Saturday, August 16, 2025

 

ಧರ್ಮಸ್ಥಳ: ಉಪ್ಪು ತಿಂದವರು ಮತ್ತು ಬೆಪ್ಪುತಕ್ಕಡಿಗಳಾದವರು…….

ಡಾ ರಾಜೇಂದ್ರ ಬುರಡಿಕಟ್ಟಿ


ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾದಳದಿಂದ ಕಳೆದ ಕೆಲವು ದಿನಗಳಿಂದ ನಿರಂತರ ತನಿಖಾಕಾರ್ಯ ನಡೆಯುತ್ತಿರುವುದು ಸರಿಯಷ್ಟೆ.

 ಅಲ್ಲಿನ ಅಪರಾಧಕೃತ್ಯಗಳ ಸತ್ಯಾಸತ್ಯ ಹೊರಗೆ ಬರಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವವರು ಒಂದು ಕಡೆ ಇದ್ದರೆ, ಇದೆಲ್ಲ ದೇವಸ್ಥಾನಕ್ಕೆ ಕೆಟ್ಟಹೆಸರು ತರುತ್ತಿರುವ ಕುತಂತ್ರ, ಕಾಣದ ಕೈಗಳು ನಡೆಸುತ್ತಿರುವ ಷಡ್ಯಂತ್ರ ಎಂದು ಹುಯಿಲೆಬ್ಬಿಸುತ್ತಿರುವವರು ಇನ್ನೊಂದು ಕಡೆ ಇದ್ದಾರೆ. ಈ ಎರಡೂ ಗುಂಪುಗಳ ಒತ್ತಡಗಳ ನಡುವೆಯೇ ಎಸ್ ಟಿ ತನ್ನ ಕಾರ್ಯವನ್ನು ತನ್ನದೇ ಅಧ ರೀತಿಯಲ್ಲಿ ಮುಂದುವರೆಸಿದೆ. ಈ ತನಿಖಾ ಕಾರ್ಯದ ಒಂದು ಭಾಗವಾಗಿ ಈ ಭಾಗದ ವಿವಿಧ ಕಡೆಗಳಲ್ಲಿ ಶೋಧಕಾರ್ಯ ಕೂಡ ನಡೆಯುತ್ತಿದೆ. ಈ ಶೋಧದಲ್ಲಿ ದೊರೆತ ಅವಶೇಷಗಳೇನು ಮತ್ತು ಎಷ್ಟು ಎಂದು ತನಿಖಾದಳ ಅಧಿಕೃತವಾಗಿ ಇದುವರೆಗೂ ಏನನ್ನೂ ಪ್ರಕಟಿಸಿಲ್ಲ. ಹಾಗಿದ್ದೂ ಏನೇನೋ ವಿಚಿತ್ರ ಬೆಳವಣಿಗೆಗಳು ನಡೆಯುತ್ತಿವೆ.

