Saturday, May 17, 2025

ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?

 ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?


ತ್ರಿಭಾಷಾ ಸೂತ್ತ ಉತ್ತರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರುತ್ತದೆ. ನಾವು ಅಂದರೆ ದಕ್ಷಿಣದವರು ಹಿಂದಿಗೆ ಕೊಡುವ ಕಾಲುಭಾಗ ಗೌರವ ಮಾನ್ಯತೆಗಳನ್ನೂ ಅಲ್ಲಿ ಉತ್ತರದಲ್ಲಿ ಕೊಡುವುದಿಲ್ಲ. ಅವರ ಅಲ್ಪಸ್ವಲ್ಪ ಗೌರವ ಏನಾದರೂ ಇದ್ದರೆ ಅದು ತಮಿಳುನಾಡು ಬಗ್ಗೆ ಮತ್ತು ತಮಿಳು ಭಾಷೆಯ ಬಗ್ಗೆ. ಕನ್ನಡವಂತೂ ಅವರಿಗೆ ಲೆಕ್ಕಕ್ಕೆ ಇಲ್ಲ.
ಈ ಧೋರಣೆ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಊರುಫಲಕಗಳನ್ನು ಗಮನಿಸಿ. ದಕ್ಷಿಣ ಭಾರತದ ರೈಲ್ವೇನಿಲ್ದಾಣಗಳ ಹೆಸರುಗಳು ಪ್ರಾದೇಶಿಕ ಭಾಷೆ, ಭಾರತದ ಬಹುಜನರ ಭಾಷೆಯಾದ ಹಿಂದಿ, ಮತ್ತು ಜಾಗತಿಕ ಭಾಷೆಯ ಮಾನ್ಯತೆ ಪಡೆದಿರುವ ಇಂಗ್ಲಿಷ್‌ ಈ ಮೂರರಲ್ಲಿ ಇರುತ್ತವೆ. ಹಾಗಾದರೆ ಪ್ರಾದೇಶಿಕ ಭಾಷೆ ಮತ್ತು ಭಾರತದ ಬಹುಜನರ ಭಾಷೆ ಒಂದೇ ಆಗಿರುವ ಹಿಂದಿ ಪ್ರದೇಶಗಳಲ್ಲಿ ಅವರು ಮೂರನೆ ಭಾಷೆಯನ್ನಾಗಿ ಯಾವುದನ್ನು ಸೇರಿಸುತ್ತಾರೆ? ಉರ್ದು. ಉತ್ತರ ಭಾರತದ ನಿಲ್ದಾಣಗಳ ಬಹುತೇಕ ಹೆಸರುಗಳು ಇರುವುದು ಹಿಂದಿ, ಉರ್ದು ಮತ್ತು ಇಂಗ್ಲಿಷ್‌ ನಲ್ಲಿ. ಒಟ್ಟಿನಲ್ಲಿ ಮೂರು ಭಾಷೆ ಮಾಡಲು ಉರ್ದು ಸೇರಿಸಿದ್ದಾರೆ. ಉರ್ದು ಸೇರಿಸಿಕೊಳ್ಳಲು ಒಂದು ನಿರ್ದಿಷ್ಠ ಮಾನದಂಡ ಅನುಸರಿಸಿದಂತಿಲ್ಲ. ಏಕೆಂದರೆ ಉರ್ದು ಭಾಷಿಕರು ಕೇವಲ ಉತ್ತರ ಭಾರತದಲ್ಲಿಲ್ಲ ದಕ್ಷಿಣದಲ್ಲೂ ಇದ್ದಾರೆ. ಹಾಗೆ ನೋಡಿದರೆ ಉರ್ದು ಹುಟ್ಟಿದ್ದೇ ದಕ್ಷಿಣದಲ್ಲಿ ಉತ್ತರದಲ್ಲಿ ಅಲ್ಲ!
ಇನ್ನು ದೇಶದ ಬಹಳಷ್ಟು ಜನ ಬರುವ ತೀರ್ಥಕ್ಷೇತ್ರಗಳಲ್ಲಿ ಸ್ಥಳಗಳ ಹೆಸರುಗಳನ್ನು ಭಾರತದ ಎಲ್ಲ ಅಧಿಕೃತ ಭಾಷೆಗಳಲ್ಲಿ ಬರೆಯುವ ಕೆಲಸವನ್ನು ಕೆಲವು ಕಡೆ ಮಾಡಲಾಗಿದೆ. ಅಯೋಧ್ಯೆಯ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಕನ್ನಡ ಬಿಟ್ಟು ಉಳಿದ ದಕ್ಷಿಣ ಭಾಷೆಗಳಲ್ಲಿ ಅಲ್ಲಿನ ಹೆಸರನ್ನು ಬರೆದಿದ್ದಾರೆ. ಹಾಗೆ ನೋಡಿದರೆ ರಾಮನನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವರು, ರಾಮನ ಹೆಸರಿನಲ್ಲಿ ಗಲಾಟೆ ಮಾಡುವವರು ಕೇರಳ, ತಮಿಳುನಾಡುಗಳಿಗಿಂತ ಕರ್ನಾಟಕದಲ್ಲಿಯೇ ಹೆಚ್ಚು ಇರುವುದು. ಕನ್ನಡಿಗರೆಲ್ಲರಿಗೆ ಅಲ್ಲದಿದ್ದರೂ ಈ ʻಉದ್ರಿಕ್ತ ರಾಮಭಕ್ತʼರಿಗೆ ಗೌರವ ಕೊಡಲಿಕ್ಕಾದರೂ ಈ ಅಯೋಧ್ಯೆಯವರು ಕನ್ನಡ ವನ್ನು ಬಳಸಬೇಕಿತ್ತಲ್ಲವೇ? ಇದು ಅವರಿಗೆ ಅವಮರ್ಯಾದೆ ಮಾಡಿದಂತೆ ಅಲ್ಲವೆ? ಕರ್ನಾಟಕದವರು ಅಯೋಧ್ಯೆಗೆ ಹೋಗುವುದು ಬೇಡವೇ? ಅಯೋಧ್ಯೆಯ ಸಂಧಿಮೂಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನೂ ನಾನು ಸುತ್ತಾಡಿ ನೋಡಿದೆ. ಎಲ್ಲಕಡೆಯೂ ಇದೇ ಕಥೆ. ಕರ್ನಾಟಕದ ಹನುಮಂತ ಅಲ್ಲಿ ಬೀದಿಬೀದಿಯಲ್ಲಿದ್ದಾನೆ; ಕನ್ನಡ ಇಲ್ಲ!
ಮೊನ್ನೆ ಪ್ರಯಾಗರಾಜ್‌ ನಲ್ಲಿ ಕುಂಭ ಮೇಳ ನಡೆದ ತ್ರಿಮೇಣಿ ಸಂಗಮದಲ್ಲಿ ಸುತ್ತಾಡಿ ದೋಣಿವಿಹಾರ ಮಾಡಿ ಜನ ಮುಳುಗಿ ಏಳುತ್ತಿದ್ದ ಸ್ಥಳಕ್ಕೆ ದೋಣಿಯಲ್ಲಿಯೇ ಹೋಗಿ ಅವರು ಮುಳುಗಿ ಏಳುವುದನ್ನೂ ಒಬ್ಬರು ಗಲೀಜು ಮಾಡಿದ ನೀರನ್ನು ಇನ್ನೊಬ್ಬರು ತೀರ್ಥವೆಂದು ಕುಡಿಯುವುದನ್ನೂ ಕ್ಯಾನುಗಳಿಗೆ ತುಂಬಿಕೊಂಡು ಹೋಗುವುದನ್ನು ಹತ್ತಿರದಿಂದ ನೋಡಿ ನಾನು ಅವೆರಡನ್ನೂ ಮಾಡದೆ ನೀರಿನಲ್ಲಿ ಗಲೀಜು ಹೆಕ್ಕಿ ತೆಗೆಯುತ್ತಿದ್ದ ಉತ್ತರ ಪ್ರದೇಶ ಸರ್ಕಾರದ ವಾಹನ ಚಾಲಕನನ್ನು ಮಾತಾಡಿಸಿ ತೇಲುವ ಮುಳುಗುವ ತೆಂಗಿನಕಾಯಿಗಳು ಪ್ಲಾಸ್ಟಿಕ್‌ ಬ್ಯಾಗುಗಳು, ಹೂವುಗಳು ಇತ್ಯಾದಿ ನೋಡುತ್ತಾ ದೋಣಿ ಇಳಿದು ಯಮುನಾ ನದಿ ದಂಡೆಯ ಮೇಲೆಯೇ ಇದ್ದ ಈಗ ಬಹುಪಾಲು ನಮ್ಮ ಸೇನೆಯ ವಶದಲ್ಲಿರುವ ಅಕ್ಬರನ ಅಲಹಾಬಾದ್‌ ಕೋಟೆ, ಅದಕ್ಕೆ ಹೊಂದಿಕೊಂಡೇ ಇರುವ ಇತಿಹಾಸ ಪ್ರಸಿದ್ಧ ಪಾತಾಳಪುರಿ, ಶ್ರೀರಾಮಚಂದ್ರನ ವನವಾಸದ ಆರಂಭದಲ್ಲಿ ಅವನು ತಮ್ಮ ಮತ್ತು ಹೆಂಡತಿಯೊಂದಿಗೆ ಪ್ರಯಾಗರಾಜ್‌ ಗೆ ಬಂದಾಗ ಅವನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣುವಂತೆ ಹೇಳಿದ ಭಾರಧ್ವಜ ಮುನಿಯ ಆಶ್ರಮ ನೋಡಿಕೊಂಡು ಬರುತ್ತಿದ್ದೆ.
ದಾರಿಯಲ್ಲಿಯೇ ಇರುವ ʻಅಲೋಪಶಂಕರಿ ದೇವಸ್ಥಾನʼದ ಹತ್ತಿರ ಗಾಡಿ ನಿಲ್ಲಿಸಿದ ನನ್ನ ಡ್ರೈವರ್‌ ಒಳಗೆ ಹೋಗಿ ಬರಲು ಸಲಹೆ ಮಾಡಿದ. ʻಇಂತಹ ನೂರಾರು ದೇವಸ್ಥಾನಗಳು ನಮ್ಮ ಊರುಗಳಲ್ಲಿಯೇ ಇವೆ ಬಿಡಪ್ಪ ಇವನ್ನು ನೋಡಲಿಕ್ಕೆ ಇಲ್ಲಿಗೆ ಬರಬೇಕಾ?ʼ ಎಂಬ ಉದಾಶೀನತೆಯಿಂದಲೇ ನಾನು ಗಾಡಿ ಇಳಿದು ಒಳಗೆ ಹೋದೆ. ಸಂತೋಷಕ್ಕೆ ತಪ್ಪುತಪ್ಪಾಗಿಯಾದರೂ ʻಕುಡಿಯುವ ನೀರುʼ ಎಂದು ಉಳಿದ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಫಲಕವನ್ನು ಬರೆದದ್ದನ್ನು ನೋಡಿ ನೀರು ಕುಡಿದಷ್ಟೇ ಸಮಾಧಾನವಾಯಿತು.
ಹಾಗೇ ಒಳಗೆ ಹೋಗಿ ದೇವರನ್ನು ಒಂದು ಸುತ್ತು ಹಾಕಿಕೊಂಡು ಬರೋಣವೆಂದು ಹೋಗಿ ಸುತ್ತು ಹೊಡೆಯುವಾಗ ನನಗೆ ಆಶ್ಚರ್ಯವೆಂಬಂತೆ ಬೇರೆ ಯಾವ ಭಾಷೆಯಲ್ಲೂ ಇಲ್ಲದ ಶುದ್ಧವಾಗಿ ಕೈಯಲ್ಲಿ ಬರೆದು ಹಾಕಿದ ಒಂದು ಸೂಚನಾ ಫಲಕವಿತ್ತು. ಅದನ್ನು ಕುತೂಹಲದಿಂದ ಓದಿದೆ: ಅದು ಹೀಗಿತ್ತು: “ದೇವಸ್ಥಾನದ ಆವರಣದಲ್ಲಿ ಕಳ್ಳರಿದ್ದಾರೆ ಜಾಗ್ರತೆ. ತಮ್ಮ ಅಮೂಲ್ಯ ವಸ್ತುಗಳಿಗೆ ತಾವೇ ಜವಾಬ್ದಾರರು. ಕಳ್ಳರಿದ್ದಾರೆ ಎಚ್ಚರಿಕೆ.”
ಇಂತಹ ಬೋರ್ಡುಗಳನ್ನು ನೋಡಿಯೇ ನನಗೆ ದೇವರ ಮೇಲಿದ್ದ ನಂಬಿಕೆ ಹೊರಟುಹೋದದ್ದು. ಒಮ್ಮೆ ಧರ್ಮಸ್ಥಳಕ್ಕೆ ಯಾರನ್ನೋ ಭಕ್ತರನ್ನು ಕರೆದುಕೊಂಡು ಡ್ರೈವರ್‌ ಆಗಿ ಹೋದಾಗ ಅವರು ಮಂಜುನಾಥ ಸ್ವಾಮಿಯ ದರ್ಶನ ಮತ್ತು ಪ್ರಸಾದಕ್ಕೆಂದು ಒಳಗೆ ಹೋದಾಗ ಅಲ್ಲಿನ ದೇವಸ್ಥಾನದ ಆವರಣದಲ್ಲಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದೆ. ಅಲ್ಲಿಯೂ ಇಂಥದ್ದೇ ಸೂಚನಾ ಫಲಕವಿತ್ತು. ಅದನ್ನು ನೋಡಿ ದೇವರು ಇಡೀ ಜಗತ್ತನ್ನು ಕಾಯುತ್ತಾನೆ ನಮ್ಮನ್ನೂ ನಮ್ಮ ವಸ್ತುಗಳನ್ನೂ ಕಾಯುತ್ತಾನೆ ಎಂದು ಜನ ಇಲ್ಲಿಗೆ ಬಂದರೆ ಇವರು ನೋಡಿದರೆ ಹೀಗೆ ಬೋರ್ಡು ಹಾಕಿದ್ದಾರಲ್ಲ ಎಂದು ಆಶ್ಚರ್ಯಪಟ್ಟಿದ್ದೆ.


ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತೀ ಅವರನ್ನು ಅವರ ಪಾಲಕರು ಚಿಕ್ಕಮಗುವಿದ್ದಾಗ ಒಮ್ಮೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ದೇವರ ಮೂರ್ತಿಯ ಮೇಲೆ ಇಲಿ ಓಡಾಡಿದ್ದನ್ನು ನೋಡಿದ ಬಾಲಕ ದಯಾನಂದ ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ,” ತನ್ನ ಮೈಮೇಲಿನ ಇಲಿಗಳನ್ನೇ ಓಡಿಸಿಕೊಳ್ಳಲಾರದ ದೇವರು ಜಗತ್ತಿನ ಜನರ ಸಮಸ್ಯೆಗಳನ್ನು ಹೇಗೆ ಓಡಿಸುತ್ತಾನೆ?” ಎಂಬುದು. ಆದರೂ ಜನರ ನಂಬಿಕೆ ಅನ್ನುವುದು ಬಹಳಷ್ಟು ಗಟ್ಟಿಯಾದದ್ದು!
ಇಂತಹ ಬೋರ್ಡುಗಳು ಈಗ ಎಲ್ಲ ದೇವಸ್ಥಾನಗಳಲ್ಲಿಯೂ ಸಾಮಾನ್ಯವಾಗಿವೆ. ನಮ್ಮ ವಸ್ತುಗಳನ್ನು ನಾವೇ ಕಾಯ್ದುಕೊಳ್ಳುವುದಾದರೆ , ಅವನ್ನು ಕದ್ದವರು ರಕ್ತಕಾರಿ ಸಾಯುವಂತೆ ಮಾಡದಿದ್ದರೆ ಅದು ನಮ್ಮಂಥ ಪರಮಭಕ್ತರಿಗೆ ದೇವರು ಮಾಡುವ ಅವಮಾನವಲ್ಲವೇ? ಎಂದು ಯಾರೂ ಅಂದುಕೊಳ್ಳುವ ಪಾಪ ಮಾಡಲಾರರು. ಅವರ ಶ್ರದ್ಧೆ, ನಂಬಿಕೆ ಅಷ್ಟರ ಮಟ್ಟಿಗೆ ಅಚಲವಾಗಿರುತ್ತದೆ.
ಆದರೆ ಈ ಅಲೋಪಶಂಕರಿ ದೇವಸ್ಥಾನದ ಈ ಬೋರ್ಡನ್ನು ನೋಡಿ ನನಗೆ ಆಶ್ಚರ್ಯವಾದದ್ದು ಏಕೆಂದರೆ ಕುಡಿಯುವ ನೀರಿನ ಸೂಚನೆಯಂತೆ ಇಲ್ಲಿ ಕನ್ನಡದ ಜೊತೆಗೆ ಇತರ ಯಾವುದೇ ಭಾಷೆಗಳಿರಲಿಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಈ ಕಳ್ಳರ ಸೂಚನೆಯ ಫಲಕ ಇದ್ದದ್ದು ಏಕೆ ಎಂದು. ಸುತ್ತಮುತ್ತ ಕಣ್ಣಾಡಿಸಿದೆ. ಬೇರೆ ಯಾವ ಭಾಷೆಗಳಲ್ಲಿಯೂ ಈ ಕಳ್ಳರ ಎಚ್ಚರಿಕೆಯ ಫಲಕಗಳು ಇರಲಿಲ್ಲ. ನನ್ನಲ್ಲಿ ಮೂಡಿದ ಪ್ರಶ್ನೆಗಳು ಇವು: ಕನ್ನಡಿಗರು ತೀರಾ ಕಡಿಮೆ ಸಂಖ್ಯೆಯಲ್ಲಿ ಬರುವ ಉತ್ತರ ಪ್ರದೇಶದಲ್ಲಿನ ಈ ದೇವಸ್ಥಾನದಲ್ಲಿ ಕಳ್ಳರ ಸೂಚನೆಯ ಬಗ್ಗೆ ದೂರದ ಕರ್ನಾಟಕದ ಭಾಷೆ ಕನ್ನಡದಲ್ಲಿ ಸೂಚನೆ ಹಾಕಲು ಏನು ಕಾರಣವಿರಬಹುದು? ಕಳ್ಳರಿರುವುದು ಕನ್ನಡಿಗರಿಗೆ ಮಾತ್ರ ಏಕೆ ಗೊತ್ತಾಗಬೇಕು?
*****
ರಾಜೇಂದ್ರ ಬುರಡಿಕಟ್ಟಿ
೧೬-೦೫-೨೦೨೫

Thursday, May 15, 2025

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ಪ್ರಯಾಗ್ ರಾಜ್ ಎಂದರೆ ಬರಿ ಕುಂಭಮೇಳವೇ!?

ತೀರ್ಥಕ್ಷೇತ್ರಗಳಿಗೆ  ಹೋಗುವವರಲ್ಲಿ ಎರಡು ರೀತಿಯ ಜನರಿರುತ್ತಾರೆ. ಪವಿತ್ರ ದಿನ ಎಂದು ಅವರು ಭಾವಿಸುವ ದಿನಗಳಂದೇ ಅದು ಎಷ್ಟೆಲ್ಲ ಕಷ್ಟ ತಮಗೆ ಮತ್ತು ಇತರರಿಗೆ ಆದರೂ ಸರಿ ಅಂದೇ ಅಲ್ಲಿಗೆ ಹೋಗಿ ದಟ್ಟಣೆಯನ್ನು ಉಂಟು ಮಾಡುವವರು ಒಂದು ಬಗೆಯವರಾದರೆ ಧಾರ್ಮಿಕ ಆಚರಣೆಗಳಲ್ಲಿ ಅಷ್ಟಾಗಿ ನಂಬಿಕೆ ಇರದಿದ್ದರೂ ಯಾವಾಗಲೋ ಸಮಯ ಸಿಕ್ಕಾಗ ಇಂತಹ ಸ್ಥಳಗಳಿಗೆ ಹೋಗಿ ಒಂದು ಸುತ್ತು ಹೊಡೆದು ಅಲ್ಲಿನ ಪರಿಸರಸೌಂದರ್ಯ, ಜನವರ್ತನೆ ಇತ್ಯಾದಿಗಳನ್ನು ನೋಡಿಕೊಂಡು ಬರುವಂತಹ ನನ್ನಂಥವರು ಇನ್ನೊಂದು ಬಗೆಯವರು. 

