Monday, September 22, 2025

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ʻಜಾತಿಗಣತಿʼ ಮಾತ್ರವೇ?

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ʻಜಾತಿಗಣತಿʼ ಮಾತ್ರವೇ?

ಇದೀಗ ತಾನೆ ರಾಜ್ಯಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದೆ. ಎಲ್ಲ ಸಮೀಕ್ಷೆಗಳಂತೆ ಇದೂ ಕೂಡ ಆರಂಭದಲ್ಲಿ ಒಂದಿಷ್ಟು ತಾತ್ವಿಕ ಚರ್ಚೆಗಳನ್ನು ಹುಟ್ಟುಹಾಕಿದೆ; ತಾಂತ್ರಿಕ ಸಮಸ್ಯೆಗಳನ್ನ ಎದುರಿಸುತ್ತಿದೆ. ಇವೆಲ್ಲವೂ ಸರಿಯಾಗಿ ಒಂದು ತಾರ್ಕಿಕ ಮತ್ತು ತಾಂತ್ರಿಕ ಅಂತ್ಯವನ್ನು ಕಂಡು  ಸಮೀಕ್ಷೆ ಅಚ್ಚುಕಟ್ಟಾಗಿ ನಡೆದರೆ ಅದರಿಂದ ನಿಜಕ್ಕೂ ಸಮಾಜಕ್ಕೆ ಒಂದಿಷ್ಟು ಒಳ್ಳೆಯದಾಗುವುದರಲ್ಲಿ ಸಂಶಯವಿಲ್ಲ. ಆದರೆ ಅದಕ್ಕೆ ಅಂಟಿಕೊಂಡ ವಿಘ್ನಗಳು ನಿವಾರಣೆ ಆಗಬೇಕು ಅಷ್ಟೆ.

ಈ ಸಮೀಕ್ಷೆಯು ವಾಸ್ತವವಾಗಿ ಸುಮಾರು ೬೦ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೂಲಕ ಕುಟುಂಬವೊಂದರ ಮತ್ತು ಅದರ ಸದಸ್ಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಮತ್ತು ಆ ಮೂಲಕ ಎಲ್ಲೆಲ್ಲಿ ಅಸಮಾನತೆ ಇದೆಯೋ ಅದನ್ನು ಸರಿಪಡಿಸುವ ಉದ್ದೇಶವನ್ನು ಇಟ್ಟುಕೊಂಡಿದೆ. ಆದರೆ ಆ ಎಲ್ಲ ಮಹತ್ವದ ಅಂಶಗಳನ್ನು ಕಡೆಗಣಿಸಿ ಅಲ್ಲಿ ಬರುವ ಜಾತಿ ಧರ್ಮಗಳನ್ನೇ ಪ್ರಧಾನವಾಗಿಟ್ಟುಕೊಂಡು ವಿವಿಧ ಜಾತಿಗಳಿಗೆ ಸೇರಿರುವ ʻಜಾತಿಜಗದ್ಗುರುಗಳುʼ ರಾಜಕೀಯ ನಾಯಕರು ಸಭೆ ಸಮಾರಂಭ ಮಾಡುವುದು, ತಮ್ಮ ಜನಾಂಗದವರಿಗೆ ಧರ್ಮದ ಕಾಲಂ ನಲ್ಲಿ ಏನು ಬರೆಸಬೇಕು, ಜಾತಿ ಕಾಲಂ ನಲ್ಲಿ ಏನು ಬರೆಸಬೇಕು ಎಂದು ಸಾರ್ವಜನಿಕ ಹೇಳಿಕೆ ಕೊಡುತ್ತಿರುವುದರಿಂದ ಮತ್ತು ಇದೇ ಅಂಶ ಚರ್ಚೆಯ ಶೇಕಡಾ ತೊಂಬತ್ತು ಭಾಗವನ್ನು ಆವರಿಸಿರುವುದರಿಂದ ಇದು ಸಹಜವಾಗಿಯೇ ʼಜಾತಿಗಣತಿʼ ಎಂದು ತಪ್ಪಾಗಿ ಗ್ರಹಿಸಲ್ಪಟ್ಟು ಅನಗತ್ಯ ಮತ್ತು ವಿಪರೀತ ಚರ್ಚೆ ಹುಟ್ಟುಹಾಕಿ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದೆ.

