನಾಗಿ, ಭಾಷಣಕಾರನಾಗಿ, ಪಾಠ ಮಾಡುವಾಗ ಅಥವಾ
ಭಾಷಣ ಮಾಡುವಾಗ ಯಾರಾದರೂ ಆಸಕ್ತಿಯಿಲ್ಲವೆಂದು ಎದ್ದು ಹೋದರೆ ಮಾಡುವವರ ಮನಸ್ಸಿಗೆ ಹೇಗನ್ನಿಸುತ್ತದೆ
ಎಂಬುದು ನನಗೆ ತೀರಾ ಪರಿಚಯವಿರುವಂಥದ್ದು. ಹಾಗಾಗಿ ಅವರು ಹೇಳಿ ಮುಗಿಸುವವರೆಗೂ ನಾನು ಕುಳಿತಿದ್ದೆ
ಮಾತ್ರವಲ್ಲ; ಅವರ ವಿಷಯವನ್ನು ಎಂದೂ ಕೇಳಿಯೇ ಇಲ್ಲವೇನೋ ಅನ್ನುವಂತೆ ಆಸಕ್ತಿಯಿಂದ ಕೇಳಿದೆ ಕೂಡ.
ಇವೆಲ್ಲವನ್ನೂ
ನೋಡಿಕೊಂಡು ಹೊರಬಂದು ಅಲ್ಲಿ ಬೆಳಸಿರುವ ಸುಂದರವಾದ ಉದ್ಯಾನದಲ್ಲಿ ಒಂದು ಸುತ್ತು ಹಾಕಲು ಹೋದೆ. ಇಡೀ
ಉದ್ಯಾನ ಬಗೆಬಗೆಯ ಹೂವುಗಳಿಂದ ಕಂಗೊಳಿಸುತ್ತಿತ್ತು. ಉದ್ಯಾನದ ಒಂದು ಸ್ಥಳದಲ್ಲಿ ʻಓಂʼ
ಎಂಬ ಸಂಸ್ಕೃತ ಅಕ್ಷರವನ್ನು ಸಿಮೆಂಟಿನಲ್ಲಿ ಬೃಹತ್ ಆಕಾರದಲ್ಲಿ ಸ್ಥಾಪಿಸಿದ್ದಾರೆ. ಒಟ್ಟಾರೆ ಈ ಕೇಂದ್ರದಲ್ಲಿ
ಸುತ್ತಾಡುವುದು ಮನಸ್ಸಿಗೆ ಆಲ್ಹಾದವನ್ನುಂಟುಮಾಡುವುದಂತೂ ಸುಳ್ಳಲ್ಲ.
ಕಲಾಪ್ರತಿಭೆಯ ವ್ಯಾಕ್ಸ್ ಮ್ಯೂಜಿಯಂ ಮತ್ತು ವೈಭವದ ಜೈನಮಂದಿರ
ಬೆಟ್ಟದಿಂದ ಇಳಿದು
ಮೌಂಟ್ ಅಬು ಪಟ್ಟಣಕ್ಕೆ ಬರುವ ಮಾರ್ಗದಲ್ಲಿಯೇ ದಿಲ್ವಾಡ ಎಂಬ ಊರು ಸಿಗುತ್ತದೆ. ಅಲ್ಲಿ ಪ್ರಸಿದ್ಧವಾದ
ಜೈನ ಮಂದಿಗಳ ಒಂದು ಆವರಣವಿದೆ. ಅಲ್ಲಿಗೆ ಬೆಟ್ಟಕ್ಕೆ ಹೋಗಿ ಬರುವವರು ಅವಶ್ಯವಾಗಿ ಇಲ್ಲಿನ ದೇವಾಲಯ
ಆವರಣಕ್ಕೆ ಭೇಟಿ ನೀಡಬೇಕು. ಈ ಆವರಣದಲ್ಲಿ ಸುಮಾರು
ಮೂರು-ನಾಲ್ಕು ಬೃಹತ್ ಆದ ದೇವಾಲಯಗಳಿದ್ದು ಐದಾರು ಚಿಕ್ಕಪುಟ್ಟ ಮಂದಿರಗಳಿವೆ. ಇವೆಲ್ಲವೂ ಜೈನಧರ್ಮದ
ವಿವಿಧ ತೀರ್ಥಂಕರರ ಹೆಸರಿನಲ್ಲಿರುವ ಮಂದಿರಗಳು. ದೊಡ್ಡ ದೇವಾಲಯಗಳ ಗರ್ಭಗುಡಿಯ ಭಾಗಗಳು ಕಪ್ಪುಶಿಲೆಯಿಂದ
ಕೂಡಿವೆ. ಅವುಗಳ ಹಜಾರಗಳು ಮಾತ್ರ ಬಿಳಿ ಹಾಗೂ ಹಳದಿ ಬಣ್ಣದ ಬೆಲೆಬಾಳುವ ಅಮೃತಶಿಲೆಗಳಿಂದ ಕೂಡಿದ ಅಲಂಕೃತ
