ಕೆಟ್ಟ ಬಿಸ್ಲು ಮತ್ತು ಟೀಚರ್ಸ್ ಟ್ರೈನಿಂಗು...
ಆಕಿ ಗೇಟಿನ ಹತ್ರ ಸ್ಕೂಟಿ ನಿಲ್ಸಿ ಇಳಿಯದಕ್ಕೂ ಸಂಗದ ನಿಂಗೇಶಿ ಬೈಕು ಅಲ್ಲಿಗೆ ಬರದುಕ್ಕೂ ಸರಿಯಾಯ್ತು. ʻನಮುಸ್ಕಾರ ಮೆಡಮ್ಮಾರೆʼ ಅಂತ ಅವ್ನು ಅಂತುದ್ದಂಗನ ಅವ್ನಿಗೆ ವಾಪಸ್ಸು ನಮುಸ್ಕಾರ ಅಂತನೂ ಅನ್ಲಿಲ್ದಂಗ ಅಕಿ ತುಡ್ರಾಕ ಸುರುವ್ ಮಾಡಿದ್ಲು. ʻಅಲ್ಲ ನಿಮ್ಮುನ ಸಂಗುಕ್ಕ ಆರ್ಸಿ ಕಳ್ಸಿದ್ದು ಟೀಚರ್ಸಿಗೆ ಹೆಲ್ಪ ಮಾಡಕ ಏನ್ ಹಿಂಸೆ ಮಾಡಕ?ʼ ಅನ್ನೋ ಅವಳ ಅರ್ಜುನಬಾಣದಂತ ಪಸ್ಟಿನ್ ಪ್ರಸ್ನೆಗೆನೆ ಅಂವ ತತ್ತರಿಸಿ ಬಿಟ್ಟ!
ʻನಾನ್ ಈ ಯಮ್ಮನ್ ತಡಿವಿಕಂದುದ್ದ ಅಲ್ಲ; ಸುಮ್ನೆ ಕಂಡ್ರೂ ಕಾಣ್ದಂಗ
ಹೋಗಿದ್ರ ಜಾಣ ಆಗ್ತಿದ್ದೆʼ ಅಂತ ಅನ್ಸಿದ್ರು ಅದುನ್ನ ಆಕೆಗೆ ತೋರಿಸ್ಕಳ್ಳದೆ ಮುಖದ ಮೇಲೆ ಬಲವಂತವಾಗಿ
ತುಸು ನಗೆ ತಂದ್ಕಂಡ್, ʻಯಾಕ್ ಮೇಡಮ್ಮಾರೆ ಏನಾತು?ʼ ಅಂದ. ʻಏನಾತು
ಅಂತೀರಲ್ರಿ, ಏನೇನ್ ಆಗ್ಬಾರ್ದೋ ಅದೆಲ್ಲ ಆಗಾಕ ಹತ್ತೇತಿ ನಿಮ್ಕಡಿಂದ. ಅಲ್ರಿ ಯಾರ್ರಿ ನಿಮ್ಗೆ ಟ್ರೈನಿಂಗ್
ಬೆಳ್ಳಂಬೆಳಿಗ್ಗೆ ಇಡ್ಸಾಕ್ ಹೇಳಿದ್ದು? ಮಾಡಾಕ್ ನೂರಾಯೆಂಟು ಕೆಲ್ಸ ಇದ್ರು ಬರಿ ಬ್ಯಾಡಾಗಿದ್ ಕೆಲ್ಸನ
ಮಾಡ್ತೀರಲ್ರಿ ಟೀಚರ್ಸಿಗೆ ಯಾವ್ದು ಹೆಲ್ಪ ಅಕತಿ ಯಾವ್ದು ಹಿಂಸೆ ಅಕತಿ ಅನ್ನೋದು ತಿಳಿಯಂಗಿಲ್ಲ ನಿಮ್ಗೆ?ʼ
ಎಂದು ಅವಳು ಎರಡನೆಯ ಬಾಣವನ್ನು ತುಸು ನಿಧಾನವಾಗಿ ಬಿಟ್ಟಾಗ ಅವನಿಗೆ ಮ್ಯಾಟರ್ ಏನು ಅಂತ ಗೊತ್ತಾತು.
