ಎಸ್.ಎಸ್.ಎಲ್.ಸಿ. ಫಲಿತಾಂಶ: ʻಫುಲ್‌ಮೀಲ್ಸ್ʼ ಕೊಟ್ಟರೂ ʼದಿಲ್‌ಖುಷ್ʼ ಆಗಲಿಲ್ಲ ಏಕೆ?
ಕನ್ನಡದ ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಯನ್ನು ಆಧರಿಸಿದ, ʼಭೂತಯ್ಯನ ಮಗ ಅಯ್ಯುʼ ಎಂಬ ಪ್ರಸಿದ್ಧ ಸಿನೇಮಾವೊಂದು ಕನ್ನಡದಲ್ಲಿ ಇರುವುದು ಬಹಳಷ್ಟು ಜನಕ್ಕೆ ಗೊತ್ತಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಈ ಸಿನೇಮಾದಲ್ಲಿ ಒಂದು ಸನ್ನಿವೇಶ ಬರುತ್ತದೆ. ಒಬ್ಬ ಹೊಟೆಲ್ಲಿನವನು, ʻಒಂದು ರೂಪಾಯಿಗೋ ಎರಡು ರೂಪಾಯಿಗೋ ʻಫುಲ್ ಮೀಲ್ಸ್ʼ ಎಂದು ಬೋರ್ಡು ಹಾಕಿರುತ್ತಾನೆ. ನಾಲ್ಕು ಜನ ಒಂದು ರಾತ್ರಿ ಊಟದ ಟೈಮಿಗೆ ತಲೆಯ ಮುಖಕ್ಕೆ ಮುಸುಕುಹಾಕಿಕೊಂಡು ಈ ಹೊಟೆಲ್ಲಿಗೆ ಬಂದು ಒಂದು ʼಫುಲ್ ಮೀಲ್ಸ್ʼಗೆ ಆರ್ಡರ್ ಮಾಡುತ್ತಾರೆ. ಅವರು ಮೂರು ಜನ ಇರುವುದರಿಂದ ಹೊಟೆಲ್ ಮಾಲಿಕ ಅನುಮಾನ ದಿಂದ ಇವರ ಕಡೆ ನೋಡಿದಾಗ ಅವರು, ʼಒಬ್ಬರೇ ಊಟ ಮಾಡುವುದು; ಉಳಿದವರು ಸುಮ್ಮನೆ ಜೊತೆಗೆ ಕುಳಿತುಕೊಳ್ಳುತ್ತೇವೆʼ ಎಂದು ಹೇಳುತ್ತಾರೆ. ಮಾಲೀಕ ಮಾಣಿಗೆ ʻಒಂದು ಫುಲ್ ಮೀಲ್ಸ್ʼ ಎಂದು ಕೂಗಿಹೇಳಿ ಇವರನ್ನು ಒಳಗೆ ಬಿಡುತ್ತಾನೆ.
ಈ ನಾಲ್ಕೂಜನ ಸಾಲಾಗಿ
ಊಟಕ್ಕೆ ಕೂರುತ್ತಾರೆ ಹೊಟೆಲ್ ಮಾಣಿ ಈ ನಾಲ್ವರಲ್ಲಿ ಮೊದಲಿಗೆ ಕುಳಿತವನ ಎದುರು ಒಂದು ಬಾಳೆ ಎಲೆ
ಹಾಕಿ ಎಲೆ ತುಂಬ ಅನ್ನ ಸಾಂಬಾರು ತಂದು ಹಾಕಿ ಒಳಗೆ ಹೋಗುತ್ತಾನೆ. ಆ ಎಲೆಯಲ್ಲಿದ್ದನ್ನು ಎಲ್ಲ ಉಂಟು
ಅವನು ʻಅನ್ನʼ ಎಂದು ಕೂಗುತ್ತಾನೆ. ಮಾಣಿ ಬಂದು ಎರಡನೆಯ ಸಲ ಅನ್ನ ಸಾಂಬಾರು
ಹಾಕಿ ಹೋಗುತ್ತಾನೆ. ಅದನ್ನು ಉಂಡಾಗ ಅವನಿಗೆ ಹೊಟ್ಟೆ ತುಂಬುತ್ತದೆ. ಆದರೆ ಅವನು ಹೀಗೆ ಹೊಟ್ಟೆತುಂಬ
ಉಂಡ ತಕ್ಷಣ ಅವನ ಸ್ಥಳಕ್ಕೆ ಪಕ್ಕದ ಇನ್ನೊಬ್ಬನು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟು, ಊಟಮಾಡಿದವನು
ಮಾಡದವನ ಸ್ಥಳದಲ್ಲಿ ಕುಳಿತು, ʼಅನ್ನʼ ಎಂದು ಕೂಗುತ್ತಾನೆ. ಅಡುಗೆಯವನು ಮತ್ತೆ ಅನ್ನ ಸಾಂಬಾರು ತಂದು
ಹಾಕುತ್ತಾನೆ. ಅವನೂ ಇನ್ನೊಮ್ಮೆ ತರಿಸಿಕೊಂಡು ಉಣ್ಣುತ್ತಾನೆ. ಹೊಟ್ಟೆತುಂಬಿದ ಮೇಲೆ ಅವನೂ ಇತ್ತ ಸರಿದು
ಉಳಿದವರಿಗೆ ಅವಕಾಶ ಮಾಡಿಕೊಡುತ್ತಾನೆ.
ಎತ್ತರೆತ್ತರಕ್ಕೇರುತ್ತಿದ್ದರೂ ಹತ್ತಿರವಾಗದ ಫಲಿತಾಂಶ
ಚಲನಚಿತ್ರದಲ್ಲಿ
ತುಂಬಾ ಹಾಸ್ಯದಿಂದ ಕೂಡಿದ ಈ ಸಂದರ್ಭವು ಇದೀಗ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಪ್ರಕಟವಾದ ಅಂಕಿಅಂಶಗಳನ್ನು
ನೋಡಿದಾಗ ಮತ್ತು ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ಗಮನಿಸಿದಾಗ ತಕ್ಷಣಕ್ಕೆ ನೆನಪಿಗೆ ಬಂತು.