ತನಿಖೆಗೆ ಆಗ್ರಹಿಸಿದ ಹೋರಾಟಗಾರರು ತನಿಖೆಯು ಸಂಪೂರ್ಣವಾಗಿ ನಡೆಯಬೇಕು ಎಂದು ಆಗ್ರಹಿಸುತ್ತಿದ್ದರೆ ಇತ್ತ, ʼಇದೊಂದು ಷಡ್ಯಂತ್ರʼ ಎಂದು ವಾದಿಸುವವರು ಇತ್ತೀಚೆಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡಿ ಜನರನ್ನು ಒಟ್ಟುಹಾಕುವುದು ಮತ್ತು ಧರ್ಮಸ್ಥಳವನ್ನು ರಕ್ಷಿಸಲು ಕರೆಕೊಡುವುದು ನಡದೇ ಇದೆ. ಇದಕ್ಕಾಗಿ ಧರ್ಮರಕ್ಷಣೆ ಮಾಡಲು ಎಚ್ಚರಾಗಿ ಎಂದು ಕೆಲವರು ಯುವಜನತೆಯನ್ನು ಹುರುದುಂಬಿಸುತ್ತಲಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಯುವಜನತೆ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು ಇಲ್ಲದಿದ್ದರೆ ಅವರ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಹಿನ್ನಲೆಯಲ್ಲಿ ಕೆಲವು ಅಂಶಗಳನ್ನು ಅವರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಮೊದಲನೆಯದಾಗಿ ತನಿಖಾ ಕಾರ್ಯವು ನ್ಯಾಯಾಂಗದ ಸುಪರ್ಧಿನಲ್ಲಿ ಕಾನೂನಿನ ಅನ್ವಯ ನಡೆಯುತ್ತಿದೆ ಎಂಬುದನ್ನು ತಾವೆಲ್ಲರೂ ತಿಳಿಯಬೇಕು.  ಯಾರುದ್ಯಾರುದೋ ಮಾತುಗಳನ್ನು ಕೇಳಿಕೊಂಡು ನೀವು ʼಧರ್ಮರಕ್ಷಣೆಗೆʼ ಎಂದು ಹೋಗಿ ಪೋಲೀಸರಿಂದ ಬಂಧನ ಇತ್ಯಾದಿಗಳಿಗೆ ಒಳಗಾಗುವು ಸಾಧ್ಯತೆಗಳು ಬಹಳ ಇರುತ್ತವೆ. ಏಕೆಂದರೆ ತನಿಖಾಕಾರ್ಯಕ್ಕೆ ಅಡ್ಡಿಪಡಿಸಿದರು ಎಂದು ಅವರು ಬಂಧಿಸಿ ಕೇಸು ಜಡಿಯುವ ಸಾಧ್ಯತೆಗಳು ತೀರಾ ನಿರೀಕ್ಷಿತ.

ನುಗ್ಗುವ ಮುನ್ನ ಇರಬೇಕಾದ ನುಗ್ಗಾಗುವ ಎಚ್ಚರ

ಇದಕ್ಕೆ ಸಂಬಂಧಿಸಿದಂತೆ ಒಂದು ಅಂಶವನ್ನುನಮ್ಮ ಯುವಕರು ಗಮನಿಸಬೇಕು. ಇದುವರೆಗೆ ಬೇರೆ ಬೇರೆ ಕಡೆ ನಡೆದಿರುವ ಕೋಮುಗಲಭೆ ಇತ್ಯಾದಿಗಳ ಸಂಬಂಧ ಬಂಧನಕ್ಕೆ ಒಳಗಾಗಿ ಇವತ್ತು ಕೋರ್ಟು ಕಛೇರಿ ಎಂದು ಅಲೆಯುತ್ತಿರುವವರಲ್ಲಿ ಬಹಳಷ್ಟು ಜನ ಅವತ್ತಿನ ಅನ್ನವನ್ನು ಅವತ್ತೇ ದುಡಿದು ತಿನ್ನಬೇಕಾದ ಪರಿಸ್ಥಿತಿಯಲ್ಲಿರುವ ಬಡವರ ಮಕ್ಕಳೇ ಆಗಿದ್ದಾರೆ.  ಆಟೋ ಓಡಿಸುವವರು, ಹೂವು ಮಾರುವವರ ಮತ್ತು ಚಪ್ಪಲಿ ಹೊಲಿಯುವವರ, ಗಾರೆ ಕೆಲಸ ಮಾಡುವವರ ಮಕ್ಕಳು ಮುಂತಾದ ದುಡಿಯುವ ವರ್ಗದ ಶ್ರಮಜೀವಿಗಳ ಕುಟುಂಬಗಳಿಗೆ ಸೇರಿದ ಯುವಕರೇ ಇಂದು ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರೆಲ್ಲರ ಕುಟುಂಬಗಳು ನಡೆಯುತ್ತಿದ್ದದ್ದು ಇವರ ದುಡಿಮೆಯಲ್ಲಿಯೇ. ಇವರ ದುಡುಕಿನ ನಿರ್ಧಾರದಿಂದಾಗಿ ಇವರ ಕುಟುಂಬಗಳನೇಕವು ಇಂದು ಸಂಕಷ್ಟದಲ್ಲಿವೆ. ಕೆಲವು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. ನುಗ್ಗುವ ಮೊದಲು ಇರಬೇಕಾದ ಎಚ್ಚರ ತಪ್ಪಿದ್ದರಿಂದ ಅವರೂ ನುಗ್ಗಾದರು ಮಾತ್ರವಲ್ಲ ಅವರ ಕುಟುಂಬಗಳನ್ನೂ ನುಗ್ಗಾಗಿಸಿದರು!

ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಇವರನ್ನು ಇಂತಹ ʼಧರ್ಮರಕ್ಷಣೆʼಗೆ ಪ್ರಚೋದಿಸಿ ಸಂಕಷ್ಟಕ್ಕೆ ಈಡುಮಾಡಿದ ನಾಯಕರುಗಳ ಮಕ್ಕಳಾರೂ ಈ ರೀತಿ ಸಂಕಷ್ಟಕ್ಕೆ ಒಳಗಾಗಿಲ್ಲ ಅವರು ಬೇರೆ ಬೇರೆ ಕಡೆ ಚೆನ್ನಾಗಿ ಶಿಕ್ಷಣ ಪಡೆದು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದು! ಉಪ್ಪು ತಿಂದವರು ನೀರು ಕುಡಿದರೋ ಇಲ್ಲವೋ ಆದರೆ ನಮ್ಮ ಬಡವರ ಮಕ್ಕಳು ಮಾತ್ರ ಬೆಪ್ಪುತಕ್ಕಡಿಗಳಾದರು!

ಈ ಸಂಗತಿ ನಮ್ಮ ಯುವಜನತೆಯ ಕಣ್ಣುತೆರೆಸಬೇಕು. ಈ ಸಂಗತಿ ಕಣ್ಣುತೆರೆಸದೇ ಹೋದರೆ ಅವರೂ ಅವರ ಕುಟುಂಬಗಳೂ ಕಣ್ಣೀರು ಹಾಕಬೇಕಾದ ಸಂದರ್ಭಗಳನ್ನು ಅವರೇ ತಂದುಕೊಳ್ಳಬೇಕಾಗುತ್ತದೆ. ಆಗ ಅವರನ್ನು ಹುರುದುಂಬಿಸಿದವರು ಅವರ ಜೊತೆಗೆ ಆರಂಭದಲ್ಲಿ ಇದ್ದಂತೆ ಮಾಡಿ ಹಂತಹಂತವಾಗಿ ದೂರವಾಗುತ್ತಾ ಬರುತ್ತಾರೆ. ಕೊನೆಗೆ ಈ ಯುವಕರು ಮತ್ತು ಅವರ ಕುಟುಂಬಗಳು ಏಕಾಂಗಿಗಳಾಗಿ ಅತ್ತ ಹೋರಾಡಲು ಬಲವೂ ಇಲ್ಲದೆ ಇತ್ತ ಕುಟುಂಬ ನಿರ್ವಹಿಸುವ ವಿಧಿಯೂ ಇಲ್ಲದೇ ಗೋಳಾಡಬೇಕಾಗುತ್ತದೆ. ದೊಡ್ಡವರೇನೋ ಯಾವುದ್ಯಾವುದೋ ಬಲದಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಆದರೆ ಇಂತಹ ಕುಟುಂಬಗಳು ಮಾತ್ರ ನೋವನ್ನು ಅನುಭವಿಸಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ನಮ್ಮ ಯುವಕರು ಇಂತಹ ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ವಿವೇಕಯುತವಾಗಿ ನಡೆದುಕೊಳ್ಳಬೇಕು. ಅಷ್ಟಕ್ಕೂ ಧರ್ಮಸ್ಥಳದಲ್ಲಿ ನಡೆಯುತ್ತಿರುವುದಾದರೂ ಏನು? ಇವರಂತೆಯೇ ಬಡವರಾದ ಅನೇಕ ಕುಟುಂಬಗಳಿಗೆ ಸೇರಿದ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ತನಿಖೆ. ನಮ್ಮೆಲ್ಲರಿಗೂ ಸತ್ತುಹೋದವರ ಬಗ್ಗೆ ಕನಿಕರ ಇರಬೇಕಲ್ಲವೇ? ಅವರಿಗೆ ಆದ ಗತಿಯೇ ನಮ್ಮ ಕುಟುಂಬಗಳಲ್ಲಿಯೇ ಯಾರಿಗಾದರೂ ಆದರೆ ನಮಗೇನನಿಸುತ್ತದೆ ಎಂದು ಕ್ಷಣಕಾಲ ವಿಚಾರಿಸಬೇಕು.

