Saturday, August 16, 2025

 

ಧರ್ಮಸ್ಥಳ: ಉಪ್ಪು ತಿಂದವರು ಮತ್ತು ಬೆಪ್ಪುತಕ್ಕಡಿಗಳಾದವರು…….

ಡಾ ರಾಜೇಂದ್ರ ಬುರಡಿಕಟ್ಟಿ


ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾದಳದಿಂದ ಕಳೆದ ಕೆಲವು ದಿನಗಳಿಂದ ನಿರಂತರ ತನಿಖಾಕಾರ್ಯ ನಡೆಯುತ್ತಿರುವುದು ಸರಿಯಷ್ಟೆ.

 ಅಲ್ಲಿನ ಅಪರಾಧಕೃತ್ಯಗಳ ಸತ್ಯಾಸತ್ಯ ಹೊರಗೆ ಬರಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವವರು ಒಂದು ಕಡೆ ಇದ್ದರೆ, ಇದೆಲ್ಲ ದೇವಸ್ಥಾನಕ್ಕೆ ಕೆಟ್ಟಹೆಸರು ತರುತ್ತಿರುವ ಕುತಂತ್ರ, ಕಾಣದ ಕೈಗಳು ನಡೆಸುತ್ತಿರುವ ಷಡ್ಯಂತ್ರ ಎಂದು ಹುಯಿಲೆಬ್ಬಿಸುತ್ತಿರುವವರು ಇನ್ನೊಂದು ಕಡೆ ಇದ್ದಾರೆ. ಈ ಎರಡೂ ಗುಂಪುಗಳ ಒತ್ತಡಗಳ ನಡುವೆಯೇ ಎಸ್ ಟಿ ತನ್ನ ಕಾರ್ಯವನ್ನು ತನ್ನದೇ ಅಧ ರೀತಿಯಲ್ಲಿ ಮುಂದುವರೆಸಿದೆ. ಈ ತನಿಖಾ ಕಾರ್ಯದ ಒಂದು ಭಾಗವಾಗಿ ಈ ಭಾಗದ ವಿವಿಧ ಕಡೆಗಳಲ್ಲಿ ಶೋಧಕಾರ್ಯ ಕೂಡ ನಡೆಯುತ್ತಿದೆ. ಈ ಶೋಧದಲ್ಲಿ ದೊರೆತ ಅವಶೇಷಗಳೇನು ಮತ್ತು ಎಷ್ಟು ಎಂದು ತನಿಖಾದಳ ಅಧಿಕೃತವಾಗಿ ಇದುವರೆಗೂ ಏನನ್ನೂ ಪ್ರಕಟಿಸಿಲ್ಲ. ಹಾಗಿದ್ದೂ ಏನೇನೋ ವಿಚಿತ್ರ ಬೆಳವಣಿಗೆಗಳು ನಡೆಯುತ್ತಿವೆ.

ತನಿಖೆಗೆ ಆಗ್ರಹಿಸಿದ ಹೋರಾಟಗಾರರು ತನಿಖೆಯು ಸಂಪೂರ್ಣವಾಗಿ ನಡೆಯಬೇಕು ಎಂದು ಆಗ್ರಹಿಸುತ್ತಿದ್ದರೆ ಇತ್ತ, ʼಇದೊಂದು ಷಡ್ಯಂತ್ರʼ ಎಂದು ವಾದಿಸುವವರು ಇತ್ತೀಚೆಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡಿ ಜನರನ್ನು ಒಟ್ಟುಹಾಕುವುದು ಮತ್ತು ಧರ್ಮಸ್ಥಳವನ್ನು ರಕ್ಷಿಸಲು ಕರೆಕೊಡುವುದು ನಡದೇ ಇದೆ. ಇದಕ್ಕಾಗಿ ಧರ್ಮರಕ್ಷಣೆ ಮಾಡಲು ಎಚ್ಚರಾಗಿ ಎಂದು ಕೆಲವರು ಯುವಜನತೆಯನ್ನು ಹುರುದುಂಬಿಸುತ್ತಲಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಯುವಜನತೆ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು ಇಲ್ಲದಿದ್ದರೆ ಅವರ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಹಿನ್ನಲೆಯಲ್ಲಿ ಕೆಲವು ಅಂಶಗಳನ್ನು ಅವರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಮೊದಲನೆಯದಾಗಿ ತನಿಖಾ ಕಾರ್ಯವು ನ್ಯಾಯಾಂಗದ ಸುಪರ್ಧಿನಲ್ಲಿ ಕಾನೂನಿನ ಅನ್ವಯ ನಡೆಯುತ್ತಿದೆ ಎಂಬುದನ್ನು ತಾವೆಲ್ಲರೂ ತಿಳಿಯಬೇಕು.  ಯಾರುದ್ಯಾರುದೋ ಮಾತುಗಳನ್ನು ಕೇಳಿಕೊಂಡು ನೀವು ʼಧರ್ಮರಕ್ಷಣೆಗೆʼ ಎಂದು ಹೋಗಿ ಪೋಲೀಸರಿಂದ ಬಂಧನ ಇತ್ಯಾದಿಗಳಿಗೆ ಒಳಗಾಗುವು ಸಾಧ್ಯತೆಗಳು ಬಹಳ ಇರುತ್ತವೆ. ಏಕೆಂದರೆ ತನಿಖಾಕಾರ್ಯಕ್ಕೆ ಅಡ್ಡಿಪಡಿಸಿದರು ಎಂದು ಅವರು ಬಂಧಿಸಿ ಕೇಸು ಜಡಿಯುವ ಸಾಧ್ಯತೆಗಳು ತೀರಾ ನಿರೀಕ್ಷಿತ.

ನುಗ್ಗುವ ಮುನ್ನ ಇರಬೇಕಾದ ನುಗ್ಗಾಗುವ ಎಚ್ಚರ

ಇದಕ್ಕೆ ಸಂಬಂಧಿಸಿದಂತೆ ಒಂದು ಅಂಶವನ್ನುನಮ್ಮ ಯುವಕರು ಗಮನಿಸಬೇಕು. ಇದುವರೆಗೆ ಬೇರೆ ಬೇರೆ ಕಡೆ ನಡೆದಿರುವ ಕೋಮುಗಲಭೆ ಇತ್ಯಾದಿಗಳ ಸಂಬಂಧ ಬಂಧನಕ್ಕೆ ಒಳಗಾಗಿ ಇವತ್ತು ಕೋರ್ಟು ಕಛೇರಿ ಎಂದು ಅಲೆಯುತ್ತಿರುವವರಲ್ಲಿ ಬಹಳಷ್ಟು ಜನ ಅವತ್ತಿನ ಅನ್ನವನ್ನು ಅವತ್ತೇ ದುಡಿದು ತಿನ್ನಬೇಕಾದ ಪರಿಸ್ಥಿತಿಯಲ್ಲಿರುವ ಬಡವರ ಮಕ್ಕಳೇ ಆಗಿದ್ದಾರೆ.  ಆಟೋ ಓಡಿಸುವವರು, ಹೂವು ಮಾರುವವರ ಮತ್ತು ಚಪ್ಪಲಿ ಹೊಲಿಯುವವರ, ಗಾರೆ ಕೆಲಸ ಮಾಡುವವರ ಮಕ್ಕಳು ಮುಂತಾದ ದುಡಿಯುವ ವರ್ಗದ ಶ್ರಮಜೀವಿಗಳ ಕುಟುಂಬಗಳಿಗೆ ಸೇರಿದ ಯುವಕರೇ ಇಂದು ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರೆಲ್ಲರ ಕುಟುಂಬಗಳು ನಡೆಯುತ್ತಿದ್ದದ್ದು ಇವರ ದುಡಿಮೆಯಲ್ಲಿಯೇ. ಇವರ ದುಡುಕಿನ ನಿರ್ಧಾರದಿಂದಾಗಿ ಇವರ ಕುಟುಂಬಗಳನೇಕವು ಇಂದು ಸಂಕಷ್ಟದಲ್ಲಿವೆ. ಕೆಲವು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ನುಗ್ಗುವ ಮೊದಲು ಇರಬೇಕಾದ ಎಚ್ಚರ ತಪ್ಪಿದ್ದರಿಂದ ಅವರೂ ನುಗ್ಗಾದರು ಮಾತ್ರವಲ್ಲ ಅವರ ಕುಟುಂಬಗಳನ್ನೂ ನುಗ್ಗಾಗಿಸಿದರು!

ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಇವರನ್ನು ಇಂತಹ ʼಧರ್ಮರಕ್ಷಣೆʼಗೆ ಪ್ರಚೋದಿಸಿ ಸಂಕಷ್ಟಕ್ಕೆ ಈಡುಮಾಡಿದ ನಾಯಕರುಗಳ ಮಕ್ಕಳಾರೂ ಈ ರೀತಿ ಸಂಕಷ್ಟಕ್ಕೆ ಒಳಗಾಗಿಲ್ಲ ಅವರು ಬೇರೆ ಬೇರೆ ಕಡೆ ಚೆನ್ನಾಗಿ ಶಿಕ್ಷಣ ಪಡೆದು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದು! ಉಪ್ಪು ತಿಂದವರು ನೀರು ಕುಡಿದರೋ ಇಲ್ಲವೋ ಆದರೆ ನಮ್ಮ ಬಡವರ ಮಕ್ಕಳು ಮಾತ್ರ ಬೆಪ್ಪುತಕ್ಕಡಿಗಳಾದರು!

ಈ ಸಂಗತಿ ನಮ್ಮ ಯುವಜನತೆಯ ಕಣ್ಣುತೆರೆಸಬೇಕು. ಈ ಸಂಗತಿ ಕಣ್ಣುತೆರೆಸದೇ ಹೋದರೆ ಅವರೂ ಅವರ ಕುಟುಂಬಗಳೂ ಕಣ್ಣೀರು ಹಾಕಬೇಕಾದ ಸಂದರ್ಭಗಳನ್ನು ಅವರೇ ತಂದುಕೊಳ್ಳಬೇಕಾಗುತ್ತದೆ. ಆಗ ಅವರನ್ನು ಹುರುದುಂಬಿಸಿದವರು ಅವರ ಜೊತೆಗೆ ಆರಂಭದಲ್ಲಿ ಇದ್ದಂತೆ ಮಾಡಿ ಹಂತಹಂತವಾಗಿ ದೂರವಾಗುತ್ತಾ ಬರುತ್ತಾರೆ. ಕೊನೆಗೆ ಈ ಯುವಕರು ಮತ್ತು ಅವರ ಕುಟುಂಬಗಳು ಏಕಾಂಗಿಗಳಾಗಿ ಅತ್ತ ಹೋರಾಡಲು ಬಲವೂ ಇಲ್ಲದೆ ಇತ್ತ ಕುಟುಂಬ ನಿರ್ವಹಿಸುವ ವಿಧಿಯೂ ಇಲ್ಲದೇ ಗೋಳಾಡಬೇಕಾಗುತ್ತದೆ. ದೊಡ್ಡವರೇನೋ ಯಾವುದ್ಯಾವುದೋ ಬಲದಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಆದರೆ ಇಂತಹ ಕುಟುಂಬಗಳು ಮಾತ್ರ ನೋವನ್ನು ಅನುಭವಿಸಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ನಮ್ಮ ಯುವಕರು ಇಂತಹ ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ವಿವೇಕಯುತವಾಗಿ ನಡೆದುಕೊಳ್ಳಬೇಕು. ಅಷ್ಟಕ್ಕೂ ಧರ್ಮಸ್ಥಳದಲ್ಲಿ ನಡೆಯುತ್ತಿರುವುದಾದರೂ ಏನು? ಇವರಂತೆಯೇ ಬಡವರಾದ ಅನೇಕ ಕುಟುಂಬಗಳಿಗೆ ಸೇರಿದ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ತನಿಖೆ. ನಮ್ಮೆಲ್ಲರಿಗೂ ಸತ್ತುಹೋದವರ ಬಗ್ಗೆ ಕನಿಕರ ಇರಬೇಕಲ್ಲವೇ? ಅವರಿಗೆ ಆದ ಗತಿಯೇ ನಮ್ಮ ಕುಟುಂಬಗಳಲ್ಲಿಯೇ ಯಾರಿಗಾದರೂ ಆದರೆ ನಮಗೇನನಿಸುತ್ತದೆ ಎಂದು ಕ್ಷಣಕಾಲ ವಿಚಾರಿಸಬೇಕು.

ಸಾಯಲು ಧರ್ಮಸ್ಥಳಕ್ಕೆ ಬರುವುದು ನಿಜವೇ?

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳೇ ನಡೆದಿಲ್ಲ ಎಂದು ಹೇಳಲು ಇವತ್ತು ಅಲ್ಲಿನ ತನಿಖೆಯನ್ನು, ಅದರ ಭಾಗವಾದ ಉತ್ಖನನವನ್ನು ವಿರೋಧಿಸುವವರು ಕೂಡ ಹೇಳುತ್ತಿಲ್ಲ. ಆರಂಭದಲ್ಲಿ ಧರ್ಮಸ್ಥಳಕ್ಕೆ ಸಾಯಲಿಕ್ಕಾಗಿ ನೂರಾರು ಜನ ಬರುತ್ತಾರೆ ಎಂದು ಉರುಳಿಸಿದ ದಾಳ ಬಹಳ ದೂರ ಉರುಳಲಿಲ್ಲ. ಆ ಸ್ಥಳದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆʼ ಎಂಬ ನಂಬಿಕೆ ಜನರಲ್ಲಿ ಕಾಶಿಯ ಬಗ್ಗೆ ಇದೆಯೇ ಹೊರತು ಧರ್ಮಸ್ಥಳದ ಬಗ್ಗೆ ಇಲ್ಲ. ಧರ್ಮಸ್ಥಳಕ್ಕೆ ಜನ ತಮ್ಮ ಸಂಕಟವನ್ನು ಹೇಳಿಕೊಂಡು ಹಗುರಾಗಿ ಬದುಕಲು ಬರುತ್ತಾರೆಯೇ ಹೊರತು ಸಾಯಲಿಕ್ಕೆ ಬರುವುದಿಲ್ಲ. ಕಾಶಿಯಲ್ಲಿಯೂ ಕೂಡ ಹೀಗೆ ಬಂದು ಸಾಯುವವರು ತಮ್ಮ ಜೀವನದ ಉತ್ತರಾರ್ಧದಲ್ಲಿ ಅದರಲ್ಲಿಯೂ ಎಪ್ಪತ್ತು ವರ್ಷಗಳ ನಂತರದವರು ಎಂಬುದು ಯಾರಿಗಾದರೂ ಗೊತ್ತಿರುವ ಸಂಗತಿ. ಆದರೆ ಧರ್ಮಸ್ಥಳದಲ್ಲಿ ಸತ್ತಿದ್ದಾರೆ ಎನ್ನವವರೆಲ್ಲ ವಿಶೇಷವಾಗಿ ವಯಸ್ಸಿಗೆ ಬಂದ ಮತ್ತು ಬರುತ್ತಿರುವ ಹುಡುಗಿಯರು ಮತ್ತು ಮಹಿಳೆಯರು! ಇದು ಯಾರಿಗಾದರೂ ಸಂಶಯ ತರುವ ಸಂಗತಿಯೇ.

ಧರ್ಮಸ್ಥಳಗಳ ಈ ಸಾವುಗಳು ಸಹಜವಲ್ಲ ಅವು ಅಪರಾಧಕೃತ್ಯಗಳಿಗೆ ಸಂಬಂಧಿಸಿದವು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಅನೇಕ ವ್ಯಕ್ತಿಗಳ ಕಾಣೆಯ ಪ್ರಕರಣಗಳು , ಅಸಹಜ ಸಾವುಗಳ ದಾಖಲೆಗಳು ಈ ಅಭಿಪ್ರಾಯವನ್ನು ಈಗಾಗಲೇ ದೃಢಪಡಿಸಿವೆ. ಹಾಗಾಗಿ ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡದೇ ಇಲ್ಲ ಎಂದು ಹೇಳಲು ಯಾರಿಗೂ ಧೈರ್ಯಬರುತ್ತಿಲ್ಲ. ಅಲ್ಲಿನ ತನಿಖೆಯನ್ನು ವಿರೋಧಿಸುವವರೂ ಕೂಡ ಇದನ್ನು ಧೈರ್ಯದಿಂದ ಹೇಳುತ್ತಿಲ್ಲ. ಅಂದರೆ ಅಪರಾಧ ಕೃತ್ಯಗಳು ನಡೆದಿವೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಈ ಮೊದಲ ಅಂಶ ದೃಢವಾಗಿದ್ದು ಭಿನ್ನಾಭಿಪ್ರಾಯಗಳು ಇರುವುದು ಈ ಅಪರಾಧ ಕೃತ್ಯಗಳನ್ನು ಮಾಡಿದವರು ಯಾರು ಎಂಬುದರ ಬಗ್ಗೆ ಅಷ್ಟೆ. ಏಕೆಂದರೆ ಅಪರಾಧ ಕೃತ್ಯ ನಡೆದಿದೆ ಎಂದ ಮೇಲೆ ಅಲ್ಲಿ ಅಪರಾಧಿ ಇರಲೇಬೇಕಲ್ಲ!


ಅಪರಾಧಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವುದು ಮತ್ತು ಅವರಿಗೆ ತಕ್ಕ ಶಿಕ್ಷೆ ವಿಧಿಸುವುದು ಬೇಡವೇ? ಬೇಕು ಎನ್ನುವುದಾದರೆ ಅದಕ್ಕೆ ಇಂತಹ ತನಿಖೆಯನ್ನು ಬಿಟ್ಟರೆ ಬೇರೆ ಯಾವ ದಾರಿಯಿದೆ. ತನಿಖೆಯನ್ನು ಬೆಂಬಲಿಸುತ್ತಿರುವವರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಬಿಟ್ಟರೆ ಅವರೇನೂ ಮಾಡುತ್ತಿಲ್ಲ. ಆದರೆ ತನಿಖೆಯನ್ನು ವಿರೋಧಿಸುತ್ತಿರುವವರು ಮಾತ್ರ ಈ ಬಗ್ಗೆ ಹುಯಿಲೆಬ್ಬಿಸುತ್ತಿದ್ದಾರೆ ಮತ್ತು ಯುವಜನತೆಯನ್ನು ಪ್ರಚೋದಿಸುತ್ತಿದ್ದಾರೆ.

ಅವರು ತಮ್ಮ ವಿರೋಧಕ್ಕೆ ಕೊಡುತ್ತಿರುವ ಕಾರಣ ಬಾಲಿಶವಾಗಿದೆ. ಇದರಿಂದ  ದೇವಾಲಯಕ್ಕೆ, ಧರ್ಮಸ್ಥಳಕ್ಕೆ ಕಳಂಕ ಬರುತ್ತದೆ ಎಂಬುದು ಅವರ ವಾದ. ಈ ವಾದದಲ್ಲಿ ಹುರುಳಿಲ್ಲ. ಧರ್ಮಸ್ಥಳಕ್ಕೆ ಕಳಂಕ ಬಂದಾಗಿದೆ. ಈಗ ಉಳಿದ್ದು ಏನಾದರೂ ಇದ್ದರೆ ಅದು ಕಳಂಕವನ್ನು ನಿವಾರಿಸಿಕೊಳ್ಳುವುದು ಮಾತ್ರ. ರೋಗ ಬರದಂತೆ ನೋಡಿಕೊಳ್ಳಬೇಕಾದವರು ಎಚ್ಚರಿಕೆ ವಹಿಸಲಿಲ್ಲ ಹಾಗಾಗಿ ರೋಗ ಬಂದಾಗಿದೆ. ಈಗೇನಿದ್ದರೂ ಚಿಕಿತ್ಸೆ ನಡೆಸಿ ಕಾಯಿಲೆ ಗುಣಪಡಿಸುವುದು ಮಾತ್ರ. ಅದು ಇಂತಹ ತನಿಖೆಯಿಂದ ಮಾತ್ರ ಸಾಧ್ಯ.

ಹಾಗಾಗಿ ಇಂತಹ ಸಮಯದಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಕಾಡಿನಲ್ಲಿ ಅಗೆದರೆ ಎದೆಗೆ ಗುದ್ದಲಿ ಬಿದ್ದಂತೆ ಒದ್ದಾಡಬಾರದು. ಹಾಗೆ ನೋಡಿದರೆ ಅಲ್ಲಿ ಅಗೆತ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಕಾಡು ಹಾಳಾಗುತ್ತದೆ ಎಂದು ಪರಿಸರವಾದಿಗಳು ಅಪಸ್ವರ ಎತ್ತಿದ್ದರೆ ಅದಕ್ಕೆ ಒಂದಿಷ್ಟು ಬೆಲೆಯಾದರೂ ಇರುತ್ತಿತ್ತು. ಅವರೆಲ್ಲ ಸುಮ್ಮನಿದ್ದಾರೆ. ಏಕೆಂದರೆ ಪರಿಸರ ಕಾಡು ಉಳಿಸಿಕೊಳ್ಳುವುದು ಮುಖ್ಯವಾದದ್ದೇ ಅದರೂ ಈ ಭಯಂಕರ ಅಪರಾಧ ಕೃತ್ಯಗಳ ಸತ್ಯ ಹೊರಗೆ ಬರಬೇಕಾದದ್ದು ಅದಕ್ಕಿಂತ ಮುಖ್ಯವಾದದ್ದು ಎಂದು ಅವರಿಗೆಲ್ಲ ಅನ್ನಿಸಿದೆ.

ಆದರೆ ನಮ್ಮ ಕೆಲವು ʼಧಾರ್ಮಿಕʼರೇ ತಮ್ಮ ಭಾವನೆಗಳಿಗೆ ಧಕ್ಕೆ ಎಂಬ ದಾಳ ಉರುಳಿಸುತ್ತಿದ್ದಾರೆ. ಯುವಕರನ್ನು ಪ್ರಚೋದಿಸುತ್ತಿದ್ದಾರೆ.  ಕೆಲವರಂತೂ ಹಿಂದಿನ ಜನ್ಮದಲ್ಲಿ ಮಟನ್‌ ಅಂಗಡಿಯಲ್ಲಿ ಕೆಲಸಕ್ಕೆ ಇದ್ದರೇನೋ ಎಂದು ನಮಗೆಲ್ಲ ಸಂಶಯ ಬರುವಂತೆ ʼಧರ್ಮಸ್ಥಳದ ತಂಟೆಗೆ ಬಂದರೆ ತಲೆ ತಗೆಯುತ್ತೇವೆʼ ʼ ಕಾಲುಮುರಿಯುತ್ತೇವೆʼ ಎಂದೆಲ್ಲ ಅಬ್ಬರಿಸುತ್ತಿದ್ದಾರೆ. ಮನುಷ್ಯರ ತಲೆ ತಗೆಯುವುದು ಕಾಲು ಮುರಿಯುವುದು ಹಾಗಿರಲಿ ಒಂದು ಕುರಿಯ ತಲೆಯನ್ನು ತಗೆದು, ಒಂದು ಕೋಳಿಯ ಕಾಲು ಮುರಿದು ಉಳಿದುಕೊಳ್ಳುವುದೂ ಕಷ್ಟವಿದೆ ಈಗ ಎಂಬುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು

ಒಬ್ಬ ಜನಪ್ರತಿನಿಧಿಯಂತೂ ʻಅನಾಮಿಕ ತೋರಿಸಿದ ಜಾಗೆಯಲ್ಲಿ ಶವ ಸಿಗದಿದ್ದರೆ ಅವನನ್ನು ಗಲ್ಲಿಗೇರಿಸಬೇಕುʼ ಎಂದು ಅಪ್ಪಣೆ ಕೊಡಿಸಿದ್ದಾನೆ. ʻಹೌದು ಶವ ಸಿಗದಿದ್ದರೆ ಅವನನ್ನು ಗಲ್ಲಿಗೇರಿಸೋಣ; ಸಿಕ್ಕರೆ ನಿನ್ನನ್ನು ಗಲ್ಲಿಗೇರಿಸಬಹುದೇʼ ಎಂದು ಅವನ್ನು ಪುಣ್ಯಕ್ಕೆ ಯಾರೂ ಕೇಳಲಿಲ್ಲ. ಇವೆಲ್ಲ ಹುಚ್ಚುತನದ ಮಾತುಗಳು.. ಭಾವನೆಗಳಿಗೆ ಬೆಲೆಯಿದೆ ನಿಜ. ಆದರೆ ಬುದ್ಧಿಯನ್ನು ಬಲಿಕೊಟ್ಟು ಭಾವನೆಗಳಿಗೆ ಬೆಲೆಕೊಟ್ಟರೆ ಅದೇ ಭಾವನೆಗಳೇ ನಮ್ಮನ್ನು ಬಾವಿಗೆ ತಳ್ಳಬಲ್ಲವು. ಈ ಎಚ್ಚರಿಕೆ ನಮ್ಮೆಲ್ಲರಿಗೂ ಇರಬೇಕು.

ಕಾನೂನನ್ನು ನಾವು ಮುರಿದರೆ…..

ನಮ್ಮ ಯುವಕರು ಅರ್ಥಮಾಡಿಕೊಳ್ಳಬೇಕಾದ ಸೂಕ್ಷ್ಮಗಳೇನೆಂದರೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಕೆಲವು ಸಾಕ್ಷಗಳನ್ನು ಅನೇಕ ಹೋರಾಟಗಾರರು ಇಟ್ಟುಕೊಂಡಿದ್ದಾರೆ. ಅವುಗಳಲ್ಲಿ ಕೆಲವನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಕೆಲವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇಟ್ಟುಕೊಂಡಿರಬಹುದು. ಸಾಕ್ಷಗಳಿಲ್ಲದೆ ಆರೋಪ ಮಾಡಿದರೆ ಶಿಕ್ಷೆ ತಮಗೆ ಆಗುತ್ತದೆ ಎಂಬುದು ಅವರಿಗೂ ಗೊತ್ತಿದೆ. ಗೊತ್ತಿದ್ದೂ ಧೈರ್ಯದಿಂದ ಆರೋಪ ಮಾಡುತ್ತಾರೆ ಎಂದರೆ ಅಲ್ಲಿ ಏನಾದರೂ ಪ್ರಬಲ ಸಾಕ್ಷಾಧಾರಗಳು ಇರಲೇಬೇಕು. ಆದರೆ ತನಿಖೆಯನ್ನು ವಿರೋಧಿಸುವವರು ನೋಡಿ, ಇದು ʻಷಡ್ಯಂತ್ರʼ ʻಪಿತೂರಿʼ,  ಎಂದು ಪುಂಗಿ ಊದುತ್ತಿದ್ದಾರೆಯೇ ಹೊರತೂ ಸಾರ್ವಜನಿಕರಿಗೆ ಅದಕ್ಕೆ ತಕ್ಕ ಸಾಕ್ಷ್ಮವನ್ನು ಕೊಡುತ್ತಿಲ್ಲ. ವಿದೇಶದಿಂದ ಹಣ ಬರುತ್ತದೆ ಎಂದು ಭಾಷಣ ಬಿಗಿಯುವ ಯಾವ ವ್ಯಕ್ತಿಯೂ ವಿದೇಶದ ಯಾವ ಸಂಸ್ಥೆ ಅಥವಾ ವ್ಯಕ್ತಿಯಿಂದ ಇಲ್ಲಿ ಯಾವ ವ್ಯಕ್ತಿ ಅಥವಾ ಸಂಸ್ಥೆ ಹಣ ಪಡೆದಿದೆ ಎಂದು ಇದುವರೆಗೂ ಒಂದೇ ಒಂದು ಉದಾಹರಣೆಯನ್ನು ಕೂಡ ಕೊಟ್ಟಿಲ್ಲ!

ಇದು ಏನೇ ಇರಲಿ ಇವೆಲ್ಲ ನ್ಯಾಯಾಲಯದಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕಾದ ಅಂಶಗಳು. ಅದರ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ. ಈಗಲೇ ನಾವು ʻಇಂಥವರೇ ಅಪರಾಧಿಗಳುʼ ಎಂದು ಯಾರನ್ನೂ ಬೊಟ್ಟು ಮಾಡಿ ತೋರಿಸುವುದು ಬೇಡ. ಹಾಗೆಯೇ ʻಇಂಥವರು ಅಲ್ಲವೇ ಅಲ್ಲʼ ಎಂದು ಹುಂಬರಂತೆ ಹೇಳುವುದೂ ಬೇಡ. ʻಸ್ಪಷ್ಟವಾಗಿ ತನಿಖೆ ನಡೆಯಲಿ ಸತ್ಯ ಹೊರಬರಲಿ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆಯಾಗಲಿʼ ಎಂದಷ್ಟೇ ಹೇಳೋಣ ಮತ್ತು ತನಿಖೆಯು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳೋಣ. ಈಗ ಎಬ್ಬಿಸಿರುವ ಹುಯ್ಲಿನಂತೆ ನಿಜವಾಗಿ ಅದೊಂದು ಷ್ಯಡ್ಯಂತ್ರವೇ ಆಗಿದ್ದರೆ ಕುತಂತ್ರವೇ ಆಗಿದ್ದರೆ ಅದನ್ನು ಮಾಡಿದವರಿಗೇ ಶಿಕ್ಷೆಯಾಗಲಿ ಅದಕ್ಕೇನಂತೆ! ಆದರೆ ಅದು ಆಗಲಿಕ್ಕಾದರೂ ತನಿಖೆ ಆಗಲೇ ಬೇಕಲ್ಲ! ತನಿಖೆಗೆ ಅಡ್ಡಿಪಡಿಸಿದರೆ ಈ ಷಡ್ಯಂತ್ರ ಮಾಡಿದವರಿಗೆ ಶಿಕ್ಷೆ ಆಗುವುದಾದರೂ ಹೇಗೆ?

ಕೊನೆಯಲ್ಲಿ ಒಂದು ಮಾತು, ʼಧರ್ಮೋರಕ್ಷತಿ ರಕ್ಷಿತಃʼ ಎಂಬ ಮಾತನ್ನು ಅನೇಕರು ಈಗ ಉಚ್ಚರಿಸುತ್ತಿದ್ದಾರೆ. ಅಂದರೆ ʻಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆʼ ಎಂಬುದು ಇದರ ಅರ್ಥ. ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ; ಇರಲೂ ಬಹುದು; ಇರದೇ ಇರಲೂ ಬಹುದು. ಏಕೆಂದರೆ ಇದು ನಂಬಿಕೆಗೆ ಸಂಬಂಧಪಟ್ಟದ್ದು. ನಂಬಬಹುದು ಅಥವಾ ಬಿಡಬಹುದು. ಆದರೆ ನಂಬಲೇಬೇಕಾದ ವಾಸ್ತವದ ಸಂಗತಿಯೊಂದಿದೆ ಅದೇನೆಂದರೆ, ʼಕಾನೂನನ್ನು ನಾವು ಮುರಿದರೆ ಕಾನೂನು ನಮ್ಮನ್ನು ಮುರಿಯುತ್ತದೆʼ . ಈ ಎಚ್ಚರಿಗೆ ನಮ್ಮ ಯುವಕರಿಗೆ ಮಾತ್ರವಲ್ಲ ಸಂಬಂಧಪಟ್ಟ ಎಲ್ಲರಿಗೂ ಇರಬೇಕಾದದ್ದು ಅವಶ್ಯಕ.

ಡಾ ರಾಜೇಂದ್ರ ಬುರಡಿಕಟ್ಟಿ

16-08-2025

*****

ಇದೇ ಪ್ರಕರಣಕ್ಕೆ ಸಂಬಂಧಿಸಿದ ನನ್ನ ಕೆಳಕಂಡ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಒತ್ತಿ ಓದಬಹುದು:

ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:

https://buradikatti.blogspot.com/2025/08/blog-post_9.html

ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:

https://buradikatti.blogspot.com/2025/08/blog-post_8.html

ಧರ್ಮಸ್ಥಳ: ಕ್ಷೇತ್ರಕ್ಕೆ ಅಂಟಿದ ರಕ್ತದ ಕಲೆ ಮತ್ತು ವರದಿಗಾರನ ಸೌಜನ್ಯ...

https://www.facebook.com/share/p/1B1a85rbFE/


 

Thursday, August 14, 2025

ಧರ್ಮಸ್ಥಳ: ಕ್ಷೇತ್ರಕ್ಕೆ ಅಂಟಿದ ರಕ್ತದ ಕಲೆ ಮತ್ತು ವರದಿಗಾರನ ಸೌಜನ್ಯ...

 ಧರ್ಮಸ್ಥಳ: ಕ್ಷೇತ್ರಕ್ಕೆ ಅಂಟಿದ ರಕ್ತದ ಕಲೆ ಮತ್ತು ವರದಿಗಾರನ ಸೌಜನ್ಯ...

ಧರ್ಮಸ್ಥಳದ ಮುಸುಕುಧಾರಿ ʻಭೀಮʼನ ಸಂದರ್ಶನವನ್ನು ರಾಷ್ಟ್ರೀಯ ಮಾಧ್ಯಮ ʼಇಂಡಿಯಾ ಟುಡೆʼ ಮಾಡಿದ್ದನ್ನು ಎಲ್ಲ ಮಾಧ್ಯಮಗಳೂ ಮರುಪ್ರಸಾರಮಾಡುತ್ತಿವೆ. ಈ ಸಂದರ್ಶನವನ್ನು ಪೂರ್ತಿ ನೋಡಿದೆ. ಅದರಲ್ಲಿ ಆತ ಕೊಟ್ಟ ವಿವಿರಗಳ ಬಗ್ಗೆ ಎಲ್ಲ ಚಾನೆಲ್‌ಗಳೂ ಯೂಟೂಬರ್ಸ್‌ ವಿವಿರ ನೀಡಿರುವುದರಿಂದ ಅದರ ವಿವರ ಇಲ್ಲಿ ಅನಗತ್ಯ. ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿ ಕಂಡವು ಅವನ್ನಷ್ಟೇ ಹೇಳುತ್ತಿರುವೆ.


ಮೊದಲನೆಯದಾಗಿ ಆತ ನಮ್ಮ ಕೆಲವು ʻಬಾಯಿಬಡಾಕಿಗಳುʼ ಬಾಯಿಬಾಯಿ ಬಡೆದುಕೊಳ್ಳುತ್ತಾ ʻಅವನು ತೀರಾ ಕುಗ್ಗಿಹೋಗಿದ್ದಾನೆ. ತನಗೆ ಶಿಕ್ಷೆಯಾಗುವ ಆತಂಕದಲ್ಲಿದ್ದಾನೆʼ ಎಂದು ಹೇಳಿದಂತೆ ಅವನು ಯಾವುದೇ ಆತಂಕದಲ್ಲಿರುವಂತೆ ನನಗಂತೂ ತೋರಲಿಲ್ಲ. ಆತ ಅತ್ಯಂತ ಸ್ಪಷ್ಟವಾಗಿ ನಿರಾತಂಕವಾಗಿ ಮಾತನಾಡಿದ. ಅವನು ಎಲ್ಲದಕ್ಕೂ ತಯಾರಾಗಿರುವಂತೆಯೇ ಕಂಡುಬಂದ.

