Friday, September 5, 2025

ಗೌರಿ ಲಂಕೇಶ್‌ ಜನನ, ಬಾಲ್ಯ ಮತ್ತು ಯೌವನ – ತಾಯಿ ಕಂಡಂತೆ

 ಗೌರಿ ಲಂಕೇಶ್ ಸ್ಮರಣೆ:

ಗೌರಿ ಲಂಕೇಶ್‌ ಜನನ, ಬಾಲ್ಯ ಮತ್ತು ಯೌವನ – ತಾಯಿ ಕಂಡಂತೆ


       ಜನವರಿ 29 ಬೆಳಿಗ್ಗೆ 6.55ಕ್ಕೆ ನನಗೆ ಡೆಲಿವರಿ ಆಯಿತು. ಹೆಣ್ಣು ಮಗು. ಒಂಭತ್ತು ಪೌಂಡ್ ತೂಗುತ್ತಿದ್ದಳು. ಮಗುವನ್ನು ನನಗೆ ತೋರಿಸಿದರು. ಅವಳು ಎಷ್ಟು ಮುದ್ದಾಗಿದ್ದಳು ಅಂದರೆ ಅಷ್ಟು ಚೆಂದದ ಮಗುವನ್ನು ನಾನೆಲ್ಲೂ ನೋಡಿಲ್ಲವೇನೋ ಅನ್ನಿಸಿತು. ನನ್ನ ಮಗುವಿನ ಮುಖ ನೋಡಿದ ತಕ್ಷಣ ನಾನು ಅನುಭವಿಸಿದ ನೋವಿನ ನೆನಪೂ ಇಲ್ಲದಂತೆ ಮಾಯವಾಯಿತು. ನನ್ನನ್ನು ವಾರ್ಡ್ಗೆ ಶಿಫ್ಟ್ ಮಾಡಿದರು. ಲಂಕೇಶರು ಆಗ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರಿಂದ (ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್) ನನಗೆ ಉಚಿತ ಸ್ಪೆಷಲ್ ವಾರ್ಡ್ನ  ಅನುಕೂಲವಿತ್ತು

        ಲಂಕೇಶರು ನಮ್ಮ ಮೊದಲ ಮಗುವನ್ನು ನೋಡಲು ಬಂದರು.  ಲಂಕೇಶರು ತಮ್ಮ ಮಗಳನ್ನು ಎಷ್ಟೋ ಹೊತ್ತು ಹಾಗೆಯೇ ನೋಡುತ್ತಾ ಕುಳಿತರು. ಆವತ್ತು ಅವರ ಕಣ್ಣಿನಲ್ಲಿ ಇದ್ದ ಸಂತೋಷವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

·         ನನ್ನ ಅತ್ತೆ ದೇವಿರಮ್ಮ ಮತ್ತು ಮಾವ ನಂದಿಬಸಪ್ಪ ಬಂದರು. ಹೆಣ್ಣು ಮಗುವನ್ನು ನೋಡಿ ನನ್ನ ಅತ್ತೆ, “ಹೆಣ್ಣಾ? ಮನೆಯಲ್ಲಿ ಇರುವ ಹೆಣ್ಣುಗಳು ಸಾಲದಿತ್ತಾ, ಈಗ ಇನ್ನೊಂದುಎಂದರು.

·         ಲಂಕೇಶರು ಅಂಗಡಿಗೆ ಹೋಗಿ ಮಗಳಿಗೆ ಪ್ರಾಕ್,  ಜುಬ್ಬಾ ಎಲ್ಲಾ ತೆಗೆದುಕೊಂಡು ಬಂದು ಮಗುವಿಗೆ ಹಾಕಲು ಹೇಳಿದರು. ನನ್ನ ಅಜ್ಜಿ ಚೆನ್ನಮ್ಮಹಾಗೆಲ್ಲ ಹೊಸ ಕೂಸಿಗೆ ಹೊಸಬಟ್ಟೆ ಹಾಕಬಾರದು. ಮೊದಲು ಬೇರೆ ಮಕ್ಕಳ ಹಳೆಬಟ್ಟೆ ಹಾಕಬೇಕುಎಂದರೂ ಇವರು ಕೇಳಲಿಲ್ಲ. “ ಬಟ್ಟೆಗಳನ್ನು ಮಗೂಗೆ ಹಾಕಿ, ನಾನು ನನ್ನ ಮಗಳನ್ನು ಬಟ್ಟೆಯಲ್ಲಿ ನೋಡಬೇಕು.” ಎಂದು ಹಠಹಿಡಿದರು. ಆಗ ಚೆನ್ನವಜ್ಜಿ ವಿಧಿಯಿಲ್ಲದೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಆಸ್ಪತ್ರೆಯ ಆವರಣದಲ್ಲಿದ್ದ ಒಂದು ಹಸುವಿನ ಮೇಲೆ ಹಾಕಿ ಮೇಲೆ ಅದನ್ನು ನನ್ನ ಮಗಳಿಗೆ ತೊಡಿಸಿದರು.

·         ಹೆರಿಗೆ ಆದ ಹದಿನೈದು ದಿನಗಳ ನಂತರ ನನ್ನ ಅಜ್ಜಿ ಚೆನ್ನವಜ್ಜಿಮನೆ ಮತ್ತು ಇಬ್ಬರು ಬಾಣಂತಿಯರ ಕೆಲಸಗಳನ್ನು ನಾನೊಬ್ಬಳೇ ಮಾಡಲಾಗುವುದಿಲ್ಲ ಎಂದು ನನ್ನನ್ನೂ ಮತ್ತು ನನ್ನ ಅಕ್ಕನನ್ನೂ ತಮ್ಮ ಮಕ್ಕಳೊಂದಿಗೆ ತಮ್ಮ ಕೊಕ್ಕನೂರಿಗೆ ಅಂದರೆ ನನ್ನ ತಾಯಿಯ ತವರುಮನೆಗೆ (ಹರಿಹರ ತಾಲ್ಲೂಕು ಮಲೇಬೆನ್ನೂರ ಸಮೀಪದ ಹಳ್ಳಿ) ಕರೆದುಕೊಂಡು ಹೋದರು. ಲಂಕೇಶರು ಪ್ರತಿ ಶನಿವಾರ ಕಾಲೇಜ್ ಮುಗಿದ ನಂತರ ಸ್ಕೂಟರ್ ನಲ್ಲಿ ಶಿವಮೊಗ್ಗದಿಂದ 68 ಕಿ.ಮೀ. ದೂರದ ಕೊಕ್ಕನೂರಿಗೆ ಬಂದು ಮತ್ತೆ ಸೋಮವಾರ ಬೆಳಗ್ಗೆ ಆರೂವರೆಗೆ ಶಿವಮೊಗ್ಗಕ್ಕೆ ಹೊರಡುತ್ತಿದ್ದರು.

·         ನಮ್ಮ ಮಗಳಿಗೆ ಗೌರಿ ಎಂದು ಹೆಸರಿಟ್ಟೆವು. ಅದು ನನ್ನ ತಾಯಿಯ ಹೆಸರು. ನನ್ನ ಮಗಳಿಗೆ ಎರಡೂವರೆ ತಿಂಗಳಾದ ನಂತರ ನಾನು ಶಿವಮೊಗ್ಗೆಯ ನಮ್ಮ ಮನೆಗೆ ವಾಪಸ್ ಬಂದೆ. ನಾನಿನ್ನೂ ಮಗಳನ್ನು ಎತ್ತಿಕೊಂಡು ಮನೆಯ ಒಳಗೆ ಹೋಗುತ್ತಿರುವಾಗ ಮನೆಯ ಮುಂದೆ ಒಂದು ಸ್ಕೂಟರ್ ಬಂದು ನಿಂತಿತು. ಯಾರು ಅಂತ ನೋಡಿದೆ. ಒಳ್ಳೆ ಅಜಾನುಬಾಹು ವ್ಯಕ್ತಿ. “ ಇವರು ತೇಜಸ್ವಿ ಅಂತಎಂದು ಲಂಕೇಶರು ಪರಿಚರು ಮಾಡಿಸಿದರು.

ಲಂಕೇಶರು ಹಸಿರು ಬಣ್ಣದ ಹೊಸ ತೊಟ್ಟಿಲನ್ನು ತಂದು, ಅದರೊಳಗೆ ಹಾಸಿಗೆ ದಿಂಬು ಎಲ್ಲಾ ಇಟ್ಟು ಅದನ್ನು ಮಗಳಿಗೆ ರೆಡಿ ಮಾಡಿಟ್ಟಿದ್ದರು. ಅದೇ ತೊಟ್ಟಿಲಿನಲ್ಲಿ ನಮ್ಮ ಇನ್ನೂ ಇಬ್ಬರು ಮಕ್ಕಳು ಬೆಳೆದರು. ಈಗಲೂ ತೊಟ್ಟಿಲು ಮರುಳಸಿದ್ಧಪ್ಪನವರ (ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಅಳಿಯರೂ ಆದ ಹಿರಿಯ ಲೇಖಕರು) ಮನೆಯಲ್ಲಿದೆ. ಅವರ ಮಗ ಚೈತನ್ಯ ಮಾತ್ರವಲ್ಲ ಚೈತನ್ಯನ ಮಗು ಕೂಡ ತೊಟ್ಟಿಲಿನಲ್ಲೇ ಬೆಳೆದಿದ್ದಾರೆ.