ನಾನು ಸುಮ್ಮನೆ ಗಮನಿಸಿದಂತೆ ತಮ್ಮ ತಮ್ಮ ಶಾಲೆಗಳ ಅಥವಾ ತಮ್ಮ ತಮ್ಮ ವಿಷಯಗಳ ಫಲಿತಾಂಶದ ಬಗ್ಗೆ ಹೆಮ್ಮಯಿಂದ
ಎಲ್ಲಾ ಗುಂಪುಗಳಲ್ಲಿ ಸಂದೇಶ ಮತ್ತು ಫೋಟೋಗಳನ್ನು ಹಾಕುವವರ ಸಂಖ್ಯೆ ಹಿಂದಿನ ವರ್ಷಗಳಷ್ಟು ದೊಡ್ಡ
ಪ್ರಮಾಣದಲ್ಲಿ ಈ ವರ್ಷ ನಡೆಯಲಿಲ್ಲ. ಅಂದ ಮಾತ್ರಕ್ಕೆ ಈ ವರ್ಷ ಅವರ ವಿಷಯಕ್ಕೆ ಹಾಗೂ ಅವರ ಶಾಲೆಗೆ
ಹಿಂದಿನಷ್ಟು ಒಳ್ಳೆಯ ಫಲಿತಾಂಶ ಬಂದಿಲ್ಲ ಎಂದು ಅರ್ಥವಲ್ಲ. ಎಲ್ಲರ ವಿಷಯಗಳಲ್ಲಿ ಮತ್ತು ಎಲ್ಲ ಶಾಲೆಗಳಲ್ಲಿ
ಕಳೆದ ವರ್ಷಕ್ಕಿಂತ ಬಹಳಷ್ಟು ಹೆಚ್ಚಿನ ಫಲಿತಾಂಶವೇ ಬಂದಿದೆ.
ಆದರೂ ಈ ಬಗ್ಗೆ
ಸಂದೇಶ ಫೋಟೋ ಹಾಕುವ ಉತ್ಸಾಹ ಶಿಕ್ಷಕರಿಗೆ ಏಕೆ ಕಡಿಮೆ ಆಯಿತು? ಇದಕ್ಕೆ ಕಾರಣವನ್ನು ನಾವು ಊಹಿಸಲು
ಸಾಧ್ಯವಿದೆ. ನಾನು ಓದುವಾಗ ನನ್ನದು ಅರವತ್ತು ಪರ್ಸೆಂಟ್ ಫಲಿತಾಂಶ ಬಂದಿತ್ತು. ಇಡೀ ಶಾಲೆಗೆ ನನ್ನನ್ನು
ʻಹಿರೋʼ ರೀತಿ ನಮ್ಮ ಹೆಡ್ಮಾಸ್ಟರ್ ಪರಿಚಯಿಸಿದ್ದರು! ಅದು ಹಳೇ ಕಾಲ
ಅನ್ನಿ. ಈಗಿನ ಕಾಲಕ್ಕೇ ಬಂದರೂ ಕೆಲವು ವರ್ಷಗಳ ಹಿಂದೆ ಇಡೀ ತಾಲ್ಲೂಕಿಗೆ ಒಂದೋ ಎರಡೂ ಶಾಲೆಗಳಲ್ಲಿ
ಶೇಕಡಾ ನೂರರಷ್ಟು ಫಲಿತಾಂಶ ಬರುತ್ತಿತ್ತು. ನೂರಕ್ಕೆ ನೂರು ಅಂಕ ಪಡೆಯುವ ಮಗು ಇಡೀ ತಾಲ್ಲೂಕಿಗೆ ಒಂದು
ಇರಬೇಕಾದರೆ ಅದೇ ದೊಡ್ಡದಾಗಿತ್ತು. ಹಾಗಾಗಿ ʻಊರಿಗೊಬ್ಬಳೇ ಪದ್ಮಾವತಿʼ
ಅನ್ನುವ ಹಾಗೆ ಆ ಶಾಲೆಗೆ ಆ ಮಗುವಿಗೆ ಎಲ್ಲಿಲ್ಲದ ಬೆಲೆ ಇರುತ್ತಿತ್ತು. ಈಗ ಯಾರನ್ನು ಕೇಳಿದರೂ,
“ನಂದು ಹಂಡ್ರಡ್ಡು ನಿಂದು ಹಂಡ್ರಡ್ಡು.” ಎಲ್ಲರೂ ಹಂಡ್ರಡ್ಡು ಹಂಡ್ರಡ್ಡು ಅಂತ ಹೇಳೋರೇ ಆದ್ರೆ ಅದನ್ನು
ಕೇಳೋರು ಬೇಡವೆ? ಬಸವಣ್ಣ ಬೇಡುವವರಿಲ್ಲದೆ ಬಡವನಾದೆನಯ್ಯ ಅಂತಾರಲ್ಲ ಹಾಗೆ ಇಲ್ಲಿ ʻಕೇಳುವವರಿಲ್ಲದೆ
ಬಡವನಾದೆನಯ್ಯʼ ಎಂದು ಹಲವರಿಗೆ ಅನ್ನಿಸಿರಬಹುದು.
ನಾನು ಮೇಷ್ಟ್ರ ಕೆಲ್ಸ ಮಾಡೋದ್ ಯಾತುಕ್ಕೆ? ನೀನು ಶಾಲೆಗೆ ಬರೋದು
ಯಾತುಕ್ಕೆ?
ಈಗಿನ ಪರೀಕ್ಷೆಯಲ್ಲಿ
ಹೀಗೆ ಅರ್ಥವಿಲ್ಲದ ಎತ್ತರದ ಫಲಿತಾಂಶ ಬರಲಿಕ್ಕೆ ಬಹಳಷ್ಟು ಕಾರಣಗಳಿವೆ. ಅವುಗಳಲ್ಲಿ ನೀಲನಕ್ಷೆ, ಮಾದರಿ
ಪ್ರಶ್ನೆಪತ್ರಿಕೆ ಇತ್ಯಾದಿಗಳ ಮೂಲಕ ನಾವು ಪ್ರಶ್ನೆಪತ್ರಿಕೆಯನ್ನು ಮೊದಲೇ ಅರ್ಧ ಬಿಡುಗಡೆ ಮಾಡುವಂಥದ್ದು
ಒಂದು. ಹಿಂದೆ ಹೇಗೆ ಇತ್ತು ಎಂದರೆ ನಾನು ಓದುವಾಗ ನನ್ನ ಸ್ನೇಹಿತ ಒಂದು ಸಲ ತರಗತಿಯ ಪರೀಕ್ಷೆ ಮುಂದೆ
ಇರುವಾಗ ಒಂದು ದಿನ ತರಗತಿಯಲ್ಲಿ, ʻಪ್ರಶ್ನೆಗಳು ಯಾವ ರೀತಿ ಬರುತ್ತವೆ ಅಂತನೋ ಯಾವ ಯಾವ ಚಾಪ್ಟರ್ ನಲ್ಲಿ ಬರುತ್ತವೆ ಅಂತನೋ ಮೇಷ್ಟ್ರನ್ನು
ಕೇಳಿಬಿಟ್ಟ. ಆ ಕಾಲದಲ್ಲಿ ಮೇಷ್ಟ್ರಿಗೆ ಇಂತಹ ಪ್ರಶ್ನೆ ಕೇಳಬೇಕಾದರೆ ಎದೆಯ ಗುಂಡಿಗ ಗಟ್ಟಿಯಾಗಿ ಇರಬೇಕಾಗಿತ್ತು.