ಕಂಬಗಳಿಂದ ರಾರಾಜಿಸುತ್ತವೆ. ಈ ಕಂಬಗಳು ಮತ್ತು ಮೇಲ್ಚಾವಣಿಗಳು ಭಾರತೀಯ ಪುರಾಣ, ಚರಿತ್ರೆ, ಜೈನಸಂಪ್ರದಾಯ
ಇತ್ಯಾದಿಗಳಿಗೆ ಸಂಬಂಧಿಸಿ ಅನೇಕ ಚಿತ್ರಾವಳಿಗಳಿಂದ ಕೂಡಿದ್ದು ಅವು ತಮ್ಮ ಕಲಾ ಶ್ರೀಮಂತಿಕೆಯಿಂದ ವಿಜೃಂಭಿಸುತ್ತಿವೆ.
ಇವೆಲ್ಲವನ್ನೂ
ನೋಡುವುದರೊಳಗೆ ಮಧ್ಯಾಹ್ನ ಊಟದ ಸಮಯವಾಗಿತ್ತು. ಅಲ್ಲಿಯೇ ದಿಲ್ವಾರದಲ್ಲಿ ಹೊಟೆಲ್ ಒಂದರಲ್ಲಿ ಊಟ
ಪೂರೈಸಿದೆ. ಇನ್ನು ಮೌಂಟ್ ಅಬುವಿನಲ್ಲಿ ನಾನು ಹೋಗಲೇಬೇಕಾದ್ದು ಒಂದು ಪ್ರಮುಖ ಸ್ಥಳವಿತ್ತು. ಅದೆಂದರೆ
ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಇರುವ ಆವರಣ. ಅದಕ್ಕಾಗಿ ಬೇಗ ಬೇಗ ಊಟ ಪೂರೈಸಿ ಸ್ಕೂಟರ್
ಸ್ಟಾರ್ಟ್ ಮಾಡಿದೆ.
ಧರ್ಮಗಳ ಎಲ್ಲ ಮೀರಿದ ಅಧ್ಯಾತ್ಮಿಕತೆ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ
ಭಾರತದ ಬಹುತೇಕ
ಎಲ್ಲ ತಾಲ್ಲೂಕು ಕೇಂದ್ರಗಳು ಒಳಗೊಂಡಂತೆ ದೇಶದಾದ್ಯಂತ ಸುಮಾರು ಐದು ಸಾವಿರಕ್ಕೂ ಹೆಚ್ಚು ಶಾಖೆಗಳನ್ನು
ಹೊಂದಿರುವುದು ಮಾತ್ರವಲ್ಲದೆ ಬ್ರಿಟನ್ ಅಮೇರಿಕ ಸೇರಿದಂತೆ ಪ್ರಪಂಚದ ಸುಮಾರು ನೂರಾ ನಲವತ್ತಕ್ಕೂ
ಹೆಚ್ಚು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಪ್ರಪಂಚದ ಬಹುಮುಖ್ಯ ಆಧ್ಯಾತ್ಮಿಕ ವಿದ್ಯಾಬೋಧನಾ
ಸಂಸ್ಥೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ. ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಹೀಗೆ
ಯಾವುದಾದರೂ ಒಂದು ಧರ್ಮವನ್ನು ಹಿಡಿದುಕೊಂಡು ಆಧ್ಮಾತ್ಮದ ಹೆಸರಿನಲ್ಲಿ ಧರ್ಮವನ್ನು ಬೋಧಿಸುವ ಅನೇಕ
ಸಂಘ ಸಂಸ್ಥೆಗಳು ನಮ್ಮಲ್ಲಿ ಇವೆ. ಆದರೆ ಎಲ್ಲ ಧರ್ಮಗಳ ಎಲ್ಲೆಗಳನ್ನು ಮೀರಿ ಶುದ್ಧ ಆಧ್ಯಾತ್ಮಿಕತೆಯನ್ನು
ಬೋಧಿಸುವುದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿಶೇಷತೆ.