ಲಂಕೇಶರ ಹೊಸ ಸಂಸಾರ 

 

   ಒಂದು ದಿನ ಲಂಕೇಶರು, ನಾನು, ನನ್ನ ಮುತ್ತಜ್ಜಿ ಮತ್ತು ನಮ್ಮ ಪುಟ್ಟ ಮಗಳೂ ಜೋಗ್ಗೆ ಹೊರಟೆವು. ಲಂಕೇಶರಿಗೆ ಮತ್ತು ನನಗೆ ಪಾಲ್ಸ್ ಕೆಳಗೆ ಇಳಿದು ನೋಡಬೇಕೆನ್ನಿಸಿತು. ನನ್ನ ಮುತ್ತಜ್ಜಿನೀವು ಹೋಗಿ ಬನ್ನಿ. ನಾನು ಮಗುವನ್ನು ಇಟ್ಟುಕೊಂಡು ಕುಳಿತಿರುತ್ತೇನೆಎಂದು ನಮ್ಮನ್ನು ಕಳುಹಿಸಿದರು. ನಾನು ಮಗುವಿಗೆ ಹಾಲುಕುಡಿಸಿ ಹೊರಟೆ. ….ನಾವಿಬ್ಬರೂ…. ಮೇಲೆ ಹತ್ತಿ ಬರುವ ಹೊತ್ತಿಗೆ ಸಂಜೆಯಾಗಿತ್ತು. ನನ್ನ ಮಗಳಿಗೆ ಹಸಿವಾಗಿ ಅಳಲಾರಂಭಿಸಿದಾಗ ನನ್ನ ಮುತ್ತಜ್ಜಿ ತನ್ನ ಬತ್ತಿದ ಎದೆಯನ್ನೆ ಆಕೆಗೆ ಕೊಟ್ಟು ಚೀಪಿಸುತ್ತಾ ಕುಳಿತಿದ್ದರು. ನಾನು ಬಂದು ಆಕೆಗೆ ಹಾಲು ಕುಡಿಸಿದೆ. ನಾವು ಶಿವಮೊಗ್ಗಕ್ಕೆ ಬಂದಾಗ ಎಲ್ಲರೂಮಗುವಾಗಿ ಇನ್ನು ಮೂರು ತಿಂಗಳೂ ಸರಿಯಾಗಿ ಆಗಿಲ್ಲ. ಆಗಲೇ ಫಾಲ್ಸ್ ಇಳಿದು ಹೋಗಿದ್ದೀಯಅಂತ ಬೈದರು.

·         ಗೌರಿ ಎಂಟು ತಿಂಗಳ ಮಗುವಾಗಿದ್ದಾಗ ಲಂಕೇಶರಿಗೆ ಬೆಂಗಳೂರಿಗೆ ಟ್ರಾನ್ಸ್ಫರ್ಆಯಿತು. ಲಂಕೇಶರು ರಾಜಾಜಿನಗರದಲ್ಲಿ ಒಂದು ಮನೆ ನೋಡಿದ್ದರು. ನನ್ನನ್ನು ಮನೆ ತೋರಿಸಲು ಕರೆದುಕೊಂಡು ಹೋದರು…..ನಮ್ಮ ಹೊಸ ಸಂಸಾರ ಮನೆಯಲ್ಲಿ ಶುರುವಾಯಿತು.

·         ಗೌರಿಗೆ ಎರಡು ವರ್ಷ ಎರಡು ತಿಂಗಳಾದಾಗ ನಾನು ಮತ್ತೆ ಗರ್ಭಿಣಿ ಆದೆ. ಇಷ್ಟು ಬೇಗ ಇನ್ನೊಂದು ಮಗು ಬೇಡವೆಂದು ಏನೇನೋ ಪ್ಲಾನ್ ಮಾಡಿದ್ಧರೂ ಮತ್ತೆ ಮಗು ಹೊತ್ತಿದ್ದೆಆಗ ಲಂಕೇಶರಿಗೆ ಮೊದಲಿನಂತೆ ಜಾಸ್ತಿ ಬಿಡುವ ಸಿಗುತ್ತಿರಲಿಲ್ಲ. ಪ್ರತಿದಿನ ಮನೆಗೆ ಸ್ವಲ್ಪ ತಡವಾಗಿ ಬರಲು ಶುರು ಮಾಡಿದರು. ಮಧ್ಯೆ ನಮ್ಮ ವಾಸ್ವ್ಯವನ್ನು ಜಯನಗರದಿಂದ ಜರ್ನಲಿಸ್ಟ್ ಕಾಲೋನಿಗೆ ಬದಲಾಯಿಸಿದ್ದೆವು.




·         ನನ್ನ ಮೊದಲ ಮಗಳು ಗೌರಿಯನ್ನು ಗಾಂಧಿಬಜಾರಿನಲ್ಲಿದ್ದ ದಿ ಹೋಮ್ ಸ್ಕೂಲ್ಗೆ ಸೇರಿಸಿದೆವುಆಗಿನ ಕಾಲದಲ್ಲಿ ಅದು ತುಂಬಾ ಒಳ್ಳೆಯ ಮತ್ತು ದುಬಾರಿ ಶಾಲೆ ಅಂತ ಹೆಸರು ಪಡೆದಿತ್ತು. ಜರ್ನಲಿಸ್ಟ್ ಕಾಲೋನಿಯಿಂದ ಸ್ಕೂಲ್ಗೆ ಗೌರಿ ಜಟಕಾ ಗಾಡಿಯಲ್ಲಿ ಹೋಗಿ ಬರುತ್ತಿದ್ದಳುಒಮ್ಮೆ ಸ್ಪೋರ್ಟ್ಸ ಡೇ ಇತ್ತು. ನಾನು ಮತ್ತು ಲಂಕೇಶರು ನಮ್ಮ ಮಗಳು ಸ್ಪೋರ್ಟ್ಸ್ನಲ್ಲಿ ಫಸ್ಟ್ ಬರುತ್ತಾಳೆ ಎಂಬ ಉಮೇದಿನಿಂದ ಹೋದೆವು. ಆದರೆ ನಮ್ಮ ಮಗಳು ಲಾಸ್ಟ್ ಬಂದಳು. ಅವಳು ತುಂಬಾ ಸಾಫ್ಟ್ ಆಗಿದ್ದಳು, ಆಗ.

·         ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಅವರನ್ನು ಕರೆದುಕೊಂಡು ಶಿವಮೊಗ್ಗ, ಕೊನಗವಳ್ಳಿ, ಎರಗನಾಳು, ಕೊಕ್ಕನೂರು ಎಂದು ಲಂಕೇಶರ ಮತ್ತು ನನ್ನ ಅಪ್ಪಯ್ಯ ಮತ್ತು ಅಜ್ಜಿಯ ಊರುಗಳಿಗೆ ಹೋಗುತ್ತಿದ್ದೆ. ಅದಕ್ಕೆಂದು ಲಂಕೇಶರು ನನಗೆ ಎಂಟು ಅಥವಾ ಹತ್ತು ದಿನಗಳ ಟೈಮ್ ಕೊಡುತ್ತಿದ್ದರು. ಒಂದೊಂದು ಊರಿನಲ್ಲಿ ಎರಡೆರಡು ದಿನ ಮಾತ್ರ ಇರುತ್ತಿದ್ದೆ. ಅಕಸ್ಮಾತ್ 11ನೇ ದಿನಕ್ಕೆ ನಾನು ಬೆಂಗಳೂರಿಗೆ ವಾಪಸ್ ಬರಲಿಲ್ಲ ಎಂದರೆ ಲಂಕೇಶರು ಟಿಲಿಗ್ರಾಮ್ ಕಳುಹಿಸುತ್ತಿದ್ದರು. ಟೆಲಿಗ್ರಾಮ್ನಲ್ಲಿ `Start immediately’ ಎಂಥಲೋ, ‘ನಿನಗೇನು ಮನೆ ಬಗ್ಗೆ ಯೋಚನೆ ಇಲ್ಲವೇ?’ ಎಂಥಲೋ ಆಜ್ಞೆ ಮಾಡುತ್ತಿದ್ದರು. ಅದನ್ನು ಕಂಡಕೂಡಲೆ ನಾನು ಮಕ್ಕಳನ್ನು ಕರೆದುಕೊಂಡು ಪಾಪಸ್ ಬರುತ್ತಿದ್ದೆ.

·         ಇನ್ನು ನಾನು ಅಪರೇಷನ್ ಮಾಡಿಸಿಕೊಳ್ಳುವ ವಿಷಯ (ಮೂರು ಮಕ್ಕಳಾದ ಮೇಲೆ) ಲಂಕೇಶರ ಅಣ್ಣ ಶಿವರುದ್ರಪ್ಪನವರಿಗೆ ತಿಳಿದಾಗ ಅವರು, “ಅವಳು ಹಡೆಯಲಾರದವಳು, ಅವನು ದುಡಿಯಲಾರದವನು. ಅದಕ್ಕೇ ಮಾಡಿಸಿಕೊಳ್ಳುತ್ತಿದ್ದಾಳೆ”  ಎಂದು  ವ್ಯಂಗವಾಡಿದ್ದರು.