ಸರ್ಕಾರದೊರು ಟೀಚರ್ಸಿಗೆ ಅದೆಂತದ ಟ್ರೈನಿಂಗ್ ಹಾಕಿದ್ರಂತ. ಅದು ಬ್ಯಾಸಿಗಿ
ರಜೆ ಆಗಿದ್ರಿಂದ ಟೀಚರ್ಸೆಲ್ಲ ಮೊದ್ಲೆ ಮುಖ ಊದಿಸ್ಕಂಡಿದ್ರಂತ. ಅದ ಟೈಮಿಗೆ ಈ ಸಂಗ್ದೋರು ಬೆಂಗ್ಳೂರಗ
ಅರ್ಜಿಕೊಟ್ಟು ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಭಾಳ ಬಿಸ್ಲೈತಿ. ಅದ್ಕ ಟ್ರೈನಿಂಗ್ ಹತ್ರಿಂದ ನಾಕರತಂಕ
ಬ್ಯಾಡ. ಅದ್ರ ಬದ್ಲು ಬೆಳಿಗ್ಗೆ ಎಂಟು ಎಂಟೂವರಿಗೆ ಸುರುವ್ ಮಾಡಿ ಮದ್ಯಾನ ಒಂದೂವರಿಗೆ ಬಿಡಂಗ ಮಾಡಿ
ಅಂತ ಕೇಳಿಕಂಡುದ್ರಂತ. ಇಲಾಕೆರು ಹಂಗ ಮಾಡಿದ್ರಂತ.
ಇಕಿ ಬೆಳಿಗ್ಗೆ ಟ್ರೈನಿಂಗಿಗೆ ಅಂತ ಹೊಂಟಾಳ. ಮನ್ಯಾಗ ಅತ್ತಿ ʼನಂಗೊಂದಿಷ್ಟು
ತೆಳ್ಳನ ಅಂಬ್ಲಿ ಬೇಕಾಗಿತ್ತು. ಇವ್ಳು ನೋಡಿದ್ರ ಆಲೆ ಸೀರೆ ಉಟ್ಕಂಡ್ ಹೊಂಟ್ಲು ಅಂತ ಎಂತದ ವಟವಟ
ಅಂತ ಅಂದತ. ಗಂಡ ಬ್ಯಾರೆ, ʻಏನ್ ವೆಕೆಷನ್ ಡಿಪಾರ್ಟಮೆಂಟೆ ನಿಮ್ದು. ಹಿಂಗೆಲ್ಲ ರಜಾದಗೆಲ್ಲ ಟ್ರೈನಿಂಗು
ಅದು ಇದು ಅಂತ ಹಾಕ್ತಾನ ಇದ್ರ ರಜೆ ಏನ್ ಸಿಕ್ಕಂಗಾತು? ನಿಮ್ಮ ಸಂಗದರು ಏನ್ ಮಾಡ್ತಾರ. ರಜೆದಾಗ
ಟ್ರೈನಿಂಗ್ ಹಾಕ್ಬೇಡಿ. ಅಂತಾನ, ಇಲ್ದಿದ್ರೆ ನಾನ್ ವೆಕೆಷನ್ ಡಿಪಾರ್ಟ್ಮೆಂಟು ಮಾಡಿ ಅಂತಾನ ಒತ್ತಡ
ತಂದು ಮಾಡ್ಸಾಕ ಆಗಲ್ಲ? ಅಂತ ಇವ್ಳಿಗೆ ಇನ್ಸಲ್ಟ್ ಆಗಂಗ ಎಂತದ ಅಂದಾನ. ಇದು ಸಾಲ್ದು ಅಂತ ಇಕಿ ಮಗ
ಬ್ಯಾರೆ ಇವ್ಳು ಮಾಡಿದ್ ಉಪ್ಪಿಟ್ ಬ್ಯಾಡ ನಂಗೆ ದ್ವಾಸಿ ಮಾಡ್ಕೊಡು ಅಂತ ಹಟಮಾಡಿದಾನ. ಇಕಿಗೆ ಪಿತ್ತ
ನೆತ್ತಿಗೇರಿ ತಡಕಳ್ಳಾಕ ಆಗ್ದೆ ಅತ್ತಿ, ಗಂಡ, ಮಗ, ಈ ಮೂವರ ಮೇಲಿನ ಸಿಟ್ಟನ್ನು ಟೋಟಲ್ ಮಾಡಿ ಆ ಹುಡುಗುನ
ಕುಂಡಿಮ್ಯಾಲ ರಪರಪರಪ ಬಡ್ದು, ಮಾಡಿದ ತಿಂಡಿನೂ ತಿನ್ನದಂಗ ಮುಖ ಗಂಟ್ ಹಾಕೊಂಡ್ ಸ್ಕೂಟಿ ಹತ್ಕಂಡ
ಬಂದಾಳ. ಅದೇ ಟೈಮಿಗೆ ಈ ನಿಂಗೇಶಿ ಅವ್ಳಿಗೆ ಎದ್ರಿಗೆ ಸಿಕ್ಕಾನ.