ನಿನ್ನೆ ಮಹಾ ಕುಂಭಮೇಳ ನಡೆದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮಕ್ಕೆ ಹಿಂಗೇ ಹೋಗಿದ್ದೆ. ಬಹಳ ದಟ್ಟಣೆ ಇರದಿದ್ದರೂ ಜನ ಇದ್ದರು. ದೋಣಿ ವಿಹಾರ ಮಾಡಿ ಅಲ್ಲಿನ ನಿಸರ್ಗ ಸೌಂದರ್ಯ ಸವಿದೆ. ನದಿ ಕೂಡುವಲ್ಲಿ ನಾನು ಮುಳುಗಿ ಏಳದಿದ್ದದ್ದು ಮತ್ತು ಗಂಗಾಪೂಜೆ ಮಾಡದೇ ಇದ್ದದ್ದು ನನ್ನ ದೋಣಿಯವನಿಗೆ ಸಹಜವಾಗಿಯೇ ಆಶ್ಚರ್ಯ ಉಂಟುಮಾಡಿತು. 'ಇಂತಹವರು ಇಲ್ಲಿಗೆ ಬರುವುದಾದರೂ ಏತಕ್ಕೆ' ಎಂದು ಅವನಿಗೆ ಅನ್ನಿಸಿರಲೂಬ‌ಹುದು. ಭಕ್ತರು ಗಂಗಾ ಯಮುನಾ ಸರಸ್ವತಿ ಮೂರೂ ನದಿ ಮಾತೆಯರಿಗೆ ಎಂದು ಮೂರು ಮೂರು ತೆಂಗಿನಕಾಯಿ ತೆಗೆದುಕೊಂಡು ಪೂಜೆ ಸಲ್ಲಿಸಿ ನದಿಗೆ ಅವುಗಳನ್ನು ತಂದ ಪ್ಲಾಸ್ಟಿಕ್ ಚೀಲದೊಂದಿಗೆ ಹಾಕುತ್ತಿದ್ದರು. ಉತ್ತರ ಪ್ರದೇಶ ಸರ್ಕಾರದ ವಾಹನವೊಂದು ಇವುಗಳನ್ನು ಎತ್ತುತ್ತಾ ನೀರು ಶುದ್ಧೀಕರಣ ಮಾಡುತ್ತಲೇ ಇತ್ತು. ಕುಂಭಮೇಳ ನಡೆದು ಇಷ್ಟು ದಿನ ಆದರೂ ಅದರ ಪಳೆಯುಳಿಕೆಗಳು ಕಿಲೋಮೀಟರ್ ಗಟ್ಟಲೆ ಅಗಲವಾಗಿರುವ ಗಂಗೆಯ ಅಂಗಳದಲ್ಲಿ ಇನ್ನೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನಸ್ಸು ಸ್ವಚ್ಛ ಆಗದೆ ನದಿಗಳು ಸ್ವಚ್ಛ ಹೋಗುವುದಾದರೂ ಹೇಗೆ?

ಇವೆಲ್ಲ ನೋಡಿಕೊಂಡು ನನ್ನ ದೋಣಿಗೆ ಹುಟ್ಟುಹಾಕಿದ ಬಿಹಾರಿವಾಲಾಗೆ ನಿಗದಿಯಾದ ಹಣಕ್ಕಿಂತ ತುಸು ಹೆಚ್ಚೇ ಹಣವನ್ನು ಕೈಗಿಟ್ಟೆ. ಪೂಜೆ ಮಾಡಿಸದ ಕಾರಣಕ್ಕೆ ನನ್ನನ್ನು ತುಸು ಅನುಮಾನದಿಂದ ನೋಡಿದ್ದ ಅವನಿಗೆ ಈಗ ಬಡತನವನ್ನು ಭಕ್ತರಿಗಿಂತ ನನ್ನಂತಹ ನಾಸ್ತಿಕರೇ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಹಾಯ ಹಸ್ತ ಚಾಚುತ್ತಾರೆ ಅನ್ನಿಸಿರಬೇಕು. ಕೃತಜ್ಞತೆಯಿಂದ ಕೈ ಮುಗಿದ.

ಪ್ರಯಾಗ್ ರಾಜ್ ಅಂದರೆ ಬರೀ ಕುಂಭಮೇಳ ಮಾತ್ರ ಅಲ್ಲ. ಅಲ್ಲಿ ನಾವು ನೋಡಬೇಕಾದ ಅನೇಕ ಮಹತ್ವದ ಸ್ಥಳಗಳಿವೆ. ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಬ್ರಿಟೀಷರೊಂದಿಗಿನ ಕಾಳಗದಲ್ಲಿ ಜೀವತ್ಯಾಗ ಮಾಡಿದ ಸ್ಥಳವನ್ನು ಸ್ಮಾರಕ ಉದ್ಯಾನವಾಗಿ ಮಾಡಿದ್ದಾರೆ. ಅಲ್ಲಿಗೆ ಕಾಲಿಟ್ಟರೆ ಸಾಕು ಹೆಮ್ಮೆ ಗೌರವದ ಭಾವನೆ ಮೂಡುತ್ತದೆ. ಅದರ ಪಕ್ಕದಲ್ಲಿ ಇರುವ ಬೃಹತ್ತಾದ ಮತ್ತು ಮಹತ್ವದ 'ಅಲಹಾಬಾದ್ ಮ್ಯೂಸಿಯಂ ಇದೆ. ಇಲ್ಲಿನ ಮೂರನೆಯ ಅಂತಸ್ತಿನ ನೆಹರೂ ಗ್ಯಾಲರಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಒಂದು ಉಡುಗೊರೆ ಇದೆ. 1956 ರಲ್ಲಿ ವಿಶಾಲವಾದ ಕರ್ನಾಟಕ ರಚನೆಯಾದ ಸಂದರ್ಭದಲ್ಲಿ ನೆಹರೂ ಅವರಿಗೆ ನೀಡಿದ ಬೃಹತ್ ಆದ 'ಗೀತಾಬೋಧನೆ' ಕಾಷ್ಠ ಕೆತ್ತನೆಯಯ ಶಿಲ್ಪ ವೇ ಆ ಉಡುಗೊರೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಶಲಕರ್ಮಿಯೊಬ್ಬರು ಅದನ್ನು ಕೆತ್ತಿದ್ದಾರೆ. ಅಕ್ಬರ್ ಕಟ್ಟಿಸಿದ ಕೋಟೆ, ಹೂಯೆನ್ ತ್ಸಾಂಗ್ ಉಲ್ಲೇಖಿಸಿದ ಹರ್ಷವರ್ಧನ ಕಾಲದ ಸಾಮ್ರಾಟ್ ಅಶೋಕ ಗೆ ಸಂಬಂಧಿಸಿದ ನೆಲದೊಳಗೇ ಇರುವ 'ಪಾತಾಳಪುರಿ' ವನವಾಸ ಕಾಲದಲ್ಲಿ ಶ್ರೀರಾಮನಿಗೆ ಚಿತ್ರಕೂಟಕ್ಕೆ ಹೋಗಿ ಅತ್ರಿಮುನಿಗಳನ್ನು ಕಾಣಲು ಹೇಳಿದ ಭಾರಧ್ವಾಜ ಮುನಿಯ ಆಶ್ರಮ ಇವೆಲ್ಲವೂ ನೋಡತಕ್ಕ ಸ್ಥಳಗಳೆ.


ಮತ್ತೆ ಇಷ್ಟೆಲ್ಲ ನೋಡಿ ಭಾರತದ ರಾಜಕಾರಣದಲ್ಲಿ ಬಹಳಷ್ಟು ಮಹತ್ವದ ಚರ್ಚೆ ಮತ್ತು ತೀರ್ಮಾನಗಳು ನಡೆದ ಜವಾಹರ್ ಲಾಲ್ ಅವರು ತಂದೆ ಮೋತಿಲಾಲ್ ನೆಹರೂ ಅವರ ಮನೆ ನೋಡದೆ ಬರಲು ಸಾಧ್ಯವೇ! ಅಲ್ಲೆಲ್ಲಾ ಸುತ್ತಾಡಿ ಅವರು ತಮ್ಮ ಮೊಮ್ಮಗಳು ಇಂದಿರಾ ಪ್ರಿಯದರ್ಶಿನಿಯನ್ನು ಫಿರೋಜ್ ಗಾಂಧಿಗೆ ಮದುವೆ ಮಾಡಿಕೊಟ್ಟ ಅವರು ಮನೆಯಂಗಳದ ವೇದಿಕೆ ರೀತಿಯ ಕಟ್ಟೆಯ ಮೇಲೆ ತುಸು ಹೊತ್ತು ಕೂತೆದ್ದು ಬಂದೆವು. ಒಟ್ಟಾರೆ ಪ್ರಯಾಗ್ ರಾಜ್ ಭೇಟಿ ಖುಷಿ ಕೊಟ್ಟಿತು.

ಕೆಲವು ಫೋಟೋಗಳು ನಿಮಗಾಗಿ..

ರಾಬು

೦೯-೦೫-೨೦೨೫.


Sunday, May 11, 2025

ಎರಡು ರಾಜ್ಯಗಳ ವಿಚಿತ್ರಕೂಟ ಈ ಚಿತ್ರಕೂಟ

ʻ

ಚಿತ್ರಕೂಟʼ ಕನ್ನಡಿಗರಿಗೆ ಮಾತ್ರವಲ್ಲ ಭಾರತೀಯರಿಗೆಲ್ಲ ಬಹುತೇಕ ಚಿರಪರಿಚಿತʼ ಹೆಸರು. ಅಪ್ಪನ ಮಾತು ನಡೆಸಿಕೊಡುವುದಕ್ಕಾಗಿ ಏನೂ ತಪ್ಪು ಮಾಡದ ರಾಮ, ಅವನ ಹೆಂಡತಿ ʻಸತಿ ಶಿರೋಮಣಿʼ ಸೀತಾ ಮತ್ತು ರಾಮನ ಹಿಂಬಾಲಕ ತಮ್ಮ ಲಕ್ಷ್ಮಣ ಇವರೆಲ್ಲ ಅಷ್ಟೇನೂ ಸಾಮಾಜಿಕ ಮಹತ್ವವಲ್ಲದ ಕೌಟಂಬಿಕ ಬಿಕ್ಕಟ್ಟನ್ನು ನಿವಾರಿಸಲೋಸುಗ ಹನ್ನೆರಡು ವರ್ಷಗಳ ಕಾಲ ವನವಾಸ ಮಾಡಿದ ಕಥೆಯನ್ನು ವಾಲ್ಮೀಕಿ ರಾಮಾಯಣ ಸೇರಿದಂತೆ ಬಹುತೇಕ ರಾಮಾಯಣಗಳು ಹೇಳುತ್ತವೆ.

ಈ ರಾಮಾಯಣಗಳ ಪ್ರಕಾರ ಅವರು ಈ ವನವಾಸವನ್ನು ಕಳೆದದ್ದು ಇಂದಿನ ವಿಂಧ್ಯಪರ್ವತ ಶ್ರೇಣಿಯಲ್ಲಿ ಬರುವ ʻಚಿತ್ರಕೂಟʼ ಎಂಬ ಪ್ರದೇಶದಲ್ಲಿ. ಕನ್ನಡದಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ ಮೊಯಿಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯಗಳು ಈ ಚಿತ್ರಕೂಟದಲ್ಲಿ ರಾಮ ಪರಿವಾರ ಕಳೆದ ದಿನಗಳ ವಿವರಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿವೆ. ಲಕ್ಷ್ಮಣ ತಂದುಕೊಡುವ ಹಸಿಕಟ್ಟಿಗೆಯನ್ನು ಒಲೆಗೆಹಾಕಿ ಅಡುಗೆಮಾಡಲು ಕಣ್ಣಲ್ಲಿ ಹೊಗೆ ತುಂಬಿಕೊಂಡು ಗೋಳಾಡುವ ಮತ್ತು ಅದಕ್ಕಾಗಿ ಮೈದುನನ ಮೇಲೆ ಹುಸಿಮುನಿಸಿನ ಕೋಪ ತೋರಿ ಅವನನ್ನು ತರಾಟೆಗೆ ತೆಗೆದುಕೊಳ್ಳುವ ಚಿತ್ರಣವನ್ನು ಕುವೆಂಪು ತಮ್ಮ ರಾಮಾಯಣದಲ್ಲಿ ವರ್ಣಿಸಿದ್ದನ್ನು ಆ ಕಾವ್ಯ ಓದಿಯೇ ಆನಂದಿಸಬೇಕು!  ಅತ್ರಿ, ಮಾರ್ಕಂಡೇಯ ಸೇರಿದಂತೆ ಬಹಳಷ್ಟು ಋಷಿಮುನಿಗಳ ವಾಸಸ್ಥಾನವಾಗಿತ್ತೆನ್ನುವ ಈ ಪ್ರದೇಶದ ಬಗ್ಗೆ ವಾಲ್ಮಕಿ ಭಾರದ್ವಾಜ ಮುನಿ ಸೇರಿದಂತೆ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ

ಈ ಚಿತ್ರಕೂಟ ಪ್ರದೇಶದಲ್ಲಿ ಸುತ್ತಾಡಲೆಂದು ಮೊನ್ನೆ ಹೋಗಿದ್ದೆ. ಈಗಿನ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆ ಮತ್ತು ಮಧ್ಯಪ್ರದೇಶದ ಸತ್ನಾ ಜಿಲ್ಲೆ ಇವುಗಳಲ್ಲಿ ಹರಡಿಕೊಂಡಿರುವ ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಈ ಚಿತ್ರಕೂಟ ಒಂದು ರೀತಿಯಲ್ಲಿ ಎರಡೂ ರಾಜ್ಯಗಳ ವಿಚಿತ್ರಕೂಟವೆಂದೇ ಹೇಳಬೇಕು. ಚಿತ್ರಕೂಟಕ್ಕೆ ಸಂಬಂಧಿಸಿದ ಪೌರಾಣಿಕ ಐತಿಹ್ಯದ ಸ್ಥಳಗಳು ಈ ಎರಡೂ ರಾಜ್ಯಗಳ್ಳಿ ಹಂಚಿಕೊಂಡಿವೆ ಅಷ್ಟೇ ಅಲ್ಲ ರಾಮಘಾಟ್‌ನ ಬಳಿಯ ಒಂದು ಊರಿನ ಮಧ್ಯೆಯೇ ಈ ರಾಜ್ಯವಿಭಜನ ರೇಖೆ ಇದ್ದು ಒಂದು ಮನೆ ಉತ್ತರಪ್ರದೇಶಕ್ಕೆಸೇರಿದರೆ ಅದರ ಮುಂದಿನ ಮನೆ ಮಧ್ಯಪ್ರದೇಶಕ್ಕೆ ಸೇರಿದೆ!

ಉತ್ತರ ಪ್ರದೇಶ ರಾಜ್ಯದಲ್ಲಿ ಬರುವ ಚಿತ್ರಕೂಟಧಾಮ ರೈಲ್ವೇಸ್ಟೇಷನ್ನಿನಲ್ಲಿ ಬೆಳಿಗ್ಗೆ ಇಳಿದಾಗ ಬೆಳಿಗ್ಗೆ ಹನ್ನೊಂದಾಗಿತ್ತು ಮೇ ಬಿಸಿಲು ಬಡಿಯುತ್ತಿತ್ತು. ಕಾಡು ಪ್ರದೇಶ ಅಷ್ಟೇನೂ ಬಿಸಿಲು ತಟ್ಟಲಿಕ್ಕಿಲ್ಲ ಅನ್ನಿಸಿದ್ದು ಸುಳ್ಳಾಗಿತ್ತು.  ರೈಲು ಇಳಿದು ಹೆಂಡತಿಯೊಂದಿಗ ಒಂದು ಆಟೋ ತೆಗೆದುಕೊಂಡು ಹೊರಟ ನನ್ನ ಹತ್ತಿರ ಇದ್ದದ್ದು ಒಟ್ಟು ಐದುಗಂಟೆಗಳ ಸಮಯ ಮಾತ್ರ ಮತ್ತೆ ಸಂಜೆ ನಾಲ್ಕುಗಂಟೆಗೆ ಮರಳಿ ಇದೇ ಸ್ಟೇಷನ್ನಿನ್ನಿಗೆ ಬಂದು ನಾನು  ಕಾಶಿಗೆ ಹೋಗುವ ರೈಲು ಹತ್ತಬೇಕಿತ್ತು. ಅಪರಿಚಿತ ಪ್ರದೇಶಕ್ಕೆ ಪ್ರವಾಸ ಹೋಗುವ ನಮಗೆ ಒಂದೊಂದು ಸಲ ಟ್ರ್ಯಾಕ್ಸಿ, ಆಟೊ ಡ್ರೈವರ್ ಗಳು ಬಹಳ ಒಳ್ಳೆಯವರು ಸಿಗುತ್ತಾರೆ ಕೆಲವು ಸಲ ತಲೆ ತಿನ್ನುವವರು ಸಿಗುತ್ತಾರೆ. ಆದರೆ ಇಲ್ಲಿ ಸಿಕ್ಕ ಡ್ರೈವರ್‌ ಬಹಳ ಒಳ್ಳೆಯವನಾಗಿದ್ದು ನನ್ನ ತಿರುಗಾಟ ಚೆನ್ನಾಗಿ ಆಯಿತು.

ನಾವು ಮೊದಲು ಹೋದದ್ದು ವನವಾಸ ಕಾಲದಲ್ಲಿ ರಾಮನ ಪರಿವಾರ ಗುಡಿಸಲು ಕಟ್ಟಿಕೊಂಡು ಬಹಳಷ್ಟು ವರ್ಷಗಳ ಕಾಲ ವಾಸವಾಗಿತ್ತು ಎಂದು ಜನ ನಂಬಿಕೊಂಡಿರುವ ಚಿತ್ರಕೂಟ ಪ್ರದೇಶದ ಹನುಮಾನ್‌ ಗರಿ ಎಂಬ ಪರ್ವತಕ್ಕೆ. ಇದು ವಿಂದ್ಯಾ ಪರ್ವತ ಶ್ರೇಣಿಯಲ್ಲಿ ಬರುವ ಒಂದು ಬೆಟ್ಟ. ಈಗ ಮಧ್ಯಪ್ರದೇಶ ಭಾಗದಲ್ಲಿ ಬರುತ್ತದೆ. ದೊಡ್ಡದಾದ ಈ ಬೆಟ್ಟವನ್ನು ಹತ್ತಲು ಈಗ ಮೆಟ್ಟಿಲುಗಳ ಜೊತೆಗೆ ʼರೋಪ್‌ ವೇʼ ವ್ಯವಸ್ಥೆ ಕೂಡ ಇದೆ. ಮೈಯಲ್ಲಿ ಶಕ್ತಿ ಇದ್ದವರು ಬೆಳಗಿನ ಸಮಯವಾದರೆ ಬೆಟ್ಟವನ್ನು ಹತ್ತಿಕೊಂಡೇ ಹೋಗಿ ಆನಂದಿಸಬಹುದು. ಇಲ್ಲವಾದರೆ ರೋಪ್‌ ವೇ ಮೂಲಕ ಬೆಟ್ಟದ ಮೇಲೆ ಹೋಗಬಹುದು. ಅಲ್ಲಿ ಹೋದ ತಕ್ಷಣ ನಮಗೆ ಸಿಗುವುದು ಆಂಜನೇಯನ ಮೂರ್ತಿ ಇರುವ ಒಂದು ಕಲ್ಲುಗುಡಿ. ಅದನ್ನು ನೋಡಿಕೊಂಡು ಅಲ್ಲಿಂದ ಮತ್ತೆ ನೂರು ಇನ್ನೂರು ಮೆಟ್ಟಿಲು ಹತ್ತಿಹೋದರೆ ಅಲ್ಲಿ ಸೀತೆಯ ಅಡುಗೆ ಮನೆ ʻಸೀತಾ ಕಿ ರಸೋಯಿʼ ಸಿಗುತ್ತದೆ. ಇಲ್ಲಿ ಸೀತೆ ಅಡುಗೆ ಮಾಡುತ್ತಿದ್ದಳು ಎಂದು ಬಣ್ಣದಲ್ಲಿ ಕಚ್ಚಾರೀತಿ ಬರೆದಿರುವ ಒಂದು ಚಿಕ್ಕ ಗುಡಿ ರೂಪದ ರಚನೆ ಇದೆ.  ಇದರ ಜೊತೆಗೆ ನಮ್ಮ ವಿವಿಧ ಪುರಾಣಗಳಲ್ಲಿ ಬರುವ ಯಾವುದ್ಯಾವುದೋ ದೇವಿಯರ ಮುನಿಗಳ ಮೂರ್ತಿಗಳಿರುವ ಚಿಕ್ಕಚಿಕ್ಕ ಗುಡಿಸಲುಗಳು ಇವೆ. ಇಲ್ಲೆಲ್ಲ ʻಹತ್ತುರೂಪಾಯಿನ ದಾನಮಾಡಿʼ ʻಇಪ್ಪತ್ತು ರೂಪಾಯಿನದಾನ ಮಾಡಿʼ ಎಂದು ತಲೆ ತಿನ್ನುವ ಜನ ತಟ್ಟೆಹಿಡಿದುಕೊಂಡು ಕಿರಿಕಿರಿಮಾಡುವುದು ಹಿಂಸೆಯಾಗುತ್ತದೆಯಾದರೂ ಅವನ್ನೆಲ್ಲ ತುಸು ಸಮಾಧಾನದಿಂದ ಸಹಿಸಿಕೊಂಡು ಮುನ್ನೆಡದರೆ ಹನುಮಂತನ ಅವತಾರ ವಾದ ಮಂಗಗಳು ಇಲ್ಲಿ ಬಹಳಷ್ಟು ಇರುತ್ತವೆ. ಇವಕ್ಕೆ ನೀವು ಕಾಳು ಇತ್ಯಾದಿ ಆಹಾರ ನೀಡಿ ಧನ್ಯರಾಗುವುದಾದರೆ ಹತ್ತಿಪ್ಪತ್ತು ರೂಪಾಯಿ ತೆಗೆದುಕೊಂಡು ಈ ಮಂಗಗಳಿಗೆ ಆಹಾರವನ್ನು ನಿಮಗೆ ಕೊಡಲು ಇಲ್ಲಿ ಸಾಕಷ್ಟು ಜನ ಇದ್ದಾರೆ.

