ದಸರಾ ಉತ್ಸವಕ್ಕೆ ಶುರುವಾದ
ಸನಾತನ ಶನಿಕಾಟ!
·
ಡಾ. ರಾಜೇಂದ್ರ ಬುರಡಿಕಟ್ಟಿ
ಮೈಸೂರು ದಸರಾ ಹಿಂದಿನ ಕೆಲವು ವರ್ಷಗಳಂತೆ ಈ ವರ್ಷ ಕೂಡ ಸನಾತನ ಶನಿಕಾಟಕ್ಕೆ
ಈಡಾಗಿದೆ. ಈ ವರ್ಷದ ಶನಿಕಾಟಕ್ಕೆ ಕಾರಣವಾಗಿದ್ದು ಸರ್ಕಾರ ಬಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟನೆಗೆ
ಕರೆದದ್ದು. ಹಿಂದೂಧರ್ಮದ ಮೂಲತತ್ವಗಳನ್ನೂ ಅದರ ಹೃದಯವೈಶಾಲ್ಯವನ್ನು ಅರ್ಥಮಾಡಿಕೊಂಡು ಬದುಕುವ ನಿಜವಾದ
ಹಿಂದೂಗಳಿಗೆ ಬಾನು ಅವರು ದಸರಾ ಉದ್ಘಾಟಿಸುವುದು ತಪ್ಪಾಗಿ ಕಾಣುವುದಿಲ್ಲ. ಆದರೆ ಹಿಂದೂಧರ್ಮವನ್ನು
ತಮ್ಮ ಅಪ್ಪನ ಖಾಸಗೀ ಆಸ್ತಿ ಎಂದು ಭಾವಿಸಿಕೊಂಡು ಅದರ ಕೆಲವು ಅವಗುಣಗಳಾದ ಜಾತಿವ್ಯವಸ್ಥೆ ವರ್ಣ ಮತ್ತು
ವರ್ಗ ವ್ಯವಸ್ಥೆ ಇತ್ಯಾದಿಗಳನ್ನೇ ಅದರ ಮೂಲ ತತ್ವಗಳೆಂದು
ತಿಳಿದುಕೊಂಡು, ಈ ಧರ್ಮವು ಕಾಲಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆಗಳನ್ನು ಆವಾಹಿಸಿಕೊಂಡು ನಿತ್ಯಹರಿಯುವ
ಸುಜಲವಾಗಲು ಬಿಡದೇ ಅದನ್ನು ಗಬ್ಬುವಾಸನೆ ಹೊಡೆಯುವ ನಿಂತನೀರಿನ ಹೊಂಡವನ್ನಾಗಿ ಮಾಡಿಕೊಂಡು ಅದರಲ್ಲಿ
ಮಿಡುಕಾಡುವ ಕೋಮುಕ್ರಿಮಿಗಳಿಗೆ ಮಾತ್ರ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮಹತ್ವದ ಸಂಗತಿಯಾಗಿ
ಕಾಡುತ್ತಿದೆ. ಹಾಗಾಗಿ ಈ ಬಗ್ಗೆ ಕೆಲವು ತಿಳಿಗೇಡಿಗಳು ಕ್ಯಾತೆ ತೆಗೆದು ಶನಿಯಂತೆ ಕಾಡುತ್ತಿದ್ದಾರೆ.
ಒಂದೆರಡು ಸಂಗತಿ ಗಮನಿಸಿ: ಒಬ್ಬ ಜನಪ್ರತಿನಿಧಿ ʼಮೈಸೂರು ದಸರಾ ಉತ್ಸವ ಜಾತ್ಯತೀತವಾದದ್ದಲ್ಲ;
ಅದು ಶುದ್ಧ ಧಾರ್ಮಿಕ ಆಚರಣೆʼ ಎಂದು ಹೇಳಿಕೆ ನೀಡಿದ್ದು ಪತ್ರಿಕೆಯಲ್ಲಿ ವರದಿಯಾಗಿದೆ. ಇನ್ನೊಬ್ಬ
ʼದಸರಾ ಉದ್ಘಾಟಿಸುವುದು ಬಾನು ಅವರ ಧಾರ್ಮಿಕ ನಂಬಿಕೆಗೆ ವಿರುದ್ಧವಾದದ್ದಾಗಿದೆʼ ಎಂದಿದ್ದಾನೆ. ಮತ್ತೊಬ್ಬ
ಆರಂಭದಲ್ಲಿ ಅವರ ಆಯ್ಕೆಯನ್ನು ಮುಕ್ತವಾಗಿ ಸ್ವಾಗತಿಸಿ ನಂತರ ಸ್ವಲ್ಪ ಪ್ಲೇಟು ಬದಲಿಸಿ, ʼಅವರು ಧಾರ್ಮಿಕ
ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕುʼ ಎಂಬ ಒಂದು ಕಂಡೀಶನ್ ಸೇರಿಸಿದ್ದಾನೆ. ಮುಗುದೊಬ್ಬ
ಅವರ ಸಾಹಿತ್ಯ ಸಾಧನೆಯ ಬಗ್ಗೆ ಗೌರವವಿದೆ; ಆದರೆ ಅವರು ದಸರಾ ಉದ್ಘಾಟಿಸುವುದು ಸರಿಯಲ್ಲ ಎಂದು ಹೇಳಿದ್ದಾನೆ.
ಇದರಲ್ಲಿ ಮೊದಲನೆಯವನ ತಕರಾರಿಗೆ ತುಸು ಹೆಚ್ಚು ವಿವರಣೆ ಬೇಕಾಗಿರುವುದರಿಂದ
ಅದನ್ನು ನಂತರ ಚರ್ಚಿಸಲಿಟ್ಟುಕೊಂಡು ಮೊದಲು ಮುಂದಿನವುಗಳನ್ನು ನೋಡೋಣ. ಅವುಗಳಲ್ಲಿ ʼಇದು ಬಾನು ಅವರ
ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದದ್ದುʼ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಹೇಳಬಹುದಾದ ಮಾತೆಂದರೆ
ಅವರ ಧಾರ್ಮಿಕ ನಂಬಿಕೆ ಇವನಿಗೆ ಹೇಗೆ ಗೊತ್ತಾಗುತ್ತದೆ? ಇವನು ಬಾನು ಅವರ ಎದೆಯ ಒಳಗೆ ಹೋಗಿ ಬಂದು
ಅವರ ಹೃದಯ ಹೇಳುವುದನ್ನು ಕೇಳಿಕೊಂಡು ಬಂದನೇ? ಅವರವರ ನಂಬಿಕೆ ಅವರದ್ದು. ತನ್ನ ಧಾರ್ಮಿಕ ನಂಬಿಕೆಗೆ
ವಿರುದ್ಧವಾದದ್ದು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕಾದದ್ದು ಬಾನು ಅವರು ಮಾತ್ರ. ಹಾಗೆ ಅದು
ವಿರುದ್ಧವಾದದ್ದು ಅನ್ನಿಸಿದರೆ ಅವರೇ ಅದನ್ನು ತಿರಸ್ಕರಿಸಲು ಸ್ವಾತಂತ್ರ್ಯವುಳ್ಳವರಾಗಿದ್ದಾರೆ. ಇವನು
ತನ್ನ ಧಾರ್ಮಿಕ ನಂಬಿಕೆಗಳನ್ನು ನೋಡಿಕೊಂಡರೆ ಸಾಕಾಗುತ್ತದೆ.
