ಉಪಶಮನ ಆರೈಕೆ: ಕೇರಳದ ಮಾದರಿ ಉಪಕ್ರಮ
· ಅನು: ಡಾ. ರಾಜೇಂದ್ರ ಬುರಡಿಕಟ್ಟಿ
(ಟಿಪ್ಪಣಿ: ಗುಣಪಡಿಸಲಾಗದ ರೋಗಗಳಿಗೆ ತುತ್ತಾದವರು ಮತ್ತು ವಯೋಸಹಜ ವೃದ್ಧಾಪ್ಯದಲ್ಲಿರುವವರನ್ನು ಆರೈಕೆ ಮಾಡುವುದು ಇಂದು ನಮ್ಮ ಸಮಾಜದಲ್ಲಿ ಕೇವಲ ವೈಯಕ್ತಿಕ ಸಮಸ್ಯೆಯಾಗಿರದೆ ಸಾಮಾಜಿಕ ಸಮಸ್ಯೆಯ ರೂಪು ತಾಳಿದೆ. ದೊಡ್ಡದಾದ ಅವಿಭಕ್ತ ಕುಟುಂಬಗಳ ಕಾಲದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿರಲಿಲ್ಲ. ಆದರೆ ಗಂಡ ಹೆಂಡತಿ ಇಬ್ಬರೂ ದುಡಿಯಲು ಮನೆಯಿಂದ ಹೊರಗೆ ಹೋಗುತ್ತಿರುವ ಮತ್ತು ಗಂಡ, ಹೆಂಡತಿ, ಒಂದು ಮಗು ಇವರು ಮೂರು ಜನ ಕೂಡಿರುವುದೇ ಒಂದು ದೊಡ್ಡ ಕುಟುಂಬ ಎಂದು ಪರಿಗಣಿಸಬೇಕಾಗಿರುವ ಈ ಕಾಲಘಟ್ಟದಲ್ಲಿ ಹೀಗೆ ಜೀವನದ ಸಂಧ್ಯಾಕಾಲದಲ್ಲಿರುವವರು ಸೂಕ್ತ ಆರೈಕೆಯಿಲ್ಲದೆ ನರಳಬೇಕಾದ ಸ್ಥಿತಿ ಸಾಮಾನ್ಯವಾಗಿಬಿಟ್ಟಿದೆ. ಒಂದು ಕಾಲದಲ್ಲಿ ಎಲ್ಲರಂತೆ ಅತ್ಯಂತ ಚಟುವಟಿಕೆಯಿಂದ ಜೀವನ ನಡೆಸಿಯೂ ಕಾಲದ ಹೊಡೆತಕ್ಕೆ ಸಿಕ್ಕ ಅವರ ಬದುಕು ಇಂದು ಹೇಳತೀರದಂತಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತ ಆರೈಕೆ ಮಾಡಿ ಅವರು ತಮ್ಮ ಜೀವನದ ಕೊನೆಯ ಕ್ಷಣಗಳನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡುವುದು ಒಂದು ಸಾಮಾಜಿಕ ಜವಾಬ್ದಾರಿ.
ಆದರೆ ಅದರ ನಿರ್ವಹಣೆ ಅಷ್ಟು ಸುಲಭವಲ್ಲ. ಈ ಹಿನ್ನಲೆಯಲ್ಲಿ ಅನೇಕ ರಾಜ್ಯಗಳಿಗೆ ಮಾದರಿಯಾಗಬಹುದಾದ ಒಂದು ಉಪಕ್ರಮ ಕೇರಳದಲ್ಲಿ ಅಲ್ಲಿನ ಸ್ವಯಂಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಜನತೆ, ಸರ್ಕಾರ ಇವುಗಳ ಸಹಭಾಗಿತ್ವದಲ್ಲಿ ಚಾಲ್ತಿಯಲ್ಲಿರುವುದನ್ನು ಲೇಖಕಿ ರೇಶ್ಮಿ ಚಕ್ರವರ್ತಿ ಪ್ರಸಿದ್ಧ ಇಂಗ್ಲಿಷ್ ದೈನಿಕ The Hinduʼ ನ Magazine ಪುರವಣಿಯಲ್ಲಿ ದಿನಾಂಕ 24-08-2025 ರಂದು ಪ್ರಕಟವಾದ ತಮ್ಮ ʼThe Empathy Effect: How Keralás Young Are Stepping Up ಎಂಬ ದೀರ್ಘವಾದ ಲೇಖನದಲ್ಲಿ ವಿವರಿಸಿದ್ದಾರೆ. ಇದು ಅದರ ಕನ್ನಡ ಅನುವಾದ. ಕರ್ನಾಟಕದಲ್ಲಿಯೂ ಈ ಸಮಸ್ಯೆ ದಿನದಿನಕ್ಕೂ ದೊಡ್ಡದಾಗುತ್ತಲೇ ಇದ್ದು ಇದಕ್ಕೆ ಸೂಕ್ತಪರಿಹಾರವಾಗಿ ಏನಾದರೂ ಮಾಡಲು ಯಾರಿಗಾದರೂ ಈ ಲೇಖನ ಪ್ರೇರಣೆಯಾಗಬಹುದು ಎಂಬುದು ಇದನ್ನು ಕನ್ನಡಿಸಲು ನನಗೆ ಇದ್ದ ಒತ್ತಾಸೆ. ಅಂದಹಾಗೆ ಈ ಲೇಖನದಲ್ಲಿ ʼಉಪಶಮನ ಆರೈಕೆʼ ಎಂಬ ಪದಪುಂಜವು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ಇದು ಇಂಗ್ಲಿಷ್ ನ ʻPalliative Careʼ ಪದಪುಂಜಕ್ಕೆ ಸಮಾನಾರ್ಥಕವಾಗಿ ಬಳಕೆಯಾಗಿದೆ. ಉಪಶಮನ ಆರೈಕೆ ಎಂದರೆ, ಗುಣಪಡಿಸಲಾಗದ ಕಾಯಿಲೆಗಳಿಂದ ಮತ್ತು ವೃದ್ಧಾಪ್ಯದಿಂದ ಬಳಲುವ ವ್ಯಕ್ತಿಗಳಿಗೆ ಅವರು ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಸಂತೋಷ ನೆಮ್ಮದಿಗಳಿಂದ ಕಳೆಯುವಂತೆ ಮಾಡಲು ಅವರಿಗೆ ಮಾಡುವ ಆರೈಕೆಯಾಗಿದೆ. – ರಾಜೇಂದ್ರ ಬುರಡಿಕಟ್ಟಿ ,ಅನುವಾದಕ)
*****
2023 ರಲ್ಲಿ, ಆದಿಲ್ ಷಾ ತಿರುವನಂತಪುರಂನಲ್ಲಿರುವ ಎ ಸಿ ಇ ಕಾಲೇಜ್ ಆಫ್ ಎಂಜಿನಿಯರಿಂಗ್ಗೆ ಸೇರಿದಾಗ, ವಾರಾಂತ್ಯದಲ್ಲಿ ಹಾಸ್ಟೆಲ್ನಲ್ಲಿ ಸ್ವಲ್ಪ ಮೋಜನ್ನು ಮಾಡುವುದನ್ನು ಕಲ್ಪಿಸಿಕೊಂಡರು. ಈಗ ಅವರು ಉಪಶಮನ ಆರೈಕೆಯ ಸ್ವಯಂಸೇವಕರಾಗಿ, ಅಗತ್ಯವಿರುವವರಿಗೆ ಔಷಧಿಗಳನ್ನು ತಲುಪಿಸುವುದರಿಂದ ಹಿಡಿದು ವೃದ್ಧ ರೋಗಿಗಳಿಗೆ ಮನೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡುವವರೆಗೆ ಎಲ್ಲವನ್ನೂ ಮಾಡಿದ್ದಾರೆ. ಅವರಿಗೆ ಕೆಲಸದಲ್ಲಿ ಯಾವುದೇ ಅಭ್ಯಂತರವಿಲ್ಲ. "ಸ್ವಯಂಸೇವೆಯು ಅನಿರೀಕ್ಷಿತವಾಗಿ ಬಂದ ಒಂದು ರೀತಿಯ ತೃಪ್ತಿಯಾಗಿತ್ತು" ಎಂದು 20 ವರ್ಷದ ಈ ಯುವಕ ಹೇಳುತ್ತಾರೆ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ಚಲನಚಿತ್ರಗಳನ್ನು ನೋಡುವುದನ್ನು ಅಥವಾ ತಮ್ಮ ಹಾಸ್ಟೆಲ್ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಕೂಡ ಇಷ್ಟಪಡುತ್ತಾರೆ.
