ಜನಗಣತಿ: ಮನೆಪಟ್ಟಿ ಹಾಗೂ ನಕ್ಷೆ ತಪ್ಪಿಲ್ಲದ ತಯಾರಿಕೆ ಹೇಗೆ?
ಮುಂದಿನ ವರ್ಷ (೨೦೨೭) ನಡೆಯಲಿರುವ ಭಾರತ ಜನಗಣತಿ ಗೆ ಪೂರ್ವಭಾವಿಯಾಗಿ ಈ ವರ್ಷ (೨೦೨೬)ರಲ್ಲಿ ನಡೆಯುತ್ತಿರುವ ಮನೆಪಟ್ಟಿ ಕಾರ್ಯಾಚರಣೆಯ ಮೊದಲ ಹಂತವಾದ ಮನೆಗಳ ಗುರುತಿಸುವಿಕೆ ಮತ್ತು ಬ್ಲಾಕುಗಳ ನಕ್ಷೆ ತಯಾರಿಕೆ ಕೆಲಸ ಈ ಲೇಖನ ಬರೆಯುವ ಹೊತ್ತಿಗೆ ಚಾಲ್ತಿಯಲ್ಲಿದೆ. ಈ ಕೆಲಸಕ್ಕಾಗಿ ಅನೇಕ ಜನ ಶಿಕ್ಷಕರು ಗಣತಿದಾರರಾಗಿ ಮತ್ತೆ ಕೆಲವರು ಮೇಲ್ವಿಚಾರಕರಾಗಿ ನಿಯೋಜಿತರಾಗಿದ್ದಾರೆ. ಇವರಲ್ಲಿ ಅನೇಕರು ನನ್ನ ಗೆಳಯ ಗೆಳತಿಯರಾಗಿದ್ದು ಅವರು ಈ ಕೆಲಸದಲ್ಲಿ ತಮಗೆ ಮೂಡುವ ಸಂದೇಶಗಳು, ಆಗುತ್ತಿರುವ ಕೆಲವು ಗೊಂದಲಗಳು ಇತ್ಯಾದಿಗಳಿಗೆ ನನ್ನ ಸಲಹೆ ಕೇಳುತ್ತಿರುತ್ತಾರೆ. ಅದು ಅವರ ದೊಡ್ಡಗುಣ. ಅದಕ್ಕಾಗಿ ಅವರಿಗೆಲ್ಲ ಧನ್ಯವಾದಗಳು.ಮನೆಪಟ್ಟಿ ಕಾರ್ಯಾಚರಣೆಯಲ್ಲಿ ಅತಿಮುಖ್ಯವಾದ ಭಾಗ ಅದರ ಆರಂಭಿಕ ಭಾಗವಾದ
ನಕ್ಷೆ ತಯಾರಿಸುವಿಕೆ. ಈ ನಕ್ಷೆ ತಯಾರಿಸಿ ಅನೇಕರು ನನಗೆ ಕಳಿಸಿ, ʼಸರಿಯಿದೆಯೇ ನೋಡಿ ಹೇಳಿʼ ಎಂದು
ಕೇಳಿದ್ದಾರೆ. ಕೆಲವರು ಬಹಳ ಚೆನ್ನಾಗಿಯೇ ʼಕೈಯ ಕನ್ನಡಿʼಯಂತೆ ನಕ್ಷೆ ತಯಾರಿಸಿದ್ದಾರೆ. ಅದನ್ನು ಹಿಡಿದುಕೊಂಡು
ಹೋದರೆ ಯಾರೇ ಆದರೂ ಎಲ್ಲವನ್ನೂ ಪರಿಶೀಲಿಸಬಹುದು. ಆದರೆ ಕೆಲವರು ತಯಾರಿಸಿದ ನಕ್ಷೆಯನ್ನು ನೋಡಿದರೆ
ಅವರಿಗೆ ಗಣತಿ ಆಯೋಗದಿಂದ ಕೊಟ್ಟ ನಕ್ಷೆಗೂ ಅವರು ತಯಾರಿಸಿದ ನಕ್ಷೆಗೂ ತಾಳೆಯೇ ಬರುತ್ತಿಲ್ಲ. ಮೂಲ
ನಕ್ಷೆಯ ಆಕಾರ ದಿಕ್ಕುದೆಸೆ ಒಂದೂ ಇವರು ರಚಿಸಿರುವ ನಕ್ಷೆಯಲ್ಲಿಲ್ಲ. ಇದನ್ನು ಹಿಡಿದುಕೊಂಡು ಯಾರಾದರೂ