ಬೆಟ್ಟದ ಮೇಲೆ ಹೋಗಿ ನಿಂತು ನೋಡಿದರೆ ಕೆಳಗಿನ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಬಹುತೇಕ ಕಾಡು ಈಗ ಕೃಷಿಭೂಮಿಯಾಗಿ ರಸ್ತೆ ಕಟ್ಟಡಗಳಾಗಿ ಬದಲಾಗಿದೆ. ಕಾಡಿನ ಭಯಂಕರತೆ ಇಲ್ಲವಾಗಿದೆ. ಈಗ ಅಲೆಮಾರಿಗಳು ಬೆಟ್ಟವಾಸಿ ಜನರ ವಾಸಸ್ಥಾನಗಳಾಗಿರುವ, ಅವರು ನಮ್ಮನ್ನು ತಮ್ಮ ಹೊಟ್ಟೆಪಾಡಿಗಾಗಿ ಕಾಡಿಬೇಡಿ ಜೀವನ ನಡೆಸುವ ತಾಣವಾಗಿರುವ ಇದು ಆ ಕಾಲದಲ್ಲಿ ರಾಮಲಕ್ಷ್ಮಣರೂ ಬೀಡು ಬಿಟ್ಟಿರಲೂ ಬಹುದು ಅನ್ನಿಸುವ ಸ್ಥಳವಾಗಿದೆ.

ಅಲ್ಲಿಂದ ಮುಂದೆ ತುಸು ದೂರದಲ್ಲಿ ʻಜಾನಕಿಕುಂಡʼವಿದೆ. ಅದನ್ನು ನೋಡಿಕೊಂಡು ಇನ್ನೂ ತುಸು ದೂರಹೋದರೆ ʻಸ್ಪಟಿಕಶಿಲಾʼ ಸಿಗುತ್ತದೆ. ಇವೆಲ್ಲ ಕಾಡಿನಲ್ಲಿ ಹರಿಯುವ ಒಂದು ಚಿಕ್ಕನದಿಯ ದಂಡೆಯಲ್ಲಿಯೇ ಇದ್ದು ಈಗಲು ತಕ್ಕಮಟ್ಟಿನ ಪ್ರೌಕೃತಿಕ ಸೌಂದರ್ಯವನ್ನು ಉಳಿಸಿಕೊಂಡಿವೆ. ಇವುಗಳನ್ನು ನೋಡಿಕೊಂಡು ನಾನು ʻರಾಮದರ್ಶನʼ ಎಂದು ಕರೆಯಲ್ಪಡುವ ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಕ್ಕೆ ಹೋದೆ. ಇದು ಮಧ್ಯಪ್ರದೇಶ ಸರ್ಕಾರದ ಒಂದು ಸಂಗ್ರಹಾಲಯ. ಇದರಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ವಿವಿಧ ಘಟನಾವಳಿಗಳ ಸುಂದರವಾದ ಪೇಯಿಂಟಿಗ್ ಗಳನ್ನು ಸಂಗ್ರಹಿಸಲಾಗಿದೆ. ಕೈಕೆಯಿಯ ವರಕೇಳುವಿಕೆ, ವಿಶ್ವಾಮಿತ್ರ ಅರಣ್ಯಕ್ಕೆ ರಾಮಲಕ್ಷ್ಮಣರನ್ನು ಒಯ್ಯುವಿಕೆ, ಸೀತಾ ಸ್ವಯಂವರ, ಅಹಲ್ಯಾ ಪ್ರಕರಣ, ತಾಟಕಿ ಸಂಹಾರ, ಸೀತಾಪರಣ, ವಾಲಿಯ ಕೊಲೆ, ಶೂರ್ಪನಖಿ ಪ್ರಕರಣ, ಸೀತಾ ಅಗ್ನಿಪ್ರವೇಶ ಹೀಗೆ ಮುಖ್ಯಘಟನೆಗಳ ಚಿತ್ರಾವಳಿಗಳು ಕಣ್ಮನ ಸೆಳೆಯುತ್ತವೆ. ಕೇವಲ ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ನಮ್ಮ ರಾಮಾಯಣ ಕಥೆಯನ್ನು ಹೇಗೆಲ್ಲ ಜನ ಗ್ರಹಿಸಿದ್ದಾರೆ ಎಂಬುದನ್ನು ತೋರಿಸುವ ಜನರ ಮುಖವಾಡಗಳು, ಆಯುಧಗಳು, ಪರಿಕರಗಳು ಚಿತ್ರಪಟಗಳು ಇವುಗಳ ಸಂಗ್ರಹ ಮತ್ತು ಆ ದೇಶಗಳ ರಾಮಾಯಣಗಳ ಬಗ್ಗೆ ಪೇಯಿಂಟಿಂಗ್‌ ಗಳನ್ನು ಸಂಗ್ರಹಿಸಿದ್ದು ಇಲ್ಲಿನ ವಿಶೇಷ. ರಾಮದರ್ಶನ ಎಂಬ ಹೆಸರನ್ನು ಸಾರ್ಥಕಗೊಳಿಸುವಂತೆ ತನ್ನ ಎದೆ ಬಗೆದು ರಾಮನನ್ನು ತೋರಿಸುವ ಹನುಮಂತನ ಬೃಹತ್‌ ಮೂರ್ತಿಯೊಂದು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.

ಈ ಸಂಗ್ರಹಾಲಯದ ಎದುರಿಗೇ ಮಹಾತ್ಮಾಗಾಂಧಿ ಚಿತ್ರಕೂಟ ಗ್ರಾಮೋದ್ಯೋಗ ವಿಶ್ವವಿದ್ಯಾಲಯವಿದೆ. ಅದರ ಒಳಗೆ ಹೋಗಲು ಸಮಯವಿರಲಿಲ್ಲವಾದ ಕಾರಣ ಹೊರಗಿನಿಂದಲೇ ಒಂದು ಫೋಟೋ ಹೊಡೆದುಕೊಂಡು ನಾನು ಹೊರಡಬೇಕಾಯಿತು.

ರಾಮಘಾಟ್‌ ಎಂಬ ಸ್ಥಳ ಕೂಡ ಬಹಳಷ್ಟು ಸುಂದರಾಗಿದೆ. ಇದರ ಒಂದು ಭಾಗ ಮಧ್ಯಪ್ರದೇಶಕ್ಕೆ ಸೇರಿದರೆ ಇನ್ನೊಂದು ಭಾಗ ಉತ್ತರಪ್ರದೇಶಕ್ಕೆ ಸೇರಿದೆ. ನಾನು ಹೋಗಿದ್ದು ಮೇ ತಿಂಗಳಾದ ಕಾರಣ ನದಿಯಲ್ಲಿ ನೀರು ತಳಮಟ್ಟದಲ್ಲಿದ್ದು ಕೊಳಕಾಗಿ ಕಾಣುತ್ತಿತ್ತು. ದೋಣಿವಿವಾರಕ್ಕೆ ಇಲ್ಲಿ ಅಲಂಕೃತ ದೋಡಿಗಳ ದಂಡೇ ಇದ್ದು ಬಹುಶಃ ನದಿಯಲ್ಲಿ ನೀರು ಹೆಚ್ಚು ಇರುವ ಸಮಯದಲ್ಲಿ ವಿಹಾರ ಮನಸ್ಸಿಗೆ ಬಹಳ ಮುದನೀಡಬಹುದೇನೋ.

ಈ ಚಿತ್ರಕೂಟದಲ್ಲಿ ಕೆಲವು ಧಾರ್ಮಿಕ ದೇವಾಲಯಗಳು ಇರುವುದು ನಿಜವಾದರೂ ನಾವು ಪೌರಾಣಿಕ ಮಹತ್ವದ ಸತಿ ಅನಸೂಯ ದೇವಾಲಯಕ್ಕೆ ಹೋಗಲೇಬೇಕು. ವಿಂದ್ಯಪರ್ವತ ಶ್ರೇಣಿಯಲ್ಲಿ ಬರುವ ಮಹೇಂದ್ರ ಪರ್ವತ ಎಂಬ ಎತ್ತರವಾದ ಬೆಟ್ಟದ ಬುಡದಲ್ಲಿ ಬೆಟ್ಟದ ಬೆನ್ನಿಗೇ ಹತ್ತಿಕೊಂಡು ನಿರ್ಮಿಸಿರುವ ಈ ದೇವಾಲಯ ಪ್ರಕೃತಿ ಮಧ್ಯೆ ಬಹಳಷ್ಟು ಚೆಂದವಾಗಿ ಕಾಣುತ್ತದೆ. ಸುತ್ತಬೆಟ್ಟಕಾಡುಗಳಿಂದ ಆವೃತವಾಗಿರುವ ಈ ಸ್ಥಳದಲ್ಲಿ ಅತ್ರಿಮುನಿಗಳು ತಮ್ಮ ಹೆಂಡತಿ ಅನಸೂಯಾಳೊಂದಿಗೆ ವಾಸವಾಗಿದ್ದರು ಎನ್ನಲಾಗುತ್ತಿದೆ. ಈಗ ಪರಮಹಂಸರೊಬ್ಬರ ಆಶ್ರಮವಾಗಿರುವ ಈ ಸ್ಥಳವನ್ನು ಒಂದು ವಸ್ತು ಮತ್ತು ಚಿತ್ರಸಂಗ್ರಹಾಲಯವಾಗಿ ಈಗ ರೂಪಿಸಲಾಗಿದೆ.

ರಾಮ ಪರಿವಾರ ಪ್ರಯಾಗ್‌ ರಾಜ್‌ ನಲ್ಲಿದ್ದ ಭಾರದ್ವಾಜ ಮುನಿಗಳನ್ನು ಭೇಟಿಮಾಡಿ ಅವರ ಸಲಹೆ ಮೇರೆಗೆ ಚಿತ್ರಕೂಟಕ್ಕೆ ಬಂದು ಇಲ್ಲಿ ಅತ್ರಿಮುನಿಗಳನ್ನು ಭೇಟಿಯಾದನೆಂದು ಹೇಳಲಾಗುತ್ತದೆ. ರಾಮ ಮುನಿಯನ್ನು ಭೇಟಿ ಆಗುವ ಮತ್ತು ಸೀತೆಗೆ ಸತಿ ಅನಸೂಯ ಹದಿಬದೆಯ ಧರ್ಮವನ್ನು ಬೋಧಿಸುವ ಭಾಗ ರಾಮಾಯಣದಲ್ಲಿ ಬಹಳ ಪ್ರಸಿದ್ಧವಾಗಿದೆ. ಅವುಗಳನ್ನು ಇಲ್ಲಿ ಗೊಂಬೆದೃಶ್ಯಗಳಾಗಿ ರೂಪಿಸಲಾಗಿದೆ. ಇವುಗಳ ಜೊತೆಗೆ ರಾಮಾಯಣ ಸೇರಿದಂತೆ ನಮ್ಮ ಪುರಾಣಗಳಲ್ಲಿ ಬರುವ ಅನೇಕ ಘಟನೆಗಳನ್ನು ಇಲ್ಲಿ ದೃಶ್ಯಾವಳಿಗಳಾಗಿ ರೂಪಿಸಲಾಗಿದೆ.

ಈ ಸತಿ ಅನುಸೂಯಾ ದೇವಾಲಯ ಅಂದರೆ ಅತ್ರಿಮುನಿ ಆಶ್ರಮವೇ ಮಂದಾಕಿನಿ ನದಿಯ ಉಗಮಸ್ಥಾನ. ಇಲ್ಲಿ ಬೆಟ್ಟದ ಬುಡದಿಂದ ಪ್ರತ್ಯಕ್ಷವಾಗುವ ಮಂದಾಕಿನ ನದಿ ಜಾನಕಿಕುಂಡ, ಸ್ಪಟಿಕಶಿಲಾ ರಾಮಘಾಟ್‌ ಸೇರಿದಂತೆ ಇಡೀ ಚಿತ್ರಕೂಟದ ಈ ಪೌರಾಣಿಕ ಸ್ಥಳಗಳಲ್ಲಿ ಹರಿದು ಮುಂದೆ ರಾಮಚರಿತ ಮಾನಸ ಬರೆದ ತುಳಸಿದಾಸರ ಜನ್ಮಸ್ಥಳವಾದ ರಾಯಪುರದಲ್ಲಿ ಯಮುನಾನದಿಯನ್ನು ಸೇರಿಕೊಳ್ಳುತ್ತದೆ. ಈ ನದಿ ಇಡೀ ಚಿತ್ರಕೂಟದ ಈ ಎಲ್ಲ ಸ್ಥಳಗಳಿಗೆ ಒಂದು ಜೀವನಾಡಿಯಾಗಿ ಹರಿದಿದೆ ಮಾತ್ರವಲ್ಲ ಈ ಪರಿಸರಕ್ಕೆ ಒಂದು ವಿಶೇಷ ಕಳೆಯನ್ನೂ ಕಟ್ಟಿದೆ.

ರಾಮಾಯಣ ಪೌರಾಣಿಕ ಕಟ್ಟುಕಥೆಯೇ ಅಥವಾ ವಾಸ್ತವವಾಗಿ ನಡೆದ ಚರಿತ್ರೆಯೇ ಎಂಬುದು ವಾದಗ್ರಸ್ತ ಸಂಗತಿ. ಪುರಾಣವನ್ನು ಇತಿಹಾಸ ಮಾಡುವ ಮತ್ತು ಇತಿಹಾಸವನ್ನು ಪುರಾಣವಾಗಿ ಮಾಡುವ ಕೆಲಸಗಳು ಎಲ್ಲ ದೇಶಗಳ ಎಲ್ಲ ಸಮುದಾಯಗಳಲ್ಲಿ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುವುದು ಸಾಮಾನ್ಯ ಸಂಗತಿಯಾದರೂ ಭಾರತದಲ್ಲಿ ಈ ಕೆಲಸಗಳು ತುಸು ಹೆಚ್ಚೇ ಅನ್ನಬೇಕು. ಅದು ಏನೇ ಇರಲಿ ನೀವು ಧಾರ್ಮಿಕ ನಂಬಿಕೆಯುಳ್ಳ ಶ್ರದ್ಧಾವಂತರಾದರೆ ಈ ಸ್ಥಳಗಳ ವೀಕ್ಷಣೆ ನಿಮಗೆ ಹೆಚ್ಚು ಭಾವುಕರನ್ನಾಗಿ ಮಾಡಬಹುದು. ಅದರೆ ಆ ಶ್ರದ್ಧಾವಂತಿಕೆ ಇಲ್ಲದೇ ಇರುವವರನ್ನೂ ಈ ಚಿತ್ರಕೂಟ ನಿರಾಶೆಗೊಳಿಸುವುದಿಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ, ಬದಲಾದ ಪರಿಸರ, ಇತ್ಯಾದಿಗಳು ನಮ್ಮ ಮನಸ್ಸಿಗೆ ಮುದನೀಡುತ್ತವೆ ಮಾತ್ರವಲ್ಲ ನಮ್ಮ ಸಂಶೋಧನಾ ಬುದ್ಧಿಯನ್ನು ತುಸು ಚುರುಕುಗೊಳಿಸುತ್ತವೆ. ಆಸಕ್ತಿ ಇದ್ದರೆ ಅವಕಾಶವಾದರೆ ಒಮ್ಮೆ ಹೋಗಿಬನ್ನಿ ಚೆನ್ನಾಗಿರುತ್ತದೆ.

ರಾಬು

೧೧-೦೫-೨೦೨೫

 

 

 

Tuesday, April 15, 2025

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 

ʼಭೀಮʼನೆಂಬ ಅಡುಗೆ ಭಟ್ಟನೂ ʻಸಂವಿಧಾನ ರಚನೆʼ ಎಂಬ ಅಡುಗೆಯೂ…

 


ಭಾರತ ಸಂವಿಧಾನದ ಮೂರನೆಯ ಮತ್ತು ಅಂತಿಮ ಕರುಡು ವಾಚನವನ್ನು ಅಂಬೇಡ್ಕರ್‌ ಅವರು ೧೯೪೯ರ ನವೆಂಬರ್‌ ೧೭ ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾಡಿದರು.  ಅದರ ನಂತರ ಸಂವಿಧಾನ ರಚನಾ ಸಭೆಯ ಸದಸ್ಯರನೇಕರು ತಮ್ಮ ʻವಂದನಾರ್ಪಣಾ ಭಾಷಣʼ (Concluding Speech) ಮಾಡಿದರು. ಅದುವರೆಗೆ ಸಂವಿಧಾನದ ಕರುಡಿನ ಮೇಲೆ  ಅನೇಕ ದಿನಗಳು ದೀರ್ಘವಾದ ಚರ್ಚೆ ಸಂವಾದಗಳು ನಡೆದಿದ್ದವು. ಕೆಲವು ವಿಧಿಗಳ ಬಗ್ಗೆ ಅತ್ಯಂತ ಬಿರುಸಿನ ವಾಗ್ವಾದಗಳೂ ನಡೆದಿದ್ದವು. ಬಹಳಷ್ಟು ಜನ ಸಂಪ್ರದಾಯವಾದಿಗಳೇ ಇದ್ದ ಸಂವಿಧಾನ ರಚನಾ ಸಭೆಯು ಅಷ್ಟು ಸುಲಭವಾಗಿ ಅಂಬೇಡ್ಕರ್‌ ಅವರ ಪ್ರಗತಿಶೀಲತೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಮಹಿಳೆಯರಿಗೆ ಪುರುಷರಂತೆ ಸಮಾನತೆ ನೀಡುವುದು, ಎಲ್ಲ ಜಾತಿ ಧರ್ಮಗಳವರನ್ನು ಸಮಾನವಾಗಿ ಕಾಣುವುದು ಇಂತಹುಗಳನ್ನು ಅವರೆಲ್ಲ ಹೇಗೆ ತಾನೆ ಒಪ್ಪಿಕೊಳ್ಳಲು ಸಾಧ್ಯ? ಅವರು ತಕರಾರು ತೆಗೆದಾಗಲೆಲ್ಲ ಅಂಬೇಡ್ಕರ್‌ ಅದಕ್ಕೆ ತಮ್ಮ ಅಪಾರ ಪಾಂಡಿತ್ಯ ಮತ್ತು ತುಳಿತಕ್ಕೊಳಗಾದವರ ಬಗೆಗಿನ ತಾಯ್ತನದ ಭಾವನೆ ಇವುಗಳಿಂದಾಗಿ ಸಮರ್ಪಕವಾಗಿ ಉತ್ತರ ಕೊಟ್ಟು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೂ ಶೇಕಡಾ ನೂರರಷ್ಟು ಅವರು ತಮ್ಮ ಕೆಲಸಗಳನ್ನು ಮಾಡಲು ಇವರು ಬಿಡಲಿಲ್ಲ. ಕೆಲವಕ್ಕೆ ಒಪ್ಪಿಕೊಂಡರು. ಮತ್ತೆ ಕೆಲವಕ್ಕೆ ಮೊಂಡಾಟ ಮಾಡಿ ತೆಗೆದು ಹಾಕಲು ಅದಾಗದಿದ್ದರೆ ಕೊನೆಪಕ್ಷ ತಿದ್ದುಪಡಿ ತರಲು ಸಮರ್ಥರಾದರು. ಇವರ ಮೊಂಡಾಟಕ್ಕೆ ಅಂಬೇಡ್ಕರ್‌ ಕೂಡ ಕೆಲವು ಸಲ ಅನಿವಾರ್ಯವಾಗಿ ಮಣಿದು ಸಂವಿಧಾನದ ಕೆಲವು ಅತ್ಯಂತ ಪ್ರಗತಿಪರ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಯಿತು.

ಅಂಬೇಡ್ಕರ್‌ ಅವರ ಅಂತಿಮ ಓದಿಗೆ ಪ್ರಮುಖ ಸದಸ್ಯರು ಮಾಡಿದ ವಂದನಾರ್ಪಣಾ ನುಡಿಗಳಲ್ಲಿ ಅಂಬೇಡ್ಕರ್‌ ಅವರೊಂದಿಗಿನ ಅದುವರೆಗಿನ ಭಿನ್ನಾಭಿಪ್ರಾಯಗಳೇನೇ ಇದ್ದರೂ ಮತ್ತು ಸಂವಿಧಾನದ ಕೆಲವು ಪ್ರಗತಿಪರ ವಿಧಿಗಳ ಬಗ್ಗೆ ಅವರಿಗೆ ಈಗಲೂ ಅಸಮಾಧಾನವಿದ್ದರೂ ಅವೆಲ್ಲವನ್ನು ಮರೆತು ಅವರು ಸಂವಿಧಾನ ರಚನೆಯ ಕಾರ್ಯದಲ್ಲಿ ಅಂಬೇಡ್ಕರ್‌ ಅವರ ಅಪಾರ ಪರಿಶ್ರಮದ ಕೊಡುಗೆಯನ್ನು ಕೊಂಡಾಡಿ ಮಾತನಾಡಿದರು. ಕರಡು ಸಮಿತಿಯಲ್ಲಿನ ಉಳಿದ ಸದಸ್ಯರೆಲ್ಲ ಏನೇನೋ ಕಾರಣಗಳಿಂದ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೆ ಕರಡು ರಚನೆಯ ಶೇ ತೊಂಬತ್ತರಷ್ಟು ಕೆಲಸವನ್ನು ಅಂಬೇಡ್ಕರ್‌ ಅವರೊಬ್ಬರೇ ಮಾಡಿದ್ದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಅವರು ಅಂಬೇಡ್ಕರ್‌ ಅವರನ್ನು ಹೊಗಳಿ ಮಾತನಾಡಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ.