ಅವಳಿಗೆ ಇಂಗ್ಲೀಷು
ಅಷ್ಟು ಚೆನ್ನಾಗಿ ಬರೆಯುತ್ತಿರಲಿಲ್ಲ. ದಕ್ಷಿಣದ ರಾಜ್ಯಗಳ ಜನರಿಗೆ ಹಿಂದಿ ಚೆನ್ನಾಗಿ ಬರುವುದಿಲ್ಲ
ಅವರು ಇಂಗ್ಲಿಷ್ ಪ್ರವೀಣರು ಎಂಬುದು ಉತ್ತರದ ರಾಜ್ಯಗಳಲ್ಲಿ ಜನರ ಸಾಮಾನ್ಯ ಭಾವನೆ. ಅವಳ ಸಂಕೋಚವನ್ನು
ಅರ್ಥಮಾಡಿಕೊಂಡ ನಾನು, ಪರವಾಗಿಲ್ಲ ಹಿಂದಿಯಲ್ಲಿಯೇ ಹೇಳಿ ಎಂದೆ. ಅವಳು 'ಮುಜೆ ಇಂಗ್ಲಿಷ್ ತೊಡಾ ತೊಡಾ
ಆತಾ ಹೈ' ಎಂದಾಗ ಆಕೆಯ ಸಂಕೋಚವನ್ನು ನಿವಾರಿಸಲಿಕ್ಕೆಂದೇ ನಾನೂ ಕೂಡ, "ಕೋಯಿ ದಿಕ್ಕತ್ ನಹಿ.
ಮುಜೆಬಿ ಹಿಂದಿ ತೋಡಾ ತೊಡಾ ಆತಾ ಹೈ" ಎಂದು ಒಂದು ಸಣ್ಣ ಸುಳ್ಳು ಹೇಳಿ ಅವಳ ಮುಜುಗರ ಹೋಗಲಾಡಿಸಿದೆ.
ಏಕೆಂದರೆ ಯಾರಾದರೂ ತಮ್ಮಲ್ಲಿ ಏನೋ ಒಂದು ಕೊರತೆ ಇದೆ ಎಂದು ನಮ್ಮ ಮುಂದೆ ಸಂಕೋಚಪಡುವಾಗ ನಾವು ಕೂಡ
ನಮ್ಮಲ್ಲಿಯೂ ಒಂದು ಕೊರತೆ ಇದೆ ಎಂದು ಹೇಳಿದರೆ ಅವರಿಗೆ ಸಮಾಧಾನ ಸಂತೋಷ ಆಗುತ್ತವೆ. ಇದು ಮನುಷ್ಯ
ಸ್ವಭಾವ. ನನ್ನ ಮಾತು ಕೇಳಿ ಅವಳು ಬಾಯ್ತುಂಬ ನಕ್ಕಳು. ಕರೆದುಕೊಂಡು ಹೋಗಿ ಇಡೀ ಆವರಣವನ್ನು ಪರಿಚಯಿಸಿದಳು.