ಹಾಗೆ ನೋಡಿದರೆ ಅವನ ಬಗ್ಗೆ ಬಾಯಿಬಡಿದುಕೊಳ್ಳುತ್ತಿರುವವರೆ ಬಹಳ ಆತಂಕದಲ್ಲಿದ್ದಂತೆ ತೋರುತ್ತಿದೆ. ಅಲ್ಲಿನ ಅಪರಾಧಗಳ ಬಗ್ಗೆ ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಮತ್ತು ಅಪರಾಧಿಗಳಿಗೆ ಆಗಬೇಕಾದ ಶಿಕ್ಷೆಯ ಬಗ್ಗೆ ಮಾತನಾಡಿದರೆ, ಅಲ್ಲಿನ ದೇವಸ್ಥಾನದ ಬಗ್ಗೆ ದೇವರ ಬಗ್ಗೆ ಯಾರೂ ಏನೂ ಮಾತನಾಡದಿದ್ದರೂ ಇವರೆಲ್ಲ ಕ್ಷೇತ್ರಕ್ಕೆ ಅವಮಾನ, ದೇವಸ್ಥಾನಕ್ಕೆ ಕೆಟ್ಟ ಹೆಸರು ತರುವ ಷ್ಯಡ್ಯಂತ್ರ ಇತ್ಯಾದಿ ಬಾಯಿಬಡಿದುಕೊಳ್ಳುತ್ತಿರುವುದನ್ನು ನೋಡಿದರೆ ಇವರಿಗೇ ದೊಡ್ಡ ಆತಂಕ ಎದುರಾದಂತೆ ಇದೆ. ವಿಲವಿಲ ಒದ್ದಾಡುತ್ತಿದ್ದಾರೆ.

ಎಸ್‌ ಐ ಟಿ ತನಿಖೆಯಲ್ಲಿ ಶವಗಳ ಸಾಕ್ಷವನ್ನು ಹುಡುಕುವುದು ಒಂದು ಭಾಗವಾಗುತ್ತದೆಯೆ ಹೊರತು ಅದೇ ಅಂತಿಮ ಆಗುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಗೊತ್ತಾಗುವ ಸಂಗತಿ. ಶವದ ಅವಶೇಷಗಳು ಸಿಗಲಿಲ್ಲ ಎಂಬ ಕಾರಣವನ್ನು ಮುಂದುಮಾಡಿ ಅಪರಾಧಗಳು ನಡೆದೇ ಇಲ್ಲ ಆತ ಹೇಳಿದ ಎಲ್ಲ ಸಂಗತಿಗಳು ʼಸುಳ್ಳುʼ ಎಂಬ ತೀರ್ಮಾನಕ್ಕೆ ಇವರಂತೆ ಎಸ್.ಐ.ಟಿ ಬರಲು ಸಾಧ್ಯವೇ? ಸಾಧ್ಯವಿಲ್ಲದ ಸಂಗತಿ. ಕಾನೂನು ತನ್ನದೇ ಆದ ದಾರಿಯನ್ನು ಕಂಡುಕೊಳ್ಳುತ್ತದೆ ಮತ್ತು ತನ್ನದೇ ಆದ ತೀರ್ಮಾನವನ್ನು ಪ್ರಕಟಿಸುತ್ತದೆ.

ಆದರೆ ಅದು ತನ್ನ ಕಾರ್ಯವನ್ನು ತಾನು ಮಾಡುವಾಗಲೇ ಇವರೆಲ್ಲ ಅಡ್ಡ ಅಡ್ಡ ಬಾಯಿ ಹಾಕಿ !ಯಾರದ್ಯಾರದೋ ಪರವಾಗಿ ಡೋಲು ಹೊಡೆಯುತ್ತಿದ್ದಾರೆ! ಮಂಜುನಾಥ ಸ್ವಾಮಿ ಶಿವನ ಅವತಾರ. ಶಿವತಾಂಡವ ನೃತ್ಯ ಯಾರಿಗೆ ತಾನೆ ಗೊತ್ತಿಲ್ಲ. ಆತ ಮನಸ್ಸು ಮಾಡಿದರೆ ಯಾರನ್ನೂ ಕ್ಷಣಮಾತ್ರದಲ್ಲಿ ಭಸ್ಮಮಾಡಬಲ್ಲನಲ್ಲವೇ? ಅಂತಹ ಮಂಜುನಾಥನನ್ನೂ ಅವನ ಕ್ಷೇತ್ರವನ್ನೂ ಈಜನ ರಕ್ಷಣೆಮಾಡುತ್ತಾರಂತೆ!

ನಾಡಿನ ಜನ ನ್ಯಾಯಕ್ಕಾಗಿ ಧರ್ಮಸ್ಥಳಕ್ಕೆ ಬರುತ್ತಿದ್ದರೆ ಧರ್ಮಸ್ಥಳದವರು ನ್ಯಾಯಕ್ಕಾಗಿ ಕೋರ್ಟುಗಳಿಗೆ ಹೋಗುತ್ತಿದ್ದಾರೆ.. ಯಾವುದ್ಯಾವುದೋ ಒತ್ತಡ ಹೆಚ್ಚಾಗಿ ತನಿಖೆಯೂ ನಿಂತೀತು. ಆದರೆ ಜನರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ದೊರೆಯದೇ ಇವರೆಲ್ಲ ಗಲಾಟೆಮಾಡಿ ತನಿಖೆ ನಿಲ್ಲುವಂತಾದರೆ ಧರ್ಮಸ್ಥಳಕ್ಕೆ ಅಂಟಿದ ರಕ್ತದ ಕಲೆ ಹಾಗೇ ಉಳಿದು ಬಿಡುತ್ತದೆ. ಹೀಗಾಗಿ ಅಪರಾಧಿಗಳು ಸಿಕ್ಕು ಅವರಿಗೆ ಶಿಕ್ಷೆ ಆದರೇನೇ ಅದಕ್ಕೆ ಅಂತ್ಯ.

ʼಷಡ್ಯಂತ್ರʼ ಅನ್ನುವವರು ʻಷಡ್ಯಂತ್ರʼಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೂ ಅವರೂ ಅವನ್ನು ಎಸ್‌ ಐ ಟಿ ಗೆ ಸಲ್ಲಿಸಲು ಅವಕಾಶವಿದೆ. ಆದರೆ ಅವರೆಲ್ಲ ಕಾನೂನಿನ ಮಾರ್ಗ ಬಿಟ್ಟು ತೋಳ್ಮಡಿಯುವ ದಾರಿ ಹಿಡಿಯುತ್ತಿರುವುದನ್ನು ನೋಡಿದರೆ ಯಾರಿಗೆ ತಾನೇ ಸಂಶಯ ಬರುವುದಿಲ್ಲ.

ದೇಶದಲ್ಲಿ ಇವತ್ತು ಕಂಬಿಯ ಹಿಂದೆ ಇರುವ ಅನೇಕ ದೇವಮಾನವರು, ಬಾಬಾಗಳನ್ನು ಒಳಗೆ ಕಳಿಸುವ ಮೊದಲು ನಡೆದ ತನಿಖೆಯ ಸಂದರ್ಭದಲ್ಲಿಯೂ ಇದೇ ತಾನೆ ಆಗಿದ್ದು? ಆದರೆ ಕಾನೂನು ಏನನ್ನು ಮಾಡಬೇಕೋ ಅದನ್ನೇ ಮಾಡಿದೆ. ಈ ಇತಿಹಾಸ ಕೂಡ ನಮಗೆ ಗಮನವಿರಬೇಕು. ಎಲ್ಲರೂ ಸುಮ್ಮನಿದ್ದು ತನಿಖೆಗೆ ಸಹಕರಿಸಬೇಕು. ಭಾವಾವೇಶವನ್ನು ಕಾನೂನು ಮಾನ್ಯಮಾಡುವುದಿಲ್ಲ. ಅಷ್ಟಕ್ಕೂ ಧರ್ಮಸ್ಥಳ ದಲ್ಲಿ ಭಕ್ತರ ಜಾಗೆ ಎಷ್ಟು ವಿಸ್ತೀರ್ಣವಿದೆ ಎಂಬುದಕ್ಕೆ ಒಂದು ಗಡಿಯಿಲ್ಲ. ಇವತ್ತು ಇಡೀ ಗ್ರಾಮವೆ ನಮ್ಮ ಶ್ರದ್ಧಾಕೇಂದ್ರ ಎನ್ನುವವರು ನಾಳೆ ಇಡೀ ದ.ಕ ಜಿಲ್ಲೆಯೇ ನಮ್ಮ ಶ್ರದ್ಧಾಕೇಂದ್ರ ಎಂದು ಹೇಳಬಹುದು.

ಆಗ ಇಡೀ ಜಿಲ್ಲೆಯಲ್ಲಿನ ಅಪರಾಧ ಕೃತ್ಯಗಳನ್ನು ತನಿಖೆ ಮಾಡುವುದನ್ನೇ ಬಿಡಲಿಕ್ಕೆ ಆಗುತ್ತದೆಯೇ? ಮಂಜುನಾಥನ ಬಗ್ಗೆ ಕ್ಷೇತ್ರದ ಬಗ್ಗೆ ಇವರು ಅಪರಾಧ ಕೃತ್ಯಗಳನ್ನು ಗಂಟುಹಾಕುವುದನ್ನು ಬಿಡದಿದ್ದರೆ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಇವರು ಯಾರನ್ನು ರಕ್ಷಿಸಲು ಹೋಗುತ್ತಾರೋ ಅವರನ್ನು ಈ ʼಭಕ್ತʼರೇ ಇನ್ನಷ್ಟು ಕಾನೂನಿನ ಸಂಕಷ್ಟಕ್ಕೆ ತಳ್ಳುತ್ತಾರೆ.... ಇದನ್ನು ಅವರು ಅರ್ಥಮಾಡಿಕೊಳ್ಳಬೇಕು.

ಈ ಭಕ್ತರ ಗಲಾಟೆ ಹೇಗಾದರೂ ಇರಲಿ. ಆದರೆ ಮಾಧ್ಯಮ ವರದಿಗಾರರು ಮಾತ್ರ ನಿಷ್ಪಕ್ಷಪಾತವಾಗಿ ಇರಬೇಕಾಗುತ್ತದೆ. ಅದನ್ನು ಬಹುಪಾಲು ನಮ್ಮ ಮಾಧ್ಯಮ ಪ್ರತಿನಿಧಿಗಳು ಮಾಡಲಿಲ್ಲವೆಂದೇ ಹೇಳಬೇಕು. ಈ ಇಂಡಿಯಾ ಟುಡೆ ವರದಿಗಾರ ಸಂದರ್ಶನವನ್ನು ಮಾಡುವಾಗ ಬಹಳಷ್ಟು ಜವಾಬ್ದಾರಿಯುತವಾಗಿ ಪ್ರಶ್ನಿಸಿದರು ಮಾತ್ರವಲ್ಲ ಒಬ್ಬ ಸಾಕ್ಷಿಯನ್ನು ಎಷ್ಟು ಘನತೆಯಿಂದ ನಡೆದುಕೊಳ್ಳಬೇಕೋ ಹಾಗೇ ನಡೆದುಕೊಂಡರು.

ನೀವು ಗಮನಿಸಿದಿರೋ ಇಲ್ಲವೋ ಧರ್ಮಸ್ಥಳದ ಧರ್ಮಾಧಿಕಾರಿಯನ್ನು ಸಂದರ್ಶನವನ್ನು ಮಾಡಿದ್ದರೆ ಅವರೊಂದಿಗೆ ಹೇಗೆ ಗೌರವದಿಂದ ಮಾತನಾಡಬಹುದಿತ್ತೋ ಅದೇ ಗೌರವದಿಂದ ಈ ಮುಸುಕುಧಾರಿಗೆ ಬಹುವಚನ ಬಳಸಿ ʼಸರ್‌ʼ ಎಂದು ಸಂಬೋಧಿಸಿ ಪ್ರಶ್ನೆ ಕೇಳುತ್ತಿದ್ದರು. ಇದು ನಮ್ಮ ವರದಿಗಾರರು ಕಲಿಯಬೇಕಾದ ಪಾಠ. ನಮ್ಮ ಬಹುತೇಕ ವರದಿಗಾರರು ಏನು ಮಾಡಿದರು ನೆನಪು ಮಾಡಿಕೊಳ್ಳಿ. ಅವನನ್ನು ಮಾನಸಿಕ ಅಸ್ವಸ್ಥ, ಕಳಿಸಿಕೊಟ್ಟ ವ್ಯಕ್ತಿ ಹೀಗೇ... ಎಲ್ಲವನ್ನೂ ಇವರೆ ತೀರ್ಮಾನಮಾಡಿದರು.

ನಮ್ಮ ವರದಿಗಾರರು ರೂಢಿಸಿಕೊಳ್ಳಬೇಕಾದ ನಡೆವಳಿಕೆ ಏನು ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಇದೇ ಸ್ಪಷ್ಟತೆ ನಮಗೆ ಈ ಮುಸುಕುಧಾರಿ ನಮ್ಮ ಸ್ಥಳೀಯ ಚಾನೆಲ್‌ ಯಾವಕ್ಕೂ ಸಂದರ್ಶನ ಕೊಡದೆ ʻಇಂಡಿಯಾ ಟುಡೆʼಗೆ ಏಕೆ ಕೊಟ್ಟಿರಬಹುದು ಎಂಬುದಕ್ಕೂ ಅರ್ಥವನ್ನು ಹುಡುಕಿಕೊಡುಬಹುದು...

ದೇವರ ಮೇಲಿನ ಕ್ಷೇತ್ರದ ಮೇಲಿನ ಭಕ್ತಿಗೌರವಗಳೇ ಬೇರೆ; ಅಪರಾಧಗಳಿಗೆ ನ್ಯಾಯಕೇಳುವುದೇ ಬೇರೆ. ಇವೆರಡನ್ನು ತಳುಕುಹಾಕದೇ ತನಿಖೆಗೆ ಸಹಕರಿಸೋಣ....

****
ಇದೇ ಪ್ರಕರಣದ ಬಗ್ಗೆ ಇರುವ ಈ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದು
ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:
https://buradikatti.blogspot.com/2025/08/blog-post_9.html
ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:
https://buradikatti.blogspot.com/2025/08/blog-post_8.html

Tuesday, August 12, 2025

ಅಂಗಾಗದಾನವೆಂಬ ಶ್ರೇಷ್ಠದಾನ

  ಅಂಗಾಗದಾನವೆಂಬ ಶ್ರೇಷ್ಠದಾನ

ವಿಶ್ವ ಅಂಗಾಗದಿನದ ವಿಶೇಷ ಉಪನ್ಯಾಸ - ಡಾ ರಾಜೇಂದ್ರ ಬುರಡಿಕಟ್ಟಿ

ಆಗಸ್ಟ್‌ ಹದಿಮೂರು ವಿಶ್ವ ಅಂಗಾಗ ದಾನ ದಿನ (World Organ Donation Day). ಒಬ್ಬ ವ್ಯಕ್ತಿ ತನ್ನ ಮರಣಾನಂತರ ಮಾಡುವ ತನ್ನ ಅಂಗಾಗದಾನದಿಂದ ಎಂಟು ಜನರ ಬದುಕಿಗೆ ಬೆಳಕು ಬರುತ್ತದೆಯಂತೆ. ಇಂತಹ ಒಂದು ಕಾರ್ಯಕ್ಕೆ ಬೇಕಾದದ್ದು ಬೇರೆ ಏನೂ ಅಲ್ಲ. ಕೇವಲ ಧಾರ್ಮಿಕ ಸಂಕೋಲೆಗಳಿಂದ ಬಿಡಿಸಿಕೊಂಡು ತುಸು ಪ್ರಗತಿಪರವಾಗಿ ಯೋಚಿಸುವಿಕೆ ಅಷ್ಟೆ. ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಮ್ಮ ದೇಶದ ಈಗಿನ ಜನಸಂಖ್ಯೆ ಸುಮಾರು ೧೫೦ ಕೋಟಿ. ಇದರಲ್ಲಿ ಅಂಗಾಂಗ ದಾನ ಮಾಡಿದವರ ಸಂಖ್ಯೆ ಕೇವಲ ನಾಲ್ಕು ಲಕ್ಷಕ್ಕಿಂತ ಕಡಿಮೆ! ದೇಶದಲ್ಲಿ ಕರ್ನಾಟಕ ಅಂಗಾಗದಾನದಲ್ಲಿ ಈಗ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಇದ್ದರೂ ಜಿಲ್ಲೆಗಳಲ್ಲಿ ಧಾರವಾಡ ಬಳ್ಳಾರಿ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿವೆ. ಅಂಗಾಗ ದಾನ ಎಂಬುದು ಎಷ್ಟು ಮುಖ್ಯವಾದದ್ದು ಅದನ್ನು ಮಾಡುವ ವಿಧಾನ ಅದರ ಪ್ರಯೋಜನ ಇತ್ಯಾದಿ ಕುರಿತು ತಿಳಿಯಲು ಈ ಲಿಂಕ್‌ ಒತ್ತಿ. 

https://youtu.be/TXqw_c1AOy8?feature=shared


Saturday, August 9, 2025

ಧರ್ಮಸ್ಥಳ: ಅಂಧಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲು ಬಡಿತವೂ!

 ಧರ್ಮಸ್ಥಳ: ಅಂಧಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲು ಬಡಿತವೂ!