 ಸಂವಿಧಾನ ಕರುಡು ರಚನೆ ಮತ್ತು ಅದರ ಚರ್ಚೆ ನಡೆಯುತ್ತಿರುವಾಗ ಅಂಬೇಡ್ಕರ್‌ ತಮ್ಮ ಮೇಲಿನ ಅಪಾರವಾದ ಜವಾಬ್ದಾರಿಯನ್ನು ನಿರ್ವಹಿಸಲು ವಾಸ್ತವದಲ್ಲಿ ದೈಹಿಕವಾಗಿ ಅಷ್ಟು ಸಮರ್ಥರಾಗಿರಲಿಲ್ಲ. ಹಗಲು ರಾತ್ರಿ ಎನ್ನದೆ ಊಟ ನಿದ್ರೆಗಳನ್ನೂ ಲೆಕ್ಕಿಸದೇ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳ ಅಧ್ಯಯನ ಮತ್ತು ಅವುಗಳ ವಿಧಿಗಳ ಆಯ್ಕೆ ಮತ್ತು ನಮ್ಮ ಸಂವಿಧಾನದ ಕರುಡು ರಚನೆ ಇಂತಹ ಕೆಲಸದಲ್ಲಿ ಮುಳುಗಿಹೋಗಿದ್ದರು. ಇದರಿಂದ ಸಹಜವಾಗಿ ಅವರ ಆರೋಗ್ಯ ಹದಗೆಟ್ಟೆತು. ಸಕ್ಕರೆ ಕಾಯಿಲೆ ಅವರನ್ನು ಅಪಾರವಾಗಿ ಭಾದಿಸುತ್ತಿತ್ತು. ಒಂದು ಸಲವಂತೂ ಕುಂಡಿಯ ಮೇಲೆ ಕುರು ಆಗಿ ಅನೇಕ ದಿನಗಳು ಖುರ್ಚಿಯ ಮೇಲೆ ಕೂರಲೂ ಆಗದಂತೆ ಅಪಾರ ಹಿಂಸೆಯನ್ನು ಅನುಭವಿಸಿದರು. ಅವರ ಅನಾರೋಗ್ಯದ ಕಾರಣಕ್ಕಾಗಿ ಸಂವಿಧಾನ ರಚನಾ ಸಭೆಯಲ್ಲಿ ಅವರು ಕುಳಿತುಕೊಳ್ಳುವುದಕ್ಕಾಗಿಯೇ ಅನುಕೂಲಕರವಾದ ಒಂದು ವಿಶೇಷ ಖುರ್ಚಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

 ಈ ಎಲ್ಲ ನೋವು ಸಂಕಟಗಳನ್ನು ಇಟ್ಟುಕೊಂಡೇ ಅವರು ಆ ಸಭೆಯಲ್ಲಿ ಕರುಡಿನ ಮೇಲಿನ ಭಿನ್ನಾಭಿಪ್ರಾಯಗಳಿಗೆ ತಕ್ಕುದಾದ ಉತ್ತರ ಕೊಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿಯೂ ಅವರು ತಮ್ಮ ಗುರುತರ ಜವಾಬ್ದಾರಿಯುತ ಕಾರ್ಯಕ್ಕೆ ಬೆನ್ನುಹಾಕದೆ ಮುಖಾಮುಖಿಯಾಗಿಯೇ ಕೆಲಸ ಮಾಡಿದರು. ಹೀಗೆ ಕಣ್ಣಿಗೆ ಕಾಣುವ ಅವರ ನೋವು ಕಾಣದೇ ಇರುವ ಈ ದೇಶದ ಕೋಟಿ ಕೋಟಿ ತುಳಿತಕ್ಕೊಳಗಾದವರ ಬಾಳಿಗೆ ಆಶಾಕಿರಣವಾಗಿ ರೂಪುಗೊಂಡ ನಮ್ಮ ಸಂವಿಧಾನ ʻಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ತುʼ ಅನ್ನುವ ಹಾಗೆ ಅಂತಿಮ ಹಂತ ತಲುಪಿತ್ತು.

ಅಂಬೇಡ್ಕರ್‌ ಅವರು ರಚಿಸಿದ ನಮ್ಮ ಸಂವಿಧಾನದ ಬಗ್ಗೆ ಬಂದ ಬಹಳಷ್ಟು ತಕರಾರುಗಳಲ್ಲಿ ಬಹುಮುಖ್ಯವಾದ ಎರಡು ತಕರಾರುಗಳೆಂದರೆ ಮೊದಲನೆಯದು ನಮ್ಮ ಸಂವಿಧಾನ ಗಾಂಧಿತತ್ವ ಹೇಳುವ ಅಧಿಕಾರ ವಿಕೇಂದ್ರಿಕರಣವನ್ನು ಬೆಂಬಲಿಸುವ ಪಂಚಾಯತ್‌ ರಾಜ್ಯ ವ್ಯವಸ್ಥೆಯನ್ನು ಕಡೆಗಣಿಸಿ ಅಧಿಕಾರದ ಕೇಂದ್ರೀಕರಣವನ್ನು ಬೆಂಬಲಿಸುತ್ತದೆ ಎಂಬುದು. ಇದಕ್ಕೆ ಅಂಬೇಡ್ಕರ್‌ ಅವರ ಉತ್ತರ ಆ ರೀತಿ ಪಂಚಾಯತಿಗಳಿಗೆ ಹಳ್ಳಿಮಟ್ಟದಲ್ಲಿ ಅಧಿಕಾರ ಸಿಕ್ಕರೆ ಅಲ್ಲಿನ ಮೇಲ್ವರ್ಗದವರು ಸಹಜವಾಗಿ ಅಧಿಕಾರ ಹಿಡಿಯುತ್ತಾರೆ ಮತ್ತು ಹಿಂದುಳಿದವರು ದಲಿತರು ಇವರ ಮೇಲೆ ಅವರು ಇದುವರೆಗೂ ಮಾಡುತ್ತಿರುವವ ಶೋಷಣೆ ಇನ್ನಷ್ಟು ಬಲಪಡೆದು ಮುಂದುವರೆಯುತ್ತದೆ ಎಂಬುದಾಗಿತ್ತು. (ಮುಂದೆ ದಮನಿತರ ಶಿಕ್ಷಣ ಮುಂತಾದವುಗಳಿಂದ ಪರಿಸ್ಥಿತಿ ಸುಧಾರಿಸಿದ ಮೇಲೆ ಪಂಚಾಯತ್‌ ವ್ಯವಸ್ಥೆ ಸಂವಿಧಾನದ ತಿದ್ದುಪಡಿಯ ಮೂಲಕ ಜಾರಿಗೆ ಬಂತು.)

ಎರಡನೆಯದು ನಮ್ಮ ಸಂವಿಧಾನದ ಮೇಲೆ ʻವಿದೇಶಿ ಸಂವಿಧಾನಗಳ ಪ್ರಭಾವ ಅತಿ ಹೆಚ್ಚಾಯಿತು ಮತ್ತು ಅದು ನಮ್ಮ ಪ್ರಾಚೀನ ಧಾರ್ಮಿಕ ಪಠ್ಯಗಳು ಹೇಳುವ ತತ್ವಗಳನ್ನು ಕಡೆಗಣಿಸಿದೆʼ ಎಂಬುದಾಗಿತ್ತು. ಅದು ನಿಜವೂ ಇತ್ತು; ಅದಕ್ಕೆ ಕಾರಣವೂ ಇತ್ತು. ಅಂಬೇಡ್ಕರ್‌ ಅವರಿಗೆ ಅದು ಅನಿವಾರ್ಯವೂ ಆಗಿತ್ತು. ನಮ್ಮ ಧಾರ್ಮಿಕ ಪಠ್ಯಗಳು ಏನೇ ಹೇಳಿದರೂ ಅವು ಸುತ್ತೂ ಬಳಸಿ ಕೊನೆಗೆ ಅಂತಿಮವಾಗಿ ಮನುಷ್ಯನನ್ನು ಸಮಾನವಾಗಿ ಕಾಣುವುದಕ್ಕೆ ವಿರುದ್ಧವಾಗಿಯೇ ನಿಲ್ಲುತ್ತಿದ್ದವು. ಅವು ಹೇಳುವ ʼಧರ್ಮʼ ಅದು ವರ್ಣಾಶ್ರಮ ಧರ್ಮವೇ ಆಗಿತ್ತು. ಅಂಬೇಡ್ಕರ್‌  ಅವರು ಅದನ್ನು ತಮ್ಮ ಅಪಾರ ಪರಿಶ್ರಮದಿಂದ ಓದಿ ಅರ್ಥೈಸಿಕೊಂಡಿದ್ದರು. ಹಾಗಾಗಿ ಅವರು ನಮ್ಮ ಸಂವಿಧಾನದ ಪ್ರಧಾನ ಆಶಯಗಳಾದ ಸಹೋದರೆ, ಸಮಾನತೆ, ಅಧಿಕಾರ ಮತ್ತು ಅವಕಾಶಗಳ ಸಮಾನತೆ, ಮನುಷ್ಯನ ವ್ಯಕ್ತಿತ್ವದ ಘನತೆ ಇಂತಹುಗಳಿಗಾಗಿ ವಿದೇಶಿ ಸಂವಿಧಾನಗಳನ್ನು ಆಶ್ರಯಿಸಬೇಕಾಯಿತು!

ಅಂಬೇಡ್ಕರ್‌  ಸಂವಿಧಾನದ ಅಂತಿಮ ಕರುಡನ್ನು ಓದಿದ ಮೂರು ದಿನಗಳ ನಂತರ ಅಂದರೆ ೧೯೪೯ರ ನವೆಂಬರ್‌ ೨೦ ರಂದು ಇಲ್ಲಿರುವ ವ್ಯಂಗಚಿತ್ರ ಆಗಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಈ ಚಿತ್ರದಲ್ಲಿ ಅಂಬೇಡ್ಕರ್‌ ಅವರನ್ನುʼಕಲಿಯುಗ ಭೀಮʼ ಎಂದು ಕರೆದು ಅಡುಗೆಭಟ್ಟನನ್ನಾಗಿ ಚಿತ್ರಿಸಲಾಗಿದೆ. (ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸದಲ್ಲಿರುವಾಗ ವಿರಾಟ ರಾಜನ ಆಶ್ರಯದಲ್ಲಿರುವಾಗ ʼಭೀಮ ಅಲ್ಲಿ ಅಡುಗೆಭಟ್ಟ ಆಗಿದ್ದನ್ನು ನೆನಪಿಸಿಕೊಳ್ಳಿ. ಅವನು ದ್ವಾಪರಯುತದ ಭೀಮನಾದರೆ ಇವನು ಕಲಿಯುಗದ ಭೀಮʼ ಎಂಬುದನ್ನು ಇದು ಧ್ವನಿಸುತ್ತದೆ.) ಮತ್ತು ಅಂಬೇಡ್ಕರ್‌ ನಿರ್ವಹಿಸಿದ ಸಂವಿಧಾನ ರಚನೆ ಯ ಕಾರ್ಯವನ್ನು ಆ ಅಡುಗೆಭಟ್ಟ ಮಾಡಿದ ಅಡುಗೆಗೆ ಹೋಲಿಸಿ ಚಿತ್ರಿಸಲಾಗಿದೆ. ಸಂವಿಧಾನ ರಚನಾ ಸಭೆಯ ಸದಸ್ಯರು ಎತ್ತಿದ ತಕರಾರುಗಳನ್ನು ಇಲ್ಲಿಅಡುಗೆಯ ಬಗ್ಗೆ ಎತ್ತಿದ ತಕರಾರುಗಳಾಗಿ ತೋರಿಸಲಾಗಿದೆ. ಒಬ್ಬರು ʻಹಲ್ವಾ ಎಲ್ಲಿ?ʼ ಎಂದು ಕೇಳುತ್ತಿದ್ದರೆ ಇನ್ನೊಬ್ಬರು ʻಉಪ್ಪು  ಹೆಚ್ಚಾಯಿತುʼ ಎಂದೂ ಮತ್ತೊಬ್ಬರು ʻಖಾರ ಕಡಿಮೆ ಆಯಿತುʼ ಎಂದೂ ಹೇಳುತ್ತಿದ್ದಾರೆ.  ಕೆಲವರು ಅಡುಗೆ ʻಸರಿಯಾಗಿ ಬೆಂದಿಲ್ಲʼವೆಂದರೆ ಮತ್ತೆ ಕೆಲವರು ಸಾಕಷ್ಟು ತರಕಾರಿ ಹಾಕಿಲ್ಲʼ ಎಂದು ಟೀಕಿಸುತ್ತಿದ್ದಾರೆ. ʼಮೀನು ಇಲ್ವಾಎಂದು ಕೇಳಿದವರೂ ಇದ್ದಾರೆ. ಕೊನೆಯ ಕಾರ್ಡ್‌ಬೋರ್ಡಿನ ತಕರಾರನ್ನು ಸೂಕ್ಷ್ಮವಾಗಿ ನೋಡಿ. ʼನೀವು ವನಸ್ಪತಿಯನ್ನು ಏಕೆ ಬಳಸುವುದಿಲ್ಲ” ಎಂದು ಕೇಳಲಾಗಿದೆ. ಇಲ್ಲಿ ʼವನಸ್ಪತಿʼ ಎಂದರೆ ʼಭಾರತೀಯತೆʼ ಎಂದೇ ಅರ್ಥ!

ಡಾ. ರಾಜೇಂದ್ರ ಬುರಡಿಕಟ್ಟಿ

16-04-2025

 

 

Monday, April 14, 2025

ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ಸತ್ತ ನಂತರವೂ ನಿತ್ಯ ಬೆಳೆಯುತ್ತಿರುವ  ಅಂಬೇಡ್ಕರ್‌ : ಅವರು ಹೇಳಿದ್ದೇನು? ನಾವು ಮಾಡುತ್ತಿರುವುದು ಏನು? ....

 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎರಡು ವರ್ಷ ಮಾತ್ರ ಆಗಿತ್ತು. 1949ರ ಏಪ್ರಿಲ್‌ 14 ರಂದು ʼಹೈದರಾಬಾದ್‌ ರಾಜ್ಯ ಪರಿಶಿಷ್ಠ ಜಾತಿಗಳ ಒಕ್ಕೂಟʼ ಅಂಬೇಡ್ಕರ್‌ ಅವರ ಜನ್ಮದಿನದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದನ್ನು ಉದ್ದೇಶಿಸಿ ಅಂಬೇಡ್ಕರ್‌ ಹೀಗೆ ಹೇಳಿದ್ದರು: “ಭಾರತದಲ್ಲಿ ರಾಜಕೀಯ ನಾಯಕರನ್ನು ಪ್ರವಾದಿಗಳ ಸ್ಥಾನದಲ್ಲಿರಿಸುವುದು ಒಂದು ಖೇಧದ ಸಂಗತಿಯಾಗಿದೆ. ಬೇರೆ ದೇಶಗಳಲ್ಲಿ ಪ್ರವಾದಿಗಳ ಜನ್ಮದಿನಗಳನ್ನು ಮಾತ್ರ ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರ ಪ್ರವಾದಿಗಳು ಮತ್ತು ರಾಜಕೀಯ ನಾಯಕರ ಜನ್ಮದಿನಗಳನ್ನು ಆಚರಿಸಲಾಗುತ್ತದೆ. ನಾನು ನನ್ನ ಜನ್ಮದಿನವನ್ನು ಆಚರಿಸುವುದನ್ನು ಇಷ್ಟಪಡುವುದಿಲ್ಲ. ನಾನು ಪ್ರಜಾಪ್ರಭುತ್ವವಾದಿ ಮತ್ತು ಇಂತಹ ವ್ಯಕ್ತಿಪೂಜೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯು ಹಳಿತಪ್ಪುವಂತೆ ಮಾಡುತ್ತವೆಯಾದ್ದರಿಂದ ಇವು ಇರಬಾರದು ಎಂಬ ಆಲೋಚನೆಯವನು. ರಾಜಕೀಯ ನಾಯಕರ ಮತ್ತು ಅವರ ಅನುಯಾಯಿಗಳ ಬಗ್ಗೆ, ಅವರು ಅರ್ಹರಾಗಿದ್ದರೆ, ಪ್ರೀತಿ, ವಿಶ್ವಾಸ, ಗೌರವ ಇವುಗಳನ್ನು ಜನ ಇಟ್ಟುಕೊಳ್ಳಬಹುದು. ಆದರೆ ಇಂತಹ ವ್ಯಕ್ತಿಪೂಜೆಗಳು ಅದನ್ನು ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಇಬ್ಬರನ್ನೂ ನೈತಿಕ ಅಧಪತನಕ್ಕೆ ಈಡುಮಾಡುತ್ತವೆ. ಏಕೆಂದರೆ ಒಂದು ಸಾರೆ ರಾಜಕೀಯ ನಾಯಕನೊಬ್ಬನನ್ನು ಪ್ರವಾದಿಯ ಸ್ಥಾನದಲ್ಲಿರಿಸಿದರೆ ಆನಂತರ ಅವನು ಪ್ರವಾದಿಯ ಪಾತ್ರವಹಿಸಿಕೊಂಡು ಪ್ರವಾದಿಗಳಂತೆ ಸಂದೇಶ ನೀಡಬೇಕಾಗುತ್ತದೆ.”

ಹೀಗೆ ಹೇಳಿದ ವ್ಯಕ್ತಿಯ ಜನ್ಮದಿನವನ್ನೇ ನಾವು ಇಂದು ಆಚರಿಸುತ್ತಿದ್ದೇವೆ. ಇದು ತಪ್ಪಲ್ಲ. ಆದರೆ ಅದನ್ನು ಹೇಗೆ ಆಚರಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯ. ಭಾರತದ ಶೇಕಡಾ ತೊಂಬತ್ತರಷ್ಟು ಜನರು ಇಂದು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವಂತಾದದ್ದು ಡಾ ಅಂಬೇಡ್ಕರ್‌ ಅವರ ದೂರದೃಷ್ಟಿಯ ಸಂವಿಧಾನದಿಂದ. ಅವರಷ್ಟು ಓದಿಕೊಂಡ ವ್ಯಕ್ತಿ ಈ ಕಾಲದಲ್ಲಿಯೇ ಇಲ್ಲವೆನ್ನುವಷ್ಟು ವಿರಳವಾಗಿರುವಾಗ ಆ ಕಾಲದಲ್ಲಂತೂ ಇರಲೇ ಇಲ್ಲ. ಪರಸ್ಪರ ಸಂಬಂಧವಿಲ್ಲದ ವಿಷಯಗಳು ಎಂದು ನಾವೆಲ್ಲರೂ ಭಾವಿಸುವ ಅನೇಕ ಜ್ಞಾನಶಿಸ್ತುಗಳಲ್ಲಿ ಅವರಿಗಿದ್ದ ಪಾಂಡಿತ್ಯ ಅಪಾರವಾದದ್ದು. ಆ ಪಾಂಡಿತ್ಯವನ್ನು ಅವರು ಈ ದೇಶದ ಜನರ ಬದುಕು ಹಸನಾಗುವಂತೆ ಮಾಡಲು ಬಳಸಿದ್ದು ಅವರ ಸಾಧನೆ. ಭಾರತದ ಜನನಾಯಕರಲ್ಲಿಯೇ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಸತ್ತನಂತರವೂ ನಿತ್ಯ ಬೆಳೆಯುತ್ತಿರುವ ವ್ಯಕ್ತಿ ಅಂದರೆ ಅದು ಅಂಬೇಡ್ಕರ್‌ ಮಾತ್ರ.

ಇಂತಹ ಒಬ್ಬ ಮಹಾನಾಯಕನ ದಿನವನ್ನು ಬಹಳ ಕಡೆ ಹೇಗೆಲ್ಲ ಆಚರಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಖೇಧವೆನಿಸುತ್ತದೆ. ಇದನ್ನು ಸರ್ಕಾರಗಳು ಅಧಿಕೃತವಾಗಿ ಆಚರಿಸುವ ಮೊದಲು ಅಭಿಮಾನದಿಂದ ಕೆಲವು ಸಂಘಟನೆಗಳು ಆಚರಿಸುವಾಗ ಅದರ ಕಿಮ್ಮತ್ತೇ ಬೇರೆ ಇತ್ತು. ಈಗ ಇದು ಸರ್ಕಾರಿ ಆಚರಣೆ ಆಗಿರುವುದರಿಂದ ಅನೇಕ ಕಛೇರಿಗಳಲ್ಲಿ ಕಾಟಾಚಾರದ ʻಫೋಟೋ ಆಚರಣೆʼ ಆಗಿರುವುದೇ ಹೆಚ್ಚು. ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದರ ಉದ್ದೇಶ ಆ ವ್ಯಕ್ತಿಯ ಬದುಕು ಸಾಧನೆಗಳಿಂದ ನಾವು ಪ್ರೇರಣೆ ಪಡೆಯುವುದೇ ಆಗಿದೆ. ಆ ವ್ಯಕ್ತಿಯ ಬದುಕು, ಸಾಧನೆ ಬರೆಹ ಇವುಗಳನ್ನು ಕುರಿತು ಬಹುಮುಖ್ಯವಾಗಿ ಉಪನ್ಯಾಸ, ಚರ್ಚೆ, ಸಂವಾದ ಇಂಥವು ನಡೆದರೇನೇ ಅದು ಅರ್ಥಪೂರ್ಣ. ಅಂಬೇಡ್ಕರ್‌ ಅವರಂಥ ಮೇಧಾವಿಗಳ ವಿಷಯದಲ್ಲಂತೂ ಇದು ಆಗಲೇ ಬೇಕಾಗಿರುವ ಅತ್ಯಗತ್ಯ ಕೆಲಸ. ಉಳಿದ ಕಛೇರಿಗಳಿಗಿಂತ ಈ ಕೆಲಸ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಬೇಕು.