·         ನಮ್ಮ ಮೂವರು ಮಕ್ಕಳು ಶಿವಮೊಗ್ಗೆಯ ಮೆಗ್ಗನ್ ಆಸ್ಪತ್ರೆಯಲ್ಲೇ ಹುಟ್ಟಿದ್ದು. ಗೌರಿ ಹುಟ್ಟಿದಾಗ ಒಟ್ಟು 70 ರೂಪಾಯಿ ಖರ್ಚಾಗಿದ್ದರೆ, ಬೇಬಿ ಹುಟ್ಟಿದಾಗ 40 ರೂಪಾಯಿ ಖರ್ಚಾಗಿತ್ತು. ಆದರೆ ಮೂರನೇ ಹೆರಿಗೆ ಆದ ನಂತರ ಆಪರೇಶನ್ ಮಾಡಿಸಿಕೊಂಡಿದ್ದರಿಂದ ಆಸ್ಪತ್ರೆಯವರೇ ನನಗೆ 240 ರೂಪಾಯಿ ಕೊಟ್ಟಿದ್ದರು. ಅಂದರೆ ನಮ್ಮ ಮೂವರ ಮಕ್ಕಳ ಹೆರಿಗೆಗೆ ನಾನು ಆಸ್ಪತ್ರೆಗೆ ಒಟ್ಟು 110 ರೂಪಾಯಿ ಕೊಟ್ಟಿದ್ದರೆ ಅವರೇ ನನಗೆ 130 ರೂಪಾಯಿ ಹೆಚ್ಚಿಗೆ ಕೊಟ್ಟು ಕಳುಹಿಸಿದ್ದರು.

ಸತ್ತು ಸತ್ತು ಬದುಕಿದ ಹುಡುಗಿ


·         ಒಂದು ದಿನ ನನ್ನ ಮಗಳು ಗೌರಿ ಸೌತ್ ಎಂಡ್ ಸರ್ಕಲ್ನಲ್ಲಿ ಪಾನಿಪುರಿ ತಿಂದು ಮನೆಗೆ ಬಂದಳು. ಅವತ್ತು ರಾತ್ರಿ ಅವಳಿಗೆ ತುಂಬಾ ಜ್ವರ. ಆಕೆಯ ಮೈಮುಟ್ಟಿದರೆ ಕೆಂಡದಂತೆ ಸುಡುತ್ತಿತ್ತು. ಆಕೆ ಏನೇನೋ ಮಾತಾಡಲು ಶುರುಮಾಡಿದಳು. ಒಂದೂ ಅರ್ಥವಾಗುತ್ತಿರಲಿಲ್ಲ. ಇದು ಸಾಮಾನ್ಯ ಜ್ವರ ಅಲ್ಲ ಎಂದು ಗೊತ್ತಾಗಿ ರಾತ್ರಿ 11 ಹೊತ್ತಿಗೆ ಗಾಂಧಿಬಜಾರಿನಲ್ಲಿದ್ದ ಪಾಂಡು ನರ್ಸಿಂಗ್ ಹೋಂಗೆ ನಾನು ಮತ್ತು ಲಂಕೇಶರು ಕರೆದುಕೊಂಡು ಹೋದೆವು.

·         ಅಷ್ಟು ಹೊತ್ತಿಗೆ ಗೌರಿಗೆ ಪ್ರಜ್ಞೆ ತಪ್ಪಿತ್ತು. ಆದರೂ ಆಗೀಗ ಎಚ್ಚರಗೊಂಡು ಕಿರುಚಾಡುತ್ತಿದ್ದಳು. ಆಕೆಯನ್ನು ನೋಡಿದ ಡಾಕ್ಟರ್ನಿಮ್ಮ ಮಗುವನ್ನು ನೀವು ಸರಿಯಾಗಿ ಬೆಳಸಿಲ್ಲ. ಆಮೇಲೆ ಬಂದು ಅವಳನ್ನು ನೋಡುತ್ತೇನೆ ಎಂದು ಹೇಳಿ ಹೋದವರು 12 ಗಂಟೆಯಾದರೂ ವಾಪಸ್ ಬರಲಿಲ್ಲ. ನರ್ಸಿಂಗ್ ಹೋಂನಲ್ಲಿದ್ದ ನರ್ಸ್ಳನ್ನು ಕೇಳಿದರೆ ಆಕೆಡಾಕ್ಟರ್ ಮತ್ತೆ ಬೆಳಗ್ಗೆ ಬರುತ್ತಾರೆಎಂದಳು.

·         ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಿಟ್ಟು ಬಂತು. ಮಗಳನ್ನು ಎತ್ತಿಕೊಂಡು ಅಲ್ಲಿಂದ ಹೊರಟರು. ಅವರನ್ನು ತಡೆಯಲು ನರ್ಸ್ ಪ್ರಯತ್ನಿಸಿದಳು, “ಡಾಕ್ಟರ್ ಅನುಮತಿ ಇಲ್ಲದೆ ಮಗುವನ್ನು ತೆಗೆದುಕೊಂಡು ಹೋಗುವಂತಿಲ್ಲಎಂದಳು. ಆಗ ಲಂಕೇಶರುನಿಮ್ಮ ನರ್ಸಿಂಗ್ ಹೋಂನ ಗಾಜುಗಳಲ್ಲಿ ಒಂದೂ ಇರದಂತೆ ಎಲ್ಲವನ್ನು ಚಿಂದಿಮಾಡುತ್ತೇನೆ. ನಮ್ಮ ಮಗುವಿಗೆ ಜ್ವರ ಬಂದು ನರಳಾಡುತ್ತಿದ್ದರೆ ನಾವು ನಮ್ಮ ಮಗಳನ್ನು ಸರಿಯಾಗಿ ಸಾಕಿಲ್ಲ ಎನ್ನುತ್ತೀರಾ? ನಿಮ್ಮನ್ನು ನೋಡಿಕೊಳ್ಳುತ್ತೇನೆಎಂದು ರೇಗಿದರು.


·       ನಾವಿಬ್ಬರೂ ಗೌರಿಯನ್ನು ಎತ್ತಿಕೊಂಡು ಆಟೋದಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಹೋದೆವು. ಮಳೆ ಜೋರಾಗಿ ಸುರಿಯುತ್ತಿತ್ತು. ಅಷ್ಟು ಹೊತ್ತಿಗೆ ಮರುಳಸಿದ್ಧಪ್ಪ ಅವರಿಗೆ ಲಂಕೇಶ್ ಫೋನ್ ಮಾಡಿದ್ದರಿಂದ ಅವರೂ ಮಾರ್ಥಾಸ್ ಆಸ್ಪತ್ರೆಗೆ ಬಂದರು. ನಮ್ಮ ಮಗಳ ಸ್ಥಿತಿಯನ್ನು ನೋಡಿದ ಆಸ್ಪತ್ರೆಯ ಡಾಕ್ಟರ್ಗಳು ಆಕೆಯನ್ನು ಕೂಡಲೇ ಅಡ್ಮಿಟ್ ಮಾಡಿಕೊಂಡರು.

·         ಗೌರಿಗೆ ಮೆದುಳಿನ ಜ್ವರ ಆಗಿದೆ ಎಂದು ಹೇಳಿ ಆಕೆಗೆ ಟ್ರೀಟ್ಮೆಂಟ್ ಶುರುಮಾಡಿದರು. ಆಕೆಯ ಬೆನ್ನಿನ ಮೂಳೆಯ ರಕ್ತನಾಳದಿಂದ ದ್ರವ ತೆಗೆಯಬೇಕೆಂದು ವೈದ್ಯರು ಹೇಳಿದರು. ಗೌರಿಗೆ ತಾನೆಲ್ಲಿದ್ದೇನೆ, ತನಗೆ ಏನಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಆಕೆಗೆ ಪ್ರಜ್ಞೆ ಇಲ್ಲದಿದ್ದರೂ ಚೀರಾಡುತ್ತಿದ್ದಳು. ಆಕೆಯನ್ನು ಹಿಡಿದಿದ್ದವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಳು. ಆಗ ಆಕೆಯನ್ನು ನಾಲ್ಕುಜನ ಬಿಗಿಯಾಗಿ ಹಿಡಿದ ನಂತರವೇ ಆಕೆಯ ಬೆನ್ನು ಮೂಳೆಗೆ ಇಂಜೆಕ್ಷನ್ನಿನ ಸೂಜಿ ಚುಚ್ಚಿ ದ್ರವವನ್ನು ತೆಗೆಯಬೇಕಾಯಿತು.

·         ಗೌರಿಯನ್ನು ಪರೀಕ್ಷಿಸಿದ ನಂತರ ವೈದ್ಯರುನಿಮ್ಮ ಮಗಳಿಗೆ 42 ಗಂಟೆಯ ಒಳಗೆ ಪ್ರಜ್ಞೆ ಬರಬೇಕು. ಇಲ್ಲವೆಂದರೆ ಅವಳು ಬದುಕುತ್ತಾಳೆ ಎಂದು ಗ್ಯಾರಂಟಿ ಕೊಡಲಾಗುವುದಿಲ್ಲ. ಆಕೆಗೆ ಪ್ರಜ್ಞೆ ಬಂದರೂ ಆಕೆ ಕುರುಡಿಯಾದರೂ ಆಗಬಹುದುಎಂದರು. ಅದನ್ನು ಕೇಳಿ ನಾವಿಬ್ಬರೂ ದಂಗಾಗಿ ಹೋದೆವು. ನನ್ನ ಮಗಳ ಕಣ್ಣುಗಳು ಅವಳ ಅಪ್ಪನ ಕಣ್ಣಿನಷ್ಟೇ ಚೆನ್ನ. “ನನ್ನ ಮಗಳ ಕಣ್ಣುಗಳ ಮುಂದೆ ಹೇಮಾಮಾಲಿನಿಯ ಕಣ್ಣು ಯಾವ ಲೆಕ್ಕಕ್ಕೂ ಇಲ್ಲಎನ್ನುತ್ತಿದ್ದೆ ನಾನು. ಅಂತಹ ಮಗಳು ಕುರುಡಿಯಾದರೆ ಎಂಬ ಚಿಂತೆ ಆಯಿತು.