ಐಟಿ ತರಬೇತುದಾರರಾದ ನಿಹಾಲಾ ಕ್ಯಾಥೂನ್ ಸಿ.ಕೆ. ಕೂಡ 18 ನೇ ವಯಸ್ಸಿನಲ್ಲಿ, ಕೋಝಿಕ್ಕೋಡ್ನಲ್ಲಿ ಕಾಲೇಜಿಗೆ ಸೇರಿದ ಕೂಡಲೇ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. "ಆರಂಭದಲ್ಲಿ ನಾನು ನಿಧಿಸಂಗ್ರಹಣೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಸಹಾಯ ಮಾಡಿದೆ. ಕ್ರಮೇಣ, ನಾನು ರೋಗಿಗಳ ಆರೈಕೆ ಮತ್ತು ಹೊಸ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದೆ. ಅದು ಶೀಘ್ರದಲ್ಲೇ ನನ್ನ ಜೀವನದ ಭಾಗವಾಯಿತು" ಎಂದು ಈಗ 25 ವರ್ಷದಲ್ಲಿರುವ ಅವರು ಹೇಳುತ್ತಾರೆ.
ಕೃತಕ ಬುದ್ಧಿಮತ್ತೆ, ಇನ್ಸ್ಟಾಗ್ರಾಮ್, ರೀಲ್ಗಳ ಜಗತ್ತಿನಲ್ಲಿ ಮುಳುಗಿಹೊಗಿದ್ದಾರೆಂದು ಇಂದು ನಾವು ಯಾವ ಯುವಜನತೆಯನ್ನು ಕರೆಯುತ್ತೇವೆಯೋ ಅಂತಹ ಯುವಜನತೆಯು ಅಸಹಾಯಕರ ಆರೈಕೆ ಮಾಡುವುದನ್ನು ಆಯಾಸಕರ ಮತ್ತು ಕೃತಜ್ಞತೆಯಿಲ್ಲದ ಕೆಲಸ ಎಂದು ಭಾವಿಸುತ್ತಾರೆ ಎಂದು ನಾವೆಲ್ಲ ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ಆದರೆ ಆಶ್ಚರ್ಯಕರವೆಂಬಂತೆ ಕೇರಳದಲ್ಲಿ ಕಳೆದ ದಶಕದಲ್ಲಿ ಅಸಹಾಯಕರ ಉಪಶಮನ ಆರೈಕೆಯ ಸ್ವಯಂಸೇವಕರಾಗಿ ವೃದ್ಧರು ಮತ್ತು ಮಾರಕ ರೋಗಗಳಿಂದ ಪೀಡಿತರಾದವರನ್ನು ನೋಡಿಕೊಳ್ಳುವ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯ, ಸ್ವಯಂಸೇವಾ ಸಂಸ್ಥೆಗಳು ಮತ್ತು ಉಪಶಮನ ಆರೈಕೆ ಸಂಸ್ಥೆಗಳ ಸಹಯೋಗದೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಬೇರೂರಿದ್ದಾರೆ.
"ಕಳೆದ 15 ವರ್ಷಗಳಿಂದ ಕೇರಳದ ಉಪಶಮನ ಆರೈಕೆಯ ಸಂಸ್ಕೃತಿಯ ಒಂದು ಭಾಗವಾಗಿ ಯುವಜನರ ಒಳಗೊಳ್ಳುವಿಕೆ ಇದೆ" ಎಂದು ಉಪಶಮನ ಆರೈಕೆಯ ಪ್ರವರ್ತಕ ಮತ್ತು ಲಾಭರಹಿತ ಸಂಸ್ಥೆ ʻಪ್ಯಾಲಿಯಮ್ ಇಂಡಿಯಾʼದ ಸಂಸ್ಥಾಪಕ ಡಾ. ಎಂ. ಆರ್. ರಾಜಗೋಪಾಲ್ ಹೇಳುತ್ತಾರೆ. ಈ ಉಪಶಮನ ಆರೈಕೆಯು ಆರಂಭದಲ್ಲಿ ಸಮುದಾಯ ನೇತೃತ್ವದ ಉಪಕ್ರಮವಾಗಿ ಪ್ರಾರಂಭವಾದದ್ದು ನಿಜವಾದರೂ ಈಗ ಅದು ಅಲ್ಲಿನ ಆಡಳಿತದ ಅಧಿಕೃತ ಮನ್ನಣೆಯನ್ನು ಪಡೆದಿದೆ. ಉಪಶಮನ ಆರೈಕೆ ಗುಂಪುಗಳ ಅರ್ಥಪೂರ್ಣ ವಕಾಲತ್ತುಗಳ ನಂತರ ಕೇರಳ ಸರ್ಕಾರವು 2019 ರ ತನ್ನ ಪರಿಷ್ಕೃತ ರಾಜ್ಯ ಉಪಶಮನ ಆರೈಕೆ ನೀತಿಯಲ್ಲಿ ಪ್ರಸ್ತಾಪಿಸಿದಂತೆ ವಿದ್ಯಾರ್ಥಿಗಳ ಒಳಗೊಳ್ಳುವಿಕೆಯನ್ನು ಸೆಪ್ಟೆಂಬರ್ 2024ರಲ್ಲಿ ಔಪಚಾರಿಕವಾಗಿ ಪ್ರೋತ್ಸಾಹಿಸಿತು. ಈ ವರ್ಷದ ಜೂನ್ನಲ್ಲಿ, ರಾಜ್ಯವು ಎನ್ಜಿಒಗಳು, ಸ್ವಯಂಸೇವಕರು, ದಾದಿಯರು ಮತ್ತು ನೈಜ ಸಮಯದಲ್ಲಿ ಉಪಶಮನ ಆರೈಕೆಯನ್ನು ಒದಗಿಸುವ ಸಂಸ್ಥೆಗಳನ್ನು ಸಂಯೋಜಿಸುವ ತಂತ್ರಜ್ಞಾನ-ಪ್ರೇರಿತ ಸಾರ್ವತ್ರಿಕ ಉಪಶಮನ ಆರೈಕೆ ಯೋಜನೆಯನ್ನು ಘೋಷಿಸಿತು.
ಕೇರಳವು 1,400 ಕ್ಕೂ ಹೆಚ್ಚು ಉಪಶಮನ ಆರೈಕೆ ಘಟಕಗಳನ್ನು ಹೊಂದಿದೆ. ಪ್ಯಾಲಿಯಮ್ ಇಂಡಿಯಾದ 2022 ರ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ವಿವಿಧ ವಯಸ್ಸಿನ 4,000 ಕ್ಕೂ ಹೆಚ್ಚು ತರಬೇತಿ ಪಡೆದ ಸ್ವಯಂಸೇವಕರಿದ್ದರು. ಜುಲೈ 2025 ರಲ್ಲಿನ ಮಾಧ್ಯಮ ವರದಿಗಳ ಪ್ರಕಾರ, ಕೇರಳ ರಾಜ್ಯವು ಹೊಸದಾಗಿ ರೂಪಿಸಿದ ʻಯುನಿವರ್ಸಲ್ ಪ್ಯಾಲಿಯೇಟಿವ್ ಕೇರ್ ಪೋರ್ಟಲ್ʼ ನಲ್ಲಿ ಸುಮಾರು 8,000 ಸ್ವಯಂಸೇವಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಅಗತ್ಯವನ್ನು ಪೂರೈಸುವುದು
"ಉಪಶಮನ ಆರೈಕೆ ಕೇವಲ ಮಾರಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ" ಎಂದು ಕೇರಳದ ಯೂನಿವರ್ಸಲ್ ಪ್ಯಾಲಿಯೇಟಿವ್ ಕೇರ್ ಪ್ರಾಜೆಕ್ಟ್‌ನ ವೈದ್ಯಕೀಯ ಅಧಿಕಾರಿ ಡಾ. ಮ್ಯಾಥ್ಯೂಸ್ ನಂಪೇಲಿ ಸ್ಪಷ್ಟಪಡಿಸುತ್ತಾರೆ. ಅವರ ಪ್ರಕಾರ "ಕೇರಳದಲ್ಲಿ, ಉಪಶಮನ ಆರೈಕೆ ಎಂದರೆ ಗಂಭೀರ ಆರೋಗ್ಯ ಸಮಸ್ಯೆಗಳು ಅಥವಾ ಕ್ಯಾನ್ಸರ್, ಪಾರ್ಶ್ವವಾಯು, ಯಕೃತ್ತಿನ ಕಾಯಿಲೆ, ನರಸ್ನಾಯುಕ ಅಸ್ವಸ್ಥತೆಗಳು, ಮಾನಸಿಕ ಕಾಯಿಲೆಗಳು ಅಥವಾ ಬಾಲ್ಯದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಬೆಂಬಲ ನೀಡುವುದು. ಇದು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಯಾವುದೇ ರೀತಿಯ ವೈದ್ಯಕೀಯ, ನರ್ಸಿಂಗ್ ಅಥವಾ ಮಾನಸಿಕ ಸಾಮಾಜಿಕ ಭದ್ರತೆಯನ್ನು ಒದಗಿಸುವ ಒಂದು ಉಪಕ್ರಮವಾಗಿದೆ. ಇದರ ಬಗ್ಗೆ ಮುಂದುವರೆದು ಅವರು, “ಕಳೆದ 5-10 ವರ್ಷಗಳಲ್ಲಿ, ನಾವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಒಂದೊಂದು ವಾರದ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಯುವಜನರಿಗೆ ತರಬೇತಿ ನೀಡುವುದರಿಂದ ಈ ಆರೈಕೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅವರಿಗೆ ಅವಕಾಶ ಸಿಗುತ್ತದೆ" ಎಂದೂ ಹೇಳುತ್ತಾರೆ.
ಭಾರತದಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ಅಂದಾಜು 5.4 ಮಿಲಿಯನ್ (ಐವತ್ನಾಲ್ಕು ಲಕ್ಷ) ಜನರಿಗೆ ಉಪಶಮನ ಆರೈಕೆಯ ಅಗತ್ಯವಿದೆ! ದೆಹಲಿಯ ಲಾಭರಹಿತ ಸಂಕಲಾ ಫೌಂಡೇಶನ್‌ನ ಹೊಸ ಅಧ್ಯಯನದ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ, ಕೇರಳದಲ್ಲಿ ನಾಲ್ಕು ಜನರಲ್ಲಿ ಒಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿರುತ್ತಾರೆ! ಹಾಗಾಗಿ ʻವಯೋಸ್ನೇಹಿ ಆರೈಕೆ ಯೋಜನೆ ʼ (Age-friendly Care-planing) ಎಂಬುದು ಇನ್ನು ಮುಂದೆ ಐಚ್ಚಿಕವಲ್ಲ; ಕಡ್ಡಾಯ.
ಉಪಶಮನ ಆರೈಕೆಯುಯ ಕೇರಳದಲ್ಲಿ ವಿಶಿಷ್ಟ ಸಮುದಾಯ ಚಳುವಳಿಯಾಗಿ ಪ್ರಾರಂಭವಾಯಿತು. 1993 ರಲ್ಲಿ ಕೋಝಿಕ್ಕೋಡ್‌ನ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೇಟಿವ್ ಮೆಡಿಸಿನ್ (ಐಪಿಎಂ)ನ ಡಾ. ರಾಜಗೋಪಾಲ್ ಮತ್ತು ಡಾ. ಸುರೇಶ್ ಕುಮಾರ್ ಅವರು ಮಾರಕ ಕಾಯಿಲೆಯಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ನೋವು ನಿವಾರಣಾ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ಸಮುದಾಯ ಸ್ವಾಮ್ಯದ, ಸ್ವಯಂಸೇವಕರ ನೇತೃತ್ವದ, ನೆರೆಹೊರೆಯ ಸಂಪರ್ಕಜಾಲದ ಮೂಲಕ ಈ ಉಪಶಮನ ಆರೈಕೆಯ ಸಂಪರ್ಕಜಾಲ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ. ಇದಕ್ಕೆ ಪೂರಕವಾಗಿ 2008 ರ ಸರ್ಕಾರದ ಉಪಶಮನ ಆರೈಕೆ ನೀತಿ (ಪ್ಯಾಲಿಯೇಟಿವ್ ಕೇರ್ ಪಾಲಸಿ) ಕೆಲಸ ಮಾಡಿತು. ಈ ನೀತಿ ಗ್ರಾಮಪಂಚಾಯತಿ, ನಗರಸಭೆಗಳಂತಹ ಸ್ಥಳೀಯ ಸಂಸ್ಥೆಗಳು ಉಪಶಮನ ಆರೈಕೆ ಸೇವೆಗಳನ್ನು ಒದಗಿಸುವ ಘಟಕಗಳನ್ನು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ಥಾಪಿಸಿ ಸೇವೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಿತು. ವೈದ್ಯರು ಮತ್ತು ದಾದಿಯರಿಂದ ಬೆಂಬಲಿತವಾದ ಸ್ವಯಂಸೇವಕರು-ವಿದ್ಯಾರ್ಥಿಗಳು ಸೇರಿದಂತೆ-ಅನಾರೋಗ್ಯ ಪೀಡಿತರು ಮತ್ತು ಅವರ ಆರೈಕೆದಾರರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ.
2019 ರ ನವೀಕೃತ ರಾಜ್ಯ ಉಪಶಮನ ಆರೈಕೆ ನೀತಿಯು ವೃದ್ಧರು ಮತ್ತು ಮಾರಕ ಕಾಯಿಲೆಗಳಿಂದ ಬಳಲುವವರಿಗೆ ಸೇವೆಯನ್ನು ಒದಗಿಸಲು ವ್ಯಕ್ತಿಗಳನ್ನು ಭಾವನಾತ್ಮಕವಾಗಿ ಮತ್ತು ಮತ್ತು ಕ್ರಿಯಾತ್ಮಕವಾಗಿ ತಯಾರುಮಾಡುವ ಬಹುದೊಡ್ಡ ಕಾರ್ಯಕ್ರಮವನ್ನು ಉತ್ತೇಜಿಸಿತು. ಅದೆಂದರೆ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿಗಳನ್ನು ನೀಡುವುದು. ಸ್ಟೂಡೆಂಟ್ಸ್ ಇನ್ ಪ್ಯಾಲಿಯೇಟಿವ್ ಕೇರ್ ಉಪಕ್ರಮ (SIPC) ಇಂತಹ ಒಂದು ಬಹುಮುಖ್ಯ ಉಪಕ್ರಮ. ಇದು ಉಪಶಮನ ಆರೈಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ನಿಧಿಸಂಗ್ರಹಣೆ ಮತ್ತು ನೇರವಾಗಿ ರೋಗಿಗಳ ಆರೈಕೆಗಾಗಿ ಭಾಗವಹಿಸುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳಿಸಲು ಸಹಾಯ ಮಾಡುತ್ತದೆ.
ಈ ತರಬೇತಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ(WHO) ಸಂಯೋಜಿತ ಪ್ರಮಾಣೀಕರಣಗಳಿಂದಾಗಿ ಈ ಸ್ವಯಂಸೇವೆಯನ್ನು ಹೆಚ್ಚಾಗಿ ವಿದ್ಯಾರ್ಥಿಗಳು ತಮ್ಮತಮ್ಮಲ್ಲೆ ಗೆಳೆಯರೊಡಗೂಡಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳಿಂದ ನೋಡಿ ಕಲಿಯುವ ಆಸಕ್ತಿಯನ್ನು ಹೆಚ್ಚಿಸಿಕೊಂಡು ಅವರು ಈ ಬಗ್ಗೆ ಒಂದು ʼಕಾಳಜಿʼಯನ್ನು ಈ ಹಂತದಿಂದಲೇ ಮೈಗೂಡಿಸಿಕೊಂಡೇ ಬೆಳೆಯುತ್ತಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರೆ ಕೆಲವು ರಾಜ್ಯಗಳು ಉಪಶಮನ ಆರೈಕೆ ನೀತಿಯನ್ನು ಹೊಂದಿದ್ದರೂ, ಉಪಶಮನ ಆರೈಕೆಗಾಗಿ ಸ್ವಯಂಸೇವೆ ನಡೆಯುತ್ತಿದ್ದರೂ, ಅವುಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನತೆಯ ಒಳಗೊಳ್ಳುವಿಕೆ ಕೇರಳದಲ್ಲಿರುವಂತೆ ರಚನಾತ್ಮಕವಾಗಿಯಾಗಲೀ ವ್ಯವಸ್ಥಿತವಾಗಿಯಾಗಲೀ ಇಲ್ಲ.
ಕೇರಳದ ಶಾಲೆಗಳು ಮತ್ತು ಕಾಲೇಜುಗಳು ಎನ್ ಎಸ್ ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಮತ್ತು ಎನ್ ಸಿ ಸಿ (ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್) ಘಟಕಗಳ ಮೂಲಕ ಲಾಭರಹಿತವಾದ ಈ ಉಪಶಮನ ಆರೈಕೆಯ ತರಬೇತಿ ಕೆಲಸವನ್ನು ಮಾಡುತ್ತಿವೆ. ಈ ರೀತಿ ಉಪಶಮನ ಆರೈಕೆಗಾಗಿ ಯುವಜನರು ಶ್ರಮಿಸುವ ರಾಜ್ಯದ ಸಂಸ್ಕೃತಿಗೆ ಬೀಜಗಳನ್ನು ಬಿತ್ತಲಾಗಿದೆ. "ಇದು ಸಾಕ್ಷರತೆ, ಶಾಲಾ ದಾಖಲಾತಿ, ವಯಸ್ಸಾದ ಸಮಾಜ ಮತ್ತು ಸಮುದಾಯದ ಅಭಿವೃದ್ಧಿ ಇವುಗಳ ಸಂಯೋಜನೆಯ ಆಂದೋಲನ" ಎಂದು ಡಾ. ರಾಜಗೋಪಾಲ್ ಹೇಳುತ್ತಾರೆ.