ಸಾಯಲು ಧರ್ಮಸ್ಥಳಕ್ಕೆ ಬರುವುದು ನಿಜವೇ?

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳೇ ನಡೆದಿಲ್ಲ ಎಂದು ಹೇಳಲು ಇವತ್ತು ಅಲ್ಲಿನ ತನಿಖೆಯನ್ನು, ಅದರ ಭಾಗವಾದ ಉತ್ಖನನವನ್ನು ವಿರೋಧಿಸುವವರು ಕೂಡ ಹೇಳುತ್ತಿಲ್ಲ. ಆರಂಭದಲ್ಲಿ ಧರ್ಮಸ್ಥಳಕ್ಕೆ ಸಾಯಲಿಕ್ಕಾಗಿ ನೂರಾರು ಜನ ಬರುತ್ತಾರೆ ಎಂದು ಉರುಳಿಸಿದ ದಾಳ ಬಹಳ ದೂರ ಉರುಳಲಿಲ್ಲ. ಆ ಸ್ಥಳದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆʼ ಎಂಬ ನಂಬಿಕೆ ಜನರಲ್ಲಿ ಕಾಶಿಯ ಬಗ್ಗೆ ಇದೆಯೇ ಹೊರತು ಧರ್ಮಸ್ಥಳದ ಬಗ್ಗೆ ಇಲ್ಲ. ಧರ್ಮಸ್ಥಳಕ್ಕೆ ಜನ ತಮ್ಮ ಸಂಕಟವನ್ನು ಹೇಳಿಕೊಂಡು ಹಗುರಾಗಿ ಬದುಕಲು ಬರುತ್ತಾರೆಯೇ ಹೊರತು ಸಾಯಲಿಕ್ಕೆ ಬರುವುದಿಲ್ಲ. ಕಾಶಿಯಲ್ಲಿಯೂ ಕೂಡ ಹೀಗೆ ಬಂದು ಸಾಯುವವರು ತಮ್ಮ ಜೀವನದ ಉತ್ತರಾರ್ಧದಲ್ಲಿ ಅದರಲ್ಲಿಯೂ ಎಪ್ಪತ್ತು ವರ್ಷಗಳ ನಂತರದವರು ಎಂಬುದು ಯಾರಿಗಾದರೂ ಗೊತ್ತಿರುವ ಸಂಗತಿ. ಆದರೆ ಧರ್ಮಸ್ಥಳದಲ್ಲಿ ಸತ್ತಿದ್ದಾರೆ ಎನ್ನವವರೆಲ್ಲ ವಿಶೇಷವಾಗಿ ವಯಸ್ಸಿಗೆ ಬಂದ ಮತ್ತು ಬರುತ್ತಿರುವ ಹುಡುಗಿಯರು ಮತ್ತು ಮಹಿಳೆಯರು! ಇದು ಯಾರಿಗಾದರೂ ಸಂಶಯ ತರುವ ಸಂಗತಿಯೇ.

ಧರ್ಮಸ್ಥಳಗಳ ಈ ಸಾವುಗಳು ಸಹಜವಲ್ಲ ಅವು ಅಪರಾಧಕೃತ್ಯಗಳಿಗೆ ಸಂಬಂಧಿಸಿದವು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಅನೇಕ ವ್ಯಕ್ತಿಗಳ ಕಾಣೆಯ ಪ್ರಕರಣಗಳು , ಅಸಹಜ ಸಾವುಗಳ ದಾಖಲೆಗಳು ಈ ಅಭಿಪ್ರಾಯವನ್ನು ಈಗಾಗಲೇ ದೃಢಪಡಿಸಿವೆ. ಹಾಗಾಗಿ ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡದೇ ಇಲ್ಲ ಎಂದು ಹೇಳಲು ಯಾರಿಗೂ ಧೈರ್ಯಬರುತ್ತಿಲ್ಲ. ಅಲ್ಲಿನ ತನಿಖೆಯನ್ನು ವಿರೋಧಿಸುವವರೂ ಕೂಡ ಇದನ್ನು ಧೈರ್ಯದಿಂದ ಹೇಳುತ್ತಿಲ್ಲ. ಅಂದರೆ ಅಪರಾಧ ಕೃತ್ಯಗಳು ನಡೆದಿವೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಈ ಮೊದಲ ಅಂಶ ದೃಢವಾಗಿದ್ದು ಭಿನ್ನಾಭಿಪ್ರಾಯಗಳು ಇರುವುದು ಈ ಅಪರಾಧ ಕೃತ್ಯಗಳನ್ನು ಮಾಡಿದವರು ಯಾರು ಎಂಬುದರ ಬಗ್ಗೆ ಅಷ್ಟೆ. ಏಕೆಂದರೆ ಅಪರಾಧ ಕೃತ್ಯ ನಡೆದಿದೆ ಎಂದ ಮೇಲೆ ಅಲ್ಲಿ ಅಪರಾಧಿ ಇರಲೇಬೇಕಲ್ಲ!


ಅಪರಾಧಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವುದು ಮತ್ತು ಅವರಿಗೆ ತಕ್ಕ ಶಿಕ್ಷೆ ವಿಧಿಸುವುದು ಬೇಡವೇ? ಬೇಕು ಎನ್ನುವುದಾದರೆ ಅದಕ್ಕೆ ಇಂತಹ ತನಿಖೆಯನ್ನು ಬಿಟ್ಟರೆ ಬೇರೆ ಯಾವ ದಾರಿಯಿದೆ. ತನಿಖೆಯನ್ನು ಬೆಂಬಲಿಸುತ್ತಿರುವವರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಬಿಟ್ಟರೆ ಅವರೇನೂ ಮಾಡುತ್ತಿಲ್ಲ. ಆದರೆ ತನಿಖೆಯನ್ನು ವಿರೋಧಿಸುತ್ತಿರುವವರು ಮಾತ್ರ ಈ ಬಗ್ಗೆ ಹುಯಿಲೆಬ್ಬಿಸುತ್ತಿದ್ದಾರೆ ಮತ್ತು ಯುವಜನತೆಯನ್ನು ಪ್ರಚೋದಿಸುತ್ತಿದ್ದಾರೆ.

ಅವರು ತಮ್ಮ ವಿರೋಧಕ್ಕೆ ಕೊಡುತ್ತಿರುವ ಕಾರಣ ಬಾಲಿಶವಾಗಿದೆ. ಇದರಿಂದ  ದೇವಾಲಯಕ್ಕೆ, ಧರ್ಮಸ್ಥಳಕ್ಕೆ ಕಳಂಕ ಬರುತ್ತದೆ ಎಂಬುದು ಅವರ ವಾದ. ಈ ವಾದದಲ್ಲಿ ಹುರುಳಿಲ್ಲ. ಧರ್ಮಸ್ಥಳಕ್ಕೆ ಕಳಂಕ ಬಂದಾಗಿದೆ. ಈಗ ಉಳಿದ್ದು ಏನಾದರೂ ಇದ್ದರೆ ಅದು ಕಳಂಕವನ್ನು ನಿವಾರಿಸಿಕೊಳ್ಳುವುದು ಮಾತ್ರ. ರೋಗ ಬರದಂತೆ ನೋಡಿಕೊಳ್ಳಬೇಕಾದವರು ಎಚ್ಚರಿಕೆ ವಹಿಸಲಿಲ್ಲ ಹಾಗಾಗಿ ರೋಗ ಬಂದಾಗಿದೆ. ಈಗೇನಿದ್ದರೂ ಚಿಕಿತ್ಸೆ ನಡೆಸಿ ಕಾಯಿಲೆ ಗುಣಪಡಿಸುವುದು ಮಾತ್ರ. ಅದು ಇಂತಹ ತನಿಖೆಯಿಂದ ಮಾತ್ರ ಸಾಧ್ಯ.

