Tuesday, January 11, 2022

ವಿಕಾರಾನಂದರ ಕೈಯೊಳಗಿರುವ ವಿವೇಕಾನಂದ

'ವಿಕಾರಾನಂದ'ರ ಕೈಯೊಳಗಿರುವ ವಿವೇಕಾನಂದ!

(ವಿವೇಕಾನಂದರ ಜನ್ಮದಿನ-ರಾಷ್ಟ್ರೀಯ ಯುವಜನೋತ್ಸವ ನಿಮಿತ್ತ ವಿಶೇಷ ಲೇಖನ)

ಜನವರಿ ಹನ್ನೆರಡು ವಿವೇಕಾನಂದರ ಜನ್ಮದಿನ. ಇದನ್ನು ರಾಷ್ಟ್ರೀಯ ಯುವದಿನವನ್ನಾಗಿ ಅನೇಕ ವರ್ಷಗಳಿಂದ ನಾವು ಆಚರಿಸುತ್ತಾ ಬರುತ್ತಿದ್ದೇವೆ. ಈ ಆಚರಣೆಯನ್ನು ನಾವು ವಿವೇಕಾನಂದರ ವಿಚಾರಗಳನ್ನು ತಿಳಿದುಕೊಳ್ಳಲು ಎಷ್ಟರಮಟ್ಟಿಗೆ ಬಳಸಿಕೊಂಡಿದ್ದೇವೆ ಎಂಬುದನ್ನು ತುಸು ಸೂಕ್ಷ್ಮವಾಗಿ ಪರಿಶೀಲಿಸಿದರೆ ನಿರಾಶೆಯಾಗುವುದು ಸಹಜ.

ವಿವೇಕಾನಂದರು ವಿಶ್ವವಿಖ್ಯಾತವಾದ ಚಿಕ್ಯಾಗೊ ಭಾಷಣಮಾಡಿ 125 ವರ್ಷಗಳು ತುಂಬಿದ ಪ್ರಯುಕ್ತ ಎರಡು ವರ್ಷಗಳ ಹಿಂದೆ ದೇಶಾದ್ಯಂತ ನಡೆದ ವಿಶೇಷ ಕಾರ್ಯಕ್ರಮದ ಸ್ವರೂಪವನ್ನು ನೆನಪಿಸಿಕೊಳ್ಳಿ. ಅದನ್ನು ಒಂದು ನೆಪವನ್ನಾಗಿ ಮಾಡಿಕೊಂಡು ನಮ್ಮ ಯುವಕರಿಗೆ ವಿವೇಕಾನಂದರ ವಿಚಾರಗಳನ್ನು ಎಷ್ಟೊಂದು ಪರಿಣಾಮಕಾರಿಯಾಗಿ ತಲುಪುವಂತೆ ಮಾಡಬಹುದಿತ್ತು. ಚಿಕ್ಕಮಕ್ಕಳು ಓದುವ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಕಲಾವಿದರನ್ನು ಬಳಸಿಕೊಂಡು ವಿವೇಕಾನಂದರ ಬಹು ಪ್ರಸಿದ್ಧವಾದ ವೇಷದ ರೂಪದರ್ಶಿಗಳನ್ನು ರೂಪಿಸಿ ಅವರ ಶೈಲಿಯಲ್ಲಿಯೇ ಚಿಕ್ಕಚಿಕ್ಕ ಪ್ರವಚನ, ಭಾಷಣಗಳನ್ನು ಮಾಡಿಸಬಹುದಿತ್ತು ಇದರಿಂದ ಎಳೆಯ ಮಕ್ಕಳಲ್ಲಿ ವಿವೇಕಾನಂದರ ಚಿತ್ರ ಬಹಳಕಾಲ ಉಳಿಯುವಣತೆ ಮಾಡಬಹುದಿತ್ತು. ಇದು ಮುಂದೆ ಅವರೆಲ್ಲ ವಿವೇಕಾನಂದರನ್ನು ಓದಲು ಪ್ರೇರೇಪಣೆ ನೀಡುತ್ತಿತ್ತು. ಬುದ್ದಿ ಬೆಳೆದ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ವಿವೇಕಾನಂದರ ಪ್ರಮುಖ ಬರೆಹಗಳನ್ನು ಸಂಗ್ರಹಿಸಿ ಮುದ್ರಿಸಿ ಉಚಿತವಾಗಿ ಅಥವಾ ಸುಲಭ ಬೆಲೆಗೆ ವಿದ್ಯಾರ್ಥಿಗಳಿಗೆ ಹಂಚಿ ಅವರೇ ಸ್ವತಃ ವಿವೇಕಾನಂದರನ್ನು ಓದುವಂತೆ ಮಾಡಬಹುದಿತ್ತು. ಅವರ ಭಾಷಣಗಳನ್ನು ಕಲಾವಿದರನ್ನು ಬಳಸಿಕೊಂಡು ಬಹುಮಾಧ್ಯಮದಲ್ಲಿ ನೋಡಲು, ಕೇಳಲು ಸಾಧ್ಯವಾಗುವಂತೆ ಪುನಃ ಸೃಷ್ಟಿಸಬಹುದಿತ್ತು.

ಅದರೆ ಆದದ್ದೇನು? ವಿವೇಕಾನಂದರ ಬರೆಹ ಮತ್ತು ಭಾಷಣಗಳನ್ನು ಎಷ್ಟೂ ಓದದಿದ್ದ ಮುಟ್ಠಾಳರೆಲ್ಲ ತಮಗಿರುವ ಸ್ಥಾನಮಾನದ ಕಾರಣದಿಂದ ರಾಷ್ಟ್ರದ ಯುವಜನಾಂಗದ ಬುದ್ಧಿವಿಕಾಸದ ಬಹುಮುಖ್ಯ ಸ್ಥಳಗಳಾದ ಕಾಲೇಜುಗಳಲ್ಲಿ ವೇದಿಕೆಗಳನ್ನು ಸೃಷ್ಟಿಸಿಕೊಂಡು, ಅವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು `ವಿವೇಕಾನಂದರು ಹಾಗೆ ಹೇಳಿದ್ದಾರೆ ಹೀಗೆ ಹೇಳಿದ್ದಾರೆ’ ಎಂದೆಲ್ಲ ಬೊಗಳೆ ಭಾಷಣ ಬಿಗಿದರು! ಮಾಧ್ಯಮದವರು ವಿವೇಕಾನಂದರ ಮಾತುಗಳಿಗಿಂತ ದೊಡ್ಡದಾಗಿ ಇವರು ಹೇಳಿದ `ಅವರ’ ಮಾತುಗಳನ್ನೇ ದೊಡ್ಡದೊಡ್ಡ ಅಕ್ಷರಗಳ ತೆಲೆಬರೆಹಕೊಟ್ಟು ವರದಿಮಾಡಿದರು. ಹೀಗೆ ಅಯೋಗ್ಯನೊಬ್ಬ ವೇದಿಕೆಯ ಮೇಲೆ ವಿವೇಕಾನಂದರು ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನಲ್ಲಿ ಹಾಗೆ ಹೇಳಿದರು. ಹೀಗೆ ಹೇಳಿದರು ಎಂದು ಭಾರೀ ವೀರಾವೇಶದಿಂದ ಮಾತನಾಡಿದ ವರದಿಯನ್ನು ನೋಡಿ ನನಗೆ ಅನುಮಾನ ಬಂದು ವಿವೇಕಾನಂದರ ಭಾಷಣವನ್ನು ತೆಗೆದು ನೋಡಿದೆ. ಅವನು ವಿವೇಕಾನಂದರು ಅಲ್ಲಿನ ಭಾಷಣದಲ್ಲಿ ಹೇಳಿದ್ದಾರೆಂದು ಹೇಳಿದ್ದ ಅಂಶಗಳಲ್ಲಿ ಶೇಕಡಾ ಹತ್ತೂ ಆ ಭಾಷಣದಲ್ಲಿ ಇರಲಿಲ್ಲ! ಈ `ವಿಕಾರಾನಂದ’ನೇ ತನ್ನ ಮೈಮೇಲೆ `ವಿವೇಕಾನಂದರನ್ನು ಆವಾಹಿಸಿಕೊಂಡು ಎಂಥೆಂಥದೋ ಹೇಳಿದ್ದ!! ಪತ್ರಿಕೆಯವರೂ ಅವನು ಹೇಳಿದ್ದು ಸರಿಯೋ ತಪ್ಪೋ ಎಂದು ವಿಚಾರಮಾಡಿ ವರದಿಮಾಡುವು ಗೋಜಿಗೂ ಹೋಗಿರಲಿಲ್ಲ. ಇದು ಎಲ್ಲೋ ಒಂದು ಕಡೆ ಒಬ್ಬನಿಂದ ನಡೆದ ಸಂಗತಿಯಾಗಿದ್ದರೆ ಅದನ್ನು ಇಲ್ಲಿ ಉಲ್ಲೇಖಿಸುವ ಅವಶ್ಯಕತೆಯಿರಲಿಲ್ಲ. ಆದರೆ ಬಹುತೇಕ ವೇದಿಕೆಗಳಲ್ಲಿ ಆಗಿದ್ದು ಇದೇ ಆದ್ದರಿಂದ ಅದನ್ನಿಲ್ಲಿ ಉಲ್ಲೇಖಿಸಬೇಕಾಯಿತು.