ಏಕೆಂದರೆ ಅದು ʼಒದ್ದು ಬುದ್ಧಿಯ ಕಲಿಸಿದಡೆ ಆಗಲಿ ಅದೇ ಮಹಾಪ್ರಸಾದವೆಂಬೆನಯ್ಯʼ ಅನ್ನುವ ಕಾಲ. ಅವನ
ಪುಣ್ಯಕ್ಕೆ ಮೇಷ್ಟ್ರು ಆ ದಿನ ಯಾಕೋ ಸಮಾಧಾನದ ಮನಸ್ಥಿತಿಯಲ್ಲಿ ಇದ್ದದ್ದರಿಂದ ಅಂತಹ ಅನಾಹುತ ಏನೂ
ಆಗಲಿಲ್ಲ. “ಪ್ರಶ್ನೆಗಳು ಹೇಗೆ ಹೇಗೆ ಬರುತ್ತವೆ, ಯಾವ ಯಾವ ಚಾಪ್ಟರ್‌ನಲ್ಲಿ ಬರುತ್ತವೆ ಅಂತ ಹೇಳಿ
ಪರೀಕ್ಷೆ ಮಾಡೋದಾದ್ರೆ ನಾನು ಮೇಷ್ಟ್ರ ಕೆಲ್ಸ ಮಾಡೋದ್ ಯಾತುಕ್ಕೆ? ನೀನು ಶಾಲೆಗೆ ಬರೋದು ಯಾತುಕ್ಕೆ?
ಏನೇನು ಪಾಟ ಮಾಡಿದೇನೋ ಅದನ್ನೆಲ್ಲದನ್ನೂ ಓದ್ಕೋಬೇಕು; ಕೂತ್ಕೊ.” ಎಂದು ಚಾಪ್ಟರ್ ಕ್ಲೋಸ್ ಮಾಡಿದರು.
ಈಗ ಪರಿಸ್ಥಿತಿ ಹೇಗಿದೆ ಅಂದರೆ ಪರೀಕ್ಷೆಗೆ ಯಾವ ಯಾವ ಚಾಪ್ಟರ್‌ನಲ್ಲಿ ಪ್ರಶ್ನೆಗಳು ಬರುತ್ತವೆ ಅಂತನೂ ಹೇಳಲಾಗುತ್ತದೆ. ಅವು ಹೇಗೆ ಹೇಗೆ ಬರುತ್ತವೆ ಅಂತನೂ ಅಧಿಕೃತವಾಗಿಯೇ ಹೇಳಲಾಗುತ್ತದೆ. ತಮಾಸೆಯ ಸಂಗತಿ ಎಂದರೆ ನನ್ನ ಪರಿಚಯದ ಮೇಡಂ ಒಬ್ಬರು ಎರಡು ಪ್ರಶ್ನೆಪತ್ರಿಕೆಗಳನ್ನೇ ಬರೆಸಿ, “ಇವೆರಡರಲ್ಲಿಯೇ ಯಾವುದಾದರೂ ಒಂದನ್ನು ಪರೀಕ್ಷೆಗೆ ಕೊಡುತ್ತೇನೆ ಈ ಎರಡಕ್ಕೆ ಚೆನ್ನಾಗಿ ಓದಿಕೊಂಡು ರೆಡಿಯಾಗಿ ಸಾಕು” ಎಂದು ಹೇಳಿ ʻಪರೀಕ್ಷೆಯ ಶಾಸ್ತ್ರʼ ಮಾಡಿದರಂತೆ. ಹೀಗೆ ಮಾಡಿ ಪರೀಕ್ಷೆ ಮಾಡಿದಾಗೂ ಉತ್ತರ ಬರೆಯದ ಕೆಲವು ಮಕ್ಕಳನ್ನು ವಿಚಾರಿಸಿದರೆ, “ನಾವು ಅದನ್ನು ಕಲಿತಿದ್ವಿ; ನೀವು ಇದನ್ನು ಕೊಟ್ಟಿದ್ದೀರಿ” ಅಂತಲೋ ನಾವು ಇದನ್ನುಕಲಿತಿದ್ವಿ; ನೀವು ಅದನ್ನು ಕೊಟ್ಟಿದ್ದೀರಿ” ಎಂತಲೋ ಹೇಳಿದರಂತೆ. ಆ ಮಕ್ಕಳ ಪ್ರಕಾರ ಮೇಡಂ ಎರಡು ಪ್ರಶ್ನೆಪತ್ರಿಕೆ ಕೊಡುವ ಮೂಲಕ ಅವರಿಗೆ ಗೊಂದಲ ಆಯಿತಾದ್ದರಿಂದ ತಪ್ಪು ಮೇಡಮ್ಮನದೇ! ಇದನ್ನೇ ಅಲ್ಲಮಪ್ರಭು, “ಕಾಲದ ಕಟ್ಟಳೆಗೆ ಬೆರಗಾದೆನಯ್ಯ” ಅನ್ನುವುದು.
ಮೊದಮೊದಲು ನೀಲನಕ್ಷೆಯನ್ನು
ಮಾತ್ರ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮಾದರಿ ಪ್ರಶ್ನೆಪತ್ರಿಕೆಗಳು, ಜೊತೆಗೆ ಎರಡು ಮೂರು
ಪೂರ್ವಭಾವಿ ಪರೀಕ್ಷೆಗಳು ಅದು ಇದೂ ಅಂತ ಪರೀಕ್ಷೆಗೆ ಬರುವ ಎಲ್ಲ ಪ್ರಶ್ನೆಗಳನ್ನೂ ಮೊದಲೇ ಮಕ್ಕಳಿಗೆ
ಗೊತ್ತುಮಾಡುವುದರಿಂದ ನಿಜವಾದ ಪರೀಕ್ಷೆಯ ಬಗ್ಗೆ ಮಕ್ಕಳಿಗೆ ಯಾವ ಗಾಂಭೀರ್ಯವೂ ಉಳಿದಿರುವುದಿಲ್ಲ.