ಸಾಮಾಜಿಕ ವಿಧಾನ
ಕೇರಳದಲ್ಲಿ, ಈ ಉಪಶಮನ ಆರೈಕೆಯು ಕೇವಲ ಒಂದು ವೈದ್ಯಕೀಯ ಅವಶ್ಯಕತೆಯಾಗಿ ಮಾತ್ರ ಹೊರಹೊಮ್ಮಿಲ್ಲ. ಇದು “ವೈದ್ಯಕೀಯ ಅವಶ್ಯಕತೆಗಳ ಜೊತೆಗೆ ಸಾಮಾಜಿಕ ಕಾಳಜಿಯನ್ನು ಬೆಸೆದುಕೊಂಡು ಹೊರಹೊಮ್ಮಿದೆ” ಎಂದು ಅನುಭವಿ ಕ್ಯಾನ್ಸರ್ ತಜ್ಞ (ಆಂಕೊಲಾಜಿಸ್ಟ್) ಮತ್ತು ಉಪಶಮನ ಆರೈಕೆ ವೈದ್ಯ ಡಾ. ಹರಿ ಮೋಹನ್ ಹೇಳುತ್ತಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಇತರ ಶಾಲಾ ಮಕ್ಕಳು ನಿಯಮಿತವಾಗಿ ಅವರ ಚಿಕಿತ್ಸಾಲಯಕ್ಕೆ ಭೇಟಿ ನೀಡುತ್ತಾರೆ. "ಪ್ರೌಢಶಾಲಾ ಮಟ್ಟದಲ್ಲಿಯೂ ಸಹ ಈ ಬಗೆಗಿನ ಜಾಗೃತಿಯು ದೊಡ್ಡಮಟ್ಟದಲ್ಲಿಯೇ ಆಗಿದೆ" ಎಂದು ಅವರು ಹೇಳುತ್ತಾರೆ.
ಶಾಲಾ ಕಾಲೇಜು ಹಂತದಲ್ಲಿಯೇ ವಯಸ್ಸಾದವರು ಮತ್ತು ಕಾಯಿಲೆಯಿಂದ ನರಳುವವರನ್ನು ʼಆರೈಕೆʼ ಮಾಡುವ ಬಗ್ಗೆ ಸಹಾನುಭೂತಿ ಮತ್ತು ಕಾಳಜಿಯನ್ನು ಮಕ್ಕಳಿಗೆ ಕಲಿಸುವ ಕೇರಳದ ಈ ಉಪಕ್ರಮವು ಅತ್ಯಂತ ಮಹತ್ವದ ಪರಿಣಾಮವನ್ನೇ ಬೀರಿದೆ. ವೈಯಕ್ತಿಕ ಲಾಭ ನಷ್ಟಗಳ ಲೆಕ್ಕಾಚಾರದ ವ್ಯಕ್ತಿವಾದಿ ಹಿತಚಿಂತನೆಯ ಆಲೋಚನಾ ಕ್ರಮದಲ್ಲಿಯೇ ಮುಳುಗಿಹೋಗಿರುವ ಇಂದಿನ ಜಗತ್ತಿನಲ್ಲಿ ಮಕ್ಕಳು ಇದರಾಚೆಗೆ ಯೋಚಿಸುವ, ದೊಡ್ಡವರಾದ ಮೇಲೆ ಕೇವಲ ಸ್ವಾರ್ಥಚಿಂತನೆ ಮಾಡದೆ ಹೀಗೆ ಕೈಲಾಗದವರ ಸೇವೆಯನ್ನು ತಮ್ಮ ಜೀವನದ ಭಾಗವಾಗಿ ಸ್ವೀಕರಿಸುವಂತೆ ಪ್ರೇರೇಪಿಸಿದೆ. ಇದು ಜನಸಮುದಾಯವು ಈ ಸೇವೆಯಲ್ಲಿ ದೊಡ್ಡಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಹೀಗೆ ಅಸಹಾಯಕರು, ರೋಗಿಗಳು ಇರುವ ಕಡೆ ರೋಗಿಗಳಿಗೆ ಮತ್ತು ಅವರನ್ನು ನೋಡಿಕೊಳ್ಳುವವರಿಗೆ ಉಚಿತವಾಗಿ ತಮ್ಮ ಮನೆಗಳಲ್ಲಿ ʼಪೋತಿಚೋರುʼ (ಆಹಾರದ ಪಾರ್ಸೆಲ್) ಮಾಡಿಕೊಡುವ ಅನೇಕ ಕುಟುಂಬಗಳನ್ನೂ ಮತ್ತು ಅವನ್ನು ಸಂಬಂಧಪಟ್ಟವರಿಗೆ ತಲುಪಿಸುವ ಸ್ವಯಂ ಸೇವಾ ಸಂಸ್ಥೆಗಳ ಸಂಪರ್ಕಜಾಲಗಳನ್ನೂ ನಾವು ಕಾಣಬಹುದಾಗಿದೆ!
ಈ ಬಗ್ಗೆ ಹರ್ಯಾಣದ ಸೋನಿಪಟ್‌ನಲ್ಲಿರುವ ಅಶೋಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ 25ವರ್ಷದ ಬೆನ್ನಾ ಫಾತಿಮಾ ಹೇಳುವ ಮಾತು ಕೇಳಿ, "ನನ್ನ ಊರು ಇರುವ ಉತ್ತರ ಮಲಬಾರ್ನಲ್ಲಿ ಬಹಳ ಸಕ್ರಿಯವಾದ ಉಪಶಮನ ಆರೈಕೆ ಸಂಸ್ಕೃತಿ ಇದೆ. ನಾನು ಹದಿಹರೆಯದಲ್ಲಿಯೇ ಇಂತಹ ಸೇವೆಯನ್ನು ಮಾಡುವುದನ್ನು ಕಲಿತೆ. ನನ್ನ ತಾಯಿ ಪಂಚಾಯತಿ ಸದಸ್ಯೆಯಾಗಿದ್ದರು ಮತ್ತು ಸಹೋದರ ಆಗಲೇ ಈ ಸೇವೆ ಮಾಡುವ ಸ್ವಯಂ ಸೇವಕರಾಗಿದ್ದರು. ನಾವು ರೋಗಿಗಳು ಮತ್ತು ಅಸಹಾಯಕರ ಮನೆಗಳನ್ನು ಸ್ವಚ್ಚಗೊಳಿಸುತ್ತೇವೆ, ಅವರ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುತ್ತೇವೆ ಮತ್ತು ಅವರೊಂದಿಗೆ ಮಾತನಾಡುತ್ತಾ ಅವರಿಗಾಗಿ ಕೆಲವು ಸಮಯ ಕಳೆಯುತ್ತೇವೆ. ಆರೈಕೆ ಎಂಬುದು ಇಲ್ಲಿ ಕೇವಲ ಮೇಲ್ನೋಟದ ಒಂದು ಜೈವಿಕ ಅಗತ್ಯವಲ್ಲ; ಅದು ಆಳದಲ್ಲಿ ಸಮಾಜಿಕವಾದದ್ದು.”
ಉಪಶಮನ ಆರೈಕೆಯ ಈ ಸಾಮಾಜಿಕ ಮುಖವನ್ನು ಕೇರಳದ ಕೋಝಿಕ್ಕೋಡ್ ನ ಐಪಿಎಂನ (Institute of Pallative Medicine) ವಾರ್ಷಿಕ ಉತ್ಸವವಾದ ʻಕ್ಯೂರಿಯಸ್ʼನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರದರ್ಶಿಸಲಾಗುತ್ತದೆ, ಪ್ರತಿವರ್ಷ ನಡೆಯುವ ಈ ಉತ್ಸವದಲ್ಲಿ ಸುಮಾರು 20,000 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ಉಪಶಮನ ಆರೈಕೆಗಾಗಿ ಜಾಗೃತಿ ಮೂಡಿಸುವ ಮತ್ತು ಅದಕ್ಕಾಗಿ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ನಡೆಯುವ ಇದು ಕಾಲೇಜು ಉತ್ಸವದಂತೆ ರಂಗಾಗಿ ನಡೆಯುವುದು ಒಂದು ವಿಶೇಷ. ಅದರ ಹಸಿರು ಕ್ಯಾಂಪಸ್ನಾದ್ಯಂತ ಅಂದಲಿಪಿ ಕಾರ್ಯಾಗಾರಗಳು, ಸಂಗೀತ ಉತ್ಸವಗಳು, ಆಹಾರ ಮಳಿಗೆಗಳು ಮತ್ತು ವರ್ಣರಂಜಿತ ಸ್ಟ್ರೀಮರ್ಗಳು ಇಲ್ಲಿ ಗಮನ ಸೆಳೆಯುತ್ತವೆ. ಸ್ವಯಂಸೇವಕರು ರೋಗಿಗಳನ್ನು ವೀಲ್ಚೇರ್ಗಳಲ್ಲಿ ಕರೆದುಕೊಂಡು ಹೋಗಿ ಜನಸಮೂಹದೊಂದಿಗೆ ಇಲ್ಲಿ ಬೆರೆಯುತ್ತಾರೆ. ಇಡೀ ಉತ್ಸವದಲ್ಲಿ ಸೌಹಾರ್ದತೆ ಮತ್ತು ನಗು ತುಂಬಿರುತ್ತದೆ.