ʻಅಲ್ರಿ ಮೇಡಮ್ಮಾರೆ ನಾವ್ ಮಾಡಿದ್ರಾಗ ಏನ್ ತಪ್ಪೈತಿ ಹೇಳ್ರಿ. ನೀವೆಲ್ಲ
ಇಡೀ ದಿನ ಇರದ್ ಬ್ಯಾಡ. ರಜಾದಿನ ಕೊನೆಪಕ್ಷ ಅರ್ಧದಿನನರ ಮನ್ಯಾಗ ಇರ್ಲಿ ಅಂತ ನಾವೆಲ್ಲ ಸೇರಿ ಕಮಿಷನ್ರಿಗೆ
ಹೇಳಿ ಅನ್ಕೂಲ ಮಾಡಿಸ್ಕೊಟ್ರೆ ಹ್ಯಾಂಗ ಮಾತಾಡ್ತೀರಲ್ರಿ? ಎಂದು ಅವ ಅಕಿ ಜೊತೆಗೆ ಪಾಟಿ ಸವಾಲಿಗೆ ಇಳ್ದ.
ಅಕಿ ಸುಮ್ನಿರ್ತಾಳ? ಮನ್ಯಾಗಿನ ಸಿಟ್ಟು ಮಗುಗ ಹೊಡ್ದಾಗ ಪೂರ್ತಿ ಕಾಲಿಯೇನು ಆಗಿರ್ಲಿಲ್ಲ. ಮಕ ಹತ್ತೇಬಿಟ್ಲು.
ʼಅಲ್ರಿ ನಿಮ್ಗೆ ಬುದ್ದಿಗಿದ್ದಿ ಐತನ್ರಿ. ಸುಮ್ನೆ ಹತ್ರಿಂದ ನಾಕೂವರೆ ತಂಕ ಇದ್ರ ಶಾಲಿಗೆ ಬಂದಂಗ
ಬಂದು ಹೋಗ್ತಿದ್ವಿ. ಕಿಸಿಕಿಸಿ ಹೋಗಿ ಅದುನ್ನ ಬೆಳಿಗ್ಗೆ ಮಾಡ್ಸಿದಿರಲ. ಎಂಟು ಗಂಟೆಗೆ ನಾವೆಲ್ಲ ಬರೋದ್
ಹ್ಯಂಗ್ರಿ. ನೀವೇನು ಗಂಡುಸ್ರು. ಮಾಡಿಟ್ಟುದ್ ತಿಂದು ಶರ್ಟ್ ಕೊಡವಿ ಹಾಕೊಂಡು ಬಂದ್ರ ಮುಗಿತು.