ಈ ರೀತಿ ಜಾತಿ ಧರ್ಮಗಳ ಕುರಿತು ವಿಪರೀತ ಚರ್ಚೆ ನಡೆಯುತ್ತಿರುವುದನ್ನು ನೋಡಿದರೆ ಅನೇಕರು ನಾವು ಸಮೀಕ್ಷೆಯಲ್ಲಿ ಬರೆಸುವ ಜಾತಿ ಧರ್ಮಗಳ ಆಧಾರದ ಮೇಲೆ ನಮಗೆ ಸರ್ಕಾರಿ ಸೌಲಭ್ಯಗಳು ಸಿಗುವುದು ಬಿಡುವುದು ನಿರ್ಧಾರವಾಗುತ್ತದೆ ಅಂದುಕೊಂಡಿದ್ದಾರೆ. ಆದರೆ ಅದು ಶುದ್ಧತಪ್ಪು ಕಲ್ಪನೆ. ಯಾವುದೇ ಸಮೀಕ್ಷೆಯ ಆಧಾರದ ಮೇಲೆ ಯಾರಿಗೂ ವ್ಯಕ್ತಿಗತವಾಗಿಸೌಲಭ್ಯಗಳನ್ನು ಕೊಡುವ ಅಥವಾ ನಿರಾಕರಿಸುವ ಅವಕಾಶ ವಾಸ್ತವದಲ್ಲಿ ಇರುವುದೇ ಇಲ್ಲ. ಸಮೀಕ್ಷೆಗಳಿಂದ ಕೇವಲ ಅಂಕಿಅಂಶಗಳನ್ನು ಮಾತ್ರ ಸಂಗ್ರಹಿಸಿ ಅವನ್ನು ಸರ್ಕಾರಗಳು ತಮ್ಮ ಯೋಜನೆಗಳನ್ನು ರೂಪಿಸಲು ಮಾತ್ರ ಬಳಸಿಕೊಳ್ಳುತ್ತವೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಾಗಿ ಸರ್ಕಾರ ಯಾವ ಯಾವ ಜಾತಿಗಳಿಗೆ ಹೆಚ್ಚು ಸೌಲಭ್ಯಗಳನ್ನು ನೀಡುತ್ತದೆಯೋ ಅದೇ ಧರ್ಮ ಅಥವಾ ಜಾತಿಯನ್ನು ಬರೆಸಿದರೆ ನಮಗೂ ಅನುಕೂಲವಾಗಬಹುದು ಎಂದು ಬಹಳಷ್ಟು ಜನ ತಪ್ಪಾಗಿ ತಿಳಿದುಕೊಂಡಿದ್ದಾರೆ. ಒಂದು ವೇಳೆ ಇದೇ ಉದ್ದೇಶದಿಂದ ಅವರು ಹಾಗೆ ತಪ್ಪಾಗಿ ಬರೆಸಿದರೆ ಅವರಿಗೆ ಸೌಲಭ್ಯವೂ ಸಿಗುವುದಿಲ್ಲ ಬದಲಾಗಿ ಸರ್ಕಾರಕ್ಕೆ ಸರಿಯಾದ ಅಂಕಿ ಅಂಶಗಳು ಸಿಗದೆ ಯೋಜನೆಗಳು ಕೂಡ ಸರಿಯಾಗಿ ರೂಪುಗೊಳ್ಳದೆ ಜನರ ಹಣ ಪೋಲಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಅದು ಹೇಗೆ ಎಂದು ನೋಡೋಣ.