ಇಡೀ ದೇಶ ಮತ್ತು ದೇಶಗಳಾಚೆ ಗಮನ ಸೆಳೆದಿರುವ ಧರ್ಮಸ್ಥಳ ಬೃಹತ್ ಪ್ರಮಾಣದ ಅತ್ಯಾಚಾರ ಮತ್ತು ಹತ್ಯೆಗಳಿಗೆ ಸಂಬಂಧಿಸಿದಂತೆ ಎಸ್.ಐ.ಟಿ. ರಚನೆಯಾಗಿ ತನ್ನ ಕಾರ್ಯವನ್ನು ನಡೆಸುತ್ತಿದೆ. ತಕ್ಕಮಟ್ಟಿನ ಸಾಕ್ಷಿಪುರಾವೆಗಳು ಸಿಗುತ್ತಿರುವ ಈ ಸಂದರ್ಭದಲ್ಲಿ:


ಮನುಷ್ಯತ್ವ ಹೊಂದಿರುವ ಯಾರಿಗೇ ಆಗಲಿ ಸತ್ತುಹೋಗಿರುವ ಜೀವಗಳ ಬಗ್ಗೆ ʻಅಯ್ಯೋ ಅನ್ನಿಸದಿರದು. ಮತ್ತು ಇದನ್ನು ಮಾಡಿದವರು ಯಾರೇ ಆಗಿರಲಿ ಅವರ ಬಗ್ಗೆ ರೋಷ ಉಕ್ಕದಿರದು. ಆದರೆ ಇಂತಹ ಸಂದರ್ಭದಲ್ಲಿಯೂ ಬಲಾಢ್ಯರ ಬಾಲಬಡುಕರು ಧಣಿಗಳ ಪರವಾಗಿ ಡೋಲು ಹೊಡೆಯುವುದನ್ನು ನಿಲ್ಲಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹೀಗೆ ಡೋಲು ಹೊಡೆಯುವವರಲ್ಲಿ ಎರಡು ರೀತಿ ಇರಬಹುದು. ಒಂದು ಬಲಾಢ್ಯ ಆರೋಪಿಗಳಿಂದ ʼಪ್ರಸಾದʼ ಪಡೆದವರು. ಇನ್ನೊಂದು ರೀತಿಯವರು ಈ ಬಲಾಢ್ಯರನ್ನು ʼದೇವರೆಂದೋʼ ʼದೇವಮಾನವರೆಂದೋʼ ತಿಳಿದುಕೊಂಡಿರುವ ಅಂಧಭಕ್ತರು.

ಮೊದಲು ಅಂಧಭಕ್ತರ ಬಗ್ಗೆ ನೋಡೋಣ. ಇಂತಹ ಅಂಧಭಕ್ತರಿದ್ದದ್ದರಿಂದಲೇ ಅನೇಕ ಬಲಾಢ್ಯರು ನಿರಾತಂಕವಾಗಿ ಅಪರಾಧ ಕೃತ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಅಂಧಭಕ್ತರಿಗೆ ಅವರ ಅಕ್ಕತಂಗಿಯರನ್ನೋ ಹೆಂಡತಿಯರನ್ನೋ ಈ ರಾಕ್ಷಸರು ಎಳೆದೊಯ್ದಾಗ ಮಾತ್ರ ʼಸತ್ಯʼ ಅರಿವಿಗೆ ಬರಬಹುದು ಅಥವಾ ಆಗಲೂ ಬರದೇ ಇರಬಹುದು. ಅಂತಹ ಅಂಧಭಕ್ತರು ʼನೀವು ಧೈರ್ಯವಾಗಿರಿ ನಾವು ನಿಮ್ಮೊಂದಿಗಿದ್ದೇವೆʼ ಎಂದು ನಡುಕ ಹುಟ್ಟಿರುವವರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಇದು ಧರ್ಮಸ್ಥಳ ಮಾತ್ರವಲ್ಲ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ, ಅಪರಾಧ ಕೃತ್ಯಗಳಿಗೆ ತಳುಕುಹಾಕಿಕೊಂಡಿರುವ ದೇವಮಾನವರ ಬಗ್ಗೆ ಇಂತಹ ಅಂಧಭಕ್ತರು ತೋರುವ ಕನಿಕರವಾಗಿದೆ. ಚಿತ್ರದುರ್ಗದ ಸ್ವಾಮಿಯ ವಿಷಯದಲ್ಲೂ ಇವರು ಹೀಗೆ ಮಾಡಿದರು. ಕೊನೆಗೆ ಹಂತಹಂತವಾಗಿ ದೂರವಾದರು. ಇಂತಹವರು ತಮ್ಮ ಅಂಧವಿಶ್ವಾಸವನ್ನು ಬಿಟ್ಟು ಕಣ್ಣುತೆರೆದು ನೋಡಬೇಕು.

ಅಷ್ಟಕ್ಕೂ ಇಂತಹವರೇ ಅಪರಾಧಿಗಳು ಎಂದು ಯಾರೂ ಹೇಳುತ್ತಿಲ್ಲ. ಅಪರಾಧ ನಡೆದಿದೆ ಎಂದರೆ ಅಪರಾಧಿ ಇದ್ದೇ ಇರುತ್ತಾರಲ್ಲ. ಅವರನ್ನು ಹಿಡಿಯಿರಿ ಎಂದಷ್ಟೇ ಹೇಳುತ್ತಿದ್ದಾರೆ. ಒಂದು ವೇಳೆ ಯಾರಾದರೂ ಯಾರ ಹೆಸರನ್ನಾದರೂ ಅಪರಾಧಿ ಎಂದು ಆರೋಪಿಸಿದ್ದರೆ ಅವರು ಏನಾದರೂ ಒಂದಿಷ್ಟು ಸಾಕ್ಷಿ ಪುರಾವೆ ಇಟ್ಟುಕೊಂಡೇ ಹೇಳಿರುತ್ತಾರೆ. ಅವರ ಹತ್ತಿರ ಅಷ್ಟಾದರೂ ಇದೆ. ಅವರು ಅಪರಾಧಿಗಳಲ್ಲ ಎಂದು ಹೇಳಲು ಇವರ ಹತ್ತಿರ ಅಂಧ ಅಭಿಮಾನ ಬಿಟ್ಟು ಇನ್ನೇನಿದೆ ಮಣ್ಣು. ಇಂತಹವರು ಈ ಹಂತದಲ್ಲಿಯಾದರೂ ತೆಪ್ಪಗಿರುವುದ ಒಳ್ಳೆಯದು.

ಇನ್ನು ʼಪ್ರಸಾದʼಪ್ರಿಯರು. ಅವರದ್ದು ಬಿಜಿನೆಸ್. ಅಬರ ಬಗ್ಗೆ ಬಹಳ ಮಾತನಾಡಲಾಗದು. ಇವರು ಆರಂಭದಿಂದ ಇಲ್ಲಿಯತನಕ ಈ ಅಪರಾಧಕೃತ್ಯಗಳಿಗೆ ಬೆಂಬಲ ಕೊಟ್ಟುಕೊಂಡು ಡೋಲು ಬಾರಿಸುತ್ತ ಬಂದದ್ದರಿಂದಲೇ ಈ ಪ್ರಕರಣ ಇಷ್ಟು ದೊಡ್ಡದಾಗಿದೆ ಮತ್ತು ನೂರಾರು ಹೆಣ್ಣುಮಕ್ಕಳ ಸಾವಿನಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಈಗಲೂ ಇವರು ಡೋಲು ಹೊಡೆಯುವುದನ್ನು ನಿಲ್ಲಿಸದಿದ್ದರೆ ಇವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈಗ ಜನರ ಗಮನ ದೊಡ್ಡ ಮೀನುಗಳನ್ನು ಹಿಡಿಯುವುದರ ಕಡೆಗೆ ಇದೆ. ಹಾಗಾಗಿ ಇವರ ಕಡೆ ಅವರ ಗಮನ ಅಷ್ಟಾಗಿ ಹರಿಯುತ್ತಿಲ್ಲ.

ಆದರೆ ಜನ ಇವರನ್ನು ಗಮನಿಸುತ್ತಿದ್ದಾರೆ. ನಾಳೆ ದೊಡ್ಡ ಮೀನುಗಳನ್ನು ಹಿಡಿದ ಮೇಲೆ ಇವರ ಕಡೆ ಗಮನ ಬಂದೇ ಬರುತ್ತದೆ.
ಕಾನೂನಿನ ಪ್ರಕಾರವೇ ಸಂಬಂಧಿಸಿದವರಿಗೆ ಶಿಕ್ಷೆ ಆಗಬೇಕು. ಅದಕ್ಕಾಗಿಯೇ ತಮ್ಮ ಎದೆಯೊಳಗಿನ ಬೆಂಕಿಯನ್ನು ಒತ್ತಿಹಿಡಿದುಕೊಂಡು ಜನ ಸುಮ್ಮನಿದ್ದಾರೆ. ಅದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು. ಒಂದುವೇಳೆ ಇವರು ಇನ್ನೂ ಏನೇನೋ ಕುತಂತ್ರಗಳನ್ನು ಮಾಡಿ ನ್ಯಾಯಾಲಯದಿಂದಲೂ ತಪ್ಪಿಸಿಕೊಂಡರು ಎಂದು ಇಟ್ಟುಕೊಳ್ಳಿ. ಆಗ ಜನ ಇವರನ್ನು ಸುಮ್ಮನೆ ಬಿಡುತ್ತಾರೆಯೇ?
ಎಸ್.ಐ.ಟಿ ಅವರು ನೆಲವನ್ನು ಅಗೆಯುವುದಕ್ಕೆ ಮೊದಲು ಈ ಡೋಲು ಬಡಿಯುವವರನ್ನು ಎಳೆದುಕೊಂಡು ಹೋಗಿ ಕುಂಡಿಯ ಮೇಲೆ ನಾಲ್ಕು ಬಾರಿಸಿದ್ದರೆ ಎಲ್ಲ ಸತ್ಯವೂ ಹೊರಗೆ ಬರುತ್ತಿತ್ತೇನೋ. ಆದರೆ ಹಾಗೆ ಮಾಡಲು ಬರುವುದಿಲ್ಲವಾದ್ದರಿಂದ ಅದನ್ನು ಅವರು ಮಾಡಿಲ್ಲ ಅನ್ನಿಸುತ್ತದೆ.

ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಆಗಿ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಬಯಸುವ ಸ್ನೇಹಿತರಲ್ಲಿ ವಿನಂತಿ. ಹೀಗೆ ಡೋಲು ಹೊಡೆಯುವವರು ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳು ಮಾಡುವ ವಿಡಿಯೋಗಳು, ನೀಡುವ ಹೇಳಿಕೆಗಳು ಎಲ್ಲವನ್ನು ಓದಿ ಸುಮ್ಮನೆ ಬಿಡಬೇಡಿ. ದಯವಿಟ್ಟು ಅವನ್ನು ಎಸ್. ಐ.ಟಿ.ಗೆ ಕಳಿಸಿಕೊಡಿ. ಸಂದರ್ಭ ಬಂದರೆ ಅವರು ಬಂದು ಇವರನ್ನು ಕುಂಡಿಯ ಮೇಲೆ ನಾಲ್ಕು ಬಿಗಿದು ಎಳೆದುಕೊಂಡು ಹೋಗುತ್ತಾರೆ. ಅಷ್ಟಾದರೂ ನಾವು ಮಾಡದಿದ್ದರೆ ಹೇಗೆ. ನಾನಂತೂ ಹೀಗೆ ನನ್ನ ಗಮನಕ್ಕೆ ಬರುವ ಇವರ ಹೇಳಿಕೆಗಳನ್ನು ಪೋಸ್ಟ್ಗಳನ್ನು ಕಳಿಸುತ್ತೇನೆ. .

ಎಸ್. ಐ. ಟಿ. ಸಂಪರ್ಕ:
WhatsApp: 8277986369,
Telephone : 0824-2005301
email : sitdps@ksp.gov.in.

ರಾಬು
02-08-2025

*****
ಇದೇ ಪ್ರಕರಣದ ಬಗ್ಗೆ ಇರುವ ಈ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದು
ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:
https://buradikatti.blogspot.com/2025/08/blog-post_8.html

Friday, August 8, 2025

ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗುಂಡಾಭಕ್ತರ ಹೇಡಿಕೃತ್ಯವೂ

 ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ  ಗುಂಡಾಭಕ್ತರ ಹೇಡಿಕೃತ್ಯವೂ

ಡಾರಾಜೇಂದ್ರ ಬುರಡಿಕಟ್ಟಿ




ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||

ಇವು ಮಹಾಭಾರತದದ ಭಾಗವೆಂದು ಹೇಳಲಾಗುವ ಭಗವದ್ಗೀತೆಯ ಆರಂಭದ ಸಾಲುಗಳು. ಅಂದರೆ ಭಗವದ್ಗೀತೆ ಆರಂಭವಾಗುವುದೇ ಸಾಲುಗಳಿಂದ. “ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ದಾಪೇಕ್ಷಿಗಳಾಗಿ ನೆರೆದಿರುವ ನನ್ನ ಮತ್ತು ಪಾಂಡುವಿನ ಮಕ್ಕಳು ಏನು ಮಾಡಿದರು?” ಎಂಬ ಮಾತು ಜನ್ಮತಃ ಕುರುಡನಾಗಿ ಬೇರೆಯವರ ನೆರವಿಲ್ಲದೆ ಯುದ್ಧವಿವರಗಳನ್ನು ತಿಳಿಯಲಾರದ ಅಸಹಾಯ ಸ್ಥಿತಿಯಲ್ಲಿರುವ ದೃತರಾಷ್ಟ್ರ ಯುದ್ಧವಿವರಗಳನ್ನು ತಿಳಿಯಲು ತಾನು ಆಶ್ರಯಿಸಿರುವ ಸಂಜಯನಿಗೆ ಕೇಳುವ ಮಾತಿದು.

ಗೀತೆಯ ಶ್ಲೋಕದಲ್ಲಿ ಬರುವ ʼಧರ್ಮಕ್ಷೇತ್ರೇ ಕುರುಕ್ಷೇತ್ರೇ…ʼ ಎಂಬ ಮಾತನ್ನು ʼಕುರುಕ್ಷೇತ್ರೇ ಧರ್ಮಕ್ಷೇತ್ರೇಎಂದು ತುಸು ಬದಲಿಸಿಕೊಂಡರೆ ಇಡೀ ಶ್ಲೋಕ ಇಂದಿನ ಧರ್ಮಸ್ಥಳದ ವಿದ್ಯಮಾನಕ್ಕೆ ಸರಿಯಾಗಿಯೇ ಹೊಂದಿಕೊಳ್ಳುತ್ತದೆ. ಏಕೆಂದರೆ ʼಧರ್ಮಕ್ಷೇತ್ರವಾದ ಕುರುಕ್ಷೇತ್ರʼ ಹುಟ್ಟುಕುರುಡನಾದ ಧೃತರಾಷ್ಟ್ರನ ಎದುರಿಗೆ ಇದ್ದರೆ ʼಕುರುಕ್ಷೇತ್ರವಾದ ಧರ್ಮಕ್ಷೇತ್ರʼ ಇಂದು ಇನ್ನೊಂದು ರೀತಿಯಲ್ಲಿ ಕುರುಡರಾಗಿರುವ ನಮ್ಮೆದುರಿಗೆ ಇದೆ. ಅಲ್ಲಿ ಯುದ್ಧವಿವರಗಳನ್ನು ತಿಳಿಯಲು ಧೃತರಾಷ್ಟ್ರ ಸಂಜಯನನ್ನು ಅವಲಂಬಿಸಿದ್ದರೆ ಇಲ್ಲಿ ನಾವು   ʼಮಾಧ್ಯಮʼವನ್ನು ಅವಲಂಬಿಸಿದ್ದೇವೆ.

ಇಂತಹ ಮಾಧ್ಯಮದ ಪ್ರತಿನಿಧಿಗಳ ಮೇಲೆ ಮೊನ್ನೆ ಧರ್ಮಸ್ಥಳದ ಪಾಂಗಳದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನು ಯಾರು ಮಾಡಿರಬಹುದು ಮತ್ತು ಮಾಡಿಸಿರಬಹುದು ಎಂಬುದನ್ನು ಎಳೆಯ ಮಕ್ಕಳೂ ಕೂಡ ಊಹಿಸಿಕೊಳ್ಳುವಷ್ಟು ಅದು ಸರಳವಾಗಿದೆ ಮತ್ತು ನೇರವಾಗಿದೆ.  ಎಲ್ಲರಿಗೂ ತಿಳಿದಿರುವಂತೆ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯೊಬ್ಬ ಮಾಧ್ಯಮದವರು ತಮ್ಮ ಬಗ್ಗೆ ವರದಿಮಾಡದಂತೆ ನ್ಯಾಯಾಲಯದಿಂದ ತಂದಿದ್ದ ತಡೆಯಾಜ್ಞೆಯೊಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಬಿದ್ದುಹೋದ ದಿನವೇ ಘಟನೆ ನಡೆದಿದೆ. ʻಕೈಲಾಗದವರು ಮೈಪರಚಿಕೊಂಡರುʼ ಎಂಬಂತೆ ವಾದ ವಿವಾದದ ಮೂಲಕ ಎದುರಾಳಿಯನ್ನು ಎದುರಿಸಲಾರದ ಹೇಡಿಗಳು ಮಾತ್ರ ಇಂತಹ ಹಲ್ಲೆಯ ಕೆಲಸಗಳಿಗೆ ಕೈಹಾಕುತ್ತಾರೆ ಮೂಲಕ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.

ಒಳಗಿನ ನಡುಕ!