ನಮ್ಮ ಯುವಜನಾಂಗಕ್ಕೆ ವಿವೇಕಾನಂದರ ವಿಚಾರಗಳನ್ನು ತಿಳಿಸುವ ಪ್ರಯತ್ನಗಳು ಹಿಂದೆಯೂ ಸರಿಯಾಗಿ ಆಗಿಲ್ಲವಾದ್ದರಿಂದ ಈ ಅಯೋಗ್ಯರ ಮಾತುಗಳಿಗೆ ಮರುಪ್ರಶ್ನೆಗಳನ್ನು ಎತ್ತಲು ವಿದ್ಯಾರ್ಥಿಗಳಿಗೂ ಸಾಧ್ಯವಾಗಲಿಲ್ಲ. ಅವರೆಲ್ಲ ಅನಿವಾರ್ಯವಾಗಿ ಚೆಪ್ಪಾಳೆತಟ್ಟಿ ಸಿಳ್ಳೆಹಾಕಿ ಇವರನ್ನು ಬೀಳ್ಕೊಟ್ಟರು. ಅದು ಅವರ ತಪ್ಪಲ್ಲ. ರಾಜ್ಯದ ಕಾಲೇಜುಗಳಲ್ಲಿ ಈ `ವಿಕಾರಾನಂದ’ರು ವಿವೇಕಾನಂದರನ್ನು ಕುರಿತು ಹೀಗೆ ಓದದೇ ದೊಡ್ಡದೊಡ್ಡ ಭಾಷಣಗಳನ್ನು ಚೀರಿ ಚೀರಿ ಮಾಡುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಗೊತ್ತಾಗಿದ್ದು ಎರಡು ಅಂಶಗಳು. ಒಂದು ಅವರು ಅಮೇರಿಕೆಯ ಸರ್ವಧರ್ಮ ವೇದಿಕೆಯ ಮೇಲೆ ಅಮೇರಿಕೆಯ ಜನರನ್ನು ಉದ್ದೇಶಿಸಿ ಮಾತಿಗೆ ತೊಡಗುವ ಮೊದಲು ಸಭೆಯನ್ನುದ್ದೇಶಿಸಿ `ಅಮೇರಿಕೆಯ ನನ್ನ ಸಹೋದರ ಸಹೋದರಿಯರೇ’ ಎಂದಾಗ ಇಡೀ ಸಭೆ ಇಷ್ಟೋ ಹೊತ್ತು ಚಪ್ಪಾಳೆ ಹೊಡೆದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು. (ಅಲ್ಲಿ ಅವರು ಹೇಳುವಾಗ ಮೊದಲು ಸಿಸ್ಟರ್ಸ್ ಎಂದು ಆಮೇಲೆ ಬ್ರದರ್ಸ್ ಎಂದು ಅಂದರಂತೆ! ಆದರೆ ಈ ವೀರರು ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರಾದ್ದರಿಂದ ಕೊನೆಗಿದ್ದ ಬ್ರದರ್ಸ್ ಶಬ್ದವನ್ನು ಮೊದಲಿಗೇ ಹಾಕಿಕೊಂಡಿರಬೇಕು!). ಸಭೆ ಚಪ್ಪಾಳೆಹೊಡೆದ ಸಮಯವನ್ನು ಪ್ರತಿಯೊಬ್ಬ ಭಾಷಣಕಾರನೂ ಭಾವಾವೇಶದಿಂದ ಸಮಯ ಸಂದರ್ಭನೋಡಿ ಹಿಗ್ಗಿಸುತ್ತಾ ಹೋಗುತ್ತಿದ್ದದ್ದೂ ಉಂಟು!!

ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಮನದಟ್ಟಾದ ಇನ್ನೊಂದು ಅಂಶವೆಂದರೆ, `ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ನಿಲ್ಲದಿರಿ’ ಎಂಬ ಅವರ ಜನಪ್ರಿಯ ಕರೆಹೇಳಿಕೆ. ವಿವೇಕಾನಂದರ ಈ ಹೇಳಿಕೆ ಒಂದು ಸ್ವತಂತ್ರ ಹೇಳಿಕೆ. ಕನ್ನಡ ಭಾಷೆಯಲ್ಲಿ `ಸರ್ವನಾಮ’ ಅಂಥ ಇವೆಯಲ್ಲ. ಅವುಗಳಂತೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಅರ್ಥವನ್ನು ಕೊಡಬಲ್ಲ ಹೇಳಿಕೆ. ಈ ಹೇಳಿಕೆಯನ್ನು ನಾವು ಒಳ್ಳೆಯ ಕೆಲಸವನ್ನು ಮಾಡಲೂ ಚೋದಕ ಹೇಳಿಕೆಯನ್ನಾಗಿ ಬಳಸಿಕೊಳ್ಳಬಹುದು. ಹಾಗೇ ಬಾನಗಡಿ ಕೆಲಸಗಳನ್ನು ಮಾಡಲು ಕೂಡ! `ವಂದೇ ಮಾತರಂ’ ಎಂಬ ಘೋಷಣೆ ಸ್ವಾತಂತ್ರ ಹೋರಾಟ ಕಾಲದಲ್ಲಿ ಬ್ರಿಟೀಷರ ವಿರುದ್ಧ ಹೋರಾಡುವ ಭಾರತೀಯ ಹೋರಾಟಗಾರರಿಗೆ ಸ್ಪೂರ್ತಿ ನೀಡಿದಂತೆ, ಅದಕ್ಕೂ ಮೊದಲು ಬಂಗಾಲದಲ್ಲಿ ಮುಸ್ಲಿಮರನ್ನು ಹಿಂಸಿಸಲೂ ಸ್ಪೂರ್ತಿ ನೀಡಿದ್ದನ್ನು ಬಂಕಿಮ್ ಚಂದ್ರ ಚಟರ್ಜಿಯವರ `ಆನಂದಮಠ’ ಕಾದಂಬರಿ ತುಂಬಾ ಸೊಗಸಾಗಿ ವಿವರಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೇ ವಿವೇಕಾನಂದರ ಈ ಹೇಳಿಕೆಯನ್ನೂ ಇವರೆಲ್ಲ ಯಾವುದಕ್ಕೆ ಜನರನ್ನು ಹುರುದುಂಬಿಸಲು ಬಳಸಿಕೊಂಡರು ಮತ್ತು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ತಮ್ಮ ವಿಚಾರಗಳಿಂದ ಪ್ರಪಂಚದ ತತ್ವಶಾಸ್ತ್ರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಅನೇಕ ಜ್ಯೋತಿಪುರುಷರನ್ನು ಜಾತಿನಾಯಕರನ್ನಾಗಿ ಮಾಡಿಕೊಂಡು ಜಾತಿಯ ಬಚ್ಚಲಿನಲ್ಲಿಯೇ ಒದ್ದಾಡುತ್ತಿರುವ ಸಮಾಜವೊಂದು ಅಲ್ಲಿಂದ ಹೊರಬರದೇ ಹೋದರೆ ಅದು ದಿನದಿನಕ್ಕೂ ಕೊಚ್ಚೆಯಲ್ಲಿ ಬಿದ್ದು ಕೊಳೆಯುತ್ತಾ ಹೋಗುವುದು ಸಹಜ. ಅಂತಹ ಸಮಾಜ ಮಹಾನ್ ನಾಯಕರನ್ನು `ತಮ್ಮವ’ನೆಂದು ಪೂಜಿಸುವಲ್ಲಿಯೇ ನಿಂತುಬಿಡುತ್ತದೆಯೇ ಹೊರತು ಅವನ ಆಲೋಚನೆಗಳಿಂದ ಪ್ರೇರಣೆ ಪಡೆದು ಅವನ ವಿಚಾರಗಳನ್ನು ಅರಗಿಸಿಕೊಂಡು ಅವನ್ನು ಅನುಸರಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಅದು ನಿಂತಲ್ಲಿಯೇ ನಿಂತುಬಿಡುತ್ತದೆಯೇ ಹೊರತು ಮುಂದೆ ಹೋಗುವುದೇ ಇಲ್ಲ. ಅಂತಹ ಸಮಾಜಕ್ಕೆ ಇಂದು ಭಾರತವೂ ಉದಾಹರಣೆಯಾಗುತ್ತಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು.