ಪರೀಕ್ಷೆಯ ಬಗ್ಗೆ ಭಯ ಕಳೆಯಬೇಕು ಎಂದು ನಾವು ಮಾಡುವ ಕೆಲಸಗಳು ಪರೀಕ್ಷಯ ಬಗ್ಗೆ ಗಾಂಭೀರ್ಯವನ್ನೇ ಕಳೆಯಬಾರದು.
ಅಷ್ಟಕ್ಕೂ ಪರೀಕ್ಷೆಯ ಭಯ ಇರುವುದು ಮಕ್ಕಳಿಗೋ ಅಥವಾ ಶಿಕ್ಷಕರು ಮತ್ತು ಅಧಿಕಾರಿಗಳಿಗೋ ಎಂದೂ ನಾವು
ಈಗ ಪರೀಕ್ಷಿಸಿಕೊಳ್ಳಬೇಕಾಗಿದೆ.
ಗಬ್ಬುವಾಸನೆಯ ರುಬ್ಬುವಿಕೆ ಮತ್ತು ಅಸ್ಥಳ ತಾಯ್ತನ!
ಫಲಿತಾಂಶದ ಮಿತಿಮೀರಿದ
ಎತ್ತರಕ್ಕೆ ಇನ್ನೊಂದು ಕಾರಣ ತಮ್ಮ ತಮ್ಮ ವ್ಯಾಪ್ತಿಯ ಫಲಿತಾಂಶದ ಕಾರಣಕ್ಕೆ ತಮ್ಮ ಮೇಲಿನವರಿಂದ ಪ್ರಶಂಸೆಗೆ
ಪಾತ್ರರಾಗಲು ಅದಲ್ಲದಿದ್ದರೆ ಕೊನೆಯ ಪಕ್ಷ ಅವಮಾನ ತಪ್ಪಿಸಿಕೊಳ್ಳಲು ಅನೇಕ ಅಧಿಕಾರಿಗಳು ಶಿಕ್ಷಣದ
ಮೂಲ ಆಶಯವನ್ನು ಅರ್ಥಮಾಡಿಕೊಳ್ಳದೇ ಅಥವಾ ಅರ್ಥ ಮಾಡಿಕೊಂಡೂ ಗಣನೆಗೆ ತೆಗೆದುಕೊಳ್ಳದೆ ಮಕ್ಕಳ ಫಲಿತಾಂಶವನ್ನೇ
ಕೇಂದ್ರೀಕರಿಸಿ, ಕಲಿಕೆಯನ್ನು ಅವಗಣಿಸಿ ಎಂಥದ್ದೆಂಥದ್ದೋ ಕ್ರಮಗಳನ್ನು ತಮ್ಮ ತಮ್ಮ ಹಂತದಲ್ಲಿ ಜಾರಿಗೊಳಿಸಿ
ಶಿಕ್ಷಕರ ಮೇಲೆ ಒತ್ತಡ ತಂದು ಅದನ್ನು ಮಾಡಿಸುವುದು. ಇಂತಹ ಕಾರ್ಯಕ್ರಮಗಳು ಮಕ್ಕಳ ಸಹಜ ಕಲಿಕೆಯನ್ನು
ಅಲಕ್ಷಿಸಿ ಅಂಕಕೇಂದ್ರಿತವಾಗಿ ರೂಪುಗೊಳ್ಳುವುದರಿಂದ, ಶಿಕ್ಷಕರು ಇಷ್ಟಪಟ್ಟೋ ಅಥವಾ ಒತ್ತಡಕ್ಕೆ ಒಳಗಾಗಿಯೋ
ಚೈತನ್ಯ ಕೊಡುವ ಪರಿಮಳ ಹೊರಸೂಸಬೇಕಾದ ತಮ್ಮ ಪಾಠವನ್ನು ಗಬ್ಬು ವಾಸನೆ ಬರುವಂತೆ ಮಕ್ಕಳನ್ನು ಹಿಡಿದುಕೊಂಡು
ʼರುಬ್ಬತೊಡಗುತ್ತಾರೆʼ. ಈ ರುಬ್ಬುವಿಕೆ ಅತ್ಯಂತ ಯಾಂತ್ರಿಕವಾಗಿ ಯಾವುದೇ ಚೈತನ್ಯವನ್ನು ನೀಡುವುದಿಲ್ಲವಾದ್ದರಿಂದ
ಕಲಿಕೆ ತೀರಾ ಮೇಲ್ಮಟ್ಟದಲ್ಲಿ ಅಂದರೆ ಪರೀಕ್ಷೆ ಮುಗಿಯುವ ತನಕ ಮಾತ್ರ ಇರುವಂತೆ ಕೆಲವು ಸಲ ಯಶಸ್ವಿಯಾಗುವುದರಿಂದ
ಅದೂ ಕೂಡ ಈ ಫಲಿತಾಂಶದ ಅಸಭ್ಯ ಏರಿಕೆಗೆ ಕಾರಣವಾಗುತ್ತಿದೆ.