ಎಲ್ಲರಿಗೂ ಗೊತ್ತಿರುವಂತೆ ಈಗ ಧರ್ಮಸ್ಥಳದಲ್ಲಿ ಎಷ್ಟೋ ವರ್ಷಗಳಿಂದ  ನಡೆಯುತ್ತಲೇ ಇದೆ ಎಂದು ಹೇಳಲಾಗುತ್ತಿರುವ ಸರಣಿ ಹತ್ಯೆಗಳನ್ನು ಕುರಿತ ತನಿಖೆ ನಡೆಯುತ್ತಿದೆ. ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಅದು ತನ್ನ ಕಾರ್ಯವನ್ನು ದಿನದಿನಕ್ಕೂ ಚುರುಕುಗೊಳಿಸುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬ ತನ್ನ ವಕೀಲರ ಮೂಲಕ ಪೋಲೀಸರಿಗೆ ಮಾಹಿತಿನೀಡುವ ಹಾಗೂ ಕಾನೂನುಬದ್ಧವಾಗಿ ಸಂಬಂಭಪಟ್ಟ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಪತ್ರ ಸಲ್ಲಿಸುವ ಮೂಲಕ ಕೆಲವು ದಿನಗಳ ಧರ್ಮಕ್ಷೇತ್ರವಾದ ಧರ್ಮಸ್ಥಳದಲ್ಲಿ ಕುರುಕ್ಷೇತ್ರ ಯುದ್ಧದ ಬೀಜ ಬಿತ್ತಲಾಯಿತು. ಹಿಂದೆ ತಾನು ನೂರಾರು ಶವಗಳನ್ನು ಯಾರದೋ ಅಣತಿ ಮೇರೆಗೆ ಅಲ್ಲಿನ ಪರಿಸರದಲ್ಲಿ ಹೂತುಹಾಕಿರುವುದಾಗಿ ಆತ ಹೇಳಿದ್ದು ಇಡೀ ನಾಡು ಮಾತ್ರವಲ್ಲ ದೇಶ ವಿದೇಶಗಳಲ್ಲಿ ಜನರಗಮನವನ್ನು ಸೆಳೆಯಿತು.

ಆದರೆ ಮಾಹಿತಿಯನ್ನು ಆತ ಪೋಲಿಸರಿಗೆ ನೀಡಿ ಒಂದು ವಾರ ಕಳೆದರೂ ಪೋಲೀಸರ ಕಡೆಯಿಂದ ಹೇಳಿಕೊಳ್ಳುವಂತಹ ಕ್ರಮಗಳು ಆರಂಭದಲ್ಲಿ ಬಿರುಸಿನಿಂದ ನಡೆಯಲೇ ಇಲ್ಲ. ಇದು ಸಹಜವಾಗಿ ಕೆಲವೇ ಜನರಲ್ಲಿದ್ದ ಸಂಶಯವನ್ನು ಬಹಳಷ್ಟು ಜನರಿಗೆ ವಿಸ್ತರಿಸಿತು. ಅದರ ಮುಂದಿನ ಭಾಗವಾಗಿ ವಿಶೇಷ ತನಿಖಾ ತಂಡ ರಚನೆಗೆ ಸಾರ್ವಜನಿಕ ಒತ್ತಡ ಹೆಚ್ಚಿತು. ಆರಂಭದಲ್ಲಿ ಬಗ್ಗೆ ಅಷ್ಟೇನೂ ಒಲವು ತೋರಿಸದಿದ್ದ ಸರ್ಕಾರ ಕೂಡ ವಿಶೇಷ ತನಿಖಾ ತಂಡವನ್ನು ರಚಿಸಲೇಬೇಕಾಯಿತು.

ಯಾವಾಗ ವಿಶೇಷ ತನಿಖಾ ತಂಡ ರಚನೆಯಾಯಿತೋ ಆವಾಗ ಸಹಜವಾಗಿ ಅಪರಾಧ ಕೃತ್ಯಗಳನ್ನು ಮಾಡಿದವರ ಎದೆಯಲ್ಲಿ ಸಣ್ಣ ನಡುಕ ಶುರುವಾಗಿರಬೇಕು. ಏಕೆಂದರೆ ನಾವು ಎಷ್ಟೇ ರಾಜಕೀಯ ಪ್ರಭಾವಿಗಳಾಗಿರಲಿ, ಹಣಬಲವುಳ್ಳವರಾಗಿರಲಿ, ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿರಲಿ, ನಮ್ಮ ಅಪರಾಧಗಳನ್ನು ಮುಚ್ಚಿಹಾಕಬಲ್ಲೆವೆಂಬ ವಿಶ್ವಾಸ ಹೊಂದಿದವರಾಗಿರಲಿ, ನಾವು ಅಪರಾಧ ಮಾಡಿದ್ದು ನಿಜವಾಗಿದ್ದರೆ ಇವು ಯಾವೂ ನಮ್ಮೆದೆಯೊಳಗಿನ ಹೆದರಿಕೆಯ ಅಂಶವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವೆಲ್ಲವೂ ಒಂದು ಹಂತದವರೆಗೆ ಮಾತ್ರ ನಮ್ಮನ್ನು ಕಾಪಾಡಬಲ್ಲವು. ಅಲ್ಲಿಂದ ಮುಂದೆ ನಾವು ಏಕಾಂಗಿಗಳಾಗಬೇಕಾಗುತ್ತದೆ. ಹೊರಗಿನಿಂದ ಉಂಟಾಗುವ ನಡುಕವನ್ನು ತಡೆಯುವುದು ಸುಲಭ; ಆದರೆ ಒಳಗಿನಿಂದ ಹುಟ್ಟುವ ನಡುಕವನ್ನು ತಡೆಯುವುದು ಅಷ್ಟು ಸುಲಭವಲ್ಲ.

ಧರ್ಮಸ್ಥಳ ಭಾಗದಲ್ಲಿ ನೂರಾರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆಗಳು ನಡೆದಿವೆ ಎಂಬುದು ಇಲ್ಲಿನ ವಿವಾದದಲ್ಲಿ ಎದ್ದು ಕಾಣುವ ಅಂಶ. ಆದರೆ ಅವಷ್ಟೇ ಅಲ್ಲದೆ ದೊಡ್ಡಮಟ್ಟದ ಭೂ ಮಾಫಿಯಾ, ಅದಕ್ಕಾಗಿ ಬಡಜನರ ಒಕ್ಕಲೆಬ್ಬಿಸುವಿಕೆ, ಒಪ್ಪದಿದ್ದರೆ ಗಂಡಸರು ಹೆಂಗಸರು, ಮಕ್ಕಳೆನ್ನದೆ ಅವರ ಹತ್ಯೆ ಇವೆಲ್ಲ ನಡೆದಿವೆ ಎಂಬುದು ಇದಕ್ಕೆ ಹೊಂದಿಕೊಂಡಿರುವ ಅಂಶ. ಇವೆಲ್ಲವನ್ನೂ ನಾವು ಬೇರೆಬೇರೆಯಾಗಿ ನೋಡಬೇಕಾಗಿಲ್ಲ. ಏಕೆಂದರೆ ಇವೆಲ್ಲವೂ ಯಾವುದೇ ಇಂತಹ ಅಪರಾಧ ಕೃತ್ಯಗಳಲ್ಲಿ ಒಂದಕ್ಕೊಂದು ತಳುಕುಹಾಕಿಕೊಂಡೇ ಕೆಲಸಮಾಡುತ್ತಿರುತ್ತವೆ.

ಪದ್ಮಲತಾ ಸೌಜನ್ಯ ಪ್ರಕರಣಗಳು

ಧರ್ಮಕ್ಷೇತ್ರದಲ್ಲಿ ನಡೆದಿವೆ ಎನ್ನಲಾದ ಅಪರಾಧಿ ಕೃತ್ಯಗಳು ಈಗಷ್ಟೇ ಬೆಳಕಿಗೆ ಬಂದಿವೆ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ಸರಿಯಾದ ಮಾತೇನೂ ಅಲ್ಲ. ವಿವಾದವನ್ನು ಮೂರು ನಾಲ್ಕು ಹಂತಗಳಲ್ಲಿ ಗುರುತಿಸಬಹುದು. ನನಗೆ ತಿಳಿದಿರುವಂತೆ ಧರ್ಮಸ್ಥಳ ಭಾಗದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬುದು ಮೊದಲ ಬಾರಿಗೆ ಸಾರ್ವಜನಿಕ ವಿಷಯವಾಗಿ ಬೆಳಕಿಗೆ ಬಂದದ್ದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ʻಪದ್ಮಲತಾ ಪ್ರಕರಣʼದಿಂದ. ಕಾಲದ ʼಜಾಣಜಾಣೆಯರ ಪತ್ರಿಕೆʼ ಎಂದೇ ಹೆಸರಾದ ʼಲಂಕೇಶ್ಪತ್ರಿಕೆʼಯಲ್ಲಿ ಬಗ್ಗೆ ಲೇಖನವೊಂದು ಪ್ರಕಟವಾದಾಗ ಮೊದಲಬಾರಿಗೆ ಇಡೀ ನಾಡಿನ ಪ್ರಜ್ಞಾವಂತ ಜನರೆಲ್ಲ ಹೌಹಾರಿ ಮೂಗಿನ ಮೇಲೆ ಬೆರಳಿಟ್ಟರು. ಇದು ಆರಂಭದ ಹಂತವಾದರ ವಿವಾದವನ್ನು ದೊಡ್ಡಮಟ್ಟದಲ್ಲಿ ಜನಮಾನಸಕ್ಕೆ ಮುಟ್ಟಿಸಿದ್ದು ಹದಿಮೂರು ಹದಿನಾಲ್ಕು ವರ್ಷಗಳ ಹಿಂದೆ ನಡೆದ ʼಸೌಜನ್ಯ ಪ್ರಕರಣ. ಕ್ಲೈಮ್ಯಾಕ್ಸ್ಹಂತಕ್ಕೆ ತಂದದ್ದು ಈಗ ಹೂತುಹಾಕಿರುವ ಹೆಣ ತೋರಿಸುತ್ತೇನೆ ಎಂದು ಬಂದಿರುವ ಅನಾಮಿಕ ತನ್ನ ತಪ್ಪೊಪ್ಪಿಗೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದಾಗ.

ಬೇರೆ ಕ್ಷೇತ್ರಗಳಲ್ಲಿ ನಡೆಯುವ ಅಪರಾಧ ಕೃತ್ಯಗಳಿಗಿಂತ ಧರ್ಮಕ್ಷೇತ್ರಗಳಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು ಕಷ್ಟ; ಮುಚ್ಚಿಹಾಕುವುದು ಸುಲಭ. ಇದಕ್ಕೆ ಬಹುಮುಖ್ಯ ಕಾರಣ ಪ್ರದೇಶಕ್ಕೆ ಒಂದು ಧಾರ್ಮಿಕ ಪ್ರಭಾವಳಿ ಇರುತ್ತದೆ ಮತ್ತು ಪ್ರಭಾವಳಿಯ ಮುಸುಕಿನಲ್ಲಿಯೇ ಇಂತಹ ಕೃತ್ಯಗಳು ನಡೆಯುತ್ತಿರುತ್ತವೆ ಎಂಬುದು. ಧಾರ್ಮಿಕ ಪ್ರಭಾವಳಿ ಇಂತಹ ಅಪರಾಧಿ ಕೃತ್ಯಗಳಿಗೆ ರಕ್ಷಾಕವಚವಾಗಿ ಕೆಲಸಮಾಡುತ್ತಿರುತ್ತದೆ. ಪ್ರಭಾವಳಿಯನ್ನು ಭೇದಿಸುವುದು ಅಷ್ಟು ಸುಲಭವಲ್ಲ ಮತ್ತು ಇದು ಕೇವಲ ಧರ್ಮಸ್ಥಳಕ್ಕೆ ಮಾತ್ರ ಮೀಸಲಾದ ಅಂಶವೂ ಅಲ್ಲ.

ಧಾರ್ಮಿಕ ಪ್ರಭಾವಳಿಯನ್ನು ಇಂತಹ ಸ್ಥಳಗಳಲ್ಲಿ ಅಪರಾಧಿ ಕೃತ್ಯಗಳನ್ನು ಮಾಡುವಂಥವರು ಬಹಳ ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಕಾರಣದಿಂದಾಗಿಯೇ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುವ ಅಪರಾಧಿಕೃತ್ಯಗಳು ಕೂಡ ಜನರ ಮನಸ್ಸನ್ನು ಅಷ್ಟಾಗಿ ಕಾಡಲಿಲ್ಲ. ಆರಂಭದಲ್ಲಿಯೇ ʻಲಂಕೇಶ್ಪತ್ರಿಕೆʼ ಮಾಡಿದ ವರದಿ ಒಂದಿಷ್ಟು ಜಾಣಜಾಣೆಯರನ್ನು ಕಂಗೆಡಿಸಿದ್ದು ನಿಜವಾದರೂ ಜಾಣಜಾಣೆಯರ ಸಂಖ್ಯೆ ಕ್ಷೇತ್ರದ ʻಭಕ್ತʼ ಸಂಖ್ಯೆಗೆ ಹೋಲಿಸಿದರೆ ಏನೇನೂ ಅಲ್ಲ ಅನ್ನುವಂತೆ ಇದ್ದದ್ದರಿಂದ ಅದು ಸ್ವಲ್ಪಹೊತ್ತು ಉರಿದು ನಂದಿಹೋದ ದೀಪವಾಯಿತು. ಹಾಗೆ ನೋಡಿದರೆ ಈ ಪ್ರಕರಣ ಒಂದು ಘೋರವಾದ ಪರಿಣಾಮವನ್ನೇ ಬೀರಿತು. ವರದಿಯನ್ನು ಬರೆದ ವ್ಯಕ್ತಿ ಜೀವವನ್ನೇ ಬಿಡಬೇಕಾಯಿತು!

ಯಾವುದೇ ಧರ್ಮಕ್ಷೇತ್ರಗಳಲ್ಲಿ ಅಪರಾಧ ಕೃತ್ಯಗಳನ್ನು ಮಾಡುವವರು ತಮ್ಮ ಅಪರಾಧ ಕೃತ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಬಹಳ ಗೋಳಾಡುವ ಅವಶ್ಯಕತೆಯೇ ಬರುವುದಿಲ್ಲ. ಏಕೆಂದರೆ ತಾವು ಹೇಳಿದ್ದನ್ನು ವೇದವಾಕ್ಯವೆಂದು ನಂಬುವ, ತಾವು ಮಾಡುವ ಪಾಪಕೃತ್ಯಗಳನ್ನು ಕಾಣಲಾರದ ಒಂದಿಷ್ಟು ʻಅಂಧಭಕ್ತರʼ ದಂಡು ಅವರ ಜೊತೆಗೆ ಇರುತ್ತದೆ. ಇವರನ್ನು ಇಟ್ಟುಕೊಂಡು ಅವರು ಕ್ಷೇತ್ರಗಳ ಶ್ರದ್ಧಾವಂತ ಭಕ್ತರ ಕಣ್ಣಿಗೆ ಮಣ್ಣು ಎರಚುತ್ತಿರುತ್ತಾರೆ. ಇದಕ್ಕಾಗಿ ಬೇರೆ ಬೇರೆಯ ಸಂದರ್ಭಗಳಲ್ಲಿ ಬೇರೆ ಬೇರೆಯದೇ ಆದ ತಂತ್ರಗಳನ್ನು ಅವರು ಬಳಸುತ್ತಿರುತ್ತಾರೆ.

ಪದ್ಮಲತಾ ಪ್ರಕರಣವನ್ನೇ ನೋಡಿ. ಪದ್ಮಲತಾ ತಂದೆ ಕಮ್ಯೂನಿಸ್ಟ್ಚಿಂತನೆಗೆ ಸೇರಿದವರು. ಅವರು ಸರ್ವಾಧಿಕಾರದ ಕಡೆಗೆ ತಿರುಗುತ್ತಿದ್ದ ಧರ್ಮಸ್ಥಳವನ್ನು ಪ್ರಜಾಪ್ರಭುತ್ವದ ಕಡೆಗೆ ತರಲು ಪ್ರಯತ್ನಿಸಿದ್ದರ ಪ್ರತಿಫಲವಾಗಿ ತಮ್ಮ ಮಗಳನ್ನು ಕಳೆದುಕೊಳ್ಳಬೇಕಾಯಿತು. ಕಾಣೆಯಾದ ಪದ್ಮಲತಾ ಎಷ್ಟೋ ದಿನಗಳ ನಂತರ ಹೆಣವಾಗಿ ದೊರೆತಳು! ಆಗ ದೂರು ದಾಖಲಾಗಿ ತನಿಖೆ ನಡೆದು ಇನ್ನೇನು ಕೆಲವು ಪ್ರಭಾವಿಗಳ ಕೈಗೆ ಕೊಳ ಬೀಳುತ್ತದೆ ಎನ್ನುವ ಹಂತ ತಲುಪಿದಾಗ ತನಿಖಾಧಿಕಾರಿ ವರ್ಗವಾದರು! ಬೇರೊಬ್ಬ ತನಿಖಾಧಿಕಾರಿ ಬಂದು ಅದಕ್ಕೆ ಪ್ರಕರಣಕ್ಕೆ ʻಸಿ ರಿಪೋರ್ಟ್‌ʼ (ಆರೋಪಿ ತಪ್ಪಿಸಿಕೊಂಡಿದ್ದಾನೆ) ಬರೆದುಬಿಟ್ಟರು. ಕಾನೂನಾತ್ಮಕವಾಗಿ ಒಳಗೆ ಇಷ್ಟು ಆದರೆ ಹೊರಗೆ ಜನಾಕ್ರೋಶವೂ ಹುಟ್ಟಲಿಲ್ಲ. ಅದು ಹುಟ್ಟದಂತೆ ಆಗ ಬಳಸಿದ ತಂತ್ರವೆಂದರೆ ʻಇದು ಕಮ್ಯೂನಿಸ್ಟರು ಮಾಡಿದ ಪಿತೂರಿ. ಅವರಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲ. ಆದ್ದರಿಂದ ಧರ್ಮಸ್ಥಳಕ್ಕೆ ಕೆಟ್ಟಹೆಸರು ತರಲು ಇದನ್ನು ಮಾಡಿದ್ದಾರೆʼ ಎಂಬ ಸುದ್ಧಿಯನ್ನು ಹಬ್ಬಿಸಿದ್ದು. ಅವರ ತಂತ್ರ ಸರಿಯಾದ ಮತ್ತು ನಿರೀಕ್ಷಿತ ಪರಿಣಾಮವನ್ನು ಬೀರಿತು. ಜನ ನಂಬಿದರು; ಪ್ರಕರಣ ಪದ್ಮಲತಾಳ ಹೆಣದೊಂದಿಗೆ ನೆಲದಲ್ಲಿ ಹೂತುಹೋಯಿತು!