ಎರೆಡನೆಯದು ʻಜನರ ಧಾರ್ಮಿಕ
ಭಾವನೆಗಳಿಗೆ ಧಕ್ಕೆ ಬರದಂತೆ ಅವರು ನಡೆದುಕೊಳ್ಳಬೇಕು ಎಂಬ ಶರತ್ತುಬದ್ಧ ಬೆಂಬಲ (Conditional
Support)̤ ಇದಕ್ಕೂ ಕೂಡ ಕಾರಣವಾಗುವಂಥದ್ದು ದಸರಾ ವನ್ನು ಒಂದು ʼಧಾರ್ಮಿಕʼ ಹಬ್ಬ
ಎಂದು ಗ್ರಹಿಸುವಲ್ಲಿ ಇರುವ ತೊಡಕು. ಜನರ ಧಾರ್ಮಿಕ ಭಾವನೆಗಳು ಒಂದೇ ರೀತಿ ಇರುವುದಿಲ್ಲ. ಬಾನು ಅವರು
ಹೇಗೆ ಮತ್ತು ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು? ಚಾಮುಂಡಿ ಪೂಜೆಯನ್ನು
ಅವರು ಮಾಡಿದರೆ ಸಾಂಪ್ರದಾಯಿಕ ಮುಸ್ಲಿಮರು ಅವರ ಮೇಲೆ ಎಗರಾಡಬಹುದು. ಮಾಡದಿದ್ದರೆ ಕೆಲವು ಹಿಂದೂಗಳು
ಇದು ಪರಂಪರೆಗೆ ವಿರೋಧ ಎಂದು ಕೂಗಾಡಬಹದು! ಅಷ್ಟಕ್ಕೂ ಒಬ್ಬ ಅವರು ಚಾಮುಂಡಿ ಬೆಟ್ಟವನ್ನು ಏರಕೂಡದು
ಎಂಬ ಸುಗ್ರೀವಾಜ್ಞೆಯನ್ನೂ ಹೊರಡಿಸಿದ್ದಾನಂತೆ. ಇವೆಲ್ಲ ಅನಪೇಕ್ಷಿತ ಬೆಳವಣಿಗೆಗಳು ಮತ್ತು ಅನಗತ್ಯವಾಗಿ
ಅವರ ಮೇಲೆ ತರುತ್ತಿರುವ ಒತ್ತಡಗಳು.
ಮೈಸೂರು ದಸರಾ ಕುರಿತು ನಾಡಿನ ಪ್ರಜ್ಞಾವಂತ ಹೋರಾಟಗಾರರಿಗೆ ಲೇಖಕರಿಗೆ
ಅನೇಕ ಭಿನ್ನಾಭಿಪ್ರಾಯಗಳು ಮೊದಲಿನಿಂದಲೂ ಇವೆ. ಇದನ್ನು ಒಂದು ರಾಜಪ್ರಭುತ್ವದ ಪಳೆಯುಳಿಕೆ ಇಂದಿನ
ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಲ್ಲದ್ದು ಎಂದು ಕರೆದು ಅದನ್ನು ವಿರೋಧಿಸಿದವರೂ ಇದ್ದಾರೆ. ಇದೇ ಕಾರಣವನ್ನು
ಮುಂದೊಡ್ಡಿ ಅದರ ಉದ್ಘಾಟನೆಯ ಆಮಂತ್ರಣ ಬಂದಾಗ ಅದನ್ನು ತಿರಸ್ಕರಿಸಿದವರೂ ಇದ್ದಾರೆ. ಹಾಗೆಯ ಅದರ ಬಗ್ಗೆ
ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೂ ಅದನ್ನು ತಿರಸ್ಕರಿಸದೇ ಪರಿಸ್ಕರಿಸಲು ಬಯಸಿ ಅದರಲ್ಲಿ ಪಾಲ್ಗೊಂಡೂ
ತಮ್ಮ ನಿಲುವುಗಳನ್ನು ರಾಜಿಮಾಡಿಕೊಳ್ಳದೇ ತಮ್ಮ ನಿಲುವುಗಳನ್ನು ತಮ್ಮ ನಡೆ ಮತ್ತು ನುಡಿಗಳಲ್ಲಿ ಅವನ್ನು
ಪ್ರತಿಪಾದಿಸಿದವರೂ ಇದ್ದಾರೆ. ಕೆಲವನ್ನು ಸಾಂದರ್ಭಿಕವಾಗಿ ನೋಡಬಹುದು.