ಉದಾಹರಣಗೆ ಸಮೀಕ್ಷೆಯೊಂದರಲ್ಲಿಒಂದು ನಗರದಲ್ಲಿ ವಾಸಿಸುವ ಅನೇಕ ಜನರ ಓಟುಗಳು, ರೇಷನ್‌ ಕಾರ್ಡುಗಳು ಆಧಾರ್‌ ಕಾರ್ಡುಗಳು ಆ ನಗರದ ಸಮೀಪದ ಹಳ್ಳಿಗಳ ವಿಳಾಸವನ್ನು ಹೊಂದಿರುತ್ತವೆ. ನಗರದ ಹೆಚ್ಚುವರಿ ಕಂದಾಯ ಶುಲ್ಕ ವಿದ್ಯುತ್‌ ಶುಲ್ಕ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಲು ಕೆಲವರು ಇವನ್ನು ಉದ್ದೇಶಪೂರ್ವಕವಾಗಿಯೂ ಮಾಡಿಕೊಂಡಿರುತ್ತಾರೆ. ಅಂದರೆ ಸರ್ಕಾರದ ಲೆಕ್ಕದ ಪ್ರಕಾರ ಇವರು ಹಳ್ಳಿಗಳಿಗೆ ಸೇರಿರುತ್ತಾರೆ. ನಗರದ ಜನರ ಪಟ್ಟಿಯಲ್ಲಿ ಇವರ ಹೆಸರೇ ಇರುವುದಿಲ್ಲ. ಆದರೆ ಇವರು ವಾಸ್ತವದಲ್ಲಿ ಆ ನಗರದಲ್ಲಿಯೇ ವಾಸಿಸುತ್ತಿರುತ್ತಾರೆ.

ಇದರಿಂದ ಏನಾಗುತ್ತದೆ ನೋಡಿ. ಆ ನಗರದ ಜನಸಂಖ್ಯೆಯನ್ನು ಲೆಕ್ಕಹಾಕುವಾಗ ಇವರು ಲೆಕ್ಕಕ್ಕೆ ಸಿಗುವುದಿಲ್ಲ. ಆ ನಗರದಲ್ಲಿ 20 ಲಕ್ಷ ಜನರಿದ್ದಾರೆ ಎಂದು ಅಂಕಿಅಂಶಗಳು ಹೇಳಿದರೆ ವಾಸ್ತವವಾಗಿ ಇವರೆಲ್ಲ ಸೇರಿ 30 ಲಕ್ಷ ಜನರಾಗುತ್ತಾರೆ. ಆದರೆ ಸರ್ಕಾರ ಅಲ್ಲಿ ಒಂದು ನೀರಿನ ಟ್ಯಾಂಕನ್ನು ಕಟ್ಟಬೇಕು ಎಂದು ತೀರ್ಮಾನಿಸಿದಾಗ ಅಂಕಿ ಅಂಶಗಳನ್ನು ನೋಡಿ 20 ಲಕ್ಷ ಜನರು ಸ್ಥಳೀಯರು ಮತ್ತು ಬಂದು ಹೋಗುವವರು 2 ಲಕ್ಷ ಎಂದು ಲೆಕ್ಕಹಾಗಿ 22 ಲಕ್ಷ ಜನರಿಗೆ ಸಾಕಾಗುವಂತೆ ಕಟ್ಟುತ್ತದೆ. ಆದರೆ ವಾಸ್ತವದಲ್ಲಿ ಅಲ್ಲಿ ನೀರು ಕುಡಿಯುವವರ ಸಂಖ್ಯೆ 30 ಲಕ್ಷ ಆಗುತ್ತದೆ. ಆಗ ನೀರಿನ ಪರದಾಟ ಉಂಟಾಗುತ್ತದೆ.