ಆನಂತರದ ದಿನಗಳಲ್ಲಿ ನಡೆದ ಜೋಡಿಮಾವುತರ ಕೊಲೆ ಸೇರಿದಂತೆ ಯಾವ ಕೊಲೆಗಳೂ ಸರಿಯಾಧ ತನಿಖೆ ನಡೆದು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿಲ್ಲ. ಕರ್ನಾಟಕ ಪೋಲೀಸ್‌ ಇಡೀ ದೇಶದಲ್ಲಿಯ ದಕ್ಷ ಪೋಲೀಸ್‌ ಗಳಲ್ಲಿ ಒಂದೆಂದು ಕೇಳಿದ್ದೇವೆ. ಅದು ನಮಗೆ ಹೆಮ್ಮೆ ತರುವ ಸಂಗತಿ. ಇಂತಹ ಪೋಲಿಸ್‌ ಇರುವಾಗಲೂ ಧರ್ಮಸ್ಥಳ ಭಾಗದಲ್ಲಿ ಅನೇಕ ಸಂಶಯಾಸ್ಪದ ಘಟನೆಗಳು ನಡೆದವು. ನಮ್ಮ ಪೋಲೀಸರು ಎಷ್ಟೇ ಸಮರ್ಥವಾಗಿ ಕೆಲಸ ಮಾಡಿದರೂ ಅಲ್ಲಲ್ಲಿ ಒಂದೆರಡು ಪ್ರಕರಣಗಳಲ್ಲಿ ಎಷ್ಟೇ ಹುಡುಕಿದರೂ ಅಪರಾಧಿಗಳು ಸಿಗದೇ ಇರಬಹುದು. ಅದನ್ನು ಪೋಲೀಸ್‌ ವೈಫಲ್ಯ ಎಂದು ಕರೆಯಲು ಬರುವುದಿಲ್ಲ. ಹೀಗೆ ಅಪರಾಧಿಗಳು ಸಿಗದೇ ಇರುವ ಪ್ರಕರಣಗಳಲ್ಲಿ ʻಸಿʼ ರೀಪೋರ್ಟ್‌ ಹಾಕುವುದು ಸಾಮಾನ್ಯ. ಆದರೆ ಎಂತೆಂಥ ದೊಡ್ಡ ಅಪರಾಧ ಕೃತ್ಯಗಳಲ್ಲಿ ತಮ್ಮ ಚಾಣಾಕ್ಷತನದಿಂದ ಅಪರಾಧಿಗಳನ್ನು ಹಿಡಿಯುವ ನಮ್ಮ ಪೋಲೀಸರಿಗೆ ಧರ್ಮಸ್ಥಳ ಭಾಗದಲ್ಲಿ ಮಾತ್ರ ಏಕೆ ಹೆಚ್ಚಿನ ಪ್ರಮಾಣದಲ್ಲಿ ʼಸಿʼ ರಿಪೋರ್ಟ್‌ ಬರೆಯಬೇಕಾಗುತ್ತದೆ ಎಂಬುದು ಇಂತಹ ಸಂಶಯಗಳಲ್ಲಿ ಮುಖ್ಯವಾದದ್ದು.

ಎಲ್ಲದಕ್ಕೂ ಒಂದು ಅಂತ್ಯ 

ಆದರೆ ಎಲ್ಲದಕ್ಕೂ ಒಂದು ಅಂತ್ಯ ಎಂಬುದು ಇದ್ದೇ ಇರುತ್ತದೆ. ಅದು ಸಮೀಪಿಸಿದಾಗ ಯಾರೂ ಅದನ್ನು ತಡೆಯಲು ಆಗುವುದಿಲ್ಲ. ಕೃತ್ಯಗಳ ಬಗ್ಗೆ ತೀವ್ರತರವಾಗಿ ಸಾರ್ವಜನಿಕರ ಗಮನ ಸೆಳೆದದ್ದು ʻಸೌಜನ್ಯ ಪ್ರಕರಣʼ ಯಾವುದ್ಯಾವುದೋ ಭೂಕಬಳಿಕೆಯ ದುರಾಸೆಯಲ್ಲಿ ಯಾವುದೋ ಹುಡುಗಿಯನ್ನು ಅಪಹರಿಸಲು ಹೋದ ಕಿಡಿಗೇಡಿಗಳ ಕೈಗೆ ಅಕಸ್ಮಾತ್ಆಗಿ ಹುಡುಗಿ ಸಿಕ್ಕಿಹಾಕಿಕೊಂಡು ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದಳು ಎನ್ನಲಾಗುತ್ತದೆ. ಪಿಯೂಸಿ ಓದುವ ಒಬ್ಬ ಅಮಾಯಕ ಹುಡುಗಿಯ ಧಾರುಣ ಅಂತ್ಯ ಮನುಷ್ಯತ್ವ ಇರುವ ಹತ್ತು ಹಲವರ ಹೃದಯವನ್ನು ತಲ್ಲಣಗೊಳಿಸಿತು. ಸೌಜನ್ಯಪರ ಹೋರಾಟಗಳು ಹುಟ್ಟಿಕೊಂಡವು. ಅನೇಕ ಪ್ರಗತಿಪರ ವ್ಯಕ್ತಿಗಳು, ಸಂಘಟನೆಗಳು ಸಾವಿಗೆ ನ್ಯಾಯ ದೊರಕಿಸಿಕೊಡಲು ಬಲಿಷ್ಠ ಹೋರಾಟಗಳನ್ನು ಕಟ್ಟಿ ಮುನ್ನೆಡಸಿದರು. ಯಾವುದೋ ಗುಡ್ಡದ ಬುಡದಲ್ಲಿ ದೇವರ ಮೂರ್ತಿಯ ಪಾದದಡಿಯಲ್ಲಿ ಹುಟ್ಟಿಕೊಳ್ಳುವ ನೀರಿನಝರಿಯೊಂದಕ್ಕೆ ಮಾರ್ಗಮಧ್ಯದಲ್ಲಿ ಅನೇಕ ಹಳ್ಳಕೊಳ್ಳಗಳು ಸೇರಿ ಅದು ಸಮುದ್ರ ಸೇರುವಾಗ ದೊಡ್ಡ ನದಿಯಾಗುವಂತೆ ಹೋರಾಟವೂ ಇಂದು ಬೃಹತ್ಆಗಿ ಬೆಳೆದುನಿಂತಿದೆ. ಮೂಲಕ ಅಪರಾಧ ಕೃತ್ಯಗಳಿಗೆ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸಲೆಂದು ಪಣತೊಟ್ಟಿದೆ.

ಸೌಜನ್ಯ ಪ್ರಕರಣ ಕಳೆದು ಹತ್ತು ಹನ್ನೆರಡು ವರ್ಷಗಳಿಂದ ಸುದ್ಧಿ ಮಾಡುತ್ತಲೇ ಇತ್ತಾದರೂ ಅದು ಪ್ರಗತಿಪರರ ಒಂದು ಚಿಕ್ಕ ವರ್ತುಲದ ಹೊರಗೆ ಹೋಗಲು ಅದಕ್ಕೆ ಸಾಧ್ಯವಾಗಿರಲಿಲ್ಲ ಎಂಬುದು ಕೂಡ ಸತ್ಯವಾದ ಮಾತು. ಪ್ರಕರಣವನ್ನು ವರ್ತುಲದಾಚೆಗೆ ದಾಟಿಸುವ ಎರಡು ಮುಖ್ಯ ಪ್ರಕರಣಗಳು ಇತ್ತೀಚೆಗೆ ನಡೆದದ್ದನ್ನು ನಾವು ಗಮನಿಸಬೇಕು. ಒಂದು: ಸೌಜನ್ಯ ಪ್ರಕರಣದಲ್ಲಿ ʻಅಪರಾಧಿʼ ಎಂದು ʻಫಿಕ್ಸ್‌ʼ ಮಾಡಲಾಗಿದ್ದ ಸಂತೋಷ ರಾವ್ಎಂಬ ವ್ಯಕ್ತಿಯನ್ನು ನ್ಯಾಯಾಲಯ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಹೊರಗೆ ಬಿಟ್ಟದ್ದು. ಇನ್ನೊಂದು ಸಮೀರ್ಎಂಬ ಯುವಕನೊಬ್ಬ ತನ್ನ ಯ್ಯೂಟೂಬ್ಚಾನೆಲ್ನಲ್ಲಿ ಧರ್ಮಸ್ಥಳದ ಕೃತ್ಯಗಳನ್ನು ಕುರಿತು ಮಾಡಿದ ವಿಡಿಯೋವೊಂದು ವ್ಯಾಪಕವಾಗಿ ವೀಕ್ಷಣೆಗೊಳಗಾಗಿದ್ದು.

ನ್ಯಾಯಾಲಯ ಸಂತೋಷ್ರಾವ್ಎಂಬ ವ್ಯಕ್ತಿಯನ್ನು ಹೊರಗೆ ಬಿಟ್ಟದ್ದು ಬಹುಮುಖ್ಯವಾದ ಪ್ರಶ್ನೆಯೊಂದನ್ನು ಹುಟ್ಟುಹಾಕಿತು. ಹುಡುಗಿಯ ಅತ್ಯಾಚಾರ ಮತ್ತು ಕೊಲೆಯಾಗಿದ್ದು ನಿಜವೆಂಬುದು ಆಗಲೇ ಧೃಡವಾಗಿತ್ತು. ಅಪರಾಧ ಕೃತ್ಯ ನಡೆದದ್ದು ನಿಜ ಎಂದು ಆದ ಮೇಲೆ ಅದನ್ನು ಮಾಡಿದವರು ಯಾರಾದರೂ ಇರಲೇಬೇಕಲ್ಲವೇ? ಎಂಬುದೇ ಪ್ರಶ್ನೆ. ಸಂತೋಷ ರಾವ್ಅಲ್ಲದಿದ್ದರೆ ಮತ್ಯಾರು ವ್ಯಕ್ತಿ ಅಥವಾ ವ್ಯಕ್ತಿಗಳು? ಒಂದು ದೊಡ್ಡ ಪ್ರಶ್ನೆ ಪ್ರಕರಣವನ್ನು ಸಾರ್ವಜನಿಕರಲ್ಲಿ ಹತ್ತು ಹಲವು ಸಂಶಯಗಳನ್ನು ಮೂಡಿಸಿತು. ಇಲ್ಲೊಂದು ಸೂಕ್ಷ್ಮ ವಿಷಯವನ್ನು ನಾವು ಗಮನಿಸಬೇಕು. ಇತ್ತೀಚೆಗೆ ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಯೊಂದಕ್ಕೆ ಬೆಳ್ತಂಗಡಿ ಪೋಲೀಸರಿಂದ ಬಂದ ಉತ್ತರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಹಿತಿಯ ಪ್ರಕಾರ 2023 ನವೆಂಬರ್ವರೆಗಿನ ಅಸಹಜ ಸಾವುಗಳ ಎಲ್ಲ ದಾಖಲೆಗಳನ್ನು ಪೋಲೀಸರು ವಿಲೇವಾರಿ ಮಾಡಿ ಅಳಿಸಿಹಾಕಿದ್ದಾರಂತೆ. ಸೌಜನ್ಯ ಪ್ರಕರಣದಲ್ಲಿ ಸಂತೋಷ್ರಾವ್ಎಂಬ ವ್ಯಕ್ತಿಯನ್ನು ನ್ಯಾಯಾಲಯ ಹೊರಗೆ ಬಿಟ್ಟದ್ದು ಕೂಡ 2023 ಜುಲೈನಲ್ಲಿ. ಅಂದರೆ ನ್ಯಾಯಾಲಯದ ತೀರ್ಪು ಹೊರಬಂದು ಸಾರ್ವಜನಿಕವಾಗಿ ದೊಡ್ಡ ಪ್ರಶ್ನೆಯೊಂದು ಹುಟ್ಟಿಕೊಂಡ ಮೂರು ನಾಲ್ಕು ತಿಂಗಳಲ್ಲಿಯೇ ಎಲ್ಲ ಅಸಹಜ ಸಾವುಗಳ ದಾಖಲೆಗಳು ವಿಲೇವಾರಿ ಆಗಿವೆ. ಇವೆರಡಕ್ಕೂ ಸಂಬಂಧ ಇದ್ದೇ ಇದೆ ಎಂಬುದು ನನ್ನ ವಾದವಲ್ಲ. ಆದರೆ ಅವನ್ನು ಹೋಲಿಸಿ ನೋಡಿ ತನಿಖೆಮಾಡಲು ಸಕಾರಣವಿದೆ ಎಂದು ಹೇಳಿದೆ ಅಷ್ಟೆ.

ಇನ್ನು ಎರಡನೆಯದು ಸಮೀರ್ವಿಡಿಯೋ ಪ್ರಕರಣ. ಸಮೀರ್ಮಾಡಿದ ವಿಡಿಯೋ ಸುಮಾರು ನಲವತ್ತು ನಿಮಿಷ ಇದೆ. ಇದನ್ನು ನಾನು ನೋಡಿದಾಗ ಸಮೀರ್ಇದರಲ್ಲಿ ಹೊಸದೇನೂ ಹೇಳಿಲ್ಲ ಅನ್ನಿಸಿತು. ನಮಗೆ ಗೊತ್ತಿರುವ ವಿಷಯವನ್ನೇ ಆತ ಅದರಲ್ಲಿ ಹೇಳಿದ್ದರು. ಆದರೂ ಅದು ವಿಶೇಷ ಪ್ರಭಾವ ಬೀರಿತು ಏಕೆಂದರೆ ಅದರಲ್ಲಿ ಹೇಳಿದ ವಿಷಯ ಹೊಸದಲ್ಲದಿದ್ದರೂ ಅದು ತಲುಪಿದ್ದು ಹೊಸ ಜನರನ್ನು! ಅದುವರೆಗೂ ಕೃತ್ಯಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಸಾವಿರಾರು ಜನರನ್ನು ಅದು ತಲುಪಿ ಅವರನ್ನು ತುಸು ಯೋಚಿಸುವಂತೆ ಮಾಡಿತು. ಅವರೆಲ್ಲರೂ ತಕ್ಷಣ ವಿಡಿಯೋವನ್ನು ಒಪ್ಪಿಕೊಳ್ಳಲಿಲ್ಲ ನಿಜ. ಹಾಗೆ ಒಪ್ಪಿಕೊಂಡುಬಿಡುತ್ತಾರೆ ಎಂದು ನಿರೀಕ್ಷೆ ಮಾಡಲಿಕ್ಕೂ ಬರುವುದಿಲ್ಲ. ಆದರೆ ಅದು ಬಹಳಷ್ಟು ಜನರನ್ನು ವಿಚಾರ ಮಾಡಲು ಹಚ್ಚುವಲ್ಲಿ ಮಾತ್ರ ಯಶಸ್ವಿಯಾಗಿದ್ದು ಸುಳ್ಳಲ್ಲ.

ಆದರೆ ಪದ್ಮಲತಾ ಪ್ರಕರಣವನ್ನು ʻಕಮ್ಯೂನಿಸ್ಟ್‌ʼ ಎಂಬ ಗಾಳಿಸುದ್ಧಿಯಲ್ಲಿ ಮುಚ್ಚಿಹಾಕಲು ಪ್ರಯತ್ನಿಸಿದ ಒಂದು ವರ್ಗವೇ ಇಲ್ಲಿ ʻಮುಸ್ಲಿಮ್‌ʼ ದಾಳವನ್ನು ಉರುಳಿಸಿತು. ಹಾಗೆ ನೋಡಿದರೆ ಪ್ರಕರಣವನ್ನು ಹಾದಿಬೀದಿಯಲ್ಲಿ ಅನೇಕ ವೇದಿಕೆಗಳಲ್ಲಿ ಸಾಕ್ಷಾಧಾರಗಳ ಸಮೇತ ಜನರ ಮುಂದಿಟ್ಟು ಅರಿವು ಮೂಡಿಸುತ್ತಿದ್ದವರು ಗಿರೀಶ್ಮಟ್ಟಣ್ಣನವರ್ಮತ್ತು ಮಹೇಶ್ತಿಮರೋಡಿ ಅಂಥವರು. ಆದರೆ ವಂದಿಮಾಗಧರು ಅವರನ್ನು ಬಿಟ್ಟು ಸಮೀರನನ್ನು ಹಿಡಿದುಕೊಂಡರು. ಏಕೆಂದರೆ ಅದು, ಅವನನ್ನು ಮುಸ್ಲಿಮ್ಎಂದು ಬಿಂಬಿಸಿ ಹಿಂದೂ ಧರ್ಮದ ವಿರೋಧಿ ಚಟುವಟಿಕೆ ಎಂದು ಜನರನ್ನು ಒಪ್ಪಿಸಲು ಬಹಳ ಸಹಾಯ ಮಾಡುವಂತಿತ್ತು!