ಮೂರನೆಯ ಕಾರಣ
ಮೌಲ್ಯಮಾಪನದಲ್ಲಿ ಶಿಕ್ಷಕರು ಬಹುಕರುಣಾಮಯಿಗಳಾಗುವುದು. ನಾನು ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ
ಶಿಕ್ಷಕರು ಪಾಠಮಾಡುವಾಗ ತಾಯಿಯಂತೆ ಇರಬೇಕು; ಪರೀಕ್ಷೆ ಮಾಡುವಾಗ ಸಬ್ ಇನಸ್ಪೆಕ್ಟರ್ ರೀತಿ ಇರಬೇಕು;
ಮೌಲ್ಯಮಾಪನ ಮಾಡುವವಾಗ ನ್ಯಾಯಾದೀಶರಂತೆ ಇರಬೇಕು! ಎಷ್ಟು ಜನ ಈ ರೀತಿ ಇವತ್ತು ಇದ್ದಾರೆ. ಅನೇಕರದ್ದು
ಇದಕ್ಕೆ ತದ್ವಿರುದ್ಧವಾದ ನಿಲುವು. ಅವರು ಪಾಠಮಾಡುವಾಗ ಸಬ್ ಇನಸ್ಪೆಕ್ಟರ್ ಆಗಿದ್ದು ಮೌಲ್ಯಮಾಪನ
ಮಾಡುವಾಗ ತಾಯಿಯಾಗಿಬಿಡುತ್ತಾರೆ! ತಾಯಿಗೆ ಮಗು ಏನು ಮಾಡಿದರೂ ಚೆಂದವೇ. ಇಂತಹ ಶಿಕ್ಷಕರಿಗೆ ಮಕ್ಕಳು
ಉತ್ತರ ಪತ್ರಿಕೆಯಲ್ಲಿ ಏನು ಬರೆದರೂ ಅಂದವೇ! ಒಟ್ಟಿನಲ್ಲಿ ಖಾಲಿ ಹಾಳೆ ಬಿಡದಿದ್ದರೆ ಸಾಕು. ಅದರಲ್ಲಿ
ಉತ್ತರವೇ ಇರಬೇಕು ಅಂತ ಏನೂ ಇಲ್ಲ!
ಹದ್ಮೂರು ಮಾರ್ಕ್ಸಿಗೆ ಹದ್ಮೂರು ಲಕ್ಷನಾ?
ನಾಲ್ಕನೆಯ ಮತ್ತು ನಾನು ಇಲ್ಲಿ ಮುಖ್ಯವಾಗಿ ಹೇಳಲೇಬೇಕಾಗಿರುವ ಕಾರಣ ಮಕ್ಕಳ ಉತ್ತೀರ್ಣತೆಯ ಅಂಕಗಳ ತಗ್ಗಿಸುವಿಕೆಯ ವ್ಯವಸ್ಥೆಯ ನಿರ್ಧಾರವನ್ನು ನಮ್ಮಲ್ಲಿ ಬಹಳಷ್ಟು ಜನ ಅಪಾರ್ಥ ಮಾಡಿಕೊಂಡಿರುವುದು ಮತ್ತು ಅದನ್ನು ದುರುಪಯೋಗ ಮಾಡಿಕೊಂಡಿರುವುದು. ಜೆ.ಡಿ ಹಂತದ ಒಬ್ಬ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ನನ್ನ ಜೊತೆ ಖಾಸಗಿಯಾಗಿ ಮಾತನಾಡುವಾಗ ಯಾತಕ್ಕೋ ಮಾತಿಗೆ ಮಾತು ಬೆಳೆದು ಮಾತು ಈ ವಿಷಯಕ್ಕೆ ಹೊರಳಿಕೊಂಡಿತು. ಆಗ ಮಾತನಾಡುತ್ತಾ, ಅವರು, “ನಮ್ಮ ಸರ್ಕಾರ್ದೊರು ಪಾಸಿಂಗ್ ಮಾರ್ಕ್ಸ್ ಇಷ್ಟು ಕಡಿಮೆಗೆ ಇಳಿಸ್ಬಾರ್ದಿತ್ತು ಕಣ್ರಿ. ಇದರಿಂದ ನಮ್ಮ ಮಾನ ಮರ್ಯಾದೆ ಎಲ್ಲ ಹೋಗ್ತಾ ಇದೆ. ಬಸ್ಸಿನಲ್ಲಿ ಬರುವಾಗ ಜನ ಮಾತಾಡ್ಕಳ್ತಾ ಇರೋದನ್ನ ಕೇಳಿದ್ರೆ ತಲೆ ತಗ್ಗಿಸಿ ಕೂತ್ಕೊಳ್ಳಂಗೆ ಆಗ್ತದೆ. ʼಹದ್ಮೂರು ಮಾರ್ಕ್ಸ ತಗೊಳ್ಳಂಗ ಮಾಡಾಕೆ ಇವ್ರಿಗೆ ಹದ್ಮೂರು ಲಕ್ಷ ಸಂಬಳʼ ಅಂತೆಲ್ಲ ಮಾತಾಡ್ತಾರೆ. ತೀರಾ ಹದಿಮೂರಕ್ಕೆ ಇಳಿಸೋದು ಅಂದ್ರೆ ಏನು ಅದುಕ್ಕೊಂದು ರೀತಿ ನೀತಿ ಅಂತ ಬೇಡ್ವಾ” ಎಂದರು. ಇದನ್ನು ಕೇಳಿ ನಾನು ಅವಕ್ಕಾಗಿಬಿಟ್ಟೆ. ಏಕೆಂದರೆ ವ್ಯವಸ್ಥೆಯ ನಿರ್ಧಾರವನ್ನು ಕೇವಲ ಶಿಕ್ಷಕರು ಮಾತ್ರ ಈ ರೀತಿ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಅಂದುಕೊಂಡಿದ್ದೆ. ಅವರಷ್ಟೇ ಅಲ್ಲ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಇದನ್ನು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ಈ ಮಾತು ನನಗೆ ದೃಢಪಡಿಸಿತು.
ಮೂವತ್ತೈದು ಅಂಕಗಳಿಗೆ
ಇದ್ದ ಉತ್ತೀರ್ಣತೆಯನ್ನು ಮೂವತ್ತಮೂರಕ್ಕೆ ಇಳಿಸಿದ್ದು ಮತ್ತು ಉತ್ತೀರ್ಣತೆಯ ಅಂಕಗಳನ್ನು ಲೆಕ್ಕಹಾಕುವಾಗ
ಆಂತರಿಕ ಅಂಕಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದು ಇದಷ್ಟೇ ಸರ್ಕಾರ ಮಾಡಿದ್ದು ಬಿಟ್ಟರೆ
ಇವರೆಲ್ಲ ತಿಳಿದುಕೊಂಡಂತೆ ಎಲ್ಲಿಯೂ ಹದಿಮೂರು ಅಂಕಗಳ ಪ್ರಸ್ತಾಪವನ್ನೇ ಮಾಡಿಲ್ಲ. ಸರ್ಕಾರ ಈ ನಿರ್ಧಾರವನ್ನು
ಮಾಡಿದ್ದರ ಹಿಂದೆ ಅನೇಕ ವೈಜ್ಞಾನಿಕ ಮತ್ತು ತಾತ್ವಿಕ ಅಂಶಗಳಿರುತ್ತವೆ. ಉತ್ತೀರ್ಣತೆಯ ಅಂಕಗಳನ್ನು
ಇಳಿಸಿದ್ದರಲ್ಲಿ ಮಕ್ಕಳ ಹಿತಾಸಕ್ತಿಯ ಅಂಶವಿದೆ. (ಎಲ್ಲ
ವಿಷಯಗಳಲ್ಲೂ ಅಷ್ಟೇ ಬರಬೇಕು ಎಂದೂ ಇಲ್ಲ. ಪ್ರತಿವಿಷಯಕ್ಕೆ ಮೂವತ್ತು ಬಂದು ಒಟ್ಟಿನಲ್ಲಿ ಸರಾಸರಿ
ಮೂವತ್ತಮೂರು ಬಂದರೂ ಸರಿ).
