ಹಿಂದಿ ತೀರ್ಪು: ಹಿನ್ನಡೆಯೇ ಮುಖಭಂಗವೇ?
ಎಸ್ ಎಸ್ ಎಲ್ ಸಿ ಯಲ್ಲಿ ಮಕ್ಕಳು ಹಿಂದಿ ಭಾಷೆಗೆ ಪಡೆಯುವ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸದೇ ಅಂಕಗಳಾಗಿಯೂ ನಮೂದಿಸದೆ ಶ್ರೇಣಿಗಳಾಗಿ ನಮೂದಿಸುವ ಬಗ್ಗೆ ಸರ್ಕಾರ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಶನ್ನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ ತೀರ್ಪಿನ ಸುದ್ಧಿಯನ್ನು ಸಂಭ್ರಮಿಸುವ ಹಾಗೆಯೇ ವಿಭ್ರಮಿಸುವ ಕೆಲಸಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿಯೇ ನಡೆದಿದೆ.
ಈ ಸುದ್ದಿಯನ್ನು ಪ್ರಕಟಿಸಿದ ಎರಡು ಪತ್ರಿಕೆಗಳ ತಲೆಬರೆಹವನ್ನು ನಾನು ಇಲ್ಲಿ ಉಲ್ಲೇಖಿಸಬೇಕು. ಒಂದು ಪತ್ರಿಕೆ ಈ ಸುದ್ದಿಗೆ ʻಸರ್ಕಾರಕ್ಕೆ ಹಿನ್ನಡೆʼ ಎಂದು ಹೆಸರು ಕೊಟ್ಟರೆ ಇನ್ನೊಂದು, ʻಸರ್ಕಾರಕ್ಕೆ ತೀವ್ರ ಮುಖಭಂಗʼ ಎಂದು ಹೆಸರು ಕೊಟ್ಟಿದೆ. ಒಂದೇ ಸುದ್ಧಿಯನ್ನು ಹೀಗೆ ಹೆಸರು ಕೊಟ್ಟು ಪ್ರಕಟಿಸುವುದರ ಹಿಂದೆ ಆ ಪತ್ರಿಕೆಗಳ ಹಿಂದಿನ ಆಶಯಗಳು ಮನೋಭಾವಗಳು ಸಹಜವಾಗಿಯೇ ಅನಾವರಣಗೊಳ್ಳುತ್ತವೆ.
ನಾನು ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಇನ್ನೂ ಓದಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ಧಿಯ ಆಧಾರದ ಮೇಲೆ ಹೇಳುವುದಾದರೆ ನ್ಯಾಯಾಲಯ 2025-26ನೇ ಸಾಲಿನಲ್ಲಿ ಹಿಂದಿ ಸೇರಿದಂತೆ ಎಲ್ಲ ತೃತೀಯ ಭಾಷೆಗಳಿಗೆ ಶ್ರೇಣಿ ಬದಲು ಅಂಕ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಿದೆಯಂತೆ. ಕೆಲವು ಮಕ್ಕಳು ಹಿಂದಿಯನ್ನು ʻಆದ್ಯತೆಯಾಗಿ ಓದಿರುವʼ ನಮಗೆ ಸರ್ಕಾರದ ನಿರ್ಧಾರದಿಂದ ಅನ್ಯಾಯ ಆಗುತ್ತದೆ ಎಂದು ಸಲ್ಲಿಸಿದ್ದ ಕೋರಿಕೆಯನ್ನು ಗಮನಿಸಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ ಎನ್ನುವುದು ಈಗ ವರದಿಯಾಗಿರುವಂಥದ್ದು.
