Sunday, October 27, 2024

ವಿಜಯ ದಶಮಿ ಮತ್ತು ಶರಣ ಸಂಸ್ಕೃತಿ

 



ಮರಣವೆಂಬುದು ಮಹಾನವಮಿಇದು ವಚನ ಸಾಹಿತ್ಯದಲ್ಲಿ ಬರುವ ಬಹಳ ಶಕ್ತಿಯುತವಾದ ಮತ್ತು ಹೆಚ್ಚು ಪ್ರಸಿದ್ಧವಿರುವ ಒಂದು ಮಾತು. ನನಗೆ ತಿಳಿದಂತೆ ವಚನ ಸಾಹಿತ್ಯದಲ್ಲಿ ಇದು ಮುಖ್ಯವಾಗಿ ಎರಡು ವಚನಗಳಲ್ಲಿ ಕಂಡುಬರುತ್ತದೆ. ಎರಡು ಮುಖ್ಯವಚನಗಳು ಇಬ್ಬರು ಪ್ರಮುಖ ವಚನಕಾರರಾದ ಬಸವಣ್ಣ ಮತ್ತು ಪ್ರಭುದೇವ ಅವರಿಗೆ ಸಂಬಂಧಿಸಿದವುಗಳೇ ಆಗಿವೆ ಎಂಬುದನ್ನೂ ನಾನಿಲ್ಲಿ ಒತ್ತುಕೊಟ್ಟು ಹೇಳಬೇಕು. ವಚನಾಂದೋಲನದ ಶಕ್ತಿಕೇಂದ್ರ ಪ್ರಭುದೇವ ಆಗಿದ್ದರೆ ಅದರ ಚಾಲಕ ಶಕ್ತಿ ಯಾಗಿದ್ದವರು ಬಸವಣ್ಣ. ಇವರಿಬ್ಬರ ವಚನಗಳಲ್ಲಿಯೇ ಮಾತು ಕಾಣಿಸಿಕೊಳ್ಳುವುದು ಅತ್ಯಂತ ಸಹಜವಾದದ್ದು ಕೂಡ. ವಚನಗಳು ಕ್ರಮವಾಗಿ ಹೀಗಿವೆ:

ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ

ಕೇಳು, ಕೂಡಲಸಂಗಮದೇವಾ,

ಮರಣವೆ ಮಹಾನವಮಿ

ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.

ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.

ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ?

ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ

ಗುಹೇಶ್ವರನನರಿಯದೆ ರಣಭೂಮಿಗಳುಲಿದವು !

ಸಾವನ್ನು ಸೂತಕವೆಂದು ಪರಿಭಾವಿಸುವ ಮತ್ತು ಅನಿಷ್ಟವೆಂದು ಶುದ್ಧೀಕರಣ ಮಾಡುವ ವೈದಿಕಶಾಹಿಯ ಪರಪಂರೆಗೆ ತದ್ವಿರುದ್ಧವಾಗಿ ಸಾವನ್ನು ಒಂದು ಹಬ್ಬವನ್ನಾಗಿ ಪರಿಭಾವಿಸುವ ನಿಲುವು ಅತ್ಯಂತ ಮಹತ್ವದ್ದು ಮತ್ತು ವಾಸ್ತವ ನೆಲೆಗಟ್ಟಿನ ಮೇಲೆ ನಿಂತಿರುವಂಥದ್ದು. ಹುಟ್ಟು ಸಾವುಗಳು ಭೂಮಿಯ ಮೇಲೆ ಮನುಷ್ಯ ಜೀವನದ ಆರಂಭ ಮತ್ತು ಅಂತಿಮ ಬಿಂದುಗಳಾಗಿವೆಯಾದರೂ ಅವೆರಡೂ ಸಹಜ ಆವಸ್ಥೆಗಳಾಗಿರುವುದು ನಿಜವಾದರೂ ನಾವು ಅವೆರಡನ್ನೂ ಸಮಭಾವದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಇನ್ನೂ ರೂಢಿಸಿಕೊಂಡಿಲ್ಲವೆಂದೇ ಹೇಳಬೇಕು. ಹುಟ್ಟನ್ನು ಸಂಭ್ರಮದಿಂದ ಸ್ವಾಗತಿಸುವ ನಾವು ಸಾವನ್ನು ಸಂಕಟದಿಂದ ಸ್ವಾಗತಿಸುತ್ತೇವೆ. ಇದು ಮನುಷ್ಯಜೀವನದ ಮಿತಿಯೂ ಇದ್ದೀತು.

ಮೇಲಿನ ಎರಡು ವಚನಗಳಲ್ಲಿ ಹೆಚ್ಚುಕಡಿಮೆ ಮರಣವೆಂಬುದು ಮಹಾನವಮಿ ಎಂಬ ಮಾತುಇದಕಾರಂಜುವರು ಇದಕಾರಳುಕುವರುಎಂಬ ಧೈರ್ಯದಿಂದ ಹುಟ್ಟಿರುವಂಥದ್ದೇ. ಹೌದು ಶರಣ ಸಂಸ್ಕೃತಿಯ ಹರಿಕಾರ ಮತ್ತು ಗುರಿಕಾರ ಆಗಿದ್ದ ಎರಡು ಚೇತನಗಳು ಅವ್ಯವಸ್ಥೆಯ ಲಾಭಗಳನ್ನು ಉಂಡು ಸುಖಿಸುವಉಂಡುಕೋರರಾಗಿರದೇ ಅದರ ವಿರುದ್ಧ ಬಂಡೆದ್ದಬಂಡುಕೋರರು!

ಸಮಾಜ ಸುಧಾರಣೆಯ ಮುಂದಾಳತ್ವವನ್ನು ವಹಿಸುವವರ ಬಹುಮುಖ್ಯ ಹೊಣೆಗಾರಿಕೆಗಳಲ್ಲಿ ತನ್ನೊಂದಿಗಿರುವ ಚಳವಳಿಯ ಕಾರ್ಯಕರ್ತರು ಧೈರ್ಯಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಕೂಡ ಬಹುಮುಖ್ಯವಾದದ್ದಾಗಿರುತ್ತದೆ. ಏಕೆಂದರೆ ಯಾವುದೇ ಕಾಲದ ಯಾವುದೇ ಚಳವಳಿ ಇರಬಹುದು ಅದು ಆಯಾ ಕಾಲದ ಸಮಾಜದಿಂದ ಪುರಸ್ಕಾರಕ್ಕೆ ಒಳಗಾಗುವುದಿಲ್ಲ. ಅದು ಆರಂಭದಲ್ಲಿ ತಿರಸ್ಕಾರಕ್ಕೆ ಒಳಗಾಗುತ್ತದೆ! ಚಳವಳಿಗಾರನೊಬ್ಬನನ್ನು ವರ್ತಮಾನವು ಹಿಂಸಿಸುತ್ತದೆ ಭವಿಷ್ಯವು ಪೂಜಿಸುತ್ತದೆ!! ಸತ್ಯವನ್ನು ಚಳವಳಿಗಾರರಿಗೆ ಮನವರಿಕೆಮಾಡಿಕೊಡಬೇಕಾದದ್ದು ಚಳವಳಿಯ ನೇತಾರನ ಬಹುಮುಖ್ಯ ಕೆಲಸವಾಗಿರುತ್ತದೆ. ಇದರ ಜೊತೆಗೆ ಭವಿಷ್ಯ ಅವನನ್ನು ಪೂಜಿಸುವುದು ನಿಜವಾದರೂ ಭವಿಷ್ಯದವರೆಗೆ ಬದುಕಲು ವರ್ತಮಾನದ ಹಿಂಸೆಯನ್ನು ಅವನು ತಾಳಿಕೊಳ್ಳಬೇಕಾಗುತ್ತದೆ. ತಾಳಿಕೊಳ್ಳುವಿಕೆಗೆ ಒಂದು ಸದೃಢವಾದ ಮನಸ್ಥಿತಿ ರೂಪುಗೊಳ್ಳಬೇಕಾಗುತ್ತದೆ. ಮೇಲಿನ ಎರಡೂ ವಚನಗಳು ಮನಸ್ಥಿತಿಯ ರೂಪಿಸುವಿಕೆಗಾಗಿ ಬಳಕೆಯಾಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.

ಮರಣವೆಂಬುದು ಮಹಾನವಮಿಎಂಬ ಸಾವಿಗಾಗಿ ಹೆದರದೆ ಚಳವಳಿಯಲ್ಲಿ ಮುನ್ನುಗ್ಗುವ ಧೈರ್ಯತಾಳಲು ಹೇಳಿದ ಮಾತೇ ಕಾಲದಲ್ಲಿ ಅವರನ್ನು ಸಾಯಿಸುವ ವಾತಾವರಣವೊಂದಿತ್ತು ಎಂಬುದನ್ನು ದೃಢಪಡಿಸುತ್ತದೆ. ವಚನಾಂದೋಲನ ಪ್ರಚಲಿತವಿದ್ದ ಸಮಾಜದ ಏರುಪೇರುಗಳನ್ನು ಸರಿಪಡಿಸಿ ಎಲ್ಲರೂ ಒಂದೆಂದು ಭಾವಿಸುವ ಸರ್ವಸಮಾನತೆಯ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ನಡೆದ ಒಂದು ಚಳವಳಿ. ನಮ್ಮದು ಕನಸಿನಲ್ಲಿಯೂ ಮನುಷ್ಯರೆಲ್ಲರೂ ಸಮಾನರೆಂದು ಕಂಡರಿಯದ ಸಮಾಜ. ಚಳವಳಿ ಸಹಜವಾಗಿಯೇ ವೈದಿಕಶಾಹಿಗಳಿಗೆ ಕಣ್ಣುರಿ ಮತ್ತು ಹೊಟ್ಟೆಯುರಿ ಎರಡನ್ನೂ ಉಂಟುಮಾಡಿತು. ಇದರ ಪ್ರತಿಫಲವಾಗಿ ರಾಜತ್ವದ ಮೇಲೆ ತನ್ನದೇ ಆದ ನಿಯಂತ್ರಣವನ್ನು ಹೊಂದಿದ್ದ ಪುರೋಹಿತಶಾಹಿ ರಾಜನನ್ನು ಶರಣರ ಮೇಲೆ ಎತ್ತಿಕಟ್ಟುವ ಕಾರ್ಯಕ್ಕೆ ಕೈಹಾಕಿತು. ಇದು ಸಹಜವಾಗಿಯೇ ಘರ್ಷಣೆಗೆ ಕಾರಣವಾಗಿ ಇದೇ ಮುಂದೆ ಇತಿಹಾಸಪ್ರಸಿದ್ಧ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು.

ಕಲ್ಯಾಣಕ್ರಾಂತಿಎಂಬುದು ಕರ್ನಾಟಕದ ಸಮಾಜೋರಾಜಕೀಯ ಚರಿತ್ರೆಯಲ್ಲಿ ನಾವೆಂದೂ ಮರೆಯಲಾರದ ಮರೆಯಬಾರದ ಒಂದು ರಕ್ತಸಿಕ್ತ ಅಧ್ಯಾಯ. ಪ್ರಧಾನವಾಗಿ ಬ್ರಾಹ್ಮಣ ಸಮುದಾಯದ ಹುಡುಗಿಯೊಬ್ಬಳನ್ನು ತಳಸಮುದಾಯದ ಹುಡುಗನಿಗೆ ಮದುವೆಮಾಡಿಕೊಡುವ ಕಾರ್ಯವನ್ನು ಶರಣರು ನಡೆಸಿದ್ದು ಮತ್ತು ಅಂತರ ಜಾತಿಯ ವಿವಾಹವೇ ಕಲ್ಯಾಣಕ್ರಾಂತಿಗೆ ಕಾರಣವೆಂದು ಗುರುತಿಸಲಾಗುತ್ತದೆ. ಅದು ಎದ್ದು ಕಾಣುವ ಪ್ರಧಾನ ಕಾರಣ ನಿಜವಾದರೂ ಮೂಲತಃ ಅದೊಂದೇ ಕ್ರಾಂತಿಗೆ ಕಾರಣವಾಗಿರಲಿಲ್ಲವೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಸಮಾಜದಲ್ಲಿ


ಆಳವಾಗಿ ಬೇರುಬಿಟ್ಟಿದ್ದ ಜಾತಿ,ಲಿಂಗ, ವರ್ಗ ಬೇಧಗಳ ವಿರುದ್ಧ ಶರಣ ಚಳವಳಿ ಧ್ವನಿಯೆತ್ತಿದ್ದು ಪುರೋಹಿತಶಾಹಿಗೆ ನುಂಗಲಾರದ ತುತ್ತಾಗಿತ್ತು. ಅದು ಅವರ ಅಸ್ಥಿತ್ವದ ಪ್ರಶ್ನೆಯಾಗಿತ್ತು. ಏನಾದರೂ ಮಾಡಿ ಶರಣರ ಮೇಲೆ ಸೇಡು ತೀರಿಸಿಕೊಳ್ಳಲು ಸಮುದಾಯ ಸದಾ ಹವಣಿಸುತ್ತಿತ್ತು. ಆದರೆ ಬಸವಣ್ಣನಂತಹ ವ್ಯಕ್ತಿತ್ವ ಅವರ ದುರುದ್ಧೇಶಕ್ಕೆ ಪ್ರಬಲ ತಡೆಯನ್ನುಂಟುಮಾಡಿತ್ತು. ಬಸವಣ್ಣನ ಬಗ್ಗೆ ಬಿಜ್ಜಳನನ್ನು ಎತ್ತಿಕಟ್ಟುವುದೂ ಕೂಡ ಅವರಿಗೆ ಆರಂಭದಲ್ಲಿ ಸುಲಭವಾಗಿರಲಿಲ್ಲ. ಆದರೆ ಮದುವೆ ಅವರಿಗೆ ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿತು.

ಕೊನೆಗೂ ಪುರೋಹಿತಶಾಹಿ ತನ್ನ ಕುತಂತ್ರವನ್ನು ಯಶಸ್ವಿಗೊಳಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮದುವೆಯ ನೆಪವನ್ನು ಮಾಡಿಕೊಂಡು ಬಸವಣ್ಣ ಮತ್ತು ಅವನ ಅನುಯಾಯಿಗಳು `ಧರ್ಮಬಾಹಿರಕೆಲಸವನ್ನು ಮಾಡುತ್ತಿರುವದರಿಂದ ಅವರನ್ನು`ಧರ್ಮದ್ರೋಹಿಗಳುಎಂದು ಬಿಂಬಿಸುವಲ್ಲಿ ಅದು ಗೆಲುವು ಸಾಧಿಸಿತು. ಕಲ್ಪಿತಧರ್ಮದ್ರೋಹವುರಾಜದ್ರೋಹಆಗುವಂತೆ ನೋಡಿಕೊಳ್ಳುವಲ್ಲಿಯೂ ಅದು ಗೆದ್ದಿತು! ರಾಜದ್ರೋಹವೆಂದಮೇಲೆ ಅದಕ್ಕೆ ತಕ್ಕ ಶಿಕ್ಷೆ ಆಗಲೇಬೇಕಾಗುತ್ತದೆ. ಸರಿ ಅದಕ್ಕಾಗಿ ಒಂದುಒಳ್ಳೆಯ ದಿನವನ್ನು ಗುರುತಿಸಲಾಯಿತು. ಅದು ಯಾವ ದಿನ? ವಿಜಯದಶಮಿಯ ದಿನ! ಹೌದು ಪುರೋಹಿತ ಶಾಹಿ ರಾಜನನ್ನು ತನ್ನ ಕುತಂತ್ರಕ್ಕೆ ಅಸ್ತ್ರವನ್ನಾಗಿ ಮಾಡಿಕೊಂಡು ಹನ್ನೆರಡನೆಯ ಶತಮಾನದ ಶರಣರನ್ನು ಸಿಕ್ಕಸಿಕ್ಕಲ್ಲಿ ಕೊಂದುಹಾಕಿ ವಚನಗಳನ್ನು ನಾಶಪಡಿಸಿ ಪುಂಡಾಟಿಕೆ ನಡೆಸಿದ್ದು, ಮದುವೆಯ ಕಾರಣಕ್ಕೆ ತಳಸಮುದಾಯದ ಗಂಡು, ಅವನ ಪಾಲಕರನ್ನು ಆನೆಯ ಕಾಲಿಗೆ ಕಟ್ಟಿ ಎಳಸಿ ಚಿತ್ರಹಿಂಸೆಕೊಟ್ಟು ಪ್ರಗತಿಪರವಾದ ಆಲೋಚನೆಯ ಮೇಲೆ ಎಂದೆಂದೂ ಅಳಿಸಲಾರದ ಬರೆಯೆಳೆದ ದಿನಗಳು ಇದೇ ವಿಜಯದಶಮಿಯ ದಿನಗಳು!!. ಅವು ವೈಚಾರಿಕತೆಯ ವಿರುದ್ಧ ಸನಾತನವಾದ ಜಯಗಳಿಸಿದ ದಿನಗಳು. ಸಮಸಮಾಜ ನಿರ್ಮಾಪಕರ ವಿರುದ್ಧ ಜಾತಿವಾದಿಗಳು, ಸಂಪ್ರದಾಯವಾದಿಗಳು ಜಯಗಳಿಸಿದ ದಿನಗಳು!!

ವಿಜಯದಶಮಿಯನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯಗಳಿಸುವಿಕೆಯ ಸಂಕೇತವೆಂದು ಹೇಳಲಾಗುತ್ತದೆ. ಇದಕ್ಕೆ ಜನರ ಕಿವಿಯಲ್ಲಿ ಹೂವು ಇಡುವ ಅನೇಕ ಕಥೆಗಳನ್ನು ಹೆಣೆದು ಇಡಲಾಗಿದೆ. ನಮ್ಮ ಯುವ ಸಮುದಾಯ ಇದನ್ನು ಕುರುಡಾಗಿ ನಂಬುತ್ತಿದೆ. ಇದು ಅವರ ತಪ್ಪಲ್ಲ. ಸತ್ಯ ಅವರಿಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಇಂದು ಬಸವಣ್ಣನ ಅನುಯಾಯಿಗಳೆಂದು ಹೇಳಿಕೊಳ್ಳುವ ಅವರ ಬಗ್ಗೆ ಗೌರವದ ಭಾವನೆಯನ್ನು ಇಟ್ಟುಕೊಂಡಿರುವ ಅನೇಕ ಜನ ವಿಜಯದಶಮಿಯನ್ನು ವಿಜಯದ ಸಂಕೇತವೆಂದೇ ನಂಬಿ ಆಚರಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲ. ವಿಜಯದಶಮಿ ಎಂಬುದು ತಮ್ಮ ವಿಜಯವಲ್ಲವೆಂದು. ತಮ್ಮ ಶರಣರನ್ನು ಬೀದಿಬೀದಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಚ್ಚಿಕೊಂದು ಸಂಪ್ರದಾಯವಾದಿಗಳು ವಿಜಯಸಾಧಿಸಿದ ದಿನವೆಂದು. ಸತ್ಯಗೊತ್ತಾದರೆ ಅವರು ವಿಜಯದಶಮಿಯನ್ನು ಸೂತಕದ ದಿನವೆಂದು ಆಚರಿಸಿಯಾರು!