ಉತ್ತೀರ್ಣತೆಗೆ
ಆಂತರಿಕ ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂಬುದರಲ್ಲಿ ಶಿಕ್ಷಕರ ಕಾರ್ಯದ ಮೇಲೆ ನಂಬಿಕೆ
ಮತ್ತು ಅವರ ಕಾರ್ಯಕ್ಕೆ ಗೌರವ ಕೊಡುವ ಉದಾತ್ತವಾದ ಆಶಯವಿದೆ. ಮೊದಲು ಲಿಖಿತ ಪರೀಕ್ಷಯಲ್ಲಿ ಕನಿಷ್ಟ
ಇಷ್ಟು ಅಂಕಗಳನ್ನು ತೆಗೆದುಕೊಳ್ಳಲೇಬೇಕು ಎಂದು ಷರತ್ತು ಇದ್ದದ್ದರಿಂದ ಶಿಕ್ಷಕರಿಗೆ ಒಂದು ಅಸಮಾಧಾನವಿತ್ತು.
“ಏಕೆ ನಾವು ಕೊಡುವ ಆಂತರಿಕ ಅಂಕಗಳಿಗೆ ಬೆಲೆಯಿಲ್ಲವೇ?
ನಾವು ಬೇಜವಾಬ್ದಾರಿಯಿಂದ ಅಂಕ ಕೊಡುತ್ತೇವೆ ಎಂದು ಇದರ ಅರ್ಥವೇ?” ಎಂದೆಲ್ಲ ಅನೇಕ ಶಿಕ್ಷಕರು
ಹೇಳುತ್ತಿದ್ದುದನ್ನು ನಾನು ಸ್ವತಃ ಕೇಳಿದ್ದೇನೆ. ವ್ಯವಸ್ಥೆಯ ಈ ನಿರ್ಧಾರದಿಂದ ಬಾಹ್ಯ ಪರೀಕ್ಷೆಯಷ್ಟೇ
ಮಹತ್ವವನ್ನು ಆಂತರಿಕ ಪರೀಕ್ಷೆಗಳಿಗೂ ಕೊಟ್ಟಂತಾಗಿ ಶಿಕ್ಷಕರು ತಮ್ಮ ಮೇಲೆ ಯಾರೂ ಹೇಳುವವರು ಕೇಳುವವರು
ಇಲ್ಲದ ಸಂದರ್ಭದಲ್ಲಿಯೂ ಬೇಜವಾಬ್ದಾರಿಯಿಂದ ಕೆಲಸ ಮಾಡುವವರಲ್ಲಎಂದೇ ಹೇಳಿದಂತೆ ಆಯಿತು ತಾನೆ? ಇದು
ವ್ಯವಸ್ಥೆ ಶಿಕ್ಷಕಸರ ಮೇಲೆ ಇಟ್ಟ ನಂಬಿಕೆ ಮತ್ತು ಭರವಸೆ ಅಲ್ಲದೆ ಇನ್ನೇನು?
ಹದಿಮೂರರ ಸುಳ್ಳು; ಇದು ಯಾರ ಮಳ್ಳು?
ಆದರೆ ನಮ್ಮ ಶಿಕ್ಷಕರು
ಮತ್ತು ಅಧಿಕಾರಿಗಳು ತಮ್ಮ ಮೇಲೆ ಭರವಸೆ ಇಟ್ಟು ನೀಡಿದ ಈ ಗೌರವನ್ನು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸಿದರು
ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆಯಾಗಿ ನಿಲ್ಲುತ್ತಿದೆ. ಸರ್ಕಾರ ಹದಿಮೂರು ಅಂಕಗಳ ಬಗ್ಗೆ ಎಲ್ಲಿಯೂ
ಹೇಳದಿದ್ದರೂ ʻಹದಿಮೂರಕ್ಕೆ ಇಳಿಸಲಾಯಿತುʼ ಎಂಬ ಸುಳ್ಳುಸುದ್ಧಿಯನ್ನು ಹುಟ್ಟಿಸಿ ಹರಿಬಿಟ್ಟವರು
ಯಾರು? ಅದನ್ನು ನಮ್ಮ ಶಿಕ್ಷಕರೇ ಮಾಡಿದ್ದಲ್ಲವೇ? ಹೌದು ಒಂದು ಮಗು ಶಿಕ್ಷಕರು ಕೊಡುವ ಕಿರುಪರೀಕ್ಷೆ,
ನಿಯೋಜಿತ ಕಾರ್ಯ ಎಲ್ಲವನ್ನೂ ಬಹಳ ಚೆಂದವಾಗಿ ಮಾಡಿಕೊಟ್ಟು ಪೂರ್ಣಪ್ರಮಾಣದಲ್ಲಿ ಅಂದರೆ ಇಪ್ಪತ್ತಕ್ಕೆ
ಇಪ್ಪತ್ತೂ ಅಂಕಗಳನ್ನು ಪಡೆಯಬಹುದು. ಆ ಮಗು ಮಾತ್ರ ಬಾಹ್ಯ ಪರೀಕ್ಷೆಯಲ್ಲಿ ಹದಿಮೂರು ಪಡೆದರೆ ಸಾಕು. ಉಳಿದವರೆಲ್ಲರಿಗೂ ಇದು ಹೇಗೆ ಅನ್ವಯಿಸುತ್ತದೆ? ಅಷ್ಟಕ್ಕೂ ಹೀಗೆ ಪೂರ್ಣಪ್ರಮಾಣದ ಅಂಕಗಳನ್ನು ಪ್ರಾಮಾಣಿಕವಾಗಿಯೇ ಪಡೆಯುವ ಮಗು ಬಾಹ್ಯ ಪರೀಕ್ಷೆಯಲ್ಲಿ
ಹದಿಮೂರು ಅಂಕ ಪಡೆಯುವಷ್ಟು ಕಳಪೆಯಾಗಿ ಬರೆಯುತ್ತದೆಯೇ?