ಇಲ್ಲಿಯೂ ಬಂದವರಿಗೆಲ್ಲ
ಅವರ ವಿಚಾರ ಬೋಧನೆ ಮಾಡುವ ವ್ಯವಸ್ಥೆ ಇದೆ. ಈಗಾಗಲೆ ಮೌಂಟ್ ಅಬುವಿನಲ್ಲಿ ಇವರದ್ದೇ ಆದ ಎರಡು ಕೇಂದ್ರಗಳಲ್ಲಿ
ಈ ಬೋಧನೆಯನ್ನು ನಾನು ಕೇಳಿದ್ದರೂ ಕೂಡ ಇಲ್ಲಿಯೂ ಅದನ್ನು ಬಹಳ ಶ್ರದ್ಧೆಯಿಂದಲೇ ಕೇಳಿದೆ. ಅದಕ್ಕಾಗಿ
ನೇಮಿಸಲ್ಪಟ್ಟ ಒಬ್ಬ ತರುಣ ಇದನ್ನು ನನಗೆ ಬಹಳ ಶ್ರದ್ಧೆಯಿಂದಲೇ ಹೇಳಿದ. ನಾವೆಲ್ಲ ಎಲ್ಲ ಧರ್ಮಗಳ ಆಚೆಗೆ
ಇರುವ ಪ್ರಜಾಪಿತ ಪರಬ್ರಹ್ಮನ ಮಕ್ಕಳು. ಒಂದು ಕಾಲದಲ್ಲಿ ಎಲ್ಲರೂ ಸುಖ ಸಂತೋಷದಿಂದ ನೆಮ್ಮದಿಯಿಂದ ಬದುಕುತ್ತಿದ್ದ
ಈ ಜಗತ್ತು ಇಂದು ಮನುಷ್ಯನ ಅಸುರೀ ಗುಣಗಳಿಂದಾಗಿ ಇಷ್ಟೊಂದು ಕೆಟ್ಟ ಸ್ಥಿತಿಗೆ ತಲುಪಿದೆ. ಮಾನವ ತನ್ನ
ಅಸುರೀ ಗುಣಗಳನ್ನು ಕಳೆದುಕೊಂಡು ಪರಬ್ರಹ್ಮನೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮತ್ತೆ ಈ ಕಲಿಯುಗವನ್ನು
ಸುಖ ಸಂತೋಷಗಳ ಸುಖಯುಗವನ್ನಾಗಿ ಮಾಡುವುದೇ ಈಶ್ವರೀಯ ವಿಶ್ವವಿದ್ಯಾಲಯದ ಗುರಿ. ಇದು ಅವರ ಬೋಧನೆಯ ಸಾರಾಂಶ.
ಸಮಯ ಇನ್ನೂ ಒಂದೆರಡು
ಗಂಟೆ ಇತ್ತು. ಆದರೆ ಅಬುಪರ್ವತದಲ್ಲಿ ನೋಡಲು ಬಹಳ ಮುಖ್ಯವಾದದ್ದು ಏನೂ ಉಳಿಯಲಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ
ಕಾರಣ ರೂಮಿಗೆ ಹೋಗಿ ಮಾಡುವುದಾದರೂ ಏನನ್ನು ಎಂದು ಮತ್ತೆ ನಿನ್ನೆ ಸಂಜೆ ನೋಡಿಬಂದ ನಕ್ಕಿ ಸರೋವರದ
ಕಡೆ ಸ್ಕೂಟರ್ ತಿರುಗಿಸಿದೆ. ಆ ಪ್ರಶಾಂತ ಪರಿಸರದಲ್ಲಿ ಎರಡನೆಯ ದಿನ ಸಂಜೆ ಕೂಡ ಒಂದೆರಡು ಗಂಟೆ ಕಳೆದೆ.
ಸರೋವರದ ಎಡಭಾಗದಿಂದ ಬೆಟ್ಟವನ್ನು ಮೆಟ್ಟಿಲು ಹತ್ತಿ ಹೋಗಿದ್ದರೆ ಸೂರ್ಯಾಸ್ತವನ್ನು ನೋಡುವ ಒಂದು ಸ್ಥಳ
ಇತ್ತು. ಆದರೆ ಇಡೀದಿನ ಸ್ಕೂಟರ್ ಹೊಡೆದು ಓಡಾಡಿ ಗುರುಶಿಖರವನ್ನು ಏರಿ ಇಳಿದು ಬಂದದ್ದರಿಂದ ಸಾಕಷ್ಟು
ದಣಿವಾಗಿತ್ತು. ಮೇಲಾಗಿ ರಾಜಸ್ತಾನದ ಈ ಪ್ರವಾಸದಲ್ಲಿಯೇ ಬೇರೆ ಬೇರೆ ಕಡೆ ಸೂರ್ಯಾಸ್ತಗಳನ್ನು ನೋಡಿದ್ದೆ.
ಹೀಗಾಗಿ ಆಸಕ್ತಿ ಹುಟ್ಟಲಿಲ್ಲ. ಬೀಸುವ ತಂಪಾದ ಗಾಳಿಗೆ
ಮೈಯೊಡ್ಡಿ ಒಂದೆರಡು ಗಂಟೆ ಕಣ್ಣಮುಂದಿನ ಸುಂದರ ಸರೋವರವನ್ನು
ನೋಡುತ್ತಾ ಕುಳಿತು ಪೇಟೆಯಲ್ಲಿ ಸುತ್ತಾಡುತ್ತಾ ರೂಮಿಗೆ ಬಂದುಬಿಟ್ಟೆ.