"ಯುವಸಮುದಾಯದ ಒಳಗೊಳ್ಳುವಿಕೆ ನಮ್ಮ ಕಾರ್ಯವಿಧಾನದ ಮೂಲಾಧಾರವಾಗಿದೆ" ಎಂದು ಐಪಿಎಂನ ಸಲಹೆಗಾರ ಮತ್ತು ಅಧ್ಯಾಪಕ ಸದಸ್ಯ ಸೈಫ್ ಮೊಹಮ್ಮದ್ ಹೇಳುತ್ತಾರೆ. ತಮ್ಮ ಸಂಸ್ಥೆಯು 2010 ರಿಂದ, ತನ್ನ SIPC ಕಾರ್ಯಕ್ರಮದ ಮೂಲಕ ಕಾಲೇಜುಗಳಲ್ಲಿ ಜಾಗೃತಿ ಮಾಡುವ ಮೂಲಕ ಸುಮಾರು 10,000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಒಟ್ಟುಗೂಡಿಸಿದೆ. “ಯುವಕರು ಹೊಸ ಶಕ್ತಿ ಮತ್ತು ವಿಭಿನ್ನ ಆಲೋಚನೆಗಳನ್ನು ತರುತ್ತಾರೆ ಎಂದು ನಮ್ಮ ಸಂಸ್ಥೆಯ ಸದಸ್ಯರು ಒಪ್ಪುತ್ತಾರೆ. ನಿಜವಾಗಿಯೂ ಆಸಕ್ತ ಯುವಕರು ರೋಗಿಗಳ ಆರೈಕೆ, ಸಮುದಾಯ ಜಾಗೃತಿ ಅಥವಾ ನಿಧಿಸಂಗ್ರಹಣೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ಸೂಕ್ತ ತರಬೇತಿ ಪಡೆಯುತ್ತಾರೆ ಮತ್ತು ಸೇವೆ ಸಲ್ಲಿಸಲು ತಮಗೆ ಸೂಕ್ತವಾದ ಕಾರ್ಯಕ್ಷೇತ್ರದ ಆಯ್ಕೆಯನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ತರಬೇತಿಯೊಂದಿಗೆ ಏನು ಮಾಡುತ್ತಾರೆ ಎಂಬುದು ನಾವು ಯೋಜಿಸಬಹುದಾದದನ್ನು ಅಷ್ಟೇ ಏಕೆ ಊಹಿಸಬಹುದಾದದ್ದನ್ನು ಕೂಡ ಮೀರುತ್ತದೆ" ಎಂದು ಮೊಹಮ್ಮದ್ ಹೇಳುತ್ತಾರೆ.
ನಿಹಾಲಾ ಕ್ಯಾಥೂನ್ ಆ ವಿದ್ಯಾರ್ಥಿಗಳಲ್ಲಿ ಒಬ್ಬರು. ಕೋಝಿಕ್ಕೋಡ್ ನಿವಾಸಿಯಾದ ಇವರು ತಮ್ಮ ಈ ಸೇವಾ ಕಾರ್ಯವನ್ನು ಬಹುಪಾಲು ಈ ತರಬೇತಿ ಪಡೆದ ವಿದ್ಯಾರ್ಥಿಗಳು ಮಾಡುವಂತೆ ಕೆಲವು ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಪ್ರಾರಂಭಿಸಿದರು. ಕ್ರಮೇಣ ರೋಗಿಗಳೊಂದಿಗೆ ಕೆಲಸ ಮಾಡಲು ಮುಂದುವರೆದರು. ಒಂದು ನೆನಪು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಕೂತಿದೆ. ಅದನ್ನು ಅವರು ಹೇಳುವುದು ಹೀಗೆ, "ಇಲ್ಲಿ ಕ್ಯಾನ್ಸರ್ ನಿಂದ ದಾಖಲಾಗಿದ್ದ 18 ವರ್ಷದ ಹುಡುಗಿಯೊಬ್ಬಳು ಇದ್ದಳು. ಕ್ಯೂರಿಯೊಸ್ 2023 ರ ಸಮಯದಲ್ಲಿ (ಸಂಸ್ಥೆಯ ವಾರ್ಷಿಕ ಉತ್ಸವ) ನಾವು ಈ ಪ್ರದೇಶದ ಸಾಂಪ್ರದಾಯಿಕ ಮುಸ್ಲಿಂ ನೃತ್ಯವಾದ ʻಒಪ್ಪನʼವನ್ನು(Oppana) ಪ್ರದರ್ಶಿಸಿದೆವು, ಅಲ್ಲಿ ಒಬ್ಬ ಪ್ರದರ್ಶಕಿ ವಧುವಿನ ಪಾತ್ರವನ್ನು ನಿರ್ವಹಿಸಿದಳು. ಈ ಹುಡುಗಿ ವಧುವಾಗಬೇಕೆಂದು ಒತ್ತಾಯಿಸುತ್ತಿದ್ದಳು ಮತ್ತು ಆ ಅವಕಾಶ ಸಿಕ್ಕಾಗ ರೋಮಾಂಚನಗೊಂಡಳು. ಆಗಾಗ್ಗೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಳು."
ಆ ಹುಡುಗಿಯನ್ನು ಬಲ್ಲವರು ಈ ಅನುಭವವನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಏಕೆಂದರೆ 2024 ರ ಈ ಉತ್ಸವ ಬರುವ ಹೊತ್ತಿಗೆ, ಆ ಹುಡುಗಿ ತೀವ್ರ ದುರ್ಬಲ ಸ್ಥಿತಿಯಲ್ಲಿದ್ದಳು ಮತ್ತು ಕೆಲವೇ ದಿನಗಳಲ್ಲಿ ಅವಳು ನಿಧನಳಾದಳು. "ಅಂತಹ ಕ್ಷಣಗಳನ್ನು ನಿಭಾಯಿಸಲು ನಮಗೆ ತರಬೇತಿ ನೀಡಲಾಗಿದ್ದರೂ ಅದು ನನಗೆ ತುಂಬಾ ಭಾವನಾತ್ಮಕವಾಗಿತ್ತು" ಎಂದು ಕ್ಯಾಥೂನ್ ನೆನಪಿಸಿಕೊಳ್ಳುತ್ತಾ ಹೇಳುವುದು ಹೀಗೆ, "ಅವಳ ಕೊನೆಯ ತಿಂಗಳುಗಳಲ್ಲಿ ನಾವು ಅವಳನ್ನು ಸಂತೋಷಪಡಿಸಿದ್ದೇವೆ ಎಂಬುದೇ ನಮಗೆ ಸಮಾಧಾನಕರ ಸಂಗತಿಯಾಗಿದೆ.”
ಒಂಟಿತನಕ್ಕೆ ಚುಚ್ಚುಮದ್ಧು
ಕೆಲವು ಯುವ ಸ್ವಯಂಸೇವಕರಿಗೆ ಭಾವನೆಗಳನ್ನು ನಿಭಾಯಿಸುವುದು ಕಷ್ಟಕರ
ಹೇಗೋ ಹಾಗೆಯೇ ʼಸಹಾನುಭೂತಿʼ ಎಂಬುದು ಕೂಡ ಸುಲಭವಾಗಿ ಬರುವುದಿಲ್ಲ. 14 ನೇ ವಯಸ್ಸಿನಲ್ಲಿ, ಫಾತಿಮಾ ಆರಂಭಿಕ ಉಪಶಮನ ಆರೈಕೆ ಭೇಟಿಯ ಸಮಯದಲ್ಲಿ ʻತೂರುನಳಿಕೆ
(Catheter) ಅನ್ನು ನೋಡಿ ಗೊಂದಲಕ್ಕೆ
ಬಿದ್ದಳು. ಮತ್ತು ಅವಳು ತನ್ನ ಗೊಂದಲದಲ್ಲಿ, ಅಲ್ಲಿ
ರೋಗಿಗೆ ಇಡಲಾಗಿದ್ದ ತೆಂಗಿನಕಾಯಿ ನೀರನ್ನು ತಾನೇ ಘಟಘಟ
ಕುಡಿದುಬಿಟ್ಟಳು. "ನನಗೆ ತುಂಬಾ ತಪ್ಪಿತಸ್ಥ ಭಾವನೆ ಬಂತು. ನಾನು ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕಿತ್ತು, ಆದರೆ ನನ್ನ ಪ್ರತಿಕ್ರಿಯೆಯು ಆ ರೋಗಿಯ
ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿತು” ಎಂದು ತನ್ನ ತಪ್ಪನ್ನು ನೆನಪಿಸಿಕೊಳ್ಳುವ ಅವಳು ತನ್ನ ʻಮಾತಿನ
ಗುಣಪಡಿಸುವ ಶಕ್ತಿʼಯ ಮೂಲಕ ಈ ಆರೈಕೆಗೆ ಮರಳಿದಳು. "ನಾನು ರೋಗಿಗಳಿಗೆ ಪತ್ರಗಳನ್ನು ಬರೆಯಲು ಪ್ರಾರಂಭಿಸಿದೆ. ಅದು ನನಗೆ ಇನ್ನೂ ಅರ್ಥಪೂರ್ಣವಾದದ್ದನ್ನು ನೀಡಲು ಇದೆ ಎಂದು ಭಾವಿಸಲು ಸಹಾಯ ಮಾಡಿತು."