ಆದರೆ ಜಗತ್ಪ್ರಸಿದ್ಧ ಹೇಳಿಕೆಹೊಂದಿದೆ. ಅದೇನೆಂದರೆ ನಾವು ಒಬ್ಬ ವ್ಯಕ್ತಿಯನ್ನು ಶಾಶ್ವತವಾಗಿ ಅಂಧಕಾರದಲ್ಲಿಟ್ಟು ಮೋಸಗೊಳಿಸಲು ಸಾಧ್ಯವಿದೆಯಂತೆ. ಅದೇ ರೀತಿ ಎಲ್ಲರನ್ನೂ ಒಂದು ಕ್ಷಣ ಅಂಧಕಾರದಲ್ಲಿಟ್ಟು ಮೋಸಗೊಳಿಸಲೂ ಸಾಧ್ಯವಿದೆಯಂತೆ. ಆದರೆ ಎಲ್ಲರನ್ನೂ ಎಲ್ಲಕಾಲದಲ್ಲಿಯೂ ಶಾಶ್ವತವಾಗಿ ಮೋಸಗೊಳಿಸಲು ಸಾಧ್ಯವಿಲ್ಲವಂತೆ. ಇಲ್ಲಿ ಆಗುತ್ತಿರುವುದೂ ಅದೇ ಏನೋ ಅನ್ನಿಸುತ್ತಿದೆ. ಅನಾಮಿಕ ವ್ಯಕ್ತಿಯೊಬ್ಬನ ತಪ್ಪೊಪ್ಪಿಗೆ ಪತ್ರದ ನಂತರ ಎಸ್ ಟಿ ರಚನೆಯಾಗಿ ಅದು ಧರ್ಮಸ್ಥಳದಲ್ಲಿ ನೆಲಬಗೆಯುವ ಕೆಲಸ ಆರಂಭಿಸಿದ ಮೇಲೆ ಅಲ್ಲಿನ ಕಾರ್ಮಿಕರು  ನೆಲಕ್ಕೆ ಹಾಕುತ್ತಿರುವ ಗುದ್ದಲಿ ಕೆಲವರ ಎದೆಗೇ ಬಿದ್ದಂತೆ ಆಗುತ್ತಿದ್ದರೆ ಅದು ಅಸಹಜವೇನಲ್ಲ. ಅನಾಮಿಕ ತೋರಿಸಿದಂತೆ ತನಿಖಾ ತಂಡ ಗುರುತುಮಾಡಿದ ಬಹುತೇಕ ಸ್ಥಳಗಳಲ್ಲಿ ಅವಶೇಷ ಸಿಕ್ಕಿಲ್ಲವೆಂದು ಕೆಲವು ವರದಿಗಳು ಬರುತ್ತಿವೆ. ಆದರೆ ವಿಶೇಷ ತನಿಖಾತಂಡ ಈ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲವಾದ್ದರಿಂದ ಈ ಬಗ್ಗೆ ಈಗಲೇ ಏನೂ ಹೇಳಲಾಗದು. ಆದರೆ ಅಪರಾಧಿಗಳನ್ನು ರಕ್ಷಿಸಲು ಪಣತೊಟ್ಟ ವರ್ಗ ಇದನ್ನೇ ದೊಡ್ಡದಾಗಿ ಬಿಂಬಿಸಿ ʻಇದು ತಳಬುಡವಿಲ್ಲದ ಪಿತೂರಿʼ ಎಂದು ತಿಪ್ಪೇಸಾರಿಸಿ ಪ್ರಕರಣವನ್ನು ಸಮಾಧಿಮಾಡಲು ಪ್ರಯತ್ನಿಸುತ್ತಿದೆ. ಆದರೆ ನನಗೆ ತಿಳಿದ ಮಟ್ಟಿಗೆ ಅವನು ತೋರಿಸಿದ ಯಾವ ಸ್ಥಳದಲ್ಲಿ ಒಂದೇ ಒಂದು ಮೂಳೆ ಸಿಗದಿದ್ದರೂ ಈ ತನಿಖೆ ನಿಲ್ಲಲಾರದು. ಏಕೆಂದರೆ ಶವದ ಅವಶೇಷ ಹುಡುಕುವುದು ತನಿಖೆಯ ಒಂದು ಭಾಗವಷ್ಟೇ. ಅದೇ ಏಕೈಕ ಮಾರ್ಗವಲ್ಲ. ಅಲ್ಲಿ ಏನೂ ಸಿಗದಿದ್ದರೂ ಇನ್ಯಾವುದೋ ಮಾರ್ಗದಿಂದ ತನಿಖೆ ನಡೆಯುತ್ತದೆ.

ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾದದ್ದು. ನಾನು ಮೊದಲೇ ಹೇಳಿದ ಹಾಗೆ ಇಂತಹ ಕ್ಷೇತ್ರಗಳಲ್ಲಿ ಒಂದಿಷ್ಟು ʼಅಂಧಭಕ್ತರುʼ (ನಿಜಭಕ್ತರು ಇವರ ಜೊತೆ ಇರುವುದಿಲ್ಲ. ಅವರು ದೇವರಕಡೆ ಇರುತ್ತಾರೆ) ಇಂತಹ ಪಾಪಕೃತ್ಯಗಳ ನಡೆಸುವ ಕೈಗಳ ಜೊತೆಗೆ ಇರುತ್ತಾರೆ. ಅದು ತೀರಾ ಸಹಜವಾದದ್ದು. ಅದರ ಜೊತೆಗೆ ಅವರಿಂದ ʻಪ್ರಸಾದʼ ಪಡೆದ ಕೆಲವು ಅಧಿಕಾರಿಗಳು ಪ್ರಕರಣಗಳನ್ನು ಹಳ್ಳಹಿಡಿಸಲು ಬೇಕಾದ ಕೆಲಸವನ್ನು ಮಾಡುವುದೂ ಹಾಗೆಯೇ ಕೆಲವು ʻಕಾರ್ಯಮರೆತ ಪತ್ರಕರ್ತರುʼ ಜನರಲ್ಲಿ ಜಾಗೃತಿ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುವುದೂ ನಡೆದೇ ಇರುತ್ತದೆ.

ಕಾರ್ಯಮರೆತ ಪತ್ರಕರ್ತರು, ʻಇದು ಹಿಂದೂ ಧರ್ಮವನ್ನು ಅವಮಾನ ಮಾಡಲಿಕ್ಕೆಂದು ರೂಪಿಸಿದ ಸಂಚು, ಇದರ ಹಿಂದೆ ಯಾವುದ್ಯಾವುದೋ ಕಮ್ಯೂನಿಸ್ಟ್ಸರ್ಕಾರಗಳಿವೆʼ ʼಇದು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲಿಕ್ಕೆಂದೇ ಮಾಡುತ್ತಿರುವ ಹುನ್ನಾರʼ ʻಇದರಲ್ಲಿ ಇಸ್ಲಾಂ , ಕ್ರೈಸ್ತ ಧರ್ಮಗಳ ಕೈವಾಡವಿದೆʼ ʼ ಅನಾಮಿಕನನ್ನು ಯಾರೋ ಕಳಿಸಿಕೊಟ್ಟು ಕೆಲಸಗಳನ್ನು ಮಾಡಿಸುತ್ತಿದ್ದಾರೆʼ ಇತ್ಯಾದಿ ಕೇಳಿಕೇಳಿ ಕಿವಿದಣಿದ, ಹೇಳಿಹೇಳಿ ಬಾಯಿಸೋತ ಸವಕಳಿ ಮಾತುಗಳನ್ನೇ ಹೇಳಿ ಜನರನ್ನು ಅಪರಾಧಿಕೃತ್ಯಗಳ ವಿರುದ್ಧ ಏಳದಂತೆ ತಮ್ಮ ಶಕ್ತಿಮೀರಿ ಕೆಲಸ ಮಾಡಿದರು. ಆದರೂ ಅವು ತನಿಖಾ ಕಾರ್ಯವನ್ನು ತಡೆಯುವಲ್ಲಿ ನಿರೀಕ್ಷಿತ ಫಲ ಕೊಡಲಿಲ್ಲ. ಇದೆಲ್ಲದರಿಂದ ಹತಾಶರಾದ ಅಪರಾಧಿಗಳು ತಮ್ಮ ಕೊನೆಯ ಅಸ್ತ್ರವಾಗಿ ವಿಷಯದದಲ್ಲಿ ತನಿಖೆಯ ವಿವರಗಳನ್ನು ನಾಡಿನ ಜನತೆಯ ಮುಂದೆ ಇಡುತ್ತಿರುವ ನಿಜವಾದ ʼಕಾರ್ಯನಿರತ ಪತ್ರಕರ್ತರʼ ಮೇಲೆ ಹಲ್ಲೆಮಾಡುವ ಹಂತಕ್ಕೆ ತಲುಪಿದರು ಅನಿಸುತ್ತದೆ. ಕೆಲಸವನ್ನು ʻಅಂಧಭಕ್ತರುʼ ಮಾಡಲು ಸಾಧ್ಯವಿಲ್ಲ. ಇದು ʼಗುಂಡಾಭಕ್ತರುʼ ಮಾಡಬಹುದಾದ ಕೆಲಸ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಹಂಪನಾ: ಬಿ ಎಲ್‌ ಶಂಕರ್

ಧ್ಯೆ ಕನ್ನಡದ ಮೇರು ಸಾಹಿತಿಗಳಿಬ್ಬರ ಒಡನಾಟ ಹೊಂದಿದ್ದ ಇಬ್ಬರು ಪ್ರಮುಖರು ಧರ್ಮಸ್ಥಳದ ವಿದ್ಯಮಾನದ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಅಲ್ಲಿನ ಆರೋಪ ಎದುರಿಸುತ್ತಿರುವವವರ ಪರವಾಗಿ ಮಾತನಾಡಿದ್ದಾರೆಂದು ವರದಿಯಾಗಿದೆ. ಅವರೆಂದರೆ ಒಬ್ಬರು ಹಂಪನಾ ಮತ್ತು ಇನ್ನೊಬ್ಬರು ಬಿ ಎಲ್ಶಂಕರ್.‌ ಮೊದಲನೆಯವರು ಕುವೆಂಪು ಅವರ ನೇರ ಶಿಷ್ಯರು ಮತ್ತು ಬಹಳಷ್ಟು ವರ್ಷಗಳ ಕಾಲ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದವರಾದರು. ಎರಡನೆಯವರು ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯರು ಮತ್ತು ಅವರ ಮರಣಾನಂತರ ಅವರ ಹೆಸರಿನ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು ಮತ್ತು ಕುವೆಂಪು ಗೀತೆಯನ್ನು ತಿರುಚಿದ ರೋಹಿತ್ಚಕ್ರತೀರ್ಥ ಅವರ ಮೇಲೆ ಸರ್ಕಾರ ಕ್ರಮಕೈಗೊಳ್ಳದಿರುವುದನ್ನು ವಿರೋಧಿಸಿ ಹಂಪನಾ ರಾಜಿನಾಮೆ ಸಲ್ಲಿಸಿದಾಗ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಬಂದು ಈಗ ಅದೇ ಸ್ಥಾನದಲ್ಲಿ ಇರುವವರು. ಇವರು ನಡೆಸಿದ ಪತ್ರಿಕಾಗೋಷ್ಠಿಯ ವಿವರಗಳೆಲ್ಲವೂ ನನ್ನ ಗಮನಕ್ಕೆ ಬಂದಿಲ್ಲವಾದರೂ ಈ ಬಗ್ಗೆ ಅವರ ನಿಲುವನ್ನು ಹೇಳಲು ನನಗೆ ಕಷ್ಟವಾಗುವುದಿಲ್ಲ. ಮಧ್ಯೆ ಬಿ ಎಲ್ಶಂಕರ್ಅವರು ಯಾವುದೋ ʻಧರ್ಮದರ್ಶನʼದಲ್ಲಿ ಮಾತನಾಡಿದ ವಿಡಿಯೋ ತುಣುಕೊಂದು ಹರಿದಾಡುತ್ತಾ ನನ್ನ ಹತ್ತಿರ ಬಂದಿದೆ. ಈ ಬಗ್ಗೆ ಸಾಕಷ್ಟು  ಟೀಕೆಗಳು ಕೂಡ ಪ್ರಕಟವಾಗಿವೆ. ಬಗ್ಗೆ ತುಸು ನೋಡೋಣ ಬನ್ನಿ:

ಮೊದಲು ಹಂಪನಾಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ಅದರ ಬಹುಮುಖ್ಯ ಭಾಗವಾದ ಸಂಶೋಧನಾ ಕ್ಷೇತ್ರದಲ್ಲಿ ಹಂಪನಾ ಅವರದ್ದು ಬಹುದೊಡ್ಡ ಹೆಸರು. ಅವರ ಸಂಶೋಧನಾ ಸಾಮರ್ಥ್ಯವನ್ನಾಗಲೀ ಬಗೆಗಿನ ಅವರ ಶ್ರದ್ಧೆ ಮತ್ತು ವಿದ್ವತ್ತುಗಳನ್ನಾಗಲೀ ನಾವು ಸಂಶಯದಿಂದ ಕಾಣಬೇಕಾದದ್ದು ಏನೂ ಇಲ್ಲ. ಅವರು ನಿಜಾರ್ಥದಲ್ಲಿಯೇ ಬಹುದೊಡ್ಡ ವಿದ್ವಾಂಸರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವಿದ್ವತ್ತಿನ ಬಗ್ಗೆ ಇಟ್ಟುಕೊಳ್ಳಬೇಕಾದ ಗೌರವವನ್ನು ಇಟ್ಟುಕೊಂಡೇ ಹೇಳಬಹುದಾದ ಕೆಲವು ಮಾತುಗಳೆಂದರೆ ಅವರು ತಮ್ಮ ಸಂಶೋಧನೆಗಳಿಂದ ದೊರೆತ ಅಪಾರ ಪ್ರಮಾಣದ ಜ್ಞಾನವನ್ನು ನಾಡಿನ ಜನರ ಬದುಕನ್ನು ಹಸನುಗೊಳಿಸಲಿಕ್ಕೆ, ಇಲ್ಲಿರುವ ಧಮನಿತರ ಬದುಕನ್ನು ಎತ್ತರಿಸಲಿಕ್ಕೆ, ಇಲ್ಲಿರುವ ತರತಮಗಳನ್ನು ಸರಿಪಡಿಸುವುದಕ್ಕೆ ಬಳಸಿಕೊಂಡದ್ದು ಮಾತ್ರ ಇಲ್ಲವೆನ್ನುವಷ್ಟು ಕಡಿಮೆಯೇ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರ್ಕಾರದ ಮಟ್ಟದಲ್ಲಿ ಅವರ ಮಾತು ನಡೆಯುತ್ತದೆ. ಏಕೆಂದರೆ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಿದ್ದಾಗ ಅವರನ್ನು ʼಆಧುನಿಕ ಬಸವಣ್ಣʼ ಎಂದು ಕೀರ್ತಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಿದ್ದಾಗ, ʻಕನ್ನಡದ ರಾಮಯ್ಯʼ ಎಂದು ಕೀರ್ತಿಸಬಲ್ಲರು! ಅರ್ಥದಲ್ಲಿ ಅವರು ʼಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು, ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಹಾಯಾಗಿರುವʼ ವಿದ್ವಾಂಸರು. ಇದು ಬಹಳಷ್ಟು ಜನ ಸಾಹಿತಿಗಳಿಗೆ ಸಾಧ್ಯವಾಗುವುದಿಲ್ಲ

ಹಂಪನಾ ಅವರ ಬಗ್ಗೆ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಕನ್ನಡದ ನೆಲದಲ್ಲಿ ಇಂದು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವಂಥದ್ದು ನಾಡಿನಲ್ಲಿರುವ ಪ್ರಗತಿಪರ ಚಳವಳಿಗಳು ಮೂಡಿಸಿದ ಅರಿವು. ಎಲ್ಲ ಚಳವಳಿಗಳಿಗೆ ಮೂಲವಾದದ್ದು ಎಪ್ಪತ್ತರ ದಶಕದಲ್ಲಿ ಮೊದಲಬಾರಿ ಚಿಗುರೊಡೆದ ಬಂಡಾಯ ಸಾಹಿತ್ಯ ಸಂಘಟನೆ. ಬಂಡಾಯ ಸಾಹಿತ್ಯ ಚಳವಳಿ ಮೊಟ್ಟೆ ಒಡೆದು ಮರಿಯಾದ್ದುಇದೇ ಹಂಪನಾ ಕಾರಣದಿಂದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ! ಅದೂ ಇದೇ ಧರ್ಮಸ್ಥಳದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಎಂಬುದು ಇತ್ತೀಚಿಗೆ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ. ೧೯೭೯ ರಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳದಲ್ಲಿ ದಲಿತ ಸಾಹಿತ್ಯಕ್ಕೆ ಒಂದು ಪ್ರತ್ಯೇಕ ಗೋಷ್ಠಿ ಏರ್ಪಡಿಸಬೇಕು ಎಂಬ ಬೇಡಿಕೆ ಎದ್ದಾಗ ಅದನ್ನು ʻಸಾಹಿತ್ಯದಲ್ಲಿ ದಲಿತ ಬಲಿತ ಎಂದು ಏನೂ ಇಲ್ಲʼ ಎಂದು ಪ್ರಸ್ತಾವನೆಯನ್ನು ತಳ್ಳಿಹಾಕಿದ ಹಂಪನಾ ನಿಲುವಿನಿಂದಲೇ ಆಗ ಪರ್ಯಾಯ ಸಾಹಿತ್ಯ ಸಮ್ಮೇಳನವೊಂದು ಮೊಟ್ಟಮೊದಲು ನಡೆಯುವಂತಾಗಿ ಅದು ಮುಂದಿನ ಅನೇಕ ಚಳವಳಿಗಳಿಗೆ ಅಡಿಪಾಯ ಹಾಕಿದ್ದು ಇಂದು ಇತಿಹಾಸ.