ಆದರೆ ವಾಸ್ತವ ಬಹಳ ಕೆಟ್ಟದ್ದಾಗಿದೆ. ಈ ದಿನಾಚರಣೆ ಬರುವ ಏಪ್ರಿಲ್‌ ಹದಿನಾಲ್ಕು ರಾಜ್ಯದ ಬಹುತೇಕ ಕೆಳಹಂತದ ಶಾಲೆಗಳಿಗೆ ರಜೆ ಇರುತ್ತದೆ. ರಜೆಯಿದ್ದರೂ ಅಂಬೇಡ್ಕರ್‌ ಜಯಂತಿಗೆ ಸ್ವಯಂ ಇಚ್ಚೆಯಿಂದ ಬರುವಂತೆ ಮಾಡುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಇನ್ನು ಶಿಕ್ಷಕರು. ಅವರಾದರೂ ತಾವೇ ಒಂದಿಷ್ಟುಹೊತ್ತು ಅಂಬೇಡ್ಕರ್‌ ಅವರ ಜೀವನ ಸಾಧನೆಗಳು, ಅವರ ವಿಚಾರಧಾರೆ ಕುರಿತು ಚಿಂತನ-ಮಂಥನ ಮಾಡಿ ಅದನ್ನು ಇದ್ದದ್ದರಲ್ಲಿಯೇ ಅರ್ಥಪೂರ್ಣಗೊಳಿಸಲು ಸಾಧ್ಯವಿದೆ. ಆದರೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಮ್ಮ ಮೇಲಿರುವ ಅಂಬೇಡ್ಕರ್‌ ಅವರ ಋಣ ತೀರಿಸಲು ಬರುವವರಿಗಿಂತ ʼಕಡ್ಡಾಯʼ ಎಂಬ ಕಾರಣಕ್ಕೆ ಸಂಕಟದಿಂದ ಬರುವವರೇ ಹೆಚ್ಚು. ಬರುಬರುತ್ತಿದ್ದಂತೆಯೇ ಅವರು ಹೊರಡುವ ಆತುರದಲ್ಲಿರುತ್ತಾರೆ! ಇವರೆಲ್ಲ ಸೇರಿ ಮಾಡುವ ಆಚರಣೆ ಎಷ್ಟು ಅರ್ಥಹೀನವಾಗಿರುತ್ತದೆ ಎಂದರೆ ಅದು ʻಸರಸ್ವತಿ ಪೂಜೆʼಯ ಕಾರ್ಯಕ್ರಮವೋ ಅಥವಾ ʻಸತ್ಯನಾರಾಯಣ ವ್ರತʼವೋ ಆಗುವುದೇ ಹೆಚ್ಚು. ಅಂಬೇಡ್ಕರ್‌ ಅವರ ಫೋಟೋ ಇಟ್ಟು ಅದಕ್ಕೆ ಕಾಯಿ ಒಡೆದು ಕರ್ಪೂರ ಬೆಳಗಿ ಕೊಬ್ಬರಿ ತಿಂದು ಅದರ ಆಚೆ ಈಚೆ ನಿಂತು ಮದುವೆ ರಿಶಪ್ಶನ್‌ ನಂತೆ ʻಹಾಜರಿಫೋಟೋʼ ಹೊಡೆಸಿಕೊಂಡರೆ ಅದೇ ಅಂಬೇಡ್ಕರ್‌ ದಿನಾಚರಣೆ!

ಸರ್ಕಾರ ಹೀಗೆ ಮಾಡಲಿಕ್ಕೆಂದು ಅವರ ಜಯಂತಿಯನ್ನು ಮಾಡಿದೆಯೇ? ಹೀಗೆ ʻಪೂಜೆ-ಪ್ರಸಾದʼವೇ ಪ್ರಧಾನವಾದ ಆಚರಣೆ ಮಾಡುವುದಾದರೆ ಅದನ್ನು ಮನೆಯಲ್ಲೋ ದೇವಸ್ಥಾನದಲ್ಲಿಯೋ ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ? ಅಂಬೇಡ್ಕರ್‌ ಪೋಟೋದೊಂದಿದೆ ಮನೆಯಲ್ಸೆಲಿಯೇ ಸೆಲ್ಪಿ ಹೊಡೆದುಕೊಂಡು ಕಳಿಸಬೇಕಾದವರಿಗೆ ಕಳಿಸಿದರೆ ಏನು ತಪ್ಪಾಗುತ್ತದೆ? ಶಾಲೆ-ಕಾಲೇಜು, ಕಛೇರಿಗಳಲ್ಲಿ ಎಲ್ಲ ಜಾತಿಧರ್ಮದ ಜನ ಸೇರಿ ಮಾಡುವ ಮಹಾವ್ಯಕ್ತಿಗಳ ಜಯಂತಿಗಳ ಮುಖ್ಯ ಉದ್ದೇಶವೇ ಅವರ ಕುರಿತು ವಿಚಾರ ಮಂಥನ. ಅದೇ ಮಾಯವಾದರೆ ಹೇಗೆ? ಹೀಗೆ ಮಾಡುವುದು ಅಂಬೇಡ್ಕರ್‌ ಅಂತಹ ಮೇಧಾವಿಗೆ ಮಾಡುವ ಅಪಚಾರವಲ್ಲದೆ ಮತ್ತೇನು? ಬೇರೆ ಕಛೇರಿಗಳಲ್ಲಿ ಆಗದಿದ್ದರೆ ದೇಶದ ಭಾವೀ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಶಾಲೆ ಕಾಲೇಜುಗಳಲ್ಲಿಯಾದರೂ ಇದು ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳದಿದ್ದರೆ ಹೇಗೆ?

ಇದಕ್ಕೆ ಮುಖ್ಯವಾಗಿ ನಮ್ಮ ಶಿಕ್ಷಕ ಸಮುದಾಯ ಮನಸ್ಸು ಮಾಡಬೇಕು ಅದಕ್ಕೆ ಪೂರಕವಾಗಿ ಅವರಿಗೆ ಸಹಾಯ ಆಗುವಂತೆ ಇಲಾಖೆ ಮಾಡಬೇಕಾದ ಕೆಲಸವೆಂದರೆ ಏಪ್ರಿಲ್‌ ಹನ್ನೊಂದರಿಂದ ಕೊಡುತ್ತಿರುವ ಬೇಸಿಗೆ ರಜೆಯನ್ನು ನಾಲ್ಕು ದಿನ ಮುಂದಕ್ಕೆ ಹಾಕಿ ಏಪ್ರಿಲ್‌ ಹದಿನೈದರಿಂದ ಕೊಟ್ಟು ಶಾಲಾ ಪುನರಾರಂಭವನ್ನು ಕೂಡ ನಾಲ್ಕುದಿನ ತಡವಾಗಿ ಮಾಡಬೇಕು. ಮತ್ತು ಇಂತಹ ದಿನಾಚರಣೆಗಳಿಗೆ ಕನಿಷ್ಠ ಒಂದೆರಡಾದರೂ ಗಂಟೆಗಳ ಕಾಲವನ್ನಾದರೂ ಬಳಸುವುದನ್ನು ನಿಗಧಿಪಡಿಸಿ ಅದನ್ನು ಹೇಗೆಲ್ಲ ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕೊಡಬೇಕು. ಕೊನೆಯ ಪಕ್ಷ ಇಷ್ಟಾದರೂ ಮಾಡದಿದ್ದರೆ ಈ ಆಚರಣೆ ಇನ್ನೂ ಹಳ್ಳ ಹಿಡಿಯುವುದು ನಿಶ್ಚಿತ. ಈ ವರ್ಷದ ಅಕ್ಟೋಬರ್‌ ನಲ್ಲಿ ಬರುವ ಮಹಾತ್ಮಾ ಗಾಂಧಿ ಜಯಂತಿ ಕೂಡ ದಸರಾ ರಜೆಯ ಮಧ್ಯೆ ಬರುವಂತೆ ಶಾಲಾ ಕಾಲೇಜುಗಳ ಕ್ಯಾಲೆಂಡರ್‌ ಪ್ರಕಟವಾಗಿದ್ದನ್ನು ನೋಡಿದರೆ ಅಂಬೇಡ್ಕರ್‌ ಜಯಂತಿಗೆ ಬಂದ ಗತಿಯೇ ರಾಷ್ಟ್ರಪಿತನ ಜಯಂತಿಗೂ ಬರುವುದು ಗ್ಯಾರಂಟಿ. ಇದು ಈ ಮಹಾವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಸಂಬಂಧಪಟ್ಟ ಎಲ್ಲರೂ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಒಂದು ಕವಿತೆಯ ನಾಲ್ಕು ಸಾಲುಗಳಿಂದ ಈ ಟಿಪ್ಪಣಿ ಮುಗಿಸುತ್ತೇನೆ.

ಅದೇ ಫೋಟೋ ಅದೇ ಹಾರ
ನಿನ್ನ ಆಚರಣೆಯಲ್ಲಿ ಉಳಿದಿಲ್ಲ ಸಾರ
ಮಣಭಾರವಿದ್ದರೂ ತಲೆಮೇಲೆ ನಿನ್ನ ಋಣ
ಆತ್ಮಸಾಕ್ಷಿಯು ಸತ್ತ ಹೊಣೆಗೇಡಿಗಳು ನಾವು….

ಡಾ. ರಾಜೇಂದ್ರ ಬುರಡಿಕಟ್ಟಿ
buradikatti@gmail̤com
14-04-2025

Friday, March 21, 2025

 

ಸುನೀತಾ ಸಾಧನೆ : ʻಗಣೇಶʼ ʼಭಗವದ್ಗೀತೆʼ ಮತ್ತು ʻಗೆದ್ದ ಎತ್ತ್ತಿನ ಬಾಲ ಹಿಡಿಯುವಿಕೆʼ

ಸುನೀತಾ ವಿಲಿಯಮ್ಸ್ ತಮ್ಮ ದೀರ್ಘಾವಧಿಯ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳಿದ್ದಾರೆ. ಅವರು ಕೈಗೊಂಡದ್ದು ಅತ್ಯಂತ ಅಪಾಯಕಾರಿಯಾದ ಒಂದು ದುಸ್ಸಾಹಸದ ಕಾರ್ಯವಾಗಿದ್ದುಅದನ್ನು ಅವರು ಧೈರ್ಯದಿಂದ ಕೈಗೊಂಡು ಯಶಸ್ವಿಯಾಗಿ ಪೂರೈಸಿದ್ದು ಅವರ ಈ ಯಾನ ಭಾರತ ಮಾತ್ರವಲ್ಲ ಇಡೀ ಮನುಕುಲದ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಅನೇಕ ವಿಧದಲ್ಲಿ ನೆರವಾಗಬಹುದಾಗಿದ್ದರಿಂದ ನಾವೆಲ್ಲರೂ ಅಂದರೆ ಭಾರತೀಯರು ಮಾತ್ರವಲ್ಲ ವಿಶ್ವದ ಜನರು ಹೆಮ್ಮೆ ಪಡಬೇಕಾದ ಸಂಗತಿ.

ಆದರೆ ಅವರ ಈ ಸಾಧನೆಯನ್ನು ನಮ್ಮಲ್ಲಿ ಕೆಲವು ಜನ ಕೊಂಡಾಡುವುದು ಬೇರೆಯದೇ ಆದ ಕಾರಣಕ್ಕಾಗಿ. ಸುನೀತಾ ಭಾರತೀಯ ಮೂಲದವರು ಎಂದು ಇವರು ಕೊಂಡಾಲಿಕ್ಕೆ ಕಾರಣ ಅವರ ʼಭಾರತೀಯತೆʼ ಅಲ್ಲ. ಅವರ ಕೆಲವು ಮಾತು ಮತ್ತು ನಡವಳಿಕೆಗಳು ಇವರ ಮೂಗಿಗೆ ʼಹಿಂದೂʼ ವಾಸನೆಯನ್ನು ಬಡಿಸಿರುವುದರಿಂದ. ಸುನೀತಾ ಅವರು ಅಂತರಿಕ್ಷದಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಾಗ ಇವರೆಲ್ಲ ದೇವಸ್ಥಾನಗಳಲ್ಲಿ ವಿಶೇಶ ಪೂಜೆ ಪ್ರಾರ್ಥನೆ ಸಲ್ಲಿಸಿ ಅವರನ್ನು ಸಂಕಷ್ಟದಿಂದ ಪಾರುಮಾಡಿದ್ದರು! ಕೊರೊನಾ ಕಾಲದಲ್ಲಿ ಕೂಡ ಇವರು ಹೀಗೆ ಮಾಡಿ, ರಸ್ತೆಗಳಲ್ಲಿ ಪಾತ್ರೆ ಪಡಗ ಬಾರಿಸಿ ಅದರ ಸೌಂಡಿನಿಂದಲೇ ದೇಶದಿಂದ ಹೊರದಬ್ಬಿದ್ದರು!!

ಇವರ ವಿಶೇಷತೆ ಎಂದರೆ ತಮಗೆ ಇಷ್ಟಬರುವುದನ್ನು ಯಾರಾದರೂ ಆಡಿದರೆ ಇಷ್ಟಬರುವುದನ್ನು ಯಾರಾದರೂ ಮಾಡಿದರೆ ಅವರೆಲ್ಲ ಜಾತಿ ಜನಾಂಗ ಧರ್ಮ ಯಾವುದಿದ್ದರೂ ಇವರಿಗೆ ಹತ್ತಿರದ ನೆಂಟರಾಗಿಬಿಡುತ್ತಾರೆ! ಹೀಗಾಗಿಯೇ ಕೆಲವರು ಸುನೀತಾ ಗಣಪತಿ ಮೂರ್ತಿಗೆ ಆರತಿ ಬೆಳಗುವ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದರು. ಒಬ್ಬ ಮತಿಗೇಡಿ ʼಸುನೀತಾ ಅಂತರಿಕ್ಷಕ್ಕೆ ಒಯ್ದದ್ದು ಭಗವದ್ಗೀತೆಯನ್ನೇ ಹೊರತು ಬುದ್ಧನ ಬುರಡೆ ಮಾತುಗಳನ್ನಲ್ಲʼ ಎಂದು ಬುದ್ಧನ ಮೇಲಿನ ತನ್ನ ಸಿಟ್ಟನ್ನು ಕಾರಿಕೊಂಡ. ಸುನೀತಾ ಅವರು ತನ್ನ ಕಷ್ಟಕಾಲದಲ್ಲಿ ಉಪನ್ನಿಷತ್ತಿನ ವಾಕ್ಯಗಳೋ ಅಥವಾ ಭಗವದ್ಗೀತೆಯ ಸಂದೇಶವೋ ತನ್ನಲ್ಲಿ ಚೈತನ್ಯ ತುಂಬುತ್ತದೆ ಎಂದು ನಂಬಿಕೊಂಡಿದ್ದರೆ ಮತ್ತು ಅದೇ ಕಾರಣಕ್ಕೆ ಗಣೇಶನ ವಿಗ್ರಹವನ್ನೋ ಅಥವಾ ಭಗವದ್ಗೀತೆಯ ಪ್ರತಿಯನ್ನೋ ತಮ್ಮೊಂದಿಗೆ ಅಂತರಿಕ್ಷಕ್ಕೆ ಒಯ್ದಿದ್ದರೆ ಅದು ಅವರ ವೈಯಕ್ತಿಕ ನಂಬಿಕೆ. ಅದರಿಂದ ಯಾರಿಗೂ ತೊಂದರೆ ಇಲ್ಲ; ಹಾಗಾಗಿ ನಾವು ಅದನ್ನು ವಿರೋಧಿಸಬೇಕಾಗಿಲ್ಲ.

ಆದರೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ನಮ್ಮ ʻಧರ್ಮವೀರʼರ ಅಂಧಭಕ್ತಿಯನ್ನು. ಗಣೇಶನ ವಿಗ್ರಹವನ್ನೋ ಭಗವದ್ಗೀತೆಯ ಪ್ರತಿಯನ್ನೋ ಒಯ್ದದ್ದರಿಂದಲೇ ಅವರು ಆ ದೊಡ್ಡ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯವಾಯಿತು ಎಂಬುದೇ ಇವರ ಆ ಅಂಧಭಕ್ತಿ! ಒಂದು ವೇಳೆ ಸುನೀತಾ ಅವರು ತಮ್ಮ ದೇಶದ ಬಹುಸಂಖ್ಯಾತರ ಧರ್ಮವಾದ ಕ್ರಿಶ್ಚಿಯನ್‌ ಧರ್ಮದ ಧರ್ಮಗ್ರಂಥವಾದ ಬೈಬಲ್‌ ಅನ್ನೋ ಅಥವಾ ಕುರಾನನ್ನೋ ಒಯ್ದಿದ್ದರೆ ಇವರ ವರ್ತನೆ ಬೇರೆಯದೇ ಆಗಿರುತ್ತಿತ್ತು ಎಂದು ಬೇರೆ ಹೇಳಬೇಕಿಲ್ಲ. ಕ್ರಿ‍ಶ್ಚಿಯನ್‌ ಮತ್ತು ಮುಸಲ್ಮಾನರ ಹೆಸರನ್ನು ಕೇಳಿದರೇನೆ ಒಂಥರಾ ಹೊಟ್ಟೆನೋವು ಶುರುವಾಗುವ ಇವರಿಗೆಲ್ಲ ಗಣೇಶನ ವಿಗ್ರಹ ಮತ್ತು ಭಗವದ್ಗೀತೆಯನ್ನು ಗೌರವಿಸಿದ್ದಕ್ಕಾಗಿ ಸುನೀತಾ ಕ್ರಿಶ್ಚಿಯನ್‌ ವ್ಯಕ್ತಿಯನ್ನು ಮದುವೆಯಾದರೂ ಇವರಿಗೆಲ್ಲ ಕ್ರಿಶ್ಚಿಯನ್‌ ಆಗಿ ಕಾಣುತ್ತಿಲ್ಲ; ಬದಲಾಗಿ ಇವರ ಅಕ್ಕನೋ ತಂಗಿಯೋ ಆಗಿ ಕಾಣುತ್ತಿದ್ದಾರೆ!

ಹೀಗೆ ಯಾರಾದರೂ ಒಬ್ಬರು ಗಣನೀಯ ಸಾಧನೆಯನ್ನು ಮಾಡಿದಾಗ ಅವರನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವ ಮತ್ತು ಹತ್ತಿರ ಎಳೆದುಕೊಂಡು ಸಂಭ್ರಮಿಸುವ ʻಆಲಿಂಗನಗುಣʼ ನಮ್ಮ ಭಾರತೀಯರಿಗೆ ಹೊಸದಲ್ಲ; ಆದರೆ ಸುನೀತಾ ಭಾರತೀಯ ಮೂಲದವರಾದರೂ ಅವರ ಕುಟುಂಬದ ಮೂಲವನ್ನು ಲೆಕ್ಕಕ್ಕೆ ತೆಗೆದುಕೊಂಡು ʼಹೊರಗಿನವಳುʼ ಎಂಬ ಯಾವುದೇ ಭೇದ ಮಾಡದೆ ಅವರ ಪ್ರತಿಭೆಯನ್ನು ಗೌರವಿಸಿ ಅವರನ್ನು ಇಂತಹ ದೊಡ್ಡ ಸಾಧನೆ ಮಾಡಲು ಸಹಕರಿಸಿದ್ದು ಅಮೇರಿಕ! ಅವರಿಗೆ ಭಗವದ್ಗೀತೆಯ ಬಗ್ಗೆಯೋ ಗಣೇಶನ ವಿಗ್ರಹದ ಬಗ್ಗೆಯೋ ಸುನೀತಾ ಹೊಂದಿರುವ ಗೌರವದ ಭಾವನೆ ತಮ್ಮ ಧರ್ಮಕ್ಕೆ ಮಾಡುವ ದ್ರೋಹ ಎಂದು ಅನ್ನಿಸಲಿಲ್ಲ! ಅದು ಅವರ ದೊಡ್ಡ ಗುಣ. ಆದರೆ ನಮ್ಮ ದೇಶದಲ್ಲಿ ಯಾರಾದರೂ ಅಂತರಿಕ್ಷಕ್ಕೆ ಕುರಾನನ್ನೋ ಬೈಬಲ್‌ ಅನ್ನೋ ತೆಗೆದುಕೊಂಡು ಹೋದರೆ ಆಕಸ್ಮಿಕವಾಗಿ ಅವರು ದುರಂತಕ್ಕೆ ಎಡೆಯಾದರೆ ಈ ಭಕ್ತರು ಆ ವ್ಯಕ್ತಿಯ ದುರಂತಕ್ಕೆ ಈ ಪುಸ್ತಕಗಳೇ ಕಾರಣ ಎಂದು ಬೊಬ್ಬೆಹೊಡೆಯುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು. ಒಂದು ವೇಳೆ ಸುನೀತಾ ಅವರು ನಮ್ಮಲ್ಲಿ ಇದ್ದಿದ್ದರೆ ನಾವೂ ಅವರ ಹಿನ್ನಲೆ ಮುನ್ನೆಲೆ ಏನೂ ನೋಡದೆ ಅವರ ಪ್ರತಿಭೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಇಷ್ಟು ಎತ್ತರಕ್ಕೆ ಬೆಳೆಯಲು ಬಿಡುತ್ತಿದ್ದೆವು ಎಂದು ಹೇಳುವುದೂ ಕಷ್ಟ!