ಶಾಲೆಗಳ ಆಚೆಗೂ ಈ ಉಪಶಮನ ಸ್ವಯಂಸೇವೆಯು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ವಿಭಜನೆಯನ್ನು ಕೂಡಿಸುವಲ್ಲಿ ಕೂಡ ಸಾಕಷ್ಟು ಕೆಲಸ ಮಾಡುತ್ತದೆ. ರೋಗಿಗಳ ಸ್ಥಿತಿ ಏನು, ಅವರ ಅವಶ್ಯಕತೆಗಳೇನು ಎಂಬುದನ್ನು ಸ್ಥಳೀಯ ಸ್ವಯಂ ಸೇವಾಸಂಸ್ಥೆಗಳು ಅಲ್ಲಿನ ಸ್ಥಳೀಯ ಆಡಳಿತಗಳಾದ ಗ್ರಾಮ ಪಂಚಾಯತ್ ನಗರಸಭೆ ಮುಂತಾದವುಗಳ ಮೂಲಕ ಗುರುತಿಸುವ ಕಾರ್ಯವನ್ನು ಮಾಡುತ್ತವೆ. ಅವರಿಗೆ ಸೇವೆ ಸಲ್ಲಿಸುವವರು ಕೂಡ ಬದಲಾಗುತ್ತಿರುತ್ತಾರೆ. ಸಾಮಾನ್ಯವಾಗಿ ವಾರಕ್ಕೊಮ್ಮೆ, ಕೆಲವು ಸಲ ಹದಿನೈದು ದಿನಕ್ಕೊಮ್ಮೆ ಈ ಬದಲಾವಣೆಗಳಾಗುತ್ತವೆ. ವಿದ್ಯಾರ್ಥಿಗಳು ಅಗತ್ಯವಿದ್ದಾಗ ಸಹಾಯ ಹಸ್ತ ಚಾಚುತ್ತಾರೆ. ಸಾಮಾನ್ಯವಾಗಿ ಒಬ್ಬ ರೋಗಿಗೆ ಇಬ್ಬರು ಸ್ವಯಂ ಸೇವಕರು ಭೇಟಿನೀಡಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ.
ವಿದ್ಯಾರ್ಥಿಗಳ ಯೌವ್ವನದ ಜೀವನವು ವೃದ್ಧರ ಏಕತಾನತೆಯ ರೋಗಕ್ಕೆ ತಕ್ಕ ಚಿಕಿತ್ಸೆಯಾಗಬಹುದಾಗಿದೆ. ಕೇರಳದ ಹೆಚ್ಚಿನ ದುಡಿಯುವ ವಯಸ್ಸಿನ ಜನ ಭಾರತದ ಹೊರಗೆ ಹೋಗಿದ್ದಾರೆ ಎಂದು ಅಲ್ಲಿನ ವಲಸೆಯ ದೀರ್ಘ ಇತಿಹಾಸವು ಹೇಳುತ್ತದೆ. ಇದರ ಪರಿಣಾಮವಾಗಿ ಕೇರಳದಲ್ಲಿ ಬಹಳಷ್ಟು ಸಂಖ್ಯೆಯ ವೃದ್ಧರು ಏಕಾಂಗಿಗಳಾಗಿ ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ. "2015 ರಲ್ಲಿ, 1.7 ಲಕ್ಷ ಹಿರಿಯ ನಾಗರಿಕರು ಹೀಗೆ ʻಏಕಸದಸ್ಯ ಕುಂಟುಂಬʼವಾಗಿ ವಾಸಿಸುತ್ತಿದ್ದರು ಮತ್ತು ಅವರಲ್ಲಿ ಅನೇಕರು ಯಾರೊಂದಿಗೂ ಸಂಪರ್ಕವಿಲ್ಲದ ʻಏಕಾಂಗಿʼಗಳಾಗಿ ವಾಸಿಸುತ್ತಿದ್ದರು" ಎಂದು ಡಾ. ಗೋಪಾಲ್ ಹೇಳುತ್ತಾರೆ.
ಈ ಹಿನ್ನೆಲೆಯಲ್ಲಿ, ಆರೈಕೆಗಾಗಿ ವಿನಂತಿಗಳು ಹಲವು ರೂಪಗಳಲ್ಲಿ ಬರಬಹುದು. ಒಮ್ಮೆ ಒಬ್ಬ ವೃದ್ಧ ವ್ಯಕ್ತಿ ಫಾತಿಮಾಳನ್ನು ತನ್ನ ಹೆಂಡತಿಯೊಂದಿಗೆ ತನ್ನ ಫೋಟೋ ತೆಗೆಯುವಂತೆ ಕೇಳಿಕೊಂಡರು. ಬಹುಶಃ ಆ ಭಾವಚಿತ್ರವನ್ನು ಲ್ಯಾಮಿನೇಟೆಡ್ ಮಾಡಿಸಿಕೊಂಡು ತಮ್ಮ ಹತ್ತಿರ ಇಟ್ಟುಕೊಳ್ಳುವ ಇಚ್ಚೆ ಅವರಿಗೆ ಇತ್ತೋ ಏನೋ. "ದುಃಖಕರವೆಂದರೆ, ನಾನು ಅದನ್ನು ಅವರಿಗೆ ಕೊಡುವ ಮೊದಲೇ ಅವರು ತೀರಿಕೊಂಡುಬಿಟ್ಟರು" ಎಂದು ಆಕೆ ಹೇಳುತ್ತಾಳೆ.
ಇಂತಹ ಕಾರ್ಯದ ಭಾವನಾತ್ಮಕ ಭಾರವು ರೋಗಿಗಳು ಮತ್ತು ಸ್ವಯಂಸೇವಕರು ಇಬ್ಬರ ಮೇಲೂ ದೊಡ್ಡ ಪರಿಣಾಮವನ್ನು ಬೀರುತ್ತದೆ. ಕ್ಯಾಥೂನ್ ಅವರು ಭೇಟಿ ನೀಡುತ್ತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆಯ ದಪ್ಪಗಾದ ಕಾಲ್ಬೆರಳ ಉಗುರುಗಳನ್ನು ಕತ್ತರಿಸಿದ್ದನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: "ಅದು ನನಗೆ ದೊಡ್ಡ ವಿಷಯವಾಗಿರಲಿಲ್ಲ, ಕೇವಲ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಮಾಡಬೇಕಾದ ಒಂದು ಸಣ್ಣ ಮತ್ತು ಸಾಮಾನ್ಯ ಕೆಲಸ. ಆದರೆ ಆ ರೋಗಿಗೆ ಅದು ಬಹುದೊಡ್ಡದಾದ ಕೆಲಸವಾಗಿತ್ತು. ಅದು ಸಾಂತ್ವನ ಮತ್ತು ಘನತೆಯ ದ್ಯೋತಕವಾಗಿತ್ತು." ಒಂದು ದಿನ, ಕ್ಯಾಥೂನ್ ತನ್ನ ಭೇಟಿಗೆ ತಡವಾಗಿ ಬರುತ್ತಿದ್ದಾಗ, ಅವರಿಗೆ ಆ ಮಹಿಳೆಯಿಂದ ಚಿಂತೆಯ ಧ್ವನಿಯ ಫೋನ್ ಕರೆ ಬಂದಿತು. "ನೀವು ಇಂದು ಬರುತ್ತಿಲ್ಲವೇ” ಎಂದು ಆ ಮಹಿಳೆ ಅವರನ್ನು ಕೇಳುತ್ತಾಳೆ. “ನಾವು ನೀಡುವ ಭೇಟಿಗಳು ಈ ರೋಗಿಗಳೊಂದಿಗೆ ಕಳೆಯುವ ಸಮಯ ನಮ್ಮ ಪಾಲಿಗೆ ಸಣ್ಣವೇ ಇರಬಹುದು ಆದರೆ ಅವರ ಪಾಲಿಗೆ ಎಷ್ಟೊಂದು ಮಹತ್ವದ್ದು ಎಂಬುದು ನನಗೆ ಅರ್ಥವಾಯಿತು.” ಎಂದು ಅವರು ಹೇಳುತ್ತಾರೆ.
ಕ್ಯಾಥೂನ್ ಈ ಮೊದಲು ತನ್ನ ಅಜ್ಜಿಯ ಆರೈಕೆಯನ್ನು ಕೂಡ ಮಾಡಿದ್ದರು. ಆದರೆ ಇತರರಿಗೆ ಮಾಡುವ ಈ ಸ್ವಯಂಸೇವೆಯು ಅವರಿಗೆ ಘನತೆಯ ಮಹತ್ವವನ್ನು ಕಲಿಸಿತು. "ಈ ರೋಗಿಗಳು ಒಂದು ಕಾಲದಲ್ಲಿ ಸಕ್ರಿಯ ಜೀವನವನ್ನು ಸಹ ನಡೆಸಿದ್ದರು" ಎಂದು ಹೇಳುವ ಅವರು ಉಪಶಮನ ಆರೈಕೆಯನ್ನು ವ್ಯಾಖ್ಯಾನಿಸುವುದು ಹೀಗೆ: ಉಪಶಮನ ಆರೈಕೆ ಎಂದರೆ ಯಾರಾದರೂ ತಮ್ಮನ್ನು ತಾವು ಕೂಡ ಬೆಲೆಯುಳ್ಳವರು, ತಮ್ಮ ಬದುಕು ಕೂಡ ಘತನೆಯಿಂದ ಕೂಡಿದ್ದು ಎಂದು ಭಾವಿಸುವಂತೆ ಮತ್ತು ಅವರಲ್ಲಿ ಅದು ಕಾಣುವಂತೆ ಮಾಡುವುದೇ ಆಗಿದೆ.