ಕಾಟೇಜು ಮಾಲಿಕನ ಮದ್ಯ-ಮದಿರೆ ಪುರಾಣ
ಮೌಂಟ್ ಅಬು ಪರ್ವತ
ಪ್ರವಾಸದ ಅನುಭವದಲ್ಲಿ ಇನ್ನೊಂದು ಸಂಗತಿಯನ್ನು ಹೇಳಬೇಕು. ಅಬು ಪರ್ವತದಲ್ಲಿ ನಾನು ಉಳಿದುಕೊಂಡದ್ದು
ಊರ ಅಂಚಿನಲ್ಲಿರುವ ಒಂದು ಕಾಟೇಜಿನಲ್ಲಿ. ನಾಲ್ಕೈದು ಜನ ಹೊರಟಾಗ ದೊಡ್ಡ ಹೊಟೆಲ್ನಲ್ಲಿಯೇ ರೂಮು ಬುಕ್
ಮಾಡಿದ್ದ ನಾನು ಕೊನೆಗೆ ಅವರೆಲ್ಲ ಬರುವುದಿಲ್ಲ ಎಂತಾಗಿ ನಾನೊಬ್ಬನೇ ಹೊರಡುವುದು ಅಂತಾದಾಗ ಆ ಹೊಟೆಲ್
ರೂಮುಗಳನ್ನು ಬುಕ್ಕಿಂಗ್ ರದ್ದುಪಡಿಸಿ, ಹೊಸದಾಗಿ ಈ ಕಾಟೇಜ್ ಬುಕ್ ಮಾಡಿಕೊಂಡಿದ್ದೆ. ಐಶಾರಾಮಿ
ಹೊಟೆಲ್ಗಳ ಸೌಲಭ್ಯಗಳೂ ಈ ಕಾಟೇಜುಗಳಲ್ಲಿ ಇರುವುದಿಲ್ಲ. ಅವುಗಳಷ್ಟು ದೊಡ್ಡ ಬೆಲೆಯೂ ಇರುವುದಿಲ್ಲ.
ಉಳಿದುಕೊಳ್ಳಲಿಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಮಾತ್ರ ಇಲ್ಲಿ ಇರುತ್ತವೆ. ಅಷ್ಟೇ ನನಗೆ ಸಾಕಾಗುತ್ತಿತ್ತಾದ್ದರಿಂದ
ಮತ್ತು ಒಬ್ಬನೇ ಇದ್ದದ್ದರಿಂದ ಈ ವ್ಯವಸ್ಥೆ ಮಾಡಿಕೊಂಡಿದ್ದೆ.
ಈ ಕಾಟೇಜ್ ಮಾಲಿಕ
ಕಾಟೇಜಿನ ಸ್ವಾಗತ ಕೌಂಟರ್ ಬಳಿಯೇ ಮಲಗುತ್ತಿದ್ದ. ನಾನು ಹೋದಾಗ ಆತ ಇರಲಿಲ್ಲ. ರೂಮುಗಳಿಗೆ ಬೀಗ ಹಾಕಿರಲಿಲ್ಲ.
ನನ್ನಂತೆಯೇ ಉಳಿಯಲು ಬಂದಿದ್ದವರು, “ಅವರು ಹೊರಗೆ ಹೋಗಿದ್ದಾರೆ ಬರುವವರೆಗೆ ಖಾಲಿ ಇರುವ ಯಾವುದಾದರೂ
ಒಂದು ರೂಮಿನಲ್ಲಿ ಸಧ್ಯಕ್ಕೆ ಇರಿ” ಎಂದು ಹೇಳಿದರು. ನಾನು ಹಾಗೆಯೇ ಮಾಡಿದೆ. ನಂತರ ಬಂದ ಕಾಟೇಜ್
ಮಾಲಿಕ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ ಎಷ್ಟೋವರ್ಷಗಳ ಹಳೆಯ ಸ್ನೇಹಿತನಂತೆ ಮಾತನಾಡತೊಡಗಿದೆ.
ನಾನು ಉಳಿದುಕೊಂಡಿದ್ದ ಎರಡೂ ದಿನಗಳ ಸಂಜೆ ನನ್ನನ್ನು ಸ್ನೇಹಿತನಂತೆ ಕೂರಿಸಿಕೊಂಡು ಹರಟೆಹೊಡೆಯತೊಡಗಿದ.