ಆಯುಧಪೂಜೆಯ ಹೆಸರಿನಲ್ಲಿ ಕೊಲ್ಲುವ ಕತ್ತಿಯೂ ಇಂದು ಪೂಜೆಗೊಳ್ಳುವ ಕೆಟ್ಟಕಾಲದಲ್ಲಿ ನಾವು ಬದುಕುತ್ತಿದ್ದೇವೆ. ‘ಕತ್ತಿಹಿಡಿದವರೂ ಕತ್ತು ಬಗ್ಗಿಸಿದವರೂ ಸೇರಿಕೊಂಡು ನಾವೆಲ್ಲ ಒಂದು; ನಾವೆಲ್ಲ ಬಂಧುಎನ್ನುವ ಘೋಷಣೆಗೆ ಮರುಳಾಗಿದ್ದೇವೆ. ಹಾಗಾಗಿ ನಮ್ಮ ನಿಜವಾದ ಶತ್ರುಗಳು ಯಾರು ಎಂಬುದೂ ನಮಗೆ ಅರ್ಥವಾಗದ ಸ್ಥಿತಿಯೊಂದು ನಿರ್ಮಾಣವಾಗುತ್ತಿದೆ. ಹಿಂದೆ ನಮ್ಮನ್ನೆಲ್ಲ ಕೊಲೆಮಾಡಿದವರೇ, ‘ಆಗಿದ್ದು ಆಗಿಹೋಯಿತು; ಹಳೆಯದನ್ನೆಲ್ಲ ಮರೆತು ಚೆನ್ನಾಗಿರೋಣ ಬನ್ನಿಎಂದು ನಮ್ಮನ್ನು ಕರೆದಾಗ ನಾವು ಹೋಗಬಾರದೇ? ಹೋಗಬಹುದು ಆದರೆ ಈಗಲಾದರೂ ಹಾಗೆ ನಮ್ಮನ್ನು ಕರೆಯುವಾಗ ಅವರ ಬಗಲಲ್ಲಿ ಕತ್ತಿಯನ್ನು ಇಟ್ಟುಕೊಂಡೇ ಕರೆಯುತ್ತಿದ್ದಾರೋ ಏನೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಆತ್ಮರಕ್ಷಣೆಯ ದೃಷ್ಟಿಯಿಂದ ಮುಖ್ಯವಾದದ್ದು!

`ಮರಣವೆಂಬುದು ಮಹಾನವಮಿಎಂಬ ಧೈರ್ಯತುಂಬುವ ಹೇಳಿಕೆಯನ್ನು ಅಕ್ಷರಶಃ ಪಾಲಿಸಿ ಹಾಗೆ ಹೇಳಿದವರನ್ನೆಲ್ಲ ಅದೇ ಮಹಾನವಮಿಯ ದಿನದಂದೇ ಬೆನ್ನಟ್ಟಿ ಕೊಂದು ಹತ್ಯಾಕಾಂಡ ನಡೆಸಿ ಹಬ್ಬವೆಂದು ಆಚರಿಸಿದ ದಿನ ಮಹಾನವಮಿ! ದುರಂತವೆಂದರೆ ಇಂದು ಶರಣಸಂಸ್ಕೃತಿಯ ವಾರಸುದಾರರೆಂದು ಹೇಳಿಕೊಳ್ಳುವ ಬಹಳಷ್ಟು ಜನ ತಿಳಿವಳಿಕೆಯ ಕೊರತೆಯಿಂದಾಗಿಸಂಸ್ಕೃತಿ ಹೆಸರಿನಲ್ಲಿ ಇದನ್ನು ಹಬ್ಬವೆಂದು ಆಚರಿಸಿ ಸಂಭ್ರಮಿಸುತ್ತಿರುವುದು! ತಮ್ಮ ಶರಣರನ್ನು ಕೊಂದವರ ಕತ್ತಿಯನ್ನೇ ಪೂಜಿಸುತ್ತಿರುವುದು! ಇದು ದುರಂತವಲ್ಲದೇ ಮತ್ತೇನು?

ಕರ್ನಾಟಕದಲ್ಲಿ ಅನೇಕ ಶರಣಸಂಸ್ಕೃತಿಯ ಮಠಗಳಿವೆ. ಅವುಗಳಲ್ಲಿ ಬೆರಳೆಣಿಕೆಯ ಮಠಗಳನ್ನು ಬಿಟ್ಟರೆ ಉಳಿದವು ವೈದಿಕಮಠಗಳ ದಾರಿಯನ್ನೇ ಹಿಡಿದು ಶರಣ ಸಂಸ್ಕೃತಿಗೆ ಎಳ್ಳುನೀರು ಬಿಡುತ್ತಿವೆ. ಹಾಗಂತ ನಾವೆಲ್ಲ ನಿರಾಶರಾಗಬೇಕಿಲ್ಲ. ಶರಣಸಂಸ್ಕೃತಿಯ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನಗೊಳಿಸಿಕೊಂಡಿರುವ ಅನೇಕ ವ್ಯಕ್ತಿಗಳು, ಕೆಲವರಾದರೂ ಮಠಗಳ ಸ್ವಾಮಿಗಳು ಇನ್ನೂ ಇದ್ದಾರೆ. ಆದರೆ ಅವರೆಲ್ಲ ಶರಣ ಸಂಸ್ಕೃತಿಯ ವಾರಸುದಾರರೆಲ್ಲ ಶರಣಸಂಸ್ಕೃತಿಯಿಂದ ದೂರವಾಗುತ್ತಿರುವುದನ್ನು ತಡೆಯಲು ಇನ್ನೂ ಚುರುಕಾಗಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಿದೆ. ಇಲ್ಲದೇ ಹೋದರೆ ಕರ್ನಾಟಕದಲ್ಲಿ ಶರಣಸಂಸ್ಕೃತಿಯ ಶವಸಂಸ್ಕಾರವನ್ನು `ಹಾದಿಬಿಟ್ಟ ಶರಣರೇ ಮಾಡಿಯಾರು! ಬಗ್ಗೆ ಜಾಗೃತಿಯ ಕೆಲಸ ತ್ವರಿತವಾಗಿ ಆಗಬೇಕಿದೆ. ಒಬ್ಬಿಬ್ಬರಿಂದಲ್ಲ. ಸಮರೋಪಾದಿಯಾಗಿ ಸರ್ವರಿಂದ.

ಪ್ರತಿವರ್ಷ ಜಂಬೂಸವಾರಿಯ ಅದ್ಧೂರಿ ಮಹಾನವಮಿ, ವಿಜಯದಶಮಿ ಉತ್ಸಹ ನೋಡಿ ನೋಡಿ ತಲೆಚಿಟ್ಟುಹಿಡಿದು ಹೋಗಿತ್ತು. ವಿಜಯದಶಮಿ ಬಂದಾಗಲೆಲ್ಲ ನನಗೆ ಶರಣರ ಹತ್ಯಾಕಾಂಡದ ಕರಾಳ ನೆನಪೊಂದು ಬಂದು ಕಾಡತೊಡಗುತ್ತದೆ. ಮನಸ್ಸು ಮುದುಡಿಕೊಳ್ಳುತ್ತದೆ. ಹೀಗಾಗಿ ಇದರಿಂದ ಬಿಡುಗಡೆ ಪಡೆಯಲೆಂದು ಅಂದಿನ ಶರಣ ಚಳವಳಿಯ ಕೇಂದ್ರ ಕಾರ್ಯಸ್ಥಾನವಾದ ಕಲ್ಯಾಣಕ್ಕೆ ಹೋಗಿ ತಿರುಗಾಡಿ ಬಂದೆ. ಅಲ್ಲಿನ ಅನುಭವ ಮಂಟಪದ ಶಾಂತವಾದ ವಾತಾವರಣದಲ್ಲಿ ಕುಳಿತು ಸಮಾಧಾನಮಾಡಿಕೊಂಡೆ. ಬಸವಣ್ಣನ ಅರಿವಿನ ಮನೆ, ಅಲ್ಲಮಪ್ರಭುಗಳ ಮಠ, ಮಡಿವಾಳ ಮಾಚಿದೇವನ ಹೊಂಡ, ಅಕ್ಕನಾಗಮ್ಮನ ಗವಿ, ಎಲ್ಲೆಲ್ಲ ಸುತ್ತಾಡಿ ಮನಸ್ಸನ್ನು ಹಗುರಮಾಡಿಕೊಂಡೆ. ಅಕ್ಕಮಹಾದೇವಿ ಕಿನ್ನರಿಬೊಮ್ಮಯರ ನಡೆವ ತಾತ್ವಿಕ ಸಂಘರ್ಷಣೆಯ ಸ್ಥಳಕ್ಕೆ ಹೋಗಿ ಅವರಿಬ್ಬರ ಮೂರ್ತಿಗಳ ನಡುವೆ ನಿಂತು ನಾನು ನಿಮ್ಮ ಮಾತಿಗೆ ಸಾಕ್ಷಿದಾರ ಎನ್ನುವಂತೆ ಫೋಟೋ ತೆಗೆಸಿಕೊಂಡೆ. ಮನಸ್ಸು ಒಂದಿಷ್ಟು ನಿರಾಳವಾಯಿತು.



ನನ್ನ ಮಗ ಅಮೃತ ಭಾರ್ಗವ, ಹಿಂದೂ ಪತ್ರಿಕೆ ವರದಿಗಾರ ಸಹೋದರ ಕುಮಾರ್ ಬುರಡಿಕಟ್ಟಿ ಜೊತೆಗೆ ಶರಣ ಸಾಹಿತ್ಯದ ಬಗ್ಗೆ ಆಳವಾದ ಅರಿವುಳ್ಳ ವಿದ್ವಾಂಸೆ ಸ್ನೇಹಿತೆ ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕಿ, ಡಾ. ಶಿವಗಂಗಾ ರುಮ್ಮಾ, ಇದ್ದದ್ದನ್ನು ಇದ್ದಂತೆ ಕೆಲವು ಸಲ ಒದ್ದಂತೆ ಹೇಳುವ ಅಪರೂಪದ ಸ್ನೇಹಿತ ಬೀದರಿನ ಸಿದ್ಧಪ್ಪ ಮೂಲಿಗೆ ಇಡೀ ದಿನ ಜೊತೆಗಿದ್ದು ನನ್ನ ಭೇಟಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದರು.

ಕೆಲವು ಫೋಟೋ ನಿಮಗಾಗಿ.

ಡಾ.ರಾಜೇಂದ್ರ ಬುರಡಿಕಟ್ಟಿ

27-10-2020

 


Tuesday, October 22, 2024

ಗಾಂಧೀಜಿ ಸಮಾಧಿಯ ಚಪ್ಪಲಿ ಸ್ಟ್ಯಾಂಡು


ಕನ್ನಡದ ಹಿರಿಯ ಲೇಖಕರಾದ ಡಾ. ಕೆ. ಶಿವರಾಮ ಕಾರಂತ ಅವರು ಒಂದು ಸಲ ಗಾಂಧೀಜಿಯನ್ನು ನೋಡಲು, ಅವರ ಆಶ್ರಮದಲ್ಲಿ ಕೆಲದಿನ ಇರಲು ಎಂದು ಹೊರಡುತ್ತಾರೆ. ಆಗ ಈಗಿನಂತೆ ಆನ್ಲೈನ್‌ ಬುಕ್ಕಿಂಗ್‌, ಡಿಜಿಟಲ್‌ ಟಿಕೆಟ್‌ ಇತ್ಯಾದಿ ಸೌಲಭ್ಯಗಳು ಇರುವುದಿಲ್ಲ. ರೈಲಿಗೆ ಹೋಗುವವರು ರೈಲ್ವೇ ಸ್ಟೇಷನ್ಗಳ ಕೌಂಟರ್‌ಗಳಲ್ಲಿ ಹಣನೀಡಿ ಭೌತಿಕ ಟಿಕೆಟ್‌ ಪಡೆದು ರೈಲು ಹತ್ತಬೇಕಿತ್ತು. ಸರಿ ಕಾರಂತರು ಇದೇ ರೀತಿ ಟಿಕೆಟ್‌ ಕೊಂಡು ತಮ್ಮ ಜುಬ್ಬಾದ ಕಿಸೆಗೆ ಹಾಕಿಕೊಂಡು ಹೊರಡುತ್ತಾರೆ. ಅಹಮದಾಬಾದಿಗೆ ತಲುಪುವಲ್ಲಿ ಅವರಿಗೆ ಒಂದು ಸಂಕಷ್ಟ ಎದುರಾಗುತ್ತದೆ. ಅವರು ಕಿಸೆಗೆ ಹಾಕಿಕೊಂಡ ಟಿಕೆಟ್‌ ಕಾಣೆಯಾಗಿರುತ್ತದೆ. ಕಾರಂತರಿಗೆ ಏನು ಮಾಡಬೇಕು ಎಂದು ತಕ್ಷಣಕ್ಕೆ ಹೊಳೆಯುವುದಿಲ್ಲ.

ಕೊನೆಗೆ ಅನಿವಾರ್ಯವಾಗಿ ಅಲ್ಲಿ ಟಿಕೆಟ್‌ ಪರಿಶೀಲನೆ ಮಾಡಲು ಗೇಟಿನಲ್ಲಿ ನಿಂತ ವ್ಯಕ್ತಿಯ ಹತ್ತಿರ ಹೋಗಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅವನು ʼಟಿಕೆಟ್‌ ಎಲ್ಲಿ ತೆಗೆದುಕೊಂಡಿದ್ದಿರಿ?ʼ ಎಂದು ಕೇಳಿದಾಗ ಅವರು ಉತ್ತರಿಸುತ್ತಾರೆ. ʻಟಿಕೆಟ್‌ ನಂಬರ್‌ ಇತ್ಯಾದಿ ಏನಾದರೂ ಗೊತ್ತಿದೆಯೇ?ʼ ಎಂದು ಕೇಳಿದಾಗ ಕಾರಂತರು ನಂಬರ್‌ ನೋಡಿಕೊಂಡಿಲ್ಲವೆಂದು ಹೇಳುತ್ತಾರೆ.


ಜೊತೆಗೆ ಅದನ್ನು ಯಾವ ಸ್ಟೇಷನ್ನಿನಲ್ಲಿ ನೋಡಿಕೊಂಡಿದ್ದೆ ಮತ್ತು ಯಾವ ಸ್ಟೇಷನ್ನಿನಲ್ಲಿ ಪರಿಶೀಲನೆ ಮಾಡಿದ್ದರು ಎಂಬುದನ್ನು ನೆನಪುಮಾಡಿಕೊಂಡು ಹೇಳುತ್ತಾರೆ. `ಸರಿ ಈಗ ಎಲ್ಲಿಗೆ ಹೋಗಬೇಕು?ʼ ಎಂದು ಅವನು ಕೇಳಿದಾಗ ಕಾರಂತರು, ʼಸಾಬರಮತಿಗೆʼ ಎಂದು ಹೇಳುತ್ತಾರೆ. ಹಾಗೆ ಅಂದದ್ದೇ ತಡ ಅವನು, ʼಹೋಗಿʼ ಎಂದು ಅವರನ್ನು ರೈಲು ಹತ್ತಲು ಬಿಟ್ಟುಬಿಡುತ್ತಾನೆ. ಈ ಘಟನೆಯನ್ನು ನೆನಪಿಸಿಕೊಂಡು ಕಾರಂತರು ಬರೆಯುತ್ತಾರೆ, “ಗಾಂಧಿಯನ್ನು ನೋಡಲು ಹೊರಟ ಈ ವ್ಯಕ್ತಿ ಸುಳ್ಳುಹೇಳಲಾರ ಎಂದು ಅವನಿಗೆ ಅನ್ನಿಸಿರಬೇಕು” ಎಂದು.

ಕಾರಂತರ ಜೀವನದ ಈ ಚಿಕ್ಕಘಟನೆ ಗಾಂಧಿ ಆ ಕಾಲದ ಜನಮಾನಸವನ್ನು ಯಾವ ಪ್ರಮಾಣದಲ್ಲಿ ಪ್ರಭಾವಿಸಿದ್ದರು ಎಂಬುದನ್ನು ತಿಳಿಸುತ್ತದೆ. ಕರ್ನಾಟಕದಲ್ಲಿಯಾದರೆ ಸಾಹಿತ್ಯ ಓದದಿದ್ದರೂ ಒಬ್ಬ ಗೇಟ್‌ ಕೀಪರ್‌ ಶಿವರಾಮ ಕಾರಂತರು ದೊಡ್ಡ ಸಾಹಿತಿ ಎಂದು ಅವರ ಹೆಸರನ್ನಾದರೂ ಕೇಳಿರುವ ಸಾಧ್ಯತೆಗಳಿರುತ್ತವೆ. ಆದರೆ ದೂರದ ಗುಜರಾತಿನಲ್ಲಿ ಅವರು ಆ ಗೇಟ್‌ ಕೀಪರ್‌ಗೆ ಅಪರಿಚಿತರು. ಆದಾಗ್ಯೂ ಅವರು ʼಪ್ರಾಮಾಣಿಕರುʼ ಎಂದು ಪರಿಗಣಿಸಲ್ಪಡುವುದು ಯಾವುದರಿಂದ? ʼಗಾಂಧಿʼ ಎಂಬ ಹೆಸರಿನಿಂದ! ಅಂದರೆ ಆ ಕಾಲದಲ್ಲಿ ಕೇವಲ ಗಾಂಧಿ ಮಾತ್ರವಲ್ಲ ಗಾಂಧಿಯ ಸಂಪರ್ಕಕ್ಕೆ ಬರುವವರೆಲ್ಲ ʼಕಳ್ಳಸುಳ್ಳರಲ್ಲʼ ಎಂದು ಪರಿಗಣಿಸಲ್ಪಡುತ್ತಿದ್ದರು. ಹೀಗಾಗಿಯೇ, “ದೂರದ ಕರ್ನಾಟಕದಿಂದ ಈ ವ್ಯಕ್ತಿ ಗಾಂಧಿಯನ್ನು ನೋಡಲು ಬಂದಿದ್ದಾನೆ ಎಂದರೆ ಈತ ಸುಳ್ಳುಹೇಳುವ ವ್ಯಕ್ತಿ ಆಗಿರಲು ಸಾಧ್ಯವೇ ಇಲ್ಲ” ಎಂದು ಆ ಗೇಟ್‌ ಕೀಪರ್‌ಗೆ ಅನ್ನಿಸಿಬಿಟ್ಟಿತು!

*****

ದೆಹಲಿಗೆ ಹೋದಾಗಲೆಲ್ಲ ಸಾಮಾನ್ಯವಾಗಿ ನಾನು ತಪ್ಪದೆ ಹೋಗುವ ಸ್ಥಳಗಳಲ್ಲಿ ರಾಷ್ಟ್ರಪಿತನ ಸಮಾಧಿ ಇರುವ ರಾಜಘಾಟ್ ಮುಖ್ಯವಾದದ್ದು.‌ ಮೊನ್ನೆ ಎಂದಿನಂತೆ ಹೋದಾಗ ಒಂದು ಅಂಶವನ್ನು ಗಮನಿಸಿದೆ. ಸಾಮಾನ್ಯವಾಗಿ ಪೂಜಾಸ್ಥಳಗಳು ಅಥವಾ ಹಾಲುಗಲ್ಲಿನ ನೆಲಹಾಸಿರುವ ಕೆಲವು ಕಟ್ಟಡಗಳಿಗೆ ಹೋದಾಗ ಅಲ್ಲಿ ನಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಹೋಗುವ ಕ್ರಮ ಇರುವುದನ್ನು ನಾವೆಲ್ಲ ಬಲ್ಲೆವು.