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ನ್ಯಾಯಾಲಯ ಸರ್ಕಾರದ ಶ್ರೇಣಿ ನೀಡುವ ಕ್ರಮವನ್ನೇ ರದ್ದುಪಡಿಸಿಲ್ಲ ಎಂಬುದು. ಈ ವರ್ಷದ ಅಂದರೆ 25-26ನೆಯ ಸಾಲಿನ ವಿದ್ಯಾರ್ಥಿಗಳಿಗೆ ಅಂಕಕೊಡಿ ಎಂದು ಮಾತ್ರ ಅದು ಹೇಳಿದೆಯಂತೆ. ಹೀಗೆ ನ್ಯಾಯಾಲಯ ಹೇಳಲು ಕಾರಣವೂ ಇದೆ. ಹಿಂದಿಯನ್ನು ಅಂಕಗಳಿಕೆಗಾಗಿಯೇ ʻಆದ್ಯತೆ ಕೊಟ್ಟು ಓದಿದ ಮಕ್ಕಳಿಗೆʼ (ಮಕ್ಕಳು ಹಾಗೆ ಓದಬಾರದು ಮತ್ತು ನಾವು ಅವರನ್ನು ಹಾಗೆ ಓದಿಸಬಾರದು ಎಂಬುದು ಬೇರೆ ಚರ್ಚೆಯ ವಿಷಯ) ಪರೀಕ್ಷಾ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ದಿಢೀರ್ ನಿರ್ಧಾರದಿಂದ ತುಸು ಅನ್ಯಾಯ ಆಗುವ ಸಾಧ್ಯತೆ ಇದ್ದೇ ಇದೆ. ಇದನ್ನೇ ನ್ಯಾಯಾಲಯ ಪರಿಗಣಿಸಿ ಈ ತೀರ್ಪು ನೀಡಿರಬಹುದು.
ಆದರೆ ಈ ತೀರ್ಪಿನಿಂದ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ ಈಗ ನ್ಯಾಯಾಲಯದ ತೀರ್ಪಿಗೆ ಗೌರವಕೊಟ್ಟು ತನ್ನ ನಿರ್ಧಾರವನ್ನು ಈ ಹಂತದಲ್ಲಿ ಕೈಬಿಟ್ಟು ಸರ್ಕಾರ ಶ್ರೇಣಿ ಬದಲು ಅಂಕ ಕೊಡಲು (ಅಂಕ ಕೊಟ್ಟೂ ಉತ್ತೀರ್ಣತೆಗೆ ಪರಿಗಣಿಸದಿರುವ ಆಯ್ಕೆಯೂ ಇಲ್ಲದೆ). ಮುಂದಾದರೆ ಅದು ಹಿಂದಿಯನ್ನು ʼಆದ್ಯತೆ ಕೊಟ್ಟು ಪರೀಕ್ಷೆ ಬರೆಯದʼ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವ ಸಾಧ್ಯತೆ ಇದ್ದೇ ಇದೆ.
ಏಕೆಂದರೆ ಸರ್ಕಾರ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲು ಶ್ರೇಣಿಕೊಡುವ ನಿರ್ಧಾರವನ್ಜು ಪ್ರಕಟಿಸಿದ್ದು ಹಿಂದಿ ಪರೀಕ್ಷೆ ನಾಲ್ಕೈದು ದಿನ ಮುಂದೆ ಇದ್ದಾಗ. ಆ ನಿರ್ಧಾರ ಸಾರ್ವಜನಿಕವಾಗಿ ಪ್ರಕಟವಾಗಿತ್ತು. ಆದ್ದರಿಂದ ʻನಾವು ಹಿಂದಿ ಪರೀಕ್ಷೆಗೆ ಹಾಜರಾಗಲಿಲ್ಲʼ ಎಂದೋ ಅಥವಾ ಹಾಜರಾದರೂ ʻಆದ್ಯತೆಯಾಗಿ ಪರಿಗಣಿಸಿ ಪರೀಕ್ಷೆ ಬರೆಯಲಿಲ್ಲʼ ಈಗ ಶ್ರೇಣಿ ಬಿಟ್ಟು ಅಂಕಕೊಟ್ಟರೆ ಮತ್ತು ಆ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸಿದರೆ ನಮಗೆ ಅನ್ಯಾಯ ಅಗುತ್ತದೆ ಎಂದು ಆಗ ʻಆದ್ಯತೆ ಕೊಟ್ಟು ಓದಿದವರುʼ ನ್ಯಾಯಾಲಯಕ್ಕೆ ಹೋದಂತೆ ಈಗ ʻಆದ್ಯತೆ ಕೊಡದೇ ಪರೀಕ್ಷೆ ಬರೆದವರುʼ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇದ್ದೇ ಇದೆ. ಆಗ ನ್ಯಾಯಾಲಯ ಏನು ಹೇಳುತ್ತದೆಯೋ ಗೊತ್ತಿಲ್ಲ.