·         ನನ್ನ ಕಷ್ಟದ ದಿನಗಳು ಶುರುವಾದವು. ನನ್ನ ತಲೆ ಸಂಪೂರ್ಣ ಖಾಲಿಯಾಗಿತ್ತು. ಆಸ್ಪತ್ರೆಯಲ್ಲಿ ನನ್ನ ಮಗಳನ್ನೇ ನೋಡುತ್ತಾ ಕುಳಿತೆ. ಐದು ನಿಮಿಷಕ್ಕೊಮ್ಮೆ ಗಡಿಯಾರ ನೋಡುತ್ತಾ ಆದಷ್ಟು ಬೇಗೆ ಪ್ರಜ್ಞೆ ಪಡೆಯಲಿ ಎಂದು ಆಶಿಸುತ್ತಿದ್ದೆ. ಹಾಸಿಗೆಯ ಮೇಲೆ ಕಣ್ಣುಮುಚ್ಚಿ ಮಲಗಿದ್ದ ಗೌರಿ ಯಾವುದೇ ರೀತಿಯ ಚಲನೆ ಇಲ್ಲದೆ ಹಾಗೇ ಮಲಗಿದ್ದಳು. ಆಕೆ ಪ್ರಜ್ಞೆ ಕಳೆದುಕೊಂಡು 36 ಗಂಟೆಗಳ ನಂತರ ಸಣ್ಣಗೆ ಕೈ ಕಾಲು ಆಡಿಸಿದಳು ಆದರೆ ಕಣ್ಣು ಬಿಡಲಿಲ್ಲ. ಕೊನೆಗೆ 38 ಗಂಟೆಗೆ ಕಣ್ಣುಬಿಟ್ಟಳು.

·         ನನಗೆ ಹೋದ ಜೀವ ಬಂದಂತಾಯಿತು. ಆಕೆಗೆ ಕಣ್ಣು ಕಾಣಿಸುತ್ತಿತ್ತು. ಜ್ವರ ಬಂದ ನಾಲ್ಕೈದು ದಿನಗಳಲ್ಲಿ ಗೌರಿಯ ಕೈಕಾಲು
ಬತ್ತಿಹೋಗಿದ್ದವು
. ಆಕೆಗೆ ನಿಲ್ಲಲೂ ಶಕ್ತಿ ಇರಲಿಲ್ಲ ಆಕೆಯನ್ನು ಹಿಡಿದು ನಿಲ್ಲಿಸಿದರೆ ಬೀಳುತ್ತಿದ್ದಳು. ಅವಳನ್ನು ಕೆಲವು ದಿನಗಳ ಕಾಲ ಐಸಿಯುನಲ್ಲೇ ಇಟ್ಟಿದ್ದರು.

·         ಕೆಲದಿನಗಳ ನಂತರ ಗೌರಿಯನ್ನು ವಾರ್ಡ್ಗೆ ಶಿಫ್ಟ್ ಮಾಡಿದರು. ಆದರೂ ಆಕೆ ಚೇತರಿಸಿಕೊಳ್ಳಲು ಬಹಳ ದಿನಗಳೇ ಬೇಕಾದವು. ಅವತ್ತು ನಾವು ಗೌರಿಯನ್ನು ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರದಿದ್ದರೆ ಅವಳು ಖಂಡಿತಾ ಬದುಕುಳಿಯುತ್ತಿರಲಿಲ್ಲ.

·         ಗೌರಿಹಬ್ಬದ ದಿನದಂತ ನಮ್ಮ ಮಗಳು ಗೌರಿಯನ್ನು ಆಸ್ಪತ್ರೆಯಿಂದ ಮನಗೆ ಕರೆದುಕೊಂಡು ಬಂದೆವು. ಒಂದು ವರ್ಷದಲ್ಲಿ ಇಷ್ಟೆಲ್ಲ ನಡೆಯಿತು.

·         ಗೌರಿಗೆ ಬ್ರೈನ್ ಫೀವರ್ ಆದಾಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಹಿಡಿದಿದ್ದರಿಂದ ಆಕೆ  ಬಹಳಷ್ಟು ದಿನ ಶಾಲೆಯಿಂದ  ಹೊರಗೇ ಉಳಿದಿದ್ದಳು. ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಏಳನೇ ತರಗತಿಯ ಪರೀಕ್ಷೆಗಳು ಒಂದು ಮುಖ್ಯಘಟ್ಟ. ಅದರಲ್ಲಿ ಚೆನ್ನಾಗಿ ಮಾರ್ಕ್ಸ್ ತೆಗೆದುಕೊಂಡರೆ ಉತ್ತಮ ಹೈಸ್ಕೂಲಿನಲ್ಲಿ ಪ್ರವೇಶ ಸಿಗುತ್ತದೆ. ಆದರೆ  ಬಹಳಷ್ಟು ಕ್ಲಾಸ್ಗಳನ್ನು ಗೌರಿ ಮಿಸ್ ಮಾಡಿಕೊಂಡಿದ್ದರಿಂದ ಆಕೆಯನ್ನು ವರ್ಷ ಪರೀಕ್ಷೆಗಳಿಗೆ ಕಳುಹಿಸುವುದು ಬೇಡವೆಂದು ನಾನು ಮತ್ತು ಲಂಕೇಶರು ನಿರ್ಧರಿಸಿದೆವು. ಆದರೆ ಗೌರಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತೇನೆ ಎಂದು ನಿರ್ಧರಿಸಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಕೂಡ ಆದಳು.


******* 

ಭಾಗ ೨:

ಯೌವನದ ಹೊಳೆಯಲ್ಲಿ ಪ್ರೀತಿಯ ಕಡಲಲ್ಲಿ…. 

 

     ಪಿ.ಯು.ಸಿ.ಯಲ್ಲಿ ಓದುತ್ತಿದ್ದ ನಮ್ಮ ಮಗಳು ಗೌರಿ ಯಾರೋ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಅಂತ ನನ್ನ ಸ್ನೇಹಿತೆ ರಾಣಿ ನನಗೆ ಹೇಳಿದಳು. ಕಾಲೇಜಿನಲ್ಲಿ ಗೌರಿಗಿಂತ ಎರಡು ವರ್ಷ ಸೀನಿಯರ್ ಆಗಿದ್ದ ಅವನ ಹೆಸರು ಚಿದಾನಂದ ರಾಜಘಟ್ಟ. ಒಮ್ಮೆ ಆತ ಗಾಂಧಿಬಜಾರ್ ನಲ್ಲಿರುವ ಗಣೇಶ ಬೇಕರಿಗೆ ಬಂದಿದ್ದಾಗ ಗೌರಿ ಆತನನ್ನು ಪರಿಚಯಿಸಿದ್ದಳು. ಆತ ಕಪ್ಪಗೆ, ಸಣ್ಣಗೆ, ಎತ್ತರಕ್ಕೆ ಇದ್ದ. ನವಿಲಿನಂತಿದ್ದ ನನ್ನ ಮಗಳು ಕೆಂಬೂತದಂತಿರುವ ಈತನನ್ನು ಹೇಗೆ ಇಷ್ಟಪಟ್ಟಳು ಎಂದು ನನಗೆ ಅಚ್ಚರಿ ಆಯಿತು.

·    ಅದೂ ಅಲ್ಲದೆ ಆಗ ಅವರಿಬ್ಬರೂ ಇನ್ನೂ ಚಿಕ್ಕ ವಯಸ್ಸಿನವರು. ನೆಟ್ಟಗೆ ಓದಬೇಕಾದ ವಯಸ್ಸು. ಇದರ ಬಗ್ಗೆ ಲಂಕೇಶರಿಗೆ ಹೇಳಿದೆ. ಅವರು ಹುಡುಗನನ್ನು ಕರೆಸು, ನಾನು ಅವನೊಂದಿಗೆ ಮಾತನಾಡುತ್ತೇನೆಅಂದರು. ಆತ ಮನೆಗೆ ಬಂದಾಗ ಅವನಿಗೆ ಬುದ್ಧಿಹೇಳಿದರು. ವಿದ್ಯಾಭ್ಯಾಸ ಮುಖ್ಯ ಎಂದೆಲ್ಲ ವಿವರಿಸಿದರು. ಅವನು ಸುಮ್ಮನೆ ಕೇಳಿಸಿಕೊಂಡು ಕೂತಿದ್ದು ಹೋದ. ಗೌರಿ ಕೂಡ ಇನ್ನು ಮುಂದೆ ಅವನನ್ನು ಮೀಟ್ ಮಾಡುವುದಿಲ್ಲ, ಓದಿನ ಕಡೆ ಗಮನ ಕೊಡುತ್ತೇನೆ ಅಂದಳು. ಆಗ ನಾನು ಸುಮ್ಮನಾದೆ. ಒಂದು ವರ್ಷದ ನಂತರ ಗೌರಿ ಕಾಲೇಜಿಗೆ ಚಕ್ಕರ್ ಹೊಡೆದು ಚಿದಾನಂದನೊಂದಿಗೆ ಯಾವುದೋ ಸಿನಿಮಾಕ್ಕೆ ಹೋಗಿದ್ದಾಗ ಮತ್ತೆ ಅದೇ ರಾಣಿ ಕೈಯಲ್ಲಿ ಸಿಕ್ಕಿಹಾಕಿಕೊಂಡಳು.