ವಿವೇಕಾನಂದರನ್ನು ಇಂದು ಕೋಮುವಾದಿಗಳು ಮತ್ತು ವಿಚಿತ್ರ ರಾಷ್ಟ್ರವಾದಿಗಳು (ಒಳ್ಳೆಯವರಲ್ಲ) ತಮ್ಮ ಪಟ್ಟಭದ್ರ ಹಿತಾಸಕ್ತಿಯ ವಿಚಾರಗಳಿಗೆ ಆಚಾರಗಳಿಗೆ ಒತ್ತಾಸೆಯಾಗಿ ಬಳಸಿಕೊಳ್ಳುವ ಮೂಲಕ ಅವರನ್ನು ಅರಿಯುವ ಬದಲು ಆರಾಧಿಸಲು ಹುರುದುಂಬಿಸುತ್ತಿದ್ದಾರೆ. `ಕೋಮುವಾದಿ’ ಎಂಬ ಪದವೇ ಇಂದು ಎಷ್ಟು ಉದ್ರಿಕ್ತವಾಗಿದೆ ಎಂದರೆ ಅದನ್ನು ಯಾರ ಹೆಸರನ್ನು ಹೇಳದೇ ಸಾಮಾನ್ಯ ವಿಷಯ ವಿವರಣೆಗೆ ಬಳಸಿದರೂ ಕೆಲವರಿಗೆ ಸಿಟ್ಟು ಬರುತ್ತದೆ! ಅವರೊಳಗೆ ಒಬ್ಬ ಕೋಮುವಾದಿ ಇಲ್ಲದೇ ಹೋದರೆ ಆ ಸಿಟ್ಟು ಬರಲು ಕಾರಣವೇ ಇರುವುದಿಲ್ಲ!. ತಾವು ಹೀಗೆ ಕೋಮುವಾದಿಗಳಾದವರು ತಮ್ಮ ವಿಚಾರಕ್ಕೆ ತಕ್ಕಂತೆ ವಿವೇಕಾನಂದರನ್ನು ಬಳಸಿಕೊಳ್ಳುವ ಮೂಲಕ ನಾವು ವಿವೇಕಾನಂದರ ವಿಚಾರಧಾರೆಯಂತೆ ನಡೆಯುತ್ತಿದ್ದೇವೆ ಎಂಬ ಹುಸಿಭ್ರಮೆಯನ್ನು ಯುವಜನತೆಯಲ್ಲಿ ತುಂಬಲು ಹವಣಿಸುತ್ತಿದ್ದಾರೆ. ಆ ಮೂಲಕ ತಾವೂ ಘನಂಧಾರಿ ಕೆಲಸವೊಂದನ್ನು ಮಾಡುತ್ತಿರುವ ವ್ಯಕ್ತಿಗಳೆಂದುಕೊಂಡಿದ್ದಾರೆ. ಅದರೆ ಅದು ಎಲ್ಲಿಯವರೆಗೆ ನಡೆಯುತ್ತದೆ ಎಂದರೆ ವಿವೇಕಾನಂದರನ್ನು ನಮ್ಮ ಯುವಜನತೆ ತಾವೇ ಸ್ವತಃ ಓದಿಕೊಳ್ಳುವವರೆಗೆ. ಆವಾಗ ವಿವೇಕಾನಂದ ಇವರು ಹೇಳುವಂತೆ ನಿಜವಾಗಲೂ ಕೋಮುವಾದಿಯಾಗಿದ್ದರೇ ಅಥವಾ ವಿಶಾಲ ಹೃದಯಿಯಾಗಿದ್ದರೆ ಎಂಬುದು ಅರಿವಾಗಿ ಇಂಥವರ ಬೊಗಳೇ ಮಾತುಗಳಿಗೆ ವಿರಾಮ ಬೀಳುತ್ತದೆ.

ನಮ್ಮ ಯುವಕರು ಇಂತಹ ಖಾಲಿತಲೆಯ ವೀರಾವೇಷಿ ಭಾಷಣವೀರರ ಕೈಯಲ್ಲಿರುವ ವಿವೇಕಾನಂದರನ್ನು ಬಿಡಿಸಿಕೊಳ್ಳಬೇಕು. ಅವರ ಭಾಷಣಗಳಿಗೆ ಸಿಳ್ಳೇತಟ್ಟಿ ಚಪ್ಪಾಳೆಹಾಕುವುದನ್ನು ಬಿಟ್ಟು ತಾವೇ ವಿವೇಕಾನಂದರನ್ನು ಸ್ವತಃ ಓದಿಕೊಳ್ಳಬೇಕು. ಆಗ ಸ್ವಾಮಿ ವಿವೇಕಾನಂದರು ಹೇಳುವ `ಹಿಂದೂಧರ್ಮ’ ಮತ್ತು ಈಗ ಬಹುತೇಕ `ದೇಶಭಕ್ತರು ಪ್ರತಿಪಾದಿಸುವ `ಹಿಂದುತ್ವ’ ಇವುಗಳ ನಡುವೆ ಇರುವ ಸಾಗರದಷ್ಟು ಅಂತರ ಅವರ ಅರಿವಿಗೆ ಬರುತ್ತದೆ. ಒಂದು ಜಾತಿ-ಧರ್ಮ-ಜನಾಂಗಗಳನ್ನು ಒಳಗೊಳ್ಳುವಿಕೆಯನ್ನು ಪ್ರತಿಪಾದಿಸಿದರೆ ಇನ್ನೊಂದು ಅವುಗಳ ನಡುವೆ ಹೇಗೆಲ್ಲ ಹೊರದೂಡುವಿಕೆಯನ್ನು ಪ್ರತಿಪಾದಿಸುತ್ತದೆ ಎಂಬುದು ತಿಳಿಯುತ್ತದೆ. ವಿವೇಕಾನಂದರ ಬಹುತೇಕ ಎಲ್ಲ ಬರೆಹಗಳು ಇಂದು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯ ಇವೆ. ನಮ್ಮ ಯುವಕರ ಚಿತ್ತ ಅತ್ತ ಹರಿಯಲಿ.

ಈ ಸಂದರ್ಭದಲ್ಲಿ ವಿವೇಕಾನಂದರ ಪ್ರಮುಖ ಮಾತುಗಳನ್ನು ಅವರ ಬರೆಹ ಭಾಷಣಗಳಿಂದ ಆಯ್ದು ಕೊಡುತ್ತಿರುವೆ. ಇವು ಕೇವಲ ಅವರನ್ನು ಸಮಗ್ರವಾಗಿ ಓದಲು ಕೈಮರ ಮಾತ್ರ ಎಂದು ವಿನಯದಿಂದ ಹೇಳಲಿಚ್ಚಿಸುವೆ.

********

• “ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಒಳ್ಳೆಯದನ್ನು ಸ್ವೀಕರಿಸುವುದೇ ನನ್ನ ಜೀವನ ಧ್ಯೇಯ.”

• “ಮತಾಂಧರಲ್ಲಿ ನೂರಕ್ಕೆ ತೊಂಬತ್ತು ಮಂದಿಗೆ ಯಕೃತ್ ಚೆನ್ನಾಗಿರಲಿಲ್ಲ. ಇಲ್ಲವೇ ಅವರು ಅಗ್ನಿಮಾಂಧ್ಯಕ್ಕೆ ಅಥವಾ ಇನ್ನೂ ಯಾವುದಾದರೂ ರೋಗಕ್ಕೆ ತುತ್ತಾಗಿದ್ದರು. ವೈದ್ಯರು ಮತಾಂಧತೆ ಎಂಬುದು ಒಂದು ಬಗೆಯ ಜಾಡ್ಯ ಎಂದು ಕಾಲ ಕ್ರಮೇಣ ಕಂಡುಹಿಡಿದರು. ನಾನು ಇಂತಹ ಹಲವಾರು ಜನರನ್ನು ಕಂಡಿರುವೆನು. ದೇವರು ನನ್ನನ್ನು ಅವರಿಂದ ದೂರವಿರಿಸಲಿ”

• “ಮಹಮ್ಮದೀಯ ಧರ್ಮ ಜನಸಾಮಾನ್ಯರಿಗೆ ಒಂದು ಸಂದೇಶವನ್ನು ಕೊಡಲು ಬಂದಿತು. ಮೊದಲನೆ ಸಂದೇಶವೇ ಸಮಾನತೆಯ ಭಾವನೆ. ಪ್ರೇಮವೆಂಬ ಒಂದೇ ಧರ್ಮ ಇರುವುದು. ಅಲ್ಲಿ ಬಣ್ಣ ಜನಾಂಗ ಮುಂತಾದ ಪ್ರಶ್ನೆಗಳೇ ಇಲ್ಲ…..

• ಈ ಮಹಾಪುರುಷರು (ಬುದ್ದ, ಏಸು, ಮಹಮ್ಮದ್) ದಾರಿಯಲ್ಲಿನ ಕೈಮರಗಳಂತೆ ಅಷ್ಟೇ. ಅವರು ಮುಂದೆ ಹೋಗಿ ಸಹೋದರರೆ ಎಂದು ಅವರು ಹೇಳುವರು. ನಾವು ಅವರಿಗೆ ಅಂಟಿಕೊಳ್ಳುತ್ತೇವೆ. ಮುಂದುವರಿಯಲು ಇಚ್ಚಿಸುವುದಿಲ್ಲ. ಸ್ವಯಂ ಆಲೋಚಿಸುವುದಕ್ಕೆ ಇಚ್ಛೆಯಿಲ್ಲ.” (1900 ಮಾರ್ಚ್ 25 ರಂದು ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಮಹಮ್ಮದ್ ಪೈಗಂಬರ್ ಮೇಲೆ ನೀಡಿದ ಉಪನ್ಯಾಸದಲ್ಲಿ- ವಿವೇಕಾನಂದರು ಮಹಮ್ಮದ್ ಪೈಗಂಬರ್ ಅವರನ್ನು ಕುರಿತು ಉಪನ್ಯಾಸ ಮಾಡಿದ್ದಾರೆ ಎಂಬುದನ್ನು ಯಾವೊಬ್ಬ ಭಾಷಣಕಾರನೂ ನಮ್ಮ ಯುವಕರಿಗೆ ಹೇಳಿದ್ದು ನನ್ನ ಗಮನಕ್ಕೆ ಇದುವರೆಗೂ ಬಂದಿಲ್ಲ. ಅವರು ಕೇವಲ ಮಹಮ್ಮದ್ ಪೈಗಂಬರ್ ಬಗ್ಗೆ ಮಾತ್ರವಲ್ಲದೇ ಏಸುವನ್ನು ಕುರಿತು ಕೂಡ ಉಪನ್ಯಾಸ ನೀಡಿದ್ದರು!! – ರಾಬು)