ಆತನ ಕೈಯಲ್ಲಿ ಯಾವಾಗಲೂ ಮದ್ಯದ ಗ್ಲಾಸು ಇದ್ದೇ ಇರುತ್ತಿತ್ತು. ಹತ್ತು ಮಾತನಾಡುವುದರೊಳಗೆ ಹದಿನೈದು
ಗುಟುಕು ಕುಡಿಯುತ್ತಿದ್ದ. ನನ್ನನ್ನು ಬಹಳ ಪ್ರೀತಿಯಿಂದಲೇ ಕುಡಿಯಲು ಆಮಂತ್ರಿಸಿದ. ಎಂದೂ ಕುಡಿಯದ
ನಾನು ಆತನ ಆಮಂತ್ರಣವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಯವಾಗಿ ನಿರಾಕರಿಸಿದೆ. “ಬೀರೂ ಆಗುವುದಿಲ್ಲವೇ?
ಎಂದು ಆತ ಕೇಳಿದಾಗ, “ಇಲ್ಲ ನೀರು ಆಗುತ್ತದೆ ಅಷ್ಟೆ” ಎಂದೆ. “ಓ ಮೈ ಗಾಡ್!” ಎಂದು ಆತ ನಶೆಯಲ್ಲಿಯೇ
ಆಶ್ಚರ್ಯ ವ್ಯಕ್ತಪಡಿಸಿದ.
ಆತ ಮಾತನಾಡುತ್ತಾ
ಮಾತನಾಡುತ್ತಾ ಸ್ನೇಹಿತನಂತೆ ನನ್ನನ್ನು ಭಾವಿಸಿ ನನ್ನ ವೃತ್ತಿ, ಊರು ಕುಟುಂಬ ಇತ್ಯಾದಿಗಳನ್ನು ಕೇಳಿ
ತಿಳಿದುಕೊಂಡ. ಅದಾದ ಮೇಲೆ ತನ್ನ ವೈಯಕ್ತಿಕ ಜೀವನದ ಕತೆಯನ್ನು ಹೇಳತೊಡಗಿದ. ಆತನಿಗೆ ಹೆಂಡತಿ ಅಲ್ಲದೇ
ಮೂರು ಜನ ಗರ್ಲ್ ಪ್ರಂಡ್ಸ್ ಇದ್ದಾರಂತೆ. ಒಬ್ಬಳಂತೂ ಕಳೆದ ಇಪ್ಪತ್ತು ವರ್ಷಗಳಿಂದ ಮದುವೆಯೇ ಆಗದೇ
ಇವನಿಗಾಗಿ ಕಾಯುತ್ತಿದ್ದಾಳಂತೆ. ಅವಳನ್ನು ಹೆಂಡತಿ ಇರುವ ಮನೆಗೆ ಕರೆತರುವಂತೆಯೂ ಇಲ್ಲ; ಅಧಿಕೃತವಾಗಿ
ಮದುವೆ ಆಗುವಂತೆಯೂ ಇಲ್ಲ. ಹೀಗಾಗಿ ಏನು ಮಾಡುವುದು ಎಂದು ಅವನು ಒದ್ದಾಡುತ್ತಿರುವುದು ಮತ್ತು ಈ ಒದ್ದಾಟದ
ಮಾನಸಿಕ ತುಮುಲದಿಂದ ಒಂದಿಷ್ಟು ರಿಲ್ಯಾಕ್ಸ್ ಪಡೆಯಲು ಅವನು ಕುಡಿತದ ಚಟಕ್ಕೆ ಬಿದ್ದಿರುವುದು ನನಗೆ
ತಿಳಿಯಿತು.