ತರಗತಿಯ ಎಲ್ಲ ಮಕ್ಕಳಿಗೂ ಶಿಕ್ಷಕರು ಪೂರ್ಣಪ್ರಮಾಣದ ಅಂಕಗಳನ್ನು
ನೀಡಿದರೆ ಮಾತ್ರ ಇವರ ಲೆಕ್ಕಾಚಾರದ ಪ್ರಕಾರ ಅವರು ಬಾಹ್ಯಪರೀಕ್ಷಯಲ್ಲಿ ಹದಿಮೂರು ಪಡೆದರೆ ಉತ್ತೀರ್ಣರಾಗುವುದು
ನಿಜ. ಆದರೆ ಇವರೇಕೆ ಕೆಲಸ ಮಾಡದವರಿಗೂ ಮಾಡಿದವರಿಗೂ ದೇವಸ್ಥಾನಕ್ಕೆ ಬಂದವರಿಗೆ ಭೇದಭಾವ ಮಾಡದೆ ಊಟಹಾಕುವಂತೆ
ಪೂರ್ಣಪ್ರಮಾಣದ ಅಂಕ ಕೊಡಬೇಕು? ಅದನ್ನು ಮಾಡಲು ಇವರಿಗೆ ಯಾರು ಹೇಳಿದರು? ಅಷ್ಟಕ್ಕೂ ಮೇಲಿನ ಯಾರಾದರೂ ಅಧಿಕಾರಿಗಳು ಹೇಳಿದರು ಎಂದೇ ಇಟ್ಟುಕೊಳ್ಳಿ ಇವರು ಆ ಮಾತನ್ನು ಏಕೆ ಕೇಳಬೇಕು? ಯಾರು ಯಾರೋ ಹೇಳಿದಂತೆ ಮಾರ್ಕ್ಸು
ಕೊಡುವುದಾದರೆ ನಾವೆಲ್ಲ ಮೇಷ್ಟ್ರ ಕೆಲ್ಸ ಮಾಡುವುದಾದರೂ ಯಾತಕ್ಕೆ? ಎಂದು ಇವರಿಗೇಕೆ ಅನ್ನಿಸುವುದಿಲ್ಲ. ಎಲ್ಲ ಸಂದರ್ಭಗಳಲ್ಲಿ ಅಧಿಕಾರಿಗಳ ಎದುರು ಮಾತನಾಡುವುದು ಆಗದಿರುಬಹುದು. ಆದರೆ ಕೊನೆಪಕ್ಷ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೂ ಸುಮ್ಮನಿದ್ದರೆ ಹೇಗೆ? ಇದು ಬೇಜವಾಬ್ದಾರಿ ಅಲ್ಲವೇ? ತಮ್ಮ
ಬೇಜವಾಬ್ದಾರಿಯಿಂದ ಆಗುವ ಅವಮಾನಕ್ಕೆ ಇನ್ಯಾರ ತಲೆಯ ಮೇಲೆ ಗೂಬೆ ಕೂರಿಸಿ ಅವರನ್ನು ಹೊಣೆಮಾಡುಡುವುದು
ಎಷ್ಟು ಸರಿ? (ಈ ಆಂತರಿಕ ಅಂಕಗಳ ಬಗ್ಗೆಯೇ ಎರಡು ಪ್ರತ್ಯೇಕ ಲೇಖನಗಳು ಇದೇ ಬ್ಲಾಗಿನಲ್ಲಿವೆ. ಹೆಚ್ಚಿನ
ವಿವರಕ್ಕೆ ಆಸಕ್ತರು ಅವನ್ನು ಓದಬಹುದು)
ಕೊನೆಯಲ್ಲಿ ಆರಂಭದಲ್ಲಿ
ಉಲ್ಲೇಖಿಸಿದ ಗೊರೂರು ಅವರ
ʼಭೂತಯ್ಯನ ಮಗ ಅಯ್ಯುʼ ಸಿನೇಮಾದ ಘಟನೆಯನ್ನು ನೆನಪಿಸಿಕೊಳ್ಳೋಣ. ಅಲ್ಲಿಯ ಹೋಟೆಲ್ ಮಾಲೀಕನೆ
ಇಲ್ಲಿನ ಸರ್ಕಾರ. ಅಲ್ಲಿ ಊಟಮಾಡಲು ಬಂದವರೆ ಇಲ್ಲಿನ ಶಿಕ್ಷಕರು. ಆ ಘಟನೆಯಲ್ಲಿ ಕೊನೆಗೆ ʼಫುಲ್‌ಮೀಲ್ಸ್ʼ
ಕೊಡುವ ಒಂದು ಉತ್ತಮ ಯೋಜನೆ ನಿಂತುಹೋಗುತ್ತದೆ. ಇದು ನಿಲ್ಲಲು ಮಾಲೀಕ ಕಾರಣನೇ ಅಥವಾ ಊಟಮಾಡಲು ಬಂದವರು
ಕಾರಣವೇ? ಮಾಲೀಕ ಹೊಟ್ಟೆತುಂಬಾ ಊಟಮಾಡಲಿ ಎಂಬ ಉದ್ದೇಶದಿಂದಲೇ ಆ ಯೋಜನೆ ತಂದಿರುತ್ತಾನೆ. ಆದರೆ ಊಟಮಾಡುವವರು
ಒಬ್ಬರ ಹೆಸರಿನಲ್ಲಿ ನಾಲ್ಕು ಜನ ಊಟಮಾಡಿ ಆ ಯೋಜನೆಯನ್ನು ದುರುಪಯೋಗ ಮಾಡಿಕೊಂಡುಬಿಡುತ್ತಾರೆ ಮತ್ತು
ಆ ಮೂಲಕ ತಮ್ಮ ಒಳಿತಿಗಾಗಿ ರೂಪಿಸಿದ ಯೋಜನೆಯೊಂದು
ತಮ್ಮಿಂದಲೇ ನಿಲ್ಲಲು ಕಾರಣರಾಗುತ್ತಾರೆ. ಇಲ್ಲಿಯೂ ಅಷ್ಟೇ ನಾಲ್ಕು ಜನ ವಿದ್ಯಾರ್ಥಿಗಳಿಗೆ ಕೊಡಬೇಕಾದಷ್ಟು
ಅಂಕಗಳನ್ನು ಒಬ್ಬ ವಿದ್ಯಾರ್ಥಿಗೇ ʼಫುಲ್ ಮೀಲ್ಸ್ʼ ರೀತಿ ʼಫುಲ್ ಮಾರ್ಕ್ಸ್ʼ ಕೊಡುವ ಮೂಲಕ ವ್ಯವಸ್ಥೆಯನ್ನು
ಅದ್ವಾನಗೊಳಿಸುತ್ತಾ ಹೋದರೆ ಕೊನೆಗೊಮ್ಮೆ ಅಲ್ಲಿ ಮಾಲೀಕ ʼಪುಲ್ ಮೀಲ್ಸ್ʼ ಬೋರ್ಡನ್ನೇ ಕಿತ್ತು ಹಾಕಿದಂತೆ
ಇಲ್ಲಿ ʼಆಂತರಿಕ ಅಂಕಗಳೇ ಬೇಡʼ ಎಂದು ನಮ್ಮ ಮಾಲೀಕನು ಅದನ್ನು ಕಿತ್ತು ಹಾಕಬಹುದು. ಆಗ ಅತ್ತೂ ಕರೆದು
ಮಾಡಲಿಕ್ಕೆ ಏನೂ ಇರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಎಚ್ಚರ ಇರಬೇಕಾದದ್ದು ಮುಖ್ಯವಾದದ್ದು.