• “ಧರ್ಮ ಒಂದು ಸಿದ್ಧಾಂತವಲ್ಲ, ಒಂದು ನಿಯಮಾವಳಿಯೂ ಅಲ್ಲ. ಅದೊಂದು ಬೆಳವಣಿಗೆಯ ಕ್ರಮ” (ಮೇಲಿನಂತೆ)

• “ಪುರೋಹಿತರು ಒಬ್ಬ ದೇವರಿರುವನೆಂದು ನಂಬುವರು. ಆದರೆ ದೇವರನ್ನು ತಮ್ಮ ಮೂಲಕ ಮಾತ್ರ ನೋಡಬಹುದು ಎನ್ನುತ್ತಾರೆ. ಪುರೋಹಿತರ ಅಪ್ಪಣೆ ಪಡೆದರೆ ಮಾತ್ರ ಭಗವಂತನ ಸನ್ನಿಧಿಗೆ ಹೋಗಬಲ್ಲರು. ಪುರೋಹಿತರು ನಿಮ್ಮನ್ನು ಆಳುವರು, ನೂರಾರು ಆಚಾರಗಳಿಂದ ನಿಮ್ಮನ್ನು ಬಲತ್ಕಾರವಾಗಿ ಬಿಗಿಯುವರು. ಅತಿ ಸರಳವಾದ ಸತ್ಯವನ್ನು ತಿಳಿಯದ ಒಂದು ಜಾಲವನ್ನಾಗಿ ಮಾಡುವರು”.

• “ಬುದ್ಧನೇ ನನ್ನ ದೇವರು. ಅವನು ಯಾವುದೇ ದೇವರ ಬಗ್ಗೆ ಸಿದ್ಧಾಂತವನ್ನು ಮಂಡಿಸಲಿಲ್ಲ. ಅವನು ಸ್ವತಃ ದೇವರಾಗಿದ್ದ.”

• “ಬೆಳವಣಿಗೆಯ ಒಂದೇ ಒಂದು ಷರತ್ತು ಎಂದರೆ ಸ್ವಾತಂತ್ರ್ಯ. ಅದನ್ನು ತೆಗೆದುಹಾಕಿದರೆ ಫಲಿತಾಂಶ ಸರ್ವನಾಶ.”

• “ ದೇಶವು ಬದುಕುತ್ತಿರುವುದು ಗುಡಿಸಲಿನಲ್ಲಿ ಎಂಬುದು ನಿಮಗೆ ನೆನಪಿರಲಿ”

• “ಮನುಷ್ಯನಲ್ಲಿ ಮತ್ತು ಮನುಷ್ಯನಿಂದ ಮಾತ್ರ ನಾವು ದೇವರನ್ನು ಅರಿಯಬಲ್ಲೆವು.”

• “ದೇವರನ್ನು ಹುಡುಕಿಕೊಂಡು ಏಕೆ ಅಲೆಯುವಿರಿ? ತುಳಿತಕ್ಕೊಳಗಾದವರು, ಸಂಕಟದಲ್ಲಿರುವವರು, ನೋವನ್ನು ಅನುಭವಿಸುತ್ತಿರುವವರು, ಬಡವರು ದೇವರಲ್ಲವೇ? ನೀವು ಅವರನ್ನು ಮೊದಲು ಏಕೆ ಪೂಜಿಸುತ್ತಿಲ್ಲ?”

• “ ತನಗೆ ತಾನು ಅಪಾಯ ತಂದುಕೊಳ್ಳದೇ ಯಾವೊಬ್ಬನೂ ಬೇರೆಯವರನ್ನು ದ್ವೇಷಿಸಲಾರ”

• “ವಿಕಾಸವೇ ಜೀವನ’ ಸಂಕುಚಿತತೆಯೇ ಸಾವು. ಪ್ರೀತಿಯೇ ಜೀವನ. ದ್ವೇಷವೇ ಸಾವು.”

• “ಪುರೋಹಿತಶಾಹಿಯನ್ನು ಬೇರುಸಹಿತ ಕಿತ್ತುಹಾಕಿದರೆ ಇಡೀ ಪ್ರಪಂಚದಲ್ಲಿಯೇ ಅತ್ಯುತ್ತಮ ಧರ್ಮವೊಂದನ್ನು ಪಡೆಯುವಿರಿ.”

• “ನಾನೊಬ್ಬ ಜಾದೂಗಾರ ಅಲ್ಲ, ತತ್ವಜ್ಞಾನಿಯೂ ಅಲ್ಲ, ಸಂತನೂ ಅಲ್ಲ. ಆದರೆ ನಾನೊಬ್ಬ ಬಡವ. ಬಡವರನ್ನು ಪ್ರೀತಿಸುವೆ.”

• “ಹೊಟ್ಟೆಕಿಚ್ಚನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಕೆಲಸಮಾಡಿ. ಇದು ದೇಶದ ಇಂದಿನ ತುರ್ತು ಅಗತ್ಯ”

• “ಈ ಭೂಮಿ ಸ್ವರ್ಗಕ್ಕಿಂತ ಮೇಲಿನದು. ಇದು ಇಡೀ ವಿಶ್ವದ ಅತ್ಯುತ್ತಮ ಶಾಲೆ.”

• “ಬಡವರು ತುಳಿತಕ್ಕೊಳಗಾದವರು ಮತ್ತು ಮುಗ್ದರು ಇವರೇ ನಿಮ್ಮ ದೇವರಾಗಲಿ”

• “ ಭಾರತಕ್ಕೆ ಇರುವ ಒಂದೇ ಒಂದು ಆಶಾದಾಯಕ ಅಂಶವೆಂದರೆ ಇಲ್ಲಿನ ಸಾಮಾನ್ಯ ಜನ”

• "My interests are international and not Indian alone."

• "Love makes no distinction between man and man, between Aryan and a Mlechchha, between a Brahmana and a Pariah, not even between an man and a woman. Love makes the whole universe as one’s own home."

******

ಕನಿಷ್ಠ ಮುಂದಿನ ಜನವರಿ ಹನ್ನೆರಡು ಬರುವುದರೊಳಗೆ ವಿವೇಕಾನಂದರ ಕೃತಿಶ್ರೇಣಿಯ ಒಂದೆರಡು ಸಂಪುಟಗಳನ್ನಾದರೂ ನಮ್ಮ ಯುವಕರು ಓದುವ ಸಂಕಲ್ಪ ಮಾಡಿಕೊಂಡರೆ ಈ ಲೇಖನ ಸಾರ್ಥಕವಾದೀತು. ಅವರ ಚಿತ್ತ ಅತ್ತ ಹರಿಯಲಿ; ಅವರು ವೈಚಾರಿಕವಾಗಿ ಸದೃಢವಾಗುವ ಮೂಲಕ ನಿಜವಾದ ಭವ್ಯಭಾರತ ನಿರ್ಮಾಣವಾಗಲಿ. ಎಲ್ಲರಿಗೂ ವಿಶೆಷವಾಗಿ ನಾನು ಬಹುವಾಗಿ ಪ್ರೀತಿಸುವ ಯುವಜನಾಂಗಕ್ಕೆ ರಾಷ್ಟ್ರೀಯ ಯವದಿನದ ಹಾರ್ದಿಕ ಶುಭಾಶಯಗಳು

ಡಾ. ರಾಜೇಂದ್ರ ಬುರಡಿಕಟ್ಟಿ

೧೨ ಜನವರಿ ೨೦೨೦.


Friday, December 31, 2021

Thursday, December 30, 2021

Wednesday, November 24, 2021

ನಾನೊಬ್ಳೇನಾ ಹೀಗೆ ರಜೆ ಹಾಕ್ತಿರೋದು?

 

 ರಜಾ ಸೌಲಭ್ಯಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ನೈತಿಕತೆ….

(ಶಿಕ್ಷಣದ ಕತೆಗಳು – 4)