ಗಣತಿಬ್ಲಾಕಿಗೆ ಹೋದರೆ ಎಲ್ಲಿ ಹೋಗಬೇಕು ಎಲ್ಲಿ ಬರಬೇಕು ಎಂಬುದೇ ತಿಳಿಯುವುದಿಲ್ಲ. ಕಾಡಿನಲ್ಲಿ ಕಣ್ಣಿಗೆ
ಕಪ್ಪುಬಟ್ಟೆ ಕಟ್ಟಿ ಬಿಟ್ಟಂತೆ ಆಗುತ್ತದೆ. ಆರಂಭದ ಕೆಲಸ ಅಧ್ವಾನ ಆದರೆ ಉಳಿದೆಲ್ಲವೂ ಅಧ್ವಾನವೇ.
ಅದಕ್ಕೆ ಹೇಳುವುದು Well begin is half done ಎಂದು.
ಹೀಗಾಗಿ ಈ ಚಿಕ್ಕ ಲೇಖನದಲ್ಲಿ ಕರಾರುವಕ್ಕಾಗಿ ನಕ್ಷೆ ತಯಾರಿಸುವುದು
ಮತ್ತು ಮನೆಪಟ್ಟಿ ತಯಾರಿಸುವುದು ಹೇಗೆ ಎಂಬುದನ್ನು ವಿವರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆಸಕ್ತರು
ಗಮನಿಸಿ. ಆಸಕ್ತಿ ಇಲ್ಲದವರು ಅಲಕ್ಷಿಸಿ.
ಮೊದಲನೆಯದಾಗಿ ಗಣತಿದಾರರಿಗೆ ಮತ್ತು ವೃತ್ತ ಮೇಲ್ವಿಚಾರಕರಿಗೆ ನೀಡಲಾದ ನಕ್ಷೆಗಳು ಯಾರೋ
ಕೈಯಿಂದ ರಚಿಸಿದ ನಕ್ಷೆಗಳಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕು. ಅವೆಲ್ಲವೂ ಗೂಗಲ್ ನಕ್ಷೆಗಳ ಜಾಲತಾಣದಿಂದ ಕೆಳಗಿಳಿಸಿಕೊಂಡ ʼಉಪಗ್ರಹ ಮಾದರಿʼಯ ನಕ್ಷೆಗಳಾಗಿವೆ ಎಂಬುದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾದ ಸಂಗತಿ. ಈ ನಕ್ಷೆಗಳು ʻಉಪಗ್ರಹ ಮಾದರಿʼ ಆಗಿರುವುದರಿಂದ ಇದರಲ್ಲಿ ಕಟ್ಟಡಗಳು ಸ್ಪಷ್ಟವಾಗಿ ಗೋಚರಿಸುತ್ತವೆ ರಸ್ತೆಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ. ಇದನ್ನು ಗಣತಿದಾರರಿಗೆ ಮತ್ತು ವೃತ್ತ ಮೇಲ್ವಿಚಾರಕರಿಗೆ ಕೊಡುವಾಗ ಅವರ ವ್ಯಾಪ್ತಿಯನ್ನು ತೋರಿಸಲಿಕ್ಕಾಗಿ ಕೃತಕವಾಗಿ ಗಡಿಗಳನ್ನು ಗುರುತಿಸಿ ಕೊಡಲಾಗಿದೆ. ಹೀಗಾಗಿ ಈ ನಕ್ಷೆಗಳಲ್ಲಿ ಗಡಿಗಳು ಗೊತ್ತಾಗುತ್ತವೆಯೇ ಹೊರತು ಒಳಗಿನ ರಸ್ತೆಗಳು ಸ್ಪಷ್ಟವಾಗಿ ಕಾಣುವುದಿಲ್ಲ.