ಕುವೆಂಪು ಶಾಮಣ್ಣ ಅವರು ನಿಲುವುಗಳು
ಕನ್ನಡದ ರಾಷ್ಟ್ರಕವಿ ಕುವೆಂಪು ಅವರಿಗೆ ಮೈಸೂರು ದಸರಾದ ಸಾಂಪ್ರದಾಯಿಕ ಆಚರಣೆಯ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇರಲಿಲ್ಲ. ಪ್ರಜಾಪ್ರಭುತ್ವವಾದಿ ಆಗಿದ್ದ ಅವರಿಗೆ ಅದು ರಾಜಪ್ರಭುತ್ವದ ಪಳೆಯುಳಿಕೆ ಆಗಿಯೇ ಕಾಣುತ್ತಿತ್ತು ಮಾತ್ರವಲ್ಲ ಅದರ ಆಚರಣೆಗಳು ಭಾರತದ ಸಂವಿಧಾನಕ್ಕೇ ಅಪಮಾನ ಎಂದು ಅವರು ಗ್ರಹಿಸಿದ್ದರು. ಅವರ ಈ ಬಗೆಗಿನ ನಿಲುವನ್ನು ಅರ್ಥಮಾಡಿಕೊಳ್ಳಲು ನಾವು ಅವರು ೧೯೬೦ ರಲ್ಲಿ ಬರೆದ ʼಅಲ್ಲಿ-ಇಲ್ಲಿʼ ಕವನವನ್ನು ನೋಡಬೇಕು. ಅದು ಆ ವರ್ಷದ ಅಕ್ಟೋಬರ್ ಮೂರನೆಯ ತಾರೀಖು. ಅವತ್ತು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ನೆಹರೂ ಭಾಷಣ ಮಾಡುತ್ತಿದ್ದರು. ಅವರು ತಮ್ಮ ಮಾತುಗಳಲ್ಲಿ ಇಡೀ ಪ್ರಪಂಚ ಅಳವಡಿಸಿಕೊಳ್ಳಬೇಕಾದ ಪ್ರಜಾಪ್ರಭುತ್ವ ಮಾದರಿ ಆಡಳಿತ ವ್ಯವಸ್ಥೆಯ ಮೌಲ್ಯಗಳಾದ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಇತ್ಯಾದಿಗಳನ್ನು ತಮ್ಮ ಮಾತುಗಳಲ್ಲಿ ಮಂಡಿಸಿ ವಿಶ್ವನಾಯಕರ ಮೆಚ್ಚುಗೆಗೆ ಪಾತ್ರರಾದರು. ಅದೇ ದಿವಸ ಮೈಸೂರಿನಲ್ಲಿ ದಸರಾ ಉತ್ಸವ ನಡೆಯುತ್ತಿತ್ತು. ಆ ವಿಶ್ವಸಂಸ್ಥೆಯ ಕಾರ್ಯಕಲಾಪ ಮತ್ತು ಈ ಮೈಸೂರು ಆಚರಣೆಯ ಕಾರ್ಯಕಲಾಪಗಳ ಬಗ್ಗೆ ಅವರು ತಮ್ಮ ಕವನದಲ್ಲಿ ಹೀಗೆ ಬರೆದರು:
“ಅಲ್ಲಿ
ಸ್ವಾತಂತ್ರ್ಯ, ಐಕ್ಯತೆ, ಸರ್ವೋದಯ, ಸಮನ್ವಯ,
ಸತ್ಯ, ಅಹಿಂಸಾ, ಸ್ನೇಹ, ದಯಾ,
ಚೀಣಾ, ಕಾಂಗೋ, ಮಂಗೋಲಿಯಾ,
ಶಾಂತಿಯೊಂದರೊಳೆ ಇಕ್ಕೆಲಗಳಿಗೂ ಜಯ…”
ಇತ್ಯಾದಿ ಮೊಳಗಿತ್ತು…
ಇಲ್ಲಿಯೋ ನಾಚಿಕೆಗೇಡು!
ದಸರಾ ದರ್ಬಾರು!
ಜಂಬೂ ಸವಾರಿ!
ಜರಿಯ ಪೇಟ, ಕರಿಯ ಕೋಟು!
ಬಿಳಿ ಷರಾಯಿ, ಉತ್ತರೀಯ!
ಬಗ್ಗು ಸೊಂಟ, ಡೊಗ್ಗು ಸಲಾಮು!
ಗುಲಾಮಿಗೂ ಚಿನ್ನದ ಮುಲಾಮು!
ಹಳೆಯ ಪಾಳೆಯಗಾರಿಕೆಗೆ ಹೊಸ ಪ್ರಹಸನ!
ಭಾರತದ ಪವಿತ್ರ ರಾಜ್ಯಾಂಗಕ್ಕೂ ಅವಮಾನ!
ಕನ್ನಡ ಸಾಹಿತ್ಯದ ಬಹಳಷ್ಟು ಒಡನಾಟವಿದ್ದ ಕುವೆಂಪು ಅವರ ಶಿಷ್ಯರಾದ ಜಿ ಎಸ್ ಶಿವರುದ್ರಪ್ಪನವರ ನೇರ ವಿದ್ಯಾರ್ಥಿ ಆಗಿದ್ದ ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅವರು ಕೂಡ ಹೆಚ್ಚು ಕಡಿಮೆ ಇದೇ ನಿಲುವಿನವರಾಗಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅವರು ಮೈಸೂರು ದಸರಾವನ್ನು ವಿರೋಧಿಸಿ ಹೋರಾಟ ಮಾಡಲು ಹೋಗಿ ಬಂಧನಕ್ಕೂ ಒಳಗಾಗಿದ್ದೆ ಎಂದು ನನ್ನೆದುರು ಮಾತನಾಡುವಾಗ ಒಂದು
ಬಾರಿ ಹೇಳಿದ ನೆನಪು. ಅಂತಹ ಶಾಮಣ್ಣ ಅವರಿಗೂ ಕೂಡ ಮುಂದೆ ಇದೇ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಬಂದಿತು. ಅವರು ಅದನ್ನು ಬಹಳ ದೊಡ್ಡ ಗೌರವ ಎಂದು ಭಾವಿಸಲೇ ಇಲ್ಲ. ಆಗಲೇ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಅವರು ʼಏ ಇಂಥವೆಲ್ಲ ನಮ್ಮಂಥ ಹೋರಾಟಗಾರರಿಗೆ ಸರಿಯಾಗಲ್ಲ ಕಣ್ರಿʼ ಎಂದು ಹೆಗಲ ಮೇಲಿನ ಹಸಿರು ಟವೆಲ್ ಕೊಡವಿ ಈ ದಸರಾ ಉದ್ಘಾಟನೆಯ ಆಮಂತ್ರಣವನ್ನೂ ತಿರಸ್ಕರಿಸಿಬಿಟ್ಟರು! ಆಗ ಅವರು ಆಡಿದ, “ವಿಧಾನಸೌಧ ಕಸಗುಡಿಸಲಿಕ್ಕೆ ಬೇಕಾದ್ರೆ ಹೋಗ್ತೀನಿ ಆದರೆ ದಸರಾ ಉದ್ಘಾಟನೆಗೆ ಮಾತ್ರ ಹೋಗಲ್ಲ” ಎಂಬ ಮಾತು ಒಂದಿಷ್ಟು ಚರ್ಚೆಯನ್ನು ಕೂಡ ಹುಟ್ಟುಹಾಕಿತ್ತು.
ಬರಗೂರು ಮತ್ತು ನಿಸಾರ್ ಪ್ರಕರಣಗಳು
ದಸರಾವನ್ನು ತಿರಸ್ಕರಿಸುವ ನಿಲುವು ಇಂತಾದರೆ ಇನ್ನು ಅದನ್ನು ಒಪ್ಪಿಕೊಂಡೂ
ಅದರ ಲೋಪಗಳನ್ನು ತಿದ್ದಿ ಅದನ್ನು ಪರಿಷ್ಕರಿಸಿ ಅದನ್ನು ಎಲ್ಲರ ಹಬ್ಬವನ್ನಾಗಿ ಮಾಡಲು ಪ್ರಯತ್ನಿಸಿದವರೂ
ಇದ್ದಾರೆ. ಆ ಸಾಲಿನಲ್ಲಿ ಮುಖ್ಯವಾಗಿ ಬರಗೂರು ಪ್ರಕರಣವನ್ನೂ ಅದಕ್ಕೆ ಅಂಟಿಕೊಂಡಂತೆ ನಿಸಾರ್ ಅಹಮ್ಮದ್
ಅವರ ಪ್ರಕರಣಗಳನ್ನೂ ನೋಡಬಹುದು ಅನ್ನಿಸುತ್ತದೆ.