ಸುಮಾರು ಇಪ್ಪತ್ತು ವರ್ಷಗಳ ಕಾಲ ಶಾಲೆಯೊಂದರ ಮುಖ್ಯೋಪಾಧ್ಯಾಯನಾಗಿ ಕಾರ್ಯನಿರ್ವಹಿಸಿದ ನನಗೆ ಒಂದು ಕ್ರಮ ಅಭ್ಯಾಸವಾಗಿ ಹೋಗಿದೆ. ಅದೆಂದರೆ ನನ್ನ ಸ್ನೇಹಿತರು ಅಥವಾ ಜೊತೆಗೆ ಕೆಲಸ ಮಾಡುವವರು ಯಾರಾದರೂ ವೈದ್ಯಕೀಯ ರಜೆಯ ಮೇಲೆ ಹೋದರೆ ಮೂರುನಾಲ್ಕು ದಿನಗಳಿಗೊಮ್ಮೆ ಅವರಿಗೆ ಫೋನ್ ಮಾಡಿ, “ಹೇಗಿದ್ದೀರಿ? ಆರೋಗ್ಯ ಹೇಗಿದೆ?” ಎಂದು ಅವರ ಆರೋಗ್ಯ ವಿಚಾರಿಸಿಕೊಳ್ಳುವುದು. ಶಾಲೆಯ ಮುಖ್ಯಶಿಕ್ಷಕನಾಗಿದ್ದಾಗ ಶುರುವಾದ ಈ ಅಭ್ಯಾಸ (ಈ ಅಭ್ಯಾಸ ಕೆಟ್ಟದ್ದೊ ಒಳ್ಳೆಯದೋ ಎಂದು ಇನ್ನೂ ನನಗೆ ಸರಿಯಾಗಿ ಅರ್ಥವಾಗಿಲ್ಲ)  ಆ ಹುದ್ದೆಯಿಂದ ಹೊರಬಂದ ಮೇಲೂ ನನ್ನನ್ನು ಬಿಡುತ್ತಿಲ್ಲ. ಆಗ ನನ್ನ ಸಹಶಿಕ್ಷಕರಿಗೆ ರಜೆ ಸಿಗುವ ವ್ಯವಸ್ಥೆಮಾಡಿ ನನ್ನ ಕೆಲಸ ಮುಗಿಯಿತು ಎಂದು ಸುಮ್ಮನಿರದೆ ಅದರಾಚೆಯೂ ನಾನು ಹೀಗೆ ಆಗಾಗ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವ ಕ್ರಮ ಶಾಲಾ ಆಡಳಿತದ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಬೀರುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ಅಷ್ಟಲ್ಲದೇ ನನ್ನ ಬಗ್ಗೆ ಆ ಶಿಕ್ಷಕರಿಗೂ ಬಹಳಷ್ಟು ಗೌರವ ಭಾವನೆ ಉಂಟಾಗುತ್ತಿತ್ತು. ಸಂಬಂಧಗಳನ್ನು ವ್ಯಕ್ತಿಗತ ನೆಲೆಯಲ್ಲಿ ಗಟ್ಟಿಗೊಳಿಸಿ ವೃತ್ತಿಬದುಕಿಗೂ ಬಲವನ್ನು ಕೊಡುತ್ತಿತ್ತು. ಹತ್ತುದಿನ ರಜೆ ಹಾಕಿದವರು ಎಂಟು ದಿನಕ್ಕೇ ಶಾಲೆಗೆ ಬಂದದ್ದೂ ಇದೆ!

ಆದರೆ ಈಗ ಪರಿಸ್ಥಿತಿ ಯಾವ ಹಂತ ತಲುಪಿದೆ ಎಂಬುದನ್ನು ನನ್ನ ಅನುಭವಕ್ಕೆ ತಂದಿರುವ ಇತ್ತೀಚಿನ ಕೆಲವು ಘಟನೆಗಳು ನನ್ನ ಈ ವಾಡಿಕೆಯ ಕ್ರಮವನ್ನು ಬಿಟ್ಟುಬಿಡುವುದೇ ಒಳ್ಳೆಯದೇನೊ ಎಂದು ನಾನು ವಿಚಾರಿಸುವಂತೆ ಮಾಡಿವೆ. ಒಂದೆರಡು ಘಟನೆಗಳನ್ನು ಗಮನಸಿ. ಮೊನ್ನೆ ಇದ್ದಕ್ಕಿದ್ದಂತೆ ನನಗೆ ಪರಿಚಿತವಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ಯಾವುದೋ ಕೆಲಸದ ನಿಮಿತ್ತ ಫೋನ್ ಮಾಡಿ ಮಾತನಾಡುವಾಗ ತೀರಾ ಸಹಜವೆಂಬಂತೆ ಆ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ನನ್ನ ಸ್ನೇಹಿತೆರೊಬ್ಬರ ಬಗ್ಗೆ ಕೇಳಿ ಶಾಲೆಯಲ್ಲಿ ಇದ್ದಾರೆಯೇ ಎಂದು ಕೇಳಿದೆ. ಅವರು, “ಇಲ್ಲ. ಅವರ ಮಗಳಿಗೆ ಹುಷಾರಿಲ್ಲವಂತೆ ಹದಿನೈದು ದಿನ ರಜೆಹಾಕಿದ್ದಾರೆ” ಎಂದರು. 

ನನಗೆ ಸಹಜವಾಗಿ ಆತಂಕವಾಯಿತು. ತಕ್ಷಣ ಆ ಶಿಕ್ಷಕಿಗೆ ಫೋನ್ ಮಾಡಿ, “ಏನಾಗಿದೆ ಮಗುವಿಗೆ? ರಜೆ ಹಾಕಿದೆಯಂತಲ್ಲ. ಏನಾದರೂ ಸಹಾಯ ಬೇಕೆ? ನನಗೆ ಒಂದು ಮಾತು ಹೇಳಲಿಕ್ಕೆ ಆಗಲಿಲ್ಲವೇ?” ಎಂದು ಪ್ರೀತಿಯಿಂದ ದಬಾಯಿಸಿದೆ.” ನನ್ನ ಜೊತೆ ಮುಚ್ಚುಮರೆಯಿಲ್ಲದೆ ಮಾತನಾಡುವಷ್ಟು ಸಲುಗೆ ಇದ್ದ ಆಕೆ ಆ ಕಡೆಯಿಂದ ಫೋನಿನಲ್ಲಿ ಹೇಳಿದಳು, “ಏಯ್ ಏನೂ ಆಗಿಲ್ಲಪ್ಪ ಮಗಳಿಗೆ. ಅವ್ಳು ಚೆನ್ನಾಗಿದ್ದಾಳೆ. ಏನಾದ್ರೂ ಆಗಿದ್ರೆ ನಿನ್ಗೆ ಹೇಳ್ತಿರಲಿಲ್ಲವೇ? ಅವ್ಳು ಮನೆಯಲ್ಲಿ ಇಲ್ವಲ್ಲ. ರೆಸಿಡೆನ್ಸಿಯಲ್ ಸ್ಕೂಲಲ್ಲಿ ಓದ್ತಿದಾಳೆ. ಇನ್ನೊಂದೆರಡು ವರ್ಷಕ್ಕೆ ಅವಳಿಗೆ ಹದಿನೆಂಟು ವರ್ಷ ಆಗುತ್ತಲ್ಲ. ಶಿಶುಪಾಲನಾ ರಜೆ ಆಮೇಲೆ ಹಾಕಲಿಕ್ಕೆ ಬರಲ್ಲಲ. ಸುಮ್ನೆ ವೇಸ್ಟ್ ಆಗುತ್ತಲ್ಲ. ಅದನ್ನೂ ಎನೋ ವಾಪಸ್ ತಗೊಳ್ತಾರೆ ಅಂತಾ ಬೇರೆ ವಾಟ್ಸಪ್ನಲ್ಲಿ ಬರ್ತಿತ್ತು. ಅದ್ಕೆ ಸುಮ್ನೆ ಹಾಕಿದೆ.” ಅಂದರೆ ಯಾವುದೋ ಊರಿನಲ್ಲಿ `ಶಿಶು’ ಚೆಂದಾಗಿ ಶಾಲೆಗೆ ಹೋಗಿ ಪಾಠ ಕೇಳುತ್ತಿತ್ತು. ಈ ಊರಿನಲ್ಲಿ ಶಿಶುವಿನ ತಾಯಿ ಅದನ್ನು ಆರೈಕೆ ಮಾಡುವ ಕಾರಣ ಕೊಟ್ಟು ಶಾಲಾ ಮಕ್ಕಳಿಗೆ ಪಾಠಹೇಳುವ ಪವಿತ್ರ ಕಾರ್ಯವನ್ನು ಬಿಟ್ಟು ಕಾಲಕಳೆಯುತ್ತಿದ್ದರು!!  ನಾನು ಮುಂದೆ ಮಾತನಾಡಲು ಮನಸ್ಸಾಗದೆ ಫೋನ್ ಕಟ್ ಮಾಡಿದೆ.

ಇನ್ನೊಂದು ಘಟನೆಯಲ್ಲಿ ಶಿಕ್ಷಕರೊಬ್ಬರು ಮೆಡಿಕಲ್ ಲೀವ್ ಪಡೆದರೆಂದು ಕೇಳಿ ‘ಹುಂಬ’ನಾದ ನಾನು ಅವರಿಗೂ ಫೋನ್ ಮಾಡಿ ಆರೋಗ್ಯ ವಿಚಾರಿದೆ. ಅವರು, “ನನಗೆ ಏನೂ ಆಗಿಲ್ಲಣ. ಸೈಟ್ ತಗೊಂಡಿದ್ನಲ. ಮನೆ ಕಟ್ಟಿಸ್ತಿದೀನಿ. ಬೇರೆ ರಜೆ ಎಲ್ಲ ಖಾಲಿ ಆಗಿತ್ತು. ಅದ್ಕೆ ಮೆಡಿಕಲ್ ಲೀವ್ ಹಾಕಿದಿನಿ. ಮನೆ ಇನ್ನೇನು ಎರಡು ಮೂರು ತಿಂಗ್ಳಲ್ಲಿ ಮುಗಿಯುತ್ತೆ. ಎಲ್ಲ ಕುಟುಂಬ ಸಮೇತ ಗೃಹಪ್ರವೇಶಕ್ಕೆ ಬರ್ಬೇಕು” ಎಂದು ಆಗಲೇ ನನಗೆ ಆಮಂತ್ರಣ ನೀಡಿದರು.