ಇದೇ ನಕ್ಷೆಯನ್ನು ಹಿಡಿದುಕೊಂಡು ಗಣತಿದಾರರು ಅಥವಾ ಮೇಲ್ವಿಚಾರಕರು
ಭೌತಿಕ ಪರಿಸರದಲ್ಲಿ ತಿರುಗಾಡಲು ಹೋದರೆ ಪದೇ ಪದೆ ದಾರಿ ತಪ್ಪುವ, ಹೋದಲ್ಲೇ ಹೋಗುವ, ಕೆಲವು ಕಡೆ ಹೋಗದೇ
ಇರುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಈ ನಕ್ಷೆ ತಮ್ಮ ಪ್ರದೇಶವನ್ನು ಗುರುತು ಮಾಡಿಕೊಳ್ಳಲು ನೀಡಲಾದ
ನಕ್ಷೆ ಮಾತ್ರ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಕೈಯಿಂದ ಮಾಡಿಕೊಳ್ಳುವ
ಕಚ್ಚಾ ನಕ್ಷೆಗಳೂ ಅಷ್ಟಾಗಿ ಅನುಕೂಲ ಮಾಡಿಕೊಡಲಾರವು. ಅದಕ್ಕಾಗಿ ಅವರು ಇನ್ನೊಂದು ಮಾದರಿ ನಕ್ಷೆಮಾಡಿಕೊಂಡೇ ಪ್ರದೇಶಕ್ಕೆ ಕಾಲಿಡುವುದು ಒಳ್ಳೆಯದು.
ಅದು ಯಾವುದು ಎಂದರೆ:
ಈ ಮೊದಲೇ ಹೇಳಿದಂತೆ
ಗಣತಿ ಆಯೋಗದಿಂದ ನೀಡಲಾದ ನಕ್ಷೆಯು ಗೂಗಲ್ ನಕ್ಷಾ ಜಾಲತಾಣದಿಂದ ʼಉಪಗ್ರಹ ಮಾದರಿʼಯಲ್ಲಿ
ಕೆಳಗಿಳಿಸಿಕೊಂಡದ್ದಾಗಿದೆ. ಗಣತಿದಾರರು ಅಥವಾ ಮೇಲ್ವಿಚಾರಕರು ಕೂಡ ಅದೇ ಗೂಗಲ್ ನಕ್ಷಾ ಜಾಲತಾಣಕ್ಕೆ
ಹೋಗಿ ಇನ್ನೊಂದು ನಕ್ಷೆಯನ್ನು ಕೆಳಗಿಳಿಸಿಕೊಳ್ಳಬೇಕು. ಆದರೆ ಅವರು ಇಳಿಸಿದಂತೆ ಈ ನಕ್ಷೆಯನ್ನು ʼಉಪಗ್ರಹ
ಮಾದರಿʼಯಾಗಿ ಇಳಿಸಿಕೊಳ್ಳದೆ ʼಸಂಚಾರ ಮಾದರಿʼಯಾಗಿ ಇಳಿಸಿಕೊಳ್ಳಬೇಕು. ಮೊದಲು ನಕ್ಷೆಯ ಜಾಲತಾಣದಲ್ಲಿ
ʼಸಂಚಾರ ಮಾದರಿ ಕೊಟ್ಟುಕೊಂಡುʼ ತಮಗೆ ಸಂಬಂಧಿಸಿದ ಬ್ಲಾಕ್ ಪ್ರದೇಶ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬೇಕು.
ನಂತರ ಆ ಭಾಗವನ್ನು ಪರದೆಯ ಮೇಲೆ ದೊಡ್ಡದು ಮಾಡಿಕೊಂಡು ಗಡಿಗಳನ್ನು ಗುರುತಿಸಿಕೊಂಡು ಆ ಭಾಗವನ್ನು
ಮಾತ್ರ ಕೆಳಗಿಳಿಸಿಕೊಳ್ಳಬೇಕು. ಕೆಳಗಿಳಿಸಿಕೊಳ್ಳಲು ಗೊತ್ತಾಗದಿದ್ದರೆ ʼಪರದೆ ಚಿತ್ರವನ್ನುʼ ಹೊಡೆದುಕೊಳ್ಳಬಹುದು.