ಐಪಿಎಂನಲ್ಲಿ ವೈದ್ಯರು ಮತ್ತು ದಾದಿಯರೊಂದಿಗೆ ಅವರ ಕೆಲಸಗಳಲ್ಲಿ ಅಂದರೆ ಔಷಧಿ ನೀಡುವುದು, ಮಾನಸಿಕ ಬೆಂಬಲ ನೀಡುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿರುವ 21 ವರ್ಷದ ಅಯನಾ ಕುಂಜು ತಮ್ಮ ಕಾಲೇಜು ದಿನಗಳಲ್ಲಿಯೇ ಸ್ವಯಂ ಸೇವಕಿಯಾಗಿ ಈ ಕಾರ್ಯಕ್ಕೆ ಇಳಿದವರು. ಇದು ಮುಂದೆ ಅವರು ಸಮಾಜ ಸೇವಕಿಯಾಗಿ ತಮ್ಮ ವೃತ್ತಿಯನ್ನು ಆಯ್ದುಕೊಳ್ಳುವಲ್ಲಿ ಕೂಡ ಪ್ರಮುಖ ಪಾತ್ರವಹಿಸಿತು. ಅವರು ತಮ್ಮ ಅನುಭವವನ್ನು ದಾಖಲಿಸುವುದು ಹೀಗೆ: “ಗಾಯಾಳುಗಳ ಗಾಯಗಳನ್ನು ಡ್ರೆಸ್ ಮಾಡುವಾಗ ಮತ್ತು ಚಿಕ್ಕಪುಟ್ಟ ಚಿಕಿತ್ಸೆಗಳನ್ನು ಮಾಡುವಾಗ ನಾನು ಅತ್ಯಂತ ಸಂತೋಷವನ್ನು ಅನುಭವಿಸುತ್ತೇನೆ ಏಕೆಂದರೆ ನಾನು ಆ ಕೆಲಸಗಳ ಮೂಲಕ ಎಷ್ಟೋ ಜನರಿಗೆ ಸಹಾಯ ಮಾಡುತ್ತಿದ್ದೇನೆ ಎಂಬ ಭಾವನೆ ನನಗೆ ಉಂಟಾಗುತ್ತದೆ. ಅವರ ಮುಖದ ಮೇಲೆ ಕಾಣುವ ಸಂತೋಷವು ಬಹಳಷ್ಟು ಅರ್ಥಗಳನ್ನು ನೀಡುತ್ತದೆ.”
ಅತಿಚಿಕ್ಕ ಕುಟುಂಬಗಳ ಈ ಯುಗದಲ್ಲಿ, ಇಂತಹ ಅನುಭವಗಳು ʻಪೀಳಿಗೆಯ ಅಂತರ́ (Generational Gap)ವನ್ನು ಕಡಿಮೆ ಮಾಡಬಹುದು. "ಇಂದು ಅನೇಕ ಮಕ್ಕಳಿಗೆ ಭಾವನಾತ್ಮಕ ಆಧಾರಗಳ ಕೊರತೆಯಿದೆ" ಎಂದು ಡಾ. ರಾಜಗೋಪಾಲ್ ಹೇಳುತ್ತಾರೆ. "ಹಿರಿಯರೊಂದಿಗಿನ ಸಹಾನುಭೂತಿ ಮತ್ತು ಸಂಪರ್ಕವು ಭಾವನಾತ್ಮಕ ಬುದ್ಧಿವಂತಿಕೆಯನ್ನು (EI) ಬೆಳೆಸಲು ಸಹಾಯ ಮಾಡುತ್ತದೆ." ಬದ್ಧತೆಗಳನ್ನು ಉಳಿಸಿಕೊಳ್ಳುವಲ್ಲಿ ವೈವಿಧ್ಯಮಯ ಜವಾಬ್ದಾರಿಗಳಿಂದಾಗಿ ದೊಡ್ಡವರು ಪ್ರಾಮಾಣಿಕರಾಗಿ ಉಳಿಯುವುದು ಕಷ್ಟ. ಆದರೆ ಈ ವಿಷಯದಲ್ಲಿ ಯುವಜನರು ದೊಡ್ಡವರಿಗಿಂತ ಸಹಜವಾಗಿ ಹೆಚ್ಚು ಪ್ರಾಮಾಣಿಕತೆಯನ್ನು ಹೊಂದಿರುತ್ತಾರೆ ಎಂಬುದು ಅವರ ಅಭಿಪ್ರಾಯ.
ಸಂಪರ್ಕಗಳನ್ನು ನಿರ್ಮಿಸುವುದು
ಆದಾಗ್ಯೂ, ಅನಾರೋಗ್ಯ ಮತ್ತು ಸಾವಿನ ವಾತಾವರಣವನ್ನು ನಿಭಾಯಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕುಂಜು ಮತ್ತು ಕ್ಯಾಥೂನ್ ಇಬ್ಬರೂ ಹೇಳುವಂತೆ ಯಾರನ್ನಾದರೂ ಕಳೆದುಕೊಳ್ಳುವುದು ಆಳವಾದ ಭಾವನಾತ್ಮಕ ಅನುಭವವನ್ನು ನೀಡುತ್ತದೆ. ಅವರ ತರಬೇತಿಯು ಈ ಅಂಶದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ಅವರನ್ನು ಹೆಚ್ಚು ಸಶಕ್ತರನ್ನಾಗಿಸುತ್ತದೆ. "ನಮ್ಮ ಹಿರಿಯರು ಮತ್ತು ಸುತ್ತಮುತ್ತಲಿನ ಇತರರ ಅನುಭವಗಳ ಬಗ್ಗೆ ತಿಳಿಯಲು ಇದು ಸಹಾಯ ಮಾಡುತ್ತದೆ" ಎಂದು ಕುಂಜು ಹೇಳುತ್ತಾರೆ.
ಸ್ವಯಂಸೇವಕರಿಗೆ ತಾವು ಹೇಗೆ ಸಹಾಯ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುವುದು ಇಲ್ಲಿನ ಇನ್ನೊಂದು ವಿಶೇಷ. ಕೊಚ್ಚಿಯ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ರೋಗಿಗಳ ʼಪರೋಕ್ಷಆರೈಕೆʼಯಲ್ಲಿ (Indirect patient Caring) ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೋಗಿಗಳ ನೇರ ಸೇವೆ ಮಾಡಲಾಗದ ಅವರು ಅದಕ್ಕಾಗಿ ಅಗತ್ಯವಿರುವ ʻನಿಧಿಸಂಗ್ರಹಣೆʼ ʻಕಾರ್ಯಕ್ರಮ ನಿರ್ವಹಣಾ ಚಟುವಟಿಕೆಗಳುʼ, ʻಹೊಸ ಸ್ವಯಂಸೇವಕರನ್ನು ತೊಡಗಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ. ಈ ರೀತಿ ಪರರಿಗಾಗಿ ಮಾಡುವ ಅವರ ಸ್ವಯಂಸೇವೆಯು ಮನೆಯಲ್ಲಿ ತಮ್ಮ ವಯಸ್ಸಾದ ಅಜ್ಜ-ಅಜ್ಜಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ತಮ್ಮನ್ನು ತರಬೇತಿಗೊಳಿಸಿದೆ ಎಂದು ಅವರು ಹೇಳುತ್ತಾರೆ.
ಪುದುಚೇರಿಯಲ್ಲಿ ಬೆನ್ನುಮೂಳೆಯ ಯೋಧರು
ಯುವಕರ
ತರಬೇತಿ ಹೇಗೆ ನಡೆಯುತ್ತಿದೆ?