ಆರಂಭದ ದಿನಗಳಲ್ಲಿ ನಾನು ಹೀಗೆ ವೈದ್ಯಕೀಯ ಕಾರಣ ಹೇಳಿ ರಜೆತೆಗೆದುಕೊಂಡವರಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದಾಗ ನನಗೆ ಧನ್ಯತೆಯ ಭಾವವೂ ಅವರಿಗೆ ಕೃತಜ್ಞತೆಯ ಭಾವವೂ ಉಂಟಾಗುತ್ತಿದ್ದವು. ಪರಸ್ಪರ ಗೌರವಗಳೂ ಹೆಚ್ಚುತ್ತಿದ್ದವು. ಬಾಂಧವ್ಯ ವೃದ್ಧಿಸುತ್ತಿತ್ತು. ಈಗ ಇದಕ್ಕೆ ತದ್ವಿರುದ್ಧವಾಗಿದೆ ಸ್ಥಿತಿ ಇದೆ. ಹೀಗೆ ನಾನು ಯಾರಿಗಾದರೂ ಫೋನ್ ಮಾಡಿದಾಗ ನಮ್ಮನ್ನು ಪರೀಕ್ಷೆ ಮಾಡ್ಲಿಕ್ಕೆ ಇವನು ಹೀಗೆ ಫೋನ್ ಮಾಡಿದ್ದಾನೆ’ ಎಂದು ಅವರು ತಿಳಿದುಕೊಳ್ಳುತ್ತಿದ್ದಾರೆ ಅಥವಾ ಅವರು ಹಾಗೆ ತಿಳಿದುಕೊಳ್ಳಬಹುದು ಎಂದು ನನಗೇ ಅನ್ನಿಸಿಬಿಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಎರಡು ಘಟನೆಗಳು ನೆನಪಿಗೆ ಬರುತ್ತಿವೆ:

ಹಬ್ಬದ ರಜೆಯನ್ನು ಆಸ್ಪತ್ರೆಗೆ ಬಳಸಲೊಪ್ಪದ ಆದರ್ಶ ಶಿಕ್ಷಕ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಅದೇ ಆಗ ನಾನು ಹೊಸದಾಗಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದೆ. ಮಲೆನಾಡಿನ ಹಳ್ಳಿಯೊಂದಕ್ಕೆ ನನ್ನನ್ನು ಹಾಕಲಾಗಿತ್ತು. ಆಗ ನಡೆದ ಒಂದು ಘಟನೆ ನನ್ನ ಇಡೀ ವೃತ್ತಿಬದುಕಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಆ ಘಟನೆ ಏನೆಂದರೆ ಒಂದು ದಿನ ಒಬ್ಬ ಶಿಕ್ಷಕರು ಒಂದು ಪರಿಮಿತ ರಜೆ (ಆರ್.ಎಚ್.) ಬೇಕೆಂದು ಅರ್ಜಿಕೊಟ್ಟರು. ಆ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರು ಒಂದು ದಿನ ಮೊದಲೇ ರಜೆಯನ್ನು ಮಂಜೂರು ಮಾಡಿದರು. ಸರಿ, ಆ ಶಿಕ್ಷಕರು ಮನೆಗೆ ಹೋದರು.  ಪರಿಮಿತ ರಜೆಗಳು ಸಾಮಾನ್ಯವಾಗಿ ಧಾರ್ಮಿಕ ಹಬ್ಬಗಳೊಂದಿಗೆ ನಂಟು ಹೊಂದಿರುತ್ತವೆ. ಭಾರತವು ಬಹುಸಂಸ್ಕೃತಿಯ ನಾಡಾಗಿರುವುದರಿಂದ ಮತ್ತು ಹಬ್ಬಗಳ ಸಂಖ್ಯೆ ತುಸು ಹೆಚ್ಚೇ ಇವೆ. ಎಲ್ಲ ರಜೆಗಳಿಗೂ ಸಾರ್ವತ್ರಿಕ ರಜೆಯನ್ನು ಕೊಡುವುದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಎಲ್ಲ ಹಬ್ಬಗಳನ್ನೂ ಎಲ್ಲರೂ ಮಾಡುವುದಿಲ್ಲವಾಗಿ ಹಾಗೆ ರಜೆ ಕೊಡುವ ಅವಶ್ಯಕತೆಯೂ ಇರುವುದಿಲ್ಲ. ಹೀಗಾಗಿ ಅವಶ್ಯವಿದ್ದವರು ಮಾತ್ರ ಬಳಸಿಕೊಳ್ಳಲು ಅನುಕೂಲವಾಗಲೆಂಬುದು ಈ ರಜೆಗಳ ನೀಡಿಕೆಯ ಉದ್ದೇಶ.

ಈ ರಜೆಯನ್ನು ಪಡೆದ ಶಿಕ್ಷಕರ ವಿಷಯದಲ್ಲಿ ಏನಾಯಿತು ಎಂದರೆ ಅದು ಡಿಸೆಂಬರ್ ತಿಂಗಳು. ಅಂದು ಪರಿಮಿತ ರಜೆ ಯಾವ ಹಬ್ಬಕ್ಕಾಗಿ ಇತ್ತೋ ಆ ಹಬ್ಬವನ್ನು ವಾಸ್ತವವಾಗಿ ಈ ಶಿಕ್ಷಕರ ಮನೆಯಲ್ಲಿ ಮಾತ್ರವಲ್ಲ ಅವರ ಸಮುದಾಯದವರು ಯಾರೂ ಮಾಡುತ್ತಿರಲಿಲ್ಲ. ಆದರೆ ಅವರ ಹತ್ತಿರದ ಸ್ನೇಹಿತನೊಬ್ಬ ಬೇರೆ ಧರ್ಮಕ್ಕೆ ಸೇರಿದವನಾಗಿದ್ದ. ಆತ ಈ ಶಿಕ್ಷಕರಿಗೆ ಒತ್ತಾಯ ಮಾಡಿ, “ನಿಮ್ಮಲ್ಲಿ ಹಬ್ಬ ಮಾಡುವುದಿಲ್ಲವಲ್ಲ. ದಯವಿಟ್ಟು ನಮ್ಮ ಮನೆಗೆ ಬನ್ನಿ. ಕೂಡಿ ಹಬ್ಬ ಮಾಡೋಣ” ಎಂದು ಆಮಂತ್ರಿಸಿದ್ದ. ಇವರಿಗೂ ಹೋಗಲು ಮನಸ್ಸಾಯಿತು. ಈಗಿನಂತೆ ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ನಾವು ನಮ್ಮ ಧರ್ಮಕ್ಕೆ ಕೊಡುವ ಗೌರವ ಎನ್ನುವ ಕೆಟ್ಟ ವಾತಾವರಣ ಆಗ ಇರಲಿಲ್ಲ. ಇನ್ನೊಂದು ಧರ್ಮದವರ ಹಬ್ಬಹರಿದಿನಗಳಲ್ಲಿ ಭಾಗವಹಿಸುವವರನ್ನು ಕೆಂಗಣ್ಣಿನಿಂದ ನೋಡುವ `ಧರ್ಮರಾಕ್ಷಸ’ರ ಹಾವಳಿಯೂ ಆಗ ಇರಲಿಲ್ಲ. ಜನ ಸಹಜವಾಗಿ ಬೆರೆಯುವ ವಾತಾವರಣವಿತ್ತು. ಹೀಗಾಗಿ ಈ ಶಿಕ್ಷಕರು ಆ ಹಬ್ಬಕ್ಕಾಗಿ ರಜೆಕೋರಿ ಅರ್ಜಿಕೊಟ್ಟು ರಜೆಪಡೆದು ಮನೆಗೆ ಬಂದರು.

ಆದರೆ ಮರುದಿನ ಬೆಳಿಗ್ಗೆ ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಒಂದು ಚಿಕ್ಕ ದುರ್ಘಟನೆ ನಡೆಯಿತು. ಬೆಳಿಗ್ಗೆ ಹೆಂಡತಿಗೆ ತೆಂಗಿನ ಕಾಯಿ ಸುಲಿದುಕೊಡಲು ಹೋದ ಈ ಶಿಕ್ಷಕರ ಕೈಗೆ ಕತ್ತಿ ತಗುಲಿ ಚಿಮ್ಮುವ ಗಾಯವಾಗಿಬಿಟ್ಟಿತು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಅವರು ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಮಾಡಿ ಆಸ್ಪತ್ರೆಗೆ ಹೋಗಿ ಕೈಗೆ ಸೂಕ್ತಚಿಕಿತ್ಸೆಮಾಡಿಸಿಕೊಂಡು ಬಂದು ಮನೆಯಲ್ಲಿ ವಿಶ್ರಾಂತಿ ಪಡೆದರು.