ಇಲ್ಲಿ ಈ ಪರಿಸ್ಥಿತಿ ಹೀಗಾದರೆ ಹಳ್ಳಿಯಲ್ಲಿ ಇದಕ್ಕೆ ವಿರುದ್ಧವಾದ ಕ್ರಿಯೆ ನಡೆಯುತ್ತದೆ. ಅಲ್ಲಿನ ಅಂಕಿ ಅಂಶಗಳ ಮೇಲೆ ಅಲ್ಲಿ 5 ಸಾವಿರ ಜನರಿಗೆ ನೀರು ಸಿಗುವಂತೆ ಒಂದು ಟ್ಯಾಂಕ್‌ ಕಟ್ಟಿದರೆ ಅಲ್ಲಿ ನೀರನ್ನು ಕುಡಿಯಲು ಕೇವಲ 1 ಸಾವಿರ ಜನ ಇರುತ್ತಾರೆ. (ಅಲ್ಲಿ ಹೆಸರಿರುವವರು ನಗರದಲ್ಲಿರುತ್ತಾರೆ).  ಹಾಗಾಗಿ ಅಲ್ಲಿ ಹಳ್ಳಿಯಲ್ಲಿ ನೀರು ಪೋಲಾದರೆ ನಗರದಲ್ಲಿ ನೀರು ಅಭಾವ ಉಂಟಾಗುತ್ತದೆ.  ಆಗ ನಾವೆಲ್ಲ ಜನ ಸರ್ಕಾರಕ್ಕೆ ಬುದ್ದಿಯಿಲ್ಲ ಕಣ್ರಿ ಎಂದು ಸರ್ಕಾರಗಳನ್ನು ಬಯ್ಯತೊಡಗುತ್ತೇವೆ. ಆದರೆ ಯಾವುದೇ ಸರ್ಕಾರಕ್ಕೆ ಸರಿಯಾದ ಅಂಕಿಅಂಶ ಸಿಗದಿದ್ದರೆ ಅದು ತಾನೆ ಏನು ಮಾಡುತ್ತದೆ? ಇದಕ್ಕೆಲ್ಲ ಪರೋಕ್ಷವಾಗಿ ನಾವೇ ಕಾರಣವಲ್ಲವೇ?


ಜಾತಿ ಧರ್ಮಕ್ಕೆ ಸಂಬಂಧಿಸಿದ ಸಂಗತಿಯನ್ನೇ ನೋಡಿ. ಈಗ ಧರ್ಮಗುರುಗಳು ಜಾತಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ಜನರಲ್ಲಿ ಜಾತಿಪ್ರಜ್ಞೆ ದಿನದಿನಕ್ಕೂ ಜಾಗೃತವಾಗುತ್ತಿದೆ. ಇಲ್ಲಿ ಸರ್ಕಾರದ ಸೌಲಭ್ಯ ಸಿಗುತ್ತದೆ ಎಂಬ ಕಾರಣದಿಂದ ಬಹುತೇಕರು ಪರಿಶಿಷ್ಟ ಜಾತಿಗಳಿಗೆ ಸೇರಿದ ಯಾವುದೋ ಜಾತಿಯನ್ನು ಬರೆಸುತ್ತಾರೆ ಎಂದಿಟ್ಟುಕೊಳ್ಳೋಣ. ಗಣತಿದಾರರಿಗೆ ಅದನ್ನು ಪರಿಶೀಲಿಸುವ ಅಧಿಕಾರವಿರುವುದಿಲ್ಲವಾದ್ದರಿಂದ ಅವರು ಹೇಳಿದ್ದನ್ನು ಅವರು ಬರೆಯುತ್ತಾರೆ. ಈ ತಪ್ಪು ನಮೂದುಗಳಿಂದ ರಾಜ್ಯಮಟ್ಟದಲ್ಲಿ ಅಂಕಿಅಂಶಗಳನ್ನು ಗುಂಪೀಕರಿಸಿದಾಗ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಜನ ಸುಮಾರು ಶೇಕಡಾ 70 ರಷ್ಟು ಇದ್ದಾರೆ ಎಂಬ ಅಂಕಿಅಂಶ ಸಿಕ್ಕುಬಿಡಬಹುದು.  ಆಗ ಏನಾಗುತ್ತದೆ? ನಾನು ಮೊದಲೇ ಹೇಳಿದಂತೆ ಹೀಗೆ ಬರೆಸಿದ್ದರ ಆಧಾರದ ಮೇಲೆ ಯಾರಿಗೂ ಪರಿಶಿಷ್ಟ ಜಾತಿಗಳಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಡಲು ಬರುವುದಿಲ್ಲ. ಆ ಸೌಲಭ್ಯ ಪಡೆಯಲು ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅವರು ತಪ್ಪು ಬರೆಸಿರುವುದರಿಂದ ಆ ದಾಖಲೆಗಳು ಅವರಿಗೆ ಸಿಗುವುದಿಲ್ಲ. ಹಾಗಾಗಿ ಸೌಲಭ್ಯ ಸಿಗುವುದಿಲ್ಲ.