ಇಂತಹ ಸ್ಥಳಗಳಲ್ಲೆಲ್ಲ ಎರಡು ಕ್ರಮ ಇರುತ್ತದೆ. ಹೊರಗಡೆ ಚಪ್ಪಲಿ ಬಿಡಲು ಒಂದು ವ್ಯವಸ್ಥೆಯನ್ನು ಆ ಸಂಸ್ಥೆಯವರೇ ಮಾಡಿರುತ್ತಾರೆ. ಅಲ್ಲಿ ಉಚಿತವಾಗಿ ಅಥವಾ ಹಣಪಾವತಿಮಾಡಿ ನಾವು ಕಟ್ಟಡದ ಒಳಗೆ ಹೋಗಿ ಬರುವವರೆಗೆ ನಮ್ಮ ಪಾದರಕ್ಷೆಗಳನ್ನು ಕಾಯ್ದಿರಿಸಿ ʼಸುರಕ್ಷಿತಭಾವʼದಿಂದ ಒಳಗೆ ಹೋಗಿ ಬರಬಹುದು. ಇನ್ನೊಂದು ಇಂತಹ  ಸುವ್ಯವಸ್ಥೆ ಇಲ್ಲದ ಕಡೆ  ಹೊರಗಡೆ ಯಾರೂ ನೋಡಿಕೊಳ್ಳುವವರು ಇಲ್ಲದೆಯೇ ನಾವು ಅವನ್ನು ಬಿಟ್ಟು ಒಳಗೆ ಹೋಗಬೇಕು. ಒಂದು ರೀತಿಯ ʼಅಸುರಕ್ಷಿತಭಾವʼದಿಂದ ಒಳಗೆ ಹೋಗಬೇಕಾಗುತ್ತದೆ. ಮರಳಿ ನಾವು ಹೊರಗಡೆ ಬಂದಾಗ ನಮ್ಮ ಪಾದರಕ್ಷೆಗಳು ಇದ್ದರೆ ಹಾಕಿಕೊಂಡು ಬರಬೇಕು. ಇಲ್ಲದಿದ್ದರೆ ಬರಿಗಾಲಲ್ಲಿ ಬರಬೇಕು. ನಾವು ತೀರಾ ಪ್ರಾಮಾಣಿಕರಲ್ಲದಿದ್ದರೆ ಮೂರನೆಯ ಆಯ್ಕೆಯೂ ಇರುತ್ತದೆ. ಅದೆಂದರೆ ಕಳೆದುಕೊಂಡ ನಮ್ಮ ಪಾದರಕ್ಷೆಗಳಿಗೆ ಬದಲಾಗಿ ನಮ್ಮ ಕಾಲಿಗೆ ಹೊಂದಿಕೆ ಆಗುವ ಅಲ್ಲಿರುವ ಯಾರದ್ದಾದರೂ ಪಾದರಕ್ಷೆಗಳನ್ನು ಹಾಕಿಕೊಂಡು ಬರುವುದು!! 

ಆದರೆ ಗಾಂಧೀಜಿ ಸಮಾಧಿಸ್ಥಳ ಪ್ರವೇಶಿಸುವಲ್ಲಿ ತುಸು ಭಿನ್ನವಾಗಿ ಈ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅಲ್ಲಿಗೆ ನಾನು ಹಲವುಸಲ ಹೋದರೂ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದು ಈಸಲವೇ. ಅಲ್ಲಿ ಪಾದರಕ್ಷೆ ಇಡಲು ನಿರ್ಧಿಷ್ಟ ಸ್ಥಳವನೋನ್ನೇನೋ ಮಾಡಲಾಗಿದೆ. ಅಲ್ಲಿ ವ್ಯವಸ್ಥೆಯನ್ನು ನೋಡಿಕೊಳ್ಳುವವರು ಕೂರಲು ಒಂದು ಕುರ್ಚಿಯೂ ಇರುತ್ತದೆ. ಆದರೆ ಆ ಖುರ್ಚಿಯು ಖಾಲಿ ಇರುವುದೇ ಹೆಚ್ಚು. ಅಲ್ಲಿ ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಅದನ್ನು ನಿರ್ವಹಿಸಲು ಕುಳಿತಿರುವುದಿಲ್ಲ. ನಾವೇ ಸ್ಟ್ಯಾಂಡಿನಲ್ಲಿ ನಮ್ಮ ಪಾದರಕ್ಷೆಗಳನ್ನು ಇಡಬೇಕು. ಹೊರಗೆ ಬರುವಾಗ ತೆಗೆದುಕೊಂಡು ಹಾಕಿಕೊಂಡು ಹೊರಗೆ ಬರಬೇಕು. ಅಲ್ಲಿ ಪಾದರಕ್ಷೆ ಸ್ಟ್ಯಾಂಡುಗಳು ಇರುವ ಎರಡೂ ಕಡೆ "ವೈಯಕ್ತಿಕ ಜವಾಬ್ದಾರಿಯ ಮೇರೆಗೆ ಉಚಿತ ಪಾದರಕ್ಷೆ ಇಡುವ ಸ್ಥಳ" ಎಂಬರ್ಥದ ಸೂಚನಾ ಫಲಕಗಳು ಮಾತ್ರ ಇವೆ.

 


ಕಾರಂತರನ್ನು ಟಿಕೇಟ್‌ ಇಲ್ಲದೆ ರೈಲು ಹತ್ತಲು ಬಿಟ್ಟ ವ್ಯವಸ್ಥೆ ಮತ್ತು ಹೀಗೆ ನೋಡಿಕೊಳ್ಳುವವರಿಲ್ಲದೆ ಪಾದರಕ್ಷೆ ಬಿಡಲು ಮಾಡಿರುವ ವ್ಯವಸ್ಥೆ ಇವುಗಳ ಆಲೋಚನಾ ಕ್ರಮವನ್ನು ಒಂದು ಏಕಸೂತ್ರ ಬಂಧಿಸಿದೆ ಎಂದು ನನಗೆ ಅನ್ನಿಸುತ್ತದೆ. ಆ ಏಕಸೂತ್ರ ಗಾಂಧಿ ಅಲ್ಲದೆ ಬೇರೆ ಏನಾಗಿರಲು ಸಾಧ್ಯ? 


ಸಾಮಾನ್ಯವಾಗಿ ದೇವಸ್ಥಾನಗಳಿಗೆ ಬರುವವರು ಎಲ್ಲರೂ ಹೇಗೆ ಜೀವನದಲ್ಲಿ ಪ್ರಾಮಾಣಿಕರಾಗಿ ಇರುವವರೇ ಇರುವುದಿಲ್ಲವೋ ಹಾಗೇಯೇ ಗಾಂಧೀಜಿಯ ಸಮಾಧಿಗೆ ಬರುವವರೂ ಕೂಡ ಎಲ್ಲರೂ ಪ್ರಾಮಾಣಿಕರಾಗಿ ಇರುವುದಿಲ್ಲ ನಿಜ. ಆದರೆ ಎಂತಹ ಭ್ರಷ್ಟನೇ ಇರಲಿ, ಸುಳ್ಳು ಅಥವಾ ಮೋಸಮಾಡುವವನೇ ಇರಲಿ, ಅವನು ದೇವಸ್ಥಾನಕ್ಕೆ ಬಂದಾಗ ಅಲ್ಲಿ ಅದನ್ನು ಮಾಡಲು ಹಿಂಜರಿದು ಕನಿಷ್ಟ ಆ ಆವರಣದಲ್ಲಿರುವವರೆಗಾದರೂ ʼಒಳ್ಳೆಯʼವ್ಯಕ್ತಿ ಆಗಿರಲು ಎಂಥದೋ ಒಂದು ಒತ್ತಡ ಅವನ ಮೇಲಿರುತ್ತದೆ. ಅದೇ ರೀತಿ ಗಾಂಧೀಜಿಯಂತಹ ಮಹಾವ್ಯಕ್ತಿಯ ಸಮಾಧಿಗೆ ನೋಡಲೋ ಅಥವಾ ಗೌರವ ನಮನ ಸಲ್ಲಿಸಲೋ ಬರುವ ವ್ಯಕ್ತಿಗಳು ಎಷ್ಟೇ ಕೆಟ್ಟವರಾಗಿದ್ದರೂ, ಸುಳ್ಳು ಮೋಸ ವಂಚನೆ ಇಂತಹ ಕೆಲಸಗಳಲ್ಲಿ ತೊಡಗಿಕೊಂಡಿದ್ದವರಾಗಿದ್ದರೂ ʻಕನಿಷ್ಠ ಈ ಸ್ಥಳದಲ್ಲಿ ಅವರು ಬೇರೆಯವರ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗುವಷ್ಟು ಕೆಳಮಟ್ಟಕ್ಕೆ ಇಳಿಯಲಾರರುʼ ಎಂಬುದು ಈ ವ್ಯವಸ್ಥೆಮಾಡಿದವರ ಆಲೋಚನೆ ಇರಬಹುದು; ಕಾರಂತರಿಗೆ ಟಿಕೆಟ್‌ ಇಲ್ಲದೆ ರೈಲು ಹತ್ತಲು ಬಿಟ್ಟ ವ್ಯಕ್ತಿಯ ಆಲೋಚನೆಯಂತೆ.

ರಾಬು

೨೨-೧೦-೨೦೨೪

 


Friday, October 18, 2024

ತಾಜ್‌ ಮಹಲ್‌ ಮತ್ತು ದೊಡ್ಡವರ ಪ್ರೀತಿ

 


ತಾಜ್‌ ಮಹಲ್‌ ಮತ್ತು ದೊಡ್ಡವರ ಪ್ರೀತಿ

ತಾಜ್‌ ಮಹಲನ್ನು ಕಂಡ ಬಹುತೇಕ ಎಲ್ಲ ಭಾಷೆಗಳ ಕವಿಗಳೂ ಅದರ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ. ಕನ್ನಡದ ಕೆಲವು ದೊಡ್ಡ ಕವಿಗಳೂ ಅದರ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ.  ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅದನ್ನು ʼಚಿರ ಬಂಧುರ ಭದ್ರಾಕೃತಿʼ  ʼದೇವಶಿಲ್ಪ ಮಾಟʼ ಎಂದಿದ್ದಾರೆ.  
ʼದೇವಲೋಕದ ಕಲೆಯೇ ವಿಶ್ರಾಂತಿಗೆಂದು ಇಲ್ಲಿ ಬಂದು ನಿಂತಿದೆʼ ಎಂದು ಅದರ ಸೌಂದರ್ಯವನ್ನು   ಹೊಗಳುವ ಅವರು ಅದರ ಹೊರಮುಖದ ಸೌಂದರ್ಯಕ್ಕೆ ಮಾತ್ರ ಮನಸೋಲದೆ ಅದರ ಒಳಮುಖವನ್ನೂ ಶೋಧಿಸಿ ಅದನ್ನು ʼಪ್ರಿಯ ವಿರಹದ ಧವಳದೀಪʼ ಎಂದೂ ಹೇಳುತ್ತಾರೆ. ʼಧವಳ ದೀಪʼ ಮನಸ್ಸಿಗೆ ಖುಷಿಕೊಡುವ ಸಂಗತಿಯಾಗದರೂ ʼವಿರಹʼ ಖುಷಿಕೊಡುವ ಸಂಗತಿಯಲ್ಲವಲ್ಲ!  ʼಷಹಜಾನನೆದೆಯ ಕೊರೆದು ಬಿಡಿಸಿದ ಸಂತಾಪʼ ಎನ್ನುವಲ್ಲಿ ಈ ಮಡುಗಟ್ಟಿದ ದುಃಖದ ಅರಿವು ಒಡಮೂಡಿದೆ. ಒಟ್ಟಾರೆ ಅದು ಸಂತೋಷ ಮತ್ತು ನೋವುಗಳೆರಡರ ಸಮ್ಮಿಶ್ರ ಸ್ಮಾರಕ ಎನ್ನುವ ಭಾವವನ್ನು ಅವರ ʼಕಂಬನಿಗಳ ಚೆಂಬೆಳಕೊಳು ಬೆಳಗುವ ಮಣಿದೀಪʼ ಎನ್ನುವ ಕಾವ್ಯಸಾಲುಗಳು ಅದ್ಭುತವಾಗಿ ಕಟ್ಟಿಕೊಡುತ್ತವೆ.

ಕನ್ನಡದ ಇನ್ನೊಬ್ಬ ದೊಡ್ಡಕವಿ ಬೇಂದ್ರೆ “ತಾಜಮಹಲನು ಕಟ್ಟಿ ಷಹಜಾನನು ಮಮತಾಜಳ ದುಃಖವನು ಮರೆಯಬಹುದೆ?” ಎಂದು ಪ್ರಶ್ನಿಸುತ್ತಾರೆ.  ಹೌದು ನಾವು ನಮ್ಮ ಪ್ರೀತಿ ಪಾತ್ರರನ್ನು
ಇನ್ನೆಂದೂ ಅವರು ನಮಗೆ ದೊರೆಯದಂತೆ ಕಳೆದುಕೊಂಡಾಗ ಅವರ ನೆನಪಿಗೆ ನಿರ್ಮಿಸುವ ಸ್ಮಾರಕಗಳು ನಮಗೆ ಸಂತೋಷದ ಬದಲು ಮತ್ತಷ್ಟು ದುಃಖವನ್ನೇ ತರುತ್ತವೆ!! ಏಕೆಂದರೆ ಮರೆಯುವುದೊಂದೇ ಪರಿಹಾರವಾಗಿರುವ ಸಮಸ್ಯೆಗೆ ಮರೆವು ಆಗದಂತೆ ಈ ಸ್ಮಾರಕಗಳು ನೆನಪು ಮರುಕಳಿಸುವಂತೆ ಮಾಡುತ್ತವೆ. ಅದನ್ನೇ ಬೇಂದ್ರೆ ಅತ್ಯಂತ ಸೂಕ್ಷ್ಮವಾಗಿ ಇಲ್ಲಿ ಹೇಳುತ್ತಾರೆ.

ತಾಜಮಹಲಿನ ಬಗ್ಗೆ  ನಮ್ಮ ಜಿ ಎಸ್.‌ ಶಿವರುದ್ರಪ್ಪನವರ ಸಮಕಾಲೀನರೇ ಆದ ಖ್ಯಾತ ಉರ್ದುಕವಿ ಸಾಹಿರ್‌ ಲೂದಿಯಾನ್ವಿ ಅವರು ಬರೆದ ಕವಿತೆಯೊಂದು ಬಹಳ ಭಿನ್ನ ವಿಚಾರವೊಂದನ್ನು ಮುನ್ನೆಲೆಗೆ ತರುತ್ತದೆ. ತಾಜಮಹಲ್‌ ಅವರಿಗೆ ಭವ್ಯಕಟ್ಟಡವಾಗಿ ಕಾಣದೆ ʼಬಂಧೀಖಾನೆʼಯಾಗಿ ಕಂಡಿದೆ!  ʼಬಡವರ
ಪ್ರೀತಿ ಲೆಕ್ಕಕ್ಕೆ ಬರುವುದಿಲ್ಲ. ಶ್ರೀಮಂತರ ಪ್ರೀತಿ ಮಾತ್ರ ಲೆಕ್ಕಕ್ಕೆ ಬರುತ್ತದೆʼ ಎಂದು ಖಿನ್ನರಾಗುವ ಅವರು ʼಬಾ ಈ ಸದ್ದುಗದ್ಧಲದಿಂದ ದೂರಹೋಗಿ ಯಾರೂ ಇಲ್ಲದ ಸ್ಥಳದಲ್ಲಿ ನಾವು ಪ್ರೀತಿಸೋಣʼ ಎಂದು ಸಂಗಾತಿಯನ್ನು ಕರೆಯುವ ಸಾಲನ್ನು ಬರೆಯುತ್ತಾರೆ.

ಹೀಗೆ ತಾಜಮಹಲ್‌ ಕೆಲವರಿಗೆ ಪ್ರೇಮದ ಭವ್ಯ ಸಂಕೇತವಾಗಿ ಕಂಡರೆ ಮತ್ತೆ ಕೆಲವರಿಗೆ ಪ್ರೀತಿಯ ಆಡಂಬರದ ಸಂಕೇತವಾಗಿ ಕಂಡಿದೆ. ಷಹಜಾನ್‌ ಏನೋ ಮಮತಾಜಳ ಮೇಲಿನ ತನ್ನ ಪ್ರೀತಿಯ ಸಂಕೇತವಾಗಿ ತಾಜಮಹಲನ್ನು ಕಟ್ಟಿಸಿದ. ಆದರೆ ನಾವು ಅತ್ಯಂತ ಅವಶ್ಯವಾಗಿ ಗಮನಿಸಬಹುದಾದ ಸಂಗತಿ ಎಂದರೆ ತಾಜಮಹಲನ್ನು ಕಟ್ಟಿದ ಸಾವಿರಾರು ಕೂಲಿಕಾರ್ಮಿಕರೂ ಕೂಡ ತಮ್ಮ ತಮ್ಮ ಹೆಂಡತಿಯರನ್ನು ಷಹಜಾನ್‌ ಮಮತಾಜಳನ್ನು ಪ್ರೀತಿಸಿದ್ದಷ್ಟೇ ಅಥವಾ ಅದಕ್ಕಿಂತ ತುಸು ದೊಡ್ಡಮಟ್ಟದಲ್ಲಿಯೇ ಪ್ರೀತಿಸುತ್ತಿದ್ದಿರಬಹುದಲ್ಲವೇ?  ಆದರೆ ಅವರ ಪ್ರೀತಿ ಷಹಜಾನನ ಪ್ರೀತಿಯಂತೆ ಲೆಕ್ಕಕ್ಕೆ ಬರುವುದಿಲ್ಲ.  ಏಕೆಂದರೆ ಲೂದಿಯಾನ್ವಿ ಹೇಳುವಂತೆ ಅನೇಕ ಸಂದರ್ಭಗಳಲ್ಲಿ “ಶ್ರೀಮಂತರ ಪ್ರೀತಿ ಲೆಕ್ಕಕ್ಕೆ ಬರುತ್ತದೆ. ಬಡವರ, ಶ್ರೀಸಾಮಾನ್ಯರ ಪ್ರೀತಿ ಲೆಕ್ಕಕ್ಕೆ ಬರುವುದೇ ಇಲ್ಲ!

 

ನಾನು ತಾಜಮಹಲಿನ ಸುತ್ತ ಅನೇಕ ಸಲ ಸುತ್ತಿದ್ದೇನೆ. ತಾಜಮಹಲಿನ ಬುಡದಲ್ಲಿ, ಅದಕ್ಕೆ ಅಂಟಿಕೊಂಡೇ ಹರಿಯುವ ಪ್ರಶಾಂತ ಯಮುನೆಯ ದಡದಲ್ಲಿ ನಾನು ಸುತ್ತಾಡುವಾಗೆಲ್ಲ ಈ ಸಂಗತಿಗಳು ಒಂದು ಸಲ ಮನಸ್ಸಿನಲ್ಲಿ ಹಾದುಹೋಗುತ್ತವೆ. ಮೊನ್ನೆ ಮಕ್ಕಳಿಗೆ ತಾಜಮಹಲ್‌ ತೋರಿಸಲು ಹೋದಾಗಿನ ಕೆಲವವು ಚಿತ್ರ ನಿಮಗಾಗಿ

ರಾಬು

೧೯-೧೦-೨೦೨೪



Tuesday, October 8, 2024

ಪ್ರತಿಷ್ಠಿತ ಕವಿಗೋಷ್ಠಿಗಳು: ಕವಿಯುತ್ತಿರುವ ಕಾರ್ಮೋಡಗಳು ಮತ್ತು ಸುಳಿಯುತ್ತಿರುವ ರವಿಕಿರಣಗಳು

 

ಈ ವರ್ಷದ ಮೈಸೂರು ದಸರಾ ಕವಿಗೋಷ್ಠಿ ಒಂದಿಷ್ಟು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಹಿರಿಯ ಲೇಖಕಿ ಬಾನು ಮುಸ್ತಾಕ್‌, ಕವಿ ಆರಿಫ್‌ ರಾಜಾ ನಿಯೋಜಿತ ಕವಿಗೋಷ್ಠಿಯಿಂದ ದೂರ ಉಳಿಯುವ ನಿರ್ಧಾರವನ್ನು ಸಾರ್ವಜನಿಕಗೊಳಿಸಿದ್ದಾರೆ. ಬಹುಶಃ ಈ ಚರ್ಚೆ ಆರಂಭವಾಗಿದ್ದು ಕಿರಿಯ ಮಿತ್ರ ವೀರಣ್ಣ ಮಡಿವಾಳರ ತನ್ನ ಅಸಮಾಧಾನವನ್ನು ಫೇಸ್‌ ಬುಕ್‌ನಲ್ಲಿ ವ್ಯಕ್ತಪಡಿಸಿದಾಗ ಮತ್ತು ಅದಕ್ಕೆ ಅನೇಕ ಮಿತ್ರರು ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ. ಪ್ರಜಾವಾಣಿ ಸೇರಿದಂತೆ ಕೆಲವು ಪತ್ರಿಕೆಗಳು ಇದನ್ನು ಸುದ್ಧಿಮಾಡಿದ್ದರಿಂದ ಇದು ತುಸು ವಿಸ್ತಾರವಾಯಿತು.

