Wednesday, April 29, 2026

ಫಲಿತಾಂಶ ಚಟಕ್ಕೆ ಮಕ್ಕಳ ಭವಿಷ್ಯ ಬಲಿಯೇ?

 ಫಲಿತಾಂಶ ಚಟಕ್ಕೆ ಮಕ್ಕಳ ಭವಿಷ್ಯ ಬಲಿಯೇ?

ಕೆಲವು ಮಕ್ಕಳು ಶಾಲೆಗೆ ಸರಿಯಾಗಿ ಬರದೇಅಥವಾ ಮಧ್ಯದಲ್ಲಿ ಶಾಲೆ ಬಿಟ್ಟು ಅಗತ್ಯ ಹಾಜರಿ ಕಡಿಮೆಯಾಗಿ ಪರೀಕ್ಷೆಗೆ ಕುಳಿತುಕೊಳ್ಳುವ ಅರ್ಹತೆ ಇಲ್ಲದಂತೆ ಅದಾಗ ಅವರ ಭವಿಷ್ಯದ ದೃಷ್ಟಿಯಿಂದ ಖಾಸಗಿ ಆಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಮ್ಮ ಶಿಕ್ಷಕರು ಕಟ್ಟಿಸುವುದು ಒಂದು ಮಾನವೀಯ ಕಾರ್ಯವಾಗಿದ್ದು ಅದು ಶ್ಲಾಘನೀಯವಾದದ್ದು. ಅಂಥ ಅನೇಕ ಶಿಕ್ಷಕರನ್ನು ನಾನು ನೋಡಿದ್ದೇನೆ ಮತ್ತು ಅವರ ಕಾರ್ಯಕ್ಕಾಗಿ ಅಭಿನಂದಿಸಿದ್ದೇನೆ.

ಆದರೆ ಇದರ ಜೊತೆಗೇ ಹೇಳಬೇಕಾದ ಒಂದು ಸಂಗತಿಯೂ ಇದೆ. ಅದೇನೆಂದರೆ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದು ಸನ್ಮಾನದ ಶಾಲು ಹೊದಿಸಿಕೊಳ್ಳುವ ಚಟಕ್ಕೆ ಬಿದ್ದು ಮಾಡಬಾರದ ಕೆಲಸಕ್ಕೆ ಕೈ ಹಾಕುವ ಕೆಲವು ಶಿಕ್ಷಕರು ಕಲಿಕೆಯಲ್ಲಿ ಬಹಳ ಹಿಂದಿರುವ ಕೆಲವು ಮಕ್ಕಳನ್ನು ಅವರು ಫೇಲಾಗುವವರು ಎಂದು ಗೊತ್ತಾಗುತ್ತಿದ್ದಂತೆ, ಅವರು ಪ್ರತಿದಿನ ಶಾಲೆಗೆ ಬರುತ್ತಿದ್ದರೂ ಉದ್ದೇಶಪೂರ್ವಕವಾಗಿ ಹಾಜರಿ ಕೊರತೆ ಮಾಡಿಸಿ, ಅವರನ್ನು ಖಾಸಗಿ ಅಭ್ಯರ್ಥಿ ಆಗಿ ಪರೀಕ್ಷೆಗೆ ಕಟ್ಟಿಸುವುದು ಕೂಡ ಇದೆ. ಇದೊಂದು ಒಂದು ಕೆಟ್ಟ ಕೆಲಸವೇ ಸರಿ.