ಇದರ ಜೊತೆಗೆ ಮತ್ತೆ ಏನಾಗುತ್ತದೆ ನೋಡಿ. ನಾನು ಮೊದಲೇ ಹೇಳಿದಂತೆ ಸಮೀಕ್ಷೆಯ ವೈಯಕ್ತಿಕ ವಿವರಗಳನ್ನು ಸರ್ಕಾರಗಳು ಬಳಸಿಕೊಳ್ಳದೇ ಅಂಕಿಅಂಶಗಳನ್ನು ಮಾತ್ರ ಯೋಜನೆ ತಯಾರಿಸಲು ಬಳಸಿಕೊಳ್ಳುತ್ತವೆ. ಇಲ್ಲಿ ಅಂಕಿಅಂಶಗಳು ಶೇ. 70 ರಷ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನ ಇದ್ದಾರೆ ಎಂದು ತೋರಿಸುವುದರಿಂದ ಸರ್ಕಾರಗಳು ತಮ್ಮ ಆಯವ್ಯಯದಲ್ಲಿ ಆ ಜಾತಿಯ ಕಲ್ಯಾಣಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಇಡಬೇಕಾಗುತ್ತದೆ. ಇದರಿಂದ ಇತರೆ ವರ್ಗಕ್ಕೆ ಸಿಗಬೇಕಾದ ಪಾಲು ಸಿಗುವುದಿಲ್ಲ. ಹೀಗೆ ಸರ್ಕಾರಗಳು ಇಟ್ಟ ಹಣ ಬಳಸಿಕೊಳ್ಳುವಷ್ಟು ಜನ ಕೂಡ ಅಲ್ಲಿ ವಾಸ್ತವದಲ್ಲಿ ಇರುವುದಿಲ್ಲ. ಅಲ್ಲಿ ಹಣ ಸರಿಯಾಗಿ ಬಳಕೆ ಯಾಗದೇ ನಿಂತುಕೊಳ್ಳಬಹುದು. ಇತ್ತ ತಪ್ಪು ಅಂಕಿಅಂಶಗಳಿಂದಾಗಿ ಶೇ. 50-60 ರಷ್ಟಿರುವ ಒಂದು ಜಾತಿಯ ಜನರ ಸಂಖ್ಯೆ ಕೇವಲ 20-30 ಎಂದು ದಾಖಲಾಗಿಬಿಡುವುದರಿಂದ ಅವರಿಗೆ ನಿಗಧಿಮಾಡುವ ಹಣದ ಪ್ರಮಾಣ ತೀರಾ ಕಡಿಮೆಯಾಗಿ ಅದು ಯಾವುದಕ್ಕೂ ಸಾಲದಂತೆ ಆಗಬಹುದು. ಆಗಲೂ ನಾವು ʻಸರ್ಕಾರಕ್ಕೆ ಬುದ್ಧಿಯಿಲ್ಲ ಕಣ್ರಿʼ ಎಂದು ಟೀಕೆ ಮಾಡುತ್ತೇವೆ!

ಆದ್ದರಿಂದ ಈ ಸಮೀಕ್ಷೆಯನ್ನು ಜನ ತಮ್ಮ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಲು ಸಾಧನ ಎಂದು ತಪ್ಪಾಗಿ ಗ್ರಹಿಸದೆ ಸರ್ಕಾರ ಯೋಜನೆ ರೂಪಿಸಲು ಪಡೆಯುವ ಅಂಕಿಅಂಶಗಳು ಎಂದು ಸರಿಯಾಗಿ ಗ್ರಹಿಸಿ ತಮ್ಮ ಮಾಹಿತಿಯನ್ನು ವಾಸ್ತವ ಅಂಶಗಳನ್ನು ಮರೆಮಾಚದೆ ನೈಜವಾಗಿ ನೀಡಬೇಕು. ಇದರಿಂದ ಜನಕ್ಕೂ ಅವರನ್ನು ಪ್ರತಿನಿಧಿಸುವ ಸರ್ಕಾರ ಎರಡಕ್ಕೂ ಸರಿಯಾದ ದಾರಿ ಕಾಣುತ್ತದೆ. ಆ ದಾರಿಯಲ್ಲಿ ನಡೆಯುವುದು ಬಿಡುವುದು ಎರಡನೆ ಹಂತದ ಕೆಲಸ. ಆದರೆ ದಾರಿಯು ಸ್ಪಷ್ಟವಾಗಿ ಕಾಣುವಂತೆ ಮಾಡುವುದು ಮೊದಲನೆಯ ಕೆಲಸ.