ಮೈಸೂರು ದಸರಾ ಮಾತ್ರವಲ್ಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಎಲ್ಲ ಗೋಷ್ಠಿಗಳಿಗಿಂತ ಹೆಚ್ಚು ಟೀಕೆಗೆ ಒಳಗಾಗುವ ಗೋಷ್ಠಿ ಎಂದರೆ ಅದು ಕವಿಗೋಷ್ಠಿಯೇ. ಇದಕ್ಕೆ ಎರಡು ಮುಖ್ಯಕಾರಣಗಳನ್ನು ಗುರುತಿಸಬಹುದು. ಒಂದು ಆಯೋಜಕರು ಕವಿಗೋಷ್ಠಿಗೆ ಕವಿಗಳನ್ನು ಅಥವಾ ಕವಿಗಳ ಕವನಗಳನ್ನು ಆಯ್ಕೆಮಾಡುವಲ್ಲಿ ಒಂದಿಷ್ಟು ಶಿಸ್ತುಬದ್ಧವಾದ ಕ್ರಮವನ್ನು ಅನುಸರಿಸದಿರುವದು.  ಎರಡನೆಯದು ಕವಿಗೋಷ್ಠಿಗೆ ಭಾಗವಹಿಸಬೇಕು ಎಂದು ಅಪೇಕ್ಷೆ ಪಡುವವರ ಸಂಖ್ಯೆ ವಿಚಾರಗೋಷ್ಠಿಗಳಂತಹ ಉಳಿದ ಗೋಷ್ಠಿಗಳಿಗೆ ಭಾಗವಹಿಸಬೇಕು ಎಂದು ಅಪೇಕ್ಷೆ ಪಡುವವರ ಸಂಖ್ಯೆಗಿಂತ ಹೆಚ್ಚಾಗಿರುವುದು. ಎರಡನೆಯದು ತಪ್ಪಲ್ಲ; ಆದರೆ ಮೊದಲನೆಯದು ಅಲಕ್ಷ ಮಾಡುವಂಥದ್ದಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನವನ್ನು ಗಮನಿಸಿ. ಕೆಲವು ವಿಚಾರಗೋಷ್ಠಿಗಳಿಗೆ ಹೇಳಿಕೊಳ್ಳುವಂತೆ ಜನ ಇರುವುದಿಲ್ಲ. ಕೆಲವು ವೇಳೆ ವೇದಿಕೆ ಮೇಲಿರುವವರಿಗಿಂತ ಮುಂದಿರುವವರ ಸಂಖ್ಯೆ ಕಡಿಮೆ ಇರುವುದೂ ಇದೆ. ಆದರೆ ಕವಿಗೋಷ್ಠಿಗೆ ಮಾತ್ರ ಈ ಸಮಸ್ಯೆ ಇರುವುದಿಲ್ಲ. ನೂರು ಜನ ಪ್ರೇಕ್ಷಕರಿಗೇನೂ ತೊಂದರೆ ಇರುವುದೇ ಇಲ್ಲ. ಕಾರಣ ಒಂದು ಕವಿಗೋಷ್ಠಿಗೆ ಇಪ್ಪತ್ತೈದರಿಂದ ಮೂವತ್ತು ಜನ ಕವಿಗಳಿರುತ್ತಾರೆ! ಅವರು ಏನಿಲ್ಲ ಎಂದರೂ ಇಬ್ಬಿಬ್ಬರನ್ನಾದರೂ ಕರೆತಂದಿರುತ್ತಾರೆ. ಅವರು ಕಾವ್ಯಾಪೇಕ್ಷೆಯಿಂದ ಬರುವುದಕ್ಕಿಂತ ʻನಮ್ಮ ಹುಡುಗʼ ಅಥವಾ ʻನಮ್ಮ ಹುಡುಗಿʼ ಕವಿತೆ ಓದುತ್ತಾನೆ/ ಓದುತ್ತಾಳೆ ಅನ್ನುವ ಅಭಿಮಾನದಿಂದ ಬಂದವರೇ ಆಗಿರುತ್ತಾರೆ. ಮೂವತ್ತು ಜನ ಕವಿಗಳು, ಅವರು ಕರೆತಂದವರು ಅರವತ್ತು, ಸಂಘಟಕರು ಅವರೂ ಇವರೂ ಸೇರಿ ಹತ್ತು. ಹೀಗೆ ನೂರಕ್ಕಂತೂ ದೋಕಾ ಇರಲ್ಲ. ಹೀಗಾಗಿ ಕವಿಗೋಷ್ಠಿ ಉಳಿದ ಗೋಷ್ಠಿಗಳಿಗಿಂತ ತುಸು ಜನಪ್ರಿಯ ಗೋಷ್ಠಿ. ಇಂತಹ ಜನಪ್ರಿಯ ಕವಿಗೋಷ್ಠಿಗಳನ್ನು ಸಂಘಟಿಸುವಾಗ ಸಂಘಟಕರು ಒಂದಿಷ್ಟು ತಮ್ಮದೇ ಆದ ಶಿಸ್ತನ್ನು ಅಳವಡಿಸಿಕೊಂಡರೆ ದೂರು ಅಥವಾ ಟೀಕೆಗಳನ್ನು ಇಲ್ಲ ಎನ್ನುವಂತೆ ಮಾಡಲಾಗದಿದ್ದರೂ ಗಣನೀಯವಾಗಿ ಕಡಿಮೆ ಮಾಡಬಹುದು. ಆದರೆ ಈ ಕೆಲಸ ಆಗದೇ ಇರುವ ಕಾರಣ ಕವಿಗೋಷ್ಠಿಗಳಿಗೆ ಕಾರ್ಮೋಡ ಕವಿಯುವುದು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ.

ಬಹಳ ದೊಡ್ಡ ವೇದಿಕೆಗಳ ಮೇಲೆ ನಡೆಯುವ ಕವಿಗೋಷ್ಠಿಗಳೂ ಕೂಡ ಒಂದೊಂದು ಸಲ ಎಷ್ಟು ಅಧ್ವಾನದಿಂದ ಕೂಡಿರುತ್ತವೆ ಎಂಬುದಕ್ಕೆ ಒಂದೆರಡು ಉದಾಹರಣೆ ಕೊಡಬೇಕು ಅನ್ನಿಸುತ್ತಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನಮಾತು. ಮಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಕಯ್ಯಾರರು ಸಮ್ಮೇಳನಾಧ್ಯಕ್ಷರು. ಅದು ಭಾರತಕ್ಕೆ ಸ್ವಾತಂತ್ರ್ಯ ದೊರೆತು ೫೦ ವರ್ಷ ತುಂಬಿದ ವರ್ಷ.  ಹಾಗಾಗಿ ಅಪರೂಪ ಎನ್ನುವಂತೆ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬೇರೆ ಬೇರೆ ಭಾಷೆಗಳ ಕವಿಗಳು ಭಾಗವಹಿಸಿದ ಒಂದು ʼಬಹುಭಾಷಾ ಕವಿಗೋಷ್ಠಿʼಕೂಡ ಆಗಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಕನ್ನಡಿಗ ಡಾ ಯು ಆರ್‌ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಚೆನ್ನಾಗಿ ನಡೆದು ಮೆರಗು ತಂದಿತು.

ಈ ಗೋಷ್ಠಿಯೇನೋ ಚೆನ್ನಾಗಿ ನಡೆಯಿತು. ಆದರೆ ಅದಲ್ಲದೆ ನಮ್ಮ ಕನ್ನಡದ ಕವಿಗಳೇ ಭಾಗವಹಿದ್ದ ಎಲ್ಲ ಅಖಿಲ ಭಾರತ ಸಮ್ಮೇಳನಗಳಲ್ಲಿ ಇರುವಂಥ ಒಂದು ಕವಿಗೋಷ್ಠಿ ಕೂಡ ನಡೆಯಿತು. ಆ ಕವಿಗೋಷ್ಠಿಯಲ್ಲಿ ಕವಿತೆ ಓದಲೆಂದು ನುಡಿಪೀಠಕ್ಕೆ ಬಂದ ಶಿವಮೊಗ್ಗದಿಂದ ಬಂದಿದ್ದ ಕವಿಯೊಬ್ಬರು ತಮ್ಮ ಕವಿತೆಗೆ ಪೂರ್ವಪೀಠಿಕೆ ಅನ್ನುವಂತೆ ʼನಾನು ಇದೀಗ ದಾರಿಯಲ್ಲಿ ಬರುವಾಗ ಈ ಕವಿತೆಯನ್ನು ಬರೆದುಕೊಂಡು ಬಂದೆʼ ಎಂದು ಹೇಳಿ ಅದು ಎಷ್ಟು ಮಹತ್ವದ್ದು ಎಂದು ಅವರೇ ಹೊಗಳಿಕೆಯ ಮಾತುಗಳನ್ನು ಆಡಿ, ಯಾತಕ್ಕೂ ಬಾರದ ಒಂದು ಕವಿತೆಯನ್ನು ಓದಿದರು. ಬಹುಶಃ ತನ್ನನ್ನು ಅತ್ಯಂತ ಪ್ರತಿಭಾಶಾಲಿ ಕವಿ ಎಂದು ಸಭಿಕರು ಗುರುತಿಸಲಿ ಎಂಬುದು ಆ ಕವಿಯ ಉದ್ದೇಶ ಇದ್ದರೂ ಇದ್ದೀತು. ಆದರೆ ಆದದ್ದೇ ಬೇರೆ. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೊನೆಯಲ್ಲಿ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುವಾಗ ಇದನ್ನು ಪ್ರಸ್ತಾಪಿಸಿ ಸಂಘಟಕರಿಗೆ ಸರಿಯಾಗಿ ಝಾಡಿಸಿ, “ಒಂದು ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನು ನಡೆಸುವಾಗ ಕೂಡ ಸಂಘಟಕರು ಕವಿಯನ್ನು ಆಯ್ಕೆಮಾಡುವಾಗ ಮತ್ತು ಕವಿಯು ತನ್ನ ಕವಿತೆಯನ್ನು ಆಯ್ಕೆ ಮಾಡುವಾಗ ಸಾಕಷ್ಟು ಜವಾಬ್ದಾರಿ ವಹಿಸಬೇಕಾಗುತ್ತದೆ. ಆದರೆ ಅಖಿಲ ಭಾರತ ಮಟ್ಟದ ಕವಿಗೋಷ್ಠಿಯನ್ನು ಸಂಘಟಿಸುವಾಗ ಇಂತಹ ಜವಾಬ್ದಾರಿ ವಹಿಸದಿದ್ದರೆ ಹೇಗೆ?” ಎಂದು ಆಕವಿಯನ್ನೂ ಕವಿಗೋಷ್ಠಿಯ ಸಂಘಟಕರನ್ನೂ ಕಿವಿ ಹಿಂಡಿದರು.

ಪಟ್ಟಣಶೆಟ್ಟಿ ಅವರು ಹೇಳಿದ ಆ ಬೆಲೆಯುಳ್ಳ ಮಾತುಗಳನ್ನು ಇವತ್ತಿಗೂ ದೊಡ್ಡ ದೊಡ್ಡ ಕವಿಗೋಷ್ಠಿ ನಡೆಸುವ ಸಂಘಟಕರು ಅಳವಡಿಸಿಕೊಂಡಂತೆ ಕಾಣುತ್ತಿಲ್ಲ. ಅಳವಡಿಸಿಕೊಂಡಿದ್ದರೆ ಕವಿಗೋಷ್ಠಿಗಳು ಹೀಗೆ ಅಧ್ವಾನ ಆಗುತ್ತಿರಲಿಲ್ಲ. ಕವಿಗೋಷ್ಠಿಗೆ ಕವಿಗಳನ್ನು ಆರಿಸುವಾಗ ಸಂಘಟಕರು ವಹಿಸಬೇಕಾದ  ಜವಾಬ್ದಾರಿ ಒಂದು ಕಡೆಯಾದರೆ ಕವಿಯು ತನ್ನಕವಿತೆಯನ್ನು ಆರಿಸುವಾಗಲೂ ಜವಾಬ್ದಾರಿ ಇರಲೇಬೇಕಾಗುತ್ತದೆ. ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕೊಂದರ ಅಧ್ಯಕ್ಷನಾಗಿದ್ದ ನಾನು ವರ್ಷಕ್ಕೊಂದು ಕವಿಗೋಷ್ಠಿ ನಡೆಸುತ್ತಿದ್ದೆ. ಈ ಕವಿಗೋಷ್ಠಿ ತಾಲ್ಲೂಕು ಮಟ್ಟದ್ದಾದರೂ ನಾನು ನೇರವಾಗಿ ಯಾವ ಕವಿಯನ್ನೂ ವೇದಿಕೆಗೆ ಬಿಡುತ್ತಿರಲಿಲ್ಲ. ಸಾಕಷ್ಟು ಮೊದಲೇ ಮೂರು ಕವನಗಳನ್ನು ತರಿಸಿಕೊಂಡು ಅದರಲ್ಲಿ ಒಂದನ್ನು ತಜ್ಞರಿಂದ ಚುನಾಯಿಸಿ ಅದನ್ನು ಓದಲು ಅವರಿಗೆ ಬಿಡುತ್ತಿದ್ದೆ. ಅಂದರೆ ಕವಿಗೋಷ್ಠಿಯ ಸಂಘಟಕನಾಗಿ ನನಗೆ ಯಾವ ಕವಿ ಯಾವ ಕವಿತೆಯನ್ನು ಓದುತ್ತಾನೆ. ಅದರ ಸಾಮಾಜಿಕ ಮಹತ್ವ ಅಥವಾ ಪ್ರಭಾವ ಏನು ಎಂಬುದು ಸಂಘಟಕನಾಗಿ ನನಗೆ ಮೊದಲೇ ತಿಳಿದಿರಬೇಕು ಎಂಬುದು ನನ್ನ ಆಲೋಚನೆ ಆಗಿತ್ತು. ತಮಾಸೆಯ ಸಂಗತಿ ಎಂದರೆ ಆ ಕವಿಗೋಷ್ಠಿ ಬಿಟ್ಟರೆ ಆ ತಾಲ್ಲೂಕಿನಲ್ಲಿ ಮತ್ತೆ ಯಾವ ಕವಿಗೋಷ್ಠಿಗಳೂ ನಡೆಯುತ್ತಿರಲಿಲ್ಲ. ಕೆಲವರು ವರ್ಷಕ್ಕೊಮ್ಮೆ ನಾನು ಕವಿಗೋಷ್ಠಿಗೆ ಕವಿತೆ ಆಮಂತ್ರಿಸಿದಾಗ ಮಾತ್ರ ಮೂರು ಕವಿತೆ ಬರೆದು ಕಳಿಸುತ್ತಿದ್ದರು. ಮತ್ತು ಅವರು ಕವಿತೆ ಬರೆಯಲು ತೊಡಗುವುದು ಮುಂದಿನ ವರ್ಷ ನಾನು ಕವಿತೆಗಳನ್ನು ಆಮಂತ್ರಿಸಿದಾಗ ಮಾತ್ರ!

ಒಂದು ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನೇ ನಾವು ಅಷ್ಟು ಕಾಳಜಿವಹಿಸಿ ಮಾಡುವಾಗ ಇಡೀ ರಾಜ್ಯವನ್ನು ಪ್ರತಿನಿಧಿಸುವ ಮೈಸೂರು ದಸರಾ ಕವಿಗೋಷ್ಠಿ ಅಥವಾ ಕನ್ನಡ ಭಾಷಿಕರನ್ನೆಲ್ಲ ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗೆ ಕವಿಯನ್ನು ಆಯ್ಕೆ ಮಾಡುವಾಗ ಮತ್ತು ಕವಿ ತನ್ನ ಕವಿತೆಯನ್ನು ಆಯ್ಕೆ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ ಹೇಗೆ? ನನಗೆ ಗೊತ್ತಿರುವಂತೆ (ಇದು ತಪ್ಪಿದ್ದರೂ ಇದ್ದೀತು) ಅಖಿಲ ಭಾರತ ಕವಿಗೋಷ್ಠಿಗಾಗಲೀ ದಸರಾ ಕವಿಗೋಷ್ಠಿಗಾಗಲೀ ಕವಿಗಳನ್ನು ಆಯ್ಕೆ ಮಾಡುವಾಗ ಒಂದು ಶಿಸ್ತನ್ನು ಸಂಘಟಕರು ಅಳವಡಿಸಿಕೊಂಡಂತಿಲ್ಲ. ಅನೇಕ ಸಂದರ್ಭಗಳಲ್ಲಿ ಸಂಘಟಕರಿಗೆ ಯಾರು ಯಾರು ಕವಿಗಳಾಗಿ ಬರುತ್ತಾರೆ ಮತ್ತು ಅವರು ಯಾವ ಯಾವ ಕವಿತೆ ಓದುತ್ತಾರೆ ಎಂಬುದೂ ಅವರು ವೇದಿಕೆಗೆ ಬಂದು ಓದುವವರೆಗೂ ಗೊತ್ತಿರುವುದಿಲ್ಲ! ಹೀಗಿರುವಾಗ ಕವಿಗೋಷ್ಠಿಗಳು ಅಧ್ವಾನಕ್ಕೆ ಆಗರವಾಗದೇ ಇನ್ನೇನಾಗಲು ಸಾಧ್ಯ?


ಈ ಅಧ್ವಾನಗಳು ಇನ್ನೂ ಒಂದು ರೀತಿಯಲ್ಲಿ ಆಗುವುದುಂಟು. ಹೀಗೆಯೇ ಒಂದು ಅಖಿಲ ಭಾರತ  ಸಾಹಿತ್ಯ ಸಮ್ಮೇಳನದಲ್ಲಿ ಡುಂಡಿರಾಜ್‌ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಕವಿಗೋಷ್ಠಿಗೆ ಧೀಡೀರನೆ ಹತ್ತಿದ ವ್ಯಕ್ತಿಯೊಬ್ಬ ಕವಿಗೋಷ್ಠಿಯ ಕವಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಅಧ್ಯಕ್ಷರು ನೀಡಿದ್ದಾರೆ ಎನ್ನಲಾದ ಶಿಫಾರಸ್ಸು ಪತ್ರವನ್ನು ತೋರಿಸಿ ನನಗೆ ಕವಿತೆ ಓದಲು ಅವಕಾಶ ಕೊಡಬೇಕೆಂದು ತರಲೆ ಮಾಡಿದ! ಇನ್ನೊಂದು ವರ್ಷ ಅದೇ ಅಖಿಲಭಾರತ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿಯಲ್ಲಿ( ಬಹುಶಃ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ ಎಂದು ನೆನಪು)  ಕವಿತೆ ಓದಿದ ಒಬ್ಬ ಕವಿ ಕವಿಗೋಷ್ಠಿಯ ಕವಿಗಳ ಹೆಸರಿನ ಪಟ್ಟಿಯಲ್ಲಿ ಹೆಸರಾಂತ ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ಅವರ ಹೆಸರು ಇಲ್ಲದಿದ್ದರಿಂದ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಅವರನ್ನು ʼನಿಮ್ಮಂಥವರು ವೇದಿಕೆಮೇಲೆ ಇರಬೇಕು ದಯವಿಟ್ಟು ಬನ್ನಿʼ ಎಂದು ಆಮಂತ್ರಿಸಿಬಿಟ್ಟ! ಶರಣಪ್ಪ ಅವರೇನೂ ಎದ್ದು ವೇದಿಕೆಗೆ ಹೋಗಲಿಲ್ಲ ಆ ಮಾತು ಬೇರೆ. ಆದರೆ ಮತ್ತೆ ಮುಂದೆ ಇನ್ನೂ ಯಾರು ಯಾರು ಬಂದು ವೇದಿಕೆಗೆ ಯಾರು ಯಾರನ್ನು ಕರೆಯುತ್ತಾರೋ ಏನೋ ಎಂದು ಗಾಬರಿಗೊಂಡು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಧ್ಯೆಯೇ ಎದ್ದು ಬಂದು ಮೈಕ್‌ ತೆಗೆದುಕೊಂಡು, ʼ “ಒಂದು ಗೋಷ್ಠಿ ಅಂದರೆ ಅದಕ್ಕೆ ಒಂದು ಶಿಸ್ತು ಇರುತ್ತದೆ. ಅದನ್ನು ನಾವು ಉಲ್ಲಂಘಿಸುವುದು ಬೇಡ” ಎಂದು ಹೇಳಿ ಆಗಬಹುದಾದ ಅಧ್ವಾನವನ್ನು ತಡೆದರು.