ಈ ನಕ್ಷೆಯು ʼಸಂಚಾರ ಮಾದರಿʼ ಆಗಿರುವುದರಿಂದ ಇದರಲ್ಲಿ ಕಟ್ಟಡಗಳು ಅಷ್ಪಷ್ಟವಾಗಿಯೂ ರಸ್ತೆಗಳು ಸ್ಪಷ್ಟವಾಗಿ
ಗೋಚರಿಸುತ್ತವೆ. ಕೇವಲ ಗಡಿ ಮಾತ್ರವಲ್ಲ ಬ್ಲಾಕಿನ ಎಲ್ಲ ಚಿಕ್ಕಪುಟ್ಟ ರಸ್ತೆಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ.
ಹೀಗೆ ಕೆಳಗಿಳಿಸಿಕೊಂಡ ಅಥವಾ ಪರದೆ ಚಿತ್ರ ತೆಗೆದುಕೊಂಡ ಚಿತ್ರವನ್ನು ದೊಡ್ಡದು ಮಾಡಿಕೊಂಡು ಒಂದು
ಎ೪ ಅಥವಾ ಎ೩ ಹಾಳೆಗೆ ಪ್ರಿಂಟ್ ಹಾಕಿಕೊಳ್ಳಬೇಕು.
ಎಲ್ಲ ರಸ್ತೆಗಳೂ ಪ್ರಿಂಟ್ ಆಗಿ ಬರುವುದರಿಂದ ಮತ್ತು ಕಟ್ಟಡಗಳನ್ನು
ಗುರುತಿಸಬೇಕಾದ ಸ್ಥಳಗಳು ಖಾಲಿ ಇರುವುದರಿಂದ ಇದನ್ನು ಹಿಡಿದುಕೊಂಡು ಯಾವ ರಸ್ತೆಯಲ್ಲಿ ಹೋಗಿ ಯಾವ
ರಸ್ತೆಯಲ್ಲಿ ಬರಬೇಕು ಎಂಬ ಸ್ಪಷ್ಟ ಚಿತ್ರಣ ಮೊದಲೇ ಸಿಗುತ್ತದೆ. ಇದನ್ನು ಮೊದಲೇ ಯೋಚಿಸಿಕೊಂಡು ಮತ್ತು
ಯೋಜಿಸಿಕೊಂಡು ಈ ನಕ್ಷೆಯನ್ನು ಹಿಡಿದುಕೊಂಡು ಗಣತಿದಾರರು ಬ್ಲಾಕಿಗೆ ಕಾಲಿಟ್ಟರೆ ತಪ್ಪುಗಳು ಆಗುವ
ಸಾಧ್ಯತೆ ಇಲ್ಲ ಎನ್ನುವಷ್ಟು ಕಡಿಮೆ. ʻದಾರಿತಪ್ಪಿದ ಗಣತಿದಾರರುʼ ಆಗುವ ಸಾಧ್ಯತೆಗಳೂ ಇರುವುದಿಲ್ಲ. ಪ್ರತಿ
ರಸ್ತೆಯಲ್ಲಿ ಹೋಗಿ ಖಾಲಿ ಇರುವ ಜಾಗದಲ್ಲಿ ಕಟ್ಟಡಗಳು ಹಾಗೂ ಕೆಲವು ಹೆಗ್ಗುರುತುಗಳನ್ನು ಗುರ್ತಿಸಿಕೊಂಡು
ಬಂದರೆ ಮುಗಿಯಿತು.