ಮರುದಿನ ಎಂದಿನಂತೆ ಶಾಲೆಗೆ ಬಂದ ಅವರು ಮುಖ್ಯಶಿಕ್ಷಕರಿಗೆ ಇನ್ನೊಂದು ಅರ್ಜಿಯನ್ನು ಕೊಟ್ಟರು. ಅದರಲ್ಲಿ ಅವರು ಹಿಂದಿನ ದಿನ ನಡೆದ ಘಟನೆಯ ವಿವರಗಳನ್ನು ತಿಳಿಸಿ ‘ಈ ಕಾರಣದಿಂದ ನಾನು ಯಾವ ಉದ್ದೇಶಕ್ಕಾಗಿ ಆರ್. ಎಚ್. ಪಡೆದಿದ್ದೆನೋ ಆ ಉದ್ದೇಶಕ್ಕಾಗಿ ಅದನ್ನು ನನ್ನ ಶಕ್ತಿಗೆ ಮೀರಿದ ಕಾರಣಕ್ಕಾಗಿ ಬಳಸಲು ಆಗಲಿಲ್ಲ. ಆದ್ದರಿಂದ ತಾವು ಮಂಜೂರು ಮಾಡಿರುವ ಆರ್.ಎಚ್. ಅನ್ನು ವಾಪಸ್ಸು ಪಡೆದು ಅದರ ಬದಲು ಒಂದು ಸಿ.ಎಲ್. (ಸಾಂದರ್ಭಿಕ ರಜೆ) ಮಂಜೂರು ಮಾಡಬೇಕಾಗಿ ವಿನಂತಿ’ ಎಂದು ಬರೆದಿದ್ದರು. ಇದನ್ನು ನೋಡಿದ ಮುಖ್ಯೋಪಾಧ್ಯಾಯರಿಗೆ ಇದು ವಿಚಿತ್ರವಾಗಿ ತೋರಿತು. ಅವರು ಮೊದಲು ಅವರು ಹಬ್ಬದ ಬದಲು ಆಸ್ಪತ್ರೆಗೆ ಹೋಗಬೇಕಾಗಿ ಬಂದದ್ದಕ್ಕೆ ಒಂದಿಷ್ಟು ವಿಷಾದವನ್ನು ವ್ಯಕ್ತಪಡಿಸಿ, “ಯಾವ ರಜೆ ಆದ್ರೆ ಏನು ಬಿಡಿ. ಅದೇನು ಸಮಸ್ಯೆಯಲ್ಲ. ಒಂದು ದಿನ ನೀವು ಇರ್ಲಿಲ್ಲ. ಅದಕ್ಕೆ ಒಂದು ದಿನ ರಜೆ ಪಡೆದಿದ್ದೀರಿ. ಅದಕ್ಕೆ ಮೊದಲು ಕೊಟ್ಟ ಪರಿವರ್ತಿತ ರಜೆಯೇ ಆಗುತ್ತೆ” ಎಂದರು.

ಬಹಳಷ್ಟು ಜನ ಮುಖ್ಯಶಿಕ್ಷಕರು ಅಥವಾ ಕಚೇರಿ ಮುಖ್ಯಸ್ಥರಿಗೆ ಇಷ್ಟೇ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಅವರಿಗೆ ತಾಂತ್ರಿಕ ಕಾರಣಗಳು ಮುಖ್ಯವಾಗುತ್ತವೆಯೇ ಹೊರತು ತಾತ್ವಿಕ ಕಾರಣಗಳಲ್ಲ. ಅವರ ಪ್ರಕಾರ ಆ ಶಿಕ್ಷಕರು ಒಂದು ದಿನ ಶಾಲೆಯಲ್ಲಿ ಇರಲಿಲ್ಲ. ಅದಕ್ಕೆ ಒಂದು ದಿನ ರಜೆಕೊಡಲಾಗಿದೆ. ಅಲ್ಲಿಗೆ ಆ ವಿಷಯ ಮುಗಿಯಿತು. ಅದನ್ನು ಬದಲಿಸುವುದು ಅನವಶ್ಯಕ. ಹಾಗಾಗಿಯೇ ಅವರು ಮುಂದುವರೆದು ಹೇಳಿದರು, “ಸಿ.ಎಲ್. ಉಳಿದರೆ ಇನ್ನೊಂದು ದಿನ ಬಳಸಿಕೊಳ್ಳಬಹದು. ಆದರೆ ಆರ್. ಎಚ್. ಉಳಿದ್ರೆ ಬಳಸಿಕೊಳ್ಳಲು ಬರುವುದಿಲ್ಲ. ಅದನ್ನು ಬಳಸಿಕೊಳ್ಳಲು ಇವತ್ತೇ ಕಡೇ ದಿನ”. ಆದರೆ ಈ ಶಿಕ್ಷಕರ ಮನಸ್ಸು ಒಪ್ಪಲಿಲ್ಲ. ಅವರ ಸಲಹೆಯನ್ನು ಈ ಶಿಕ್ಷಕರು ಗೌರವಯುತವಾಗಿ ನಿರಾಕರಿಸಿ ರಜೆ ಪರಿವರ್ತನೆಗೆ ಮತ್ತೆ ಕೇಳಿಕೊಂಡರು. ಇವರ ಒತ್ತಾಯಕ್ಕೆ ಮಣಿದು ಕೊನೆಗೂ ಮುಖ್ಯೋಪಾಧ್ಯಾಯರು, ಇವರಿಗೆ ಮಂಜೂರು ಮಾಡಿದ್ದ ಪರಿವರ್ತಿತ ರಜೆಯನ್ನು ಮರಳಿ ಪಡೆದು ಅದರ ಬದಲು ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದರು. ಈ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ತರಗತಿಯ ಪಾಠಕ್ಕೆ ತೆರಳಿದರು. ಮುಖ್ಯೋಪಾಧ್ಯಾಯರು ಹೇಳಿದಂತೆ ಅವರ ಪರಿವರ್ತಿತ ರಜೆ ಬಳಕೆಯಾಗದೇ ಹಾಗೇ ಉಳಿಯಿತು! ಆದರೆ ಆ ಶಿಕ್ಷಕರಿಗೆ ಅದು ನಮ್ಮ ಬಹಳಷ್ಟು ಜನ ಶಿಕ್ಷಕರಿಗೆ ಅನ್ನಿಸುವಂತೆ ‘ವೇಸ್ಟ್’ ಆಯಿತು ಅನ್ನಿಸಲಿಲ್ಲ. ಈ ಘಟನೆ ನನ್ನ ಇಡೀ ವೃತ್ತಿಜೀವನದಲ್ಲಿ ರಜೆಯನ್ನು ಹಾಕುವಾಗಲೆಲ್ಲ ನೆನಪಿಗೆ ಬರುತ್ತದೆ ಮಾತ್ರವಲ್ಲ ರಜೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದೆ.

ನಾನೊಬ್ಳೇನಾ ಹೀಗೆ ರಜೆ ಹಾಕೋದು?

ಕನ್ನಡದ ಸೂಕ್ಷ್ಮಮನಸ್ಸಿನ ಸಂವೇದನಾಶೀಲ ಕಲಾವಿದ, ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ‘ಅವರವರ ಭಾವಕ್ಕೆ’ ಕೃತಿಯ ಲೇಖನವೊಂದರಲ್ಲಿ ಒಂದು ಮುಖ್ಯವಾದ ಘಟನೆಯನ್ನು ದಾಖಲಿಸುತ್ತಾರೆ. ಅವರು ಒಂದು ಸಲ ತಮ್ಮ ಸ್ನೇಹಿತನ ಮನೆಗೆ ಹೋಗುತ್ತಾರೆ. ಆ ಸ್ನೇಹಿತನ ಹೆಂಡತಿ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿದ್ದರು. ಇವರು ಹೋದಾಗ ಅವರು ತಮ್ಮ ಮನೆಯಲ್ಲಿ ತನ್ನ ಮಗನಿಗೆ ಪಾಠ ಮಾಡುತ್ತಿರುತ್ತಾರೆ. ಸಲಿಗೆಯಿದ್ದದ್ದರಿಂದ ಇವರು ಸಹಜವಾಗಿ, “ಇವತ್ತು ಶಾಲೆಯಿಲ್ಲವೇ?” ಎಂದು ಕೇಳುತ್ತಾರೆ, ಅದಕ್ಕೆ ಅವರು, “ಇದೆ ಮೆಡಿಕಲ್ ಲೀವ್ ಹಾಕಿದಿನಿ, ಮಗನಿಗೆ ಪಾಠ ಹೇಳಿಕೊಡಬೇಕಲ್ಲ” ಎನ್ನುತ್ತಾರೆ. “ಹಾಗಾದರೆ ಶಾಲೆಯಲ್ಲಿ ನಿಮ್ಮ ಬಳಿ ಕಲಿಯುವ ಮಕ್ಕಳ ಗತಿ” ಎಂದು ನಗುತ್ತ ಸ್ವಲ್ಪ ಸೀರಿಯಸ್ ಆಗಿಯೇ ಕೇಳುತ್ತಾರೆ. ಅದಕ್ಕೆ ಅವರು ಪ್ರಕಾಶ್ ರೈಗೆ ಶಾಕ್ ಹೊಡೆದಂತೆ ಉತ್ತರ ಕೊಡುತ್ತಾರೆ, “ಅದಕ್ಕೆ ನಾನೇನು ಮಾಡ್ಲಿ? ನಾನೊಬ್ಳೇನಾ ಹೀಗೆ ರಜಾ ತಗೋಳೋದು?”

ಇದನ್ನು ದಾಖಲಿಸಿ ಪ್ರಕಾಶ್ ರೈ ನಮ್ಮ ದೇಶದ ಬಹಳ ಮುಖ್ಯವಾದ, ಗಂಭೀರವಾದ ಸಮಸ್ಯೆಗಳಲ್ಲಿ ಇದೂ ಒಂದು ಎನ್ನುತ್ತಾರೆ. ಅವರೇ ಮುಂದುವರೆದು ಬರೆಯುತ್ತಾರೆ, “ಒಬ್ಬ ಗುರು ಹಲವು ಪರೀಕ್ಷೆಗಳನ್ನಿಟ್ಟು ಪ್ರತಿಭಾವಂತನಾದ ಒಬ್ಬನನ್ನು ಆಯ್ಕೆಮಾಡಿ ‘ಇವನೇ ನನ್ನ ಶಿಷ್ಯ’ ಎಂದು ಹೇಳುವ ಪ್ರಯತ್ನಕ್ಕಿಂತ, ಇಂಥವನೇ ನನ್ನ ಗುರು ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಆರಿಸುವ ಪಕ್ವತೆ ದೊಡ್ದದು.”