ಹಾಗಾಗಿ ಇಂತಹ ಸಮಯದಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಕಾಡಿನಲ್ಲಿ ಅಗೆದರೆ ಎದೆಗೆ ಗುದ್ದಲಿ ಬಿದ್ದಂತೆ ಒದ್ದಾಡಬಾರದು. ಹಾಗೆ ನೋಡಿದರೆ ಅಲ್ಲಿ ಅಗೆತ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಕಾಡು ಹಾಳಾಗುತ್ತದೆ ಎಂದು ಪರಿಸರವಾದಿಗಳು ಅಪಸ್ವರ ಎತ್ತಿದ್ದರೆ ಅದಕ್ಕೆ ಒಂದಿಷ್ಟು ಬೆಲೆಯಾದರೂ ಇರುತ್ತಿತ್ತು. ಅವರೆಲ್ಲ ಸುಮ್ಮನಿದ್ದಾರೆ. ಏಕೆಂದರೆ ಪರಿಸರ ಕಾಡು ಉಳಿಸಿಕೊಳ್ಳುವುದು ಮುಖ್ಯವಾದದ್ದೇ ಅದರೂ ಈ ಭಯಂಕರ ಅಪರಾಧ ಕೃತ್ಯಗಳ ಸತ್ಯ ಹೊರಗೆ ಬರಬೇಕಾದದ್ದು ಅದಕ್ಕಿಂತ ಮುಖ್ಯವಾದದ್ದು ಎಂದು ಅವರಿಗೆಲ್ಲ ಅನ್ನಿಸಿದೆ.

ಆದರೆ ನಮ್ಮ ಕೆಲವು ʼಧಾರ್ಮಿಕʼರೇ ತಮ್ಮ ಭಾವನೆಗಳಿಗೆ ಧಕ್ಕೆ ಎಂಬ ದಾಳ ಉರುಳಿಸುತ್ತಿದ್ದಾರೆ. ಯುವಕರನ್ನು ಪ್ರಚೋದಿಸುತ್ತಿದ್ದಾರೆ.  ಕೆಲವರಂತೂ ಹಿಂದಿನ ಜನ್ಮದಲ್ಲಿ ಮಟನ್‌ ಅಂಗಡಿಯಲ್ಲಿ ಕೆಲಸಕ್ಕೆ ಇದ್ದರೇನೋ ಎಂದು ನಮಗೆಲ್ಲ ಸಂಶಯ ಬರುವಂತೆ ʼಧರ್ಮಸ್ಥಳದ ತಂಟೆಗೆ ಬಂದರೆ ತಲೆ ತಗೆಯುತ್ತೇವೆʼ ʼ ಕಾಲುಮುರಿಯುತ್ತೇವೆʼ ಎಂದೆಲ್ಲ ಅಬ್ಬರಿಸುತ್ತಿದ್ದಾರೆ. ಮನುಷ್ಯರ ತಲೆ ತಗೆಯುವುದು ಕಾಲು ಮುರಿಯುವುದು ಹಾಗಿರಲಿ ಒಂದು ಕುರಿಯ ತಲೆಯನ್ನು ತಗೆದು, ಒಂದು ಕೋಳಿಯ ಕಾಲು ಮುರಿದು ಉಳಿದುಕೊಳ್ಳುವುದೂ ಕಷ್ಟವಿದೆ ಈಗ ಎಂಬುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು

ಒಬ್ಬ ಜನಪ್ರತಿನಿಧಿಯಂತೂ ʻಅನಾಮಿಕ ತೋರಿಸಿದ ಜಾಗೆಯಲ್ಲಿ ಶವ ಸಿಗದಿದ್ದರೆ ಅವನನ್ನು ಗಲ್ಲಿಗೇರಿಸಬೇಕುʼ ಎಂದು ಅಪ್ಪಣೆ ಕೊಡಿಸಿದ್ದಾನೆ. ʻಹೌದು ಶವ ಸಿಗದಿದ್ದರೆ ಅವನನ್ನು ಗಲ್ಲಿಗೇರಿಸೋಣ; ಸಿಕ್ಕರೆ ನಿನ್ನನ್ನು ಗಲ್ಲಿಗೇರಿಸಬಹುದೇʼ ಎಂದು ಅವನ್ನು ಪುಣ್ಯಕ್ಕೆ ಯಾರೂ ಕೇಳಲಿಲ್ಲ. ಇವೆಲ್ಲ ಹುಚ್ಚುತನದ ಮಾತುಗಳು.. ಭಾವನೆಗಳಿಗೆ ಬೆಲೆಯಿದೆ ನಿಜ. ಆದರೆ ಬುದ್ಧಿಯನ್ನು ಬಲಿಕೊಟ್ಟು ಭಾವನೆಗಳಿಗೆ ಬೆಲೆಕೊಟ್ಟರೆ ಅದೇ ಭಾವನೆಗಳೇ ನಮ್ಮನ್ನು ಬಾವಿಗೆ ತಳ್ಳಬಲ್ಲವು. ಈ ಎಚ್ಚರಿಕೆ ನಮ್ಮೆಲ್ಲರಿಗೂ ಇರಬೇಕು.

