ಧರ್ಮಸ್ಥಳ: ಕ್ಷೇತ್ರಕ್ಕೆ ಅಂಟಿದ ರಕ್ತದ ಕಲೆ ಮತ್ತು ವರದಿಗಾರನ ಸೌಜನ್ಯ...
ಧರ್ಮಸ್ಥಳದ ಮುಸುಕುಧಾರಿ ʻಭೀಮʼನ ಸಂದರ್ಶನವನ್ನು ರಾಷ್ಟ್ರೀಯ ಮಾಧ್ಯಮ ʼಇಂಡಿಯಾ ಟುಡೆʼ ಮಾಡಿದ್ದನ್ನು ಎಲ್ಲ ಮಾಧ್ಯಮಗಳೂ ಮರುಪ್ರಸಾರಮಾಡುತ್ತಿವೆ. ಈ ಸಂದರ್ಶನವನ್ನು ಪೂರ್ತಿ ನೋಡಿದೆ. ಅದರಲ್ಲಿ ಆತ ಕೊಟ್ಟ ವಿವಿರಗಳ ಬಗ್ಗೆ ಎಲ್ಲ ಚಾನೆಲ್‌ಗಳೂ ಯೂಟೂಬರ್ಸ್ ವಿವಿರ ನೀಡಿರುವುದರಿಂದ ಅದರ ವಿವರ ಇಲ್ಲಿ ಅನಗತ್ಯ. ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿ ಕಂಡವು ಅವನ್ನಷ್ಟೇ ಹೇಳುತ್ತಿರುವೆ.ಮೊದಲನೆಯದಾಗಿ ಆತ ನಮ್ಮ ಕೆಲವು ʻಬಾಯಿಬಡಾಕಿಗಳುʼ ಬಾಯಿಬಾಯಿ ಬಡೆದುಕೊಳ್ಳುತ್ತಾ ʻಅವನು ತೀರಾ ಕುಗ್ಗಿಹೋಗಿದ್ದಾನೆ. ತನಗೆ ಶಿಕ್ಷೆಯಾಗುವ ಆತಂಕದಲ್ಲಿದ್ದಾನೆʼ ಎಂದು ಹೇಳಿದಂತೆ ಅವನು ಯಾವುದೇ ಆತಂಕದಲ್ಲಿರುವಂತೆ ನನಗಂತೂ ತೋರಲಿಲ್ಲ. ಆತ ಅತ್ಯಂತ ಸ್ಪಷ್ಟವಾಗಿ ನಿರಾತಂಕವಾಗಿ ಮಾತನಾಡಿದ. ಅವನು ಎಲ್ಲದಕ್ಕೂ ತಯಾರಾಗಿರುವಂತೆಯೇ ಕಂಡುಬಂದ.
ಹಾಗೆ ನೋಡಿದರೆ ಅವನ ಬಗ್ಗೆ ಬಾಯಿಬಡಿದುಕೊಳ್ಳುತ್ತಿರುವವರೆ ಬಹಳ ಆತಂಕದಲ್ಲಿದ್ದಂತೆ ತೋರುತ್ತಿದೆ. ಅಲ್ಲಿನ ಅಪರಾಧಗಳ ಬಗ್ಗೆ ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಮತ್ತು ಅಪರಾಧಿಗಳಿಗೆ ಆಗಬೇಕಾದ ಶಿಕ್ಷೆಯ ಬಗ್ಗೆ ಮಾತನಾಡಿದರೆ, ಅಲ್ಲಿನ ದೇವಸ್ಥಾನದ ಬಗ್ಗೆ ದೇವರ ಬಗ್ಗೆ ಯಾರೂ ಏನೂ ಮಾತನಾಡದಿದ್ದರೂ ಇವರೆಲ್ಲ ಕ್ಷೇತ್ರಕ್ಕೆ ಅವಮಾನ, ದೇವಸ್ಥಾನಕ್ಕೆ ಕೆಟ್ಟ ಹೆಸರು ತರುವ ಷ್ಯಡ್ಯಂತ್ರ ಇತ್ಯಾದಿ ಬಾಯಿಬಡಿದುಕೊಳ್ಳುತ್ತಿರುವುದನ್ನು ನೋಡಿದರೆ ಇವರಿಗೇ ದೊಡ್ಡ ಆತಂಕ ಎದುರಾದಂತೆ ಇದೆ. ವಿಲವಿಲ ಒದ್ದಾಡುತ್ತಿದ್ದಾರೆ.