ಒಬ್ಬ ಶಿಕ್ಷಕರಿಗೆ ಹಬ್ಬಕ್ಕೆ ಎಂದು ರಜೆಪಡೆದು ಅದನ್ನು ಆಸ್ಪತ್ರೆಗೆ ಹೋಗಲು ಬಳಸಿಕೊಂಡದ್ದು ಎಷ್ಟರಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಎದುರಾಯಿತು. ಯೋಚಿಸಿ ನೋಡಿದಾಗ ಹಾಗೇ ಮಾಡುವುದು ‘ತಪ್ಪು’ ಅನ್ನಿಸಿತು. ಹಬ್ಬಕ್ಕಿಂತ ಆಸ್ಪತ್ರೆಗೆ ಹೋಗಿದ್ದು ಬಹಳ ಮುಖ್ಯವಾದ ಘಟನೆಯಾಗಿದ್ದರೂ ಅದು ಅವರಿಗೆ ಅಪರಾಧವಾಗಿ ಕಂಡಿತು! ಅವರು ತಮ್ಮ ಅಪರಾಧಿಪ್ರಜ್ಞೆಯಿಂದ ಹೊರಬರಲು ಮರುದಿನ ಶಾಲೆಗೆ ಬಂದು ತಾವು ಪಡೆದ ರಜೆಯನ್ನು ಪರಿವರ್ತಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನೊಬ್ಬರಿಗೆ ತಮಗೆ ಇಲ್ಲದ ಕಾಯಿಲೆಯನ್ನು ಸೃಷ್ಟಿಸಿಕೊಂಡು ರಜೆಪಡೆದದ್ದು ಅಪರಾಧವಾಗಿ ಕಾಣಲಿಲ್ಲ. ಮತ್ತೊಬ್ಬರಿಗೆ ಕಾರಣವೇ ಇಲ್ಲದೇ ರಜೆ ವೇಸ್ಟ್ ಆಗುತ್ತೆ ಅಂಥ ರಜೆಹಾಕಿ ಮನೆಯಲ್ಲಿ ಕುಳಿತುಕೊಳ್ಳುವುದು ತಪ್ಪಾಗಿ ಕಾಣಿಸಲಿಲ್ಲ….. ತಾವು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ನೈತಿಕ ಪ್ರಶ್ನೆಯೊಂದು ಇವರಲ್ಲಿ ಹುಟ್ಟಲೇ ಇಲ್ಲ.

ಹೌದು ಇವರೆಲ್ಲರೂ ನಮ್ಮ ‘ಗೌರವಾನ್ವಿತ’ ಶಿಕ್ಷಕರೆ. ನಮ್ಮ ಸಮಾಜವನ್ನು ದೇಶವನ್ನು ಕಟ್ಟಲು ಸ್ವಾರ್ಥರಹಿತ ಸೇವಾಮನೋಭಾವದ ಶಿಕ್ಷಕರ ಅವಶ್ಯಕತೆಯಿದೆ. ಅವರನ್ನು ಎಲ್ಲಿಂದ ತರುವುದು? ಇರುವವರನ್ನೇ ಸರಿಮಾಡುವ ಬಗೆ ಎಂಥದ್ದು. ಖಂಡಿತಾ ಇದು, ಬಲಪ್ರಯೋಗ, ಅಧಿಕಾರ ಮುಂತಾದವುಗಳಿಂದ ಆಗುವಂಥದ್ದಲ್ಲ. ಶಿಕ್ಷಕರ ಸಂಘಗಳು ಶಿಕ್ಷಕರಿಗೆ ರಜೆ ಕೊಡಿಸಲು ತೋರುವ ಉತ್ಸಾಹವನ್ನು ಮಿತಿಮೀರಿದ ಇಂತಹ ರಜೆಗಳಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಿ ಬದಲಿ ವ್ಯವಸ್ಥೆ ಮಾಡಿಸಲೂ ಉತ್ಸಾಹ ತೋರಿಸಬೇಕು. ಅದು ಅವುಗಳ ಜವಾಬ್ದಾರಿ ಕೂಡ ಹೌದು. ಆದರೆ ಅವು ಈ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿವೆ? ಇನ್ನು ಶಿಕ್ಷಕರಿಗೆ ತಮ್ಮದೇ ಆದ ಸಾಮಾಸಿಕ ಹೊಣೆಗಾರಿಕೆ ಇದೆ. ಅದನ್ನು ಅವರು ಮರೆಯಬಾರದು. ಇತರ ನೌಕರರಿಗೆ ತಮ್ಮನ್ನು ಅವರು ಹೋಲಿಸಿಕೊಳ್ಳಲೂ ಬಾರದು. ಏಕೆಂದರೆ ಈಗಲೂ  ನಮ್ಮ ಸಮಾಜದಲ್ಲಿ ಶಿಕ್ಷಕರೆಂದರೆ ಕೇವಲ ಸರ್ಕಾರಿ ನೌಕರರಲ್ಲ. ಸರ್ಕಾರ ಅವರಿಗೆ ಸಾವಿರ ಸೌಲಭ್ಯಗಳನ್ನು ಕೊಡಬಹುದು. ಆದರೆ ಅವುಗಳಲ್ಲಿ ಎಷ್ಟನ್ನು ಬಳಸಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸ್ವಯಂ ನ್ಯಾಯಾಧೀಶರಾಗಿ ಅವರು ತೀರ್ಮಾನಿಸಿಕೊಳ್ಳುವ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಬೇಕು.  ‘ಸಿಗುವ ಸೌಲಭ್ಯವನ್ನು ಯಾಕೆ ಬಿಡಬೇಕು’ ಎಂದು ಆಲೋಚಿಸುವುದು ಒಳ್ಳೆಯ ಶಿಕ್ಷಕರ ಲಕ್ಷಣವಲ್ಲ. ಪರೋಕ್ಷವಾಗಿ ಶಿಕ್ಷಕರು ರಜೆ ಹಾಕುವುದೇ ಅಪರಾಧ ಎಂದು ಬಿಂಬಿಸುವುದು ನನ್ನ ಮಾತಿನ ಅರ್ಥವಲ್ಲ. ಅವರಿಗೂ ಎಲ್ಲರಂತೆ ಒಂದು ಖಾಸಗೀ ಬದುಕೆಂಬುದು ಇರುತ್ತದೆ. ಆದರೆ ಒಂದು ದಿನ ರಜೆಹಾಕುವಾಗ ಐವತ್ತು ಮಕ್ಕಳಿಗೆ ಪಾಠ ಇಲ್ಲದಂತೆ ಆಗುತ್ತದೆಯಾದ್ದರಿಂದ ರಜೆ ಹಾಕುವ ಕಾರಣವೂ ಅಷ್ಟೊಂದು ಗಂಭೀರವಾಗಿರಬೇಕು ಎಂದು ಅವರಿಗೆ ಅನ್ನಿಸಬೇಕು.

ಯಾವಾಗ ಒಬ್ಬ ಶಿಕ್ಷಕನಿಗೋ ಶಿಕ್ಷಕಿಗೋ “ನನ್ನ ಒಂದು ಮಗುವಿಗೆ ಪಾಠಮಾಡಲಿಕ್ಕೆ ನನ್ನನ್ನು ನಂಬಿಕೊಂಡ ಐವತ್ತು ಮಕ್ಕಳಿಗೆ ಪಾಠಯಿಲ್ಲದಂತೆ ಮಾಡಿದೆ” ಎಂಬ ಭಾವನೆ ಉಂಟಾಗುತ್ತದೆಯೋ ಯಾವಾಗ ನನಗೆ ಒಂದು ಮನೆಯನ್ನು ಕಟ್ಟಿಕೊಳ್ಳಲು ದೇಶವನ್ನೇ ಕೆಡವುವ ಕೆಲಸ ಮಾಡುತ್ತಿದ್ದೇನೆ ಅನ್ನಿಸುವ ಭಾವನೆ ಉಂಟಾಗುತ್ತದೆಯೋ ಯಾವಾಗ ರಜೆ ವೇಸ್ಟ್ ಆಗುತ್ತದೆ ಎಂದು ಕಾರಣವೇ ಇಲ್ಲದೆ ರಜೆಹಾಕಿ ಕುಳಿತುಕೊಂಡು ತಿನ್ನುವ ಅನ್ನ ಪಾಪದ್ದು ಅನ್ನುವ ಭಾವನೆ ಉಂಟಾಗುತ್ತದೆಯೋ ಅಂದೇ ಆ ಶಿಕ್ಷಕ ಅಥವಾ ಶಿಕ್ಷಕಿಯ ವ್ಯಕ್ತಿತ್ವ ಮಾತ್ರವಲ್ಲ ಇಡೀ ದೇಶದ ಚಿತ್ರಣವೇ ಬದಲಾವಣೆಗೆ ಮುಖಮಾಡುತ್ತದೆ. ಹಾಗೆ ಆಗಲೆಂದು ನಾವೆಲ್ಲ ಆಶಿಸೋಣ…..

ಡಾ. ರಾಜೇಂದ್ರ ಬುರಡಿಕಟ್ಟಿ

Saturday, September 18, 2021