ಕಾನೂನನ್ನು ನಾವು ಮುರಿದರೆ…..

ನಮ್ಮ ಯುವಕರು ಅರ್ಥಮಾಡಿಕೊಳ್ಳಬೇಕಾದ ಸೂಕ್ಷ್ಮಗಳೇನೆಂದರೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಕೆಲವು ಸಾಕ್ಷಗಳನ್ನು ಅನೇಕ ಹೋರಾಟಗಾರರು ಇಟ್ಟುಕೊಂಡಿದ್ದಾರೆ. ಅವುಗಳಲ್ಲಿ ಕೆಲವನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಕೆಲವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇಟ್ಟುಕೊಂಡಿರಬಹುದು. ಸಾಕ್ಷಗಳಿಲ್ಲದೆ ಆರೋಪ ಮಾಡಿದರೆ ಶಿಕ್ಷೆ ತಮಗೆ ಆಗುತ್ತದೆ ಎಂಬುದು ಅವರಿಗೂ ಗೊತ್ತಿದೆ. ಗೊತ್ತಿದ್ದೂ ಧೈರ್ಯದಿಂದ ಆರೋಪ ಮಾಡುತ್ತಾರೆ ಎಂದರೆ ಅಲ್ಲಿ ಏನಾದರೂ ಪ್ರಬಲ ಸಾಕ್ಷಾಧಾರಗಳು ಇರಲೇಬೇಕು. ಆದರೆ ತನಿಖೆಯನ್ನು ವಿರೋಧಿಸುವವರು ನೋಡಿ, ಇದು ʻಷಡ್ಯಂತ್ರʼ ʻಪಿತೂರಿʼ,  ಎಂದು ಪುಂಗಿ ಊದುತ್ತಿದ್ದಾರೆಯೇ ಹೊರತೂ ಸಾರ್ವಜನಿಕರಿಗೆ ಅದಕ್ಕೆ ತಕ್ಕ ಸಾಕ್ಷ್ಮವನ್ನು ಕೊಡುತ್ತಿಲ್ಲ. ವಿದೇಶದಿಂದ ಹಣ ಬರುತ್ತದೆ ಎಂದು ಭಾಷಣ ಬಿಗಿಯುವ ಯಾವ ವ್ಯಕ್ತಿಯೂ ವಿದೇಶದ ಯಾವ ಸಂಸ್ಥೆ ಅಥವಾ ವ್ಯಕ್ತಿಯಿಂದ ಇಲ್ಲಿ ಯಾವ ವ್ಯಕ್ತಿ ಅಥವಾ ಸಂಸ್ಥೆ ಹಣ ಪಡೆದಿದೆ ಎಂದು ಇದುವರೆಗೂ ಒಂದೇ ಒಂದು ಉದಾಹರಣೆಯನ್ನು ಕೂಡ ಕೊಟ್ಟಿಲ್ಲ!