ಸುನೀತಾ ಅವರು ಭಾರತದಲ್ಲಿ ಹುಟ್ಟಲಿಲ್ಲ; ಭಾರತದಲ್ಲಿ ಬೆಳೆಯಲಿಲ್ಲ; ಭಾರತದವನನ್ನು ಮದುವೆಯಾಗಲಿಲ್ಲ; ಭಾರತದ ಪೌರತ್ವವನ್ನು ಪಡೆದಿಲ್ಲ. ಅವರ ಹೆಸರು (ʼಸುನೀತʼ ಎಂದರೇನೇ ʻಒಳ್ಳೆಯ ನೀತಿಯʼ, ʻಒಳ್ಳೆಯ ನಡವಳಿಕೆಯʼ ಎಂದರ್ಥ) ಬಿಟ್ಟರೆ ಉಳಿದ ಏನೂ ʼಭಾರತೀಯʼ ಆಗಿಲ್ಲ. (ಇದು ಅವರ ಕೊರತೆಯೇನಲ್ಲ.) ಹಾಗಿದ್ದೂ ಅವರು ಇವರಿಗೆಲ್ಲ ʼಭಾರತೀಯಳುʼ! ಅವರ ಅಪ್ಪನೋ ಅಜ್ಜನೋ ಇಲ್ಲಿ ಹುಟ್ಟಿದ್ದರು ಎಂಬುದು ಇದಕ್ಕೆ ಕಾರಣ. ಅವರ ಅಜ್ಜ ಮುತ್ತಜ್ಜ ಏಕೆ ಏಳೆಂಟು ತಲೆಮಾರಿನ ಹಿಂದಿನವರು ಭಾರತದವರು ಎಂಬ ಎಳೆ ಸಿಕ್ಕರೂ ಸಾಕು ಇವರ ಕೊಂಡಾಟ ಶುರುವಾಗುತ್ತದೆ! ಆದರೆ ಇದೇ ಗುಣ ಬೇರೆ ದೇಶದ ಮೂಲದವರು ನಮ್ಮ ದೇಶಕ್ಕೆ ಬಂದು ಏನನ್ನಾದರೂ ಸಾಧನೆ ಮಾಡಿದರೆ ಅದನ್ನು ಗೌರವಿಸುವ ಗುಣ ಇಂಥವರಲ್ಲಿ ಇರುವುದಿಲ್ಲ. ಅಷ್ಟೇ ಏಕೆ ಅವರ ಸಾಧನೆಯನ್ನು ಅವರ ದೇಶಗಳಲ್ಲಿ ಸಂಭ್ರವಿಸುವುದನ್ನು ಕೂಡ ಸಹಿಸಿಕೊಳ್ಳುವ ಮನಸ್ಥಿತಿ ಇಂಥವರಿಗೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ಇವರಿಗೆ ʻಹೊರಗಿನವರುʼ ಬಂದು ಇಲ್ಲಿ ಹೆಸರು ಮಾಡಿದ್ದಕ್ಕೆ ಒಳಗೊಳಗೇ ಹೊಟ್ಟೆ ಹಿಂಡತೊಡಗುತ್ತದೆ.

ಯುರೋಪಿಯನ್ನರು ಅದರಲ್ಲಿಯೂ ವಿಶೇಷವಾಗಿ ಬ್ರಿಟೀಷರು ಈ ದೇಶಕ್ಕೆ ಬಂದು ಅವರ ವಿದ್ವಾಂಸರು ನಮ್ಮ ದೇಶಿಯ ಭಾಷೆ ಕಲೆ, ಸಾಹಿತ್ಯ ಆರೋಗ್ಯ ಇಂತಹ ಸೇವೆಗಳಲ್ಲಿ ಗಣನೀಯ ಸೇವೆಯನ್ನು ಮಾಡಿದಾಗ ಇವರು ಅದನ್ನು ಮೆಚ್ಚಿಕೊಳ್ಳುವುದಿಲ್ಲ. ಅಗೆಲ್ಲ ಇವರಿಗೆ ಅವರು ʼಹೊರಗಿನವರುʼ ಆಗಿಯೇ ಕಾಣುತ್ತಾರೆ. ಕಿಟಲ್, ಮದರ್ ತೆರೆಸಾ ಮುಂತಾದವರ ಸಾಧನೆಯಲ್ಲಿ ಇವರಿಗೆ ʼಧರ್ಮಪ್ರಚಾರʼ ʼಮತಾಂತರʼ ಇಂತಹ ಹುಳುಕುಗಳೇ ಕಾಣುವುದು ಇದೇ ಕಾರಣದಿಂದ. ಇವರ ಮನಸ್ಥಿತಿಯ ಇನ್ನೂ ಕೆಟ್ಟಸಂಗತಿ ಎಂದರೆ ಈ ದೇಶಕ್ಕೆ ಅಧಿಕೃತವಾಗಿ ಬಂದು ಈ ದೇಶದ ಪ್ರಜೆಯಾಗಿಯೇ ಇದ್ದು ಈ ದೇಶದ ಬದುಕು ಸಂಸ್ಕೃತಿಗಳನ್ನು ಗೌರವಿಸುತ್ತಾ ಬಾಳುವವರೂ ಇವರಿಗೆ ಈ ದೇಶದವರಾಗಿ ಕಾಣುವುದಿಲ್ಲ!

ಹೀಗೆ ʻನಮ್ಮವರುʼ ʼನಮ್ಮ ಊರಿನವರುʼ ʼನಮ್ಮ ದೇಶದವರುʼ ಎಂದು ಕೊಂಡಾಟ ಮಾಡುವ ಇವರೆಲ್ಲ ನಮ್ಮವರೆ ಬೇರೆ ಕಡೆಗೆ ಹೋಗಿ ಮಾಡಬಾರದ ಕೆಲಸವನ್ನು ಮಾಡಿ ಆರೋಪಿಗಳೋ ಅಪರಾಧಿಗಳೋ ಆದಾಗ ಬಹಳಷ್ಟು ಜಾಣತನದಿಂದ ಆದಷ್ಟೂ ಅವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ! ಇದೇ ಕಾರಣದಿಂದ ನಮ್ಮಲ್ಲಿಯೇ ಹುಟ್ಟಿ ಈಗ ಬೇರೆ ದೇಶಗಳಲ್ಲಿ ಇರುವ ದೊಡ್ಡ ದೊಡ್ಡ ಆರೋಪಿಗಳನ್ನು ಇವರು ʼನಮ್ಮವರುʼ ಎನ್ನಲು ಹಿಂದೇಟು ಹಾಕುತ್ತಾರೆ. ಇದೇ ಸುನೀತಾ ಇಂತಹ ಸಾಧನೆಯನ್ನು ಮಾಡದೆ ಎಂಥದೋ ಕೆಟ್ಟ ಕೆಲಸ ಮಾಡಿ ಪ್ರಖ್ಯಾತಿಯ ಬದಲು ಕುಖ್ಯಾತಿ ಪಡೆದಿದ್ದರೆ ಇವರ ಪ್ಲೇಟ್ ಉಲ್ಟಾ ತಿರುಗತೊಡಗುತ್ತಿತ್ತು. ಅವರ ಪೂರ್ವಜರು ಯಾವುದೋ ಕಾಲದಲ್ಲಿ ಇಲ್ಲಿಂದ ಅಮೇರಿಕಕ್ಕೆ ಹೋಗಿದ್ದಾರೆ. ಹಾಗಿದ್ದಾಗ ಸುನೀತಾ ಭಾರತಕ್ಕೆ ಹೇಗೆ ಸಂಬಂಧಪಡುತ್ತಾರೆ? ಎಂದು ಇವರೆಲ್ಲ ವಕಾಲತ್ತು ಹೂಡುತ್ತಿದ್ದರು!

ಒಂದು ಉದಾಹರಣೆ ಕೊಡುವುದಾದರೆ ನಮ್ಮ ಕುಂದಾಪುರದ ಮಹಿಳೆಯೊಬ್ಬರು, ಬೆಂಕಿ-ಬಿರುಗಾಳಿಯ ʻಭೀಕರ ಭಾಷಣʼಮಾಡಿ ಧರ್ಮ ರಕ್ಷಣೆ ಮಾಡುವಾಗ ಅಲ್ಲಿನ ಅನೇಕರು ತನ್ನ ಹೆಸರಿಗೆ ಊರಿನ ಹೆಸರನ್ನೇ ತಗಲುಹಾಕಿಕೊಂಡ ಈ ಮಹಿಳೆ ಇಡೀ ಊರಿಗೆ ಕೀರ್ತಿ ತರುತ್ತಿದ್ದಾಳೆ ಎಂದು ಸಂಭ್ರಮಿಸಿದರು. ಆದರೆ ಅದೇ ಮಹಿಳೆ ಅದ್ಯಾವುದೋ ಪಕ್ಷದ ಟಿಕೆಟ್ ಕೊಡಿಸುವ ವಂಚನೆಯ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಆ ಸುದ್ಧಿ ದಿನಾ ಪತ್ರಿಕೆಯಲ್ಲಿ ಬರತೊಡಗಿದಾಗ ಇವರೆಲ್ಲ ಮೂಗುಮುರಿದು ಆಕೆಯ ಹೆಸರಿನೊಂದಿಗೆ ನಮ್ಮ ಊರಿನ ಹೆಸರನ್ನು ಮಾಧ್ಯಮದವರು ಬಳಸಬಾರದು ಎಂದು ಅವಲತ್ತುಕೊಂಡರು! ಒಳ್ಳೆಯದಾದರೆ ಕೊಂಡಾಡಿ ʼತಬ್ಬಿಕೊಳ್ಳುವುದು; ಕೆಟ್ಟದ್ದಾದರೆ ಮೂಗುಮುರಿದು ದಬ್ಬಿಬಿಡುವುದು! ಇಂಥವರ ಮನಸ್ಥಿತಿ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿಯುವ ಕಡೆಗೇ ಇರುತ್ತದೆ. ಇವರ ಅಪ್ಪ ದೊಡ್ಡ ಸಾಧನೆ ಮಾಡಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರೆ ಇವರು ತಮ್ಮನ್ನು ,ʼಇಂಥವರ ಮಗʼ ಎಂದು ಪರಿಚಯಿಸಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪ ಅಂಥದ್ದೇನೂ ಸಾಧನೆ ಮಾಡಿರದ ವ್ಯಕ್ತಿಯಾಗಿರದೇ ಸಾಮಾನ್ಯ ವ್ಯಕ್ತಿಯಾಗಿದ್ದು ಹೆಣ್ಣುಕೊಟ್ಟ ಮಾವ ಏನಾರೂ ಅಂತಹ ಸಾಧನೆ ಮಾಡಿದ್ದರೆ ಆಗ ತಕ್ಷಣ ಇವರ ಪ್ಲೇಟ್ ಬದಲಿಯಾಗಿಬಿಡುತ್ತದೆ. ಆಗ ಇವರೆಲ್ಲ ನಾನು ಇಂಥವರ ಅಳಿಯʼ ಎಂದು ಪರಿಚಯಿಸಿಕೊಳ್ಳುತ್ತಾರೆ!

ಇದು ಮಾರ್ಚ್ ತಿಂಗಳು. ಸ್ವತಂತ್ರ ಭಾರತದ ಸಮಾಜೋರಾಜಕೀಯ ಕ್ಷೇತ್ರವನ್ನು ಬಹುವಾಗಿ ಪ್ರಭಾವಿಸಿರುವ ರಾಮಮನೋಹರ ಲೋಹಿಯಾ ಅವರ ಜನ್ಮ ಆದ ತಿಂಗಳು. ಅವರು ಪ್ರತಿಪಾದಿಸಿದ ಸಪ್ತಕ್ರಾಂತಿಯಲ್ಲಿನ ಒಂದು ಮುಖ್ಯ ಅಂಶ ʼವಿಶ್ವಸರ್ಕಾರʼ ರಚನೆ. ಅಂಥದ್ದೊಂದು ಕನಸು ನನಸಾದರೆ ನಾವೆಲ್ಲ ಆ ದೇಶದವರು, ಈ ದೇಶದವರು ಎಂಬ ಸಂಕುಚಿತತೆಯಿಂದ ಮುಕ್ತರಾಗಿ ಕುವೆಂಪು ಹೇಳುವಂತೆ ನಿಜಾರ್ಥದಲ್ಲಿ ʼವಿಶ್ವಪ್ರಜೆʼಗಳಾಗುತ್ತೇವೆ. ಅಂತಹ ಒಂದು ಸ್ಥಿತಿ ಸಧ್ಯಕ್ಕೆ ಕಾಣದಿದ್ದರೂ ಅತ್ತಕಡೆ ಮುಖಮಾಡಿ ನಡೆಯಬೇಕಾದದ್ದು ಪ್ರಜ್ಞಾವಂತರೆಲ್ಲರ ಕರ್ತವ್ಯ.

ಆ ಕರ್ತವ್ಯವನ್ನು ಮಾಡಬೇಕಾದರೆ ಇಂತಹ ಕ್ಷುಲ್ಲಕ ಮನಸ್ಥಿತಿಗಳಿಂದ ಹೊರಬಂದು ನಾವು ವಿಶ್ವಮಟ್ಟದಲ್ಲಿ ಆಲೋಚಿಸುವಂಥವರಾಗಬೇಕು. ಇಂತಹ ಕೊಂಡಾಟ, ಭಂಟಾಟಗಳಲ್ಲಿ ತೊಡಗಿಕೊಳ್ಳದೆ ವಿಶ್ವದ ಯಾವುದೇ ದೇಶದ ಯಾವುದೇ ಜನಾಂಗದ ವ್ಯಕ್ತಿ ಇಡೀ ವಿಶ್ವಕ್ಕೆ ಉಪಯುಕ್ತವಾಗಬಲ್ಲ ಏನನ್ನಾದರೂ ಸಾಧನೆ ಮಾಡಿದರೆ ಅವರು ನಮ್ಮವರು ತಮ್ಮವರು ಎಂಬ ಭೇದ ಮಾಡದೆ ಅವರ ಸಾಧನೆಯ ಕಾರಣಕ್ಕೇ ನಾವು ಅವರನ್ನು ಗೌರವಿಸುವುದನ್ನು ಕಲಿಯಬೇಕು. ಆಗ ಕುವೆಂಪು ಹೇಳುವ ವಿಶ್ವಮಾನವ ಪ್ರಜ್ಞೆ ನಮ್ಮದಾಗಬಹುದು; ಅದು ಲೋಹಿಯಾ ಪ್ರತಿಪಾದನೆಯ ವಿಶ್ವಸರ್ಕಾರ ರಚನೆಯ ಕಡೆ ನಮ್ಮದೃಷ್ಟಿಯನ್ನು ತಿರುಗಿಸಬಲ್ಲದು. ಸುನೀತಾ ಅವರನ್ನು ಅಂತರಿಕ್ಷಕ್ಕೆ ಕಳಿಸಿದ್ದೂ ವಿಜ್ಞಾನವೇ; ಅವರನ್ನು ಅಲ್ಲಿಂದ ಕರೆಸಿಕೊಂಡದ್ದೂ ವಿಜ್ಞಾನವೇ! ಇದನ್ನು ಧರ್ಮಕ್ಕೆ ಗಂಟುಹಾಕುವುದು ಅಜ್ಞಾನದ ಕೆಲಸವಲ್ಲದೇ ಬೇರೇನೂ ಅಲ್ಲ!!

ರಾಬು
೨೧-೦೩-೨೦೨೪

Saturday, March 8, 2025

ಮತ್ತೆ ಮೇಲೆದ್ದ ಸೌಜನ್ಯ: ಸಾಯಲೊಪ್ಪದ ಸತ್ತ ಹುಡುಗಿಯ ಪ್ರಕರಣ

 

ಮತ್ತೆ ಮೇಲೆದ್ದ ಸೌಜನ್ಯ: ಸಾಯಲೊಪ್ಪದ ಸತ್ತ ಹುಡುಗಿಯ ಪ್ರಕರಣ 

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೆ ಬಹಳ ದೊಡ್ಡ ಪ್ರಮಾಣದಲ್ಲಿ ವೈರಲ್‌ ಆದ ಸಮೀರ್‌ ಎಂಬ ಯೂಟೂಬರ್‌ ಯುವಕನ ವಿಡಿಯೋದ ಕಾರಣಕ್ಕಾಗಿ ಇದು ಆಗಿದೆ. ನಾನು ಸಮೀರನ ಆ ವಿಡಿಯೋವನ್ನು ನೋಡಿದೆ. ಅದರಲ್ಲಿ ಆತ ಏನನ್ನೂ ಹೊಸದಾಗಿ ಹೇಳಿಲ್ಲ ಅನ್ನಿಸಿತು. ಆದರೂ ಅದು ಅಷ್ಟು ದೊಡ್ಡ ಪ್ರಮಾಣದಲ್ಲಿ ವೈರಲ್‌ ಆಗಲು ಕಾರಣವಾದದ್ದು ಆ ವಿಡಿಯೋದ ವಿಷಯ ಹೊಸದಲ್ಲವಾದರೂ ಅದನ್ನು ನೋಡಿದವರು ಬಹಷ್ಟು ಪ್ರಮಾಣದಲ್ಲಿ ಹೊಸಬರೇ ಆಗಿದ್ದು ಅನ್ನಿಸಿತು. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದದ್ದು ಇದು ಎರಡನೆ ಸಲ. ಹದಿಮೂರು ವರ್ಷಗಳ ಹಿಂದಿನ ಅಂದರೆ ೨೦೧೨ರ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ʼಕೊಲೆಗಾರʼ ಎಂದು ʼಸಿಕ್ಕಿಹಾಕಿಸಲ್ಪಟ್ಟಿದ್ದʼ ಸಂತೋಷ್‌‌ ರಾವ್ ಎಂಬ ವ್ಯಕ್ತಿಯನ್ನು ೨೦೨೩ರ ಜೂನ್‌ನಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆಮಾಡಿದಾಗ ಮೊಟ್ಟಮೊದಲು ಈ ಪ್ರಕರಣ ಸುದ್ಧಿಮಾಡಿತು.  ಅದಾದ ನಂತರ ಅದಕ್ಕಿಂತ ವ್ಯಾಪಕವಾಗಿ ಈ ಪ್ರಕರಣವನ್ನು ವಿಸ್ತರಿಸಿದ್ದು ಈ ವಿಡಿಯೋ.

೨೦೨೩ರಲ್ಲಿ ಈ ಪ್ರಕರಣ ಸುದ್ದಿ ಮಾಡಿದ್ದು ಏಕೆಂದರೆ ಈ ಪ್ರಕರಣದಲ್ಲಿ ಆ ಹುಡುಗಿಯನ್ನು ʼಬರ್ಬರವಾಗಿ ಕೊಲೆಮಾಡಲಾಗಿದೆʼ ಎಂಬ ಅಂಶ ಆಗಲೇ ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಕೊಲೆಮಾಡಿದವನೆಂದು ಸಿಕ್ಕಿಹಾಕಿಸಲ್ಪಟ್ಟ ವ್ಯಕ್ತಿಯು ನಿಪರಾಧಿ ಎಂಬುದೂ ನಂತರ ಸಾಬೀತಾಯಿತು. ಆಗ ದೊಡ್ಡ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಕೊಲೆಗಾರ ಈತನಲ್ಲದಿದ್ದರೆ ಮತ್ಯಾರು? ಎಂಬುದೇ ಆ ಪ್ರಶ್ನೆ. ಈ ಪ್ರ‍ಶ್ನೆಯನ್ನು ಮುಂದುಮಾಡಿಕೊಂಡು ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಟಮಾಡುವ ಹೋರಾಟಗಾರರು ಮತ್ತೆ ಪ್ರಕರಣದ ಮರುತನಿಖೆಗೆ ಒತ್ತಾಯ ಮಾಡುಲು ಧ್ವನಿ ಎತ್ತಿದ್ದು ಸದ್ದು ಮಾಡಲು ಕಾರಣವಾಗಿತ್ತು. ಆರಂಭದಲ್ಲಿ ಧರ್ಮಸ್ಥಳಕ್ಕೆ ನಂತರ ಸುತ್ತಮುತ್ತಲ ಹಳ್ಳಿಗಳಿಗೆ ನಂತರ ಕರಾವಳಿಗೆ ಆನಂತರ ಬೆಟ್ಟದ ಮೇಲಿನ ಜಿಲ್ಲೆಗಳಿಗೆ ಹೀಗೆ ಈ ಪ್ರಕರಣದ ಚರ್ಚೆ ವ್ಯಾಪಿಸಿತು. ಆದಾಗ್ಯೂ ಈ ಪ್ರಕರಣ ಸಾರ್ವಜನಿಕವಾಗಿ ರಾಜ್ಯದ ಎಲ್ಲಕಡೆಗೂ ಚರ್ಚೆಯ ವಿಷಯವಾಗಿರಲಿಲ್ಲ. ಸಮೀರ್‌ ವಿಡಿಯೋ ಇದುವರೆಗೂ ಯಾರು ಈ ಪ್ರಕರಣಕ್ಕೆ ಅಪರಿಚಿತರಾಗಿದ್ದರೋ ಅಂಥವರನ್ನು ದೊಡ್ಡ ಸಂಖ್ಯೆಯಲ್ಲಿ ಮುಟ್ಟಿದ್ದು ಅವರಲ್ಲಿ ದಿಗ್ಭ್ರಮೆಯನ್ನು ಉಂಟುಮಾಡಿದ್ದು ಇದು ದೇಶವಿದೇಶಗಳ ಕನ್ನಡಿಗರಿಗೂ ತಲುಪುವಂತೆ ವೈರಲ್‌ ಆಗಲು ಕಾರಣ ಅನ್ನಿಸುತ್ತದೆ.