ಎಸ್ ಐ ಟಿ ತನಿಖೆಯಲ್ಲಿ ಶವಗಳ ಸಾಕ್ಷವನ್ನು ಹುಡುಕುವುದು ಒಂದು ಭಾಗವಾಗುತ್ತದೆಯೆ ಹೊರತು ಅದೇ ಅಂತಿಮ ಆಗುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಗೊತ್ತಾಗುವ ಸಂಗತಿ. ಶವದ ಅವಶೇಷಗಳು ಸಿಗಲಿಲ್ಲ ಎಂಬ ಕಾರಣವನ್ನು ಮುಂದುಮಾಡಿ ಅಪರಾಧಗಳು ನಡೆದೇ ಇಲ್ಲ ಆತ ಹೇಳಿದ ಎಲ್ಲ ಸಂಗತಿಗಳು ʼಸುಳ್ಳುʼ ಎಂಬ ತೀರ್ಮಾನಕ್ಕೆ ಇವರಂತೆ ಎಸ್.ಐ.ಟಿ ಬರಲು ಸಾಧ್ಯವೇ? ಸಾಧ್ಯವಿಲ್ಲದ ಸಂಗತಿ. ಕಾನೂನು ತನ್ನದೇ ಆದ ದಾರಿಯನ್ನು ಕಂಡುಕೊಳ್ಳುತ್ತದೆ ಮತ್ತು ತನ್ನದೇ ಆದ ತೀರ್ಮಾನವನ್ನು ಪ್ರಕಟಿಸುತ್ತದೆ.
ಆದರೆ ಅದು ತನ್ನ ಕಾರ್ಯವನ್ನು ತಾನು ಮಾಡುವಾಗಲೇ ಇವರೆಲ್ಲ ಅಡ್ಡ ಅಡ್ಡ ಬಾಯಿ ಹಾಕಿ !ಯಾರದ್ಯಾರದೋ ಪರವಾಗಿ ಡೋಲು ಹೊಡೆಯುತ್ತಿದ್ದಾರೆ! ಮಂಜುನಾಥ ಸ್ವಾಮಿ ಶಿವನ ಅವತಾರ. ಶಿವತಾಂಡವ ನೃತ್ಯ ಯಾರಿಗೆ ತಾನೆ ಗೊತ್ತಿಲ್ಲ. ಆತ ಮನಸ್ಸು ಮಾಡಿದರೆ ಯಾರನ್ನೂ ಕ್ಷಣಮಾತ್ರದಲ್ಲಿ ಭಸ್ಮಮಾಡಬಲ್ಲನಲ್ಲವೇ? ಅಂತಹ ಮಂಜುನಾಥನನ್ನೂ ಅವನ ಕ್ಷೇತ್ರವನ್ನೂ ಈಜನ ರಕ್ಷಣೆಮಾಡುತ್ತಾರಂತೆ!
ನಾಡಿನ ಜನ ನ್ಯಾಯಕ್ಕಾಗಿ ಧರ್ಮಸ್ಥಳಕ್ಕೆ ಬರುತ್ತಿದ್ದರೆ ಧರ್ಮಸ್ಥಳದವರು ನ್ಯಾಯಕ್ಕಾಗಿ ಕೋರ್ಟುಗಳಿಗೆ ಹೋಗುತ್ತಿದ್ದಾರೆ.. ಯಾವುದ್ಯಾವುದೋ ಒತ್ತಡ ಹೆಚ್ಚಾಗಿ ತನಿಖೆಯೂ ನಿಂತೀತು. ಆದರೆ ಜನರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ದೊರೆಯದೇ ಇವರೆಲ್ಲ ಗಲಾಟೆಮಾಡಿ ತನಿಖೆ ನಿಲ್ಲುವಂತಾದರೆ ಧರ್ಮಸ್ಥಳಕ್ಕೆ ಅಂಟಿದ ರಕ್ತದ ಕಲೆ ಹಾಗೇ ಉಳಿದು ಬಿಡುತ್ತದೆ. ಹೀಗಾಗಿ ಅಪರಾಧಿಗಳು ಸಿಕ್ಕು ಅವರಿಗೆ ಶಿಕ್ಷೆ ಆದರೇನೇ ಅದಕ್ಕೆ ಅಂತ್ಯ.