ನಮ್ದು ಹೆಂಗ್ಸುರುದ್ದು ಹಂಗಕತನ್ರಿ? ಮಕ್ಳ ಮುಕ್ಳಿ ಮಾರಿ ತೊಳ್ದು, ಹೊರಾಗ ಹೋಗರಿಗೆ ಮನ್ಯಾಗ ಇರರಿಗೆ
ಕೂಳು ಬೇಸಿಟ್ಟು ಹೊರ್ಡಬೇಕಲ್ರಿ. ಹೋಗ್ಲಿ ಇಲ್ಲಿ ಬಂದ್ರ ತಿಂಡ್ಯರ ಐತಾ? ಅದೂ ಇಲ್ಲ. ಮಧ್ಯಾನ ಊಟರ
ಐತ? ಅದೂ ಇಲ್ಲ. ಮನ್ಯಾಗ ತಿಂಡಿ ಮಾಡ್ಕಂಡ್ ತಿಂದ್
ಬರ್ಲಿಕ್ ಟೈಮರ ಐತ? ಅದೂ ಇಲ್ಲ. ಮದ್ಯಾನ್ನ ಮನಿಗೆ ಹೋಗಿ ಬೇ್ಸ್ಕಂಡ್ ತಿನ್ನತಿಗೆ ಮೂರು ಗಂಟೆ ಅಕತಿ.
ನಿಮ್ಗೆ ಇಂತದೆಲ್ಲ ಯಾಕ ಅರ್ತ ಆಗಲ್ಲ ಅಂತನಿ…ʼ
ಅವ್ಳ ಮಾತು ಏನಾರ ಮಾಡಿ ಕಟ್ ಮಾಡಣ ಅಂತ ಅವ್ನು ಅಡ್ಡಬಾಯಿ ಹಾಕಿ,
ʼ ಬಿಸ್ಲು ಭಾಳ ಇತ್ತಲ ಮೇಡಮ್ಮಾರೆ ಅದ್ಕ…ʼ ಅಂತ ಏನ ಹೇಳಾಕ ಅಂತ ಹೋದ. ಆಕಿ ಎಲ್ಲಿ ಬಿಡ್ತಾಳ.. ʼಎಂತ
ಬಿಸುಲು ಸುಮ್ನಿರ್ರಿ. ಯಾತಕ್ ಏನೇನ ಹೇಳ್ತಿರಿ. ಹೊರಾಗ ಕಲ್ಲು ಮಣ್ಣು ಹೋರರು ಬೀದ್ಯಾಗ ಇದ್ದು ದುಡ್ಕಂಡ
ತಿನ್ನರು ನಮ್ಮಂಗ ಮಾಡಿದ್ರ ಮುಗಿತು. ಇಲ್ಲಿ ಬಿಲ್ಡಿಂಗ್ ಒಳಾಗ ಫ್ಯಾನಿನ್ ಕೆಳಾಗ ಕುತ್ಕಂಡ ಟ್ರೈನಿಂಗ್
ಕೇಳರಿಗೇ ಸುಸ್ತಾಗ್ತತನ. ಅದು ಹೋಗ್ಲತ್ಲಾಗ.. ಇಲ್ಲೇ ಪಕ್ಕದ ಬಿಲ್ಡಿಂಗ್ನ್ಯಾಗ ಜನಗಣತಿ ಟ್ರೈನಿಂಗ್
ನಡಿಯಾಕ ಹತ್ತೇತಲ. ಅವ್ರ ಟ್ರೈನಿಂಗ್ ಹತ್ರಿಂದ ಐದ್ರತಂಕ ನಡಿತೈತಲ… ಅಲ್ಲಿ ನಮ್ಮ ಟೀಚರ್ಸ ಇದಾರಲ್ಲ.
ಆ ಬಿಲ್ಡಿಂಗಿಗೆ ಬೀಳ್ಲಿಲ್ಲದ ಬಿಸ್ಲು ಈ ಬಿಲ್ಡಿಂಗಿಗೆ ಬೀಳ್ತತ?ʼ ಎಂದು ಅಕಿ ಕರೆಟ್ ಲಾ ಪಾಯಿಂಟ್
ಹಾಕಿದಾಗ ಅವ್ನಿಗೆ ಎಂತದ ಹೇಳದು ಅಂತನೆ ಗೊತ್ತಾಗದೆ ಮನಸಿನಲ್ಲೆ ಮುಂಡಿಗೆ ತಿನ್ನುತ್ತಿರಬೇಕಾದರೆ
ಅಷ್ಟೊತ್ತಿಗೆ ಇನ್ನೊಬ್ಬ ಮೇಷ್ಟ್ರ ಬೈಕ್ ಬಂದು ಗೇಟಿನಾಗ
ದಾರಿಯಲ್ಲೆ ನಿಂತು ಮಾತಾಡ್ತಿದ್ದ ಇವ್ರಿಗೆ ದಾರಿಬಿಡಿ ಅಂತ ಸಿಗ್ನಲ್ ಕೊಡುವ ಹಾರನ್ ಹಾಕತೊಡಗಿದ.