ʻಪಾಲಿಯಮ್ ಇಂಡಿಯಾʼ ಪಂಚಾಯತಿ ಮಟ್ಟದ ತಮ್ಮ ಹದಿನಾಲ್ಕು ಸಂಘಟನೆಗಳ ಮೂಲಕ ತಿರುವನಂತಪುರದಲ್ಲಿ ಆರರಿಂದ ಹತ್ತನೆಯ ತರಗತಿ ಮಕ್ಕಳಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಕೊಝಿಕ್ಕೋಡ್‌ನ ಐಪಿಎಂ ನಲ್ಲಿ 17 ರಿಂದ 21 ವರ್ಷದ ವಯೋಗುಂಪಿನ ಸ್ವಯಂ ಸೇವಕರು ಸ್ನಾತಕ ಪದವಿ ಪಡೆಯುತ್ತಾರೆ. ಇಲ್ಲಿ ಈ ಸ್ವಯಂ ಸೇವೆಯಲ್ಲಿ ತೊಡಗಿಕೊಂಡು ವಾರದ ಭೇಟಿನೀಡಲು ಬೇಕಾದ ಮಾನಸಿಕ ಸಿದ್ಧತೆ ಕುರಿತ ಆರುತಿಂಗಳ ತರಬೇತಿಯನ್ನು, ವಿಶ್ವ ಆರೋಗ್ಯ ಸಂಸ್ಥೆ ಪ್ರಾಯೋಜಿತವಾದ 20 ಗಂಟೆಗಳ ನೇರಸ್ವಯಂ ಸೇವೆಯ ಕಾರ್ಯಕ್ರಮದ ಜೊತೆಗೆ ನೀಡಲಾಗುತ್ತದೆ. ತ್ರಿಶ್ಶೂರ್‌ನ ʻಪೇಯಿನ್ ಎಂಡ್ ಪಲ್ಯಾಟಿವ್ ಕೇರ್ ಸೊಸೈಟಿʼ ಕೂಡ ವಿದ್ಯಾರ್ಥಿ ಸ್ವಯಂಸೇವಕರಿಗೆ ʻಸಂವೇದನಾ ಕಾರ್ಯಕ್ರಮʼ ನೀಡುತ್ತಿದೆ. ಕೊಝಿಕ್ಕೋಡ್‌ನ ಫಾರೂಕ್ ಕಾಲೇಜು ಕೂಡ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ನಡೆಸುವ ಒಂದು ಡಯಾಲಿಸಿಸ್ ಕೇಂದ್ರ ಮತ್ತು ಉಪಶಮನ ಆರೈಕೆ ಕೇಂದ್ರವನ್ನು ಹೊಂದಿದೆ.
ಸಮಸ್ಯೆ
ಸವಾಲುಗಳು ಏನೂ ಇಲ್ಲವೇ?
ಈ ದೊಡ್ಡಮಟ್ಟದ ಸೇವಾ ಉಪಕ್ರಮದಲ್ಲಿ ಯಾವುದೇ ಸಮಸ್ಯೆ-ಸವಾಲುಗಳು ಇಲ್ಲವೇ ಇಲ್ಲವೆಂದಲ್ಲ. ಒಮ್ಮೆ ಒಬ್ಬ ಸ್ವಯಂಸೇವಕ ಕ್ಯಾನ್ಸರ್ ರೋಗಿಯೊಬ್ಬರಿಗೆ ಚಿಕಿತ್ಸೆಯನ್ನು ಬಿಟ್ಟುಬಿಡುವಂತೆ ತಪ್ಪಾಗಿ ಸಲಹೆ ನೀಡಿದ ಸಮಯವನ್ನು ಡಾ. ಮೋಹನ್ ನೆನಪಿಸಿಕೊಳ್ಳುತ್ತಾರೆ. "ಈ ತಪ್ಪು ನಿರ್ಣಯಗಳು ಸ್ವಯಂಸೇವಕರಿಗೆ ರೋಗನಿರ್ಣಯ ಅಥವಾ ಚಿಕಿತ್ಸೆ ನೀಡಲು ಸರಿಯಾದ ತರಬೇತಿ ನೀಡದ ಕಾರಣ ಸಂಭವಿಸುತ್ತವೆ, ಇದರ ಜೊತೆಗೆ ಕೆಲವರು ತಮ್ಮನ್ನು ತಾವು ತಜ್ಞರೆಂದು ಭಾವಿಸಲು ಪ್ರಾರಂಭಿಸುತ್ತಾರೆ." ಈ ಸಮಸ್ಯೆಗಳಿಗೆಲ್ಲ ಪರಿಹಾರವು ಅವರಿಗೆ ರಚನಾತ್ಮಕ ತರಬೇತಿ ನೀಡುವಲ್ಲಿ ಮತ್ತು ಅವರಿಗೆ ತಮ್ಮ ಸೇವೆಯ ಮಿತಿಗಳನ್ನುಸ್ಪಷ್ಟವಾಗಿ ನಿಗದಿಪಡಿಸುವುದರಲ್ಲಿದೆ ಎಂದು ಅವರು ಹೇಳುತ್ತಾರೆ.
ಈ ಎಲ್ಲ ಮಿತಿಗಳು ಮತ್ತು ನ್ಯೂನತೆಗಳ ಹೊರತಾಗಿಯೂ ಸಾವಿನ ಅಂಚಿಗೆ ತಲುಪಿದ ಅನಾರೋಗ್ಯ ಪೀಡಿತರಗೆ ಸಹಾನುಭೂತಿಯ ಆರೈಕೆಯನ್ನು ಒದಗಿಸಲು ಯುವಕರು ದೊಡ್ಡಪ್ರಮಾಣದಲ್ಲಿ ಒಗ್ಗೂಡಿ ಬರುತ್ತಿರುವುದು ಒಂದು ವಿಶಿಷ್ಟ ವಿದ್ಯಮಾನವಾಗಿದೆ. ಮೊಹಮ್ಮದ್ ಗಮನಿಸಿದಂತೆ: "ಇದು ಪಠ್ಯಪುಸ್ತಕಗಳಿಂದ ಕಲಿಯಲು ಸಾಧ್ಯವಿಲ್ಲದ ಮತ್ತು ಕೇವಲ ನೈಜ ಮಾನವ ಸಂಪರ್ಕಗಳಿಂದ ಮಾತ್ರ ಕಲಿಯಬಹುದಾದ ಸಹಾನುಭೂತಿಯನ್ನು ಬೆಳೆಸುತ್ತದೆ.” ಕೇರಳದಲ್ಲಿ ಉಪಶಮನ ಆರೈಕೆಯ ಆರಂಭಿಕ ವಾಸ್ತುಶಿಲ್ಪಿಗಳು ಇದನ್ನು ಸರಿಯಾಗಿಯೇ ಗುರುತಿಸಿ ಮುನ್ನೆಲೆಗೆ ತಂದರು. "ಈ ಉಪಕ್ರಮದಲ್ಲಿ ವೈದ್ಯರು ಮತ್ತು ದಾದಿಯರು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆಯಾದರೂ ಅದಕ್ಕೆ ಪ್ರೇರಕ ಶಕ್ತಿ ಎಂಬುದು ಜನರಿಂದಲೇ ಬರಬೇಕಾಗುತ್ತದೆ " ಎಂದು ಮೊಹಮ್ಮದ್ ಹೇಳುತ್ತಾರೆ.
ಇಂದಿನ ಸಂಘರ್ಷಭರಿತ ಜಗತ್ತಿನಲ್ಲಿ ಮತ್ತು ಸಾಮಾಜಿಕ ನಿರಾಸಕ್ತಿಯ ಕಾಲಘಟ್ಟದಲ್ಲಿ, ದಯೆ ಮತ್ತು ದುರ್ಬಲರ ಬಗೆಗಿನ ಸಹಾನುಭೂತಿಗಳು ಕೆಲವೊಮ್ಮೆ ದೌರ್ಬಲ್ಯಗಳೆಂದು ಪರಿಗಣಿಸಲ್ಪಡುವುದುಂಟು. ಈ ದೃಷ್ಟಿಕೋನದಿಂದ ನೋಡಿದಾಗ, ಅಸಹಾಯಕರು ಮತ್ತು ದುರ್ಬಲರನ್ನು ನಿರ್ಲಕ್ಷಿಸುತ್ತಿರುವ ಇಂದಿನ ಸಮಾಜದ ಕೆಟ್ಟದಾದ ಒಂದು ನಡವಳಿಕೆಯ ವಿರುದ್ಧ ಅನಾರೋಗ್ಯ ಪೀಡಿತರು, ಪರಿತ್ಯಕ್ತರು ಮತ್ತು ಸಾವಿನ ಅಂಚಿನಲ್ಲಿರುವವರನ್ನು ನೋಡಿಕೊಳ್ಳಲು ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ ಈ ಯುವಕರು ಮಾಡುತ್ತಿರುವ ಕೆಲಸವು ಒಂದು ಸಭ್ಯ ಮತ್ತು ಸ್ಥಿರವಾದ ಹೋರಾಟವೇ ಆಗಿದೆ. "ಉಪಶಮನ ಆರೈಕೆಯ ಸ್ವಯಂಸೇವೆಯು ನನಗೆ ಪ್ರೀತಿಯ ರಾಜನೀತಿಯಲ್ಲಿ ನಂಬಿಕೆ ಹುಟ್ಟಿಸಿದೆ ಮಾತ್ರವಲ್ಲ ಆಶಾಭಾವನೆಯನ್ನು ಕೂಡ ಉಂಟುಮಾಡಿದೆ" ಇದು ಫಾತಿಮಾ ಅವರ ಬೆಲೆಯುಳ್ಳ ಮಾತು.
*****
ಇಂಗ್ಲಿಷ್ ಮೂಲ: ರೇಶ್ಮಿ ಚಕ್ರವರ್ತಿ
ಅನು:
ಡಾ. ರಾಜೇಂದ್ರ ಬುರಡಿಕಟ್ಟಿ





No comments:
Post a Comment