ಮಾತಿನ ಮಧ್ಯೆ ಆತ ಸ್ವಾಭಾವಿಕವಾಗಿ, “ನಿಮಗೆ ಎಷ್ಟು ಜನ ಗರ್ಲ್ ಫ್ರೆಂಡ್ಸ ಇದ್ದಾರೆ?” ಎಂದೂ ಕೇಳಿದ. “ನನಗೆ ಒಬ್ಬ ಹೆಂಡತಿ ಬಿಟ್ಟರೆ ಮತ್ಯಾರೂ ಇಲ್ಲ.” ಎಂದು ನಾನು ಹೇಳಿದಾಗ ಅವನು ಮತ್ತೊಮ್ಮೆ, “ಓ ಮೈ ಗಾಡ್!” ಎಂದು ಮತ್ತೊಂದು ಗುಟುಕು ಹೀರುತ್ತಾ ಉದ್ಧರಿಸಿಬಿಟ್ಟ. ಬಹುಶಃ ಪ್ರಪಂಚದಲ್ಲಿ ಎಲ್ಲಾ ಗಂಡಸರೂ ಅವನಂತೆ ಮೂರು ಅಲ್ಲದಿದ್ದರೂ ಒಬ್ಬಿಬ್ಬರನ್ನಾದರೂ ಹೀಗೆ ಗರ್ಲ್ಫ್ರೆಂಡ್ ಅಂತ ಇಟ್ಟುಕೊಂಡಿರುತ್ತಾರೆ ಎಂದು ಅವನು ಭಾವಿಸಿದ್ದ ಎಂದು ಕಾಣುತ್ತದೆ. ಅವನು ಏನು ಮಾಡಬೇಕು ಎಂದು ನನ್ನ ಸಲಹೆ ಕೇಳಿದ. ಹೀಗೆ ಮೂರು ನಾಲ್ಕು ಹೆಂಗಸರನ್ನು ಇಟ್ಟುಕೊಂಡು ನಿಭಾಯಿಸಿ ಅನುಭವ ಇಲ್ಲದ ನಾನು ಅವನಿಗೆ ಹೇಗೆ ತಾನೆ ಉತ್ತಮ ಸಲಹೆ ಕೊಡಲು ಸಾಧ್ಯ? ಆದರೂ ಅನುಭವವಿಲ್ಲದಿದ್ದರೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ ಅವನನ್ನು ಕೂರಿಸಿಕೊಂಡು ಒಂದೆರಡು ಬುದ್ಧಿ ಮಾತುಗಳನ್ನು ಹೇಳಿದೆ. ನನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವನಾಗಿದ್ದ ಅವನು ನನ್ನ ಮಾತುಗಳನ್ನು ಶ್ರದ್ಧೆಯಿಂದಲೋ ನಶೆಯಿಂದಲೋ ಒಟ್ಟು ಕೇಳಿದ.
“ಯಾವ ಹೆಣ್ಣಿಗೂ
ಜೀವನದಲ್ಲಿ ನಾವು ಮೋಸಮಾಡಬಾರದು. ಗಂಡು ಹೆಣ್ಣಿನ ಸಂಬಂಧ ಜೀವನವು ನಮಗೆ ಕೊಡುವ ಅತ್ಯಮೂಲ್ಯ ಸಂತೋಷಗಳಲ್ಲಿ
ಒಂದು. ಅದರಿಂದ ಯಾರೂ ವಂಚಿತರಾಗಬಾರದು. ನಿಮಗೆ ಮದುವೆ ಆಗಿರಬಹುದು. ಆದರೆ ನಿಮಗಾಗಿ ಕಳೆದ ಇಪ್ಪತ್ತು
ವರ್ಷಗಳಿಂದ ಇನ್ನೊಬ್ಬ ಹೆಣ್ಣು ಮದುವೆಯೇ ಆಗದೆ ಕಾಯುತ್ತಿದ್ದಾಳೆ ಎಂದರೆ ಏನರ್ಥ? ನಿಮ್ಮ ಹೆಂಡತಿಯಂತೆಯೇ
ಅವಳನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಲ್ಲವೇ?, ಅದಕ್ಕಾಗಿ ನೀವು ಏನಾದರೂ
ಮಾಡಲೇ ಬೇಕಲ್ಲವೇ?” ಎಂದು ತಿಳಿಹೇಳಿದೆ. “ಹೌದು ಬ್ರದರ್” ಎಂದು ಒಪ್ಪಿಕೊಂಡ ಆತ, “ಬೇರೆ ಒಂದು ಮನೆಮಾಡಿ
ಅವಳನ್ನು ಇಡುತ್ತೇನೆ. ಅಲ್ಲಿಗೂ ಇಲ್ಲಿಗೂ ಹೋಗುತ್ತಾ ಬರುತ್ತಾ ಇರುತ್ತೇನೆ” ಎಂದ. “ಅಷ್ಟು ಮಾಡಿ”
ಎಂದು ನಾನು ಎದ್ದೆ.