ಮಕ್ಕಳು ಮತ್ತು ನ್ಯಾಯಾಲಯದ ಈ ವಿಚಾರ ಒಂದು ಕಡೆಗೆ ಇರಲಿ. ನ್ಯಾಯಾಲಯದ ತೀರ್ಪು ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯೇ ಅಥವಾ ಮುಖಭಂಗವೇ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ನೋಡಬೇಕು. ಮೊಟ್ಟಮೊದಲನೆಯದಾಗಿ ನ್ಯಾಯಾಲಯ ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಬಗೆಗಿನ ಸರ್ಕಾರದ ನಿಲುವನ್ನೇ ಪ್ರಶ್ನಿಸಿಲ್ಲ; ತಪ್ಪು ಎಂದು ಹೇಳಿಲ್ಲ. ಯಾವ ಭಾಷೆಯನ್ನು ತನ್ನ ನಿಯಂತ್ರಣದ ಶಾಲೆಗಳಲ್ಲಿ ಕಲಿಸಬೇಕು ಕಲಿಸಬಾರದು ಎಂಬುದನ್ನು ನಿರ್ಧರಿಸುವ ಹಕ್ಕು ಚುನಾಯಿತ ಸರ್ಕಾರಕ್ಕೆ ಸಂವಿಧಾನಬದ್ಧವಾಗಿಯೇ ಇರುತ್ತದೆ. ಹಾಗಾಗಿ ನ್ಯಾಯಾಲಯಗಳು ಸರ್ಕಾರಗಳ ಆಡಳಿತಾತ್ಮಕವಾದ ಇಂತಹ ನಿರ್ಧಾರಗಳನ್ನು ಪ್ರಶ್ನಿಸುವುದಿಲ್ಲ ಮತ್ತು ರದ್ದು ಮಾಡುವುದಿಲ್ಲ. ಆದರೆ ಸರ್ಕಾರದ ಅಕಾಲಿಕ ಮತ್ತು ಗೊಂದಲದ ನಿರ್ಧಾರಗಳಿಂದ ಯಾರಿಗಾದರೂ ಅನ್ಯಾಯ ಆಗುವಂತಿದ್ದರೆ ಆಗ ಮಾತ್ರ ಮಧ್ಯೆ ಪ್ರವೇಶಿಸಿ ಬಾಧಿತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತವೆ. ಇಲ್ಲಿ ಆಗಿದ್ದು ಕೂಡ ಅದೆ ಅನ್ನಿಸುತ್ತದೆ.
ವಾಸ್ತವವಾಗಿ ನ್ಯಾಯಾಲಯದ ಈ ತೀರ್ಪಿನಿಂದ ಸರ್ಕಾರಕ್ಕೆ ಒಂದು ಹೆಜ್ಜೆ ಹಿನ್ನಡೆ ಆಗಿದೆಯಾದರೂ ಇದರಲ್ಲಿ ಮುಖಭಂಗವಾಗುವಂಥದ್ದೇನೂ ಕಂಡುಬರುವುದಿಲ್ಲ. ಸರ್ಕಾರ ಒಂದು ವೇಳೆ ಈ ನಿರ್ಧಾರವನ್ನು ಮುಂದಿನ ಶಿಕ್ಷಣವರ್ಷದಿಂದ ಅನ್ವಯಿಸುತ್ತೇವೆ ಎಂದು ಆದೇಶ ಮಾಡಿದ್ದರೆ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯೆ ಪ್ರವೇಶವನ್ನೇ ಮಾಡುತ್ತಿರಲಿಲ್ಲ ಅನ್ನಿಸುತ್ತದೆ.