ಹಾಗಾದರೆ ಈ ಕವಿಗೋಷ್ಠಿಗಳ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಆದರೆ ಸಂಬಂಧಪಟ್ಟವರು ಪ್ರಯತ್ನಶೀಲರಾಗಬೇಕು. ಮೊದಲನೆಯದಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಥವಾ ಮೈಸೂರು ದಸರಾದ ಕವಿಗೋಷ್ಠಿಯಂತಹ ಕವಿಗೋಷ್ಠಿಗಳನ್ನು ಆಯೋಜಿಸುವಾಗ ಅವು ಅತ್ಯಂತ ಉತ್ಕೃಷ್ಟವಾಗಿರುವಂತೆ ನೋಡಿಕೊಳ್ಳಬೇಕು. ಇದನ್ನು ಸಾಧಿಸಲು ಮೊದಲು ಮಾಡಬೇಕಾದ್ದು ಕವಿಗಳನ್ನು ಆಯ್ಕೆಮಾಡುವ ವಿಧಾನದ ಸುಧಾರಣೆ. ಈಗ ಸಾಮಾನ್ಯವಾಗಿ ಈ ಕವಿಗೋಷ್ಠಿಗಳಿಗೆ ಕವಿಗಳನ್ನು ಹೇಗೆ ಆಯ್ಕೆಮಾಡಲಾಗುತ್ತದೆ? ಜಿಲ್ಲಾ ಮಟ್ಟದ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೋ ಅಲ್ಲಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೋ ಕವಿಗಳ ಹೆಸರನ್ನು ಕಳಿಸಿಕೊಡಲು ಕೇಳಿಕೊಳ್ಳಲಾಗುತ್ತದೆ. ಅವರು ತಮ್ಮ ಸಂಪರ್ಕದಲ್ಲಿರುವ ಯಾರೋ ಒಬ್ಬಿಬ್ಬರ ಹೆಸರನ್ನು ಕಳಿಸಕೊಡುತ್ತಾರೆ. ಅವರ ಜೊತೆಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೋ ಅಥವಾ ದಸರಾ ಸಮಿತಿಯ ಯಾವುದೋ ದೊಡ್ಡ ಹುದ್ದೆಯಲ್ಲಿರುವರೋ ನೀಡುವ  ಶಿಫಾರಸ್ಸು ಪತ್ರವನ್ನು ಹಿಡಿದುಕೊಂಡು ಬಂದು ಕೆಲವರು ಕವಿತೆ ಓದುವುದೂ ಇದೆ. ಆದರೆ ಇದು ಸರಿಯಾದ ಕ್ರಮವಲ್ಲ. ಇಂತಹ ದೊಡ್ಡ ಮಟ್ಟದ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆಮಾಡಲು ರಾಜ್ಯಮಟ್ಟದಲ್ಲಿ ಪರಿಣಿತ ಕವಿಗಳನ್ನೊಳಗೊಂಡ ಒಂದು ಉನ್ನತ ಮಟ್ಟದ ಸಮಿತಿ ಇರಬೇಕು. ಅದು ನೇರವಾಗಿ ಅಥವಾ ಜಿಲ್ಲಾ ಘಟಕಗಳಿಂದ ಚುನಾಯಿತವಾಗಿ ಬರುವ ಕವಿಗಳ ಸಾಧನೆಯನ್ನು ಪರಿಶೀಲಿಸಿ ಅವಕಾಶ ಕಲ್ಪಿಸಬೇಕು.

ಅಖಿಲಭಾರತಮಟ್ಟದ ಸಾಹಿತ್ಯ ಸಮ್ಮೇಳನ ಅಥವಾ ಮೈಸೂರು ದಸರಾ ಕವಿಗೋಷ್ಠಿಗಳನ್ನು ರೂಪಿಸುವಾಗ ಅಲ್ಲಿಗೆ ಕವಿಗಳಿಗೆ ಅವಕಾಶ ಕೊಡುವಾಗ ಪ್ರಧಾನವಾಗಿ ಅವು ʻಹೊಸಬರಿಗೆ ಅವಕಾಶ ಕೊಡುವ ವೇದಿಕೆಗಳಾಗದಂತೆ ಎಚ್ಚರವಹಿಸಬೇಕು. ಇದರರ್ಥ ಅವಕಾಶ ಕೊಟ್ಟವರಿಗೇ ಕೊಡಬೇಕು ಎಂದೂ ಅಲ್ಲ. ಕವಿಗಳಿಗೆ ಅವಕಾಶ ಕೊಡುವುದು ಮೊದಲ ಆದ್ಯತೆ ಆಗಬಾರದು. ಮುಂದೆ ಕುಳಿತ ಉದಯೋನ್ಮುಖ ಕವಿಗಳನೇಕರು ಮುಂದೆ ನಾಡಿನ ಬೆಲೆಯುಳ್ಳ ಕವಿಗಳಾಗಿ ಬೆಳೆಯಲು ಕವಿಗೋಷ್ಠಿ ಪ್ರಭಾವ ಬೀರುವುದರ ಕಡೆ ಮೊದಲ ಆದ್ಯತೆ ಇರಬೇಕು. ಏಕೆಂದರೆ ʻಕವಿಗೋಷ್ಠಿಯಲ್ಲಿ ಕವಿತೆ ಓದಿದ್ದರಿಂದ ನಾನು ಮುಂದೆ ಒಬ್ಬ ಕವಿಯಾಗಿ ಬೆಳೆದೆʼ ಎಂದು ಹೇಳುವಂಥ ಸಂದರ್ಭಗಳು ಕಡಿಮೆ. ʻದಸರಾ ಕವಿಗೋಷ್ಠಿಯಲ್ಲಿ ಇಂಥವರು ಓದಿದ ಕವಿತೆ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಇದರಿಂದ ನಾನು ಕವಿಯಾಗಿ ಬೆಳೆಯುವಲ್ಲಿ ಬಹಳ ಸಹಾಯವಾಯಿತುʼ ಎಂದು ಮುಂದೆ ಕುಳಿತು ಕವಿತೆ ಕೇಳಿದ ಉದಯೋನ್ಮುಖರು ಹೇಳುವ ಸಾಧ್ಯತೆ ಹೆಚ್ಚು. ಹೀಗಾಗಿ ಈಗಾಗಲೇ ಕಾವ್ಯಕ್ಷೇತ್ರೆಲ್ಲಿ ಒಂದಿಷ್ಟು ಕೆಲಸ ಮಾಡಿ ನುರಿತವರನ್ನೇ ಅಂದರೆ ಒಂದೆರಡಾದರೂ ಕವನ ಸಂಕಲನ ಪ್ರಕಟಿಸಿದವರು ಅಥವಾ ಮಾಧ್ಯಮಗಳ ಮೂಲಕ ಒಂದಿಷ್ಟು ಕವಿಯಾಗಿ ರೂಪಗೊಂಡವರನ್ನೇ ಈ ಕವಿಗೋಷ್ಠಿಗಳಿಗೆ ಆಯ್ಕೆಮಾಡಬೇಕು. ಹಾಗೆ ನೋಡಿದರೆ ದೊಡ್ಡ ದೊಡ್ಡ ಕವಿಗಳು ಇಂತಹ ಕವಿಗೋಷ್ಠಿಗಳಲ್ಲಿ ಕವಿತೆ ಓದಿ ಮುಂದೆ ಕುಳಿತ ಚಿಕ್ಕವರನ್ನು ಪ್ರಭಾವಿಸಬೇಕು.  ಹೊಸಬರಿಗೆ ಅವಕಾಶ ಕೊಡಲು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ಸಾಕಷ್ಟು ವೇದಿಕೆಗಳಿವೆ. ಅಲ್ಲಿ ಅವಕಾಶಕೊಡುವ ಕೆಲಸ ಆಗಲಿ. ಇಲ್ಲಿ ಅದು ಬೇಡ!

ಕವಿಗಳನ್ನು ಹೀಗೆ ಆಯ್ಕೆ ಮಾಡಿದ ಮೇಲೆ ಅವರ ಕವಿತೆಗಳನ್ನು ಅವರು ಎಷ್ಟೇ ದೊಡ್ಡವರಾದರೂ ಸಂಘಟಕರು ತರಿಸಿಕೊಂಡು ಒಂದು ಸಲ ಪರಿಶೀಲಿಸಿದ ನಂತರವೇ ಕವಿ ಆ ಕವಿತೆಯನ್ನು ಓದುವಂತಾಗಬೇಕು. ಇದು ಕವಿಗಳ ಮೇಲೆ ಸಂಘಟನೆಯ ʻನಿಯಂತ್ರಣʼ ಅಥವಾ ʼಕಡಿವಾಣʼ ಇತ್ಯಾದಿಯಾಗಿ ಭಾವಿಸಲೇಬಾರದು.

ಒಂದು ನೆನಪಿನೊಂದಿಗೆ ಈ ಲೇಖನ ಮುಗಿಸುತ್ತೇನೆ. ಇಪ್ಪತ್ತು ವರ್ಷಗಳ ಹಿಂದೆ ನಾನೂ ಈ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಎರೆಡು ಕವಿತೆ ಓದಿದ್ದೆ.  ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲು ಧಾರವಾಡದಿಂದ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿ, ಹಾವೇರಿಯ ಕವಿ ಗಂಗಾಧರ ನಂದಿ, ಮತ್ತು ನಾನು ಅಕ್ಕಪಕ್ಕದ ರೂಮುಗಳಲ್ಲಿಯೇ ಉಳಿದಿದ್ದೆವು. ಬೆಳಿಗ್ಗೆ ತಿಂಡಿ ತಿನ್ನುವಾಗ ಆಗಲೇ ಹಲ್ಲುಗಳೆಲ್ಲವನ್ನೂ ಕಳೆದುಕೊಂಡಿದ್ದ ಕಣವಿಯವರು ತಿಂಡಿಯನ್ನು ಜಗಿಯಲು ಒದ್ದಾಡುತ್ತಿರುವಾಗ ಅದನ್ನು ನೋಡಿ ನನಗೆ ಸಂಕಟವಾಗುತ್ತಿತ್ತು.  ಅವರ ಎದುರು ಅರಾಮಾಗಿ ತಿಂಡಿತಿನ್ನಲು ಮುಜುಗರವಾಗುತ್ತಿತ್ತು. ಆದರೆ ಕೆಲವು ಔಪಚಾರಿಕ ಮಾತುಗಳನ್ನಾಡುವುದನ್ನು ಬಿಟ್ಟರೆ ಅವರಿಗೆ ಸಹಾಯ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿದ್ದೆವು. ಇಳಿಹೊತ್ತಿನಲ್ಲಿ ನಮ್ಮನ್ನು ಕುದುರೆ ಸರೋಟಿನಲ್ಲಿ ಕವಿಗೋಷ್ಠಿ ಯಾವಾಗಲೂ ನಡೆಯುವ ಜಗನ್ಮೋಹನ ಅರಮೆಗೆ ಕರೆದೊಯ್ಯಲಾಯಿತು. ಕವಿಗೋಷ್ಠಿಯನ್ನು ಉದ್ಘಾಟಿಸಿದ ಅರವಿಂದ ಮಾಲಗತ್ತಿ ಅದಕ್ಕೂ ಎಷ್ಟೋ ವರ್ಷಗಳ ಹಿಂದೆ ತಾವು ಬಾಲಕರಾಗಿದ್ದಾಗ ಮೈಸೂರು ದಸರಾದಿಂದ ಆಕರ್ಷಿತರಾಗಿ ದೂರದ ಜಮಖಂಡಿಯಿಂದ ಅವರ ದೊಡ್ಡಪ್ಪನೋ ಅಥವಾ ಚಿಕ್ಕಪ್ಪನೋ ಅವರ ಜೊತೆ ಮೈಸೂರು ದಸರಾ ನೋಡಲು ಬಂದದ್ದನ್ನು ಭಾವುಕರಾಗಿ ನೆನಪಿಸಿಕೊಂಡರು. ಅಧ್ಯಕ್ಷೀಯ ನುಡಿಗಳನ್ನಾಡಿದ ಕಣವಿಯವರು ʻನನಗೆ ಅರಮನೆಯೊಂದಿಗೆ ಗುರುತಿಸಿಕೊಳ್ಳುವುದಕ್ಕಿಂತ ಕುದುರೆ ಸಾರೋಟಿನೊಂದಿಗೆ ಗುರುತಿಸಿಕೊಳ್ಳುವುದು ಹೆಚ್ಚು ಇಷ್ಟವಾಗುತ್ತದೆʼ ಎಂದು ಹೇಳಿ ಕವಿಯೊಬ್ಬನ ಮನೋಧರ್ಮ ಹೇಗಿರಬೇಕು ಎಂಬುದನ್ನು ಪರೋಕ್ಷವಾಗಿ ತಿಳಿಸಿಕೊಟ್ಟರು.

ಮೈಸೂರು ದಸರಾ ಹೀಗೆ ಒಬ್ಬೊಬ್ಬರ ಭಾವಕೋಶಗಳನ್ನು ಒನ್ನೊಂದು ರೀತಿಯಲ್ಲಿ ತುಂಬಬಲ್ಲ ಶಕ್ತಿ ಇರುವಂಥದ್ದು. ಅದು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಹೊರಳಿಕೊಂಡ ವ್ಯವಸ್ಥೆಯೊಂದರಲ್ಲಿ ನಡೆಯುತ್ತಿರುವಾಗ ಅದಕ್ಕೆ ತಕ್ಕ ಸಾಕಷ್ಟು ಪರಿವರ್ತನೆಗಳನ್ನು ಮಾಡಿಕೊಳ್ಳಬೇಕು. ವೀರಣ್ಣಗೋ ಇನ್ನಾರಿಗೋ ಅವಕಾಶ ಸಿಗಲಿಲ್ಲ ಎಂಬುದು ಇಲ್ಲಿ ಮುಖ್ಯವಲ್ಲವಾದರೂ ಸಕಾರಣಯುಕ್ತ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕಾರ್ಯೋನ್ಮಖರಾಗಬೇಕಾದದ್ದು ಸಂಘಟಕರ ಜವಾಬ್ದಾರಿ. ಈ ಹಿನ್ನಲೆಯಲ್ಲಿ ಅಸಮಾಧಾನವನ್ನು ಅನುಮಾನಿಸುವ ಅಥವಾ ಅವಮಾನಿಸುವ ಮನಸ್ಥಿತಿಯಿಂದ ಹೊರಬಂದು, ಅಸಮಾಧಾನಿಗಳ ಸಾತ್ವಿಕ ಕೋಪವನ್ನು ಸರಿಯಾಗಿ ಅರ್ಥೈಸಿಕೊಂಡು ಆಗಿರುವ ಟೀಕೆಗಳನ್ನುಎಂದು ಮಾತ್ರವಲ್ಲ; ಅಂಥವರ ಸಾತ್ವಿಕ ಕೋಪವನ್ನು ಸರಿಯಾಗಿ ಗ್ರಹಿಸಿ ಆಗಿರುವ ತಪ್ಪುಗಳನ್ನುಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವತ್ತ ಸಂಘಟಕರು ಮುಂದಡಿಯಿಡಬೇಕು. ಆಗ ಮಾತ್ರ ಈ ಪ್ರಿತಿಷ್ಠಿತ ಕವಿಗೋಷ್ಠಿಗಳಿಗೆ ಕವಿಯುತ್ತಿರುವ ಕಾರ್ಮೋಡಗಳು ದೂರಸರಿದು ರವಿಕಿರಣಗಳು ನಮ್ಮ ಸಾಹಿತ್ಯ ಸಂಕೃತಿಗಳನ್ನು ಬೆಳಗಬಲ್ಲವು. ಹಾಗಾಗಲೆಂದು ಆಶಿಸೋಣ.

 

ರಾಜೇಂದ್ರ ಬುರಡಿಕಟ್ಟಿ

೦೮-೧೦-೨೦೨೪

 

Friday, May 31, 2024

 

`ನೈರುತ್ಯ’ ಮತ್ತು ಕಳ್ಳಬಸಿರಿನ ತಾಯಿಯರು

 


ಶಿಕ್ಷಕ ಮಿತ್ರರೊಬ್ಬರುನೈರುತ್ಯ’ ‘ನೈಋತ್ಯ ಪದಪ್ರಯೋಗಗಳಲ್ಲಿ ಯಾವುದು ಸರಿ ಎಂದು ಕೇಳಿದ್ದಾರೆ. ಬಹುಶಃ ಪ್ರಶ್ನೆ ಅವರಿಗೆ ಇಷ್ಟುದಿನವಿಲ್ಲದ್ದು ಈಗೇಕೆ ಬಂದಿತು ಎಂದು ನಾವು ಊಹಿಸಿಕೊಳ್ಳಲು ಸಾಧ್ಯವಿದೆ. ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ನಿಂತ  ಅಭ್ಯರ್ಥಿಗಳಿಂದ ದಿನನಿತ್ಯ ರಾಶಿರಾಶಿಯಾಗಿ ಬಂದು ಬೀಳುತ್ತಿರುವ ಅಭ್ಯರ್ಥಿಗಳ ಸಾಧನಾ ಪರಿಚಯ ಮತ್ತು ಮನವಿ ಪತ್ರಗಳಲ್ಲಿ ಒಬ್ಬಿಬ್ಬರು ‘ನೈಋತ್ಯ’ ಪದವನ್ನೂ ಬಹಳಷ್ಟು ಜನರು ‘ನೈರುತ್ಯ’ ಪದವನ್ನೂ ಬಳಸಿದ್ದನ್ನೂ ನಾನೂ ಗಮನಿಸಿದ್ದೆ. ಒಬ್ಬ ಭಾಷಾ ಶಿಕ್ಷಕರಾಗಿ ಅವರಿಗೆ ಇಂತಹ ಪ್ರಶ್ನೆ ಸಾಂದರ್ಭಿಕವಾಗಿ ಹುಟ್ಟಿದ್ದು ಸಹಜವಾದದ್ದು ಮಾತ್ರವಲ್ಲ ಅಪೇಕ್ಷಣೀಯವಾದದ್ದು. ಅವರ ಜೊತೆಗೆ ಅವರಂತೆ ಇತರರಿಗೆ ಈ ಬಗ್ಗೆ ಇದ್ದಿರಬಹುದಾದ ಗೊಂದಲಗಳು ತಿಳಿಯಾಗಬಹುದೇನೋ ಅಂದೆನಿಸಿ ಅದನ್ನು ನೆಪಮಾಡಿಕೊಂಡು ಪ್ರಸ್ತುತ ವಿದ್ಯಮಾನವನ್ನೂ ಅವಲೋಕಿಸಿ ಈ ಲೇಖನವನ್ನು ಇಲ್ಲಿ ಕೊಡಲಾಗುತ್ತಿದೆ.