ಹೀಗೆ ಒಂದು ಒಳ್ಳೆಯ
ಫಲಿತಾಂಶವೂ ನಮಗೆ ಸಂತೋಷಕೊಡುವ ಶಕ್ತಿಯನ್ನು ಕಳೆದುಕೊಂಡು ʻಹೆಣದ
ಶೃಂಗಾರʼವಾಗಿ ತೋರುವುದು ಒಂದು ದುರಂತವೇ ಸರಿ. ಈ ಚೋದ್ಯದ ಕಾರಣವನ್ನು ಕನ್ನಡದ ಹಿರಿಯ ಕವಿ ಕೆ. ಎಸ್.
ನರಸಿಂಹಸ್ವಾಮಿ ಅವರ ಕವಿತೆಯ ಕೆಳಗಿನ ನಾಲ್ಕು ಸಾಲುಗಳು ತುಂಬಾ ಅರ್ಥಪೂರ್ಣವಾಗಿ ಧ್ವನಿಸುತ್ತವೆ:
ಊರಿಗೆ ಊರೆ ಹಸೆಯಲಿ ನಿಂತರೆ
ಆರತಿ ಎತ್ತುವರಾರಲ್ಲಿ?
ಸಭೆಗೆ ಸಭೆಯೇ ಭಾಷಣಕೆದ್ದರೆ
ಚಪ್ಪಾಳೆಗೆ ಜನ ಇನ್ನೆಲ್ಲಿ?
****
ಡಾ ರಾಜೇಂದ್ರ ಬುರಡಿಕಟ್ಟಿ
Sunday, April 26, 2026
ಇಷ್ಟವಿದ್ದವರು ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಕೆಳಕಂಡ ಲೇಖನಗಳನ್ನೂ ಅವುಗಳ ಲಿಂಕ್
ಮೇಲೆ ಕ್ಲಿಕ್ ಮಾಡುವುದರ ಮೂಲಕ ಓದಬಹುದು.
ಅಂಕವ್ಯಸನದ ಅವಾಂತರಗಳು.. (ಭಾಗ-೨)
https://buradikatti.blogspot.com/2026/03/2.html
ಅಂಕವ್ಯಸನದ ಅವಾಂತರಗಳು.. (ಭಾಗ-೧)
https://buradikatti.blogspot.com/2026/02/blog-post.html
ಆತಂಕದ ಬಲೆಯಲ್ಲಿ ಆಂತರಿಕ ಅಂಕಗಳು..
https://buradikatti.blogspot.com/2026/01/blog-post.html
ಗಂಡ ಗಾವುಂಡರ ನಡುವೆ ಗಂಡಾಂತರಕ್ಕೀಡಾದವೇ ಮಕ್ಕಳು?
https://buradikatti.blogspot.com/2025/07/blog-post.html
ಒತ್ತಿಮಾಡುವ ಹಣ್ಣು ಮತ್ತು ದೇವರ ಅಂಕಿ ದರ್ಬಾರು
https://buradikatti.blogspot.com/2024/11/blog-post_17.html
ಅಂಕ ಇಳಿಕೆ: ಬಿಚ್ಚಲಿಕ್ಕೆಂದೇ ಉಟ್ಟ ಸೀರೆಯೇ?
https://buradikatti.blogspot.com/2025/08/blog-post.html
ಶಾಲಾ ಶಿಕ್ಷಕರ ರಜಾ ನಿರಾಕರಣೆಯ ಸಾಧಕ ಬಾಧಕಗಳು
https://buradikatti.blogspot.com/2024/11/blog-post.html
ಕಿಚ್ಚಿಲ್ಲದ ಬೆಂಕಿ ಮತ್ತು ಬಕ್ರಿದ್ ರಜೆ
https://buradikatti.blogspot.com/2025/06/blog-post_5.html
ನೈರುತ್ಯ ಮತ್ತು ಕಳ್ಳ ಬಸುರಿನ ತಾಯಿಯರು
https://buradikatti.blogspot.com/2024/05/blog-post_31.html
ಎಸ್.ಎಸ್.ಎಲ್.ಸಿ ಫಲಿತಾಂಶ: ಕೆಸರು ಕಪ್ಪೆ ಕೊಂಡಾಟ ಮತ್ತು ಪಾದುಕಾ ಪೂಜೆ!
https://buradikatti.blogspot.com/2022/05/blog-post.html
ಎಸ್.ಎಸ್.ಎಲ್.ಸಿ.: ಶಾಲೆಗೆ ಹೋಗುವವರಿಗೇಕೆ ಶಾಲೆಬಿಡುವ ಪತ್ರ:
https://buradikatti.blogspot.com/2020/07/blog-post.html
ʻಅರಮನೆʼಯ ದೌಲತ್ತಿನಲ್ಲಿ ನೆನಪಾಗದ ʼಅಜ್ಜಿಮನೆʼ
https://buradikatti.blogspot.com/2020/07/blog-post_14.html






No comments:
Post a Comment