ಹೀಗಾಗಿ ಸರ್ಕಾರಕ್ಕೆ ಬಾಗಿಲು ಮುಚ್ಚೇಹೋಯಿತು ಎಂದು ಹಿಂದಿಪರವಾದಿಗಳು ಸಂಭ್ರಮಿಸುವ ಹಾಗನ್ನುವುದಕ್ಕಿಂತ ವಿಭ್ರಮಿಸುವ ಯಾವ ಕಾರಣವೂ ಇಲ್ಲಿ ಇಲ್ಲ. ಸರ್ಕಾರ ನ್ಯಾಯಾಲಯದ ತೀರ್ಪಿಗೆ ಗೌರವ ಕೊಟ್ಟು ಈ ವರ್ಷ ಹಿಂದಿನಂತೆಯೇ ಅಂಕಕೊಡುತ್ತೇವೆ ಮತ್ತು ಆ ಅಂಕಗಳನ್ನು ತೇರ್ಗಡೆಗೂ ಪರಿಗಣಿಸುತ್ತೇವೆ ಎಂದು ಮಾಡಿ, ಮುಂದಿನ ವರ್ಷದಿಂದ ಹಿಂದಿಯನ್ನು ಉತ್ತೀರ್ಣತೆಗೆ ಪರಿಗಣಿಸುವುದಿಲ್ಲ ಎಂದು ತೀರ್ಮಾನಿಸಿದರೆ ಅಷ್ಟೇ ಏಕೆ ʼನಾವು ಹಿಂದಿಯನ್ನು ಕಲಿಸುವುದೇ ಇಲ್ಲʼ ಎಂದು ತೀರ್ಮಾನ ಮಾಡಿದರೂ ನನ್ನ ತಿಳಿವಳಿಕೆ ಮಟ್ಟಿಗೆ ಯಾವ ನ್ಯಾಯಾಲಯಗಳೂ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಏಕೆಂದರೆ ಮೊದಲೇ ಹೇಳಿದಂತೆ, ʼಒಂದು ಭಾಷೆಯನ್ನು ತನ್ನ ನಿಯಂತ್ರಣದ ಶಾಲೆಗಳಲ್ಲಿ ಅವಶ್ಯವೆನಿಸಿದಾಗ ಕಲಿಸಲು ಆರಂಭಿಸುವ ಅಧಿಕಾರ ಮತ್ತು ಸ್ವಾತಂತ್ರ್ಯ ಒಂದು ಸರ್ಕಾರಕ್ಕೆ ಇದೆ ಎನ್ನುವುದಾರೆ ಅನವಶ್ಯ ಎನಿಸಿದಾಗ ಅದನ್ನು ಕೈಬಿಡುವ ಅಧಿಕಾರ ಮತ್ತು ಸ್ವಾತಂತ್ರ್ಯವೂ ಆ ಸರ್ಕಾರಕ್ಕೆ ಇದ್ದೇ ಇರುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರ ತಜ್ಞರೊಡನೆ ಸಮಾಲೋಚಿಸಿ ಯೋಗ್ಯ ನಿರ್ಧಾರ ಕೈಗೊಳ್ಳಬೇಕು ಮತ್ತು ಕಾನೂನಿನ್ವಯವೇ ತನ್ನ ನಿರ್ಧಾರನ್ನು ಸಮರ್ಥಿಸಿಕೊಳ್ಳಬೇಕು.
ಡಾ. ರಾಜೇಂದ್ರ ಬುರಡಿಕಟ್ಟಿ
Friday, April 17, 2026
ಇದೇ ವಿಷಯವನ್ನು ಕುರಿತ ವಿವರವಾದ ಮಾಹಿತಿಗಾಗಿ ʼಹಿಂದಿ ಹಿಂದಿ ಎಂಬ ಹುಂಬು ಹಂಬಲವೇಕೆ?ʼ ಎಂಬ ಕೆಳಗಿನ ಲೇಖನವನ್ನು ಕೂಡ ಆಸಕ್ತರು ಲಿಂಕ್ ಒತ್ತಿ ಓದಬಹುದಾಗಿದೆ. ಲಿಂಕ್: https://buradikatti.blogspot.com/2026/04/blog-post_8.html

No comments:
Post a Comment