ಅವರ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಪ್ರಶ್ನೆಗಳನ್ನು ಇಲ್ಲಿ ಸೇರಿಸಿಕೊಳ್ಳಬಹುದು. ಅವೆಂದರೆ `ರಸರುಷಿ ಕುವೆಂಪು’ ಅನ್ನುವಾಗ ‘ರಸರುಷಿ’ ಸರಿಯೋ ಅಥವಾ ‘ರಸಋಷಿ’ ಸರಿಯೋ? ಹಾಗೆಯೇ ಪತ್ರ ಬರೆಯುವಾಗ ಬರೆಯುವವರ ವಿಳಾಸವನ್ನು ಪ್ರಾರಂಭಿಸುವಾಗ ‘ಇಂದ’ ಎಂದು ಬರೆಯಬೇಕೋ ಅಥವಾ ‘ಯಿಂದ’ (ಕೆಲವರು ಇದನ್ನು ‘ಯಿಂದಾ’ ಎಂದೂ ಬರೆಯುವುದುಂಟು) ಬರೆಯಬೇಕೋ?.... ಇತ್ಯಾದಿ

ಕನ್ನಡ ಭಾಷಾಪರಿಸರದಲ್ಲಿ ಈ ಎಲ್ಲ ಬಳಕೆಗಳು ಇರಲು ಕಾರಣ ಕನ್ನಡದ ಕೆಲವು ಗುಣಿತಾಕ್ಷರಗಳು ಮತ್ತು ಸ್ವರಾಕ್ಷರಗಳ ನಡುವಿನ ಧ್ವನಿಸಾಮ್ಯತೆ. ಕನ್ನಡದ ಸ್ವರಗಳಾದ ಇ,ಉ,ಋ,ಎ ಮತ್ತು ಇವುಗಳ ಅಕ್ಕಂದಿರು ಅಂದರೆ ದೀರ್ಘಗಳು ಮತ್ತು ಗುಣಿತಾಕ್ಷರಗಳಾದ ಯಿ,ವು,ರು,ಯೆ ಮತ್ತು ಇವುಗಳ ಅಕ್ಕಂದಿರೇ ಒಬ್ಬರ ಬದಲು ಇನ್ನೊಬ್ಬರು ಯಾರ ಯಾರ ಪಕ್ಕವೋ ತಪ್ಪಾಗಿ ಬಂದು ಕುಳಿತುಕೊಳ್ಳುವುದುಂಟು. ಗೊತ್ತು ಪರಿಚಯ ಇದ್ದವರು ಇವರನ್ನು ಎಬ್ಬಿಸಿ ಕಳಿಸಿದರೆ ಉಳಿದವರು ಹೋಗಲಿಬಿಡಿ ಎಂದು ಸುಮ್ಮನಿರುತ್ತಾರೆ.

ಕನ್ನಡದ ಭಾಷೆಯ ಜಾಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಯಾವುದು ಸರಿಯಾದ ಮತ್ತು ಯಾವುದು ತಪ್ಪಾದ ಪ್ರಯೋಗ ಎಂದು ನಮಗೆ ಸ್ಪಷ್ಟವಾಗುತ್ತದೆ. ಮೊದಲೇ ಹೇಳಿದಂತೆ ಇವುಗಳ ಮಧ್ಯೆ ಧ್ವನಿಸಾಮ್ಯತೆ ಇದ್ದರೂ ಬಳಕೆಯಲ್ಲಿ ಒಂದರ ಬದಲು ಇನ್ನೊಂದನ್ನು ಬಳಸುವುದು ಸರಿಯಾದ ಕ್ರಮ ಎನಿಸುವುದಿಲ್ಲ. ಇದಕ್ಕೆ ಇರುವ ಸೂತ್ರವೆಂದರೆ ಈ ಧ್ವನಿಗಳನ್ನು ನಾವು ಶಬ್ದದ ಆರಂಭಕ್ಕೆ ಬಳಸಬೇಕಾದರೆ ಸ್ವರವನ್ನೂ ಶಬ್ದದ ಮಧ್ಯ ಮತ್ತು ಅಂತ್ಯದಲ್ಲಿ ಬಳಸಬೇಕಾದರೆ ಗುಣಿತಾಕ್ಷರವನ್ನೂ ಬಳಸಬೇಕು. ಈ ಕಾರಣದಿಂದ ‘ಇಂದ’ ಸರಿಯಾದ ಪ್ರಯೋಗವಾದರೆ ‘ಯಿಂದ’ ಅಥವಾ ‘ಯಿಂದಾ’ ತಪ್ಪು ಪ್ರಯೋಗಗಳು. ‘ಉಡ’ ಸರಿಯಾದ ಬಳಕೆ ಅದರೆ ‘ಕಾಉ’ ತಪ್ಪುಬಳಕೆ. ‘ಕಾವು’ ಸರಿಬಳಕೆ. ಹಾಗೆಯೇ ಪ್ರತ್ಯೇಕವಾಗಿ ಬರೆಯುವಾಗ ‘ಋಷಿ’ ಸರಿಯಾದ ಪ್ರಯೋಗ. ಆದರೆ ‘ರಸಋಷಿ’ ಸರಿಯಾದ ಪ್ರಯೋಗವಲ್ಲ. ಈ ಸಂದರ್ಭದಲ್ಲಿ ‘ರಸರುಷಿ’ ಸರಿಯಾದ ಪ್ರಯೋಗ.  ಅದೇ ರೀತಿ ಶಬ್ದದ ಮೊದಲಸ್ಥಾನದ ಪ್ರಯೋಗವಾಗಿ ‘ಎಲೆ’ ಸರಿಯಾದ ಪ್ರಯೋಗ. ಆದರೆ ಇದೆ `ಎ’ ಅನ್ನು ಶಬ್ದದ ಕೊನೆಗೆ ಬಳಸಬೇಕಾದಾಗ ‘ಮಾಎ’ ತಪ್ಪಾಗಿಬಿಡುತ್ತದೆ. ಅದು ‘ಮಾಯೆ’ ಆಗಬೇಕಾಗುತ್ತದೆ. ಇಷ್ಟು ಮಾಹಿತಿಯಿಂದ ‘ನೈರುತ್ಯ’ ‘ನೈಋತ್ಯ’ ಯಾವುದು ಸರಿ ಎಂಬ ಪ್ರಶ್ನೆಗೆ ‘ನೈರುತ್ಯ’ ಸರಿಯೆಂಬುದು ಖಚಿತವಾಯಿತು ಅಂದುಕೊಳ್ಳುತ್ತೇನೆ. ಈ ಚುನಾವಣೆಯನ್ನು ನಡೆಸುವ ಚುನಾವಣಾ ಆಯೋಗವೇ ತನ್ನ ಜಾಲತಾಣದಲ್ಲಿನ ಮಾಹಿತಿಗಳಲ್ಲಿ ಈ ಪದವನ್ನು ‘ನೈಋತ್ಯ’ ಎಂದು ಬಳಸಿದೆ. ಆದರೆ ಯಾರೋ ಬಳಸಿದರು ಎಂಬ ಸಂಗತಿಯು ಅದು ಸರಿಯೆಂಬುದಕ್ಕೆ ಅಧಿಕೃತತೆಯನ್ನು ಒದಗಿಸುವುದಿಲ್ಲ ಎಂಬುದನ್ನು ಶಿಕ್ಷಕರು ಅರಿಯಬೇಕಾಗುತ್ತದೆ; ಅರಿಯುವಂತೆ ಮಾಡಬೇಕಾಗುತ್ತದೆ.

***

ಈ ‘ನೈರುತ್ಯ’ ಪದಬಳಕೆಯ ವಿಶ್ಲೇಷಣೆಯ ಸಾಂದರ್ಭಿಕ ಚರ್ಚೆಯಾಗಿ ಇನ್ನೊಂದು ಮಹತ್ವದ ವಿಷಯವನ್ನು ನಾನು ಇಲ್ಲಿ ಪ್ರಸ್ತಾಪಿಸಬೇಕು. ವಿಧಾನ ಪರಿಷತ್ತಿನ ಚುನಾವಣೆಯ ಕಾರಣಕ್ಕೆ ‘ನೈರುತ್ಯ’ ಪದದ ಎಳೆಯನ್ನು ಹಿಡಿದು ಇಷ್ಟು ಎಳೆದಿರುವ ನಾನು ಇನ್ನೊಂದಿಷ್ಟನ್ನು ಎಳೆದರೆ ಅದು ಈ ಸಂದರ್ಭಕ್ಕೆ ಅನುಚಿತವಾಗಲಾರದೇನೋ ಎನ್ನಿಸುತ್ತಿದೆ. ಈ ಪ್ರಶ್ನೆಯನ್ನು ಶಿಕ್ಷಕರೊಬ್ಬರು ನನಗೆ ಕಳಿಸಿದ ಸಂದರ್ಭದಲ್ಲಿಯೇ ಈ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಯ ಅನೇಕ ವಿದ್ಯಮಾನಗಳೂ ನನಗೆ ತಲುಪುತ್ತಿದ್ದವು. ನನಗೆ ತಿಳಿದಿರುವಂತೆ ಈ ಕ್ಷೇತ್ರದಿಂದ ನಡೆಯುತ್ತಿರುವ ಶಿಕ್ಷಕರ ಚುನಾವಣೆಯಲ್ಲಿ ಅನೇಕ ಶಿಕ್ಷಕರು ಈ `ಶಬ್ದ’ಕ್ಕಿಂತ ‘ಅರ್ಥ’ಕ್ಕೆ ಮಾರುಹೋಗಿದ್ದರು. ಅರ್ಥಕ್ಕೆ ಎರಡು ಅರ್ಥವಿರುವುದು ಸಹಜವಷ್ಟೆ! ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಭಾಷೆಯ ರಾಚನಿಕ ಸಂಗತಿಯೊಂದರ ವಿವರಣೆ ಬಯಸಿದ್ದು ಸಹಜವಾಗಿಯೇ ನನಗೆ ಈ ಲೇಖನವನ್ನು ಬರೆಯುವಂತೆ ಮಾಡಿತು.

ವಿಧಾನ ಪರಿಷತ್ತಿನ ಚುನಾವಣೆಯನ್ನು ಮೇಲ್ಮನೆಯ ಚುನಾವಣೆಯೆಂದು ಕರೆಯುವ ವಾಡಿಕೆ ಇದೆ. ಇದನ್ನು ಒಂದರ್ಥದಲ್ಲಿ `ಪ್ರಜ್ಞಾವಂತರ ಕೂಟ’ ಎಂದು ಕರೆಯಬಹುದು. ಆದರೆ ಅದು ಇಂದು ತಲುಪಿರುವ ಗತಿ ನೋಡಿದರೆ ಮರುಕ ಹುಟ್ಟುತ್ತದೆ. ಪರಿಷತ್ತಿನ ಚುನಾವಣೆಗಳು ಕೂಡ ವಿಧಾನಸಭೆಯ ಚುನಾವಣೆಯ ಹಾದಿಯನ್ನೇ ಹಿಡಿದದು ಕಲುಷಿತಗೊಳ್ಳುತ್ತಿರುವುದು ದುರಂತ. ಇಂತಹ ಸಂದರ್ಭದಲ್ಲಿ ಕೊನೆಯಪಕ್ಷ ಪ್ರಜ್ಞಾವಂತರೆಂದು ಬೇರೆಯವರಿಂದ ಕರೆಯಲ್ಪಡುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಾದರೂ ಕಲುಷಿತಗೊಳ್ಳದಂತೆ ಇರಬೇಕಾಗಿತ್ತು ಎಂಬುದು ನಮ್ಮಂಥವರ ನಿರೀಕ್ಷೆ. ಅದರಲ್ಲೂ ಶಿಕ್ಷಕರ ಕ್ಷೇತ್ರ ಎಂದರೇನೇ ಅದನ್ನು ಕಲುಷಿತಗೊಳಿಸಲು ಬರುವವರು ಅಂಜುವ ಸಂದರ್ಭ ಇತ್ತೀಚಿನವರೆಗೂ ಇತ್ತು. ಆದರೆ ಕಳೆದ ಒಂದೆರಡು ಚುನಾವಣೆಗಳನ್ನು ನೋಡಿದರೆ ಈ ಕ್ಷೇತ್ರ ಎಷ್ಟು ಹೊಲಸಾಗುತ್ತಿದೆ ಎಂದರೆ ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಶಿಕ್ಷಕರಿಗೆ ಯಾವುದೇ ಬಗೆಯ ಗೌರವ ಘನತೆಗಳೂ ಉಳಿಯಲಿಕ್ಕಿಲ್ಲ ಅನ್ನಿಸುತ್ತಿದೆ.

ತೀರಾ ಇತ್ತೀಚಿನವರೆಗೂ ಶಿಕ್ಷಕರ ಕ್ಷೇತ್ರವೆಂದರೆ ಚುನಾವಣಾ ಭ್ರಷ್ಟಾಚಾರ ಮಾಡುವವರು ಅಂಜುತ್ತಿದ್ದರು. ದುಡ್ಡು ಹೆಂಡ, ಇತ್ಯಾದಿ ಹಂಚಿ ಇಲ್ಲಿ ಗೆದ್ದುಬರಲು ಸಾಧ್ಯವಿಲ್ಲ ಎಂದು ಅವರಿಗೆ ಅನ್ನಿಸಿತ್ತು. ಆದರೆ ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಈ ಮೇಷ್ಟ್ರನ್ನೂ ನಾವು ಜೀತದಾಳುಗಳಂತೆ ಖರೀದಿ ಮಾಡಬಹುದು ಎಂಬುದು ಅವರಿಗೆ ಮನದಟ್ಟಾಗಿಬಿಟ್ಟಿದೆ. ಇದಕ್ಕೆ ನಾವು ಯಾವುದೇ ಅಭ್ಯರ್ಥಿಗಳನ್ನು ದೂರುವುದು ಸಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಆಸ್ಪದಕೊಟ್ಟಿರುವುದು ಶಿಕ್ಷಕರ ಸಮುದಾಯವೇ ಎಂದರೇ ಬಹಳಷ್ಟು ಜನರಿಗೆ ಸಿಟ್ಟು ಬರಲಾರದೇನೋ. ಆರಂಭದಲ್ಲಿ ಒಬ್ಬಿಬ್ಬರು, ಡೈರಿ, ಕ್ಯಾಲೆಂಡರ್, ವಾಟರ್ ಬಾಟೆಲ್, ಥರ್ಮಾಸ್ ಪ್ಲಾಸ್ಕ್ ಇತ್ಯಾದಿಗಳನ್ನು ‘ಉಡುಗೊರೆ’ಯಾಗಿ ನೀಡುವ ಕೆಲಸ ಆರಂಭಿಸಿ ಇವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಆರಂಭಿಸಿದರು. ಅದಕ್ಕೆ ಸಿಕ್ಕ ಮೌನ ಅನುಮೋದನೆಯಿಂದಾಗಿ ಕಳೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಿಂದ ಬ್ಯಾಗ್ ಗಳು ವಿತರಣೆಯಾದವು. ಆದರೆ ಶಿಕ್ಷಕರು ತೀರಾ ಮಾನಗೆಟ್ಟವರಲ್ಲ ಅವರೊಳಗೆ ಒಂದು ಆತ್ಮಸಾಕ್ಷಿ ಇದ್ದು ಅದು ಅವರನ್ನು ಕಾಡುತ್ತದೆ ಎಂಬುದಕ್ಕೆ ಒಂದು ನಿದರ್ಶನವೆಂದರೆ ಬಹಳಷ್ಟು ಜನ ಆ ಬ್ಯಾಗನ್ನು ಪಡೆದರಾದರೂ ಅದರ ಮೇಲೆ ಯಾರ ಹೆಸರು ಇದ್ದಿಲ್ಲವಾದರೂ ಅದರ ಮೇಲಿನ ಒಂದು ಸೂಕ್ತಿಯಿಂದ ಈ ಚೀಲ ಹೆಗಲಿಗೆ ಹಾಕಿಕೊಂಡವನು ಅಥವಾ ಹಾಕಿಕೊಂಡವಳು ಯಾರ ಕಾಲಡಿ ಇರುವ `ಚೇಲಾ’ ಎಂದು ಗೊತ್ತಾಗಿ ಬಿಡುತ್ತಿತ್ತಾದ್ದರಿಂದ ಅವರು ಅದನ್ನು ಸಾರ್ವಜನಿಕವಾಗಿ ಬಳಸಲೇ ಇಲ್ಲ…

‘ನಮ್ಮ ಶಿಕ್ಷಕರೂ ಭ್ರಷ್ಟರೂ ಆಗಬೇಕು ಮತ್ತು ಅದು ಗೊತ್ತಾಗದಂತೆಯೂ ಇರಬೇಕು’ ಅಂದರೆ `ಹಾದರ ನಡೆಯಬೇಕು ಆದರೆ ಅದು ಹಾದಿಬೀದಿ ಸುದ್ಧಿಯಾಗಬಾರದು’ ಅಂತಾರಲ್ಲ ಅಂತಹ ‘ಪ್ರಜ್ವಲನೀತಿ’ಯೊಂದನ್ನು ಅಳವಡಿಸಿಕೊಂಡು ಅವರ ಘನತೆಗೆ ಚ್ಯುತಿ ಬರದಂತೆ ಅವರು ಸಾರ್ವಜನಿಕರಿಗೆ ಮರ್ಯಾದಸ್ತರಂತೆಯೇ ಕಾಣಬೇಕೆಂದು ಬಯಸಿದ ಕೆಲವು ಅಭ್ಯರ್ಥಿಗಳು ಈ ಸಲ `ಕವರ್’ ಗಳನ್ನು ಕಳಿಸುತ್ತಿದ್ದಾರಂತೆ. ಕೆಲವು ಕಡೆ ಈ ಕವರ್ `ನನಗೆ ಬಂದಿಲ್ಲ ನಿನಗೆ ಬಂದಿಲ್ಲ` ಎಂದು ಶಿಕ್ಷಕರು ಮುಖ ಊದಿಸಿಕೊಂಡ ಉದಾಹರಣೆಗಳೂ ಇವೆ. ಶಿಕ್ಷಕರ ಸಂಘಗಳ ಕೆಲವು ‘ಅಅಗಳು’(ಅವಿವೇಕಿ ಅಧ್ಯಕ್ಷರುಗಳು) (ಎಲ್ಲರೂ ಅಲ್ಲ) ಇಲಾಖೆಯಿಂದ ಕಾಲಮಿತಿ ಬಡ್ತಿ, ಇನ್ಕ್ರಿಮೆಂಟ್, ಇತ್ಯಾದಿಗಳನ್ನು ಶಿಕ್ಷಕರಿಗೆ ಕೊಡಿಸುವುದು ಹೇಗೋ ಹಾಗೇ ಈ ಕವರ್ ಗಳನ್ನು ಸರಿಯಾದ ರೀತಿಯಲ್ಲಿ ಶಿಕ್ಷಕರಿಗೆ ತಲುಪುವಂತೆ ಮಾಡುವುದೂ ಕೂಡ ನಮ್ಮ ಜವಾಬ್ದಾರಿಯೆಂದು ತಿಳಿದು ಈ ಹೇಸಿಗೆ ಹಂಚಿಕೆ ಕಾರ್ಯದಲ್ಲಿ ತೊಡಗಿರುವುದು ಸುಳ್ಳೆನ್ನಬಹುದೆ?