ʼಷಡ್ಯಂತ್ರʼ ಅನ್ನುವವರು ʻಷಡ್ಯಂತ್ರʼಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೂ ಅವರೂ ಅವನ್ನು ಎಸ್ ಐ ಟಿ ಗೆ ಸಲ್ಲಿಸಲು ಅವಕಾಶವಿದೆ. ಆದರೆ ಅವರೆಲ್ಲ ಕಾನೂನಿನ ಮಾರ್ಗ ಬಿಟ್ಟು ತೋಳ್ಮಡಿಯುವ ದಾರಿ ಹಿಡಿಯುತ್ತಿರುವುದನ್ನು ನೋಡಿದರೆ ಯಾರಿಗೆ ತಾನೇ ಸಂಶಯ ಬರುವುದಿಲ್ಲ.
ದೇಶದಲ್ಲಿ ಇವತ್ತು ಕಂಬಿಯ ಹಿಂದೆ ಇರುವ ಅನೇಕ ದೇವಮಾನವರು, ಬಾಬಾಗಳನ್ನು ಒಳಗೆ ಕಳಿಸುವ ಮೊದಲು ನಡೆದ ತನಿಖೆಯ ಸಂದರ್ಭದಲ್ಲಿಯೂ ಇದೇ ತಾನೆ ಆಗಿದ್ದು? ಆದರೆ ಕಾನೂನು ಏನನ್ನು ಮಾಡಬೇಕೋ ಅದನ್ನೇ ಮಾಡಿದೆ. ಈ ಇತಿಹಾಸ ಕೂಡ ನಮಗೆ ಗಮನವಿರಬೇಕು. ಎಲ್ಲರೂ ಸುಮ್ಮನಿದ್ದು ತನಿಖೆಗೆ ಸಹಕರಿಸಬೇಕು. ಭಾವಾವೇಶವನ್ನು ಕಾನೂನು ಮಾನ್ಯಮಾಡುವುದಿಲ್ಲ. ಅಷ್ಟಕ್ಕೂ ಧರ್ಮಸ್ಥಳ ದಲ್ಲಿ ಭಕ್ತರ ಜಾಗೆ ಎಷ್ಟು ವಿಸ್ತೀರ್ಣವಿದೆ ಎಂಬುದಕ್ಕೆ ಒಂದು ಗಡಿಯಿಲ್ಲ. ಇವತ್ತು ಇಡೀ ಗ್ರಾಮವೆ ನಮ್ಮ ಶ್ರದ್ಧಾಕೇಂದ್ರ ಎನ್ನುವವರು ನಾಳೆ ಇಡೀ ದ.ಕ ಜಿಲ್ಲೆಯೇ ನಮ್ಮ ಶ್ರದ್ಧಾಕೇಂದ್ರ ಎಂದು ಹೇಳಬಹುದು.
ಆಗ ಇಡೀ ಜಿಲ್ಲೆಯಲ್ಲಿನ ಅಪರಾಧ ಕೃತ್ಯಗಳನ್ನು ತನಿಖೆ ಮಾಡುವುದನ್ನೇ ಬಿಡಲಿಕ್ಕೆ ಆಗುತ್ತದೆಯೇ? ಮಂಜುನಾಥನ ಬಗ್ಗೆ ಕ್ಷೇತ್ರದ ಬಗ್ಗೆ ಇವರು ಅಪರಾಧ ಕೃತ್ಯಗಳನ್ನು ಗಂಟುಹಾಕುವುದನ್ನು ಬಿಡದಿದ್ದರೆ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಇವರು ಯಾರನ್ನು ರಕ್ಷಿಸಲು ಹೋಗುತ್ತಾರೋ ಅವರನ್ನು ಈ ʼಭಕ್ತʼರೇ ಇನ್ನಷ್ಟು ಕಾನೂನಿನ ಸಂಕಷ್ಟಕ್ಕೆ ತಳ್ಳುತ್ತಾರೆ.... ಇದನ್ನು ಅವರು ಅರ್ಥಮಾಡಿಕೊಳ್ಳಬೇಕು.