ಹೀಗೆ ಒಂದು ಅರ್ಧರಚಿತವಾದ ನಕ್ಷೆಯನ್ನು ಹಿಡಿದುಕೊಂಡು ಹೋಗಿ ಮನೆ ಗುರುತು
ಹಾಕಿಕೊಂಡು ಬಂದಾಗ ಕಚ್ಚಾ ನಕ್ಷೆ ತಯಾರಾಗುತ್ತದೆ. ಅದು ಮತ್ತು ಗಣತಿ ಆಯೋಗ ನೀಡಿದ ನಕ್ಷೆ ಎರಡನ್ನೂ
ಇಟ್ಟುಕೊಂಡು ನಕ್ಷೆಯ ಅಂತಿಮ ಪ್ರತಿ ತಯಾರಿಸಿದರೆ ಈ ಕೆಲಸ ಮುಗಿಯುತ್ತದೆ.
ಒಬ್ಬ ಮೇಲ್ವಿಚಾರಕನಾಗಿ ಕೆಲಸ ಮಾಡಬೇಕಾದ ನಾನು ಈ ಮಾದರಿಯನ್ನು ಅನುಸರಿಸಿದೆ.
ಗಣತಿ ಪ್ರದೇಶವನ್ನು ಸಾಕಷ್ಟು ಸಲ ಸುತ್ತಾಡಿ ಪ್ರತಿಬೀದಿಯನ್ನೂ ಪರಿಚಯ ಮಾಡಿಕೊಂಡ ಮೇಲೆ ಈ ರೀತಿ ಗೂಗಲ್
ನಿಂದ ಇಳಿಸಿಕೊಂಡ ಗಡಿರಸ್ತೆ ಮತ್ತುಒಳರಸ್ತೆಗಳು ಪ್ರಿಂಟಾಗಿರುವ ಖಾಲಿನಕ್ಷೆಗಳನ್ನು ಕೆಳಗಿಳಿಸಿಕೊಂಡು
ಅವನ್ನು ಪ್ರಿಂಟ್ ಹಾಕಿಕೊಂಡು ಅದರಲ್ಲಿ ಗಡಿಗಳನ್ನು ಗುರ್ತುಮಾಡಿ, ಗಣತಿದಾರರಿಗೆ ಕೊಟ್ಟು, ʼಒಳಗಿನ
ಒಂದೂ ಮನೆ ಬಿಡಬೇಡಿ; ಹೊರಗೆ ಕಾಲಿಡಬೇಡಿʼ ಎಂದು ಸೂಚನೆ ನೀಡಿ ಕಳಿಸಿದ್ದೆ. ಅವರು ಯಾವ ತೊಂದರೆಯೂ ಇಲ್ಲದೆ ಸಲೀಸಾಗಿ ಈ
ಕೆಲಸವನ್ನು ಮಾಡಿಕೊಂಡು ಬಂದರು. ಕೊನೆಯಲ್ಲಿ ನಾನು ಅವರು ಗುರುತು ಮಾಡಿಕೊಂಡು ಬಂದ ಅದೇ ನಕ್ಷೆಯನ್ನು
ಹಿಡಿದುಕೊಂಡು ಅವರನ್ನು ಕರೆದುಕೊಂಡು ಹೋಗಿ ʻನೀವು ಗುರುತಿಸಿದ
ಯಾವ ಮನೆ ಎಲ್ಲಿದೆ ತೋರಿಸಿʼ ಎಂದು ಹೇಳಿದಾಗ ಅವರು ತೋರಿಸಿದರು. ಯಾವ ತಪ್ಪುಗಳೂ ಆಗಿರಲಿಲ್ಲ.