·    ಮಧ್ಯೆ ಗೌರಿಗೆ ಇಬ್ಬರು ಡಾಕ್ಟರ್ ವರಗಳಿಂದ ಪ್ರಪೋಸಲ್ ಬಂದವು. ಇಬ್ಬರೂ ನಮ್ಮ ಪರಿಚಿತರೇ. ಒಬ್ಬ ಇದ್ದಕ್ಕಿದ್ದಂತೆ ಹೇಳದೆ ಕೇಳದೆ ನಮ್ಮ ಮನೆಗೆ ಬಂದೇಬಿಟ್ಟ. ಗೌರಿ ತನ್ನ ರೂಮಿನ ಬಾಗಿಲು ಹಾಕಿಕೊಂಡು ಕೂತವಳು ಆತನನ್ನು ನೋಡಲು ಹೊರಗೆ ಬರಲೇ ಇಲ್ಲ. ಅದಾದ ಕೆಲವು ದಿನಗಳ ನಂತರ ಅವಳು ಯಾರಿಗೂ ಹೇಳದೇ ಕೇಳದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಸೊಂಟದ ತನಕ ಇದ್ದ ತನ್ನ ತಲೆಕೂದಲನ್ನು ಕತ್ತರಿಸಿ ಬಾಬ್ ಕಟ್ ಮಾಡಿಸಿಕೊಂಡು ಬಂದಳು. ಅವಳ ಪ್ರಕಾರ ಹುಡುಗನ ಮನೆಯವರು ಸಂಪ್ರದಾಯಸ್ಥರಾಗಿದ್ದರಿಂದ ಬಾಬ್ ಕಟ್ ಹುಡುಗಿಯನ್ನು ಒಪ್ಪುವುದಿಲ್ಲ ಎಂದಾಗಿತ್ತು. ಅದ ಸರಿಯೂ ಆಯಿತು. ಆಕೆಯ ಹೊಸ ಅವತಾರವನ್ನು ನೋಡಿದ ನನ್ನ ತಮ್ಮ ಶಿವು ಗೌರಿಗೆ ಎರಡು ಬಿಗಿದ. ಆಕೆ ಸುಮ್ಮನೇ ಕೂತಿದ್ದಳು.

·      ಇನ್ನೊಬ್ಬ ಡಾಕ್ಟರ್ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದ. ಅವನೂ ಒಂದು ದಿನ ತನ್ನ ತಂದೆಯೊಂದಿಗೆ ನಮ್ಮ ಮನೆಗೆ ಬಂದ. ಗೌರಿಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆಕೆ ಮನೆಯಲ್ಲಿ ತೊಟ್ಟಿದ್ದ ಬಟ್ಟೆಯಲ್ಲೇ ಅವರ ಮುಂದೆ ಕೂತಳು. ಹುಡುಗ ಸ್ವಲ್ಪ ಕುಳ್ಳ. ಹೊಟ್ಟೆ ಕೂಡ ಇತ್ತು. ಆತ ಹೋದ ನಂತರಹುಡುಗಿ ಏನಂದಳುಎಂದು ಎರಡು ಪತ್ರ ಬರೆದ. ಗೌರಿ ಸುತಾರಾಂ ಒಪ್ಪಲಿಲ್ಲ.

·   ನನಗೆ ಈಗಲೇ ಮದುವೆ ಬೇಡ. ನಾನು ಓದುತ್ತೇನೆಎಂದು ಗೌರಿ ಹಟಹಿಡಿದಳು. ಆಗ ಲಂಕೇಶರು ತಮ್ಮಎಲ್ಲಿಂದಲೋ ಬಂದವರುಚಿತ್ರದಲ್ಲಿ ತೊಡಗಿದ್ದರಿಂದ ಇದೆಲ್ಲದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆಅಮ್ಮನಿಗೆ ಬೇಜಾರಾಗದಂತೆ ನಡೆದುಕೋಎಂದಷ್ಟೇ ತಮ್ಮ ಮಗಳಿಗೆ ಹೇಳಿ ಶೂಟಿಂಗ್ ಜಾಗದಿಂದಲೇ ಪತ್ರ ಬರೆದಿದ್ದರು.

·   ನನಗೂ ನನ್ನ ಮಕ್ಕಳು ಚೆನ್ನಾಗಿ ಓದಬೇಕು, ಅವರೆಲ್ಲ ಡಾಕ್ಟ್ರರ್, ಇಂಜಿನಿಯರ್ ಆಗಬೇಕಂತ ಆಸೆ. ನಮ್ಮ ಮಕ್ಕಳು ಯಾರೂ ರಾಂಕ್ ಸ್ಟುಡೆಂಟ್ಸ್ ಅಲ್ಲ. ಆದರೆ ಬುದ್ಧಿವಂತರು. ಯಾರೂ ಹಗಲು ರಾತ್ರಿ ಓದುತ್ತಿರಲಿಲ್ಲ. ಆದರೂ ಒಳ್ಳೆಯ ಮಾರ್ಕ್ಸ್ ಅನ್ನು ಪಡೆಯುತ್ತಿದ್ದರು. ಅಜಿತ್ (ಇಂದಿನ ಇಂದ್ರಜಿತ್ ಲಂಕೇಶ್) ಅಂತೂ ಬರೀ ಕ್ರಿಕೆಟ್ ನಲ್ಲೇ ಕಾಲ ಕಳೆಯುತ್ತಿದ್ದ. ಆದರೂ ಎಸ್.ಎಸ್.ಎಲ್.ಸಿನಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ.

·  ನಾವಿನ್ನೂ ಗಾಂಧಿಬಜಾರಿನ ಮನೆಯಲ್ಲಿ ಇದ್ದಾಗಲೇ ನಮ್ಮ ದೊಡ್ಡ ಮಗಳು ಗೌರಿ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯ ಆಗತಾನೆ ಪ್ರಾರಂಭಿಸಿದ್ದ ಬಿಎ ಪತ್ರಿಕೋದ್ಯಮ ಕೋರ್ಸ್ ಸೇರಿದಳು. ಅದೇ ಹೊತ್ತಿಗೆ ಚಿದಾನಂದ ರಾಜಘಟ್ಟ ಕೂಡ ಡಿಗ್ರಿ ಮುಗಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಸೇರಿದ್ದ. ಅವರಿಬ್ಬರ ಸ್ನೇಹ ಮುಂದುವರೆದಿತ್ತು. ಗೌರಿ ಮತ್ತು ಚಿದು ಒಬ್ಬರನ್ನೊಬ್ಬರು ಬಿಟ್ಟು ಇರುವುದಿಲ್ಲ ಎಂದು ನನಗೆ ಖಾತರಿ ಆಗಿ ಅದರ ಬಗ್ಗೆ ಚಕಾರವೆತ್ತದೆ ಸುಮ್ಮನಾದೆ.  


·  ಚಿದು ನಮ್ಮ ಮನೆಯವರಿಗೆ ಹತ್ತಿರವಾದ. ಟೆನ್ನಿಸ್ ಅಥವಾ ಕ್ರಿಕೆಟ್ ಟೆಸ್ಟ್ ಮ್ಯಾಚ್ಗಳಿದ್ದರಂತೂ ಲಂಕೇಶರು, ಅಜಿತು ಮತ್ತು ಚಿದು ದಿನಗಟ್ಟಲೆ ಆಗಿನ ಬ್ಲಾಕ್ ಆಂಡ್ ವೈಟ್ ಟಿವಿ ಮುಂದೆ ಕೂತು ಆಟವನ್ನು ನೋಡುತ್ತಿದ್ದರು.

·    ಡಿಗ್ರಿ ಮುಗಿಸಿದ ನಂತರ ಗೌರಿ ದೆಹಲಿಯಲ್ಲಿರುವ ಐಐಎಂಸಿ ಎಂಬ ಸಂಸ್ಥೆಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದಲು ಒಬ್ಬಳೇ ಹೋದಳು. ನಮ್ಮ ಮಗುವೊಂದು ಪ್ರಥಮ ಬಾರಿಗೆ ಮನೆ ಬಿಟ್ಟು ಅಷ್ಟು ದೂರ, ಅಷ್ಟು ದಿನ ಒಬ್ಬಳೇ ಹೋದದ್ದು ಅದೇ ಮೊದಲು. ಆಕೆಯನ್ನು ಬೆಂಗಳೂರಿನ ನಿಲ್ದಾಣದಲ್ಲಿ ಟ್ರೈನ್ ಹತ್ತಿಸಿದಾಗ ನನ್ನ ಕಣ್ಣಲ್ಲಿ ಸಹಜವಾಗಿಯೇ ಕಣ್ಣೀರು.