ಒಂದು ವರ್ಷ ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪದ ಅವರಿಗೆ ಕೂಡ ಈ ದಸರಾ ಉದ್ಘಾಟನೆಯ ಆಮಂತ್ರಣ ಬರುತ್ತದೆ. ಅವರು ಅದನ್ನು ಒಪ್ಪಿಕೊಂಡು ಉದ್ಘಾಟನೆಗೆ ಬರುತ್ತಾರೆ ಕೂಡ. ಬರಗೂರು ಉದ್ಘಾಟನೆಗೆ ಬಂದಾಗ ಕೂಡ ಈಗ ಕ್ಯಾತೆ ತಗೆದಿರುವ ʼಧರ್ಮರಕ್ಷಕರುʼ ಕ್ಯಾತೆ ತಗೆದಿದ್ದರು. ಆಗ ಇವರ ಕ್ಯಾತೆಯ ವಿಷಯ ಅವರು ನಾಸ್ತಿಕರು. ದೇವರ ಮೇಲೆ ನಂಬಿಕೆ ಇಲ್ಲದವರು ದಸರಾ ಉದ್ಘಾಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದಾಗಿತ್ತು. ಇವರ ಎಲ್ಲ ಬಗೆಯ ಒತ್ತಡಗಳನ್ನು ಸಹಿಸಿಕೊಂಡೂ ಅವು ಯಾವಕ್ಕೂ ತಲೆಬಾಗದೆ, ಇವರ ಈ ಎಲ್ಲ ಬಗೆಯ ಪುಟಪೋಸಿ ತಕರಾರುಗಳ ಮಧ್ಯೆಯೇ ಅವರು ತಮ್ಮಿಷ್ಟದಂತೆಯೇ ದಸರಾ ಉದ್ಘಾಟಿಸಿದರು. ಇದು ʻ
ಸತ್ಯಕ್ಕೆ ಸಾಕ್ಷಿ ಕೇಳುವ ಕಾಲʼ ಎಂದು ಅರಿತ ಅವರು ತಮ್ಮ ಮಾತುಗಳನ್ನು ತಿರುಚುವ ಕಿಡಿಗೇಡಿ ಮಾಧ್ಯಮ ಪ್ರತಿನಿಧಿಗಳಿಗೆ ಆಹಾರವಾಗದಂತೆ ತಾವು ಮಾತನಾಡುವ ಭಾಷಣವನ್ನುಲಿಖಿತವಾಗಿ ಮುದ್ರಿಸಿಕೊಂಡೇ ಬಂದು ಹಂಚಿದರು! ಬರಗೂರು ಚಾಮುಂಡಿ ಪೂಜೆ ಮಾಡದೆ ನಮ್ಮ ಸಂಪ್ರದಾಯಕ್ಕೆ ಅಪಚಾರ ಮಾಡಿದರು ಎಂದು ಕಿರುಚಾಡಿದ ಇವರೆಲ್ಲ ನಾಡಿಗೆ ಇದರಿಂದ ಕೇಡಾಗುತ್ತದೆ ಬರಗಾಲ ಇತ್ಯಾದಿ ಕಾಡುತ್ತದೆ ಎಂದೆಲ್ಲ ಬೊಬ್ಬೆಹೊಡೆದರು. ನನಗೆ ಸರಿಯಾಗಿ ಖಾತ್ರಿಯಿಲ್ಲದ ಒಂದು ಅಂಶವನ್ನು ಇಲ್ಲಿ ಹೇಳುವುದಾದರೆ ಬರಗೂರು ದಸರಾ ಉದ್ಘಾಟಿಸಿದ ವರ್ಷ ಕೆಲವು ಸನಾತನಿಗಳು ಅದನ್ನು ಉದ್ಘಾಟಿಸಿ ವರ್ಷಗಳಿಗಿಂತ ಚೆನ್ನಾಗಿ ಮಳೆಬೆಳೆಯಾಗಿ ನಾಡು ಸಮೃದ್ಧಿಯನ್ನು ಕಂಡಿತಂತೆ!ಹಿಂದೆ ಕನ್ನಡದ ಕವಿ ನಿಸಾರ್ ಅಹಮದ್ ಕೂಡ ಈ ದಸರಾ ಉದ್ಘಾಟಿಸಿದ್ದಾರೆ.
ಆಗ ಇವರು ಅಷ್ಟೊಂದು ದೊಡ್ಡದಾಗಿ ದನಿ ಎತ್ತರಿಸಲಿಲ್ಲ. ಇದಕ್ಕೆ ಕಾರಣ ಮುಸ್ಲಿಮ್ ರ ಬಗ್ಗೆ ಹಿಂದೂ
ಕೋಮುವಾದಿಗಳ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಬಹಳಷ್ಟು ವರ್ಷಗಳ ಹಿಂದೆ ಲಂಕೇಶ್ ಒಂದು
ಲೇಖನದಲ್ಲಿ ಹೇಳಿದ್ದರು. ಅದೆಂದರೆ ಅವರು ಮುಸ್ಲಿಮರಾದರೂ ಇವರ ತಾಳಕ್ಕೆ ತಕ್ಕಂತೆ ಕುಣಿದರೆ ಇವರಿಗೆ
ಅವರ ಬಗ್ಗೆ ತಕರಾರು ಇರುವುದಿಲ್ಲವಂತೆ. ಅವರು ತಮ್ಮ ಸ್ವತಂತ್ರ ವಿಚಾರಗಳನ್ನು ಮುನ್ನೆಲೆಗೆ ತಂದರೆ
ಮಾತ್ರ ಇವರಿಗೆ ತಕರಾರಂತೆ. ನಿಸಾರರು ಇವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ನಿಜ. ಆದರೆ ಅವರು ಈ ಕೋಮುವಾದಿಗಳಿಗೆ
ಅಪತ್ಯವಾಗುವ ಯಾವುದೇ ವಿಚಾರಗಳನ್ನು ಬಹಿರಂಗವಾಗಿ ಹೇಳುತ್ತಿರಲಿಲ್ಲ. ತಮಗಾಗುವ ನೋವನ್ನು ʻನಿಮ್ಮೊಡನಿದ್ದು
ನಿಮ್ಮಂತಾಗದೆʼ ಎಂದು ಮನಸ್ಸಿನಲ್ಲಿಯೇ ಅನುಭವಿಸುತ್ತಿದ್ದರು. ಹಾಗಾಗಿ ಇವರಿಗೆ ಅವರ ಬಗ್ಗೆ ಹೆಚ್ಚು
ತಕರಾರು ಇರಲಿಲ್ಲ.