ಈ ಪ್ರಕರಣದ ಬಗ್ಗೆ ಈಗಾಗಲೇ ಅನೇಕ ಹೋರಾಟಗಾರರು ತಮ್ಮ ಅನೇಕ ಬರೆಹ ಮತ್ತು ಮಾತುಗಳಲ್ಲಿ ಅದರ ಹಿನ್ನಲೆ, ಹುನ್ನಾರ, ಇತಿಹಾಸ ಇತ್ಯಾದಿಯಾಗಿ ಸಾಕಷ್ಟು ವಿವರಗಳನ್ನು ಸಾರ್ವಜನಿಕವಾಗಿ ನೀಡುತ್ತಲೇ ಬಂದಿದ್ದರೂ ಮತ್ತು ಈಮೊದಲೇ ಪ್ರಸ್ತಾಪವಾದಂತೆ ಈಗಾಗಲೇ ಒಂದಿಷ್ಟು ಜನರಿಗೆ ಗೊತ್ತಿರುವ ಸಂಗತಿಗಳನ್ನೇ ಸಂಗ್ರಹಿಸಿ, ಸಂಕ್ಷೇಪಿಸಿ, ಅವನ್ನು ಒಂದು ಸರಣಿಯಾಗಿ ಜೋಡಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಮಾನ್ಯರಿಗೆ ಸುಲಭವಾಗಿ ಪ್ರಕರಣ ಅರ್ಥವಾಗುವಂತೆ ಮಾಡಿದ್ದಷ್ಟೆ ಈ ವಿಡಿಯೋದಲ್ಲಿ ಸಮೀರ್‌ ಮಾಡಿದ ಕೆಲಸ. ಆತ ಆ ವಿಡಿಯೋದಲ್ಲಿ ನೀಡಿದ ವಿವರ ಮಾಡಿದ ಆರೋಪ ಯಾವೂ ಹೊಸವಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವೆಲ್ಲ ಸೌಜನ್ಯಪರ ಹೋರಾಟಗಾರರು ಇದುವರೆಗೂ ನೀಡಿದ ವಿವರಗಳೇ ಮತ್ತು ಆರೋಪಗಳೇ ಆಗಿವೆ. ಆದರೂ ಈ ವಿಡಿಯೋ ಪ್ರಕರಣ ಹೆಚ್ಚು ತೀವ್ರಸ್ವರೂಪದ ವಾದ ವಿವಾದಗಳನ್ನು ಹುಟ್ಟುಹಾಕಲು ಕಾರಣವಾದದ್ದು ಎರಡು ಅಂಶಗಳು ಅನ್ನಿಸುತ್ತದೆ.

ಒಂದು ಕಳೆದ ಹತ್ತು ವರ್ಷಗಳವರೆಗೂ ಸೌಜನ್ಯಪರ ಹೋರಾಟಗಾರರು ಎಷ್ಟು ಮಾತುಗಳನ್ನು ಆಡಿದ್ದರೂ ಸಭೆಗಳನ್ನು ಮಾಡಿದ್ದರೂ, ಲೇಖನಗಳನ್ನು ಬರೆದಿದ್ದರೂ ಅವು ಇಷ್ಟೊಂದು ದೊಡ್ಡಪ್ರಮಾಣದ ʼಹೊಸಬರನ್ನುʼ ತಲುಪಿ ಅವರ ಮನಸ್ಸು ಹೃದಯಗಳನ್ನು ತಲ್ಲಣಗೊಳಿಸಿರಲಿಲ್ಲ ಮತ್ತು ಅದನ್ನು ಈ ವಿಡಿಯೋ ಮಾಡಿತು. ಇನ್ನೊಂದು ಅದಕ್ಕೆ ದೇವರು ಧರ್ಮದ ಬಣ್ಣ ಅಂಟಿಸಿ ಅದನ್ನು ಹಾದಿತಪ್ಪಿಸಲು ನೋಡುತ್ತಿರುವವರು ಅದನ್ನು ವಿರೋಧಿಸಿದ್ದು. ಏಕೆಂದರೆ ಸಾಮಾಜ ಸುಧಾರಣೆಯ ಅಥವಾ ಅನ್ಯಾಯವನ್ನು ಪ್ರತಿಭಟಿಸುವ ಒಂದು ಹೇಳಿಕೆಯನ್ನು ಸಮಾಜ ಸ್ವೀಕರಿಸುವಲ್ಲಿ ಆ ಸಂದೇಶ ಅಥವಾ ಹೇಳಿಕೆಯ ವಿಷಯವಷ್ಟೆ ಮುಖ್ಯವಾಗದೆ ಅದನ್ನು ಹೇಳಿದವರು ಯಾರು ಎಂಬುದೂ ಮುಖ್ಯವಾಗಿಬಿಡುತ್ತದೆ. ಅಂದರೆ ಕಾಯಿಲೆಗೆ ಕೊಟ್ಟ ಇಂಜೆಕ್ಷನ್‌ ಒಂದೇ ಆದರೂ ಅದನ್ನು ಕೊಡಲು ಬಳಸಿದ ಸಿರಿಂಜ್‌ ಬದಲಾದಾಗ ಪರಿಣಾಮವೂ ಬದಲಾಗುವ  ಪರಿ ಇದು! ʼಸಮೀರ್ʼ ಎಂಬ ಹೆಸರೇ ಅದನ್ನು ಧಾರ್ಮಿಕವಾಗಿ ಬಳಸಿಕೊಳ್ಳಲು ಅಸ್ತ್ರವಾದದ್ದು ಇಲ್ಲಿನ ಬೆಳೆವಣಿಗೆ.

ಈ ವಿಡಿಯೋದಲ್ಲಿ ಸೌಜನ್ಯ ಪ್ರಕರಣದ ಪ್ರಮುಖ ವಿವರಗಳೆಲ್ಲ ಇರುವುದರಿಂದ ಮತ್ತು ಅದನ್ನು ಬಹಳಷ್ಟು ಜನ ನೋಡಿರುವುದರಿಂದ ಈ ಪ್ರಕರಣದ ಇತಿಹಾಸ ಹಿನ್ನಲೆ ಇವು ಎಲ್ಲವನ್ನೂ ಬಿಟ್ಟು ನೇರವಾಗಿ ಈ ವಿಡಿಯೋದ ಬಗ್ಗೆ ಕೇಳಿಬಂದ ಕೆಲವು ತಕರಾರುಗಳನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ.

ಮೊದಲನೆಯ ತಕರಾರೇ ʼಇದು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ದಾಳಿ. ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿ ಇಟ್ಟುಕೊಂಡು ಅವುಗಳ ಘನತೆ ಗೌರವಗಳನ್ನು ಹಾಳುಮಾಡಲು ಹೂಡಿರುವ ಸಂಚುʼ ಎಂಬುದು. ಈ ಆರೋಪ ಮಾಡಲು ಆ ಹುಡುಗನ ಹೆಸರು ʻಸಮೀರ್‌ʼ ಆಗಿರುವುದು ಈ ತಕರಾರು ಎತ್ತಿದವರಿಗೆ ದೊರೆತ ಒಂದು ಧನಾತ್ಮಕ ಅಂಶ. ಹಿಂದೂ ಧರ್ಮದ ಹುಡುಗಿಯ ವಿಷಯ ಇವನಿಗೆ ಯಾತಕ್ಕೆ ಬೇಕು. ಇವನ ಧರ್ಮದ ಜನಾಂಗದಲ್ಲಿ ಆದ ಇಂತಹ ಪ್ರಕರಣಗಳ ಬಗ್ಗೆ ಇವನೇಕ ವಿಡಿಯೋ ಮಾಡಲ್ಲ ಇತ್ಯಾದಿ ಡೈಲಾಗು ಹೊಡೆಯುವುದು ಅದಕ್ಕೆ ಒಂದಿಷ್ಟು ಬೇರೆ ಪ್ರಕರಣಗಳನ್ನು ಹೆಸರಿಸಿ ಅವುಗಳ ಬಗ್ಗೆ ವಿಡಿಯೋ ಮಾಡು ಅನ್ನುವುದು ಇತ್ಯಾದಿ ಇವರು ಮಾಡುತ್ತಿದ್ದಾರೆ.

ಈ ತಕರಾರಿಗೆ ಕೊಡಬಹುದಾದ ಉತ್ತರವೆಂದರೆ ಒಂದು ಹುಡುಗಿಯ ಸಾವಿಗಾಗಿ ಕೇಳುವ ನ್ಯಾಯವನ್ನು ಈ ರೀತಿ ಮತಧರ್ಮಗಳ ಕೆಸರಲ್ಲಿ ಸಿಕ್ಕಿಹಾಕಿಸುವುದು ಕೇವಲ ಕಿಡಿಗೇಡಿ ಕೆಲಸ ಮಾತ್ರವಲ್ಲ; ಮಹಾ ಅಪರಾಧ ಕೂಡ. ಕಾಲೇಜಿಗೆ ಹೋದ ಹುಡುಗಿಯೊಬ್ಬಳನ್ನು ಬರ್ಬರವಾಗಿ ಕೊಲೆಮಾಡಿರುವ ಒಂದು ಹೇಯ ಪ್ರಕರಣವನ್ನು ಮತಧರ್ಮಮುಕ್ತವಾಗಿ ನಾವು ಚರ್ಚಿಸಬೇಕು. ನಮ್ಮ ಸಾತ್ವಿಕ ಕೋಪ ಹುಟ್ಟಬೇಕಾದದ್ದು ಆ ಹೇಯ ಕೃತ್ಯವನ್ನು ಮಾಡಿದವರ ಮೇಲೆಯೇ ಹೊರತು ಅದನ್ನು ಸಾರ್ವಜನಿಕಗೊಳಿಸಿದವರ ಮೇಲಲ್ಲ.

ಆ ಹುಡುಗಿಗೆ ಆದ ಗತಿ ನಾಳೆ ನಮ್ಮ ಮನೆಯ ಅಕ್ಕತಂಗಿಯರಿಗೋ ಮಕ್ಕಳಿಗೋ ಬರಬಹುದು ಎಂಬ ಎಚ್ಚರ ಮನುಷ್ಯರಾದ ನಮ್ಮೆಲ್ಲರಿಗೂ ಇರಬೇಕು. ಈ ಅನ್ಯಾಯವನ್ನು ನಮ್ಮ ನಮ್ಮ ಹಂತದಲ್ಲಿ ಹೇಗೆ ಪ್ರತಿಭಟಿಸಬಹುದು ಎಂಬುದರ ಕಡೆ ನಮ್ಮ ಗಮನ ಹರಿಸಬೇಕೆ ಹೊರತು ಅದನ್ನು ಪ್ರಶ್ನೆಮಾಡಿದವರು ಮತಧರ್ಮದ ಬಗ್ಗೆ ಅಲ್ಲ. ಆ ಹುಡುಗಿಯನ್ನು ಕೊಂದವರು ಯಾರೆಂದು ಇದುವರೆಗೂ ಖಚಿತವಾಗಿಲ್ಲವಾದರೂ ಈ ಕೃತ್ಯಕ್ಕೆ ಬಲಿಯಾದ ಆ ಹುಡುಗಿಯನ್ನು ಹಿಂದೂ ಧರ್ಮದವಳು ಎನ್ನಲಾಗುತ್ತದೆ. ಹೀಗಿದ್ದರೆ ಈಗ ʼಧರ್ಮʼ ʼಧರ್ಮʼ ಎಂದು ಕೂಗಾಡುವವರು ಅದೇ ಧರ್ಮದ ಒಂದು ಹುಡುಗಿಗೆ ಆದ ಅನ್ಯಾಯವನ್ನು ದೊಡ್ಡಮಟ್ಟದಲ್ಲಿ ಪ್ರತಿಭಟಿಸಬೇಕಿತ್ತಲ್ಲವೇ? ಕನಿಷ್ಠ ಆ ಹುಡುಗ ಮಾಡಿದಂಥ ವಿಡಿಯೋವನ್ನು ಇವರ್ಯಾರೋ ಮಾಡಿದ್ದರೂ ಆಗುತ್ತಿತ್ತಲ್ಲವೇ? ಇವರೇ ಮಾಡಿದ್ದರೆ ಆ ಹುಡುಗ ಮಾಡುವ ಅವಶ್ಯಕತೆಯೇ ಇಂದು ಬರುತ್ತಿರಲಿಲ್ಲ.

ಈ ವಿಡಿಯೋ ಪ್ರಕರಣವನ್ನು ವಿರೋಧಿಸುವವರಲ್ಲಿ ಮುಖ್ಯವಾಗಿ ಎರಡು ಬಗೆಯವರಿದ್ದಾರೆ. ಅವರಲ್ಲಿ ಮೊದಲನೆಯವರು ದೇವರು ಧರ್ಮಗಳ ಬಗ್ಗೆ ʻಅಂಧಾಭಿಮಾನʼವನ್ನು ಇಟ್ಟುಕೊಂಡು ಯಾವಾಗಲೂ ಎಲ್ಲದಕ್ಕೂ ಧರ್ಮ ದೇವರುಗಳನ್ನು ಎಳೆದುತಂದು ಧಾರ್ಮಿಕ ದ್ವೇಷವನ್ನು ಹುಟ್ಟುಹಾಕಿ ಸಾಮಾಜಿಕ ಕಲಹಗಳನ್ನು ಮತೀಯ ಸಂಘರ್ಷಗಳನ್ನು ಉಂಟುಮಾಡುವವರು.  ಒಂದು ಧರ್ಮದ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಇವರಿಗೆ ಅದೇ ಧರ್ಮದ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದಾಗ, ಕೊಲೆಮಾಡಿದಾಗ ನೆನಪಿಗೆ ಬರದ ಧರ್ಮ ಅದನ್ನು ಪ್ರಶ್ನೆಮಾಡಿದಾಗ ಓಡೋಡಿ ಬರುತ್ತದೆ. ಅದೂ ಅದನ್ನು ಪ್ರಶ್ನೆಮಾಡಿದವರು ಬೇರೆ ಧರ್ಮದವರಾದರಂತೂ ಇವರ ಪಿತ್ತ ನೆತ್ತಿಗೆ ಏರುತ್ತದೆ. ಒಂದು  ವಿಡಿಯೋ ಬಂದಾಗ ಅದರಲ್ಲಿರುವ ವಿಷಯದ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಬೇಕೆ ಹೊರತು ಅದನ್ನು ಬಿಟ್ಟು ʼಅದನ್ನು ಮಾಡಬೇಕಿತ್ತುʼ ʻಇದನ್ನು ಮಾಡಬೇಕಿತ್ತುʼ ಎನ್ನುವುದು ಉಳಿದವರ ಕೆಲಸವಲ್ಲ. ಅಷ್ಟಕ್ಕೂ ಅವನು ಬಿಟ್ಟ ವಿಷಯಗಳನ್ನು ಇವರೇ ಮಾಡಬಹುದಲ್ಲ. ಆ ಯೋಗ್ಯತೆಯೂ ಇವರಿಗೆ ಇರಲ್ಲ. ಕೂಗುಮಾರಿಗಳಂತೆ ಕೂಗಾಡುವುದನ್ನು ಬಿಟ್ಟು ಇವರಿಗೆ ಬೇರೇನೂ ಮಾಡಲು ಆಗುವುದಿಲ್ಲ. ಒಬ್ಬ ವ್ಯಕ್ತಿಯ ಮೇಲಿನ ಸಿಟ್ಟನ್ನು ಇವರು ಒಂದು ಸಮೂಹದ ಮೇಲಿನ ಜನಾಂಗದ ಮೇಲಿನ ಸಿಟ್ಟನ್ನಾಗಿ ಮಾಡಿಕೊಂಡು ಅಷ್ಟಕ್ಕೂ ನಿಲ್ಲದೆ ಅದನ್ನು ʼದ್ವೇಷʼವಾಗಿ ಬೆಳೆಸಿಕೊಂಡು ವೀರಾವೇಶತಾಳುವ ಇವರು ಒಂದು ರೀತಿಯ ʼಧರ್ಮರ(ರಾ)ಕ್ಷಕರು!ʼ. ಇಂತಹವರು ಯಾವುದೇ ಧರ್ಮದಲ್ಲಿದ್ದರೂ ಅವರು ಆ ಧರ್ಮಕ್ಕೆ ದೊಡ್ಡ ಕಳಂಕವೇ. ಇಂತಹವರನ್ನು ನಿಯಂತ್ರಿಸಬೇಕಾದದ್ದು ಮೂಲಭೂತವಾಗಿ ಆಯಾ ಧರ್ಮಗಳ ನಿಜಾರ್ಥದ ಶ್ರದ್ಧಾವಂತ ಅನುಯಾಯಿಗಳ ಜವಾಬ್ದಾರಿ.

ಎರಡನೆಯವರು ಆ ಹುಡುಗಿಯ ಸಾವಿನ ಬಗ್ಗೆ ಹೃದಯದಲ್ಲಿ ನಿಜವಾಗಿಯೂ ಕನಿಕರವನ್ನು ಇಟ್ಟುಕೊಂಡ ಮಾನವಂತರು. ಇವರ ತಕರಾರು ಏನೆಂದರೆ “ಆ ಹುಡುಗಿಯ ಸಾವಿಗೆ ನಿಜವಾದ ನ್ಯಾಯ ಸಿಗಬೇಕು. ಆದರೆ ಅದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಅವರ ಕುಟುಂಬವನ್ನು ಹೊಣೆಗಾರರನ್ನಾಗಿ ಮಾಡಿ ಆರೋಪಿಸುವುದು ಅವರ ಘನತೆ ಗೌರವಕ್ಕೆ ಧಕ್ಕೆ ತರುವುದು ಆ ಮೂಲಕ ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾದ ʻ

ಧರ್ಮಸ್ಥಳʼ ಕ್ಕೆ ಕಳಂಕ ತರುವುದು ಸರಿಯಲ್ಲ” ಎಂಬುದು. ಇದಕ್ಕೆ ಕೊಡಬಹುದಾದ ಉತ್ತರವೆಂದರೆ ಇದುವರೆಗೂ ನನಗೆ ಗೊತ್ತಿರುವಂತೆ ಸೌಜನ್ಯಪರ ಹೋರಾಟಗಾರರನ್ನೂ ಸೇರಿದಂತೆ ಯಾರೊಬ್ಬರೂ “ಈ ಕೊಲೆಯನ್ನು ಇವರೇ ಮಾಡಿದ್ದಾರೆ ಇವರನ್ನು ಬಂಧಿಸಿ” ಎಂದು ಹೇಳಿಲ್ಲ; ಒತ್ತಡವನ್ನು ತಂದಿಲ್ಲ. ಅದನ್ನು ಮಾಡಲಿಕ್ಕೆ ಬರುವುದೂ ಇಲ್ಲ. ಅವರೆಲ್ಲ ಕೇಳುತ್ತಿರುವುದು ಏನೆಂದರೆ ʼಕೊಲೆಯನ್ನು ಆ ವ್ಯಕ್ತಿ (ಸಂತೋಷ್‌ ರಾವ್) ಮಾಡಿಲ್ಲ ಎಂದಾದರೆ ಅದನ್ನು ಮಾಡಿದವರು ಯಾರು?ʼ ಎಂಬುದು ಸೂಕ್ತ ತನಿಖೆಯಾಗಬೇಕು ಎಂದು. ಹೀಗೆ ಮರು ತನಿಖೆಗೆ ಒತ್ತಾಯಿಸುವಲ್ಲಿ ಅವರು ಧರ್ಮಾಧಿಕಾರಿಗಳು ಅಥವಾ ಅವರ ಕುಟುಂಬವನ್ನು ಪ್ರಸ್ತಾಪಿಸಿರುವುದು ಅಲ್ಲಲ್ಲಿ ಕಂಡುಬರುತ್ತದೆಯಾದರೂ ಅವರೇ ಮಾಡಿದ್ದಾರೆ ಎಂದು ಅವರು ಹೇಳುತ್ತಿಲ್ಲ; ಬದಲಾಗಿ ಅವರ ಮೇಲೆ ನಮಗೆ ಸಂಶಯವಿದೆ ಎಂದು ಹೇಳುತ್ತಿದ್ದಾರೆ.

ಹೀಗೆ ಒಬ್ಬರ ಮೇಲೆ ಸಂಶಯವಿದೆ ಎಂದು ಹೇಳುವುದು ಅವರಿಗೆ ಮಾಡುವ ಅವಮಾನವೆ? ಅಥವಾ ಅದು ಅಪರಾಧವೇ? ಖಂಡಿತಾ ಅಲ್ಲ. ಏಕೆಂದರೆ ನಮ್ಮ ಮನೆಯಲ್ಲಿ ಅಥವಾ ಬೀದಿಯಲ್ಲಿ ಒಂದು ಕೊಲೆಯಾಯಿತು ಎಂದು ನಾವು ಪೋಲಿಸರಿಗೆ ದೂರು ನೀಡಲು ಹೋದಾಗ ಪೋಲೀಸರೇ ನಮಗೆ “ನಿಮಗೆ ಯಾರ ಮೇಲಾದರೂ ಸಂಶಯವಿದೆಯೇ?” ಎಂದು ಕೇಳುತ್ತಾರೆ. ಆಗ ನಮಗೆ ಯಾರ ಮೇಲಾದರೂ ಅನುಮಾನ ಸಂಶಯಗಳು ಇದ್ದರೆ  ನಾವು ಅವರ ಹೆಸರನ್ನು ಹೇಳುತ್ತೇವೆ. ಹಾಗೆ ಹೇಳಿದ ತಕ್ಷಣ ಆ ವ್ಯಕ್ತಿ ಅಪರಾಧಿ ಎಂದು ಆಗುವುದಿಲ್ಲ. ಅಥವಾ ಆ ವ್ಯಕ್ತಿಯ ಹೆಸರನ್ನು ಹೇಳಿದ ಕಾರಣಕ್ಕೆ ಹೆಸರು ಹೇಳಿದವನು ಅಪರಾಧಿ ಆಗುವುದಿಲ್ಲ. ಅದು ತನಿಖೆಗೆ ಚಾಲನೆ ಕೊಡಲು ತನಿಖಾಧಿಕಾರಿಗೆ ಒಂದು ಆರಂಭಿಕ ಮಾಹಿತಿ ಅಷ್ಟೆ. ಆ ತನಿಖಾಧಿಕಾರಿ ತನಿಖೆಮಾಡಿದ ನಂತರ ನಾವು ಸಂಶಯ ಇದೆ ಎಂದು ಹೇಳಲ್ಪಟ್ಟ ವ್ಯಕ್ತಿಅಪರಾಧಿ ಆಗಲೂ ಬಹುದು; ಆಗದಿರಲೂ ಬಹುದು. ಆದರೆ ಆರೋಪ ಮಾಡಲೇ ಬಾರದು ಎನ್ನುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಆರೋಪವನ್ನು ಗೌರವಿಸಬೇಕು. ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಅದನ್ನು ಅವರು ಅವಮಾನವೆಂದಾಗಲೀ ಘನತೆಗೆ ಧಕ್ಕೆ ಎಂದಾಗಲೀ ಭಾವಿಸಲೇಬಾರದು. ಅಥವಾ ಅವರ ಬಗ್ಗೆ ತನಿಖೆಯನ್ನೇ ಮಾಡಬಾರದು ಎಂದು ಹೇಳುವುದು ಸರಿಯಾದ ನಡೆಯಲ್ಲ.