· ಲಂಕೇಶರಿಗೂ ಒಂದು ತರಹದ ಆತಂಕ. ಗೌರಿ ಮನೆಯಲ್ಲಿದ್ದಾಗ ಆಕೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದಿದ್ದ ಅವರು ಆಕೆ ದೆಹಲಿಯಲ್ಲಿದ್ದಾಗ ಪ್ರತಿದಿನ ಟಿವಿಯಲ್ಲಿ ನ್ಯೂಸ್ ನೋಡುವಾಗ ದೆಹಲಿಯ ಹವಾಮಾನ ಹೇಗಿದೆ ಎಂದು ವಿಶೇಷವಾಗಿ ಗಮನವಿಟ್ಟು ನೋಡುತ್ತಿದ್ದರು; ತಮ್ಮ ಮಗಳು ದೆಹಲಿಯ ಶೆಖೆಯಿಂದಲೋ, ಚಳಿಯಿಂದಲೋ ಕಷ್ಟ ಅನುಭವಿಸುವುದು ಬೇಡ ಎಂಬ ಕಾಳಜಿಯಿಂದ. ಆಕೆ ದೆಹಲಿಯಲ್ಲಿದ್ದಾಗ ಚಿದಾನಂದ ಬೆಂಗಳೂರಿನಲ್ಲಿ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಾಗಿದ್ದ.

·  ನಾನು ಬಯಸಿದಂತೆ ನನ್ನ ಮೊದಲ ಮಗಳು ಡಾಕ್ಟರೂ ಆಗಲಿಲ್ಲ, ಇಂಜನಿಯರ್ ಕೂಡ ಆಗಲಿಲ್ಲ. ಬದಲಾಗಿ ಆಕೆ ಇಂಗ್ಲಿಷ್ ಪತ್ರಿಕೋದ್ಯಮ ಸೇರುವುದು ಗ್ಯಾರಂಟಿ ಆಗಿತ್ತು.

·  ದೆಹಲಿಯಲ್ಲಿ ಕೋರ್ಸ್ ಮುಗಿಸಿಕೊಂಡು ಒಂದು ವರ್ಷದ ನಂತರ ಬೆಂಗಳೂರಿಗೆ ವಾಪಸ್ ಬಂದ ಗೌರಿ ಆಗತಾನೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಳು. ಚಿದಾನಂದ ಕೂಡ ಪತ್ರಿಕೋಧ್ಯಮದಲ್ಲಿ ಹೆಸರು ಗಳಿಸಲಾರಂಭಿಸಿದ್ದ. “ಇನ್ನು ನೀವಿಬ್ಬರೂ ಹೀಗೆ ಓಡಾಡಿದ್ದು ಸಾಕು. ಮದುವೆ ಮಾಡಿಕೊಳ್ಳಿ. ಇಲ್ಲವೆಂದರೆ ಒಟ್ಟಿಗೆ ಓಡಾಡುವುದನ್ನು ನಿಲ್ಲಿಸಿಎಂದು ನಾನು ಹಟ ಮಾಡಿದೆ. ಹೇಗಿದ್ದರೂ ನನ್ನ ಮಗಳು ಓದಿದ್ದಾಳೆ, ಈಗ ಕೆಲಸ ಪಡೆದು ತನ್ನ ಕಾಲ ಮೇಲೆ ನಿಂತಿದ್ದಾಳೆ ಎಂಬ ವಿಶ್ವಾಸ ನನಗೆ ಬಂದಿತ್ತು


·    ಒಂದು ದಿನ ಲಂಕೇಶರು ನಮ್ಮನ್ನೆಲ್ಲ ಎಂಜಿ ರಸ್ತೆಯಲ್ಲಿರುವ ಹೋಟೆಲ್ಲಿಗೆ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾಗ ಗೌರಿನಾನು ಮತ್ತು ಚಿದು ಮುಂದಿನ ತಿಂಗಳು ಮದುವೆ ಆಗುತ್ತೇವೆ. ನಮ್ಮಿಬ್ಬರ ಹೆಸರುಗಳನ್ನು ರಿಜಿಸ್ಟ್ರಾರ್ ಆಫೀಸಿನಲ್ಲಿ ನಮೂದಿಸಿ ಬಂದಿದ್ದೇವೆಎಂದಳು. ಅದನ್ನು ಕೇಳಿಇದೆಂತಹ ಮದುವೆ?” ಎಂದೆ ನಾನು. ಆದರೆ ಅದನ್ನು ಕೇಳಿ ಲಂಕೇಶರಿಗೆ ತುಂಬಾ ಸಂತೋಷವಾಯಿತು. ಯಾಕೆಂದರೆ ಗೌರಿ ಯಾವ ಸಂಪ್ರದಾಯ ಇತ್ಯಾದಿಗಳಿಲ್ಲದೆ ಸರಳವಾಗಿ ರಿಜಿಸ್ಟರ್ ಮದುವೆಯಾಗಲು ನಿಶ್ಚಯಿಸಿದ್ದಳು. ಆಕೆನನ್ನ ಮದುವೆಗೆ ಖರ್ಚಾಗುವುದು ಕೇವಲ ಹಿನೈದು ರೂಪಾಯಿ ಐವತ್ತು ಪೈಸೆಎಂದಾಗ ಲಂಕೇಶರು ಹೆಮ್ಮೆಯಿಂದ ನಕ್ಕಿದ್ದರು. ಯಾಕೆಂದರೆ ಅವರೂ ಇಂತಹ ಸರಳ ಮದುವೆಗಳಲ್ಲಿ ನಂಬಿಕೆ ಇಟ್ಟಿದ್ದವರು ಮತ್ತು ಪ್ರೋತ್ಸಾಹಿಸುತ್ತಿದ್ದವರು

· ಒಂದು ದಿನ ಆಫೀಸಿನಿಂದ ಮನೆಗೆ ಬಂದ ಗೌರಿನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಆಗುತ್ತಿದ್ದೇನೆಎಂದಳು. ಆಕೆಯ ಅಪ್ಪ ಇನ್ನೂ ಆಫೀಸಿನಿಂದ ಬಂದಿರಲಿಲ್ಲವಾದ್ದರಿಂದ ಅವರ ಆಫೀಸಿಗೆ ಫೋನ್ ಮಾಡಿ ತನ್ನ ಅಪ್ಪನಿಗೆ ಹೇಳಿದಳು.

· ಮಾರನೆಯ ದಿನ ಅಂಗಡಿಯನ್ನು ತೆರೆದ ನಂತರ, ಅದರ ಜವಾಬ್ದಾರಿಯನ್ನು ಶಾಂತಾಳಿಗೆ ವಹಿಸಿ ಲಂಕೇಶರೊಂದಿಗೆ ನಾನು ರಿಜಿಸ್ಟ್ರಾರ್ ಆಫೀಸಿಗೆ ಹೋದೆ. ಅಲ್ಲಿಗೆ ಗೌರಿ ಮತ್ತು ಚಿದು ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಚಿದು ತಂದೆ ಡಾ. ರಾಜಣ್ಣ ಮತ್ತು ತಾಯಿ ಉಮಾ ಕೂಡ ಬಂದರು. ಅವರಿಬ್ಬರಿಗೆ ಕಾನೂನು ಮದುವೆ ಒಂದಿಷ್ಟೂ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ನಮ್ಮ ಮಗಳಂತೆ ಚಿದು ತನ್ನ ಹೆತ್ತವರಿಗೆ ಮದುವೆ ಆಗುತ್ತಿರುವ ಬಗ್ಗೆ ಮುಂಚಿತವಾಗಿ ಹೇಳದೇ ಅದೇ ದಿನ ಬೆಳಗ್ಗೆ ಹೇಳಿ ರಿಜಿಸ್ಟರ್ ಕಚೇರಿಗೆ ಆತ ಬಂದಿದ್ದರಿಮದ ಸಹಜವಾಗಿಯೇ ಅವರು ತಳಮಳಗೊಂಡಿದ್ದರು.

·  ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮುಗಿದು ಎಲ್ಲರೂ ಹೊರಬಂದ ನಂತರ ಉಮಾ ಅವರುಇದೆಂತಹ ಮದುವೆ, ಸಂಪ್ರದಾಯವಾಗಿ ಮದುವೆ ಆಗಬೇಕು. ನಾವು ನಮ್ಮ ಸಂಬಂಧಿಕರನ್ನು, ಹತ್ತಿರದವರನ್ನು ಕರೆಯಬೇಕುಎಂದು ಹಟಹಿಡಿದರು. ಗೌರಿ ಅದಕ್ಕೆ ಒಪ್ಪಲಿಲ್ಲ. “ಸಂಪ್ರದಾಯದ ಹೆಸರಲ್ಲಿ ಹುಡುಗಿ ಮನೆಯವರಿಂದ ಗಂಡಿನ ಕಡೆಯವರು ಅನಗತ್ಯವಾಗಿ ಹಣ ವೆಚ್ಚ ಮಾಡಿಸುತ್ತಾರೆ. ನನಗೆ ಅದು ಬೇಕಿಲ್ಲ. ನನ್ನ ಅಪ್ಪ ಅಮ್ಮ ನನಗೆ ವಿದ್ಯೆ ಕೊಡಿಸಿದ್ದಾರೆ. ಅಷ್ಟೇ ಸಾಕುಎಂದಳು. ಲಂಕೇಶರು ಏನೂ ಹೇಳದೆ ಸಿಗರೇಟು ಸೇದುತ್ತಾ ನಿಂತಿದ್ದರು