ನಿಂಗೇಸಿಗೆ ಅವಳ ಲಾ ಪಾಯಿಂಟಿಗೆ ಉತ್ತರಕೊಡಲಾಗದೆ ತಪ್ಪಿಸಿಕೊಳ್ಳಲು
ಇದೊಂದು ಚಾನ್ಸ್ ಆಗಿ ತೋರಿತು. ʻದಾರ್ಯಾಗ ಏನ್ ಮಾತಡದು ಬರ್ರಿ ಆಮ್ಯಾಲ ಮಾತಾಡಣಂತ ವೇಕಲ್ ಬರ್ತಾವುʼ
ಅಂತ ಟ್ರೈನಿಂಗ ನಡಿಯೋ ಬಿಲ್ಡಿಂಗ್ ಕಡಿಗೆ ಹೆಜ್ಜೆ ಹಾಕಿದ. ಅವ್ನುಅತ್ಲಾಗ ಹೋಗ್ತಿದ್ದಂಗನ, ʼಮಾಡದ್
ಮಾಡು ಅಂದ್ರ ಆಡ ದಾಸನ್ ಕಟ್ಕಂಡ ಓಡಿ ಹೋಗ್ತನಿ ಅಂದುದ್ಲಂತ ಹಂಗಾತು ಇವ್ರ ಕತಿʼ ಎಂದು ಅವ್ಳು ಮನ್ಸಿನಾಗೆ
ಅಂದ್ಕಂಡು ಸ್ಕೂಟಿ ಬೀಗ ಹಾಕಿದ್ನೋ ಇಲ್ಲೋ ಅಂತ ಚೆಕ್ ಮಾಡಕ ಅಂತ ಸ್ಕೂಟಿಕಡಿಗೆ ತಿರುಗಿ ಅಲ್ಲಿ ಮೊಬೈಲಿಗೆ
ಅಂತ ಕೈಹಾಕ್ತಾಳ. ಆಗನ ಗೊತ್ತಾಗಿದ್ದು ಬೆಳಿಗ್ಗೆ ಗಡಿಬಿಡಿಯಾಗ ಚಾರ್ಜ್ ಹಾಕಿದ್ದು ಅಲ್ಲೇ ಬಿಟ್
ಬಂದೆ ಅಂತ. ಅಕಿನೂ ಬೆಳಿಗ್ಗೆ ಬಂದಿದ್ದ ಸಿಟ್ಟಲ್ಲಿ ಫಿಫ್ಟಿ ಪರ್ಸಂಟ್ ಮಗಗ ಹೊಡ್ದು ಕಡಿಮೆ ಮಾಡಿಕಂಡಿದ್ಲು.
ಈಗ ನಿಂಗೇಸಿಗೆ ಚಾರ್ಜ್ ಮಾಡಿದಾಗ ಇನ್ನೂ ಟೊಂಟಿಫೈವ್ ಪರ್ಸೆಂಟ್ ಕಡಿಮೆ ಆದಂಗಾತು. ಇವೆಲ್ಲ ಇದ್ದವೆ.
ನಾನೇ ಕೂಲಾಗಿರದ ಕಲಿಬೇಕು ಅನಕಂತ ಅವ್ಳು ಒಳಕ್ಕ ಹೆಜ್ಜೆ ಹಾಕಿದ್ಲು.
-ಹುಚ್ಚುಮಲ್ಲಿ
12-04-2026

No comments:
Post a Comment