ಆದರೆ ಬಾನು ಅವರ ವ್ಯಕ್ತಿತ್ವ ಅಂಥದ್ದಲ್ಲ. ಅವರು ಆರಂಭದಲ್ಲಿ ಲಂಕೇಶ್
ಪತ್ರಿಕೆಯಿಂದಲೇ ಬರೆವಣಿಗೆ ಆರಂಭಿಸಿದವರು. ಕನ್ನಡದ ಎಲ್ಲ ಬಗೆಯ ಜನಪರ ಚಳವಳಿಗಳಲ್ಲಿ ತಮ್ಮ ಇತಿಮಿತಿಯಲ್ಲಿ
ಪಾಲ್ಗೊಂಡವರು. ಜನವಿರೋಧಿಯಾದ ಮನುಷ್ಯವಿರೋಧಿಯಾದ ಯಾವುದೇ ವಿಚಾರವನ್ನು ಅವರು ನಿರ್ಭಿಡೆಯಿಂದ ತಮ್ಮ
ಮಾತು ಮತ್ತು ಬರೆವಣಿಗೆಯ ಮೂಲಕ ಪ್ರತಿಪಾದಿಸುತ್ತಾ ಬಂದವರು. ಈ ಜನಪರ ಹೋರಾಟಗಳೆಲ್ಲವೂ ನಮ್ಮ ಬಹುತೇಕ
ಕೋಮುವಾದಿಗಳಿಗೆ ನಕ್ಸಲ್ ಹೋರಾಟಗಳಾಗಿಯೇ ಕಾಣುತ್ತವೆ. ಅಲ್ಲಿ ಭಾಗವಹಿಸುವವರೆಲ್ಲ ಇವರಿಗೆ ದೇಶದ್ರೋಹಿಗಳಾಗಿ
ಕಾಣುತ್ತಾರೆ. ಹೀಗಿರುವಾಗ ಬಾನು ಅವರನ್ನು ಇವರೆಲ್ಲರೂ ಹೇಗೆ ತಾನೆ ಹೃದಯತುಂಬಿ ಸ್ವಾಗತಿಬಲ್ಲರು?
ಈಗ ಸ್ವಾಗತಿಸಲು ಇವರ ಹೃದಯ ಸ್ವಚ್ಚವಾಗಿ ಇರುತ್ತದೆಯೇ? ವಾಸ್ತವವಾಗಿ ಇದು ಇವರ ಸಮಸ್ಯೆ.
ಧಾರ್ಮಿಕ ಚಟುವಟಿಕೆಗಳ ಬಗ್ಗೆ ಸಂವಿಧಾನ ಹೇಳುವುದೇನು?
ಇವರೆಲ್ಲರಿಗೂ ನಮ್ಮ ಸಂವಿಧಾನದ ಮೂಲ ಪರಿಚಯವೇ ಇಲ್ಲವೆಂಬುದು ಇದರಿಂದ
ತಿಳಿಯುತ್ತದೆ. ಏಕೆಂದರೆ ನಮ್ಮ ಸಂವಿಧಾನವು ಜಾತ್ಯತೀತತೆ ಮತ್ತು ಧಾರ್ಮಿಕ ಭಾವನೆಗಳನ್ನು ಕುರಿತು
ಏನು ಹೇಳುತ್ತದೆ ಎಂದರೆ ಜಾತ್ಯತೀತತೆ ಭಾರತೀಯ ಜನಜೀವನದ ಅವಿಭಾಜ್ಯ ಅಂಗವಾಗಿ ಇರಬೇಕು ಎಂಬುದು ಅದರ
ಆಶಯ. ಈ ಆಶಯವನ್ನು ಸಾಕಾರಗೊಳಿಸಲು ಎಲ್ಲ ನಾಗರಿಕರು ಪ್ರಯತ್ನಿಸಬೇಕು ಎಂಬುದನ್ನು ಅದು ಒತ್ತಿ ಹೇಳುತ್ತದೆ.
ಧಾರ್ಮಿಕ ಭಾವನೆಗಳನ್ನು ಅದು ಗೌರವಿಸುತ್ತದೆಯೇ ಹೊರತು ಅದನ್ನು ಉದ್ಧೀಪನಗೊಳಿಸಲು ಹೇಳುವುದಿಲ್ಲ.
ಇದರ ಅರ್ಥವನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸರ್ಕಾರ ಯಾವುದೇ ಧರ್ಮದ ಪರ ಅಥವಾ ವಿರೋಧ ನಿಲ್ಲುವ ಹಾಗಿಲ್ಲ. ಧಾರ್ಮಿಕ ವಿಷಯಗಳಲ್ಲಿ ಅದು ʼನಿರ್ಲಿಪ್ತʼ ಅಥವಾ ʼಅಲಿಪ್ತʼ
ನೀತಿಯನ್ನು ಅನುಸರಿಸಬೇಕು. ಯಾವುದೇ ಧರ್ಮದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಅಧಿಕಾರ ಅದಕ್ಕೆ ಹೇಗೆ ಇಲ್ಲವೋ ಹಾಗೆಯೇ ಯಾವುದೇ ಧರ್ಮದ ಧಾರ್ಮಿಕ ಚಟುವಟಿಕೆಗಳನ್ನು ಮುಂದೆ ನಿಂತು ಮಾಡುವ ಅಧಿಕಾರವೂ ಇಲ್ಲ. ಹಾಗಾಗಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದನ್ನು ಜನರಿಗೆ ಬಿಟ್ಟುಬಿಡಬೇಕು. ಅವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದಷ್ಟೇ ಸರ್ಕಾರದ ಜವಾಬ್ದಾರಿಯಾಗುತ್ತದೆ.
ಈ ಹಿನ್ನಲೆಯಲ್ಲಿ ದಸರಾ ಹಬ್ಬ ಇವರೆಲ್ಲ ಹೇಳುವಂತೆ ಶುದ್ಧ ಧಾರ್ಮಿಕವೇ
ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ʻಹೌದುʼ ಎನ್ನುವುದಾದರೆ
ಯಾವ ಧರ್ಮಕ್ಕೆ ಸೇರಿದ ಹಬ್ಬ ಎಂಬ ಎರಡನೆಯ ಪ್ರಶ್ನೆ ಏಳುತ್ತದೆ. ಅದಕ್ಕೆ ಸಹಜವಾಗಿ ʻಹಿಂದೂಧರ್ಮದ
ಧಾರ್ಮಿಕ ಹಬ್ಬʼ ಎಂಬ ಉತ್ತರ ಬರುತ್ತದೆ. ಇದು ನಿಜವೇ ಆದರೆ ಸರ್ಕಾರದ ಪ್ರತಿನಿಧಿಗಳಾದ ಮುಖ್ಯಮಂತ್ರಿ
ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಅದನ್ನು ಮುಂದೆ ನಿಂತು ಮಾಡುವುದು ತಪ್ಪಾಗುತ್ತದೆ. ಏಕೆಂದರೆ
ಆ ಕ್ರಿಯೆ ನಮ್ಮ ಸಂವಿಧಾನದ ಧಾರ್ಮಿಕ ಅಲಿಪ್ತತೆಯ ಆಶಯಕ್ಕೆ ವಿರುದ್ಧವಾಗುವ ಮೂಲಕ ಸಂವಿಧಾನವಿರೋಧಿ
ಚಟುವಟಿಕೆಯಾಗಿಬಿಡುತ್ತದೆ.