·  ಕೊನೆಗೆ ಗೌರಿಗೆ ಹಟ ಮಾಡಬೇಡ ಎಂದು ಹೇಳಿದ ನಾನುನಮ್ಮ ಮನೆಯಲ್ಲೇ ಸರಳವಾದ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳೋಣ ಎರಡೂ ಕಡೆಯವರಿಂದ ಇಪ್ಪತ್ತು ಇಪ್ಪತ್ತೈದು ಜನರನ್ನು ಕರೆಯೋಣಅಂದೆ. ಅದೂ ಲಂಕೇಶರು ಪ್ರತಿಪಾದಿಸುತ್ತಿದ್ದ ಸರಳ ಮದುವೆಯಂತಿದ್ದರಿಂದ ಅವರೂ ಒಪ್ಪಿದರು. ಅವಳ ಅಪ್ಪ ಒಪ್ಪಿದ ಮೇಲೆ ವಿಧಿ ಇಲ್ಲದೆ ಗೌರಿ ಸುಮ್ಮನಾದಳು

·   ಇದಾದ ಐದಾರು ದಿನಗಳ ನಂತರ ಒಂದು ಭಾನುವಾರ ನಮ್ಮ ಮನೆಯಲ್ಲೇ ಒಂದು ಚಿಕ್ಕ ಕಾರ್ಯಕ್ರಮ ಇಟ್ಟುಕೊಂಡೆವು. ತುರಾತುರಿಯಲ್ಲಿ ನಾನು ಎಲ್ಲ ವ್ಯವಸ್ಥೆಯನ್ನು ಮಾಡಿ ಮುಗಿಸಿದೆ. ಅಪ್ಪಯ್ಯ, ಶಿವು, ವಿಮಲಾ ಶಿವಮೊಗ್ಗೆಯಿಂದ ಬಂದರು. ಲಂಕೇಶರ ಅಣ್ಣ ಶಿವರುದ್ರಪ್ಪ ಮತ್ತು ಅವರ ಮಕ್ಕಳು ಬಂದರು. ಚಿದು ಮನೆಕಡೆಯಿಂದ ಸುಮಾರು ಐವತ್ತು ಜನ ಬಂದರು. ಆದರೆ ಕಾರ್ಯಕ್ರಮಕ್ಕೆ ಗೌರಿಯಾಗಲಿ, ಚಿದು ಆಗಲಿ ತಮ್ಮ ಯಾವ ಸ್ನೇಹಿತರನ್ನೂ ಕರೆಯದೆ ಇಂತಹ ಸಂಪ್ರದಾಯ ಮದುವೆಯ ವಿರುದ್ಧ ತಮ್ಮ ಬಂಡಾಯವನ್ನು ಮುಂದುವರೆಸಿದರು. ನನ್ನ ತಮ್ಮ ಶಿವು ಗೌರಿಯನ್ನು ಧಾರೆ ಎರೆದು ಕೊಟ್ಟ.

·   ನಮ್ಮ ಮನೆಯ ಡೈನಿಂಗ್ ರೂಮಿನಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದರೆ ಲಂಕೇಶರು ಎಂದಿನಂತೆ ಎಲ್ಲವನ್ನೂ ತಮ್ಮ ಸ್ಟಡಿ ರೂಮಿನಲ್ಲಿ ಕೂತು ನೋಡುತ್ತಿದ್ದರು. ಕೊನೆಗೆಗಂಡು ಹೆಣ್ಣಿನ ಮೇಲೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಬನ್ನಿಎಂದು ಯಾರೋ ಲಂಕೇಶರನ್ನು ಕರೆದಾಗ ಅವರುಅದೆಲ್ಲ ಬೇಡ. ನನ್ನ ಆಶೀರ್ವಾದ ಸದಾ ನನ್ನ ಮಗಳಿಗೆ ಇದ್ದೇ ಇರುತ್ತದೆಎಂದರು. ಆದರೆ ಇತರರೂ ಒತ್ತಾಯ ಮಾಡಿದಾಗ ಲಂಕೇಶರು ಕೆಳಗೆ ಬಂದು ಮಗಳು ಮತ್ತು ಅಳಿಯನ ಮೇಲೆ ಅಕ್ಷತೆ ಹಾಕಿ ಇಬ್ಬರನ್ನೂ ಹಾರೈಸಿದರು.

·   ಮದುವೆಯಾದ ನಂತರ ಗೌರಿ ಮತ್ತು ಚಿದು ನಮ್ಮ ಮನೆಯ ಹತ್ತಿರವೇ ಬಾಡಿಗೆಮನೆ ಹಿಡಿದಿದ್ದರು. ಇದರ ಬಗ್ಗೆ ಚಿದುನ ಅಪ್ಪ ಮತ್ತು ಅಮ್ಮನಿಗೆ ಬೇಸರವಾಗಿದ್ದರೂ ತಾನು ತನ್ನ ಅಪ್ಪ-ಅಮ್ಮ-ತಂಗಿ-ತಮ್ಮನ ಹತ್ತಿರ ಇದ್ದಿದ್ದರಿಂದ ಗೌರಿಗೆ ನೆಮ್ಮದಿ ಇತ್ತು.  ಲಂಕೇಶರು ಬೆಳಗ್ಗೆ ವಾಕಿಂಗ್ ಹೋದಾಗ ಕೆಲವೊಮ್ಮೆ ಮಗಳು ಮತ್ತು ಅಳಿಯನ ಮನೆಗೆ ಭೇಟಿ ನೀಡುತ್ತಿದ್ದರು. ಆಗ ಅವರಿಬ್ಬರದ್ದು ಹೊಸ ಸಂಸಾರವಾದ್ದರಿಂದ ಮನೆಯಲ್ಲಿ ಅಗತ್ಯವಾದ ಎಲ್ಲ ಸಾಮಾನುಗಳು ಇರಲಿಲ್ಲ. ಇಬ್ಬರೂ ನೆಲದಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಿದ್ದರು.

·   ಒಮ್ಮೆ ಲಂಕೇಶರುಆಫೀಸಿಗೆ ಹೋಗುವಾಗ ನಿನ್ನ ಮನೆಯ ಬೀಗದ ಕೀಅನ್ನು ನನ್ನ ಆಫೀಸಿನಲ್ಲಿ ಬಿಟ್ಟುಹೋಗುಎಂದು ಗೌರಿಗೆ ಹೇಳಿದರು. “ಯಾಕೆ?” ಎಂದು ಆಕೆ ಕೇಳಿದಾಗಸುಮ್ಮನೆ ಕೊಟ್ಟುಹೋಗುಅಂದರು ಆಕೆಯ ಅಪ್ಪ. ಗೌರಿ ಮತ್ತು ಚಿದು ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವ ಮುನ್ನ ಲಂಕೇಶರ ಆಫೀಸಿಗೆ ಹೋಗಿ ತಮ್ಮ ಮನೆಯ ಕೀಅನ್ನು ಪಡೆದು ಬಂದು ನೋಡಿದರೆ, ಮನೆಯ ಹಾಲ್ ನಲ್ಲಿ ಎರಡು ಹೊಸ ಮಂಚಗಳು ಇದ್ದವು. ಏನಾಗಿತ್ತೆಂದರೆ ಲಂಕೇಶರು ತಮ್ಮ ಸಹಾಯಕರಿಗೆ ದುಡ್ಡುಕೊಟ್ಟು, ಮಂಚಗಳನ್ನು ಖರೀದಿಸಿ, ಗೌರಿಯ ಮನೆಯಲ್ಲಿ ಅದನ್ನು ಇಟ್ಟುಬರಲು ಹೇಳಿದ್ದರು. ಅವರು ಹಾಗೆಯೇ ಮಾಡಿದ್ದರು. ಮರುದಿನ ಮಗಳ ಮನೆಗೆ ಹೋದ ಲಂಕೇಶರು ಸುಮ್ಮನೇಮೀಯಾಂವ್” (ಬಹಳ ಸಂತೋಷವಾದಾಗ ಲಂಕೇಶ್ ಅವರ ಬಾಯಿಂದ ಹೊರಡುತ್ತಿದ್ದ ಶಬ್ದವಿದು) ಎಂದು ವಾಪಸ್ ಬಂದಿದ್ದರು.

·   ಲಂಕೇಶರಿಗೆ ಸ್ಟ್ರೋಕ್ ಆದಾಗ ನಮ್ಮ ಹಿರಿ ಮಗಳು ಗೌರಿ ಫ್ರಾನ್ಸ್ ದೇಶದಿಂದ ಪತ್ರಿಕೋದ್ಯಮದ ಸ್ಕಾಲರ್ ಶಿಪ್ ಪಡೆದು ದೇಶದ ರಾಜಧಾನಿ ಪ್ಯಾರಿಸ್ ನಲ್ಲಿ ವಾಸಿಸುತ್ತಿದ್ದಳು. ಆಗ ನಮ್ಮ ಮೂವರು ಮಕ್ಕಳಲ್ಲಿ ತಮ್ಮ ಅಪ್ಪನೊಂದಿಗೆ ತುಂಬಾ ಭಾವುಕವಾದ ಸಂಬಂಧ ಹೊಂದಿದ್ದವಳು ಆಕೆಯೇ. ಲಂಕೇಶರಿಗೆ ಸ್ಟ್ರೋಕ್ ಆಗಿರುವ ಬಗ್ಗೆ ಗೌರಿಗೆ ಗೊತ್ತಾದರೆ ಆಕೆ ಪ್ಯಾರಿಸ್ಅನ್ನು ತೊರೆದು ನಿಂತ ಕಾಲಲ್ಲೇ ಬೆಂಗಳೂರಿಗೆ ಬರುತ್ತಾಳೆಂದು ನಮಗೆ ಗೊತ್ತಿತ್ತು. ಕಾರಣಕ್ಕೆ ಲಂಕೇಶರ ಆರೋಗ್ಯ ಕೆಟ್ಟದ್ದರ ಬಗ್ಗೆ ಆಕೆಗೆ ಹೇಳುವುದೇ ಬೇಡವೆಂದು ನಿರ್ಧರಿಸಿದೆವು.