 ಈ ಎರಡನೆಯ ವರ್ಗದ ಅಭಿಮಾನಿಗಳು ಮೊದಲನೆಯ ವರ್ಗದವರಷ್ಟು ʻಅಂಧಭಕ್ತʼರಲ್ಲದಿದ್ದರೂ ಇವರಿಗೆ ಆ ಹುಡುಗಿಯ ಅತ್ಯಾಚಾರ ಮತ್ತು ಕೊಲೆಗಳಿಗಿಂತ ತಮ್ಮ ಪೂಜ್ಯರ ಮಾನ ಮರ್ಯಾದೆ ಘನತೆ ಗೌರವಗಳೇ ಮುಖ್ಯವಾಗುತ್ತವೆ. ಹಾಗಾಗಿ ಆ ಹುಡುಗಿಯ ಸಾವಿಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ ಆದರೆ ನಮ್ಮ ಪೂಜ್ಯರ ಘನತೆಗೆ ಧಕ್ಕೆ ಆಗಬಾರದು ಎಂದು ಹಂಬಲಿಸುತ್ತಾರೆ. ಈ ಎರಡೂ ಬಗೆಯವರನ್ನು ಮಾತನಾಡಿಸಿ ನೋಡಿ ಅವರು ಹೇಳುವ ಮಾತು ಎಂದು ಸಾಮಾನ್ಯವಾಗಿ ಹೀಗೆ ಇರುತ್ತದೆ: “ಆ ಹುಡುಗಿಯ ಅತ್ಯಾಚಾರ, ಕೊಲೆ ಆಗಿದ್ದು ನಿಜ; ಆದರೆ ಅದಕ್ಕೂ ನಮ್ಮ ಪೂಜ್ಯರಿಗೂ ಅವರ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ.”  ಇವರೆಲ್ಲ ಅರ್ಥಮಾಡಿಕೊಳ್ಳಬೇಕಾದ ಮುಖ್ಯ ಸಂಗತಿ ಏನೆಂದರೆ ಆ ಸಾವಿಗೆ ನ್ಯಾಯಕ್ಕಾಗಿ ಹೋರಾಡುವವರು ʼ”ಆ ಸಾವಿಗೆ ಇಂಥವರೇ ಕಾರಣ” ಎಂದು ಹೇಳದೇ ಇರುವಾಗ, ಇವರಿಗೆ “ಆ ಸಾವಿಗೆ ಇಂಥವರು ಕಾರಣ ಅಲ್ಲ” ಎಂದು ಹೇಳುವ ಅಧಿಕಾರ ಹೇಗೆ ಮತ್ತು ಎಲ್ಲಿಂದ ಬರುತ್ತದೆ? ಅವೆಲ್ಲ ನ್ಯಾಯಾಲಯದಲ್ಲಿ ಚರ್ಚೆಯಾಗಿ ತೀರ್ಮಾನಿಸಬೇಕಾಗಿರುವ ಸಂಗತಿಗಳು. ಹಾಗಾಗಿ ಈ ʻಭಕ್ತರುʼ ಅನಗತ್ಯ ಭಾವೋದ್ವೇಗಕ್ಕೆ ಒಳಗಾಗದೇ ತನಿಖೆಗೆ ಸಹಕರಿಸಬೇಕು. ಅಷ್ಟಕ್ಕೂ ʻಕುಂಬಳಕಾಯಿ ಕಳ್ಳʼ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಬೇರೆಯದೇ ಆದ ಅರ್ಥವನ್ನು ಕೊಟ್ಟುಬಿಡುತ್ತದೆ.

ಈ ವಿಡಿಯೋದ ಬಗ್ಗೆ ಬರುತ್ತಿರುವ ಇನ್ನೊಂದು ತಕರಾರು ಎಂದರೆ “ಇವರ ಹತ್ತಿರ ಅಷ್ಟೊಂದು ದಾಖಲೆಗಳಿದ್ದರೆ ಅವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಬಹುದಲ್ಲ. ಅದನ್ನು ಬಿಟ್ಟು ಸುಮ್ಮಸುಮ್ಮನೆ ಹೀಗೇಗೆ ಹಾದಿಬೀದಿಯಲ್ಲಿ ಸುದ್ದಿಮಾಡುತ್ತಿದ್ದಾರೆ” ಎಂಬುದು. ಇದಕ್ಕೆ ಕೊಡಬಹುದಾದ ಉತ್ತರವೆಂದರೆ ಸಾಮಾನ್ಯವಾಗಿ ನ್ಯಾಯಾಲಯಗಳ ಪ್ರಕ್ರಿಯೆಯ ಬಗ್ಗೆ ಅರಿವು ಇರುವವರು ಇಂತಹ ತಕರಾರು ಒಡ್ಡುವುದಿಲ್ಲ. ಏಕೆಂದರೆ ನ್ಯಾಯಾಲಯಕ್ಕೆ ಸುಮ್ಮಸುಮ್ಮನೆ ನಮ್ಮಲ್ಲಿರುವ ಸಾಕ್ಷಿಗಳನ್ನು ಒಯ್ದುಕೊಡಲು ಬರುವುದಿಲ್ಲ. ಅದನ್ನು ನ್ಯಾಯಾಲಯ ಸ್ವೀಕರಿಸುವುದೂ ಇಲ್ಲ. ಆ ದಾಖಲೆಗಳನ್ನು ಅಲ್ಲಿ ಸ್ವೀಕರಿಸಬೇಕಾದರೆ ಆ ಬಗ್ಗೆ ಪ್ರಕರಣವೊಂದು ದಾಖಲಾಗಿ ಅದು ನ್ಯಾಯಾಲಯದ ಮುಂದೆ ಬರಬೇಕಾಗುತ್ತದೆ. ಆಗ ನ್ಯಾಯಾಲಯ ಸಾಕ್ಷಿಗಳನ್ನು ಪುರಾವೆಗಳನ್ನು ಕೇಳಬಹುದು. ಅಥವಾ ಇವರೇ ಒಯ್ದು ನ್ಯಾಯಾಲಯಕ್ಕೆ ಸಲ್ಲಿಸಬಹುದು.

ಇಲ್ಲಿ ಪ್ರಕರಣವೇ ದಾಖಲಾಗಿಲ್ಲ. ಹಾಗಿದ್ದ ಮೇಲೆ ಹೋರಾಟಗಾರರು ನ್ಯಾಯಾಲಯಕ್ಕೆ ತಮ್ಮಲ್ಲಿರುವ ಸಾಕ್ಷಿ ಪುರಾವೆಗಳನ್ನು ಹೇಗೆ ಸಲ್ಲಿಸಲು ಬರುತ್ತದೆ? ಹಾಗಾದರೆ ಇಲ್ಲಿ ಪ್ರಕರಣ ದಾಖಲಿಸಬೇಕಾದವರು ಯಾರು? ಈ ಹೋರಾಟಗಾರರು ಅಲ್ಲ. ಏಕೆಂದರೆ ಅವರು ʼಪ್ರಕರಣದ ಮರುತನಿಖೆಗೆ ಒತ್ತಾಯಿಸುತ್ತಿದ್ದಾರೆ ಅಂದರೆ  ಇಂಥವರೇ ಕೊಲೆಗಾರರು ಎಂದು ಅವರಿಗೂ ತಿಳಿದಿಲ್ಲ. ಈಗಾಗಲೇ ಈ ಪ್ರಕರಣಲ್ಲಿ ಸಂತೋಷರಾವ್‌ ನಿರಪರಾಧಿ ಎಂದು ಸಾಬೀತಾಗಿ ಹೊರಗೆ ಬಂದಿರುವುದರಿಂದ ಒಂದು ಆ ಪ್ರಕರಣದಲ್ಲಿ ಹಿನ್ನಡೆಯಾದವರು ಮೇಲಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕಾಗಿತ್ತು. ಅಥವಾ ಹೋರಾಟಗಾರರು ನಮ್ಮ ಹೆಸರನ್ನು ಹೇಳುತ್ತಿದ್ದಾರೆ ಅದರಿಂದ ನಮಗೆ ಅವಮಾನವಾಗಿದೆ ನಮ್ಮ ಘನತೆ ಗೌರವಗಳಿಗೋ ನಮ್ಮ ಪೂಜ್ಯರ ವ್ಯಕ್ತಿತ್ವಕ್ಕೋ ಹಾನಿ ಆಗಿದೆ ಎಂದೋ  ಹಾಗೆ ಭಾವಿಸುವವರು ಪ್ರಕರಣ ದಾಖಲಿಸಬೇಕು. ಇವೆರಡೂ ಆಗಿಲ್ಲ. ನ್ಯಾಯಾಲಯ ಕೇಳಿದರೂ ದಾಖಲೆ ಕೊಡದೇ ಇದ್ದದ್ದು ಇದೆಯೇ? ಇಲ್ಲ.  ಹೀಗಾಗಿ ಇವರೆಲ್ಲ ಹೋರಾಟಗಾರರ ಬಗ್ಗೆ  ಮಾಡುತ್ತಿರುವ ಈ ಆರೋಪ ಹುರುಳಿಲ್ಲದ್ದು ಮತ್ತು ಸಾಮಾನ್ಯ ಜನರನ್ನು ಹಾದಿತಪ್ಪಿಸುವಂಥದ್ದು! ಇದೀಗ ಈ ವಿಡಿಯೋ ಪ್ರಕರಣ ಕುರಿತು ಈಗ ಎಫ್‌ ಐ ಆರ್‌ ದಾಖಲಾಗಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾಯ್ದುನೋಡಬೇಕಷ್ಟೆ.

ʻಧರ್ಮಸ್ಥಳʼ ಎಂದರೆ ಕೇವಲ ʻಮಂಜುನಾಥಸ್ವಾಮಿ ದೇವಸ್ಥಾನʼ ಅಷ್ಟೇ ಅಲ್ಲ; ಕೇವಲ ಅಲ್ಲಿನ ಧರ್ಮಾಧಿಕಾರಿ ಅಷ್ಟೇ ಅಲ್ಲ.  ಅದೊಂದು ಊರು. ಅಲ್ಲಿ ಎಲ್ಲ ಊರುಗಳ ಹಾಗೆಯೇ ಈ ದೇವಸ್ಥಾನ, ಧರ್ಮಾಧಿಕಾರಿಗಳು ಇವರ ಹೊರತಾಗಿಯೂ ಒಂದು ಜನಜೀವನ ಇದೆ. ಅದಕ್ಕೂ ಅಸ್ತಿತ್ವವಿದೆ ಎಂಬುದನ್ನು ನಾವು ಮರೆಯಬಾರದು. ಹಾಗಾಗಿ ʼಧರ್ಮಸ್ಥಳʼದ ಬಗ್ಗೆ ಯಾರಾದರೂ ಮಾತನಾಡಿದರೆ ಅದನ್ನು ನಮಗೇ ಅಂದದ್ದು ಎಂದು ಯಾರಾದರೂ ಮೈಮೇಲೆ ಎಳೆದುಕೊಳ್ಳುವುದು ಹುಚ್ಚುತನವಲ್ಲದೆ ಬೇರೇನೂ ಅಲ್ಲ. ಒಂದು ವೇಳೆ ಬಹಳಷ್ಟು ಗೌರವಯುತ ವ್ಯಕ್ತಿಯಾಗಿ ಅಲ್ಲಿನ ಧರ್ಮಾಧಿಕಾರಿ ವ್ಯಾಪಕ ಜನಮನ್ನಣೆ ಪಡೆದು ʼಊರೆಂದರೆ ತಾವಲ್ಲದೆ ಬೇರೇನೂ ಅಲ್ಲʼ ಅನ್ನುವಷ್ಟು ದೊಡ್ಡವರು ಎಂದು ವಾದಕ್ಕೆ ಒಪ್ಪಿಕೊಂಡರೂ ಅವರು ಅಥವಾ ಅವರ ಹಿಂಬಾಲಕ ಅಥವಾ ಅಭಿಮಾನಿ ಪಡೆ ಅಲ್ಲಿ ನಡೆದಿರುವ ಕೊಲೆ ಅತ್ಯಾಚಾರ ಇಂಥವುಗಳನ್ನು ತಮಗೆ ತಮ್ಮ ಪೂಜ್ಯರಿಗೆ ಅವಮಾನ ಎಂದು ಭಾವಿಸಬೇಕೋ ಅಥವಾ ಅವುಗಳನ್ನು ಸಾರ್ವಜನಿಕಗೊಳಿಸಿ ಜನಜಾಗೃತಿ ಮಾಡುವಾಗ ತಮ್ಮಮೇಲೆ ಸಂಶಯ ವ್ಯಕ್ತಪಡಿಸಿದ್ದು ಅವಮಾನವೆಂದು ಭಾವಿಸಬೇಕೋ.

ಧರ್ಮಸ್ಥಳದಲ್ಲಿ ಅಲ್ಲಿನ ಧರ್ಮಾಧಿಕಾರಿಗಳ ಪ್ರಭಾವ ಎಷ್ಟು ಎಂಬುದನ್ನು ಹೇಳುವಾಗ ಕೆಲವರು ʻಧರ್ಮಸ್ಥಳದಲ್ಲಿ ಒಂದು ಎಲೆ ಅಲ್ಲಾಡುವುದಾದರೂ ಅದು ಅವರನ್ನು ಕೇಳಿಯೇ ಅಲ್ಲಾಡುವುದುʼ ಎಂದು ಹೇಳುವುದುಂಟು. ಇದು ಅತಿಶಯೋಕ್ತಿ ಇರಬಹುದು. ಆದರೆ ಆ ಊರಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಅರಿವು ಅವರಿಗೆ ಇರುತ್ತದೆ ಆ ಮಟ್ಟಿನ ಸಂಪರ್ಕಜಾಲ ಅವರಿಗೆ ಇದೆ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಹೀಗಿದ್ದಮೇಲೆ ಇಂತಹ ಕೆಟ್ಟ ಕೃತ್ಯಗಳು ನಡೆದಾಗ ಅವನ್ನು ಮಾಡಿದವರು ಯಾರು ಎಂಬ ಮಾಹಿತಿ ಅವರಿಗೆ ಬರುವುದಿಲ್ಲವೇ? ಇಡೀ ರಾಜ್ಯದ ಜನರ ರಾಜಿ ಪಂಚಾಯತಿ ಮಾಡುವ ಧರ್ಮಾಧಿಕಾರಿಗಳು ತಮ್ಮ ಊರಿನಲ್ಲಿಯೇ ಇಂತಹ ಘಟನೆಗಳು ನಡೆದರೆ ಅದು ತಮಗೆ ಅವಮಾನ ಎಂದು ಭಾವಿಸಿ ಅವು ನಡೆಯದಂತೆ ಕ್ರಮ ಕೈಗೊಳ್ಳಬೇಕಲ್ಲವೇ?

ಹಾಗೇ ಮಾಡದಿದ್ದರೆ ಈಡೀ ರಾಜ್ಯದ ಜನ ಅಷ್ಟೇ ಏಕೆ ಹೊರರಾಜ್ಯಗಳ ಜನ ʼಪೂಜ್ಯʼವೆಂದು ಭಾವಿಸುವ ʼಪವಿತ್ರʼವೆಂದು ತಿಳಿಯುವ ಒಂದು ಧರ್ಮಕ್ಷೇತ್ರದಲ್ಲಿ ಇಂತಹ ಹೇಯ ಕೃತ್ಯಗಳು ಒಂದಲ್ಲ ಎರಡಲ್ಲ ಸರಣಿಯಾಗಿ ನಡೆಯುತ್ತವೆ ಎಂದರೆ ಜನ ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಅವರ ಮೇಲೆ ಜನ ಇಟ್ಟುಕೊಂಡ ಗೌರವ ಏನಾಗಬೇಡ? ಹಾಗಾಗಿ ಅಲ್ಲಿನ ಧರ್ಮಾಧಿಕಾರಿಗಳಾಗಲಿ ಅವರ ಭಕ್ತಮಂಡಳಿಯಾಗಲೀ ಅಲ್ಲಿನ ಸರಣಿ ಅತ್ಯಾಚಾರ ಕೊಲೆ ಇತ್ಯಾದಿಗಳನ್ನು ತಮಗೆ ಅವಮಾನ ಎಂದು ಭಾವಿಸಬೇಕೆ ಹೊರತು ಯಾರಾದರೂ ಆ ಬಗ್ಗೆ ತಮ್ಮ ಬಗ್ಗೆ ವ್ಯಕ್ತಪಡಿಸುವ ಸಂಶಯವನ್ನಲ್ಲ. ಹೀಗೆ ಸಂಶಯ ಅನುಮಾನಗಳು ಬಂದಾಗ ಆ ಬಗ್ಗೆ ಸೂಕ್ತ ತನಿಖೆ ಆಗಬೇಕು ಅದಕ್ಕೆ ಸಂಬಂಧಪಟ್ಟವರೆಲ್ಲರೂ ಸಹಕರಿಸಬೇಕು. ಹೀಗಾಗಿ ಅಲ್ಲಿನ ಈಗಾಗಲೇ ಅಧಿಕೃತವಾಗಿ ದಾಖಲಾಗಿರುವ ಅಪರಾಧ ಕೃತ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿದರೆ ಅದನ್ನು ಬೆಂಬಲಿಸಿ ಅವರಿಗೆ ಎಲ್ಲರೂ ಸಹಕರಿಸಬೇಕೇ ಹೊರತು ಅದನ್ನು ʼಇಡೀ ಕ್ಷೇತ್ರಕ್ಕೆ ಮಸಿಬಳಿಯುವ ಕುತಂತ್ರʼ ಎಂದು ಸೋಗಲಾಡಿತನ ಮಾಡಿ ತನಿಖೆಯ ದಿಕ್ಕುತಪ್ಪಿಸಬಾರದು. ಅಷ್ಟಕ್ಕೂ ನಿಜವಾದ ಬಂಗಾರವಾದರೆ ಅದು ಬೆಂಕಿಯಲ್ಲಿ ಹಾಕಿದಾಗ ಅದಕ್ಕೆ ʼಕಳಂಕʼ ಹಿಡಿಯುವುದಿಲ್ಲ; ಬದಲಾಗಿ ಅದು ಮತ್ತಷ್ಟು ಹೊಳಪಾಗುತ್ತದೆ ಎಂದು ಕನ್ನಡದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ ವಚನವೊಂದರಲ್ಲಿ ಹೇಳುತ್ತಾಳೆ. ಆದರೆ ಅದು ನಿಜವಾದ ಬಂಗಾರವಾಗಿರಬೇಕು ಅಷ್ಟೆ!

ಇಷ್ಟಾಗಿಯೂ ಯಾರಾದರೂ ಅಲ್ಲಿನ ದೇವಸ್ಥಾನದ ಬಗ್ಗೆ ಧರ್ಮಾಧಿಕಾರಿಗಳ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಳ್ಳುವುದು ಅವರ ವೈಯಕ್ತಿಕ ವಿಚಾರ. ಅದು ಅಪರಾಧವಲ್ಲ; ಅದನ್ನು ನಾವ್ಯಾರೂ ಟೀಕಿಸಬೇಕಿಲ್ಲ. ಆದರೆ ʻಭಕ್ತಿʼಯ ನೆರೆಹಾವಳಿಯಲ್ಲಿ ʻನ್ಯಾಯʼ ಕೊಚ್ಚಿಹೋಗಬಾರದು ಅಷ್ಟೆ!!

*****

ಸೂಚನೆ: ಈ ಲೇಖನದಲ್ಲಿ ಚರ್ಚಿಸಲ್ಪಟ್ಟ ಸಮೀರ್‌ ಅವರ ವಿಡಿಯೋ ನೋಡಲು ಯೂ ಟೂಬಿನ ಈ ಲಿಂಕನ್ನು ಒತ್ತಿ: https://youtu.be/LJsfsDH78BY?feature=shared

******

ಡಾ. ರಾಜೇಂದ್ರ ಬುರಡಿಕಟ್ಟಿ

buradikatti@gmail.com

೦೮-೦೩-೨೦೨೫

(ಅಂತರರಾಷ್ಟ್ರೀಯ ಮಹಿಳಾ  ದಿನ)