ಇದು ಕೇವಲ ಹಿಂದೂಧರ್ಮದ ಆಚರಣೆಗಳಿಗೆ ಮಾತ್ರ ಅನ್ವಯವಾಗುವುದಿಲ್ಲ.
ಭಾರತದ ಸಂವಿಧಾನದ ಪ್ರಕಾರ ಆಡಳಿತ ವ್ಯವಸ್ಥೆಯಲ್ಲಿರುವ ಯಾವುದೇ ಜನಪ್ರತಿನಿಧಿಗಳು ಯಾವುದೇ ಒಂದು ನಿರ್ಧಿಷ್ಟ ಧರ್ಮಕ್ಕೆ ಸೇರಿದ ಆಚರಣೆಗಳನ್ನು
ಪ್ರತಿನಿಧಿಯಾಗಿ ಭಾಗವಹಿಸುವುದು ಸರಿಯಾದ ನಡವಳಿಕೆಯೇ ಅಲ್ಲ. ಆದರೆ ಈ ಆಶಯವನ್ನು ಮನನಮಾಡಿಕೊಂಡು ಅದಕ್ಕೆ
ತಕ್ಕಂತೆ ನಡೆದುಕೊಳ್ಳುವ ಪ್ರತಿನಿಧಿಗಳನ್ನು ಆರಿಸಿ ಕಳಿಸುತ್ತಿಲ್ಲವಾದ ಕಾರಣ ನಾವು ಅವರನ್ನು ಹಿಯ್ಯಾಳಿಸಲೂ
ಬರುವುದಿಲ್ಲ. ಏಕೆಂದರೆ ನಮ್ಮ ಸಂವಿಧಾನ ಈ ದೇಶದಲ್ಲಿ ಏನೇ ಒಳ್ಳೆಯದಾದರೂ ಏನೇ ಕೆಟ್ಟದ್ದಾದರೂ ಅದಕ್ಕೆ
ನೇರವಾಗಿ ಪ್ರಜೆಗಳಾದ ನಮ್ಮನ್ನೇ ಹೊಣೆಮಾಡುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದ ಪೀಠಿಕೆ, ʻಭಾರತದ
ಜನತೆಯಾದ ನಾವು…..ʼ ಎಂದೇ ಪಾರಂಭವಾಗುತ್ತದೆ.
ಹಾಗಾಗಿ ದಸರಾ ಉತ್ಸವವನ್ನು ನಾವು ಧಾರ್ಮಿಕ ಗಡಿಗಳಾಚೆ ದಾಟಿಸಿ ಅದನ್ನು
ʻನಮ್ಮ ನಾಡಿನ ಉತ್ಸವʼ ʼನಾಡಹಬ್ಬʼ ಎಂದು ಕರೆದುಕೊಂಡಾಗ ಮಾತ್ರ ಅದರಲ್ಲಿ
ಸರ್ಕಾರ ಅದರ ಅಂಗವಾದ ಮಂತ್ರಿಮಹೋದಯರು ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶ ತೆರೆದುಕೊಳ್ಳುತ್ತದೆ. ಅದನ್ನು
ಈ ತಿಳಿಗೇಡಿಗಳು ಹೇಳಿದಂತೆ ʼಶುದ್ಧಧಾರ್ಮಿಕ ಆಚರಣೆʼ ಅಂದುಕೊಂಡರೆ ಬಾನು ಅವರು ಭಾಗವಹಿಸುವ ಅವಕಾಶ
ಮುಚ್ಚುತ್ತದೆಯೋ ಇಲ್ಲವೋ ಆದರೆ ಸರ್ಕಾರದ ಮಂತ್ರಿಮಹೋದಯರು ಭಾಗವಹಿಸುವ ಅವಕಾಶವೇ ಮುಚ್ಚಿಬಿಡುತ್ತದೆ.
ಈ ಅವಕಾಶ ಮುಚ್ಚಬಾರದು ಎಂದರೆ ಅದು ʼಜಾತ್ಯತೀತವಾಗಿರುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡ ಹೌದು! ಏಕೆಂದರೆ ನಾಡಹಬ್ಬ ಎಂದರೆ ನಾಡಿನ ಹಬ್ಬ. ನಾಡು ಎಂದರೆ ಇಡೀ
ರಾಜ್ಯ. ರಾಜ್ಯ ಎಂದರೆ ರಾಜ್ಯದ ಜನರು. ಅವರು ಯಾವುದೇ ಜಾತಿ ಧರ್ಮಕ್ಕೆ ಸೇರಿರಲಿ ಅವರು ನಾಡವರು! ಹಾಗಾಗಿ
ನಾಡಿನ ಜನ ಅವರು ಯಾವುದೇ ಜಾತಿ ಧರ್ಮಕ್ಕೆ ಸೇರಿರಲಿ ಅವರ ನಂಬಿಕೆ ಆಚರಣೆಗಳು ಏನೇ ಇರಲಿ ಅವರೆಲ್ಲರೂ
ಈ ನಾಡಹಬ್ಬದಲ್ಲಿ ಭಾಗವಹಿಸಲು ಅದರ ಮುಂದಾಳತ್ವ ವಹಿಸಲು ಎಲ್ಲ ಬಗೆಯಲ್ಲೂ ಸಮನಾಗಿ ಅರ್ಹರು.
ದಸರಾ ಉದ್ಘಾಟನೆಗೆ ಯಾರನ್ನು ಕರೆಯಲಾಗುತ್ತದೆ?
ದಸರಾ ಹಬ್ಬವನ್ನು ನಾವು ನಾಡಹಬ್ಬವೆಂದು ಒಪ್ಪಿಕೊಂಡಮೇಲೆ ಅದನ್ನು ಸರ್ಕಾರವೇ
ಮುಂದೆ ನಿಂತು ಮಾಡುವುದು ಅಂತಾದ ಮೇಲೆ ಅದರ ಉದ್ಘಾಟನೆಯಂಥ ಬಹುಮುಖ್ಯ ಕೆಲಸಕ್ಕೆ ಸಾಮಾನ್ಯವಾಗಿ ಯಾರನ್ನು ಕರೆಯಲಾಗುತ್ತದೆ ಮತ್ತು ಕರೆಯಬೇಕಾಗುತ್ತದೆ ಎಂಬುದನ್ನು
ನೋಡೋಣ. ಈ ದಸರಾ ಉದ್ಘಾಟನೆಯು ಒಂದು ʻಗೌರವʼ ಎಂದು ಪರಿಗಣಿಸಲ್ಪಡುವುದರಿಂದ ಸಹಜವಾಗಿ ಮತ್ತು ಸಾಮಾನ್ಯವಾಗಿ
ಈ ಗೌರವವನ್ನು ನಾಡು-ನುಡಿಗಳಿಗೆ ʻಗೌರವʼ ತರುವಂಥ ಕೆಲಸ ಮಾಡಿದವರಿಗೆ ಕೊಡಬೇಕಾದದ್ದು ಸಮಂಜಸ. ಈ ಹಿನ್ನಲೆಯಲ್ಲಿ
ಬಾನು ಮುಸ್ತಾಕ್ ಅವರ ಆಯ್ಕೆ ಸರಿಯಾಗಿಯೇ ಇದೆ. ಅವರಿಗೆ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಮಟ್ಟದ
ಬೂಕರ್ ಪ್ರಶಸ್ತಿ ಬಂದದ್ದು ಅವರ ಆಯ್ಕೆಯ ಹಿಂದಿರುವ ಮಾನದಂಡ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.