ಕೆಲವು ವರ್ಷಗಳ ಹಿಂದೆ ಯಾವುದೋ ಒಂದು ಸಂಸ್ಥೆಯವರು ಶಿಕ್ಷಕರ ಬಗ್ಗೆ ಒಂದು ಸಮೀಕ್ಷೆ ಮಾಡಿ ಕೆಲವು ಮಹತ್ವದ ಅಂಕಿ ಅಂಶಗಳನ್ನು ಕೊಟ್ಟದ್ದನ್ನು ನೋಡಿದ್ದೆ. ಅದರ ವಿವರಗಳು ಮರೆತುಹೋಗಿವೆಯಾದರೂ ಒಂದು ಅಂಶಮಾತ್ರ ಇನ್ನೂ ನೆನಪಿದೆ. ಅವರು ಕರ್ತವ್ಯ ನಿಷ್ಠತೆ ಮತ್ತು ಭ್ರಷ್ಟತೆಯನ್ನು ಆದರಿಸಿ ಶಿಕ್ಷಕರನ್ನು ಮೂರು ಗುಂಪುಗಳಾಗಿ ವಿಂಗಡಿಸಿದ್ದರು. ಅವರ ಪ್ರಕಾರ ನಮ್ಮ ಸಮಾಜದಲ್ಲಿ ಶೇ 40 ರಷ್ಟು ಅತ್ಯಂತ ಉತ್ತಮ ಶಿಕ್ಷಕರಿದ್ದಾರಂತೆ. ಶೇಕಡಾ 20 ರಷ್ಟು ಅತ್ಯಂತ ಕೆಟ್ಟುಹೋಗಿರುವ ಶಿಕ್ಷಕರಿದ್ದಾರಂತೆ. ಉಳಿದ ಶೇಕಡಾ 40 ರಷ್ಟು ಶಿಕ್ಷಕರನ್ನು ಅವರು ಅತ್ತ ಒಳ್ಳೆಯವರೂ ಅಲ್ಲದ ಇತ್ತ ಕೆಟ್ಟವರೂ ಅಲ್ಲದ ‘ಟ್ರೆಮಂಡಸ್’ ಗ್ರೂಫ್ ಎಂದಿದ್ದರು. ಈ ಟ್ರೆಮಂಡಸ್ ಗ್ರೂಫ್ ಯಾವಾಗ ಕೆಟ್ಟದ್ದಾಗುತ್ತೆ ಯಾವಾಗ ಒಳ್ಳೆಯದಾಗಿರುತ್ತೆ ಎಂದು ನಿಖರವಾಗಿ ಹೇಳುವುದು ಕಷ್ಟ ಎಂದಿದ್ದ ಅವರು ಶಿಕ್ಷಣ ವ್ಯವಸ್ಥೆ ಉತ್ತಮವಾಗಬೇಕು ಎಂದು ಬಯಸುವ ಮಂತ್ರಿಮಹೋದಯರು, ಮೇಲಧಿಕಾರಿಗಳು ಹಾಗೂ ಸಾರ್ವಜನಿಕರೆಲ್ಲರೂ ಅತ್ಯಂತ ಫೋಕಸ್ ಕೊಟ್ಟು ಗಮನಿಸಬೇಕಾದದ್ದು ಒಟ್ಟು ಶಿಕ್ಷಕರಲ್ಲಿ ಶೇಕಡಾ 40 ರಷ್ಟಿರುವ ಕೇವಲ ಇದೊಂದೇ ಗುಂಪನ್ನು ಎಂದಿದ್ದರು. ಏಕೆಂದರೆ ಮೊದಲ ವಿಭಾಗದಲ್ಲಿ ಬರುವ ಶೇಕಡಾ 40 ರಷ್ಟು ಒಳ್ಳೆಯ ಶಿಕ್ಷಕರು ಎಷ್ಟು ಒಳ್ಳೆಯವರು ಎಂದರೆ ಅವರಿಗೆ ಅವರ ವೃತ್ತಿಗೌರವ, ಘನತೆ, ಬದ್ಧತೆ ಮುಂತಾದವುಗಳ ಸ್ಪಷ್ಟ ಅರಿವಿದ್ದು ಅವರು ಯಾವುದೇ ಮೇಲಧಿಕಾರಿ ಅಷ್ಟೇ ಏಕೆ ಶಿಕ್ಷಣ ಇಲಾಖೆ ಎಂಬುದು ಇಲ್ಲದಿದ್ದರೂ ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವವರು. ಇವರಿಗೆ ಯಾವ ಅಧಿಕಾರಿಯ ಅವಶ್ಯಕತೆಯೂ ಇಲ್ಲ.

ಇನ್ನು ಕೆಟ್ಟುಹೋಗಿರುವ ಶೇಕಡಾ 20 ರಷ್ಟು ಜನ ಶಿಕ್ಷಕರು ಎಷ್ಟು ಕೆಟ್ಟುಹೋಗಿದ್ದಾರೆಂದರೆ ತಾಲ್ಲೂಕಿಗೆ ಏಳು ಎಂಟು ಜನ ಬಿಇಒ ಇತ್ಯಾದಿ ಅಧಿಕಾರಿಗಳನ್ನು ಹಾಕಿದರೂ ಇವರನ್ನು ಸರಿಮಾಡಲು ಸಾಧ್ಯವಿಲ್ಲವಂತೆ. ಇವರು ರಿಪೇರಿ ಮಾಡಲಾಗದಷ್ಟು ಕೆಟ್ಟುಹೊಗಿರುವುದರಿಂದ ಇವರ ಬಗ್ಗೆ ಗಮನ ಕೇಂದ್ರೀಕರಿಸುವುದು ಕೂಡ ಸಮಯ ಮತ್ತು ಹಣದ ಅಪವ್ಯಯವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಇನ್ನು ಉಳಿದದ್ದು ಮೂರನೆಯದಾದ ‘ಟ್ರೆಮಂಡಸ್ ಗ್ರೂಫ್’. ಈ ‘ಟ್ರೆಮಂಡಸ್ ಗ್ರೂಫ್’ ಹೇಗಿರುತ್ತದೆ ಎಂದರೆ ಇದು ಶಾಶ್ವತವಾಗಿ ಒಳ್ಳೆಯದ್ದಾಗಲಿ ಕೆಟ್ಟದ್ದಾಗಿ ಆಗಲಿ ಇರದೆ ಸಮಯ ಸಂದರ್ಭ ಗಮನಿಸಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳುತ್ತದೆಯಂತೆ. ತಮ್ಮ ಸುತ್ತಮುತ್ತಲ ಪರಿಸರ, ಮೇಲಧಿಕಾರಿಗಳು ಇವರೆಲ್ಲ ಒಳ್ಳೆಯವರಾಗಿದ್ದಾಗ ಇವರಷ್ಟು ಒಳ್ಳೆಯವರೇ ಇಲ್ಲ ಅನ್ನುವಷ್ಟು ಒಳ್ಳೆಯ ಕೆಲಸವನ್ನು ಇವರು ಮಾಡುತ್ತಾರಂತೆ. ಆದರೆ ಸುತ್ತಮುತ್ತಲ ಪರಿಸರ ಹಾಗೂ ಹೀಗೂ ಇದ್ದು ಮೇಲಧಿಕಾರಿಗಳು ಒಂದಿಷ್ಟು ಭ್ರಷ್ಟರೂ ಆಸೆಬಡುಕರು ಇತ್ಯಾದಿ ಇದ್ದಾಗ ಇವರು ತಕ್ಷಣಕ್ಕೆ ತಮ್ಮ ವರ್ತನೆಯನ್ನು ಬದಲಿಸಿಕೊಂಡು ಸ್ವಲ್ಪಭ್ರಷ್ಟರನ್ನು ಮಹಾಭ್ರಷ್ಟರನ್ನಾಗಿ ಮಾಡಿ ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿಬಿಡುತ್ತಾರಂತೆ. ಒಟ್ಟಾರೆಯಾಗಿ ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು. ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಹಾಯಾಗಿರುವ ಗುಂಪು ಇದು. ಹೀಗಾಗಿ ಅವರು ಒತ್ತಿ ಹೇಳಿದ್ದು ಎಲ್ಲರ ಗಮನ ಇರಬೇಕಾದದ್ದು ಈ ‘ಟ್ರೆಮಂಡಸ್ ಗ್ರೂಫ್’ ಕಡೆಗೆ. ಏಕೆಂದರೆ ಇವರು ಒಳ್ಳೆಯವರಾದರೆ ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಸಂಖ್ಯೆ ಶೇಕಡಾ 80ಕ್ಕೆ ಏರುತ್ತದೆ! ಆದರೆ ಇವರು ಕಟ್ಟವರಾದರೆ ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಸಂಖ್ಯೆ ಶೇ. 40ಕ್ಕೆ ಇಳಿದು ಕೆಟ್ಟ ಶಿಕ್ಷಕರ ಸಂಖ್ಯೆ ಶೇ. 60ಕ್ಕೆ ಏರಿಬಿಡುತ್ತದೆ; ಶಿಕ್ಷಣ ದುರಂತದ ಕಡೆ ಮುಖಮಾಡಿಬಿಡುತ್ತದೆ.

ಈ ಚುನಾವಣೆಯ ವಿದ್ಯಮಾನಗಳ ಹಿನ್ನಲೆಯಲ್ಲಿ ಈ ಮೂರೂ ಬಗೆಯ ಶಿಕ್ಷಕರನ್ನೂ ನಾನು ಕಂಡಿದ್ದೇನೆ. ಯಾರಾದರೂ ಏನಾದರೂ ಕೊಡಲು ಬಂದರೆ ಹಾವನ್ನು ಕಂಡವರಂತೆ ಓಡಿಹೋಗುವ ಮೊದಲನೆಯ ಗುಂಪಿನ ಸಜ್ಜನರನ್ನೂ ಕಂಡಿದ್ದೇನೆ. ಇನ್ನು ಕೊಡುವುದಕ್ಕೆ ಹಸಿದನಾಯಿಗಳಂತೆ ಬಾಯಿತೆಗೆದುಕೊಂಡು ಕುಳಿತಿರುವ, ಬರದಿದ್ದರೆ ತಗಾದೆ ತೆಗೆಯುವ ಕೊನೆಯ ಗುಂಪಿನ ದುರ್ಜನರನ್ನೂ ಕಂಡಿದ್ದೇನೆ. ಹಾಗೆಯೇ ಈ ಮೂರನೆಯ ಗುಂಪಿನವರನ್ನೂ ಕೂಡ. ಮೊದಲನಯ ಗುಂಪಿನವರು ಈ ದೇಶದ ಸೌಭಾಗ್ಯ. ಅವರು ಕಂಡರೆ ಕಾಲುಹಿಡಿದು ನಮಸ್ಕರಿಸಬೇಕು ಎನ್ನಿಸುತ್ತದೆ. ಕೊನೆಯವರನ್ನು ಕಂಡರೆ ……. ಅನ್ನಿಸುತ್ತದೆ. ಶಿಕ್ಷಣ ಸುಧಾರಿಸಲು ಈ ಎರಡೂ ಗುಂಪುಗಳಿಗೆ ಶಿಕ್ಷಣಾಧಿಕಾರಿಗಳ ಮತ್ತು ಸಮಾಜದ ನಿಗಾ ಹೇಗೆ ಅವಶ್ಯಕತೆ ಇಲ್ಲವೋ ಹಾಗೆಯೇ ಈ ಎರಡೂ ಗುಂಪುಗಳಿಗೆ ನನ್ನ ಲೇಖನದ ಅವಶ್ಯಕತೆಯೂ ಇರುವುದಿಲ್ಲ. ಮೊದಲನೆಯ ಗುಂಪಿಗೆ ಈ ಕಠಿಣ ಮಾತುಗಳು ಅನ್ವಯಿಸುವುದೇ ಇಲ್ಲ. ಕೊನೆಯ ಗುಂಪಿಗೆ ಹೇಳಿ ಉಪಯೋಗವಿಲ್ಲ. ಏಕೆಂದರೆ ತಾವು ತಿನ್ನುತ್ತಿರುವುದು ಅಮೃತವೋ ಅಮೇದ್ಯವೋ ಎಂದು ಅರಿಯಲಾರದೆ “ಎಲ್ಲರೂ ತಿನ್ನುವಾಗ ನಾವು ತಿಂದರೆ ಏನು ತಪ್ಪು” ಎಂದು ವಾದಿಸುವವರಿಗೆ ಏನಾದರೂ ಹೇಳಲು ಹೋಗುವುದು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ. ಅವರ ಆಲೋಚನಾ ಕ್ರಮ ಹೇಗಿರುತ್ತದೆ ಎಂದರೆ ದೇಶದಲ್ಲಿ ಯಾರೂ ಸಾಚಾ ಅಲ್ಲ ಎಂಬುದೇ ಅವರ ವಾದ. ಅಂಥವರೊಂದಿಗೆ ಸಂವಾದ ಅಸಾಧ್ಯ. ಮತ್ತು ವಿವಾದ ಮಾತ್ರ ಸಾಧ್ಯ!!

ಹಾಗಾಗಿ ಮೂರನೆಯ ಗುಂಪಿಗೆ ಮಾತ್ರ ನನ್ನ ಲೇಖನ. ಸಾವಿರದಲ್ಲಿ ಒಬ್ಬರಿಗಾದರೂ ಇದು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುತ್ತದೆ ಎಂಬ ನಂಬಿಕೆಯಲ್ಲಿ ಈ ಲೇಖನ ಬರೆಯುತ್ತಿರುವಾಗಲೇ ಅಪರೂಪಕ್ಕೆ ದೂರದ ಊರಿನಿಂದ ಗೆಳತಿಯೊಬ್ಬಳು ಫೋನ್ ಮಾಡಿದಳು. ಇದೇ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಯೊಬ್ಬನ ಕಡೆಯವರು ಶಾಲೆಗೇ ಬಂದು ಎಲ್ಲರಿಗೂ ಒಂದೊಂದು ಕವರ್ ಕೊಟ್ಟು ಫೋನ್ ನಂಬರ್ ತೆಗೆದುಕೊಂಡು ಹೋದರೆಂದೂ ಕವರ್ ಒಳಗೆ ಎರಡೆರೆಡು ಸಾವಿರ ರೂಪಾಯಿ ಇದ್ದವೆಂದೂ ಹೇಳಿದಳು. ಅವಳಿಗೆ ಅದನ್ನು ನನಗೆ ಹೇಳಬೇಕು ಎಂದು ಏಕೆ ಅನ್ನಿಸಿತೋ ಗೊತ್ತಿಲ್ಲ. ಏನಾದರೂ ಸಮಾಧಾನ ಆಗುವಂಥ ಪರಿಹಾರ ಹೇಳಬಹುದುದೆಂದು ಅವಳು ನನಗೆ ಕಾಲ್ ಮಾಡಿದ್ದಾಳೆ ಎಂದು ಊಹಿಸಿಕೊಂಡೆ. ಅವಳು ಆಡಿದ ಮಾತಿನ ಧಾಟಿಯನ್ನು ಗಮನಿಸಿ ನನಗೆ ಅನ್ನಿಸಿದ್ದು ಇಷ್ಟು. ಸ್ಟಾಫ್ ರೂಮಿನಲ್ಲಿ ಎಲ್ಲರೂ ತೆಗೆದುಕೊಳ್ಳುವಾಗ ಇವಳೊಬ್ಬಳೇ  `ಬೇಡ’ ಎಂದು ಹೇಳಿ ದುರ್ಜನ ಸಹೋದ್ಯೋಗಿಗಳ ಕೆಂಗಣ್ಣ ಕೋಪಕ್ಕೆ ಗುರಿಯಾಗಲಾರದೆ ಸುಮ್ಮನೆ ಕವರ್ ತೆಗೆದುಕೊಂಡಿದ್ದಾಳೆ. ಆದರೆ ಅವರು ಹೋದ ಮೇಲೆ ಅವಳಿಗೆ ಅದು ತಪ್ಪು ಅನ್ನಿಸಿದೆ. ಮನೆಗೆ ಬಂದ ಮೇಲೂ, ‘ಮಕ್ಕಳಿಗೆ ಸರಿತಪ್ಪುಗಳ ಬುದ್ಧಿಹೇಳುವ ಸ್ಥಾನದಲ್ಲಿರುವ ನಾನು ಈ ಕೆಲಸ ಮಾಡಿದ್ದು ಎಷ್ಟುಸರಿ’ ಎಂಬ ಜಿಜ್ಞಾಸೆ ಅವಳಿಗೆ ಕಾಡಿದೆ. ಹೀಗೆ ಆತ್ಮಸಾಕ್ಷಿ ಕಾಡುವುದು ಕೇವಲ ಈ ಮೂರನೆಯ ಗುಂಪಿನವರಿಗೆ ಮಾತ್ರ. ಮೊದಲನೆಯ ಗುಂಪಿನವರು ಸ್ವಭಾವತಃ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲವಾದ್ದರಿಂದ ಅವರಿಗೆ ಪಾಪಪ್ರಜ್ಞೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್ನು ಎರಡನೆಯ ಗುಂಪಿನವರು ನಾಚಿಕೆ, ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟಿರುವುದರಿಂದ ಅವರಿಗೆ ಆತ್ಮಸತ್ತುಹೋಗಿರುವುದರಿಂದ ಅದು ಕಾಡುವ ಪ್ರಶ್ನೆಯೇ ಬರುವುದಿಲ್ಲ. ತೊಳಲಾಟ ಏನಿದ್ದರೂ ಈ ಮೂರನೆಯ ಗುಂಪಿನವರಿಗೇ.

ಅವಳಿಗೆ ನಾನು ಹೇಳಿದ್ದು ಇಷ್ಟು: ನಿನ್ನಂತೆ ಅನೇಕರು ಪರಿಸ್ಥಿತಿಯ ಒತ್ತಡ, ಇನ್ಯಾವುದ್ಯಾವುದೋ ಕಾರಣಕ್ಕಾಗಿ ತಪ್ಪು ಮಾಡುತ್ತಿರುತ್ತಾರೆ. ಹೀಗೆ ತಪ್ಪುಮಾಡುವವರ ಒಳಗೆ ಒಂದು ಆತ್ಮಸಾಕ್ಷಿ ಎನ್ನುವುದು ಇದ್ದು ಇದು ಅವರನ್ನು ಕಾಡುತ್ತಿರುತ್ತದೆ. ಅದೇ ನಿನಗೂ ಕಾಡುತ್ತಿದೆ. ತೆಗೆದುಕೊಂಡ ಹಣವನ್ನು ನೀನು ಬಳಸಿಕೊಳ್ಳಬೇಡ. ಹಾಗಂತ ಅದನ್ನು ಈಗ ಮರಳಿ ಕೊಡಲು ಹೋಗುವುದೂ ಈಗ ಸರಿ ಆಗಲಿಕ್ಕಿಲ್ಲ. ಅದನ್ನು ನೀನು ಕಲಿಸುವ ಮಕ್ಕಳಿಗೆ ಏನನ್ನಾದರೂ ಕೊಡಿಸಿ ಖರ್ಚುಮಾಡಿಬಿಡು. ಇದು ಅತ್ಯುತ್ತಮ ಮಾರ್ಗವಲ್ಲದಿದ್ದರೂ ಸಧ್ಯಕ್ಕೆ ಇರುವ ಉತ್ತಮ ಆಯ್ಕೆ. ಇದರಿಂದ ಒಳ್ಳೆಯದನ್ನು ಮಾಡಿದೆ ಎಂಬ ಹೆಮ್ಮೆ ಮೂಡದಿದ್ದರೂ ಕೆಟ್ಟಪಾಪವನ್ನು ತೊಳೆದುಕೊಂಡೆ ಎಂಬ ಸಮಾಧಾನವಾದರೂ ಸಿಗುತ್ತದೆ. ಇಲ್ಲದೇ ಹೋದರೆ ಕಳ್ಳಬಸಿರಿನ ತಾಯಿಗೆ ಮಗು ಎದುರಿಗೆ ಬಂದಾಗಲೆಲ್ಲ ಚುಚ್ಚುವ ಮುಳ್ಳನೆನಪುಗಳಂತೆ ಇಂತಹ ಘಟನೆಗಳ ನೆನಪುಗಳು ಸದಾ ನಿನ್ನನ್ನು ಹಿಂಡುತ್ತಲೇ ಇರುತ್ತವೆ.” ಅವಳಿಗೆ ಸಮಾಧಾನವಾದಂತೆ ಕಂಡಿತು. ಫೋನ್ ಇಟ್ಟಳು.