ಹಂಪನಾ ಅವರಿಗೆ ಕನ್ನಡ ಸಾಹಿತ್ಯದಲ್ಲಿ ತಾನೊಂದು ಮೈಲುಗಲ್ಲಾಗಬೇಕು ಎಂಬ ಅತಿಯಾಸೆಯೊಂದು ಯಾವಾಗ ಹುಟ್ಟಿಕೊಂಡೋ ಗೊತ್ತಿಲ್ಲ.  ಸುಮಾರು ಐವತ್ತು ವರ್ಷಗಳಷ್ಟು ಹಿಂದೆಯೇ (ಅವರು ಸಾಹಿತ್ಯ ಪರಿಷತ್ತಿನ ಧ್ಯಕ್ಷರಾಗಿದ್ದ ಕಾಲದಲ್ಲಿ) ಬಹುದೊಡ್ಡ ವಿದ್ವಾಂಸರಿದ್ದ ವೇದಿಕೆಯೊಂದರಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ʻಪಂಪನಿಂದ ಕುವೆಂಪುವರೆಗೆʼ ಎಂದು ಪ್ರಚಲಿತವಿರುವ ಸಾಹಿತ್ಯವಲಯದ ಪ್ರಸಿದ್ಧ ಹೇಳಿಕೆಯೊಂದನ್ನು ತಿರುಚಿ ʻಪಂಪನಿಂದ ಹಂಪನಾವರೆಗೆʼ ಎಂದು ಹೇಳಿ ಅಲ್ಲಿದ್ದವರನ್ನೆಲ್ಲ ಮುಜುಗರಕ್ಕೀಡುಮಾಡಿದ್ದರಂತೆ. ಕನ್ನಡದ ಯಾವುದೇ ಪ್ರಗತಿಪರ ಚಳವಳಿಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳದ, ನಾಡಿನ ಜನರ ಸುಖದುಃಖಗಲ್ಲಿ ಸುಖಕ್ಕೆ ಮಾತ್ರ ಭಾಗಿಯಾಗುವ ಹಂಪನಾ ಅವರು ಜನರ ದುಃಖದ ಸಂದರ್ಭದಲ್ಲಿ ಎಂದೂ ಅವರೊಂದಿಗೆ ಇದ್ದವರಲ್ಲ. ಕಲಬುರ್ಗಿ ಅವರ ಹತ್ಯೆ ನಡೆದಾಗ ಇಡೀ ಸಾಹಿತ್ಯಲೋಕ ಮರುಕಪಡುತ್ತಿರುವಾಗ ಹಂಪನಾ, ʻಇದು ಸಂಶೋಧಕರಿಗೆ ನೀಡಿದ ಎಚ್ಚರಿಕೆʼ ಎಂದು ಹೇಳಿಕೆ ನೀಡಿ ತಮ್ಮ ಸಣ್ಣತನವನ್ನು ತೋರಿಸಿದ್ದರು. ಇದೇ ಕಾರಣಕ್ಕೋ ಏನೋ ಚಂಪಾ ಅವರು ಬೆಂಗಳೂರಿನಲ್ಲಿ ಪ್ರಗತಿಪರ ಸಾಹಿತ್ಯ ಚಟುವಟಿಕೆಗಳಿಗೆ ಅಡ್ಡಿಮಾಡುವ ಪ್ರಮುಖರಲ್ಲಿ ʻಹಂಪನಾ-ಕಂಪನಾʼ ಜೋಡಿಯನ್ನು ಹೆಸರಿಸುತ್ತಿದ್ದರು. ಹಾಗಾಗಿ ಇಂತಹ ವಿಷಯಗಳಲ್ಲಿ ಹಂಪನಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಯಾವ ಅಗತ್ಯವೂ ಇಲ್ಲ.

ಇನ್ನು ಬಿ.ಎಲ್.‌ ಶಂಕರ್ಅವರು. ಕರ್ನಾಟಕದ ಸಜ್ಜನ ರಾಜಕಾರಣಿಗಳನ್ನು ಹೆಸರಿಸುವಾಗ ವೈ ಎಸ್.‌ ವಿ ದತ್ತಾ ಮುಂತಾದವರ ಹೆಸರಿನ ಜೊತೆ ಸೇರಿಕೊಳ್ಳುವ ಹೆಸರು ಬಿ. ಎಲ್‌. ಶಂಕರ್ಅವರದ್ದು.  ಕನ್ನಡ ಸಾಹಿತ್ಯದೊಂದಿಗೆ, ಸಾಹಿತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದವರು ಎಂಬ ಕಾರಣಕ್ಕೆ ಮತ್ತು ವೇದಿಕೆಗಳಲ್ಲಿ ಕನ್ನಡ ಸಾಹಿತ್ಯವನ್ನು ಬೆನ್ನಿಗಿಟ್ಟುಕೊಂಡೇ ತುಂಬಾ ನಯವಾಗಿ ವಿನಯದಿಂದ ಮಾತನಾಡುವ ಕಾರಣಕ್ಕೆ ಅವರಿಗೆ ಹೆಸರು ಬಂದಿರಲೂಬಹುದು. ಅವರು ಮಾತನಾಡಿದ ವಿಡಿಯೋ ತುಣುಕಿನಲ್ಲಿ ಕೆಲವೇ ಮಾತುಗಳಿದ್ದು ಅದರಲ್ಲಿ ಅವರು ತಮ್ಮ ಎಂದಿನ ಶೈಲಿಯಂತೆ ಯಾವುದನ್ನೂ ಖಚಿತವಾಗಿ ಹೇಳದೇ ಮಾರ್ಮಿಕವಾಗಿಯೇ ಮಾತನಾಡಿದ್ದಾರೆ.  ತೇಜಸ್ವಿ ಸಾಹಿತ್ಯ ಹೇಗೆ ʼವಿಸ್ಮಯʼವೋ ಹಾಗೆ ಶಂಕರ್ಅವರ ಮಾತು ಕೂಡ ʼವಿಸ್ಮಯʼವೇ. ನೀವು ಅದನ್ನು ಹಾಗೂ ಅರ್ಥಮಾಡಿಕೊಳ್ಳಬಹುದು. ಹೀಗೂ ಅರ್ಥಮಾಡಿಕೊಳ್ಳಬಹುದು. ನಾನು ಅರ್ಥಮಾಡಿಕೊಂಡಂತೆ ಅವರ ಮಾತಿನ ಮುಖ್ಯಾಂಶವೆಂದರೆ ʻವೀರೇಂದ್ರ ಹೆಗಡೆಯವರು ತಪ್ಪುಮಾಡಿಲ್ಲ; ಧರ್ಮಸ್ಥಳದಲ್ಲಿ ತಪ್ಪು ನಡೆದಿಲ್ಲʼ ಎಂಬುದು.

ಇದರಲ್ಲಿ ಮೊದಲನೆಯದು ಸರಿ ಇದ್ದೀತು. ಎರಡನೆಯದು ಸರಿಯಿರಲಿಕ್ಕಿಲ್ಲ.

 
ವೀರೇಂದ್ರ ಹೆಗಡೆಯವರು ತಪ್ಪುಮಾಡಿದ್ದಾರೆಂದು ಅಲ್ಲಿ ಈಗಲೇ ಯಾರು ಹೇಳಿದ್ದಾರೆ? ಯಾರಾದರೂ ಹೇಳಿದ್ದರೆ ಅದಕ್ಕೆ ಇವರೆಲ್ಲ ಏಕೆ ಅಷ್ಟು ಬೆಲೆಕೊಡಬೇಕು?  ಅವೆಲ್ಲ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಅಂಶಗಳಲ್ಲವೇ? ಇನ್ನೊಂದು ಧರ್ಮಸ್ಥಳಗಳಲ್ಲಿ ತಪ್ಪು ನಡೆದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ತಪ್ಪು ನಡೆದಿವೆ, ಅಪರಾಧಗಳಾಗಿವೆ ಎಂಬುದು ಸರ್ಕಾರಿ ದಾಖಲೆಗಳಿಂದಲೇ ಈಗಾಗಲೇ ಜಗಜ್ಜಾಹೀರಾಗಿದೆ. ಹೀಗಿದ್ದೂ ಶಂಕರ್ಅವರ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಮ್ಮಲ್ಲಿ ಪೂರ್ವಾಶ್ರಮದ ವಾಸನೆ ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂಬ ಮಾತಿದೆ. ಬಿ ಎಲ್ಶಂಕರ್ಧರ್ಮಸ್ಥಳದ ಕಾಲೇಜಿನಲ್ಲಿಯೇ ಕಾನೂನು ಪದವಿ ಓದಿದವರು ಸರಿ. ಅದಕ್ಕೆ ಅವರು ಅದರೊಡನೆ ಗುರುತಿಸಿಕೊಳ್ಳುವ ಅಗತ್ಯವಿರಲಿಲ್ಲವೇನೋ. ಕೊನೆಯ ಪಕ್ಷ ತಾವು ಈಗ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಧ್ಯಕ್ಷರಾಗಿರುವ ಕಾರಣಕ್ಕಾದರೂ ಅವರು ಒಂದಿಷ್ಟು ಅಂತರ ಕಾಯ್ದುಕೊಳ್ಳಬೇಕಾಗಿತ್ತು; ಆದರೆ ಅವರು  ಕೆಲಸವನ್ನು ಮಾಡಲಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ತಿದ್ದಿಕೊಳ್ಳುವುದು ಅಥವಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಎರಡರಲ್ಲಿ ಒಂದನ್ನು ಆಯ್ದುಕೊಂಡರೆ ಅವರ ʼಸಜ್ಜನಿಕೆʼಗೆ ನಿಜಾರ್ಥದಲ್ಲಿ ಗೌರವ ಸಲ್ಲುತ್ತದೆ.

ನಾವೆಲ್ಲರೂ ಮಾಡಬೇಕಾದ ಕೆಲಸ:

ಇದುವರೆಗೂ ಧರ್ಮಸ್ಥಳದ ಹತ್ಯೆಗಳ ಬಗ್ಗೆ ಹೋರಾಡುತ್ತಿರುವ ಯಾವ ಹೋರಾಟಗಾರರೂ ಮಂಜುನಾಥ ಸ್ವಾಮಿಗೆ ಅಗೌರವ ಆಗುವ ಯಾವ ಮಾತನ್ನೂ ಆಡಿದ್ದನ್ನು ನಾನು ಕೇಳಿಲ್ಲ. ಆದರೆ ಕೆಲವು ʼಭಕ್ತʼರು ಅಪರಾಧ ಕೃತ್ಯಗಳ ಬಗೆಗಿನ ವಿರೋಧವನ್ನು ಕ್ಷೇತ್ರದ ಬಗೆಗಿನ ವಿರೋಧವೆಂದು ಅಲ್ಲಿನ ಗಣ್ಯವ್ಯಕ್ತಿಗಳ ತೇಜೋವಧೆ ಮಾಡುವ ಹುನ್ನಾರವೆಂದು ಬಿಂಬಿಸಲು ಹೊರಟಾಗ ಅವರು ʻನಾವು ಮಂಜುನಾಥ ಸ್ವಾಮಿಯ ಪರಮ ಭಕ್ತರು; ದೇವರಿಗೆ ಕ್ಷೇತ್ರಕ್ಕೆ ಕಳಂಕ ತರುವ ಉದ್ದೇಶ ನಮಗಿಲ್ಲವೆಂದೂ ಅಲ್ಲಿನ ಕೆಲವು ವ್ಯಕ್ತಿಗಳ ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುವುದು ಮಾತ್ರ ನಮ್ಮ ಉದ್ದೇಶವೆಂದೂ ಅನೇಕ ಸಲ ಸಾರ್ವಜನಿಕ ಸ್ಪಷ್ಟನೆ ನೀಡಿದ್ದಾರೆ. ಆದರೂ ಅಪರಾಧ ಕೃತ್ಯಗಳ ಬಗೆಗಿನ ವಿರೋಧವನ್ನು ಕ್ಷೇತ್ರಕ್ಕೆ ತಗಲುಹಾಕಿ ಇದು ಇಡೀ ಧರ್ಮಸ್ಥಳಕ್ಕೇ ಕಳಂಕ ತರುವ ಕೃತ್ಯವೆಂದು ಬಿಂಬಿಸಹೊರಟಿರುವುದು ನಡದೇ ಇದೆ.  ವ್ಯಕ್ತಿಯೊಬ್ಬನ ಮೇಲಿನ ಆಪಾದನೆಯು ಕ್ಷೇತ್ರವೊಂದರ ಮೇಲಿನ ಆಪಾದನೆ ಆಗುವುದಿಲ್ಲವೆಂಬುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು. ಹಿನ್ನಲೆಯಲ್ಲಿ ಅತಿಮುಖ್ಯವಾಗಿ ನಾವು ಧರ್ಮಸ್ಥಳದ ದೇವಸ್ಥಾನವನ್ನು ಅಪರಾಧ ಕೃತ್ಯಗಳೊಂದಿಗೆ ಸಮೀಕರಸದೇ ಅವೆರಡನ್ನೂ ಪ್ರತ್ಯೇಕವಾಗಿ ನೋಡಬೇಕಾಗುತ್ತದೆ.

ಮಾಧ್ಯಮದ ಮೇಲಿನವರ ಹಲ್ಲೆಯ ಪ್ರಕರಣದಲ್ಲಿ ಇಂಥವರೆಲ್ಲ ಕೊಡುತ್ತಿರುವ ಕಾರಣವೊಂದೇ. ಇವರು ಸುಳ್ಳುಸುದ್ಧಿ ಹರಡುತ್ತಿದ್ದಾರೆ ಎಂದು. ಅದು ನಿಜವೇ ಆಗಿದ್ದರೆ ಅದಕ್ಕೆ ಇವರೆಲ್ಲ ಅವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತೇ ಹೊರತು ಹಲ್ಲೆಮಾಡುವ ಪುಂಡಾಟಿಕೆಯನ್ನಲ್ಲ. ಇಂತಹ ಚಟುವಟಿಕೆಗಳು ಸಮಸ್ಯೆಯನ್ನು ಸರಳವಾಗಿಸದೇ ಇನ್ನಷ್ಟು ಕಗ್ಗಂಟಾಗಿಸುತ್ತವೆ. ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಹತ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾತಂಡದಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಮಾಡಬೇಕಾದ ಕೆಲಸವೆಂದರೆ ತನಿಖೆಗೆ ಯಾವುದೇ ರೀತಿ ಅಡ್ಡಿಪಡಿಸದೇ ತನಿಖೆಗೆ ಸಹಕಾರಕೊಡುವುದು. ಧರ್ಮಸ್ಥಳ ಅಂದ ತಕ್ಷಣ ಮೈಮೇಲೆ ಗಣಬಂದವರ ಹಾಗೆ ಉನ್ಮಾದಕ್ಕೆ ಒಳಗಾಗದೆ ನಮಗೆ ಗೊತ್ತಿರುವ ಸಂಗತಿಗಳನ್ನು ತನಿಖಾತಂಡಕ್ಕೆ ನೀಡುವುದು ಆಮೂಲಕ ತನಿಖೆ ಪಾರದರ್ಶಕವಾಗಿ ನಡೆದು ನಿಜವಾದ ಅಪರಾಧಿಗಳು ಯಾರೆಂಬುದು ಪತ್ತೆಯಾಗಿ ಅವರು ಕಾನೂನಿನನ್ವಯ ಶಿಕ್ಷೆಗೆ ಒಳಗಾಗುವಂತೆ ನೋಡಿಕೊಳ್ಳುವುದು. ಈ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾಗಿ ಕೊಲೆಯಾದವರ ಪ್ರಾಣಕ್ಕಿಂತ ನಮಗೆ ದೊಡ್ಡವರ ಘನತೆ ಗೌರವಗಳೇ ಮುಖ್ಯವಾಗಬಾರದು. ಬಿ ಎಲ್ಶಂಕರ್ಅವರ ವಿಡಿಯೋದಲ್ಲಿ ಇರುವ ಒಂದು ಮಾತಿನಿಂದಲೇ ಲೇಖನ ಮುಗಿಸುತ್ತೇನೆ. “ಸತ್ಯ ಒಮ್ಮೆ ಬಾಗಿಲು ದಾಟಿ ಹೊರಬಂದರೆ ಮುಗಿಯಿತು. ನೂರು ಸುಳ್ಳು ಎದುರಾದರೂ ಸತ್ಯ ಸತ್ಯವೇ ಸುಳ್ಳು ಸುಳ್ಳೇ

ಡಾ. ರಾಜೇಂದ್ರ ಬುರಡಿಕಟ್ಟಿ

 08-08-2025

 ******

ಈ ಲೇಖನವನ್ನೂ ನೀವು ಓದಬಹುದು:

ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:

https://buradikatti.blogspot.com/2025/08/blog-post_9.html