ಅದು ಸೂರ್ಯಪ್ರಕಾಶದಷ್ಟೇ ಸ್ಪಷ್ಟವಾಗಿದೆ.
ಏಕೆಂದರೆ ಅವರು ಒಬ್ಬ ದೊಡ್ಡ ಲೇಖಕಿ ಎಂಬುದು ನಮ್ಮ ನಾಡಿನ ಬಹಳಷ್ಟು ಜನಕ್ಕೆ ಇತ್ತೀಚಿನವರೆಗೂ ಅಪರಿಚಿತ ಸಂಗತಿಯೇ. ನಮ್ಮ ಜನರಿಗೆ ಅವರನ್ನು ಪರಿಚಯಿಸಲು ಅವರಿಗೆ ʻಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿʼ ಬರಬೇಕಾಯಿತು. ಒಂದು ವೇಳೆ ಅದು ಬರದಿದ್ದರೆ ಅವರಿಗೆ ದಸರಾ ಉದ್ಘಾಟನೆಯ ಆಹ್ವಾನವೂ ಇರುತ್ತಿರಲಿಲ್ಲ; ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಯೂ ಆಗುತ್ತಿರುಲಿಲ್ಲ. ಈ ಪ್ರಶಸ್ತಿಯನ್ನು ಕನ್ನಡಕ್ಕೆ ತರುವ ಮೂಲಕ ಅವರು ಕನ್ನಡದ ಸ್ಥಾನಮಾನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ್ದಾರೆ. ಅವರ ಕೆಲವು ಕಥೆಗಳನ್ನು ಅನುವಾದಿಸಿದ ಲೇಖಕಿ ದೀಪಾ ಬಸ್ತಿ ಕನ್ನಡದ ʼಪುಣ್ಯʼ ʼಚಪಾತಿʼ ʼಸವತಿʼ ʼಸೆರಗುʼ ʼತಾಂಬೂಲʼ ಇಂಥ ಪದಗಳನ್ನು ತಮ್ಮ ಇಂಗ್ಲಿಷ್ ಅನುವಾದದಲ್ಲಿ ಹಾಗೆಯೇ ಉಳಿಸಿಕೊಂಡು ಅವು ಜಾಗತಿಕ ಮಟ್ಟಕ್ಕೆ ಪರಿಚಯವಾಗುವಂತೆ ಮಾಡಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಮಟ್ಟದ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇದು ದೊಡ್ಡಮಟ್ಟದಲ್ಲಿ ಆದರೆ ಕರ್ನಾಟಕಕ್ಕೆ ಸೀಮಿತಿಗೊಳಿಸಿಕೊಂಡು ಹೇಳುವುದಾದರೆ
ಕರ್ನಾಟಕದ ಹಾಸನ ಭಾಗದಲ್ಲಿ ಮಹಿಳೆಯರೆಲ್ಲರು ತಲೆಯಿತ್ತಿ ನಡೆಯಲಿಕ್ಕೆ, ಸಾರ್ವಜನಿಕವಾಗಿ ಮುಖತೋರಿಸಲಿಕ್ಕೆ
ಕೂಡ ಹಿಂಸೆ ಪಡುವಂತಹ ಮಟ್ಟಕ್ಕೆ ಅಲ್ಲಿನ ಜನಪ್ರತಿನಿಧಿಯೊಬ್ಬಅವರ ಮಾನ ಮರ್ಯಾದೆಗಳನ್ನು ಮಣ್ಣುಪಾಲು
ಮಾಡಿದ ಕೆಲವೇ ದಿನಗಳಲ್ಲಿ ಅಲ್ಲಿಂದಲೇ ಬಂದ ಈ ಲೇಖಕಿ ಈ ಪ್ರಶಸ್ತಿಯ ಮೂಲಕ ಅವರಲ್ಲಿ ಸ್ವಾಭಿಮಾನ ಮತ್ತು
ಆತ್ಮಸ್ಥೈರ್ಯದ ಸ್ಪೂರ್ತಿಯನ್ನು ತುಂಬಿದರು. ಈ ಪ್ರಶಸ್ತಿಯ ಆಚೆಗೂ ಬಾನು ಅವರು ಒಬ್ಬ ಒಳ್ಳೆಯ ಮನಸ್ಸಿನ
ಪ್ರಜ್ಞಾವಂತ ಲೇಖಕಿ. ಈ ಸಮಾಜದಲ್ಲಿ ನಡೆಯುವ ಕ್ರೌರ್ಯ, ದೇವರು ಧರ್ಮಗಳ ಹೆಸರಿನಲ್ಲಿ ನಡೆಯುವ ಅತ್ಯಾಚಾರ ಅನಾಚಾರ ಇವುಗಳ ಬಗ್ಗೆ
ವಿರೋಧವನ್ನು ಅವರು ತಮ್ಮ ಬದುಕು ಬರೆಹಗಳಲ್ಲಿ ವ್ಯಕ್ತಪಡಿಸಿದ್ದರೆ ಅದು ನಮ್ಮ ಸಮಾಜದ ಕೂಡಿಬಾಳುವ
ನೆಮ್ಮದಿಯ ಬದುಕಿನ ಸಂಸ್ಕೃತಿಗೆ ನೀಡಿದ ಕೊಡುಗೆ ಎಂದು ಭಾವಿಸಬೇಕೆ ಹೊರತು ಅದನ್ನು ನಾಡಿನ ಸಂಸ್ಕೃತಿ
ಆಚಾರ ವಿಚಾರಗಳಿಗೆ ವಿರುದ್ಧವಾದ ಕ್ರಿಯೆ ಎಂದು ಭಾವಿಸಬಾರದು.
ಆರದಿರಲಿ ಹಣತೆ….