ಇದು ಏನೇ ಇರಲಿ ಇವೆಲ್ಲ ನ್ಯಾಯಾಲಯದಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕಾದ ಅಂಶಗಳು. ಅದರ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ. ಈಗಲೇ ನಾವು ʻಇಂಥವರೇ ಅಪರಾಧಿಗಳುʼ ಎಂದು ಯಾರನ್ನೂ ಬೊಟ್ಟು ಮಾಡಿ ತೋರಿಸುವುದು ಬೇಡ. ಹಾಗೆಯೇ ʻಇಂಥವರು ಅಲ್ಲವೇ ಅಲ್ಲʼ ಎಂದು ಹುಂಬರಂತೆ ಹೇಳುವುದೂ ಬೇಡ. ʻಸ್ಪಷ್ಟವಾಗಿ ತನಿಖೆ ನಡೆಯಲಿ ಸತ್ಯ ಹೊರಬರಲಿ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆಯಾಗಲಿʼ ಎಂದಷ್ಟೇ ಹೇಳೋಣ ಮತ್ತು ತನಿಖೆಯು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳೋಣ. ಈಗ ಎಬ್ಬಿಸಿರುವ ಹುಯ್ಲಿನಂತೆ ನಿಜವಾಗಿ ಅದೊಂದು ಷ್ಯಡ್ಯಂತ್ರವೇ ಆಗಿದ್ದರೆ ಕುತಂತ್ರವೇ ಆಗಿದ್ದರೆ ಅದನ್ನು ಮಾಡಿದವರಿಗೇ ಶಿಕ್ಷೆಯಾಗಲಿ ಅದಕ್ಕೇನಂತೆ! ಆದರೆ ಅದು ಆಗಲಿಕ್ಕಾದರೂ ತನಿಖೆ ಆಗಲೇ ಬೇಕಲ್ಲ! ತನಿಖೆಗೆ ಅಡ್ಡಿಪಡಿಸಿದರೆ ಈ ಷಡ್ಯಂತ್ರ ಮಾಡಿದವರಿಗೆ ಶಿಕ್ಷೆ ಆಗುವುದಾದರೂ ಹೇಗೆ?

ಕೊನೆಯಲ್ಲಿ ಒಂದು ಮಾತು, ʼಧರ್ಮೋರಕ್ಷತಿ ರಕ್ಷಿತಃʼ ಎಂಬ ಮಾತನ್ನು ಅನೇಕರು ಈಗ ಉಚ್ಚರಿಸುತ್ತಿದ್ದಾರೆ. ಅಂದರೆ ʻಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆʼ ಎಂಬುದು ಇದರ ಅರ್ಥ. ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ; ಇರಲೂ ಬಹುದು; ಇರದೇ ಇರಲೂ ಬಹುದು. ಏಕೆಂದರೆ ಇದು ನಂಬಿಕೆಗೆ ಸಂಬಂಧಪಟ್ಟದ್ದು. ನಂಬಬಹುದು ಅಥವಾ ಬಿಡಬಹುದು. ಆದರೆ ನಂಬಲೇಬೇಕಾದ ವಾಸ್ತವದ ಸಂಗತಿಯೊಂದಿದೆ ಅದೇನೆಂದರೆ, ʼಕಾನೂನನ್ನು ನಾವು ಮುರಿದರೆ ಕಾನೂನು ನಮ್ಮನ್ನು ಮುರಿಯುತ್ತದೆʼ . ಈ ಎಚ್ಚರಿಗೆ ನಮ್ಮ ಯುವಕರಿಗೆ ಮಾತ್ರವಲ್ಲ ಸಂಬಂಧಪಟ್ಟ ಎಲ್ಲರಿಗೂ ಇರಬೇಕಾದದ್ದು ಅವಶ್ಯಕ.

ಡಾ ರಾಜೇಂದ್ರ ಬುರಡಿಕಟ್ಟಿ

16-08-2025

*****

ಇದೇ ಪ್ರಕರಣಕ್ಕೆ ಸಂಬಂಧಿಸಿದ ನನ್ನ ಕೆಳಕಂಡ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಒತ್ತಿ ಓದಬಹುದು:

ಧರ್ಮಸ್ಥಳ: ಅಂದಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲುಬಡಿತವೂ:

https://buradikatti.blogspot.com/2025/08/blog-post_9.html

ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:

https://buradikatti.blogspot.com/2025/08/blog-post_8.html

ಧರ್ಮಸ್ಥಳ: ಕ್ಷೇತ್ರಕ್ಕೆ ಅಂಟಿದ ರಕ್ತದ ಕಲೆ ಮತ್ತು ವರದಿಗಾರನ ಸೌಜನ್ಯ...

https://www.facebook.com/share/p/1B1a85rbFE/


 

No comments:

Post a Comment