ನಾನು ಕುಡಿಯದಿದ್ದರೂ
ಕುಡುಕರು ಹೇಗೆಲ್ಲ ಮಾತನಾಡುತ್ತಾರೆ ಎಂಬುದರ ಅನುಭವ ಇರುವವನು. ಕುಡಿಯುವ ಅವನ ಮುಂದೆ ಕುಡಿಯದೆ ಕೂತು
ನಾನು ಅವನ ಕತೆಯನ್ನು ಕೇಳತೊಡಗಿದ್ದೆ. ಇಷ್ಟ ಇದೆಯೋ ಇಲ್ಲವೋ ಬೇರೆ ಪ್ರಶ್ನೆ. ಆದರೆ ಕುಡುಕರು ಏನಾದರೂ
ಹೇಳತೊಡಗಿದರೆ ಅವರು ಹೇಳಿ ಮುಗಿಸುವವರೆಗೂ (ಅವರು ಬೇಗ ಮುಗಿಸುವುದಿಲ್ಲವೆಂಬುದೂ ನಿಜ) ಕೇಳದಿದ್ದರೆ
ಅಥವಾ ಅವರು ಭಾವಪರವಶರಾಗಿ ಮಾತನಾಡುವಾಗ ದಿಢೀರನೆ ನಾವು ಎದ್ದರೆ ಅವರಿಗೆ ಕೋಪ ಬರುತ್ತದೆ. ಸಮಯ ನೋಡಿ
ನಿಧಾನವಾಗಿ ಅವರಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ನಾನು ಇದೇ ತಂತ್ರವನ್ನು ಇಲ್ಲಿಯೂ ಅನುಸರಿಸಿದೆ.
ಅವನಿಗೆ ಸಮಾಧಾನ
ಆಗುವಂತೆ ಒಂದಿಷ್ಟು ಹೊತ್ತು ಆಲಿಸಿ ಕೆಲವು ಸಲಹೆ ನೀಡಿ ಅವನ ಮನಸ್ಸನ್ನು ಗೆದ್ದು, “ಆಯಾಸವಾಗುತದೆ
ಮಲಗಲೇ? ಎಂದು ಕೇಳಿದಾಗ ಅವನೇ, “ಎಸ್ ಎಸ್ ಐ ಡಿಸ್ಟರ್ಬ್ಡ್ ಯು; ಸಾರಿ ಫಾರ್ ದ ಸೇಮ್” ಎಂದು
ನನ್ನನ್ನು ಮಲಗಲು ಬೀಳ್ಕೊಟ್ಟ. ಇಡೀ ರಾತ್ರಿ ತಿರುಗಾಟದ ಕಾರಣದಿಂದ ಕಣ್ತುಂಬ ನಿದ್ದೆಮಾಡಿ ಬೆಳಿಗ್ಗೆ
ಅದೇ ಸ್ಕೂಟರ್ ತೆಗೆದುಕೊಂಡು ಲಗೇಜ್ ಸಮೇತ್ ಬಸ್ ನಿಲ್ದಾಣ ತಲುಪಿ ಅಲ್ಲಿ ಸ್ಕೂಟರ್ ಇಟ್ಟು ಪಕ್ಕದ
ಹೊಟೆಲ್ ಒಂದರಲ್ಲಿ ಕೀ ಕೊಟ್ಟು ನನ್ನ ಮುಂದಿನ ಪ್ರವಾಸೀ ತಾಣವಾದ ಜೋಧಪುರಕ್ಕೆ ಬಸ್ ಹತ್ತಿದೆ. ಎರಡು
ದಿನಗಳ ಮೌಂಟ್ ಅಬು ಪ್ರವಾಸದ ಅನುಭವ ನನ್ನ ರಾಜಸ್ತಾನದ ಪ್ರವಾಸದ ಅನುಭವವನ್ನು ಶ್ರೀಮಂತಗೊಳಿಸಿತು
ಎಂದು ಬೇರೆ ಹೇಳಬೇಕಾಗಿಲ್ಲ.
****
ಡಾ ರಾಜೇಂದ್ರ ಬುರಡಿಕಟ್ಟಿ
೧೪-೧೦-೨೦೨೬










No comments:
Post a Comment