ಈ ಮಧ್ಯೆ ಕೆಲವು ಪ್ರಗತಿಪರ ಸ್ನೇಹಿತರು ಬಾನು ಅವರು ಈ ಉತ್ಸವದ ಉದ್ಘಾಟನೆಗೆ ಬಂದಿರುವ ಆಮಂತ್ರಣವನ್ನು ತಿರಸ್ಕರಿಸುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನನಗೇನೋ ಈ ಸಲಹೆ ಸರಿಯಾದದ್ದು ಅನ್ನಿಸುವುದಿಲ್ಲ. ಈ ಹಂತದಲ್ಲಿ ಅವರು ಹಾಗೆ ಮಾಡಿದರೆ ಅದರಿಂದ ಸಮಾಜಕ್ಕೆ ಬೇರೆಯದೇ ಆದ ಸಂದೇಶ ರವಾನೆಯಾಗುತ್ತದೆ. ಕೆಲವು ಕಿಡಿಗೇಡಿ ಕಪಿಗಳ ಕಿರುಚಾಟಕ್ಕೆ ಬೆದರಿಯೇ ಅವರು ಹಿಂಜರಿದರು ಎಂಬ ಸಂದೇಶ ರವಾನೆಯ ಜೊತೆಗೆ ಮುಂದೆ ಹೀಗೆ ಮಾಡುವವರಿಗೆ ಉತ್ತೇಜನವೂ ಸಿಕ್ಕಂತಾಗುತ್ತದೆ. ಮಾತ್ರವಲ್ಲ ಅದು ನಾಡಿನ ಕೂಡಿಬಾಳುವ ಪರಂಪರೆಗೆ ನಾವು ಮಾಡಬೇಕಾದ ಕೆಲಸಗಳಿಗೆ ಹಿನ್ನಡೆಯೂ ಆಗುತ್ತದೆ. ಹಾಗಾಗಿ ಈ ಹಂತದಲ್ಲಿ ಬಾನು ಅವರು ತಮಗೆ ಬಂದ ಆಮಂತ್ರಣವನ್ನು ಶಾಮಣ್ಣ ಅವರಂತೆ ನಿರಾಕರಿಸುವುದು ಸರಿಯಾಗುವುದಿಲ್ಲ. ಅವರು ಬರಗೂರು ಮಾದರಿಯನ್ನು ಆರಿಸಿಕೊಳ್ಳಬೇಕು. ಧೈರ್ಯದಿಂದ ಮಾತ್ರವಲ್ಲ ʻಇದು ನಮ್ಮಹಬ್ಬʼ ಎಂಬ ಭಾವನೆಯಿಂದ ಸಂತೋಷದಿಂದ ಪಾಲ್ಗೊಂಡು ಅದನ್ನು ಉದ್ಘಾಟಿಸಬೇಕು. ಅಲ್ಲಿ ಹೇಗೆ ನಡೆದುಕೊಳ್ಳಬೇಕು ಮತ್ತು ಏನು ಮಾತನಾಡಬೇಕು ಎಂಬುದನ್ನು ಅವಿವೇಕಿಗಳಿಂದ ಹೇಳಿಸಿಕೊಳ್ಳುವಷ್ಟು ಅವರು ತಿಳಿಗೇಡಿಗಳೇನೂ ಅಲ್ಲ. ಅವರ ಕಥೆಗಳ ಅನೇಕ ಮಹಿಳೆಯರು ತಮ್ಮ ಬುರ್ಕಾದೊಳಗಿನ ಸೆರಗಿನಿಂದ ಆಗಾಗ ಕಣ್ಣನ್ನು ಒರೆಸಿಕೊಳ್ಳುತ್ತಾರಲ್ಲ. ಹಾಗೆ ಮಾಡುವಂಥದ್ದು ಕೂಡ ಇಲ್ಲಿ ಏನೂ ಇಲ್ಲ. ಏಕೆಂದರೆ ʼಶನಿʼಯನ್ನೂ ʼದೇವರುʼ ಎಂದು ಕಾಣುವುದು ನಮ್ಮ ಸಂಸ್ಕೃತಿ.
ಕೊನೆಯಲ್ಲಿ ಒಂದು ಮಾತು : ʻಬಾನುʼ
ಅಂದರೇನೇ ಆಕಾಶ. ಅವರು ಬಾನಿನಷ್ಟೇ ವಿಶಾಲವಾಗಿ ಆಲೋಚಿಸಬಲ್ಲರು. ಪ್ರಶ್ನೆ ಅದಲ್ಲ. ಅವರು ಉದ್ಘಾಟನೆಗೆ
ಆಯ್ಕೆ ಆದದ್ದು ಅವರ ʼಎದೆಯ ಹಣತೆʼಯ ಕಾರಣಕ್ಕೆ. ಹಣತೆ ನಂದಾದೀಪವಲ್ಲ. ಅದನ್ನು ಜೋಪಾನವಾಗಿ ಹಿಡಿದುಕೊಂಡರೆ
ಮಾತ್ರ ಅದು ಬೆಳಕನ್ನು ಕೊಡುತ್ತದೆ. ಸರಿಯಾಗಿ ಹಿಡಿದುಕೊಳ್ಳದಿದ್ದರೆ ಕೆಳಗೆ ಬಿದ್ದು ಒಡೆದು ಬಿಡುತ್ತದೆ.
ಅದು ಒಡೆದಾಗ ಎರಡು ರೀತಿಯ ಪರಿಣಾಮಗಳು ಆಗಬಹುದು. ಒಂದು: ಹಣತೆ ನಂದಿಹೋಗುವುದು. ಇನ್ನೊಂದು ಎಣ್ಣೆ
ಮತ್ತು ಬತ್ತಿಯ ಸಂಯೋಜನೆ ತಪ್ಪಿ ಬೆಳಕು ಬೆಂಕಿಯಾಗಿಬಿಡುವುದು! ಮೊದಲನೆಯದು ಅನಿಷ್ಟ. ಎರಡನೆಯದು ಅಪಾಯ! ಈ ಎಚ್ಚರಿಗೆ ಸಂಬಂಧಪಟ್ಟವರಿಗೆಲ್ಲರಿಗೂ
ಇರಲಿ; ಬಾನು ಮುಸ್ತಾಕ್ ಯಾವ ಹಿಂಜರಿಕೆಯೂ ಇಲ್ಲದೆ ದಸರಾ ಉದ್ಘಾಟಿಸುವ ಮೂಲಕ ʻದಸರಾ
ಕೇವಲ ಒಂದು ಧರ್ಮದ ಹಬ್ಬವಲ್ಲ ಅದು ಸಮಸ್ತ ನಾಡವರ ಹಬ್ಬʼ ಎಂಬ ಮಹತ್ವದ ಸಂದೇಶ ರವಾನೆಯಾಗಲಿ ಎಂದು
ಆಶಿಸೋಣ.
*****
ಡಾ ರಾಜೇಂದ್ರ ಬುರಡಿಕಟ್ಟಿ
26-08-2024







No comments:
Post a Comment