ಶಿಕ್ಷಕ ಕ್ಷೇತ್ರದ ಚುನಾವಣೆಗಳು ಹೇಗೆ ನಡೆಯಬೇಕು ಅಂದರೆ ಅಭ್ಯರ್ಥಿಗಳಾದವರು ತಮ್ಮ ಸಾಧನೆ ಪರಿಚಯ ಚುನಾಯಿತರಾದರೆ ಮಾಡಲು ಉದ್ದೇಶಿಸಿರುವ ಕೆಲಸಗಳು ಇತ್ಯಾದಿಗಳ ಒಂದು ಕರಪತ್ರವನ್ನೋ ಚಿಕ್ಕ ಪುಸ್ತಿಕೆಯನ್ನೋ ರಚಿಸಿ ಅದನ್ನು ಡಿಜಿಟಲ್ ಮಾಧ್ಯಮದಲ್ಲೋ ಅವಶ್ಯವೆನಿಸಿದರೆ ಮುದ್ರಿತ ರೂಪದಲ್ಲಿಯೋ ಶಿಕ್ಷಕರಿಗೆ ತಲುಪಿಸಬೇಕು. ಅದನ್ನು ಓದಿಕೊಂಡು ತಮ್ಮದೇ ಆದ ವಿವೇಚನಾಶಕ್ತಿಯನ್ನು ಬಳಸಿ ಯಾರನ್ನು ಆಯ್ಕೆಮಾಡಿದರೆ ಶಿಕ್ಷಕರನ್ನು ವಿಧಾನಪರಿಷತ್ತಿನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು ಎಂದು ಅವರಿಗೆ ಅನ್ನಿಸುತ್ತದೆಯೋ ಅಂಥವರಿಗೆ ಮತಗಟ್ಟೆಗೆ ಹೋಗಿ ಶಿಕ್ಷಕರು ಮತಚಲಾಯಿಸಬೇಕು. ಇದಿಷ್ಟೇ ನಡೆಯಬೇಕಾದದ್ದು. ಇದರ ಹೊರತಾಗಿ ನಡೆಯುವುದೆಲ್ಲವೂ ಅನವಶ್ಯ ಮಾತ್ರವಲ್ಲ; ಶಿಕ್ಷಕರ ಘನತೆ-ಗೌರವಗಳಿಗೆ ಧಕ್ಕೆ ತರುವಂಥದ್ದು.  ಹಾಗೆ ನೋಡಿದರೆ ‘ಅವರಿಗೆ ಮತಹಾಕಿ ಇವರಿಗೆ ಮತಹಾಕಿ’ ಎಂದು ಕೇಳುವುದೂ ಇಲ್ಲಿ ಇರಬಾರದು. ಏಕೆಂದರೆ ಇದರಿಂದ ಯಾರಿಗೆ ಮತಹಾಕಬೇಕು ಎಂದು ಸ್ವತಂತ್ರವಾಗಿ ವಿಚಾರಮಾಡುವ ಶಕ್ತಿಯೂ ಶಿಕ್ಷಕರಿಗಿಲ್ಲ ಎಂದು ಇದರಿಂದ ಭಾವಿಸಿದಂತಾಗುತ್ತದೆ. 

ಆದರೆ ಈ ಚುನಾವಣೆಯ ಸ್ವರೂಪ ಎಷ್ಟು ಕೆಟ್ಟರೂಪವನ್ನು ತಾಳಿದೆ ನೋಡಿ. ಉಳಿದ ಚುನಾವಣೆಗಳಂತೆ ಇಲ್ಲಿಯೂ ಪ್ರೀ ವೆಡ್ಡಿಂಗ್ ಶೂಟ್ ಗಳ ರೀತಿಯಲ್ಲಿ ಪ್ರೀ ಎಲೆಕ್ಷನ್ ಕೂಟಗಳು ನಡೆಯುತ್ತಿವೆ. ಬಲಾಢ್ಯ ಮತ್ತು ಧನಾಢ್ಯ ಅಭ್ಯರ್ಥಿಗಳು ನಡೆಸುವ ಈ ಔತಣಕೂಟಗಳಲ್ಲಿ ನಮ್ಮ ಶಿಕ್ಷಕರು ಮದುವೆಮನೆ ಊಟಕ್ಕೆ ಹೋಗಿಬರುವಂತೆ ಯಾವ ಮುಜುಗರವೂ ಇಲ್ಲದೇ ಹೋಗಿ ‘ತೀರ್ಥ’ ‘ಪ್ರಸಾದ’ ಸ್ವೀಕರಿಸಿ ಬರುತ್ತಿದ್ದಾರೆ. ಅದರಲ್ಲಿಯೇ ಒಂದಿಷ್ಟು ಮಾನ ಮರ್ಯಾದೆ ಇಟ್ಟುಕೊಂಡವರು ತಾವು ಮತನೀಡಲು ಉದ್ದೇಶಿಸಿರುವ ಅಭ್ಯರ್ಥಿಗಳು ನಡೆಸುವ ಕೂಟಗಳಿಗೆ ಮಾತ್ರ ಹೋಗುತ್ತಿದ್ದರೆ ಮಾನ ಮರ್ಯಾದೆ ಎಲ್ಲವನ್ನೂ ಸಂಪೂರ್ಣ ಬಿಟ್ಟವರು ಎಲ್ಲ ಅಭ್ಯರ್ಥಿಗಳ ‘ಔತಣಕೂಟ’ಗಳಿಗೂ ಹಸಿದ ನಾಯಿಗಳಂತೆ ಓಡಿಹೋಗಿ, ತಿಂದು-ಕುಡಿದು ಬರುತ್ತಿದ್ದಾರೆ. ಇಂಥವರು ಹೀಗೆ ತಿಂದು-ಕುಡಿದು ಬಂದ ಎಲ್ಲ ಅಭ್ಯರ್ಥಿಗಳಿಗೂ ಮತಹಾಕಲು ಸಾಧ್ಯವಿಲ್ಲ. ಬಹಳ ಎಂದರೆ ಅವರಲ್ಲಿ ಒಬ್ಬರಿಗೆ ಮತಹಾಕಬಹುದು. ಉಳಿದವರ ಕೂಳು ತಿನ್ನುವಾಗ ಇವರಿಗೆ ಕನಿಷ್ಠ ಪಾಪಪ್ರಜ್ಞೆಯೂ ಕಾಡುವುದಿಲ್ಲ. ಏಕೆಂದರೆ ಪಾಪಪ್ರಜ್ಞೆ ಕಾಡಬೇಕಾದರೆ ಆತ್ಮಸಾಕ್ಷಿ ಇರಬೇಕಾಗುತ್ತದೆ. ಇಂಥವರಿಗೆ ‘ಶಿಕ್ಷಕ ಆತ್ಮ’ವೇ ಸತ್ತು ಪ್ರೇತಾತ್ಮವಾಗಿರುವುದರಿಂದ ಆತ್ಮಸಾಕ್ಷಿಯ ಪ್ರಶ್ನೆಯೇ ಹುಟ್ಟುವುದಿಲ್ಲ. ಇವರಲ್ಲಿ ಅನೇಕರನ್ನು ಚುನಾವಣಾ ಆಯೋಗ ಚುನಾವಣಾ ಸಮಯದಲ್ಲಿ ‘ಅಧ್ಯಕ್ಷಾಧಿಕಾರಿ’ಯಂಥ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸುತ್ತದೆ. ಇವರನ್ನು ಅಧ್ಯಕ್ಷಾಧಿಕಾರಿಯಲ್ಲ ಚುನಾವಣಾಧಿಕಾರಿಯನ್ನೇ ಮಾಡಿದರೂ ಇವರು ಮಾಡುವುದು ಇಂತಹ ಕಚಡಾ ಕೆಲಸವನ್ನೇ. ನಮ್ಮೂರಕಡೆ ಒಂದು ಗಾದೆ ಇದೆ. ನಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೊರಟರೂ ಅದು ಹೇಸಿಗೆ ಕಂಡ ತಕ್ಷಣ ಕೆಳಗೆ ಹಾರುತ್ತದೆ ಎಂದು! ಅದಕ್ಕೂ ಇವರಿಗೂ ಏನೂ ವ್ಯತ್ಯಾಸವಿಲ್ಲ.

ಕನಿಷ್ಠ ಆತ್ಮಸಾಕ್ಷಿ ಇರುವ ಶಿಕ್ಷಕರು ಈ ಹಂತದಲ್ಲಿಯೂ ಮಾಡಬಹುದಾದ ಉತ್ತಮ ಕೆಲಸವೊಂದಿದೆ. ಅದೆಂದರೆ ಈ ರೀತಿ ತಮಗೆ ಏನೇನೋ ಹಂಚಿಕೆ ಮಾಡಿದವರಿಗೆ ‘ಋಣ ತೀರಿಸುವ’ ಕೆಲಸ ಮಾಡದೆ ಅವರನ್ನು, ಅವರು ಯಾರೇ ಆಗಲಿ, ಚುನಾವಣೆಯಲ್ಲಿ ಸೋಲಿಸುವ ಮೂಲಕ ಸಮಾಜಕ್ಕೆ ‘ನಾವು ಖರೀದಿಸಲ್ಪಡುವ ಜೀತದಾಳುಗಳಲ್ಲ’ ಎಂಬ ಸಂದೇಶ ನೀಡುವುದು. ಬಲಾಢ್ಯ ಮತ್ತು ಧನಾಡ್ಯ ಅಭ್ಯರ್ಥಿಗಳ ಕಾಲಾಳಾಗಿಯೋ ಜೀತದಾಳುಗಳಾಗಿಯೋ ಇರುವುದಕ್ಕಿಂತ, ಅವರ ಹಾಕುವ ಬಿಕ್ಷೆಗೆ ಬಾಯಿ ತೆಗೆದುಕೊಂಡು ಕೂರುವ ಬಿಕಾರಿಗಳಾಗದೆ, ವಿಧಾನಪರಿಷತ್ತಿನಲ್ಲಿ ತಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಬಲ್ಲ, ಆದಷ್ಟೂ ಕೈಯಲ್ಲಿ ದುಡ್ಡುಕಾಸು ಇಲ್ಲದಂತಹ, ತಮ್ಮೊಳಗಿನ ಒಬ್ಬ ಪ್ರತಿಭಾವಂತ ಶಿಕ್ಷಕನನ್ನೋ ಅಥವಾ ಶಿಕ್ಷಕಿಯನ್ನೋ ಆಯ್ಕೆಮಾಡುವುದು. ಇದನ್ನು ಮಾಡದಿದ್ದರೆ ಮತ್ತು ಈ ರೀತಿ ಗುಂಡು-ತುಂಡು-ಕವರ್ರು ಕೊಟ್ಟವರನ್ನೇ ಆರಿಸಿ ತಂದರೆ ಅವರ ರಾಜಕೀಯ ಭವಿಷ್ಯ ಏನಾಗುವುದೋ ಆದರೆ ಶಿಕ್ಷಕರ ಸಮುದಾಯಕ್ಕೆ ಮಾತ್ರ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿ. ಓದು ಬರೆಹ ಬರದ ಕುಡಿತದ ಚಟವಿರುವ ಒಬ್ಬ ಅನಕ್ಷರಸ್ಥ ಮತದಾರನನ್ನು ಒಂದು ಸರಾಯಿ ಬಾಟಲಿ ಕೊಟ್ಟು ಬುಟ್ಟಿಗೆ ಹಾಕಿಕೊಂಡಷ್ಟೇ ಸುಲಭವಾಗಿ ಈ ಬುದ್ಧಿಗೇಡಿ ಮೇಷ್ಟ್ರುಗಳನ್ನೂ ಒಂದು ಡೈರಿಯನ್ನೋ, ಬ್ಯಾಗನ್ನೋ, ಕವರನ್ನೋ ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಬಹುದು ಎಂದು ಅವರಿಗೆ ಮನವರಿಕೆಯಾಗಿ ಅವರು ಅದನ್ನು ಮಾಡುತ್ತಹೋಗುತ್ತಾರೆ. ಆಗ ವಿಧಾನಪರಿಷತ್ತಿನ ಈ ಕ್ಷೇತ್ರ ‘ಶಿಕ್ಷಕರ ಕ್ಷೇತ್ರ’ ಎಂಬ ಘನತೆಯನ್ನು ಕಳೆದುಕೊಂಡು ನಿಜಾರ್ಥದಲ್ಲಿ ‘ಡಬಲ್ ಡಿಗ್ರಿ ಗುಗ್ಗುಗಳ ಕ್ಷೇತ್ರ’ವಾಗಿಬಿಡುತ್ತದೆ!

ಈ ದೇಶದಲ್ಲಿ ಈಗಲೂ ಶಿಕ್ಷಕರಿಗೆ ಒಂದಿಷ್ಟು ಬೆಲೆಯಿದೆ. ಈಗಲೂ ಒಬ್ಬ ಮೇಷ್ಟ್ರು ನಮ್ಮಲ್ಲಿ ಕೇವಲ ಒಬ್ಬ ಸರ್ಕಾರಿ ನೌಕರ ಅಲ್ಲ. ಒಬ್ಬ ಶಿಕ್ಷಕನಿಗೆ ಅಥವಾ ಶಿಕ್ಷಕಿಗೆ ಶಾಲೆಬಿಟ್ಟಮೇಲೂ ಎದುರಿಗೆ ಬಂದ ಜನ ‘ನಮಸ್ಕಾರ’ ಅನ್ನುತ್ತಾರೆ. ಅವರು ವಾಸಿಸುವ ಮನೆಯನ್ನು ಹೆಸರಿನಿಂದ ಕರೆಯದೇ ‘ಮೇಷ್ಟ್ರಮನೆ’ ಎನ್ನುತ್ತಾರೆ. ಅಷ್ಟೇ ಏಕೆ ಅವರು ಸತ್ತಮೇಲೂ ಆ ಮನೆಗೆ ‘ಮೇಷ್ಟ್ರಮನೆ’ ಎಂದು ಕರೆಯುತ್ತಾರೆ. ಈ ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸಗಳಿಗೆ ನಮ್ಮ ಶಿಕ್ಷಕರು ಕೈಹಾಕಬಾರದು. ಬಹಳಷ್ಟು ಶಿಕ್ಷಕರಿಗೆ ‘ಸಮಾಜ ಹಿಂದಿನಂತೆ ಶಿಕ್ಷಕರಿಗೆ ಗೌರವ ಕೊಡುತ್ತಿಲ್ಲ’ ಎಂಬ ನೋವಿದೆ. ಅದಕ್ಕೆ ಬಹುಪಾಲು ನಾವೇ ಕಾರಣ ಎಂಬುದರ ಕಡೆಗೆ ಅವರಿಗೆ ಗಮನವಿಲ್ಲ. ದೇಶದ ಹಿತ, ಸಮಾಜದ ಹಿತ ಬಯಸುವ ಶಿಕ್ಷಕರು ಸಣ್ಣ ತಪ್ಪು ಮಾಡಿದರೂ ಅದು ದೊಡ್ಡದಾಗಿ ಕಾಣುವುದು ಅವರ ಮೇಲಿನ ಗೌರವದಿಂದಲೇ ಹೊರತು ಬೇರೆ ಏನೂ ಅಲ್ಲ. ಹಾಗಾಗಿ ಶಿಕ್ಷಕರು ಅದೂ ಕೈತುಂಬ ಸಂಬಳ ಪಡೆಯುವ ಈ ಕಾಲಘಟ್ಟದಲ್ಲಿ ಯಾವುದೇ ಎಂಜಲಿಗೆ ಕೈಯೊಡ್ಡುವ, ಅದನ್ನು ‘ಮಹಾಪ್ರಸಾದ’ವೆಂದು ಸ್ವೀಕರಿಸಿ, ಸವಿಯುವ ಹಂತಕ್ಕೆ ಇಳಿಯಬಾರದು. ಇಂತಹ ಹೇಸಿಗೆಹಣ ಸ್ವೀಕರಿಸುವ ಕೆಲಸ ಮಾಡುವ ಶಿಕ್ಷಕರು ತರಗತಿಯಲ್ಲಿ ಬಸವಣ್ಣನವರ ‘ಪರಧನವನೊಲ್ಲೆ, ಪರಸತಿಯನೊಲ್ಲೆ’ ಎಂಬ ವಚನವನ್ನು ತಲೆಯೆತ್ತಿ ಮಕ್ಕಳ ಮುಖನೋಡಿ ಧೈರ್ಯದಿಂದ ಹೇಗೆ ಪಾಠಮಾಡಲು ಸಾಧ್ಯವಾಗುತ್ತದೆ. ಮನಸ್ಸಿನೊಳಗೇ ವಚನವನ್ನು ‘ಪರಧನವ ಬಲ್ಲೆ; ಪರಸತಿಯನೂ ಬಲ್ಲೆ ಎಂದು ತಿದ್ದಿಕೊಳ್ಳಬೇಕಾಗುತ್ತದೆ ಅಷ್ಟೆ! ಇಂತಹ ದಯನೀಯ ಸ್ಥಿತಿ ಯಾವ ಶಿಕ್ಷಕರಿಗೂ ಬರದಿರಲಿ.

ಯಾರಾದರೂ `ನೀನು ಕೊಳಚೆಗುಂಡಿಯಲ್ಲಿ ಬಿದ್ದಿದ್ದೀಯಾ’ ಎಂದರೆ ಅದನ್ನು ಪರಿಶೀಲಿಸಿಕೊಂಡು ಸರಿಯಾಗಿದ್ದರೆ ಕೊಳಚೆಗುಂಡಿಯಿಂದ ಮೇಲೆ ಬರುವುದರಕಡೆಗೆ ನಮ್ಮ ಗಮನ ಹರಿಯಬೇಕೆ ಹೊರತು ‘ನಾನೊಬ್ಬನೆ ಬಿದ್ದಿದ್ದೀನಾ. ನೋಡಿಲ್ಲಿ ಎಷ್ಟೊಂದು ಜನ ಇದ್ದಾರೆ ಎಂದು ಕೊಳಚೆಗುಂಡಿಯಲ್ಲಿ ತನ್ನೊಂದಿಗೆ ಕುಣಿದುಸಂತೋಷಪಡುವವರನ್ನು ತೋರಿಸಿ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಕಡೆ ಗಮನ ಹರಿಸಬಾರದು. ಇದು ಶಿಕ್ಷಣದ ಅಭ್ಯುದಯದ ಕಡೆಗೆ ಇಡುವ ಬೆಲೆಯುಳ್ಳ ಹೆಜ್ಜೆ. ಇಲ್ಲದೇ ಹೋದರೆ, ‘ಏರಿ ನೀರುಂಬುವೊಡೆ, ನಾರಿಯೇ ಮನೆಯಲ್ಲಿ ಕಳವುವೊಡೆ ಇನ್ಯಾರಿಗೆ ದೂರಲಯ್ಯ’ ಎಂಬ ಅಸಹಾಯಕತೆಯ ಕತ್ತಲು ನಮ್ಮ ಸಮಾಜವನ್ನು ಆವರಿಸುತ್ತದೆ. ಹಾಗಾಗದಿರಲಿ.

ರಾಜೇಂದ್ರ ಬುರಡಿಕಟ್ಟಿ

30 ಮೇ 2024