 
ಇದರ ಜೊತೆಗೆ ಇರುವುದು ಅಂಥ ಒಂದು ವರದಿ. ರಾಷ್ಟ್ರೀಯ ದಿನಪತ್ರಿಕೆ 'ದಿ ಹಿಂದೂ' ದಲ್ಲಿ ಇಷ್ಟು ದೊಡ್ಡದಾಗಿ ಪ್ರಕಟವಾಗಿರುವ ಈ ವರದಿ ಬೇಗಾರ್ ಕೆ. ಪಿ ಎಸ್ ಶಾಲೆಯದ್ದು. ರಿಸಲ್ಟ್ ದುರಾಸೆಯಿಂದ ಶಾಲೆಗೆ ಬರುವ ರೆಗ್ಯುಲರ್ ಮಕ್ಕಳನ್ನು ನಮಗೆ ಗೊತ್ತಿಲ್ಲದಂತೆ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಕಟ್ಟಿಸಿದ್ದಾರೆ ಮತ್ತು ಆಮೂಲಕ ಮಕ್ಕಳು ಫೇಲ್ ಆಗಲು (ಆಂತರಿಕ ಅಂಕಗಳ ನೆರವು ಇಲ್ಲದಾಗುವ ಕಾರಣ) ಕಾರಣರಾಗಿದ್ದಾರೆ ಎಂದು ಪಾಲಕರಿಂದ ಶಿಕ್ಷಕರ ಮೇಲೆ ದೂರು ದಾಖಲಾಗಿದೆ.


ಅಲ್ಲಿನ ಶಿಕ್ಷಕರು ಇದನ್ನು ಉದ್ದೇಶಪೂರ್ವಕವಾಗಿ ಫಲಿತಾಂಶ ಚಟದಿಂದ ಮಾಡಿದ್ದು ಹೌದೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.  ಒಂದುವೇಳೆ ಹೌದು ಎಂತಾದರೆ ಉದ್ದೇಶಪೂರ್ವಕವಾಗಿ ಈ ರೀತಿ ಮಕ್ಕಳನ್ನು ತಮ್ಮ ಫಲಿತಾಂಶ ಚಟಕ್ಕೆ ಬಳಸಿಕೊಂಡು ಅವರ ಭವಿಷ್ಯಕ್ಕೆ ಮಾರಕವಾಗುವುದು ಕೇವಲ ನಿಯಮದ ಕಡೆಯಿಂದ ಮಾತ್ರವಲ್ಲ ನೈತಿಕತೆ ಕಡೆಯಿಂದಲೂ ಅಕ್ಷಮ್ಯ ಅಪರಾಧ.


ಹಾಗಾಗಿ ಇಂಥವರಿಗೆ ಸರಿಯಾದ ಶಿಕ್ಷೆ ಆಗಬೇಕು. ಇವರು ಮಾತ್ರವಲ್ಲ! ಅನೇಕರು ಇರುವುದು ಸುಳ್ಳಲ್ಲ. ನಮ್ಮಲ್ಲಿ ಕದ್ದವರೆಲ್ಲರನ್ನೂ ಕಳ್ಳರು ಎನ್ನುವುದಿಲ್ಲ. ಸಿಕ್ಕಿಬಿದ್ದವರನ್ನು ಮಾತ್ರ ಕಳ್ಳರು ಎನ್ನಲಾಗುತ್ತದೆ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ.


ಇಂಥ ಪ್ರಕರಣಗಳು ಗೊತ್ತಿದ್ದೂ ತಮ್ಮ ವ್ಯಾಪ್ತಿಯ ಇದೇ ಫಲಿತಾಂಶ ಚಟದಿಂದ ಸುಮ್ಮನಿರುವ ಅಧಿಕಾರಿಗಳು ಯಾರೂ ಇಂತಹ ಕಷ್ಟದ ಸಂದರ್ಭದಲ್ಲಿ ಶಿಕ್ಷಕರ ನೆರವಿಗೆ ಬರುವುದಿಲ್ಲ. ಇಂತಹ ಘಟನೆಗಳು ನಮ್ಮ ಶಿಕ್ಷಕರನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಲಿ.


ರಾಜೇಂದ್ರ ಬುರಡಿಕಟ್ಟಿ
೨೯-೦೪-೨೦೨೬

No comments:

Post a Comment