ಈ ಭಕ್ತರ ಗಲಾಟೆ ಹೇಗಾದರೂ ಇರಲಿ. ಆದರೆ ಮಾಧ್ಯಮ ವರದಿಗಾರರು ಮಾತ್ರ ನಿಷ್ಪಕ್ಷಪಾತವಾಗಿ ಇರಬೇಕಾಗುತ್ತದೆ. ಅದನ್ನು ಬಹುಪಾಲು ನಮ್ಮ ಮಾಧ್ಯಮ ಪ್ರತಿನಿಧಿಗಳು ಮಾಡಲಿಲ್ಲವೆಂದೇ ಹೇಳಬೇಕು. ಈ ಇಂಡಿಯಾ ಟುಡೆ ವರದಿಗಾರ ಸಂದರ್ಶನವನ್ನು ಮಾಡುವಾಗ ಬಹಳಷ್ಟು ಜವಾಬ್ದಾರಿಯುತವಾಗಿ ಪ್ರಶ್ನಿಸಿದರು ಮಾತ್ರವಲ್ಲ ಒಬ್ಬ ಸಾಕ್ಷಿಯನ್ನು ಎಷ್ಟು ಘನತೆಯಿಂದ ನಡೆದುಕೊಳ್ಳಬೇಕೋ ಹಾಗೇ ನಡೆದುಕೊಂಡರು.
ನೀವು ಗಮನಿಸಿದಿರೋ ಇಲ್ಲವೋ ಧರ್ಮಸ್ಥಳದ ಧರ್ಮಾಧಿಕಾರಿಯನ್ನು ಸಂದರ್ಶನವನ್ನು ಮಾಡಿದ್ದರೆ ಅವರೊಂದಿಗೆ ಹೇಗೆ ಗೌರವದಿಂದ ಮಾತನಾಡಬಹುದಿತ್ತೋ ಅದೇ ಗೌರವದಿಂದ ಈ ಮುಸುಕುಧಾರಿಗೆ ಬಹುವಚನ ಬಳಸಿ ʼಸರ್ʼ ಎಂದು ಸಂಬೋಧಿಸಿ ಪ್ರಶ್ನೆ ಕೇಳುತ್ತಿದ್ದರು. ಇದು ನಮ್ಮ ವರದಿಗಾರರು ಕಲಿಯಬೇಕಾದ ಪಾಠ. ನಮ್ಮ ಬಹುತೇಕ ವರದಿಗಾರರು ಏನು ಮಾಡಿದರು ನೆನಪು ಮಾಡಿಕೊಳ್ಳಿ. ಅವನನ್ನು ಮಾನಸಿಕ ಅಸ್ವಸ್ಥ, ಕಳಿಸಿಕೊಟ್ಟ ವ್ಯಕ್ತಿ ಹೀಗೇ... ಎಲ್ಲವನ್ನೂ ಇವರೆ ತೀರ್ಮಾನಮಾಡಿದರು.
ನಮ್ಮ ವರದಿಗಾರರು ರೂಢಿಸಿಕೊಳ್ಳಬೇಕಾದ ನಡೆವಳಿಕೆ ಏನು ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಇದೇ ಸ್ಪಷ್ಟತೆ ನಮಗೆ ಈ ಮುಸುಕುಧಾರಿ ನಮ್ಮ ಸ್ಥಳೀಯ ಚಾನೆಲ್ ಯಾವಕ್ಕೂ ಸಂದರ್ಶನ ಕೊಡದೆ ʻಇಂಡಿಯಾ ಟುಡೆʼಗೆ ಏಕೆ ಕೊಟ್ಟಿರಬಹುದು ಎಂಬುದಕ್ಕೂ ಅರ್ಥವನ್ನು ಹುಡುಕಿಕೊಡುಬಹುದು...
ದೇವರ ಮೇಲಿನ ಕ್ಷೇತ್ರದ ಮೇಲಿನ ಭಕ್ತಿಗೌರವಗಳೇ ಬೇರೆ; ಅಪರಾಧಗಳಿಗೆ ನ್ಯಾಯಕೇಳುವುದೇ ಬೇರೆ. ಇವೆರಡನ್ನು ತಳುಕುಹಾಕದೇ ತನಿಖೆಗೆ ಸಹಕರಿಸೋಣ....
****
ಇದೇ ಪ್ರಕರಣದ ಬಗ್ಗೆ ಇರುವ ಈ ಲೇಖನಗಳನ್ನೂ ನೀವು ಅವುಗಳ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಓದಬಹುದು
ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:
https://buradikatti.blogspot.com/2025/08/blog-post_9.html
ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:
https://buradikatti.blogspot.com/2025/08/blog-post_8.html

No comments:
Post a Comment