·  ಗೌರಿ ಸಾಮಾನ್ಯವಾಗಿ ವಾರಕ್ಕೊಮ್ಮೆ ಮನೆಗೆ ಫೋನ್ ಮಾಡಿ ನನ್ನ, ಬೇಬಿ ಹಾಗು ಅಜಿತು ಜೊತೆ ಮಾತನಾಡುತ್ತಿದ್ದಳು. ಲಂಕೇಶರಿಗೆ ಫೋನ್ ಎಂದರೇ ಒಂದು ರೀತಿಯ ಅಲರ್ಜಿ ಇದ್ದಿದ್ದರಿಂದ ಅವರೊಂದಿಗೆ ಪತ್ರಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ ಗೌರಿ ಆಗೊಮ್ಮೆ, ಈಗೊಮ್ಮೆ ಮಾತ್ರ ಅಪ್ಪನನ್ನು ಫೋನ್ ನಲ್ಲಿ ಮಾತನಾಡಿಸುತ್ತಿದ್ದಳು.

·   ಆದರೆ ಇದಾದ ನಾಲ್ಕೈದು ವಾರಗಳಲ್ಲಿ ಮಾರ್ಚ್ 8 ರಂದು ಲಂಕೇಶರ ಹುಟ್ಟುಹಬ್ಬ ಬಂದೇಬಿಟ್ಟಿತು. ಅವತ್ತು ಗೌರಿ ತನ್ನ ಅಪ್ಪನ ಆಫೀಸಿಗೆ ಫೋನ್ ಮಾಡಿಹ್ಯಾಪಿ ಬರ್ತಡೇ ಅಪ್ಪಾ, ಹೇಗಿದ್ದೀಯಾ?” ಎಂದು ಕೇಳಿದ್ದಾಳೆ. ಆಗ ಲಂಕೇಶರು ಯಾಮ್ ಫೈನ್. ಸ್ಟ್ರೋಕ್ ನಿಂದ ಸಂಪೂರ್ಣವಾಗಿ ರಿಕವರ್ ಆಗಿದ್ದೇನೆಎಂದಿದ್ದಾರೆ. ಅದನ್ನು ಕೇಳಿ ಗೌರಿಗೆ ಶಾಕ್ ಆಗಿದೆ. “ಏನು ಸ್ಟ್ರೋಕ್ಎಂದು ಆಕೆ ಕೇಳಿದ್ದಾಳೆ. ಆಗ ಆಕೆಗೆ ಏನೆಂದು ಉತ್ತರ ಕೊಡುವುದೆಂದು ಲಂಕೇಶರಿಗೆ ಗೊತ್ತಾಗದೆ ಅವರು ಇದ್ದಕ್ಕಿದ್ದಂತೆ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಇನ್ನಷ್ಟು ಕಂಗಾಲಾದ ಗೌರಿ ನನ್ನ ಅಂಗಡಿಗೆ ಪೋನ್ ಮಾಡಿಅಪ್ಪನಿಗೆ ಯಾವಾಗ ಸ್ಟ್ರೋಕ್ ಆಯಿತು. ನನಗ್ಯಾಕೆ ಅದರ ಬಗ್ಗೆ ಹೇಳಲಿಲ್ಲಎಂದೆಲ್ಲ ಕಿರುಚಾಡಿದಳು. …..ನಾನು ಅಪ್ಪನಿಗೆ ಸಣ್ಣದಾದ ಸ್ಟ್ರೋಕ್ ಆಗಿತ್ತು. ಈಗ ಅಪ್ಪ ಚೆನ್ನಾಗಿದೆ. ನೀನು ಯೋಚನೆ ಮಾಡಬೇಡಎಂದೆಲ್ಲ ಹೇಳಿದೆ. ಆದರೂ ಆಕೆನನ್ನಿಂದ ಇದನ್ನು ಯಾಕೆ ಮುಚ್ಚಿಟ್ಟೆ. ನಾನು ನಿನ್ನನ್ನು ನಂಬೋದಿಲ್ಲ ನಾನು ಈಗಲೇ ಬೆಂಗಳೂರಿಗೆ ವಾಪಸ್ ಬರ್ತೀನಿಎಂದು ಹಟ ಹಿಡಿದಳು.

·   ನಮ್ಮ ಹಿರಿ ಮಗಳು ಗೌರಿ ಪತ್ರಕರ್ತೆಯಾಗಿ ನೆಲೆಕಂಡುಕೊಂಡಿದ್ದಳು. ಹಾಗೆಯೇ ಕಿರಿ ಮಗಳು ಕವಿತಾ ಜಾಹೀರಾತು ಏಜನ್ಸಿ ತೆರೆದು ಕೈತುಂಬ ದುಡಿಯುತ್ತಿದ್ದಳು ಜೊತೆಗೆ ಕೆಲವು ಕಾರ್ಪೋರೇಟ್ ಸಿನಿಮಾಗಳನ್ನು ಆನಂತರ ಹಲವಾರು ಸಾಕ್ಷ್ಯಚಿತ್ರಗಳನ್ನೂ ಮಾಡಿದ ಕವಿತಾ ಎಲ್ಲರಿಂದಲೂ ಸೈ ಎನಿಸಿಕೊಂಡಳು

·  ನಮ್ಮ ಮೂವರು ಮಕ್ಕಳು ಲಂಕೇಶರ ಆರೋಗ್ಯದ ವಿವಿಧ ಆಯಾಮಗಳ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದರು. ಗೌರಿ ಅಪ್ಪನ ಡಯಾಬಿಟಿಸ್ ಮೇಲೆ ನಿಗಾ ಇಟ್ಟಿದ್ದರೆ, ಬೇಬಿ ಅವರ ಲಿವರ್ ಕುರಿತ ೆಲ್ಲ ಬದಲಾವಣೆಗಳನ್ನು ಗಮನಿಸುತ್ತಿದ್ದಳು. ಅಜಿತು ಪ್ರತಿದಿನ ಬ್ಲಡ್ ಪ್ರೆಶರ್ ಅನ್ನು ಚೆಕ್ ಮಾಡುತ್ತಿದ್ದ

·    ದೆಹಲಿಯಲ್ಲಿ ಈಟಿವಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದ ಗೌರಿ ವಿವಿಧ ಕಡೆ ಸುತ್ತಾಡುತ್ತಿದ್ದಳುಆದರೆ  ಆಕೆ ದೆಹಲಿಯಿಂದ ಎಲ್ಲಿಗೇ ಹೋದರೂ ಮುಂಚಿತವಾಗಿಯೇ ಹೇಳುತ್ತಿದ್ದಳಲ್ಲದೇ ಆಕೆ ಬೇರೆ ಊರನ್ನು ತಲುಪಿದ ಕೂಡಲೇ ಅಲ್ಲಿನ ಫೋನ್ ನಂಬರ್ ಅನ್ನು ಕೊಡುತ್ತಿದ್ದಳು. ಎರಡು ಮೂರು ದಿನಕ್ಕೊಮ್ಮೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಳು. ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದಳು......



(ಇವು ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “ಹುಳಿಮಾವು ಮತ್ತು ನಾನುಕೃತಿಯಿಂದ ಆಯ್ದ ಭಾಗಗಳು. ಗೌರಿ ಅವರ ವೈಚಾರಿಕತೆ, ಸಾರ್ವಜನಿಕ ಬದುಕು ಎಲ್ಲದರ ಬಗ್ಗೆ ಅವರ ಹತ್ಯೆಯಾದ ದಿನ ಮತ್ತು ಹುಟ್ಟಿದ ದಿನಗಳ ಆಸುಪಾಸಲ್ಲಿ ಅನೇಕ ಗೆಳೆಯರು ಮಹತ್ವದ ಅಂಶಗಳನ್ನಿಟ್ಟುಕೊಂಡು ಚರ್ಚಿಸುತ್ತಾರೆ. ಅವುಗಳ ಮಧ್ಯೆ ಇಂತಹ ಭಾವಪೂರ್ಣ ಅಂಶಗಳೂ ಸಂಬಂಧಪಟ್ಟವರನ್ನು ಕಲಕಬಹುದು ಎಂದು ಇವನ್ನು ಇಲ್ಲಿ ಎತ್ತಿಕೊಡುತ್ತಿದ್ದೇನೆ.– ಡಾ. ರಾಜೇಂದ್ರ ಬುರಡಿಕಟ್ಟಿ.)

No comments:

Post a Comment