ಇಲ್ಲಿ ಸಮೀಕ್ಷೆ ಮಾಡುವವರೂ ಸೇರಿದಂತೆ ನಮ್ಮ ಅನೇಕ ವಿದ್ಯಾವಂತರಲ್ಲಿ ಕೂಡ ನಮ್ಮ ಜಾತಿವ್ಯವಸ್ಥೆಯ ಬಗ್ಗೆ ಸರಿಯಾಗಿ ತಿಳಿವಳಿಕೆ ಇದ್ದಂತಿಲ್ಲ. ಹಾಗಾಗಿ ಅವರಲ್ಲಿ ಅನೇಕರು, ʼನಮ್ಮದು ಜಾತ್ಯತೀತ ರಾಷ್ಟ್ರ ಎನ್ನುತ್ತಾರೆ. ಹಾಗಿದ್ದಮೇಲೆ ಜಾತಿ ಕಾಲಂ ಏಕೆ ಇರಬೇಕು?” ಎಂದು ಮುಗ್ಧವಾಗಿ ಕೇಳುವುದುಂಟು. ಜಾತಿ ಕಾಲಂನಲ್ಲಿ ಜಾತಿ ನಮೂದು ಮಾಡುವುದರಿಂದ ತುಳಿತಕ್ಕೊಳಗಾದ ಜಾತಿಗಳಿಗೆ ವಿಶೇಷ ಸ್ಥಾನಮಾನ ನೀಡಿ ಅವು ಇತರ ಜಾತಿಗಳ ಸರಿಸಮವಾಗಿ ಎದ್ದುನಿಲ್ಲುವಂತೆ ಮಾಡಲು ಆ ಮೂಲಕ ದೌರ್ಜನ್ಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಜಾತಿಯತೆಯನ್ನು ಮಾಡಲು ಜಾತಿಕಾಲಂ ಬೇಕಾಗುವುದಿಲ್ಲ; ಜಾತಿಯತೆಯನ್ನು ನಿವಾರಿಸಲು ಬೇಕಾಗುತ್ತದೆ!

ಇವತ್ತು ನಮ್ಮ ಸಮಾಜದ ಎಲ್ಲ ವರ್ಗಗಳಲ್ಲಿ ಎಲ್ಲ ಜಾತಿಯ ಜನರೂ ತಕ್ಕಷ್ಟು ಮಟ್ಟಿಗೆ ಪ್ರವೇಶಮಾಡಲು ಸಾಧ್ಯವಾಗಿದೆ ಎನ್ನುವುದಾದರೆ ಅದು ಈ ಜಾತಿ ಕಾಲಂ ನಿಂದಲೇ ಎನ್ನುವುದನ್ನು ನಾವು ಮರೆಯಬಾರದು. ಹಾಗಾಗಿ ನಮ್ಮ ಜಾತಿಸಮಾಜದ ವ್ಯವಸ್ಥೆಯ ಚಲನೆಯ ಜಾಡು ಅರಿತೇ ನಾವು ಆಡುವುದನ್ನೂ ಮಾಡುವುದನ್ನೂ ರೂಢಿಸಿಕೊಳ್ಳಬೇಕಾಗುತ್ತದೆ.

ಯಾರಾದರೂ ಇಲ್ಲಿ ಮಾಡಬಾರದ್ದನ್ನು ಮಾಡಲು ಹೋದರೆ ಅದು ಆಗಬಾರದ್ದೇ ಆಗುತ್ತದೆ ಎಂಬ ಎಚ್ಚರಿಕೆ ನಮ್ಮೆಲ್ಲರಿಗೂ ಇರಲಿ; ಸಮೀಕ್ಷೆ ಯಶಸ್ವಿಯಾಗಲಿ.

ರಾಜೇಂದ್ರ ಬುರಡಿಕಟ್ಟಿ

23-09-2025

No comments:

Post a Comment