ಹೀಗೆ ಹೇಳುವ ಮೂಲಕ ಎಲ್ಲ ಮೇಲ್ವಿಚಾರಕರೂ ನನ್ನಂತೆಯೇ ಮಾಡಬೇಕು ಎಂದು
ಪರೋಕ್ಷವಾಗಿ ಹೇಳುವುದು ನನ್ನ ಉದ್ದೇಶವಲ್ಲ; ಅದರ ಅಗತ್ಯವೂ ನನಗಿಲ್ಲ. ಆದರೆ ಕೆಲವು ಸಲ ಭಿನ್ನವಾಗಿ
ಯೋಚಿಸಿದಾಗ ಕೆಲಸಗಳು ಕಡಿಮೆಯಾಗುತ್ತವೆ ಮಾತ್ರವಲ್ಲ ಅಂಕಿಅಂಶಗಳು ಕರಾರುವಕ್ಕಾಗಿ ಸಿಗುವ ಮೂಲಕ ಆಗುವ
ಕೆಲಸವೂ ನಿಖರವೂ ಪರಿಪೂರ್ಣವೂ ಆಗುತ್ತದೆ. ಇಲ್ಲಿ ಆರು ಎ೪ ಹಾಳೆ ಖರ್ಚುಮಾಡಿದ್ದರಿಂದ ಆರಾರು ಸಲ ಬ್ಲಾಕಿನಲ್ಲಿ
ದಿಕ್ಕುತಪ್ಪಿಸಿಕೊಂಡು ಅಲೆಯುವುದು ತಪ್ಪಿತು ಅಷ್ಟೆ.
ಕೊನೆಯ ಮಾತು: ಜನಗಣತಿ ಒಂದು ರಾಷ್ಟ್ರೀಯ ಕಾರ್ಯ. ಸಮಸ್ಯೆ ಸಾವಿರವಿದ್ದರೂ
ಅದರಲ್ಲಿ ಪಾಲ್ಗೊಳ್ಳುವುದು ಒಂದು ಹೆಮ್ಮೆಯ ಸಂಗತಿ. ಒಬ್ಬ ಸರ್ಕಾರಿ ನೌಕರನಿಗೆ ಅಥವಾ ನೌಕರಳಿಗೆ ಆತನ
ಅಥವಾ ಆಕೆಯ ಸೇವಾವಧಿಯಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳಲು ಸಿಗುವುದು ಎರಡೇ ಗಣತಿಗಳು. ಒಂದಿಷ್ಟು ಪುಣ್ಯವಂತರಿಗೆ
ಮೂರು ಸಿಗುತ್ತವೆ. ಎಲ್ಲೋ ಬೆರಳೆಣಿಕೆಯ ಭಾಗ್ಯವಂತರಿಗೆ ಮಾತ್ರ ನಾಲ್ಕು ಜನಗಣತಿಗಳು ಸಿಗುತ್ತವೆ.
ಹಾಗೆ ನಾಲ್ಕು ಜನಗಣತಿಗಳು ಸಿಗಬೇಕಾದರೆ ಎರಡು ಶರತ್ತುಗಳು ಪೂರ್ಣಗೊಳ್ಳಬೇಕು. ಒಂದು: ಅವನು ಅಥವಾ
ಅವಳು ಇಪ್ಪತ್ತು ವರ್ಷದೊಳಗೇ ಸರ್ಕಾರಿ ಸೇವೆಗೆ ಸೇರಿರಬೇಕು. ಎರಡು: ಅವನು ಅಥವಾ ಅವಳು ಕೆಲಸಕ್ಕೆ
ಸೇರಿದ ವರ್ಷ ಅಥವಾ ಮರುವರ್ಷವೇ ಜನಗಣತಿ ಬರಬೇಕು.
ಹೀಗೆ ಭಾಗ್ಯವಾಗಿ ಬರುವ ಜನಗಣತಿ ಯಶಸ್ವಿಯಾಗಲು ಕೇವಲ ಕಾನೂನಿನ ಪ್ರಯೋಗ
ಮಾತ್ರ ಸಾಲದು. ಒಡಲಾಳದ ಬದ್ಧತೆಯೂ ಬೇಕು. ನಾವೆಲ್ಲರೂ ಆ ಬದ್ಧತೆಯಿಂದ ಈ ಕಾರ್ಯವನ್ನು ಅರ್ಥಪೂರ್ಣವಾಗಿ
ಯಶಸ್ವಿಗೊಳಿಸೋಣ.
ಡಾ. ರಾಜೇಂದ್ರ ಬುರಡಿಕಟ್ಟಿ
Sunday, April 19, 2026



No comments:
Post a Comment